General

 

ಪರಮಾಶ್ಚರ್ಯ!

ಕೊಡಗು ಜಿಲ್ಲಾ ಬಸವ ಸಂಸ್ಕೃತಿ ಅಭಿಯಾನದ ಕಾರ್ಯಕ್ರಮದ  (೨೨-೦೯-೨೦೨೫ ) ಸಭಾ ಸಜ್ಜಿಕೆಯ ಪರದೆಯಲ್ಲಿ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಚಿತ್ರ ಪ್ರತ್ಯಕ್ಷವಾದುದು !

ಅಭಿಯಾನದ ಹಲವು ಜಿಲ್ಲೆಗಳ ಕಾರ್ಯಕ್ರಮದಲ್ಲಿ ಸಾಣೆಹಳ್ಳಿ ಶ್ರೀಗಳು ತಮ್ಮ ಗುರುಗಳ ಬಗ್ಗೆ ಮಾತನಾಡಿದರು ಮತ್ತು ಅವರ ಪುಣ್ಯ ತಿಥಿಯ ಪ್ರಚಾರ ಮಾಡಿದರು.

ಮಾತೆ ಮಹಾದೇವಿಯವರ ಶಿ಼ಷ್ಯ ಬಳಗ ತಮ್ಮ ಗುರುಗಳ ಬಗ್ಗೆ ಉಲ್ಲೇಖಿಸಿ ಮಾತನಾಡಿದರು.ಎಲ್ಲ ಅಭಿಯಾನ ಕಾರ್ಯಕ್ರಮಗಳಲ್ಲಿ ಮಾತನಾಡಿದರು.

ಆದರೆ ಎಲ್ಲಿಯೂ, ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಹೆಸರು ಪ್ರಸ್ಥಾಪವಾಗದಂತೆ ಎಚ್ಚರಿಕೆ ವಹಿಸಿತು ಲಿಂಗಾಯತ ಮಠಾಧಿಶರ ಒಕ್ಕೂಟ,

ವಚನಕಟ್ಟುಗಳನ್ನು ಸಂಗ್ರಹಿಸಿದ, ವಚನ ಪಿತಾಮಹ ಹಳಕಟ್ಟಿಯವರಿಗೆ ಸಹಾಯ ಸಹಕಾರ ಸಲ್ಲಿಸಿದ, ಶರಣರ ವಚನಗಳನ್ನು ಸಂಗೀತದ ಮೂಲಕ ಪಂಚಾಕ್ಷರಿ ಗವಾಯಿಗಳ ಮೂಲಕ ಜಗತ್ತಿಗೆ ಪರಿಚಯಿಸಿದ ಮತ್ತು ಶಿವಯೋಗಮಂದಿರದ ವಟು ಸಾಧಕರಿಗೆ ವಚನಗಳನ್ನು ಅರ್ಚನ,ಅರ್ಪಣ,ಅನುಭಾವಗಳಲ್ಲಿ ರೂಢಿಗೆ ತಂದ ಕಾರುಣಿಕ ಯುಗಪುರುಷ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು ಸ್ಮರಿಸುವುದು   ಒತ್ತಟ್ಟಿಗಿರಲಿ,

ಅವರನ್ನು ಖಳನಾಯಕನಂತೆ ಬಿಂಬಿಸಿ  ,ಬಸವ ಭಾರತ ಪತ್ರಿಕೆಯಲ್ಲಿ  ಪೂರ್ವನಿಯೋಜಿತವಾಗಿ ಮುದ್ರಿಸಿದ ಲಿಂಗಾಯತ ಮಠಾಧಿಶರ ಒಕ್ಕೂಟದ ಗೌರವ ಸಂಪಾದಕರು,ಆ ಪತ್ರಿಕೆ ಆ ಪುಟಗಳನ್ನು ಮುದ್ರಿಸಿ ಅಭಿಯಾನದಲ್ಲಿ ಉಚಿತವಾಗಿ ಹಂಚಿದ ಜಾಗತಿಕ ಲಿಂಗಾಯತ ಮಹಾಸಭೆಯ ಅತೃಪ್ತ ಸದಸ್ಯರ ಮಧ್ಯದಲ್ಲಿ ,ಅಭಿಯಾನ ಆರಂಭವಾಗಿ ಬರೊಬ್ಬರಿ ೨೧ ದಿವಸಗಳ ನಂತರ ಘಟಸ್ಥಾಪನೆಯ ದಿನದಂದು  “ಮಠದಿಂದ ಘಟವಲ್ಲ-ಘಟದಿಂದ ಮಠ “ ವೆಂದ ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಚಿತ್ರ ಮೌನವಾಗಿ ಕೊಡಗಿನ ವೀರರ ನಾಡಿನಲ್ಲಿ ಉದ್ಭವಾಗಿರುವುದು ಆಶ್ಚರ್ಯವೆನಿಸಿತು.

ಅದರ ಜೊತೆ ಪೂಜ್ಯರು ಸ್ಥಾಪಿಸಿದ  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡುಗು  ಜಿಲ್ಲಾ ಘಟಕದ ಹೆಸರು ರಾರಾಜಿಸುತ್ತಿತ್ತು.

ಸಂತೋಷವೆನಿಸಲಿಲ್ಲ!

ಒಂದು ಕ್ಷಣ ವಿಷಾದವೆನಿಸಿತು. ನೋವೆನಿಸಿತು ಅಕ್ರೋಶದ ಕಟ್ಟೆಯೊಡಿಯಿತು .ಹಲವು ಕ್ರೂರ ಮುಖಗಳು ಕಣ್ಣು ಮುಂದೆ ಬಂದವು.

“ವೀರಶೈವರು” ನಿಮ್ಮ ಲಿಂಗಾಯತ ಧರ್ಮಕ್ಕೆ ಬಂದರೆ ಸೇರಿಸಿಕೊಳ್ಳುವಿರಾ ಎಂದು ಮಾಧ್ಯಮದವರು ಕೇಳಿದಾಗ “ವೀರಶೈವರಷ್ಟೇ ಅಲ್ಲ ವೇಶ್ಯೇಯರೂ ಬಂದರೆ ಲಿಂಗಾಯತ ಧರ್ಮಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ವ್ಯಂಗವಾಗಿ ,ತುಚ್ಛವಾಗಿ ವೀರಶೈವ ಎಂದು ಒಪ್ಪಿಕೊಂಡವರನ್ನು ವೇಶ್ಯೆಯರಿಕ್ಕಿಂತಲೂ ಕೀಳು ಮಟ್ಟದಲ್ಲಿ ಕಂಡ ನಿಜಗುಣಾನಂದ ಸ್ವಾಮಿಗಳು,

ಅಖಿಲ ಭಾರತ ವೀರಶೈವ ಮಹಾಸಭೆಗೆ ವೀರಶೈವ ಎಂದು ಹೆಸರು ಬರಲು  ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳೇ ಕಾರಣ ವೆಂದು  ಸುಳ್ಳುಗಳ ಪುಸ್ತಕವನ್ನು ಬರೆದ ಡಾ. ಎಸ್.ಎಂ. ಜಾಮದಾರ್‌ ಅವರು,

ಪಂಚಾಚಾರ ಗಣಾಚಾರದ ಹೆಸರಿನಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಮೇಲೆ ಅಟ್ಯಾಕ ಮಾಡಿದರೆ ಪಾಪ ಕೆಲವರಿಗೆ ನೋವಾಗುತ್ತದೆ,ಅದನ್ನು ಜೆ.ಎಲ್‌ .ಎಮ್‌ ಮತ್ತು ಲಿಂಗಾಯತ ಮಠಾಧೀಶರ ಒಕ್ಕೂಟ ಕ್ಲಿಯರ್‌ ಮಾಡಲಿ ಎಂದು ಭಯೋತ್ಪಾಕ ಭಾಷೆಯಲ್ಲಿ ಮಾತನಾಡಿದ ಮತ್ತು ಈ ಕಾರ್ಯಕ್ರಮದ ಲೈವ ಚೀತ್ರಿಕರಣ ಮಾಡುವ ವಚನ ಟಿವಿ ಮುಖ್ಯಸ್ಥ  ಸಿದ್ದು ಯಾಪಲಪರ್ವಿಯವರು,

ಅಭಿಯಾನ ಆರಂಭಗೊಳ್ಳುವ ಎರಡು ದಿನ ಮೊದಲು ಬಸವ ಭಾರತ ಎಂಬ ಮಾಸಪತ್ರಿಕೆ ಲಿಂಗಾಯತ ಮಠಾಧಿಶರ ಒಕ್ಕೂಟದ ಗೌರವ ಸಂಪಾದಕರ ನೇತೃತ್ವದಲ್ಲಿ  ಶಶಿಕಾಂತ ಪಟ್ಟಣ ಎಂಬುವವರಿಂದ ಶ್ರೀ ಕುಮಾರ ಶಿವಯೋಗಿಗಳ ಮೇಲೆ ಅವಹೇಳನದ ಲೇಖನ ಬರೆಯಿಸಿ,ಮುದ್ರಿಸಿದಾಗ ಎದ್ದ ಪ್ರತಿಭಟನೆಗೆ ಶಶಿಕಾಂತ ಪಟ್ಟಣ ಅವರು ಕ್ಷಮೆ ಯಾಚಿಸಿದರು.ಅವರ ಕ್ಷಮೆ ಯಾಚಿಸಿದ್ದಕ್ಕೆ ಆಕ್ಷೇಪಣೆ ಮಾಡಿ ಬಸವ ಸಂಸ್ಕೃತಿ ಅಭಿಯಾನ ಮುಗಿಯುವವರೆಗೆ  ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಅವಹೇಳನದ ಲೇಖನ ಜೀವಂತವಾಗಿರ ಬೇಕೆಂಬ ಫರ್ಮಾನು ಹೊರಡಿಸಿದ ಅನಾಮಧೇಯ ಹಲವರು,

ಜಾಗತಿಕ ಲಿಂಗಾಯತ ಮಹಾಸಭಾದ ಕೃಪಾ ಪೋಷಿತ ೨೪x ೭  ಸಾಮಾಜಿಕ ಜಾಲತಾಣಗಳ ಸಕ್ರೀಯ ಕಾರ್ಯಕರ್ತರಾದ, ಅಶ್ಲೀಲ ಸಾಹಿತ್ಯದ  ನಿಜಗುಣ ಮೂರ್ತಿ ಮತ್ತು ಸಿ.ಜಿ.ಸಿದ್ದಲಿಂಗಸ್ವಾಮಿಗಳು,

ಈ ಎಲ್ಲ ಮಹಾತ್ಮರು ಮತ್ತು ಮಹಾನುಭಾವರು  ಅದು ಹೇಗೆ   ಕೊಡಗಿನಲ್ಲಿ ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಭಾವ ಚಿತ್ರದ ಬಳಕೆ ಯನ್ನು  ಗಮನಿಸಲಿಲ್ಲ ?.

ಬಹುಷಃ ಕೊಡಗಿನ ಕಾರ್ಯಕ್ರಮದ ಖರ್ಚು ವೆಚ್ಚಗಳನ್ನು ಅಲ್ಲಿನ ಅಖಿಲ ಭಾರತ ವೀರಶೈವ ಮಹಾಸಭೆ ವಹಿಸಿಕೊಂಡಿರಬಹುದಾದರೂ ,ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಘಟಕಗಳು ಕೈ ಜೋಡಿಸಿದ್ದರೂ ಎಲ್ಲಿಯೂ ಚಿತ್ರ ಬಿಡಿ ಹೆಸರನ್ನೂ ಎತ್ತದಂತೆ ಸುಗ್ರೀವಾಜ್ಞೆಯನ್ನು ಹೊರಡಿಸಿದ್ದ ಅಭಿಯಾನದ ಸೂತ್ರದಾರರು ಕೊಡಗು ಜಿಲ್ಲೆಯಲ್ಲಿ ಮರೆತು ಬಿಟ್ಟಿದ್ದು ಸಖೇದಾಶ್ಚರ್ಯ!.

೨೦ನೆಯ ಶತಮಾನದ ಆರಂಬದಲ್ಲಿ ನೂರಾರು ಒಳಪಂಗಡಗಳನ್ನು ಒಟ್ಟುಗೂಡಿಸಿ ಅಖಂಡ ವೀರಶೈವ ಮಹಾಸಭಾವನ್ನು ಸ್ಥಾಪಿಸಿದ ಮಹಾಪುರುಷನ ಚಿತ್ರದ ಎದುರು ವೀರಶೈವ ಬೇರೆ ,ಲಿಂಗಾಯತ ಬೇರೆ ಎಂದು ಹೇಳುವುದೇ ಬಸವ ಸಂಸ್ಕೃತಿ ಎಂದು ಬಿಂಭಿಸಿದ ರೀತಿ , ಒಬ್ಬ ರಾಜಕಾರಣಿಯ ಅಧಿಕಾರದ ದಾಹಕ್ಕೆ ಬಲಿ ಕೊಟ್ಟಂತೆಯಿತ್ತು.

ಒಂದು  ತೋರಣದ ಎಲೆ ಬಸವಣ್ಣನವರ ಭಾವ ಚಿತ್ರ ಸರಕಾರಿ ಕಛೇರಿಯಲ್ಲಿ ತೂಗು ಹಾಕಿದ್ದು,

ಎರಡನೆಯ ತೋರಣದ ಎಲೆ ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಣೆ ಮಾಡಿದ್ದು,

ಮೂರನೆಯ ತೋರಣದ ಎಲೆ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಯನ್ನು ತುರಾತುರಿಯಲ್ಲಿ ಕೇಂದ್ರಕ್ಕೆ ಕಳುಹಿಸಿದ್ದು

ನಾಲ್ಕನೆಯ ತೋರಣ ವಿಜಯಪುರದ ವಿ.ವಿ.ಗೆ ಅಕ್ಕ ಮಹಾದೇವಿಯವರ ಹೆಸರು ಇಟ್ಟಿದ್ದು..

ಹಬ್ಬಕ್ಕೆ ತಂದ ಹರಕೆಯ ಕುರಿ

ತೋರಣಕ್ಕೆ ತಂದ ತಳಿರ ಮೇಯಿತ್ತು;

ಕೊಂದಹರೆಂಬುದನರಿಯದೆ

ಬೆಂದೊಡಲ ಹೊರೆಯ ಹೋಯಿತ್ತಲ್ಲದೆ!

ಅದಂದೇ ಹುಟ್ಟಿತ್ತು,

ಅದಂದೇ ಹೊಂದಿತ್ತು;

ಕೊಂದವರುಳಿದರೇ ,ಕೂಡಲಸಂಗಮದೇವಾ??”. 

ಈ ತೋರಣಗಳು ಹೊರಗೆ ಕಂಡರೆ,

 ಒಳಗೆ ವೀರಶೈವ ಲಿಂಗಾಯತರ, ರಾಜಕಾರಣಿಗಳ ಮತ್ತು ಅಧಿಕಾರಿಗಳ ಎಳೆಹೂಟೆ ಕಾರ್ಯ ಅವ್ಯಾಹತ.

ಮುಂದೊಂದು ದಿನ ಕೊಂದವರು ಉಳಿಯದಿರಬಹುದು ಆದರೆ ಇಂದು ಅಖಂಡ ವೀರಶೈವ ಲಿಂಗಾಯತವನ್ನು ಛಿದ್ರ ಛಿದ್ರ ಮಾಡಿ ಅವರವರಲ್ಲಿ ವಿಷವನ್ನು ತುಂಬಿ  ಭೇಧವನ್ನು ಅನುಷ್ಠಾನಗೊಳಿಸುವಲ್ಲಿ   ಸಿದ್ದರಾಮಯ್ಯ ಯಶಸ್ವಿಯಾಗಿರುವರು.

ತೋರಣಗಳನ್ನು ಮೇಯ್ದ ಕುರಿಗಳು ,

ಸರಕಾರದ ಪ್ರಶಸ್ತಿ ಅನುದಾನ ಪಡೆದ ನರಿಗಳು

ಇಂದು ವ್ಯಾಘ್ರಗಳು.

ಈ   ಫಲಾನುಭವಿ ಗೋಮುಖ  ವ್ಯಾಘ್ರಗಳ ಆರ್ಭಟಗಳಲ್ಲಿ  “ವೀರಶೈವ ಲಿಂಗಾಯತ “ ದುರ್ಬಲಗೊಂಡಿದೆ .

ಆದರೆ ಆಗಿರುವ ದುರಂತ  , ಮತ್ತು ಆಗುವ  ನಷ್ಠ- ಊಹೆಗೂ ನಿಲಕಲಾರದ್ದು.

ಮುಂದೊಂದು ದಿನ ಮೈ ಕೊಡವಿ ,ಧೂಳುಗಳ ಮಧ್ಯದಲ್ಲಿ ಫಿನಿಕ್ಸ ಪಕ್ಷಿಯಂತೆ ಮರು ಜನ್ಮ ಪಡೆದುಕೊಳ್ಳುವುದು ಶತ ಸಿದ್ಧ.

ಫಿನಿಕ್ಸ್ (Phoenix) ಎಂಬುದು ಗ್ರೀಕ್ ಪುರಾಣಗಳಲ್ಲಿ ಪ್ರಸಿದ್ಧವಾದ ಅದ್ಭುತ ಪಕ್ಷಿ.
ಇದು ಒಂದು ಅಮರ ಪಕ್ಷಿ, ತನ್ನ ದೇಹವೇ ಅಗ್ನಿಯಾಗಿ ಭಸ್ಮವಾದ ಬಳಿಕ, ಆ ಭಸ್ಮದಿಂದಲೇ ಮತ್ತೆ ಪುನರ್ಜನ್ಮ ಪಡೆಯುತ್ತದೆ ಎಂದು ನಂಬಿಕೆ.

 

-ಶ್ರೀಕಂಠ.ಚೌಕೀಮಠ

 

ಇಂದು ೧೩-೦೯-೨೦೨೫ ಮುಂಜಾನೆ  ದಿನಪತ್ರಿಕೆ ತೆರೆದಾಗ ನನಗೊಂದು ಆಘಾತಕಾರಿ ಸುದ್ದಿ ಅತ್ಯಂತ ನೋವನ್ನುಂಟು ಮಾಡಿತು. “ಹಾನಗಲ್ಲ ಶ್ರೀ ಕುಮಾರೇಶ್ವರ ಮಠ ಕ್ಕೆ ಹುಸಿ ಬಾಂಬ್ ಕರೆ ” ಎಂಬ ತಲೆಬರಹದಡಿ ಪ್ರಕಟವಾದ ಸುದ್ದಿ.

೧೯೦೦ ರ ಅವಧಿಯಲ್ಲಿ ಹಾನಗಲ್ಲ ಸುತ್ತಮುತ್ತಲ ಗುರುಳೇ ರೋಗ ಮತ್ತು ಬರಗಾಲ ಅಪ್ಪಳಿಸಿದಾಗ ಇಡೀ ಹಾನಗಲ್ಲ ಮಠ ಆಶ್ರಯ ತಾಣವಾಗಿಸಿ , ಆಸ್ಪತ್ರೆಯಾಗಿ  ,ಶಿಕ್ಷಣ ಕೇಂದ್ರವಾಗಿ  ಜೀವನಾಡಿಯಾದ ಶ್ರೀ ಮಠದ ಪವಿತ್ರ ನೆಲಕ್ಕೆ  , ಛಿದ್ರ ಛಿದ್ರ ವಾಗಿ ಹೋಗಿದ್ದ ಸಮಾಜವನ್ನು ಒಂದು ಗೂಡಿಸಿ, ಸಮಾಜದ ಶ್ರೇಯೋಭಿವೃದ್ಧಿಗೆ ತಮ್ಮ ಇಡೀ ಜೀವಮಾನವನ್ನೇ ತ್ಯಾಗ ಮಾಡಿದ ಮಹಾ ಪುರುಷ ಹಾನಗಲ್ಲ ಶ್ರೀಕುಮಾರೇಶ್ವರರ ಮಠಕ್ಕೇ ಬಾಂಬ್‌ ಇಟ್ಟಿದ್ದೇನೆ ಎಂದು ಬೆಂಗಳೂರಿನಿಂದ ಹಾನಗಲ್ಲಿಗೆ ಬಂದು ಪೋಲಿಸ ಗಸ್ತು ವಾಹನದ ೧೧೨ ಕ್ಕೆ ದೂರವಾಣಿ ಕರೆ ಮಾಡಿದ ಆರೋಪಿ ಹರೀಶ ಚವ್ವಾಣನ ಹೇಳಿಕೆ ,ಹಲವು ಸಂಶಯಗಳಿಗೆ ಕಾರಣವಾಯಿತು.

ಸುದ್ದಿ ಮಾಡಿದವ ಮಾನಸಿಕ ಅಸ್ವಸ್ಥ ಎಂದು ಪತ್ರಿಕೆಯಲ್ಲಿ ಬರೆಯಲಾಗಿತ್ತು. ಒಬ್ಬ ಮಾನಸಿಕ ಅಸ್ವಸ್ಥ ಹಾನಗಲ್ಲಿನಲ್ಲಿ ಶ್ರೀ ಕುಮಾರೇಶ್ವರ ಮಠವನ್ನೇ ಏಕೆ ಆಯ್ದುಕೊಂಡ ?.

ಆಶ್ಚರ್ಯವೆನಿಸುತ್ತದೆ.!

ಒಂದು ಕ್ಷಣ ಪ್ರಸ್ತುತ ಕರ್ನಾಟಕದಲ್ಲಿ ಜರಗುತ್ತಿರುವ  ವೀರಶೈವ ಲಿಂಗಾಯತ ಒಳ ಜಗಳಗಳು ,ತಾರಕಕ್ಕೇರುತ್ತಿರುವ ಪರ ವಿರೋಧದ ಭಾಷಣಗಳು ,ಅದರಲ್ಲೂ ವೀರಶೈವ ಎಂಬ ಶಬ್ಧಕ್ಕೆ ಉಗ್ರವಾಗಿ ವಿರೋಧಿಸುತ್ತಲೇ ಹುಟ್ಟಿಕೊಂಡ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಬಸವ ಸಂಸ್ಖೃತಿ ಅಭಿಯಾನ ಹಾನಗಲ್ಲಿನ ಜಿಲ್ಲೆ ಮತ್ತು ಪರಮಪೂಜ್ಯ  ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಜನ್ಮ ಸ್ಥಳ ಜೋಯಿಸರಹರಳಹಳ್ಳಿಯ ಜಿಲ್ಲೆ  ಹಾವೇರಿಯನ್ನು ಪ್ರವೇಶ ಮಾಡುತ್ತಿರುವದು ನಾಳೆ ೧೪-೦೯-೨೦೨೫ ಕಾಕತಾಳಿಯ !.

ಹಲವು ಸುಂದರ  ಸ್ವಸ್ಥ ಮುಖಗಳು ಮತ್ತು ಅವರು ಉದುರಿಸಿದ ಸುಂದರ ಮುತ್ತುಗಳು ಕಣ್ಣೆದರು ಬಂದವು.

ಅವುಗಳಲ್ಲಿ…..

ಅಖಿಲ ಭಾರತ ವೀರಶೈವ ಮಹಾಸಭೆಗೆ ಲಿಂಗಾಯತ ಮಹಾಸಭೆ ಎಂದು ಹೆಸರಿಡದೇ ವೀರಶೈವ ಮಹಾಸಭೆ ಎಂದು ಹೆಸರಿಟ್ಟವರು ಹಾನಗಲ್ಲ ಕುಮಾರಸ್ವಾಮಿಗಳು ಎಂದು ಹಲವು ಅವಹೇಳನಕರ ವಿಷಯಗಳ ಪುಸ್ತಕವನ್ನು ಬರೆದ ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಮತ್ತು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸೂತ್ರದಾರಿಗಳಾದ ,ಚಾಣಾಕ್ಷರೂ,ಚಾಣುಕ್ಯರೂ ಮತ್ತು ಮಹಾ ಮೇಧಾವಿಗಳಾದ ಡಾ.ಎಸ್.ಎಮ್.ಜಾಮದಾರ ಅವರು,

೨೨-೦೪-೨೦೨೫ ರಂದು ಬೆಳಗಾವಿಯಲ್ಲಿ ಜರುಗಿದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ “ವಚನ ದರ್ಶನ ಮಿಥ್ಯ VS ಸತ್ಯ” ಪುಸ್ತಕದ ಕುರಿತಾದ ಕಾರ್ಯಕ್ರಮದಲ್ಲಿ ಗದುಗಿನ ಕೆ.ವಿ.ಎಸ್.ಆರ್‌ ಪದವಿ ಪೂರ್ವ ಕಾಲೇಜಿನ ನಿವೃತ್‌ ಇಂಗ್ಲಿಷ್‌ ಭಾಷೆಯ ಪ್ರಾದ್ಯಾಪಕ ಮತ್ತು ವಚನ ಟಿ,ವಿಯ ಮುಖ್ಯಸ್ಥ ಸಿದ್ದು .ಬ. ಯಾಪಲಪರ್ವಿ ಎನ್ನುವವರು, ಕಾರ್ಯಕ್ರಮ “ವಚನ ದರ್ಶನ ಮಿಥ್ಯ VS ಸತ್ಯ” ಪುಸ್ತಕಕ್ಕೆ ಸೀಮಿತವಾಗಿದ್ದರೂ ಅನಾವಶ್ಯಕವಾಗಿ ಪುಸ್ತಕಕ್ಕೂ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೂ ಯಾವುದೇ ಸಂಬಂಧವಿಲ್ಲದಿದ್ದರೂ  ಪರಮಪೂಜ್ಯರ ಹೆಸರನ್ನು ಪ್ರಸ್ಥಾಪಿಸಿ : “ಪಂಚಾಚಾರ, ಗಣಾಚಾರದ ಹೆಸರಿನಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಮೇಲೆ ಅಟ್ಯಾಕ್ ಮಾಡಿದ ಕೂಡಲೇ ‘ಪಾಪ’ ಕೆಲವರಿಗೆ ನೋವಾಗುತ್ತದೆ, ಅದನ್ನ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟ ಕ್ಲಿಯರ್ ಮಾಡಲಿ.” ಎಂದು ಪ್ರವಾಚಿಸಿದ್ದರಲ್ಲಿ  “ಅಟ್ಯಾಕ” ಅನ್ನುವ ಭಯೋತ್ಪಾದಕ ಶಬ್ಧ.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಬಸವ ಸಂಸ್ಖೃತಿ ಅಭಿಯಾನ ಆರಂಭಗೊಳ್ಳುವ ಒಂದು ವಾರದ ಹಿಂದೆ “ ಬಸವ ಭಾರತ “ ಪತ್ರಿಕೆಯಲ್ಲಿ ಪ್ರಕಟಗೊಂಡ ಡಾ,ಶಶಿಕಾಂತ ಪಟ್ಟಣ ಅವರ ಲೇಖನದಲ್ಲಿ ಉದ್ದೇಶಪೂರ್ವಕವಾಗಿ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರ ಕುರಿತು ಬರೆದ ಅವಹೇಳನದ ಲೇಖನ.

ಲೇಖನಕ್ಕೆ ತೀವೃ ವಿರೋಧವುಂಟಾದಾಗ ಕ್ಷಮೆ ಯಾಚಿಸಿದ ಡಾ,ಶಶಿಕಾಂತ ಪಟ್ಟಣ ಅವರ 29-08-2025ರಂದು ನಡೆದ ಕಾನ್ಫರೆನ್ಸ್ ಕರೆಯಲ್ಲಿ ವ್ಯಕ್ತವಾದ ಮಾತುಗಳು ಸಂಶಯದ ದಿಕ್ಕನ್ನು ಬದಲಾಯಿಸುವಂತಹದ್ದು- ವಚನ ಟಿ.ವಿಯಲ್ಲಿ ಸಂದರ್ಶನ ಕೊಡುವ.,ಜಾಗತಿಕ ಲಿಂಗಾಯತ ಮಹಾಸಭಾದ ಹಿರಿಯ ಸದಸ್ಯರಾದ ಶ್ರೀ ಅಶೋಕ ಬರಗುಂಡಿ (ನಿವೃತ್ತ ಎಂಜಿನಿಯರ್) ಬಸವತತ್ವ ಪ್ರತಿಪಾದಕರು ಅವರು ಲಿಂಗಾಯತ ಮಠಾಧೀಶರ ಬಸವತತ್ವ ಅಭಿಯಾನ ಆರಂಭವಾಗುತ್ತಿರುವದರಿಂದ- ಪ್ರಕಟಗೊಂಡ ಪೂಜ್ಯ ಹಾನಗಲ್ಲ ಶ್ರೀಗಳ ಕುರಿತು ಅವಹೇಳನ ದ ಲೇಖನಕ್ಕೆ ಕ್ಷಮೆ ಕೇಳಿದ ಡಾ,ಶಶಿಕಾಂತ ಪಟ್ಟಣ  ಅವರಿಗೆ ತಾಕೀತು ಮಾಡಿದ್ದು ಹಲವು ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆ.

ಜೊತೆಗೆ ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯರುಗಳಾದ ಶ್ರೀ ನಿಜಗುಣಮೂರ್ತಿ ಮತ್ತು ಶ್ರೀ ಸಿದ್ದಲಿಂಗಸ್ವಾಮಿ.ಸಿ.ಜಿ. ಅವರ ಮುಂದುವರೆದ ಜಾಲತಾಣಗಳಲ್ಲಿನ  ನಿರಂತರ ಅವಹೇಳನಗಳು ಡಾ,ಶಶಿಕಾಂತ ಪಟ್ಟಣ ಅವರ ಲೇಖನದ ಪ್ರಕಟಣೆ ಉದ್ದೇಶ ಪೂರ್ವಕ ಹಿನ್ನಲೆಯನ್ನು ಸಾಬೀತು ಪಡಿಸುತ್ತದೆ.

ಕೆಲವು ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯರು ಪೂಜ್ಯ ಶ್ರೀ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಅವಹೇಳನದ ಲೇಖನದ ಪುಟಗಳನ್ನಷ್ಟೇ ಸಾವಿರಾರು ಪ್ರತಿ ಮುದ್ರಿಸಿ  ಇಲ್ಲವೇ ಝರಾಕ್ಸ ಪ್ರತಿ ಮಾಡಿಸಿ ಲಿಂಗಾಯತ ಮಠಾಧೀಶರ ಒಕ್ಕೂಟ ಆರಂಭಿಸಿರುವ ಬಸವ ಸಂಸ್ಕೃತಿ ಅಭಿಯಾನದಲ್ಲಿ ಹಂಚಲು ಮತ್ತು ಅದಕ್ಕೆ ಉಂಟಾಗುವ ಖರ್ಚು ವೆಚ್ಚಗಳನ್ನು ಭರಿಸುವದಾಗಿಯೂ ಹೇಳಿದ ಸಂಗತಿಗಳು ಬಸವ ಭಾರತ ಪತ್ರಿಕೆಯ ಸಂಪಾದಕ ಶಿವರುದ್ರ  ಮತ್ತು ಲೇಖಕ ಡಾ. ಶಶಿಕಾಂತ ಪಟ್ಟಣ  ಕಾನಫರೆನ್ಸ ಕಾಲ್‌ ನಲ್ಲಿ  ವಿಚಾರ ವಿನಿಮಯದಲ್ಲಿ ವ್ಯಕ್ತ ವಾದುದನ್ನು ನಾನು ಇಲ್ಲಿ ಸ್ಮರಿಸುತ್ತೇನೆ.

ಎಲ್ಲದರ ಜೊತೆಗೆ ನಾನು ಅತ್ಯಂತ ಗೌರವ ಮತ್ತು ಅಭಿಮಾನದಿಂದ ಕಾಣುವ ಇಬ್ಬರ  ಶ್ರೀಗಳ “ಮೌನ” ನನಗೆ ಅತ್ಯಂತ ನೋವನ್ನುಂಟುಮಾಡಿದೆ.

“ ಬಸವ ಭಾರತ “ ಪತ್ರಿಕೆಯಲ್ಲಿ ಪ್ರಕಟಗೊಂಡ ಡಾ,ಶಶಿಕಾಂತ ಪಟ್ಟಣ ಅವರ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರ ಕುರಿತು ಬರೆದ ಅವಹೇಳನದ ಲೇಖನದ ಸಂಚಿಕೆಯ ಗೌರವ ಸಂಪಾದಕರಾದ  ಇಲಕಲ್ಲಿನ ಪೂಜ್ಯ ಗುರು ಮಹಾಂತಸ್ವಾಮಿಗಳು ಮತ್ತು ಸಹಿಯಿಲ್ಲದ ಪತ್ರದಲ್ಲಿ ವಿಷಾದ ವ್ಯಕ್ತಪಡಿಸಿದ “ ಬಸವ ಭಾರತ “ ಪತ್ರಿಕೆಯ ಸಂಪಾದಕರ ಪತ್ರದಲ್ಲಿ  ಹಠಾತ್ತಾಗಿ ಕಾಣಿಸಿಕೊಂಡ ಭಾಲ್ಕಿಯ ಪೂಜ್ಯ ಬಸವಲಿಂಗ ಪಟ್ಟಾಧ್ಯಕ್ಷರ ಹೆಸರು , ಅವರಿಬ್ಬರ ಗಮನಕ್ಕೆ ತಂದರೂ  ಅವರು  ಲಿಖಿತ ಸ್ಪಷ್ಠೀಕರಣ ಕೊಡದೇ ಇರುವುದು.

ಸುಂದರವಾಗಿದ್ದ ಬಂಧುರವಾಗಿದ್ದ ವೀರಶೈವ ಲಿಂಗಾಯತ ಸಮುದಾಯ ೨೦೧೭ ರಿಂದ ಇಲ್ಲಿಯವರೆಗೆ ರಾಜಕೀಯ ಬಲಿಪಶುವಾಗಿದ್ದು. ಎಡಗೈ ತನ್ನ ಬಲಗೈಯನ್ನೇ ಸಂಶಯದಿಂದ ನೋಡುವ ಸ್ಥಿತಿಯನ್ನು ತಲುಪಿದ್ದು ಶೋಚನೀಯ.

ಮೇಲ್ನೋಟಕ್ಕೆ ಬಸವಣ್ಣನವರ ಭಾವಚಿತ್ರ ಸರಕಾರಿ ಕಛೇರಿಯಲ್ಲಿ ಹಾಕಿಸಿ ,ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಒಳನೋಟದಲ್ಲಿ ಕರಳುಬಳ್ಳಿಗಳಿಗೆ ಕೊಳ್ಳಿಯನಿಕ್ಕಿದವರು ಒಳ ಒಳಗೆ  ನಗುತ್ತಿರುವ  ಮುಸಿ ಮುಸಿ ನಗು ಹೊರ ಹೊರಗೆ ಕರಳುಬಳ್ಳಿಗಳು ಕತ್ತಿ ಮಸಿಯುತ್ತಿರುವುದು ವೀರಶೈವ ಲಿಂಗಾಯತರ ದುರಂತ ಮತ್ತು ಅವರು  ಹಗಲು ಕಂಡ ಬಾವಿಗೆ ರಾತ್ರಿ ಹಾರಿಕೊಳ್ಳುತ್ತಿರುವುದು ಶೋಚನೀಯ.

ಲಿಂಗಾಯತ ಎಂದು ವಾದಿಸುವವರು ಲಿಂಗಾಯತ ರಾಗಿ ಬದುಕಲಿ

ವೀರಶೈವರು ಎಂದು ವಾದಿಸುವವರು ವೀರಶೈವರಾಗಿ ಬದುಕಲಿ

ವೀರಶೈವ ಲಿಂಗಾಯತರು ಎಂದು ಸಮರಸದ ಬದುಕನ್ನು ಕಾಣಲಿಚ್ಚುಸುವವರು ವೀರಶೈವ ಲಿಂಗಾಯತರಾಗಿ ಬದುಕಲಿ.

ಆದರೆ ನಾ ಹೆಚ್ಚು ನೀ ಹೆಚ್ಚು ಎನ್ನುವ ಹಗ್ಗ ಜಗ್ಗಾಟದ ಪ್ರತಿ ಹಂತದಲ್ಲೂ  ಸಮಾಜದ ಉನ್ನತಿಗೆ ಹಗಲಿರಳು ಶ್ರಮಪಟ್ಟ ಪರಮಪೂಜ್ಯ  ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು  ಅನಾವಶ್ಯಕವಾಗಿ ಎಳೆದುತರುವ ಪಾಪದ ಕೆಲಸ ಅಕ್ಷಮ್ಯ ಅಪರಾಧ.

ಈ ವಿಷಯದ ಸೂಕ್ಷ್ಮತೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಲಿಂಗಾಯತ ಮಠಾಧೀಶರ ಒಕ್ಕೂಟ ತೀವೃವಾಗಿ ಮನಗಾಣಬೇಕು.

ಪರಮಪೂಜ್ಯ  ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು ಕುರಿತು ಅವಹೇಳಕಾರಿ ಪುಸ್ತಕ ಪ್ರಕಟಿಸುವುದು ,ಸಾರ್ವಜನಿಕ ಸಭೆಯಲ್ಲಿ ಪೂಜ್ಯರ ಮೇಲೆ “ಅಟ್ಯಾಕ” ಎಂಬ ಭಯೋತ್ಪಾದಕ ಶಬ್ಧವನ್ನು ಕೇಳಿಯೂ ಕೇಳದಂತೆ ಕುಳಿತುಕೊಳ್ಳುವುದು ,ಜಾಣ ಮೌನವನ್ನು ವಹಿಸುವುದು  ಇಂದು ಸಂಬಂಧಪಟ್ಟವರ ಆತ್ಮಗಳಿಗೆ ಸಂತೋಷವನ್ನು ನೀಡುತ್ತಿರಬಹುದು.

ನ್ಯಾಯಾಂಗ, ರಾಜ್ಯಾಂಗ ಮತ್ತು ಕಾರ್ಯಾಂಗಗಳು  ಸಂಬಂಧಪಟ್ಟವರ ಆತ್ಮಗಳಿಗೆ ಪೂರಕ ಸಹಕಾರ ನೀಡುತ್ತಿರಬಹುದು,ಆದರೆ  ಮುಂದೊಂದು ದಿನ ನಿಸರ್ಗ ಈ ಎಲ್ಲ ನೀಚ ಕಾರ್ಯಗಳಿಗೆ  ತಕ್ಕ ಉತ್ತರ ನೀಡುತ್ತದೆ ಎಂಬ ಅಚಲ ನಂಬಿಕೆ ನನ್ನದು.

-ಶ್ರೀಕಂಠ.ಚೌಕೀಮಠ

 

 

 

 

ಜ.ಚ.ನಿ

 

ಶಿಲ್ಪಿಗಳಲ್ಲಿ ಶಿಲಾಶಿಲ್ಪಿಯೆ ಪ್ರಸಿದ್ದ. ಈತನು ಜಾತಿಯ ಶಿಲೆಯನ್ನು ತೆಗೆದುಕೊಂಡು ತನ್ನ ಅಂತಸ್ಥವಾದ ಕಲೆಯನ್ನು ಅದರಲ್ಲಿರಿಸಿ ಅದನ್ನು ಕಲಾಮೂರ್ತಿಯನ್ನಾಗಿ ಮಾಡಬಲ್ಲನು, ಮಾಡುತ್ತಾನೆ.

ಕ್ರಿಯಾಶಿಲ್ಪಿಯಾದ ಕುಮಾರಯೋಗಿಯು ಅನೇಕ ಶಿಲಾವರ್ಗದ ಮನುಷ್ಯರನ್ನು ಶಿಷ್ಯರನ್ನಾಗಿ ಪರಿಗ್ರಹಿಸಿದ ಕಡೆದು ಕಡೆದು ಮೂರ್ತಿಗಳನ್ನಾಗಿ ಮಾಡಿದನು. ಶಿಲಾಶಿಲ್ಪಿಗಿಂತಲು ಕ್ರಿಯಾಶಿಲ್ಪಿಯ ಕೌಶಲ್ಯ ಹೆಚ್ಚಿನದು; ಕಷ್ಟ ಹೆಚ್ಚಿನದು, ಶಿಲಾಶಿಲ್ಪಿಗೆ ಶಿಲೆಯು ವಶಂಗತವಾಗಿರುತ್ತದೆ. ಅದರಂತೆ ಕ್ರಿಯಾಶಿಲ್ಪಿಗೆ ಶಿಲಾವರ್ಗದ ಮನುಷ್ಯರ ಮನಸ್ಸು ವಶವರ್ತಿಯಾಗುವುದು ತೀರ ಕಷ್ಟದ ಮಾತು. ಕ್ರಿಯಾಶಿಲ್ಪಿಯು ತಾನೊಂದು ನೆನೆದರೆ ಶಿಷ್ಯನು ಮತ್ತೊಂದನ್ನು ನೆನೆಯುತ್ತಿರುತ್ತಾನೆ. ಅಂಥವರ ಮನಸ್ಸನ್ನು ಪರಿಪಾಲಿಸುವುದೆ ಪರಮ ಸಾಹಸದ ಕೆಲಸ, ಶಿಲಾಶಿಲ್ಪಿಯ ಉಳಿಯ ಹೊಡೆತ ಶಿಲೆಯಲ್ಲಿ ನೇರವಾಗಿ ಮೂಡುತ್ತದೆ. ಕ್ರಿಯಾಶಿಲ್ಪಿಯ ಹಿತನುಡಿಯ ಪರಿಣಾಮ ಶಿಷ್ಯನ ಮನಸ್ಸಿನ ಮೇಲೆ ಒಮ್ಮಿಗೆ ಮೂಡಲರಿಯದು.

ಶಿಲಾವರ್ಗದ ಮನುಷ್ಯರನ್ನು ಮಾನವತ್ವದ ಮಟ್ಟಕ್ಕೆ ತಂದು  ಮೂರ್ತಿವಂತರನ್ನಾಗಿ ಮಾಡುವುದು ಇದೂ ಒಂದು ಶಿಲ್ಪಕಲೆ. ದುಸ್ವಭಾವಗಳನ್ನು ದೂರೀಕರಿಸಿ ಸುಸ್ವಭಾವ-ಸ್ವಾನುಭಾವಗಳನ್ನು ಬೋಧಿಸಿ ಶಾಂತಿ-ಸೌಹಾರ್ದ್ರ ಕಳೆಗಳನ್ನು ತುಂಬಿ ತೋರುವಂತೆ ಎಸಗುವುದು ಒಂದು ಸಜೀವ ಸೋಜ್ವಲ ಶಿಲ್ಪಕಲೆ; ಪ್ರವಾಹಿ ಕಲೆ. ಇದರಲ್ಲಿ ಹಸ್ತ ನೈಪುಣ್ಯಕ್ಕಿಂತ ಭಾವ ನೈಪುಣ್ಯ ಪ್ರಧಾನವಾದುದು; ಪ್ರಯುಕ್ತವಾದುದು.

ಶಿಲಾಶಿಲ್ಪಿಯು ಬಹಿರಂಗಗಳನ್ನು ನಿರ್ಮಿಸಬಲ್ಲನು. ಮಾನವೋನ್ನತಿ ಗೈಯುವ ಶಿಷ್ಟ ಶಿಲ್ಪಿಯು ಅಂತರಂಗವನ್ನು ಅಲಂಕರಿಸಬಲ್ಲನು ; ತಿದ್ದಿ ಶುದ್ಧಗೊಳಿಸಬಲ್ಲನು. ಎರಡನೆಯದಾಗಿ ವಸನಾಭರಣಗಳನ್ನು ಉಡಿಸಿ ತೊಡಿಸುವುದರಲ್ಲಿ ಶಿಲಾಶಿಲ್ಪಿಯ ನೈಪುಣ್ಯವಿದ್ದರೆ, ಗುಣಾಭರಣಗಳನ್ನು ತೊಡಿಸುವುದರಲ್ಲಿ ಶಿಷ್ಟಶಿಲ್ಪಿಯ ಪುಣ್ಯಪ್ರಭೆ ಕಾರಣವಾಗಿರುತ್ತದೆ. ಉಡಿಗೆಯಿಲ್ಲದೆ ಬರೀತೊಡಿಗೆಗಳಿಂದ ಅಲಂಕರಿಸಿದ ಶಿಲ್ಪಕಲೆಗಳಿಗೇನು ಕೊರತೆಯಿಲ್ಲ. ಬೇಲೂರು, ಹಳೆಬೀಡುಗಳನ್ನು ನೋಡಿದವರಿಗೆ ಬೇರೆ ನಿದರ್ಶನಬೇಕಿಲ್ಲ. ಈ ಸಂವಿಧಾನವು ಶಿಷ್ಟಶಿಲ್ಪಿಯ ಕಲೆಗೆ ಸಾದೃಶ್ಯವಾಗಿದೆ;  ಸಂಗ್ರಾಹ್ಯವಾಗಿದೆ. ಏಕೆಂದರೆ ಅಂತರಂಗದ ಆತ್ಮನಿಗೆ ಗುಣಾಭರಣದ ವಿನಹ ವಸನಾಭರಣದ ಹಂಗೆಲ್ಲಿ, ಏತಕ್ಕೆ ?

ಶಿಲಾಶಿಲ್ಪಿಯದು ಜಡವಾದ ಕಲೆ, ಕ್ರಿಯಾಶಿಲ್ಪಿಯದು ಅಜಡವಾದ ಕಲೆ. ಶಿಲಾಶಿಲ್ಪಿಯು ಶಿಲೆಯಲ್ಲಿ ಬರೀ ಲಾವಣ್ಯವನ್ನು ಕುದುರಿಸುತ್ತಾನೆ. ಶಿಷ್ಟಶಿಲ್ಪಿಯು ಮಾನವನಲ್ಲಿ ಪುಣ್ಯಲಾವಣ್ಯವನ್ನು ಕೆತ್ತುತ್ತಾನೆ. ಶಿಲಾಶಿಲ್ಪಿಯ ಕಲೆ ಕಾಲಕ್ಕೊಳಗಾಗುತ್ತದೆ. ಕ್ರಿಯಾಶಿಲ್ಪಿಯ ಕಲೆ ಕಾಲಾತೀತವಾಗಿರುತ್ತದೆ.

ಕುಮಾರೇಶನ ಕ್ರಿಯಾಶಕ್ತಿನಿಶಿತವಾದುದು; ನಿತಾಂತವಾದುದು ಅದುದರಿಂದಲೆ ಯಾರಿಂದಲು ಸುಧಾರಿಸಲು ಶಕ್ಯವಿಲ್ಲದ ಅನೇಕರು ಸ್ವಾಮಿಗಳವರ ಕ್ರಿಯಾಶಿಲ್ಪಕ್ಕೆ ಸಿಕ್ಕು ಮುದ್ದಾದ ಮೂರ್ತಿವಂತರಾದರು; ಕೊನೆಯಿಲ್ಲದ ಕೀರ್ತಿವಂತರಾದರು.

ಸರಿಯಾಗಿ ಓದು ಬಾರದವರು ಅವರ ಕೈಯಲ್ಲಿ ಶ್ರೇಷ್ಟ ಶಿವಾನುಭವಿಗಳಾದರು. ಬರೆಯಬಾರದವರು ಪ್ರಸಿದ್ಧ ಲೇಖಕರಾದರು. ಚನ್ನಾಗಿ ಮಾತನಾಡಲು ಬಾರದವರು ವಾಗ್ಮಿಗಳಾದರು; ವ್ಯಾಖ್ಯಾತೃಗಳಾದರು; ಕೀರ್ತನ ಕಲಾವಿದರಾದರು. ಸಂಗೀತದ ಗಂಧವನರಿಯದವರು ‘ಸಂಗೀತ ಸಾಗರ’ವಾದರು. ಸಂಸಾರಿಗಳಾಗಬೇಕಾದವರು ಸನ್ಯಾಸಿಗಳಾದರು. ಪಶುಗಾಯಿಗಳಾಗಬೇಕಾದವರು ಪಾಠಶಾಲಾಧ್ಯಾಪಕರಾದರು. ರಾಗಿಗಳು ವಿರಾಗಿಗಳಾದರು. ಕೃಪಣರು ತ್ಯಾಗಿಗಳಾದರು.  ರೋಗಿಗಳು ನಿರೋಗಿಗಳಾದರು. ಭವಿಗಳು ಭಕ್ತರಾದರು. ಗುಣಹೀನರು ಗುಣಿಗಳಾದರು.

ಸುಳಿವು ಸರಿಯಾಗಿಲ್ಲದ ಶಿಲೆಗಳು ಶಿಲ್ಪಿಯ ಕೈಗೆ ಸೇರಿದರು ಮೂರ್ತಿಗಳಾಗುವ ಭಾಗ್ಯವಿಲ್ಲದೆ ಒಡೆದು ಹೋಗುವಂತೆ, ಸ್ವಾಮಿಗಳವರ ಕ್ರಿಯಾಶಿಲ್ಪಕ್ಕೆ ಸಿಕ್ಕಿದ ಕೆಲವರು ಕರ್ಮಬಲದಿಂದ ಕಲಾಹೀನರಾದರು. ಕನಿಷ್ಠ ಬಾಳು ಬಾಳಿದರು. ಯಾವುದನ್ನು ಪುಣ್ಯ ಬೇಕು; ಭಾಗ್ಯ ಬೇಕು.

ಅಂಥವರ ವಿಷಯದಲ್ಲಿ ಸ್ವಾಮಿಗಳವರು ಒಮ್ಮೊಮ್ಮೆ ನೆನೆದು ಮನಸಾರೆ ಮರುಗುತ್ತಿದ್ದರು. ಮತ್ತೊಮ್ಮೆ “ಸಗಣಿಯ ಬೆನಕಂಗೆ ಸಂಪಿಗೆಯ ಅರಳಲ್ಲಿ ಪೂಜಿಸಿದರೆ ರಂಜನೆ ಅಹುದಲ್ಲದೆ ಅದರ ಗಂಜಳ ಬಿಡದಣ್ಣ… ಎಂಬ ಬಸವೇಶ್ವರನ ವಚನವನ್ನು ನೆನೆದು ಸುಮ್ಮನಾಗುತ್ತಿದ್ದರು; ನೆಮ್ಮದಿಗೊಳ್ಳುತ್ತಿದ್ದರು.

ಜಗದ್ಗುರು ಡಾ||ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ  ಗದಗ

 

ವ್ಯಕ್ತಿಯ ಜೀವನದಲ್ಲಿ ಹರಕೆ-ಹಾರೈಕೆಗಳೆರಡಕ್ಕೂ ವಿಶೇಷ ಮಹತ್ವವಿದೆ. ‘ಹರಕೆ ಇದರ ಶಾಬ್ದಿಕ ಅರ್ಥ ಅಭೀಷ್ಟಸಿದ್ಧಿಗಾಗಿ ದೇವರಲ್ಲಿ ಮಾಡಿಕೊಳ್ಳುವ ಸೇವೆ, ಸಂಕಲ್ಪ  ಅಥವಾ ಅಭೀಷ್ಟ ಸಿದ್ದಿಸಿದ ಮೇಲೆ ದೇವರಿಗೆ ಅರ್ಪಿಸುವ ವಸ್ತು ಎಂದಿದ್ದರೂ ದೇವರಲ್ಲಿ ಬೇಡಿಕೊಳ್ಳುವುದು (ಉದಾಹರಣೆಗೆ ಹರಕೆ ಹೊರುವುದು) ಎಂಬ  ಅರ್ಥದಲ್ಲಿಯೂ ಈ ಶಬ್ದವನ್ನು ಬಳಸಿಕೊಳ್ಳುತ್ತೇವೆ. ದೇವರಲ್ಲಿ ಬೇಡಿಕೊಳ್ಳುವ, ಮೊರೆ ಇಡುವ ಕ್ರಿಯೆಗೆ ನಾವು ಪ್ರಾರ್ಥನೆ ಎನ್ನುತ್ತೇವೆ. ಆಗ ಹರಕೆಯ ಅರ್ಥ ಪ್ರಾರ್ಥನೆ ಎಂದಾಗುತ್ತದೆ. ನಾವು ಪರಮಾತ್ಮನ ಕೃಪೆಗಾಗಿ, ಮನಸ್ಸನ್ನು ನಿರ್ಮಲಗೊಳಿಸುವುದಕ್ಕಾಗಿ, ಹೃದಯಶುದ್ಧಿಗಾಗಿ ದೇವರನ್ನು ಪ್ರಾರ್ಥಿಸುತ್ತೇವೆ. ಬದುಕುವುದಕ್ಕೆ ಆಧಾರಭೂತವಾದ ಅನ್ನ, ನೀರು, ಭೂಮಿ, ಗಾಳಿ ಇತ್ಯಾದಿ ಸರ್ವಸ್ವವನ್ನು ದಯಪಾಲಿಸಿದ ಭಗವಂತನಿಗೆ ಸಲ್ಲಿಸುವ ಕೃತಜ್ಞತೆಯೂ ಪ್ರಾರ್ಥನೆ ಎನಿಸುವುದು. ಸರ್ವಶಕ್ತನಾದ ಸರ್ವವ್ಯಾಪಿಯಾದ ಭಗವಂತನಲ್ಲಿ ನಮ್ಮ ದೋಷ ದೌರ್ಬಲ್ಯಗಳನ್ನು ಸಮರ್ಪಿಸಿ, ಸದ್ಗುಣ ಸಂಪನ್ನರಾಗಿ ಬದುಕುವುದಕ್ಕೆ ಹಾಗೆಯೇ ಕ್ಷಣಿಕ ಸುಖಭೋಗಗಳನ್ನು ತ್ಯಾಗ ಮಾಡಿ ಆತ್ಮೋನ್ನತಿಯನ್ನು ಹೊಂದುವುದಕ್ಕೆ ನಾವು ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಲೇಬೇಕು. ಸತ್ಸಂಕಲ್ಪದ ಸಾಧನೆಗಾಗಿ ನಾವು ಮಾಡುವ ಪ್ರಾರ್ಥನೆಯಲ್ಲಿ ಅಚಲ ಶ್ರದ್ಧೆ ಹಾಗೂ ವಿಶ್ವಾಸಗಳು ಇರಬೇಕಾದುದು ಅತ್ಯವಶ್ಯ. ಅಚಲ ಶ್ರದ್ಧೆಯುಳ್ಳ ಉಪನಿಷತ್ಕಾಲದ ಗುರುಶಿಷ್ಯರು ಭಗವಂತನನ್ನು ಪ್ರಾರ್ಥಿಸುವ ಮಾದರಿಯೊಂದು ಹೀಗಿದೆ:

 ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ

ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ

ಸ್ಥಿರೈರಂಗೈಸ್ತು಼ಷ್ಟುವಾಂಸಸ್ತನೂಬಿಃ

ವ್ಯಶೇಮ ದೇವಹಿತಂ ಯದಾಯುಃ (ಪ್ರಶೋಪನಿಷತ್)

‘ದೇವತೆಗಳೇ! ನಾವು ನಮ್ಮ ಕಿವಿಗಳಿಂದ ಕಲ್ಯಾಣಕಾರಕ ವಚನಗಳನ್ನೇ ಕೇಳುವಂತಾಗಲಿ, ಕಣ್ಣುಗಳಿಂದ ಮಂಗಳಕರವಾದುದನ್ನೇ ನೋಡುವಂತಾಗಲಿ. ನಮ್ಮ ಶರೀರದ ಪ್ರತಿಯೊಂದು ಅವಯವವೂ ಸದೃಢವಾಗಿರಲಿ, ಅವುಗಳ ಸಹಾಯದಿಂದ ನಮ್ಮ ಆಯುಷ್ಯದುದ್ದಕ್ಕೂ ಭಗವಂತನ ನಾಮಸ್ಮರಣೆ ಮಾಡುವಂತಾಗಲಿ’ ಇದೊಂದು ಪ್ರಾರ್ಥನೆ (ಹರಕೆ)ಯ ಅತ್ಯುತ್ತಮ ಮಾದರಿ. ಇಲ್ಲಿ ನಿಂದೆ, ಚಾಡಿ, ಬೈಗುಳ ಅಥವಾ ಪಾಪದ ಮಾತುಗಳನ್ನು ಕೇಳಬಾರದೆಂಬ, ಅಮಂಗಲಕಾರಿ ಮತ್ತು ಪತನಕ್ಕೆ ಕಾರಣವಾಗುವ ದೃಶ್ಯಗಳನ್ನು ನೋಡಬಾರದೆಂಬ ಗುರು-ಶಿಷ್ಯರ ಆಶಯವನ್ನು ಗುರುತಿಸಬೇಕು. ನಮ್ಮ ಹರಕೆ ಅಥವಾ ಪ್ರಾರ್ಥನೆಯೂ ಹೀಗಿದ್ದರೆ ಒಳ್ಳೆಯದಲ್ಲವೆ?   ʼಹಾರೈಕೆ’ಯೂ ಕೋರಿಕೆ, ಬಯಕೆ ಇತ್ಯಾದಿ ಅರ್ಥಗಳನ್ನು ಹೊಂದಿದ ಸುಂದರ ಶಬ್ದ. ಒಳ್ಳೆಯದನ್ನು ಬಯಸುವುದಕ್ಕೆ, ಶುಭವನ್ನು ಕೋರುವುದಕ್ಕೆ ನಾವು ‘ಹಾರೈಕೆ’ ಎಂಬ ಪದಪ್ರಯೋಗ ಮಾಡುತ್ತೇವೆ. ನಮ್ಮ ಹಾರೈಕೆಯೂ ಪರಿಶುದ್ಧ ಅಂತಃಕರಣದಿಂದ, ಮಾನವ ಕಲ್ಯಾಣದ ಆಶಯದಿಂದ ಬಂದುದಾಗಿರಬೇಕು. ಉಪನಿಷತ್ಕಾಲದ ಋಷಿಗಳು ವ್ಯಕ್ತಗೊಳಿಸಿದ ಹಾರೈಕೆಯಲ್ಲಿ ನಾವು ಅಂತಹ ಆಶಯವನ್ನು ಕಾಣಬಹುದಾಗಿದೆ-

ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ

ಏವಂ ತ್ವಯಿ ನಾನ್ಯಥೇತೋsಸ್ತಿ ನಕರ್ಮ ಲಿಪ್ಯತೇ ನರೇ ! (ಈಶೋಪನಿಷತ್)

ಈ ಜಗತ್ತಿನಲ್ಲಿ ಸರ್ವಶಕ್ತ ಪರಮಾತ್ಮನ ಧ್ಯಾನ ಮಾಡುತ್ತ ಅರ್ಥಾತ್ ಎಲ್ಲವೂ ಅವನದೇ ಎಂದು ಪರಿಭಾವಿಸಿ, ಅವನ ಸೇವೆ(ಪೂಜೆ)ಗಾಗಿ ಶಾಸ್ತ್ರನಿಯತವಾದ ಕರ್ಮ(ಕರ್ತವ್ಯ)ಗಳನ್ನು ನಿರ್ವಹಿಸುತ್ತ, ನೂರು ವರ್ಷಗಳವರೆಗೆ ಬದುಕುವ ಇಚ್ಛೆಯುಳ್ಳವನಾಗು. ಕರ್ಮಗಳನ್ನು ಮಾಡುತ್ತ ಕರ್ಮಗಳಿಗಂಟಿಕೊಳ್ಳದೆ ಭವಬಂಧನದಿಂದ ಮುಕ್ತನಾಗುವ ಮಾರ್ಗ ಇದಕ್ಕಿಂತ ಬೇರೊಂದಿಲ್ಲ. ಇಲ್ಲಿ ಶಾಸ್ತ್ರನಿಯತ ಕರ್ಮಗಳನ್ನು ಮಾಡುತ್ತ ಜೀವನ ನಿರ್ವಹಣೆ ಮಾಡುವುದು ಯಾವುದೇ ಸ್ವಾರ್ಥಕ್ಕಾಗಿ ಅಥವಾ ವಿಷಯ ಭೋಗಕ್ಕಾಗಿ ಅಲ್ಲ; ತಾಪತ್ರಯಗಳಿಂದ ಭವಬಂಧನದಿಂದ ಮುಕ್ತನಾಗುವುದಕ್ಕಾಗಿ. ಈ ಕಾರಣಕ್ಕಾಗಿಯೇ ಪೂರ್ಣ ಜೀವನವನ್ನು ಪರಮಾತ್ಮನಿಗೆ ಸಮರ್ಪಿಸಬೇಕೆನ್ನುವ ಆಶಯ ಹೊಂದಿದ ಋಷಿಗಳ ಮಾನವೀಯ ಕಳಕಳಿ ನಮಗೆ ಮುಖ್ಯವಾಗುತ್ತದೆ.

 

ಲೇಖಕರು ಶ್ರೀ ಮ.ನಿ.ಪ್ರ. ಡಾ.ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳು .ಓಲೆಮಠ.ಜಮಖಂಡಿ

ಕನ್ನಡ ನಾಡಿನ ಪುಣ್ಯ ವಿಶೇಷವೆಂದರೆ, ಕುಮಾರ ಶಿವಯೋಗಿಗಳಂಥ ಮಹಿಮಾಶಾಲಿಗಳು ಉದಯರಾದದ್ದು. ಲೋಕಬೆಳಗಲು ರವಿಬೇಕು; ಆಧ್ಯಾತ್ಮಲೋಕ ಬೆಳಗಲು ಶ್ರೀ ಕುಮಾರ ಶಿವಯೋಗಿಗಳಂಥ ಚಿದ್ಬೆಳಕು ಬೇಕು. ಬಸವಾದಿ ಶಿವಶರಣರ ತರುವಾಯು ಆ ಆಧ್ಯಾತ್ಮ ಬೆಳಕನ್ನು ಬೆಳಗಿಸಿದವರು ಲಿಂಗೈಕ್ಯ ಹಾನಗಲ್ಲ ಪರಮಪೂಜ್ಯ ಶ್ರೀ ಕುಮಾರ ಶಿವಯೋಗಿಗಳು.

ಶರಣರು ಸಮಷ್ಟಿಗಾಗಿ ದುಡಿದಂತೆ ; ಕುಮಾರ ಶಿವಯೋಗಿಗಳು ವ್ಯಷ್ಟಿಯಾಗಿ ಸಮಷ್ಟಿಯನ್ನು ಕಟ್ಟಿ; ಸಮಷ್ಟಿಯ ಶ್ರೇಷ್ಠತೆಯನ್ನು ಸಮಷ್ಟಿಗೆ ಅರುಹಿ ಶ್ರೇಷ್ಠತೆಯ ಶಿಖರ ಕಟ್ಟಲು ಆಗ ಅವರಿಗೆ ಅವರ ಅರಿವೇ, ಒಂಟಿ ಸಲಗ. ವಿಶೇಷ ಸವಲತ್ತುಗಳೇ ಇಲ್ಲದ ಹಳ್ಳಿಯಲ್ಲಿ ಉದಿಸಿದರು. ಯಾರೂ ಕೇಳುವವರೇ ಇಲ್ಲ ಎಂಬಂತಹ ವಾತಾವರಣದಲ್ಲಿ ಬೆಳೆದರು. ಜ್ಞಾನಭ್ರಮರದ ಕುಕ್ಕಾರಿಯಲ್ಲಿ ಜ್ಞಾನಹಸಿವಿನ ಕಸಿವಿಸಿಯುಸಿರಿಗೆ ಕಿವಿಯೇ ಇರದ ಬಡತನದ ಭದ್ರಕೋಟೆಯಲ್ಲಿ ನಲುಗಿದ ಆ ಅವಸ್ಥೆ ಅದು.

ಅಕ್ಕ ಹೇಳುವ ಹಾಗೆ ಅನಂತಕಾಲ ತಪಿಸಿದ ಫಲಪಕ್ವವಾದಾಗ ವೈರಾಗ್ಯದಿಂದ ಬಂದ ಬಣ್ಣ ಅವರಿಗೆ ಕಾಣಹತ್ತಿತು ; ಹಣ್ಣು ಹಣ್ಣಾದ ಸಿಪ್ಪೆ ಕಳಚಲು ಕಳಿಯಲು ಲಿಂಗ ನೈವೇದ್ಯವಾಗಲು ಅರ್ಹವಾಗುವಂತೆ ಜೋಯಿಸರ ಹರಳಳ್ಳಿ ಎಂಬ ತಳಿಗೆ ಸಾಲೀಮಠಕ್ಕೆಂದೇ ಮೀಸಲಾಗಿಬಿಟ್ಟಿತ್ತು. ಹೃದಯಶ್ರೀಮಂತಿಕೆ ಭಾವಶ್ರೀಮಂತಿಕೆ ಭೂಮವಾದ ಸಾಂಸ್ಕೃತಿಕ ಆಧ್ಯಾತ್ಮಿಕ ದೈವಾವಲಂಬಿಕ ಶ್ರೀಮಂತಿಕೆ ಮನದ ತುಂಬ ; ಮನೆಯತುಂಬ ಇಂಬಿಲ್ಲದಂತೆ ತುಂಬಿತುಳುಕಿತ್ತು ; ಅರ್ಥ ದತ್ತೂರಿಯನೊಂದು ಬಿಟ್ಟು.

ಹಸಿದೇ ಬಂದ ಸದಾ ಹಸಿದೇ ನಿಂತ ಹಸಿವಿನಿಂದಲೇ ಹೋಗಿ ಬರುವವರು ಕಣ್ಣರಳಿಸಿ ಜೊಲ್ಲು ಸುರಿಸಿ ಮನೆ ತುಂಬ ನಿಂತ ಹಸುಗಳು ಹಸಿವಿಗೆ ಸಂಕೇತವಾದಂತಾಗಿದ್ದವು. ಇಂದೋ ನಾಳೆಯೋ ಬಿದ್ದೇ ತೀರುವೆ ಎಂಬಂತಹ ಟೊಂಕುಮುರಿದವರಂತೆ ನಿಂತ ಹಾಳು ಬೀಳು ಬಣ್ಣ ಕಳೆದಕೊಂಡ ಮಣ್ಣು ಮನೆ.  ಉಳಿದ ಬಳೆದ ಅನ್ನಕ್ಕೆ ತಾನೇ ಅಧಿಕಾರಿಯೆಂಬ ಉಂಡು ಓಡಾಡಿ ಕರಗಿಸಿಯೇನು

ಎಂಬಂತಹ ಹಳ್ಳಿಯ ಹೈದ ಅಣ್ಣ ಶಿವಬಸಯ್ಯ. ಹಾಲಯ್ಯ ದಟ್ಟಡಿಯನಿಡುವಾಗಲೇ ತಂದೆ ಪಿತೃಪರ್ವತ ಸದೃಶ ಬಸವಯ್ಯ ಅಸ್ತಂಗತ.

ಬಡತನದ ಒಳಹೊರ ಭಾರಕ್ಕೆ ವೃದ್ಧಾಪ್ಯದಿಂದ ಮಗನ ಮರಣದಿಂದ ಮುಗಿಲೇ ಹರಿದು ಮೈಮೇಲೆ ಬಿದ್ದಂತೆ ಚಿಂತಿತ ಮನೆಗೆ ಹಿರಿತನಕ್ಕುಳಿದ ಅಜ್ಜ ಕೊಟ್ರಯ್ಯಾ ಕಂಗಾಲಾದ ಕಾಲಘಟ್ಟದಲ್ಲಿ ಅಲೆದಾಡುವುದು. ಅನಿವಾರ್ಯವಾಯಿತು ಜೋಳಿಗೆ ಸಾತ್ವಿಕ ಶಿಖಾಮಣಿಯಾದ ಬಾಲ ಹಾಲಯ್ಯನವರ ಕೊರಳಿಗೆ ಆರು ವರುಷದ ಬಾಲಕ ಹಾಲಯ್ಯ ಮನೆಗೂ ಓಡಾಡಿ ನೀಲಮ್ಮರ ಕೊರಳು ಕಕ್ಕುಲಾತಿಗೆ ಮಿಡಿದ ಮನೆಯಿಂದ ಮನೆಗೆ ಜೋಳಿಗೆ ಹೊತ್ತು ಅರ್ಧ ದಿನ ಶ್ಯಾಲೆಯನ್ನು ತಪ್ಪಿಸಿ ; ಅಂದಿನ ಮನೆಯ ಹಸಿವೆಯನ್ನು ಪೂರೈಸಲು ಅಲೆದಾಡಿದ.

ಒಂದು ದಿನ ಲಿಂಗನಾಯಕನೆಂಬ ಹಳ್ಳಿಯ ವೃದ್ಧ ಈತನ ಜೋಳಿಗೆ ಕಂಡು ಕಿಡಿನುಡಿದ : “ಏನೋ, ನಿನ್ನ ವಯಸ್ಸಿನಲ್ಲಿ ಭಿಕ್ಷೆ ಬೇಡುವುದಾ ? ಯಾಕಾಗಿ ನೀನು ದುಡಿಬಾರದು ? “ಆ ನುಡಿ ಹಾಲಯ್ಯನವರಿಗೆ ಸಿಡಿಲಾಗಿ ಬಡಿಯಿತು. ಬದುಕೆ ತಿರುಮುರುವಾಗಿ ಕಂಡಿತು. ಕೋಮಲ ಮನಸ್ಸು ಕಮರಿದಂತೆನಿಸಿತು. ಬಾರವಾದ ಹೃದಯ ಮತ್ತು ಬರಿದಾದ ಜೋಳಿಗೆ ಹೊತ್ತು ಮನೆಗೆ ಬಂದ. ಊಟ ನಿದ್ರೆ ಬೇಡವಾದವು.

ಪ್ರಳಯ, ಭೂಕಂಪ ಹಾಗು ಜ್ವಾಲಾಮುಖಿಗಳ ಸಂಭವವು ; ಒಂದು ದಿನದ ಪರಿತಾಪವಲ್ಲ. ಬಹುಕಾಲದಿಂದ ನಡೆದ ಬಿರುಬಿಗಿತ ಶಾಕೋತ್ಪಾದನ ರಸವಿರಸ ಸಂಘರ್ಷ ಸಂಘಾತ ಮಂಥನ ಸಿಡಿತ ರೌದ್ರಭೀಕರನೋಟ ಅವು.

ಪ್ರಾಪಂಚಿಕ ಅಡತಡೆಗಳನ್ನು ನಿಜಗುಣರು ತಮ್ಮ ಶಾಸ್ತ್ರದಲ್ಲಿ ಬಹಳ ಮಾರ್ಮಿಕವಾಗಿ ಚರ್ಚಿಸುತ್ತಾರೆ. ಪ್ರಾಪಂಚಿಕ ಒತ್ತಡದಲ್ಲಿರುವ ಪ್ರಪಂಚ ಹೊತ್ತು ವಿಲಿವಿಲಿ ಒದ್ದಾಡಿದ ಆಸಾಮಿಗಳೇ ನಿಜಗುಣ ಶಾಸ್ತ್ರದಲ್ಲಿ ಹೆಚ್ಚು ಬಲ್ಲವಾಗಿರುತ್ತಾರೆ. ಅಂಥ ಅತ್ಯಂತಿಕ ಸತಿ ಸುತ ತಾಪತ್ರಯದ ಅಡಚಣೆ ಹಾಲಯ್ಯನವರಿಗೆಲ್ಲಿತ್ತು ? ಆಧ್ಯಾತ್ಮಿಕ ರಹಸ್ಯದತ್ತ ಅವರ ಒಲವು ಅವರ ವಯೋಮಾನಕ್ಕೆ ಮೀರಿದವರೊಂದಿಗಿನ ಒಡನಾಟ ಹೆಚ್ಚಾಗಿ ಹೋಗಿತ್ತು. ಸಂಸಾರದ ಹೇಯತೆಯ ಬಗ್ಗೆ ಹಗಲೂ ರಾತ್ರಿ ಚರ್ಚಿಸಿ ಸಂಸಾರದ ಸುತ್ತ ತಿರುಗುವವರ ನೋಡಿ ಅವರಲ್ಲಿ ನಗುವು ಹುಟ್ಟಿತು. ಬುದ್ಧ ಹಾಗು ನಿಜಗುಣರ ಎಚ್ಚರದ ಊರಿಗೆ ಅವರು ಅರಗಾಗಿ ಕರಗಿಹೋದರು. ಅಣ್ಣ ತೊಳೆದು ತರಲೆಂದೆಸೆದ ಬಟ್ಟಿ ಹೊಸಬಾಳಬಟ್ಟೆಗೆ ದಾರಿ ಮಾಡಿಕೊಟ್ಟಿತು. ಎಲ್ಲ ಇದ್ದೂ ಮಧ್ಯರಾತ್ರಿ ಎದ್ದ ಬುದ್ಧ ಅವರಿಗೆ ಆದರ್ಶವಾಗಿಬಿಟ್ಟ. ಅವರಿವರ ಬಾಯಿಂದ ಕುತೂಹಲದಿಂದ ತಿಳಿದು ಕೇಳಿದ ನಿಜಗುಣರ ಶಾಸ್ತ್ರದೊಲವು ನಿರಂತರ ಅವರನ್ನು ಕೈಮಾಡಿ ಕರೆಯುತ್ತಿತ್ತು. ಊರುಕೇರಿ ಮನೆ ಮಾರು  ಓದು ಕಟ್ಟಿದ ಮುಲಕೀ ಪರೀಕ್ಷೆ ಕಲಕು ಮಲಕಾಗಿ ಹೊರಳಿ ಬಿದ್ದವು. ʼಭಿಕ್ಷೆಯೆತ್ತಿ ತಂದದ್ದನ್ನು ತಿಂದು ಮಲಗಿದ್ದಾನೆ’ ಎಂಬ ಅಣ್ಣನ ಸಣ್ಣ ಮಾತು ಆ ಮುದುಕನ ಮಾಹಿಗಿಂತ ದೊಡ್ಡದೆನ್ನಿಸಲಿಲ್ಲ. ಹಾಲಯ್ಯನವರಿಗೆ.

”ನಿನ್ನರಿಕೆಯ ನರಕವೇ ಸುಖ ಕಂಡಯ್ಯ’ ಎಂದು ಉಡತಡಿ ಬಿಟ್ಟು ಕಲ್ಯಾಣ ಕಂಡು ಜಗನ್ಮಾತೆ ಅಕ್ಕಮಹಾದೇವಿಯವರು ‘ನೆಟ್ಟನೆ ಭವಗೆಟ್ಟೆನು’ ಎಂದು ನಡೆದ ಕಠಿಣ ಪಥ ಹಾಲಯ್ಯನವರಿಗೂ ಸತ್ಪಥವಾಗಿಬಿಟ್ಟಿತು. ಆರೂಢ ಪಥವೇ ಪಥವು ; ಅದವರಿಗೆ ಎದೆಂದಿಗೂ ಇಳಿಯದ ಆವೇಶ ತಂದಿತ್ತು.

ದೋಣಿಯನ್ನಲ್ಲ ಸಾಗುವ ದಿಕ್ಕನ್ನು ಬದಲಿಸಿದ ಅವರಿಗೆ ನಿಷ್ಪಲವಾದ ಮುಲಕಿ ಪರೀಕ್ಷೆಯು ಇನ್ನಿಷ್ಟು ನಿಖರವಾಗಿ ಬ್ರಹ್ಮಪ್ರಜ್ಞಾನಕ್ಕೆ ಪ್ರಖರ ನಂದದ ದೀಪಸ್ಥಂಬವಾಗಿ ಮಹಾಮಾರ್ಗತೋರಿಸಿತು. ಗಾಂವಟಿ ಶ್ಯಾಲಾ ಮಾಸ್ತರಕೀಯಿಂದ ಕೂಡಿಟ್ಟ ಹಣವು ; ಹೆತ್ತವ್ವ ಹೊತ್ತು ಹೊರೆದ ಋಣ ತೀರಿಸುವುದೋ ಎಂಬ ಅಳುಕು ; ಆದಿಶಂಕರರ ಇಂಗಿತ ಅರಿತ ಅವರ ತಾಯಿ ಯತಿಯಾಗಲು ಅನುಮತಿ ದೊರೆತು ಐತಿಹಾಸಿಕ ಗೆಲವು ಹಾಲಯ್ಯನವರ ಬಾಳಬಟ್ಟೆಗೂ ಚಾಚಿಕೊಂಡಿತ್ತು . ಸದಾ ಉನ್ಮುಖಿಯಾಗಿ ಸಂಸಾರ ಸಾಗರದ ಉರದುದ್ದ ಸಿರದುದ್ದ ಕಷ್ಟವ ತೆರೆ ಎದುರಿಸಿದ್ದ ನೀಲಮ್ಮ ಮಗನ ಸಂತೋಷಕ್ಕೆ ಪಡೆದ ಆ ಧನ ತಾಯಿಗೆ ತವನಿಧಿಯಾಗಿ ಬಿಟ್ಟಿತು. ಹಿಂದಿದ್ದ ತಾಪತ್ರಯಗಳು ಲುಪ್ತವಾಗಿ ಹೋದವು.

ಹಾಲಯ್ಯರ ಮದುವೆ ಮಾಡಿ ಮೊಮ್ಮಕ್ಕಳನ್ನು ಕಾಣಬೇಕೆಂಬ ಕನಸಿಗೆ ಮಗನ ತೀವ್ರ ವೈರಾಗ್ಯದ ಅರುಹಿನ ರವಿಕಿರಣಗಳು ಕನಿಸಿನ ನಿದ್ರೆಗೆ ಆಸ್ಪದವನ್ನೇ ಕೊಡದೆ ಹಾಗೆ ನೋಡಿಕೊಂಡವು. ಏನನ್ನೋ ಕೇಳಲೆಂದು ಬಂದಮಾತೆಗೆ ರಾಮಕೃಷ್ಣ ಪರಮಹಂಸರ ಕಾಳಿಕೆಯ ಎದುರು ನಿಂತ ನಿರಾಪೇಕ್ಷಾವಸ್ಥೆಯ ನರೇಂದ್ರನಂತಾಗಿತ್ತು ನೀಲಮ್ಮ ತಾಯಿಯದು.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಡರು ; ಎಮ್ಮಿಗನೂರಿನ ಶ್ರೀ ಜಡೆಯ ಸಿದ್ದರು; ಎಳಂದೂರ ಶ್ರೀ ಬಸವಲಿಂಗಶಿವಯೋಗಿಗಳು; ಜ್ಞಾನ-ಕ್ರಿಯೆ-ಭಕ್ತಿಯೋಗದ ಸಾಗರ ಸಂಗಮ ಈ ತ್ರಿವಿಧರು. ಆ ಸಂಗಮ ರಾಮೇಶ್ವರದಲ್ಲಿ ಕಾಣುವುದು; ಭಕ್ತಿ-ಜ್ಞಾನ-ವೈರಾಗ್ಯ ಸಂಗಮ ಕುಮಾರಶಿವಯೋಗಿಗಳ ವ್ಯಕ್ತಿತ್ವದಲ್ಲಿ ಕಂಡುಬರುವುದು.

“ಶರಣ ಜನರ ಹೃದಯ ನಳಿನದೊಳು ಪರಿಶೋಭಿಸುತ್ತಿಹುದು ಗುರುಶಂಭುಲಿಂಗ ನಿನ್ನ ದಿವ್ಯ ಪಾದ” ಎಂಬ ನಿಜಗುಣರ ಈ ಪದ್ಯವು ಕಲ್ಯಾಣದ ಶರಣರನ್ನೇ ಅಧಿಕೃತವಾಗಿ ಗಮನದಲ್ಲಿಟ್ಟುಕೊಂಡಿರುವುದು ತುಂಬ ಔಚಿತ್ಯ ; “ಬಿಡಬೇಕು ಬಲು ಹಿಂದೆ ಬರಿದೆ ತನ್ನಿರವನು’ ಸಗುಣ ಸಂತತಿಯನು ನಿಗಮಾದಿ ವಿಧಿಯನು ! ಮಿಗೆ ತಪವನು ತನಗಹ ಸಿದ್ಧಿಗಳನ್ನು! ಎಂಬುದಾಗಿ ನುಡಿದ ನಿಜಗುಣರಿಗೆ ಈ ಇದಕ್ಕೆ ಪರ್ಯಾಯ ಎಂಬಂತೆ ಬಾಳಿ ಬದುಕಿದ ಕುಮಾರ ಶಿವಯೋಗಿಗಳು ನಿಜಗುಣರ ಷಟ್ ಶಾಸ್ತ್ರಕ್ಕೆ ಗೌರವ ಹೆಚ್ಚಿಸಿದರು. ಜ್ಞಾನಿ-ಯೋಗಿ-ಜಿಜ್ಞಾಸು -ಉನ್ಮತ್ತ – ಪಿಶಾಚಿ-ವ್ಯಾಕರಣಿ ಎಂಬ ವರ್ಗಿಕರಣದಲ್ಲಿ ಶುದ್ಧಯೋಗಿಯಾಗಿದ್ದರಿಂದಲೇ ಶಿವಯೋಗ ಮಂದಿರದಂಥ ಸಂಸ್ಥೆ ಕಟ್ಟಲು ಅವರಿಗೆ ಸಾಧ್ಯವಾಯಿತು. “ತನಗೆ ಮುಂದೊದಗುವ ಮುನಿದೇವ ಗಣಪದ !ವನು ರುದ್ರೇಶ್ವರ ಸದಾಶಿವ ಭಾವನೆಯನು ! ಘನಶಂಭುಲಿಂಗವಾಗಿ ಮುಕ್ತಿ ಸುಖವನು ! ಜನಿಸಿದೀ ಕಾಮವಿಲ್ಲೆನಿಪುರಿಂದ ! ಎಂದು ಮುಂದುವರಿದ ಪದ್ಯ ಕುಮಾರಶಿವಯೋಗಿಗಳನ್ನು ಕುರಿತೇ ಹಾಡಿದಂತಿದೆ.

ಶರಣರೇ ಮಹತ್ ಸಂಕಲ್ಪಹೊತ್ತು ೨೦ನೇ ಶತಮಾನದಲ್ಲಿ  ಶಿವಯೋಗಿಗಳಾದರು : ಅಷ್ಟೇ ಅಲ್ಲ ಅವರ ಆದರ್ಶಗಳನ್ನು ಮನನವಾಗಿಸಿಕೊಂಡು ಸಮಾಜಮುಖಿಯಾಗಿ ಬದುಕಿ “ಸಮಾಜ ಸೇವೆಯೇ ಲಿಂಗಪೂಜೆ’ ಎಂಬುದನ್ನು ನಡೆದು ನುಡಿದು ಬದುಕಿದರು. ಸರ್ವರ ಏಳ್ಗೆ ಅವರ ಗುರಿಯಾಗಿತ್ತು. ಗುಪ್ತವಾಗಿ ಅಲ್ಲಲ್ಲಿ ಮುಸುಕಿನಲ್ಲಿದ್ದ ವಚನಸಾಹಿತ್ಯವನ್ನು ಹೊರತಂದು ಅದರ ಪ್ರಚಾರಕ್ಕೆ ವಿದ್ವತ್ ಬಳಗ ಗುರುತಿಸಿ ಗೌರವಿಸಿ ಅವರಿಂದ ಸಾಹಿತ್ಯ ರಕ್ಷಣೆ ಮಾಡಿ, ಒಂದು ಶಿಸ್ತಿಗೆ ಅಳವಡಿಸಿ ಇಂದಿನ ಎಲ್ಲ ಓದುವ ವೇದಿಕೆಗೆ ನೆರವಾದರು.

೧೮೬೭ರಲ್ಲಿ ಜನಿಸಿದ ತರುಣ ವೇದಾಂತ ಜಿಜ್ಞಾಸುವಿಗೆ, ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಒಂದು ಗ್ರಾಮವಾದ ಜೋಯಿಸರ ಹಳ್ಳಿಯ ಸಂಬಂಧವೆಲ್ಲ ಪೂರ್ವಾಶ್ರಮದ ನೆನಹಾಗಿ ಬಿಟ್ಟತಷ್ಟೇ. ಹುಟ್ಟಿದೂರಬಿಟ್ಟು ಕಜ್ಜರಗಿಯ ಹಿರೇಮಠದ ರಾಚಯ್ಯನವರ ಕಣ್ಣಿಗೆ ಬಿದ್ದು ನಾಲ್ಕು ವರ್ಷ ಓದಿ ಧಾರವಾಡಕ್ಕೆ ಕಾಲ್ನಡಿಗೆಯಲ್ಲೇ ನಡೆದ ನಡಿಗೆ, ಹುಬ್ಬಳ್ಳಿಯ ಸಿದ್ಧಾರೂಢಮಠದ ಆಧ್ಯಾತ್ಮ ಶಾಲೆಗೆ ನಡೆದ ಅಂದಿನ ನಡಿಗೆಯು ವಿಲಕ್ಷಣವಾಗಿತ್ತು.

ಅನಿರೀಕ್ಷಿತವಾಗಿ ಪರೀಕ್ಷೆಯಲ್ಲಿ ಅನುತೀರ್ಣರಾದ ನಿರಾಶೆಯು ತಾಯಿಯ ತವರಾದ ಲಿಂಗದಹಳ್ಳಿಯಲ್ಲಿ ಸಮಾಳದ ಬಸವಪ್ಪಯ್ಯನವರ ಷಟ್‌ಶಾಸ್ತ್ರ ಶೈಲಿ ಮನಸೊರೆಗೊಂಡುದೇ ಕಾರಣವಾಗಿ ಸಿದ್ಧಾರೂಢರ ಸಾಮಿಪ್ಯ ಸಾಧ್ಯವಾಯಿತು. ಅಲ್ಲಿ ಕೆಲವರು ಇಷ್ಟಲಿಂಗ ಧರಿಸುವದರ ವಿರುದ್ಧದ ವಿಚಾರದಲ್ಲಿ ಸಂದೇಹವೆದ್ದು ಹುಬ್ಬಳ್ಳಿಯ ರುದ್ರಾಕ್ಷಿಮಠದ ಶ್ರೀಗಳು ಜಡೆಯಸಿದ್ದರಲ್ಲಿಗೆ ಕಳುಹಿಸಬೇಕಾಯಿತು. ಇವರು ಕೇಳುವ ಮುನ್ನವೇ ಅವರು ಧರಿಸಲೇಬೇಕೆಂಬ ಕುರುಹು ತೋರಿದರು. “ಎಲ್ಲಿಗೆ ಹೋಗಲಿನ್ನು ಮುಂದೆ ? ‘ಎಂಬ ವಿಚಾರ ಜಡೆಸಿದ್ಧರಿಗೆ ಗೊತ್ತಾಗಿ’ ಎಲ್ಲಿಂದ

ಬಂದಿದ್ಧಿಯೋ ಅಲ್ಲಿಗೆ ಹೋಗು” ಎಂಬುದನ್ನು ಸೂಚ್ಯವಾಗಿಸಿದರು. ಸಿದ್ಧಾರೂಢರಲ್ಲಿಗೆ ಎಳಂದೂರ ಶ್ರೀಗಳು ಆಗಮವಾಯಿತು. ಅವರಿಂದ ಆಕರ್ಷಿತರಾದ ಹಾಲಯ್ಯ ಅವರೊಂದಿಗೆ ನಾಡನಲೆದರು.ಅಣ್ಣಿಗೇರಿಯ ಶಾಖಾಮಠದಲ್ಲಿ ವಿಷಮಜ್ವರ ನೆಪವಾಗಿ ಎಳಂದೂರ ಶ್ರೀಗಳು ಲಿಂಗೈಕ್ಯರಾದರು. ಗುರೂಪದೇಶವಿಶೇಷವಾಗಿತ್ತು : ‘ವ್ಯಕ್ತಿಗಿಂತ ಸಮಾಜ ದೊಡ್ಡದು. ಇಂದಿನಿಂದ

ಸಮಾಜಸೇವೆಗೆ  ಬದ್ಧನಾಗು’ ಎಂಬುದಾಗಿ ಶ್ರೀಗಳು ಇಹದಿಂದ ನಿರ್ಗಮಿಸುವದಕ್ಕಿಂತ ಮೊದಲು ನುಡಿದುದರ ಫಲವಾಗಿ ಅತಿ ಶೀಘ್ರದಲ್ಲಿ ಶ್ರೀಮದ್‌ ವೀರಶೈವ ಶಿವಯೋಗ ಮಂದಿರ ಸಂಸ್ಥೆಯ ಮುನ್ನವೇ ಅಖಿಲಭಾರತ ವೀರಶೈವ ಮಹಾಸಭೆ ಸ್ಥಾಪನೆ ಆಯಿತು

ಮನೋ ಶುದ್ದಿಗೆ ಆತ್ಮಸಿದ್ಧಿಗೆ ಶಂಭುಲಿಂಗ ಬೆಟ್ಟದಲ್ಲಿ ೧೨ ವರ್ಷ ತಪೋಲಿಂಗಧ್ಯಾನ ಸೇವಾತತ್ಪರರಾಗಿ ಕಳೆದದಿನಗಳು ಸತ್ಪ್ರೇರಣೆ ಕೊಟ್ಟವು; ಅದರ ಅರುಹು ನೆರವಾಗಿ ಜನರ ಮಧ್ಯೆ ಹೋದರು. ದಾನ, ಧರ್ಮ, ನೀತಿ, ನಿಯಮ ಕಾಯಕ, ದಾಸೋಹತತ್ವವನು ಬೋಧಿಸಿದರು. ಅಲ್ಲಮನಂತೆಯೇ ನಾಡನೆಲ್ಲ ಅಲೆದರು. ಅವರ ನಡೆಯಲ್ಲಿ ಗಾಂಭೀರ್ಯವಿತ್ತು; ನುಡಿಯಲ್ಲಿ ಹೊಳಪಿತ್ತು ಮಾತುಗಳಲ್ಲಿ ಮಾರ್ಧವತೆ ಇತ್ತು. ದೇವರು ಧರ್ಮ ಸನ್ಮಾರ್ಗಪರವಿಚಾರ ವಿವರಿಸುತ್ತ ಸ್ವಾಮಿಪಾದರು ಸ್ವರಬದ ಬೆಟ್ಟದ ಮಠದಲ್ಲಿ ಬಹುಕಾಲದಿಂದ ಅನುಷ್ಠಾನಮಾಡಿ ಆ ಭಾಗದಲ್ಲಿ ಜನಾನುರಾಗಿಯಾದರು.

ಆ ಸಮಯದಲ್ಲಿ ಕರ್ನಾಟಕ ಆದ್ಯಮಠಗಳಲ್ಲಿ ಒಂದಾದ ಚಿತ್ರದುರ್ಗ ಮಠಕ್ಕೆ ಅಧಿಪತಿಗಳಿರಲಿಲ್ಲ. ಮಠದ ಭಕ್ತರು ಹಾಲಯ್ಯನವರನ್ನು ಕಂಡುಪೀಠಾಧಿಪತಿಗಳಾಗಿ ಬರಬೇಕೆಂದು ಅರಿಕೆಯಿಟ್ಟರು. ಇನ್ನೊಬ್ಬರಾಗಿದ್ದರೆ ಕುಣಿದಾಡುತ್ತಿದ್ದರು. ಆದರೆ ಹಾಲಯ್ಯನವರನ್ನು ಯಾವುದೊಂದು ಸ್ಥಳಕ್ಕೆ ಬಂಧಿತರಾಗಬಯಸಿರಲಿಲ್ಲ.” (ಲಿ.ಮ.ಸ.ಪು:೭೭), ಮತ್ತೊಮ್ಮೆ ಇಂಥದೇ ಸನ್ನಿವೇಶ ಆದರಿದು ವಿಭಿನ್ನ, ಆ ಮಠದ ಫಕೀರ ಸ್ವಾಮಿಗಳಿಗೆ ವೃದ್ಧಾಪ್ಯ, ಹಾಲಯ್ಯನವರನ್ನು ಹಾನಗಲ್ಲಿಗೆ ಕೆರೆ ತರಲು ಭಕ್ತರಿಗೆ ಆಜ್ಞೆಯಾಯಿತು.  ಸರ್ವವು ಹಾಲಯ್ಯನವರ ಮುಂದೆ ಪ್ರಸ್ತಾಪವಾಯಿತು. ಹಾಲಯ್ಯನವರು ವಿನಮ್ರರಾಗಿ ನುಡಿದರು, ನಾನೊಬ್ಬ ಸಮಾಜ ಸೇವಕನ ನನಗೆ ದೊಡ್ಡ ಮಠವೊಂದರ ಹೊಣೆಗಾರಿಕೆ ಬೇಡ; ಮಠ ಹಾಗೂ ಸಮಾಜ ಸೇವೆ ಎರಡು ವ್ಯವಸ್ಥೆಗಳನ್ನು ತೂಗಿಸಿಕೊಂಡು ಹೋಗುವುದು ಅಸಾಧ್ಯವೆಂದು ತಿಳಿದವ ನಾನು; ನನ್ನನ್ನು ದಯವಿಟ್ಟು ಬಿಟ್ಟಬಿಡಿ ಎಂಬುದಾಗಿ ವಾದಿಸಿದರು. ಹಾಸಿಗೆಯಿಂದ ಬೇಸರಗೊಂಡು ಫಕೀರಸ್ವಾಮಿಗಳು ಸ್ವಾನುಭವದ ಅಧಿಕಾರಬೆರೆಸಿದ ಆಗ್ರಹದ ಮಾತುಗಳು ಎಂಬಂತೆ ಉಪದೇಶ ಮಾಡಿದರು, ನೀನಿನ್ನೂ ಚಿಕ್ಕವ ವೈಯಕ್ತಿಕವಾಗಿ ದೊಡ್ಡದಾಗಿ ಸಮಾಜಸೇವೆ ಮಾಡಲಾಗದೆಂದು ನಿನಗೆ ತಿಳಿಯದು, ಅದಕ್ಕೆ ಧಾರ್ಮಿಕ ಸಂಸ್ಥೆಯೊಂದರ ಬೆಂಗಾವಲು  ಬೇಕು .ಮಠದ ಆದಿಪತ್ಯ ಸ್ವೀಕರಣೆ ಸ್ವಾರ್ಥ ಬಯಕೆಗಾಗಿ ಅಲ್ಲ. ನಿಷ್ಕಾಮ ಸೇವೆಗೆ ಎಂಬ ಮಂತ್ರ ಸದೃಶಮಾತುಗಳು ಅವರನ್ನು ಮಂತ್ರಮುಗ್ದಗೊಳಿಸಿದವು. ಹಾಲಯ್ಯನವರು  ಹಾನಗಲ್ಲ  ಕುಮಾರ ಸ್ವಾಮಿಗಳೆಂದೇ ಪ್ರಸಿದ್ಧಿಯಾದರು.

ಬಸವ ಸಾಮಾಜಿಕ ಕ್ರಾಂತಿಯನ್ನವರು  ಪುನರಜ್ಜೀವನಗೊಳಿಸಿದರು. ಧರ್ಮ, ಶಿಕ್ಷಣ, ಕಲೆ,ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಮಾಜೋನ್ನತಿಯ ಹೊಂಗನಸು ಅವರದು  ಕೃಷಿಗೆ ಸಂಗೀತಕ್ಕೆ ಅಪಾರ ಕೊಡುಗೆ ಅವರದು, ಅಚಾರವೇ ವೀರಶೈವ ಲಿಂಗಾಯತ ಧರ್ಮದ ತಿರುಳು; ಅದನ್ನು ಶಿವಯೋಗಮಂದಿರದ ಮೂಲಕ ಉಳಿಸಿ ಬೆಳೆಸಿದರು. ಅಂಧರ ಉಪಜೀವನಕ್ಕೆ ತಳಪಾಯ ಹಾಕಿ ಅಲ್ಲಿ ಗುರು ಶಿಷ್ಯ ಪರಂಪರೆಗೆ ಶ್ರೀಕಾರ ಹಾಕಿದರು.

ಶ್ರೀ ಗುರು ಕುಮಾರಂ ವಂದೇ

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ.

 

ರಸನೇಂದ್ರಿಯದೊಳು ಶೋ ! ಭಿಸುವ ಚಿದ್ರಸವ ಭೋ-

ಗಿಪುದು ಬಹು ರಸಿಕ-ಅಸಮ ಗುರುಲಿಂಗವೆಂ-

ದುಸುರಿದೈ ಗುರುವೆ ಕೃಪೆಯಾಗು   ||೧೬೦||

 

ಜ್ಞಾನೇಂದ್ರಿಯಗಳಲ್ಲಿ ಎರಡನೆಯದು ರಸನೆ. ಇದು ಅಪ್‌ತತ್ತ್ವದಿಂದಾದ ತನ್ಮಾತ್ರೆಯನ್ನು ಗ್ರಹಿಸುವದು. ಅರ್ಥಾತ್ ರಸನೆ (ನಾಲಿಗೆ)ಗೆ ಅನುಭವವಾಗುವದು ರಸ. ರಸಗಳಲ್ಲಿಯೂ ಷಡ್ರಸಗಳೆಂದು ಪ್ರಸಿದ್ಧಿಯಿದೆ. ರಸನೇಂದ್ರಿಯದೊಳಗೆ ಶೋಭಿಸುವ ಮಧುರ, ಒಗರು, ಖಾರ, ಹುಳಿ, ಕಹಿ, ಲವಣವೆಂಬ ಆರು ರಸಗಳನ್ನು ಭೋಗಿಸುವವರಿಗೆ ರಸಿಕರೆಂತಲೂ ವಾಡಿಕೆಯುಂಟು. ದಿನಾಲು ಈ ಷಡ್ರಸಗಳನ್ನು ಭುಂಜಿಸುವವರಿಗೆ ರಸಿಕರೆಂದು ಹೇಳುವ ಅಗ್ಗಳಿಕೆ ಕೇಳಿಬರುತ್ತಿದೆ. ಸುಖ-ಜೀವಿಗಳು (ಶ್ರೀಮಂತರು) ಷಡ್ರಸಗಳಿಂದ ಕೂಡಿದ ಪದಾರ್ಥಗಳನ್ನು ಸ್ವೀಕರಿಸುತ್ತಾರೆ. ಇವರು ಷಡ್ರಸಗಳನ್ನು ಭೋಗಿಸುವ ಭೋಗಿಗಳೆನಿಸುವರೆ ವಿನಃ ಪ್ರಸಾದಿಗಳಾಗುವದಿಲ್ಲ. ಪ್ರಸಾದ ಗುಣಗಳನ್ನು ಪಡೆಯುವದಿಲ್ಲ.  ಪದಾರ್ಥ ಗುಣಗಳ ಬಾಧೆ ತಪ್ಪುವದಿಲ್ಲ.

 

ರಸನೇಂದ್ರಿಯಕ್ಕೆ ಗೋಚರಿಸುವ ಷಡ್ರಸಗಳನ್ನು ಗುರುತಿಸುವದು ಗುರುಲಿಂಗವು. ಈ ಗುರುಲಿಂಗವು ಕೇವಲ ರಸವನ್ನಾಗಿ ಗ್ರಹಿಸದೇ ಚಿದ್ರಸವನ್ನಾಗಿ ಸ್ವೀಕರಿಸುವಂತಾಗ ಬೇಕು. ಆಗ ರಸವು ಪ್ರಸಾದವಾಗಿ ಆನಂದವನ್ನು ಹುಟ್ಟಿಸುತ್ತದೆ. ರಸದ ಬಂಧನ ಗುರುಲಿಂಗಕ್ಕೆ ಇರುವದಿಲ್ಲ. ಗುರುಲಿಂಗವು ಸಕಲ ರಸಗಳನ್ನು ಗುರುತಿಸುವದರಿಂದ ಬಹುರಸಿಕವೆನಿಸಿದೆ. ಮತ್ತು ಅದು ರಸವನ್ನು ಚಿದ್ರಸವನ್ನಾಗಿ ಭೋಗಿಸುವದರಿಂದ ಈ ಗುರುಲಿಂಗಕ್ಕೆ ಸಮನಾದುದು ಮತ್ತೊಂದಿಲ್ಲ. ಅದಕ್ಕಾಗಿ ಅಸಮಗುರುಲಿಂಗವೆಂದು ವರ್ಣಿಸಲ್ಪಟ್ಟಿದೆ ಎಂದು ಮುಂತಾಗಿ ಗುರುನಾಥನು ರಸನೇಂದ್ರಿಯದಲ್ಲಿ ಗುರುಲಿಂಗದ ಗುರುತನ್ನು ತೋರಿಸಿಕೊಡುತ್ತಾನೆ.

 

ಚನ್ನಬಸವಣ್ಣನವರು ನಿರೂಪಿಸಿದ ಗುರುಲಿಂಗದ ಮಿಶ್ರಷಡ್ವಿದ ಲಿಂಗಾರ್ಪಣವನ್ನು ಅವಲೋಕಿಸುವದು ಯಥಾ ಯೋಗ್ಯವಾಗಿದೆ.

 

“ಗುರುಲಿಂಗದ ಮಿಶ್ರಷಡ್ವಿದ ಲಿಂಗಾರ್ಪಣದ ವಿವರವು. ಮಧುರವಾದ ರುಚಿಯನರಿವುದು ಆಚಾರಲಿಂಗದಲ್ಲಿ, ಒಗರಾದ ರುಚಿಯನರಿವುದು ಗುರುಲಿಂಗದಲ್ಲಿ, ಖಾರವಾದ ರುಚಿಯನರಿವುದು ಶಿವಲಿಂಗದಲ್ಲಿ, ಆಮ್ಲವಾದ ರುಚಿಯನರಿವುದು ಜಂಗಮ ಲಿಂಗದಲ್ಲಿ ; ಕಹಿಯಾದ ರುಚಿಯನರಿವುದು ಪ್ರಸಾದಲಿಂಗದಲ್ಲಿ, ಇವು ಎಲ್ಲರಲ್ಲಿಯ ರುಚಿಯನರಿವುದು ಮಹಾಲಿಂಗದಲ್ಲಿ. ಇಂತೀ ಪಂಚರಸಂಗಳು ಲವಣ ಕೂಡಿದಲ್ಲದೇ ರುಚಿಯಾಗಿ ಆ ಲವಣವನ್ನು ಪಂಚರಸಂಗಳಲ್ಲಿ ಕೂಡಿ ಅರ್ಪಿಸಬೇಕಲ್ಲದೆ ಬೇರೆ ಬೇರೆ  ಅರ್ಪಿಸಲಾಗದು. ಇಂತು ಗುರುಲಿಂಗದ ಮಿಶ್ರಾರ್ಪಣವು.”

 

ಗುರುಲಿಂಗದೊಳಗಿನ ಆಚಾರಲಿಂಗವು ಮಧುರ ರಸವನ್ನು, ಗುರುಲಿಂಗವು ಒಗರನ್ನು, ಶಿವಲಿಂಗವು ಖಾರವನ್ನು, ಜಂಗಮಲಿಂಗವು ಆಮ್ಲವನ್ನು, ಪ್ರಸಾದ ಲಿಂಗವು ಕಹಿಯನ್ನು ಅನುಭವಿಸುವದು. ಈ ಪಂಚರಸಗಳಾದರೂ ಲವಣ (ಉಪ್ಪು) ಕೂಡದೆ ರುಚಿಸುವದಿಲ್ಲವಾದ್ದರಿಂದ ಉಪ್ಪು ಪಂಚರಸಗಳಲ್ಲಿ ಅಂತರ್ಭೂತವಾಗುವದು. ಪಂಚರಸಗಳ ಅನುಭವವೇ ಗುರುಲಿಂಗದ ಮಹಾಲಿಂಗಕ್ಕಾಗುವದು. ಓ ಗುರುವೇ ! ರಸನೇಂದ್ರಿಯದೊಳಗಿನ ಗುರುಲಿಂಗವನ್ನು ಗುರುತಿಸುವ ಗೌರವವನ್ನಿತ್ತು ಕಾಪಾಡು.

 

ನಯನೇಂದ್ರಿಯದೊಳು ಚಿನು | ಮಯರೂಪ ನೋಟ ತ-

ನ್ಮಯವೆ ಶಿವಲಿಂಗ – ಸ್ವಯವೆಂದು ನಂಬು ನಿ-

ರ್ಣಯವೆಂದ ಗುರುವೆ ಕೃಪೆಯಾಗು  ||೧೬೧||

 

ಮೂರನೆಯ ಜ್ಞಾನೇಂದ್ರಿಯ ನಯನ. ನಯನವು ಅಗ್ನಿತತ್ತ್ವಾಧಿಕತ್ಯತೆ  ಯಿಂದಾದುದು. ಅಂತೆಯೇ ನೇತ್ರದಲ್ಲಿ ಪ್ರಕಾಶವಿದೆ. ರೂಪವನ್ನು ಗ್ರಹಿಸುವ ಸಾಮರ್ಥ್ಯವನ್ನು ಪಡೆದಿದೆ.

 

ರ್ವೇಷು ಗಾತ್ರೇಷು ಶಿರಃ ಪ್ರಧಾನಮ್ |

ಸರ್ವೆಂದ್ರಿಯಾಣಾಂ ನಯನಂ ಪ್ರಧಾನಮ್ ||ʼʼ

 

ಎಲ್ಲ ಅವಯವಗಳಲ್ಲಿ ಶಿರಸ್ಸೇ ಮುಖ್ಯವಾದುದು. ಎಲ್ಲ ಇಂದ್ರಿಯಗಳಲ್ಲಿ ನೇತ್ರೇಂದ್ರಿಯವೇ ಪ್ರಧಾನವಾದುದು. ನೇತ್ರವು ಸರ್ವಸುಂದರವಾದುದು. ಕಣ್ಣುಗಳಿಂದಲೇ ಮನುಷ್ಯನು ಶಿವನ ಸೃಷ್ಟಿಯ ಸೊಬಗನ್ನು ಸೌಂದರ್ಯವನ್ನು ನೋಡುತ್ತಾನೆ. ಆನಂದಿಸುತ್ತಾನೆ. ನೇತ್ರವಿಲ್ಲದವನ ಜನ್ಮ ನಿರರ್ಥಕವೇ ಸರಿ. ಕಣ್ಣಿನಲ್ಲಿ ಕಾಣುವ ರೂಪವು ಬರಿ ರೂಪವಾಗಬಾರದು. ಅದು ಚಿನುಮಯ ರೂಪವಾಗಬೇಕು. ಮಂಗಲ ರೂಪವಾಗಿ ಪರಿಣಮಿಸಬೇಕು. ಅಂದರೆ ಕಣ್ಣಿನಲ್ಲಿ ಶಿವಲಿಂಗದ ಸ್ವರೂಪು ತೋರಿ ಬರುವದು. ಇದು ನಿಶ್ಚಯವಾದ ಮಾತು. ಇದನ್ನು ನಂಬಿ ನಡೆಯೆಂದು ಗುರು ನಿರೂಪಿಸುತ್ತಾನೆ.

ಯಾವುದೇ ರೂಪವನ್ನು ಗ್ರಹಿಸುವದು ಕಣ್ಣಿನ ಪ್ರಾಕೃತಿಕ ಧರ್ಮ. ಕಂಡ ಸುಂದರ ರೂಪವನ್ನು ಮೋಹಿಸುವದು ವಿಕೃತಿಯೆನಿಸುವದು. ಆದರೆ ಮೋಹಕ ರೂಪವನ್ನು ನೋಡಿದರೂ ಶಿವರೂಪದಲ್ಲಿ ಭಾವಿಸುವದೇ ಶಿವಲಿಂಗದ ಸಂಸ್ಕೃತಿ. ಇಂಥ ಸಂಸ್ಕೃತಿಯನ್ನು ಸಮನ್ವಯಗೊಳಿಸಿಕೊಳ್ಳುವದೇ ಚನಮಯನ ದರ್ಶನ. ಶಿವಲಿಂಗದ ಸಾಕ್ಷಾತ್ಕಾರ.

 

ಶಿವಲಿಂಗದ ಮಿಶ್ರಷದ್ವಿಧ ಲಿಂಗಾರ್ಪಣದ ವಿವರವು ಇಂತಿದೆ – “ಪೀತ ವರ್ಣದ ರೂಪನರಿವುದು ಆಚಾರಲಿಂಗದಲ್ಲಿ, ಶ್ವೇತವರ್ಣದ ರೂಪನರಿವುದು ಗುರುಲಿಂಗದಲ್ಲಿ,  ಹರಿತವರ್ಣದ ರೂಪನರಿವುದು ಶಿವಲಿಂಗದಲ್ಲಿ, ಮಂಜಿಷ್ಠವರ್ಣದ ರೂಪನರಿವುದು ಜಂಗಮಲಿಂಗದಲ್ಲಿ, ಕಪೋತವರ್ಣದ ರೂಪನರಿವುದು ಪ್ರಸಾದ ಲಿಂಗದಲ್ಲಿ ,ಇಂತಿವು ಎಲ್ಲರಲ್ಲಿಯ ರೂಪನರಿವುದು    ಮಹಾಲಿಂಗದಲ್ಲಿ. ಇಂತು ಶಿವಲಿಂಗದ ಮಿಶ್ರಾರ್ಪಣ”ವೆಂದು ಚನ್ನಬಸವಣ್ಣನವರು ನಿರೂಪಿಸಿದ್ದಾರೆ.

 

ರೂಪವು ಪೀತ (ಹಳದಿ) ಶ್ವೇತ (ಬಿಳುಪು) ಹರಿತ (ಹಸಿರು) ಮಂಜಿಷ್ಠ(ಕಪ್ಪು)ಗಳೆಂದು ಐದು ತೆರ.   ರೂಪವನ್ನು ಗ್ರಹಿಸುವ ಶಿವಲಿಂಗವು  ಆಚಾರಲಿಂಗವಾಗಿ ಹಳದಿ ರೂಪವನ್ನು ಗ್ರಹಿಸಿದರೆ, ಗುರುಲಿಂಗವಾಗಿ ಬಿಳಿರೂಪವನ್ನು ನೋಡುತ್ತದೆ. ಶಿವಲಿಂಗದೊಳಗಿನ  ಶಿವಲಿಂಗವು ಹಸಿರುರೂಪವನ್ನು ಕಾಣುತ್ತದೆ. ಜಂಗಮಲಿಂಗವು ಮಂಜಿಷ್ಠ ಬಣ್ಣವನ್ನು ನೋಡಿದರೆ ಪ್ರಸಾದಲಿಂಗವು ಕಪೋತವರ್ಣವನ್ನು ಕಾಣುವದು. ಈ ಎಲ್ಲ ರೂಪಗಳ ಅರಿವು ಮಹಾಲಿಂಗಕ್ಕೆ ಆಗುವದು. ಗುರುವೆ ! ರೂಪವನ್ನು ಸುರೂಪವನ್ನಾಗಿ ಶಿವರೂಪವನ್ನಾಗಿ ನೋಡುವ ಶಿವಲಿಂಗಕ್ಕಾಶ್ರಯವಾದ ಕಂಗಳನ್ನಿತ್ತು ಕಾಪಾಡು.

 

ಅಂಗ ಸೋಂಕಿನ ಸುಖವೆ | ಲಿಂಗ ಸ್ಪರ್ಶನವಾಗ-

ಲಂಗ ತ್ವಗಿಂದ್ರಿಯ-ಜಂಗಮಲಿಂಗವೆಂದು

ಕಂಗೊಳಿಪ ಗುರುವೆ ಕೃಪೆಯಾಗು  ||೧೬೨||

 

ನಾಲ್ಕನೆಯ ಜ್ಞಾನೇಂದ್ರಿಯ ತ್ವಕ್ಕು ಅರ್ಥಾತ್ ಚರ್ಮ. ಇದು ವಾಯು ತತ್ತ್ವಪ್ರಧಾನವಾದುದು. ಈ ತ್ವಗಿಂದ್ರಿಯಕ್ಕೆ ಶೀತೋಷ್ಣಗಳ ಸ್ಪರ್ಶವಾಗುತ್ತದೆ. ಚರ್ಮಕ್ಕೆ ತಂಪು, ಉಷ್ಣಗಳೆನಿಸಿದ ಸ್ಪರ್ಶಸುಖ ಅನುಭವಕ್ಕೆ ಬರುವದು. ಬೇಸಿಗೆಯಲ್ಲಿ ತಂಪುಸ್ಪರ್ಶ ಸುಖವೆನಿಸಿದರೆ; ಚಳಿಗಾಲದಲ್ಲಿ ಉಷ್ಣಸ್ಪರ್ಶ ಹಿತವೆನಿಸುವದು. ಮಳೆಗಾಲದಲ್ಲಿ ಮಂದೋಷ್ಣವು ಆನಂದವನ್ನುಂಟು ಮಾಡುವದು. ಆದರೆ  ಯಾವುದೇ ಅಂಗಸೋಂಕಿನ ಸುಖವು ಲಿಂಗಸ್ಪರ್ಶನದ ಅನುಭವವಾಗುವಂತಾಗ ಬೇಕು. ಸ್ಪರ್ಶವು ಶಾರೀರಿಕವೆನಿಸಿದರೆ ಅದು ಜೀವಿಯನ್ನು ಮೋಹಪಾಶದಲ್ಲಿ ಕೆಡುವುದು. ಅದಕ್ಕಾಗಿ ಲಿಂಗಮುಖವಾಗಿ ಸ್ಪರ್ಶಿಸುವ ತ್ವಗಿಂದ್ರಿಯದಲ್ಲಿ ಜಂಗಮ ಲಿಂಗವನ್ನು ನೆನಯಬೇಕು. ಭಾವಿಸಬೇಕು. ಅಂದರೆ ಭಕ್ತನು ಸಂಸಾರಿಯಾಗಿಯೂ ಕಂಗೊಳಿಸಬಲ್ಲನು. ತನ್ನನ್ನು ನೆರೆನಂಬಿದ ಶಿಷ್ಯನಿಗೆ ಮನೋಜ್ಞ ರೂಪವಾಗಿ

ಕಂಗೊಳಿಪ ಗುರುನಾಥನು ಜಂಗಮಲಿಂಗದ ಅರಿವು ಮೂಡುವಂತೆ ಬೋಧಿಸಿ ಹರಸುತ್ತಾನೆ.

 

ಚನ್ನಬಸವಣ್ಣನವರು ಪ್ರತಿಪಾದಿಸಿದಂತೆ-  “ಜಂಗಮಲಿಂಗದ ಮಿಶ್ರಷಡ್ವಿಧ ಲಿಂಗಾರ್ಪಣದ ವಿವರವು. ಕಠಿಣವಾದ ಸ್ಪರ್ಶನವನರಿವುದು ಆಚಾರಲಿಂಗದಲ್ಲಿ; ಮೃದುವಾದ ಸ್ಪರ್ಶನವನರಿವುದು ಗುರುಲಿಂಗದಲ್ಲಿ: ಉಷ್ಣವಾದ ಸ್ಪರ್ಶನವನರಿವುದು ಶಿವಲಿಂಗದಲ್ಲಿ: ಶೈತ್ಯವಾದ ಸ್ಪರ್ಶನವನರಿವುದು ಜಂಗಮ ಲಿಂಗದಲ್ಲಿ: ನುಣುಪು ಮಿಶ್ರವಾದ ಸ್ಪರ್ಶನವನರಿವುದು ಪ್ರಸಾದಲಿಂಗದಲ್ಲಿ ; ಇಂತಿವು ಎಲ್ಲರಲ್ಲಿಯ ಸ್ಪರ್ಶನವನರಿವುದು ಮಹಾಲಿಂಗದಲ್ಲಿ ಇಂತು ಜಂಗಮಲಿಂಗದ ಮಿಶ್ರಾರ್ಪಣವು”

ಸ್ಪರ್ಶದಲ್ಲಿಯೂ ಕಠಿಣ, ಮೃದು, ಉಷ್ಣ ಶೈತ್ಯ, ನುಣುಪು ಮಿಶ್ರವೆಂದು ಆರು ವಿಧವಾಗಿದೆ. ಇವುಗಳನ್ನು ಕ್ರಮವಾಗಿ ಜಂಗಮಲಿಂಗದೊಳಗಿನ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗಗಳಿಂದ ಅರಿಯಬೇಕು. ಐದರ ಅನುಭವವೇ ಮಹಾಲಿಂಗಕ್ಕೆ ತೃಪ್ತಿಯನ್ನೀಯುವದು. ಗುರುದೇವ ! ಸ್ಪರ್ಶಸುಖ ಬಯಸುವ ತ್ವಗಿಂದ್ರಿಯದಲ್ಲಿ ಜಂಗಮಲಿಂಗದ ಸಾಕ್ಷಾತ್ಕಾರವಾಗುವಂತೆ ಕರುಣಿಸಿ ಲಿಂಗಸ್ಪರ್ಶಸುಖವನ್ನು ಅನುಭವಿಸಬಲ್ಲ ಘನತೆಯನ್ನಿತ್ತು ಸಲಹು.

ಕುಮಾರ ಸ್ವಾಮಿಗಳವರ ಶಿಷ್ಯ ಸಂಪತ್ತು ಅಷ್ಟಿಷ್ಟಲ್ಲ; ಅಗಣಿತವಾಗಿದೆ. ಇಂದಿಗೆ ೪೧  ವರುಷಗಳಿಂದ ನಡೆಯುತ್ತಿರುವ ಶಿವಯೋಗಮಂದಿರದಲ್ಲಿಯೆ ಸಾವಿರಾರು ಮಂದಿ ಶಿಷ್ಯರಾಗಿದ್ದಾರೆ. ಆಚೆ ಉತ್ತರಕರ್ನಾಟಕದಲ್ಲಿ ಊರು ಊರಿನಲ್ಲಿ ಶಿಷ್ಯರಾಗಿದ್ದಾರೆ. ಸಮಾಜದ ಪ್ರಮುಖರನೇಕರು ಸ್ವಾಮಿಗಳವರಲ್ಲಿ ಶಿಷ್ಯತ್ವವನ್ನು ವಹಿಸಿದ್ದಾರೆ. ಆದರೆ ಅವರೆಲ್ಲರ ಹೆಸರುಗಳನ್ನು ಇಲ್ಲಿ ಹೆಸರಿಸಲು ಸಾಧ್ಯವಿಲ್ಲ. ಸ್ವಾಮಿಗಳವರಲ್ಲಿಯೂ ಸಮಾಜದಲ್ಲಿಯೂ ಪ್ರಮುಖರಾದವರ ಸಂಕ್ಷಿಪ್ತ ಪರಿಚಯ ಇಲ್ಲಿ ಅವಶ್ಯಕ.

 

೧. ಶ್ರೀ ಜಗದ್ಗುರು ಗುರುಸಿದ್ಧರಾಜೇಂದ್ರ ಸ್ವಾಮಿಗಳವರು.

ಇವರು ಹುಬ್ಬಳ್ಳಿಯಲ್ಲಿ ಪ್ರಸಿದ್ಧವಾಗಿರುವ ಮೂರುಸಾವಿರಮಠದ ಅಧಿಪತಿಗಳು. ವಿರಕ್ತಾಶ್ರಮದ ಕುಮಾರ ಸಮಯ ಮೂಲ ಪೀಠದವರು. ಈ ಮಠಕ್ಕೆ ಹಾನಗಲ್ಲ ಸ್ವಾಮಿಗಳವರೆ ಇವರನ್ನು ನಿಯೋಜಿಸಿದರು. ಇವರು ಮೊದಲು ಕೊಣ್ಣೂರು ಮಠಾಧಿಪತಿಗಳು. ಶಿವಯೋಗ ಮಂದಿರದಲ್ಲಿದ್ದು ಓದಿದವರು. ಮಂದಿರದ ಅಧ್ಯಕ್ಷತೆಯನ್ನು ವಹಿಸಿ ಅನೇಕ ದಿನ ಕೆಲಸಮಾಡಿದ್ದಾರೆ. ತಮ್ಮ ಮಠದಲ್ಲಿಯೆ ಒಂದು ಸಂಸ್ಕೃತ ಪಾಠಶಾಲೆಯನ್ನು ಉಚಿತ ಭೋಜನಾಲಯವನ್ನು ಸ್ಥಾಪಿಸಿ… ಕಲಕತ್ತಾ ಯೂನಿರ್ವಸಿಟಿ ಪರೀಕ್ಷೆಗಳನ್ನು ತಮ್ಮ ಪಾಠಶಾಲೆಯಲ್ಲಿಯೆ ನೆರವೇರುವಂತೆ ಮಾಡಿಸಿದ್ದಾರೆ. ಅಲ್ಲದೆ ಅದೇ ಹುಬ್ಬಳ್ಳಿಯಲ್ಲಿ ಔದ್ಯೋಗಿಕ ಶಿಕ್ಷಣ ಕಾಲೇಜ ಸ್ಥಾಪನೆಗಾಗಿ ಒಂದು ಲಕ್ಷರೂಪಾಯಿಗಳನ್ನು ಉದಾರವಾಗಿ ಆಶೀರ್ವದಿಸಿದ್ದಾರೆ.

 

೨. ನವಿಲುಗುಂದ ಗವಿಮಠದ ಶ್ರೀ ಮ.ನಿ.ಬಸವಲಿಂಗ ಸ್ವಾಮಿಗಳವರು.

ಇವರು ಶಿವಯೋಗಮಂದಿರದಲ್ಲಿದ್ದು ಓದಿ ವಿದ್ಯಾವಿಚಕ್ಷಣರಾಗಿ ಸ್ವಾಮಿಗಳವರ ಶಿಷ್ಯರಲ್ಲಿ ಅಗ್ರಗಣ್ಯರಾಗಿದ್ದಾರೆ. ಅವರ ಕೃಪೆಗೆ ಪಾತ್ರರಾಗಿದ್ದಾರೆ. ಮಂದಿರದ ಉಪಾಧ್ಯಕ್ಷರಾಗಿ ಬಹುಕಾಲ ಕೆಲಸ ಮಾಡಿದ್ದಾರೆ. ಸ್ವಾಮಿಗಳವರು ಇದ್ದಾಗಳೆ ಗ್ರಂಥ ಬರೆವ ಶಕ್ತಿಯನ್ನು ಗಳಿಸಿದ್ದರು. ಈಚೆಗೆ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ದುಡಿದಿದ್ದಾರೆ; ತುಂಬಾ ಹೆಸರು ಗಳಿಸಿದ್ದಾರೆ. ಸಂಘ ಸಂಸ್ಥೆಗಳಲ್ಲಿ ಅಂಗವಹಿಸಿದ್ದಾರೆ. ಸರ್ವಧರ್ಮ ಸಮನ್ವಯದಂತಹ ಮಹತ್ಕಾರ್ಯವನ್ನು ಕೈಗೊಂಡಿದ್ದಾರೆ. ಅಯಾಮತದ ವಿದ್ಯಾವಂತರನ್ನು ಪ್ರತಿವರ್ಷ ಕರೆಯಿಸಿ ಮಠದಲ್ಲಿ ಭಾಷಣ ಮಾಡಿಸುತ್ತಾರೆ. ಎಲ್ಲ ತತ್ವಗಳ ಸಮನ್ವಯ ಪ್ರಚಾರ ಪ್ರಾರಂಭಿಸಿದ್ದಾರೆ. ಕೆಲವು ದಿನಗಳ ಹಿಂದೆ ಬಾಗಲಕೋಟೆಯಲ್ಲಿ ಆದ ಬಸವೇಶ್ವರ ಕಾಲೇಜ ಸ್ಥಾಪನೆಗೆ ಮೂಲಕರ್ತರಾಗಿ ನಿಂತು ಕೆಲಸ ಮಾಡಿದ್ದಾರೆ. ಕಾಸುಕೂಡಿಸಿದ್ದಾರೆ. ಕೀರ್ತಿ ಪಡೆದಿದ್ದಾರೆ. ಹೀಗೆ ಅವರ ಕಾರ್ಯಕ್ಷೇತ್ರ ಅನೇಕ   ಮುಖವಾಗಿದೆ.   ಆಧುನಿಕ ಸಾಹಿತಿಗಳು ವಿದ್ವಾಂಸರು ಪ್ರಮುಖರು ಇವರಲ್ಲಿ ಶ್ರದ್ಧೆ ವಿಶ್ವಾಸವುಳ್ಳವರಾಗಿದ್ದಾರೆ.

 

೩ ಹಾಲಕೆರೆಯ ಇಂದಿನ ಶ್ರೀ ಮ.ನಿ, ಅನ್ನದಾನ ಸ್ವಾಮಿಗಳವರು.

ಇವರು ಶಿವಯೋಗ ಮಂದಿರದಲ್ಲಿದ್ದು ಶಿಕ್ಷಣ ಪಡೆದವರಲ್ಲದಿದ್ದರು, ಹಾನಗಲ್ಲ ಸ್ವಾಮಿಗಳವರಿಂದ ಹೆಚ್ಚು ಉಪಕೃತರಾಗಿದ್ದಾರೆ. ಸ್ವಾಮಿಗಳವರು ಲಿಂಗೈಕ್ಯರಾದ ಮೇಲೆ ಶಿವಯೋಗಮಂದಿರದ ಅಧ್ಯಕ್ಷತೆಯನ್ನು ವಹಿಸಿ ಅಮೋಘವಾದ ಸೇವೆ ಸಲ್ಲಿಸಿದ್ದಾರೆ. ತಪೋನಿಷ್ಠರು, ಭವನ ನಿರ್ಮಾಣ ಚಿತ್ರ ಬರವಣಿಗೆ ಕಲೆಗಳಲ್ಲಿ ನಿಷ್ಣಾತರು. ಮೊನ್ನೆ ಮೊನ್ನೆ ಗದುಗಿನಲ್ಲಿ ಜ್ಞಾನ ದಾಸೋಹವನ್ನು ಕರೆದು ತಿಂಗಳುಗಟ್ಟಲೆ ಬಹು ವಿಜೃಂಭಣೆಯಿಂದ ಜರುಗಿಸಿದರು. ದೊಡ್ಡ ದೊಡ್ಡ ವಿದ್ವಾಂಸರನ್ನು ಶಿವಾನುಭವಿಗಳನ್ನು ಕರೆಯಿಸಿದ್ದರು.

 

೪. ಬಿದರಿ ಪಟ್ಟಾಧ್ಯಕ್ಷರವರು.

ಇವರ ನಿಜವಾದ ಹೆಸರು ಬಿದರೀ ಪ್ರಭುಕುಮಾರ ಪಟ್ಟಾಧ್ಯಕ್ಷರು. ಇವರು ಸ್ವಾಮಿಗಳವರ ಶಿಷ್ಯರು. ಬಹುಕಾಲ ಶಿವಯೋಗಮಂದಿರ ನಿವಾಸಿಗಳು. ಯೋಗದಲ್ಲಿ ಅದ್ವಿತೀಯರು. ಸಂಸ್ಥೆಯಲ್ಲಿ ಯೋಗ ಶಿಕ್ಷಣಾಚಾರ್ಯರಾಗಿದ್ದರು. ಉತ್ತರ ಭಾರತ ಸಂಚಾರ ಮಾಡಿ ಅಲ್ಲಿನ ಯೋಗಿಗಳಿಂದ ‘ಯೋಗಿರಾಜ’ ಎಂಬ ಬಿರುದು ಪಡೆದಿದ್ದರು. ಪ್ಲಾವಿನಿ ವಜ್ರೋಳಿ ಮುಂತಾದ ಮೇಲಿನ ಯೋಗಗಳಲ್ಲಿ ಸಂಪೂರ್ಣಸಿದ್ಧಿ ಇವರಿಗಿತ್ತು. ಶಾಂತರು ಸರಳಹೃದಯರು. ಸಾಧುಶೀಲರು. ಶಿವಪೂಜಾ ಧುರಂಧರರು. ನೀರ ಮೇಲೆ ಆಸನ ಹಾಕಿ ಎಷ್ಟು ಹೊತ್ತಾದರು ತೇಲುತ್ತಿದ್ದರು. ನೆಲದ ಮೇಲೆ ಆಸನ ಹಾಕಿ ಹನ್ನೆರಡು ಗಂಟೆ ಹೊತ್ತಾದರು ಸುಖವಾಗಿ ಸ್ಥಿರವಾಗಿ ಕುಳಿತಿರುತ್ತಿದ್ದರು. ಅನೇಕರಿಗೆ ದೀಕ್ಷಾ ಗುರುಗಳು. ಲಿಂಗೈಕ್ಯರಾಗಿದ್ದಾರೆ. ನಾಮಾಂಕಿತವಿಟ್ಟು ಒಂದು

 

೫. ಸಖರಾಯ ಪಟ್ಟಣದ ಪಟ್ಟಾಧ್ಯಕ್ಷರಾದ ಶ್ರೀ ಮ.ಲಿಂ.ಚ. ಸದಾಶಿವ ಶಿವಾಚಾರ್ಯಸ್ವಾಮಿಗಳವರು.

ಇವರು ಶಿವಯೋಗ ಮಂದಿರದಲ್ಲಿ ಸಂಸ್ಕೃತ ಶಿಕ್ಷಣ ಪಡೆದು ಸ್ವಾಮಿಗಳವರ ಕೃಪೆಗೆ ಪಾತ್ರರಾದವರು. ವಿದ್ಯೆಯಲ್ಲಿ ಯೋಗದಲ್ಲಿ ಶೀಲಾಚರಣೆಯಲ್ಲಿ ಶಿವಪೂಜೆಯಲ್ಲಿ ನಿಷ್ಣಾತರು. ಕನ್ನಡದಲ್ಲಿ ಕೆಲವು ಗ್ರಂಥಗಳನ್ನು ಬರೆದಿದ್ದಾರೆ. ಹಾನಗಲ್ಲ ಸ್ವಾಮಿಗಳವರ ಮೇಲೆ ಒಂದು ರಗಳೆಯ ಕಾವ್ಯವನ್ನು ಅವರ ನಾಮಾಂಕಿತವಿಟ್ಟು ಒಂದು ವಚನವನ್ನು ರಚಿಸಿದ್ದಾರೆ. ಸಂಸ್ಕೃತದಲ್ಲಿ ‘ಕೈವಲ್ಯೋಪನಿಷದ್ಭಾಷ್ಯ’ ಬರೆದಿದ್ದಾರೆ. ಅಚ್ಚಾಗುತ್ತಿದೆ. ಇದು  ಇವರ ವೈಶಿಷ್ಟ್ಯ  ನಮಗೆಲ್ಲ ಹೆಮ್ಮೆ. ಇದನ್ನು ಬರೆದು ಇವರು ನಿಜವಾಗಿ ಆಚಾರ್ಯ ಪದವಿಗೇರಿದ್ದಾರೆ. ಗಿರಿಯಾಪುರದಲ್ಲಿ ಶ್ರೀಗುರು ಕುಮಾರಾಶ್ರಮವನ್ನು ಸ್ಥಾಪಿಸಿದ್ದಾರೆ. ಮೊನ್ನೆ ಮೊನ್ನೆ ಮಾಘಮಾಸದಲ್ಲಿ ಅದೇ ಆಶ್ರಮದಲ್ಲಿ ಶಿವಾನುಭವ ಸಪ್ತಾಹ’ವನ್ನು ಸ್ವಾಮಿಗಳವರ ಸ್ಮಾರಕಕ್ಕಾಗಿ ಕೂಡಿಸಿ ಒಳ್ಳೆ ವೈಭವದಿಂದ ವ್ಯವಸ್ಥೆಯಿಂದ ನೆರವೇರಿಸಿದ ಪುಣ್ಯಪುರುಷರು. ಈ ಕೃತಿಯು ಸಹ ಅವರ ಪ್ರೇರಣೆಯ ಫಲ. ಅವರ ಸಪ್ತಾಹ ಸ್ಮಾರಕಚಿನ್ಹೆ.

 

೬ ಶ್ರೀ ಮ.ನಿ. ನಾಗನೂರು ಶಿವಬಸವ ಶ್ರೀಗಳವರು.

ಇವರು ಶಿವಯೋಗಮಂದಿರದಲ್ಲಿದ್ದು ಸ್ವಾಮಿಗಳವರಿಗೆ ಶಿಷ್ಯರಾದವರು, ಹೆಚ್ಚು ವಿದ್ಯಾಭ್ಯಾಸ ಮಾಡದಿದ್ದರು ವಿದ್ಯಾರ್ಥಿಗಳ ಪೋಷಣದಂತಹ ಮಹತ್ಕಾರ್ಯವನ್ನು ಕೈಗೊಂಡಿದ್ದಾರೆ.  ಬೆಳಗಾವಿ ಜಿಲ್ಲಾ ಕೇಂದ್ರದಲ್ಲಿ ಒಂದು ವಿದ್ಯಾರ್ಥಿ ನಿಲಯ ಸ್ಥಾಪಿಸಿ ಬಹುದಿನಗಳಿಂದ ಬಹುರೂಪದಲ್ಲಿ ಶ್ರಮಿಸಿ ಓದುವ ವಿದ್ಯಾರ್ಥಿಗಳಿಗೆ ಊಟ ವಸತಿಗಳನ್ನು ಏರ್ಪಡಿಸಿದ್ದಾರೆ. ಈಗ ಅದು ಬೃಹದ್ರೂಪದಲ್ಲಿ ಮೈದಾಳಿ ಕೆಲಸ ಮಾಡುತ್ತಿದೆ. ಇದೀಗ ಇವರು ಶಿವಯೋಗ ಮಂದಿರ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.

 

೭. ಕೊಪ್ಪದ ಶ್ರೀ ಮ.ನಿ. ಮಹಾಂತ ಶ್ರೀಗಳವರು.

ಈಗ ಇಳಕಲ್ಲ ಮಠಾಧಿಕಾರಿಗಳಾಗಿದ್ದಾರೆ. ಇವರು ಶಿವಯೋಗಮಂದಿರದಲ್ಲಿದ್ದು ಶಿಕ್ಷಣ ಪಡೆದು ಉತ್ತಮ ವ್ಯಾಖ್ಯಾತೃಗಳಾಗಿದ್ದಾರೆ. ಜನಮನಾಕರ್ಷಣಶಕ್ತಿ ಇವರಲ್ಲಿ ಚನ್ನಾಗಿದೆ. ವಾಣಿ ಪ್ರಸನ್ನತೆಯಿದೆ. ಲೀಲಾಜಾಲವಾಗಿ ರುಚಿಕರವಾಗಿ ಮಾತಾಡಬಲ್ಲರು ಸಭಿಕರನ್ನು ನಗೆಗಡಲಲ್ಲಿ ಮುಳುಗಿಸಿ ತೇಲಿಸಬಲ್ಲರು. ಸ್ವಾಮಿಗಳವರ ಅಪ್ಪಣೆಯ ಮೇರೆಗೆ ನಾಡಿನ ಅನೇಕ ಭಾಗಗಳಲ್ಲಿ ಸಂಚರಿಸಿ ಧರ್ಮ ನೀತಿಗಳನ್ನು ಪೌರಾಣಿಕ ಕಥಾಜೋಡಣೆಯಿಂದ ಮನ ಮೆಚ್ಚುವಂತೆ ಬೋಧಿಸಿ ಜನ ಜಾಗೃತಿಯ ಮಾಡಿ ಶಿವಯೋಗಮಂದಿರ ಕೀರ್ತಿ ಬೆಳಗಿಸಿ ಕೃತಾರ್ಥರಾಗಿದ್ದಾರೆ. ಇಳಕಲ್ಲ ಮಠಾಧಿಪತಿಗಳಾದ ಮೇಲೆ ಹುನಗುಂದದಲ್ಲಿ ಒಂದು ಹೈಸ್ಕೂಲನ್ನು ಸ್ಥಾಪಿಸಿ ಉಚಿತ ಭೋಜನಾಲಯವನ್ನು ಏರ್ಪಡಿಸಿ ಸತ್ಕಾರ್ಯ ಮಾಡುತ್ತಿದ್ದಾರೆ. ಅಲ್ಲಿನ ಮಹಾಜನಗಳ ಪ್ರೇಮಾದರಗಳಿಗೆ ಪಾತ್ರರಾಗಿದ್ದಾರೆ. ಇವರು ವಿದ್ಯಾಗುಣ ಪಕ್ಷಪಾತಿಗಳು. ನಿಗರ್ವಿಗಳು. ಬೋಧಾಸಕ್ತರು. ಸ೦ತಸಚಿತ್ತರು. ಪ್ರೋತ್ಸಾಹಿಗಳು.

 

೮. ಶ್ರೀ ಮ.ನಿ. ಜಡೆಸ್ವಾಮಿಗಳೆಂಬವರೊಬ್ಬರು.

ಇವರು ಅನೇಕ ಕಾಲ ಶಿವಯೋಗ ಮಂದಿರದಲ್ಲಿದ್ದು ಸಂಸ್ಥೆಯ ಸೇವೆ ಸಲ್ಲಿಸಿದ್ದಾರೆ. ಅನುಷ್ಠಾನ ಮಾಡುವದರಲ್ಲಿ ಸ್ವಾಮಿಗಳವರಿಗೆ ಅಚ್ಚು ಮೆಚ್ಚಿಗೆಯವರಾಗಿದ್ದರು. ಕಲ್ಯಾಣದಲ್ಲಿರುವ ಮುಖ್ಯವಾದ ಶೂನ್ಯಸಿಂಹಾಸನ ಮಠಕ್ಕೆ ಅಧಿಪತಿಗಳಾಗಿದ್ದಾರೆ. ಪ್ರಭುಸ್ವಾಮಿಗಳಾಗಿದ್ದಾರೆ. ಸದ್ಯಃ ಬೀರೂರಿನಲ್ಲಿದ್ದು ವಿದ್ಯಾಪ್ರೋತ್ಸಾಹ ಸೇವೆ ಸಲ್ಲಿಸುತ್ತಿದ್ದಾರೆ.

 

೯. ಈ ಕೃತಿಕರ್ತರ ಪರಿಚಯ ಅನಾವಶ್ಯಕವಾದರು ಕ್ರಮಪ್ರಾಪ್ತವಾಗಿ ಎರಡು ಮಾತನ್ನು ಹೇಳಿದರೆ ಹೆಚ್ಚೆನಿಸಲಾರದು; ಆತ್ಮಸುತ್ತಿಯೆನಿಸಲಾರದು. ಶ್ರೀ ಜಗದ್ಗುರು ನಿಡುಮಾಮಿಡಿ ಶ್ರೀಶೈಲ ಪೀಠವು  ಪಂಚಪೀಠಗಳಲ್ಲೊಂದು. ಶ್ರೀಶೈಲ ಸೂರ್ಯಸಿಂಹಾಸನ ಪೀಠ. ಪ್ರಾಚೀನ ಪೀಠ, ಪ್ರಭಾವಯುತ ಪೀಠ.  ಸ್ವಾಮಿಗಳವರ ಕೃಪೆಯ ಬಲದಿಂದ ಇದರ ಅಧಿಕಾರ ಪ್ರಾಪ್ತವಾಗಿದೆ. ಹಿಂದಿದ್ದ ಮೈಸೂರು ಮಹಾರಾಜರವರ ಆರ್ಡರ ಪ್ರಕಾರ ಕೋಲಾರ ಜಿಲ್ಲಾಧಿಕಾರಿಗಳು ಸ್ವತಃ ನಿಂತು ಪೀಠದ ಪಟ್ಟಾಧಿಕಾರವನ್ನು ನೆರವೇರಿಸಿದರು. ಶಿವಯೋಗ ಮಂದಿರ ಶಿಕ್ಷಣ ಪಡೆದವರಲ್ಲಿ ನಾವೊಬ್ಬರು. ಅಷ್ಟಿಷ್ಟು ಕನ್ನಡ ಸಾಹಿತ್ಯ ಸೇವೆ ನಡೆಯುತ್ತಿದೆಯೆಂಬುದಕ್ಕೆ ಈ ಕೃತಿಯೊಂದು ಸಾಕ್ಷಿ. ಇದು ಹನ್ನೆರಡನೆಯ ಕೃತಿ. ಗೌರಿಬಿದನೂರಿನಲ್ಲಿ ಕೋಮುಪಂಥಗಳ ಭಾವನೆಯಿಲ್ಲದೆ ವಿದ್ಯಾರ್ಥಿನಿಲಯವನ್ನು ಸ್ಥಾಪಿಸಲಾಗಿದೆ. ಎರಡು ವರ್ಷಗಳಿಂದ  ನಡೆಯುತಲಿದೆ. ಗೂಳೂರಿನ ಮಾಧ್ಯಮಿಕ ಶಾಲೆಯ ಕಟ್ಟಡಕ್ಕೆ ಪೀಠದಿಂದ ಧನಸಹಾಯ ಮಾಡಲಾಗಿದೆ. ಕರ್ನಾಟಕ ಏಕೀಕರಣ ವಿಷಯದಲ್ಲಿ ಭಾಷಣಗಳ ಮೂಲಕ ಸೇವ ಸಲ್ಲಿದೆ.

 

೧೦. ಭಾಲ್ಕಿ ಶ್ರೀ ಮ.ಲಿಂ.ಚ. ಚನ್ನಬಸವ ಪಟ್ಟಾಧ್ಯಕ್ಷರು.

ಇವರು ಶಿವಯೋಗ   ಮಂದಿರದಲ್ಲಿದ್ದು ಶಿಕ್ಷಣ ಪಡೆದವರು. ಸ್ವಾಮಿಗಳವರ ಸೇವೆಯನ್ನು ಮಾಡಿ ಧನ್ಯರಾದವರು. ಇವರು ಹೈದರಾಬಾದ ಪ್ರಾಂತ್ಯದಲ್ಲಿ ಗುಲಬರ್ಗಾ ಜಿಲ್ಲೆಯ ಒಂದೂರಿನಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಿ ಆ ಭಾಗದ ವಿದ್ಯಾರ್ಥಿಗಳಿಗೆ ತುಂಬ ಸಹಾಯ ಮಾಡಿದ್ದಾರೆ; ಸತ್ಕಾರ್ಯ ನಿರತರಾಗಿದ್ದಾರೆ.

 

ಇದಲ್ಲದೆ ಶ್ರೀ ವ್ಯಾಕರಣಾಳ ಪಟ್ಟಾಧ್ಯಕ್ಷರು, ಕೆಳದಿ ಪಟ್ಟಾಧ್ಯಕ್ಷರು, ಸೂಡಿ ಪಟ್ಟಾಧ್ಯಕ್ಷರು ಶ್ರೀ ಸವದತ್ತಿ ಅಪ್ಪಯ್ಯ ಸ್ವಾಮಿಗಳವರು, ಬಾಗಲಕೋಟಿ ಕರವೀರಮಠದ ಶ್ರೀಗಳು, ನೇರಡುಗುಂಭ ಶ್ರೀಗಳು ಮುಖ್ಯ ಶಿಷ್ಯರಾಗಿದ್ದರು.

 

೧೧. ಶಿರೂರಿನ ಶ್ರೀ ಮಾಗಿ ಶಿವಬಸಪ್ಪ ಮಾಸ್ತರರು.

ಇವರು ಸಂಸ್ಥೆಯ ಸ್ಥಾಪನೆಯ ಮೊದಲ್ಗೊಂಡು ಇಂದಿನವರೆವಿಗು ಸಂಸ್ಥೆಯ ಮ್ಯಾನೇಜರರಾಗಿ ಅಮೋಘವಾದ ಸೇವೆ ಸಲ್ಲಿಸಿದ್ದಾರೆ; ಸಲ್ಲಿಸುತ್ತಿದ್ದಾರೆ. ಮನೆ ಬಾಳಿನ ಮಮತೆಯನ್ನು ಬಿಟ್ಟು ಔದಾರ್ಯದಿಂದ ಔತ್ಸುಕ್ಯದಿಂದ ಭಕ್ತಿಪ್ರಸಕ್ತಿಯಿಂದ ಸಂಸ್ಥೆಯ ಸೇವೆಗೆ ತಮ್ಮ ಆಯುಷ್ಯವನ್ನೇ ಮುಡಿಪಿಟ್ಟು ದುಡಿದು ಧನ್ಯರಾದರು. ಆದರ್ಶಜೀವಿಗಳಾದರು, ಸ್ವಾಮಿಗಳವರ ಸತ್ಕೃಪೆಗೆ ಪಾತ್ರರಾದರು. ಇವರ ತ್ಯಾಗ, ಸತ್ಯಸಂಧತೆ, ಸ್ವಾಮಿಗಳವರಲ್ಲಿದ್ದ ಗಾಢಭಕ್ತಿ ನಿಯಮ ನಿಷ್ಠೆ, ವಚನ ಪರಿಪಾಲನಾ ದೃಷ್ಟಿ, ಕಷ್ಟಸಹಿಷ್ಣುತೆ ಮುಂತಾದ ಗುಣಗಳು ಸ್ತುತ್ಯರ್ಹವಾದವು. ಈಗ ತೀರ ಅಪರವಯಸ್ಸಿನವರಾಗಿ ಸಂಸ್ಥೆಯಲ್ಲಿಯೆ ತಂಗಿದ್ದಾರೆ.

 

೧೨. ಸಂಗೀತಗಾರರು : ಶ್ರೀ ಪಂಚಾಕ್ಷರಿ ಗವಾಯಿಗಳವರು.

ಇವರು ಸ್ವಾಮಿಗಳವರ ಕೃಪೆಯಲ್ಲಿಯೇ ಬೆಳೆದು ಸಂಗೀತಾಭ್ಯಾಸ ಮಾಡಿ ನಂತರ ಒಂದು ಸಂಗೀತ ಪಾಠಶಾಲೆಯನ್ನು ಸ್ಥಾಪಿಸಿದರು. ಸ್ವಾಮಿಗಳವರ ಕೃಪೆಯಿಂದ ಗಾಯನ ನಯನ ಪಡೆದು ಅನೇಕ ಕುರುಡ ಮಕ್ಕಳಿಗೆ ಗಾನನೇತ್ರಗಳನ್ನು ತಂದುಕೊಟ್ಟರು. ಅವರಲ್ಲಿ ಶ್ರೀ ಪುಟ್ಟಯ್ಯನವರು ಅಗ್ರಗಣ್ಯರು. ಇವರು ಈಗ ಅದೇ ಪಾಠಶಾಲೆಯನ್ನು ತಮ್ಮಗಾಯನ ಕವನ ಕಲಾಶಕ್ತಿಗಳಿಂದ ಸುರಕ್ಷಿತವಾಗಿ ಮುಂದುವರಿಸಿದ್ದಾರೆ. ಗದಗಿನಲ್ಲಿ ಕುಮಾರಾಶ್ರಮವೊಂದನ್ನು ಸ್ಥಾಪಿಸಿ ಅಲ್ಲಿ ಗಾಯನ ಶಿಕ್ಷಣವನ್ನು ನಡೆಸಿದ್ದಾರೆ. ಅಲ್ಲದೆ ಕುರುಡರಿಗೆ ಆಧುನಿಕ ವಿಜ್ಞಾನ ಪದ್ಧತಿಯನ್ನನುಸರಿಸಿ ಅಕ್ಷರಾಭ್ಯಾಸವನ್ನು ಆರಂಭಿಸಿ ಅದರಲ್ಲಿಯು ಜಯಶೀಲರಾಗಿದ್ದಾರೆ. ಒಟ್ಟಿನಲ್ಲಿ ಕುಮಾರೇಶ್ವರನ ಕೃಪೆಯಿಂದ ಕನ್ನಡ ನಾಡಿನ ಕುರುಡ ಮಕ್ಕಳನೇಕರು ಗಾನ-ವಿದ್ಯೆಗಳನ್ನು ಕಲಿತು ಸ್ವತಂತ್ರಜೀವಿಗಳಾಗಿ ಸಾಂಸ್ಕೃತಿಕ ಜೀವಿಗಳಾಗಿ ಬದುಕುವಂತಾಗಿದೆ; ಬೆಳಗುವಂತಾಗಿದೆ.

 

೧೩. ಕೀರ್ತನಕಾರರು :

 ೧. ದೇವಲಾಪುರದ ಶ್ರೀ ಬಸವಲಿಂಗ ಶಾಸ್ತ್ರಿಗಳವರು.

ಇವರು ಸ್ವಾಮಿಗಳವರ ಆಶೀರ್ವಾದದಿಂದ ಆಶ್ರಯದಿಂದ ಅದ್ವಿತೀಯ ಕೀರ್ತನಕಾರರಾದರು. ತಮ್ಮ ಅಸ್ಖಲಿತವಾದ ಅದ್ಭುತವಾದ ವಾಕ್ ವೈಖರಿಯಿಂದ ಜನರನ್ನು ತಲೆದೂಗಿಸುತ್ತಿದ್ದರು. ಮಂಜುಳವಾದ ಕಂಠದಿಂದ ಮನ ಮೆಚ್ಚಿಸುತ್ತಿದರು. ವಿಷಯ ನಿರೂಪಣೆಯಲ್ಲಿ ಅವರದೇ ಒಂದು ವೈಶಿಷ್ಟ್ಯ. ಎಷ್ಟು ಅಲ್ಪ ಅವಕಾಶ ಕೊಟ್ಟರು ಅದರಲ್ಲಿಯೆ ವಿಷಯವನ್ನು ಸೂಕ್ತವಾಗಿ ತೃಪ್ತಿಕರವಾಗಿ ಪ್ರತಿಪಾದಿಸುತ್ತಿದ್ದರು. ಜನರನ್ನು ಹರ್ಷವುಳಕಿತರನ್ನಾಗಿ ಮಾಡುತ್ತಿದ್ದರು. ಕೊನೆಯವರೆಗು ಕೀರ್ತನ ಸೇವೆಯನ್ನು ಸಲ್ಲಿಸಿ ಕನ್ನಡ ನಾಡಿನಲ್ಲಿ ತಮ್ಮ ಸಂಸ್ಥೆಯ ಕೀರ್ತಿ ಹರಡಿದರು. ಶಿವಯೋಗ ಮಂದಿರದಲ್ಲಿಯ ಸಮಾಧಿಸ್ಥರಾದರು.

 

ಎರಡನೆಯವರು ಹಿರಿಯಹಾಳ ಶ್ರೀ ವೀರಯ್ಯನವರು. ಇವರು ಆ ಕೀರ್ತನ ಕಲೆಯನ್ನು ಸ್ವಾಮಿಗಳವರಲ್ಲಿಯೆ ಅಭ್ಯಸಿಸಿದವರು. ಅಭ್ಯುದಯಕ್ಕೆ ಬಂದವರು. ಹೆಚ್ಚಿನ ಸಂಗೀತ ಹೆಚ್ಚಿನ ವಿದ್ವತ್ತು ಇಲ್ಲದಿದ್ದರೂ ಕಲೆಯಲ್ಲಿ ಹಿಂದಡಿಯಿಡದವರು.  ಇದ್ದ ಸಂಗೀತದಲ್ಲಿಯೆ ವಿಚಾರಾತ್ಮಕವಾಗಿ ವಿನೋದಾತ್ಮಕವಾಗಿ ಕೀರ್ತನ ಮಾಡಬಲ್ಲ ಸಮರ್ಥರು. ಜಂಭದ ಮಾತಿಲ್ಲ. ಜನತಾ ಪ್ರೇಮಿಗಳು. ಈಗಲು ಕೀರ್ತನ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸ್ವಾಮಿಗಳವರಲ್ಲಿ ಮೀರಿದ ಭಕ್ತಿವಂತರಾಗಿದ್ದಾರೆ.

 

೧೪. ಕವಿಗಳು :

೧. ದ್ಯಾಂಪೂರಿನ ಶ್ರೀ ಚನ್ನಕವಿಗಳು. ಇವರು ಸ್ವಾಮಿಭಕ್ತರು. ಪುರಾಣಕರ್ತರು. ಷಟ್ಪದಿಯಲ್ಲಿ ಅನೇಕ ಪುರಾಣಗಳನ್ನು ಬರೆದಿದ್ದಾರೆ. ಪುರಾಣ ನಿರ್ಮಾಣ ವಿಷಯದಲ್ಲಿ ಇವರು ವೀರಶೈವ ವ್ಯಾಸರು. ರಾಘವಾಂಕನ ಕಾವ್ಯಕನ್ನಿಕೆ ಇವರ ಕೈವಿಡಿದಿದ್ದಳು; ಕೃತಾರ್ಥಳಾಗಿದ್ದಳು. ಚನ್ನಕವಿಗಳು ತಮ್ಮ ಕಾವ್ಯ ಶ್ರೀಯನ್ನು ಕೊನೆಯ ಉಸಿರಿನಲ್ಲಿಯು ಸ್ವಾಮಿಗಳವರ ಪಾದದಲ್ಲಿರಿಸಿ ಕೃತಾರ್ಥರಾದರು; ಕೀರ್ತಿಕಾಯರಾದರು.

ಎರಡನೆಯವರು…. ಶ್ರೀ ಲಿಂಗಪ್ಪ ಮಾಸ್ತರರು.

ಇವರು ಸ್ವಾಮಿ ಶಿಷ್ಯರು. ಕಾವ್ಯಜೀವಿಗಳು ಸ್ವಾಮಿಗಳವರ ಮೇಲೆ ಅನೇಕ ಪದ್ಯಗಳನ್ನು ಬರೆದಿದ್ದಾರೆ. ಕಾವ್ಯವೊಂದನ್ನು ಕಟ್ಟಿದ್ದಾರೆ. (ಅದಾವುದೊ ಹೆಸರು ಗೊತ್ತಿಲ್ಲ) ಸ್ವಾಮಿಗಳವರಲ್ಲಿ ಅಚಲವಾದ ಭಕ್ತಿಯಿತ್ತು. ಇವರು ಮುಕ್ತರಾಗಿದ್ದಾರೆ.

 

೧೫. ಸಂಶೋಧಕರು ಅಥವಾ ಶಿವಾನುಭಾವಿಗಳು : ಶ್ರೀ ಚನ್ನಮಲ್ಲಿಕಾರ್ಜುನರು ‘ಸದ್ಧರ್ಮ ದೀಪಿಕೆ’ಯ ಸಂಪಾದಕರು. ಇವರು ಸ್ವಾಮಿಗಳವರ ತುಂಬಾ ನೆಚ್ಚಿನ ಶಿಷ್ಯರು. ಮೊದಲಿನಿಂದಲು ಸ್ವಾಮಿಗಳವರಲ್ಲಿ ಪಳಗಿದ್ದಾರೆ. ಅವರ ಸನ್ನಿಧಿಯಲ್ಲಿಗೆ ಆಗಾಗ್ಗೆ ಬಂದು ಅನೇಕ ಸಂಶೋಧನೆಗಳನ್ನು ಮಾಡಿದ್ದಾರೆ. ಭಾಷಣ ಮಾಡಿದ್ದಾರೆ. ಅಲ್ಲದೆ ಶ್ರೀಗಳವರ ಆಶೀರ್ವಾದದಿಂದ ಒಂದು ಪ್ರೆಸ್ಸನ್ನು ಪಡೆದು ಹಾವೇರಿಯಲ್ಲಿದ್ದು ‘ಸದ್ಧರ್ಮ ದೀಪಿಕೆ’ ಮಾಸಿಕ ಹೊರಡಿಸಿದರು. ಅನೇಕ ಸ್ವತಂತ್ರ ಪುಸ್ತಕಗಳನ್ನು ಬರೆದು ಪ್ರಕಟಿಸಿದರು. ಪುರಾತನ ಗ್ರಂಥಗಳನ್ನು ಪ್ರಕಟಿಸಿದರು. ಅವುಗಳಲ್ಲಿ ಅಕ್ಕಮಹಾದೇವಿಯ ರಗಳೆ ಪ್ರಧಾನವಾದುದು. ಸ್ವಾಮಿಗಳವರಲ್ಲಿದ್ದು ಶಿವಾನುಭವ ಮರ್ಮವನ್ನು ಚನ್ನಾಗಿ ಅರಿತಿದ್ದಾರೆ, ಈಗಲು ಅದೇ ಮಾಸಿಕವನ್ನು ಹೊರಡಿಸುತ್ತಿದ್ದಾರೆ.

 

ಎರಡನೆಯವರು ದ್ಯಾಂಪೂರ ಶ್ರೀ ಮಹಾಲಿಂಗಪ್ಪನವರು. ಇವರು ಶಿವಯೋಗ ಮಂದಿರದಲ್ಲಿಯೆ ಅನೇಕ ವರುಷಗಳವರೆಗೆ ಸ್ವಾಮಿಗಳವರ ಸನ್ನಿಧಿಯಲ್ಲಿದ್ದು ಪುರಾತನ ಗ್ರಂಥಗಳನ್ನು ಸಂಶೋಧಿಸಿದ್ದಾರೆ. ಸ್ವಾಮಿಗಳವರಿಂದ ಉತ್ತೇಜಿತರಾಗಿದ್ದಾರೆ. ಈಗಲು ಅದೇ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಮೂರನೆಯದಾಗಿ ಇಟಗಿ ಶ್ರೀ ಸೋಮನಾಥ ಶಾಸ್ತ್ರಿಗಳವರು. ಇವರು ಸಂಸ್ಕೃತ ಪಂಡಿತರು. ಮಗ್ಗಿಮಾಯಿದೇವರ ಸಂಸ್ಕೃತ ಶಿವಾನುಭವ ಗ್ರಂಥಗಳ ವಿಚಾರವನ್ನು ಸ್ವಾಮಿಗಳವರಲ್ಲಿ ಆಳವಾಗಿ ಅಭ್ಯಸಿಸಿದ್ದರು. ಶಿವಾನುಭವಿಗಳಾಗಿದ್ದರು. ಶಿಷ್ಯರಾಗಿದ್ದರು. ಶಿವಾಧೀನರಾಗಿದ್ದಾರೆ.

 

೧೬. ಲೇಖಕರು : ಶ್ರೀ ಕರ್ಜಿಗಿ ಗುರುಮೂರ್ತಿ ಶಾಸ್ತ್ರಿಗಳವರು. ಇವರು ಸ್ವಾಮಿಗಳವರಲ್ಲಿ ನಿಷ್ಠಾವಂತ ಶಿಷ್ಯರು. ಸ್ವಾಮಿಗಳವರಿಂದ ಪ್ರಚೋದಿತರಾಗಿ ಅನೇಕ ಬಗೆಯ ಲೇಖನಗಳನ್ನು ಬರೆಯುತ್ತಿದ್ದರು. ‘ಶಿವಪ್ರತಾಪ’ ಎಂಬ ವಾರ ಪತ್ರಿಕೆಯ ಸಂಪಾದಕರಾಗಿದ್ದರು. ಸ್ವಾಮಿಗಳವರ ಆಶ್ರಯ ಅಪ್ಪಣೆಗಳಿಂದ ಆ ಪತ್ರಿಕೆ ಹೊರಬಿದ್ದು ಕೆಲವು ದಿನ ಮಾತ್ರ ಕೆಲಸ ಮಾಡಿತು. ಶಾಸ್ತ್ರಿಗಳವರು ಸ್ವಾಮಿಗಳವರ ಜನ್ಮಭೂಮಿಯ ಬಳಿಯವರು. ಅದರಿಂದಾಗಿ ಸ್ವಾಮಿಗಳವರ ಸಂಕ್ಷಿಪ್ತ ಚರಿತೆಯನ್ನು ಸಂಗ್ರಹಿಸಿ ಸ್ಮಾರಕ ಚಂದ್ರಿಕೆಯಲ್ಲಿ ಕೊಟ್ಟಿದ್ದಾರೆ. ಅದುವೆ ಈ ಗ್ರಂಥಕ್ಕೆ ಬೀಜ. ಇವರು ಶಿವಾಧೀನರಾಗಿದ್ದಾರೆ.

ಶ್ರೀ ಮಲ್ಲಿಕಾರ್ಜುನ ದೇಶಿಕರು. ಇವರು ಸ್ವಾಮಿಗಳವರಲ್ಲಿ ಅನೇಕ ದಿನಗಳಿದ್ದು ಸೇವೆ ಮಾಡಿದ್ದಾರೆ. ಅಭ್ಯಾಸ ಮಾಡಿದ್ದಾರೆ. ಅಭ್ಯಾಸಕ್ಕಿಂತ ಆಶೋತ್ತರವೇ ಮಿಗಿಲಾಗಿದ್ದ ಇವರನ್ನು ಇಂದು ಒಬ್ಬ ಲೇಖಕರಾಗುವಂತೆ ಮಾಡಿದ್ದಾರೆ ಸ್ವಾಮಿಗಳವರು. ಇವರು ಈಚೆಗೆ ನಾಲ್ಕಾರು ಪುಸ್ತಕಗಳನ್ನು ಬರೆದಿದ್ದಾರೆ.

೧೭. ಪುರಾಣಿಕರು :

೧. ತೆಲಸಂಗದ ಶ್ರೀ ಬಸವಲಿಂಗ ಪಟ್ಟದ್ದೇವರು. ಇವರು ಶಿವಯೋಗಮಂದಿರದಲ್ಲಿಯೆ ಇದ್ದು ಅಭ್ಯಾಸಮಾಡಿದವರು. ಸಂಸ್ಕೃತದಲ್ಲಿ ಚನ್ನಾಗಿ ಗತಿಯಿದ್ದವರು. ಮರಾಠಿ ಭಾಷೆಯ ಪರಿಚಯವು ಇವರಿಗಿದೆ. ಇವರು ಶಿವಯೋಗ ಮಂದಿರದಲ್ಲಿಯೆ ಸಂಗೀತಾಭ್ಯಾಸವನ್ನು ತಕ್ಕಷ್ಟು ಮಾಡಿ ಪುರಾಣ ಹೇಳುವದರಲ್ಲಿ ಪ್ರವೀಣರಾಗಿದ್ದಾರೆ. ಶಾರೀರವಿದೆ; ಸೇಮುಷಿಯಿದೆ. ಇವರಲ್ಲದೆ ಶ್ರೀ ರುದ್ರದೇಶಿಕರು ಎಡಹಳ್ಳಿ ಇವರು ಸಹ ಪುರಾಣವನ್ನು ಹೇಳಬಲ್ಲರು.

 

ಇದಲ್ಲದೆ ಸಾಮಾಜಿಕರಲ್ಲಿ ದೇವಿಹೊಸೂರು ರಾ.ಬ. ಚನ್ನಬಸವಪ್ಪ ಶೆಟ್ಟರು, ಶಿರಸಂಗಿ ಲಿಂಗರಾಜರು, ಅರಟಾಳ ರುದ್ರಗೌಡರು, ಮೆಣಸಿನಕಾಯಿ ಸಾಹೇಬರು, ಕಿತ್ತೂರು ರೇವಣಸಿದ್ದಪ್ಪನವರು, ಶ್ರೀ ವೀರಬಸವ ಶ್ರೇಷ್ಟಿಯವರು, ವಾರದ ಅಪ್ಪಾಸಾಹೇಬರು, ಒಂಟಮುರಿ ದೇಸಾಯರು, ಇಟಗಿ ದೇಸಾಯರು, ಸವದತ್ತಿ ಮೂಗಪ್ಪಣ್ಣನವರು, ತೇರದಾಳ ಬುದ್ದಯ್ಯನವರು, ಧಾರವಾಡ ಶಿವಲಿಂಗ ಶಾಸ್ತ್ರಿಗ ಗಳು,  ರೋಣ ಜೋಳದ ಮಾಸ್ತರರು, ಅಡ್ನೂರಿನ ಪ್ರಭುಗೌಡರು, ಕುರಹಟ್ಟಿ ಪರ್ವತಗೌಡರು, ಬೆನಕೊಪ್ಪ ಭಾಪುಗೌಡರು ಮುಂತಾಗಿ ಅನೇಕ ಪ್ರಮುಖ ಶಿಷ್ಯರಿದ್ದರು; ಈಗಲು ಇವರಲ್ಲಿ ಕೆಲವರಿದ್ದಾರೆ.

 

ಹಾವೇರಿ ಶ್ರೀಗಳವರು

ಇವರು ಹಾನಗಲ್ಲ ಕುಮಾರ ಸ್ವಾಮಿಗಳವರಿಗೆ ಮಲ್ಲಣಾರ್ಯರಂತೆ ಅತ್ಯಂತ ಆಪ್ತರು. ಆದರಾಭಿಮಾನಿಗಳು. ಕೊನೆಯವರೆವಿಗು ಸ್ವಾಮಿಗಳವರೊಡನೆ ಸಹಕರಿಸಿ ಕೆಲಸ ಮಾಡಿದರು. ಸ್ವಾಮಿಗಳವರು ಶಿವಯೋಗ ಮಂದಿರ ಭಾರವನ್ನು ತಮ್ಮ ತರುವಾಯ ಇವರ ಹೆಗಲ ಮೇಲಿರಿಸಿ ಇಳುಹಿ ಹೋದರು. ಹಾವೇರಿ ಹುಕ್ಕೇರಿಮಠದ ಶ್ರೀ ಮ.ನಿ. ಶಿವಬಸವ ಸ್ವಾಮಿಗಳವರು ಆ ಭಾರವನ್ನು ತಮ್ಮ ಉಸಿರು ಇರುವವರೆವಿಗು ಹೊತ್ತು ನಿತ್ತರಿಸಿದರು. ಯಶಸ್ವಿಗಳಾದರು. ಇವರು ತಪೋನಿಷ್ಠರು. ಸದಾಚಾರ ನಿರತರು.

 

 

ಲೇಖಕರು : ಪೂಜ್ಯ ಶ್ರೀ.ಜಗದ್ಗುರು   ಡಾ|| ಸಿದ್ಧರಾಮ ಮಹಾಸ್ವಾಮಿಗಳು.ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

 

ಇಂದಿನ ವೈಜ್ಞಾನಿಕಯುಗದಲ್ಲಿ ಧರ್ಮ ತನ್ನ ನೈಜ ಅರ್ಥವನ್ನು ಕಳೆದುಕೊಂಡು ತಪ್ಪು ತಪ್ಪಾಗಿ ಅರ್ಥೈಸಲ್ಪಡುತ್ತಿದೆ. ಅಜ್ಞಾನ ಅಂಧಶ್ರದ್ಧೆಯಿಂದಾಗಿ ಧರ್ಮವು ಜಾತೀಯ ಸಂಘಟನೆಯಾಗಿ, ಗೊಡ್ಡು ಸಂಪ್ರದಾಯವಾಗಿ ಅವಹೇಳನಕ್ಕೆ ಗುರಿಯಾಗುತ್ತಿದೆ. ಅನೇಕ ವಿದ್ಯಾವಂತರು, ಪ್ರಗತಿಪರ ವಿಚಾರವುಳ್ಳವರು ನಾವು ಇಂಥ ಧರ್ಮಕ್ಕೆ ಸೇರಿದವರು ಅಥವಾ ಧಾರ್ಮಿಕರು ಎಂದು ಹೇಳಿಕೊಳ್ಳಬಯಸುವುದಿಲ್ಲ. ಹಾಗೆ ಹೇಳಿದರೆ ಪ್ರಗತಿಶೀಲರು ಎನಿಸಿಕೊಳ್ಳಲಾರೆವು ಎಂದು ಭಾವಿಸುತ್ತಾರೆ. ಧರ್ಮವನ್ನು ಸರಿಯಾಗಿ ಅರ್ಥೈಸದಿರುವುದು ಹಾಗು ನಿಜಾಚರಣೆಗಿಂತ ಬಾಹ್ಯ ಆಡಂಬರಕ್ಕೆ ವಿಶೇಷ ಮಹತ್ವ ಕೊಡುವುದು ಈ ಅವಾಂತರಕ್ಕೆ ಕಾರಣವಾಗಿದೆ.

 

ವಾಸ್ತವದಲ್ಲಿ ಧರ್ಮ ಅತ್ಯಂತ ವಿಶಾಲವಾದ ಅರ್ಥವನ್ನು ಹೊಂದಿದೆ. ಪ್ರಾಣಿದಯೆ, ಅಂತಃಕರಣ, ಪ್ರೀತಿ, ವಿಶ್ವಾಸ, ಪ್ರಾಮಾಣಿಕತೆ, ಸೇವಾಮನೋಭಾವಗಳಲ್ಲಿ ಅದು ಸದಾ ಅಣುರಣಿಸುತ್ತದೆ. ಅದೊಂದು ಜೀವನಪದ್ಧತಿ ಹಾಗೆಯೇ ಆದರ್ಶ ನಡವಳಿಕೆ. ನಮ್ಮ ನೆರೆಹೊರೆಯವರನ್ನು ಅರ್ಥಮಾಡಿಕೊಂಡು, ಅವರೊಡನೆ ಹೊಂದಿಕೊಂಡು ಬಾಳುವುದೇ ಧರ್ಮ. ಇದನ್ನು ಬಿಟ್ಟು ಕೇವಲ ಪೂಜೆ, ಜಪತಪಾದಿ ಕರ್ಮಗಳೇ ಧರ್ಮವೆಂದು ಭಾವಿಸುವುದು ತಪ್ಪು. ಅಹಿಂಸಾಪರವಾದ, ನೀತಿಯುತವಾದ ಸಾತ್ವಿಕ ಬದುಕು ನಮ್ಮದಾಗಬೇಕು. ‘ದಯವಿಲ್ಲದ ಧರ್ಮ ಅದಾವುದಯ್ಯಾ?’ ಎಂದು ಬಸವಣ್ಣನವರು ಕೇಳುವಲ್ಲಿ ಇದೇ ಅರ್ಥ ಧ್ವನಿತವಾಗಿದೆ. ನೊಂದವರ ನೋವಿನಲ್ಲಿ ಭಾಗಿಯಾಗಿ ನಮ್ಮ ಕೈಲಾದಮಟ್ಟಿಗೆ ಅವರ ದುಃಖ ಶಮನಗೊಳಿಸುವುದು, ದೀನ ದಲಿತರ ಬದುಕಿಗೆ ಆಸರೆಯಾಗಿ ನಿಲ್ಲುವುದೇ ಧರ್ಮ. ಅದು ಬರೀ ಉಪದೇಶದ ಮಾತಲ್ಲ; ಚರ್ಚೆಯ ವಿಷಯವೂ ಅಲ್ಲ. ಮಾನವೀಯತೆಯನ್ನು ಅರಿತು ಆಚರಿಸುವುದೇ ಧರ್ಮ, ಅದಕ್ಕಾಗಿಯೇ ‘ಧರ್ಮಂಚರ’ ಎಂದು ಉಪನಿಷತ್ತಿನಲ್ಲಿ ಹೇಳಲಾಗಿದೆ. ಉದಾಹರಣೆಗಾಗಿ ಒಬ್ಬ ವ್ಯಕ್ತಿಗೆ ಗುಂಡು ತಗುಲಿದೆ ಎಂದು ಭಾವಿಸೋಣ. ಆಗ ನಾವು ತಕ್ಷಣ ವೈದ್ಯರಲ್ಲಿ ಅವನನ್ನು ಕರೆದುಕೊಂಡು ಹೋಗುತ್ತೇವೆ. ವೈದ್ಯರು ಅವನ ಶರೀರದಲ್ಲಿ ಪ್ರವೇಶವಾಗಿರುವ ಗುಂಡನ್ನು ತಕ್ಷಣ ಹೊರತಗೆದು ಸರಿಯಾದ ಔಷಧೋಪಚಾರ ಮಾಡುವುದೇ ಧರ್ಮ. ಅದು ಬಿಟ್ಟು, ನಿನಗೆ ಗುಂಡು ಹೊಡೆದ ವ್ಯಕ್ತಿ ಯಾರು? ಅವನ ವಯಸ್ಸೆಷ್ಟು? ಅವನು ಎಷ್ಟು ಎತ್ತರವಾಗಿದ್ದ? ಅವನ ಬಣ್ಣ ಯಾವುದಿತ್ತು? ಹೀಗೆಲ್ಲ ಚರ್ಚಿಸುತ್ತ ಕುಳಿತುಕೊಳ್ಳುವುದು ಧರ್ಮವಾದೀತೆ  ?

 

ಜಗತ್ತಿನಲ್ಲಿ ಇಂದು ಅಸ್ತಿತ್ವದಲ್ಲಿರುವ ಎಲ್ಲ ಧರ್ಮಗಳ ಗುರಿ ಮಾನವ ಕಲ್ಯಾಣ. ಬಾಹ್ಯ ಆಡಂಬರಕ್ಕೆ, ಅಂಧಾನುಕರಣೆಗೆ ಧರ್ಮದಲ್ಲಿ ಸ್ಥಳವಿಲ್ಲ. ಆದರೆ ದುರದೃಷ್ಟದಿಂದ  ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಧರ್ಮ ಸುಲಿಗೆಯ ಸಾಧನವಾಗಿ ಮಾರ್ಪಟ್ಟು ಅನಾದರಣೆಗೆ ಕಾರಣವಾಗಿದೆ. ಧರ್ಮ ಯಾವಾಗಲೂ ಜ್ಞಾನಿಯಲ್ಲಿ ಜನಿಸಿ, ಅನುಭಾವಿಯಲ್ಲಿ ಬೆಳೆದು ಪುರೋಹಿತಶಾಹಿಯ ಜನರಲ್ಲಿ ಅವಸಾನ ಹೊಂದುತ್ತದೆ. ಜಗತ್ತಿನ ಪ್ರತಿಯೊಂದು ಧರ್ಮದಲ್ಲಿ ಪುರೋಹಿತಶಾಹಿಯ ಕೈವಾಡ ಇದ್ದೇ ಇದೆ. ಬೌದ್ಧಧರ್ಮ ಭಾರತದಿಂದ ಹೊರಹೋಗುವಲ್ಲಿ, ಕ್ರಿಸ್ತ ಶಿಲುಬೆಗೇರುವಲ್ಲಿ, ಬಸವಣ್ಣನವರ ಕ್ರಾಂತಿ ವಿಫಲವಾಗುವಲ್ಲಿ, ಅವರ ಕೈವಾಡ ಸ್ಪಷ್ಟವಾಗಿದೆ. ಧರ್ಮ ಧರ್ಮಗಳಲ್ಲಿ ಭೇದ ಹುಟ್ಟಿಸಿ, ಧರ್ಮದ ಹೆಸರಿನಲ್ಲಿ ಕೊಲೆ ಸುಲಿಗೆಗಳಿಗೆ ಕಾರಣರಾದವರು ಇದೇ ಜನ. ಮನುಷ್ಯ ಧರ್ಮಾಭಿಮಾನಿ ಯಾಗಿರಬೇಕು ಎಂದಾಗ ಅಂಧಾಭಿಮಾನಿಯಾಗಬೇಕು ಎಂದು ಅರ್ಥವಲ್ಲ. ಭೂಮಿ ತನ್ನ ಅಕ್ಷದ ಸುತ್ತ ತಿರುಗುತ್ತ ಸೂರ್ಯನ ಸುತ್ತ ತಿರುಗುತ್ತಿರುವುದರಿಂದಲೇ ಹಗಲು, ರಾತ್ರಿಗಳು ಋತುಮಾನಗಳು ಸಾಧ್ಯವಾಗುತ್ತಿವೆ. ಇಲ್ಲದಿದ್ದರೆ ಹವಾಮಾನ ವೈಪರೀತ್ಯಗಳುಂಟಾಗಿ ಭೂಮಿಯ ನಾಶಕ್ಕೆ ಕಾರಣವಾಗುತ್ತಿತ್ತು. ಹಾಗೆಯೇ ವ್ಯಕ್ತಿ ಸ್ವಧರ್ಮ ನಿಷ್ಠೆಯುಳ್ಳವನಾಗಿರುವಂತೆ ಪರಧರ್ಮ ಸಹಿಷ್ಣುವಾದಾಗ ತಾನೂ ಬದುಕುತ್ತಾನೆ: ಇನ್ನೊಬ್ಬರನ್ನು ಬದುಕಿಸುತ್ತಾನೆ. ಪ್ರತಿಯೊಬ್ಬರಿಗೂ ಅವರದೇ ಆದ ಧರ್ಮವಿದೆ. ರಾಜಧರ್ಮ, ಪ್ರಜಾಧರ್ಮ, ಅಧ್ಯಾಪಕ ಧರ್ಮ, ಸೈನಿಕಧರ್ಮ ಇತ್ಯಾದಿ. ಅವರವರ ಧರ್ಮ ಪರಿಪಾಲನೆಯಲ್ಲಿಯೇ ಅವರವರ ಅಭ್ಯುದಯವೂ ಸೇರಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮವನ್ನು ಅರ್ಥಾತ್ ಕರ್ತವ್ಯಪ್ರಜ್ಞೆಯನ್ನು ಅರಿತು ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ಕಾರ್ಯ ಮಾಡುತ್ತ ಇಹಪರಗಳಲ್ಲಿ ಶ್ರೇಯಸ್ಸನ್ನು ಪಡೆಯಲು ಸಾಧ್ಯವಿದೆ.

ಲೇಖಕರು: ಶ್ರೀ ಕೆ. ವಿ. ಬಾಳಿಕಾಯಿ

 

ವೀರಶೈವ ಧರ್ಮವು ಬಹು ಪ್ರಾಚೀನವಾದುದು. ಷಟ್‌ಸ್ಥಲಗಳ ಮೂಲಕ ಮಾನವನನ್ನು ಮಹಂತನನ್ನಾಗಿ ಮಾಡುವ ದಿವ್ಯಾಮೃತ. ಅಲ್ಲಿಂದ ಇಲ್ಲಿಯವರೆಗೆ ಈ ವಿಶಾಲ ಧರ್ಮದಲ್ಲಿ ಅನೇಕ ಮಹಾತ್ಮರು, ಶಿವಶರಣರು ಆಗಿಹೋಗಿದ್ದಾರೆ. ಎಲ್ಲರ ತತ್ತ್ವಗಳನ್ನು ಕಂಡಾಗ, ಕಂಡು ಉಂಡಾಗ ಬಹಿರಂಗ ಸಂಗ ಬಿಟ್ಟು ಅಂತರಂಗದ ಜ್ಯೋತಿ ತಾನೇ ತಾನಾಗಿ ದೇದೀಪ್ಯಮಾನವಾಗಿ ಬೆಳಗುತ್ತದೆ. ಇಂತಹ ಮಹಾತ್ಮರಲ್ಲಿ ಮುಳಗುಂದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳು ಒಬ್ಬರಾಗಿದ್ದಾರೆ.

ಈ ಶಿವಯೋಗಿಗಳ ಬಗೆಗೆ ಐತಿಹಾಸಿಕವಾದ ಚಾರಿತ್ರ್ಯವು ನಮಗೆ ಸಾಕಷ್ಟು ಲಭ್ಯ ವಾಗಿಲ್ಲ. ಅಲ್ಲಲ್ಲಿ ಪ್ರಚಲಿತವಿದ್ದ ಅಂಶಗಳನ್ನು ಗಮನಿಸಿ ಇವರ ಚರಿತ್ರೆಯನ್ನು ಹೇಳ ಬೇಕಾಗುತ್ತದೆ. ಈ ಮಹಾತ್ಮರು ೧೯ನೆಯ ಶತಮಾನದ ಮೊದಲ ಪಾದದಲ್ಲಿ ಬಾಳಿ ಬೆಳಗಿದರು.  ಮುಳಗುಂದದ ಕಲ್ಮಠದ ಮಹಾಂತ ಶಿವಯೋಗಿಗಳು ಬಿಜಾಪುರ ಜಿಲ್ಲೆಯ ಯರನಾಳ ಗ್ರಾಮದ ಹಿರೇಮಠದ ಸದ್ಭಕ್ತ ದಂಪತಿಗಳಿಗೆ ಗಂಡುಮಗುವನ್ನು ಆಶೀರ್ವದಿಸಿದರು. ಆತನೇ ಮುಂದೆ ಬಾಲಲೀಲಾ ಮಹಾಂತ ಶಿವಯೋಗಿಯೆಂದು ಪ್ರಸಿದ್ಧವಾದನು.

 

ತಮ್ಮ ಚಿಕ್ಕ ವಯಸ್ಸಿನಲ್ಲೇ ತಾಯಿ-ತಂದೆಯನ್ನು ಬಿಟ್ಟು ಸದ್ಗುರುಗಳನ್ನು ಹುಡುಕುತ್ತ ಲಿಂಗನಾಯಕನಹಳ್ಳಿಗೆ ಬಂದು ಅಲ್ಲಿ ಶ್ರೀ ಚೆನ್ನವೀರ ಸ್ವಾಮಿಗಳ ಶಿಷ್ಯರಾಗಿ ಶಿವಯೋಗ ಸಾಧನವನ್ನು ಪಡೆದು ಜ್ಞಾನನಿಧಿಯಾಗಿ ದೇಶಸಂಚಾರ ಮಾಡುತ್ತ, ಬಾಲಲೀಲೆಗಳನ್ನು ತೋರುತ್ತ ಭಕ್ತರನ್ನು ಶಿವಭಕ್ತಿಯಲ್ಲಿ ನಡೆಸುತ್ತ ಅವರನ್ನು ಉದ್ಧರಿಸಿದರು.

 

ಈ ಮಹಾತ್ಮರು ರಚಿಸಿದ ಕೃತಿಯೇ ‘ಕೈವಲ್ಯ ದರ್ಪಣ’, ಕೈವಲ್ಯವೆಂದರೆ ಮೋಕ್ಷ ದರ್ಪಣವೆಂದರೆ ಕನ್ನಡಿ, ಮೋಕ್ಷವನ್ನು ತೋರಿಸುವ ಕನ್ನಡಿ. ಇದೊಂದು ಬಿಡಿಪದ್ಯಗಳ ಸಂಕಲನ. ಇದರ ಮಹಿಮೆಯನ್ನು ಎಷ್ಟು ವರ್ಣಿಸಿದರೂ ತೀರದು. ಶ್ರೀಗಳವರ ಆತ್ಮಧ್ವನಿಯೇ ಈ ಪದ್ಯಗಳಲ್ಲಿ ಗುಂಜಾರವ ಮಾಡಿದಂತೆ ಆಗುತ್ತದೆ. ಒಂದೊಂದು ಪದ್ಯವೂ ಸಾಧಕನಿಗೆ ಸಾಧನೆಯ ಸೋಪಾನ. ಎಲ್ಲ ಪದ್ಯಗಳ ಸೌಂದರ್ಯವನ್ನು ವಿವರಿಸಿ ಹೇಳುವುದು ಈ ಲೇಖನಕ್ಕೆ ಮೀರಿದ ಮಾತು.

ವೀರಶೈವ ಧರ್ಮದ ಅಷ್ಟಾವರ್ಣಗಳಲ್ಲಿ ಮೊದಲನೆಯ ಸ್ಥಾನ ಗುರುವಿನದು,.’ನ ಗುರೋರಧಿಕಂ’ ಎನ್ನುವ ಮಾತಿನಂತೆ, ಗುರುವಿಗಿಂತ ಹಿರಿದಾದ ವಸ್ತು ಜಗತ್ತಿನಲ್ಲಿ ಯಾವುದೂ ಇಲ್ಲ. ಅದನ್ನೇ ‘ಪಾಲಿಸೈ ಪರಮ ಶ್ರೀ ಗುರುನಾಥ ದಯೆಯಿಂದ ಎನ್ನುವ ಪದ್ಯದಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ. ಈ ಪದ್ಯದ ಭಾವ ಅಲೌಕಿಕ ಮತ್ತು ಇವರು ಪರಮಾತ್ಮನಲ್ಲಿ ಮೊರೆಯಿಡುವ ರೀತಿಯಂತು‌ ಅನ್ಯಾದೃಶ,. ಸಾಕು ಪರಿಹರಿಸು ಎನ್ನ ದೇಹದ ದುರ್ಗುಣಗಳನ್ನು ನೂಕು ನುಗ್ಗನು ಮಾಡಿ ಕಾಡುತಿಹವು”, ದೇಹದ ಒಳಗಿರುವ ಚೇಳು, ಹಾವು, ಹುಲಿ, ಕರಡಿಗಳೆಂಬ ದುರ್ಗುಣಗಳ ಬಾಧೆಯನ್ನು ಪರಿಹರಿಸು ದೇವಾ ಎಂದು ಬೇಡಿಕೊಳ್ಳುತ್ತಾರೆ. ಇಂಥಹ ಪದಗಳು ನಮ್ಮ ನಿತ್ಯಮಂತ್ರಗಳಾಗ ಬೇಕಾಗಿವೆ. ‘ಮನಸ್ಸೆಂಬ ಮಂಗವು ವಿಷಯದ ಇಂದ್ರಿಯದ ಶಾಖೆ ಶಾಖೆಗಳು ಹಾರುತಿದೆ, “ಕಂದನೆನ್ನನು ಸಲಹೋ ಗುರು ಮಹಾಂತಲಿಂಗ” ಎಂದು ಆರ್ತರಾಗಿ ಕೇಳುತ್ತಾರೆ. ಅದೇ ರೀತಿಯಾಗಿ ಲಿಂಗದ ಮಹಿಮೆಯನ್ನು ಕೊಂಡಾಡಿದ್ದಾರೆ. ಜಂಗಮದ ಮಹತಿಯನ್ನಂತೂ ಅವರ ಬಾಯಿಂದಲೇ ಕೇಳಬೇಕು.

 

ಜಂಗಮವೆ ಪರದೈವ ಜಗಮವೆ ಪರವಸ್ತು

ಜಂಗಮವೆ ಪರಮ ಪಾವನಮೂರ್ತಿಯು||

ಜಂಗಮದ ಪಾದವನು| ಪಿಂಗದಲ್ಲಿ ನೆನೆ ಮನವೆ

ಭಂಗಗೊಳಿಪುದು ಭವದ ಬೇರುಗಳನ್ನು       ||೧||

ಜಗಮವೆ ಜಗದೊಡೆಯ |ಜಂಗಮವೆ ಜಗಭರಿತ

ಜಂಗಮವೆ ಸಾಕ್ಷಾತ್ ಲಿಂಗಮೂರ್ತಿ |

ಜಂಗಮದ ಪಾದವನು| ಅಂಗ ಮನ ಪ್ರಾಣದಲಿ|

ಸಂಗೊಳಿಸು ಕಂಡೆಯ ಲೆ ಚಿತ್ತವೇ     ||೨||

 

ಮತ್ತೊಂದು ಪದ್ಯದಲ್ಲಿ ಸುಖಭೋಗ ದೊರೆಯುವ ಮಹಾಹಾದಿಯನ್ನೇ ಹೇಳಿ ಕೊಟ್ಟಿದ್ದಾರೆ.  ಅದು ತುಂಬಾ ಪ್ರಚಲಿತವಾಗಿರುವ ಪದ್ಯ ಎರಡು ಮಾಣಿಕ್ಯದ ಮಾತುಗಳು. ಹರಪೂಜೆ ಗುರುಸೇವೆ ಇಲ್ಲದೇ ಸುಖಭೋಗಗಳು ದೊರೆಯಲಾರದು. ಇದೇ ಪದ್ಯದ ಕೆನೆಯಲ್ಲಿ ‘ನರಪಾಪ ಪ್ರಣ್ಯವನು ನರರ ಸೆರಗಿನಲಿ ಹಾಕಿ ಗುರು ಮಹಾಂತ ಲಿಂಗ ತಾ ಮರೆಯಾಗಿರುತಿರುವ. ಅವರವರ ಪಾಪಪುಣ್ಯಗಳಿಗೆ ಅವರವರೇ ‘ಬಾದ್ಧಸ್ಥರು.ʼಉದ್ಧರೇತ್ ಆತ್ಮಾನಾ’ ‘ಆತ್ಮನಂ ಎಂಬ ಗೀತೆಯ ಮಾತು ಇಲ್ಲಿ ಪ್ರಸ್ತುತ

ವೀರಶೈವ ಸಿದ್ಧಾಂತದಲ್ಲಿ ಜಗತ್ತು ಮಿಥ್ಯೆಯಲ್ಲ ಜಗತ್ತು ಸತ್ಯವಾದುದು. ಪ್ರಪಂಚ ದಿಂದ ಪಾರಮಾರ್ಥದ ಕಡೆಗೆ ಸಾಗುವ ಮಹತ್ತಿನ ಹಾದಿ ಇದರಲ್ಲಿ ಅಡಕವಾಗಿದೆ. ಪ್ರಪಂಚಕ್ಕೆ ವಿಮುಖವಾಗುವುದು ಸಲ್ಲ.  ಅದನ್ನೇ ಪೂಜ್ಯ ಶ್ರೀಗಳವರು,

 

 ಸಂಸಾರದೊಳಗೆ ಸದ್ಗತಿಯುಂಟು ಕೇಳ್ ಮಗನೆ |

ಬಸವಾದಿ ಪ್ರಮಥರಿಗೇನಿದ್ದಿಲ್ಲವೇ ||

ಎನ್ನುವ ಪದ್ಯದಲ್ಲಿ ಮೋಕ್ಷದ ದಾರಿಯನ್ನು ಅತ್ಯಂತ ಸುಲಭವಾಗಿ ತಿಳಿಸಿಕೊಟ್ಟಿದ್ದಾರೆ.

 

ಇನ್ನೊಂದು ಪದ್ಯದಲ್ಲಿ ಶಿವಯೋಗಿಯ ಇರುವಿಕೆಯನ್ನು ಅತ್ಯಂತ ಹೃದ್ಯವಾಗಿ ಹೇಳಿದ್ದಾರೆ. ಆ ಶಿವಯೋಗಿಯ ಸ್ವರೂಪವನ್ನು ನೆನಸಿಕೊಂಡಾಗ ಆಗುವ ಆನಂದ ಅವರ್ಣನೀಯ.

 

ಶಿವಯೋಗಿ ಸಾಕ್ಷಾತ್ | ಶಿವನಾದ ಕಾರಣದಿ|

ಅವನಿಭೋಗಗಳವಗೆ ತೃಣಗಾಂಬುವು ||

‘ಏಕಂ ಸದ್ವಿಪ್ರಾಃ ಬಹುಧಾ ವದಂತಿ’ ಎನ್ನುವ ಮಾತಿನಂತೆ ದೇವನು ಒಬ್ಬನೇ. ಏಕದೇವನ ಇರುವಿಕೆಯನ್ನು ಎಲ್ಲರಿಗೂ ಅತ್ಯಂತ ಸುಲಭವಾಗಿ ತಿಳಿಯುವ ರೀತಿಯಲ್ಲಿ ಅರುಹಿದ್ದಾರೆ.

 

ಅವರವರ ಭಕ್ತಿಗೆ ಅವರವರ ಭಾವಕ್ಕೆ |

ಅವರವರ ತೆರನಾಗಿ ಇರುತಿಹನು ಶಿವಯೋಗಿ

 

ಈ ಪದ್ಯದ ಭಾವವನ್ನು ನಾವು ಸಂಪೂರ್ಣವಾಗಿ ಅರಿತು ಅನುಭವಿಸಿದ್ದಾದರೆ ನಾವು ಪೂರ್ಣ ನೆಮ್ಮದಿಯಿಂದ ಬಾಳಬಹುದಲ್ಲವೇ!

 

ಇವರು ತಮ್ಮ ಮಂಗಳಾರತಿ ಪದ್ಯದಲ್ಲಿ ಪರಮಾತ್ಮನನ್ನು ವರ್ಣಿಸಿದ ರೀತಿ ಅತ್ಯದ್ಭುತ. ವೇದೋಪನಿಷತ್ತುಗಳಲ್ಲಿ ಪರಮಾತ್ಮನನ್ನು ಅನೇಕ ರೀತಿಯಲ್ಲಿ ವರ್ಣಿಸಿದ್ದಾರೆ.  ಅದನ್ನೇ ನಮ್ಮ ಸಿರಿಗನ್ನಡದಲ್ಲಿ ಈ ಮಹಾಶಿವಯೋಗಿಗಳು ಎಲ್ಲರಿಗೂ ಸುಲಭಗ್ರಾಹ್ಯವಾಗುವ ರೀತಿಯಲ್ಲಿ ವರ್ಣಿಸಿದ್ದಾರೆ.

 

ಬೇಕು ಬೇಡಂಬೆರಡು ಭವಬೀಜಗಳ ಹುಲಿದು|

ಲೋಕದೊಳಗಿದ್ದು ಇಲ್ಲದ ಮಹಿಮೆಗೆ

ಭಂಗಾರ ಕಬ್ಬುನವು ಹಿರಿಕಿಗಿದು ಸಮಗಂಡ |

ಲಿಂಗ ಮಹಂತೇಶ ಮಹಾ ಜಗತ್ಪುತ್ರಗೆ

 

ಅತ್ಯಂತ ಕ್ಲಿಷ್ಟವಾದ ವಿಷಯವನ್ನು ಅತ್ಯಂತ ಸುಲಭವಾಗಿ ತಿಳಿಸುವ ರೀತಿ ಜ್ಞಾನಿಗಳಿಗೆ ಮಾತ್ರ ಸಾಧ್ಯ. ಮತ್ತೊಂದು ಪದ್ಯದಲ್ಲಿ ಭಕ್ತಿಯ ಹಿರಿಮೆಯನ್ನು ಕೊಡಮಾಡಿದ್ದಾರೆ. ‘ಸೆಡವು ಬಿಗುವಿನ ಭಕ್ತಿ ಹಿಡಿಯಬೇಡೆಂದು ನಮ್ಮೊಡೆಯ ಹೇಳಿದನು ಕೇಳಯ್ಯ’ ಭಕ್ತಿಯಲ್ಲಿ ಸಂಪೂರ್ಣ ಸಮರ್ಪಣ ಭಾವವಿರಬೇಕು. ಆ ಸಮರ್ಪಣ ಭಾವವಿರುವಾಗ `ಗುರು ತಂದೆ ಕಾಯುವಾ’, ಮತ್ತೊಂದು ಪದ್ಯದಲ್ಲಿ ಶ್ರೀಗಳು ಶಿವನ್ನು ಮಾತನಾಡಿಸುವ ರೀತಿಯನ್ನು ನೋಡಬೇಕು.

 

 ಗುರುವೆ ನೀ ಮಾತನಾಡೊ ಸುರತರು ಕಲ್ಪತರುವೆ ನೀ ಮಾತನಾಡೊ|

ಸುರರ ದೇವರ್ಕಳ ಒಡೋಲಗದೊಳು ಮೆರೆವೆ ನೀ ಮಾತನಾಡೋ ||||

 

ಲಿಂಗವೆ ಮಾತನಾಡೊ ಶ್ರೀಗುರು ಮಹಂ

ಲಿಂಗವೆ ಮಾತನಾಡೋ ||

ಸಂಗನ ಶರಣರ ಅಂಗೈಯೊಳಿರುವಂಥ|

ಲಿಂಗವೆ ಮಾತನಾಡೋ   ||೧||

 

ಈ ಮಾತನ್ನು ಕೇಳಿದಾಗ ಗುರುಲಿಂಗವು ಸಾಕ್ಷಾತ್ ಎದುರಿಗೆ ನಿಂತಿರುವ ಹಾಗೆ ಭಕ್ತರಿಗೆ ಭಾಸವಾಗುತ್ತದೆ.

ಒಟ್ಟಾರೆಯಾಗಿ ಈ ಶಿವಯೋಗಿಗಳವರ ‘ಕೈವಲ್ಯ ದರ್ಪಣ’ವೆಂಬ ಕೃತಿರತ್ನ ನಮ್ಮ ಸಾಹಿತ್ಯದ ಅಮೂಲ್ಯ ಕೃತಿಗಳಲ್ಲಿ ಒಂದಾಗಿದೆ. ಇದರ ವಿಷಯದ ಹರಹು ಬಹು ವಿಸ್ತಾರವಾದದ್ದು. ಶೈಲಿಯಂತೂ ಪಂಡಿತ ಪಾಮರರಿಗೂ ಹೃದ್ಯ. ಸಾಹಿತ್ಯಜ್ಞರಿಗೂ ಇಲ್ಲಿ ಅಲಂಕಾರಗಳ ರಸದೌತಣವಿದೆ. ಉದಾಹರಣೆಗೆ ಯಮಕಾಲಂಕಾರವು ಎಷ್ಟು ಸಹಜವಾಗಿ ಬಂದಿದೆ ನೋಡಿ.

 

ಪುಣ್ಯದಿಂದಲಿ ಆನೆ ಕುದುರೆಯು| ಪುಣ್ಯದಿಂದಲಿ ರಥ ಪದಾತಿಯು

ಪುಣ್ಯದಿಂದಲಿ ಸರ್ವಸಿದ್ಧಿಯು ಕೇಳು ಪುಣ್ಯತ್ಮ ||

ಪುಣ್ಯದಿಂದಲಿ ಅನ್ನ ವಸ್ತ್ರವು |ಪುಣ್ಯದಿಂದಲಿ ದಂಡು ಮಾರ್ಬಲ |

ಪುಣ್ಯದಿಂದಲಿ ಸರ್ವಸಿದ್ಧಿಯು ಕೇಳು ಪುಣ್ಯಾತ್ಮ ||

 

ಎಲ್ಲೂ ಕ್ಲಿಷ್ಟತೆಯ ಸುಳಿವಿಲ್ಲ. ಮಾನವನಿಗೆ ಅತ್ಯಂತ ಸರಳವಾಗಿ ಸಾಧನಾ ಮಾರ್ಗವನ್ನು ತಿಳಿಸಿದೆ ಈ ಕೃತಿರತ್ನ, ಇದರಲ್ಲಿಯ ತತ್ತ್ವಗಳು ನಮ್ಮ ದಾರಿದೀಪಗಳಾಗಬೇಕು. ಶಿವನೇ ತಾನಾದ ಈ ಮಹಾಶಿವಯೋಗಿಯು ಮನುಕುಲದ ಕಲ್ಯಾಣಕ್ಕಾಗಿ ಈ ಕೃತಿಯನ್ನು ನೀಡಿ ನಮ್ಮನ್ನು ಧನ್ಯರಾಗಿಸಿದ್ದಾರೆ. ಈ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಯ ದಿವ್ಯ ಪಾದಪದ್ಮಗಳಲ್ಲಿ ನನ್ನ ದೀರ್ಘದಂಡ ನಮನಗಳು.

“ಅಟ್ಯಾಕ” ಅನ್ನುವುದು ಬಸವ ಭಾಷೆಯೆ ?

ಲೇಖಕ:ಶ್ರೀಕಂಠ.ಚೌಕೀಮಠ

ಕಳೆದ ಹಲವು ತಿಂಗಳುಗಳಿಂದ ಕರ್ನಾಟಕದಲ್ಲಿ “ವಚನ ದರ್ಶನ” ಎಂಬ ಪುಸ್ತಕದ ಪ್ರಚಾರ ಮತ್ತು ಆ ಪುಸ್ತಕಕ್ಕೆ ಪ್ರತಿಯಾಗಿ  “ವಚನದರ್ಶನ ಮಿಥ್ಯ -ಸತ್ಯ” ಪುಸ್ತಕದ ಪ್ರಚಾರಗಳನ್ನು ನಾವೆಲ್ಲ ನೋಡುತ್ತ ಬಂದಿರುತ್ತೇವೆ.

ಒಂದು ಪುಸ್ತಕ ಅದರ ಒಳತಿರಳು  ತಪ್ಪು ಗ್ರಹಿಕೆಯಿಂದ ಕೂಡಿದೆ ಎಂಬ ಒಂದು ಗುಂಪಿನ ವಾದ ದ ಫಲಶೃತಿಯಾಗಿ ಆರಂಭವಾದ ಪ್ರತಿರೋಧಗಳು ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ರಾಷ್ಟ್ರೀಯ ಬಸವದಳ, ಲಿಂಗಾಯತ ಸಂಘಟನೆ ಬಸವಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರ ಮೂಲಕ ಆರಂಭ ಗೊಂಡಿದ್ದನ್ನು ನಾವು ನೋಡುತ್ತ ಕೇಳುತ್ತ ಬಂದಿದ್ದೇವೆ.

ಇದೊಂದು ತಾತ್ವಿಕ ಹೋರಾಟ.

ಒಂದು ಪುಸ್ತಕದ ವಿಷಯಗಳನ್ನು ವಿರೋಧಿಸುವ ಮತ್ತು ಅದಕ್ಕೆ ಪೂರಕವಾದ ವಿವರಣೆ ನೀಡುವ ಒಂದು ಅರ್ಥದಲ್ಲಿ  ಆರೋಗ್ಯಕರ ಚಳುವಳಿ.

ಆದರೆ ಈ ಆರೋಗ್ಯಕರ ಚಳುವಳಿಯ ಪ್ರತಿರೋಧದಲ್ಲಿ ಮೊನ್ನೆ ೨೨-೦೪-೨೦೨೫ ರಂದು ಬೆಳಗಾವಿಯಲ್ಲಿ ಜರುಗಿದ  “ವಚನ ದರ್ಶನ ಮಿಥ್ಯ VS ಸತ್ಯ” ಪುಸ್ತಕದ ಕುರಿತಾದ ಕಾರ್ಯಕ್ರಮದಲ್ಲಿ ಗದುಗಿನ ಕೆ.ವಿ.ಎಸ್.ಆರ್‌ ಪದವಿ ಪೂರ್ವ ಕಾಲೇಜಿನ ನಿವೃತ್‌ ಇಂಗ್ಲಿಷ್‌ ಭಾಷೆಯ ಪ್ರಾದ್ಯಾಪಕ ಮತ್ತು ವಚನ ಟಿ,ವಿಯ ಮುಖ್ಯಸ್ಥ ಸಿದ್ದು .ಬ. ಯಾಪಲಪರ್ವಿ ಎನ್ನುವವರು ಅನಾರೋಗ್ಯಕರ ವಾತವರಣ ವನ್ನು ಸೃಷ್ಠಿಸಿದ್ದು ಖಂಡನೀಯ.

ಕಾರ್ಯಕ್ರಮ “ವಚನ ದರ್ಶನ ಮಿಥ್ಯ VS ಸತ್ಯ” ಪುಸ್ತಕಕ್ಕೆ ಸೀಮಿತವಾಗಿದ್ದರೂ ಅನಾವಶ್ಯಕವಾಗಿ ಪುಸ್ತಕಕ್ಕೂ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೂ ಯಾವುದೇ ಸಂಬಂಧವಿಲ್ಲದಿದ್ದರೂ  ಪರಮಪೂಜ್ಯರ ಹೆಸರನ್ನು ಪ್ರಸ್ಥಾಪಿಸಿ : “ಪಂಚಾಚಾರ, ಗಣಾಚಾರದ ಹೆಸರಿನಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಮೇಲೆ ಅಟ್ಯಾಕ್ ಮಾಡಿದ ಕೂಡಲೇ ‘ಪಾಪ’ ಕೆಲವರಿಗೆ ನೋವಾಗುತ್ತದೆ, ಅದನ್ನ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟ ಕ್ಲಿಯರ್ ಮಾಡಲಿ.” ಎಂದು ಮಾತನಾಡುತ್ತ ಈ ಕೆಳಗಿನ ಸಾಲುಗಳ ಮೂಲಕ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟಕ್ಕೆ ಫತ್ವಾ ಹೊರಡಿಸಿರುವರು

  1. “ಪಂಚಾಚಾರ, ಗಣಾಚಾರದ ಹೆಸರಿನಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಮೇಲೆ ಅಟ್ಯಾಕ್ ಮಾಡಿದ ಕೂಡಲೇ ‘ಪಾಪ’ ಕೆಲವರಿಗೆ ನೋವಾಗುತ್ತದೆ, ಅದನ್ನ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟ ಕ್ಲಿಯರ್ ಮಾಡಲಿ.”
  2. “ಏನು ಸಂಸ್ಕೃತ ವ್ಯಾಮೋಹ ಕೇವಲ ಹಾನಗಲ್ಲ ಕುಮಾರ ಸ್ವಾಮಿಗಳಿಗೆ ಇತ್ತೋ?”
  3. “ಶಿವಯೋಗಮಂದಿರದ ಟೆಕ್ಸ್ಟ್ ಬುಕ್ ಏನು?”
  4. “ಅಲ್ಲಿ ಬಸವಣ್ಣನಿಗೆ ಅಪಮಾನ ಮಾಡಿದ ವ್ಯಕ್ತಿಯ ಟೆಕ್ಸ್ಟ್ ಬುಕ್ ಇದೆ. ಅದು ಯಾಕೆ ಇಡಬಾರದು ಅನ್ನೋದನ್ನ ನಾವು ಚರ್ಚಿಸೋಣ. .”

ಜೆಎಲ್‌ಎಂ ಸಂಘಟನೆಯ ಸಿದ್ದು ಯಾಪಲಪರ್ವಿ ಯ  “ಅಟ್ಯಾಕ” ಎನ್ನುವ ಈ  ಭಯೋತ್ಪಾದಕ ಶಬ್ಧಕ್ಕೆ ನನ್ನ ಮೂಲ ಭೂತ ಪ್ರಶ್ನೆ.

  1. ಸಾರ್ವಜನಿಕವಾಗಿ “ಪಂಚಾಚಾರ, ಗಣಾಚಾರದ ಹೆಸರಿನಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಮೇಲೆ ಅಟ್ಯಾಕ್ ಮಾಡಿದ ಕೂಡಲೇ ‘ಪಾಪ’ ಕೆಲವರಿಗೆ ನೋವಾಗುತ್ತದೆ, ಅದನ್ನ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟ ಕ್ಲಿಯರ್ ಮಾಡಲಿ.” ಎಂದು ಹೇಳಲಿಕ್ಕೆ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು ಮಾಡಿದ ಅಪರಾಧ ವೇನು ? .

ಸಮಾಜಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಮಹಾನ್‌ ಸಂತನಮೇಲೆ ಸಿದ್ದು ಯಾಪಲಪರ್ವಿಯಂತವರು ಮಾತನಾಡುವ ಮುನ್ನ ಜಾಗೃತ ಅವಸ್ಥೆಗೆ ಬಂದು ಎಚ್ಚರದಿಂದ  ಮಹಾತ್ಮರ ಬಗ್ಗೆ ಮಾತನಾಡಲಿ.

  1. ಪೂಜ್ಯರ ಭೌತಿಕ ಶರೀರ ಮಹಾಲಿಂಗದಲ್ಲಿ ಐಕ್ಯವಾಗಿ ೯೫ ವರ್ಷ ಕಳೆದರೂ ಪೂಜ್ಯರ ಮೇಲೆ “ಅಟ್ಯಾಕ್” ಎನ್ನುವ ಶಬ್ಧದ ಪ್ರಯೋಗ ಎಷ್ಟು ಸಮಂಜಸ ?‘ಪಾಪ’ ಕೆಲವರಿಗೆ ನೋವಾಗುತ್ತದೆ ಎಂದು ಹೇಳಿದ ಸಿದ್ದು .ಬ. ಯಾಪಲಪರ್ವಿಯವರಿಗೆ ಈ ಮೂಲಕ ತಿಳಿಸುವದೇನೆಂದರೆ ಇದು  ಕುಮಾರೇಶನ  ಅನುಯಾಯಿಗಳ ಬರೀ ನೋವಲ್ಲ ರಕ್ತ ಕ್ರಾಂತಿಗೆ,  ಸಿದ್ದು .ಬ. ಯಾಪಲಪರ್ವಿ  ಹಾಕಿದ ಮುನ್ನುಡಿ ಮತ್ತು ಈ ಮೂಲಕ ಉದ್ಭವವಾಗುವ ಎಲ್ಲ ಅಹಿತಕರ ಘಟನೆಗಳಿಗೆ ಈ ಕಾರ್ಯಕ್ರಮದ ಸಂಘಟಕರಾದ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟ ನೇರ ಹೊಣೆಯಾಗುತ್ತಾರೆ.

 

  1. “ಏನು ಸಂಸ್ಕೃತ ವ್ಯಾಮೋಹ ಕೇವಲ ಹಾನಗಲ್ಲ ಕುಮಾರ ಸ್ವಾಮಿಗಳಿಗೆ ಇತ್ತೋ?” ಎಂದು ಕೇಳುವ ಈ ಇಂಗ್ಲೀಷ ಪ್ರಾಧ್ಯಾಪಕರಿಗೆ ಪಿತ್ತ ನೆತ್ತಿಗೇರಿದಂತೆ ಕಾಣುತ್ತದೆ.ತಾನು ಪಾಶ್ಚ್ಯಾತ್ಯ ಭಾಷೆ ಇಂಗ್ಲೀಷ ಓದಿದರೆ ಮತ್ತು ಕಲಿಸಿದರೆ  ನಡೆಯುತ್ತದೆ ಆದರೆ ಜನ ಭಾರತದ ಮೂಲ ಭಾಷೆ ಸಂಸ್ಕೃತ ಓದಿದರೆ ಮತ್ತು ಓದಿಸಿದರೆ  ಅಪರಾಧವೆಂಬಂತೆ ವ್ಯಂಗವಾಗಿ ಮಾತನಾಡಿರುವ  ಸಿದ್ದು ಯಾಪಲಪರ್ವಿ  ಆಯಾ ಕಾಲ ಘಟ್ಟದ ಭಾಷಾ ಅಧ್ಯಯನ ಆಯಾ ಕಾಲಘಟ್ಟದ ಅನಿವಾರ್ಯತೆಯಿಂದಲೇ ನಡೆಯುತ್ತದೆಯೇ ಹೊರತು ವಯಸ್ಸು ಮುಚ್ಚಿಕೊಳ್ಳಲು  ಬಳಸುವ ಹೇರ ಡ್ರೈಯರ ಬಣ್ಣದಂತಲ್ಲ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳತಕ್ಕದ್ದು.

ಸಂಸ್ಕೃತ ಭಾಷೆಯ ಅಧ್ಯಯನವನ್ನು ಅಪಹಾಸ್ಯಗೊಳಿಸುವ ಪ್ರಯತ್ನವು ಜ್ಞಾನದ ಮೇಲೆ ಬೀರುವ ಅಪಮಾನವಾಗಿದೆ. ಸಿದ್ದು ಯಾಪಲಪರ್ವಿ   ಪಾಶ್ಚಾತ್ಯ ಭಾಷೆಯ ಅಧ್ಯಾಪಕರಾಗಿದ್ದರೂ, ಭಾರತೀಯ ಭಾಷೆಗಳ ವಿರುದ್ಧ ಅಭಿಮಾನ ಕೊರತೆಯು ಗಂಭೀರ ವಾದುದ್ದು.

  1. ಶಿವಯೋಗಮಂದಿರದ ಟೆಕ್ಸ್ಟ್ ಬುಕ್ ಏನು ? ಎಂದು ಪ್ರಶ್ನಿಸಿದ ಸಿದ್ದು ಯಾಪಲಪರ್ವಿ    ಶಿವಯೋಗಮಂದಿರದ ಹಲವು ಪ್ರಕಟಣೆಗಳಲ್ಲಿ ಶಿವಯೋಗಮಂದಿರದ ಅಧ್ಯಯನದ ಕುರಿತು ಅಲ್ಲಿ ಬಳಸುವ ಪಠ್ಯಪುಸ್ತಕಗಳ ಕುರಿತು ಪಾರದರ್ಶಕವಾಗಿ ಸಾರ್ವಜನಿಕಗೊಳಿಸಿದ್ದರೂ ಮತ್ತು ೨೨-೦೪-೨೦೨೫ ರಂದು ಬೆಳಗಾವಿಯಲ್ಲಿ ಜರುಗಿದ  ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಶಿವಯೋಗಮಂದಿರದ ಸಾಧಕರೇ ವಹಿಸಿದ್ದರೂ  ಶಿವಯೋಗಮಂದಿರದ ಪಠ್ಯಪುಸ್ತಕಗಳ ಕುರಿತು ಗುಮಾನಿ ಮತ್ತು ಅನುಮಾನ ವ್ಯಕ್ತಪಡಿಸಿದ್ದು ಕುಚೋದ್ಯತನವೇ ಹೊರತು ಬೇರೆ ಏನೂ ಇಲ್ಲ.ಅವುಗಳ ಕುರಿತು ಜನಸಮ್ಮುಖದಲ್ಲಿ ಶಂಕೆ ವ್ಯಕ್ತಪಡಿಸುವುದು ದುರಭಿಪ್ರಾಯದಿಂದ ಕೂಡಿದ ನಡೆ.

 

  1. “ಅಲ್ಲಿ ಬಸವಣ್ಣನಿಗೆ ಅಪಮಾನ ಮಾಡಿದ ವ್ಯಕ್ತಿಯ ಟೆಕ್ಸ್ಟ್ ಬುಕ್ ಇದೆ. ಅದು ಯಾಕೆ ಇಡಬಾರದು ಅನ್ನೋದನ್ನ ನಾವು ಚರ್ಚಿಸೋಣ. .” ಎಂದು ಹೇಳಿದ ಸಿದ್ದು .ಬ. ಯಾಪಲಪರ್ವಿಯವರ ವಿಚಿತ್ರ ಆಪಾದನೆ. ಇಷ್ಟೆಲ್ಲಾ ಸಾರ್ವಜನಿಕವಾಗಿ ಮಾತನಾಡಿ ಅಡ್ಡಗೋಡೆಯ ಮೇಲೆ ದೀಪವನ್ನಿಟ್ಟಂತೆ  ಸಾರ್ವಜನಿಕರಲ್ಲಿ ಶಿವಯೋಗಮಂದಿರದ ಬಗೆಗೆ ತಪ್ಪು ಕಲ್ಪನೆ ಬರುವಂತೆ ಪ್ರಚೋದನೆ ಮಾಡುವದಕ್ಕಿಂತ ಬದಲು ನೇರವಾಗಿ ಪುಸ್ತಕದ ಹೆಸರು ಮತ್ತು ಲೇಖಕನ ಹೆಸರು ಹೇಳಬಹುದಿತ್ತಲ್ಲವೆ?

 

  1. ಸಿದ್ದು ಯಾಪಲಪರ್ವಿ ಸದಸ್ಯರಾಗಿರುವ  ಜೆಎಲ್‌ಎಂ, ಬಸವಣ್ಣನವರ ವಚನನಾಮಾಂಕಿತ ವನ್ನೇ ಬದಲಿಸಿದವರ ಜೊತೆ ವೇದಿಕೆ ಹಂಚಿಕೊಂಡಿದ್ದನ್ನು ಮತ್ತು ಬಸವಣ್ನನವರ ಪತ್ನಿ ನೀಲಾಂಬಿಕೆ ವಚನ “ನೋಡು ನೋಡು ಲಿಂಗವೇ “ ವನ್ನೆ ಅಪಾರ್ಥ ಮಾಡಿದ,ಸಂಶೋದಕ ,ಚನ್ನಬಸವಣ್ಣ ನವರ ಜನನವನ್ನೇ ಅಪವಿತ್ರ ಗೊಳಸಿದ ವರನ್ನು ಒಪ್ಪಿಕೊಂಡು ಅವರ ಸಂಶೋದನೆಗಳನ್ನೆ ಹೊತ್ತು ಮೆರೆಸುವ ಜೆಎಲ್‌ಎಂ  ಕುರಿತು ಮೊದಲು ಚಿಂತಿಸಲಿ, ನಂತರ ಶತಮಾನದ ಇತಿಹಾಸ ವಿರುವ ಶಿವಯೋಗಮಂದಿರದ ಬಗ್ಗೆ ಮಾತನಾಡಲಿ.

 

ಈ ಮೂಲಕ ಇಂಥ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು  ಲಿಂಗಾಯತ ಮಠಾಧಿಪತಿಗಳ ಒಕ್ಕೂಟಕ್ಕೆ ನನ್ನ ಕಳಕಳಿಯ ಮನವಿ.ಇಂಥಹ ಅಚಾತುರ್ಯದ ಘಟನೆಗಳು ಮರುಕಳಿಸುವುದೇ ಆದಲ್ಲಿ ದಯವಿಟ್ಟು ಅದನ್ನು ಮುಂಚಿತವಾಗಿ  ಕಾರ್ಯಕ್ರಮದ  ಹಿಡನ್ನ ಅಜೆಂಡಾ ವನ್ನು ದಯವಿಟ್ಟು ಸಾರ್ವಜನಿಕವಾಗಿ ಬಹಿರಂಗಗೊಳಿಸಿ.

“ವಚನದರ್ಶನ ಮಿಥ್ಯ -ಸತ್ಯ ಎಂಬ ಪುಸ್ತಕದ ಹೆಸರಿನಲ್ಲಿ ಹಾನಗಲ್ಲ ಶ್ರೀ ಕುಮಾರೇಶ್ವರರ ನಿಂದನೆಯನ್ನು ಶಿವಯೋಗಮಂದಿರದ ಸಾಧಕ ಮಠಾಧಿಪತಿಗಳು ಶ್ರೀ ಕುಮಾರೇಶನ ಭಕ್ತ ಸಂಕುಲ ಒಪ್ಪಿಕೊಳ್ಳಲು ಸಾಧ್ಯವಿಲ್ಲ..

ಜಾಗತಿಕ ಲಿಂಗಾಯತ ಮಹಾಸಭಾ ಮತ್ತು  ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಸಿದ್ದು ಯಾಪಲಪರ್ವಿ ಮೂಲಕ ಆಡಿಸಿದ ಈ  ರೀತಿಯ ತುಚ್ಛ ಮಾತುಗಳನ್ನು ಸಹಿಸಲು ಇನ್ನು ಸಾಧ್ಯವಿಲ್ಲ.

ಈ ರೀತಿಯ ಶಬ್ದಪ್ರಯೋಗಗಳು, ವಿಶೇಷವಾಗಿ “ಅಟ್ಯಾಕ್” ಎಂಬ ಕ್ರೂರ ಪದದ ಬಳಕೆ, ಭಯೋತ್ಪಾದಕ ಛಾಯೆಯ ಮಾತುಗಳು ಸಮಾಜದಲ್ಲಿ ಭಾವನಾತ್ಮಕವಾಗಿ ತೀವ್ರ ಪ್ರತಿಕ್ರಿಯೆ ಉಂಟುಮಾಡಬಲ್ಲವು ಮತ್ತು ಭವಿಷ್ಯದಲ್ಲಿ ಶಾಂತಿಗೆ ಧಕ್ಕೆಯುಂಟುಮಾಡುವ ಆತಂಕವಿದೆ.

ವಚನ ಸಂಸ್ಕೃತಿಯ ಕುರಿತ ತಾತ್ವಿಕ ಚರ್ಚೆ ಮತ್ತು ಗ್ರಂಥಗಳ ಆಲೋಚನಾತ್ಮಕ ವಿಶ್ಲೇಷಣೆಗಳು, ಅರ್ಥಪೂರ್ಣ ರೀತಿಯಲ್ಲಿ ನಡೆಯುವುದು ಒಳ್ಳೆಯದು. ಆದರೆ, ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳವರ ನಾಮದೊಂದಿಗೆ ಯಾವುದೇ ಸಂಬಂಧವಿಲ್ಲದ ವಿಷಯವನ್ನು ಎಳೆದುಕೊಂಡು ಅವರು ಮೇಲೆಗೆ “ಅಟ್ಯಾಕ್” ಎಂಬ ಶಬ್ದವನ್ನು ಬಳಸುವುದು ನಿಜಕ್ಕೂ ಖಂಡನೀಯ.

ಈ ಕುರಿತು ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಮಠಾಧಿಪತಿಗಳ ಒಕ್ಕೂಟ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ಅಪೇಕ್ಷೆ ನಮ್ಮದಾಗಿದೆ. ಶತಮಾನದ ಪರಂಪರೆಯ ಘನತೆಯ ರಕ್ಷಣೆಯೇ ನಮ್ಮ ಆಶಯ.ಇದಕ್ಕೆ ಸಂಬಂಧಪಟ್ಟಂತೆ ತ್ವರಿತ ಕ್ರಮಕೈಗೊಳ್ಳಲಾಗುವುದು ಎಂಬ ವಿಶ್ವಾಸವಿದೆ.

-ಶ್ರೀಕಂಠ.ಚೌಕೀಮಠ

ಸೇವಕ-ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿ ಮತ್ತು ಕರ್ನಾಟಕ