ಕನ್ನಡದ ಭಕ್ತಿಯ ಪರಂಪರೆಯಲ್ಲಿ ವಚನ ಸಾಹಿತ್ಯವು ಕೇವಲ ಕಾವ್ಯವಲ್ಲ; ಅದು ಒಂದು ಯುಗದ ಆತ್ಮಸ್ವರ. ಶರಣರ ಅನುಭವದ ಅಗ್ನಿಯಲ್ಲಿ ಕರಗಿ ಹೊರಬಂದ ಆ ವಚನಗಳು ಧರ್ಮ, ಸಮಾಜ ಮತ್ತು ಮಾನವೀಯ ಮೌಲ್ಯಗಳ ಕುರಿತು ಕನ್ನಡ ಜನಮನಕ್ಕೆ ದಿಕ್ಕು ತೋರಿಸಿದ ದೀಪಸ್ತಂಭಗಳಂತಿವೆ. ಹೀಗಾಗಿ ವಚನಗಳ ಕುರಿತು ಏಳುವ ಪ್ರತಿಯೊಂದು ಪ್ರಶ್ನೆಯೂ ಕೇವಲ ಸಾಹಿತ್ಯದ ಚರ್ಚೆಯಲ್ಲ; ಅದು ಪರಂಪರೆ, ಪರಿಶ್ರಮ ಮತ್ತು ಸತ್ಯದ ಹುಡುಕಾಟಕ್ಕೆ ಸಂಬಂಧಿಸಿದ ವಿಚಾರ.

 

ಇಂತಹ ಸಂವೇದನಾಶೀಲ ನೆಲೆಯಲ್ಲಿ ಮಹಾಮನೆ – ಕನ್ನಡ ಮಾಸಿಕ ಪತ್ರಿಕೆಯ ಮಾರ್ಚ್ ೨೦೨೬ರ ಸಂಚಿಕೆಯಲ್ಲಿ ಪ್ರಕಟವಾದ ಡಾ. ಬಸವರಾಜ ಸಬರದ ಅವರ ಬಸವಣ್ಣನವರು ಪುನರ್ಜನ್ಮವನ್ನು ನಂಬಿದ್ದರೆ?” ಎಂಬ ಲೇಖನ ಗಮನ ಸೆಳೆಯುತ್ತದೆ. ಲೇಖನದ ಭಾಷೆ ತೀಕ್ಷ್ಣವಾಗಿದೆ, ಪ್ರಶ್ನೆಗಳು ಪ್ರಚೋದಕವಾಗಿವೆ ಮತ್ತು ಅಭಿಪ್ರಾಯಗಳು ನೇರವಾಗಿವೆ. ಓದುಗರ ಮನಸ್ಸಿನಲ್ಲಿ ಚರ್ಚೆಯ ಕಿಡಿ ಹೊತ್ತಿಸುವ ಲೇಖನವೆಂದರೆ ಅದು ನಿಜ. ಆದರೆ ಚರ್ಚೆ ಸತ್ಯದ ಹುಡುಕಾಟದತ್ತ ಸಾಗಬೇಕೇ ಹೊರತು ಆರೋಪ–ಪ್ರತ್ಯಾರೋಪಗಳ ನೆರಳಿನಲ್ಲಿ ನಿಂತುಕೊಳ್ಳಬಾರದು.

 

ಆ ಲೇಖನದಲ್ಲಿ ಡಾ. ಸಬರದ ಅವರು ಭಾಲ್ಕಿ ಹಿರೇಮಠ ಸಂಸ್ಥಾನದಿಂದ ಪ್ರಕಟವಾಗುವ ಶಾಂತಿಕಿರಣ ಮಾಸಪತ್ರಿಕೆಯಲ್ಲಿ (ಮೇ–2025) ಪ್ರಕಟವಾದ ಬಸವಣ್ಣನವರ ವಚನಗಳಲ್ಲಿ ಜನ್ಮಾಂತರ ವಿಚಾರ ಎಂಬ ಲೇಖನವನ್ನು ಉಲ್ಲೇಖಿಸುತ್ತಾರೆ. ಡಾ. ವಿ. ವಿ. ಹೆಬ್ಬಳ್ಳಿ ಅವರು ಬರೆದ ಆ ಲೇಖನದ ಸಂಶೋಧನಾ ವಿಧಾನವನ್ನೇ ಅವರು ಪ್ರಶ್ನಿಸುತ್ತಾರೆ. ಆಯ್ದುಕೊಂಡ ವಚನಗಳ ಸಂಖ್ಯೆಯನ್ನೇ ನಮೂದಿಸದೆ ಸಂಶೋಧನೆಯ ಕನಿಷ್ಠ ಶಿಸ್ತನ್ನೂ ಪಾಲಿಸಿಲ್ಲ ಎಂಬುದು ಅವರ ಆರೋಪ. ಜೊತೆಗೆ, ಧರ್ಮಶಾಸ್ತ್ರಗಳಲ್ಲಿ ವರ್ಣಿತವಾಗಿರುವ ಜನ್ಮಾಂತರ ಕಥೆಗಳನ್ನು ವಿಶ್ವಾಸಾರ್ಹವಲ್ಲವೆಂದು ಹೇಳುವುದು ಸಂಸ್ಕೃತಿಯ ಮೇಲೆ ಪ್ರಹಾರ ಮಾಡಿದಂತಾಗುತ್ತದೆ ಎಂಬ ಅಭಿಪ್ರಾಯವನ್ನೂ ಅವರು ತೀವ್ರವಾಗಿ ಖಂಡಿಸುತ್ತಾರೆ.

 

ಆದರೆ ಈ ಚರ್ಚೆಯ ಮಧ್ಯದಲ್ಲಿ ಮತ್ತೊಂದು ತೀಕ್ಷ್ಣವಾದ ಹೇಳಿಕೆ ಮೂಡುತ್ತದೆ —
ರಾವ್ ಬಹಾದ್ದೂರ ಡಾ. . ಗು. ಹಳಕಟ್ಟಿಯವರಿಂದ ಹಿಡಿದು ಡಾ. ಎಂ. ಎಂ. ಕಲಬುರ್ಗಿಯವರವರೆಗೆ ಸಂಪಾದಿಸಿ ಪ್ರಕಟಿಸಿರುವ ವಚನ ಸಂಪುಟಗಳಲ್ಲಿ ಅನೇಕ ಪಕ್ಷಿಪ್ತ (ಖೊಟ್ಟಿ) ವಚನಗಳಿವೆ ಎಂಬ ಮಾತು.

ಈ ಮಾತು ಕೇವಲ ಒಂದು ಅಭಿಪ್ರಾಯವಲ್ಲ; ಅದು ಕನ್ನಡದ ವಚನ ಸಂಗ್ರಹದ ಇತಿಹಾಸವನ್ನೇ ಸ್ಪರ್ಶಿಸುವ ಹೇಳಿಕೆ.

ಮಳೆ–ಬಿಸಿಲನ್ನು ಲೆಕ್ಕಿಸದೆ, ಮನೆ–ಮಠಗಳನ್ನು ಮಾರಿ, ಹರಿದ ಕೋಟನ್ನು ಧರಿಸಿ, ಕಾಲಿಗೆ ಚಕ್ರ ಕಟ್ಟಿ ಊರು ಊರು ತಿರುಗಿ ವಚನಗಳನ್ನು ಸಂಗ್ರಹಿಸಿದ ಮಹನೀಯರು ರಾವ್ ಬಹಾದ್ದೂರ ಡಾ. ಫ. ಗು. ಹಳಕಟ್ಟಿಯವರು. ತಮ್ಮ ಇಡೀ ಜೀವಮಾನವನ್ನೇ ವಚನ ಸಂಗ್ರಹ ಮತ್ತು ಮುದ್ರಣ ಕಾರ್ಯಕ್ಕೆ ಅರ್ಪಿಸಿದ ಅವರ ಪರಿಶ್ರಮದಿಂದಲೇ ಇಂದಿನ ಸಮಾಜಕ್ಕೆ ವಚನಗಳ ಅಮೂಲ್ಯ ಸಂಪತ್ತು ದೊರೆತಿದೆ.

ಅಂತಹ ಮಹನೀಯರ ಪರಿಶ್ರಮದ ಫಲವನ್ನು “ಖೊಟ್ಟಿ” ಅಥವಾ “ಪ್ರಕ್ಷಿಪ್ತ” ಎಂಬ ಪದಗಳಿಂದ ಸುಲಭವಾಗಿ ತಳ್ಳಿಹಾಕುವುದು ಎಷ್ಟು ಸರಳವೋ, ಅಷ್ಟೇ ನೋವುಂಟುಮಾಡುವ ಸಂಗತಿಯೂ ಹೌದು.

ಬಹುಶಃ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ವೃತ್ತಿ ವೇತನ ಮತ್ತು ನಿವೃತ್ತಿ ವೇತನದ ನೆಮ್ಮದಿಯಲ್ಲಿ ಬರೆಯುವವರಿಗೆ, ಮಳೆ–ಬಿಸಿಲು ಎನ್ನದೆ ಕಾಲಿಗೆ ಚಕ್ರ ಕಟ್ಟಿ ಸಂಗ್ರಹಿಸಿದ ವಚನಗಳ ಅಮೂಲ್ಯ ಸಂಪತ್ತನ್ನು ಪ್ರಶ್ನಿಸುವುದು ಬಹಳ ಸುಲಭವಾಗಬಹುದು. ಆದರೆ ಆ ಮಾತಿನ ಹಿಂದೆ ನಿಂತಿರುವ ಪರಿಶ್ರಮದ ಇತಿಹಾಸವನ್ನು ಮರೆಯಬಾರದು.

ಇನ್ನೊಂದೆಡೆ, ಡಾ. ಸಬರದ ಅವರೇ ಹೇಳುವಂತೆ, 1993ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಮಗ್ರ ವಚನ ಸಂಪುಟಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಅವರು ಡಾ. ಎಂ. ಎಂ. ಕಲಬುರ್ಗಿಯವರೊಂದಿಗೆ ಚರ್ಚೆ ನಡೆಸಿ, ವಚನಗಳಲ್ಲಿ ಇರುವ ಪಕ್ಷಿಪ್ತ ವಚನಗಳನ್ನು ಗುರುತಿಸಲು ಸಂಶೋಧನಾ ಸಮಿತಿಯನ್ನು ರಚಿಸಬೇಕು ಎಂದು ಸಲಹೆ ನೀಡಿದ್ದರು. ಕಲಬುರ್ಗಿಯವರು ಆ ಮಾತನ್ನು ಒಪ್ಪಿಕೊಂಡರೂ, ಮೊದಲು ಸಮಗ್ರ ಸಂಪುಟಗಳು ಪ್ರಕಟವಾಗಲಿ; ನಂತರ ಆ ಕೆಲಸ ಕೈಗೊಳ್ಳೋಣ ಎಂದು ಹೇಳಿದ್ದಾರೆ.

ಆದರೆ ಆ ಕಾರ್ಯ ನಂತರ ನಡೆಯಲೇ ಇಲ್ಲ.

ಈ ಹಿನ್ನೆಲೆಯಲ್ಲಿ, ಸರಕಾರದ ಅಧಿಕೃತ ಪ್ರಕಟಣೆಗಳ ಸಂಪಾದಕರೇ ನೇರ ಹೊಣೆಗಾರರಾಗುವ ಕಾರಣ ಬಸವಣ್ಣನವರ ವಚನಗಳಲ್ಲಿ ಜನ್ಮಾಂತರ ವಿಚಾರ ಎಂಬ ಲೇಖನ ಬರೆದ ಡಾ. ವಿ. ವಿ. ಹೆಬ್ಬಳ್ಳಿಯವರಾಗಲಿ ಅಥವಾ ಅದನ್ನು ಪ್ರಕಟಿಸಿದ ಭಾಲ್ಕಿ ಹಿರೇಮಠ ಸಂಸ್ಥಾನದ “ಶಾಂತಿಕಿರಣ” ಪತ್ರಿಕೆಯ ಸಂಪಾದಕ ಮಂಡಳಿಯಾಗಲಿ ತಪ್ಪಿತಸ್ಥರೆಂದು ಹೇಳುವುದು ನ್ಯಾಯಸಮ್ಮತವಾಗುವುದಿಲ್ಲ.

ಇಲ್ಲಿ ಮತ್ತೊಂದು ಪ್ರಶ್ನೆ ಸಹ ಉದ್ಭವಿಸುತ್ತದೆ. 2007ರಲ್ಲಿ ಪ್ರಕಟವಾದ ತಮ್ಮದೇ ಕೃತಿ ಶೂನ್ಯ ಸಂಪಾದನೆಯ ಪ್ರಸ್ತುತ ಸವಾಲುಗಳು ಎಂಬ ಪುಸ್ತಕದಲ್ಲಿ ಅನೇಕ ಪಕ್ಷಿಪ್ತ ವಚನಗಳನ್ನು ಗುರುತಿಸಿದ್ದೇನೆ ಎಂದು ಡಾ. ಸಬರದ ಹೇಳುತ್ತಾರೆ. ಆ ಪುಸ್ತಕವನ್ನು ನೋಡಿದ ನಂತರ ಡಾ. ಎಂ. ಎಂ. ಕಲಬುರ್ಗಿಯವರೂ ಅವು ಪಕ್ಷಿಪ್ತ ವಚನಗಳೇ ಎಂದು ಒಪ್ಪಿಕೊಂಡಿದ್ದರು ಎಂಬುದನ್ನೂ ಅವರು ಉಲ್ಲೇಖಿಸುತ್ತಾರೆ.

ಹಾಗಾದರೆ ನಂತರ ಸರಕಾರವಾಗಲಿ, ಸಂಶೋಧನಾ ಸಂಸ್ಥೆಗಳಾಗಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಏನನ್ನು ಸೂಚಿಸುತ್ತದೆ?

ಡಾ. ಎಂ. ಎಂ. ಕಲಬುರ್ಗಿಯವರು ಮಾರ್ಗ” (ಸಂಪುಟ–1, ಪುಟ 607, 1988) ನಲ್ಲಿ ಹೇಳುವಂತೆ, ಶೂನ್ಯ ಸಂಪಾದನೆಗಳು ಬಸವಣ್ಣನವರ 300 ವಚನಗಳನ್ನು ಬಳಸಿಕೊಂಡಿದ್ದು ಅವುಗಳಲ್ಲಿ 200 ವಚನಗಳು ಪಕ್ಷಿಪ್ತವಾಗಿದ್ದರೆ, ಶೂನ್ಯ ಸಂಪಾದನೆಯ ಮೂರರಲ್ಲಿ ಎರಡು ಭಾಗವೂ ವಚನಗಳನ್ನೇ ಹೊಂದಿದೆ ಎಂಬ ಅನುಮಾನಕ್ಕೆ ಬರಬೇಕಾಗುತ್ತದೆ.

ಇದು ಕಲಬುರ್ಗಿಯವರು ಬಿಟ್ಟುಹೋದ ಅನುಮಾನದ ಕರಿನೆರಳು.

ಆ ಕಾರಣದಿಂದಲೇ 1993ರಲ್ಲಿ ಸಮಗ್ರ ವಚನ ಸಂಪುಟಗಳನ್ನು ಪ್ರಕಟಿಸುವ ಸಂದರ್ಭದಲ್ಲಿಯೇ ಈ ವಿಷಯದ ಕುರಿತು ಗಂಭೀರವಾದ ವೈಜ್ಞಾನಿಕ ತನಿಖೆ ನಡೆಯಬೇಕಿತ್ತು. 12ನೇ ಶತಮಾನದ ವಚನಗಳ ಕಟ್ಟುಗಳನ್ನು ಪತ್ತೆಹಚ್ಚಿ, ಅವುಗಳ ಮೇಲೆ ವೈಜ್ಞಾನಿಕ–ರಸಾಯನಿಕ ಪರೀಕ್ಷೆ ನಡೆಸಿ, ಅವುಗಳ ಕಾಲಮಾನವನ್ನು ನಿಖರವಾಗಿ ಗುರುತಿಸಿದ ನಂತರವೇ ಸಮಗ್ರ ವಚನ ಸಂಪುಟಗಳನ್ನು ಪ್ರಕಟಿಸಿದ್ದರೆ, ಇಂದಿನ ದಿನದಲ್ಲಿ ನಡೆಯುತ್ತಿರುವ ಈ ವಿವಾದಗಳಿಗೆ ಸ್ಪಷ್ಟ ಉತ್ತರ ದೊರಕುತ್ತಿತ್ತು.

ಇಂದು ಪರಿಸ್ಥಿತಿ ಹೇಗಾಗಿದೆ ಎಂದರೆ, ಯಾವ ವಚನಗಳು ತಮ್ಮ ತಮ್ಮ ಸಿದ್ಧಾಂತಗಳಿಗೆ ಅಡ್ಡಿಯಾಗುತ್ತವೋ, ಅವುಗಳನ್ನು ತಕ್ಷಣವೇ “ಖೊಟ್ಟಿ” ಅಥವಾ “ಪ್ರಕ್ಷಿಪ್ತ” ಎಂದು ಕರೆಯುವುದು ಕೆಲವರಿಗೆ ಹಾಲು ಕುಡಿದಷ್ಟೇ ಸರಳವಾಗಿ ಬಿಟ್ಟಿದೆ.

ಇದು ನಿಲ್ಲಲೇಬೇಕು.

ಇನ್ನೂ ಒಂದು ವಿಚಿತ್ರ ಸಂಗತಿ ಎಂದರೆ — ಡಾ.ಬಸವರಾಜ ಸಬರದ ಅವರು ಡಾ. ವಿ. ವಿ. ಹೆಬ್ಬಳ್ಳಿಯವರ ಕುರಿತು “ಕಣ್ಣರಿಯದಿದ್ದರೂ ಕರುಳರಿಯದೆ?” ಎಂಬ ಗಾದೆಯನ್ನು ಬಳಸುತ್ತಾರೆ. ಆದರೆ ಜನ್ಮಜನ್ಮಾಂತರ ಸಂಬಂಧಗಳನ್ನೇ ಒಪ್ಪದ  ಡಾ.ಬಸವರಾಜ ಸಬರದ ಅವರೇ ಇಲ್ಲಿ “ಕರುಳು ಅರಿಯುತ್ತದೆ” ಎಂಬ ಅತೀಂದ್ರಿಯ ಭಾವನೆಗೆ ಆಧಾರವಾಗಿ ತೀರ್ಪು ನೀಡುವುದು ಸ್ವತಃ ಅವೈಜ್ಞಾನಿಕವಲ್ಲವೇ ಎಂಬ ಪ್ರಶ್ನೆಯೂ ಸಹಜವಾಗಿಯೇ ಉದ್ಭವಿಸುತ್ತದೆ.

ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ 2018ರ ನಂತರ, ಬಸವಾದಿ ಶರಣರು ಮತ್ತು ಅವರ ಬೋಧನೆಗಳು ಒಂದು ಗುಂಪಿನ ಕಪಿಮುಷ್ಟಿಯಲ್ಲಿ ಸಿಕ್ಕಿಬಿದ್ದಂತಿರುವ ವಾತಾವರಣ ರೂಪುಗೊಂಡಿದೆ. “ಇವ ನಮ್ಮವ” ಎಂದು ಕರೆಯುತ್ತಿದ್ದವರೇ ಇಂದು “ಇವನಾರವನು?” ಎಂದು ಪ್ರಶ್ನಿಸುವ ಸ್ಥಿತಿ ಮೂಡಿರುವುದು ದುಃಖಕರ ಸಂಗತಿ.

ಆದರೆ ಇಲ್ಲಿ ಒಂದು ಸತ್ಯವನ್ನು ಮರೆಯಲು ಸಾಧ್ಯವಿಲ್ಲ.

ಪ್ರಕ್ಷಿಪ್ತ ವಚನಗಳ ಕುರಿತು ಪ್ರಶ್ನೆ ಎತ್ತಿದವರು ಡಾ. ಬಸವರಾಜ ಸಬರದ ಅವರೇ. ಈಗ ಅದಕ್ಕೆ ಬರೋಬ್ಬರಿ ಮೂವತ್ತ್ಮೂರು ವರ್ಷಗಳು ಕಳೆದಿವೆ. ಇಷ್ಟು ದೀರ್ಘ ಅವಧಿಯ ನಂತರವೂ ಈ ಪ್ರಶ್ನೆಗೆ ಅಂತಿಮ ಉತ್ತರ ದೊರಕದಿರುವುದು ಕನ್ನಡ ಸಾಹಿತ್ಯ ಸಂಶೋಧನೆಗೆ ಆರೋಗ್ಯಕರ ಲಕ್ಷಣವಲ್ಲ.

ಹೀಗಾಗಿ ಈಗ ಒಂದು ನ್ಯಾಯಸಮ್ಮತ ನಿರೀಕ್ಷೆ ಮೂಡುತ್ತದೆ.

ಪ್ರಕ್ಷಿಪ್ತ ವಚನಗಳ ಕುರಿತು ಪ್ರಶ್ನೆ ಎತ್ತಿದವರೇ ಈ ವಿವಾದಕ್ಕೆ ಅಂತಿಮ ಉತ್ತರ ನೀಡಬೇಕು. 12ನೇ ಶತಮಾನದ ವಚನಗಳ ಕಟ್ಟುಗಳನ್ನು ಪತ್ತೆಹಚ್ಚಿ, ಅವುಗಳ ಮೇಲೆ ವೈಜ್ಞಾನಿಕ–ರಸಾಯನಿಕ ಪರೀಕ್ಷೆ ನಡೆಸಿ, ಅವುಗಳ ಕಾಲಮಾನವನ್ನು ನಿಖರವಾಗಿ ಗುರುತಿಸಿ, ಸಮಗ್ರ ವಚನ ಸಂಪುಟಗಳನ್ನು ವೈಜ್ಞಾನಿಕ ಆಧಾರಗಳೊಂದಿಗೆ ಪ್ರಕಟಿಸುವ ಕಾರ್ಯವನ್ನು ಸ್ವತಃ ಡಾ. ಬಸವರಾಜ ಸಬರದ ಅವರು ಕೈಗೆತ್ತಿಕೊಳ್ಳಬೇಕು.

ಅದು ನಡೆದ ದಿನ, ಈ ದೀರ್ಘಕಾಲದ ವಿವಾದಕ್ಕೆ ತೆರೆ ಬೀಳುತ್ತದೆ.

ಅಂದಾಗ ಮಾತ್ರ ವಚನಗಳ ಸತ್ಯದ ಮೇಲೆ ಮಸುಕಾಗಿರುವ ಅನುಮಾನಗಳ ಮೋಡಗಳು ಕಳಚುತ್ತವೆ.

ಪ್ರಶ್ನೆಯನ್ನು ಎತ್ತಿದವರೇ ಉತ್ತರ ನೀಡಿಪ್ರಕ್ಷಿಪ್ತ ವಚನಗಳ ದೀರ್ಘ ವಿವಾದಕ್ಕೆ ಮಂಗಳ ಹಾಡಲಿ.

ಶ್ರೀಕಂಠ ಚೌಕೀಮಠ