ಮಹಾಲಿಂಗಯ್ಯನವರು ವೀರಯ್ಯನವರು ಹಿರೇಮಠ
ಲಿಂಗೈಕ್ಯ ಶ್ರೀಮನ್ನಿರಂಜನ ಪ್ರ. ಸ್ವ, ಶ್ರೀ. ಶಿವಯೋಗಮಂದಿರದ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರಿಂದ ಪರಿಷ್ಕರಿಸಲ್ಪಟ್ಟಿದ್ದು.
ಸಂಗ್ರಹ : ಪೂಜ್ಯ ನಾಗನಾಥ ದೇವರು ಸೋಮಸಮುದ್ರ
ನಿಚ್ಚಲುಂ ಶಿವರಾತ್ರಿಯಂ ಮಾ |
ಳ್ಪಚ್ಚರಿಯೆನಿಪ ಭಾಷೆ ಭಕ್ತರ |
ನಚ್ಚ ಶಿವನೆಂದಿರ್ಪ ಭಾಷೆ ಶಿವೈಕ್ಯರೆಗ್ಗುಗಳ ||
ಎಚ್ಚರಿಸದಿಹ ಭಾಷೆ ಶರಣರ |
ಹೆಚ್ಚು ಕುಂದುಗಳಂ ನುಡಿಯದಿಹ |
ಸಚ್ಚರಿತ್ರದ ಭಾಷೆ ಏನುವಂ ವಂಚಿಸದ ಭಾಷೆ. ||೧||
ಮೃಡನನಾದೊಡೆಯೊಂದು ಬಾರಿಗೆ |
ಕಡಗಿ ಬೇಡಡ ಭಾಷೆ ಏನಾ|
ದೊಡೆ ಬಯಸಿದೊಡವಿಗಳನಡಿಯಿಡದೀವುದದು ಭಾಷೆ ||
ನುಡಿದು ಪುಸಿಯದ ಭಾಷೆ ನೆನಪಿನ |
ಗಡಣೆಯಂತಂ ತೋರೆಯಿಲ್ಲದೆ |
ನುಡಿವ ಭಾಷೆಯು ನುಡಿದಹಗೆ ತಾಂ ನಡೆಸುವುದು ಭಾಷೆ. ||೨||
ಛಲವನಳಿಯದ ಭಾಷೆ ಭಕ್ತರ |
ಸಲುಗೆಯಂ ಸಲಿಸುವುದು ಭಾಷೆಯ |
ಚಲಿತ ದಾಸೋಹವನು ವಿರತಂ ಮಾಳ್ಪುದದು ಭಾಷೆ |
ನಲಿದು ಕನಸಿನೊಳುಂ ಪಿನಾಕಿಗೆ |
ಗೆಲವನೀಯದ ಭಾಷೆ ಭಕ್ತರು |
ಗಳಿಗೆ ಗೆಲವಂ ಕೊಟ್ಟು ತಾಂ ಶರಣೆಂಬುದದು ಭಾಷೆ. ||೩||
ಪರಸಮಯಿಗಳ ದರ್ಪಮಂ ಸಂ
ಹರಿಪ ಭಾಷೆ ಕುತರ್ಕದಿಂ ಮ |
ತ್ಸರಿಪ ಪರವಾದಿಗಳನೊಮ್ಮೆಗೆ ಸೋಲಿಸುವ ಭಾಷೆ ||
ಪರಮನಂ ನಿಂದಿಸುವವೊಂದಿರ |
ನೊರಸಿ ಕಳೆವುದು ಭಾಷೆ ಹರ ಭ|
ಕ್ತರನುದಾಸೀನದಿ ನುಡಿವ ನುಡಿಗೇಳದದು ಭಾಷೆ. ||೪||
ಹರ ಶರಣ ಪರತಂತ್ರ ಭಾವದೆ|
ಬೆರಸಿ ಚರಿಸುವ ಭಾಷೆ ಎಂದುಂ |
ಹರ ಗಣಾರ್ಪಿತವಾಗದಿನಿತುಂ ಮುಟ್ಟದಿಹ ಭಾಷೆ ||
ಶರಣರೇನೆಂದೊಡೆಯವರಿಗು |
ತ್ತರವನೀಯದ ಭಾಷೆ ಜಂಗಮ|
ವರರ ನೆಗಳು ಪ್ರಾಣಲಿಂಗವೆನಿಪ್ಪುದದು ಭಾಷೆ. ||೫||
ನರರುಮಂ ಯಾಚಿಸದ ಭಾಷೆ ಇ ]
ತರ ಜನಕೆ ಕೈ ಮುಗಿಯದದು ನಿ|
ರ್ಬರದ ಭಾಷೆ ಭವೌಘ ಬಾಧೆಗೆ ಸಿಲ್ಕದಿಹ ಭಾಷೆ ||
ಕರಣವಿಷಯಕ್ಕಿಂಬುಗುಡದ |
ಚ್ಚರಿಯ ಭಾಷೆ ಷಡರಿಗಳಂ ಪರಿ |
ಹರಿಪ ಭಾಷೆ ಶಿವೈಕ್ಯ ಭಕ್ತಿಯನಲರಿಸುವ ಭಾಷೆ. ||೬||
ನೆಟ್ಟ ನೀಶಾಚಾರಮಂ ಮುಂ |
ದಿಟ್ಟು ಬಳೆಯಿಪ ಭಾಷೆ ತಲೆ ಪರಿ |
ದಟ್ಟಿಯುಳಿದೊಡೆ ಶರಣೆನುತ್ತಿಹ ಭಾಷೆ ತಲೆಗಟ್ಟಿ ||
ಬಿಟ್ಟೊಡಂ ವಂದಿಸುವ ಭಾಷೆಯು |
ಮುಟ್ಟಿದೊಡೆ ಹಿಮ್ಮೆಟ್ಟದಗ್ಗದ |
ಗಟ್ಟಿ ಭಾಷೆ ಇವೆಲ್ಲವಂ ತುದಿ ಮುಟ್ಟಿಸುವ ಭಾಷೆ ||೭||
ದ್ವಿತೀಯ ಶಂಭುವೆನಿಸಿದ ನಂದಿಕೇಶ್ವರನು ಭೂಲೋಕದಲ್ಲಿ ಕಾರಣಿಕ ಪುರುಷನಾಗಿ ಬಸವನಾಮದಿಂದ ಅವತರಿಸಿ ಅನೇಕ ಪ್ರತಿಜ್ಞೆಗಳನ್ನು ಮಾಡಿ ಅದರಂತೆ ನಡೆದು ತೋರಿಸಿದುದು ಜಗತ್ಪಸಿದ್ಧವಾಗಿರುವುದು. ಭೀಮ ಕವಿಯು ತನ್ನಿಂದ ರಚಿಸಲ್ಪಟ್ಟ ಬಸವಪುರಾಣದ ಆರನೆಯ ಸಂಧಿಯ ಪ್ರಾರಂಭದಲ್ಲಿ ಆ ಅನೇಕ ಪ್ರತಿಜ್ಞೆಗಳಲ್ಲಿ ೩೪ ನ್ನು ಮಾತ್ರ ೭ ಪದ್ಯಗಳಲ್ಲಿ ಉಸುರಿರುವನು. ಅವುಗಳನ್ನೇ ಮೇಲೆ ಉದ್ಧರಿಸಲಾಗಿದೆ.
ಈ ೩೪ ಭಾಷೆಗಳಲ್ಲಿ ಮಾದರಿಗಾಗಿ ಒಂದನ್ನು ಮಾತ್ರ ಇಲ್ಲಿ ವಿಶದವಾಗಿ ವಿವರಿಸಿರುತ್ತೇವೆ. ಹೀಗೆಯೇ ಎಲ್ಲ ಭಾಷೆಗಳ ಅರ್ಥ-ತಾತ್ಪರ್ಯವನ್ನು ತಿಳಿಯಲು ಇಚ್ಛಿಸುವ ಓದುಗರು ಲಿಂಗೈಕ್ಯ ಶ್ರೀಮನ್ನಿರಂಜನ ಪ್ರ. ಸ್ವ, ಶ್ರೀ. ಶಿವಯೋಗಮಂದಿರದ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರಿಂದ ಪರಿಷ್ಕರಿಸಲ್ಪಟ್ಟು. ಶಿ. ಮಹಾಲಿಂಗಯ್ಯನವರು ವೀರಯ್ಯನವರು ಹಿರೇಮಠ ಇವರಿಂದ ಪ್ರಸಿದ್ಧಿಸಲ್ಪಟ್ಟ ‘ಬಸವ ಭಾಷೆ ‘ ಎಂಬ ಪುಸ್ತಕವನ್ನು ಅವಲೋಕಿಸ ಬೇಕಾಗಿ ಸೂಚನೆ.
ಮೊದಲನೆಯ ಭಾಷೆ : ನಿಚ್ಚಲುಂ ಶಿವರಾತ್ರಿಯಂ ಮಾಚ್ಚರಿಯೆನಿಪ ಭಾಷೆ
ಅರ್ಥ:- ನಿಚ್ಚಲು = ಪ್ರತಿದಿನವೂ, ಶಿವರಾತ್ರಿಯಂ = ಶಿವಯೋಗವನ್ನು, ಮಾಳ್ಪ = ಮಾಡುತ್ತಿರುವ, ಅಚ್ಚರಿಯೆನಿಪ = ಆಶ್ಚರ್ಯವೆಂದು, ತೋರುವ ಭಾಷೆ=ಪ್ರತಿಜ್ಞೆಯು.
ವಿವರಣೆ :- ಶಿವರಾತ್ರಿ* ಇದು ವರ್ಷಕ್ಕೊಂದುಸಾರೆ ಮಾಘ ಕೃಷ್ಣ ಪಕ್ಷ ಚತುರ್ದಶಿಯಲ್ಲಿ ಮಾಡಲ್ಪಡುವುದು ಮಹಾ ಶಿವರಾತ್ರಿಯೆಂದೂ – ಪ್ರತಿ ತಿಂಗಳು ಕೃಷ್ಣ ಪಕ್ಷ ಚತುರ್ದಶಿಯಲ್ಲಿ ಮಾಡಲ್ಪಡುವುದು ಮಾಸ ಶಿವರಾತ್ರಿಯೆಂದೂ ಕರೆಯಲ್ಪಡುವುದು. ಶಿವಭಕ್ತರು ಈ ಎರಡೂ ಪ್ರಕಾರದ ಶಿವರಾತ್ರಿಗಳಲ್ಲಿಯೂ ಶಿವಸನ್ನಿಧಿಯನೈದು, ಕಾಮ – ನಿಷ್ಕಾಮವೆಂಬ ಉಭಯ ವಿಧಿಗಳಲ್ಲಿ, ತಮಗೆ ಬೇಕಾದ ವಿಧಿಯಿಂದ, ಶಿವಾರ್ಚನೆ, ಶಿವಕಥಾಶ್ರವಣ, ಜಾಗರಣ ಮೊದಲಾದ ಸತ್ಕ್ರಿಯೆಗಳನ್ನು ಮಾಡುವುದು ಪ್ರಸಿದ್ಧವಾಗಿರುವುದು.
ಶ್ರೋತ್ರಾದಿ ಜ್ಞಾನೇಂದ್ರಿಯಗಳೈದು, ವಾಗಾದಿ ಕರ್ಮೇಂದ್ರಿಯಗಳೈದು, ಮಾನಸಾದಿ ಅಂತಃಕರಣಗಳು ನಾಲ್ಕು – ಅಂತು ಹದಿನಾಲ್ಕು ಕರಣಗಳನ್ನು ಶಿವಲಿಂಗಕ್ಕರ್ಪಿಸಿದರೆ ( ಶಿವಧರ್ಮ ಕಾರ್ಯಗಳಲ್ಲಿ ಸವೆಸಿದರೆ) ಅದು ಚತುರ್ದಶಿ ಎನಿಸುವುದು. ಆ ಶಿವಲಿಂಗದ ನೆನಹಿನಲ್ಲಿ ಮನವು ಮಗ್ನವಾಗಿ ಹೋಗಲು ಅದು ಶಿವರಾತ್ರಿ ಎನಿಸುವುದು. ಆ ಶಿವಜ್ಞಾನದ ಎಚ್ಚರ ಕುಂದದಿರಲು ಜಾಗರಣವೆನಿಸುವುದು. ಇದೇ ವೀರಶೈವರು ಮುಖ್ಯವಾಗಿ ಪ್ರತಿ ದಿನದಲ್ಲಿ ಆಚರಿಸುವ ಆಶ್ಚರ್ಯಕರವಾದ ಶಿವರಾತ್ರಿಯು.** ಇದೇ ಶಿವಯೋಗವೆಂದು ಹೇಳಲ್ಪಡುತ್ತಿದೆ.
ಜ್ಞಾನ, ಭಕ್ತಿ, ಧ್ಯಾನ, ವೃತ, ಅರ್ಚನವೆಂಬ ಅಂಗಗಳುಳ್ಳ ಶಿವಯೋಗಕ್ಕೆ ಶಿವಜ್ಞಾನಾದಿ ನಾಲ್ಕು ಅಂಗಗಳು ಗರ್ಭೀಕರಿಸಿಕೊಂಡಿರುವುದರಿಂದ ಶಿವಾರ್ಚನೆಯೇ ಮುಖ್ಯವೆನಿಪ ಶಿವಯೋಗವೆಂಬುದಾಗಿ ಹೇಳಿರುವುದು. ಈ ಉಭಯ ಪಕ್ಷವನ್ನು ವಿಚಾರಿಸಿ ನೋಡಿದರೆ ಶಿವಾರ್ಚನೆಗಿಂತಲೂ ಮೊದಲೆ ಶಿವಜ್ಞಾನಾದಿ ನಾಲ್ಕು ಅಂಗಗಳನ್ನು ಸಾಮಾನ್ಯವಾಗಿ ಸಂಗ್ರಹಿಸಿ ಶಿವಾರ್ಚನೆಯ ಕಾಲಕ್ಕೆ ವಿಶೇಷ ರೂಪದಿಂದ ಕೂಡಿಕೊಂಡು ಆಚರಿಸತಕ್ಕದ್ದು ಎಂದು ಗೊತ್ತಾಗುವುದು. ಅನ್ಯ ಮತಜ್ಞಾನ ನಿಷೇಧವೂ ಅನ್ಯ ದೇವತಾ ನಿಷೇಧವೂ ಜ್ಞಾನ – ಭಕ್ತಿಗಳೆಂಬ ಎರಡು ಅಂಗ ಗಳಲ್ಲಿ ಉಕ್ತವಾಗಿರುವುದರಿಂದ ಈ ಎರಡನ್ನೂ ಪೂಜಾ ಕಾಲದಲ್ಲಿ ಆಚರಿಸಿದರೆ ಶಿವಯೋಗಕ್ಕೆ ಕೇವಲ ವಿರೋಧವೆನಿಸುವುದು. ಆದ್ದರಿಂದ ಶಿವಾರ್ಚನೆಯಲ್ಲಿ ಅನ್ಯ ಭಾವನೆಯಿಲ್ಲದೆ ಶಿವಾಕಾರ ವೃತ್ತಿಯುಳ್ಳ ಶಿವಜ್ಞಾನ, ಶಿವಭಕ್ತಿಗಳನ್ನು ಗುರುಮುಖದಿಂದರಿದು ವಿಶೇಷ ರೂಪದಿಂದ ಆಚರಿಸತಕ್ಕದ್ದು. ಮತ್ತು ಶಿವಧ್ಯಾನ, ಶಿವವೃತ ಈ ಎರಡು ಅಂಗಗಳನ್ನು ರುದ್ರರೂಪಿಯಾಗುವುದಕೋಸ್ಕರ ಪೂಜಾಸನದಲ್ಲಿ ಕುಳಿತನಂತರ ಸಾಮಾನ್ಯ ರೂಪದಿಂದ ಮಾಡತಕ್ಕದ್ದು. ಶಿವಾರ್ಚನೆಯ ಕಾಲದಲ್ಲಿ ಗುರು ನಿರೂಪಿಸಿದಂತೆ ವಿಶೇಷ ರೂಪವಾಗಿ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗಗಳ ಅರ್ಚನೆಯನ್ನು ಆಚರಿಸತಕ್ಕದ್ದು. ಹೀಗೆ ಐದು ಅಂಗಗಳಿಂದ ಕೂಡಿದುದೇ ಶಿವಯೋಗವೆಂದು ಎನಿಸಿಕೊಳ್ಳುವುದು. ಇದೇ ವೀರಶೈವರ ಶಿವರಾತ್ರಿಯು, ಇಂತಹ ಶಿವರಾತ್ರಿಯನ್ನು ಪ್ರತಿದಿನವೂ ಮಾಡುವೆನೆಂಬುದು ಭಗವಾನ್ ಬಸವೇಶ್ವರನ ಮೊದಲನೆಯ ಪ್ರತಿಜ್ಞೆಯು.
* ಶಿವರಾತ್ರಿ- ರಾಶಿ ಸುಖಮಿತಿ ರಾತ್ರಿಃ – ಸುಖವನ್ನು ಕೊಡುವುದಾದುದರಿಂದ ರಾತ್ರಿಯೆನಿಸಿಕೊಳ್ಳುವುದು. ಶಿವಸ್ಯ ರಾತ್ರಿಃ – ಶಿವರಾತ್ರಿ – ಶಿವಸಂಬಂಧ ಸುಖವನ್ನು ಕೊಡುವುದರಿಂದ ಶಿವರಾತ್ರಿಯೆನಿಸುವುದು. (ಶಿವಯೋಗಿಗಳಿಗೆ ಶಿವಸಂಬಂಧ ನಿತ್ಯವಾದ ಅಖಂಡ ಸುಖವನ್ನು ಕೊಡುವುದರಿಂದ ಶಿವರಾತ್ರಿಯೆನಿಸಿಕೊಳ್ಳು ವುದು, ಮಿಕ್ಕವರಿಗೆ ಕ್ಷಣಿಕವೆನಿಸಿ ಮಾಯಾ ಸಂಬಂಧ ಸುಖವನ್ನು ಕೊಡುವುದರಿಂದ ರಾತ್ರಿಯೆನಿಸಿಕೊಳ್ಳು ವುದು. ) ವಿವೇಕಿಗಳಾದವರು ಶಿವಸಂಬಂಧವಾದ ರಾತ್ರಿಯನ್ನೇ ಸಾಧಿಸಬೇಕು.
** ಈ ಶಿವರಾತ್ರಿಯ ದಿವಸ ನಿರಾಹಾರಿಯಾಗಿ, ಉಪವಾಸ ಮಾಡಬೇಕೆಂಬ ವಿಧಿಯು ಕರ್ಮಿಗೆ ಉಂಟು. ಆದರೆ ವೀರಶೈವನು ಶಿವಪೂಜಾಕರ್ಮನಿಷ್ಠನಾದುದರಿಂದ ಶಿವಸನ್ನಿಧಿಯಲ್ಲಿ ವಾಸ ಮಾಡುವುದೇ ಉಪವಾಸವೆಂತಲೂ ಜಡ ಜೀವಿಗಳಂತೆ ಅಂಗಭೋಗಿಯಾಗದೆ ಲಿಂಗಭೋಗೋಪಭೋಗಿಯಾದುದರಿಂದ ನಿರಾಹಾರಿಯೆಂತಲೂ ಉಂಡು ಉಪವಾಸಿಯೆಂತಲೂ ಹೇಳಿರುವುದರಿಂದ ವೀರಶೈವನು ಇತರರಂತೆ ಉಪವಾಸ ಮಾಡುವವನಲ್ಲವೆಂದು ತಿಳಿಯತಕ್ಕದ್ದು.