ಲೇಖಕರು :
ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ
ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.
ಮುಂಡರಗಿ
ಪರಮ ಕಟಯೊಳಗಿರ್ದ | ಗುರುಲಿಂಗದೊಳಗೆ ಮಾ-
ಕ್ಷರವೆ ಮೊದಲಾದವರ–ವರ ಷಡಕ್ಷರ ಮಂತ್ರ
ವೊರೆದ ಶ್ರೀಗುರುವೆ ಕೃಪೆಯಾಗು I ೧೨೧ |
ಲಿಂಗದ ಎರಡನೆಯ ಅವಯವ ಕಟಿ, ಇದು ಪರಮವೆನಿಸಿದೆ. ಅರ್ಥಾತ್ ಶ್ರೇಷ್ಠವೆನಿಸಿದೆ. ಕಟಿಭಾಗವು ಸಣ್ಣಾಗಿರುವದರಿಂದ ಅಂದವಾಗಿ ಕಾಣುವದು. ಮೃಗ ರಾಜವೆನಿಸಿದ ಸಿಂಹದ ನಡುವು ಸಾಮಾನ್ಯವಾಗಿ ಸಣ್ಣದಾಗಿರುತ್ತದೆ. ಕುಲವಧುವಿನ ಕಟಿಭಾಗವೂ ಸಣ್ಣದಾಗಿರುವದೆಂಬ ವರ್ಣನೆಯು ಕಾವ್ಯಗಳಲ್ಲಿ ಕಾಣ ಸಿಕ್ಕುವದು. ಶಕ್ತಿ ಸೂಚಕವಾದ ಲಿಂಗ ಪೀಠದ ಮಧ್ಯಭಾಗವೂ ಚಿಕ್ಕದಾಗಿರುವಲ್ಲಿ ವಿಶೇಷತೆಯಿದೆ. ಲೋಕ ವ್ಯವಹಾರಕ್ಕೆ ಯಥೋಚಿತವೆನಿಸಿದೆ.
ಕ್ರಿಯಾಲಿಂಗವೆನಿಸಿದ ಇಷ್ಟಲಿಂಗದ ಎರಡನೆಯ ಲಿಂಗವೇ ಗುರುಲಿಂಗವೆನಿಸಿದೆ. ಈ ಗುರುಲಿಂಗವು ಕಟಿಭಾಗದಲ್ಲಿದೆ. ಗುರುಲಿಂಗದಲ್ಲಿ ‘ಮಃ’ ಪ್ರಣವವಿದೆ. ಇಲ್ಲಿ ಮಾಕ್ಷರ (ಮಕಾರ) ವೆ ಮೊದಲಾಗಿ ಷಡಕ್ಷರ ಮಂತ್ರವು ಅಡಕವಾಗಿದೆ. ಅಂದರೆ ಈ ಗುರುಲಿಂಗ ಷಟ್‌ಸ್ಥಲದಲ್ಲಿ “ಮಃ” ಪ್ರಣವದ ಶ್ರೇಷ್ಠ ಷಡಕ್ಷರ ಮಂತ್ರದ ಇರುವು ಗುಪ್ತವಾಗಿರುತ್ತದೆಂದು ಗುರುವು ಪ್ರಿಯ ಶಿಷ್ಯನಿಗೆ ಲಿಂಗಸ್ಥಾನದಲ್ಲಿಯ ಮಂತ್ರರೂಪವನ್ನು ಬೋಧಿಸುತ್ತಾನೆ. ಮಕಾರ ಮಂತ್ರದ ಸ್ತೋತ್ರ ಕೆಳಗಿನಂತಿದೆ-
ಮಂದಾಕಿನಿ-ಸಲಿಲ-ಚಂದನ ಚರ್ಚಿತಾಯ
ನಂದೀಶ್ವರ ಪ್ರಮಥನಾಥ-ಮಹೇಶ್ವರಾಯ |
ಮಂದಾರಪುಷ್ಪ-ಬಹುಪುಷ್ಪ-ಸುಪೂಜಿತಾಯ
ತಸ್ಮೈ ಮಕಾರಾಯ ನಮಃ ಶಿವಾಯ (೨) (ಬ್ರಹತ್ ಸ್ತೋತ್ರ ರತ್ನಾಕರ)
ಶ್ರೀರುದ್ರಯಾಮಲ ತಂತ್ರದಲ್ಲಿ ‘ಮ’ಕಾರ ಮಂತ್ರದ ಮಹಿಮೆ
ಮಹಾದೇವಂ ಮಹಾತ್ಮಾನಂ
ಮಹಾಧ್ಯಾನಪರಾಯಣಮ್ |
ಮಹಾಪಾಪಹರಂ ದೇವಂ
ಮಕಾರಾಯ ನಮೋ ನಮಃ (೨)
ಎಂದಿದೆ. ಮಕಾರವು ಮಹಾಧ್ಯಾನ ಪರಾಯಣ ಮಹಾದೇವನ ಸ್ವರೂಪದ್ದಾಗಿದೆ. ಪಾಪನಾಶಕವಾದ ಮಂತ್ರದ ಸ್ತೋತ್ರವನ್ನು ಶಿವಪೂಜೆಯ ಕಾಲದಲ್ಲಿ ಅವಶ್ಯ ನುತಿಸಬಹುದು.
ಅವಿರಳದ ವರ್ತುಳದ | ಶಿವಲಿಂಗದೊಳು ಶಿಕಾ-
ರವೇ ಮೊದಲಾಗಿರ್ದ – ತವೆ ಷಣ್ಮಂತ್ರವ ತೋ-
ರ್ದವಿರಳ ಗುರುವೆ ಕೃಪೆಯಾಗು | ೧೨೨||
ಲಿಂಗ ಪೀಠದ ಮೇಲಿನ ಸುತ್ತಳತೆಯೇ ವರ್ತುಳವು. ಇದು ಅವಿರತವಾದುದು. ವಿರಾಮವಿಲ್ಲದೆ ದುಂಡಾದ ಪೂರ್ಣಗೊಂಡ ರೇಖೆಯೇ (ಪರಿಘವೆ) ವರ್ತುಳವು. ಇಲ್ಲಿ ಶಿವಲಿಂಗದ ವಾಸ. ಶಿವಲಿಂಗಕ್ಕೆ ‘ಶಿ’ ಕಾರ ಪ್ರಣವಾಕ್ಷರ ಸಂಬಂಧವಿರುವದು. ಹೀಗೆ ‘ಶಿ’ ಕಾರ ಷಣ್ಮಂತ್ರವನ್ನು ಜ್ಞಾನನಿಬಿಡವಾದ (ಅವಿರಳನೆನಿಸಿದ) ಗುರುನಾಥನು ತೋರಿಸಿ ರಕ್ಷಿಸುತ್ತಾನೆ. ಇದು ಸದ್ಗುರುವಿನ ಕರ್ತವ್ಯ.
‘ಶಿ’ ಕಾರದಲ್ಲಿಯ ‘ಇ’ಕಾರವೇ ಶಕ್ತಿಯು. ʼʼಇಕಾರಃ ಶಕ್ತಿರುಕ್ತಾʼ’ ಎಂದು ಶಾಸ್ತ್ರಕಾರರು ನಿರ್ವಚಿಸಿದ್ದಾರೆ. ವೃತ್ತ, ಕಟಿ, ವರ್ತುಳದಿಂದ ಕೂಡಿದ ಪೀಠವೇ ಲಿಂಗದ ಆಧಾರ ಸ್ಥಾನವಾಗಿದೆ. ಪೂರ್ಣತೆಯನ್ನು ಪಡೆದ ವಸ್ತುವಿನಲ್ಲಿ ಶಕ್ತಿಯ ಆವಿರ್ಭಾವವಾಗುವಂತೆ ಈ ವರ್ತುಳದಲ್ಲಿ ಶಿಕಾರ ಪ್ರಣವವು ಶಕ್ತಿಯ ವೈಶಿಷ್ಟ್ಯತೆ ಯನ್ನು ಸೂಚಿಸುತ್ತದೆ. ಇಂಥ ಶಿಕಾರ ಪ್ರಣವಕ್ಕೆ ಜಗದ್ಗುರು ಶಂಕರಾಚಾರ್ಯರು ವಂದಿಸಿದ್ದಾರೆ.
ಶಿವಾಯ ಗೌರೀವದನಾಬ್ಜ-ವೃಂದ-
ಸೂರ್ಯಾಯ ದಕ್ಷಾಧ್ವರ ನಾಶಕಾಯ |
ಶ್ರೀ ನೀಲಕಂಠಾಯ ವೃಷಭ ಧ್ವಜಾಯ
ತಸ್ಮೈ ಶಿಕಾರಾಯ ನಮಃ ಶಿವಾಯ
ಪಾರ್ವತಿಯ ಮುಖಕಮಲವನ್ನು ಅರಳಿಸುವಲ್ಲಿ ಸೂರ್ಯಸದೃಶನಾದ, ದಕ್ಷನ ಯಜ್ಞವನ್ನು ನಾಶಮಾಡಿದ, ವಿಷವನ್ನು ಧರಿಸಿ ನೀಲಕಂಠನೆನಿಸಿದ, ವೃಷಭ ವಾಹನನೆನಿಸಿದ ಶಿವನಿಗೆ ಹಾಗೂ ಶಿವನ ಸ್ವರೂಪವೆನಿಸಿದ ಶಿಕಾರ ಪ್ರಣವಕ್ಕೆ ನಮಸ್ಕಾರವು. ಇದರಂತೆ ಶಿವಷಡಕ್ಷರ ಸ್ತೋತ್ರದಲ್ಲಿ ‘ಶಿ’ ಕಾರ ಮಂತ್ರದ ವರ್ಣನೆ ಕೆಳಗಿನಂತಿದೆ.
“ಶಿವಂ ಶಾಂತಂ ಜಗನ್ನಾಥಂ ಲೋಕಾನುಗ್ರಹಕಾರಕಂ |
ಶಿವಮೇಕಪದಂ ನಿತ್ಯಂ ಶಿಕಾರಾಯ ನಮೋ ನಮಃ” ||
ಮಂಗಲಕರನೂ, ಶಾಂತನೂ, ಜಗದೊಡೆಯೆನಿಸಿ ಲೋಕಕ್ಕೆ ಅನುಗ್ರಹಿಸ ತಕ್ಕವನೂ, ನಿತ್ಯನೂ, ಆದ ಶಿವ ಪದದ ಏಕಾಕ್ಷರವೆನಿಸಿದ ‘ಶಿ’ ಕಾರ ಪ್ರಣವಕ್ಕೆ ಅನಂತ ವಂದನೆಗಳು.
*
ಇಂತು ಗೋಮುಖದೊಳಗಿ | ಪ್ಪಂಥ ಜಂಗಮ ಲಿಂಗ
ಮಂತ್ರ ವಾಕಾರ-ಮುಂತಾದ ಷಣ್ಮಂತ್ರ
ಮಂ ತೋರ್ದ ಗುರುವೆ ಕೃಪೆಯಾಗು || ೧೨೩ ||
ಇನ್ನು ಕ್ರಮಪ್ರಾಪ್ತವಾದ ಸ್ಥಾನ ಗೋಮುಖವು. ಎಲ್ಲ ಅವಯವಗಳಲ್ಲಿ ಮುಖ ಮುಖ್ಯವಾಗಿರುವಂತೆ ಲಿಂಗಕ್ಕೆ ಗೋಮುಖವು ಸುಂದರ ಅವಯವವಾಗಿದೆ. ಗೋಮುಖಕ್ಕೆ ಜಲಹರಿಯೆಂತಲೂ ಕರೆಯುತ್ತಾರೆ. ಸ್ಥಾವರಲಿಂಗದ ಮೇಲೆ ಅಭಿಷೇಕ ಮಾಡಿದ ಅಭಿಷೇಕವು ಜಲಹರಿಯ ಮುಖಾಂತರವೇ ಹರಿದು ಹೋಗುವದು. ಇಷ್ಟಲಿಂಗದ ಮೇಲೆ ಅಭಿಷೇಕ ಮಾಡಿದರೂ ಜಲಹರಿಯ ಭಾಗದ ಮೂಲಕವೇ ಹೋಗುವದು. ಶಿವನ ಎಡಭಾಗದಲ್ಲಿ ಶಕ್ತಿಯು ಇರುವಂತೆ ಈ ಗೋಮುಖವು ಲಿಂಗದ ಎಡಭಾಗದಲ್ಲಿ ಇರುವದು.
ಈ ಗೋಮುಖದಲ್ಲಿ ಜಂಗಮಲಿಂಗವಿರುತ್ತದೆ. ಅಂತೆಯೇ ಲಿಂಗಕ್ಕರ್ಪಿಸಿದ ಅಭಿಷೇಕಾದಿಗಳು ಗೋಮುಖದಲ್ಲಿ ಸಮರ್ಪಿತಗೊಳ್ಳುವವು. ಜಂಗಮಲಿಂಗಕ್ಕೆ ‘ವಾ’ ಕಾರ ಪ್ರಣವವು ಸಂಬಂಧಗೊಳ್ಳುವದು. ಈ ಜಂಗಮ ಲಿಂಗದಲ್ಲಿ ‘ವಾ’ ಕಾರ
ಮುಖ್ಯವಾದ ಷಣ್ಮಂತ್ರವು ನೆಲೆಗೊಂಡಿರುತ್ತದೆ. ಗುರುದೇವನು ಈ ಗೋಮುಖದಲ್ಲಿ ‘ವಾ’ ಕಾರ ಮಂತ್ರವನ್ನು ಸಂಬಂಧಗೊಳಿಸಿ ಲಿಂಗವನ್ನು ಶಕ್ತಿಯುಕ್ತವನ್ನಾಗಿ ಕರುಣಿಸುತ್ತಾನೆ. ಇಲ್ಲಿ ಲಿಂಗದ ಮುಖವೇ ಜಂಗಮವಾಗಿರುವ ಅನ್ಯೋನ್ಯ ಸಂಬಂಧವೂ
ವ್ಯಕ್ತವಾಗುವದು.
ವಶಿಷ್ಠ ಕಂಭೋದ್ಭವ ಗೌತಮಾರ್ಯ
ಮುನೀಂದ್ರ ದೇವಾರ್ಚಿತ ಶೇಖರಾಯ |
ಚಂದ್ರಾರ್ಕ ವೈಶ್ವಾನರ ಲೋಚನಾಯ
ತಸ್ಮೈ ವಕಾರಾಯ ನಮಃ ಶಿವಾಯ (೪) ||
ಎಂದು ಶಂಕರ ಭಗವತ್ಪಾದರು ‘ವಾ’ ಕಾರ ಪ್ರಣವವನ್ನು ನುತಿಸಿದರೆ ಶಿವಷಡಕ್ಷರ ಸ್ತೋತ್ರದಲ್ಲಿ
ವಾಹನಂ ಋಷಭೋ ಯಸ್ಯ
ವಾಸುಕಿಃ ಕಂಠಭೂಷಣಮ್ |
ವಾಮೇ ಶಕ್ತಿಧರಂ ದೇವಂ
ವ ಕಾರಾಯ ನಮೋ ನಮಃ ||
ಯಾವಾತನಿಗೆ ಋಷಭವು ವಾಹನವೋ, ಸರ್ಪವು ಕಂಠಾಭರಣವೋ, ವಾಮಭಾಗದಲ್ಲಿ ಶಕ್ತಿಸಮೇತನೋ ಅಂಥ ವಾಕಾರ ಮಂತ್ರ ಮೂರ್ತಿಗೆ ನಮಸ್ಕಾರವು.
ನಾದನಾಳದ ಸುಪ್ರ | ಸಾದ ಲಿಂಗದೊಳು ನಿ
ರ್ಭೇದವಹ ಯಕಾ ರಾದಿ ಷಣ್ಮಂತ್ರಗಳ
ಬೋಧಿಸಿದ ಗುರುವೆ ಕೃಪೆಯಾಗು || ೧೨೪ ||
ಲಿಂಗದ ಐದನೆಯ ಅವಯವ ನಾಳ, ಇದು ನಾದ ರೂಪಾಗಿದೆ. ನಾದವು ಕಳಾಲಿಂಗ ಸ್ವರೂಪವು. ಲಿಂಗಪೀಠದ ಮಧ್ಯ ತಗ್ಗು ಪ್ರದೇಶವೇ ನಾಳವು; ಅಥವಾ ರಂಧ್ರವು. ಪೀಠರಂಧ್ರದ ಸ್ಥಾನವೇ ಲಿಂಗಕ್ಕೆ ಆಶ್ರಯಸ್ಥಾನ. ಈ ನಾದಮಯ (ಕಳಾಮಯ) ನಾಳದಲ್ಲಿರುವದು ಪ್ರಸಾದಲಿಂಗವು. ಅದರೊಳು ಭೇದವಳಿದ ‘ಯ’ ಕಾರ ಪ್ರಣವಾಕ್ಷರವುಂಟು. ಇಲ್ಲಿ ನಾಳಕ್ಕೂ ಮತ್ತು ಅದರೊಳಡಗಿದ ಚಿತ್ಪೀಠವಾದ ಲಿಂಗಕ್ಕೂ ಅಭೇದವಿರುತ್ತದೆ. ಪೀಠ ಹಾಗೂ ಚಿತ್ಪೀಠಗಳೆರಡೂ ಭಿನ್ನವಾಗಿ ಕಂಡರೂ ಶಕ್ತಿವಿಶಿಷ್ಟಾದ್ವೈತ ತತ್ತ್ವವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತವೆ.
ಪ್ರಸಾದ ಲಿಂಗಕ್ಕೆ ಮುಖ್ಯವಾದ ‘ಯ’ ಕಾರಾದಿ ಬೀಜಾಕ್ಷರವುಳ್ಳ ಷಣ್ಮಂತ್ರವು ಅಲ್ಲಿ ಸಂಬಂಧವಾಗುತ್ತದೆ. ಎಂದು ಮುಂತಾಗಿ ಬೋಧಿಸುವನು ಗುರುದೇವನು. ಪಂಚಾಕ್ಷರಿಯ ಅಂತಿಮ ಪ್ರಣವದ ವರ್ಣನೆಯನ್ನು ಶಂಕರಾಚಾರ್ಯರು ಹೀಗೆ ನುತಿಸಿದ್ದಾರೆ.
ಯಕ್ಷಸ್ವರೂಪಾಯ ಜಟಾಧರಾಯ
ಪಿನಾಕ ಹಸ್ತಾಯ ಸನಾತನಾಯ |
ದಿವ್ಯಾಯ ದೇವಾಯ ದಿಗಂಬರಾಯ
ತಸ್ಮೈ ‘ಯ’ ಕಾರಾಯ ನಮಃ ಶಿವಾಯ (೫)
ಪಂಚಾಕ್ಷರಮಿದಂ ಪುಣ್ಯಂ ಯಃ ಪಠೇಚ್ಛಿವಸನ್ನಿದೌ
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ (೬)
ಪುಣ್ಯಪ್ರದವಾದ ಪಂಚಾಕ್ಷರ ಮಹಾಮಂತ್ರದ ಸ್ತೋತ್ರವನ್ನು ಶಿವಪೂಜೆಯ ಕಾಲಕ್ಕೆ ಪಠಿಸುವವನು ಶಿವಲೋಕವನ್ನು ಹೊಂದಿ ಶಿವನೊಡನೆ ಆನಂದದಿಂದಿರುವ ಸೌಭಾಗ್ಯವನ್ನು ಪಡೆಯುವನು. ಶಿವಷಡಕ್ಷರ ಸ್ತೋತ್ರದಲ್ಲಿ ಯಕಾರ ಪ್ರಣವದ ಸ್ತುತಿ ಕೆಳಗಿನಂತಿದೆ.
ಯತ್ರ ಯತ್ರ ಸ್ಥಿತೋ ದೇವಃ ಸರ್ವವ್ಯಾಪೀ ಮಹೇಶ್ವರಃ
ಯೋ ಗುರುಃ ಸರ್ವ ದೇವಾನಾಂ ಯಕಾರಾಯ ನಮೋ ನಮಃ
ಬಹು ಮೇಲು ಪೀಠದಾ | ಮಹಲಿಂಗದೊಳಗೆ ತಾ
ನಿಹ ಓಂಕಾರಾದಿ ಸಹಜ ಷಣ್ಮಂತ್ರವನ-
ರುಹಿದೆಯೈ ಗುರುವೆ ಕೃಪೆಯಾಗು | ೧೨೫ |
ಲಿಂಗಷಟ್‌ಸ್ಥಲದಲ್ಲಿ ಬಹು ಮೇಲಾದುದು ಚಿತ್ಪೀಠವು . ಚಿಚ್ಛಕ್ತಿಮಯ ವಾದುದೇ ಚಿತ್ಪೀಠವೆನಿಸುವದು. ಚಿಚ್ಛಕ್ತಿಭರಿತನಾದ ಐಕ್ಯನು ಮಹಾಲಿಂಗದಲ್ಲಿ ಸಮರಸನಾಗಿರುವಂತೆ, ಚಿತ್ಪೀಠದಲ್ಲಿರುವುದು ಮಹಾಲಿಂಗವು. ಈ ಮಹಾಲಿಂಗದಲ್ಲಿ ಮಹವಾದುದು (ಶ್ರೇಷ್ಠವಾದುದು) ಓಂಕಾರ ಪ್ರಣವವು. ಇದು ಸಹಜವೆನಿಸಿದೆ. ಯಾಕಂದರೆ ಓಂಕಾರವು ಷಣ್ಮಂತ್ರವನ್ನು ಸಂಪೂರ್ಣವಾಗಿ ಹುದುಗಿಸಿಕೊಂಡಿದೆ. ಓಂಕಾರದಿಂದಲೇ ಪಂಚ ಪ್ರಾಣಗಳು ಪ್ರಕಟಗೊಳ್ಳುವದರಿಂದ ಸಹಜ ಷಣ್ಮಂತ್ರವೆನಿಸುವದು. ಇಂಥ ಓಂಕಾರದ ಚಿಂತನ ಸಮರಸವಾದ ಚೇತನವಾಗಿದೆ. ಷಡಕ್ಷರ ಸ್ತೋತ್ರದಲ್ಲಿ-
ಓಂಕಾರಂ ಬಿಂದು ಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿನಃ |
ಕಾಮದಂ ಮೋಕ್ಷದಂ ಚೈವ ಓಂಕಾರಾಯ ನಮೋ ನಮಃ ||
ಬಿಂದು ಸಹಿತವಾದ ಓಂಕಾರವನ್ನು ಯೋಗಿಗಳು ಹೃದಯದಲ್ಲಿ ಸದಾಕಾಲವೂ ಧ್ಯಾನಿಸುತ್ತಾರೆ. ಈ ಓಂಕಾರವು ಕಾಮ (ಬಯಸಿದ್ದ)ವನ್ನು ಮೋಕ್ಷವನ್ನುಕೊಡುವಂಥಹ ದಾಗಿದೆ. ʼʼಶಿವತತ್ತ್ವ ರತ್ನಾಕರ’ದ ಪ್ರಥಮ ಕಲ್ಲೋಲದ ಐದನೆಯ ತರಂಗದಲ್ಲಿ
ಓಂಕಾರಪ್ರಭವಾ ವೇದಾ ಓಂಕಾರಪ್ರಭವಾಃ ಸ್ವರಾಃ |
ಓಂಕಾರಪ್ರಭವಂ ಸರ್ವಂ ತ್ರೈಲೋಕ್ಯಂ ಸಚರಾಚರಮ್ ||
ಪ್ರಣವೋ ಹಿ ಪರಂ ಬ್ರಹ್ಮ ಪ್ರಣವಃ ಪರಮಂ ಪದಮ್ |
ತಸ್ಮಾದುಚ್ಚಾರಣಾತ್ ಸಮ್ಯಕ್ ಪ್ರಣವಸ್ಯ ಶಿವಾತ್ಮನಃ |
ಪಾತಕಾನಿ ವಿನಶ್ಯಂತಿ ಹೃದಿಧ್ಯಾತೇ ಪರೇ ಶಿವೇ |
ವೇದಗಳು, ಸ್ವರಗಳು ಓಂಕಾರದಿಂದ ಪ್ರಾದುರ್ಭವಿಸಿವೆ. ತ್ರೈಲೋಕದ ಸಕಲ ಸಚರಾಚರ ಪ್ರಾಣಿಗಳಿಗೂ ಓಂಕಾರವೇ ಆಶ್ರಯವಾಗಿದೆ. ಇಂಥ ಓಂಕಾರ ಪ್ರಣವವು ಪರಬ್ರಹ್ಮವೂ, ಪರಮಪದವೂ ಆಗಿದೆ. ಆದ್ದರಿಂದ ಶಿವನ ಆತ್ಮವೇ ಓಂಕಾರ ಪ್ರಣವವು. ಇದನ್ನು ಧ್ಯಾನಪೂರ್ವಕ ಜಪಿಸುವದರಿಂದ ಸಕಲ ಪಾತಕಗಳು ನಾಶವಾಗುತ್ತವೆ. ಎಂದು ಓಂಕಾರದ ಅಪಾರ ಮಹಿಮೆಯನ್ನು ಬಣ್ಣಿಸಿದ್ದಾರೆ. ಇಂಥ ಓಂಕಾರದ ಉಪದೇಶವನ್ನು ಕರುಣಿಸುವ ಗುರುನಾಥನು ಕೃತಕೃತ್ಯನು. ಉಪದೇಶ ಪಡೆಯುವ ಶಿಷ್ಯನೂ ಧನ್ಯನು.
ಚಿತ್ಪೀಠದ ಮಹಾಲಿಂಗ ಮತ್ತು ಓಂಕಾರ ಪ್ರಣವವು ಒಂದಾಗಿದೆ. ಅಂತೆಯೇ ಓಂಕಾರದಲ್ಲಿ ಪಂಚಪ್ರಣವಗಳು ಕೂಡಿಕೊಂಡಿವೆ. ಮತ್ತು ಮಹಾಲಿಂಗದ ಸುನಾಮವೇ ಷಣ್ಮಂತ್ರವು. ಆದ್ದರಿಂದ ಅದು ಸಾರ್ಥಕವಾಗಿದೆ.