ಸುಖ-ದುಃಖ

ಪೂಜ್ಯ ಜಗದ್ಗುರು ಡಾ| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

 

ಸುಖ-ದುಃಖಗಳು ಮನಸ್ಸಿನ ಪರಿಣಾಮಗಳು. ಬಯಸದೇ ಇದ್ದರೂ ಮನುಷ್ಯನಿಗೆ ದುಃಖಗಳು ಬರುವಂತೆ ಸುಖಗಳೂ ಬರುತ್ತವೆ. ಬಂದ ಸುಖವನ್ನು ಸೇವಿಸಬೇಕು. ಒದಗಿದ ದುಃಖವನ್ನು ಸಹಿಸಿಕೊಳ್ಳಬೇಕು. ಸುಖ ಬಂದಾಗ ಹಿಗ್ಗದೆ ದುಃಖ ಬಂದಾಗ ಕುಗ್ಗದೆ ಪಾಲಿಗೆ ಬಂದುದನ್ನು ಪ್ರಸಾದಭಾವದಿಂದ ಸ್ವೀಕರಿಸಿ ಸಂತೋಷದಿಂದಿರಬೇಕು.

ಸುಖ ದುಃಖಗಳು ಚಕ್ರದೋಪಾದಿಯಲ್ಲಿ ಸುತ್ತುತ್ತಿರುತ್ತವೆ. ಸುಖಾನುಭವದ ನಂತರ ಬರುವ ದುಃಖವು ಯಾತನಾಮಯವಾಗಿರುತ್ತದೆ. ಆದರೆ ದುಃಖವನ್ನನುಭವಿಸಿದ ಮೇಲೆ ಬರುವ ಸುಖವು ಬಿಸಿಲಿನಿಂದ ಬಳಲಿದ ವ್ಯಕ್ತಿಗೆ ಮರದ ನೆರಳು ಹಿತವಾಗಿರುವಂತೆ ಆಪ್ಯಾಯಮಾನವೆನಿಸುತ್ತದೆ. ಮನುಷ್ಯ ತನಗೆ ದುಃಖ ಒದಗಿ ಬಂದಾಗ ತನಗಿಂತ ಹೆಚ್ಚು ದುಃಖಕ್ಕೊಳಗಾದವರನ್ನು ಕಾಣುವುದು ಸೂಕ್ತ.  ಆಗ ಮನಸ್ಸಿನಲ್ಲುಂಟಾದ ಉದ್ವೇಗ ಕಿಂಚಿತ್ತಾದರೂ ಶಮನಗೊಳ್ಳುತ್ತದೆ.

‘ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ’ ಎಂಬುದು ಪ್ರಭುವಾಣಿ. ಇದು ಎಲ್ಲರಿಗೂ ಗೊತ್ತಿದ್ದರೂ ಆ ಒಂದು ಕ್ಷಣದ ಸುಖಕ್ಕಾಗಿ ಹಾತೊರೆಯುತ್ತಿರುವುದು ಎಂಥ ವಿಪರ್ಯಾಸ. ಯಾತ್ರಿಕನೊಬ್ಬ ಕಾಡುದಾರಿಯಲ್ಲಿ ನಡೆದು ಬರುವಾಗ ನಾಲ್ದೆಶೆಯಿಂದ ಹುಲಿ, ರಕ್ಕಸಿ, ಕಾಡಾನೆ, ಕಾಡ್ಗಿಚ್ಚುಗಳ ರೂಪದಲ್ಲಿ ವಿಪತ್ತು ಒದಗಿ ಬರುತ್ತದೆ. ಯಾವ ದಾರಿಯಲ್ಲಿ ನಡೆದರೂ ಸಾವು ನಿಶ್ಚಿತವೆಂದರಿತ ಅವನು ವಿಪತ್ತಿನಿಂದ ಪಾರಾಗಲು ಹಾಳುಭಾವಿಯಲ್ಲಿರುವ ಮರದ ಬೇರಿಗೆ ಜೋತು ಬೀಳುತ್ತಾನೆ. ಬಾವಿಯ ತಳದಲ್ಲಿ ಕಾಳಸರ್ಪ ಹೆಡೆಯೆತ್ತಿ ನಿಂತಿದೆ. ಮರದ ಬೇರನ್ನು ಇಲಿಯೊಂದು ಒಂದೇ ಸವನೆ ಕಡಿಯುತ್ತಿದೆ. ಹೀಗೆ ಸಾವು ಬದುಕಿನ ನಡುವೆ ಸೆಣಸುತ್ತಿರುವ ಅವನ ಮೂಗಿನ ತುದಿಯ ಮೇಲೆ ಮರದ ಮೇಲಿರುವ ಜೇನು ಹುಟ್ಟಿನಿಂದ ಜೇನುಹನಿಯೊಂದು ಬೀಳುತ್ತದೆ. ಅದನ್ನು ನಾಲಿಗೆ ಚಾಚಿ ಸವಿದ ಅವನು ಒಂದು ಕ್ಷಣ ಸುಖವನ್ನನುಭವಿಸಿ ವಿಪತ್ತಿಗೆ ಗುರಿಯಾಗುತ್ತಾನೆ. ಇಂಥ ಜೇನುಹನಿಯೇ ಸಂಸಾರದ ಸುಖ. ಅದು ಶಾಶ್ವತವಾದುದಲ್ಲ. ಈ ವಿಷಯ ಸುಖದ ಆಶೆಯೇ ದುಃಖಕ್ಕೆ ಮೂಲ, ಇದನ್ನರಿತು ನಿರ್ವಿಷಯವಾಗಿ ಆಸೆ ಆಮಿಷಗಳನ್ನಳಿದು ಅಂತಃಕರಣವನ್ನು ಪರಿಶುದ್ಧಗೊಳಿಸಬೇಕು. ಆಗ ಅಧ್ಯಾತ್ಮಿಕ ಪ್ರಸನ್ನತೆಯುಂಟಾಗಿ ಮನುಷ್ಯನು ಸದಾ ಸುಖಿಯಾಗಿರಲು ಸಾಧ್ಯವಾಗುತ್ತದೆ.

 

Related Posts