ಮಾನ್ಯ ಶ್ರೀ ರವಿಂದ್ರ ಕೋಳಕುರ
ಅದ್ಯಕ್ಷರು
ರಾಷ್ಟ್ರೀಯ ಬಸವದಳ ಬಸವಕಲ್ಯಾಣ
ತಮಗೆ ಗೌರವಪೂರ್ವಕ ವಂದನೆಗಳು.
ಇತ್ತೀಚೆಗೆ ತಮ್ಮ ಫೇಸಬುಕ್ ಖಾತೆಯಲ್ಲಿ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಕುರಿತು ತಾವು ಪ್ರಕಟಿಸಿರುವ ಬರಹವನ್ನು ಗಮನದಿಂದ ಓದಿದೆ. ಆ ಬರಹದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ವೈಚಾರಿಕ ಚರ್ಚೆಯ ಮಿತಿಯನ್ನು ಮೀರಿ, ಇತಿಹಾಸದ ಅಪೂರ್ಣ ಅರಿವು, ಪೂರ್ವಾಗ್ರಹ ಮತ್ತು ಸಂಶಯಾಸ್ಪದ ನಿರೂಪಣೆಯ ಮಿಶ್ರಣವಾಗಿ ಕಾಣುತ್ತವೆ ಎಂಬ ವಿಷಾದವನ್ನು ಆರಂಭದಲ್ಲೇ ದಾಖಲಿಸಬೇಕಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಕೆಲವು ಚಿತ್ರಗಳು ಮತ್ತು ಪೋಸ್ಟರ್ಗಳು, ವೀರಶೈವ–ಲಿಂಗಾಯತ ಸಮುದಾಯಗಳ ಮಧ್ಯೆ ಅನಗತ್ಯ ಕಲಹ ಸೃಷ್ಟಿಸಿ ದೂರದಿಂದ ಸಂಭ್ರಮಿಸುವ ಅತೃಪ್ತ ಮನೋಭಾವಗಳ ಉತ್ಪನ್ನವಾಗಿರುವುದು ಹೊಸ ವಿಷಯವೇನಲ್ಲ. ಆದರೆ ಸಮಾಜದ ಜವಾಬ್ದಾರಿಯುತ ಸ್ಥಾನದಲ್ಲಿರುವ ತಾವು, ಚಿತ್ರಕ್ಕೂ ನಿಮ್ಮ ಬರಹಕ್ಕೂ ನೇರ ಸಂಬಂಧವೇ ಇಲ್ಲದಿದ್ದರೂ, ಅದನ್ನು ನೆಪವನ್ನಾಗಿ ಮಾಡಿಕೊಂಡು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಂತಹ ಮಹನೀಯರ ಕುರಿತು ಅವಹೇಳನಾತ್ಮಕ ಮತ್ತು ಇತಿಹಾಸವಿರೋಧಿ ಹೇಳಿಕೆಗಳನ್ನು ಮಾಡಿರುವುದು ಆಶ್ಚರ್ಯಕ್ಕಿಂತ ಹೆಚ್ಚು ನೋವನ್ನುಂಟುಮಾಡುತ್ತದೆ.
“ಇತಿಹಾಸದ ಅರಿವಿಲ್ಲದವರು ಹಾನಗಲ್ಲ ಕುಮಾರ ಶಿವಯೋಗಿಗಳು ವಚನಗಳನ್ನು ಸಂರಕ್ಷಿಸಿದರು ಎಂದು ನಂಬಿರಬಹುದು” ಎಂದು ತಾವು ಬರೆದಿದ್ದೀರಿ. ಆದರೆ ಅದೇ ವಾಕ್ಯ ತಮಗೇ ಪ್ರಶ್ನೆಯಾಗಿ ಮರಳಿ ಬರುತ್ತದೆ — ಇತಿಹಾಸವನ್ನು ಸಂಪೂರ್ಣವಾಗಿ ಓದಿರುವವರು ನಿಜವಾಗಿಯೂ ಇಂತಹ ನಿರ್ಣಯಕ್ಕೆ ಬರಬಹುದೇ?
ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು “ಶರಣರ ಸಮಾನತೆಯ ತತ್ವಕ್ಕೆ ವಿರುದ್ಧವಾದ ವೀರಶೈವ ಮತವನ್ನು ಗಟ್ಟಿಗೊಳಿಸಲು ಶ್ರಮಿಸಿದರು” ಎಂಬ ನಿಮ್ಮ ಆರೋಪವು ಇತಿಹಾಸದ ದಾಖಲೆಗಳ ಎದುರು ನಿಲ್ಲಲಾರದು. ಪೂಜ್ಯಾ ಕುಮಾರೇಶ್ವರರು, ಅಖಿಲ ಭಾರತ ವೀರಶೈವ ಮಹಾಸಭೆ, ಶರಣ ಸಾಹಿತ್ಯ, ಶಿವಯೋಗಮಂದಿರ, ಫ.ಗು. ಹಳಕಟ್ಟಿಯವರ ಸಂಬಂಧ — ಇವುಗಳ ಇತಿಹಾಸವನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಯಾರೂ ಇಂತಹ ಸರಳೀಕೃತ ಮತ್ತು ಪೂರ್ವಾಗ್ರಹಪೂರಿತ ಅಭಿಪ್ರಾಯ ವ್ಯಕ್ತಪಡಿಸುವ ಸಾಧ್ಯತೆಯೇ ಇಲ್ಲ.
ತಾವು ಬರೆದಿರುವ ಸಾಲುಗಳಲ್ಲಿ “ಅಜ್ಞಾನದಿಂದ ಸಾಹಿತ್ಯಕ್ಕೆ ಕಂಟಕ” ಎಂಬ ಮಾತಿದೆ. ಆದರೆ ಸಾಮಾಜಿಕ ಜಾಲತಾಣ ಒಂದು ಪೋಸ್ಟರ್ ಆಯ್ದುಕೊಂಡು, ಉಳಿದ ದಾಖಲೆಗಳನ್ನು ಮೌನವಾಗಿ ಕಡೆಗಣಿಸಿ ಸಮಾಜದ ಮುಂದೆ ಅರ್ಧಸತ್ಯವನ್ನು ಇಡುವುದೇ ಸಾಹಿತ್ಯ ಮತ್ತು ಇತಿಹಾಸಕ್ಕೆ ದೊಡ್ಡ ಕಂಟಕ ಎಂಬುದನ್ನು ತಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
ದಯವಿಟ್ಟು ತಾವೇ ಒಮ್ಮೆ ಪ್ರಶ್ನಿಸಿಕೊಳ್ಳಿ —
ತಾವು ಪ್ರಕಟಿಸಿದ ಚಿತ್ರಕ್ಕೂ, ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೂ, ವಚನ ಪಿತಾಮಹ ಶ್ರೀ ಫ.ಗು. ಹಳಕಟ್ಟಿಯವರಿಗೂ ಇರುವ ನಿಜವಾದ ಸಂಬಂಧವೇನು?
ಯಾವ ಕಾರಣಕ್ಕೆ ತಾವು ಅನಗತ್ಯವಾಗಿ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಕುರಿತು ಹಾಗೂ ಅವರು ಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭೆಯ ಕುರಿತು ಸಮಾಜದಲ್ಲಿ ತಪ್ಪು ಕಲ್ಪನೆ ಮೂಡುವ ರೀತಿಯಲ್ಲಿ ಬರೆಯುತ್ತಿದ್ದೀರಿ ಎಂಬುದು ನಿಜಕ್ಕೂ ಆಶ್ಚರ್ಯಕರವಾಗಿದೆ.
ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೂ ವಚನ ಪಿತಾಮಹ ಶ್ರೀ ಫ.ಗು. ಹಳಕಟ್ಟಿಯವರಿಗೂ ಇದ್ದ ಆತ್ಮೀಯ ಮತ್ತು ಆಧ್ಯಾತ್ಮಿಕ ಸಂಬಂಧದ ಕುರಿತು, ಸ್ವತಃ ಫ.ಗು. ಹಳಕಟ್ಟಿಯವರೇ ತಮ್ಮ “ಶಿವಾನುಭವ” ಪತ್ರಿಕೆಯಲ್ಲಿ ಅಪಾರ ಗೌರವದಿಂದ ಬರೆದಿರುವ ಲೇಖನಗಳನ್ನು ದಯವಿಟ್ಟು ಒಮ್ಮೆ ಮನಸ್ಸು ತೆರೆದು ಓದಿ. ಇತಿಹಾಸವನ್ನು ಘೋಷಣೆಗಳಿಂದಲ್ಲ, ದಾಖಲೆಗಳಿಂದ ಅರಿಯಬೇಕು.
ಲೇಖನಗಳಿಗಾಗಿ :
- https://journal.shrikumar.com/archives/936
- https://journal.shrikumar.com/archives/4352
- https://journal.shrikumar.com/archives/2021
ಆ ಇಬ್ಬರು ಮಹಾತ್ಮರ ನಡುವೆ, ಇಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸುವಂತಹ ಸಣ್ಣತನ, ದ್ವೇಷ ಅಥವಾ ಗೌರವದ ಕೊಳುಕುತನ ಇರಲಿಲ್ಲ. ಅವರ ಸಂಬಂಧವು ವೈಚಾರಿಕ ಪ್ರಾಮಾಣಿಕತೆ, ಪರಸ್ಪರ ಗೌರವ ಮತ್ತು ಶರಣ ಸಾಹಿತ್ಯದ ಮೇಲಿನ ಸಮಾನ ತಪಸ್ಸಿನ ಮೇಲೆ ನಿಂತಿತ್ತು.
ಅದಕ್ಕೇ ವಚನ ಪಿತಾಮಹ ಫ.ಗು. ಹಳಕಟ್ಟಿಯವರು ತಮ್ಮ ಮೊದಲ ಮುದ್ರಿತ “ವಚನಶಾಸ್ತ್ರ ಸಾರ” ಕೃತಿಯನ್ನು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ ಅರ್ಪಿಸಿದರು. ಅದು ಕೇವಲ ಅರ್ಪಣೆಯಲ್ಲ; ಇಬ್ಬರು ಮಹಾತ್ಮರ ನಡುವಿನ ದೈವಿಕ ಬಾಂಧವ್ಯದ ಇತಿಹಾಸದ ದಾಖಲೆ.
ಆ ಸಂಬಂಧಕ್ಕೆ ಇಂದು ಯಾರೊಬ್ಬರ ಪ್ರಮಾಣಪತ್ರವೂ ಸಮಾಜಕ್ಕೆ ಬೇಕಾಗಿಲ್ಲ.
ಮುಂದುವರಿದು ತಾವು —
“ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಕಟ್ಟಿ, ಬಸವಣ್ಣನವರ ವೈಚಾರಿಕ ಕ್ರಾಂತಿಯನ್ನು ಪುನಃ ವೈದಿಕೀಕರಣದ ಚೌಕಟ್ಟಿನೊಳಗೆ ತರುವ ಪ್ರಯತ್ನ ಇವರಿಂದ ನಡೆಯಿತು” ಎಂದು ಬರೆದಿದ್ದೀರಿ.
ಆದರೆ ಇತಿಹಾಸದ ಪುಟಗಳನ್ನು ಸಂಪೂರ್ಣವಾಗಿ ಓದಿದ್ದರೆ, ಇಂತಹ ಆರೋಪ ಮಾಡುವ ಮೊದಲು ಕನಿಷ್ಠ ಒಂದು ಕ್ಷಣ ತಡೆದು ಯೋಚಿಸುತ್ತಿದ್ದಿರಿ.
ವಚನ ಪಿತಾಮಹ ಶ್ರೀ ಫ.ಗು. ಹಳಕಟ್ಟಿಯವರೇ 1933ರಲ್ಲಿ ಧಾರವಾಡದಲ್ಲಿ ನಡೆದ 11ನೇ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಸಂಗತಿ ಬಹುಶಃ ತಮಗೆ ತಿಳಿದಿರಲಿಕ್ಕಿಲ್ಲ.
ಅದೂ ಹೋಗಲಿ — ತಾವು ಅಧ್ಯಕ್ಷರಾಗಿರುವ ರಾಷ್ಟ್ರೀಯ ಬಸವದಳದ ಸಂಸ್ಥಾಪಕರಾದ ಶ್ರೀ ಮಾತೆ ಮಹಾದೇವಿಯವರೇ 1983ರಿಂದ 1992ರವರೆಗೆ ಅಖಿಲ ಭಾರತ ವೀರಶೈವ ಮಹಾಸಭೆಯ ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷರಾಗಿದ್ದ ಸಂಗತಿಯೂ ತಮ್ಮ ಸ್ಮರಣೆಗೆ ಬಾರದಿರುವುದು ನಿಜಕ್ಕೂ ದುರಂತಕರ.
ಹಾಗಾದರೆ ಪ್ರಶ್ನೆ ಉದ್ಭವಿಸುತ್ತದೆ —
ಫ.ಗು. ಹಳಕಟ್ಟಿಯವರೂ ತಪ್ಪೇ?
ಮಾತೆ ಮಹಾದೇವಿಯವರೂ ತಪ್ಪೇ?
ಅಥವಾ ಇತಿಹಾಸವನ್ನು ಇಂದಿನ ರಾಜಕೀಯ ಮತ್ತು ಪೂರ್ವಾಗ್ರಹದ ಕಣ್ಣಿನಿಂದ ಮರುಬರೆಯುವ ಪ್ರಯತ್ನವೇ ನಡೆಯುತ್ತಿದೆಯೇ?
“ಶರಣರ ಸಮಾನತೆಯ ತತ್ವಕ್ಕೆ ವಿರುದ್ಧವಾದ ‘ವೀರಶೈವ’ ಮತ” ಎಂದು ಅತ್ಯಂತ ಸುಲಭವಾಗಿ ತೀರ್ಪು ನೀಡುವ ತಾವು, ತಾವು ಅಧ್ಯಕ್ಷರಾಗಿರುವ ರಾಷ್ಟ್ರೀಯ ಬಸವದಳದ ಸಂಸ್ಥಾಪಕರಾದ ಶ್ರೀ ಮಾತೆ ಮಹಾದೇವಿಯವರ ಜೀವನ, ಬರಹಗಳು ಮತ್ತು ಸಾರ್ವಜನಿಕ ಪ್ರತಿಜ್ಞೆಗಳನ್ನಾದರೂ ಸಂಪೂರ್ಣವಾಗಿ ಅಧ್ಯಯನ ಮಾಡಿದ್ದೀರೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.
1966ರ ಏಪ್ರಿಲ್ 5ರಂದು ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳಿಂದ ಜಂಗಮ ದೀಕ್ಷೆ ಸ್ವೀಕರಿಸಿದ ಸಂದರ್ಭದಲ್ಲಿ, ಶ್ರೀ ಮಾತೆ ಮಹಾದೇವಿಯವರೇ ಹೀಗೆ ಪ್ರತಿಜ್ಞೆ ಮಾಡಿರುವ ದಾಖಲೆಗಳು ಲಭ್ಯವಿವೆ:
“ಆದರ್ಶ ಸಾಧನೆಗೆ ವೀರಶೈವ ಧರ್ಮಪ್ರಚಾರಕ್ಕೆ ಸದಾ ಹೋರಾಡುತ್ತೇನೆ. ಶರಣ ಧರ್ಮ ಪ್ರಚಾರ ಮಾಡಲು ಪರದೇಶಕ್ಕೆ ಹೋಗುವೆ. ನಾನು ಇನ್ನೂ ಹೆಚ್ಚಿನ ಶಕ್ತಿಯನ್ನು ಗಳಿಸುವೆ. ನಂತರ ವೀರಶೈವ ಮಿಷನರಿಯಾಗಿ ಹೋಗುವೆ.”
(ಉಲ್ಲೇಖ : ‘ಲಿಂಗಾಯತ ವೀರಶೈವ: ಒಂದೆಯೂ ಹೌದು, ಹಿಂದೂವೂ ಹೌದು’, ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಶ್ರೀಮದ್ ವಿಭೂತಿಪುರ, ವೀರ ಸಿಂಹಾಸನ ಮಠ, ಬೆಂಗಳೂರು; ‘ರೇಣುಕ ಸೌಭಾಗ್ಯ ಸಿರಿ’ ಗ್ರಂಥ, ಪುಟ 141, ಮತ್ತು ೬-೦೪-೧೯೬೬ ರ ಕನ್ನಡಮ್ಮ ಪತ್ರಿಕಾ ವರದಿ )
ಇದನ್ನು ಇತಿಹಾಸ ಎನ್ನಬೇಕೋ?
ಅಥವಾ ಇಂದಿನ ಕೆಲವು ಆಯ್ಕೆಮಾಡಿದ ವೈಚಾರಿಕ ವ್ಯಾಖ್ಯಾನಗಳಂತೆ “ಅನುಕೂಲಕರ ಸತ್ಯ” ಎನ್ನಬೇಕೋ?
ಇಷ್ಟೇ ಅಲ್ಲ — ಶ್ರೀ ಮಾತೆ ಮಹಾದೇವಿಯವರೇ ರಚಿಸಿರುವ “ಮಾತೃವಾಣಿ” ಕೃತಿಯಲ್ಲಿ ಅವರು ಹೀಗೆ ಬರೆದಿದ್ದಾರೆ:
“ದಾವಣಗೆರೆ ವಿಶ್ವಕಲ್ಯಾಣ ಮಂಟಪ ಸ್ಥಾಪಕ, ಧೀರ ಗುರುವರ್ಯ, ವೈರಾಗ್ಯಪರ, ವೀರಶೈವ ಧರ್ಮದೀಪ್ತಿ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಯವರ ಪಾದಾಂಬುಜದಲ್ಲಿ… ಅರ್ಪಿಸುವೆನಾಂ ಮಹಾದೇವೀ ಪ್ರಿಯ ಸಚ್ಚಿದಾನಂದ ಸತಿಯಾಗಿ.”
(ಮಾತೃವಾಣಿ, ದಾವಣಗೆರೆ, 1965)
ಇದು ಕೇವಲ ಗೌರವದ ಭಾಷೆಯಲ್ಲ; ಅದು “ವೀರಶೈವ” ಎಂಬ ಪದವನ್ನು ತಾವು ಇಂದು ಚಿತ್ರಿಸುವ ರೀತಿಯಲ್ಲೇ ಆ ಕಾಲದ ಮಹನೀಯರು ಕಂಡಿರಲಿಲ್ಲ ಎಂಬ ಸ್ಪಷ್ಟ ಇತಿಹಾಸದ ಸಾಕ್ಷಿ.
ಅದೇ “ಮಾತೃವಾಣಿ” ಕೃತಿಯಲ್ಲಿರುವ “ವೀರಶೈವರ ಲಾಂಛನ” ಎಂಬ ಲೇಖನದಲ್ಲಿ ಮಾತೆ ಮಹಾದೇವಿಯವರು ಇನ್ನೂ ಸ್ಪಷ್ಟವಾಗಿ ಬರೆಯುತ್ತಾರೆ:
“ವಿಭೂತಿ ರುದ್ರಾಕ್ಷಿ ಧಾರಣೆಯ ಕಂಡು ಹೀನೈಸಿ ನಗುವರ|
ನೋಡೆನ್ನ ಮನದೊಳು ಸಿಗ್ಗದು ಸಂಚರಿಸಿವೆ|
ತ್ರಿಪುಂಡ್ರವದು ವೀರಶೈವರ ವಿಷಯ ಭಸ್ಮದಾ ಲಾಂಛನ|
ರುದ್ರಾಕ್ಷಿಯದು ಲಿಂಗಪತಿಯಕ್ಷಿಯಿಂ ಹೊಮ್ಮಿ ಕಟ್ಟಲ್ಪಟ್ಟ ಮಂಗಲಸೂತ್ರ|
ಇಂಥಪ್ಪ ವಿಭೂತಿ ರುದ್ರಾಕ್ಷಿ ಧರಿಸಿದ ಸದ್ಭಕ್ತರಂ ಕಂಡು|
ಹೀಯಾಳಿಪರ ಅಡೆತಡೆಯಿಲ್ಲದ ಜ್ಞಾನಕ್ಕೆ ಮನನೊಂದು ನಕ್ಕೆನೊ? ಸಚ್ಚಿದಾನಂದ”
(ಮಾತೃವಾಣಿ, ಪುಟ 42)
ಈ ಕೃತಿಗೆ ಹಿರಿಯ ವಿದ್ವಾಂಸ ಡಾ. ಎಚ್. ತಿಪ್ಪೇರುದ್ರಸ್ವಾಮಿಯವರು “ಮೆಚ್ಚುನುಡಿ” ಬರೆದಿರುವುದೂ ಗಮನಾರ್ಹ ಸಂಗತಿ.
ಇದು ನಿಜವಾದ ಇತಿಹಾಸ.
ಇವು ದಾಖಲೆಗಳು.
ಇವು ಪುಸ್ತಕಗಳಲ್ಲಿ ಉಳಿದಿರುವ ಮಹನೀಯರ ಸ್ವಂತ ಮಾತುಗಳು.
ಹೀಗಿರುವಾಗ, “ಅಜ್ಞಾನದಿಂದ ಸಾಹಿತ್ಯಕ್ಕೆ ಕಂಟಕ” ಎಂಬ ಮಾತನ್ನು ತಾವು ಇತರರ ಕಡೆ ತೋರಿಸುವ ಮೊದಲು, ಇತಿಹಾಸವನ್ನು ಸಂಪೂರ್ಣವಾಗಿ ಓದದೆ, ಸತ್ಯವನ್ನು ತಿರುಚಿ ಸಮಾಜದ ಮುಂದೆ ಅರ್ಧಸತ್ಯಗಳನ್ನು ಇಡುವವರಿಂದಲೇ ಇಂದಿನ ಸಾಹಿತ್ಯ ಲೋಕಕ್ಕೆ ದೊಡ್ಡ ಕಂಟಕ ಎದುರಾಗಿದೆ ಎಂಬ ಕಟುಸತ್ಯವನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ವಾಸ್ತವವಾಗಿ ತಮ್ಮ ಲೇಖನದ ಪ್ರತಿಯೊಂದು ಆರೋಪವೂ, ತಮಗೇ ಹಿಡಿದ ಕನ್ನಡಿಯಾಗಿದೆ.
1909ರಲ್ಲಿ ಆರಂಭವಾದ ಶ್ರೀ ಶಿವಯೋಗಮಂದಿರದಲ್ಲಿ ಇಂದಿಗೂ ಪ್ರತಿದಿನ ಮೂರು ಹೊತ್ತು ಶರಣರ ವಚನಗಳ ವಾಚನ ನಡೆಯುತ್ತಿರುವ ಸಂಗತಿ ಬಹುಶಃ ತಮಗೆ ತಿಳಿದಿಲ್ಲವೆನಿಸುತ್ತದೆ. ಅಲ್ಲಿ ಬದುಕಿದ ವಟು–ಸಾಧಕರ ಜೀವನದಲ್ಲಿ “ಅರ್ಪಣ, ಅರ್ಚನೆ ಮತ್ತು ಅನುಭಾವ”ಗಳು ಕೇವಲ ಪದಗಳಲ್ಲ; ಅವು ಬದುಕಿನ ಕ್ರಮವಾಗಿದ್ದವು. ಆ ಜೀವನಕ್ರಮವನ್ನು ರೂಪಿಸಿ, ಶರಣ ಸಂಸ್ಕೃತಿಯನ್ನು ಮಂದಿರದ ನಿತ್ಯಸಾಧನೆಯ ಭಾಗವನ್ನಾಗಿಸಿದವರು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳೇ.
ವಚನಗಳು ಕೇವಲ ಪುಸ್ತಕಗಳಲ್ಲಿ ಉಳಿಯಬಾರದು; ಅವು ಜನರ ಉಸಿರಿನಲ್ಲಿ ಬದುಕಬೇಕು ಎಂಬ ದೃಷ್ಟಿಯಿಂದಲೇ ಶಿವಯೋಗಮಂದಿರದಲ್ಲಿ ಕಲಿತ ಕೀರ್ತನಕಾರರು, ಪುರಾಣಿಕರು, ಶಾಸ್ತ್ರಿಗಳು ಮತ್ತು ಉಪನ್ಯಾಸಕರಿಗೆ — “ಯಾವ ಊರಿಗೆ ಹೋದರೂ ಕಾರ್ಯಕ್ರಮವನ್ನು ಶರಣರ ವಚನಗಳ ಗಾಯನ ಮತ್ತು ಅವುಗಳ ಅರ್ಥವಿವರಣೆಯಿಂದಲೇ ಆರಂಭಿಸಬೇಕು” ಎಂದು ಕಟ್ಟುನಿಟ್ಟಾಗಿ ಹೇಳಿಕೊಟ್ಟವರು ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು.
ಇದು ವಚನ ವಿರೋಧಿಯ ಕೆಲಸವೇ?
ಅಥವಾ ವಚನಗಳನ್ನು ಸಮಾಜದ ನಿತ್ಯಚೇತನವನ್ನಾಗಿಸಿದ ಮಹಾಯೋಗಿಯ ಕಾರ್ಯವೇ?
ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳಿಂದ ರೂಪುಗೊಂಡ ಸಂಸ್ಕೃತಿ ಮತ್ತು ಸಂಸ್ಕಾರಗಳಲ್ಲಿ ಬೆಳೆದ ಶಿಷ್ಯ ಪರಂಪರೆಯ ಶ್ರೇಷ್ಠ ಉದಾಹರಣೆ ಪಂಡಿತ ಪಂಚಾಕ್ಷರಿ ಗವಾಯಿಗಳು.
ಮುಂಬಯಿಯ ಎಚ್.ಎಂ.ವಿ. ಕಂಪನಿಯವರು ಖ್ಯಾತ ಕಲಾವಿದರ ಗಾನಮುದ್ರಿಕೆಗಳನ್ನು ಹೊರತರುವ ಸಲುವಾಗಿ ಅನೇಕ ಕಲಾವಿದರನ್ನು ಆಹ್ವಾನಿಸಿದ್ದ ಸಂದರ್ಭದಲ್ಲಿ, ಪಂಚಾಕ್ಷರಿ ಗವಾಯಿಗಳು “ನಾನು ಶರಣರ ವಚನಗಳನ್ನೇ ಹಾಡುತ್ತೇನೆ” ಎಂದು ಹಠ ಹಿಡಿದಿದ್ದರು. ಕಂಪನಿಯವರು ಬೇರೆ ರೀತಿಯ ಗಾಯನಕ್ಕೆ ಒತ್ತಾಯಿಸಿದಾಗ, ಕಾರ್ಯಕ್ರಮವನ್ನೇ ಬಹಿಷ್ಕರಿಸಿ ಹೊರನಡೆದ ಗವಾಯಿಗಳ ಧೈರ್ಯ, ವಚನಗಳ ಮೇಲಿನ ನಿಷ್ಠೆ ಮತ್ತು ಶರಣ ಸಾಹಿತ್ಯದ ಮೇಲಿನ ಭಕ್ತಿಗೆ ಮೂಲವಾದ ಸಂಸ್ಕಾರ ಎಲ್ಲಿಂದ ಬಂದಿತೆಂಬುದನ್ನು ಇತಿಹಾಸ ಮರೆತಿಲ್ಲ.
ಕೊನೆಯಲ್ಲಿ ಎಚ್.ಎಂ.ವಿ. ಕಂಪನಿಯವರೇ ಗವಾಯಿಗಳ ಆಗ್ರಹಕ್ಕೆ ಮಣಿಯಬೇಕಾಯಿತು. ಅದು ಕೇವಲ ಒಬ್ಬ ಕಲಾವಿದನ ಜಯವಲ್ಲ; ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳ ಶಿಷ್ಯ ಪರಂಪರೆಯ ವೈಚಾರಿಕ ವಿಜಯ.
ಬಹುಶಃ 1940ರ ದಶಕದಲ್ಲಿ ತಾವು ಹುಟ್ಟಿರಲಿಲ್ಲವೋ ಏನೋ; ಆದರೆ ಶರಣರ ವಚನಗಳನ್ನು ಸಂಗೀತದ ಮೂಲಕ ಜನಮಾನಸಕ್ಕೆ ತಲುಪಿಸಿ, ಮನೆಮನೆಗೆ ಹರಡಿಸಿದ ಮಹಾನ್ ಕಾರ್ಯವನ್ನು ಮಾಡಿದವರು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳ ಶಿಷ್ಯರಾದ ಪೂಜ್ಯ ಪಂಡಿತ ಪಂಚಾಕ್ಷರಿ ಗವಾಯಿಗಳೇ ಎಂಬುದನ್ನು ಇತಿಹಾಸ ಸ್ಪಷ್ಟವಾಗಿ ದಾಖಲಿಸಿದೆ.
ಹೀಗಿರುವಾಗ, ವಚನಗಳ ಜೀವನಾಡಿಯಾಗಿದ್ದ ಮಹಾತ್ಮರನ್ನು ವಚನ ವಿರೋಧಿಗಳಂತೆ ಚಿತ್ರಿಸುವ ಪ್ರಯತ್ನ ಎಷ್ಟು ಅಸಂಬದ್ಧ ಮತ್ತು ಪೂರ್ವಾಗ್ರಹಪೂರಿತ ಎಂಬುದು ಸಮಾಜವೇ ನಿರ್ಧರಿಸಲಿದೆ.
ತಮಗೆ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳ ಕುರಿತು ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ಇತಿಹಾಸದ ಕುರಿತು ನಿಜವಾದ ಅಧ್ಯಯನದ ಆಸಕ್ತಿ ಇದ್ದರೆ, ಶ್ರೀ ಹರ್ಡೇಕರ ಮಂಜಪ್ಪನವರ ಲೇಖನವನ್ನು ಒಮ್ಮೆ ಮನಃಪೂರ್ವಕವಾಗಿ ಓದಿ.
https://journal.shrikumar.com/archives/938
ಬಹುಶಃ ಅದು ಇತಿಹಾಸದ ಬಗ್ಗೆ ತಮಗೆ ಮೂಡಿಸಿರುವ ಅನೇಕ ತಪ್ಪುಕಲ್ಪನೆಗಳಿಗೆ ಉತ್ತರ ನೀಡಬಹುದು.
ಈ ಎಲ್ಲ ಮಹಾತ್ಮರು ನನ್ನಂತೆ ಮತ್ತು ತಮ್ಮಂತೆ ಹೆಸರಿಗಾಗಿ ಬದುಕಿದವರಲ್ಲ. ಪ್ರಚಾರಕ್ಕಾಗಿ ಹೋರಾಡಿದವರಲ್ಲ. ಹುದ್ದೆಗಳಿಗಾಗಿ ಸಮಾಜಸೇವೆ ಮಾಡಿದವರಂತೂ ಅಲ್ಲವೇ ಅಲ್ಲ. ಅವರು ಮಾಡಿದ ಸಾಧನೆ, ತ್ಯಾಗ ಮತ್ತು ತಪಸ್ಸು ಇಂದಿಗೂ ಸಮಾಜದ ಸ್ಮೃತಿಯಲ್ಲಿ ಜೀವಂತವಾಗಿರುವುದೇ ಅದರ ಸಾಕ್ಷಿ.
ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು, ವಚನ ಪಿತಾಮಹ ಫ.ಗು. ಹಳಕಟ್ಟಿಯವರು, ಪೂಜ್ಯ ಪಂಚಾಕ್ಷರಿ ಗವಾಯಿಗಳು — ಇವರು ಸಮಾಜದೊಳಗೆ ವಿಭಜನೆ ಸೃಷ್ಟಿಸಲು ಬದುಕಿದವರಲ್ಲ; ಸಮಾಜದೊಳಗೆ ಜ್ಞಾನ, ಸಂಸ್ಕಾರ ಮತ್ತು ಶರಣ ಚಿಂತನೆಯ ಬೆಳಕು ಹಚ್ಚಲು ಬದುಕಿದ ಮಹಾತ್ಮರು.
ಇಂದು ಲಿಂಗಾಯತ ಧರ್ಮವು ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ, ಯಾರೋ ಕುಹಕ ಮನೋಭಾವದವರು ಸೃಷ್ಟಿಸಿದ ಪೋಸ್ಟರ್ಗಳು ತಾವು ಊಹಿಸುವ ಮಟ್ಟಿಗೆ ಸಮಾಜದಲ್ಲಿ ಗೊಂದಲ ಸೃಷ್ಟಿಸಬಲ್ಲವು ಎನ್ನುವುದು ತರ್ಕಹೀನವಾದ ವಾದ.
ನಿಮ್ಮದೇ ಸರಕಾರವಿದೆ.
ನಿಮ್ಮದೇ ಅನುಕೂಲಕರ ಮುಖ್ಯಮಂತ್ರಿಗಳಿದ್ದಾರೆ.
ನಿಮ್ಮದೇ ಅಧಿಸೂಚನೆಗಳಿವೆ.
ರಾಜ್ಯ ಸರ್ಕಾರದ ನಿರ್ಣಯಗಳಿವೆ.
ಕೇಂದ್ರ ಸರ್ಕಾರ ಮಾನ್ಯತೆ ನೀಡಿಲ್ಲವೆಂದರೆ, ಪ್ರಜಾಸತ್ತಾತ್ಮಕ ಹೋರಾಟದ ಮಾರ್ಗವಿದೆ. ನ್ಯಾಯಾಂಗ ವ್ಯವಸ್ಥೆಯಿದೆ. ಸಂವಿಧಾನಾತ್ಮಕ ಹಕ್ಕುಗಳಿವೆ. ಅವುಗಳ ಮೂಲಕ ಹೋರಾಟ ನಡೆಸುವುದು ಪ್ರಜ್ಞಾವಂತರ ಮಾರ್ಗ.
ಆದರೆ ಅದನ್ನೆಲ್ಲ ಬಿಟ್ಟು, ಬಳಗದವರೇ ಆದ ಕೆಲವು ಕುಹಕಿಗಳು ಹರಿಬಿಟ್ಟಿರುವ ಒಂದು ಪೋಸ್ಟರ್ಗೆ ಸಂಬಂಧವಿಲ್ಲದ ತರ್ಕಗಳನ್ನು ಜೋಡಿಸಿ, ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳಂತಹ ಮಹನೀಯರ ಕುರಿತು ಬೇಕಾಬಿಟ್ಟಿಯಾಗಿ ಬರೆಯುವುದು ಕೇವಲ ವೈಚಾರಿಕ ದೌರ್ಬಲ್ಯವಲ್ಲ; ಅದು ಅಕ್ಷಮ್ಯ ಅಪರಾಧ.
ವೈಚಾರಿಕತೆ ಎಂದರೆ ದಾಖಲೆಗಳ ಆಧಾರದ ಮೇಲೆ ಮಾತನಾಡುವುದು.
ಇತಿಹಾಸ ಎಂದರೆ ಪೂರ್ವಾಗ್ರಹವಲ್ಲ — ಪ್ರಾಮಾಣಿಕ ಅಧ್ಯಯನ.
ಮಹಾತ್ಮರ ಕುರಿತು ಮಾತನಾಡುವಾಗ ಭಾಷೆಗೆ ಮಿತಿ, ಮನಸ್ಸಿಗೆ ವಿನಯ ಮತ್ತು ಸತ್ಯಕ್ಕೆ ಬದ್ಧತೆ ಅಗತ್ಯ.
ಆ ಪ್ರಜ್ಞೆಯನ್ನೇ ವಿನಯಪೂರ್ವಕವಾಗಿ ತಮಗೆ ಈ ಮೂಲಕ ಸ್ಮರಿಸಬೇಕಾಗಿದೆ.
ಶರಣು ಶರಣಾರ್ಥಿಗಳು.
ಶ್ರೀಕಂಠ ಚೌಕೀಮಠ
ಅಧ್ಯಕ್ಷರು
ಅಖಿಲ ಭಾರತ ವೀರಶೈವ ಮಹಾಸಭಾ.ದೆಹಲಿ ರಾಜ್ಯ ಘಟಕ
ನವದೆಹಲಿ


























Total views : 25259