ರಾಗ-ದ್ವೇಷ

ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ್ಯ ಸಂಸ್ಥಾನಮಠ ಗದಗ

 

 

ರಾಗದ್ವೇಷಗಳು ವ್ಯಕ್ತಿಯ ಅಧಃಪತನಕ್ಕೆ ಕಾರಣವಾಗುವುದರಿಂದ ಇವುಗಳಿಗೆ ಹೀನಗುಣಗಳೆಂದು ಕರೆಯಲಾಗಿದೆ. ‘ರಾಗ’ದ ಶಾಬ್ದಿಕ ಅರ್ಥ ಪ್ರೀತಿ, ಒಲವು, ಆಸಕ್ತಿ ಎಂದಿದ್ದರೂ ಅದನ್ನು ‘ವಿಷಯ ವ್ಯಾಮೋಹ’ ಎಂಬರ್ಥದಲ್ಲಿಯೇ ಹೆಚ್ಚಾಗಿ ಬಳಸಲಾಗುತ್ತದೆ. ಸ್ವಾರ್ಥ ಪ್ರೇರಿತನಾದ ವ್ಯಕ್ತಿಯು ಮತ್ಸರ ಭಾವದಿಂದ ಇನ್ನೊಬ್ಬರೊಂದಿಗೆ ಸಾಧಿಸುವ ಹಗೆತನಕ್ಕೆ ‘ದ್ವೇಷ’ ಎನ್ನುತ್ತೇವೆ. ರಾಗಕ್ಕೆ ಮೂಲ ವಿಷಯೇಚ್ಛೆ. ‘ವಿಷಯ’ವೆಂದರೆ ವ್ಯಕ್ತಿಯನ್ನು ಮೋಹ ಪಾಶದಲ್ಲಿ ಬಂಧಿಸುವ ಲೌಕಿಕ ಭೋಗ ಭಾಗ್ಯಗಳು. ವಿಷಯ ಸುಖಕ್ಕೆ ಮರುಳಾದ ವ್ಯಕ್ತಿಯ ಮನಸ್ಸು ವಿಕಾರಕ್ಕೆ ಒಳಗಾಗುತ್ತದೆ. ಮನಸ್ಸು ವಿಕಾರಕ್ಕೊಳಗಾದಾಗ ದ್ವೇಷಾಸೂಯೆಗಳು ಹುಟ್ಟಿಕೊಳ್ಳುತ್ತವೆ. ಆದ್ದರಿಂದ ರಾಗದ್ವೇಷಗಳು ಒಂದೇ ನಾಣ್ಯದ ಎರಡು ಮುಖಗಳಂತೆ ತೋರುತ್ತವೆ.

 

ರಾಗದಿಂದ ಮನುಷ್ಯನಲ್ಲಿ ಆಶೆ ಆಮಿಷಗಳು ಹುಟ್ಟಿಕೊಳ್ಳುತ್ತವೆ. ಅಹಂಕಾರ ಅವಿವೇಕಗಳು ಹೆಚ್ಚುತ್ತವೆ. ಮದ ಮತ್ಸರಗಳು ಮಿತಿ ಮೀರುತ್ತವೆ. ಆಗ ಮನುಷ್ಯ ಭ್ರಾಂತಿಗೊಳಗಾಗುತ್ತಾನೆ. ವಿಷಯ ಭೋಗದಿಂದಲೇ ತನಗೆ ಸುಖ ದೊರೆವುದೆಂದು ಭಾವಿಸುತ್ತಾನೆ. ತನ್ನತನದ ಅರಿವು ಕಳೆದುಕೊಳ್ಳುತ್ತಾನೆ. ಎಲ್ಲವೂ ತನಗೇ ಬೇಕೆಂಬ ಸ್ವಾರ್ಥಲಾಲಸೆಗಳಿಂದ ಕೂಡಿ ಎಲ್ಲರನ್ನೂ ದ್ವೇಷಿಸಲು ಪ್ರಾರಂಭಿಸುತ್ತಾನೆ. ಹೀಗೆ ರಾಗದಿಂದ ದ್ವೇಷವೂ, ರಾಗದ್ವೇಷಗಳಿಂದ ಮನೋವಿಕಾರವೂ, ಮನೋವಿಕಾರದಿಂದ ಭವಬಂಧನವೂ ಉಂಟಾಗುತ್ತದೆ. ರಾಗದ್ವೇಷಗಳು ಮನಸ್ಸಿನ ಶಕ್ತಿಯನ್ನು ಹಾಳು ಮಾಡುತ್ತವೆ. ಆಗ ಮನಸ್ಸು ವಿಷಯವಾಸನೆಯಲ್ಲಿ ಮುಳುಗಿಹೋಗುತ್ತದೆ. ವಿಷಯ ವಾಸನೆಯಿಂದ ಕೂಡಿದ ಮನಸ್ಸುಳ್ಳ ವ್ಯಕ್ತಿ ಸದಾ ಅನ್ಯರನ್ನು ದ್ವೇಷಿಸುತ್ತಾನೆ. ತನ್ನ ಹಿತಕ್ಕಾಗಿ ಅನ್ಯರ ಹಿತ ಬಲಿಕೊಡುತ್ತಾನೆ. ತನ್ನ ಸುಖ ಸಂತೋಷಕ್ಕಾಗಿ ಅನ್ಯರನ್ನು ಸಂಕಟಕ್ಕೀಡುಮಾಡುತ್ತಾನೆ. ಕೊನೆಗೆ ತಾನೂ ಹಾಳಾಗುತ್ತಾನೆ. ಇತರರನ್ನೂ ಹಾಳುಮಾಡುತ್ತಾನೆ.

 

ದ್ವೇಷದ ಕಿಚ್ಚು ತಂದೆ ಮಕ್ಕಳಲ್ಲಿ, ಅಣ್ಣ-ತಮ್ಮಂದಿರಲ್ಲಿ, ಪತಿ ಪತ್ನಿಯರಲ್ಲಿ, ಗುರು-ಶಿಷ್ಯರಲ್ಲಿ ಹೀಗೆ ಎಲ್ಲಿಯಾದರೂ ಹೊತ್ತಿಕೊಳ್ಳಬಲ್ಲದು. ಈ ದ್ವೇಷ ಎಂಬ ಕಿಚ್ಚು ಒಬ್ಬರಿಂದ ಇನ್ನೊಬ್ಬರನ್ನು ಅಗಲಿಸಿ ಕಷ್ಟಕ್ಕೆ ಗುರಿಪಡಿಸುವುದು. ಅಂತೆಯೇ ಉಪನಿಷತ್ಕಾಲದ ಗುರುಶಿಷ್ಯರು ‘ಮಾ ವಿದ್ವಿಷಾವಹೈ’ ಅಂದರೆ ‘ಹೇ ದೇವರೆ! ನಾವಿಬ್ಬರೂ ಪರಸ್ಪರ ಎಂದೂ ದ್ವೇಷಿಸದಂತೆ ಮಾಡು’ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುವುದನ್ನು ಕಾಣುತ್ತೇವೆ. ಅಣ್ಣತಮ್ಮಂದಿರ ದ್ವೇಷಕ್ಕೆ ಸಂಬಂಧಿಸಿದ ಕಾಲ್ಪನಿಕ ಕಥೆಯೊಂದು ಹೀಗಿದೆ: ಇಬ್ಬರು ಅಣ್ಣ ತಮ್ಮಂದಿರಲ್ಲಿ ಸಂಪತ್ತಿನ ವಿಷಯವಾಗಿ ದ್ವೇಷ ಹುಟ್ಟಿಕೊಂಡಿತು. ಇಬ್ಬರೂ ಒಬ್ಬರಿಗಿಂತ ಒಬ್ಬರು ಹೆಚ್ಚು ಶ್ರೀಮಂತರಾಗುವುದಕ್ಕಾಗಿ ದೇವರಿಂದ ವರ ಪಡೆಯಲು ಕಾಡಿಗೆ ತೆರಳಿ ಉಗ್ರ ತಪವನ್ನಾಚರಿಸಿದರು. ಇವರ ತಪಸ್ಸಿಗೆ ಮೆಚ್ಚಿದ ಶಿವನು ಮೊದಲು ತಮ್ಮನ ಹತ್ತಿರ ಬಂದು ವರ ಕೇಳಲು ಹೇಳಿದನು. ಆಗ ತಮ್ಮನು ‘ನಾನು ಎಷ್ಟು ಸಂಪತ್ತನ್ನು ಕೇಳಿದರೂ ಅದಕ್ಕಿಂತ ಹೆಚ್ಚು ಸಂಪತ್ತನ್ನು ನನ್ನ ಅಣ್ಣ ಕೇಳುವ ಸಾಧ್ಯತೆ ಇರುವುದರಿಂದ ಅಣ್ಣನಿಗೆ ಏನು ಕೊಡುವೆಯೋ ಅದಕ್ಕೆ ದುಪ್ಪಟ್ಟು ತನಗೆ ಬೇಕೆಂದು ಶಿವನನ್ನು ಕೇಳಿದನು. ತಮ್ಮನಿಗೆ ತಥಾಸ್ತು ಎಂದು ಹೇಳಿ ಅಣ್ಣನ ಹತ್ತಿರ ಹೋದ ಶಿವನು ವರ ಕೇಳಿಕೊಳ್ಳಲು ಹೇಳಿದನು. ಆಗ ಅಣ್ಣನು ‘ನನ್ನ ತಮ್ಮನಿಗೆ ಏನು ವರ ಕೊಟ್ಟಿರುವೆ?’ ಎಂದು ಶಿವನನ್ನು ಕೇಳಿದ. “ನೀನು ಏನು ಬೇಡಿಕೊಳ್ಳುವೆಯೋ ಅದರ ದುಪ್ಪಟ್ಟು ಅವನಿಗೆ ಕೊಡುವುದಾಗಿ ವರ ಕೊಟ್ಟಿರುವೆ’ ಎಂದು ಶಿವ ಹೇಳುತ್ತಾನೆ. ಇದನ್ನು ಕೇಳಿ ದ್ವೇಷದಿಂದ ಕುದಿದ ಅಣ್ಣ ‘ಹಾಗಾದರೆ ನನ್ನ ಒಂದು ಕಣ್ಣು ಕಾಣದಂತಾಗಲಿ’ ಎಂದು ಶಿವನಲ್ಲಿ ವರ ಕೇಳಿದ. ಶಿವನು ‘ತಥಾಸ್ತು’ ಎಂದು ಹೇಳಿದ ತಕ್ಷಣ ಅಣ್ಣನ ಒಂದು ಕಣ್ಣು, ತಮ್ಮನ ಎರಡೂ ಕಣ್ಣುಗಳು ಕಾಣದಂತಾದವು. ಇದು ರಾಗದ್ವೇಷಗಳ ಪರಿಣಾಮ.

ರಾಗದ್ವೇಷಗಳು ಎಂತಹ ಬಲ್ಲಿದರನ್ನೂ ದುಃಖಕ್ಕೀಡುಮಾಡದೆ ಬಿಡವು. ಭವಭವಾಂತರದ ಸುಳಿಗೆ ಸಿಲುಕುವಂತೆ ಮಾಡುವುದೇ ಅವುಗಳ ಕೆಲಸ. ರಾಗದ್ವೇಷಗಳ ಈ ಮಾಯಾಪ್ರಪಂಚದಿಂದ ಬಿಡುಗಡೆ ಹೊಂದಲು ಪರಶಿವಜ್ಞಾನವನ್ನು ಸಂಪಾದಿಸಬೇಕಾದುದು ಅನಿವಾರ್ಯ.

Related Posts