ಲೇಖಕರು :ಶ್ರೀ ಕೊಟ್ಟೂರಸ್ವಾಮಿಗಳು ಜಡೆ ( ಪೂಜ್ಯ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು)
( ಪರಂಜ್ಯೊತಿ ಪತ್ರಿಕೆಯಿಂದ)
ಸಂಗ್ರಹ : ಶ್ರೀ ಕೆ.ಹೆಚ್.ಮಲ್ಲನಗೌಡರು ಗದಗ
“ಯೋಗಶ್ಚಿತ್ ವೃತ್ತಿ ನಿರೋಧಃ”योग श्चित्तवृत्ति निरोधः ಇದು ಪಾತಂಜಲಿ ಋಷಿಯ ವಾಣಿ. ಈ ವಾಣಿ ಯೋಗಾಭ್ಯಾಸಗಳಿಗೆ ಧೈರ್ಯ ಹಾಗೂ ಉತ್ಸಾಹವನ್ನುಂಟು ಮಾಡುತ್ತದೆ. ಯೋಗಾಭ್ಯಾಸದಿಂದ (ಯೋಗಾಸನಗಳನ್ನು ಹಾಕುನದರಿಂದ) ನಮಗುಂಟಾಗುವ ಲಾಭವೇನು? ಅದರ ಪ್ರಯೋಜನವೇನು? ಏಕೆ ಹಾಕಬೇಕು? ಹೀಗೆ ಹಲವಾರು ರೀತಿಯಿಂದ ಪ್ರಶ್ನೆಗಳ ಸುರಿಮಳೆಯೇ ಈ ವೈಜ್ಞಾನಿಕ ಯುಗದಲ್ಲಿ ಪ್ರಾರಂಭವಾಗುತ್ತವೆ. ಈ ಪ್ರಶ್ನೆಗಳ ಸುರಿಮಳೆಗೆ ಉತ್ತರವಾಗಿ ಯೋಗಾಸನಗಳಿಂದ ಆರೋಗ್ಯ ಸಂಪತ್ತು ಹೆಚ್ಚುತ್ತದೆ ಈ ಸಂಪತ್ತಿಗಿಂತಲೂ ಹೆಚ್ಚಿನ ಸಂಪತ್ತು ಜಗತ್ತಿನಲ್ಲಿ ಯಾವದೂ ಇಲ್ಲ, ಅಲ್ಲದೇ ಆರೋಗ್ಯದಿಂದ ಆಯುಷ್ಯ ಅಭಿವೃದ್ಧಿಯಾಗುತ್ತದೆ ಎಂಬುದಾಗಿ ಹೇಳಿದರೂ ಅದು ಸಮಾಧಾನವಾಗಲಾರದು ಮತ್ತೆ ಶುಷ್ಕವಾದವೇ ವಾಗುತ್ತದೆ. ಕೊನೆಯದಾಗಿ ಉತ್ತರ ಹೇಳಬೇಕೆಂದರೆ ಮೇಲ್ಕಾಣಿಸಿದ ಪಾತಂಜಲಿ ಋಷಿಯ ಸೂತ್ರವೇ ಪ್ರತ್ಯುತ್ತರವಾಗಿ ನನಗೆ ತೋರುತ್ತದೆ.
ಈ ಸೂತ್ರಾಧಾರದಂತೆ ಎಷ್ಟುಜನ ಯೋಗಾಭ್ಯಾಸಿಗಳು ಯೋಗಸಾಧನೆ ಮಾಡಿ ಈ ಕಾಲದಲ್ಲಿ ಚಿತ್ ವೃತ್ತಿಯನ್ನು ವಿರೋಧಿಸಿದ್ದಾರೆ? ಬೆರಳಿನಲ್ಲಿ ಎಣಿಸುವಷ್ಟು ಜನರೆಂದರೆ ಮಾತ್ರ ತಪ್ಪಾಗಲಾರದು. ಯೋಗಾಭ್ಯಾಸದಿಂದ ಚಿತ್ (ಮನಸ್ಸಿನ) ವೃತ್ತಿ (ಚಂಚಲತೆ) ನಿರೋಧ (ನಿಲ್ಲುವದು ಹೇಗೆ? ಇದು ಎಷ್ಟೋಜನ ಯೋಗಾಭ್ಯಾಸಿಗಳಿಗೆ ಬಿಡಿಸಲಾರದ ಸಮಸ್ಯೆಯಾಗಿಯೇ ಉಳಿದಿದೆ. ಇದಕ್ಕೆ ಪರಿಹಾರದ ದಾರಿಯೇ ಕಾಣದಾಗಿದೆ. ಇದರ ಪರಿಹಾರದ ಉಪಾಯ ಕಾಣಬೇಕಾದರೆ ಯೋಗವನ್ನು ಆಳವಾಗಿ ಅಭ್ಯಾಸಿಸಬೇಕು. ವಿಜಯಶಾಲಿ ಯಾಗಬಯಸುವ ಸೈನಿಕರು ಸೈನಿಕ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮರೀತಿಯ ಶಿಕ್ಷಣ ಪಡೆದ ಮಾತ್ರಕ್ಕೆ ಆತ ವಿಜಯಶಾಲಿಯಾಗಲಾರ ವಿಜಯಶಾಲಿಯಾಗಬೇಕಾದರೆ ರಣಾಂಗಣ (ಯುದ್ಧರಂಗ) ಕ್ಕೆ ಹೋಗಿ ಎದುರಾಳಿಯೊಡನೆ ಪ್ರಾಣವನ್ನು ಪಣಕ್ಕಿಟ್ಟು ಹಗಲಿರುಳೆನ್ನದೇ ಹೋರಾಡಿದಾಗ ಮಾತ್ರ ವಿಜಯಶಾಲಿಯಾಗಬಹುದು ಅದರಂತೆ ಅಭ್ಯಾಸಿಸಿದ ಯೋಗದಿಂದ ಚಿತ್ತಚಂಚಲತೆ ದೂರಾಗದು. ಅಭ್ಯಸಿಸಿದುದನ್ನು ಚೆನ್ನಾಗಿ ಅನುಭವಿಸಕೊಳ್ಳಬೇಕು. ಕೆಲವೊಂದು ಆಸನಗಳನ್ನು ಹಾಕುವ ದನ್ನು ಕಲಿತು, ಇಂತಿಂಥ ಆಸನದಿಂದ ಇಂತಿಂಥ ರೋಗಗಳು ಹೋಗುತ್ತವೆಯಂತೆ ಎಂದು ಯಾವಕಾಲದಲ್ಲೋ ಯಾರೋ ಹೇಳಿದ ಮಾತನ್ನೇ ಹೇಳುತ್ತಾ ಹೋಗುವದು ಈಗಿನ ಹಲವಾರುಜನ ಯೋಗಾಭ್ಯಾಸಿಗಳ ಕರ್ತವ್ಯವಾಗಿದೆ. ಉದಾ! ಮಯೂರಾಸನದಿಂದ ಗುಮ್ಮಿಸಂಬಂಧವಾದ ಮತ್ತು ಅಗ್ನಿ ಮಾಂದ್ಯ ಮುಂತಾದ ರೋಗಗಳು ನಿವಾರಣೆಯಾಗುತ್ತದೆಂಬ ಮಾತನ್ನು ಯಾವ ಕಾಲದಿಂದಲೋ ಕೇಳುತ್ತಾ ಬಂದಿದ್ದೇವೆ. ಆದರೆ ಪ್ರತಿನಿತ್ಯ ಯೋಗಾಸನಗಳನ್ನು ಹಾಕುವ ಎಷ್ಟೋಜನ ಯೋಗಾಭ್ಯಾಸಿಗಳು ಬೆಳಗಾದಾಕ್ಷಣ ಹೊಟ್ಟೆ ಹಿಡಿದಿದೆ ಎಂಬ ನರಳುವಿಕೆಯನ್ನು ಕೇಳುತ್ತಲಿದ್ದೇವೆ.
ಅಂದಮೇಲೆ ಇಷ್ಟಕ್ಕೆ ಹೀಗಾದರೆ ಇನ್ನು ಯೋಗಾಭ್ಯಾಸದಿಂದ ಚಿತ್ರ ಚಾಂಚಲ್ಯತೆ ಎಷ್ಟರಮಟ್ಟಿಗೆ ನಿಲ್ಲುವದೆಂಬ ವಿಷಯ ಜನಸಾಮಾನ್ಯರಿಗೂ ಗೊತ್ತಾಗುತ್ತದೆ. ಪಾತಂಜಲಿ ಋಷಿಯ ಸೂತ್ರ ಕೇವಲ ಬಾಯಾತಾಗಿ ನಿಂತಿದೆಯೇ ವಿನಃ ಅದರ ಅನುಭವ ನಮಗಿಂದು ಇಲ್ಲದಾಗಿದೆ. ಅಭ್ಯಸಿಸಿದುದನ್ನು ಅನುಭವಿಸಬೇಕಾದರೆ ಅವಿರತವಾಗಿ ಅನುಷ್ಠಾನ ಗೈಯಬೇಕು ಆಗ ಅದರ ಅನುಭವ ವುಂಟಾಗುತ್ತದೆ. ಪೂರ್ವಜರು ಹೇಳಿದ ಮಾತುಗಳನ್ನು ಇಂದು ನಾವು ಪುನಃ ವಿಮರ್ಶಿಸಬೇಕಾಗಿದೆ. ಆ ಬುದ್ಧಿ ಆಶಕ್ತಿ ನಮ್ಮಲ್ಲಿದೆ. ಅವುಗಳನ್ನು ಅಲ್ಲಗಳೆಯುವದರಲ್ಲಿಅರ್ಥವಿಲ್ಲ. ಅಲ್ಲಗಳೆದವರು ಅಧ: ಪತನ ವಾಗುವಲ್ಲಿ ಸಂದೇಹವಿಲ್ಲ. ಪೂರ್ವಾಚರಣೆಗಳನ್ನು ಪುನರ್ವಿಮರ್ಶೆ ಮಾಡಿ ಅವುಗಳಿಗೊಂದು ಹೊಸತನವನ್ನು ಕೊಟ್ಟು ಸರಿಯಾದ ರೀತಿ ನೀತಿಯಿಂದ ಕಾಲಕ್ಕೆ ಹೊಂದಾಣಿಕೆ ಮಾಡಿಕೊಂಡಾಗ ಅವುಗಳ ಪರಿಣಾಮ ಆಗ ಆರ್ಯ ಸಂಸ್ಕೃತಿ ಉಳಿಯುತ್ತದೆ, ಬೆಳೆಯುತ್ತದೆ. ಅಲ್ಲದೆ ಆಧುನಿಕ ಕಾಲದಲ್ಲಿ ಯೋಗಾಭ್ಯಾಸಕ್ಕೊಂದು ಹೊಸಕಳೆ ಬರುತ್ತದೆ. ಬೆಲೆ ಬಾಳುತ್ತದೆ. ಯೋಗಾಭ್ಯಾಸ ಸರ್ವಾದರಣೀಯವಾಗುತ್ತವೆ. ಇದು ನಿಸ್ಸಂದೇಹ
“ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗೆ ಮನವೇ ಬೀಜ” ಇದು ವೈರಾಗ್ಯ ಶಿಖರದ ತುತ್ತುದಿಯ ಮೇಲೇರಿದ ಮಹಾದೇವಿಯಕ್ಕನ ಮಹಾವಾಣಿ. ಇದು ಸಮಂಜಸವಾದುದು, ಸತ್ಯವಾದುದು. ಜನಸಾಮಾನ್ಯರಿಗೂ ತಿಳಿಯುತ್ತದೆ. ಕಾಯದಲ್ಲಿರುವ ಕರಣಂಗಳ ಚೇಷ್ಟೆಗೆ ಮನವೇ ಮೂಲಕಾರಣ. ಆ ಮನದ ಚೇಷ್ಟೆಗೆ ಪ್ರಾಯೋದಾನವೇ ಕಾರಣ. ಈ ಉದಾನವಾಯು ಮಾನವನ ಶರೀರದಲ್ಲಿ ಉಂಟಾಗುವ ಬಗೆ ಹೇಗೆಂದರೆ ಪ್ರತಿಯೊಬ್ಬ ಮಾನವನ ಶರೀರದಲ್ಲಿ ೭೨ ಕೋಟಿ ೭೨ ಲಕ್ಷ ೧೦ ಸಾವಿರ ೨೦೧ ನಾಡಿಗಳುಂಟು. ಈ ಎಲ್ಲ ನಾಡಿಗಳಲ್ಲಿ ಶ್ರೇಷ್ಠವಾದುದು ಸುಷುಮ್ಮೆ ನಾಡಿ ಈ ನಾಡಿಯಲ್ಲಿ ಹರಿದಾಡುವದು ಉದಾನವಾಯು. ಊರ್ಧ್ವನವಾಗಿ ಹರಿದಾಡುವದರಿಂದ ಉದಾನವಾಯು ಎಂದು ಹೆಸರು.
ತೇಜೋ ರೂಪವೇ ಉದಾನವಾಯು ಆ ತೇಜೋರೂಪ ಉದಾನವು ತಣ್ಣಗಾದಲ್ಲಿಮರಣ ವೊದಗಿ ಮರಣ ಹುಟ್ಟು ಒದಗುವದು. ಇದು ಕಾರಣ ಮೈ ಬಿಸಿಯೇ ಉದಾನ ಪ್ರಾಣ ಕಾಣಾ” ಎಂಬುದಾಗಿ ಶ್ರೀ ಜ. ಚ. ನಿ. ಯವರ ಅಭಯವಾಣಿ ಸಾರುತ್ತದೆ. ಇದಲ್ಲದೆ “ಪ್ರಾಣಾ ಪಾನಾದಿಗಳಿಂದ ವೃತ್ತಿ, ಸಮಾನ ವ್ಯಾನಗಳಿಂದ ಶಾಂತಿ, ಉದಾನೋಪಾಸನೆ ಯಿಂದ ಉತ್ಕಾಂತಿ, ಉದಾನ ಸಾಕ್ಷಾತ್ಕಾರದಿಂದ ಅವಿಚ್ಛತ್ತಿ ಅಮೃತೋತ್ಪತ್ತಿ.”
ಎಂಥ ಸುಂದರವಾಣಿ ಅಭಯವಾಗಿದೆ ಉದಾನವಾಯುವಿನ ಕೇವಲ ಉಪಾಸನೆ ಮಾತ್ರದಿಂದ ಉತ್ಕಾಂತಿಯಂತೆ ಅದರ ಸಾಕ್ಷಾತ್ಕಾರದಿಂದ ಅವಿಚ್ಚೆತ್ತಿ ಅಷ್ಟೆ ಅಲ್ಲ ಅಮೃತದ ಉತ್ಪತ್ತಿಯಂತೆ ಈ ಅಮೃತದ ಉತ್ಪತ್ತಿಗೆ ಕಾರಣವಾದ ಉದಾನ ವಾಯವನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ, ಸುಷುಮ್ಮೆಯಿಂದ ಕಾರ್ಯ ನಡೆಯಬೇಕು. ಈ ಸುಷುಮ್ಮೆ ಕಾರ್ಯ ನಡೆಯಬೇಕಾದರೆ, ಯೋಗಾಸನಗಳಲ್ಲಿ ಒಂದಾದ ಸರ್ವಾಂಗಾಸನ” ವನ್ನು ಸತತವಾಗಿ ನಿಯಮಿತ ತನದಿಂದ ಶ್ರಮವರಿತು (ಪ್ರತಿನಿತ್ಯ) ಸಾಧಿಸುವದರಿಂದ ಸುಷುಮ್ಮೆ (ಉದಾನವಾಯು) ಕಾರ್ಯ ಪ್ರಾರಂಭವಾಗುತ್ತದೆ ಕ್ರಮೇಣ ಸಾಕ್ಷಾತ್ಕರಿಸಿಕೊಂಡಾಗ ನಿಜವಾಗಿ ಅಮೃತೋತ್ಪತ್ತಿಯಾಗುವಲ್ಲಿ ಸಂದೇಹವಿಲ್ಲ.
ಕನಸಿನಲ್ಲಿ ಕಾಯಕರಣಗಳು ನಿದ್ರಿಸುತ್ತಿದ್ದರೂ, ಮನ ಪ್ರಾಣಗಳು ಎದ್ದಿರುತ್ತವೆ.ಅಂದಿನ ಇಂದಿನ ಹಿಂದಿನ ಜನ್ಮ ಜನ್ಮಾಂತರದ ಸಂಸಾರಗಳು ವಾಸನೆಗಳು ಮನದಮೇಲೆ ಮೂಡುತ್ತವೆ. ಆದರೆ ಸುಷುಮ್ಮೆ ಕಾರ್ಯ ನಡೆದಾಗ ಮನಸ್ಸಿನ ಓಡಾಟಕ್ಕೆ ಎಡೆಯಿಲ್ಲ.ಶ್ರೀ ಜ. ಚ. ನಿ. ಯವರ ಅಭಯವಾಣಿ ಸಾರುವಂತೆ,
“ಸುಷುಪ್ತಿಯಲ್ಲಿ ಮನಸ್ಸು ಮಲಗುತ್ತದೆ. ಪಿತ್ತದ ಪ್ರಭೆಯು ಆತ್ಮನ ಎಲ್ಲಾ ನಾಡಿ ಗಳನ್ನು ಮುಚ್ಚುತ್ತದೆ. ಆಗ ಮನದ ಕಿರಣಗಳು ಕರಣಗಳೊಡನೆ ಹೃದಯದಲ್ಲಿ ಹುದುಗುತ್ತವೆ. ಆಗ ವಿಜ್ಞಾನಾತ್ಮನು ಮಾತ್ರ ತುಂಬಾ ಎಚ್ಚೆತ್ತಿರುತ್ತಾನೆ. ತನು ಮನ ಗಳಿರುವದಿಲ್ಲ. ಕರಣಂಗಳಿರುವದಿಲ್ಲ. ವಾಸನಾದಿಗಳಿರುವದಿಲ್ಲ. ದರ್ಶನಾದಿ ಕಾರ್ಯಗಳಿರುವದಿಲ್ಲ.ಎಲ್ಲೆಲ್ಲಿಯೂ ಸುಪ್ತಸುಖ, ಪ್ರಸನ್ನ ಭಾವಗಳು ಮಾತ್ರ ಇರುತ್ತವೆ. ಹಗಲು ಮುಳಗಲು ಹಕ್ಕಿಗಳು ಹೇಗೆ ಗೂಡು ಸೇರುತ್ತವೆಯೋ ಹಾಗೆ ತನು, ಮನ, ಕರಣ, ಹರಣಾದಿಗಳೆಲ್ಲವೂ ಆ ಆತ್ಮನಲ್ಲಿ ಸೇರಿಕೊಳ್ಳುತ್ತವೆ. ಸುಪ್ತವಾಗುತ್ತವೆ.”
ಅಂದಮೇಲೆ ಯೋಗಾಸನಗಳಲ್ಲಿಯ ಒಂದು ಆಸನವನ್ನು ಸಾಧಿಸುವದರಿಂದ ತನು, ಮನ,ಕರಣಾದಿ ಕ್ರೀಯೆಗಳೆಲ್ಲವೂ ಹೇಳ ಹೆಸರಿಲ್ಲದಂತಾಗಿ, ಅಮೃತೋತ್ಪತ್ತಿ ಯಾಗುತ್ತದೆಂದಮೇಲೆ ಪರಿಪೂರ್ಣವಾದ ಯೋಗಾಭ್ಯಾಸ ಸಾಧನೆಯಿಂದ ಮನಸ್ಸಿನ ಚಂಚಲತೆಯನ್ನು ನಿಲ್ಲಿಸುವದಷ್ಟೇ ಅಲ್ಲ; ಸಾಕ್ಷಾತ್ ಪರಮಾತ್ಮನ ಸ್ವರೂಪರಾಗಲೂ ಕೂಡ ಸಾಧ್ಯವಾಗುತ್ತದೆಂದು ನಿಸ್ಸಂದೇಹವಾಗಿ ಹೇಳಬಹುದು.
ಆದ್ದರಿಂದ ಈಗ ಯೋಗಾಭ್ಯಾಸವೆಂದರೆ ನಿರುದ್ಯೋಗಿಗಳಾದವರು ಮಾಡುವಂಥ ಕೆಲಸ ಉದರ ಪೋಷಣೆಗಾಗಿ ಹಾಕುವಂಥ ವೇಷ ಎಂಬ ದುರ್ಭಾವನೆ ಸಾಮಾನ್ಯ ಜನರಲ್ಲಿಯೂ,ಬೇರೂರಿದೆ. ಕಾರಣ ಯೋಗಾಭ್ಯಾಸಿಗಳು. ಇದನರಿತು ಸತತ ಪ್ರಯತ್ನದಿಂದ ಸಾಧಿಸಿ ತೋರಿಸಿದ್ದಾದರೆ ಈ ಯೋಗಾಭ್ಯಾಸಕ್ಕಂಟಿರುವ ಕಲಂಕಹೋಗಿ, ಜನತೆಯಲ್ಲಿ ಉಂಟಾಗಿರುವ ದುರ್ಭಾವನೆ ದೂರಾಗಿ ಹೊಸಕಳೆ ಬರುತ್ತದೆ. ಅಲ್ಲಗಳೆಯುವವರ ಮೇಲೂ ಕೂಡ ಹೊಸ ಬೆಳಕನ್ನುಬೀರುವದರಲ್ಲಿ ಸಂದೇಹವಿಲ್ಲ.