ಮಾನವೀಯತೆಯ ಮಹಾಮೂರ್ತಿ ಸಿಂದಗಿ ಪಟ್ಟಾಧ್ಯಕ್ಷರು.

ಲೇಖಕರು  :ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು

ಕರ್ನಾಟಕದ ವೀರಶೈವ ಮಹಾಂತರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು ಶ್ರೇಷ್ಠರು. ಇವರ ಕಣ್ಣಿನಲ್ಲಿ ಬೆಳೆದ ಅನೇಕ  ಶಿವಯೋಗಿಗಳು ಬಾಳಬೆಳಕನ್ನು ತೆರೆದುಕೊಂಡರು. ಅಂಥವರಲ್ಲಿ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರು ಅಗ್ರಗಣ್ಯರು. ಇವರು ಜೀವನದ ಉದ್ದಕ್ಕೂ ಹಾನಗಲ್ಲ ಶಿವಯೋಗಿಗಳನ್ನು ನೆನೆಯುತ್ತಲೇ ಸಾರ್ಥಕ ಶಿವಬದುಕನ್ನು ನಡೆಸಿದರು.

ಪೂರ್ವಜರು-ಬಾಲ್ಯ: ಕಲಬುರ್ಗಿ ಜಿಲ್ಲೆಯ ಯಾತನೂರು 19ನೆಯ ಶತಮಾನಕ್ಕೆ ಒಂದು ಪುಟ್ಟಗ್ರಾಮ. ಅಲ್ಲಿ ವೀರಶೈವ ಮನೆತನಕ್ಕೆ ಸೇರಿದವರೆ ಹೆಚ್ಚಾಗಿದ್ದರು. ಅಲ್ಲಿನ ಚೆನ್ನಯ್ಯ ಮತ್ತು ಶಿವಲಿಂಗವ್ವ ಜಂಗಮ ದಂಪತಿಗೆ ಇಬ್ಬರು ಮಕ್ಕಳು, ವೀರಯ್ಯ ಮತ್ತು ಸಿದ್ದಯ್ಯ. ಆ ಗ್ರಾಮಕ್ಕೆಮೂರು ವರ್ಷ ಬರಗಾಲ ತುಂಬಿತ್ತು. ಚೆನ್ನಯ್ಯ ಆ ಊರನ್ನು ಬಿಟ್ಟು ತಮ್ಮ ಪೂರ್ವಜರ ಊರಾದ ಸಿಂದಗಿ ತಾಲ್ಲೂಕಿನ ಕುಮಸಗಿಗೆ ಬಂದರು. ತಮ್ಮ ಪೂರ್ವಜರು ನೆಲೆಸಿದ್ದ ಮಠವನ್ನುದುರಸ್ತಿಗೊಳಿಸಿದರು. ಆದರೆ, ಬಡತನ ಉದ್ದಕ್ಕೂ ಕಾಡುತ್ತಿತ್ತು. ಚೆನ್ನಯ್ಯ ಅನಿವಾರ್ಯವಾಗಿ ಆ ಊರನ್ನು ಬಿಟ್ಟು ಸಿಂದಗಿಗೆ ಬರಬೇಕಾಯಿತು. ಆ ಕಾಲಕ್ಕೆ ಅದೊಂದು ದೊಡ್ಡಗ್ರಾಮ. ಊರಿನ ಎಲ್ಲ ಚಟುವಟಿಕೆಗಳ ಕೇಂದ್ರಸ್ಥಾನ ಊರಾನಮಠ. ಆ ಮಠದ ಸ್ವಾಮಿಗಳು ರೇವಣಸಿದ್ಧರು. ಅವರು ಚೆನ್ನಯ್ಯನ ಕುಟುಂಬವನ್ನು ಸ್ವಾಗತಿಸಿದರು. ಇವರ ಮಧ್ಯಮಪುತ್ರನೇ ಲಿಂಗಯ್ಯ, ಸೋಮವ್ವ ತನ್ನ ತವರುಮನೆ ಸಾಲೋಟಗಿಗೆ ಹೋದಾಗ ಗಡ್ಡಿ ಲಿಂಗಯ್ಯನ ಜಾತ್ರೆಗೆ ಹೋಗಬೇಕೆಂಬ ಹಂಬಲ ಆಕೆಗೆ ಉಂಟಾಯಿತು. ಜಾತ್ರೆಯಲ್ಲಿ ತೇರೆಳೆಯುವ ಸಂದರ್ಭದಲ್ಲಿ ಗಂಡು ಮಗುವನ್ನು ಹೆತ್ತಳು. 21.08.1906ರಂದು ಪುಬ್ಬಾ ನಕ್ಷತ್ರದಲ್ಲಿ ಗಂಡುಮಗು ಶಿವಶಕ್ತಿಯ ಪ್ರಭಾವದಿಂದ ಇಳೆಗೆ ಅವತರಿಸಿತು. ಆ ಮಗುವೇ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರು.

ಲಿಂಗಯ್ಯನ ಬಾಲ್ಯದ ಬದುಕು ಸುಖವಾಗಿರಲಿಲ್ಲ. ಅವನು ಕೈಯಲ್ಲಿ ಜೋಳಿಗೆ ಹಿಡಿದು ಕೋರಾನ್ನ ಭಿಕ್ಷೆಗೆ ಹೋಗುತ್ತಿದ್ದ. ಹಿರಿಯ ಅಣ್ಣ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ. ಆದರೂ ಬಡತನ ಹಾಸಿಕೊಂಡಿತ್ತು. ಲಿಂಗಯ್ಯ ನಾಲ್ಕನೆಯ ತರಗತಿ ಓದುತ್ತಿದ್ದ. ಆಗ ಒಂದು ಅಪೂರ್ವ ಘಟನೆ ನಡೆಯಿತು! ಬೀಳೂರು ಶ್ರೀಗಳು ಮಹಿಮಾವಂತರು. ಅವರು ಲಿಂಗಯ್ಯನನ್ನು ನೋಡಿ, ‘ಈ ಹುಡುಗನ್ನ ನಮ್ಮ ಜತೀಗಿ ಕಳಿಸ್ತೀರೇನು?’ಎಂದು ಕೇಳಿದರು. ನಾಲ್ಕನೆಯ ಇಯತ್ತೆ ಮುಗಿದ ನಂತರ ಕಳುಹಿಸುವುದಾಗಿ ದಂಪತಿ ವಾಗ್ದಾನವಿತ್ತರು. ಅದರಂತೆ ಸ್ವಾಮಿಗಳಿಗೆ ಲಿಂಗಯ್ಯನನ್ನು ಒಪ್ಪಿಸಿದರು. ಆಗ ಲಿಂಗಯ್ಯನಿಗೆ ಎಳೆಹರೆಯ. ಶ್ರೀಮಠದ ಭಕ್ತರೊಬ್ಬರು ಲಿಂಗಯ್ಯನನ್ನು ಶಿವಯೋಗ ಮಂದಿರಕ್ಕೆ ಕಳುಹಿಸಿದರೆ ಒಳಿತೆಂದಾಗ ರೇವಣಸಿದ್ಧಸ್ವಾಮಿಗಳು ಒಪ್ಪಿದರು. ಲಿಂಗಯ್ಯ ಶಿವಯೋಗಮಂದಿರಕ್ಕೆ ಬಂದ. ಅಲ್ಲಿ ಹಾನಗಲ್ಲ ಶಿವಯೋಗಿಗಳು ಮಧ್ಯಾಹ್ನದ ಪೂಜೆಯಲ್ಲಿದ್ದರು. ಲಿಂಗಯ್ಯ ಸಾಷ್ಟಾಂಗ ನಮಸ್ಕಾರ ಮಾಡಿದ. ಶಿವಯೋಗಿಗಳು ಲಿಂಗಯ್ಯನ ಮೈಹಿಡಿದು ಎತ್ತಿದರು.

ಶಿವಯೋಗ ಮಂದಿರದ ಸಾಧನೆಯ ಹಾದಿಯಲ್ಲಿ ಮುಳುಗಿಹೋದ ಲಿಂಗಯ್ಯ ಹಾನಗಲ್ಲ ಕುಮಾರಸ್ವಾಮಿಗಳ ಪೂಜಾಮರಿಯಾಗಿ ಸೇವೆಗೆ ನಿಂತುಕೊಂಡ. ಲಿಂಗಯ್ಯ ಎಲ್ಲರ ಬಾಯಲ್ಲೂ ಲಿಂಗಾರ್ಯರಾಗಿ ರೂಪಾಂತರಗೊಂಡರು. ಕಂಚಗಲ್ಲಮಠದ ಬಿದರೆ ಪಟ್ಟಾಧ್ಯಕ್ಷರು ಯೋಗಿರಾಜ, ಯೋಗ ಸಾರ್ವಭೌಮರೆಂದು ಹೆಸರು ಪಡೆದಿದ್ದರು. ಕುಮಾರಸ್ವಾಮಿಗಳು ಅವರನ್ನು ಶಿವಯೋಗಮಂದಿರಕ್ಕೆ ಕರೆತಂದು ಯೋಗವನ್ನು ಹೇಳಿಕೊಡಲು ವ್ಯವಸ್ಥೆ ಮಾಡಿದರು.

 ಬಿದರೆ ಪಟ್ಟಾಧ್ಯಕ್ಷರ ಯೋಗಕೃಪೆಗೆ ಲಿಂಗಾರ್ಯರು ಒಳಗಾದರು. ಯೋಗದ ಎಲ್ಲಾ ಬಗೆಗಳಲ್ಲಿ ಪರಿಣತಿ ಸಾಧಿಸಿದರು. ಇವುಗಳ ಜತೆಗೆ ವೈದ್ಯವಿದ್ಯೆಯಲ್ಲೂ ಪರಿಣತರಾದರು. ಯೋಗ-ಆಯುರ್ವೆದ ಒಂದೇ ನಾಣ್ಯದ ಎರಡು ಮುಖಗಳಂತೆ ಅವರು ಬೆಳಗಿದರು.

ಸಿಂದಗಿಯ ಹಿರಿಯ ಮಠದ ನಿಯೋಜಿತ ಉತ್ತರಾಧಿಕಾರಿಯೆಂದು ರೇವಣಸಿದ್ಧಸ್ವಾಮಿಗಳು ಮೊದಲೇ ಹೇಳಿದ್ದರು. ಆ ಮಠದ ಪರಂಪರೆಯಲ್ಲಿ ಆಗಿಹೋದ ಶಾಂತೇಶಸ್ವಾಮಿಗಳ ನೆನಪಿನಲ್ಲಿ ‘ಶಾಂತವೀರದೇವರು’ ಎಂದು ಶಿವಯೋಗಮಂದಿರದ ಪ್ರತಿಯೊಬ್ಬರು ಕರೆಯುತ್ತಿದ್ದರು. ಶಾಂತವೀರದೇವರ ಪೂಜೆ ವಿಶಿಷ್ಟವಾದುದು. ಅವರು ಪಶ್ಚಿಮ ಪದ್ಮಾಸನದಲ್ಲಿ ಕುಳಿತು ವಿಗ್ರಹದಂತೆ ನಿಶ್ಚಲರಾಗಿ ರೆಪ್ಪೆಮಿಟುಕಿಸದೆ ಬಿಟ್ಟ ಕಂಗಳಿಂದ ಅಂಗೈಯೊಳಗಿನ ಇಷ್ಟಲಿಂಗವನ್ನು ನೋಡುತ್ತ ಭಾವಲಿಂಗಕ್ಕೆ ತಲುಪಿ, ಅಲ್ಲಿಂದ ಪ್ರಾಣಲಿಂಗಕ್ಕೆ ಸಾಗುತ್ತಿದ್ದ ಪರಿ ಅನನ್ಯವಾದುದು. ಶಾಂತವೀರದೇವರಲ್ಲಿ ಈಗ ಯೋಗ-ಶಿವಯೋಗದ ಸಮನ್ವಯ ಸಿದ್ಧಿಗೊಂಡಿತ್ತು. 1930ರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು ಶಿವೈಕ್ಯರಾದರು. ಇದು ಶಾಂತವೀರ ದೇವರನ್ನು ದಿಗ್ಬ್ರಾಂತ ಗೊಳಿಸಿತು. ಸ್ವಲ್ಪ ಮಟ್ಟಿಗೆ ರೇವಣಸಿದ್ಧ ಶಾಸ್ತ್ರಿಗಳಲ್ಲಿ ಪ್ರಾರಂಭಿಕ ಸಂಸ್ಕೃತ ಅಭ್ಯಾಸವೇನೊ ಸಾಗಿತ್ತು. ಶಿವಯೋಗಮಂದಿರದ ಕೆಲವು ಸಾಧಕರು ಹೆಚ್ಚಿನ ಅಭ್ಯಾಸಕ್ಕಾಗಿ ಕಾಶಿಗೆ ಹೊರಟಿದ್ದರು.ಶಾಂತವೀರದೇವರಿಗೆ ಕಾಶಿಗೆ ಹೋಗಬೇಕೆಂಬ ಹಂಬಲ ಬಲಿಯಿತು. ಮನೆಯಲ್ಲಿ ವಿಷಯ ತಿಳಿಸಿದಾಗ ತಾಯಿ ‘ಏಳಿ ದೇವ್ರ. ನೀವು ಚಿಂತಿ ಮಾಡಬ್ಯಾಡ್ರಿ. ನಿಮ್ಮ ಖರ್ಚು ನಾನು ಪೂರೈಸ್ತೀನಿ! ಎಮ್ಮಿ ಕಟೀನಿ-ಹಣ ನಿಮಗೆ ಕಳಸ್ತೀನಿ. ಇದು ಸತ್ಯ’ ಎಂದು ಧೈರ್ಯ ತುಂಬಿದರು.

1937ರಲ್ಲಿ ಶಿರಿಯಾಳಕೊಪ್ಪದ ಶಿವಯೋಗಿದೇವರು, ಗೌರಾಪುರದ ಜಿ.ಎಂ.ಉಮಾಪತಿ ಶಾಸ್ತ್ರಿಗಳು ಮತ್ತು ಶಿವಮೂರ್ತಿ ದೇವರು ಈ ಮೂವರೊಡನೆ ಶಾಂತವೀರದೇವರು ಕಾಶಿಯನ್ನು ತಲುಪಿದರು. ಅಲ್ಲಿ ಮುರುಘಾಮಠಕ್ಕೆ ಸೇರಿದ ಜಯದೇವವಾಡಿಯಲ್ಲಿ ಉಳಿದುಕೊಂಡರು.ಅಲ್ಲಿರುವಾಗ ತಾಂತ್ರಿಕ ಕಾರಣಗಳಿಂದ ಜಯದೇವ ವಾಡಿಯನ್ನು ಬಿಡಬೇಕಾಯಿತು. ಶಾಂತವೀರದೇವರು ತಮ್ಮ ಯೋಗಪ್ರದರ್ಶನದ ಮೂಲಕ ಮೀರಾಘಾಟ್ ಬಳಿಯಲ್ಲಿದ್ದ ಉದಾಸಿಮಠದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಂಡರು. ಶಾಂತವೀರದೇವರು ‘ಬಂಗಾಲಿ ಲೋಲಾʼಕ್ಕೆ ಹೋಗಿ ವೈದಿಕ ಮತ್ತು ಜ್ಯೋತಿಷ್ಯಗಳನ್ನು ಕಲಿಯುತ್ತಿದ್ದರು. ಉಳಿದ ಮೂವರು ಕ್ರಮಾಗತಶಿಕ್ಷಣವನ್ನು ಪಡೆಯುತ್ತಿದ್ದರು. 1942ರ ಚಲೇಜಾವ್ ಚಳವಳಿ ದೇಶಾದ್ಯಂತ ವ್ಯಾಪಿಸಿ ದಾಗ ಕಾಶಿಯನ್ನು ಬಿಟ್ಟು ಊರಿಗೆ ಮರಳಿದರು.

ಸೇವಾಭಾವ: ಶಾಂತವೀರದೇವರು ಕಾಶಿಯಿಂದ ಬಂದಮೇಲೆ ಪಟ್ಟಾಭಿಷೇಕ ಮಾಡೋಣ ಎಂದು ಊರಿನ ಜನ ಸಮಯವನ್ನುಮುಂದೂಡತೊಡಗಿದರು. ಒಮ್ಮೆ ಸಭೆ ಸೇರಿತ್ತು. ಸಭೆಯಲ್ಲಿದ್ದ ಜನ ‘ಮಳೆ ಬರಲಿ ಮಾಡೋಣವಂತೆ’ ಎಂದಾಗ ಶಾಂತವೀರದೇವರಿಗೆ ಬೇಸರವಾಗಿ ‘ಈಗ ಮಾಡುವುದಾದರೆ ಮಾಡಿರಿ. ಇಲ್ಲವಾದರೆ ಪಟ್ಟವೇ ಬೇಡ’ ಎಂದರು. ಪ್ರಕೃತಿಯ ಮಾಯೆಯೊ ಎಂಬಂತೆ ಆ ರಾತ್ರಿ ಉಧೋ  ಮಳೆ ಸುರಿಯಿತು. ಊರೆಂಬೋ ಊರು ಕತ್ತಲ ಗವಿಯಾಯಿತು. ಊರಿನ ಪ್ರಮುಖರು ಪಟ್ಟಾಧಿಕಾರಕ್ಕೆ ಸಿದ್ಧತೆ ಮಾಡತೊಡಗಿದರು.

೧೯೪೩ ರ ಇಸವಿ ಸಿಂದಗಿಯಲ್ಲಿ ಸಂಭ್ರಮವೋ ಸಂಭ್ರಮ. ಶಾಂತವೀರದೇವರಿಗೆ ಹುಕ್ಕೇರಿಮಠದ ಶ್ರೀಗಳಿಂದ ಚಿನ್ಮಯದೀಕ್ಷೆ ನೆರವೇರಿತು.ಯಾದವಾಡದ ಶಿವಮೂರ್ತಿ ಪಟ್ಟಾಧ್ಯಕ್ಷರಿಂದ ಕ್ರಿಯಾದೀಕ್ಷೆಯನ್ನು ಪಡೆದು ‘ಶ್ರೀಮದ್‌ಘನಲಿಂಗ ಚಕ್ರವರ್ತಿ ಶಾಂತವೀರ ಶಿವಾಚಾರ್ಯರು’ ಎಂಬ ನೂತನ ಅಭಿದಾನ ಹೊಂದಿದರು. ಅನಂತರ ಊರಿನ ಪ್ರಮುಖರ ಜತೆ ಮಾತನಾಡಬೇಕೆಂದು ಬಯಸಿದರು. ಆದರೆ, ಊರಿನ ಜನ ಸ್ಪಂದಿಸಲಿಲ್ಲ. ಅವರ ಕಣ್ಣಮುಂದೆ ಹಾನಗಲ್ಲ ಕುಮಾರಸ್ವಾಮಿಗಳ ಕ್ರಿಯಾಪರಂಪರೆ ಇತ್ತು. ಧರ್ಮಜಾಗೃತಿ ಮತ್ತು ಸಮಾಜದ ಏಳ್ಗೆಗಾಗಿ ದುಡಿಯಬೇಕೆಂಬ ಹಂಬಲ ತುಂಬಿತ್ತು. ಶಾಂತವೀರದೇವರಿಗೆ ಮುಂದೇನು ಮಾಡಬೇಕೆಂದು ತೋಚದೆ ಮಾರ್ಗದರ್ಶನಕ್ಕಾಗಿ ಹುಕ್ಕೇರಿಮಠದ ಮಹಾತಪಸ್ವಿ ಶ್ರೀಶಿವಬಸವಸ್ವಾಮಿಗಳ ಬಳಿಹೋದರು. ಸ್ವಾಮಿಗಳ ಆರೋಗ್ಯ ಸರಿಯಿರಲಿಲ್ಲ. ಅವರ ಉಪಚಾರಕ್ಕೆ ನಿಂತರು. ಮಠಕ್ಕೆ ಬಂದವರ ಉಪಚಾರ, ಆಡಳಿತ ನೋಡಿಕೊಳ್ಳುವ ಜವಾಬ್ದಾರಿ ಇವರ ಮೇಲೆ ಬಿದ್ದಿತು. ಶಾಂತವೀರದೇವರು ಅಷ್ಟಾವರಣಗಳ ಬಗೆಗೂ ಕಾಯಕ-ದಾಸೋಹದ ಬಗೆಗೂ ಜನರಿಗೆ ತಿಳಿಹೇಳತೊಡಗಿದರು. ಆಗಾಗ್ಗೆ ರೋಗಿಗಳನ್ನು ಪರೀಕ್ಷಿಸಿ ಔಷಧಗಳನ್ನು ನೀಡುತ್ತಿದ್ದರು. ಹುಕ್ಕೇರಿ ಶ್ರೀಗಳು ಇದರಿಂದ ಸಂಪ್ರೀತರಾದರು. ಒಂದು ದಿನ ಶಾಂತವೀರ ಸ್ವಾಮಿಗಳನ್ನು ಕರೆದು ನೀವು ಸಿಂದಗಿ ಪಟ್ಟಾಧ್ಯಕ್ಷರಾದರೂ ನಿಮ್ಮ ಕಾರ್ಯಕ್ಷೇತ್ರ ಹಾವೇರಿ. ನೀವು ಇಲ್ಲಿದ್ದು ಕುಮಾರೇಶ್ವರರು ಹಾಕಿಕೊಟ್ಟ ದಾರಿಯಲ್ಲಿ ನಡೆಯಿರಿ ಎಂದರು. 1951ರ ಮಾರ್ಚ್ ತಿಂಗಳಿನಲ್ಲಿ ಶ್ರೀಕುಮಾರೇಶ್ವರ ವೈದಿಕ ಮತ್ತು ಜ್ಯೋತಿಷ್ಯ ಉದ್ಘಾಟನೆ ಆಯಿತು.ಶ್ರೀಶಾಂತವೀರ ಸ್ವಾಮಿಗಳು ವಾತ್ಸಲ್ಯಮಯಿ. ಅವರು ಅನೇಕ ಬಡ ಜಂಗಮಮಕ್ಕಳಿಗೆ ಊಟ-ಬಟ್ಟೆಕೊಟ್ಟು ಯೋಗ-ವೈದಿಕಗಳನ್ನು ಹೇಳತೊಡಗಿದರು.

ವಿದ್ಯಾಸಕ್ತಿ: ನರೇಗಲ್ಲಮಠದಲ್ಲಿ ವೈದಿಕ-ಜ್ಯೋತಿಷ್ಯ ಪಾಠಶಾಲೆ ಪ್ರಾರಂಭವಾಯಿತು. ಹಾನಗಲ್ಲ ಕುಮಾರಸ್ವಾಮಿಗಳು ಕೆಲದಿನ ಅನುಷ್ಠಾನ ಮಾಡಿದ್ದ ಊರು ಸಂಗೂರು. ಈ ಚಿಕ್ಕಹಳ್ಳಿಯಲ್ಲಿ ಶಿವಯೋಗಮಂದಿರವನ್ನು ಕಟ್ಟಿಸಿದರು. ಮಂಡಗೈ ಭರಮಪ್ಪ ಎಂಬುವವನೊಬ್ಬ ಆಶ್ರಯಕ್ಕೆಬಂದಾಗ ಸ್ವಾಮಿಗಳು ‘ಭಸ್ಮ’ ತಯಾರಿಕೆಯ ಶಾಸ್ತ್ರೀಯ ವಿಧಾನವನ್ನು ಕಲಿಸಿ ಆ ಕಾಯಕಕ್ಕೆ ಅವನನ್ನು ತೊಡಗಿಸಿದರು. ಸಂಗೂರಿನ ಮಠದ ಜಾಗದಲ್ಲಿ ಅರುವತ್ತು ಹಸುಗಳನ್ನುಳ್ಳ ಗೋಶಾಲೆ ಪ್ರಾರಂಭವಾಯಿತು. ಹೀಗಾಗಿ, ಭಸ್ಮತಯಾರಿಕೆಗೆ ಅನುಕೂಲವಾಯಿತು. ಅಲ್ಲಿ ಒಂದೆಡೆ ಪಶುಪಾಲನೆ, ಮತ್ತೊಂದೆಡೆ ಭಸ್ಮತಯಾರಿಕೆ, ಇನ್ನೊಂದೆಡೆ ವಟುಗಳ ಅಧ್ಯಯನ, ಯೋಗ, ಷಟ್ಕರ್ಮಸಾಧನ, ಗದ್ದುಗೆಯಲ್ಲಿ ಘಂಟಾರವ,ಭಕ್ತಾದಿಗಳ ಸಡಗರ, ಶಿವಯೋಗಿಗಳ ತೇರು-ಹೀಗೆ ಸಂಗೂರು ಸಂಭ್ರಮದಿಂದ ನಳನಳಿಸತೊಡಗಿತು. ಇತ್ತ ನರೇಗಲ್ಲಮಠವನ್ನು ಸ್ವಾಮಿಗಳು ಶಿಷ್ಯರನ್ನೂ ವಟುಗಳನ್ನೂ ಕಟ್ಟಿಕೊಂಡು ಸಂಪೂರ್ಣ ದುರಸ್ತಿಗೊಳಿಸಿದರು. ಗದುಗಿನ ಗೌಡಪ್ಪಗೌಡರು ಗದುಗಿನಲ್ಲಿ ಸ್ಥಳದಾನ ಮಾಡಿದರು.ಅಲ್ಲಿ ಸಂಸ್ಕೃತ ಪಾಠಶಾಲೆ ತೆರೆದರು.

ಗದುಗಿನ ತೋಂಟದಾರ್ಯರು ಪೂರ್ವದಲ್ಲಿ ಸಿಂದಗಿಯ ಹಿರೇಮಠಕ್ಕೆ ಉತ್ತರಾಧಿಕಾರಿಗಳಾಗಿ ನಿಯೋಜಿತರಾಗಿದ್ದವರೇ. ಆದರೆ, ಆಕಸ್ಮಿಕವಾಗಿ ಗದುಗಿನ ತೋಂಟದಾರ್ಯಮಠಕ್ಕೆ ಸ್ವಾಮಿಗಳಾಗಿ ನಿಯುಕ್ತಿ ಆದಾಗ ಪಟ್ಟಾಧ್ಯಕ್ಷರು ಮಮ್ಮಲ ಮರುಗಿದರು. ಆದರೆ, ಶಿವನ ಲೀಲೆ ಬೇರೆ ಇರಬಹುದೆಂದು ತಿಳಿದು ಸಮಾಧಾನಗೊಂಡರು. ಪಾಠಶಾಲೆಯ ವಿದ್ಯಾರ್ಥಿಗಳು ಬೆಳಿಗ್ಗೆ ಏಳುವುದು ತಡವಾದರೆ ಅವರ ಹಾಸಿಗೆ ಬಳಿಬಂದು ‘ಏಳ್ರಪಾ ಗದಿಗೆಯ್ಯನೋರೆ, ಏಳ್ರಪಾ ಶರಣಯ್ಯನೋರೆ, ನಿನ್ನೆ ಸಂಜೀಕ ಹಾಸಿಗೆ ಮ್ಯಾಲೆ ಮಕ್ಕೊಂಡಿರಿ. ಅವು ಕುಂಯ್ಯೋ ಮರ್ರೋ ಅಂತ ಅಳಾಕಹತ್ತಾವು. ಅವುಗಳ ಮೇಲೆ ಕರುಣೆ ತೋರ್ರಪಾ. ಏಳಿ, ಏಳಿ ‘ಎಂದು ಎಬ್ಬಿಸಿದರೆ ಮುಸಿಮುಸಿ ನಗುತ್ತ ಹುಡುಗರು ಏಳುತ್ತಿದ್ದರು.

ಪ್ರಸಂಗಗಳು: ಪೂಜ್ಯ ಸಿಂದಗಿ ಪಟ್ಟಾಧ್ಯಕ್ಷರು ಉತ್ತರಕರ್ನಾಟಕದ ಹಳ್ಳಿಹಳ್ಳಿಗಳನ್ನು ಸುತ್ತಿದರು. ಆಯಾ ಜಿಲ್ಲೆಗಳ ಪ್ರತಿಯೊಂದು ಹಳ್ಳಿಗಳಲ್ಲೂ ‘ಶಿವನ ಡಂಗುರ’ವನ್ನು ಸಾರಿದರು. ಅವರು ಶಿವಸಂಸ್ಕಾರ ಹೊಂದುವಂತೆ ಮಾಡಿದರು. ಅವರ ವೈದ್ಯಕೀಯದಿಂದ ಸಹಸ್ರಾರು ಜನ ನಿರೋಗಿಗಳಾದರು. ಒಬ್ಬಾಕೆ ಮುದುಕಿ, ಹಾವೇರಿಯ ಕಳ್ಯಾಳ ಗ್ರಾಮದವಳು. ಆಕೆಗೆ ಕಣ್ಣು ಕಾಣಿಸುತ್ತಿರಲಿಲ್ಲ. ಆಕೆಗೆ ಔಷಧಕೊಟ್ಟು ಕಳಿಸಿದರು.

 ‘ನೀವು ಲಿಂಗಧಾರಿಗಳಾಗಲು ಇಚ್ಚಿಸಿದರೆ, ಲಿಂಗದೀಕ್ಷೆ ಮಾಡಿ ಲಿಂಗ ನೀಡುವೆವು’ ಎಂದರು. ರಾಜಕುಮಾರ್ ಒಪ್ಪಿದರು. ರಾಜ್ ತಾಯಿ ಮೊದಲು, ಅನಂತರ ಉಳಿದವರು ಲಿಂಗದೀಕ್ಷೆಯನ್ನು ಹೊಂದಿದರು.

ಹಾವೇರಿಯ ಹಿರೇಮಠಕ್ಕೆ ಸಿದ್ಧರಾಮದೇವರು ಎಂಬುವರನ್ನು ಉತ್ತರಾಧಿಕಾರಿ ಮಾಡಲು ಸಿದ್ಧಗೊಳಿಸಿದ್ದರು. ಆದರೆ, ಅವರು ಗದುಗಿನ ಸ್ವಾಮಿಗಳಾಗಿ ಮುಂದೆ ಪ್ರಸಿದ್ಧರಾದರು. ಇದು ಶ್ರೀಗಳ ಖಿನ್ನತೆಗೆ ಕಾರಣವಾಯಿತು. ಮತ್ತೊಂದು ಅಂಥದೇ ಮರಿ ತಯಾರು ಮಾಡಲು ಸಾಧ್ಯವಿಲ್ಲದ ವಯಸ್ಸು, ಆಗ ಸ್ವಾಮಿಗಳಿಗೆ ಎಪ್ಪತ್ತು ವರ್ಷ. ಅವರು ಈ ಸನ್ನಿವೇಶದಿಂದ ದಿಗ್ಬ್ರಾಂತ ಪರಿಭ್ರಮಣಕ್ಕೊಳಗಾದರು. ಅವರು ನಿಂತಲ್ಲಿ ನಿಲ್ಲದೆ ಒಂದೇ ಸಮನೆ ಓಡಾಡತೊಡಗಿದರು. ಅವರು ಸೇಡು ತೀರಿಸಿಕೊಳ್ಳುವಂತೆ ದೇಹದಂಡನೆಯನ್ನು ಮಾಡತೊಡಗಿದರು. 1980, ಜನವರಿ 14 ಸಂಕ್ರಮಣದ ದಿನ, ಸಂಗೂರಿನ ಕುಮಾರೇಶ್ವರ ಜಾತ್ರೆ. ಅವರು 24 ಗಂಟೆ ನೀರಲ್ಲಿ ನಿಂತು ಭಕ್ತರಿಗೆ ಆಶೀರ್ವಾದ ಮಾಡಿದರು.

ಜನವರಿ 16ರಂದು ವರ್ದಿ ಎಂಬ ಹಳ್ಳಿಗೆ ಹೋಗಿ ಪಾದಪೂಜೆ-ಭಿಕ್ಷೆ ಮುಗಿಸಿಕೊಂಡು ಕಾಡಶೆಟ್ಟಿಹಳ್ಳಿಗೆ ಬಂದಾಗ ಜ್ವರವೋ ಜ್ವರ, ಹಾವೇರಿಗೆ ಬಂದಾಗ ಪಾರ್ಶ್ವವಾಯು ಬಡಿದಿತ್ತು. ಹುಬ್ಬಳ್ಳಿಯ ಬಿ.ಆರ್.ಪಾಟೀಲ ವೈದ್ಯರ ದವಾಖಾನೆಗೆ ಸ್ವಾಮಿಗಳನ್ನು ಕರೆತಂದರು. ಗದುಗಿನ ಶ್ರೀಗಳಿಗೆ ವಿಷಯ ತಿಳಿದು ಬಂದರು. 1980ನೆಯ ಇಸವಿ ಮಾರ್ಚ್ 16. ಮಹಾಶಿವರಾತ್ರಿಯ ದಿನ. ಸಿಂದಗಿಯ ಪಟ್ಟಾಧ್ಯಕ್ಷರು ಸದ್ದುಗದ್ದಲವಿಲ್ಲದೆ ಶಿವೈಕ್ಯರಾದರು.

ಸಿಂದಗಿಯ ಶಾಂತವೀರ ಶಿವಾಚಾರ್ಯರು ಸಹಸ್ರಾರು ಬಡ ವಿದ್ಯಾರ್ಥಿಗಳಿಗೆ ಅನ್ನ ನೀಡಿದರು. ಅವರಲ್ಲಿ ಕೆಲವರನ್ನು ಶಾಸ್ತ್ರಿಗಳನ್ನಾಗಿ, ಸ್ವಾಮಿ ಗಳನ್ನಾಗಿ ಮಾಡಿದರು. ಹಳ್ಳಿಹಳ್ಳಿಗಳಲ್ಲಿ ಸಹಸ್ರಾರು ಜನರಿಗೆ ವೈದ್ಯರಾದರು. ಪ್ರೀತಿ, ಕರುಣೆ, ಸೇವೆ, ಮಮತೆ, ತ್ಯಾಗ, ಆತ್ಮೀಯತೆ-ಇವುಗಳಿಗೆ ಅಮೃತಮಯ ಸ್ಪರ್ಶವನ್ನು ನೀಡಿದರು. ಅವರು ಇಲ್ಲದಿದ್ದರೆ ಉತ್ತರಕರ್ನಾಟಕದ ಕೆಲವೊಂದು ಪ್ರದೇಶ ಧರ್ಮಾಚರಣೆಗಳಿಂದ ವಂಚಿತವಾಗುತ್ತಿತ್ತು. ಅವರ ಬದುಕನ್ನು ನೆನೆಯುವುದೇ ಪೂಜೆ. ನಾವು ಅವರನ್ನು ಅರಿಯುವುದೇ ಆರಾಧನೆ, ಅನುಸರಿಸುವುದೇ ಉಪಾಸನೆ!

Related Posts