ಸಂಸ್ಕತಿ-ನಾಗರಿಕತೆ

ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

ಸಂಸ್ಕೃತಿ ಮತ್ತು ನಾಗರಿಕತೆ ಇವುಗಳ ಮುಖ್ಯ ಉದ್ದೇಶ ಮನುಷ್ಯನಿಗೆ ಸುಖ ಸಂತೋಷವನ್ನುಂಟು ಮಾಡುವುದು. ಮೇಲ್ನೋಟಕ್ಕೆ ಇವು ಒಂದೇ ಎಂಬಂತೆ ಕಂಡು ಬಂದರೂ ಸೂಕ್ಷ್ಮದೃಷ್ಟಿಯಿಂದ ಅವಲೋಕಿಸಿದಾಗ ಇವೆರಡರ ವ್ಯತ್ಯಾಸ ಕಂಡು ಬರುತ್ತದೆ. ಆದರೆ ಒಂದು ಇನ್ನೊಂದಕ್ಕೆ ಪೂರಕ ಎಂಬುದನ್ನು ಮಾತ್ರ ಮರೆಯಲಾಗದು. ಸಂಸ್ಕಾರ ಸಂಪನ್ನ ಜೀವನಕ್ಕೆ ನಾವು ಸಂಸ್ಕೃತಿ ಎಂದು ಕರೆಯುತ್ತೇವೆ. ಒಳ್ಳೆಯದನ್ನು ಬಯಸುವುದು, ಒಳ್ಳೆಯದನ್ನು ಪ್ರೀತಿಸುವುದು, ನುಡಿದಂತೆ ನಡೆಯುವುದು, ಶೀಲ ಚಾರಿತ್ರ್ಯಗಳನ್ನು ಹೊಂದುವುದು ಇವೇ ಮುಂತಾದ ಸಂಸ್ಕಾರಗಳು ಸಂಸ್ಕೃತಿಯ ಹೆಗ್ಗುರುತುಗಳು. ಇವು ವ್ಯಕ್ತಿಯ ಲೌಕಿಕ ಹಾಗು ಪಾರಲೌಕಿಕ ಉನ್ನತಿಗೆ ಸಹಕಾರಿಯಾಗಿವೆ. ತನ್ಮೂಲಕ ಸಮಾಜದ ಸರ್ವಾಂಗೀಣ ವಿಕಾಸಕ್ಕೆ ಕಾರಣವಾಗುತ್ತವೆ.

ಸಂಸ್ಕೃತಿ ಯಾವುದೇ ಜನಾಂಗ ಅಥವಾ ದೇಶದ ಆತ್ಮ, ಜನರ ಊಟ- ಉಪಚಾರ, ಉಡುಗೆ-ತೊಡುಗೆ, ಆಟ-ಪಾಠ, ನಡೆ-ನುಡಿ, ಧರ್ಮ-ಆತ್ಮಜ್ಞಾನ ಇವು ಅವರ ಬದುಕಿನ ಸಾರಸರ್ವಸ್ವ. ಅನೇಕ ಶತಮಾನಗಳಿಂದ ಆ ಜನಜೀವನ ನಡೆದು ಬಂದುದರ ಫಲಶೃತಿ ಇದು. ಇದನ್ನೇ ನಾವು ಸಂಸ್ಕೃತಿ ಎನ್ನುತ್ತೇವೆ. ಇದು ವ್ಯಕ್ತಿಗೆ ಸಂಸ್ಕಾರವನ್ನು ಕೊಡುವ ಶಕ್ತಿ. ಸಂಸ್ಕಾರ ಸಂಪನ್ನ ವ್ಯಕ್ತಿಗಳ ವಿಚಾರ, ಮಾತು ಮತ್ತು ಕೃತಿಗಳಲ್ಲಿ ಇದು ಅಭಿವ್ಯಕ್ತಗೊಳ್ಳುತ್ತದೆ. ವ್ಯಕ್ತಿಯ ಅಂತರಂಗದ ಜೀವರಸವಾಗಿರುವ ಸಂಸ್ಕೃತಿಯು ಅವನ ಧರ್ಮ, ದರ್ಶನ, ಸಾಹಿತ್ಯ, ಸಂಗೀತ, ಕಲೆ, ಶಿಲ್ಪ, ನೃತ್ಯ ಮುಂತಾದವುಗಳಲ್ಲಿ ನಿರಂತರ ಪ್ರವಹಿಸುತ್ತಿರುತ್ತದೆ.

 ನಾಗರಿಕತೆ ವ್ಯಕ್ತಿಯ ಬಹಿರಂಗ ಜೀವನಕ್ಕೆ ಸಂಬಂಧಿಸಿದೆ. ವಿಜ್ಞಾನ-ತಂತ್ರಜ್ಞಾನಗಳ ಪರಿಣಾಮವಾಗಿ ವ್ಯಕ್ತಿಯ ಜೀವನ ಇಂದು ಎಚ್ಚು ಸುಖಮಯವಾಗಿದೆ. ಲೌಕಿಕ ಸುಖ ಸೌಲಭ್ಯಗಳನ್ನು ಪಡೆಯುವ ಸಾಧನೆಗಳೆಲ್ಲವೂ ನಾಗರಿಕತೆಯ ಅಂಗ ಪ್ರತ್ಯಂಗಗಳು. ನಾಗರಿಕತೆ ಮುಖ್ಯತಃ ಪ್ರಯೋಜನಾತ್ಮಕವಾದುದು. ಅದು ವ್ಯಕ್ತಿಯ ಬಾಹ್ಯ ಹಾಗೂ ಭೌತಿಕ ವಿಕಾಸಕ್ಕೆ ಸಹಕಾರಿಯಾದುದು. ಆದರೆ ಸಂಸ್ಕೃತಿ ವ್ಯಕ್ತಿಯ ಆಂತರಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಕಾರಣವಾಗಿದೆ. ಅಂತೆಯೇ ಅದು ಆನಂದಾತ್ಮಕವಾದುದು.

 ಸಂಸ್ಕೃತಿ ಮತ್ತು ನಾಗರಿಕತೆಗಳೆರಡಕ್ಕೂ ವಿಶೇಷ ಸಂಬಂಧವಿದೆ. ಅದು ತುಪ್ಪದಲ್ಲಿರುವ ಕಂಪು, ಹೂವಿನಲ್ಲಿರುವ ಸುವಾಸನೆಯಂತಹ ಸಂಬಂಧ, ಸಂಸ್ಕೃತಿ ಆತ್ಮವೆನಿಸಿದರೆ ನಾಗರಿಕತೆ ದೇಹದಂತಿದೆ. ಇವೆರಡೂ ಒಂದಕ್ಕೊಂದು ಪೂರಕವಾಗಿದ್ದು, ಪರಸ್ಪರ ಪ್ರಭಾವ ಬೀರುತ್ತ ಮುನ್ನಡೆಯುತ್ತವೆ. ನಾಗರಿಕತೆಗೆ ಬೆಲೆ ಬರುವುದು ಸಂಸ್ಕೃತಿಯ ಸ್ಪರ್ಶದಿಂದ, ಯಾವುದೇ ಜನಾಂಗ ಅಥವಾ ದೇಶ ಸಂಸ್ಕೃತಿಯ ಸ್ಪರ್ಶವಿಲ್ಲದೇ ನಾಗರಿಕತೆಯ ಬಗ್ಗೆ ಹೆಮ್ಮೆ ಪಡಲಾರದು. ಅಂಥ ಸಂಸ್ಕೃತಿಯನ್ನು ಅರಿತು ಆಚರಿಸುವ, ಸಮೃದ್ಧವಾಗಿ ಬೆಳೆಸುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು. ಸಂಸ್ಕೃತಿಯ ವಿವಿಧ ಮುಖಗಳನ್ನು ಪರಿಚಯಿಸುವ ಗ್ರಂಥಾಲಯ, ವಸ್ತುಸಂಗ್ರಹಾಲಯ, ಆರ್ಟ್‌ಗ್ಯಾಲರಿ ಮುಂತಾದವುಗಳನ್ನು ನಿರ್ಮಿಸಬೇಕು. ಸಂಸ್ಕೃತಿಯ ಸೊಬಗನ್ನು ಜನಗಳಿಗೆ ತಿಳಿಸುವ ನಿರಂತರ ಪ್ರಯತ್ನವೇ ಆಯಾ ಜನಾಂಗದ ಅಭಿವೃದ್ಧಿಯ ಹಾಗು ಚಲನಶೀಲತೆಯ ಪ್ರತೀಕ.

Related Posts