ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು
ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ
ಆಹಾರ-ವಿಹಾರಗಳು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಿತಮಿತವಾದ, ಸಾತ್ವಿಕವಾದ ಆಹಾರವನ್ನು ಸೇವಿಸುವವರು, ಯಥಾಯೋಗ್ಯ ವಿಹಾರ ಮಾಡುವವರು ಸದಾ ಪ್ರಸನ್ನಚಿತ್ತರಾಗಿರುತ್ತಾರೆ. ಅತಿಯಾದ ಆಹಾರ ಸೇವನೆ ಮತ್ತು ಆರೋಗ್ಯವನ್ನು ಲಕ್ಷಿಸದೆ ಅತೀ ತಿರುಗಾಟ, ವ್ಯಾಯಾಮಾದಿಗಳು ನಮ್ಮ ಶರೀರದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತವೆ. ಶರೀರ ಮನಸ್ಸುಗಳೆರಡೂ ಒಂದಕ್ಕೊಂದು ಸಂಬಂಧಿಸಿರುವುದರಿಂದ ಶರೀರದ ಪರಿಣಾಮ ಮನಸ್ಸಿನ ಮೇಲಾಗುವುದು. ಮನಸ್ಸು ನಮ್ಮ ಎಲ್ಲ ಬಾಹ್ಯ ಹಾಗು ಅಂತರಿಂದ್ರಿಯಗಳ ವ್ಯವಹಾರಕ್ಕೆ ಆಧಾರವಾಗಿರುವುದರಿಂದ ಶಾರೀರಿಕ ಆರೋಗ್ಯವನ್ನು ಕಾಯ್ದುಕೊಳ್ಳುವುದು ಅತ್ಯವಶ್ಯ. ಅತಿಯಾದ ಆಹಾರ ಸೇವನೆ, ಅತಿಯಾದ ಉಪವಾಸ ಮತ್ತು ಮಿತಿಮೀರಿದ ದೈಹಿಕಶ್ರಮದಿಂದ ದೇಹ ದುರ್ಬಲಗೊಳ್ಳುತ್ತದೆ. ಶರೀರಮಾದ್ಯಂ ಖಲು ಧರ್ಮಸಾಧನಂ’, ಕೂಡಲಸಂಗಮದೇವರ ಒಲಿಸಬಂದ ಪ್ರಸಾದ ಕಾಯವ ಕೆಡಿಸಲಾಗದು’ ಎಂಬಿತ್ಯಾದಿ ವಾಕ್ಯಗಳು ಧರ್ಮಸಾಧನೆಗಾಗಿ, ಮಾನಸಿಕ ನೆಮ್ಮದಿಗಾಗಿ ಆರೋಗ್ಯಪೂರ್ಣ ಶರೀರದ
ಆವಶ್ಯಕತೆಯನ್ನು ಎತ್ತಿ ಹೇಳುತ್ತವೆ
“ಆಹಾರ ಶುದ್ಧೌ ಸತ್ವಶುದ್ಧಿಃ ಸತ್ವಶುದ್ಧೌ ಧ್ರುವಾಸ್ಮೃತಿಃ’ ಅಂದರೆ ಆಹಾರ ಶುದ್ಧಿಯಿಂದ ಅಂತಃಕರಣಗಳು ಶುದ್ಧವಾಗುವವು. ಅಂತಃಕರಣಗಳು ಶುದ್ಧವಾದರೆ ಮನಸ್ಸಿನಲ್ಲಿ ಪರಮಾತ್ಮನ ಸ್ಮರಣೆ ನಿರಂತರವಾಗಿ ಉಳಿಯುವುದು ಎಂದು ಹೇಳಲಾಗಿದೆ. ನಮ್ಮ ಕಣ್ಣು, ನಾಲಿಗೆ, ಕಿವಿ ಇತ್ಯಾದಿ ಇಂದ್ರಿಯಗಳಿಗೆ ಆಹಾರವಾದ ರೂಪ, ರಸ, ಶಬ್ದಾದಿ ವಿಷಯಗಳು ಹಾಗೆಯೇ ದೇಹಪೋಷಣೆಗೆ ಪೂರಕವಾದ ಅನ್ನ, ಜಲಾದಿಗಳು ಪರಿಶುದ್ಧವಾಗಬೇಕು. ಆಗ ಮಾತ್ರ ಮನಸ್ಸು ಮತ್ತು ಹೃದಯಗಳೆರಡೂ ನಿರ್ಮಲಗೊಳ್ಳುವವು. ನಾವು ದಿನನಿತ್ಯ ಸ್ವೀಕರಿಸುವ ಆಹಾರವು ಜಾತಿ, ಆಶ್ರಯ, ನಿಮಿತ್ತಗಳೆಂಬ ಮೂರು ಮುಖ್ಯ ದೋಷಗಳಿಂದ ದೂಷಿತವಾಗುವ ಸಾಧ್ಯತೆ ಇರುತ್ತದೆ. ಈರುಳ್ಳಿ, ಬೆಳ್ಳುಳ್ಳಿ ಮುಂತಾದ ಪದಾರ್ಥಗಳು ‘ಜಾತಿಗತ’ ದೋಷದಿಂದ, ದುರಾಚಾರಿಗಳ ಸಂಪರ್ಕ ಅಥವಾ ದುರಾಚಾರಿಗಳಿಂದ ಅರ್ಜಿತವಾದ ಆಹಾರವು ‘ಆಶ್ರಯ’ ದೋಷದಿಂದ ಮತ್ತು ನೊಣ, ಜಿರಲೆ ಇತ್ಯಾದಿ ಕೀಟಗಳ ಸಂಪರ್ಕದಿಂದ ಆಹಾರ ಪದಾರ್ಥಗಳು ನಿಮಿತ್ತ ದೋಷದಿಂದ ದೂಷಿತವಾಗುತ್ತವೆ. ಆದ್ದರಿಂದ ನಾವು ಸ್ವೀಕರಿಸುವ ಆಹಾರವು ಸಾತ್ವಿಕವೂ, ದೋಷರಹಿತವೂ, ಪವಿತ್ರವೂ ಆಗಿರಬೇಕು. ಮಾಂಸ, ಮದ್ಯ ಇತ್ಯಾದಿ ತಾಮಸಿಕ ಆಹಾರ ಸೇವನೆಯಿಂದ ಮನುಷ್ಯನಲ್ಲಿ ತಾಮಸ ಪ್ರವೃತ್ತಿ ಉಂಟಾಗುತ್ತದೆ. ಆಗ ಮನುಷ್ಯ ಮನೋವಿಕಾರದಿಂದ ಬಳಲುತ್ತಾನೆ.ಆಹಾರದಂತೆಯೆ ಮನಸ್ಸು ಮತ್ತು ಮನಸ್ಸಿನಲ್ಲಿಯ ವಿಚಾರಗಳು ನಿರ್ಮಾಣಗೊಳ್ಳುತ್ತವೆ. ಗ್ರೀಕ್ ತತ್ವಜ್ಞಾನಿ ಪೈಥಾಗೋರಸನು- ‘ಯಾವ ಮನುಷ್ಯ ಏನು ತಿನ್ನುತ್ತಾನೆ ಎಂಬುದನ್ನು ನೀವು ನನಗೆ ಹೇಳಿದರೆ ಅವನು ಏನು ವಿಚಾರ ಮಾಡುತ್ತಿರುತ್ತಾನೆ ಎಂಬುದನ್ನು ನಾನು ನಿಮಗೆ ಹೇಳುತ್ತೇನೆ’ ಎನ್ನುತ್ತಾನೆ. ಈ ಆಹಾರಕ್ಕೆ ಸಂಬಂಧಿಸಿದ ಮಹಾಭಾರತದ ಕತೆಯೊಂದು ಹೀಗಿದೆ:
ಮಹಾಭಾರತ ಯುದ್ಧದ ಕೊನೆಯ ದಿನಗಳಲ್ಲಿ ಅರ್ಜುನ ನಿರ್ಮಿಸಿದ ಶರಶಯ್ಯೆಯಲ್ಲಿ ಪಿತಾಮಹ ಭೀಷ್ಮರು ಧರ್ಮೋಪದೇಶದಲ್ಲಿ ನಿರತರಾಗಿದ್ದರು. ಆಗ ದ್ರೌಪದಿಯು ‘ಮಹಾರಾಜ ನಾನೊಂದು ಪ್ರಶ್ನೆ ಕೇಳುವೆ, ನನ್ನ ಪ್ರಶ್ನೆ ತಮ್ಮ ಮನ ನೋಯಿಸುವುದರಿಂದ ನಾನು ಮೊದಲೇ ಕ್ಷಮೆ ಯಾಚಿಸುತ್ತೇನೆ. ತಮಗೆ ಕೆಡುಕೆನಿಸಿದರೆ ದಯಮಾಡಿ ಸಿಟ್ಟಾಗಬೇಡಿ’ ಎನ್ನುತ್ತಾಳೆ, ಶಾಂತಚಿತ್ತರಾದ ಭೀಷ್ಮರು ‘ನಾನೆಂದೂ ಸಿಟ್ಟಾಗಲಾರೆ, ನೀನು ಏನು ಬೇಕಾದರೂ ಕೇಳು’ ಎಂದಾಗ, ದ್ರೌಪದಿಯು- ‘ಪಿತಾಮಹ’ ದುರ್ಯೋಧನನು ತುಂಬಿದ ಸಭೆಯಲ್ಲಿ ನನ್ನನ್ನು ಬೆತ್ತಲೆಗೊಳಿಸುತ್ತಿರುವಾಗ ಮಾನರಕ್ಷಣೆಗಾಗಿ ಅತ್ತು ಕರೆದು ಗೋಳಿಡುತ್ತಿದ್ದೆ. ಕಂಡ ಕಂಡವರ ಕಾಲಿಗೆ ಬಿದ್ದೆ. ತಾವೂ ಆ ಸಭೆಯಲ್ಲಿ ವಿರಾಜಮಾನರಾಗಿದ್ದೀರಿ, ನಾನು ತಮ್ಮ ಕಾಲಿಗೂ ಬಿದ್ದೆ. ಪರಿಪರಿಯಾಗಿ ಪ್ರಾರ್ಥಿಸಿದೆ. ಇಂದು ಧರ್ಮದ ಬಗ್ಗೆ ದೊಡ್ಡ ದೊಡ್ಡ ಮಾತು ಹೇಳುತ್ತಿರುವ ತಾವು ಅಂದು ಒಬ್ಬ ಅಬಲೆಯ ಮಾನಹಾನಿಯನ್ನು ಹೇಗೆ ಸಹಿಸಿಕೊಂಡಿರಿ? ಅವಳ ಆರ್ತಧ್ವನಿ ತಮಗೇಕೆ ಕೇಳಲಿಲ್ಲ? ಆಗ ನಿಮ್ಮ ಧರ್ಮ ಎಲ್ಲಿ ಹೋಗಿತ್ತು?’ ಎಂದು ಪ್ರಶ್ನಿಸುತ್ತಾಳೆ. ಶಾಂತಮುದ್ರೆಯಲ್ಲಿದ್ದ ಭೀಷ್ಮರು- ‘ಮಗಳೆ ನೀನು ಹೇಳುವುದು ನಿಜ, ಆ ಸಮಯದಲ್ಲಿ ನಾನು ದುರ್ಯೋಧನನ ಪಾಪಯುಕ್ತ ಆಹಾರವನ್ನು ಸೇವಿಸುತ್ತಿದ್ದೆ. ಆ ಪಾಪ ನನ್ನ ಶರೀರವನ್ನೆಲ್ಲ ವ್ಯಾಪಿಸಿತ್ತು. ಅದು ರಕ್ತವಾಗಿ ನನ್ನ ನರನಾಡಿಗಳಲ್ಲೆಲ್ಲ ಹರಿದಾಡುತ್ತಿತ್ತು. ಅಂದು ನಾನು ಬಯಸಿದರೂ ಧರ್ಮದ ಮಾತು ಹೇಳಲು ಸಾಧ್ಯವಾಗಲಿಲ್ಲ. ಇಂದು ಅರ್ಜುನನ ಬಾಣಗಳು ನನ್ನ ರಕ್ತವನ್ನೆಲ್ಲ ಹೊರತೆಗೆದಿವೆ. ಪಾಪದ ಅನ್ನ ಶರೀರದಿಂದ ಹೊರಹೋಗಿದೆ. ಆದ್ದರಿಂದ ಇಂದು ಧರ್ಮದ ಬಗ್ಗೆ ವಿಸ್ತಾರವಾಗಿ ಹೇಳುತ್ತಿರುವೆ.’ ಎಂದು ಉತ್ತರಿಸುತ್ತಾರೆ. ನೋಡಿ ಹೇಗಿದೆ ಆಹಾರದ ಪ್ರಭಾವ?
ನಾವು ನಮ್ಮ ಆಹಾರವನ್ನು ಯಾವ ಭಾವನೆಯಿಂದ, ಯಾವ ಮೂಲದಿಂದ ಸಂಗ್ರಹಿಸುತ್ತೇವೆಯೋ ಮತ್ತು ತಯಾರಿಸುತ್ತೇವೆಯೋ ಅದರ ಪ್ರಭಾವ ಮನಸ್ಸಿನ ಮೇಲಾಗುವುದು ಸಹಜ, ಆದ್ದರಿಂದ ಸತ್ಯ ಮತ್ತು ನ್ಯಾಯದಿಂದ ಅರ್ಜಿತವಾದ, ಪವಿತ್ರವಾದ ಭಾವನೆಯಿಂದ ತಯಾರಿಸಲಾದ, ಸಾತ್ವಿಕವಾದ ಆಹಾರವನ್ನು ಹಿತಮಿತವಾಗಿ ಸೇವಿಸುತ್ತ ಯೋಗ್ಯ ರೀತಿಯ ವಿಹಾರಾದಿಗಳನ್ನು ಕೈಕೊಂಡಲ್ಲಿ ಮನಸ್ಸು ಪ್ರಸನ್ನವಾಗಿ ನಮ್ಮ ನಿಯಂತ್ರಣಕ್ಕೊಳಪಡುತ್ತದೆ. ಆಗ ಸುಖ ಹಾಗು ನೆಮ್ಮದಿಯ ಜೀವನ
ನಡೆಸಲು ಸಾಧ್ಯವಾಗುತ್ತದೆ.