ಲೇಖಕರು :ಡಾ . ಸಿದ್ದಣ್ಣ .ಬ . ಉತ್ನಾಳ

(ಗ್ರಂಥ ಋಣ :ಚಿನ್ಮಯ ಚೇತನ ಶ್ರೀ ಮದಥಣಿ ಮುರುಘೇಂದ್ರ ಶಿವಯೋಗಿಗಳು)

ಹನ್ನೆರಡನೆಯ ಶತಮಾನದಲ್ಲಿ ಗಟ್ಟಿಗೊಂಡು ೧೯ ನೆಯ ಶತಮಾನದಲ್ಲಿ ಸವಕಲಾದ ವೀರಶೈವ ದಾರ್ಶನಿಕ ಪದಗಳಿಗೆ ಹೊಸ ಶಕ್ತಿ ತುಂಬಿ ; ಜಗಕ್ಕೆಲ್ಲ ಜಂಗಮಜ್ಯೋತಿಯಾಗಿ ಬೆಳಗಿದವರು ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳು .

 ಜ್ಯೋತಿ ಕತ್ತಲೆಯಲ್ಲಿ ಭಾತಿಯಿಂದುರಿವಂತೆ

ಪ್ರೀತಿಯಿಂದೆಸೆವ ಶಿವಯೋಗಿ ಜಗಕ್ಕೆಲ್ಲ

 ಜ್ಯೋತಿ ತಾನಕ್ಕು ಸರ್ವಜ್ಞ

ಜಗವೆಲ್ಲ ಶಿವಾನುಭವ ಸೌರಭದಿಂದ ಹನ್ನೆರಡನೆಯ ಶತಮಾನಶಕ್ತಿ ಮರುಕಳಿಸಿತು . ಶಿವಯೋಗದ ಸ್ವರೂಪವು ಶ್ರೀಮದಥಣಿ ಮುರುಘೇಂದ್ರ ಶಿವಯೋಗಿ ಗಳ ಯೋಗಮಯ ಜೀವನದಲ್ಲಿ ಬೆಳಗುತ್ತಿದ್ದಿತು . ಆ ಬೆಳಕಿನ ಸಹಾಯದಿಂದ ಸಹಸ್ರಾರು ಮಹಾತ್ಮರು ಇಂದು ನಡೆದು ನುಡಿದು ನಾಡ ಪಾವನ ಮಾಡುತ್ತಿ ದ್ದಾರೆ . “ ಶಿವಯೋಗಿಗಳು ಚುಂಬಕವಾಗಿ ಸಮಾಜವನ್ನು ಆಕರ್ಷಿಸಿದರು : ಪರುಷರಾಗಿ ಹಲವರನ್ನು ಪರಿವರ್ತನಗೊಳಿಸಿದರು ; ಪ್ರದೀಪವಾಗಿ ಕೆಲವರನ್ನು ಪ್ರಕಾಶಗೊಳಿಸಿದರು . ಅವರ ಪ್ರಸಾದ ವಾಣಿಯ ಪ್ರಭಾವದಿಂದ , ಅವರ ಕೃಪಾದೃಷ್ಟಿಯ ಬಲದಿಂದ , ಅವರ ಆಶೀರ್ವಾದದ ಪರಿಣಾಮವಾಗಿ ಆತ್ಮ ಶಕ್ತಿಯನ್ನು ಅರಳಿಸಿಕೊಂಡವರ ಸಂಖ್ಯೆ ಅಸಂಖ್ಯ . ಇಂದಿಗೂ ಈ ಪ್ರಕಾಶ ಪರಂಜ್ಯೋತಿ ಸ್ವರೂಪವಾಗಿ ಪ್ರಕಾಶ ಪಸರಿಸುತ್ತಿದೆ ” .

ಈ ಪ್ರಕಾಶದ ಪೂರ್ವದಿಗಂತವೇ ನದಿ ಇಂಗಳಗಾವಿ , ಅಲ್ಲಿ ಶಾಲಿವಾಹನ ಶಕೆ ೧೭೫೮ ರ ವೈಶಾಖ ಮಾಸದ ಶುಕ್ಲಪಕ್ಷ ೧೧ , ಬೆಳಕು ಉದಯವಾಯಿತು . ಈ ಮಹಿಮರಿಗೆ ಜನ್ಮದಾತರಾಗುವ ಪುಣ್ಯ ರಾಚಯ್ಯ – ನೀಲಾಂಬಿಕೆಯರದು .

ಆರಾಜಿಸುವ ಪರಬ್ರಂಹ ತೇಜಃ ಕಲಾ |

 ಕೌರವಾರಂಗೊಂಡು ಪುಟ್ಟ ತೆನೆಪದಿನೆಂಟು |

 ನೂರ ಮೂವತ್ಪಾದನೆಯ ಶಕ ವರ್ಷದೊಳ್ಗುರುಲಿಂಗ ನಾಮಾಂಕಿತ

ಧಾರಣಿಯೊಳವತರಿಸಿ ಬಾಲಲೀಲೆಗಳಿಂದ

ಮಾರ ಸೌಂದರ್ಯಮಂ ಜರೆಯುವಾ ಕೃತಿಯನುಂ

 ಸಾರುತಾಪುತ್ರರೋಳೀತನಧಿಕ ಪ್ರೇಮ ಜೀವಿಯೆನೆ ರಂಜಿಸಿರ್ದಂ ||

ಗುರುಲಿಂಗಯ್ಯನ ಆಚಾರ – ವಿಚಾರ ಸಾಮಾನ್ಯ ಮಕ್ಕಳಂತಿರದೆ ಅಸಾಮಾನ್ಯವಾಗಿ ಕಾಣತೊಡಗಿದವು . ಆಗ ಈ ಬಾಲಕನನ್ನು ಅಥಣಿಯ ಗಚ್ಚಿನಮಠಕ್ಕೆ ಕರೆದುಕೊಂಡು ಬಂದರು . ಪೀಠಾಧಿಪತಿಗಳಾಗಿದ್ದ ಎರಡನೆಯ ಮರುಳ ಶಂಕರಸ್ವಾಮಿಗಳು ಗುರುಲಿಂಗಯ್ಯನನ್ನು ಗುರುದೃಷ್ಟಿಯಿಂದ ಕಂಡು ‘ ಸಾಕ್ಷಾತ್ ಶಿವನೇ ಆಗಮಿಸಿದ’ನೆಂದು ಅಂತಃಕರಣದಿಂದ ಬರಮಾಡಿಕೊಂಡರು . ಅಧ್ಯಯನಕ್ಕಾಗಿ ತೆಲಸಂಗದ ಶಿವಬಸವ ದೇವರಲ್ಲಿ ಹಾಗೂ ಮಮದಾಪುರದ ಮಹಾಯೋಗಿಗಳಲ್ಲಿ ವ್ಯವಸ್ಥೆ ಮಾಡಿದರು . ಅಭ್ಯಾಸ ಮುಗಿಸಿಕೊಂಡು ಮರಳಿ ಅಥಣಿಗೆ ಆಗಮಿಸಿದರು . ಮರುಳಶಂಕರರು ಮುರುಘೇಂದ್ರ ಎಂದು ಹೊಸ ನಾಮಕರಣ ಮಾಡಿದರು . ಗುರುಶಾಂತಸ್ವಾಮಿಗಳಿಂದ ಷಟಸ್ಥಲ ಬ್ರಹ್ಮೋಪದೇಶವನ್ನು ಪಡೆದು ಮುಂದೆ ಸಂಚಾರ ಕೈಕೊಂಡರು . ಹಳ್ಳಿಯಲ್ಲಿ ಏಕರಾತ್ರಿ , ಪಟ್ಟಣದಲ್ಲಿ ಪಂಚರಾತ್ರಿಗಳಂತೆ ವಾಸ್ತವ್ಯ ಮಾಡುತ್ತ ನಡೆದರು , ಚರಜಂಗಮಾಚರಣೆಯ ಪಾಲನೆಗಾಗಿ ಪುಣ್ಯಸ್ಥಳಗಳ ದರ್ಶನ ಕೈಕೊಂಡರು .

ನಂತರ ಅಥಣಿ ತಾಲೂಕಿನ ಶೂರಪಾಲಿ ಗ್ರಾಮದ ಹತ್ತಿರ ” ಗುಹೇಶ್ವರ ಗಡೆ’ಯಲ್ಲಿ ಆರು ವರುಷ ಶಿವಯೋಗಾನುಸಂಧಾನಕ್ಕೋಸ್ಕರ ಏಕಾಂತ ವಾಸ ದಲ್ಲಿದ್ದರು . ಇದೇ ಸಂದರ್ಭದಲ್ಲಿ ಶಿವಯೋಗಿಗಳು ಲಿಂಗಾರ್ಚನೆಗೆ ಕುಳಿತಾಗ ಶಿವಯೋಗ ಸಾಧನೆ ನಾಗರಹಾವೊಂದು ದಿನಾಲು ತೂಗಿ ತೊನೆಯುತ್ತಿತ್ತು .ಶಿವಯೋಗ ಸಾಧನೆ ಯನ್ನು ಮುಗಿಸಿ ಶಿವಯೋಗ ಸಿದ್ದರಾಗಿ ಹೊರಬಿದ್ದರು ಶ್ರೀ ಮುರುಘೇಂದ್ರ ದೇವರು .

 ಗಚ್ಚಿನ ಮಠಕ್ಕೆ ಆಗಮಿಸಿದಾಗ ಮಠದ ಅಧಿಕಾರವನ್ನು ವಹಿಸಿಕೊಳ್ಳಲು ಚೆನ್ನಬಸವಸ್ವಾಮಿಗಳು ಹಾಗೂ ಭಕ್ತರು ವಿನಯದಿಂದ ಕೇಳಿಕೊಂಡರು . “ ಈ ಮಠ – ಮಾನ್ಯಗಳ ಅಧಿಕಾರ ಬೇಡ , ಗುರು – ಲಿಂಗ – ಜಂಗಮ ಸೇವೆಯಂತೆ ಶರಣರ ಸೇವೆಯೇ ಸಾಕು . ನಾ ನಿರಾಭಾರಿ ಜಂಗಮ , ನನಗೆ ಲಿಂಗಯ್ಯನ ಸಂಗೊಂದು ಸಾಕು ” . ಶ್ರೀ ಸಿದ್ದಲಿಂಗ ದೇವರನ್ನು ಮಠದ ಅಧಿಪತಿಯನ್ನಾಗಿ ಮಾಡಿದರು . ಶ್ರೀಗಳು ಹಾಗೂ ಭಕ್ತರು ಶ್ರೀ ಮುರುಘಂದ್ರ ಮಹಾಸ್ವಾಮಿ ಗಳಿಗೆ ಈ ಮಠದಲ್ಲಿಯೇ ಇರಲು ಕೇಳಿಕೊಂಡಾಗ ಗಚ್ಚಿನ ಮಠವು ಗಟ್ಟಿ ಯಾಯಿತು , ಯೋಗ ಮಂಟಪವೇ ಶಿವಯೋಗಿಗಳ ಶಿವಾಲಯವಾಯ್ತು .

 ಮುಂದೆ ಶ್ರೀ ಮುರುಘಂದ್ರ ಶಿವಯೋಗಿಗಳ ಜೀವನವು “ ಬಿಂದು ನಾದವ ನುಂಗಿ , ಇಂದು ರವಿಯನು ನುಂಗಿ , ಸಂದಿರ್ದ ಮನವ ನಿಜ ನುಂಗಿದಾ ಯೋಗಿ ಇಂದುಧರನಕ್ಕು ” ಎಂಬ ಸರ್ವಜ್ಞನ ಮಾತಿನ ಮೂರ್ತಿಯಾದರು . ಯತಿಗಳಿಗೆ ಶಿವಯೋಗ ಸಾಮ್ರಾಜ್ಯದ ಸಾಮ್ರಾಟರಾದರು .

 ಈ ಜೀವ ಶಿವನಾಗುವುದೇ ಶಿವಯೋಗ . ನಿಜಗುಣ ಶಿವಯೋಗಿಗಳು ಕಾಯ ಪಿಡಿದಾತ್ಮರಾಶಿಗೆ ಪರತರ ಮುಕ್ತಿಗುಪಾಯವಿದು ; ನಿಜ ಶಿವ ಮಂತ್ರ ವಣ್ಣ ” ಎಂದು ವಿವರಿಸಿದ್ದಾರೆ . ಪರಶಿವನನ್ನು ಅರಿತು ಅರಿವಿನಲ್ಲಿ ಬೆರೆಯು ವುದೇ ಮುಕ್ತಿ , ಜೀವ ಶಿವನೆಂದು ತಿಳಿದು , ತಳೆದು ತಾನೊಂದಾದಾಗ ಆಗುವ ಆನಂದ ಸ್ವರೂಪವೇ ಶಿವಸ್ವರೂಪ . ಇದೇ ಲಿಂಗಾಂಗ ಸಾಮರಸ್ಯ ಅರ್ಥಾತ್ ಶಿವಯೋಗ ‘ . “ ಶಿವಯೋಗಿ ಶರೀರೇ ಚ ಸದಾ ಸನ್ನಿಹಿತಃ ಶಿವ ” ಸದುಕ್ತಿಯಂತೆ ತಮ್ಮಲ್ಲಿ ಶಿವನನ್ನು ,ಶಿವನಲ್ಲಿ ತಮ್ಮನ್ನು ಕಂಡು ಸದಾಶಿವ ಸ್ವರೂಪದಲ್ಲಿ ಬಾಳುವವರೇ ಶಿವಯೋಗಿಗಳು .

 ನೆನಹ ಮನದಲ್ಲಿ ಕಟ್ಟಿ , ಮನವ ಘನದಲ್ಲಿ ಕಟ್ಟಿ

ಮನವನ್ನಪಾನಕೆಳಸದೆ ಯೋಗಿಗೆ

ವನವಾಸವೇಕೆ ಸರ್ವಜ್ಞ .

“ ಲಿಂಗಾಂಗ ಯೋಗಾಚರಣೆಗೆ ಪ್ರಸಾದ ಭೋಗವು , ಅದರಿಂದುಂಟಾಗುವ ತೃಪ್ತಿ ಇವೆರಡೇ ಮುಖ್ಯ ಫಲಗಳೆನಿಸುವವು , ಜಗತ್ತಿನ ಸತ್ಪದಾರ್ಥಗಳೆಲ್ಲವೂ ಶಿವಪ್ರಸಾದವಾಗಿ ಪರಿಣಮಿಸಬೇಕು . ಆತ್ಮನು ಆ ಪ್ರಸಾದಭೋಗಿಯಾಗಿ ತೃಪ್ತನಾಗಬೇಕು . ಆ ತೃಪ್ತಿಯು ನಿತ್ಯವಾದುದು , ಲಿಂಗಾನಂದರೂಪ ವಾದುದು . ಇದೇ ಲಿಂಗೋಪಭೋಗ – ಜನ್ಯವಾದ ಶಿವಸುಖವು . ಇದನ್ನು ಪಡೆದವನು ( ಶಿವಯೋಗಿ ) ಮುಕ್ತ ಜೀವಿಯು , ಶಿವಯೋಗಿಯು ಈ ಸ್ಥಿತಿ ಯನ್ನು ಪಡೆಯುವುದೇ ಲಿಂಗಾಂಗ ಯೋಗದ ಸಹಚಾಚರಣೆಯ ಗುರಿ ” .

ಈ ಮಹಾಲಿಂಗ ( ತೃಪ್ತಿ ) ದಲ್ಲಿ ಬೆರೆತ ಲಿಂಗಾಂಗ ಯೋಗಿಯು ಷಟ್‌ಸ್ಥಲ ಬ್ರಹ್ಮಮೂರ್ತಿಯಾಗಿ ಕಂಗೊಳಿಸುವನು . ಇದೇ ಲಿಂಗಾಂಗ  ಯೋಗರೂಪವಾದ ಶಿವಯೋಗದ ನಿಜಸ್ಥಿತಿಯು , ಶ್ರೀ ಮುರುಘೇಂದ್ರ ಶಿವಯೋಗಿಗಳು ಸರ್ವಾಂಗಲಿಂಗ ಸ್ಥಿತಿಯನ್ನು ಪಡೆದವರಾಗಿದ್ದರು .

ಜೀವ ಶಿವನಾಗುವತ್ತ ಮಾಡುವ ಸಾಧನೆಯೇ ಯೋಗ . ಇದರಲ್ಲಿ ಮಂತ್ರ ಯೋಗ , ಲಯಯೋಗ , ಹಠಯೋಗ , ರಾಜಯೋಗ ಹಾಗೂ ಶಿವಯೋಗ ಎಂದು ಐದು ಪ್ರಕಾರಗಳುಂಟು . ‘ ಪರಿಪೂರ್ಣಯೋಗ ‘ ವೆಂದು ಪರಿಪೂರ್ಣ ಯೋಗವೇ ಮುಖ್ಯವೆಂದು ಭಾವಿಸುವವರುಂಟು , ಆದರೆ ” ಶಿವಯೋಗ’ವೇ ಪರಿಪೂರ್ಣ ಅರ್ಥಾತ್ ಪೂರ್ಣ ಯೋಗ .

ಹಲವು ಯೋಗವ ಮಾಡಿ  ಫಲವೇನು ಮಗನೆ

ಎಂದೊಲಿದು ಲಿಂಗಾಂಗ ಸುಲಭ ಯೋಗವನೊಡನೆ

ಕಲಿಸಿದ ಗುರುವೇ ಕೃಪೆಯಾಗು ||

ಎಂದು ಮೈಲಾರ ಬಸವಲಿಂಗ ಶರಣರು ಹೇಳಿದ್ದಾರೆ . ಶ್ರೀ ಮುರುಘೇಂದ್ರ ಶಿವಯೋಗಿಗಳು ಷಟಸ್ಥಲಾಚರಣೆಯಲ್ಲಿ ಬಲ್ಲಿದ ರಾಗಿ , ಶಿವಯೋಗಿ ಚಕ್ರವರ್ತಿಗಳೆನಿಸಿಕೊಂಡಿದ್ದರು . ಈ ಷಟ್‌ಸ್ಥಲದಲ್ಲಿ ಇಹ – ಪರ ಶಕ್ತಿ ಒಂದಾಗಿದೆಂದಾಗ ಈ ಶಿವಯೋಗದ ಮುಂದೆ ಮತ್ತಾವ ಯೋಗ ? ಜೀವವೇ ದೇವರಲ್ಲಿ ಒಂದಾಗುವ ಶಕ್ತಿ ಸಮ್ಮಿಳಿತವಾದಾಗ ಮತ್ತಾ ವುದರಲ್ಲಿ ಒಂದಾಗುವುದು ! ದೇಹ ಕಠಿಣದಿಂದ ಮಾಡುವ ಯೋಗ ಶೈವ ಮತದಲ್ಲಿ ಪ್ರಾಮುಖ್ಯತೆಹೊಂದಿದೆ . ವೀರಶೈವದಲ್ಲಿ ‘ ಷಟ್‌ಸ್ಥಲ ಮಾರ್ಗದಿಂದ ಸಾಧಿಸುವ ಲಿಂಗಾಂಗ ಸಂಯೋಗವೇ ವೀರಶೈವದ ಶಿವಯೋಗವಾಗಿರುವುದು , ಲಿಂಗಾಂಗಗಳ ಸಾಮರಸ್ಯವೇ ಸಂಯೋಗವೆನಿಸುವುದು .

ಸಮ್ಯಗೊಗೋ ಹಿ ಸಂಯೋಗೋಭವೇಲ್ಲಿಂಗಾಂಗಯೋಃ

 ಸದಾ ಸಂಯೋಗ ಏವ ಸಾಯುಜ್ಯರೂಪ ಮುಕ್ತಿರ್ನ ಚಾಪರಾ

 ಎಂದು ಮೊಗ್ಗೆಯ ಮಾಯಿದೇವರು ತಮ್ಮ ಶಿವಾನುಭವ ಸೂತ್ರದಲ್ಲಿ ಹೇಳಿದ್ದಾರೆ ,

ಆ ಪರಶಿವನಲ್ಲಿ ಮನವನ್ನು ಲೀನಗೊಳಿಸಿ ಧ್ಯಾನಿಸುವುದೇ ಮಂತ್ರಯೋಗ , ಕರಣೇಂದ್ರಿಯ ಭೋಗದಿಂದ ಬಿಡುಗಡೆ ಹೊಂದಿ , ಪರಶಿವನಲ್ಲಿ ಚಿತ್ರವನ್ನು ಲಯಗೊಳಿಸುವದೇ ಲಯಯೋಗ – ಸರಾಗವಾಗಿ ಸಂಚರಿಸುತ್ತಿರುವ ಪ್ರಾಣ ವಾಯುವನ್ನು ಮೂಗಿನ ರಂಧ್ರದ ಮೂಲಕ ತಡೆಹಿಡಿದು ತೂಬಿಸಿ ಹಣೆಯಲ್ಲಿ ಹೊಳೆಯುವ ಪ್ರಕಾಶವನ್ನೇ ತದೇಕ ಚಿತ್ತದಿಂದ ನೋಡುವುದೇ ಹಠಯೋಗ . ಈ ಜಗತ್ತಿನಲ್ಲಿ ಒಳ – ಹೊರಗೆಲ್ಲಾ ತುಂಬಿರುವ ಪ್ರಕಾಶವೇ ( ಪರತತ್ವವೆ ) ತಾನೆಂದು ತಿಳಿದು , ಆ ಅರಿವನ್ನೂ ಮೀರಿ ನಿಲ್ಲುವುದೇ ರಾಜಯೋಗ , ಒಂಭತ್ತು ಚಕ್ರಗಳಲ್ಲಿ ಒಂದು ಮಹಾಜ್ಯೋತಿ ಸಂಚರಿಸುವುದು . ಆ ಜ್ಯೋತಿಯೇ ಗುರುಸಿದ್ಧ ಮೂರ್ತಿ : ಗುರುಸಿದ್ಧ ನೇ ಶಿವಸ್ವರೂಪಿ ಎಂದು ಎರಡಿಲ್ಲದೇ ಭಾವಿಸಿ ನಂಬಿ ಧ್ಯಾನಿಸುವುದೇ ಶಿವಯೋಗ . ಪರತತ್ವವು ತನಗೆ ತಾನೇ ಗೋಚರಿಸು ವುದು . ಶರೀರದಲ್ಲಿ ಪರಂಜ್ಯೋತಿಯಿದೆ , ಪರತತ್ವವೂ ಇದೆ . ಆ ಜ್ಯೋತಿಯೇ ಮೂಲಸ್ವರೂಪ ; ಇದನ್ನೇ ಪರಬ್ರಹ್ಮ ಸ್ವರೂಪವೆನ್ನುತ್ತಾರೆ . ಈ ದೇಹದಲ್ಲಿ ಇರುವ ನವಚಕ್ರಗಳನ್ನು ಸಂಧಿಸಿ ಚಿಜ್ಯೋತಿಯನ್ನು ಕಾಣಬಹುದು . ಇದುವೇ ಪರಿಪೂರ್ಣ‌ ಲಿಂಗ , ಪರಶಿವತತ್ವ , ಹೀಗೆ ಪರಶಿವತತ್ವ ಕಂಡು ಶಿವಯೋಗಿ ಗಳಾದರು . ಆಗ ಭಕ್ತರು

ಪರಮಾತ್ಮನಿವನೆಂದು ನಿರುಕಿಸಲ್ಕೆಲರಂತು |

ಪರಮಸದ್ಗುರುವೆಂದು ಪೂಜಿಸಲ್ಕೆಲರಂತು |

ಹರಶರಣನೆಂದು ಸಲೆಪಾಡಲ್ಕೆಲರಂತು ಭೂರಿಸಂತೋಷವಾಂತು |

ಪರವಸ್ತುವೆಂದು ನೆರೆನುತಿಸಲ್ಕೆಲರಂತು |

ಚರಣಸನ್ನಿಧಿ ದರ್ಶನಕ್ಕೆಂದು ಕೆಲರಂತು |

ತರತರಗೊಳ್ಳುತಂ ಬರುತಿರ್ಪರನುದಿನಂ ಭಕ್ತಿಭಾವಾಸಕ್ತರು ||

 ನವಚಕ್ರಗತ ತೇಜೋಮಯ ಗುರುಸಿದ್ದನೆ

ಶಿವಲಿಂಗನಾಗಿಹನಿದನೊಂದಿ |

ಅವಿರಳನಾಗಿರಲಪವರ್ಗವಹುದೆಂದು

 ಶಿವಯೋಗವನು ಕಾಣಿಸಿದರಿಂದೆ

ಎಂದು ಸರ್ಪಭೂಷಣ ಶಿವಯೋಗಿಗಳು ಶಿವಯೋಗ ಕುರಿತು ಹೇಳಿದ್ದಾರೆ .

ಶಿವಾನುಭವ ದರ್ಪಣದಲ್ಲಿ :

 ಶಿವಯೋಗೀಶಂ ಸದಾಪಶ್ಚಿಮವಿತಥ ಪದ್ಮಾಸನಾಸೀನನಾಗು |

ತ್ತವ ನೀಲಜ್ಯೋತಿ ಕಾಂತ್ಯದ್ವಯ ಮಿಡಿದರೆ ಯೋಗಾನುಭವ ಪ್ರಕಾಶಂ |

 ತವೆ ಕುಂಡಗ್ನಿಯೊಳ್ ಚಲ್ಲುತಿರೆ ವಿಮಳಷಟ್ಚ್ಕ್ರ ಪದ್ಮಂಗಳೆಲ್ಲಂ |‌

 ರವಿ ಚಂದ್ರಾಗ್ನಿ ಪ್ರಭಾ ಕೋಟಿ ಕಿರಣಮಯವಾಗಲ್

ತ್ರಿಲೋಕಾಂತ ತೇಜಂ |

ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಶಿವಯೋಗ ಸಾಮ್ರಾಜ್ಯದ ಸಾರ್ವಭೌಮರಾದರು . ಅವರ ಜೀವನವೇ ಶಿವಯೋಗ ; ಶಿವಯೋಗವೇ ಅವರ ಜೀವನ .

 ಶ್ರೀ ರಮಣ ಮಹರ್ಷಿಗಳು ಹೇಳುತ್ತಾರೆ , ನಾನು ಎಲ್ಲ ಯೋಗಗಳನ್ನು ಅರಿತುಕೊಂಡೆ ಆದರೆ ‘ ನಾದಯೋಗ ‘ ಎಷ್ಟು ಪ್ರಯತ್ನಿಸಿದರೂ ತಿಳಿಯಲಿಲ್ಲ . ಇದರಿಂದ ತಿರುಗಾಟದಲ್ಲಿ ನಿರತನಾದೆ . ಆಗ ಮುಂಬೈಯಲ್ಲಿ ಒಬ್ಬ ವಕೀಲರು ಶ್ರೀಮದಥಣಿಯಲ್ಲಿ ಶ್ರೀ ಮುರುಘೇಂದ್ರ ಶಿವಯೋಗಿಗಳಿದ್ದಾರೆ . ಅವರನ್ನು ಕಂಡರೆ ಸಾಧ್ಯವಾಗುತ್ತದೆಂದು ಹೇಳಿದಾಗ ರಮಣ ಮಹರ್ಷಿಗಳು ಅಥಣಿಗೆ ಬಂದು ಶ್ರೀ ಮುರುಘಂದ್ರ ಶಿವಯೋಗಿಗಳಿಂದ ನಾದಯೋಗ ( ಕಿವಿಯಲ್ಲಿ ಅರುಹಿದರು ) ವನ್ನು ತಿಳಿಸಿಕೊಟ್ಟರೆಂದು ಹೇಳಿದ್ದಾರೆ . ನಿಜವಾಗಿ ಶಿವಯೋಗದ ರಹಸ್ಯವನ್ನರಿತು ಶಿವಯೋಗ ಸಂಪತ್ತಿನಲ್ಲಿ ಸಾಕ್ಷಾತ್ ಶಿವನೆನಿಸಿಕೊಂಡರು .

 ಕರ್ನಾಟಕದ ಗಾಂಧೀಯೆಂದೇ ಖ್ಯಾತರಾಗಿದ್ದ ಲಿಂ . ಹರ್ಡೆಕರ ಮಂಜಪ್ಪ ನವರು , ರಾಷ್ಟ್ರಪುರುಷ ದಿ . ಲೋಕಮಾನ್ಯ ತಿಲಕರು ( ಚಿತ್ರದುರ್ಗದ ಮಠದಲ್ಲಿ ) ಕೂಡಿ ಚರ್ಚಿಸುವಾಗ ಯೋಗಿಯ ಲಕ್ಷಣಗಳೇನು ? ಎಂದು ತಿಲಕರು ಕೇಳಿದಾಗ , ಮಂಜಪ್ಪನವರು ಮಂಡಿಸಿದಾಗ ಇಂಥವರು ಇಂದುಂಟೆ ? ಎಂದು ಶ್ರೀ ತಿಲಕರು ಕೇಳಿದರು , ತಾವುಗಳು ಅಥಣಿಗೆ ಹೋಗಿ ಶ್ರೀ ಮುರುಘೇಂದ್ರ ಸ್ವಾಮಿಗಳನ್ನು ಕಾಣಬಹುದು ಎಂದು ಹೇಳಿದರು , ನಂತರ ಶ್ರೀ ಲೋಕಮಾನ್ಯ ತಿಲಕರು ಅಥಣಿಗೆ ಬಂದು ಮಠಕ್ಕೆ ಹೋಗುವಷ್ಟರಲ್ಲಿ ಶ್ರೀ ಶಿವಯೋಗಿಗಳು ಬಾಗಿಲಿಗೆ ಬಂದು ನಿಂತಿದ್ದರು . ಪಾದದಿಂದ ಮಸ್ತಕದವರೆಗೆ ತದೇಕ ದೃಷ್ಟಿಯಿಂದ ನೋಡಿ  ಕಣ್ಣಿಗೆ ಕಾಣದವರ ಕುರಿತು ಜಿಜ್ಞಾಸೆಗೈದು ಟೀಕೆ ಬರೆದೆ ; ನಿಮ್ಮಂತಹ ಮಹಾ ತ್ಮರ ಕುರಿತು ಬರೆಯಬೇಕಾಗಿತ್ತೆನ್ನು ವಷ್ಟರೊಳಗಾಗಿಯೇ ಶ್ರೀ ಶಿವಯೋಗಿ ಗಳು ಅವರು ಮಹಾತ್ಮರಪಾ ! ಶಿವಸ್ವರೂಪಿಗಳ್ರೆಪಾ ಹಾಗ ನುಡಿಬಾರದೆಂದು  ಹೇಳಿದಾಗ ಶ್ರೀ ತಿಲಕರು ಆನಂದತುಂದಿಲರಾಗಿ ನಿಂತುಬಿಟ್ಟಿದ್ದರು . ನಂತರ ಶ್ರೀ ಶಿವಮಾರ್ಗ ಸಂದರ್ಶಿಸಿ ದರ್ಶನಾಶೀರ್ವಾದ ಪಡೆದು ಪುನೀತರಾದರು . ಇದೇ ಸಂದರ್ಭದಲ್ಲಿ ಶ್ರೀ ತಿಲಕರು ‘ ನಾನು ಇಟ್ಟುಕೊಂಡ ಗುರಿ ಕಾಣಲು ಎಂದು ಪ್ರಶ್ನೆ [ ಭಾರತ ಸ್ವಾತಂತ್ರ್ಯ ಕುರಿತು ] ಕೇಳಿದಾಗ ಶ್ರೀಗಳು ಸಾವಕಾಶವಾಗಿ ‘ ನಿನ್ನ ಗುರಿ ಸಾಧಿಸುತ್ತದೆ, ನೀನು ಕಾಣುವುದಿಲ್ಲ ‘ ಎಂದು ಹೇಳಿದರು [ ೧೯೪೭ ರಲ್ಲಿ ಸ್ವಾತಂತ್ರ್ಯ ದೊರಕಿತು ; ಪೂರ್ವದಲ್ಲಿಯೇ ಶ್ರೀ ತಿಲಕರು ಸ್ವರ್ಗಸ್ಥರಾದರು ] .

ಅದ್ವೈತ ಸಿದ್ದಾಂತದ ಸಾಕಾರರೂಪಿಗಳಾದ ಶ್ರೀ ಸಿದ್ಧಾರೂಢರು ದೇಶ ಸಂಚಾರ ಕೈಕೊಂಡು ಕಾಶಿಗೆ ಹೋದರು . ಅಲ್ಲಿದ್ದ ಪಂಡಿತರನ್ನು ಕಂಡು ಚರ್ಚಿಸಿ ಅದ್ವೈತ ಸಿದ್ದಾಂತದ ಹಿರಿಮೆಯನ್ನು ಎತ್ತಿ ತೋರಿದರು . ನಂತರ ಹುಬ್ಬಳ್ಳಿಗೆ ಆಗಮಿಸಿದರು . ಅಲ್ಲಿದ್ದ ಪಂಡಿತರಲ್ಲಿ ಇಬ್ಬರು ಊರಿಗೆ ಹೋಗಿದ್ದರು . ಇವರು ಕಾಶಿಗೆ ಬರುವಷ್ಟರಲ್ಲಿ ಶ್ರೀ ಸಿದ್ಧಾರೂಢರ ಸಿದ್ದಾಂತ ಸಾಧನೆ ಕುರಿತು ದಿನನಿತ್ಯ ಚರ್ಚೆ , ಇದನರಿತು ಅದೇ ತಾನೇ ಊರಿಂದ ಬಂದವರು ಗಾಬರಿಯಾಗಿ ಕೇಳಲು ನಡೆದ ವಿಷಯ ವಿಸ್ತರಿಸಿದರು . ನೀವು ಮುಖ್ಯ ಪ್ರಶ್ನೆಯನ್ನೇ ಕೇಳಿಲ್ಲ , ಶಿವಯೋಗಿ ಅಥವಾ ಯತಿಯ ಕುರಿತು ಲಕ್ಷಣವೇನೆಂದು ಕೇಳಬೇಕಾಗಿತ್ತು . ಉತ್ತರ ಹೇಳಿ ನೋಡೋಣವೆಂದು ಹೇಳಿದಾಗ , ಎಲ್ಲರೂ ಗಾಬರಿಯಾಗಿ ನೀವು ಹುಬ್ಬಳ್ಳಿಗೆ ಹೋಗಿ ಈ ಪ್ರಶ್ನೆ ಕೇಳಿ ಬರ್ರಿ ಎಂದು ಹೇಳಿದಾಗ ಇವರಿಬ್ಬರು ಹುಬ್ಬಳ್ಳಿಗೆ ಬಂದರು . ಶ್ರೀ ಸಿದ್ಧಾರೂಢರನ್ನು ಕಂಡು ಪ್ರಶ್ನೆ ಕೇಳಲಾಗಿ ‘ ಪಂಡಿತರೇ ತಮ್ಮಲ್ಲಿಗೆ ಬಂದಾಗ್ಗೆ ಉತ್ತರ ಹೇಳಬಹುದಿತ್ತು . ಆದರೆ ತಾವುಗಳು ಅಥಣಿಗೆ ಹೋಗಿರಿ , ಶ್ರೀ ಮುರಿಗೆಪ್ಪನೆಂಬ ಶಿವಯೋಗಿಗಳಿದ್ದಾರೆ ಈ ಪ್ರಶ್ನೆಗೆ ಸರಿಯಾದ ಉತ್ತರ ತೋರಿಸುತ್ತಾರೆ ‘ ಎಂದು ಹೇಳಿದರು . ಆಗ ಪಂಡಿತರು ಅಥಣಿಗೆ ಆಗಮಿಸಿದರು .

 ಸದರದಲ್ಲಿ ಆಸೀನರಾಗಿದ್ದ ಶ್ರೀ ಶಿವಯೋಗಿಗಳು ಈ ಪಂಡಿತರನ್ನು ಕಂಡ ಕೂಡಲೆ ‘ ಬರ್ರೆಪಾ ಬರ್ರಿ  ವೇಳೆ ಬಹಳಾಗಿ ದೆ , ಸ್ನಾನ ಮಾಡಿ , ಪೂಜೆ ಮಾಡಿ , ಪ್ರಸಾದ ಸ್ವೀಕರಿಸಬೇಕೆಂದು ಹೇಳಿದರು . ಹೀಗೆ ದಿನಾಲು ` ಎದ್ರೆಪಾ , ಸ್ನಾನ , ಪೂಜೆ , ಪ್ರಸಾದ ಮಾಡ್ರಿ ‘ ಎಂದು ಹೇಳುತ್ತಾ ನಡೆದರು . ಬಂದ ಪಂಡಿತರು ತಮ್ಮಲ್ಲಿಯೇ ಚರ್ಚಿಸಿದರು . ನಾವು ಗಾಡಿಗಟ್ಟಲೆ ಗ್ರಂಥಗಳನ್ನು ಅಭ್ಯಾಸ ಮಾಡಿದರೂ ಈ ಪ್ರಶ್ನೆಗೆ ಉತ್ತರ ದೊರೆತಿಲ್ಲ . ಈತ ಏನೇನು ಓದಿದ್ದಾನೆ ; ಏನೋ ! ಅಪ್ಪನವರ ವಚನಗಳಂತೆ , ತೊಡಿಯ ಮೇಲಿಟ್ಟುಕೊಂಡು ಓದುತಾ ರೆ . ಇವರಿಗೆ ಈ ಪ್ರಶ್ನೆ ಕೇಳಿ ಅವಮಾನ ಮಾಡುವುದರಲ್ಲಿ ಅರ್ಥ ವಿಲ್ಲವೆಂದು ತಿಳಿದು ಮರುದಿನ ಹೋಗಲು ಅಪ್ಪಣೆ ಪಡೆದುಕೊಂಡರು .

ಹುಬ್ಬಳ್ಳಿಗೆ ಬಂದು ಅಪಹಾಸ್ಯದಿಂದ ನುಡಿದರು ‘ ಸ್ವಾಮಿ ನಿಮಗೆ ಉತ್ತರ ಕೊಡದಾಗದಿದ್ದರೆ ಅವರ ಹತ್ತಿರ ನಮ್ಮನ್ನು ಕಳಿಸುವ ಕಾರಣವಿರಲಿಲ್ಲ . ಅವರೇನು ಪಂಡಿತರೇ ? ಶಾಸ್ತ್ರ ಓದಿದವರೇ ? ಅವರಿಗೇನು ಕೇಳುವುದು ? ನಿಮಗೆ ಉತ್ತರ ದೊರೆಯದಿದ್ದರೆ ನಾವು ಕಾಶಿಗೆ ಹೋಗುತ್ತೇವೆ ‘ ಎಂದು ಸ್ಪಷ್ಟವಾಗಿ ಹೇಳಿಬಿಟ್ಟರು .

ಶ್ರೀ ಸಿದ್ಧಾರೂಢರು ತಮಗಾದ ಅನುಭವವೇನು ? ಎಂದು ಕೇಳಲು ಬರ್ರೆಪಾ ಬರ್ರಿ  , ಸ್ನಾನ ಪೂಜೆ ಪ್ರಸಾದ ಸ್ವೀಕರಿಸಿರಿ  ಎಂದು ದಿನನಿತ್ಯ ಕೇಳುತ್ತಾ ಹಾಗೂ ವ್ಯವಸ್ಥೆ ಪೂರೈಸುತ್ತಾ ಸಾಗಿದರು . ನಮ್ಮ ಪರಿಚಯ ಕೂಡ ಅರಿಯಲಿಲ್ಲ . ಆಗ ಶ್ರೀ ಸಿದ್ಧಾರೂಢರು ನಸುನಕ್ಕು ‘ ಹುಚ್ಚಪ್ಪಗಳಿರಾ ! ನಿಮ್ಮ ಪೂರ್ವಾಶ್ರಮ ವಿಚಾರಿಸದೆ ನಿಮಗೆ ಮಾಡಿದ ಈ ಆತಿಥ್ಯವೇ ನಿಜವಾದ ಶಿವಯೋಗಿ ಲಕ್ಷಣ ‘ ಎಂದು ಹೇಳಿದಾಗ ತಬ್ಬಿಬ್ಬಾಗಿ ತಲೆದೂಗಿ ಹೊರಟು ಹೋದರು .

ಶ್ರೀ ಶಿವಯೋಗಿಗಳು ಸದಾ ಶಿವಭಾವದಲ್ಲಿದ್ದವರು . ಬಂದವರೆಲ್ಲರೂ ಶಿವಸ್ವರೂಪಿಗಳೆ . ಇವರಿಗೆ ಮಾಡುವ ಆತಿಥ್ಯ ಶಿವನಿಗೆ ಸಲ್ಲುತ್ತದೆಂದು ಸದಾ ಸರ್ವರನ್ನು ಶಿವಸ್ವರೂಪದಲ್ಲಿ ಕಂಡ ಮಹಾಬೆಳಗು . ಶ್ರೀಗಳ ಜೀವನವೇ ಪವಾಡಮಯವಾಗಿತ್ತು , ಹೊರತು ಅವರು ಎಂದೂ ಪವಾಡಗಳನ್ನು ಮಾಡಲು ಹೋಗಲಿಲ್ಲ .

ವೀರಶೈವ ಧರ್ಮದ ಶ್ರೇಷ್ಟ ಸಿದ್ದಾಂತವೇ ಶಿವಯೋಗ . ತಲುಪಿದಾಗ ಸಮಸ್ತ ಬ್ರಹ್ಮಾಂಡವೇ ಲಿಂಗಮಯ . ಕಣ್ಣಿಗೆ ಕಾಣುವ ಪ್ರತಿಯೊಂದು ವಸ್ತು ಲಿಂಗಸ್ವರೂಪವಾಗಿ ಕಾಣುತ್ತವೆ . ಇಂತಹ ಸ್ವರೂಪ ಸ್ಥಿತಿಯೇ ಶಿವಯೋಗ ಸ್ಥಿತಿ , ಎಲ್ಲದರ ಸಂಬಂಧವು ಶಿವಸ್ವರೂಪವೇ ಶಿವಯೋಗ ಸ್ವರೂಪ .

ಶ್ರೀ ಶಿವಯೋಗಿಗಳು ಲಿಂಗೈಕ್ಯರಾಗುವುದು ಇನ್ನೂ ಆರು ತಿಂಗಳಿರಲು ಪ್ರಭುದೇವರ ಮಾನಸ ಪೂಜೆ ಪ್ರಾರಂಭವಾಯಿತು . ಹಸ್ತದಲ್ಲಿಯ ಲಿಂಗಯ್ಯ ಶರೀರದಲ್ಲಿ ಒಂದಾಗಿಬಿಡುತ್ತಿದ್ದ . ಶ್ರೀಗಳ ಕೈಯಲ್ಲಿ ಲಿಂಗವೇ ಇರುತ್ತಿರಲಿಲ್ಲ . ಆದರೆ ಪೂಜಾಸ್ಥಿತಿ ಪ್ರಾರಂಭವಾಗಿ ವಿಶ್ವ ಪೂಜೆಗೊಳ್ಳುತ್ತಿತ್ತು . ಇಂತಹ ಸ್ವಲೀಲಾ ಆನಂದಲಿಂಗ ಸ್ವರೂಪರೇ ಆದರೂ ಅದು ಲಿಂಗಪೂಜೆ ತಂತಾನೆ ನೆರವೇರುತ್ತಿತ್ತು . ಸಿದ್ಧಯ್ಯ ಪುರಾಣಿಕರು “ ಶಿವಯೋಗಿಗಳು ಸಂಪೂರ್ಣವಾಗಿ ಅಂತರ್ಮುಖಿಗಳಾದರು . ಆಗಾಗ ಬಾಲಲೀಲೆ , ಮರುಕ್ಷಣ ದಲ್ಲಿ ಯೋಗಲೀಲೆ , ಒಮ್ಮೆ ಪೂರ್ಣ ಪ್ರಜ್ಞಾವಸ್ಥೆ , ಒಮ್ಮೆ ಅರೆ ಪ್ರಜ್ಞಾವಸ್ಥೆ , ಒಮ್ಮೆ ಅಂತಃಪ್ರಜ್ಞಾವಸ್ಥೆ ; ಜಾಗೃತ – ಸ್ವಪ್ನ – ಸುಷುಪ್ತಿಗಳಲ್ಲಿಯೂ ಶಿವಧ್ಯಾನ , ಶಿವಚಿಂತನ , ಶಿವಾನುಭವ ; ಕಾಳರಾತ್ರಿಯಲ್ಲಿ ಕುಳಿತು , ” ಆಹಾ , ಲಿಂಗಪೂಜೆ ಎಷ್ಟು ಚೆನ್ನಾಗಿ ನಡೆದಿದೆ ‘ ಎಂದು ಉದ್ಗರಿಸುತ್ತಿದ್ದರು ; ಪರಿಚಿತರನ್ನೂ ಸಹ “ ನೀವಾರು ಎಲ್ಲಿಂದ ಬಂದಿರಿ ? ‘ ಎಂದು ಕೇಳುತ್ತಿದ್ದರು . ಯೋಗ ಮಂಟಪವನ್ನು ನೋಡಿ ‘ ಇದಾರ ಮನೆ ? ” ಎಂದು ಪ್ರಶ್ನಿಸುತ್ತಿದ್ದರು ; ಹಸ್ತದಲ್ಲಿ ಲಿಂಗದೇವ ನ್ಯಸ್ತವಾಗಿರದಿದ್ದರೂ ಜಲವನೆರೆ ದಂತೆ , ಭಸ್ಮ ಧರಿಸಿದಂತೆ , ಪತ್ರಿ ಪುಷ್ಪಗಳನ್ನರ್ಪಿಸಿದಂತೆ , ನೈವೇದ್ಯವನ್ನು ತೋರಿಸಿದಂತೆ ಲಿಂಗಪೂಜೆ ಮಾಡುತ್ತಿದ್ದರು . ಅದು ಲಿಂಗವೇ ಲಿಂಗಾರ್ಚನೆ ಯನ್ನು ಮಾಡುತ್ತಿದ್ದ ಮಹಾಪೂಜೆ ” ಎಂದು ವಿವರಿಸಿದ್ದಾರೆ .

 ಒಂದು ದಿನ ಶ್ರೀ ಶಿವಯೋಗಿಗಳು ಭಕ್ತರಿಗೆ “ ಶಿವರಾತ್ರಿ ಎಂದಿದೆ ? ಕೇಳಿದರು . ಎಲ್ಲರೂ ಸೋಮವಾರ ಎಂದರು . ಶಿವಯೋಗಿಗಳು ಅಂತರ್ಮುಖಿಯಾಗಿ ‘ ಶನಿವಾರ ‘ ಎಂದರು . ಆಗ ಎಲ್ಲರೂ ಗಾಬರಿಯಾದರು ಅಂದೇ  ಶಾ.ಶ. ೧೮೪೩ ನೆಯ ದುರ್ಮುಖಿ ಸಂವತ್ಸರದ ಚೈತ್ರ ಮಾಸ ಕೃಷ್ಣ ಪಕ್ಷ ಪ್ರತಿಪದ ಶನಿವಾರ ಹನ್ನೊಂದು ಘಂಟೆಗೆ ಲಿಂಗಾರ್ಚನೆ ಮಾಡುತ್ತಾ ಮಹಾ ಬೆಳಕಿನೊಳಗೆ ಬೆಳಕಾದರು . ನಿಜವಾಗಿ ಅಂದೇ ನಿಜ ಶಿವರಾತ್ರಿ ಆಯಿತು . ಶಿವಯೋಗಿವರೇಣ್ಯರಾದ ಶ್ರೀ ಮುರುಘೇಂದ್ರ ಶಿವಯೋಗಿಗಳ ಜೀವನವೇ ವೀರಶೈವ ಧರ್ಮದ ನಿಜಸ್ವರೂಪ .

 “ ವಿಜ್ಞಾನದ ಬಿರುಗಾಳಿಯಲ್ಲಿ ಕಣ್ಣು ಮುಚ್ಚಿದ ಮಾನವರಿಗೆ ಇಂದು ಸುಜ್ಞಾನ ಕಾಣದಂತಾಗಿದೆ . ಅಂತಹವರು ಅನುಭಾವದ ಹಿರಿಮೆಯನ್ನೇ ಅರಿಯದಾಗಿದ್ದಾರೆ . ಇಂದಿನ ವೈಜ್ಞಾನಿಕ ಯುಗದಲ್ಲಿಯೇ ಇಂತಹ ವಿಜ್ಞಾನಿ ಗಳನ್ನು ಬೆರಗುಗೊಳಿಸುವಂತೆ ಶ್ರೀ ಮದಥಣಿಯ ಶಿವಯೋಗಿವರ್ಯರು ದೇಹವನ್ನೇ ಪ್ರಯೋಗಶಾಲೆಯನ್ನಾಗಿ ಮಾಡಿ ವೀರ , ವೈರಾಗ್ಯ , ಸದ್ಭಕ್ತಿ , ಸತ್ಕ್ರಿಯೆ , ಸದಾಚಾರಗಳೆಂಬ ಸಾಧನ ಸಂಪತ್ತಿನಿಂದ ಸುಜ್ಞಾನದ ಫಲವನ್ನು ಪಡೆದರು . ಇಂತಹ ಮಹಾನುಭಾವರೆದುರು ವಿಜ್ಞಾನವಷ್ಟೇ ಏಕೆ ಸಮಸ್ತ ವಿಶ್ವವೂ ಮಣಿಯಬಲ್ಲದು ” ಎಂದು ವಿದ್ವಾನರಾದ ಡಾ . ಆರ್ . ಸಿ . ಹಿರೇಮಠರು ಅಥಣಿ ಶಿವಯೋಗಿಗಳ ಕುರಿತು ಉದ್ಗಾರವೆತ್ತಿದ್ದಾರೆ .

ಅಥಣಿ ಭೂಕೈಲಾಸವಾಯಿತು . ಶಿವಾನುಭವ ಸೌರವ್ಯೂಹದಲ್ಲಿ ಅನೇಕ ಗ್ರಹಗಳಿದ್ದಂತೆ ಶಿವಯೋಗಿಗಳ ಶಕ್ತಿಯ ಸುತ್ತ ತಿರುಗಿ ಆ ಕಿರಣ ಕಂಡು ಆನಂದಿಸಿದವರ ಸಂಖ್ಯೆ ಅಸಂಖ್ಯಾತವಾದುದು . ಇಂದಿಗೂ ಕರ್ತೃ ಗದ್ದುಗೆಗೆ ಭಕ್ತಿಯಿಂದ ಬಾಗಿದವನಿಗೆ ಬೇಡಿದ್ದನ್ನು ಕೊಡುವ ಕಾಮಧೇನು .

ಲೇಖಕರು : ಪ್ರಕಾಶ ಗಿರಿಮಲ್ಲನವರ

ಮಡಿವಾಳ ತಂದೆಗಳ ಬಟ್ಟೆಗಳ ನಾನೊಗೆವೆ

ಹಡಪದಪ್ಪಣ್ಣಗಳ ಕ್ಷೌರವನು ನಾಗೈವೆ

ಡೋಹರ ಕಕ್ಕಯ್ಯಂಗೆ ತೊಗಲ ಹದ ಮಾಡುವೆ

ವೀರ ಹರಳೇಶಂಗೆ ಜೋಡ ನಾ ಮಾಡಿಡುವೆ

ಮಾರಯ್ಯ ತಂದೆಗಳ ಕಟ್ಟಿಗೆಯ ನಾ ಹೊರುವೆ

ಧೀರ ಕೇತಯ್ಯಗಳ ಬುಟ್ಟಿಯನು ನಾ ಮಾಳ್ಪೆ

ನುಲಿಯ ಚಂದಯ್ಯಗಳ ಹಗ್ಗ ಕಣಿಯಗೈವೆ

ಸಲೆ ಮಾದಾರ ಚೆನ್ನಂಗಳಂಬಲಿಯ ಮಾಡಿಡುವೆ

ಶಿವದಾಸಮಯ್ಯಗಳ ಬಟ್ಟೆಗಳ ನಾ ಮಾಳ್ಪೆ

ತವೆ ಶಂಕರಯ್ಯಗಳ ಕಪನಿಯನು ನಾ ಹೊಲಿವೆ

ಅಮುಗೆ ಸಿದ್ಧೇಶಂಗೆ ಪಾಕವನು ನಾಗೈವೆ

ಕುಂಬಾರ ಗುಂಡಯ್ಯ ನಾಂ ಮಡಿಕೆಯಂಗೈವೆ

ಸಂಭ್ರಮದಿ ಪ್ರಭುವಿಂಗೆ ಮದ್ದಳೆಯ ಬಾರಿಸುವೆ

ಆವಾವ ಕಾಯಕವ ಮಾಡಿದೊಡು ಬಸವೇಶ

ಆವಗಂ ಶರಣರು ಸೇವಿಪೆನು ಬಸವೇಶ

-ಅಥಣಿ ಶಿವಯೋಗಿಗಳು

               ಇದು ಶ್ರೀಮದಥಣಿ ಮುರುಘೇಂದ್ರ ಶಿವಯೋಗಿಗಳು ರಚಿಸಿದ ಪದ್ಯ. ಈ ಪದ್ಯವನ್ನು ಸಿದ್ಧಗಂಗಾಮಠದ ಲಿಂ. ಪೂಜ್ಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳು ಪ್ರತಿನಿತ್ಯ ಬೆಳಗಿನ ಲಿಂಗಪೂಜಾ ಸಮಯದಲ್ಲಿ ಈ ಹಾಡನ್ನು ಹಾಡುತ್ತಿದ್ದರು. ತಮ್ಮ ಶ್ರೀಮಠದ ಸಿದ್ಧಗಂಗಾ ಮಾಸಪತ್ರಿಕೆಯ ಪ್ರಾರಂಭದ ಪುಟದಲ್ಲಿ ‘ಆವಾವ ಕಾಯಕವ ಮಾಡಿದಡೆಯೂ ಬಸವೇಶ | ಆವಗಂ ಶರಣರನು ಸೇವಿಪೆನು ಬಸವೇಶ’ ಎಂಬ ಶಿವಯೋಗಿಗಳ ಹಾಡಿನ ಸಾಲನ್ನು ಘೋಷವಾಕ್ಯವಾಗಿ ಪ್ರಕಟಿಸುತ್ತ ಬಂದಿರುವುದು ಗಮನಾರ್ಹ ಸಂಗತಿ.

               12ನೇ ಶತಮಾನದ ಬಸವಾದಿ ಶಿವಶರಣರ ಆಶಯಗಳನ್ನು ಅಕ್ಷರಶಃ ಅನುಷ್ಠಾನಕ್ಕೆ ತಂದು, ಅವುಗಳಿಗೆ ಜೀವಂತಿಕೆ ಕೊಟ್ಟ ಪ್ರಾತಃಸ್ಮರಣೀಯರಲ್ಲಿ ಶ್ರೀ ಮುರುಘೇಂದ್ರ ಶಿವಯೋಗಿಗಳು ಅಗ್ರಗಣ್ಯರು. ಶಿವಯೋಗಿಗಳಿಂದ ಅಥಣಿ ಭೂಕೈಲಾಸವೆನಿಸಿತು, ತಪೋಭೂಮಿಯೆನಿಸಿತು. ಅಭಿನವ ಕಾಶಿ, ದಕ್ಷಿಣದ ಕಾಶಿ ಎನಿಸಿತು. ಶ್ರೀ ಮುರುಘೇಂದ್ರ ಶಿವಯೋಗಿಗಳು ನಡೆದಾಡುವ ದೇವರು, ಸುಳಿದಾಡುವ ಧರ್ಮ ಎಂದು ಜನಮಾನಸದಲ್ಲಿ ಖ್ಯಾತರಾಗಿದ್ದರು. ಇಂಥ ಶಿವಯೋಗಿಗಳನ್ನು ನೆನೆಯುವುದೇ ಈ ಸಮಾಜಕ್ಕೆ ಉದಯ, ಅವರನ್ನು ಮರೆಯುವುದೇ ಅಸ್ತಮಾನ!

               ಅಥಣಿ ತಾಲೂಕಿನ ಕೃಷ್ಣಾನದಿ ತೀರದಲ್ಲಿರುವ ‘ಇಂಗಳಗಾಂವಿ’ ಗ್ರಾಮದ ಭಾಗೋಜಿಮಠದ ಶ್ರೀ ರಾಚಯ್ಯ-ನೀಲಮ್ಮ ದಂಪತಿಗಳ  ಪುತ್ರರಾಗಿ ಮುರುಘೇಂದ್ರ ಶಿವಯೋಗಿಗಳು ಶಾಲಿವಾಹನ ಶಕೆ 1758 ದುರ್ಮುಖಿ ನಾಮ ಸಂವತ್ಸರದ ವೈಶಾಖ ಶುದ್ಧ 11ನೇ ಶುಭೋದಯದಂದು (ಕ್ರಿ.ಶ.1836) ಜನಿಸಿದರು. ರಾಚಯ್ಯನವರ ಧರ್ಮಪತ್ನಿ ನೀಲಮ್ಮನವರ ತವರು ಮನೆ ಜಮಖಂಡಿ ತಾಲೂಕಿನ ಮೈಗೂರು ಹಿರೇಮಠ. ಈ ಮೈಗೂರು ಹಿರೇಮಠದ ಮನೆತನದಲ್ಲಿ ಜನಿಸಿದ ಐದು ಜನ ವ್ಯಕ್ತಿಗಳು ಅಥಣಿ ಮೋಟಗಿಮಠದ ಅಧಿಪತಿಗಳಾಗಿದ್ದು ಒಂದು ಸುಯೋಗ. ರಾಚಯ್ಯ-ನೀಲಮ್ಮ ದಂಪತಿಗಳಿಗೆ ಒಟ್ಟು ಐದು ಜನ ಗಂಡು ಮಕ್ಕಳು. ಅವರಲ್ಲಿ ಮೂರನೆಯವರೇ ಶಿವಯೋಗಿಗಳು. ಹುಟ್ಟಿದಾಗ ‘ಗುರುಲಿಂಗಯ್ಯ’ ಎಂದು ನಾಮಕರಣ ಮಾಡಿದರು. ಶಿವನ ತೇಜವೇ ಭೂಮಿಗಿಳಿದಂತಿದ್ದ ಗುರುಲಿಂಗಯ್ಯನವರು ಬಾಲ್ಯದಲ್ಲಿಯೇ ಧಾರ್ಮಿಕ ಸಂಸ್ಕಾರದ ಜಗತ್ತಿನಲ್ಲಿ ಬೆಳೆದರು.

               ಗುರುಲಿಂಗಯ್ಯನವರು ಏಳುವರ್ಷದವರಿದ್ದಾಗ ಅಥಣಿ ಮೋಟಗಿಮಠದ ಶ್ರೀಗಳು ಇವರನ್ನು ಶ್ರೀಮಠಕ್ಕೆ ಒಪ್ಪಿಸಿರಿ ಎಂದು ರಾಚಯ್ಯನವರಿಗೆ ಹೇಳಿದರು. ಕ್ರಿ.ಶ.  1843 ರಲ್ಲಿ ಗುರುಲಿಂಗಯ್ಯನವರು ಅಥಣಿ ಗಚ್ಚಿನಮಠದ ಎರಡನೆಯ ಶ್ರೀ ಮರುಳಶಂಕರ ಮಹಾಸ್ವಾಮಿಗಳ ಸನ್ನಿಧಾನಕ್ಕೆ ಬಂದರು.

               ಗಚ್ಚಿನಮಠದಲ್ಲಿಯೇ ಇದ್ದುಕೊಂಡು ಗುರುಲಿಂಗಯ್ಯನವರು ವಿದ್ಯಾರ್ಜನೆ ಮಾಡತೊಡಗಿದರು. ಮರುಳಶಂಕರ ಸ್ವಾಮಿಗಳು ಗುರುಲಿಂಗಯ್ಯನವರ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಇವರನ್ನು ಪರೀಕ್ಷೆ ಮಾಡಬೇಕೆಂಬ ಉದ್ದೇಶಕ್ಕಾಗಿ ಒಂದು ದಿನ ಕರೆದು ತೆಲಸಂಗಕ್ಕೆ ಹೋಗಿ ಅಲ್ಲಿಯ ಶಿವಬಸವ ದೇಶಿಕರ ಸೇವೆ ಮಾಡಲು ಅಪ್ಪಣೆ ನೀಡಿದರು. ತೆಲಸಂಗದ ಶಿವಬಸವ ದೇಶಿಕರು ಕುಷ್ಟರೋಗದಿಂದ ಬಳಲುತ್ತಿದ್ದರು. ಗುರುಲಿಂಗಯ್ಯನವರು ಗುರುಗಳ ಆಜ್ಞೆಯನ್ನು ಶಿರೋಧಾರೆಯೆಂದು ಭಾವಿಸಿ ತಕ್ಷಣ ತೆಲಸಂಗಕ್ಕೆ ಬಂದರು. ಕುಷ್ಟರೋಗದಿಂದ ಬಳಲುತ್ತಿದ್ದ ಗುರುಸ್ವರೂಪರಾದ ಶಿವಬಸವ ದೇಶಿಕರ ಸೇವೆಯನ್ನು ಮನಮುಟ್ಟಿ ಮಾಡಿದರು. ಅವರಿಗೆ ಸ್ನಾನಪೂಜಾದಿ ವ್ಯವಸ್ಥೆ ಜೊತೆಗೆ ಸರಿಯಾದ ಔಷಧೋಪಚಾರ ಮಾಡಿದರು. ಕೆಲವೇ ದಿನಗಳಲ್ಲಿ ಶಿವಬಸವ ದೇಶಿಕರ ಕುಷ್ಟರೋಗ ಕಡಿಮೆಯಾಗಿ ಮೊದಲಿನಂತಾದರು. ಈ ವಿಷಯ ತಿಳಿದ ಗಚ್ಚಿನಮಠದ ಮರುಳಶಂಕರ ಸ್ವಾಮಿಗಳು ಮನದಲ್ಲಿ ಸಂತೋಷಪಟ್ಟರು. ತಮ್ಮ ಶಿಷ್ಯ ಗುರುಲಿಂಗಯ್ಯ ‘ಸೇವಾಜೀವಿ’ ಎಂಬುದನ್ನು ಮನಗಂಡರು. ನಂತರ ಗುರುಲಿಂಗಯ್ಯನವರು ಇನ್ನಷ್ಟು ಅಧ್ಯಯನ ಮಾಡಬೇಕೆಂದು ಮಮದಾಪುರ ಗ್ರಾಮಕ್ಕೆ ಬಂದರು. ಅಷ್ಟರಲ್ಲಿ ಗುರುಗಳೂ ಮಾರ್ಗದರ್ಶಕರೂ ಆದ ಪೂಜ್ಯ ಶ್ರೀ ಮರುಳಶಂಕರ ಸ್ವಾಮಿಗಳು ಲಿಂಗೈಕ್ಯರಾದ ವಿಷಯ ತಿಳಿದು ಅಥಣಿಗೆ ಧಾವಿಸಿ ಬಂದರು. ಗುರುಗಳನ್ನು ಸ್ಮರಿಸಿಕೊಂಡು ದುಃಖಿತರಾದರು. ಇದೇ ಸಂದರ್ಭದಲ್ಲಿ ಗಚ್ಚಿನಮಠದ ಪೀಠಾಧಿಪತಿಗಳಾಗಿ ಎರಡನೆಯ ಗುರುಶಾಂತ ಸ್ವಾಮಿಗಳು ಪೀಠಾರೋಹಣಗೈದರು. ಗುರುಲಿಂಗಯ್ಯನವರು ಗುರುಶಾಂತ ಶ್ರೀಗಳ ಹತ್ತಿರ ಬಂದು ತಮಗೆ ಅನುಗ್ರಹ ದೀಕ್ಷೆ ದಯಪಾಲಿಸಬೇಕೆಂದು ವಿನಂತಿಸಿಕೊಂಡರು. ಗುರುಶಾಂತ ಸ್ವಾಮಿಗಳು ಗುರುಲಿಂಗಯ್ಯನವರಿಗೆ ನಿರಂಜನ ದೀಕ್ಷೆ ನೀಡಿ ಪರಶಿವನ ಮಗನಾದ ಮುರುಘನ್ ಹೆಸರಿನ ನೆನಪಿಗಾಗಿ ‘ಮುರುಘೇಂದ್ರ’ ಎಂದು ನಾಮಕರಣ ಮಾಡಿದರು. ಗುರುಲಿಂಗಯ್ಯ ಎಂಬ ಪೂರ್ವಾಶ್ರಮದ ಹೆಸರು ಮಾಯವಾಗಿ, ಈಗ ‘ಮುರುಘೇಂದ್ರ ಎಂಬ ನಾಮದಿಂದ ಬೆಳಗತೊಡಗಿದರು.

ಲೋಕಸಂಚಾರ

               ಪೂಜ್ಯ ಶ್ರೀ ಗುರುಶಾಂತ ಸ್ವಾಮಿಗಳಿಂದ ಶಿವಯೋಗದೀಕ್ಷೆ ಸಂಪಾದಿಸಿದ ಮುರುಘೇಂದ್ರ ಶ್ರೀಗಳು ಕ್ರಿ.ಶ. 1856ರಲ್ಲಿ ಲೋಕಸಂಚಾರ ಕೈಕೊಂಡರು. ‘ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ’ ಎಂಬಂತೆ ಲೋಕಾನುಭವ ಪಡೆಯಲು ಜಗವ ಸುತ್ತಲು ಪ್ರಾರಂಭಿಸಿದರು. ದೇಶದ ಪವಿತ್ರ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ ಬಂದರು. ಕೂಡಲಸಂಗಮ, ಹಂಪಿ, ಶ್ರೀಶೈಲ, ಕಾಳಹಸ್ತಿ, ಬಸವಕಲ್ಯಾಣ, ಸೊಲ್ಲಾಪುರ, ಹರಿಹರ, ದಾವಣೆಗೆರೆ, ಚಿತ್ರದುರ್ಗ, ಗವಿಪುರ, ಶಂಭುಲಿಂಗನ ಬೆಟ್ಟ, ತಲಕಾಡು, ಗೋಕರ್ಣ, ಉಳವಿ, ಬನವಾಸಿ, ಕಂಚಿ, ರಾಮೇಶ್ವರ ಮೊದಲಾದ ಕ್ಷೇತ್ರಗಳಲ್ಲಿ ಸತತ 12 ವರ್ಷಗಳ ಕಾಲ ಸಂಚರಿಸಿದರು. ಪೂಜ್ಯ ಶಿವಯೋಗಿಗಳು ಸಮಸ್ತ ದಕ್ಷಿಣ ಭಾರತವನ್ನು ಸುತ್ತಿದರು.

ಪೀಠತ್ಯಾಗ

               ಶ್ರೀ ಮುರುಘೇಂದ್ರ ಶಿವಯೋಗಿಗಳು ಸತತ 12 ವರುಷಗಳ ಕಾಲ ಲೋಕಸಂಚಾರ ಮಾಡಿ ತಿರುಗಿ ಅಥಣಿ ಗಚ್ಚಿನಮಠಕ್ಕೆ ಬರುವಷ್ಟರಲ್ಲಿ ಪೂಜ್ಯ ಶ್ರೀ ಗುರುಶಾಂತ ಸ್ವಾಮಿಗಳು ಲಿಂಗೈಕ್ಯರಾಗಿದ್ದರು. ಮೂರನೆಯ ಚನ್ನಬಸವ ಸ್ವಾಮಿಗಳು ಗಚ್ಚಿನಮಠದ ಅಧಿಕಾರ ಸೂತ್ರ ಹಿಡಿದುಕೊಂಡಿದ್ದರು. ಮುರುಘೇಂದ್ರ ಶ್ರೀಗಳು ಚನ್ನಬಸವ ಸ್ವಾಮಿಗಳನ್ನು ಭೇಟಿ ಮಾಡಿದರು. ಆಗಲೇ ವಯೋವೃದ್ಧರಾಗಿದ್ದ ಪೂಜ್ಯ ಶ್ರೀ ಚನ್ನಬಸವ ಸ್ವಾಮಿಗಳು ಮುರುಘೇಂದ್ರ ಶ್ರೀಗಳಿಗೆ ‘ನೀವು ಗಚ್ಚಿನಮಠದ ಪೀಠಾಧಿಪತ್ಯ ವಹಿಸಿಕೊಳ್ಳಬೇಕೆಂದು’ ಹೇಳಿದರು.  ಆದರೆ ಮಠಾಧಿಪತ್ಯ ಸ್ವೀಕರಿಸುವ ಯಾವ ವಾಂಛೆಯು ಮುರುಘೇಂದ್ರ ಶ್ರೀಗಳಲ್ಲಿ ಇರಲಿಲ್ಲ. ಅದಕ್ಕಾಗಿ ಗುಹೇಶ್ವರ ಗುಹೆಯಲ್ಲಿ ತಪೋನುಷ್ಠಾನ ಮಾಡಲು ನಿರ್ಧರಿಸಿದರು. ನಲವತ್ತು ವಯಸ್ಸಿನ ಮುರುಘೇಂದ್ರ ಶ್ರೀಗಳಲ್ಲಿ  ‘ಮಠಾಧಿಪತ್ಯ ಸ್ವೀಕರಿಸಲು’ ಮತ್ತೊಮ್ಮೆ ಚನ್ನಬಸವ ಸ್ವಾಮಿಗಳು ವಿನಂತಿಸಿಕೊಂಡರು. ಆದರೆ ಶಿವಯೋಗಾನಂದದಲ್ಲಿ ಸಮರಸ ಸ್ಥಿತಿಯನ್ನು ಅನುಭವಿಸುತ್ತಿದ್ದ ಮುರುಘೇಂದ್ರ ಶ್ರೀಗಳಿಗೆ ಪೀಠದ ಯಾವುದೇ ಅಧಿಕಾರ ಬೇಕಾಗಿರಲಿಲ್ಲ. ತಾವು ಇಷ್ಟಲಿಂಗಪೂಜೆ-ಶಿವಯೋಗ ಸಾಧನೆಯಲ್ಲಿ ಕಾಲಕಳೆಯುತ್ತೇವೆ. ನನ್ನ ಬದಲಾಗಿ ಸಿದ್ಧಲಿಂಗ ಚರವರೇಣ್ಯರನ್ನು ಮಠಾಧಿಕಾರಿಗಳನ್ನಾಗಿ ಮಾಡಿ ಎಂದು ಚನ್ನಬಸವ ಶ್ರೀಗಳಲ್ಲಿ ವಿನಂತಿಸಿಕೊಂಡರು. ಭಕ್ತ ಸಮುದಾಯದ ಶ್ರೀ ಸಿದ್ಧಲಿಂಗ ಚರವರೇಣ್ಯರು ಗಚ್ಚಿನಮಠದ ಅಧಿಪತಿಗಳಾಗಿ ನಿಯುಕ್ತಿಯಾದರು. ಶಿವಯೋಗಿಗಳು ನಿರಾಳರಾದರು.

ಬಸವ ಪ್ರಜ್ಞೆಯ ಸಾಕಾರ ಮೂರ್ತಿ

               ಶ್ರೀ ಮುರುಘೇಂದ್ರ ಶಿವಯೋಗಿಗಳು ಬಸವಣ್ಣನವರ ವಚನಗಳನ್ನು ಪ್ರತಿನಿತ್ಯ ಚಿಂತನೆಗೈಯುತ್ತಿದ್ದರು. ‘ಅಪ್ಪನ ವಚನಗಳೆಂದು’ ಗೌರವದಿಂದ ಕಾಣುತ್ತಿದ್ದರು. ಸದಾಕಾಲ ತಮ್ಮ ಜೊತೆಯಲ್ಲಿ ವಚನ ಕಟ್ಟುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಒಮ್ಮೆ ಒಬ್ಬ ಕಾಶಿ ಪಂಡಿತ ಶಿವಯೋಗಿಗಳ ಹತ್ತಿರ ಬಂದು ‘ತಾನೊಂದು ಬೃಹತ್ ಧಾರ್ಮಿಕ ಗ್ರಂಥ ರಚಿಸಿರುವೆ, ಅದನ್ನು ತಾವು ಓದಬೇಕೆಂದು’ ಶಿವಯೋಗಿಗಳಲ್ಲಿ ವಿನಂತಿಸಿಕೊಂಡ. ಆಗ ಶಿವಯೋಗಿಗಳು ತಾವು ಈಗಾಗಲೇ ಒಂದು ಗ್ರಂಥವನ್ನು ಓದುತ್ತಿರುವೆ ಅದಕ್ಕಾಗಿ ನಿಮ್ಮ ಗ್ರಂಥ ಓದಲು ಸಮಯವಿಲ್ಲ ಎನ್ನುತ್ತಾರೆ. ಆಗ ಆ ಪಂಡಿತ, ಇದನ್ನು ನಿಮ್ಮ ಹತ್ತಿರವೇ ಇಟ್ಟು ಹೋಗುವೆ, ತಾವು ಆ ಗ್ರಂಥ ಓದಿ ಮುಗಿಸಿದ ನಂತರ ಓದಿರಿ ಎನ್ನುತ್ತಾನೆ. ಆಗ ಶಿವಯೋಗಿಗಳು ‘ಅದು ಜೀವನಪರ್ಯಂತ ಓದುವ ಪುಸ್ತಕ’ ಎನ್ನುತ್ತಾರೆ. ಅಂಥ ಕೃತಿ ಯಾವುದು? ಎಂದು ಪಂಡಿತ ಆಶ್ಚರ್ಯದಿಂದ ಕೇಳುತ್ತಾನೆ. ಆಗ ಶಿವಯೋಗಿಗಳು ‘ಅದು ಅಪ್ಪನ ವಚನಗಳ ಕಟ್ಟು. ಬಸವಣ್ಣನವರ ವಚನಗಳ ಕಟ್ಟು. ಅವುಗಳನ್ನು ಓದುವುದೇ ನಮ್ಮ ಬದುಕಿನ ಬಹುದೊಡ್ಡ ಕರ್ತವ್ಯ. ಅದನ್ನು ಓದಿ ಅದರಲ್ಲಿಯ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಕ್ಷರಶಃ ಅನುಷ್ಠಾನಕ್ಕೆ ತಂದು, ಆಚರಿಸಲು ಈ ಜನ್ಮ ಸಾಕಾಗಲ್ಲ, ಅದಕ್ಕಾಗಿ ನಿಮ್ಮ ಕೃತಿ ಓದಲು ನಮಗೆ ಸಮಯವಿಲ್ಲ, ದಯವಿಟ್ಟು ತೆಗೆದುಕೊಂಡು ಹೋಗಿ’ ಎಂದು ಹೇಳುತ್ತಾರೆ. ಬಸವಣ್ಣನವರ ವಚನಗಳೆಂದರೆ ತಮ್ಮ ಪ್ರಾಣವೆಂದು ಶಿವಯೋಗಿಗಳು ಭಾವಿಸುತ್ತಾರೆ.

               ಹಳ್ಳಿ ಜನರಲ್ಲಿ ಆಗ ಇನ್ನೂ ವಚನಗಳು ಅಷ್ಟು ಪ್ರಚಾರದಲ್ಲಿ ಇರಲಿಲ್ಲ. ಆದರೆ ಅವರಲ್ಲಿ ಬಸವಣ್ಣನವರ ಕುರಿತು ಭಕ್ತಿ ಭಾವ ಮೂಡಿಸಬೇಕೆಂದು ಶಿವಯೋಗಿಗಳು ನೂರಾರು ಹಳ್ಳಿಗಳಲ್ಲಿ ‘ಬಸವ ಪುರಾಣ’ ಏರ್ಪಡಿಸುತ್ತಾರೆ. 1884ರಲ್ಲಿ ಒಮ್ಮೆ ತೇರದಾಳದ ಪ್ರಭುದೇವರ ದೇವಸ್ಥಾನದಲ್ಲಿ ಒಂಬತ್ತು ತಿಂಗಳವರೆಗೆ ಬಸವಪುರಾಣ  ಆಯೋಜಿಸುತ್ತಾರೆ. ಬಾಗಲಕೋಟೆಯ ವೈರಾಗ್ಯದ ಮಲ್ಲಣಾರ್ಯರು  ಬಸವ ಪುರಾಣ ಹೇಳುವಲ್ಲಿ ಅಪ್ರತಿಮ ಪಾಂಡಿತ್ಯವುಳ್ಳವರು. ಅವರನ್ನು ಅಥಣಿಗೆ ಕರೆಯಿಸಿಕೊಂಡು, ಅವರಿಂದ ಅನೇಕ ಕಡೆ ಬಸವ ಪುರಾಣ ನೆರವೇರುವಂತೆ ಮಾಡುತ್ತಾರೆ. ಇದು ಸಾಮಾನ್ಯ ಜನರಲ್ಲಿ ಬಸವ ಪ್ರಜ್ಞೆಯನ್ನು ಶಿವಯೋಗಿಗಳು ಜಾಗೃತಗೊಳಿಸಿದ ಪರಿ.

ಹಾನಗಲ್ಲ ಗುರು ಕುಮಾರ ಶಿವಯೋಗಿಗಳಿಗೆ ಪ್ರೇರಣೆ

               ಕ್ರಿ.ಶ. 1903ರಲ್ಲಿ ಸವದತ್ತಿಯಲ್ಲಿ ಮೂರು ತಿಂಗಳ ಕಾಲ ಬಸವ ಪುರಾಣ ನೆರವೇರಿತು. ಈ ಪುರಾಣ ಮಂಗಲೋತ್ಸವಕ್ಕೆ ಅಥಣಿ ಶಿವಯೋಗಿಗಳು ದಯಮಾಡಿಸಿದ್ದರು. ಇದೇ ಸಂದರ್ಭದಲ್ಲಿ ಅನೇಕ ಹರಗುರು ಚರಮೂರ್ತಿಗಳು ಆಗಮಿಸಿದ್ದರು. ಅವರಲ್ಲಿ ಹಾನಗಲ್ಲ ಗುರು ಕುಮಾರ ಶಿವಯೋಗಿಗಳು ಒಬ್ಬರು. ಹಾನಗಲ್ಲ ಕುಮಾರ ಶಿವಯೋಗಿಗಳಿಗೆ ಈ ಸಮಾಜವನ್ನು ಹೇಗಾದರೂ ಮುಂದೆ ತರಬೇಕೆಂಬ ಬಲವಾದ ಬಯಕೆ. ಈ ಬಯಕೆಯನ್ನು ಶಿವಯೋಗಿಗಳಲ್ಲಿ ವಿನಂತಿಸಿಕೊಂಡರು. ಆ ಕಾಲದಲ್ಲಿದ್ದ ಸಮಯಭೇದಗಳು ಅಳಿಯಬೇಕು. ಸ್ವಾಮಿಗಳಲ್ಲಿ ಮೊದಲು ಏಕತೆ ಮೂಡಬೇಕು. ಈ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಲು ವಿನಂತಿಸಿಕೊಂಡರು. ಅಖಿಲ ಭಾರತ ವೀರಶೈವ ಮಹಾಸಭೆ ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರುವ ಆಲೋಚನೆಯೂ ಈ ಸಂದರ್ಭದಲ್ಲಿ ಮೂಡಿತು ಎನ್ನುವುದು ಸಮಸ್ತ ಸಮಾಜ ಬಾಂಧವರು ಅಭಿಮಾನ ಪಡುವ ಸಂಗತಿಯಾಗಿದೆ. ಅಥಣಿ ಶಿವಯೋಗಿಗಳ ಮಾರ್ಗದರ್ಶನದಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳು ಮಹಾಸಭೆಯ ಸ್ಥಾಪನೆಗೆ ರೂಪರೇಷೆಗಳನ್ನು ಸಿದ್ಧಪಡಿಸಿದರು. ಸಮಯಭೇದ ನಿವಾರಣೆಯಲ್ಲಿ ಉಭಯ ಪೂಜ್ಯರು ಅಹರ್ನಿಶಿ ಶ್ರಮಿಸಿದರು. ಅಥಣಿ ಶಿವಯೋಗಿಗಳು ಲಿಂಗೈಕ್ಯರಾದ ನಂತರ ಶ್ರೀ ಕುಮಾರ ಶಿವಯೋಗಿಗಳು ಅಥಣಿಗೆ ಧಾವಿಸಿ ಬಂದರು. ಶಿವಯೋಗಿಗಳ ಕರ್ತೃಗದ್ದುಗೆ ಮುಂದೆ ನಿಂತು ಭಾವಪರವಶರಾಗಿ ಮಂಗಳಾರತಿ ಹಾಡಿದರು. ಸ್ವತಃ ಕುಮಾರ ಶಿವಯೋಗಿಗಳೇ ರಚಿಸಿದ ಆ ಪದ್ಯ ಹೃದಯಸ್ಪರ್ಶಿಯಾಗಿದೆ. 

ಮಂಗಳಾರತಿ ದೇವಗೆ ಶಿವಯೋಗಿಗೆ

ಕಂಗಳಾಲಯ ಸಂಗಗೆ

ಜಂಗಮ ಲಿಂಗ ಭೇದದ ಸ್ವಯಚರಪರ

ದಿಂಗಿತವರುಪಿದಂತಾಚರಿಸಿದ ಮಹಿಮಗೆ                  ||ಪ||

ಒಂದೆ ಮಠದಿ ವಾಸಿಸಿ ಸದ್ಭಕ್ತಿಯಿಂ

ಬಂದ ಬಂದವರನು ಬೋಧಿಸಿ

ನಿಂದು ಏಕಾಂತದಾನಂದದ ಯೋಗದ

ಚೆಂದವನರಿದನುಷ್ಠಾನಿಪ ಶಿವಸ್ವಯಗೆ                      ||1||

ಚರಿಸಿ ಭಕ್ತರ ಭಕ್ತಿಯ ಕೈಕೊಳ್ಳುತ್ತ

ಭರದಿ ಪರತರ ಬೋಧೆಯ-

ನಿರದೆ ಬೋಧಿಸಿ ಶಿಷ್ಯ ಭಕ್ತರನುದ್ಧರಿಸಿ

ಚರತಿಂಥಿಣಿಯೊಳಾಡಿ ಗುರುವೆನಿಪ ಚರವರಗೆ              ||2||

ಪಾಪಪುಣ್ಯಗಳ ಮೀರಿ ಸ್ವಾತಂತ್ರ್ಯದಿ

ಕೋಪಾದಿ ಗುಣವ ತೂರಿ

ತಾಪಗೊಳ್ಳದೆ ಜಗಜ್ಜಾಲವ ಧಿಕ್ಕರಿಸಿ

ಕಾಪಟ್ಯವಳಿದು ಶಿವ ತಾನಹ ಪರತರಗೆ                    ||3||

ಅಷ್ಟಾವರಣವ ಸಾಧಿಸಿ ಸದ್ಭಕ್ತಿಯಿಂ

ಶಿಷ್ಟ ಚರವರನೆನಿಸಿ

ಶ್ರೇಷ್ಠ ಪ್ರಮಥನಾಮ ಪ್ರೇಮದಿಂದುಚ್ಚರಿಸಿ

ಕಷ್ಟತರದ ಮಾಯೆಯನು ಗೆಲಿದ ಯತಿವರಗೆ               ||4||

ಸಚ್ಚಿದಾನಂದವೆನಿಪ ಅಥಣೀಪುರಿ

ಗಚ್ಚಿನಮಠ ಮಂಟಪ

ಅಚ್ಚರಿಗೊಳಿಪ ಷಟ್‍ಸ್ಥಲ ಬ್ರಹ್ಮಿವಾಸದಿಂ

ಬಿಚ್ಚಿ ಬೇರೆನಿಸದ ಮುರುಘ ಶಿವಯೋಗಿಗೆ                  ||5||

               ಪೂಜ್ಯ ಶ್ರೀ ಕುಮಾರ ಶಿವಯೋಗಿಗಳ ದೃಷ್ಟಿಯಲ್ಲಿ ಅಥಣಿ ಮುರುಘೇಂದ್ರ ಶಿವಯೋಗಿಗಳು ಸ್ವಯ ಜಂಗಮ, ಚರ ಜಂಗಮ, ಪರ ಜಂಗಮ ಮೂರೂ ಬಗೆಯ ಜಂಗಮ ಅವಸ್ಥೆಯನ್ನು ತಲುಪಿದ ಮಹಾ ಶಿವಯೋಗಿಗಳು ಎಂಬುದನ್ನು ಮೇಲಿನ ಮಂಗಳಾರತಿ ಪದ್ಯದಲ್ಲಿ ಕಾಣಬಹುದಾಗಿದೆ.

ಮೃತ್ಯುಂಜಯ ಅಪ್ಪಗಳಿಗೆ ಮಾರ್ಗದರ್ಶನ

               ಧಾರವಾಡ ಮುರುಘಾಮಠದ ಪೀಠಾಧಿಪತಿಗಳಾಗಿದ್ದ ಪೂಜ್ಯ ಶ್ರೀ ಮೃತ್ಯುಂಜಯ ಅಪ್ಪಗಳು ಶಿವಯೋಗಿಗಳ ಆಶೀರ್ವಾದಿಂದ  ಬೆಳೆದವರು. ಬಾಲ್ಯದಲ್ಲಿ ಒಮ್ಮೆ ಅಂಕಲಗಿ ಅಡವಿ ಸ್ವಾಮಿಗಳ ಹತ್ತಿರ ಬಂದು ‘ತಾವು ಹೆಚ್ಚಿನ ಅಧ್ಯಯನಕ್ಕೆ ಕಾಶಿಗೆ ಹೋಗಬೇಕು, ಆಶೀರ್ವದಿಸಿ’ ಎಂದು ಕೇಳಿಕೊಂಡರು. ಆಗ ಅಂಕಲಗಿ ಅಡವಿ ಸ್ವಾಮಿಗಳು ‘ನಿನಗೆ ಮಾತನಾಡುವ ಕಾಶಿ ವಿಶ್ವನಾಥ ಬೇಕೋ, ಮಾತನಾಡದ ವಿಶ್ವನಾಥ ಬೇಕೋ?’ ಎಂದು ಕೇಳಿದರು. ಆಗ ಮೃತ್ಯುಂಜಯ ಅಪ್ಪಗಳು ‘ನನಗೆ ಮಾತನಾಡುವ ದೇವರು ಬೇಕು’ ಎಂದರು. ಅಂಕಲಗಿ ಅಡಿವೆಪ್ಪನವರು ‘ನೀನು ಕಾಶಿಗೆ ಹೋಗುವ ಬದಲು, ಅಥಣಿಗೆ ಹೋಗು, ಅಲ್ಲಿ ಮುರುಘೇಂದ್ರ ಶಿವಯೋಗಿಗಳು ಕಾಶಿ ವಿಶ್ವನಾಥನ ಪ್ರತಿರೂಪವೇ ಆಗಿದ್ದಾರೆ. ಅವರ ಆಶೀರ್ವಾದ ಪಡೆದುಕೊ’ ಎಂದು ಹೇಳಿದರು. ಮೃತ್ಯುಂಜಯ ಅಪ್ಪಗಳು ನೇರವಾಗಿ ಅಥಣಿಗೆ ಬಂದು, ಗಚ್ಚಿನಮಠದಲ್ಲಿ ಸೇವೆ ಮಾಡತೊಡಗಿದರು. ಇವರ ಸೇವೆಯನ್ನು ಮೆಚ್ಚಿ ಶಿವಯೋಗಿಗಳು ತಮ್ಮ ಆಪ್ತ ವಲಯದಲ್ಲಿ ಸೇರಿಸಿಕೊಂಡರು. ಒಂದು ದಿನ ಮೃತ್ಯುಂಜಯ ಅಪ್ಪಗಳು ಒಂದು ರೂಪಾಯಿ ನಾಣ್ಯವನ್ನು ಶಿವಯೋಗಿಗಳು ಕೂಡ್ರುವ ಸ್ಥಾನದಲ್ಲಿ ಇಟ್ಟಿದ್ದರು. ಇದನ್ನು ಕಂಡು ಶಿವಯೋಗಿಗಳು ‘ಚೇಳು ಚೇಳು’ ಎಂದು ಕೂಗಿದರು. ಮೃತ್ಯುಂಜಯಪ್ಪಗಳು ಓಡಿ ಬಂದು, ಎಲ್ಲಿ ಚೇಳು ಎಂದು ಕೇಳಿದರು. ಆಗ ಶಿವಯೋಗಿಗಳು ಒಂದು ರೂಪಾಯಿ ನಾಣ್ಯ ತೋರಿಸಿ ಅದೇ ಚೇಳು ಎಂದರು. ಈ ಘಟನೆಯಿಂದ ವಿರಕ್ತನಾದವನು ಯಾವುದೇ ವಸ್ತು ವಿಷಯಗಳಿಗೆ ವ್ಯಾಮೋಹಗೊಳ್ಳಬಾರದೆಂದು ಮೃತ್ಯುಂಜಯ ಅಪ್ಪಗಳು ಅರಿತುಕೊಂಡರು. ನಂತರ ಧಾರವಾಡ ಮುರುಘಾಮಠದ ಪೀಠಾಧಿಪತಿಗಳಾಗಿ ಬಂದರು. ಮುರುಘಾಮಠದಿಂದ ಸಾಹಿತ್ಯ ಪ್ರಕಟಿಸುವ ಸಲುವಾಗಿ ಬಾಲಲೀಲಾ ಮಹಾಂತ ಶಿವಯೋಗಿ ಗ್ರಂಥಮಾಲೆ ಪ್ರಾರಂಭಿಸಿದರು. ಮುರುಘಾಮಠದಿಂದ ಪ್ರಕಟವಾಗುವ ಪ್ರತಿಯೊಂದು ಪುಸ್ತಕವನ್ನು ಅಥಣಿ ಮುರುಘೇಂದ್ರ ಶಿವಯೋಗಿಗಳಿಗೆ ಅರ್ಪಿಸಿದರು. ‘ತಾನು ಭೂಮಿಗವಸಾನಂ, ಭೂಮಿತನಗವಸಾನಂ ಎಂಬಂತೆ ಬಾಳಿ ಬದುಕಿದ ಮುರುಘೇಂದ್ರ ಶಿವಯೋಗಿಗಳ ಸನ್ನಿಧಾನಕ್ಕೆ’ ಎಂಬ ವಾಕ್ಯವನ್ನು ಪ್ರತಿ ಪುಸ್ತಕದಲ್ಲಿ ಮುದ್ರಿಸಿದರು. ಇದು ಮೃತ್ಯುಂಜಯ ಅಪ್ಪಗಳು ಶಿವಯೋಗಿಗಳ ಮೇಲಿಟ್ಟ ಭಕ್ತಿ ಶ್ರದ್ಧೆಗೆ ನಿದರ್ಶನ.

ಲೋಕಮಾನ್ಯರೊಂದಿಗೆ ಶಿವಯೋಗಿಗಳು

ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಎಂದು ಪ್ರತಿಪಾದಿಸಿದ ಲೋಕಮಾನ್ಯ ಬಾಲಗಂಗಾಧರ ತಿಲಕರು, ಕೇಸರಿ ಪತ್ರಿಕೆ ಮೂಲಕ ಭಾರತೀಯರಲ್ಲಿ ಸ್ವಾತಂತ್ರ್ಯದ ಅರಿವು ಮೂಡಿಸುತ್ತಿದ್ದರು. ಅವರೊಮ್ಮೆ ಶಿವಯೋಗಿಗಳ ದರ್ಶನ ಪಡೆಯಲು ಬಯಸಿದರು. ದಿನಾಂಕ 15-11-1917ರಂದು ಕಾರ್ತಿಕ ಮಾಸದ ಗುರುವಾರ ದಿನ ತಿಲಕರು ಅಥಣಿಗೆ ಆಗಮಿಸಿದರು. ವಿಭೂತಿ ಗಟ್ಟಿ, ಗಂಧದ ಕೊರಡು, ರುದ್ರಾಕ್ಷಿಮಾಲೆ ಮತ್ತು ಹಣ್ಣು ಹಂಪಲಗಳನ್ನು ಕಾಣಿಕೆಯಾಗಿ ಶಿವಯೋಗಿಗಳಿಗೆ ಅರ್ಪಿಸಿ, ಶಿರಬಾಗಿ ನಮಸ್ಕರಿಸಿದರು. ಉಭಯ ಮಹಾನುಭಾವರು ದೇಶದ ವಿಚಾರವಾಗಿ ಸುದೀರ್ಘವಾಗಿ ಚರ್ಚಿಸಿದರು. ಕೊನೆಗೆ ತಿಲಕರು ನಮಗೆ ಸ್ವಾತಂತ್ರ್ಯ ದೊರೆಯುವುದು ಯಾವಾಗ ಎಂದು ಕೇಳಿದರು. ಆಗ ಶಿವಯೋಗಿಗಳು ‘ಸ್ವಾತಂತ್ರ್ಯದ ಫಲವನ್ನು ಅನುಭವಿಸಲು ನಾವು ನೀವು ಇರುವುದಿಲ್ಲ. ನಾವು ಹಚ್ಚಿಟ್ಟ ಮರಗಳ ಫಲವನ್ನು ಮುಂದಿನ ಪೀಳಿಗೆಯವರು ಅನುಭವಿಸುತ್ತಾರೆ’ ಎಂದು ಮಾರ್ಮಿಕವಾಗಿ ನುಡಿದರು. ಮುಂದೆ ಶಿವಯೋಗಿಗಳ ಕೃಪಾಶೀರ್ವಾದದಂತೆ ದಿ. 1-8-1920ರಂದು ತಿಲಕರು ಮುಂಬೈಯಲ್ಲಿ ಪರಂಧಾಮ ಪಡೆದರು. ಶಿವಯೋಗಿಗಳ ವಾಣಿ ಸತ್ಯವಾಯಿತು. ಒಬ್ಬರು ರಾಜಕೀಯ ಪಟು, ಇನ್ನೊಬ್ಬರು ಅಧ್ಯಾತ್ಮದ ಮೇರು. ಇವರಿಬ್ಬರ ಸಮಾಗಮದಲ್ಲಿ ಭಾರತದ ಭವಿಷ್ಯವಾಣಿ ಅಡಗಿತ್ತು. ಶ್ರೀ ಶಿವಯೋಗಿಗಳ ಘನವ್ಯಕ್ತಿತ್ವವನ್ನು ಕುರಿತು ತಿಲಕರು ಗೀತೆಯೊಂದನ್ನು ಮರಾಠಿಯಲ್ಲಿ ರಚಿಸಿದರು. ಅದನ್ನು ನಲವಡಿ ಶ್ರೀಕಂಠಶಾಸ್ತ್ರಿಗಳು ಅನುವಾದಿಸಿದರು. ಪದ್ಯ ಹೀಗಿದೆ:

ನೋಡಿ ಧನ್ಯನಾದೆ ನಾನೀಗ

ನೋಡಿ ಪಾದವ ಮಾಡಿ ಸ್ತೋತ್ರವ

ಕೂಡಿ ಧ್ಯಾನದಿಂ ಬೇಡಿ ಮೋಕ್ಷವ                 ||1||

ತೂರಿ ಮಾಯಾ ಜಾಲವನ್ನು

ಹಾರಿ ನಿತ್ಯ ತತ್ವ ಸುಖಕ್ಕೆ

ಸೇರಿ ಬ್ರಹ್ಮವನ್ನು ಮೀರಿ ರಾರಾಜಿಪುದರಿಂದ     ||2||

ಭಾಸುರ ತನಯ ನಾಮ ಪತ್ತಣ

ವಾಸ ರುಚಿರ ಗಚ್ಚಿನಮಠ

ದೀಶ ಮುಕ್ತಿಕೋಶ ಮುರುಘೇಶನೆಂದು

ನೋಡಿ ಧನ್ಯನಾದೆ ನಾನೀಗ                     ||3||

ರಾಷ್ಟ್ರಧರ್ಮ ದ್ರಷ್ಟಾರ ಹರ್ಡೇಕರ ಮಂಜಪ್ಪನವರಿಗೆ ದೀಕ್ಷೆ

               ರಾಷ್ಟ್ರಧರ್ಮ ದ್ರಷ್ಟಾರ ಹರ್ಡೇಕರ ಮಂಜಪ್ಪನವರು ಕನ್ನಡದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸಿದ ಪ್ರಾತಃಸ್ಮರಣೀಯರಲ್ಲಿ ಒಬ್ಬರು. ಅವರು ದೇವದಾಸಿ ಮಗ ಎನ್ನುವ ಕಾರಣಕ್ಕೆ ಯಾರೂ ಲಿಂಗದೀಕ್ಷೆಯನ್ನು ಅವರಿಗೆ ನೀಡಿರಲಿಲ್ಲ. ಮಂಜಪ್ಪನವರು ಕೊನೆಗೆ ಅಥಣಿ ಶಿವಯೋಗಿಗಳಲ್ಲಿ ದೀಕ್ಷೆ ನೀಡಲು ವಿನಂತಿಸಿಕೊಂಡರು. ಬಸವಣ್ಣನವರ ವಚನಗಳನ್ನು ನಿತ್ಯ ಪಾರಾಯಣ ಮಾಡುತ್ತಿದ್ದ ಶಿವಯೋಗಿಗಳಿಗೆ ‘ದಾಸಿ ಪುತ್ರನಾಗಲಿ, ವೇಶ್ಯಾ ಪುತ್ರನಾಗಲಿ ಲಿಂಗದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ಪರಿಭಾವಿಸಬೇಕು’ ಎಂಬ ನುಡಿ ನೆನಪಿಗೆ ಬಂದಿತು. ಪ್ರೀತಿಯಿಂದ ಕರೆದು ಗಚ್ಚಿನಮಠದಲ್ಲಿ ಲಿಂಗದೀಕ್ಷೆಯನ್ನು ದಯಪಾಲಿಸಿದರು. ಮಂಜಪ್ಪನವರು ಶಿವಯೋಗಿಗಳಿಂದ ತುಂಬ ಪ್ರಭಾವಿತರಾಗಿ, ಶಿವಯೋಗಿಗಳನ್ನು ಕುರಿತು ‘ಪ್ರಥಮಾಚಾರ ದೀಪಿಕೆ’ ಎಂಬ ಪುಸ್ತಕವನ್ನು ರಚಿಸಿರುವುದು ಗಮನಾರ್ಹವಾದ ಸಂಗತಿಯಾಗಿದೆ.

ದಾನವೀರ ಶಿರಸಂಗಿ ಲಿಂಗರಾಜರಿಗೆ ಮಾರ್ಗದರ್ಶನ

               ಲಿಂಗಾಯತ ಸಮಾಜದಲ್ಲಿ ತ್ಯಾಗವೀರ ಎನಿಸಿಕೊಂಡ ಶಿರಸಂಗಿ ಲಿಂಗರಾಜರು ದೊಡ್ಡ ಸಂಸ್ಥಾನಿಕರು. ಅವರಿಗೆ ಮಕ್ಕಳಾಗಲಿಲ್ಲ. ಇದರಿಂದ ಮಾನಸಿಕವಾಗಿ ಬಹಳ ನೊಂದುಕೊಂಡರು. ಆಗ ಶಿವಯೋಗಿಗಳು ಲಿಂಗರಾಜರಿಗೆ ದರ್ಶನ ನೀಡಿ, ಮಕ್ಕಳಿಲ್ಲವೆಂದು ಕೊರಗದಿರಿ. ಸಮಾಜದ ಮಕ್ಕಳನ್ನೇ ನಿಮ್ಮ ಮಕ್ಕಳೆಂದು ಭಾವಿಸಿ, ಅವರ ಶಿಕ್ಷಣಕ್ಕಾಗಿ ನಿಮ್ಮ ಸಂಸ್ಥಾನ ಸದುಪಯೋಗವಾಗಲಿ ಎಂದು ಆಶೀರ್ವದಿಸಿದರು. ಶಿವಯೋಗಿಗಳ ಮಾತಿನಿಂದ ಪ್ರೇರಿತರಾಗಿ ಲಿಂಗರಾಜರು ತಮ್ಮ ಸಮಸ್ತ ಸಂಸ್ಥಾನವನ್ನು ಸಮಾಜಕ್ಕೆ ಮೀಸಲಿಟ್ಟರು ಎಂಬುದು ಈಗ ಇತಿಹಾಸ.

ಜಗದ್ಗುರುಗಳಿಗೆ ಆಶೀರ್ವಾದ

               ಪೂಜ್ಯ ಮುರುಘೇಂದ್ರ ಶಿವಯೋಗಿಗಳು ಯಾವುದೇ ಮಠದ ಅಧಿಪತಿಯಾಗಲಿಲ್ಲ. ಆದರೆ ಯೋಗ್ಯಮಠಕ್ಕೆ ಯೋಗ್ಯ ಉತ್ತರಾಧಿಕಾರಿ ಬರಬೇಕೆಂಬ ಕಳಕಳಿ ಅವರಲ್ಲಿತ್ತು. 1903ರಲ್ಲಿ ಸವದತ್ತಿಯಲ್ಲಿ ಜರುಗಿದ ಬಸವ ಪುರಾಣ ಕಾರ್ಯಕ್ರಮಕ್ಕೆ ಸಹಜವಾಗಿ ಜಯದೇವ ಪಂಡಿತರು ಆಗಮಿಸಿದ್ದರು. ಅದೇ ಆಗ ಕಾಶಿಯಿಂದ ಪಂಡಿತ ಪದವಿಯಿಂದ ವಿಭೂಷಿತರಾಗಿ ಬಂದಿದ್ದ ಜಯದೇವ ಪಂಡಿತರನ್ನು ಶಿವಯೋಗಿಗಳು ಕಾರುಣ್ಯದೃಷ್ಟಿಯಿಂದ ನೋಡಿದರು. ಜಯದೇವ ಪಂಡಿತರಲ್ಲಿ ಸಮಾಜವನ್ನು ಮುನ್ನಡೆಸುವ ಅತುಲ ಸಾಮರ್ಥ್ಯವಿರುವುದನ್ನು ಗಮನಿಸಿದರು. ಇವರು ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿಗಳಾಗಲಿ ಎಂದು ಆಶೀರ್ವದಿಸಿದರು. ಜಯದೇವ ಜಗದ್ಗುರುಗಳು ಮಾಡಿದ ಸೇವೆ ನಾಡವರಿಗೆ ವೇದ್ಯವಾಗಿರುವುದನ್ನು ಮತ್ತೆ ಹೇಳಬೇಕಾಗಿಲ್ಲ.

               ಹಾಗೆಯೇ ಗಚ್ಚಿನಮಠದಲ್ಲಿ ವಾಗೀಶ ಎಂಬ ಸಾಧಕರು ಶಿವಯೋಗಿಗಳವರ ಸೇವೆಯನ್ನು ಮನಮುಟ್ಟಿ ಮಾಡುತ್ತಿದ್ದರು. ಒಂದು ದಿನ ಶಿವಯೋಗಿಗಳ ಲಿಂಗಪೂಜೆಗೆ ಬಿಲ್ವ ಸಂಗ್ರಹಿಸಲು ಹೋದಾಗ ಬಿಲ್ವಪತ್ರೆಯೊಂದು ಸಾಧಕರ ತಲೆ ಮೇಲೆ ಬಿತ್ತು. ಅದನ್ನು ಗಮನಿಸಿದ ಶಿವಯೋಗಿಗಳು ‘ನೀನು ಪರ್ವತಪೀಠದ ಒಡೆಯನಾಗುವಿ’ ಎಂದು ಆಶೀರ್ವದಿಸಿದರು. ಶಿವಯೋಗಿಗಳ ವಾಣಿಯಂತೆ 1941ರಲ್ಲಿ ವಾಗೀಶ ಪಂಡಿತಾರಾಧ್ಯರು ‘ಶ್ರೀಶೈಲ ಪೀಠ’ದ ಜಗದ್ಗುರುಗಳಾದರು.

               ಬಂಥನಾಳ ಶಿವಯೋಗಿಗಳು, ಬೀಳೂರು ಗುರುಬಸವ ಸ್ವಾಮಿಗಳು ಮೊದಲಾದ ಸಮಾಜಸೇವಾಸಕ್ತ ಶ್ರೀಗಳಿಗೆ ಮುರುಘೇಂದ್ರ ಶಿವಯೋಗಿಗಳು ಮಾರ್ಗದರ್ಶಕರಾಗಿದ್ದರು. ಜಾತಿಮತ ಪಂಥಗಳನ್ನು ಮೀರಿದ್ದ ಶಿವಯೋಗಿಗಳು ಭಕ್ತವರ್ಗದ ಅನೇಕ ಸಾಧಕರನ್ನು ವಿರಕ್ತಮಠಗಳಿಗೆ ಸ್ವಾಮಿಗಳನ್ನಾಗಿ ಮಾಡುವಲ್ಲಿ ಪ್ರಯತ್ನಿಸಿದ್ದರು. ಇಂದು ನಾವೆಲ್ಲ ಜಾತಿ ಜಾತಿಗಳ ನಡುವೆ ಗೋಡೆ ಕಟ್ಟಿಕೊಂಡಿರುವಂಥ ಸಂದರ್ಭದಲ್ಲಿ ಅಂದು ಶಿವಯೋಗಿಗಳು ಅದೆಲ್ಲವನ್ನು ಮೀರಿ ನಿಂತಿದ್ದರು. ತಮ್ಮ ಗಚ್ಚಿನಮಠಕ್ಕೆ ಭಕ್ತವರ್ಗದ ಸಿದ್ಧಲಿಂಗ ಸ್ವಾಮಿಗಳನ್ನು ಅಧಿಪತಿಗಳನ್ನಾಗಿ ಮಾಡಿದರು. ಬೀಳೂರು ಗುರುಬಸವ ಸ್ವಾಮಿಗಳು ಭಕ್ತವರ್ಗದವರು. ಹೀಗೆ ಅನೇಕ ಶ್ರೀಗಳನ್ನು ಶಿವಯೋಗಿಗಳು ಸಮಾಜಸೇವೆಗೆ ಸಿದ್ಧಗೊಳಿಸಿದ್ದರು.

ಲಿಂಗೈಕ್ಯ

               ಲಿಂಗವಿಡಿದು ಲಿಂಗಸಿದ್ಧಿಯ ಬದುಕು ಬದುಕಿದ ಶಿವಯೋಗಿಗಳು ತಮ್ಮ 85ನೇ ವಯಸ್ಸಿನಲ್ಲಿ ದಿನಾಂಕ 23-4-1921ರಂದು ಲಿಂಗೈಕ್ಯರಾದರು. ಶಿವಯೋಗ ಚೇತನವೊಂದರ ದಿವ್ಯ ಅಧ್ಯಾಯ ಮುಕ್ತಾಯವಾದಂತಾಯಿತು.

ರಚನೆ:  ದ್ಯಾಂಪುರ ಶ್ರೀಚನ್ನಕವಿಗಳು

 

ಶ್ರೀ ಗುರು ಕುಮಾರ ಪರಶಿವ

ಯೋಗಿಯ ನೂರೆಂಟು ನಾಮಗಳನನವರತಂ

ರಾಗಂಮಿಗೆ ಪಠಿಪಾತಂ

ಗಾಗುವವಖಿಲಾರ್ಥ ಸಿದ್ಧಿ ಮುಕ್ತಿ ಗಳಿಳೆಯೋಳ್

ಶ್ರೀ ವಿರಾಟ್ ಪುರಾಧಿವಾಸ ಯತಿಕುಲೇಶ ಗುರುಕುಮಾರ

ಭಾವಭೇದವರಿದ ಮಹಿತ ಚಿತ್ಪ್ರಕಾಶ ಗುರುಕುಮಾರ

ಲಿಂಗಸಂಗ ಮದನ ಮದವಿಭಂಗತುಂಗ ಗುರುಕುಮಾರ

ಮಂಗಲಾಂಗ ಜಂಗಮಾದಿನಾಥವರದ ಗುರುಕುಮಾರ

ಯೋಗಶೀಲ ಭಕ್ತಪಾಲ ವಿರತಿಲೋಲ ಗುರುಕುಮಾರ

ರಾಗರಹಿತ ಸುಕೃತಚರಿತ ಸುಗುಣಭರಿತ ಗುರುಕುಮಾರ

ನಿನ್ನ ಪಾಲಿನನ್ನವತಿಥಿಗುಣಿಸಿ ತಣಿದೆ ಗುರುಕುಮಾರ

ಮನ್ನಣೆಯನು ಪಡೆದೆ ಬಾಲ್ಯದಲ್ಲಿ ನೀನು ಗುರುಕುಮಾರ

ಗಳಿಸಿದೆಲ್ಲ ಹಣವ ತಾಯಿಗೊಲಿದು ಕೊಟ್ಟೆ ಗುರುಕುಮಾರ

ಸಲಹಿದೊಂದು ಋಣಕೆ ಸಲ್ಲಿತೆಂದು ಪೇಳ್ದೆ  ಗುರುಕುಮಾರ  

ಮಗನ ಮೋಹವಳಿಯಲೆಂದು ತಾಯ್ಗೆ ಪೇಳ್ದೆ  ಗುರುಕುಮಾರ

ಬಗೆಯ ಮಾತ್ರ ಮೋಹವೆನ್ನೊಳಿಲ್ಲವೆಂದೆ ಗುರುಕುಮಾರ

ನಿಜಗುಣಾರ್ಯ ಸುಗಮಶಾಸ್ತ್ರವರಿಯಲೆಂದು ಗುರುಕುಮಾರ

ಸುಜನರೊಡನೆ ಚಿಂತನವನು ಮಾಡಲಾದೆ ಗುರುಕುಮಾರ

ಜಡೆಯಸಿದ್ಧರಿಂದ ಸಂಶಯವನು ನೀಗಿ ಗುರುಕುಮಾರ

ಪಡೆದೆ ವೀರಶೈವ ಮಾರ್ಗ ನಿಶ್ಚತೆಯನು ಗುರುಕುಮಾರ

ಭವ ವಿಮೋಚನಕ್ಕೆ ಗುರುವನರಸಲಾದೆ ಗುರುಕುಮಾರ

ತವಕದಿಂದ ಬಸವಲಿಂಗ ಯತಿಯ ಕಂಡೆ ಗುರುಕುಮಾರ

ಎನಗೆ ನೀನೆ ಗುರುವರೇಣ್ಯನೆಂದು ನಂಬಿ ಗುರುಕುಮಾರ

ವಿನಯದಿಂದ ತತ್ಪದಾಶ್ರಯದೋಳ್ ನಿಂದೆ ಗುರುಕುಮಾರ

ಅತುಲ ಶೀಲ ಸತ್ಕ್ರಿಯಾಚರಣೆಯ ಪಿಡಿದೆ ಗುರುಕುಮಾರ

ಮತಿಯೊಳಲಸದದನು ಬಿಡದೆ ನಡೆಸಲಾದೆ ಗುರುಕುಮಾರ

ಯೋಗಶಾಸ್ತ್ರದಲ್ಲಿ ನಿಪುಣನಾದೆ ಕಲಿತು ಗುರುಕುಮಾರ

ಆಗಮಾರ್ಥ ತತ್ತ್ವಕುಶಲನೆನಿಸಿದಯ್ಯ ಗುರುಕುಮಾರ

ಮೊದಲು ಮನೆಯ ಜನರ ಹೊರಳಿ ನೋಡಲಿಲ್ಲ ಗುರುಕುಮಾರ

ಪುದಿದ ಶರಣರೆನ್ನ ಬಳಗವೆಂದು ತಿಳಿದೆ ಗುರುಕುಮಾರ

ಶಂಭುಲಿಂಗಶೈಲಕಾತನೊಡನೆ ಪೋದೆ ಗುರುಕುಮಾರ

ಶಂಭುಲಿಂಗವೀತನೆಂದು ಸೇವೆಗೈದೆ ಗುರುಕುಮಾರ

ಗುರುವಿನೊಲುಮೆಯಿಂದ ಚಿದುಪದೇಶವಾಂತೆ ಗುರುಕುಮಾರ

ಗುರುಸಮಾನ ಯೋಗ್ಯತೆಯನು ಪಡೆದು ಮೆರೆದೆ ಗುರುಕುಮಾರ

ಗುರುವಿನೊಡನೆ ದೇಶಪರ್ಯಟನವಗೈದೆ ಗುರುಕುಮಾರ

ಶರಣಗಣಕೆ ಪರಮತತ್ತ್ವದಿರವನೊರೆದೆ ಗುರುಕುಮಾರ

ಬಿದರಿಯೂರು ಕುಮಾರ ಶಂಭುಯೋಗಿಯಿಂದ ಗುರುಕುಮಾರ

ಸದಯಜಂಗಮಾಶ್ರಮವನು ಪೊಂದಿದಯ್ಯ ಗುರುಕುಮಾರ

ಹಾನಗಲ್ಲ ಮಠಕೆ ಸ್ವಾಮಿಯಾಗಿ ಮೆರೆದೆ ಗುರುಕುಮಾರ

ದಾನಧರ್ಮ ಶೀಲನೆನಿಸಿ ಪೆಸರ ಪಡೆದೆ ಗುರುಕುಮಾರ

ಸ್ಥಾಪಿಸಿದೆ ಮಹಾಸುಸಭೆಯನೆಮ್ಮಮತದೆ ಗುರುಕುಮಾರ

ರೂಪುಗೊಳ್ಳಲಾದುದೆಮ್ಮ ಧರ್ಮದೇಳ್ಗೆ ಗುರುಕುಮಾರ

ವರವಿರಾಗದಸಮ ಮಲ್ಹಣಾರ್ಯನೊಪ್ಪಿ ಗುರುಕುಮಾರ

ನೆರವನರ್ಥಿಸಿದನು ನಿನ್ನೊಳೀ ಮತಕ್ಕೆ ಗುರುಕುಮಾರ

ಗುರುಚರಾಧಿಕಾರಿಗಳನು ತಿದ್ದಲೆಂದು ಗುರುಕುಮಾರ

ಪರಮಯೋಗಶಾಲೆಯಾಗಲೆಂದು ಬಗೆದೆ ಗುರುಕುಮಾರ

ಚರಮಹಾಂತ ಯೋಗಿ ತೋರಿದೆಡೆಯೊಳೊಪ್ಪಿ ಗುರುಕುಮಾರ

ಹರನ ಯೋಗಮಂದಿರವನು ವಿರಚಿಸಿರ್ದೆ ಗುರುಕುಮಾರ

ಪಂಚಪೀಠದವರನಾದರಿಸಿದೆ ನೀನು ಗುರುಕುಮಾರ

ಪಂಚಸೂತ್ರ ಲಿಂಗರಚನೆಗೊಳಿಸಿದಯ್ಯ ಗುರುಕುಮಾರ

ಗೋಮಯವನು ಸುಟ್ಟ ಬೂದಿಯಿಂದ ಪಡೆದು ಗುರುಕುಮಾರ

ನೇಮವಿಡಿದು ಮಾಡಿಸಿದೆ ವಿಭೂತಿಯನು ಗುರುಕುಮಾರ

ಧರ್ಮದಿರವನಖಿಲ ಜನಕೆ ತಿಳಿಸಿ ಪೇಳ್ದೆ ಗುರುಕುಮಾರ

ಧರ್ಮದೇಳ್ಗೆಗಾಗಿ ಸವೆಸಿದಯ್ಯ ತನುವ ಗುರುಕುಮಾರ

ಪಿರಿದೆನಿಪ್ಪ ಗ್ರಂಥ ಸಂಗ್ರಹವ ನೆಗಳ್ದೆ ಗುರುಕುಮಾರ

ಹರುಷದಿಂದ ಯೋಗಸಾಧಕರನು ಪೊರೆದೆ ಗುರುಕುಮಾರ

ನಿತ್ಯ ದಾಸೋಹವಾಗಲೆಸಗಿದಯ್ಯ ಗುರುಕುಮಾರ

ಸತ್ಯವಾದಿಗಳಿಗೆ ಮೆಚ್ಚಿ ಹಿಗ್ಗುತಿರ್ದೆ ಗುರುಕುಮಾರ

ಅಂದಣದೊಳು ಜಂಗಮವನು ಮೆರೆಸಿದಯ್ಯ ಗುರುಕುಮಾರ

ಅಂದವೆನಿಸಿ ನೀನು ಏರಿ ಮೆರೆಯಲಿಲ್ಲ ಗುರುಕುಮಾರ

ಮೇಲಗದ್ದುಗೆಯನು ಬಯಸಿ ಬೇಡಲಿಲ್ಲ ಗುರುಕುಮಾರ

ಕೀಳುತಾಣವೆಂದು ಮನದಿ ಕುಗ್ಗಲಿಲ್ಲ ಗುರುಕುಮಾರ

ಪರತರ ಪ್ರಮಾಣದಂತೆ ನಡೆದು ಬಾಳ್ದೆ ಗುರುಕುಮಾರ

ಹರನ ಶಾಸ್ತ್ರ ವಚನಗಳನು ಮೀರಲಿಲ್ಲ ಗುರುಕುಮಾರ

ಅಂಗ-ಲಿಂಗ ಸಾಮರಸ್ಯ ಸುಖವನುಂಡೆ ಗುರುಕುಮಾರ

ಲಿಂಗಭೋಗ ಭೋಗಿಯೆಂದು ಕೀರ್ತಿ ಪಡೆದೆ ಗುರುಕುಮಾರ

ವೀರಶೈವ ಸಮಯ ಘನಧ್ವಜವನೆತ್ತಿ ಗುರುಕುಮಾರ

ಧಾರುಣಿಯೊಳು ಪಿಡಿದು ಮೆರೆಸಿದಯ್ಯ ವೀರ ಗುರುಕುಮಾರ

ಮುಕ್ತಿಗಿಂ ಸಮಾಜ ಸೇವೆಯಧಿಕವೆಂದೆ ಗುರುಕುಮಾರ

ಭಕ್ತಿ ಹೀನರನ್ನು ನೋಡಿ ಮನದಿ ನೊಂದೆ ಗುರುಕುಮಾರ

ಕುರುಡಗತುಲ ಗಾನಕುಶಲತೆಯನು ಕೊಡಿಸಿ ಗುರುಕುಮಾರ

ಧರೆಯೊಳಾತನಿಂದ ಪರ್ಬಲೆಸಗಿದಯ್ಯ ಗುರುಕುಮಾರ

ಪ್ರಮಥವರ್ತನವನು ತಕ್ಕುದೆಂದು ತಿಳಿದೆ ಗುರುಕುಮಾರ

ಪ್ರಮಥನಿಂದೆಗಿನಿಸು ತಡೆಯಲಿಲ್ಲ ನೀನು ಗುರುಕುಮಾರ

ಬಳಸಿದಯ್ಯ ಕೈಯ್ಯನೂಲಿನರಿವೆಗಳನು ಗುರುಕುಮಾರ

ಗಳಿಸಿದಯ್ಯ ಭಕ್ತಿ ಚಿದ್ ವಿರಕ್ತಿಗಳನು ಗುರುಕುಮಾರ

ತೆತ್ತೆ ಸ್ವಮತ ಸೇವೆಗಾಗಿ ಜನ್ಮವಿದನು ಗುರುಕುಮಾರ

ಮತ್ತೆ ಬರುವೆನೆಂದು ಕೊನೆಗೆ ಪೇಳಿ ಪೊದೆ ಗುರುಕುಮಾರ

ಅಂಗ ಭೋಗದಿಚ್ಛೆಗಾಡಲಿಲ್ಲ ದೇವ ಗುರುಕುಮಾರ

ಲಿಂಗದಿಚ್ಛೆಗಾಡ ನೆಚ್ಚಿ ಶಾಂತಿಪಡೆದೆ ಗುರುಕುಮಾರ

ಶಿವನ ಯೋಗಮಂದಿರಕ್ಕೆ ದುಡಿದು ದಣಿದೆ ಗುರುಕುಮಾರ

ಶಿವಸಮರ್ಚನಾನುಭವವ ಮಾಡಿ ತಣಿದೆ ಗುರುಕುಮಾರ

ಬೆಳೆದುದೀ ಸಮಾಜದಲ್ಲಿ ಬೋಧಕಾಳಿ ಗುರುಕುಮಾರ

ಬೆಳೆದರಭವಕಥಿಕರಿದುವೆ ನಿನ್ನ ಪುಣ್ಯ ಗುರುಕುಮಾರ

ನಿನ್ನ ಮಠವ ಮರೆದು ಮತವೆ ನನ್ನದೆಂದು ಗುರುಕುಮಾರ

ಮನ್ನಿಸಿದೆ ವಿಶಾಲ ದೃಷ್ಟಿಯಿಂದ ನೋಡಿ ಗುರುಕುಮಾರ

ಸಮಯ ಭೇದಗಳನ್ನು ಹೇಳಿ ಕೇಳಿ ಮುರಿದೆ ಗುರುಕುಮಾರ

ಸಮಯಭೇದವಪ್ರಮಾಣವೆಂದು ತಿಳಿದೆ ಗುರುಕುಮಾರ

ಭೂತ ಚೇಷ್ಟೆಗಳಿಗೆ ಲಿಂಗಪೂಜೆಯಿಂದ ಗುರುಕುಮಾರ

ಭೀತಿಗೆಡಿಸಿದಯ್ಯ ಮಠದೊಳಿರುವ ಜನದ ಗುರುಕುಮಾರ

ಪರಳಿಯಾ ವಿವಾದದಲ್ಲಿ ಜಯವ ಪಡೆದೆ ಗುರುಕುಮಾರ

ಧರೆಯ ಸುರರಿಗಾಯ್ತು ಮಾನಹಾನಿಯಂದು ಗುರುಕುಮಾರ

ಶರಣು ಹೊಕ್ಕವರ ಕಾಯ್ದೆ ಕರುಣದಿಂದ ಗುರುಕುಮಾರ

ನರರಿಗಾದ ಕಷ್ಟವೆನ್ನದೆಂದು ಅರಿತೆ ಗುರುಕುಮಾರ

ಪೋದ ಬಂದ ಗ್ರಾಮದಲ್ಲಿ ಸಭೆಯ ಕರೆದು ಗುರುಕುಮಾರ

ವೇದ ಮಂತ್ರ ಧರ್ಮಬೋಧೆಗೈದೆ ನೋಡಿ ಗುರುಕುಮಾರ

ಸೊನ್ನಲಿಗೆಯ ಶರಣರೊಪ್ಪಿ ಭಕ್ತಿಯಿಂದ ಗುರುಕುಮಾರ

ನಿನ್ನನಂತ್ಯದಲ್ಲಿ ಬಯಸಿ ಕಂಡರಂದು ಗುರುಕುಮಾರ

ತಿಳಿದೆ ಮಲ್ಲಿಕೆರೆಯ ಸ್ವಾಮಿಯಲ್ಲಿ ನೀನು ಗುರುಕುಮಾರ

ಸಲೆ ಶಿವಾನುಭವ ಸುಶಾಸ್ತ್ರದಿರವನೊಪ್ಪಿ ಗುರುಕುಮಾರ

ಕೊನೆಯೊಳೀ ಸಮಾಜಮತ ಸಮಾಜವೆಂದು ಗುರುಕುಮಾರ

ಕನವರಿಸುತ ಲಿಂಗದಲ್ಲಿ ಬೆರೆದೆ ನೀನು ಗುರುಕುಮಾರ

ಸಲಹು ತಂದೆ ತಾಯಿ ಬಂಧು ಬಳಗ ನೀನೆ ಗುರುಕುಮಾರ

ಸಲಹು ಬಸವ ಚನ್ನಬಸವ ಪ್ರಭುವೆ ನೀನು ಗುರುಕುಮಾರ

ತಿರುಗಲಾರೆನಖಿಲ ಯೋನಿಗಳೊಳು ನಾನು ಗುರುಕುಮಾರ

ಶರಣು ಹೊಕ್ಕೆನಯ್ಯ ನೋಡಿ ಕರುಣಿಸಯ್ಯ ಗುರುಕುಮಾರ

ಬಾರೋ ನನ್ನ ಕಲ್ಪತರುವೆ ತೋರು ಮುಖವ ಗುರುಕುಮಾರ

ಬಾರೊ ಪರಮಮೋಕ್ಷ ಗುರುವೆ ನಿಜದ ಕುರುಹು ಗುರುಕುಮಾರ

ಬಿಡದಿರೆನ್ನ ಕರವ ಭವಭವಂಗಳಲ್ಲಿ ಗುರುಕುಮಾರ

ನಡೆಸು ವೀರಶೈವ ಮಾರ್ಗದಲ್ಲಿ ಮುದದೆ ಗುರುಕುಮಾರ

ಶರಣು ಗುರುವೆ ಶರಣು ಲಿಂಗವೇ ಚರಾರ್ಯ ಗುರುಕುಮಾರ

ಶರಣು ಶರಣು ಚೆನ್ನಕವಿವರೇಣ್ಯ ವಂದ್ಯ ಗುರುಕುಮಾರ

ಇಂತೀ ಶುಭನಾಮಂಗಳಂ

ಸಂತಸದಿಂ ಜಪಿಸುತಿರ್ಪ ಘನಸುಕೃತಿಗಳಂ

ಕಂತುಹರ ಪಾಲಿಸುವನನಂತ ಸಮಾಧಾನ ಸುಖ ಸಮೃದ್ಧಿಯನಿತ್ತು.