ಕ್ರಾಂತಿಕಾರಿ ಶ್ರೀ ಕುಮಾರಯೋಗಿ

ಲೇಖಕರು : ಆಸ್ಥಾನ ವಿದ್ವಾನ್, ಪಂಡಿತರತ್ನ ಶ್ರೀ ಬಿ. ಶಿವಮೂರ್ತಿಶಾಸ್ತ್ರಿಗಳು

(ಶರಣ ಸಾಹಿತ್ಯ ವಿದ್ವಾಂಸ ಬಿ. ಶಿವಮೂರ್ತಿಶಾಸ್ತ್ರಿಗಳು ಬಸವಯ್ಯ ಹುಲಿಕುಂಟೆಮಠ- ನೀಲಮ್ಮ ದಂಪತಿ ಪುತ್ರರು. ತುಮಕೂರಿನಲ್ಲಿ 23-2-1903 ರಂದು ಜನಿಸಿದರು. ಗುಬ್ಬಿಯ ವೆಸ್ಲಿಯನ್ ಮಿಷನ್ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. 1936ರಲ್ಲಿ  ಮೈಸೂರು ಸಂಸ್ಥಾನದ ವಿದ್ವಾಂಸರಾದರು. ಸಾಹಿತ್ಯ ಪರಿಷತ್ತಿನ ಕನ್ನಡನುಡಿ ಮತ್ತು ಪರಿಷತ್ ಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ಮೈಸೂರು ಸರ್ಕಾರದ ಪ್ರತಿನಿಧಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿದ್ದರು. ಶರಣ ಸಾಹಿತ್ಯ ಮತ್ತು ಸ್ವತಂತ್ರ ಕರ್ನಾಟಕ ಪತ್ರಿಕೆಗಳ ಸ್ಥಾಪಕರೂ ಹೌದು. ಆಸ್ಥಾನ ವಿದ್ವಾನ್ ಬಿರುದಿನ ಜೊತೆಗೆ ಕೀರ್ತನ ಕೇಸರಿ ಎಂಬ ಬಿರುದೂ ಲಭಿಸಿತ್ತು.1966ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ದೊರಕಿತು. 1975ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ,  1968ರಲ್ಲಿ ಜನತೆ ದೇವಗಂಗೆ ಎಂಬ ಅಭಿನಂದನ ಗ್ರಂಥವನ್ನು ಸಮರ್ಪಿಸಿತು. ಕರ್ನಾಟಕ ಏಕೀಕರಣಕ್ಕೆ ದುಡಿದವರು,

ಕೃತಿಗಳು:  ರಾಘವಾಂಕನ ವೀರೇಶ ಚರಿತೆ, ಕೋಡಿಹಳ್ಳಿ ಕೇಶೀರಾಜನ ‘ಷಡಕ್ಷರ ಮಂತ್ರ ಮಹಿಮೆ’ ಗುರುಸಿದ್ದನ ಮಾದೇಶ್ವರ ಸಾಂಗತ್ಯ ಇತ್ಯಾದಿ.  ಕನ್ನಡ ನಿಘಂಟು ಕಾರ್ಯ (1964) ಪೂರ್ಣಗೊಳಿಸಿದರು.  ಭಾಷಣ ಕಲೆ ಅತ್ಯುತ್ತಮ ಮಾಧ್ಯಮವೆಂದು ತಿಳಿದಿದ್ದ ಅವರು ಕನ್ನಡ ನಾಡಿನಲ್ಲೇ ಪ್ರಪ್ರಥಮವಾಗಿ ಭಾಷಣಕಲಾತರಗತಿಗಳನ್ನು ಪ್ರಾರಂಭಿಸಿದ ಹಿರಿಮೆ ಶಾಸ್ತ್ರಿಗಳದ್ದು.  ಶಿವಮೂರ್ತಿ ಶಾಸ್ತ್ರಿಗಳ ಅವಧಿಯಲ್ಲಿ ಪುಸ್ತಕ ಭಂಡಾರಕ್ಕೆ ಸುಮಾರು 4000  ಪುಸ್ತಕಗಳ ಸೇರ್ಪಡೆ ಆಯಿತು. ಆರ್. ನರಸಿಂಹಾಚಾರ್ಯರ ಕವಿಚರಿತ್ರೆ ಪರಿಷ್ಕೃತವಾಗಿ ಪ್ರಕಟವಾಯಿತು. ಬಿ. ಶಿವಮೂರ್ತಿ ಶಾಸ್ತ್ರಿಗಳು ಅಧ್ಯಕ್ಷರಾಗಿದ್ದ ಅವಧಿಯಲ್ಲಿ 6 ಸಮ್ಮೇಳನಗಳು ನಡೆದಿವೆ. ಪರಿಷತ್ತಿಗೆ ನಾಡಿನ ನಾನಾ ಸಂಸ್ಥೆಗಳಲ್ಲಿ ಆಕಾಶವಾಣಿ, ದೂರದರ್ಶನ, ಶಿಕ್ಷಣ ಇಲಾಖೆ ಸಂಸ್ಕೃತಿ ಇಲಾಖೆ ಮೊದಲಾದ ಕಡೆ ಪ್ರಾತಿನಿಧ್ಯವಿರುವಂತೆ ಮಾಡಿದ್ದು ಶಾಸ್ತ್ರಿಗಳ ಹೆಗ್ಗಳಿಕೆಗಳಲ್ಲಿ ಒಂದು. ಬಿ. ಶಿವಮೂರ್ತಿ ಶಾಸ್ತ್ರಿಗಳು 15-01-1976 ರಲ್ಲಿ ಲಿಂಗೈಕ್ಯರಾದರು.

)

ವೀರಶೈವ ಸಂಸ್ಕೃತಿಯು ಇಂದಿನ ಪರಿಪಾಕ ಸ್ಥಿತಿಗೆ ಬರಬೇಕಾದರೆ, ಇದಕ್ಕೆ ಬಹುಕಾಲದಿಂದ ಬಹು ಜನ ಮಹಾಪುರುಷರು ಮಹಾತ್ಮರು ಮಾಡಿದ ಕಾರ್ಯಗಳು ಸೇವೆಯೂ ಕಾರಣವಾಗಿವೆ. ವೀರಶೈವ ಧರ್ಮ,ಸಾಹಿತ್ಯ, ಸಮಾಜಗಳ ಅಭಿವೃದ್ಧಿಗಾಗಿ ಸಾವಿರಾರು ವರ್ಷಗಳಿಂದ ಹಲವು ವಿಭೂತಿಗಳು ನಾನಾ ಬಗೆಯಾಗಿ ಹೆಣಗಿದ್ದಾರೆ. ಅವರೆಲ್ಲರ ತಪಸ್ಸಿನ, ತ್ಯಾಗದ, ಪ್ರತಿಭೆಯ, ಸಾಹಸದ ಫಲವೇ ಇಂದಿನ ವೀರಶೈವ ಸಮಾಜ. ಶ್ರೀ ರೇಣುಕಾದಿ ಆಚಾರ್ಯರು, ಶ್ರೀ ಬಸವಾದಿ ಪ್ರಮಥರು, ನೂರೊಂದು ಜನ ವಿರಕ್ತರು, ಮೊನೆ ಮೊನ್ನೆ ಆಗಿ ಹೋದ ತ್ಯಾಗವೀರ ಶಿರಸಂಗಿ ಲಿಂಗರಾಜ, ದಾನಶೂರ ವಾರದ ಮಲ್ಲಪ್ಪ, ಧರ್ಮಪ್ರಾಣ ಸಕ್ಕರೆ ಕರಡೆಪ್ಪ, ಧರ್ಮನಿಷ್ಕ ಯಜಮಾನ ವೀರಸಂಗಪ್ಪ ಮೊದಲಾದ ಆಧುನಿಕ ಮಹಾಪುರುಷರು ಲಿಂಗವಂತ ಸಮಾಜಕ್ಕಾಗಿ ಸರ್ವಾರ್ಪಣ ಮಾಡಿದ ಪುಣ್ಯಕ್ಕೆ ಭಾಗಿಗಳಾಗಿದ್ದಾರೆ.

ಇಂತಹ ಪುಣ್ಯ ಶ್ಲೋಕರ ಪಂಕ್ತಿಯಲ್ಲಿ ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳು ಗಣನಾರ್ಹರು.ಹಾನಗಲ್ಲ ಶ್ರೀಗಳು ವೀರಶೈವ ಮತದ ಸರ್ವತೋಮುಖವಾದ ಅಭಿವೃದ್ಧಿಗೆ ಬಹಳವಾಗಿ ಶ್ರಮಿಸಿದ ಮಹಾವಿರಕ್ತರು.

ವೀರಶೈವ ಸಮಾಜವು ಭಾರತ ದೇಶದಲ್ಲಿ ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ತನ್ನದೆ ಆದ ಮಹದ್ಗುಣಗಳಿಂದ ಹಲವಾರು ಶತಮಾನಗಳಿಂದ ಪರಿಶೋಭಿಸುತ್ತಿದೆ. ವೀರಶೈವ ದರ್ಶನವು ಜ್ಞಾನ, ಕರ್ಮ, ಯೋಗ,ಭಕ್ತಿಗಳ ಸಮನ್ವಯದಿಂದ ಪರಿಪೂರ್ಣವೆನಿಸಿ ಮುಮುಕ್ಷುಗಳ ಮನ್ನಣೆಗೆ ಪಾತ್ರವಾಗಿದೆ. ವೀರಶೈವ ರಾಜರ ಸೌಜನ್ಯ ಮತ್ತು ಪರಾಕ್ರಮಗಳ ಫಲವಾಗಿ, ವೀರಶೈವ ಕವಿಗಳ ಪ್ರತಿಭೆ ಮತ್ತು ಪಾಂಡಿತ್ಯಗಳ ಪರಿಣಾಮವಾಗಿ,ವೀರಶೈವ ಮಠಾಧಿಪತಿಗಳ ಕಾರ್ಯದಕ್ಷತೆ ಮತ್ತು ‘ದಾಸೋಹಂಭಾವ’ಗಳಿಂದಾಗಿ, ಈ ಸಮಾಜಕ್ಕೆ ಹೆಚ್ಚಿನ ಮಾನ ಮನ್ನಣೆಗಳು ದೇಶದ ಇತಿಹಾಸದಲ್ಲಿ ಪ್ರಾಪ್ತವಾಗಿವೆ.

ವ್ಯಕ್ತಿಗಳು ಸಮಾಜ ಜೀವಿಗಳು, ಸಮಾಜವನ್ನು ಅವಲಂಬಿಸಿ ವಿಕಾಸಗೊಳ್ಳುವದು ಮನುಷ್ಯನ ಹುಟ್ಟು ಗುಣವಾಗಿದೆ. ಸಂಘ ಜೀವನವು ಪ್ರಾಣಿಗಳಿಗೂ ಅನಿವಾರ್ಯವಾಗಿರುವಾಗ ಪ್ರಗತಿಪರ ಮಾನವನಿಗೂ ಅದು ಅನಿವಾರ್ಯವಾಗಿದೆ. ಸಮಾಜ ಶಾಸ್ತ್ರದ ಈ ವಿಕಾಸ ತತ್ತ್ವವನ್ನರಿತ ಲಿಂ. ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು ವೀರಶೈವ ಸಮಾಜದ ಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿಗಳ ರಕ್ಷಣೆಯ ಉದ್ದೇಶದಿಂದ ಅಖಿಲ ಭಾರತೀಯ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದರು. ಈ ಮಹತ್ಕಾರ್ಯ ಸಾಧನೆಗೆ ಸಮಾಜದ ಸಮಕಾಲೀನ ಮಹಾ ಪುರುಷರ ಮತ್ತು ಪ್ರತಿಭಾಶಾಲಿಗಳ ಬೆಂಬಲವನ್ನು ಪಡೆದರು. ಜನಸಾಮಾನ್ಯರಿಗೆ ಸಂಘಟನೆಯ ಮಂತ್ರವನ್ನು ಉಪದೇಶಿಸಿದರು; ಅವರ ಗಮನವನ್ನು ಮಹಾಸಭೆಯತ್ತ ಸೆಳೆದರು. ಈ ಮಹಾಸಭೆಯ ಚಟುವಟಿಕೆಗಳಿಂದ ವೀರಶೈವ ಧರ್ಮ ಸಂಸ್ಕೃತಿ ಮತ್ತು ಸಾಹಿತ್ಯಗಳ ಬೆಳವಣಿಗೆಗೆ ಮಾರ್ಗವಾಯಿತು.

ಇದುವರೆಗೆ ೧೯೦೪ ರಿಂದ ೧೯೫೯ರ ವರೆಗೆ ೫೫ ವರ್ಷಗಳ ಸುದೀರ್ಘವಾದ ಅವಧಿಯಲ್ಲಿಸಮಾಜದ ಗಣ್ಯ ಮಹನೀಯರ ಅಧ್ಯಕ್ಷತೆಯಲ್ಲಿ ನಾಡಿನ ಪ್ರಮುಖ ಸ್ಥಳಗಳಲ್ಲಿ ಹದಿನಾರು ಅಧಿವೇಶನಗಳು ನಡೆದಿವೆ. ೧೯೦೪ ಮತ್ತು ೧೯೦೫ರಲ್ಲಿ ಧಾರವಾಡ, ಬೆಂಗಳೂರಲ್ಲಿ ದಾನಶೂರ ಸಿರಸಂಗಿ ಲಿಂಗರಾಜರು;೧೯೦೭ರಲ್ಲಿ ಸೊಲ್ಲಾಪುರದಲ್ಲಿ ಸರ್ ಪುಟ್ಟಣ್ಣ ಶೆಟ್ಟರು; ೧೯೦೮ರಲ್ಲಿ ಬಾಗಿಲುಕೋಟೆಯಲ್ಲಿ ರಾಜ ಲಖಮನಗೌಡ ಒಂಟಮುರಿ ದೇಸಾಯಿ ಅವರು; ೧೯೦೯ರಲ್ಲಿ ಬಳ್ಳಾರಿಯಲ್ಲಿ ಪುಣ್ಯಶ್ಲೋಕ ಶ್ರೀವಾರದ ಮಲ್ಲಪ್ಪನವರು; ೧೯೧೦ರಲ್ಲಿ ಬೆಳಗಾಂವಿಯಲ್ಲಿ ಶ್ರೀ ಬುಳ್ಳಪ್ಪ ಬಸವಂತರಾಯರು; ೧೯೧೩ ರಲ್ಲಿ ನಿಪ್ಪಾಣಿಯಲ್ಲಿ ಶ್ರೀ ಅರಟಾಳ ರುದ್ರಗೌಡರು; ೧೯೧೭ರಲ್ಲಿ ದಾವಣಗೆರೆಯಲ್ಲಿ ಸರ್ ಪುಟ್ಟಣಶೆಟ್ಟರು; ೧೯೧೯ರಲ್ಲಿ ಬೀರೂರಿನಲ್ಲಿ ಶ್ರೀ ಮೆಣಸಿನಕಾಯಿ ಶಾಂತವೀರಪ್ಪನವರು; ೧೯೨೭ ರಲ್ಲಿ ಬೆಂಗಳೂರಿನಲ್ಲಿ ಸರ್ ಸಿದ್ದಪ್ಪ ಕಂಬಳಿ ಅವರು; ೧೯೩೩ರಲ್ಲಿ ಧಾರವಾಡದಲ್ಲಿ ಡಾ. ಫ.ಗು.ಹಳಕಟ್ಟಿ ಅವರು; ೧೯೩೪ರಲ್ಲಿ ರಾಯಚೂರಲ್ಲಿ ಸರ್ ಸಿದ್ದಪ್ಪ ಕಂಬಳಿ ಅವರು; ೧೯೩೮ರಲ್ಲಿ ಹುಬ್ಬಳ್ಳಿಯಲ್ಲಿ ಪ್ರೊ. ಎಸ್. ಎಸ್. ಬಸವನಾಳ ಅವರು; ೧೯೪೦ ರಲ್ಲಿ ಕುಂಭಕೋಣದಲ್ಲಿ ಬ್ಯಾರಿಸ್ಟರ್ ಎಂ.ಎಸ್.ಸರದಾರ ಅವರು; ೧೯೪೫ ರಲ್ಲಿ ತುಮಕೂರಿನಲ್ಲಿ ಶ್ರೀ ಸಿ. ಸಿ. ಹುಲಕೋಟಿ ಅವರು; ೧೯೫೫ರಲ್ಲಿ ಬಸವಕಲ್ಯಾಣದಲ್ಲಿ ಶ್ರೀ ಬಂಥನಾಳ ಶಿವಯೋಗಿಗಳವರ ಅಧ್ಯಕ್ಷತೆಯಲ್ಲಿ ಹದಿನಾರು ಅಧಿವೇಶನಗಳು ನಡೆದಿವೆ.

ಈ ಅವಧಿಯಲ್ಲಿ ಸಮಾಜದ ಅನೇಕ ಮಹತ್ಕಾರ್ಯಗಳು ನಡೆದಿವೆ. ಈ ಮಹಾಸಭೆಯ ಅಧಿವೇಶನಗಳು ನಡೆಯಲು ಆರ್ಥಿಕ ಸಹಾಯವನ್ನು ಕೊಡುವದಕ್ಕಾಗಿ ೧೯೧೭ರಲ್ಲಿ ಚಿತ್ರದುರ್ಗದ ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ ಪ್ರಯತ್ನದ ಫಲವಾಗಿ ‘ಚಿರಸ್ಥಾಯಿ ನಿಧಿ’ಯ ಸ್ಥಾಪನೆಯಾಯಿತು.

ವ್ಯಕ್ತಿಯು ಸಮಾಜದ ಅಂಗ, ಸಮಾಜವು ರಾಷ್ಟ್ರದ ಒಂದು ಭಾಗ. ಕಾರಣ, ವ್ಯಕ್ತಿಯ ಉನ್ನತಿಯು ಸಮಾಜಕ್ಕೂ, ಸಮಾಜದ ಅಭ್ಯುದಯವು ದೇಶಕ್ಕೂ ಪರಸ್ಪರ ಪೂರಕವಾದುದು. ಈ ಅರ್ಧ ಶತಮಾನದಲ್ಲಿಆಗಿರುವ ಎಲ್ಲ ಸಾಮಾಜಿಕ ಮಹತ್ಕಾರ್ಯಗಳಿಗೆ ವೀರಶೈವ ಮಹಾಸಭೆಯು ಎಲ್ಲ ರೀತಿಯಲ್ಲಿ ಮೂಲವಾಗಿದೆ.ಮಹಾಸಭೆಯಿಂದ ಅಷ್ಟೇನು ಕಾರ್ಯ ಸಾಧನೆಯಾಗಿಲ್ಲವೆಂದು ಗೊಣಗುಟ್ಟುವ ಜನ ‘ಮಹಾಸಭೆಗಾಗಿ ನಾವೆಲ್ಲರೂ ಒಂದಾಗಿ ಶ್ರಮಿಸಬೇಕು.’ ಎಂಬ ಭಾವನೆಯನ್ನು ಬೆಳೆಸಿಕೊಳ್ಳಲಿ. ದೇಶದಲ್ಲಿ ಕಂಗೊಳಿಸುವ ವೀರಶೈವ ವಿದ್ಯಾರ್ಥಿನಿಲಯಗಳು, ವಿದ್ಯಾರ್ಥಿವೇತನ ನಿಧಿಗಳು, ಸ್ಕೂಲು-ಕಾಲೇಜುಗಳು, ಶಿವಯೋಗಮಂದಿರದಂಥ ಮಹಾ ಸಂಸ್ಥೆಗಳೂ ಜನ್ಮ ತಾಳಿರುವದಕ್ಕೆ ವೀರಶೈವ ಮಹಾಸಭೆಯು ಮೂಲವಾಗಿದೆ.ಇಂದಿನ ಶಿಕ್ಷಿತ ವೀರಶೈವರ ಮನಸ್ಸು ತಪೋಧನರಾದ, ಕರ್ಮಯೋಗಿಗಳಾದ ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು ತೋರಿದ ದಾರಿಯಲ್ಲಿ ಮುಂದುವರಿದಾಗಲೇ ಸಮಾಜದ ಕಲ್ಯಾಣ ಸಾಧ್ಯ.

ಹಾನಗಲ್ಲ ಕುಮಾರ ಶಿವಯೋಗಿಗಳು ವೀರಶೈವ ಮಹಾಸಭೆ, ಶಿವಯೋಗಮಂದಿರಗಳ ಸಂಸ್ಥಾಪಕರೆಂದು ಮಾತ್ರ ಅವರನ್ನು ನಾವು ಗೌರವಿಸಬೇಕಾಗಿಲ್ಲಅವರ ಧೈಯ-ಧೋರಣೆಗಳು ಉದಾತ್ತವಾದವು ವಿಧಾಯಕವಾದವು. ವೀರಶೈವ ಸಮಾಜವನ್ನು ಸರ್ವಾಂಗ ಸುಂದರವನ್ನಾಗಿ ಮಾಡಬೇಕೆಂಬುದೇ ಅವರ ಜೀವಿತದ ಪರಮಧ್ಯೇಯವಾಗಿದ್ದಿತು. ವೀರಶೈವ ಸಿದ್ಧಾಂತ, ಸಾಹಿತ್ಯ, ಸಂಸ್ಕೃತಿಗಳನ್ನು ಅವರು ಚೆನ್ನಾಗಿ ತಿಳಿದುಕೊಂಡು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ವೀರಶೈವ ಸಂಸ್ಕೃತಿಯೇ ಅವರ ರೂಪದಲ್ಲಿಸಾಕಾರವಾದಂತಿತ್ತು ಹಗಲಿರುಳು ಅವರು ವೀರಶೈವ ಸಮಾಜದ ಅಭಿವೃದ್ಧಿ ಚಿಂತನೆಯನ್ನು ಮಾಡುತ್ತಿದ್ದರು.

ಸಮಾಜದ ಸುಖ ದುಃಖಗಳು, ಮಾನಾಪಮಾನಗಳು ತಮ್ಮವೆಂದು ಭಾವಿಸಿದ್ದರು. ಸಮಾಜವೇ ತಾವು, ತಾವೇ ಸಮಾಜವಾಗಿದ್ದರು.ಶ್ರೀಗಳವರು ಪಂಡಿತರ ತಂಡವನ್ನು ನಿರ್ಮಿಸಿದರು, ಸಂಗೀತ ಕಲೆಯನ್ನು ಬೆಳಗಿಸಿದರು, ಕವಿಗಳಿಗೆ ಮಾರ್ಗದರ್ಶನ ಮಾಡಿದರು, ಸಂಸ್ಕೃತ ಭಾಷೆಯ ಪ್ರಚಾರ ಕೈಗೊಂಡರು. ಅವರು ಕೀರ್ತಿಯನ್ನು ತಿರಸ್ಕರಿಸಿದರು. ಕೀರ್ತಿಯು ಮಾತ್ರ ಅವರನ್ನು ಪುರಸ್ಕರಿಸಿತು. ಅವರು ಪಲ್ಲಕ್ಕಿಯನ್ನು ಹತ್ತಿದವರಲ್ಲ. ಆದರೆ ಪಲ್ಲಕಿಯವರು ಅವರ ಸನ್ನಿಧಿಗೆರಗದಿರಲಿಲ್ಲ !

ವೀರಶೈವ ಸಮಾಜದಲ್ಲಿ ಗ್ರಂಥಪ್ರಚಾರ ಮಾಡಿದ ಮಹನೀಯರು ಕೆಲವರು, ವಿದ್ಯಾಪ್ರಚಾರ ಮಾಡಿದ ಪುಣ್ಯಾತ್ಮರು ಕೆಲವರು. ತತ್ವೋಪದೇಶ ಮಾಡಿದವರು ಕೆಲವರು. ಪಾಠಶಾಲೆಗಳನ್ನು ಸ್ಥಾಪಿಸಿದವರು ಕೆಲವರು.ಯೋಗವಿದ್ಯೆಯನ್ನು ಕಲಿಸಿದವರು ಕೆಲವರು, ಪರವಾದಿಗಳ ಕೂಡ ವಾದಿಸಿದವರು ಕೆಲವರು. ಸದಾಚಾರಕ್ಕೆ ಮಾರ್ಗದರ್ಶಕರಾದವರು ಕೆಲವರು, ಸಮಾಜ ಸಂಘಟನೆಗಾಗಿ ಪ್ರಯತ್ನಿಸಿದವರು ಕೆಲವರು.ಇವೆಲ್ಲವನ್ನೂ ಸಾಧಿಸಿದ ಒಬ್ಬರೇ ಒಬ್ಬ ಮಹಾತ್ಮರೆಂದರೆ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು.

ಒಟ್ಟಿನಲ್ಲಿ ವೀರಶೈವ ಸಮಾಜಕ್ಕಾಗಿ ತಮ್ಮ ಜೀವಿತವನ್ನು ಧಾರೆಯೆರೆದವರು ಹಾನಗಲ್ಲ ಶ್ರೀಗಳು.ಭಾರತದ ಕಲ್ಯಾಣಕ್ಕಾಗಿ ಮಹಾತ್ಮಾ ಗಾಂಧಿಯವರು, ಹಿಂದೂ ಧರ್ಮದ ಉದ್ಧಾರಕ್ಕಾಗಿ ಪಂಡಿತ ಮಾಲವೀಯರು, ಬಡಜನರ ದುಃಖನಿವಾರಣೆಗಾಗಿ ಪಂಡಿತ ನೆಹರೂಜಿಯವರು ತೋರಿದ ತೋರುತ್ತಿರುವ ತ್ಯಾಗವನ್ನೆ ಶ್ರೀಗಳು ವೀರಶೈವರ ಅಭ್ಯುದಯಕ್ಕಾಗಿ ತೋರುತ್ತಿದ್ದರು. ಈ ಎಲ್ಲ ಕಾರಣಗಳಿಂದ ವೀರಶೈವ ಚರಿತ್ರೆಯಲ್ಲಿ ಶ್ರೀಗಳು ಶ್ರೀ ರೇಣುಕಾಚಾರ್ಯ ಮತ್ತು ಶ್ರೀ ಬಸವೇಶ್ವರ ಮೊದಲಾದ ಮಹಾತ್ಮರಂತೆ ಯುಗಾವತಾರಿಗಳಾಗಿದ್ದಾರೆ. ವಂದನೀಯರಾಗಿದ್ದಾರೆ. ಇಂದಿನ ಯುಗದಲ್ಲಿ ಧಾರ್ಮಿಕ, ಸಾಮಾಜಿಕ,ಶೈಕ್ಷಣಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಕ್ರಾಂತಿಯನ್ನು ಮಾಡಿ ಪ್ರಗತಿಯನ್ನು ಸಾಧಿಸಿದ ಶ್ರೇಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲಬೇಕು.

Related Posts