ರಚನೆ :ಪರಮಪೂಜ್ಯ ಮೌನತಪಸ್ವಿ ಶ್ರೀ ಜಡೆ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ಸಮಾಧಾನ ಕಲಬುರಗಿ
ವ್ಯಾಖ್ಯಾನ : ಶ್ರೀ ರಾಮೇಶ್ವರ ಬಿಜ್ಜರಗಿ -ಸೋಲಾಪುರ

ಯೋಗ ಮಾಡಿದರಿಲ್ಲl ಭೋಗದೊಳ್ ಮೊದಲಿಲ್ಲ,l
ತ್ಯಾಗದೊಂದಿಗಿದೆ,ಶಿವ”ಲಿಂಗ-ಭೋಗೋಪ-l
ಭೋಗ” ದಲಿ- “ಶಾಂತಿ” ಜಡೆಯೊಡೆಯ!
ಜೀವನದಲ್ಲಿ ಮನುಷ್ಯನು ಬಯಸುವದು ಸುಖ ಶಾಂತಿಯನ್ನು. ಜೀವನು ಶರೀರ ಹೊತ್ತು ಹುಟ್ಟಿಬಂದಮೇಲೆ ನೋವು ನಲಿವುಗಳು ಅನಿವಾರ್ಯವಾಗಿವೆ. ನಲಿವಿಗಿಂತ ನೋವು
ಹೆಚ್ಚಿಗೆ ಬರುವದರಿಂದ ಮನುಷ್ಯ ಜೀವನದಲ್ಲಿ ಸುಖ-ಶಾಂತಿ ಪಡೆಯಲು ಭೋಗ ವಸ್ತುಗಳನ್ನು ಕೊಂಡುಕೊಂಡು ಅದರಿಂದ ಸುಖ ಪಡೆಯಲು ಪ್ರಯತ್ನಿಸುತ್ತಾನೆ. ಆದರೆ ಕೆಲವೇ ದಿನಗಳಲ್ಲಿ ಅದು ಬೇಸರ ತರುತ್ತದೆ. ಆಗ ಯೋಗದ ಕಡೆಗೆ ಗಮನ ಹರಿಸುತ್ತಾನೆ. ಯೋಗ ಅಂದರೆ ಶಿವ ಜೀವ ಸಂಯೋಗ. ಯೋಗದಲ್ಲಿ ಕರ್ಮಯೋಗ, ಜ್ಞಾನಯೋಗ, ರಾಜಯೋಗ, ಹಠಯೋಗ, ಅಷ್ಟಾಂಗಯೋಗ ಶಿವಯೋಗ, ಹೀಗೆ ಅನೇಕ ಪ್ರಕಾರಗಳಿವೆ. ಯೋಗ ಅಂದರೆ ಸರ್ವಸಾಮಾನ್ಯರ ಭಾಷೆಯಲ್ಲಿ ಅಷ್ಟಾಂಗ ಯೋಗಕ್ಕೆ ಹೀಗೆ ಹೇಳುತ್ತಾರೆ. ಆದರೆ ಇದರಲ್ಲಿ ಹೆಸರಿಗೆ ತಕ್ಕಂತೆ ಎಂಟು ಭಾಗಗಳಿವೆ.
1. ಯಮ- ನಿಶಿದ್ಧವಾದ ಕಾರ್ಯಗಳನ್ನು ತ್ಯಾಗ ಮಾಡುವದು ಅಂದರೆ ಬೇರೆಯವರಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು.
2. ನಿಯಮ- ಆಚರಣ ಪದ್ಧತಿಗಳ ಬಗ್ಗೆ ನಿಯಮಗಳು.
3. ಆಸನ- ದೇಹ ಆರೋಗ್ಯವಾಗಿರಲು ಮಾಡುವ ವ್ಯಾಯಾಮ ಪ್ರಕಾರಗಳು.
4. ಪ್ರಾಣಾಯಾಮ- ಶ್ವಾಸೋಚ್ಚಸ್ವಾಸಗಳನ್ನು ನಿಯಂತ್ರಿಸುವದು.
5. ಪ್ರತ್ಯಾಹಾರ- ಮನಸ್ಸನ್ನು ಪಂಚೇಂದ್ರಿಯಗಳ ಕಡೆಗೆ ಹರಿಯುವದನ್ನು ತಡೆಯುವದು.
6 ಧ್ಯಾನ- ಒಂದೇ ಕಡೆಗೆ ಅಥವಾ ವಸ್ತುವಿನಲ್ಲಿ ಮನ ಕೇಂದ್ರೀಕರಿಸುವದು.
ಪರಮ ಪೂಜ್ಯ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಒಂದು ತ್ರಿವಿಧಿ ಹೀಗಿದೆ.
“ಒಂದೇ ವಸ್ತುವಿನೊಳುl ಚಂದದಿಂದಲಿ ಲಕ್ಷl
ಸಂದು ಬಿಡದಲಿರಿಸಿlನೆನವುದು ಅದು ಧ್ಯಾನ-l
ವೆಂದೆನಿಸುವದು ಜಡೆಯೊಡೆಯ!
ಅಂದರೆ ಒಂದೇ ವಸ್ತುವಿನಲ್ಲಿ ಎಡಬಿಡದೆ ಸಂಪೂರ್ಣ ಲಕ್ಷ ಕೇಂದ್ರೀಕರಿಸುವದೇ ಧ್ಯಾನ ಎನಿಸುವದು.
7. ಧಾರಣ- ಚಿತ್ತವನ್ನು ಒಂದೆಡೆ ತಡೆಯುವದು.
8. ಸಮಾಧಿ- ಸಮಾಧಿ ಅಂದರೆ ಶಿವ ಜೀವ ಯೋಗ.! ಇಲ್ಲಿಯವರೆಗೆ ಹೋಗುವದು.ಅತಿ ಕಷ್ಟದ ಕೆಲಸ. ಸಾಮಾನ್ಯವಾಗಿ ಜನರೆಲ್ಲ ಯೋಗ ಅಂದರೆ ಪ್ರಾಣಾಯಾಮ, ಆಸನಗಳು, ಧ್ಯಾನ ಇವುಗಳನ್ನೇ ಯೋಗವೆಂದು ತಿಳಿಯುತ್ತಾರೆ ಸಮಾಧಿವರೆಗೂ ಹೋಗುವದೇ ಇಲ್ಲ. ಹೀಗಾಗಿ ಈ ಮಾರ್ಗದಿಂದ ಮುಕ್ತಿ ಪಡೆಯುವದು ಕಷ್ಟವಾಗುತ್ತದೆ. ಸುಖವಂತೂ ಸಿಗುವದೇ ಇಲ್ಲ. ಅದೇ ರೀತಿ ಭೋಗದಿಂದಲೂ ಸುಖ ಸಿಗುವದಿಲ್ಲ. ಇವೆಲ್ಲದಕ್ಕಿಂತ ನಿಜವಾದ ಸುಖವು ತ್ಯಾಗದಲ್ಲಿದೆ. ತ್ಯಾಗದಲ್ಲಿ ಯಾವ ಅಪೇಕ್ಷೆಯೂ ಇರುವದಿಲ್ಲ ಇದು ನನ್ನದಲ್ಲ ಎಂದು ತ್ಯಜಿಸುವುದು! ತ್ಯಾಗ ಎಂದರೆ ಆಶೆಯನ್ನು ಮೀರುವದು. ಆಶೆ ಮೀರಿದರೆ ಮಾಯೆಯನ್ನು ಗೆದ್ದಂತೆ. ಇಂತಹ ನಿರ್ಮಲ ಕಾಯನು ಶಿವಭಕ್ತಿ ಮಾಡಿದಾಗ ಶಿವಯೋಗ ಸಮನಿಸುವದು. ಶಿವಯೋಗ ಅಂದರೆ ಜಡೆಯೊಡೆಯ! ಶಿವ ಜೀವ ಒಂದಾಗುವದು. ಲಿಂಗಾಂಗ ಸಾಮರಸ್ಯ.- ಲಿಂಗ- ಅಂಗ ಒಂದಾಗುವದು. ಇದುವೇ ಲಿಂಗ ಭೋಗೋಪಭೋಗ ಇದುವೇ “ಮುಕ್ತಿ” ಇದರಲ್ಲಿ ನಿಜವಾದ ಶಾಂತಿ ಸಿಗುತ್ತದೆ. ಮುಕ್ತಿ ಸಿಗುವದು ತ್ಯಾಗದಿಂದ ಎಂದು ಪೂಜ್ಯರು ಈ ತ್ರಿವಿಧಿಯಲ್ಲಿ ತಿಳಿಸುತ್ತಾರೆ. ತ್ಯಾಗ ಅಂದರೆ ತನ್ನದನ್ನು ನಿರಪೇಕ್ಷ ಭಾವದಿಂದ ದಾನ ಮಾಡುವದು. ಬೇರೆಯವರದ್ದಕ್ಕೆ ಆಶೆ ಪಡದೆ ಇರುವದು. ಮುಕ್ತಿ ಪಡೆಯಲು ಆಶೆಯನ್ನು ಸಂಪೂರ್ಣವಾಗಿ ಬಿಟ್ಟಿರಬೇಕು.
ಖೇಚರಿಯ, ಷ ಣ್ಮುಖಿಯ,l ಸೂಚಿಸಿದರು ಶಾಂಭವಿಯ,l
ಗೋಚರಿಸಿ,ಕೊಡುವ ಗುರು-ವರನ ಸೇವಿಪ ವಿ-l
ವೇಚನೆಯ ನೀಡು, ಜಡೆಯೊಡೆಯ!
ಶಿವಯೋಗ ಸಾಧನೆಯಲ್ಲಿ ಖೇಚರಿ, ಷ ಣ್ಮುಖಿ, ಮತ್ತು ಶಾಂಭವಿ ಮುದ್ರೆಗಳು ಉಪಯುಕ್ತವಾಗಿವೆ ಎಂದು ಹೇಳುತ್ತಾರೆ. ಈ ಮುದ್ರೆಗಳು ತುಂಬಾ ಕಷ್ಟಕರವಾಗಿವೆ. ಖೇಚರಿ ಮುದ್ರೆಯನ್ನು ಕುಂಡಲಿನಿ ಜಾಗೃತಗೊಳಿಸುವ ಸಲುವಾಗಿ ಮಾಡಲಾಗುತ್ತದೆ. ಇದರಲ್ಲಿ ನಾಲಿಗೆಯ ತುದಿಯನ್ನು ಅಂಗಳಕ್ಕೆ ಹಚ್ಚಿ ಹಿಂದೆ ಗಂಟಲಲ್ಲಿ ಹೋಗಿಸುವ ಪ್ರಯತ್ನ ಮಾಡಲಾಗುತ್ತದೆ. ಷಣ್ಮುಖಿ ಮುದ್ರೆಯನ್ನು ಮನಸ್ಸಿನ ಏಕಾಗ್ರತೆಗಾಗಿ ಮಾಡಲಾಗುತ್ತದೆ. ಇದರಲ್ಲಿ ಆರು ಮುಖಗಳು ಅಂದರೆ ಮೂಗಿನ ಹೊಳ್ಳೆಗಳು ಎರಡು, ಎರಡು ಕಣ್ಣುಗಳು, ಮತ್ತು ಎರಡೂ ಕಿವಿಗಳು ಹೀಗೆ ಈ ಆರು ಮುಖಗಳನ್ನು ಮುಚ್ಚಿ ಉಸಿರಾಟ ನಿಯಂತ್ರಿಸ ಬೇಕು. ಶಾಂಭವಿ ಮುದ್ರೆಯಲ್ಲಿ ದೃಷ್ಟಿಯನ್ನು ಆಜ್ಞಾ ಚಕ್ರದಲ್ಲಿ ಕೇಂದ್ರೀಕರಿಸಬೇಕು.ಇದರಿಂದ .ಮೂರನೆಯ ಕಣ್ಣು ಜಾಗೃತವಾಗಿ ಮನುಷ್ಯನ ವ್ಯಕ್ತ ಮತ್ತು ಅವ್ಯಕ್ತ ಭಾವಗಳನ್ನು ತಿಳಿದುಕೊಳ್ಳಬಹುದು. ಈ ಮೂರು ಮುದ್ರೆಗಳನ್ನು ಮಾಡುವದು ಎಂದರೆ ಬಲು ಕಷ್ಟ ಪಡಬೇಕು. ಇವನ್ನೆಲ್ಲ ಬಿಟ್ಟು ಪ್ರತ್ಯಕ್ಷವಾಗಿ ನಿನ್ನ ಕಣ್ಣಮುಂದೆ ಇದ್ದು ನಿನಗೆ ಇಷ್ಟವಾದದ್ದನ್ನು ಕೊಡುವ ಗುರುವಿನ ಸೇವೆಯನ್ನು ಮಾಡುವ ಸುಬುದ್ಧಿಯನ್ನು ಕೊಡು ಎಂದು ಜಡೆಯೊಡೆಯನಲ್ಲಿ ಪೂಜ್ಯರು ಕೇಳಿಕೊಂಡಿದ್ದಾರೆ.
ಮೂರ್ವಿಧದ ಮುದ್ರೆಯನುl ಆರಿಗಾವುದು ಹಿತವೋ?l
ಆರಿಸಿದನರಗಿಸಿದರು, ಮೂರನಪ್ಪಿದರ್l
“ವೀರಶೈವರೈ” ಜಡೆಯೊಡೆಯ!
ಮೂರ್ವಿಧದ ಮುದ್ರೆಗಳು ಅಂದರೆ, ಖೇಚರಿ, ಷಣ್ಮುಖಿ, ಮತ್ತು ಶಾಂಭವಿ ಈ ಮೂರು ಪ್ರಕಾರದ ಮುದ್ರೆಗಳು ಶಿವಯೋಗ ಸಾಧನೆಗೆ ಅನುಕೂಲವಾಗಿವೆ ಎನ್ನುವರು. ಆದರೆ ಯಾವುದು ಯಾರಿಗೆ ಹಿತವೋ ಅದನ್ನು ಆರಿಸಿ ಅದನ್ನು ಸಾಧಿಸಬೇಕು. ಇದನ್ನು ಯೋಗ ಮುದ್ರೆಗಳಲ್ಲಿ ನಿಪುಣರಾದವರು ಮಾಡಬಹುದು. ಅಂತಹ ಮಹಾತ್ಮರನ್ನು ಹುಡುಕುವದು ಕಷ್ಟ ಮತ್ತು ಮುದ್ರಾ
ಸಾಧನೆಯೂ ಕಠಿಣವಾದ್ದರಿಂದ ಜಡೆಯೊಡೆಯ ! ವೀರಶೈವರು ಗುರು ಲಿಂಗ ಜಂಗಮರ ಸೇವೆಯೇ ಸಾಧನೆ ಎಂದು ಮುಕ್ತಿಯನ್ನು ಇಚ್ಚಿಸಿದರು.