2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೬

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 

ಅಣುಗ ಹಿಂದಣದಗ್ರ | ದಣುಚಕ್ರದೊಳು ಭಕ್ತಿ

ಮಣಿಹವಿಡಿದಿಪ್ಪ-ಅಣು ಮಹಾಲಿಂಗ ನೆಲೆ

ತೃಣು ಎಂದ ಗುರುವೆ ಕೃಪೆಯಾಗು   ||೧೪೮||

 

ನವಚಕ್ರಗಳನ್ನು ಮೀರಿನಿಂದುದು ದಶಮಚಕ್ರ. ಹತ್ತನೆಯ ಪದ್ಮವು ಬಹು ಸೂಕ್ಷ್ಮವಾಗಿರುವದರಿಂದಲೇ ಅದು ಅಣು ಚಕ್ರವೆನಿಸಿದೆ. ಇಂಥ ಅಣುಚಕ್ರವನ್ನು ಅರಿಯುವದು ಸಾಮಾನ್ಯಸಾಧಕನ ಶಕ್ತಿಯಲ್ಲ. ಅಂತೆಯೇ ಶಿಷ್ಯನಿಗೆ ಶ್ರೀಗುರು ಅಣುಗನೆಂದು ಸಂಬೋಧಿಸಿದ್ದು ಗಮನಾರ್ಹವಾಗಿದೆ.

 

ಶರೀರವಿಜ್ಞಾನಿಗಳು ತಲೆಬುರುಡೆಯಲ್ಲಿ ದೊಡ್ಡ ಮೆದುಳು ಸಣ್ಣ ಮೆದುಳು ಎಂದೆರಡುಭಾಗ ತೋರಿಸುವರು. ಆದರೆ ಅಧ್ಯಾತ್ಮಿಕ ವಿಜ್ಞಾನಿಗಳು ಬ್ರಹ್ಮರಂಧ್ರ, ಶಿಖಾಚಕ್ರ, ಪಶ್ಚಿಮಶಿಖಾಚಕ್ರ ಹಾಗೂ ಅಣುಚಕ್ರಗಳೆಂದು ನಾಲ್ಕು ಭಾಗ ಮಾಡಿರುವರು. ಈ ನಾಲ್ಕು ಜ್ಞಾನಗಮ್ಯವಾದವುಗಳೇ, ಪಶ್ಚಿಮ ಶಿಖಾಚಕ್ರದ ಕೆಳಭಾಗದಲ್ಲಿ ತೋರುವ ಈ ಮಹಾಲಿಂಗವು- ಅರ್ಣೋರಣೀಯಾನ್ ಮಹತೋ ಮಹೀಯಾನ್” ಎಂಬ ಶೃತಿಮಾತಿನಂತೆ ಅಣುವಿಗೆ ಅಣುವಾಗಿ ಮಹತ್ತಿಂಗೆ ಮಹತ್ತಾಗಿ ತೋರುವದು. ಇದು ಕೇವಲ ಭಕ್ತಿಯಿಂದ ಮಾತ್ರ ಲಭ್ಯವಾಗುವದು. ಭಕ್ತಿಪಥವೇ ಮುಖ್ಯಗುರಿಯಾಗಿ ನಡೆಯುವ ಮಹಾನುಭಾವಿಗಳು ಈ ಲಿಂಗದ ದರ್ಶನ ಪಡೆಯಬಲ್ಲರು ಎಂದು ಬೋಧಿಸಿದ ಗುರುವೆ ಕೃಪೆಯಾಗು. ನಿನ್ನ ಕೃಪೆಯಿದ್ದರೇನೆ ಈ ಅಣು ಮಹಾಲಿಂಗನ ದರ್ಶನ ಮಾಡಿಕೊಳ್ಳಬಹುದು.

 

ಇಂದಿನ ಯುಗದಲ್ಲಿ ಅಣು ವಿಜ್ಞಾನವನ್ನು ಕಂಡುಹಿಡಿದಿರುವರು. ಆದರೆ ಈ ವಿಜ್ಞಾನ ಕೇವಲ ಭೌತಿಕವಾಗಿದೆ. ಭೌತಿಕ ಪ್ರಗತಿ ಸೀಮಿತವಾದುದು. ಭೌತಿಕವಿಜ್ಞಾನವು ಮಾನವನನ್ನು ಆಲಸಿಯನ್ನಾಗಿಸಿದೆ. ಅಸಂತೃಪ್ತಿಯನ್ನೊಡ್ಡಿದೆ. ಜೀವನ ಸಮಸ್ಯೆಗಳು ಈ ವಿಜ್ಞಾನದಿಂದ ಪರಿಹಾರವಾಗುವದಿಲ್ಲ. ಆದರೆ ನಮ್ಮ ಪೂರ್ವಜರು ಮಹಾನುಭಾವಿಗಳಾಗಿ ಅಧ್ಯಾತ್ಮಶಕ್ತಿಯಿಂದ ಅಣುವಿಜ್ಞಾನವನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದರು. ತಮ್ಮ ಅತ್ಮೋದ್ಧಾರದ ಜೊತೆಗೆ ಜಗತ್ತಿನ ಕಲ್ಯಾಣಕ್ಕಾಗಿ ಬಳಸುತ್ತಿದ್ದರು. ರಾಮಾಯಣ ಮಹಾಕಾವ್ಯದಲ್ಲಿ ಹನುಮಂತನು ಅಣುವಾಗಿಯೂ, ಮಹತ್ತಾಗಿಯೂ ವರ್ತಿಸಿದ ಘಟನೆ ಸ್ಮರಣೀಯವಾಗಿದೆ. ಆತನು ಮಹಾ ಆತ್ಮಜ್ಞಾನಿಯಾಗಿದ್ದನು. ಅಂತೆಯೇ ತನ್ನ ಯೋಗಶಕ್ತಿಯಿಂದ ಸಮುದ್ರ ಲಂಘನ ಮಾಡಲು ಸಾಧ್ಯವಾಯಿತು.

 

ಅಧ್ಯಾತ್ಮವಿಜ್ಞಾನವನ್ನು ಸೂಕ್ಷ್ಮವಾಗಿ ತೋರಬಲ್ಲವರು ಇಂದು ಅತ್ಯಂತ ವಿರಳವೆಂದೇ ಹೇಳಬೇಕಾಗಿದೆ. ಮಹಾಜ್ಞಾನಿ ಚನ್ನಬಸವಣ್ಣನವರು ನಿರೂಪಿಸಿದ ಘಟ ಚಕ್ರ, ಕರಣಹಸಿಗೆ, ಮಂತ್ರಗೋಪ್ಯ ಮುಂತಾದ ಅನುಭಾವ ಸಾಹಿತ್ಯದಲ್ಲಿಯೂ ವ್ಯಕ್ತವಾಗದ ಶಿವಕವಿಯು ವ್ಯಕ್ತಗೊಳಿಸಿದ್ದು ಅಣುಚಕ್ರದ ವಿಷಯವನ್ನು    ಗಮನೀಯವಾಗಿದೆ. ಇದು ಅವರ ಪರಮಗುರು ಚನ್ನವೀರೇಶ್ವರರಲ್ಲಿದ್ದ ವ್ಯಕ್ತಿತ್ವದ ಪ್ರತೀಕವೆಂತಲೂ ಅವರ ಪ್ರತಿಭೆಯ ದ್ಯೋತಕವೆಂತಲೂ ಗ್ರಹಿಸಬಹುದು.

 

ಮತ್ತೆ ಮತ್ಕರದಿಷ್ಟ | ನಿತ್ಯ ನಿಜಲಿಂಗವನು

ಹತ್ತು ಚಕ್ರದೊಳು-ಗೊತ್ತು ತೋರಿಸಿಕೊಟ್ಟ

ಸತ್ಯ ಸದ್ಗುರುವೆ ಕೃಪೆಯಾಗು  ೧೪೯ ||

 

ಶಿವಕವಿಯು ಹತ್ತು ಚಕ್ರಗಳಲ್ಲಿ ಇಷ್ಟಲಿಂಗದ ವ್ಯಾಪ್ತಿಯನ್ನು ಪ್ರತಿಪಾದಿಸಿ ಇಲ್ಲಿ ಉಪಸಂಹಾರಗೊಳಿಸುತ್ತಾನೆ ಮತ್ತು ಗುರುಕೃಪೆಗೆ ಉಪಕೃತಿಯನ್ನು ಸೂಚಿಸುತ್ತಾನೆ. ಜಗತ್ತಿನಲ್ಲಿ ಮರೆಯದ ವಸ್ತು ಉಪಕಾರಸ್ಮರಣೆ ಉಪಕೃತಿಯನ್ನು ಮರೆಯುವವನು ಮಾನವನೇ ಆಗಲಾರನು. ಪಶು-ಪಕ್ಷಿಗಳಲ್ಲಿಯೂ ಸಹ ಉಪಕಾರಸ್ಮರಣೆ ವ್ಯಕ್ತವಾಗುತ್ತದೆ. ಆದರೆ ಮುಂದುವರೆದಿದ್ದೇವೆಂಬ ಇಂದಿನ ಮಾನವರಲ್ಲಿ ಉಪಕೃತಿ ಸ್ಮರಣೆ ಕಡಿಮೆಯಾಗಹತ್ತಿದೆ. ಕೃತಜ್ಞನಾಗುವ ಬದಲು ಕೃತಘ್ನನಾಗುವ ಭಾವ ಅವರಲ್ಲಿ ಬೆಳೆಯಹತ್ತಿದೆ. ಇಳೆ-ಬೆಳೆ-ಮಳೆಯನ್ನಿತ್ತ ಮಾನವ ಜನ್ಮವನ್ನಿತ, ಮಹಾದೇವನನ್ನು ಸ್ಮರಿಸಬೇಕು. ಇದು ಪ್ರತಿಯೊಬ್ಬನ ಕರ್ತವ್ಯವಾಗಿದೆ. ಕ್ರಿಶ್ಚಿಯನ್ನರಲ್ಲಿ ಈ ಬಗೆಯ ಉಪಕೃತಿ ಸ್ಮರಣೆಗೆ ಪ್ರಾಧಾನ್ಯತೆಯಿದೆ. ಅವರು ಪ್ರತಿನಿತ್ಯವೂ ತಾವುಣ್ಣುವಾಗ ಆ ಭಗವಂತನನ್ನು ಪ್ರಾರ್ಥಿಸಿಯೇ ತೀರುತ್ತಾರೆ. ಇದು ಒಳ್ಳೆಯ ಸಂಸ್ಕಾರವು. ಆದ್ದರಿಂದ ಇಂಥ ಉಪಕಾರ ಸ್ಮರಣೆಯು ಬೆಳೆದು ಬರಲೆಂದೇ ಮಕ್ಕಳಿಗೆ ಒಳ್ಳೆ ಸಂಸ್ಕೃತಿಯನ್ನು ಕಲಿಸಿಕೊಡಬೇಕು. ತನಗೆ ಏನಾದರೂ ಸಹಾಯಮಾಡಿದ ವ್ಯಕ್ತಿಗೆ ಧನ್ಯವಾದವನ್ನು ತೋರುವ ಸುಜ್ಞಾನವನ್ನು ಕರುಣಿಸಿದ ಗುರುವನ್ನು ಎಂದೂ ಮರೆಯಬಾರದು.

 

ಗುರುವೆ ! ನೀನು ನಿತ್ಯನೂ ಸತ್ಯನೂ ಆದ ಶಿವನಲ್ಲವೆ ! ಎನ್ನ ಮೇಲೆ ಕೃಪೆಮಾಡಿ ಸಂಸಾರ ಬಂಧನದಿಂದ ಮುಕ್ತನನ್ನಾಗಿಸಿದೆ. ಇಷ್ಟಲಿಂಗವನ್ನು ಕರುಣಿಸಿದೆ. ಲಿಂಗ ಸ್ವರೂಪವನ್ನೂ, ಮಹತ್ವವನ್ನು ತಿಳಿಸಿದೆ. ಲಿಂಗಧಾರಣೆಯ ಘನತೆಯನ್ನು ಬೀರಿದೆ. ಬಾಹ್ಯಧಾರಣೆಯಂತೆ ಆಂತರಿಕ ದಶಕಚಕ್ರಗಳಲ್ಲಿ ಲಿಂಗದ ಗೊತ್ತು ಗುರಿಯನ್ನು ತೋರಿಸಿಕೊಟ್ಟೆ. ಈ ಲಿಂಗವು ನಿತ್ಯವೂ ಸತ್ಯವೂ ಆದುದು. ಎನ್ನ ವಾಮಕರದಲ್ಲಿ ಕಾಣಿಸಿಕೊಂಡು ಎನ್ನ ಅಂಗಾಂಗಗಳೆಲ್ಲವನ್ನು ಲಿಂಗವನ್ನಾಗಿಸುವ ಮಹಾ  ಶಕ್ತಿಯುಳ್ಳುದು. ಇದೆಲ್ಲವೂ ನನಗೆ ಪ್ರಾಪ್ತವಾದುದು ನಿನ್ನ ಕೃಪೆಯಿಂದಲ್ಲದೆ ಬೇರೇನಿದೆ !

 

ಮಾತೃಋಣ, ಪಿತೃಋಣ, ಗುರುಋಣ ಈ ತ್ರಿವಿಧ ಋಣಗಳಲ್ಲಿ ಗುರು ಋಣವೇ ದೊಡ್ಡದು. ಗುರುಋಣವನ್ನು ತೀರಿಸಲು ಶಿಷ್ಯನು ಅತ್ಯಂತ ಪ್ರಯತ್ನ ಶೀಲನಾಗಬೇಕಾಗುವದು. ಗುರೂಪದೇಶವನ್ನು ಚೆನ್ನಾಗಿ ಅರಿತು ಆಚರಿಸಿ ಅನುಭವಿಯಾಗುವದರಿಂದಲೇ ಗುರುಋಣದಭಾರ ಕಡಿಮೆಯಾಗಬಲ್ಲುದು.

Related Posts