ವಚನ ವಾಙ್ಮಯದ ಮಹತ್ವ

ಫ. ಗು. ಹಳಕಟ್ಟಿ, ವಿಜಾಪೂರ

ಶರಣರ ನಡೆ ನುಡಿ ಆಚಾರ ವಿಚಾರಗಳಂತೆ ವರ್ತಿಸುವದೇ ತಮ್ಮ ಜೀವಿತದ ಕರ್ತವ್ಯವೆಂದು ತಿಳಿದು ಹಾಗೆ ನಡೆಯುವ ಜನರು ಕೆಲವು ವರ್ಷಗಳ ಹಿಂದೆ ಬಹು ಜನರು ದೊರಕುತ್ತಿದ್ದರು. ಇವರು ವಚನ ಶಾಸ್ತ್ರ ಗ್ರಂಥವನ್ನು ಯಾವಾಗಲೂ ಅತಿ ಭಕ್ತಿಯಿಂದ ಓದುತ್ತಿದ್ದರು ಮತ್ತು ಶಕ್ತ್ಯಾನುಸಾರ ಹಾಗೆ ನಡೆಯುತ್ತಲೂ ಇದ್ದರು. ಆದರೆ ಇಂಥ ಜನರು ವೀರಶೈವ ಸಮಾಜದಲ್ಲಿ ಈಗ ಬಹು ವಿರಳರಾಗುತ್ತಲಿದ್ದಾರೆ. ಇಷ್ಟೇ ಅಲ್ಲ, ವಚನ ಶಾಸ್ತ್ರವೆಂದರೆ ವೀರಶೈವರ ಒಂದು ಮಹತ್ವದ ಧಾರ್ಮಿಕ ವಾಙ್ಮಯವೆಂಬ ತಿಳುವಳಿಕೆಯು ಸಹ ಜನರಲ್ಲಿ ಹಾರಿ ಹೋಗಿರುತ್ತದೆ. ಆದರೆ ಇದಕ್ಕೆ ಅಪವಾದವಾಗಿ ವರ್ತಿಸಿದವರೆಂದರೆ, ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳೇ ಇದ್ದಾರೆ. ಈ ಮಹಾನುಭಾವರು ಶಿವಶರಣರ ನಡೆ ನುಡಿಗಳಲ್ಲಿ ಬಹು ಶ್ರದ್ಧೆಯನ್ನು ವಹಿಸಿದವರಾಗಿದ್ದರು ಮತ್ತು ಅವರು ವಚನ ಶಾಸ್ತ್ರ ತತ್ವಗಳನ್ನು ಬಲ್ಲವರು ಎಲ್ಲಾದರೂ ಇದ್ದಾರೆಂದು ತಿಳಿದ ಕೂಡಲೆ ಅವರಲ್ಲಿಗೆ ಹೋಗಿ ಅವುಗಳ ತತ್ವಗಳ ಬಗ್ಗೆ ವಿಚಾರ ಮಾಡಲು ಮುಂದುವರೆಯುತ್ತಿದ್ದರು. ಈ ದೃಷ್ಟಿಯಿಂದ ಶ್ರೀ ಸ್ವಾಮಿಗಳವರ ಮೇಲು ಪಂಕ್ತಿಯನ್ನು ಪ್ರತಿ ಒಬ್ಬ ವೀರಶೈವನು ಈ ಕಾಲಕ್ಕೆ ಅನುಸರಿತಕ್ಕದ್ದಾಗಿದೆ.

ಷಟ್ಸ್ಥಲ ಸಿದ್ಧಾಂತದ ತತ್ವಗಳನ್ನು ಅರಿಯಲು ವಚನ ಗ್ರಂಥಗಳೇ ಬಹು ಸಹಾಯಕಾರಿಗಳು. ಆದರೆ ಸಮಾಜದ ದುರ್ದೈವದಿಂದ ಇದರ ತತ್ವಗಳು ಹಿಂದುಸ್ಥಾನದಲ್ಲಿ ಇನ್ನೂ ಅಪರಿಚಿತವಾಗಿ ಉಳಿದಿವೆ. ಅವುಗಳನ್ನು ಹೊರಗೆಡುಹುವ ಪ್ರಯತ್ನಗಳು ಇನ್ನೂ ಆಗಿರುವದಿಲ್ಲ. ಷಟ್ಸ್ಥಲ ಶಾಸ್ತ್ರವು ವೀರಶೈವ ಧರ್ಮದ ಒಂದು ಮುಖ್ಯ ವೈಶಿಷ್ಟ್ಯವೆಂದು ಹೇಳಬಹುದು. ಈ ಸಮಾಜದಲ್ಲಿ ಆಗಿ ಹೋದ ಅನೇಕ ಧರ್ಮ ಪ್ರಚಾರಕ್ಕೂ ತತ್ವವೇತ್ತಿಗಳೂ, ಸಾಧು ಸತ್ಪುರುಷರೂ ಇದರ ತತ್ವಗಳನ್ನೇ ಸಾರಿರುವರು. ಷಟ್ಸ್ಥಲದ ಉದ್ದೇಶವು ಮನುಷ್ಯನ ಶಕ್ತಿಗಳನ್ನೂ ಅವನ ಗುಣ ಧರ್ಮಗಳನ್ನೂ ಸರಿಯಾದ ರೀತಿಯಿಂದ ವಿಕಾಸಗೊಳಿಸುವದೇ ಇರುತ್ತದೆ. ಈ ರೀತಿಯನ್ನು ಅವರು ಗೊತ್ತುಪಡಿಸಿ ಅವನ್ನು ಈ ಶಾಸ್ತ್ರದ ಮೂಲಕ ಪ್ರಚುರ ಪಡಿಸಿರುತ್ತಾರೆ. ಆಗಮ ಧರ್ಮಗಳು ಅನೇಕವಿದ್ದು ಅವುಗಳಲ್ಲಿ ಷಟ್ಸ್ಥಲವನ್ನು ವಿಸ್ತಾರವಾಗಿ ಬೋಧಿಸುವ ಧರ್ಮವೆಂದರೆ, ವೀರಶೈವವೇ ಇರುತ್ತದೆ. ವೀರಶೈವರಲ್ಲಿ ಈ ಧರ್ಮದ ಮರ್ಮಗಳನ್ನು ಅರುಹತಕ್ಕ ಗ್ರಂಥಗಳು ಕನ್ನಡ, ಸಂಸ್ಕೃತ, ತಮಿಳು, ತೆಲಗು, ಭಾಷೆಗಳಲ್ಲಿ ಅನೇಕವಿವೆ. ಆದರೆ ಅವುಗಳಲ್ಲಿ ಷಟ್ಸ್ಥಲದ ತತ್ವಗಳನ್ನು ಬಹು ವಿಶದವಾಗಿ ಅರಹುವ ಗ್ರಂಥಗಳೆಂದರೆ ವಚನಗಳೇ ಇವೆ. ಈ ದೃಷ್ಟಿಯಿಂದ ಇವುಗಳ ಮಹತ್ವವು ಬಹಳ ಇರುತ್ತದೆ.

ಈ ಪ್ರಕಾರ ವಚನ ಶಾಸ್ತ್ರವು ಷಟ್ಸ್ಥಲಗಳ ಅಭ್ಯಾಸ ದೃಷ್ಟಿಯಿಂದ ಅಷ್ಟೇ ಅಲ್ಲ,‌ ಇದು ಒಂದು ಕಾಲಕ್ಕೆ ಕರ್ನಾಟಕದಲ್ಲಿ ರಾಜಕೀಯ ಸಾಮಾಜಿಕ ಮತ್ತು ವಾಙ್ಮಯಾತ್ಮಕ ಸ್ಥಿತಿಯಲ್ಲಿ ಬಹು ಮಹತ್ವದ ಬದಲಾವಣೆಗಳನ್ನು ಮಾಡಿರುತ್ತದೆ. ಈ ದೃಷ್ಟಿಯಿಂದಲೂ ಈ ಶಾಸ್ತ್ರ ಗ್ರಂಥಗಳು ಪಠನೀಯವಾಗಿರುತ್ತವೆ.

 ವೀರಶೈವ ಧರ್ಮವು ೧೧-೧೨ನೇ ಶತಮಾನಗಳಲ್ಲಿ ಕರ್ನಾಟಕದಲ್ಲಿ ಪ್ರಸಾರ ಹೊಂದಲಿಕ್ಕೆ ಈ ವಚನಗ್ರಂಥಗಳೇ ಮುಖ್ಯ ಕಾರಣವಾದವೆಂದು ಹೇಳಬಹುದು. ಅವುಗಳ ಮೂಲಕವಾಗಿಯೇ ಆಗಿನ ವೀರಶೈವ ಧರ್ಮ ಪ್ರವರ್ತಕರು ಧರ್ಮ ತತ್ವಗಳನ್ನು ದೇಶಮಧ್ಯದಲ್ಲಿ ಪ್ರಸಾರಗೊಳಿಸಿದರು. ಆ ಕಾಲಕ್ಕೆ ಬಸವಾದಿ ಶಿವಶರಣರು ಕಲ್ಯಾಣ ಪಟ್ಟಣದಲ್ಲಿ ಶಿವಾನುಭವ ಮಂಟಪವನ್ನು ಸ್ಥಾಪಿಸಿ ಅಲ್ಲಿ ಶಿವಾನುಭವದ ತತ್ವಗಳನ್ನು ಚರ್ಚಿಸಿ ಅವುಗಳನ್ನು ಈ ವಚನಗಳ ಮೂಲಕವಾಗಿಯೇ ಸಾಮಾನ್ಯ ಜನರಿಗೆ ಸಹ ತಿಳಿಯುವಂತೆ ಬೋಧಿಸಿದರು. ಈ ಪ್ರಕಾರ ಆ ಕಾಲಕ್ಕೆ ಹಲಕೆಲವು, ಶಿವಶರಣರಷ್ಟೇ ಅಲ್ಲ, ಅಸಂಖ್ಯಾತ ಶಿವಶರಣರು ಬೇರೆ ಬೇರೆ ಭಾಗಗಳಲ್ಲಿ ಉದ್ಭವಿಸಿ ತಮ್ಮ ತಮ್ಮ ವಿಚಾರಸರಣೆಗೆ ಅನುಸಾರವಾಗಿ ನಾನಾವಿಧವಾಗಿ ಇವುಗಳ ಮೂಲಕ ಧರ್ಮತತ್ವಗಳನ್ನು ಬೋಧಿಸಿದ್ದಾರೆ. ಹೀಗೆ ಈ ಗ್ರಂಥಗಳು ಅಸಂಖ್ಯವಾಗಿ ಹೊರಟು ಒಂದು ವಾಙ್ಮಯ ಸ್ವರೂಪವನ್ನೇ ಹೊಂದಿವೆ. ಹಾಗೆ ಈ ವಾಙ್ಮಯವು ಕೃತ್ರಿಮ ರೀತಿಯಿಂದ ಹೊರಟಿರುವದಿಲ್ಲ. ಅದು ಒಂದು ಧರ್ಮಕ್ರಾಂತಿಯ ಕಾಲಕ್ಕೆ ಹೊರಟಿರುತ್ತದೆ. ಆದುದರಿಂದ ಇದು ಒಂದು ನಿಸ್ಸಾರವಾದ ವಾಙ್ಮಯ ವಾಗಿರುವದಿಲ್ಲ. ಅದರಲ್ಲಿ ಒಂದು ಬಗೆಯ ಚೈತನ್ಯವು ಇರುತ್ತದೆ. ಅದರಲ್ಲಿ ಓಜಸ್ಸು ಇದೆ, ಬಲವು ಇದೆ, ಇಂಥ ವಾಙ್ಮಯವು ವೀರಶೈವರಲ್ಲಿ ಹುಟ್ಟಿದುದಕ್ಕಾಗಿ ಅವರು ಅಭಿಮಾನಪಡತಕ್ಕದ್ದಾಗಿದೆ.

 ವಚನ ಗ್ರಂಥಗಳಲ್ಲಿ ಈ ಬಗೆಯ ಓಜಸ್ಸು ಮತ್ತು ಬಲವು ಉಂಟಾಗಲಿಕ್ಕೆ ಕಾರಣಗಳಾವವು ? ಅವುಗಳ ರಚನೆಯಲ್ಲಿ ಅಂಥದೇನು ಇದೆ ? ಎಂಬುದನ್ನು ನಾವು ವಿಚಾರ ಮಾಡುವದು ಬಹಳ ಮಹತ್ವದ್ದಿರುತ್ತದೆ. ಈ ಬಗ್ಗೆ ನಾವು ಕೆಲವು ಮುಖ್ಯವಾದ ಕಾರಣಗಳನ್ನು ಕೆಳಗೆ ವಿವರಿಸುತ್ತೇವೆ.

 ವಚನ ಗ್ರಂಥಗಳಲ್ಲಿ ನಿರ್ದಾಕ್ಷಿಣ್ಯವಾಗಿ ನುಡಿದ ಸತ್ಯ ಮಾತುಗಳಿವೆ. ಈ ಸಂಗತಿಯೇ ಅವುಗಳ ಓಜಸ್ಸಿಗೆ ಕಾರಣವಾಗಿರುತ್ತದೆ. ಸತ್ಯ ಮಾತುಗಳಲ್ಲಿ ಯಾವಾಗಲೂ ಒಂದು ಬಲವು ಇರುತ್ತದೆ. ತತ್ವವೇತ್ತಿಗಳು ತಮ್ಮ ಸಿದ್ಧಾಂತವನ್ನು ಸ್ಥಾಪಿಸಲು ನಾನಾ ಬಗೆಯ ಯುಕ್ತಿ ಪ್ರಯುಕ್ತಿಗಳನ್ನು ಯೋಜಿಸುವದುಂಟು. ಇಂಥವರ ಗ್ರಂಥಗಳಲ್ಲಿ ಸೂಕ್ಷ್ಮ ಜಾಙ್ಮಯು ಬೇಕಾದಷ್ಟು ಇರಬಹುದು. ಆದರೆ ಅವುಗಳಲ್ಲಿ ಜೀವಕಳೆಯು ಮಾತ್ರ ಸ್ಫುರಿಸಲಾರದು. ಆದರೆ ಸತ್ಯಭಾಷೆಯ ವಿಧವು ಬೇರೆ. ಅದು ತಟ್ಟನೆ ಮನಸ್ಸಿಗೆ ಹೊಳೆಯುತ್ತದೆ. ಅದರಲ್ಲಿ ಸರಳತೆಯುಂಟು; ಓಜಸ್ಸುಂಟು, ವಚನಗ್ರಂಥಗಳೆಲ್ಲ ಹೀಗೆಯೇ ಇವೆ. ಅವುಗಳನ್ನು ಓದಿದೊಡನೆಯೇ ಅವುಗಳಲ್ಲಿಯ ತತ್ವಗಳ ನಿಜತ್ವವು ಮನಸ್ಸಿನಲ್ಲಿ ಕೂಡಲೇ ಪ್ರಕಾಶಿಸಹತ್ತುತ್ತದೆ. ಅವುಗಳ ಕೂಡ ವಾದವಿವಾದ ಮಾಡಲು ಮನಸ್ಸು ಮುಂದಾಗುವದಿಲ್ಲ. ಒಂದುದಿನ ಸ್ವಾಮಿ ವಿವೇಕಾನಂದರವರು ಸತ್ಯವನ್ನು ತಿಳಿಯಲುದ್ದೇಶಿಸಿ ಶ್ರೀ ರಾಮಕೃಷ್ಣ ಪರಮಹಂಸರಿದ್ದೆಡೆಗೆ ಹೋದರು. ಅವರೊಡನೆ ವಾದವಿವಾದ ಮಾಡುವ ಉದ್ದೇಶದಿಂದಲೇ ಹೋದರು. ಆದರೆ ರಾಮಕೃಷ್ಣರವರ ನುಡಿಗಳನ್ನು ಕೇಳಿದೊಡನೆಯೇ ಅವರೊಡನೆ ವಾದವಿವಾದ ಮಾಡುವ ಅವರ ಮನಸ್ಸು ಹಾರಿಹೋಯಿತು. ಪ್ರತಿ ಒಬ್ಬ ಮಹಾಪುರುಷನ ನುಡಿಯ ರೀತಿಯು ಹೀಗೆಯೇ ಇರುತ್ತದೆ. ಅವನ ಮಾತುಗಳಲ್ಲಿ ಸತ್ಯತೆಯ ಪ್ರಭಾವವು ಸ್ವತಃ ಸಿದ್ಧವಾಗಿಯೇ ಹರಿಯುತ್ತಿರುತ್ತದೆ. ಅದು ಕೂಡಲೇ ಮನಸ್ಸಿನಲ್ಲಿ ಬಿಂಬಿಸುತ್ತದೆ. ವಚನಗಳ ರೀತಿಯಾದರೂ ಹಾಗೆಯೇ ಇದ್ದು

ಅವುಗಳಲ್ಲಿರುವ ಶಕ್ತಿಗೆ ಇದೇ ಮುಖ್ಯ ಕಾರಣವೆಂದು ಹೇಳಬಹುದು.

ವಚನಗಳಲ್ಲಿ ಮೋಹಕತನವು ಇದೆ. ಯಾಕೆಂದರೆ ಅವುಗಳಲ್ಲಿ ಕಾಪಟ್ಯ ಕುಹಕತನ ಕುತಂತ್ರದ ವಿಚಾರಗಳಿಲ್ಲ. ಅಂದರೆ ವಚನಕಾರನು ತನ್ನ ಮನಸ್ಸಿನಲ್ಲಿ ಇದ್ದದ್ದನ್ನು ಇದ್ದಕ್ಕಿದ್ದ ಹಾಗೆಯೇ ನುಡಿಯುವನು. ಚಿಕ್ಕ ಮಗುವಿನ ನುಡಿಯಲ್ಲಿ ಮೋಹಕತನವು ಏಕೆ ಇರುತ್ತದೆಂಬುದನ್ನು ನಾವು ವಿಚಾರಿಸಿದರೆ ಅದು ತನ್ನ ಮನಸ್ಸಿನಲ್ಲಿ ಹೊಳೆದದ್ದನ್ನು ಇದ್ದಕ್ಕಿದ್ದ ಹಾಗೆಯೇ ನಿರ್ವ್ಯಾಜವಾಗಿ ನುಡಿಯುವದು. ಇದೇ ಮಗುವಿನ ಮಾತಿನ ಮೋಹಕತನಕ್ಕೆ ಕಾರಣವು. ವಚನ ಗ್ರಂಥಗಳು ಹಾಗೆಯೇ ಇರುತ್ತವೆ. ಒಬ್ಬ ಮನುಷ್ಯನು ಅತ್ಯಂತ ವಕೃತ್ವ ಶಕ್ತಿಯುಳ್ಳವನಾಗಿರಬಹುದು. ಇಂಥವರು ಸಮಾಜದಲ್ಲಿ ಹೇರಳವಾಗಿ ದೊರೆಯುವದುಂಟು. ಆದರೆ ಅವರು ಇಷ್ಟರಿ೦ದಲೇ ಸಮಾಜದ ಚಾಲಕರಾದದ್ದು ತೋರಿಬರುವದಿಲ್ಲ. ಇದಕ್ಕೆ ಕಾರಣವೆಂದರೆ ಇವರು ನಡೆದಂತೆ ನುಡಿಯುವದಿಲ್ಲ. ನುಡಿದಂತೆ ನಡೆಯುವುದಿಲ್ಲ . ಆದ್ದರಿಂದ ಇಂಥವರ ಮಾತಿನಲ್ಲಿ ಬಲವಿರುವದಿಲ್ಲ. ಮ. ಗಾಂಧಿಯವರ ವಿಚಾರಗಳು ಸಮ್ಮತವಾಗದೆ ಇದ್ದಂತವರು ನಮ್ಮ ದೇಶದಲ್ಲಿ ಅನೇಕರಿರಬಹುದು. ಆದರೆ ಅವರ ಮಾತಿನಲ್ಲಿ ಕಪಟಭಾವವಿರುವದಿಲ್ಲಾದ್ದರಿಂದ ಅವುಗಳಲ್ಲಿ ಒಂದು ಬಲವುಂಟಾಗಿರುತ್ತದೆ. ಇದೇ ಮೇರೆಗೆ ವಚನಗಳ ಸ್ಥಿತಿಯು ಇರುತ್ತದೆ. ಆದ್ದರಿಂದ ಅವುಗಳಲ್ಲಿ ಒಂದು ಅತರ್ಕ್ಯವಾದ ಶಕ್ತಿಯು ಉತ್ಪನ್ನವಾಗಿರುತ್ತದೆ.

 ವಚನಗಳಲ್ಲಿಯ ಮತ್ತೊಂದು ವೈಶಿಷ್ಟ್ಯವೆಂದರೆ ಅವುಗಳಲ್ಲಿ ಒಂದು ಅಸಾಧಾರಣ ವಾದ ಧೈರ್ಯಭಾಗವು ತುಂಬಿ ತುಳುಕುತ್ತದೆ. ಅಂದರೆ ಅವುಗಳಲ್ಲಿ ಅಂಜಿ ನುಡಿದ ಮಾತುಗಳಿಲ್ಲ. ಹೀಗೆ ವರ್ತಿಸಬೇಕಾದರೆ ಅತ್ಯಂತ ಮನೋಧೈರ್ಯವು ಬೇಕು. ಸತ್ಯವನ್ನು ಹೇಳಲು  ಜನರು ಯಾವಾಗಲೂ ಹಿಂಜರಿಯುವದುಂಟು. ಹೆರವರ ಇಚ್ಛೆಯಂತೆ ನುಡಿಯುವವರೇ ಬಹಳ. ಆದರೆ ವಚನಕಾರರಲ್ಲಿ ಈ ಬಗೆಯ ಸ್ಥಿತಿಯು ಇರುವದಿಲ್ಲ. ಅವರು ಸಮಾಜದ ದೋಷಗಳನ್ನೂ ಮನುಷ್ಯನ ಕುಂದುಗಳನ್ನೂ ಹೊರಗೆಡವಲು ಎಂದೂ ಹಿಂಜರಿದಿಲ್ಲ. ಇದರಿಂದ ವಚನಕಾರರು ನಿಜವಾದ ಸಮಾಜ ಸುಧಾರಕರಾಗಿರುವರು. ಅವರು ಜ೦ಗಮರು ಮತ್ತು ಮಠಾಧಿಪತಿಗಳ ದುರ್ವೃತ್ತಿಗಳನ್ನೂ ದುಷ್ಟರ ದುರ್ನಡತೆಗಳನ್ನೂ ಎಷ್ಟು ಕಠೋರವಾಗಿ ನಿಂದಿಸಿದರೋ ಅಷ್ಟು ಈಗಿನ ಸಮಾಜ ಸುಧಾರಕರಾರೂ ನಿಂದಿಸಿರಲಿಕ್ಕಿಲ್ಲ. ಸಮಾಜವನ್ನು ಸುಧಾರಿಸಲಪೇಕ್ಷಿಸುವವರು ಸಮಾಜದ ದೋಷಗಳನ್ನು ಹೊರಗೆಡವಲು ಹಿಂಜರಿದರೆ ಅವರ ಉದ್ದಿಶ್ಯ ಕಾರ್ಯಗಳು ಹೇಗೆ ನೆರವೇರಬಹುದು? ಇಂಥವರು ಸಮಾಜದ ರೋಷವನ್ನು ಸಹಿಸಲು ಸಿದ್ಧರಾಗಿರತಕ್ಕದ್ದು. ವಚನಕಾರರ ಚರಿತ್ರೆಗಳನ್ನು ನಾವು ನೋಡಿದರೆ ಅವರು ಹೀಗೆಯೇ ವರ್ತಿಸಿದಂತೆ ತೋರಿಬರುವದು. ಅವರು ತಮ್ಮ ಇಷ್ಟ ಕಾರ್ಯದಲ್ಲಿ ಧನ ಸಂಪತ್ತನ್ನು ಸೂರೆಮಾಡಿರುವರು, ರಾಜ್ಯವೈಭವವನ್ನು ತ್ಯಜಿಸಿರುವರು, ತಮ್ಮ ಪ್ರಾಣವನ್ನು ಕೂಡ ನೀಗಿರುವರು. ಇಂಥವರು ನುಡಿದ ಮಾತುಗಳಲ್ಲಿ ಭೀರುತನವು ಇರುವ ಬಗೆ ಹೇಗೆ ? ಇದರ ಸತ್ಯತೆಯನ್ನು ವಾಚಕರು ನೋಡಬೇಕಾದರೆ ಬಸವಣ್ಣನವರ ಮಾಹೇಶ್ವರ ಸ್ಥಲಕ್ಕೆ ಸಂಬಂಧಿಸಿದ ವಚನಗಳನ್ನಾಗಲಿ ಇಲ್ಲವೆ ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯನವರ ವಚನಗಳನ್ನಾಗಲಿ ನೋಡಬೇಕು. ಅಂದರೆ ವಚನಕಾರರಲ್ಲಿ ಎಂಥ ಅಸದೃಶ್ಯವಾದ ಮನೋಧೈರ್ಯ ವಿದೆಂಬುದು ತಿಳಿದುಬರುತ್ತದೆ. ಇದರಿಂದಲೇ ವಚನ ವಾಙ್ಮಯಗಳಲ್ಲಿ ಒಂದು ವಿಲಕ್ಷಣ ಜೀವಕಳೆಯು ಉತ್ಪನ್ನವಾಗಿರುತ್ತದೆ.

ವಚನ ಗ್ರಂಥಗಳಲ್ಲಿ ಪಕ್ಷಪಾತದ ಮಾತುಗಳಿಲ್ಲ. ಇದು ಅವುಗಳಲ್ಲಿಯ ಮತ್ತೊಂದು ವಿಶಿಷ್ಟತ್ವವು. ವಚನಕಾರರು ಇವರು ನನ್ನವರು, ಇವರು ನನ್ನ ಬಂಧುಗಳು, ಇವರು ನನ್ನ ಜಾತಿಯವರು, ನನ್ನ ವರ್ಗದವರೆಂದು ತಿಳಿದು, ಯಾರನ್ನೂ ಎತ್ತಿ ನುಡಿದಿಲ್ಲ. ಅವರ ದೃಷ್ಟಿಯಲ್ಲಿ ಎಲ್ಲರೂ ಸರಿಸಮಾನರು. ಸದ್ಗುಣಗಳು ಎಲ್ಲಿದ್ದರೂ ಅವಕ್ಕೆ ಮನ್ನಣೆ ಕೊಡುವಂಥವರು ಮತ್ತು ದುರ್ಗುಣಗಳು ಇದ್ದಲ್ಲಿ ಸಮೀಪದ ಬಂಧುಗಳಾಗಿದ್ದರೂ ಕೂಡ ಅವರನ್ನು ನಿಂದಿಸುವಂಥವರು ಇರುತ್ತಾರೆ. ಈ ಪ್ರಕಾರ ಅವರು ಎಲ್ಲರೊಡನೆ ಸಮಭಾವದಿಂದ ವರ್ತಿಸಿರುತ್ತಾರೆ. ಒಬ್ಬ ಹೊಲೆಯನಿರಲಿ, ಬ್ರಾಹ್ಮಣನಿರಲಿ, ಶ್ರೀಮಂತನಿರಲಿ, ಬಡವನಿರಲಿ, ಅವನ ಶೀಲಗಳನ್ನು ನೋಡಿ ಅವು ಸರಿಯಾಗಿದ್ದರೆ ಅವನನ್ನು ಕೇವಲ ಸಹೋದರನಂತೆ ಅವರು ಕಾಣುವವರಾಗಿರುವರು. ಈ ಅಭಿಪ್ರಾಯದ ಉಕ್ತಿಗಳು ವಚನಗ್ರಂಥಗಳಲ್ಲಿ ತುಂಬಿ ಹೋಗಿವೆ. ಹೀಗೆ ಅವರು ಬರೇ ನುಡಿಯಲ್ಲಷ್ಟೇ ಅಲ್ಲ, ಹಾಗೆ ನಡೆದೂ ತೋರಿಸಿದರು. ಅಸ್ಪೃಶ್ಯರೊಡನೆ ಅವರು ಸಹಭೋಜನ ಮಾಡಿರುವರು. ಲಗ್ನಾದಿ ವ್ಯವಹಾರಗಳನ್ನು ನಡೆಸಿರುವರು. ಇದರಲ್ಲಿ ಅವರು ಸಮಾಜದ ರೋಷವನ್ನು ಲೆಕ್ಕಿಸಲಿಲ್ಲ. ಈ ಪ್ರಕಾರ ವಚನಗಳೆಂದರೆ, ಅವು ನಡೆದು ತೋರಿಸಿ ನುಡಿದ ಮಾತುಗಳಾಗಿವೆ. ಆದ್ದರಿಂದ ವಚನವಾಙ್ಮವು ವೀರಶೈವರಲ್ಲಿ ಬಹು ಮಹತ್ವದ ಸ್ಥಾನವನ್ನು ಹೊಂದಿರುವದು.

 ವಚನಗಳನ್ನು ಹೇಳುವ ರೀತಿಯಾದರೂ ಅವುಗಳ ಬಲವನ್ನು ಹೆಚ್ಚಿಸಿರುತ್ತದೆ. ಆತ್ಮನಿರೀಕ್ಷಣೆಯಿಂದ ತಮ್ಮ ದೋಷಗಳನ್ನು ತಾವು ತಿಳಿದುಕೊಂಡು ಅವುಗಳನ್ನು ದೂರಮಾಡಿಕೊಳ್ಳುವ ಉದ್ದಿಶ್ಯವಾಗಿ ತಮಗೆ ತಾವೇ ಹೇಳಿಕೊಳ್ಳುವ ಶಬ್ದಗಳು ಇವಾಗಿರುತ್ತವೆ. ವಚನಕಾರರ ಉದ್ದೇಶವು ಪ್ರಥಮದಲ್ಲಿ ತಮ್ಮ ಸುಧಾರಣೆ ಅಂದರೆ ತಮ್ಮ ಉಚ್ಚ ಧ್ಯೇಯದಂತೆ ತಾವು ಮೊದಲು ನಡೆದು ತೋರಿಸುವುದು ಇರುತ್ತದೆ. ಹೀಗೆ ನಡೆದು ತೋರಿಸಿ ಆ ಮೇಲೆ ತಮಗೆ ಉಂಟಾದ ಅನುಭವವನ್ನು ಜನರಿಗೆ ಹೇಳುವದು ಇರುತ್ತದೆ. ಇದೇ ಅವರ ಪದ್ಧತಿಯಾಗಿದೆ. ವಚನಕಾರರು ಎರಡನೆಯವರಿಗೆ ಬರೇ ಉಪದೇಶ ಮಾಡುವ ಕಾರ್ಯವನ್ನು ಕೈಗೊಂಡಿಲ್ಲ. ಮೊದಲು ತಾವು ನಡೆದು ಆಮೇಲೆ ಹೇಳುವವರಾಗಿರುವರು. ನಿಜವಾಗಿ ಇದೇ ಶಿವಾನುಭವವೆನಿಸಿಕೊಳ್ಳುತ್ತದೆ. ಇಂಥವರ ಮಾತುಗಳಲ್ಲಿ ಸಾರವಿರುತ್ತದೆ. ಚೈತನ್ಯವಿರುತ್ತದೆ. ವಚನಶಾಸ್ತ್ರವು ಈ ರೀತಿಯದಾಗಿರುತ್ತದೆ.

ಈಗಿನ ಕಾಲಕ್ಕೆ ಅನೇಕರು ಸಮಾಜ ಚಾಲಕರಾಗಲು ಬಗೆಯುತ್ತಾರೆ. ಸಮಾಜವನ್ನು ಸುಧಾರಿಸಲು ಅಪೇಕ್ಷಿಸುತ್ತಾರೆ. ಆದರೆ ಇವರು ವಚನಕಾರರ ಮಾರ್ಗವನ್ನು ಹಿಡಿದಿದ್ದಾದರೆ ಅವರು ಈ ಸ್ಥಿತಿಯನ್ನು ನಿಸ್ಸಂದೇಹವಾಗಿ ಹೊಂದಬಹುದು. ಅಂದರೆ ವಚನಕಾರರಂತೆ ಅವರು ಸತ್ಯಭಾಷಿಗಳಾಗಿರಬೇಕು. ಅವರಲ್ಲಿ ಯಾವ ಬಗೆಯ ಕಾಪಟ್ಯ ಭಾವವಿರಬಾರದು, ತಾವು ಹಿಡಿದ ಕಾರ್ಯದಲ್ಲಿ ಅತ್ಯಂತ ಧೈರ್ಯಶಾಲಿಗಳಾಗಿರಬೇಕು, ಪಕ್ಷಪಾತವಿರಕೂಡದು ಮತ್ತು ಆತ್ಮ ಸುಧಾರಣೆಯಲ್ಲಿ ತೊಡಗಿರಬೇಕು. ಹೀಗೆ ಇವರು ಆಚರಿಸಿದ್ದಾದರೆ ಅವರು ಮೇಲ್ತರದ ಸ್ಥಿತಿಯನ್ನು ಅವಶ್ಯವಾಗಿ ಹೊಂದುವರು. ವಚನ ಕಾರರಲ್ಲಿ ಈ ಬಗೆಯ ಭಾವವು ತುಂಬಿತುಳುಕುತ್ತದೆ. ಆದ್ದರಿಂದಲೇ ಅವರು ವೀರಶೈವ ಸಮಾಜದಲ್ಲಿ ಒಂದು ಮಹತ್ವದ ಕ್ರಾಂತಿಯನ್ನುಂಟುಮಾಡಲು ಶಕ್ತರಾದರು.

ನಾವು ಯಾವ ವಾಙ್ಮಯವನ್ನು ತೆಗೆದುಕೊಂಡರೂ ಅದು ಎರಡು ವರ್ಗದ ಜನರಿಂದ ಬೆಳೆದದ್ದು ತೋರಿಬರುತ್ತದೆ. ಇವರಲ್ಲಿ ಒಂದು ವರ್ಗದವರಿಗೆ ನಾವು ತತ್ವವೇತ್ತಿಗಳೆಂದು ಹೇಳಬಹುದು. ಇವರು ನಾನಾಬಗೆಯ ಬುದ್ಧಿ ಕುಶಲತೆಗಳನ್ನು ಉಪಯೋಗಿಸಿ ತಮ್ಮ ಮತವನ್ನು ಸಿದ್ಧಪಡಿಸಿರುತ್ತಾರೆ. ಇಂಥ ವರ್ಗದವರಲ್ಲಿ ಶಂಕರಾಚಾರ್ಯ, ರಾಮಾನುಜಾಚಾರ್ಯ ಇಂಥ ತತ್ವಜ್ಞರು ಬರುತ್ತಾರೆ. ಈ ವರ್ಗವಲ್ಲದೆ ಇನ್ನೊಂದು ವರ್ಗವಿದ್ದು ಇವರಿಗೆ ನಾವು ಧರ್ಮಸುಧಾರಕರೆಂದು ಹೇಳಬಹುದು. ಇವರಿಂದಲೂ ಮಹತ್ವದ ವಾಙ್ಮಯವುಂಟಾಗುತ್ತದೆ. ಇಂಥವರಲ್ಲಿ ಗೌತುಮ್ ಬುದ್ಧ, ಕ್ರೈಸ್ತ ಕನಪ್ಯೂಶಿಯಸ್, ಉಪನಿಷತ್ಕಾರರು, ಬಸವೇಶ್ವರ ಮೊದಲಾದ ಧರ್ಮ ಸ್ಥಾಪಕರೂ ಧರ್ಮ ಪ್ರವರ್ತಕರೂ ಸಾಧು ಸತ್ಪುರುಷರೂ ಬರುತ್ತಾರೆ. ಇವರು ತಮ್ಮ ಉಕ್ತಿಗಳಿಂದ ಜನಾಂಗದ ಹೃದಯವನ್ನು ತಲ್ಲಣಿಸಿ ಅದನ್ನು ಉಚ್ಚಸ್ಥಿತಿಗೆ ತಂದಿರುತ್ತಾರೆ. ಇವರು ಮೊದಲನೆಯ ವರ್ಗದವರಂತೆ ಕೇವಲ ಬೌದ್ಧಿಕ ತತ್ವವಿಚಾರಗಳನ್ನು ಹೇಳುತ್ತ ಕೂಡದೆ, ತಾವು ನುಡಿದಂತೆ ಆಚರಿಸಿ ಜಗತ್ತಿನಲ್ಲಿ ಪ್ರಸಿದ್ಧರಾಗಿರುವರು. ಇವರಿಂದ ಉಂಟಾದ ವಾಙ್ಮಯವು ಸಾಮಾನ್ಯವಾದುದಲ್ಲ. ಈ ವಾಙ್ಮಯವು ಇತರ ತತ್ವವೇತ್ತಿಗಳ ಬೌದ್ಧಿಕ ವಾಙ್ಮಯಕ್ಕೆ ಕಾರಣವಾಗಿರುವದು. ಉದಾ: ಉಪನಿಷದ್‌ ಗ್ರಂಥಗಳ ನುಡಿಗಳ ಮೇಲೆ ಹಿಂದುಗಡೆ ಪ್ರಸಿದ್ಧರಾಗಿರುವ ತತ್ವವೇತ್ತಿಗಳು ತಮ್ಮ ಸಿದ್ಧಾಂತಗಳನ್ನು ಕಲ್ಪಿಸಿರುವರು. ಇದರಂತೆಯೇ ಕ್ರೈಸ್ತರ ಬೈಬಲ್, ಮಹ್ಮದೀಯರ ಕುರಾನ, ಬೌದ್ಧರ ಧಮ್ಮಪದ ಇವುಗಳು ಇರುತ್ತವೆ. ಈ ಗ್ರಂಥಗಳ ಮೂಲಕ ಹಿಂದುಗಡೆ ಅನೇಕಾನೇಕ ತತ್ವಗ್ರಂಥಗಳು ಆಯಾಯ ಮತಗಳಲ್ಲಿ ಉತ್ಪನ್ನವಾಗಿರುತ್ತವೆ. ವಚನ ವಾಙ್ಮಯವು ಇದೇ ಬಗೆಯ ವಾಙ್ಮಯದಲ್ಲಿ ಬರುತ್ತದೆ. ಅದರಲ್ಲಿಯ ವಿಚಾರಗಳು ಹಿಂದುಗಡೆ ವೀರಶೈವ ತತ್ವ ಗ್ರಂಥಗಳನ್ನು ಹೆಚ್ಚಿಸಲು ಕಾರಣವಾಗಿವೆ. ವಚನಕಾರರ ಪ್ರತಿ ಒಂದು ವಚನದ ಮೇಲೆ ದೊಡ್ಡ  ದೊಡ್ಡ ಗ್ರಂಥಗಳನ್ನು ಸಹ ಬರೆಯಬಹುದಾಗಿದೆ. ಇಷ್ಟು ಅವು ಪ್ರಫುಲ್ಲಿತ ವಿಚಾರಗಳಿಂದ ತುಂಬಿ ಹೋಗಿವೆ. ಇದೇ ಸಜೀವ ವಾಙ್ಮಯದ ಕುರುಹು.

ಆದರೆ ವೀರಶೈವ ಸಮಾಜದ ಅದೃಷ್ಟದಿಂದ ಇಂಥ ಮಹತ್ತರವಾದ ವಾಙ್ಮಯವನ್ನು ದೂಷಿಸುವ ಕೆಲ ಮಹಾನುಭಾವರು ಇದರಲ್ಲಿ ಉತ್ಪನ್ನರಾಗಿದ್ದಾರೆ. ಇನ್ನೂ ಕೆಲವರು ಸಂಸ್ಕೃತದ ಮೋಹಕ್ಕೆ ಒಳಗಾಗಿ ಈ ಸಜೀವ ಕನ್ನಡ ವಾಙ್ಮಯವನ್ನು ನಿರಾಕರಿಸುವದುಂಟು. ಈ ಸ್ಥಿತಿಯನ್ನು ತೀವ್ರವಾಗಿ ಹೋಗಲಾಡಿಸುವದು ವೀರಶೈವ ಸಮಾಜದ ಅದ್ಯ ಕರ್ತವ್ಯವಾಗಿದೆ. ಆದ್ದರಿಂದ ಅವರು ತಾವು ಸ್ಥಾಪಿಸಿದ ಶಾಲೆಗಳಲ್ಲಿಯೂ ಧರ್ಮ ಪಾಠಶಾಲೆಗಳಲ್ಲಿಯೂ ಈ ಗ್ರಂಥಗಳನ್ನು ಅಭ್ಯಾಸಿಸುವ ಯೋಜನೆ ಮಾಡುವದು ಅವಶ್ಯವಿದೆ. ಇಷ್ಟೇ ಅಲ್ಲ, ಪ್ರತಿ ಒಬ್ಬರು ತಮ್ಮ ಮನೆಯಲ್ಲಿ ಮತ್ತು ಸಭಾ ಸ್ಥಳಗಳಲ್ಲಿ ವಚನಗಳ ತತ್ವಗಳನ್ನು ಪ್ರಸಂಗಿಸಿ ಅವುಗಳನ್ನು ಬಹು ಜನರ ಸಮಾಜಕ್ಕೆ ತಿಳಿಯಪಡಿಸಲು ಯತ್ನಿಸುವದು ಅವಶ್ಯವಿದೆ. ಈ ಪ್ರಕಾರ ಅವರು ವರ್ತಿಸಲೆಂದು ನಾನು ನಮ್ರ ಪೂರ್ವಕವಾಗಿ ಸೂಚಿಸಿ ಈ ನನ್ನ ಲೇಖನವನ್ನು ಮುಗಿಸುತ್ತೇನೆ.

Related Posts