(ಶ್ರೀ ಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆ)
ಲೇಖಕರು ; ಕೆ. ಎಸ್. ಪಲ್ಲೇದ
ಪ್ರಾಚಾರ್ಯರು, ಬಸವಯೋಗ ಕೇಂದ್ರ, ಗದಗ
ಯೋಗವು ವಿಶ್ವಕಲ್ಯಾಣಕ್ಕಾಗಿ ಮತ್ತು ಮಾನವನ ಶ್ರೇಯೋಭಿವೃದ್ಧಿಗಾಗಿ ನಮ್ಮ ಪೂರ್ವಜರು ನೀಡಿದ ಮಹಾನ್ ಕೊಡುಗೆಯಾಗಿದೆ. ಈ ಕೊಡುಗೆಯನ್ನು ಆದಿಶಿವನಿಂದ ಮೊದಲ್ಗೊಂಡು ವಶಿಷ್ಠ, ಪತಂಜಲಿ, ಸ್ವಾತ್ಮಾರಾಮ ಇನ್ನಿತರೆ ಋಷಿಮುನಿಗಳಾದಿಯಾಗಿ, ಅಲ್ಲಮ, ಬಸವಾದಿ ಶಿವಶರಣರು ಮನುಕುಲಕ್ಕೆ ಕರುಣಿಸಿದ ವರಪ್ರಸಾದವಾಗಿದೆ. ಮುಖ್ಯವಾಗಿ ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ.
ಇತ್ತೀಚೆಗೆ ವಿಶ್ವಸಂಸ್ಥೆಯು “ಜೂನ್ 21 ಅಂತರಾಷ್ಟ್ರೀಯ ಯೋಗ ದಿನ” ಎಂದು ಘೋಷಿಸಿದ ಮೇಲಂತೂ “ಯೋಗ ಎಲ್ಲರಿಗಾಗಿ, ಎಲ್ಲರೂ ಯೋಗಕ್ಕಾಗಿ, ಯೋಗದಲ್ಲಿ ಎಲ್ಲಾ ಐತಿ “ ಎಂಬ ಹೆಗ್ಗಳಿಕೆಯಿಂದ ಯೋಗವು ಜಗತ್ಪ್ರಸಿದ್ಧಿಯಾಗಿದೆ. ಅಂದು ಅಧ್ಯಾತ್ಮ ಸಾಧನೆಗೆ ಮೋಕ್ಷ ಸಂಪಾದನೆಗೆ ಸೀಮಿತವಾಗಿದ್ದ ಯೋಗ ಇಂದು ಕೊರೋನಾ ಕಾಯಿಲೆಯಂತ ಮಾರಕ ಕಾಯಿಲೆಗಳಿಗೆ ಮಹಾಮದ್ದಾಗಿ ಮಾನವನ ನೆಮ್ಮದಿಯ ಬದುಕಿಕೊಂದು ಆಧಾರಸ್ತಂಭವಾಗಿದೆ. ವಿಶ್ವಶಾಂತಿ ಸ್ಥಾಪನೆಗೆ ಅಡಿಪಾಯವಾಗಿದೆ. ಹಾಗೆಯೇ ಯೋಗವು ಒಂದು ವಿಸ್ಮಯ ವಿಜ್ಞಾನವೂ ಆಗಿದ್ದು, ಪ್ರಸ್ತುತ ದಿನಮಾನಕ್ಕೆ ಕಾಮಧೇನು, ಕಲ್ಪವೃಕ್ಷ ಸ್ವರೂಪದಲ್ಲಿದೆ.
ಇಷ್ಟೆಲ್ಲ ಶ್ರೇಷ್ಠತೆ ಹೊಂದಿರುವ ಯೋಗವು ಋಷಿಮುನಿಗಳಿಂದ ಪರಂಪರಾಗತವಾಗಿ ಗುರು-ಶಿಷ್ಯ ಬಳಗದಿಂದ ಬೆಳೆದು ಬಂದಿದೆ. ಈಗ ಬಾಬಾ ರಾಮದೇವ, ರವಿಶಂಕರ ಗುರೂಜಿ ಮತ್ತು ಅನೇಕ ಯೋಗ ಕೇಂದ್ರಗಳು ಯೋಗ ಪ್ರಸಾರ ಸೇವೆಯಲ್ಲಿ ಇರುವರು. ಈ ನಿಟ್ಟಿನಲ್ಲಿ ಯೋಗ ಪ್ರಸಾರ ಸೇವೆಯಲ್ಲಿ ಗದುಗಿನ ಯೋಗ ಪಾಠಶಾಲೆ ವಿಶಿಷ್ಟ ರೀತಿಯಲ್ಲಿ ನಿರತವಾಗಿರುವುದು.
ಪೂರ್ವ ಕಾಲದಿಂದಲೂ ಮಠಗಳು ಅನ್ನ, ಆಶ್ರಯಗಳಿಗೆ ಹೆಸರುವಾಸಿಯಾಗಿದ್ದರೆ ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠವು ಅನ್ನ, ಅಕ್ಷರ, ಆರೋಗ್ಯ ಸೇವೆಗಳಿಗೆ ಪ್ರಸಿದ್ಧಿಯಾಗಿದೆ. ಆರೋಗ್ಯ ಸೇವೆಗಾಗಿಯೇ ಈ ಮಠದ 19 ನೆಯ ಪೀಠಾಧಿಪತಿಗಳಾದ ತ್ರಿವಿಧ ದಾಸೋಹಿ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಶ್ರೀಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆ ಎಂಬ ನಾಮೆಯಿಂದ ಯೋಗ ಪಾಠಶಾಲೆ ಸ್ಥಾಪಿಸಿದರು (19-05-1975). ಯೋಗ ಶಬ್ದವೇ ಕೇಳರಿಯದ ವಾತಾವರಣವಿದ್ದಾಗ ಗದುಗಿನ ಯೋಗ ಪಾಠಶಾಲೆ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದಲ್ಲಿ ಉದಯವಾಗಿರುವದು ಸೋಜಿಗ ಮತ್ತು ನಮ್ಮ ಸೌಭಾಗ್ಯವಾಗಿದೆ. ಈಗ ಇದು ಎಸ್.ವಾಯ್.ಬಿ.ಎಂ.ಎಸ್. ಯೋಗ ಪಾಠಶಾಲೆ ಎಂದು ಪ್ರಚಲಿತದಲ್ಲಿದೆ.

ಯೋಗ ಪಾಠಶಾಲೆ ಯೋಗ ಪ್ರಸಾರ ಸೇವೆಗಾಗಿ ಹಲವಾರು ಧ್ಯೇಯೋದ್ದೇಶಗಳನ್ನು ಹೊಂದಿದೆ. ಅವುಗಳಲ್ಲಿ ವ್ಯಕ್ತಿಯ ಆರೋಗ್ಯ ಮತ್ತು ಸಮಾಜ ಸ್ವಾಸ್ಥ್ಯಯ ಸಂರಕ್ಷಣೆ ಪ್ರಮುಖವಾಗಿದ್ದು, ಒಬ್ಬ ವ್ಯಕ್ತಿ ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಅಧ್ಯಾತ್ಮಿಕವಾಗಿ, ಆರೋಗ್ಯವಂತನಾಗಿರುವುದೇ ಆರೋಗ್ಯ. ಈ ಆರೋಗ್ಯ ಶ್ರೀಸಾಮಾನ್ಯರೆಲ್ಲರಿಗೂ ದೊರೆಯಬೇಕೆಂಬುದು ಮೂಲ ಧ್ಯೇಯವಾಗಿದೆ. ಅಂತೆಯೇ ಯೋಗ ಪಾಠಶಾಲೆಯು ಸ್ಥಾಪನೆಯಾದಂದಿನಿಂದ ಈ ತನಕ ಯೋಗದ ಮುಂಚೂಣಿಯಲ್ಲಿ ಆರೋಗ್ಯ, ಶಿಕ್ಷಣ, ಸಂಸ್ಕೃತಿ, ಅಧ್ಯಾತ್ಮ, ರಾಷ್ಟ್ರ ಸೇವಾ ಕಾರ್ಯಗಳಲ್ಲಿ ನಿರತವಾಗಿರುವುದು.

ಆರೋಗ್ಯ ಸೇವೆ : “ಆರೋಗ್ಯವು ಸಂಪೂರ್ಣ ದೈಹಿಕ, ಮಾನಸಿಕ ಸಾಮಾಜಿಕ ಮತ್ತು ಅಧ್ಯಾತ್ಮಿಕ ಯೋಗ ಕ್ಷೇಮದ ಸ್ಥಿತಿಯಾಗಿದೆ ಹಾಗೂ ಕೇವಲ ರೋಗ ಅಥವಾ ದುರ್ಬಲತೆಯ ಅನುಪ ಸ್ಥಿತಿಯಲ್ಲ” ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದ ಆರೋಗ್ಯವೇ ನಮ್ಮೆಲ್ಲರಿಗೆ ಭಾಗ್ಯವಾಗಿದೆ. ನಾವೆಲ್ಲ ಆರೋಗ್ಯವಾಗಿದ್ದರೆ ಮಾತ್ರ ನಮಗೆ ಎಲ್ಲ ಭಾಗ್ಯ (ಸಂಪತ್ತು) ಗಳು ದೊರೆಯುವವು. ಆರೋಗ್ಯವಿಲ್ಲದ ಬಾಳು ಬರಿಗೋಳು. ಪ್ರಸ್ತುತದಲ್ಲಿ ಕೊರೋನಾ ಕಾಯಿಲೆಯಿಂದ, ವೈಯ್ಯಕ್ತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಇನ್ನಿತರೆ ಸರ್ವ ಕ್ಷೇತ್ರಗಳಲ್ಲಿ ಅನಾರೋಗ್ಯ, ಅವ್ಯವಸ್ಥೆಗಳಿಂದ ಜನತೆ ನಾನಾ ಸಂಕಷ್ಟಗಳಿಗೆ ಬಲಿಯಾಗಿದ್ದಾರೆ. ವ್ಯಕ್ತಿ ಆರೋಗ್ಯವಂತನಾಗಿದ್ದರೆ ಇವೆಲ್ಲ ಸಂಕಷ್ಟಗಳು ಇಲ್ಲದಾಗುವವು. ಯೋಗವು ವ್ಯಕ್ತಿಯ ದೈಹಿಕ, ಮಾನಸಿಕ, ಸಾಮಾಜಿಕ, ನೈತಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪರಿಣಾಮಕಾರಿ ಸಾಧನೆ ಮಾರ್ಗವಾಗಿದೆ. ಆದ್ದರಿಂದಲೇ ಯೋಗ ಪಾಠಶಾಲೆಯು ಪ್ರತಿದಿನ ಬೆಳಿಗ್ಗೆ ಜಾತಿ, ಮತ, ಪಂಥ, ಸ್ತ್ರೀ-ಪುರುಷ ವಯೋಮಿತಿಗಳ ಭೇದವಿಲ್ಲದೆ ಆಸಕ್ತರಿಗೆ ಯೋಗ ಸಾಧನೆ, ತರಬೇತಿ ವರ್ಗಗಳನ್ನು ನಡೆಸುತ್ತಿದೆ. ಹಾಗೆಯೇ ಸಾಯಂಕಾಲ ಮಹಿಳಾ ಶಿಕ್ಷಕಿಯರಿಂದ ಮಹಿಳೆಯರಿಗಾಗಿ ಯೋಗ ತರಬೇತಿ ವರ್ಗಗಳನ್ನು ನಡೆಸುತ್ತಿದೆ. ಇದಲ್ಲದೆ ದಸರಾ ಬೇಸಿಗೆ ರಜಾ ದಿನಗಳಲ್ಲಿ ಶಾಲಾ ಮಕ್ಕಳಿಗೆ ಯೋಗ ತರಬೇತಿ ಶಿಬಿರಗಳನ್ನು ನಡೆಸುತ್ತಿದೆ. ಬೇಡಿಕೆ ಇದ್ದಲ್ಲಿ ಸಾರ್ವಜನಿಕವಾಗಿ ಉಚಿತ ಯೋಗ ತರಬೇತಿ ಶಿಬಿರಗಳನ್ನು ನಡೆಸಿ ಜನತೆಯಲ್ಲಿ ಆರೋಗ್ಯ ಯೋಗದ ಅರಿವು ಮೂಡಿಸುತ್ತಿದೆ. ಜನತೆಯ ಆರೋಗ್ಯ ಭಾಗ್ಯವೇ ದೇಶದ ನಿಜವಾದ ಸಂಪತ್ತಾಗಿದೆ.
ಶಿಕ್ಷಣ ಸೇವೆ : ಶಕ್ತಿಗಳಲ್ಲಿ ಯಾಂತ್ರಿಕ ಶಕ್ತಿ, ವಿದ್ಯುತ್ ಶಕ್ತಿ, ಸಂಘಟನಾ ಶಕ್ತಿ, ದೈವ ಶಕ್ತಿ ಮುಂತಾದ ಶಕ್ತಿಗಳಿಗಿಂತ ಯೋಗ ಶಿಕ್ಷಣ ಶಕ್ತಿ ಹೆಚ್ಚಿನದಾಗಿದೆ. ಕಾರಣ ಯೋಗ ಶಿಕ್ಷಣ ಶಕ್ತಿಯಿಂದ ನಾವು ಇನ್ನುಳಿದ ಸರ್ವ ಶಕ್ತಿಗಳನ್ನು ಪಡೆಯಬಹುದು. ಇಂದು ದೇಶಕ್ಕೆ ಬೇಕಾಗಿರುವುದು ಯುವಶಕ್ತಿ. ಈ ಯುವಶಕ್ತಿ ಬಲಗೊಳಿಸಲು ಮತ್ತು ಯುವಕರಲ್ಲಿ ಯೋಗಾಸಕ್ತಿ ಬೆಳೆಸಲು ಯೋಗ ಪಾಠಶಾಲೆಯು ತನ್ನ ಅಂಗ ಸಂಸ್ಥೆಯಾದ ಬಸವ ಯೋಗ ಕೇಂದ್ರದಿಂದ ಕರ್ನಾಟಕ ಸರಕಾರ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಮಾನ್ಯತೆಯಲ್ಲಿ ಒಂದು ವರ್ಷ ಅವಧಿಯ ಸರ್ಟಿಫಿಕೇಟ್ ಕೋರ್ಸ್ ಇನ್ ಯೋಗ ಸ್ಟಡೀಜ್ ಮತ್ತು ಪಿ.ಜಿ. ಡಿಪ್ಲೋಮಾ ಇನ್ ಯೋಗ ಸ್ಟಡೀಜ್ ಕೋರ್ಸ್‍ಗಳನ್ನು ನಡೆಸುತ್ತಿದೆ. ಪ್ರತಿವರ್ಷ 50-60 ವಿದ್ಯಾರ್ಥಿಗಳು ಯೋಗ ಪದವಿ ಪಡದು ಯೋಗ ಶಿಕ್ಷಣ ಪ್ರಸಾರಕ್ಕೆ ಸಿದ್ಧರಾಗುತ್ತಿದ್ದಾರೆ. ಯೋಗ ವಿಷಯವಾಗಿ ಉಪನ್ಯಾಸ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ನಡೆಸುವ ಮೂಲಕ ಯೋಗ ಶಿಕ್ಷಣ ಸೇವೆ ಸಲ್ಲಿಸುತ್ತಿದೆ.
ಸಾಂಸ್ಕೃತಿಕ ಸೇವೆ : ಇಂದು ನಮ್ಮ ಭಾರತೀಯ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಆದರೆ ಭಾರತೀಯರಾದ ನಾವು ನಮ್ಮ ಸಂಸ್ಕೃತಿ ಬಿಟ್ಟು ಪಾಶ್ಚಿಮಾತ್ಯ ಸಂಸ್ಕೃತಿ ಗೆ ಮರುಳಾಗುತ್ತಿದ್ದೇವೆ. ಇದು ಹೀಗೆಯೇ ಮುಂದುವರಿಯಬಾರದೆಂಬ ಅಭಿಲಾಷೆಯಿಂದ ಯೋಗ ಪಾಠಶಾಲೆಯು ಸಾಂದರ್ಭಿಕವಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನತೆಯ ಮನ ಪರಿವರ್ತನಗೊಳಿಸುತ್ತಲಿದೆ. ಉದಾಹರಣೆಯಾಗಿ ಹೇಳುವುದಾದರೆ-
ದಸರಾ, ಬೇಸಿಗೆ ರಜಾ ದಿನಗಳಲ್ಲಿ ಪ್ರತಿವರ್ಷ ಶಾಲಾ ಮಕ್ಕಳಿಗಾಗಿ “ ಸಂಸ್ಕೃತಿ -ಸಂಸ್ಕಾರ” ಶಿಬಿರ ನಡೆಸುತ್ತಿದೆ. ಈ ಶಿಬಿರದಲ್ಲಿ ಮಕ್ಕಳಿಗೆ ಭಾರತೀಯ ಕ್ರೀಡೆ, ಕಲೆ, ಸಾಹಿತ್ಯ, ಆದರ್ಶ ಮಹಾತ್ಮರ ಪರಿಚಯ, ಪರಂಪರೆ, ಸಂಸ್ಕಾರಗಳ ತರಬೇತಿ ನೀಡಲಾಗುತ್ತಿದೆ. ಇವುಗಳ ಜೊತೆಯಲ್ಲಿ ನೀಡುವ ಯೋಗ ತರಬೇತಿಯು ಮಕ್ಕಳಲ್ಲಿ ಆತ್ಮಸ್ಥೈರ್ಯ, ನೈತಿಕ ಬಲಗಳನ್ನು ಹೆಚ್ಚಿಸಿ ಅವರು ಸುಸಂಸ್ಕೃತರಾಗಿ ಬೆಳೆಯಲು ಸಹಾಯಕವಾಗುತ್ತದೆ. ಹೀಗೆ ಯೋಗ ಪಾಠಶಾಲೆಯು ಸಾಂಸ್ಕೃತಿಕವಾಗಿ ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೋಳಿಸುತ್ತಿದೆ.
ಅಧ್ಯಾತ್ಮ ಸೇವೆ : ಇಂದು ನಾವು ವೈಜ್ಞಾನಿಕವಾಗಿ ಮುಂದುವರೆದು ಇಡೀ ವಿಶ್ವವೇ ನಮ್ಮ ಅಂಗೈಯಲ್ಲಿ ಇದ್ದರೂ ಅಧ್ಯಾತ್ಮ ಕೊರತೆಯಿಂದ ಹೆಚ್ಚಿನ ಪ್ರಯೋಜನ ಇಲ್ಲವಾಗಿದೆ. ಆಧ್ಯಾತ್ಮ ಎಂದರೆ ನಂಬಿಗೆ, ಒಳ್ಳೆಯದು ಎಂದು ಅರ್ಥೈಸಬಹುದು. ವ್ಯಕ್ತಿಯಲ್ಲಿ ವಿಶ್ವಾಸ ಮತ್ತು ಒಳ್ಳೆಯದನ್ನು ಗುರುತಿಸುವ ಮನೋಭಾವ ಹೆಚ್ಚಿಸಲು ಯೋಗ ಪಾಠಶಾಲೆಯು ತನ್ನ ಸಮೂಹ ಸಂಸ್ಥೆಗಳ ಜೊತೆಯಲ್ಲಿ ಪ್ರತಿ ತಿಂಗಳಿನ ಕೊನೆಯ ಬುಧವಾರದಂದು “ಮಾಸಿಕ ವಚನ ಶ್ರವಣ” ಕಾರ್ಯಕ್ರಮ ನಡೆಸುತ್ತಿದೆ. ಈ ಕಾರ್ಯಕ್ರಮದಲ್ಲಿ ಶಿವಶರಣರ ವಚನ ಮತ್ತು ಮಹಾತ್ಮರು, ಸಾಧು ಸತ್ಪುರುಷರು ತಿಳಿಸಿದ ಮಾತುಗಳ ಕುರಿತು ಅನುಭವಿಕರು ಉಪನ್ಯಾಸ ನೀಡುತ್ತಾರೆ. ಈಗಾಗಲೇ 47 ಮಾಸಿಕ ವಚನ ಶ್ರವಣ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಹಾಗೇಯೆ ಧರ್ಮ ಭಾವ ಬೆಳೆಸಲು ಪ್ರತಿವರ್ಷ ಶ್ರಾವಣ ಮಾಸದಲ್ಲಿ ಒಂದು ವಾರ ಕಾಲ “ಸಾಪ್ತಾಹಿಕ ವಚನ ಶ್ರಾವಣ” (ವಚನ ಸಪ್ತಾಹ) ಕಾರ್ಯಕ್ರಮ ನಡೆಸಿ ಆ ಕಾರ್ಯಕ್ರಮದಲ್ಲಿ ಒಂದು ವಾರ ಕಾಲ ದಿನಕ್ಕೊಂದು ವಚನ ವಿಶ್ಲೇಷಣೆಯನ್ನು ಬಲ್ಲಿದವರಿಂದ ತಿಳಿಸಲಾಗುತ್ತದೆ ಇಂತಹ ಕಾರ್ಯಕ್ರಮಗಳಿಂದ ವ್ಯಕ್ತಿಯಲ್ಲಿ `ಸ್ವಧರ್ಮ ರಕ್ಷಣೆ ಪರಧರ್ಮ ಸಂಹಿಷ್ಣುತೆ’ ಭಾವ ಮೂಡಿ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುವುದು.
ರಾಷ್ಟ್ರ ಸೇವೆ : ರಾಷ್ಟ್ರ ಸೇವೆ ಎಂದರೆ ರಾಷ್ಟ್ರೋನ್ನತಿಗಾಗಿ ಸಮಾಜ ಅಭಿವೃದ್ಧಿಗಾಗಿ ಸರಕಾರ ಕೈಕೊಂಡ ಯೋಜನೆ ಯೋಚನೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದು. ಇಲ್ಲವೆ ಸ್ವತಃ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವದು ರಾಷ್ಟ್ರ ಸೇವೆಯಾಗಿದೆ. ಈ ನಿಟ್ಟಿನಲ್ಲಿ ಯೋಗ ಪಾಠಶಾಲೆಯು ರಾಷ್ಟ್ರ ಪ್ರಗತಿಗಾಗಿ ಪೂರಕವಾಗುವ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡು ಅವುಗಳನ್ನು ರಾಷ್ಟ್ರೀಯ ಹಬ್ಬ, ನಾಡ ಹಬ್ಬ, ದಿನಾಚರಣೆ, ಜಯಂತ್ಯೋತ್ಸವ, ಸ್ಮರಣೋತ್ಸವ, ಮುಂತಾದ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಕಾರ್ಯಗತಗೊಳಿಸುವದು ಉದಾಹರಣೆಗಾಗಿ ಹೊಸ ವರ್ಷಾಚರಣೆಯನ್ನು ಹರ್ಷೋತ್ಸವ ಎಂದು, ಮಕರ ಸಂಕ್ರಾಂತಿಯನ್ನು ಸಂಕ್ರಾಂತಿ ಸಂಭ್ರಮ ಎಂದು ವಿಶ್ವ ಪರಿಸರ ದಿನದಂದು ವನಮಹೋತ್ಸವ ಆಚರಿಸುವುದು. ಅಂತರಾಷ್ಟ್ರೀಯ ಯೋಗ ದಿನ ನಿಮಿತ್ತ ಯೋಗ ಸಪ್ತಾಹ ಕಾರ್ಯಕ್ರಮ ಆಚರಿಸುವುದು ಶಿಕ್ಷಕರ ದಿನಾಚರಣೆ ದಿನ ಯೋಗ ಕೋರ್ಸ್, ವರ್ಗಗಳ ಪ್ರಾರಂಭೋತ್ಸವ, ಪ್ರಕೃತಿ ಚಿಕಿತ್ಸಾ ದಿನಾಚರಣೆ ಮುಂತಾದವುಗಳು.
ವಿಶೇಷವಾಗಿ ರಾಷ್ಟ್ರ ಸೇವೆ ಸಲ್ಲಿಸುವುದಕ್ಕೋಸ್ಕರ ಪ್ರತಿ ತಿಂಗಳಿನ ಪ್ರತಿ ರವಿವಾರ ದಿನ ಯೋಗ ತರಬೇತಿ ನಂತರ “ಅನ್ವೇಷಣೆ” ಕಾರ್ಯಕ್ರಮ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ಪ್ರಚಲಿತ ವಿಷಯ, ಸಮಸ್ಯೆ-ಸಮಾಧಾನಗಳ ಕುರಿತು ಚರ್ಚೆ ಮಾಡಲಾಗುವುದು. ಅಂದರೆ 12 ನೇ ಶತಮಾನದ ಅನುಭವ ಮಂಟಪ ಮಾದರಿಯಲ್ಲಿ `ಅನ್ವೇಷಣ’ ಕಾರ್ಯಕ್ರಮ ನಡೆಸುವುದು. ಈಗಾಗಲೆ 381 “ಅನ್ವೇಷಣೆ” ಕಾರ್ಯಕ್ರಮಗಳು ನಡೆದಿವೆ.
ಇಷ್ಟೆಲ್ಲ ಸೇವೆಗಳ ಸಫಲತೆಗೆ ಯೋಗ ಪಾಠಶಾಲೆಯ ಸಮೂಹ ಸಂಸ್ಥೆಗಳಾದ ಬಸವ ಯೋಗ ಕೇಂದ್ರ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ, ಬಸವ ಯೋಗ ಚಿಂತನ ಕೂಟ, ಕುಮಾರೇಶ್ವರ ಯೋಗ ಜಿಮ್, ಹಳೆಯ ವಿದ್ಯಾರ್ಥಿಗಳ ಸಂಘ ಇವುಗಳ ಸಹಕಾರ ಮತ್ತು ಪ್ರಸ್ತುತ ಶ್ರೀಮಠದ ಧರ್ಮಾಧಿಕಾರಿಗಳಾದ ಪೂಜ್ಯಶ್ರೀ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮಿಗಳವರ ಕೃಪಾಶೀರ್ವಾದ, ಸಾರ್ವಜನಿಕರ ಪ್ರೋತ್ಸಾಹಗಳು ಯೋಗ ಪಾಠಶಾಲೆಗೆ ಮೂಲ ಬಂಡವಾಳಗಳಾಗಿವೆ. ಇನ್ನೂ ತನಕ ಸರಕಾರದಿಂದ ಯಾವದೇ ರೀತಿಯ ಅನುದಾನ ಮೊತ್ತವನ್ನು ಪಡೆಯದಿರುವುದು ವಿಶೇಷವಾಗಿದೆ.
ಯೋಗ ಪಾಠಶಾಲೆಯು ಮುಂಬರುವ 2025 ಕ್ಕೆ ತನ್ನ ಸುವರ್ಣೋತ್ಸವ (1975-2025) ಆಚರಣೆಯ ಸವಿನೆನಪಿಗಾಗಿ ಸುಸಜ್ಜಿತ ಯೋಗ ಮಂದಿರ, ಯೋಗ ಗ್ರಂಥಾಲಯ, ಯೋಗ ವಸ್ತು ಸಂಗ್ರಹಾಲಯ, ಯೋಗ ಉದ್ಯಾನವನ, ಯೋಗ ಚಿಕಿತ್ಸಾಲಯ ಯೋಗ ಸಂಶೋಧನಾಲಯಗಳನ್ನು ನಿರ್ಮಿಸುವ ಯೋಜನೆಗಳ ಸಿದ್ಧತೆ ನಡೆಸಿದೆ. ಇದಕ್ಕಾಗಿ ಎಸ್.ವಾಯ್.ಬಿ.ಎಂ.ಎಸ್. ಯೋಗ ಪಾಠಶಾಲೆಯ ಅಭಿವೃದ್ಧಿ ಸೇವಾ ಸಮಿತಿ ಸ್ಥಾಪಿಸಲಾಗಿದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಶ್ರೀ ಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆಯು ಯೋಗ ಪ್ರಸಾರ ಸೇವೆಯನ್ನು ಯೋಗ ಶಿಬಿರ, ಸ್ಪರ್ಧೆ, ತರಬೇತಿವರ್ಗ, ಉಪನ್ಯಾಸ, ಕಾರ್ಯಾಗಾರ, ವಿಚಾರ ಸಂಕಿರಣ, ಸಮ್ಮೇಳನ, ಉತ್ಸವಗಳ ಮೂಲಕ ಕಳೆದ ನಾಲ್ಕು ದಶಕಕ್ಕಿಂತಲೂ ಹೆಚ್ಚು ಕಾಲ ಉಚಿತವಾಗಿ ನಿತ್ಯ ನಿರಂತರವಾಗಿ ಎಲೆಮರೆಯ ಕಾಯಿಯಂತೆ ಯೋಗ ಪ್ರಸಾರ ಸೇವೆಯಲ್ಲಿ ನಿರತವಾಗಿರುವದು ಶ್ಲಾಘನೀಯ ವಿಷಯವಾಗಿದೆ.
ಯೋಗ ಪ್ರಸಾರ ಸೇವೆಗೆ ಸರಕಾರ ಮತ್ತು ಸಾರ್ವಜನಿಕರ ಪ್ರೋತ್ಸಾಹ ದೊರೆತರೆ ಸದೃಢ, ಸಮೃದ್ಧ ಭಾರತ ನಿರ್ಮಾಣವಾಗುವಲ್ಲಿ ಸಂದೇಹವಿಲ್ಲ. ಈ ಕಾರ್ಯ ಯಶಸ್ಸಿಗೆ ನಾವೆಲ್ಲರೂ ಕೈಜೋಡಿಸೋಣ. ಯೋಗ ಕಲಿಯೋಣ-ಕಲಿಸೋಣ. `ಯೋಗದಿಂದ ಆರೋಗ್ಯ-ಆರೋಗ್ಯದಿಂದ ಅಭಿವೃದ್ಧಿ’ ವಾಣಿ ಸಾರ್ಥಕಗೊಳಿಸೋಣ.
–