ಲೇಖಕರು :
ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ
ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.
ಮುಂಡರಗಿ
ಇಂತಪ್ಪ ಲಿಂಗದಾ | ದ್ಯಂತ ಷಡುಸ್ಥಾನದೊಳು
ದಾಂತಾದಿ ಮಾಂತ-ಮಂತ್ರ ಮೂಲವ ತೋರಿ
ದಂತಪ್ಪ ಗುರುವೆ ಕೃಪೆಯಾಗು ॥ ೧೨೬ |
ಮೇಲೆ ವಿವರಿಸಿದಂಥ ಈ ಇಷ್ಟಲಿಂಗದ ಆದ್ಯಂತಗಳೆನಿಸಿದ ವೃತ್ತ, ಕಟಿ ವರ್ತುಳ, ಗೋಮುಖ, ನಾಳ, ಚಿತ್ಪೀಠಗಳೆಂಬ ಆರು ಸ್ಥಾನಗಳಲ್ಲಿ ಕ್ರಮವಾಗಿ ನ ಕಾರ; ‘ಮ’ ಕಾರ; ‘ಶಿ’ ಕಾರ; ‘ವಾ’ ಕಾರ; ‘ಯ’ ಕಾರ; ಹಾಗೂ `ಓಂ’ ಕಾರಗಳೆಂಬ ಷಣ್ಮಂತ್ರವನ್ನು ತೋರಿಸಿದಂತಪ್ಪ ಸದ್ಗುರುವೆ ಕೃಪೆಯಾಗು ಎಂದು ಶಿವಕವಿಯು ಲಿಂಗಷಟ್‌ಸ್ಥಲಗಳಲ್ಲಿ ಷಡಕ್ಷರ ಮಂತ್ರದ ವ್ಯಾಪಕತೆಯನ್ನು ಹಾಗೂ ಮರ್ಮವನ್ನು ವಿವರಿಸಿ ಉಪಸಂಹಾರಗೊಳಿಸಿದ್ದಾನೆ. ಲಿಂಗದ ಷಟ್‌ಸ್ಥಾನಗಳನ್ನು ವಿಭಾಗಿಸಿ ಮಂತ್ರಗಳನ್ನು ಸಂಬಂಧಿಸುವ ಪರಿಯು ಶರಣಕವಿಯ ಮಂತ್ರಮಹತ್ವವನ್ನು ವ್ಯಕ್ತಗೊಳಿಸಿದೆ.
‘ದಾಂತಾದಿ ಮಾಂತ ಮಂತ್ರಮೂಲ’ ವೆಂಬ ವಾಕ್ಯ ಪ್ರಯೋಗದಿಂದ ಷಡಕ್ಷರ ಮಹಾಮಂತ್ರದ ಸುಂದರಸ್ವರೂಪ ಹೊರಹೊಮ್ಮಿದೆ. ಇಲ್ಲಿ ಶಿವಕವಿಯ ವೈಯಾಕರಣದ ಜ್ಞಾನ ವಿಸ್ತಾರತೆಯೂ ವಿಸ್ತೃತಗೊಂಡಿದೆ. ದಾಂತವೆಂದರೆ ತವರ್ಗದ ಅಂತ್ಯಾಕ್ಷರವು ‘ನ’ ಕಾರ. ನಕಾರವೇ ಆದಿಯಾಗಿಯುಳ್ಳ. ಮಾಂತದ ಆದಿಯಾದ ಅಕ್ಷರ ‘ಯ’ ಕಾರವು . ಅರ್ಥಾತ್ ಪವರ್ಗದ ಅಂತಿಮಾಕ್ಷರ ಮಕಾರ. ಈ ಮಕಾರದ ಮೇಲೆ ಆದಿಯಾಗಿ ಬರುವ ಅಕ್ಷರವೇ ಯಕಾರವು . ನಕಾರಾದಿ ಯಕಾರ ಕಡೆಯಾದ ಮಂತ್ರವೆ೦ದಾಗುವದು. ಇನ್ನು ”ಮಂತ್ರ ಮೂಲ’ ವೆಂದರೆ ಈ ಮೇಲಿನ ಪಂಚಾಕ್ಷರಿ ಮಂತ್ರಕ್ಕೆ ಆಧಾರವಾದ ಪ್ರಣವವೇ ಓಂಕಾರವು. ಇಲ್ಲಿ ಈ ದಾರ್ಶನಿಕ ಶಿವಕವಿಯು ವ್ಯಾಕರಣ ಜ್ಞಾನವೂ ಚಮತ್ಕಾರಿಕ ರೀತಿಯಲ್ಲಿ ಪ್ರಕಟಗೊಂಡಿದೆ.
ಈ ಷಡಕ್ಷರ ಮಹಾಮಂತ್ರದ ಷಟ್‌ತತ್ತ್ವವನ್ನು ‘ಶಿವತತ್ತ್ವ ರತ್ನಾಕರದಲ್ಲಿ ಸುಂದರವಾಗಿ ವರ್ಣಿಸಿದ್ದಾರೆ-
ಯಕಾರಃ ಪರಿಪೂರ್ಣತ್ವಂ ವಾಕಾರೋ ನಿತ್ಯಮೇವ ಚ |
ಆನಂದಶ್ಚ ಶಿಕಾರಃ ಸ್ಯಾತ್ ಮಕಾರಶ್ಚಿತ್ ಸ್ವರೂಪಕಃ ||
ನಕಾರಃ ಸತ್ ಸ್ವರೂಪಂ ಚ ಪ್ರಣವೋ ವಿಶ್ವರೂಪಕಃ |
ಶಿವನು ಸತ್, ಚಿತ್, ಆನಂದ, ನಿತ್ಯ, ಪರಿಪೂರ್ಣವಾಗಿ ವ್ಯಾಪಕನಾಗಿರುವಂತೆ ಶಿವಾತ್ಮಕವಾದ ಈ ಮಹಾಮಂತ್ರವೆನಿಸಿದ ಷಡಕ್ಷರವೂ ಶಿವನ ಷಟ್‌ಸ್ವರೂಪಗಳನ್ನು ಒಳಗೊಂಡಿದೆ. ಯಕಾರವು ಪರಿಪೂರ್ಣತ್ವವನ್ನು ಹೊಂದಿದ್ದರೆ ವಾಕಾರವು ನಿತ್ಯತ್ವದ
ದ್ಯೋತಕವಾಗಿದೆ. ಶಿಕಾರವು ಆನಂದಮಯವೆನಿಸಿದರೆ ಮಕಾರವು ಜ್ಞಾನ ಸ್ವರೂಪವುಳ್ಳುದಾಗಿದೆ. ನಕಾರವು ಸತ್‌ಸ್ವರೂಪವನ್ನು ಪಡೆದು ಓಂಕಾರ ಪ್ರಣವವು ವಿಶ್ವವ್ಯಾಪಕತ್ವ ರೂಪವನ್ನು ಧರಿಸಿದೆ. ಅಂತೆಯೇ ಓಂಕಾರದಲ್ಲಿ ಸಕಲವು ಗರ್ಭೀಕರಿಸಿದೆ. ಹೀಗೆ ಷಟ್‌ಪ್ರಣವಗಳಲ್ಲಿ ಒಂದೊಂದು ಶಿವತತ್ತ್ವಸ್ವರೂಪವು ಸನ್ನಿಹಿತವಾಗಿದೆ. ಇಂಥ ಶಿವತತ್ತ್ವಭರಿತವಾದ ಮಹಾಮಂತ್ರವು ಅಸಾಧಾರಣ ಶಕ್ತಿಯುಳ್ಳುದು. ಇಂಥ ಷಣ್ಮಂತ್ರಭರಿತ ಇಷ್ಟಲಿಂಗವೂ ಅನುಪಮವಾದುದು. ಓ ಪರಮ ಗುರುವೆ
ಮಂತ್ರಮಯ ಮಹಾಲಿಂಗವನ್ನು ಅಂಗವಿಸಿಕೊಳ್ಳು ವಂತೆ ಹರಸು.
ತನಯ ಪೇಳುವೆ ನಿನ್ನ | ತನುವಿನೊಳಗೀ ಲಿಂಗ
ವನು ಧರಿಸಿಕೊಂಬ ಘನ ಚಾರಿತ್ರವ ಕೇಳೆಂ
ದನಘ ಶ್ರೀಗುರುವೆ ಕೃಪೆಯಾಗು ||೧೨೭||
ಶ್ರೀಗುರುವು ಶಿಷ್ಯನ ತತ್ತ್ವಜಿಜ್ಞಾಸಾಭಾವವನ್ನು ಅರಿತು ಇಷ್ಟಲಿಂಗದ ಲಕ್ಷಣ-ಸ್ವರೂಪ ಹಾಗೂ ಮಹತ್ವವನ್ನು ತಿಳುಹಿ ಸದ್ಯಃ ಅಂಥ ಲಿಂಗವನ್ನು ಧರಿಸಿ ಕೊಳ್ಳುವ ಸ್ಥಾನವನ್ನು ಮತ್ತು ಯೋಗ್ಯತೆಯನ್ನು ತಿಳಿಸುವವನಾಗುತ್ತಾನೆ.
“ಸದ್ಗುರು ಕರಕಮಲದಲ್ಲಿ ಸಂಜಾತನಾದ ತನಯನೆ ! ಚಿತ್ತವಿಟ್ಟು ಕೇಳು. ನಾನು ಪೇಳುವ ನುಡಿಗಳಲ್ಲಿ ಪರಮಪಾವನವೂ ದಿವ್ಯವೂ, ಭವ್ಯವೂ ಆದ ಈ ಇಷ್ಟಲಿಂಗವನ್ನು ಯಾವ ಯಾವ ಸ್ಥಾನಗಳಲ್ಲಿ ಯಾವ ಯಾವ ತತ್ತ್ವವನ್ನರಿತು ಘನತೆ ಪಡೆದು ಧರಿಸಿಕೊಳ್ಳಬೇಕೆಂಬ ಘನವಾದ ಚಾರಿತ್ರವಿದೆ. ಇಂಥ ಅನುಪಮ ಚರಿತ್ರವನ್ನರಿಯದೆ ಧರಿಸುವ ಲಿಂಗಧಾರಣೆ ಭಾರವಾದೀತು. ಹಾಗೆ ಧರಿಸಿದರೆ ಯಾವ ಪ್ರಯೋಜನವೂ ಎನಿಸದು. ಅದುಕಾರಣ ಅದರ ಮರ್ಮವನ್ನರಿತು ಧರಿಸುವದು ಪ್ರತಿಯೊಬ್ಬ ವೀರಶೈವನ ಕರ್ತವ್ಯವಾಗಿದೆ. ಅಲ್ಲಿಯೇ ವೀರಪದದ ಸಾರ್ಥಕತೆಯಿದೆ. ದಿವ್ಯತೆಯಿದೆ; ಭವ್ಯತೆಯಿದೆ. ಲಿಂಗಧಾರಣ ಚಾರಿತ್ರತೆಯ ಎಚ್ಚರಿಕೆಯನ್ನರಿತು ಧರಿಸುವ ಭಕ್ತನೇ ನಿಜ ವೀರಶೈವನಾಗುವನು” ಎಂದ ಮುಂತಾಗಿ ಮಮತೆಯಿಂದ ಅಘ (ಪಾಪ) ರಹಿತನಾದ ಸದ್ಗುರುನಾಥನು ಸದುವಿನಯಶೀಲ ಶಿಷ್ಯನಿಗೆ ಬೋಧಿಸುತ್ತಾನೆ.
ಲಿಂಗಧಾರಣೆಯ ಅಸಾಧಾರಣತೆಯನ್ನು ಮೈಗೂಡಿಸಿಕೊಂಡ ಶ್ರೀಗುರುವೇ ಅನಘನೆನಿಸುವನು. ಘನತೆವೆತ್ತವನಾಗುವನು. ಲಿಂಗಧಾರಣೆಯ ಸಾರ್ಥಕ್ಯವನ್ನು ಸಾಧಿಸಿದ ಚನ್ನವೀರ ಯತಿಗಳ ಶಿಷ್ಯನೆನಿಸಿದ ಈ ದಾರ್ಶನಿಕ ಶರಣನು ಅಸಾಧಾರಣ ವ್ಯಕ್ತಿತ್ವವನ್ನು ಹೊಂದಿದ್ದನೆಂಬುದು ಧ್ವನಿತವಾಗುತ್ತದೆ. ಆತನ ವೀರತ್ವದ ಕೆಚ್ಚು ಮೆಚ್ಚುವಂಥಹದು. ಮುಂದೆ ಕ್ರಮವಾಗಿ ಲಿಂಗಧಾರಣೆಯ ವಿವರವನ್ನು ವಿವರಿಸುತ್ತಾನೆ.
ನರಮಾನವರಿಗೊಮ್ಮೆ | ಕರವೊಡ್ಡಿ ಬೇಡುವಾ-
ಚರಣೆಯನೆ ಉಳಿದು-ಕರಪೀಠದೊಳು ಲಿಂಗ
ಧರಿಸೆಂದ ಗುರುವೆ ಕೃಪೆಯಾಗು || ೧೨೮ ||
ಶರೀರದಲ್ಲಿ ಲಿಂಗವನ್ನು ಧರಿಸಿಕೊಳ್ಳುವ ಸ್ಥಾನಗಳು ಆರು. ೧) ಕರ, ೨) ಕಕ್ಷೆ, ೩) ಉರ, ೪) ಶಿರ, ೫) ಮುಖಸೆಜ್ಜೆ, ೬) ಅಮಳೈಕ್ಯವೆಂದು ಆರು ಲಿಂಗಧರಿಸುವ ಅವಯವಗಳು. ಕರಪೀಠಾದಿಗಳಲ್ಲಿ ಲಿಂಗವನ್ನು ಧರಿಸಿಕೊಳ್ಳುವ ಯೋಗ್ಯತೆ ಹೇಗಿರಬೇಕೆಂಬ ಮರ್ಮವನ್ನು ಕ್ರಮಶಃ ನಿರೂಪಿಸುತ್ತಾನೆ.
ಸದ್ಗುರುನಾಥನು ಶಿರದ ಸಹಸ್ರದಳಕಮಲ ಮಧ್ಯದ ಕಳೆಯನ್ನು ತನ್ನ ಭಾವಕ್ಕೆ ಭಾವದಿಂದ ಶಿಷ್ಯನ ಮನದಲ್ಲಿ ತಂದು ಆ ಮನದಿಂದ ನೇತ್ರದ್ವಾರಾ ಕರಕಮಲಕ್ಕೆ ಇಷ್ಟಲಿಂಗವನ್ನಾಗಿ ಮೂರ್ತಗೊಳಿಸುತ್ತಾನೆ. ಪ್ರಾಣ ಮತ್ತು ಭಾವಗಳನ್ನು ಒಳಗೊಂಡ ಇಷ್ಟಲಿಂಗವನ್ನು ಧರಿಸುವ ಕರವು ಪರಮಪವಿತ್ರವಾಗಿರಬೇಕು. ಹಸ್ತಹಸನವಾಗದೇ ಶಿವನ ಪ್ರಸನ್ನತೆ ಪ್ರಾದುರ್ಭವಿಸುವದಿಲ್ಲ. ಶಿವಲಿಂಗವನ್ನು ಧರಿಸಿಕೊಳ್ಳುವ ಕೈಯು ಬೇರೊಬ್ಬ ನರನನ್ನು ಮರೆತೂ ಬೇಡಬಾರದು. ನರ ಮತ್ತು ಮಾನವ ಶಬ್ದಗಳು ಸಮಾನಾರ್ಥಕವಾಗುವದರಿಂದ ಶಿವಕವಿಯು ದ್ವಿರುಕ್ತಿದೋಷಕ್ಕೆ ಗುರಿಯಾಗಬೇಕಾಗುವದು. ಆದರೆ ನರ ಮತ್ತು ಮಾನವ ಪದಗಳೆರಡನ್ನು ಪ್ರಯೋಗಿಸುವಲ್ಲಿ ಧ್ವನಿಯಿದೆ. ವ್ಯಂಜನವಿದೆ. ಸಾಂಕೇತಿಕತೆಯಿದೆ. ಇಷ್ಟಲಿಂಗವನ್ನು ಧರಿಸಿಕೊಳ್ಳುವ ಭಕ್ತನು ಯಾರೊಬ್ಬರನ್ನು ಕೈಯೊಡ್ಡಿ ಬೇಡಬಾರದೆಂಬ ಅರ್ಥ ವಿಸ್ತಾರವು ವ್ಯಾಪಿಸಿದೆ. ದ್ವಿರುಕ್ತಿ ದೋಷದ ಲವಶೇವೂ ಶಿವಕವಿಗೆ ಸೋಂಕುವದಿಲ್ಲ.
ಆದಾನ-ಪ್ರದಾನಗಳೇ ಕರದ ಕರ್ಮವಾಗಿದ್ದರೂ ಪ್ರದಾನ ಗುಣವೇ ತನ್ನದಾಗಬೇಕು. ಕಾಯಕವನ್ನು ಮಾಡಿ ಗುರು-ಲಿಂಗ-ಜಂಗಮಕ್ಕೆ ಸಲ್ಲಿಸುವ ಕರ್ತವ್ಯ ಭಕ್ತನದಾಗಬೇಕು. ಜೊತೆಗೆ ಆ ಪೂಜ್ಯರಿಂದ ಪಾದೋದಕ ಪ್ರಸಾದಗಳಿಗಾಗಿ ಕೈಯೊಡ್ಡಬೇಕಲ್ಲದೆ ತನ್ನ ಹೊಟ್ಟೆ ಹೊರೆಯಲು ಸತಿ-ಸುತರನ್ನು ಸಲುಹಲು ಕನಸಿನಲ್ಲಿಯೂ ಮಾನವರನ್ನು ಯಾಚಿಸಬಾರದು.
. ಭವಿಗಳನ್ನಂತೂ ಎಂದೂ ಬೇಡಬಾರದು. ಅವರ ಪದಾರ್ಥಗಳು ತನ್ನ ಶಿವಲಿಂಗಕ್ಕೆ ಸಲ್ಲಲಾರವು.
‘’ಧರೆಗೆ ಯಾಚನೆಯಿಂದ ಲಘುತನಮುಂಟೆ ?’’
ನಿಜಗುಣ ಶಿವಯೋಗಿಗಳು ಯಾಚನೆಯ ಲಘುತ್ವವನ್ನು ಪ್ರತಿಪಾದಿಸಿರುವರು. ಬೇಡುವದು ಬಹುಕೀಳುತನ, ಬೇಡುವಕೈಯಿಂದ ಕಾಯಕಮಾಡಿ ದಾಸೋಹಿಯಾಗಿ ನೀಡಿ ಗುರುಪ್ರಸಾದವನ್ನು ಪಡೆಯಬೇಕು. ಲಿಂಗಭಕ್ತನು ಎಂದೂ ಯಾವ ಯಾವ ಕಾಲದಲ್ಲಿಯೂ ಇತರರನ್ನು ಬೇಡಬಾರದೆಂದು ಶರಣರು ಕಾಯಕದ ಕಟ್ಟಳೆಯನ್ನು ಕಟ್ಟಿದರು. ಕಲ್ಯಾಣದಲ್ಲಿ ಬೇಡದ ಜನರಿಲ್ಲವೆಂದೇ ಅಣ್ಣನವರು- “ಬೇಡವವರಿಲ್ಲದೇ ಬಡವನಾದೆನಯ್ಯಾ !” ಎಂದು ಉದ್ಗಾರ ತೆಗೆದರು. ಶರಣ ಸಂತತಿಗೆಲ್ಲ ಕಾಯಕ ನಿಯಮವನ್ನು ಕಲ್ಪಿಸಿಕೊಟ್ಟು ಸಮಾಜವನ್ನು ಸಮೃದ್ಧಗೊಳಿಸಿದರು. ಆರ್ಥಿಕ ಸಮತೋಲನವನ್ನು ತಂದುಕೊಟ್ಟರು. ದುರಾಶೆಯ ದುಷ್ಟ ಬೀಜವನ್ನು ಹುರಿದು ಹಾಕಿದರು. ಸಂತೃಪ್ತಿಯ ಜೀವನದ ಸಂಜೀವಿನಿಯನ್ನು ತಂದುಕೊಟ್ಟರು. ಕಾಯಕವು
ಶರಣರಿಗೆ ಮರುಜೇವಣಿಯಾಯಿತು.
ಕಾಯಕಲ್ಪದಿಂದ ಕರಸ್ಥಲವೂ ಪರಸ್ಥಲವಾಗಬಲ್ಲುದು. ಜ್ಞಾನನಿಧಿ ಚನ್ನಬಸವಣ್ಣ ನವರು ಕರಸ್ಥಲದ ನಿಜವನ್ನು ನಿಚ್ಚಳವಾಗಿ ತಮ್ಮ ವಚನದಲ್ಲಿ ನಿರೂಪಿಸಿದ್ದಾರೆ-
ಕರಸ್ಥಲದಲ್ಲಿ ಲಿಂಗವ ಧರಿಸಿದ ಬಳಿಕ
ಲಿಂಗದಲ್ಲಿ ಅನಿಮಿಷದೃಷ್ಟಿಯಾಗಿರಬೇಕು.
ತನ್ನ ತಾನೇ ಅನಿಮಿಷನಾಗಿರಬೇಕು.
ಜಂಗಮದ ನಿಲುಕಡೆಯನರಿಯಬೇಕು.
ಪ್ರಸಾದದಲ್ಲಿ ಪರಿಪೂರ್ಣನಾಗಿರಬೇಕು.
ಹಿರಣ್ಯಕ್ಕೆ ಕೈಯಾನದಿರಬೇಕು.
ತನ್ನ ನಿಲುಕಡೆಯ ತಾನರಿಯದಿರಬೇಕು
ಇದು ಕಾರಣ ಕೂಡಲ ಚನ್ನ ಸಂಗಯ್ಯನಲ್ಲಿ
ಕರಸ್ಥಲದ ನಿಜವನರಿವಡೆ ಇದೇ ಕ್ರಮ
ಕರಸ್ಥಲದಲ್ಲಿ ಲಿಂಗಧಾರಣವಾದ ಮೇಲೆ ಲಿಂಗಭಕ್ತನ ಅನಿಮಿಷ ದೃಷ್ಟಿಯಾಗಬೇಕು. ಎಲ್ಲವೂ ಲಿಂಗಮಯವಾಗಿ ಕಾಣಬೇಕು. ಲಿಂಗದ ಹರಣ ಜಂಗಮವೆಂದರಿದು ಕಾಯಕದಿಂದ ದಾಸೋಹ ಮಾಡಬೇಕು. ಜಂಗಮದ ಶೇಷ ಪ್ರಸಾದದ ಮಹತ್ವವನ್ನರಿತು ಪರಿಪೂರ್ಣವಾಗಿ ತೃಪ್ತಮನವುಳ್ಳವನಾಗಿರ ಬೇಕು. ಹೀಗಾದ ಬಳಿಕ ಅನ್ಯರ ಧನಕ್ಕೆ ಕೈಯಾನದಿರಬೇಕು. ಆಶಿಸದಿರಬೇಕು. ಕೇವಲ ತನ್ನತನ (ಸ್ವಾರ್ಥ) ಕ್ಕಾಗಿ ಸಂಗ್ರಹಿಸಿದ ಧನವು ತ್ರಿವಿಧ ದಾಸೋಹವೆನಿಸದು. ತ್ಯಾಗದಿಂದ ಭೋಗವಾಗಬೇಕು. ಅಂದರೆ ತ್ಯಾಗಾಂಗ ಶುದ್ಧಿ. ಪ್ರಸಾದ ಭೋಗದಿಂದ ಭೋಗಾಂಗ ಶುದ್ಧಿಯಾದೀತು. ಇಂಥ ನಿಜಾಚರಣೆಯು ಕರಸ್ಥಲವನ್ನು ಪರಸ್ಥಲ (ಲಿಂಗಸ್ಥಲ) ವನ್ನಾಗಿಸುವದು ಎಂದು ಬೋಧಿಸಿದ ಬೋಧಾಗುರುವೆ ! ಭವದ ಬೇರಾದ ಬೇಡುವಿಕೆಯನ್ನು ಬಹುದೂರಗೊಳಿಸು.
ಬೇಡುವಿಕೆಯು ತೀರ ಸಾಮಾನ್ಯವಾದುದು. ಬೇಡುವ ಕೈಯು ಕೆಳಗಿರುವದಲ್ಲದೆ; ನೀಡುವವನ ಕರ ಮೇಲಾಗಿರುತ್ತದೆ. ಬೇಡುವದರಿಂದ ಜೀವನವೇ ಕೀಳೆನಿಸುವದು. ನೀಡುವವನು ಮೇಲೆನಿಸುವನು. ದಾನಗುಣ ಅವರ್ಣನೀಯವಾದುದು.
ಸಿರಿಬಂದ ಕಾಲಕ್ಕೆ ಕರೆದು ದಾನವ ಮಾಡು |
ಪರಿಣಾಮವಕ್ಕು ಪದವಕ್ಕು ಕೈಲಾಸ
ನೆರೆಮನೆಯು ಅಕ್ಕು ಸರ್ವಜ್ಞ || ಸ. ವ. ೬೦೪ ||
ಕೊಡುವಾತನೇ ಹರನು ಪಡೆವಾತನೇ ನರನು |
ಒಡಲ ಒಡವೆಗಳು ಕೆಡೆದು ಹೋಗದ ಮುನ್ನ
ಕೊಡು ಪಾತ್ರವರಿದು ಸರ್ವಜ್ಞ || ೬೧೯ ||
ಆಗ ಬಾ, ಈಗ ಬಾ, ಹೋಗಿ ಬಾ ಎನ್ನದಲೆ
ಆಗಲೇ ಕರೆದು ಕೊಡುವವನ ಧರ್ಮ ಹೊ-
ನ್ನಾಗದೆ ಬಿಡದು ಸರ್ವಜ್ಞ || ೨೨ ||
ಎಂದು ಮುಂತಾಗಿ ಸರ್ವಜ್ಞ ಕವಿಯು ದಾನದ ಅಪಾರ ಮಹಿಮೆಯನ್ನು ಮುಕ್ತ ಕಂಠದಿಂದ ಬಣ್ಣಿಸಿದ್ದಾನೆ. ಮಾನವನು ಸ್ವಭಾವತಃ ಲೋಭಿಯು. ಲೋಭಗುಣ ಅಂಟಿಕೊಂಡಿರುತ್ತದೆ. ಈ ಆಶಾಪಾಶವು ತೆರಣಿಯ ಹುಳದಂತೆ ಸುತ್ತಿಕೊಂಡು ತನ್ನನ್ನೇ ನಾಶಪಡಿಸುವದು. ಆಶೆಯು ನಿರಾಶೆಯಾಗಿ ಪರಿವರ್ತನ ಹೊಂದಬೇಕಾದರೆ ಬೇಡುವ ಕರ ನೀಡುವಂತಾಗಬೇಕು. ಭಿಕ್ಷೆ ಬೇಡುವ ಭಿಕ್ಷುಕನು ನೀಡುವವರಿಗೆ ಉತ್ತಮ ಉಪದೇಶವನ್ನೇ ನೀಡುತ್ತಾನೆ-ಹಿಂದಿನ ಜನ್ಮದಲ್ಲಿ ನಾನು ಯಾರಿಗೂ ನೀಡಿಲ್ಲವೆಂದು ಇಂದು ಈ ಭಿಕ್ಷಾ ಪಾತ್ರೆಯನ್ನು ಹಿಡಿದು ತಿರುಗುತ್ತಿರುವೆ. ನೀವಾದರೂ ನನ್ನಂತಾಗ ಬೇಡಿ”ರೆಂದು ಸಾರುತ್ತಾನಂತೆ.
ಜನ-ಜೀವಿಗಳಿಗೆ ಜೀವನವ (ನೀರ) ನ್ನು ನೀಡುವ ಮೋಡಗಳು ಆಕಾಶದಲ್ಲಿ ಮೆರೆದರೆ ಆ ನೀರನ್ನು ಸಂಗ್ರಹಿಸುವ ಸಾಗರ ಕೆಳಗಿದೆ. ಅದುಕಾರಣ ಕೈಯೊಡ್ಡದ ಕರ ಸಾರ್ಥಕತೆಯನ್ನು ಪಡೆಯಬಲ್ಲುದು. ಈ ಸಾಫಲ್ಯತನ ಕಾಯಕಶೀಲದಲ್ಲಿದೆ. ದಾಸೋಹದ ನಿಯಮದಲ್ಲಿದೆ. ಇಂಥ ಕಾಯಕ ಮತ್ತು ದಾಸೋಹ ಕೈಕೊಂಡ ಕರವು ಇಷ್ಟಲಿಂಗವನ್ನು ಧರಿಸಿಕೊಳ್ಳಲು ಸಮರ್ಥವೆನಿಸುವನು. ಲಿಂಗವನ್ನು ದಯ ಪಾಲಿಸುವ ಸದ್ಗುರುನಾಥನು ಶಿಷ್ಯನಿಗೆ ಕರಸ್ಥಲದ ಸಾರ್ಥಕ್ಯವನ್ನು ಬೋಧಿಸುವನು. ನರಮಾನವರನ್ನು ಬೇಡುವ ಆಚರಣೆಯನ್ನು ನಿರಾಕರಿಸುತ್ತ ಕರದ ಪರಾವಲಂಬನೆ ಯನ್ನು ದೂರೀಕರಿಸುತ್ತ; ಸ್ವಾವಲಂಬನೆಯ ಸಿದ್ಧಿಯನ್ನು ದಯಪಾಲಿಸುವನು. ಧನ-ಧಾನ್ಯಾದಿಗಳಿಂದ ದರಿದ್ರನೆನಿಸಿದರೂ ದಾಸೋಹಿಯೆನಿಸುವ ಶಿವಭಕ್ತನಿಗೆ ಶಿವನು ಪ್ರಿಯನಾಗುವನೆಂಬುದನ್ನು ಗುರು ತಿಳಿಸುತ್ತಾನೆ.
ಇಂದ್ರಿಯೇಚ್ಛೆಗೆ ಹರಿವ | ಮಂದಬುದ್ಧಿಯ ನೀಗಿ
ದಂದು ಲಿಂಗವನು – ಕಂದ ಕಕ್ಷೆಯೊಳು ದರಿ-
ಸೆಂದ ಶ್ರೀಗುರುವೆ ಕೃಪೆಯಾಗು ||೧೨೯ ||
ಶಿವಕವಿಯು-ಕರಸ್ಥಲದಲ್ಲಿ ಲಿಂಗಧಾರಣೆಯ ಮರ್ಮವನ್ನು ತಿಳಿಸಿ ಯಾಚನೆಯನ್ನು ನಿವಾರಿಸಿ ಕಾಯಕ-ದಾಸೋಹ ತತ್ತ್ವಗಳನ್ನು ಮನನ ಮಾಡಿಸಿದ ಸುಜ್ಞಾನ ಮೂರುತಿ ಗುರುದೇವನು ಇಂದ್ರಿಯೇಚ್ಛೆಯನ್ನು ಹರಿದು ಹಾಕುವ ನೀತಿಯನ್ನು
ನಿರೂಪಿಸುವನೆಂಬುದನ್ನು ನಿರ್ವಚಿಸುತ್ತಾನೆ.
“ಬಲವಾನ್ ಇಂದ್ರಿಯಗ್ರಾಮಃ ” (ವ್ಯಾಸರ ನುಡಿ)
ಇಂದ್ರಿಯಗಳ ಸಮೂಹವು ಬಲಶಾಲಿಯಾಗಿದೆ. ಇಂದ್ರಿಯ ಶಕ್ತಿಗೆ ಮಣಿಯದವರಿಲ್ಲ. ಇಂದ್ರಿಯಗಳ ಶಕ್ತಿಗೆ ಅಶ್ವಶಕ್ತಿಯನ್ನು ಉಪನಿಷತ್ಕಾರರು ಉಪಮಿಸಿದ್ದಾರೆ. ಭೌತಿಕ ವಿಜ್ಞಾನಿಗಳೂ ಸಹ ಯಾವುದೇ ಎಂಜನ್ನಿನ ಬಲವನ್ನು ಗುರುತಿಸುವಾಗ ಅಶ್ವಶಕ್ತಿಗೆ ತುಲನೆ ಮಾಡುತ್ತಿರುವದು ಯಥೋಚಿತವಾಗಿದೆ. ಕಠೋಪನಿಷತ್ತಿನ ಪ್ರಥಮಾಧ್ಯಾಯದ ಮೂರನೆಯ ವಲ್ಲಿಯಲ್ಲಿ ಯಮಧರ್ಮನು ಧೀರಬಾಲಕ ಆತ್ಮತತ್ತ್ವಜಿಜ್ಞಾಸು ನಚಿಕೇತನಿಗೆ
ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವ ತು |
ಬುದ್ಧಿಂ ತು ಸಾರಥಿಂ ವಿದ್ಧಿ ಮನಃ ಪ್ರಗ್ರಹಮೇವ ಚ || ೩ ||
ಇಂದ್ರಿಯಾಣಿ ಹಯಾನಾಹುರ್ವಿಷಯಾನ್ ತೇಷು ಗೋಚರಾನ್ |
ʼʼಶರೀರವೇ ರಥವು. ಆತ್ಮನು ರಥಿಕನು. ರಥದ ಸಾರಥಿಯೇ ಬುದ್ಧಿಯು. ಇಂದ್ರಿಯಗಳು ರಥವನ್ನು ಜಗ್ಗುವ ಕುದುರೆಗಳು. ಮನವು ಅವುಗಳಿಗೆ ಜೋಡಿಸಿದ ಲಗಾಮು. ಶಬ್ದಾದಿ ವಿಷಯಂಗಳೇ ಪ್ರತ್ಯಕ್ಷ ಗೋಚರಿಸುವ ಪದಾರ್ಥಗಳೆಂದು ತಿಳಿʼʼ ಎಂಬುದಾಗಿ ಬೋಧಿಸಿದ್ದಾನೆ. ರಥದ ಸಾರಥಿಯು ಬುದ್ಧಿವಂತನಾಗಿದ್ದರೆ ರಥಿಕನು ಯೋಗ್ಯ ಗುರಿಯನ್ನು ಗುರುತಿಸಬಲ್ಲನು. ಅಂತೆಯೇ ಬುದ್ಧಿಗೆ ಸಾರಥಿಯ ಸಂಕೇತ ಸಮೀಚೀನವಾಗಿದೆ. ಬುದ್ಧಿಯಿಲ್ಲದ ಸಾರಥಿಯು ರಥವನ್ನು ಗುರಿಯತ್ತ ಸಾಗಿಸಲಾರನು. ರಥವನ್ನೆಳೆಯುವ ಕುದುರೆಗಳು ಅವನ ವಶವರ್ತಿಯಾಗಿ ವರ್ತಿಸಲಾರವು. ಇದರಂತೆ ಆಧ್ಯಾತ್ಮಿಕ ರಥವೆನಿಸಿದ ಶರೀರಕ್ಕೆ ಸಾರಥಿಯಾದ ಬುದ್ಧಿಯು ಮಂದವಾಗಿದ್ದರೆ ಕುದುರೆಗಳೆಂಬ ಇಂದ್ರಿಯಗಳು ತಮ್ಮಿಚ್ಛೆಯಂತೆ ಹರಿಯುತ್ತವೆ. ಸುಬುದ್ಧಿಯುಳ್ಳ ಮಾನವನು ಸುವಿವೇಕದಿಂದ ಇಂದ್ರಿಯಗಳನ್ನು ನಿಗ್ರಹಿಸುತ್ತಾನೆ. ಇಂದ್ರಿಯೇಚ್ಛೆಗೆ ಮನವನ್ನು ಮಾರುಗೊಳಿಸುವದಿಲ್ಲ. ಸುವಿಚಾರದಿಂದ, ಸತ್ಕ್ರಿಯೆಗಳಿಂದ, ಸತ್ಸಂಗದಿಂದ ಇಂದ್ರಿಯಗಳನ್ನು ಹಾಗೂ ಮನವನ್ನು ಉದಾತ್ತೀಕರಿಸಬೇಕು. ಪರಿಪಕ್ವಗೊಳಿಸಬೇಕು. ಈ ರೀತಿಯಾಗಿ ಮನ ಮತ್ತು ಇಂದ್ರಿಯಗಳು ಸುಬುದ್ಧಿಯಿಂದ ಸಮರ್ಥವಾದರೆ ಇಷ್ಟಲಿಂಗವನ್ನು ಕಕ್ಷೆಯಲ್ಲಿ ಧಾರಣ ಮಾಡಬೇಕು.
ಕಕ್ಷೆಯೆಂದರೆ ಎಡದ ತೋಳು. ಇಂಜಕ್ಷನ್ ಮಾಡುವ ವೈದ್ಯನು ರೋಗಿಯ ಹೃದಯಕ್ಕೆ ಎಣ್ಣೆಯ ಪರಿಣಾಮವು ತೀವ್ರವಾಗಲೆಂದು ಎಡರಟ್ಟಿಗೇನೇ ಮಾರುವಂತೆ ಹೃದಯ ಮಧ್ಯದ ಚಿತ್ಕಳೆಯ ದ್ಯೋತಕವಾಗಿ ಮತ್ತು ಸಾಮೀಪ್ಯ ಸಂಬಂಧವನ್ನು ಸೂಚಿಸುವದಕ್ಕಾಗಿಯೂ ಕಕ್ಷೆಗೆ ಲಿಂಗಧಾರಣ ಮಾಡುವ ಕ್ರಮ ಪುರಾತನಕಾಲದಿಂದಲೂ ಬೆಳೆದುಬಂದಿದೆ. ಎಡರಟ್ಟೆಯಲ್ಲಿ ಲಿಂಗವನ್ನು ಧರಿಸಿಕೊಳ್ಳುವ ಭಕ್ತನ ಬುದ್ಧಿಯ ಮಂದತ್ವವನ್ನು ಕಳೆದುಕೊಂಡರೆ ಇಂದ್ರಿಯಗಳ ಇಚ್ಛೆಯು ಲಿಂಗೇಚ್ಛೆಯಾಗ ಬಲ್ಲುದೆಂದು ಸದ್ಗುರು ಬೋಧಿಸುತ್ತಾನೆ.
ಷಟ್‌ಸ್ಥಲ ಜ್ಞಾನಿ, ಸತ್ಕ್ರಿಯೆಯ ಸುಯಿದಾನಿ ಚನ್ನಬಸವಣ್ಣನರು-
ಕಕ್ಷೆಯಲ್ಲಿ ಲಿಂಗವ ಧರಿಸಿದ ಬಳಿಕ,
ಅನ್ಯಕಾಂಕ್ಷೆ ಇಲ್ಲದಿರಬೇಕು,
ಮಾಯದ ಉಸುರಡೆಯಾಡದಿರಬೇಕು.
ಸಂಸಾರ ಸಂಗವ ಹೊದ್ದದೆ ಮನವು
ಮಹಾಸ್ಥಲವನಿಂಬುಗೊಂಡಿರಬೇಕು.
ಕೂಡಲ ಚೆನ್ನಸಂಗಯ್ಯನಲ್ಲಿ ಏಕಾರ್ಥವಾಗಿರಬೇಕು
ಇದೆ ಕಕ್ಷೆಯಲ್ಲಿ ಲಿಂಗವ ಧರಿಸುವ ಕ್ರಮ || ೯೦೭ II
ಕಕ್ಷೆಯಲ್ಲಿ ಲಿಂಗವನ್ನು ಧರಿಸಿ ಲಿಂಗಭಕ್ತನು ಲಿಂಗದಿಚ್ಛೆಯಲ್ಲದ ವಸ್ತುವನ್ನು ಬಯಸಬಾರದು. ಮಾಯೆಯನ್ನು ಹೊದ್ದದಿರಬೇಕು. ಸಂಸಾರ ಸಂಗವನ್ನು ತ್ಯಜಿಸಿ ಮಹಾಲಿಂಗದಲ್ಲಿ ಮನವು ತಲ್ಲೀನಗೊಳ್ಳಬೇಕು. ಇಂತಾದರೆ ಕಕ್ಷೆಯಲ್ಲಿ ಲಿಂಗ ಧರಿಸಲು ಯೋಗ್ಯಕ್ರಮವೆಂದು ಬೋಧಿಸಿದ್ದಾರೆ.
ಅಂಗದ ಆರವಯವಗಳಲ್ಲಿ ಲಿಂಗವನ್ನು ಧರಿಸುವ ಶಿವಭಕ್ತನು ಸದ್ಗುರು ಬೋಧೆಯಂತೆ ಸದ್ಗುಣಗಳನ್ನು ಅಳವಡಿಸಿಕೊಳ್ಳುವದು ಸಮೀಚೀನವಾಗಿದೆ. ಮುಂದಿನ ತ್ರಿಪದಿಯಲ್ಲಿ ಎದೆಯ ಮೇಲೆ ಲಿಂಗಧಾರಣದ ಅಂತರಾರ್ಥವನ್ನು ವಿವರಿಸುತ್ತಾನೆ.
ಪರಹೆಣ್ಣಿಗೆದೆಗೊಟ್ಟು | ಭರದಿಂದಲಪ್ಪುವಾ
ದುರಿತವನೆ ಉಳಿದು-ಉರಸಜ್ಜೆಯೊಳು ಲಿಂಗ
ಧರಿಸೆಂದ ಗುರುವೆ ಕೃಪೆಯಾಗು || ೧೩೦ |
ಕರದಲ್ಲಿ ಕಾಣಿಸುವದು ಇಷ್ಟಲಿಂಗ, ಕಕ್ಷೆಯಲ್ಲಿ ಧರಿಸುವದು ಪ್ರಾಣಲಿಂಗ, ಉರದಲ್ಲಿ ಧಾರಣಮಾಡುವದು ಭಾವಲಿಂಗ ದ್ಯೋತಕವೆಂತಲೂ ಭಾವಿಸಬಹುದು. ಸ್ಥೂಲವಾಗಿ ಪ್ರತ್ಯಕ್ಷವಾಗಿ ಪೂಜೆಗೈಯಲು ಅನುಕೂಲವಾದುದು ಇಷ್ಟಲಿಂಗವು. ಶರೀರದ ಎಡಭಾಗದಲ್ಲಿಯೇ ಪ್ರಾಣಪುಪ್ಪುಸವಿರುವದರಿಂದ ಅದನ್ನು ಸೂಚಿಸುವ ಎಡದ ರಟ್ಟೆಯಲ್ಲಿ ಕಟ್ಟುವದು ಪ್ರಾಣಲಿಂಗದ ಪರಿಯಾಯವಾಗ ಬಹುದು. ಹೃದಯದಮೇಲೆ ಧರಿಸುವದು ಭಾವಲಿಂಗವೆನ್ನಬಹುದು. ದುಷ್ಕರ್ಮಗಳ ಭಾವವಳಿದು ಮನಪವಿತ್ರವಾದರೆ ಭಾವಲಿಂಗದ ಅನುಸಂಧಾನ ಸಾಧ್ಯವಾಗುವದು. ಅದು ಕಾರಣ ಉರದಮೇಲೆ ಲಿಂಗವನ್ನು ಧರಿಸುವ ಭಕ್ತನು ಪರರ ಹೆಣ್ಣು ಮಕ್ಕಳನ್ನು ಅಪ್ಪಿಕೊಳ್ಳುವ ಪಾಪವನ್ನು ಪರಿಹರಿಸಬೇಕು. ಲಿಂಗವನ್ನು ಅಪ್ಪಿಕೊಂಡ ಎದೆಯು ಪರಸ್ತ್ರೀಯಳ ಎದೆಯನ್ನು ಸೋಂಕಬಾರದು. ಪಂಚಪಾತಕಗಳಲ್ಲಿ ಪರಸ್ತ್ರೀ ಸಂಗವೊಂದೆಂದು ಅನುಭವಿಗಳು ಸಾರಿದ್ದಾರೆ. ಪರಸ್ತ್ರೀ ಸಂಗದಲ್ಲಿ ಲೋಲುಪನಾದ ಜೀವಿಯು ಅನಂತ ಪಾಪಗಳನ್ನು ಮಾಡುತ್ತಾನೆ. ತನ್ನ ತನುವನ್ನು, ಧನವನ್ನು, ಮನವನ್ನು ಅವಳಿಗಾಗಿ ಸೂರೆಮಾಡುತ್ತಾನೆ. ಸ್ವತಂತ್ರತೆಯನ್ನು ಕಳೆದುಕೊಳ್ಳುತ್ತಾನೆ. ಕಳ್ಳನಂತೆ ಸುಳ್ಳನಾಗಿ ಸುಳಿದಾಡುತ್ತಾನೆ. ಅಪರಾಧಿಯಾಗಿ ಸಜ್ಜನ ಸಹವಾಸದಿಂದ ದೂರಾಗಿ ದುರ್ಜನರ ಸಹವಾಸದಲ್ಲಿ ಬೀಳುತ್ತಾನೆ. ವಿಷಯ ಲಂಪಟತನದಿಂದ ತನ್ನ ಸತಿಸುತರನ್ನು, ಬಾಂಧವರನ್ನು ದುಃಖಕ್ಕೀಡು ಮಾಡುತ್ತಾನೆ. ಇದನ್ನರಿತ ಸದ್ಗುರುನಾಥನು ದಯೆಯಿಂದ ಇಂಥ ದುರಿತದಿಂದ ದೂರಿರಬೇಕೆಂದು ಸಾರುತ್ತಾನೆ. ಸಲಹುತ್ತಾನೆ.
ಪರಧನ ಪರಸ್ತ್ರೀಯನ್ನು ಪರಿಹರಿಸುವ ಶರಣ ಸಾಹಿತ್ಯ ಅಪಾರವಾಗಿದೆ. ಶರಣ ಧರ್ಮಕ್ಕೆ ನೀತಿಯೇ ನೆಲೆಗಟ್ಟಾಗಿದೆ. ಅಣ್ಣಬಸವಣ್ಣನವರು-
ನೋಡಲಾಗದು, ನುಡಿಸಲಾಗದು ಪರಸ್ತ್ರೀಯ, ಬೇಡ ಕಾಣಿರೋ
ತಗರ ಬೆನ್ನಲಿ ಹರಿವ ಸೊಣಗನಂತೆ ಬೇಡ ಕಾಣಿರೋ !
ಒಂದಾಶೆಗೆ ಸಾಸಿರ ವರುಷ ನರಕದೊಳದ್ದುವ ಕೂಡಲ ಸಂಗಮದೇವ
ಚನ್ನ ಬಸವಣ್ಣನವರು-
ದಾಸಿಯರ ಸಂಗ ಕಸನೀರ ಹೊರಸಿತ್ತು.
ವೇಸಿಯರ ಸಂಗ ಎಂಜಲವ ತಿನಿಸಿತ್ತು.
ಪರಸ್ತ್ರೀಯರ ಸಂಗ ಪಂಚಮಹಾ ಪಾತಕವ ತಂದಿತ್ತು.
ಈ ತ್ರಿವಿಧವು ನಾಸ್ತಿಯಾದಲ್ಲದೆ ಭಕ್ತನಲ್ಲ
ಭಕ್ತಿಯಿಲ್ಲದೆ ಮುಕ್ತಿಗೆ ಸಲ್ಲ ನಮ್ಮ ಕೂಡಲ ಚನ್ನಸಂಗಯ್ಯನಲ್ಲಿ
ದೇವರ ದಾಸಿಮಾರ್ಯರು-
ಈಶನ ಶರಣರು ವೇಶಿಯ ಹೋದರೆ
ಮೀಸಲೋಗರವ ಹೊರಗಿರಿಸಿದಡೆ
ಹಂದಿ ಮೂಸಿನೋಡಿದಂತೆ ಕಾಣಾ ರಾಮನಾಥಾ ?
ಮತ್ತು
ಶಿವಪೂಜೆಯೆತ್ತ ? ವಿಷಯದ ಸವಿಯೆತ್ತ?
ಆ ವಿಷಯದ ಸವಿ ತಲೆಗೇರಿ
ಶಿವಪೂಜೆಯ ಬಿಟ್ಟು ವೇಶಿಯರ ಎಂಜಲ
ಹೇಸದೆ ತಿಂಬ ದೋಷಿಗಳೇನೆಂಬೆನೈ ರಾಮನಾಥಾ ?
ಅಂಬಿಗರ ಚೌಡಯ್ಯ ಶರಣನು-
ಬ್ರಹ್ಮದ ಮಾತನಾಡಿ
ಕನ್ಯೆಯರ ಕಾಲದೆಸೆಯಲ್ಲಿ ಕುಳಿತಲ್ಲಿ
ಪರಬೊಮ್ಮದ ಮಾತು ಅಲ್ಲಿ
ನಿಂದಿತ್ತೆಂದನಂಬಿಗರ ಚೌಡಯ್ಯ
ಎಂದು ಮುಂತಾಗಿ ಪರಸ್ತ್ರೀಸಂಗವನ್ನು ಶರಣರು ನಿಷ್ಠುರವಾಗಿ ನಿಷೇಧಿಸಿದ್ದಾರೆ. ಪರಸ್ತ್ರೀಸಂಗವನ್ನು ತೊರೆಯದೆ ಉರದಲ್ಲಿ ಲಿಂಗವನ್ನು ಧರಿಸಬಾರದೆಂಬುದೇ ಶಿವ ಕವಿಯ ಸದಾಶಯವಾಗಿದೆ.
ಈ ಉರಸ್ಥಲದ ಹಿರಿಮೆಯನ್ನು ಗರಿಮೆಯನ್ನು ಚನ್ನಬಸವಣ್ಣನವರ ವಚನದಿಂದ ಅರಿತುಕೊಳ್ಳೋಣ-
ಉರಸ್ಥಲದಲ್ಲಿ ಲಿಂಗವ ಧರಿಸಿದ ಬಳಿಕ
ಮನದ ಕೊನೆಯಿಂದ ಲಿಂಗವನಗಲದಿರಬೇಕು
ಉರ ಗುರುಸ್ಥಲ, ಉರ ಲಿಂಗಸ್ಥಲ, ಉರ ಜಂಗಮಸ್ಥಲ,
ಉರ ಪ್ರಸಾದಿಸ್ಥಲ, ಉರ ಮಹಾಸ್ಥಲ,
ಉರ ಅನುಭಾವಸ್ಥಲವೆಂದರಿವುದು.
ಅನ್ಯ ಮಿಶ್ರಂಗಳ ಹೊದ್ದಲಾಗದು
ತಟ್ಟು-ಮುಟ್ಟು-ತಾಗು ನಿರೋಧಂಗಳಿಗೆ ಗುರಿಯಾಗಲಾರದು.
ಇಂದ್ರಿಯಗಳ ಕೂಡಿ ಮನಸ್ತಾಪಗೊಳ್ಳದೆ
ಉರಲಿಂಗ ಸ್ವಾಯತವಾಗಿರ್ದುದು
ಪ್ರಾಣಲಿಂಗಿ ಲಿಂಗಪ್ರಾಣಿಗಿದು ಚಿಹ್ನ
ಕೂಡಲ ಚನ್ನಸಂಗಮದೇವಾ || ೯೦೪ ||
ಉರಸ್ಥಲವು ಗುರು-ಲಿಂಗ-ಜಂಗಮ-ಪ್ರಸಾದಗಳೆಂಬ ಚತುರ್ವಿಧ ಸಾರಾಯ ಸಂಪತ್ತಿಗೆ ಆಶ್ರಯ ಸ್ಥಾನವೆನಿಸಿದ್ದರಿಂದ ಮಹಾಸ್ಥಲವೆಂದೆನಿಸಿದೆ. ಉರದಲ್ಲಿಯೇ ಅನುಭಾವ ಮಡುಗಟ್ಟಬಲ್ಲುದು. ಅದು ಕಾರಣ ಉರಕ್ಕೆ ಅನ್ಯವಸ್ತುಗಳ ಸಂಪರ್ಕ ಹೊಲ್ಲ. ಉರದಿಂದ ಪರಸ್ತ್ರೀಯರ ತಟ್ಟು-ಮುಟ್ಟುಗಳು ದೂರಾಗಬೇಕು. ಉರದ ಮೇಲೆ ಶಿವಲಿಂಗವನ್ನು ಸ್ವಾಯತಗೊಳಿಸಿಕೊಂಡ ಮೇಲೆ ಮನದ ಕೊನೆಯಿಂದ ಲಿಂಗವನಗಲದಂತಿರಬೇಕಲ್ಲದೆ ; ಪ್ರಾಣಲಿಂಗಿ-ಲಿಂಗಪ್ರಾಣಿಯೆನಿಸಬೇಕು. ಇದುವೆ ಉರದಲ್ಲಿ ಲಿಂಗವ ಧರಿಸುವ ಮಹಾ ಸಂಕೇತ.