ಶಿವಯೋಗ : ಲೇಖಕರು ಲಿಂ. ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳು.

ಲೇಖಕರು :ಲಿಂ ..ನಿ.ಪ್ರಸದಾಶಿವಸ್ವಾಮಿಗಳು ,ವಿರಕ್ತಮಠ  ಹಾನಗಲ್ಲ .

ಅಧ್ಯಕ್ಷರುಶ್ರೀಮದ್ವೀರಶೈವಶಿವಯೋಗಮಂದಿರ

—————————————————————————————————————————————————

ಭಾರತವು ಪುರಾತನ ಕಾಲದಿಂದಲೂ ಯೋಗಭೂಮಿ ಎನಿಸಿದೆ . ಆದ್ದರಿಂದಲೆ ಜಗತ್ತಿನಲ್ಲಿಯೇ ಯೋಗ ಮಾರ್ಗವನ್ನು ಕಂಡುಕೊಂಡು ಅದರಿಂದ ಆಗತಕ್ಕ ಫಲವನ್ನು ಅನುಭವಿಸಿ ಜಗತ್ತಿಗೆ ಯೋಗ ತತ್ವವನ್ನು ಅರುಹಿದ ಕೀರ್ತಿ ಭಾರತೀಯರಿಗೆ ಸಲ್ಲತಕ್ಕದ್ದಾಗಿದೆಯೆಂದು ಹೇಳಿದರೆ ತಪ್ಪಾಗಲಾರದು . ಆದ್ದರಿಂದ ಭಾರತದಲ್ಲಿ ಯೋಗಿಗಳು ಆಯಾಯ ಕಾಲದಲ್ಲಿ ಅವತಾರ ಮಾಡುತ್ತ ಬಂದಿರುವುದು ಪ್ರಸಿದ್ಧವಾಗಿದೆ . ಈಗಲೂ ಕೂಡಾ ಹಿಮಾಲಯ , ಕೇದಾರ , ಕಾಶೀ , ಶ್ರೀಶೈಲ ಮೊದಲಾದ ಪುಣ್ಯಕ್ಷೇತ್ರಗಳಲ್ಲಿ ಶೈವಯೋಗಿಗಳು ವಾಸಮಾಡಿ , ಹಠಯೋಗಾದಿಗಳಿಂದ ಶರೀರವನ್ನು ವಜ್ರದಂತೆ ಕಠಿಣವನ್ನಾಗಿ ಮಾಡಬಹುದು . ಅಣಿಮಾದಿ ಅಷ್ಟಸಿದ್ಧಿಗಳನ್ನು ಹೊಂದಬಹುದು , ಆಕಾಶದಲ್ಲಿ ಸಂಚರಿಸಬಹುದು . ಇವೆಲ್ಲ ಸಿದ್ಧಿಗಳು ನಶ್ವರವಾದವುಗಳು . ಇವುಗಳಿಂದ ಅಮೃತತ್ವ ಸಿದ್ದಿಸಲಾರದು . ಶಿವಯೋಗ ಶಕ್ತಿಯ ಮುಂದೆ ಈ ಸಿದ್ಧಿಗಳು ಕಃಪದಾರ್ಥವು . ಶಿವಯೋಗಿಗಳು ಕಾಶೀ ಮೊದಲಾದ ಕ್ಷೇತ್ರಗಳನ್ನು ಅರಸುತ್ತ ಹೋಗಲಾರರು . ಅವರಿಗೆ ಪುಣ್ಯಕ್ಷೇತ್ರಗಳ ಅವಶ್ಯಕತೆಯಿಲ್ಲ . “ ಶಿವಯೋಗಿಯಿರ್ದ ನೆಲವೇ ಕ್ಷೇತ್ರಂ ಪವಿತ್ರಂ ಪರಂ ” ಎಂಬಂತೆ ಶಿವಯೋಗಿಯು ಪಾದವಿಟ್ಟ ನೆಲವೇ ಕ್ಷೇತ್ರವು , ಜಲವೇ ಪಾವನ ತೀರ್ಥವೆನಿಸುವುದು . ಶಿವಯೋಗದಿಂದ ಅಧ್ಯಾತ್ಮಿಕ ಶಕ್ತಿಯು ಉಂಟಾಗುವುದು . ಅದರಿಂದ ಜಗತ್ತನ್ನೇ ಉದ್ಧಾರ ಮಾಡಬಹುದು . ಈ ಶಕ್ತಿಯನ್ನು ಸಾಧಿಸಿಕೊಂಡ ಶಿವಯೋಗಿಯೇ ಜಗದ್ಗುರು ಎನಿಸಿಕೊಳ್ಳುವನು . ಆ ಶಿವಯೋಗಿಯಿಂದ ಜಗತ್ತು ಪಾವನಮಯವಾಗುತ್ತದೆ . ಈ ಹಿಂದೆ ಅಲ್ಲಮಪ್ರಭು , ತೋಂಟದ ಸಿದ್ಧಲಿಂಗ ಯತಿಗಳೂ ಮೊದಲಾದ ಅನೇಕ ಶಿವಯೋಗಿವರ್ಯರು ಅವತರಿಸಿ ಜಗದೋದ್ದಾರ ಮಾಡಿ ಹೋಗಿದ್ದಾರೆ .ಹಿಂದೊಂದು ಕಾಲದಲ್ಲಿ ಗೋರಕ್ಷನಾಥನೆಂಬ ಹಠಯೋಗಿಯು  ಪ್ರಾಣಾಯಾಮಾದಿ ಹಠಯೋಗವನ್ನು ಸಾಧಿಸಿ ಶರೀರವನ್ನು ವಜ್ರದಂತೆ ಕಠಿಣವನ್ನಾಗಿ ಮಾಡಿಕೊಂಡಿದ್ದನು . ತನಗೆ ಸಮಾನವಾದ ಯೋಗಿಗಳೇ ಇಲ್ಲವೆಂದು ಭಾವಿಸಿ ಆಹಂಕಾರಗಿರಿಯನ್ನು ಏರಿದ್ದನು . ಈ ವಿಷಯವನ್ನರಿತ ಅಲ್ಲಮಪ್ರಭುದೇವರು ಗೋರಕ್ಷಯೋಗಿಯು ಗರ್ವಭಂಗ ಮಾಡುವ ಉದ್ದೇಶದಿಂದ ಅವನೆಡೆಗೆ ಹೋದರು . ಗೋರಕ್ಷನಾಥನು ಪ್ರಭುದೇವರನ್ನು ಕಂಡು ಅವರ ಮುಂದೆ ತನ್ನ ಯೋಗಶಕ್ತಿಯ ಪ್ರತಾಪವನ್ನು ತೋರಿಸಬೇಕೆಂದೆ ಹಮ್ಮಿನಿಂದ ಖಡ್ಗವನ್ನು ಪ್ರಭುದೇವರ ಕೈಯಲ್ಲಿ ಕೊಟ್ಟು , ಆ ಖಡ್ಗದಿಂದ ತನ್ನ ಶರೀರಕ್ಕೆ ಹೊಡೆಯಬೇಕೆಂದು ಕೇಳಿಕೊಳ್ಳುತ್ತಾನೆ . ಅದರಂತೆ ಪ್ರಭುದೇವರು ಹೊಡೆಯಲು ಖಡ್ಗವು ಎರಡು ತುಂಡಾಗಿ ಬೀಳುವುದು . ಅದರಿಂದ ಗೋರಕ್ಷನಾಥನಿಗೆ ಆನಂದವೇ ಆನಂದವು . ಪ್ರಭುದೇವರು ಅದರಿಂದ ಆಶ್ಚರ್ಯ ಪಡದೆ ತಮ್ಮ ಶರೀರವನ್ನು ಖಡ್ಗದಿಂದ ಹೊಡೆಯಬೇಕೆಂದು ಗೋರಕ್ಷನಿಗೆ ಆಜ್ಞಾಪಿಸಿದರು . ಅದರಂತೆ ಅವನು ಪ್ರಭುದೇವರ ಶರೀರಕ್ಕೆ ಖಡ್ಗದಿಂದ ಹೊಡೆಯಲು ಆಕಾಶದಲ್ಲಿ ಬೀಸಿದಂತಾಯಿತು . ಖಡ್ಗವು ಶರೀರವನ್ನೇ ತಾಗಲಿಲ್ಲ . ಅವರ ಶರೀರವು ಲಿಂಗಕಾಯವಾಗಿತ್ತು . ಗೋರಕ್ಷನಾಥನು ಪ್ರಭುದೇವರ ಸ್ವರೂಪವನ್ನು ನೋಡಿ ಅತ್ಯಂತ ವಿಸ್ಮಿತನಾಗಿ ಮುಖ ಭಂಗಿತನಾಗುತ್ತಾನೆ . 

ಶಿವಯೋಗದ ಸಾಮರ್ಥ್ಯವು ಆಪಾರವಾದದ್ದು . ಶಿವಯೋಗವನ್ನು ಸಾಧಿಸಿದ ಅಲ್ಲಮಪ್ರಭುವಿನ ವ್ಯಕ್ತಿತ್ವವು “ ನಡೆದರೆ ನಿರ್ಗಮನಿ , ಸುಳಿದಡೆ ಗತಿರಹಿತ ಅಘಟಿತ ಘಟಿತನೇನೆಂಬೆ ” ಎಂಬ ವಚನದಂತೆ ಅವನ ಕಾಯವು ಲಿಂಗಕಾಯವಾಗಿತ್ತು .

 ಇನ್ನು ಯೋಗವೆಂದರೆ ಎರಡು ವಸ್ತುಗಳು ಕೂಡುವಿಕೆ ಎಂದು ಅರ್ಥವಾಗುತ್ತದೆ . ಬಹುಕಾಲದಿಂದ ಅಗಲಿದ ಎರಡು ವಸ್ತುಗಳು ಕೂಡಿದವೆಂದರೆ ಅಲ್ಲಿ ಆನಂದವು ತೋರುತ್ತದೆ . ಆ ಎರಡು ವಸ್ತುಗಳಲ್ಲಿ ಪರಸ್ಪರ ಪ್ರೇಮವಿದ್ದಾಗ ಮಾತ್ರ ಯೋಗ ಉಂಟಾಗುತ್ತದೆ . ಅಂದ ಮೇಲೆ ಈ ಯೋಗಕ್ಕೆ ಪ್ರೇಮ ಅಥವಾ ಭಕ್ತಿಯೇ ಕಾರಣವಾಗುತ್ತದೆ . ಹೇಗೆಂದರೆ ಆಗಲಿದ ದಂಪತಿಗಳು ಕೂಡಿದಾಗ ಒಂದು ತರಹದ ಆನಂದವು . ತಂದೆ ಮಕ್ಕಳು ಕೂಡಿದಾಗ ಒಂದು ತರಹದ ಆನಂದವು . ಗುರು – ಶಿಷ್ಯರು ಕೂಡಿದಾಗ ಒಂದು ತರಹದ ಆನಂದವು ಉಂಟಾಗುತ್ತದೆ . ಈ ಕೂಡುವಿಕೆ ಮತ್ತು ಆನಂದವು ನಶ್ವರವಾದವುಗಳು . ನಿಜವಾದ ಶಾಶ್ವತ ಆನಂದ ಉಂಟಾಗ ಬೇಕಾದರೆ ಶಿವಯೋಗವು ಮುಖ್ಯವಾಗಿದೆ . ಜಗತ್ತಿಗೆ ಕಾರಣೀಭೂತನಾದ ಶಿವನಿಂದ ಬಹು ದಿವಸಗಳ ಜೀವಾತ್ಮನು ಪುನಃ ಶಿವನಲ್ಲಿ ಕೂಡುವದರಿಂದ ನಿತ್ಯಾನಂದ ಉಂಟಾಗಿ ಅಮೃತನಾಗುವನು , ಪುನಃ ಅವನಿಗೆ ಜನನ ಮರಣಗಳಿಲ್ಲ . ಇದೇ ವಿಷಯವನ್ನು ಶಿವಾನುಭಾವಿಗಳು ವಿಸ್ತಾರ ರೀತಿಯಿಂದ ವಿವೇಚನೆ ಮಾಡಿದ್ದಾರೆ . ಅದು ಹೇಗೆಂದರೆ “ ಶಿವಯೋಃ ಶಿವರೂಪ ಲಿಂಗಾಂಗಯೋಃ ಯೋಗ ಶಿವಯೋಗಃ ” . ಎಂಬಂತೆ ಬ್ರಹ್ಮ ಸ್ವರೂಪನಾದ ಶಿವನೇ ಲಿಂಗಾಂಗವೆಂದು ಎರಡು ರೂಪ ತಾಳಿದ್ದಾನೆ . ಕ್ಷೀರವು ಕ್ಷೀರದಲ್ಲಿ ಬೆರೆಸಿದಂತೆ ಶುದ್ಧರಾದ ಲಿಂಗಾಂಗಗಳ ನೋಟವೇ ಶಿವಯೋಗವೆಂದೆನಿಸುವುದು . ಲಿಂಗವೆಂದರೆ ಶಿವ , ಅಂಗನೆಂದರೆ ಶುದ್ಧ ಜೀವನು . ಈ ಶಿವಜೀವರ ಸಮ್ಯಕ್ ಸಂಬಂಧವೇ ಸುಯೋಗವೆಂದೆನಿಸುವದು . ಲಿಂಗವು ಶಕ್ತಿಯಿಂದ ಕೂಡಿದೆ . ಅಂಗನು ಭಕ್ತಿಯಿಂದ ಕೂಡಿರುವನು . ಈ ಪೂಜ್ಯ ಪೂಜ್ಯಕರ ಸಂಯೋಗ ಸದ್ಭಾವವೇ ಸಾಮರಸ್ಯವು . ಈ ಸಾಮರಸ್ಯವೇ ಸಾಯುಜ್ಯ ರೂಪವಾದ ಮುಕ್ತಿಯೆನಿಸುವುದು . ಆದಕಾರಣ ಲಿಂಗಾಂಗ ಸಾಮರಸ್ಯಕ್ಕಿಂತಲೂ ಪರತರವಾದ ಮುಕ್ತಿಯು ಬೇರೊಂದಿಲ್ಲ . ಸದ್ಗುರು ಅವಿದ್ಯಾನಾಶ ಮಾಡಿ ಶಿವವಿದ್ಯಾದಾನ ಮಾಡುವನು . ಮುಮುಕ್ಷುವಾದ ವೀರಶೈವನು ಗುರುವಿನ ಬಳಿಗೆ ಹೋಗಿ ತನ್ನನ್ನು ಉದ್ಧಾರ ಮಾಡಬೇಕೆಂದು ಕೇಳಿಕೊಳ್ಳುವನು . ಗುರುವು ಶಿಷ್ಯನ ಅವಿದ್ಯಾಭೇದಕವಾದ ಶಿವದೀಕ್ಷೆಯನ್ನು ಮಾಡುವನು . ಆ ದೀಕ್ಷೆಯಿಂದ ಶಿಷ್ಯನ ಸ್ಥೂಲ, ಸೂಕ್ಷ್ಮ , ಕಾರಣಗಳೆಂಬ ಶರೀರತ್ರದಲ್ಲಿರುವ ಆಣವ , ಮಾಯಾ , ಕಾರ್ಮಿಕಗಳೆಂಬ ಮಲತ್ರಯವನ್ನು ವೇಧಾ , ಮಂತ್ರ , ಕ್ರಿಯಾಗಳೆಂಬ ಮೂರು ದೀಕ್ಷೆಗಳಿಂದ ನಾಶಮಾಡಿ ತ್ರಿವಿಧ ಲಿಂಗಗಳನ್ನು ಸ್ಥಾಪಿಸುವನು . ಹೇಗೆಂದರೆ ತ್ಯಾಗಾಂಗ ನಾಮಕವಾದ  ಸ್ಥೂಲ ಶರೀರದಲ್ಲಿ ಕ್ರಿಯಾ ದೀಕ್ಷೆಯಿಂದ ಇಷ್ಟಲಿಂಗವನ್ನು ಭೋಗಾಂಗ ನಾಮಕವಾದ ಸೂಕ್ಷ್ಮ ಶರೀರದಲ್ಲಿ ಮಂತ್ರ ದೀಕ್ಷಾ ಬಲದಿಂದ ಪ್ರಾಣಲಿಂಗವನ್ನು , ಯೋಗಾಂಗ ನಾಮಕವಾದ ಕಾರಣ ಶರೀರದಲ್ಲಿ ವೇಧಾ ದೀಕ್ಷೆಯಿಂದ ಭಾವಲಿಂಗವನ್ನು ಸ್ಥಾಪಿಸಿ ಕೊಡುವನು . ಈ ಉಪಾಸನೆಯೇ ಸಂಯೋಗವೆಂದೆನಿಸುವುದು . ಸಂಯೋಗವೆಂದರೆ ದ್ವೈ ತಭಾವನಾಶವು . ಆ ನಾಶವೇ ನಿವೃತ್ತಿಯು . ನಿವೃತ್ತಿಯೇ ವಿಶ್ರಾಂತಿಯು . ಅದುವೇ ಪರಮ ಪದವಿಯು . ಅರ್ಥಾತ್ ಶಿವಯೋಗವು . ಸ್ಪಟಿಕಕ್ಕೂ ಅದರ ಸ್ವಚ್ಛತೆಗೂ , ದೀಪಕ್ಕೂ ಕಾಂತಿಗೂ , ಆಲಿಕಲ್ಲಿಗೂ ನೀರಿಗೂ , ಕರ್ಪೂರಕ್ಕೂ ವಾಸನೆಗೂ ಮತ್ತು ಪುಷ್ಪಕ್ಕೂ ಗಂಧಕ್ಕೂ ಇರುವ ಭೇದವು ಇರುತ್ತದೆ . 

ಮೂರು ಲಿಂಗಗಳು ಮೂರು ಶರೀರಗಳಲ್ಲಿ ಸಂಬಂಧ ಮಾಡುವಂತೆ ಆ ಮೂರು ಲಿಂಗಗಳು ಆಚಾರಲಿಂಗ , ಗುರುಲಿಂಗ , ಶಿವಲಿಂಗ , ಜಂಗಮಲಿಂಗ , ಪ್ರಸಾದಲಿಂಗ , ಮಹಾಲಿಂಗವೆಂದು ಆರು ಲಿಂಗಗಳಾಗಿ ನಾಸಿಕದಲ್ಲಿ ಆಚಾರಲಿಂಗ , ಜಿಹ್ವೆಯಲ್ಲಿ ಗುರುಲಿಂಗ , ನೇತ್ರದಲ್ಲಿ ಶಿವಲಿಂಗ , ತ್ವಕ್ ನಲ್ಲಿ ಚರಲಿಂಗ , ಶ್ರೋತ್ರದಲ್ಲಿ ಪ್ರಸಾದಲಿಂಗ , ಹೃದಯದಲ್ಲಿ ಮಹಾಲಿಂಗ ರೀತಿಯಾಗಿ ಲಿಂಗಗಳನ್ನು ಸಂಬಂಧ ಮಾಡುವನು . ಹೀಗೆ ಸರ್ವಾಂಗದಲ್ಲಿ ಲಿಂಗ ಸಂಬಂಧವಾದುದರಿಂದ ವೀರಶೈವನು ಶಿವಯೋಗವನ್ನು ಸಹಜವಾಗಿ ಆಚರಿಸಬಲ್ಲನು . ಶಿವಯೋಗವನ್ನು ಆಚರಿಸಬೇಕೆಂಬ ವೀರಶೈವನ್ನು ಸಂಸಾರವನ್ನು ತ್ಯಾಜ್ಯಮಾಡಿ ಅರಣ್ಯವನ್ನು ಸೇರಬೇಕಾಗಿಲ್ಲ ಮತ್ತು “ ನ ಕಾಯ ಶೋಷಣಂ ತಪಃ “ ಎಂಬಂತೆ ದೇಹವನ್ನು ನಾನಾ ರೀತಿಯಾಗಿ ದಂಡಿಸಬೇಕಾಗಿಲ್ಲ . ಸಂಸಾರಿಗಳ ಮಧ್ಯದಲ್ಲಿದ್ದುಕೊಂಡೆ ಪ್ರತಿಯೊಂದು ಆಚರಣೆಗಳನ್ನು ಲಿಂಗಮುಖವಾಗಿ ಆಚರಿಸುತ್ತ ಶಿವಯೋಗವನ್ನು ಸಾಧಿಸಬಲ್ಲನು , ಪಾಪವರ್ಜಿತವಾದ , ಕ್ಷಮಾಶೀಲವಾದ , ಪರಮಕಾರುಣ್ಯ ಪೂರ್ಣವಾದ , ಕೇವಲ ಅನುಗ್ರಹಕ್ಕೆ ಕಾರಣವಾದ ಗುಣವು ಶಿವಯೋಗದ ಮುಖ್ಯ ಲಕ್ಷಣವಾಗಿದೆ . ಯಾಕೆಂದರೆ – ಶಿವಯೋಗಿಗಳು ಯಾವಾಗಲೂ ಸಕಲ ಜೀವಾತ್ಮರ ಲೇಸನೇ ಬಯಸತಕ್ಕವರು . ಇದು ವೀರಶೈವ ಸಿದ್ಧಾಂತವು . ಈ ಸಿದ್ಧಾಂತವು ಸೃಷ್ಟಿಯು ಮಿಥ್ಯವೆಂದು , ಸಂಸಾರವು ಮಾಯೆಯೆಂದು ತ್ಯಾಜ್ಯವೆಂದು ಪ್ರತಿಪಾದಿಸುವದಿಲ್ಲ . ಸೃಷ್ಟಿಯು ಶಿವಸ್ವರೂಪವೆಂದು ಬೋಧಿಸುತ್ತದೆ . ಅಣುರೇಣುತೃಣಕಾಷ್ಟಗಳಲ್ಲಿ ಶಿವನನ್ನೇ ಕಾಣುವ ಶಿವಯೋಗಿಗಳ ಹೃದಯವು ಕ್ಷಮೆ , ಶಾಂತಿ , ದಯೆ ಮೊದಲಾದ ಸಾತ್ವಿಕ ಗುಣಗಳಿಂದ ಕೂಡಿದ್ದಾಗಿದೆ . ಆ ಹೃದಯದಲ್ಲಿ ಕೋಪ , ತಾಪ , ಶಾಪಗಳಿಗೆ ಎಂದೂ ಸ್ಥಾನವಿಲ್ಲ . ಹೀಗೆ ಶುದ್ಧಗುಣಗಳಿಂದ ಕೂಡಿದ ಶಿವಯೋಗಿಯು ಶಿವಯೋಗವನ್ನು ಸಾಧಿಸುತ್ತ ಹೋದರೆ , ಅವನಿಗೆ ಐಕ್ಯಸ್ಥಿತಿಯು ಘಟಿಸುವುದು . ಪರಶಿವನಿಗಿಂತಲೂ ತಾನು ಬೇರೆಯಲ್ಲ , ಎಲ್ಲವೂ ಪರಶಿವ ಸ್ವರೂಪವೆಂಬ ಅತ್ಯಂತ ಪರಿಪಕ್ವವಾದ ಜ್ಞಾನದಿಂದ ತಾನು ಸತಿ , ಲಿಂಗಪತಿ ಎಂಬ ಭಿನ್ನಭಾವವನ್ನಳಿದು , ಎಲ್ಲವೂ ಶಿವಾತ್ಮಕವೆಂಬ ಏಕೋಭಾವವು ಬಲಿದು , ಉರಿಯು ಬೇರೆ ಕರ್ಪುರವು ಬೇರೆ ಎಂಬ ಆಕಾರವು ಅಡಗಿ ಮೂಲ ತತ್ವದಲ್ಲಿ ಅಡಕವಾಗುವಂತೆ ಐಕ್ಯವನ್ನು ಪಡೆಯುವದೇ ಐಕ್ಯಸ್ಥಲವು . ಈ ಐಕ್ಯ ಸ್ಥಿತಿಯಲ್ಲಿ ಸಾಧಕನು ಬಯಲು ಬಯಲಿನಲ್ಲಿ ಕೂಡುವಂತೆ , ಜ್ಯೋತಿ ಜ್ಯೋತಿ ಒಂದಾದಂತೆ ದೇವನಲ್ಲಿ ಐಕ್ಯ ಸ್ಥಿತಿಯನ್ನು ಹೊಂದುತ್ತಾನೆ . ಈ ಐಕ್ಯಸ್ಥಿತಿಯನ್ನು ಹೊಂದಬೇಕಾದರೆ ಶುದ್ಧ ಜೀವಾತ್ಮನು ಅಂದರೆ ಅಂಗನು ಮನಸ್ಸಿನ ಹರಿದಾಟವನ್ನು ಪ್ರಯತ್ನದಿಂದ ತಡೆದು , ಭಕ್ತಿಯಿಂದ ಲಿಂಗದಲ್ಲಿ ದೃಷ್ಟಿಯನ್ನಿಟ್ಟು , ಸ್ವರೂಪ ಚಿಂತನೆಯನ್ನು ಮಾಡುತ್ತ , ಲಿಂಗವನ್ನು ಪೂಜಿಸುವದರಿಂದ ಶಿವಯೋಗವು ಸಿದ್ಧಿಸುವುದು . ಕಾರಣ ಈ ಶಿವಯೋಗಕ್ಕೆ ಮನಸ್ಸಿನ ನಿರೋಧವೇ ಮುಖ್ಯ ಕಾರಣವಾಗಿದೆ . “ ಯೋಗಶ್ಚಿತ್ತವೃತ್ತಿನಿರೋಧಃ ” ಎಂಬಂತೆ ಮನಸ್ಸಿನ ವೃತ್ತಿಗಳು ಶಬ್ದಾದಿ ವಿಷಯಗಳಲ್ಲಿ ವ್ಯಾಪಿಸಿ ದುಃಖವನ್ನುಂಟು ಮಾಡುತ್ತವೆ . “ ಚಿತ್ತೇ ಚಲತಿ ಸಂಸಾರಃ ” ಎಂಬಂತೆ ಮನಸ್ಸು ಚಂಚಲವಾದರೆ ಸಂಸಾರವು , “ ನಿಶ್ಚಲೇ ಮೋಕ್ಷ ಏವಚ ” ಎಂಬಂತೆ ಮನಸ್ಸು ಸ್ಥಿರವಾದರೆ ಮುಕ್ತಿಯು ಉಂಟಾಗುವುದು . ಮನಸ್ಸನ್ನು ತಡೆಯಲು ಸುಲಭಸಾಧ್ಯವಲ್ಲ . “ ಕಶ್ಚಿತ್ ಧೀರಃ ಪ್ರತ್ಯಗಾತ್ಮಾನ ಮೈಕ್ಷತ್ ” ಎಂಬಂತೆ ಧೀರನಾದವನು ಮನಸ್ಸನ್ನು ತಡೆಯುತ್ತಾನೆ . ಅವನಿಗೆ ಶಿವಯೋಗವು ಪ್ರಾಪ್ತಿಯಾಗುತ್ತದೆ .

“ ಆಲಿನಿಂದೊಡೆ ಸುಳಿದು ಸೂಸುವ ಗಾಳಿ ನಿಲುವದು , 

ಗಾಳಿ ನಿಲೆ ಮನ ಮೇಲೆ ನಿಲುವದು , 

ಮನವು ನಿಂದೊಡೆ ಬಿಂದು ನಿಲ್ಲುವದು , 

ಬಿಂದು ನಿಂದೊಡೆ ಕಾಮಕಾಲರ ಗೆದ್ದು ,

 ಮಾಯೆ ಹೇಳ ಹೆಸರಿಲ್ಲ ಎನಿಸಬಹುದೈ ಬಸವ ಕೇಳೆಂದ ”

 ಎಂಬ ಪ್ರಭುದೇವರ ಉಕ್ತಿಯಂತೆ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಲಿಂಗದಲ್ಲಿ ದೃಷ್ಟಿಯನ್ನಿಟ್ಟು , ಮನಸ್ಸಿನ ಚಂಚಲತ್ವವನ್ನು ತಡೆದು , ತದೈಕ ಧ್ಯಾನದಿಂದ ಲಿಂಗಪೂಜೆಯನ್ನು ಬಾಹ್ಯದ ಎಚ್ಚರವಿಲ್ಲದೆ ಆರು ತಿಂಗಳವರೆಗೆ ಮಾಡುವಂತವರಾಗಿದ್ದರು . ಅವರ ಶರೀರದ ಮೇಲೆ ಹುತ್ತ ಆವರಿಸಿತು . ಇದರಿಂದ ಸಿದ್ಧಲಿಂಗನು ಮರಣ ಗೆಲಿದ ಮಹಾಂತನಾಗಿ ಈಗಲೂ ಅವನು ಸಮಾಧಿಸ್ಥಿತಿಯಲ್ಲಿದ್ದು , ಮಾನವರ ಕಲ್ಯಾಣ ಮಾಡುತ್ತಿರುವುದು ಪ್ರತ್ಯಕ್ಷ ಕಾಣುತ್ತಲಿದ್ದೇವೆ . ಇದೇ ಐಕ್ಯಸ್ಥಿತಿಯ ಲಕ್ಷಣವು . ಇದನ್ನು ಸಾಧಿಸುವದೇ ಶಿವಯೋಗಿಯ ಕರ್ತವ್ಯವು .

Related Posts