ಲೇಖಕರು :
ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ
ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.
ಮುಂಡರಗಿ
ಪ್ರಾಣಾಯಾಮದ– ತ್ರಾಣಗುಂದುವಿಕೆ
ಪ್ರಾಣಾಯಾಮದ ಯೋಗ | ತ್ರಾಣಗುಂದುವುದೆಂದು
ಮಾಣಿಸಿ ಮುಕ್ತಿಯ-ಪ್ರಾಣಲಿಂಗವನಿತ್ತ
ಜಾಣ ಶ್ರೀಗುರುವೆ ಕೃಪೆಯಾಗು ||೯೬ ||
ನಾಲ್ಕನೆಯದು ಪ್ರಾಣಾಯಾಮ. ಆಸನಗಳ ಸಿದ್ಧಿಯಾದರೂ ಪ್ರಾಣಾಯಾಮದ ಸಾಧನೆಗೆ ಅವಶ್ಯಬೇಕು. ಆಸನಗಳನ್ನು ಸಾಧಿಸಿ ಶ್ವಾಸ ನಿಃಶ್ವಾಸಗಳನ್ನು ನಿಯಮಿತ ಗೊಳಿಸುವದೇ ಪ್ರಾಣಾಯಾಮವೆನಿಸುವದು. ಪ್ರಾಣ ವಾಯುವಿನ ಗಮನಾಗಮನ
ಗಳನ್ನು ನಿರೋಧಗೊಳಿಸುವದಕ್ಕೇನೆ ಪ್ರಾಣಾಯಾಮವೆಂದು ಹೆಸರು. ಹೊರಗಿನ ಶುದ್ಧವಾದ ಪ್ರಾಣ ವಾಯುವನ್ನು ಘ್ರಾಣದಿಂದ ತೆಗೆದುಕೊಳ್ಳುವದು ಶ್ವಾಸವು. ಒಳಗಿನ ಅಶುದ್ಧವಾದ ಅಂಗಾರಾಮ್ಲ ವಾಯುವನ್ನು ಹೊರಕ್ಕೆ ಬಿಡುವದು ನಿಃಶ್ವಾಸವು. ಈ ಕ್ರಿಯೆಯು ಸದಾ ನಡೆದಿರುತ್ತದೆ. ಈ ವಾಯುವಿನ ಗತಿಯನ್ನು ಯೋಗಿಯಾದವನು ಕ್ರಮಬದ್ಧಗೊಳಿಸುವ ಸಾಧನವೇ ಇದು ಪ್ರಾಣಾಯಾಮ. ಇದರಿಂದ ಶಾರೀರಿಕ, ಮಾನಸಿಕ ಪ್ರಸನ್ನತೆ ಮತ್ತು ಸ್ಥಿರತೆಯುಂಟಾಗುವದು.
ಮನುಸ್ಮೃತಿ”ಯಲ್ಲಿ–
“ದಹ್ಯಂತೇ ದಾಹ್ಯಮಾನಾನಾಂ ಧಾತೂನಾಂ ಚ ಯಥಾ ಮಲಾಃ |
ತಥೇಂದ್ರಿಯಾಣಾಂ ದಹ್ಯಂತೇ ದೋಷಾಃ ಪ್ರಾಣಸ್ಯ ನಿಗ್ರಹಾತ್ ||ʼʼ
ʼʼಅಗ್ನಿಯ ಸಂಪರ್ಕದಿಂದ ವಿವಿಧ ಧಾತುಗಳ ಸರ್ವದೋಷ (ಹೊಲಸು) ವು ಸುಟ್ಟು ಹೋಗುವಂತೆ ಪ್ರಾಣಾಯಾಮದಿಂದ ಶಾರೀರಿಕ ಮತ್ತು ಮಾನಸಿಕ ದೋಷಗಳೆಲ್ಲ ಸುಟ್ಟು ತನು-ಮನಗಳೆರಡೂ ಅತ್ಯಂತ ಪವಿತ್ರ, ಪ್ರಸನ್ನ ಹಾಗೂ ನಿರ್ವಿಕಾರಿಗಳಾಗುತ್ತವೆ” ಯೆಂದು ಪ್ರಾಣಾಯಾಮದ ಮಹತಿಯು ಹೇಳಲ್ಪಟ್ಟಿದೆ.
”ಯೋಗಾಸನಗಳು” ಎಂಬ ಪುಸ್ತಕದಲ್ಲಿ ಟಿ. ಕೃಷ್ಣಮಾಚಾರ್ಯರು- “ಪ್ರಾಣ ಶಕ್ತಿಗೆ ಆಧಾರವಾದುದೇ ಪ್ರಾಣವಾಯುವು. ಇದು ಹೊರಗಿನ ಗಾಳಿಯಂತಲ್ಲ. ಇದೊಂದು ಸೂಕ್ಷ್ಮ ಮತ್ತು ಅದ್ಭುತವಾದ ಮಿಂಚಿನಂತೆ ವೇಗವುಳ್ಳ ಹಾಗೂ ಬಿಸಿಯೊಂದಿಗೆ ಕೂಡಿದ ತೇಜಃಪ್ರವಾಹ. ಅದನ್ನು ದೃಢಪಡಿಸುವದು ಪ್ರಾಣಾಯಾಮವೆಂಬ ಯೋಗಾಂಗದ ೪ನೆಯ ಮೆಟ್ಟಿಲೆಂದು ಬಣ್ಣಿಸಿದ್ದಾರೆ.
ಪ್ರಾಣಾಯಾಮಕ್ಕೂ ಆಸನಕ್ಕೂ ಸಂಬಂಧವಿದೆ. ಆಸನದ ಸಾಧನೆಯಿಲ್ಲದೆ ಪ್ರಾಣಾಯಾಮವನ್ನು ಮಾಡಲು ಬರುವದಿಲ್ಲ. ಪ್ರಾಣಾಯಾಮವನ್ನು ಚನ್ನಾಗಿ ತಿಳಿಯದೇ ಮಾಡಬಾರದು. ಗುರುಮುಖದಿಂದ ಅರಿತಾಚರಿಸಬೇಕು. ಈ ಪ್ರಾಣಾಯಾಮವು ರೇಚಕ, ಪೂರಕ, ಕುಂಭಕವೆಂದು ಮೂದೆರನಾಗಿದೆ. ಋಜುಕಾಯನಾಗಿ ಕುಳಿತು ಕನಿಷ್ಠ-ಅನಾಮಿಕ ಬೆರಳುಗಳಿಂದ ತನ್ನವಾಮ (ಎಡ) ನಾಸಾಪುಟವನ್ನು ಹಿಡಿದು, ಮಾತ್ರಾಗಣನೆಯಿಲ್ಲದೆ ದಕ್ಷಿಣನಾಸಾಪುಟದಿಂದ ಬಂದು ಮಾಡಿ ಹೊಟ್ಟೆಯೊಳಗಿನ ದೂಷಿತವಾಯುವನ್ನು ನಿಶ್ಯೇಷವಾಗಿ ಹೊರಗೆ ಹಾಕುವದೇ ರೇಚಕವು. ಬಲದ ನಾಸಿಕರಂಧ್ರವನ್ನು ಹೆಬ್ಬೆರಳಿನಿಂದ ಹಿಡಿದು ಎಡಗಡೆಯ ನಾಸಿಕರಂಧ್ರದಿಂದ ಅತಿ ಶೀಘ್ರವೂ ಅತಿಸಾವಕಾಶವೂ ಆಗದಂತೆ ಸಮಾನ ರೀತಿಯಿಂದ ಹನ್ನೆರಡು ಮಾತ್ರೆಗಳವರೆಗೆ ಹೊರಗಣ ಶುದ್ಧವಾಯುವನ್ನು ಮಂತ್ರೋಚ್ಚಾರ ಪೂರ್ವಕ ಒಳಕ್ಕೆ ತೆಗೆದುಕೊಳ್ಳುವದೇ ಪೂರಕವೆನಿಸುವದು. ಒಳಗೆ ತುಂಬಿಕೊಂಡ ಪ್ರಾಣವಾಯುವನ್ನು, ನಾಶಿಕದ ಎರಡೂ ರಂಧ್ರಗಳನ್ನು ಬಂದು ಮಾಡಿ ಹನ್ನೆರಡು ಅಥವಾ ೧೮ ಮಾತ್ರೆಗಳ ವರೆಗೆ ಅಲ್ಲೇ ತಡೆಯುವದು ಕುಂಭಕವಾಗುವದು. ಪುನಃ ಪುನಃ ಮಾತ್ರೆಗಳನ್ನು ಹೆಚ್ಚಿಸುತ್ತ ಹೋಗಬೇಕು. ಈ ರೀತಿಯಾಗಿ ಪ್ರಣಾಯಾಮವನ್ನು ಸಾಧಿಸುವಲ್ಲಿ ಮಿತಹಾರಿಯಾಗಿರಬೇಕು. ಇದರಿಂದ ಸಾಧಕನು ಶಕ್ತಿಗುಂದುವನು. ಪ್ರಾಣಾಯಾಮವನ್ನೇ ಮುಖ್ಯವಾಗಿರಿಸಿ ಬಹಳ ಹೊತ್ತು ಸಾಧಿಸಿದರೆ ಅಪಾಯವೂ ಸಂಭವಿಸುವದು. .
ಇದೆಲ್ಲವನ್ನರಿತ ಶರಣರು ಪ್ರಾಣದ ತ್ರಾಣವನ್ನು ಕಡೆಗಾಣಿಸುವ ಪ್ರಾಣಾಯಾಮವನ್ನು ಬಿಡಿಸಿದರು. ಪ್ರಾಣಾಯಾಮದ ಸಾಧನೆಗಿಂತ ಸದ್ಗುರುವು ಮುಕ್ತಿಯನ್ನು ಕರುಣಿಸಬಲ್ಲ ವರರತ್ನವೆನಿಸಿದ ಪ್ರಾಣಲಿಂಗವನ್ನು ಆರಾಧಿಸಲು ಉಪದೇಶಿಸಿದನು. ಈ ಪ್ರಾಣಲಿಂಗಾನುಸಂಧಾನದಲ್ಲಿ ಮನ ಲೀನಗೊಳ್ಳುವದು. ಚಾಂಚಲ್ಯ ಕಡಿಮೆಯಾಗುವದು. ಲಿಂಗಪೂಜಕನು ಶಿವಪೂಜೆಯ ಪ್ರಾರಂಭದಲ್ಲಿ ಸಂಕ್ಷಿಪ್ತವಾದ ಪ್ರಾಣಾಯಾಮವನ್ನು ಮಾಡುತ್ತಾನೆ. ಅದರಿಂದ ಆಂತರಿಕ ವಾಯುವು ಶುದ್ಧವಾಗುವದು. ಷಡಕ್ಷರ ಮಂತ್ರಸ್ಮರಣೆಗೆ ಅನುಕೂಲವಾಗುವದು. ಗುರುಕರುಣಿಸಿದ ಇಷ್ಟಲಿಂಗವನ್ನು ಷೋಡಶೋಪಚಾರಗಳಿಂದ ಅರ್ಚಿಸಿ ಆಮೇಲೆ ಪ್ರಾಣ ಲಿಂಗಾನುಸಂಧಾನದಿಂದ ಪ್ರಾಣವು ಲಿಂಗಮಯವಾಗುವದು. ಲಿಂಗ-ನಿರೀಕ್ಷಣೆ ಮಾಡುತ್ತ ಮಂತ್ರಾನುಷ್ಠಾನ ಜಪದಿಂದ ಪ್ರಾಣಲಿಂಗದ ಸಾಕ್ಷಾತ್ಕಾರವಾಗುವದು. ಪ್ರಾಣವು ಪ್ರಣವ ಸ್ವರೂಪಗೊಳ್ಳುವದು.
ಪ್ರಾಣವೇ ಲಿಂಗವಾಗಿಯುಳ್ಳ ಶಿವಭಕ್ತನು ಪ್ರಾಣಲಿಂಗದಲ್ಲಿ ಲೀನವಾಗಿ ಹೊರಗಿನ ವೈಷಯಿಕ ವ್ಯಾಮೋಹದಿಂದ ಬಿಡುಗಡೆಯಾಗುವನು. ಭಾವದಲ್ಲಿ ಬೆರೆಯುವ ಯೋಗ್ಯತೆಯನ್ನು ಪಡೆಯುವನು. ಈ ರೀತಿಯಾದ ಸರಳವಾದ ಉಪಾಯವನ್ನು ಕರುಣಿಸಿದ ಸದ್ಗುರುನಾಥನು ನಿಜವಾಗಿಯೂ ಜಾಣನಲ್ಲವೆ |
ಪ್ರತ್ಯಾಹಾರದ ಮಿಥ್ಯತ್ವ
ಪ್ರತ್ಯಾಹಾರವ ಕೊಂಬ | ಮಿಥ್ಯಾಯೋಗವ ಬಿಡಿಸಿ
ತಥ್ಯವಾಗಿರ್ದ – ನಿತ್ಯತೃಪ್ತಿಯ ಲಿಂಗ
ವಿತ್ತ ಶ್ರೀಗುರುವೆ ಕೃಪೆಯಾಗು ||೯೭||
ಪ್ರತ್ಯಾಹಾರವು ಅಷ್ಟಾಂಗಯೋಗದಲ್ಲಿ ಐದನೆಯದು. ಇಲ್ಲಿಯವರೆಗೆ ವಿವರಿಸಿದ ಯಮ-ನಿಯಮ-ಆಸನ-ಪ್ರಾಣಾಯಾಮ ಮತ್ತು ಈ ಪ್ರತ್ಯಾಹಾರ ಇದು ಅಷ್ಟಾಂಗ ಯೋಗದಲ್ಲಿ ಬಹಿರಂಗ ಸಾಧನೆಗಳೆನ್ನುತ್ತಾರೆ. ಈ ಐದರಿಂದಲೂ ಬಹಿರಿಂದ್ರಿಯಗಳ ನಿಗ್ರಹವೇ ಮುಖ್ಯ-ಸಾಧ್ಯವಾಗಿದೆ. ಈ ಐದು ಸಾಧನೆಯಿಂದ ಮುಂದಿನ ಮೂರನ್ನು ಸಾಧ್ಯಗೊಳಿಸಲು ಅನುಕೂಲವಾಗುವದು. ಇಲ್ಲಿ ಪ್ರತಿಪಾದಿಸಬೇಕಾದ ಪ್ರತ್ಯಾಹಾರದಲ್ಲಿಯೂ ಕಾಯ-ಕರಣೇಂದ್ರಿಯಗಳನ್ನು ವಿಷಯಗಳಿಂದ ವಿರಮಿಸಿ (ಮುಕ್ತಗೊಳಿಸಿ) ಆತ್ಮ ಸ್ವರೂಪ ಮಾತ್ರದಲ್ಲಿ ಚಿತ್ತವು ಬೆರೆಯುವಂತೆ ಮಾಡುವ ವಿಧಾನವೇ ಇರುತ್ತದೆ. ನಿಜಗುಣ ಶಿವಯೋಗಿಗಳು
ಬಾಹ್ಯಾರ್ಥಂಗಳಲ್ಲಿ ಎರಗುವ ಚಿತ್ತಮಂ ಹೃದಯಾಕಾಶದಲ್ಲಿಯೇ
ನಿಲ್ಲಿಸುವುದು ಪ್ರತ್ಯಾಹಾರವು. ಹೃದಯ ಸ್ಥಾನದಿಂದ ಚಲಿಸುವ
ಮನಮಂ ಮರಳಿ ಮರಳಿ ಅಲ್ಲಿಯೇ ಸ್ಥಾಪಿಸುವುದು ಪ್ರತ್ಯಾ ಹಾರವು.
ಅನಾತ್ಮಕವಾದ ದೇಹೇಂದ್ರಿಯಾದಿಕದಲ್ಲಿಯ ಆತ್ಮ
ಬುದ್ಧಿಯಂ ಬಿಡಿಸಿ ಸ್ವಸ್ವರೂಪ ಸಾಕ್ಷಾತ್ಕಾರಮಂ ಮಾಳ್ಪುದು
ಪ್ರತ್ಯಾಹಾರವು”
ಎಂದು ಪಾರಮಾರ್ಥ ಪ್ರಕಾಶಿಕೆ’ ಯಲ್ಲಿ ಪ್ರತಿಪಾದಿಸಿದ್ದಾರೆ. ಮತ್ತು ಪ್ರತ್ಯಾಹಾರವನ್ನು ಸೂಕ್ಷ್ಮವಾಗಿ ಐದು ತೆರನಾಗಿ ವಿವೇಚಿಸುತ್ತಾರೆ. ಪ್ರೇಮ ವಸ್ತುವಿನ ಮೋಹ ತ್ಯಾಗಕ್ಕಾಗಿ ನಿವಾಂತ ಸ್ಥಾನಕ್ಕೆ ಹೋಗುವದು ತನುಪ್ರತ್ಯಾಹಾರವೆಂತಲೂ, ಅಭಿಮಾನ ಬಿಟ್ಟು ನಾನೊಬ್ಬ ಪರಶಿವನ ಸೇವಕನೆಂದು ಸತ್ಕರ್ಮವನ್ನು ಕರ್ಮೇಂದ್ರಿಯಗಳಿಂದ ಮಾಡಹತ್ತಿದರೆ ಅದಕ್ಕೆ ಕರ್ಮೇಂದ್ರಿಯ ಪ್ರತ್ಯಾಹಾರವೆಂತಲೂ, ಎಲ್ಲೆಲ್ಲಿ ದುರ್ವಿಷಯಗಳಿರುವವೋ ಅಲ್ಲಲ್ಲಿ ತನ್ನ ಜ್ಞಾನೇಂದ್ರಿಯಗಳಿಗೆ ಬುದ್ಧಿಕಲಿಸಿ ನಿರೋಧಿಸುವದೇ ಜ್ಞಾನೇಂದ್ರಿಯ ಪ್ರತ್ಯಾಹಾರವೆಂತಲೂ, ಆತ್ಮಚಿಂತನೆಯಲ್ಲಿ ಮನಸ್ಸನ್ನು ತೊಡಗಿಸಿದರೆ ಮನಸ್ಸಿನ ಪ್ರತ್ಯಾಹಾರವೆಂದೂ, ಬುದ್ಧಿಯನ್ನು ಇಂದ್ರಿಯಗಳ ಸಂಬಂಧದಿಂದ ಬಾಹ್ಯಾಂತರ ವಿಷಯಗಳ ವಿಚಾರಕ್ಕೆ ಬಿಡದೆ ಜ್ಞಾನ ಸ್ವರೂಪವಾದ ಆತ್ಮನ ವಿಚಾರದಲ್ಲಿಯೇ ದೃಢವಾಗಿ ನಿಲ್ಲುವಂತೆ ಉಪಯೋಗಿಸುವದೇ ಬುದ್ಧಿಯ ಪ್ರಾತ್ಯಾಹಾರವೆಂತಲೂ ಪ್ರತ್ಯಾಹಾರದ ವಿಶ್ಲೇಷಣೆಯನ್ನು ಮಾಡಿದ್ದಾರೆ.
ಒಟ್ಟಿನ ಮೇಲೆ ತನುವಿನಿಂದ, ಕರ್ಮೇಂದ್ರಿಯಗಳಿಂದ, ಜ್ಞಾನೇಂದ್ರಿಯಗಳಿಂದ ಮನ-ಬುದ್ಧಿಗಳಿಂದಲೂ ವಿಷಯಗಳನ್ನು ನಿರೋಧಿಸುವದು ಪ್ರತ್ಯಾಹಾರದ ಸ್ಪಷ್ಟವಾದ ಅರ್ಥವೆನಿಸಿದೆ. ಇಂಥ ನಿಗ್ರಹಯೋಗವನ್ನು ಶರಣರು ಮಿಥ್ಯಾಯೋಗವೆಂದು ಕರೆದರು. ಯಾಕೆಂದರೆ ಪ್ರಕೃತಿಯು ಪ್ರತಿಯೊಂದು ಪದಾರ್ಥವನ್ನು ಮಾನವನ ಉಪಯೋಗಕ್ಕಾಗಿ ಕಲ್ಪಿಸಿರುವಾಗ ಇಂದ್ರಿಯಗಳು ಅವುಗಳಿಗಾಗಿ ಆಶಿಸುತ್ತಿರುವಾಗ ಪ್ರತ್ಯಾಹಾರ ಮಾಡುವದು ವ್ಯರ್ಥವೆನಿಸುವದು. ಪದಾರ್ಥಗಳಿಂದ ಜೀವಿಸುವ
ಜೀವಾತ್ಮನು, ಹಸಿರು ಹುಲ್ಲನ್ನು ಮುಂದಿರಿಸಿ ದೂರದಲ್ಲಿ ಕಟ್ಟಿ ಹಾಕಿದ ಪಶುವಿನಂತೆ ವಿಷಯಗಳಿಂದ ದೂರವಿರುವದು ಅಸಮಂಜಸವೆನಿಸದಿರದು. ಗುರುನಾಥನು ಇಂಥ ವ್ಯರ್ಥವಾದ ವಿಷಯ ನಿಗ್ರಹಯೋಗವನ್ನು ಬಿಡಿಸಿ ಗಂಧ, ರಸ, ರೂಪು, ಸ್ಪರ್ಶ, ಶಬ್ದಗಳೆಂಬ ವಿಷಯಗಳನ್ನು ಉದಾತ್ತೀಕರಣಗೊಳಿಸಿ ಪ್ರಸಾದ ಸ್ವರೂಪವಾಗಿ ಲಿಂಗಭೋಗೋಪಭೋಗಿಯೆನಿಸಿ ನಿತ್ಯ ತೃಪ್ತಿಯನ್ನು ಹೊಂದೆಂದು ಕರುಣಿಸುತ್ತಾನೆ. ತಥ್ಯವಾದ ಅರ್ಪಣಯೋಗವನ್ನು ಕಲಿಸುತ್ತಾನೆ. ಏನೆಲ್ಲವನ್ನು ಭೋಗಿಸಿಯೂ ಉಪವಾಸಿಯಂತಿರುವ ಕಲೆಯನ್ನು ಅನುಗ್ರಹಿಸುತ್ತಾನೆ.
ಪ್ರಕೃತಿ ಮಾತೆ ಕರುಣಿಸಿದ ಪದಾರ್ಥಗಳನ್ನು ಸುಜ್ಞಾನ ಸತ್ಕ್ರಿಯೆಗಳಿಂದ ಪ್ರಸಾದಗೊಳಿಸಿ ಸ್ವೀಕರಿಸುವದೇ ಪ್ರಸಾದ ಯೋಗವು. ಇದರಿಂದ ನಿತ್ಯತೃಪ್ತತೆ ಸಾಧ್ಯ ವಾಗುವದು. ಅದು ಕಾರಣ ತೃಪ್ತಿಯಿಲ್ಲದ ಪ್ರತ್ಯಾಹಾರವು ಮಿಥ್ಯಾಯೋಗವೇ ಸರಿ. ಯೋಗಾಂಗದ ಅಂಗವಾದ ಈ ಪ್ರತ್ಯಾಹಾರದಿಂದ ಮಾನಸಿಕ ಸಮಾಧಾನ ಸುಲಭವಾಗಿ ಸಿಕ್ಕಲಾರದು. ಅಂತೆಯೇ ಅದನ್ನು ಮಿಥ್ಯಾ ಯೋಗವೆಂಬುದಾಗಿ ವ್ಯಾಖ್ಯಾನಿಸಿದುದರಲ್ಲಿ ಯಥಾರ್ಥತೆಯಿದೆ.
ಇಷ್ಟಲಿಂಗ ಪೂಜೆಯನ್ನು ಪೂರೈಸಿದ ಫಲವು` ಗುರುಲಿಂಗ-ಜಂಗಮರ ಪಾದೋದಕ ಪ್ರಸಾದದಲ್ಲಿ ಪರಿಣಮಿಸುತ್ತದೆ. ಪ್ರತಿನಿತ್ಯದಲ್ಲೂ ಫಲ ಪಡೆಯುವ ಲಿಂಗಭಕ್ತನು ನಿತ್ಯತೃಪ್ತನು, ನಿತ್ಯಮುಕ್ತನು. ಅದಕ್ಕಾಗಿಯೇ ಆತನ ಕರಣೇಂದ್ರಿಯಗಳು ಲಿಂಗೇಂದ್ರಿಯಗಳಾಗುತ್ತವೆ. ವಿಷಯ ವಾಸನೆಯ ಸೋಂಕು ಅವಕ್ಕೆ ಸುಳಿಯಲಾರದು. ಪ್ರತ್ಯಾಹಾರದ ಪರಿಪೂರ್ಣಭಾವ ಲಿಂಗವಂತನಲ್ಲಿಯೇ ಮೈಗೂಡಿಕೊಂಡಿದೆ. ಸರ್ವಾಂಗ ಲಿಂಗಿಯಾದ ಶರಣನು ನಿತ್ಯವೂ ಸಂತೃಪ್ತನೆನಿಸಿದ ಮೇಲೆ ತನುಪ್ರತ್ಯಾಹಾರ, ಕರ್ಮಂದ್ರಿಯ ಪ್ರತ್ಯಾಹಾರ, ಜ್ಞಾನೇಂದ್ರಿಯ ಪ್ರತ್ಯಾಹಾರ, ಮಾನಸಿಕ ಪ್ರತ್ಯಾಹಾರ, ಬುದ್ಧಿಯ ಪ್ರತ್ಯಾಹಾರಗಳನ್ನು ಪ್ರತ್ಯೇಕವಾಗಿ ಅಳವಡಿಸಿಕೊಳ್ಳುವ ಅವಶ್ಯಕತೆಯೆ ಉಳಿಯಲಾರದು.
ಓ ಪರಮ ಗುರುವೆ, ಇಂಥ ತಥ್ಯ ಯೋಗವೆನಿಸಿದ ಅರ್ಪಣ ಸದ್ಭಾವವನ್ನು ಅರುಹಿ ನಿತ್ಯತೃಪ್ತನನ್ನಾಗಿ ಮಾಡು. ನಿತ್ಯ ಮುಕ್ತನಾಗುವ ಪರಿಯನ್ನು ಕರುಣಿಸು. ಲಿಂಗಾಂಗ ಸಾಮರಸ್ಯದಲ್ಲಿ ಸಂತೃಪ್ತಿ ಸದಾ ಸನ್ನಿಹಿತವಾಗಿರುತ್ತದೆ.
ಧ್ಯಾನ ಯೋಗದ ಪರಿಹಾರ
ಮೌನಗೊಂಡಿರುತಿರ್ಪ | ಧ್ಯಾನಯೋಗವ ಬಿಡಿಸಿ
ನೀನಿಷ್ಟಲಿಂಗ-ಧ್ಯಾನದೊಳಗಿರಿಸಿದೈ
ಮೌನಿ ಶ್ರೀಗುರುವೆ ಕೃಪೆಯಾಗು ||೯೮||
ಅಷ್ಟಾಂಗ ಯೋಗದಲ್ಲಿ ಧ್ಯಾನ ಧಾರಣ-ಸಮಾಧಿಗಳ ವಿವೇಕ ಖ್ಯಾತಿಯನ್ನು ಉತ್ಪತ್ತಿ ಮಾಡುವಲ್ಲಿ ಉಪಯುಕ್ತ ಸಾಧನಗಳು. ಆತ್ಮ ಸಾಕ್ಷಾತ್ಕಾರಕ್ಕೆ ಇವು ಮುಖ್ಯವಾದವುಗಳು. ಯೋಗ ದರ್ಶನದಲ್ಲಿ ಮೊದಲು ಧಾರಣ ಯೋಗವನ್ನು ತಿಳಿಸಿ ನಂತರ ಧ್ಯಾನದ ಪ್ರತಿಪಾದನೆ ಬಂದಿದೆ. ಪ್ರಾಣಾಯಾಮ-ಪ್ರತ್ಯಾಹಾರಗಳಿಂದ ಪರಿಶುದ್ಧವಾದ ಚಿತ್ತವು ಸ್ಥಿರಗೊಂಡು ಧೈಯ ವಸ್ತುವಿನ ಧಾರಣ (ಧರಿಸಲು ಯೋಗ್ಯ) ಮಾಡಲು ಶಕ್ತವಾಗುವದು. ಆ ಚಿತ್ತದಲ್ಲಿ ನಿಂತ ಧೈಯವನ್ನು ಧ್ಯಾನಿಸುವುದೇ ಧ್ಯಾನವಾಗುವದು. ಈ ಧ್ಯಾನದ ವ್ಯಾಖ್ಯೆಯನ್ನು ಯೋಗ ದರ್ಶನದಲ್ಲಿ
“ತತ್ರ ಪ್ರತ್ಯಯ್ಯೆಕತಾನತಾ ಧ್ಯಾನಮ್ ʼʼ[೩-೨ ||
ಧೈಯ ಮೂರ್ತಿಗಳಲ್ಲಿರಿಸಿದ ವೃತ್ತಿಯ ಏಕಾಕಾರವೇ ಧ್ಯಾನವೆನಿಸುವದೆಂದು ವಿವರಿಸಲಾಗಿದೆ.
ಶಿವಯೋಗ ಪ್ರದೀಪಿಕೆಯಲ್ಲಿ ಮತ್ತು ಪಾರಮಾರ್ಥ ಪ್ರಕಾಶಿಕೆಯಲ್ಲಿ ಧ್ಯಾನ- ಧಾರಣ-ಸಮಾಧಿಗಳೆಂತಲೂ ಕ್ರಮ ನಿರೂಪಿಸಲ್ಪಟ್ಟಿದೆ. ನಮ್ಮ ಶಿವಕವಿಯಾದರೂ ಈ ಮಾರ್ಗವನ್ನೇ ಅನುಸರಿಸಿದ್ದಾನೆ. ಇಲ್ಲಿ ಪ್ರಥಮತಃ ಧ್ಯಾನದ ವಿಚಾರವನ್ನು ವಿವರಿಸಿದ್ದಾನೆ. ಯಾಕೆಂದರೆ ಯೋಗಮಾರ್ಗದಲ್ಲಿ ಯಮ-ನಿಯಮಾದಿಗಳನ್ನು ಸಾಧಿಸಿ ಶುದ್ಧವಾದ ಚಿತ್ತ ಭಿತ್ತಿಯಲ್ಲಿ ಧೈಯವನ್ನು ಧಾರಣ ಮಾಡಿಕೊಂಡರೇನೆ ಧ್ಯಾನಕ್ರಿಯೆಗೆ ಅನುಕೂಲವಾಗುವದು. ಆದರೆ ಇಲ್ಲಿ ಶಿವಾದ್ವೈತ ಸಿದ್ಧಾಂತವು ಲಿಂಗಧಾರಣ ಪ್ರಕ್ರಿಯೆಯಿಂದಲೇ ಪ್ರಾರಂಭವಾಗುತ್ತದೆ. ಅದುಕಾರಣ ಗುರು ಕೃಪೆಯಿಂದ ಧರಿಸಿಕೊಂಡ ಲಿಂಗವನ್ನು ಧ್ಯಾನಿಸುವುದೇ ಪ್ರಧಾನ ಕರ್ತವ್ಯವಾಗಿದೆ.
ಅಲ್ಲದೇ ಯೋಗ ದರ್ಶನಕಾರರ ಧ್ಯಾನವು ಆಧಾರಾದಿ ಚಕ್ರಗಳಲ್ಲಿಯ ಜ್ಯೋತಿಯನ್ನು ಧ್ಯಾನಿಸುವದೇ ಆಗಿದೆ. ಅವರು ವಿಭಿನ್ನ ಚಕ್ರಗಳಲ್ಲಿ ಭಿನ್ನಮೂರ್ತಿಗಳನ್ನೇ ಧ್ಯಾನಿಸುತ್ತಾರೆ. ಆಧಾರದಲ್ಲಿ ಗಣಪತಿಯನ್ನು ಸ್ವಾಧಿಷ್ಠಾನದಲ್ಲಿ ಚತುರ್ಮುಖ ಬ್ರಹ್ಮನನ್ನು, ಮಣಿಪೂರಕದಲ್ಲಿ ವಿಷ್ಣುವನ್ನು, ಅನಾಹತಚಕ್ರದಲ್ಲಿ ರುದ್ರನನ್ನು, ವಿಶುದ್ಧಿಚಕ್ರದಲ್ಲಿ ಜೀವನನ್ನು, ಆಜ್ಞಾಚಕ್ರದಲ್ಲಿ ಪರಮಾತ್ಮನನ್ನು, ಸಹಸ್ರಾರ ಚಕ್ರದಲ್ಲಿ ಪರಬ್ರಹ್ಮನನ್ನು ಧ್ಯಾನಿಸುತ್ತಾರೆ. ಈ ಏಳು ಚಕ್ರಗಳಲ್ಲಿ ಸಗುಣ ಮೂರ್ತಿಗಳನ್ನು ಕಲ್ಪಿಸುತ್ತ ಅವುಗಳ ಪ್ರಕಾಶವನ್ನೇ ನಿರ್ಗುಣವನ್ನಾಗಿ ಭಾವಿಸುತ್ತಾರೆ. ಇನ್ನು ಕೆಲವರು ಬಾಹ್ಯ ಮೂರ್ತಿಗಳಲ್ಲಿಯೂ ಮನ-ದೃಷ್ಟಿಗಳನ್ನಿಟ್ಟು ಧ್ಯಾನಿಸುತ್ತಾರೆ. ಧೈಯ ಮೂರ್ತಿಗಳನ್ನು ಪುನಃ ಪುನಃ ಮನಸ್ಸಿನಲ್ಲಿಟ್ಟು ಭಾವಿಸುವದರಿಂದ ಧ್ಯಾನವಾಗುವದು. ವಿಭಿನ್ನ ಮೂರ್ತಿಗಳನ್ನು ಧ್ಯಾನಿಸುವದು ಸಹಜ ಮಾರ್ಗವಲ್ಲ, ಮತ್ತು ಅದು ಈ ಧ್ಯಾನವು ಕೇವಲ ಮೌನಯುತವಾದುದು. ಮೌನಿಯಾಗಿ ವಿಭಿನ್ನ ಚಕ್ರಗಳಲ್ಲಿ ಪರಿಪೂರ್ಣ ಧ್ಯಾನವೂ ಆಗುವದಿಲ್ಲವೆಂದು ಶರಣರು ಹೇಳುತ್ತಾರೆ. ಕಾಣದ, ಕಲ್ಪನೆಗೆ ಬಾರದ ಮೂರ್ತಿಗಳನ್ನು ಕಲ್ಪಿಸಿ ಧ್ಯಾನಿಸುವದರಿಂದ ಅಲ್ಲಿ ಸಗುಣಕ್ಕಿಂತ ನಿರ್ಗುಣದ ಕಲ್ಪನೆಯೇ ಬೆಳೆದು ಬರುತ್ತದೆ. ನಿರ್ಗುಣ ವಸ್ತುವಿನಲ್ಲಿ ಮನದ ವೃತ್ತಿ ಏಕಾಕಾರವಾಗುವದು ಕಠಿಣ. ಕಾಣದ ವಸ್ತುವನ್ನು ಧ್ಯಾನಿಸಲು ಸುಲಭವಾಗುವದಿಲ್ಲ.
ಅವ್ಯಕ್ತಾಹಿ ಗತಿರ್ದುಖಂ- (ಭ. ಗೀತೆ)
.
ಆದ್ದರಿಂದ ಮೌನಗೊಂಡಿರುವ ಧ್ಯಾನಯೋಗ ಸಾಧುವಲ್ಲ. ಅಂಥ ಧ್ಯಾನದಿಂದ ಪೂರ್ಣತ್ತ್ವ ಪ್ರಾಪ್ತಿಯಾಗಲಾರದು. . ಗುರುಕರುಣಿಸಿದ ಇಷ್ಟಲಿಂಗವು ಸಾಕಾರವಿರುವದರಿಂದ ಸಗುಣವೂ, ಅರುಹಿನ ಕುರುಹೇ ಆಗಿರುವದರಿಂದ ನಿರ್ಗುಣವೂ ಆಗಿರುತ್ತದೆ. ಕಾಣುವ ಕಾಂತಿಯುಕ್ತವಾದ ಈ ಲಿಂಗದಲ್ಲಿ ದೃಷ್ಟಿಯನ್ನಿರಿಸಿ ಗುರೂಪದಿಷ್ಟವಾದ ಷಡಕ್ಷರ ಮಹಾಮಂತ್ರದ ಅರ್ಥವನ್ನು ಸುಬುದ್ಧಿಯಿಂದ ಗ್ರಹಿಸುತ್ತ ಭಾವದಲ್ಲಿ ಬೆರೆಯುವ ಲಿಂಗಧ್ಯಾನವು ಅಮೋಘವಾಗಿದೆ. ಅನುಪಮವಾಗಿದೆ.
ಯೋಗದ ಧ್ಯಾನಕ್ಕಿಂತಲೂ ಶಿವಯೋಗದ ಧ್ಯಾನವು ಯುಕ್ತಿಯುಕ್ತವಾಗಿದೆ. ಇಷ್ಟಲಿಂಗದ ಧ್ಯಾನವು ದೃಷ್ಟಿಯೋಗವೆನಿಸಿದೆ. ಕಣ್ಣಿಗೆ ಕಾಣುವ ಲಿಂಗದಲ್ಲಿ ಮನವು ನಿಲ್ಲುವದು. ಲಿಂಗವು ಕಣ್ಣಿಗೆ ಕಾಣುವ ಆಕಾರವುಳ್ಳುದಾದರೂ ಅದನ್ನು ಪಡೆದ ಪರಿಯನ್ನು ಈ ಹಿಂದೆ ವಿಶದವಾಗಿ ಅರಿತಿದ್ದೇವೆ. ನವಚಕ್ರಗಳಲ್ಲಿಯ ನವಬ್ರಹ್ಮರ ಮಹಾಚೈತನ್ಯವನ್ನು ಸಂಸ್ಕಾರಗೊಳಿಸಿ ಇಷ್ಟಲಿಂಗದ ಕಿರಣಗಳನ್ನಾಗಿ ನವಲಿಂಗಗಳನ್ನು ನೆಲೆಸುವಂತೆ ಗುರುವು ಕರುಣಿಸುತ್ತಾನೆ. ಈ ನವಲಿಂಗಗಳು ತನ್ನ ಚಿಚ್ಛೈತನ್ಯದ ಕುರುಹುಗಳಾಗಿರುವದರಿಂದ ಧ್ಯಾನವು ಸುಲಭಸಾಧ್ಯವಾಗುವದು. ದೃಷ್ಟಿಯೋಗವುಳ್ಳ ಲಿಂಗಧ್ಯಾನವು ಸಫಲವಾಗುವದು.
ದೃಷ್ಟಿಯೋಗದ ಮಹತಿಯು ಅಪಾರವಾಗಿದೆ. ಅಕ್ಕಮಹಾದೇವಿಯು ತನ್ನ ‘ʼಯೋಗಾಂಗ ತ್ರಿವಿಧಿ” ಯಲ್ಲಿ ಅಷ್ಟಾಂಗ ಯೋಗವನ್ನು ಅತಿಗಳೆದು ದೃಷ್ಟಿಯೋಗವನ್ನು ಎತ್ತಿ ತೋರಿಸಿರುವಳು-
ಅಷ್ಟಾವರಣದ ಹಣ್ಣು ಬಟ್ಟಬಯಲೊಳಗಿರಲು
ಅಷ್ಟಾಂಗಯೋಗವನ್ನು ಮಾಡಿ ಬಳಲುವರು
ದೃಷ್ಟಿಯಿಡುವುದನು ಮರೆದಿಹರು ||
ಅಷ್ಟಾವರಣದ ಹಣ್ಣೆಂದರೆ ಕರಕಮಲದಲ್ಲಿ ಕಾಣಿಸಿಕೊಂಡ ಇಷ್ಟಲಿಂಗವು ಅದರಲ್ಲಿ ದೃಷ್ಟಿಯಿಡುವದು ಶ್ರೇಷ್ಠವಾದ ಕೆಲಸ. ಅದನ್ನು ಮರೆತು ಅಷ್ಟಾಂಗ ಯೋಗದ ಬರಿ ಧ್ಯಾನ ಮಾಡಿ ಬಳಲುವಿಕೆಯನ್ನೇ ಪಡೆಯಬೇಕಾಗುವದೆಂದು ತಿಳಿಸಿದ್ದಾಳೆ. ಆಲಿನಿಂದೊಡೆ ಗಾಳಿ, ಮನ, ನಿಂತು ಕಾಲ-ಕರ್ಮರ ಕಾಟ ಅಳಿಯುವದೆಂಬ ಚಾಮರಸನು ಹೇಳಿದ ಪ್ರಭುವಿನ ವಿಚಾರವನ್ನು ಈಗಾಗಲೇ
ತಿಳಿಸಿದ್ದೇವೆ. ಈ ದೃಷ್ಟಿಯೋಗದ ವಿಷಯವನ್ನು ಉಸುರದ ಶರಣರೇ ವಿರಳ. ಸಿದ್ಧಾಂತಕ್ಕನುಗುಣವಾಗಿ
ʼʼಮನದೊಳಗೆ ದೃಷ್ಟಿಯಿಟ್ಟವನೆ ನಿಜಮುಕ್ತ’ʼ
ಪ್ರಾಣಲಿಂಗದಲ್ಲಿ ದೃಷ್ಟಿ ಬೆರೆಯುವಿಕೆಯೇ ನಿಜಮುಕ್ತಿಯೆನಿಸುವದು. ಛಾಂದೋ ಗ್ಯೋಪನಿಷತ್ತು ಪ್ರತಿಪಾದಿಸಿದ
”ಆತ್ಮಾ ವಾರೇ ದೃಷ್ಟವ್ಯಃ’
“ಆತ್ಮನನ್ನು ನೋಡಬೇಕು’ ಎನ್ನುವ ತತ್ತ್ವವನ್ನು ಶರಣರು ಕರಗತ ಮಾಡಿ ಕೊಂಡಿದ್ದಾರೆ. ಶಿವನನ್ನು ನೋಡಿ ಧ್ಯಾನಿಸುವ ನಯನ-ಮನಗಳೆರಡೂ ಪವಿತ್ರವಾಗುತ್ತವೆ. ಶಿವಲಿಂಗವನ್ನು ಕೇವಲ ಉಪಚಾರಗಳಿಂದ ಉಪಚರಿಸುವದು ಅರ್ಚನೆಯಲ್ಲ. ಲಿಂಗವನ್ನು ನಿರೀಕ್ಷಿಸದ ಜಪ ಧ್ಯಾನವಲ್ಲ. ಇವೆಲ್ಲವುಗಳ ಸಂಗಮದಿಂದಲೇ ಶಿವಯೋಗ ಸಾಧಿಸುವದು. ಈ ವಿಚಾರವನ್ನು ಚನ್ನಬಸವಣ್ಣನವರು ಅನೇಕ ದೃಷ್ಟಾಂತಗಳ ಮೂಲಕ ತಮ್ಮ ವನಚದಲ್ಲಿ ವ್ಯಕ್ತಮಾಡಿದ್ದಾರೆ-
ಕತ್ತಲ ಮನೆಯಲ್ಲಿರ್ದ ಮನುಜನು
ಜ್ಯೋತಿಯನೆನಿತು ಹೊತ್ತು ನೆನೆದಡೆಯೂ ಬೆಳಕಾಗಬಲ್ಲುದೆ
ಬೆಂಕಿಯ ಹೊತ್ತಿಸದನ್ನಕ್ಕ ?
ಮರದುದಿಯ ಫಲವು ನೋಟ ಮಾತ್ರಕ್ಕುದುರುವುದೇ
ಹತ್ತಿ ಹರಿಯದನ್ನಕ್ಕ ?
ಹುಟ್ಟು ಗುರುಡನು ಕಷ್ಟ ಬಟ್ಟು ಎಷ್ಟು ಹೊತ್ತು ನಡೆದಡೆಯೂ
ಇಚ್ಛಿತ ಪಟ್ಟಣವ ಮುಟ್ಟುವನೇ, ಕಣ್ಣುಳ್ಳವನ ಕೈವಿಡಿಯದನ್ನಕ್ಕ ?
ಹಾಂಗೆ, ಸಮ್ಯಗ್ ಜ್ಞಾನಾತ್ಮಕವಾದ
ಲಿಂಗಾರ್ಚನ, ಲಿಂಗ ನಿರೀಕ್ಷಣ, ಲಿಂಗಧ್ಯಾನಗಳಿಲ್ಲದೆ
ಆ ನೆನಹು ನಿರೀಕ್ಷಣೆ ಪೂಜೆ ಇವುಗಳೊಂದೊಂದೆ
ಮುಕ್ತಿಯನೀವವೆಂಬ ಯುಕ್ತಿಗೆಟ್ಟ ಮಂದ ಮತಿಗಳ ಮೆಚ್ಚುವನೆ,
ಕೂಡಲ ಚನ್ನಸಂಗಮದೇವನು ?
ಕತ್ತಲ ಮನೆಯ ಕುಳಿತು ಬೆಂಕಿಯನ್ನು ಹೊತ್ತಿಸದೆ ಎಷ್ಟೊತ್ತು ಜ್ಯೋತಿಯನ್ನು ನೆನೆದಡೆ ಎಂದೂ ಬೆಳಕಾಗುವದಿಲ್ಲ, ವೃಕ್ಷದ ತುದಿಯ ಹಣ್ಣನ್ನು ಹತ್ತಿ ಹರಿಯ ಬೇಕಲ್ಲದೆ ನೋಟ ಮಾತ್ರದಿಂದ ಕೆಡವುದಕ್ಕಾಗುವದಿಲ್ಲ. ಹುಟ್ಟು ಗುರುಡನು ಕಣ್ಣುಳ್ಳವರ ಕೈಹಿಡಿಯದೆ ಕಷ್ಟಪಟ್ಟು ಎಷ್ಟು ಹೊತ್ತು ನಡೆದರೂ ಇಚ್ಛಿತವಾದ ಪಟ್ಟಣಕ್ಕೆ ಹೋಗಲಾರನು, ಇದರಂತೆ ಸಮ್ಯಗ್ ಜ್ಞಾನಾತ್ಮಕವೆನಿಸಿದ ಸತ್ಕ್ರಿಯಾರೂಪ ಲಿಂಗಾರ್ಚನೆಯು ಲಿಂಗ ನಿರೀಕ್ಷಣ, ಲಿಂಗಧ್ಯಾನಗಳಿಲ್ಲದೆ ಪರಿಪೂರ್ಣವಾಗುವದಿಲ್ಲ. ಅಲ್ಲದೆ ಈ ನೆನಹು, ನೋಟ, ಪೂಜೆಗಳಲ್ಲಿ ಒಂದೊಂದೇ ಕ್ರಿಯೆಯಿಂದ ಎಂದಿಗೂ ಶಿವಯೋಗ ಸಾಧ್ಯವಾಗುವುದಿಲ್ಲ. ಒಂದೊಂದರಿಂದಲೇ ಮುಕ್ತಿಯನ್ನು ಹೊಂದುವನೆಂಬ ಮಂದಮತಿಯನ್ನು ಮಹಾದೇವನೆಂದಿಗೂ ಮೆಚ್ಚುವದಿಲ್ಲ. ಕಾರಣ ಅರ್ಚನೆಯಾದ ಬಳಿಕ ಲಿಂಗದಲ್ಲಿ ದೃಷ್ಟಿಯಿಟ್ಟು ಶಿವಷಡಕ್ಷರ ಮಹಾಮಂತ್ರದ ಧ್ಯಾನವನ್ನು ಮಾಡಬೇಕು. ಅಂತೆಯೇ ಅನೇಕ ಶರಣರು ದೃಷ್ಟಿಯೋಗದ ವಿಚಾರ ವಾಗಿ ಕೆಳಗಿನಂತೆ ಪ್ರತಿಪಾದಿಸಿದ್ದಾರೆ, ಬಹುರೂಪಿ ಚೌಡಯ್ಯ ಶರಣನು-
“ನೋಡುವವರ ದೃಷ್ಟಿ ಬಟ್ಟಬಯಲು”
ಮೋಳಿಗೆ ಮಾರಯ್ಯನವರ ಧರ್ಮಪತ್ನಿ ಮಹಾದೇವಿಯು
”ಇಷ್ಟದಲ್ಲಿ ನೋಟ, ಜ್ಞಾನದಲ್ಲಿ ಕೂಟ’
ಮಹಾನುಭಾವಿ ಬಸವಣ್ಣನವರು-
“ಒಲಿದ ಠಾವಿನಲ್ಲಿ ನೋಟ ಜೀವಾಳವಯ್ಯಾ’
“’ಹೊತ್ತಾರೆ ಎದ್ದು ಲಿಂಗದೇವನ ದೃಷ್ಟಿಯಾರೆ
ನೋಡದವನ ಸಂಸಾರವೇನವನ ?
“ಶಂಭು ನಿಮ್ಮಯ ನೋಟ, ಹೆರಹಿಂಗದ ಕಣ್ಬೇಟ
ನಿಮ್ಮ ನೋಟ ಅನಂತಸುಖ, ಕೂಟ ಪರಮಸುಖ”
ಷಟ್‌ಸ್ಥಲ ಮಹಾಜ್ಞಾನಿ ಚನ್ನಬಸವಣ್ಣನವರು-
“ಸ್ನೇಹದ ನೋಟದಲ್ಲಿಯೇ ತೃಪ್ತಿ”
ತೋಂಟದ ಸಿದ್ಧಲಿಂಗ ಶಿವಯೋಗಿಗಳು-
“ಕಂಗಳ ಕೊನೆಯ ಮೊನೆಯಲ್ಲಿ ಕಾಣುವುದು
ಲಿಂಗ ತಾನೆ ಅಯ್ಯಾ’ |
ಘನಲಿಂಗ ದೇವನು-
ಇಷ್ಟಲಿಂಗಮಂ ಕರದಲ್ಲಿ ಪಿಡಿದು ಪೂಜೆಯಮಾಡಿ
ಆ ಲಿಂಗಮಂ ಅನಿಮಿಷ ದೃಷ್ಟಿಯಿಂದ
ನೋಡುವುದೀಗ ಲಿಂಗದ ನೋಟ
ಹೀಗೆ ಹೇಳಿರುವ ಹಲವಾರು ಶರಣರ ದೃಷ್ಟಿಯೋಗದ ವಿಚಾರವನ್ನು ಚ. ಸುಂದರೇಶನ್ನರು ತಮ್ಮ “ದೃಷ್ಟಿಯೋಗ’ ಗ್ರಂಥದಲ್ಲಿ ಸಂಗ್ರಹಿಸಿದ್ದಾರೆ. ದೃಷ್ಟಿ ಯೋಗವು ಶಿವಯೋಗದ ಜೀವಾಳ. ಇದರಿಂದ ಲಿಂಗಧ್ಯಾನವು ಪರಿಪೂರ್ಣವೂ ಫಲದಾಯಕವೂ ಆಗುವದು.
ಶಿವಯೋಗವು ತನ್ನದೇ ಆದ ಐದಂಗಳನ್ನು ಹೊಂದಿದೆ. ೧) ಶಿವಜ್ಞಾನ, ೨) ಶಿವಭಕ್ತಿ, ೩) ಶಿವಧ್ಯಾನ, ೪) ಶಿವವ್ರತ, ೫) ಶಿವಾರ್ಚನ, ಶಿವನ ವಿಷಯಕ ಜ್ಞಾನವಿದ್ದರೆ ಶಿವನಲ್ಲಿ ಭಕ್ತಿ ಬೆಳೆಯುವದು ಅಂಥ ಶಿವಲಿಂಗದಲ್ಲಿ ಭಕ್ತಿಯಿಂದ ಧ್ಯಾನವುಳ್ಳವನಾಗಿ ಬಹಿರ್ಲಕ್ಷ್ಯವನ್ನು ಅಂತರ್ಮುಖಗೊಳಿಸಬೇಕು. ಧೈಯ ವಸ್ತುವಾದ ಲಿಂಗಾಕಾರವೇ ತಾನಾಗಬೇಕು. ಸರ್ವವೂ ಶಿವಮಯವೆಂಬ ವ್ರತವು ವಿಶಾಲ ಮನೋಭಾವವುಳ್ಳವನನ್ನಾಗಿ ಮಾಡುವದು. ಶಿವಾರ್ಚನೆಯಲ್ಲಿ ಬಾಹ್ಯವಾದ ಇಷ್ಟಲಿಂಗದ ಪೂಜೆಯು ಉಪಚಾರಗಳಿಂದ ಕೂಡಿದ್ದರೆ, ಪ್ರಾಣಲಿಂಗದ ಪೂಜೆ ಆಂತರಿಕ ಜ್ಞಾನ ಮತ್ತು ಧ್ಯಾನಗಳಿಂದ ಕೂಡಿರುತ್ತದೆ. ಈ ಲಿಂಗ ಧ್ಯಾನವು ಹೆಚ್ಚಿದಂತೆ ಪ್ರಾಣಲಿಂಗವೇ ತಾನಾಗುವನು. ಇಂಥ ಇಷ್ಟಲಿಂಗ ಧ್ಯಾನವುಳ್ಳ ಶ್ರೀಗುರುವು ಮೌನಿಯಾಗುತ್ತಾನೆ. ಬಾಹ್ಯ ವ್ಯವಹಾರದಲ್ಲಿ ಮೌನವುಳ್ಳವನಾಗುತ್ತಾನೆ. ಇಂಥ ಲಿಂಗಧ್ಯಾನವನ್ನು ಕಲಿಸಿಕೊಡುವ ಗುರುನಾಥನು ಮಾನ್ಯತೆಯನ್ನು ಪಡೆದವನಾಗುತ್ತಾ. ನೆಂತಲೂ ಪಾಠಾಂತರದ ಅರ್ಥ ಸರಿಹೋಗುವದು.
ಧಾರಣಯೋಗದ ನಿರಸನ
ಧಾರಣದ ಯೋಗದಾ | ಚರಣೆಯನೆ ಅತಿಗಳೆದು
ಕಾರಣದ ಲಿಂಗ-ಧಾರಣವ ಗೈದ ಪರಿ
ಪೂರ್ಣ ಶ್ರೀಗುರುವೆ ಕೃಪೆಯಾಗು ||೯೯ ||
ಧಾರಣವೆಂದರೆ ಧರಿಸುವದು. ಪರಿಶುದ್ಧವಾದ, ಸ್ಥಿರವಾದ ಮನೋಭೂಮಿಕೆಯಲ್ಲಿ ಆರಾಧ್ಯ ವಸ್ತುವಿನ ಆಕಾರ ಕರಿಗೊಳ್ಳುವದು. ಪೂರ್ವೋಕ್ತ ಪಂಚಾಂಗಗಳಿಂದ ಧಾರಣಯೋಗವನ್ನು ಸಾಧಿಸಲು ಅನುಕೂಲವಾಗುವದು. ಮನಸ್ಸಿನ ಅಧೀನಗಳಾದ ಇಂದ್ರಿಯಗಳು ಮನೋನಿಗ್ರಹದಿಂದ ವಶವಾದರೆ ಧೈಯ ವಸ್ತುವಿನ ಸ್ವಸ್ವರೂಪವು ಚಿತ್ತದಲ್ಲಿ ಸ್ಥಿರಗೊಳ್ಳುವದು. ಆ ಧೈಯವನ್ನು ಕಾಣುತ್ತ ಧ್ಯಾನ ಲೀನವಾಗುವನು. ಅದಕ್ಕಾಗಿಯೇ ಧ್ಯಾನ-ಧಾರಣ-ಸಮಾಧಿಗಳು ವಿವೇಕ ಖ್ಯಾತಿಗಳೆಂದು ಕರೆಯಲ್ಪಟ್ಟಿವೆ. ಅಂದರೆ ಆತ್ಮನ ಅರಿವನ್ನು ಹೇಳತಕ್ಕವುಗಳೆಂದರ್ಥ.
ಧಾರಣವು ಆಧಿಭೌತಿಕ, ಅಧ್ಯಾತ್ಮಿಕವೆಂದು ವಿಭಾಗವಾಗುತ್ತದೆ. ಸೂರ್ಯ- ಚಂದ್ರ, ದೇವತಾ ಮೂರ್ತಿ, ಶಿವಲಿಂಗ (ಸ್ಥಾವರ), ಸಾಲಿಗ್ರಾಮಾದಿಗಳು ಧಾರಣ ಕ್ರಿಯೆಯ ಆಧಿಭೌತಿಕ ಸ್ಥಾನಗಳೆನಿಸುತ್ತವೆ. ಆಧಾರಾದಿ ಚಕ್ರಗಳ ಮೂರ್ತಿಗಳ ಚೈತನ್ಯ ಧಾರಣವು ಆಧ್ಯಾತ್ಮಿಕ ಸ್ಥಲವುಳ್ಳದಾಗುವದು. ಆಧಿಭೌತಿಕ ಧಾರಣವು ಬಾಹ್ಯವಾಗಿದ್ದರೆ ಆಧ್ಯಾತ್ಮಿಕ ಧಾರಣಯೋಗವು ಆಂತರಿಕವಾಗಿದೆ.
ಧಾರಣಕ್ರಿಯೆಯು ನಿತ್ಯ ವ್ಯವಹಾರದಲ್ಲಿಯೂ ನಡೆಯುತ್ತದೆ. ಉದಾಹರಣೆಗಾಗಿ-ಹಿರಿಯರು ಹೇಳುವ ಮಾತಿನಲ್ಲಿ ಶ್ರದ್ಧೆಯಿಂದ ಕಿವಿಗೊಟ್ಟರೆ ಸರಿ, ಉದಾಸೀನದಿಂದ ಅವರೇನಾದರೂ ಹೇಳಿಕೊಳ್ಳಲಿ, ತನ್ನ ಮನ ಮಾತ್ರ ಬೇರೆಡೆಗೆ ಇದ್ದರೆ ಅವರ ಅಭಿಪ್ರಾಯ ಅವನಿಗೆ ತಿಳಿಯುವದೇ ಇಲ್ಲ. ಕೇಳುವ ಕಿವಿಯಲ್ಲಿ ಮನಸ್ಸು ನಿಂತರೆ ಶಬ್ದ ವಾಕ್ಯಾರ್ಥ ಅನುಭವಕ್ಕೆ ಬರುತ್ತದೆ. *ಶಾಕುಂತಲ ನಾಟಕದಲ್ಲಿ ಶಕುಂತಲೆಯು ದುಷ್ಯಂತ ರಾಜನ ಚಿಂತೆಯಲ್ಲಿ ಮಗ್ನವಾಗಿರುವಾಗ ದೂರ್ವಾಸ ಮುನಿಯು ಭಿಕ್ಷೆ ಕೇಳಿ ಬೇಡಿದ್ದಾಗಲಿ, ಸಿಟ್ಟಿಗೆದ್ದು ಶಾಪಕೊಡುವುದನ್ನಾಗಲಿ ಅವಳು ಅರಿಯುವದಿಲ್ಲ. ಮಹಾಮುನಿಯ ಮಾತನ್ನು ಅನಾದರ ಗೊಳಿಸಿದುದುಕ್ಕೇನೇ ಅವಳು ಮುಂದೆ ತೊಂದರೆಯನ್ನು ಅನುಭವಿಸಿದಳು.
ಇದರಂತೆ ಊಟ ಮಾಡುವಾಗ ಮನ ವ್ಯಗ್ರವಾದರೆ ಷಡ್ರಸಾನ್ನವೂ ಸಹರುಚಿಸುವದಿಲ್ಲ. ಸುಗಂಧದ ವಾಸನೆಯೂ ತಿಳಿಯುವದಿಲ್ಲ, ಬುದ್ಧಿಯ ಗ್ರಹಿಕೆಯೂ ನಿಂತುಹೋಗುತ್ತದೆ. ಕಾರಣ ಆಯಾ ಕಾರ್ಯಗಳಲ್ಲಿ ಮನ ಕೂಡಿರಬೇಕು. ಚಿತ್ತಭಿತ್ತಿ ಹಸನಾಗಿರಬೇಕು. ಅಂತೆಯೇ ಹಿರಿಯರು ಮನವಿಟ್ಟು ಕೆಲಸ ಮಾಡಲು. ಹೇಳುವದುಂಟು. ಮನಮುಟ್ಟಿ ಮಾಡುವ ಕಾರ್ಯದಲ್ಲಿ ಕುಶಲತೆ ಲಭಿಸುವದು. ಅದಕ್ಕಾಗಿ ಕೃಷ್ಣನು “ಯೋಗಃ ಕರ್ಮಸು ಕೌಶಲಮ್‘ ಕಾರ್ಯದಲ್ಲಿ ಕುಶಲತೆಯನ್ನು ಸಾಧಿಸುವುದೇ ಯೋಗವೆಂದು ಪ್ರತಿಪಾದಿಸಿದ್ದಾನೆ. ಅರ್ಜುನನಿಗೆ ಯುದ್ಧ ಕಾರ್ಯದಲ್ಲಿಯಾದರೂ ಮನಃಪೂರ್ವಕ ಬಾಣಪ್ರಯೋಗ ಮಾಡೆಂದು ತಿಳಿಸುತ್ತಾನೆ. ಅಂದರೇನೆ ಗುರಿಸಾಧಿಸಲು ಸಾಧ್ಯವಾಗುವದು.
ಸಾಧಕನಾದವನು ತನ್ನ ಧೈಯ ವಸ್ತುವಿನಲ್ಲಿ ಮನಸ್ಸನ್ನು ಕೇಂದ್ರೀಕೃತಗೊಳಿಸ ಬೇಕು. ಗುರುವಾದ ದ್ರೋಣಾಚಾರ್ಯರ ಬಾಣ ಪ್ರಯೋಗ ಪರೀಕ್ಷೆಯಲ್ಲಿ ಏಕಲಕ್ಷ್ಯವುಳ್ಳ ಅರ್ಜುನನಿಗೆ ಗುರಿಯಾದ ಪಕ್ಷಿಯ ಕೊರಳೊಂದೆ ಕಂಡಿತು. ಉಳಿದ ಯಾವ ಪಕ್ಷಿಯ ಅವಯವವೂ ಕಾಣಲಿಲ್ಲ. ಗಿಡದ ಶಾಖೆಗಳೂ ಗೋಚರಿಸಲಿಲ್ಲ. ಆದರೆ ಉಳಿದ ಶಿಷ್ಯರಿಗೆ ಎಲ್ಲವೂ ಕಂಡುದರಿಂದ ಗುರಿ ಸಿಕ್ಕಲಿಲ್ಲ. ಅರ್ಜುನನು ಮಾತ್ರ ಅದನ್ನು ಸಾಧಿಸಿ ಉತ್ತೀರ್ಣನಾದ. ಅಂತೆಯೇ ಮುಂದೆ ದ್ರೌಪದಿಯ ಸ್ವಯಂವರದಲ್ಲಿಯಾದರೂ ಕಾಯ್ದ ಎಣ್ಣೆಯಲ್ಲಿ ಮೇಲಿನ ಮೀನದ ಛಾಯೆಯನ್ನು ನೋಡಿ ಮೇಲೆ ಗುರಿ ಹೊಡೆಯುವ ಮಹಾಕಾರ್ಯದಲ್ಲಿ ಅವನು ಜಯಶಾಲಿಯಾದನು. ಈ ರೀತಿಯಾಗಿ ಸರ್ವೆ೦ದ್ರಿಯ ವಿಷಯಗಳ ಅರಿವಾಗಬೇಕಾದರೂ ಆ ಇಂದ್ರಿಯಗಳಲ್ಲಿ ಚಿತ್ತವು ಸ್ಥಿರವಾಗಬೇಕಾಗುವದು.
ಅಧ್ಯಾತ್ಮ ಸಾಧಕನು ತಾನು ಹೊಂದಬೇಕಾದ ಆರಾಧ್ಯ ವಸ್ತುವಿನಲ್ಲಿಯೇ ತನ್ನ ಎಲ್ಲ ಇಂದ್ರಿಯಗಳು ತಲ್ಲೀನವಾಗಬೇಕು. ಶಿವನನ್ನು ಭಜಿಸುವ ಭಕ್ತನಿಗೆ ಕಣ್ಣಿನಲ್ಲಿ ಕಾಣುವ ವಸ್ತುಗಳೆಲ್ಲವೂ ಆ ಶಿವನ ಆಕಾರದಲ್ಲಿಯೇ ಕಾಣಬೇಕು. ಕಿವಿಯಲ್ಲಿ ಆತನ ಗುಣಗಾನವೇ ಕೇಳಿಸುವಂತಾಗಬೇಕು. ಉಣ್ಣುವ ಪದಾರ್ಥವು ಶಿವಪ್ರಸಾದವಾಗಿಯೇ ತೀರಬೇಕು. ವಾಸಿಸುವ ಗಂಧವೂ ಶಿವನಿಗೆ ಸಮರ್ಪಿಸಿದ ಪುಷ್ಪ-ಧೂಪ ಗಂಧವಾಗಿ ಅಭ್ಯಾಸವಾಗಬೇಕು. ಹೀಗಾದರೆ ಆ ಸಾಧಕನು ತೀವ್ರದಲ್ಲಿ ಧೈಯ ವಸ್ತುವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವನು. ಮೀರಾಬಾಯಿಯು ವಿಷವನ್ನು ಸಹ ಕೃಷ್ಣನ ಚರಣಾಮೃತವೆಂದು ಸ್ವೀಕರಿಸಿ ಅಮರಳಾದಳು. ಒಟ್ಟಿನಲ್ಲಿ ಮನವು ಲಕ್ಷದಲ್ಲಿ ಲೀನವಾದರೆ ಧಾರಣಯೋಗವು ಸುಗಮವಾಗುವದು.
ಯೋಗಶಾಸ್ತ್ರಕಾರರ ಧಾರಣವು ಶರೀರದ ಸಪ್ತ ಚಕ್ರಗಳಲ್ಲಿಯ ನಿರ್ಗುಣ ವಸ್ತುವಿನ ಧಾರಣವಾಗಿದೆ. ಅಧ್ಯಾತ್ಮಿಕವಾಗಿರುವದರಿಂದ ಸುಲಭ ಸಾಧ್ಯವಾಗುವದಿಲ್ಲ. ಈ ನಿರವಯವನ್ನು ಧಾರಣ ಮಾಡುವದು ಸರಿಯಲ್ಲವೆಂದು ವಿಚಾರಿಸಿ ಶರಣರು ಸಗುಣವೂ, ನಿರ್ಗುಣ ನಿರಾಕಾರವೂ ಆದ ಪ್ರಾಣಲಿಂಗದ ಧ್ಯಾನದಿಂದ ಲಭ್ಯವಾಗುವ ಭಾವಲಿಂಗದ ಧಾರಣವು ಪರಿಪೂರ್ಣವಾದುದೆಂದು ಬೋಧಿಸಿದ್ದಾರೆ. ಬಾಹ್ಯದಲ್ಲಿ ಇಷ್ಟಲಿಂಗದ ಧಾರಣೆಯು ಸರ್ವೆಂದ್ರಿಯಗಳಲ್ಲಾದರೆ ಪ್ರಾಣದಲ್ಲಿ ಪ್ರಾಣಲಿಂಗದ ಧ್ಯಾನ ಸಾರ್ಥಕವಾಗುವದು. ಆಗ ಕಾರಣತನುವಿನ ಭಾವವು ಬೆರೆಯುವದು. ತನುಭಾವ, ಇಂದ್ರಿಯಭಾವ ಬಯಲಾಗಿ ಎಲ್ಲ ಇಂದ್ರಿಯಗಳಲ್ಲಿ ಲಿಂಗಭಾವ ಬರಬೇಕು. ಕ್ರಿಯಾಜ್ಞಾನಗಳು ಅನುಭವದಲ್ಲಿ ಅಳವಡಬೇಕು. ಅಂದರೆ ಭಾವದಲ್ಲಿ ಭಾವಲಿಂಗವಾಗಿ ಬಯಲಾತ್ಮನಾಗುವ ಶಕ್ತಿ ಬರುತ್ತದೆ. ಇಂಥ ಭಾವವನ್ನೇ ಹೊಂದಿದ ಅಲ್ಲಮ ಪ್ರಭುಗಳು ವೋಮಕಾಯರೇನಿಸಿದ್ದರು. ಇದು ನಿರಂಜನ ಪ್ರಭುವಿನ ಅನುಗ್ರಹವಿಲ್ಲದೆ ದೊರೆಯದು. ನಿರಾಭಾರಿ ಗುರುನಾಥನು ಸ್ವತಃ ತಾನು
ತನು-ಮನ-ಭಾವಂಗಳಲ್ಲಿ ತ್ರಿಲಿಂಗಗಳನ್ನು ಧಾರಣ ಮಾಡಿ ಪರಿಪೂರ್ಣವಾಗಿರುತ್ತಾನೆ. ಅಂಥವರ ಕೃಪೆಯಾದರೆ ಧಾರಣಯೋಗವು ಸುಗಮವಾಗುವದು.
ಅಣ್ಣನವರ-
ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ
ಕೂಡಲ ಸಂಗಮದೇವಾ ನಿಮ್ಮ ಚರಣಕಮಲದಲಾನು ತುಂಬಿ
ವಚನ, ನಯನ, ಮನ, ಶ್ರವಣೇಂದ್ರಿಯ ಮೊದಲಾದವುಗಳಲ್ಲಿಯೂ ಶಿವನೇ ತುಂಬಿದರೆ ನಾನು ಭ್ರಮರದಂತೆ ನಿಮ್ಮ ಚರಣಕಮಲದಲ್ಲಿ ತುಂಬಿ ಬಾಳುವೆನೆನ್ನುವ ಮಾತು ಧಾರಣ ತತ್ತ್ವಕ್ಕೆ ಉತ್ತಮ ಉದಾಹರಣೆಯಾಗಿದೆ. ಬಾಹ್ಯ ವ್ಯವಹಾರವು ಈ ರೀತಿಯಾದರೆ ಅಂತರಂಗದಲ್ಲೂ ಪ್ರಾಣ-ಭಾವಲಿಂಗಗಳು ಭರಿತವಾಗುವವು.
ಸಮಾಧಿಯೋಗದ ನಿರಸನ
ಸುಸಮಾಧಿಯೋಗ ತಾ | ಮಸವೆಂದು ತೊಲಗಿಸುತ
ಅಸಮ ಲಿಂಗದೊಳು-ಅಸುವಳಿದೊಡೈಕ್ಯವೆಂ-
ದುಸುರಿದೈ ಗುರುವೆ ಕೃಪೆಯಾಗು ||೧೦೦||
ಅಷ್ಟಾಂಗಯೋಗದ ಅಂತಿಮ ಸಾಧನವೇ ಸಮಾಧಿಯು. ಇಲ್ಲಿ ಧ್ಯಾನ-ಧ್ಯಾತ್ಮ ಧೈಯಗಳು ಏಕಾಕಾರವಾಗುವವು. ಧೈಯವಸ್ತುವೇ ತಾನಾಗುವದೇ ಸಮಾಧಿಯ ಮುಖ್ಯಗುರಿ. ಧ್ಯಾನಗೈಯುವವನು, ಧ್ಯಾನವು, ಒಂದಾಗುವದು ಸಮಾಧಿಯಾಗು ವದು. ಚಿತ್ತದ ವಿಕ್ಷೇಪ (ಚಂಚಲವೃತ್ತಿ) ಗಳು ಇಲ್ಲಿ ಉಳಿದಿರುವುದಿಲ್ಲ. ಧಾರಣ ಮಾಡಿದ ಧೈಯವೇ ತಾನಾಗುವಾಗ ಬಾಹ್ಯ ವೃತ್ತಿಗಳು ಬಯಲಾಗುತ್ತವೆ.
‘ಸಮಾಧಿ’ ಶಬ್ದದ ವ್ಯುತ್ಪತ್ತಿ ಲಭ್ಯವಾದ ಅರ್ಥವಾದರೂ ಕೂಡುವದು, ಅಥವಾ ಏಕರೂಪವಾಗುವದು-
“ಸಮ್ಯಗಾಧೀಯತೇ ಏಕಾಗ್ರೀಕ್ರಿಯತೇ
ವಿಕ್ಷೇಪಾನ್ ಪರಿಹೃತ್ಯ ಮನೋ ಯತ್ರ ಸ ಸಮಾಧಿಃ”
ವಿಕ್ಷೇಪಗಳನ್ನು ತಡೆದು ಚಿತ್ತವನ್ನು ಏಕಾಗ್ರಗೊಳಿಸುವದು. ಧ್ಯಾನಾವಸ್ಥೆಯಲ್ಲಿ ಧ್ಯಾನ-ಧೈಯವಸ್ತು ಮತ್ತು ಧ್ಯಾನಮಾಡುವವ ಇವುಗಳು ಭಿನ್ನ ಭಿನ್ನವಾಗಿ ಪ್ರತೀತವಾಗುತ್ತವೆ. ಆದರೆ ಸಮಾಧಿಯಲ್ಲಿ ಧೈಯ ವಸ್ತುವು ಮಾತ್ರ ಉಳಿಯುತ್ತದೆ. ಯೋಗದರ್ಶನದಲ್ಲಿ(ಮೂರನೆಯಪಾದ ೩ನೇ ಸೂತ್ರ).
ತದೇವಾರ್ಥಮಾತ್ರ ನಿರ್ಭಾಸಂ ಸ್ವರೂಪ ಶೂನ್ಯಮಿವ ಸಮಾಧಿ: ೩||೩
ಅದೇ ಧ್ಯಾನವೃತ್ತಿಗೆ ಕೇವಲ ಧ್ಯೇಯವೊಂದೇ ಭಾಸವಾದಾಗ ಸ್ವರೂಪ ಶೂನ್ಯದಂತಾಗುವದೇ ಸಮಾಧಿ ಎಂದು ಪ್ರತಿಪಾದಿಸಿದೆ. ಈ ಸಮಾಧಿಯು ಎರಡು ತೆರನಾಗುತ್ತದೆ. ಸದಾನಂದ ಯೋಗಿಯು ವೇದಾಂತಸಾರ’ದಲ್ಲಿ
“ಸಮಾಧಿರ್ದ್ವಿವಿಧಃ ಸವಿಕಲ್ಪೋ ನಿರ್ವಿಕಲ್ಪ ಕಶ್ಚಿತಿ”
ಸವಿಕಲ್ಪಕ ನಿರ್ವಿಕಲ್ಪಕಗಳೆಂದು ಸಮಾಧಿಯನ್ನು ವಿಭಾಗಮಾಡಿಸಿದ್ದಾನೆ. ಇವನ್ನೇ ಯೋಗದರ್ಶನಕಾರರು- “ಸಂಪ್ರಜ್ಞಾತ ಸಮಾಧಿ, ಅಸಂಪ್ರಜ್ಞಾತ ಸಮಾಧಿ” ಎಂದು ಕರೆದಿರುವರು. ಉದಾಹರಣೆಗಾಗಿ ಬೆಂಕಿಯನ್ನು ತಕ್ಕೊಳ್ಳಬಹುದು. ಬೆಂಕಿಯು ಕಟ್ಟಿಗೆಯ ತುಂಡುಗಳನ್ನು ಸುಟ್ಟು ತನ್ನಂತಾದ ಮೇಲೂ ಎಷ್ಟೋ ಹೊತ್ತು ಉರಿಯುತ್ತದೆ. ಹಾಗೆ ಸಂಪ್ರಜ್ಞಾತ ಸಮಾಧಿಯಲ್ಲಿ ಧ್ಯಾನ ಧ್ಯಾತ್ಮ, ಧ್ಯೇಯಗಳು ಅಡಗಿ ಕೇವಲ ಧ್ಯೇಯವಾಗಿರುತ್ತಾನೆ. ಅಗ್ನಿಯು ಉರಿದು ಕೊನೆಗೆ ತಾನೂ ಶಾಂತವಾಗುವಂತೆ ಸಮಾಧಿಸ್ಥಿತಿಯಲ್ಲಿ ಧ್ಯೇಯವೂ ಅಡಗಿ ಹೋಗುವದನ್ನೇ ಅಸಂಪ್ರಜ್ಞಾತ ಸಮಾಧಿಯೆಂದು ಕರೆದಿರುವರು.
ಸಮಾಧಿಸ್ಥಿತಿಯಲ್ಲಿಯೂ ಧ್ಯೇಯದ ಅರ್ಥಪ್ರತ್ಯಯವಿರುವದರಿಂದ ಇದು ಪೂರ್ಣವಾದ ಸಮರಸವಲ್ಲವೆಂದು ಶರಣರು ಅದನ್ನು ತಾಮಸವೆಂದು ಕರೆದರು. ಸಮಾಧಿಸ್ಥಿತಿಯಲ್ಲಿ ಯಾವುದೂ ಇರಬಾರದು. ಅಲ್ಲಿ ವಿಚಾರಸುಳಿದರೆ ತನ್ನ ಜೀವಜ್ಞಾನ ಉಳಿದಿರುವದು. ಆದರೆ ಲಿಂಗಾಂಗಯೋಗದಲ್ಲಿ ಪ್ರಾಣವೂ ಲಿಂಗವಾಗಿ ಭಾವದಲ್ಲಿ ಬೆರೆಯುವವನೇ ಐಕ್ಯನು. ಲಿಂಗಭಕ್ತನು ನಿತ್ಯಜೀವನದಲ್ಲಿ ಸಂಸಾರ ಹೊಂದಿದ್ದರೂ ಐಕ್ಯ ಸ್ಥಿತಿಗೇರಬಲ್ಲನು. ಕಮಲದ ಎಲೆಯು ನೀರಿನಲ್ಲಿದ್ದರೂ ನೀರಿನ ಲೇಪವಿಲ್ಲದಂತೆ
ಶರಣನು ಸಂಸಾರಿಯಾದರೂ ಸಂಸಾರ ಲೇಪವಿಲ್ಲದಂತಿರುವನು. ಸರ್ಪಭೂಷಣ ಶಿವಯೋಗಿಗಳು-
ಯಾವ ಕೃತ್ಯದೊಳಿರುತಿರ್ದ್ದರು ಶಿವಯೋಗಿ
ಭಾವದೊಳಗೆ ಬ್ರಹ್ಮವನು ಬಿಡದಿಹನು
ಹೊರಗೆ ಸಕಲ ಲೋಕ ವ್ಯವಹಾರದೊಳಗಿರ್ದು || ಪ ||
ಗುರುಸಿದ್ದನನು ಸಂಧಾನದೆ ಬೆರೆದಿಹನು
ಶಿವಯೋಗಿಯಾದವನು ಯಾವ ಲೌಕಿಕ ಕೆಲಸದೊಳಗೆ ತೊಡಗಿದ್ದರೂ ತನ್ನ ಭಾವದಲ್ಲಿ ಶಿವನನ್ನು ಧ್ಯಾನಿಸದೇ ಬಿಡನು. ಲೋಕವ್ಯವಹಾರಗಳಲ್ಲಿಯೂ ಗುರುಸಿದ್ಧನಾದ ಪರಶಿವಲಿಂಗನ ಅನುಸಂಧಾನದಲ್ಲಿಯೇ ಬೆರೆದಿರುವನು. ಎಂದು ಐಕ್ಯಸ್ಥಿತಿಯಲ್ಲಿರುವ ಶಿವಯೋಗಿಯ ಸ್ವರೂಪವನ್ನು ವರ್ಣಿಸಿರುವರು.
ಯೋಗಿಯು ಸಂಸಾರ ಭಾವವನ್ನು ತುಚ್ಛವೆಂದು ತ್ಯಜಿಸಿ ಮೌನಧ್ಯಾನದಲ್ಲಿ ನಿರ್ಗುಣ ಬ್ರಹ್ಮವನ್ನು ಧಾರಣ ಮಾಡಿ ಸಮಾಧಿ ಹೊಂದುವದು ತಾಮಸ ಗುಣ (ಅಜ್ಞಾನ) ಎಂದು, ಇಂಥ ಸಮಾಧಿಯೋಗವನ್ನು ಬಿಡಿಸಿ ಗುರುವು ಅಸಮ ಅನುಪಮವೆನಿಸಿದ ತನ್ನ ಕರದಿಷ್ಟದ ಮಹಾಲಿಂಗದಲ್ಲಿ ಪ್ರಾಣವು-ಭಾವವು ಏಕಾಕಾರವಾಗುವದೇ ಐಕ್ಯಸ್ಥಿತಿಯೆಂದು ಬೋಧಿಸುತ್ತಾನೆ. ಐಕ್ಯನಲ್ಲಿ ಅರ್ಥ-ಪ್ರಾಣ- ಅಭಿಮಾನಗಳು ಅಡಗಿ ತೋರದಂತಾಗಿರುತ್ತವೆ. ಅಂತೆಯೇ ಹಡಪದಪ್ಪಣ್ಣನು ಕೂಡಲಸಂಗಮನಲ್ಲಿ ಬಸವಣ್ಣನವರು ಐಕ್ಯವಾಗುವ ಸಂದೇಶವನ್ನು ತಿಳಿಸಿದಾಕ್ಷಣ ನೀಲಮ್ಮನವರು-“ಅಲ್ಲಿ ಇಲ್ಲಿ ಎಂಬ ಉಭಯ ಸಂದೇಹವನ್ನು ಅಳಿದು ತಮ್ಮ ಕರದಿಷ್ಟ ಲಿಂಗದಲ್ಲಿ ಬೆರೆದು ಐಕ್ಯರಾಗುವ ಕಥಾನಕ’ ಅನುಭವಪೂರ್ಣವಾಗಿದೆ. ಈ ರೀತಿಯಾದ ಶಿವಯೋಗವು ಸಹಜಯೋಗ. ಅಷ್ಟಾಂಗಯೋಗವು ಶಿವಯೋಗದಂತೆ ಸಹಜವೆನಿಸದು. ಅದುಕಾರಣ ಅದು ಅಸಹಜವೆನಿಸುತ್ತದೆ. ಅಸಹಜತೆಯಲ್ಲಿ ತಾಮಸಗುಣ ವ್ಯಕ್ತವಾಗುವದರಿಂದ ಅದನ್ನು ತಾಮಸವೆಂದರು. ಇಂಥ ತಾಮಸಮಯವಾದ ಸಮಾಧಿಯೋಗವನ್ನು ತೊಲಗಿಸಿ ಲಿಂಗಾಂಗ ಸಾಮರಸ್ಯದ ಸವಿಯನ್ನು ಸವಿಯುವಂತೆ ಗುರುವರನು ಕರುಣಿಸುತ್ತಾನೆ. ಲಿಂಗೈಕ್ಯನಾಗುವ ಗುರಿಯನ್ನು ತೋರಿಸಿ ಕೊಡುತ್ತಾನೆ. ಐಕ್ಯಸ್ಥಲದ ವಿಚಾರ ಮುಂದೆ ಬರುವದರಿಂದ ಇಲ್ಲಿ ವಿಸ್ತಾರಗೊಳಿಸುವ ಅವಶ್ಯಕತೆಯಿಲ್ಲ.