ಪೂಜ್ಯ ವಿಜಯಪ್ರಭು ದೇವರು ಬೂದಗುಂಪಾ
ಪ್ರಿಯ ಸಹೃದಯರೆ ಭವ್ಯ ಪರಂಪರೆಯನ್ನ ದಿವ್ಯ ಸಂಪ್ರದಾಯವನ್ನು ಹೊಂದಿದ ದೇಶ ಅದು ಭಾರತ ದೇಶ. ಈ ದೇಶ, ಈನಾಡು ಮತ್ತು ಸಂಸ್ಕೃತಿಯನ್ನ ಎಲ್ಲ ಜೀವಿಗಳಿಗೆ ತಿಳಿಸಿ ಅದರಂತೆ ನಡೆದು ಸಾರ್ಥಕ ಬದುಕನ್ನು ಕಟ್ಟಿಕೊಂಡು ಬಾಳಿ ಬದುಕಿ ಅಂತ ಹೇಳಿದವರು ಈ ದೇಶದ ದಾರ್ಶನಿಕರು, ಮಹಾತ್ಮರು, ಸಂತರು, ಮಹಾಂತರು ಅಂತಹ ಮಹಾತ್ಮರ ಇರುವಿಕೆಯನ್ನ ಅವರು ನಡೆಸಿದ ಜೀವನಶೈಲಿಯನ್ನು, ಅವರ ಆದರ್ಶದ ಪಥವನ್ನು, ಪವಾಡವನ್ನು, ಲೋಕ ಸೇವೆಯನ್ನು ಇಂದಿನ ಪೀಳಿಗೆಗಳಿಗೆ ಗೊತ್ತು ಮಾಡಿಕೊಟ್ಟವರು ಕವಿಗಳು.
ಇಂತಹ ಕವಿಗಳಲ್ಲಿ 4 ಪ್ರಕಾರಗಳು
1 ವರ ಕವಿ
2 ಶಿವ ಕವಿ
3 ಆಶು ಕವಿ
4 ನರ ಕವಿ
ಹೀಗೆ ಎಲ್ಲದರ ಅರಿವನ್ನ ಎಲ್ಲದರಲ್ಲಿ ಪರಿಣಿತಿ ಹೊಂದಿದ ಹಲವಾರು ಕವಿಗಳು ನಮಗೆ ದೊರೆಯುತ್ತಾರೆ. ಧರ್ಮಗ್ರಂಥಗಳನ್ನ, ನೀತಿ ತತ್ವಗಳನ್ನ, ಪುರಾಣ ಪುಣ್ಯ ಕಥೆಗಳನ್ನ, ಉಪನಿಷದಾದಿ ಸಂಸ್ಕೃತ ಗ್ರಂಥಗಳನ್ನ, ಇಂತೆಲ್ಲ ಮಹಾನ ಗ್ರಂಥಗಳ ಸಾರವನ್ನು ಎಲ್ಲರ ಮನ ಮುಟ್ಟುವಂತೆ ಬರೆದು ಆ ಮಹಾನ್ ಗ್ರಂಥಕ್ಕೆ ಭಾಷ್ಯ ಬರೆದು ಪುಸ್ತಕರೂಪದಲ್ಲಿ ನಮ್ಮೆಲ್ಲರ ಕೈಗೆ ಕೊಟ್ಟವರು ಶಿವ ಕವಿಗಳು ಇಂತಹ ಅನೇಕ ಶಿವ ಕವಿಗಳಲ್ಲಿ ಒಬ್ಬರು ದ್ಯಾಂಪುರದ ಚೆನ್ನ ಕವಿಗಳು.
ಇವರು ಗದುಗಿನ ಹತ್ತಿರವಿರುವ ನಾರಾಯಣಪುರದಲ್ಲಿ ಕ್ರಿ.ಶ.1879 ರಲ್ಲಿ ಜನಿಸಿದರು ತಂದೆ ಕೊಟ್ಟೂರ ಬಸವಯ್ಯನವರು, ತಾಯಿ ನೀಲಾಂಬಿಕೆ ಈ ಇರ್ವ ದಂಪತಿಗಳು ದ್ಯಾಂಪುರದಲ್ಲಿ ವಾಸವಾಗಿದ್ದ ರಿಂದ ಕವಿಗಳಿಗೆ ದ್ಯಾಂಪುರ ಚೆನ್ನ ಕವಿಗಳೆಂದು ರೂಢಿ. ಕವಿಗಳು ತಮ್ಮ ಸೋದರಮಾವಂದಿರಾದ ನಾರಾಯಣಪುರದ ಕಲ್ಯಾಣ ಶಾಸ್ತ್ರಿಗಳವರಲ್ಲಿ ಕನ್ನಡ ಹಾಗೂ ಸಂಸ್ಕೃತ ವನ್ನ ಕಲಿತು, ವೀರಯ್ಯ ನವರೆಂಬ ಶಿಕ್ಷಕರ ಸಹಾಯದಿಂದ ತಮ್ಮ ಅಭ್ಯಾಸವನ್ನ ಹೆಚ್ಚಿಸಿಕೊಂಡು, ಅಷ್ಟೇ ಅಲ್ಲದೆ ಕನ್ನಡದ ಪ್ರಸಿದ್ಧ ಕಾವ್ಯಗಳಾದ ಶಬರಶಂಕರ ವಿಳಾಸ, ರಾಜಶೇಖರ ವಿಳಾಸ, ಜೈಮಿನಿ ಭಾರತ ಹೀಗೆ ಮೊದಲಾದ ಉತ್ಕೃಷ್ಟ ಗ್ರಂಥಗಳನ್ನ ಆಸ್ಥೆಯಿಂದ ಅಭ್ಯಾಸ ಮಾಡಿ ಕಾವ್ಯ ಸಾಹಿತ್ಯದಲ್ಲಿ ಪರಿಣತಿ ಹೊಂದಿದರು. ಅಷ್ಟೇ ಅಲ್ಲ ಕಲಿತ ವಿದ್ಯೆ ನನ್ನೊಂದಿಗೆ ಇದ್ದರೆ ಸಾಲದು ನನಗೆ ತಿಳಿದ ಮಟ್ಟಿಗೆ ಇನ್ನುಳಿದವರಿಗೆ ತಿಳಿಸೋಣವೆಂಬ ಹಂಬಲದಿಂದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸುಮಾರು ಹದಿನಾರು ವರ್ಷ ಸೇವೆಯನ್ನ ಮಾಡಿದ ಕವಿಗಳು. ಇಂತಹ ಕವಿಗಳನ್ನ ಹುಡುಕಿ ಅವರಿಗೆ ಸ್ಥಾನಮಾನಗಳನ್ನು ಕಲ್ಪಿಸಿ ಧರ್ಮದ ತಿರುಳನ್ನ, ನಮ್ಮ ಸಂಸ್ಕೃತಿಯನ್ನು ಸಾಹಿತ್ಯ ರೂಪದಲ್ಲಿ ಎಲ್ಲೆಡೆ ಹರಡಿಸಿ ಎಂದು ಚೆನ್ನ ಕವಿಗಳಿಗೆ ಆಶೀರ್ವದಿಸಿದವರು ಪರಮಪೂಜ್ಯ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳು. ಪೂಜ್ಯರ ಅಪ್ಪಣೆಯಂತೆ ಚೆನ್ನ ಕವಿಗಳು ಧರ್ಮೋಪದೇಶ ಹಾಗೂ ಸಾಹಿತ್ಯ ಸೇವೆಗಾಗಿ ತಮ್ಮ ಉಳಿದ ಆಯುಷ್ಯವನ್ನು ಮೀಸಲಾಗಿಟ್ಟರು .
ಚೆನ್ನ ಕವಿಗಳೆಂದರೆ ಕನ್ನಡ ನಾಡಿನಲ್ಲಿರುವ ಸರ್ವ ಜನರಿಗೆ ಚಿರಪರಿಚಿತರು, ಇಂತಹ ಕವಿಗಳ ಪರಿಚಯ ಮಾಡಿಕೊಡುವುದೇoದರೆ ಸೂರ್ಯನ ಪರಿಚಯ ಮಾಡಿಕೊಟ್ಟಂತೆ ಸರಿ, ಬಲು ವಿಚಕ್ಷಣ ಮತಿಯುಳ್ಳ ಚೆನ್ನ ಕವಿಗಳಿಗೆ ಪದ್ಯಗಳನ್ನ ಕಟ್ಟುವುದೆಂದರೆ ಸಹಜ ಸ್ವಭಾವದಾಗಿತ್ತು ಅದರಂತೆ ಕಾವ್ಯಗಳನ್ನ ಬರೆಯಬೇಕೆಂದರೆ ಯಾವಾಗಲೂ ಅವರಿಗೆ ಹುರುಪು ಹುಮ್ಮಸ್ಸು ಉಂಟಾಗುತ್ತಿತ್ತು . ಸಣ್ಣ ಹಳ್ಳಿಯಲ್ಲಿ ಹುಟ್ಟಿದ ಇವರ ಕವಿತ್ವದ ಪ್ರಭೆಯು ಕರ್ನಾಟಕದ ತುಂಬಾಬೆಳಗಿತು. ಈ ನಾಡಿಗೆ ಇವರು ಮಾಡಿದ ಸಾಹಿತ್ಯ ಸೇವೆಯು ಅಪಾರವಾಗಿದೆ.
ಕನ್ನಡ ನಾಡಿನ ಮೇಲೆ, ಕನ್ನಡ ಭಾಷೆಯ ಮೇಲೆ, ನುಡಿಯ ಮೇಲೆ ಎಷ್ಟೊಂದು ಅಭಿಮಾನ ಅಂದರೆ ಅವರೇ ಕುಮಾರೇಶ್ವರರ ಪುರಾಣದಲ್ಲಿ ತಿಳಿಸಿದ ಹಾಗೆ
“ಕನ್ನಡಮ್ಮನ ಮಕ್ಕಳಾದೆಮಗೆ ಹೆಮ್ಮೆಯಿಂ
ಕನ್ನಡದ ಭಾಷೆಯಂ ಬೆಳಿಸುವದೇ ಭೂಷಣಂ
ಕನ್ನಡಕೆ ಮನ್ನಣೆಯನೆಸಗದವನದಮನೆಂಬುದರಿಂದ ರಚಿಸಿದೆನ್ನ
ಕನ್ನಡದ ಕಬ್ಬದೊಳಗೊಪ್ಪಿರಲಿ ತಪ್ಪಿರಲಿ
ಕನ್ನಡದ ಸೇವೆಯಂಮಾಡಿದುತ್ಸಾಹ ವಿಂದೆನ್ನ
ಮಾನಸಕಾಗದೇ ಕ್ಷಮಿಸಿ ನಲಿಯರೇ ಕರುನಾಡ ಜಾಣರೆಲ್ಲ”
ಇಷ್ಟೊಂದು ಕನ್ನಡ ಭಾಷಾಭಿಮಾನಿ ಕವಿಯಾಗಿದ್ದರು ಶ್ರೀ ಚೆನ್ನ ಕವಿಗಳು.
“ತುಡುಗರೆಸಗಿದ ದೋಷಮದು ಮೂರು ತಲೆಯನಕ
ಬಿಡದು ಕವಿಕಾವ್ಯದೊಳು ನೆಗಳ್ದ ದೋಷಂ ಮುಂದೆ
ಕೆಡದಿಹುದು ನೂರತಲೆಯನ್ನ ಮೆಂದೊರೆವ ನಾಣ್ನುಡಿಗಂಜು ದುತ್ಸಾಹದೆ”
ತುಡುಗರು ಮಾಡಿದ ದೋಷ, ತಪ್ಪು ಅದು ಅವರ ಮೂರು ತಲೆಮಾರಿನವರೆಗೆ ಬಿಡದೆ ಕಾಡಿದರೆ, ಕವಿಯು ಕಾವ್ಯ ರಚನೆಯಲ್ಲಿ ಮಾಡಿದ ತಪ್ಪು, ದೋಷವದು ನೂರು ತಲೆಮಾರಿನವರೆಗೆ ಕಾಡದೆ ಬಿಡದು ಎಂಬ ನಾಣ್ನುಡಿಗೆ ಅಂಜಿ ಬಹಳ ಎಚ್ಚರದಿಂದ ಪುರಾಣಗಳನ್ನ, ಕಾವ್ಯಗಳನ್ನ ಬರೆದಿದ್ದೇನೆ ಎನ್ನುವರು ಚೆನ್ನ ಕವಿಗಳು.
ಶ್ರೀ ದ್ಯಾಂಪುರದ ಚೆನ್ನಕವಿಗಳು ಬರೆದಿರುವ ಒಂಬತ್ತು ಪುರಾಣಗಳು ಇಂತಿವೆ :-
1 ಹೇಮರಡ್ಡಿ ಮಲ್ಲಮ್ಮನ ಪುರಾಣ
2 ಹಾಲಕೆರೆ ಶ್ರೀ ಅನ್ನದಾನೇಶ್ವರ ಮಹಾಪುರಾಣ
3 ನಾಲ್ವತವಾಡದ ವೀರೇಶ್ವರ ಪುರಾಣ
4 ಕಮತಗಿ ಶ್ರೀ ಹುಚ್ಚೇಶ್ವರ ಪುರಾಣ
5 ಕಂಬಳಿಹಾಳ ದೊಡ್ಡ ಬಸವೇಶ್ವರ ಪುರಾಣ
6 ಇಲಕಲ್ಲ ವಿಜಯ ಮಹಾಂತೇಶ್ವರ ಪುರಾಣ
7 ಮುಳಗುಂದದ ಬಾಲಲೀಲಾ ಮಹಾಂತೇಶ್ವರ ಪುರಾಣ
8 ಶಿರಹಟ್ಟಿ ಶ್ರೀ ಫಕೀರೇಶ್ವರ ಚರಿತ್ರೆ
9 ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣ
ಪುರಾಣಗಳು ಧರ್ಮದ ಸಾಂಕೇತಿಕ ನಿರೂಪಣೆಗಳು, ಪುರಾಣಗಳಲ್ಲಿ ದೇವರು, ದೇವತೆಗಳು ಮತ್ತು ವಿಶೇಷ ವ್ಯಕ್ತಿಗಳ ಅತಿಮಾನುಷಕ್ಕೆ ಕಾರಣವಾದ ಅಸಾಮಾನ್ಯ ಸನ್ನಿವೇಶ, ಸಂದರ್ಭಗಳು, ಅಸಮ-ವಿಷಮ ಪರಿಸರದಲ್ಲಿ ಸಮಾನತೆಗಾಗಿ ನಡೆದ ಅಸಾಮಾನ್ಯ ಘಟನೆಗಳು ಆ ಕಾಲಘಟ್ಟದ ಚರಿತ್ರೆಯನ್ನು ಗರ್ಭೀಕರಿಸಿಕೊಂಡಿ ರುತ್ತವೆ ಪುರಾಣಗಳು. ಈ ಹಿನ್ನೆಲೆಯಲ್ಲಿ ಪುರಾಣಗಳು ಮನುಷ್ಯ ಸಂಸ್ಕೃತಿಯ ಶಾಸನಗಳು. ಹೀಗಾಗಿ ಯಾವುದೇ ಸಂಸ್ಕೃತಿ, ಸಮಾಜ, ಸಮುದಾಯವನ್ನು ಅಭ್ಯಾಸ ಮಾಡುವುದಕ್ಕೆ ಅಥವಾ ಮನುಕುಲದ ಒಂದು ಕಾಲಘಟ್ಟದ ಚರಿತ್ರೆಯನ್ನು ಅರಿಯುವುದಕ್ಕೆ ಇಂತೆಲ್ಲ ಪುರಾಣಗಳು ಸಹಕಾರಿಯಾಗುತ್ತವೆ. ಭವಿಷ್ಯದ ಬದುಕಿಗೆ ಮನುಷ್ಯನ ಚರಿತ್ರೆಗೆ, ಎಣ್ಣೆ ಬತ್ತಿಯಾಗುತ್ತವೆ, ವರ್ತಮಾನದ ಲೌಕಿಕ ಬದುಕಿಗೆ ಗಚ್ಚುಗಾರೆ ಯಾಗುತ್ತವೆ ಇಂತಹ ಪುರಾಣಗಳು.
ಹೀಗೆ ಚೆನ್ನಕವಿಗಳು ರಚಿಸಿರುವ ಒಂಬತ್ತು ಪುರಾಣಗಳು “ವಾರ್ಧಕ ಷಟ್ಪದಿಯಲ್ಲಿ ವೆ” ಉಳಿದ ಸುಮಾರು ಹನ್ನೆರಡು ಕೃತಿಗಳು “ಶತಕ ಹಾಗೂ ಹಾಡುಗಬ್ಬಗಳ ರೂಪದಲ್ಲಿ ರಚಿತವಾಗಿವೆ.
1 ಕಾಲಕಾಲೇಶ್ವರ ಶತಕ 2 ಕಲ್ಲಿನಾಥ ಶತಕ 3 ಕೊಟ್ಟೂರೇಶ್ವರ ಶತಕ
4 ಬಸವ ತ್ರಿವಿಧಿ 5 ಅನ್ನದಾನೀಶ್ವರ ಜೋಗುಳಪದ 6 ನಲ್ನುಡಿ
7 ಶ್ರೀ ಗವಿಸಿದ್ದೇಶ್ವರ ಮಂಗಲ ಪದಗಳು 8 ಮಂತ್ರ ರಹಸ್ಯ 9 ಬೀಗಿತಿಯರ ಹಾಡು
10 ಮನೋ ಬೋಧೆ 11 ಶ್ರೀ ಕುಮಾರೇಶ್ವರ ಶತಕ 12 ಕೊನೆಯದಾಗಿ ತಾವು ಶಿವೈಕ್ಯರಾಗುವ 15 ದಿನಗಳ ಪೂರ್ವದಲ್ಲಿ ಬರೆದದ್ದು ಅದು ಸದಾಶಿವ ಲೀಲೆ.
ಕನ್ನಡ ಸಾಹಿತ್ಯದಲ್ಲಿ ಪ್ರಾಚೀನ ಕಾವ್ಯಗಳು ವಿಪುಲವಾಗಿವೆ, ಹಿಂದಿನ ಪರಂಪರೆಯನ್ನು ಬಿಡದೆ ಇಪ್ಪತ್ತನೆಯ ಶತಮಾನದಲ್ಲಿ ಕಾವ್ಯಗಳನ್ನು ಬರೆದವರು ವಿರಳ ಆದರೆ ಶ್ರೀ ಚನ್ನ ಕವಿಗಳು ಒಂಬತ್ತು ಪುರಾಣಗಳನ್ನು ಬರೆದು ಅದರ ಜೊತೆಗೆ ಶತಕಹಾಗೂಹಾಡುಗಳನ್ನ ರಚಿಸಿ ಈ ಕೊರತೆಯನ್ನ ಬಹುಮಟ್ಟಿಗೆ ಪೂರೈಸಿದವರು.
ಚೆನ್ನ ಕವಿಗಳ ಕೃತಿಗಳಲ್ಲಿ ರಸವತ್ತಾಗಿಯೂ ಜನಪ್ರೀಯವಾಗಿಯು ಇವೆ ಇವರು ಬರೆದ ಪುರಾಣಗಳನ್ನು ಆಸ್ಥೆಯಿಂದ ಶ್ರವಣ ಮಾಡುತ್ತಾರೆ.
ಇವರ ಕಾವ್ಯಶಕ್ತಿಯನ್ನ, ಸಾಹಿತ್ಯ ಸೇವೆಯನ್ನ ಅರಿತುಕೊಂಡ ಧಾರವಾಡದ ಶ್ರೀ ಮೃತ್ಯುಂಜಯ ಅಪ್ಪಗಳವರು ಇವರಿಗೆ ಕ್ರಿ.ಶ.1940 ರಲ್ಲಿ “ಕವಿರತ್ನ” ಎಂಬ ಬಿರುದನ್ನ ದಯಪಾಲಿಸಿದರು.
ಭರತಖಂಡದ ಬೇರೆಬೇರೆ ಭಾಗಗಳಲ್ಲಿ ಮಹಾನುಭಾವರನೇಕರು ಉದ್ಭವಿಸಿ ಭಾರತೀಯರ ಧರ್ಮ, ಸಂಸ್ಕೃತಿ, ನೀತಿ, ನಡೆ-ನುಡಿಗಳನ್ನುಳಿಸಿ ಶೋಧಿಸಿ ಅವು ಪ್ರಕಾಶಮಾನವಾಗುವಂತೆ ಪರಿಶ್ರಮಪಟ್ಟರು. ಇಂತಹ ಮಹನೀಯರ ಜೀವಿತ ಕಥನವನ್ನ, ಅವರು ನಡೆದ ಪಥವನ್ನ, ಪುರಾಣ ರೂಪದಲ್ಲಿ, ಶತಕ ರೂಪದಲ್ಲಿ ನಮ್ಮೆಲ್ಲರಿಗೂ ತಿಳಿಸಿ ಎಲ್ಲರಿಂದ ಗೌರವವನ್ನು ಪಡೆದು ಈ ವಿಧದ ಗೌರವಾನ್ವಿತ ಜೀವನವನ್ನು ಸಾಗಿಸಿ ದಿನಾಂಕ 5-3-1946 ರಲ್ಲಿ ಕವಿಗಳಿಗೆ ಬದುಕನ್ನು ರೂಪಿಸಿಕೊಟ್ಟು ತಂದೆಯಾದ ಕುಮಾರ ಶಿವಯೋಗಿ ಸ್ಥಾಪಿಸಿದ ಶಿವಯೋಗ ಮಂದಿರದಲ್ಲಿ ಶಿವೈಕ್ಯರಾದರು.
ಶ್ರೀ ದ್ಯಾಂಪುರದ ಚೆನ್ನಕವಿಗಳು ರಚಿಸಿರುವ ಎಲ್ಲ ಕೃತಿಗಳ ಸಾರವನ್ನು ಸವಿದರೆ ಮಾನವನಿಗೆ ನಿಜವಾಗಿಯೂ ಸ್ವಾರ್ಥತ್ಯಾಗದ ಅರಿವು ಉಂಟಾಗುವುದು.
ಇಂತಹ ಮಹಾನ್ ಕವಿಯು ಅಪೂರ್ವವಾದ ಕೃತಿಯನ್ನು ರಚಿಸಿಕೊಟ್ಟಿದ್ದಾರೆ ಅಂತಹ ಕೃತಿಗಳನ್ನು ಪಡೆದು ಓದಿ ಧನ್ಯಾತ್ಮರಾಗೋಣ .