ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳೂ ಶಿಕ್ಷಣ ಪ್ರಸಾರವೂ

• ಶ್ರೀ ಶಿ. ಫ. ಮರಡೂರ ಧಾರವಾಡ

ಸ್ವಾರ್ಥೋ ಯಸ್ಯ ಪರಾರ್ಥ ಏವ ಸಃ ಪುಮಾನ್ ಏಕಃ ಸತಾಂ ಅಗ್ರಣೀಃ ||

(ಅರ್ಥ : ಪರಹಿತವೇ ತನ್ನ ಹಿತವೆಂದು ತಿಳಿದು ಆಚರಿಸುವ ಮಹಾಪುರುಷನೇ ಸಜ್ಜನ (ಸಂತ) ರಲ್ಲಿ ಶ್ರೇಷ್ಠನು.)

ಶ್ರೀಗಳವರು ತಮ್ಮ ಮಾನವ ಜನ್ಮ ಯಾತ್ರೆಯನ್ನೆಲ್ಲ ಸಮಾಜ ಸೇವೆಯಲ್ಲಿಯೇ ಕಳೆದು ತಮ್ಮ ಅವತಾರ ಕೃತ್ಯವನ್ನು ಮುಗಿಸಿ, ಅಂತರ್ಧಾನರಾಗಿರುವರು. ಶ್ರೀಗಳವರ ಪರಶಿವ ಸಾಕ್ಷೀಭೂತವಾದ ಅವಿಶ್ರಾಂತಶ್ರಮದ ಕೃತ್ಯಗಳಿಂದ ಸಮಾಜದಲ್ಲಿ ವಿಚಿತ್ರವಾದ  ಜಾಗೃತಿಯು ಉತ್ಪನ್ನವಾಗಿರುವದು; ವೀರಶೈವ ಸಮಾಜದ ಎಲ್ಲೆಡೆಗಳಲ್ಲಿಯೂ ನವಚೈತನ್ಯವು ತಲೆದೋರಿರುವದು; ನಾವು ಯಾರು ? ನಮ್ಮ ಕರ್ತವ್ಯವೇನು ? ಎಂಬ ಅರಿವು ಸ್ವಾಮಿಗಳಲ್ಲಿಯೂ, ಶಿಷ್ಯರಲ್ಲಿಯೂ, ಅಶಿಕ್ಷಿತ ಸುಶಿಕ್ಷಿತರಲ್ಲಿಯೂ ಮೊಳೆಯೊಡೆ ದಿರುವದು; ವೀರಶೈವರೆಲ್ಲರು ತಮ್ಮ ಇರವನ್ನರಿತು ಅರಬಡಿಸಿ ತಿದ್ದಿಕೊಳ್ಳಹತ್ತಿರುವದು; ಶ್ರೀಗಳವರು ಲಿಂಗೈಕ್ಯರಾಗಿ ಹೋಗಿದ್ದರೂ ಕೂಡ, ಅವರಿಂದ ಸಮಾಜದಲ್ಲಿ ಉಂಟಾದ ಜಾಗೃತಿಯ ಪ್ರಕಾಶವು  ಝಗಝಗಿಸುತ್ತಿರುವದು; ಶ್ರೀಗಳಂಥ ವಿಭೂತಿಗಳ ದಿವ್ಯಲೀಲೆ (ಕೃತಿ)ಗಳ ರಹಸ್ಯದ ಸಿಂಹಾವಲೋಕನವನ್ನು ಆಗಾಗ್ಗೆ ಮಾಡುತ್ತ ನಮ್ಮ ಜೀವಿತದ ಕರ್ತವ್ಯಗಳ ಹಾದಿಯನ್ನು ಕಂಡು ಹಿಡಿಯುವದು ನಮ್ಮೆಲ್ಲರ ಕರ್ತವ್ಯವಾಗಿರುವದು. ಆದುದರಿಂದ, ಪ್ರಸ್ತುತ ಲೇಖದಲ್ಲಿ ಶ್ರೀಗಳವರಿಂದ ವೀರಶೈವ ಸಮಾಜದಲ್ಲಿ ಶಿಕ್ಷಣ ಪ್ರಸಾರವು ಹೇಗಾಯಿತೆಂಬುದರ ಸಂಕ್ಷಿಪ್ತ ಸಿಂಹಾವಲೋಕನವು ಮಾಡಲ್ಪಟ್ಟಿರುವುದು.

ಶ್ರೀಗಳವರಿಂದ ಸಮಾಜದಲ್ಲಿ ಶಿಕ್ಷಣದ ಪ್ರಸಾರವು ಹೇಗಾಯಿತೆಂಬುದರ ನಿಜವಾದ ಕಲ್ಪನೆಯಾಗಬೇಕಾದರೆ, ಶ್ರೀಗಳವರು ಸಮಾಜ ಸೇವೆಯ ಸೂತ್ರವನ್ನು ವಹಿಸಿ, ಕರ್ತವ್ಯ ರಂಗಸ್ಥಲದ ಮೇಲೆ ಸೂತ್ರಧಾರರಾಗಿ ನಿಂತ ಕಾಲಕ್ಕೆ ವೀರಶೈವ ಸಮಾಜದ ಸ್ಥಿತಿಯು ಹೇಗಿತ್ತೆಂಬ ಸಂಗತಿಯು ಗೊತ್ತಿರಲಿಕ್ಕೆ ಬೇಕಾಗುವದು. ಆದಕಾರಣ ಆಗಿನ ಆಂದರೆ ೩೦-೪೦ ವರ್ಷಗಳ ಹಿಂದಿನ ಸಮಾಜದ ಸ್ಥಿತಿಗತಿಗಳನ್ನು ಸಂಕ್ಷಿಪ್ತವಾಗಿ ವಿವರಿಸುವೆವು.

 ಒಂದಾನೊಂದು ಕಾಲದಲ್ಲಿ ನಮ್ಮ ಈ ವೀರಶೈವ ಸಮಾಜವು ಒಳ್ಳೆ ಸುವ್ಯವಸ್ಥಿತವಾದ ಸುಸ್ವರೂಪದಲ್ಲಿತ್ತೆಂಬುದಕ್ಕೆ ನಮ್ಮ ಸಮಾಜದ ಸರ್ವಾಂಗ ಸುಂದರವಾದ ರಚನೆಯೇ ಪ್ರತ್ಯಕ್ಷ ಸಾಕ್ಷಿಯಾಗಿರುವದು. ಈ ಸಮಾಜ ರಚನೆಯಲ್ಲಿ ವ್ಯಕ್ತಿಯ ಆಚಾರ ವಿಚಾರಗಳಿಗೆ ಮಹತ್ವವೇ ಇರುವದಿಲ್ಲ. ನಮ್ಮ ಸಮಾಜದಲ್ಲಿ ಪಂಚ ಧರ್ಮಪೀಠಗಳಿರುವವು. ಆ ಪೀಠಗಳು ಕಾಶಿ, ಹಿಮವತ್ಕೇದಾರ, ಶ್ರೀಶೈಲ, ರಂಭಾಪುರಿ, ಉಜ್ಜಯನಿ ಮೊದಲಾದ ಭರತಖಂಡದೊಳಗಿನ ಪುಣ್ಯಕ್ಷೇತ್ರಗಳಲ್ಲಿ ನೆಲೆಸಿ ಕಂಗೊಳಿಸುತ್ತಿರುವವು. ಈ ಪೀಠಾಚಾರ್ಯರು ದೇಶದಲ್ಲೆಲ್ಲ ಸಂಚರಿಸಿ, ಭಕ್ತವೃಂದದ ಅನುಮತಿಯಿಂದ ಸಮಾಜದಲ್ಲಿ ಧರ್ಮಚ್ಯುತಿಯಾಗದಂತೆ ವ್ಯವಸ್ಥೆಯನ್ನಿಡುವದೂ, ಭಕ್ತಕೋಟಿಯಿಂದ ದೊರೆತ ಕಾಣಿಕೆಯಿಂದ ಧರ್ಮೊತ್ಕರ್ಷದ ಕಾರ್ಯವನ್ನು ನೆರವೇರಿಸುವದೂ ಇವರ ಕರ್ತವ್ಯಗಳಾಗಿರುವವು. ಒಳನಾಡಿನಲ್ಲಿ ಪಟ್ಟದ ಸ್ವಾಮಿಗಳು ಹಾಗೂ ಚರಮೂರ್ತಿಗಳು ಎಂಬ ಪೀಠಾಚಾರ್ಯರ ಪ್ರತಿನಿಧಿಗಳಿರುವರು ಪೀಠಾಚಾರ್ಯರ ಅನುಜ್ಞೆಯಂತೆ ಸಮಾಜದ ಧಾರ್ಮಿಕ ಕಾರ್ಯಗಳನ್ನು ಮಾಡುವದೂ, ಭಕ್ತರಲ್ಲಿ ಶಿಕ್ಷಣ ಪ್ರಸಾರವಾಗುವ ಯೋಜನೆಯನ್ನು  ನಿಯೋಜಿಸುವದೂ ಭಕ್ತರಿಂದ ದೊರೆತ ಕಾಣಿಕೆಯಿಂದ ಅತಿಥಿ ಅಭ್ಯಾಗತರನ್ನು ಉಪಚರಿಸುವದೂ; ಇವರ ಕರ್ತವ್ಯಗಳು. ಇದಲ್ಲದೆ ಊರೂರಿಗೆ ಮಠದಯ್ಯನವರು, ಮಠಪತಿ,   ಗಣಾಚಾರಿ, ಸ್ಥಾವರ, ಕುಮಾರ ಎಂಬ ಹೆಸರಿನ ಉಪಾಚಾರ್ಯರಿರುವರು. ಗ್ರಾಮದೊಳಗಿನ ಶೆಟ್ಟಿ, ಬಣಕಾರ, ಗ್ರಾಮಾಧಿಕಾರಿಗಳು ಇವರೆಲ್ಲರ ಸಹಾಯದಿಂದ ಧರ್ಮದ ಕಾರ್ಯಗಳನ್ನು ನೆರವೇರಿಸುವದು ಇವರ ಕರ್ತವ್ಯವು. ಇದಲ್ಲದೆ, ಅಲ್ಲಲ್ಲಿಗೆ ವಿರಕ್ತ ಸ್ವಾಮಿಗಳಿರುವರು. ಇವರು ಕೇವಲ ಶಿವಯೋಗ ಸಂಪನ್ನರಾಗಿ ಭಕ್ತರಿಗೆ ಶಿವಾನುಭವದ ಉಪದೇಶವನ್ನು ಮಾಡತಕ್ಕದ್ದು. ಇವರೆಲ್ಲರಿಗೂ ಆಗಿನ ಕಾಲದ ಅರಸರಿಂದ ಸ್ವಾಸ್ತವೃತ್ತಿಗಳು ದೊರೆದಿರುವವು. ಈ  ಸಮಾಜದ ವ್ಯವಸ್ಥೆಯು ಅರಸರಿಗೂ ಪ್ರಜೆಗಳಿಗೂ ಕೂಡಿಯೇ ಹಿತಕರವಾದು ದರಿಂದಲೇ ಸ್ವಾಸ್ತವೃತ್ತಿಗಳ ಮಾನಮನ್ಯತೆಗಳು ದೊರೆದಿರಲಿಕ್ಕೆ ಬೇಕು. ಈ ಪ್ರಕಾರ ಸುಂದರವಾದ ಸಮಾಜ ವ್ಯವಸ್ಥೆಯು ಯಾವ ಕಾಲಕ್ಕೆ ಯಾರಿಂದ ಆಯಿತೆಂಬುದಕ್ಕೆ ಐತಿಹಾಸಿಕ ಪ್ರಮಾಣಗಳು ಇನ್ನೂ ಉಪಲಬ್ದವಾಗಿಲ್ಲ. ಆದರೆ ಸಮಾಜೋದ್ಧಾರ ಕರಾದ ಶ್ರೀ ಬಸವೇಶ್ವರರಿಂದ ಈ ಸಮಾಜ ವ್ಯವಸ್ಥೆಯು ಹೆಚ್ಚು ದೃಢವಾಯಿತು.

ಕಾಲಗತಿಯಿಂದ ಭರತಖಂಡಕ್ಕೆ ಹ್ರಾಸ ಕಾಲವು ಒದಗಲು ನಮ್ಮ ವೀರಶೈವ ಸಮಾಜವೂ ಅದಕ್ಕೆ ತುತ್ತಾಯಿತು. ಮುಸಲ್ಮಾನ ಬಾದಶಹರ ನೂಕುನುಗ್ಗಲಿನ ಆಳ್ವಿಕೆಯಿಂದಲೂ, ಪೇಶವೆಯರ ಪರಮತದ ಸಹಿಷ್ಣುತೆಯ ಒತ್ತಾಳಿಕೆಯಿಂದಲೂ ವೀರಶೈವ ಸಮಾಜದ ಬಂಧನಗಳು ಸಡಿಲಾಗಿ, ಸಮಾಜವು ಲಿಕಿ ಲಿಕಿಯಾಗಿ ಹೋಯಿತು. ದೊಡ್ಡ ದೊಡ್ಡ ಮಠದ ಸ್ವಾಮಿಗಳು ತಮ್ಮ ಕರ್ತವ್ಯಗಳನ್ನು ಮರೆತು ಹೊನ್ನು, ಹೆಣ್ಣು ಮಣ್ಣುಗಳೆಂಬ ತ್ರಿವಿಧ ಮೋಹಜಾಲದ ಬಲೆಗೆ ಬಿದ್ದು ಸಾಮಾನ್ಯರಂತೆ ವರ್ತಿಸ ತೊಡಗಿದ್ದರು; ಉಳಿದವರು ಅಶಿಕ್ಷಿತರಾಗಿ ಕಾಡಾದಿಗಳನ್ನು  ಹೋಲಹತ್ತಿದ್ದರು: ವೀರಶೈವ ಧರ್ಮದ ಪ್ರಾಣವಾದ ಇಷ್ಟಲಿಂಗದ ಅರಿವು ಕೂಡ ಇಲ್ಲದಂತಾಗತೊಡಗಿತ್ತು . ವೀರಶೈವರ ಮದುವೆ ಮೊದಲಾದ ಧಾರ್ಮಿಕ ಕಾರ್ಯಗಳು – ಜೋಯಿಸರೆಂಬ ಪರಮತಿಯರ ಕೈಸೇರಿ ಹೋಗಿದ್ದವು; ವೀರಶೈವರ ಕೆಲ ಕೆಲವು ಪುಣ್ಯ ಕ್ಷೇತ್ರಗಳ  ಗಡಿಗುಂಡಾರಗಳು ಅನ್ಯರ ಪಾಲಾಗಿ ಹೋಗಿದ್ದುವು, ಒಟ್ಟಿಗೆ ವೀರಶೈವ ಸಮಾಜದ ಅಳಿಗಾಲವೆ ಬಂದು ಹೋಗಿತ್ತು.

ಮುಂದೆ ಬ್ರಿಟಿಷ್ ಸಾಮ್ರಾಜ್ಯದ ಸುಧಾರಣೆಗಳು ತಲೆಯೆತ್ತಿ ಶಿಕ್ಷಣ ಪ್ರಸಾರವು ಒತ್ತರದಿಂದ ಸಾಗತೊಡಗಿತು . ನಮ್ಮ ಸಮಾಜವು ವಿದ್ಯೆಯಲ್ಲಿ ತೀರಾ ಹಿಂದಿರುವದನ್ನು ಕಂಡು ಕೈ. ವಾ. ಡೆಪ್ಯುಟಿ ಚೆನ್ನಪ್ಪನವರು, ಕೈ.ವ. ಗಿಲಿಗಿಂಚಿ ಗುರುಸಿದ್ದಪ್ಪನವರು, ದಿ. ಬ. ಅರಟಾಳ ಸಾಹೇಬರು  ವೀರಶೈವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರವಾದ ಅನೇಕ ಪ್ರಯತ್ನಗಳನ್ನು ಮಾಡಿದರು. ಈ ಮಹಿನೀಯರಿಂದ ವೀರಶೈವ ಸಮಾಜವು ಬಹು ಉಪಕೃತವಾಗಿರುವರು

 ಇದೇ ಸಂದಿಗೆ ಶ್ರೀಗಳವರು ತಪಸ್ಸಿದ್ದ  ಶಿವಯೋಗಿಗಳಿಂದ ಪವಿತ್ರವಾದ ಹಾನಗಲ್ಲ ಮಠಕ್ಕೆ ಸ್ವಾಮಿಗಳಾದರು. ಶ್ರೀಗಳವರು ಹಾನಗಲ್ಲ ಮಠದ ಅಧಿಕಾರವನ್ನು ಕೈಕೊಳ್ಳುವದಕ್ಕಿಂತ ಮೊದಲೇ ದೇಶದಲ್ಲೆಲ್ಲ ಸಂಚರಿಸಿ ಸಮಾಜದ ಸ್ಥಿತಿಗತಿಗಳನ್ನು ಕಣ್ಣಾರೆ ಕಂಡಿದ್ದರು. ಇಂಥ ಪತಿತ ಸಮಾಜದ ಸೇವೆಯನ್ನು ಮಾಡುವುದೇ ತಮ್ಮ ಜೀವಿತದ ಕರ್ತವ್ಯವೆಂತಲೂ, ಆತ್ಮಶಾಂತಿಯ ಸಾಧನವೆಂತಲೂ ಮೊದಲೇ ದೃಢ ಸಂಕಲ್ಪವನ್ನು ಮಾಡಿಕೊಂಡಂತೆ ತೋರುತ್ತದೆ. ಸ್ವಾಮಿತ್ವವನ್ನು ವಹಿಸಿದ ಕೂಡಲೆ ವೀರಶೈವ ಧರ್ಮದ ಜೀರ್ಣೋದ್ದಾರದ ಕಾರ್ಯವನ್ನು ಕೈಕೊಂಡು ಅದಕ್ಕನುಗುಣವಾದ ಲೋಕ ಶಿಕ್ಷಣ ಪ್ರಾರಂಭಿಸಿದರು.

 ಶಿಕ್ಷಣ ಪ್ರಸಾರಕ್ಕೆ (೧) ಪಾಠಶಾಲೆಗಳು (೨) ವಾಚನ ಮಂದಿರಗಳು (2) ವ್ಯಾಖ್ಯಾನಗಳು, ಪುರಾಣಗಳು, ಶಿವಕೀರ್ತನೆಗಳು, ಪ್ರವಚನಗಳು (5) ವಾರಪತ್ರಿಕೆ ,ಮಾಸ ಪತ್ರಿಕೆಗಳು (5) ಗ್ರಂಥಗಳ ಸಂಶೋಧನವು ಹಾಗೂ ಗ್ರಂಥ ಪ್ರಸಾರವು ಇವೇ ಪ್ರಮುಖ ಸಾಧನಗಳಾಗಿರುವವು. ಶ್ರೀಗಳವರು ಎಲ್ಲ  ಸಾಧನಗಳಿಂದ ವಿರಶೈವ ಸಮಾಜದಲ್ಲಿ ಶಿಕ್ಷಣ ಪ್ರಸಾರವನ್ನು ಮಾಡಲಾರಂಭಿಸಿದರು

೧. ಪಾಠಶಾಲೆಗಳು –  ಸರಕಾರದವರು ಪ್ರಾಥಮಿಕ ಮಾಧ್ಯಮಿಕ ಶಾಲೆಗಳನ್ನು   ಸ್ಥಾಪಿಸಿ  ಶಕ್ಷಣವನ್ನು ಕೊಡಲಾರಂಭಿಸಿದ್ದರು .ಆದರೆ ಧಾರ್ಮಿಕ ಶಿಕ್ಷಣಕ್ಕೆ ಮೂಲಾಧಾರವಾದ ಸಂಸ್ಕೃತ ವಿದ್ಯಾಭ್ಯಾಸದ  ಸಂಸ್ಥೆಗಳು ಮಾತ್ರ ಅತಿ ವಿರಳವಾಗಿದ್ದು, ಎಲ್ಲಿಯಾದರೂ ಒಂದೆರಡು ಸಂಸ್ಥೆಗಳಿದ್ದರೆ ಅವುಗಳಲ್ಲಿ ವೀರಶೈವರಿಗೆ ಪ್ರವೇಶವೇ ಇದ್ದಿಲ್ಲ. ವೀರಶೈವರನ್ನು ಶೂದ್ರಕೋಟೆಯಲ್ಲಿ ಗಣಿಸಿ ಬಿಟ್ಟಿದ್ದರು. ಸಂಸ್ಕೃತ ವಿದ್ಯೆಯೇ ಇಲ್ಲದ್ದರಿಂದ ವೀರಶೈವರ ಧರ್ಮದ ಜ್ಞಾನವೂ ಲಯವಾಗುತ್ತ ನಡೆದಿತ್ತು. ಶ್ರೀಗಳವರು  ಈ ಶೋಚನೀಯ ಸ್ಥಿತಿಯನ್ನು ಅವಲೋಕಿಸಿ, ವೀರಶೈವ ಸಂಸ್ಕೃತ ಪಾಠಶಾಲೆಗಳನ್ನು ಸ್ಥಾಪಿಸುವ ಪ್ರಯತ್ನವನ್ನು ಮೊದಲು ಕೈಕೊಂಡರು. ಇಂದಿಗೆ ೨೦-೩೦ ವರ್ಷಗಳ  ಹಿಂದೆ ವೀರಶೈವರಲ್ಲಿ ಸಂಸ್ಕೃತ ಪಾಠಶಾಲಾ ಸ್ಥಾಪನೆಯ ಒಂದು ಯುಗವು ಪ್ರಾರಂಭವಾಗಿತ್ತು. ಎಲ್ಲಿ ನೋಡಿದರೂ ಸಂಸ್ಕೃತ ಪಾಠಶಾಲೆಗಳೇ ತೋರುತ್ತಿದ್ದವು.ಈ ಚಲನವಲನಕ್ಕೆ ಶ್ರೀಗಳವರ ಪ್ರಯತ್ನವೇ ಕಾರಣವೆಂದು ಹೇಳಬಹುದು. ಪ್ರಾಕೃತಕ್ಕೆ ವೀರಶೈವರಲ್ಲಿ ನ್ಯಾಯ, ವ್ಯಾಕರಣ, ವೇದ, ವೇದಾಂತಗಳಲ್ಲಿ ಘನಪಂಡಿತರಾದ ಎಷ್ಟೋ ಜನ ಶಾಸ್ತ್ರಿಗಳು ಉದಯರಾಗಿರುವರು. ಕಾಶಿ, ಕಲಕತ್ತಾ ಮೊದಲಾದ ಕಡೆಯ ಸಂಸ್ಕೃತ ವಿದ್ಯಾಪೀಠಗಳಲ್ಲಿ ವೀರಶೈವ ವಿದ್ಯಾರ್ಥಿಗಳು ಕಂಗೊಳಿಸುತ್ತಿರುವರು. ಶ್ರೀಗಳವರಿಂದ ಪರಿಪೋಷಿತರಾದ ಎಷ್ಟೋ ಜನರು ಸಂಸ್ಕೃತದಲ್ಲಿ ಘನವಿದ್ವಾಂಸರಾಗಿರುವರು.

ವೀರಶೈವ ಧಾರ್ಮಿಕ ಕಾರ್ಯಗಳನ್ನು ಮಾಡಿಸುವ ಜ್ಞಾನವನ್ನು ಮಾಡಿ ಕೊಡುವದರ ಸಲುವಾಗಿ ಶ್ರೀಗಳವರು ವೀರಶೈವ ವೈದಿಕ  ಪಾಠಶಾಲೆಗಳನ್ನು ಏರ್ಪಡಿಸಿದರು. ಈ ಪ್ರಯತ್ನದಿಂದ ಗ್ರಾಮದ ಮಠಸ್ಥರು ತಮ್ಮ ವೈದಿಕ ಕಾರ್ಯಗಳೆಲ್ಲ ತಾವೇ ಸಾಗಿಸಹತ್ತಿದರು. ವೀರಶೈವರ ಧಾರ್ಮಿಕ ಕಾರ್ಯಗಳನ್ನು ಮಾಡುವದೂ ತಮ್ಮ ಹಕ್ಕೆಂದು ಅನ್ಯಾಯದಿಂದ  ಭಾವಿಸಿಕೊಂಡಿದ್ದ ಜೋಯಿಸರು ವೀರಶೈವರ ಈ ಪ್ರಗತಿಯನ್ನು ನೋಡಿ ಅಸೂಯೆಯಿಂದ ತಳಮಳಿಸಹತ್ತಿದರು. ತಡೆಯಲಾರದೆ “ವೀರಶೈವರು ತಮ್ಮ ಬಾಧ್ಯತೆಗೆ ಭಂಗವನ್ನುಂಟು ಮಾಡಿದರೆಂದುʼʼ ನ್ಯಾಯ ಸಭೆಯಲ್ಲಿ ದೂರಿಟ್ಟರು. ಶ್ರೀಗಳವರು ಇಂಥ ಜೊಳ್ಳು ಬೆದರಿಕೆಗಳಿಗೆ ಮಣಿಯದೆ, ಇಂಥ ಪ್ರಸಂಗಗಳು ಒದಗಿದಲ್ಲೆಲ್ಲ ತಾವೇ ಹೋಗಿ ನಿಂತು, ನ್ಯಾಯಾಧೀಶರಿಗೆ ವೀರಶೈವ ಧರ್ಮದ ನಿಜಸ್ಥಿತಿಯ ಜ್ಞಾನವನ್ನು ಪೂರೈಸಿಕೊಟ್ಟು, ಜೋಯಿಸರ ಹಕ್ಕುಗಳು ಪರಧರ್ಮದವರ ಮೇಲೆ ನಡೆಯುವದು ಎಂಥ ಭಯಂಕರ ಅನ್ಯಾಯ ವೆಂಬುದನ್ನು ಜನತೆಯ ಅನುಭವಕ್ಕೆ ತಂದುಕೊಟ್ಟರು. ಪ್ರಕೃತಕ್ಕೆ ವೀರಶೈವರ ಧರ್ಮ ಕಾರ್ಯಗಳಲ್ಲಿ ಹಣಿಕಿ ನೋಡುವ ಎದೆಯು ಸಹ ಪರಸಮಯದವರಲ್ಲಿ  ಇಲ್ಲದಂತಾಗಿರುವದು.

ವೈದಿಕ ಜ್ಞಾನದಂತೆ ವೀರಶೈವರಿಗೆ ಜ್ಯೋತಿಷ್ಯ ಜ್ಞಾನದ ಅವಶ್ಯಕತೆಯು ಉಂಟೆಂದು ತಿಳಿದು, ಜ್ಯೋತಿಷ್ಯ ಪಾಠಶಾಲೆಗಳನ್ನು ಏರ್ಪಡಿಸುವ ಉಪಕ್ರಮವೂ ಶ್ರೀಗಳವರಿಂದಲೇ ಪ್ರಾರಂಭವಾಯಿತು. ಈಗ ವೀರಶೈವ ಜ್ಯೋತಿಷ್ಯರನೇಕರು  ಪಂಚಾಂಗಗಳನ್ನು ಕೂಡ ಬರೆಯುತ್ತಿರುವರು. ಕೆಲ ಕೆಲವರು ಜ್ಯೋತಿರ್ಗಣಿತದಲ್ಲಿ ನಿಷ್ಣಾತರಾಗಿರುವರು.

ನಮ್ಮ ವೀರಶೈವ ಸಮಾಜದಲ್ಲಿ ವಿರಕ್ತ ಸ್ವಾಮಿಗಳೂ ಪಟ್ಟಚರಾಧಿಕಾರಿಗಳೂ ಹೇರಳವಾಗಿದ್ದಾರೆ. ಈ ಎಲ್ಲ ಸ್ವಾಮಿಗಳು ಆಜನ್ಮ ಬ್ರಹ್ಮಚಾರಿಗಳಾಗಿರಬೇಕೆಂದು ಧರ್ಮದ ಕಟ್ಟಪ್ಪಣೆಯೂ ಇರುವದು. ಪೂರ್ವ ವಯಸ್ಸಿನಲ್ಲಿ ಯೋಗ್ಯವಾದ ಶಿಕ್ಷಣವೂ, ಸಂಸ್ಕಾರವೂ ಇಲ್ಲದೆ, ಆಜನ್ಮ ಬ್ರಹ್ಮಚಾರಿಯಾಗಿರುವದು ದುಸ್ಸಾಧ್ಯವಾದ ಸಂಗತಿಯು. ಈ ಪ್ರಕಾರದ ಶಿಕ್ಷಣವೂ ಸಂಸ್ಕಾರ ಇಲ್ಲದುದರಿಂದ ಬಹು ಜನ  ಸ್ವಾಮಿಗಳು ಹೊನ್ನು, ಹೆಣ್ಣು ಮಣ್ಣಿನ ಮೋಹಪಾಶದಲ್ಲಿ ಸಿಕ್ಕು, ಪವಿತ್ರವಾದ ಆಶ್ರಮವನ್ನು ಅಪವಿತ್ರಗೊಳಿಸಿ ಬಿಟ್ಟಿದ್ದರು. ಪುಣ್ಯಕ್ಷೇತ್ರಗಳೆನಿಸಿಕೊಳ್ಳುವ ಮಠಗಳನ್ನು ಶಾಪದ ನೆಲೆವೀಡುಗಳನ್ನು ಮಾಡಿಬಿಟ್ಟಿದ್ದರು. ಸಮಾಜೋದ್ಧಾರಕರಾದ ಸ್ವಾಮಿಗಳು ಸಮಾಜ ವಿಧ್ವಂಸಕರಾಗಿ ಬಿಟ್ಟಿದ್ದರು. ಈ ಹೀನಾವಸ್ಥೆಯನ್ನು ಕಂಡು, ಪರಸಮಯ ದವರು ಚಪ್ಪಳೆಯನ್ನಿಕ್ಕಿ ನಗೆಯಾಡುತ್ತಿದ್ದರು. ಅತ್ಯಸಹ್ಯವಾದ ಸ್ಥಿತಿಯನ್ನು ನೋಡಿ ಶ್ರೀಗಳವರು ತಲ್ಲಣಗೊ೦ಡು,  ಗುರುವರ್ಗದವರಿಗೆ ಯೋಗ್ಯವಾದ ಶಿಕ್ಷಣವನ್ನು ಕೊಟ್ಟು ಸಂಸ್ಕೃತಿಗೊಳಿಸುವ ಗುರುಕುಲವೊಂದು ಇರಬೇಕೆಂದು ವೀರಶೈವ ಮಹಾಸಭೆಯಲ್ಲಿ ನಿರ್ಣಯವನ್ನು ಮಾಡಿಸಿಕೊಂಡು ಶಿವಯೋಗಮಂದಿರದ ಸ್ಥಾಪನೆಯನ್ನು ಮಾಡಿರುವರು. ಈ ಮಂದಿರದಲ್ಲಿ ಸುಸಂಸ್ಕೃತರಾದ ಎಷ್ಟೋಜನ ಸ್ವಾಮಿಗಳು ಸ್ವಾಮಿತ್ವಕ್ಕೆ ಸಲ್ಲುವಂತೆ ಸದಾಚಾರದಿಂದ ನಡೆದು, ಮಂದಿರದ ಬಿಳ್ಜಸ (ಧವಲ ಕೀರ್ತಿ)ವನ್ನು ನಾಲ್ದೆಶೆಗಳಲ್ಲಿ ಪಸರಿಸಹತ್ತಿರುವರು. ಮಂದಿರದ ಸ್ಥಾಪನೆಯ ಸಲುವಾಗಿ ಶ್ರೀಗಳವರು ಹಗಲಿರುಳೆನ್ನದೆ ದುಡಿಯಬೇಕಾಯಿತು. ‘ಶ್ರೇಯಾಂಸಿ ಬಹು ವಿಘ್ನಾʼನಿ ಎಂಬ ಉಕ್ತಿಯಂತೆ ಮಂದಿರ ಸ್ಥಾಪನೆಯ ಕಾರ್ಯದಲ್ಲಿ ಅಸಂಖ್ಯ ವಿಘ್ನಗಳು ಬಾಯ್ದೆರೆದು ನಿಂತವು. ಎಷ್ಟೋ ಜನ ಸುಶಿಕ್ಷಿತ ವೀರಶೈವರು ಕೂಡ ಒಂದಿಲ್ಲೊಂದು ತರದಿಂದ ಮಂದಿರ ಸ್ಥಾಪನೆಯ ಬಗ್ಗೆ ಜನತೆಯಲ್ಲಿ ವಿರುದ್ಧವಾದ ಅಭಿಪ್ರಾಯಗಳನ್ನು ಪ್ರದರ್ಶಿಸುತ್ತಿದ್ದರು. ಸ್ವಾರ್ಥ ಪರಾಯಣರಾದ ಎಷ್ಟೋ ಜನ ಗುರುವರ್ಗದವರು ಈ ಕಾರ್ಯಕ್ಕೆ ಕಡುಹಗೆಗಳೇ ಆಗಿದ್ದರು. ಶ್ರೀಗಳವರು ಇಂಥ ಎಡರುಗಳಿಗೆ ಅಳುಕಲಿಲ್ಲ. ಕೈಕೊಂಡ ಕಾರ್ಯದಿಂದ ಹಿಂಜರಿಯಲಿಲ್ಲ. ಪರಶಿವನ ಮೇಲೆಯೂ ಗುರುವಾಕ್ಯದ ಮೇಲೆಯೂ ನಂಬಿಗೆಯನ್ನಿಟ್ಟು ತಮ್ಮ ಹುಟ್ಟು ಗುಣಕ್ಕನುಸರಿಸಿ ಪೆಟ್ಟುಗಳು ಬಡಿಬಡಿದಂತೆ ಶ್ರೀಗಳವರು ಹೆಚ್ಚು ಹೆಚ್ಚು ಗಟ್ಟಿಯಾಗಿ ಕೈಕೊಂಡ ಕಾರ್ಯವನ್ನು ಪೂರ್ಣ ಸಿದ್ಧಿಗೊಯ್ದರು.

ಅಡಿಯ ಮುಂದಿಡೆ ಸ್ವರ್ಗ |

ಅಡಿಯಹಿಂದಿಡೆ ನರಕ |

ಅಡಿಗಶ್ವ ಮೇಧ ಫಲ ಧರ್ಮ ಕಾರ್ಯಕ್ಕೆ 1

ಮಡಿಯಲೇ ಬೇಕು ಸರ್ವಜ್ಞ |

ಎ೦ಬ ಉಕ್ತಿಯನ್ನು ಆಗಾಗ್ಗೆ ಆಡಿ ತೋರಿಸಿ ಈ ಧರ್ಮ ಕಾರ್ಯವನ್ನು ನೇರವೇರಿಸಿದರು. ಈ ಕಾರ್ಯದಲ್ಲಿ ಶ್ರೀಗಳವರು ಪ್ರಕಟಗೊಳಿಸಿದ ದೃಢ ನಿಶ್ಚಯವೂ ಕ್ರಮ ಸಾಹಸಗಳೂ ಅವರ್ಣೀಯವಾಗಿರುವವು. ಶ್ರೀಗಳವರ ತಪಃ ಪ್ರಭಾವದಿಂದ ಹುಲಿಕರಡಿಗಳ ಆವಾಸಕ್ಕೆ ತಕ್ಕದಾದ ಆ ಕಾಡಡವಿಯು ಈಗ ಶಿವಯೋಗಿಗಳ ನೆಲವೀಡಿಕೆ ಸಲ್ಲುವಂಥ ಸೈಪಿನ (ಪುಣ್ಯದ) ಸೀಮೆಯಾಗಿರುವದು. ಶ್ರೀಗಳವರು ಶಿವಯೋಗಮಂದಿರದ ಕಾರ್ಯವು ಸುಲಲಿತವಾಗಿ ಸಾಗುವಂತೆ ಲಕ್ಷಾವಧಿ ರೂಪಾಯಿಗಳ ಬೆಲೆಯುಳ್ಳ ಆಸ್ತಿಯನ್ನು ಮಾಡಿಟ್ಟಿರುವರು. ಶ್ರೀಗಳಿರುವವರೆಗೆ  ಜನರು ಮಂದಿರದ ಬಗ್ಗೆ ಮನಸ್ಸು ಹಾಕದಿದ್ದರೂ ಸಾಗಿ ಹೋಯಿತು. ಇನ್ನು ಮೇಲೆ  ಪ್ರತ್ಯೇಕ ಸುಶಿಕ್ಷಿತ ವೀರಶೈವನು ಮಂದಿರದ ವಿಷಯಕ್ಕೆ ಆಲೋಚಿಸಲೇ ಬೇಕಾಗಿರುವದು. ಎಷ್ಟೋ ಜನ ಗುರುವರ್ಗದವರು ಸಂಕುಚಿತ ವಿಚಾರಗಳಿಂದ ಶಿವಯೋಗ ಮಂದಿರದ ಕಡೆಗೆ ಹೊರಳಿ ಕೂಡ ನೋಡಿರುವದಿಲ್ಲ. ಮಂದಿರವು ಶ್ರೀಗಳವರದಲ್ಲ, ವೀರಶೈವ ಸಮಾಜದ್ದು, ಅದು ಯಾವ ಸಮಯ ನಿದರ್ಶಕವಾದ ಮಠವಲ್ಲ ಗುರುಗಳಾಗತಕ್ಕವರಿಗೆ ಶಿಕ್ಷಣವನ್ನು ಕೊಡುವಂಥ ಒಂದು ಸಂಸ್ಥೆಯು, ಅಹಂಕಾರ ಮಮಕಾರಗಳನ್ನು ಮೆಟ್ಟಿ ನಿಂತಿದ್ದ ಶ್ರೀಗಳವರು ಮಂದಿರದಲ್ಲಿ ತಮ್ಮ ಸಂಬಂಧವನ್ನೇ ಇಟ್ಟುಕೊಂಡಿರುವದಿಲ್ಲ. ಯೋಗ್ಯ ಗುರುಗಳು ಮಂದಿರದಿಂದ ಸಿದ್ಧರಾಗಿ ಹೋದದ್ದನ್ನು ಕಣ್ಣಾರೆ ಕಂಡು ಧನ್ಯರಾಗಬೇಕೆಂಬುದೊಂದೇ ಸಂಬಂಧವನ್ನು ಶ್ರೀಗಳವರು ಇಟ್ಟುಕೊಂಡಿದ್ದರು. ಈ ಮನೋರಥವನ್ನು  ಸಫಲಗೊಳಿಸುವ ಭಾರವು ವೀರಶೈವ ಸಮಾಜದ ಮೇಲಿರುವದು.

ಶ್ರೀಗಳವರು ಸಂಸ್ಕೃತ ವಿದ್ಯಾಭ್ಯಾಸವೊಂದಕ್ಕೆ ಲಕ್ಷ್ಯವಿಟ್ಟು, ಉಳಿದ ವಿದ್ಯಾಭ್ಯಾಸಗಳನ್ನು ಅಲಕ್ಷಿಸಲಿಲ್ಲ. ಶ್ರೀಗಳವರಿಂದ ಆಶ್ರಯ ಹೊಂದಿದ ಎಷ್ಟೋ ಜನ ಆಂಗ್ಲ ವಿದ್ಯಾಭೂಷಿತರಾದ ಪದವೀಧರರಿರುವರು. ಇಂಗ್ಲೀಷವನ್ನು ಕಲಿತು ಅಪಕ್ವ ವಿಚಾರಗಳಿಂದ ಧರ್ಮ ಲಂಡರು ಮಾತ್ರ ಆಗಬಾರದೆಂದು ಶ್ರೀಗಳವರ ಆಗ್ರಹವಿತ್ತು ಧರ್ಮ ನಿಷ್ಠರಾದ ಪದವೀಧರರು ಉದಯರಾಗಿ, ದ್ವೀಪದ್ವೀಪಾಂತರ ಗಳಲ್ಲಿ ಸಂಚರಿಸಿ, ವೀರಶೈವರ ಇರವನ್ನು ಜಗತ್ತಿನ ನಿದರ್ಶನಕ್ಕೆ ತಂದು ಕೊಡಬೇಕೆಂದು ಶ್ರೀಗಳವರ ಮನೀಷೆಯು ಇತ್ತು. ವೀರಶೈವ ಧರ್ಮವು ರಾಷ್ಟ್ರ ಧರ್ಮವಾಗಲಿಕ್ಕೆ ತಕ್ಕ ಧರ್ಮವಿರುವದೆಂದು ಶ್ರೀಗಳವರ ನಿಶ್ಚಯವಿತ್ತು  ಕೈ. ವಾ. ವೀರಬಸವಶ್ರೇಷ್ಠಿಯವರನ್ನು ಪಾಶ್ಚಾತ್ಯ ದೇಶಗಳಿಗೆ ಉಪದೇಶಕ್ಕೆ ಕಳಿಸಬೇಕೆಂದು ಶ್ರೀಗಳವರು ಪ್ರಯತ್ನಿಸಿದರು. ಕಾರಣಾಂತರಗಳಿಂದ ಶ್ರೀಗಳವರ ಈ ಕೋರಿಕೆಯು ಕೊನೆಗಾಣದೆ ಉಳಿಯಿತು.

ಶ್ರೀಗಳವರು ಪ್ರಾಥಮಿಕ ಶಿಕ್ಷಣವನ್ನಂತೂ ವಿಶೇಷವಾಗಿ ಪ್ರೀತಿಸುತ್ತಿದ್ದರು. ಪ್ರಾಥಮಿಕ ಶಿಕ್ಷಣವೇ ಸಾಮಾನ್ಯ ಜನರನ್ನು ತಿದ್ದುವ ಸಾಧನವೆಂಬುದನ್ನು ಮರೆತು ಬಿಟ್ಟಿದ್ದಿಲ್ಲ. ಹಿಂದುಸ್ಥಾನದಲ್ಲಿ ಬ್ರಿಟಿಷ್ ಸರಕಾರದಿಂದ ಪ್ರಾಥಮಿಕ ಶಾಲೆಗಳು ಸ್ಥಾಪನ ವಾಗಿದ್ದರೂ ಶ್ರೀಗಳವರು ಹೋದ ಹೋದಲ್ಲಿ ವೀರಶೈವ ಶಿಕ್ಷಕರನ್ನು ಕರಿಸಿಕೊಂಡು ವೀರಶೈವ ಸಮಾಜದ ಅಭಿವೃದ್ಧಿಗೆ ಅನುಕೂಲವಾಗುವಂತೆ ಶಾಲೆಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ಹೇಗೆ ಕೊಡಬೇಕೆಂಬುದನ್ನು ಉಪದೇಶಿಸದೆ ಬಿಡಲಿಲ್ಲ. ಇಷ್ಟಕ್ಕೆ ಶ್ರೀಗಳವರಿಗೆ ತೃಪ್ತಿಯಾಗದೆ, ಶಿವಯೋಗಮಂದಿರದಲ್ಲಿ ವೀರಶೈವ ಶಿಕ್ಷಕ ಸಮ್ಮೇಲನವನ್ನು ಪ್ರತಿವರ್ಷ ಮಾಡುವ ಕಾರ್ಯವನ್ನು ಉಪಕ್ರಮಿಸಿದರು. ಒಂದು ವರ್ಷ ಅದರಂತ ಸಮ್ಮೇಲನ ಕಾರ್ಯವೂ ಕೊನೆಗೊಂಡಿತು. ದ್ರವ್ಯದ ಅಡಚಣಿಯಿಂದಲೂ, ವೀರಶೈವರಲ್ಲಿ ಸಮಾಜಾಭಿಮಾನದ ಅಂಕುರವೇ ಇಲ್ಲದೆ ಇರುವದರಿಂದಲೂ ಶ್ರೀಗಳವರು ಈ ಪ್ರಯತ್ನದಲ್ಲಿಯೂ ಸಂತೃಪ್ತರಾಗಲಿಲ್ಲ. ಆದರೂ, ಶ್ರೀಗಳವರು  ಇಷ್ಟಕ್ಕೆ ಹತಾಶರಾಗಿ ಕೂಡ್ರಲಿಲ್ಲ. ಮೊಗಲಾಯಿಯಲ್ಲಿ ಪ್ರಾಥಮಿಕ  ಶಾಲೆಗಳ ಪ್ರಸಾರವಿಲ್ಲದ್ದನ್ನು ಕಂಡು ಶಿವಯೋಗಮದಿರದಲ್ಲಿ ಶಿಕ್ಷಕರನ್ನು ತಯಾರಿಸಿ,, ಅಲ್ಲಲ್ಲಿಗೆ ಊರಮನೆ (ಗಾಂವಠಿ) ಶಾಲೆಗಳನ್ನು ನೆಲೆಗೊಳಿಸುವ ಉಪಕ್ರಮವನ್ನು ನಡೆಸಿದ್ದರು.ಉಂಡಮಾನನ್ನು ಗರು ಸಮಾಜ ಕಂಟಕರಾದ ಜನರಿಂದ ಈ ಕಾರ್ಯದಲ್ಲಿಯೂ  ಅಡ್ಡಿಗಳುಂಟಿದವು . ಕರ್ತವ್ಯ ದಕ್ಷರಾದ ವೀರಶೈವ ಶಿಕ್ಷಕರನ್ನು ಕಂಡ ಕೂಡಲೇ ಶ್ರೀಗಳವರು ಆನಂದ ಪರವಶರಾಗಿ ಹೋಗುತ್ತಿದ್ದರು. ಅಂಥವರ ಉತ್ಕರ್ಷದ ಚಿಂತನವನ್ನೇ ಮಾಡತೊಡಗುತ್ತಿದ್ದರು. ಇಂಥ ನಿಸ್ವಾರ್ಥ ಬುದ್ಧಿಯ ಸಮಾಜ ಸೇವಾ ತತ್ಪರ ಸ್ವಾಮಿಗಳು, ದೊರೆಯುವದು ಅತಿ ದುರ್ಲಭವು ! ಧನ್ಯಕುಮಾರ ಗುರುದೇವಾ ನೀನೇ ಧನ್ಯನು !!

ಮಾನವ ಪ್ರಾಣಿಗೆ ಅಗತ್ಯವಾದ ಅನುಕೂಲತೆಗಳೂ ಜಗತ್ತಿನ ಸರ್ವ ಸುಧಾರಣಾ ಕಾರ್ಯಗಳೂ ವೀರಶೈವ  ಸಮಾಜದಲ್ಲಿರಬೇಕೆಂದು ಶ್ರೀಗಳವರ ಉತ್ಕಟೇಚ್ಛೆಯಿತ್ತು. ಪಾಶ್ಚಾತ್ಯ ಔಷಧಿಗಳಲ್ಲಿ ನಿಷಿದ್ಧವಾದ ದ್ರವ್ಯಗಳಿರುತ್ತವೆ. ಹಾಗೂ ಕೇವಲ ಭಿನ್ನವಾಯುಗುಣದಲ್ಲಿ ಉತ್ಪನ್ನವಾದ ವನಸ್ಪತಿಗಳಿರುತ್ತವೆ. ಆದುದರಿಂದ, ನಮ್ಮ ದೇಶದ ರೋಗಪ್ರತೀಕಾರಕ್ಕೆ ಈ ಔಷಧಿಗಳು ಗ್ರಾಹ್ಯವಾದವುಗಳಲ್ಲವೆಂದು ಶ್ರೀಗಳವರ ವಿಚಾರಗಳಿದ್ದವು. ಈ ಕೊರತೆಯನ್ನು ನೀಗುವದಕ್ಕಾಗಿ ಶಿವಯೋಗ ಮಂದಿರದಲ್ಲಿ ಒಂದು ಆಯುರ್ವೇದ ಶಾಲೆಯನ್ನು ಏರ್ಪಡಿಯುವ ಪ್ರಯತ್ನವನ್ನು ಶ್ರೀಗಳವರು ನಡೆಸಿದರು. ದುಡ್ಡಿಲ್ಲದ್ದರಿಂದ ಈ ಕಾರ್ಯವೂ ಪೂರ್ಣ ಸಿದ್ದಿಸದೆ ಉಳಿಯಿತು. ಆದರೂ ಮಂದಿರದಲ್ಲಿ ದೇಶೀಯ ವೈದ್ಯದಲ್ಲಿ ತಜ್ಞರಾದ ವೈದ್ಯರನಿಟ್ಟು ಅವರಿಂದ ಶಿಕ್ಷಣವನ್ನು ಕೊಡಿಸುವ ಕಾರ್ಯವನ್ನು ಶ್ರೀಗಳವರು ಸಣ್ಣಪ್ರಮಾಣದಿಂದ ನಡಿಸದೆ ಬಿಡಲಿಲ್ಲ. ಇಂಥ ವೈದ್ಯರಿಗೆ ಸಹಾಯವನ್ನು ಒದಗಿಸಿಕೊಟ್ಟು ಅವರನ್ನು ಪ್ರೋತ್ಸಾಹಿಸುವದರಲ್ಲಿ ಶ್ರೀಗಳವರು ಹಿಂದೆ ಮುಂದೆ ನೋಡಲಿಲ್ಲ.

ಔದ್ಯೋಗಿಕ ಶಿಕ್ಷಣದ ಬಗ್ಗೆ ಪ್ರಯತ್ನಿಸುವದನ್ನು ಶ್ರೀಗಳವರು ಬಿಡಲಿಲ್ಲ ಶಿವಯೋಗ ಮಂದಿರದಲ್ಲಿ ಶಾಸ್ತ್ರೀಯ ಪದ್ಧತಿಯಂತೆ ಮಾದರಿಯ ಹೊಲವನ್ನು (ಫಾರ್ಮ) ಮಾಡಿಸುವ ಪ್ರಯತ್ನವನ್ನು ನಡಿಸಿದರು. ಗೋಶಾಲೆಗಳನ್ನು ಏರ್ಪಡಿಸಿದರು  ಬಾಗಲಕೋಟೆಯಲ್ಲಿ ಮಂದಿರದ ದ್ರವ್ಯದಿಂದ ಒಂದು ಜಿನಿಂಗ ಫ್ಯಾಕ್ಟರಿಯನ್ನು ನಿರ್ಮಾಣ ಮಾಡಿಸಿರುವರು. ಅದು ಅತ್ಯುತ್ತಮವಾಗಿ ಲಾಭದಾಯಕವೂ ವೀರಶೈವರಿಗೆ ಉದ್ಯೋಗ ಮಾರ್ಗದರ್ಶಕವೂ ಆದ ಸಂಸ್ಥೆಯಾಗಿ  ಕಂಗೊಳಿಸುತ್ತಿರುವದು. ಮೈಸೂರ ಸೀಮೆಯ ಕಪ್ಪನಹಳ್ಳಿ ಎಂಬ ಗ್ರಾಮದಲ್ಲಿ ಎಂಜಿನ್ನದ ಸಹಾಯದಿಂದ ನೀರನ್ನು ಹಾಯಿಸಿ, ಕಬ್ಬಿನ ಬೆಳೆಯನ್ನು ತೆಗೆದುಕೊಳ್ಳುವ ಕೆಲಸವನ್ನು ಶ್ರೀಗಳವರು ನಡಿಸಿದರು. ಈ ಕಾರ್ಯವೂ ಯಶಸ್ವಿಯಾಗಿರುವುದು. ಇಂಥ ಉದ್ಯೋಗಗಳಲ್ಲದೆ ವೀರಶೈವರಿಗೆ ಅತ್ಯಗತ್ಯವಾದ ಭಸ್ಮ, ಲಿಂಗಪೀಠ, ಶಿವದಾರ ಮೊದಲಾದ ಸಣ್ಣ ಪುಟ್ಟ ಉದ್ಯೋಗಗಳಿಗೂ ಶ್ರೀಗಳವರು ಬಹಳ ಉತ್ತೇಜನವನ್ನು ಕೊಟ್ಟರು.

ಶಿವಯೋಗಮಂದಿರದಲ್ಲಿ ಮಹಿಳಾ ಪರಿಷತ್ತನ್ನು ನೆರೆಯಿಸಿ, ಸ್ತ್ರೀ ಶಿಕ್ಷಣಕ್ಕೆ ಉತ್ತೇಜನವನ್ನು ಕೊಡುವ ಕಾರ್ಯಕ್ರಮವು ನಡದೇ  ಇರುವದು. ವೀರಶೈವರಲ್ಲಿ ಆದರ್ಶ ಸ್ತ್ರೀ ಪುರುಷರು ತಲೆದೋರುವದಕ್ಕೆ ಮಾಡತಕ್ಕ ಪ್ರಯತ್ನಗಳನ್ನೆಲ್ಲ ಶ್ರೀಗಳವರು ಮಾಡಿಬಿಟ್ಟರು. ಶ್ರೀಗಳವರಿಗೆ ಪರಶಿವನು ದಯಪಾಲಿಸಿದ ಮೇಧಾಶಕ್ತಿಗೂ, ನಿಸ್ಸ್ವಾ ರ್ಥಯುಕ್ತವಾದ ಪರೋಪಕಾರ ಬುದ್ದಿಗೂ, ಧನಸಹಾಯವೂ ಜನಸಹಾಯವೂ ಜೋಡಾಗಿದ್ದರೆ ವೀರಶೈವ ಸಮಾಜದಲ್ಲಿ ಕುಮಾರ ಸೃಷ್ಟಿಯೆಂಬ ಒಂದು ಸರ್ವಾಂಗ ಸುಂದರವಾದ ಹೊಸ ಸೃಷ್ಟಿಯ ಕಂಗೊಳಿಸುತ್ತಿತ್ತೆಂದು ಹೇಳಿದರೆ, ಅತಿಶಯೋಕ್ತಿಯಾಗಲಾರದು.

ವ್ಯಾಖ್ಯಾನಾದಿಗಳು : ಶ್ರೀಗಳವರು ಅನೇಕ ಪ್ರಕಾರದ ಸಭೆಗಳನ್ನು ಏರ್ಪಡಿಸಿ, ಅನುಭವಿಕರಾದ ವಿದ್ವಜ್ಜನರಿಂದ ವ್ಯಾಖ್ಯಾನ ಕೊಡಿಸಿ, ಒಳ್ಳೇ ಒತ್ತರದಿಂದ ಶಿಕ್ಷಣ ಪ್ರಸಾರವನ್ನು ಮಾಡಲಾರಂಭಿಸಿದರು. ವೀರಶೈವ ಮಹಾಸಭೆಯಾದರೂ ಶ್ರೀಗಳವರ ಪ್ರಯತ್ನ ವಿಶೇಷದಿಂದಲೇ ಕೆಲವು ವರ್ಷ ಅತಿ ವೈಭವದಿಂದ ನಿರ್ವಿಘ್ನವಾಗಿ ನೆರವೇರಿತು. ಆ ಮಹಾಸಭೆಗೆ ಶ್ರೀಗಳವರ ಸಂಬಂಧ ತಪ್ಪಿದ ಕೂಡಲೇ ಕಲ್ಲಾಪಿಲ್ಲಿ ಯಾಗಿ ಕೂತಿರುವದು. ಶ್ರೀಗಳವರು ಸಭೆಗಳಲ್ಲಿ ಮಾತ್ರ ಕೆಲಸವನ್ನು ಮಾಡಿ ಉಳಿದ ವೇಳೆಯಲ್ಲಿ ಕೈಮುಚ್ಚಿಕೊಂಡು ಕೂಡುತಿದ್ದಿಲ್ಲ. ಸಭೆಗಳಲ್ಲಾದ ಗೊತ್ತುವಳಿಯನ್ನು ಬಳಿಕೆಯಲ್ಲಿ ತರತಕ್ಕ ಉಪಾಯಗಳನ್ನು ಆ ಕೂಡಲೇ ಆರಂಭಿಸುತ್ತಿದ್ದರು. ಶ್ರೀಗಳವರು ದಯಮಾಡಿಸಿದಲ್ಲೆಲ್ಲ ಜನಸ್ತೋಮವು ಕೂಡಿಯೇ ಕೂಡುತ್ತಿತ್ತು. ಇಂಥ  ಸುಸಮಯವನ್ನು ಎಂದೂ ವ್ಯರ್ಥವಾಗಿ ಹೋಗಗೊಡುತ್ತಿದ್ದಿಲ್ಲ. ಆ ಕಾಲಕ್ಕೆ ಪುರಾಣ ಪ್ರವಚನಗಳಾಗಲಿ, ವ್ಯಾಖ್ಯಾನ ಕೀರ್ತನಗಳಾಗಲಿ ನಡದೇ ತೀರುತ್ತಿದ್ದವು. ಇದರಿಂದ ಜನರಿಗೆ ಅನೇಕ ವಿಷಯಗಳ ಶಿಕ್ಷಣವು ಸಹಜವಾಗಿಯೇ ದೊರೆಯುತ್ತಿತ್ತು.ʼʼ ಶ್ರೀಗಳಿದ್ದಲ್ಲಿ ಸಭೆಗಳು” ಎಂಬ ನಾಣ್ಣುಡಿಯೇ ಜನತೆಯಲ್ಲಿ ಉತ್ಪನ್ನವಾಗಿ ಹೋಗಿತ್ತು.

ಶಿವಕೀರ್ತನಗಳು : ವೀರಶೈವರಲ್ಲಿ ಕೀರ್ತನಕಾರರೇ ಇದ್ದಿದ್ದಿಲ್ಲ; ಲೋಕ ಶಿಕ್ಷಣಕ್ಕೆ ಶಿವಕೀರ್ತನಗಳೂ ಒಳ್ಳೇ ಸಹಾಯಕಾರಿಗಳಾದುದರಿಂದ ಶ್ರೀಗಳವರು ಕೀರ್ತನಗಳ ಪ್ರಸಾರವನ್ನು ಪ್ರಾರಂಭಿಸಿದರು. ಶಿವಯೋಗಮಂದಿರವು ಅಸ್ತಿತ್ವದಲ್ಲಿ ಬಂದ ಕೂಡಲೇ ಕೀರ್ತನಕಾರರಿಗೆ ಬೇಕಾದ ಅನುಕೂಲತೆಗಳನ್ನು ಶ್ರೀಗಳವರು ಒದಗಿಸಿಕೊಟ್ಟರು. ಗಾಯನ ಶಾಲೆಯನ್ನೇರ್ಪಡಿಸಿ, ಕೀರ್ತನಕಾರರಿಗೆ ಸಂಗೀತದ ಜ್ಞಾನವನ್ನು ಮಾಡಿಸಿ ಕೊಡಹತ್ತಿದರು. ವೀರಶೈವ ಧರ್ಮದ ಮರ್ಮವನ್ನು ತಾವೇ ಅವರಿಗೆ ಹೇಳುತ್ತಿದ್ದರು. ಕೀರ್ತನಗಳು ಸಮಾಜ ಸುಧಾರಣೆಗೆ ಅನುಕೂಲವಾಗುವಂತೆ ಯಾವ ಧೈಯದಿಂದ ಸಾಗತಕ್ಕದ್ದೆಂಬುದನ್ನು ವಾದಪ್ರವಾಹಗಳಿಂದ ಗೊತ್ತು ಮಾಡಿಕೊಟ್ಟರು. ಶ್ರೀಗಳವರ ಪ್ರಯತ್ನದಿಂದ ವೀರಶೈವರಲ್ಲಿ ಅಸಂಖ್ಯ ಶಿವಯೋಗ ಕೀರ್ತನಕಾರರು ಮುಂದುವರಿದರು. ಅವರಲ್ಲಿ ಕೆಲಕೆಲವರಂತೂ ಅದ್ವಿತೀಯ ಕೀರ್ತನಕಾರರೆನಿಸಿಕೊಂಡಿರುವರು. ಕೀರ್ತನಗಳ ಪ್ರಸಾರದಿಂದ ವೀರಶೈವರಲ್ಲಿ ಅನೇಕ ವಿಷಯಗಳ ಜ್ಞಾನವಾಗಿ ಜಾಗೃತಿಯು ನೆಲೆಗೊಂಡಿತು. ಶಿವಕೀರ್ತನವೆಂಬ ಶಬ್ದವು ಕನ್ನಡ ವಾಙ್ಮಯದಲ್ಲಿ ಶ್ರೀಗಳವರಿಂದಲೆ ಹೊಸದಾಗಿ ಸೇರಿತೆಂದು ಹೇಳಬಹುದು.

 ಉಪದೇಶಕರು : ಜನತೆಯಲ್ಲಿ ಶಿಕ್ಷಣ ಪ್ರಸಾರವಾಗಲಿಕ್ಕೆ ಕ್ರಿಶ್ಚಿನ್ ಮಿಶನರಿಗಳಂತ್ತೆ ಕಾರ್ಯಾರಂಭವನ್ನು ಮಾಡಿದರು.  ಉಪದೇಶಕರನ್ನು ನೇಮಿಸಬೇಕೆಂದು ಶ್ರೀಗಳವರ ವಿಚಾರವಿತ್ತು. ಅದರಂತೆ, ಕೈ.ವಾ. ವೀರಬಸವ ಶ್ರೇಷ್ಠಿಯವರು ಈ ಉಪದೇಶಕ ಕಾರ್ಯವನ್ನು ಶಿವಯೋಗಮಂದಿರದ ಪಕ್ಷದಿಂದಲೇ ಕೆಲವು ವರ್ಷ ಮಾಡಿದರು. ದುಡ್ಡಿನ ಅಡಚಣಿಯಿಂದ ಈ ಸ್ತುತ್ಯ ಕಾರ್ಯವು ಅಷ್ಟಕ್ಕೇ  ನಿಂತುಹೋಯಿತು.

ವಾರ ಪತ್ರಿಕೆಗಳು, ಮಾಸ ಪತ್ರಿಕೆಗಳು : ಶ್ರೀಗಳವರು ವೀರಶೈವರ ಶಿಕ್ಷಣ ಪ್ರಸಾರಕ್ಕೆ ವಾರ ಪತ್ರಿಕೆಗಳ ಹಾಗೂ ಮಾಸ ಪತ್ರಿಕೆಗಳ ಉಪಯೋಗವನ್ನು ಮಾಡಿಕೊಳ್ಳದೆ ಬಿಡಲಿಲ್ಲ. ಆರಂಭದಲ್ಲಿ ಮೈಸೂರ ಸ್ಟಾರ ಪತ್ರಿಕೆಯೊಂದೇ ನಮ್ಮ ಸಮಾಜದಲ್ಲಿ ಹೊರಡುತ್ತಿತ್ತು, ಉತ್ತರ ಕರ್ನಾಟಕದಲ್ಲಿ ಶ್ರೀಗಳವರ ಉಪದೇಶದಿಂದ ಆ ವಾರ ಪತ್ರಿಕೆಯ ಪ್ರಸಾರವು ಹೆಚ್ಚಾಯಿತು. ಧರ್ಮತರಂಗಿಣಿ ಎಂಬ ಮಾಸ ಪತ್ರಿಕೆಯು ಕೇವಲ ಶ್ರೀಗಳವರ ಕೃಪೆಯ ಬಲದಿಂದಲೇ ನಡೆದಿತ್ತು. ಕರ್ನಾಟಕದಲ್ಲಿ ಧರ್ಮತರಂಗಿಣಿಯು ಪ್ರವೇಶಿಸದ ವೀರಶೈವರ ಮನೆಗಳೇ ಇದ್ದಿಲ್ಲವೆಂದು ಹೇಳಬಹುದು. ಈ ಪತ್ರಿಕೆಗಳಿಗೆ ಸಮಾಜ ಹಿತವಾಗುವಂಥ ಸೂಚನೆಗಳನ್ನು ಶ್ರೀಗಳವರು ಸಕಾಲಕ್ಕೆ ತಿಳಿಸುತ್ತಲೇ ಇದ್ದರು.

ಪ್ರಾಚೀನ ಗ್ರಂಥಗಳ ಸಂಶೋಧನವೂ ಹೊಸ ಗ್ರಂಥಗಳ ಪ್ರಸಾರವೂ : ಲೋಕ ಶಿಕ್ಷಣಕ್ಕೆ ಗ್ರಂಥ ಭಾಂಡಾಗಾರವು ಒಳ್ಳೇ ಬಲವಾದ ಸಾಧನವಾಗಿರುವದು. ರಾಜಾಶ್ರಯವು ತಪ್ಪಿ ಹೋದುದರಿಂದಲೂ, ಪರಮತದವರ ಮತ್ಸರದಿಂದಲೂ ವೀರಶೈವ ಪ್ರಾಚೀನ ಗ್ರಂಥಗಳು ಉಪಲಬ್ಧವಿಲ್ಲದೆ ಹೋಗಿದ್ದವು. ಆದುದರಿಂದ ಪ್ರಾಚೀನ ಗ್ರಂಥಗಳ ಸಂಶೋಧನಕ್ಕಾಗಿ ಒಂದು ಮಂಡಲವನ್ನೇರ್ಪಡಿಸಬೇಕೆಂದು ಸ್ವಾಮಿಗಳು ಪ್ರಯತ್ನಿಸಿದರು. ಜನಸಹಾಯ ಧನಸಹಾಯಗಳು ದೊರೆಯದ್ದರಿಂದ ಈ ಕಾರ್ಯವು ಪೂರ್ಣಸಿದ್ಧಿಗೆ ಹೋಗಲಿಲ್ಲ. ಆದರೂ, ಶ್ರೀಗಳವರು ತ್ರಾವಣಕೋರ ಮೊದಲಾದ ಸ್ಥಲಗಳಿಗೆ ಶಾಸ್ತ್ರಿಗಳನ್ನು ಕಳಿಸಿ, ಕೆಲವು ಮಹತ್ವದ ವೀರಶೈವ ಮತ ಗ್ರಂಥಗಳನ್ನು ಸಂಗ್ರಹಿಸಿ, ಅವುಗಳ ಸಂಶೋಧವನ್ನು ಮಾಡಿಸಿರುವರು. ಶ್ರೀಗಳವರ ಪ್ರಯತ್ನದ ಪ್ರಭಾವದಿಂದಲೆ ಮೂಲಿಗುಂಪಾಗಿ ಹುಳದ ಬಾಯಿಗೆ ತುತ್ತಾಗಿ ಹೋಗುತ್ತಿದ್ದ ಎಷ್ಟೋ ವಚನ ಗ್ರಂಥಗಳು ಪ್ರಸಾರಕ್ಕೆ ಬಂದವು. ಶಿವಯೋಗಮಂದಿರದಲ್ಲಿ ವಚನ ಗ್ರಂಥಗಳ ಭಂಡಾರವೇ ಏರ್ಪಟ್ಟಿರುವದು. ಹೊಸ ಗ್ರಂಥಗಳಿಗೆ ಶ್ರೀಗಳವರು ಮುಕ್ತ ಹಸ್ತದಿಂದ ಸಹಾಯವನ್ನು ಮಾಡುತ್ತಿದ್ದರು. ಸಣ್ಣ ಸಣ್ಣ ಧರ್ಮಗ್ರಂಥಗಳನ್ನು ಮುದ್ರಿಸಿ, ಮಿಶನರಿಗಳಂತೆ ಒಂದೆರಡು ದುಡ್ಡುಗಳಿಗೆ ಅವು ದೊರೆಯುವಂತೆ ಮಾಡಬೇಕೆಂದು ಶ್ರೀಗಳವರ ವಿಚಾವಿತ್ತು ಆದರೆ ಮಾಡತಕ್ಕ ಕೆಲಸಗಳು ಹೆಚ್ಚಾಗಿ ದುಡ್ಡಿನ ಅಡಚಣಿಯು ಬೆಳೆದದ್ದರಿಂದ ಇಂಥ ಮಹತ್ತರ ಕಾರ್ಯಗಳು ಸಹ ನಿರುಪಾಯದಿಂದ ಅಷ್ಟಕ್ಕೆ ನಿಂತವು.

 ವಾಚನ ಮಂದಿರಗಳು : ಆರಂಭದಲ್ಲಿ ಶ್ರೀಗಳವರ ಉಪದೇಶದಿಂದಲೇ ವೀರಶೈವರಲ್ಲಿ ವಾಚನ ಮಂದಿರಗಳು ಸ್ಥಾಪಿತವಾದವು.

 ನೈತಿಕ ಶಿಕ್ಷಣ : ನೈತಿಕ ಶಿಕ್ಷಣಕ್ಕೆ ಶ್ರೀಗಳವರು ಹೆಚ್ಚು ಮಹತ್ವವನ್ನು ಕೊಡುತ್ತಿದ್ದರು. ಎಂಥ ದೊಡ್ಡ ಸ್ವಾಮಿಯಾಗಿರಲಿ, ವಿದ್ವಾಂಸನಿರಲಿ, ಶ್ರೀಮಂತನಿರಲಿ, ಅಧಿಕಾರಿಯೇ ಇರಲಿ, ಅವರಲ್ಲಿ ಶೀಲ (ನೀತಿ) ಒಂದಿಲ್ಲದಿದ್ದರೆ ನಿರುಪಯುಕ್ತ ಮನುಷ್ಯನೆಂದೇ ಶ್ರೀಗಳವರು ತಿಳಿಯುತ್ತಿದ್ದರು. ಅಂಥ ಮನುಷ್ಯರಿಗೆ ಶ್ರೀಗಳವರಲ್ಲಿ ಬೆಲೆಯು ಬರುತ್ತಿದ್ದಿಲ್ಲ. ನೀತಿ ಶಿಕ್ಷಣದ ಪಾಠವನ್ನು ಪಡೆಯಲಿಕ್ಕೆ ಶ್ರೀಗಳವರೇ ಪ್ರತ್ಯಕ್ಷ ವಸ್ತುವಾಗಿದ್ದರು. ಶ್ರೀಗಳವರು ತಮ್ಮ ಪ್ರತ್ಯಕ್ಷವಾದ ಆಚರಣೆಯಿಂದ ನೀತಿಬೋಧದ ಪಾಠವನ್ನು ಎಲ್ಲರಿಗೂ ಅಪ್ರತ್ಯಕ್ಷವಾಗಿ ಬೋಧಿಸುತ್ತಿದ್ದರು. ಶ್ರೀಗಳವರು ನೀತಿಯ ಸಾಕಾರ ಮೂರ್ತಿಯೇ ಆಗಿದ್ದರೆಂದು ಹೇಳಿದರೆ ಅತಿಶಯೋಕ್ತಿಯಾಗದು. ಶ್ರೀಗಳಲ್ಲಿಯ ಧೈರ್ಯಸ್ಥೈರ್ಯಗಳು, ಪರೋಪಕಾರ ಪರಾಯಣತೆಯು, ವಿರತಿ ವಿತರಣೆಗಳು ನಿರಭಿಮಾನ ನಿಸ್ವಾರ್ಥತೆಗಳು, ಶಾಂತಿದಾಂತಿಗಳು ಭೂತದಯೇ, ಅತ್ಯುಜ್ವಲವಾದ ಬ್ರಹ್ಮಚರ್ಯ, ಇವೇ ಮೊದಲಾದ ಸದ್ಗುಣಗಳು ಲೋಕೋತ್ತರ ವಾಗಿದ್ದವು!! ಶ್ರೀಗಳಲ್ಲಿ ಸಹಜವಾಗಿಯೇ ವಾಸವಾಗಿರುತ್ತಿದ್ದ ಈ ಸದ್ಗುಣಗಳ ಸಮುಚ್ಚಯದಿಂದ ಉದ್ಭವಿಸಿದ ಗುಪ್ತ ಶಕ್ತಿಯು ಅಸಂಖ್ಯ ವೀರಶೈವರನ್ನು ಸನ್ಮಾರ್ಗ ಪ್ರವೃತ್ತರನ್ನು ಮಾಡದೆ ಬಿಡಲಿಲ್ಲ. ದುರುಳ ವೇದಾಂತಿಗಳಿಂದ ಸಮಾಜದಲ್ಲಿ ಆಗುತ್ತಿರುವ ಧರ್ಮಲೋಪವನ್ನು ನೀತಿ ಬಾಹ್ಯ ಆಚರಣೆಗಳನ್ನು ಶ್ರೀಗಳವರು ಯುಕ್ತಿ  ಪ್ರಯಕ್ತಿಗಳಿಂದಲೂ, ಶಾಸ್ತ್ರಾಧಾರದಿಂದಲೂ ಖಂಡಿಸಿ ಬಿಟ್ಟಿದ್ದರು. ದೇಶದಲ್ಲೆಲ್ಲ ಸಂಚರಿಸಿ, ಆ ದುರುಳರಿಂದ ಆಗುವ ಅನರ್ಥ ಪರಂಪರೆಗಳನ್ನು ಜನತೆಯ ನಿದರ್ಶನಕ್ಕೆ ತಂದು ಕೊಟ್ಟು, ದುರುಳರ ಬಗ್ಗೆ ಜನತೆಯಲ್ಲಿ ತಿರಸ್ಕಾರವನ್ನು ಕಂಡು ಶ್ರೀಗಳವರು ಮರಮರನೆ ಮರಗುತ್ತಿದ್ದರು. ಪ್ರಮರ್ಥವರ್ಗದ ನಿಂದೆಯನ್ನು ಕೇಳಿ ಉದ್ವೇಗ ಚಿತ್ತರಾಗಿ, ತಮ್ಮ ಶಕ್ತಿ ಸರ್ವಸ್ವವನ್ನೆಲ್ಲ ಧಾರೆಯೆರೆದು ಈ ಕಲಹವನ್ನು ಶಾಂತಿಗೊಳಿಸಬೇಕೆಂದು ಆತುರಪಡುತ್ತಿದ್ದರು. ದೊಡ್ಡದೊಂದು ಸಭೆಯನ್ನೇರ್ಪಡಿಸಿ, ಶಾಸ್ತ್ರಾಧಾರಗಳಿಂದ ಈ ಕಲಹದ ನಿರ್ಣಯವನ್ನು ಮಾಡಬೇಕೆಂದು ಹಗಲಿರುಳು ಚಿಂತಿಸುತ್ತಿದ್ದರು. ಆದರೆ ಸಮಾಜದ ದುರ್ದೈವವು ಶ್ರೀಗಳವರ ಈ ಕಾರ್ಯವನ್ನು ನೆರವೇರಗೊಡಲಿಲ್ಲ. ಶ್ರೀಗಳವರು ಈ ಮೇರೆಗೆ ಸಮಾಜದಲ್ಲಿ ನೀತಿಯ ಪ್ರಸಾರವನ್ನು ಮಾಡಲು ಪ್ರಯತ್ನಿಸಿದರು. 

ಪರಿಣಾಮ : ಶ್ರೀಗಳವರ ಪ್ರಯತ್ನದಿಂದ ವೀರಶೈವರೊಳಗಿನ ಹಲಕೆಲವು ಕೆಟ್ಟ ರೂಢಿಗಳು ಅಳಿದುಹೋದವು. ವೀರಶೈವ ಧರ್ಮವು ವೇದ ಸಮ್ಮತವಾದ ಸರ್ವೋತ್ಕೃಷ್ಟ ಧರ್ಮವೆಂದು ಪರಮತದವರಿಗೂ ಮನವರಿಕೆಯಾಯಿತು. ವೀರಶೈವರಂತೂ ತಮ್ಮ ಧರ್ಮದ ಉತ್ಕೃಷ್ಟತೆಯನ್ನು ನೆನೆಸಿ (ಸ್ಮರಿಸಿ) ಅಭಿಮಾನದಿಂದ ತಲೆಯೆತ್ತಿ ನಡೆಯುವಂತಾಯಿತು.  ವೀರಶೈವರಲ್ಲಿ ಜಾಗೃತಿಯು ಉತ್ಪನ್ನವಾಗಿ: ಧಾರ್ಮಿಕ ಸಾಮಾಜಿಕ ಸುಧಾರಣೆಗಳ ಕುರುಹುಗಳು  ತಲೆದೋರಹತ್ತಿರುವವು. (ಪರಶಿವನ ಕೃಪೆಯಿಂದ ಅವೆಲ್ಲವುಗಳ ಯೋಗ್ಯ ನಿರ್ಣಯವು ಬೇಗನೆ ಆಗಲಿಕ್ಕೆ ಬೇಕಾಗಿರುವದು.). ಸಮಾಜದಲ್ಲಿ ಧಾರ್ಮಿಕ ಬೌದ್ಧಿಕ, ಸಾಮಾಜಿಕ, ಔದ್ಯೋಗಿಕ ಶಿಕ್ಷಣಗಳ ಪ್ರಸಾರವಾಯಿತು

ಖಂಡಿಸದೆ ಕರಣವನು |

ದಂಡಿಸದೆ ದೇಹವನು |

ಉಂಡುಂಡು ಸ್ವರ್ಗಕೈದಲಿಕ್ಕದನೇನು |

ರಂಡೆಯಾಳುವಳೆ ಸರ್ವಜ್ಞ |

 ಎಂಬ ಸರ್ವಜ್ಞ ಕವಿಯ ವೀರವಾಣಿಯ ಸತ್ಯತೆಯನ್ನು ಶ್ರೀಗಳವರು ತಮ್ಮ ಆಚರಣೆಯಿಂದ ಜನತೆಯ ಅನುಭವಕ್ಕೆ ತಂದು ಕೊಟ್ಟರು. ಇಂದ್ರಿಯಗಳ ನಿಗ್ರಹವೂ ದೇಹ ದಂಡನೆಯೂ ಇಲ್ಲದೆ ಐಹಿಕ ಪಾರಲೋಕಿಕ ಕಾರ್ಯಗಳೆಂದೂ ಸಿದ್ಧವಾಗಲಾರ ವೆಂಬ ತಮ್ಮ ಪ್ರತ್ಯಕ್ಷ ಪ್ರಯೋಗವನ್ನು ಶ್ರೀಗಳವರು ಸಮಾಜದೆದುರಿಗಿಟ್ಟು ಹೋಗಿರುವರು. ಶ್ರೀಗಳವರ ಉದಾಹರಣೆಯಿಂದ ಸರ್ವಜ್ಞ ಕವಿಯ ಮೇಲಿನ ನೀತಿಯ ರಹಸ್ಯವನ್ನರಿತು ಶ್ರೀಗಳವರು ಒಡ್ಡಿದ ಅನೇಕ ಸಾಮಾಜಿಕ ಕಾರ್ಯಗಳನ್ನು ಪುರೋವೃದ್ಧಿಗೆ ಒಯ್ಯುವುದು ಪ್ರತ್ಯೇಕ ಸುಶಿಕ್ಷಿತ ವೀರಶೈವನ ಕರ್ತವ್ಯವಾಗಿರುವದು. ಇಂತಹ ಸದ್ಭುದ್ಧಿಯನ್ನು ಪರಮಾತ್ಮನು ದಯಪಾಲಿಸಲೆಂದೂ, ವೀರಶೈವ ಸಮಾಜವು ಅಂತಹ ಸುಯೋಗವನ್ನು ಕಣ್ಣಾರೆ ಕಂಡು ಅನಂದಿಸುವ ಸುಸಮಯವು ಬೇಗನೆ ಪ್ರಾಪ್ತವಾಗಲೆಂದು ಪರಶಿವನನ್ನು ಅನನ್ಯಭಾವದಿಂದ ಪ್ರಾರ್ಥಿಸಿ ,ಸಮಾಜ ಸೇವಾರೂಪ ತಪಸ್ಸಿನಿಂದ ಪರಮ ಪವಿತ್ರವಾದ ಶ್ರೀಗಳವರ ದಿವ್ಯ ಪಾದಾರವಿಂದಗಳಿಗೆ ಲೇಖನ ರೂಪವಾದ ಈ ಅನಂತ ಪ್ರಣಾಮಗಳನ್ನು ಸಮರ್ಪಿಸುವೆನು.

Related Posts