ಜ.ಚ.ನಿ
ಅದೇ ಕಾಲಕ್ಕೆ ಸಮಾಜದ ವಿರಕ್ತ ಮುಖ್ಯ ಮಠಗಳಲ್ಲಿ ಒಂದಾದ ಚಿತ್ರದುರ್ಗ ಮಠಕ್ಕೆ ಮೂರ್ತಿಗಳಿಲ್ಲದಿತ್ತು. ಆ ಭಾಗದ ಪ್ರಮುಖರನೇಕರು ಯೋಚಿಸಿ ಯೋಗ್ಯ ಮೂರ್ತಿಗಾಗಿ ಹೆಸರುವಾಸಿಯಾದ ಸದಾಶಿವಸ್ವಾಮಿಗಳವರ ಬಳಿಗೆ ಬಂದರು; ಬಿನ್ನವಿಸಿಕೊಂಡರು. ಆದರೆ ಸಮಾಜಸೇವೆಗಾಗಿ ತ್ರಿಕರಣಗಳನ್ನು ಮೀಸಲಾಗಿರಿಸಿದ ಸ್ವಾಮಿಗಳು ಆ ಜಗದ್ಗುರು ಮಠಾಧಿಪತ್ಯಕ್ಕೆ ಮನಸ್ಸು ಮಾಡಲಿಲ್ಲ. ಬಂದವರು ಆಗ್ರಹ ಅತಿಶಯವಾಯಿತು. ಅದಕ್ಕೆ ಸ್ವಾಮಿಗಳು ತಮಗೆ ಪರಿಚಯವಿದ್ದ ಮತ್ತೊಬ್ಬರ ಹೆಸರನ್ನು ಸೂಚಿಸಿದರು. ಅವರೇ ಈಗ ಬೃಹನ್ಮಠದಲ್ಲಿ ಮಿರಾಜಿಸುತ್ತಿರುವ ಶ್ರೀ ಮ.ನಿ.ಪ್ರ.ಜ. ಜಯದೇವ ಮುರುಘರಾಜೇಂದ್ರ ಸ್ವಾಮಿಗಳವರು. ಇವರು ಆಗ ಕಾಶಿಯಲ್ಲಿ ಓದುತ್ತಿದ್ದರು. ಸ್ವಾಮಿಗಳುವರ ಸಹಾಯಕ್ಕೆ ಭಾಗಿಗಳಾಗಿದ್ದರು. ಇವರನ್ನು ಅಲ್ಲಿಂದ ಕರೆಯಿಸಿ ಬೃಹನ್ಮಠದ ಅಧಿಕಾರಕ್ಕೆ ಭಾಗಿಗಳನ್ನಾಗಿ ಮಾಡಿದರು.
ʼʼಲೌಕಿಕ ಮತ್ತು ಪಾರಮಾರ್ಥಿಕ ವಿದ್ಯಾಭ್ಯಾಸಗಳನ್ನು ಮಾಡುತ್ತಿದ್ದ ನಮ್ಮ ಜನಾಂಗದವರಿಗೆ ಕೈಲಾದ ಮಟ್ಟಿಗೆ ಮೊದಲಿನಿಂದಲೂ ಸಹಾಯ ಮಾಡುತ್ತಿದ್ದರೆಂಬುದಕ್ಕೆ ಕಾಶಿಯಲ್ಲಿ ಅಭ್ಯಾಸ ಮಾಡುವಾಗ ನಮಗೂ ಇನ್ನಿತರರಿಗು ಸಹಾಯ ಮಾಡಿದುದೇ ನಿದರ್ಶನವಾಗಿದೆ.
ನಮ್ಮನ್ನು ಶ್ರೀ ೧೦೮ ಜಗದ್ಗುರು ಪಿಠಾಧಿಕಾರಕ್ಕೆ ಬರಮಾಡಿದವರು ಇವರೇ.
ಎಂದು ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರ ಸ್ಮಾರಕ ಚಂದ್ರಿಕೆಗೆ ಸಂದೇಶ ಬರಿಯುತ್ತ ಈ ಮೇಲೆ ಕಂಡ ಮಾತುಗಳನ್ನು ಸ್ವತಃ ಚಿತ್ರದುರ್ಗದ ಮಹಾಸ್ವಾಮಿಗಳವರು ಬರೆದಿದ್ದಾರೆ. ಇದರಿಂದ ಸ್ವಾಮಿಗಳವರ ನಿರಾಶೆ ಪರಹಿತಾಭಿಲಾಷೆ ಎಷ್ಠಿದ್ದವೆಂಬುದು ವ್ಯಕ್ತವಾಗುತ್ತದೆ.
ಬಂದೊದಗಿದ ಈ ಪೀಠಾಧಿಪತ್ಯವನ್ನು ಈ ರೀತಿ ತಪ್ಪಿಸಿಕೊಳ್ಳುವಷ್ಟರಲ್ಲಿ ಮತ್ತೊಂದು ಮಠಾಧಿಪತ್ಯವು ಇವರನ್ನು ನಿರೀಕ್ಷಿಸಿಕೊಂಡು ಬಂದಿತು. ಅದೇ ಹಾನಗಲ್ಲ ಮಠಾಧಿಪತ್ಯ. ಆ ಮಠಾಧಿಕಾರಿಗಳಾದ ಶ್ರೀ ಮ.ನಿ.ಫಕೀರಸ್ವಾಮಿಗಳವರು ತೀರ ಮುಪ್ಪಿನವರಾಗಿದ್ದರು. ವೀರ ವಿರತಿ ಸಂಪನ್ನರು ವಾಕ್ ಸಿದ್ದಿಸಮನ್ವಿತರು ಆಗಿದ್ದರು. ತಮ್ಮ ವೃದ್ಧಾಪ್ಯ ಕಾಲವಾದ್ದರಿಂದ ಉತ್ತರಾಧಿಕಾರವನ್ನು ಮತ್ತೊಬ್ಬ ಸಮರ್ಥ ವಟುವಿನ ಹೆಗಲ ಮೇಲಿರಿಸಲು ಮನಸ್ಸು ಮಾಡಿದರು. ಮಂತ್ರಾಲೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದರು. ಆ ಕ್ಷಣದಲ್ಲಿಯೇ ಅದೇ ಸೊರಬ ಪ್ರಾಂತದ ಪ್ರಮುಖರಾದ ಮತ್ತು ಸದಾಶಿವಸ್ವಾಮಿಗಳಂತೆ ತಮಗೂ ಆಪ್ತಶಿಷ್ಯರಾಗಿದ್ದ ಶ್ರೀ ಉಳವಿ ಗುರುಬಸವಯ್ಯ ನವರಿಗು ಕೆಂಡಪ್ಪಗೌಡರಿಗು ಸಹ ಸ್ವಾಮಿಗಳವರನ್ನು ಹೇಗಾದರೂ ಮಾಡಿ ಕರೆದುಕೊಂಡು ಬರಲು ಕಾಗದ ಬರೆಯಿಸಿದರು. ಅದರಂತೆ ಈ ಇಬ್ಬರು ಆಪ್ತಶಿಷ್ಯರು ಸದಾಶಿವಸ್ವಾಮಿಗಳವರ ಹತ್ತಿರಕ್ಕೆ ಬಂದು ಮಹಾಸ್ವಾಮಿ, ತಮ್ಮ ತಪಸ್ಸಾಧನೆಗೆ ಸಮಾಜಸೇವೆಗೆ ವಾಕ್‌ಸಿದ್ಧಿಯುಳ್ಳ ಹಾನಗಲ್ಲ ಫಕೀರ ಮಹಾಸ್ವಾಮಿಗಳವರ ಕೃಪೆಯಾದರೆ ಇನ್ನೂ ಚೆನ್ನಾಗಿರುತ್ತದೆ. ಆದ ಕಾರಣ ಅಲ್ಲಿಗೆ ಹೋಗಿ ದರ್ಶನ ಪಡೆಯುವುದು ಒಳಿತಲ್ಲವೆ? ಎಂದು ಬಿನ್ನವಿಸಿಕೊಂಡು ಉಪಾಯವಾಗಿ ಹಾನಗಲ್ಲಿಗೆ ಕರೆದುಕೊಂಡು ಹೋದರು. ಸ್ವಾಮಿಯ ದರ್ಶನವಾಯಿತು. ಫಕೀರಸ್ವಾಮಿಗಳವರು ತಮ್ಮ ಮಠದ ಉತ್ತರಾಧಿಕಾರದ ವಿಷಯವನ್ನು ಅಪ್ಪಣೆಮಾಡಿದರು. ಸ್ವಾಮಿಗಳವರು ಒಪ್ಪದೆ ನಾನೊಬ್ಬ ಸಮಾಜ ಸೇವಕ ನನಗೇಕೆ ಈ ಬೃಹನ್ಮಠದ ಅಧಿಪತ್ಯ. ಅಪ್ಪಣೆಯಾದರೆ ಹೋಗಿಬರುವೆನು. ಎಂದು ಹೇಳಿ ಹೊರಡಹತ್ತಿದರು. ನಿಲ್ಲಿಸಿ ತಮ್ಮಾ! ನಿನಗೆ ತಿಳಿಯದು. ಸಮಾಜ ಸೇವೆಗೆ ಬರೀ ಒಂದು ವ್ಯಕ್ತಿತ್ವ ಸಾಲದು. ಅಧಿಪತ್ಯದಿಂದ ಆಗುವಷ್ಟು ಆಗದು. ಮಠಾಧಿಕಾರವಹಿಸಿದರೆ ವ್ಯಕ್ತಿತ್ವಕ್ಕು ವಕ್ತೃತ್ವಕ್ಕು ಬೆಲೆಬರುತ್ತದೆ. ಅದರಿಂದ ಸಮಾಜ ಸೇವೆಯನ್ನು ಯಥೇಪ್ಸಿತವಾಗಿ ಮಾಡಬಹುದು. ಮಠಾಧಿಪತ್ಯವನ್ನು ವಹಿಸುವುದು ಸಮಾಜ ಸೇವೆಗಾಗಿಯೇ ಹೊರತು ಸ್ವಾರ್ಥಕ್ಕಾಗಿಯಲ್ಲ. ಆದ್ದರಿಂದ ಗುರುವಚನವನ್ನು ಮೀರಬೇಡ. ಅಧಿಕಾರಕ್ಕೆ ಅಂಗೀಕರಿಸು ಎಂದು ಅಪ್ಪಣೆಕೊಡಿಸಿದ್ದನ್ನು ಸ್ವಾಮಿಗಳು ಆಲೋಚಿಸುತ್ತಿರುವಾಗಲೆ ಪಕ್ಕದಲ್ಲಿದ್ದ ಪ್ರಮುಖರ ಒತ್ತಾಯವೂ ವಿಶೇಷವಾಯಿತು. ಈ ಎರಡೊಂದು ಕಾರಣದಿಂದ ವಿಧಿಯಿಲ್ಲದೆ ಒಪ್ಪಬೇಕಾಯಿತು.
ಒಪ್ಪುವ ಮೊದಲು ಒಂದು ವಿಜ್ಞಾಪನೆಯನ್ನು ಸ್ವಾಮಿಗಳವರು ಸಲ್ಲಿಸಿದರು. ಏನೆಂದರೆ ಸುಮ್ಮನೆ ಬಂದ ಮಾತ್ರಕ್ಕೆ ಮಠಾಧಿಕಾರಕ್ಕೆ ನನ್ನ ಮನಸ್ಸು ಒಪ್ಪದು. ಕೆಲವುದಿನ ತಮ್ಮ ಸೇವೆ ಸಲ್ಲಿಸಿದ ನಂತರ ಆಗಬಹುದು ಎಂದು. ಇದಕ್ಕೆ ಫಕೀರಸ್ವಾಮಿಗಳವರೂ ಒಪ್ಪಿದರು.
ಮಠದಲ್ಲಿರುವ ದಾಸೋಹದಿಂದಲೆ ಸದಾಶಿವಸ್ವಾಮಿಗಳ ತೃಪ್ತಿತೀರದೆ ಒಂದು ಪಾಠಶಾಲೆಯನ್ನು ಸ್ಥಾಪಿಸಿ ಅದರ ಪುರೋಭಿವೃದ್ಧಿಗಾಗಿ ಮಲೆನಾಡ ಭಾಗಕ್ಕೆ ಬಹುದೂರ ಭಿಕ್ಷಕ್ಕೆ ದಯಮಾಡಿಸಿದ್ದರು. ಆ ಸಂದರ್ಭದಲ್ಲಿ ಫಕೀರಸ್ವಾಮಿಗಳವರಿಗೆ ಕಾಹಿಲೆಯಾಗಿ ಅವರು ಆ ಸಮಯಕ್ಕೆ ತಮ್ಮಲ್ಲಿಗೆ ಬಂದಿದ್ದ ಬಿದರಿ ಕುಮಾರಸ್ವಾಮಿಗಳವರಿಗೆ ಅಧಿಕಾರವಹಿಸಿ ಲಿಂಗೈಕ್ಯರಾದರು.
ಈ ಸಮಾಚಾರ ತಿಳಿದು ಮಲೆನಾಡಿನಿಂದ ಸದಾಶಿವಸ್ವಾಮಿಗಳವರು ಬಂದರು ಬಿದರಿ ಕುಮಾರ ಶ್ರೀಗಳವರು ಉತ್ತರಾಧಿಕಾರವನ್ನು ಬಹುವೈಭವದಿಂದ ಸದಾಶಿವ ಸ್ವಾಮಿಗಳವರಿಗೆ ಮಾಡಿದರು. ಹಾನಗಲ್ಲ ಕುಮಾರ ಸ್ವಾಮಿಗಳೆಂದು ಹೆಸರನ್ನಿಟ್ಟರು. ಏಕಕಾಲದಲ್ಲಿಯ ಸದಾಶಿವ ಸ್ವಾಮಿಗಳವರು ಹಾನಗಲ್ಲ ಮಠಾಧಿಪತ್ಯವನ್ನು ಪಾಠಶಾಲಾಕೃತ್ಯವನ್ನು ವಹಿಸಿದರು ನಿರ್ವಹಿಸಲನುವಾದರು.
ಹೀಗೆ ಪಾಠಶಾಲಾಕೃತ್ಯವನ್ನು ನೆರವೇರಿಸುತ್ತ ಮಠದ ಅಧಿಪತ್ಯವನ್ನು ನಿರ್ವಹಿಸುವುದು ಸ್ವಾಮಿಗಳವರ ಕಾರಣಿಕತನದ ಒಂದು ಕುರುಹು ಅಲ್ಲವೆ ?