.- ಶ್ರೀ ನಿರಂಜನ ಪ್ರಭು ಡಾ.ಚೆನ್ನಮಲ್ಲ ಮಹಾಸ್ವಾಮಿಗಳು ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ ಕನಕಗಿರಿ
ಭಾರತ ಅನ್ನುವುದು ಕೇವಲ ಒಂದು ಹೆಸರಲ್ಲ, ಅದು ಕೇವಲ ಒಂದು ದೇಶ ಮಾತ್ರವಲ್ಲ, ಅದೊಂದು ಸಂಸ್ಕೃತಿ, ಸತ್ಯದ ಪ್ರತೀಕವಾಗಿ, ತ್ಯಾಗಕ್ಕೆ ಪೂರಕವಾಗಿ, ಅಹಿಂಸೆಯ ಮುಖವಾಗಿ, ಆಧ್ಯಾತ್ಮದ ನೆಲೆಯಾಗಿ ಸನಾತನ ಸತ್ಯದ ಮೌಲ್ಯಗಳನ್ನು ಒಳಗೊಂಡು, ಜೀವನ ಸಿದ್ಧಾಂತವನ್ನು ತಿಳಿಸುವುದೇ ಭಾರತ.
ಭಾರತವನ್ನು ಅರ್ಥಮಾಡಿಕೊಳ್ಳಬೇಕೆಂದರೆ, ಭಾರತದ ಅಂತರಾತ್ಮವನ್ನು ಅರ್ಥ ಮಾಡಿಕೊಳ್ಳಬೇಕು. ಭಾರತದಲ್ಲಿನ ಆಧ್ಯಾತ್ಮವನ್ನು, ಭಾರತದಲ್ಲಿನ ಸಂಸ್ಕೃತಿಯನ್ನು, ಭಾರತದ ಜೀವನ ಮೌಲ್ಯಗಳನ್ನು ಹಾಗೂ ಭಾರತದ ಆದರ್ಶ ಇತಿಹಾಸವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಭಾರತದ ಪರಿಚಯ ನಮಗಾಗುತ್ತದೆ. ಭಾರತವೆಂದರೆ ಕೇವಲ ಭವ್ಯವಾದ ದೇವಾಲಯಗಳು, ಹಿಮಾಲಯ, ಗೌರಿಶಂಕರ ಶಿಖರ, ತಾಜ್ ಮಹಲ್, ಕೆಂಪುಕೋಟೆ, ಕಾಶಿ, ರಾಮೇಶ್ವರ, ಶ್ರೀಶೈಲ, ಗಂಗಾ ನದಿ ಇವು ನಿಜವಾದ ಭಾರತವಲ್ಲ. ನಿಜವಾಗಿಯು ಭಾರತ ಅರ್ಥವಾಗುವುದು ಇಲ್ಲಿರುವ ಸನಾತನವಾಗಿ ಉಳಿದು, ನಡೆದುಕೊಂಡು ಬಂದಿರುವ “ವಸುಧೈವ ಕುಟುಂಬಕಂʼʼ ಎಂಬ ಉದಾತ್ತವಾದ, ವಿಶಾಲವಾದ ಸಿದ್ಧಾಂತದಿಂದಾಗಿ ಎಂದರೆ ತಪ್ಪಾಗಲಾರದು. ʼʼತಿರಕೊಂಡ ತಂದು ಕರಕೊಂಡು ಉಣಬೇಕು” ಎಂಬ ಸಂಸ್ಕೃತಿಯಿಂದಾಗಿ ನಮ್ಮ ಭಾರತವನ್ನು ಪೂಜಿಸಲಾಗುತ್ತಿದೆ. ಇಲ್ಲಿರುವ ಮಾನವೀಯ
ಮೌಲ್ಯಗಳ ಪಾಲನೆಯಿಂದಾಗಿ ಹಾಗೂ ತಾನು ಯಾರು? ಎಂಬುದನ್ನು ತಿಳಿದುಕೊಳ್ಳುವ ಕಲೆಯನ್ನು ತಿಳಿಸಿಕೊಡುವುದೆ ಭಾರತ.
ಧರ್ಮ-ಆಧ್ಯಾತ್ಮದ ತಾಯೊಡಲು
ಯೋಗ-ಶಿವಯೋಗದ ಮೇಲೊಡಲು
ತತ್ತ್ವ-ಸಿದ್ಧಾಂತಗಳ ಹಾಲ್ಗಡಲು
ಸಂತ-ಶರಣರ ಸಿರಿಗಡಲು
ಜಗಕೆ ಜಗದ್ಗುರುವಾದ ಪುಣ್ಯಭೂಮಿ
ಚೆನ್ನನ ಅಭಿಮಾನ, ಸ್ವಾಭಿಮಾನದ ಭರತಭೂಮಿ
ಭಾರತ ಆಧ್ಯಾತ್ಮದ ನೆಲೆವೀಡು. ಇಲ್ಲಿ ಅನೇಕ ಧರ್ಮಗಳು ಸಹಬಾಳ್ವೆಯಿಂದ ಇವೆ. ‘ಅನೇಕತೆಯಲ್ಲಿ ಏಕತೆ’ ಎಂಬುದು ಭಾರತದ ಹೆಮ್ಮೆಯಾಗಿದೆ. ಧರ್ಮ ಮತ್ತು ಆಧ್ಯಾತ್ಮ ಭಾರತದ ನಿಜವಾದ ಮೂಲ ಸತ್ವವಾಗಿದೆ. ಭಾರತದಲ್ಲಿ ಹುಟ್ಟಿರುವ ಸಂತರು, ಮಹಾಂತರು, ಮಹಾಪುರುಷರು, ಋಷಿಗಳು ಈ ಭೂಮಂಡಲದ ಬೇರೆ ಯಾವ ಪ್ರದೇಶದಲ್ಲ ಅವತರಿಸಿರುವುದಿಲ್ಲ. ಇಲ್ಲಿ ಕೃಷ್ಣ-ರಾಮ, ಬುದ್ಧ-ಬಸವ, ನಾನಕ-ಮಹಾವೀರ- ವಿವೇಕಾನಂದರಂತಹ ಅನೇಕ ವಿಭೂತಿ ಪುರುಷರು ಅವತರಿಸಿದ್ದಾರೆ. ಅದಕ್ಕಾಗಿಯೇ ಇದನ್ನು ಎಲ್ಲರೂ ‘ಭಾರತ ಮಾತೆ’ ಎಂದು ಗೌರವಿಸುತ್ತಾರೆ. ವಿವೇಕಾನಂದರು ವಿದೇಶ ಪ್ರವಾಸವನ್ನು ಮುಗಿಸಿ ಭಾರತದ ನೆಲದಲ್ಲಿ ಕಾಲಿಡುವ ಮೊದಲು ಈ ತಾಯ್ ನೆಲವನ್ನು ಹಣೆ ಹಚ್ಚಿ ನಮಸ್ಕರಿಸುತ್ತಾರೆ. ಇದೊಂದು ಘಟನೆ ಸಾಕು ಭಾರತ ಪವಿತ್ರ ಭೂಮಿ ಎಂದು ತಿಳಿಯಲು. ಈ ಎಲ್ಲ ಅಂಶಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಭಾರತವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು.