ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ
ನಯ-ವಿನಯ ಸಂಪನ್ನನಾದ ವ್ಯಕ್ತಿ ಸಹಜವಾಗಿ ಎಲ್ಲರ ಗಮನ ಸೆಳೆಯುತ್ತಾನೆ. ಜನರ ಪ್ರೀತಿ-ವಿಶ್ವಾಸಗಳಿಗೂ ಪಾತ್ರನಾಗುತ್ತಾನೆ. ಸಮಾಜದಲ್ಲಿ ಸದ್ಗುಣಶೀಲನೆನಿಸಿ ಬಾಳುತ್ತಾನೆ. ಬಾಳು ಬೆಳಗುತ್ತಾನೆ. ವ್ಯಕ್ತಿಯಲ್ಲಿರುವ ಧನ, ಯೌವ್ವನ, ಅಧಿಕಾರ, ವಿದ್ಯೆ ಮೊದಲಾದವುಗಳಿಗೆ ಬೆಲೆ ಬರುವುದು ಆ ವ್ಯಕ್ತಿಯ ನಯ-ವಿನಯ ಹಾಗು ಸರಸ ಸಜ್ಜನಿಕೆಗಳಿಂದ. ಈ ಕಾರಣಕ್ಕಾಗಿಯೇ ‘ವಿದ್ಯಾ ವಿನಯೇನ ಶೋಭತೆ” ಎಂದು ಹೇಳಿರುವುದು.
ದ್ವೇಷಾಸೂಯೆಗಳಿಲ್ಲದ, ಮೋಸ ವಂಚನೆಗಳಿಲ್ಲದ, ಪರಿಶುದ್ಧ ಹೃದಯದ ಸಂಯಮಶೀಲ ವ್ಯಕ್ತಿಗಳಲ್ಲಿ ನಯ-ವಿನಯಗಳು ಮನೆ ಮಾಡಿಕೊಂಡಿರುತ್ತವೆ. ನಯವಿನಯದಿಂದ ಸಜ್ಜನಿಕೆ, ಸಜ್ಜನಿಕೆಯಿಂದ ಮೃದು ವಚನಗಳು ಲಭ್ಯವಾಗುತ್ತವೆ. ಈ ಮೃದು ವಚನಗಳ ಸಕಲ ಜಪತಪಂಗಳು. ಸರ್ವಾರ್ಪಣ ಮನೋಭಾವದಿಂದ ಜನಸೇವೆ ಮಾಡುವ ಮೃದು ವಚನದ ಸದ್ಗುಣಶೀಲರಲ್ಲಿ ವಿನಯಗುಣ ಭಗವಂತನ ಒಲವನ್ನು ಗಳಿಸುವ ಸಾಧನವಾಗಿರುತ್ತದೆ. ಸದುವಿನಯವೇ ಸದಾಶಿವನ ಒಲುಮೆಯಯ್ಯ ಎಂಬ ಬಸವವಾಣಿ ಈ ಮಾತಿಗೊಂದು ನಿದರ್ಶನ.
ವಿದ್ಯಾರ್ಜನೆಯ ಸಂದರ್ಭದಲ್ಲಿ ಸದ್ವಿನಯ ಸದಾಚಾರಗಳು ಅತ್ಯವಶ್ಯವಾಗಿದ್ದರೂ ಆ ವಿದ್ಯೆಯೇ ವ್ಯಕ್ತಿಯನ್ನು ನಯವಿನಯ ಸಂಪನ್ನನಾಗಿಸುತ್ತದೆ.
ವಿದ್ಯಾದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಮ್
ಪಾತ್ರತ್ವಾತ್ ಧನಮಾಮ್ನೋತಿ ಧನಾದ್ಧರ್ಮಃ ತತಃ ಸುಖಮ್
ಅಂದರೆ ವಿದ್ಯೆಯಿಂದ ವಿನಯ, ವಿನಯದಿಂದ ಗೌರವಾದರಗಳನ್ನು ಪಡೆದ ವ್ಯಕ್ತಿ ಶ್ರೀಮಂತನಾಗುತ್ತಾನೆ. ತನ್ನಲ್ಲಿರುವ ಧನದಿಂದ ಧರ್ಮಕಾರ್ಯಗಳನ್ನು ನೆರವೇರಿಸುತ್ತ ಸುದೀರ್ಘ ಕಾಲ ಸುಖಿಯಾಗಿ ಬಾಳುತ್ತಾನೆ ಎಂದು ಸುಭಾಷಿತವೊಂದು ಹೇಳುತ್ತದೆ. ಕಾರಣ ಸದಾ ಗರ್ವದಿಂದ ಬೀಗದೆ ನಮ್ರರಾಗಿ ಬಾಗುವುದೇ ವಿಹಿತ.
ಚೀನ ದೇಶದ ಅತ್ಯಂತ ವೃದ್ಧನಾದ ಸಂತನೊಬ್ಬ ತನ್ನೆಲ್ಲ ಭಕ್ತರನ್ನು ಶಿಷ್ಯರನ್ನು ಕರೆದು ‘ನನ್ನ ಬಾಯಿಯಲ್ಲಿ ಏನಿದೆ? ಎಷ್ಟು ಹಲ್ಲುಗಳಿವೆ? ಹೇಳಿರಿ’ ಎಂದು ಬಾಯಿತೆರೆದು ತೋರಿಸಿದ. ಬಾಯಿಯಲ್ಲಿ ಇಣುಕಿ ನೋಡಿದ ಎಲ್ಲರೂ ‘ಹಲ್ಲುಗಳೆಲ್ಲ ಬಿದ್ದುಹೋಗಿವೆ ಒಂದೂ ಉಳಿದಿಲ್ಲ’ ಎನ್ನುತ್ತಾರೆ. ನಾಲಿಗೆಯಾದರೂ ಇದೆಯಲ್ಲವೇ? ಎಂದು ಸಂತನು ಮರುಪ್ರಶ್ನಿಸುತ್ತಾನೆ. ಎಲ್ಲರೂ ‘ಇದೆ’ ಎನ್ನುತ್ತಾರೆ. ಆಗ ಸಂತನು ‘ನೋಡಿ! ನಾಲಿಗೆಯಾದರೂ ಜನ್ಮದಾರಬ್ದದಿಂದಲೇ ಇದೆ. ಹಲ್ಲುಗಳು ನಂತರ ಬಂದವುಗಳು, ನಂತರ ಹೋಗಬೇಕಾಗಿತ್ತು. ಹಲ್ಲುಗಳೇ ಮೊದಲು ಹೋಗಲು ಕಾರಣವೇನು?’ ಶಿಷ್ಯರೆಲ್ಲರೂ ಕಾರಣವೇನೆಂದು ತಿಳಿಯದೆ ‘ಗೊತ್ತಿಲ್ಲ’ ಎಂದು ಹೇಳಿದರು. ಆಗ ಸಂತನು ನಿಧಾನವಾಗಿ ಇದನ್ನೇ ಹೇಳಲು ನಿಮ್ಮನ್ನೆಲ್ಲ ಕರೆದಿರುವೆ. ನೋಡಿ! ನಾಲಿಗೆ ಈವರೆಗೂ ಇರಲು ಕಾರಣವೆಂದರೆ ಅದರ ಮೃದುತ್ವ ಹಲ್ಲುಗಳು ನಂತರ ಬಂದು ಮೊದಲು ಹೋಗಲು ಕಾರಣ ಅದರ ಕಠಿಣತೆ(ಬಿರುಸುತನ) ಹಾಗು ಕಠಿಣತೆಯ ಬಗ್ಗೆ ಅವುಗಳಿಗಿರುವ ಅಭಿಮಾನವೇ ಕಾರಣ. ಆದ್ದರಿಂದ ನನ್ನ ಪ್ರೀತಿಯ ಶಿಷ್ಯರೇ! ಸುದೀರ್ಘ ಕಾಲ ಬದುಕುವುದಾದರೆ ನಮ್ರರಾಗಿರಿ, ವಿನಯಶಾಲಿಗಳಾಗಿರಿ, ಅಹಂಕಾರ, ಅಭಿಮಾನದಿಂದ ಮುಕ್ತರಾಗಿರಿ ಎಂದು ಉಪದೇಶಿಸುತ್ತಾನೆ.
ನಯ-ವಿನಯ ನಮ್ಮ ಹೃದಯ ಶ್ರೀಮಂತಿಕೆಯ ಪ್ರತೀಕ. ಅದು ಏತ ತಲೆ ಬಾಗಿದಂತೆ. ಇಕ್ಕುಳ ಕೈ ಮುಗಿದಂತೆ, ಕೃತ್ರಿಮವಾಗಿರದೆ ಗೊನೆಬಿಟ್ಟ ಬಾಳೆಯಂತೆ ನೈಜವಾಗಿರಬೇಕು. ಆಗ ಬದುಕು ಸುಂದರವಾಗುತ್ತದೆ; ಬಂಧುರವಾಗುತ್ತದೆ.