ಕಾರುಣಿಕ ಯುಗಪುರುಷ ಧಾರವಾಹಿ : ಭಾಗ 5
ಜ.ಚ.ನಿ
ಊಟ ಮಾಡಿಕೊಂಡು ಸುಮ್ಮನೆ ಕುಳಿತುಕೊಳ್ಳುವ ಪ್ರವೃತ್ತಿ ಅವರದಾಗಿರಲಿಲ್ಲ, ಅವರ ಅಜ್ಜಂದಿರವರ ಕಾಯಕಕ್ಕೆ ಕೈ ಹಾಕಿದರು. ಅದೇ ಲಿಂಗದಹಳ್ಳಿಯಲ್ಲಿಯೇ ಒಂದು ಸ್ವತಂತ್ರ ಪ್ರಾಥಮಿಕ ಶಾಲೆಯನ್ನು ಪ್ರಾರಂಭ ಮಾಡಿದರು. ಅನೇಕ ಬಾಲಕರು
ಕೂಡಿದರು. ವಿದ್ಯಾಶಿಕ್ಷಣವು ಆರಂಭವಾಯಿತು.
ಇಷ್ಟರಿಂದಲೆ ಅವರ ಮನಸ್ಸು ತೃಪ್ತಿಯಾಗಲಿಲ್ಲ. ತಮ್ಮ ಆತ್ಮಶಿಕ್ಷಣವೂ ಆಗಬೇಕೆಂದು ಆಲೋಚಿಸಿದರು. ಅದಕ್ಕೆ ತಕ್ಕಂತೆ ಅದೇ ಊರಿನಲ್ಲಿ ವೇದಾಂತವಿದ್ಯೆಯಲ್ಲಿ ಬಲ್ಲಿದರಾದ ಸಮಾಳದ ಬಸವಪ್ಪಯ್ಯನವರೆಂಬುವರಿದ್ದರು. ಅವರಲ್ಲಿಗೆ ಹೋಗಿ ತಮ್ಮ ಕೋರಿಕೆಯನ್ನು ಅರಿಕೆ ಮಾಡಿದರು. ಅವರು ಸಂತೋಷದಿಂದ ಒಪ್ಪಿದರು. ಅದರಿಂದಾಗಿ ಅವರಲ್ಲಿ ಕನ್ನಡ ಕಾವ್ಯಗಳನ್ನು, ನಿಜಗುಣರ ಕನ್ನಡ ಷಟ್‌ಶಾಸ್ತ್ರಗಳನ್ನು ನೋಡಲಾರಂಭಿಸಿದರು.
ವೇದಾಂತದ ರುಚಿ ಅವರ ಮನಸ್ಸಿಗೆ ಹಿಡಿಯಿತು. ಸಿದ್ಧಾಂತದ ಅರಿವು ಅವರ ಕಣ್ಣನ್ನು ತೆರೆಯಿಸಿತು. ಇಷ್ಟ-ಪ್ರಾಣ-ಭಾವಲಿಂಗಗಳ ಬಣ್ಣನೆಯ ‘ಕೈವಲ್ಯ ಪದ್ಧತಿಯ ಪದ್ಯಗಳು ಅವರ ಬಾಳನ್ನು ಭಾವರಾಜ್ಯಕ್ಕೇರಿಸಿದವು. ಭಕ್ತಿಪಂಥಕ್ಕೆ ಹಚ್ಚಿತು. ಲಿಂಗಪೂಜೆಯಲ್ಲಿ ಅವರಿಗೆ ಅಮಿತವಾದ ಪ್ರೇಮ ಹುಟ್ಟಿತು. ಒಮ್ಮೊಮ್ಮೆ ಆ ಪೂಜಾ ವೈಭವದಲ್ಲಿ ಆನಂದಪರವಶತೆಯಲ್ಲಿ ಬೆರೆದು ಬಾಹ್ಯವ ಮರೆದು ಶಾಲೆಗೆ ಹೋಗುವುದನ್ನೇ ಮರೆಯುತ್ತಿದ್ದರು, ವೇಳೆಯನ್ನೇ ಮೀರುತ್ತಿದ್ದರು. ನಿಜಗುಣರ ಗ್ರಂಥಗಳ ಅಭ್ಯಾಸದಲ್ಲಿ ಅವರಿಗೆ ದಿನೇ ದಿನೇ ಅಭಿರುಚಿ ಹೆಚ್ಚಿತು. ಆ ಓದಿನ ಮುಂದೆ ಅವರಿಗೆ ಮತ್ತೊಂದು ಬೇಕಾಗದಾಯಿತು. ಇದರಿಂದಾಗಿ ಮೆಲ್ಲಮೆಲ್ಲನೆ ಅವರ ಮನಸ್ಸು ವೈರಾಗ್ಯದ ಒಂದೊಂದೆ ಹಂತಗಳನ್ನು ಏರಹತ್ತಿತು. ಬರಬರುತ್ತ ಸಂಸಾರದ ಕಹಿರಸವು ಅವರ ಅನುಭವಕ್ಕೆ ಬರಹತ್ತಿತು. ದಿನೇ ದಿನೇ ಶರೀರದ ಅಸಾರತೆ ಅಶಾಶ್ವತತೆ ಅವರಿಗೆ ವೇದ್ಯವಾಗತೊಡಗಿತು.