ದೃಷ್ಟಿ- ಸೃಷ್ಟಿ

ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

ದೃಷ್ಟಿ ಎಂದರೆ ಕಣ್ಣಿನ ನೋಟ ಅಥವಾ ನೋಡುವ ಕ್ರಿಯೆ. ನೋಡುವ ನೋಟದಲ್ಲಿ ನಮ್ಮ ಕಣ್ಣಿಗಿಂತಲೂ ಮನಸ್ಸಿನ ಪಾತ್ರ ಪ್ರಮುಖವಾದುದು. ಕಣ್ಣಿನಿಂದ ಯಾವುದೇ ವಸ್ತುವನ್ನು ನೋಡಿದರೂ ಮನಸ್ಸು ಅದರ ಮೇಲೆ ಕೇಂದ್ರೀಕೃತವಾಗದ ಹೊರತು ಆ ವಸ್ತುವಿನ ಜ್ಞಾನ ನಮಗೆ ಸಾಧ್ಯವಾಗುವುದಿಲ್ಲ. ನಾವು ಒಂದು ವಸ್ತುವನ್ನು ನೋಡಿದಾಗ ಮೊದಲು ನಮ್ಮ ಮನಸ್ಸು ಆ ವಸ್ತುವಿನ ಮೇಲೆ ಕೇಂದ್ರೀಕೃತವಾಗುತ್ತದೆ. ಬುದ್ದಿಯು ಇದು ಇಂಥ ವಸ್ತುವೆಂದು ನಿರ್ಧರಿಸುತ್ತದೆ. ನಾನು ಈ ವಸ್ತುವನ್ನು ನೋಡುತ್ತಿದ್ದೇನೆ ಎಂಬುದು ಅಹಂಕಾರ. ಹಾಗೆಯೇ ಕಾಮಕ್ರೋಧಾದಿ ಸಂವೇಗಗಳಿಗೆ ಒಳಗಾಗುವುದು ಚಿತ್ತ , ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್ತ ಇವು ನಮ್ಮ ಅಂತಃಕರಣಗಳು. ‘ಕರಣಂಗಳ ಚೇಷ್ಟೆಗೆ ಮನವೇ ಬೀಜ’ ಎನ್ನುತ್ತಾಳೆ ಅಕ್ಕಮಹಾದೇವಿ.

ಅಂತಃಕರಣಗಳ ವ್ಯವಹಾರವೆಲ್ಲವೂ ಮನಸ್ಸಿನಿಂದ ಮೊದಲ್ಗೊಳ್ಳುತ್ತದೆ. ಹಾಗೆಯೇ  ಕಣ್ಣು ಕಿವಿ ಇತ್ಯಾದಿ ಜ್ಞಾನೇಂದ್ರಿಯಗಳ ವ್ಯವಹಾರಕ್ಕೂ ಮನಸ್ಸೇ ಕಾರಣ. ಆದ್ದರಿಂದ ನಾವು ನೋಡುವ ನೋಟ ಅಥವಾ ನಮ್ಮ ಕಣ್ಣಿನ ದೃಷ್ಟಿ ಪವಿತ್ರವಾಗಿರಲು ಮನಸ್ಸು ಪವಿತ್ರವಾಗಿರಬೇಕಾದುದು ಹಾಗೆಯೇ ನಿರ್ಮಲವಾಗಿರಬೇಕಾದುದು ಅತ್ಯವಶ್ಯ. ʼ ಎಲ್ಲಿ ನೋಡಿದಡಲ್ಲಿ ಮನವೆಳೆಸಿದರೆ ಆಣೆ ನಿಮ್ಮಾಣೆ ನಿಮ್ಮ ಪ್ರಮಥರ ಆಣೆ’ ಎಂದು ಬಸವಣ್ಣನವರು ಮನಸ್ಸಿನ ಹೀನ ದೃಷ್ಟಿಗೆ ಕಡಿವಾಣ ಹಾಕುತ್ತಾರೆ. ಸದಾಭೌತಿಕ

ಸುಖಕ್ಕಾಗಿ ಹಾತೊರೆಯುವ ಹಾಗು ವಿಷಯಾದಿಗಳಿಗೆ ಹರಿಯುವ ಮನಸ್ಸಿಗೆ ಜ್ಞಾನಿಗಳಾದವರು ಸಂಸ್ಕಾರಕೊಟ್ಟು ದೃಷ್ಟಿಯನ್ನು ಪವಿತ್ರವಾಗಿರಿಸಿಕೊಳ್ಳುತ್ತಾರೆ.

 ಮಾತೃವತ್ ಪರದಾರೇಷು ಪರದ್ರವ್ಯೇಷು ಲೋಷ್ಠವತ್!

ಆತ್ಮವತ್ ಸರ್ವಭೂತೇಷು ಯಃ ಪಶ್ಯತಿ ಸಃ ಪಂಡಿತಃ!!

 ಎಂಬುದು ಸುಭಾಷಿತೋಕ್ತಿ, ಪರಸ್ತ್ರೀಯರನ್ನು ತಾಯಿಯಂತೆ, ಪರಧನವನ್ನು ಮಣ್ಣಿನ ಹೆಂಟೆಯಂತೆ ಎಲ್ಲ ಜೀವಿಗಳನ್ನು ತನ್ನಂತೆ ಕಾಣುವುದು ಜ್ಞಾನಿಗಳ ಲಕ್ಷಣ. ಇಂಥ ಜ್ಞಾನಿಗಳ ದೃಷ್ಟಿಯೇ ನಿರ್ಮಲದೃಷ್ಟಿ, ಪವಿತ್ರ ದೃಷ್ಟಿಯುಳ್ಳವರಿಗೆ ಎಲ್ಲವೂ ಸುಂದರವಾಗಿ, ಪವಿತ್ರವಾಗಿ ಕಾಣುತ್ತದೆ.

 ಹಚ್ಚ ಹಸಿರಿಬಿಂದ ಕೂಡಿದ ದಟ್ಟ ಕಾಡಿನ ಮಧ್ಯದಲ್ಲಿ ಸುಂದರವಾದ ಒಂದು ಮನೆ ಇತ್ತು. ಅದನ್ನು ಕಂಡ ಸಾಧು ಸತ್ಪುರುಷರೊಬ್ಬರು ‘ಎಷ್ಟು ಸುಂದರವಾದ ಪ್ರಶಾಂತವಾದ ಸ್ಥಳವಿದು! ಇಲ್ಲಿಯೇ ಇದ್ದು ಸದಾ ಭಗವಂತನ ಧ್ಯಾನ ಮಾಡಬೇಕು’ ಎಂದು ಯೋಚಿಸಿದರು. ಅದೇ ಮನೆಯನ್ನು ನೋಡಿದ ಕಳ್ಳನೊಬ್ಬನು ಎಂತಹ ಗುಪ್ತವಾದ ಸ್ಥಳದಲ್ಲಿರುವ ಮನೆ ಇದು! ನಾನು ಕಳವು ಮಾಡಿ ಸಂಗ್ರಹಿಸಿದ ವಸ್ತುಗಳನ್ನು ಇಲ್ಲಿ ಇಟ್ಟರೆ ಅವು ಯಾರ ಕಣ್ಣಿಗೂ ಬೀಳಲಾರವು ಎಂದು ಯೋಚಿಸಿದ. ದುರಾಚಾರಿ ದುರ್ವ್ಯಸನಿಯೊಬ್ಬ ಆ ಮನೆಯನ್ನು ಕಂಡು ನನ್ನ ದುರಾಚಾರಕ್ಕಾಗಿ ಇದಕ್ಕಿಂತಲೂ ಉತ್ತಮವಾದ ಏಕಾಂತ ಸ್ಥಳ ಮತ್ತೊಂದಿಲ್ಲ ಎಂದು ನಿರ್ಧರಿಸಿದ. ಹಾಗೆಯೇ ಮನೆಯನ್ನು ನೋಡಿದ ಜೂಜುಗಾರನೊಬ್ಬ ಜೂಜಾಟವಾಡಲು ಅತ್ಯಂತ ಯೋಗ್ಯವಾದ ಮನೆ ಇದು. ನನ್ನ ಗೆಳೆಯರನ್ನೆಲ್ಲ ಇಲ್ಲಿ ಕರೆ ತಂದು ಜೂಜಾಟವಾಡುವ ಎಂದು ಯೋಚಿಸಿದ. ಹೀಗೆ ಒಂದೇ ಮನೆಯನ್ನು ಬೇರೆ ಬೇರೆ ದೃಷ್ಟಿಕೋನ ಹೊಂದಿದ ವ್ಯಕ್ತಿಗಳು ಬೇರೆ ಬೇರೆ ರೂಪದಲ್ಲಿ ನೋಡಿದರು. ನಮ್ಮ ನೋಟದ ಹಿಂದಿನ ಮನಸ್ಸಿನ ಪಾವಿತ್ರ್ಯತೆ ಬಹಳ ಮಹತ್ವದ್ದು. ಆಶೆ-ಆಮಿಷಗಳಿಂದ, ಕಾಮ ಕ್ರೋಧಾದಿ ಮನೋವಿಕಾರಗಳಿಂದ ಮನಸ್ಸು ಮುಕ್ತವಾಗಿರಬೇಕು. ಆಗ ನಮ್ಮ ದೃಷ್ಟಿ ಹಾಗು ಅಂತಃಕರಣಗಳೆಲ್ಲವೂ ಒಳ್ಳೆಯದಾಗುತ್ತವೆ. ದೃಷ್ಟಿಯಂತೆ ಸೃಷ್ಟಿ ಅಲ್ಲವೇ?

Related Posts