ಲೇಖಕರು :ಪೂಜ್ಯ ಮುಪ್ಪಿನ ಬಸವಲಿಂಗ ದೇವರು, ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ ಹಾಲಕೆರೆ
‘ಸುಕುಮಾರ ಶಿವಯೋಗ ಮಂದಿರ ಬ್ಲಾಗ್’ ಸಂಚಿಕೆ-2 ಅಥಣಿ ಮುರುಘೇಂದ್ರ ಶಿವಯೋಗಿಗಳ ಪುಣ್ಯತಿಥಿ ಯ ಶತಮಾನೋತ್ಸವದ ವಿಶೇಷ ಸಂಚಿಕೆಯಾಗಿ ಹೊರಬರುತ್ತಿರುವುದು ಸಂತಸದ ಸಂಗತಿ.
ಶ್ರೀ ಕುಮಾರ ಮಹಾಸ್ವಾಮಿಗಳು ಸಮದರ್ಶಿತ್ವದ ಪೂರ್ಣ ರೂಪ. ಶಿವಯೋಗ ಮಂದಿರ ಸಂಸ್ಥೆಯಲ್ಲಿ ಗುರು-ವಿರಕ್ತ ಪೀಠಗಳ ಯೋಗ್ಯ ಉತ್ತರಾಧಿಕಾರಿಗಳಿಗೆ ಶಿಕ್ಷಣ ಕೊಟ್ಟು, ಪರಸ್ಪರರಲ್ಲಿ ಸೌಹಾರ್ದ, ಪ್ರೀತಿ, ಐಕ್ಯತೆ ಬೆಳೆಯುವಲ್ಲಿ ಬಹು ಶ್ರಮಿಸಿದರು.
ಗುರು ಪೀಠಗಳಲ್ಲಿ ಆದರದ ಭಾವನೆಗಳನ್ನಿಟ್ಟುಕೊಂಡಿದ್ದ ಶ್ರೀಗಳು ಉಜ್ಜಯನಿ ಪೀಠದ ಕಲಹವನ್ನು ಬಗೆಹರಿಸುವಲ್ಲಿ ಬಹಳ ಶ್ರಮಪಟ್ಟರು. ಉಜ್ಜಯಿನಿ ಶ್ರೀ ಸಿದ್ಧಲಿಂಗ ಜಗದ್ಗುರುಗಳು ಶ್ರೀಗಳವರನ್ನು ಗೌರವಾಭಿಮಾನದಿಂದ ಕಂಡು ಶ್ರೀ ಶಿವಯೋಗ ಮಂದಿರಕ್ಕೆ ಆರ್ಥಿಕ ಸಹಾಯ ಮಾಡಿದ್ದನ್ನು ಕಾಣುತ್ತೇವೆ, ಮೇಲಾಗಿ ಹಲವು ಬಾರಿ ಶಿವಯೊಗ ಮಂದಿರಕ್ಕೆ ದಯಮಾಡಿಸಿದ್ದು ದಾಖಲೆಯಲ್ಲಿದೆ. ಶ್ರೀಗಳವರು ಬಸವಾದಿಶರಣರ ವಿಚಾರಗಳನ್ನು ಬಹುವಿಧವಾಗಿ ಒಪ್ಪಿ, ಅಪ್ಪಿರುವಂಥವರು.

ವಿರಕ್ತರಲ್ಲಿರುವ ಸಮಯ ಭೇದಗಳಿಗೆ ಶ್ರೀಗಳು ಅವಕಾಶ ಕೊಡಲಿಲ್ಲ. ಎಲ್ಲ ವಿರಕ್ತ ಪೀಠಗಳಿಗೆ ಪ್ರಭು ಸಂಪ್ರದಾಯವೆ ಮೂಲವೆಂದು ಹಾನಗಲ್ಲ ಪೀಠಕ್ಕೆ ಬೇಕಾದಷ್ಟು ಬಿರುದಾವಳಿಗಳಿದ್ದರೂ ಸ್ವಪ್ರತಿಷ್ಠೆ ನಿರಪೇಕ್ಷಿತರಾದ ಶ್ರೀಗಳು ತಮ್ಮ ಬರವಣಿಗೆಗಳಲ್ಲಿ, ಪತ್ರಗಳಲ್ಲಿ ‘ಶ್ರೀನಿರಾಭಾರಿ ದೇಶಿಕವರೇಣ್ಯ ಶ್ರೀ ಅಲ್ಲಮಪ್ರಭು ಸ್ವಾಮ್ಯನ್ವಯಗತ ಹಾನಗಲ್ಲ ಕುಮಾರ ಸ್ವಾಮಿಗಳು’ ಎಂದು ಬರೆದು; ಬರೆಯಿಸುತ್ತಿದ್ದನ್ನು ಕಾಣುತ್ತೇವೆ.
ಮದನಾದಿ ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ತರುವಾಯ ಅವರ ಏಳನೇಯ ಪರಂಪರೆಯ ಬಾಚನಹಳ್ಳಿ ಕೌದಿ ಮಹಾಂತ ಸ್ವಾಮಿಗಳು ಶ್ರೀ ಅರ್ಧನಾರೀಶ್ವರರೆಂಬುವವರಿಗೆ ಅಧಿಕಾರ ಅನುಗ್ರಹವನ್ನು ನೀಡಿ ಬಾಚನಹಳ್ಳಿಯಲ್ಲಿ ಲಿಂಗೈಕ್ಯರಾಗುವರು. ಅವರಲ್ಲಿದ್ದ ಚರಮೂರ್ತಿಗಳಿಂದ ಕುಮಾರ, ಮುರುಘ, ಚಿಲ್ಲಾಳ, ಕೆಂಪಿನ ಎಂಬ ಶಾಖೆಗಳು ಸಮಯಭೇದಗಳಾಗುವವು. ಸಮಯಗಳೆಂದರೆ ಗುರುಗಳ ಆಚಾರ ಭೇದದಿಂದ ಈ ಕಲ್ಪನೆ ಉಂಟಾಯಿತೆ ಹೊರತು ತಾತ್ವಿಕ ಆಧಾರದಿಂದಲ್ಲ. ಒಂದು ಸಮಯದ ಸ್ವಾಮಿಗಳು ಇನ್ನೊಂದು ಸಮಯದ ಸ್ವಾಮಿಗಳನ್ನು ಕಂಡರೆ, ಸಂಪರ್ಕಿಸಿದರೆ ಮಹಾ ಮೈಲಿಗೆ ಎಂಬ ಭಾವ ಎಲ್ಲರಲ್ಲಿಯು ಮೂಡಿ, ಒಂದು ಸಮಯದ ಸ್ವಾಮಿಗಳು ಇನ್ನೊಂದು ಸಮಯದ ಮಠಕ್ಕೆ ಬಂದರೆ ಮಠ ತೊಳೆಯುವ ಪದ್ಧತಿ ಜಾರಿಯಲ್ಲಿತ್ತು.
‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದಡೆ ನಿಲಬಹುದೆ’ ಮರ್ತ್ಯದ ಮೈಲಿಗೆ ತೊಳೆಯಬೇಕಾದವರಲ್ಲಿಯೇ ಈ ಭಾವವಿದ್ದರೆ ಹೇಗೆ? ಹೀಗಾದಲ್ಲಿ ಸಮಾಜ ಅಭಿವೃದ್ದಿ ಕಾಣುವುದೆಂತು? ಎಂದು ವಿಚಾರಿಸಿ; ಮನನೊಂದರು. ಸಮಾಜದಲ್ಲಿರುವ ಅಸ್ಪೃಶ್ಯತೆ ನಿವಾರಣೆಗೆ ಮಹತ್ಮಾ ಗಾಂಧೀಜಿಯವರು
ಹೋರಾಡಿದಂತೆ ಶ್ರೀಗಳವರು ಶಾಸ್ತ್ರಸಮ್ಮತವಲ್ಲದ, ಸಮಾಜದ ಸಮಗ್ರತೆಗೆ ಮಾರಕವಾದ ಈ ಸಮಯಭೇದ ನಿವಾರಣೆಗೆ ಅಷ್ಟೆ ಪರಿಣಾಮಕಾರಿಯಾದ ಯೋಜನೆ ಮಾಡಿ ಹೋರಾಟ ಮಾಡಿದರು.
ಸಮಯಭೇದದ ನಿವಾರಣೆಯ ಕುರಿತು ಮಲ್ಲನಕೆರೆ ಶ್ರೀಗಳೊಂದಿಗೆ ಚರ್ಚಿಸಿ,ಮದನಾದಿ ನಿರಂಜನ ತೋಂಟದ ಸಿದ್ಧಲಿಂಗ ಶಿವಯೋಗಿಗಳ ದರ್ಶನ ಮಾಡಬೇಕೆಂದು ತಿರ್ಮಾನಿಸಿದರು. ಗದುಗಿನ ತೋಂಟದ ಜಗದ್ಗುರುಗಳನ್ನು ಶಿವಯೋಗಮಂದಿರಕ್ಕೆ ವೈಭವದಿಂದ ಬರಮಾಡಿಕೊಂಡರು. ಶ್ರೀ ಶಿವಯೋಗ ಮಂದಿರದ ಎಲ್ಲ ಪರಿವಾರದೊಂದಿಗೆ ಯಡಿಯೂರಿಗೆ ದಯಮಾಡಿಸಿದಾಗ ಗದುಗಿನ ತೋಂಟದ ಜಗದ್ಗುರುಗಳು ಅಷ್ಟೇ ಪ್ರಿತ್ಯಾದಾರದಿಂದ ಬರಮಾಡಿಕೊಂಡರು. ಶ್ರೀಗಳವರು ಶಿವಯೋಗ ಸಾಮ್ರಾಟ್ ತೋಂಟದ ಸಿದ್ಧಲಿಂಗ ಗುರುಗಳಲ್ಲಿ ಧ್ಯಾನಸ್ಥ ರಾಗಿ ತಮಗಿರುವ ಸಂಶಯಕ್ಕೆ ಪರಿಹಾರ ಕಂಡುಕೊಂಡರು.

ಲಿಂ. ಜಗದ್ಗುರು ತೋಂಟದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಜೊತೆಗೆ ಪಾದಯಾತ್ರೆ ೧೯೧೨ ರಲ್ಲಿ ಪೂಜ್ಯ ಲಿಂ.ಹಾನಗಲ್ಲ ಕುಮಾರ ಶಿವಯೋಗಿಗಳು ಸುಕ್ಷೇತ್ರ ಯಡೆಯೂರು ಶ್ರೀಗಳವರು ನಾಲ್ಕು ಸಮಯದ ಜಗದ್ಗುರುಗಳು ಇದ್ದಲ್ಲಿಯೇ ದಯಮಾಡಿಸಿ ಐಕ್ಯಮತ ತರುವಲ್ಲಿ ಬಹು ಹೆಣಗಾಡಿದರು

ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರಿಗೆ ಕಾಶಿಯಲ್ಲಿ ಅಧ್ಯಯನ ಮಾಡುವಾಗ ಆರ್ಥಿಕ ಸಹಾಯ ಮಾಡಿ; ಬೃಹನ್ಮಠ ಚಿತ್ರದುರ್ಗದ ಜಗದ್ಗುರು ಪೀಠಕ್ಕೆ ಶ್ರೀಗಳವರೇ ಬರಮಾಡಿಕೊಂಡಿದ್ದು ಇತಿಹಾಸ. ಅನಂತಪುರದ ಬೆಕ್ಕಿನಕಲ್ಮಠದ ಲಿಂಗಮಹಾಸ್ವಾಮಿಗಳನ್ನು ಶಿವಯೋಗ ಮಂದಿರದ ಪ್ರಥಮ ಜಾತ್ರಾಮಹೋತ್ಸವಕ್ಕೆ ಬರಮಾಡಿಕೊಂಡರು.

. ಪೂಜ್ಯರ ಸಮಾಜ ಪ್ರೇಮ ಕಂಡ ಲಿಂಗಮಹಾಸ್ವಾಮಿಗಳು ಮಲೆನಾಡಿನಲ್ಲಿ ಶಾಖಾ ಶಿವಯೋಗ ಮಂದಿರವಾಗ ಬೇಕೆಂಬ ಇಚ್ಛೆಯಂತೆ ಕಪನಹಳ್ಳಿ (ಕಾಳೇನಹಳ್ಳಿ) ಶಾಖಾಶಿವಯೋಗ ಮಂದಿರ ಸ್ಥಾಪನೆಮಾಡಿದರು. ಕುಮಾರಸಮಯದ ಮೂರುಸಾವಿರ ಮಠದ ಗಂಗಾಧರ ಜಗದ್ಗುರುಗಳನ್ನು ಆದರದಿಂದ ಕಂಡು ಅವರ ಸಾನಿಧ್ಯದಲ್ಲಿ ಬಂಕಾಪುರದಲ್ಲಿ ಧರ್ಮೋತ್ತೇಜಕ ಸಭೆಯನ್ನು ಸ್ಥಾಪಿಸಿ ಹಲವು ಸಮಾಜೋಧಾರ್ಮಿಕ ಕಾರ್ಯಗಳನ್ನು ಕೈಕೊಂಡು ಸಮಯಭೇದ ಜಗದ್ಗುರುಗಳಿಗೆಲ್ಲಾ ಆದರ್ಶರಾದರು.
ಪೂಜ್ಯ ಶ್ರೀಗಳವರು ಅಥಣಿ ಮುರುಘೇಂದ್ರ ಶಿವಯೋಗಿಗಳನ್ನ ಬಹಳ ಗೌರವಿಸುತ್ತಿದ್ದರು. ಮಂದಿರದ ವಟುಗಳನ್ನ, ಸಾಧಕರನ್ನ, ಸ್ವಾಮಿಗಳನ್ನ ಶಿವಯೋಗಿಗಳ ಸಾತ್ವಿಕ ತಪಶಕ್ತಿಯ ದರ್ಶನ ಪಡೆಯಲು ಕಳುಹಿಸುತ್ತಿದ್ದರು.

ನಾನು ಶಿವಯೋಗ ಮಂದಿರದಲ್ಲಿ ಓದುವಾಗ ಸಂಸ್ಥೆಯ ಅಧ್ಯಕ್ಷರಾದ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು ಅಪ್ಪಣೆ ಪಡಿಸಿದ್ದು ನೆನಪುಂಟು ‘ ಒಮ್ಮೆ ಜಯದೇವ ಜಗದ್ಗುರುಗಳು ಶ್ರೀಗಳವರ ಬೇಟಿ ಸಂದರ್ಭದಲ್ಲಿ ಶಿವಯೋಗ ಮಂದಿರದ ಕಾರ್ಯೋದ್ಯೇಶಗಳ ಪ್ರಗತಿಯ ಕುರಿತು ಮಾತನಾಡುತ್ತಿರುವಾಗ ಶ್ರೀಗಳವರು ನಮ್ಮ ಶಿವಯೋಗ ಮಂದಿರ ಸಂಸ್ಥೆಯಲ್ಲಿ ಅಥಣಿ ಶಿವಯೋಗಿಗಳಂಥ ಶಿವಯೋಗಿಗಳು ತಯಾರಾಗಬೇಕು ಇದೆ ನಮ್ಮ ಘನ ಉದ್ದೇಶವೇಂದರಂತೆ ಆಗ ಜಯದೇವ ಜಗದ್ಗುರುಗಳು ನಮ್ಮ ಬೃಹನ್ಮಠದ ಪರಂಪರೆಯಲ್ಲಿ ತಮ್ಮಂಥ ಸಮಾಜ ಕಳಕಳಿಯುಳ್ಳ ಸಮಾಜಪ್ರೇಮಿ ಸ್ವಾಮಿಗಳು ಬರಬೇಕು’ ಎಂದು ಪರಸ್ಪರ ಗೌರವ ಮಾತುಗಳಾಡಿದ್ದನ್ನ ಸ್ಮರಿಸಬಹುದು.
ಪೂಜ್ಯ ಶ್ರೀಗಳು ಅಥಣಿ ಶಿವಯೋಗಿಗಳಲ್ಲಿ ಬಹು ಭಕ್ತಿಯಿಂದ
ಮಂಗಳಾರತಿ ದೇವಗೆ ಶಿವಯೋಗಿಗೆ | ಕಂಗಳಾಲಯ ಸಂಗಗೆ |
ಜಂಗಮಲಿಂಗಬೇದದ ಸ್ವಯಚರಪರ |
ದಿಂಗಿತವರುಪಿದರಿತಾಚರಿಸಿದ ಮಹಿಮಗೆ ಎಂದು ಭಾವ ತುಂಬಿ ಸ್ಮರಿಸಿರುವರು. ಶ್ರೀಗಳವರು ಶಿವಯೋಗ ಮಂದಿರದ ಪರಿಸರದಲ್ಲಿ ಗುರು-ವಿರಕ್ತ ಮತ್ತು ವಿರಕ್ತರಲ್ಲಿನ ಸಮಯಭೇದದ ಸಂಕುಚಿತ ಭಾವನೆಗೆ ಅವಕಾಶಕೊಡದೆ ಸಮದರ್ಶಿತ್ವವನ್ನು ಮೆರೆದಿರುವರು