ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-26

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ತರಳ ಕೇಳು ಮಾ | ಕ್ಷರವೆ ಮೂರೊಂದಾದ

ವರ ಮೂಲ ಪ್ರಣವದಿರವೆ ಲಿಂಗವೆಂ

ದೊರೆದ ಶ್ರೀಗುರುವೆ ಕೃಪೆಯಾಗು       ||೧೧೬||

ಲಿಂಗವು ಪೂಜ್ಯವಸ್ತುವೆಂಬುದನ್ನು ಸಿದ್ಧಮಾಡುತ್ತ ಅದು ಮೂಲ ಪ್ರಣವ ರೂಪವೆಂದು ಪ್ರತಿಪಾದಿಸುತ್ತಾನೆ.

ಸದ್ಗುರುನಾಥನ ಬೋಧೆಯು ಜೀವನ ವಿಕಾಸದಾಯಕವೂ ಮೋಕ್ಷಪ್ರದಾಯಕವೂ ಆಗಿದೆ. ಆತನು ಶಿಷ್ಯನಲ್ಲಿ ಅತ್ಯಂತ ಕರುಣಾಮಯಿಯಾಗಿ ಪ್ರೀತಿಯ ಪುತ್ರನೆಂದು ಮೈದಡವಿ ತತ್ತ್ವದ ತಿರುಳನ್ನು ತುತ್ತುಮಾಡಿ ಉಣಿಸುವ ಸನ್ನಿವೇಶ ರೋಮಾಂಚನಕಾರಿಯಾದುದು. ವಾತ್ಸಲ್ಯದಿಂದ ಶಿಷ್ಯನ ಚಿತ್ತವೃತ್ತಿಗಳು ಗುರು ವಚನದತ್ತ ಕೇಂದ್ರೀಕೃತವಾದರೆ ಅನುಭವದ ವಿಷಯ ಸುಲಭವಾಗುವದು. ಗುರುವಾದವನು ತನ್ನ ಶಿಷ್ಯವೃಂದಕ್ಕೆ ದಯಾಸಾಗರನೆನಿಸಬೇಕೆಂಬುದು ಇಲ್ಲಿ ಸೂಚಿತ ವಾಗುತ್ತದೆ. ಅಂತೆಯೇ ಗುರುವು ತರಳ ! ಕೇಳು, ಈ ನಿನ್ನ ಲಿಂಗವು ಓಂಕಾರದಿರವು. ಓಂಕಾರವು ಮೂಲ ಪ್ರಣವವಾಗಿದೆ. ಈ ಓಂಕಾರದಲ್ಲಿ ಅ, ಉ, ಮ,’ ಗಳೆಂಬ ಮೂರಕ್ಷರಗಳಿವೆ. ಈ ಮೂರೊಂದಾದುದೇ ಮೂಲಪ್ರಣವೆನಿಸುವದು.

ಚನ್ನಬಸವಣ್ಣನವರು ಕರಣಹಸಿಗೆಯ ಪ್ರಾರಂಭವನ್ನು ಪ್ರಣವದುತ್ಪತ್ತಿಯಿಂದಲೇ ಪ್ರಾರಂಭಿಸುತ್ತದೆ .

ಓಂಕಾರವೆಂಬ ಪ್ರಣವದಲ್ಲಿ ಅಕಾರ ಉಕಾರ ಮಕಾರ ಇವು

ಮೂರು ಬೀಜಾಕ್ಷರ, ಅಕಾರವೇ ನಾದ, ಉಕಾರವೆ ಬಿಂದು,

ಮಕಾರವೆ ಕಳೆ, ಮತ್ತಂ ಆಕಾರವೆ ರುದ್ರ, ಉಕಾರವೆ ಈಶ್ವರ,

ಮಕಾರವೆ ಸದಾಶಿವ. ಇಂತೀ ಅಕಾರ, ಉಕಾರ, ಮಕಾರಕ್ಕೆ

 ನಾದ ಬಿಂದು ಕಳೆಯೇ ಆಧಾರ, ಆ ನಾದ ಬಿಂದು ಕಳಗೆ

ಪ್ರಕೃತಿಯೆ ಆಧಾರ, ಆ ಪ್ರಕೃತಿಗೆ ಪ್ರಾಣವೆ ಆಧಾರ.

 ಆ ಪ್ರಾಣಕ್ಕೆ ಲಿಂಗವೆ ಆಧಾರ, ‘ಅ’ ಎಂದಡೆ ಅನಾಹತ,

ಉ’ ಎಂದಡೆ ನಾದ ಉಳಿಯತ್ತು, ‘ಮ’ ಎಂಬಲ್ಲಿ

 ಬಿಂದು ಬಂದು ಕೂಡಲು ಶಿವಶಕ್ತಿಯಾಗುತ್ತಂ

ಇಂತಹ ಓಂಕಾರವಾಯಿತ್ತು

ಮುಂದುವರೆದು

 “ಓಂಕಾರಾತ್ಪ್ರಭವಾ ವೇದಾ ಓಂಕಾರಾತ್ಪ್ರಭವಃ ಸ್ವರಃ |

 ಓಂಕಾರಾತ್ಪ್ರಭವಂ ಸರ್ವಂ ತ್ರೈಲೋಕ್ಯಂ ಸಚರಾಚರಮ್ ।”

 ಎಂದು ಓಂಕಾರದ ಹಸಿಗೆಯನ್ನು ಮಾಡಿರುವರು. ಓಂಕಾರದಲ್ಲಿ ಶಿವಶಕ್ತಿಯರ ಸಮ್ಮಿಲನವಿದೆ. ಲಿಂಗದಲ್ಲಿ ಅಡಿಪೀಠವೆ ಶಕ್ತಿ ಮುಡಿ ಲಿಂಗವೇ ಶಿವನೆನಿಸಿದ್ದಾನೆ. ಓಂಕಾರದಿಂದಲೇ ವೇದಗಳು, ಸ್ವರಗಳು, ಅಷ್ಟೇ ಅಲ್ಲದೆ ಸಕಲ ಸಚರಾಚರ ಜಗವೆಲ್ಲವೂ ಉತ್ಪನ್ನವಾಗಿದೆ. ಲಿಂಗದ ಲಕ್ಷಣವೂ ಇದೇ ಅರ್ಥವನ್ನು ಒಳಗೊಂಡಿರುವುದಾಗಿ ಈಗಾಗಲೇ ಅರಿತಿದ್ದೇವೆ. ಲಿಂಗ ಮತ್ತು ಪ್ರಣವಕ್ಕೆ ಅಭೇದವಿದೆ. ಕೆಳದಿ ಬಸವಪ್ಪ ನಾಯಕ ವಿರಚಿತ ‘ಶಿವತತ್ತ್ವರತ್ನಾಕರ” ದಲ್ಲಿ-“

“ಓಂಕಾರ ಏವ ಲಿಂಗಂ ಸ್ಯಾತ್ ಸರ್ವಕಾರಣಕಾರಣಮ್ |

ಓಮಿತಿ ಬ್ರಹ್ಮ ಪರಮಂ ಲಿಂಗಾಕಾರಂ ಮಹೇಶ್ವರಮ್॥ ೧-೫-೭ ||

“ಸರ್ವಕಾರಣಕ್ಕೆ ಕಾರಣವಾದ ಓಂಕಾರವೇ ಲಿಂಗವು. ಅದುವೇ ಪರಬ್ರಹ್ಮ ಅದುವೇ ಲಿಂಗಾಕಾರದ ಮಹೇಶ್ವರ” ವೆಂದು ಪ್ರತಿಪಾದಿತವಾಗಿದೆ.

ಈ ರೀತಿಯಾಗಿ ಪ್ರಣವರೂಪವು ಈ ಇಷ್ಟಲಿಂಗವು; ಆದುದರಿಂದ ಇದು ಮಂತ್ರಮೂರ್ತಿಯೆನಿಸಿದೆ, ಅದನ್ನು ಪೂಜಿಸಿ ನೀನೂ ಮಂತ್ರಮಯನೂ ಲಿಂಗ ರೂಪನೂ ಆಗೆಂದು ಬೋಧಿಸಿದ ಗುರುವೆ ! ಲಿಂಗರೂಪವನ್ನು ಕರುಣಿಸು.

ತಾರಕ ಕೃತಿ ಮೊದಲಾ | ದಾರು ಕೃತಿಗಳೆ ಲಿಂಗ

 ದಾರು ಸ್ಥಾನದೊಳು-ಆರು ಪ್ರಣವದ ಕೃತಿಯ

ತೋರಿಸಿದೆ ಗುರುವೆ ಕೃಪೆಯಾಗು     ||೧೧೭||

ಪ್ರಣವರೂಪವೇ ಇಷ್ಟಲಿಂಗವೆಂದು ತಿಳಿಸಿ ಪ್ರಣವದ ಸ್ವರೂಪವೇನೆಂಬುದನ್ನು ನಿರೂಪಿಸುತ್ತಾನೆ.

 ಪ್ರಣವವು ಆರು ಆಕೃತಿಗಳಿಂದ ಮೂರ್ತಿಮತ್ತಾಗಿದೆ. ೧. ತಾರಕ ೨. ದಂಡಕ ೩. ಕುಂಡಲ ೪, ಅರ್ಧಚಂದ್ರ ೫ ದರ್ಪಣ ೬. ಜ್ಯೋತಿ ಎಂಬಿವು ಪ್ರಣವದ ಆರಾಕೃತಿಗಳು. ಪ್ರಣವದ ಶಿರಸ್ಸೇ ತಾರಕಾಕೃತಿ, ಪ್ರಣವದ ಕೊರಳು ದಂಡಾಕೃತಿ; ಅದರ ಕೆಳಗಡೆಯ ಮುಡಿಯೇ ಕುಂಡಲಾಕೃತಿ, ಎರಡನೆಯ ಮುಡಿ ಅರ್ಧ ಚಂದ್ರಾಕೃತಿ; ಮಗ್ಗಲದ ಬಿಂದುವೇ ದರ್ಪಣಾಕೃತಿ; ಪ್ರಣವದ ಮೇಲ್ಗಡೆಯ ಕುಡಿಯೇ ಜ್ಯೋತಿರಾಕೃತಿಯು

ತಾರಕ-ದಂಡಕೋಭಯಾಕೃತಿಗಳಿಗೆ ಕ್ರಮದಿಂದ ನಕಾರ-ಮಕಾರಗಳು (ಪ್ರಣವದ ಬೀಜಾಕ್ಷರಗಳು). ಇವೆರಡಕ್ಕೂ ಅ’ಕಾರ ನಾದ ಪ್ರಣವದ ಸಂಬಂಧ ವಾಗುತ್ತದೆ. ಕುಂಡಲ-ಅರ್ಧಚಂದ್ರೋಭಯಾಕೃತಿಗಳಿಗೆ ಕ್ರಮದಿಂದ ಶಿಕಾರ ವಾಕಾರ ಪ್ರಣವಗಳು. ಇವೆರಡಕ್ಕೂ ‘ಉ’ಕಾರ ಬಿಂದು ಪ್ರಣವದ ಸಂಬಂಧವಿದೆ. ಇನ್ನು ದರ್ಪಣ ಮತ್ತು ಜ್ಯೋತಿರುಭಯಾಕೃತಿಗಳಿಗೆ ಕ್ರಮದಿಂದ ಯಕಾರ ಓಂಕಾರ ಪ್ರಣವಗಳು ಇವೆರಡಕ್ಕೂ ‘ಮ” ಕಾರ ಕಲಾ ಪ್ರಣವದ ಸಂಬಂಧವುಂಟು.

 ಪ್ರಥಮಂ ತಾರಕರೂಪಂ ದ್ವಿತೀಯಂ ದಂಡ ಉಚ್ಯತೇ |

ತೃತೀಯಂ ಕುಂಡಲಾಕಾರಂ ಚತುರ್ಥಂ ಚಾರ್ಧಚಂದ್ರಕಮ್‌ ||

ಪಂಚಮಂ ಬಿಂದು ಸಂಯುಕ್ತಂ ಪ್ರಣವಂ ಪಂಚಬ್ರಹ್ಮರಾಟ್||

 ಆರಾಕೃತಿಗಳಿಗೆ ಆರು (ಬೀಜಾಕ್ಷರ ಅಥವಾ) ಪ್ರಣವದ ಸಂಬಂಧವನ್ನು ಶಿವತತ್ತ್ವ ರತ್ನಾಕರದಲ್ಲಿ

 ನಕಾರ ಸ್ತಾರಕಸ್ಥಾನಂ ಮಕಾರೋ ದಂಡಮುಚ್ಯತೇ ।

ಶಿಕಾರಃ ಕುಂಡಲಾಕಾರೋ ವಾಕಾರಾಶ್ಚಾರ್ಧಚಂದ್ರಕಃ ||

ಯಕಾರೋ ಬಿಂದುರೂಪೋ ಯಮೋಂಕಾರಃ ಪಂಚವರ್ಣಕಃ ||        ||೧-೫-೨೦||

ಎಂದು ವಿವರಿಸಿದ್ದಾರೆ.

ಶಿ. ಶಿ. ಬಸವನಾಳರು ಸಂಪಾದಿಸಿದ ಈ ಗುರುಕರುಣ ತ್ರಿವಿಧಿಯಲ್ಲಿ ತಾರಕಾ ಕೃತಿ’ ಎಂಬ ಪಾಠಾಂತರವಿದೆ. ಆಕೃತಿಯೆಂದರೆ ಆಕಾರ; ಕೃತಿಯೆಂದರೆ ಕ್ರಿಯೆಯೆನಿಸುವದು. ಲಿಂಗದಲ್ಲಿ ನಾಮರೂಪವೂ ಇದೆ. ಕ್ರಿಯೆಯೂ ಸಮನ್ವಯ ಗೊಂಡಿದೆ. ಓಂಕಾರದಲ್ಲಿ  ನಾಮ-ರೂಪ-ಕ್ರಿಯೆಗಳಿರುವಂತೆ ಇಷ್ಟಲಿಂಗದಲ್ಲಿಯೂ ಅವುಗಳು ವ್ಯಾಪಿಸಿವೆ. ನಾಮ-ರೂಪ-ಕ್ರಿಯಾತ್ಮಕವಾದ ಈ ಲಿಂಗವು ಸಕಲ ವೆನಿಸಿದೆ. ನಾಮ-ರೂಪ-ಕ್ರಿಯಾ ಶೂನ್ಯವಾದುದು ನಿಷ್ಕಲವೆನಿಸುವದು. ತೋರುವ ಜಗತ್ತು ಈ ಮೂರರಿಂದಲೇ ಆವರಿಸಿಕೊಂಡಿದೆ. ಜಗದಲ್ಲಿ ಕಾಣಿಸಿಕೊಂಡ ನಾಮ- ರೂಪ-ಕ್ರಿಯಾತ್ಮಕನಾದ ಅಂಗನಿಗೆ ಈ ಲಿಂಗವೂ ನಾಮರೂಪಾತ್ಮಕವೆಂದು ಗುರು ನಾಥನು ತತ್ತ್ವದ ತಿರುಳನ್ನು ತಿಳಿಸಿದ್ದಾನೆ.  

 ಸಕಲಕ್ಕೂ ಕಾರಣವೆನಿಸಿದ ಓಂಕಾರವೇ ಲಿಂಗವಾಗಿರುವಂತೆ; ಸಮಸ್ತ ಕಾರ್ಯಗಳಿಗೆ ನಾಯಕನೆನಿಸಿದ ವಿನಾಯಕ ಅಥವಾ ಗಣಪತಿಯ ಆಕಾರವಾದರೂ ಓಂಕಾರ ಮಯವಾಗಿದೆ. ಓಂಕಾರದ ಆ ಆರು ಆಕೃತಿಗಳಿಂದಲೇ ಗಣಪತಿಯ ಆಕಾರದ ಕಲ್ಪನೆಯು ಸ್ಪಷ್ಟವಾಗುವದು. ಗಣೇಶನ ಪೌರಾಣಿಕ ಕಥಾನಕಗಳು ರೋಚಕ ವಾಗಿರಬಹುದು. ತಾತ್ವಿಕ ವಿಚಾರದಲ್ಲಿ ಪ್ರಣವ ಸ್ವರೂಪವು ಪ್ರಕಟವಾಗುವದು. ಕುಂಡಲ ಮತ್ತು ಅರ್ಧಚಂದ್ರಾಕೃತಿಗಳೇ ವಿನಾಯಕನ ಎರಡು ಹುಬ್ಬುಗಳಾದರೆ  ತಾರಕ-ದಂಡಕಾಕೃತಿಗಳು ಸೊಂಡಿಲೆನಿಸಿದೆ. ಮುಖಮಂಡಲವೇ ದರ್ಪಣ,  ಏಕದಂತವೇ ಜ್ಯೋತಿರಾಕೃತಿಯು.  ಆದ್ದರಿಂದಲೇ ವೈದಿಕ ಕಾರ್ಯಗಳಲ್ಲಿ, ವಿದ್ಯಾ ರಂಭಾದಿ ಕೆಲಸಗಳಲ್ಲಿಯೂ ವಿಘ್ನವಿನಾಶವಾಗಲೆಂದು ಓಂಕಾರ ರೂಪಿ ವಿನಾಯಕನ ಪೂಜೆಯಾಗುತ್ತದೆ. ಓಂಕಾರದ ಗೌರವವಾದರೂ ಗಣಪತಿಯ ರೂಪದಲ್ಲಿ ಸ್ವೀಕರಿಸಲು ಸಾಧ್ಯವಾಗಿದೆಯೆಂದು ಹೇಳಬಹುದು.

ದೇವನಾಗರಿ ಲಿಪಿಯ ಓಂಕಾರಕ್ಕೂ (ದ್ರಾವಿಡ) ಕನ್ನಡ ಲಿಪಿಯ ಓಂಕಾರಕ್ಕೂ ವ್ಯತ್ಯಾಸವಿಲ್ಲ. ದೇವನಾಗರಿ ಲಿಪಿಯ ಓಂಕಾರವನ್ನು ತಿರುವಿದ (ಹೊರಳಿಸಿದ) ರೂಪವೇ ಗಣಪತಿಯ ರೂಪಾಗಿದೆ. ಒಟ್ಟಿನಲ್ಲಿ ಆರು ಕೃತಿಗಳು ಅದರಲ್ಲಿಯೂ ಇವೆ. ಆರಾಕೃತಿಗಳುಳ್ಳದೇ ಪ್ರಣವವು. ಪ್ರಣವದಿರವೇ ಈ ಲಿಂಗವು. ಇದರರ್ಥವನ್ನು ತಿಳಿಸಿ ಪ್ರತ್ಯಕ್ಷ ತೋರಿಸಿ ರಕ್ಷಿಸಿದವನು ಶ್ರೀಗುರುನಾಥನು. ಮಹಾಜ್ಞಾನಿಯಾದ ಕುಮಾರ ಷಣ್ಮುಖನಿಗೆ ಶಿವನು ಓಂಕಾರದ ಅರ್ಥವನ್ನು ಅದೆಷ್ಟೋ ದಿನಗಳವರೆಗೆ ಹೇಳಿದನೆಂಬುದು ಪೌರಾಣಿಕ ಸತ್ಯಕಥೆಯಾಗಿದೆ. ಓಂಕಾರದ ಮಹತ್ವವು ಮಹತ್ತರವಾದುದು. ಈ ಪ್ರಣವ ಮಂತ್ರವನ್ನು ಸಾಕ್ಷಾತ್ಕರಿಸಿಕೊಳ್ಳುವ ಸಾಧನವೇ ಲಿಂಗ, ಲಿಂಗವೇ ಪ್ರಣವವು.

 ಓ ಪರಮ ಗುರುವೇ ! ಮಂತ್ರ ಮೂರುತಿಯೇ ನಿರಂಜನ ಪ್ರಭುವೇ | ಪ್ರಣವರೂಪ ಲಿಂಗವನ್ನು ಅನುಸಂಧಾನ ಮಾಡಿ ತತ್ಸ್ವರೂಪಿಯಾಗುವ ಸೌಭಾಗ್ಯ ವನ್ನು ಕರುಣಿಸಿ ಕಾಪಾಡು.

ವೃತ್ತಕಟಿ  ವರ್ತುಳವು | ಮತ್ತೆ ಗೋಮುಖ ನಾಳ

ಚಿತ್ಪೀಠವಾರು ಗೊತ್ತತೋರಿಸಿ ಲಿಂಗ

ವಿತ್ತ ಶ್ರೀಗುರುವೆ ಕೃಪೆಯಾಗು     || ೧೧೮ ॥

ಪ್ರಣವದ ಆರಾಕೃತಿಗಳಿಂದ ಕೂಡಿ ನಾಮ-ರೂಪ ಕ್ರಿಯಾತ್ಮಕವಾದ ಲಿಂಗವು ಆರು ಸ್ಥಲವುಳ್ಳದಾಗಿದೆ. ಅರ್ಥಾತ್ ಷಡವಯವವನ್ನು ಹೊಂದಿದೆಯೆಂಬುದನ್ನು ವಿವರಿಸುತ್ತ ಆ ಆರುಸ್ಥಲಗಳಲ್ಲಿ ಆರಕ್ಷರಗಳನ್ನು ಸಂಬಂಧಿಸಿ ತೋರಿಸುತ್ತಾನೆ ಶಿವ

ಕವಿಯು. ೧) ವೃತ್ತ,  ೨) ಕಟಿ,  ೩) ವರ್ತುಳ,  ೪) ಗೋಮುಖ,  ೫) ನಾಳ,  ೬) ಚಿತ್ಪೀಠ ಇವು ಆರು ಲಿಂಗದ ಅವಯವಗಳು. ಅಂಗನು ಆರಾದಂತೆ ಲಿಂಗವೂ ಆರಾಗಿದೆ. ಆರು ಸ್ಥಲ (ಅವಯವ) ಗಳನ್ನು ಪಡೆದಿದೆ. ಲಿಂಗ ಷಟ್‌ಸ್ಥಲಗಳಲ್ಲಿ ಮಂತ್ರ ಷಡಕ್ಷರ ಆವರಿಸಿಕೊಂಡಿದೆ. ಮಂತ್ರರೂಪವೇ ಲಿಂಗವೆಂಬುದಾಗಿ ಸದ್ಗುರುನಾಥನು ಶಿಷ್ಯನಿಗೆ ಬೋಧಿಸುತ್ತಾನೆ. ಮಂತ್ರರೂಪವಾದ ಲಿಂಗಾರ್ಚನೆಯಿಂದ ಮಂತ್ರಮಯನಾಗ ಬೇಕೆಂಬುದೇ ಗುರುವಿನ ಉಪದೇಶ.

 ಹಿಂದೆ ತಿಳಿಸಿದ ಲಿಂಗದ ಪಂಚಸೂತ್ರಗಳೂ ಈ ಲಿಂಗ ಷಟ್‌ಸ್ಥಲದಲ್ಲಿ ವ್ಯಕ್ತವಾಗುತ್ತದೆ. ವೃತ್ತವೆಂದರೆ ಕೆಳಗಿನ  ಸುತ್ತಳತೆ ಅಥವಾ ಪರಿಘವೆನ್ನಬಹುದು.  ವೃತ್ತವು  ಪೂರ್ಣತೆಯ ಕುರುಹಾಗಿದೆ. ಕಟಿಯೆಂದರೆ ಲಿಂಗದ ನಡುವು. ಕೆಳಗಿನ ವೃತ್ತ ಮತ್ತು ಮೇಲಿನ ವರ್ತುಳದ ನಡುವಿನ ಸಣ್ಣ ಭಾಗವು. ಮೂರನೆಯದು ಮೇಲಿನ ವರ್ತುಳವು. ಪೀಠವೆನಿಸಿದ ಈ ಕೆಳಭಾಗದಲ್ಲಿ ಲಿಂಗವನ್ನಿಡುವ ರಂಧ್ರವು ನಾಳವೆನಿಸುವದು. ಪೀಠದ ನಾಳದಲ್ಲಿದ್ದ ಪ್ರಕಾಶಮಯವಾದ ಬಾಣರೂಪ ಲಿಂಗವೇ ಚಿತ್ಪೀಠವಾಗಿದೆ. ಈ ರೀತಿಯಾಗಿ ಲಿಂಗದಲ್ಲಿಯ ಆರು ಸ್ಥಲಗಳನ್ನು ಗುರುವರನು ದೀಕ್ಷಾ ಸಮಯದಲ್ಲಿ ವಿವರಿಸಿ ಲಿಂಗವನ್ನು ಕರುಣಿಸುತ್ತಾನೆ. ಅಂಗದಲ್ಲಿ ಷಟ್ ಚಕ್ರಗಳನ್ನು ತಿಳಿಸಿ ಷಡ್ಲಿಂಗಗಳ ಮರ್ಮವನ್ನು ಬೋಧಿಸಿದಂತೆ ಇನ್ನು ಲಿಂಗಗಳ ಷಟ್‌ಸ್ಥಲಗಳಲ್ಲಿ ಮಂತ್ರರಹಸ್ಯವನ್ನು ತಿಳಿಸುವ ಮಾತನ್ನು ಮುಂದಿನ ತ್ರಿಪದಿಯಲ್ಲಿ ಪ್ರತಿಪಾದಿಸುತ್ತಾನೆ.

ಬಾಲ ಬಾರೆಂದೆನ್ನ | ಕೈಲಿ ಲಿಂಗವ ಕೊಟ್ಟು

ಈ ಲಿಂಗದೊಳಗೆ-ಮೂಲ ಷಣ್ಮಂತ್ರವನು

ಕೀಲಿಸಿದ ಗುರುವೆ ಕೃಪೆಯಾಗು       ||೧೧೯ ||

ಕರುಣಾಮಯನೂ, ಜ್ಞಾನಸಾಗರನೂ, ವೈರಾಗ್ಯಪರನೂ ಆದ ಸದ್ಗುರುವಿನ ಸನ್ನಿಧಿಯಲ್ಲಿ ವಯೋಮಾನದಿಂದ ಹಿರಿಯನಾದರೂ ಶಿಷ್ಯನು ಬಾಲಕನೇ.  ಜ್ಞಾನ-ವೈರಾಗ್ಯಗಳ ತುಲನೆಯಿಂದ ಸಣ್ಣವನೇ ಸರಿ.  ಕಿಂಕರತ್ವವನ್ನು ವಹಿಸಿದರೆ ಮಾತ್ರ ಗುರುವಿನಿಂದ ಜ್ಞಾನಕಿರಣ ಹರಿದು ಬರುತ್ತದೆ. ಕೀಳಿಂಗಲ್ಲದೆ ಹಯನ ಕರಯದೆಂದುʼʼ ಅಣ್ಣನವರು ಅನುಭವದ ಅಮೃತವನ್ನೇ ಸುರಿದಿರುವರು. ಶಿಷ್ಯನ ಸದಾಚರಣೆ ಗುರುನಾಥನಿಗೆ ತೃಪ್ತಿಯನ್ನೀಡಬೇಕು. ಆಗ ಗುರುವರನು ಸದಯಾಂತಃ ಕರಣದಿಂದ ಶಿಷ್ಯನನ್ನು ಕಂದನಂತೆ, ಹೇ ಬಾಲ ! ಬಾ ನನ್ನ ಹತ್ತಿರಕೆ; ಬಾಳ ಬಾ; ನಿಜವಾದ ಬಾಳು ಈ ನಿನ್ನ ಕೈಯಲ್ಲಿತ್ತ ಇಷ್ಟಲಿಂಗದಲ್ಲಿದೆ.  ಈ ಲಿಂಗವೇ ಜೀವನ ಸಾಗರವನ್ನು ದಾಟಿಸುವ ದಿವ್ಯಸಾಧನ.  ಲಿಂಗದ ಜ್ಞಾನವೇ ಜೀವನದ ಜೀವಾಳ.  ಕ್ರಿಯಾದಿ ದೀಕ್ಷೆಗಳಿಂದ ನಿನ್ನ ಸ್ಥೂಲ-ಸೂಕ್ಷ್ಮ-ಕಾರಣ ಶರೀರವು ಪವಿತ್ರಗೊಂಡು ಮಂತ್ರಮಯವಾಗಿರುವಂತೆ ಈ ಲಿಂಗದಲ್ಲಿಯೂ ಮೂಲಮಂತ್ರವನ್ನು ಕೀಲಿಸಿರುವೆ.

ಇದೂ ಮಂತ್ರಮಯವಾಗಿದೆ. ನಿತ್ಯ ಲಿಂಗಾರ್ಚನೆ, ಲಿಂಗಾರ್ಪಣ, ಲಿಂಗಾನುಭವಗಳಿಂದ ಶಿವಯೋಗದ ಅಥವಾ ಲಿಂಗಾಂಗಯೋಗದ ಅನುಸಂಧಾನ (ಸಾಕ್ಷಾತ್ಕಾರ) ನಡೆಯಬೇಕು. ಮಹಾನುಭಾವಿಗಳು ಅನುಸರಿಸಿದ ಅನುವಿದಾಗಿದೆ” ಎಂದು ಮುಂತಾಗಿ ಬೋಧಿಸಿ ಕೃಪೆಗೆಯುತ್ತಾನೆ.

ಶಿಲ್ಪಿಯು ಅದೆಷ್ಟು ಸುಂದರವಾಗಿ ಕಲಾಮಯವಾದ ಲಿಂಗವನ್ನು ತಯಾರಿಸ ಬಹುದು. ಆದರೆ ಅದು ಲಿಂಗಾಕಾರದ ಮೂರ್ತಿಯಾದೀತೇ ವಿನಾ ಲಿಂಗವೆನಿಸುವದಿಲ್ಲ . ಗುರುಕರಕಮಲ ಸ್ಪರ್ಶದಿಂದಲ್ಲದೆ ಅದರಲ್ಲಿ ಲಿಂಗಗುಣವು ಮೈದೋರುವ ದಿಲ್ಲ. ಶಿಲಾಭಾವವು ಸರಿಯುವದಿಲ್ಲ.  ಅದುಕಾರಣವೇ ಮಾರಾಟಕ್ಕಿಕ್ಕಿದ ಲಿಂಗವನ್ನು ಧರಿಸುವದರಿಂದ ಲಿಂಗ ಕಳೆಯು ಸಮನಿಸುವದಿಲ್ಲ. ಇಂಥ ಲಿಂಗವನ್ನು ಕಟ್ಟಿಕೊಳ್ಳಲೇ ಬಾರದು. ಅದರಿಂದ ಯಾವ ಪ್ರಯೋಜನವಾಗುವದಿಲ್ಲ. ಇವೆಲ್ಲ ದೋಷಗಳನ್ನು ದೂರೀಕರಿಸುವದಕ್ಕಾಗಿ ಗುರುನಾಥನು ಲಿಂಗದ ಮೇಲೆ ಷಡವಯವಗಳಲ್ಲಿ ಷಣ್ಮಂತ್ರಾಕ್ಷರಗಳನ್ನು ಕೀಲಿಸುತ್ತಾನೆ. ಮಂತ್ರಾಕ್ಷರ ಸಂಸ್ಕಾರದಿಂದ ಮಂತ್ರಾಕ್ಷರನ್ಯಾಸ ದಿಂದ ಶಿಲಾಭಾವದ ಲಿಂಗವು ಮಂತ್ರಮಯವಾಗುವದರಲ್ಲಿ ಯಾವ ಸಂದೇಹವಿಲ್ಲ.

ಚಾರುವೃತ್ತದೊಳಿರ್ಪಾ | ಚಾರಲಿಂಗದೊಳಗೆ ನ

ಕಾರ ಮೊದಲಾದ – ಆರು ಪ್ರಣವದ ನೆಲೆಯ

ತೋರಿಸಿದ ಗುರುವೆ ಕೃಪೆಯಾಗು    ೧೨೦ |

ಶರಣಕವಿಯು ಲಿಂಗದ ಒಂದೊಂದು ಸ್ಥಲದಲ್ಲಿ ಒಂದೊಂದು ಮಂತ್ರಾಕ್ಷರಗಳ ಸಂಬಂಧವನ್ನು ತೋರಿಸುತ್ತ ಹೋಗುತ್ತಾನೆ.

ವೃತ್ತ ಸ್ಥಾನವು ಚಾರುತರವಾದುದು. ಯಾಕಂದರೆ ವೃತ್ತವು ಗೋಲಾಕಾರ ವಾಗಿರುವದು.  ದುಂಡಾಗಿರುವದರಿಂದ ಪರಿಪೂರ್ಣವಾಗಿ ಶೋಭಿಸುತ್ತದೆ.  ಅಂತೆಯೇ ಶಿವಕವಿಯು ವೃತ್ತಕ್ಕೆ ಚಾರು ಪದವನ್ನು ವಿಶೇಷಣವಾಗಿ ಬಳಸಿದ್ದಾನೆ. ಅಲ್ಲದೆ ಪೂರ್ಣವಾದ ಪರಿಘದಲ್ಲಿ ಸಕಲವೂ ಸೇರಿದೆಯೆಂಬ ಭಾವವೂ ವ್ಯಕ್ತವಾಗುವದು. ಈ ವೃತ್ತ ಸ್ಥಾನದಲ್ಲಿರುವ ಲಿಂಗ ಆಚಾರಲಿಂಗವೆನಿಸಿದೆ. ವೃತ್ತವು ಎಲ್ಲ ಸ್ಥಲಗಳಿಗೆ ಆಧಾರವಾಗಿರುವಂತೆ ಆಚಾರಲಿಂಗವು ಎಲ್ಲ ಲಿಂಗಗಳಿಗೆ ಆಶ್ರಯವಾಗಿದೆ.

ಈ ಆಚಾರಲಿಂಗದಲ್ಲಿ ನಕಾರ ಪ್ರಣವ ಪ್ರಕಾಶಮಾನವಾಗಿದೆ. ಇಲ್ಲಿ ‘ನ ʼಕಾರ ಮುಖ್ಯವಾಗಿದ್ದು ಅದರಲ್ಲಿ ಉಳಿದೈದು ಪ್ರಣವಗಳು ಸುಪ್ತವಾಗಿವೆ. ವೃತ್ತ ಪೂರ್ಣವಾಗಿರುವಂತೆ ಆಚಾರವು ಪರಿಪಕ್ವಗೊಂಡರೆ ಮಾತ್ರ ಆಚಾರಲಿಂಗದ ಅರಿವು ಆಗುವದು. ಆ ಮಂತ್ರದ ನೆಲೆ ಸ್ಥಿರವಾಗುವದು.

ಶಿವ ಪಂಚಾಕ್ಷರ ಸ್ತೋತ್ರದಲ್ಲಿ ಶಂಕರಾಚಾರ್ಯರು ‘ನ ʼಕಾಲ ಮಂತ್ರಾಕ್ಷರದ ವರ್ಣನೆಯನ್ನು –

ನಾಗೇಂದ್ರ-ಹಾರಾಯ ತ್ರಿಲೋಚನಾಯ

ಭಸ್ಮಾಂಗರಾಗಾಯ ಮಹೇಶ್ವರಾಯ |

ನಿತ್ಯಾಯ ಶುದ್ಧಾಯ ದಿಗಂಬರಾಯ

ಸ್ಮೈ ನಕಾರಾಯ ನಮಃ ಶಿವಾಯ

ಎಂದು ಸುಂದರವಾಗಿ, ಮಾರ್ಮಿಕವಾಗಿ ಹಾಡಿರುವರು. ಇದರಂತೆ ಶ್ರೀರುದ್ರಯಾಮಲತಂತ್ರದಲ್ಲಿ ಉಮಾಮಹೇಶ್ವರ ಸಂವಾದಲ್ಲಿಯೂ ಷಡಕ್ಷರ ಸ್ತೋತ್ರವು ಅರ್ಥ ಪೂರ್ಣವಾಗಿದೆ-

“ನಮಂತಿ ಋಷಯೋ ದೇವಾಃ ನಮಂತ್ಯಪ್ಸರಸಾಂಗನಾಃ |

ನರಾ ನಮಂತಿ ದೇವೇಶಂ ನಕಾರಾಯ ನಮೋ ನಮಃ” ||

ಮಹಾಮಂತ್ರಕ್ಕೆ ಮಣಿಯದವರಾರು ? ಸಕಲರೂ ಶಿರ ಬಾಗಿಸಲೇಬೇಕಾಗುವದು.

Related Posts