ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಧಾರವಾಹಿ: ಭಾಗ-೩೩ :

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 

 

 

 

ಮಿನುಗುವ ದ್ವಾದಶ ಪತ್ರ | ದನಹತ ಚಕ್ರದೊಳು ವಾ

ಮನು ಘನ ವಿಗ್ರಹಚಿನುಮಯದ ಚರಲಿಂಗ

ವನು ತೋರ್ದ ಗುರುವೆ ಕೃಪೆಯಾಗು   ||೧೪೨||

 

ನಾಭಿಸ್ಥಾನದ ಮೇಲಿರುವುದು ಹೃದಯ. ಈ ಹೃದಯವೇ ಅನಾಹತ ಅಥವಾ ಅನಹತ ಚಕ್ರಕ್ಕೆ ತಾಣ. ಇದು ಹನ್ನೆರಡು ದಳಗಳಿಂದ ಮಿನುಗುತ್ತದೆ.  ಹೃದಯ ಕಮಲದಲ್ಲಿ ಎಂಟುದಳಗಳು ಸ್ಫುಟವಾಗಿಯೂ ನಾಲ್ಕು ದಳಗಳು ಗೋಪ್ಯಾವಾಗಿರುತ್ತವೆಂಬುದಲ್ಲಿ ಎಂಬತ್ತೆಂಟುನೆಯ ತ್ರಿಪದಿಯ ವ್ಯಾಖ್ಯಾನದಲ್ಲಿ ಅರಿತಿದ್ದೇವೆ. ಜಿವಾತ್ಮನು ಕೇವಲ ಕೆಳಮುಖಗಳಾದ ಎಂಟು ದಳಗಳಲ್ಲಿ ಸಂಚರಿಸುವನು. ಆ ದಳಕ್ರಮದಂತೆ ವಿಭಿನ್ನ ವೃತ್ತಿಯುಳ್ಳವನಾಗುವವನಲ್ಲದೆ ಊರ್ಧದಳದ ಮಧ್ಯದ ಮಹಾದೇವನನ್ನು ಮರೆಯುವನು. ಇಲ್ಲಿಯೇ ʼವಾʼ ಕಾರ ಮಂತ್ರ ಮೂರ್ತಿಯಾದ ಚಿನ್ಮಯರೂಪಿ ಚರಲಿಂಗವಿರುವದು. ಈ ಜಂಗಮಲಿಂಗವು ಮಾಂಜಿಷ್ಟವರ್ಣದ ಸುಮನ ಪದ್ಮದಲ್ಲಿ ಅರ್ಧಚಂದ್ರಾಕೃತಿಯುಳ್ಳದು. ಸದ್ಗುರುನಾಥನು ಇಂಥ ಅನುಪಮ ಜಂಗಮ ಲಿಂಗವನ್ನು ತೋರಿಸಿ ಉದ್ದರಿಸುವನು. ಭಕ್ತನು ಲಿಂಗವನ್ನು ಪೂಜಿಸಿ ಜಂಗಮನ ಬರುವಿಕೆಗಾಗಿಯ ಹಾರೈಸಬೇಕಾದುದು ಅವನ ಕರ್ತವ್ಯವಲ್ಲವೆ.

 

ʼʼನವಲಿಂಗ ಸಾಹಿತ್ಯ’ʼ ದಲ್ಲಿ ಜಂಗಮಲಿಂಗದ ವಿವರ ಕೆಳಗಿನಂತಿದೆ –

ಜಂಗಮಲಿಂಗ : ಇದಕ್ಕೆ ಅನಾಹತವೆ ನೆಲೆ; ಯಜನವೆ ಕಲೆ, ತ್ವಙ್ಮುಖ ಅರ್ಧಚಂದ್ರಾಕೃತಿ, ನಿತ್ಯರೂಪು, ಅಷ್ಟಮಿಯ ಚಂದ್ರನಿಗೆ ಅರ್ಧಚಂದ್ರವೆಂದು ಹೆಸರು. ಅಷ್ಟಕಲೆಗಳಿಂದ ಕೂಡಿ ಅಷ್ಟಮದಗಳ ಕಳೆದು ಅಷ್ಟವಿಧ-ಪೂಜೆಗೊಳ ಪಡುವದೆ ಜಂಗಮಲಿಂಗ. ಇದು ದ್ವಾದಶ-ದಳದ ಸುಮನ ಪದ್ಮದಲ್ಲಿ  ಮಂಡಿಸಿರುತ್ತದೆ’. (ಪುಟ ೭೪ರಲ್ಲಿ)

 

ಹೃದಯ ಕಮಲದ ಆನಂದ ಬ್ರಹ್ಮವೇ ಇಷ್ಟಲಿಂಗದಲ್ಲಿ ಜಂಗಮಲಿಂಗವಾಗಿ ಕೂಡಿಕೊಂಡಿರುವದು. ಅಂದರೆ ಆನಂದಮಯನೇ ಜಂಗಮನು. ಅಲ್ಲದೆ ಭಕ್ತರನ್ನು ಆನಂದಗೊಳಿಸುವವನು ಜಂಗಮನು ಜ್ಞಾನಮೂರ್ತಿಯು. ಅದುಕಾರಣ ಜಂಗಮ ಲಿಂಗವನ್ನು ಅನಾಹತ ಚಕ್ರದಲ್ಲಿ ಸಂದರ್ಶಿಸಿ ಪೂಜಿಸುವವನಿಗೆ ಆನಂದಕ್ಕೆ ಕುಂದೇ ಇಲ್ಲ.  ಇಂಥ ಕುಂದು ಕೊರತೆಗಳಿಗೆ ಇಂಬಿಲ್ಲ . ಚಿನುಮಯರೂಪಿ ಚರಲಿಂಗವನ್ನು ತೋರಿ ಅನುಸಂಧಾನ ಮಾಡಹಚ್ಚಿದ ಪರಮ ಗುರುವೇ ನಿನಗೆ ವಂದನೆ.

 

 

ಹದಿನಾರು ಳದಾ ವಿ | ಶುದ್ಧಿ ಚಕ್ರದೊಳಿರ್ಪ

ಸದಮಲ  ಪ್ರಣವ –ದು ಶೇಷಲಿಂಗ ವೆಂ

ಬುದ ಪೇಳ್ದ ಗುರುವೆ ಕೃಪೆಯಾಗು     || ೧೪೩||

 

ಹೃದಯ ಕಮಲವನ್ನು ಮೇಲೇರಿ ಬರಲು ವಿಶುದ್ವಿ ಚಕ್ರವು ಸಿಕ್ಕುವದು.  ಇದು ಹದಿನಾರು ದಳಗಳಿಂದ ಶೋಭಿಸುತ್ತದೆ. ವಿಶುದ್ಧಿ ಚಕ್ರಕ್ಕೆ ಕಠವೇ ಆಶ್ರಯ ಸ್ಥಾನ.  ಕೆಳಗಿನ ನಾಲ್ಕು ಪದ್ಮಗಳಲ್ಲಿ ೩೨ ವ್ಯಂಜನಗಳೇ ದಳಾಕ್ಷರಗಳಾದರೆ ಶುದ್ಧಿಚಕ್ರದಲ್ಲಿ ೧೬ ಸ್ವರಗಳು ದಳಗತಾಕ್ಷರಗಳಾಗಿ ಶೋಭಿಸುತ್ತವೆ. ಈ ಪದ್ಮ ಮಧ್ಯದಲ್ಲಿ ಮುಹೂರ್ತಮಾಡಿದುದು ʼಯ’ಕಾರ ಮಂತ್ರಾಕ್ಷರ ಮೂರ್ತಿಯಾದ ಪ್ರಸಾದಲಿಂಗವು.  ಇದು ಕಪ್ಪು ಬಣ್ಣದ ಸುಜ್ಞಾನ ಪದ್ಯದಲ್ಲಿ ದರ್ಪಣಾಕೃತಿಯಿಂದ ವಿರಾಜಿಸುವದು. ವಿಶುದ್ಧಿ ಚಕ್ರದ ವಿಸ್ತಾರವಾದ ವಿವರವು ಎಂಬತ್ತೇಳನೇ ತ್ರಿಪದಿಯಲ್ಲಿ ಬಂದಿದೆ.

ಪ್ರಸಾದಲಿಂಗ : ಈ ಲಿಂಗಕ್ಕೆ ವಿಶುದ್ಧಿಯ ನೆಲ; ಈಳನವೆ ಕಲೆ, ಶ್ರೋತ್ರವೆ ಮುಖ, ದರ್ಪಣಾಕಾರ, ಪರಿಪೂರ್ಣರೂಪು. ಷೋಡಶದಳದ ಸುಜ್ಞಾನ  ಪದ್ಮದಲ್ಲಿ ಮಂಡಿಸಿರುತ್ತದೆ. ಇದು ಶ್ರೋತ್ರಕ್ಕೆ ಶ್ರೋತ್ರವಾಗಿದೆ. ‘ʼ ಶ್ರೋತ್ರಸ್ಯ ಶ್ರೋತ್ರಂ” ಎಂದು ನವಲಿಂಗ ಸಾಹಿತ್ಯಕಾರರು ವಿವರಿಸಿದ್ದಾರೆ.

 

ಪರಿಶುದ್ಧವಾದ ಈ ವಿಶುದ್ಧಿ ಚಕ್ರಕ್ಕೆ ಆಧಾರವಾದ ಕಂಠದೇಶವು ಸುಂದರ ಅವಯವವಾಗಿದೆ.  ಕಂಠವು ಶಿರ ಮತ್ತು ದಡವನ್ನು ವಿಭಾಗಿಸುತ್ತದೆ. ಈ ಕಂಠದಿಂದ ಮೇಲೆಯೇ ಎಲ್ಲ ಜ್ಞಾನೇಂದ್ರಿಯಗಳಿವೆ. ಅವುಗಳಿಗೆ ಅದು ಸಹಕಾರಿಯಾಗಿದೆ. ಮತ್ತು ಕರ್ಮೇಂದ್ರಿಯವಾದ ಬಾಯಿಗೆ ಉಪಕಾರಿಯಾಗಿದೆ. ಕಂಠವು ಸರಿಯಿದ್ದರೇನೆ ಮುಖದಲ್ಲಿರಿಸಿದ ಪ್ರಸಾದವು ಮಹಾಲಿಂಗಕ್ಕೆ ಸಮರ್ಪಿತವಾಗುವದು. ಪ್ರಸಾದವನ್ನು  ಪಡೆಯುವ ಈ ಕಂಠವು ಪ್ರಸಾದಲಿಂಗಕ್ಕೆ ನೆಲೆಯಾಗಿದೆ. ನಿರ್ಮಲವಾದ ಪ್ರಸಾದವನ್ನು ಸ್ವೀಕರಿಸುತ್ತಿದ್ದರೇನೆ ಪ್ರಸಾದಲಿಂಗದ ಅರಿವು ಉಂಟಾಗುವದು. ಇಂಥ ಪ್ರಸಾದಲಿಂಗವನ್ನು ಪ್ರಸನ್ನತೆಯಿಂದ ತಿಳಿಸಿಕೊಟ್ಟ ಗುರುವೆ ! ಕೃಪೆಯಾಗು, ನಿನ್ನ ಕೃಪೆಯಲ್ಲಿಯೇ ಪ್ರಸಾದಲಿಂಗವು ಪ್ರಸನ್ನವಾಗುವದು.

Related Posts