ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೮

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ  ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್‌ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ  ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )

ಡಿಸೆಂಬರ  ೨೦೨೧ ರ ಸಂಚಿಕೆ

ಶೈವಮಾರ್ಗದ ಭವದ ನೋವ ತಾರಿಸಿ ವೀರ-

ಶೈವಾಮೃತ ಮೊಲೆಯನುಣಿಸಿ ಪೊರೆದೆನ್ನ ಹೆ-

ತವ್ವ ಶ್ರೀಗುರುವೆ ಕೃಪೆಯಾಗು   || ೩೨ ||

ಕವಿಯು ಹೆತ್ತವ್ವೆಯ ನೋವನ್ನು ನೆನಿಸುತ್ತಾನೆ ತಾಯಿಯು ಮಗುವನ್ನು ಹೆರಬೇಕಾದರೆ ಅನಂತ ಕಷ್ಟ-ನಷ್ಟಗಳನ್ನು ಅನುಭವಿಸಿ ಮೊಲೆಯುಣಿ’ಸಿ ಸಲಹುತ್ತಾಳೆ.ಮಗನ ನೋವನ್ನು ಸ್ಮರಿಸುವದಿಲ್ಲ. ನೋವು ನನಗಿರಲಿ, ಮಗನು ಸುಖವಾಗಿರಲೆಂದೇ ಬಯಸುತ್ತಾಳೆ. ಪೂಜ್ಯಗುರುವರರು ‘ಮಕ್ಕಳಿಗೆ ಕಷ್ಟ-ನಷ್ಟಗಳೆಷ್ಟೇ ಬಂದರೂ, ಎಡರು-ತೊಡರಗಳು ಬಂದರೂ ಅವೆಲ್ಲವುಗಳನ್ನು ನನಗೇ ತಾಯೆನ್ನುವವಳೇ ತಾಯಿ” ಎಂದು ತಾಯಿ ಶಬ್ದದ ಅರ್ಥವನ್ನು ಅಪ್ಪಣೆ ಮಾಡುತ್ತಿದ್ದರು.ಗುರುತಾಯಿಯೂ ಅಷ್ಟೇ ಭಕ್ತನ ಭವದ ನೋವನ್ನು ಸ್ಮರಿಸುವದಿಲ್ಲ. ಶೈವ ಮಾರ್ಗವು ಭವದ ಬೀಜವೆನಿಸಿದೆ. ಸ್ಥಾವರಲಿಂಗವನ್ನು ಆರಾಧಿಸುವವನು ಶೈವನೆನಿಸುವನು. ಶಿವನೂ ಸಹ ಲಿಂಗವಿಲ್ಲದೆ ಭವಿಯಾಗಿರುವದರಿಂದ ಭಕ್ತನನ್ನು ನಿಜ ಮುಕ್ತನನ್ನಾಗಿ ಮಾಡಲಾರನೆಂಬುದು ಶರಣರ ವಾದ, ಶಿವನು ಶೈವಭಕ್ತರಿಗೆ ಚತುರ್ವಿಧ ಮುಕ್ತಿಗಳನ್ನು ಕರುಣಿಸಿ ಅವರ ಪುಣ್ಯ ತೀರಿದ ಮೇಲೆ ಪುನಃ ಭವಕ್ಕೆ ನೂಕುವನು. ಭವದಲ್ಲಿ ಬರುವದರಿಂದ ಮಾಯಾ ಮೋಹದ ಬಂಧನವು ಜೀವಾತ್ಮನನ್ನು ದುಃಖಿ

ಯನ್ನಾಗಿ ಮಾಡುವದು. ಶೈವನಾದವನು ಶಿವನು ಬೇರೆ; ತಾನು ಬೇರೆಂದು ಭಾವಿಸುವನು ಅವನಲ್ಲಿ ಪೂಜ್ಯ ಪೂಜಕ ದ್ವಂದ್ವಭಾವ ಅಳಿಯುವದಿಲ್ಲ. ಕೈಲಾಸ ಬೇರೆ ಶಿವನು ಬೇರೆಯೆಂಬ ದ್ವಂದ್ವವನ್ನು ಕಳೆದುಕೊಳ್ಳಲಾರನು. ಈ ದ್ವಂದ್ವವಳಿಯದೇ ಭವದನೋವು ಇದೇ ವಿಷಯವನ್ನು ಬಸವಲಿಂಗಶರಣರು ತಮ್ಮ ಧರ್ಮಾಚಾರ ಪ್ರಕರಣದಲ್ಲಿ ಅಳಿಯದು.

ಶ್ರೀ ಮಹಾ ಸದ್ ಭಕ್ತನಂಗವೇ ಕೈಲಾಸ, ಲಿಂಗವ ಸಾಕ್ಷಾತ್ ಶಿವಂ |

ಈ ಮರ್ಮವನರಿಯದದಶ್ಚಿದ ಶಾಸ್ತ್ರವನೋದಿ

ಭೂಮಿಯೊಳಗಿರ್ದು ಕೈಲಾಸಬೇಡುಂಟೆಂಬ

ಕಾಮಿತಾರ್ಥಿಗಳೆಲ್ಲರಗಗನಭವಾಂತರದೊಳರಸಿ ಕಾಣದೆ ಪೋದರು

ಮತ್ತು

‘ಭವಿಗಳವರು ಶಿವನೋಲಗದೊಳೆಡೆಯು

ಭುವನದೊಳು ಭವಿಗೆ ಭವಮುಂಟಿಲ್ಲದಂದು-ಸದ್ಭಕ್ತರಿಗೆ ಭವಗಳುಂಟೆ ? || ೨೬ ||

ಎಂದು ಭವಿಗಳಿಗೆ ಭವದನೋವಲ್ಲದೆ ವೀರಶೈವನಿಗೆ (ಶರಣನಿಗೆ) ಭವವಿಲ್ಲೆಂದು ಖಂಡಿತವಾಗಿ ತಿಳಿಸಿದ್ದಾರೆ. ಸ್ವಾನುಭಾವದಿಂದ ಮುಪ್ಪುರಿಗೊಂಡ ವೀರಶೈವತತ್ವಾಚರಣೆಯು ಶ್ರೇಷ್ಠವಾಗಿದೆ. ಗುರುನಾಥನು ಶೈವಮಾರ್ಗವು ಭವದ ಬುನಾದಿ ಯೆಂದು ಅದನ್ನು ಹೋಗಲಾಡಿಸಿ ಕರುಣೆಯಿಂದ ವೀರಶೈವ ತತ್ವದ ಮಹತ್ವವನ್ನು ತಿಳಿಸುತ್ತಾನೆ. ವೀರಶೈವತತ್ತ್ವವು ಅಮೃತ ಸಮಾನವಾಗಿದೆ. ಶರಣತತ್ತ್ವವನ್ನುಅನುಸರಿಸಿದವನು ಅಮರನಾಗುತ್ತಾನೆಂದು ಗುರುಬೋಧಿಸಿ ಹೆತ್ತವ್ವೆಯಂತೆ ಶಿಷ್ಯನನ್ನು ಸಾಕಿಸಲಹುತ್ತಾನೆ. ತಾನೆಷ್ಟೇ ಕಷ್ಟಗಳನ್ನು ಪಟ್ಟರೂ ಶಿಷ್ಯನಿಗೆ ಸುಖವನ್ನೇ ಬಯಸುತ್ತಾನೆ. ಹೆತ್ತವ್ವೆಯ ಹೃದಯ ಹರವಾದುದು,

ಓ ಹೆತ್ತವೆಯೇ ! ಪಾದೋದಕ ಪ್ರಸಾದವೆಂಬ ಅಮೃತವನ್ನು ನಿತ್ಯದಲ್ಲಿತ್ತು

ಕಾಪಾಡು, ಪಾದೋದಕ ಪ್ರಸಾದಗಳು ಸವೆಯದಮೃತವಲ್ಲವೇ ?

ಉಪ್ಪುನೆಲ್ಲಿಯು ಕೂಡಿ | ಒಪ್ಪಿ ರುಚಿಗೊಡುವಂತೆ

ತಪ್ಪದೆಂದೆಂದು ಅಗಲಿಕೆಯಿಲ್ಲದೆ

ನ್ನಪ್ಪ ಶ್ರೀಗುರುವೆ ಕೃಪೆಯಾಗು  || ೩೩||

ಶಿವಮಾರ್ಗದ ಜಾಡ್ಯವನ್ನು ಬಿಡಿಸಿ ವೀರಶೈವಾಮೃತವನ್ನು ಉಣಿಸಿ ಪೋಷಿಸಿದ ಶ್ರೀಗುರು ಹೆಮ್ಮೆಯಾದಂತೆ ಹೆತ್ತಪ್ಪನೂ ಆಗಿದ್ದಾನೆ. ಅಪ್ಪ ಮತ್ತು ಮಗನ ಸಂಬಂಧದ ಸ್ವಾರಸ್ಯವನ್ನು ಉತ್ತಮ ಉದಾಹರಣೆಯಿಂದ ಸಮರ್ಥಿಸುತ್ತಾನೆ. ಗುರುಶಿಷ್ಯರ ಸಂಬಂಧದ ಬಗ್ಗೆ ಅಲ್ಲಮ ಪ್ರಭುಗಳ ವಚನವೂ ಮನನೀಯವಾಗಿದೆ.

ಎತ್ತಣ ಮಾಮರ, ಎತ್ತಣ ಕೋಗಿಲೆ

ಎತ್ತಣಿಂದೆತ್ತ ಸಂಬಂಧವಯ್ಯಾ ?

ಬೆಟ್ಟದ ನೆಲ್ಲಿ, ಸಮುದ್ರದ ಉಪ್ಪು.

ಎತ್ತಣಿಂದೆತ್ತ ಸಂಬಂಧವಯ್ಯಾ ?

ಗುಹೇಶ್ವರಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತ ಸಂಬಂಧವಯ್ಯಾ ?

ಮಾವಿನಮರಕ್ಕೂ ಕೋಗಿಲೆಗೂ ಏನು ಸಂಬಂಧ ? ಮರ ಉಬ್ದಿಜ, ಕೋಗಿಲೆ ಅಂಡಜ ಒಂದಕ್ಕೊಂದು ಸಂಬಂಧವಿಲ್ಲ. ಆದರೂ ವಸಂತಕಾಲದಲ್ಲಿ ಮಾಮರ ಚಿಗುರಲು ಚಿಗುರೆಲೆಗಳನ್ನು ತಿಂದ ಕೋಗಿಲೆ ಇಂಪಾಗಿ ಕೂಜನಮಾಡುತ್ತದೆ. ಗುಡ್ಡ ಗಾಡಿನಲ್ಲಿ ಬೆಳೆದ ನೆಲ್ಲಿಕಾಯಿ, ಸಮುದ್ರದ ದಂಡೆಯಲ್ಲಿ ತಯಾರಾಗುವ ಉಪ್ಪಿಗೆ ಯಾವ ಸಂಬಂಧವಿಲ್ಲ. ಆದರೂ ಅವೆರಡರ ಸಂಗಮ ಆರೋಗ್ಯಕ್ಕೆ ಹಿತಕರ ರುಚಿಕವಾಗುತ್ತೆ. ಹಾಗೆ ಅಂಗಲಿಂಗಗಳ ಸಂಬಂಧವೂ ವಿಚಿತ್ರವಾಗಿದೆ. ಈ ಬಗ್ಗೆ ಲಿಂಗಲೀಲಾ ವಿಲಾಸಕಾರರ ಟೀಕೆ ಉಲ್ಲೇಖನೀಯವಾಗಿದೆ. “ಅಂಗಕ್ಕೆಯೂ ಲಿಂಗಕ್ಕೆಯೂ ಸಂಬಂಧವೇನೂ ಇಲ್ಲ, ಅದೇನು ಕಾರಣವೆಂದರೆ-ಅಂಗವೆ ಜಡ, ಲಿಂಗವೇ ಜಡಾಜಡ ರಹಿತನಾಗಿ; ಮನಕ್ಕೆಯೂ ಅರುವಿಂಗೆಯೂ ಸಂಬಂಧವಿಲ್ಲ. ಅದೇನುಕಾರಣವೆಂದರೆ- ಮನವ ಮರವ; ಅರಿವೆ ಬೆಳಗಾಗಿ ಇಂತಪ್ಪ ತನು-ಮನವಿಡಿದಾತಂಗೆ ಮಹಾಲಿಂಗ ಸಂಗ ಒಮ್ಮೆಯೂ ಇಲ್ಲದೆ ಇರುತ್ತಿರಲಾ ಗುರುಕರುಣದಿಂದ ತನುಧರ್ಮ ಮನಧರ್ಮವಳಿದು ಮಹಾಲಿಂಗವು ಕರಸ್ಥಲಕ್ಕೆ ಇಷ್ಟಲಿಂಗವಾಗಿ ಬಂದಿತು.” (ಪುಟ ೧೦೭) ಸಾಹಸಿ ವ್ಯಕ್ತಿಯುಬೆಟ್ಟದ ನೆಲ್ಲಿಕಾಯಿಯನ್ನು ಉಪ್ಪನ್ನು ಕೂಡಿಸುವಂತೆ ಕರುಣಾಮಯನಾದ ಸದ್ಗುರುವು ಶಿವದೀಕ್ಷೆಮಾಡಿ ಜಡಶರೀರವನ್ನು ಶುದ್ಧಗೊಳಿಸಿ ಅಂಗವನ್ನಾಗಿಸಿ ಅರುಹಿನ ಕುರುಹನ್ನೇ ಲಿಂಗವನ್ನಾಗಿ ನನ್ನ ಕರಸ್ಥಲಕ್ಕೆ ಕರುಣಿಸುತ್ತಾನೆ. ಅಂಗದಲ್ಲಿಯ ಮಹಾಲಿಂಗದ ಚೈತನ್ಯವನ್ನು ಲಿಂಗವನ್ನಾಗಿ ಪರಿವರ್ತಿಸಿ ಈ ಅಂಗದಿಂದ ಎಂದೂ ಅಗಲಲಾರದಂತೆ ಇರಿಸುವನು ತಿಳಿಯದ ಅಜ್ಞಾನದಿಂದ ದೂರವಾದ ಅಂಗಲಿಂಗಗಳನ್ನು ಒಂದುಗೂಡಿಸಿ ಒಪ್ಪುವಂತೆ ಮಾಡುವನು. ತಂದೆಯು ಲೌಕಿಕ ಸತಿಪತಿಗಳನ್ನು ಒಂದುಗೂಡಿಸಿ ಸುಖಿಯಾಗಿರಿಸುವಂತೆ ; ಗುರುತಂದೆಯು ಶರಣ ಸತಿಯೊಡನೆ ಲಿಂಗಪತಿಯನ್ನು

ಸಮರಸಗೊಳಿಸುವನು. ಈ ಸತಿಪತಿ ಸಮರಸದ ಬಾಳುವೆಗೆ ಪ್ರತಿಯುಂಟೆ?” ಎಂದು ಬಾಲಲೀಲಾ ಮಹಾಂತರು ಹಾಡಿದ್ದು ಯಥೋಚಿತವಾಗಿದೆ. ಗುರುಪಿತನು ನನ್ನನ್ನು ಲಿಂಗಪತಿಯೊಡನೆ ಕೂಡಿಸಿ ಮಹದುಪಕಾರ ಮಾಡಿದ್ದಾನೆ. ಇಂಥ ಕರುಣಾಮಯನಾದ ಅಪ್ಪನು ಇನ್ನಾರುಂಟು ?

*

ಜ್ಜೀವ ನಿಮ್ಮ ಪಾ | ದಾಬ್ಜವನು ಭಜಿಸಿ ಹ –

ಸ್ತಾಜ್ಜದೂಳ್ಜನಿಸಿ-ಸಜ್ಜೀವವಾದುದೆ –

ಜ್ಜಯ್ಯ ಗುರುವೆ ಕೃಪೆಯಾಗು  || ೩೪||

ಲೌಕಿಕ ತಂದೆಯ ತಂದೆಯು ಅಜ್ಜನಾಗುವಂತೆ ಗುರುನಾಥನೂ ಅಜ್ಜನಾಗುತಾನೆ. ಯಾಕೆಂದರೆ ಈ ಜೀವಾತ್ಮನು ಗುರುವಿನ ಪಾದಕಮಲದ ಸೇವೆ ಮಾಡಿ ಸಜೀವವಾಯಿತು. ಅಂದರೆ ಶಿವದೀಕ್ಷಾಸಂಸ್ಕಾರದಿಂದ ಎಲ್ಲ ಕ್ರಿಯೆಗಳು ಸತ್ ಕ್ರಿಯೆಗಳಾಗುವವು. ಜೀವನ ಜಡತ್ವವು ದೂರವಾಗುವದು. ಸಕಲಾಚಾರಗಳು ಸದಾಚಾರಗಳಾಗುವವು. ಗುರುನಾಥನ ಕೃಪೆಯಿಂದ ಅವನ ಹಸ್ತಕಮಲದಲ್ಲಿ ಶಿಷ್ಯನ ಲಿಂಗತಂದೆಯ ಜನನವಾಗುತ್ತದೆ. ಆ ಲಿಂಗತಂದೆಯನ್ನು ಹಡೆದ ತಂದೆ ಗುರುವರನಲ್ಲವೇ, ಹಾಗಾದರೆ ಗುರುವು ಅಜ್ಜನಲ್ಲದೆ ಮತ್ತೇನು ?

ಶಿವಕವಿಯು ಗುರುವಿನಲ್ಲಿ ವಿಭಿನ್ನ ಸ್ವರೂಪವನ್ನು ಕಂಡು ತಣಿದಿದ್ದಾನೆ. ಮನದುಂಬಿ ಹಾಡಿದ್ದಾನೆ. ಗುರುನಾಥನೆ ! ಲೌಕಿಕ ಅಜ್ಜನು ಮೊಮ್ಮಗನಿಗೆ ಸುಜ್ಞಾನವನ್ನು ಕಲಿಸುವಂತೆ, ನೀನು ಅಧ್ಯಾತ್ಮದ ಅಜ್ಜನು, ನಿನ್ನ ಕರುಣೆ ಅಗಾಧವಾದುದು. ನನ್ನ ಹೃದಯ ಕಮಲವನ್ನರಳಿಸಿ ಸುಜ್ಞಾನವನ್ನಿತ್ತು ಆತ್ಮೀಯ ಅಜ್ಜನಾಗಿರುವೆ. ನಿನಗಿಂತಲೂ ಆತ್ಮೀಯರುಂಟೆ ?

ಮತ್ತೆ ನಾ ನಿಮ್ಮ | ಸತ್ಪುತ್ರನಾತ್ಮಜನಣುಗ

ಪೆತ್ತವನ ಮಗನ ಭೃತ್ಯನೈ ನೀನೆನ್ನ

ಮುತ್ತಯ್ಯ ಗುರುವೆ ಕೃಪೆಯಾಗು || ೩೫ ||

ಲೌಕಿಕದಲ್ಲಿ ಅಜ್ಜಯ್ಯನಿಗೇನೇ ಮುತ್ತಯ್ಯನೆನ್ನುವದು ಪ್ರೀತಿಯ ಸಂಕೇತವಾಗಿದೆ. ಮೇಲೆ ವಿವರಿಸಿದುದನ್ನೇ ಒತ್ತಿ ಹೇಳುತ್ತಾನೆ.

ಗುರುವೆ ! ನಾನು ನಿಮ್ಮ ಮೊಮ್ಮಗನು. ನನ್ನ ಪೆತ್ತವನು (ಲಿಂಗವು) ನಿನ್ನ ಕರಕಮಲದಲ್ಲಿ ಹುಟ್ಟಿ ನಿನಗೆ ಸತ್ಪುತ್ರನಾದನು. ಅವನ ಅಣುಗ (ಮಗ)ನಾದವನು ನಾನು, ಎನ್ನ ಅಂಗದಿಂದ ಅಗಲದ ಅಧ್ಯಾತ್ಮಿಕ ಪಿತನು ಲಿಂಗದೇವನು. ಅವನು ನಿನ್ನಿಂದ ಬಂದವನು. ಆ ಲಿಂಗ ಪತಿಯ, ಲಿಂಗಪಿತನ ಸೇವೆಮಾಡಲು ಅಣಿಯಾದ ಮೊಮ್ಮಗನು ನಾನು. ಆದ್ದರಿಂದ ನೀನು ನನ್ನ ಮುತ್ತಯ್ಯನಲ್ಲವೆ ? ಇಂಥ ಅನನ್ಯ ಸಂಬಂಧವನ್ನು ಹೊಂದಿದ ನಾನೇ ಧನ್ಯನು.

Related Posts