ಲೇಖಕರು :
ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ
ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.
ಮುಂಡರಗಿ
ಅಷ್ಟಾಂಗಯೋಗ ಬಲು | ಕಷ್ಟವೆಲೊ ಮಗನೆ ಎಂ
ದಿಷ್ಟ ಲಿಂಗವನು. ಸೃಷ್ಟಿಸುತ ಕರಕಿತ್ತ
ಶ್ರೇಷ್ಠ ಶ್ರೀಗುರುವೆ ಕೃಪೆಯಾಗು ||೧೦೧||
ಇಲ್ಲಿಯವರೆಗೆ ಅಷ್ಟಾಂಗಯೋಗದ ವಿಚಾರವನ್ನು ವಿವರವಾಗಿ ಆಲೋಚಿಸಿದ್ದೇವೆ. ಅಷ್ಟಾಂಗಯೋಗದಲ್ಲಿ ಪ್ರತಿಯೊಂದು ಯೋಗಾಂಗವನ್ನು ಅನಂತಾನಂತ ನಿಯಮ ಪೂರ್ವಕ ಅನೇಕ ವ್ರತಗಳನ್ನು ಆಚರಿಸುತ್ತ ಬಾಹ್ಯಯೋಗಗಳನ್ನು ಸಿದ್ಧಿಸಿ ವಿವೇಕ ಖ್ಯಾತಿಗಳೆನಿಸಿದ ಧ್ಯಾನ ಧಾರಣ ಸಮಾಧಿಗಳನ್ನು ಸಾಧಿಸುವದು ಕೊನೆಗೆ ನಿರ್ವಿಕಲ್ಪಕ (ಅಸಂಪ್ರಜ್ಞಾತ) ಸಮಾಧಿಯನ್ನು ಸಿದ್ಧಿಸುವುದು ಸುಲಭವಲ್ಲ. ಸಿದ್ಧರಾದವರೂ ವಿರಳ. ಆದರೆ ಯೋಗಭ್ರಷ್ಟರಾಗುವವರ ಸಂಖ್ಯೆಯೇ ಬಹಳ. ಯೋಗಭ್ರಷ್ಟರಾದವರು ಪುನಃ ಪುನಃ ಹುಟ್ಟಿ ಯೋಗವನ್ನು ಸಾಧಿಸಬೇಕಾಗುವದು. ಅದು ಕಾರಣವೆ ಸಮಾಧಿಯು ತಾಮಸವೆಂದು ಹಿಂದಿನ ತ್ರಿಪದಿಯಲ್ಲಿ ಉಕ್ತವಾಗಿದೆ. ಇಂಥ ಅಷ್ಟಾಂಗಯೋಗವು ಕಷ್ಟಕರವಲ್ಲದೆ ಮತ್ತೇನು |
ಈ ಅಷ್ಟಾಂಗಯೋಗದ ಕಷ್ಟತತಿಯನ್ನು ಅರಿತ ಗುರುನಾಥನು ದಯೆಯಿಂದಲೂ ಪ್ರೀತಿಯಿಂದಲೂ ಇಷ್ಟಲಿಂಗವನ್ನು ಶಿರದರಮನೆಯಲ್ಲಿಂದ ಸೃಷ್ಟಿಸಿ ಕರಕಮಲಕ್ಕೆ ಕೊಟ್ಟಿದ್ದಾನೆ. ಈ ಕರದಿಷ್ಟಲಿಂಗಯೋಗ ಸುಲಭಯೋಗ, ಸಹಜ ಯೋಗ, ಶಿವಯೋಗ. ಅಂತೆಯೇ ಅದು ಮಂಗಲಕರಯೋಗವೆನಿಸಿದೆ.
ಅಷ್ಟಾಂಗಯೋಗವು ಕ್ರಮಸಾಧನೆಯುಳ್ಳುದು. ಒಂದೊಂದನ್ನೇ ಆಚರಿಸುತ್ತ ಅಳವಡಿಸಿಕೊಳ್ಳುತ್ತ ಸಾಧಿಸಬೇಕಾಗುವದು. ಶಿವಯೋಗದಲ್ಲಿ ಅಥವಾ ಲಿಂಗಾಂಗ ಯೋಗದಲ್ಲಿ ಯೋಗದ ಎಂಟೂ ಅಂಗಗಳೂ ಏಕಕಾಲಕ್ಕೆ ಸಮಾವೇಶಗೊಳ್ಳುತ್ತವೆ. ಲಿಂಗಾಂಗ ಸಾಮರಸ್ಯ ಜ್ಞಾನವುಳ್ಳ ಶಿವಭಕ್ತನಿಗೆ ಸುಮನ-ಸತ್ಕ್ರಿಯೆಗಳಿಂದ ಯಮವು ಲಿಂಗಪೂಜೆಯ ನಿಯಮವು, ಶಿವಪೂಜೆಗೆ ಕುಳಿತುಕೊಳ್ಳುವ ಆಸನವು, ಪ್ರಾಣ ಲಿಂಗಾನುಸಂಧಾನದಲ್ಲಿ ಪ್ರಾಣಾಯಾಮವು, ಪ್ರಸಾದ ಶುದ್ಧಿಯಲ್ಲಿ ಪ್ರತ್ಯಾಹಾರವು, ಉಪಾಂಶು-ಮಾನಸಿಕ ಜಪಗಳೇ ಲಿಂಗಧ್ಯಾನವು, ಭಾವದಲ್ಲಿ ಭಾವಲಿಂಗವನ್ನು ಹೊಂದುವದೇ ಧಾರಣವು. ಐಕ್ಯಸ್ಥಿತಿಯಲ್ಲಿ ಸಮಾಧಿ. ಹೀಗೆ ಇವೆಲ್ಲವೂ ಶಿವಯೋಗದಲ್ಲಿ ಸಮತ್ವಗೊಳ್ಳುತ್ತವೆ.
ಅಷ್ಟಾಂಗಯೋಗದಲ್ಲಿ ಆಯಾಸವಿದೆ, ಕರ್ಮಜಡತೆಯಿದೆ. ಲಿಂಗಾಂಗ ಯೋಗದಲ್ಲಿ ಯಾವ ಆಯಾಸವಿಲ್ಲ, ಕರ್ಮಜಡತೆಯ ಸೋಂಕಿಲ್ಲ, ನವನಾಥರಲ್ಲಿ ಪ್ರಸಿದ್ಧನಾದ ಗೋರಕ್ಷನಾಥನು ಹಠಯೋಗಸಾಧನೆಯಿಂದ ವಜ್ರದೇಹಿಯಾಗಿದ್ದರೂ, ಶಿವಯೋಗ ಸಿದ್ಧನೆನಿಸಿ ವೋಮಕಾಯನಾದ ಅಲ್ಲಮಪ್ರಭುವಿನ ಸಿದ್ಧಿಗೆ ಶರಣಾಗತ ನಾದ ಎಂಬ ಆಖ್ಯಾನಕ ರೋಚಕವೂ ತಾತ್ವಿಕವೂ ಆಗಿದೆ. ಇದರಿಂದ ಅಷ್ಟಾಂಗ ಯೋಗಕ್ಕಿಂತಲು ಶಿವಯೋಗವೇ ಮಿಗಿಲೆಂದು ತಿಳಿಯದಿರದು.
ಅಷ್ಟಾಂಗ ಯೋಗವು ಬಹು ಕ್ರಿಯೆಗಳಿಂದ ಕೂಡಿ ಅಲ್ಪ ಫಲ ಕೊಟ್ಟರೆ ಶಿವಯೋಗವು ಅಲ್ಪ ಕ್ರಿಯೆ, ಬಹು ಫಲದಾಯಕವಾಗಿದೆ. ಸಾಮಾನ್ಯಾಧಿಕಾರಿಯೂ ಸಹ ಲಿಂಗಪೂಜೆಯ ಮರ್ಮವನ್ನು ಅರಿತು ಆಚರಿಸಬಹುದು. ಅಳವಡಿಸಿಕೊಳ್ಳ ಬಹುದು. ಆದರೆ ಯೋಗವು ಹಾಗಲ್ಲ. ಇದನ್ನೆಲ್ಲ ತಿಳಿದ ಮಹಾಗುರುವು ಶಿಷ್ಯೋದ್ಧಾರಕ್ಕಾಗಿ ಇಷ್ಟಲಿಂಗವನ್ನು ಹುಟ್ಟಿಸಿ ಕರುಣಿಸಿದುದು ಮಹಾಕರುಣೆಯೇ ಸರಿ. ಸುಲಭದಲ್ಲಿ ಸಿಕ್ಕುವ ಮುಕ್ತಿದಾಯಕನಾದ ಗುರುವರನು ಶ್ರೇಷ್ಠವಲ್ಲದೆ ಮತ್ತೇನು ! ಅವನು ಪರಮಶ್ರೇಷ್ಠನೆನಿಸಿದ್ದಾನೆ.
ಶಾಂಬವಿಯ ಮುದ್ರೆಯ ವಿ | ಡಂಬಿಸುತಲೆನಗೆ ಸ್ವ-
ಯಂಭು ಲಿಂಗವ ಕ-ರಾಂಬುಜದೊಳಿತ್ತ ಕರು
ಣಾಂಬುನಿಧಿ ಗುರುವೆ ಕೃಪೆಯಾಗು | ೧೦೨ |
ಶಿವಕವಿಯು ಅಷ್ಟಾಂಗಯೋಗದ ವಿಚಾರಗಳನ್ನು ಸೂಕ್ಷ್ಮವಾಗಿ ನಿರಸನ ಮಾಡಿ ಹಠಯೋಗಕ್ಕಿಂತಲೂ ಶಿವಯೋಗವೇ (ಲಿಂಗಾಂಗಯೋಗ) ಮಿಗಿಲಾದುದೆಂದು ಪ್ರತಿಪಾದಿಸಿದ ಮೇಲೆ ಯೋಗ ಮಾರ್ಗದ ಇನ್ನೊಂದು ಪ್ರಭೇದವೆನಿಸಿದ ತಾಂತ್ರಿಕ ಮಾರ್ಗದ ಮುದ್ರೆಗಳನ್ನು ಸೂಕ್ತವಾಗಿ ವಿಡಂಬಿಸುತ್ತಾನೆ.
ಮುದ್ರೆಯೆಂದರೆ ಮುದ್ರಿಕೆಯಿಂದ ಹೇಳಬಹುದು. ಅಂದರೆ ಸಂಕೇತವನ್ನು ಕೆತ್ತಿರುವ ಉಂಗುರ ಅಥವಾ ಸಾಧನವೆಂತಲೂ ಅರ್ಥ ಮಾಡಬಹುದು. ವೈಷ್ಣವರು ದೇಹ ಶುದ್ದಿಗಾಗಿ ಮತಾಚಾರ್ಯರಿಂದ ಭಗವಂತನ ಚಿನ್ಹೆಯನ್ನು (ಅಚ್ಚು) ಮುದ್ರಿಸಿಕೊಳ್ಳುವದಕ್ಕೂ ಮುದ್ರೆಯೆಂಬುದಾಗಿ ಹೆಸರಿದೆ. ಇನ್ನು ತಾಂತ್ರಿಕ ಮಾರ್ಗದಲ್ಲಿಯೂ ಈ ಮುದ್ರೆಗಳ ವಿಚಾರ ಬರುತ್ತದೆ. ತಂತ್ರವು ಆಗಮದ ಒಂದು ಭಾಗವು, ಆಗಮವು ವೇದದ ಸಮಕಾಲೀನವೆಂತಲೂ, ಕೆಲವರು ಅದಕ್ಕೂ ಮೊದಲಿನದೆಂತಲೂ ಪ್ರತಿಪಾದಿಸುತ್ತಾರೆ. ಕೆಲವು ಕಾರಣಗಳಿಂದ ಇತ್ತೀಚಿನದೆಂಬುದಾಗಿಯೂ ಹೇಳುತ್ತಾರೆ. “ಶ್ರೀಮೃಗೇಂದ್ರೋತ್ತರಾಗಮ” ದಲ್ಲಿ ೨೮ ಶಿವಾಗಮಗಳು ಶಿವನ ಸದ್ಯೋಜಾತಾದಿ-ಪಂಚಮುಖದಿಂದ ಸೃಷ್ಟಿಯ ಕಾಲಕ್ಕೇನೆ ಹುಟ್ಟಿದವೆನ್ನುವ ಸಬಲ ಪ್ರಮಾಣದಿಂದ ಆಗಮಗಳ ಬಹಪ್ರಾಚೀನತೆ ಕಂಡುಬರುತ್ತದೆ. ಉಪಾಗಮಗಳು ಅಧಿಕ ಸಂಖ್ಯೆಯಲ್ಲಿವೆ. ಆಗಮಗಳಲ್ಲಿ ಶಿವನು ಶಿವೆ (ಪಾರ್ವತಿ)ಗೆ ಕ್ರಿಯಾ- ಜ್ಞಾನವನ್ನು ಆಚಾರ-ವಿಚಾರಗಳನ್ನು, ಯೋಗ-ಶಿವಯೋಗವನ್ನು, ಏನೆಲ್ಲ ವಿಷಯವನ್ನು ಬೋಧಿಸಿದ್ದಾನೆ. ಶಿವಾದ್ವೈತ ಸಾಹಿತ್ಯ ಕರ್ತೃಗಳೆನಿಸಿದ ಜ.ಚ.ನಿ. ಯವರು ಸೂಕ್ಷ್ಮ ತಂತ್ರಸಾರ’ದ ಮುಮ್ಮಾತಿನಲ್ಲಿ ಆಗಮದ ವಿಷಯ ವ್ಯಾಪ್ತಿ ಯನ್ನು ಪ್ರಸ್ತಾಪಿಸುತ್ತ-ಚಿತ್ತಶುದ್ಧಿಗೆ ಬೇಕಾದ ಧರ್ಮಗಳು; ಕಾಯಶುದ್ಧಿಗೆ ಬೇಕಾದ ಕ್ರಿಯೆಗಳು, ಪ್ರಾಣಶುದ್ಧಿಗೆ ಬೇಕಾದ ಯೋಗಗಳು; ಬುದ್ಧಿವಿಕಾಸಕ್ಕೆ ಬೇಕಾದ ಜ್ಞಾನ-ವಿಜ್ಞಾನಗಳು, ಶಿಲ್ಪ ಸಂಗೀತ ಚಿತ್ರ ಮೊದಲಾದ ಮನೋಲ್ಲಾಸಕ ಕಲೆಗಳು ಆಗಮಗಳಲ್ಲಿವೆ. ಹುಟ್ಟು-ಸಾವಿನ, ಬಾಳು-ಬದುಕಿನ, ಆಗುಹೋಗುಗಳ ವಿಚಾರ ನಿಗಮಗಳಲ್ಲಿದೆ. ಉಪಾಸನೆಯ ವಿಧಿ-ವಿಧಾನಗಳು ನಿರೂಪಿತವಾಗಿವೆ. ಹೆಸರಾದ ಅರವತ್ತು ನಾಲ್ಕು ಕಲೆಗಳನ್ನು ವಿವರಿಸುತ್ತವೆ ಆಗಮಗಳು” ಎಂದುದಾಗಿ ವರ್ಣಿಸಿದ್ದಾರೆ.
ದೇವತೆಯ ಧ್ಯಾನ ಮತ್ತು ಉಪಾಸನೆಯ ಐದಂಗಗಳಾದ ಪಟಲ, ಪದ್ಧತಿ, ಕವಚ, ಸಹಸ್ರನಾಮ, ಸ್ತೋತ್ರಗಳಿಂದ ಕೂಡಿದ ಗ್ರಂಥವು ಆಗಮದಲ್ಲಿ ತಂತ್ರ ಸಾಹಿತ್ಯವೆನಿಸುವದು. ಆಗಮಗಳಲ್ಲಿ ಸೃಷ್ಟಿ, ಪ್ರಲಯ, ದೇವತಾರ್ಚನೆ, ಸರ್ವ ಸಾಧನ ಪುರಶ್ಚರಣ, ಷಟ್‌ಕರ್ಮ (ಶಾಂತಿ-ವಶೀಕರಣ ಸ್ತಂಭನ ವಿದ್ವೇಷಣ, ಉಚ್ಚಾಟನ ಮತ್ತು ಮಾರಣಗಳು), ಮತ್ತು ಧ್ಯಾನಯೋಗ ಹೀಗೆ ಏಳು ವಿಷಯಗಳು ಉಕ್ತವಾಗಿವೆ. ಶಾಕ್ತ್ಯಾಗಮದ ವಾಮಾಚಾರ ಹಾಗೂ ಹೈಯ ಪೂಜಾಪದ್ಧತಿಗಳಿಂದ ತಾಂತ್ರಿಕವಿಧಿ-ವಿಧಾನಗಳು ನಿಂದಾಸ್ಪದವಾದವು. ಕೌಲಾಚಾರ ಅಥವಾ ಸಮಯಮಾರ್ಗಿಗಳಲ್ಲಿ ಪಂಚತತ್ತ್ವ ಸಾಧನೆಯು ಬರುತ್ತದೆ. ಕುಲವೆಂದರೆ ಆಧಾರಾದಿ ಚಕ್ರಗಳು, ಅವುಗಳನ್ನು ಅರಿಯಲು ಶ್ರೀ ಚಕ್ರದ ಪೂಜೆ ಮಾಡುವವನು ಕೌಲನೆನಿಸುವನು. ಅಥವಾ ಸಮಯಮಾರ್ಗಿಯೆಂತಲೂ ಕರೆಯಲ್ಪಡುತ್ತಾನೆ.
ಕಾಲಾಂತರದಲ್ಲಿ ಶ್ರೀಚಕ್ರದ ಕಲ್ಪನೆಯು ಸ್ತ್ರೀಯೋನಿಯ ಪೂಜೆಗೆ ಮಾರ್ಪ ಟ್ಟಿತು. ಶ್ರೀಚಕ್ರದ ಸಾಧನೆಯಲ್ಲಿ ಸಿದ್ಧಿ ಸಾಧಿಸಿದ ಮಂದಾಧಿಕಾರಿಗಳು ವಾಮ ಚಾರಿಗಳಾಗಿ ವರ್ತಿಸಹತ್ತಿದರು. ಶ್ರೀಚಕ್ರದ ಸಾಧನೆಗೆ ಪಂಚತತ್ತ್ವ ಸಾಧನೆಯೂ ಪೋಷಕವಾದುದು. ಈ ಪಂಚತತ್ತ್ವ ಸಾಧನೆಯ ಪಂಚ ಮಕಾರಗಳು. ಕೇವಲ ಬಾಹ್ಯವಾಚ್ಯಾರ್ಥದಲ್ಲಿ ಪರಿವರ್ತನಗೊಂಡವು. ಪಂಚ ಮಕಾರಗಳೆಂದರೆ- ೧) ಮಧ್ಯ ೨) ಮಾಂಸ ೩) ಮತ್ಸ ೪) ಮುದ್ರಾ ಮತ್ತು ೫) ಮೈಥುನಗಳು. ಇವುಗಳ ತಾತ್ವಿಕ ವಿಚಾರ ಅರ್ಥಪೂರ್ಣವಾಗಿದೆ.
ʼ’ಮಧ್ಯಂ ಮಾಂಸಂ ಚ ಮೂನಂ ಚ
ಮುದ್ರಾ ಮೈಥುನಮೇವ ಚ |
ಮಕಾರಪಂಚಕಂ ಪ್ರಾಹುಃ
ಯೋಗೀನಾಂ ಮುಕ್ತಿದಾಯಕಮ್ ”
ಪಂಚಮಕಾರಗಳು ಯಥಾರ್ಥತಃ ಯೋಗಿಗಳಿಗೆ ಮುಕ್ತಿದಾಯಕವಾಗಿವೆ ಎನ್ನುವ ಮಾತಿನ ಮಥಿತಾರ್ಥ ಹೀಗಿದೆ-ಮಧ್ಯವೆಂದರೆ ಹೊರಗಿನ ಮದವೇರಿಸಿ ಬುದ್ಧಿ ಶೂನ್ಯನನ್ನಾಗಿಸುವ ಮಧ್ಯವಲ್ಲ. ೬೯ನೆಯ ತ್ರಿಪದಿಯಲ್ಲಿ ವಿವರಿಸಿದಂತೆ ಶಿರದಲ್ಲಿಯ ಬ್ರಹ್ಮರಂಧ್ರ ಅಥವಾ ಸಹಸ್ರದಳ ಕಮಲದಲ್ಲಿ ಸ್ರವಿಸುವ ಅಮೃತವನ್ನು ಯೋಗಿಗಳು ಮಧ್ಯವೆಂದು ಕರೆದಿದ್ದಾರೆ. ಇದಕ್ಕೆ ಕುಲಾರ್ಣವತಂತ್ರ ಹಾಗೂ ಗಂಧರ್ವತಂತ್ರಗಳಲ್ಲಿ ಮತ್ತು ಯೋಗಚೂಡಾಮಣ್ಯುಪನಿಷತ್ತಿನಲ್ಲಿ ಪ್ರಮಾಣಗಳು ಉಪಲಬ್ಧವಾಗುತ್ತವೆ. ಸಹಸ್ರಾರದ ಸುಧೆಯನ್ನು ಖೇಚರೀ ಮುದ್ರೆಯ ಸಾಧನೆಯಿಂದ ಸಾಧಿಸಲು ಬರುವದು. ಇದನ್ನು ಮುಂದೆ ವಿಚಾರಿಸುವಾ
ತಂತ್ರಸಾಧಕನು ಪುಣ್ಯ ಹಾಗೂ ಪಾಪರೂಪಿಯಾದ ಜೀವಾತ್ಮನ ಪಶು (ವಿಷಯ) ಗಳನ್ನು ಜ್ಞಾನರೂಪೀ ಖಡ್ಗದಿಂದ ಸಂಹರಿಸಿ ತನ್ನ ಮನಸ್ಸನ್ನು ಬ್ರಹ್ಮದಲ್ಲಿ ಲೀನಗೊಳಿಸುವವನು ಮಾಂಸಹಾರಿಯೆನಿಸುವನು. ಶರೀರದಲ್ಲಿರುವ ಈಡಾ (ಇಡಾ) ಮತ್ತು ಪಿಂಗಳಾ ನಾಡಿಗಳಲ್ಲಿ ಪ್ರವಹಿಸುವ ಶ್ವಾಸ-ನಿಃಶ್ವಾಸಗಳೇ ಮತ್ಸ್ಯಗಳು. ಅವುಗಳನ್ನು ಕುಂಭಕದಿಂದ ಪ್ರಾಣ ವಾಯುವನ್ನು ಸುಷುಮ್ಮಾನಾಡಿಯಲ್ಲಿ ಸಂಚಾಲನೆ ಗೊಳಿಸುವುದಕ್ಕೆ ಮತ್ಸ್ಯಸಾಧನೆಯೆನಿಸುವದು. ಅಸತ್‌ಸಂಗದಿಂದ ಬಂಧನ ವಾಗುವದನ್ನು ಅರಿತು ಸತ್ಸಂಗವನ್ನು ಮಾಡಿ ಮುಮುಕ್ಷುವೆನಿಸಿ ಅಸತ್‌ಸಂಗವನ್ನು ಸಂಪೂರ್ಣ ತ್ಯಜಿಸುವದೇ ಮುದ್ರೆಯೆನಿಸುವದು. ಇನ್ನು ಮೈಥುನವೆಂದರೆ- ಸೇರಿಸುವುದು ಅಥವಾ ಕೂಡಿಸುವದು ಎಂದರ್ಥ. ಸಹಸ್ರಾರದಲ್ಲಿರುವ ಶಿವನೊಡನೆ ಕುಂಡಲಿನಿಯನ್ನು ಜಾಗೃತಗೊಳಿಸುವದು ಅಥವಾ ಸುಷಮ್ಮಾ ನಾಡಿಯಲ್ಲಿ ಪ್ರಾಣವನ್ನು ಮಿಳನಗೊಳಿಸುವದು ಎಂಬುದಾಗಿ ಅನುಭವಿಗಳು ತಿಳಿಸುತ್ತಾರೆ
.ಸಾಂಸಾರಿಕ ಸುಖಕ್ಕಿಂತ ಸಾವಿರ ಪಾಲು ಅಧಿಕವಾದ ಸುಖವು ಸುಷುಮ್ಮಾ ನಾಡಿಯಲ್ಲಿ ಪ್ರಾಣವಾಯುವನ್ನು ಸ್ಥಿರಗೊಳಿಸುವದರಿಂದ ಉಂಟಾಗುವದು. ಇದೇ ನಿಜವಾದ ಮೈಥುನವೆಂದು ತಂತ್ರವೇತ್ತರು ಪ್ರತಿಪಾದಿಸಿದ್ದಾರೆ. ತಂತ್ರ ಪ್ರಮಾಣವೂ ಉಂಟು. ನಿಜವಾದ ತತ್ತ್ವವನ್ನರಿಯದ ವಾಮಮಾರ್ಗಿಗಳು ಸ್ವೇಚ್ಛಾಚಾರದಿಂದ ವರ್ತಿಸಿ, ಸಿದ್ಧಾಂತಕ್ಕೇನೆ ಕಲಂಕವನ್ನುಂಟು ಮಾಡಿರುವರು. ಆದರೆ ನಾಥ ಸಂಪ್ರದಾಯದ ಗೋರಕ್ಷನಾಥನೇ ಮುಂತಾದ ಹಠಯೋಗಿಗಳು ಪಂಚತತ್ತ್ವ ಶುದ್ದಿಯಿಂದ ಮುದ್ರೆಗಳ ಸಾಧನೆಯಿಂದಲೂ ವಜ್ರಕಾಯರಾದ ಇತಿಹಾಸ ಯೋಗ ಶಾಸ್ತ್ರದಿಂದ ತಿಳಿದು ಬರುತ್ತದೆ.
ಯೋಗಮುದ್ರೆಗಳಲ್ಲಿ ಮುಖ್ಯವಾದವುಗಳು ಮೂರು ಖೇಚರೀ ಶಾಂಭವೀ, ಷಣ್ಮುಖೀ ಎಂದು ಅಂತರಾತ್ಮನ ಅರಿವಿಗಾಗಿ ನಯನ-ಮನ-ಪ್ರಾಣಗಳ ಸಂಯಮನಕ್ಕಾಗಿ ಸಾಧಿಸುವ ಬಾಹ್ಯ ಕ್ರಿಯೆಗಳೇ ಮುದ್ರೆಗಳು, ತ್ರಿಪದಿಯ ಶಿವಕವಿಯು ಮೊದಲನೆಯದಾಗಿ ಶಾಂಭವೀ ಮುದ್ರೆಯನ್ನು ವಿಡಂಬಿಸುತ್ತಾನೆ.
ಈ ಮುದ್ರೆಯ ಲಕ್ಷಣವನ್ನು ಶಿವಯೋಗ ಪ್ರದೀಪಿಕೆಯ ಟೀಕಾಕಾರರು-
”ಮೋಚಯತಿ, ದ್ರಾವಯತೀತಿ ಮುದ್ರಾ’
ಅಜ್ಞಾನಾಂಧಕಾರವನ್ನು ತೊಲಗಿಸಿ ಶಿವಾನಂದ ಪ್ರವಾಹವನ್ನು ನಿರಾಯಾಸದಿಂದ ಸುರಿಸುವದೇ ಮುದ್ರೆಯೆನಿಸುವದು” ಎಂದು ಪ್ರತಿಪಾದಿಸಿದ್ದಾರೆ. ನಿಜಗುಣ ಶಿವಯೋಗಿಗಳು-
ಹೃದಯಾಕಾಶಮಧ್ಯದ ದಿವ್ಯಲಿಂಗ ಸ್ಥಲದಂತರ್ಲಕ್ಷ್ಯಮಂ
ಕಾಣ್ಬುದಕ್ಕೆ ಪರಮೋಪಾಯಮಾದ ಮುದ್ರಾಲಕ್ಷಣ
ವೆಂದು ಪಾರಮಾರ್ಥ ಪ್ರಕಾಶಿಕೆ”ಯಲ್ಲಿ ಮುದ್ರೆಯ ಸ್ವರೂಪವನ್ನು ತಿಳಿಸಿದ್ದಾರೆ. ಮುದ್ರೆಗಳು ರಾಜಯೋಗಾಂತರ್ಗತವಾಗಿವೆ. ಖೇಚರೀ ಮುದ್ರೆ ಮತ್ತು ಶಾಂಭವೀ ಮುದ್ರೆಗೆ ಹೆಚ್ಚಿನ ಅಂತರವಿಲ್ಲ. ಈ ಶಾಂಭವೀ ಮುದ್ರೆಯ ವಿವರವು ಕೆಳಗಿನಂತಿದೆ
ಅಂತರ್ಲಕ್ಷ್ಯವಿಲೀನ ಚಿತ್ತಪವನೋ ಯೋಗೀ ಯದಾ ವರ್ತತೇ |
ದೃಷ್ಟ್ಯಾ ನಿಶ್ಚಲತಾರಯಾ ಬಹಿರಧಃ ಪಶ್ಯನ್ನಪಶ್ಯನ್ನಪಿ ||
ಮುದ್ರೆಯಂ ಖಲು ಶಾಂಭವೀ ಭವತಿ ಸಾ ಲಬ್ಧಾ ಪ್ರಸಾದಾದ್ಗುರೋಃ ||
ಅಂದರೆ ಹೃದಯದ ಅನಾಹತ ಚಕ್ರಗತ ಮಹಾಚೈತನ್ಯದಲ್ಲಿ ಲಕ್ಷ ಪ್ರಾಣ ಮತ್ತು ನಿಶ್ಚಲವಾದ ದೃಷ್ಟಿಗಳನ್ನು ಇರಿಸಿ, ಹೊರಗೆ ಕೆಳಗೆ ನೋಡುತ್ತಿದ್ದರೂ ನೋಡದಂತಿರುವದೇ ಶಾಂಭವೀ ಮುದ್ರೆಯೆನಿಸುವದು. ಈ ಮುದ್ರೆಯು ಸದ್ಗುರುವಿನ ಕೃಪಾಪ್ರಸಾದದಿಂದಲ್ಲದೇ ಅರಿವಿಗೆ ಬರುವದಿಲ್ಲ, ಶಾಂಭವ ಸ್ವರೂಪವನ್ನಾಗಿಸುವ ಸಾಧನೆಯೇ ಶಾಂಭವೀಯು
ನಾಶಿಕಾಗ್ರದಲ್ಲಿರಿಸಲ್ಪಟ್ಟ ನಿಮೇಷೋನ್ಮೇಷಂಗಳಿಲ್ಲದ
ಲೋಚನಂಗಳ ದಿವ್ಯಾಲೋಕನದಿಂದೆ ಲಕ್ಷಿಸಲು ಯೋಗ್ಯ-
ಮಾದ ಹೃದಯದಲ್ಲಿ ನಿಶ್ಚಲವಾದ ಜ್ಯೋತಿರ್ಮ೦ಡಲವನು
ಕಾಂಬುದೇ ಶಾಂಭವೀ ಮುದ್ರೆಯೆನಿಸುವದು.
ಎಂದು ಶಾಂಭವೀ ಮುದ್ರಾ ಸ್ವರೂಪವನ್ನು ನಿಜಗುಣರು ವಿವರಿಸಿದ್ದಾರೆ. ಇದನ್ನೇ ಶಿವಯೋಗ ಪ್ರದೀಪಿಕೆಯ ಐದನೆಯ ಪಟಲ ೭ನೆಯ ಶ್ಲೋಕದಲ್ಲಿ ನೋಡಿ-
ಅಂತಶ್ಚಿತ್ತಂ ಬಹಿಶ್ಚಕ್ಷುರ್ನಿಮೇಷೋನ್ಮೇಷವರ್ಜಿತಂ ||
ಏಷಾ ಸಾ ಶಾಂಭವೀ ಮುದ್ರಾ ಸರ್ವತಂತ್ರೇಷು ಗೋಪಿತಾ |
ಶಾಂಭವೀ ದ್ವಿವಿಧಾ ಪ್ರೋಕ್ತಾ ಪೂರ್ವೋತ್ತರವೀಭೇದತಃ ||
ಚಿತ್ತವು ಅಂತರ್ಲಕ್ಷ್ಯವುಳ್ಳದ್ದಾಗಿ ಚಕ್ಷುಗಳು ನಿಮೇಷ (ರೆಪ್ಪೆ ಮುಚ್ಚುವದು) ಉನ್ಮೇಷ (ರೆಪ್ಪೆ ತೆರೆಯುವದು) ಗಳಿಲ್ಲದಂತಿರುವದೇ ಶಾಂಭವೀ ಮುದ್ರೆಯು. ಇದು ಎಲ್ಲ ತಂತ್ರಗಳಲ್ಲಿ ರಹಸ್ಯವಾಗಿ ಹೇಳಲ್ಪಟ್ಟಿದೆ. ಮತ್ತು ದಿವ್ಯ ಹೃದಯಲಿಂಗಾನುಸಂಧಾನಕ್ಕೆ ಶಾಂಭವೀಯೆನಿಸುವದು. ಇದು ನಾಸಿಕಾಗ್ರದೃಷ್ಟಿಯ ದ್ವಾರಾ ನಾದನುಸಂಧಾನವನ್ನು ಮಾಡುವ ಮನದೊಳು ಕೂಡಲು ಪೂರ್ವಶಾಂಭವೀ” ಯೆನಿಸುವದು. ಆ ನಾಸಿಕಾಗ್ರದೃಷ್ಟಿಯೂ ಮನವೂ ನಾದಬ್ರಹ್ಮದಲ್ಲಿ ಮುಳುಗಲು (ಬೆರೆಯಲು) ‘ಉತ್ತರ ಶಾಂಭವೀ’ ಯೆನಿಸುವದು. ಹೀಗೆ ಇದು ಎರಡು ತೆರನಾಗಿರುವದು. ಈ ಎರಡೂ ವಿಧದಿಂದಲೂ ಯೋಗಿಗಳು ನಾದಾನುಸಂಧಾನವನ್ನು ಮಾಡುವರೆಂದು ಟೀಕಾಕಾರರು ವಿವರಿಸಿದ್ದಾರೆ.
ಮನವು ಅಂತರ್ಮುಖಗೊಂಡು ದೃಷ್ಟಿಯು ನಾಶಿಕದ ತುದಿಯಲ್ಲಿದ್ದು ನಾದಬ್ರಹ್ಮನು ಅನುಸಂಧಾನ ಮಾಡುವ ಈ ಶಾಂಭವೀ ಮುದ್ರೆಯು ಉತ್ತಮ ಗುರುವಿನ ಮಾರ್ಗದರ್ಶನದಿಂದಲೂ ಸುಲಭವಾಗಿ ಸಿದ್ಧಿಸುವದಿಲ್ಲ. ಅಂತರ್ಮುಖವಾದ ಮನಸ್ಸಿನಲ್ಲಿ ವಿಷಯಗಳ ಸುಳಿದಾಟವು ನಿಲ್ಲಬೇಕು. ಬಹಿರ್ಗತವಾದ ದೃಷ್ಟಿಗೆ ಯಾವುದನ್ನೂ ಕಾಣದಂತಿರಿಸುವದು ಸಹಜವಲ್ಲ. ಮನ-ನೇತ್ರಗಳ ಅಂತರದಿಂದ ಪ್ರಾಣವೂ ವಿಷಯವ್ಯಾಮೋಹದಿಂದ ದೂರವಾಗಲಾರದು. ಕಾರಣ ಇಂಥ ಶಾಂಭವೀ ಮುದ್ರೆಯಿಂದ ಸುಲಭ ಪ್ರಯೋಜನವೆನಿಸುವದಿಲ್ಲ ಎಂಬುದನ್ನು ಮನಸಾ ಅರಿತ ಶರಣರು ಈ ಶಾಂಭವೀ ಮುದ್ರೆಯನ್ನು ವಿಡಂಬಿಸಿದರು.
ಶಾಂಭವಿಯ ಮುದ್ರೆಯಲ್ಲಿ ಬಾಹ್ಯ ದೃಷ್ಟಿ ಅಂತಃ ಸಂಯಮನವಿರುವದು ಸಮಂಜಸ ಹಾಗೂ ಸಹಜವೆನಿಸುವದಿಲ್ಲ. ಸಮರಸಕ್ಕೆ ಸಾಧನವಾಗಲಿಕ್ಕಿಲ್ಲವೆಂದು ಮನಗಂಡು ಕರುಣಾನಿಧಿಯಾದ ಸದ್ಗುರುವು ಸ್ವಸ್ವರೂಪವಾದ ಸ್ವಯಲಿಂಗವನ್ನು ಶಿಷ್ಯನ ಕರಕಮಲಕ್ಕೆ ತ೦ದಿರಿಸಿದುದು ಅನುಪಮ ಪವಾಡವೇ ಆಗಿದೆ. ಕರದಿಷ್ಟ ಲಿಂಗದಲ್ಲಿ ದೃಷ್ಟಿಯನ್ನು ಮನವನ್ನು ಪ್ರಾಣವನ್ನು ಬೆರೆಸಿ ಲಿಂಗವೇ ತಾನಾಗುವ ಶಾಂಭವ ಪದವನ್ನು ಪಡೆಯಲು ಉಪದೇಶಿಸಿದ್ದಾನೆ. ಧ್ಯಾನದ ವಿಷಯದಲ್ಲಿ ಹಿಂದೆ ಪ್ರತಿಪಾದಿಸಿದಂತೆ ಲಿಂಗಯೋಗದಲ್ಲಿ ದೃಷ್ಟಿಯೋಗದ ಮಹತ್ವವು ಅಗಣಿತವಾಗಿದೆ. ಅಂಥ ಶಿವಲಿಂಗಯೋಗದಿಂದಾಗುವ ಶಾಂಭವ (ಶಿವ) ಸ್ವರೂಪವು ಸಹಜವಾಗಿ ಪ್ರಾಪ್ತವಾಗುವದು. *‘ಇಷ್ಟಲಿಂಗವಿಲ್ಲದೆ ಮಾಡುವ ಶಾಂಭವೀ ಮುದ್ರೆಗಿಂತ ಇಷ್ಟಲಿಂಗದಲ್ಲಿರಿಸುವ ನಯನ-ಮನ-ಹರಣಗಳನ್ನು ಕೇಂದ್ರೀಕರಿಸುವ ಈ ಸ್ವಯಂಭುಲಿಂಗ ಮುದ್ರೆ ಮಹತ್ತಾದುದು. ಇದುವೆ ನಿಜವಾದ ಶಿವಯೋಗದ ಶಾಂಭವೀ ಮುದ್ರೆ. ಕ್ರಿಯಾಶಾಂಭವೀ ಮುದ್ರೆ, ಇದಕ್ಕೆ ಸರಿಸಮವಾದುದು ಬೇರೊಂದಿಲ್ಲ”
ಕಣ್ಮೂಗು ಕಿವಿ ಬಲಿವ | ಷಣ್ಮುಖಿಯ ಮುದ್ರೆ ಬಹು
ತಿಣ್ಣೆಂದು ಬಿಡಿಸಿ – ಷಣ್ಮಂತ್ರಲಿಂಗ ತೋ-
ರ್ದಾಣ್ಮ ಶ್ರೀಗುರುವೆ ಕೃಪೆಯಾಗು ||೧೦೩ ||
ಆಗಮಗಳಲ್ಲಿ ಶಿವನು ಪಾರ್ವತಿಗೆ ಬೋಧಿಸಿದಂತೆ ಪುತ್ರನಾದ ಷಣ್ಮುಖನಿಗೂ ಉಪದೇಶಿಸಿದ್ದಾನೆ. ಕೆಲವು ಆಗಮಗಳಲ್ಲಿ ಪಾರ್ವತಿದೇವಿಯು ಶ್ರೋತೃವಾಗಿದ್ದರೆ ಕೆಲವೊಂದರಲ್ಲಿ ಕುಮಾರ ಷಣ್ಮುಖಸ್ವಾಮಿಯು ಶಿಷ್ಯತ್ವವನ್ನು ವಹಿಸಿದ್ದಾನೆ. ಶಾಂಭವೀ ಮುದ್ರೆಯನ್ನು ಶಂಭುವು (ಶಿವನು) ತನ್ನ ಅರ್ಧಾಂಗಿನಿಯಾದ ಶಾಂಭವಿಗೆ ತಿಳಿಯಪಡಿಸಿದ್ದರೆ ಷಣ್ಮುಖಿಯ ಮುದ್ರೆಯನ್ನು ಷಣ್ಮುಖನಿಗೆ ಬೋಧಿಸಿರುವನು. ಕುಮಾರನು ಆರು ಮುಖವುಳ್ಳವನಾಗಿರುವಂತೆ ಈ ಷಣ್ಮುಖೀ ಮುದ್ರೆಯಲ್ಲಿಯೂ ಅದನ್ನು ಮುದ್ರಿಸುವ (ಮುಚ್ಚುವ) ವಿಷಯವು ಪ್ರತಿಪಾದಿತವಾಗಿದೆ. ಸಾಂಕೇತಿಕ ಅರ್ಥವುಳ್ಳದ್ದಾಗಿದೆ. ಖೇಚರೀ ಮತ್ತು ಶಾಂಭವೀ ಮುದ್ರೆಗಳು ಉತ್ತಮ ಅಧಿಕಾರಿಗಳಿಗೆ ಸಾಧ್ಯವಾದರೆ, ಷಣ್ಮುಖೀ ಮುದ್ರೆಯು ಕನಿಷ್ಠಾಧಿಕಾರಿಗೂ ಸಾಧ್ಯವೆಂದು ನಿಜಗುಣರು ತಿಳಿಸಿದ್ದಾರೆ.
ಷಣ್ಮುಖೀ ಮುದ್ರೆಯ ಲಕ್ಷಣವನ್ನು ಶಿವಯೋಗ ಪ್ರದೀಪಿಕೆಕಾರರು-
“ವಕ್ತ್ರೇ ಚಾಪೂರ್ಯವಾಯುಂ ಹುತವಹನಿಲಯೇ ಅಪಾನಮಾಕೃಷ್ಯ ಧೃತ್ಯಾ |
ಸ್ವಾಂಗುಷ್ಠಾದ್ಯಂಗುಲೀಭಿರ್ನಿಜಕರತಲಯೋಃ ಷಡ್ಭಿರೇವಂ ನಿರುಧ್ಯ ||
ಶ್ರೋತ್ರೇ ನೇತ್ರೇ ಚ ನಾಸಾಪುಟಯುಗಳಮ್ ಅಥಾನೇನ ಮಾರ್ಗೆಣ ಧೀರಾಃ |
ಪಶ್ಯಂತಿ ಪ್ರತ್ಯಯಾನ್ ಸತ್ಪ್ರಣವಬಹುವಿಧ- ಧ್ಯಾನಸಂಲೀನಚಿತ್ತಾಃ || ೫-೧೭ ||
ಮುಖದ ಏಕದೇಶಮಾದ ನಾಸಾಪುಟದಲ್ಲಿ ಪ್ರಾಣವಾಯುವನ್ನು ಪೂರಿಸಿ ಅಗ್ನಿ ಸ್ಥಾನವೆನಿಸುವ ಅಧಃಕುಂಡಲಿನೀ ಸ್ಥಲದ ತ್ರಿಕೋಣಾಕಾರಮಾದ ಮೂಲಾಧಾರದಲ್ಲಿಯ ಅಪಾನವಾಯುವನ್ನು ಆಕುಂಚನಗೊಳಿಸಿ ತನ್ನ ಕರತಲವೆರಡರಲ್ಲಿಯ ಅಂಗುಷ್ಠ-ತರ್ಜನೀ-ಮಧ್ಯಮ (ಅಂಗುಷ್ಠ=ಹೆಬ್ಬೆರಳು, ತರ್ಜನೀ=ತೋರಬೆರಳು; ಮಧ್ಯಮ=ನಡುವಿನ ಬೆರಳು) ಗಳೆಂಬ ಆರೂ ಬೆರಳುಗಳಿಂದ ಶ್ರೋತ್ರ, ನೇತ್ರ, ನಾಸಾಪುಟಯುಗಳವನ್ನು ತಡೆದು ಈ ಷಣ್ಮುಖೀಕರಣ ಮಾರ್ಗದಿಂದ ನಿಶ್ಚಲ ತತ್ತ್ವಚಿತ್ತರಾದ ಯೋಗೀಶ್ವರರು ಪ್ರಣವದ ದಶವಿಧನಾದಲ್ಲಿ ಲೀನಚಿತ್ತರಾಗಿ ದಶವಿಧ ಬಿಂದು ಸಾಕ್ಷಾತ್ಕಾರರೂಪವಾದ ಪ್ರತ್ಯಯಗಳನ್ನು ಕಾಣುತ್ತಿಹರು” ಎಂದು ಬಸವಾರಾಧ್ಯರು ಟೀಕೆಯಲ್ಲಿ ವಿವರಿಸಿರುವರು.
ಈ ಷಣ್ಮುಖೀ ಮುದ್ರೆಯಲ್ಲಿ ಸಾಧಕನು ತನ್ನ ಕಿವಿಯೆರಡು, ಕಣ್ಣೆರುಡು ಮತ್ತು ಮೂಗಿನ ರಂಧ್ರಗಳೆರಡು ಸೇರಿ ಆ ಆರನ್ನು ತನ್ನ ಕೈಗಳ ಹೆಬ್ಬೆರಳು, ತೋರಬೆರಳು, ನಡುವಿನ ಬೆರಳುಗಳಿಂದ ಮುಚ್ಚುವನು. ಮುಖದ ಷಣ್ಮುಖಗಳನ್ನು (ಆರು ರಂಧ್ರಗಳ ಬಾಯಿಯನ್ನು) ಬಂದು ಮಾಡಿ ಬಾಯಿಯಿಂದ ಗಾಳಿಯನ್ನು ಒಳಗೆಳೆದು ತುಂಬಿ ಹೃದಯದಲ್ಲಿ ನಿಲ್ಲಿಸಿ ಅಗ್ನಿಸ್ಥಾನವಾದ ನಾಭಿಮಂಡಲದ ಅಧಃ ಕುಂಡಲಿನಿಯಲ್ಲಿ ಸಂಬಂಧವುಳ್ಳ ಮೂಲಾಧಾರದ ಅಪಾನವಾಯುವನ್ನು ಮೇಲೇರಿಸಿ ಹೃದಯಗತ ತುರ್ಯಾವಸ್ಥೆಯನ್ನು ಹೊಂದಿದ ಪ್ರಾಣವಾಯುವಿನೊಡನೆ ಸುಷುಮ್ಮಾನಾಡಿಯ ದ್ವಾರಾ ಮೇಲಕ್ಕೇರಿಸಿ ಸಹಸ್ರಾರದಲ್ಲಿ ಧೀರರಾದ ಯೋಗಿಗೆ ಅನಾಹತನಾದವು ಉತ್ಪನ್ನವಾಗಿ ದಶವಿಧನಾದಗಳು ಗೋಚರಿಸುವವು. ಮತ್ತು ದೃಷ್ಟಿಯಲ್ಲಿ ದಶವಿಧ ಬಿಂದುಗಳನ್ನು ಕಾಣುವರು. ಇದುವೆ ಷಣ್ಮುಖೀ ಮುದ್ರೆಯ ಮಹಾ ಸಾಧನವೆಂದು ಅನುಭವಿಗಳು ವಿವರಿಸಿದ್ದಾರೆ.
ಶಿವಯೋಗ ಪ್ರದೀಪಿಕೆಯಲ್ಲಿ ಟೀಕಾಕಾರರು ಷಣ್ಮುಖೀ ಮುದ್ರೆಯಿಂದ ಗೋಚರಿಸುವ ಬಿಂದು ಪ್ರಕಾರವನ್ನು ಈ ರೀತಿ ತಿಳಿಸಿದ್ದಾರೆ- “ಭ್ರೂಮಧ್ಯದಲ್ಲಿ ಬೆಳಗುವ ನಯನ ದೀಪ್ತಿಯೇ ಬಿಂದು ದೇವನ ಮಹಾಸ್ಥಾನವಪ್ಪುದರಿಂದೆ ೧) ಧೂಮ್ರ ವರ್ಣದಂತೆ, ೨) ಮೇಘಪಟಲದಂತೆ ಕಾಣ್ಬುದು ಶುದ್ಧತಮೋಗುಣಾತ್ಮಕವಾದ ಸ್ಥೂಲಬಿಂದುವೆನಿಸುವದು. ೩) ಕುಂಕುಮ ವರ್ಣದಂತೆ, ೪) ಖದ್ಯೋತಗಳಂತೆ ಕಾಣ್ಬುದು ಶುದ್ಧರಜೋಗುಣಾತ್ಮಕವಾದ ಮಧ್ಯಬಿಂದುವೆನಿಸುವುದು. ೫) ಶುದ್ಧಸ್ಪಟಿಕ ದಂತೆ. ೬) ನಿರ್ಮಲಾಕಾರದಿಂದ ಕಾಣ್ಬುದು ಶುದ್ಧಸಾತ್ವಿಕವಾದ ಪರಮಬಿಂದು ವೆನಿಸುವದು”.
ಷಣ್ಮುಖೀಮುದ್ರೆಯಲ್ಲಿ ಶ್ರವಣೇಂದ್ರಿಯ, ನೇತ್ರಂದ್ರಿಯ ಮತ್ತು ಘ್ರಾಣೇಂದ್ರಿಯಗಳ ವಿಷಯಗಳಾದ ಶಬ್ದ, ರೂಪ, ಗಂಧಗಳ ವಿಕಾರವು ದೂರವಾಗುವದು ಮತ್ತು ೧) ಚಿಣ್‌ನಾದ, ೨) ಚಿಣ್ ಚಿಣ್‌ನಾದ, ೩) ಘಂಟಾನಾದ, ೪) ಶಂಖನಾದ, ೫) ತಂತಿಯನಾದ, ೬) ತಾಳಗಳನಾದ, ೭) ಕೊಳಲಿನನಾದ, ೮) ಭೇರಿಯನಾದ ೯) ಮೃದಂಗನಾದ, ೧೦) ಮೇಘನಾದಗಳೆಂಬ
ದಶವಿಧನಾದವಾಗಿ ಪರಿವರ್ತನೆ ಹೊಂದಿ ತನ್ಮಯನನ್ನಾಗಿಸುವದು. ಮತ್ತು ಆತ್ಮದ ಅರಿವೂ ಆಗಬೇಕಾದರೆ ಕಷ್ಟಸಾಧ್ಯವಾಗುವದು.
ಇಂಥ ಷಣ್ಮುಖೀ ಮುದ್ರೆಯು ಕಣ್ಮಗು ಕಿವಿಗಳನ್ನು ಬಂಧಿಸಿ ಆಯಾಸಪಡಿಸುವದು. ಮತ್ತು ಅದು ಸುಸಾಧ್ಯವೂ ಅಲ್ಲ. ಅದಕ್ಕಿಂತ ಷಣ್ಮಂತ್ರ ಲಿಂಗಾರಾಧನೆಯು ಸುಲಭವೆಂದು ಶಿವಕವಿಯು ಒತ್ತಿ ಹೇಳುತ್ತಾನೆ. ಸದ್ಗುರುವು ಎನ್ನೊಡೆಯನಾದುದ ರಿಂದ ನನ್ನ ಚಿಂತೆ ಅವನಿಗಿದೆ. ಆತನು ಈ ಷಣ್ಮುಖೀ ಮುದ್ರೆಯು ಶಿಷ್ಯನಿಗೆ ಬಹುತಿಣ್ಣೆಂದು ತಿಳಿದು ಅದರ ಗೋಜನ್ನು ಬಿಡಿಸುತ್ತಾನೆ. ಅಂದರೆ ಈ ಮುದ್ರೆಯು ಬಾಹುಭಾರವೂ ಆಯಾಸಕರವೂ ಎಂದು ತಿಳಿದು ಅದನ್ನು ಪರಿಹರಿಸಿ ಷಣ್ಮಂತ್ರವೆನಿಸಿದ ಷಡಕ್ಷರ ಮಹಾಮಂತ್ರ ಭರಿತವಾದ ಇಷ್ಟಲಿಂಗವನ್ನು ಕರುಣಿಸಿದ್ದಾನೆ. ಲಿಂಗದಲ್ಲಿ ಷಣ್ಮುಂತ್ರದ ಕಲೆಯು ಪಸರಿಸಿರುವಂತೆ ಅಂಗದಲ್ಲಿಯೂ ತುಂಬುತ್ತಾನೆ. ಮೂಗಿನಲ್ಲಿ ನಕಾರ ಪ್ರಣವವನ್ನು, ಬಾಯಿಯಲ್ಲಿ ಮಕಾರ ಮಂತ್ರವನ್ನು, ಕಣ್ಣಿನಲ್ಲಿ ಶಿಕಾರವನ್ನು, ತ್ವಕ್ಕಾದ ಗಲ್ಲಗಳಲ್ಲಿ ವಾಕಾರ ಬೀಜಾಕ್ಷರವನ್ನು, ಕಿವಿಯಲ್ಲಿ ಯಕಾರವನ್ನು, ಹೃದಯದಲ್ಲಿ ಹಾಗೂ ಭ್ರೂಮಧ್ಯದಲ್ಲಿ ಓಂಕಾರ ಪ್ರಣವನ್ನು ಸಂಬಂಧಗೊಳಿಸಿ ಮಾಂಸಮಯ ಕಾಯವನ್ನು ಮಂತ್ರಮಯ ವನ್ನಾಗಿಸಿದ್ದಾನೆ.
ಜ್ಞಾನೇಂದ್ರಿಯಗಳಲ್ಲಿ ಆಯಾ ಮಂತ್ರಗಳನ್ನು ನೆಲೆಗೊಳಿಸಿ ಲಿಂಗವನ್ನು ಸಂಬಂಧ ಮಾಡಿದ್ದರಿಂದ ನನ್ನ ಸರ್ವಾಂಗವೆಲ್ಲ ಲಿಂಗಮಯವಾಗಿದೆ. ಶಿವಲಿಂಗವನ್ನು ನಿರೀಕ್ಷಣ ಮಾಡುವ ನೇತ್ರಗಳು ಶಿವಲಿಂಗವೇ ತಾವಾಗಿ ಮಹಾಮಂತ್ರದ ಜಪಾನುಷ್ಠಾನದಿಂದ ಪ್ರಣವನಾದವು ಶ್ರವಣೇಂದ್ರಿಯದಲ್ಲಿ ನಿಜಲಿಂಗಾನಂದದಲ್ಲಿ ತನ್ಮಯನಾಗುವ ಅವಕಾಶ ಈ ಷಣ್ಮಂತ್ರ ಲಿಂಗಮುದ್ರೆಯಲ್ಲಿ ಓತಪ್ರೋತವಾಗಿದೆ.
ಓ ಗುರುವೆ ! ಬಹುಭಾರವಾದ ಇಂಥ ಷಣ್ಮುಖೀ ಮುದ್ರೆಯ ಜಡತ್ವವನ್ನು ಪರಿಹರಿಸಿ ಸುಲಭ ಸಾಧ್ಯವಾದ ಷಣ್ಮಂತ್ರ ಲಿಂಗಮುದ್ರೆಯನ್ನು ಸಾಧಿಸುವ ಶಕ್ತಿಯನ್ನು ಕರುಣಿಸಿ ಕಾಪಾಡು.
ಖೇಚರಿಯ ಮುದ್ರೆ ನೀ | ನಾಚರೀಸಲೇನುಂಟು
ಗೋಚರಿಪ ಲಿಂಗ-ದಾಚರಣೆ ಘನವೆಂದು
ಸೂಚಿಸಿದ ಗುರುವೆ ಕೃಪೆಯಾಗು ||೧೦೪||
ಯೋಗಿಗಳು ಖೇಚರೀ ಮುದ್ರೆಯನ್ನು ಉತ್ತಮ ಅಧಿಕಾರಿಗೆ, ಶಾಂಭವೀ ಮುದ್ರೆಯನ್ನು ಮಧ್ಯಮಾಧಿಕಾರಿಗೆ, ಷಣ್ಮುಖೀ ಮುದ್ರೆಯನ್ನು ಮಂದಾಧಿಕಾರಿಗೆಂದು ಹೇಳುತ್ತಾರೆ. ರಾಜಯೋಗದಲ್ಲಿ ಖೇಚರೀ ಮುದ್ರೆಯು ರಾಜಮುದ್ರೆಯೆನಿಸಿದೆ. ಇದರ ಮಹತ್ವವು ಉಪನಿಷತ್ತಿನಲ್ಲಿ ಧಾರಾಳವಾಗಿ ಬಂದಿದೆ. ಯೋಗ ಚೂಡಾಮಣ್ಯು-ಪನಿಷತ್ತಿನಲ್ಲಿ ಖೇಚರೀ ಮುದ್ರೆಯ ಮಹತ್ವವನ್ನು ಬಹುವಾಗಿ ಬಣ್ಣಿಸಿದ್ದಾರೆ. ಆಕಾಶದಲ್ಲಿ ಸಂಚರಿಸುವ ಶಕ್ತಿಯನ್ನು ಈ ಖೇಚರೀ ಮುದ್ರೆಯಿಂದ ಸಾಧ್ಯವೆಂದು ಕೆಲವರು ಪ್ರತಿಪಾದಿಸಿದ್ದಾರೆ. ಈ ಮುದ್ರೆಯನ್ನು ಭ್ರೂಮಧ್ಯದಲ್ಲಿ ಊರ್ಧ್ವ ದೃಷ್ಟಿಯಿಂದ ಸಾಧಿಸುವ ಕಾರಣ ಇದಕ್ಕೆ ಖೇಚರೀ ಎಂಬ ಸಾರ್ಥಕ ನಾಮ ಬಂದಿದೆ.
ಯೋಗ ಚೂಡಾಮಣ್ಯುಪನಿಷತ್ಕಾರರು ಖೇಚರೀ ಮುದ್ರೆಯ ಲಕ್ಷಣವನ್ನು
“ಕಪಾಲಕುಹರೇ ಜಿಹ್ವಾ ಪ್ರವಿಷ್ಟಾ ವಿಪರೀತಗಾ |
ಭ್ರುವೋರಂತರ್ಗತಾ ದೃಷ್ಟಿರ್ಮುದ್ರಾ ಭವತಿ ಖೇಚರೀ || ೫೨ ||
ನಾಲಗೆಯನ್ನು ಕೆನ್ನೆಗಳ ನಡುವಿರುವ ಸಂಧಿಯಲ್ಲಿ ವಿಪರೀತವಾಗಿ (ನಾಲಿಗೆಯಲ್ಲಿ ಎರಡು ಹೋಳು ಮಾಡಿ ಒಳಹೊರಗೆ ಹೊರಳಿಸಿ) ಸೇರಿಸಬೇಕು. ದೃಷ್ಟಿಯನ್ನು ಹುಬ್ಬುಗಳ ಮಧ್ಯದಲ್ಲಿರಿಸಬೇಕು. ಆಗ ಖೇಚರೀ ಮುದ್ರೆಯೆನಿಸುವದು. ಫೇರಂಡ ಸಂಹಿತೆಯೂ ಇದೇ ತೆರನಾಗಿ ಖೇಚರಿಯ ಚರಿತ್ರೆಯನ್ನು ಬಿತ್ತರಿಸಿದೆ. ಶಿವಯೋಗ ಪ್ರದೀಪಿಕೆಯಲ್ಲಿ ಖೇಚರೀ ಮುದ್ರೆಯನ್ನು ಎರಡು ಪ್ರಕಾರವಾಗಿ ವಿಂಗಡಿಸಿದ್ದಾರೆ. ಒಂದು ಬಾಹ್ಯದಲ್ಲಿ ಖೇಚರೀ ಇನ್ನೊಂದು ಅಂತಃ ಖೇಚರೀ ಎಂದು ಇಬ್ಬಗೆಯಾಗಿದೆ.
ಮೇಲೆ ವಿವರಿಸಿದ ಲಕ್ಷಣವು ಬಾಹ್ಯಖೇಚರಿಯಾಗಿದೆ. ಅಂತಃಖೇಚರಿಯ ಲಕ್ಷಣವು ಕೆಳಗಿನಂತಿದೆ
ಲಕ್ಷ್ಯಲೀನ ಮನಸಾನಿಲೇನ ಯೋ ವರ್ತತೇ ಅಚಲಿತತಾರಯಾ ಭವೇತ್ |
ಖೇಚರೀ ಯಾಥ ಸೈವ ಶಾಂಭವೀಮುದ್ರಯಾ ಸ ತು ತಯಾ ಜಗದ್ಗುರುಃ II ಶಿ.ಪ್ರ. ೫-೩||
ಯಾವ ಯೋಗಿಯು ಹೃತ್ಕಮಲದ ದಿವ್ಯಲಿಂಗವೆಂಬ ಅಂತರ್ಲಕ್ಷ್ಯದಲ್ಲಿ ಮನಸ್ಸು, ಮನಸ್ಸಿನೊಡನೆ ಬೆರೆತ ವಾಯುವಿನಿಂದ ನಿಶ್ಚಲವಾದ ತಾರಕಮಂಡಲ (ಕಣ್ಣಿನಲ್ಲಿಯ ಗುಡ್ಡೆಗಳು) ವುಳ್ಳವನಾಗುವನೋ ಈ ಸ್ಥಿತಿಯು ಅಂತಃ ಖೇಚರೀಯೆನಿ ಸುವದು. ಈ ಖೇಚರೀಮುದ್ರೆಯೇ ನಾಸಿಕಾಗ್ರದೃಷ್ಟಿಯಿಂದ ಶಾಂಭವೀ ಮುದ್ರೆಯೆನಿಸುವದು. ಈ ಹಿಂದೆ ಇದರ ವ್ಯಾಖ್ಯಾನವನ್ನು ಅವಲೋಕಿಸಲಾಗಿದೆ.
ಖೇಚರೀ ಮುದ್ರೆಗಳನ್ನು ಸಾಧಿಸಿದ ಯೋಗೀಶ್ವರನು ಜಾಗ್ರ-ಸ್ವಪ್ನ-ಸುಷುಪ್ತಿ ಗಳ ಜಯಗಳಿಸಿ ಜಗದ್ಗುರುವೆನಿಸುವನು. ಅಂದರೆ ಲೋಕ ಪೂಜ್ಯವೆನಿಸುವನು. ಇವನಿಗಿಂತಲೂ ಪೂಜ್ಯನು ಬೇರೊಬ್ಬನೆನಿಸನು. ಇದೇ ಮಾತನ್ನು ನಿಜಗುಣರೂ ಸಹ ಪಾರಮಾರ್ಥ ಪ್ರಕಾಶಿಕೆಯಲ್ಲಿ ಸ್ಪಷ್ಟವಾಗಿ ಕನ್ನಡದಲ್ಲಿ ಪ್ರತಿಪಾದಿಸಿದ್ದಾರೆ.
ಖೇಚರೀಮುದ್ರೆಯ ದೃಷ್ಟಿ ಮನೋಮಾರುತಂಗಳ
ನಿಶ್ಚಲತ್ವದಿಂ ಕ್ರಮದಿಂ ಜಾಗ್ರ-ಸ್ವಪ್ನ-ಸುಷುಪ್ತಿಗಳೆಂಬ-
ವಸ್ಥಾತ್ರಯಂಗಳಂ ಗೆಲಿದಾತನೇ ಜಗದ್ಗುರುವಪ್ಪಂ
ಜಗದ್ಗುರುತ್ವದ ಲಕ್ಷಣ ಇಷ್ಟು ಗಹನವಾಗಿದೆ. ಶಿವಯೋಗಸಾಧನೆಯಲ್ಲಿಯೂ ಪರಜಂಗಮನೆನಿಸಿ ಶಿವಸಾಮ್ರಾಜ್ಯವನ್ನೇ ಕವಡಿಗೆ ಸಮಮಾಡಿ ಅವಸ್ಥಾತ್ರಯಗಳನ್ನು ಮೀರಿ ಮಹಾಮಹಿಮನೆನಿಸಿದಲ್ಲಿ ಜಗದ್ಗುರುತ್ವವು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಕೇವಲ ವೃತ್ತಿ ಗುರುತ್ವವಾದೀತು, ಯೋಗಿಗಳು ಖೇಚರೀ ಮುದ್ರೆಯ ಮಹಾ ಸಾಧನೆಯಿಂದ ಅವರ್ಣನೀಯವಾದ ಯೋಗ್ಯತೆಯನ್ನು ಪಡೆದಿದ್ದಾರೆ. ಈ ಮುದ್ರೆಯ ಅಗಣಿತವಾದ ಮಹತ್ವಕ್ಕೆ ಯೋಗ ಚೂಡಾಮಣ್ಯುಪನಿಷತ್ತಿನ ಕೆಲವು ಪ್ರಮಾಣಗಳನ್ನು ಅವಲೋಕಿಸಿ-
ನ ರೋಗೋ ಮರಣಂ ನಾಸ್ತಿ ನ ನಿದ್ರಾ ನ ಕ್ಷುಧಾ ತೃಷಾ |
ನ ಚ ಮೂರ್ಛಾ ಭವೇತ್ತ ಸ್ಯ ಯೋ ಮುದ್ರಾಂ ವೇತ್ತಿ ಖೇಚರೀಮ್ ||
ಪೀಡ್ಯತೇ ನ ಚ ರೋಗೇಣ ಲಿಪ್ಯತೇ ನ ಸ ಕರ್ಮಭಿಃ |
ಬಾಧ್ಯತೇ ನ ಚ ಕೇನಾಪಿ ಯೋ ಮುದ್ರಾಂ ವೇತ್ತಿ ಖೇಚರೀಮ್ ||
ಖೇಚರ್ಯಾ ಮುದ್ರಿತಂ ಯೇನ ವಿವರಂ ಲಂಬಿಕೋರ್ಧ್ವತಃ |
ನ ತಸ್ಯ ಕ್ಷೀಯತೇ ಬಿಂದುಃ ಕಾಮಿನ್ಯಾಲಿಂಗಿತಸ್ಯ ಚ ||
ಯಾವದ್ಬಿಂದುಃ ಸ್ಥಿತೋ ದೇಹೇ ತಾವನ್ಮೃತ್ಯುಭಯಂ ಕುತಃ ||
ಯಾವದ್ಬದಾ ನಭೋಮುದ್ರಾ ತಾವಂದ್ಬಿಂದುರ್ನ ಗಚ್ಛತಿ ॥
ಕಥಿತೇಯಂ ಮಹಾಮುದ್ರಾ ಮಹಾ ಸಿದ್ಧಿಕರೀ ನೃಣಾಮ್ |
ಗೋಪನೀಯಾ ಪ್ರಯತ್ನೇನ ನ ದೇಯಾ ಯಸ್ಯ ಕಸ್ಯಚಿತ್ |
“ಈ ಖೇಚರೀ ಮುದ್ರೆಯನ್ನು ಸಾಧಿಸಿದ ಸಾಧಕನಿಗೆ ರೋಗ, ನಿದ್ರೆ, ಹಸಿವು ನೀರಡಿಕೆ, ಮೂರ್ಛಗಳು ಹೋಗುವವಲ್ಲದೆ ಮರಣವೂ ಇಲ್ಲದಾಗುವದು. ಅವನನ್ನು ರೋಗಗಳು, ಕರ್ಮಗಳು ಪೀಡಿಸಲಾರವು. ಈ ಮುದ್ರಾಸಾಧನೆಯ ಪ್ರಭಾವದಿಂದ ವೀರ್ಯವನ್ನು ಊರ್ಧ್ವಮುಖಗೊಳಿಸಿದವನು ಸ್ತ್ರೀಯಳನ್ನು ಅಲಂಗಿಸಿದರೂ ಅವನಿಗೆ ವೀರ್ಯಪಾತವಾಗುವದಿಲ್ಲ. ನಭೋಮುದ್ರೆ (ಖೇಚರೀ) ಯನ್ನು ಸಾಧಿಸುತ್ತಿರುವವನಿಗೆ ವೀರ್ಯಪಾತ ನಿಂತು ಹೋಗುವದು. ದೇಹದಲ್ಲಿ ವೀರ್ಯವು ಘಟ್ಟಿಗೊಂಡರೆ ಅವನಿಗೆ ಮರಣವೆಂಬುದೇ ಇಲ್ಲ. ಇಂಥ ಸರ್ವಸಿದ್ದಿ ದಾಯಕವಾದ ಈ ಮಹಾಮುದ್ರೆಯನ್ನು ಸಿಕ್ಕ ಸಿಕ್ಕ ಮನುಷ್ಯನಿಗೆ ಹೇಳಬಾರದು. ರಹಸ್ಯವಾಗಿರಬೇಕು’, ಎಂದಿದ್ದಾರೆ ಉಪನಿಷತ್ಕಾರರು. ಕೆಲವು ಸಾಧಕ ಯೋಗಿಗಳು ಅಂತಃಖೇಚರಿಯನ್ನು ಅರಿಯದೆ ಬಹುಪ್ರಯಾಸವುಳ್ಳ ಲಂಬಿಕಾ ಯೋಗವೆನಿಸುವ ಬಾಹ್ಯ ಖೇಚರಿಯನ್ನು ಆಶ್ರಯಿಸಿ ನಾಲಿಗೆಯನ್ನು ಸೀಳುವ ವಿಷಯದಲ್ಲಿ ಆತುರ ಪಡುತ್ತಾರೆಂದು ಚನ್ನ ಸದಾಶಿವಯೋಗಿಗಳು ಹೇಳಿದ್ದಾರೆ.
ಅಂತೂ ಖೇಚರೀ ಮುದ್ರೆಯ ಬಾಹ್ಯ ಸ್ವರೂಪವು ಅತ್ಯಂತ ಆಯಾಸಕರವಾಗಿದೆ. ಅಂತಃಖೇಚರೀಯ ಅಲ್ಪವಾದ ಅನುಸಂಧಾನವು ಶಿವಯೋಗದಲ್ಲಿಯೂ ಸುಲಭವಾಗಿ ಸಮಾವೇಶವಾಗುವದು. ಅದನ್ನರಿತ ಸದ್ಗುರುವು ಖೇಚರೀ ಮುದ್ರೆ ಯನ್ನು ಆಚರಿಸುವದಕ್ಕಿಂತ ಘನವಾದ ಮತ್ತು ಪ್ರತ್ಯಕ್ಷ ಕಾಣುವ ಲಿಂಗದಾಚರಣೆಯನ್ನು ಸೂಚಿಸಿರುವನು. ಇದು ಸುಲಭ ಸಾಧ್ಯವಾದುದು. ಆದರೆ ನಾಲಗೆಯನ್ನು (ಸೀಳಿ ಒಂದು ಭಾಗವನ್ನು ಗಂಟಲೊಳಗೆ ಇನ್ನೊಂದನ್ನು) ಮುಂದಕ್ಕೆಳೆದು ಭ್ರೂ ಮಧ್ಯಭಾಗಕ್ಕೆ ಮುಟ್ಟಿಸಿ ದೃಷ್ಟಿ ನಿಲ್ಲಿಸುವ ಈ ಕಡು ಕಷ್ಟಕರವಾದ ಖೇಚರೀ ಮುದ್ರೆಯನ್ನು ಬದಿಗಿರಿಸಿ ಅಂಗೈಯಲ್ಲಿ ಗೋಚರಿಸುವ ಮಂಗಲಮಯ ಶಿವಲಿಂಗದಲ್ಲಿ ಕಂಗಳ ದೃಷ್ಟಿಯನ್ನಿಡಲು ಕಲಿಸಿ ನಾಲಿಗೆಯಿಂದ ಷಡಕ್ಷರ ಮಂತ್ರವನ್ನು ಜಪಿಸುತ್ತ ಮನ-ಭಾವಗಳನ್ನು ಆ ಲಿಂಗದಲ್ಲಿ ಬೆರೆಯಿಸುವ ಲಿಂಗಧಾರಣೆ ಶ್ರೇಷ್ಠ ತರವಾದುದು. ಲಿಂಗಪೂಜೆಯೆಂಬ ಘನವಾದ ಸತ್ಕ್ರಿಯೆಯಿಂದ ಕಾಮ-ಕಾಲ- ಮಾಯೆಯನ್ನು ಗೆಲ್ಲಲು ಬರುವದು. ಐಕ್ಯನೆನಿಸಿ ಬಯಲಾತ್ಮನಾಗುವ ಸಾಧನೆಗೆ ಖೇಚರಿಯ ನಿಲವು ನಿಲ್ಲಲಾರದು.
ಶೂನ್ಯವನ್ನು ಸಂಪಾದಿಸಿ ನಿರಂಜನನಾದ ಅಲ್ಲಮನ ನಿಲುವಿಗೆ ಹಠಯೋಗವನ್ನು ಸಾಧಿಸಿ ವಜ್ರಕಾಯನಾದ ಗೋರಕ್ಷನ ವ್ಯಕ್ತಿತ್ವವು ಹಾರಿಹೋಯಿತೆಂಬುದನ್ನು ಹಿಂದೆಯೂ ತಿಳಿಸಿದೆ. ಬಯಲಾತ್ಮನಾದವನಿಗೆ ಯಾವ ಉಪಾಧಿ ತಾಗೀತು ! ಕಾರಣ ಗುರುಕುರಣೆಯಿಂದ ಕಾಣಬರುವ ಇಷ್ಟಲಿಂಗದಾಚರಣೆಗೆ ಯೋಗಮುದ್ರೆಗಳು ಸರಿಗಾಣವು, ಓ ಗುರುವೆ, ಅಂಥ ನಿಜಲಿಂಗೈಕ್ಯನನ್ನು ಮಾಡುವ ಘನವಾದ ಲಿಂಗದನಿಲವನ್ನು ಎನ್ನಲ್ಲಿ ನೆಲೆಗೊಳಿಸು. ಕೃಪೆಮಾಡಿ ಕಾಪಾಡು.
ಹಠಯೋಗಮಾರ್ಗ ಸಂ | ಕಟದಿನಾಗುವ ಮೋಕ್ಷ
ಸಟೆಯೆಂದು ಬಿಡಿಸಿ-ಘಟದ ಸಂಗದ ಲಿಂಗ
ದಿಟವೆಂದ ಗುರುವೆ ಕೃಪೆಯಾಗು ||೧೦೫||
ಇಲ್ಲಿಯವರೆಗೆ ವಿಚಾರಿಸಿದಂತೆ ಯೋಗಮಾರ್ಗವಾಗಲಿ ತಾಂತ್ರಿಕಮಾರ್ಗವಾಗಲಿ ಸುಲಭಸಾಧ್ಯವಲ್ಲವೆಂಬುದು ವೇದ್ಯವಾಗಿದೆ. ಯೋಗದಲ್ಲಿ ಮುಖ್ಯವಾಗಿ ನಾಲ್ಕು ಭಾಗಗಳು-ಮಂತ್ರಯೋಗ, ಲಯಯೋಗ, ಹಠಯೋಗ, ರಾಜಯೋಗ ವೆಂದು. ಇಷ್ಟದೇವತಾರೂಪ ಮಂತ್ರ ಜಪವೇ ಮಂತ್ರಯೋಗವಾದರೆ ಇಷ್ಟದೇವತಾ ಮೂರ್ತಿಯಲ್ಲಿ ಪ್ರಣವಾತ್ಮಕನಾದದಲ್ಲಿ ಮನೋಮಾರುತಂಗಗಳನ್ನು ಒಡಗೂಡಿಸಿ ಬೆರೆಯುವದೇ ಲಯಯೋಗವೆನಿಸುವದು. ಯಮಾದ್ಯಷ್ಟಾಂಗಯೋಗವು, ಮಹಾ ಮುದ್ರೆಗಳು, ಬಂಧಗಳು, ಧೌತಿ, ಬಸ್ತಿ, ನೇತಿ, ತ್ರಾಟಕ, ನೌಲಿ, ಕಪಾಲಭಾತಿ ಗಳೆಂಬ ಷಟ್‌ಕರ್ಮಗಳು, ಮೊದಲಾದ ಕಷ್ಟತರ ಸಾಧನೆಗಳಿಂದ ದೇಹ-ಮನ ಜೀವವನ್ನು ಪರಿಶುದ್ಧಗೊಳಿಸುವ ಯೋಗವೇ ಹಠಯೋಗವೆನಿಸುವದು. ಈ ಹಠ ಯೋಗದ ಕೆಲವು ಅಂಗಗಳು ಮಂತ್ರಯೋಗ ಮತ್ತು ಲಯಯೋಗಕ್ಕಾದರೂ ಪೋಷಕವಾಗಿವೆ. ಹಠಯೋಗದಿಂದ ಶುದ್ಧನಾದ ಜೀವನು ಅಂತರ್ಲಕ್ಷ್ಯವುಳ್ಳವನಾಗಿ ಬ್ರಹ್ಮ ಸಾಕ್ಷಾತ್ಕಾರ ಮಾಡಿಕೊಳ್ಳುವದು ರಾಜಯೋಗವೆನಿಸುವದು.
ʼʼ ಶಬ್ದಾತ್ಮಕ ಮಂತ್ರಯೋಗ ಸಾಧನೆಗಿಂತ ನಿಶ್ಯಬ್ದಾತ್ಮಕವಾದ ಮನೋಲಯ ವೆನಿಸುವ ಲಯಯೋಗವು ವಿಶೇಷವಾದುದು. ಪ್ರಾಣಾಯಾಮದ ಸಾಧನದಿಂದ ವಾಯುಜಯವನ್ನು ಪಡೆದು ಮನಸ್ಸಿನ ಸ್ಥಿರತೆ ಹೊಂದುವ ಹಠಯೋಗವು ಲಯಯೋಗಕ್ಕಿಂತ ಮಿಗಿಲಾಗಿದೆ. ಮನಸ್ಸು ಮತ್ತು ಅನಿಲಗಳನ್ನು ನಿರಾಯಾಸದಿಂದ ನಿಲಿಸಿ ನಿಜವಸ್ತು ಸಾಕ್ಷಾತ್ಕಾರವನ್ನು ಮಾಡಿಸುವ ರಾಜಯೋಗವು ಎಲ್ಲವುಗಳಿಗಿಂತ ಹೆಚ್ಚಿನದು ಎಂದು ನಿಜಗುಣ ಶಿವಯೋಗಿಗಳು ಯೋಗಮಾರ್ಗದ ಕ್ರಮಿಕತೆಯನ್ನು ಸಾರಿದ್ದಾರೆ. ಅಧಿಕ ಶ್ರಮ ಸಾಧ್ಯವಾದ ಯೋಗಫಲವನ್ನು ಶರಣರು ಒಪ್ಪಲಿಲ್ಲ. ಹಠಯೋಗವು ಹೆಸರಿಗೆ ತಕ್ಕಂತಿದೆ. ಅನ್ವರ್ಥಕತೆಯನ್ನು ಹೊಂದಿದೆ. ಹಟವೆಂದರೆ ಜೋರಾವರಿ ಅಥವಾ ಬಲಾತ್ಕಾರ. ಇಲ್ಲಿ ಸಹಜತೆಯಿರುವದಿಲ್ಲ. ಬಲಾತ್ಕಾರದಿಂದ ಇಂದ್ರಿಯಗಳನ್ನು, ಮನಸ್ಸನ್ನು, ವಾಯುವನ್ನು, ಬುದ್ಧಿಯನ್ನು ನಿಗ್ರಹಿಸುವ, ನಿರೋಧಿಸುವ ಯೋಗದಿಂದ ಸಂಕಟವಾಗದೆ ಇರದು.
ಇಂಥ ಸಂಕಷ್ಟದಿಂದಾಗುವ ಮೋಕ್ಷವೂ ದಿಟವಾದುದಲ್ಲ. ಅದು ಸಟೆಯಾದು ದೆಂದರೆ ಅನೇಕ ದುಃಖಗಳನ್ನು ಅನುಭವಿಸಿ ತನು-ಮನ-ಇಂದ್ರಿಯಗಳನ್ನು ಬಳಲಿಸಿ ಶಿವನ ಕೃಪಾಪ್ರಸಾದವನ್ನು ತ್ಯಜಿಸಿ ಯೋಗಿಯೆನಿಸಿ ಶರೀರ ನಾಶವಾದ ಮೇಲೆ ಮೋಕ್ಷವನ್ನು ಹೊಂದುವನು. ಅಣಿಮಾದಿ ಸಿದ್ಧಿಗಳನ್ನು ಪಡೆಯಬಹುದು. ಆದರೆ ಪುಣ್ಯಕ್ಷಯವಾದರೆ ಪುನಃ ಯೋಗಿಯು ಭವಕ್ಕೆ ಬರುವನು. ಅಲ್ಲದೆ ಯೋಗ ಭ್ರಷ್ಟರಾಗಿ ಜನ್ಮಾಂತರಗಳನ್ನು ಅನುಭವಿಸುವವರೇ ಹೆಚ್ಚು. ಇದು ಕಾರಣ ಸಂಕಷ್ಟ ದಿಂದ ಸಾಧ್ಯವೆನಿಸುವ ಹಠಯೋಗ ಮಾರ್ಗದಲ್ಲಿ ಲಭ್ಯವಾಗುವ ಮೋಕ್ಷವೂ ಸಟೆ ಯಾಗುವದು. ಅಂದರೆ ಸ್ಥಿರ (ಶಾಶ್ವತ) ಮೋಕ್ಷವಾಗುವುದಿಲ್ಲ.
ಇದನ್ನರಿತು ಸದ್ಗುರುವು ಕಾಯಘಟವನ್ನು ಸಂಸ್ಕರಿಸಿ ಶುದ್ಧಗೊಳಿಸಿ ಮಂತ್ರ ಮಯವಾಗಿಸಿ ಇಷ್ಟಲಿಂಗವನ್ನು ಸಂಗತ ಮಾಡುವನು. ಗುರೂಪದೇಶದಂತೆ ಸಾರ್ಥಕತೆಯನ್ನು ಪಡೆದ ಭಕ್ತನ ಕಾಯವು ಪಂಚಭೂತಗಳಲ್ಲಿ ಅಡಗುವಾಗ (ದೇಹಾವಸಾನದಲ್ಲಿ) ಲೂ ಶಿಷ್ಯನ ಸಂಗ ಬಿಡದ ಲಿಂಗವೇ ದಿಟವಾದುದು. ಈ ಲಿಂಗೈಕ್ಯನಾಗುವ ಮೋಕ್ಷವೇ ಸತ್ಯವಾದುದು. ಲಿಂಗ ಕಳೆಯಲ್ಲಿ ಅಂಗಕಳೆಯು ಬೆರೆತು ಮಹಾಕಳೆಯಾದ ಮೇಲೆ ಸ್ಥೂಲ ಕಾಯದೊಂದಿಗೆ ಹೋಗುವ ಇಷ್ಟಲಿಂಗವು ಸತ್ಯವಾಗಿಯೂ ಸಮರಸದ ಲಿಂಗವಾಗಿದೆ. ಕಾಯವಿಡಿದು ಕೈವಲ್ಯಕ್ಕೇರುವ ಕಷ್ಟವಿಲ್ಲದ ಯೋಗ ಲಿಂಗಾಂಗಯೋಗ. ಇದು ಕ್ರಿಯಾ-ಜ್ಞಾನಗಳ ಸಮನ್ವಯಯೋಗ, ಯೋಗಿಗಳ ಯೋಗದಲ್ಲಿ ಕ್ರಿಯೆ ಯಳಿದು ಕೇವಲ ಜ್ಞಾನ ಮಾರ್ಗದಿಂದ ಸಂತೃಪ್ತಿ ಸಮನಿಸಲಾರದು. ಸಕ್ಕರೆಯು ಸಿಹಿಯೆಂಬುವದು ಕೇವಲ ಜ್ಞಾನದಿಂದ ತಿಳಿಯದು. ಅದು ಕಾರಣ ಗುರುವು ಕರಣೇಂದ್ರಿಯಗಳನ್ನು ಸಂತೃಪ್ತಿಯಿದೆ. ನಿತ್ಯತೃಪ್ತತೆಯಿಂದ ಸತ್ಯಮುಕ್ತಿಯನ್ನು ಪಡೆಯಲು ಸಾಧ್ಯವಿದೆ. ಶಿವಯೋಗಸಾಧಕನಿಗೆ. ಆದ್ದರಿಂದ ಲಿಂಗಾಂಗಯೋಗವು ದಿಟವಾದುದು. ಅಂಥ ದಿಟಯೋಗದಲ್ಲಿ ಧೀರನಾಗುವ ಧೈರ್ಯವನ್ನು ದಯಪಾಲಿಸು ಗುರುತಂದೆಯೆ