ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ  ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್‌ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ  ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )ಮೇ ೨೦೨೧ ರ ಸಂಚಿಕೆ

ಪ್ರಸ್ತಾವನೆ

‘ ‘ ತಮೇವ ವಿದಿತ್ವಾತಿಮೃತ್ಯುಮೇತಿ

ನಾನ್ಯ : ಪಂಥಾ ವಿದ್ಯತೇ ಅಯನಾಯ ‘ ||

ಆತ್ಮತತ್ತ್ವವನ್ನು ಅರಿತು ಮೃತ್ಯುವನ್ನು ಮೀರಬಹುದು . ಇದಕ್ಕಿಂತಲೂ ಭಿನ್ನವಾದ ಬೇರೊಂದು ಮೋಕ್ಷದ ಮಾರ್ಗವಿಲ್ಲವೆಂದು ಉಪನಿಷತ್ಕಾರರು ಸ್ವಾನುಭಾವವನ್ನು ಸೂಚಿಸಿದರೆ ; ಅಣ್ಣ ಬಸವಣ್ಣನವರು

 ……. ತಾನಾರೆಂಬುದ ಸಾಧಿಸಲಾಗದು ಕೂಡಲ ಸಂಗಮದೇವರ ಕರುಣವುಳ್ಳವಂಗಲ್ಲದೆ ”

ಎಂದಿದ್ದಾರೆ . ಸದ್ಗುರುವಿನ ಸತ್ಕೃಪೆಯಿಲ್ಲದೆ ತಾನಾರು ? ತನ್ನ ಗುರಿಯೇನು ? ಎಂಬುದನ್ನು ಸಾಧಿಸಲಿಕ್ಕಾಗದು . ಎಂಭತ್ನಾಲ್ಕು ಲಕ್ಷ ಜೀವಿಗಳಲ್ಲಿ ಮಾನವನು ಮಿಗಿಲಾಗಿದ್ದಾನೆ . ಮಾನವಕುಲ ಭಿನ್ನಕಾರಣಗಳಿಂದ ವಿಭಿನ್ನತೆಯನ್ನು ಹೊಂದಿದ್ದರೂ ಎಲ್ಲರ ಗಮ್ಯಸ್ಥಾನ ಒಂದೇ ಆಗಿದೆ . ಆತ್ಮದರ್ಶನ ಮಾಡಿಸುವ , ಮಾಡಿಕೊಳ್ಳುವ ಪ್ರವೃತ್ತಿ ಬಹು ಪುರಾತನವಾದುದು . ಜೀವ – ಜಗತ್ತು – ಈಶ್ವರ , ಈ ತ್ರಿಪುಟಿಯ ಯಥಾರ್ಥತೆಯನ್ನು ತಿಳಿಸಿಕೊಡುವ ದರ್ಶನ ಶಾಸ್ತ್ರಗಳು ವಿಭಿನ್ನ ಮಾರ್ಗವನ್ನು ಅನುಸರಿಸಿ , ಮುಖ್ಯವಾಗಿ ಷಡ್ದರ್ಶನಗಳಾದವು , ನ್ಯಾಯ , ವೈಶೇಷಿಕ , ಸಾಂಖ್ಯ , ಯೋಗ , ಪೂರ್ವಮೀಮಾಂಸೆ ಉತ್ತರಮೀಮಾಂಸೆಗಳೆಂದು ಷಡ್ದರ್ಶನ ಖ್ಯಾತಿಯಿದ್ದರೂ , ಶಿವಾದ್ವೈತಿಗಳು ಕಂಡ ವೀರಶೈವ ದರ್ಶನ ಅಮೂಲ್ಯವಾಗಿದೆ . ಉತ್ತರ ಮೀಮಾಂಸೆಯು ಅದ್ವೈತವನ್ನು ಹೇಳುತ್ತಿದ್ದರೆ ; ವೀರಶೈವ ದರ್ಶನವು ಶಕ್ತಿವಿಶಿಷ್ಟಾದ್ವೈತವನ್ನು ಪ್ರದಿಪಾದಿಸುತ್ತದೆ .

ಶಕ್ತಿ ವಿಶಿಷ್ಟಾದ್ವೈತದಲ್ಲಿ ಮುಖ್ಯವಾಗಿ , ಅಷ್ಟಾವರಣ , ಪಂಚಾಚಾರ , ಷಟ್ ಸ್ಥಲಗಳ ಸಮನ್ವಯವಿದೆ . ಇಲ್ಲಿ ವೈಚಾರಿಕತೆಯೊಡನೆ ಸತ್ಕ್ರಿಯೆಗಳ ಸಂಗಮವಿದೆ . ಅಂತೆಯೇ ಸತ್ಕ್ರಿಯಾ – ಸುಜ್ಞಾನಗಳ ಸಮಸಮುಚ್ಚಯದಲ್ಲಿ ಷಟ್‌ಸ್ಥಲ ಸಿದ್ಧಾಂತವು ರೂಪುಗೊಂಡಿದೆ . ಶುದ್ಧಾಂತಃಕರಣಿಯಾದ ಜೀವನು ಅಷ್ಟಾವರಣಾಂಗಿಯಾಗಿ , ಪಂಚಾಚಾರ ಪ್ರಾಣಿಯೆನಿಸಿ , ಷಟ್‌ಸ್ಥಲ ಮಾರ್ಗದಲ್ಲಿ ಮುನ್ನಡೆದು ಶೂನ್ಯ ಸಂಪಾದನೆಯನ್ನು ಸಾಧಿಸುವನು . ಅಂಗನು ಜಗತ್ತಿನ ಪ್ರತಿಯೊಂದು ಪದಾರ್ಥ ( ಗಂಧ – ರಸ – ರೂಪ – ಸ್ಪರ್ಶ – ಶಬ್ದ ) ಗಳನ್ನು ಪ್ರಸಾದಗೊಳಿಸಿ ಲಿಂಗದೇವನಿಗೆ ಸಮರ್ಪಿಸಿ ಅಂಗಲಿಂಗಗಳ ಸಮರಸವನ್ನು ಸಾಧಿಸುತ್ತಾನೆ . ನಿರ್ವಿಕಲ್ಪ ಸಮಾಧಿ ಗಿಂತಲೂ ಮೇಲ್ಮಟ್ಟದ ಸ್ಥಿತಿಯಾದ ಐಕ್ಯಸ್ಥಲದಲ್ಲಿ ಶೂನ್ಯವನ್ನು ಹೊಂದುತ್ತಾನೆ . ಅರ್ಥಾತ್ ಸಂಪಾದಿಸುತ್ತಾನೆ . ಇಲ್ಲಿ ಶೂನ್ಯವೆಂದರೆ ನಿಷೇಧವಲ್ಲ . ಎಲ್ಲವನ್ನು ಒಳಗೊಂಡ ಮಹಾಚೈತನ್ಯವೆಂದೇ ಅರ್ಥವಾಗುವದು . ಇಂಥ ಶೂನ್ಯವನ್ನು ಸಂಪಾದಿಸಿದವನಿಗೆ ಕಾಲ – ಕರ್ಮ – ಮಾಯೆಗಳ ಬಾಧೆಯಾಗುವದಿಲ್ಲ . ಅವನು ಸದ್ಯೋನ್ಮುಕ್ತನಾಗುವನು . ಆತನಿಗೆ ಪೂರ್ಣಾನುಭೂತಿಯಾಗಿ ಪೂರ್ಣಾನಂದ ಪ್ರಾಪ್ತಿಯಾಗುವದು . ಮಾನವೀಯ ಪರಿಪೂರ್ಣ ವಿಕಾಸ ಲಭ್ಯವಾಗಿ ದೇವತ್ವವನ್ನು ಅರ್ಥಾತ್ ಶಿವತ್ವವನ್ನು ಹೊಂದುವನು .

 ಈ ವೀರಶೈವ ದರ್ಶನವು ಆಗಮಗಳಲ್ಲಿ ಉಕ್ತವಾಗಿದ್ದು , ಸಿದ್ಧಾಂತ ಶಿಖಾಮಣಿ ಹಾಗೂ ೧೨ ನೆಯ ಶತಮಾನದ ಶರಣರ ವಚನ ಸಾಹಿತ್ಯದಲ್ಲಿ ಪರಿಷ್ಕಾರಗೊಂಡಿದೆ . ಬಸವಣ್ಣ , ಚನ್ನಬಸವಣ್ಣನವರು ಷಟ್‌ಸ್ಥಲಸಿದ್ಧಾಂತಕ್ಕೆ ಹೊಸರೂಪು ಕೊಟ್ಟರು . ಆಚರಣೆಯಲ್ಲಿ ತತ್ವವನ್ನು ಆಚರಿಸುವ ಬಗೆಯನ್ನು ಕಂಡರು . ೧೫ ನೇ ಶತಮಾನದಲ್ಲಿ ತೋಂಟದ ಸಿದ್ಧಲಿಂಗಯತಿಗಳು ‘ ಷಟ್‌ಸ್ಥಲ ಜ್ಞಾನಸಾರಾಮೃತ’ವನ್ನು ರಚಿಸಿ ಷಟ್‌ಸ್ಥಲ ಮಾರ್ಗವನ್ನು ಪುನರುಜೀವನಗೊಳಿಸಿದರು . ಜನಸಾಮಾನ್ಯರ ನಡೆನುಡಿಯಲ್ಲಿ ಈ ತತ್ವವನ್ನು ಮೈಗೂಡಿಸಿಕೊಳ್ಳುವ ದಿವ್ಯದರ್ಶನ ಮಾಡಿಸಿದವರು ೧೮ ನೆಯ ಶತಮಾನದಲ್ಲಿ ಬಳ್ಳಾರಿ ಜಿಲ್ಲೆಯ ಹಾಲವರ್ತಿ ಶಿವಾನುಭವ ಚರವರ್ಯರಾದ ಲಿಂಗನಾಯಕನಹಳ್ಳಿಯ ಶ್ರೀ ಚನ್ನವೀರ ಶಿವಯೋಗಿಗಳು , ಅಷ್ಟಾವರಣ – ಪಂಚಾಚಾರ – ಷಟ್‌ಸ್ಥಲಗಳನ್ನು ಸ್ವತಃ ತಾವು ಅಳವಡಿಸಿಕೊಂಡು ಶಿವಭಕ್ತರಿಗೂ ಸಾಧನೆಯ ಸುಲಭ ಮಾರ್ಗವನ್ನು ಬೋಧಿಸಿದರು . ಶಿವಾನುಭವ ಕೇಂದ್ರವನ್ನು ಸ್ಥಾಪಿಸಿ ಅನೇಕರ ಬಾಳನ್ನು ಬೆಳಗಿಸಿದ ಪರಂಜ್ಯೋತಿಗಳು ; ಇಂಥ ಸ್ವಯಂ ಜ್ಯೋತಿಯ ದಿವ್ಯಪ್ರಕಾಶದಲ್ಲಿ ಬೆಳಗಿದ ಶರಣಪುಂಗವ ಮೈಲಾರ ಬಸವಲಿಂಗ ಶರಣರು .

 ಹರಭಕ್ತರಾದ ಬಸವಲಿಂಗ ಶರಣರು ಹರದ ವೃತ್ತಿಯನ್ನು ಕೈಕೊಂಡು ಗುರು ಲಿಂಗ – ಜಂಗಮ ದಾಸೋಹಿಗಳಾಗಿ ಶಿವಾನುಭವವನ್ನು ಚನ್ನವೀರೇಶ್ವರರಿಂದ ಪಡೆದರು . ಅಚ್ಚ ವೀರಶೈವ ಸಂಸ್ಕೃತಿ ಇವರ ಕೃತಿಗಳಲ್ಲಿ ನಿರರ್ಗಳವಾಗಿ ಮೂಡಿ ಬಂದಿದೆ . ಶಿವನಿಗಿಂತಲೂ ಶಿವಭಕ್ತನೇ ಶ್ರೇಷ್ಠನೆಂಬುದನ್ನು ನಿರ್ಭಿತಿಯಿಂದ ವೈಚಾರಿಕವಾಗಿ ಪ್ರತಿಪಾದಿಸಿದ ಶರಣರಿವರು . ನ್ಯಾಯನಿಷ್ಟುರರಾಗಿ ಯಾವ ದಾಕ್ಷಿಣ್ಯಕ್ಕೆ ಒಳಗಾಗದ ಧೀರರು , ನಿಜವೀರಶೈವನ ನೈಜಾಚರಣೆಯನ್ನು ತತ್ವಬದ್ಧವಾಗಿ ತಿಳಿಸಿದ್ದಾರೆ . ಇವರು , ೧. ಷಟ್ಸ್ಥಲ ನಿರಾಭಾರಿ ವೀರಶೈವ ಸಿದ್ದಾಂತ , ೨ ಗುರುಕರುಣ ತ್ರಿವಿಧಿ ೩. ಶಿವಾನುಭವ ದರ್ಪಣ , ೪ , ಲಿಂಗಪೂಜಾ ವಿಧಾನಗಳು ಎಂಬ ನಾಲ್ಕು ಕೃತಿಗಳನ್ನು ರಚಿಸಿದ್ದಾರೆ . ಮೊದಲನೆಯದರಲ್ಲಿ – ಅಷ್ಟಾವರಣದ ಮಹತ್ವ , ಪಂಚಾಚಾರ ಹಾಗೂ ಧರ್ಮಾಚಾರಗಳನ್ನು ವಿವರಿಸಿದ್ದಾರೆ . “ ಗುರುಕರುಣ ತ್ರಿವಿಧಿ ‘ ಯಲ್ಲಿ ಮೇಲಿನ ಮೂರು ತತ್ತ್ವಗಳನ್ನು ಮನೋಜ್ಞವಾಗಿ ತುಂಬಿರಿಸಿದ್ದಾರೆ . ವಸ್ತುತಃ ಈ ತ್ರಿವಿಧಿಯ ಶಾಪವಿಮೋಚನೆಗಾಗಿ ರಚಿಸಿದ ಕೃತಿಯಲ್ಲ . ಜನ ವದಂತಿಯ ಮೂಲಕ ಬೆಳೆದ ಶಾಪದ ಸಂಗತಿ ಸತ್ಯಕ್ಕೆ ದೂರವಾಗಿದೆ , ಏಕೆಂದರೆ ಈ ಶಿವಕವಿಯ ವೈಚಾರಿಕತೆ , ಆಳವಾದ ಅನುಭವ , ತರ್ಕಬದ್ಧವಾದ ವಿಚಾರ , ವಿಮರ್ಶೆಗಳು ಮತ್ತು ಶಾಸ್ತ್ರೀಯ ಸಿದ್ಧಾಂತಗಳ ಪ್ರತಿಪಾದನೆ ಇದರಲ್ಲಿ ಮುಪ್ಪರಿಗೊಂಡಿವೆ .

ಈ ದಿಶೆಯಲ್ಲಿ ಗುರುಕರುಣ ತ್ರಿವಿಧಿಯು ಬಸವಲಿಂಗ ಶರಣರ ಅತ್ಯುತ್ತಮ ಕೃತಿಯೆಂದೇ ಹೇಳಬೇಕು . ಇದರಲ್ಲಿ ಸಮಗ್ರ ವೀರಶೈವ ದಾರ್ಶನಿಕ ಸಿದ್ಧಾಂತವು ಪ್ರತಿಪಾದಿತವಾಗಿದೆ . ವೀರಶೈವರ ಅಷ್ಟಾವರಣ , ಪಂಚಾಚಾರ ಷಟ್‌ಸ್ಥಲಗಳು ಒಂದಕ್ಕೊಂದು ಆಚರಣೆಯಲ್ಲಿ ಹೇಗೆ ಸಮನ್ವಯಗೊಳ್ಳುತ್ತವೆಂಬ ಪರಿಯನ್ನು ಬಹು ಸುಂದರವಾಗಿ ಈ ಚಿಕ್ಕ ಕೃತಿಯಲ್ಲಿ ವರ್ಣಿಸಿದ್ದು , ಅದರಿಂದ ಶಿವಕವಿಯ ಸ್ವಾನುಭಾವ ಹಾಗೂ ವಿಚಕ್ಷಣಮತಿಯ ಪರಿಚಯವಾಗುವದು . ತ್ರಿವಿಧಿಯಲ್ಲಿ ಕೇವಲ ೩೩೩ ತ್ರಿಪದಿಗಳಿದ್ದು , ಎರಡೇ ಸಾಲಿನಲ್ಲಿ ಅಪಾರವಾದ ತತ್ತ್ವವನ್ನು ಹಿಡಿದಿರಿಸಿರುವ ಸಾಹಸ ಶರಣರದು .

 ಆಲದ ಮರದ ಬೀಜ ಬಹು ಚಿಕ್ಕದಾಗಿದ್ದರೂ ಮರ ಅದೆಷ್ಟು ವಿಸ್ತಾರವಾಗಿರುವುದೋ ಅದರಂತೆ ಈ ತ್ರಿವಿಧಿಯಲ್ಲಿ ಸಮಗ್ರ ವೀರಶೈವ ಸಿದ್ಧಾಂತದ ದರ್ಶನವನ್ನೇ ಮಾಡಿಕೊಳ್ಳಬಹುದು . ಬಹುಶಃ ಇದು ಗುರುಸ್ತುತಿಗೈದ ಪಾರಾಯಣ ತ್ರಿವಿಧಿಯೆಂಬುದಾಗಿಯೇ ಬಹುಜನರ ತಿಳುವಳಿಕೆಯಾಗಿತ್ತು . ಇಂಥ ಮಹತ್ವಪೂರ್ಣ ಕೃತಿಯ ಅಧ್ಯಯನ ಮಾಡುವ ಸದವಕಾಶ ದೊರೆತುದು , ಮಹಾಶಿವಯೋಗಿಗಳ ಸತ್ಪ್ರೇರಣೆಯೇ ಇರಬೇಕು . ಪೂಜ್ಯ ಗುರುವರ್ಯರ ಅಪ್ಪಣೆಯಂತೆ ಮುಂಡರಗಿಯ ಕೆಲವು ಸದ್ಭಕ್ತರ ಮನೆಗಳಲ್ಲಿ ಶ್ರಾವಣ ಮಾಸದ ಪ್ರಯುಕ್ತ ಈ ‘ ಗುರುಕರುಣ ತ್ರಿವಿಧಿ’ಯು ಪಾರಾಯಣಗೈಯ್ಯಲ್ಪಡುತ್ತದೆ . ಆ ಭಕ್ತರ ಪಾರಾಯಣವೇ ಈ ಕೃತಿ ರಚನೆಗೆ ಕಾರಣ . ಈ ತ್ರಿವಿಧಿ ಚಿಕ್ಕದಾಗಿದ್ದರೂ ಅದನ್ನು ಅರ್ಥೈಸುವದು ಸುಲಭ ಸಾಧ್ಯವಲ್ಲ . ಸಂಸಾರ ಹೇಯಸ್ಥಲದಲ್ಲಿ ಬರುವ ಬೆಡಗಿನ ತ್ರಿಪದಿಗಳಾಗಲಿ , ಸ್ವಾನುಭಾವಾಚರಣೆಯನ್ನು ಸೂಚಿಸುವ ತ್ರಿಪದಿಗಳಾಗಲಿ ಅರ್ಥಪೂರ್ಣವಾಗಿವೆ . ಅನೇಕಾರ್ಥಗಳನ್ನು ವ್ಯಕ್ತಗೊಳಿ ಸುವಲ್ಲಿ ಶಿವಕವಿಯ ಪ್ರತಿಭೆ ಘನವಾದುದು . ಈ ಶರಣರಿಗಿರುವ ಬಹುಗ್ರಂಥಗಳ ಅಧ್ಯಯನ ಫಲವಾಗಿ ಶಿವಾನುಭವವನ್ನು ಕೇಳಿದ ಪರಿ ( ಶಾಸ್ತ್ರಶ್ರವಣ ) ಸತ್ಕ್ರಿಯ ಸುಜ್ಞಾನಗಳಾಚರಣೆಯಲ್ಲಿಯ ಸ್ವಾನುಭವವು ಈ ಕೃತಿಯಲ್ಲಿ ವ್ಯಕ್ತವಾಗಿವೆ .

ಇಂಥ ಮಹತ್ವದ ಕೃತಿಯನ್ನು ಅಭ್ಯಸಿಸಿ , ಅನುಭವಿಸುವಲ್ಲಿ ಅಂತಃಪ್ರೇರಣೆ ಯಾದುದು ನಿರಾಭಾರಿ ಗುರುವಿನದೆಂಬುದರಲ್ಲಿ ಸಂಶಯವಿಲ್ಲ . ಸುಜ್ಞಾನ ಜಂಗಮನ ಸರಣೆಯೇ ಹಿನ್ನೆಲೆಯಾಗಿ ವೀರಶೈವ ದಾರ್ಶನಿಕ ಸಿದ್ಧಾಂತ ಮೂಡಿ ಬಂದಿದೆ . ಎರಡು ಸಲದ ಅನುಷ್ಠಾನದ ಫಲವೇ ಈ ಕೃತಿ , ಮೌನಾನುಷ್ಠಾನ ಮಾಡಿ ಅರ್ಚನ ಅರ್ಪಣಗಳನ್ನು ಪೂರೈಸಿ , ಗುರುಕರುಣ ತ್ರಿವಿಧಿಯ ತಿರುಳನ್ನು ಅನುಭವ ಮಾಡಿಕೊಳ್ಳಲು ಪ್ರಯತ್ನಿಸಲಾಯಿತು . ಸನ್ ೧೯೭೫ ರ ಶ್ರಾವಣ ಮಾಸದಲ್ಲಿ ಪ್ರಾರಂಭವಾಗಿ ಕೇವಲ ೧೩೦ ತ್ರಿಪದಿಗಳ ವಿವರಣೆ ನೀಡಿಯಾಯಿತು . ಪ್ರಥಮ ಪ್ರಯತ್ನದಲ್ಲಿ ಅತಿ ಕಠಿಣವಾದ ವಿಷಯಗಳನ್ನು ಹೇಗೆ ವಿಮರ್ಶಿಸಬೇಕೆಂದು ವಿಚಾರಿಸುತ್ತ ಪೂಜೆಯನ್ನು ಪೂರೈಸಿ , ಶ್ರೀಗುರು ಕುಮಾರೇಶ್ವರನ ಗ್ರಂಥಾಲಯದಲ್ಲಿ ಮಂಡಿಸುತ್ತಿದ್ದಂತೆ ಚಿದ್ಗುರು ಕುಮಾರ ಶಿವಯೋಗಿ ಹಾಗೂ ಅನ್ನದಾನೀಶ್ವರರು ಅದೆಂತು ಬರೆಯಿಸಿದರೊ ಅರಿಯದ ವಿಷಯ . ೬೦೦ ಪುಟದ ಈ ಹೆಬ್ಬೊತ್ತಿಗೆಯನ್ನು ೧೯೭೫-೭೯ರಲ್ಲಿ ೩೦ + ೨೧ ಒಟ್ಟು ದಿನಗಳ ಅನುಷ್ಠಾನ ಕಾಲದಲ್ಲಿ ಪ್ರತಿ ಪಾದಿಸುವ ಪ್ರಸಂಗ ಕೇವಲ ೫೧ ಆಶ್ಚರ್ಯಕರವೆಂದೇ ಹೇಳಬೇಕು . ಕಾರ್ಯ ಬಾಹುಳ್ಯದಿಂದ ಎರಡನೆಯ ಸಲು ಅನುಷ್ಠಾನ ವಿಲಂಬವಾದರೂ ‘ ಗುರುಕರುಣ ತ್ರಿವಿಧಿ’ಯ ಯಥಾರ್ಥ ದರ್ಶನವಾಯಿತು . ಇದು ಕೇವಲ ತ್ರಿವಿಧಿಯಲ್ಲ ; ಇದರಲ್ಲಿ ‘ ವೀರಶೈವ ದಾರ್ಶನಿಕ ಸಿದ್ಧಾಂತವೇ ತುಂಬಿದೆಯಲ್ಲ . ೧೫ ನೆಯ ಶತಮಾನದಲ್ಲಿ ರೂಪುಗೊಂಡ ಶೂನ್ಯ ಸಂಪಾದನೆ ಗ್ರಂಥಗಳ ಫಲಶೃತಿಯೆಂಬುದು ಇಲ್ಲಿ ಪ್ರಾಪ್ತವಾಯಿತು . ಆ ಶೂನ್ಯ ಸಂಪಾದನೆಗಳು ಶೂನ್ಯಸಂಪಾದನೆ ಮಾಡಿಕೊಂಡ ಮಹಾನುಭಾವಿಗಳ ದಿವ್ಯ ನಿಲುವನ್ನು ಎತ್ತಿ ತೋರಿಸುವ ಪ್ರಸಂಗಗಳನ್ನು ನಿರೂಪಿಸಿದೆ . ಅವುಗಳನ್ನು ಅರ್ಥೈಸುವದು ಸಾಮಾನ್ಯರ ಮಾತಲ್ಲ . ಅಲ್ಪರ ತುತ್ತಲ್ಲ . ಅವುಗಳನ್ನು ಅರ್ಥೈಸುವದು ಸುಲಭದ ಮಾತಲ್ಲ . ಅದು ಕಬ್ಬಿಣದ ಕಡಲೆ ಮಾತ್ರವಲ್ಲ . ಅದು ಉಕ್ಕಿನ ಕಡಲೆ ‘ ಎಂಬುದಾಗಿ ಪಂಡಿತರೇ ಅಭಿಪ್ರಾಯ ಪಡುತ್ತಿರುವಾಗ ಸಾಮಾನ್ಯರ ಮಾತೇನು ?

ಬಸವಲಿಂಗ ಶರಣರು ನಿರಾಭಾರಿ ಗುರುಗಳಾದ ಶ್ರೀ ಚನ್ನವೀರ ಶಿವಯೋಗಿ ಗಳಿಂದ ಚಿನ್ಮಯಾನುಗ್ರಹವನ್ನು ಹೊಂದಿದವರು . ವೀರಶೈವರಲ್ಲಿ ಸಾಭಾರಿ ಗುರು ದೀಕ್ಷೆಗೈದು ಲಿಂಗವನ್ನು ಕರುಣಿಸಿದರೂ ಆಗದು . ಪ್ರಾಥಮಿಕ , ಮಾಧ್ಯಮಿಕ , ಹಾಗೂ ಮಹಾವಿದ್ಯಾಲಯಗಳಲ್ಲಿ ಅಭ್ಯಸಿಸಿದರೂ ಪೂರ್ಣವಿದ್ಯೆ ಪ್ರಾಪ್ತವಾಗುವದಿಲ್ಲ . ಪುನಃ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಬೇಕಾಗುತ್ತದೆ . ಅದರ ಮೇಲೆ ಸ್ವಾಧ್ಯಾಯ – ಸ್ವಾನುಭಾವಗಳು ತನ್ನ ವ್ಯಕ್ತಿತ್ವವನ್ನು ರೂಪಿಸಬಲ್ಲವು . ಅದರಂತೆ ಹಿರಿಯ ಮಠದವರಾಗಲಿ , ಸಾಭಾರಿಗುರು ( ಪಟ್ಟಾಧಿಕಾರಿ , ಉಪಾಚಾರ್ಯ ) ಗಳಾಗಲಿ ಸಂಸ್ಕರಿಸಿದರೆ ಆಗುವದಿಲ್ಲ . ಅನುಗ್ರಹವನ್ನು ನಿರಾಭಾರಿ ಜಂಗಮ ದೇವನಿಂದಲೇ ಹೊಂದಬೇಕೆಂಬುದು ಈ ತ್ರಿವಿಧಿಯಲ್ಲಿ ಸ್ಪಷ್ಟವಾದ ವಿವರಣೆ ನೀಡಿದೆ . ಲಿಂಗದೀಕ್ಷೆ ಮಾಡಿದ ಗುರು ಲಿಂಗದಪ್ರಾಣನಾಗುವದಿಲ್ಲ . ಸೂರ್ಯ – ಚಂದ್ರರಿಬ್ಬರೂ ಆತ್ಮ ಪ್ರಕಾಶದಿಂದ ಬೆಳಗುತ್ತಿದ್ದಂತೆ ಗುರು – ಲಿಂಗಗಳೆರಡೂ ಜಂಗಮ ಪ್ರಕಾಶದಿಂದಲೇ ಬೆಳಗಬಲ್ಲವೆಂಬುದು ಬಸವಲಿಂಗ ಶರಣರ ಈ ಕೃತಿಯಲ್ಲಿ ಪ್ರಮಾಣ ಪೂರ್ವಕ ಪ್ರತಿಪಾದಿತವಾಗಿದೆ . ಜಂಗಮಸ್ಥಲದ ಮಹತ್ವ ಹಾಗೂ ಜಂಗಮಾಧಿಕಾರದ ಘನತೆಗಳು ಇಲ್ಲಿ ಮೂಡಿಬಂದಿವೆ . ತತ್ತ್ವ ಸಮನ್ವಯ ಚನ್ನಾಗಿ ವಿಕಾಸ ಹೊಂದಿದೆ . ‘ ಶಿವಾನುಭವ ದರ್ಪಣ ” ದಲ್ಲಿ ತಾತ್ವಿಕ ಅನುಭಾವ ಪದ್ಯಗಳಿವೆ .

 “ ಗುರುಕರುಣ ತ್ರಿವಿಧಿ’ಯ ಸ್ಥೂಲ ನೋಟ ಕೆಳಗಿನಂತಿದೆ . ಶಿವಕವಿಗಳು ಅಷ್ಟಾವರಣವನ್ನು ಪ್ರಾಮುಖ್ಯವಾಗಿಟ್ಟುಕೊಂಡು ಪಂಚಾಚಾರಗಳನ್ನು ಮತ್ತು ಷಟ್‌ಸ್ಥಲಗಳನ್ನು ಅದರಲ್ಲಿಯೇ ಅಡಕಗೊಳಿಸಿದ್ದಾರೆ . ಏಕೆಂದರೆ , ಜೀವಾತ್ಮನ ಅಷ್ಟಾಂಗಗಳು ವ್ಯಕ್ತವಾಗಿರುವಂತೆ , ಅಷ್ಟಾವರಣವು ಸ್ಪುಟವಾಗಿದೆ . ಪಂಚಪ್ರಾಣಗಳು ಶರೀರದಲ್ಲಿ ಅವ್ಯಕ್ತವಾಗಿರುವಂತೆ , ಪಂಚಾಚಾರಗಳು ಅಳವಟ್ಟಿವೆ . ಷಟ್‌ಸ್ಥಲಾತ್ಮವು ಅಷ್ಟಾವರಣಾಚರಣೆಯಿಂದ ವ್ಯಕ್ತವಾಗುತ್ತದೆ . ಪ್ರಥಮತಃ ನಿರಾಭಾರಿ ಗುರುವಿನ ಸ್ತುತಿಗೈದು ಸಾಭಾರಿ ಸದ್ಗುರುವಿನ ಸ್ವರೂಪವನ್ನು , ಮಹತ್ವವನ್ನು ತಿಳಿಸಿ ಈ ಗುರುವಿನ ಅವಶ್ಯಕತೆಯೇನೆಂಬುದನ್ನು ವಿವರಿಸಿದ್ದಾನೆ . ಅವಶ್ಯಕತೆಯ ಅರಿವಾಗುತ್ತಿದ್ದಂತೆ ಆತನನ್ನು ಹೃದಯ ತುಂಬಿ ಹಾಡಿದ್ದಾನೆ . ಗುರುದೀಕ್ಷೆ ಪಡೆದವನು ಲೌಕಿಕ ತಂದೆ – ತಾಯಿ ಬಂಧುಬಳಗವನ್ನು ತ್ಯಜಿಸಿ ಗುರುವಿನಲ್ಲಿಯೇ ಎಲ್ಲವನ್ನು ಕಾಣಬೇಕು . ಸದ್ಗುರುವನ್ನೇ ಸರ್ವಸ್ವವೆಂದು ಆರಾಧಿಸಿದರೆ ಗುರು ಕೃಪೆ ತೀವ್ರ ಲಭಿಸುವದೆಂಬುದು ಸ್ಪಷ್ಟವಾಗುತ್ತದೆ . ಯುಗಪ್ರಜ್ಞೆಯುಳ್ಳ ಗುರು ಶಿಷ್ಯನ ಯೋಗಕ್ಷೇಮವನ್ನು ಚಿಂತಿಸುತ್ತಾನೆ . ತನ್ನ ನಂಬಿದ ಶಿಷ್ಯನ ಬಗೆಗೆ ಕನಿಕರವಾಗುತ್ತದೆ . ಸಂವೇದನೆಯಾಗುತ್ತದೆ . ಅದು ಅವಶ್ಯ . ಅವನೇ ಸದ್ಗುರು !

ಗುರುವಿನ ಸಂವೇದನೆಯ ನಗುವೆ ಈ ದಾರ್ಶನಿಕ ಸಿದ್ಧಾಂತದ ಬೀಜವನ್ನ ಬಹುದು . ಜೀವಕೋಟಿ ಹುಟ್ಟಿ ಎಡರು ಕಂಟಕಗಳಲ್ಲಿ ಬಳಲಿ ವ್ಯರ್ಥವಾಗಿ ಸಾಯುವದು ಯಾವ ಹಿತೈಷಿಗೆ ನೆಮ್ಮದಿಯಾದೀತು ! ಸಾವಿನ ಅಧಿಪತಿಯಾದ ಯಮನು ಕೋಣನ ಸವಾರಿ ಮಾಡುವಲ್ಲಿ ಸಾಂಕೇತಿಕತೆಯನ್ನು ಇರಿಸಿ ಶಿವಕವಿಯು ಸಾವಿನ ಕಾರಣವನ್ನು ಮುಂದೆ ಸೂಚಿಸುತ್ತಾನೆ . ಕಾಮಕೇಳಿಯಲ್ಲಿ ಮೈಮರೆತ ಮಾನವನು ಮಾಯಾ ಬಂಧನದಲ್ಲಿ ಸಿಲುಕುತ್ತಾನೆ . ಶರಣ ಸಿದ್ದಾಂತದಂತೆ ಮಾಯೆ ಹೊರಗಿನದಲ್ಲ . ಮನದ ಮುಂದಣ ಆಶೆಯೇ ಮಾಯೆಯಾಗಿ ಮನುಷ್ಯನನ್ನು ಕಾಡುತ್ತದೆ . ಕಾಮನ ಉರವಣಿಗೆಯಲ್ಲಿ ಮಹಾಮಾರಿ ಮಾಯೆಯ ಉಪಟಳಕ್ಕೆ ಬಲಿಯಾಗುವ ಈ ಕಾಯದ ಉತ್ಪತ್ತಿಯ ಬಗೆಯನ್ನು ಮಾರ್ಮಿಕವಾಗಿ ತಿಳಿಸುತ್ತಾನೆ ಪಂಚಭೂತಗಳ ಭಯಾನಕತೆಯನ್ನು ತಿಳಿಸುತ್ತ ಪಂಚಭೂತಗಳ ಪಂಚೀಕರಣದ ಕಾರಣದಿಂದಲೇ ಶರೀರವಾಯಿತೆಂದು ವಿವರಿಸುವನು . ಪಂಚಭೂತಮಯವಾದ ದೇಹವಿಕಾರದ ಅರಿವನ್ನು ಬಹುಸುಂದರವಾಗಿ ನೀಡುತ್ತಾನೆ . ಅಜ್ಞಾನಿಯಾದ ಜೀವಿಯು ಅಷ್ಟಮದಗಳಿಂದ ಸಪವ್ಯವಸನಗಳನ್ನು ಅನುಭವಿಸುವದು ಗಾಳಿಗಿಕ್ಕಿದ ಸೊಡರೆಂಬುದನ್ನು ಸೂಚಿಸುತ್ತಾನೆ . ಮತ್ತೆ ಒಂದೊಂದಾಗಿ ಪಂಚೇಂದ್ರಿಯಗಳ ಪಂಚವಿಷಯಗಳ ಪ್ರಸ್ತಾಪ ಮಾಡುವಲ್ಲಿ ಶಿವಕವಿಯ ಐತಿಹಾಸಿಕ ಪ್ರಜ್ಞೆ , ತೀರ್ಥಕ್ಷೇತ್ರಗಳ ಪರಿಚಯ , ವ್ಯವಹಾರಿಕ ಜ್ಞಾನ , ಯೌಗಿಕ ಪ್ರತಿಭೆಗಳು ವ್ಯಕ್ತವಾಗಿವೆ . ಪಂಚವಿಷಯಗಳ ಪರಿಚಯ ನೀಡಿ ಅಂತಃಕರಣ ಚತುಷ್ಟಯ ಹಾಗೂ ಗುಣತ್ರಯ ಪ್ರಸ್ತಾಪ ಮಾಡಿದ್ದಾನೆ . ಈ ಎಲ್ಲ ವಿಚಾರಗಳನ್ನು ತಿಳಿಯುತ್ತಿರಲು ಸಂಸಾರ ಹೇಯವೆನಿಸುವದು ಸಹಜ . ಸಂಸಾರ ಬಂಧನದಿಂದ ತನು ತಾಪಗಳಿಂದ ಮುಕ್ತನಾಗಲು ಗುರುವಿನಲ್ಲಿ ಶಿಷ್ಯನು ಪ್ರಾರ್ಥಿಸುತ್ತಾನೆ . ಗುರುಕರುಣ ತ್ರಿವಿಧಿಯ ನಿರೂಪಣೆ ಕ್ರಮಬದ್ಧ ಕಥಾನಕದಂತೆ ಸಾಗಿದೆ . ತ್ರಿಪದಿಯ ಯಾವ ಪದಗಳೂ ವ್ಯರ್ಥವಾಗಿ ಪ್ರಯೋಗಿಸಲ್ಪಟ್ಟಿಲ್ಲ . ಪ್ರತಿ ಶಬ್ದಗಳು ತನ್ನ ವೈಶಿಷ್ಟ್ಯವನ್ನು ಪಡೆದಿವೆ . ಸಂಸಾರಹೇಯಸ್ಥಲದ ತ್ರಿಪದಿಗಳು ಶ್ಲೇಷವಾಗಿವೆ . ೩-೪ ಅರ್ಥಗಳನ್ನು ಅಭಿವ್ಯಂಜಿಸಿವೆ . ೫೦ ನೆಯ ತ್ರಿಪದಿಯಂತೂ ವೀರಶೈವ ಸಿದ್ದಾಂತವನ್ನು ಬೋಧಿಸುವ ಪರಿಣಿತ ಪ್ರಜ್ಞೆಯ ದ್ಯೋತಕವಾಗಿದೆ . ಅದೆಷ್ಟು ಅರ್ಥಗಳನ್ನು ಮಾಡಿದರೂ ತ್ರಿಪದಿಯ ಅಂತಃಸತ್ವ ವ್ಯಕ್ತವಾಗುತ್ತದೆ .

 ಶಿಷ್ಯನ ಪ್ರಾರ್ಥನೆಯಂತೆ ಗುರುಕಾರುಣ್ಯದಿಂದ ದೊರೆಯುವದೇ ಲಿಂಗ , ನುಡಿಯ ಬ್ರಹ್ಮವು ನಡೆಗೆ ಬಂದು ಇಷ್ಟಲಿಂಗವೆನಿಸುವದು . ಈ ಲಿಂಗ ಹೊರಗಿನದಲ್ಲ ; ಶಿಷ್ಯನ ಚಿಚ್ಛೈತನ್ಯವೇ ಸದ್ಗುರುವಿನ ಯೋಗಶಕ್ತಿಯಿಂದ ಅರುಹಿನ ಕುರುಹಾಗಿ ಕಾಣಿಸಿಕೊಂಡುದೇ ಇಷ್ಟಲಿಂಗ ದೇಹದ ನವಚಕ್ರಗಳಲ್ಲಿಯ ನವಬ್ರಹ್ಮರು ಇಷ್ಟಲಿಂಗದಲ್ಲಿ ನವಲಿಂಗಗಳಾಗಿ ರೂಪುಗೊಳ್ಳುವ ವಿಧಾನ ಅದ್ಭುತವಾದುದು . ಇಂಥ ಲಿಂಗಯೋಗಕ್ಕಿಂತ ಅಷ್ಟಾಂಗಯೋಗ ಕಷ್ಟ ಸಾಧ್ಯವೆಂತಲೂ ಶಾಂಭವ್ಯಾದಿ ಮುದ್ರೆಗಳೂ , ಹಠಯೋಗವೂ ಸಂಕಟದ ಮಾರ್ಗವೆಂದು ವಿಡಂಬಿಸಿ ಸುಲಭ ಸಾಧ್ಯವಾದ ಶಿವಯೋಗದ ಮರ್ಮವನ್ನು ತಿಳಿಸುತ್ತಾನೆ . ಲಿಂಗಾಂಗಯೋಗಕ್ಕೆ ಮೂಲವಾದ ಲಿಂಗದ ಲಕ್ಷಣ ಹಾಗೂ ವ್ಯಾಪ್ತಿಯನ್ನು ವಿವೇಚಿಸಿ ಈ ಲಿಂಗ ಮೂಲ ಪ್ರಣವರೂಪಿಯಾಗಿದೆಯೆಂದು ಪ್ರತಿಪಾದಿಸುತ್ತಾನೆ . ಲಿಂಗಷಟ್‌ಸ್ಥಲಗಳಲ್ಲಿ ಷಣ್ಮಂತ್ರದ ಸಂಬಂಧ ಮಾಡಿದಂತೆ ; ಅಂಗಸ್ಥಲಗಳಲ್ಲಿ ಲಿಂಗಧಾರಣ ಚಾರಿತ್ರವನ್ನು ವಿವೇಚಿಸುವಲ್ಲಿ ವೀರಶೈವ ಸಂಸ್ಕೃತಿ ಪ್ರಕಟವಾಗಿದೆ . ಲಿಂಗವಂತನ ಶ್ರೇಷ್ಠತೆಯ ಮರ್ಮ ವ್ಯಕ್ತವಾಗುವದು . ಈ ಇಷ್ಟಲಿಂಗವನ್ನು ಆಧಾರಾದಿ ಚಕ್ರಗಳಲ್ಲಿ ಅರ್ಚಿಸಿ ಮಹಾಲಿಂಗವನ್ನು ಬೆರೆಯುವ ಕ್ರಮವನ್ನು ತಿಳಿಸುತ್ತ ಕರ್ಮೇಂದ್ರಿಯಗಳಲ್ಲಿ ಕ್ರಿಯಾಲಿಂಗ ಸಂಬಂಧವನ್ನು ಜ್ಞಾನೇಂದ್ರಿಯಗಳಲ್ಲಿ ಪ್ರಾಣಲಿಂಗ ಸಂಬಂಧವನ್ನು , ಕರಣೇಂದ್ರಿಯಗಳಲ್ಲಿ ಭಾವಲಿಂಗ ಸಂಬಂಧವನ್ನು ತೋರಿಸಲಾಗಿದೆ . ಮೂರು ವಿಧದಲ್ಲಿ ತ್ರಿವಿಧ ಸಂಬಂಧ ಹಾಗೂ ತ್ರಿವಿಧಾಂಗದ ತ್ರಿವಿಧತೆಯನ್ನು ಹೇಳುವಲ್ಲಿ ಶಿವಕವಿಯ ಲಿಂಗತತ್ತ್ವದ ವ್ಯಾಪಕತೆ ಅವರ್ಣನೀಯವಾಗಿದೆ .

 ಲಿಂಗವು ಸರ್ವಾಂಗಗಳಲ್ಲಿ ಚೇತನಗೊಳ್ಳಲು ಜಂಗಮ ಕೃಪೆ ಅತ್ಯವಶ್ಯ , ಲಿಂಗದ ಪ್ರಾಣ ಜಂಗಮ . ಲಿಂಗದಮುಖ ಜಂಗಮವೆಂಬುದನ್ನು ಸಿದ್ಧಾಂತಗೊಳಿಸಿ ಜ್ಞಾನ ಜಂಗಮನ ನಿಲವನ್ನು ತಿಳಿಸುತ್ತ ಜಂಗಮನ ತ್ರಿವಿಧ ಸ್ವರೂಪವನ್ನು ಬಿತ್ತರಿಸುತ್ತಾನೆ . ಜಂಗಮದೇವನ ಕರ್ತವ್ಯವನ್ನು ಸೂಚಿಸುವವನಾಗಿ ನುಡಿದಂತೆ ನಡೆವ ಷಟ್‌ಸ್ಥಲದಿರವನ್ನು ಪ್ರತಿಪಾದಿಸುತ್ತಾನೆ . ಷಟ್‌ಸ್ಥಲವು ಜೀವನ ಸಿದ್ಧಾಂತವೆನಿಸಿದೆ . ಅನುಗ್ರಹವನ್ನು ಪಡೆದ ಶರಣನು ಈ ಮಾರ್ಗದಲ್ಲಿ ಮುನ್ನಡೆಯಬಲ್ಲನು . ಗುರುವಿನ ಗುರು ಜಂಗಮನಾಗಿರುವದರಿಂದ ಆತನ ಮಹತ್ವ ಅತಿಶಯವಾಗಿದೆ . ಜಂಗಮನು ಸಹಜಾಚರಣೆಯಿಂದಲೇ ಭಕ್ತೊದ್ಧಾರಗೈಯಬೇಕು . ಗುರು ಧರ್ಮ – ಕರ್ತೃವಾದರೆ ; ಜಂಗಮ ಧರ್ಮಸಂಶೋಧಕನೆಂಬುದನ್ನು ಶಿವಕವಿಯು ಸ್ಪಷ್ಟ ಪಡಿಸಿದ್ದಾನೆ . ಸಾರಾಯಸಂಪತ್ತಿನಲ್ಲಿ ಗುರು – ಲಿಂಗ – ಜಂಗಮ – ಪ್ರಸಾದಗಳು ಹೇಳಲ್ಪಡುವದರಿಂದ ತ್ರಿವಿಧ ವಸ್ತುಗಳ ಆರಾಧನೆ ಅವಶ್ಯವೆಂಬುದು ತಿಳಿಯುತ್ತದೆ . ಪೂಜ್ಯವಸ್ತುಗಳ ಪೂಜೆಯಲ್ಲಿ ಪಾದೋದಕ ಪ್ರಸಾದಗಳು ಪ್ರಾಪ್ತವಾಗುವವು . ಪ್ರಸಾದದಲ್ಲಿ ಪಾದೋದಕ , ಮಂತ್ರ , ಭಸ್ಮ , ರುದ್ರಾಕ್ಷಗಳು ಒಳಗೊಳ್ಳುವಂತೆ , ಜಂಗಮನಲ್ಲಿಯೂ ಗುರು – ಲಿಂಗಗಳು ಪರಿಪೂರ್ಣವಾಗಿರುತ್ತವೆ . ಅಂತೆಯೇ ಜಂಗಮಾರಾಧನೆಯೇ ಮುಖ್ಯವಾದುದು . ಪಾದೋದಕವು ಚಿದಮೃತವೆಂದು ವರ್ಣಿಸಲಾಗಿದೆ . ಇದರ ಮಹತ್ವವನ್ನು ತಿಳಿಸಿ ಪ್ರಸಾದವೇ ಸದ್ಭಕ್ತರನ್ನು ಪೊರೆವ ಮಹಾತಾಯಿಯೆಂದು ಪ್ರತಿಪಾದಿಸಲಾಗಿದೆ . ಚತುರ್ವಿಧ ಸಾರಾಯ ಸಂಪತ್ತನ್ನು ಮೈಗೂಡಿಸಿ ಕೊಂಡರೆ ಧ್ಯಾನ – ಮೌನ ನೇಮ – ನಿತ್ಯಗಳೆಂಬ ಪರಿಣಾಮ ಪ್ರಾಪ್ತವಾಗುವ ಬಗೆ ಮಾರ್ಮಿಕವಾಗಿದೆ .

 ಅಷ್ಟಾವರಣದ ಸಾಧನಗಳಾದ ವಿಭೂತಿ – ರುದ್ರಾಕ್ಷ – ಮಂತ್ರಗಳ ಬಾಹ್ಯ ಸ್ವರೂಪ ವಿವರಣೆಗಿಂತ ಅಂತರಿಕವಾಗಿ ಧರಿಸಿಕೊಳ್ಳುವ ರೀತಿಯನ್ನು ಬಹುಸುಂದರವಾಗಿ ವರ್ಣಿಸಿದ್ದಾನೆ . ಅಂತರಂಗದ ಅಷ್ಟಾವರಣವನ್ನು ಮೈಗೂಡಿಸಿಕೊಳ್ಳುವಲ್ಲಿಯೇ ಶೂನ್ಯ ಸಂಪಾದನೆಯಾಗುವದೆಂಬ ಸಮಾರೋಪವಾಗಿದೆ . ಕೊನೆಗೆ ನಿರಾಭಾರಿ ಜಂಗಮನ ಕೃಪೆಯಿಂದ ಶರಣನು ತಾನು ಸಾಧಿಸಿದ ನಿಲವನ್ನು ಸೂಚಿಸುತ್ತ ಪರಮ ಪೂಜ್ಯ ಚನ್ನವೀರ ಮಹಾಶಿವಯೋಗಿಗಳ ಘನವ್ಯಕ್ತಿತ್ವವನ್ನು ಚಿತ್ರಿಸಿ ಮಂಗಲಗೈದಿದ್ದಾನೆ . ಹೀಗೆ ಗುರುಕರುಣ ತ್ರಿವಿಧಿಯಲ್ಲಿ ಸಂಪೂರ್ಣವಾಗಿ ಕ್ರಮ ಬದ್ಧವಾದ ವೀರಶೈವ ದಾರ್ಶನಿಕ ಸಿದ್ದಾಂತವು ಪ್ರತಿಪಾದಿಸಲ್ಪಟ್ಟಿದೆ . ಶೂನ್ಯ ಸಂಪಾದನೆಯನ್ನು ಸಾಧಿಸಬಯಸುವ ಸಾಧಕರಿಗೆ ಅತ್ಯುತ್ತಮ ಸಾಧನವಾಗಬಹುದೆಂಬುದನ್ನು ಬೇರೆ ಹೇಳಬೇಕಿಲ್ಲ . ಕೃತಿ ರಚನೆಯ ಸ್ವಾನುಭಾವದ ಪರಿಣಾಮ ಹೇಳಿದರಾಗದು . ಅದನ್ನು ಸ್ವಾಧ್ಯಾಯ ಸದಾಚರಣೆಗಳಿಂದ ಸ್ವಾನುಭಾವದಲ್ಲಿ ತಂದುಕೊಳ್ಳಲೆಂದು ಹಾರೈಸಲಾಗಿದೆ .

 ಮೃಡಗಿರಿ ಶ್ರೀ ಜಗದ್ಗುರು ಅನ್ನದಾನೀಶ್ವರನ ಮಹಾಪೀಠದ ದಶಮಾಧಿಕಾರಿ ಗಳಾಗಿ ದ್ವಾದಶ ವರ್ಷಂಗಗಳಲ್ಲಿ ಸದ್ಭಕಸಂತತಿಗೆ ನೀಡುವ ಮಹಾಕೃತಿ ಶ್ರೀ ಜಗದ್ಗುರು ಅನ್ನದಾನೀಶ್ವರ ಗ್ರಂಥಮಾಲೆಯ ರಜತೋತ್ಸವದ ಸ್ಮಾರಕ ಸಂಥ . ಸ್ಥಾವರ ಕೃತಿಗಳಿಗೆ ಅಳಿವಿದ್ದರೂ , ಅಳಿವಿಲ್ಲದ ಜಂಗಮಕೃತಿಯಿದು . ಕನ್ನಡಮ್ಮನ ಮುಕುಟಕ್ಕಿರಿಸಿದ ಮಹಾಮಣಿ .

ಗುರುಕರುಣ ತ್ರಿವಿಧಿಯ ವ್ಯಾಖ್ಯಾನ

ಶ್ರೀ ಲಿಂಗನಾಯಕನಹಳ್ಳಿಯ ಶಿವಾನುಭವಚರವರ ಹಾಲವರ್ತಿ ಶ್ರೀ ಮನ್ನಿರಂಜನ ಪ್ರಣವರೂಪ ಚನ್ನವೀರಮಹಾ ಶಿವಯೋಗಿಗಳವರ ಕರಸಂಜಾತರೂ , ಮಹಾಶಿವಾನುಭಾವಿಗಳೂ , ಕಾಯಕನಿರತರೂ , ಶಿವಕವಿಪುಂಗವರೂ ಆದ ಮೈಲಾರದ ಬಸವಲಿಂಗ ಶರಣರಿಗೂ ಒಮ್ಮೆ ಮತಿಯು ಅಮಂಗಳವಾಯಿತು . ಅಮಂಗಲದಿಂದ ಮಂಗಲ ಮೈದೋರದು . ಅದು ಕಾರಣ ಸಹಾಧ್ಯಾಯಿಗಳಾದ ಮುಳಗುಂದದ ಬಾಲಲೀಲಾ ಮಹಾಂತರ ಸಲಹೆಯಂತೆ , “ ಹರ ಮುನಿದರೆ ಗುರು ಕಾಯ್ವನು ; ಗುರು ಮುನಿದರೆ ಕಾವರಾರಿಲ್ಲವೆಂಬುದನ್ನರಿತು ಬಸವಲಿಂಗ ಶರಣರು – ಕರುಣ , ಸ್ಕಲೆ , ಶಾಸ್ತ್ರಪರಿಣತಿ , ಸೌಂದರತೆ , ನಿರಾಶೆಗಳಿಂದ ಶೋಭಾಯಮಾನನಾದ ಜ್ಞಾನ , ಐಶ್ವರ್ಯ , ಯಶಸ್ಸು , ಧರ್ಮ , ವೀರ್ಯ , ತೇಜಸ್ಸುಗಳೆಂಬ ಷಡ್ಗುಣೈಶ್ವರ್ಯ ಭರಿತನಾದ ನಿರಾಭಾರಿ ಸದ್ಗುರುವಿನ ಕೃಪೆ ಪಡೆಯಲು ಮತಿಗೆ ಮಂಗಳವನ್ನು ಮುಮ್ಮೊದಲು ಪ್ರಾರ್ಥಿಸುತ್ತಾರೆ

 ಮತಿ ವಿಕೃತವಾದರೆ ಗುರು ಕೃಪೆಯಾಗದು . ಗುರು ಕೃಪೆಗೆ ಸುಮತಿಯೇ ಮೂಲ , ಅದನ್ನರಿತ ಶರಣರು ಸುಮತಿಯನ್ನು ಮತ್ತು ಮಂಗಳವನ್ನು ಬೇಡುವ ಜೊತೆಗೆ ಗುರು ಕರುಣೆಯನ್ನು ಯಾಚಿಸಿದ್ದಾರೆ . ಪ್ರಾರ್ಥನೆಯು ವ್ಯಕ್ತಿಗತವಾಗಿದ್ದರೂ ಸಮಾಜದ ಕಲ್ಯಾಣಕ್ಕೆ ಕಾರಣವಾಗಿದೆ . ಶಿವಾನುಭವದ ಅರುವಿಗೆ ಆಶ್ರಯವಾಗಿದೆ . ಸ್ವಾನುಭಾವದ ನಿಲುವಿಗೆ ಆಧಾರವೆನಿಸಿದೆ . ಇಲ್ಲಿ ಅಷ್ಟಾವರಣವೆ ಅಂಗ ಎಂಬ ವೀರಶೈವ ತತ್ತ್ವವನ್ನು ಮೈಗೂಡಿಸಿಕೊಳ್ಳಲು ಅನುವಾಗಿದೆ . ಅಂಗನೊಡನೆ ಪ್ರಾಣ ಮತ್ತು ಆತ್ಮಗಳು ಒಡಗೂಡಿರುವಂತೆ ಅಷ್ಟಾವರಣ ತತ್ತ್ವದೊಡನೆಯೇ ಪಂಚಾಚಾರ ಪ್ರಾಣಗಳು , ಷಟ್‌ಸ್ಥಲ ಆತ್ಮವೂ ಅನುಗೂಡಿದೆ .

ಈ ಶರಣ ಕವಿಯನ್ನು ಕುರಿತು ಹೇಳುವ ಕಥಾನಕವು ಯಥಾರ್ಥವಾಗಿಲ್ಲ . ಯಾಕಂದರೆ ಜನವದಂತಿಗಳು ಕಾಲಾಂತರದಲ್ಲಿ ವಿಪರ್ಯಾಸಗೊಳ್ಳುವದು ಸಹಜ . ಶಿವಕವಿಯ ಅಸಾಧಾರಣವಾದ ಸ್ವಾನುಭಾವದ ರಸಘಟ್ಟಿಯನ್ನು ಅರ್ಥೈಸಿಕೊಳ್ಳದೆ

ಅಪಚಾರ ನುಡಿಗಳನ್ನಾಡುವದು ಸಮಂಜಸವೆನಿಸುವುದಿಲ್ಲ . ಜೀವನದಲ್ಲಿ ಎಂಥ ಜ್ಞಾನಿಯಾದರೂ ಎಡಹುತ್ತಾನೆ . ಭಕ್ತಿಭಾಂಡಾರಿ ಬಸವಣ್ಣನವರ ಜೀವನದಲ್ಲಿಯೂ ಅಂಥ ಸನ್ನಿವೇಶಗಳಿಗೆ ಕೊರತೆಯಿಲ್ಲ . ಬಸವಲಿಂಗ ಶರಣರು ಆಕಸ್ಮಿಕವಾಗಿ ಪೂಜ್ಯ ತನ್ಮೂಲಕ ಜಂಗಮ ಪುಂಗವನಿಂದ ಪಡೆದ ಸ್ವಾನುಭವದ ಸುಧೆಯನ್ನು ಕ್ರಮಬದ್ಧವಾಗಿ ಗುರುವರರಿಗೆ ಪ್ರತ್ಯುತ್ತರ ನೀಡಿದ ತಪ್ಪಿಗಾಗಿಯೇ ಗುರು ಕೃಪೆಯನ್ನು ಯಾಚಿಸಿದ್ದಾರೆ . ವೀರಶೈವ ಸಿದ್ದಾಂತವನ್ನಾಗಿ ಹೆಣೆದಿರುವುದು ಸಾಧಕರ ಸೌಭಾಗ್ಯವೇ ಸರಿ .

೧. ಶ್ರೀ ಗುರು

೧. ಶ್ರೀ ಗುರು ಪ್ರಾರ್ಥನೆ

ಶ್ರೀ ಗುರುವೆ ಸತ್ಕ್ರಿಯೆಯ  | ಆಗರವೆ ಸುಜ್ಞಾನ

ಸಾಗರವೆ ಎನ್ನಮತಿಗೆ ಮಂಗಳವಿತ್ತು

ರಾಗದಿಂ ಬೇಗ ಕೃಪೆಯಾಗು

ಶ್ರೀ ಗುರುವೆ ಷಡ್ಗುಣೈಶ್ವರ್ಯ ಸಂಪದ್ಯುಕ್ತನಾದ ಗುರುವೆ ! ಶ್ರೀ ಕಾರವು ನಾನಾರ್ಥಗಳಲ್ಲಿ ಪ್ರಯೋಗವಾಗಿದೆ . ಶಬ್ದಕೋಶವು ೧೬-೧೭ ಅರ್ಥಗಳನ್ನು ಸೂಚಿಸಿದೆ . ಅಮರಕೋಶದಲ್ಲಿ   “ಸಂಪತ್ತಿಃ  ಶ್ರೀಶ್ಚ ಲಕ್ಷ್ಮೀಶ್ಚ “ ಈ ಶಬ್ದವು ಮುಖ್ಯವಾಗಿ ಸಂಪತ್ತಿ ಲಕ್ಷ್ಮಿ ಅರ್ಥಗಳನ್ನು ಹೊಂದಿದೆ . ಶ್ರೀಕಾರವು ಮಂಗಲ ಸೂಚಕವಾಗಿ ರುವದರಿಂದ ಇಲ್ಲಿ ಈ ಕೃತಿಗೆ ಆದಿ ಮಂಗಲವಾಗಿ ಘಟಿಸಿದೆ .

ಶ್ರೀ ಗುರುರಾಯನು ಸಂಪದ್ಭರಿತನು . ಸಂಪತ್ತು ಲೌಕಿಕ ಮತ್ತು ಪಾರಮಾರ್ಥಿಕ ವೆಂದು ಇಬ್ಬಗೆಯಾಗಿದೆ . ಸತಿ – ಪುತ್ರ – ಧನ – ಧಾನ್ಯ – ಕರಿ- ತುರಗಾದಿಗಳು ಲೌಕಿಕ ಸಂಪತ್ತೆನಿಸಿದರೆ ; ಭಕ್ತಿ – ಜ್ಞಾನ – ವೈರಾಗ್ಯಾದಿಗಳು ಪಾರಮಾರ್ಥಿಕ ಸಂಪತ್ತು . ಶ್ರೀ ಗುರುವಿನಲ್ಲಿ ಪಾರಮಾರ್ಥಿಕ ಸಂಪತ್ತು ವಿಪುಲವಾಗಿದ್ದರೂ ಭೌತಿಕ ಸಂಪತ್ತನ್ನೂ ಕರುಣಿಸಬಲ್ಲವನಾಗಿದ್ದಾನೆ . ಅಜ್ಞಾನ ನಿವಾರಣೆಯೇ ಗುರು ಶಬ್ದದ ಅರ್ಥ , ಅಜ್ಞಾನವನ್ನು ಕಳೆಯಬಲ್ಲವನೆ ಗುರುವೆನಿಸುವನು . ಜ್ಞಾನಿಗಳು ಗುರು ಶಬ್ದ ನಿರ್ವಚನವನ್ನು – ಗುಕಾರ ಸ್ತ್ರಂಧಕಾರಃ ಸ್ಯಾತ್ ರುಕಾರಸ್ತನ್ನಿರೋಧಕಃ | ಅಂಧಕಾರ ನಿರೋಧಿತ್ವಾತ್ ಗುರುರಿತ್ಯಭಿಧೀಯತೇ || ಈ ರೀತಿ ಮಾಡಿರುವರು . ‘ ಗುರುರ್ನಾಮ ಗೃಣಾತಿ – ಉಪದಿಶತಿ ತಾತ್ವಿಕಮರ್ಥಮ್ ? ಗುರುವಾದವನು ಶಿಷ್ಯನನ್ನು ಪರಿಗ್ರಹಿಸಿ ತಾತ್ವಿಕ ವಿಷಯಗಳನ್ನು ಉಪದೇಶಿಸು ತಾನೆ . ಶ್ರೀಗುರು ತನ್ನನ್ನು ಮೊರೆ ಹೊಕ್ಕವರ ಅಜ್ಞಾನವನ್ನು ನಾಶ ಮಾಡಿ ಜನನ ಮರಣಗಳನ್ನು ಕಳೆದು ಅರ್ಥಾತ್ ದೂರ ಮಾಡಿ ಸಕಲ ದುಃಖಗಳನ್ನು ನಿವೃತ್ತ. ಗೊಳಿಸುವನಲ್ಲದೆ ನಿತ್ಯಾನಂದ ಪದ ಪ್ರಾಪ್ತಿ ರೂಪ ಮುಕ್ತಿಯನ್ನು ಕರುಣಿಸ ಬಲ್ಲನು . ಅದು ಕಾರಣ ಬ್ರಹ್ಮ ವಿಷ್ಣು ಮಹೇಶ ಈ ತ್ರಿಮೂರ್ತಿಗಳಿಗಿಂತಲೂ ಶ್ರೀ ಗುರು ಮಿಗಿಲಾಗಿದ್ದಾನೆ.

 ಗುರುವಾದರೂ ಸತ್ಯ ಶುದ್ಧಕಾಯಕ , ನಿತ್ಯ ಶಿವಾರ್ಚನೆ ಧರ್ಮೋಪದೇಶಾದಿ ಸತ್ಕ್ರಿಯೆಗಳಿಗೆ ಆಶ್ರಯ ಸ್ವರೂಪನಾಗಬೇಕು . ಅಂದರೆ ಸತ್ಯಶುದ್ಧ ಕಾಯಕ ಮಾಡುವ ಶಿವಭಕ್ತರಲ್ಲಿ ಶಿವಾರ್ಚನೆ ಮಾಡಬೇಕು . ಅಂಥ ಸದ್ಭಕ್ತರಿಗೆ ಧರ್ಮೋಪದೇಶ ಗೈಯ್ಯಬೇಕು . ಸದ್ಗುರು ಲಿಂಗಾಂಗಸಾಮರಸ್ಯ ರೂಪ ಶಿವಜ್ಞಾನಕ್ಕೆ ಸಾಗರವಾಗಿರ ಬೇಕು . ಇಂಥ ಪರಮ ಗುರುವಿನ ಉಪದೇಶ ಶಿಷ್ಯನ ಹೃದಯವನ್ನು ಪ್ರವೇಶಿಸಿ ಬಲ್ಲುದು . ಮತಿಗೆ ಮಂಗಲವನ್ನೀಯಬಲ್ಲುದು . ಪ್ರೇಮದಿಂದ ತೀವ್ರವಾಗಿ ಕರುಣೆ ದೊರೆಯಬಲ್ಲುದು .

 ವೀರಶೈವರಿಗೆ ಪೂಜ್ಯರೆನಿಸಿದವರು ಮೂವರು ; ಗುರು – ಲಿಂಗ – ಜಂಗಮರೇ ಆರಾಧ್ಯರು ಗುರುವಿನ ಗುರುವೇ ಶ್ರೀಗುರು . ನಿರಾಭಾರಿ ಗುರು . ಈ ಕೃತಿಯಲ್ಲಿ ಶಿವಕವಿಯು ನಿರಂಜನ ಜಂಗಮ ದೇವನ ಸತ್ಕೃಪೆಯನ್ನೇ ಪ್ರತಿ ನುಡಿಗೂ ಪ್ರಾರ್ಥಿಸಿ ದ್ದಾನೆ . ಪರಮ ಪೂಜ್ಯ ಶ್ರೀ ಚನ್ನವೀರ ಮಹಾಸ್ವಾಮಿಗಳು ನಿರಾಭಾರಿ ಗುರುಗಳು . ನಿರಾಭಾರಿ ಜಂಗಮ ಲಕ್ಷಣವನ್ನು ಪರಿಪೂರ್ಣವಾಗಿ ಮೈಗೂಡಿಸಿಕೊಂಡಿದ್ದರು . ಬಸವ ಲಿಂಗ ಶರಣರು ಸತ್ಯಶುದ್ಧ ಕಾಯಕ ತತ್ಪರತೆಯನ್ನು ಅಳವಡಿಸಿಕೊಳ್ಳುವ ಜೊತೆಗೆ ಅಷ್ಟಾವರಣವನ್ನು ಆಚರಣೆಯಲ್ಲಿ ಅನುಸರಿಸಿದವರು . ಅಂತೆಯೇ ಈ ಶರಣರು ನಿರಾಭಾರಿ ಗುರುತ್ವದ ಗರಿಮೆಯನ್ನು ಪಡೆದ ಪರಮ ಗುರುಗಳಲ್ಲಿ ತಮ್ಮ ಮತಿಯ ಅಮಂಗಳತೆಯನ್ನು ಹೋಗಲಾಡಿಸಿಕೊಳ್ಳಲು ತಾತ್ವಿಕ ಪ್ರಾರ್ಥನೆಯನ್ನು ಮಾಡಿದರು . ನಿರಾಭಾರಿ ಗುರುಗಳೇ ಭಕ್ತನನ್ನು ಅನುಗ್ರಹಿಸಿ ಮುಕ್ತನನ್ನಾಗಿಸುತ್ತಾರೆ . ನಿರಾಭಾರಿ ನಿರಂಜನ ಜಂಗಮನಿಲ್ಲದೆ ಭಕ್ತನಿಗೆ ಐಕ್ಯಸ್ಥಲ ಅಳವಡುವದಿಲ್ಲ . ಅಂತೆಯೇ ಲಿಂಗನಾಯಕನಹಳ್ಳಿಯ ಪೂಜ್ಯರಲ್ಲಿ ಶಿವಕವಿಗಳು ಅನುಗೃಹೀತರಾಗಿದ್ದರು . ಈ ಗುರುಕರುಣ ತ್ರಿವಿಧಿಯಲ್ಲಿ ಪ್ರತಿಪಾದಿಸಲ್ಪಟ್ಟ ಶ್ರೀಗುರು ನಿರಾಭಾರಿ ಗುರುವೆಂಬು ದರಲ್ಲಿ ಯಾವ ಸಂಶಯವಿಲ್ಲ .

 ಮತಿ ಮಲಿನವಾಗುವದು ಮಾನವ ಸಮಾಜಕ್ಕೆ ಸಹಜವಾದುದು . ಮಲಿನ ವಾದ ಮತಿಯನ್ನು ಗುರು ಸನ್ನಿಧಿಯಲ್ಲಿ ಮಂಗಳಮಯಗೊಳಿಸುವದೇ ಮಾನವನ ಕರ್ತವ್ಯ , ಸುಮತಿಯನ್ನು ಸಾಧಿಸುವುದೇ ಶರಣ ತತ್ತ್ವದ ಜೀವಾಳ , ಅರಿವು ಆಚಾರ ಗಳಲ್ಲಿಯೇ ಶರಣಧರ್ಮ ಹುದುಗಿಕೊಂಡಿದೆಯೆಂಬುದು ಈ ಚಿಕ್ಕ ಕೃತಿಯಲ್ಲಿ ವ್ಯಕ್ತ ವಾಗುವದು . ಭಕ್ತನನ್ನು ಮುಕ್ತನನ್ನಾಗಿಸುವದು ಈ ಮೇರು ಕೃತಿ

 ಗುರುಕರುಣ ತ್ರಿವಿಧಿಯು ಕೇವಲ ಪಾರಾಯಣ ಮಾಡುವ ಸ್ತೋತ್ರ ಕೃತಿಯಲ್ಲ . ವೀರಶೈವ ಸಿದ್ದಾಂತವನ್ನು ದರ್ಶನ ಮಾಡಿಸುವ ದಿವ್ಯತೆ – ಭವ್ಯತೆ ಈ ಕೃತಿಯಲ್ಲಿದೆ ಯೆಂದರೆ ಅಚ್ಚರಿಪಡಬೇಕಾಗಿಲ್ಲ . ಶಾಸ್ತ್ರಕಾರರು ನಿರೂಪಿಸುವ ಅನುಬಂಧ

ಚತುಷ್ಟಯವು ಇಲ್ಲಿ ಸುಬಂಧುರವಾಗಿ ನಿಂತಿದೆ . ಸತ್ಯ ಶುದ್ಧ ಕಾಯಕ ತತ್ಪರನು , ಸತ್ಕ್ರಿಯಾ ಸುಜ್ಞಾನದಿಂದ ಲಿಂಗಾಂಗ ಸಾಮರಸ್ಯ ಸೌಖ್ಯಾಕಾಂಕ್ಷಿಯಾದ ಸದ್ಭಕ್ತನು ಇದಕ್ಕೆ ಅಧಿಕಾರಿಯಾಗಿದ್ದಾನೆ . ಅಷ್ಟಾವರಣಾಂಗ – ಪಂಚಾಚಾರ ಪ್ರಾಣ – ಷಟ್ ಸ್ಥಲಾತ್ಮ ತತ್ತ್ವಪ್ರಧಾನವಾದ ವೀರಶೈವ ದಾರ್ಶನಿಕ ಸಿದ್ಧಾಂತವೇ ಇಲ್ಲಿಯ ವಿಷಯ ವಾಗಿದೆ . ಅಂಗನನ್ನು ಲಿಂಗನನ್ನಾಗಿಸಬಲ್ಲ ಸದ್ಗುರು ಶಿಷ್ಯನಿಗೆ ಸಂಬಂಧಿಯಾಗಿದ್ದಾನೆ . ಅರ್ಥಾತ್ ಬೋಧ್ಯ – ಬೋಧಕ ಭಾವ ಸಂಬಂಧವಿದೆ . ಲಿಂಗಾಂಗ ಸಾಮರಸ್ಯ ರೂಪ ಮಹಾ ಮಂಗಳವೇ ಪ್ರಯೋಜನವಾಗಿದೆ . ಅಥವಾ ಶರಣನ ಶೂನ್ಯ ಸಂಪಾದನೆಯೇ ಮಹಾ ಪ್ರಯೋಜನವೆಂತಲೂ ಹೇಳಬಹುದು . ಇಂಥ ಸತಿಯಿಂದ ಲಿಂಗಾಂಗ ಸಾಮರಸ್ಯವೆಂಬ ಸೌಖ್ಯ ಸಾಧ್ಯವಾಗುವದಲ್ಲದೆ ಮಹಾಮಂಗಳವು ಮೈದೋರುವದು . (ಮುಂದುವರೆಯುವದು)

Related Posts