ಲೇಖಕರು :ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ
ನೂರಾರು ಮತವಿಹುದು ಲೋಕದುಗ್ರಾಣದಲಿ ।
ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್ ॥
ಸಾರದಡುಗೆಯನೊಳವಿಚಾರದೊಲೆಯಲಿ ಮಾಡು ।
ಬೇರೆ ಮತಿ ಬೇರೆ ಮತ – ಮಂಕುತಿಮ್ಮll
ಪ್ರಪಂಚವು ಬಹಳಷ್ಟು ವಿಶಾಲವಾಗಿದೆ.ಅದರೊಂದಿಗೆ ಇಲ್ಲಿನ ಮನುಕುಲವೂ ಸಹ.ಇಲ್ಲಿನ ಮನುಕುಲದಲ್ಲಿ ಹಲವಾರು ಜನಾಂಗಗಳನ್ನು ನಾವು ಕಾಣುತ್ತೇವೆ. ಆ ಪ್ರತಿಯೊಂದು ಜನಾಂಗಕ್ಕೂ ಸಹ ಅವುಗಳದ್ದೇ ಆದ ಪದ್ಧತಿ,ಆಚರಣೆ,ಕಟ್ಟಲೆಗಳು ಇವೆ.ಇವುಗಳೇ ಮುಂದೆ ಬೆಳೆಯುತ್ತಾ ಬೆಳೆಯುತ್ತಾ ಸಬಲವಾಗಿ ಮುಂದೆ ಧರ್ಮವಾಗಿ ರೂಪುಗೊಂಡವು.ಇವುಗಳು ಶತಮಾನ, ಶತಮಾನಗಳಿಂದ ಬಂದಿವೆ.ಇವುಗಳ ಉದ್ದೇಶ ಮಾನವನ ಆಂತರಿಕ ,ಸಾಮಾಜಿಕ,ದೈಹಿಕವಾಗಿ ವಿಕಾಸ ಹೊಂದುವುದೇ ವಿನಃ ತಮ್ಮ ತಮ್ಮಲ್ಲೇ ಉಚ್ಛ ನೀಚತ್ವವನ್ನು ಬೇಧಿಸಲು, ಭಿನ್ನಾಭಿಪ್ರಾಯ ಕಲಹಗಳನ್ನು ಸೃಷ್ಠಿಸಿ ನಮ್ಮ ಅಂತ್ಯವನು ನಾವೇ ಮಾಡಿಕೊಳ್ಳಲು ಅಲ್ಲ.
ಆದರೆ ಇಂದು ನಡೆಯುತ್ತಿರುವ ಪರಿಸ್ಥಿತಿ ಹೀಗೆ ಇದೆ.
ಇಂದು ಸಮಗ್ರ ವಿಶ್ವವನ್ನು ಗಮನಿಸಿದಾಗ ಒಟ್ಟು ಇಲ್ಲಿ 4,300 ಧರ್ಮಗಳು ಹುಟ್ಟಿಕೊಂಡಿವೆ.ಇವೆಲ್ಲ ಧರ್ಮಗಳು ಇರೋದು ಮಾನವನಿಗಾಗಿಯೆ ಹೊರತು ಪ್ರಾಣಿಗಳಿಗಲ್ಲ.
ಇಷ್ಟಾದರೂ ಸಹ ಈ ಮಾನವನಿಗಾಗಿಯೇ ಇರುವ ಧರ್ಮಗಳ ಅರ್ಥವನ್ನು ಮಾನವನು ತಿಳಿಯದೇ ಮಂಕಾಗಿ,ಯಾವುದೋ ಆಮಿಷಕ್ಕೆ ಒಳಗಾಗಿ ತನ್ನ ತನವನ್ನು ಮರೆತು, ಬೀದಿಗೆ ಬಂದು ಧರ್ಮಗಳಲ್ಲಿ ಬಿರುಕು ಹುಟ್ಟಿಸುವ ಕೆಲಸ ಮಾಡ್ತಾ ಇದ್ದಾನೆ.ಧರ್ಮಗಳ ಉದ್ದೇಶ ಇದು ಅಲ್ಲ.ಆದರೆ ನಮ್ಮ ಉದ್ದೇಶ ಇದರ ಹೊರತಿಲ್ಲ. ನೋಡಿ ಎಷ್ಟು ದಯನೀಯ ಸಂಗತಿ.
ಇಲ್ಲಿ ಯಾವುದೂ ಶ್ರೇಷ್ಠವಿಲ್ಲ ಮತ್ತು ಕನಿಷ್ಠನೂ ಇಲ್ಲ.ಎಲ್ಲವೂ ಸಹ ಅವರವರ ಮನೋಭಾವದಲ್ಲಿ ಅಡಗಿದೆ.ನಾವು ಪಾಲಿಸುವ ಧರ್ಮವನ್ನು ಅರಿತು ನಾವು ನಡೆಯಬೇಕಷ್ಟೇ.ನಮ್ಮಲ್ಲಿಯೇ ಭೇದ-ಭಾವ ಮಾಡಿ ವಿನಾಕಾರಣ ನಮ್ಮ ನಾಶಕ್ಕೆ ನಾವೇ ಗುರಿ ಆಗೋದಲ್ಲ.ಇದನ್ನೇ ಶರಣರು ಹೇಳಿದ್ದು.ಇದಕ್ಕಾಗಿಯೇ ಕಲ್ಯಾಣ ಕ್ರಾಂತಿ ಆಗಿದ್ದು.
“ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ,
ಜಲವೊಂದೇ ಶೌಚ ಆಚಮನಕ್ಕೆ,”
ಎಂದು ಶರಣರು ಸ್ಪಷ್ಟ ವಾಗಿ ತಿಳಿಸಿದ್ದಾರೆ.ಹೋಗಲಿ ಬೇರೆ ಧರ್ಮ ನಿನಗೆ ತೃಪ್ತಿ ಕೊಟ್ಟಿಲ್ಲ ಅಂದಾಕ್ಷಣ ಅದರ ಬಗ್ಗೆ ತಿಳಿಯದೆ ಇಲ್ಲ ಸಲ್ಲದ ಹಾಗೆ ಮಾತನಾಡೋದು,ಅದನ್ನು ನಿಂದಿಸೋದು, ಅವಮಾನಿಸೋದು ನಿನ್ನ ಹಕ್ಕಲ್ಲ.ಹೇಗೆ ನಿನ್ನ ಧರ್ಮದ ಮೇಲೆ ನಿನಗೆ ಪ್ರೇಮವೋ ಹಾಗೇ ಅವರದು ಅವರಿಗೆ ಪ್ರೇಮ,.ಅದಕ್ಕೆಂದೇ ಇಲ್ಲಿ ಡಿ. ವಿ. ಜಿ. ಯವರು ತಿಳಿಸಿದ್ದಾರೆ.ಈ ಲೋಕವೆಂಬ ಸಂಗ್ರಹಣಾ ಕೊಠಡಿಯಲ್ಲಿ(store room) ನೂರಾರು ಧರ್ಮಗಳಿವೆ.ನಿನಗೆ ಹಿಡಿಸಿದ್ದನ್ನು ನೀನು ಆಯ್ಕೆ ಮಾಡಿಕೋ.ನಿನ್ನ ಮನಸ್ಸಿನ ಒಲೆಯಲ್ಲಿ ಆ ವಿಚಾರವನ್ನು ಅಡುಗೆಮಾಡಿ ಸಾರವನ್ನು ಅನುಭವಿಸು. ಯಾರ ಬುದ್ಧಿ ಹೇಗಿರುತ್ತದೋ ಹಾಗೆ ಅವರ ಮತ.ಅದನ್ನು ನೀನು ಪ್ರೀತಿಸುವುದಾದರೆ ಪ್ರೀತಿಸು,ಆಗದಿದ್ದರೆ ಸುಮ್ಮನಿರು. ಆದರೇ ಅನ್ಯರ ಭಾವ ಅಭಿಪ್ರಾಯ ಅಥವಾ ಮತವನ್ನು ಕುಹಕವಾಡುವುದಾಗಲೀ, ಅಲ್ಲಗೆಳೆಯುವುದಾಗಲೀ, ಖಂಡಿಸುವುದಾಗಲೀ ಸಲ್ಲ. ಏಕೆಂದರೆ ಯಾರ ಬುದ್ಧಿ ಮತ್ತು ವಿಚಾರ ಹೇಗಿರುತ್ತದೆಯೋ ಅವರ ಮತವೂ ಹಾಗಿರುತ್ತದೆ.
ಒಂದೇ “ಪರವಸ್ತು”ವನ್ನು ಕಂಡುಕೊಳ್ಳಲು ಸಾವಿರಾರು ಮಾರ್ಗಗಳು ಇವೆ. ಆ ಮಾರ್ಗಕ್ಕೆ ತಕ್ಕಂತೆ ಧರ್ಮಗಳಿವೆ.ಹೀಗೆ ಆ ಮಾರ್ಗದಲ್ಲಿ ಆ ಧರ್ಮಿಯನಿಗೆ ಅವನದೇ ಆದ ಅಧಿಕಾರ ಮತ್ತು ಸಂಪೂರ್ಣ ಸ್ವಾತಂತ್ರ್ಯ ಉಂಟು.ಯಾರು ಹೇಗೆ ಕಂಡುಕೊಳ್ಳುತ್ತಾರೆಯೋ ಹಾಗೆ ಅದರ ದರ್ಶನವಾಗುತ್ತದೆ.ಪ್ರತಿಯೊಬ್ಬರ ದರ್ಶನವು ಅವರವರ ವಿಚಾರಗಳ ಆಧಾರದ ಮೇಲೆ ಸೃಷ್ಟಿಯಾಗಿರುವವು.ಅವುಗಳ ಮಾರ್ಗದಲ್ಲಿ ಭಿನ್ನತೆಯನ್ನು ನಾವು ಕಂಡರೂ ಸಹ ಅವುಗಳ ಗುರಿ ಮಾತ್ರ ಒಂದೇ ಆಗಿರುತ್ತದೆ. ‘आकाशात् पतितं तोयं यथा गच्छति सागरम्। सर्वदेव नमस्कारः केशवं प्रति गच्छति’।। ಎಂದರು ನಮ್ಮ ಹಿರಿಯರು. ಯಾವ ಪದ್ದತಿಯನ್ನು ಅನುಸರಿಸಿ, ಯಾವುದೇ ಹೆಸರಿನಿಂದ ನಮಸ್ಕರಿಸಿದರೂ, ಆಕಾಶದಿಂದ ಬಿದ್ದ ಮಳೆಯ ನೀರು ಹರಿಯುವಾಗ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಟ್ಟ ನದಿಗಳಾದರೂ ಸೇರುವುದು ಒಂದೇ ಕಡಲೆಂಬಂತೆ, ನಮ್ಮೆಲ್ಲ ಆಚರಣಾ ಮಾರ್ಗಗಳು ಬೇರೆಯಾದರೂ ಸಹ,ನಮ್ಮ ಭಕ್ತಿ ಸಲ್ಲೋದು ಮಾತ್ರ ಪರಾತ್ಪರ ವಸ್ತುವನ್ನೆ.ಅಲ್ಲಿ ಉಚ್ಛ ನೀಚವಿಲ್ಲ, ಭಿನ್ನತೆ ಇಲ್ಲ,ಅಲ್ಲಿ ನಾಮವಿಲ್ಲ,ಅಲ್ಲಿ ಸಾಕಾರ ನಿರಾಕಾರ ಭೇದವಿಲ್ಲ.ಯಾವುದೇ ವ್ಯತ್ಯಾಸವಿಲ್ಲ. ಹಾಗಾಗಿ ಆ ಪರತತ್ವವನ್ನು ಕುರಿತಾದ ನಮ್ಮ ಚಿಂತನೆಗೆ, ಜಗತ್ತಿನಲ್ಲಿರುವ ಸಾವಿರಾರು ಮಾರ್ಗಗಳಲ್ಲಿ ಯಾವುದಾದರೊಂದು ಮಾರ್ಗವನ್ನು ಹುಡುಕಿಕೊಂಡು, ಆ ಮಾರ್ಗವನ್ನು ದೃಢವಾಗಿ ನಂಬಿ ನಡೆದು ಗುರಿ ತಲುಪಬೇಕೇ ವಿನಃ ಅನ್ಯರ ಭಾವ ಅಭಿಪ್ರಾಯ ಅಥವಾ ಮತವನ್ನು ಕುಹಕವಾಡುವುದಾಗಲೀ, ಅಲ್ಲಗೆಳೆಯುವುದಾಗಲೀ, ಖಂಡಿಸುವುದಾಗಲೀ ಸಲ್ಲ.
ಸ್ವಧರ್ಮದಲಿ ನಿಷ್ಠೆ,ಪರಧರ್ಮ ಸಹಿಷ್ಣುತೆ ಇರಬೇಕು.ಆಗ ಬದುಕು ಸಾರ್ಥಕ.
ಹೀಗೆ ಒಂದು ಪ್ರಸಂಗ. ಒಂದು ಬಾರಿ ಶಿವಯೋಗ ಮಂದಿರದಲ್ಲಿ ಸಾಧಕರಾಗಿದ್ದ ನವಿಲುಗುಂದದ ಶ್ರೀ ಬಸವಲಿಂಗ ಸ್ವಾಮಿಗಳು ಒಮ್ಮೆ ಮಂದಿರಕ್ಕೆ ಬಂದ ಅಥಿತಿಗಳೊಂದಿಗೆ ಭಾಷಣ ಮಾಡುವಾಗ ಉತ್ಸಾಹದಿಂದ ” ನ ವೀರಶೈವ ಸಮಮ್ ಮತಮಸ್ತಿ ಭೂತಲೆ”,ಎನ್ನುವ ಆಗಮದ ಸಂಸ್ಕೃತೋಕ್ತಿಯನ್ನು ಉದ್ಧರಿಸಿ ಜಗತ್ತಿನ ಸರ್ವ ಶ್ರೇಷ್ಠ ಧರ್ಮ ನಮ್ಮ ವೀರಶೈವ ಧರ್ಮ ಎಂದು ತಮ್ಮ ಧರ್ಮವನ್ನು ಪ್ರತಿಪಾದಿಸಿದ್ದರು. ಈ ಸಭೆಯಲ್ಲಿ ಕುಮಾರ ಶ್ರೀಗಳು ಸಹ ಉಪಸ್ಥಿತರಿದ್ದರು.ಸಭೆ ಮುಗಿದ ಬಳಿಕ ಬಸವಲಿಂಗ ಶ್ರೀಗಳನ್ನು ಬರ ಹೇಳಿದರು.ಇದನ್ನು ತಿಳಿದ ಬಸವಲಿಂಗ ಸ್ವಾಮಿಗಳು “ನನ್ನ ಭಾಷಣವನ್ನ ಕೇಳಿ ಪ್ರಶಂಸಿಸಲು ಕರೆದಿದ್ದಾರೆ.” ಎಂದು ಖುಷಿಯಿಂದ ಹೊರಟರು.ಆದರೆ ಅಲ್ಲಿ ಕುಮಾರ ಶ್ರೀಗಳ ಗಾಂಭೀರ್ಯ ಮುಖವನ್ನು ನೋಡಿದಾಕ್ಷಣ ಇವರ ಮುಖದ ಸಂತೋಷ ಬಾಡಿ ಹೋಗಿತ್ತು. “ಯಾವ ಯಾವ ಧರ್ಮಗಳ ಬಗೆಗೆ ಓದಿಕೊಂಡಿರುವಿರಿ”? ಎಂದು ಗಾಂಭೀರ್ಯದಿಂದ ಕುಮಾರ ಶ್ರೀಗಳು ಪ್ರಶ್ನಿಸಿದಾಗ,ಬಸವಲಿಂಗ ಸ್ವಾಮಿಗಳ ಬಾಯಲ್ಲಿ ಮಾತೇ ಹೊರಡದೆ ಸುಮ್ಮನೆ ನಿಂತಿದ್ದರು. “ಯಾಕೆ ಸುಮ್ಮನಾದಿರಿ”? ಎಂದು ಗುರುಗಳು ಮತ್ತೆ ಪ್ರಶ್ನಿಸಿದಾಗ ಬಸವಲಿಂಗ ಶ್ರೀಗಳು ಇನ್ನೂ ಮೌನದಿಂದಿರುವುದರಲ್ಲಿ ಅರ್ಥವಿಲ್ಲ ಎಂದು ಅರಿತು ಭಯದಿಂದ ‘ ಇಲ್ಲ ಬುದ್ಧಿ,ನಾನು ವೀರಶೈವ ಧರ್ಮ ಬಿಟ್ಟು ಬೇರೆ ಧರ್ಮದ ಬಗೆಗೆ ಏನನ್ನು ತಿಳಕೊಂಡಿಲ್ಲ.’ ಎಂದು ಅಳುಕುತ್ತ ಉತ್ತರಿಸಿದಾಗ, ಗುರುಗಳು ಶಾಂತರಾಗಿ ” ನಿಮ್ಮ ಧರ್ಮದ ಬಗ್ಗೆ ಮಾತ್ರ ತಿಳಿದ ನೀವು ಜಗತ್ತಿನ ಉಳಿದ ಧರ್ಮಗಳಿಗಿಂತ ನಿಮ್ಮ ಧರ್ಮವೇ ಶ್ರೇಷ್ಠ ಎಂದು ಹೇಗೆ ಹೇಳಿದಿರಿ?ಅದಕ್ಕೇನು ಅಧಾರಗಳಿವೆಯೇ? ಎಲ್ಲರಿಗೂ ಅವರವರ ಧರ್ಮ ಶ್ರೇಷ್ಠ. ಇವತ್ತಿನ ನಿಮ್ಮ ಭಾಷಣ ಕೇಳಿ ಅತಿಥಿಗಳು ಏನು ಭಾವಿಸಿಕೊಂಡಿರಬಹುದು? ಶಿವಯೋಗ ಮಂದಿರದ ಬಗ್ಗೆ ತಪ್ಪು ಭಾವನೆ ಅವರಿಗೆ ಬಂದಂತೆ ಅಗಲಿಲ್ಲವೆ ನೀವಾಡಿದ ನುಡಿಗಳು?ನಿಮ್ಮ ನುಡಿ ಬೇರೆಯವರ ಮನಕ್ಕೆ ನೋವು ತರಬಾರದು.ನುಡಿ ಸತ್ಯವಿರಬೇಕು.ಎಲ್ಲ ಧರ್ಮವು ಶ್ರೇಷ್ಠವೇ.ನಿಮ್ಮ ಧರ್ಮದಲ್ಲಿ ನಿಮಗೆ ನಿಷ್ಠೆಯ ಪರಿಪಾಲನೆ ಇರಬೇಕು,ಹಾಗೆ ಪರ ಧರ್ಮಗಳಲ್ಲಿ ಸಹಿಷ್ಣುತೆ, ಗೌರವ ಇರಬೇಕು ಆಗಲೇ ನಿಮ್ಮ ಸಾಧನೆ ಪೂರ್ಣವಾಗುತ್ತದೆ ಮತ್ತು ಭಗವಂತನಿಗೆ ಮೆಚ್ಚ್ಚುಗೆ ಆಗುತ್ತದೆ.”ಎಂದು ಸಂಪೂರ್ಣ ಎಲ್ಲ ಧರ್ಮಗಳ ಬಗ್ಗೆ ಅರಿತ ಕುಮಾರ ಶ್ರೀಗಳು, ತಮ್ಮ ಧರ್ಮದಲ್ಲಿ ನಿಷ್ಠಾವಂತರಾಗಿ,ಪರ ಧರ್ಮಗಳಲ್ಲಿ ಗೌರವವನ್ನು ನೀಡುವ ದಿವ್ಯ ಬೋಧೆಯನ್ನೂ ಅವರ ಮೂಲಕ ಈ ಸಮಾಜಕ್ಕೆ ಸೂಕ್ಷ್ಮವಾಗಿ ತಿಳಿಸಿದ್ದರು.