ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೯ :

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

  

 ಜಡಸಂಸಾರದ ತೆಕ್ಕೆ| ಸಡಲಿ ಲಿಂಗವ ದೃಢದಿ

ಪಿಡಿವ ಪಾಣಿಯು ತಾ ಒಡೆಯ ಜಂಗಮಲಿಂಗ

ದೊಡಲೆಂದ ಗುರುವೆ ಕೃಪೆಯಾಗು   ||೧೫೪||

 ನಾಲ್ಕನೆಯ ಕರ್ಮೇಂದ್ರಿಯ ಪಾಣಿ, ಪಾಣಿಗೆ ಕರ, ಕೈ, ಹಸ್ತಗಳೆಂದು ಪರ್ಯಾಯಪದಗಳು.  ವಸ್ತುಗಳ ಆದಾನ ಪ್ರದಾನ ಕಾರ್ಯಗಳನ್ನು ಮಾಡುವದು ಕೈಯ ಕೆಲಸ. ಅರ್ಥಾತ್  ತಕ್ಕೊಳ್ಳುವದು (ಗೃಹಿಸುವದು) ಮತ್ತು ಕೊಡುವದನ್ನು ಕರದಿಂದಲೇ ಮಾಡುತ್ತೇವೆ. ಕಾಯಕಕ್ಕೆ ಕರವೇ ಮೂಲವಾಗಿದೆ. ದುಡಿದ ಕೈಗಳಿಂದ ಫಲವನ್ನು ಗ್ರಹಿಸುತ್ತೇವೆ. ಇನ್ನಿತರರಿಗೆ ದಾನವನ್ನು ಕೊಡುತ್ತೇವೆ. ಆದರೆ ಕೊಡುವ ಕೈಗಳಿಂದ ಭಿಕ್ಷೆ ಬೇಡಬಾರದು.

ಶಿವನು ಅನಂತ ಕರಗಳಿಂದ ಕೊಟ್ಟ ಇಳೆ-ಮಳೆ ಬೆಳೆಗಳನ್ನು ಅನುಭವಿಸುವ ಮಾನವನು ಅಹಂಕಾರಿಯಾಗಿ ನಾನು ಮಾಡುತ್ತೇನೆ. ನಾನು ನೀಡುತ್ತೇನೆ. ನಾನೇ ಕೊಡುತ್ತೇನೆಂದು ಅಭಿಮಾನ ಪಡುತ್ತಾನೆ. ನಾನೆಂಬ ಗರ್ವದಿಂದ ಜಡವಾದ ಸಂಸಾರ ಬಂಧನದಲ್ಲಿ ಸಿಲುಕುತ್ತಾನೆ. ಅಜ್ಞಾನದಿಂದ ಸಂಸಾರವು ಜಡವಾಗುವದು. ಈ ಅಜ್ಞಾನದಿಂದಲೇ ಮಹಾದಾನಿ ಮಹದೇವನನ್ನು ಮರೆತು ಅಭಿಮಾನಿಸಿ ಅಹಂಕಾರಪಡುತ್ತಾನೆ.

ಶರಣನಾದವನು ಅಹಂಕರ್ತೃತ್ವವನ್ನು ಸಂಪೂರ್ಣವಾಗಿ ಮರೆತು ಶಿವಕರ್ತೃತ್ವವನ್ನು ನೆನೆಯುತ್ತಾನೆ. ಎಲ್ಲವೂ ಶಿವ (ಲಿಂಗದೇವ) ನ ಪ್ರೇರಣೆಯಿಂದಲೇ ಘಟಿಸುತ್ತದೆಂದು ಭಾವಿಸುತ್ತಾನೆ. ಅದರಂತೆ ಆಚರಿಸುತ್ತಾನೆ. ಸದ್ಗುರೂಪದೇಶದಿಂದ ಜಡಸಂಸಾರದ ತೆಕ್ಕೆಯನ್ನು ಸಡಲಿಸಿ ಬಿಟ್ಟುಬಿಡುತ್ತಾನೆ. ಅರ್ಥಾತ್ ಸಂಸಾರದಲ್ಲಿ ಇದ್ದೂ ಇಲ್ಲದಂತೆ ಶಿವ ಸಂಸಾರದಲ್ಲಿ ಬಾಳುತ್ತಾನೆ. ಗುರುವಿತ್ತ ಇಷ್ಟಲಿಂಗವನ್ನು ಘಟ್ಟಿಯಾಗಿ ಹಿಡಿದುಕೊಳ್ಳುವನು. ಅಂದರೆ ದೃಢಮನಸ್ಸಿನಿಂದ ಲಿಂಗದೇವನನ್ನು ನೆನೆಯಬೇಕು. ನೆರೆನಂಬಬೇಕು. ದೃಢನಂಬಿಗೆಯಿಂದ ಲಿಂಗವನ್ನು ಆರಾಧಿಸುವ

ಮತ್ತು ಗುರು-ಲಿಂಗ-ಜಂಗಮಕ್ಕಾಗಿ ಕಾಯಕ ಮಾಡುವ ಕೈಗಳೇ ”ಗುರುವಿನ ಗುರು ಜಂಗಮವಿಂತೆಂಬುದು ಕೂಡಲ ಸಂಗಯ್ಯನ ವಚನ”ವೆಂದ ಅಣ್ಣನ ವಾಣಿಯಂತೆ ಮೃಡ ಜಂಗಮ ಸ್ವರೂಪಿಗಳಾಗುತ್ತವೆ. ಕರಗಳು ಜಂಗಮಲಿಂಗದ ಒಡಲಾಗುತ್ತವೆ.   ತನುಸೇವೆ ಗುರುವಿಗೆ, ಮನಸೇವೆ ಲಿಂಗಕ್ಕೆ ಸಲ್ಲುವಂತೆ, ಧನಸೇವೆ ಜಂಗಮಕ್ಕೆ ಸಲ್ಲಬೇಕು. ಅರ್ಥಾತ್ ಕೈಗಳಿಂದ ಜಂಗಮಕ್ಕೆ ವಂಚನೆಯಿಲ್ಲದೆ ನೀಡಿದರೆ ಕರಗಳು ಜಂಗಮ ಲಿಂಗದ ಒಡಲಾಗುವವು. ದಾನವೇ ಹಸ್ತಕ್ಕೆ ಭೂಷಣವೆಂದು ಅನುಭವಿಗಳೂ ನುಡಿದಿದ್ದಾರೆ. ಕರದ ಯಥಾರ್ಥತೆಯನ್ನು ೧೨೮ನೆಯ ತ್ರಿಪದಿಯಲ್ಲಿಯೂ ನೋಡ ಬಹುದು.

ಹೇ ಗುರುದೇವ ! ಸಂಸಾರದ ತೆಕ್ಕೆಯನ್ನು ಬಿಡಿಸಿ ಎಂದೆಂದಿಗೂ ಲಿಂಗವನ್ನು ಪಿಡಿಯುವ ಶಕ್ತಿಯನ್ನು ಕರಗಳಿಗೆ ಕೊಡು. ಅಂದರೆ ಈ ಕೈಗಳು ಜಂಗಮಲಿಂಗ ವಾಗಬಲ್ಲವು.

ಶಿವಕವಿಯು ಇಲ್ಲಿ ವೀರಶೈವ ಸಿದ್ಧಾಂತವನ್ನೇ ತುಂಬಿದ್ದಾನೆ. ಲಿಂಗಭಕ್ತನಾದವನು ಲಿಂಗಪೂಜೆಯನ್ನು ಮಾಡುವದು, ಜಂಗಮನ ಬರುವಿಗಾಗಿ ಹಾರೈಸುವದು, ಮತ್ತು ಲಿಂಗದ ಮುಖ ಜಂಗಮವೆಂದು ಅರಿತು ಆತನ ಸಂತೃಪ್ತಿಗೊಳಿಸಬೇಕೆಂಬುದನ್ನು ಮನನ ಮಾಡಿಕೊಳ್ಳಬೇಕು. ನಾನು ಕಾಯಕ ಮಾಡುವದೆಲ್ಲ ಜಂಗಮನ ಸೊತ್ತೆಂದು ಭಾವಿಸಬೇಕು. ಅರ್ಥಾತ್ ಕಾಯಕ ಮಾಡಿದ ಫಲವೆಲ್ಲ ಜಂಗಮನದೆಂದು ನಂಬಬೇಕು. ಯಾಕಂದರೆ ದಾಸೋಹಂಭಾವದಿಂದ ದೊರೆತ ಶೇಷವೇ

ಪ್ರಸಾದವಾಗುವದು. ತ್ಯಾಗಪೂರಿತವಾದ ಭೋಗವೇ ಲಿಂಗಭೋಗೋಪವೆನಿಸುವದು. ಅದಕ್ಕಾಗಿಯೇ ಕೈಗಳು ಜಂಗಮಲಿಂಗವನ್ನು ತೃಪ್ತಿಪಡಿಸಬಲ್ಲವುಗಳೆಂದು ನಿರೂಪಿಸಲ್ಪಟ್ಟಿವೆ.

ಕಾಕು ಸಟೆ ಮಾತುಗಳ | ನಿಃಕರಿಸಿ ನಿಜ ಸತ್ಯ

ವಾಕ್ಕೇ ಸುಪ್ರಸಾ-ದಾಖ್ಯ ಲಿಂಗವಿದು ಬಹು

ಜೋಕೆಂದ ಗುರುವೆ ಕೃಪೆಯಾಗು   ||೧೫೫||

ಐದನೆಯ ಕರ್ಮೇಂದ್ರಿಯ ವಾಣಿಯು, ಐದು ಕರ್ಮೇಂದ್ರಿಯಗಳಲ್ಲಿ ಇದು ಬಹು ಮುಖ್ಯವಾದುದು. ಇದಕ್ಕೆ ಮುಖವೆಂತಲೂ ಹೇಳಬಹುದು. ಬಾಯಿಯಿಂದಲೇ ಮಾತು ವ್ಯಕ್ತವಾಗುವದಲ್ಲದೆ; ಗುರುಲಿಂಗಕ್ಕೂ ಪೋಷಕವಾಗಿದೆ. ಮತ್ತು ಬಾಯಿಯೇ ದೇಹವನ್ನು ಸಂರಕ್ಷಿಸುವ ಪ್ರಮುಖ ಸಾಧನವೂ ಹೌದು. ವಾಣಿಯಿಂದ ತನ್ನ ಭಾವಾಭಿವ್ಯಕ್ತಿಯನ್ನು ಇತರರಿಗೆ ತಿಳಿಸಲು ಸಾಧ್ಯವಾಗುವದು.

ಮಾತು ಯಥಾರ್ಥವಾಗಿರಬೇಕು. ಮಾತಿನಲ್ಲಿ ಕಾಕುತನ, ಸಟೆಗಳಿರಬಾರದು. ಅನ್ಯರಿಗೆ ಕೊಂಕುನುಡಿಯುವದು ಸುಳ್ಳು ಹೇಳುವದು ದೊಡ್ಡ ಅಪರಾಧ. ಶರಣರು ಸುಳ್ಳುನುಡಿಗೆ ಸೇರುವದಿಲ್ಲ. ಸುಳ್ಳುನುಡಿ ಪಾಪಕಾರಕವೆಂದು ನುಡಿದಿರುವರು. ಸತ್ಯಾಸತ್ಯತೆಯ ವಿಚಾರವನ್ನು ಈಗಾಗಲೇ ೧೩೨ನೆಯ ತ್ರಿಪದಿಯ ವ್ಯಾಖ್ಯಾನದಲ್ಲಿ ಮಾಡಲಾಗಿದೆ. ಮಾತಿನಲ್ಲಿ ಪಾವಿತ್ರ್ಯತೆ ಇರಬೇಕು. ನಿಜವಾದ ಸತ್ಯವಿರಬೇಕು. ಆ ಮಾತು ಸಾರ್ಥಕವಾಗುವದು. ಅಣ್ಣ ಬಸವಣ್ಣನವರು –

ನುಡಿದರೆ ಮುತ್ತಿನ ಹಾರದಂತಿರಬೇಕು,

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು,

ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು,

ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು,

ನುಡಿಯೊಳಗಾಗಿ ನಡೆಯದಿದ್ದರೆ,

ಕೂಡಲ ಸಂಗಮದೇವನೆಂತೊಲಿವನಯ್ಯಾ.

ಮಹಾಜ್ಞಾನಿ ಅಲ್ಲಮ ಪ್ರಭುಗಳು –

ಮಾತೆಂಬುದು ಜ್ಯೋತಿರ್ಲಿಂಗ

ಸ್ವರವೆಂಬುದು ಪರತತ್ವ

ತಾಳೋಷ್ಟ್ರ ಸಂಪುಟವೆಂಬುದೇ ನಾದಬಿಂದುಕಳಾತೀತ

ಗುಹೇಶ್ವರನ ಶರಣರು ನುಡಿದು

ಸೂತಕಿಗಳಲ್ಲ ಕೇಳಾ ಮರುಳೆ !

ಮಾತು ಮುತ್ತಿನಹಾರದಂತೆ, ಸ್ಪಟಿಕದಂತೆ, ಮಾಣಿಕ್ಯದ ಪ್ರಭೆಯಂತೆ ಮಹತ್ವವುಳ್ಳದ್ದಾಗ ಬೇಕು. ಮಾತಿಗೆ ಮಹಾಲಿಂಗನೂ ತಲೆದೂಗಬೇಕು. ಇಂಥ ಮಾತೇ ಜ್ಯೋತಿರ್ಲಿಂಗ ವಾಗುವದು. ಜ್ಯೋತಿರ್ಲಿಂಗದ ದರ್ಶನ ಮಾಡಿಸಬಲ್ಲ ಶರಣರು ಸೂತಕಿಗಳಲ್ಲ. ಶಿವಶರಣರ ಸೂಳ್ನುಡಿಗಳಲ್ಲಿ ಶಿವಸಾಕ್ಷಾತ್ಕಾರ ನಿಚ್ಚಳವಾಗಿ ತೋರುವದು. “ಕೂಡಲಸಂಗನ ಶರಣರು ಮನದರದು ಮಾತನಾಡಿದರೆ ಲಿಂಗವ ಕಾಣಬಹುದು” ಎಂಬ ಅಣ್ಣನ ವಾಣಿಯಲ್ಲಿ ಅಮೃತ ತೊಟ್ಟು ಧಾರೆಗಟ್ಟಿದೆ. ಅಂತೆಯೇ ಮಹಾನುಭಾವಿಗಳು ನುಡಿದುದು ಪ್ರಸಾದವಾಣಿ, ನಡೆದುದು ಲಿಂಗನಡೆ, ಪ್ರಸಾದವಾಣಿಯಲ್ಲಿಯೇ ಪ್ರಸಾದಲಿಂಗದ ಸಾನಿಧ್ಯ ವೇದ್ಯವಾಗುವದು.

ಪ್ರಸಾದಲಿಂಗನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಬೇಕಾದ ಮುಖದಿಂದ ವ್ಯರ್ಥನುಡಿಗಳನ್ನು ಆಡಬಾರದು. ಜೊಳ್ಳು ಮಾತಿಗೆ ಮನವೆಳಸಬಾರದು. ಗೊಳ್ಳು ಹರಟೆಗೆ ಕಾಲಹರಣ ಮಾಡಬಾರದು. ಅದಕ್ಕಾಗಿ ಬಹು ಜೋಕೆ (ಎಚ್ಚರಿಕೆ) ಯಿಂದ ಮಾತನಾಡಬೇಕೆಂದು ಗುರುರಾಯನು ಎಚ್ಚರಿಕೆಯಿತ್ತಿದ್ದಾನೆ. ಒಳ್ನುಡಿ ಒಳಿತನ್ನೇ ಮಾಡಬಲ್ಲುದು. ಗೊಳ್ಳು ಮಾತು ಜಗಳಕ್ಕೆ ಅವಕಾಶವಾಗುವದು. “ಮಾತು ಬಲ್ಲವ ಮಾಣಿಕ ತಂದ, ಮಾತನರಿಯದವ ಜಗಳವ ತಂದ’ ಎಂಬ ಲೋಕವಾಣಿ ಪ್ರಸಿದ್ಧವಿದೆ. ಕಾರಣ ಮಾತನ್ನು ಎಚ್ಚರಿಕೆಯಿಂದಲೇ ಬಳಸಬೇಕು. ವೈಖರಿಯ ಶಕ್ತಿಯನ್ನು ಸಂಪಾದಿಸಲು ಮೌನವೇ ಉತ್ತಮ ಸಾಧನ. ಅಂತೆಯೇ ಮಾತಿಗಿಂತಲೂ ಮೌನಶ್ರೇಷ್ಠವೆಂದು ಅನುಭವಿಗಳು ಅನುಭವದ ನುಡಿಯನ್ನು ನುಡಿದಿರುವರು.

ಗಾಂಧಿಜಿಯವರು  ಆತ್ಮಶಕ್ತಿಯನ್ನು ಹಾಗೂ ವಾಣಿಶಕ್ತಿಯನ್ನು ಬೆಳೆಸಿಕೊಳ್ಳಲು ಆಗಾಗ್ಗೆ ಮೌನಿಗಳಾಗುತ್ತಿದ್ದುದು ಅವರ ಆತ್ಮಚರಿತೆಯಿಂದ ತಿಳಿದುಬರುತ್ತದೆ. ಜ್ಞಾನಿಗಳು ಬಹುಶಃ ಮೌನಿಗಳಾಗಿಯೇ ಇರುತ್ತಾರೆ. ‘ಮಾತು ಬೆಳ್ಳಿ, ಮೌನ ಬಂಗಾರ”ವೆಂಬುದು ಸತ್ಯವಾಗಿದೆ. ಓ ಗುರುವೇ ! ಎನ್ನ ಮಾತು ಮಂತ್ರವಾಗಿಸಲು ಕೃಪೆಮಾಡು. ಶಿವ ನಾಮವನ್ನು ನೆನೆಯುವ ವಾಣಿಯಲ್ಲಿ ಪ್ರಸಾದಲಿಂಗದ ಪ್ರಸನ್ನತೆಯುಂಟಾಗುವಂತೆ ಹರಸು.

 

Related Posts