ಶ್ರೀ ಕುಮಾರೇಶ್ವರರ ದಿವ್ಯ ಭೋದನೆಯ ಲೇಖನ ಮಾಲೆ-೨ :ಅರ್ಪಣ

ಲೇಖಕರು :- ಪೂಜ್ಯ ಶ್ರೀ ಸಿದ್ದೇಶ್ವರ ದೇವರು ( ವಿಜಯ ಪ್ರಭು ದೇವರು) ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠಬೂದಗುಂಪ

 ಅಂದಣವನೇರಿ ಮೆರೆದ ತನುವಲ್ಲ

  ಕುಂದಣವಗಳಿಸಿ ಗಡಣಿಸಿದ ಕೈಯಲ್ಲ

  ಕೀರ್ತಿಗಾಗಿ ಕಾಯಕವ ಕೈಕೊಳ್ವನಲ್ಲ

  ವಿರತಿಗಾಗಿ ವಿಷಯ ತೊರೆದವನಲ್ಲ

  ಕಾಮಕ್ಕೆ ತಾಣಿಲ್ಲ ,ಕೋಪಕ್ಕೆ ಇಂಬಿಲ್ಲ

  ಲೋಭಕ್ಕೆ ತೆರವು ತಾನಿಲ್ಲ, ಮೋಹದ ಮಾತೇಕೆ ?

  ಮುದದ ಮೊಳಕೆ ತೋರದು ,ಮತ್ಸರಕ್ಕೆಡೆಯಿಲ್ಲ  .

  ಶ್ರೀ ನಿಡುಮಾಮಿಡಿ ಶ್ರೀಗಿರಿ ಸೂರ್ಯ ಸಿಂಹಾಸನಾಧೀಶ ವಾಸ ಕುಮಾರೇಶ್ವರ

  ನಿನ್ನ ಗುಣಂಗಳ ಗಣಿಸಲಾರಳವು ಹೇಳಾ

ಪ್ರಿಯ ಸಹೃದಯರೇ ವೀರಶೈವ ಲಿಂಗಾಯತ ಧರ್ಮದಲ್ಲಿ ಬಸವಾದಿ ಶಿವಶರಣರು ತಮ್ಮ ನಿಜಜೀವನದಲ್ಲಿ ಆಚರಿಸಿಕೊಂಡು ಬಂದಂತಹ ಹಾಗೂ ವೀರಶೈವ ಸಾಧಕನು ತನ್ನ ಪ್ರತಿ ನಿತ್ಯ ಜೀವನದಲ್ಲಿ ಆಚರಿಸಿಕೊಂಡು ಹೋಗಲೇಬೇಕಾದ ಮೂರು ಕ್ರಿಯೆಗಳೆಂದರೆ 1 ಅರ್ಚನೆ 2 ಅರ್ಪಣ 3 ಅನುಭಾವ.

ಗುರು ಅನುಗ್ರಹಿಸಿದ ಇಷ್ಟಲಿಂಗವನ್ನ ನಿಷ್ಠೆಯಿಂದ ತ್ರಿಕಾಲ ಪೂಜಿಸುವುದು ಅರ್ಚನೆ.

ಆ ಪೂಜಾ ಫಲದಿಂದ ದೊರೆತ ಪಾದೋದಕ ಮತ್ತು ಪ್ರಸಾದವನ್ನು ಸ್ವೀಕರಿಸುವುದು ಜೊತೆಗೆ ಶಿವನಿಂದ ಬಂದ ಪ್ರಸಾದವನ್ನು ಶಿವನಿಗೆ ಅರ್ಪಿಸುವುದು, ದಾಸೋಹ ಗೈಯುವುದು ಅರ್ಪಣ.

ವೀರಶೈವ ಲಿಂಗಾಯತ ಧರ್ಮದ ತತ್ವತ್ರಯಗಳಾದ ಅಷ್ಟಾವರಣ, ಪಂಚಾಚಾರ, ಷಟಸ್ಥಲ,ಹಾಗೂ ಧರ್ಮಗ್ರಂಥಗಳ ಕುರಿತು ಚಿಂತನಾಗೋಷ್ಠಿ,ಶಿವಾನುಭವಕ್ಕೆ ಅನುಭಾವವೆನ್ನುವರು.

ಇಲ್ಲಿ ಅರ್ಪಣ ವಿಷಯ ಕುರಿತು ಚಿಂತಿಸುವುದಾದರೆ ಪ್ರಸಾದ ಪರಿಕಲ್ಪನೆಯಲ್ಲಿ ಅರ್ಪಿಸುವುದು ಮುಖ್ಯವಾದುದೇ? ಹೊರತು ಸ್ವೀಕರಿಸುವುದಿಲ್ಲ.ಸಾಧಕನು ಪ್ರಾಥಮಿಕ ಹಂತದಲ್ಲಿ ಆಹಾರ ಪಾನೀಯಗಳನ್ನು ಅರ್ಪಿಸಿ ,ಅವುಗಳನ್ನು ಸೇವಿಸುತ್ತಾನೆ.ಆನಂತರ ಆಹಾರದಂತ ಸ್ಥೂಲ ವಸ್ತುಗಳನ್ನಷ್ಟೇ ಅಲ್ಲ ,ರೂಪ ರಸ ಗಂಧ ಮುಂತಾದ ವಿಷಯಗಳನ್ನ ಅರ್ಪಿಸಿ ಸೇವಿಸುತ್ತಾನೆ,ಆಮೇಲೆ ಇಂದ್ರಿಯ ಕರಣಗಳನ್ನು ಅರ್ಪಿಸುತ್ತಾನೆ,ಕೊನೆಯಲ್ಲಿ ತನ್ನ ಭಾವ (ಆತ್ಮ)ವನ್ನೆ ಅರ್ಪಿಸುತ್ತಾನೆ.

ವಸ್ತು-ವಿಷಯಗಳನ್ನಾಗಲಿ, ಇಂದ್ರಿಯ ಕರಣಗಳನ್ನಾಗಲಿ ಸೇವಿಸಬೇಕು ಅಥವಾ ಬಳಸಬೇಕು ಎಂದಾದರೆ ಅವುಗಳನ್ನು ಮೊದಲು ಲಿಂಗಕ್ಕೆ ಅಥವಾ ಅದರ ಪ್ರತಿನಿಧಿಗಳಾದ ಗುರು -ಜಂಗಮಕ್ಕೆ ಅರ್ಪಿಸಬೇಕು.

ಇದನ್ನು ಸತತ ಸಾಧನೆಯ ಮೂಲಕ ರೂಢಿಗತ ಮಾಡಿಕೊಳ್ಳಬೇಕು. ಹೀಗೆ ರೂಢಿಗತ ಮಾಡಿಕೊಳ್ಳಬೇಕು ಎಂಬ ನಿರ್ಧಾರವನ್ನು ಶರಣರು ಅವಧಾನ ಭಕ್ತಿ ಎನ್ನುತ್ತಾರೆ.

ಲಿಂಗಾರ್ಪಿತ ವಸ್ತು ಶುದ್ಧವಾಗುತ್ತದೆ, ಲಿಂಗಾರ್ಪಣಾಭಾವ ಭಕ್ತನನ್ನು ಶುದ್ಧ ಮಾಡುತ್ತದೆ.ಪ್ರಪಂಚದ ಪ್ರತಿಯೊಂದು ವಸ್ತುವೂ ಪ್ರಸಾದ ಎಂದು ಭೋಗಿಸಿದರೆ ನಮ್ಮ ಅಹಂಭಾವವು ಕಡಿಮೆಯಾಗಿ “ಸೋಹಂ’ ಎಂಬ ಭಾವ ಬೆಳೆದು ನಾವು ಶುದ್ಧ ರಾಗುತ್ತೇವೆ ಎಂದು ನಂಬಬೇಕು ಇಂಥ ನಂಬಿಕೆಗಳೆ  ನಮ್ಮ ಅಧ್ಯಾತ್ಮಿಕ  ಜೀವನವನ್ನು ರೂಪಿಸುತ್ತವೆ.

  ಶುದ್ಧ,ಸಿದ್ದ,ಪ್ರಸಿದ್ಧ ಪ್ರಸಾದವೆಂತುಂಟೆಂದು ಬೆಸಗೊಂಡೊಡೆ ಹೇಳಿಹೆ. ಕೇಳಿರೆ

  ಶುದ್ಧಪ್ರಸಾದವುಗುರುಮುಖದಿಂದ ಬಂದುದು

  ಸಿದ್ದ ಪ್ರಸಾದವು ಲಿಂಗ ಮುಖದಿಂದ ಬಂದುದು

  ಪ್ರಸಿದ್ಧ ಪ್ರಸಾದವು ಜಂಗಮ ಮುಖದಿಂದ ಬಂದುದು

  ಇದರೊಳಗಾವುದ ಘನವೆಂಬೆ, ಅವುದು ಕಿರಿದೆಂಬೆ

  ಗುರು ಪ್ರಸಾದದಿಂದ ತನು ಶುದ್ಧಿ, ಲಿಂಗ ಪ್ರಸಾದದಿಂದ ಮನ ಶುದ್ದಿ

           ಜಂಗಮ  ಪ್ರಸಾದದಿಂದ ಭಾವಶುದ್ಧಿ

  ಶರಣರ ಸಂಗದಿಂದ ಸಾಧ್ಯವಾಯಿತ್ತು ಕೂಡಲಚೆನ್ನಸಂಗಮದೇವ .

ಶಿವನು ಕರುಣಿಸಿದ ಈ ಮನುಷ್ಯ ಜನ್ಮವು ಸಾರ್ಥಕತೆ ಪಡೆಯಬೇಕು.

ಈ ಜೀವನವೂಕೂಡ  ಶಿವನು ಪ್ರಸಾದರೂಪದಲ್ಲಿ ಕರುಣಿಸಿದ್ದು “ಲಿಂಗ ಮಯ ಜಗತ್ ಸರ್ವಂ ” ಎಂಬಂತೆ ಪ್ರತಿ ಅಣು ಅಣುವೂಕೂಡ ಶಿವಕಾರುಣ್ಯದಿಂದ ತನ್ನ ಅಸ್ತಿತ್ವ ಪಡೆದು ನಡೆಯುತ್ತಿರುತ್ತದೆ.ಈ ಪ್ರಸಾದವನ್ನು ಹಿರಿದು, ಕಿರಿದು ಎನ್ನಲಾದೀತೆ? ಘನವಾದ ಈ ಪ್ರಸಾದವು ಗುರುಮುಖದಿಂದ ಬಂದ ಶುದ್ಧ ಪ್ರಸಾದದಿಂದ ತನು ಶುದ್ದಿ.ಲಿಂಗ ಮುಖದಿಂದ ಬಂದ ಸಿದ್ದ ಪ್ರಸಾದದಿಂದ ಮನಃಶುದ್ಧಿ.ಜಂಗಮ ಮುಖದಿಂದ ಬಂದ ಪ್ರಸಿದ್ಧ ಪ್ರಸಾದದಿಂದ ಭಾವಶುದ್ದಿ ಆಗುತ್ತದೆ.ಇವೆಲ್ಲ ಶುದ್ಧಿಯಾಗಿ ಇರಬೇಕಾದರೆ ಶರಣರ ಸಂಗದಿಂದ ಮಾತ್ರ ಸಾಧ್ಯ ವೆನ್ನುತ್ತಾರೆ ಚೆನ್ನಬಸವಣ್ಣನವರು.ಶರಣರ ಸಂಗ ಭವದುಃಖ-ದುಮ್ಮಾನಗಳನ್ನು ದೂರಸರಿಸಿ ಶಿವ ಸಾಕ್ಷಾತ್ಕಾರವನ್ನು ಪಡೆಯಲು ಸಾಧ್ಯ ಮಾಡುತ್ತದೆ.

ಶಿವಯೋಗಿಗಳು ಶರಣರು ಈ ಪ್ರಸಾದಕ್ಕೆ ಎಷ್ಟು ಮಹತ್ವ ಕೊಟ್ಟಿದ್ದಾರೆಂದರೇ

ಹೀಗೆ ಒಂದು ದಿನ ಪೂಜ್ಯ ಶ್ರೀ ಕುಮಾರಸ್ವಾಮಿಗಳು ಇಳಕಲ್ಲಿಗೆ ಹೋದ ಸಮಯದಲ್ಲಿ ವಿಜಯ ಮಹಾಂತ ಶಿವಯೋಗಿಗಳು ಶಿವಪೂಜೆಗೆ ಮೂರ್ತ ಮಾಡಿದ್ದರು.ಶ್ರೀಕುಮಾರಸ್ವಾಮಿಗಳು ಮಠಕ್ಕೆ ಬಂದ ವಿಷಯವನ್ನು ಸೇವಾ ಬಳಗದವರು ಶಿವಯೋಗಿಗಳಿಗೆ ತಿಳಿಸಿದಾಗ,ಆಗ ಶಿವಯೋಗಿಗಳು ಶ್ರೀಗಳಿಗೆ ತಕ್ಷಣ ಸ್ನಾನ ಮಾಡಿ ಪೂಜಾ ಕೋಣೆಯೊಳಗೆ ಬರಲು ಅಪ್ಪಣೆ ಮಾಡಿದರು.ಶ್ರೀ ಕುಮಾರ ಸ್ವಾಮಿಗಳು ಸ್ನಾನ ಪೂರೈಸಿ ಶಿವಯೋಗಿಗಳ ಪೂಜಾಗೃಹ ಪ್ರವೇಶಿಸಿ ಗದ್ದುಗೆಯಲ್ಲಿ ಮೂರ್ತ ಮಾಡಿದ್ದ ಶಿವಯೋಗಿಗಳಿಗೆ ಭಕ್ತಿಯಿಂದ ಸಾಷ್ಟಾಂಗ ಪ್ರಣಾಮ ಮಾಡಿ ಪಾದೋದಕ ಸ್ವೀಕರಿಸಿದರು.ಪ್ರಸಾದಕ್ಕೆ ಸಿದ್ಧಗೊಳಿಸಿದ ಪದಾರ್ಥಗಳನ್ನು ಎಡೆ ಬಟ್ಟಲಿಗೆ ಎಡೆಮಾಡಿ,ಕರ್ಪೂರ ಹಚ್ಚಿದ ನಂತರ ಶಿವಯೋಗಿಗಳು ಕುಮಾರಶ್ರೀಗಳಿಗೆ “ತಾವು ನಮ್ಮೊಡನೆ ಇದೇ ಬಟ್ಟಲಲ್ಲಿ ಪ್ರಸಾದ ಸ್ವೀಕರಿಸಬೇಕು ಎಂದಿದ್ದರು ” ಈ ಮಾತನ್ನು ಕೇಳಿದ ಕುಮಾರ ಶ್ರೀಗಳಿಗೆ ಪರಮಾಶ್ಚರ್ಯವಾಗಿ ಹೃದಯ ತುಂಬಿಬಂದಿತ್ತು,ಕನಸಿನಲ್ಲೂ ಸುಳಿಯದಂಥ ಈ  ಪ್ರಸಾದ ಕರುಣೆಯ ಸೌಭಾಗ್ಯ ತಾನಾಗಿ ಅನುಗ್ರಹವಾದ ಆನಂದದಲ್ಲಿ ಶ್ರೀಗಳು ಶಿವಯೋಗಿಗಳೊಂದಿಗೆ  ಸಹಭೋಜನಕ್ಕೆ ಮೂರ್ತ ಮಾಡಿದರು.

ಇಲ್ಲಿ ಒಂದು ವಿಷಯ ಸೂಕ್ಷ್ಮವಾಗಿ ವಿಚಾರಿಸುವದೆಂದರೆ “ಕುಮಾರ ಶ್ರೀಗಳು ಉಪ್ಪು,ಹುಳಿ,ಖಾರ ಬಿಟ್ಟು ಸಾತ್ವಿಕ ಪ್ರಸಾದ ಸೇವಿಸುವ ವ್ರತ ಶ್ರೀಗಳದ್ದಾಗಿತ್ತು ” ಆದರೆ ಇಲ್ಲಿ ತಾವು ಸೇವಿಸುವ ಸಾತ್ವಿಕ ಆಹಾರ ಪದಾರ್ಥಗಳಿಗೆ ಹೊರತಾದ ಜೋಳದ ಕಡುಬು,ಕಾರ ಬೇಳೆ,ಅನ್ನ ಮೊದಲಾದ ಶಿವಯೋಗಿಗಳ ಅಭ್ಯಾಸದ ಪದಾರ್ಥಗಳು ಎಡೆಬಟ್ಟಲಲ್ಲಿ ಇದ್ದರೂ ಆ ಪದಾರ್ಥಗಳತ್ತ ಲಕ್ಷಗೊಡದೆ ಸೇವಿಸುತ್ತಿದ್ದ ಶ್ರೀ ಕುಮಾರಸ್ವಾಮಿಗಳಿಗೆ ಆ ಪ್ರಸಾದ ಅಮೃತ ವಾಗಿತ್ತು.

ಹುಳಿ, ಉಪ್ಪು, ಖಾರ ಎಂಬ ರುಚಿ ಆ ಪ್ರಸಾದದಲ್ಲಿ ಅಳಿದಿತ್ತು. ಹೀಗೆ ಈರ್ವರು  ಶಿವಯೋಗಿಗಳು ಒಂದೇ ಎಡೆಬಟ್ಟಲಲ್ಲಿ ಪ್ರಸಾದ ಸೇವನೆಯೊಂದಿಗೆ ಸಮರಸ ಭಾವದಲ್ಲಿ ಮುಳುಗಿದ್ದರು.

ಮಹಾತ್ಮರು,ಶಿವಯೋಗಿಗಳು, ಸಂತರು, ಶಿವಭಕ್ತರು, ಸ್ವಾಮಿಗಳು ಅನ್ನ ಪ್ರಸಾದಕ್ಕೆ ಬಹಳ ಮಹತ್ವ ಕೊಡುತ್ತಾರೆ. ಇವರು ಪ್ರಸಾದ ಸ್ವೀಕರಿಸುವುದಕ್ಕಿಂತ ಮುಂಚೆ ಅನ್ನಪ್ರಸಾದವನ್ನು ಮೊದಲು ಶಿವನ ರೂಪದಲ್ಲಿದ್ದ ಲಿಂಗಕ್ಕೆ ಅರ್ಪಿಸಿ ಹೇ ದೇವಾ ನೀನು ಕೊಟ್ಟ ಪ್ರಸಾದವನ್ನು ಮೊದಲು ನಿನಗೆ ಅರ್ಪಿಸಿ ಆನಂತರ ನಾನು ಸೇವಿಸುತ್ತೇನೆ, ನಿನ್ನ ಈ ಪ್ರಸಾದದಿಂದ ನನ್ನ ರಕ್ತವು ಪರಿಶುದ್ಧವಾಗಿ ಹರಿಯುವಂತಾಗಲಿ, ಕೆಟ್ಟ ವಿಚಾರಗಳು ನನ್ನ ತಲೆಯಲ್ಲಿ ಸುಳಿಯದಂತಾಗಲಿ, ನನ್ನ ನರನಾಡಿಗಳಲ್ಲಿ ಹೊಸ ಚೈತನ್ಯವು ಹುಟ್ಟುವಂತಾಗಲಿ ಎಂದು ಭಗವಂತನಿಗೆ ಮನಃಪೂರ್ವಕವಾಗಿ ಬೇಡಿಕೊಂಡು ಪ್ರಸಾದ ಸೇವಿಸುತ್ತಾರೆ.

ಕೇವಲ ಶರೀರ ಮೋಹಿಗಳು ಊಟ, ಅನ್ನಕ್ಕೆ ಆಸೆಪಡುವವರು ಆದರೆ ಗುರು-ಲಿಂಗ-ಜಂಗಮ ರಲ್ಲಿ ನಿಷ್ಠೆ ಉಳ್ಳವರು ಪೂಜ್ಯಭಾವದಿಂದ ಪ್ರಸಾದವನ್ನ  ಸೇವಿಸುವರು. ಶರೀರೇಂದ್ರಿಯ ಭಾವ ಅಳಿದು ಸದ್ಭಾವದ ಸತ್ ಕಾಯಕದೊಳಗೆ ಗುರು -ಲಿಂಗ-ಜಂಗಮಕ್ಕೆ ಅರ್ಪಿಸಿ ಸೇವಿಸುವುದೇ ನಿಜ ಪ್ರಸಾದ.

ಹೇಗೆ ಬೆಂಕಿಯಿಂದ ಬೆಣ್ಣೆ ಕರಗಿ ತುಪ್ಪವಾಗುವುದು ಹಾಗೆ ಚಿದ್ಘನಲಿಂಗದ ಮುಖದಿಂದ ಸಂಸ್ಕಾರಗೊಂಡ ಪದಾರ್ಥ ಮಹಾಪ್ರಸಾದ ವಾಗುವುದು.ತುಪ್ಪ ಮತ್ತೆ ಬೆಣ್ಣೆಯಾಗದು,ಪ್ರಸಾದ ಮರಳಿ ಪದಾರ್ಥವಾಗದು.ಶಿವನ ಕರುಣವೆ ಪ್ರಸಾದ ಗುರುಲಿಂಗ ಜಂಗಮದಿಂದ ಶಿವಭಕ್ತರಾದವರಿಗೆ ಪ್ರಸಾದ ಸಲ್ಲಬೇಕೆ ಹೊರತು ಉಳಿದವರಿಗೆ ಪ್ರಸಾದ ಸಂದೀತೆ? ಪ್ರಸಾದವೇ ತಂದೆ, ಇದರೊಳಗನ ಭಕ್ತಿಯೇ ತಾಯಿ,ಪ್ರಸಾದ ಸೇವ್ಯ ಸಂಯೋಗ ಪಡೆದಾಗ ಜನಿಸುವವಳೇ ಪರಮ ಮುಕ್ತಿ ಕನ್ನಿಕೆ .ಇದೇ ಪರಮೇಶ್ವರ ಸಾಕ್ಷಾತ್ಕಾರಕ್ಕೆ ಹಾದಿ.ಪರಶಿವ ಭಕ್ತಿ ಪರಶಿವ ಶಕ್ತಿಯೊಡನೆ ಬೆರೆದಿರುವುದೇ ಪ್ರಸಾದ ಧರ್ಮ.ಪ್ರಸಾದದಿಂದ ಪರಶಿವ ಭಕ್ತಿ  ಸದ್ಭಕ್ತಿಯಾಗಿ ಮಧುರಗೊಳ್ಳುವುದು, ಇದುವೇ ಪ್ರಸಾದ, ಇದುವೇ ಅರ್ಪಣ.

Related Posts