ಕಾವ್ಯ :ಬಿಚ್ಚಿ ಬೇರೆನಿಸದ ಮುರಘ ಶಿವಯೋಗಿಗೆ ರಚನೆ : ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳು

 

 

ಮಂಗಳಾರತಿ ದೇವಗೆ ಶಿವಯೋಗಿಗೆ

ಕಂಗಳಾಲಯ ಸಂಗಗೆ .

ಜಂಗಮ ಲಿಂಗ ಭೇದದ ಸ್ವಯಚರಪರ

ದಿಂಗಿತವರುಪಿದಂತಾಚರಿಸಿದ ಮಹಿಮಗೆ      ॥ ಪ ॥

ಒಂದೆ ಮಠದಿ ವಾಸಿಸಿ ಸದ್ಭಕ್ತಿಯಿಂ

ಬಂದ ಬಂದವರನು ಬೋಧಿಸಿ

ನಿಂದು ಏಕಾಂತದಾನಂದದ ಯೋಗದ

 ಚೆಂದವನರಿದನುಷ್ಠಾನಿಪ ಶಿವಸ್ವಯಗೆ    ॥ ೧ ॥

ಚರಿಸಿ ಭಕ್ತರ ಭಕ್ತಿಯ ಕೈಕೊಳ್ಳುತ್ತ

ಭರದಿ ಪರತರ ಬೋಧೆಯ

ನಿರದೆ ಬೋಧಿಸಿ ಶಿಷ್ಯ ಭಕ್ತರನುದ್ಧರಿಸಿ

ಚರತಿಂಥಿಣಿಯೊಳಾಡಿ ಗುರುವೆನಿಪ ಚರವರಗೆ  ॥ ೨ ॥

ಪಾಪಪುಣ್ಯಗಳ ಮೀರಿ ಸ್ವಾತಂತ್ರ್ಯದಿ

ಕೋಪಾದಿ ಗುಣವ ತೂರಿ .

ತಾಪಗೊಳ್ಳದೆ ಜಗಜ್ಜಾಲವ ಧಿಕ್ಕರಿಸಿ

ಕಾಪಟ್ಯವಳಿದು ಶಿವ ತಾನಹ ಪರತರಗೆ    ॥ ೩ ॥

ಅಷ್ಟಾವರಣವ ಸಾಧಿಸಿ ಸದ್ಭಕ್ತಿಯಿಂ

ಶಿಷ್ಟ ಚರವರನೆನಿಸಿ

ಶ್ರೇಷ್ಠ ಪ್ರಮಥನಾಮ ಪ್ರೇಮದಿಂದುಚ್ಚರಿಸಿ

ಕಷ್ಟತರದ ಮಾಯೆಯನು ಗೆಲಿದ ಯತಿವರಗೆ   ॥ ೪ ॥

ಸಚ್ಚಿದಾನಂದವೆನಿಪ ಅಥಣೀಪುರಿ

ಗಚ್ಚಿನಮಠ ಮಂಟಪ

ಅಚ್ಚರಿಗೊಳಿಪ ಷಟ್‌ಸ್ಥಲ ಬ್ರಹ್ಮಿವಾಸದಿಂ

ಬಿಚ್ಚಿ ಬೇರೆನಿಸದ ಮುರಘ ಶಿವಯೋಗಿಗೆ    ॥ ೫ ॥

 

   

Related Posts