ಲೇಖಕರು : ಪೂಜ್ಯ ಶ್ರೀ.ಜಗದ್ಗುರು   ಡಾ|| ಸಿದ್ಧರಾಮ ಮಹಾಸ್ವಾಮಿಗಳು.ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

 

ಇಂದಿನ ವೈಜ್ಞಾನಿಕಯುಗದಲ್ಲಿ ಧರ್ಮ ತನ್ನ ನೈಜ ಅರ್ಥವನ್ನು ಕಳೆದುಕೊಂಡು ತಪ್ಪು ತಪ್ಪಾಗಿ ಅರ್ಥೈಸಲ್ಪಡುತ್ತಿದೆ. ಅಜ್ಞಾನ ಅಂಧಶ್ರದ್ಧೆಯಿಂದಾಗಿ ಧರ್ಮವು ಜಾತೀಯ ಸಂಘಟನೆಯಾಗಿ, ಗೊಡ್ಡು ಸಂಪ್ರದಾಯವಾಗಿ ಅವಹೇಳನಕ್ಕೆ ಗುರಿಯಾಗುತ್ತಿದೆ. ಅನೇಕ ವಿದ್ಯಾವಂತರು, ಪ್ರಗತಿಪರ ವಿಚಾರವುಳ್ಳವರು ನಾವು ಇಂಥ ಧರ್ಮಕ್ಕೆ ಸೇರಿದವರು ಅಥವಾ ಧಾರ್ಮಿಕರು ಎಂದು ಹೇಳಿಕೊಳ್ಳಬಯಸುವುದಿಲ್ಲ. ಹಾಗೆ ಹೇಳಿದರೆ ಪ್ರಗತಿಶೀಲರು ಎನಿಸಿಕೊಳ್ಳಲಾರೆವು ಎಂದು ಭಾವಿಸುತ್ತಾರೆ. ಧರ್ಮವನ್ನು ಸರಿಯಾಗಿ ಅರ್ಥೈಸದಿರುವುದು ಹಾಗು ನಿಜಾಚರಣೆಗಿಂತ ಬಾಹ್ಯ ಆಡಂಬರಕ್ಕೆ ವಿಶೇಷ ಮಹತ್ವ ಕೊಡುವುದು ಈ ಅವಾಂತರಕ್ಕೆ ಕಾರಣವಾಗಿದೆ.

 

ವಾಸ್ತವದಲ್ಲಿ ಧರ್ಮ ಅತ್ಯಂತ ವಿಶಾಲವಾದ ಅರ್ಥವನ್ನು ಹೊಂದಿದೆ. ಪ್ರಾಣಿದಯೆ, ಅಂತಃಕರಣ, ಪ್ರೀತಿ, ವಿಶ್ವಾಸ, ಪ್ರಾಮಾಣಿಕತೆ, ಸೇವಾಮನೋಭಾವಗಳಲ್ಲಿ ಅದು ಸದಾ ಅಣುರಣಿಸುತ್ತದೆ. ಅದೊಂದು ಜೀವನಪದ್ಧತಿ ಹಾಗೆಯೇ ಆದರ್ಶ ನಡವಳಿಕೆ. ನಮ್ಮ ನೆರೆಹೊರೆಯವರನ್ನು ಅರ್ಥಮಾಡಿಕೊಂಡು, ಅವರೊಡನೆ ಹೊಂದಿಕೊಂಡು ಬಾಳುವುದೇ ಧರ್ಮ. ಇದನ್ನು ಬಿಟ್ಟು ಕೇವಲ ಪೂಜೆ, ಜಪತಪಾದಿ ಕರ್ಮಗಳೇ ಧರ್ಮವೆಂದು ಭಾವಿಸುವುದು ತಪ್ಪು. ಅಹಿಂಸಾಪರವಾದ, ನೀತಿಯುತವಾದ ಸಾತ್ವಿಕ ಬದುಕು ನಮ್ಮದಾಗಬೇಕು. ‘ದಯವಿಲ್ಲದ ಧರ್ಮ ಅದಾವುದಯ್ಯಾ?’ ಎಂದು ಬಸವಣ್ಣನವರು ಕೇಳುವಲ್ಲಿ ಇದೇ ಅರ್ಥ ಧ್ವನಿತವಾಗಿದೆ. ನೊಂದವರ ನೋವಿನಲ್ಲಿ ಭಾಗಿಯಾಗಿ ನಮ್ಮ ಕೈಲಾದಮಟ್ಟಿಗೆ ಅವರ ದುಃಖ ಶಮನಗೊಳಿಸುವುದು, ದೀನ ದಲಿತರ ಬದುಕಿಗೆ ಆಸರೆಯಾಗಿ ನಿಲ್ಲುವುದೇ ಧರ್ಮ. ಅದು ಬರೀ ಉಪದೇಶದ ಮಾತಲ್ಲ; ಚರ್ಚೆಯ ವಿಷಯವೂ ಅಲ್ಲ. ಮಾನವೀಯತೆಯನ್ನು ಅರಿತು ಆಚರಿಸುವುದೇ ಧರ್ಮ, ಅದಕ್ಕಾಗಿಯೇ ‘ಧರ್ಮಂಚರ’ ಎಂದು ಉಪನಿಷತ್ತಿನಲ್ಲಿ ಹೇಳಲಾಗಿದೆ. ಉದಾಹರಣೆಗಾಗಿ ಒಬ್ಬ ವ್ಯಕ್ತಿಗೆ ಗುಂಡು ತಗುಲಿದೆ ಎಂದು ಭಾವಿಸೋಣ. ಆಗ ನಾವು ತಕ್ಷಣ ವೈದ್ಯರಲ್ಲಿ ಅವನನ್ನು ಕರೆದುಕೊಂಡು ಹೋಗುತ್ತೇವೆ. ವೈದ್ಯರು ಅವನ ಶರೀರದಲ್ಲಿ ಪ್ರವೇಶವಾಗಿರುವ ಗುಂಡನ್ನು ತಕ್ಷಣ ಹೊರತಗೆದು ಸರಿಯಾದ ಔಷಧೋಪಚಾರ ಮಾಡುವುದೇ ಧರ್ಮ. ಅದು ಬಿಟ್ಟು, ನಿನಗೆ ಗುಂಡು ಹೊಡೆದ ವ್ಯಕ್ತಿ ಯಾರು? ಅವನ ವಯಸ್ಸೆಷ್ಟು? ಅವನು ಎಷ್ಟು ಎತ್ತರವಾಗಿದ್ದ? ಅವನ ಬಣ್ಣ ಯಾವುದಿತ್ತು? ಹೀಗೆಲ್ಲ ಚರ್ಚಿಸುತ್ತ ಕುಳಿತುಕೊಳ್ಳುವುದು ಧರ್ಮವಾದೀತೆ  ?

 

ಜಗತ್ತಿನಲ್ಲಿ ಇಂದು ಅಸ್ತಿತ್ವದಲ್ಲಿರುವ ಎಲ್ಲ ಧರ್ಮಗಳ ಗುರಿ ಮಾನವ ಕಲ್ಯಾಣ. ಬಾಹ್ಯ ಆಡಂಬರಕ್ಕೆ, ಅಂಧಾನುಕರಣೆಗೆ ಧರ್ಮದಲ್ಲಿ ಸ್ಥಳವಿಲ್ಲ. ಆದರೆ ದುರದೃಷ್ಟದಿಂದ  ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಧರ್ಮ ಸುಲಿಗೆಯ ಸಾಧನವಾಗಿ ಮಾರ್ಪಟ್ಟು ಅನಾದರಣೆಗೆ ಕಾರಣವಾಗಿದೆ. ಧರ್ಮ ಯಾವಾಗಲೂ ಜ್ಞಾನಿಯಲ್ಲಿ ಜನಿಸಿ, ಅನುಭಾವಿಯಲ್ಲಿ ಬೆಳೆದು ಪುರೋಹಿತಶಾಹಿಯ ಜನರಲ್ಲಿ ಅವಸಾನ ಹೊಂದುತ್ತದೆ. ಜಗತ್ತಿನ ಪ್ರತಿಯೊಂದು ಧರ್ಮದಲ್ಲಿ ಪುರೋಹಿತಶಾಹಿಯ ಕೈವಾಡ ಇದ್ದೇ ಇದೆ. ಬೌದ್ಧಧರ್ಮ ಭಾರತದಿಂದ ಹೊರಹೋಗುವಲ್ಲಿ, ಕ್ರಿಸ್ತ ಶಿಲುಬೆಗೇರುವಲ್ಲಿ, ಬಸವಣ್ಣನವರ ಕ್ರಾಂತಿ ವಿಫಲವಾಗುವಲ್ಲಿ, ಅವರ ಕೈವಾಡ ಸ್ಪಷ್ಟವಾಗಿದೆ. ಧರ್ಮ ಧರ್ಮಗಳಲ್ಲಿ ಭೇದ ಹುಟ್ಟಿಸಿ, ಧರ್ಮದ ಹೆಸರಿನಲ್ಲಿ ಕೊಲೆ ಸುಲಿಗೆಗಳಿಗೆ ಕಾರಣರಾದವರು ಇದೇ ಜನ. ಮನುಷ್ಯ ಧರ್ಮಾಭಿಮಾನಿ ಯಾಗಿರಬೇಕು ಎಂದಾಗ ಅಂಧಾಭಿಮಾನಿಯಾಗಬೇಕು ಎಂದು ಅರ್ಥವಲ್ಲ. ಭೂಮಿ ತನ್ನ ಅಕ್ಷದ ಸುತ್ತ ತಿರುಗುತ್ತ ಸೂರ್ಯನ ಸುತ್ತ ತಿರುಗುತ್ತಿರುವುದರಿಂದಲೇ ಹಗಲು, ರಾತ್ರಿಗಳು ಋತುಮಾನಗಳು ಸಾಧ್ಯವಾಗುತ್ತಿವೆ. ಇಲ್ಲದಿದ್ದರೆ ಹವಾಮಾನ ವೈಪರೀತ್ಯಗಳುಂಟಾಗಿ ಭೂಮಿಯ ನಾಶಕ್ಕೆ ಕಾರಣವಾಗುತ್ತಿತ್ತು. ಹಾಗೆಯೇ ವ್ಯಕ್ತಿ ಸ್ವಧರ್ಮ ನಿಷ್ಠೆಯುಳ್ಳವನಾಗಿರುವಂತೆ ಪರಧರ್ಮ ಸಹಿಷ್ಣುವಾದಾಗ ತಾನೂ ಬದುಕುತ್ತಾನೆ: ಇನ್ನೊಬ್ಬರನ್ನು ಬದುಕಿಸುತ್ತಾನೆ. ಪ್ರತಿಯೊಬ್ಬರಿಗೂ ಅವರದೇ ಆದ ಧರ್ಮವಿದೆ. ರಾಜಧರ್ಮ, ಪ್ರಜಾಧರ್ಮ, ಅಧ್ಯಾಪಕ ಧರ್ಮ, ಸೈನಿಕಧರ್ಮ ಇತ್ಯಾದಿ. ಅವರವರ ಧರ್ಮ ಪರಿಪಾಲನೆಯಲ್ಲಿಯೇ ಅವರವರ ಅಭ್ಯುದಯವೂ ಸೇರಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮವನ್ನು ಅರ್ಥಾತ್ ಕರ್ತವ್ಯಪ್ರಜ್ಞೆಯನ್ನು ಅರಿತು ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ಕಾರ್ಯ ಮಾಡುತ್ತ ಇಹಪರಗಳಲ್ಲಿ ಶ್ರೇಯಸ್ಸನ್ನು ಪಡೆಯಲು ಸಾಧ್ಯವಿದೆ.

ಲೇಖಕರು: ಶ್ರೀ ಕೆ. ವಿ. ಬಾಳಿಕಾಯಿ

 

ವೀರಶೈವ ಧರ್ಮವು ಬಹು ಪ್ರಾಚೀನವಾದುದು. ಷಟ್‌ಸ್ಥಲಗಳ ಮೂಲಕ ಮಾನವನನ್ನು ಮಹಂತನನ್ನಾಗಿ ಮಾಡುವ ದಿವ್ಯಾಮೃತ. ಅಲ್ಲಿಂದ ಇಲ್ಲಿಯವರೆಗೆ ಈ ವಿಶಾಲ ಧರ್ಮದಲ್ಲಿ ಅನೇಕ ಮಹಾತ್ಮರು, ಶಿವಶರಣರು ಆಗಿಹೋಗಿದ್ದಾರೆ. ಎಲ್ಲರ ತತ್ತ್ವಗಳನ್ನು ಕಂಡಾಗ, ಕಂಡು ಉಂಡಾಗ ಬಹಿರಂಗ ಸಂಗ ಬಿಟ್ಟು ಅಂತರಂಗದ ಜ್ಯೋತಿ ತಾನೇ ತಾನಾಗಿ ದೇದೀಪ್ಯಮಾನವಾಗಿ ಬೆಳಗುತ್ತದೆ. ಇಂತಹ ಮಹಾತ್ಮರಲ್ಲಿ ಮುಳಗುಂದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳು ಒಬ್ಬರಾಗಿದ್ದಾರೆ.

ಈ ಶಿವಯೋಗಿಗಳ ಬಗೆಗೆ ಐತಿಹಾಸಿಕವಾದ ಚಾರಿತ್ರ್ಯವು ನಮಗೆ ಸಾಕಷ್ಟು ಲಭ್ಯ ವಾಗಿಲ್ಲ. ಅಲ್ಲಲ್ಲಿ ಪ್ರಚಲಿತವಿದ್ದ ಅಂಶಗಳನ್ನು ಗಮನಿಸಿ ಇವರ ಚರಿತ್ರೆಯನ್ನು ಹೇಳ ಬೇಕಾಗುತ್ತದೆ. ಈ ಮಹಾತ್ಮರು ೧೯ನೆಯ ಶತಮಾನದ ಮೊದಲ ಪಾದದಲ್ಲಿ ಬಾಳಿ ಬೆಳಗಿದರು.  ಮುಳಗುಂದದ ಕಲ್ಮಠದ ಮಹಾಂತ ಶಿವಯೋಗಿಗಳು ಬಿಜಾಪುರ ಜಿಲ್ಲೆಯ ಯರನಾಳ ಗ್ರಾಮದ ಹಿರೇಮಠದ ಸದ್ಭಕ್ತ ದಂಪತಿಗಳಿಗೆ ಗಂಡುಮಗುವನ್ನು ಆಶೀರ್ವದಿಸಿದರು. ಆತನೇ ಮುಂದೆ ಬಾಲಲೀಲಾ ಮಹಾಂತ ಶಿವಯೋಗಿಯೆಂದು ಪ್ರಸಿದ್ಧವಾದನು.

 

ತಮ್ಮ ಚಿಕ್ಕ ವಯಸ್ಸಿನಲ್ಲೇ ತಾಯಿ-ತಂದೆಯನ್ನು ಬಿಟ್ಟು ಸದ್ಗುರುಗಳನ್ನು ಹುಡುಕುತ್ತ ಲಿಂಗನಾಯಕನಹಳ್ಳಿಗೆ ಬಂದು ಅಲ್ಲಿ ಶ್ರೀ ಚೆನ್ನವೀರ ಸ್ವಾಮಿಗಳ ಶಿಷ್ಯರಾಗಿ ಶಿವಯೋಗ ಸಾಧನವನ್ನು ಪಡೆದು ಜ್ಞಾನನಿಧಿಯಾಗಿ ದೇಶಸಂಚಾರ ಮಾಡುತ್ತ, ಬಾಲಲೀಲೆಗಳನ್ನು ತೋರುತ್ತ ಭಕ್ತರನ್ನು ಶಿವಭಕ್ತಿಯಲ್ಲಿ ನಡೆಸುತ್ತ ಅವರನ್ನು ಉದ್ಧರಿಸಿದರು.

 

ಈ ಮಹಾತ್ಮರು ರಚಿಸಿದ ಕೃತಿಯೇ ‘ಕೈವಲ್ಯ ದರ್ಪಣ’, ಕೈವಲ್ಯವೆಂದರೆ ಮೋಕ್ಷ ದರ್ಪಣವೆಂದರೆ ಕನ್ನಡಿ, ಮೋಕ್ಷವನ್ನು ತೋರಿಸುವ ಕನ್ನಡಿ. ಇದೊಂದು ಬಿಡಿಪದ್ಯಗಳ ಸಂಕಲನ. ಇದರ ಮಹಿಮೆಯನ್ನು ಎಷ್ಟು ವರ್ಣಿಸಿದರೂ ತೀರದು. ಶ್ರೀಗಳವರ ಆತ್ಮಧ್ವನಿಯೇ ಈ ಪದ್ಯಗಳಲ್ಲಿ ಗುಂಜಾರವ ಮಾಡಿದಂತೆ ಆಗುತ್ತದೆ. ಒಂದೊಂದು ಪದ್ಯವೂ ಸಾಧಕನಿಗೆ ಸಾಧನೆಯ ಸೋಪಾನ. ಎಲ್ಲ ಪದ್ಯಗಳ ಸೌಂದರ್ಯವನ್ನು ವಿವರಿಸಿ ಹೇಳುವುದು ಈ ಲೇಖನಕ್ಕೆ ಮೀರಿದ ಮಾತು.

ವೀರಶೈವ ಧರ್ಮದ ಅಷ್ಟಾವರ್ಣಗಳಲ್ಲಿ ಮೊದಲನೆಯ ಸ್ಥಾನ ಗುರುವಿನದು,.’ನ ಗುರೋರಧಿಕಂ’ ಎನ್ನುವ ಮಾತಿನಂತೆ, ಗುರುವಿಗಿಂತ ಹಿರಿದಾದ ವಸ್ತು ಜಗತ್ತಿನಲ್ಲಿ ಯಾವುದೂ ಇಲ್ಲ. ಅದನ್ನೇ ‘ಪಾಲಿಸೈ ಪರಮ ಶ್ರೀ ಗುರುನಾಥ ದಯೆಯಿಂದ ಎನ್ನುವ ಪದ್ಯದಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ. ಈ ಪದ್ಯದ ಭಾವ ಅಲೌಕಿಕ ಮತ್ತು ಇವರು ಪರಮಾತ್ಮನಲ್ಲಿ ಮೊರೆಯಿಡುವ ರೀತಿಯಂತು‌ ಅನ್ಯಾದೃಶ,. ಸಾಕು ಪರಿಹರಿಸು ಎನ್ನ ದೇಹದ ದುರ್ಗುಣಗಳನ್ನು ನೂಕು ನುಗ್ಗನು ಮಾಡಿ ಕಾಡುತಿಹವು”, ದೇಹದ ಒಳಗಿರುವ ಚೇಳು, ಹಾವು, ಹುಲಿ, ಕರಡಿಗಳೆಂಬ ದುರ್ಗುಣಗಳ ಬಾಧೆಯನ್ನು ಪರಿಹರಿಸು ದೇವಾ ಎಂದು ಬೇಡಿಕೊಳ್ಳುತ್ತಾರೆ. ಇಂಥಹ ಪದಗಳು ನಮ್ಮ ನಿತ್ಯಮಂತ್ರಗಳಾಗ ಬೇಕಾಗಿವೆ. ‘ಮನಸ್ಸೆಂಬ ಮಂಗವು ವಿಷಯದ ಇಂದ್ರಿಯದ ಶಾಖೆ ಶಾಖೆಗಳು ಹಾರುತಿದೆ, “ಕಂದನೆನ್ನನು ಸಲಹೋ ಗುರು ಮಹಾಂತಲಿಂಗ” ಎಂದು ಆರ್ತರಾಗಿ ಕೇಳುತ್ತಾರೆ. ಅದೇ ರೀತಿಯಾಗಿ ಲಿಂಗದ ಮಹಿಮೆಯನ್ನು ಕೊಂಡಾಡಿದ್ದಾರೆ. ಜಂಗಮದ ಮಹತಿಯನ್ನಂತೂ ಅವರ ಬಾಯಿಂದಲೇ ಕೇಳಬೇಕು.

 

ಜಂಗಮವೆ ಪರದೈವ ಜಗಮವೆ ಪರವಸ್ತು

ಜಂಗಮವೆ ಪರಮ ಪಾವನಮೂರ್ತಿಯು||

ಜಂಗಮದ ಪಾದವನು| ಪಿಂಗದಲ್ಲಿ ನೆನೆ ಮನವೆ

ಭಂಗಗೊಳಿಪುದು ಭವದ ಬೇರುಗಳನ್ನು       ||೧||

ಜಗಮವೆ ಜಗದೊಡೆಯ |ಜಂಗಮವೆ ಜಗಭರಿತ

ಜಂಗಮವೆ ಸಾಕ್ಷಾತ್ ಲಿಂಗಮೂರ್ತಿ |

ಜಂಗಮದ ಪಾದವನು| ಅಂಗ ಮನ ಪ್ರಾಣದಲಿ|

ಸಂಗೊಳಿಸು ಕಂಡೆಯ ಲೆ ಚಿತ್ತವೇ     ||೨||

 

ಮತ್ತೊಂದು ಪದ್ಯದಲ್ಲಿ ಸುಖಭೋಗ ದೊರೆಯುವ ಮಹಾಹಾದಿಯನ್ನೇ ಹೇಳಿ ಕೊಟ್ಟಿದ್ದಾರೆ.  ಅದು ತುಂಬಾ ಪ್ರಚಲಿತವಾಗಿರುವ ಪದ್ಯ ಎರಡು ಮಾಣಿಕ್ಯದ ಮಾತುಗಳು. ಹರಪೂಜೆ ಗುರುಸೇವೆ ಇಲ್ಲದೇ ಸುಖಭೋಗಗಳು ದೊರೆಯಲಾರದು. ಇದೇ ಪದ್ಯದ ಕೆನೆಯಲ್ಲಿ ‘ನರಪಾಪ ಪ್ರಣ್ಯವನು ನರರ ಸೆರಗಿನಲಿ ಹಾಕಿ ಗುರು ಮಹಾಂತ ಲಿಂಗ ತಾ ಮರೆಯಾಗಿರುತಿರುವ. ಅವರವರ ಪಾಪಪುಣ್ಯಗಳಿಗೆ ಅವರವರೇ ‘ಬಾದ್ಧಸ್ಥರು.ʼಉದ್ಧರೇತ್ ಆತ್ಮಾನಾ’ ‘ಆತ್ಮನಂ ಎಂಬ ಗೀತೆಯ ಮಾತು ಇಲ್ಲಿ ಪ್ರಸ್ತುತ

ವೀರಶೈವ ಸಿದ್ಧಾಂತದಲ್ಲಿ ಜಗತ್ತು ಮಿಥ್ಯೆಯಲ್ಲ ಜಗತ್ತು ಸತ್ಯವಾದುದು. ಪ್ರಪಂಚ ದಿಂದ ಪಾರಮಾರ್ಥದ ಕಡೆಗೆ ಸಾಗುವ ಮಹತ್ತಿನ ಹಾದಿ ಇದರಲ್ಲಿ ಅಡಕವಾಗಿದೆ. ಪ್ರಪಂಚಕ್ಕೆ ವಿಮುಖವಾಗುವುದು ಸಲ್ಲ.  ಅದನ್ನೇ ಪೂಜ್ಯ ಶ್ರೀಗಳವರು,

 

 ಸಂಸಾರದೊಳಗೆ ಸದ್ಗತಿಯುಂಟು ಕೇಳ್ ಮಗನೆ |

ಬಸವಾದಿ ಪ್ರಮಥರಿಗೇನಿದ್ದಿಲ್ಲವೇ ||

ಎನ್ನುವ ಪದ್ಯದಲ್ಲಿ ಮೋಕ್ಷದ ದಾರಿಯನ್ನು ಅತ್ಯಂತ ಸುಲಭವಾಗಿ ತಿಳಿಸಿಕೊಟ್ಟಿದ್ದಾರೆ.

 

ಇನ್ನೊಂದು ಪದ್ಯದಲ್ಲಿ ಶಿವಯೋಗಿಯ ಇರುವಿಕೆಯನ್ನು ಅತ್ಯಂತ ಹೃದ್ಯವಾಗಿ ಹೇಳಿದ್ದಾರೆ. ಆ ಶಿವಯೋಗಿಯ ಸ್ವರೂಪವನ್ನು ನೆನಸಿಕೊಂಡಾಗ ಆಗುವ ಆನಂದ ಅವರ್ಣನೀಯ.

 

ಶಿವಯೋಗಿ ಸಾಕ್ಷಾತ್ | ಶಿವನಾದ ಕಾರಣದಿ|

ಅವನಿಭೋಗಗಳವಗೆ ತೃಣಗಾಂಬುವು ||

‘ಏಕಂ ಸದ್ವಿಪ್ರಾಃ ಬಹುಧಾ ವದಂತಿ’ ಎನ್ನುವ ಮಾತಿನಂತೆ ದೇವನು ಒಬ್ಬನೇ. ಏಕದೇವನ ಇರುವಿಕೆಯನ್ನು ಎಲ್ಲರಿಗೂ ಅತ್ಯಂತ ಸುಲಭವಾಗಿ ತಿಳಿಯುವ ರೀತಿಯಲ್ಲಿ ಅರುಹಿದ್ದಾರೆ.

 

ಅವರವರ ಭಕ್ತಿಗೆ ಅವರವರ ಭಾವಕ್ಕೆ |

ಅವರವರ ತೆರನಾಗಿ ಇರುತಿಹನು ಶಿವಯೋಗಿ

 

ಈ ಪದ್ಯದ ಭಾವವನ್ನು ನಾವು ಸಂಪೂರ್ಣವಾಗಿ ಅರಿತು ಅನುಭವಿಸಿದ್ದಾದರೆ ನಾವು ಪೂರ್ಣ ನೆಮ್ಮದಿಯಿಂದ ಬಾಳಬಹುದಲ್ಲವೇ!

 

ಇವರು ತಮ್ಮ ಮಂಗಳಾರತಿ ಪದ್ಯದಲ್ಲಿ ಪರಮಾತ್ಮನನ್ನು ವರ್ಣಿಸಿದ ರೀತಿ ಅತ್ಯದ್ಭುತ. ವೇದೋಪನಿಷತ್ತುಗಳಲ್ಲಿ ಪರಮಾತ್ಮನನ್ನು ಅನೇಕ ರೀತಿಯಲ್ಲಿ ವರ್ಣಿಸಿದ್ದಾರೆ.  ಅದನ್ನೇ ನಮ್ಮ ಸಿರಿಗನ್ನಡದಲ್ಲಿ ಈ ಮಹಾಶಿವಯೋಗಿಗಳು ಎಲ್ಲರಿಗೂ ಸುಲಭಗ್ರಾಹ್ಯವಾಗುವ ರೀತಿಯಲ್ಲಿ ವರ್ಣಿಸಿದ್ದಾರೆ.

 

ಬೇಕು ಬೇಡಂಬೆರಡು ಭವಬೀಜಗಳ ಹುಲಿದು|

ಲೋಕದೊಳಗಿದ್ದು ಇಲ್ಲದ ಮಹಿಮೆಗೆ

ಭಂಗಾರ ಕಬ್ಬುನವು ಹಿರಿಕಿಗಿದು ಸಮಗಂಡ |

ಲಿಂಗ ಮಹಂತೇಶ ಮಹಾ ಜಗತ್ಪುತ್ರಗೆ

 

ಅತ್ಯಂತ ಕ್ಲಿಷ್ಟವಾದ ವಿಷಯವನ್ನು ಅತ್ಯಂತ ಸುಲಭವಾಗಿ ತಿಳಿಸುವ ರೀತಿ ಜ್ಞಾನಿಗಳಿಗೆ ಮಾತ್ರ ಸಾಧ್ಯ. ಮತ್ತೊಂದು ಪದ್ಯದಲ್ಲಿ ಭಕ್ತಿಯ ಹಿರಿಮೆಯನ್ನು ಕೊಡಮಾಡಿದ್ದಾರೆ. ‘ಸೆಡವು ಬಿಗುವಿನ ಭಕ್ತಿ ಹಿಡಿಯಬೇಡೆಂದು ನಮ್ಮೊಡೆಯ ಹೇಳಿದನು ಕೇಳಯ್ಯ’ ಭಕ್ತಿಯಲ್ಲಿ ಸಂಪೂರ್ಣ ಸಮರ್ಪಣ ಭಾವವಿರಬೇಕು. ಆ ಸಮರ್ಪಣ ಭಾವವಿರುವಾಗ `ಗುರು ತಂದೆ ಕಾಯುವಾ’, ಮತ್ತೊಂದು ಪದ್ಯದಲ್ಲಿ ಶ್ರೀಗಳು ಶಿವನ್ನು ಮಾತನಾಡಿಸುವ ರೀತಿಯನ್ನು ನೋಡಬೇಕು.

 

 ಗುರುವೆ ನೀ ಮಾತನಾಡೊ ಸುರತರು ಕಲ್ಪತರುವೆ ನೀ ಮಾತನಾಡೊ|

ಸುರರ ದೇವರ್ಕಳ ಒಡೋಲಗದೊಳು ಮೆರೆವೆ ನೀ ಮಾತನಾಡೋ ||||

 

ಲಿಂಗವೆ ಮಾತನಾಡೊ ಶ್ರೀಗುರು ಮಹಂ

ಲಿಂಗವೆ ಮಾತನಾಡೋ ||

ಸಂಗನ ಶರಣರ ಅಂಗೈಯೊಳಿರುವಂಥ|

ಲಿಂಗವೆ ಮಾತನಾಡೋ   ||೧||

 

ಈ ಮಾತನ್ನು ಕೇಳಿದಾಗ ಗುರುಲಿಂಗವು ಸಾಕ್ಷಾತ್ ಎದುರಿಗೆ ನಿಂತಿರುವ ಹಾಗೆ ಭಕ್ತರಿಗೆ ಭಾಸವಾಗುತ್ತದೆ.

ಒಟ್ಟಾರೆಯಾಗಿ ಈ ಶಿವಯೋಗಿಗಳವರ ‘ಕೈವಲ್ಯ ದರ್ಪಣ’ವೆಂಬ ಕೃತಿರತ್ನ ನಮ್ಮ ಸಾಹಿತ್ಯದ ಅಮೂಲ್ಯ ಕೃತಿಗಳಲ್ಲಿ ಒಂದಾಗಿದೆ. ಇದರ ವಿಷಯದ ಹರಹು ಬಹು ವಿಸ್ತಾರವಾದದ್ದು. ಶೈಲಿಯಂತೂ ಪಂಡಿತ ಪಾಮರರಿಗೂ ಹೃದ್ಯ. ಸಾಹಿತ್ಯಜ್ಞರಿಗೂ ಇಲ್ಲಿ ಅಲಂಕಾರಗಳ ರಸದೌತಣವಿದೆ. ಉದಾಹರಣೆಗೆ ಯಮಕಾಲಂಕಾರವು ಎಷ್ಟು ಸಹಜವಾಗಿ ಬಂದಿದೆ ನೋಡಿ.

 

ಪುಣ್ಯದಿಂದಲಿ ಆನೆ ಕುದುರೆಯು| ಪುಣ್ಯದಿಂದಲಿ ರಥ ಪದಾತಿಯು

ಪುಣ್ಯದಿಂದಲಿ ಸರ್ವಸಿದ್ಧಿಯು ಕೇಳು ಪುಣ್ಯತ್ಮ ||

ಪುಣ್ಯದಿಂದಲಿ ಅನ್ನ ವಸ್ತ್ರವು |ಪುಣ್ಯದಿಂದಲಿ ದಂಡು ಮಾರ್ಬಲ |

ಪುಣ್ಯದಿಂದಲಿ ಸರ್ವಸಿದ್ಧಿಯು ಕೇಳು ಪುಣ್ಯಾತ್ಮ ||

 

ಎಲ್ಲೂ ಕ್ಲಿಷ್ಟತೆಯ ಸುಳಿವಿಲ್ಲ. ಮಾನವನಿಗೆ ಅತ್ಯಂತ ಸರಳವಾಗಿ ಸಾಧನಾ ಮಾರ್ಗವನ್ನು ತಿಳಿಸಿದೆ ಈ ಕೃತಿರತ್ನ, ಇದರಲ್ಲಿಯ ತತ್ತ್ವಗಳು ನಮ್ಮ ದಾರಿದೀಪಗಳಾಗಬೇಕು. ಶಿವನೇ ತಾನಾದ ಈ ಮಹಾಶಿವಯೋಗಿಯು ಮನುಕುಲದ ಕಲ್ಯಾಣಕ್ಕಾಗಿ ಈ ಕೃತಿಯನ್ನು ನೀಡಿ ನಮ್ಮನ್ನು ಧನ್ಯರಾಗಿಸಿದ್ದಾರೆ. ಈ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಯ ದಿವ್ಯ ಪಾದಪದ್ಮಗಳಲ್ಲಿ ನನ್ನ ದೀರ್ಘದಂಡ ನಮನಗಳು.

“ಅಟ್ಯಾಕ” ಅನ್ನುವುದು ಬಸವ ಭಾಷೆಯೆ ?

ಲೇಖಕ:ಶ್ರೀಕಂಠ.ಚೌಕೀಮಠ

ಕಳೆದ ಹಲವು ತಿಂಗಳುಗಳಿಂದ ಕರ್ನಾಟಕದಲ್ಲಿ “ವಚನ ದರ್ಶನ” ಎಂಬ ಪುಸ್ತಕದ ಪ್ರಚಾರ ಮತ್ತು ಆ ಪುಸ್ತಕಕ್ಕೆ ಪ್ರತಿಯಾಗಿ  “ವಚನದರ್ಶನ ಮಿಥ್ಯ -ಸತ್ಯ” ಪುಸ್ತಕದ ಪ್ರಚಾರಗಳನ್ನು ನಾವೆಲ್ಲ ನೋಡುತ್ತ ಬಂದಿರುತ್ತೇವೆ.

ಒಂದು ಪುಸ್ತಕ ಅದರ ಒಳತಿರಳು  ತಪ್ಪು ಗ್ರಹಿಕೆಯಿಂದ ಕೂಡಿದೆ ಎಂಬ ಒಂದು ಗುಂಪಿನ ವಾದ ದ ಫಲಶೃತಿಯಾಗಿ ಆರಂಭವಾದ ಪ್ರತಿರೋಧಗಳು ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ರಾಷ್ಟ್ರೀಯ ಬಸವದಳ, ಲಿಂಗಾಯತ ಸಂಘಟನೆ ಬಸವಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರ ಮೂಲಕ ಆರಂಭ ಗೊಂಡಿದ್ದನ್ನು ನಾವು ನೋಡುತ್ತ ಕೇಳುತ್ತ ಬಂದಿದ್ದೇವೆ.

ಇದೊಂದು ತಾತ್ವಿಕ ಹೋರಾಟ.

ಒಂದು ಪುಸ್ತಕದ ವಿಷಯಗಳನ್ನು ವಿರೋಧಿಸುವ ಮತ್ತು ಅದಕ್ಕೆ ಪೂರಕವಾದ ವಿವರಣೆ ನೀಡುವ ಒಂದು ಅರ್ಥದಲ್ಲಿ  ಆರೋಗ್ಯಕರ ಚಳುವಳಿ.

ಆದರೆ ಈ ಆರೋಗ್ಯಕರ ಚಳುವಳಿಯ ಪ್ರತಿರೋಧದಲ್ಲಿ ಮೊನ್ನೆ ೨೨-೦೪-೨೦೨೫ ರಂದು ಬೆಳಗಾವಿಯಲ್ಲಿ ಜರುಗಿದ  “ವಚನ ದರ್ಶನ ಮಿಥ್ಯ VS ಸತ್ಯ” ಪುಸ್ತಕದ ಕುರಿತಾದ ಕಾರ್ಯಕ್ರಮದಲ್ಲಿ ಗದುಗಿನ ಕೆ.ವಿ.ಎಸ್.ಆರ್‌ ಪದವಿ ಪೂರ್ವ ಕಾಲೇಜಿನ ನಿವೃತ್‌ ಇಂಗ್ಲಿಷ್‌ ಭಾಷೆಯ ಪ್ರಾದ್ಯಾಪಕ ಮತ್ತು ವಚನ ಟಿ,ವಿಯ ಮುಖ್ಯಸ್ಥ ಸಿದ್ದು .ಬ. ಯಾಪಲಪರ್ವಿ ಎನ್ನುವವರು ಅನಾರೋಗ್ಯಕರ ವಾತವರಣ ವನ್ನು ಸೃಷ್ಠಿಸಿದ್ದು ಖಂಡನೀಯ.

ಕಾರ್ಯಕ್ರಮ “ವಚನ ದರ್ಶನ ಮಿಥ್ಯ VS ಸತ್ಯ” ಪುಸ್ತಕಕ್ಕೆ ಸೀಮಿತವಾಗಿದ್ದರೂ ಅನಾವಶ್ಯಕವಾಗಿ ಪುಸ್ತಕಕ್ಕೂ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೂ ಯಾವುದೇ ಸಂಬಂಧವಿಲ್ಲದಿದ್ದರೂ  ಪರಮಪೂಜ್ಯರ ಹೆಸರನ್ನು ಪ್ರಸ್ಥಾಪಿಸಿ : “ಪಂಚಾಚಾರ, ಗಣಾಚಾರದ ಹೆಸರಿನಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಮೇಲೆ ಅಟ್ಯಾಕ್ ಮಾಡಿದ ಕೂಡಲೇ ‘ಪಾಪ’ ಕೆಲವರಿಗೆ ನೋವಾಗುತ್ತದೆ, ಅದನ್ನ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟ ಕ್ಲಿಯರ್ ಮಾಡಲಿ.” ಎಂದು ಮಾತನಾಡುತ್ತ ಈ ಕೆಳಗಿನ ಸಾಲುಗಳ ಮೂಲಕ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟಕ್ಕೆ ಫತ್ವಾ ಹೊರಡಿಸಿರುವರು

  1. “ಪಂಚಾಚಾರ, ಗಣಾಚಾರದ ಹೆಸರಿನಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಮೇಲೆ ಅಟ್ಯಾಕ್ ಮಾಡಿದ ಕೂಡಲೇ ‘ಪಾಪ’ ಕೆಲವರಿಗೆ ನೋವಾಗುತ್ತದೆ, ಅದನ್ನ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟ ಕ್ಲಿಯರ್ ಮಾಡಲಿ.”
  2. “ಏನು ಸಂಸ್ಕೃತ ವ್ಯಾಮೋಹ ಕೇವಲ ಹಾನಗಲ್ಲ ಕುಮಾರ ಸ್ವಾಮಿಗಳಿಗೆ ಇತ್ತೋ?”
  3. “ಶಿವಯೋಗಮಂದಿರದ ಟೆಕ್ಸ್ಟ್ ಬುಕ್ ಏನು?”
  4. “ಅಲ್ಲಿ ಬಸವಣ್ಣನಿಗೆ ಅಪಮಾನ ಮಾಡಿದ ವ್ಯಕ್ತಿಯ ಟೆಕ್ಸ್ಟ್ ಬುಕ್ ಇದೆ. ಅದು ಯಾಕೆ ಇಡಬಾರದು ಅನ್ನೋದನ್ನ ನಾವು ಚರ್ಚಿಸೋಣ. .”

ಜೆಎಲ್‌ಎಂ ಸಂಘಟನೆಯ ಸಿದ್ದು ಯಾಪಲಪರ್ವಿ ಯ  “ಅಟ್ಯಾಕ” ಎನ್ನುವ ಈ  ಭಯೋತ್ಪಾದಕ ಶಬ್ಧಕ್ಕೆ ನನ್ನ ಮೂಲ ಭೂತ ಪ್ರಶ್ನೆ.

  1. ಸಾರ್ವಜನಿಕವಾಗಿ “ಪಂಚಾಚಾರ, ಗಣಾಚಾರದ ಹೆಸರಿನಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಮೇಲೆ ಅಟ್ಯಾಕ್ ಮಾಡಿದ ಕೂಡಲೇ ‘ಪಾಪ’ ಕೆಲವರಿಗೆ ನೋವಾಗುತ್ತದೆ, ಅದನ್ನ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟ ಕ್ಲಿಯರ್ ಮಾಡಲಿ.” ಎಂದು ಹೇಳಲಿಕ್ಕೆ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು ಮಾಡಿದ ಅಪರಾಧ ವೇನು ? .

ಸಮಾಜಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಮಹಾನ್‌ ಸಂತನಮೇಲೆ ಸಿದ್ದು ಯಾಪಲಪರ್ವಿಯಂತವರು ಮಾತನಾಡುವ ಮುನ್ನ ಜಾಗೃತ ಅವಸ್ಥೆಗೆ ಬಂದು ಎಚ್ಚರದಿಂದ  ಮಹಾತ್ಮರ ಬಗ್ಗೆ ಮಾತನಾಡಲಿ.

  1. ಪೂಜ್ಯರ ಭೌತಿಕ ಶರೀರ ಮಹಾಲಿಂಗದಲ್ಲಿ ಐಕ್ಯವಾಗಿ ೯೫ ವರ್ಷ ಕಳೆದರೂ ಪೂಜ್ಯರ ಮೇಲೆ “ಅಟ್ಯಾಕ್” ಎನ್ನುವ ಶಬ್ಧದ ಪ್ರಯೋಗ ಎಷ್ಟು ಸಮಂಜಸ ?‘ಪಾಪ’ ಕೆಲವರಿಗೆ ನೋವಾಗುತ್ತದೆ ಎಂದು ಹೇಳಿದ ಸಿದ್ದು .ಬ. ಯಾಪಲಪರ್ವಿಯವರಿಗೆ ಈ ಮೂಲಕ ತಿಳಿಸುವದೇನೆಂದರೆ ಇದು  ಕುಮಾರೇಶನ  ಅನುಯಾಯಿಗಳ ಬರೀ ನೋವಲ್ಲ ರಕ್ತ ಕ್ರಾಂತಿಗೆ,  ಸಿದ್ದು .ಬ. ಯಾಪಲಪರ್ವಿ  ಹಾಕಿದ ಮುನ್ನುಡಿ ಮತ್ತು ಈ ಮೂಲಕ ಉದ್ಭವವಾಗುವ ಎಲ್ಲ ಅಹಿತಕರ ಘಟನೆಗಳಿಗೆ ಈ ಕಾರ್ಯಕ್ರಮದ ಸಂಘಟಕರಾದ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟ ನೇರ ಹೊಣೆಯಾಗುತ್ತಾರೆ.

 

  1. “ಏನು ಸಂಸ್ಕೃತ ವ್ಯಾಮೋಹ ಕೇವಲ ಹಾನಗಲ್ಲ ಕುಮಾರ ಸ್ವಾಮಿಗಳಿಗೆ ಇತ್ತೋ?” ಎಂದು ಕೇಳುವ ಈ ಇಂಗ್ಲೀಷ ಪ್ರಾಧ್ಯಾಪಕರಿಗೆ ಪಿತ್ತ ನೆತ್ತಿಗೇರಿದಂತೆ ಕಾಣುತ್ತದೆ.ತಾನು ಪಾಶ್ಚ್ಯಾತ್ಯ ಭಾಷೆ ಇಂಗ್ಲೀಷ ಓದಿದರೆ ಮತ್ತು ಕಲಿಸಿದರೆ  ನಡೆಯುತ್ತದೆ ಆದರೆ ಜನ ಭಾರತದ ಮೂಲ ಭಾಷೆ ಸಂಸ್ಕೃತ ಓದಿದರೆ ಮತ್ತು ಓದಿಸಿದರೆ  ಅಪರಾಧವೆಂಬಂತೆ ವ್ಯಂಗವಾಗಿ ಮಾತನಾಡಿರುವ  ಸಿದ್ದು ಯಾಪಲಪರ್ವಿ  ಆಯಾ ಕಾಲ ಘಟ್ಟದ ಭಾಷಾ ಅಧ್ಯಯನ ಆಯಾ ಕಾಲಘಟ್ಟದ ಅನಿವಾರ್ಯತೆಯಿಂದಲೇ ನಡೆಯುತ್ತದೆಯೇ ಹೊರತು ವಯಸ್ಸು ಮುಚ್ಚಿಕೊಳ್ಳಲು  ಬಳಸುವ ಹೇರ ಡ್ರೈಯರ ಬಣ್ಣದಂತಲ್ಲ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳತಕ್ಕದ್ದು.

ಸಂಸ್ಕೃತ ಭಾಷೆಯ ಅಧ್ಯಯನವನ್ನು ಅಪಹಾಸ್ಯಗೊಳಿಸುವ ಪ್ರಯತ್ನವು ಜ್ಞಾನದ ಮೇಲೆ ಬೀರುವ ಅಪಮಾನವಾಗಿದೆ. ಸಿದ್ದು ಯಾಪಲಪರ್ವಿ   ಪಾಶ್ಚಾತ್ಯ ಭಾಷೆಯ ಅಧ್ಯಾಪಕರಾಗಿದ್ದರೂ, ಭಾರತೀಯ ಭಾಷೆಗಳ ವಿರುದ್ಧ ಅಭಿಮಾನ ಕೊರತೆಯು ಗಂಭೀರ ವಾದುದ್ದು.

  1. ಶಿವಯೋಗಮಂದಿರದ ಟೆಕ್ಸ್ಟ್ ಬುಕ್ ಏನು ? ಎಂದು ಪ್ರಶ್ನಿಸಿದ ಸಿದ್ದು ಯಾಪಲಪರ್ವಿ    ಶಿವಯೋಗಮಂದಿರದ ಹಲವು ಪ್ರಕಟಣೆಗಳಲ್ಲಿ ಶಿವಯೋಗಮಂದಿರದ ಅಧ್ಯಯನದ ಕುರಿತು ಅಲ್ಲಿ ಬಳಸುವ ಪಠ್ಯಪುಸ್ತಕಗಳ ಕುರಿತು ಪಾರದರ್ಶಕವಾಗಿ ಸಾರ್ವಜನಿಕಗೊಳಿಸಿದ್ದರೂ ಮತ್ತು ೨೨-೦೪-೨೦೨೫ ರಂದು ಬೆಳಗಾವಿಯಲ್ಲಿ ಜರುಗಿದ  ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಶಿವಯೋಗಮಂದಿರದ ಸಾಧಕರೇ ವಹಿಸಿದ್ದರೂ  ಶಿವಯೋಗಮಂದಿರದ ಪಠ್ಯಪುಸ್ತಕಗಳ ಕುರಿತು ಗುಮಾನಿ ಮತ್ತು ಅನುಮಾನ ವ್ಯಕ್ತಪಡಿಸಿದ್ದು ಕುಚೋದ್ಯತನವೇ ಹೊರತು ಬೇರೆ ಏನೂ ಇಲ್ಲ.ಅವುಗಳ ಕುರಿತು ಜನಸಮ್ಮುಖದಲ್ಲಿ ಶಂಕೆ ವ್ಯಕ್ತಪಡಿಸುವುದು ದುರಭಿಪ್ರಾಯದಿಂದ ಕೂಡಿದ ನಡೆ.

 

  1. “ಅಲ್ಲಿ ಬಸವಣ್ಣನಿಗೆ ಅಪಮಾನ ಮಾಡಿದ ವ್ಯಕ್ತಿಯ ಟೆಕ್ಸ್ಟ್ ಬುಕ್ ಇದೆ. ಅದು ಯಾಕೆ ಇಡಬಾರದು ಅನ್ನೋದನ್ನ ನಾವು ಚರ್ಚಿಸೋಣ. .” ಎಂದು ಹೇಳಿದ ಸಿದ್ದು .ಬ. ಯಾಪಲಪರ್ವಿಯವರ ವಿಚಿತ್ರ ಆಪಾದನೆ. ಇಷ್ಟೆಲ್ಲಾ ಸಾರ್ವಜನಿಕವಾಗಿ ಮಾತನಾಡಿ ಅಡ್ಡಗೋಡೆಯ ಮೇಲೆ ದೀಪವನ್ನಿಟ್ಟಂತೆ  ಸಾರ್ವಜನಿಕರಲ್ಲಿ ಶಿವಯೋಗಮಂದಿರದ ಬಗೆಗೆ ತಪ್ಪು ಕಲ್ಪನೆ ಬರುವಂತೆ ಪ್ರಚೋದನೆ ಮಾಡುವದಕ್ಕಿಂತ ಬದಲು ನೇರವಾಗಿ ಪುಸ್ತಕದ ಹೆಸರು ಮತ್ತು ಲೇಖಕನ ಹೆಸರು ಹೇಳಬಹುದಿತ್ತಲ್ಲವೆ?

 

  1. ಸಿದ್ದು ಯಾಪಲಪರ್ವಿ ಸದಸ್ಯರಾಗಿರುವ  ಜೆಎಲ್‌ಎಂ, ಬಸವಣ್ಣನವರ ವಚನನಾಮಾಂಕಿತ ವನ್ನೇ ಬದಲಿಸಿದವರ ಜೊತೆ ವೇದಿಕೆ ಹಂಚಿಕೊಂಡಿದ್ದನ್ನು ಮತ್ತು ಬಸವಣ್ನನವರ ಪತ್ನಿ ನೀಲಾಂಬಿಕೆ ವಚನ “ನೋಡು ನೋಡು ಲಿಂಗವೇ “ ವನ್ನೆ ಅಪಾರ್ಥ ಮಾಡಿದ,ಸಂಶೋದಕ ,ಚನ್ನಬಸವಣ್ಣ ನವರ ಜನನವನ್ನೇ ಅಪವಿತ್ರ ಗೊಳಸಿದ ವರನ್ನು ಒಪ್ಪಿಕೊಂಡು ಅವರ ಸಂಶೋದನೆಗಳನ್ನೆ ಹೊತ್ತು ಮೆರೆಸುವ ಜೆಎಲ್‌ಎಂ  ಕುರಿತು ಮೊದಲು ಚಿಂತಿಸಲಿ, ನಂತರ ಶತಮಾನದ ಇತಿಹಾಸ ವಿರುವ ಶಿವಯೋಗಮಂದಿರದ ಬಗ್ಗೆ ಮಾತನಾಡಲಿ.

 

ಈ ಮೂಲಕ ಇಂಥ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು  ಲಿಂಗಾಯತ ಮಠಾಧಿಪತಿಗಳ ಒಕ್ಕೂಟಕ್ಕೆ ನನ್ನ ಕಳಕಳಿಯ ಮನವಿ.ಇಂಥಹ ಅಚಾತುರ್ಯದ ಘಟನೆಗಳು ಮರುಕಳಿಸುವುದೇ ಆದಲ್ಲಿ ದಯವಿಟ್ಟು ಅದನ್ನು ಮುಂಚಿತವಾಗಿ  ಕಾರ್ಯಕ್ರಮದ  ಹಿಡನ್ನ ಅಜೆಂಡಾ ವನ್ನು ದಯವಿಟ್ಟು ಸಾರ್ವಜನಿಕವಾಗಿ ಬಹಿರಂಗಗೊಳಿಸಿ.

“ವಚನದರ್ಶನ ಮಿಥ್ಯ -ಸತ್ಯ ಎಂಬ ಪುಸ್ತಕದ ಹೆಸರಿನಲ್ಲಿ ಹಾನಗಲ್ಲ ಶ್ರೀ ಕುಮಾರೇಶ್ವರರ ನಿಂದನೆಯನ್ನು ಶಿವಯೋಗಮಂದಿರದ ಸಾಧಕ ಮಠಾಧಿಪತಿಗಳು ಶ್ರೀ ಕುಮಾರೇಶನ ಭಕ್ತ ಸಂಕುಲ ಒಪ್ಪಿಕೊಳ್ಳಲು ಸಾಧ್ಯವಿಲ್ಲ..

ಜಾಗತಿಕ ಲಿಂಗಾಯತ ಮಹಾಸಭಾ ಮತ್ತು  ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಸಿದ್ದು ಯಾಪಲಪರ್ವಿ ಮೂಲಕ ಆಡಿಸಿದ ಈ  ರೀತಿಯ ತುಚ್ಛ ಮಾತುಗಳನ್ನು ಸಹಿಸಲು ಇನ್ನು ಸಾಧ್ಯವಿಲ್ಲ.

ಈ ರೀತಿಯ ಶಬ್ದಪ್ರಯೋಗಗಳು, ವಿಶೇಷವಾಗಿ “ಅಟ್ಯಾಕ್” ಎಂಬ ಕ್ರೂರ ಪದದ ಬಳಕೆ, ಭಯೋತ್ಪಾದಕ ಛಾಯೆಯ ಮಾತುಗಳು ಸಮಾಜದಲ್ಲಿ ಭಾವನಾತ್ಮಕವಾಗಿ ತೀವ್ರ ಪ್ರತಿಕ್ರಿಯೆ ಉಂಟುಮಾಡಬಲ್ಲವು ಮತ್ತು ಭವಿಷ್ಯದಲ್ಲಿ ಶಾಂತಿಗೆ ಧಕ್ಕೆಯುಂಟುಮಾಡುವ ಆತಂಕವಿದೆ.

ವಚನ ಸಂಸ್ಕೃತಿಯ ಕುರಿತ ತಾತ್ವಿಕ ಚರ್ಚೆ ಮತ್ತು ಗ್ರಂಥಗಳ ಆಲೋಚನಾತ್ಮಕ ವಿಶ್ಲೇಷಣೆಗಳು, ಅರ್ಥಪೂರ್ಣ ರೀತಿಯಲ್ಲಿ ನಡೆಯುವುದು ಒಳ್ಳೆಯದು. ಆದರೆ, ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳವರ ನಾಮದೊಂದಿಗೆ ಯಾವುದೇ ಸಂಬಂಧವಿಲ್ಲದ ವಿಷಯವನ್ನು ಎಳೆದುಕೊಂಡು ಅವರು ಮೇಲೆಗೆ “ಅಟ್ಯಾಕ್” ಎಂಬ ಶಬ್ದವನ್ನು ಬಳಸುವುದು ನಿಜಕ್ಕೂ ಖಂಡನೀಯ.

ಈ ಕುರಿತು ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಮಠಾಧಿಪತಿಗಳ ಒಕ್ಕೂಟ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ಅಪೇಕ್ಷೆ ನಮ್ಮದಾಗಿದೆ. ಶತಮಾನದ ಪರಂಪರೆಯ ಘನತೆಯ ರಕ್ಷಣೆಯೇ ನಮ್ಮ ಆಶಯ.ಇದಕ್ಕೆ ಸಂಬಂಧಪಟ್ಟಂತೆ ತ್ವರಿತ ಕ್ರಮಕೈಗೊಳ್ಳಲಾಗುವುದು ಎಂಬ ವಿಶ್ವಾಸವಿದೆ.

-ಶ್ರೀಕಂಠ.ಚೌಕೀಮಠ

ಸೇವಕ-ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿ ಮತ್ತು ಕರ್ನಾಟಕ

 

ಇಂದಿಗೆ ಸರಿಯಾಗಿ ೪೫ ವರ್ಷಗಳ ಹಿಂದಿನ ಅವಿಸ್ಮರಣೀಯ ಘಟನೆಯ ಮೆಲಕು.(1980)

ಶ್ರೀ ಮನ್ನಿರಂಜನ ಜಗದ್ಗುರು ತೋಂಟದ ಡಾ.ಸಿದ್ಧಲಿಂಗ ಮಹಾಸ್ವಾಮಿಗಳು ತಮ್ಮ ಪಟ್ಟಾಧಿಕಾರ ರಜತ ಮಹೋತ್ಸವ ಅಭಿನಂದನ ಗ್ರಂಥದಲ್ಲಿ ಬರೆದ “ಪಟ್ಟಾಧ್ಯಕ್ಷರಿಗೆ ಪಂಚ ಪತ್ರ ಲೇಖನದ ನಾಲ್ಕನೆಯ ಪತ್ರದಿಂದ ಆಯ್ದುಕೊಂಡ ಸಾಲುಗಳು……

(ಪೂಜ್ಯ ಶ್ರೀ ಸಿಂದಗಿ ಪಟ್ಟಾಧ್ಯಕ್ಷರಿಗೆ ಆರೋಗ್ಯದಲ್ಲಿ ತೊಂದರೆಯಾದ ಸಂಧರ್ಭ)

“ಇಂದಿನ ಈ ಪಾರ್ಶ್ವವಾಯುವಿನಂತಹ ಸ್ಥಿತಿಯಲ್ಲೂ ನಿಮ್ಮ ನಿಷ್ಠೆ ಹಿಮಾಚಲ. ಅಚಲ.

 ದೇಹ ಬಹಿರಂಗದ ಪ್ರಜ್ಞೆ ಕಳೆದುಕೊಂಡರೂ ನಿಮ್ಮ ಕೈ ಸದಾ ಕೊರಳ ಇಷ್ಟಲಿಂಗವನ್ನು ನೇವರಿಸುತ್ತಿತ್ತು.

ಮೊನ್ನೆ ಆಸ್ಪತ್ರೆಗೆ ನಿಮ್ಮನ್ನು ಕಾಣಲು ಬಂದಿದ್ದೆನಲ್ಲ, ಅಂದಿಗೆ ಪ್ರಜ್ಞೆ ಮಾತು ಮೌನವಾಗಿ, ಹದಿನೈದು-ಇಪ್ಪತ್ತು, ದಿನಗಳೇ ಸಂದಿದ್ದವು.

 ಅಂದು ನಿಮ್ಮ ಆರಾಧ್ಯ ದೈವ  ಕುಮಾರೇಶನ ಸ್ಮರಣದಿನ.

ನಾನು ನಿಮ್ಮ ಕಿವಿಯ ಸಮೀಪ, “ ಬುದ್ದೀ, ಇಂದು ಕುಮಾರೇಶ್ವರನ  ಪುಣ್ಯತಿಥಿ ” ಎಂದು ಹೇಳಿದಾಗ ಇಪ್ಪತ್ತು ದಿನಗಳಿಂದ ತೆರೆಯದ ಕಣ್ಣು ತೆರೆದದ್ದು, ಕಣ್ಣಿನಲ್ಲಿ ಹೊಸ ಬೆಳಕು ಕಂಡದ್ದು, ಏಳಲಾರದ ಕೈ ತನಗೆ ತಾನೇ ಎದ್ದು ನಮಿಸಿದ್ದು, ಮುಖದ ತುಂಬ ಸಂತೃಪ್ತಿಯ ಸಾರ್ಥಕತೆಯ ನಗೆ ತೇಲಿದ್ದು ಅದೊಂದು ರೋಮಾಂಚನ, ಹೃದಯಸ್ಪರ್ಶಿ ಅನುಭವ.”

ಈ ಸಾಲುಗಳನ್ನು ಓದುತ್ತ ಹೋದಂತೆ ಅನಿಸಿದ್ದು,

ಶ್ರೀ ಶಿವಯೋಗಮಂದಿರದ ಗುರು-ಶಿಷ್ಯ ಪರಂಪರೆಯ ಅವಿನಾಭಾವ ಸಂಬಂಧಗಳು- ಅವು ಪವಾಡಗಳಲ್ಲ ! ಅವು ನಿಜಜೀವನದ ವಸ್ತು ಸ್ಥಿತಿಗಳು !!.

ಪ್ರಚಾರವನ್ನು ಬಯಸದ ಮಹಾಸಂತನ  ೯೫ನೆಯ ಪುಣ್ಯ ಸ್ಮರಣೆಯ ಪವಿತ್ರ ದಿನವಿಂದು ಕಾರುಣಿಕ ಯುಗಪುರುಷ  ಸಮಾಜ ಸಂಜೀವಿನಿಯ  ಪರಮಪೂಜ್ಯ  ಹಾನಗಲ್ಲ ಶ್ರೀ ಕುಮಾರ ಮಹಾಶಿವಯೋಗಿಗಳ ಸ್ಮರಣೆ  ಕೇವಲ ಒಂದು ದಿನದ ಸ್ಮರಣೆಯಲ್ಲ ಅವರ ಸ್ಮರಣೆ ನಮ್ಮ ನಿತ್ಯ ಸ್ಮರಣೆ, ನಮ್ಮ ನಿತ್ಯ ಧ್ಯಾನ .

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲ .ಆದರೆ ಅವರು ಸಮಾಜಕ್ಕೆ ನೀಡಿ ಹೋದ ಹಲವು  ಕಾರ್ಯಗಳ ಫಲಶೃತಿ ಅವರನ್ನು ಅಜರಾಮರರನ್ನಾಗಿಸಿದೆ.ಅವರನ್ನು ಕಾರಣಿಕ ಯುಗಪುರುಷರರನ್ನಾಗಿಸಿದೆ.

ಅವರ “ಇರುವ”ನ್ನು ಮೃಡಗಿರಿ ಶ್ರೀ ಜಗದ್ಗುರುಗಳು ಅತ್ಯಂತ ಅರ್ಥಗರ್ಭಿತವಾಗಿ ತಮ್ಮ ವಚನದಲ್ಲಿ ವರ್ಣಿಸಿದ್ದಾರೆ

ಕಾರಣಿಕ ಯುಗಪುರುಷ ಗುರು ಕುಮಾರನ ಇರವ ನೋಡಿರೆ !

ಜನಿಸಿದಾಗಲೆ ತನ್ನನು ಭಿಕ್ಷೆಗೈಯಿಸಿದಾತನಯ್ಯಾ ;

ಮಾತೃಋಣ ತೀರಿಸಿ,

ಗುರು ಋಣ ತೀರಿಸಲೆಂದೇ  ಶಿವಯೋಗ ಮಂದಿರವ ಸಂಸ್ಥಾಪಿಸಿದನಯ್ಯಾ.

ಸಮಾಜಋಣದಿಂ ಮುಕ್ತನಾಗಲೆಂದೇ

ಅಖಿಲಭಾರತ ವೀರಶೈವ ಮಹಾಸಭೆಯ ರಚಿಸಿದನಯ್ಯಾ.

ತ್ರಿವಿಧ ಋಣಮುಕ್ತ,

ತ್ರಿವಿಧ ಲಿಂಗ ಪೂಜಕ

ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದ

ಗುರುಕುಮಾರೇಶನಿವನಯ್ಯಾ ಮೃಡಗಿರಿ ಅನ್ನದಾನೀಶ.

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು,“ತ್ರಿವಿಧ” ಋಣಮುಕ್ತ ರು ಮಾತೃ ಋಣ,ಗುರು ಋಣ ಮತ್ತು ಸಮಾಜ ಋಣ ಗಳಿಂದ ಮುಕ್ತರಾದವರು.ಅವರು ತ್ರಿವಿಧ ಲಿಂಗ ಪೂಜಕರು .ಕಾಯದ ಕರದಲ್ಲಿ ಇಷ್ಟಲಿಂಗವ ಕೊಟ್ಟು,ಮನದ ಕರದಲ್ಲಿ ಪ್ರಾಣಲಿಂಗವ ಕೊಟ್ಚು ಭಾವದ ಕರದಲ್ಲಿ ಭಾವಲಿಂಗವ ಕೊಟ್ಟು,ಶಿವಯೋಗ ಸಂಪನ್ನರಾದವರು.

ಅವರು ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದವರು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ವೀರಶೈವ-ಲಿಂಗಾಯತ ಧರ್ಮದ ವಿಶಿಷ್ಟ ಪಾರಿಭಾಷಿಕ ಶಬ್ದ ಮತ್ತು ತತ್ವವಾಗಿರುವ ಜಂಗಮದ ಪ್ರಮುಖ ಭೇದವಾಗಿರುವ ಸ್ವಯ , ಚರ ಮತ್ತು ಪರ ಜಂಗಮದ ಅಂತಸ್ಸತ್ವವನ್ನು ಅರಿತು ಆಚರಿಸಿದ ಮಹಿಮರು  ಮತ್ತು  ತ್ರಿವಿಧ ಜಂಗಮತ್ವದ   ನಿಲವಿಗೇರಿ ಮೆರೆದ ಮಹಾತ್ಮರು.

 

 

ಸಂಪಾದಕೀಯ :

ಶ್ರೀಕಂಠ.ಚೌಕೀಮಠ.

ಸಂಪಾದಕರು.”ಶ್ರೀಕುಮಾರ ತರಂಗಿಣಿ “    ಮಾಸಿಕ ಬ್ಲಾಗ್

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ ,

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲ .ಆದರೆ ಅವರು ಸಮಾಜಕ್ಕೆ ನೀಡಿ ಹೋದ ಹಲವು  ಕಾರ್ಯಗಳ ಫಲಶೃತಿ ಅವರನ್ನು ಅಜರಾಮರರನ್ನಾಗಿಸಿದೆ.ಅವರನ್ನು ಕಾರಣಿಕ ಯುಗಪುರುಷರರನ್ನಾಗಿಸಿದೆ.

ಅವರ “ಇರುವ”ನ್ನು ಮೃಡಗಿರಿ ಶ್ರೀ ಜಗದ್ಗುರುಗಳು ಅತ್ಯಂತ ಅರ್ಥಗರ್ಭಿತವಾಗಿ ತಮ್ಮ ವಚನದಲ್ಲಿ ವರ್ಣಿಸಿದ್ದಾರೆ

ಕಾರಣಿಕ ಯುಗಪುರುಷ ಗುರು ಕುಮಾರನ ಇರವ ನೋಡಿರೆ !

ಜನಿಸಿದಾಗಲೆ ತನ್ನನು ಭಿಕ್ಷೆಗೈಯಿಸಿದಾತನಯ್ಯಾ ;

ಮಾತೃಋಣ ತೀರಿಸಿ,

ಗುರು ಋಣ ತೀರಿಸಲೆಂದೇ  ಶಿವಯೋಗ ಮಂದಿರವ ಸಂಸ್ಥಾಪಿಸಿದನಯ್ಯಾ.

ಸಮಾಜಋಣದಿಂ ಮುಕ್ತನಾಗಲೆಂದೇ

ಅಖಿಲಭಾರತ ವೀರಶೈವ ಮಹಾಸಭೆಯ ರಚಿಸಿದನಯ್ಯಾ.

ತ್ರಿವಿಧ ಋಣಮುಕ್ತ,

ತ್ರಿವಿಧ ಲಿಂಗ ಪೂಜಕ

ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದ

ಗುರುಕುಮಾರೇಶನಿವನಯ್ಯಾ ಮೃಡಗಿರಿ ಅನ್ನದಾನೀಶ.

-ಮೃಡಗಿರಿ ಶ್ರೀ ಜಗದ್ಗುರುಗಳು

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು,“ತ್ರಿವಿಧ” ಋಣಮುಕ್ತ ರು ಮಾತೃ ಋಣ,ಗುರು ಋಣ ಮತ್ತು ಸಮಾಜ ಋಣ ಗಳಿಂದ ಮುಕ್ತರಾದವರು.ಅವರು ತ್ರಿವಿಧ ಲಿಂಗ ಪೂಜಕರು .ಕಾಯದ ಕರದಲ್ಲಿ ಇಷ್ಟಲಿಂಗವ ಕೊಟ್ಟು,ಮನದ ಕರದಲ್ಲಿ ಪ್ರಾಣಲಿಂಗವ ಕೊಟ್ಚು ಭಾವದ ಕರದಲ್ಲಿ ಭಾವಲಿಂಗವ ಕೊಟ್ಟು,ಶಿವಯೋಗ ಸಂಪನ್ನರಾದವರು.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ವೀರಶೈವ-ಲಿಂಗಾಯತ ಧರ್ಮದ ವಿಶಿಷ್ಟ ಪಾರಿಭಾಷಿಕ ಶಬ್ದ ಮತ್ತು ತತ್ವವಾಗಿರುವ ಜಂಗಮದ ಪ್ರಮುಖ ಭೇದವಾಗಿರುವ ಸ್ವಯ , ಚರ ಮತ್ತು ಪರ ಜಂಗಮದ ಅಂತಸ್ಸತ್ವವನ್ನು ಅರಿತು ಆಚರಿಸಿದ ಮಹಿಮರು  ಮತ್ತು  ತ್ರಿವಿಧ ಜಂಗಮತ್ವದ   ನಿಲವಿಗೇರಿ ಮೆರೆದ ಮಹಾತ್ಮರು.

ಮುಖಪುಟ

ಶ್ರೀಕುಮಾರ ತರಂಗಿಣಿ  ಜನೆವರಿ ೨೦೨೫   ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಪರ ಶಿವಯೋಗದ ಸಾರ|” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೪೧ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಕಾರುಣಿಕ ಕುಮಾರಯೋಗಿ ಧಾರವಾಹಿ: -ಲೇಖಕರು-ಜ.ಚ.ನಿ
  4. : ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ
  5. ಹಾನಗಲ್ಲ ಶ್ರೀಕುಮಾರೇಶ್ವರರ ತಪೋಭೂಮಿ ಕ್ಯಾಸನೂರು ಶ್ರೀ ಕ್ಷೇತ್ರ :ಲೇಖಕ: ಶ್ರೀಕಂಠ.ಚೌಕೀಮಠ.

 

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

ಪರ ಶಿವಯೋಗದ ಸಾರ

(ರಾಗ – ಭೂಪ)

 

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

 

ಪರ ಶಿವಯೋಗದ ಸಾರ |

ಕರುಣ ವಿಹಾರ | ತೋಂಟದಾರ್ಯ ಹೋ || 1 ||

 

ಮನವು ನೇತ್ರವು ಸುಷುಮ್ನದಿ ಕೂಡಿ |

ತನುವನು ಮೀರಿ ಶಿವಸುಭಾನುತೋಷ |

ಆನಂದಸಕ್ತ ಗುಹದಲಿ ನೀ

ಅನನ್ಯ ವಿಲಾಸ ಹೋ                                   || 2 ||

 

ಶರಣಲೋಕ ಮುನ್ನ ಪರಿದು ಬಂದು ನಿನ್ನ |

ಮರೆಯೊಳು ಸಾರೆ ವರವಿಜ್ಞಾನವನ್ನು |

ಪರಂಪರಾನಂದಭ್ಧಿಯಾ ಕರುಣಿಸಿ |

ಪರಿಪಾಲಿಸೆನ್ನ ಹೋ                                || 3 ||

 

ಸಿದ್ಧಲಿಂಗ ಭೂಷ ಬದ್ಧಜೀವ ಪಾಶ |

ವಿದ್ದುರೆ ಸಾರೆ ಸಿದ್ಧ ಶಿವಯೋಗ ವಾಸ |

ಸಿದ್ಧಾಂತ ಶೇಖರಾವೇಶ ಮುದದೊಳು ನೀ

ಪರಿಪಾಲಿಸೇಶ ಹೋ                              || 4 ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ.

 

ಪುತ್ರ ಕೇಳೀ ಲಿಂಗ | ಶ್ರೋತ್ರಾದಿ ಇಂದ್ರಿತನ್

ಮಾತ್ರೆಯ ಸುಜ್ಞಾನ-ಮಾತ್ರದೊಳರಿ ಎಂದಾ

ಧಾತ್ರೀಶ ಗುರುವೆ ಕೃಪೆಯಾಗು    ||೧೫೮||

 ಕರ್ಮೇಂದ್ರಿಯಗಳಲ್ಲಿ ಇಷ್ಟ (ಕ್ರಿಯಾ) ಲಿಂಗ ಸಂಬಂಧವನ್ನು ತೋರಿಸಿ ಈಗ ಜ್ಞಾನೇಂದ್ರಿಯಗಳಲ್ಲಿ ಪ್ರಾಣಲಿಂಗದ ಸಂಬಂಧವನ್ನು ತಿಳಿಸುತ್ತಾನೆ.

ಜ್ಞಾನೇಂದ್ರಿಯಗಳಿಗೆ ಧರ್ಮೆಂದ್ರಿಯಗಳೆಂತಲೂ ಹೆಸರು. ಈ ಜ್ಞಾನೇಂದ್ರಿಯಗಳು ಅಗ್ನಿತತ್ತ್ವದಿಂದ ಜನಿಸಿದವುಗಳು. ಅರ್ಥಾತ್ ಅಗ್ನಿಯ ಪಂಚೀಕರಣದಿಂದ ಪ್ರಕಟ ಗೊಂಡಿವೆ. ಶ್ರೋತ್ರ, ತ್ವಕ್, ನೇತ್ರ, ಜಿಹ್ವೆ, ಘಾಣಗಳೇ ಪಂಚಜ್ಞಾನೇಂದ್ರಿಯಗಳು. ಪಂಚೀಕೃತ ಅಗ್ನಿಯ ಅರ್ಧಭಾಗವೇ ನೇತ್ರ. ಉಳಿದ ಅರ್ಧಭಾಗದ ಅಗ್ನಿಯಲ್ಲಿ ಸೇರಿದ ಕಾಲುಭಾಗದ (೧/೮ನೇ ಭಾಗ) ಅಕಾಶ ತತ್ತ್ವವೇ ಶ್ರೋತ್ರ. ಕಾಲುಭಾಗದ (೧/೮) ವಾಯುವೇ ತ್ವಕ್ಕು. ಅಪ್ಪುವಿನ (೧/೮) ಪಾದಾಂಶವೇ ಜಿಹ್ವೆ.  ಪೃಥ್ವಿಯ ಕಾಲು (೧/೮) ಭಾಗವೇ ನಾಶಿಕವಾಗಿದೆ. ಈ ಪಂಚಜ್ಞಾನೇಂದ್ರಿಯಗಳಿಗೆ ಪಂಚನ್ಮಾತ್ರೆಗಳು ಸಮರ್ಪಿತವಾಗುತ್ತವೆ. ಪಂಚತನ್ಮಾತ್ರೆಗಳು ಪಂಚೀಕೃತ ಜಲದ ಪಂಚ ಅಂಶಗಳು ಶಬ್ದ ಸ್ಪರ್ಶ, ರೂಪ, ರಸ, ಗಂಧಗಳೇ ಪಂಚತನ್ಮಾತ್ರೆಗಳೆನಿಸಿವೆ. ಪಂಚಜ್ಞಾನೇಂದ್ರಿಗಳಿಗೆ ಪಂಚತನ್ಮಾತ್ರೆಗಳು ಸಮರ್ಪಿತವಾಗುವಲ್ಲಿಯೇ ಸುಜ್ಞಾನದಿಂದ ಪ್ರಾಣಲಿಂಗ ಸಂಬಂಧವನ್ನು ಮಾಡಬೇಕು. ಇಂದ್ರಿಯಗಳನ್ನು ಲಿಂಗಗಳ್ನಾಗಿ ಗ್ರಹಿಸಿ ತನ್ಮಾತ್ರೆಗಳನ್ನು ಪ್ರಸಾದವನ್ನಾಗಿ ಸ್ವೀಕರಿಸುವ ಸುಜ್ಞಾನದ ಕಲೆಯನ್ನು ಕರಗತಮಾಡಿಕೊಳ್ಳುವದೇ ಪ್ರಾಣಲಿಂಗ ಧಾರಿಯ ಕರ್ತವ್ಯವಾಗಿದೆ.

ದೇಹವು ಕಣ್ಣಿಗೆ ಕಾಣಿಸುತ್ತದೆ. ಅದು ಸ್ಥೂಲವಾಗಿದೆ. ಆದರೆ ದೇಹದಲ್ಲಿಯ ಪ್ರಾಣ ಕಾಣಿಸುವದಿಲ್ಲ. ಅದು ಸೂಕ್ಷ್ಮವಾದುದು. ಕರ್ಮೆಂದ್ರಿಯಗಳು ಕಾರ್ಯ ಮಾಡುವುದೆಲ್ಲ ಸ್ಪಷ್ಟವಾಗುತ್ತದೆ. ಜ್ಞಾನೇಂದ್ರಿಯಗಳು ಕಾರ್ಯಗೈಯುವದು ಗೋಚರಿಸುವದಿಲ್ಲ. ಜ್ಞಾನೇಂದ್ರಿಯಗಳು ಕಣ್ಣಿಗೆ ಕಂಡರೂ ಅವುಗಳ ಜ್ಞಾನೇಂದ್ರಿಯತ್ವವು ಕಾಣಿಸುವದಿಲ್ಲ. ಅದು ಅನುಭವದಿಂದಲೇ ವೇದ್ಯವಾಗುತ್ತದೆ. ಉದಾಹರಣೆಗಾಗಿ ಕಿವುಡನಿಗೆ ಕಿವಿಗಳಿರುತ್ತವೆ. ಆದರೆ ಅವನಿಗೆ ಯಾವ ಶಬ್ದವೂ ಕೇಳಿಸುವದಿಲ್ಲ. ಶೀತ ಬಾಧೆಯಾದವನಿಗೆ ಮೂಗಿದ್ದರೂ ವಾಸನೆ ಬರುವದಿಲ್ಲ. ಜ್ವರ ಬಂದವನಿಗೆ ನಾಲಿಗೆಯಿದ್ದರೂ ರುಚಿಸುವುದಿಲ್ಲ, ಶರೀರವು ಮರಗಟ್ಟಿದಾಗ ಯಾವುದೇ ತರಹದ ಸ್ಪರ್ಶ ತಿಳಿಯುವದಿಲ್ಲ. ಯಾಕೆಂದರೆ ಪದಾರ್ಥಗಳನ್ನು ಗ್ರಹಿಸುವ ಇಂದ್ರಿಯವು ಸೂಕ್ಷ್ಮವಾಗಿರುತ್ತದೆ, ಮತ್ತು ಅಲ್ಲಿ ಜ್ಞಾನಪೂರ್ವಕವಾದ ಗ್ರಹಿಕೆಯಾಗಬೇಕು. ಬೇರೊಂದು ಕಡೆ ಲಕ್ಷ್ಯವಿರುವ ವ್ಯಕ್ತಿಯು ಬೇರೊಬ್ಬನಿಂದ ಹೇಳಿದ ಮಾತನ್ನು ಕೇಳಲಾರನು, ಶಬ್ದಗಳು ಕಿವಿಗೆ ಬಿದ್ದರೂ ಅರ್ಥವಾಗುವದಿಲ್ಲ. ಉಂಡರೂ ಭೋಗಿಸಿದ ಪ್ರಸಾದವು ತೃಪ್ತಿಯನ್ನು ನೀಡಲಾರದು. ಆದುಕಾರಣ ಗುರುನಾಥನು ಇಲ್ಲಿ ಎಚ್ಚರಿಸಿದ್ದಾನೆ. –

“ ಶ್ರೋತ್ರಾದಿ ಇಂದ್ರಿತನ್ಮಾತ್ರೆಯ ಸುಜ್ಞಾನ ಮಾತ್ರದೊಳರಿ’ ಎಂದು.

ಪ್ರಾಣಲಿಂಗ ಸಂಬಂಧದಲ್ಲಿ ಸುಜ್ಞಾನವೇ ಮುಖ್ಯಸಾಧನವಾಗಿದೆ. ಸುಜ್ಞಾನ ಮಾಧ್ಯಮದಿಂದಲೇ ಸಂಬಂಧವನ್ನು ತಿಳಿಯಬಹುದು. ಹೀಗೆ ಉಪದೇಶಿಸುವ ಗುರು ಸಾಮಾನ್ಯನಲ್ಲ. ಅವನು ಧಾತ್ರೀಶನೆನಿಸಿದ್ದಾನೆ. ಶಿವನು ಬ್ರಹ್ಮಾಂಡ ಜಗದೊಡೆಯ ನಾದರೆ ಗುರುವು ಪಿಂಡಾಂಡ-ಜಗದೊಡೆಯನಾಗಿದ್ದಾನೆ. ಪಿಂಡಾಂಡದ ಸಕಲ ವಿಜ್ಞಾನ ಗುರುವಿಗೆ ವೇದ್ಯವಾದುದು. ಓ ಗುರುವೇ ! ಕೃಪೆಯಿಟ್ಟು ಜ್ಞಾನೇಂದ್ರಿಯಗಳಲ್ಲಿ ಪ್ರಾಣಲಿಂಗವನ್ನು ಸಂಬಂಧಗೊಳಿಸು. ಪ್ರಾಣಲಿಂಗದೊಳಗಿನ ಷಡ್ಲಿಂಗದರಿವನ್ನು ದಯಪಾಲಿಸು.

ನಾಸಿಕೇಂದ್ರಿಯದಿ ಸ | ದ್ವಾಸನೆಯ ಕೊಂಬುದು

ಲ್ಲಾ ಸದಾಚಾರ ವಾ ಸಲ್ಲಿಂಗವೆಂದುಪ

ದೇಶಿಸಿದ ಗುರುವೆ ಕೃಪೆಯಾಗು   ||೧೫೯||

ಪೃಥ್ವಿತತ್ತ್ವದ ನಾಶಿಕ (ಮೂಗು)ವು ವಾಸನೆಯನ್ನು ಸ್ವೀಕರಿಸುತ್ತದೆ. ನಾಶಿಕೇಂದ್ರಿಯವೇ ಆಚಾರಲಿಂಗಕ್ಕೆ ಆಶ್ರಯ. ಮೂಗು ಯಾವುದೇ ವಾಸನೆಯನ್ನು ವಾಸಿಸುವದು ಸಹಜ. ಅದು ಅದರ ಪ್ರಕೃತಿ ಧರ್ಮ. ಈ ಪ್ರಾಕೃತಿಕ ಧರ್ಮವನ್ನು ಕಳೆಯಬೇಕಾದರೆ ಭಕ್ತನಾದವನು ಇದು ನಾಸಿಕವೆಂದು ಭಾವಿಸದೇ ಆಚಾರಲಿಂಗ ವೆಂದು ಗ್ರಹಿಸಬೇಕು. ಮೂಗಿನಿಂದ ಸ್ವೀಕರಿಸಲ್ಪಡುವ ಗಂಧವನ್ನು ಪದಾರ್ಥವೆಂದು ತಿಳಿಯದೇ ಅದನ್ನು ಗಂಧಪ್ರಸಾದವೆಂದು ಗ್ರಹಿಸಬೇಕು. ಯಾವುದೇ ವಾಸನೆಯನ್ನು ಆಚಾರಲಿಂಗದ ಸ್ಮರಣೆಮಾಡಿ ಗಂಧಪ್ರಸಾದವನ್ನಾಗಿ ಸ್ವೀಕರಿಸಬೇಕು. ಇದರಿಂದ

ಗಂಧದ ಪೂರ್ವಾಶ್ರಯವು ಅಳಿಯುವದು. ಪ್ರಾಸಾದಿಕ ಭಾವನೆಯು ಮನದಲ್ಲಿ ಬೆಳೆಯುವದು. ಗಂಧಗಳು ಭಿನ್ನವಾಗಿದ್ದರೂ ಪ್ರಸಾದವೆಂದೇ ಸ್ವೀಕರಿಸುವದರಿಂದ ಅದರ ಬಾಧೆಯಾಗುವದಿಲ್ಲ. ಮೋಹಕ ಗಂಧವೇ ಆಗಿದ್ದರೂ ಲಿಂಗಮುಖವಾಗಿ ಪ್ರಸಾದವನ್ನಾಗಿಸಿ ಸ್ವೀಕರಿಸುವ ವ್ಯಕ್ತಿಗೆ (ಶರಣನಿಗೆ) ಆ ಮೋಹ ಪರಿಣಾಮ ಬೀರದು. ಪ್ರಾಸಾದಿಕಗಂಧವು ಆತ್ಮನನ್ನು ಉಲ್ಲಾಸಗೊಳಿಸುವದು. “ಸುಗಂಧಂ ಪುಷ್ಟಿವರ್ಧನಮ್” ಸುಗಂಧ ದ್ರವ್ಯಗಳ ಪರಿಣಾಮ ದೇಹದಲ್ಲಿ ಪುಷ್ಟಿಯನ್ನು ಹೆಚ್ಚಿಸುವದು. ಈ ದೈಹಿಕ ಉತ್ಸಾಹವನ್ನು ಸಾತ್ವಿಕಗೊಳಿಸುವದೇ ಲಿಂಗತತ್ತ್ವ. ಲಿಂಗವಂತನು ಆಚಾರಲಿಂಗಕ್ಕರ್ಪಿತವಾಗುವ ಸುಗಂಧದಿಂದ ಪುಷ್ಟಿಯನ್ನು ಪಡೆದು ಸದಾಕಾಲವೂ ಪ್ರಾಸಾದಿಕ (ಪ್ರಸನ್ನ) ಗುಣಗಳನ್ನು ಹೊಂದುವನು. ಇಂಥ ಶರಣನಿಗೆ ಯಾವಾಗಲೂ ಬೇಸರವೆಂಬುದು ಇರುವದಿಲ್ಲ ಅವನು ಆಲಸಿಯಾಗುವದಿಲ್ಲ. ಉಲ್ಲಾಸಗೊಳಿಸಬಲ್ಲ ತಥ್ಯವನ್ನು ಹೊಂದಿರುವುದೇ ಆಚಾರಲಿಂಗದ ಕುರುಹು.

ವೀರಶೈವರಲ್ಲಿ ಅರ್ಚನ, ಅರ್ಪಣ ಮತ್ತು ಅನುಭವಗಳು ಬಹಳ ಮುಖ್ಯವಾಗಿವೆ. ಲಿಂಗಾರ್ಚನೆಯಿಂದ ಆತ್ಮಾನುಸಂಧಾನ ಮಾಡಬೇಕು. ಲಿಂಗ ಗುಣಗಳನ್ನು ಪಡೆಯಲು ಲಿಂಗಾರ್ಪಣ ಮಾಡಬೇಕು. ಅರ್ಪಿಸಿದ್ದು ಅನುಭವದಲ್ಲಿ ಅಳವಡಬೇಕು. ಈ ಅರ್ಪಣ ವಿಧಾನವೇ ಪ್ರಸ್ತುತ ಪ್ರಕರಣದಲ್ಲಿ ಸ್ಪುಟಗೊಂಡಿದೆ.

ಷಟ್‌ಸ್ಥಲಜ್ಞಾನಿಗಳಾದ ಚನ್ನಬಸವಣ್ಣನವರು ನಿರೂಪಿಸಿದ “ಮಿಶ್ರಾರ್ಪಣ’ವು ಅತ್ಯಂತ ಮಹತ್ವಪೂರ್ಣವಾದುದು. ಮಿಶ್ರಾರ್ಪಣದ ಅರಿವಿಲ್ಲದೆ ಅಂಗನು  ಲಿಂಗನಾಗನು. ಅರ್ಪಣಸದ್ಭಾವವೇ ಚರಮಗುರಿಯಾಗಿದೆ. ಅರ್ಪಣವು ಕಾಯಾರ್ಪಣ, ಕರಣಾರ್ಪಣ, ಮತ್ತು ಭಾವಾರ್ಪಣವೆಂದು ಮೂಬಗೆಯಾಗಿದೆ. ಕ್ರಿಯೆಯಿಂದ ಮಾಡುವದು ಕ್ರಿಯಾರ್ಪಣ, ಜ್ಞಾನದಿಂದ ಗ್ರಹಿಸುವದು ಕರಣಾರ್ಪಣ, ಭಾವದಲ್ಲಿ ಆನಂದಿಸುವದು ಭಾವಾರ್ಪಣ. ಈ ವಿಚಾರವನ್ನು ಮಿಶ್ರಾರ್ಪಣದಿಂದಲೇ ಅವಲೋಕಿಸುವದು ಸೂಕ್ತ.

ಕಾಯಾರ್ಪಣ : ಕಾಯದ ಕೈಯ ಮುಟ್ಟಿ, ಕ್ರಿಯಾರ್ಪಣವ ಮಾಡುವಾಗ; ಭೋಜ್ಯವಾಚಾರ ಲಿಂಗದಲ್ಲಿ ಪಾನ್ಯ ಗುರುಲಿಂಗದಲ್ಲಿ ಭಕ್ಷ್ಯ ಶಿವಲಿಂಗದಲ್ಲಿ ಚೋಹ್ಯ ಜಂಗಮಲಿಂಗದಲ್ಲಿ ಲೇಹ್ಯ ಪ್ರಸಾದಲಿಂಗದಲ್ಲಿ. ಇವು ಎಲ್ಲರಲ್ಲಿಯ ಅರಿವು ಮಹಾಲಿಂಗದಲ್ಲಿ, ಇಂತೀ ಷಡ್ವಿಧಕಾಯಾರ್ಪಣವಾದಲ್ಲಿ ಮುಂದೆ ಕರಣಾರ್ಪಣದ ಭೇದಮಂ ಪೇಳ್ವೆ.”

ಕರಣಾರ್ಪಣ : ನಾಶಿಕದಲ್ಲಿ ಆಚಾರಲಿಂಗ, ಜಿಹ್ವೆಯಲ್ಲಿ ಗುರುಲಿಂಗ, ನೇತ್ರದಲ್ಲಿ ಶಿವಲಿಂಗ, ತ್ವಕ್ಕಿನಲ್ಲಿ ಜಂಗಮಲಿಂಗ, ಶ್ರೋತ್ರದಲ್ಲಿ ಪ್ರಸಾದಲಿಂಗ, ಹೃದಯದಲ್ಲಿ ಮಹಾಲಿಂಗವು. ಇಂತೀ ಷಡ್ವಧಲಿಂಗಾರ್ಪಣವೆಂತೆಂದೊಡೆ ಆಚಾರಲಿಂಗದರಿವು ಗಂಧ, ಗುರುಲಿಂಗದರಿವು ರಸ, ಶಿವಲಿಂಗದರಿವು ರೂಪು ಜಂಗಮಲಿಂಗದರಿವು ಸ್ಪರ್ಶನ, ಪ್ರಸಾದಲಿಂಗದರಿವು ಶಬ್ದ ಮಹಾಲಿಂಗದರಿವು ಸರ್ವೆಂದ್ರಿಯ. ಇಂತೀ ಷಡ್ವಧಲಿಂಗಕ್ಕೆ ಮಿಶ್ರಾರ್ಪಣವು”.

ಷಡಂಗಗಳಲ್ಲಿ ಷಡ್ಲಿಂಗಗಳನ್ನು ವಿವರಿಸಿ ಅವುಗಳಿಗಾಗುವ ಪದಾರ್ಥಗಳ ವಿಚಾರವನ್ನು ವಿವರವಾಗಿ ತೋರಿಸಿದ್ದಾರೆ. ಮುಂದುವರೆದು ಆಚಾರಲಿಂಗದಲ್ಲಿಯೇ ಆರು ಲಿಂಗಗಳಾಗುವ ಮತ್ತು ಆಚಾರಲಿಂಗದರಿವಾದ ಗಂಧವೂ ಆರಾಗುವ ಪರಿಯನ್ನು ಪ್ರತಿಪಾದಿಸಿದ್ದಾರೆ; ನೋಡಿ –

“ಆಚಾರಲಿಂಗದ ಮಿಶ್ರ ಷಡ್ಡಿಧ ಲಿಂಗಾರ್ಪಣದ ವಿವರವೆಂತೆಂದೊಡೆ. ಆವುದಾನೊಂದು ಅರ್ಪಣಕ್ಕೆ ಬೇಕಾದುದು ಬೇರು, ಗೆಣಸು, ಮೊದಲಾದ ಗಂಧವನುವುದು ಆಚಾರಲಿಂಗದಲ್ಲಿ; ಮರ, ತಿಗುಡು, ಹಗಿನ ಮೊದಲಾದ ಗಂಧವನರಿವುದು ಗುರುಲಿಂಗದಲ್ಲಿ; ಚಿಗುರು ಮೊದಲಾದ ಪತ್ರಿಯ ಗಂಧವನರಿವುದು ಶಿವಲಿಂಗದಲ್ಲಿ ;ಮೊಗ್ಗೆ ಮೊದಲಾದ ಪುಷ್ಪದ ಗಂಧವನರಿವುದು ಜಂಗಮಲಿಂಗದಲ್ಲಿ; ಕಾಯಿ ಹಣ್ಣು ಮೊದಲಾದ ಫಲದ ಗಂಧವನರಿವುದು ಪ್ರಸಾದಲಿಂಗದಲ್ಲಿ; ಇವೆಲ್ಲರಲ್ಲಿಯ ಗಂಧವನರಿವುದು ಮಹಾಲಿಂಗದಲ್ಲಿ. ಇಂತು ಆಚಾರಲಿಂಗದ ಮಿಶ್ರಾರ್ಪಣವು.  ”

ಹೀಗೆ ಬೇರು, ಬೊಡ್ಡೆ, ಚಿಗುರು-ಎಲೆ, ಮೊಗ್ಗೆ-ಪುಷ್ಪ, ಕಾಯಿ-ಹಣ್ಣುಗಳ ಗಂಧವನ್ನು ಆಚಾರಲಿಂಗದ ಆರು ಲಿಂಗಗಳಿಗೆ ಸಮರ್ಪಿಸುವ ಸಾವಧಾನತೆಯನ್ನು, ಸುಜ್ಞಾನವನ್ನು ಪಡೆಯಬೇಕು. ಇದುವೇ ಭವದ ಬಂಧನದಿಂದ ಬಿಡುಗಡೆಯಾಗುವ ಉಪಾಯ. ಷಡ್ವಿಧ ಮಿಶ್ರಾರ್ಪಣ ವಿಧಾನದಿಂದ ವಿಷಯಗಳು ಪ್ರಸಾದವಾಗಿ ಪ್ರಸನ್ನತೆಉನ್ನು ಕೊಡಬಲ್ಲವು. ಓ ಗುರುವೆ ! ಇಂಥ ಸೂಕ್ಷ್ಮತೆಯನ್ನು ಗ್ರಹಿಸುವು ಯೋಗ್ಯತೆಉನ್ನು ಸುಜ್ಞಾನವನ್ನು ಕರುಣಿಸಿ ಸಲಹು.

ಇವೆರಡು ಪರಸ್ಪರ ಪೂರಕವಾದವು, ಪ್ರೇರಕವಾದವು. ಒಂದು ಒಳಮ್ಮೆ ಇನ್ನೊಂದು ಹೊರಮೈ,  ಎರಡು ಸೇರಿ ಒಮ್ಮೈ, ಒಂದನ್ನು ಬಿಟ್ಟು ಇನ್ನೊಂದು ಶೋಭಿಸುವಂತಿಲ್ಲ. ಇವೆರಡು ಸುಂದರ ಸಮನ್ವಯ ಸೃಷ್ಟಿ, ವೀರಶೈವರ ವಿಶಿಷ್ಟ ಸೃಷ್ಟಿ.

ಈ  ಪೂರ್ಣವಾದ ಸಾರವಾದ ವಿಚಾರವನ್ನು ತಿಳಿದು ತಮ್ಮಲ್ಲಿ ಇವೆರಡನ್ನು ಅಳವಡಿಸಿಕೊಂಡ  ಮಹಾನುಭಾವರೆಂದರೆ ಬಸವಣ್ಣನವರ ನಂತರ ಹಾನಗಲ್ಲ ಕುಮಾರ ಸ್ವಾಮಿಗಳವರೊಬ್ಬರೆ ! ದಾಸೋಹಂಭಾವದಿಂದಿರುವವರಲ್ಲಿ ದಾಸೋಹ ಸೇವೆಯ ಅಭಾವ, ದಾಸೋಹ ಸೇವೆಯನ್ನು ನಡೆಸುವವರಲ್ಲಿ ದಾಸೋಹಂಭಾವದ ಕೊರತೆ, ಎರಡನ್ನು ಸಮನ್ವಯವಾಗಿ ಸಮನಿಸಿಕೊಂಡವರು ಅತ್ಯಂತ ಅಪರೂಪ. ಇಲ್ಲೆಂದರೆ ಆಗದು ಅಪಲಾಪ.

‘ಎನಗಿಂತ ಕಿರಿಯರಿಲ್ಲ’ ಎಂಬ ಬಸವಣ್ಣನವರ ಜೀವಾಳದ ಅಮೃತೋಕ್ತಿಯನ್ನು ಚಾಚು ತಪ್ಪದೆ ತ್ರಿಕರಣಗಳಿಂದ ನಡೆಸಿಕೊಂಡು ಬಂದರು ಸ್ವಾಮಿಗಳವರು. ಅವರಿಗೆ ತಾವು ಹಿರಿಯರೆಂಬ ಭಾವನೆ ಕನಸಿನಲ್ಲಿಯು ಕಾಣಿಸಿಕೊಳ್ಳಲಿಲ್ಲ. ಅವರು ತಮ್ಮ ದಾಸೋಹಂಭಾವವನ್ನು ನುಡಿಗಿಂತ ಹೆಚ್ಚು ನಡೆಯಲ್ಲಿಯೆ ತೋರುತ್ತಿದ್ದರು. ಈ ವಿಷಯದಲ್ಲಿ ಅವರದು ‘ಕ್ರಿಯಾಕೇವಲ ಮುತ್ತರಂʼʼ

ಶ್ರೀಗಳವರಿಗೆ ತಾವು ಸ್ವಾಮಿಗಳೆಂಬ ಸ್ವಾಭಿಮಾನವಿರಲಿಲ್ಲ. ಸಭೆ ಸಂಸ್ಥೆಗಳ ಸ್ಥಾಪಕರೆಂಬ ಸ್ವಾಹಂಕಾರವಿರಲಿಲ್ಲ. ಒಮ್ಮೆ ಬಳ್ಳಾರಿಯಲ್ಲಿ ವೀರಶೈವ ಮಹಾಸಭೆಯು ಆರಂಭವಾಗುವ ಮೊದಲು ಆದಾರೋ ವಿಷಬೀಜ ಬಿತ್ತಿದರು. ಜರಗಬೇಕಾದ ಸಭೆಯ ಮೂಲಕ್ಕೆ ಕೊಡಲಿ ಏಟು ಹಾಕಿದರು. ಪರಸ್ಪರ ವೈಮನಸ್ಸಿನಿಂದ ಸಭೆಯ ನಿಲ್ಲುವ ಪ್ರಸಕ್ತಿ ಪ್ರಾಪ್ತವಾಯಿತು, ಆಗ ಸ್ವಾಮಿಗಳವರು ಪ್ರತಿಯೊಬ್ಬ ಗಣ್ಯ ಗೃಹಸ್ಥರ ಮನೆಗಳಿಗೆ ಪಾದಚಾರಿಗಳಾಗಿ ಪ್ರಸಾದದ ಹಂಗಿಲ್ಲದೆ ಹತ್ತಾರು ಸಲ, ನೂರಾರು ಸಲ ತಿರುಗಾಡಿ ತಿಳಿಹೇಳಿ ಎಲ್ಲರ ಹೃದಯಗಳನ್ನು ತಿಳಿಗೊಳಿಸಿದರು. ಸಭೆಯು ಸಾಂಗವಾಗಿ ಸಾಗುವಂತೆ ಮಾಡಿದರು. ಅವರ ದಾಸೋಹಂಭಾವಕ್ಕೆ ಇಂತಹ ಅನೇಕ ಉದಾಹರಣೆಗಳನ್ನು ಉದಹರಿಸಬಹುದು.

ತಾವು ಸ್ವತಃ ಸತ್ಪುರುಷರಾಗಿದ್ದರು ಶಿವಯೋಗಿಗಳಾಗಿದ್ದರು ತಮ್ಮಲ್ಲಿ ಆ ಭಾವನೆ ಅವರಿಗೆ ಎಳ್ಳಷ್ಟು ಇರಲಿಲ್ಲ. ಬೇರೆ ಬೇರೆ ಊರುಗಳಲ್ಲಿ ಯಾರಾದರು ಸತ್ಪುರುಷರಿದ್ದರೆ ಶಿವಯೋಗಿಗಳಿದ್ದರೆ ಅವರ ದರ್ಶನಕ್ಕೆ ದಯಮಾಡಿಸುತ್ತಿದ್ದರು. ಅಲ್ಲಿ ದಾಸೋಹಂಭಾವದಿಂದ ವರ್ತಿಸುತ್ತಿದ್ದರು. ‘ವಿನಮಿತನಹುದರಿಂದುಪಚಾರಮುಂಟೆ?” ಎಂಬ ನುಡಿಯನ್ನು ಸಾವಿರ ಪಾಲಿಗು ಸಾರ್ಥಕಗೊಳಿಸುತ್ತಿದ್ದರು.

ಸಾಧು ಮಾರ್ಗದಲ್ಲಿರುವವರನ್ನು ಕಂಡು ಅವರ ಸಂತೋಷ ಉಕ್ಕಿಬರುತ್ತಿತ್ತು. ಕುತೂಹಲ ಕೆರಳಿ ಬರುತ್ತಿತ್ತು. ಅವರನ್ನು ಕಾಣದೆ ಅವರಿಗೆ ತೃಪ್ತಿಯಿರುತ್ತಿರಲಿಲ್ಲ. ವಿನಯದಿಂದ ಅವರ ಗುಣವರ್ಣನೆಯಿಂದ ನೆನವಿನಿಂದ ಕಾಯವಾಙ್ಮನ ಸೇವೆಗಳನ್ನು ನಿರಪೇಕ್ಷೆಯಿಂದ ನಿರ್ಮಲ ಹೃದಯದಿಂದ ಸಮರ್ಪಿಸುತ್ತಿದ್ದರು.

ಒಮ್ಮೆ ಅಥಣಿ ಶಿವಯೋಗಿಗಳ ದರ್ಶನಕ್ಕೆ ದಯಮಾಡಿದ್ದರು. ಕಾಯಮನ ಸೇವೆಗಳೊಡನೆ ಎಂದಿಗೂ ಕಾಣಬರುವ ವಾಣಿ ಸೇವೆಯನ್ನು ಅವರಲ್ಲಿ ಸಲ್ಲಿಸಿದ್ದಾರೆ.

“ಮಂಗಳಾರತಿ ದೇವಗೆ ಶಿವಯೋಗಿಗೆ

ಕಂಗಳಾಲಯ ಸಂಗಗೆ II

ಜಂಗಮಲಿಂಗ ಭೇದದ ಸ್ವಯ ಚರಪರ

ಇಂಗಿತವರುಪಿದಂತಾಚರಿಸಿದ ಮಹಿಮಗೆ||ʼʼ

ಇದು ಅವರ ದರ್ಶನಕ್ಕೆ ದಯಮಾಡಿಸಿದಾಗ ಅವರ ಮೇಲೆ ಕಟ್ಟಿ ಹಾಡಿದ ಹಾಡಿಸಿದ ಮಂಗಳಾರತಿ, ಹೃದಯವುಕ್ಕಿದಾಗ ವಾಣಿಯು ಉಕ್ಕುವುದು ಅವರದೊಂದು ಸುಸ್ವಭಾವ. ಅದಕ್ಕೆ ಅವಕಾಶ ಕಲ್ಪಿಸಿಕೊಳ್ಳುತ್ತಿರಲಿಲ್ಲ. ಸಾಹಸದಿಂದ ಶಬ್ದಗಳನ್ನು ಸೆರೆಹಿಡಿದು ತಂದು ಪವಣಿಸುತ್ತಿರಲಿಲ್ಲ. ಹೃದಯದಿಂದ ಹುಟ್ಟಿ ಹೃದಯದಿಂದ ನಿರರ್ಗಳವಾಗಿ ಹೊರಹೊಮ್ಮುತ್ತಿತ್ತು. ಈ ಪದ್ಯವು ಅಷ್ಟೇ, ಅದರಿಂದಾಗಿ ಅರ್ಥ ಪೂರ್ಣವಾಗಿದೆ. ಶಿವಯೋಗಿಗಳವರ ಜೀವನ ಸಾರವನ್ನು ಸೂರೆಗೊಂಡಿದೆ. ಪಲ್ಲವಿಯಲ್ಲಿ ಪಲ್ಲವಿಸಿದ ಸ್ವಯ ಚರ ಪರ ಜಂಗಮ ವಿವರಣೆಯನ್ನು ಮುಂದಿನ ಪದಗಳಲ್ಲಿ ಸ್ವಾರಸ್ಯವಾಗಿ ಸಹಜಾರ್ಥವಾಗಿ ಬಿತ್ತರಿಸಿದ್ದಾರೆ.

ಮುಖಸ್ತುತಿಗಾಗಿ ಅವರು ಬಣ್ಣಿಸುತ್ತಿರಲಿಲ್ಲ. ಅದು ಅವರ ಹತ್ತಿರಕ್ಕೆ ಸುಳಿಯುತ್ತಿರಲಿಲ್ಲ. ಮುಖಸ್ತುತಿಗಾಗಿ ಯಾವಜೀವವು ಎಲ್ಲಿಯು ಅವರು ಮನಸ್ಸು ಮಾಡಿದವರಲ್ಲ. ಇದು ತಮಗು ಇಷ್ಟವಿರಲಿಲ್ಲ. ಇನ್ನೊಬ್ಬರ ವಿಷಯದಲ್ಲಿಯು ತಾವು ಮಾಡುತ್ತಿರಲಿಲ್ಲ.

ಎಡೆಯೂರು ತೋಂಟದಾರ್ಯರ ಸೊನ್ನಲಾಪುರ ಸಿದ್ಧರಾಮೇಶ್ವರರ ಗದ್ದುಗೆಗಳ ದರ್ಶನಕ್ಕೆ ದಯಮಾಡಿದಾಗಲು ಸ್ವಾಮಿಗಳು ವಾಣಿಸೇವೆಯನ್ನು ಪದ್ಯಗಳ ಮುಖಾಂತರ ಸಲ್ಲಿಸಿದ್ದಾರೆ. ಇದರಿಂದಾಗಿ ಅವರು ಮುಖಸ್ತುತಿ ಪರರಲ್ಲ ಎಂಬುದು ವ್ಯಗ್ಗಳವಾಗುತ್ತದೆ. ಸ್ವಾಮಿಗಳವರ ದಾಸೋಹಂಭಾವ ಆಳವಾದುದು ಅಪಾರವಾದುದು ಅದನ್ನು ಅಳೆಯಲು ನಮ್ಮಂಥವರಿಂದ ಸಾಧ್ಯವಿಲ್ಲ.

ಇನ್ನು ಅವರ ದಾಸೋಹ ಸೇವೆಗೆ ಶಿವಯೋಗ ಮಂದಿರವೆ ಒಂದು ದೊಡ್ಡ ನಿದರ್ಶನ. ಅಲ್ಲಿ ಒಂದು ದೊಡ್ಡ ದಾಸೋಹವನ್ನು ಏರ್ಪಡಿಸಿ ಅಲ್ಲಿನ ಕೆಲಸಗಾರರಲ್ಲದೆ ಪ್ರತಿ ದಿನವು ಪರಸ್ಥಳಗಳಿಂದ ಬರುತ್ತಿರುವ ನೂರಿನ್ನೂರು ಜನ ಅತಿಥಿ ಅಭ್ಯಾಗತರಿಗೆ ಪ್ರಸಾದ ವಿನಿಯೋಗ ಕೊರತೆಯಿಲ್ಲದೆ ನಡೆಯುತ್ತಿತ್ತು. ನಡೆಯುತ್ತಿದೆ. ಆ ದಾಸೋಹದಲ್ಲಿ ದೊಡ್ಡವರು ಚಿಕ್ಕವರು ಧನಿಕರು ದರಿದ್ರರು ಎಂಬ ಭೇದಭಾವವಿಲ್ಲ. ಒಬ್ಬರಿಗೊಂದು ಇನ್ನೊಬ್ಬರಿಗೆ ಇನ್ನೊಂದು ಪ್ರಸಾದದ ಏರ್ಪಾಡಿಲ್ಲ, ಇದು ನಿಜವಾದ ದಾಸೋಹ ಸೇವೆ

ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

 

ಬ್ರಹ್ಮವೊಂದೆ ಪರಮಸತ್ಯ. ಆ ಪರಮಸತ್ಯವನ್ನು ಅಭೇದಭಾವದಿಂದ  ಅನುಭವಿಸುವವರೇ ಬ್ರಹ್ಮಜ್ಞಾನಿಗಳು. ಎಲ್ಲರೂ ಬ್ರಹ್ಮಜ್ಞಾನಿಗಳಾಗಲು ಸಾಧ್ಯವಿಲ್ಲ.  ಬ್ರಹ್ಮಜ್ಞಾನಿಯಾಗಬೇಕಾದರೆ ತನುವಿನ ವ್ಯಾಮೋಹವನ್ನು ಕೈಬಿಡಬೇಕು. ಮನಸ್ಸಿನ ಚಾಂಚಲ್ಯವನ್ನು ನಿಲ್ಲಿಸಬೇಕು. ಭಾವಗತವಾದ ಅಹಂಕಾರವನ್ನು ಇಲ್ಲವಾಗಿಸಬೇಕು. ದೇಹ, ಮನ, ಬುದ್ಧಿ, ಪ್ರಾಣಗಳು ನಾನಲ್ಲವೆಂಬ ವಿಮಲಜ್ಞಾನವನ್ನು ಹೊಂದಬೇಕು. ಇಂಥವರು ದೇಹವೆ ನಾನೆಂಬ ಭ್ರಮೆಯಿಂದ ಮುಕ್ತರಾಗಿ ಪರಬ್ರಹ್ಮದ ಅರಿವಿನ ಕಳೆಯ ಆತ್ಮವೆಂದರಿತು ಪರಬ್ರಹ್ಮದೊಡನೆ ತಾದಾತ್ಮ ಹೊಂದಿ ಬ್ರಹ್ಮಾನಂದವನ್ನು ಅಂದರೆ ಪರಮಸುಖವನ್ನು ಸದಾ ಅನುಭವಿಸುತ್ತಾರೆ.

ಜನಸಾಮಾನ್ಯರಿಗೆ ಅಹಂಭಾವವನ್ನು ಅಳಿಯುವುದು, ದೇಹಗುಣ ಅಭಿಮಾನವನ್ನು ತ್ಯಜಿಸುವುದು ಕಷ್ಟವಾಗುತ್ತದೆ. ದೇಹವೆ ನಾನೆಂಬ ಅಭಿಮಾನ ಹಾಗು ಭೌತಿಕ ವಿಷಯಗಳೇ ಸುಖದ ನೆಲೆ ಎಂಬ ಭಾವನೆ ಹೊಂದಿದ ಅವರಿಗೆ ಪರವಸ್ತುವೆ ತಾವೆಂಬ ಅರಿವು ಸಾಧ್ಯವಾಗುವುದಿಲ್ಲ. ಬದುಕಿನುದ್ದಕ್ಕೂ ವಿಷಯಗಳ ಹಿಂದೆ ಹರಿಯುವ ಅವರು ಭವಬಂಧನದಲ್ಲಿ ಸಿಕ್ಕು ಸದಾ ದುಃಖವನ್ನನುಭವಿಸುತ್ತಾರೆ. ಇಂಥವರು ಯೋಗ್ಯ ಗುರುವನ್ನಾಶ್ರಯಿಸಿ ತಮ್ಮ ತನು ಮನ ಭಾವಗಳನ್ನು ಶಿವನಿಗೆ ಸಮರ್ಪಿಸಿ ಸಾಧನಾ ಪಥದಲ್ಲಿ ಮುಂದುವರೆದಾಗ ದೇವನ ಅರಿವು ಕೊನೆಗೆ ತಾನೇ ದೇವರೆಂಬ ಅರಿವು ಸಾಧ್ಯವಾಗುತ್ತದೆ. ಈ ಸಾಧನಾಪಥವೇ ಸುಖದ ಮಾರ್ಗ.  ಈ ಮಾರ್ಗದಲ್ಲಿ ಮುನ್ನಡೆದವರು ಭವಬಂಧನದಿಂದ ಮುಕ್ತರಾಗುತ್ತಾರೆ.

ಸಮಾಜದಲ್ಲಿ ಮಿಥ್ಯಾಜ್ಞಾನಿಗಳಿಗೂ ಕೊರತೆ ಏನಿಲ್ಲ. ಅವರು ಬ್ರಹ್ಮವನ್ನರಿಯದಿದ್ದರೂ ಮಾತಿನ ಬ್ರಹ್ಮವನಾಡುವವರು. ಶಬ್ದಜಾಲದೊಳಗೆ ಬದುಕು ಸಾಗಿಸುವ ಇವರು ಲೌಕಿಕ ವಿಷಯಗಳಿಂದ ವಿಮುಖರಾದವರಲ್ಲ. ಅಜ್ಞಾನವನ್ನು ಕಳೆದುಕೊಂಡು ನಿಜಜ್ಞಾನಿಗಳಾಗಬೇಕೆಂದು ಬಯಸುವವರೂ ಅಲ್ಲ. ‘ಅಹಂ ಬ್ರಹ್ಮಾಸ್ಮಿ’ ‘ನಾನೇ ಬ್ರಹ್ಮ’ ಎಂದು ಹೇಳುತ್ತ ಗಾಢಭ್ರಮೆಯೊಳಗಿರುವ ಇಂಥವರನ್ನು ಕುರಿತು ಹೇಳುವ ಕತೆಯೊಂದು ಹೀಗಿದೆ: ಬ್ರಹ್ಮವನ್ನರಿಯದಿದ್ದರೂ ಬ್ರಹ್ಮವನ್ನರಿತಿರುವೆ ಎಂದು ಹೇಳುತ್ತಿದ್ದ ಮಿಥ್ಯಾಜ್ಞಾನಿಯೊಬ್ಬ ‘ಅಹಂ ಬ್ರಹ್ಮಾಸ್ಮಿ’ ಎಂದು ಹೇಳುತ್ತ ರಸ್ತೆಯಲ್ಲಿ ನಡೆದು ಹೊರಟಿದ್ದ. ಅದೇ ರಸ್ತೆಯಲ್ಲಿ ಎದುರಿನಿಂದ ಮದವೇರಿದ ಆನೆಯೊಂದು ಬರುತ್ತಿತ್ತು. ಅದರ ಮಾವುತ ‘ಆನೆಗೆ ಮದವೇರಿದೆ. ರಸ್ತೆಯಲ್ಲಿ ಎದುರಿನಿಂದ ಬರುವವರು ದೂರ ಸರಿಯಬೇಕೆಂದು ಕೂಗಿ ಕೂಗಿ ಹೇಳುತ್ತಿದ್ದ. ಆದರೆ ಈ ಮಿಥ್ಯಾಜ್ಞಾನಿ ‘ನಾನು ಬ್ರಹ್ಮನಿದ್ದೇನೆ. ಆನೆಯೂ ಬ್ರಹ್ಮವಿದೆ ಈ ಆನೆ ನನಗೇನು ಮಾಡುತ್ತದೆ?’ ಎಂದು ದುರಹಂಕಾರದಿಂದ ಮಾವುತನ ಮಾತನ್ನು ಲೆಕ್ಕಿಸದೇ ಮುಂದುವರೆದ. ಆಗ ಮದೋನ್ಮತ್ತ ಆನೆ ತನ್ನ ಸೊಂಡಿಲಿನಿಂದ ಈ ದುರಹಂಕಾರಿಯನ್ನು ಎತ್ತಿ ಒಗೆಯಿತು. ಪೆಟ್ಟು ತಿಂದ ಮಿಥ್ಯಾಜ್ಞಾನಿ ಶ್ರೀ ರಾಮಕೃಷ್ಣ ಪರಮಹಂಸರಲ್ಲಿಗೆ ಬಂದು ಬ್ರಹ್ಮನಾದ ನನಗೆ ಹೀಗೇಕಾಯಿತು ಎಂದು ಕೇಳಿದ. ಆಗ ರಾಮಕೃಷ್ಣರು ಇವನ ಅಜ್ಞಾನಕ್ಕೆ ನಕ್ಕು “ನೀನೇನೊ ಬ್ರಹ್ಮ ಸರಿ. ಆದರೆ ಎದುರಿನಿಂದ ಕೂಗಿ ಹೇಳುತ್ತಿದ್ದ ಮಾವುತನೂ ಒಬ್ಬ ಬ್ರಹ್ಮ ಎಂಬುದನ್ನು ಏಕೆ ಅರಿಯಲಿಲ್ಲ.?’ ಎಂದಾಗ ತನ್ನ ಅಜ್ಞಾನಕ್ಕೆ ತಾನೇ ನಾಚಿ ತಲೆ ತಗ್ಗಿಸಿದ.

ಬರೀ ಶಾಸ್ತ್ರಾಧ್ಯಯನ ಮಾಡಿದವರು ಎಂದೂ ಬ್ರಹ್ಮಜ್ಞಾನಿಗಳಾಗುವುದಿಲ್ಲ. ಬ್ರಹ್ಮವನ್ನರಿತವರು ಸುಮ್ಮನಾಗಿರಬೇಕು. ಬಾಹ್ಯದಲ್ಲಿ ಎಂದೂ ತಮ್ಮ ಬ್ರಹ್ಮದ್ವೈತವನ್ನು ಬಳಸಬಾರದು. ಅಂತೆಯೇ ನಿಜಗುಣರು ‘ಬಳಸದಿರದ್ವೈತವನು ಬಾಹ್ಯದಲ್ಲಿ ನಿನ್ನೊಳಗೇಕೋ ಭಾವನೆಯೊಡಗೂಡು’ ಎಂದು ಸ್ಪಷ್ಟಪಡಿಸಿದ್ದಾರೆ. ಬ್ರಹ್ಮಜ್ಞಾನವನ್ನರಿತವರು ಸತ್ತು ಸ್ವರ್ಗ ಸೇರಬೇಕೆಂದೇನೂ ಅಲ್ಲ. ಅವರು ಬ್ರಹ್ಮವನ್ನರಿತೂ ನಮ್ಮ ಮಧ್ಯದಲ್ಲಿ ಇರಬಲ್ಲರು. ಅವರೇ ಜೀವನ್ಮುಕ್ತರು, ಕಾಯವನ್ನೇ ಕೈಲಾಸವಾಗಿಸಿಕೊಂಡ ಪುಣ್ಯಪುರುಷರು.