ಶ್ರೀ ಮನ್ನಿರಂಜನ ಪ್ರಣವಸ್ವರೂಪಿ ಲಿಂ. ಶಿವಬಸವ ಮಹಾಸ್ವಾಮಿಗಳರು ಹುಕ್ಕೇರಿಮಠ ಹಾವೇರಿ ಶ್ರೀಗಳವರ ಧರ್ಮಪ್ರಸಾರ ಕಾರ್ಯ

ಲೇಖಕರು : ಲಿಂ.ಶ್ರೀ ಚೆನ್ನಮಲ್ಲಿಕಾರ್ಜುನ, ಮೈಸೂರು,

ಶ್ರೀ ಮನ್ನಿರಂಜನ ಪ್ರಣವಸ್ವರೂಪಿ ಲಿಂ. ಶಿವಬಸವ ಮಹಾಸ್ವಾಮಿಗಳರು ಹುಕ್ಕೇರಿಮಠ ಹಾವೇರಿ, ಅವರು ಪರಮ ಪೂಜ್ಯರಾದ ಲಿಂ. ಶ್ರೀ ಸದಾಶಿವ ಮಹಾ ಸ್ವಾಮಿಗಳು (ಕುಮಾರ ಸ್ವಾಮಿಗಳು) ಹಾನಗಲ್ಲ, ಅವರ ಪ್ರಥಮ ಪರಿಚಯ ಮಾಡಿಕೊಂಡ ಕಾಲದಿಂದಲೂ ನಾನು ಹಾವೇರಿ ಶ್ರೀಗಳವರ ಸಂಪರ್ಕದಲ್ಲಿದ್ದೆನು. ಉಭಯ ಶ್ರೀಗಳವರು ವೀರಶೈವ ಸಮಾಜ ಪುರುಷನ ಎಡಗೈ-ಬಲಗೈಯಾಗಿ ಅನೇಕ ಮಹತ್ಕಾರ್ಯಗಳನ್ನು ಮಾಡಿರುವರು. ಪ್ರತಿಯೊಂದು ಕಾರ್ಯದಲ್ಲಿಯೂ ಹಾನಗಲ್ಲ ಶ್ರೀಗಳವರು ಹಾವೇರಿ ಶ್ರೀಗಳವರ ಅಭಿಪ್ರಾಯವನ್ನು ತೆಗೆದುಕೊಂಡು ಇಬ್ಬರೂ ಸೇರಿ ಕಾರ್ಯಗಳನ್ನು ಪ್ರಯತ್ನ ಪೂರ್ವಕವಾಗಿ ನಿರ್ವಹಿಸುತ್ತಿದ್ದರು.

ಹಾವೇರಿ ಶ್ರೀಗಳವರಲ್ಲಿ ಒಂದು ದಿವ್ಯ ತೇಜಸ್ಸಿದ್ದಿತು. ಅವರಿಗೆ ಶಿವ ಯೋಗವು ಸಂಪೂರ್ಣವಾಗಿ ಸಾಧಿಸಿದ್ದಿತು. ಅದರಲ್ಲಿ ಅವರು ಸಿದ್ಧಿ ಪಡೆದಿದ್ದರು. ಲಿಂಗಪೂಜೆಯನ್ನು ಮಾಡುವಾಗ ಯಾವ ಜನರು ಎಷ್ಟು ದೂರದಲ್ಲಿದ್ದರೂ, ಅವರನ್ನು ಲಿಂಗದಲ್ಲಿ ಕಂಡುದರ ವಿಚಾರವನ್ನು ಶ್ರೀಗಳವರು ಆ ಕೂಡಲೇ ಹೇಳಿ ಬಿಡುತಿದ್ದರು; ಮುಂದಿನ ಕೆಲಸಗಳ ಆಗುಹೋಗುಗಳನ್ನೂ ತಿಳಿಸುತ್ತಿದ್ದರು. ಈ ದಿವ್ಯ ದೃಷ್ಟಿಯಿಂದಲೂ ಶ್ರೀಗಳವರಲ್ಲಿ ಭಕ್ತರ ಭಕ್ತಿ-ವಿಶ್ವಾಸಗಳು ಬಹಳ ಹೆಚ್ಚಿದವು.

ಶ್ರೀಗಳವರು ನಡೆದ ಧರೆ ಪಾವನವಾಗುತ್ತಿತ್ತು; ಅವರು ನಿಂದ ನೆಲ ನಿಜ ಕ್ಷೇತ್ರವಾಗುತ್ತಿತ್ತು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿವಯೋಗಾಶ್ರಮವು ಶಿವಪೂಜಾ ಪ್ರೇಮಿಗಳಾದ ಶ್ರೀಗಳವರ ಕೃಪೆಯಿಂದಲೇ ಮೊಟ್ಟ ಮೊದಲು ಸ್ಥಾಪಿತವಾಯಿತು. ಅವರು ಹಾನಗಲ್ಲ ಶ್ರೀಗಳವರೊಂದಿಗೆ ಸಂಚರಿಸಿ ಮಲೆನಾಡ ಪ್ರಾಂತದಲ್ಲಿ ಶಿವಧರ್ಮದ ಪ್ರಸಾರವನ್ನು ಮಾಡಿದರು. ಕಪನಳ್ಳಿಯ ಶಿವಯೋಗಾಶ್ರಮವು ಧರ್ಮಕಾರ್ಯಗಳ ಕೇಂದ್ರವಾಯಿತು. ಈಗ ಇಲ್ಲಿ ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಭವ್ಯ ಭವನದ ನಿರ್ಮಾಣವಾಗಿದೆ; ಈಗ ಈ ಶಿವಯೋಗಾಶ್ರಮದ ಅಧ್ಯಕ್ಷರಾಗಿರುವ ಶ್ರೀ ನಿ. ಪ್ರ. ರುದ್ರಮುನಿಸ್ವಾಮಿಗಳವರು ಶ್ರೀಗಳವರ ಕೃಪಾ ವಲಯದಲ್ಲಿ ಬೆಳೆದು ಬಂದವರು. ಅವರು ಶಿವಯೋಗ ಮಂದಿರದ ಮಾದರಿಯಲ್ಲಿ ಈ ಆಶ್ರಮದ ಮುಖಾಂತರ ಅನೇಕ ಜನಹಿತದ ಕಾರ್ಯಗಳನ್ನು ಮಾಡುತ್ತ ಭಕ್ತರಿಗೆ ಪೂಜ್ಯರಾಗಿರುವರು. ಕೃಷಿ ಮತ್ತು ಗೋಸಂಗೋಪನ ಕಾರ್ಯದಲ್ಲಿ ಈ ಆಶ್ರಮ ಮಾದರಿಯ ಸೇವೆಯನ್ನು ಸಲ್ಲಿಸುತ್ತಿರುವುದು. ಈ ಆಶ್ರಮಕ್ಕೆ ಅನೇಕ ಭಕ್ತರು ಬಹು ಪ್ರಕಾರವಾಗಿ ಭಕ್ತಿ ಸಲ್ಲಿಸಿರುವರು. ಅವರಲ್ಲಿ ಹಳೇಪಟ್ಟಣದ ಶೆಟ್ಟರ ಹಾಲಪ್ಪನವರು ಅಗ್ರಗಣ್ಯರು. ಇವರು ಶ್ರೀಗಳವರಿಂದ ಅನುಗ್ರಹ ಪಡೆದು ಈಗಲೂ ಇಲ್ಲಿಯೇ ಶಿವಪೂಜಾನುಷ್ಠಾನ ಮತ್ತು ಸೇವೆಯನ್ನು ತ್ರಿಕರಣ ಪೂರ್ವಕ ಮಾಡುತ್ತ ಆದರ್ಶ ಶಿವಶರಣರೆನ್ನಿಸಿಕೊಂಡಿರುವರು.

ಪತ್ರಿಕೆ ಮತ್ತು ಗ್ರಂಥಗಳ ಪ್ರಕಟನೆಯ ರೂಪದಲ್ಲಿ ಧರ್ಮಕಾರ್ಯಗಳು ಸತತವಾಗಿ ನಡೆಯಬೇಕೆಂಬ ಮಹೋದ್ದೇಶ ಹಾವೇರಿ ಶ್ರೀಗಳವರದಾಗಿತ್ತು. ಅದರಂತೆ ಶ್ರೀಗಳವರು ಹಾವೇರಿಯಲ್ಲಿ ‘ ಶ್ರೀ ಶಿವಲಿಂಗ ವಿಜಯ ಮುದ್ರಣಾಲಯ’ ವನ್ನು ಸ್ಥಾಪಿಸಿ ಅದನ್ನು ನನ್ನ ವಶಕ್ಕೆ ಕೊಟ್ಟರು. ‘ ಸದ್ದರ್ಮದೀಪಿಕೆ’ ಎಂಬ ಮಾಸಪತ್ರಿಕೆಯನ್ನು ಪ್ರಕಟಿಸುವುದಕ್ಕೆ ಮತ್ತು ಅನೇಕ ಓಲೆಗರಿಯ ಗ್ರಂಥಗಳನ್ನು ಮುದ್ರಿಸಿ ಪ್ರಕಾಶಗೊಳಿಸುವುದಕ್ಕೂ ಈ ಮಹಾಸ್ವಾಮಿಗಳವರೇ ಮೂಲ ಕಾರಣ, ರೆಂದು ಹೇಳುವದು ಅತಿಶಯೋಕ್ತಿಯಲ್ಲ. ಒಮ್ಮೆ, ಚಿತ್ರದುರ್ಗದ ಬೃಹನ್ಮಠಾಧ್ಯಕ್ಷರಾದ ಲಿಂ. ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾವೇರಿಗೆ ದಯಮಾಡಿಸಿದಾಗ ಶ್ರೀಗಳವರು ಜಗದ್ಗುರುಗಳ ಸನ್ನಿಧಿಯಲ್ಲಿ ಧರ್ಮ ಗ್ರಂಥಗಳ ಸಂಶೋಧನೆ ಮತ್ತು ಪ್ರಕಾಶನದ ಬಗೆಗೆ ಕಳಕಳಿಯಿಂದ ವಿಚಾರ ವಿನಿಮಯ ಮಾಡಿದ ಪ್ರಸಂಗ ನನಗೆ ಚೆನ್ನಾಗಿ ನೆನಪಿದೆ. ತಮ್ಮ ಮಠದ ಖರ್ಚಿನಲ್ಲಿ, ತಮ್ಮ ಸ್ವಂತದ ಅನುಕೂಲತೆಗಳಲ್ಲಿ ಏನಾದರೂ ಕೊರತೆ ಬಂದರೂ ಚಿಂತೆಯಿಲ್ಲ, ಧರ್ಮ ಪ್ರಸಾರವು ಮಾತ್ರ ಚೆನ್ನಾಗಿ ನಡೆಯಬೇಕೆಂದು ಶ್ರೀಗಳವರು ಹಂಬಲಿಸುತ್ತಿದ್ದರು. ಹಾವೇರಿಯಲ್ಲಿ ತಮ್ಮ ಮಠವನ್ನು ಕಲ್ಲುಮಠವನ್ನಾಗಿ ಮಾರ್ಪಡಿಸಿದ ಕೀರ್ತಿಯು ಶ್ರೀಗಳವರಿಗೆ ಸಲ್ಲುವಂತಾಗಿದ್ದರೂ, ಆ ಕಟ್ಟಡದ ನಿರ್ಮಾಣಕ್ಕೆ ದ್ರವ್ಯವು ಬೇಕಾಗಿದ್ದರೂ ಅದನ್ನು ಬದಿಗಿಟ್ಟು ಧರ್ಮಗ್ರಂಥಗಳ ಪ್ರಕಟನೆಯ ಕಾರ್ಯಕ್ಕೆ ಹೆಚ್ಚು ದ್ರವ್ಯವನ್ನು ವಿನಿಯೋಗಿಸುತ್ತಿದ್ದರು. ನನಗೆ ವರ್ಷ ಗಟ್ಟಲೆ ತಮ್ಮೊಡನೆ ಪೂಜೆ ಮತ್ತು ಪ್ರಸಾದಕ್ಕೂ ಅನುಕೂಲತೆಗಳನ್ನು ದಯಪಾಲಿಸಿದ ಶ್ರೀಗಳು ಎಂತಹ ಕೃಪಾಳುಗಳೆಂಬುದನ್ನು ಬೇರೆ ಹೇಳಬೇಕೆ ?

ಶ್ರೀಗಳವರು ಪದವೀಧರರಾಗ ಬಯಸಿದ ಅನೇಕ ಬಡ ವಿದ್ಯಾರ್ಥಿಗಳಿಗೂ ಮುಕ್ತಹಸ್ತದಿಂದ ಸಹಾಯ ನೀಡಿದರು. ಅವರ ಕೃಪೆಯಿಂದ ಅನೇಕರು ಪದವೀಧರರಾಗಿ ಉಚ್ಚ ಸ್ಥಾನಗಳನ್ನು ಪಡೆದಿರುವರು. ಪ್ರೊ ಎಸ್.ಎಸ್.ಭೂಸನೂರುಮಠ, ಶ್ರೀ ಅ. ಮ. ಪಾಟೀಲ ಮೊದಲಾದವರು ಶ್ರೀಗಳವರ ಕೃಪಾಶ್ರಯ ಪಡೆದು ವಿದ್ಯಾ ರ್ಜನೆ ಮಾಡಿದವರು. ಶ್ರೀಗಳವರಿಗೆ ಹಣವನ್ನು ಕೂಡಿಡಬೇಕೆಂಬ ಆಶೆಯಿರಲಿಲ್ಲ. ಭಕ್ತರಿಂದ ಕಾಣಿಕೆ ಬಂದುದೇ ತಡ ಆ ಕೂಡಲೇ ಅದು ಬಡವಿದ್ಯಾರ್ಥಿಗಳಿಗಾಗಿ ಯಥೇಚ್ಛವಾಗಿ ವಿನಿಯೋಗವಾಗುತ್ತಿತ್ತು. ಹಣ ಕೊಟ್ಟು ಅದಕ್ಕೆ ಪ್ರತಿಯಾಗಿ ಹೆಸರನ್ನು ಗಳಿಸಬೇಕೆಂದು ಶ್ರೀಗಳವರು ಕನಸು ಮನಸಿನಲ್ಲಿಯೂ ಬಗೆದವರಲ್ಲ.

ವೀರಶೈವರಲ್ಲಿ ಭಿಕ್ಷೆ ಬೇಡುವದು ಸಮಾಜಕ್ಕಾಗಿ ಎಂದಿರುವ ಧರ್ಮನಿಯಮವನ್ನು ಶ್ರೀಗಳವರು ಪಾಲಿಸಿ ಬಡವರಿಗೆ ಸಾವಿರಗಟ್ಟಲೆ ಧನಸಹಾಯ ಮಾಡಿ ಇತರ ಸ್ವಾಮಿಗಳಿಗೆ ಆದರ್ಶರಾಗಿದ್ದಾರೆ. ಶ್ರೀಗಳವರು ಅನೇಕ ಸಲ ವ್ಯಾಪಾರ ಮಾಡಿ ಹಾನಿಗೀಡಾದ ಭಕ್ತರಿಗೆ ಬಂಡವಾಳ ಕೊಟ್ಟಿದ್ದಾರೆ. ವ್ಯವಸಾಯದಲ್ಲಿ ಉತ್ಪತ್ತಿ ಕಡಿಮೆಯಾಗಿ ನಿರ್ಗತಿಕರಾದ ರೈತರಿಗೆ ಅನುಕೂಲತೆ ಕಲ್ಪಿಸಿಕೊಟ್ಟಿದ್ದಾರೆ. ಅವರಲ್ಲಿ ಕೆಲವರು ಶ್ರೀಗಳವರನ್ನು ಇನ್ನು ಹಾಡಿ ಹರಸುತ್ತಿದ್ದಾರೆ.

ಶಿವಯೋಗಮಂದಿರದಲ್ಲಿ ಹಾನಗಲ್ ಶ್ರೀಗಳವರೊಡನೆ ವಿಶೇಷ ಶ್ರದ್ಧೆಯಿಂದ ಕಾರ್ಯಮಾಡಿ ಶ್ರೀಗಳವರು ಮಂದಿರದ ಸಾಧಕರಿಗೆ, ವಟುಗಳಿಗೆ ಧರ್ಮ-ಯೋಗ ಆಚಾರ ಮುಂತಾದವುಗಳನ್ನು ಕಲಿಸಿ ಸಂಸ್ಥೆಯ ಉನ್ನತಿಗೆ ಕಾರಣರಾಗಿದ್ದಾರೆ. ಶ್ರೀಗಳ ತಪಃಪ್ರಭಾವದಿಂದಲೇ ಸಂಸ್ಥೆಯು ಇಂದಿನ ಯುಗದಲ್ಲಿ ಉಳಿದು ಬೆಳೆಯುತಿದೆ. ಹಾನಗಲ್ ಶ್ರೀಗಳವರು ಇವರ ಅಚ್ಚಳಿಯದ ಸಮಾಜ ಪ್ರೇಮ ಮತ್ತು ಧರ್ಮ ಕಾರ್ಯಕ್ಷಮತೆಯನ್ನು ಮನಗಂಡೇ ಇವರನ್ನು ಮಂದಿರದ ಆಜೀವ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಶ್ರೀ ಕುಮಾರ ಸ್ವಾಮಿಗಳು ಲಿಂಗೈಕ್ಯರಾದ ಮೇಲೆಯೂ ಶ್ರೀಗಳವರು ಧೈರ್ಯದಿಂದ ಸಂಸ್ಥೆಯ ಅಭಿವೃದ್ಧಿಯನ್ನು ಬಯಸಿ ಕಾರ್ಯ ಮಾಡಿದರು. ಕೆಲವರು ಹಾನಗಲ್ಲ ಪೂಜ್ಯರು ಲಿಂಗೈಕ್ಯರಾದ ಮೇಲೆ ಮಂದಿರವು ನಡೆಯಲಾರದು, ಅದನ್ನು ಒಂದು ವ್ಯವಸಾಯ ಕಾಲೇಜನ್ನಾಗಿ ಮಾರ್ಪಡಿಸಬೇಕೆಂಬ ವಿಚಾರವನ್ನು ಮುಂದು ಮಾಡಿದರು. ಆದರೆ ಶ್ರೀಗಳವರು ಮಂದಿರದಲ್ಲಿ ಧಾರ್ಮಿಕ ಶಿಕ್ಷಣವು ಆದರ್ಶವಾಗಿ ಎಂದಿನಂತೆ ನಡೆಯುವಂತೆ ಮಾಡಿ, ಸಂಸ್ಥೆಯು ಎಂದಿಗೂ ಅಳಿಯದಂತಹ ಧಾರ್ಮಿಕ ಅಡಿಪಾಯವನ್ನು ಹಾಕಿದರು; ಹಾನಗಲ್ ಶ್ರೀಗಳವರ ಧೈಯಧೋರಣೆಗಳನ್ನು ಉಳಿಯುವಂತೆ ಮಾಡಿದರು; ಕೆಲವು ಅಭಿಮಾನಿ ತರುಣ ಸ್ವಾಮಿಗಳನ್ನೂ ಉತ್ಸಾಹಿ ಭಕ್ತರನ್ನೂ ಮಂದಿರದ ಟ್ರಸ್ಟ ಕಮೀಟಿಯಲ್ಲಿ ತೆಗೆದುಕೊಂಡು ಸಂಸ್ಥೆಯ ಕಾರ್ಯಗಳು ಸುಗಮವಾಗಿ ನಡೆಯು ವಂತೆ ಯೋಜಿಸಿದರು. ಈ ವಿಷಮ ಕಾಲದಲ್ಲಿ ಶ್ರೀಗಳವರು ಪ್ರಯತ್ನಿಸಿರದಿದ್ದರೆ ಶಿವಯೋಗಮಂದಿರವೇ ಉಳಿಯುತ್ತಿರಲಿಲ್ಲ. ಶ್ರೀಗಳವರ ಉದ್ದೇಶವನ್ನು ಸಾಧಿಸಲು ಹಾಲಕೆರೆಯ ಶ್ರೀ ಅನ್ನದಾನ ಸ್ವಾಮಿಗಳು ಮತ್ತು ನವಿಲುಗುಂದದ ಶ್ರೀ ಬಸವಲಿಂಗ ಸ್ವಾಮಿಗಳು ಮತ್ತು ಉಳಿದವರೂ ಬಹು ಹೆಣಗಿದ್ದಾರೆ.

ಶ್ರೀಗಳವರು ಆಡಂಬರದ ಜೀವನದವರಲ್ಲ. ವೀರಶೈವ ಷಟ್‌ಸ್ಥಲಮಾರ್ಗದಲ್ಲಿ ಶ್ರೀಗಳವರು ಬಹು ನಿಷ್ಠೆಯಿಂದ ನಡೆದರು; ಉಳಿದವರಿಗೂ ಮಾರ್ಗ ತೋರಿದರು. ನೂತನ ಮಠಾಧಿಕಾರಿಗಳಿಗೆ ನಿರಂಜನ ಚರಪಟ್ಟಾಧಿಕಾರವನ್ನು ಶ್ರೀಗಳವರು ಹಾನಗಲ್ ಶ್ರೀಗಳವರ ಇಚ್ಛೆಯಂತೆ ಕೊಡುತ್ತಿದ್ದರು. ಶ್ರೀಗಳವರು ಅನೇಕ ಸ್ವಾಮಿಗಳಿಗೂ, ಗುರುಗಳಿಗೂ ಭಕ್ತರಿಗೂ ಅನುಗ್ರಹವನ್ನು ದಯಪಾಲಿಸಿರುವರು. ಅವರಿಂದ ಅನುಗ್ರಹ ಪಡೆದವರೆಲ್ಲರೂ ಸಮಾಜದಲ್ಲಿ ಸನ್ಮಾನ್ಯರಾಗಿ ಬಾಳಿದ್ದಾರೆ. ಅವರದು ಅಮೃತ ಹಸ್ತ. ಆ ಹಸ್ತ ಸ್ಪರ್ಶದಿಂದ ‘ ಗುರು ಮುಟ್ಟಿ ಗುರುವಾದರು’ ಎಂಬುದು ಸಿದ್ಧವಾಗುತ್ತಿತ್ತು. ಅಂತಹ ಆದರ್ಶ ಮಹಾಸ್ವಾಮಿಗಳ ಪರಮಾದರ್ಶದಲ್ಲಿ ಎಲ್ಲರೂ ನಡೆದರೆ ವೀರಶೈವ ಸಮಾಜವು ಅಮೃತಮಯ ವಾಗಿ ಬಾಳುವುದಲ್ಲವೆ ?.

Related Posts