ಲೇಖಕರು :
ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ
ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.
ಮುಂಡರಗಿ
( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )
ಜುಲೈ ೨೦೨೧ ರ ಸಂಚಿಕೆ
ಗುರುವಿನ ಮಹತ್ವ
ನ ಗುರೋರಧಿಕವೆಂದು | ಜಗದಲ್ಲಿ ಸಾರುತಿಹ
ನಿಗಮ ಶೃತಿಗೇಳಿ-ಗುರುವೆ ನಾ ನಿಮ್ಮ ಪದ
ಯುಗವ ಬಣ್ಣಿಪೆನು ಕೃಪೆಯಾಗು ||೬||
ಶಿವ ಕವಿಯು ಮೇಲೆ ಹೇಳಿದ ಸಾಧ್ಯ, ವೇಧ್ಯ, ಭೇಧ್ಯ ಸ್ವರೂಪನಾದ ಗುರುವು ಅನುಪಮನಾಗಿದ್ದಾನೆಂಬುದ ಕುರಿತು ಶೃತಿ ಮಾತನ್ನು ಎತ್ತಿಹೇಳುತ್ತಾನೆ. ‘ನ ಗುರೋರಧಿಕಂ, ನ ಗುರೋರಧಿಕಂ” ಗುರುವಿಗಿಂತ ಮಿಗಿಲಾದ ವಸ್ತು ಜಗತ್ತಿನಲ್ಲೇ ಇಲ್ಲ. ಗುರು ಮಹತ್ವವು ಅಸದಳವಾಗಿದೆ, ಅಗಣಿತವಾಗಿದೆ.
ಸದ್ಭಕ್ತಿಯಿಲ್ಲದವರಿಗೆ ಸದ್ಗುರು ಸಾಧ್ಯವಾಗುವದಿಲ್ಲ. ಲಿಂಗಾಂಗ ಸಾಮರಸ್ಯವನ್ನು ಪಡೆಯದವರಿಗೆ ವೇದ್ಯನಾಗುವದಿಲ್ಲ. ಸತ್ಪ್ರಮಥರಲ್ಲದವರಿಗೆ ಭೇದ್ಯನಾಗುವದಿಲ್ಲ.ಇಂಥ ಗುರುವಿನ ಗರಿಮೆಯನ್ನು ಹೇಳಿದರಾಗದು. ಲಿಖಿಸಿದರಾಗದು. ಗುರುವಿಗೆ ಸಮನಾದ ಬೇರೊಂದು ಉಪಮಾನವೂ ಇಲ್ಲ. ಅಂತೆಯೇ ಆದಿ ಶಂಕರಾಚಾರ್ಯರು.
ದೃಷಾಂತೋ ನೈವ ದೃಷ್ಟಃ ತ್ರಿಭುವನಜಠರೇ
ಸದ್ಗುರೋಃ ಜ್ಞಾನಧಾತುಃ |
ಜ್ಞಾನಪ್ರದಾಯಕನಾದ ಸದ್ಗುರುವಿಗೆ ಸದೃಶವಾದ ದೃಷ್ಟಾಂತವು ಮೂರು ಲೋಕದಲ್ಲಿಲ್ಲವೆಂದು ಗುರು ಗರಿಷ್ಕತೆಯನ್ನು ಹೃದಯ ತುಂಬಿ ಹಾಡಿದ್ದಾರೆ. ಇದನ್ನೆಲ್ಲಕೇಳಿ ತಿಳಿದು ಓ ಗುರುವೆ ! ನಾನು ನಿನ್ನ ಪಾದದ್ವಯವನ್ನು ನುತಿಸುವೆನು. ಎನ್ನ ಮೇಲೆ ನಿನ್ನ ಕೃಪಾಮೃತವನ್ನು ಸಿಂಚಿಸಿ ತಣಿಸಲಾರೆಯಾ ?
ಹರನಿಂದಲಧಿಕ ಸ | ದ್ಗುರುವೆಂಬುದನು ಕೇಳಿ
ಗುರುವೆ ನಾ ನಿನ್ನ ಚರಣವನು ನುತಿಸುವೆನು
ಕರುಣದಿಂದೆನಗೆ ಕೃಪೆಯಾಗು II ೭ II
ಗುರುವಿನ ಆಧಿಕ್ಯತೆ ಅಧಿಕವಾಗಿದೆ. ಶಿವನಿಗಿಂತಲೂ ಸದ್ಗುರು ಮಿಗಿಲಾಗಿದ್ದಾನೆ.
ಶಿವನು ನಿರಾಕಾರ ನಿರ್ಗುಣನು.
ವಾ ಙ್ಮನಕ್ಕಗೋಚರನು, ಅದು ಕಾರಣ
ಭಕ್ತಹಿತಕಾಗಿ ಗುರುರೂಪವ ಧರಿಸಿ ಧರೆಗಿಳಿದು ಬಂದವನು
ಶಿವನಲ್ಲದೆ ಗುರು ಬೇರಲ್ಲವೆಂದ
ನಮ್ಮ ಮೃಡಗಿರಿ ಅನ್ನದಾನೀಶ | (ವ.ವ. ೧೧)
ಮತ್ತು-
ಹರನಿಗಿಂತಲೂ ಗುರುವಧಿಕ,
ಹರ ಮುನಿದರೂ ಗುರು ಕಾಯುವನು
ಗುರು ಮುನಿದರೆ ಹರಕಾಯನೆಂಬುದನರಿದು
ಗುರು ವಚನದಂತೆ ನಡೆವವಗೆ ದುಃಖವಿಲ್ಲೆಂದ
ನಮ್ಮ ಮೃಡಗಿರಿ ಅನ್ನದಾನೀಶ (ವ. ವ. ೧೩)
ಅಪ್ರತ್ಯಕ್ಷನಾದ ಶಿವನಿಗಿಂತಲೂ ಸದ್ರೂಪನಾಗಿ ಸದ್ಭಕ್ತರಿಗೆ ಪ್ರತ್ಯಕ್ಷವಾಗಿ ಸಂದರ್ಶನವನ್ನೀಯುವ ಸದ್ಗುರುವು ಶ್ರೇಷ್ಠವೆಂಬುದರಲ್ಲಿ ಯಾವ ಸಂಶಯವಿಲ್ಲ. ಹರ ಕಾಣನು. ಗುರು ದರ್ಶನವಿತ್ತು ಕೃಪೆ ದೋರುತ್ತಾನೆ. ಹರ ಮುನಿದರೂ ಗುರು ರಕ್ಷಿಸಬಲ್ಲನು. ಗುರು ಮುನಿದರೆ ಕಾವ ಶಕ್ತಿಹರನಲ್ಲಿಲ್ಲ. ಅಂತೆಯೇ ನಿರ್ಗುಣ-ಸಗುಣ ಭಕ್ತಿಮಾರ್ಗದ ಹಿಂದೀ ಕವಿಗಳೂ ಸಹ ಗುರುಮಹತ್ವವನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ.
ಕಬೀರದಾಸರು :
ಸತಗುರು ಕೀ ಮಹಿಮಾ ಅನಂತ, ಅನಂತ, ಕಿಯಾ ಉಪಗಾರ
ಗುರು-ಗೋವಿಂದ ದೋನೋಂ ಖಡೆ, ಕಾಕೆ ಲಾಗೂ೦ ಪಾಯೀ |
ಬಲಿಹಾರೀ ಯಾ ಗುರುಕೀ, ಗೋವಿಂದ ದಿಯಾ ಬತಾಯೀ |
ಸೂರದಾಸರು :
ಗುರು ಬಿನಾ ಐಸೀ ಕೌನ ಕರೈ ?
ಮಾಲಾತಿಲಕ ಮನೋಹರ ಬಾನೀ, ಲೈ ಸಿರ ಛಟಾ ಧರೆ |
ಭವಸಾಗರತೆಂ ಬೂಢತ ರಾಖ್ಯೆ, ದೀಪಕ ಹಾಥ ಧರೈ |
ಸೂರದಾಸ ಗುರು ಐಸಾ ಸಮರಥ ಛಿನ ಮೈಂ ಲೆ ಊಧರೈ |
ನಿರ್ಗುಣ ಭಕ್ತಿಮಾರ್ಗಿಗಳಾದ ಕಬೀರದಾಸರು ಸದ್ಗುರುವಿನ ಮಹಿಮೆ ಅನಂತ ಅನಂತವೆಂದು ಹೇಳಿದ್ದಾರೆ. ಯಾಕೆಂದರೆ ಗುರುಕರುಣೆ ದೋರುತ್ತಾನೆ. ಆಕಸ್ಮಾತ್ತಾಗಿ ಗುರು ಮತ್ತು ಹರ ಏಕಕಾಲಕ್ಕೆ ಬಂದರೆ ನಾನು ಸದ್ಗುರುವಿಗೇನೆ ಮೊದಲು ಮಣಿಯುತ್ತೇನೆಂದು ತಮ್ಮ ಗುರು ಭಕ್ತಿಯನ್ನು ನಿರೂಪಿಸಿದ್ದಾರೆ. ಸಗುಣಭಕ್ತಿ ಮಾರ್ಗಿಗಳಾದ ಸೂರದಾಸರು ಗುರು ಮಹಿಮೆಯನ್ನು ವಿಚಾರಪೂರ್ವಕವಾಗಿ ಮಂಡಿಸಿದ್ದಾರೆ. ಮಾಲಾ ತಿಲಕವನ್ನು, ಜಟಾಜೂಟವನ್ನು ಧರಿಸಿ, ಮನೋಹರವಾದ ಮಾತುಳ್ಳ ಸದ್ಗುರುನಾಥನು ಜ್ಞಾನದೀಪವನ್ನು ಕೈಯಲ್ಲಿ ಹಿಡಿದು ಭವಸಾಗರದಲ್ಲಿ ಮುಳುಗುವ ನಮ್ಮನ್ನು ಉದ್ಧರಿಸುತ್ತಾನೆ. ಇಂಥ ಗುರು ಸಮರ್ಥನಾಗಿದ್ದಾನೆ. ಮನಸ್ಸು ಮಾಡಿದರೆ ಭಕ್ತನನ್ನು ಕ್ಷಣದಲ್ಲಿ ಉದ್ಧರಿಸಬಲ್ಲನೆಂದು ಗುರು ಗರಿಮೆಯನ್ನು ವಿಶದೀಕರಿಸಿದ್ದಾರೆ.
ಕವಿಗಳು ಸ್ವತಃ ಜ್ಞಾನಿಗಳಾಗಿದ್ದರು. ಅನುಭಾವಿಗಳಾಗಿದ್ದರು. ಗುರುಚರಣ ಮಹಿಮೆಯನ್ನು ನುತಿಸುವಲ್ಲಿ ಅಪಾರ ಪ್ರೇಮವನ್ನು ವ್ಯಕ್ತಮಾಡಿದ್ದಾರೆ. ಗುರುಸ್ತುತಿಗೈಯ್ಯುವದು ಶಿಷ್ಯನ ಗುರಿಯಾದರೆ, ಕರುಣೆ ದೋರುವದು ಗುರುವಿನ ಅಗ್ಗಳಿಕೆ ಯಾಗಿದೆ. ಗುರುಕರುಣೆಯೇ ಮಾನವ ಜೀವನದ ಸಾರಸರ್ವಸ್ವವೆಂಬುದು ಶರಣರ ಸಂದೇಶವಾಗಿದೆ.
ಗುರು ಕೃಪಾಬಲವೇ ಶಿಷ್ಯರಿಗೆ ಜೀವಾಳ ;
ಗುರು ಕೃಪಾಬಲವೇ ಲಿಂಗಾಂಗ ಸಮರಸದ ಮುಂಬೆಳಗು ;
ಗುರು ಕೃಪಾಬಲವೇ ವೀರಶೈವನ ಒಳಬೆಳಗು,
ಗುರು ಸೇವೆಯ ಮಾಡಿ ಗುರು ಕೃಪೆಯ ಪಡೆಯೆಂದ
ನಮ್ಮ ಮೃಡಗಿರಿ ಅನ್ನದಾನೀಶ (ವ.ವ. ೧೬)
********
ಎಲ್ಲ ದೈವಕೆ ನಿಮ್ಮ | ಮೆಲ್ಲಡಿಯೇ ಘನವೆಂದು
ಸೊಲ್ಲಿಗೊಮ್ಮೊಮ್ಮೆ ನುತಿಪೆನಾಂ ಗುರುರಾಯ
ಸಲ್ಲೀಲೆಯಿಂದ ಕೃಪೆಯಾಗು || ೮ ||
ಈ ಜಗತ್ತಿನಲ್ಲಿ ದೇವತೆಗಳ ಸಂಖ್ಯೆ ಹೇಳತೀರದಷ್ಟಿದೆ. ಶಿವನ ಸೃಷ್ಟಿ ಮಾನವ.ಮಾನವನ ಸೃಷ್ಟಿ ದೇವತೆಗಳಾಗಿವೆ. ”ನಾ ಮಾಡಿದಲ್ಲದೆ ನೀ ದೇವನಲ್ಲ’ವೆಂಬ ಅಲ್ಲಮಪ್ರಭುಗಳ ವಾಣಿ ನಿದರ್ಶನವಾಗಿದೆ. ಮಾನವನು ಭಿನ್ನ ಭಿನ್ನ ವಸ್ತುಗಳನ್ನುದೇವರನ್ನಾಗಿಸಿದ್ದಾರೆ. ಅಣ್ಣ ಬಸವಣ್ಣನವರು ಈ ಬಹು ದೇವತಾ ವಾದವನ್ನು ಚನ್ನಾಗಿ ಖಂಡಿಸಿದ್ದಾರೆ.
ಮಡಕೆ ದೈವ, ಮೊರದೈವ, ಬೀದಿಯ ಕಲ್ಲುದೈವ
ಹಣಿಗೆ ದೈವ, ಬಿಲ್ಲನಾರಿ ದೈವ ಕಾಣಿರೋ
ಕೋಳಗ ದೈವ, ಗಿಣ್ಣಿಲು ದೈವ ಕಾಣಿರೋ
ದೈವ ದೈವವೆಂದು ಕಾಲಿಡಲಿಂಬಿಲ್ಲ.
ದೈವನೊಬ್ಬನೆ ಕೂಡಲ ಸಂಗಮದೇವ.
ಅರಗು ತಿಂದು ಕರಗುವ ದೈವವ
ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯಂಬೆನಯ್ಯಾ
ಅವಸರ ಬಂದಡೆ ಮಾರುವ ದೈವವನೆಂತು ಸರಿಯಂಬೆನಯ್ಯಾ ?
ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯಂಬೆನಯ್ಯಾ ?
ಸಹಜಭಾವ ನಿಜೈಕ್ಯ ಕೂಡಲಸಂಗಮನೊಬ್ಬನೆ ದೇವ.
ಪ್ರತಿಯೊಂದು ವಸ್ತುವಿಗೆ ದೇವರೆಂದು ಕರೆದರೆ ಕಾಲಿಡಲೂ ಸ್ಥಳವಿಲ್ಲವಾಗುವದು. ತನ್ನನ್ನು ತಾನು ರಕ್ಷಿಸಿಕೊಳ್ಳದ ವಸ್ತುವು ದೇವರಾಗದು. ಜನರು ನೀರಕಂಡಲ್ಲಿಮುಳುಗಿ, ಮರವ ಕಂಡಲ್ಲಿ ಸುತ್ತುತ್ತ ಮೌಢ್ಯರಾಗಿದ್ದಾರೆ. ಒಣಗುವ ಗಿಡವನ್ನುನಂಬುವ ಜನರು ನಿಜವಾದ ದೇವರನ್ನು ನಂಬಲಾರರು. ಕಲ್ಲ ಮನೆಯಮಾಡಿ, ಕಲ್ಲದೇವರನ್ನು ಪ್ರತಿಷ್ಠಿಸಿ, ಆಕಸ್ಮಿಕವಾಗಿ ಗುಡಿ ಮೇಲಿನ ಕಲ್ಲು ಕೆಳಗೆ ಬಿದ್ದರೆ ದೇವರೆ ಹೊದನೆಂದು ಪ್ರಭುದೇವರು ವಿಡಂಬಿಸಿದ್ದಾರೆ.ಪ್ರತಿಷ್ಠಾಪನೆ ಹೊಂದುವ ಪ್ರತಿಯೊಂದು ದೇವತೆಯಾದರೂ ನಾಶ ಹೊಂದುವದು. ಅಲ್ಲದೆ ಪ್ರತಿಷ್ಠಾಪನೆಯಾಗುವ ಕಾಲಕ್ಕೆ ಗುರುಚರಣವೇ ಸಕಲ ದೇವತೆಗಳಿಗೆ ಘನವಾಗಿದೆ. ಸದ್ಗುರುವಿನ ಮೆಲ್ಲಡಿಯ ಮಹಿಮೆ ಅಪಾರವಾದುದು.
ಗುರು ಚರಣಂ ಭವಹರಣಂ
ಶರಣಜನ ಹೃದಾಭರಣಮಾತ್ಮ ಸುಖಕರಣಂ ||
ಮರಣ ಭಯಾದುತ್ತರಣಂ
ತರುಣಾರುಣಕಿರಣವರ್ಣಮಹಮೀಡೇ ||
ಭವಹರಣಕ್ಕೆ ಕಾರಣವಾದ ಗುರುಚರಣವು ಶರಣ ಜನರ ಹೃದಯಾಭರಣವಾಗಿದೆ. ಗುರುಚರಣ ಗಾನವು ಆತ್ಮಕ್ಕೆ ಸುಖವನ್ನು ನೀಡುವದು. ಮರಣ ಭಯವನ್ನುನಿವಾರಿಸುವದು. ಬಾಲಸೂರ್ಯನ ಕಿರಣಕ್ಕೆ ಸಮನಾದ ಗುರುಚರಣವನ್ನುನುಡಿ-ನುಡಿಗೊಮ್ಮೆ ಉಸುರಿಗೊಮ್ಮೆ ನುಡಿಸಿ ಧನ್ಯರಾಗುವದೇ ಮಾನವನ ಕರ್ತವ್ಯ.ಶರಣನ ನಿಜನಿಷ್ಠೆ, ನೈಜವಾದ ಗುರುನುಡಿಯು ಗುರುಕೃಪೆಗೆ ಕಾರಣವಾಗುವದು.ಇಂಥ ನುಡಿಗೆ ಗುರುತಂದೆಯು ಸಲೀಲೆಯಿಂದ ಕೃಪೆದೋರುವನು. ಪೂರ್ವಜರು ಏಳುವಾಗ, ಮಲಗುವಾಗ, ಪೂಜೆ ಮೊದಲಾದ ಶುಭ ಪ್ರಸಂಗಗಳಲ್ಲಿಯೂ ಗುರು ಸ್ತುತಿಯನ್ನು ತಪ್ಪದೇ ಮಾಡುತ್ತ ಬಂದಿರುವರು.
ಗುರುದೇವೋ ಮಹಾದೇವೋ ಗುರುದೇವಃ ಸದಾಶಿವಃ |
ಗುರುದೈವಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ||
ಗುರುಬ್ರ್ರಹ್ಮಾ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರಃ |
ಗುರುಸಾಕ್ಷಾತ್ ಪರಬ್ರಹ್ಮಾ ತಸ್ಮೈ ಶ್ರೀಗುರವೇ ನಮಃ |
ಆವಾಚ್ಯಾತ್ಮ ಸ್ವರೂಪಾಯ ಶಿವಭಾವಪ್ರದಾಯಿನೇ |
ನಮಸ್ಸದ್ಗುರುನಾಥಾಯ ಷಟ್‌ಸ್ಥಲಬ್ರಹ್ಮಮೂರ್ತಯೇ ||
**********
ನರಜೀವಿಗಳಿಗೋರ್ವ | ಹರನೆ ಕಾರಣಕರ್ತ
ಶರಣ ಸಂತತಿಗೆ ಗುರುವೆ ನೀಕರ್ತನೆಂ
ದೆರಗಿರ್ವನಡಿಗೆ ಕೃಪೆಯಾಗು || ೯ ||
ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕಲ್ಲ, ಎಂಬತ್ನಾಲ್ಕು ಲಕ್ಷ ಜೀವಿಗಳನ್ನುನಿರ್ಮಿಸಿದನು ಹರನು. ಎಲ್ಲ ಜೀವಿಗಳಿಗಿಂತ ನರಜೀವಿಯೇ ಮಿಗಿಲು. ಆದರೆ ಈ ನರನು ಹುಟ್ಟು ಸಾವುಗಳ ಮಧ್ಯದಲ್ಲಿ ಸಿಕ್ಕು ಬಳಲಿ ತೊಳಲಾಡುತ್ತಿದ್ದಾನೆ. ಹರನ ಸೃಷ್ಟಿಯ ನರನು ಕಷ್ಟಜೀವಿಯಾಗಿದ್ದಾನೆ. ಭವ-ಭವಾಂತರಗಳಲ್ಲಿ ಹುಟ್ಟಿ ಹುಟ್ಟಿ ಮಾನವನು ಸಾಯುತ್ತಾನೆ. ಜಗತ್ತಿನಲ್ಲಿ ಅತ್ಯಂತ ಭಯಾನಕವಾದ ವಸ್ತುವೇ ಸಾವು.ಸಾವಿಗಂಜದ ಮಾನವರಿಲ್ಲ. ಶಿವನು ತನ್ನ ಲೀಲೆಗೋಸ್ಕರ ಜೀವಿಗಳನ್ನು ಭವಚಕ್ರ ದಲ್ಲಿ ತಿರುಗಿಸುತ್ತಾನೆ.
ಗುರುದೇವನು ಕರುಣಾಮಯನು. ಭವಬಂಧನದಲ್ಲಿ ಬಿದ್ದು ದುಃಖಿಯಾಗುತಿರುವ ಮಾನವರನ್ನು ಉದ್ಧರಿಸುತ್ತಾನೆ. ಮಾಂಸಮಯ ಶರೀರವನ್ನು ಮಂತ್ರ ಮಯವನ್ನಾಗಿಸುತ್ತಾನೆ. ಶಿಷ್ಯನಿಗೆ ತನ್ನ ಹಸ್ತಕಮಲದಲ್ಲಿ ಪುನರ್ಜನ್ಮವನ್ನೀಯುತ್ತಾನೆ.ಅದುಕಾರಣವೇ ಶರಣರು ಗುರುಕರಸಂಜಾತರೆಂದು ಹೆಸರು ಪಡೆಯುತ್ತಾರೆ. ಶರಣನಿಗೆ ಹುಟ್ಟು-ಸಾವಿನ ಕೀಲವನ್ನು ತಿಳಿಸಿ ಮುಕ್ತನಾಗುವ ಮಾರ್ಗವನ್ನು
ತಿಳಿಸುತ್ತಾನೆ. ತನುತ್ರಯಗಳನ್ನು ಪಾವನಗೊಳಿಸಿ ಲಿಂಗತ್ರಯವನ್ನು ಕರುಣಿಸುತ್ತಾನೆ. ಮಹಾಮಂತ್ರವನ್ನು ಬೋಧಿಸಿ ಶರಣ ಮಾರ್ಗವನ್ನು ತಿಳಿಸುತ್ತಾನೆ. ಮರವೆಯನ್ನುದೂರಗೊಳಿಸಿ ಅರಿವನ್ನು ಜಾಗೃತಗೊಳಿಸುತ್ತಾನೆ. ಅರಿವಿನ ಕುರುಹೇ ಲಿಂಗವೆಂದು ಮನವರಿಕೆ ಮಾಡಿಕೊಡುತ್ತಾನೆ. ಇಂಥ ಶರಣನು ಭವಚಕ್ರವನ್ನು ದಾಟಿ ಮುಕ್ತ ನಾಗುತ್ತಾನೆ. ಪುನರ್ಜನ್ಮವನ್ನು ಕಳೆದುಕೊಳ್ಳುತ್ತಾನೆ. ಶಿವನ ದೃಷ್ಟಿಯಿಂದ ಪಾರಾಗುತಾನೆ. ಪ್ರಭುಲಿಂಗಲೀಲೆಯಲ್ಲಿ ಶಿವನಿಗೆ ಪಾರ್ವತಿಯು ‘ಹೇ ದೇವಾ ನಾಮ-ರೂಪಕ್ರಿಯೆಗಳನ್ನು ಗೆಲ್ಲಬಲ್ಲ ನಿತ್ಯ ಮುಕ್ತನಾಗುವ ನಿರ್ಮಲವಾದ ಉದ್ಯೋಗವಾವುದು??ಎಂದು ಕೇಳಲು ಆಗ ಶಿವನು “ಭೋಗ ಭೂಮಿಯಾದ ಭೂತಲದಲ್ಲಿ ಮಾನವ ಶರೀರಿಯಾಗಿ ಹುಟ್ಟಿ ಶರಣನಾಗಿ ಶಿವಯೋಗ ಮಾರ್ಗದಿಂದ ನಿಜವನ್ನು ಸಾಧಿಸಿ ಮುಕ್ತರಾಗಬಹುದು” ಎಂದು ತಿಳಿಸಿದ ಮಾತುಗಳು ಮನನೀಯವಾಗಿವೆ.
ಶಿವಕವಿಯು ‘ಓರ್ವಹರ’ನೆಂಬ ಪದಪ್ರಯೋಗದಲ್ಲಿಯೂ ವಿಶೇಷತೆಯನ್ನುತುಂಬಿದ್ದಾನೆ. ಈ ಜಗತ್ತನ್ನು ಹಾಗೂ ಸಕಲ ಜೀವಜಂತುಗಳನ್ನು ನಿರ್ಮಾಣ ಮಾಡುವ ಶಿವನು ಒಬ್ಬನೇ ಇದ್ದಾನೆ. ಶಿವನು ಎಷ್ಟೇ ಜೀವಗಳನ್ನು ಹುಟ್ಟಿಸಿದರೂ ಅವೆಲ್ಲಅವನಿಗಿಂತ ಭಿನ್ನವಾಗಿವೆ. ಕುಂಬಾರನು ಎಷ್ಟೇ ಗಡಿಗೆ ಮಡಿಕೆಗಳನ್ನು ತಯಾರಿಸಿದರೂ ಅವು ಅವನಿಗಿಂತ ಭಿನ್ನವಾಗಿರುವದಿಲ್ಲವೇ ! ಹಾಗೆ ಶಿವನು ತನ್ನಂತೆ ಮಾಡಿಕೊಳ್ಳುವದಿಲ್ಲ. ಜೀವನು ಶಿವನಾದ ಮೇಲೆಯೇ ದುಃಖದಿಂದ ಮುಕ್ತ ನಾಗುವನು. ಈ ದುಃಖಿಯಾದ ಜೀವನನ್ನು ಶಿವನನ್ನಾಗಿ ಮಾಡುವ ಮಹಾಶಕ್ತಿ ಸದ್ಗುರುವಿನಲ್ಲಿದೆ. ದೀಪದಿಂದ ಮತ್ತೊಂದು ದೀಪ ಬೆಳಗುವಂತೆ ಗುರುವರನು ಸಚಿಷ್ಯರನ್ನು ತನ್ನಂತೆ ಮಾಡಿಕೊಳ್ಳುತ್ತಾನೆ. ಅನೇಕ ಗುರುಬಳಗವನ್ನೇ ತಯಾರಿಸುವನು. ಒಬ್ಬ ಶರಣನನ್ನಲ್ಲ.ಶರಣ ಸಂತತಿಗೇನೇ ಕಾರಣ ಕರ್ತನಾಗುವನು.
ಇಂಥ ಅಪಾರಶಕ್ತಿಯನ್ನು ಪಡೆದ ಓ ಗುರುವೆ ! ನಿನ್ನಡಿಯ ಬಯಸಿ ಬಂದಿರುವೆ, ನಿನ್ನ ಸಿರಿಯಡಿಗೆ ಮುಡಿಯಿಡುವೆ. ಪಿಡಿದೆತ್ತಿ ಬಿಡೆದಲೆ ನೀ ಕಾಪಾಡು.
********
ಶಿವನ ಸನ್ನಿಧಿಯರ್ಗೆ| ಭವ ಮರಣವುಂಟೆಂದು
ತವಪಾದ ಪದ್ಮ ಸನ್ನಿಧಿಯ ಬಯಸಿ ಬಂ-
ದವನೆನಗೆ ಗುರುವೆ ಕೃಪೆಯಾಗು II ೧O II
ಶಿವಕವಿಯು ಮೇಲಿನ ಅರ್ಥವನ್ನೇ ಪುಷ್ಟಿಗೊಳಿಸುತ್ತಾನೆ. ಶಿವನಸನ್ನಿಧಿ ಹಾಗೂ ಗುರುಸನ್ನಿಧಿಯ ಮರ್ಮವನ್ನು ತಿಳಿಸುತ್ತಾನೆ. ಪುಣ್ಯವನ್ನು ಗಳಿಸಿದ ಮಾನವರು ಚತುರ್ವಿಧ ಮೋಕ್ಷಗಳಾದ ಸಾಲೋಕ್ಯ,ಸಾಮೀಪ್ಯ, ಸಾರೂಪ್ಯ, ಸಾಯುಜ್ಯಗಳನ್ನು ಸಂಪಾದಿಸುತ್ತಾರೆ.
“”ಕ್ಷೀಣೇ ಪುಣ್ಯೇ ಮರ್ಥ್ಯಲೋಕಂ ವಿಶಂತಿ.”
ಸ್ವರ್ಗಲೋಕದಲ್ಲಿ ಪುಣ್ಯವಿರುವವರೆಗೆ ಅನಂತ ಸುಖಗಳನ್ನು ಅನುಭವಿಸಿದ ಮಾನವರು ಪುಣ್ಯತೀರಲು ಪುನಃ ಮರ್ತ್ಯಲೋಕಕ್ಕೆ ಬರಬೇಕಾಗುವದು. ಶಿವನ ಸನ್ನಿಧಿಯು ಸ್ಥಿರವಾದುದಲ್ಲ. ಚುನಾವಣೆಯಲ್ಲಿ ಜನಮತವನ್ನು ಪಡೆದ ವ್ಯಕ್ತಿಯು ಆ ಅವಧಿ ಮುಗಿಯುವ ವರೆಗೆ ರಾಜಕೀಯ ಅಧಿಕಾರದ ಸುಖವನ್ನು ಅನುಭವಿಸಿ ಸಮಯ ಮುಗಿದ ಬಳಿಕ ಪುನಃ ತನ್ನ ನೆಲೆಗೆ ಬರುವಂತೆ, ಮಾನವನು ಪುಣ್ಯ ಮುಗಿದ ಬಳಿಕ ಭೂಲೋಕದಲ್ಲಿ ಹುಟ್ಟಬೇಕಾಗುವದು. ಪಾಪಮಾಡಿದವನು ರೌರವ ನರಕ ಗಳಲ್ಲಿ ಬೀಳಬೇಕಾಗುವದು. ಪುಣ್ಯವೆಂಬುದು ಬೆಲೆಯಿದ್ದಂತೆ. ಬೆಲೆತೆತ್ತು ಅನೇಕ ಲೌಕಿಕ ಭೋಗಗಳನ್ನು ಭೋಗಿಸುವಂತೆ ಪುಣ್ಯವೆಂಬ ಬೆಲೆಯಿಂದ ಸ್ವರ್ಗಲೋಕದ ಸುಖವನ್ನು ಅನುಭೋಗಿಸುವನು.
ಇಂದಿನ ವೈಜ್ಞಾನಿಕ ಯುಗದಲ್ಲಿ ಪುಣ್ಯ-ಪಾಪಗಳ ಸ್ವರ್ಗ-ನರಕ ಲೋಕಗಳ ಕಲ್ಪನೆ ಸ್ಥಿರವಾಗದಿದ್ದರೂ, “ಪುಣ್ಯಪಾಪವೆಂಬುದು ನಿಮ್ಮಿಷ್ಟ ಕಾಣಿರೆ” “ಅಯ್ಯಾ ಎಂದಡೆ ಸ್ವರ್ಗ, ಎಲ್ಲವೋ ಎಂದಡೆ ನರಕ’ ಎನ್ನುವ ಶರಣವಾಣಿಗೆ ಚ್ಯುತಿಯಿಲ್ಲ. ಮಾನವನ ನಡತೆಗೆ ತಕ್ಕಂತೆ ಗುಣಾವಗುಣಗಳು ಲಭ್ಯವಾಗುತ್ತವೆ. ಒಟ್ಟಿನ ಮೇಲೆ ಪುಣ್ಯದ ದಾರಿಯಲ್ಲಿ ನಡೆವವಗೆ ಪುನರ್ಜನ್ಮವಿದೆ. ಯಾಕೆಂದರೆ ಪುಣ್ಯದಲ್ಲಿ ಸಕಾಮ ಕರ್ಮವಿದೆ. ಅಂತೆಯೇ ವೀರಶೈವ ಸಂಸ್ಕೃತಿಯು ಪುಣ್ಯಪಾಪಗಳನ್ನು ಮೀರಿನಿಂತಿದೆ. “ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ” ಎಂಬ ದಾಸವಾಣಿ ಸತ್ಯವಾಗಿದೆ. ಪ್ರತಿಯೊಬ್ಬನೂ ಗುರುಪಾದಪದ್ಮ ಸೇವೆಯನ್ನು ಬಯಸಬೇಕು. ಗುರುಪಾದ ಸನ್ನಿಧಿಯು ಭವರೋಗವನ್ನು ಕಳೆಯುವದು. ಭೌತಿಕದ ಆಶೆಯನ್ನುಬಿಡಿಸುವದು. ಭವ-ಮರಣವನ್ನು ನಿವಾರಿಸುವದು. ಗುರುಪಾದ ಸನ್ನಿಧಿಯು ಚಿನ್ನಿಧಿಯಂತೆ ಸದಾ ಬೆಳಗಿಸಬಲ್ಲದು. ಪರಮ ಪೂಜ್ಯ ಗುರುವರರು ಅರಸರ ಹಿಂದೆ, ಗುರುಗಳ ಮುಂದೆ” ಇರಬೇಕೆಂದು ಅಪ್ಪಣೆ ಮಾಡುತ್ತಿದ್ದರು. ಅರಸ ಕ್ಷಣಚಿತ್ತದವ; ಯಾವಕಾಲಕ್ಕೆ ಏನು ಆಜ್ಞೆಯನ್ನುಮಾಡುವನೋ ತಿಳಿಯದು. ಒಮ್ಮೆ ಲಾಭವಾಗಬಹುದು, ಮತ್ತೊಮ್ಮೆ ಹಾನಿಯಾಗಬಹುದು. ಅದಕ್ಕಾಗಿ ಅವರು ನಡೆದಂತೆ ಹಿಂಬಾಲಿಸುವದೇ ಸುಗಮದಾರಿ. ಆದರೆ ಗುರುಗಳ ಮುಂದೆ ಸೇವಾತತ್ಪರರಾಗಿದ್ದರೆ; ಗುರುಸನ್ನಿಧಿಯಲ್ಲಿ ಕಾಯಕ ತತ್ಪರನಾಗಿದ್ದರೆ ಗುರುಕೃಪೆ ಅವಶ್ಯವಾಗಿ ಘಟಿಸುವದು. ಗುರು ಕೃಪಾದೃಷ್ಟಿ ಹರಿದುಬರುವದು. ಆದ್ದರಿಂದ ಗುರುಸನ್ನಿಧಿಯ ಮಹತ್ವ ಅಪಾರವಾಗಿದೆ, ಅನುಪಮವಾಗಿದೆ. ಇದನ್ನರಿತ ಶಿವಕವಿಗಳು ಗುರುಪಾದಪದ್ಮ ಸನ್ನಿಧಿಯನ್ನು ಬಯಸಿದರು. ಕರುಣಾಮಯ ಗುರುವು ಪಾದಸನ್ನಿಧಿಯನ್ನು ಬಯಸಿಬಂದ ಭಕ್ತನನ್ನು ಉದ್ಧರಿಸದೇ ಬಿಡನೆಂಬ ದೃಢ ವಿಶ್ವಾಸವೂ ಅವರಲ್ಲಿ ವ್ಯಕ್ತವಾಗುತ್ತದೆ