ಲೇಖಕ: ಶ್ರೀಕಂಠ.ಚೌಕೀಮಠ
ಕಾರಣಿಕ ಯುಗಪುರುಷ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಹಾಗೂ ಗದುಗಿನ ಜಗದ್ಗುರು ತೋಂಟದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಯಡೆಯೂರು ಪಾದಯಾತ್ರೆಯು ಕನ್ನಡಿಗರ ಮತ್ತು ವೀರಶೈವ/ಲಿಂಗಾಯತ ಧರ್ಮೀಯರ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ಮಹತ್ವದ ಅಧ್ಯಾಯವನ್ನು ಬರೆದಿತ್ತು. ಬರುವ ಡಿಸೆಂಬರ್ 6, 2024ರಂದು, ಈ ಐತಿಹಾಸಿಕ ಪಾದಯಾತ್ರೆಗೆ 107 ವರ್ಷಗಳು ತುಂಬುತ್ತವೆ.(6 ಡಿಸೆಂಬರ್ 1917 )
ಈ ಪಾದಯಾತ್ರೆಯು ಆ ಕಾಲದಲ್ಲಿ ಚಾರಿತ್ರಿಕ ಸಂಚಲನವನ್ನು ಮೂಡಿಸಿತ್ತು.
ಈ ಪಾದಯಾತ್ರೆಯು ಕೇವಲ ಧಾರ್ಮಿಕ ಉತ್ಸವವಾಗಲಿಲ್ಲ.
ಇದು ಸಮಾಜದ ವೈಚಾರಿಕ ಚೇತನವನ್ನು ತೋರುವ ಸಂಚಾರವಾಗಿತ್ತು.
ಇದು ಭಕ್ತಿಯೊಂದಿಗೆ ತಪಸ್ಸಿನ ಅನುಭಾವವನ್ನು ಬೆಸೆದು ಸಾಮಾನ್ಯ ಜನರ ಬದುಕಿಗೆ ಅಧ್ಯಾತ್ಮಿಕ ಸಂಕೇತಗಳನ್ನೂ ಬೆಸೆಯಿತು.
ಶ್ರೀ ಕುಮಾರ ಶಿವಯೋಗಿಗಳ ಈ ಪಾದಯಾತ್ರೆ, ಜನರಲ್ಲಿ ಸಮಾನತೆ, ತ್ಯಾಗ, ತಾಳ್ಮೆ, ಸಹನೆ ಹಾಗೂ ಭಕ್ತಿ ಇಂತಹ ಗುಣಗಳನ್ನು ಪ್ರೇರಣೆಗೊಳಿಸಿತು. ಪಾದಯಾತ್ರೆಯು ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಜಾಗೃತಿಯನ್ನು ಉಂಟುಮಾಡಿತು ಮತ್ತು ಜನರ ಹೃದಯದಲ್ಲಿ ಅಧ್ಯಾತ್ಮಿಕತೆಯ ಬೆಂಕಿಯನ್ನು ಹೊತ್ತಿಸಿ ಅವರ ನೈತಿಕ ಮತ್ತು ಸಾಂಸ್ಕೃತಿಕ ಆಳವನ್ನು ವೃದ್ಧಿಸಿತು.
ಈ ಹಿನ್ನಲೆಯಲ್ಲಿ, ಯಡೆಯೂರು ಪಾದಯಾತ್ರೆಯ 107ನೇ ವರ್ಷವನ್ನು ಸ್ಮರಿಸುವುದು ಕೇವಲ ಒಂದು ಸಾಂಕೇತಿಕವಲ್ಲ; ಇದು ನಮ್ಮ ಸಂಸ್ಕೃತಿಯ ಒಂದು ಅಂಶವಾಗಿ, ಭಕ್ತಿ ಮತ್ತು ತ್ಯಾಗದ ಮಹತ್ವವನ್ನು ಮನಗಾಣಿಸುವ ಧಾರ್ಮಿಕ ಚಳುವಳಿಯೇ ಆಗಿದೆ.
ಯಡೆಯೂರು ಪಾದಯಾತ್ರೆಯಲ್ಲಿ ಭಾಗವಹಿಸಿದವರ ಅನುಭವಗಳನ್ನು ಸಂಗ್ರಹಿಸಿದ ಮತ್ತು ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು ಅತೀ ಹತ್ತಿರ ದಿಂದ ಕಂಡಿದ್ದ ಕವಿರತ್ನ ದ್ಯಾಂಪುರ ಚನ್ನಕವಿಗಳು ತಮ್ಮ ಶ್ರೀಕುಮಾರೇಶ್ವರ ಪುರಾಣದಲ್ಲಿ ಅತ್ಯಂತ ಹೃದಯ ಸ್ಪರ್ಷಿಯಾಗಿ ಹೀಗೆ ವರ್ಣಿಸಿದ್ದಾರೆ ( ಭಾವಾರ್ಥ ಸೌಜನ್ಯ : ಪೂಜ್ಯ ಅಭಿನವ ಸಿದ್ಧಾರೂಡ ಮಹಾಸ್ವಾಮಿಗಳು)
ಎಡೆಯೂರ ಶ್ರೀಸಿದ್ಧಲಿಂಗಸುಕ್ಷೇತ್ರಕ್ಕೆ
ಸಡಗರದೊಳಾ ಜಗದ್ಗುರು ತೋಂಟದಾರ್ಯರೀ
ಮೃಡಯೋಗಿವರ ಕುಮಾರೇಶನಂ ಶಿವಯೋಗಮಂದಿರದ ಸಾಧಕರನು
ಒಡಗೊಂಡು ದಯಮಾಡಿಸಿದರೊಮ್ಮೆ ಭಕ್ತಿಯಿಂ
ನಡೆದವರೊಡನೆ ಕೆಲ ಭಕ್ತಮಾಹೇಶ್ವರರು
ಪೊಡವಿಯೊಳು ಪೆಸರಾಗುವಂತೆ ಮೆರೆದುದು ಪಯಣವದು ಬಣ್ಣಿಸಲ್ಸಾಲ್ಗುಮೇ
ಭಾವಾರ್ಥ : ಎಡೆಯೂರ ಶ್ರೀ ಸಿದ್ಧಲಿಂಗೇಶ್ವರ ಸುಕ್ಷೇತ್ರಕ್ಕೆ ಸಂಭ್ರಮದಲ್ಲಿ ಆ ಜಗದ್ಗುರು ತೋಂಟದ ಸಿದ್ಧೇಶ್ವರ ಮಹಾಸ್ವಾಮಿಗಳು ಈ ಶಿವಯೋಗಿವರನಾದ ಕುಮಾರೇಶನು ಶಿವಯೋಗ ಮಂದಿರದ ಸಾಧಕರನ್ನು ಕೂಡಿಕೊಂಡು, ಭಕ್ತಿಯಿಂದ ಮಹಾತ್ಮರೊಡನೆ ಕೆಲವು ಭಕ್ತರು ಜಂಗಮರು ಪಾದಯಾತ್ರೆ ಹೊರಟರು. ಭೂಲೋಕದಲ್ಲಿ ಹೆಸರಾಗುವಂತೆ ಪ್ರಸಿದ್ಧವಾದ ಆ ಪಾದಯಾತ್ರೆಯನ್ನು ನನಗೆ ವರ್ಣಿಸಲು ಅಸಾಧ್ಯ.
ಮೊಳಗುತಿರೆ ವಿವಿಧವಾದ್ಯಂಗಳುಂ ಸದ್ವಂದಿ-
ಗಳು ಪೊಗಳುತಿರೆ ಪಥದೊಳಲ್ಲಲ್ಲಿ ಭಕ್ತಸಂ-
ಕುಳವೈದಿ ಪೂಜೋಪಚಾರದಿಂ ಗಣಸಮಾರಾಧನೆಯನೆಯಸಗುತಿರಲು
ಉಳಿದೆಡೆಗಳಲ್ಲಿ ವ್ಯಾಖ್ಯಾನಕೀರ್ತನಗಳುಂ
ಹಲವು ವಿಷಯಪ್ರವಚನಂಗಳುಂ ಜರಗುತಿರ
ಲೆಳಸಿ ದರ್ಶನಕಾಗಿ ಬಂದ ಭಕ್ತರಿಗೆ ಶುಭವಾದನಂಗೈವುತಿರಲು
ಭಾವಾರ್ಥ : ವಿವಿಧ ವಾಧ್ಯಗಳು ನುಡಿಯುತ್ತಿರುವವು, ಜಯಘೋಷದವರು ಸ್ತುತಿಸುತ್ತಿರುವರು, ಅಲ್ಲಲ್ಲಿ ಭಕ್ತ ಸಮೂಹವು ಬಂದು ಪೂಜೆ ಸೇವಾದಿಗಳಿಂದ ಜಂಗಮ ತೃಪ್ತಿಯನ್ನು ಮಾಡುತ್ತಿರಲು, ಇನ್ನುಳಿದ ಕಡೆಗಳಲ್ಲಿ ಉಪನ್ಯಾಸ ಶಿವಕೀರ್ತನಗಳು ಹಲವು ವಿಷಯಕವಾಗಿ ಪ್ರವಚನಗಳು ನಡೆಯುತ್ತಿದ್ದವು. ದರ್ಶನ ಆಶೆಯಿಂದ ಬಂದ ಭಕ್ತರಿಗೆ ಮಂಗಲಾಶೀರ್ವಾದಗಳನ್ನು ಮಾಡುತ್ತಿದ್ದರು.
ಶಿವಯೋಗ ಪರಂಪರೆಯ ನಿಗೂಢತೆ ತುಂಬಾ ಆಕರ್ಷಕ ಮತ್ತು ಆಳವಾದದ್ದು, ಇದರ ನಿಜ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ನಡೆಸಿದ ಪ್ರತಿಯೊಂದು ಪ್ರಯತ್ನವೂ ಹೊಸತನವನ್ನು ನೀಡುತ್ತಲೇ ಹೋದಂತೆ. ವೀರಶೈವ/ಲಿಂಗಾಯತ ಪರಂಪರೆಯ ಪುನರುಜ್ಜೀವನ ಮತ್ತು ಶರಣರ ಕಾರ್ಯವನ್ನು ಪುನಃ ಜೀವಂತಗೊಳಿಸಿದ ಮಹಾನುಭಾವರಲ್ಲಿ ಶ್ರೀ ಸಿದ್ಧಲಿಂಗೇಶ್ವರರ ಪಾತ್ರ ಅತಿ ಮಹತ್ವದ್ದಾಗಿದೆ. ತಮ್ಮ ಏಳುನೂರು ವಿರಕ್ತ ಶಿಷ್ಯರೊಂದಿಗೆ ನಾಡಿನ ಮೂಲೆ ಮೂಲೆಗೂ ಹಾಸುಹೊಕ್ಕು ವೀರಶೈವ/ಲಿಂಗಾಯತ ಮತದ ಬೋಧನೆ, ಶರಣರ ಸಾಹಿತ್ಯ ಮತ್ತು ಷಟ್‌ಸ್ಥಲ ತತ್ತ್ವದ ವೈಚಾರಿಕತೆಯನ್ನು ಜನರ ಮನಸ್ಸಿನಲ್ಲಿ ನೆಲೆಗೊಳಿಸಿದರು.
ಶ್ರೀ ಸಿದ್ಧಲಿಂಗೇಶ್ವರರ ಸಾಮಾಜಿಕ ಮತ್ತು ಧಾರ್ಮಿಕ ಪ್ರಭಾವ
ಶ್ರೀ ಸಿದ್ಧಲಿಂಗೇಶ್ವರರು ಪುರಾತನ ವೀರಶೈವ/ಲಿಂಗಾಯತ ಶರಣರ ಸಾಹಿತ್ಯವನ್ನು ಸಮಗ್ರವಾಗಿ ಸಂಗ್ರಹಿಸುವಲ್ಲಿ, ಅದಕ್ಕೆ ಹೊಸ ಆಯಾಮ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. “ಷಟ್‌ಸ್ಥಲ ಜ್ಞಾನ ಸಾರಾಮೃತ” ಎಂಬ ಮಹತ್ವದ ಕೃತಿ ರಚನೆ ಮೂಲಕ ಷಟ್‌ಸ್ಥಲ ತತ್ತ್ವಕ್ಕೆ ನಿರ್ದಿಷ್ಟರೂಪವನ್ನು ನೀಡಿದರು. ಇದರಿಂದ ವಚನ ಸಾಹಿತ್ಯವು ಹೊಸ ಸೃಜನಶೀಲತೆಯನ್ನು ಹೊಂದಿ ಪುನರುಜ್ಜೀವಿತವಾಯಿತು. ಈ ಕೃತಿಗಳ ಪ್ರೇರಣೆಯಿಂದ, ಶರಣರ ಆದರ್ಶಗಳು, ತತ್ವಗಳು ಮತ್ತು ಜೀವನದ ಮಾರ್ಗದರ್ಶನಗಳು ಜನಸಾಮಾನ್ಯರ ನಡುವೆ ಸ್ಪಷ್ಟವಾಗಿ ಪ್ರಚಾರಕ್ಕೆ ಬಂದವು.
ಸಮಾಜದ ಅಧ್ಯಾತ್ಮಿಕ ನೆಲೆಯಲ್ಲಿ ಶ್ರೀ ಸಿದ್ಧಲಿಂಗೇಶ್ವರರ ಸಾಧನೆ
ವೀರಶೈವ/ಲಿಂಗಾಯತ ಮತದ ಆಳವಾದ ಸಂಸ್ಕಾರಗಳನ್ನು ಜೀವಂತವಾಗಿರಿಸಲು ಶ್ರೀ ಸಿದ್ಧಲಿಂಗೇಶ್ವರರು ನಾಡಿನಾದ್ಯಂತ ವಿವಿಧ ಮಠಗಳನ್ನು ಸ್ಥಾಪಿಸಿದರು. ಜಂಗಮರನ್ನು ಮಠಾಧಿಪತಿಗಳಾಗಿ ನೇಮಕ ಮಾಡಿದ್ದು, ವೀರಶೈವ/ಲಿಂಗಾಯತ ತತ್ವಗಳ ಆಚರಣೆ ಮತ್ತು ಅಭ್ಯಾಸವನ್ನು ಹೆಚ್ಚು ಶಕ್ತಿಶಾಲಿಯಾಗಿ ಮಾಡಿಕೊಂಡು ಹೋದರು. ಈ ಮೂಲಕ ಅವರು ವೀರಶೈವ/ಲಿಂಗಾಯತ ಧರ್ಮದ ಭಕ್ತ ವಲಯದಲ್ಲಿ ನಂಬಿಕೆ ಮತ್ತು ಆಚರಣೆಗಳನ್ನು ಬಲಗೊಳಿಸಿದರು.
ಶ್ರೀ ಕುಮಾರ ಶಿವಯೋಗಿಗಳ ಪಾದಯಾತ್ರೆಯ ಹಿನ್ನೆಲೆ
ಶಿವಯೋಗ ಪರಂಪರೆಯಲ್ಲಿನ ವ್ಯತ್ಯಾಸ ಮತ್ತು ಸಮಯಾಚಾರ ಭಿನ್ನತೆಗಳ ಬಗ್ಗೆ ಸ್ವತಃ ಶ್ರೀ ಕುಮಾರ ಶಿವಯೋಗಿಗಳು ಸ್ಪಷ್ಠವಾಗಿ ಅರಿತುಕೊಳ್ಳಲು ಇಚ್ಛಿಸಿ, ಮಲ್ಲನಕೆರೆ ಶ್ರೀ ಚೆನ್ನಬಸವ ಸ್ವಾಮಿಗಳ ಸಲಹೆ ಮೇರೆಗೆ 1917ರಲ್ಲಿ ಯಡೆಯೂರಿಗೆ ಪಾದಯಾತ್ರೆ ಕೈಗೊಂಡರು. ಅವರ ಈ ಯಾತ್ರೆ, ವೀರಶೈವ/ಲಿಂಗಾಯತ ಧರ್ಮದ ಬೃಹತ್ ಪರಂಪರೆಯ ಆಚರಣೆ ಮತ್ತು ಅಂತರಂಗವನ್ನು ಅರಿಯಲು ನಡೆಸಿದ ಒಗ್ಗಟ್ಟಿನ ಪ್ರಯತ್ನವಾಗಿತ್ತು. ಶಿವಯೋಗ ಮಂದಿರದ ಸಾಧಕರು, ,ಗುರು ವಿರಕ್ತರನ್ನೊಳಗೊಂಡ ಮತ್ತು ಐದು(ಕುಮಾರ,ಮುರುಘ,ಸಂಪಾದನೆ,ಕೆಂಪಿನ ಮತ್ತು ಚಿಲ್ಲಾಳ) ಸಮಯಗಳ ಪರಂಪರೆಯ ಯತಿಗಳನ್ನೊಡಗೂಡಿ ತೋಂಟದಾರ್ಯ ಮಠದ ಶ್ರೀ ಸಿದ್ಧೇಶ್ವರ ಜಗದ್ಗುರುಗಳ ನೇತೃತ್ವದಲ್ಲಿ ಈ ಯಾತ್ರೆ ಪ್ರಾರಂಭಗೊಂಡಿತು.
ಈ ಪಾದಯಾತ್ರೆಯು ಶಿವಯೋಗದ ಪರಂಪರೆ, ವೈಚಾರಿಕತೆ ಮತ್ತು ತಾತ್ವಿಕತೆಗಳನ್ನು ಪುನರುಜ್ಜೀವನಗೊಳಿಸುವ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿತ್ತು. ಶ್ರೀ ಕುಮಾರ ಸ್ವಾಮಿಗಳು ಯಡೆಯೂರಿನಲ್ಲಿ ಕಂಡುಹಿಡಿದ ಈ ಅಂಶಗಳು ಅವರ ಧಾರ್ಮಿಕ, ಸಾಮಾಜಿಕ ಮತ್ತು ಅಧ್ಯಾತ್ಮಿಕ ಚಿಂತನೆಗೆ ಹೊಸ ಆಳವನ್ನು ತಂದುಕೊಟ್ಟವು.
ಧಾರ್ಮಿಕ, ಅಧ್ಯಾತ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳಲ್ಲಿ ಅಪ್ರತಿಮ ಸಂಚಲನ ಉಂಟುಮಾಡಿದ ಈ ಪಾದಯಾತ್ರೆಯು ಎರಡು ಪ್ರಮುಖ ಕೊಡುಗೆಗಳನ್ನು ಕರ್ನಾಟಕದ ಭಕ್ತಸಮೂಹಕ್ಕೆ ನೀಡಿತು:
- ಯಡೆಯೂರು ಕ್ಷೇತ್ರದ ಪರಿಚಯ ಮತ್ತು ಉತ್ತರ ಕರ್ನಾಟಕದ ಭಕ್ತರೊಂದಿಗೆ ಅವಿನಾಭಾವಸಂಬಂಧ:
ಈ ಪಾದಯಾತ್ರೆಯ ಮಹತ್ವದ ಸಾಧನೆಗಳಲ್ಲಿ ಒಂದು ಎಂದರೆ ಉತ್ತರ ಕರ್ನಾಟಕದ ಭಕ್ತರು ಯಡೆಯೂರು ಕ್ಷೇತ್ರದ ಮಹತ್ವವನ್ನು ಅರಿತುಕೊಂಡು, ಆ ಸ್ಥಳದೊಂದಿಗೆ ಅಧ್ಯಾತ್ಮಿಕವಾಗಿ ಪ್ರೇರಣೆ ಸಿಕ್ಕಿತು. ಇದರಿಂದ ಭಕ್ತರು ಯಡೆಯೂರು ಕ್ಷೇತ್ರವನ್ನು ಕೇವಲ ತೀರ್ಥಕ್ಷೇತ್ರವಲ್ಲ, ಒಂದು ಜೀವನ ಶೈಲಿಯಾಗಿ, ಅಧ್ಯಾತ್ಮಿಕ ಕೇಂದ್ರವಾಗಿ ಗುರುತಿಸಿದರು. ಈ ಸಂಬಂಧವು ಜನರ ನಿತ್ಯ ಜೀವನದಲ್ಲೂ ಪ್ರಭಾವ ಬೀರಿತು, ಹಾಗೂ ತಾತ್ವಿಕ ಶ್ರದ್ಧೆಯ ಬಲವರ್ಧನೆಗೆ ಸಹಾಯ ಮಾಡಿತು.
- ಯಡೆಯೂರಿನಲ್ಲಿ ಸಂಸ್ಕೃತ ಪಾಠ ಶಾಲೆಯ ಆರಂಭ:
ಈ ಪಾದಯಾತ್ರೆಯು ಧಾರ್ಮಿಕ ಶಿಕ್ಷಣ ಮತ್ತು ಸಂಸ್ಕೃತಿಕ ಪ್ರವೃತ್ತಿಗಳಿಗೆ ಹೊಸ ಕಿರಣ ನೀಡಲು ಯಡೆಯೂರಿನಲ್ಲಿ ಸಂಸ್ಕೃತ ಪಾಠ ಶಾಲೆಯನ್ನು ಸ್ಥಾಪಿಸಿತು. ಈ ಪಾಠ ಶಾಲೆಯು ವೇದ, ಶಾಸ್ತ್ರ, ವಚನ ಸಾಹಿತ್ಯದ ಅಧ್ಯಯನವನ್ನು ಉತ್ತೇಜಿಸಿತು ಮತ್ತು ನವಯುಗದ ವೀರಶೈವ/ಲಿಂಗಾಯತ ಧರ್ಮದ ತತ್ವಜ್ಞಾನವನ್ನು ಪೋಷಿಸಲು ಅಧ್ಯಾತ್ಮಿಕ ಕೇಂದ್ರವಾಯಿತು. ಇದರಿಂದ ಪೀಳಿಗೆಯ ನಂತರ ಪೀಳಿಗೆಗೆ ಶರಣರ ಸಾಹಿತ್ಯ, ಷಟ್‌ಸ್ಥಲ ತತ್ತ್ವ ಮತ್ತು ವಚನಗಳ ತಾತ್ವಿಕ ವಿವರಣೆಗಳು ತಿಳಿಯುವಂತಾದವು.
ಈ ಪಾದಯಾತ್ರೆಯು ಧಾರ್ಮಿಕ ಮತ್ತು ಸಾಂಸ್ಕೃತಿಕ ಪೋಷಣೆಗಾಗಿ ನಿಂತ ಒಂದು ದೀರ್ಘಕಾಲೀನ ಪರಂಪರೆಯನ್ನು ಬೆಳೆಸಿದ್ದು, ಯಡೆಯೂರಿನ ಮಹತ್ವವನ್ನು ಕರ್ನಾಟಕದ ದಾರ್ಶನಿಕ ಭೂಮಿಯಲ್ಲಿ ಸ್ಥಾಪಿತಗೊಳಿಸಿತು.
ಪಾದಯಾತ್ರೆಯ ಫಲಶೃತಿಯಾಗಿ ೧೯೧೭ರಲ್ಲಿ ಯಡೆಯೂರಿನಲ್ಲಿ ಪೂಜ್ಯ ಚಿಕ್ಕತೊಟ್ಟಲಕೆರೆಯ ಅಟವಿ ಸಿದ್ಧೇಶ್ವರ ಶಿವಯೋಗಿಗಳು ಸ್ಥಾಪಿಸಿದ್ದ ಮತ್ತು ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಸಂಸ್ಕೃತ ಪಾಠಶಾಲೆ ಪುನರಾಂಭಗೊಂಡಿತು, ಆ ಕಾಲದಲ್ಲಿ ಮಹತ್ವದ ಧಾರ್ಮಿಕ ಮತ್ತು ಶಿಕ್ಷಣಾತ್ಮಕ ಸಾಧನೆಯಾಗಿತ್ತು. ಈ ಪಾಠಶಾಲೆಗೆ ಆರ್ಥಿಕ ಬೆಂಬಲವು ವಿವಿಧ ಮೂಲಗಳಿಂದ ಸಿಕ್ಕಿತ್ತು:
- ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ: ೫,೦೦೦ ರೂ.
- ಶಿವಯೋಗ ಮಂದಿರ ಸಂಸ್ಥೆ: ೧,೦೦೦ ರೂ.
- ಬೀರೂರ ಪತ್ರಿ ಚನ್ನವೀರಯ್ಯನವರು: ೧,೦೦೦ ರೂ.
- ಗದುಗಿನ ಶ್ರೀಮಂತ ಭಕ್ತರು: ೩,೦೦೦ ರೂ.
ಈ ಎಲ್ಲಾ ದಾನಗಳನ್ನು ಸೇರಿಸಿ, ಒಟ್ಟು ೧೦,೦೦೦ ರೂ. ಮೂಲಧನವನ್ನಾಗಿ ಉಪಯೋಗಿಸಿ, ಈ ಪಾಠಶಾಲೆ ಆರಂಭಗೊಂಡು , ಭಾರತೀಯ ಶಾಸ್ತ್ರಗಳ, ವಿಶೇಷವಾಗಿ ಸಂಸ್ಕೃತ ಮತ್ತು ವೈದಿಕ ಪಾಠಶಾಲೆಯ ಶಿಕ್ಷಣದ ಮೂಲಶಕ್ತಿಯಾಯಿತು.
ಈ ಪಾಠಶಾಲೆಯ ಮರುಸ್ಥಾಪನೆ ಮತ್ತು ನಿರ್ವಹಣೆ, ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ನೇತೃತ್ವದಲ್ಲಿ ನಡೆದ ಮಹತ್ವದ ಸಾಧನೆ ಮತ್ತು ಅವರ ಕಾರ್ಯಕ್ಷಮತೆ, ಧಾರ್ಮಿಕ ಅಂಕಿತತೆ ಹಾಗೂ ಶ್ರದ್ಧೆಯ ಉದಾಹರಣೆಯಾಯಿತು. ಪಾಠಶಾಲೆಯು ಹಲವಾರು ಪೀಳಿಗೆಗಳ ವಿದ್ಯಾರ್ಥಿಗಳಿಗೆ ಸಂಸ್ಕೃತ, ಶಾಸ್ತ್ರ ಮತ್ತು ಧಾರ್ಮಿಕ ತತ್ವದ ವಿದ್ಯೆಯನ್ನು ಒದಗಿಸಿ, ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪೋಷಿಸಲು ಪ್ರೇರಣೆ ನೀಡಿತು.
ಇಂದಿಗೂ ಸಂಸ್ಕೃತ ವೈದಿಕ ಪಾಠಶಾಲೆ ಯಶಸ್ವಿಯಾಗಿ ನಡೆದುಕೊಂಡು ಬರುವುದಂತೆಯೇ ಅದು ಧಾರ್ಮಿಕ, ಅಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಅಸ್ಥಿತ್ವದ ಪ್ರಬಲ ಸಂಕೇತವಾಗಿದೆ. ಪಾಠಶಾಲೆಯು ಮೂಲಧಾರ್ಮಿಕ ವಿದ್ಯೆಯನ್ನು ಪೀಳಿಗೆಗಿಂತ ಪೀಳಿಗೆಗೆ ಸತತವಾಗಿ ಪೋಷಿಸುತ್ತಾ ಬಂದು, ಸಮಾಜದಲ್ಲಿ ಭಾರತೀಯ ಸಂಸ್ಕೃತಿಯನ್ನೂ ಉಳಿಸಿದೆ.
ಸಂಸ್ಕೃತ ಪಾಠಶಾಲೆಯು ವೇದ-ಶಾಸ್ತ್ರಗಳ ಅಧ್ಯಯನ, ಧಾರ್ಮಿಕ ಗ್ರಂಥಗಳ ಪರಿಶೀಲನೆ ಮತ್ತು ವೈದಿಕ ಪಾಠದ ಸಾಂಪ್ರದಾಯಿಕ ತರಬೇತಿಯನ್ನು ಮುಂದುವರಿಸುತ್ತಿರುವುದು ನಮ್ಮ ಪರಂಪರೆಯು ಸದೃಢವಾಗಿ ಉಳಿಯಲು ಸಾಕ್ಷಿಯಾಗಿದೆ. ಶ್ರೀ ಕುಮಾರ ಶಿವಯೋಗಿಗಳ ನಿಕಟ ನೇತೃತ್ವದಲ್ಲಿ ಸ್ಥಾಪಿತಗೊಂಡ ಈ ಸಂಸ್ಥೆಯು, ಅದರ ಆಧುನಿಕ ಅವಶ್ಯಕತೆಗಳಿಗೆ ತಕ್ಕಂತೆ ಧಾರ್ಮಿಕ ಅಭ್ಯಾಸಗಳಲ್ಲಿ ಆದ್ಯತೆ ನೀಡುತ್ತಾ ಭಾರತೀಯ ತತ್ವಜ್ಞಾನವನ್ನು ಸಾರುತ್ತಿದೆ.
ಈ ಪಾಠಶಾಲೆಯ ಸತತ ಯಶಸ್ಸು ಆ ಪಾಠಶಾಲೆಗೆ ಬೆಂಬಲ ನೀಡಿದವರ ತ್ಯಾಗ, ಸಹಕಾರ ಮತ್ತು ಶ್ರೀ ಸಿದ್ಧಲಿಂಗೇಶ್ವರರ ಆಶೀರ್ವಾದದ ಫಲವೆಂದು ಹೇಳಬಹುದು.

೧೯೧೭ ರ ಐತಿಹಾಸಿಕ ಯಡೆಯೂರು ಪಾದಯಾತ್ರೆಯಲ್ಲಿ ಭಾಗವಹಿದ ಪೂಜ್ಯರು.
-
-
- ಶ್ರೀ ಜಗದ್ಗುರು ತೋಂಟದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಗದಗ
- ಶ್ರೀ ಮ.ನಿ.ಪ್ರ. ಹಾನಗಲ್ಲ ಕುಮಾರ ಮಹಾಸ್ವಾಮಿಗಳು,
- ಶ್ರೀ ಮ.ನಿ.ಪ್ರ. ಶಿವಬಸವಮಹಾಸ್ವಾಮಿಗಳು ಹಾವೇರಿ,
- ಶ್ರೀ ನಿ. ಪ್ರ. ಶಿವ ಮೂರ್ತಿಸ್ವಾಮಿಗಳು ಚರಂತಿಮಠ, ಬಾಗಲಕೋಟೆ,
- ಶ್ರೀ ನಿ. ಪ್ರ. ಅಪ್ಪಯ್ಯಸ್ವಾಮಿಗಳು ಬಿದರಿ ಸವದತ್ತಿ,
- ಶ್ರೀ ಷ. ಬ್ರ, ವ್ಯಾಕರಣಾಳ ಪಟ್ಟಾಧ್ಯಕ್ಷರು,
- ಶ್ರೀ ನಿ. ಪ್ರ. ಗವಿಮಠದ ಬಸವಲಿಂಗಸ್ವಾಮಿಗಳು ನವಲಗುಂದ,
- ಶ್ರೀ ನಿ. ಪ್ರ ಕೊಪ್ಪದ ಮಹಾಂತಸ್ವಾಮಿಗಳು ಇಲಕಲ್,
- ಶ್ರೀ ನಿ. ಪ್ರ. ಬಸವಲಿಂಗ ಸ್ವಾಮಿಗಳು ನಿರಡಗಂಬ,
- ಶ್ರೀ ನಿ. ಪ್ರ. ಶಿವಬಸವಸ್ವಾಮಿಗಳು ರುದ್ರಾಕ್ಷಿಮಠ ನಾಗನೂರ,
- ಶ್ರೀ ಷ. ಬ್ರ, ಶಿರೂರ ಪಟ್ಟಾಧ್ಯಕ್ಷರು ಬಾಗಲಕೋಟೆ,
- ಶ್ರೀ ನಿ. ಪ್ರ. ಮಹೇಶ್ವರಸ್ವಾಮಿಗಳು ಹಾನಗಲ್,
- ಶ್ರೀ ಷ. ಬ್ರ. ಬಿದರಿ ಪಟ್ಟದ್ದೇವರು,
- ಶ್ರೀ ನಿ. ಪ್ರ ಚರಂತಪ್ಪನವರು ಸಂಪಗಾವ,
- ಶ್ರೀ ಸೊನ್ನದ ಮರಿದೇವರು,
- ಶ್ರೀ ರೇಣುಕದೇವರು ಹಾನಗಲ್ (ಲಿಂ. ಸದಾಶಿವಸ್ವಾಮಿಗಳು),
- ಶ್ರೀ ಷ. ಬ್ರ. ಕೆಂಚಬಸವ ಪಟ್ಟದ್ದೇವರು ಗುಲಬರ್ಗಾ,
- ಶ್ರೀ ನಿ. ಪ್ರ. ಓಲಿಮಠದ ಸ್ವಾಮಿಗಳು ಜಮಖಂಡಿ,
- ಶ್ರೀ ಘನಲಿಂಗ ದೇವರು ಶಿಶಂಬರ,
- ಅನಂತರಪುರದ ಶ್ರೀ ಸಚ್ಚಿದಾನಂದದೇವರು.
- ಶ್ರೀ ಆದಿನಾಥದೇವರು ಖೇಳಗಿ,
- ಶ್ರೀ ಸಿದ್ಧವೀರದೇವರು ನವಲಗುಂದ,
- ಶ್ರೀ ನಿ. ಪ್ರ ರಾಮಗಡ್ಡಿ ಸ್ವಾಮಿಗಳು,
- ಶ್ರೀ ಗುರುಲಿಂಗ ದೇವರು, ಹಾರನಹಳ್ಳಿ,
- ಶ್ರೀ ಚಿದ್ಘನಾರ್ಯರು ಅನಂತಪುರ,
- ಶ್ರೀ ಷ. ಬ್ರ. ರೇವಣಸಿದ್ಧ ಪಟ್ಟದ್ದೇವರು ಕೆಳದಿ,
- ಶ್ರೀ ಹಾರನಹಳ್ಳಿ ಮರಿದೇವರು,
- ಶ್ರೀ ಕೆಂಪಯ್ಯ ದೇವರು ಮರಡಿಮಠ, ಕೊಣ್ಣೂರ,
- ಶ್ರೀ ಷ. ಬ್ರ. ಸಖರಾಯಪಟ್ಟದ್ದೇವರು,
- ಶ್ರೀ ನಿ. ಪ್ರ ನೊಣವಿನಕೆರೆ ಶ್ರೀಗಳು,
- ಶ್ರೀ ನಿ. ಪ್ರ ತುರುವಿನಕೆರೆ ಸ್ವಾಮಿಗಳು,
- ಶ್ರೀ ನಿ. ಪ್ರ ತರೀಕೆರೆ ಶ್ರೀಗಳು,
- ಶ್ರೀ ನಿ. ಪ್ರ ನಂದಗಡ ಶ್ರೀಗಳು,
- ಶ್ರೀ ನಿ. ಪ್ರ ಗುರುಪಾದಸ್ವಾಮಿಗಳು ಗುಲಗಂಜಿಮಠ, ರೋಣ,
- ಶ್ರೀ ಷ. ಬ್ರ ಶಿಗ್ಗಾಂವಿ ಪಟ್ಟದ್ದೇವರು,
- ಶ್ರೀ ಷ. ಬ್ರ ಸವಡಿಪಟ್ಟದ್ದೇವರು,
- ಶ್ರೀ ಷ. ಬ್ರ, ಸತ್ತಿಗೇರಿ ಪಟ್ಟದ್ದೇವರು,
- ಶ್ರೀ ಷ. ಬ್ರ, ಅಬ್ಬಿಗೇರಿ ಪಟ್ಟದ್ದೇವರು
- ಶ್ರೀ ಷ. ಬ್ರ. ಮಂಗಳೂರು ಪಟ್ಟದ್ದೇವರೇ ಮುಂತಾದವರು ಮತ್ತು ಭಕ್ತ ವೃಂದ
ಪೂಜ್ಯ ಜಗದ್ಗುರು ತೋಂಟದ ಸಿದ್ದೇಶ್ವರ ಮಹಾಸ್ವಾಮಿಗಳವರ ಸಂಸ್ಥಾನ ಮಠದ ವಾಹನಗಳು ಮತ್ತು ರಕ್ಷಣಾ ಸಾಮಗ್ರಿಗಳು ಮತ್ತು ಸಿಬ್ಬಂದಿಗಳ ವಿವರ.
-
-
- ಆನೆ-೧
- ಒಂಟೆಗಳು-೪,
- ಕುದುರೆಗಳು-೨೫
- ಮೇಣೆ,-೧
- ಮೋಟಾರಕಾರ ಗಳು-೨,
- ಡಮಣಿಗಾಡಿ ಗಳು-೧೦,
- ಕುದುರೆ ಗಾಡಿಗಳು-೮,
- ಎತ್ತಿನಗಾಡಿಗಳು-೧೦೦,
- ಲಾಂಡಾ ಗಾಡಿ ಗಳು-೨,
- ಬಂದೂಕಗಳು-೧೦,
- ರಿವಾಲ್ವರ ಗಳು-೨,
- ಖಡ್ಗಗಳು-೧೦,
- ಭಲ್ಲೆಗಳು -೪ ಇವುಗಳ ಜತೆ
- ಸಂಸಾನ ಮಠದ ಬೆಳ್ಳಿ ಬಂಗಾರದ ಉತ್ಸವದ ಸಾಮಾನುಗಳು ಒಯ್ಯಲ್ಪಟ್ಟವು.
- ಇದಕ್ಕೆ ಸರಿಯಾಗಿ ೫೦೦ ಸಿಬ್ಬಂದಿ ಜನರು ಇದ್ದರು.
ದಾಖಲೆಯಾಗಿ ದೊರಕಿರುವ ಕಪ್ಪು ಬಿಳುಪಿನ ಭಾವಚಿತ್ರದ ಆಧಾರದ ಮೇಲೆ ೬-೧೨-೧೯೧೭ ರಂದು ಪಾದಯಾತ್ರೆಯ ತಂಡ ಯಡೆಯೂರು ತಲುಪಿರುತ್ತದೆ. ಈ ಪಾದಯಾತ್ರೆ ಗದುಗಿನಿಂದ ೩೮೦ ಕಿ.ಮಿ. ಗಳನ್ನು ಕ್ರಮಿಸಿದೆ. ಸರಾಸರಿ ದಿನಕ್ಕೆ ೨೫ ಕಿಮಿ ಗಳ ಸಾಮರ್ಥ್ಯದಿಂದ ನೋಡಿದರೆ ಬಹುಷಃ ಈ ಪಾದಯಾತ್ರೆಗೆ ೧೬ ದಿನಗಳು ತಗುಲಿರಬಹುದು ಅಂದರೆ ನವಂಬರ ೨೦ ೧೯೧೭ ರಂದು ಈ ಪಾದಯಾತ್ರೆ ಆರಂಭಗೊಂಡಿರಬಹುದು ಎಂಬ ಊಹೆ.
ಕ್ರಮಿಸಿದ ಮಾರ್ಗ ಸೂಚಿ ಹೀಗಿದೆ ( ಶ್ರೀ ಸಿದ್ದೇಶ್ವರ ಪುರಾಣ ಪುಸ್ತಕದಲ್ಲಿ ಪಂಡಿತ ವೈ .ನಾಗಭೂಷಣ ಶಾಸ್ತ್ರಿಗಳು ದಾಖಲಿಸಿದಂತೆ)




ಕ್ರ.ಸಂ. |
ಸ್ಥಳಗಳು |
ಕಿ.ಮಿ |
ವಿಶೇಷತೆಗಳು |
೧ |
ಗದಗ |
|
|
೨ |
ಡಂಬಳ |
೧೮.೨ |
|
೩ |
ಮುಂಡರಗಿ |
೧೬.೩ |
ಕರ್ತೃ ಸ್ಥಾನಗಳ ಸಂದರ್ಶನ ಮಾಡಿಕೊಂಡ ಈ ಮಹಾಯಾತ್ರಿಕರು ಮುಂಡರಗಿ ಸಮೀಪದ ತುಂಗಭದ್ರಾ ತೀರದಲ್ಲಿ ಬೀಡುಬಿಟ್ಟರು |
೪ |
ಹಂಪಸಾಗರ |
೭.೮ |
ಹಂಪಸಾಗರದ ಆಗರ್ಭ ಶ್ರೀಮಂತರಾದ ಶ್ರೀ ಮರ್ತೂರ ಸಂಗಪ್ಪನವರು ಮತ್ತು ಶ್ರೀ ಮಸಗಿ ಗುರುಬಸಪ್ಪನವರೇ ಮುಂತಾದ ಪ್ರಮುಖ ಭಕ್ತಾಗ್ರೇಸರರು ಶ್ರೀ ಜಗದ್ಗುರು ಸನ್ನಿಧಿಯವರನ್ನು ಹಾಗು ಸನ್ನಿಧಿಯೊಡನೆ ಆಗಮಿಸಿದ ಹರ-ಗುರು- ಚರ ಸಮೂಹವನ್ನು ಹಾನಗಲ್ಲ ಶ್ರೀಗಳೊಡನೆ ಆಗಮಿಸಿದ ಶಿವಯೋಗ ಮಂದಿರದ ಸಾಧಕರು ಹಾಗು ವಟುಗಳನ್ನು ಕ್ರಮೋಪಚಾರಗಳಿಂದ ಸತ್ಕರಿಸಿ ಮಹಾಗಣಾರಾಧನೆ ಯನ್ನೆಸಗಿದರು |
೫ |
ಹೂವಿನ ಹಡಗಲಿ |
೧೫.೮ |
ಭಕ್ತರಾದ ಸರ್ವಶ್ರೀ ಮುಂಡರಗಿ ರುದ್ರಪ್ಪನವರು, ಡಂಬಳದ ಬಂಗಾರಶೆಟ್ಟಿ ಬಂಗಾರೆಪ್ಪನವರು ಮತ್ತು ಷಣ್ಮುಖಪ್ಪನವರೇ ಮೊದಲಾದವರು ವಾದ್ಯ ವೈಭವದಿಂದ ಪಾದಯಾತ್ರಾ ನಿಯೋಗವನ್ನು ಬರಮಾಡಿಕೊಂಡು ತಮ್ಮ ಸೇವೆ ಸಲ್ಲಿಸಿದರು. |
೬ |
ಹರಪನಹಳ್ಳಿ |
೨೮.೨೨ |
ಇಲ್ಲಿಯ ವೇ ಶಿವರುದ್ರಶಾಸ್ತ್ರಿಗಳು ತಮ್ಮ ಪಾಠಾಶಾಲಾ ವಿದ್ಯಾರ್ಥಿಗಳೊಡನೆ ವೇದಘೋಷದಿಂದ ಶ್ರೀ ಗಳವರನ್ನು ಬರಮಾಡಿಕೊಂಡ ಮೇಲೆ ಆ ಊರಿನ ಪ್ರಮುಖ ಮುಂದಾಳುಗಳಿಂದ ಅತಿಥಿಗಳಿಗೆಲ್ಲ ಪ್ರಸಾದ ಸಂತರ್ಪಣೆಯಾಯಿತು. ಅದೇ ಸಮಯದಲ್ಲಿ ಶ್ರೀ ಶಾಸ್ತ್ರಿಗಳವರ ಕೋರಿಕೆಯ ಮೇರೆಗೆ ಮದ್ರಾಸಿನಲ್ಲಿ ಬಿ. ಎ. ತರಗತಿಯಲ್ಲಿರುವ ಅವರ ಮಗನಿಗೆ ಮಾಸಿಕ ಸಹಾಯ ಮಾಡುವ ಕುರಿತು ಶ್ರೀಗಳಿಂದ ಆಶೀರ್ವಾದವಾಯಿತು.
|
೭ |
ದಾವಣಗೇರೆ |
೩೬.೯ |
ಮೈಸೂರ ಸರಕಾರದವರು ಶ್ರೀ ಗಳವರ ಸವಾರಿಯೊಂದಿಗೆ ಇರಬೇಕಾದ ರಕ್ಷಣಾ ಸಿಬ್ಬಂದಿ ಮೊದಲಾದವುಗಳ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಡಾವಣಗೇರಿಯ ಪುರಪ್ರಮುಖರು ಊರಲ್ಲೆಲ್ಲ ತಳಿರು ತೋರಣಗಳನ್ನು ಕಟ್ಟಿಸಿ ಮಹಾಸನ್ನಿಧಿಯನ್ನು ಅಭೂತಪೂರ್ವ ಉತ್ಸವದಿಂದ ಸ್ವಾತಿಸಿದರು. ಶಿವಯೋಗ ಮಂದಿರದ ಸಾಧಕರು, ವಟುಗಳು ಹಾಗು ಇನ್ನುಳಿದ ಹರ-ಗುರು-ಚರಮೂರ್ತಿಗಳಿಂದ
ಅಲ್ಲಿಯ ಸಭೆ ಪರಶಿವನ ಒಡೋಲಗದಂತೆ ಕಂಗೊಳಿಸಿತು. ಸಭೆಯಲ್ಲಿ ವಿದ್ವಜ್ಜನರ ಭಾಷಣಗಳಾದವು. ಕನ್ನಡ-ಸಂಸ್ಕೃತ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಪಂಡಿತ ಪ್ರಭಪ್ಪನವರು ಸ್ವರಚಿತ ಜಗದ್ಗುರುಗಳವರ ‘ಸ್ತೋತ್ರ ಪಂಚಕ’ವನ್ನು ಪ್ರಸ್ತಾಪಿಸಿ ಶ್ರೀ ಸನ್ನಿಧಿಗೆ ಅದನ್ನು ಭಕ್ತಿ ಪೂರ್ವಕವಾಗಿ ಸಮರ್ಪಿಸಿದರು.
ಮಾರನೆಯ ದಿನ ಪ್ರಾತಃಕಾಲ ಡಾವಣಗೇರಿಯ ಸದ್ಭಕ್ತರಾದ ಬಾಗಿಲಮನೆಯ ಶ್ರೀ ಷಡಕ್ಷರಪ್ಪನವರು ಶ್ರೀಗಳವರ ಪಾದಧೂಳಿ ತಮ್ಮ ಮನೆಯಲ್ಲಿ ಬೀಳಲೆಂದು ಅಪೇಕ್ಷಿಸಿದ್ದರಿಂದ ಶ್ರೀ ಮಹಾಸನ್ನಿಧಿಯವರು ಅವರ ಮನೆಗೂ ದಯಮಾಡಿಸಿದರು. ಆ ಸಂದರ್ಭದಲ್ಲಿ ಶ್ರೀ ಷಡಕ್ಷರಪ್ಪನವರು ೨೧ ತೋಪುಗಳನ್ನು ಹಾರಿಸಿ ಶ್ರೀಗಳನ್ನು ಸ್ವಾಗತಿಸಿದರು
|
೮ |
ಹೊಳಲಕೆರೆ |
೫೪.೩೮ |
ಪಾದಪೂಜೆ |
೯ |
ಹೊಸದುರ್ಗ |
೨೯.೭೪ |
ಪಾದಪೂಜೆ |
೧೦ |
ಅಜ್ಜಂಪುರ |
೩೦.೨೪ |
ಪಾದಪೂಜೆ |
೧೧ |
ಬೀರೂರು |
೧೭.೩೫ |
ಬೀರೂರಲ್ಲಿ ವೇ. ಪತ್ರಿ ಚನ್ನವೀರಯ್ಯನವರು ತಮ್ಮ ಇನ್ನುಳಿದ ಪ್ರತಿಷ್ಠಿತರೊಡನೆ ಸಲ್ಲಿಸಿದ ಸೇವೆ ಅವಿಸ್ಮರಣೀಯ, ಶ್ರೀ ಪತ್ರಿ ಚನ್ನವೀರಯ್ಯನವರ ಉದ್ಯಾನದಲ್ಲಿಯೇ ಅಂದಿನ ರಾತ್ರಿ ಶ್ರೀ ಗಳವರ ಬಿಡಾರವಾಯಿತು. ಮಾರನೆಯ ದಿನ ಪ್ರಾತಃಕಾಲ ಶ್ರೀ ಚನ್ನವೀರಯ್ಯನವರ ಮನೆಯಲ್ಲಿ ಶ್ರೀ ಗಳವರ ಪಾದಪೂಜೆ ಜರುಗಿತು. ಶ್ರೀ ಪತ್ರಿಯವರ ಮನೆಯವರಿಗೆ ಮತ್ತು ಬೀರೂರ ಸದ್ಭಕ್ತರಿಗೆ ಆಶೀರ್ವಾದ ಅನುಗ್ರಹಿಸಿ ಅವರೆಲ್ಲರಿಗೂ ತಮ್ಮೊಡನೆ ಶ್ರೀ ಎಡೆಯೂರ ಕ್ಷೇತ್ರಕ್ಕೆ ಬರಲು ಅಪ್ಪಣೆ ಮಾಡಿ ಪ್ರಯಾಣ ಮುಂದುವರಿಸಿದರು |
೧೨ |
ಬಾಣಾವರ |
೩೧.೫೮ |
ಬೀರೂರ ಶ್ರೀ ಸಣ್ಣಕ್ಕಿ ಪಶ್ವತಯ್ಯನವರ ವ್ಯವಸ್ಥೆ |
೧೩ |
ಅರಸಿಕೇರೆ |
೧೫.೩೦ |
ಬೀರೂರ ಶ್ರೀ ಸಣ್ಣಕ್ಕಿ ಪಶ್ವತಯ್ಯನವರ ವ್ಯವಸ್ಥೆ |
೧೪ |
ತಿಪಟೂರು |
೨೩.೩೦ |
ಬೀರೂರ ಶ್ರೀ ಸಣ್ಣಕ್ಕಿ ಪಶ್ವತಯ್ಯನವರ ವ್ಯವಸ್ಥೆ |
೧೫ |
ನೊಣವಿನಕೆರೆ |
೧೩.೧೭ |
ನೊಣವಿನಕೆರೆಯ ಶಿವಾನುಭವ ಚರವರ್ಯರಾದ ಸೋಮಕಟ್ಟಿ, ಶ್ರೀ ಕರಿವೃಷಭೇಂದ್ರಸ್ವಾಮಿಗಳವರ ಮಠದಲ್ಲಿ ಅಂದು ವಾಸ್ತವ್ಯಮಾಡಿ ಅಲ್ಲಿ ಭಕ್ತಾದಿಗಳ ಸೇವೆಯನ್ನು ಸ್ವೀಕರಿಸಿ ಮುಂದೆ ಪ್ರಯಾಣ ಬೆಳೆಯಿಸಲಾಯಿತು. |
೧೬ |
ತುರುವಕೆರೆ |
೧೩.೨೪ |
ತುರುವೆಕೆರೆಯ ಭಕ್ತರು ಶ್ರೀ ಸನ್ನಿಧಿಯವರು ವಿಶ್ರಾಂತಿ ತೆಗೆದುಕೊಳ್ಳಲು ಸುಂದರವಾದ ಮಂಟಪ ರಚಿಸಿದ್ದರು. ಅಲ್ಲಿ ಆ ಭಕ್ತಾದಿಗಳ ಕೋರಿಕೆಯ ಮೇರೆಗೆ ಕೆಲ ಸಮಯ ವಿಶ್ರಾಂತಿ ತೆಗೆದುಕೊಂಡು ಅಲ್ಲಿಯ ಭಕ್ತರೆಲ್ಲರಿಗೆ ಆಶೀರ್ವದಿಸಿ ಮುಂದೆ ಎಲ್ಲಿಯೂ ನಿಲ್ಲದೆ ಶ್ರೀ ಯಡೆಯೂರ ಕ್ಷೇತ್ರವನ್ನು ಪ್ರವೇಶಿಸಿದರು |
೧೭ |
ಯಡೆಯೂರು |
೨೪.೩೭ |
|
ಶ್ರೀ ಕ್ಷೇತ್ರದ ಅದ್ಭುತ ದರ್ಶನವೊಡನೆ, ಶ್ರೀ ಜಗದ್ಗುರುಗಳು ಹಾನಗಲ್ಲ ಶ್ರೀಗಳ ಪವಿತ್ರ ಹಸ್ತದಲ್ಲಿ ತಮ್ಮ ಹಸ್ತವನ್ನಿಟ್ಟು, ಪಾದಯಾತ್ರಿ ಯಾಗಿ ನಡೆದರು. ಅವರ ಜೊತೆಯಲ್ಲಿ, ಎಲ್ಲಾ ಹರ-ಗುರು-ಚರಮೂರ್ತಿಗಳು ಶ್ರದ್ಧೆಯ ಪ್ರತಿಬಿಂಬವಾಗಿ ಹಿಂಬಾಲಿಸುತ್ತಿದ್ದರು.
ಈ ಪಾದಯಾತ್ರೆಯು ಕೇವಲ ಒಂದು ಸಮಾರಂಭವಲ್ಲ, ಇದು ಶ್ರೀ ಕ್ಷೇತ್ರದ ದರ್ಶನಕ್ಕೆ ಶ್ರೀಗಳಿಗೆ ಸಲ್ಲಿಸುವ ಅಧ್ಯಾತ್ಮಿಕ ಸಮರ್ಪಣೆ, ಗೌರವ ಹಾಗೂ ಭಕ್ತಿಯ ಸಂಕೇತವಾಗಿತ್ತು. ಶ್ರೀಗಳಿಗೆ ಪೂರ್ವಭಾವಿಯಿಂದ, ಹಿಂದಿನಿಂದ ಗಮಕಿ, ಗಾಯಕರ ಕಲಾನೈಪುಣ್ಯವು ಪುರಾತನ ಪರಂಪರೆಯ ಸ್ಮರಣೆ ಬಯಸುವಂತೆ ಪ್ರತಿಫಲಿಸುತ್ತಿತ್ತು. ಶಾಸ್ತ್ರಜ್ಞರು ಹಾಗೂ ಅಪಾರ ಭಕ್ತಸಮೂಹವು ಕ್ರಮಿಸಿದ ದಾರಿ ಹಾಗು ಹೃದಯದಲ್ಲಿ ಭಕ್ತಿ ತುಂಬಿಕೊಂಡು, ಮಂಗಳಕಾರವಾದ ಮೇಳ-ತಾಳಗಳ ಭೋರ್ಗರೆತದೊಂದಿಗೆ ಸಾಗುತ್ತಿದ್ದದು.
ಛತ್ರ – ಚಾಮರಗಳ ಅಲಂಕಾರಗಳೊಂದಿಗೆ ಸರ್ವಪೂಜಿತ ಶ್ರೀಗಳು ಶ್ರೀ ಕ್ಷೇತ್ರವನ್ನು ಸಮೀಪಿಸುತ್ತಿದ್ದಂತೆ, ಧರ್ಮದರ್ಶಿಗಳು ಹಾಗೂ ಅರ್ಚಕರು ಪೂರ್ಣ ಕುಂಭ ಸ್ವಾಗತದೊಂದಿಗೆ ಸ್ವಾಗತಿಸಿದರು. ವೇದಘೋಷದ ಮಹತ್ವದಿಂದ, ದೇವಸ್ಥಾನದ ಪವಿತ್ರ ವಾತಾವರಣವು ಭಕ್ತಿಯಲ್ಲೂ ಶ್ರದ್ಧೆಯಲ್ಲೂ ಪರಿಪೂರ್ಣವಾಯಿತು. ಶ್ರೀಗಳಿಗೆ ಅರ್ಪಿಸಲಾದ ಮಂಗಳಸ್ವಾಗತವು, ಪವಿತ್ರ ಕ್ಷೇತ್ರದ ಅಧ್ಯಾತ್ಮಿಕ ಭವ್ಯತೆಯನ್ನು ಬೆಳಗಿಸಿತು.
ಕಾರ್ತಿಕ ಬಹುಳ ಪಂಚಮಿಯ ಪವಿತ್ರ ದಿನ, ಶ್ರೀ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆದ ಮಹತ್ವದ ಸಭೆಯು ಭಕ್ತರ ಹೃದಯದಲ್ಲಿ ಭಕ್ತಿ ಮತ್ತು ಭಾವನೆಯನ್ನು ತುಂಬಿತು.
ಈ ಸಂದರ್ಭದಲ್ಲಿ, ಶ್ರೀ ಹಾನಗಲ್ಲ ಶ್ರೀಗಳ ಅಪ್ಪಣೆಯಂತೆ, ಆದರ್ಶ ಶಿಕ್ಷಕರೂ, ಪ್ರಸಿದ್ಧ ಕವಿಯೂ ಹಾಗೂ ವಾಗ್ಮಿಗಳೂ ಆದ ಶ್ರೀ ಜಿಗಳೂರ ಲಿಂಗಪ್ಪ ಮಾಸ್ತರರು, ಅನಾದಿ ಸಿದ್ಧಲಿಂಗೇಶ್ವರರಿಂದ ಹಿಡಿದು ತೋಂಟದಾರ್ಯ ಪರಂಪರೆಯ ಶ್ರೀ ಜಗದ್ಗುರು ಸಿದ್ಧೇಶ್ವರ ಮಹಾಸ್ವಾಮಿಗಳ ವರೆಗಿನ ಅದ್ಭುತ ಚರಿತ್ರೆಯನ್ನು ನಿರೂಪಿಸಿದರು. ಅವರ ಚರಿತ್ರೆ ಮತ್ತು ತತ್ವಜ್ಞಾನವನ್ನು ಶ್ರದ್ಧೆಯಿಂದ ಶ್ರವಣಿಸಿದ ಭಕ್ತರು ಮತ್ತು ವಿದ್ವಾಂಸರು ಆ ನೈಜ ಪರಂಪರೆಯ ಮಹತ್ವವನ್ನು ಅರ್ಥಮಾಡಿಕೊಂಡರು. ಅದರೊಂದಿಗೆ ಶ್ರೀ ಕೊಪ್ಪದ ಮಹಾಂತದೇಶಿಕರು ಅವರ ವಿಶಿಷ್ಟ ಉಪನ್ಯಾಸದ ಮೂಲಕ ಸಭೆಗೆ ಮತ್ತಷ್ಟು ಆಳವನ್ನು ತಂದುಕೊಟ್ಟರು.
ಮಾರನೆಯ ದಿನವೂ ವಿದ್ವಜ್ಜನರ ಉಪನ್ಯಾಸಗಳು ನಡೆಯುತ್ತಾ, ಮಹಾಸ್ವಾಮಿಗಳಿಗೆ ತ್ರಿಕಾಲ ರುದ್ರಾಭಿಷೇಕದಂತೆ ವಿಭಿನ್ನ ಧಾರ್ಮಿಕ ಸೇವೆಗಳು ನಡೆಯಿತು. ಸಂಜೆ ದೀಪೋತ್ಸವಾದಿ ಸೇವೆಗಳು ಕ್ಷೇತ್ರವನ್ನು ಪ್ರಕಾಶಮಯಗೊಳಿಸಿದವು, ಭಕ್ತರ ಹೃದಯಗಳಲ್ಲಿ ಅಧ್ಯಾತ್ಮಿಕ ಶಾಂತಿ ಮತ್ತು ಆನಂದ ತುಂಬಿದವು.
ಈ ಧಾರ್ಮಿಕ ಉತ್ಸವದ ಇನ್ನೊಂದು ಮುಖ್ಯ ಅಂಶವಾಗಿ ಗಜ-ಅಶ್ವಗಳ ಮೆರವಣಿಗೆಯೊಂದಿಗೆ, ಭಕ್ತಾದಿಗಳ ಶ್ರದ್ಧಾ ಸಮರ್ಪಣೆಯೊಂದಿಗೆ ಬಿರುದಾವಳಿಗಳ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.
ಮಹಾಸ್ವಾಮಿಯವರಿಗೆ ಸಲ್ಲಿಸಿದ ಭಕ್ತಿಯ ಸಂಕೇತವಾಗಿ, ಬೆಟಗೇರಿ ಕಣವಿ ಶ್ರೀ ಮಲ್ಲೇಶಪ್ಪನವರು ಮತ್ತು ನರೇಗಲ್ಲ ಕಣವಿ ಶ್ರೀ ಗುರಪ್ಪಜನವರು ಮಹಾಸ್ವಾಮಿಯ ನಿತ್ಯ ನೈವೇದ್ಯಕ್ಕೆ ಒಂದು ಹೊಲವನ್ನು ಖರೀದಿಸಿ, ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು.
ಮುಂಡರಗಿಯ ಶೆಟ್ಟರ ಸಂಗಪ್ಪಯ್ಯನವರು ಮಹಾಸ್ವಾಮಿಯ ದೀಪಾರಾಧನೆಗಾಗಿ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸಿ ಒಂದು ಹೊಲವನ್ನು ದಾನವಾಗಿ ಸಲ್ಲಿಸಿದರು.
ಜಕ್ಕಲಿಯ ಸದ್ಭಕ್ತರಾದ ಕಡಗದ ತೋಟಪ್ಪನವರು ಮಹಾಸ್ವಾಮಿಯ ರಥೋತ್ಸವ ಸಂದರ್ಭದಲ್ಲಿ, ಆ ರಥಕ್ಕೆ ತಗಲುವ ಎಣ್ಣೆ ಖರ್ಚನ್ನು ನೋಡಿಕೊಂಡು ತಮ್ಮ ಶ್ರದ್ಧೆಯ ಮೂಲಕ ಮತ್ತಷ್ಟು ಸಮರ್ಪಣೆಯನ್ನು ತೋರಿಸಿದರು.
ಶ್ರೀ ಕ್ಷೇತ್ರ ಎಡೆಯೂರ ಕಾರ್ಯಕ್ರಮದ ಯಶಸ್ವಿ ಪೂರ್ಣತೆಗೆ ಮುಂದಿನ ಹಂತವಾಗಿ, ಅನಾದಿ ಸಿದ್ಧಲಿಂಗೇಶ್ವರರ ತಪೋಭೂಮಿಯಾದ ಶ್ರೀ ಕಗ್ಗೆರೆ ಕ್ಷೇತ್ರಕ್ಕೆ ಪ್ರಯಾಣವನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ, ಖರ್ಚಿನ ಭಾಗವನ್ನು ಹೊಂಬಳ ಗ್ರಾಮದ ಸದ್ಭಕರಾದ ಶ್ರೀ ಮೈಲಾರ ಶಂಕರಪ್ಪನವರು ತಗೆದುಕೊಂಡರು,
ಶ್ರೀ ಜಗದ್ಗುರುಗಳೊಡನೆ ಪ್ರಯಾಣಿಸಿದವರ ಸಂಖ್ಯೆ ಕನಿಷ್ಠ ೧,೦೦೦ ಜನರಷ್ಟು ಇದ್ದಾಗ, ಕಗ್ಗೆರೆ ಗ್ರಾಮದ ಸುತ್ತಲಿನ ಊರುಗಳಿಂದ ೮-೧೦ ಸಾವಿರ ಜನರು ಶ್ರೀಗಳ ಅವರ ದರ್ಶನಕ್ಕೆ ಧಾವಿಸಿದರು. ಈ ಪೂರಕ ಜನಸಂಖ್ಯೆಗೆ ಪ್ರಸಾದವನ್ನು ವ್ಯವಸ್ಥೆ ಮಾಡುವುದೇ ದೊಡ್ಡ ಸಮಸ್ಯೆಯಾಗಿ ಬಿಟ್ಟಿತು , ಏಕೆಂದರೆ ಕಗ್ಗೆರೆಯಲ್ಲಿ ಮಾಡಿದ ವ್ಯವಸ್ಥೆಯಂತೆ ಕೇವಲ ೧೦೦೦ ಜನರಿಗೆ ಮಾತ್ರ ಪ್ರಸಾದ ನೀಡಲು ಅವಕಾಶವಿತ್ತು.
“ಎಲ್ಲರಿಗೂ ಒಂದು ಮುಷ್ಟಿ ಪ್ರಸಾದ ಕೊಡುವುದಾದರೆ, ಊಟದ ಎಲೆಗಳು ಕೂಡ ದೊರಕುತ್ತವೆ,” ಎಂದು ಯೋಚನೆಯಾಯಿತು. ಹೊತ್ತೊಯ್ಯುವ ಸಾಮಾನುಗಳು ಶ್ರೀ ಕ್ಷೇತ್ರ ಎಡೆಯೂರಿನಲ್ಲಿ ಮಾತ್ರವಿದ್ದು, ಅದು ೮-೧೦ ಮೈಲು ದೂರದಲ್ಲಿತ್ತು. ಸಮೀಪದ ಹಳ್ಳಿಗಳು ಕೂಡ ಕಡಿಮೆ ಜನಸಂಖ್ಯೆ ಇರುವ ಸಣ್ಣ ಸಣ್ಣ ಕೊಂಪೆಗಳು.
ಈ ಧರ್ಮ ಸಂಕಟದಲ್ಲಿ ಏನು ಮಾಡಬೇಕೆಂದು ಯಾರಿಗೂ ತಿಳಿದಿಲ್ಲದಾಗ, ಶ್ರೀ ಹಾನಗಲ್ಲ ಮಹಾಸ್ವಾಮಿಗಳವರು ಧೈರ್ಯದಿಂದ ಸ್ಥಳಕ್ಕೆ ಬಂದು ಹೇಳಿದರು, “ಬುದ್ಧಿ! ಆಲೋಚನೆ ಏಕೆ? ಯಾವ ಮಹಾತ್ಮನು ಒಂದು ಭಾಂಡ ಅನ್ನದಿಂದ ೫೦೦ ಜನರನ್ನು ತಣಿಸಿದನೋ ಆತನು ಈಗಲೂ ಇರುವನು. ಇದು ಆತನದೇ ಪವಿತ್ರ ಕ್ಷೇತ್ರ” ಎಂದು ಧೈರ್ಯ ಹೇಳಿ ಶ್ರೀ ಜಗದ್ಗುರುಗಳವರನ್ನು ಪ್ರಸಾದ ವ್ಯವಸ್ಥೆ ಇದ್ದಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಪ್ರಸಾದಕ್ಕೆ ಜಗದ್ಗುರುಗಳವರ ಹಸ್ತವನ್ನು ಸ್ಪರ್ಶಿಸಿದರು..
ಅಷ್ಟರಲ್ಲಿ, ಒಬ್ಬ ಹಳ್ಳಿಕಾರನು ಧಾವಿಸಿ ಬಂದು, “ಊಟದ ಎಲೆಗಳಿಂದ ತುಂಬಿದ ಗಾಡಿ ಹಳ್ಳದಲ್ಲಿ ನಿಂತಿದೆ, ಸಹಾಯಕ್ಕೆ ಬನ್ನಿ” ಎಂದು ಹೇಳಿದರು. ಯಾತ್ರಿಕರು ಗಾಡಿಯನ್ನು ಸಾಗಿಸುವ ಕಾರ್ಯದಲ್ಲಿ ತೊಡಗಿದರು. ಯಾತ್ರಿಕರೆಲ್ಲರಿಗೂ ಎಲೆಗಳನ್ನು ಹಂಚಿ, ಸಮಾನವಾಗಿ ಪ್ರಸಾದ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಯಿತು. ವಿಚಿತ್ರವೆಂದರೆ, ಎಲ್ಲರಿಗೂ ಎಲೆಗಳು ತಲುಪಿದವು, ಪ್ರಸಾದ ಯಾರಿಗೂ ಕಡಿಮೆ ಯಾಗಲಿಲ್ಲ.!
ಮಾರನೆಯ ದಿನ, ಶ್ರೀ ಜಗದ್ಗುರುಗಳು, ಅರ್ಚಕರು, ಧರ್ಮದರ್ಶಿಗಳು ಮತ್ತು ಸೇವಕರಿಗೆ ಸಂಸ್ಥಾನಮಠದಿಂದ ಆಶೀರ್ವಾದ ನೀಡಿದ ಬಳಿಕ, ತುರುವೇಕೆರೆ ಮಾರ್ಗವಾಗಿ ಮರುಪ್ರಯಾಣವನ್ನು ಆರಂಭಿಸಿದರು.
ಮಾರ್ಗ ಮಧ್ಯದಲ್ಲಿ ಶ್ರೀ ಕೊಟ್ಟೂರು ಕ್ಷೇತ್ರವನ್ನು ಭೇಟಿ ಮಾಡಲಾಯಿತು. ವೀರಶೈವ/ಲಿಂಗಾಯತ ಕ್ಷೇತ್ರಗಳಲ್ಲಿ ಕೊಟ್ಟೂರಿಗೂ ಮಹತ್ವವಿದೆ, ಏಕೆಂದರೆ ಇಲ್ಲಿ ಶ್ರೀ ಕೊಟ್ಟೂರ ಬಸವೇಶ್ವರರು ಲೋಕೋದ್ಧಾರಕ್ಕಾಗಿ ಅಭಿವ್ಯಕ್ತವಾದ ಪಂಚಗಣಾಧೀಶ್ವರರಲ್ಲಿ ಒಬ್ಬರಾಗಿದ್ದಾರೆ. ಈ ಕ್ಷೇತ್ರದಲ್ಲಿ ಅವರ ಜೀವಂತ ಸಮಾಧಿ ಇದೆ, ಮತ್ತು ಅವರಿಗೆ ಸಲ್ಲಿಸಲಾದ ಪೂಜೆಗಳ ಮೂಲಕ ಅವರುಗಳ ಅಪಾರ ಮಹಿಮೆ ಸಂದರ್ಶನವಾಯಿತು.
ಅಲ್ಲಿಂದ, ಶ್ರೀ ಗಳು ಬಾಚಗೊಂಡನಹಳ್ಳಿ, ಹಿರೇಹಡಗಲಿ ಮತ್ತು ಹಂಪಸಾಗರಗಳನ್ನು ಭೇಟಿಯಾಗಿ ಅಲ್ಲಿನ ತಮ್ಮ ಪೀಠದ ಗುರುಗಳಿಗೆ ಪೂಜೋಪಚಾರಗಳನ್ನು ಸಲ್ಲಿಸಿದರು. ಇದರಿಂದ ಗಣಾರಾಧನೆಯ ಪರಂಪರೆ ಬೆಳೆಯಿತು. ನಂತರ, ಅವರು ಮುಂಡರಗಿಗೆ ಬಂದರು, ಅಲ್ಲಿ ಸದ್ಭಕ್ತರಿಗೆ ನಿರೂಪಣೆ ನೀಡಿದರು ಮತ್ತು ನಂತರ ಡಂಬಳ ಸಂಸ್ಥಾನ ಮಠಕ್ಕೆ ಸಾಗಿದರು. ಅಲ್ಲಿಯೂ ಗಣಾರಾಧನೆ ನಡೆಸಿದ ನಂತರ, ಅಣ್ಣಿಗೇರಿಯತ್ತ ಅವರ ಪ್ರಯಾಣ ಮುಂದುವರಿಯಿತು.
ಅಣ್ಣಿಗೇರಿಗೆ ಬರುವಾಗ, ಅಲ್ಲಿಯ ಪರಮ ಭಕ್ತರಾದ ಶ್ರೀ ಶಂಕರಪ್ಪ ದೇಸಾಯಿಯವರ ಸೇವೆಯನ್ನು ಸ್ವೀಕರಿಸಿದರು. ಅವರು ಅಲ್ಲಿಯ ಭಕ್ತರಿಗೆ ಆಶೀರ್ವದಿಸಿದರು ಮತ್ತು ನಂತರ ಗದುಗಿನ ಕಡೆಗೆ ತಮ್ಮ ಯಾತ್ರೆ ಮುಂದುವರಿಸಿದರು.
ಗಡಿಪರ್ವ: ಶ್ರೀ ಮಹಾಸನ್ನಿಧಿಯು ಗದುಗಿನ ಹೊರವಲಯದಲ್ಲಿರುವ ಮಾನ್ವಿ ಮಲ್ಲೇಶಪ್ಪನವರ ತೋಟದಲ್ಲಿ ವಾಸ್ತವ್ಯ ಮಾಡಿದರು. ಈ ಸಂದರ್ಭದಲ್ಲಿ, ಗದಗ-ಬೆಟಗೇರಿ-ಶಹಪೂರಪೇಟೆಯ ಸದ್ಭಕ್ತರು ನಾನಾವಿಧದ ಪಕ್ವಾನ್ನಗಳನ್ನು ಸಿದ್ಧಪಡಿಸಿ, ಶ್ರೀ ಜಗದ್ಗುರುಗಳ ಸನ್ನಿಧಿಯಲ್ಲಿ ಗಡಿಪರ್ವವನ್ನು ವಿಜೃಂಭಣೆಯಿಂದ ಆಚರಿಸಿದರು.

ಮೇಲ್ಕಾಣಿಸಿದ ಎಲ್ಲಾ ವಿವರಗಳಿಗೆ ಮಿಗಿಲಾಗಿ, ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರ ಶಿವಯೋಗದ ಬದುಕಿನಲ್ಲಿ ೧೯೧೭ರ ಡಿಸೆಂಬರ್ ೬ರಂದು ಒಂದು ವಿಶೇಷ ಸಂಗತಿ ನಡೆಯಿತು. ಯಡೆಯೂರಿನಲ್ಲಿ ಸಿದ್ಧಲಿಂಗೇಶ್ವರರ ಕ್ರಿಯಾ ಸಮಾಧಿಯ ದರ್ಶನವಾದ ನಂತರ, ಶ್ರೀ ಕುಮಾರ ಸ್ವಾಮಿಗಳು ದೇವಾಲಯದ ಎಡಭಾಗದ ಪ್ರಾಕಾರದ ಕೆಳ ಅಂತಸ್ತಿನಲ್ಲಿ ಪೂಜಾದಿಗಳಿಗೆ ಪೂರ್ಣಿಸಿ, ಸಂಜೆಯ ಮೇಲೆ ಪವಡಿಸಿದರು.
ನಡುರಾತ್ರಿ, ಅವರಿಗೆ ಒಂದು ಸ್ಫೂರ್ತಿದಾಯಕ ಕನಸು ಕಾಣಿಸಿತು. ಕನಸಿನಲ್ಲಿ, ಶ್ರೀ ಸಿದ್ಧಲಿಂಗೇಶ್ವರರು ಗದ್ದುಗೆಯಲ್ಲಿ ಲಿಂಗಪೂಜೆಯಲ್ಲಿ ಮುಳುಗಿದ್ದಾಗ, ಶಿವಯೋಗಿಗಳು ಅವರಿಂದ ಪಾದೋದಕ ಮತ್ತು ಪ್ರಸಾದ ಪಡೆಯುತ್ತಿದ್ದರು. ಶ್ರೀ ಸಿದ್ಧಲಿಂಗೇಶ್ವರರು ಭಸ್ಮ ಧಾರಣೆಯೊಂದಿಗೆ, ರುದ್ರಾಕ್ಷಿ ಮಾಲೆಗಳ ಶೋಭೆಯಲ್ಲಿ ಬಿಂಬಿತವಾಗಿದ್ದರು. ಜಂಗಮಮೂರ್ತಿಗಳು ಒಬ್ಬೊಬ್ಬರಾಗಿ ಪಾದೋದಕ ಮತ್ತು ಪ್ರಸಾದ ಪಡೆಯುತ್ತಿದ್ದಾಗ, ಅವರು ಕೇವಲ ತಾವು ಮಾತ್ರ ನೋಡುತ್ತ ನಿಂತಂತೆ, ಶ್ರೀ ಕುಮಾರ ಸ್ವಾಮಿಗಳಿಗೆ ತಮ್ಮ ಗುರುಗಳು, ಬಿದರಿ ಶ್ರೀ ಕುಮಾರ ಸ್ವಾಮಿಗಳು, ತಮ್ಮತ್ತ ನೋಡುತ್ತಿದ್ದಂತೆ ಭಾಸವಾಯಿತು.
ಕನಸಿನಿಂದ, ಶ್ರೀ ಕುಮಾರ ಸ್ವಾಮಿಗಳು ಎಚ್ಚರಗೊಳ್ಳಲು. “ಇದು ಶ್ರೀ ಸಿದ್ಧಲಿಂಗೇಶ್ವರನ ವಿಲಾಸ,” ಎಂದು ಅವರು ಯೋಚಿಸಿದರು. ” ಈ ಕ್ಷೇತ್ರವು ಶಿವಯೋಗ ಪರಂಪರೆಯ ಅನಾದಿ ನಿರಂಜನ ಜಗದ್ಗುರುಗಳ ಸ್ಥಳ.” ಈ ದೃಷ್ಟಿಯಿಂದ, ಅವರು ತಮ್ಮಲ್ಲಿದ್ದ ಸಂದೇಹಗಳನ್ನು ಬದಗಿರಿಸಿ,ಭಕ್ತಿಯಿಂದ, ಅವರು ತಮ್ಮ ಕನಸಿನ ವೃತ್ತಾಂತವನ್ನು ಶ್ರೀ ಸಿದ್ಧೇಶ್ವರ ಜಗದ್ಗುರುಗಳಿಗೆ ಹಂಚಿಕೊಂಡರು. ಈ ಸಂದರ್ಭದಲ್ಲಿ, ಶ್ರೀ ಸಿದ್ಧಲಿಂಗೇಶ್ವರರ ಸನ್ನಿಧಾನದಲ್ಲಿ ಮಂಗಳಾರತಿ ನೆರವೇರಿಸಿ, ಶ್ರೀ ಕುಮಾರ ಸ್ವಾಮಿಗಳು ಶ್ರದ್ಧೆಯಿಂದ ಸಾಷ್ಟಾಂಗ ಪ್ರಣಾಮ ಮಾಡಿದರು. ಅವರ ಕಂಗಳಲ್ಲಿ ಆನಂದಭಾಷ್ಪ ಹರಿಯುತ್ತಿತ್ತು, ಭಾವನೆಯಲ್ಲಿ ಉಕ್ಕಿದ ಶ್ರೀ ಸಿದ್ಧಲಿಂಗೇಶ್ವರನ ಸ್ತುತಿ.
“ಶ್ರೀ ಜಗದ್ಗುರು ವರತೋಂಟದಾರ್ಯ
ಸುಜನಮನವಾಸ ಘನಸಾರ ಶೌರ್ಯ
ಮಾಯಾ ಮೋಹ ಹೇಯಗೊಳಿಸಿ ಬಿಡದು
ಕಾಯಜ ಮದಹರ ಜಯವೀಯೋ ಪೊರೆದು
ಜನನ ದೂರನೆನಿಸಿ ನೋಡಿ ದಯದಿ
ಗಣಸಮೂಹದಿ ಗಣಿಸೋ ನೀ ಮುದದಿ
ಸಿದ್ಧಲಿಂಗ ಶುದ್ಧ ಕ್ಷೇತ್ರಾಧೀಶ
ತಿದ್ದುತೆ ಮನವನು ಬದ್ಧನೆನಿಸದೆ ತೋಷ
ಎಡೆಯೂರು ಯಾತ್ರೆ ಫಲಿಸಿತು, ಹೃದಯವು ಪ್ರಫುಲ್ಲಗೊಂಡಿತು. ಶ್ರೀ ಕುಮಾರ ಸ್ವಾಮಿಗಳಲ್ಲಿದ್ದ ಸಮಯಭೇದದ ಸಂದೇಹಗಳು ಅಳಿದವು.
ಶಿಷ್ಯ ಪರಂಪರೆ ಮೂಲಕ ಬಾಚನಹಳ್ಳಿ ಕೌದಿ ಶ್ರೀ ಮಹಾಂತ ಸ್ವಾಮಿಗಳಿಂದ ಶ್ರೀ ಅರ್ಧನಾರೀಶ್ವರರಿಗೆ ಅನುಗ್ರಹವಿತ್ತದ್ದು, ಮುಂದೆ ಇವರ ಶಿಷ್ಯ ಪರಂಪರೆಯ ಚರಮೂರ್ತಿಗಳಿಂದ ಸಮಯಭೇದಗಳಾಗಿವೆಯೇ ಹೊರತು ತಾತ್ತ್ವಿಕವಾಗಿ ಈ ಎಲ್ಲವೂ ಶಿವಯೋಗ ಪರಂಪರೆಯವೇ ಎನ್ನುವುದು ನಿಚ್ಚಳವಾಗಿತ್ತು .
ಸಮಯಾಚಾರ ಎನ್ನುವುದು ವೀರಶೈವ ಆಚರಣೆಯನ್ನೇ ಆಧರಿಸಿರುವಂಥಹುದು. ಶಿಷ್ಯ ಪರಂಪರೆಯನ್ನು ಗುರುತಿಸಿಕೊಳ್ಳಲು ಇದು ಹುಟ್ಟಿದೆ. ಅಷ್ಟೇ ಎಂದು ಅರಿವಾಗಿತ್ತು.
೧೯೧೭ರಲ್ಲಿ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು ಆಯೋಜಿಸಿದ ಯಡೆಯೂರು ಪಾದಯಾತ್ರೆ , ಹರಿದು ಹಂಚಿಹೋಗಿದ್ದ ವೀರಶೈವ/ಲಿಂಗಾಯತ ಧರ್ಮೀಯರ ಒಗ್ಗೂಡುವಿಕೆಯ ಚಳುವಳಿಯ ಫಲಶೃತಿಯಾಗಿ ಸ್ಥಾಪನೆಗೊಂಡ ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಶ್ರೀಮದ್ವೀರಶೈವ ಶಿವಯೋಗಮಂದಿರ ಗಳ ಕೊಡುಗೆಗಳಿಗಿಂತ ವಿಭಿನ್ನವಾಗಿ ಹೊರಹೊಮ್ಮಿದ್ದು ಒಂದು ವಿಶೇಷ ಮತ್ತು ವಿಸ್ಮಯ !!.
ಸ್ವಾತಂತ್ರ್ಯದ ಹೋರಾಟಕ್ಕೆ ಮಹಾತ್ಮಾ ಗಾಂಧಿಯವರು ಜಾರಿಗೆ ತಂದ ಚಳುವಳಿಯ ಮಾರ್ಗೋಪಾಯಗಳಾದ ಪಾದಯಾತ್ರೆ,ಉಪವಾಸ ಮತ್ತು ಸ್ವದೇಶಿ ಖಾದಿ ಕಡ್ಡಾಯಗಳನ್ನು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಶಿವಯೋಗಿಗಳು ಗಾಂಧೀಜಿಯವರಕ್ಕಿಂತಲೂ ಮುಂಚೆಯೇ ಜಾರಿಗೆ ತಂದುಕೊಂಡಿದ್ದರು.
ಪೂಜ್ಯ ಕುಮಾರ ಶಿವಯೋಗಿಗಳು ೩ ದಿವಸ ಉಪವಾಸ ಸತ್ಯಾಗ್ರಹ ಮಾಡಿದ್ದು ಬಳ್ಳಾರಿಯ ೫ನೆಯ ಅಖಿಲ ಭಾರತ ವೀರಶೈವ ಮಹಾಸಭಾ ಅಧಿವೇಷನದಲ್ಲಿ ಸಮಾಜ ನಾಲ್ಕು ಚೂರಾಗುವದನ್ನು ನಿಲ್ಲಿಸಲು ಮತ್ತು ಅದರಲ್ಲಿ ಯಶಸ್ವಿಯಾಗಿದ್ದು (ಗಾಂಧೀಜಿಯ ಮೊದಲ ಉಪವಾಸ ಸತ್ಯಾಗ್ರಹ ೧೯೧೭ ಅಹಮದಾಬಾದ ನಲ್ಲಿ).
ಪೂಜ್ಯ ಕುಮಾರ ಶಿವಯೋಗಿಗಳು ಸ್ವದೇಶಿ ಖಾದಿ ವಸ್ತ್ರ ಕಡ್ಡಾಯ ಮಾಡಿದ್ದು ೧೯೦೯ ರಲ್ಲಿ ಶ್ರೀ ಶಿವಯೋಗಮಂದಿರ ಸ್ಥಾಪನೆ ಮಾಡಿದ ವರ್ಷ ( ಗಾಂಧೀಜಿ ಸ್ವದೇಶಿ ಖಾದಿ ವಸ್ತ್ರ ಕಡ್ಡಾಯ ಮಾಡಿದ್ದು ಸಬರಮತಿ ಆಶ್ರಮದಲ್ಲಿ ೧೯೧೮-೧೯ ರಲ್ಲಿ)
ಪೂಜ್ಯ ಕುಮಾರ ಶಿವಯೋಗಿಗಳು ಯಡೆಯೂರು ಪಾದಯಾತ್ರೆ ಸಂಘಟಿಸಿದ್ದು ೧೯೧೭ ರಲ್ಲಿ (ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಕ್ಕೆ ಮೊದಲ ಪಾದಯಾತ್ರೆ ಮಾಡಿದ್ದು ೧೯೩೦ ರಲ್ಲಿ)
.
ಗ್ರಂಥ ಋಣ:
- ಶ್ರೀಕುಮಾರೇಶ್ವರ ಪುರಾಣ: ಕವಿರತ್ನ ದ್ಯಾಂಪುರ ಚನ್ನಕವಿಗಳು
- ಶ್ರೀಕುಮಾರೇಶ ಚರಿತೆ .ಲೇಖಕರು ಶ್ರೀ ಗುರುಕಂದ
- ಶ್ರೀ ವಿರಕ್ತ ತೋಂಟದಾರ್ಯ ವಿರಚಿತ “ ಶ್ರೀ ಸಿದ್ದೇಶ್ವರ ಮಹಾಪುರಾಣ ಪ್ರಕಾಶಕರು ಡಾ. ಸಿದ್ದಲಿಂಗಯ್ಯಾ ರಾಚಯ್ಯಾ ಹಿರೇಮಠ ಗದಗ
- ನಿರಂಜನ (೧೯೭೪ -ಪ್ರಕಾಶನ ತೋಂಟದಾರ್ಯ ಮಠ ಗದಗ ಪ್ರಕಾಶನ)