ಹೊಸ ಪುಸ್ತಕ ಓದು

 

ಭವ್ಯ ಕೃತಿಗೆ-ದಿವ್ಯ ವ್ಯಾಖ್ಯಾನ

ಪುಸ್ತಕದ ಹೆಸರು : ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣ (ಕವಿರತ್ನ ದ್ಯಾಂಪುರ ಚೆನ್ನಕವಿ ಕೃತ)
ವ್ಯಾಖ್ಯಾನ : ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು
ಪ್ರಕಾಶಕರು : ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರ ಜಯಂತಿ ಸಮಿತಿ
ಮುದ್ರಣ: ೨೦೨೨ ಪು. ೬೫೨
ಬೆಲೆ: ರೂ. ೧೫೦೦
ಸಂಪರ್ಕವಾಣಿ : ೮೩೧೦೨೭೬೪೪೨

ಪ್ರತಿಭೆ-ಪಾಂಡಿತ್ಯ-ವಿದ್ವತ್ತುಗಳು ಕಣ್ಮರೆಯಾಗುತ್ತಿವೆ ಎಂಬ ಆತಂಕದಲ್ಲಿರುವ ಕನ್ನಡಿಗರಿಗೆ ಅಲ್ಲೊಂದು ಇಲ್ಲೊಂದು ಆಶಾಕಿರಣಗಳು ಗೋಚರಿಸುತ್ತಿವೆ. ಕನ್ನಡ ಭಾಷೆ ಸಂಸ್ಕೃತಿಯ ಸಮೃದ್ಧಿಗಾಗಿ ಪರಿಶ್ರಮಿಸುವ ಯುವ ವಿದ್ವಾಂಸರ ಪಡೆ ಇಂದಿಗೂ ಕಾರ್ಯನಿರತವಾಗಿದೆ ಎಂಬುದಕ್ಕೆ ಪ್ರಸ್ತುತ ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ವ್ಯಾಖ್ಯಾನಿಸಿದ ‘ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣ’ ಕೃತಿಯೇ ಸಾಕ್ಷಿಯಾಗಿದೆ. ಕನ್ನಡ ಸಾಹಿತ್ಯದಲ್ಲಿ ಪ್ರಾಚೀನ ಕಾಲದಿಂದಲೂ ಸೂತ್ರರೂಪದಲ್ಲಿ ಕೃತಿಗಳನ್ನು ರಚಿಸುವುದು, ನಂತರ ಆ ಸೂತ್ರಗಳಿಗೆ ವ್ಯಾಖ್ಯಾನ ಬರೆಯುವ ಪದ್ಧತಿ ಬೆಳೆದು ಬಂದಿದೆ. ಕೇಶಿರಾಜನ ಶಬ್ದಮಣಿ ದರ್ಪಣ ಮೊದಲಗೊಂಡು ಕನ್ನಡದಲ್ಲಿ ಸೂತ್ರ ರೂಪದ ಕೃತಿಗಳು ನೂರಾರು ಬೆಳಕು ಕಂಡಿವೆ. ಅದರಲ್ಲೂ ಶರಣ ಸಾಹಿತ್ಯದಲ್ಲಿ ಈ ಬಗೆಯ ಕೃತಿಗಳ ಒಂದು ದೊಡ್ಡ ಪರಂಪರೆಯೇ ಇದೆ.  ಪ್ರಾರಂಭದ ಘಟ್ಟದಲ್ಲಿ ಇಂಥ ಸೂತ್ರರೂಪದ ಕೃತಿಯ ಅರ್ಥ-ಭಾವ-ಉದ್ದೇಶಗಳನ್ನು ವಿವರಿಸಿ ಹೇಳುವುದಕ್ಕಾಗಿ ಸಂಸ್ಕೃತ ಸಾಹಿತ್ಯದಲ್ಲಿ ವ್ಯಾಖ್ಯಾನ, ಭಾಷ್ಯ, ವಾರ್ತಿಕ, ಅದಿಕರಣ, ಕೃತಕ, ತಾತ್ಪರ್ಯ ನಿರ್ಣಯಗಳೆಂಬ ವಿವಿಧ ಪ್ರಕಾರಗಳನ್ನು ರೂಪಿಸಲಾಗಿದೆ. ಆದರೆ ಕನ್ನಡ ಕೃತಿಗಳಿಗೆ ವ್ಯಾಖ್ಯಾನ ಬರೆದ ವೀರಶೈವ ಲಿಂಗಾಯತ ವ್ಯಾಖ್ಯಾನಕಾರರು ಇದಕ್ಕಾಗಿ ಟೀಕೆ, ವ್ಯಾಖ್ಯಾನ, ಟಿಪ್ಪಣಿ, ಸಾರಾರ್ಥ, ಸಾರಾಮೃತ, ವಾಚ್ಯ, ವಚನಾರ್ಥ, ನುಡಿ ಮುಂತಾದ ಪದಗಳನ್ನು ಬಳಸಿದ್ದರೂ ಇವೆಲ್ಲ ವಿವಿಧ ಪ್ರಕಾರಗಳಲ್ಲ, ‘ಟೀಕೆ’ಯನ್ನು ಸೂಚಿಸುವ ಪರ್ಯಾಯ ಪದಗಳು. ಕನ್ನಡ ಸಾಹಿತ್ಯದಲ್ಲಿ ‘ಟೀಕೆ’ ಅಥವಾ ‘ಟೀಕು’ ಪದವೇ ಅಧಿಕವಾಗಿ ಬಳಕೆಗೊಂಡಿರುವುದು ಕಂಡುಬರುತ್ತದೆ. ವಿಜಯನಗರ ಸಾಮ್ರಾಜದ ಪ್ರಸಿದ್ಧ ದೊರೆ ಪ್ರೌಢದೇವರಾಯ ಕಾಲದಲ್ಲಿ ಈತನ ಮಂತ್ರಿಗಳಾದ ಲಕ್ಕಣ-ಜಕ್ಕಣರ ರಾಜರಕ್ಷೆ ಹಾಗೂ ನೂರೊಂದು ವಿರಕ್ತರ ಧರ್ಮರಕ್ಷೆಗಳಲ್ಲಿ ಈ ಕೆಲಸ ವ್ಯಾಪಕವಾಗಿ ಮುನ್ನಡೆಯುವಂತಾಯಿತು. ಆಮೇಲೆ ಏಳುನೂರೊಂದು ವಿರಕ್ತರ ಸಮಯದಲ್ಲಿ ಈ ವ್ಯಾಖ್ಯಾನ ಕಾರ್ಯಕ್ಕೆ ಪವನವೇಗ ಸಂಪ್ರಾಪ್ತವಾಯಿತು. ಏಳುನೂರೊಂದು ವಿರಕ್ತರ ಅಧಿಪತಿ ತೋಂಟದ ಸಿದ್ಧಲಿಂಗದೇವ, ಆತನ ಶಿಷ್ಯ-ಪ್ರಶಿಷ್ಯರಾದ ಚೆನ್ನದೇವ, ಕಟ್ಟಿಗೆಹಳ್ಳಿ ಸಿದ್ಧಲಿಂಗ, ಎಳಂದೂರು ಪರ್ವತ ಶಿವಯೋಗಿ, ಸೋಮಶೇಖರ ಶಿವಯೋಗಿ ಮೊದಲಾದವರು ಹಾಗೂ ಇತರರು ಈ ವ್ಯಾಖ್ಯಾನ ರಚನಾಕರ‍್ಯವನ್ನು  ಮುಂದುವರಿಸಿ, ಅದನ್ನು `ಕಾಯಕ’ದ ಮಟ್ಟಕ್ಕೆ ಮುಟ್ಟಿಸಿದರು. ಇದಲ್ಲದೆ ವ್ಯಾಖ್ಯಾನ ಮಾಡುವುದನ್ನೇ ಪ್ರಮುಖ ವೃತ್ತಿಯನ್ನಾಗಿಸಿಕೊಂಡ `ಟೀಕಿನ ಗುರುಪಾದ ಸ್ವಾಮಿ’ಯಂಥವರಿಗೂ `ವ್ಯಾಖ್ಯಾನದ ಕರ‍್ಯಾಗಾರ’ಗಳೆನಿಸಿದ `ಟೀಕಿನಮಠ’ಗಳೂ ಈ ವ್ಯಾಖ್ಯಾನ ಸಾಹಿತ್ಯದ ಬೆಳವಣಿಗೆಗೆ ಬೆಂಬಲವಾಗಿ, ಬೆಳಕಾಗಿ ನಿಂತವು. ಇದು ವೀರಶೈವ ವ್ಯಾಖ್ಯಾನಗಳ ಸಹಾಯವಿಲ್ಲದೆ ಶಾಸ್ತç ಕೃತಿಗಳ ಅಧ್ಯಯನ ಬಹಳ ಕಷ್ಟವಾಗಿ ಪರಿಣಮಿಸಿದುದರಿಂದ ಇವುಗಳ (ವ್ಯಾಖ್ಯಾನದ) ರಚನಾಕರ‍್ಯ ಕಾಲದಿಂದ ಕಾಲಕ್ಕೆ ಅನಿವರ‍್ಯವಾಗಿ ಬೆಳೆಯುವಂತಾಯಿತು. ಈ ಪರಂಪರೆಯನ್ನು ಆಧುನಿಕ ಯುಗದಲ್ಲಿ ಮುಂದುವರಿಸಿದ ಶ್ರೇಯಸ್ಸು ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳಿಗೆ ಸಲ್ಲುತ್ತದೆ. ಕಬ್ಬಿಣದ ಕಡಲೆಯಂತಿದ್ದ ಚೆನ್ನಕವಿಗಳ ಈ ಪುರಾಣಕ್ಕೆ ಸರಳವಾದ ಭಾಷ್ಯವನ್ನು ಶ್ರೀಗಳು ರಚಿಸಿದ್ದಾರೆ. 
ಇಪ್ಪತ್ತನೆಯ ಶತಮಾನದ ಆರಂಭ ಘಟ್ಟದಲ್ಲಿ ಕನ್ನಡ ನಾಡಿನಲ್ಲಿ ಧರ್ಮ ಸಂಸ್ಕೃತಿಗಳ ಕುರಿತಾದ ಅರಿವು ಮೂಡಿರಲಿಲ್ಲ. ಪರಧರ್ಮೀಯರು ತಮ್ಮ ಧರ್ಮದ ಪ್ರಭಾವವನ್ನು ಬೀರಿ ಧರ್ಮಾಂತರ-ಮತಾಂತರದಂತಹ ಕಾರ್ಯದಲ್ಲಿ ತೊಡಗಿದ್ದರು. ಇದು ಮುಂದುವರೆದಿದ್ದರೆ, ಈ ನಾಡಿನಲ್ಲಿ ಹುಟ್ಟಿ ಬೆಳೆದ ಧರ್ಮ-ಪಂಥಗಳು ಗಂಡಾಂತರಕ್ಕೀಡಾಗುವ ಅಪಾಯವಿತ್ತು. ಇದಲ್ಲದೆ ಲಿಂಗಾಯತ ಸಮಾಜ ಬಾಂಧವರು ತಮ್ಮ ಧರ್ಮ ಸಂಸ್ಕೃತಿಯ ಆಚಾರ-ವಿಚಾರಗಳನ್ನು ತ್ಯಜಿಸಿ, ಇತರ ಸಂಪ್ರದಾಯದತ್ತ ವಾಲತೊಡಗಿದ್ದರು. ಈ ಉಭಯ ಸಂಕಟಗಳಿಂದ ಪಾರು ಮಾಡಲು ಪ್ರಯತ್ನಿಸಿದ ಪ್ರಾತಃಸ್ಮರಣೀಯರಲ್ಲಿ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು ಅಗ್ರಗಣ್ಯರು. ಅಖಿಲ ಭಾರತ ವೀರಶೈವ ಮಹಾಸಭೆ, ಶಿವಯೋಗಮಂದಿರದಂತಹ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರುವುದರ ಮೂಲಕ ಸಮಾಜ ಸಂಸ್ಕೃತಿಗಳನ್ನು ಉಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಇಂಥ ಮಹಾಮಹಿಮರ ಚರಿತೆಯನ್ನು ಕವಿರತ್ನ ದ್ಯಾಂಪುರ ಚೆನ್ನಕವಿಗಳು ವಾರ್ಧಕ ಷಟ್ಪದಿಯಲ್ಲಿ ರಚಿಸಿರುವುದು ಗಮನಿಸುವ ಅಂಶ.  ದ್ಯಾಂಪುರದ ಚೆನ್ನಕವಿಗಳು  ಗದುಗಿನ ಸಮೀಪದ ದ್ಯಾಂಪುರದಲ್ಲಿ ಕ್ರಿ.ಶ. ೧೮೭೯ ರ ಸುಮಾರಿಗೆ ಜನಿಸಿದರು. ಕನ್ನಡದಲ್ಲಿ ಪ್ರಸಿದ್ಧ ಕಾವ್ಯಗಳಾದ ಶಬರಶಂಕರವಿಳಾಸ, ರಾಜಶೇಖರ ವಿಳಾಸ, ಜೈಮಿನಿ ಭಾರತ ಮೊದಲಾದವುಗಳನ್ನು ಆಸ್ಥೆಯಿಂದ ಅಭ್ಯಾಸ ಮಾಡಿ, ಕಾವ್ಯ ಸಾಹಿತ್ಯದಲ್ಲಿ ಪರಿಣತೆಯನ್ನು ಪಡೆದರು. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಹದಿನಾರು ವರ್ಷ ಕೆಲಸ ಮಾಡಿದರು. ಆ ಸಮಯದಲ್ಲಿ ವೀರಶೈವ ಮಹಾಸಭೆ, ಶಿವಯೋಗಮಂದಿರ ಮೊದಲಾದ ಸಂಸ್ಥೆಗಳ ಆಧಾರಸ್ತಂಭರಾಗಿ ವೀರಶೈವರಲ್ಲಿ ಧರ್ಮ, ಆಚಾರ, ನೀತಿಗಳು ನೆಲೆಗೊಳ್ಳುವಂತೆ ಶ್ರೀ.ಮ.ನಿ.ಪ್ರ.ಹಾನಗಲ್ಲ ಕುಮಾರ ಸ್ವಾಮಿಗಳವರು ಅವಿಶ್ರಾಂತವಾಗಿ ಪರಿಶ್ರಮಪಡುತ್ತಲಿದ್ದರು. ಶ್ರೀಗಳವರ ಅಪ್ಪಣೆಯಂತೆ ಚೆನ್ನಕವಿಗಳು ಧರ್ಮೋಪದೇಶ ಹಾಗೂ ಸಾಹಿತ್ಯ ಸೇವೆಗಾಗಿ ತಮ್ಮ ಉಳಿದ ಆಯುಷ್ಯವನ್ನು ಮೀಸಲಾಗಿಟ್ಟರು. ಈ ಅವಧಿಯು ಅವರ ಕಾವ್ಯ ನಿರ್ಮಾಣಕ್ಕೆ ಹೆಚ್ಚು ಅನುಕೂಲತೆಯನ್ನೊದಗಿಸಿಕೊಟ್ಟಿತು. ಅವರ ಒಳ್ಳೆಯ ಕೃತಿಗಳೆಲ್ಲ ಈ ಕಾಲದಲ್ಲಿಯೇ ರಚಿತವಾದವು. ಇವುಗಳಲ್ಲಿ ಒಂಬತ್ತು ಪುರಾಣಗಳು ವಾರ್ಧಿಕ ಷಟ್ಪದಿಯಲ್ಲಿವೆ. ಉಳಿದ ಸುಮಾರು ಹನ್ನೆರಡು ಕೃತಿಗಳು ಶತಕ ಹಾಗೂ ಹಾಡು ಗಬ್ಬಗಳ ರೂಪದಲ್ಲಿ ರಚಿತವಾಗಿವೆ. ಚೆನ್ನಕವಿಗಳು ಹೆಮ್ಮರಡ್ಡಿ ಮಲ್ಲಮ್ಮನ ಪುರಾಣ, ಹುಚ್ಚೇಶ್ವರ ಪುರಾಣ, ಬಾಲಲೀಲಾ ಮಹಾಂತ ಶಿವಯೋಗಿ ಪುರಾಣಗಳನ್ನು ರಚಿಸಿದರು. ಆದರೆ ಮುಂದೆ ತಮ್ಮ ಸಮಕಾಲೀನ ಮಹಾತ್ಮರ ಚರಿತ್ರೆ ಬರೆಯಬೇಕೆಂಬ ಅಪೇಕ್ಷೆ ಅವರಲ್ಲಿ ಮೂಡಿತು. ನಾಲ್ವತ್ತವಾಡದ ವೀರೇಶ್ವರ ಶರಣರು, ಹಾನಗಲ್ಲ ಕುಮಾರ ಸ್ವಾಮಿಗಳು ಮೊದಲಾದವರನ್ನು ಪುರಾಣ ಕಾವ್ಯಗಳನ್ನು ರಚಿಸಿದರು. ತಮ್ಮ ನಡುವೆ ಇರುವ ಈ ಮಹಾತ್ಮರು ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಕಾವ್ಯಮಾಧ್ಯಮದಲ್ಲಿ ದಾಖಲಿಸಿದರೆ ಬಹುಕಾಲ ಉಳಿಯಬಲ್ಲದೆಂಬ ನಂಬಿಕೆ ಚೆನ್ನಕವಿಗಳಿಗಿತ್ತು. 
ಹಾನಗಲ್ಲ ಕುಮಾರ ಶಿವಯೋಗಿಗಳಿಗೆ ತಮ್ಮ ಪುರಾಣ ರಚನೆಯ ವಿಷಯ ತಿಳಿದಾಗ, ಚೆನ್ನಕವಿಗಳನ್ನು ಕರೆದು, ಮಹಾತ್ಮರ ಚರಿತ್ರೆಯನ್ನು ಬರೆಯುವಂತವನಾಗು, ನಮ್ಮಂತವರ ಬಗ್ಗೆ ಬರೆಯಬೇಡ ಎಂದು ಕಟ್ಟಪ್ಪಣೆ ಮಾಡಿದ್ದರು. ಹೀಗಿದ್ದೂ ಚೆನ್ನಕವಿಗಳು ಶ್ರೀಗಳು ಲಿಂಗೈಕ್ಯರಾದ ನಂತರ ಪುರಾಣ ರಚನೆಗೆ ತೊಡಗಿಕೊಂಡರು. ಆದರೆ ಪುರಾಣವನ್ನು ಪೂರ್ಣ ಮಾಡುವುದು ಅವರಿಂದ ಸಾಧ್ಯವಾಗಲಿಲ್ಲ. ಕೊನೆಯ ಎರಡು ಸಂಧಿಗಳಿರುವಾಗಲೇ ಲಿಂಗೈಕ್ಯರಾದರು. ಪುಟ್ಟರಾಜ ಕವಿ ಗವಾಯಿಗಳು ಮತ್ತು ಹುಕ್ಕೇರಿ ಸದಾಶಿವ ಶಾಸ್ತಿçಗಳು ಮತ್ತೆರೆಡು ಸಂಧಿಗಳನ್ನು ಬರೆದು, ಪುರಾಣವನ್ನು ಪೂರ್ಣಗೊಳಿಸಿದರು. 
“ಚೆನ್ನಕವಿಗಳು ಮಹಾಸ್ವಾಮಿಗಳವರ ಜೀವನವನ್ನೂ ಅವರಿಂದಾದ ಮಹತ್ಕಾರ್ಯಗಳನ್ನೂ ವಾರ್ಧಕ ಷಟ್ಪದಿಯಲ್ಲಿ ವರ್ಣಿಸಿದ್ದಾರೆ. ಈ ಕಾವ್ಯದ ಪ್ರತಿಯೊಂದು ಸಂಧಿಯ ಆದಿಯಲ್ಲಿ ಬರುವ ಶಿವಸ್ತುತಿಪರವಾದ ಪದ್ಯಗಳು ಸುಂದರವಾಗಿವೆ. ಕಾವ್ಯ ಶೈಲಿ ಸರಳವೂ ಸ್ವಾಭಾವಿಕವೂ ಆಗಿದೆ. ಶ್ರೀಗಳವರ ಜೀವನವೆ ಒಂದು ಪವಾಡವಾಗಿದೆ. ಆದುದರಿಂದ ಉಳಿದ ಪುರಾಣಗಳಲ್ಲಿರುವಂತೆ ಈ ಪುರಾಣದಲ್ಲಿ ಕವಿಗಳು ಪವಾಡಗಳಿಗೆ ಆಸ್ಪದ ಕೊಟ್ಟಿಲ್ಲ. ಇಲ್ಲಿ ಶ್ರೀಗಳವರ ಜೀವನ ಸ್ಫುಟವಾಗಿ ಮೂಡಿದೆ. ಹದಿನೆಂಟು ವರ್ಣನೆಗಳಿಗೆ ಇಲ್ಲಿ ಸ್ಥಳವಿಲ್ಲ. ಕಥಾನಾಯಕನು ವೈರಾಗ್ಯಶೀಲನೂ, ಯೋಗಿಯೂ, ಮಹಾತಪಸ್ವಿಯೂ ಆಗಿರುವದರಿಂದ ಲೋಕಹಿತದ ಕಡೆಗೆ ಕವಿಯು ದೃಷ್ಟಿಯನ್ನು ಹೆಚ್ಚಾಗಿ ಹಾಕಿದ್ದಾನೆ. ಸಾಮಾನ್ಯವಾಗಿ ಪುರಾಣಗಳಲ್ಲಿ ಭಕ್ತಿಯ ಪ್ರಭಾವವನ್ನು ಹೇಳಿ ಜನತೆಯನ್ನು ಭಕ್ತಿಮಾರ್ಗದ ಕಡೆಗೆ ಒಯ್ಯುವ ಸಂಪ್ರದಾಯವಿದೆ. ಆದರೆ ಈ ಪುರಾಣದಲ್ಲಿ ನಾಯಕನ ಕರ್ತೃತ್ವ ಶಕ್ತಿಯಿಂದ ಸಮಾಜಹಿತದ ಘನವಾದ ಕಾರ್ಯಗಳು ಜರುಗಿರುವದರಿಂದ ಶ್ರೋತೃಗಳ ದೃಷ್ಟಿಯು ವಿಶಾಲವಾಗಿ ಲೋಕಹಿತದ ಕಡೆಗೆ ಒಲಿಯುವಂತಿದೆ. ಇದು ಕವಿಯ ಕೊನೆಯ ಕೃತಿಯಾದುದರಿಂದ ಇದಕ್ಕೂ ಮೊದಲಿನ ಕೃತಿಗಳಿಗೂ ಮಹದಂತರವಿದೆ. ಈ ಕಾವ್ಯದಲ್ಲಿ ಕವಿಯು ಪ್ರಾಸ, ಯಮಕ ಮುಂತಾದ ಶಬ್ದಾಲಂಕಾರಗಳಿಗೆ ಬಲೆಬೀಳದೆ ಉಪಮೆ, ಉತ್ಪ್ರೇಕ್ಷೆ, ರೂಪಕ ಮೊದಲಾದ ಅರ್ಥಾಲಂಕಾರಗಳನ್ನು ಮಿತವಾಗಿ ಹಿತವಾಗಿ ಉಪಯೋಗಿಸಿದ್ದಾನೆ. ಇದು ಈ ಕಾವ್ಯದ ವೈಶಿಷ್ಟö್ಯ. ಈ ಕಾವ್ಯದ ಆರಂಭದಲ್ಲಿ

ಇದು ರಸಿಕಮಾದ ಕಾದಂಬರಿಯ ಕತೆಯಲ್ಲ
ವಿದು ಕಲಿಗಳಿತಿಹಾಸಮಲ್ಲ ಕಲ್ಪಿತವಲ್ಲ
ವಿದಿರೊಳಪ್ರಾಸಂಗಿಕಾಸAಭವಾಸತ್ಯದೋಷ ವಿಷಯಂಗಳಿಲ್ಲ
ಪುದಿದ ಮಾಯಾ ಮೋಹ ಮೋಸದಿಂ ಕಂಗೆಟ್ಟು
ಕುದಿವ ಮಾನವರನೆಚ್ಚರಿಸಿ ಪಾಲಿಸಲುಳ್ಳ
ಸದಮಲ ಜ್ಞಾನ ವೈರಾಗ್ಯ ಭಕ್ತಿಗಳ ಸೊಂಪಿನ ಸುಗ್ಗಿ ಬಗೆಗೊಳಿಪುವು |೧|
ಎಂದು ಹೇಳಿರುವನು. ಈ ಮಾತನ್ನು ಕವಿಯು ಅಕ್ಷರಶಃ ಪಾಲಿಸಿರುವನು.” ಎಂಬ ಖ್ಯಾತ ವಿದ್ವಾಂಸರಾದ ಡಾ. ಶಿ. ಚೆ. ನಂದೀಮಠ ಅವರ ನುಡಿ ಅಕ್ಷರಶಃ ನಿಜ.
ಈ ಪುರಾಣದಲ್ಲಿ ಒಟ್ಟು ೨೨ ಸಂಧಿಗಳು, ೮೫೭ ಪದ್ಯಗಳಿವೆ. ರಾಘವಾಂಕನ ತರುವಾಯ ವಾರ್ಧಕ ಷಟ್ಪದಿಯನ್ನು ಪರಿಣಾಮಕಾರಿಯಾಗಿ ಬಳಸಿದ ಶ್ರೇಯಸ್ಸು ಚೆನ್ನಕವಿಗಳಿಗೆ ಸಲ್ಲುತ್ತದೆ. ಈ ಪುರಾಣವನ್ನು ಆಧುನಿಕ ಶಿಕ್ಷಣ ಪಡೆದವರು ಓದುವುದು ತುಂಬಾ ಕಷ್ಟಸಾಧ್ಯ. ಅದಕ್ಕಾಗಿ ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ಪ್ರತಿಪದಾರ್ಥ ಮತ್ತು ಭಾವಾರ್ಥಗಳೆರಡನ್ನೂ ನೀಡಿ ಓದುಗರ ಕೈಗೆ ನೀಡಿದ್ದಾರೆ.
ಚೆನ್ನಕವಿಗಳ ಪಾಂಡಿತ್ಯಕ್ಕೆ ಸಮನಾದ ಸರಳಾನುವಾದವನ್ನು ಬರೆದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ಎಳೆಯ ವಯಸ್ಸಿನಲ್ಲಿಯೇ ಹಾನಗಲ್ಲ ಕುಮಾರೇಶ್ವರ ಪುರಾಣವನ್ನು ಪ್ರವಚನ ಮಾಡಿದವರು. ಇಂಗ್ಲಿಷ್ ಸಾಹಿತ್ಯದಲ್ಲಿ ಆಳವಾದ ಅಧ್ಯಯನ ಮಾಡಿರುವ ಅವರು ಹಾನಗಲ್ಲ ಕುಮಾರ ಶಿವಯೋಗಿಗಳವರನ್ನು ಕುರಿತು ಈಗಾಗಲೇ ಇಂಗ್ಲಿಷ್ ಭಾಷೆಯಲ್ಲೊಂದು ಕೃತಿರತ್ನವನ್ನು ರಚಿಸಿದ್ದಾರೆ. ಈಗ ಚೆನ್ನಕವಿಗಳ ವಾರ್ಧಕ ಷಟ್ಪದಿಯ ಮಹಾಕಾವ್ಯಕ್ಕೆ ಅತ್ಯಂತ ಹೃದ್ಯವಾದ ಶೈಲಿಯಲ್ಲಿ ಭಾವಾರ್ಥವನ್ನು ನೀಡಿದ್ದಾರೆ. ಚೆನ್ನಕವಿಗಳದು ಹರಿಹರ-ರಾಘವಾಂಕರ ಉದಿತೋದಿತ ಶೈಲಿ, ಈ ಶೈಲಿಗೆ ಪೂರಕವಾದ ಭಾಷೆಯನ್ನು ಬಳಸಿ, ಜನಸಾಮಾನ್ಯರಿಗೂ ಈ ಮಹಾಕಾವ್ಯ ಅರ್ಥವಾಗುವಂತೆ ಮಾಡುವಲ್ಲಿ ಶ್ರೀಗಳು ಯಶಸ್ವಿಯಾಗಿದ್ದಾರೆ. ಪೂಜ್ಯರ ಸಾಹಿತ್ಯ ಪ್ರೀತಿ, ಲೋಕಾನುಭವ, ಅಸಂಖ್ಯ ಗ್ರಂಥಾವಲೋಕನ, ವಾಙ್ಮಯ ತಪಸ್ಸು, ಚಿಂತನ ಮಂಥನಗಳು ಇಲ್ಲಿ ಹೃದಯಸ್ಪರ್ಶಿಯಾಗಿ ಮೂಡಿಬಂದಿವೆ.

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ

Related Posts