ಪೂಜ್ಯ ಜಗದ್ಗುರು ಡಾ.ಶ್ರೀ ಸಿದ್ದರಾಮ ಸ್ವಾಮಿಗಳು ತೋಂಟದಾರ್ಯಮಠ ಗದಗ
ಸಂಸಾರದ ಕಷ್ಟಕೋಟಲೆಗಳಲ್ಲಿ ಸಿಕ್ಕು ಘಾಸಿಯಾದ ಮನುಷ್ಯನು ಶಿವಪಥವನ್ನು ಅರಿತು ನಿತ್ಯಸುಖಿಯಾಗಬೇಕೆಂದು ಬಯಸುತ್ತಾನೆ. ಶಿವಪಥವೆಂದರೆ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗ. ತಾನು ಶಿವನ ಅಂಗವಾದ ಆತ್ಮ ಎಂಬ ಜ್ಞಾನ
ಪಡೆದು ಪುನಃ ಶಿವನೊಂದಿಗೆ ಸಾಮರಸ್ಯ ಪಡೆಯುವುದು. ಇದುವೆ ಮೋಕ್ಷಮಾರ್ಗ. ಶಿವಪಥದಲ್ಲಿ ಮುನ್ನಡೆಯಬೇಕೆಂಬ ವ್ಯಕ್ತಿಗೆ ಗುರುವಿನ ಮಾರ್ಗದರ್ಶನ(ಗುರುಪಥ)ದ ಆವಶ್ಯಕತೆ ಇದೆ. ವೇದ, ಆಗಮ, ಶಾಸ್ತ್ರ, ಪುರಾಣಗಳು ಕಾಣಲರಿಯದ ಶಿವಪಥವನ್ನು
ಕಂಡವನು ಗುರುಮಾತ್ರ. ಶಿವಪಥವನ್ನು ತೋರಲು ಆತನೇ ಸಮರ್ಥ. ಗುರು ತನ್ನಲ್ಲಿರುವ ಅಪಾರ ಕರುಣೆಯಿಂದ ಮೋಕ್ಷಾಪೇಕ್ಷಿಯಾದ ವ್ಯಕ್ತಿಯ ಅಜ್ಞಾನವನ್ನು ಕಳೆದು ಸುಜ್ಞಾನಿಯಾಗಿಸುತ್ತಾನೆ. ಭವಿತನವನ್ನು ಕಳೆದು ಭಕ್ತನಾಗಿಸುತ್ತಾನೆ. ಹೀಗೆ
ಗುರುಕರುಣೆ ಪಡೆದ ಭಕ್ತನೆ ಶಿವಪಥಕ್ಕೆ ಅರ್ಹನಾಗುತ್ತಾನೆ.
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಶ್ರೇಷ್ಠವಾದ ಸ್ಥಾನವಿದೆ. ಗುರುವಿಗಿಂತ ಅಧಿಕವಾದುದು ಯಾವುದೂ ಇಲ್ಲ. ‘ನ ಗುರೋರಧಿಕಂ ನ ಗುರೋರಧಿಕಂ’ ಎಂಬುದು ಶೃತಿವಾಕ್ಯ. ‘ಗುರುದೈವಾತ್ಪರಂ ನಾಸ್ತಿ’ ಗುರುವಿಗಿಂತಲೂ ಶ್ರೇಷ್ಠನಾದ ದೇವರಿಲ್ಲ. ಅವನು ಬ್ರಹ್ಮನ್ನರಿತ ಪರಬ್ರಹ್ಮ. ನಿಜವನರಿದ ನಿಶ್ಚಿಂತ, ಅವನೇ ಶಿವಪಥದರ್ಶಕ. ಶಿಲೆಯೊಳಗಣ ಬೆಂಕಿಯಂತೆ, ಬೀಜದೊಳಗಣ ವೃಕ್ಷದಂತೆ ದೃಷ್ಟಿಗೆ ಅಗೋಚರನಾದ ಶಿವನನ್ನು ತೋರುವವನೇ ಶ್ರೀಗುರು. ಇಂಥ ಗುರುವಿನ ಉಪದೇಶವನ್ನು ಹೊಂದಿದಾಗಲೇ ನರರಿಗೆ ಮುಕ್ತಿ. ಗುರುವಚನದಿಂದ ಅಂಗ ಮನ ಪ್ರಾಣಗಳು ಪರಿಶುದ್ಧವಾಗಿ ಸದ್ಭಕ್ತಿ ನೆಲೆಗೊಳ್ಳುವುದು. ಭವಪಾಶ ಹರಿದು ನಿಜಮುಕ್ತಿಯ ದರ್ಶನವಾಗುವುದು.
ಗುರೂಪದೇಶ, ಗುರುವಿನ ಮಾರ್ಗದರ್ಶನವಿಲ್ಲದೆ ಕೇವಲ ತಪಸ್ಸಿನಿಂದ ಮೋಕ್ಷವನ್ನು ಪಡೆಯಬೇಕೆಂಬ ಛಲದಿಂದ ಯುವಕ್ರೀತನೆಂಬ ಋಷಿಕುಮಾರ ಕಾಡಿಗೆ ತೆರಳಿದ. ಕಾಡಿನಲ್ಲಿ ಆಗಲೇ ತಪೋನಿರತರಾಗಿದ್ದ ಹಿರಿಯ ಋಷಿಮುನಿಗಳೆಲ್ಲರೂ
ಗುರೂಪದೇಶ ಹೊಂದಿ ಸಾಧನೆ ಮುಂದುವರಿಸಲು ಪರಿಪರಿಯಾಗಿ ಹೇಳಿದರೂ ಆತ ತನ್ನ ನಿರ್ಧಾರಕ್ಕೆ ಅಚಲನಾಗಿದ್ದ. ಒಂದು ದಿನ ಯುವಕ್ರೀತ ಗಂಗಾನದಿಯ ತೀರದಲ್ಲಿ ನಡೆದು ಹೋಗುವಾಗ ನದಿಯಲ್ಲಿ ಮಳಲನ್ನು (ಉಸುಕು) ಎಸೆಯುತ್ತ ಕುಳಿತಿದ್ದ ಮುದುಕನೊಬ್ಬನನ್ನು ಕಂಡ. ಆಶ್ಚರ್ಯಚಕಿತನಾಗಿ ‘ಎಷ್ಟು ದಿನಗಳಿಂದ ಹೀಗೆ ನದಿಯಲ್ಲಿ ಮಳಲನ್ನು ಎಸೆಯುತ್ತ ಕುಳಿತಿರುವೆ? ಮಳಲನ್ನು ನದಿಗೆ ಎಸೆಯುತ್ತಿರುವ ಕಾರಣವೇನು?’ ಎಂದು ಕೇಳಿದ. ಆಗ ಮುದುಕನು ‘ಕಳೆದ ಎಂಬತ್ತು ವರ್ಷಗಳಿಂದ ತುಂಬಿ ಹರಿಯುತ್ತಿರುವ ಈ ನದಿಗೆ ಮಳಲಿನಿಂದ ಸೇತುವೆ ನಿರ್ಮಿಸುತ್ತಿರುವೆ’ ಎಂದು ಉತ್ತರಿಸಿದ. ಅಯ್ಯಾ! ಎಂದಾದರೂ ಈ ಮಳಲಿನಿಂದ ಸೇತುವೆ ನಿರ್ಮಾಣ ಸಾಧ್ಯವೇ? ವ್ಯರ್ಥವಾಗಿ ಸಮಯವನ್ನೇಕೆ ಕಳೆಯುತ್ತಿರುವೆ! ಎಂದು ಯುವಕ್ರೀತ ಮರಳಿ ಮುದುಕನನ್ನು ಪ್ರಶ್ನಿಸಿದ. ಪ್ರಶಾಂತ ಮುದ್ರೆಯಲ್ಲಿದ್ದ ಆ ಮುದುಕ ‘ಅಪ್ಪಾ ಯುವಕ್ರೀತ! ಗುರೂಪದೇಶ, ಗುರುಕರುಣೆ, ಗುರುವಿನ
ಮಾರ್ಗದರ್ಶನವಿಲ್ಲದೆ ನೀನು ಮೋಕ್ಷವನ್ನು ಸಂಪಾದಿಸುವುದಾದರೆ ಈ ಹಿಡಿ ಮಳಲಿನಿಂದ ಜನ ಸಂಚಾರಕ್ಕೆ ಸೇತುವೆ ನಿರ್ಮಾಣವೂ ಸಾಧ್ಯ’ ಎಂದು ಉತ್ತರಿಸಿದಾಗ ತನ್ನ ತಪ್ಪಿನ ಅರಿವಾಗಿ ಶಿವಜ್ಞಾನ ಸಿದ್ಧಿಯುಳ್ಳ ಗುರುವಿನಿಂದ ಶಿವಪಥವನ್ನರಿಯುತ್ತಾನೆ.
ಅಧ್ಯಾತ್ಮ ಸಿದ್ಧಿಯನ್ನು ಪಡೆದ, ನಿಜದ ನಿಲವನ್ನರಿತ, ಅಪಾರ ಕರುಣೆಯುಳ್ಳ ಗುರುವಿನ ಮಾರ್ಗದರ್ಶನದಲ್ಲಿ ಮಾತ್ರ ಶಿವಪಥದ ಅರಿವು ಸಾಧ್ಯವಾಗುವುದು. ಅಂತೆಯೇ ಬಸವಣ್ಣನವರು ‘ಶಿವಪಥ ಅರಿವೊಡೆ ಗುರುಪಥ ಮೊದಲು’ ಎಂದು ಹೇಳಿರುವುದು. ಆದ್ದರಿಂದ ಮೋಕ್ಷಾಪೇಕ್ಷಿಯಾದ ಮನುಷ್ಯನು ಶ್ರದ್ಧೆಯಿಂದ, ಕಿಂಕರಭಾವದಿಂದ ಗುರುಸೇವೆ ಮಾಡಿ ಗುರುಕರುಣೆ, ಗುರುಪಥ ಹೊಂದುವುದೇ ಸೂಕ್ತ.