ಧ್ಯಾನ ಮತ್ತು ಅನುಷ್ಠಾನ

ಲೇಖಕರು : ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು

 

 

ಪ್ರತೀ ಜೀವಿಗೆ ಆಧಾರ ಭಗವಂತನಿಂದ ನಿರ್ಮಾಣವಾದ ಈ ಭೂಮಂಡಲ.ಇದು ಪಂಚಭೂತಗಳಿಂದ ಆವೃತವಾದದ್ದು.ಇಲ್ಲಿ ಜೀವಿಸುವ ಪ್ರತಿ ಜೀವಿಗೂ ಸುಖ – ದುಃಖ, ಆಸೆ – ನಿರಾಸೆ,ನೋವು – ನಲಿವು ಹೀಗೆ ಎಲ್ಲ ಅನುಭವಗಳು ಸಾಮಾನ್ಯವೇ.ಆದರೆ ಮನುಷ್ಯನನ್ನು ಹೊರತು ಪಡಿಸಿ ಉಳಿದೆಲ್ಲಾ ಜೀವಿಗಳು ತಮ್ಮ ತಮ್ಮ ಕುಂದು ಕೊರತೆಗಳನ್ನು,ಕಷ್ಟ ಸುಖಗಳನ್ನು ತಮ್ಮಷ್ಟಕ್ಕೆ ತಾವೇ ನಿಭಾಯಿಸಿಕೊಳ್ಳುತ್ತವೆ. ಸಮತೋಲನದಲ್ಲಿ ಬದುಕು ನಡೆಸುತ್ತವೆ.ಆದರೆ ಮಾನವ ಮಾತ್ರ ಇವುಗಳಿಗಿಂತ ಭಿನ್ನ.ಇವನು ಪ್ರತಿ ಕ್ಷಣ ಕ್ಷಣಕ್ಕೂ ಬದಲಾಗುವವ. ಅತೃಪ್ತ,ಸ್ವಾರ್ಥ ಪರತೆಯನ್ನು ತುಂಬಿಕೊಂಡು ನಡೆವವ.ಇವನಿಗೆ ಸುಖ – ದುಃಖ,ನೋವು – ನಲಿವು ,ಲಾಭ – ನಷ್ಟ ಬಂದೊದಗಿದಾಗ ಒಂದೊಂದು ತರಹದ ಮನೋಸ್ಥಿತಿ ಇವನು ಎದುರಿಸುತ್ತಾನೆ.ಇವನು ಭೂಮಿಗೆ ಬಂದ ಕಾರಣ,ಧೇಯೋದ್ದೇಶ,ಕಾರ್ಯ ಕಲ್ಪ ಎಲ್ಲವನ್ನೂ ಬದಿಗೊತ್ತಿ ಲೋಕದ ಮಾಯಾವಶನಾಗಿ ಭವದ ಚಕ್ರದಲ್ಲಿ ಬಿದ್ದು ಭಿನ್ನ ಭಿನ್ನ ರೀತಿಯ ಗುಣಗಳನ್ನು ಹೊಂದಿ ದುಃಖಿಯಾಗಿ ಕೊನೆಗೆ ತನ್ನ ಕೈಲಾಗದಿದ್ದ ಪಕ್ಷದಲ್ಲಿ ಭಗವಂತ ,ಆತ್ಮ ,ಪರಮಾತ್ಮ ಎಂಬುದರ ಕಡೆಗೆ ಚಿತ್ತೈಸುವ. ಈ ಲೋಕದ ವ್ಯವಸ್ಥೆಗೆ ಅಂಟಿಕೊಂಡು ಬದಲಾದ ಮನುಷ್ಯ ಮತ್ತೆ ಆ ಪರಮ ಸ್ವರೂಪ ಪಡೆಯಬೇಕಾದರೆ ಅದಕ್ಕೆ ಮೂಲ ಬೇರು ಈ ಅಂತರಾತ್ಮ ನ ಅರಿವನ್ನು ತಿಳಿಸುವ ಅಧ್ಯಾತ್ಮ. ಇದು ಅವನ ಪಾಪಯುಕ್ತ ದೇಹ,ಮನಸು ಬುದ್ಧಿಯನ್ನು ಪುಣ್ಯಯುಕ್ತವನ್ನಾಗಿ ಮಾಡಿ ಮುಕ್ತನನ್ನಾಗಿ ಮಾಡುತ್ತದೆ.ಆ ಅಧ್ಯಾತ್ಮವನ್ನು ಅರಿಯಲು ಅವನಿಗೆ ಕೆಲವೊಂದಿಷ್ಟು ಮಾರ್ಗಗಳು ಅವಶ್ಯ.ಅವುಗಳಲ್ಲಿ ನೂರಾರು ಮಾರ್ಗಗಳು ಉಂಟು.ಆ ನೂರಾರು ಮಾರ್ಗಗಳಲ್ಲಿ ಅತ್ಯಂತ ಸುಲಭ ಸೂಕ್ಷ್ಮ ಶಿಸ್ತಿನ ವಿದ್ಯೆಯೇ ಈ “ಧ್ಯಾನ ಮತ್ತು ಅನುಷ್ಠಾನ.”

ಧ್ಯಾನ ಮತ್ತು ಅನುಷ್ಠಾನ ಎಂದರೇನು ಅವುಗಳ ಕ್ರಮಗಳೇನು ಹೇಗೆ ಆಚರಿಸಬೇಕು ಎನ್ನುವ ಪರಿಯನ್ನು ಈ ಕೆಳಕಂಡಂತೆ ಅವಲೋಕಿಸೋಣ.

ಮಾನಸಿಕ ಆಘಾತ ತರುವ ಸಂಗತಿಗಳನ್ನು ಎದುರಿಸುವ ಶಕ್ತಿ, ಸಾಮರ್ಥ್ಯ, ಸ್ಥಿರ ಚಿತ್ತ ನಮಗಿದೆಯೇ? ಎಂದು ಕೇಳಿದರೆ ಬಹುತೇಕರಿಂದ ಇಲ್ಲ ಎಂಬ ಉತ್ತರ. ಇನ್ನು ಕೆಲವರು ಅವುಗಳನ್ನು ಗಳಿಸುವುದೇಗೆ ಎಂದು ಪ್ರಶ್ನೆ ಎಸೆಯುತ್ತಾರೆ. ಇವುಗಳ ಗಳಿಕೆಗೆ ಯೋಗ ಮಾರ್ಗದ ಧ್ಯಾನವೇ ಸಾಧನ ಹಾಗೂ ಮನಸ್ಸಿನ ಸ್ಥಿರತೆಗೆ ಧ್ಯಾನ ತಾಯಿಬೇರು ಇದ್ದಂತೆ. ವ್ಯಕ್ತಿಗತವಾಗಿ ಶಾಂತಿ ಲಭಿಸಿದರೆ ವಿಶ್ವಶಾಂತಿ ಸಾಧ್ಯವಾಗುತ್ತದೆ.

ಧ್ಯಾನ ಎಂದರೇನು?

ಪತಂಜಲಿ ಮುನಿಯು ಅಷ್ಟಾಂಗ ಯೋಗದಲ್ಲಿ ಧ್ಯಾನ ಕುರಿತು ವಿವರಿಸಿದ್ದು, ಧ್ಯಾನ ಸಾಧನೆಯ ಏಳನೇ ಮೆಟ್ಟಿಲಾಗಿದೆ. ಆರನೇ ಮೆಟ್ಟಿಲು ಧಾರಣ. ಧಾರಣ ಎಂದರೆ ಒಂದೇ ವಿಷಯದ ಮೇಲಿನ ಏಕಾಗ್ರತೆ. ಮನಸ್ಸು ಚಂಚಲವಾಗದೆ ತಿಕ್ಕಾಟಕ್ಕೊಳಗಾಗದೆ ತನ್ನ ಕ್ರಿಯೆಯತ್ತಲೇ ಏಕಾಗ್ರವಾಗಿರುವ ಸ್ಥಿತಿ.  ಆಂತರ್ಯದ ಜ್ಞಾನವು ಬುದ್ಧಿಯೊಡನೆ ಉದ್ವೇಗರಹಿತವಾಗಿ ಸಂಗಮಿಸುವಂತೆ ಪ್ರೇರಣೆ ನೀಡುತ್ತದೆ. ಇದೇ ಸ್ಥಿತಿ ಹೆಚ್ಚು ಸಮಯ ಮುಂದುವರಿದರೆ ಅದೇ ಧ್ಯಾನ.

*ತಮ್ಮ ಆಂತರ್ಯವನ್ನು ಕೂಲಂಕಷವಾಗಿ ಪರೀಕ್ಷಿಸಿಕೊಳ್ಳಲು ಇರುವ ಸಾಧನ ಧ್ಯಾನವಾಗಿದ್ದು, ಆತ್ಮವನ್ನು ಪೂರ್ಣವಾಗಿ ಅರಿತುಕೊಳ್ಳುವುದೇ ಧ್ಯಾನ.

*ಧ್ಯಾನಿಸುವವ – ಧ್ಯಾನ ಕ್ರಿಯೆ -ಧ್ಯೇಯ (ಗುರಿ) ಈ ಮೂರರ ಪರಸ್ಪರ ಸಂಯೋಜನೆಯೇ ಧ್ಯಾನ.

*ಧ್ಯಾನ ಎಂದರೆ ತಲ್ಲೀನತೆ.

*ಅದು ಒಂದು ವಸ್ತುವನ್ನು ಕೇಂದ್ರವಾಗಿ ಇಟ್ಟುಕೊಂಡು ನಮ್ಮನ್ನು ಅದರೊಂದಿಗೆ ಅಳವಡಿಸಿಕೊಳ್ಳುವುದು.

ಧ್ಯಾನದಲ್ಲಿ ಎರಡು ಪ್ರಕಾರ

1) ಸಾಕಾರ ಅಥವಾ ಸಬೀಜ(ಸಗರ್ಭ) ಧ್ಯಾನ: ಧ್ಯಾನಕ್ಕೆ ಪೂರಕವಾಗಿ ವಸ್ತು, ದೇವ, ದೇವತೆ, ನೆಚ್ಚಿನ ಗುರು, ಸೂರ್ಯ, ಚಂದ್ರ, ನಕ್ಷತ್ರ, ಹೀಗೆ ಪ್ರಿಯವಾದುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಅದರ ರೂಪ, ಆಕಾರ, ಗುಣ, ಸಾಧನೆಗಳನ್ನು ಮನನ ಮಾಡಿಕೊಳ್ಳುತ್ತಾ ಅಥವಾ ಮಂತ್ರ(ಶ್ಲೋಕ ಪಠಣ) ಸಾಧನದ ಮೂಲಕ ಏಕಾಗ್ರತೆಯನ್ನು ಪಡೆಯುವುದೇ ಸಾಕಾರ ಧ್ಯಾನ.

2) ನಿರಾಕಾರ ಅಥವಾ ನಿರ್ಬೀಜ(ಅಗರ್ಭ) ಧ್ಯಾನ: ಧಾರಣಗೊಂಡ ದೇಹದ ಉಸಿರಾಟ ಪ್ರಕ್ರಿಯೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಕ್ರಮೇಣ ನಿರಾಕಾರವಾದ ಅನಂತಾತೀತವಾದ ‘0’ ‘ಶೂನ್ಯ’ದತ್ತ ಮನಸ್ಸನ್ನು ಉನ್ನತ ಸ್ಥಿತಿಯತ್ತ ಕೊಂಡೊಯ್ಯುವುದೇ ನಿರಾಕಾರ ಧ್ಯಾನ.

ಕಮಲ

ಧ್ಯಾನದಲ್ಲಿ ಕಮಲದ ಹೂವಿಗೆ ಪ್ರಮುಖ ಪಾತ್ರ. ಕಮಲ ಧ್ಯಾನದ, ಶುದ್ಧತೆಯ ಪ್ರತೀಕ. ಧರ್ಮ ಪರಂಪರೆಯಲ್ಲಿ ಅದರ ಸೌಂದರ್ಯಕ್ಕೆ ಅಗ್ರಸ್ಥಾನವಿದೆ. ಧ್ಯಾನಕ್ಕೆ ಕುಳಿತ ಸ್ಥಿತಿಯನ್ನು, ದಳಗಳಿಂದ ತನ್ನ ಆಂತರ್ಯದ ಸೌಂದರ್ಯವನ್ನು ಮುಚ್ಚಿಕೊಂಡಿರುವ; ಪೂರ್ಣವಾಗಿ ಅರಳಿ ತನ್ನ ಸುಗಂಧವನ್ನು ಹರಡಲು ಕಾದುನಿಂತ ಕಮಲಕ್ಕೆ ಹೋಲಿಸಬಹುದು. ದಳಗಳು ಬಿಚ್ಚಿದೊಡನೆ ಸೌಂದರ್ಯ, ಸುಗಂಧ ಸುತ್ತಲೂ ಹರಡುವಂತೆ ಸಿದ್ಧಿ ಪಡೆದ ಯೋಗಿಯು ಧ್ಯಾನದ ಮೂಲಕ ಪರಿವರ್ತನೆಗೊಂಡು ತನ್ನ ಅಂತಃ ಪ್ರಭೆಯನ್ನು ಹರಡುತ್ತಾನೆ.

ಧ್ಯಾನಕ್ಕೆ ಸಿದ್ಧತೆ

ಸ್ಥಳ ಆಯ್ಕೆ: ಶುದ್ಧ ಗಾಳಿ ಬೆಳಕಿನಿಂದ ಕೂಡಿದ, ಗಲಾಟೆ, ಗದ್ದಲ, ಕಿರಿಕಿರಿ ಸದ್ದುಗಳಿಲ್ಲದ ಪ್ರಶಾಂತ ಸ್ಥಳ ಧ್ಯಾನಕ್ಕೆ ಸೂಕ್ತ. ಸಮತಟ್ಟಾದ ನೆಲವಿರಲಿ.

ಕಾಲ: ಪ್ರಾತಃ ಕಾಲ, ಸಂಜೆ ಸೂರ್ಯಾಸ್ತದ ನಂತರ, ಮಲಗುವ ಮುನ್ನ ಅಭ್ಯಾಸ ಮಾಡಬಹುದು. ಪ್ರಸ್ತುತ ಒತ್ತಡದ ದಿನಗಳಲ್ಲಿ ಲಭ್ಯವಿರುವ ಬಿಡುವಿನ ವೇಳೆ ಲಘು ಧ್ಯಾನ ಮಾಡಿ ವಿಶ್ರಾಂತಿ ಪಡೆಯಬಹುದು.

ನೆಲ ಹಾಸು: ಧ್ಯಾನಕ್ಕೆ ಕೂರಲು ಹತ್ತಿಯ ಜಮಖಾನ, ರೇಷ್ಮೆ ವಸ್ತ್ರ, ಕಂಬಳಿ, ಸೆಣಬಿನ ನೆಲಹಾಸು ಉತ್ತಮ. ಉನ್ನತ ಸಾಧನೆಗಾಗಿ ಸಾಧಕರು ಜಿಂಕೆ ಹಾಗೂ ಹುಲಿಯ ಚರ್ಮಗಳನ್ನು(ಲಭ್ಯವಿದ್ದಲ್ಲಿ) ಬಳಸಬಹುದು ಎಂದು ಹೇಳಲಾಗಿದೆ.

ಕುಳಿತುಕೊಳ್ಳುವ ವಿಧಾನ: ಧ್ಯಾನಕ್ಕೆ ಪದ್ಮಾಸನದಲ್ಲಿ ಕೂರುವುದು ಒಳಿತು. ಇಲ್ಲವೇ ಯಾವುದೇ ಅನುಕೂಲಕರ ಸ್ಥಿತಿಯಲ್ಲಿ ಕೂರಬಹುದು. ಬೆನ್ನುಹುರಿ, ಕುತ್ತಿಗೆ, ತಲೆ ಒಂದೇ ನೇರಕ್ಕಿರಲಿ.

ಮುದ್ರೆ: ಧ್ಯಾನಕ್ಕೆ ಆತ್ಮಾಂಜಲಿ ಅಥವಾ ಹೃದಯಾಂಜಲಿ ಮುದ್ರೆ, ಜ್ಞಾನ ಮುದ್ರೆ, ಚಿನ್ ಮುದ್ರೆ, ಚಿನ್ಮಯ ಮುದ್ರೆ, ಶಿವ ಮುದ್ರೆ ಪ್ರಮುಖವಾದವು.

ಎಚ್ಚರಿಕೆ

*ಮನಸ್ಸು ಚಂಚಲ,ಉದ್ವೇಗ,ಚಿಂತೆ ಇವುಗಳಿಂದ ಆವೃತವಾದ ಸಮಯದಲ್ಲಿ ಮಾಡಬಾರದು.ಕೆಲವು ನಿಮಿಷ ದೀರ್ಘ ಉಸಿರಾಟ ಮಾಡಿ ಮುಂದುವರೆಯ ಬೇಕು.

* ಯೋಗಾಸನಗಳು, ಪ್ರಾಣಾಯಾಮ ಅಭ್ಯಾಸದ ತಕ್ಷಣ ಧ್ಯಾನ ಬೇಡ. ಪ್ರಾಣಾಯಾಮ, ಧ್ಯಾನಗಳೆರಡನ್ನೂ ಪೂರೈಸುವವರೆಗೆ ಕೂರುವ ಸಾಮರ್ಥ್ಯವಿದ್ದರೆ ಎರಡನ್ನು ಅಭ್ಯಸಿಸಬಹುದು.

* ಕಣ್ಣುಗಳ ದೃಷ್ಟಿ ಮೇಲಕ್ಕೆ ಹರಿಯದಂತೆ ಕಾಯ್ದುಕೊಳ್ಳಿ. ಕಣ್ಣುಚ್ಚಿ ಧ್ಯಾನಿಸುವ ವೇಳೆ ದೃಷ್ಟಿ ಮೇಲಕ್ಕೆ ಹರಿದರೆ ಉಸಿರಾಟಕ್ಕೆ ತಡೆಯೊಡ್ಡುತ್ತದೆ. ನರ, ಮಾಂಸಖಂಡ, ರಕ್ತನಾಳ, ಮೆದುಳಿನ ಮೇಲೆ ಒತ್ತಡ ಬೀಳುತ್ತದೆ.

* ಹಠದಿಂದ ಧ್ಯಾನ ಬೇಡ. ದೇಹ ಚಲನೆಗೆ ಒಳಗಾದಾಗ, ತಲೆ ಅತ್ತಿತ್ತ ತಿರುಗಿದರೆ ಧ್ಯಾನ ನಿಲ್ಲಿಸಿ, ವಿರಮಿಸಿ. ಧ್ಯಾನವನ್ನು ಗುರುಮುಖೇನ ಅಭ್ಯಾಸ ನಡೆಸಿ.

ಪ್ರಯೋಜನಗಳು

* ಧ್ಯಾನದಿಂದ ಮಗುವಿನಂತೆ ಮನಸ್ಸು ವಿಶ್ರಮಿಸುತ್ತದೆ.

* ದೇಹ, ಮನಸ್ಸಿನ ದ್ವಂದ್ವ ದೂರ.

* ಮನಸ್ಸನ್ನು ಎಚ್ಚರದಲ್ಲಿಟ್ಟು ಪರಮಸುಖ ನೀಡುವಂತಹದ್ದು.

* ಏಕಾಗ್ರತೆ ಲಭಿಸುತ್ತದೆ. ಮನಸ್ಸು ಪ್ರಶಾಂತವಾಗುವುದರಿಂದ ಓದಿಗೆ ಸಹಕಾರಿ. ನೆನಪಿನ ಶಕ್ತಿ ಹೆಚ್ಚಳ.

* ಆಂತರ್ಯದ ಸತ್ಯ ಅರಿವಾಗುತ್ತದೆ. ಪ್ರಜ್ಞೆಯ ವಿಸ್ತಾರಕ್ಕೆ ಧ್ಯಾನ ಕಾರಣ.

* ಧ್ಯಾನಾಭ್ಯಾಸದ ವೇಳೆ ದೇಹದ ನವ ದ್ವಾರಗಳು ನಿಯಂತ್ರಿಸಲ್ಪಡುವುದ ರಿಂದ ಪ್ರಚೋದನೆಗೆ ತಡೆಯೊಡ್ಡುತ್ತದೆ. ಮೆದುಳನ್ನು ಪ್ರಚೋದಿಸುವ ಕರುಳಿನ ಸಂಕೋಚ, ಉಸಿರಾಟ ಪ್ರಕಿಯೆ, ಹೃದಯದ ಬಡಿತ ಸೇರಿದಂತೆ ಹಲವು ಶಾರೀರಿಕ ಸ್ವಾಭಾವಿಕ ಕ್ರಿಯೆಗಳು ನಿಯಂತ್ರಣದಲ್ಲಿರುತ್ತವೆ.

* ಮನಸ್ಸು ಪ್ರಕೃತಿಯೊಂದಿಗೆ ಒಂದಾಗುತ್ತದೆ.

* ಭಾವೋದ್ವೇಗ, ವಿಕೃತ ಭಾವ ಶಮನವಾಗುತ್ತದೆ.

* ತೇಜಸ್ಸು, ಚಿಂತನೆ, ಜಾಗರೂಕತೆ ವೃದ್ಧಿಸಿ ಅನಂತ ಚೈತನ್ಯ ಲಭಿಸುತ್ತದೆ.

* ಮನಸ್ಸಿನ ಜಾಗೃತಾವಸ್ಥೆಯಿಂದಾಗಿ ಹರ್ಷ, ಶಾಂತಿ, ಸಮಾಧಾನ ತಮ್ಮದಾಗುತ್ತದೆ.

* ಪರಿಶುದ್ಧ ಭಾವನೆ ತಳೆದು ಭ್ರಮೆ ದೂರಾಗುತ್ತದೆ. ದೃಢತೆ ಲಭಿಸುತ್ತದೆ.

* ಅಹಂಕಾರ, ಬಲ, ದರ್ಪ, ಕಾಮ, ಕ್ರೊಧ, ಅಪರಿಗ್ರಹ ತ್ಯಜಿಸಿ ವ್ಯಕ್ತಿ ಶಾಂತನಾಗುತ್ತಾನೆ.

* ಬಂಧನದ ಸ್ಥಿತಿಯಲ್ಲಿ ವ್ಯಕ್ತಿ ಧ್ಯಾನ ಆರಂಭಿಸುತ್ತಾನೆ, ಧ್ಯಾನದ ತತ್ಪರಿಣಾಮವಾಗಿ ಬಂಧ ಮುಕ್ತನಾಗುತ್ತಾನೆ.

*ದೇಹವನ್ನು ಮಣಿಸಿ ದೇಹವನ್ನು ಜಯಿಸಿದ ನಂತರ ಉಸಿರನ್ನು ಜಯಿಸುತ್ತೇವೆ, ನಂತರ ಮನಸ್ಸನ್ನು ಗೆದ್ದು ವಿಚಾರ ಪಕ್ವತೆ ಗಳಿಸುತ್ತೇವೆ. ಮುಂದಿನ ಹೆಜ್ಜೆಯಾಗಿ ತತ್ಕರ್ಮಗಳಲ್ಲಿ ಮಗ್ನರಾಗಿ ‘ವಿಕಸಿತ ಜ್ಞಾನ’, ‘ಹೊಸ ಪ್ರಕಾಶ’(ಪ್ರಜ್ಞೆ) ವನ್ನು ಪಡೆಯುತ್ತೇವೆ. ಈ ಜ್ಞಾನದ ಅಧಿಕಾರಿಯಾದ ಮಾನವನು ತಮ್ಮ ಆತ್ಮವನ್ನು ಪರಮಾತ್ಮ(ತನ್ನ ಇಷ್ಟ, ಪ್ರೀತಿ ಪಾತ್ರವಾದ ಅಥವಾ ತಮ್ಮಿಚ್ಛೆಯ ಧರ್ಮ ನಂಬಿಕೆಯ ದೇವರು)ನಿಗೆ ಅರ್ಪಿಸಿ, ಆತನ ಆಜ್ಞೆ ಪಾಲಕನಾಗುತ್ತಾನೆ. ಇದೇ ಶರಣಾಗತಿ ಎಂದು ಅನುಭಾವಿಗಳು ಹೇಳಿದ್ದಾರೆ.

ಅನುಷ್ಠಾನ.

ದಿಕ್ಕುದೆಸೆ, ಗೊತ್ತುಗುರಿಯಿಲ್ಲದೆ ನಮ್ಮ ಮನಸ್ಸಿನಲ್ಲಿ ಉದ್ಭವವಾಗುವ ಆಲೋಚನೆ, ಭಾವನೆ ಸಂವೇದನಗಳ ತರಂಗಗಳನ್ನು ಹೇಗೆ ಪರಿಷ್ಕೃತಗೊಳಿಸುವುದು ಎಂಬುದು ಎಲ್ಲರನ್ನೂ ಜೀವನದುದ್ದಕ್ಕೂ ಕಾಡುವ ಒಂದು ಸಮಸ್ಯೆ. ನಮ್ಮ ಆಲೋಚನೆಗಳನ್ನು ನಿರ್ದಿಷ್ಟ ಗುರಿಯುಳ್ಳ ಪೂರ್ಣ ಅರಿವಿನಿಂದ ಕೂಡಿದ ಉಪಯುಕ್ತ ಆಲೋಚನೆಗಳಾಗಿ ಪರಿವರ್ತಿಸಲು ಪ್ರಯತ್ನ ಮಾಡಬೇಕು. ಹೊರಜಗತ್ತಿನಂತೆಯೇ ಒಂದು ಒಳಜಗತ್ತು ಇದೆ. ಇಲ್ಲಿ ನಮ್ಮ ನಿಜವಾದ ಸ್ವಭಾವದ ಅಸ್ತಿತ್ವವೊಂದಿರುತ್ತದೆ. ಅದು ಬಾಹ್ಯಪ್ರಪಂಚಕ್ಕಿಂತಲೂ ಬಹಳ ವೈಭವಯುತವಾಗಿ ನಮ್ಮ ಹೃದಯಾಂತರಾಳದಲ್ಲಿ ಇರುವುದು. ಎತ್ತರದ ಪರ್ವತ- ಪ್ರದೇಶದಲ್ಲಿ ನಿಂತರೆ ಪ್ರವಾಹಗಳು ನಮ್ಮನ್ನು ಕೊಚ್ಚಿಕೊಂಡು ಹೋಗಲಾರವು. ಅದೇ ರೀತಿ ಮನಸ್ಸನ್ನು ಪೂರ್ಣ ಅರಿವಿನಿಂದ ಕೂಡಿರುವ ಎತ್ತರದ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಇರಿಸಲು ಪ್ರಯತ್ನ ಮಾಡಿದರೆ ಜೀವನ ಸುಗಮವಾಗುವುದು. ನಮ್ಮ ಒಳ ಅರಿವನ್ನು ಹೊರತೆಗೆಯಲು, ಪರಿಶುದ್ಧ ಪರಿಪಕ್ವ ಸ್ಥಿತಿಯನ್ನು ತಲುಪಲು,ಆತ್ಮಾನಂದವನ್ನು ಆನಂದಿಸಲು ಇರುವ ಏಕೈಕ ಮಾರ್ಗ ಎಂದರೆ ಅನುಷ್ಠಾನ.

*ನಮ್ಮ ಸಂಕಲ್ಪವನ್ನು ಈಡೇರಿಸಲು ಅಂದರೆ ಜಾರಿಗೆ ತರಲು ಇರುವ ಸೋಪಾನವೆ ಈ ಅನುಷ್ಠಾನ.

*ಯೋಗ ಸಾಧನೆಯಿಂದ ಯಾವ ಯಾವ ಸಾಧನೆಯನ್ನೂ ಸಿದ್ಧಿಯನ್ನು ಪಡೆಯಲಿಕ್ಕೆ ಸಾಧ್ಯವೋ ಅದನ್ನೆಲ್ಲ  ಶಿವಯೋಗ ಆಚರಣೆಯ ಅನುಷ್ಠಾನದಿಂದ ಪಡೆಯಲು ಸಾಧ್ಯ.

*ಹೆಸರೇ ಹೇಳುವಂತೆ ಅನುಷ್ಠಾನ ಎಂದರೆ ಇದು ಕೇವಲ ಮೌಖಿಕವಾಗಿ ನುಡಿಯುವ ನುಡಿ ಅಲ್ಲ ಇದು ದೇಹ ಹಾಗೂ ಆತ್ಮ ವಿಜ್ಞಾನದ ಕ್ರಿಯೆಯಾಗಿದೆ.

*ನಿಗ್ರಹಾನುಗ್ರಹ ಶಕ್ತಿ ಪ್ರಾಪ್ತವಾಗಿ ಅಂಗಕ್ರಿಯೆಗಳೆಲ್ಲ ಲಿಂಗಕ್ರಿಯೆಗಳಾಗಳು ಅನುಷ್ಠಾನ ಅವಶ್ಯಕ.

*ಅನುಷ್ಠಾನ ಮಾಡಿದ ಮಹನೀಯನಿಗೆ ಪಂಚ ಪರುಷ ಸಿದ್ಧಿಗಳು(ವಾಕ್,ದೃಷ್ಠಿ,ಹಸ್ತ,ಮನೋ,ಭಾವ) ಅವರ ವಶವಾಗಿ

ಅವರ ಬೌದ್ಧಿಕ,ಶಾರೀರಿಕ,ಮಾನಸಿಕ ಚಟುವಟಿಕೆಗಳೆಲ್ಲವೂ ಲೋಕೊದ್ಧಾರಕ್ಕಾಗಿ ಕಾರಣವಾಗುವವು.

*ಸಾಮಾನ್ಯರಂತೆ ಈ ಭೂಮಿಯಲ್ಲಿ ಜನಿಸಿದರೂ ಸಹ ಅನುಷ್ಠಾನ ಮಾತ್ರದಿಂದ ಅವರ ಅಂಗ ಗುಣಗಳೆಲ್ಲ ಶಿವಗುಣಗಳಾಗಿ ಅರಳಿ ನಿತ್ಯ ನಿರಂತರ

ಸುಗಂಧವನ್ನು ಬೀರುತ್ತಲೇ ಇರುತ್ತದೆ.

*ಅನುಷ್ಠಾನ ಎಂದರೆ ಏನೋ ಸಾಮಾನ್ಯ ಇಲ್ಲವೇ ವಿಶೇಷ ಪೂಜಾ ವಿಧಿ ಎಂದು ಯಾರೂ ಭಾವಿಸಬಾರದು.ಅನುಷ್ಠಾನ ಕಾಲದಲ್ಲಿ  ಅಣು ಯುದ್ದ,ಪರಮಾಣು ಯುದ್ಧದಂತಹ ಪ್ರಸಂಗಗಳು ದೇಹದಲ್ಲಿ ಎದುರಿಸಬೇಕಾಗುತ್ತದೆ.ಸೃಷ್ಠಿಯ ಅಸುರೀ ಶಕ್ತಿಗಳನ್ನು ದಮನಮಾಡಿ ವಿಜಯ ಸಂಪಾದಿಸಬೇಕು. ಹೋರಾಟಕ್ಕಿಳಿದಾಗ ಘೋರರೂಪದಲ್ಲಿ ಮೇಲೇರಗುತ್ತವೆ ಅವುಗಳ ನಿಗ್ರಹ ಅಧ್ಯಾತ್ಮಿಕವಾಗಿ ಶಕ್ತಿಶಾಲಿಯಾದ ತಪಸ್ಸಿಗೆ ಮಾತ್ರ ಸಾಧ್ಯ. ಈ ಅನುಷ್ಠಾನ ಭೂಮಿಯು ದೇಹ ಮನಸ್ಸು ಹಾಗೂ ದಶೆಂದ್ರಿಯಗಳು,ಪಂಚ ತನ್ಮಾತ್ರಯಗಳು,ಪಂಚಭೂತಗಳು,ಮತ್ತು ಅಂತಃಕರಣ ಚತುಷ್ಟಯಗಳ ನಡುವಿನ ಮಹಾಯುದ್ಧದ ರಣರಂಗವಾಗಿದೆ.ಅದಕ್ಕಾಗಿಯೇ ಇದನ್ನು ಪಡೆಯಲು ಯೋಗ್ಯ ಗುರುವಿನ ಮಾರ್ಗದರ್ಶನ ಅವಶ್ಯಕ.

ಅನುಷ್ಠಾನ ವಿಧಗಳು.

ಇದರಲ್ಲಿ 3 ವಿಧಗಳು

1.ಸಾತ್ವಿಕ ಅನುಷ್ಠಾನ.

2.ರಾಜಸಿಕ ಅನುಷ್ಠಾನ.

3 ತಾಮಸಿಕ ಅನುಷ್ಠಾನ.

ಸಾತ್ವಿಕ ಅನುಷ್ಠಾನ:- ಇದು ಅಂತರಂಗದ ಅರಿವಿನ ಖನಿಯಾದ ಆತ್ಮವನ್ನು ಶಿವಯೋಗ ಮಾರ್ಗದ ಮೂಲಕ ಅಂದರೆ ಮೊದಮೊದಲು ಸ್ಥೂಲ ತನುವಿನೊಡಗೂಡಿ ಸ್ಥೂಲ ಗ್ರಾಹಿಯಾದ  ಗುರು ಕೊಟ್ಟ ಇಷ್ಟಲಿಂಗದ ನಿರಿಕ್ಷಣೆಯ ಮೂಲಕ ಬಾಹ್ಯ ಇಂದ್ರಿಯಗಳ ಒಳಸೆಳೆತವನ್ನು ಮಾಡುತ್ತಾ ಸೂಕ್ಷ್ಮ ಶರೀರದ ಪ್ರಾಣಲಿಂಗವನ್ನು ಕಂಡುಕೊಳ್ಳುವುದು.ಇದು ಮನೋಗ್ರಾಹಿ.ಇಲ್ಲಿ ಮನೋನಿಗ್ರಹ ವೆ ಇದಕ್ಕೆ ತಾಯಿ ಬೇರು.ನಂತರ ಭಾವಲಿಂಗವನ್ನು ಅದರ ಅರಿವನ್ನು ಭಾವಗಾನುವುದು.ಇಲ್ಲಿ ಅಭ್ಯಂತರ ಸಾಧನೆಯ ಮೂಲಕ ಭಾವಗ್ರಾಹಿ ಆತ್ಮವನ್ನು ಕಾಣುವ ಸ್ಥಿತಿ. ಇದಕ್ಕೆ ಮೂಲ ಮಾರ್ಗವೇ ಅಷ್ಟಾವರಣ, ಪಂಚಾಚಾರ,ಷಟಸ್ಥಲ ಮಾರ್ಗ.

ಇಲ್ಲಿ ಆತ್ಮನನ್ನು ಪ್ರಾಧಾನ್ಯವಾಗಿಟ್ಟುಕೊಂಡು ಮುನ್ನಡೆವ ಸಾಧಕನು ದೇಹದ ಸುಖ ದುಃಖಕ್ಕೆ ಬೆಲೆ ಕೊಡದೆ ಇರುತ್ತಾನೆ.ಹಾಗಾಗಿ ಸಾತ್ವಿಕ ಆಹಾರ ಸೇವನೆ,ಸಾತ್ವಿಕ ನಡೆ,ಸಾತ್ವಿಕ ನುಡಿ,ಸಾತ್ವಿಕ ವಾತಾವರಣ,ಸಾತ್ವಿಕ ವಿಚಾರಗಳು ಇದಕ್ಕೆ ಸಹಕಾರಿ.

ಇದನ್ನು  ಬಸವಾದಿ ಪ್ರಮಥ ಶಿವಶರಣರು,ಅಥಣಿಯ ಮುರುಘೇಂದ್ರ ಶಿವಯೋಗಿಗಳು, ಇಲಕಲ್ ವಿಜಯ ಮಹಾಂತ ಶಿವಯೋಗಿಗಳು,ಹಾನಗಲ್ಲ ಕುಮಾರ ಮಹಾ ಸ್ವಾಮಿಗಳು,ಹಾವೇರಿ ಶಿವಬಸವ ಮಹಾ ಸ್ವಾಮಿಗಳು, ಹಾಲಕೆರೆಯ ಅನ್ನದಾನ ಶಿವಯೋಗಿಗಳು, ಒಳಬಳ್ಳಾರಿಯ ಚನ್ನಬಸವ ತಾತನವರು ಇನ್ನೂ ಹಲವಾರು ಶಿವಯೋಗಿಗಳು ಮಾಡಿದ್ದಾರೆ.

ರಾಜಸಿಕ ಅನುಷ್ಠಾನ:- ಇದು ಒಂದು ಲೌಕಿಕ ಅನುಷ್ಠಾನ ವೆ ಸರಿ.ಲೋಕಾನುಭವ ಇರುವ ವ್ಯಕ್ತಿ ಲೌಕಿಕ ವಸ್ತುವನ್ನು (ತನ್ನ ಹೊಲ, ಮನೆ, ಆಸ್ತಿ,ಪಾಸ್ತಿಗಳನ್ನು ಪಡೆಯಲು ತನ್ನ ಪ್ರತಿಷ್ಠೆಗಳು ,ಬಯಕೆಗಳನ್ನು ಪೂರೈಸಲು ಸಾಮಾನ್ಯವಾಗಿ ದೇವರಿಗೆ ಮೊರೆಹೋಗುತ್ತಾರೆ.ತಾತ್ಕಾಲಿಕ ಭಕ್ತಿ ಇಂದ ಮಾಡುವ ದೇವರ ಪ್ರಾರ್ಥನೆ ಇದು.ಇದು ಲೋಕಾಸಕ್ತ ಎಲ್ಲ ಜನರು ಮಾಡುತ್ತಾರೆ.

ತಾಮಸ ಅನುಷ್ಠಾನ:- ಇದು ಕಾಮಾದಿ ಅರಿಷಡ್ ವೈರಿಗಳನ್ನು ಜಾಗೃತಗೊಳಿಸಿ ದುಷ್ಟಶಕ್ತಿಗಳನ್ನು ವಶಮಾಡಿಕೊಂದು ತನ್ನ ಮನೋವಾಂಚೆಯನ್ನು, ಪ್ರಲೋಭನೆಗಳನ್ನು ಪೂರೈಸುವ ಅನುಷ್ಠಾನವಾಗಿದೆ. ಇದು ವಾಮಾಚಾರ ಬಾನಾಮತಿ ಇತ್ಯಾದಿ ವಿಧಿಗಳು ಇದರಲ್ಲಿವೆ.ಇದನ್ನು ವಾಮಮಾರ್ಗದ ಅಮಾನುಷ ಶಕ್ತಿ ಪಡೆಯಲು ಬಯಸುವವರು ಮಾಡುತ್ತಾರೆ.

ಉಪಸಂಹಾರ:-

ಹೀಗೆ ಮನುಷ್ಯನ ಅಭ್ಯುದಯಕ್ಕೆ ಸಹಕಾರಿ ಆಗುವವು ಈ ಧ್ಯಾನ ಮತ್ತು ಅನುಷ್ಠಾನ.ಅವರವರ ಸಂಪ್ರದಾಯ ಮನೋಸ್ಥಿತಿ ಗೆ ತಕ್ಕಹಾಗೆ ಇವುಗಳು ಅವನ ರೂಢಿಗೆ ಬರುತ್ತವೆ.ಇವೆರಡರಲ್ಲಿ ಏನೇ ವ್ಯತ್ಯಾಸ ಗಣನೀಯವಾಗಿ ಕಂಡು ಬರದಿದ್ದರೂ ಮಾರ್ಗಗಳಲ್ಲಿ,ಅದಕ್ಕೆ ಉಪಯೋಗವಾಗುವ ವಸ್ತು ವ್ಯವಸ್ಥೆಯಲ್ಲಿ ಭಿನ್ನತೆಯನ್ನು ಕಾಣುತ್ತೇವೆ.ಏನೇ ಆಗಲಿ ಪಂಚಭೂತ ಗಳಿಂದ ನಿರ್ಮಾಣವಾದ ಈ ಶರೀರ ಲೋಕದ ಮಾಯೆಗೆ ಅಳವಟ್ಟಾಗಿ ದೇಹಸ್ಥಿತಿ ಪಂಚಭೂತಗಳು ವ್ಯತ್ಯಾಸ ವಾಗುತ್ತವೆ.ಅದನ್ನು ಗಮನಿಸಿ ಅವುಗಳನ್ನು ಸಮಸ್ಥಿತಿಯಲ್ಲಿ ಇಡಲು ಇವುಗಳು ಅತ್ಯವಶ್ಯ. ಬನ್ನಿ ಆಚರಿಸಿ ಆನಂದಿಸೋಣ.

Related Posts