ಲೇಖಕರು : ಪೂಜ್ಯ ಮ.ನಿ.ಪ್ರ.ಶಿವಬಸವಸ್ವಾಮಿಗಳು ವಿರಕ್ತಮಠ, ಅಕ್ಕಿಆಲೂರು
ಭರತ ಭೂಮಿಯಲ್ಲಿ ವಿಶ್ವಶಾಂತಿ ಸಾರಿದ ತೇಜೋಮೂರ್ತಿಗಳ ಭವ್ಯಪರಂಪರೆಯಿದೆ ಮಾನವ ಕುಲದ ಉದ್ಧಾರಕ್ಕಾಗಿ ಬುದ್ಧ, ಅಹಿಂಸೆಯ ಖಡ್ಗವಿಡಿದು, ಸಮಾನತೆ,ಕಾಯಕ, ದಾಸೋಹಗಳ ತ್ರಿವೇಣಿ ಸಂಗಮವಾಗಿ ಬಸವ, ಶರಣರ ಚಳುವಳಿಯ ನಿಜವಾರಸುದಾರರಾಗಿ ಯಡೆಯೂರು ಸಿದ್ಧಲಿಂಗ ಯತಿಗಳು, ಒಂದೊಂದು ಕ್ರಾಂತಿಯ ಬೀಜದೊಂದಿಗೆ ಬಂದವರು, ಹೆಮ್ಮರವಾಗಿ ಬೆಳೆದರು ನಿಜ, ಆದರೆ ೧೯ನೇ ಶತಮಾನ ವೀರಶೈವ-ಲಿಂಗಾಯತರ ಪಾಲಿಗೆ ಕತ್ತಲೆ, ಶಿಕ್ಷಣ ವಂಚಿತ ಸಮಾಜವನ್ನು ಅಂಧಶ್ರದ್ಧೆ ತನ್ನ ಭದ್ರಬಾಹುಗಳಿಂದ ಮತ್ತೆ ಬಂಧಿಸಿತ್ತು, ಆಗ ಮಾನವೀಯತೆ, ಸಮಾನತೆ, ಕಾಯಕ,
ದಾಸೋಹ, ಅಹಿಂಸೆ, ಸಾಹಿತ್ಯ ರಚನೆ, ಸಂರಕ್ಷಣೆ ಮತ್ತು ಪ್ರಸಾರಕ್ಕಾಗಿ ವೈದ್ಯಭಾನುವಿನ ಉದಯವಾಯಿತು. ಹಾವೇರಿ ಜಿಲ್ಲೆಯ ಜೋಯಿಸರ ಹರಳಹಳ್ಳಿಯ ಸಾಲಿಮಠ ಕನ್ನಡ ಶಿಕ್ಷಣ ಪ್ರಸಾರಕ್ಕೆ ಹೆಸರಾದ ಕೇಂದ್ರಸ್ಥಾನ. ಸತಿ-ಪತಿ ಭಾವಕ್ಕೆ ಭಾಷ್ಯ ಬರೆದಂತಿದ್ದ ಬಸಯ್ಯ ಮತ್ತು ನೀಲಮ್ಮನವರ ಪವಿತ್ರ ಗರ್ಭದಲ್ಲಿ ಕ್ರಿ.ಶ. ೧೮೬೭ರ ಪ್ರಭವನಾಮ
ಸಂವತ್ಸರ ಭಾದ್ರಪದ ಶುಕ್ಲಪಕ್ಷ ತ್ರಯೋದಶಿಯ ಬುಧವಾರ ಬ್ರಾಹ್ಮಿಮುಹೂರ್ತದಲ್ಲಿ ಶ್ರೀಕುಮಾರ ಶಿವಯೋಗಿಗಳ ಜನನವಾಯಿತು. ಭಿಕ್ಷಾವೃತ್ತಿಗೆ ತಿಲಾಂಜಲಿ ಇತ್ತು ನಿಜಗುಣರ ಶಾಸ್ತ್ರವನ್ನು ಆಮೂಲಾಗ್ರವಾಗಿ ಅಧ್ಯಯನಗೈದರು. ಯಳಂದೂರಿನ ಬಸವಲಿಂಗ ಶಿವಯೋಗಿಗಳ ಜೊತೆಗೂಡಿ ಹನ್ನೊಂದು ಸಂವತ್ಸರ ಉಗ್ರ ತಪಸ್ಸನ್ನಾಚರಿಸಿ ಆಚಾರ ವಿಚಾರ ಸಂಪನ್ನರಾದರು. ಧಾರ್ಮಿಕ ಮಠಗಳನ್ನು ಸಮಾಜಮುಖಿಯಾಗಿ ಪರಿವರ್ತಿಸಿದರು. ಹಾನಗಲ್ಲ ವಿರಕ್ತಮಠದ ಪೀಠಾಧೀಶರಾಗಿ ಸಮಾಜ ಸೇವೆಗೆ ತೊಡಗಿದರು. ವೈರಾಗ್ಯ ಮಲ್ಲಣಾರ್ಯರ ಪ್ರಾಂಜಲ ಮನಸ್ಸಿನ ಸಾಮಾಜಿಕ ಕಳಕಳಿಗೆ ಕಿವಿಗೊಟ್ಟರು. ಜನಸೇವಾ ದೀಕ್ಷೆತೊಟ್ಟರು. ಕತ್ತಲುಂಡ ಸಮಾಜಕ್ಕೆ ಬೆಳಕಾಯಿತು. ಅಜ್ಞಾನ ಅಳಿದು ಆಚಾರ ಮೊಳಕೆಯೊಡೆಯಿತು. ಲಲಾಟದ ಮೇಲೆ ವಿಭೂತಿ ರಾರಾಜಿಸಿತು. ಅಂಗಕ್ಕೆ ಲಿಂಗಸ್ಪರ್ಶವಾಯಿತು. ಜಿಡ್ಡುಗಟ್ಟಿದ ಸಮಾಜ ಜಂಗಮರೂಪ ವಾಯಿತು. ಮಠಗಳು ಮಾನವೀಯತೆಯ ವಿಶ್ವವಿದ್ಯಾಲಯಗಳಾದವು, ಭಕ್ತರ ಮನೆಗಳೆಲ್ಲ ಕಲ್ಯಾಣದ ಮಹಾಮನೆಗಳಾದವು.
ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳು ಕೈಗೊಂಡ ಕಾರ್ಯಗಳು ಒಂದೆರಡಲ್ಲ ಅನೇಕ. ಅಂತೆಯೇ ನಾಡಿನ ಗಣ್ಯ ಮಾನ್ಯರಾದ ವರಕವಿ ದ.ರಾ.ಬೇಂದ್ರೆ, ಹರ್ಡೆಕರ ಮಂಜಪ್ಪ, ಎಸ್.ಸಿ.ನಂದೀಮಠ, ಎಸ್.ಎಸ್.ಬಸವನಾಳ, ಡಾ. ಜಚನಿ ಹಾಗು ದ್ಯಾಂಪೂರ ಚನ್ನಕವಿಗಳು ‘ಯುಗಪುರುಷ’ ಹಾಗು ‘ಕಾರಣಿಕ ಶಿವಯೋಗಿ ಎಂದು ಉದ್ಗಾರವೆತ್ತಿದ್ದರು. ವಚನ ಸಾಹಿತ್ಯದ ಗಂಧ ಗಾಳಿಯು ಗೊತ್ತಿರದ ಸಮಾಜಕ್ಕೆ ವಕೀಲ ವೃತ್ತಿಯನ್ನು ಧಿಕ್ಕರಿಸಿ, ವಚನ ಸಾಹಿತ್ಯ ಸಂಶೋಧನೆಯಲ್ಲಿ ಮುಳುಗಿ ವಚನ ಸಾಹಿತ್ಯ ಸಾಗರ ಹರಿಸಿದ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಅವರು ‘ಶಿವಶರಣರ ವಚನಗಳನ್ನು ಮೊದಲು ಪ್ರಸಾರ ಮಾಡಿದವರು ಹಾನಗಲ್ಲಶ್ರೀ ಕುಮಾರ ಸ್ವಾಮಿಗಳೇ ಆಗಿದ್ದಾರೆ. ಅವರು ಹೋದಲ್ಲೆಲ್ಲಶಿವಶರಣರ ವಿಚಾರಗಳನ್ನು ತಮ್ಮ ವಾಣಿಯಿಂದ ಜನರ ಮುಂದೆ ಪ್ರಸ್ತಾಪಿಸಿ ಅವುಗಳನ್ನು ಮುಂದಕ್ಕೆ ತಂದರು. ಅಲ್ಲದೇ ಭಕ್ತರ ಮನೆಯ ಪೂಜಾಗದ್ದುಗೆಯಲ್ಲಿ ಪೂಜೆಗೊಳ್ಳುತ್ತಿದ್ದ ವಚನಗಳ ಕಟ್ಟುಗಳನ್ನು ಸಂಗ್ರಹಿಸಿ ನನ್ನ ಸಂಶೋಧನೆಗೆ ನೆರವಾದರು’ ಮತ್ತು ‘ವಚನ ಶಾಸ್ತ್ರಸಾರ’ ಮೊದಲ ಗ್ರಂಥಕ್ಕೆ ಹಣದ ದಾಸೋಹ ನೀಡಿದರೆಂದು ಸ್ಮರಿಸಿದ್ದಾರೆ.
ವೀರಶೈವ ಮಹಾಸಭೆಯ ಜನ್ಮದಾತ
ವೀರಶೈವ-ಲಿಂಗಾಯತ ಸಮಾಜಕ್ಕೆ ಶಿಕ್ಷಣದ ಗಂಧ-ಗಾಳಿ ತಿಳಿದಿರಲಿಲ್ಲ, ವಿದ್ಯಾವಂತರಿಲ್ಲದ ವಿಷಮ ಪರಿಸ್ಥಿತಿ. ಮೊದಲಿನಿಂದಲೂ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಶೋಷಣೆಗೆ ಒಳಗಾದುದು ವೀರಶೈವ-ಲಿಂಗಾಯತ ಸಮಾಜ, ಅಂತೆಯೇ ಶ್ರೀ ಕುಮಾರ ಶಿವಯೋಗಿಗಳು ಸಮಾಜಸಂಘಟನೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕುವ ದಿಟ್ಟ ದೀಕ್ಷೆ ತೊಟ್ಟರು. ೧೯೦೪ನೇ ಇಸ್ವಿ ಧಾರವಾಡದಲ್ಲಿ ಅಖಂಡ ವೀರಶೈವ-ಲಿಂಗಾಯತ ಸಮಾಜವನ್ನು ಒಂದುಗೂಡಿಸಿದರು. ವೀರಶೈವ ಮಹಾಸಭೆಯ ಪ್ರಥಮ ಅಧಿವೇಶನ ಶ್ರೀಮಂತ ಲಿಂಗರಾಜ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಕರ್ನಾಟದಲ್ಲಿಯೇ ಯಾವ ವಿಧವಾದ ಸಾರ್ವಜನಿಕ ಸಮ್ಮೇಳನಗಳು ಜರುಗದಿದ್ದ ಕಾಲದಲ್ಲಿ ಜನಾಂಗವು ಗಾಢನಿದ್ರೆ ಹೋಗಿದ್ದ ಕಾಲದಲ್ಲಿ ಹಿಂದೂ ಮಹಾಸಭೆ ಸ್ಥಾಪನೆಯಾಗದ ಕಾಲದಲ್ಲಿ ವೀರಶೈವ ಮಹಾಸಭೆಯ ಅಧಿವೇಶನ ನಡೆಸಿದ್ದು ಶ್ರೀ ಕುಮಾರ ಶಿವಯೋಗಿಗಳ ಅದ್ವಿತೀಯವಾದ ಮುಂದಾಲೋಚನೆಯ ದ್ಯೋತಕವಾದುದು. ತಮ್ಮ ಜೀವಿತಾವಧಿಯಲ್ಲಿ ಹತ್ತು ಸಮ್ಮೇಳನಗಳು ನಡೆದರೂ ಎಂದೂ ಅಧ್ಯಕ್ಷರಾಗಬೇಕೆಂದು ಬಯಸಿದವರಲ್ಲ, ಬಸವಣ್ಣ ಅನುಭವ ಮಂಟಪಕ್ಕೆ ಅಲ್ಲಮಪ್ರಭುವನ್ನು ಕೂರಿಸಿದಂತೆ ವೀರಶೈವ- ಲಿಂಗಾಯತ ಸಮಾಜದ ಗಣ್ಯರನ್ನು ಕೂರಿಸಿ ಆನಂದ ಪಟ್ಟರು, ನಿಸ್ವಾರ್ಥ ಸೇವಾ ಧರ್ಮದ ದೃಷ್ಟಾರರು.
ವೀರಶೈವ-ಲಿಂಗಾಯತರ ಧರ್ಮಕ್ಷೇತ್ರ ಶಿವಯೋಗಮಂದಿರ
ಸಮಾಜವೆಂಬುದೆ ಮಂತ್ರ, ಸೇವಾಧರ್ಮವೇ ಶ್ರೀಕುಮಾರ ಶಿವಯೋಗಿಗಳ ಜೀವನ ಧರ್ಮ. ಶಿಕ್ಷಣ ಕ್ರಾಂತಿಯ ಕಹಳೆ ಮೊಳಗಿತು. ರವೀಂದ್ರನಾಥ ಟ್ಯಾಗೋರರು ಶಾಂತಿನಿಕೇತನ ಆರಂಭಿಸಿದಂತೆ, ಅರವಿಂದರು ಅರವಿಂದಾಶ್ರಮ ಪ್ರಾರಂಭಿಸಿದಂತೆ,ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಆಶ್ರಮ ನಿರ್ಮಿಸಿದಂತೆ, ಮನುಷ್ಯರನ್ನು ಮಹಾಂತರನ್ನಾಗಿ ಮಾಡಲು ಕುಮಾರ ಶಿವಯೋಗಿಗಳು ಶಿವಯೋಗಮಂದಿರವನ್ನು೬-೨.೧೯೦೯ ಮಾಘಮಾಸ ರಥಸಪ್ತಮಿ ದಿನ ಸ್ಥಾಪಿಸಿದರು. ಮಂದಿರದ ಮೊದಲ ಸಪ್ತಸಾಧಕರಾಗಿ ನವಿಲುಗುಂದದ ಶ್ರೀ ಬಸವಲಿಂಗದೇವರು, ಬಿದರಿಯ ಶ್ರೀ ಅಪ್ಪಯ್ಯ ದೇವರು, ಕಂಚುಗಲ್ಲಿನ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು, ಕುರವತ್ತಿ ಮಹಾದೇವ ದೇಶಿಕರು, ಬಾಗಲಕೋಟೆಯ ಶಿವಮೂರ್ತಿದೇವರು, ವ್ಯಾಕರಣಾಳದ ಸಿದ್ಧಲಿಂಗ ಪಟ್ಟದ್ದೇವರು, ಮಮದಾಪುರದ ಶ್ರೀ ಗುರುಸಿದ್ಧದೇವರು, ಶಿವಯೋಗ ಸಂಪನ್ನರಾಗಿ ಮೂಡಿಬಂದರು. ಗುರು-ವಿರಕ್ತರು ಸಮಾನರೆಂಬ ಅಂಶವು ಇಲ್ಲಿ ಎದ್ದು ಕಾಣುತ್ತಿದೆ. ಶ್ರೀ ಕುಮಾರ ಶಿವಯೋಗಿಗಳ ೬೩ರ ತುಂಬು ಜೀವನದಲ್ಲಿ ಅನೇಕ ಸ್ವಾಮಿಗಳು ಸಮಾಜ ಸೇವೆಗೆ ಸನ್ನದ್ಧರಾದರು. ಮುಂದೆ ಕರ್ನಾಟಕದಲ್ಲಿ ಸ್ಥಾಪನೆಯಾದ ‘ಉಚಿತ ವಿದ್ಯಾರ್ಥಿ ಪ್ರಸಾದ ನಿಲಯ’ಗಳ ತಲಕಾವೇರಿಯಾಯಿತು ಶಿವಯೋಗಮಂದಿರ.
ಕವಿ,ಕಲಾವಿದರ ಕರುಣಾಳು
ಉಭಯಗಾನ ವಿಶಾರದ ಪಂ. ಪಂಚಾಕ್ಷರ ಗವಾಯಿಗಳಿಗೆ ಸಂಗೀತ ಶಿಕ್ಷಣ ಕೊಡಿಸುವ ಮೂಲಕ ಗಾನಗಂಗೆಯನ್ನು ಹರಿಸಿದರು. ಸಂಗೀತಗಾರರು,ಕವಿ-ಕಲಾವಿದರು, ಕೀರ್ತನ ಪ್ರವಚನಕಾರರು, ಕಾಯಕ ಜೀವಿಗಳು, ಕಾಣಹತ್ತಿದರು. ಗೋಸಂರಕ್ಷಣೆ, ವಿಭೂತಿ ತಯಾರಿಕೆ, ಪಂಚಸೂತ್ರ ಲಿಂಗಗಳ ತಯಾರಿಕೆ, ಕೃಷಿ ಸಾಹಿತ್ಯ ಸಂರಕ್ಷಣೆ, ಹೀಗೆ ಅನೇಕ ಸಮಾಜಮುಖಿ ಕಾರ್ಯಗಳಿಗೆ ತಮ್ಮನ್ನು ತೊಡಗಿಸಿಕೊಂಡರು.ಅವರ ತಪದ ಮಹಾಮೌನವು ಮಥಿಸಿ ತಂದ ನವನೀತ! ಅದನ್ನು ಆಶ್ರಯಿಸಿದವರು; ಸೇವಿಸಿದವರು ವಿದ್ಯಾಪಾತ್ರರಾದರು! ಮಾನವರಾದರು; ಮಾನವತೆಯಲ್ಲಿ ಪರಿಪೂರ್ಣರಾದರು! ಅಮೃತಪುತ್ರರಾದರು. ಶ್ರೀಕುಮಾರ ಶಿವಯೋಗಿಗಳು ‘ಸಮಾಜ-ಸಮಾಜ’ವೆನ್ನುತಲೆ ೧೯.೦೨.೧೯೩೦ನೇ ಗುರುವಾರದಂದು ಲಿಂಗದಲ್ಲಿ ಸಮರಸವಾದರು