General

ಮಲ್ಲನಗೌಡ  ಹಿರೇಸಕ್ಕರಗೌಡ್ರ , ಗದಗ

“ಹಾನಗಲ್ಲ ಕುಮಾರ ಸ್ವಾಮಿಗಳ ಅಪೂರ್ವ ಪೂರ್ಣ –ಯೋಗದ ಮರಿ ಇದು. ಇದೂ ಪೂರ್ಣವೇ. ಪೂರ್ಣಾತ್  ಪೂರ್ಣಂ ಉದಚ್ಯತೇ .” ದ.ರಾ.ಬೇಂದ್ರೆ

ಮೇಲಿನ  ಉಕ್ತಿಯನ್ನು “ದರ್ಶನ ಶಾಸ್ತ್ರ-ಚಕ್ರವರ್ತಿ” ಪೂರ್ಣತ್ವಕಾರ, “ಸಪ್ತಬಾಷಾ ಸಾಗರ”, “ಸತ್ವಪೂರ್ಣ ಸಾಹಿತ್ಯ ಸಾಗರ” ಶಬ್ದಬ್ರಹ್ಮ  ಲಿಂ ಡಾ||ಗುರುಸಿದ್ಧ ದೇವ ಶಿವಾಚಾರ್ಯ ಮಹಾಸ್ವಾಮಿಗಳು ಕೆಳದಿ ಸಂಸ್ಥಾನ ರಾಜಗುರು ಹಿರೇಮಠ, ಕೆಳದಿ ಇವರ ಕುರಿತು   “ಶಾಸ್ತ್ರ ಕಾವ್ಯ” ವಾದ “ಪೂರ್ಣತ್ವ” ಗ್ರಂಥದ “ಶಿವ-ಸಂಕಲ್ಪ”ದಲ್ಲಿ ಬರೆದವರೆಂದರೆ ಜ್ಞಾನ ಪೀಠ ಪ್ರಶಸ್ತಿ ಪುರಸ್ಕತ ವರಕವಿ ಡಾ: ದ.ರಾ.ಬೇಂದ್ರೆ ರವರು.  ಪೂರ್ಣತ್ವಕಾರ ಕಳದಿ ಪೂಜ್ಯರ “ಪೂರ್ಣತ್ವ”ದ ಪೂರ್ಣ ಪ್ರಜ್ಞೆಯನ್ನು ಮನಸಾ ಮೆಚ್ಚಿ ಮೇಲಿನಂತೆ ಮನದುಂಬಿ ನುಡಿದಿದ್ದಾರೆ.

ಇಲಕಲ್ ಹಿರೇಮಠದ ಬಡಕುಟುಂಬದಲ್ಲಿ ಜನಿಸಿ, ಶ್ರೀಮದ್ ವೀರಶೈವ ಶಿವಯೋಗಮಂದಿರದಲ್ಲಿ ಅಧ್ಯಯನ ಮಾಡಿ, ಶ್ರೀ ಹಾನಗಲ್ ಗುರುಕುಮಾರೇಶನನ್ನು ಸಂಪೂರ್ಣವಾಗಿ ಗ್ರಹಿಸಿ,  ಅವರ ಪಥದಲ್ಲಿ ನಡೆದು ಸರ್ವರಿಗೂ ಆದರ್ಶದ ಬೆಳಕು ತೋರಿದ ಪರಮ ವೈರಾಗ್ಯಶಾಲಿ, ಪಂಡಿತೋತ್ತಮರು  ಪೂರ್ಣತ್ವಕಾರ ಕಳದಿ ಪೂಜ್ಯರು.

 ಪೂರ್ಣತ್ವಕಾರ ಡಾ||ಕೆಳದಿ ಶ್ರೀಗಳದ್ದು  ವಿಶಾಲ ಆಳ ಹರಿವಿನ, ಸದಾ ಸಮಾಜದ, ಶಿವಯೋಗ ಮಂದಿರದ ಹಿತಕ್ಕಾಗಿ ತನು-ಮನ-ಧನ ಸವೆಸಿದ  ಸುಗಂಧ ಭರಿತ  ಹೋರಾಟದ ಜೀವನ. 

ಬಾಲ್ಯ ಜೀವನ:

ಗ್ರಾನೈಟ್ ಉದ್ಯಮ ಮತ್ತು ಸೀರೆಗಳಿಗೆ ಜಗತ್‍ಪ್ರಸಿದ್ಧವಾದ, ಮಹಾತಪಸ್ವಿ ವಿಜಯ ಮಹಾಂತೇಶನ ತಪೋಭೂಮಿ,  ಆಧ್ಯಾತ್ಮದ ತವರಾದ   ಬಾಗಲಕೋಟ ಜಿಲ್ಲೆ, ಹುನಗುಂದ ತಾಲ್ಲೂಕಿನ ಇಳಕಲ್  ಪೂಜ್ಯರ ಹುಟ್ಟೂರು.  ಇಳಕಲ್  ಹಿರೇಮಠದ ಪುಣ್ಯ ಶರಣ ದಂಪತಿಗಳಾದ  ಶ್ರೀ ವೇ||ಗುರುಮೂರ್ತಯ್ಯ ಮತ್ತು ಅನ್ನದಾನಮ್ಮ ನವರ ಪುಣ್ಯ ಗರ್ಭದಲ್ಲಿ   ಜೇಷ್ಟ  ಪುತ್ರರಾಗಿ ಆರನೇ ಮಾರ್ಚ 1930 ರಂದು  ಜನಿಸಿದರು.  ಇವರ ಜನ್ಮ ನಾಮ “ಗುರುಸಿದ್ದಯ್ಯ”.

“ಮನೆಯೇ ಮೊದಲು ಪಾಠ ಶಾಲೆ : ಜನನಿ ತಾನೇ ಮೊದಲು ಗುರು” ಎನ್ನುವಂತೆ,   ತಾಯಿ ಅನ್ನದಾನಮ್ಮನವರು ಎಳೆಯ ಬಾಲಕ ಗುರುಸಿದ್ಧಯ್ಯನಿಗೆ ಬಾಲ್ಯದಲೇ ಉತ್ತಮ ಸಂಸ್ಕಾರ ನೀಡುತ್ತಾ, ಅವನ ಬಾಲ ಲೀಲೆಗಳನ್ನು ನೋಡುತ್ತಾ ಆನಂದ ಪಡುತ್ತಿದ್ದರು.   “ತಿರಿದು ತಂದರೂ  ಕರೆದು  ಉಣ್ಣುವ” ಪರಮ ಸಂಸ್ಕತಿ   ಆ ಶರಣ ದಂಪತಿಗಳದಾಗಿತ್ತು.   ಗುರುಸಿದ್ದಯ್ಯನಿಗೆ ಎಳೆಯ ವಯಸ್ಸಿನಲ್ಲಿ  ಕಾಯಕ, ದಾಸೋಹದ ಮಹತ್ವನ್ನು ಮನಗಾಣಿಸಿದ್ದರು.  ಹಿರೇಮಠ ಮನೆತನಕ್ಕೆ ಸೇರಿದವರಾಗಿದ್ದರಿಂದ ಶಿಷ್ಯಮಕ್ಕಳ ಮನೆಗೆ ಹೋಗಿ ರೊಟ್ಟಿ  ತರುವ  ಸಂಪ್ರದಾಯ ಇದೆ. ಹೀಗೆ ರೊಟ್ಟಿಗೆ ಹೋಗುವಾಗ ಕೈಯಲ್ಲಿದ್ದ ಬುಟ್ಟಿ ಮತ್ತು ಬೆತ್ತಗಳು ಬಾಲಕ ಗುರುಸಿದ್ದಯ್ಯನಿಗಿಂತಲೂ  ಎತ್ತರವಾಗಿದ್ದವು. ಆಗ  ಊರಿನ ಜನರು ನಮ್ಮೂರಿನ ಮತ್ತೊಬ್ಬ   “ವಿಜಯ ಮಹಾಂತೇಶ” ಎನ್ನುತ್ತಿದ್ದರು.

ಬಾಲಕ ಗುರುಸಿದ್ದಯ್ಯ  ಇಳಕಲ್ ನಲ್ಲಿಯೇ   ಗಾಂವಟಿ ಶಾಲೆಗೆ ಹೋಗುತ್ತಿದ್ದ. ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರಲಿಲ್ಲ.   ಆದರೂ  ಹೆತ್ತವರಿಗೆ  ಮಗ  ಗುರುಸಿದ್ದಯ್ಯನನ್ನು ಚೆನ್ನಾಗಿ ಓದಿಸಿಬೇಕೆಂಬ ಮಹದಾಸೆ,  ಇದೇ ಆಸೆಯನ್ನು   ಹೆಣ್ಣಜ್ಜ ವೀರಯ್ಯ ನವರಿಗೂ ಇತ್ತು.  ಅಂತೆಯೇ ಮೊಮ್ಮಗ ಗುರುಸಿದ್ಧಯ್ಯನನ್ನು   ಗಜೇಂದ್ರಗಡ ಕ್ಕೆ ಕರೆತಂದು   ಉರ್ದು ಶಾಲೆಗೆ ಸೇರಿಸಿದರು.  ಆ ಶಾಲೆಯ  ಅಬ್ದುಲ್ ಗಪಾರ್‍ಖಾನ್ ಮಾಸ್ತರರು  ಮತ್ತು ವೀರಯ್ಯನವರು ಗೆಳೆಯರಾಗಿದ್ದರು. ಆಗ ಕುಷ್ಟಗಿ, ಯಲಬುರ್ಗಾ, ಗಜೇಂದ್ರಗಡ ಭಾಗದಲ್ಲಿ   ಇವರ  ಶಿಷ್ಯಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದ್ದರಿಂದ,  ನವಾಬರ ಆಡಳಿತ ಪ್ರಭಾವವೋ ಏನೋ ಅಲ್ಲಿನ ಜನರು   ಉರ್ದು ಹೆಚ್ಚು ಮಾತನಾಡುತ್ತಿದ್ದರಿಂದ,  ಉರ್ದು ಭಾಷೆ  ಕಲಿತರೆ ಒಳ್ಳೇದು ಎಂಬ ಉದ್ಧೇಶದಿಂದ ಉರ್ದು ಶಾಲೆಗೆ ಸೇರಿಸಿದ್ದರು.   ಅಬ್ದಲ್ ಗಫಾರ್ ಖಾನ್ ಮಾಸ್ತರರಿಂದ  ಬಾಲಕ ಗುರುಸಿದ್ದಯ್ಯನ ಜೀವನ ಬಹಳ ಪ್ರಭಾವಿತಗೊಂಡಿತು. ಯಾಕೆಂದರೆ ಅಬ್ದುಲ್ ಗಫಾರ್‍ಖಾನ್ ಮಾಸ್ತರರು ಪ್ರತಿದಿನ ಗುರುಸಿದ್ಧಯ್ಯನಿಗೆ ನಮಿಸಿ ಪಾಠ ಪ್ರಾರಂಭ ಮಾಡುತ್ತಿದ್ದರು, ಅಲ್ಲದೆ ಮುಂದೆ ನೀನು ದೊಡ್ಡ ಯೋಗಿ ಆಗುವವನಿದ್ದಿ,  ಸ್ವಾಮಿ ಜೀವನದಲ್ಲಿ ನಿಷ್ಠೆ ಇರಬೇಕು ಎನ್ನುವುದಕ್ಕೆ  ಪ್ರತಿಜ್ಞೆಗೆ ಕುಳಿತ ಫಕೀರನ ಆಸೆಯನ್ನು ಪ್ರವಾಹ ರೂಪದಲ್ಲಿ ದೇವರು ಈಡೇಸಿದ ಕಥೆಯನ್ನು   ಹಾಗೂ  ದೇವರು ಇದ್ದಾನೆ, ನಂಬಿದವರನ್ನು ದೇವರು ಎಂದೂ ಕೈಬಿಡುವುದಿಲ್ಲ  ಎನ್ನುವುದಕ್ಕೆ  ಮಹ್ಮದ ಪೈಗಂಬರ್‍ರವರನ್ನು ವೈರಿಗಳಿಂದ  ಜೇಡರಬಲೆ ರಕ್ಷಿಸಿದ ಕಥೆಯನ್ನು ಮನಮುಟ್ಟುವಂತೆ ಹೇಳಿದ್ದನ್ನು  ಕೆಳದಿ ಅಜ್ಜನವರ   ಬಾಯಿಂದಲೆ ಕೇಳಬೇಕು. ಅದರ ಸೊಗಸು,  ರೋಮಾಂಚನ ಇನ್ನೆಲ್ಲು ಸಿಗುವುದಿಲ್ಲ. ಅದನ್ನು ಕೇಳಿದ್ದು ನನ್ನ ಪುಣ್ಯ. ಅಬ್ದುಲ್ ಗಫಾರ ಖಾನ್ ಮಾಸ್ತರರ ನೀತಿ ಕಥೆಗಳು,  ನನ್ನ ಸ್ವಾಮಿ ಜೀವನಕ್ಕೆ, ಸ್ವಾಮಿ ಜೀವನದಲ್ಲಿ “ಗಟ್ಟಿ ಸ್ವಾಮಿ” ಆಗಲಿಕ್ಕೆ ಮುನ್ನುಡಿಯಾದವು ಎಂದು ನೆನಪಿಸಿಕೊಳ್ಳುತ್ತಿದ್ದರು.  

ಹೆತ್ತವರಿಗೆ ಮಗ ಗುರುಸಿದ್ದಯ್ಯನಿಗೆ  ಮದುವೆ ಮಾಡಿ, ಮೊಮ್ಮಕ್ಕಳನ್ನು ಆಡಿಸಬೇಕೆಂಬ ಆಸೆ, ಆದರೆ ವಿಧಿ ಲಿಖಿತವೇ ಬೇರೆ, ವಿಧಿ ಲಿಖಿತ ತಪ್ಪಿಸಲು ಯಾರಿಂದ ಸಾಧ್ಯ? ಬಾಲಕ ಗುರುಸಿದ್ದಯ್ಯ ಯಾವಾಗಲೂ ಕಾಯಕ, ದಾಸೋಹ ಹಾಗೂ ದೇವರ ಧ್ಯಾನದಲ್ಲೇ ಇರುತ್ತಿದ್ದ. ಕುಮಾರೇಶ ನನ್ನನ್ನು  ಬಾ ಎಂದು ಕರೆಯುತ್ತಿದ್ದಾನೆ ಎಂದು ತಂದೆಯವರಲ್ಲಿ ಹೇಳಿಕೊಳ್ಳುತ್ತಿದ್ದ.  ಇದರಿಂದ  ವಿಧಿಯಿಲ್ಲದೆ,  ಗುರುಸಿದ್ದಯ್ಯನನ್ನು ಶಿವಯೋಗಮಂದಿರಕ್ಕೆ ಒಪ್ಪಿಸಲು ನಿರ್ಧರಿಸಿ, ಶಿವಯೋಗಮಂದಿರಕ್ಕೆ ಕರೆತಂದು  ಪೂಜ್ಯ ಹಾನಗಲ್ ಸದಾಶಿವ ಸ್ವಾಮಿಗಳ ಪಾದಕ್ಕೆ ಅರ್ಪಿಸಿದರು. 

ಬದುಕು ಬೆಳಗಿಸಿದ ಶಿವಯೋಗ ಮಂದಿರ:

ಶಿವಯೋಗ ಮಂದಿರದ ಮಣ್ಣು ಸ್ಪರ್ಶಿಸಿದ ಕೂಡಲೇ ಗುರುಸಿದ್ದಯ್ಯನಲ್ಲಿದ್ದ ತಂದೆ-ತಾಯಿ, ಬಂಧು-ಬಳಗದ ವ್ಯಾಮೋಹದ ಪೊರೆ  ಕಳಚಿಹೋಯಿತು. ಯಾಕೆಂದರೆ ಮಂದಿರಕ್ಕೆ ಕಾಲಿಟ್ಟ ತಕ್ಷಣವೇ ತಂದೆಯವರಿಗೆ ತಂದೆ ಎಂದು ಕರೆಯದೇ “ಗುರುಮೂರ್ತಯ್ಯನವರೇ, ಮಂದಿರಕ ಪೂರ್ವಕ್ಕ ದಾರಿ ಇಲ್ಲೇನ್ರಿ? ಎಂದು ಪ್ರಶ್ನೆ ಮಾಡಿದ್ದರು. ಎಳೆವಯಸ್ಸಿನಲ್ಲೇ ಎಂತಹ ವೈರಾಗ್ಯ ನೋಡಿ.  ಆಗ ತಂದೆಯವರು “ಇಲ್ಲಪ್ಪ” ಎಂದಾಗ “ಮುಂದ  ಇಲ್ಲಿ ದಾರಿಯಾದರ ನಡಿತೈತಲ್ರೀ ?” ಎಂದು ಮರು ಪ್ರಶ್ನಿಸಿದಾಗ ತಂದೆಯವರು  “ಕುಮಾರೇಶನ ಕೃಪೆ” ಎಂದಿದ್ದರು,  ಬಾಲ್ಯದಲ್ಲಿ ತಂದೆಯವರ ಮುಂದೆ ಹೇಳಿದಂತೆ,   ಮಲಪ್ರಭೆ ನದಿಗೆ ಸೇತುವೇ ನಿರ್ಮಿಸುವ ಮೂಲಕ ಶಿವಯೋಗ ಮಂದಿರಕ್ಕೆ ಪೂರ್ವಕ್ಕೆ ದಾರಿ ಮಾಡಿದರು. ಇದು ಲೀಲೆ. 

ಯತಿಕುಲ ತಿಲಕ ಹಾನಗಲ್ ಗುರುಕುಮಾರೇಶ್ವರ ಮಹಾಸ್ವಾಮಿಗಳಿಂದ ಸನ್ 1909 ರಲ್ಲಿ ಸ್ಥಾಪಿತವಾದ  ಶಿವಯೋಗಮಂದಿರ  ಮಲಪ್ರಭೆಯ ರಮ್ಯ ನಿಸರ್ಗದ ಒಡಲು.   ಗುರುಸಿದ್ದಯ್ಯ ಶಿವಯೋಗ ಮಂದಿರ ಸೇರಿದ ನಂತರ ಅಲ್ಲಿನ ಪದ್ದತಿಯಂತೆ ಗುರುಸಿದ್ದಾರ್ಯರಾಗಿ, ಗುರುಸಿದ್ದದೇವರಾಗಿ,   ಶಿವಯೋಗಮಂದಿರದ ವಾರಿಗೆ ಎಲ್ಲ ವಟು -ಸಾಧಕ, ಮರಿದೇವರಿಗಿಂತಲೂ  ಶಿಕ್ಷಣ, ಸಾಹಿತ್ಯ, ಯೋಗ, ಶ್ರಮದಾನ, ಪೂಜೆ, ಆಟ-ಪಾಠ, ಈಜು ಎಲ್ಲದರಲ್ಲೂ ಮುಂದಿದ್ದರು. ಇವರು  ಶಿವಯೋಗಮಂದಿರದ ವಿದ್ಯಾರ್ಜನೆ ಸಮಯದಲ್ಲಿ  ಶಿವಯೋಗಮಂದಿರವನ್ನು ವರ್ಣಿಸಿ ಬರೆದಿರುವ “ನೋಡಿರಿಲ್ಲಿದೆ ಶಿವನಮಂದಿರ” ಎಂಬ ಕವಿತೆ ಬಹಳ ಜನಪ್ರಿಯವಾಗಿದೆ. ಶಿವಯೋಗ ಮಂದಿರದಲ್ಲಿ  ಪೂಜ್ಯ ಹಾನಗಲ್ ಸದಾಶಿವ ಸ್ವಾಮಿಗಳು, ಹಂಡಿ ಮಾಸ್ತರರು, ದ್ಯಾಂಪುರ ಚನ್ನಕವಿಗಳು. ಪಗಡದಿನ್ನಿ ಬೃಹನ್ಮಠದ ಬಸವರಾಜ ಶಾಸ್ರ್ತಿಗಳು ಮುಂತಾದ ಪಂಡಿತೋತ್ತಮರ ಸನ್ನಿಧಿಯಲ್ಲಿ  ವಿದ್ಯಾರ್ಜನೆ ಮಾಡಿ,  ಪೂಜ್ಯ ಹಾನಗಲ್ ಸದಾಶಿವ ಸ್ವಾಮಿಗಳು  “ಮಂದಿರದ ಹೆಸರುಳಿಸುವ ಗಟ್ಟಿಮರಿ ಅಂದರೆ ನೀವ” ಎಂದು ಹೇಳುವಷ್ಟರ ಮಟ್ಟಿಗೆ  ಬೆಳೆದು ನಿಂತರು.  ಶಿವಯೋಗ ಮಂದಿರ ಗುರುಸಿದ್ದಯ್ಯನ  ಕತ್ತಲೆಯ ಬದುಕಿಗೆ ಬೆಳಕು, ನೀಡಿತು,  ಕೆಳದಿ ಅಜ್ಜನವರ ರೂಪದಲ್ಲಿ  ಸಮಾಜಕ್ಕೆ ಮಹಾನ್ ತಪಸ್ವಿಯನ್ನು ನೀಡಿತು. 

ಕಾಶಿಯಲ್ಲಿ ಉನ್ನತ ವ್ಯಾಸಂಗ ಮುಗಿಸಿ, ಶಿವಯೋಗ ಮಂದಿರಕ್ಕೆ ಮರಳಿದ  ಮರಿದೇವರೊಬ್ಬರಿಗೆ ಶಿವಯೋಗಮಂದಿರದಲ್ಲಿ ಮಾಡಿದ ಸನ್ಮಾನದಿಂದ ಪ್ರಭಾವಿತರಾಗಿ, ತಾವೂ ಅವರಂತಯೇ  ಹೆಚ್ಚಿನ ಉನ್ನತ ವ್ಯಾಸಂಗ ಮಾಡಬೇಕೆಂಬ ಮಹಾದಾಸೆಯಿಂದ,  ಹಿರಿಯ ಗುರುಗಳ ಅನುಮತಿ, ಶಿಷ್ಯ ಮಕ್ಕಳ ಸಹಾಯ ಸಹಕಾರದಿಂದ ಉನ್ನತ ವ್ಯಾಸಂಗಕ್ಕೆ  ಕಾಶಿ  ಕ್ಷೇತ್ರಕ್ಕೆ  ತೆರಳಿದರು.

ಕಾಶಿಯಲ್ಲಿ ಉನ್ನತ ವ್ಯಾಸಂಗ:

1952 ರ ಡಿಸೆಂಬರ್ 07 ನೇ ತಾರೀಖಿಗೆ ಕಾಶಿಗೆ ಕಾಲಿರಿಸಿದ  ಇಲಕಲ್ ಗುರುಸಿದ್ಧ ದೇವರು ಕಾಶಿಯ ಜಂಗಮವಾಡಿ  ಮಠದಲ್ಲಿ 05 ವರ್ಷ, ಹಾಗೂ ಹನುಮಾನ್ ಘಾಟ್‍ನಲ್ಲಿ 11 ವರ್ಷ ಹೀಗೆ 16 ವರ್ಷಗಳ ಕಾಲ ಕಾಶಿ ನಿವಾಸಿಗಳಾಗಿದ್ದುಕೊಂಡು, ಉನ್ನತ ವ್ಯಾಸಂಗ ಮಾಡಿದರು. ಕಾಶಿ ಹಿಂದೂ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಎಂ.ಎ.ಯಲ್ಲಿ “ವೇದಾಂತ” ವಿಷಯವನ್ನು  ಅಧ್ಯಯನ ಮಾಡಿದರು.  ಪ್ರತಿ ವರ್ಷ ವಿಶ್ವ ವಿದ್ಯಾಲಯದ ತತ್ವ –ಜ್ಞಾನ- ವಿಭಾಗದಲ್ಲಿ “ಮೆರಿಟ್ ಸ್ಕಾಲರಶಿಫ್” ಪಡೆದು ಅಂತಿಮ ವರ್ಷದ “ವೇದಾಂತ ಶಾಸ್ತ್ರಾಚಾರ್ಯ” ಪರೀಕ್ಷೆಯಲ್ಲಿ  14 ಸಾವಿರ ಜನ ವಿದ್ಯಾರ್ಥಿಗಳಲ್ಲಿ ಸರ್ವ ಪ್ರಥಮ ಸ್ಥಾನಗಳಿಸಿ ಪ್ರಥಮ ರ್ಯಾಂಕ್  [ಈiಡಿsಣ ಖಚಿಟಿಞ] ಪಡೆದುಕೊಂಡರು. [1959-60] ಈ ಸಾಧನೆಯು ವೀರಶೈವ ಮಠಾಧೀಶರಲ್ಲಷ್ಟೆ ಅಲ್ಲದೆ ದಕ್ಷಿಣ ಭಾರತೀಯರೊಬ್ಬರು ಮಾಡಿದ ಅಂದಿನ ವಿಶಿಷ್ಟ ಸಾಧನೆ.  ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಪಡೆಯುವ ಮೂಲಕ ಕಾಶ್ಮೀರದ ಅಂದಿನ ಮಹಾರಾಜ ಕರಣಸಿಂಗ್ ರವರಿಂದ ಬಂಗಾರದ ಪದಕವನ್ನು ಪಡೆದುಕೊಂಡರು.

         ಕಾಶಿ ಹಿಂದೂ ವಿಶ್ವವಿದ್ಯಾಲಯದಿಂದ “ಶಾಸ್ತ್ರಾಚಾರ್ಯ” ರಾದರೆ, ಕಲ್ಕತ್ತ ವಿಶ್ವವಿದ್ಯಾಲಯದಿಂದ “ಕಾವ್ಯತೀರ್ಥ”ಪದವಿ [1954], ಡಾಕಾ ವಿಶ್ವವಿದ್ಯಾಲಯದಿಂದ [ಆಗಿನ ಪೂರ್ವ ಪಾಕಿಸ್ತಾನ –ಈಗಿನ ಬಾಂಗ್ಲಾದೇಶ] “ಕಾವ್ಯನಿಧಿ” ಪದವಿ [1955] ಯನ್ನು ಪಡೆದುಕೊಂಡರು.

ದೆಹಲಿಯ ಕೇಂದ್ರ ಸರ್ಕಾರದಿಂದ ಸ್ಕಾಲರ್‍ಶಿಫ್ ಪಡೆದು, ಪಂಡಿತ ಶ್ರೇಷ್ಠರೂ ಹಾಗೂ ಭಾರತ ಸಂಸ್ಕøತ  ಆಯೋಗದ  ಅಧ್ಯಕ್ಷರಾಗಿದ್ದ ಪಂಡಿತ ವಿ.ಎಸ್.ರಾಮಚಂದ್ರ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ “ಅದ್ವೈತ ವೇದಾನ್ತ ಶಾಕ್ತ ತನ್ತ್ರಯೋ:ಸಾಮ್ಯ ವೈಷಮ್ಯ ಚಿನ್ತನಮ್ “ ಎಂಬ ಆಧ್ಯಾತ್ಮಿಕ ತತ್ವಜ್ಞಾನದ ಸಂಸ್ಕøತ ಪಿ.ಎಚ್.ಡಿ. ಗ್ರಂಥವನ್ನು ಸಮರ್ಪಿಸಿ, 8 ನೇ ಜೂನ್ 1973 ರಲ್ಲಿ  ಡಾಕ್ಟರೇಟ್ ಪದವಿಗಳಿಸಿಕೊಂಡರು. ಇದಲ್ಲದೆ, ಅದುವರೆಗೂ ಯಾವ ವೀರಶೈವ ಮಠಾಧೀಶರು ಕಾಶಿ ಹಿಂದೂ ವಿಶ್ವ ವಿದ್ಯಾಲಯದ ಸಂಸ್ಕøತ ಮಹಾವಿದ್ಯಾಲಯದ “ಪ್ರಾಚ್ಯ-ಧರ್ಮ-ವಿಜ್ಞಾನ” ವಿಭಾಗದಿಂದ ಪಡೆದಿರಲಾರದಂತಹ “ದರ್ಶನ ಶಾಸ್ತ್ರ ಚಕ್ರವರ್ತಿ”  ಎಂಬ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಈ ಸಾಧನೆ ಇಂದಿಗೂ ಅಲ್ಲಿ ದಾಖಲೆಯಾಗಿ ಉಳಿದಿದೆ. ಜೊತೆಗೆ ಎಲ್‍ಎಲ್‍ಬಿ ಪದವಿಯನ್ನು ಸಹ ಪಡೆದುಕೊಂಡರು.

ಕಾಶಿಯಲ್ಲಿ ಉನ್ನತ ಅಧ್ಯಯನದೊಂದಿಗೆ ಬಿಡುವಿನ ಅವಧಿಯಲ್ಲಿ  ರಾಮಕೃಷ್ಣಾಶ್ರಮ, ಥಿಯೋಸಫಿಕಲ್ ಸೋಸೈಟಿ ಮುಂತಾದ ಆಧಾತ್ಮಿಕ ಕೇಂದ್ರಗಳಗೆ ಬೇಟಿ ನೀಡುತ್ತಿದ್ದರು.ಅಲ್ಲಿ ನಡೆಯುತ್ತಿದ್ದ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಅಲ್ಲದೆ, ಶ್ರಾವಣ ಮಾಸ ಮತ್ತು ಅಧ್ಯಯನ ಬಿಡುವಿನ ಸಮಯದಲ್ಲಿ  ಹಿಮಾಲಯ, ಋಷಿಕೇಶ, ಗಂಗಾನದಿ ಶಾಂತ ಪರಿಸರದ ಘಾಟ್‍ಗಳಲ್ಲಿ  ತಿಂಗಳುಗಟ್ಟಲೆ ಕಠಿಣ ತಪಸ್ಸು  ಆಚರಿಸುತ್ತಿದ್ದರು.  ಹೀಗೆ  ಒಟ್ಟು 16 ವರ್ಷಗಳ ಕಾಶಿ ನಿವಾಸಿಗಳಾಗಿ, ಉನ್ನತ ವ್ಯಾಸಂಗವನ್ನು  ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಗಳಿಸಿ  ಶಿವಯೋಗಮಂದಿರಕ್ಕೆ ದೊಡ್ಡ ಹೆಸರು, ಗೌರವನ್ನು ತಂದುಕೊಟ್ಟರು.

ಕೆಳದಿ ರಾಜಗುರು ಹಿರೇಮಠದ ಪಟ್ಟಾಧ್ಯಕ್ಷರಾಗಿ:

ಕಾಶಿಯಿಂದ ಮರಳಿ ಶಿವಯೋಗಮಂದಿರಕ್ಕೆ ಬಂದ  ನಂತರ, ಶಿವಯೋಗ ಮಂದಿರದಲ್ಲಿ   ವಟು-ಸಾಧಕರಿಗೆ ಪಾಠ ಹೇಳುತ್ತಿದ್ದರು. ಆ ಸಮಯದಲ್ಲಿ  ಕೆಳದಿ ರಾಜಗುರು ಹಿರೇಮಠದ ಸ್ವಾಮಿಗಳಾಗಬೇಕು ಎಂಬ ಬೇಡಿಕೆ ಆ ಪ್ರಾಂತ್ಯದ ಭಕ್ತರಿಂದ ಬಂದಿದ್ದನನ್ನು  ಒಪ್ಪಿ,   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು  ಕೆಳದಿ ಯ ಸಮೀಪದ ಬಂದಗದ್ದೆಯಲ್ಲಿರುವ, ಕೆಳದಿಯ ನಾಯಕರು ಸ್ಥಾಪಿಸಿ, ಗುರುವಿಗರ್ಪಿಸಿದ ಕೆಳದಿ ಸಂಸ್ಥಾನ ರಾಜಗುರು ಹಿರೇಮಠದ ಪಟ್ಟಾಧ್ಯಕ್ಷರಾಗಿ   ಸ್ವಸ್ತಿಶ್ರೀ ವಿಜಯಾಭ್ಯುದಯ ಶ್ರೀಮನೃಪಶಾಲಿವಾಹನ ಶಕ 1891ಕ್ಕೆ ಸೌಮ್ಯನಾಮ ಸಂವತ್ಸರದ ಅಶ್ವಯುಜ ಶುದ್ಧ ವಿಜಯ ದಶಮಿಯ ದಿನಾಂಕ:20-10-1969 ನೇ ಇಸ್ವಿಯ ಸೋಮವಾರದಂದು ಅಧಿಕಾರ ವಹಿಸಿಕೊಂಡು  ನ್ಯಾಯಾಲಯದಲ್ಲಿ  ಹಲವಾರು ವ್ಯಾಜ್ಯಗಳ ಕಾರಣದಿಂದ ತೀರಾ ಹಿಂದುಳಿದಿದ್ದ ಮಠವನ್ನು ಅಭಿವೃದ್ದಿ ಪಡಿಸಿದರು. ಮಠದಲ್ಲಿ ಬಡಮಕ್ಕಳಿಗೆ ಉಚಿತ ಪ್ರಸಾದ ನಿಲಯ ಪ್ರಾರಂಭ ಮಾಡಿ, ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿದರು, ಶ್ರೀಗಳ ಆಶ್ರಯದಲ್ಲಿ ವಿದ್ಯಾರ್ಜನೆ ಮಾಡಿದವರಲ್ಲಿ ಸರ್ಕಾರದ ವಿವಿಧ ಇಲಾಖೆ, ಹುದ್ದೆಗಳಲ್ಲಿ, ಪತ್ರಿಕೋದ್ಯಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಶಿವಯೋಗ ಮಂದಿರ – ಅದರ ಸಂರಕ್ಷಣೆ:

 ಪೂರ್ಣತ್ವಕಾರ ಡಾ:ಕೆಳದಿ ಶ್ರೀಗಳು ಪರಮಾತ್ಮನ ಸ್ವರೂಪ ಶ್ರೀ ಮ.ನಿ.ಪ್ರ. ಶ್ರೀ ಹಾನಗಲ್ ಕುಮಾರ ಮಹಾಸ್ವಾಮಿಗಳನ್ನು ತಮ್ಮ ಹೃದಯ ಮಂದಿರದಲ್ಲಿ ಇರಿಸಿಕೊಂಡು, ತಮ್ಮ ಜೀವನ ರಥವನ್ನು ಶಿವನ ಪಥದಲ್ಲಿ ಸಾಗಿಸಿದವರು.   ಶ್ರೀಮದ್ ವೀರಶೈವ ಶಿವಯೋಗಮಂದಿರದ ಪ್ರಚಾರ ಹಾಗೂ  ಪ್ರಚುರಕ್ಕಾಗಿ ಹಗಲಿರಳು ಹೋರಾಡಿದವರು.

1976 ರಲ್ಲಿ ಶಿವಯೋಗ ಮಂದಿರದ ಟ್ರಸ್ಟ ಕಮಿಟಿ ಸದಸ್ಯರಾಗಿ, 1984 ರಲ್ಲಿ ಶಾಖಾ ಬಾದಾಮಿ ಮಠದ ಸಂಚಾಲಕರಾಗಿ, ಶಿವಯೋಗಮಂದಿರ  ಹಾಗೂ ಅದಕ್ಕೆ ಸಂಬಂಧಿಸಿದ ಆಸ್ತಿ, ಮಠಗಳ ರಕ್ಷಣೆಗಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಅದರಲ್ಲೂ ಶಾಖಾ ಬಾದಾಮಿ ಮಠದ ರಕ್ಷಣೆಗಾಗಿ ತಮ್ಮ ಪ್ರಾಣದ ಹಂಗು ತೊರೆದು ದುಡಿದ್ದಾರೆ.  ಈ ಬಗ್ಗೆ ಶ್ರೀ ಅನ್ನದಾನೇಶ್ವರ ಮಹಾಸ್ವಾಮಿಗಳು, ಸಂಸ್ಥಾನ ಮಠ, ಮುಂಡರಗಿ ರವರು ತಮ್ಮ “ಕಾರಣಿಕ ಸುಕುಮಾರ” ಗ್ರಂಥದಲ್ಲಿ  “ಶಿವಯೋಗಮಂದಿರ ಶಾಖಾ ಬಾದಾಮಿ ಮಠದ ಏಳಿಗೆಗಾಗಿ ಕೆಳದಿ ಡಾ:ಗುರುಸಿದ್ಧ ದೇವ ಶಿವಾಚಾರ್ಯರು, ಹೆಚ್ಚು ಕಷ್ಟಪಟ್ಟಿದ್ದಾರೆ” ಎಂಬುದನ್ನು ಉಲ್ಲೇಖಿಸಿದ್ದಾರೆ.

ಪರಮಪೂಜ್ಯ ಮೌನ ತಪಸ್ವಿ ಶ್ರೀಮ.ನಿ.ಪ್ರ ಜಡೆಯ ಶಾಂತಲಿಂಗ ಮಹಾಸ್ವಾಮಿಗಳು, ಶಾಂತಲಿಂಗೇಶ್ವರ ವಿರಕ್ತಮಠ, ನಿಂಬಾಳ, ಸಮಾಧಾನ ಧ್ಯಾನ ಕೇಂದ್ರಗಳು, ಕಲ್ಬುಗಿ, ರವರು “ ಡಾ:ಗುರುಸಿದ್ಧ ದೇವ ಶಿವಾಚಾರ್ಯ ಮಹಾಸ್ವಾಮಿಗಳು, ಕೆಳದಿ ಸಂಸ್ಥಾನ ರಾಜಗುರು ಹಿರೇಮಠ ರವರು “ವೀರಶೈವ ತತ್ವ -ಸಿದ್ಧಾಂತದ ಪ್ರತಿಬೋಧಕ, ಪ್ರತಿರೂಪಕರಾಗಿದ್ದರು,  ಹಾನಗಲ್ಲ   ಶ್ರೀ ಗುರುಕುಮಾರ ಕೃಪೆಯ ಕರುಣೆಯ ಕಂದರಾದ ಕೆಳದಿ ಪೂಜ್ಯರು ಶಿವಯೋಗ ಮಂದಿರದ ಸರ್ವತೋಮುಖ ಶ್ರೇಯೋಭಿವೃದ್ದಿಗೆ ತಮ್ಮ ಜೀವನವನ್ನೆ ಮುಡಿಪಾಗಿರಿಸಿದ್ದ ಮಹಾತ್ಮರವರು”  ಎಂದು ಹಲವಾರು ತಮ್ಮ ಬರವಣಿಗೆಗಳಲ್ಲಿ  ಸ್ಮರಿಸಿರುವುದನ್ನು ಕಾಣಬಹುದಾಗಿದೆ.

ಏನೆ ಕಾರ್ಯವಗೈದರದು ನಿಜ

ಹಾನಗಲ್ಲ ಕುಮಾರ ಕೃಪೆಯದು

ಮಾನದಿಂದಲಿ ನುಡಿವ ಗುರುಸಿದ್ಧೇಶ ಮನಸಾರೆ

ಪ್ರಾಣವೇ ಶಿವಯೋಗಮಂದಿರ

ಧ್ಯಾನವೇ ಸುಕುಮಾರ ನಾಮವು

ತ್ರಾಣವೇ ವಟುಸಾಧಕರು ನಿಜ ಎಂದಿಹನು ಗುರುಸಿದ್ಧ ||

ಎಂಬ ಕೆಳದಿ ಗುರುಸಿದ್ದೇಶ್ವರ ಪುರಾಣದ ಕವಿ ವಾಣಿಯಂತೆ ಶಿವಯೋಗ ಮಂದಿರ ಮತ್ತು ಅದರ ನೀತಿ, ನಿಯಮಾವಳಿ, ಆಸ್ತಿ ಸಂರಕ್ಷಣೆ ವಿಚಾರದಲ್ಲಿ  ಕೆಳದಿ ಶ್ರೀಗಳು ತಮ್ಮ  ತನು-ಮನ-ಪ್ರಾಣವನ್ನು ಮುಡಿಪಿಟ್ಟು ದುಡಿದ ದಿವ್ಯಾತ್ಮರವರು.

ಶಿವಯೋಗ ಮಂದಿರದಲ್ಲಿ  ಪಾಠ-ಪ್ರವಚನ :

ಕೆಳದಿ ಶ್ರೀಗಳು ಶಿವಯೋಗ ಮಂದಿರದಲ್ಲಿ  ವಟು –ಸಾಧಕ – ಮರಿದೇವರುಗಳಿಗೆ  ಧಾರ್ಮಿಕ  ವಿಧಿ – ವಿಧಾನಗಳನ್ನು , ಆಧ್ಯಾತ್ಮಿಕ ವಿಚಾರಗಳನ್ನು ಪ್ರಾತ್ಯಕ್ಷತೆಯಿಂದ ತಿಳಿಸಿ ಹೇಳುತ್ತಿದ್ದರು.  ವಿವಿಧ ವಿಷಯಗಳಲ್ಲಿ ಪರಿಣಿತರಾದ ಸಂಪನ್ಮೂಲ ವ್ಯಕ್ತಿಗಳನ್ನು  ಕರೆಸಿ  ಪಾಠ  ಹೇಳಿಸುತ್ತಿದ್ದರಲ್ಲದೆ ಪ್ರಾಯೋಗಿಕ ತರಬೇತಿಗಳನ್ನು ಸಹ ನೀಡಿಸುತ್ತಿದ್ದರು.

ಮರಿದೇವರಿಗೆ ಆಧ್ಯಾತ್ಮ ಪಾಠ ಹೇಳುವಾಗ ಕೆಳದಿ ಶ್ರೀಗಳು ತೆಂಗಿನಕಾಯಿ ಹಾಗೂ ಬಾಳೆಯ ಹಣ್ಣು ಇವುಗಳನ್ನು ಪ್ರಾಯೋಗಿಕವಾಗಿ ಬಳಸಿಕೊಂಡು ಹೇಳುತ್ತಿದ್ದರು.

ಪರಮಾತ್ಮನು “ಬ್ರಹ್ಮ –ವಿಷ್ಣು-ಮಹೇಶ್ವರ” ಎಂಬ ಮೂರು ಭಾಗಗಳಾಗಿದ್ದಾನೆ. “ಸೃಷ್ಟಿ ಕಾರ್ಯವನ್ನು ಬ್ರಹ್ಮನ ಮೂಲಕ, ರಕ್ಷಣಾ ಕಾರ್ಯವನ್ನು ವಿಷ್ಣುವಿನ ಮೂಲಕ ಹಾಗೂ ಲಯ ಕಾರ್ಯವನ್ನು ಮಹೇಶ್ವರನ ಮೂಲಕ ನೆರವೇರಿಸುತ್ತಾನೆ” ಎಂಬ ವಿಚಾರಗಳನ್ನು ತೆಂಗಿನಕಾಯಿಯಿಂದ ಶ್ರೀಗಳು ಪ್ರಾತ್ಯಕ್ಷಿಕವಾಗಿ ತೋರಿಸುತ್ತಿದ್ದರು. ಸುಲಿದ ತೆಂಗಿನಕಾಯಿಯಲ್ಲಿ ಮೂರು ಪ್ರತ್ಯೇಕ ಭಾಗಗಳು ಕಂಡುಬರುತ್ತವೆ, ದೊಡ್ಡದಾದ ಭಾಗವು ಬ್ರಹ್ಮ ಸೂಚಕ, ಅದರ ಎಡ ಭಾಗವು ವಿಷ್ಣು ಸೂಚಕ ಮತ್ತು ಬಲಭಾಗವು  ಮಹೇಶ್ವರ ಸೂಚಕಗಳಾಗಿರುತ್ತವೆ. ಅದರಲ್ಲಿ ಪರಮಾತ್ಮನಿಗೆ ಇರುವಂತೆ ಮೂರು ಕಣ್ಣುಗಳು ಇವೆ. ದೊಡ್ಡ ಭಾಗದಲ್ಲಿರುವ ಕಣ್ಣಿನಿಂದ ಮಾತ್ರ ತೆಂಗಿನಕಾಯಿಯು ಮೊಳಕೆಯೊಡೆದು, ಸಸಿಯಾಗಿ, ಮರವಾಗಿ ಫಲಪ್ರದವಾಗುವುದು.

ಹಾಗೆಯೇ ಬಾಳೆ ಹಣ್ಣಿನಲ್ಲೂ ಸಹ ಮೂರು ಭಾಗಗಳಿವೆ. “ಏಕ ಮೂರ್ತಿ ತ್ರಯೋಭಾಗ” ಎಂಬುದಕ್ಕೆ ಇದು ನಿದರ್ಶನವಾಗಿದೆ ಅಂತಾ ಕೆಳದಿ ಶ್ರೀಗಳು ಪಾಠವನ್ನು ಹೇಳುತ್ತಿದ್ದರು.

ಓಂ ಮತ್ತು    ಇವುಗಳ  ಅರ್ಥದ ಮರ್ಮ:

         ಒಮ್ಮೆ ಪಾಠ ಬೋಧನೆಯ ಸಮಯದಲ್ಲಿ ಓಂ ಮತ್ತು    ಇವುಗಳ ಅರ್ಥದ ಮರ್ಮ ತಿಳಿಸಿ, ಓಂ = ಅ+ಉ+ಮ್ ಇದು ಮೂರಕ್ಷರಗಳ ಸಂಯೋಜನೆಯಿಂದ ಆಗಿರುವುದು. ಬ್ರಹ್ಮ – ವಿಷ್ಣು- ಮಹೇಶ್ವರರ ಸಂಕೇತವೇ ಓಂ ಆಗಿರುತ್ತದೆ. ಆದರೆ    ಇದು ಅಕ್ಷರ ಅಲ್ಲ. ಅದೊಂದು ಧರ್ಮದ ಸಂಕೇತ, ಅದು ಸರ್ವ ಧರ್ಮವನ್ನು ಪ್ರತಿನಿಧಿಸುತ್ತದೆ. ಹೇಗೆಂದರೆ   ನ್ನು ಬಿಚ್ಚಿ ಇಟ್ಟಾಗ ತ್ರಿಶೂಲ   ಸಂಕೇತವು ಪರಮಾತ್ಮನ ಕೈಯಲ್ಲಿರುವುದು ಇದು ವೀರಶೈವರ ಧರ್ಮದ ದ್ಯೂತಕವಾಗಿ. ಇದು ಇಸ್ಲಾಂ ಧರ್ಮೀಯರ ಸಂಕೇತವಾದ ಅರ್ಧ ಚಂದ್ರಾಕೃತಿಯನ್ನು ತೋರಿಸುತ್ತದೆ. ಕ್ರೈಸ್ತ್ ಧರ್ಮೀಯರ ಕ್ರಾಸ್ ದಂತೆಯೂ ಇದು ಇರುತ್ತದೆ. ಹೀಗಾಗಿ ಇದು ಸರ್ವಧರ್ಮೀಯರ ಸಂಕೇತವಾಗಿದೆ ವಿನಃ ಅದು ಅಕ್ಷರವಲ್ಲ. ಅಂತಾ ಸ್ಪಷ್ಟೀಕರಿಸಿದರು.  ಅಧಿಕ ಚಿನ್ಹೆ,  ಭಾಗಾಕಾರ ಚಿನ್ಹೆ,  ಗುಣಾಕಾರ ಚಿನ್ಹೆ,   ಬರಾಬರಿ ಚಿನ್ಹೆ, ಒಟ್ಟಿನಲ್ಲಿ   ಕಾರವು ಚಿನ್ಹೆಯೆ ಆಗಿದೆ ; ಅಕ್ಷರ ಅಲ್ಲ.  ಹೀಗೆ ಕೆಳದಿ ಶ್ರೀಗಳವರ ಜ್ಞಾನ ಆಳವಾಗಿ, ಅಪಾರವಾಗಿ, ಅಪರಿಮಿತವಾಗಿ ಹೊಂದಿದ್ದ ಪುಣ್ಯಾತ್ಮ, ಧರ್ಮಾತ್ಮ, ದಿವ್ಯಾತ್ಮ, ಮಹಾತ್ಮ ಅಷ್ಟೇ ಏಕೆ ಸಾಕ್ಷಾತ್ ಪರಮಾತ್ಮರೆ ಆಗಿದ್ದಾರೆ.

ವೀರಶೈವ ಧರ್ಮ:

ವೀರಶೈವ ಧರ್ಮ ಭಾವಲಿಂಗದವರೆಗೆ ವಿಸ್ತಾರವಾಗಿರುತ್ತದೆ. ನವ ಲಿಂಗಗಳು ಹಂತ ಹಂತವಾಗಿ ಹೀಗೆ ವಿಸ್ತøತಗೊಳ್ಳುತತವೆ. [1] ಆಚಾರ ಲಿಂಗ  [2] ಗುರುಲಿಂಗ [3] ಶಿವಲಿಂಗ [4] ಜಂಗಲಿಂಗ [5] ಪ್ರಸಾದ ಲಿಂಗ [6] ಮಹಾಲಿಂಗ [7] ಇಷ್ಟಲಿಂಗ [8] ಪ್ರಾಣಲಿಂಗ [9] ಭಾವಲಿಂಗ ಹೀಗೆ ಅಂಗ ಲಿಂಗ ಸ್ವರೂಪವಾಗಿ ಲಿಂಗಾಂಗ ಸಾಮರಸ್ಯದ ರಹಸ್ಯದ ಗುಟ್ಟನ್ನು ಇಡಿ ಇದ್ದದ್ದನ್ನು ಬಿಡಿಯಾಗಿ ತಿಳಿಸಿದರು. ಭಾವದಂತೆ ಬ್ರಹ್ಮನಿದ್ದಾನೆ ; ಭಾವದಲ್ಲಿ ಭಗವಂತನಿದ್ದಾನೆ, ಅಂತೆಯೇ ಶಿವಯೋಗಿಗಳು ಅವರವರ ಭಾವಕ್ಕೆ, ಅವರವರ ತೆರನಾಗಿ ಇರುತಿಹರು ಶಿವಯೋಗಿಗಳು ಎಂದು ವರ್ಣಿಸಿದ್ದಾರೆ  ಹೀಗೆ ಸರಳವಾಗಿ   ತಿಳಿಸಿ ಹೇಳುತ್ತಿದ್ದರು.

         ವೀರಶೈವ ಧರ್ಮದ ಲಾಂಛನದಲ್ಲಿ ಆರು ಸ್ಥಲಗಳಿವೆ. ಅದರ ಮಂತ್ರ ಓಂ ನಮಃ ಶಿವಾಯ ಎಂಬ ಷಡಕ್ಷರ ಮಂತ್ರವಾಗಿರುವುದು. ಈ ಆರು ಅಕ್ಷರಗಳು ಧರ್ಮಲಾಂಛನದಲ್ಲಿ ನಮೂದಿತವಾಗಿರುತ್ತವೆ. ಇದು ದೀಕ್ಷಾ ಮಂತ್ರವೂ ಹೌದು. 07 ಕೋಟಿ ಮಂತ್ರಗಳಲ್ಲಿ ಅತ್ಯಂತ ಶ್ರೇಷ್ಠ “ಮಹಾ” ಮಂತ್ರ ಇದಾಗಿದೆ. ಇದು ಪರಮಾತ್ಮನ ನಾಮಸ್ಮರಣೆಯಾಗಿರುವುದು. “ನೀನ್ಯಾಕೋ ? ನಿನ್ನ ಹಂಗ್ಯಾಕೋ ? ನಿನ್ನ ನಾಮದ ಬಲವೊಂದಿದ್ದರೆ ಸಾಕು” ಓಂ ನಮಃ ಶಿವಾಯ ಅಂತಾ ನಾಮ ಬಲದಿಂದ ಬರಡು ಜೀವನದಲ್ಲಿ ಚೈತನ್ಯ ತುಂಬುವ ಚೇತನ ಮಂತ್ರ ಇದಾಗಿದೆ ಎಂದು  ಹೇಳುತ್ತಿದ್ದರು.

ವೀರಶೈವ ಎಂಬ ಮಾರ್ಮಿಕವಾಗಿ ಕೆಳದಿ ಶ್ರೀಗಳು ಅರ್ಥೈಸಿದ್ದಾರೆ. ವಿ =ವಿದ್ಯೆ, ರ =ರಮಿಸು,       ಶೈವ =ಶಿವನ ಆರಾಧಕನು, ಯಾವನು ಶಿವನ ಆರಾಧಕನಾಗಿದ್ದು ವಿದ್ಯೆಯಿಂದ ರಮಿಸುವನೋ ಅವನೇ ವಿರಶೈವ ಎಂದಿದ್ದಾರೆ. ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವೀರ =ಶೂರ + ಧೀರ ಅಂತಾ ಅರ್ಥೈಸಿದ್ದಾರೆ. “ಶೂರ” ಇದು ದೇಹ ಧಾಢ್ರ್ಯಡ ಸೂಚಕವಾಗಿದರೆ “ಧೀರ” ಇದು ಮನೋ ಬಲವನ್ನು ತಿಳಿಸುವುದು. ದೇಹಧಾಢ್ರ್ಯ ಹಾಗೂ ಮನೋಬಲ ಇವೆರಡರ ಸಮ್ಮಿಳನದ ದ್ಯೋತಕವಾಗಿರುವುದೆ “ವೀರಶೈವ” ವಾಗಿದೆ. ಎಂದು ನೈಜ ಧಾರ್ಮಿಕತೆಯನ್ನು ತಿಳಿಸಿ ಹೇಳಿದರು. “ಧೈರ್ಯಂ ಸರ್ವತ್ರ ಸಾಧನಂ” ಇದು ನಿಜ ಧರ್ಮದ ಸಾರವಾಗಿದೆ. “ಶರೀರಂ ಆದ್ಯಂ ಖಲು ಧರ್ಮ ಸಾಧನಂ” ಎಂಬ ವೇದ ವಾಕ್ಯ ನಿಜವೆಂದು ಸಾರುತ್ತಿದ್ದಾರೆ ಕೆಳದಿ ಶ್ರೀಗಳು.

ಚೀನಿಯರ ವಿಚಾರಧಾರೆಯಂತೆ ಅಂದರೆ “ಒಂದು ವರ್ಷದ ಫಲ ಬೇಕಾದರೆ ಧಾನ್ಯದ ಬೀಜ ಬಿತ್ತಬೇಕು. ಹತ್ತು ವರ್ಷದ ಫಲ ಬೇಕಾದರೆ ಹಣ್ಣಿನ ಗಿಡದ ಬೀಜ ಬಿತ್ತಬೇಕು,, ನೂರು ವರ್ಷದ ಫಲ ಬೇಕಾದರೆ ವಿದ್ಯೆಯ ಬೀಜ ಬಿತ್ತಬೇಕು” ಎಂಬ ಭಾವವನ್ನು ತಳೆದು ಕೆಳದಿ ಶ್ರೀಗಳು  ಶಿವಯೋಗ ಮಂದಿರದ ವಟು ಸಾಧಕರಿಗೆ ವಿದ್ಯೆಯೆಂಬ ಬೀಜವನ್ನು ಧಾರೆಯರೆದಿದ್ದಾರೆ.

ಅದೇ ರೀತಿ ಶಿವಯೋಗ ಮಂದಿರದಲ್ಲಿ  ಅಶಿಸ್ತು, ಕುಮಾರ ಸ್ವಾಮಿಗಳು ಹಾಕಿದ ನೇಮವನ್ನು ಭಂಗಮಾಡುವಂತಿರಲಿಲ್ಲ. ಒಮ್ಮೆ ಶಿವಯೋಗಮಂದಿರದಲ್ಲಿ  ಒಬ್ಬ ಮರಿದೇವರ ಪೂಜಾ ಕೊಠಡಿಯಲ್ಲಿ ಕೆಳದಿ ಶ್ರೀಗಳು ಮೆಣಸಿನಕಾಯಿಯನ್ನು ಕಂಡರು. ಕೂಡಲೇ ಶ್ರೀ ಹಾನಗಲ್ ಕುಮಾರ ಸ್ವಾಮಿಗಳು ಹಾಕಿದ ನೇಮ ಭಂಗವಾಯಿತು ಎಂದು ತಿಳಿದು ಆ ಮರಿದೇವರಿಗೆ ಶಿಕ್ಷೆ ನೀಡಿ, ಮರಿದೇವರನ್ನಾಗಿಸಲು ಶ್ರೀ ಬನಶಂಕರಿ ದೇವಸ್ಥಾನದವರೆಗೆ ಒಂದು ಕಲ್ಲನ್ನು ಆ ಮರಿದೇವರ ತಲೆಯ ಮೇಲೆ ಹೊರಿಸಿ, ತಾವು ಅವರ ಹಿಂದೆ ನಡೆದುಕೊಂಡು ಹೋಗಿ ಬಂದರು. ಇದು ಕೆಳದಿ ಶ್ರೀಗಳು ಶಿವಯೋಗಮಂದಿರದ ನಿಯಮಾವಳಿಗಳನ್ನು ಎಷ್ಟೊಂದು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದರು, ಹಾಗೂ  “ಹಾನುಗಲ್ಲ ಕುಮಾರ ಮಹಾಸ್ವಾಮಿಗಳವರ ಮೇಲೆ ಎಷ್ಟೊಂದು ಪ್ರೀತಿ ಗೌರವ ವಿಶ್ವಾಸ ಇಟ್ಟಿದ್ದರು.  ಎಂಬುದು ಎದ್ದು ಕಾಣುತ್ತದೆ.

 “ಜೀವನ ಸುಗಮವಾಗಿ, ಸುಂದರವಾಗಿ ಸಾಗಬೇಕಾದರೆ ದಿನ ನಿತ್ಯದ ಖರ್ಚನ್ನು  ಅತ್ಯವಶ್ಯಕ,      ಅವಶ್ಯಕ  ಮತ್ತು  ಅನಾವಶ್ಯಕ “ ಇವುಗಳನ್ನು ಕ್ರಮವಾಗಿ ಅರಿತು ಮಾಡಬೇಕು. “ಹೊಸ ದುಡ್ಡು ಬರುವವರೆಗೆ, ಹಳೆ ದುಡ್ಡನ್ನು ಕಾಪಾಡಿಕೊಂಡು ಬರಬೇಕು” ಎಂಬ ಮಹತ್ವದ ಜ್ಞಾನ  ಪೂಜ್ಯ ಕೆಳದಿ ಶ್ರೀಗಳು ನೀಡುತ್ತಿದ್ದರು, ಇದನ್ನು ಅನುಸರಿಸಿದ ಬಹಳ ಜನರಿಗೆ ಆರ್ಥಿಕ ತೊಂದರೆಗಳು ಇಲ್ಲದಂತಾದವು.

ಬೇಸಿಗೆಯಲ್ಲಿ ಪ್ರವಾಸಕ್ಕೆ ವಟು-ಸಾಧಕರು, ಮರಿದೇವರುಗಳನ್ನು ಮಲೆನಾಡು ಕೆಳದಿಗೆ ಕರೆದಕೊಂಡು  ಹೋಗುತ್ತಿದ್ದರು. ಹದಿನೈದು ದಿವಸ ತಿಂಗಳಾನುಗಟ್ಟಲೆ ಕೆಳದಿ ಮಠದಲ್ಲಿಟ್ಟುಕೊಂಡು ಸಂಸ್ಕøತ ಪಾಠ ಪ್ರವಚನಗಳನ್ನು ನೀಡುತ್ತಿದ್ದರು.   ಸಾಗರದ ರಾಜಗುರು ಕಲ್ಯಾಣ ಕೇಂದ್ರದ ಉದ್ಘಾಟನೆ ಸಮಯದಲ್ಲಿ  36 ಮರಿದೇವರ ಮಂಟಪ ಪೂಜೆ ಮಾಡಿ, ಅವರಿಗೆ ಬೆಳ್ಳಿಯ ಪೂಜಾ ಪರಿಕರಗಳನ್ನು ನೀಡಿದರು. ಪ್ರತಿ ವರ್ಷ ಶ್ರಾವಣ ಮಾಸದ  ಮುಕ್ತಾಯ ದಿನದಂದು  ಅಮವಾಸ್ಯೆ ಪಾಢ್ಯದ ದಿನದಂದು ಬಾದಾಮಿ ಶಾಖಾ ಮಠದಿಂದ ಮಹಾಕೂಟ ಮಾರ್ಗವಾಗಿ ಶಿವಯೋಗ ಮಂದಿರದವೆಗೆ ಪಾದಯಾತ್ರೆ ಮಾಡಿ, ಮರಿದೇವರುಗಳ ಪಾದಪೂಜೆ ಮಾಡುವ ಮೂಲಕ  ಮುಕ್ತಾಯ ಮಾಡುತ್ತಿದ್ದರು. “ಶಿವಯೋಗ ಮಂದಿರದ ವಟು-ಸಾಧಕ-ಮರಿದೇವರುಗಳನ್ನು ಹಾನಗಲ್ ಕುಮಾರೇಶನ ಪ್ರತಿರೂಪ” ಎಂದೇ ಭಾವಿಸಿ ನಡೆಯುತ್ತಿದ್ದರು.

ಹೀಗೆ ವಟು-ಸಾಧಕರಿಗೆ  ಶಿವಪೂಜೆ, ಶಿವಧ್ಯಾನ, ಜ್ಞಾನ, ವಿಜ್ಞಾನ, ಆಧ್ಯಾತ್ಮ, ಶಿವಯೋಗ, ಪಾಠ  – ಬೋಧನೆ ಮಾಡುತ್ತಾ, ಅವರ ಬಾಳಿಗೆ ಬೆಳಕಾದವರು. ಶಿವಯೋಗ ಮಂದಿರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು.  ಇವರ ಗರಡಿಯಲ್ಲಿ ವಿದ್ಯಾರ್ಜನೆ ಮಾಡಿದ ವಟು-ಸಾಧಕ-ಮರಿದೇವರುಗಳು ಇಂದು ದೊಡ್ಡ ದೊಡ್ಡ ಮಠಗಳ ಮಠಾಧಿಪತಿಗಳಾಗಿ, ಪೀಠಾಧಿಪತಿಗಳಾಗಿ, ಜಗದ್ಗುರುಗಳಾಗಿ  ಕಾಯಕ-ದಾಸೋಹದ ಸೇವೆಯನ್ನು ನಾಡಿಗೆ ನೀಡುತ್ತಿದ್ದಾರೆ.

ಶಿವಯೋಗ ಮಂದಿರದ ವಟು-ಸಾಧಕರಿಗೆ ಎಲ್ಲವೂ ಆಗಿದ್ದ   ಪೂರ್ಣತ್ವಕಾರ ಡಾ||ಕೆಳದಿ ಶ್ರೀಗಳನ್ನು  ಕುರಿತು ಪೂಜ್ಯ ಮ.ಘ.ಚ. ಪ್ರಭುಕುಮಾರು ಶಿವಾಚಾರ್ಯರು  ತ್ರಿಪದಿ ಛಂದಸ್ಸಿನಲ್ಲಿ ಬರೆದ “ಅರಳಿದ ಅರಿವು” ತ್ರಿಪದಿಯಲ್ಲಿ  ಬರೆದ ಈ ತ್ರಿಪದಿಯನ್ನು ಸ್ಮರಿಸಬಹುದಾಗಿದೆ.

 ಬ

ಹಡೆದ ತಾಯಿಯ ಮಮತೆ | ಪಡೆದೆ ಶಿವಮಂದಿರದಿ

ಒಡೆಯ ಗುರುಸಿದ್ಧ ಕೆಳದೀಶ ಗುರುವೆನಗೆ

ಬಿಡದೆ ಕೈಹಿಡಿದ ಜಗದೀಶ   ||968||    

ಸಮಾಜ ಸೇವೆ ಮತ್ತು ಧಾರ್ಮಿಕ ಜನ ಜಾಗೃತಿ:

“ಗುರುವಿನ ವಿರಕ್ತಿ –ವಿರಕ್ತಿಯಲ್ಲಿ ಗುರುತ್ವ” ಇರಬೇಕು .ನಾ ಹೆಚ್ಚು ನಾ ಹೆಚ್ಚು ಎಂಬ ಬೇದ ಭಾವನೆ ಇರಬಾರದು . ಗುರು-ವಿರಕ್ತರೊಂದೆ ಎಂಬ ಸಮತೆ ಸಾರುವ ಉದ್ದೇಶದಿಂದ ದಿನಾಂಕ:27.11.1978 ರಿಂದ 07.12.1978 ರವರೆಗೆ ಹುಬ್ಬಳ್ಳಿಯಿಂದ ಶಿವಯೋಗಮಂದಿರದವರೆಗೆ  11 ದಿನಗಳ ಪಾದಯಾತ್ರೆಯನ್ನು ಹುಬ್ಬಳ್ಳಿ ಜಗದ್ಗುರುಗಳು ಸೇರಿದಂತೆ ಅನೇಕ ಸ್ವಾಮೀಜಿಗಳೊಂದಿಗೆ ಕೈಗೊಂಡು, ಗುರು-ವಿರಕ್ತರು ಒಂದೆ ಎಂಬ ಹಾನಗಲ್ ಕುಮಾರೇಶನ ಸಂದೇಶವನ್ನು ಸಾರಿದರು. ಪಾದಯಾತ್ರೆಯುದ್ದಕ್ಕೂ ಸುಮಾರು 05 ಸಹಸ್ರಕ್ಕಿಂತಲೂ ಅಧಿಕ ಜನರಿಗೆ  ಲಿಂಗಧಾರಣೆ ಮಾಡಿ, ಧರ್ಮ ಜಾಗೃತಿ ಮೂಡಿಸಿದರು.

1979 ರಲ್ಲಿ ತಮಿಳುನಾಡಿನಲ್ಲಿ ಧರ್ಮ ಪ್ರಚಾರ ಕೈಗೊಂಡು ಅಲ್ಲಿಯೂ ಸಹಸ್ರಾರು ಜನರಿಗೆ ಲಿಂಗಧಾರಣೆ ಮಾಡಿದ್ದಲ್ಲದೆ. ಮಲೇಷಿಯಾ, ಸಿಂಗಾಪೂರ, ಲಂಕಾದಿಂದ ಬಂದವರಿಗೂ ಕೆಳದಿ ಶ್ರೀಗಳು ಶಾಸ್ತ್ರೋಕ್ತವಾಗಿ ಲಿಂಗಧಾರಣೆ ಮಾಡಿದರು. ಹೀಗೆ ತಮಿಳು ನಾಡು ಸೇರಿದಂತೆ ಹಿಂದೂಸ್ತಾನದ ಹಲವಾರು ರಾಜ್ಯಗಳಲ್ಲಿ ಸಂಚರಿಸಿ, ಲಕ್ಷಾಂತರ  ಭಕ್ತರಿಗೆ ಲಿಂಗಧಾರಣೆ, ಶಿವದೀಕ್ಷೆ, ರುದ್ರಾಕ್ಷಿ ಧಾರಣ ಮಾಡಿ  ಅಜ್ಞಾನ ಕಳೆದು ಜಾಗೃತಗೊಳಿಸಿದರು.    

ವೀರಶೈವರು ಇಷ್ಟ ಲಿಂಗ ಧಾರಣೆ ಮಾಡಿರಬೇಕು ಎಂದು ತಿಳಿಸಿ ಲಿಂಗಧಾರಣೆ ಮಾಡುತ್ತಿದ್ದರು. “ಪೂರ್ಣತ್ವ” ಗ್ರಂಥದ   ಪೂರ್ಣತ್ವ -ಭಾವಾಭಿವ್ಯಕ್ತಿ ಯ ಪುಟ  -156 ರಲ್ಲಿ ವೀರಶೈವನ ಇಷ್ಟಲಿಂಗಧಾರಣೆ ಮಹತ್ವವನ್ನು  ಈ ಕೆಳಗಿನಂತೆ ತಿಳಿಸಿದ್ದಾರೆ.

ಇಷ್ಟಾರ್ಥ ಸಿದ್ಧಿಸಿತು;

ಇಷ್ಟಕ್ಕೆ ಸಾಕೆಂದು

ಇಷ್ಟ ಲಿಂಗವ ಬಿಡುವ ವೀರಶೈವ ; ಅರೆ ವೀರಶೈವ |

ಅಷ್ಟ ಮಾಸದ ಗರ್ಭ

ಸೃಷ್ಟಿಯಿಂ ಲಯತನಕ

ಇಷ್ಟಲಿಂಗವ ಬಿಡದ ವೀರಶೈವ ; ವರ ವೀರಶೈವ|

ಪ್ರತಿ ವರ್ಷ ಕೆಳದಿ ರಾಜಗುರು ಹಿರೇಮಠದಲ್ಲಿ ವಿಜಯದಶಮಿ ದಿನದಂದು ಸಹಸ್ರ ಸಹಸ್ರ ಜನರಿಗೆ ಲಿಂಗದಾರಣೆ, ಧೀಕ್ಷೆ, ಅಯ್ಯಾಚಾರ,ಗಳನ್ನು ಜರುಗಿಸಿ ಧರ್ಮ ಜಾಗೃತಿ ಮಾಡಿದ್ದಾರೆ.

ಕೆಳದಿ ಅಜ್ಜನವರು  ಸಮಾಜ ಮುಖಿಯಾಗಿ, 01.06.1989 ರಲ್ಲಿ  ಸಾಗರ ಪಟ್ಟಣದಲ್ಲಿ  ರಾಜಗುರು ವಿದ್ಯಾವರ್ಧಕ ಸಂಘದ ಸ್ಥಾಪನೆ ಮಾಡುವ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿ  ನಿಂತ ಪೂಜ್ಯರು  ಸಾಗರ ಪಟ್ಟಣದಲ್ಲಿ ರಾಜಗುರು ಕಲ್ಯಾಣ ಕೇಂದ್ರ ಸ್ಥಾಪನೆ [1993],   ಮತ್ತು ಶಿವಯೋಗಮಂದಿರದ ಬಳಿ ಮಂಗಳೂರು ಗ್ರಾಮದ ಸೇತುವೆ ಬಸವೇಶ್ವರನ ಸನ್ನಿದಾನದಲ್ಲಿ  ಸೇತುವೆ ಬಸವೇಶ್ವರ ಕಲ್ಯಾಣ ಮಂಟಪ ನಿರ್ಮಾಣ [1995],  ಮಾಡುವ ಮೂಲಕ ಉಚಿತ ಸಾಮೂಹಿಕ ವಿವಾಹಗಳಿಗೆ  ಚಾಲನೆ ನೀಡಿ, ಬಡವರಿಗೆ ದೀನರಿಗೆ ಆಸರೆಯಾದರು.  

 ಶಿವಯೋಗ ಮಂದಿರ ಸ್ಥಾಪನೆಯಾಗಿ ಶತಮಾನವಾಗುತ್ತಾ ಬಂದರೂ  ಪೂರ್ವ ದಿಕ್ಕಿನ  ದಾರಿ ಇಲ್ಲವೆಂದು  ಕೆಳದಿ ಪೂಜ್ಯರು ತಮ್ಮ ಭಕ್ತರ ಸಹಾಯ ಸಹಕಾರದಿಂದ ಲಕ್ಷಾಂತರ  ರೂಪಾಯಿ ಸ್ವಂತ ಖರ್ಚಿನಲ್ಲಿ ಮಲಪ್ರಭಾ ನದಿಗೆ ಶಿವಯೋಗ ಮಂದಿರದ ಬಳಿ  ಸೇತುವೆ ನಿರ್ಮಾಣ [1994-2007] ಮಾಡಿದರು. ಇವರ ಈ ಕಾರ್ಯವನ್ನು ಮೆಚ್ಚಿದ ಬಾಗಲಕೋಟ ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಮದನಗೋಪಾಲ, ಐ.ಎ.ಎಸ್ ರವರು 50 ಸಾವಿರ ರೂಪಾಯಿ ಸರ್ಕಾರದ ಹಣವನ್ನು ಮಂಜೂರಿಸಿದ್ದರು.  ಒಂದು ಸರ್ಕಾರ ಮಾಡಲಾಗದ ಕೆಲಸವನ್ನು ಕೆಳದಿ ಪೂಜ್ಯರು ಸ್ವತ: ತಾವೆ ಕಲ್ಲು, ಸಿಮೆಂಟು, ಕರಣಿ, ಹಿಡಿದು ಸೇತುವೆ ಕಟ್ಟಿದ್ದು,  ಕೆಳದಿ ಶ್ರೀಗಳ ಹಠಯೋಗದ ಘನ ವ್ಯಕ್ತಿತ್ವಕ್ಕೆ ಉದಾಹರಣೆಯಾಗಿದೆ, ಇದು ಹಠಯೋಗಿಗಳು, ತಪಸ್ವಿಗಳಿಂದ ಮಾತ್ರ ಸಾಧ್ಯ. ಇದರಿಂದ ಸುತ್ತ ಮುತ್ತಲಿನ ಗ್ರಾಮಗಳ ಜನರ ಕಷ್ಟವನ್ನು ಪರಿಹರಿಸಿದರು.  ಸಮಾಜದಿಂದ ಪಡದಿದ್ದನ್ನು ಸಮಾಜಕ್ಕೆ ನೀಡಿದ ದಿವ್ಯಾತ್ಮ ಕೆಳದಿ ಪೂಜ್ಯರು.

ಸಾಹಿತ್ಯ:

ಪೂಜ್ಯ ಪೂರ್ಣತ್ವಕಾರ ಡಾ: ಕೆಳದಿ ಶ್ರೀಗಳು ಕನ್ನಡ, ಸಂಸ್ಕತ, ಹಿಂದಿ, ಮರಾಠಿ, ಇಂಗ್ಲೀಷ್, ಉರ್ದು, ಬಂಗಾಳಿ ಬಾಷೆಗಳಲ್ಲಿ ವ್ಯಾಕರಣ ಬದ್ದ ಪ್ರಭುತ್ವ ಸಾಧಿಸಿದ್ದರು.  ಕೆಳದಿ ಗುರುಗಳ ಪಾಂಡಿತ್ಯ ಅಪರಾವಾದದ್ದು, “ಶಬ್ದಗಳ ಡಾಕ್ಟರ್”, “ಪುರುಷ ಸರಸ್ವತಿ” ಎಂದೇ ಖ್ಯಾತರಾದವರು.   ಇವರ ಕಾವ್ಯನಾಮ “ಗುರುಮೂರ್ತಿ”  ಮಹಾನ್ ಪಂಡಿತರಾಗಿದ್ದ ಗುರುಗಳು “ಶಿವ-ಶಕ್ತಿ”  “ಹಾನಗಲ್ ಗುರುಕುಮಾರ” “ರಾಮಕೃಷ್ಣ ಪರಮಹಂಸ” “ವಿವೇಕಾನಂದ” ಮುಂತಾದ ಸಂಸ್ಕøತ ಕೃತಿಗಳನ್ನು  ಹಾಗೂ ಕ್ನನಡದಲ್ಲಿ  “ಪೂಣತ್ವ” , ಲಿಂಗೈಕ್ಯ ಜಗದ್ಗುರು ಗಂಗಾಧರ ಸ್ವಾಮಿಗಳು“ ಎಂದು ಕೃತಿಯನ್ನು ಬರೆದಿದ್ದಾರೆ.  “ಶ್ರೀ ಗುರುಸಿದ್ಧೇಶ್ವರ ಭಕ್ತಿಗೀತೆಗಳು”                  “ಶ್ರೀ ಕರಡೀಶ ಚರಿತಾಮೃತ ಚಂಪೂ ಪ್ರಬಂಧ” “ಕುಮಾರವಾಣಿ” ಇವರು  ಸಂಪಾದಿತ ಕೃತಿಗಳು.

          ಪೂರ್ಣತ್ವಕಾರ ಡಾ:ಕೆಳದಿ ಶ್ರೀಗಳ   ಸಾಹಿತ್ಯದ  ಅಮೂಲ್ಯ  ಮತ್ತು  , ಶ್ರೇಷ್ಟವಾದ ಕೃತಿ ಎಂದರೆ,  “ಪೂರ್ಣತ್ವ” ಇದು ವರಕವಿ ದ.ರಾ. ಬೇಂದ್ರೆಯವರಿಂದ ಪ್ರಶಂಸಿಲ್ಪಟ್ಟಿದೆ.  ಅಲ್ಲದೆ, ವರಕವಿ ದ.ರಾ ಬೇಂದ್ರೆಯವರು  ಈ ಪೂರ್ಣತ್ವ  ಕೃತಿಯ “ಶಿವ ಸಂಕಲ್ಪ” ದಲ್ಲಿ    “ಹಾನಗಲ್  ಕುಮಾರಸ್ವಾಮಿಗಳ ಅಪೂರ್ವ ಪೂರ್ಣ ಯೋಗದ ಮರಿ ಇದು, ಪೂರ್ಣಾತ್ ಪೂರ್ಣಮ್ ಉದಚ್ಯತೇ “ ಎಂದು  ಕೆಳದಿ ಅಜ್ಜನವರ ಬಗ್ಗೆ   ಮನಮೆಚ್ಚಿ ನುಡಿದಿದ್ದಾರೆ.

ಓಂ ಪೂರ್ಣ; ಅದು ಪೂರ್ಣ;

ಇದು ಪೂರ್ಣವಿದೆ ಮತ್ತು

ಪೂರ್ಣದಿಂದಲೆ ಪೂರ್ಣ;

ಅದೆ ಸತ್ತು ; ಅದೆ ಚಿತ್ತು;

ಪೂರ್ಣದಲಿ ಪೂರ್ಣ ಕಳೆ-

ದರು, ಬೆರೆಸುವದು ಮತ್ತು.

ಬೆರೆಸು; ಪೂರ್ಣ ಬೆರೆಸದೆ

ಬಿಡಬೇಡ ಬೇಸತ್ತು.     [ಪೂರ್ಣತ್ವ  ಪುಟ-36]

‘ತಿರುಗದ್ದೆ ತಿರುಗುವುದೇ?’

ಇತಿ ನಿಲ್ಲದಿರು ಅತ್ತು,

“ಅ-ಕ್ಷ” ಎಂಭೈವತ್ತು

ಅಕ್ಷರದ ನಿಜ ಸುತ್ತು

ಜಗ ತುಂಬ ಬೆಳೆದಿಹುದು

ವಿದ್ಯೆ ನಾಮದ ಸುತ್ತು

ಬೆಳೆಸು; ಪೂರ್ಣ ಬೆಳಸದೆ

ಬಿಡಬೇಡ ಬೇಸತ್ತು.  [ಪೂರ್ಣತ್ವ ಪುಟ-3 ]

ಸ್ವಯಮೇವ ಜೀಕಾಲಿ

ಜೀಕಲಿಕೆ ಮನ ತೆತ್ತು,

ಅದರಲ್ಲಿ ನೀಟಾಗಿ

ಕುಳಿತೊ, ನಿಂತೋ ಮತ್ತು

ಎರಡು ಕೈಯಲಿ ಎರಡು

                 ಹಗ್ಗ ಹಿಡಿ ; ಜೀಕೆತ್ತು.

ಜೀಕು; ಪೂರ್ಣ ಜೀಕದೆ

                 ಬಿಡಬೇಡ ಬೇಸತ್ತು. [ಪೂರ್ಣತ್ವ ಪುಟ-7]

ಗಡಿಯಾರ ಮುಳ್ಳುಗಳು

                 ಅಷ್ಟೆ  ಅಂಕೆಯ ಸುತ್ತು

ಕೀಲೆ ಇರೆ ತಿರುಗುವು-

                 ದಿನ-ದಿನಕು ಕೆಲ ಸುತ್ತು.

ಸುತ್ತದಿರೆ ಸರಿಯಾಗಿ

ತಿಳಿಸಲಾರವು ಹೊತ್ತು.

ತಿಳಿಸು; ಪೂರ್ಣ ತಿಳಿಸದೆ

                 ಬಿಡಬೇಡ ಬೇಸತ್ತು. [ಪೂರ್ಣತ್ವ ಪುಟ-4]

         ಪೂರ್ಣತ್ವ ಗ್ರಂಥವು  ವೀರಶೈವ ಧರ್ಮಧ 36 ತತ್ವಗಳ ವರ್ಣನೆ ಹೊಂದಿದ್ದು, ಬೆರೆಸು, ಬೆಳೆಸು, ಜೀಕು, ತಿಳಿಸು ಹೀಗೆ  ಕ್ರಿಯಾ ಸಂಯೋಜನೆ ಮೆರಗು ನೀಡಿ ಆಲಸ್ಯದಿಂದ, ಬೇಸರಿಂದ ಪರಮೋನ್ನತ ಸಾಧನೆಯನ್ನು ಮರೆಯಲಾರದಂತೆ ಸದಾ ಸದ್ ವೃತ್ತಿಯನ್ನು ನೆನಪು ಮಾಡಿಕೊಡುತ್ತಾ “ಪೂರ್ಣ ಮುಗಿಸದೇ ಬಿಡಬೇಡ ಬೇಸತ್ತು”  ಎಂದು ಸೂಚಿಸುವ ಪೂರ್ಣತ್ವದ ಸೂತ್ರಗಳು ಸದಾ ಸದ್‍ವೃತ್ತಿ ಸಾಧನೆಯನ್ನು ಸಾಧಿಸುತ್ತಿರಬೇಕೆಂದು ಹೇಳುತ್ತವೆ. ಕೆಳದಿ ಅಜ್ಜನವರು  “ಪೂರ್ಣತ್ವ”  ಎಂಬ ಶ್ರೇಷ್ಠ ಕೃತಿಯನ್ನು ಬರೆದಿದ್ದರಿಂದಲೂ ಹಾಗೂ ನುಡಿದಂತೆ ನಡೆದು, ನಡೆದಂತೆ ನುಡಿದು, ಹಿಡಿದ ಕಾರ್ಯವನ್ನು  ಪೂರ್ಣಗೊಳ್ಳುವವರೆಗೆ ಬಿಡದ ಛಲವಂತರಾಗಿದ್ದರು, ಹಾಗಾಗಿ ಅವರು “ಪೂರ್ಣತ್ವಕಾರ” ರಾಗಿದ್ದಾರೆ. ಹಠಯೋಗಿಯಾಗಿದ್ದಾರೆ.

 “ಇಂಗ್ಲೀಷ್ “SಔUಐ’ =ಆತ್ಮ ಗಟ್ಟಿ ಇದ್ದರೆ, ಕನ್ನಡದ ಸೋಲ್ (ಸೋಲು) =ಅಪಜಯ ಎಂದೂ ಆಗುವುದಿಲ್ಲ” ಎಂದು  ಕೆಳದಿ ಅಜ್ಜನವರು ಯಾವಾಗಲೂ ಹೇಳುತ್ತಿದ್ದರು.

ಬಹುಭಾಷಾ ಪಂಡಿತರೂ, ಶ್ರೇಷ್ಠ ಬರಹಗಾರರೂ, ವಾಗ್ಮಿಗಳೂ ಆಗಿದ್ದ ಕೆಳದಿ ಗುರುಗಳು ಅವರು ಬರೆದಿದ್ದನ್ನು ಪುಸ್ತಕ ರೂಪದಲ್ಲಿ ತಂದು ಪ್ರಕಟಿಸಿದ್ದರೆ ಇಂದು ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿರುತ್ತಿದ್ದರು. ಅದನ್ನು ಮಾಡಲಿಲ್ಲವೆಂಬ ಕೊರಗು ಆಪ್ತ ಭಕ್ತರಲ್ಲಿದೆ.  ಗುರುಗಳು ಈ ರೀತಿಯ ಬರವಣಿಗೆಗಳನ್ನು ಸಂಗ್ರಹಿಸಿ, ಪ್ರಕಟಿಸಬೇಕಾದ ಕಾರ್ಯ ನಡೆಯಬೇಕಾಗಿದೆ.

ಮಹಾ ತಪಸ್ವಿ:

ಮಹಾತಪಸ್ವಿಯಾಗಿದ್ದ ಪೂರ್ಣತ್ವಕಾರ ಕೆಳದಿ ಪೂಜ್ಯರು ತಮ್ಮ ತಪಃಶಕ್ತಿಯಿಂದಲೆ  ಲೀಲೆಗಳನ್ನು ಗೈದ ಲೀಲಾಪರುಷರಾಗಿದ್ದಾರೆ. ಹಿಮಾಲಯ, ಋಷಿಕೇಶ, ಶಿವಯೋಗ ಮಂದಿರ, ಕೆಳದಿ ಮುಂತಾದ ಪುಣ್ಯ ತಪೋಭೂಮಿಯಲ್ಲಿ ತಪ ಗೈದ ಕೆಳದಿ ಪೂಜ್ಯರು ನೊಂದು ಬಂದ ಭಕ್ತರ ಕಷ್ಟಗಳನ್ನು ತಮ್ಮ ತಪಃಶಕ್ತಿಯಿಂದ ನಿವಾರಿಸಿದ ದಿವ್ಯಾತ್ಮರು. ಅಂತಹ ನೂರಾರು , ಸಾವಿರಾರು ಲೀಲೆಗಳನ್ನು  ಉದಾರಿಸಬಹುದಾಗಿದೆ.

ಆಡಂಬರವನ್ನು ಬಯಸುವ ಇಂದಿನ ಸಮಾಜವು ಪೂರ್ಣತ್ವಕಾರ ಕೆಳದಿ ಶ್ರೀಗಳ ‘ನಿರಾಡಂಬರ” “ಸರಳ” “ತತ್ವಗತ” ಜೀವನವನ್ನು ಅರ್ಥ ಮಾಡಿಕೊಳ್ಳುವಲ್ಲಿ, ಅವರ ಪ್ರತಿಭೆ- ಪಾಂಡಿತ್ಯವನ್ನು ಬಳಸಿಕೊಳ್ಳುವಲ್ಲಿ ವಿಫಲವಾಯಿತು ಎಂದರೆ ತಪ್ಪಾಗಲಿಕ್ಕಿಲ್ಲ.

“ನಿಸ್ವಾರ್ಥ” “ನಿಷ್ಕಳಂಕ” ನಿರ್ಮಲಾತ್ಮದ” ಪೂರ್ಣತ್ವಕಾರ ಕೆಳದಿ ಶ್ರೀಗಳಿಗೆ ಕೆಲವು ಜನ ಸ್ವಾರ್ಥಿಗಳು, ಕಳಂಕಿತರು, ಕಲ್ಮಶ ರು ಅನೇಕ ರೀತಿಯಲ್ಲಿ ತೊಂದರೆ, ಚಿತ್ರಹಿಂಸೆ ನೀಡಿದರೂ ಅದನ್ನೆಲ್ಲ ತಾಳ್ಮೆಯಿಂದ ಸಹಿಸಿದರೆ, ಹೊರತು ತೊಂದರೆ ಮಾಡಿದವರೆಂದಿಗೂ  ಕೆಳದಿ ಪೂಜ್ಯರು ಕೇಡುಬಯಸಲಿಲ್ಲ.

ರಾಜಗುರು ಹಿರೇಮಠದ ಪಟ್ಟಾಧ್ಯಕ್ಷರಾಗಿ ತಮ್ಮ ಇಚ್ಚೆಯಂತೆ ಸನ್ 2200 ನೇ ಇಸ್ವಿಯಲ್ಲಿ  ತಮ್ಮ ತರುವಾಯ  ಶ್ರೀ ಮೃತ್ಯಂಜಯ ದೇಶಿಕ ಶಿವಾಚಾರ್ಯರನ್ನು ಕೆಳದಿ ರಾಜಗುರು ಹಿರೇಮಠದ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಳಿಸಿದರು.  

ಲಿಂಗೈಕ್ಯ:

ಮೌನ ತಪಸ್ವಿ ಶ್ರೀಮ.ನಿ.ಪ್ರ.ಜಡೆಯ ಶಾಂತಲಿಂಗ ಮಹಾಸ್ವಾಮಿಗಳು, ವಿರಕ್ತ ಮಠ ನಿಂಬಾಳ ರವರು ಹೇಳುವಂತೆ  “ಕರ್ಮಣ್ಯೇಕಂ ವಚಸ್ಯೇಕಂ ಮನಸ್ಯೇಕಂ ಮಹಾತ್ಮನಾಮ್” ಮಹಾತ್ಮರಾದವರಿಗೆ ಕೃತಿ (ಕಾಯ), ಮಾತು (ವಾಕ್), ಮತಿ (ಮನಸ್ಸು) ಈ ಮೂರರಲ್ಲಿಯೂ ಏಕರೂಪತೆಯಿರುತ್ತದೆ. ಈ ಸುಭಾಷಿತೋಕ್ತಿಯೇ ವ್ಯಕ್ತಿರೂಪದಂತಿದ್ದವರು ಕೆಳದಿ ಡಾ:ಗುರುಸಿದ್ಧ ದೇವ ಶಿವಾಚಾರ್ಯ ಮಹಾಸ್ವಾಮಿಗಳು, 

ಸರಳತೆ, ಸಹನೆ, ತಾಳ್ಮೆ, ಸಮ-ಚಿತ್ತತೆ, ದೈರ್ಯ, ತ್ಯಾಗ, ಆದರ್ಶ, ಸಿದ್ದಾಂತ, ಮಹಾನ್ ಪಾಂಡಿತ್ಯ, ತಪಃಶಕ್ತಿ, ಇವುಗಳ ಸಮ್ಮಿಳಿತದ  ಮೇರು ವ್ಯಕ್ತಿತ್ವ ಕೆಳದಿ ಅಜ್ಜನವರದಾಗಿತ್ತು.  ತ್ಯಾಗ ಜೀವನದಲ್ಲಿ, ಆದರ್ಶ ಯೋಗಿಯಾಗಿ ಬೆಳಿಗಿದ ಕೆಳದಿ ಅಜ್ಜನವರು “ಹಾನಗಲ್  ಗುರು ಕುಮಾರೇಶ್ವರರನ್ನು ಸಂಪೂರ್ಣವಾಗಿ ಗ್ರಹಿಸಿ, ಅವರ ಪಥದಲ್ಲಿ  ನಡೆದು,  ಶ್ರೀಮದ್ ವೀರಶೈವ ಶಿವಯೋಗ ಮಂದಿರದ  ಪ್ರಚಾರ ಹಾಗೂ ಪ್ರಚುರಕ್ಕಾಗಿ ಹಗಳಿರುಳು  ಶ್ರಮಿಸಿ,  “ಹಾನಗಲ್ ಗುರುಕುಮಾರ ಶಿವಯೋಗಿಗಳ ಮತ್ತೊಂದು ಅವತಾರ”ವಾಗಿದ್ದರು. 

ಅವರನ್ನು “ರಾಜಗುರುಗಳು ಎನ್ನುವದಕ್ಕಿಂತಲೂ  ಗುರುಗಳಲ್ಲಿ ರಾಜರಂತಿದ್ದು “ “ಗುರುತ್ವ, ದಿವ್ಯತ್ವ, ಸಿದ್ದಿ ಹೊಂದಿದ ಮಹಾನ್ ತಪಸ್ವಿಯಾಗಿದ್ದರು.

ಏಕ-ನಿಷ್ಠೆಗೆ = ಗುರಿಗೆ ಸಿದ್ಧಿ ದೊರೆವುದು ಸಹಜ |

ಸಾಧಕನ ಸಾಧನೆಗೆ ಸಿದ್ದಿ ದೊರೆತರೆ ಸಿದ್ಧ ;||

ಅಣಿಮಾದಿ ಸಿದ್ದಿ ದೊರೆತ ಗುರುವೇ ಗುರುಸಿದ್ಧ |

ಗುರು-ಸಿದ್ಧ – ದೇವನೇ “ಗುರುಸಿದ್ಧದೇವ” =ಶಿವ ||

                                   ಕೆಳದಿ ಪೂಜ್ಯರು ಲಿಲತ ರಗಳೆ ಛಂದಸ್ಸಿನಲ್ಲಿ ಬರೆದ ಪದ್ಯದ 03 ನೇ ಪ್ಯಾರಾ

 ಇಂತಹ ಮಹಾನ್  ತಪಸ್ವಿಗಳು ಆಷಾಡ ಶುದ್ಧ ಏಕಾದಶಿ,   ಜುಲೈ  09  2009 ರ  ಮಂಗಳವಾರ  ದಂದು  ತಮ್ಮ 79 ನೇ ವಯಸ್ಸಿನಲ್ಲಿ  ಲಿಂಗೈಕ್ಯರಾದರು.

 ಕೆಳದಿ ಅಜ್ಜನವರ  ಕರ್ತೃ ಗದ್ದುಗೆಯನ್ನು  ಶ್ವೇತಾಂಬರದಾರಿ, ಮೌನತಪಸ್ವಿ    ಜಡೆಯ ಶಾಂತಲಿಂಗ ಮಹಾಸ್ವಾಮಿಗಳು, ವಿರಕ್ತಮಠ, ನಿಂಬಾಳ, ಇವರ ಮಾರ್ಗದರ್ಶನದಲ್ಲಿ   ಶಿವಯೋಗ ಮಂದಿರದ ಪಲಪ್ರಭೆ ನದಿ ಬಲದಂಡೆ ಮೇಲೆ ನಿರ್ಮಿಸಲಾಗಿದೆ.

ಪರಮ ಪೂಜ್ಯ ಮೌನ ತಪಸ್ವಿ ಜಡೆಯೊಡೆಯರ  ಪರಿಶ್ರಮದಿಂದ ಇಂದು ದೊಡ್ಡ ಮಠವಾಗಿ ಬೆಳದು ನಿಂತಿದ್ದು, ಇದು  ಪೂರ್ಣತ್ವಕಾರ  ಲಿಂ ಡಾ||ಕೆಳದಿ ಶ್ರೀಗಳ ಹಾಗೂ ಮೌನತಪಸ್ವಿ ಜಡೆಯ ಶಾಂತಲಿಂಗ ಮಹಾಸ್ವಾಮಿಗಳ ಪರಿಶುದ್ಧ ಗೆಳೆತನದ ಸಂಕೇತವಾಗಿದೆ.

                 ————*******—————–

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಇಕ್ಕೇರಿ ಚೌಬೀದಿಯೊ | ಳಿಕ್ಕಿದ ಫಲ ಸರಕು

ತಕ್ಕೊಂಡು ಮಾರಿ ಮಿಕ್ಕಲಾಭವದೆನಗೆ

ಸಿಕ್ಕದ್ದೆ ಗುರುವೆ ಕೃಪೆಯಾಗು  ||೭೧ ||

ಪಂಚಜ್ಞಾನೇಂದ್ರಿಯಂಗಳ ಪಂಚವಿಷಯಗಳನ್ನು ವಿವರಿಸಿದ ಮೇಲೆ ಅಂತಕರಣ ಚತುಷ್ಟಯವನ್ನು ಸೂಚಿಸಿದ್ದಾನೆ. ಪಂಚಜ್ಞಾನೇಂದ್ರಿಯಗಳಿಗೆ ಮತ್ತು ಅಂತಃಕರಣ ಚತುಷ್ಟಯಕ್ಕೆ ಸಮೀಪ ಸಂಬಂಧವಿದೆ. ಇಲ್ಲಿ ಶಿವಕವಿಯ ಐತಿಹಾಸಿಕ ಪ್ರಜ್ಞೆಯೂ ವ್ಯಕ್ತವಾಗಿದೆ.

ವಿಜಯನಗರ ಸಾಮ್ರಾಜ್ಯವು ಅಸ್ತಂಗತವಾಗುವ ಸಮಯಕ್ಕೆ ಕೀರ್ತಿವೆತ್ತ ಕನ್ನಡಿಗರ ಹೆಮ್ಮೆಯ ರಾಜ್ಯ ಕೆಳದಿ ಅರಸರದು. ಸುಮಾರು ಕ್ರಿ. ಶ. ೧೫೦೦ ರಿಂದ ೧೭೬೩ರ ವರೆಗೆ ಸಮೃದ್ಧಿಯಿಂದ, ಧೀರತನದಿಂದ, ಉದಾರತನದಿಂದ ಹಾಗೂ ಧರ್ಮದಿಂದ ಆಳಿದ, ಬಾಳಿದ ಶ್ರೇಯಸ್ಸು ಈ ರಾಜರದು. ಕೆಳದಿ, ಇಕ್ಕೇರಿ ಮತ್ತು ಬಿದನೂರು ಎಂದು ಮೂರು ರಾಜಧಾನಿಗಳಲ್ಲಿ ರಾಜ್ಯವಾಳಿದರು. ಇಕ್ಕೇರಿಯು ಶಿವಮೊಗ್ಗಾ ಜಿಲ್ಲೆಯ ಸಾಗರಕ್ಕೆ ಮೂರು ಮೈಲು ದೂರದಲ್ಲಿದೆ. ಇಲ್ಲಿ ಅಘೋರೇಶ್ವರ ದೇವಾಲಯವು ದರ್ಶನೀಯವಾಗಿದೆ. ದೇವಸ್ಥಾನದ ಮುಂದಿನ ನಂದಿಯ ವಿಗ್ರಹವು ಭವ್ಯವೂ ಬೃಹತ್ತೂ ಆಗಿದೆ. ಕೆಳದಿ ಅರಸರಲ್ಲಿ ಶಿವಪ್ಪನಾಯಕನು ಅತ್ಯಂತ ಶೂರನೂ, ಧಾರ್ಮಿಕನೂ, ಶಿಸ್ತಿನವನೂ, ಹಾಗೂ ಪ್ರಜಾವತ್ಸಲನೂ ಆಗಿದ್ದನು. ಇವನ ಕಾಲದಲ್ಲಿ ಭೂಕಂದಾಯದಲ್ಲಿ ಸುಧಾರಣೆಯಾದುದಲ್ಲದೆ ಕೆಲವು ಬೆಲೆಯುಳ್ಳ ವಸ್ತುಗಳಿಗೆ ಕರಹಾಕುವ ಪದ್ಧತಿ ಪ್ರಾರಂಭವಾಯಿತು.

 ಇಕ್ಕೇರಿಯು ಆರನೆಯ ಅರಸನಾದ ಹಿರಿಯ ವೆಂಕಟಪ್ಪನಾಯಕನ ಕಾಲದಲ್ಲಿ ಅತ್ಯಂತ ಅಭಿವೃದ್ಧಿ ಪಡೆದ ನಗರವಾಗಿತ್ತು. ಆದ್ದರಿಂದ ಅಲ್ಲಿ ಸುಂದರವಾದ ಚೌಬೀದಿ ( ಚತುಷ್ಪಥ)ಗಳಿದ್ದವು “ಇಕ್ಕೇರಿ ವರಹ” (ಸುವರ್ಣನಾಣ್ಯ)ಗಳೆಂದು ಆ ಪಟ್ಟಣದ ಪತನದ ನಂತರವೂ ಕರೆಯಲ್ಪಡುತ್ತಿದ್ದುದು ಇಕ್ಕೇರಿಯ ಪ್ರಸಿದ್ಧಿಗೆ ನಿದರ್ಶನವಾಗಿದೆ. ಇಲ್ಲಿ ಅಡಿಕೆ, ಮೆಣಸು, ಯಾಲಕ್ಕಿ, ಭತ್ತ, ಕಬ್ಬು ಮೊದಲಾದ ಬೆಲೆಬಾಳುವ ಫಲ ಸರಕು ಬರುತ್ತಿತ್ತು. ವ್ಯಾಪಾರವು ಭರದಿಂದ ಸಾಗುತ್ತಿತ್ತು. ಪರಪ್ರಾಂತಗಳಿಗೂ ಅಲ್ಲಿಂದ ರವಾನೆಯಾಗುತ್ತಿತ್ತು. ಅಲ್ಲಿಯ ಮಾಲನ್ನು ಅಲ್ಲೇ ಖರೀದಿ ಮಾಡಿ ವ್ಯಾಪಾರ (ಮಾರಾಟ) ಮಾಡಿದರೂ ಹೆಚ್ಚಿನ ಲಾಭ ದೊರೆಯುತ್ತಿತ್ತು. ಆದರೆ ಅದು ಕರಕೊಡುವದಕ್ಕೆ ಸರಿಹೋಗುತ್ತಿತ್ತು. ಇದರಿಂದ ಕೊನೆಗೆ ಹೆಚ್ಚಿನ ಲಾಭ ಉಳಿಯುತ್ತಿರಲಿಲ್ಲ. ಆ ಅರಸರು ಅತಿ ಲಾಭ ಬಡಕರಿಗೆ ಅವಕಾಶವಿತ್ತಿರಲಿಲ್ಲವೆಂಬುದೂ ಧ್ವನಿತವಾಗುತ್ತದೆ.

ಕೆಳದಿ ಅರಸರ ಇಕ್ಕೇರಿ ಶಿವಕವಿಗೊಂದು ಮಾಧ್ಯಮ ಮಾತ್ರ. ಇಲ್ಲಿಯ ಇಕ್ಕೇರಿ ಯೆಂದರೆ ಶರೀರ, ಈ ಇಕ್ಕೇರಿಯು ಶೂರತನ, ಉದಾರತನ, ಶಿಸ್ತು, ಧಾರ್ಮಿಕತನಗಳಿಗೂ ಆಶ್ರಯದಾಗಿದೆ. ಇಲ್ಲಿಯೂ ಚೌಬೀದಿ ಅಥವಾ ಚತುಷ್ಪಥವಿದೆ. ಅಂದರೆ ನಾಲ್ಕು ದಾರಿಗಳಿಂದ ಕೂಡಿದೆ. ಎರಡು ಹಲ್ಲಿನಸಾಲು ಮತ್ತು ಎರಡು ತುಟಿಗಳಿಂದ ಕೂಡಿದ ಬಾಯಿಯೇ ಚೌಬೀದಿ. ಇನ್ನೊಂದು ತೆರನಾಗಿ ಅರ್ಥೈಸಿದರೆ ಇನ್ನೂ ಸುಂದರವಾದ ಭಾವ ಬರುತ್ತದೆ. ಶರೀರದಲ್ಲಿ ಕಾಣುವ ಪಂಚಜ್ಞಾನೇಂದ್ರಿಯ ಗಳಿದ್ದರೆ ಕಾಣದ ಆದರೆ ಅತಿ ಮಹತ್ವದ ನಾಲ್ಕು ಅಂತಃಕರಣಗಳಿವೆ. ಅವುಗಳನ್ನು ಮನ, ಬುದ್ಧಿ, ಚಿತ್ತ, ಅಹಂಕಾರಗಳೆಂದು ಕರೆಯುತ್ತಾರೆ. ಇವುಗಳೇ ಕರ್ಮೇಂದ್ರಿಯ ಹಾಗೂ ಜ್ಞಾನೇಂದ್ರಿಯಗಳ ಕಾರ್ಯವನ್ನು ಪ್ರೇರೇಪಿಸುತ್ತವೆ.

ಮನಸ್ಸು ವಾಯುಮಯವಾಗಿದ್ದು ಸಂಕಲ್ಪ ವಿಕಲ್ಪದಿಂದ ಕೂಡಿದೆ. ಬುದ್ಧಿಯು ಜಲದಿಂದ ಹುಟ್ಟಿರುತ್ತದೆ. ಇದಕ್ಕೆ ನಿಶ್ಚಯಿಸುವ ಗುಣವಿದೆ. ಚಿತ್ತವು ಪೃಥ್ವಿತತ್ತ್ವದಿಂದಾಗಿದ್ದು ಸ್ಥಿರದಿಂದ ಅವಧರಿಸಿ ಆನಂದಿಸುತ್ತದೆ. ಅಹಂಕಾರವು ಅಗ್ನಿ ತತ್ತ್ವದಿಂದ ಹುಟ್ಟಿದ್ದು ಅಹಂಭಾವದಿಂದ ಅಹಂಕರಿಸುತ್ತದೆ.ʼʼ ವೇದಾಂತ ಸಾರʼʼ ಗ್ರಂಥದಲ್ಲಿ –

ಬುದ್ಧಿರ್ನಾಮ ನಿಶ್ಚಯಾತ್ಮಿಕಾಂತಃಕರಣವೃತ್ತಿಃ |

ಮನೋನಾಮ ಸಂಕಲ್ಪ ವಿಕಲ್ಪಾತ್ಮಿಕಾಂತಃಕರಣ ವೃತ್ತಿಃ |

ಅನಯೋರೇವ ಚಿತ್ತಾಹಂಕಾರಯೋರಂತರ್ಭಾವಃ ||ʼʼ

“ಬುದ್ಧಿಯೆಂಬುದು ನಿಶ್ಚಯ ಸ್ವಭಾವದ ಆಂತಃಕರಣ ವೃತ್ತಿಯು ಮನಸ್ಸೆಂಬುದು ಸಂಕಲ್ಪ ವಿಕಲ್ಪಗಳ ಸ್ವಭಾವದ ಅಂತಃಕರಣ ವೃತ್ತಿಯು. ಈ ಮನೋ ಬುದ್ಧಿಗಳಲ್ಲೇ ಚಿತ್ತ ಮತ್ತು ಅಹಂಕಾರಗಳು ಅಂತರ್ಭೂತವಾಗುತ್ತವೆಂದು ತಿಳಿಸಿದೆ. ಸಾಮಾನ್ಯವಾಗಿ ಯಾವುದೇ ವಿಷಯಕ್ಕೆ ವಿಚಾರ ಬಂದರೆ ಮೊದಲು ಮನಸ್ಸು ಸಂಕಲ್ಪ ವಿಕಲ್ಪ ಮಾಡುತ್ತದೆ- “ಹೌದೋ ಅಲ್ಲೋ ಎಂದುದಾಗಿ.” ಆಗ ಅಹಂಕಾರವು ಗರ್ವಿಸುತ್ತದೆ.-ʼ ಇದು ನನಗೆ ಮೊದಲೇ ತಿಳಿದಿತ್ತು’ ಎಂದು. ನಂತರ ಬುದ್ಧಿಯ ಸಾರಾಸಾರ  ವಿಚಾರದಿಂದ, ನಿಶ್ಚಯಿಸಿದರೆ ಚಿತ್ತವು ಅದರ ಆನಂದವನ್ನು ಅನುಭವಿಸುತ್ತದೆ. ಹೀಗೆ ಅಂತಃಕರಣಗಳ ವೃತ್ತಿಯು ವ್ಯಕ್ತವಾಗುತ್ತದೆ. ʼʼಅಂತಃಕರಣ  ಪರಿಶುದ್ಧಗೊಳಿಸುವದಕ್ಕಾಗಿಯೇ ಶಾಶ್ವತ ಪ್ರಾದುರ್ಭಾವವಾಗಿದೆ”  ಯೆಂದು ಅನುಭವಿಗಳು ನಿರೂಪಿಸುತ್ತಾರೆ. ಶಿವಕವಿಗಳು ಇಲ್ಲಿ ಪ್ರಸ್ತುತ ಅಂತಃಕರಣ ಚತುಷ್ಟಯವನ್ನು ಪರಿಶುದ್ಧಗೊಳಿಸುವ ಪರಿಯನ್ನು ಅವುಗಳ ಸಾರ್ಥಕತೆಯನ್ನು ಪ್ರತಿಪಾದಿಸಿದ್ದಾರೆ.

ಮನ, ಬುದ್ಧಿ, ಅಹಂಕಾರಗಳ ಸಮ್ಮಿಲಿತವಾದ ಸತ್ಕಾರ್ಯವು ಚಿತ್ತಕ್ಕೆ ಆನಂದವನ್ನು ಕೊಡಬಲ್ಲುದು. ಕೇವಲ ವೈಷಯಿಕವಾಗಿ ಜೀವಭಾವದಿಂದ ಜೀವನ ಮುಂದುವರೆದರೆ ಎಂದಿಗೂ ಪಾವನವಾಗದು. ಗುರಿಯನ್ನು ಸಾಧಿಸಲು ಶಕ್ಯವಿಲ್ಲ. ಮನಸ್ಸಿನ ಚಂಚಲತೆ ಮಾನವನನ್ನು ಕೀಳುಗೊಳಿಸುತ್ತದೆ. ಅಹಂಕಾರವು ಗುರಿಯನ್ನು ನಿರ್ಮೂಲಗೊಳಿಸುತ್ತದೆ. ದುರ್ಬುದ್ಧಿಯು ದುಃಖಿಯನ್ನಾಗಿಸಿದ ಮೇಲೆ ಚಿತ್ತಕ್ಕೆಲ್ಲಿಯ ಆನಂದ ? ಅಂತೆಯೇ ನಿಜಗುಣರ ”ಕೈವಲ್ಯ ಪದ್ಧತಿ”ಯಲ್ಲಿ

ತಡೆವುದಾಗದು ತನಗಗಣಿತ ವಿಷಯದೊ |

ಳೆಡೆಯಾಡುವತಿ ಚಪಲತೆಯ ಚಿತ್ತವನು ||’

”ಮನ-ಬುದ್ಧಿ-ಅಹಂಕಾರಗಳ ತಾಕಲಾಟದಲ್ಲಿ, ಅಗಣಿತ ವಿಷಯಂಗಳಲ್ಲಿ ಎಡೆಯಾಡುವ ಚಿತ್ತದ ಚಪಲತೆಯನ್ನು ತಡೆಯುವದಕ್ಕಾಗುವದಿಲ್ಲ’ʼ ವೆಂಬ ಮಾತುಗಳು ಮಾರ್ಮಿಕವಾಗಿವೆ. ಮನನೀಯವಾಗಿವೆ. ಮನ ಮುಮ್ಮೊದಲು ಆಶಿಸುತ್ತದೆ. ಅಲ್ಪಬುದ್ಧಿಯು ಆಶೆಗೆ ಪ್ರಚೋದನವನ್ನೀಯುತ್ತದೆ. ಅಹಂಕಾರವು ಧೃತಿಗೆಡಿಸಿ ಚಿತ್ತವನ್ನು ಅಸ್ಥಿರಗೊಳಿಸುವದು. ಅದುಕಾರಣ ಈ ಚತುಷ್ಪಥವೆನಿಸಿದ ಅಂತಃಕರಣ ಚತುಷ್ಟಯವನ್ನು ಪಳಗಿಸಬೇಕು. ಮನಬಯಸಿದುದಕ್ಕೆ ಅವಕಾಶ ವೀಯದೇ  ಸನ್ಮನದಿಂದ ಅಥವಾ ಸುಮನದಿಂದ ಶಿವನು ಕರುಣಿಸಿದ ಪದಾರ್ಥಗಳನ್ನು ಗುರು-ಲಿಂಗ-ಜಂಗಮಕ್ಕೆ ಸಲ್ಲಿಸಿ  ಶೇಷಪ್ರಸಾದವನ್ನು ಸವಿಯಬೇಕು. ಇದನ್ನರಿಯದೆ ದೇಹವೆಂಬ ಇಕ್ಕೇರಿಯ ಚೌಬೀದಿಯೆನಿಸಿದ ಬಾಯಲ್ಲಿ ಅಂತಃಕರಣಗಳ ಬಯಕೆಯಂತೆ ಸಿಕ್ಕ ಸಿಕ್ಕ ಪದಾರ್ಥಗಳನ್ನು ಪರಿಶುದ್ಧಗೊಳಿಸದೆ, ಸಂಸ್ಕರಿಸದೆ, ಜೀವಭಾದದಿಂದ ತುಂಬಿದರೆ ಅದೆಲ್ಲವೂ ಹಾನಿಯಾಗುವದು ಖಂಡಿತ. ತನ್ನ ಜೀವಕ್ಕಾಗಿ ಉಪಯೋಗಿಸಿದ ಪದಾರ್ಥಗಳೆಲ್ಲ ಮರುದಿನ ಮಣ್ಣಾಗುವದು ನಿಶ್ಚಿತವಿದೆ. ಶಿವನಿತ್ತ ಪದಾರ್ಥಗಳನ್ನು ಶಿವನಿಗರ್ಪಿಸದೆ ಭುಂಜಿಸಿದರೆ ಜೀವಾತ್ಮನ ಮಲಿನವೃತ್ತಿಯೇ ಬೆಳೆಯುವದು. ಶಾಂತಿ ಸಮಾಧಾನಗಳು ಸಿಕ್ಕವು. ಮನದ ಮುಂದಣ ಆಶೆಯು ಮಾಯೆಯಾಗಿ ಬಂಧಿಸುವದು. ಆ ಕರಣಗಳ ಅಧೀನದಲ್ಲಿ ನಡೆದರೆ ಅವುಗಳ ಉಪಟಳವು ಅಡಗುವದಿಲ್ಲ. ಅದಕ್ಕಾಗಿ ಬಾಲಲೀಲಾ ಮಹಾಂತರಂಥವರೂ ತಮ್ಮ “ಕೈವಲ್ಯ ದರ್ಪಣ’ ದಲ್ಲಿ –

ʼ’ಕರಣಗುಣಗಳುರುವಣಿಗೆಯನು ತಾಳೆ,

ಪೊರೆಯೋ ಬೇಗನೆʼʼ

 ಎಂದು ಶಿವನಲ್ಲಿ ಮೊರೆಯಿಟ್ಟಿದ್ದಾರೆ. ಇಂಥ ಮಹಾನುಭಾವರೇ ಕರಣಂಗಳ ಉರುವಣಿಗೆಯನ್ನು ತಾಳದಾದ ಮೇಲೆ ಪಾಮರರ ಪಾಡೇನು ? ಕೆಳಗಿನ ವಚನದಲ್ಲಿ ಅಣ್ಣ ಬಸವಣ್ಣನವರು ಅಂತಃಕರಣ ವೃತ್ತಿಗಳನ್ನು ಪರಿಶುದ್ಧಗೊಳಿಸುವ ರೀತಿಯನ್ನು ವಿಶದಪಡಿಸಿದ್ದಾರೆ.

ಮೌನದಲುಂಬುದು ಆಚಾರವಲ್ಲ.

ಲಿಂಗಾರ್ಪಿತವ ಮಾಡಿದ ಬಳಿಕ

ತುತ್ತಿಗೊಮ್ಮೆ ಶಿವಶರಣೆನ್ನುತ್ತಿರಬೇಕು.

ಕರಣವೃತ್ತಿಗಳಡಗುವವು

ಕೂಡಲಸಂಗನ ನೆನೆವುತ್ತಲುಂಡರೆ.

ಶಿವನಿತ್ತ ಪದಾರ್ಥಗಳನ್ನು ಶಿವರೂಪಿ ಗುರು-ಲಿಂಗ-ಜಂಗಮಕ್ಕೆ ಸಲ್ಲಿಸದೆ ಭೋಗಿಸಬಾರದು. ತ್ರಿವಿಧಕ್ಕರ್ಪಿಸಿ ಪ್ರಸಾದವನ್ನಾಗಿಸಿ ಶಿವಲಿಂಗವನ್ನು ಧ್ಯಾನಿಸುತ್ತ ಸ್ವೀಕರಿಸಿದರೆ ಕರಣವೃತ್ತಿಗಳು ಪರಿಪಾಕಗೊಳ್ಳುವವು. ಮಿಕ್ಕಪ್ರಸಾದದ ಲಾಭ ಸಿಕ್ಕದೇ ಹೋಗುವದಿಲ್ಲ. ಅವಶ್ಯವಾಗಿ ಆ ಪ್ರಸಾದ ಪ್ರಾಪ್ತಿಯ ಫಲ ಪ್ರಸನ್ನತೆಯನ್ನು ನೀಡುವದು. ಚಿರಶಾಂತಿಯು ಸಿಕ್ಕುವದು. ಪರಮ ನಿರಂಜನ ಗುರುವೆ ! ಅಂತಃಕರಣಗಳನ್ನು ಸಂತೃಪ್ತಗೊಳಿಸುವ ಪ್ರಸಾದ ಪರಿಯನ್ನು ತಿಳುಹಿ ಕಾಪಾಡು.

ʼʼಇಕ್ಕೇರಿ ಚೌಬೀದಿ’ಗೆ ಯೋಗರೂಢವಾದ ಇನ್ನೊಂದು ಅರ್ಥವನ್ನು ಗ್ರಹಿಸಬಹುದು. ಈಡಾ-ಪಿಂಗಳಾ ನಾಡಿಗಳ ದ್ವಾರವೇ ಇಕ್ಕೇರಿ. ನಾಭಿಮಂಡಲದಿಂದ ಹೊರಹೊರಟ ಇಕ್ಕೇರಿಯು ಭ್ರೂಮಧ್ಯದ ‘ಅಜ್ಞಾ ಚಕ್ರಕ್ಕೆ ಬಂದು ಸೇರುವದು. ಈಡಾ-ಪಿಂಗಳಾ (ಚಂದ್ರ-ಸೂರ್ಯ) ನಾಡಿರೂಪದ ಕಣ್ಣುಗಳೆರಡು ಕಿವಿಗಳೆರಡು ಭ್ರೂಮಧ್ಯದಲ್ಲಿ ಸೇರುತ್ತಿರಲು ಚೌಬೀದಿಯೆನಿಸುವದು. ಅಥವಾ ಎರಡೂ ನೇತ್ರಗಳು ಭ್ರೂಮಧ್ಯದಲ್ಲಿ ಸುಷುಮ್ಮೆಯಲ್ಲಿ ಬೆರೆದು ಬ್ರಹ್ಮರಂದ್ರಕ್ಕೇರುವ ತ್ರಿಕೂಟವೆಂತಲೂ ಕರೆಯುವರು. ಈ ವಿಚಾರದಲ್ಲಿ ಸರ್ಪಭೂಷಣ ಶಿವಯೋಗಿಗಳ ಯೋಗಪ್ರತಿ ಪಾದನಸ್ಥಲದ ಈ ಭಾವಗೀತೆ ಅರ್ಥಪೂರ್ಣವಾಗಿದೆ.

ಭೂಧಿಸೆನ್ನನು ಗುರುವೆ ! ನಿನ್ನಯ  ದಿವ್ಯ.

ಪಾದವನಂಬಿರುವೆ

ವೇದಾಂತದೊಳು ಗೋಪ್ಯವಾದ ತತ್ತ್ವವನೆ ಸಂ |

ಪಾದಿಸಿ ಮನದಿ ವಿ | ನೋದಿಸಿ ಸುಖಿಸೆಂದು        ||ಪ||

ತಲೆವಾಗಿ ಬೆಳೆದಿರುವ | ಪಂಕೇಜದ

ದಳದೆ ತಿರುಗುತಿರುವ

ಕಳಹಂಸ ಶಿಶುವಿನ | ಸುಳುಹನು ತಡೆದು ತ

ನಳಿನದ ಕರ್ಣಿಕೆ | ಯೊಳು ನಿಂತು ನಲಿಯೆಂದು       ||೧||

 ಆದಿಯಂತ್ಯವ ಭೇದಿಸಿ | ನಿರ್ಗುಣವಾದ

ನಾದಿಬ್ರಹ್ಮವ ಸಾಧಿಸಿ

ಹಾದಿನಾಲ್ಕರ ನಡು | ವೇದಿಕೆಯೊಳು ಕುಳಿತು

ಮೋದದಿ ದಶವಿಧ | ನಾದವ ಕೇಳೆಂದು                 ||೨||

ಮೂಲಕುಂಡಲಿಯನೆತ್ತಿ | ಅಗ್ನಿಯದ

ಮೇಲಣ ನೆಲೆಗೆ ಹತ್ತಿ

ಸಾಲಿಟ್ಟು ಸುರಿತಿರ್ಪ | ಹಾಲನೆ ಸವಿದುಂಡು

ನೀಲಜ್ಯೋತಿಯ ದಿವ್ಯ | ಜ್ವಾಲೆಯೊಳ್ ಬೆಳಗೆಂದು || ೩ ||

ಸರ್ಪಭೂಷಣರು ತಾವು ಅನುಭವಿಸಿ ಕಂಡುಂಡ ಸವಿಯನ್ನು ಶ್ರೀ ಗುರುವಿಗೆ ಬೋಧಿಸೆಂದು ಬೇಡಿಕೊಂಡಿದ್ದಾರೆ. ಯೋಗವಿಚಾರ ಬಹುಗೋಪ್ಯವಾದುದು. ರಹಸ್ಯವನ್ನು ಭೇದಿಸುವ ಅಪಾರವಾದ ಧೀಶಕ್ತಿಬೇಕು. ಮುಂದೆ ಪ್ರತಿಪಾದಿಸಲ್ಪಡುವ (೮೮ನೇಯ ತ್ರಿಪದಿಯಲ್ಲಿ) ಹೃದಯ ಮಧ್ಯದ ಅನಾಹತಚಕ್ರದಲ್ಲಿ ದ್ವಾದಶದಳದ ಕಮಲವುಂಟು. ಆದರೆ ಅಷ್ಟದಳ ಕಮಲವು ಸ್ಪಷ್ಟವಾಗಿದ್ದು ನಾಲ್ಕು ದಳಗಳು ಗೋಪ್ಯವಾಗಿವೆ. ಅಂತೆಯೇ ಹೃದಯದಲ್ಲಿ ಅಷ್ಟದಳದ ಕಮಲವೆಂಬುದಾಗಿಯೇ ವೇದಾಂತಗಳು ಪ್ರತಿಪಾದಿಸಿದ್ದುಂಟು. ಅಷ್ಟದಳ ಕಮಲವು ಹೃದಯದಲ್ಲಿ ಬಾಳೆಯ ಹೂವಿನಂತೆ ತಲೆಕೆಳಗೆ ಮಾಡಿಕೊಂಡು ಬೆಳೆದಿದೆ. ಈ ಅಷ್ಟದಳಗತ ಜೀವಹಂಸನು ಆಜ್ಞಾನಿಯಾಗಿ ದಳಕ್ರಮಾನುಸಾರವಾದ ಭಿನ್ನ ಭಿನ್ನಸ್ಥಿತಿಯನ್ನು ಹೊಂದಿ ತಿರುಗುತ್ತಿರುವನು. ಆ ತಿರುಗಾಟವನ್ನು ತಡೆದು ಆ ಕಮಲಮಧ್ಯದ ನಾಲ್ಕು ದಳಗಳಲ್ಲಿ ನಿಶ್ಚಲವಾಗಿರುವ ಪರಮಾತ್ಮನನ್ನು ಅರಿತು ಸುಖಿಸಬೇಕು. ಇದಕ್ಕೆ ಸಾಧನವಾದ ಷಟ್‌ಚಕ್ರಗಳನ್ನು ಅರಿಯಬೇಕು. ಆಧಾರದಿಂದ ಅಗ್ನಿಯದವರೆಗೂ ಭೇದಿಸಿ ನಡೆದು ನಿರ್ಗುಣವೂ ಅನಾದಿಯೂ ಆದ ಬ್ರಹ್ಮತತ್ತ್ವವನ್ನು ಸಾಧಿಸಿ ಹದಿನಾಲ್ಕರ ನಡುವಿನ ಅಗ್ನಿಯ ಚಕ್ರದ ಚತುಃಪೀಠದಲ್ಲಿ ಕುಳಿತು ಸಂಮೋದದಿಂದ ದಶವಿಧನಾದವ ಕೇಳಬೇಕು. ಮತ್ತು ನಾಭೀಸ್ಥಾನದಲ್ಲಿರುವ ಮೂಲಕುಂಡಲಿನೀ ಶಕ್ತಿಯನ್ನು ಸ್ಪುಟಗೊಳಿಸಿ ಅಗ್ನಿಯ ಚಕ್ರದಮೇಲಿರುವ ತ್ರಿಕೋಣಸ್ಥಾನದವರೆಗೂ ಹೋಗಿ, ಸುಷುಮ್ಮನಾಡಿಯೊಳಗಿಂದ ಹೊರಬರುವ ಚಿದಮೃತವನ್ನು ಪಾನಮಾಡಿ  ನೀಲಜ್ಯೋತಿಯ ದಿವ್ಯಪ್ರಕಾಶದಲ್ಲಿ ಮಹಾಬೆಳಕನ್ನು ಸಂಪಾದಿಸಬೇಕು. ಆದರೆ ಈ ಚತುಷ್ಪಥದಲ್ಲಿ ಸಿಕ್ಕುವ ದಿವ್ಯ ಪ್ರಕಾಶದ ಲಾಭ ಎಲ್ಲ ಯೋಗಿಗಳಿಗೆ ಲಭ್ಯವಾಗುವದಿಲ್ಲ. ಅಂತೆಯೇ ಶಿವಕವಿಗಳು “ಮಿಕ್ಕಲಾಭವದೆನಗೆ ಸಿಕ್ಕದೆ ಗುರುವೆ” ಎಂದು ಶ್ರೀ ಗುರುವಿನಲ್ಲಿ ಪ್ರಾರ್ಥಿಸಿದ್ದಾರೆ. ಕೇವಲ ಚೌಬೀದಿಗೆ ಮುಟ್ಟಿದರೂ ಆಗದು.  ಅಲ್ಲಿಂದ ಬ್ರಹ್ಮರಂದ್ರಕ್ಕೇರಬೇಕು ಪುನಃ ಬ್ರಹ್ಮರಂದ್ರದಿಂದ ಇಳಿಯುವದು ಕಠಿಣ.ಅದಕ್ಕಾಗಿ ಇಂಥ ಲಾಭದಾಯಕವಲ್ಲದ ಕೃತಿಗಿಂತ ಶ್ರೀ ಗುರು ಕೃಪೆ ಪಡೆದು ಬ್ರಹ್ಮರಂಧ್ರದ ಮಹಾಚೈತನ್ಯವೆನಿಸಿದ ಇಷ್ಟಲಿಂಗವನ್ನು ಪಡೆದು ದೃಷ್ಟಿಯೋಗದಿಂದ ನಿರಂತರವಾದ ದಿವ್ಯಪ್ರಕಾಶವನ್ನು ಹಾಗೂ ತನ್ಮೂಲಕ ನಿತ್ಯಾನಂದವನ್ನು ಪಡೆಯಬೇಕು.

ಮಣ್ಣ ಮಟ್ಟಿಯ ಮೇಲೆ | ಕಣ್ಣ ಕುಪ್ಪೆಯ ದುರ್ಗ

ಬಣ್ಣ ಬಹಿರೂಪು – ಸಣ್ಣ ಬಾಗಿಲಿಗೆ ಮೂ

ವಣ್ಣವೈ ಗುರುವೆ ಕೃಪೆಯಾಗು    ||೨||

ಈ ತ್ರಿಪದಿಯಲ್ಲಿ ಗುಣತ್ರಯದ ಪ್ರತಿಪಾದನೆ ಬಂದಿದೆ. ಪಂಚಮಹಾ ಭೂತಗಳ ಪರಿಚಯ ಮಾಡಿಕೊಡುತ್ತ, ಅವುಗಳ ಪಂಚೀಕರಣವನ್ನು ನಿರೂಪಿಸಲಾಯಿತು. ಅದರ ಪರಿಪಾಕತೆಯಿಂದಲೇ ತನು ಜನಿಸಿ ಅನೇಕ ವಿಕಾರಗಳಿಗೆ ಬಲಿಯಾಗುವ ಬಗೆಯನ್ನು ಬಿತ್ತರಿಸಲಾಯಿತು. ದೇಹವಿಕಾರಗೊಳ್ಳಲು ಕಾರಣಗಳಾದ ಪಂಚೇಂದ್ರಿಯಗಳಿಗೆ ಗೋಚರಿಸುವ ಪಂಚ ವಿಷಯಗಳನ್ನು ಪ್ರಸ್ತಾಪಿಸಿ ನಂತರ ಅಂತಃಕರಣ ಚತುಷ್ಟಯವನ್ನು ಎತ್ತಿ ತೋರಿಸಲಾಯಿತು. ಈ ದೇಹ ಇವುಗಳಲ್ಲದೆ ಗುಣತ್ರಯ ವಿಭಾಗದಿಂದಲೂ ವಿಭಿನ್ನವಿಕಾರಗಳನ್ನು ಹೊಂದುತ್ತದೆಂಬುದನ್ನು ಶಿವಕವಿಯು ರಚನಾತ್ಮಕವಾಗಿ ಬಣ್ಣಿಸಿದ್ದಾನೆ.

‘ಕಣ್ಣ ಕುಪ್ಪೆ’ ಯೆಂಬುದೊಂದು ಮಲೆನಾಡಿನ ಊರು. ಆ ಮಲೆನಾಡಿನಲ್ಲಿ ಮಣ್ಣಿನ ಪರ್ವತಗಳೇ ಬಹಳ. ಈ ಕಣ್ಣಕುಪ್ಪೆಯ ದಿಬ್ಬ (ಪರ್ವತ)ದ ಮೇಲೆ ಕೋಟೆಯೊಂದಿದೆ. ಇದಕ್ಕೆ ಸಣ್ಣ ಸಣ್ಣ ಎರಡು ಬಾಗಿಲುಗಳಿವೆ. ಅವುಗಳ ಹೊರ ನೋಟ ಬಹು ಬಣ್ಣಗಳಿಂದ ರಂಜಿತವಾಗಿದೆ. ಆದರೆ ಬಾಗಿಲುಗಳಿಗೆ ಬಳೆದಿರುವ ಬಣ್ಣಗಳು ಮೂರೇ ಮೂರು. ಈ ದುರ್ಗ ಮಲೆನಾಡಿನಲ್ಲಿ  ನೆಲೆಸಿರುವದರಿಂದ ಸೃಷ್ಟಿಯ ಸೌಂದರ್ಯಕ್ಕೆ ಆಶ್ರಯವಾಗಿದೆ. ಸುತ್ತಮುತ್ತಲು ಮರಗಳಿರುವದರಿಂದ ಎಲೆಗಳ ಹಸಿರುಬಣ್ಣ ಅಲ್ಲದೆ ಹೂವುಗಳ ವಿವಿಧ ಬಣ್ಣಗಳು ಕಾಣುವದು ಸ್ವಾಭಾವಿಕ. ಬಾಗಿಲುಗಳ ಸಮೀಪಕ್ಕೆ ಹೋಗಿ ನೋಡಿದರೆ ಮೂರು ಬಣ್ಣಗಳು ಎದ್ದು ಕಾಣುತ್ತವೆ. ಇಲ್ಲಿ ಇದೊಂದು ಕೇವಲ ರೂಪಕ. ವಾಚ್ಯಾರ್ಥದ ಪರಿಚಾಯಕ.

ಈ ದೇಹವು ಪೃಥ್ವಿತತ್ತ್ವಪ್ರಧಾನವಾಗಿರುವದರಿಂದ ಮಣ್ಣುಮಯವಾಗಿದೆ ಕಾರಣ ಅದೇ ಮಣ್ಣು ಮಟ್ಟೆ. ಈ ಹಿಂದೆ ವಿವರಿಸಿದಂತೆ ಶರೀರದಲ್ಲಿ ಮೂಗು ಪೃಥ್ವಿ ತತ್ತ್ವಾಧಿಕ್ಯತೆಯಿಂದ ಉತ್ಪನ್ನವಾದುದು. ಈ ಮಣ್ಣು ಮಟ್ಟೆಯಾದ ಮೂಗು, ಅಲ್ಲದೆ ದಿಡದ ಮೇಲ್ಬಾಗದಲ್ಲಿರುವ ತಲೆಬುರುಡೆಯೇ ಭದ್ರಕೋಟೆಯಾಗಿದೆ. ಈ ಕೋಟೆಯಲ್ಲಿ ಸಣ್ಣ ಸಣ್ಣ ಬಾಗಿಲುಗಳೆಂದರೆ ಎರಡು ಕಣ್ಣು ಗುಡ್ಡಿಗಳು. ಇವುಗಳಲ್ಲಿ ಅನೇಕ ಬಣ್ಣ ಗೋಚರಿಸಿದಂತಾದರೂ ಸೂಕ್ಷ್ಮವಾಗಿ ಪರಿಶೀಲಿಸಿದರೆ ನಿಜವಾಗಿ ತೋರುವ ಬಣ್ಣಗಳು ಮೂರಾಗಿವೆ. ೧) ಬಿಳುಪು ೨) ಕೆಂಪು ೩) ಕಪ್ಪು . ಈ ಮೂರು ಬಣ್ಣಗಳು ಪ್ರಕೃತಿ ತತ್ತ್ವದ ತ್ರಿಗುಣಗಳಿಂದಲೇ ಬಂದಿವೆ. ಸತ್ತ್ವ ರಜ, ತಮಗಳೇ   ತ್ರಿಗುಣಗಳು, ಭಗವದ್ಗೀತೆಯಲ್ಲಿ –

ಸತ್ವಂ ರಜಸ್ತಮ ಇತಿ ಗುಣಾಃ ಪ್ರಕೃತಿ ಸಂಭವಾಃ |

ಸತ್ಚ, ರಜ, ತಮೋಗುಣಗಳು ಪ್ರಕೃತಿಯಿಂದ ಸಂಜನಿಸದವುಗಳೆಂದು ಪ್ರತಿಪಾದಿತ ವಾಗಿವೆ. ಸಾಂಖ್ಯತತ್ತ್ವಾನುಯಾಯಿಗಳೂ ತ್ರಿಗುಣಾತ್ಮಕ ಪ್ರಕೃತಿಯಿಂದಲೇ ಜಗದುತ್ಪತ್ತಿ ಯನ್ನು ಮನ್ನಿಸಿದ್ದಾರೆ.

ಈ ತ್ರಿಗುಣಾತ್ಮಕ ತತ್ತ್ವವು ಪ್ರತಿಯೊಂದು ಶರೀರದಲ್ಲಿ ವ್ಯಕ್ತವಾಗಿ ತೋರುತ್ತಿದೆ. ತ್ರಿಗುಣಗಳ ಪ್ರತ್ಯಕ್ಷ ಪರಿಚಯವು ಕಣ್ಣಿನಲ್ಲಿ ಗೋಚರಿಸುತ್ತದೆ. ಸಾತ್ವಿಕ ವ್ಯಕ್ತಿಯ ಕಣ್ಣುಗಳು ತೇಜಃಪುಂಜವಾಗಿ ಹೆಚ್ಚು (ಬಿಳುಪು) ಶುಭ್ರವಾಗಿರುತ್ತವೆ. ರಾಜಸಿಯ ನೇತ್ರಗಳು ಕೆಂಪಾಗಿರುತ್ತವೆ. ತಾಮಸಿಯ ಕಂಗಳು ಕಪ್ಪಾಗಿರುತ್ತವೆ. ಕಣ್ಣುಗಳ ರೂಪವೇ ತ್ರಿಗುಣಗಳ ಪ್ರತ್ಯಕ್ಷ ಸ್ವರೂಪ. ಈ ತ್ರಿಗುಣಗಳ ಗುಣ ಧರ್ಮವು ಬಹಳ ಭಿನ್ನ ಭಿನ್ನವಾಗಿದೆ. ಇದನ್ನು ಚನ್ನಬಸವಣ್ಣನವರು ‘ಕರಣ ಹಸಿಗೆ’ಯಲ್ಲಿ ಕೆಳಗಿನಂತೆ ವಿವರಿಸಿದ್ದಾರೆ

ಸತ್ಯಂ ಜ್ಞಾನಂ ತಪೋ ಮೌನಂ

ತೋಷಶ್ಯಾಂತಿರ್ವಿವೇಕಿತಾ |

ಉತ್ಸಾಹೋ ನಿಶ್ಚಯೋ ಧೈರ್ಯಂ

ಸಾತ್ವಿಕಸ್ಯ ಚ ಲಕ್ಷಣಮ್ ||ʼʼ

ಸತ್ಯ, ಜ್ಞಾನ, ತಪ, ಮೌನ, ಹರುಷ, ಶಮೆ, ವಿವೇಕ, ಸಾಹಸ, ನಿಶ್ಚಯ, ಧೈರ್ಯ, ಈ ಹತ್ತು ಗುಣಗಳುಳ್ಳವನೇ ಸಾತ್ವಿಕ ವ್ಯಕ್ತಿಯೆನಿಸುವನು.

ಗರ್ವಃ ಕ್ರೋಧೋಽತ್ಯಹಂಕಾರಃ

ಸತಿಸಂಗಃ ಪ್ರಲಾಪನಂ |

ಅಪ್ರಿಯಂ ದಂಭಮಾತ್ಸರ್ಯೌ

ರಾಜಸಸ್ಯ ಚ ಲಕ್ಷಣಮ್ ||”

“ಗರ್ವ, ಕ್ರೋಧ, ಅತಿಯಾದ ಅಹಂಕಾರ, ವಿಷಯಸಂಗ, ವಾದ, ಅಪ್ರಿಯ ವಚನ, ದಂಭ, ಮತ್ಸರ ಈ ಎಂಟು ಗುಣಗಳು ವ್ಯಕ್ತವಾಗಿ ತೋರುವ ವ್ಯಕ್ತಿಯೇ ರಾಜಸಿಯೆನಿಸುವನು.

ಅಜ್ಞಾನ ಮೋಹ ನಿದ್ರಾಶ್ಚ

ಚಾಪಲ್ಯಂ ಬುದ್ಧಿಹೀನತಾ |

ಪಾಪಿತ್ವಂ ಪರಬಾಧಿತ್ವಂ

ತಾಮಸಸ್ಯಚ ಲಕ್ಷಣಮ್ ||ʼʼ

.

ಅಜ್ಞಾನ, ಮೋಹ, ನಿದ್ರೆ, ಚಾಪಲ್ಯ, ಹೀನವೃತ್ತಿ  ಪಾಪಿಷ್ಠತನ, ಪರನಿಂದೆ, ಪರಹಿಂಸೆ ಈ ಎಂಟು ತಾಮಸ ವ್ಯಕ್ತಿಯ ಗುಣಗಳು. ಈ ಗುಣಗಳಿಂದ ತಾಮಸಿತನವು ಪ್ರತ್ಯಕ್ಷವಾಗುತ್ತದೆ  

ಮನೋಮಂದಿರದಲ್ಲಿ ಮುಹೂರ್ತಗೊಂಡ ಅಹಂಕಾರ ವ್ಯಕ್ತಿಯು ಈ ಮೂರು ಗುಣಗಳನ್ನಾಶ್ರಯಿಸಿ ತನ್ನ ಇರುವಿಕೆಯನ್ನು ತೋರಿಸುತ್ತದೆ. ಸಾತ್ವಿಕನಿಗೆ ಸಾತ್ವಿಕಾಹಂಕಾರ ಮೈದೋರಿದರೆ ರಾಜಸನಿಗೆ ರಾಜಸಮಯವಾಗುತ್ತದೆ, ತಾಮಸಿಗೆ ಅಂಧಃಕಾರಮಯವಾಗಿರುತ್ತದೆ. ಸಾಧು ಸಜ್ಜನರು ಸಾತ್ವಿಕತೆಯ ಸಂಕೇತವಾದರೆ. ರಾಜಸನು ರಜೋಗುಣದ ದ್ಯೋತಕವಾಗಿದ್ದಾನೆ. ಅಜ್ಞನಾದ ಕೂಡ ಮಾನವನು  ತಾಮಸ ಗುಣದ  ಪ್ರತೀಕನೆನಿಸುತ್ತಾನೆ

ಸಂತಜ್ಞಾನೇಶ್ವರರು ಭಗವದ್ಗೀತೆಯ ೧೪ನೆಯ ಗುಣತ್ರಯ ವಿಭಾಗ ಯೋಗಾಧ್ಯಾಯದ ವ್ಯಾಖ್ಯಾನದಲ್ಲಿ ತ್ರಿಗುಣಗಳ ಯಥಾರ್ಥ ಸ್ವರೂಪವನ್ನು ಸುಂದರವಾಗಿ ವರ್ಣಿಸಿದ್ದಾರೆ – “ಅರಣ್ಯದಲ್ಲಿ ಬೇಡನು ಬಲೆಹಾಕಿ ಬೇಟೆಯ ಪ್ರಾಣಿಯನ್ನು ಹಿಡಿಯುವಂತೆಯೂ ಈ ಸತ್ವಗುಣವು ಜೀವನವನ್ನು ಸುಖ ಹಾಗೂ ಜ್ಞಾನ ಇವುಗಳ ಆಶೆಹಚ್ಚಿ ಹಿಡಿದೆಳೆದು ಬಂಧಿಸುವದು. ಬಳಿಕ ಜ್ಞಾನದ ಹೆಮ್ಮೆ ಪಡುವ ಜೀವನ ‘ನನ್ನಂಥ ಜ್ಞಾನಿಯು ಯಾವನೂ ಇಲ್ಲ ಎಂಬ ಪ್ರತಿಷ್ಠೆ ಮೆರೆಯಿಸುತ್ತ ಇರುವಾಗಲೇ ತನ್ನ ವಶದಲ್ಲಿದ್ದ ಆತ್ಮ ಸುಖವನ್ನು ಕಳೆದುಕೊಳ್ಳುವನು……. ಮತ್ತು ಆ ಸತ್ತ್ವ ಜೀವನುʼʼ ನನ್ನಂಥ ಭಾಗ್ಯವಾನರಿಲ್ಲ. ನನ್ನ ಹಾಗೆ ಸುಖಿಗಳಿಲ್ಲ.” ಮುಂತಾದ ವಿಕಾರಗಳ ಅಭಿಮಾನದಿಂದ ಹಿರಿಹಿರಿ ಹಿಗ್ಗುವನು. ಇಷ್ಟೇ ಅಲ್ಲ ನನ್ನಂಥ ವಿದ್ವಾಂಸನಾವನೂ ಇಲ್ಲೆಂದು ಹೇಳುವ ಅಭಿಮಾನವೆಂಬ ಭೂತವು ಅವನ ಮೈಯಲ್ಲಿ ಸೇರುವದು. ನಾನು ಸ್ವಯಂಜ್ಞಾನ  ಸ್ವರೂಪನಿರುವೆನೆಂಬುದನ್ನು ಮರೆತುದಕ್ಕೆ ಆ ಸತ್ವಜೀವನಿಗೆ ಏನೊಂದು ವಿಷಾದವೆನಿಸುವದಿಲ್ಲ. ಆದರೆ ಅನ್ಯ ವಿಷಯ ಜ್ಞಾನದಿಂದ ಮುಗಿಲೆತ್ತರವಾಗಿ ಉಬ್ಬುವನು.”

“ಈ ಗುಣವು ಜೀವನನ್ನು ಯಾವಾಗಲೂ ರಂಜನೆಗೊಳಿಸುತ್ತಿರುವದರಿಂದಲೇ ಇದಕ್ಕೆ ರಜೋಗುಣವೆಂಬ ಹೆಸರು ಬಂದಿದೆ. ಇದು ಕಾಮಾದಿ ವಿಕಾರಗಳ ಮೂರ್ತಿಯಾಗಿರುವದು. ಜೀವನದಲ್ಲಿ ಈ ಗುಣಾಂಶ ಸೇರಿತೆಂದರೆ ಕಾಮಾದಿಗಳು ತಮಗೆ ತಾನೇ ಬಂದು ಕೂಡಿಕೊಳ್ಳುವವು. ಆದುದರಿಂದ ಆಗ ರಜೋಗುಣಿಯ ಅನಿಯಂತ್ರಿತ ಮನೋರಾಜ್ಯ ಸುರುವಾಗುವುದು…. ರಜೋಗುಣಿಯ ಹವಣಿಕೆ ಹೆಚ್ಚಾಗಿ, ದುಃಖದಾಯಕ ಸಂಗತಿಗಳೂ ಕೂಡ ಅದಕ್ಕೆ ರುಚಿಯೆನ್ನಿಸುವವು. ಈ ರಜೋಗುಣ ಜೀವನಿಗೆ ಮೇರುಗಿರಿಯಷ್ಟು ಲಾಭವಾದರೂ ಇನ್ನೂ ಹೆಚ್ಚು ಲಾಭದ ಆಸೆ ಪಡುತ್ತಿರುವದು. ಹಾಗೂ ಆ ಜೀವವು ಕವಡೀ ಕಿಮ್ಮತ್ತಿನ ಲಾಭಕ್ಕಾಗಿ ಹಂಗು ದೊರೆದು  ಹೋರಾಡುವದು……. ಮತ್ತು ದೇಹಧಾರಿಯ ಶರೀರವನ್ನು ರಜೋಗುಣವೆಂಬ ದಾರುಣವಾದ ಬಂಧನದಿಂದ ಬಿಗಿಯುವದುʼʼ.

ʼʼಈ ಗುಣದ ಪರದೆಯಿಂದ ದೃಷ್ಟಿಯು ಮಂದವಾಗುವದು. ಈ ಗುಣವು ಮೋಹರಜನೀರೂಪ ಕರಿಯ ಮೋಡದಂತೆ ಇರುವದು. ಈ ಗುಣಕ್ಕೆ ಅಜ್ಞಾನವು ಎಲ್ಲ ಬಗೆಯಿಂದ ಸಹಾಯಕಾರಿಯಾಗಿರುವದು. ಅದರಿಂದಲೇ ಜಗತ್ತು ಮೋಹಗೊಂಡು ಕುಣಿಯ ಹತ್ತುವದು. ಈ ತಮೋಗುಣವು ಅವಿಚಾರದ ಮಹಾಮಂತ್ರವೂ, ಮೂಢತೆಯೆಂಬ ಮದಿರಾಪಾತ್ರೆಯೂ, ಇಲ್ಲವೆ ಜೀವನವನ್ನು ತುಂಡರಿಸುವ ಮೂರ್ತಿವಂತ ಮೋಹನಾಸ್ತ್ರವೂ ಆಗಿರುವದು. ಅರ್ಜುನಾ ! ಇದೇ ತಮೋಗುಣದ ಲಕ್ಷಣವುʼʼ.

ಈ ಮಾತುಗಳಿಂದ ತ್ರಿಗುಣಗಳ ಸ್ವರೂಪ ಸ್ಪಷ್ಟವಾಗದೇ ಇರದು. ತ್ರಿಗುಣಗಳ ಸ್ವರೂಪವನ್ನು ಪ್ರತ್ಯೇಕವಾಗಿ ವಿವಾದಿಸಿದ್ದಾರೆ. ಆಯಾ ಗುಣಗಳ ಪರಿಸರದಲ್ಲಿ ಅದೇ ಗುಣದ ಪ್ರಭಾವ ಪ್ರತ್ಯಕ್ಷವಾಗಿ ಕಂಡುಬರುತ್ತದೆ. ಹಿಂದಿನ ಋಷಿಗಳ ಆಶ್ರಮದಲ್ಲಿ ಸಾತ್ವಿಕಗುಣದ ಪ್ರಭಾವದಿಂದ ಸ್ವಭಾವತಃ ವೈರವುಳ್ಳ ಪ್ರಾಣಿಗಳೂ ಸಹ ಪರಸ್ಪರ ಮಿತ್ರರಾಗಿ ಬಾಳಿದ್ದು ಎದ್ದು ಕಾಣುತ್ತದೆ. ಇದಕ್ಕೆ ವಶಿಷ್ಠರ, ಕಣ್ವ ಮುನಿಗಳ, ಕಾದಂಬರಿಯ ಜಾಬಾಲಿ ಮುನಿಪುಂಗವರ ಆಶ್ರಮದ ಉದಾಹರಣೆಗಳು ಕಾವ್ಯಗಳಲ್ಲಿ ಜೀವಂತವಾಗಿ ಉಳಿದಿವೆ. ಹಿಂದಿನ ಮಾತೇಕೆ ? ಪೂಜ್ಯರಾದ ಈ ಕೃತಿಕರ್ತರ ಗುರುವರರೆನಿಸಿದ ಲಿಂಗನಾಯಕನ ಹಳ್ಳಿ ಚನ್ನವೀರ ಮಹಾಶಿವಯೋಗಿಗಳ, ಅಥಣಿ, ಬದರಿ, ಹಾಗೂ ಮುಂಡರಗಿ ಮಹಾಸ್ವಾಮಿಗಳವರ ದಿವ್ಯ ಚರಿತ್ರೆಯಲ್ಲಿಯೂ ಕ್ರೂರ ಪ್ರಾಣಿಗಳು ಸೇವೆ ಸಲ್ಲಿಸಿದ ದೃಷ್ಟಾಂತಗಳು ದೃಗ್ಗೋಚರವಾಗುತ್ತವೆ.

ಇನ್ನು ಶೃಂಗಾರಿಕ ವ್ಯಕ್ತಿಗಳ ಪರಿಸರದಲ್ಲಿ ಕಾಮವಿಕಾರದ ದೃಷ್ಟಾಂತಕ್ಕೆ ಕೊರತೆಯಿಲ್ಲ. ನಿತ್ಯ ಜೀವನದಲ್ಲಿ ಬೇಕಾದಷ್ಟು ಪ್ರಸಂಗಗಳು ಕಾಣಬರುತ್ತವೆ. ತಾಮಸಗುಣದ ಪರಿಸರವಂತೂ ಅಂಧಕಾರದಲ್ಲೇ ಮುಳುಗಿಸುತ್ತದೆ. ಮಹಾಕವಿ ಚಾಮರಸನು ʼ’ಪ್ರಭುಲಿಂಗ ಲೀಲೆ”ಯಲ್ಲಿ ಮಾಯಾದೇವಿಯು ಪ್ರಾದುರ್ಭಾವ ವಾಗುತ್ತಲೇ ಮುನಿಶ್ರೇಷ್ಠರ ಧೀರಮನವೂ ಚಂಚಲವಾಯಿತೆಂಬ ವಿಚಾರ  ತಾಮಸಗುಣದ ಪರಾಕಾಷ್ಠತೆಯನ್ನು ತೋರಿಸುತ್ತದೆ. ಸಾತ್ವಿಕರಿಗೂ ಒಮ್ಮೊಮ್ಮೆ ಸಾತ್ವಿಕಾಹಂಕಾರದ ಪ್ರಸಂಗಗಳು ತೋರಿಬರುತ್ತವೆ. ಅನೇಕ ಮಹಾನುಭಾವರ ಜೀವನದಲ್ಲಿ ಇವನ್ನು ನೋಡಬಹುದು. ಜಗದಣ್ಣ, ಜಗಜ್ಯೋತಿ, ಭಕ್ತಿಕಿಂಕರರೆನಿಸಿದ ಬಸವಣ್ಣನವರಿಗೂ ಅನೇಕ ಸಲ ಸಾತ್ವಿಕಾಹಂಕಾರದ ಸುಳುಹು ಹೊರಸೂಸಿದೆ.

ತ್ರಿಗುಣಗಳ ಬಣ್ಣ ಅವರವರ ಮುಖಮಂಡಲದಿಂದಲೇ ಪ್ರಕಾಶಗೊಳ್ಳುತ್ತದೆ. ಸಾತ್ವಿಕನ ನೇತ್ರಗಳು ಶುಭ್ರವೂ ತೇಜಃಪುಂಜವಾಗಿದ್ದರೆ, ರಜೋಗುಣಿಯ ಕಣ್ಣಿನಲ್ಲಿ ಕೆಂಡದಂತೆ ಕೆಂಪು ಛಾಯೆ ಸುಳಿಯುತ್ತಿರುತ್ತದೆ. ತಾಮಸಿಯ ಕಂಗಳಂತೂ  ಕರಿ ಮೋಡದಂತೆ ಮುಸುಗಿರುತ್ತವೆ. ಅವನು ನೋಡಲೂ ಭಯಾನಕವಾಗಿಯೇ ಕಾಣುವನು. ಈ ರೀತಿಯಾಗಿ ಲೌಕಿಕರ ಬಾಳಿನಲ್ಲಿ ತ್ರಿಗುಣಗಳ ಏರಿಳಿತ ವ್ಯಕ್ತವಾಗುತ್ತದೆ. ಇಂಥ ಮೂವಣ್ಣಗಳೆನಿಸಿದ ಸತ್ತ್ವ, ರಜ-ತಮೋಗುಣಗಳ ಬಾಧೆಯನ್ನು ಸದ್ಗುರುವಿನ ಕೃಪೆಯಿಂದ ಸದ್ಬೊಧೆಯಿಂದ ಹಾಗೂ ಸದಾಚಾರದಿಂದ ನಿವಾರಿಸಿಕೊಳ್ಳಬಹುದು. ಈ ಎಲ್ಲ ತನುಬಾಧೆಗಳನ್ನು, ಇಂದ್ರಿಯ ಬಾಧೆಗಳನ್ನು ಸಹಿಸಲಾರದ ಜೀವನು ತತ್ತರಿಸಿ ಹೋಗುವನು. ಸಂಸಾರದ ಬೇಗೆಯಲ್ಲಿ ಬಳಲಿ ಬೆಂದು ನೊಂದು ಸದ್ಗುರುವನ್ನು ಶರಣಾಗತನಾಗಬೇಕೆಂಬುವ ಉಪಾಯ ಹೊಳೆಯದೆ ಇರದು.

ಶಿಲೆಯ ತೆಪ್ಪವನೇರಿ | ಜಲವ ದಾಂಟುವೆನೆಂಬ

ಬಲು ಮೂಢತನವ – ತೊಲಗಿಸುತ ನೀನೆನ್ನ

ಸಲಹು ಶ್ರೀ ಗುರುವೆ ಕೃಪೆಯಾಗು.       ||೭೩ ||

ವೀರಶೈವ ಷಟ್‌ಸ್ಥಲ (ಶಿವಾದ್ವೈತ) ಸಿದ್ಧಾಂತದಲ್ಲಿ ನೂರೊಂದು ಸ್ಥಲಗಳನ್ನು ಪ್ರತಿಪಾದಿಸಿದ್ದಾರೆ. ಇದಕ್ಕೆ ‘ಏಕೋತ್ತರ ಶತಸ್ಥಲ” ಎಂಬುದಾಗಿಯೂ ಹೆಸರಿದೆ. ಕಲ್ಲುಮಠದ ಪ್ರಭುದೇವರು ವಿರಚಿತ ‘ಲಿಂಗಲೀಲಾ ವಿಲಾಸ ಚಾರಿತ್ರ”ದಲ್ಲಿ ಒಟ್ಟಿಗೆ ಹದಿನಾರು ಸ್ಥಲಗಳನ್ನು ವಿವರಿಸಿ ಅವುಗಳಲ್ಲೇ ನೂರೊಂದು ಸ್ಥಲದ ವಿಷಯವನ್ನು ಕ್ರೋಢೀಕರಿಸಿರುವಂತೆ ಬಸವಲಿಂಗ ಶರಣರು ಈ ಗುರುಕರುಣ ತ್ರಿವಿಧಿಯ ಸ್ತೋತ್ರ ತ್ರಿಪದಿಯಲ್ಲಿಯೇ ಅಷ್ಟಾವರಣವನ್ನು ಪ್ರಧಾನ ವಿಷಯವನ್ನಾಗಿಟ್ಟುಕೊಂಡು ಇದರಲ್ಲಿಯೇ ಸಕಲ ತತ್ತ್ವದ ತಿರುಳನ್ನು ಮಾರ್ಮಿಕವಾಗಿ ತಿಳಿಸಿದ್ದಾರೆ.

ಪ್ರಾರಂಭದಲ್ಲಿ ಶ್ರೀ ಗುರುವಿನಲ್ಲಿ ಪ್ರಾರ್ಥನಾ ರೂಪವಾದ ಆದಿಮಂಗಲ ಗೈಯುತ್ತ ʼʼನ ಗುರೋರಧಿಕಂ, ನ ಗುರೋರಧಿಕಂ ಶೃತಿ ಶಾಸನತಃ ʼʼಎಂಬ ಕೃತಿ ವಚನವನ್ನು “ನಗುರೋರಧಿಕವೆಂದು‘ ಎಂಬ ತ್ರಿಪದಿಯಲ್ಲಿ ಪ್ರತ್ಯಕ್ಷ ಶಿವನಾದ ಗುರುವಿಗಿಂತ ಅಧಿಕವಿಲ್ಲ. ಶ್ರೀ ಗುರುವೆನಿಸಿದ ಪರಮ ನಿರಂಜನ ಗುರುವರನೇ ಪ್ರಧಾನ ಪುರುಷನೆಂದುʼʼ ಪಿಂಡಸ್ಥಲ’ʼದ ನಿರೂಪಣೆ ಮಾಡಿದ್ದಾನೆ. ಮುಂದೆ

ನರಜೀವಿಗಳಿಗೋರ್ವ | ಹರನೆ ಕಾರಣಕರ್ತ

ಶರಣ ಸಂತತಿಗೆ – ಗುರುವೆ ನೀ ಕರ್ತನೆಂದು”

 ಶರಣ ಸಂತತಿಯ ಕಾರಣದ ನಿರೂಪಣೆಯ ಮೂಲಕ ʼʼಪಿಂಡಜ್ಞಾ ʼʼನವನ್ನು ತೋರಿಸಿ ಕೊಡುತ್ತಾನೆ. ಮತ್ತು ಗುರುಕರುಣೆಯ ಅವಶ್ಯಕತೆ ಹಾಗೂ ಗುರುಕರ್ತವ್ಯದ ಮರ್ಮವನ್ನು ತಿಳಿಸಿದ್ದಾನೆ. ಸಿದ್ಧಾಂತ ಶಿಖಾಮಣಿಯ

ಜಾತಸ್ಯಹಿ ಧ್ರುವೋ ಮೃತ್ಯುರ್ಧ್ರುವಂ ಜನ್ಮ ಮೃತಸ್ಯಚ ʼʼ  ॥ ೫.೫೯

“ಹುಟ್ಟಿದ ಜೀವಿಗೆ ಮರಣ ನಿಶ್ಚಿತವಾಗಿದೆ. ಅದರಂತೆ ಸತ್ತವನಿಗೆ ಹುಟ್ಟು ನಿಶ್ಚಯವಾಗಿದೆ” ಯೆಂಬುಕ್ತಿಯಂತೆ ಜನನ-ಮರಣಗಳ ಚಕ್ರದಲ್ಲಿ ಸುಳಿದು ಘಾಸಿಯಾಗುವ ಜೀವನಿಗೆ ಕಾಮ-ಕಾಲ-ಮಾಯೆಗಳ ಮಿತಿಮೀರಿದ ಉಪಟಳದಿಂದ ಸಂಸಾರ ಹೇಯದ ಅರಿವು ದೃಢವಾಗಲೆಂದು, ಪಂಚಮಹಾಭೂತಗಳಿಂದ ಹುಟ್ಟಿದ ದೇಹಕ್ಕೆ ಅಂಟಿದ ಅನೇಕ ವಿಕಾರಗಳನ್ನು ಮತ್ತು ಪಂಚೇಂದ್ರಿಯಗಳು ಪಂಚವಿಷಯ ಗಳಿಗಾಗಿ ಹಾತೊರೆಯುವ ಪರಿಯನ್ನು, ಅಂತಃಕರಣ ಚತುಷ್ಟಯದ ಬಂಧನವನ್ನು, ತ್ರಿಗುಣಗಳ ತಾಕಲಾಟವನ್ನು ತಿಳಿಯಪಡಿಸಿದ್ದಾನೆ. ಇದೆಲ್ಲವನ್ನು ಅವಗಾಹನೆಗೆ ತಂದುಕೊಳ್ಳುವ ಎಂಥ ಪಾಮರ ಮಾನವನಿಗೂ ಸಂಸಾರಹೇಯಬರುವದು ಸ್ವಾಭಾವಿಕವಾಗಿದೆ. ವೈರಾಗ್ಯಭಾವ ಬಲಿದ ಮೇಲೆ ಈ ಘೋರತರ ಸಂಸಾರ ಸಾಗರವನ್ನು ದಾಟುವದು ಹೇಗೆಂಬ ವಿಚಾರವೂ ಸುಳಿದು ಗುರು ಕಾರುಣ್ಯದ ಹಂಬಲಹುಟ್ಟಿ ಸದ್ಗುರು ಸನ್ನಿಧಿಗೆ ಆಗಮಿಸಿ ಪರಿಪರಿಯಾಗಿ ಪ್ರಾರ್ಥಿಸುತ್ತಾನೆ.

ನದಿಯನ್ನು ದಾಟಲಿಚ್ಛಿಸುವ ನರನು ಈಸುಗುಂಬಳವನ್ನೋ, ಬೆಸೆದ ಡಬ್ಬಿಯನ್ನೋ, ತೆಪ್ಪವನ್ನೋ  ಸಾಧನವನ್ನಾಗಿಟ್ಟುಕೊಳ್ಳುತ್ತಾನೆ. ಅಜ್ಞಾನಿಯು ನದಿ ದಾಟಲು ಈ ಸಾಧನಗಳನ್ನು ಬದಿಗಿರಿಸಿ ಕಲ್ಲು ಕಟ್ಟಿಕೊಂಡು ನೀರಿಗೆ ಧುಮುಕಿದರೆ ಮುಳುಗುವದು ಖಂಡಿತ. ಬಾಲಕನೂ ಸಹ ಇದನ್ನು ನೋಡಿ ನಗದಿರಲಾರ. ಕಲ್ಲು ಕಟ್ಟಿಕೊಂಡು ನೀರಿನಲ್ಲಿ ಮುಳುಗಿದ ಮೂರ್ಖನು ಮೇಲಕ್ಕೆ ಬರುವದೂ ಇಲ್ಲ. ಆದರೆ ರಾಮಾಯಣವನ್ನು ಓದಿದವರಿಗೆ ಅಥವಾ ಕೇಳಿದವರಿಗೆ ಈ ಮಾತು ಆಶ್ಚರ್ಯವನ್ನುಂಟು ಮಾಡಬಹುದು. ಸೀತೆಯನ್ನು ಕರೆತರುವದಕ್ಕಾಗಿ ರಾಮನು ಲಂಕಾ ನಗರಿಗೆ ಹೋಗಬೇಕಾಯಿತು. ಆ ಊರು ಸೇರಲು ಸಮುದ್ರ ಆತಂಕವೊಡ್ಡಿದೆ. ದಾಟುವ ಬಗೆ ಹೇಗೆಂದು ಚಿಂತಿಸುತ್ತಿರುವಾಗ ಬ್ರಹ್ಮಚಾರಿಯೂ ಆತ್ಮಜ್ಞಾನಿಯೂ ಅನನ್ಯ ಭಕ್ತಿವಂತನೂ, ಪರಾಕ್ರಮಿಯೂ ಆದ ಹನುಮಂತನು ಕಲ್ಲಿನ ಮೇಲೆ ದೇವನಾದ ರಾಮನ ಹೆಸರನ್ನು ಬರೆದು ಸಮುದ್ರದಲ್ಲಿ ಬಿಡುತ್ತಿರಲು ಅವೆಲ್ಲ ತೇಲಿ ಸೇತುವೆಗೆ ಸಾಧನವಾದವು. ರಾಮಚಂದ್ರನಿಗೆ ಆಶ್ಚರ್ಯವೆನಿಸಿ ಸ್ವತಃ ತಾನೇ ಕಲ್ಲು ಬಿಟ್ಟನು. ಅದು ಮುಳಗಿ ಹೋಯಿತು. ಭಗವಂತನನ್ನು ನಂಬಿ ಮಾಡಿದ ಕೆಲಸವು ಯಶಸ್ವಿಯಾಗುವದು. ನಾನೇ ದೊಡ್ಡವನು, ಸಮರ್ಥನು, ದೇವನೆಂಬ ಅಹಂಭಾವ ದಿಂದ ಮಾಡುವ ಕಾರ್ಯವು ಜಡವಾಗುವದು. ಜಡವಾಗಿ ತೇಲದೆ ಮುಳುಗಿ ಹೋಗುವದು. ಆ ಕಾರ್ಯ ಯಶಸ್ವಿಯಾಗದು. ಈ ಜಡತನವೇ ಸಂಸಾರದ ಪರಿಯಾಯವೆನಿಸಿದೆ.  –

ದೇಹದ ಉತ್ಪತ್ತಿಯ ಕಾಲಕ್ಕೇನೆ ಜಡತನದ ಸಂಘರ್ಷ ಪ್ರಾರಂಭವಾಗಿ ಜೀವನಾಂತ್ಯದವರೆಗೂ ತಪ್ಪದು. ಅದಿಲ್ಲದೆ ಜೀವನವಾಗದು. ‘ಪರಮಾರ್ಥಗೀತೆ’ ಯಲ್ಲಿ ನಿಜಗುಣಗರು

 “ಅಗಳೆ ಕೇಳಾ ರತಿಮಥನದೊಳು |

ಯೋಗವಹುದು ರೇತಂ ರಕ್ತದೊಳು ||

ಮತ್ತಾಯೋಗವಿಧಂ ತನುವಿಂಗೆ !

ಬಿತ್ತದರಿಂ ಸಂಸ್ಕೃತಿ ಜೀವಂಗೆ || ೪ | ೪ ||

“ತಂದೆ-ತಾಯಿಯ ರೇತೋ ರಕ್ತಗಳ ಸಂಯೋಗದಿಂದ ಶರೀರ ರಚನೆಯಾಗಿ, ಜೀವನು ‘ಈ ದೇಹವೇ ನನ್ನ’ದೆಂಬ ಬುದ್ಧಿಯಿಂದ ಪುಣ್ಯ-ಪಾಪಗಳನ್ನು ಮಾಡುತ್ತ  ದುಃಖಿತನಾಗಿ ಪುನಃ ಪುನಃ ಜನನ ಮರಣ ರೂಪ ಸಂಸಾರವನ್ನು ಹೊಂದುವನೆಂದು ಸಂಸಾರದ ರೀತಿಯನ್ನು ತಿಳಿಸಿದ್ದಾರೆ

ತನುವಿಕಾರ ಮನವಿಕಾರ ಜನನ-ಮರಣಸ್ಥಿತಿ ಕಾರಣ

ಹೊನ್ನತೋರಿದೆ ಜಗದ ಕಣ್ಣ ಮೊದಲಿಗೆ,

ಹೆಣ್ಣ ಸುಳಿಸಿದೆ ಜಗದ ಕಣ್ಣ ಮೊದಲಿಗೆ,

ಮಣ್ಣ ಹರವಿದೆ ಜಗದ ಕಣ್ಣ ಮೊದಲಿಗೆ,

ತನ್ನುವ ತಪ್ಪಿಸಿ ಜಗವ ಸಂಸಾರಕ್ಕೊಪ್ಪಿಸಿ

ನುಣ್ಣನೆ ಹೋದನುಪಾಯದಿ ಸೊಡ್ಡಳಾ !

ಕೆಲಸಕ್ಕೆ ಹೋಗುವ ತಂದೆ ತಾಯಿಗಳು ಮಕ್ಕಳಿಗೆ ಬಗೆಬಗೆಯ ಆಟಿಕೆಗಳನ್ನಿತ್ತು ತಾವು ಅವರಿಂದ ಬಿಡುಗಡೆಯಾಗುತ್ತಾರೆ. ಇದರಂತೆ ಪರಶಿವನು ತನ್ನಂಶೀಭೂತರಾದ ಜೀವಾತ್ಮರಿಗೆ ಹೊನ್ನು, ಹೆಣ್ಣು, ಮಣ್ಣುಗಳೆಂಬ ಸಾಂಸಾರಿಕ ವಿಷಯ ಸುಖಕ್ಕೆ ಮೆಚ್ಚಿಸಿ, ಮರುಳಗೊಳಿಸಿ ಕೊನೆಗೆ ಜನನ-ಮರಣಗಳನ್ನಾವರಿಸಿ ತಾನು ಮಾತ್ರ ಭವವಿರಹಿತನಾಗಿ ನಿರ್ಲಿಪ್ತನಾಗಿಯೇ ಸೊಡ್ಡಳ ಬಾಚರಸನ ಮಹಾದೇವನು ಮೆರೆಯುತ್ತಾನೆಂದು ಸೊಡ್ಡಳ ಬಾಚರಸರು ಸಂಸಾರದ ವಿಚಿತ್ರತೆಯನ್ನು ಚಿತ್ರಿಸಿದ್ದಾರೆ. ಶಿವನು ಲೀಲಾಮಯ ನಾಗಿದ್ದರೂ ಉಪಾಯದಿಂದ ನುಣ್ಣನೆ ನುಣುಚಿಗೊಂಡಿರುತ್ತಾನೆ.

ಇಂಥ ವಿಷಯ ಸಂಸಾರ ಸಾಗರ ಅಪಾರವಾಗಿದೆ. ಇದನ್ನು ಈಸಿ ಜಯಿಸುವದು ಬಲು ದುಸ್ತರವಾದುದು. ಅದರಲ್ಲಿಯೂ ಶಿವಕವಿ ನಿರೂಪಿಸಿರುವಂತೆ ಶಿಲೆಯ ತೆಪ್ಪವನೇರಿ ಜಲವದಾ೦ಟಲು ಪ್ರಯತ್ನಿಸುವದು ಅಸಾಧ್ಯಕಾರ್ಯವೇ ಸರಿ. ಶಿಲೆಯ ತೆಪ್ಪವೆಂದರೆ ಅಜ್ಞಾನದಿಂದ ಆವರಿಸಿದ ನನ್ನದೆಂಬ ಅಹಂಭಾವವುಳ್ಳ ಜಡದೇಹ. ಇಂಥ ಭಾರವಾದ ಶರೀರವನ್ನು ಕಟ್ಟಿಕೊಂಡು ವಿಷಮವಾದ ಸಂಸಾರ ಸಾಗರವನ್ನು ದಾಟುತ್ತೇನೆಂಬುದು ಮೂಢತನವಲ್ಲದೆ ಮತ್ತೇನು ? ಆದರೆ ಈ ತನುವಿಲ್ಲದೆ ಮುಕ್ತಿಯ ಮಾರ್ಗವೂ ಇಲ್ಲ. ಈ ವಿಷಯವನ್ನು ೫೫ನೆಯ ತ್ರಿಪದಿಯಲ್ಲಿ ಮನನ ಮಾಡಿಕೊಂಡಿದ್ದೇವೆ. ಮಾನವತನವು ಪರಮ ಪವಿತ್ರವಾದುದು. ಅಜ್ಞಾನದಿಂದ ಅದಕ್ಕೆ ಜಡತ್ವ ಜೋಡಾಗುತ್ತದೆ. ಇಂಥ ಜಡತ್ವವನ್ನು ಸದ್ಗುರು ಕರುಣೆಯಿಲ್ಲದೆ ನೀಗಿಸಿಕೊಳ್ಳಲು ಸಾಧ್ಯವಾಗುವದಿಲ್ಲ. ಅದುಕಾರಣ ಗುರುಸನ್ನಿಧಿಯನ್ನು ಆಶ್ರಯಿಸಿ ಸದ್ಬೋಧೆಯಿಂದ ಅಜ್ಞಾನವನ್ನು ನೀಗಿಸಿಕೊಂಡು ತನುವಿನ ಜಡತ್ವವನ್ನು ಕಳೆದು ಕೊಳ್ಳಬೇಕು. ಸುಜ್ಞಾನಿಯಾಗಿ ಶಿವಲಿಂಗವನ್ನು ಪಡೆಯಬೇಕು. ಈ ಇಷ್ಟಲಿಂಗವೆಂಬ ತೆಪ್ಪವನ್ನು ಆಶ್ರಯಿಸಿದರೆ ಸಂಸಾರಸಾಗರ ಸಸಾರವಾದೀತು. ಸ್ವತಂತ್ರಸಿದ್ಧಲಿಂಗ ಯತಿಗಳು –

ಅಜ್ಞಾನವೆಂಬ ಕತ್ತಲೆ ಆವರಿಸಿತ್ತಯ್ಯ ಜಗವೆಲ್ಲವ

ಅಂಧಕಾರ ಗುಹೆಯೊಳಗಿದ್ದವರಂತೆ ಇದ್ದರಯ್ಯಾ ಜೀವರೆಲ್ಲಾ

ಹೊಲಬುದಪ್ಪಿ ತಿಳಿವಿಲ್ಲದೆ ಕಳವಳಗೊಳುತ್ತಿದ್ದರಯ್ಯಾ

ಅಡವಿಯ ಹೊಕ್ಕ ಶಿಶುವಿನಂತೆ.

ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ,

ನಿಮ್ಮ ಕರುಣವಾಗದನ್ನಕ್ಕೆ ಬಳಲುತ್ತಿದ್ದರಯ್ಯಾ ಹೊಲಬನರಿಯದೆ”.

“ಅಜ್ಞಾನವೆಂಬ ಕತ್ತಲೆಯಲ್ಲಿ ದಾರಿಗಾಣದೆ; ಹೊಲಬನರಿಯದೆ ಜೀವಿಯು ಬಳಲುತ್ತಾನೆ. ಕಳವಳಗೊಳ್ಳುತ್ತಾನೆ. ಅರಣ್ಯವನ್ನು ಹೊಕ್ಕು ಶಿಶು ಕಿಂಕರ್ತವ್ಯ ಮೂಢವಾಗುವಂತೆ ಜೀವನು ಅಜ್ಞಾನದಿಂದ ಭ್ರಾಂತನಾಗುತ್ತಾನೆ. ಗುರುವಿನ ಕರುಣೆಯಾಗದೆ ಗುರಿಯನ್ನು ಗುರುತಿಸಲಾಗದು. ಅದುಕಾರಣ ಪರಶಿವ ಸ್ವರೂಪಿಯಾದ ಸದ್ಗುರುವಿನ ಕೃಪೆ ಅತ್ಯವಶ್ಯವಾಗಿ ಬೇಕೆಂಬುದನ್ನು ಮನನ ಮಾಡಿಕೊಟ್ಟಿದ್ದಾರೆ.

ಗುರುಕರುಣೆಯನ್ನು ಪಡೆಯಲಿಚ್ಛಿಸುವ ಜೀವಾತ್ಮನು ಶ್ರೀಗುರುಸನ್ನಿಧಿಗೆ ಬರಿಗೈಯಿಂದ ಹೋಗಬಾರದು. ಮುಮುಕ್ಷವಾದವನು-

ಸ ಗುರುಮೇವಾಭಿಗಚ್ಛೇತ್ ಸಮಿತ್‌ಪಾಣಿಃ

ಶ್ರೋತ್ರಿಯಂ ಬ್ರಹ್ಮನಿಷ್ಠಮ್ ।।”

ಮುಂಡಕೋಪನಿಷತ್ || ೧-೨–೧೨ ||

ದರ್ಭೆಯನ್ನು ಕೈಯಲ್ಲಿ ಹಿಡಿದುಕೊಂಡು (ಆತ್ಮನನ್ನು ಅರಿಯಲು) ಶಾಸ್ತ್ರನಿಷ್ಠನೂ ಬ್ರಹ್ಮವಿಜ್ಞಾನಿಯೂ ಆದ ಗುರುವನ್ನು ಹೊಂದಬೇಕೆಂಬ ಶ್ರುತಿಪ್ರಮಾಣದಂತೆ ಶಿವ ಕವಿಯು ತನ್ನ ಅಮಂಗಲ (ಅಜ್ಞಾನಯುತ) ಬುದ್ಧಿಯನ್ನು  ಕಳೆದುಕೊಳ್ಳುವದಕ್ಕಾಗಿಯೂ, ಪ್ರತ್ಯುತ್ತರ ನೀಡಿದ ಕಾರಣ ಗುರುಕೋಪವನ್ನು ಪರಿಹರಿಸಿಕೊಳ್ಳುವದಕ್ಕಾಗಿಯೂ ಭಕ್ತಿಯನ್ನೇ ಮುಂದಿಟ್ಟುಕೊಂಡು ಮಹಾಜ್ಞಾನ ನಿಧಿಯಾದ, ನಡೆನುಡಿಯೊಂದಾದ ನಿರಾಭಾರಿ ನಿರಂಜನಗುರು ಚನ್ನವೀರೇಶ್ವರನ ಸನ್ನಿಧಿಗೆ ಬಂದಿದ್ದಾನೆ. ಮೂಢತನವನ್ನು ತೊಲಗಿಸಲು ಪ್ರಾರ್ಥಿಸಿದ್ದಾನೆ. ಸದ್ಗುರುವನ್ನಲ್ಲದೆ, ಮತ್ತಿನ್ನಾರನ್ನು ಬೇಡಬೇಕು ! ಕಳೆದುಕೊಂಡಲ್ಲಿ ಹುಡುಕಿದರೆ ತನ್ನ ವಸ್ತು ದೊರೆಯುವಂತೆ ಆತ್ಮ ಜ್ಞಾನಿಯಲ್ಲಿಯೇ ಆತ್ಮಜ್ಞಾನವನ್ನು ಬೇಡಬೇಕು. ಸದ್ಗತಿಯನ್ನು ಸಾಧಿಸಬೇಕು. ಶಿವಕವಿಯ ಪ್ರಾರ್ಥನೆ ವ್ಯಕ್ತಿಗತವಾದುದಲ್ಲ. ಸಮಸ್ತ ಶಿಷ್ಯರಿಗೂ ಸಮನ್ವಯವಾಗುವಂಥಹದು. ಸಕಲರೂ ಇದನ್ನು ಅನುಸರಿಸಬೇಕು. ಆದರ್ಶವನ್ನಾಗಿ ಮಾಡಿಕೊಳ್ಳಬೇಕು.

ಕಾಯ ಕರ್ಮಗಳೆಂಬ | ಮಾಯ ಸಂಸಾರವನು

ಹೇಯವನೆ ಮಾಡಿ- *ಪ್ರಿಯದಿಂ ಪಾಲಿಸುವ

**ಐಯ್ಯ ಶ್ರೀಗುರುವೆ ಕೃಪೆಯಾಗು        ||೭೪ ||

ಪ್ರಿಯದಿಂದ ಪಾಲಿಸಯ್ಯ’ʼ ಎಂಬ ಪಾಠಾಂತರವೂ ಇದೆ. ‘ಪಾಲಿಸಯ್ಯ’ ಎಂಬ ಪದವು ಶಿಷ್ಯನ ಬೇಡಿಕೆಯನ್ನು ವ್ಯಕ್ತಗೊಳಿಸುತ್ತದೆ. ಹಿಂದಿನ ತ್ರಿಪದಿಯಲ್ಲಿʼʼ ಬಲು ಮೂಢತನವ- ತೊಲಗಿಸುತ ನೀನೆನ್ನ ಸಲಹು” ಎಂದು ಬಿನ್ನಹಮಾಡಿ ಕೊಂಡಮೇಲೆ ಶ್ರೀಗುರುವು ಅವಶ್ಯವಾಗಿ ಕರುಣೆದೋರುವನೆಂಬ ವಿಶ್ವಾಸ ಇಲ್ಲಿ ವ್ಯಕ್ತವಾಗುತ್ತದೆ. ಅದಕ್ಕಾಗಿ ಈ ಮಾಯಾಸಂಸಾರವನ್ನು ಹೇಯಮಾಡಿ ನನ್ನನ್ನು ಪ್ರಿಯದಿಂ ಪಾಲಿಸುವ ಐಯ್ಯ ಶ್ರೀಗುರುವೆಂಬ ಪದಪ್ರಯೋಗವು ಸಮಂಜಸವೇ ಆಗಿದೆ. ಒಡೆಯನಾದ ಶ್ರೀಗುರು ಕೃಪೆಮಾಡುವನೆಂಬ ವಿಶ್ವಾಸ ಶಿಷ್ಯನಲ್ಲಿ ಅವಶ್ಯ ಬೇಕು. ನಂಬಿದವನಿಗೆ ಇಂಬು ದೊರೆಯುವದು.

ಕಾಯವು ತಂದೆ ತಾಯಿಗಳ ಸಂಯೋಗ ಕರ್ಮದಲ್ಲಿಯೇ ಜನಿಸುತ್ತದೆ. ಅದಕ್ಕಾಗಿ ಕಾಯದ ಉತ್ಪತ್ತಿಯಲ್ಲಿಯೇ ಕರ್ಮ ಬೆನ್ನುಹತ್ತಿದೆ. ಕಾಯದ ಕ್ರಿಯೆಗೆ ಅನೇಕ ಆಕಾರಗಳು ಅನುಸರಿಸುತ್ತವೆ. ಒಂಬತ್ತು ತಿಂಗಳು ಒಂಬತ್ತು ದಿನಕಳೆದ ಮೇಲೆ ಕಾಯವು ಕರ್ಮ ಭೂಮಿಯಲ್ಲಿ ಕಾಲಿಕ್ಕುತ್ತದೆ. ಶರೀರವು ಸಿದ್ಧವಾಗುವ ಪರಿಯನ್ನು ನಿಜಗುಣರು ತಮ್ಮ ಪರಮಾರ್ಥಗೀತೆಯ ನಾಲ್ಕನೆಯ ಗತಿಯಲ್ಲಿ ವಿವರಿಸಿದ್ದಾರೆ.

ಮಲವೆರಡವು ಬೆರದೊಂದು ದಿನಕ್ಕೆ |

ಕಲಲಂ ಬುದ್ಬುವೈದು ದಿನಕ್ಕೆ II

ಪತ್ತು ದಿನಕೆ ಕಂದಾಕೃತಿಯದಕೆ |

ಮತ್ತೆಯು ದಿನದಶ-ಪಂಚಕ ಬಲಿಕೆ ||

ತಲೆ ತೋಳ್ತೊಡೆ ಸರ್ವಾಂಗ ತತಿಗಳು |

ಬೆಳೆವವು ಚೌಮಾಸಾಂತ ಗತಿಯೊಳು ||

ನವಿರ ಕುಳಿಗಳೆಲುಗಳು ಚಲನೆಗಳು

ಸವನಿಪವೈದಾರೇಳ್ಮಾಸದೊಳು ||

ಪೂರ್ವಸ್ಮರಣಂ ಜನಿಪಾಯಾಸ |

 ಸಾರ್ವಮದೆಂಟು ನವಕ್ರಮ ಮಾಸ |

ಸೂತಿಮರುತನಿಂದಿದು ಜನಿಯಕ್ಕು

ಈ ತೆರದಿಂ ಪಿಂಡೋದಯವಕ್ಕು || ೫ ||

ತಂದೆ ತಾಯಿಗಳ ಮಲರೂಪಿ ರೇತೋರಕ್ತಗಳು ಕೂಡಿಕೊಂಡು ಮೊದಲನೆ ದಿನದಲ್ಲಿ ಕಲಲವಾಗುವದು. ಅಂದರೆ ಬಿಳಿ ಮತ್ತು ಕೆಂಪು ಬಣ್ಣದ ಮಿಶ್ರಣ ದಂತಾಗುವದು. ಐದನೇ ದಿನದಲ್ಲಿ ಗುಳ್ಳೆಗಳಾಕಾರವಾಗುವದು. ನಂತರ ಹತ್ತು  ದಿವಸಗಳಲ್ಲಿ ಅದು ಒಂದು ದುಂಡಗಡ್ಡೆ ಅಥವಾ ಅನ್ನದ ಉಂಡೆಯಂತಾಗುವದು. ಹದಿನೈದನೇ ದಿನಕ್ಕೆ ಸ್ವಲ್ಪು ಬೆಳೆದು ಉದ್ದಾಗುವದು. ಆ ಮೇಲೆ ಸುಮಾರು ನಾಲ್ಕು ತಿಂಗಳು ಮುಗಿಯುತ್ತಿರಲು ತಲೆ, ತೋಳು, ಕೈ, ಕಾಲುಗಳು, ಹೊಟ್ಟೆ ಮೊದಲಾದ ಅವಯವಗಳು ಹುಟ್ಟುವವು. ಮುಂದೆ ಐದು ಆರು ಏಳು ತಿಂಗಳುಗಳಲ್ಲಿ ಕೂದಲುಗಳು, ಹುಟ್ಟಿ (ಶರೀರಕ್ಕೆ ತೂತುಗಳು, ಎಲುವುಗಳು ಉಂಟಾಗುವವಲ್ಲದೆ ಚೇತನ ಪ್ರಾರಂಭವಾಗುವದು. ಮುಂದಿನ ಎಂಟನೇ ತಿಂಗಳಲ್ಲಿ ಜ್ಞಾನೋದಯವಾಗಿ ಹಿಂದಿನ ಜನ್ಮಂಗಳ ಸ್ಮರಣೆ ಹುಟ್ಟುವದು. ಗರ್ಭಾಶಯದ ಕಷ್ಟ ಪ್ರಾಪ್ತವಾಗುವದು. ೨೮ನೆಯ ತ್ರಿಪದಿಯ ವಿವರಣೆಯಲ್ಲಿ ವಿವರಿಸಿದಂತೆ ಜೀವನು ಶಿವನಲ್ಲಿ ಮೊರೆಯಿಡುವನು. ಅಂತೆಯೇ ಏಂಟನೆ ತಿಂಗಳಲ್ಲಿ ವೀರಶೈವರು ಗರ್ಭಸ್ಥಶಿಶುವಿಗೆ ಲಿಂಗ ಸಂಸ್ಕಾರ ಮಾಡಿಸುವರು) ನವಮಾಸಗಳು ತುಂಬುತ್ತಲೇ ಪ್ರಸೂತಿ ವಾಯುವಿನಿಂದ ಶರೀರವು ಭೂಮಿಯಲ್ಲಿ ಅವಿರ್ಭವಿಸುವದು. ಗರ್ಭವತಿಯಾದ ತಾಯಿಯು ಅತ್ಯಂತ ಜಾಗರೂಕಳಾಗಿ ಗರ್ಭದ ಶಿಶುವಿನ ರಕ್ಷಣೆ ಮಾಡಬೇಕಾಗುವದು. ಹೊಟ್ಟೆಯೊಳಗಿನ ಗರ್ಭವು ತಾಯಿಯ ಮನೋ ಮೂಲಕ ಅನೇಕ ವಿಷಯಗಳನ್ನು ಇಚ್ಛಿಸುತ್ತದೆ. ಇಂಥ ತಾಯಿಯ ಬಯಕೆಯನ್ನು ಪೂರೈಸಬೇಕಾಗುವದು. ಆ ಬಯಕೆಗಳನ್ನು ಪೂರ್ಣ ಮಾಡದಿದ್ದರೆ ಗರ್ಭವು ಅವಯವಗಳಿಂದ ಹೀನವಾಗಿಯೂ ಅಶಕ್ತವಾಗಿಯೂ  ಬುದ್ಧಿಮಾಂದ್ಯವುಳ್ಳದ್ದಾಗಿಯೂ ಬಹುಕಷ್ಟದಿಂದ ಹುಟ್ಟುತ್ತದೆಂದು ಅನುಭವಿಗಳು ಹೇಳುತ್ತಾರೆ. ಆದ್ದರಿಂದ ಗರ್ಭಿಣಿಯರಿಗೆ ಅನುಕೂಲ ಮಾಡಿಕೊಡಬೇಕು. ತಾಯಿಯು ಉತ್ತಮ ಭಾವನೆಗಳಿಂದ ಗರ್ಭವನ್ನು ಬೆಳೆಯಿಸಿ ಶ್ರೇಷ್ಠನಾದ ಪುತ್ರನನ್ನು ಪಡೆಯ ಬಹುದೆಂಬುದು ಅನೇಕ ಉದಾಹರಣೆಗಳಿಂದ ತಿಳಿದುಬರುತ್ತದೆ. ಧರ್ಮಾಭಿಮಾನವುಳ್ಳ ತಾಯಿಯು ಧರ್ಮಾತ್ಮನನ್ನು ಹಡೆಯುವಳು. ರಾಷ್ಟ್ರಾಭಿಮಾನವುಳ್ಳ ಮಾತೆಯು ರಾಷ್ಟ್ರೊದ್ಧಾರಕನನ್ನೇ ಹೆರುವಳು.

ಶಿವನಲ್ಲಿ ಪ್ರಾರ್ಥಿಸಿ ಹಿಂದಿನ ಕರ್ಮವನ್ನೆಲ್ಲ ಸ್ಮರಿಸಿ ಈ ಭವ ಸಾಕೆಂದು ಬೇಸತ್ತು ಶಿಶುವು ಸುಮ್ಮನೆ ಗರ್ಭಾಸನದಲ್ಲಿ ಕುಳಿತುಕೊಂಡಿರುತ್ತಿರಲು ಕೋಟಿಸಿಡ್ಲು ಹೊಡೆದಂತೆ ಪ್ರಸೂತಿಗಾಳಿಯ ಅಘಾತಕ್ಕೆ ಸಿಕ್ಕು ಕೆಳಮುಖಮಾಡಿ ಬಹು ಕಷ್ಟದಿಂದ ಜರಾಯು ಚೀಲವನ್ನು ಹರಿದು ಯೋನಿಯ ಮುಖಾಂತರ ಹೊರಬರುವದು. ಆ ವಾಯುವಿನ ಹೊಡೆತಕ್ಕೆ ಒಳಗಾಗಿ ಜ್ಞಾನವೆಲ್ಲ ಮರೆತುಹೋಗಿ ಅಜ್ಞಾನದಿಂದ ಬಾಧೆಗಳು  ಪ್ರಾರಂಭವಾಗುವವು. ಕಾಯ ಬೆಳೆದಂತೆ ಕರ್ಮಗಳನ್ನು ಮಾಡಬೇಕಾಗುವದು.  ಅದರಿ೦ದ ಸುಖ-ದುಃಖಗಳು ಲಭ್ಯವಾಗುವವು. ಈ ವಿಚಾರವನ್ನು ನಿಜಗುಣರು ಇದೇ”ಪರಮಾರ್ಥಗೀತೆ”ಯ ಆರನೆಯ ಗತಿಯಲ್ಲಿ –

ಕರ್ಮ ವ್ಯವಹಾರವೇ ಮುನ್ನವನು |

ಕರ್ಮವ ಮಾಡಿದನದರಿಂದವನು ||

ಜನನಾಂತರವನು ಬಿಡದೈದುವನು |

ಜನಿಸಿದ ಕರ್ಮ ಫಲವನುಣುತಿಹನು ||

ಅಂತಾ ಕರ್ಮವೆ ಕಾರಣಮಾಗಿ|

ಮುಂತಿಹ ಸೃಷ್ಟಿಯೆ ಕಾರ್ಯಮದಾಗಿ ||

ಆ ಕಾರ್ಯವು ಕಾರಣ ವಶವಾಗಿ |

ಲೋಕಂ ಕೆಡುವುದು ದುಃಖಿತಮಾಗಿ || ೬-೨ |

ಶರೀರಕ್ಕೆ ಕರ್ಮವೇ ಮುಖ್ಯ. ಈ ಕರ್ಮದಿಂದಲೇ ಜನನ ಮರಣ, ಸುಖ ದುಃಖಗಳೆಂಬ ವಿಚಾರವನ್ನು ಸರಳವಾಗಿ ಪ್ರತಿಪಾದಿಸಿರುವರು.

ದೇಹವನ್ನು ಧರಿಸಿದ ದೇಹಿಗೆ ಕರ್ಮಬಲದಿಂದ ದುಃಖತ್ರಯಗಳು ಉಂಟಾಗುವವು. ಈ ವಿಚಾರವನ್ನು ಸಿದ್ಧಾಂತ ಶಿಖಾಮಣಿ’ಯಲ್ಲಿ ಶಿವಯೋಗಿ ಶಿವಾಚಾರ್ಯರು-

ಕರ್ಮ ಮೂಲೇನ ದುಃಖೇನ ಪೀಡ್ಯಮಾನಸ್ಯದೇಹಿನಃ

ಆಧ್ಯಾತ್ಮಿಕಾದಿನಾ ನಿತ್ಯಂ ಕುತ್ರ ವಿಶ್ರಾಂತಿರವಾಪ್ಯತೇ || ೫೬೨ ॥

ಆಧ್ಯಾತ್ಮಿಕಂ ತು ಪ್ರಥಮಂ ದ್ವಿತೀಯಂ ಚಾಧಿಭೌತಿಕಮ್ |

ಆದಿದೈವಿಕಮನ್ಯಚ್ಚ ದುಖಃತ್ರಯಮಿದಂ ಸ್ಮೃತಮ್ || ೫೬೩ ||

ಎಂದು ಪ್ರತಿಪಾದಿಸಿದ್ದಾರೆ. ಜೀವನ ದುಃಖಕ್ಕೆ ಮೂಲವಾದದು ಕರ್ಮ. ಅದರಿಂದ ಪೀಡಿತನಾದ ದೇಹಿಗೆ ವಿಶ್ರಾಂತಿಯಿಲ್ಲ ; ಸುಖವಿಲ್ಲ. ಈ ಕರ್ಮಗಳು ಆಧ್ಯಾತ್ಮಿಕ, ಆಧಿಭೌತಿಕ ಹಾಗೂ ಆದಿದೈವಿಕವೆಂದು ಮೂಬಗೆಯಾಗಿವೆ. ಆಧ್ಯಾತ್ಮಿಕ ದುಃಖವು ಬಾಹ್ಯ-ಅಭ್ಯಂತರವೆಂದು ಇಬ್ಬಗೆ, ವಾತ-ಪಿತ್ತ ಶ್ಲೇಷ್ಮಾ (ಕಫ)ದಿಗಳಿಂದ ಉತ್ಪನ್ನ ವಾಗುವ ದುಃಖವೇ ಬಾಹ್ಯಾಧ್ಯಾತ್ಮಿಕ ದುಃಖವೆನಿಸಿಕೊಳ್ಳುವದು. ರಾಗ-ದ್ವೇಷ- ಕಾಮಕ್ರೋಧಾದಿಗಳಿಂದ ಉತ್ಪನ್ನವಾದ ದುಃಖವು ಅಭ್ಯಂತರ ಆಧ್ಯಾತ್ಮಿಕ ದುಃಖವೆನಿಸುವದು. ರಾಜ-ಮಾನವ- ಪಶು -ಮೃಗ -ಸರ್ಪ ಮೊದಲಾದ ಭೌತಿಕ ವಸ್ತುಗಳಿಂದಾಗುವ ದುಃಖಕ್ಕೆ ಆಧಿಭೌತಿಕವೆಂದು ಹೆಸರು. ಯಕ್ಷ, ರಾಕ್ಷಸ, ಭೂತ ಪಿಶಾಚಿ ನವಗ್ರಹ ಇತ್ಯಾದಿಗಳಿಂದಾಗುವ ದುಃಖವು ಅಧಿದೈವಿಕ ದುಃಖವೆಂದು ನಾಮ ಎಂದಿದೆ. ಸಾಂಖ್ಯರು ಸಹ ದುಃಖತ್ರಯವನ್ನು ಮನ್ನಿಸಿ ಇವುಗಳನ್ನು ಹೋಗಲಾಡಿಸುವದಕ್ಕಾಗಿಯೇ ಶಾಸ್ತ್ರದ ಪ್ರವೃತ್ತಿಯಾಗಿರುವದಾಗಿ ಹೇಳುತ್ತಾರೆ. ಸಾಂಖ್ಯತತ್ತ್ವಕೌಮುದಿ”ಯಲ್ಲಿ ಆಧ್ಯಾತ್ಮಿಕ ದುಃಖದ್ವಂದ್ವಕ್ಕೆ ಶಾರೀರಿಕ ಮಾನಸೆಕವೆಂದು ಕರೆದಿದ್ದಾರೆ. ಶರೀರವು ಬಾಹ್ಯವಸ್ತು, ಮನವು ಆಂತರಿಕವೇ ಆಗಿದೆ.

ಈ ತೆರನಾಗಿ ಮಾನವನಿಗೆ ತನ್ನ ಕಾಯ, ಕಾಯದಿಂದಾಗುವ ಕರ್ಮ ಮತ್ತು ಮಾಯಪಾಶ ಇವು ಬಂಧನಕಾರಿಯಾಗುವವು. ಅವನು ಅಲ್ಪಸುಖಕ್ಕಾಗಿ  ಅನಂತದುಃಖಗಳನ್ನು ಎದುರಿಸುತ್ತಾನೆ. ಎಂಥ ದುಃಖದಾಯಕ ಸಮಯದಲ್ಲಿಯೂ ಅತ್ಯಲ್ಪ ಸುಖಕ್ಕೆ ʼʼಹಾವಿನಬಾಯ ಕಪ್ಪೆ ಹಾರುವ ನೊಣಕ್ಕೆ ಆಶೆಮಾಡುವಂತೆ,ʼʼ ಹಂಬಲಿಸುವನು. *ಶೂಲವನೇರುವ ಕಳ್ಳ ಸಾಯುವನೆಂಬ ಪರಿವೆಯಿಲ್ಲದೆ ಹಾಲೋಗರಕ್ಕೆ ಆಶಿಸುವಂತೆ” ಜೀವಾತ್ಮನು ಅಧೋಮುಖ ಇಂದ್ರಿಯಗಳ ಚಾಪಲ್ಯದಿಂದ ವಿಷಯಗಳನ್ನೇ ಬಯಸಿ ಬಂಧಿತನಾಗುತ್ತಾನೆ. ವಿಷಯ ಸಾಮೀಪ್ಯದಲ್ಲಿ ಎಂಥ ದುಃಖವನ್ನಾದರೂ ತಾತ್ಕಾಲಿಕವಾಗಿ ಮರೆಯುವನು. ಈ ವಿಚಾರದಲ್ಲಿ ಶರಣ ಚಂದಿಮರಸನ ವಚನ ಅತ್ಯಂತ ಸುಂದರವಾದ ಉದಾಹರಣೆಯಾಗಬಲ್ಲುದು. ವಿಷಯ ಸುಖದ ಚಮತ್ಕಾರಿಕೆಯನ್ನು ಅವಲೋಕಿಸಬಹುದು.

ಬಟ್ಟೆಗೊಂಡು ವೋಗುತ್ತಿಪ್ಪ ಮನುಜನೊಬ್ಬ

ಹುಲಿ, ಕಾಡಗಿಚ್ಚು, ರಕ್ಕಸಿ ಕಾಡಾನೆಗಳು

 ನಾಲ್ಕು ದೆಸೆಯಟ್ಟುತ್ತ ಬರೆ ಕಂಡು,

 ಭರದಿಂದ ಹೋಗದೆಸೆಯಿಲ್ಲದೆ, ಭಾವಿಯ ಕಂಡು,

 ತಲೆಯನೂರಿ ಬೀಳುವಲ್ಲಿ, ಹಾವಕಂಡು,

 ಇಲಿಕಡಿದ ಬಳ್ಳಿಯ ಹಿಡಿದು ನಿಲೆ,

 ಜೇನ ಹುಳುಗಳು ಮೈಯನೂರುವಾಗ

ಮೂಗಿನ ತುದಿಯಲ್ಲಿ ಒಂದು ಹನಿ ಮಧು ಬಿಂದು ಬೀಳೆ;

ಆ ಮಧುವ ಕಂಡು ಹಿರಿದಪ್ಪ ದುಃಖವನ್ನೆಲ್ಲಾ ಸೈರಿಸಿ

ನಾಲಗೆಯ ತುದಿಯಲ್ಲಿ ಆ ಮಧುವ ಸೇವಿಸುವಂತೆ

ಈ ಸಂಸಾರ ಸುಖ, ವಿಚಾರಿಸಿ ನೋಡಿದಡೆ ದುಃಖದಾಗರ,

ಇದನರಿದು ಸಕಲವಿಷಯಗಳಲ್ಲಿ ಸುಖವಿಂತುಂಟೆಂದು

ನಿರ್ವಿಷಯನಾಗಿ ನಿಂದ ನಿಲುವು ಚಿಮ್ಮಲಿಗೆಯ ಚನ್ನರಾಮ

ಕಾಡಾರಣ್ಯದಲ್ಲಿ ಹೋಗುವ ಮನುಷ್ಯನಿಗೆ ಹುಲಿ, ಕಾಡಗಿಚ್ಚು, ರಾಕ್ಷಸಿ, ಕಾಡಾನೆ ನಾಲ್ಕು ದಿಕ್ಕಿನಲ್ಲಿಯೂ ಬೆನ್ನಟ್ಟಿ ಬರುತ್ತಿರಲಾಗಿ ಬೇರೆಲ್ಲಿಯೂ ಹೋಗದವನಾಗಿ ಹಾಳುಭಾವಿಯನ್ನು ನೋಡುತ್ತಾನೆ. ಇದುವೆ ತನಗೆ ರಕ್ಷಣೆ ನೀಡುವದೆಂದರಿದು ಬೀಳಲಿಚ್ಚಿಸಿದರೆ ಕೆಳಗೆ ಭಾವಿಯಲ್ಲಿ ಘಟಸರ್ಪ ಬುಸ್ಸೆಂದು ಆಡಹತ್ತಿದೆ. ತಕ್ಷಣವೇ ಬಳ್ಳಿಗೆ ಜೋತುಬೀಳುತ್ತಾನೆ. ಆದರೆ ಅದು ಇಲಿ ಕಡಿದು ಜರ್ಜರಿತವಾಗಿದೆ. ಇಂಥ  ಬಳ್ಳಿಗೇನೇ ಜೋತು ಬೀಳುವಾಗ ಮೈಗೆ ತಾಗಿದ ಜೇನುಹುಳಗಳ ಕಡಿತ, ಅದರಲ್ಲಿಯ ಜೇನು ಹುಟ್ಟಿನಿಂದ ಸುರಿದ ಒಂದು ತೊಟ್ಟು ಜೇನು ಮೂಗಿನ ತುದಿಗೆ ತಗಲಿಕೊಂಡಿತಂತೆ. ಅಂಥ ಭಯಾನಕ ದುಃಖಮಯ ಸಮಯದಲ್ಲಿ ಜೀವನ ಸುತ್ತೆಲ್ಲ ಆವರಿಸಿದ ದುಃಖತತಿಯನ್ನು ಮರೆತು ಆ ಜೇನ ಹನಿಯನ್ನು ಸವಿಯಲು ಅಶಿಸುತ್ತಾನೆ. ಇದುವೆ ಸಂಸಾರದ ವಿಚಿತ್ರವಾದ ಚಿತ್ರ. ಎಂಥ ಅದ್ಭುತ ದುಃಖ ಸಮೂಹ. ಇದು ನಿಜವಾಗಿಯೂ ದುಃಖದ ಸಾಗರವೇ ಸರಿ. ಸಾಸಿವೆಯೆಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡೆಂದು ಶರಣ ಸಾಹಿತ್ಯ ವಿವರಿಸಿದೆ. ಈ ಭವದುಃಖವನ್ನು ವಿಚಾರಿಸಿದರೆ ಈ ಸಂಸಾರ ಹೇಯವೆನಿಸುವದು ಸಹಜ.

ಇಂತಿರುವ ಸಂಸಾರದಹೇಯವನ್ನು ಮನಗ೦ಡು ವಿಚಾರವಂತನಾಗಿ ಚಿರಸುಖದ ತವರಾದ ಧರ್ಮಮಾರ್ಗದಲ್ಲಿ ಮುನ್ನಡೆಯುತ್ತ ವೈರಾಗ್ಯಶೀಲನಾದರೆ ಅವಶ್ಯವಾಗಿ ಅಂಥವನು ಮುಕ್ತನಾಗುವನು. ಆ ನಿಲವನ್ನು ಜನತೆಗೆಲ್ಲ ಮಾರ್ಗದರ್ಶನ ಮಾಡಬಲ್ಲವನೇ ಮಹಾನುಭಾವಿಯೆನಿಸುವನು. ಪರಮಗುರುವೆ ! ನಾನು ಈ ಕಾಯ-ಕರ್ಮ-ಮಾಯೆಯ ಹೇಯವನ್ನು ತಿಳಿದು ಜಿಗುಪ್ಸೆಗೊಂಡಿದ್ದೇನೆ. ನಿನ್ನ ಜ್ಞಾನ ಜ್ಯೋತಿಯಿಂದ ಎನ್ನ ಕರ್ಮವನ್ನು ಸುಟ್ಟು ಹಾಕಿ ಮಾಯಾ ಪಾಶದಿಂದ ಮುಕ್ತನನ್ನಾಗಿ ಮಾಡು. ಕಾಯದ ಕೊಳೆಯನ್ನು ಕಳೆದು ಕರಣಾಮೃತ ಸಿಂಚನೆಯಿಂದ ಶಿವಬಾಳನ್ನು ಚಿಗುರಿಸು. ನಿನ್ನದು ಅಪಾರಪ್ರೇಮ. ಆರ್ತಹೃದಯಿಗಳಿಗೆ ಬಲವಾದ ಆಸರ ನೀನು. ಶರಣಾಗತನಾದವನನ್ನು ಪ್ರೀತಿಯಿಂದ ಸಲಹುವ ಸದ್ಗುರು ನೀನು. ಎನ್ನನ್ನು ಹರಸು. ನಿನ್ನವನನ್ನಾಗಿರಿಸಿಕೋ. ಇದು ನಿನ್ನ ಧರ್ಮವಲ್ಲವೇ ?

 ಇಂತಪ್ಪ ಸಂಸಾರ | ಭ್ರಾಂತಿಯೊಳಿರ್ದವನನೇ-

ಕಾಂತದೊಳ್ಕರೆದು-ಮುಂತೆ ನೀ ಪರವಸ್ತು

ವಿಂತೆಂದ ಗುರುವೆ ಕೃಪೆಯಾಗು      ೭೫ ||

ಶಿವಕವಿಯು ಹಿಂದಿನ ತ್ರಿಪದಿಗಳಲ್ಲಿ ಸಾಂಸಾರಿಕ ಭ್ರಾಂತಿಯನ್ನು ವಿವರಿಸಿ ಜೀವನು ಈ ಭ್ರಾಂತಿಯ ಬಂಧನದಲ್ಲಿ ಬಂಧಿತನಾಗುವ ರೀತಿಯನ್ನು ತಿಳಿಸಿದನು. ಪೂರ್ವಪುಣ್ಯ ವಿಶೇಷದಿಂದ ತನ್ನ ಅಜ್ಞಾನವನ್ನು ಅರಿತು ಅದನ್ನು ಕಳೆದುಕೊಳ್ಳಲು ಈ ಸಂಸಾರ ಹೇಯವೆಂದು ಮನಗಂಡು, ಸಾಂಸಾರಿಕ ಭ್ರಾಂತಿಯನ್ನು ನಿರಸನ ಮಾಡಿಕೊಳ್ಳಲು ಸದ್ಗುರು ಸನ್ನಿಧಿಯನ್ನು ಬಯಸಿಬರುವನು. ಶುದ್ಧಾಂತಃಕರಣ ನಾಗಲು ಸದ್ಗುರುವಿನಲ್ಲಿ ಜೀವಾತ್ಮನು ಪ್ರಾರ್ಥಿಸುವನು;- ಗುರುವೆ ! ಇಲ್ಲಿಯ ವರೆಗೆ ವೈಷಯಿಕ ವ್ಯಾಮೋಹವು ಬಹಳ ದಿನಗಳಿಂದಲೂ ನನ್ನಲ್ಲಿ ಮನೆಮಾಡಿಕೊಂಡಿತ್ತು. ಅದಕ್ಕಾಗಿ ನಿನ್ನ ಸಾನ್ನಿಧ್ಯ ದೂರವಾಗಿತ್ತು, ಈ ಸಂಸಾರ ಭ್ರಾಂತಿಯು ಸ್ಥಿರವಾದುದಲ್ಲ. ಅದು ನಿನ್ನ ಕೃಪಾದೃಷ್ಟಿ ಬೀಳುತ್ತಲೆ ಕಳಚಿ ಹೋಗುವದು. ಸತ್ಪುರುಷರ ಸಹವಾಸದಿಂದ ಯಥಾರ್ಥ ವಸ್ತುವಿನ ತಿಳುವಳಿಕೆಯಾದರೆ ಅದು ಹಾರಿಹೋಗುವದು. ನಿನ್ನ ಬೋಧಾಮೃತ ಸಿಂಚನೆಯಿಂದ ಎನ್ನ ಜೀವನದಲ್ಲಿ ನವಚೈತನ್ಯ ತುಂಬುವದು. ಅಜ್ಞಾನವು ಸಂಪೂರ್ಣವಾಗಿ ನಾಶವಾಗುವದು. ಪೂಜ್ಯಪಾದರಾದ ಶಂಕರಾಚಾರ್ಯರು ಸಹ ಭಗವದ್ಗೀತಾ ಭಾಷ್ಯ’ ದಲ್ಲಿ –

ಭ್ರಾಂತಿಪ್ರತ್ಯಯ ನಿಮಿತ್ತ ಏವಾಯಂ ಸಂಸಾರಭ್ರಮಃ |

ನ ತು ಪರಮಾರ್ಥಃ ಇತಿ ಸಮ್ಯಗ್ ದರ್ಶನಾತ್ |

ಅತ್ಯಂತಮೇವ ಉಪರಮಃ | || ೧೮ – ೬೬ ||

“ಸಂಸಾರ ಭ್ರಮೆಯು ಭ್ರಾಂತಿ ಪ್ರತ್ಯಯದ (ದೇಹಾದಿಗಳಲ್ಲಿ ಕರ್ತೃತ್ವ, ಭೋಕೃತ್ವದ ತಪ್ಪು ತಿಳುವಳಿಕೆ) ನಿಮಿತ್ತದಿಂದಲೇ ಉಂಟಾಗಿರುತ್ತದೆಯೇ ಹೊರತು ಪರಮಾರ್ಥವಲ್ಲ. ಅಂದರೆ ಸತ್ಯವಾದುದಲ್ಲ. ಆದ್ದರಿಂದ ಇದು ಸರಿಯಾದ ತಿಳುವಳಿಕೆಯಿಂದ ಅತ್ಯಂತವಾಗಿ ನಾಶಹೊಂದುತ್ತದೆ.’ ಎಂದು ಪ್ರತಿಪಾದಿಸಿದ್ದಾರೆ. ಅದರಂತೆ ಸಂಸಾರವು ಹೇಯವೆಂಬುದನ್ನರಿತು ಪರಮ ಗುರುನಾಥನೇ ! ನಿನ್ನ ಪಾದಪದ್ಮಂಗಳಲ್ಲಿ ಶರಣಾಗತ ನಾಗಿದ್ದೇನೆ. ಕೃಪೆಮಾಡಿ ರಕ್ಷಿಸು.

ಶರಣಾಗತನಾದ ಶಿಷ್ಯನನ್ನು ಸದ್ಗುರು ದಯಾದೃಷ್ಟಿಯಿಂದ ಅವಲೋಕಿಸಿ ಕರುಣೆ ಬೀರುತ್ತಾನೆ.ʼʼ ಮಗು ! ನೀನು ಸಂಸಾರಭ್ರಾಂತಿಯೊಳಗಿದ್ದು ದುಃಖ ಪಟ್ಟಿರುವೆ. ಬಳಲಿರುವೆ. ಬೆಂದಿರುವೆ. ಬಾ ಒಳಗೆ” ಎಂದು ಸಮೀಪಕ್ಕೆ ಕರೆದು ಮೈದಡವಿ ಸಂತೈಸುತ್ತಾನೆ. ಆತ್ಮೀಯತೆಯಿಂದ ಕಲ್ಯಾಣ ಕೇಳುತ್ತಾನೆ. ಜನ ಗದ್ದಲದಿಂದ ಬೇರ್ಪಡಿಸಿ ಏಕಾಂತದಲ್ಲಿ ಕರೆದೊಯ್ಯುತ್ತಾನೆ. ಧೈರ್ಯವನ್ನು ದಯಪಾಲಿಸುತ್ತಾನೆ.

 ಬಳಲಿದವನನ್ನು ಸಂತೈಸಲು ಏಕಾಂತವಾಸ ಬಹಳ ಮುಖ್ಯ. ಇದು ಲೌಕಿಕಾನು ಭವವೂ ಹೌದು. ಶಾಸ್ತ್ರಶ್ರವಣಕ್ಕಾದರೂ ಏಕಾಂತವಾಸವು ಅತ್ಯವಶ್ಯಬೇಕು. ಯಾಕಂದರೆ ಸಂತೆಯಲ್ಲಿ ಶಾಸ್ತ್ರವನ್ನು ಹೇಳಬಾರದೆಂಬ ಲೋಕೋಕ್ತಿಯೂ ಉಂಟು. ಅದಕ್ಕಾಗಿ ಅನುಭವ ಗೋಷ್ಠಿಯನ್ನು ಪ್ರಶಾಂತ ವಾತಾವರಣದಲ್ಲಿ ನೆರವೇರಿಸಬೇಕು. ಗಹನವಾದ ವಿಷಯವನ್ನು ಕೇಳುವ ಶಿಷ್ಯನ ಮನಸ್ಸು ಚಂಚಲವಾದರೆ ಗುರುವಿನ ಶ್ರಮ ವ್ಯರ್ಥವಾಗುವದು. ಪ್ರಫುಲ್ಲಮನದಿಂದ ಗುರುವಚನವನ್ನು ಅರಿಯಲು ಏಕಾಂತವಾಸ, ಪರಿಪೂರ್ಣವಾದ ಏಕಾಗ್ರತೆಗಳೇ ಸಾಧನವಾಗುವವು. ಅದಕ್ಕಾಗಿ ಪ್ರಶಾಂತವಾದ ಏಕಾಂತದಲ್ಲಿ ನನಗೆ ನೀನು ʼʼಪ್ರಥಮತಃ ಪರಾತ್ಪರ ಪರಶಿವನೇ ಆಗಿದ್ದಿ. ಸಾಂಸಾರಿಕ ಭ್ರಾಂತಿಯಿಂದ ಅದನ್ನು ಮರೆತಿದ್ದಿ, ಅದಕ್ಕಾಗಿ ಪಡಬಾರದ ಕಷ್ಟಗಳನ್ನು ಅನುಭವಿಸಿರುವಿ” ಎಂದು ಕರುಣದಿಂದ ಬೋಧೆಗೈದೆ. ಓ ಕರುಣಾಕರನೆ ! ನಿನ್ನಂಥ ಪರಮ ಗುರುವನ್ನು ಪಡೆದ ನಾನು ಧನ್ಯನು. ಕೃತಾರ್ಥನು.

ಶ್ರದ್ಧಾವಾನ್ ಲಭತೇ ಜ್ಞಾನಮ್ ।”

ಗುರು ಶುಶ್ರೂಷಯಾ ವಿದ್ಯಾ |

ಶ್ರದ್ಧೆ (ವಿಶ್ವಾಸ) ಯುಳ್ಳವನು ಆತ್ಮಜ್ಞಾನವನ್ನು ಹೊಂದುವನು. ಮತ್ತು ಗುರು ಸೇವಾ ಫಲದಿಂದಲೂ ವಿದ್ಯಾರ್ಜನೆಯನ್ನು  ಮಾಡಿಕೊಳ್ಳಬಹುದೆಂಬ ಗೀತೋಕ್ತಿಗಳು ಅತ್ಯಂತ ಯಥಾರ್ಥವಾಗಿವೆ. ಸದ್ಗುರುವಿನ ಸೇವೆಯನ್ನು ಶ್ರದ್ಧಾಪೂರ್ವಕ ಮಾಡಬೇಕು. ಶ್ರೀಗುರುವಿನಲ್ಲಿ ಆಪ್ತ-ಅಂಗ-ಸ್ಥಾನ-ಸದ್ಭಾವಗಳೆಂಬ ಚತುರ್ವಿಧ ಸೇವೆಗಳನ್ನು ಸಮರ್ಪಿಸಬೇಕು. ಸಂತೃಪ್ತಿಗೊಳಿಸಬೇಕು. ಮಾತಿನಿಂದ ಗುರು ದೊರೆಯುವದಿಲ್ಲ.  ಗುಲಾಮತನ ಅವಶ್ಯಬೇಕು. ಕಿಂಕರನಾಗಬೇಕು. ಗೋವು ಕೀಳಿಂಗಲ್ಲದೆ ಹೈನ ಕರೆಯದು. ಗೋಸೇವೆ ಮಾಡಿ ಕಿಂಕರನಾಗಿ ಅದರ ಪಾದದಡಿ ಕುಳಿತರೇನೆ ಹಾಲು ಸಿಕ್ಕುವದು. ಅದರಂತೆ ಸದ್ಗುರುನಾಥನು ಸೇವೆಗೆ ಒಲಿದು ಕರುಣಾಮೃತವನ್ನು ಪಾನಮಾಡಿಸುವನು. ಆಗ ಸಂಸಾರ ಭ್ರಾಂತಿಯು ದಿಕ್ಕೆಟ್ಟು ಓಡಿಹೋಗುವದು. ಭ್ರಮೆಯಳಿದು ಭಕ್ತಿಭಾವ ಅಳವಡುವದು. ಧನ-ಕನಕ-ಕಾಮಿನಿಯರಲ್ಲಿಯ ವ್ಯಾಮೋಹವೇ  ಗುರುಸನ್ನಿಧಿಯಲ್ಲಿ ಪರಿಪಾಕಗೊಂಡು ಭಕ್ತಿಯಾಗುವದು.

 ಇಂಥ ಭಕ್ತಿಯಿಂದ ಮಾತ್ರ ಮುಕ್ತಿ, ಸಾಮರಸ್ಯ ಸಮನಿಸುವದು. “ಕ್ತೇ ಸಾಧ್ಯಂ ನ ಹಿ ಕಿಂಚಿದಸ್ತಿʼʼ ಭಕ್ತಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಶಿವಭಕ್ತಿಯು ಬೇಡನನ್ನು ಸಹ ಭಕ್ತ ಶ್ರೇಷ್ಠನನ್ನಾಗಿ ಮಾಡಲಿಲ್ಲವೆ ? ಭಕ್ತಿಯಿಂದಲೇ ಗುರುಸಾನಿಧ್ಯ ಲಭ್ಯವಾಗಿ ಸಂಸಾರಭ್ರಾಂತಿಯು ನಿರಸನವಾಗುವದು. ಗುರುಸಾನಿಧ್ಯದ ಮಹತ್ವ ಅಪಾರವಾದುದು. ಅಂಥ ಸಾನ್ನಿಧ್ಯವನ್ನು ಸಂಪಾದಿಸಿದ ಮನುಷ್ಯನೇ ಧನ್ಯನು, ಪುಣ್ಯನು.

*

: ಸೌಜನ್ಯ “ಬೆಳಗು”

ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು ಯಾವ ಲೌಕಿಕ ಭೋಗಭಾಗ್ಯವನ್ನು ಬಯಸಿ ಪಡೆದವರಲ್ಲ ; ಆದರೆ ಅವರ ಅಧ್ಯಾತ್ಮ ಪರಿವಾರದಲ್ಲಿಯ ಅವರ ಶಿಷ್ಯ ಸಂಪತ್ತು ಅಪರಿಮಿತವಾದುದು, ಲೋಕೋತ್ತರವಾದುದು. ಅವರು ತಮ್ಮ ಸಮಾಜಸೇವೆಯ ಕನಸನ್ನು ಲೋಕಹಿತಸಾಧನೆಯ ಆದರ್ಶವನ್ನೂ ಪೂರ್ಣ ಮಾಡುವ ಹಿರಿಯ ಹೊಣೆಗಾರಿಕೆಯನ್ನು ಮಂದಿರದ ಸಾಧಕರ ಮೇಲೆ ಕಾರ್ಯಕರ್ತರ ಮೇಲೆ ಬಿಟ್ಟು ಬಯಲಾದರು. ಅವರ ಸೇವಾಭಾವದ ಕಮ್ಮಟವಾದ ಮಂದಿರದಲ್ಲಿ ದೀಕ್ಷಿತರಾದ ಶ್ರೀಗಳವರು, ಸಂಗೀತಗಾರರು, ಕಲಾವಂತರು, ಅನುಭವಿಗಳು, ಸಂಶೋಧಕರು, ಶಾಸ್ತ್ರಿಗಳು ಶಿಕ್ಷಕರು ಮುಂತಾಗಿ ದಕ್ಷರಾದ ಕಾರ್ಯಕರ್ತರು ಈ ಲೋಕಸೇವೆಯ ಭಾರವನ್ನು ಹೊತ್ತು ಅನೇಕ ಮುಖವಾಗಿ  ನಿರ್ವಹಿಸಿದ್ದಾರೆ, ನಿರ್ವಹಿಸುತ್ತಿದ್ದಾರೆ. ಇವರ ರೂಪದಲ್ಲಿ ಶ್ರೀಗಳವರ ಕಾರ್ಯಶಕ್ತಿ ಪ್ರಭೆಯ ಕಿರಣಗಳು ಅಲ್ಲಲ್ಲಿ ಮೂಡಿ ನಾಡಬಾನನ್ನು ಬೆಳಗಿದ್ದಾವೆ. ಮಂದಿರದ ಫಲಿತಾಂಶಗಳ ಪ್ರತ್ಯಕ್ಷ ದಿಗ್ದರ್ಶನವನ್ನು ನಾಡಿನ ಸರ್ವತೋಮುಖವಾದ ಏಳ್ಗೆಗೆ ವಿನಿಯೋಗವಾಗುತ್ತಿರುವ ಶ್ರೀಗಳವರ ಈ ಶಿಷ್ಯ ಸಂಪತ್ತಿನಲ್ಲಿ ಕಾಣಬಹುದಾಗಿದೆ.

(ಕ್ರಿ. ಶ. ೧೯೦೯)

.

೧).ಸವದತ್ತಿಯ ಶ್ರೀ ನಿ. ಪ್ರ. ಅಪ್ಪಯ್ಯ (ಶಿವಲಿಂಗ) ಸ್ವಾಮಿಗಳು: ಸವದತ್ತಿಯ ಶ್ರೀ .ನಿ ಪ್ರ.ಅಪ್ಪಯ್ಯ ಸ್ವಾಮಿಗಳು ಹಾನಗಲ್ಲ ಶ್ರೀಗಳವರ ಶಿಷ್ಯ ಸಂಪತ್ತಿಯ ಭಾಂಡಾರದಲ್ಲಿ  ಮುಕುಟಮಣಿಯಾಗಿ ರಾರಾಜಿಸಿದರು. ಅವರು ಮುಧೋಳ ಸ್ವತಂತ್ರಿ ಮಠದಲ್ಲಿ ಬಿದರಿ ಕುಮಾರ ಶಿವಯೋಗಿಗಳ ಕರುಣೆಯ ಕಂದರಾಗಿ ಶಾ. ಶ. ೧೮೧೬ನೆಯ ಕಾರ್ತಿಕ ಶು. ೧ನೇ ಶುಭದಿನ ಜನಿಸಿದರು. ವಟು ಮಹಾಲಿಂಗಾರ್ಯ ಗುರುಪುತ್ರನಾಗಿಯೆ ಬೆಳೆದನು . ಬಾಲ್ಯದಲ್ಲಿಯೆ ಬಿದರಿ ಶ್ರೀಗಳವರು ಮಹಾಲಿಂಗಾರ್ಯನನ್ನು ತಮಗೆ ಬೇಕೆಂದು ಕರೆತಂದರು. ‘ಅಪ್ಪಯ್ಯ’ನೆಂದು ಪ್ರೀತಿಯಿಂದ ಕಂಡರು. ಅಪ್ಪಯ್ಯ ದೇವರ ಶಿಕ್ಷಣದ ಭಾರ ಹಾನಗಲ್ಲ ಶ್ರೀಗಳವರದಾಯಿತು. ಅಪ್ಪಯ್ಯ ದೇವರು ಕೆಲವು ವರ್ಷ ಹಾವೇರಿಯ ಹುಕ್ಕೇರಿಮಠದ ಪಾಠಶಾಲೆಯಲ್ಲಿ ಸಂಸ್ಕೃತಾಭ್ಯಾಸ ಮಾಡಿದರು. ೧೯೦೯ ರಲ್ಲಿ ಶಿವಯೋಗ ಸಾಧಕರಾದರು. ೧೫ ವರ್ಷ ಶಿವಯೋಗ ಮತ್ತು ಶಿವಾನುಭವ ಶಿಕ್ಷಣ ಪಡೆದರು. ಹಾವೇರಿ ಶ್ರೀಗಳವರಿಂದ ಅನುಗ್ರಹ ಹೊಂದಿ ಕಾಲು ನಡಿಗೆಯಿಂದ ಎಡೆಯೂರ ಶ್ರೀ ಕ್ಷೇತ್ರದ ಯಾತ್ರೆಯನ್ನು ಮಾಡಿ ಶ್ರೀ ಸಿದ್ಧಲಿಂಗ ಶಿವಯೋಗಿಯ ದರ್ಶನ ಪಡೆದರು. ಅಂದಿನಿಂದ ಶಿವಯೋಗದಲ್ಲಿ ಸಿದ್ದಿ ಪಡೆಯುವ ಹಂಬಲ ಬಲವಾಯಿತು. ಸವದತ್ತಿಯ ಕಲ್ಮಠಕ್ಕೆ  ಅಧಿಕಾರಿಗಳಾದ ಮೇಲೆ ಬಿದರಿ ಗುರುವರ್ಯರು ತಪಗೈದು ಸಿದ್ಧಿಪಡೆದ ನವಿಲುತೀರ್ಥ’ದಲ್ಲಿ ಅನುಷ್ಠಾನ ಮಾಡಿದರು. ಅವರ ಶಿವಯೋಗ ಸಿದ್ಧಿಯನ್ನು ಕಂಡು ಹಾನಗಲ್ಲ ಮತ್ತು ಹಾವೇರಿ ಶ್ರೀಗಳವರಿಗೆ ಅಮಿತಾನಂದವಾಯಿತು. ಅಪ್ಪಯ್ಯ ಸ್ವಾಮಿಗಳು ಗುರುಪುತ್ರರಾಗಿದ್ದರಿಂದ ಅವರ ಮೇಲೆ ಉಭಯ ಶ್ರೀಗಳವರದೂ ಅಪಾರವಾದ ಪ್ರೇಮ. ಹಾವೇರಿ ಶ್ರೀಗಳವರು ಅವರ ನೆನಹಿಗಾಗಿಯೇ ‘ಶಿವಲಿಂಗ ವಿಜಯ’ ಮುದ್ರಣ ಮಂದಿರವನ್ನು ಸ್ಥಾಪಿಸಿದ್ದರಂತೆ ಎಳೆಯ ವಯಸ್ಸಿನಲ್ಲಿಯೆ ಶ್ರೀ ಅಪ್ಪಯ್ಯ ಸ್ವಾಮಿಗಳ ಜೀವನ ಫಲ ಶಿವಯೋಗ ನಿಷ್ಪತ್ತಿ ಪಡೆದು ಪರಿಪಕ್ವವಾಗಿತ್ತು, ಅದನ್ನು ಶಕೆ ೧೮೪೬ ಮಾರ್ಗಶಿರ ಶು. ೭(ಕ್ರಿ.ಶ.೧೯೨೪) ರಂದು ಶಿವ ತನಗೆ ಬೇಕೆಂದು ಎತ್ತಿಕೊಂಡ.

೨). ಗುಳೇದಗುಡ್ಡದ ಶ್ರೀ ನಿ. ಪ್ರ. ಒಪ್ಪತ್ತಿನ ಸ್ವಾಮಿಗಳು :ಗುಳೇದಗುಡ್ಡದ ಶ್ರೀ ನಿ.ಪ್ರ. ಒಪ್ಪತ್ತಿನ ಸ್ವಾಮಿಗಳು ಮಂದಿರದಲ್ಲಿ ಶಿಕ್ಷಣ ಪಡೆದು ಒಪ್ಪತ್ತೇಶ್ವರ ಮಠಕ್ಕೆ ಅಧಿಕಾರಿಗಳಾಗಿ ಹೋದ ಮೇಲೆಯೂ ಸಂಸ್ಥೆಯ ಸೇವೆಯನ್ನು ತ್ರಿಕರಣಪೂರ್ವಕವಾಗಿ ಮಾಡುತ್ತಿದ್ದರು. ಅವರು ಪ್ರತಿವರ್ಷ ಭಿಕ್ಷೆ ಮಾಡಿ ಮಂದಿರದ ದಾಸೋಹ ಕಾರ್ಯಕ್ಕೆ ನೆರವಾಗಿದ್ದರು. ಶಿವರಾತ್ರಿಯ ಉತ್ಸವದಲ್ಲಿ ಅವರ ನೇತೃತ್ವದಲ್ಲಿ ದಾಸೋಹದಲ್ಲಿ ಶಿವಪೂಜೆ ಮತ್ತು ಅನ್ನಸಂತರ್ಪಣೆಯ ಕಾರ್ಯ ಸಾಂಗವಾಗಿ ನಡೆಯುತ್ತಿದ್ದಿತು. ಅವರು ಖಿಲವಾದ ತಮ್ಮ ಮಠವನ್ನು ಬಹಳ ಅಭಿವೃದ್ಧಿಗೆ ತಂದಿದ್ದರು.

೩) ಬಾಗಲಕೋಟೆಯ ಶ್ರೀ ನಿ. ಪ್ರ. ಶಿವಮೂರ್ತಿ ಸ್ವಾಮಿಗಳು:ಬಾಗಲಕೋಟೆಯ ಶ್ರೀ ನಿ.ಪ್ರ .ಶಿವಮೂರ್ತಿ ಸ್ವಾಮಿಗಳು ಚರಂತಿಮಠದ ಅಧಿಕಾರಿಗಳಾಗಿ ಮಂದಿರದಲ್ಲಿ ೨೦ ವರ್ಷ ಶಿಕ್ಷಣ ಪಡೆದವರು, ಹಾನಗಲ್ಲ ಶ್ರೀಗಳವರ ಅಪ್ಪಣೆಯಂತೆ ಅವರು ಅನಂತಪುರ-ಕೆಳದಿ ಪ್ರಾಂತದಲ್ಲಿ ಕೀರ್ತನ- ಪ್ರವಚನಗಳನ್ನು ಮಾಡಿಸಿ ಶಿವಾನುಭವ ಪ್ರಸಾರವನ್ನು ಕೈಕೊಂಡರು. ಕಪನಳ್ಳಿಯಲ್ಲಿ ಅನುಷ್ಠಾನವನ್ನು ಮಾಡಿ ಶಿವಯೋಗ ಸಿದ್ಧಿಯನ್ನು ಪಡೆದಿದ್ದರು. ಅನಂತಪುರದ ಶ್ರೀ ಲಿಂಗಸ್ವಾಮಿಗಳು ಲಿಂಗೈಕ್ಯರಾದ ಮೇಲೆ  ಆ ಸಂಸ್ಥಾನಮಠದ ವ್ಯವಸ್ಥೆಯನ್ನು ಕೆಲವು ವರ್ಷ ನೋಡಿಕೊಂಡಿದ್ದರು; ಅದರ ಅಭಿವೃದ್ಧಿಯನ್ನು ಮಾಡಿದರು. ಬಾಗಲಕೋಟೆಯಲ್ಲಿರುವ ‘ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘ’ ಕ್ಕೆ ೮-೧೦ ಸಾವಿರ ರೂಪಾಯಿ ಬೆಲೆ ಬಾಳುವ ತಮ್ಮ ಮಠದ ಜಮೀನನ್ನು ದಾನವಾಗಿ ದಯಪಾಲಿಸಿ ವಿದ್ಯಾದಾನದ ಕಾರ್ಯಕ್ಕೆ ಪ್ರೋತ್ಸಾಹವಿತ್ತರು. ಶ್ರೀಗಳವರು ಯಾವಾಗಲೂ ಶಿವಯೋಗಮಂದಿರದ ಅಭಿವೃದ್ಧಿಯ ಕಾರ್ಯಗಳಲ್ಲಿ ಅಭಿಮಾನದಿಂದ ಸಹಕರಿಸುತ್ತಿದ್ದರು. ಶ್ರೀಗಳವರೆ ಬಾಗಲಕೋಟೆಯ ಕರವೀರಮಠದ ಅಧಿಕಾರವನ್ನು ವಹಿಸಿಕೊಂಡಿದ್ದರು. ಎರಡು ಮಠಗಳ ಪ್ರಗತಿಯ ಬಗ್ಗೆ ಉಪಾಯಗಳನ್ನು ಕೈಕೊಂಡಿದ್ದರು. ಅನಿರೀಕ್ಷಿತವಾಗಿ ಕ್ರಿ.ಶ. ೧೯೪೭ರಲ್ಲಿ ಲಿಂಗೈಕ್ಯರಾದರು.

)ಕಂಚುಕಲ್ಲ-ಬಿದರೆ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು: ಕಂಚುಕಲ್ಲ -ಬಿದರೆ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು ದೊಡ್ಡಮಠದ ಅಧಿಕಾರಿಗಳಾಗಿದ್ದರು. ಜಿ. ಚಿಕ್ಕಮಗಳೂರ ಕಡೂರ ತಾಲೂಕಿನ ಕೆ. ಬಿದರೆಯ ದೊಡ್ಡಮಠ ಹೆಸರಾದ ಗುರುಪೀಠ. ಈ ಮಠದ ಅನೇಕ ತಪಸ್ವಿಗಳ ಪ್ರಾಚೀನ ಪರಂಪರೆಯಲ್ಲಿ ಲಿಂ. ಶ್ರೀ ದೊಡ್ಡಜ್ಜಯ್ಯನವರು ಬಹಳ ಕೀರ್ತಿ ಪಡೆದ ಮಹಿಮರು. ಅವರ ಉತ್ತರಾಧಿಕಾರಿಗಳೆ ಮರುಳಸಿದ್ದ ದೇವರು. ಅವರು ಹಾನಗಲ್ಲ ಶ್ರೀಗಳವರ ನೇತೃತ್ವದಲ್ಲಿ ಯೋಗವಿದ್ಯೆಯ ಶಿಕ್ಷಣ ಪಡೆದರು. ಷಟ್ಕರ್ಮಗಳಲ್ಲಿ ನಿಪುಣರಾಗಿ ಪ್ರಾಣಾಯಾಮವನ್ನು ಪೂರ್ಣವಾಗಿ ಸಾಧಿಸಿದ್ದರು. ಕ್ರಿ. ಶ. ೧೯೨೧ ರಲ್ಲಿ ನಾಶಿಕದಲ್ಲಿ ಕೂಡಿದ ಕುಂಭಮೇಳದಲ್ಲಿ ಉತ್ತರ ಹಿಂದುಸ್ತಾನದ ಯೋಗಿಗಳೆಲ್ಲ ಸೇರಿದ್ದರು. ಹಾನಗಲ್ಲ ಶ್ರೀಗಳವರು ಬಿದರೆಯ ಪ್ರಭುಕುಮಾರ ಪಟ್ಟಾಧ್ಯಕ್ಷರು ಮತ್ತು ಕೆಲವು ಸಾಧಕರನ್ನು ಕೂಡಿಕೊಂಡು ಕುಂಭಮೇಳಕ್ಕೆ ದಯಮಾಡಿಸಿದ್ದರು. ಅಲ್ಲಿಯ ಸಿದ್ಧಯೋಗಿಗಳೆಲ್ಲ ಬಿದರೆ ಶ್ರೀ ಪಟ್ಟಾಧ್ಯಕ್ಷರ  ಯೋಗಸಾಧನೆಯನ್ನು ಕಂಡು ಅಪ್ರತಿಭರಾದರು; ಶ್ರೀ ಪಟ್ಟದ್ದೇವರಿಂದ ಯೋಗದ ವಿಶೇಷ ಸಾಧನೆಗಳನ್ನು ಕಲಿತುಕೊಂಡರು; ‘ಯೋಗರಾಜ’ರೆಂದು ಬಿರುದುಕೊಟ್ಟು ಮನ್ನಿಸಿದರು. ಮಂದಿರದ ಸಾಧಕರು ಯೋಗಸಿದ್ಧರಾಗಬೇಕೆಂಬ ಶ್ರೀಗಳವರ ಧೈಯವನ್ನು ಪೂರ್ಣವಾಗಿ ಸಾಧಿಸಿದ ಶ್ರೇಯ ಬಿದರಿ ಪಟ್ಟಾಧ್ಯಕ್ಷರಿಗೆ ಸಲ್ಲಬೇಕು. ಅವರು ಕೊನೆಯವರೆಗೂ ಮಂದಿರದಲ್ಲಿಯೇ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಅವರ ಪ್ರಾಣಾಯಾಮ ಸಿದ್ಧಿಯನ್ನು ಕಂಡು ಪರದೇಶದ ಡಾಕ್ಟರರೂ ಕೂಡ ಆಶ್ಚರ್ಯಪಡುತ್ತಿದ್ದರು.

 ಅವರು ಶಿವಯೋಗದಲ್ಲಿಯೂ ಸಿದ್ಧಿಪಡೆದವರು. ಸಾವಿರಾರು ಜನ ಶಿಷ್ಯರಿಗೆ ಶಿವದೀಕ್ಷೆಯನ್ನು ದಯುಪಾಲಿಸಿದರು. ಎಡಹಳ್ಳಿಯ ಶ್ರೀ ಮಲ್ಲಪ್ಪ ದೇಸಾಯರಿಗೆ ದೀಕ್ಷಾಗುರುಗಳಾಗಿದ್ದರು. ಶ್ರೀ ಪಟ್ಟದ್ದೇವರು ಮಂದಿರದ ಸೇವೆಯನ್ನು ಮಾಡುತ್ತಲೆ ದಿನಾಂಕ ೨೭-೬-೧೯೩೧ ರಲ್ಲಿ ಗಿರಿಯಾಪುರ (ಜಿ. ಚಿಕ್ಕಮಗಳೂರು) ದಲ್ಲಿ ಲಿಂಗೈಕ್ಯರಾದರು.

೫)ವ್ಯಾಕರಣಾಳ ಶ್ರೀ ಸಿದ್ಧಲಿಂಗ ಪಟ್ಟಾಧ್ಯಕ್ಷರು:ವ್ಯಾಕರಣಾಳ ಶ್ರೀ ಸಿದ್ಧಲಿಂಗ ಪಟ್ಟಾಧ್ಯಕ್ಷರು ಕುಷ್ಟಗಿ ತಾಲೂಕಿನ ವ್ಯಾಕರಣನಾಳ ಮತ್ತು ಮುದಗಲ್ಲ ಹಿರೇಮಠಗಳ ಅಧಿಕಾರಿಗಳಾಗಿದ್ದರು. ಅವರು ಮಂದಿರದಲ್ಲಿಯೆ ಸಂಸ್ಕೃತ ಪ್ರೌಢಶಿಕ್ಷಣ ಪಡೆದು ಸಾಧಕರಿಗೆ ಪಾಠಗಳನ್ನು ಹೇಳಿಕೊಡುತ್ತಿದ್ದರು. ಮಂದಿರದ ಸಾಧಕರ ಮತ್ತು ವಟುಗಳ ಪಾಲಕರಾಗಿ ಒಳ್ಳೆ ಶಿಸ್ತಿನಿಂದ ವ್ಯವಸ್ಥೆಯನ್ನು  ನೋಡಿಕೊಂಡಿದ್ದರು. ಅವರು ಆಶುಕವಿಗಳಾಗಿದ್ದರು. ಸಂಸ್ಕೃತದಲ್ಲಿ ಅನೇಕ ಸ್ತೋತ್ರಪರ ಅಷ್ಟಕಗಳನ್ನು ರಚಿಸಿದ್ದಾರೆ. ಅವರು ಯೋಗಸಾಧನೆಯಲ್ಲಿಯೂ ಉತ್ತಮ ಪ್ರಗತಿಯನ್ನು ಪಡೆದಿದ್ದರು. ಮಂದಿರಕ್ಕೆ ಯೋಗಶಿಕ್ಷಣಾರ್ಥಿಗಳಾಗಿ ಬಂದ ಸ್ವಪರಮತೀಯ ಮುಮುಕ್ಷುಗಳಿಗೂ ಯೋಗಸಾಧನೆ ಮತ್ತು ಧರ್ಮಗಳ ವಿಷಯವಾಗಿ ಬೋಧಿಸುವಷ್ಟು ದಕ್ಷರಾಗಿದ್ದರು. ಪುರಾಣ-ಪ್ರವಚನ ಪಟುಗಳಾಗಿದ್ದರು. ಹಾನಗಲ್ಲ ಶ್ರೀಗಳವರು ವ್ಯಾಕರಣಾಳ ಪಟ್ಟಾಧ್ಯಕ್ಷರ ಮೇಲೆಯೆ ಮಂದಿರದ ವ್ಯವಸ್ಥೆಯನ್ನು ವಹಿಸಿ ನಿಶ್ಚಿಂತರಾಗಿ ಭಿಕ್ಷೆಯಲ್ಲಿರುತ್ತಿದ್ದರು. ಸಂಸ್ಥೆಯ ಹಿತವೇ ತಮ್ಮ ಹಿತವೆಂದು ಭಾವಿಸಿ ನಿಸ್ಪೃಹವಾಗಿ ಸಂಸ್ಥೆಗೆ ಶ್ರಮಿಸುತ್ತಿದ್ದ ಶ್ರೀ ಪಟ್ಟಾಧ್ಯಕ್ಷರು ೧೯೧೯ ರಲ್ಲಿ ಇನ್‌ಫ್ಲ್ಯಎಂಜಾದಿಂದ ಲಿಂಗೈಕ್ಯರಾದರು. ಅವರ ಗದ್ದುಗೆ ಮಂದಿರದಲ್ಲಿಯೇ ಇದೆ.

೬) ನವಿಲುಗುಂದದ ಶ್ರೀ ನಿ. ಪ್ರ. ಬಸವಲಿಂಗ ಸ್ವಾಮಿಗಳು: ನವಿಲುಗುಂದದ ಶ್ರೀ ನಿ. ಪ್ರ. ಬಸವಲಿಂಗ ಸ್ವಾಮಿಗಳು ಗವಿಮಠದ ಅಧಿಪತಿಗಳು. ಅವರು ನವಿಲುಗುಂದ ತಾಲೂಕಿನ ತಿರ್ಲಾಪುರ ಗ್ರಾಮದಲ್ಲಿ ಜನ್ಮತಾಳಿ ನವಿಲುಗುಂದ ಗವಿಮಠಾಧೀಶರಾದ ಲಿಂ. ಸಿದ್ದಲಿಂಗ ಸ್ವಾಮಿಗಳ ಕೃಪಾಬಲದಿಂದ ಶಿವಯೋಗ ಮಾರ್ಗದಲ್ಲಿ ದೀಕ್ಷೆ ಪಡೆದರು.

 ನವಿಲುಗುಂದ ಗವಿಮಠದ ಮೂಲಕರ್ತೃಗಳು ಶ್ರೀ ಜಡೆಸ್ವಾಮಿಗಳು; ಚಿತ್ರದುರ್ಗ ಪೀಠದ ಪರಂಪರೆಯವರು. ಮುನ್ನೂರು ವರ್ಷಗಳ ಹಿಂದೆ ಇಲ್ಲಿಯೇ ಒಂದು ಗುಡಿಸಲಲ್ಲಿ ತಪೋನುಷ್ಠಾನ ಮಾಡಿ ಭಾವಿಯಲ್ಲಿ ನೀರು ಬರಿಸಿದ ಪವಾಡ ತೋರಿದರು. ಅವರ ಸ್ಮಾರಕವಾಗಿ ಜೈನಮತದ ಗೌಡರು ಚಿಕ್ಕ ಮಠವೊಂದನ್ನು ಕಟ್ಟಿಸಿ ಭೂಮಿಯನ್ನು ದಾನವಾಗಿ ಕೊಟ್ಟು ಅನುಷ್ಠಾನಕ್ಕೆ ಅನುಕೂಲ ಮಾಡಿದರು.

 ಹಾನಗಲ್ಲ ಶ್ರೀಗಳವರ ಮಾರ್ಗದರ್ಶನದಲ್ಲಿ ಶ್ರೀ ಬಸವಲಿಂಗ ದೇಶಿಕರು ಮಂದಿರದಲ್ಲಿ ಪಂ. ಸೋಮನಾಥ ಶಾಸ್ತ್ರಿಗಳು, ಉಮಚಗಿಯ ಪಂ. ಶಂಕರಶಾಸ್ತ್ರಿಗಳು, ಕೊಂಗವಾಡದ ಪಂ. ವೀರಭದ್ರ ಶಾಸ್ತ್ರಿಗಳವರಲ್ಲಿ ವೇದಾಂತ, ತರ್ಕ ಮತ್ತು ಸಾಹಿತ್ಯ ವಿಷಯಗಳ ಅಧ್ಯಯನ ಮಾಡಿದರು. ಯೋಗದಲ್ಲಿಯೂ ಸಾಧನೆ ಮಾಡಿದರು. ೧೯೨೧ರಲ್ಲಿ ಶ್ರೀ ಗವಿಮಠಕ್ಕೆ ಬಂದ ಬಳಿಕ ಶಿವಯೋಗ ಮಂದಿರಕ್ಕೆ ಕಾಣಿಕೆಯೆಂದು ಸುಮಾರು ಎಂಟು ಸಾವಿರ ರೂಪಾಯಿಗಳನ್ನು ಐದುವರೆ ಕೂರಿಗೆ ಭೂಮಿಯನ್ನು ನವಿಲುಗುಂದ ಭಕ್ತರಿಂದ ಪಡೆದು ಅರ್ಪಿಸಿದರು. ಪಂ. ಪಂಚಾಕ್ಷರ ಗವಾಯಿಗಳಿಗೆ ಮಿರ್ಜಿಯ ನೀಲಕಂಠ ಬುವಾ ಅವರಿಂದ ಸಂಗೀತ ಪಾಠವನ್ನು ಮಠದ ವತಿಯಿಂದ ಹೇಳಿಸಿದರು. ಕೆಲವು ಕಾಲ ಗವಾಯಿಗಳ ಸಂಗೀತ ಪಾಠಸಾಲೆಗೆ ಮಠದಲ್ಲಿಯೇ ಆಶ್ರಯ ನೀಡಿದರು. ಶಿವಯೋಗ ಮಂದಿರಕ್ಕೆ ಆರ್ಥಿಕ ಬಿಕ್ಕಟ್ಟು ಬಂದಾಗಲೆಲ್ಲ ಭಿಕ್ಷೆಯ ರೂಪದಿಂದ ಸಹಾಯ ನೀಡಿ ಸಂಸ್ಥೆಯ ಯೋಗಕ್ಷೇಮದಲ್ಲಿ ಭಾಗಿಗಳಾಗಿದ್ದಾರೆ.

ಶ್ರೀಗಳವರು ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಕಷ್ಟು ಸ್ಥಾನಮಾನಗಳನ್ನು ಸಂಪಾದಿಸಿದ್ದಾರೆ. ಬೆಂಗಳೂರಿನʼ ಕನ್ನಡ ಸಾಹಿತ್ಯ ಪರಿಷತ್ತಿʼನ ಕಾರ್ಯಕಾರಿ ಮಂಡಲದ ಸದಸ್ಯರಾಗಿ ‘ಉತ್ತರ ಕರ್ನಾಟಕ ಪ್ರಾಂತೀಯ ಸಾಹಿತ್ಯ ಸಮಿತಿ’ಯ ಅಧ್ಯಕ್ಷರಾಗಿ, ʼಕರ್ನಾಟಕ ವಿದ್ಯಾವರ್ಧಕ ಸಂಘ’ ದ ಉಪಾಧ್ಯಕ್ಷರಾಗಿ ಮತ್ತು ೧೯೨೨ ರಿಂದ ಇದುವರೆಗೆ ಶಿವಯೋಗಮಂದಿರ ಸಂಸ್ಥೆಯ ಉಪಾಧ್ಯಕ್ಷರಾಗಿಯೂ, ಕೆಲವು ವರ್ಷ ಮ್ಯಾನೇಜಿಂಗ ಟ್ರಸ್ಟಿಗಳಾಗಿಯೂ ಕಾರ್ಯ ಮಾಡಿ ಅನೇಕ ಸಂಘ ಸಂಸ್ಥೆಗಳ ಪ್ರಗತಿಗೆ ಕಾರಣರಾಗಿದ್ದಾರೆ. ಬಾಗಲಕೋಟೆ ಬಸವೇಶ್ವರ ಕಾಲೇಜು ಪ್ರಾರಂಭವಾದಂದಿನಿಂದ ಇದುವರೆಗೂ ಬಾಗಲಕೋಟೆಯ ‘ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಅದರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವರು. ೧೯೨೪ ರಲ್ಲಿ ‘ಲಿಂಗ’ ಮತ್ತು ೧೯೨೮ ರಲ್ಲಿ ‘ಗುರು’ ವಿಷಯಗಳನ್ನು ಕುರಿತು ಪುಸ್ತಕಗಳನ್ನು ಬರೆದರು. ೧೯೩೩ ರಿಂದ ೧೯೩೭ರ ವರೆಗೆ ಶಿವಯೋಗ ಮಂದಿರದ ಪರವಾಗಿ ಪುಣೆ, ಬೆಂಗಳೂರು, ಮೈಸೂರು, ವಿಜಾಪುರ ಮೊದಲಾದ ಕಡೆ ಪ್ರಯಾಣ ಮಾಡಿ ಧರ್ಮ, ಸಂಸ್ಕೃತಿ, ಸಾಹಿತ್ಯಗಳ ಪ್ರಚಾರ ಕಾರ್ಯವನ್ನು ಮಾಡಿದರು.  ೧೯೪೧ ರಲ್ಲಿ ಶ್ರೀಮಠದಲ್ಲಿ ʼಉತ್ತರ ಕರ್ನಾಟಕ ಪ್ರಾಂತೀ  ಸಾಹಿತ್ಯ ಸಮ್ಮೇಲನ’ವನ್ನು ಜರುಗಿಸಿದರು. ಶಿವಯೋಗ ಮಂದಿರದಲ್ಲಿ ಶ್ರೀ ರೇವಣಸಿದ್ದೇಶ್ವರ  ವಾಚನಾಲಯವನ್ನು ಸ್ಥಾಪಿಸಿ, ದಾನಿಗಳಿಂದ ಗ್ರಂಥಗಳನ್ನು ಶೇಖರಿಸಿದರು. ‘ಸುಕುಮಾರ’ ಕೈಬರಹ ಮಾಸಿಕವನ್ನು ಹೊರಡಿಸಿದರು. ʼಆರ್ಯಧರ್ಮ ಪ್ರದೀಪಿಕೆ’ಯಲ್ಲಿ ವೀರಶೈವ ಧರ್ಮದ ಬಗೆಗೆ ವಿವೇಚನಾತ್ಮಕ ಲೇಖನ ಬರೆದರು.

೧೯೪೨ರ ಜೂನ ೧೫ನೆಯ ದಿನಾಂಕದಲ್ಲಿ ಧಾರವಾಡದ ಪೂಜ್ಯ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳವರಲ್ಲಿ ಹೋಗಿ ಶಿವಾನುಭವ ಸಂಘದ ಸ್ಥಾಪನೆಯ ಬಗ್ಗೆ ವಿಚಾರ ಮಾಡಿ ಅಲ್ಲಿಯೇ ‘ಶಿವಾನುಭವ ಸಂಸ್ಥೆ’ಯನ್ನು ಪ್ರಾರಂಭಿಸಿದರು. ೧೯೪೩ನೆಯ ನವಂಬರ ದಿನಾಂಕ ೧೪ ರಂದು ಬಸವೇಶ್ವರ ಕಾಲೇಜನ್ನು ತೆರೆಯುವ ಬಗ್ಗೆ ಆಲೋಚನಾ ಕಮೀಟಿಯನ್ನು ಕರೆದು, ನಿರ್ಧರಿಸಿ ಬಾಗಲಕೋಟೆ ಮತ್ತು ಇತರ ಪಟ್ಟಣಗಳ ಗ್ರಾಮಗಳ ಮಹಾಜನರ ಸಹಕಾರ-ಸಹಾಯದಿಂದ ಬಾಗಲಕೋಟೆಯಲ್ಲಿಯೆ ಬಸವೆ ಕಾಲೇಜನ್ನು ಸ್ಥಾಪಿಸಿದರು.

 ಶ್ರೀಗಳವರು ೧೯೪೫ರ ಫೆಬ್ರುವರಿ ದಿನಾಂಕ ೮-೯ ರಿಂದ ‘ಸರ್ವಧರ್ಮ ಸಮ್ಮೇಲನ’ವನ್ನು ಗವಿಮಠದಲ್ಲಿ ಸೇರಿಸಿ ಇದುವರೆಗೂ ಅದನ್ನು ಪ್ರತಿವರ್ಷ ನಡೆಯಿಸಿಕೊಂಡು ಬಂದಿರುವರು. ಧರ್ಮದ ವ್ಯಾಪಕ ಭಾವನೆಯನ್ನು ಜನತೆಯಲ್ಲಿ ಮೂಡಿಸಿರುವರು. ಶ್ರೀ ಮಠದಲ್ಲಿ ಒಂದು ಫ್ರೀ ಬೋರ್ಡಿಂಗನ್ನು ಮತ್ತು ಕನ್ನಡ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿ ನಡೆಯಿಸುತ್ತಿರುವರು. ಪ್ರತಿವರ್ಷ ಶ್ರೀ ಸಿದ್ಧಲಿಂಗೇಶ್ವರ ಜಾತ್ರೆಯನ್ನು ಏರ್ಪಡಿಸಿ ಅದರ ಅಂಗವಾಗಿ ಶಿವಾನುಭವ ಸಮ್ಮೇಲನ, ಒಕ್ಕಲುತನ ಪರಿಷತ್ತು ಸಹಕಾರಿ ಪರಿಷತ್ತು ಮಹಿಳಾ ಗೋಷ್ಠಿಗಳನ್ನು ಜರುಗಿಸಿ ನಾಡಿನ ಜನತೆಯಲ್ಲಿ ಧರ್ಮ, ಸಂಸ್ಕೃತಿ, ಸಾಹಿತ್ಯಗಳ ಬಗ್ಗೆ ಜನಜಾಗ್ರತಿಯನ್ನುಂಟು ಮಾಡುತ್ತಲಿರುವರು.೭)ಕುರವತ್ತಿ ಶ್ರೀ ನಿ. ಪ್ರ. ತೋಂಟದಾರ್ಯ (ಮಹಾದೇವ) ಸ್ವಾಮಿಗಳು :ಕುರವತ್ತಿ ಶ್ರೀ ನಿ. ಪ್ರ. ತೋಂಟದಾರ್ಯ (ಮಹಾದೇವ) ಸ್ವಾಮಿಗಳು ವಿರಕ್ತಮಠದ ಅಧಿಕಾರಿಗಳು, ಅವರು ಮೊದಲು ಬಾಗಲಕೋಟೆಯ ಕರವೀರಮಠದ ವತಿಯಿಂದ ಮಂದಿರದಲ್ಲಿ ಶಿಕ್ಷಣ ಪಡೆದರು. ಅವರು ಹಾನಗಲ್ಲ ಶ್ರೀಗಳವರ ಸೇವೆಯನ್ನು ಮಾಡಿದ್ದಲ್ಲದೆ ಕಪನಳ್ಳಿ ಮೊದಲಾದ ಶಾಖಾಮಂದಿರಗಳಲ್ಲಿ ಅನುಷ್ಠಾನವನ್ನು ಮಾಡಿದರು. ಅವರು ೧೯೩೩ ನೆಯ ಇಸ್ವಿಯವರೆಗೂ ಶಿವಯೋಗ ಮಂದಿರದಲ್ಲಿಯೇ ಇದ್ದು ಮಂದಿರದ ಒಕ್ಕಲುತನ-ಗೋಶಾಲೆಗಳ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು. ಶ್ರೀ ಮಹಾದೇವ ದೇಶಿಕರ ಹಿರಿಯತನದಲ್ಲಿ ಮಂದಿರದ ಒಕ್ಕಲುತನವು ಬಹಳ ಪ್ರಗತಿಯನ್ನು ಪಡೆದಿತ್ತು ಅವರು ಕೆಲವು ವರ್ಷ ಕೆಳದಿಯ ಹಿರೇಮಠದ ಅಧಿಕಾರವನ್ನು ವಹಿಸಿಕೊಂಡಿದ್ದರು. ಈಗ ಕುರವತ್ತಿಯಲ್ಲಿ ತೋಂಟದಾರ್ಯ ಮಠದ ಜೀರ್ಣೋದ್ಧಾರವನ್ನು ಮಾಡಿ ಧರ್ಮಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಅವರು ಹಾನಗಲ್ಲ ವಿರಕ್ತಮಠದ ಜೀರ್ಣೋದ್ಧಾರವನ್ನು ಮಾಡಿ ಸೇವೆ ಸಲ್ಲಿಸಿದವರು

: ಸೌಜನ್ಯ “ಬೆಳಗು”

ಶಿವಯೋಗಮಂದಿರದ ಶಾಖೆಗಳನ್ನು ಅಲ್ಲಲ್ಲಿ ಸ್ಥಾಪಿಸಿ ಅವುಗಳ ಮೂಲಕ ಶಿವಾನುಭವದ ಬೋಧೆಯಾಗುವಂತೆ ಮಾಡುವದು ಸಂಸ್ಥೆಯ ಉದ್ದೇಶಗಳಲ್ಲಿ ಒಂದು. ಅದರ ಸಾಧನೆಗಾಗಿ ಶ್ರೀಗಳವರು ನಾಡಿನ ಮೂಲೆ ಮೂಲೆಯಲ್ಲೆಲ್ಲ ಗ್ರಾಮಾಂತರ ಪ್ರದೇಶಗಳಲ್ಲಿ ಮಂದಿರದ ಶಾಖಾ ಸಂಸ್ಥೆಗಳನ್ನು ಸ್ಥಾಪಿಸಿದರು. ಶಿವಮೊಗ್ಗ, ಧಾರವಾಡ, ರಾಯಚೂರು ಮೊದಲಾದ ದೂರದ ಜಿಲ್ಲೆಗಳಲ್ಲಿಯೂ ಜನತೆಯು ಶಿವಯೋಗ ಮಂದಿರದ ಪ್ರಭಾವಕ್ಕೆ ಒಳಗಾಗಿ ತಮ್ಮ ಬಾಳನ್ನು  ಹಸನಗೊಳಿಸಿಕೊಳ್ಳಲೆಂಬ ಶ್ರೀಗಳವರ ಲೋಕಹಿತ ಭಾವನೆ ಕಪನಳ್ಳಿ, ನಿಡಗು೦ದಿ-ಕೊಪ್ಪ, ರಾಮಗಡ್ಡಿ, ಹಿರೇಹಾಳ ಮತ್ತು ಬದಾಮಿ ಗ್ರಾಮಗಳಲ್ಲಿ ರೂಪುಗೊಂಡಿತು. ಅಲ್ಲಿ ಶಾಖಾ ಶಿವಯೋಗಮಂದಿರಗಳ ಸ್ಥಾಪನೆಯಾಯಿತು.

ಶಾಖಾ ಶಿವಯೋಗಮಂದಿರ, ನಿಡಗುಂದಿಕೊಪ್ಪ

ಶಿವಯೋಗಮಂದಿರದ ಭಿಕ್ಷೆಗಾಗಿ ೧೯೧೪ ನೆಯ ಇಸ್ವಿಯಲ್ಲಿ ನಿಡಗುಂದಿ (ತಾ. ರೋಣ, ಜಿ. ಧಾರವಾಡ) ಗ್ರಾಮಕ್ಕೆ ಲಿಂ. ಪರಮಪೂಜ್ಯ ಹಾನಗಲ್ಲ ಮತ್ತು ಹಾವೇರಿ ಶ್ರೀಗಳವರು ದಯಮಾಡಿಸಿದ್ದರು. ಹಾವೇರಿ ಶ್ರೀ ನಿ. ಪ್ರ. ಶಿವಬಸವ ಮಹಾಸ್ವಾಮಿಗಳವರ ಪೂಜೆಗೆ ಏರ್ಪಾಟು ಮಾಡಿದ ಮನೆಯ ಕಿಡಕಿ ಮತ್ತು ಬಾಗಿಲುಗಳಲ್ಲಿ ಜನ ಶ್ರೀಗಳವರ ಲೀಲಾಮಯ ಪೂಜೆಯನ್ನು ನೋಡುವ ಕುತೂಹಲದಿಂದ ಇಣಿಕಿ ನೋಡಹತ್ತಿದರು. ಈ ಜನ ಜಂಗುಳಿಯನ್ನು ಕಂಡು ಹಾವೇರಿ ಶ್ರೀಗಳವರು ಬಹಳ ಬೇಸರಗೊಂಡರು. ಪೂಜೆ ಅರ್ಪಣ ಮುಗಿದ ಮೇಲೆ ಅವರು ಲೀಲಾಮಯವಾಗಿ ಹಾನಗಲ್ಲ ಶ್ರೀಗಳವರನ್ನು ಕುರಿತು ʼʼತಾವು ಈ ಮರುಳ ಜನರನ್ನು ಬೇಡಿ ಶಿವಯೋಗ ಮಂದಿರವನ್ನು ಬೆಳೆಸಲು ಯತ್ನಿಸುವಿರಲ್ಲವೆ ? ಅದರ ಪರಿಣಾಮವಿದು; ಇಂದು ನಮ್ಮ ಶಿವಪೂಜೆಗೆ ಕೊರತೆಯನ್ನುಂಟು ಮಾಡಿತು. ಇನ್ನು ಜನವನ್ನು ಬೇಡುವದಾದರೆ ತಮ್ಮ ಶಿವಯೋಗಮಂದಿರ ತಮಗೆ ಇರಲಿ, ಶಿವನನ್ನೆ ಬೇಡಿ ಶಿವಮಂದಿರವನ್ನು ಕಟ್ಟುವೆ.” ಎಂದು ಅಪ್ಪಣೆ ಕೊಡಿಸಿ ಅಂದೇ ಕೊಪ್ಪದ ನೆರೆಯ ಹಳ್ಳದ ಪ್ರಶಾಂತ ಸ್ಥಳದಲ್ಲಿ ಬಿಲ್ವವೃಕ್ಷದ ಅಡಿಯಲ್ಲಿ ಜೋಪಡಿಯನ್ನು ಹಾಕಿಸಿಕೊಂಡು ಅನುಷ್ಠಾನಕ್ಕೆ ಕುಳಿತರು. ಮೂರು   ತಿಂಗಳವರೆಗೆ ಲಿಂಗಾನಂದದಲ್ಲಿ ತನ್ಮಯರಾಗಿದ್ದರು. ಈ ಸ್ಥಾನ ಶ್ರೀಗಳವರ ಮನಕ್ಕೆ ನೆಮ್ಮದಿಯನ್ನು ತಂದುಕೊಟ್ಟಿತು. ಮುಂದೆ ಮಳೆಗಾಲ ಬಂದಿತು ಭಕ್ತರ ಆಗ್ರಹದ ಮೇರೆಗೆ ಶ್ರೀಗಳವರು ಹಾನಗಲ್ಲ, ಹಾಲಕೆರೆ ಮತ್ತು ರೋಣದ ಶ್ರೀಗಳವರನ್ನು ಕರೆಯಿಸಿಕೊಂಡು ಆ ಸ್ಥಾನದಲ್ಲಿಯೇ ಶಾಖಾ ಶಿವಯೋಗಮಂದಿರವನ್ನು ಸ್ಥಾಪಿಸುವ ನಿರ್ಧಾರವನ್ನು ಸೂಚಿಸಿದರು. ಹಾನಗಲ್ಲ ಶ್ರೀಗಳವರಿಗೆ ಹಾವೇರಿ ಶ್ರೀಗಳವರ ತಪಃಪ್ರಭಾವವನ್ನು ಕಂಡು ಹಿಡಿಸಲಾರದಷ್ಟು ಆನಂದವಾಯಿತು. ಅವರೇ ಅನುಷ್ಠಾನದ ಆರಾಧನೆ ಮಾಡಿಸಿ ೧೯೧೪ ನೆಯ ಇಸ್ವಿಯ ಬಸವಜಯಂತಿಯ ಶುಭ ದಿನದಲ್ಲಿ ಶಾಖಾಮಂದಿರದ ಅಡಿಗಲ್ಲನ್ನು ಇಡಿಸಿದರು. ಅಂದೇ ಸಂಗೀತ ಶಾಲೆಯ ಪ್ರಾರಂಭೋತ್ಸವವೂ ವಿಜೃಂಭಣೆಯಿಂದ, ಉತ್ಸಾಹದಿಂದ ಜರುಗಿತು. ಶ್ರೀ ಪಂಚಾಕ್ಷರ ಗವಾಯಿಗಳ ಆನಂದಕ್ಕೆ ಅಂದು ಮೇರೆ ಇಲ್ಲವಾಗಿತ್ತು .

ಆಲೂರ ಸದ್ಭಕ್ತರು ಮಂದಿರದ ಅನುಕೂಲತೆಗೆ ಯೋಗ್ಯ ಕ್ಷೇತ್ರವನ್ನು ಒದಗಿಸಿಕೊಟ್ಟರು. ಶಾಖಾ ಮಂದಿರವು ನಿರಾತಂಕವಾಗಿ ನಡೆಯಲೆಂಬ ಘನವಾದ ಉದ್ದೇಶದಿಂದ ಕೊಪ್ಪ ಮತ್ತು ಹಾಲಕೆರೆ ಗ್ರಾಮಗಳ ಸದ್ಭಕ್ತರು ೬೦ ಎಕರೆ ಜಮೀನುಗಳನ್ನು  ದಾನವಾಗಿ ಕೊಟ್ಟರು. ೩-೪ ವರ್ಷಗಳಲ್ಲಿಯೇ ಶ್ರೀಗಳವರ ಅನುಷ್ಠಾನದ ಪ್ರಭಾವದಿಂದ ಆ ಭೂಮಿ ಪುಣ್ಯ ಕ್ಷೇತ್ರವಾಗಿ ಕಂಗೊಳಿಸಿತು. ಕಲ್ಯಾಣದ ದೇಶಿಕರಿಗೆ ಇಲ್ಲಿಯೇ ನಿರಾಭಾರಿ  ಚರಪಟ್ಟಾಧಿಕಾರವನ್ನು ನೆರವೇರಿಸಲಾಯಿತು. ಅವರು ಮೂರು ವರ್ಷ ಇಲ್ಲಿಯೇ ಅನುಷ್ಠಾನ ಮಾಡಿದರು. ನಂತರ ಇಲ್ಲಿಯೇ ಶ್ರೀ ಮಹಾದೇವ ಸ್ವಾಮಿಗಳು, ಶ್ರೀ ನಿರಂಜನ ಸ್ವಾಮಿಗಳು ಮೊದಲಾದವರು ಕೆಲವು ಕಾಲ ಶಿವಯೋಗಾನುಷ್ಠಾನ ಮಾಡಿ ಸಿದ್ಧಿಪಡೆದರು. ಆ ಮೇಲೆ ಕ್ರಿ.ಶ. ೧೯೨೪ರಲ್ಲಿ ಹಾನಗಲ್ಲ ಮಹಾ ಸ್ವಾಮಿಗಳವರು ಮ೦ದಿರದ ಸಾಧಕರಾದ ಶ್ರೀ ಗೋಕಾಕ ದೇಶಿಕರವರನ್ನು ಇಲ್ಲಿಗೆ ಕರೆತಂದರು. “ಹಾವೇರಿಯ ಶ್ರೀ ಶಿವಬಸವ ಸ್ವಾಮಿಗಳು ಶಿವನನ್ನು ಬೇಡಿ ಈ ಶಿವಯೋಗಾಶ್ರಮವನ್ನು ಕಟ್ಟಿದ್ದಾರೆ. ಇಲ್ಲಿ ನೀವು ೧೨ ವರ್ಷ ಬಿಡದೆ ಶಿವಯೋಗ ತಪಸ್ಸನ್ನು ಆಚರಿಸಬೇಕು; ಆಗ ಈ ಆಶ್ರಮ ಜಾಗ್ರತ ಕ್ಷೇತ್ರವಾಗುತ್ತದೆ. ಅದರಿಂದ ನಿಮ್ಮ ಉದ್ಧಾರ ಮತ್ತು ಸಮಾಜದ ಉದ್ಧಾರವೂ ಆಗುವದು.” ಎಂದು ಅಪ್ಪಣೆ ಕೊಡಿಸಿ ಅವರ ಅನುಷ್ಠಾನಕ್ಕೆ ಪ್ರೇರಣೆಯನ್ನಿತ್ತರು. ಅಂತೆಯೆ ಗೋಕಾಕ ದೇಶಿಕರು ಶಿವಯೋಗದಲ್ಲಿ ಸಿದ್ಧಿ ಪಡೆದರು; ಶ್ರೀಗಳವರ ಧೈಯವನ್ನು ಬಿಡದೆ ಸಾಧಿಸಿದರು. ಅವರೇ ಮುಂದೆ ಆ ಆಶ್ರಮದ   ಅಧಿಕಾರಿಗಳಾಗಿ ಭಕ್ತರ ಭಕ್ತಿಯನ್ನು ಕೈಕೊಂಡು ಅದರ ಸರ್ವಾಂಗಸುಂದರ ಅಭಿವೃದ್ಧಿಯನ್ನು ಮಾಡಿರುವರು. ಅವರ ಪೂಜೆಯ ಪ್ರಭಾವದಿಂದ ಈ ಕ್ಷೇತ್ರ ಪ್ರತಿದಿನವೂ ನೂರಾರು ಭಕ್ತರನ್ನು ಆಕರ್ಷಿಸುತ್ತಿದೆ.

ಪ್ರಾರಂಭದಲ್ಲಿ ಈ ಮಂದಿರಕ್ಕೆ ಕೊಪ್ಪ ಮತ್ತು ಹಾಲಕೆರೆಯ ಸದ್ಭಕ್ತರು ಬಹುಮುಖವಾಗಿ ಸಹಾಯ ಸಲ್ಲಿಸಿದ್ದರು. ಕೊಪ್ಪ ಗ್ರಾಮದ ಭಕ್ತರು ೨೮೦೦ ರೂಪಾಯಿಗಳ ನಿಧಿಯನ್ನು ಅರ್ಪಿಸಿ ಶಾಖಾ ಮಂದಿರದ ಆರ್ಥಿಕ ಕೊರತೆಯನ್ನು ನೀಗಿಸಿದರು; ೧೬ ಜನ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಪ್ರಸಾದ ವಿನಿಯೋಗದ ಅನುಕೂಲತೆಯನ್ನು ಕಲ್ಪಿಸಿಕೊಟ್ಟಿದ್ದರು. ಕೆಲವು ನಿಷ್ಠಾವಂತ ಭಕ್ತರು ಶಿವಯೋಗಮಂದಿರದ ಹೆಸರಿನಿಂದ ಗೋದಿ ಬಿತ್ತಿ ಅದರಿಂದ ಬಂದ ಬೆಳೆಯನ್ನು ಶಿವಾರ್ಪಣ ಬುದ್ಧಿಯಿಂದ ಈ ಮಂದಿರಕ್ಕೆ ಅರ್ಪಿಸಿದ್ದರು. ಹಾಲಕೆರೆಯ ಶ್ರೀ ಬಸವನಗೌಡ ಪಾಟೀಲ ಅವರು ಈ ಶಾಖಾ ಮಂದಿರದ ಮೇಲ್ವಿಚಾರಣೆಯನ್ನು ನೋಡಿ ಕೊಳ್ಳುತ್ತಿದ್ದರು.

ರಾಮಗಡ್ಡಿಯ ಶಾಖಾಮಂದಿರ

ರಾಮಗಡ್ಡಿ (ಜಿ. ರಾಯಚೂರು) ಯಲ್ಲಿ ಶಾ. ಶ. ೧೮೩೬ (ಕ್ರಿ.ಶ.೧೯೧೪)  ನೆಯ ಆನಂದನಾಮ ಸಂವತ್ಸರದ ಮಾಘ ಶು. ೧೪ ರಂದು ಶ್ರೀ ಸಿದ್ಧಲಿಂಗಸ್ವಾಮಿಗಳು ಉರ್ಫ ಚೋಳೇಂದ್ರಸ್ವಾಮಿಗಳು ಅವರಿಂದ ಒಂದು ಶಿವಯೋಗಾಶ್ರಮವು ಸ್ಥಾಪಿತವಾಯಿತು. ಈ ಸ್ಥಾನ ನದಿಯ ನಡುಗಡ್ಡೆಯಲ್ಲಿ ರಮ್ಯವಾದ ಫಲವತ್ತಾದ ಪ್ರದೇಶದಲ್ಲಿದೆ. ಈಗ ನೀರಡಗುಂಭದ ಪಶ್ಚಿಮಾದ್ರಿಮಠದ ಅಧಿಪತಿಗಳಾದ ಶ್ರೀ ನಿ.ಪ್ರ. ಸಿದ್ದಲಿಂಗಸ್ವಾಮಿಗಳು ಆ ಆಶ್ರಮದ ಅಧಿಕಾರವನ್ನು ವಹಿಸಿಕೊಂಡಿರುವರು. ಪ್ರಾರಂಭದಲ್ಲಿ ಇಲ್ಲಿ ಐದು ಜನ ಸಾಧಕರು ಮತ್ತು ೧೫ ಜನ ಸಂಸ್ಕೃತ ಕಲಿಯುವ ವಿದ್ಯಾರ್ಥಿಗಳು ಇದ್ದರು. ಇಲ್ಲಿಂದ ಇದುವರೆಗೆ ೯ ಜನ  ಮೂರ್ತಿಗಳು ಯೋಗ ಧರ್ಮಗಳ ಶಿಕ್ಷಣ ಪಡೆದು ಆಯಾ ಪ್ರಾಂತಗಳಲ್ಲಿ ಸಂಚರಿಸಿ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಗಳಾಗಿದ್ದಾರೆ. ೭- ೮ ಜನ ಶಾಸ್ತ್ರಿಗಳು ಇಲ್ಲಿಂದಲೇ ವೈದಿಕಾದಿ ಶಿಕ್ಷಣ ಪಡೆದು ಅಲ್ಲಲ್ಲಿ ಅಧ್ಯಾಪಕರಾಗಿದ್ದಾರೆ.” ಈಗ ಇಲ್ಲಿ ಮಂದಿರದಿಂದಲೇ ಶಿಕ್ಷಣ ಪಡೆದ ಶ್ರೀ ಶಿವಪುತ್ರ ದೇವರು ನೀರಡಗುಂಭ ಶ್ರೀಗಳವರ ಮಾರ್ಗದರ್ಶನದಲ್ಲಿ ಅಶ್ರಮದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ.

ಶಿವಯೋಗಾಶ್ರಮ ಕಪನಳ್ಳಿ

ಹಾನಗಲ್ಲ ಶ್ರೀಗಳವರು ಮಲೆನಾಡಿಗೆ ದಯಮಾಡಿದ್ದರು. ಅನಂತಪುರದ ಮುರಘಾಮಠದಲ್ಲಿ ಬಿಡಾರವಾಗಿತ್ತು, ಆಗ ಗುತ್ತಲದ ಶ್ರೀಗಳವರು ಮತ್ತು ಕೆಳದಿಯ ಶ್ರೀ ರೇವಣಸಿದ್ಧ ಪಟ್ಟಾಧ್ಯಕ್ಷರು ದಯ ಮಾಡಿಸಿದ್ದರು. ಈ ತ್ರಿಮೂರ್ತಿಗಳು ಹಾನಗಲ್ಲ ಶ್ರೀಗಳವರಲ್ಲಿ ತಾವು ಶಿವಯೋಗಮಂದಿರವನ್ನು ಸ್ಥಾಪಿಸಿ ಇದುವರೆಗೆ ಬಯಲು ಸೀಮೆಯಲ್ಲಿ ಸಾಕಷ್ಟು ಜನಜಾಗ್ರತಿಯನ್ನುಂಟು ಮಾಡಿದಿರಿ. ಇನ್ನು ಮಲೆನಾಡಿನಲ್ಲಿಯ ಜನಗಳ ಸುಧಾರಣೆಗಾಗಿ ಒಂದು ಶಾಖಾ ಶಿವಯೋಗಮಂದಿರವನ್ನು ಸ್ಥಾಪಿಸುವುದು ಅವಶ್ಯಕವಾಗಿದೆ ಎಂದು ಪ್ರಸ್ತಾಪಿಸಿದರು. ಅದಕ್ಕೆ ಹಾನಗಲ್ಲ ಶ್ರೀಗಳವರು ಒಪ್ಪಿ ಅಲ್ಲಿಯ ಭಕ್ತರ ಅಪೇಕ್ಷೆಯಂತೆ ಅನಿಮಿಷ ದೇವರ ತಪೋಭೂಮಿಯಾದ ಕಪನಳ್ಳಿ(ಜಿ, ಶಿವಮೊಗ್ಗ ತಾ. ಶಿಕಾರಿಪುರ)ಯ ನೆರೆಯಲ್ಲಿ ದಿನಾಂಕ ೧೦-೩-೧೯೧೭ ರಲ್ಲಿ ‘ಶಿವಯೋಗಾಶ್ರಮ’ವನ್ನು ಸ್ಥಾಪಿಸಿದರು. ಅನಂತಪುರದ ಜ. ಲಿಂಗಮಹಾಸ್ವಾಮಿಗಳು, ಗುತ್ತಲದ ಶ್ರೀರುದ್ರ ಸ್ವಾಮಿಗಳು, ಕೆಳದಿ, ಸಾಲೂರು, ತ್ಯಾವಣಗಿ ಮೊದಲಾದ ಊರುಗಳ ಪಟ್ಟ ಚರಮೂರ್ತಿಗಳು, ಶಿಕಾರಿಪುರ ಮೊದಲಾದ ಗ್ರಾಮಗಳ ಸದಭಕ್ತರೂ ಸೇರಿ ಹಾವೇರಿ ಶ್ರೀಗಳವರ ನೇತೃತ್ವದಲ್ಲಿ ಶಿವಯೋಗಾಶ್ರಮದ ಆರಂಭೋತ್ಸವವನ್ನು ವೈಭವದಿಂದ ಸಾಂಗಗೊಳಿಸಿದರು. ಸಾವಿರಾರು ಜನ ಸೇರಿತ್ತು, ನಿತ್ಯ ದಾಸೋಹ ನಡೆಯಿತು. ಅದರೊಂದಿಗೆ ಜ್ಞಾನದಾಸೋಹವೂ ಅಖಂಡವಾಗಿ ಸಾಗಿತು. ಮಲೆನಾಡಿನ ಜನರಲ್ಲಿ ಎಂದಿಲ್ಲದ ಭಕ್ತಿ ವಿಶ್ವಾಸಗಳು ಮೈದಾಳಿದ್ದವು.

ಈ ಆಶ್ರಮವು ಸುರಕ್ಷಿತವಾಗಿ ಸಾಗಲೆಂದು ಶಿಕಾರಿಪುರದ ಶ್ರೀ ಹೊನ್ನಪ್ಪ ಶೆಟ್ಟರ ಚನ್ನಪ್ಪನವರು ೧೦ ಸಾವಿರ ರೂಪಾಯಿಗಳ ಮೂಲ ನಿಧಿಯನ್ನು ಅರ್ಪಿಸಿ ಅದರ ಬಡ್ಡಿಯಿಂದ ಆಶ್ರಮದ ದೈನಿಕ ವೆಚ್ಚವು ಸಾಗುವಂತೆ ಏರ್ಪಡಿಸಿದ್ದರು.

 ಹಾನಗಲ್ಲ ಶ್ರೀಗಳವರ ಅಪ್ಪಣೆಯ ಮೇರೆಗೆ ಶ್ರೀ ಮಹಾದೇವ ದೇಶಿಕರು ಮಂದಿರದ ೫-೬ ಜನ ಸಾಧಕರೊಂದಿಗೆ ಆಶ್ರಮದಲ್ಲಿ ಅನುಷ್ಠಾನ ಮಾಡುತ್ತಿದ್ದರು. ಹುಬ್ಬಳ್ಳಿ ಶ್ರೀ ಶಿವಮೂರ್ತಿ ಸ್ವಾಮಿಗಳು, ಇಲಕಲ್ಲ ಶ್ರೀ ಮಹಾಂತ ದೇಶಿಕರು, ಬಾಗಿಲುಕೋಟೆಯ ಶ್ರೀ ಶಿವಮೂರ್ತಿ ಸ್ವಾಮಿಗಳು ಮೊದಲಾದ ಶಿವಯೋಗಿಗಳೊಡನೆ ಶ್ರೀ ಮಹಾದೇವ ದೇಶಿಕರು (ಈಗ ಕುರವತ್ತಿ ಶ್ರೀಗಳು) ಲಿಂಗಾಣತಿಯಿಂದ ಬಂದುದನ್ನು ಸ್ವೀಕರಿಸುತ್ತ ಸಂಕಲ್ಪ ಪೂರ್ವಕವಾಗಿ ಒಂದು ಕೋಟಿ ಮಹಾಮಂತ್ರ ಜಪವನ್ನು ಮಾಡಿ ಶ್ರೀ ಗಳವರ ಆಶೆಯನ್ನು ಸಫಲಗೊಳಿಸಿದರು.

 ಹಳೇ ಪಟ್ಟಣದ ಹಾಲಪ್ಪ ಶೆಟ್ಟರು ಮುಂತಾದ ಸದ್ಭಕ್ತರು ಆಶ್ರಮಕ್ಕೆ ಹತ್ತು ಉತ್ತಮ ಹಸುಗಳನ್ನು ಕೊಟ್ಟರು. ಉಳಿದ ಭಕ್ತರೂ ಗೋದಾನ ಮಾಡಿದರು. ಕೆಲವು ದಿನಗಳಲ್ಲಿ ಆಶ್ರಮದ ಗೋಸಂತತಿಯು ಎರಡು ನೂರಕ್ಕೆ ಮಿಕ್ಕಿತು. ಒಳ್ಳೆಯ ತಳಿಯ ಆಕಳುಗಳ ಪೀಳಿಗೆ ಹೆಚ್ಚಿತು. ಈಗಲೂ ಆಶ್ರಮದಲ್ಲಿ ಗೋರಕ್ಷಣೆಯ ಕಾರ್ಯ ನಿರಾಬಾಧವಾಗಿ ನಡೆದಿದೆ.

ಈ ಆಶ್ರಮವನ್ನು ಸ್ಥಾಪಿಸುವ ಮುಂಚೆ ಈ ಪ್ರಾಂತದ ಜನತೆಯಲ್ಲಿ ಮೌಡ್ಯವು ಮನೆ  ಮಾಡಿಕೊಂಡಿತ್ತು. ಜನತೆಯು ವೀರಶೈವರ ನಿಜಾಚರಣೆಯನ್ನು ಮರೆದಿತ್ತು ಇದನ್ನು ಕಂಡು ಜನರಿಗೆ ವೀರಶೈವಾಚಾರ ಮಾರ್ಗದ ಬೋಧೆ ಮಾಡಲು ಪೂಜ್ಯರಾದ ಹಾವೇರಿ ಮತ್ತು ಹಾನಗಲ್ಲ ಶ್ರೀಗಳವರು ಅವಿಶ್ರಾಂತ ಶ್ರಮವಹಿಸಿ ಅನಂತಪುರದ ಶ್ರೀಗಳು ಮತ್ತು ಕೆಳದಿ ಪಟ್ಟಾಧ್ಯಕ್ಷರರೊಡನೆ ಆಲೋಚಿಸಿ ಸಾಗರ, ಶಿರಿಯಾಳಕೊಪ್ಪ ಸಿದ್ದಾಪುರ ಮತ್ತು ಬಂಕಾಪುರ ಗ್ರಾಮಗಳಲ್ಲಿ ಧರ್ಮೋತ್ತೇಜಕ ಸಭೆಗಳನ್ನು ನಡೆಯಿಸಿದರು; ಪುರಾಣ ಕೀರ್ತನಗಳಿಂದ ಜನರು ಸದಾಚರಣೆಯಲ್ಲಿ ನಡೆಯುವಂತೆ ಮಾಡಿದರು.

  ಶಿರಿಯಾಳ ಕೊಪ್ಪದಲ್ಲಿ ಹಾನಗಲ್ಲ ಶ್ರೀಗಳವರು ಮೂರು ತಿಂಗಳುಗಳ ವರೆಗೆ ಶ್ರೀ ನಿಜಗುಣಾರ್ಯರ ಗ್ರಂಥಗಳ ಪ್ರವಚನಗಳನ್ನು ನಡೆಯಿಸಿ ಬೋಧವಿತ್ತು ಜನರ ನಡೆ ನುಡಿಗಳನ್ನು ತಿದ್ದಿದರು; ಸಾವಿರಾರು ಮಾಹೇಶ್ವರ ಭಕ್ತ ವಟುಗಳಿಗೆ ವೀರಶೈವದೀಕ್ಷೆಯ ಸಂಸ್ಕಾರವನ್ನು ಮಾಡಿಸಿ ಶಿವಪೂಜಾ ವಿಧಾನವನ್ನು ಬೋಧಿಸಿದರು. ತೊಗರಸಿಯ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವದಲ್ಲಿ ದೊಡ್ಡ ಸಭೆಯನ್ನು ಸೇರಿಸಿ ವೀರಶೈವ ಮತತತ್ವಗಳ ಪ್ರಸಾರವನ್ನು ಮಾಡಿ ಜನರಲ್ಲಿ ಅರಿವಿನ ಬೆಳಗು ಮೂಡುವಂತೆ ಮಾಡಿದರು. ಶಿರಿಯಾಳಕೊಪ್ಪದ ಹತ್ತಿರ ಬಿಳುವಾಣಿ ಮರಡಿಮಠದಲ್ಲಿ ಮೂರು ತಿಂಗಳು ವಾಸ್ತವ್ಯ ಮಾಡಿ ಶ್ರೀಗಳವರು ಈ ಪ್ರಾಂತದ ಭಕ್ತ ಮಾಹೇಶ್ವರರನ್ನು ಕೂಡಿಕೊಂಡು ‘ಶಿವಾನುಭವ’ ಶಾಸ್ತ್ರವನ್ನು ಶ್ರೀ ಕಬ್ಬೂರ ಶರಣರಿಂದ ಜನರಿಗೆ ಬೋಧೆ ಮಾಡಿಸಿದರು. ಅನೇಕರು ದೀಕ್ಷೆ-ಅನುಗ್ರಹಗಳನ್ನು ಪಡೆದರು. ಹೀಗೆ ಶಿವಯೋಗಾಶ್ರಮವು ಸ್ಥಾಪಿತವಾದಂದಿನಿಂದ ಮಲೆನಾಡಿನಲ್ಲಿ ಅನೇಕ ರೀತಿಯಿಂದ ಧರ್ಮಜಾಗೃತಿಯ ಕಾರ್ಯಗಳು ನಡೆದು ಜನತೆಯಲ್ಲಿ ಆಸ್ತಿಕಭಾವನೆ ಒಡಮೂಡುವಂತಾಯಿತು. ಶ್ರೀ ಹಾಲಪ್ಪಶೆಟ್ಟರು ಒಡಕುಹೊಳೆಯಲ್ಲಿ ಸವದತ್ತಿಯ ಶ್ರೀಗಳವರಲ್ಲಿದ್ದು ಅನುಷ್ಠಾನದ ಕ್ರಮ ತಿಳಿದುಕೊಂಡು ಬಂದು ಕಪನಳ್ಳಿಯಲ್ಲಿ ಅನುಷ್ಠಾನ ಮಾಡುತ್ತ  ಆಶ್ರಮದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು.

ಈಗ ಶಿವಯೋಗಾಶ್ರಮದಲ್ಲಿ ಶ್ರೀ ನಿ.ಪ್ರ. ರುದ್ರಮುನಿಸ್ವಾಮಿಗಳು ಪೂಜ್ಯರ ಉದ್ದೇಶಗಳಂತೆ ಗೋರಕ್ಷಣೆ, ಒಕ್ಕಲುತನ ಮೊದಲಾದ ಕಾಯಕಗಳಿಗೆ ಉತ್ತೇಜನ ಕೊಟ್ಟು ಅನುಷ್ಠಾನ ಮಾಡುತ್ತ ಜನರಲ್ಲಿ ನೀತಿ ಸದಾಚಾರಗಳು ನೆಲೆಗೊಳ್ಳುವಂತೆ ಪ್ರಯತ್ನಿಸುತ್ತಿದ್ದಾರೆ. ಇದುವರೆಗೂ ಆಶ್ರಮಕ್ಕೆ ಸ್ಥಿರವಾದ ಕಟ್ಟಡಗಳಿರಲಿಲ್ಲ. ಶ್ರೀಗಳವರು ಅಂದವಾದ ನೂತನ ಮಠವನ್ನು ಕಟ್ಟಿಸಿ ಆಶ್ರಮದ ಶೋಭೆಯನ್ನು ಹೆಚ್ಚಿಸಿದ್ದಾರೆ.

ಹಿರೇಹಾಳದಲ್ಲಿ ಮಂದಿರ

ಹಿರೇಹಾಳು (ತಾ. ರೋಣ ಜಿ. ಧಾರವಾಡ) ಗ್ರಾಮ ಶಿವಯೋಗಮಂದಿರಕ್ಕೆ ಬಹಳ ದೂರದಲ್ಲಿಲ್ಲ. ಅಲ್ಲಿಯ ಭಕ್ತರ ಆಗ್ರಹದಂತೆ ಶ್ರೀಗಳವರು ಅಲ್ಲಿ ಅನುಷ್ಠಾನ ಮಾಡಲು ಒಬ್ಬ ಸಾಧಕರನ್ನು ಕಳಿಸಿದರು.  ಶ್ರೀ ನಿರಂಜನ ಸಿದ್ಧಲಿಂಗಸ್ವಾಮಿಗಳ ಅನುಷ್ಠಾನದ ಪ್ರಭಾವದಿಂದ ಹಿರೇಹಾಳದಲ್ಲಿ ಶಾಖಾಶಿವಯೋಗ ಮಂದಿರದ ಸ್ಥಾಪನೆಯಾಯಿತು. ಅಲ್ಲಿ ಯಾವಾಗಲೂ ಒಬ್ಬ ಸಾಧಕರು ಇದ್ದು ಶಿವಯೋಗದೊಂದಿಗೆ ಜನರಲ್ಲಿ ಪ್ರವಚನಾದಿಗಳಿಂದ ಧರ್ಮಪ್ರಸಾರವನ್ನು ಮಾಡಲು ಅನುಕೂಲತೆಗಳನ್ನು ಅಲ್ಲಿಯ ಭಕ್ತರು ಕಲ್ಪಿಸಿಕೊಟ್ಟಿದ್ದರು.*

ಬದಾಮಿಯ ಶಾಖಾಮಂದಿರ

ಮಂದಿರಕ್ಕೆ ಅನೇಕ ಮುಖವಾಗಿ ಸಹಾಯ ಸಲ್ಲಿಸಿದ ಅಧಿಕಾರಿಗಳಲ್ಲಿ  ರಾ. ಬ. ಕಿತ್ತೂರ ರೇವಣಸಿದ್ಧಪ್ಪಯ್ಯನವರೂ (Retired D.D.C.) ಒಬ್ಬರು. ಅವರ ಧರ್ಮಪ್ರೇಮ ಸಮಾಜಾಭಿಮಾನಿಗಳ ಗುರುತೆಂದು ಶಿವಯೋಗಮಂದಿರದ ಅಭಿಮಾನಿಗಳು ಹಿತಚಿಂತಕರೂ ಧರ್ಮ ಕಾರ್ಯಕ್ಕೆಂದು ಬದಾಮಿಯಲ್ಲಿ ಶಾಖಾ ಶಿವಯೋಗಮಂದಿರವನ್ನು ಶಾ.ಶ. ೧೮೪೮ (ಕ್ರಿ.ಶ. ೧೯೨೬) ರಲ್ಲಿ ಸ್ಥಾಪಿಸಿದರು. ಈ ಕಾರ್ಯದಲ್ಲಿ ಇಲಕಲ್ಲ ಶ್ರೀ ಮಹಾಂತಸ್ವಾಮಿಗಳು, ಶ್ರೀ ಜಡೇಸಿದ್ದಲಿಂಗಸ್ವಾಮಿಗಳು ಮತ್ತು ನವಿಲುಗುಂದದ ಶ್ರೀ ಬಸವಲಿಂಗ ಸ್ವಾಮಿಗಳು ಅಲ್ಲಲ್ಲಿ ಸಂಚರಿಸಿ ನಿಧಿಸಂಗ್ರಹ ಮಾಡಿದರು. ಅಂದವಾದ ಶಿವಾನುಭವ ಮಂಟಪವನ್ನು ಕಟ್ಟಿಸಿದರು. ಈ ಕಾರ್ಯದಲ್ಲಿ ಶ್ರೀ ಕಿತ್ತೂರ ಸಾಹೇಬರಲ್ಲಿ ವಿಶ್ವಾಸವುಳ್ಳ ಅನೇಕ ಜನರು ಸಹಾಯಸಲ್ಲಿಸಿದರು.   ಹುಬ್ಬಳ್ಳಿಯ ಶ್ರೀ ಬಸವಶೆಟ್ಟೆಪ್ಪ ನೀಲಿ ಅವರು ಒಂದು ಉತ್ತಮ ಭಾವಿಯನ್ನು ಕಟ್ಟಿಸಿದರು.  ಇಲ್ಲಿ ಪ್ರವಾಸಿ ಭಕ್ತರ ಮಾಹೇಶ್ವರ ಶಿವಪೂಜೆಗೆ ಪ್ರಸಾದಕ್ಕೆ ಅನುಕೂಲತೆಗಳನ್ನು ಊರ ಪ್ರಮುಖರು ಒದಗಿಸಿಕೊಟ್ಟರು.

 ಈ ಶಾಖಾಮಂದಿರದ ಸ್ಥಾಪನೆಯಿಂದ ಬದಾಮಿಯ ಭಕ್ತರಿಗೆ ಬಹಳ ಅನುಕೂಲವಾಯಿತು. ಆಗಾಗ ಇಲ್ಲಿ ನಡೆಯುತ್ತಿದ್ದ ಪುರಾಣ ಪ್ರವಚನಗಳಿಂದ ಜ್ಞಾನ ಪ್ರಸಾರವು ಜನತೆಯಲ್ಲಿ ಜಾಗ್ರತಿಯನ್ನು ತಂದಿತು ಇಲ್ಲಿ ಭಾವಿಯ ನೀರಿನ ಉಪಯೋಗಪಡೆದು ಒಂದು ಹಣ್ಣಿನ ತೋಟವನ್ನು ಬೆಳೆಸಿದ್ದರು. ಬಿಲ್ವಪತ್ರಿಯ ಬನವೂ ಇದೆ. ಕೆಲವು ವರ್ಷ ಇಲ್ಲಿ ಇಂಗ್ಲೀಷ ಶಾಲೆಯೂ ನಡೆಯಿತು. ಬದಾಮಿಯ ಶಾಲಾಮಂದಿರದಲ್ಲಿ ಮಂದಿರದ ಶ್ರೀಗಳವರು ಮತ್ತು ಪ್ರವಾಸಿ ಜನರು ತಂಗುವದಕ್ಕೆ ಅನುಕೂಲತೆಯನ್ನು ಕಲ್ಪಿಸಲಾಗಿದೆ.

 ಈ  ಶಾಖಾಶಿವಯೋಗಮಂದಿರಗಳೆಲ್ಲ ಶ್ರೀಗಳವರ ಕರ್ತೃತ್ವ ಶಕ್ತಿಯ ಜೀವಂತ ಪ್ರಮಾಣಗಳಾಗಿವೆ. ಶ್ರೀಗಳವರು ಮಂದಿರದ ಸಾಧಕರಿಗೆ ಕೇವಲ ಅನುಕೂಲ ಮಠಗಳಿಗೆ ಅಧಿಕಾರಿಗಳಾಗಲು ಪ್ರೇರಣೆಯನ್ನು ಕೊಡದೆ ಅವರು ತಮ್ಮ ತಪೋಬಲದಿಂದ ಹೊಸ ಮಂದಿರಗಳನ್ನೇ ಅಶ್ರಮಗಳನ್ನೇ ಸ್ಥಾಪಿಸಿ ತ್ಯಾಗಮಯ ಜೀವನವನ್ನು ಸಾಗಿಸುವಂತೆ ಬೋಧಿಸುತ್ತಿದ್ದರು. ಈ ಆಶ್ರಮಗಳೆಲ್ಲ ಮಂದಿರದ ಶಿವಯೋಗಿ ಸಾಧಕರ ಅನುಷ್ಠಾನ ಪ್ರಭಾವದ ಪರಿಣಾಮವಾಗಿಯೇ ಮೈದಾಳಿ ಬಂದಿವೆ, ಬರುತ್ತಿವೆ. ಅವುಗಳ ಮುಖಾಂತರ ಅನೇಕ ಬಗೆಯಾಗಿ ಜನತಾ ಜಾಗ್ರತಿಯ ಮಹಾಕಾರ್ಯಗಳು ಯಶಸ್ವಿಯಾಗಿ ಕೈಗೂಡಿವೆ.

ಲೇಖಕರು : ಲಿಂ. ಡಾ :ಗುರುಸಿದ್ದದೇವ ಶಿವಾಚಾರ್ಯ ಮಹಾಸ್ವಾಮಿಗಳು, ಕೆಳದಿ. ಸಂಸ್ಥಾನ ರಾಜಗುರು ಹಿರೇಮಠ, ಕೆಳದಿ,-ಶಿವಯೋಗಮಂದಿರ – ಮಂಗಳೂರು.

ಚಾಲ: ʼʼನೋಡಿರಿಲ್ಲಿದೆ. ಶಿವನ ಮಂದಿರʼʼ ಎಂಬಂತೆ,

ಬೇವು ಬೆಲ್ಲದ ಬೆರಕ ಸರಿಸಮ | ಮಾಡಿರೆನುವ ಯುಗಾದಿಯು ||

ʼʼಜೀವಿ ತಾ೦ ಸುಖ ದುಃಖ ಸಹಿಸಲಿ” ಎಂಬುದಿದುವೆ ಯುಗಾದಿಯು ||

ಯುಗ-ಯುಗಾಂತರ, ಕಾಲ ಗಣನೆಗೆ | ಯುಗದ ಆದಿ-ಯುಗಾದಿಯು ||

ನಗು.ವಸಂತದ ಚೈತ್ರಶುದ್ಧದ | ಮೊದಲ ದಿನವೆ ಯುಗಾದಿಯು ||

ಆ ಪರಮನವತಾರದೆಣಿಕೆಗೆ | ನಾಮವಿಹ ಯುಗ ನಾಲ್ಕಿವೆ ||

ದ್ವಾಪರ.ತ್ರೇತಾ.ಕೃತ.ಕಲಿಯು | ಎಂಬ ಯುಗಗಳು ನಾಲ್ಕಿವೆ | |

” ಕಲಿ. ಯುಗೇ…. ವೈವಶ್ವತಾಭಿಧ | ಮನು “ವಿನದಿದು ಯುಗಾದಿಯು ||

ಕಲಿತ, ಕಲಿಯುವ, ಕಲಿಸಬಯಸುವ | ಸರ್ವ ಜನರ ಯುಗಾದಿಯು  | |

ನೂರು ವರ್ಷದ ಜೀವಿ : ಮನುಜಗೆ | ಯುಗದ ಅರ್ಥವು ವರ್ಷವು ||

ಆರು ಋತುಗಳ ಮೊದಲ ಋತುವಿನ | ಮೊದಲ ದಿನ ಚಿರ ಹರ್ಷವು  ||

ಶಾಲಿ.ವಾಹನ.ಶಕದ ಮೊದಲಿನ | ಮೊದಲ ದಿನವೆ ಯುಗಾದಿಯು ||

ಬಾಲಿಕಾ. ಸಮ.ಮನದ ನಿರ್ಮಲ | ಚಿಗುರ ಚಲುವೆ ಯುಗಾದಿಯು ||

ಭುವಿಯ ಮಧ್ಯದ ರೇಖೆ ಮೇಲ್ಗಡೆ | ಸೂರ್ಯ ಬರಲು ಯುಗಾದಿಯು ||

ನವ.ನವೀನತೆ ಬಿಸಿಯ ಬೀಸುವ |ಸೂರ್ಯನಿಂದ ಯುಗಾದಿಯು ||

ಚೈತ್ರದಾದಿಯು : ಫಾಲ್ಗುಣಾ೦ತ್ಯವು | ಮಧ್ಯ ಕಾಲ ಯುಗಾದಿಯು ||

ಜಾತ್ರೆ.ರಥಕಿಹ ಧ್ವಜಗಳಂತೆಯೆ | ಚಿಗಿತ ಗಿಡದ ಯುಗಾದಿಯು ||

ಧರ್ಮ.ಶಾಸ್ತ್ರವು, ಕಾಲ.ಧರ್ಮವು | ತಿಳಿಪುದೊಂದೇ ಕಾಲವು ||

ಕರ್ಮ-ಗತಿ-ಮತಿ.ಸಿದ್ದಿ ಬಯಸಲು | ಯುಗದ ಆದಿ ಸುಕಾಲವು ||

ರಾಮಚಂದ್ರನು ಪಟ್ಟ ಕೇರಿದ್ದ | ಪರ್ವ ದಿನವೆ ಯುಗಾದಿಯು ||

ಭೂಮಿ,ಪಾಲಕ : ಶಾಲಿ.ವಾಹನ | ಮೆಚ್ಚಿ ಪೇಳ್ದ ಯುಗಾದಿಯು ||

ಹಾನುಗಲ್ಲ ಕುಮಾರ ಯೋಗಿಯು | ಯೋಗ ತಿಳಿಪ ಯುಗಾದಿಯು ||

ಜ್ಞಾನ ಕರ್ಮದ ಸಮ.ಸಮುಚ್ಚಯ | ಸಾರುತಿರುವ ಯುಗಾದಿಯು ||

* ಮೂರುವರೆ ಶುಭ ದಿನ ‘ದ ವರ್ಷಕೆ | ಮೊದಲ ಹಬ್ಬ ಯುಗಾದಿಯು ||

ಚಾರು.ಲತೆ ಗಿಡ ಪಲ್ಲವಿಪ ತೆರ | ಮಾಡುವುದಿದೆ ಯುಗಾದಿಯು ||

ಆ ಶಿಲಾ.ಯುಗ, ಈ ಕಲಾ.ಯುಗ | ಹಸಿರು ಗಿಡದ ಯುಗಾದಿಯು  ||

ಈಶ.ರವಿ.ಶಶಿ. ಕೃಪೆಯಿರುವನಕ | ಮುಂದುವರೆವ ಯುಗಾದಿಯು ||

ಯುಗ.ಯುಗಾಂತರ. ಸೌಖ್ಯ.ದಾಯಕ | ಯುಗದ ಆದಿ=ಯುಗಾದಿಯು ||

ಜಗಕೆ ಶಿವ=ʼʼಗುರುಮೂರ್ತಿ ʼʼಕರುಣಿಪ | ಕೃಪೆಯ ಚಿಹ್ನ ಯುಗಾದಿಯು ||

ಡಾ|| – ʼಗುರುಸಿದ್ದ ದೇವ’ ಕೆಳದಿ

ಸಂಗನಬಸವದೇವರು, ಎಂ.ಎ.ವಾರಣಾಸಿ

(  ಲಿಂ :ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ

ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು

ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.

ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ವಾರಣಾಸಿಯಲ್ಲಿ ವ್ಯಾಸಂಗ ಸಮಯದಲ್ಲಿ ಬರೆದ ಲೇಖನ)

ಸಂಗ್ರಹ ಸೌಜನ್ಯ : ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಯೋಗವೆಂದರೇನು ? ಈ ಪ್ರಶ್ನೆಗೆ ಸರ್ವಸಮ್ಮತ ಉತ್ತರವನ್ನೀಯುವದು ಅಸಂಭವ. ನಮ್ಮ ಆಚಾರ್ಯರು ಯೋಗ ಶಬ್ದದ ವ್ಯಾಖ್ಯೆಯನ್ನು ನಾನಾ ಪ್ರಕಾರವಾಗಿ ಮಾಡಿದ್ದಾರೆ, ಭಾಷಾವಿಜ್ಞಾನಿಗಳ ಪ್ರಕಾರ ಭಾರತದ ಅತ್ಯಂತ ಪ್ರಾಚೀನಗ್ರಂಥವಾದ ಋಗ್ವೇದದಲ್ಲಿ ರಥಕ್ಕೆ ಹೂಡುವ ಪಶುಗಳ ಬಂಧನಕ್ಕೆ ಯೋಗ ವೆಂದು ಹೇಳಲಾಗಿದೆ. ಇದು ಯೋಗ ಶಬ್ದದ ಪ್ರಾಚೀನವಾದ ಅರ್ಥ, ಯದ್ಯಪಿ ಋಕ್‌ಸಂಹಿತೆಯ ಕೆಲವು ಕಡೆ ಯೋಗ, ಯೋಗಕ್ಷೇಮ ಶಬ್ದಗಳು ಬಂದಿವೆ. ಆದರೆ ಅವುಗಳ ಅರ್ಥ ಯೋಗಸೂತ್ರ, ಉಪನಿಷತ್ತು, ಹಾಗೂ ಮಹಾಭಾರತಗಳಲ್ಲಿ ಕೊಡುವ ಅರ್ಥಕ್ಕಿಂತ ಅತ್ಯಂತ ಭಿನ್ನವಾಗಿದೆ.

ಪ್ರಾಚೀನ ವೈದಿಕಗ್ರಂಥಗಳಲ್ಲಿ ಯೋಗಶಬ್ದದ ಘನಿಷ್ಠ ಸಂಬಂಧವು ತಪಸ್ಸು, ಯಜ್ಞ, ಜಾದು, ತಂತ್ರ, ಮಂತ್ರ ಶಬ್ದಗಳ ಜೊತೆಗೆ ಇತ್ತೆಂದು ವೇದ್ಯವಾಗುತ್ತದೆ. ಇದಲ್ಲದೇ ಐತಿಹಾಸಿಕ ಯುಗದಲ್ಲಿ ತಪಸ್ಸಿನಿಂದ ಪ್ರಾಪ್ತವಾಗುವ ಶಕ್ತಿಗಳ ಮತ್ತು ಧ್ಯಾನದಿಂದ ಸಿದ್ಧಿಸಿದ ಸಿದ್ಧಿಗಳ ಅರ್ಥದಲ್ಲಿ ಯೋಗಶಬ್ದದ ಪ್ರಯೋಗವು ಕಂಡು ಬರುತ್ತದೆ.

ಹರಪ್ಪಾ ಮೊಹಂಜೋದಾರೊ ಸಂಸ್ಕೃತಿಯ ಸಮಯದಲ್ಲಿ ಯೋಗ ಮತ್ತು ಧ್ಯಾನ ಶಬ್ದಗಳ ಪ್ರಯೋಗದ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಆ ಕಾಲದಲ್ಲಿ ದೊರೆತ ಕೆಲವು ನಾಣ್ಯಗಳ ಮೇಲೆ ಮತ್ತು ಪಾಷಾಣಖಂಡಗಳ ಮೇಲೆ ಕೆತ್ತಿದ ಧ್ಯಾನಸ್ಥ ಪುರುಷರನ್ನು ತಪಸ್ವಿಗಳನ್ನು ನೋಡಬಹುದು. ಅತಃ ಯೋಗ ಪರಂಪರೆಯು ಐದುಸಾವಿರ ವರ್ಷಗಳ ಪೂರ್ವದಲ್ಲಿ ಊರ್ಜಿತಾವಸ್ಥೆಯಲ್ಲಿ ಇತ್ತೆಂದು ಖಚಿತವಾಗಿ ಹೇಳಬಹುದು.

ವೈದಿಕಮಧ್ಯಕಾಲವು ವೈದಿಕ ಮತ್ತು ಅವೈದಿಕ ಸಂಸ್ಕೃತಿಗಳ ಸಂಗಮ ಕಾಲವು. ಈ ಸಂಗಮದ ಪ್ರಭಾವವು ಜೈನ, ಬೌದ್ಧ, ಸಾಂಖ್ಯ, ಆಜೀವಿಕ ಮತ್ತು ಪ್ರಾಚೀನ ಉಪನಿಷತ್ತುಗಳ ಮೇಲೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಮೋಕ್ಷಪಾಯವಾದ ಯೋಗಮಾರ್ಗದಲ್ಲಿ ಸರ್ವಜಾತೀಯ ಮುಮುಕ್ಷಗಳಿಗೆ ಪ್ರವೇಶ ಸಿಗಬೇಕಾದರೆ ಈ ಎರಡೂ ಸಂಸ್ಕೃತಿಗಳ ಸಂಗಮದ (ಸಮ್ಮಿಶ್ರಣ) ಪರಿಣಾಮವೆಂದೇ ಹೇಳಬಹುದು. ಆದರೆ ಈ ಉದಾರತೆಯು ವೀರಶೈವ, ಜೈನ, ಬೌದ್ಧ ಧರ್ಮಗಳಲ್ಲಿ ಮೊದಲಿನಿಂದಲೂ ವಿದ್ಯಮಾನವಾಗಿತ್ತು, ಬ್ರಾಹ್ಮಣಪರಂಪರೆಯಲ್ಲಿ ಮಾತ್ರ ಈ ಪ್ರಗತಿಶೀಲ ವಿಚಾರವು ಕಾಲಾಂತರದಲ್ಲಿ ಪ್ರವೇಶ ಮಾಡಿತು.

ಐತಿಹಾಸಿಕ ಹಾಗೂ ಸೈದ್ಧಾಂತಿಕ ದೃಷ್ಟಿಯಿಂದ ಯೋಗವು ಶ್ರಮಣಯೋಗ ಬ್ರಾಹ್ಮಣಯೋಗವೆಂದು ಎರಡು ಪ್ರಕಾರ, ಶ್ರಮಣಯೋಗವು ಅನೇಶ್ವರವಾದಿಯಾದರೆ, ಬ್ರಾಹ್ಮಣಯೋಗವು ಬ್ರಹ್ಮಾತ್ಮವಾದಿಯು, ಈಶ್ವರವಾದಿಯು ಮತ್ತು ಪುರುಷವಾದಿಯೂ ಆಗಿದೆ. ವೈದಿಕಮಧ್ಯಕಾಲದಲ್ಲಿ ಸಾಂಖ್ಯ ಮತ್ತು ಯೋಗದ ಮೇಲೆ ಸೇಶ್ವರಿವಾಖ್ಯೆಗಳ ರಚನೆಯ ನಂತರ ಇವೆರಡುಗಳ ಗಣನೆಯು ಷಡ್‌ದರ್ಶನ ಗಳಲ್ಲಿ ಪ್ರಾರಂಭವಾಯಿತು.

ಮಹಾಭಾರತದ ಶಾಂತಿಪರ್ವದಲ್ಲಿ ಸಂಕಲಿತ ಯೋಗ ವಿಷಯಕ ಸಾಮಗ್ರಿಯು ಪ್ರಾಚೀನಕಾಲದಿಂದ ಕೇಳುತ್ತ ಬಂದಿರುವ ವಿವಿಧ ಕಥನಗಳನ್ನು ಆಶ್ರಯಿಸಿದೆ. ಕಾರಣ ಕ್ರಿ.ಶ. ಪೂರ್ವ ೬ ಅಥವಾ ೫ ನೆಯ ಶತಮಾನದ ಯೋಗಪರಂಪರೆಯನ್ನು ತಿಳಿಯ ಬೇಕಾದರೆ ಪ್ರಾಚೀನ ಪಾಲೀಸೂತ್ರಗಳನ್ನು ಉಪನಿಷತ್ತುಗಳನ್ನು ಹಾಗೂ ಜೈನಸೂತ್ರ ಗಳನ್ನು ಆಶ್ರಯಿಸಬೇಕು. ಪ್ರಾಚೀನ ಪಾಲೀಸಾಹಿತ್ಯವು ಮೂರು ಭಾಗಗಳಲ್ಲಿ ವಿಭಕ್ತವಾಗಿದೆ. ಆ ಮೂರು ಭಾಗಗಳು ವಿನಯಪಿಟಕ, ಸುತ್ತ ಪಿಟಕ, ಅಭಿಧಮ್ಮ ಪಿಟಕಗಳೆಂದು ಕರೆಯಲ್ಪಡುತ್ತಿವೆ. ಅಶೋಕನ ಸಮಯದಲ್ಲಿ ರಚಿತ ಸುತ್ತಪಿಟಕದ ಖುದ್ದಕನಿಕಾಯಗಳಲ್ಲಿ ಬೌದ್ಧ ಯೋಗ ವಿಷಯಕ ಸಾಮಗ್ರಿಯು ಪರ್ಯಾಪ್ತವಾಗಿ ದೊರೆಯುತ್ತದೆ. ಭಗವಾನ ಗೌತಮಬುದ್ದನು ಪೂರ್ವಾಶ್ರಮದಲ್ಲಿ ಅತ್ಯಂತ ಕಠೋರವಾದ ಯೋಗಸಾಧನೆಯನ್ನು ಮಾಡಿದನೆಂದು ಪ್ರತೀತಿ ಇದೆ. ಇಷ್ಟೆ ಅಲ್ಲ, ಆತನು ಕೈಕೊಂಡ ಅತಿ ಕಟುತರ ಯೋಗದ್ಯೋತಕವೂ ಕೇವಲ ಅಸ್ಥಿ ಪಂಜರವೂ ಆದ ಆತನ ಶಿಲಾಪ್ರತಿಮೆಗಳು ಇನ್ನೂ ಅನೇಕ ಕಡೆಗೆ ದೊರೆಯುವವು. ಆ ಕಾಲದಲ್ಲಿ ಅವನು ಸರ್ವಶ್ರೇಷ್ಠಯೋಗಿ ಮತ್ತು ಧ್ಯಾನಮಾರ್ಗದ ಸರ್ವಶ್ರೇಷ್ಟ ಉಪದೇಶಕನೆಂದು ಪಾಲಿಸಾಹಿತ್ಯವು ಘೋಷಿಸುತ್ತದೆ.

ನಿರ್ವಾಣಧಾತು(ಧರ್ಮ ಧಾತುವಿನ ಪ್ರಾಪ್ತಿಯೇ ಬೌದ್ಧಯೋಗದ ಪರಮೋದ್ದೇಶ. ಈ ಯೋಗದಲ್ಲಿ ಸ್ಮೃತಿ, ಧ್ಯಾನ ಸಮಾಧಿ, ಶಮಥ, ವಿಪಶ್ಯನಾ ಮೊದಲಾದವುಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಬೌದ್ಧಯೋಗದ ಅಷ್ಟಾಂಗಗಳಲ್ಲಿ ೪ ಸಮ್ಯಕ್ ದೃಷ್ಟಿಗೆ ಪ್ರಥಮಸ್ಥಾನವಿದೆ, ಹಾಗೂ ಬೌದ್ಧರ ದಾರ್ಶನಿಕ ಪಕ್ಷವು ಸಮಾವೇಶಗೊಂಡಿದೆ. ಬೌದ್ಧರ ಅನೇಕ ಗ್ರಂಥಗಳಲ್ಲಿ ನಾನಾ ಪ್ರಕಾರದ ಧ್ಯಾನ-ಸಮಾಧಿಗಳ ವರ್ಣನೆಯು ಮತ್ತು ಅನೇಕ ಯೋಗಿಗಳ ಉಲ್ಲೇಖವು ಆ ಕಾಲದ ಭವ್ಯಯೋಗಪರಂಪರೆಯನ್ನು ಸೂಚಿಸುತ್ತದೆ.

ಯೋಗಪರಂಪರೆಯ ಇತಿಹಾಸದಲ್ಲಿ ಪತಂಜಲಿ ಮಹರ್ಷಿಗಳಿಗೆ ವಿಶಿಷ್ಟ ಸ್ಥಾನವಿದೆ. ಅವನ ಕಾಲ ೩ನೆಯ ಶತಮಾನ, ಅವನ ಕಾಲದಲ್ಲಿಯೇ ಯೋಗವು ವ್ಯಾವಹಾರಿಕ ಮಾರ್ಗದಿಂದ ಐಶ್ವರೀಯ ದಾರ್ಶನಿಕ ಸ್ವರೂಪವನ್ನು ಮೈದಾಳಿತು * ಯೋಗಸೂತ್ರ”ದಲ್ಲಿ ಉಪನಿಷದ್‌ದಾಂತ, ಸಾಂಖ್ಯ ಮತ್ತು ಪ್ರಾಚೀನಯೋಗ ಪದ್ಧತಿಯ ಸಮನ್ವಿತ ರೂಪವನ್ನು ನಿರೂಪಿಸಲು ಪ್ರಯಾಸಮಾಡಲಾಯಿತು. “ಯೋಗಶ್ಚಿತ್ತವೃತ್ತಿ ನಿರೋಧಃ ” ವೆಂಬ ವ್ಯಾಖ್ಯೆಯು ಸರ್ವತ್ರ ಪ್ರಾಸಾರವಾಯಿತು.

ಪಾತಂಜಲಯೋಗದ ಪರಮಲಕ್ಷ್ಯವು ವಿವೇಕಖ್ಯಾತಿ, ಭೇದಜ್ಞಾನವೇ ವಿವೇಕ ಖ್ಯಾತಿ. ಇದರ ಪ್ರಾಪ್ತಿಗಾಗಿ ಏಕಾಗ್ರಭೂಮಿಯ ಅನುಸಂಧಾನ ಪರಮಾವಶ್ಯಕ ವಾಗಿದೆ. ಸಾಧಕನು ಏಕಾಗ್ರಭೂಮಿಯ ಅನುಸಂಧಾನದಿಂದ ನಿರೋಧಭೂಮಿಯಲ್ಲಿ ಪ್ರವೇಶಮಾಡುವನು, ಅಲ್ಲಿ ಅವನಿಗೆ ಪ್ರಕೃತಿ ಪುರುಷರ ವಿಯೋಗಾವಸ್ಥೆಯ ಅನುಭವವು ಆಗುವದು. ಈ ಅನುಭವವು ನಿರ್ಮಲ ಪುರುಷನ ಅನುಭವವು ಇದುವೇ ಸಮಾಧಿ. ಪಾತಂಜಲ ಯೋಗಾನುಸಂಧಾನದಲ್ಲಿ ವ್ಯಷ್ಟಿಗತ ಮತ್ತು ಸಮಷ್ಟಿಗತ ರೂಪದ ಅಸ್ತಿತ್ವಕ್ಕೆ ಸ್ಥಾನವಿಲ್ಲ. ಕಾರಣ ಪ್ರಭುದೇವರು ಇದಕ್ಕೆ ಅಳಿದುಕೊಡುವ ಯೋಗವೆಂದು ಕರೆದಿದ್ದಾರೆ.

ಶೈವಶಾಸ್ತ್ರಗಳು ಮೊದಲಿನಿಂದಲೂ ಯೋಗಕ್ಕೆ ಅತಿ ಮಹತ್ವದ ಸ್ಥಾನವನ್ನು ಕೊಟ್ಟಿವೆ. ಪಾಶುಪತಸೂತ್ರದಲ್ಲಿ ಯೋಗವು ಐದು ತತ್ವಗಳಲ್ಲಿ ಒಂದಾಗಿದೆ ಎಂದು ಉಕ್ತವಾಗಿದೆ. ಶೈವರಿಗೆ ಪ್ರಮಾಣ ಗ್ರಂಥಗಳಾದ ಆಗಮಗಳಲ್ಲಿ ಪ್ರತಿಪಾದಿತವಾದ ಕ್ರಿಯಾ, ಚರ್ಯಾ, ಯೋಗ, ಜ್ಞಾನಗಳೆಂಬ ನಾಲ್ಕು ಪಾದಗಳಲ್ಲಿ ಯೋಗದ ಸ್ಥಾನವು ಜ್ಞಾನದ ನಂತರ ಇರುತ್ತದೆ. ಇದರಿಂದ ಆಗಮ ವಾಙ್ಮಯದಲ್ಲಿ ಯೋಗಕ್ಕಿದ್ದ ಮಹತ್ವವು ಸ್ಪಷ್ಟವಾಗುವದು. ಸುಪ್ರಭೇದಾಗಮ ಮತ್ತು ಈಶಾನ ಶಿವಯೋಗಿಗಳ * ಈಶಾನ ಶಿವ ಗುರುದೇವ ಪದ್ಧತಿ “ಗಳಲ್ಲಿ ವರ್ಣಿತವಾದ ಯೋಗವು ಯೋಗ ದರ್ಶನದಿಂದ ವಿಶೇಷವಾಗಿ ಭಿನ್ನವಾಗಿಲ್ಲ. ಆದರೂ ಕಿಂಚಿತ್‌ ವ್ಯತ್ಯಾಸ ಇಲ್ಲದೇ ಇಲ್ಲ. ಈಶ್ವರನ ಪ್ರತಿಬಿಂಬವನ್ನು ಮುಂದಿಟ್ಟುಕೊಂಡು ಅದರ ಮೇಲೆ ದೃಷ್ಟಿಯನ್ನು ಚೆಲ್ಲಿ, ಅದರಲ್ಲಿಯೇ ಮನಸ್ಸಿನ ವ್ಯಾಪಾರವನ್ನೆಲ್ಲ ಕೇಂದ್ರೀಕರಿಸಿ ಧ್ಯಾನವನ್ನು ಬರಿಸಿ ಸಮಾಧಿ ಯನ್ನು ಸಾಧಿಸುವ ಮಾರ್ಗಕ್ಕೆ ಶೈವಾಗಮಗಳು ಪ್ರಾಮುಖ್ಯತೆಯನ್ನು ಕೊಟ್ಟಂತೆ ತೋರುತ್ತದೆ. ರಾಜಯೋಗದ ತತ್ವಗಳು ಶೈವಾಗಮಗಳ ಯೋಗದಲ್ಲಿ ಅಡಕವಾಗಿವೆಯಾದರೂ ಮೂರ್ತಿಯನ್ನು ಮುಂದಿಟ್ಟುಕೊಂಡು ಧ್ಯಾನಿಸುವದೊಂದು ಅದರ

ವೈಶಿಷ್ಟ್ಯ.

ಶಿವಯೋಗ ಪ್ರದೀಪಕಾರರು ಯೋಗವನ್ನು ಮಂತ್ರಯೋಗ, ಲಯಯೋಗ. ಹಠಯೋಗ, ರಾಜಯೋಗ ಶಿವಯೋಗವೆಂದು ಐದುವಿಧವಾಗಿ ಹೇಳುವರು. ಓಂಕಾರ ಮೊದಲಾದ ಮಂತ್ರಗಳನ್ನು ಜಪಿಸುವವರು ಮಂತ್ರ ಯೋಗಿಗಳೆಂದೂ, ಮನೋಮಾರುತನೊಡನೆ ಕೂಡುವ ಚಿತ್ರವನ್ನು ಆತ್ಮಧೇಯದಲ್ಲಾಗಲಿ ಅಥವಾ ನಾದದಲ್ಲಾಗಲಿ ತಲ್ಲೀನವನ್ನಾಗಿ ಮಾಡುವವರು ಲಯಯೋಗಿಗಳೆಂದೂ ಅಷ್ಟಾಂಗ ಮಾರ್ಗಗಳಿಂದಲೂ ಮುದ್ರಾಕರಣ ಬಂಧಗಳಿಂದಲೂ ಅಥವಾ ಕುಂಭಕದಿಂದಲೂ ವಾಯುವನ್ನು ಸ್ವಾಧೀನಪಡಿಸಿಕೊಂಡವರು ಹಠಯೋಗಿಗಳೆಂದೂ, ಮನೋವೃತ್ತಿ ಯಿಲ್ಲದವರೂ, ಜ್ಞಾನದಿಂದ ಬ್ರಹ್ಮಸಾಕ್ಷಾತ್ಕಾರವನ್ನು ಪಡೆದವರೂ, ರಾಜ ಯೋಗಿಗಳೆಂದೂ, ೧೦ ಶಿವಜ್ಞಾನ, ಶಿವಭಕ್ತಿ ಮತ್ತು ಶಿವಧ್ಯಾನದಿಂದ ಕೂಡಿದ ಶಿವಾರ್ಚನೆಯನ್ನು ಮಾಡುವವರು ಶಿವಯೋಗಿಗಳೆಂದೂ ಚನ್ನಸದಾಶಿವಯೋಗೀಂದ್ರರು ಹೇಳುವರು. ಇವೆಲ್ಲವುಗಳಲ್ಲಿ ಶಿವಯೋಗವೇ ಮಿಗಿಲಾದುದು. ಯದೃಪಿ ರಾಜ ಯೋಗಕ್ಕೂ ಶಿವಯೋಗಕ್ಕೂ, ನಿಜವಾಗಿ ಭೇದವಿಲ್ಲವೆಂದು ಸಾಧಕರ ಜ್ಞಾನಶಕ್ತಿಯ ಬೆಳವಣಿಗೆಯ ಸಲುವಾಗಿ ಭೇದವು ಹೇಳಲ್ಪಟ್ಟಿದೆ ಎಂದು ಶಿವಯೋಗ ಪ್ರದೀಪಕಾರ ಮತ. ಆದರೆ ಪ್ರಭುದೇವರು ಕೆಳಗಿನ ವಚನದಿಂದ ಎರಡೂ ಯೋಗಗಳಲ್ಲಿ ಮಹದಂತರವಿದೆಯೆಂದು ವ್ಯಕ್ತವಾಗದೇ ಇರಲಾರದು,

ಅಷ್ಟಾಂಗಯೋಗದಲ್ಲಿ ಯಮನಿಯಮಾ ಆಸನ ಪ್ರಾಣಾಯಾನು ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿಯೆಂದು ಎರಡು ಯೋಗ ಉಂಟು,

ಅಲ್ಲಿ ಅಳಿದು ಕೂಡುವದೊಂದು ಯೋಗ, ಅಳಿಯದೇ ಕೂಡುವದೊಂದು ಯೋಗ,

ಈ ಎರಡೂ ಯೋಗದೊಳಗೆ ಅಳಿಯದೇ ಕೂಡುವ ಯೋಗವರಿದು ಕಾಣಾ ಗುಹೇಶ್ವರಾ?”

ಇಲ್ಲಿ ಅಳಿದುಕೂಡುವ ಯೋಗ ಮತ್ತು ಉಳಿದು ಕೊಡುವ ಯೋಗದ ಬಗ್ಗೆ ಸಂಕ್ಷಿಪ್ತವಾಗಿ ವಿವೇಚಿಸೋಣ. ಪತಂಜಲಿಯ ರಾಜಯೋಗವೇ ಅಳಿದು ಕೊಡುವ ಯೋಗ. ಅಲ್ಲಿದು ಕೂಡುವ ಯೋಗದಲ್ಲಿ ಬ್ರಹ್ಮಸಾಕ್ಷಾತ್‌ಕಾರವಾದ ನಂತರ ಜೀವದ ಅಸ್ತಿತ್ವವೇ ಉಳಿಯಲಾರದು. ಅರ್ಥಾತ್ ಮುಕ್ತಾವಸ್ಥೆಯಲ್ಲಿ ಜೀವನಿಗೆ ತನ್ನ ಸ್ವರೂಪದ ಬೋಧವು ಆಗಲಾರದು. ತನ್ನ ಸ್ವರೂಪದ ಬೋಧವಿಲ್ಲದ ಪರಬ್ರಹ್ಮ ಸಾಕ್ಷಾತ್ಕಾಕಾರ ಸಾಧನವಾದ ರಾಜಯೋಗವು- ಸರ್ವಶ್ರೇಷ್ಠಯೋಗವು ಆಗಬಹುದೆ ! ಕಾರಣ ಅಲ್ಲಮಪ್ರಭುದೇವರು ಈ ಯೋಗವನ್ನು ಖಂಡಿಸಿದ್ದಾರೆ.

ಉಳಿದು ಕೂಡುವ ಯೋಗವೇ ಶಿವಯೋಗ, ಶಿವಯೋಗದಲ್ಲಿ ಅಂಗನಿಗೆ ತನ್ನ ಸ್ವರೂಪದ ಬೋಧವು ಇರುತ್ತದೆ. ಕಾರಣ ಪ್ರಭುದೇವರು ಇದಕ್ಕೆ ಉಳಿದುಕೂಡುವ ಯೋಗವೆಂದು ಕರೆದಿದ್ದಾರೆ. ಶಿವಯೋಗದಲ್ಲಿ ಸಾಮರಸ್ಯಕ್ಕೆ ಅತಿಮಹತ್ವವಿದೆ. ಸಮಾನ ಅಸ್ತಿತ್ವಗಳಾದ ಎರಡರ (ಅಂಗ ಲಿಂಗ) ಹೊಂದಾಣಿಕೆಯೇ ಸಾಮರಸ್ಯ, ಸಾಮರಸ್ಯವು ಭಾವಗತ ಸಾಮರಸ್ಯ, ಜ್ಞಾನಗಳ ಸಾಮರಸ್ಯ, ಸ್ವರೂಪಗತ ಸಾಮರಸ್ಯ ವೆಂದು ಮೂರು ಪ್ರಕಾರವಾಗಿವೆ. ಹಲವಾರು ತಾಂತ್ರಿಕಯೋಗಗಳು ಜ್ಞಾನಗತ ಮತ್ತು ಭಾವಗತ ಸಾಮರಸ್ಯದಲ್ಲಿ ಇತಿಶ್ರೀಯನ್ನು ಹೊಂದಿದರೆ ಕೆಲವು ಶೈವಯೋಗ ಗಳು ಸ್ವರೂಪಗತ ಸಾಮರಸ್ಯದಲ್ಲಿ ಮುಕ್ತಾಯಗೊಳ್ಳುತ್ತವೆ. ಈ ಎಲ್ಲ ಯೋಗಗಳು ಅಪೂರ್ಣಗಳಾಗಿವೆ. ಉಪರೋಕ್ತ ಮೂರು ಪ್ರಕಾರದ ಸಾಮರಸ್ಯಗಳು ಶಿವಯೋಗ ದಲ್ಲಿ ಪ್ರಾಪ್ತವಾಗುತ್ತವೆ. ಈ ತ್ರಿವೇಣಿ ಸಂಗಮವು ಶಿವಯೋಗವನ್ನು ಬಿಟ್ಟು ಇನ್ನುಳಿದ ಯಾವ ಯೋಗದಲ್ಲಿಯೂ ಆಗಲು ಸಾಧ್ಯವಿಲ್ಲ, ಜೀವಸ್ವರೂಪದ ಕೇಂದ್ರಬಿಂದುವಿನಿಂದ ಸತ್ಯಾನ್ವೇಷಣ ಪ್ರಾರಂಭವಾಗಿ ಮನಃ ಅದೇ ಬಿಂದುವಿನಲ್ಲಿ ಸಮ ಸ್ವರೂಪ ವನ್ನು ಕಾಣುವದೇ ಪೂರ್ಣತತ್ವವೆನಿಸಿಕೊಳ್ಳುತ್ತದೆ, ಅಂಗಭವದಿಂದ ಲಿಂಗದ ಕಲೆಗಳನ್ನು ಭಕ್ತಗಳನ್ನು ಅಳವಡಿಸಿಕೊಂಡು ಅಂಗಗತಸ್ವರೂಪವನ್ನೇ ಲಿಂಗಗಳಸ್ವರೂಪವೆಂದು ಭಾವಿಸುವುದೇ ಪೂರ್ಣತ್ವ, ಇದುವೇ ಶಿವಯೋಗ ಇದುವೇ ಪರಮಯೋಗ.

ಶಿವಯೋಗದ ಪ್ರಾಚೀನತೆಯ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆಗಮ ವಾಙ್ಮಯದಲ್ಲಿ ಶಿವಯೋಗ ಶಬ್ದದ ಪ್ರಯೋಗವು ಕಂಡುಬರುತ್ತದೆ. ಪ್ರಾಚೀನ ಶೈವಾಚಾರ್ಯರು ತಮ್ಮನ್ನು ಶಿವಯೋಗಿಗಳೆಂದು ಕರೆದುಕೊಂಡಿದ್ದಾರೆ. ಸೋಮಾ ನಂದನು ನಿರಂತರ ಶಿವಸಮಾವೇಶ ಭಾವದಲ್ಲಿ ಇರುವೆನೆಂದು ಹೇಳಿಕೊಂಡಿರುತ್ತಾನೆ. ಹಾಗೆ ಶಿವಯೋಗವು ಬಹುಪ್ರಾಚೀನದವರೆಗೆ ಹೋಗುತ್ತದೆ. ಆದರೆ ಮೊಟ್ಟಮೊದಲು ಅದರ ನಿಶ್ಚಿತ ರೂಪವನ್ನು ಸಿದ್ಧಾಂತಶಿಖಾಮಣಿ ಮತ್ತು ಶಿವಯೋಗ ಪ್ರದೀಪಿಕೆಯಲ್ಲಿ ಕಾಣುತ್ತೇವೆ.

ಯೋಗ ಪರಂಪರೆಯ ಬಗ್ಗೆ ಸಂಕ್ಷಿಪ್ತವಾಗಿ ನಿರೂಪಿಸಲಾಯಿತು. ಇಂದು ಶಾಂತಮಯ ಜೀವನಕ್ಕಾಗಿ ಯೋಗವು ಅತ್ಯಾವಶ್ಯಕವಾಗಿವೆ. ಕೇವಲ ಭೌತಿಕ ಉನ್ನತಿಯಿಂದ ಜೀವನದಲ್ಲಿ ಪರಮಶಾಂತಿಯು ಸಿಗಲಾರದು. ಕಾರಣ ಯೋಗ ಕಲಿಸುವ ಶಾಲೆಗಳನ್ನು ನಮ್ಮ ಸಮಾಜದ ಧರ್ಮಗುರುಗಳು ಸ್ಥಾಪಿಸಬೇಕಾಗಿ ಸವಿನಯಪ್ರಾರ್ಥನೆ:

ಶ್ರೀ ಮಲ್ಲಿಕಾರ್ಜುನದೇವರು, ಬಿ. ಎ., ಆನಂದಪುರಂ,

( ಪೂಜ್ಯ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು

ಬೆಕ್ಕಿನ ಕಲ್ಮಠ ಶಿವಮೊಗ್ಗ ಹುಬ್ಬಳ್ಳಿಯ ವ್ಯಾಸಂಗ ಸಮಯದಲ್ಲಿ ಬರೆದಿದ್ದು)

ʼʼಮರ್ತ್ಯಲೋಕದ ಮಹಾಮನೆ ಹಾಳಾಗಬಾರದೆಂದು ಕರ್ತನಟ್ಟಿದನಯ್ಯ ಒಬ್ಬ ಶಿವಶರಣನ, ಆ ಶರಣ ಬಂದು ಶಿವಪುರವ ಕೈಲಾಸ ಮಾಡಿ ರುದ್ರಗಣ, ಪ್ರಮಥಗಣಂಗರೆಲ್ಲರ ಹಿಡಿತಂದು, ಅಸಂಖ್ಯಾತರೆಂದು ಹೆಸರಿಟ್ಟು ಕರೆದು, ಭಕ್ತಿಯ ಕುಳಸ್ಥಳವ ಶೈತದೃಷ್ಟ ಪವಾಡದಿಂದ ಮೆರೆದು ತೋರಿ, ಜಗವರಿಯ ಶಿವಾಚಾರದ ಧ್ವಜವನೆತ್ತಿಸಿ, ಮರ್ತ್ಯಲೋಕ ಶಿವಲೋಕವೆರಡಕ್ಕೆ

ನಿಚ್ಚಣಿಕೆಯಾದನು……. ನೋಡಾ ಸಿದ್ದರಾಮಯ್ಯ

ಇದು ಪ್ರಭುದೇವರ ವಚನ; ಬಸವಣ್ಣನವರನ್ನು ಕುರಿತದ್ದು. ಇಂದಿಗೆ ಎಂಟು ನೂರು ವರ್ಷಗಳಾಚೆ : ಇಂದು ಪ್ರಗತಿ, ಕ್ರಾಂತಿ ಅನ್ನುವುದೆಲ್ಲ ಬಸವಣ್ಣನವರ ನೇತೃತ್ವದಲ್ಲಿ ನಡೆಯಿತು; ಅದೊಂದು ವಿಸ್ಮಯಕಾರಕ ಕ್ರಾಂತಿ, ಕನ್ನಡ ನಾಡಿನಲ್ಲಿ,  ಕನ್ನಡಿಗರಿಂದ, ಕನ್ನಡದ ಮೂಲಕ, ಬರಿ ಹನ್ನೆರಡು ವರ್ಷಗಳಲ್ಲಿ ಈ ಕ್ರಾಂತಿ : ಧರ್ಮ, ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರಗಳಲ್ಲಿ ಹೊಸ ಜೀವ ತುಂಬಿತು; ಈ ನಾಡು ಬೆಳಗಿನ ಭೂಮಿಯಾಯಿತು. ಚಂದನದ ಸನ್ನಿಧಿಯಿಂದ ಬೇವು- ಬೆಬ್ಬುಲಿ ಮರಗಳು ಪರಿಮಳಿತವಾಗುವಂತೆ : ಶರಣರ ಸಂಗದಿಂದ ಪಾಮರರು ಪೂತಾತ್ಮರಾದರು, ಕೀಳು ಕಸಬು ಕಾಯಕವಾಯಿತು. ಜನವಾಣಿ ದೇವವಾಣಿಯಾಯಿತು, ಹಾಳು ಹೆಣ್ಣು ಕಪಿಲಸಿದ್ಧ ಮಲ್ಲಿಕಾರ್ಜುನವಾಯಿತು, ಕತ್ತಲೆ ಸತ್ತು ಬೆಳಕು ಬೀದಿವರಿಯಿತು. ಇದರಿಂದ ಪ್ರಪಂಚವೇ ಬೆರಗಾಗಿ, ಕನ್ನಡ ನಾಡನ್ನು ನೋಡುವಂತಾಯಿತು.

ಇಂತಹದೇ ಒಂದು ಪ್ರಸಂಗ : ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ, ಇಪ್ಪತ್ತನೇ ಶತಮಾನದ ಪೂರ್ವಾರ್ಧದ ಸಂಕ್ರಮಣ ಕಾಲದಲ್ಲಿ ನಡೆಯಿತು. ೧೨ನೇ ಶತಮಾನದಲ್ಲಿ ಮಹಾತ್ಮ ಬಸವಣ್ಣ ಅಧ್ವರ್ಯುವಾದರೆ, ಈ ಕಾಲದಲ್ಲಿ ಒಬ್ಬ ವೀರ ಸನ್ಯಾಸಿಯ ನೇತೃತ್ವದಲ್ಲಿ ನಾಡು ಹೊಸ ಬೆಳಗನ್ನು ಕಂಡಿತು. ಆ ಸನ್ಯಾಸಿಯ ಪ್ರೇರಣೆಯಿಂದ ಸತ್ತಂತವರು ಬಡಿದೆಚ್ಚತ್ತರು, ಕಚ್ಚಾಡುವವರು ಒಲಿದು ಒಂದಾದರು, ಒಟ್ಟಿಗೆ ಬಾಳುವ ಹದನನು ಕಲಿತರು. ಆ ಮಹಾನುಭಾವ ಭಕ್ತಿಯಲ್ಲಿ ಬಸವಣ್ಣನಾಗಿ, ಜ್ಞಾನದಲ್ಲಿ ಚನ್ನಬಸವಣ್ಣನಾಗಿ, ವೈರಾಗ್ಯದಲ್ಲಿ ಪ್ರಭುದೇವನಾಗಿ, ಉಳಿದ ಕಾಯಕಂಗಳಲ್ಲಿ ಶಿವಶರಣರಂಶನಾಗಿ ಕಂಗೊಳಿಸಿದ ಆ ಕಾರುಣ್ಯಮೂರ್ತಿಯೇ ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳು.

* ಭೂತಿ, ವಿಭೂತಿಯಾಯಿತು ʼʼ :

ಧಾರವಾಡ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಜೋಯಿಸರಹರಳಳ್ಳಿಯಲ್ಲಿ, ಬಡ ಕುಟುಂಬದಲ್ಲಿ ಬಸವಯ್ಯ- ನೀಲಮ್ಮ ದಂಪತಿಗಳ ಚಿದ್ಗರ್ಭದಿಂದ, ಕ್ರಿ. ಶ. ೧೮೬೭ ರಲ್ಲಿ ಶ್ರೀಗಳು ಜನಿಸಿದರು. ಬಡತನದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಹಾಲಯ್ಯ : ʼʼಜಗತ್ತೇ ನನ್ನ ಮನೆ, ಮಾನವ ಕುಲವೇ ನನ್ನ ಕುಟುಂಬʼʼ ಎಂಬ ಉದಾತ್ತ ತತ್ತ್ವವೇ ಮೂರ್ತಿವೆತ್ತಂತಿದ್ದ ಈ ಮಹಾನುಭಾವ, ಒಂದು ಕುಟುಂಬದ ಉದ್ಧಾರಕ್ಕೆ ಹೇಗೆ ನಿಂತಾನು. ಮನೆಯನ್ನು ತೊರೆದು, ಹುಬ್ಬಳ್ಳಿಗೆ ಬಂದು, ಆರೂಢಮಠದಲ್ಲಿದ್ದು, ಶಾಸ್ತ್ರಾಭ್ಯಾಸ ಮಾಡಿ, ಮುಂದೆ ಎಳಂದೂರು ಬಸವಲಿಂಗ ಸ್ವಾಮಿಗಳ ಶಿಷ್ಯತ್ವವನ್ನು ಪರಿಗ್ರಹಿಸಿ, ವಿದ್ಯಾ ವಿನಯಸಂಪನ್ನನಾಗಿ, ಯೋಗಾಸನ ಬಲ್ಲಿದನಾಗಿ ನಂತರದ, ದೀರ್ಘಕಾಲದ ತಪಸ್ಸಿನ ಪ್ರಭಾವ ಎಲ್ಲೆಡೆ ಚಲ್ಲವರಿಯಿತು. ಹಾನಗಲ್ಲ ವಿರಕ್ತ ಮಠ ಇವರ ಬರವನ್ನು ಹಾರೈಸಿತ್ತು. ಹಿರಿಯರ ಕೋರಿಕೆಯ ಮೇರೆಗೆ ಅಧಿಕಾರವನ್ನು ಹೊಂದಿ, ಹಾಲಯ್ಯ : ಹಾನಗಲ್ಲ ಕುಮಾರ ಸ್ವಾಮಿಗಳಾದರು. ಭೂತಿ, ವಿಭೂತಿಯಾಯಿತು.

 ಹಾನಗಲ್ಲ ಕುಮಾರ ಶಿವಯೋಗಿಗಳು : ಸಮಾಜಕ್ಕೊಂದು ಪರಿವರ್ತನೆಯ ಕಾಲ. ಅವರ ವಿದ್ಯುತ್ ಸ್ಪರ್ಷದಿಂದ ಸತ್ತಂತಿರುವವರು ಮರು ಹುಟ್ಟು ಪಡೆದರು, ಮೂಕರಾದವರು ವಾಗ್ಮಿಗಳಾದರು, ಪಾಪಿಗಳು ಪವಿತ್ರರಾದರು, ಕುರುಡರಿಗೆ ಕಣ್ಣು ಬಂದಿತು, ದುರ್ಬಲರು ಭೀಮ ಬಲರಾದರು. ಅವರದು ಅದ್ಭುತ ಶಕ್ತಿ; ಅದು ನಾಡಿಗೆ ನಾಡನ್ನೇ ಹಿಡಿದೆತ್ತಿತು. ಅವರು ಗೈದ ಮಹತ್ತರ ಕಾರ್ಯಗಳಲ್ಲಿ : ಅಖಿಲ ಭಾರತ ವೀರಶೈವ ಮಹಾ ಸಭೆ ಹಾಗೂ ಶಿವಯೋಗ ಮಂದಿರಗಳ ಸ್ಥಾಪನೆ ಪ್ರಮುಖವಾದವುಗಳು. ಇವೆರಡೂ ವೀರಶೈವ ಸಮಾಜ ಪುರುಷನ ಶ್ವಾಸಕೋಶಗಳು.

*ʼʼ ವೀರಶೈವ ಮಹಾ ಸಭೆ ʼʼ:

ಪಾಶ್ಚಾತ್ಯ ಶಿಕ್ಷಣದ ಯಾವ ಗಾಳಿಯ ಸೋ೦ಕಿಲ್ಲದ ಶ್ರೀಗಳು, ಯಾವ ಸಮಾಜದಲ್ಲಿ ಸಾರ್ವಜನಿಕ ಸಮ್ಮೇಲನ ನಡೆಯದಿದ್ದ ಕಾಲದಲ್ಲಿ, ೬೫ ವರ್ಷಗಳ ಹಿಂದೆ ಜನಾಂಗವು ಮಲಗಿದ್ದ ಕಾಲದಲ್ಲಿ, ಸಮಾಜಕ್ಕೊಂದು ವ್ಯವಸ್ಥಿತ ಸಂಘಟಿತ ರೂಪ ಕೊಡಲು, ನವ ಚೈತನ್ಯ ತುಂಬಲು ಏಕಮೇವ ಸಾಧನವಾದ, ಅಖಿಲ ಭಾರತ ವೀರಶೈವ ಮಹಾ ಸಭೆಯನ್ನು ಸಮಾಜದ  ಪ್ರಮುಖರನ್ನೊಳಗೊಂಡು ೧೯೦೪ರಲ್ಲಿ ಧಾರವಾಡದಲ್ಲಿ ಸ್ಥಾಪಿಸಿ, ಪ್ರಥಮ ಅಧಿವೇಶನ ನಡೆಸಿದುದು ನಿಜಕ್ಕೂ ಅಚ್ಚರಿಯನ್ನುಂಟುಮಾಡುವದು ಮತ್ತು ಶ್ರೀಗಳಲ್ಲಿದ್ದ ಅದ್ವಿತೀಯವಾದ ಮುಂದಾ ಲೋಚನೆಯ ದ್ಯೋತಕವಾದುದು. ಈ ಮಹಾ ಸಭೆಯಿಂದ ಆದ ಪ್ರಯೋಜನಗಳು ಅನೇಕ. ಲಿಂಗಾಯತ ವಿದ್ಯಾವರ್ಧಕ ಪಂಡ ಏರ್ಪಟ್ಟು, ವೀರಶೈವರಿಗೆ ಇಂಗ್ಲೀಷ್  ವಿದ್ಯಾಭ್ಯಾಸಕ್ಕೆ ಸಹಾಯವಾಯಿತು; ವೀರಶೈವರ ಅಭಿವೃದ್ಧಿಗೆ ನಿಧಿ ಏರ್ಪಟ್ಟಿತ್ತು. ಒಟ್ಟಿನಲ್ಲಿ ಸಮಾಜದ ಸರ್ವತೋಮುಖ ಜಾಗ್ರತಿಗೆ ಸಹಕಾರಿಯಾಯಿತು.

“ʼ ಶಿವಯೋಗಮಂದಿರ ʼʼ :

ಸಮಾಜದ ಪ್ರಗತಿಯನ್ನು ಬಯಸುವ ಕುಮಾರ ಶಿವಯೋಗಿಗಳು, ವೀರಶೈವ ಆಚಾರ ವಿಚಾರಗಳು ಶುದ್ಧವಾಗಿ ಇರಬೇಕಾದರೆ, ಸಮಾಜದ ಉದ್ಧಾರಕ್ಕಾಗಿಯೇ ತಮ್ಮನ್ನು ಮುಡುಪಾಗಿಡಬಲ್ಲ, ಶಿವಯೋಗಿ ಸಿದ್ಧರ ಸಮೂಹವೊಂದು ಸಿದ್ಧವಾಗುವ ವರೆಗೆ, ಸಮಾಜದ ಉದ್ಧಾರ ಸಾಧ್ಯವಿಲ್ಲವೆಂದು ಮನಗಂಡಿದ್ದರು. ಗುರು. ಜಂಗಮರು ; ತಜ್ಞರೂ, ಸುಶುಕ್ಷಿತರು, ನಡೆ ನುಡಿ ಗಳಲ್ಲಿ ಶುದ್ಧರೂ, ಶಿವಯೋಗದಲ್ಲಿ ನಿಷ್ಠರೂ ಆಗಿರಬೇಕೆಂದೂ, ಪ್ರತಿಭಾಶಾಲಿ ಭಕ್ತರನ್ನು, ಶಿವಾನು ಭವಿಗಳನ್ನು ತಯಾರು ಮಾಡುವ ಘನವಾದ ಉದ್ದೇಶ ಈಡೇರಬೇಕಾದರೆ, ಒಂದು ಯೋಗ ಮಂದಿರ ಸ್ಥಾಪಿಸಬೇಕೆಂದು ಸಂಕಲ್ಪಿಸಿ, ಒ೦ಟಮುರಿ ದೇಸಾಯರ ಅಧ್ಯಕ್ಷತೆಯಲ್ಲಿ ನಡೆದ ನಾಲ್ಕನೆ ಅಧಿವೇಶನದಲ್ಲಿ ನಿಶ್ಚಯಿಸಲಾಯಿತು. ಇಲಕಲ್ಲ ವಿಜಯ ಮಹಾಂತಸ್ವಾಮಿಗಳು ತೋರಿದ ಕೊಟ್ಟೂರು ಬಸವೇಶ್ವರ ತಪೋವನ, ಬನಶಂಕರಿ-ಮಹಾಕೂಟ ಇವುಗಳ ಮಧ್ಯದಲ್ಲಿ, ಮಲಾಪಹಾರಿ ದಂಡೆಯ ಮೇಲೆ ಕ್ರಿ. ಶ. ೧೯೦೯ ರಲ್ಲಿ ಶಿವಯೋಗ ಮಂದಿರ ಸ್ಥಾಪನೆಯಾಯಿತು.

 ಇಂದಿನಿಂದ, ಕುಮಾರ ಶಿವಯೋಗಿಗಳ ಕಾರ್ಯಕ್ಷೇತ್ರ ಸಮಾಜವಾದರೆ : ಕೇಂದ್ರ ಬಿಂದು ಶಿವಯೋಗಮಂದಿರವಾಯಿತು. ವಟುಗಳು ಬಂದರು, ಯೋಗಪಟುಗಳಾಗತೊಡಗಿದರು; ಜನತೆಯನ್ನು ಕತ್ತಲೆಯಿಂದ ಬೆಳಕಿನೆಡೆಗೆ ಒಯ್ಯುವ ಕೈದೀವಿಗೆಯಾದರು. ಕುಮಾರ ಶಿವಯೋಗಿ ಗಳು ಯಾವ ಪೀಠಕ್ಕೂ ಜಗದ್ಗುರುಗಳಾಗಲಿಲ್ಲ; ಆದರೆ, ಜಗದ್ಗುರುಗಳಂಥವರನ್ನು ತಯಾರು ಮಾಡುವ ಸಂಸ್ಥೆ ಕಟ್ಟಿದರು. ಧರ್ಮ ಪ್ರಸಾರಕ್ಕೆ ಯೋಗ್ಯ ಸಾಧನ : ಕೀರ್ತನ, ಪುರಾಣ. ಇಂತಹ ಕಲೆಯನ್ನು  ಪುನರುಜೀವನಗೊಳಿಸುವದರೊಂದಿಗೆ, ಅನೇಕ ಅಂಗಹೀನ ಬಡ ಮಕ್ಕಳಿಗೆ ಕಲ್ಯಾಣವಾಗುವದೆಂದು ತಿಳಿದರು. ಶಾಸ್ತ್ರಕಾರರು, ಕವಿಗಳು, ಗವಾಯಿಗಳು, ವೈದ್ಯರೂ, ಸಿದ್ಧರೂ, ಭಕ್ತರೂ, ಮುಕ್ತರೂ ಸಾಲು ಸಾಲಾಗಿ ಶಿವಯೋಗ ಮಂದಿರವೆಂಬ ಗರಡೀ ಮನೆಯಿಂದ ಹೊರಬಂದರು. ಮಕ್ಕಳಿಗೆ ಕಲಿಸುವ ಶಿಕ್ಷಕರಿಗೆ ಇಲ್ಲಿ ಶಿಕ್ಷಣ ಕೊಡಲಾಗುತ್ತಿದೆ. ಗ್ರಂಥ ಸಂಗ್ರಹ, ಹುಳಹತ್ತಿ ಹಾಳಾಗುತ್ತಿದ್ದ ತಾಡವೋಲೆಗಳನ್ನು ಸಂಗ್ರಹಿಸಿ ಸಂಶೋಧಿಸಿದರು. ಶಿವಯೋಗಮಂದಿರ ಶಿವ ಜೀವೈಕ್ಯ ವಿದ್ಯೆಯ ಕೇಂದ್ರವಾಯಿತು. ಭಸ್ಮಲಿಂಗಗಳ ತಯಾರು ಮಾಡಿದರು. ಕೃಷಿ ಸಂವರ್ಧನ, ಪಶು ಸಂಗೋಪನ, ಗ್ರಾಮೋದ್ಯೋಗಗಳ ಪುನರುತ್ಥಾನ, ಖಾದಿ ಪ್ರೋತ್ಸಾಹ, ಒಂದೇ ಎರಡೇ, ಹೀಗೆ ರಾಷ್ಟ್ರ ನಿರ್ಮಾಣಕಾರ ಭರದಿಂದ ಸಾಗಿತು. ಸಂಸ್ಥೆಯಿಂದ ಪತ್ರಿಕೆಗಳು ಪ್ರಕಟವಾದವು. ವ್ಯಾಪಾರ, ಉದ್ದಿಮೆ, ಎಲ್ಲ ರಂಗದಲ್ಲಿ ಕೈಯಾಡಿಸಿದ ಮಹಾಗಾರುಡಿಗರಾದ, ಕುಮಾರ ಶಿವಯೋಗಿಗಳಿಂದ ಒಟ್ಟಿನಲ್ಲಿ ಹೊಸ ಹುಟ್ಟೋಂದು ತಲೆದೋರಿತು.

ಲಿಂಗವನ್ನಿ ಲಿಂಗೈಕ್ಯವೆನ್ನಿʼʼ:

ಕುಮಾರ ಶಿವಯೋಗಿಗಳು ಏನು ಮಾಡಿದ್ದಾರೆ ಏನ್ನ ಬೇಕಿಲ್ಲ; ಏನು ಮಾಡಿಲ್ಲ ಎಂದು ಕೇಳಬೇಕು. ನಡೆಗಲಿಸಿದ, ನುಡಿಗಲಿಸಿದ, ಉಡಗಲಿಸಿದ, ಉಣಗಲಿಸಿದ ಏನೆಲ್ಲವನ್ನೂ ಅರುಹಿ, ಇಲ್ಲಿ ಸಲ್ಲಿ, ಎಲ್ಲೆಲ್ಲಿಯೂ ಸಲ್ಲುವ ಬಲ್ಲಿದರನ್ನಾಗಿಸಿದ ಜನತೆಯನ್ನು, ಅವರು ಪವಾಡಗಳನ್ನು ಮಾಡಲಿಲ್ಲ; ಅವರ ಜೀವನವೇ ಒಂದು ದೊಡ್ಡ ಪವಾಡ. ಅವರ ಜೀವನವೇ ತೆರೆದಿಟ್ಟ ಪುಸ್ತಕ.

 ಸಮಗ್ರ ಅರವತ್ತೂರು ವರ್ಷದ ತಮ್ಮ ಜೀವಿತ ಕಾಲದಲ್ಲಿ : ನಾಡು, ನುಡಿ, ಧರ್ಮ, ಸಮಾಜ ಇವುಗಳ ಚಿಂತನೆಯಲ್ಲಿ ಸ್ವಸ್ವಾಸ್ಥ್ಯವನ್ನು ಗಮನಿಸದೆ, ಅವಿಶ್ರಾಂತವಾಗಿ ದುಡಿದು, ಮೈ ಮುಪ್ಪಾಗಿದ್ದರೂ ಮನ ಮುಪ್ಪಾಗದ ತೇಜಸ್ವಿ ಶಿವಯೋಗಿಗಳು, ಕಾಯಿಲೆಯಿಂದ ಹಾಸಿಗೆ ಹಿಡಿದಾಗಲೂ, ಲೋಕದ ಲೋಗರ ಕಲ್ಯಾಣದ ಬಗ್ಗೆ ಚಿಂತಿಸುತ್ತಿದ್ದರು. ಆರೋಗ್ಯದ ಬಗ್ಗೆ  ವಿಚಾರಿಸಿದಾಗ ನೊಂದು : ʼʼ ನನ್ನ ಆರೋಗ್ಯ ಏನು ಮಾಡ್ತಿರಿ, ಸಮಾಜದ ಬಗ್ಗೆ ಯೋಚಿಸಿ ಕಾರ್ಯಪ್ರವೃತ್ತರಾಗಿರಿ; ಎಚ್ಚರಾಗಿ ಜಾಗ್ರತೆ ಗುರಿಯನ್ನು ಸಾಧಿಸಿರಿ ʼʼಎನ್ನುತ್ತಿದ್ದರು. ಕೊನೆಯಲ್ಲೂ ಈ ಸಮಾಜ, ಸಮಾಜ ” ಎಂದು ಕನವರಿಸುತ್ತಿದ್ದುದಲ್ಲದೆ, ಅವಶ್ಯ ಬಿದ್ದರೆ ಮತ್ತೊಮ್ಮೆ ಜನ್ಮವೆತ್ತುವೆನೆಂದು ನುಡಿದ ಆ ಜ್ಯೋತಿ, ಮಹಾ ಜ್ಯೋತಿಯಲ್ಲಿ ಒಡವೆರೆದು ಒಂದಾಗಿ, ನಾಡ ನಂದಾದೀಪವಾಗಿ ಎಲ್ಲರ ಹೃನ್ಮಂದಿರದಲ್ಲಿ ಬೆಳಗುತ್ತಿದೆ.

ಕವಿರತ್ನ ದ್ಯಾಂಪುರ ಚನ್ನಕವಿಗಳು

ಶಾರ್ದೂಲ ವಿಕ್ರೀಡಿತ :

ಶ್ರೀಮನ್ನಿತ್ಯ ನಿರಂಜನ ಪ್ರಭು ಕುಲಾಂಭೋರಾಶಿ ರಾಕಾಸುಧಾ

ಧಾಮಂ ಧರ್ಮಸುಧಾರಕವ್ರಜಲಲಾಮಂ ದಿವ್ಯ ಶೀಲಾನ್ವಿತಂ

ಕಾಮಕ್ಲೇಶ ವಿಭಂಗನೂರ್ಜಿತ ಕೃಪಾಪಾಂಗಂ ಪ್ರಬೋಧಾಕರಂ

ಪ್ರೇಮಂದಾಳ್ಧೆನಗೀಗೆ ಭಕ್ತಿ ಪದಮಂ ನಿಚ್ಚಂ ಕುಮಾರೇಶ್ವರಂ    ||೧||

ಚಂಪಕಮಾಲಾ :

ಅನುಪಮ ಜಂಗಮಾಶ್ರಮಕೆ ಸಲ್ಲುವ ಲಾಂಛನವಾ ಪವಿತ್ರ ಲಾಂ

ಛನಕೊರೆಯಪ್ಪ ವರ್ತನಮದಕ್ಕೆಣೆಯಾಗುವ ಚಿತ್ತ ವೃತ್ತಿಯಾ

ಮನಸಿಗೆ ತಕ್ಕ ದಿವ್ಯ ಶಿವಲಿಂಗದ ಪೂಜೆಯದಕ್ಕೆ ಸಲ್ವ ಚಿ –

ದ್ಘನತರ ಶಾಂತಿ ನಿನ್ನೊಳೊಡಮೂಡಿದುದೈ ಜಗದೇಕನಾಯಕಾ     ||೨||

ಮತ್ತೇಭವಿಕ್ರೀಡಿತ :

ಘನದುಃಖಾನಲನಿಂದ ಬೇವ ಜನರಂ ಕಂಡಾತ್ಮದೊಳ್ಕಂದಿ ಸು-

ಮ್ಮನೆ ಗೋಳಾಡುವದೇತಕೆ ನೀವು ಶಿವಲಿಂಗಾರಾಧನಂ ಗೈಯಿರೈ

ಮನಮಂ ನೋಯಿಪ  ಕಷ್ಟಗಳ್ತೊಲಗಿ ತಾನೇ ಸೌಖ್ಯವೈತರ್ಪುದೆಂ –

ದನುವಿಂ ಬೋಧಿಸಿ ಕಾಯ್ದೆ ಕಕ್ಕುಲತೆಯಿಂ ಶ್ರೀಮತ್ಕುಮಾರೇಶ್ವರಾ     ||೩||

ಶಿವಲಿಂಗಾರ್ಚನೆಗೈದೆ ಮಾಣದೆ ಚಿದಾನಂದಾರ್ಥಮಿ ಪೂಜೆಯೇ

ಶಿವಯೋಗೋತ್ಸವಮೆಂದು ನಂಬಿ ಶಿವಭಾವಂ ಬೆತ್ತು ನೀನಾವಗಂ

ಕವಿದೀ ಕ್ಷುತ್ತೃಷೆಯಂ ನಿವಾರಿಪ ನಿಮಿತ್ತಂ ಪೂಜೆಯಂ ಮಾಡದೆ

ಶಿವಯೋಗೀಶ್ವರನೆಂದು ಕೀರ್ತಿವಡೆದೈ ಶ್ರೀಮತ್ಕುಮಾರೇಶ್ವರಾ    ||೪||

ಶಿವಲಿಂಗಾರ್ಚನೆ ರೋಗಕೌಷಧಮಿದೇ ಚಿಂತಾಲತಾಛೇದಕಂ

ಶಿವಲಿಂಗಾರ್ಚನೆ ಸರ್ವಸಿದ್ಧಿದಮಿದೇ ಸಾಯುಜ್ಯಭಾಗ್ಯಾಯನಂ

ಶಿವಲಿಂಗಾರ್ಚನೆ ಸತ್ಕೃತಾರ್ಥತೆಯಿದೇ ಸಂತೋಷ ಜನ್ಮಾಲಯಂ

ಶಿವಲಿಂಗಾರ್ಚನೆ ಗೈವುದಾಗಳೆನುತಂ ಪೇಳ್ದೈ ಕುಮಾರೇಶ್ವರಾ   ||೫||

 ನಿನ್ನಂತೆಮ್ಮಯ ಧರ್ಮದುನ್ನತಿಗೆ ಯತ್ನ೦ಗೈದರಾರ್ನ್ಯಾಯದಿಂ

ನಿನ್ನಂತೆಮ್ಮಭಿಮಾನದಗ್ಗಳಿಕೆಯಿಂದಾತ್ಮಾರ್ಪಣಂ ಗೈದರಾರ್

ನಿನ್ನಂ ಪೋಲ್ವ ಶಿವಾನುಭಾವಿಗಳದಾರ್ನೀನೇ ವಿರಕ್ತೋತ್ತಮಂ

ನಿನ್ನಿಂದಾದುದು ಮಂಗಲೋದಯಮೆಲೈ ಶ್ರೀಮತ್ಕುಮಾರೇಶ್ವರಾ     ||೬||

ಅನುರಾಗಂಮಿಗೆ ಚಿತ್ಕಲಾತ್ಮಕ ಮಹಾಲಿಂಗಾನುಸಂಧಾನದಿಂ

ದನಿಶಂ ಭಾಸುರಲಿಂಗವಾಗಿ ಪೊರೆದೈ ಸದ್ಧರ್ಮಮಂ ಯತ್ನದಿಂ

ನಿನಗಿನ್ನೆತ್ತಣ ಹುಟ್ಟು ಸಾವು ಮಲಮಾಯಾಮುಖ್ಯಪಾಶವ್ರಜಂ

ಘನಯೋಗಾಭ್ಯುದಯ ಪ್ರಭಾವವಿದು ಕೇಳ್ ಶ್ರೀಮತ್ಕುಮಾರೇಶ್ವರಾ    ||೭||

ಬೇಡುವದಲ್ಲ ಮಂದಿಯನು ಧರ್ಮಸುಧಾರಣೆಗಾಗಿ ದೇವರಂ

ಬೇಡುವದೊಳ್ಳಿತಾವನಿತು ಶಕ್ತಿ ಸಮನ್ವಿತರಲ್ಲ ಮಾಳ್ಪುದೇಂ

ನೀಡುವ ಜಂಗಮರ್ನರರ ಬೇಡುವದೆತ್ತಣ ಸುದ್ದಿಯೆಂದು ನೀ-

ನಾಡುತಲಿರ್ದೆ ಮುಚ್ಚಿಕೊಳದಾತ್ಮ ನಿರೀಕ್ಷಣೆಯಿಂ ಚರಾಧಿಪ    ||೮||

ನಿನ್ನಯ ಜನ್ಮವೇ ಜಗದೊಳಿಲ್ಲದನರ್ಘ್ಯ ಪವಿತ್ರ ಜನ್ಮವೈ

ನಿನ್ನಯ ಪುಣ್ಯ ಜೀವನವೆ ಧರ್ಮಸುಧಾರಣ ಭಾಗ್ಯ ಜೀವನಂ

ನಿನ್ನಮಲಪ್ರಯತ್ನವೆ ಮಹೇಶ ಮತೋತನ್ನತಿಯುತ್ ಪ್ರಯತ್ನವೈ

ನಿನ್ನಯ ಪೇರ್ಮೆಯಂ ಪಡೆವರಾರು ಧರಾತಲದೊಳ್ಚರಾಧಿಪ        ||೯||

ಎಮ್ಮ ಸಮಾಜವೆಂದಿಗೆ ಸುಧಾರಿಪುದಾವ ಮಹಾತ್ಮನಳ್ಕರಿಂ

ದೆಮ್ಮ ಸಮಾಜದೇಳ್ಗೆಯನು ಮಾಡುವನೈ ಸಿರಿವಿದ್ಯೆಯುದ್ಯಮಂ

ಎಮ್ಮ ಸಮಾಜದೊಳ್ಬೆಳೆಯಲಾವುದುಪಾಯಮದೆಂತು ಕಾಣ್ಬುದೋ   

ಎಮ್ಮ ಸಮಾಜಸೇವೆ ಕೃತಕೃತ್ಯತೆಯೆಂದು ನೆಗಳ್ದೆ ಜಂಗಮಾ    ||೧೦||

ನೀನೆ ದಯಾಳು ನಿನ್ನ ವಚನಂ ನಿಗಮಾಗಮದರ್ಥಸಾರವೈ

ನೀನೆ ವಿರಾಗಿ ನಿನ್ನತುಲ ಶೀಲವೆ ಸತ್ಪ್ರಮಥೇಂದ್ರ ಸಮ್ಮತಂ

ನೀನೆ ಗುಣಾಬ್ಧಿ ನಿನ್ನ ಮಲವೃತ್ತಿಯೆ ಲೋಕವಿತಾನಪಾವನಂ

ನೀನೆ ವಿಚಾರಿ ನಿನ್ನ ಸರಿಯಾರು ವಿರಾಟ್ಪುರದೀಶಯೋಗಿಯೆ     ||೧೧||

ಚಂಪಕಮಾಲಾ :

ಬೆಳಿಸುವಳೂಡಿ ಮಾತೆ ಮಗನಾವಗನಾತಗೆ ಪೇಳ್ದು ಬುದ್ಧಿಯಂ

ಕಲಿಸುವನಯ್ಯನೊಲ್ದು ಮಗನೆಂಬ ಮರುಂಕದೊಳನ್ಯ ಪುತ್ರರಂ

ಬಳೆಯಿಸಿ ಬುದ್ಧಿಗೊಟ್ಟು ಶಿವಯೋಗ ಸುಧಾರಸ ಪಾನದಿಂ ಕರಂ

ಸಲಹಿದೆ ನೀನೆ ಮಾತೆ ಪಿತರೈ ವಟು ವರ್ಗಕೆ ಯೋಗಿವಲ್ಲಭ     ||೧೨||

ವಿತತ ಶಿವಾನುಭವ ಸುಖಚರ್ಚೆಯ ನಿನ್ನಯ ವೃತ್ತಿಯಾಗಿ ಸ-

ನ್ನುತ ಶಿವಲಿಂಗದರ್ಚನೆಯ ಸುವ್ರತಮಾಗಿರುತಿರ್ದುಮೊಳ್ಪಿನಿಂ

ಮತಹಿತ ಕಾರ್ಯಮಂ ಬಿಡದೆ ನೀನದರೊಳ್ನೆರೆನೋಡಿ ಮಾಡಿದೈ

ಕ್ಷಿತಿಯೊಳು ನಿನ್ನ ಜಾಣ್ಮೆಯಿದು ಚಿದ್ಘನರೂಪ ಸದಾಶಿವಪ್ರಭು     ||೧೩||

ತ್ಪಲ ಮಾಲಾ :

ಕಾಯವಿಕಾರವಿಲ್ಲ ಮನದುಲ್ಬಣವಿಲ್ಲ ಮದಾಳಿಯಿಲ್ಲವಾ

ವಾಯುಗುಣಂಗಳಿಲ್ಲ ನಿಖಿಲೇಂದ್ರಿಯ ಚೇಷ್ಟೆಗಳಿಲ್ಲವಾವಗಂ

ಮಾಯೆಯ ಕಾಟವಿಲ್ಲ ವಿಷಯಂಗಳ ಲಾಲಸೆಯಿಲ್ಲ ಜೀವನಾ-

ಪಾಯಮದಿಲ್ಲ ನಿನ್ನೊಳೆ ಮಹಾಪ್ರಭುಲಿಂಗ ಕುಮಾರಯೋಗಿಯೆ     ||೧೪||

ನಿನ್ನಯ ಮೂರ್ತಿಯನ್ನೆರಡು ಕಣ್ಣೊಳು ಕಟ್ಟಿಹುದಾರ್ಯ ಚೆಲ್ವಿನಿಂ

ನಿನ್ನಯ ತತ್ವಪೂರಿತ ಮೃದೂಕ್ತಿಗಳೆನ್ನ ವಿಚಾರಭಾವದೊಳ್

ಸನ್ನುತ ಶಾಂತಿಯಂ ಕುಡುತಲಿರ್ಪುವು ನಿನ್ನಯ ರೀತಿನೀತಿಗಳ್

ನನ್ನಿಯೊಳೆನ್ನನೆಚ್ಚರಿಪವಾತ್ಮದೆ ನಿಂದು ಕುಮಾರಯೋಗಿಯೆ    ||೧೫||

ನಿನ್ನನು ಪಾಡುವೀರಸನೆ ನಿನ್ನದು ದೇವ ಮಹಾನುಭಾವ ಕೇ-

ಳ್ನಿನ್ನನು ಜಾನಿಪೀ ಮನವೆ ನಿನ್ನದು ನೋಡು ತ್ರಿತಾಪಲೋಪಕ

ನಿನ್ನಯ ರೂಪಮಂ ತಿಳಿವ ಮನ್ಮತಿ ನಿನ್ನದು ಲಿಂಗಭಾವವೇ

ನಿನ್ನದು ನಿನ್ನದಯ್ಯ ಕರುಣಾಳು ಕುಮಾರ ಮಹಾಯತೀಶ್ವರಾ    ||೧೬||

ಕಂದ :

ಪೂಜಾರ್ಪಣಾನುಭವಮಂ

ರಾಜಿತಶಿವಭಾವ ಪೂರ್ಣಮೆನೆ ಮಾಡುತ್ತಂ

ಓಜೆಮಿಗೆ ಬಾಳ್ದಯತಿಕುಲ

ರಾಜಂ ನೀನಲ್ತೆ ಯೋಗನಿಷ್ಠ ಕುಮಾರಾ    ||೧೭||

ಚರದೇವ ನಿನ್ನ ನಾಮಂ

ವರಮಂತ್ರಂ ನಿನ್ನ ರೂಪವೀಶ್ವರರೂಪಂ

ಪುರುಷಾರ್ಥಕಾರಣಂ ನಿ-

ನ್ನುರುತರ ಕರುಣಾಕಟಾಕ್ಷದೀಧಿತಿ ಯತಿಪ    ||೧೮||

ಚಂಪಕ ಮಾಲಾ

ಘನತರಮುಕ್ತಿಗಿಂದ ಸ್ವಸಮಾಜದ ಸೇವೆಯೆ ಶ್ರೇಷ್ಠವೆಂದು ನೀ-

ನನವರತಂ ಸಮರ್ಪಿಸಿದೆ ನಿನ್ನ ಸಮಾಜಕೆ ಸರ್ವ ವಸ್ತುವಂ

ಕೊನೆಯೊಳು ನಮ್ಮ ಧರ್ಮ ಸುಸಮಾಜ ಸಮಾಜ ಸಮಾಜವೆಂದು ಬ-

ಲ್ಕನವರಿಸುತ್ತಲಿರ್ದೆ ಶಿವಧರ್ಮ ಸಮಾಜದ ನೇಹಮೆಂತುಟೊ    ||೧೯||

 ಕಂದ :

ಜಯ ಪರತರಚಿತ್ಸುಖಮಯ

ಜಯಜಯ ನೀರಂಜನಾಲಮಾನ್ವದೇವ

ಜಯ ವೀರಶೈವ ಬಾಂಧವ

ಜಯಜಯ ಲಿಂಗಾಂಗ ಸಾಮರಸ್ಯ ರಸಜ್ಞ

ಶ್ರೀ ಚೆನ್ನಕವಿ

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಪಂಚೇಂದ್ರಿಯಗಳ ಪಂಚವಿಷಯ

೧. ಶ್ರೋತ್ರೇಂದ್ರಿಯ – ಶಬ್ದವಿಷಯ

ಸವಣರಾ ಪೇಟೆಯೊಳು | ದಿವಸ ಸಂತೆಯ ಶಬ್ದ

ನಿವಹ ಪೂರೈಸಿ- ದನೇಕಾಂತದೊಳೆನ್ನ

ನವಧರಿಸು ಗುರುವೆ ಕೃಪೆಯಾಗು   ||೬೬ ||

ಹರಭಕ್ತನಾದ ಶಿವಕವಿಯು ವೃತ್ತಿಯಲ್ಲಿ ಹರದನಾಗಿದ್ದನು. ಅಂತೆಯೇ ಅವನಿಗೆ ದೇಶದ ಅನೇಕ ವ್ಯಾಪಾರಿ ಸ್ಥಳಗಳ  ಅನುಭವವಿತ್ತು. ಆ ಸ್ಥಳಗಳ ನಾಮ. ನಿರ್ದೆಶಮಾಡುತ್ತ ದ್ವಂದ್ವಾರ್ಥದಲ್ಲಿ ಪಂಚೇಂದ್ರಿಯಗಳ ಪಂಚ  ವಿಷಯಗಳನ್ನು  ಪ್ರತಿಪಾದಿಸಿದ್ದಾನೆ

ಶ್ರೋತ್ರ, ತ್ವಕ್, ನೇತ್ರ, ಜಿಹ್ವಾ, ಘ್ರಾಣಗಳೆಂಬ ಪಂಚಜ್ಞಾನೇಂದ್ರಿಯಗಳಿಗೆ  ಶಬ್ದ, ಸ್ಪರ್ಶ, ರೂಪ, ರಸ,  ಗಂಧಗಳೆಂಬ ಪಂಚತನ್ಮಾತ್ರೆಗಳೇ ಪಂಚವಿಷಯ ಗಳಾಗುತ್ತವೆ. ಈ ಪಂಚಜ್ಞಾನೇಂದ್ರಿಯಗಳು ಪಂಚವಿಷಯಗಳಿಗಾಗಿ ಬಯಸಿ ಜೀವನನ್ನು ಕಾಮ, ಕಾಲರ ಬಲೆಗೆ ಬೀಳಿಸುತ್ತವೆ. ತನ್ನ ಇಂದ್ರಿಯಗಳೇ ತನ್ನನ್ನು ಆ ಮಾಯಾಬಲೆಯಲ್ಲಿ ಸಿಕ್ಕಿಸುವ ಮಾತು ವಿಚಾರಣೀಯವಾಗಿದೆ. ಇದು ಲೋಕದ ವೈಚಿತ್ರ್ಯ.. ಬ್ರಹ್ಮಸೃಷ್ಟಿಯ ಚಾರಿತ್ರ. ಶಿವಕವಿಯು ಒಂದೊಂದು ವಿಷಯದ ವಿವರಣೆಯನ್ನು ಅಸಾಧಾರಣ ಬುದ್ಧಿ ಶಕ್ತಿಯಿಂದಲೇ ವಿವರಿಸಿದ್ದಾನೆ. ಪ್ರಥಮದಲ್ಲಿ ಶ್ರೋತ್ರೇಂದ್ರಿಯ ಗ್ರಾಹ್ಯವಾದ ‘ಶಬ್ದ’  ವಿಷಯವನ್ನು ಕುರಿತು ಹೇಳಿದ್ದಾನೆ. ಈ ತ್ರಿಪದಿಯಲ್ಲಿ ಶಬ್ದಶ್ಲೇಷವೂ ಇದೆ. ಮತ್ತು ಪರಮತ ಖಂಡನಾಪೂರ್ವಕ ಸ್ವಮತ ಸಮರ್ಥನೆಯೂ ಆಗಿದೆ.

ಮೊದಲನೆಯ ಅರ್ಥ ಸವಣೂರಿನ ಪರವಾಗಿದೆ. ಈ ಶರಣಕವಿಯ ಸಮ ಕಾಲದಲ್ಲಿ ಇಂದಿನ ಧಾರವಾಡ ಜಿಲ್ಲೆಯ ಸವಣೂರು ನವಾಬನ ಸಂಸ್ಥಾನವಾಗಿತ್ತು. ಅದು ವ್ಯಾಪಾರಕ್ಕೆ ಪ್ರಸಿದ್ಧ ಸ್ಥಳವೂ ಆಗಿತ್ತು. ದಿನನಿತ್ಯದ ವ್ಯವಹಾರಕ್ಕಿಂತಲೂ ಸಂತೆಯ ವ್ಯವಹಾರವು ವಿಶೇಷವಾಗಿತ್ತು. ಸುತ್ತಲಿನ ಜನರು ನಿಶ್ಚಿತ ದಿನ ಸಂತೆಯನ್ನು ಮಾಡಲು ಸೇರುತ್ತಾರೆ. ಸಂತೆಯೆಂದ ಮೇಲೆ ಕೇಳುವದೇನು ? ಗದ್ದಲವೇ ಗದ್ದಲ ! ಶಬ್ದಗಳ ಸುರಿಮಳೆ ; ಕೂಗಾಟಗಳ, ಕಿರುಚಾಟಗಳ, ಅಬ್ಬರ ! ಒಂದೆಡೆ ಖರೀದಿ ಮಾಡುವವರ ಚೌಕಸಿ, ಇನ್ನೊಂದೆಡೆ ಮಾರುವವರ ವಸ್ತುವಿನ ಬಣ್ಣನೆ. ಹೀಗೆ ಅನೇಕ ರೀತಿಯ ವ್ಯಾವಹಾರಿಕ ಮಾತುಗಳು ಕೇಳುವವರಿಗೆ ಬಲು ಬೇಜಾರು. ಆದರೇನು ಮಾಡುವದು ?

ಸಂತೆಯಲ್ಲಿ ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ ?”

 ಎನ್ನುವ ಅಕ್ಕನ ಮಾತಿನಂತೆ ಹೆದರದೆ, ಬೆದರದೆ, ಬೇಸರಗೊಳ್ಳದೆ ಧೈರ್ಯದಿಂದ ಸ್ಥಿರತೆಯನ್ನು ಕಾಯ್ದುಕೊಂಡು ತನ್ನ ಸಂತೆಯ ವ್ಯವಹಾರವನ್ನು ಮುಗಿಸಿಕೊಳ್ಳ ಬೇಕಾದುದು ಪ್ರತಿಯೊಬ್ಬನ ಕರ್ತವ್ಯವಾಗಿದೆ.

 ಇನ್ನೊಂದರ್ಥದಲ್ಲಿ ಸವಣರೆಂದರೆ ಜೈನ ಸನ್ಯಾಸಿಗಳು, ಆ ಸನ್ಯಾಸಿಗಳಿರುವ ಸ್ಥಾನಕ್ಕೇನೇ ‘ಸವಣರಾಪೇಟೆ’ಯೆನ್ನುವರು. ಶ್ರವಣ ಶಬ್ದದ ತದ್ಭವವೇ ‘ಸವಣ’. ಶ್ರವಣವೆಂದರೆ ಕೇಳುವದು. ಕಿವಿಯಿಂದ ಕೇಳುವ ಕೆಲಸವೇ ಮುಖ್ಯವಾಗಿಯುಳ್ಳವನು ಸವಣನೆನಿಸಿಕೊಳ್ಳುತ್ತಾನೆ. ಇವನು ಸವಣನೆನಿಸಿದರೂ ಲೌಕಿಕ ವ್ಯಾವಹಾರಿಕ ಶಬ್ದ ಬಳಕೆಯಿಂದ ಏಕತೆಯನ್ನು  ಸಾಧಿಸುವದಕ್ಕಾಗುವದಿಲ್ಲ. ಅವರದು ಅನೇಕಾಂತ ಸಿದ್ಧಾಂತ. ಕಾರಣ ಶಿವಕವಿಯು ಸವಣರ ಅನೇಕಾಂತತೆಯನ್ನು ಪರಿಹರಿಸಿ ಏಕಾಂತತೆಯನ್ನು ಸದ್ಗುರುವಿನಲ್ಲಿ ಕೇಳಿದ್ದಾನೆ. ಏಕಾಂತತೆಯಿಂದ ಶಬ್ದಬ್ರಹ್ಮನ ಸಾಕ್ಷಾತ್ಕಾರವಾಗುತ್ತದೆ.

ಈ ಬಸವಲಿಂಗ ಶರಣರ ಕಾಲಕ್ಕೆ ಜೈನಮತದ ಪ್ರಭಾವ ಎದ್ದು ಕಾಣುತ್ತದೆ. ಆ ಜೈನ ದರ್ಶನದಲ್ಲಿ ‘ಸ್ಯಾದ್ವಾದ’ ಅಥವಾ ಅನೇಕಾಂತವಾದವೆಂಬುದು ಪ್ರಸಿದ್ಧವಾಗಿದೆ. ಇವರು ನಾಸ್ತಿಕ ಮತದವರು. ದೇವನ ಅಸ್ತಿತ್ವವನ್ನು ಒಪ್ಪುವದಿಲ್ಲ. ಮತ್ತು ವೇದಗಳನ್ನು ಮನ್ನಿಸುವದಿಲ್ಲ. ಲೌಕಿಕ ವ್ಯವಹಾರದಲ್ಲಿ ಪ್ರತಿಯೊಂದು ವಸ್ತುವಿನ ಅನಂತ ಧರ್ಮವನ್ನು ಕಾಣುತ್ತಾರೆ. ಹೇಗೆಂದರೆ ಬಹು ಭ್ರಾಂತಿಗಳಿಂದ ಕೂಡಿದ ಮನುಷ್ಯನಿಗೆ ಪ್ರತಿಯೊಂದು ವಸ್ತುವಿನ ಸಮಸ್ತ ಧರ್ಮಗಳ ಯಥಾರ್ಥ ಜ್ಞಾನವನ್ನು ಹೊಂದುವ ಸಾಮರ್ಥ್ಯವಿರುವದಿಲ್ಲ. ಅವನಲ್ಲಿ ಕೇವಲ ಆಂಶಿಕ ಜ್ಞಾನವಿರಬಹುದು. ಆದರೆ ಮುಖ್ಯವಾಗಿ ಕೈವಲ್ಯ ಜ್ಞಾನವಾಗುವವರೆಗೆ ಅವನಲ್ಲಿ ಅನೇಕಾಂತತೆಯೇ ಇರುವದು.

ಉದಾಹರಣಾರ್ಥವಾಗಿ ಒಂದು ವಸ್ತುವಿನ ಬಗ್ಗೆʼʼ ಸ್ಯಾತ್ ಸತ್” ಇದು ಸತ್ ಆಗಿರಬಹುದೆಂಬ ವಿಚಾರ  ಪ್ರಾರಂಭವಾಗುವದರಿಂದ ಇದಕ್ಕೆ ‘ಸ್ಯಾದ್ವಾದ’ವೆಂಬ ಹೆಸರು ಬಂದಿದೆ. ಈ ತತ್ತ್ವವನ್ನು ಪಂಡಿತ ಬಲದೇವ ಉಪಾಧ್ಯಾಯರ *ಭಾರತೀಯ ದರ್ಶನ” ದಲ್ಲಿ ಸ್ಪಷ್ಟವಾಗಿ ಕಾಣಬಹುದು. “ವರ್ತಮಾನ ದೇಶ ಮತ್ತು ಕಾಲವನ್ನು ವಿಚಾರ ಮಾಡುವರಿಂದ ನಾವು ಘಟದ ಸತ್ ಅನ್ನು ಅನುಭವಿಸುತ್ತೇವೆ. ಆದರೆ ಈ ಸತ್ ತ್ರೈಕಾಲಿಕ ಸತ್ಯವಲ್ಲ. ಆದರೆ ಸಾಪೇಕ್ಷಿಕ ಸತ್ಯವಾಗುತ್ತದೆ. ಅಂದರೆ ಸದ್ಯ ಇದ್ದ ಕೊಡವು ಇನ್ನೊಂದು ಕ್ಷಣದಲ್ಲಿ ಇರಲಿಕ್ಕಿಲ್ಲ ಅಥವಾ ಹೊರಗಿದ್ದುದು ಒಳಗೆ ಹೋಗಿರಬಹುದು. ಮತ್ತು ಅದು ಇದೂ ಅದರ ಆಕಾರದ ಬಗ್ಗೆ ಸರಿಯಾಗಿ ತಿಳಿದಿರಲಿಕ್ಕಿಲ್ಲ. ಇತ್ಯಾದಿ ರೂಪದಿಂದ ಯಥಾರ್ಥ ಜ್ಞಾನವಾಗುವದಿಲ್ಲವೆಂಬುದು ಸವಣರ ಮತ. ಈ ಸ್ವರೂಪವನ್ನೇ ಏಳು ತೆರನಾಗಿ ವಿವರಿಸುತ್ತಾರೆ.

೧) ಸ್ಯಾದಸ್ತಿ – ಯಾವದೋ ಪ್ರಕಾರದಲ್ಲಿದೆ.

೨) ಸ್ಯಾನ್ನಾಸ್ತಿ – ಯಾವದೋ ಪ್ರಕಾರದಲ್ಲಿ ಇಲ್ಲ.

೩) ಸ್ಯಾದಸ್ತಿಚ ನಾಸ್ತಿ ಚ – ಹೇಗೋ ಇದೆ ಮತ್ತು ಇಲ್ಲ.

೪)ಸ್ಯಾದವಕ್ತವ್ಯಂ – ಹೇಗೋ ವರ್ಣನಾತೀತವಾಗಿದೆ.

೫)ಸ್ಯಾದಸ್ತಿ ಚ ಅವಕ್ತವ್ಯಂಚ –  – ಹೇಗೋ ಇದೆ. ಮತ್ತು ವರ್ಣನಾತೀತವಾಗಿದೆ.

೬)ಸ್ಯಾನ್ನಾಸ್ತಿಚ ಅವಕ್ತವ್ಯಂ ಚ – ಹೇಗೋ ಇಲ್ಲ. ಮತ್ತು ವರ್ಣನಾತೀತವಾಗಿದೆ.

೭)ಸ್ಯಾದಸ್ತಿಚ ಸ್ಯಾನ್ನಾಸ್ತಿಚ ಅವಕ್ತವ್ಯಂ ಚ – ಹೇಗೋ ಇದೆ, ಇಲ್ಲ ಮತ್ತು ವರ್ಣನಾ ತೀತವಾಗಿದೆ. ಹೀಗೆ ಸಪ್ತಪ್ರಕಾರದ ನ್ಯಾಯದಿಂದ ಅನೇಕಾಂತತೆಯನ್ನು ಸಿದ್ಧಿಸಿ ತೋರುತ್ತಾರೆ. ಅನೇಕಾಂತತೆಯನ್ನು ಹೇಳುವ ಸವಣರು ಸ್ಥಿರತೆಯಿಲ್ಲದೆ ಲೋಕ ವ್ಯವಹಾರದ ತೊಳಲಾಟದಲ್ಲಿ ಬೀಳಬೇಕಾಗುವದು. ಶಾಂತಿ-ಸಮಾಧಾನ ಗಳ-ಸ್ಥಿರತ್ವಗಳ ಸುಳಿವು ಇಲ್ಲದಾಗುವದು.

ಆತ್ಮ ತತ್ತ್ವವನ್ನು ತಿಳಿಯಲು ಶ್ರವಣವು ಮುಖ್ಯ ಸಾಧನವಾಗಿದೆ. ಯಾಜ್ಞವಲ್ಕ್ಯರು ಮೈತ್ರಾದೇವಿಗೆ –

ಆತ್ಮಾವಾರೇ ದ್ರಷ್ಟವ್ಯಃ

ಶ್ರೋತವ್ಯೋ ಮಂತವೋ ನಿಧಿಧ್ಯಾಸಿತವ್ಯಃ|

ಆತ್ಮನನ್ನು ಕಾಣುವ (ಪ್ರತ್ಯಕ್ಷ ಮಾಡಿಕೊಳ್ಳುವ) ಸಾಧನಗಳೆಂದರೆ ೧ ಶ್ರವಣ ೨ ಮನನ ೩ ನಿಧಿಧ್ಯಾಸನಗಳೆಂದು ತ್ರಿವಿಧ ಸಾಧನೆಗಳನ್ನು ತಿಳಿಸಿದ್ದಾರೆ. ಈ ಮೊದಲನೆಯ ಶ್ರವಣ ಕ್ರಿಯೆಗೆ ಸಾಧನವಾದುದು ಶ್ರೋತ್ರೇಂದ್ರಿಯವಾಗಿದೆ. ಶ್ರೋತ್ರವು ಆಕಾಶ ತತ್ತ್ವದ ಅಗ್ನಿಯಿಂದ ಉತ್ಪನ್ನವಾಗಿದ್ದು ಅದಕ್ಕೆ ದಶದಿಕ್ಕುಗಳೇ ಅಧಿದೇವತೆಗಳಾಗಿವೆ. ಶ್ರೋತ್ರಕ್ಕೆ ಶಬ್ದವೇ ವಿಷಯ. ಅಕ್ಷರಾತ್ಮಕ, ಅನಕ್ಷರಾತ್ಮಕವೆಂದು ಎರಡು ಶಬ್ದದ ಭೇದಗಳು, ಅಕ್ಷರಾತ್ಮಕವಾದ ಶಬ್ದವು ಮಂತ್ರರೂಪವಾಗಬೇಕು. ಲೌಕಿಕ ಶಬ್ದಗಳಿಂದ  ಜೀವನದಲ್ಲಿ ಸಮಾಧಾನವಿಲ್ಲ. ಶ್ರೋತ್ರೇಂದ್ರಿಯಕ್ಕೆ ಅಧ್ಯಾತ್ಮಿಕ ಶಬ್ದ ಶ್ರವಣವೇ ಭೂಷಣವು. ಇಂಥ ಶ್ರವಣವು ನವವಿಧ ಭಕ್ತಿಗಳಲ್ಲಿ ಮೊದಲನೆಯದಾಗಿದೆ. ಆತ್ಮತತ್ತ್ವವನ್ನು ತಿಳಿಸುವ ಶಬ್ದವು ಅಧ್ಯಾತ್ಮಿಕವಾದರೆ ಆತ್ಮನನ್ನು ತಿಳಿಸುವ ಶಬ್ದವು ಮಂತ್ರವಾಗಿದೆ. ಅಂಥ ಮಂತ್ರವು ಸದ್ಗುರುವಿನಿಂದ ದೊರೆಯಲು ಸಾಧ್ಯ. ಸದ್ಗುರು ಕೃಪೆಯಿಂದ ದೊರೆತ ಮಂತ್ರವು ಜೀವನವನ್ನೇ ಪಾವನಗೊಳಿಸಿ ದೇವರನ್ನಾಗಿಸುತ್ತದೆ.

ಲೌಕಿಕ ವ್ಯಾವಹಾರಿಕ ಶಬ್ದಗಳಿಂದ ಅನೇಕಾಂತತೆಯನ್ನು ದೂರ ಮಾಡಲು ಮಂತ್ರಾನುಸಂಧಾನದಿಂದ ಮಾತ್ರ  ಸಾಧ್ಯವಾಗುವದು. ಇದರಿಂದಲೇ ಏಕಾಂತತೆ ದೊರೆಯುವದು. ಶಿವನಲ್ಲಿ ಏಕನಿಷ್ಠೆಯೂ ಬೆಳೆಯುವದು. ಇಂತಾದರೆ  ಜ್ಞಾನೇಂದ್ರಿಯ ವಾದ ಈ ಶ್ರೋತ್ರೇಂದ್ರಿಯವು ಸಾರ್ಥಕವಾಗುವದು

. ಮಾನವನ ಉಪಯೋಗಕ್ಕಾಗಿ ಲಭ್ಯಗಳಾದ ಪಂಚ ಜ್ಞಾನೇಂದ್ರಿಯಗಳು ಶಿವನ ಮಹಾ ಕೊಡುಗೆಯೆನಿಸಿವೆ. ಇವುಗಳಲ್ಲೊಂದು ಇಂದ್ರಿಯವು ಊನವಾದರೆ ಜೀವನವೇ  ಅಸ್ತವ್ಯಸ್ತವಾಗುವದು. ಈ ಜ್ಞಾನೇಂದ್ರಿಯಗಳನ್ನು ಕೇವಲ ಲೌಕಿಕ ವಿಷಯಗಳತ್ತ ಬಳಸಿದರೆ ಜೀವನಿಗೆ ಬಂಧನವು ನಿಶ್ಚಿತ. ಕಾರಣ, ಇಂದ್ರಿಯಗಳ ವಿಷಯವು ಮೇಲೆ ವಿವರಿಸಿದಂತೆ ಅಧ್ಯಾತ್ಮಿಕವಾಗಬೇಕು. ಒಂದೊಂದು ಇಂದ್ರಿಯದ ವಿಷಯವೇ ಒಂದೊಂದು ಜೀವಿಯ ಹಾನಿಗೆ ಕಾರಣವಾಗಿರುವಾಗ ಐದಿಂದ್ರಿಯಗಳ ಭೋಗವನ್ನು ಹೊಂದುವ ಜೀವನು ಬಾಳಿ ಉಳಿಯುವ ಬಗೆಯೆಂತು.

…….. ಶ್ರವಣೇಂದ್ರಿಯ ವಿಷಯದಿಂದೆ

ಎರಳೆ ಕೆಡುವದು ಬೇಟೆಗಾರನ ಸರಳಿನಲ್ಲಿ;

ಇಂತೀ ಪ್ರಾಣಿಗಳು ಒಂದೊಂದು ವಿಷಯದಿಂದೆ

ಬಂಧನಕ್ಕೊಳಗಾದವು,

ಇಂತಪ್ಪ ಪಂಚೇಂದ್ರಿಯ ವಿಷಯ ವ್ಯಾಪಾರದಲ್ಲಿ

ಲಂಪಟರಾದ ಮನುಜರು ಕೆಟ್ಟ ಕೇಡನೇನೆಂಬೆನಯ್ಯ ಅಖಂಡೇಶ್ವರ”

ಎಂದು ಷಣ್ಮುಖ ಶಿವಯೋಗಿಗಳು ಹೇಳಿದ ಮಾತು ಮಾರ್ಮಿಕವಾಗಿದೆ. ಇಲ್ಲಿ  ಶ್ರವಣೇಂದ್ರಿಯ ಪ್ರಬಲವಾದ ಜಿಂಕೆಯು ಬೇಟೆಗಾರನ ಕೊಳಲಿನ ನಾದಕ್ಕೆ ಮರುಳಾಗಿ ಅವನ ಬಾಣಕ್ಕೆ ಆಹುತಿಯಾಗುತ್ತದೆ. ಪಂಚೇಂದ್ರಿಯಗಳ ಸ್ಫುರಣವುಳ್ಳ ಜೀವಾತ್ಮನು ಪಂಚ ವಿಷಯಗಳ ಬಲೆಯಲ್ಲಿ ಬಿದ್ದರೆ ಸಾಯುವದು ಖಂಡಿತ. ಅದು ಕಾರಣ ಜ್ಞಾನೇಂದ್ರಿಯಗಳನ್ನು ಆಜ್ಞಾನದಿಂದ ವಿಷಯಗಳಲ್ಲಿ ಬಂಧಿಸುವದು ಸರ್ವಥಾ ವಿಹಿತವಲ್ಲ.

ಶಿವಕವಿಯು ಪ್ರಥಮತಃ ಇಲ್ಲಿ ಶ್ರೋತ್ರೇಂದ್ರಿಯಕ್ಕೆ ಕಾರಣವಾದ ಲೌಕಿಕ ಸಂತೆಯ ಶಬ್ದಗಳನ್ನು ಕೇಳಿ ಕೇಳಿ ಏಕಾಂತತೆಯನ್ನು ಕಳೆದುಕೊಳ್ಳುವದು ಬೇಡವೆಂದಿದ್ದಾನೆ. ಸಂತೆಯ ಶಬ್ದಗಳು ಎಷ್ಟು ನಿಷ್ಪ್ರಯೋಜಕಗಳೋ ; ಅದರಿಂದ ದೊರೆಯುವ ಅನೇಕಾಂತತೆಯೂ ನಿರುಪಯುಕ್ತವಾದುದು. ಉಪಯೋಗವಿಲ್ಲದ ವ್ಯವಹಾರಿಕ ಮಾತುಗಳನ್ನಾಡಿ ಮತ್ತು ಅಂಥವುಗಳನ್ನು ಕೇಳುವದೂ ಜೀವನದಲ್ಲಿ ವ್ಯರ್ಥಸಮಯ ಇದೆಲ್ಲವನ್ನು ಜ್ಞಾನೇಂದ್ರಿಯವಾದ ಕರ್ಣಕ್ಕೆ ಶ್ರೀ ಗುರುವಿನ ಕೃಪೆಪಡೆದು ಶಬ್ದವನ್ನೇ ಮಂತ್ರಮಯ ವಾಗಿಸಿಕೊಳ್ಳುವ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾನೆ.

ಪರಮಗುರುವೆ ! ಮಂತ್ರೋಪದೇಶವನ್ನು ಮಾಡಿ ಶ್ರವಣೇಂದ್ರಿಯವನ್ನು ಸಾರ್ಥಕಗೊಳಿಸು. ಸಕಲ ನಿರರ್ಥಕ ಶಬ್ದಗಳನ್ನು ತ್ಯಜಿಸಿ ಆತ್ಮೋದ್ಧಾರದ ನುಡಿಗಳನ್ನು ಓಂಕಾರನಾದವನ್ನು ಶಬ್ದ ಪ್ರಸಾದವನ್ನಾಗಿ ಭೋಗಿಸುವ ಕಲೆಯನ್ನು ಕಲಿಸಿ ಉದ್ಧರಿಸು.

೨.   ತ್ವಗಿಂದ್ರಿಯ – ಸ್ಪರ್ಶವಿಷಯ

ಗಾಳಿ ಪೂಜೆಯ ಗುಡ್ಡ | ವಾಳುಮಟ್ಟಿಹುದು ಈ

ರೇಳು ಲೋಕವನು – ತಾಳಿಕೊಂಡಿಹುದೆಂದು

ಹೇಳುವರು ಗುರುವೆ ಕೃಪೆಯಾಗು  ||೬೭||

ವಾಯುತತ್ತ್ವದ ಜ್ಞಾನೇಂದ್ರಿಯ ತ್ವಕ್, ಅದಕ್ಕೆ ಗೋಚರಿಸುವ ವಿಷಯ ಸ್ಪರ್ಶನ. ಅಲ್ಲಿ ಚಂದ್ರನು ಅಧಿದೇವತೆಯಾಗಿದ್ದಾನೆ. ಸ್ಪರ್ಶವಿಷಯವು ಶೀತ, ಉಷ್ಣ, ಮೃದು, ಕಠಿಣವೆಂದು ನಾಲ್ಕು ತೆರನಾಗುತ್ತದೆ. ಎಲ್ಲ ವಸ್ತುಗಳ ವಿವಿಧ ಸ್ಪರ್ಶವು ತ್ವಗಿಂದ್ರಿಯಕ್ಕೆ ಗೊತ್ತಾಗುತ್ತದೆ. ಹೀಗೆ ಗಾಳಿ ಮತ್ತು ಸ್ಪರ್ಶ ವಿಷಯದ ವಿವೇಚನೆ ಈ ತ್ರಿಪದಿಯಲ್ಲಿ ಬಂದಿದೆ. ಇಲ್ಲಿಯೂ ಶ್ಲೇಷಾರ್ಥವಿದೆ.  ಶ್ಲೇಷವೆಂದರೆ ಕೂಡಿದ್ದು, ಎರಡು ಅಥವಾ ಅನೇಕಾರ್ಥಗಳಿಂದ ಕೂಡಿದೆಯೆಂದರ್ಥ.

ಭಾರತೀಯ ಧಾರ್ಮಿಕ ಜೀವನದಲ್ಲಿ ಬಹು ಭಾವುಕ ಪರಂಪರೆಗಳು ಬೆಳೆದು ಬಂದಿವೆ. ಕೆಲವು ತಾತ್ವಿಕವಾಗಿಯೂ, ಹಲವು ಅಧ್ಯಾತ್ಮಿಕವಾಗಿಯೂ, ಇನ್ನಷ್ಟು ಮೂಢನಂಬಿಕೆಯುಳ್ಳವುಗಳೂ ಆಗಿವೆ. ಆದಿಮಾನವನಿಗೆ ದೈವತ್ವದ ಕಲ್ಪನೆ ಬಂದಾಗಿನಿಂದಲೂ ಬಹುಶಃ ಪಂಚಭೂತಗಳನ್ನು ದೇವರೆಂದು ನಂಬಿ ಪೂಜಿಸುವ ಇತಿಹಾಸವುಂಟು. ಅದು ಇಂದಿಗೂ ಹೊರತಾಗಿಲ್ಲ. ಭೂಮಿಯನ್ನು ಭೂತಾಯಿ ಯೆಂತಲೂ ; ಜಲವನ್ನು ಗಂಗಾಮಾತೆಯೆಂತಲೂ ; ಅಗ್ನಿಯನ್ನು ಅಗ್ನಿ ದೇವನೆಂದೂ, ಯಜ್ಞದ ದೂತನೆಂತಲೂ; ಗಾಳಿಯನ್ನು ಮತ್ತು ಆಕಾಶವನ್ನು ಪೂಜಿಸುವ ರೂಢಿ ಬೆಳೆದುಬಂದಿದೆ. ಇಲ್ಲಿ ಪ್ರಸ್ತುತ ವಿಷಯ ಗಾಳಿಗೆ ಸಂಬಂಧಿಸಿದೆ.

ಗಾಳಿಯು ಸಕಲ ಪ್ರಾಣಿಗಳಿಗೂ ಪ್ರಾಣಸ್ವರೂಪವಾಗಿದೆ. ಇದು ಕಣ್ಣಿಗೆ ಕಾಣದಿದ್ದರೂ ಸ್ಪರ್ಶದಿಂದ ಮಾತ್ರತಿಳಿದು ಬರುತ್ತದೆ. ಇದರ ಶಕ್ತಿ ಅದ್ಭುತವಾದುದು. ಆದರೆ ಗಾಳಿಯನ್ನು ತಡೆಯುವ ಶಕ್ತಿ ಪರ್ವತಕ್ಕೆ ಮಾತ್ರವುಂಟು. ಪರ್ವತದ ಮೇಲೆ ಹೋದಾಗ ಗಾಳಿಯ ಹೆಚ್ಚಿನ ಅನುಭವ ಬರುವದು. ಅಂತೆಯೇ ಪರಮಪೂಜ್ಯ ಗುರುವರರಾದ ಶ್ರೀ ಜಗದ್ಗುರು ಅನ್ನದಾನಿ ಮಹಾಶಿವಯೋಗಿಗಳು ಮೇಲಕ್ಕೆ ಹೋದಂತೆ ಗಾಳಿ ಬಹಳ’ ಎಂದು ಅಧ್ಯಾತ್ಮಿಕವಾಗಿಯೂ, ಲೌಕಿಕವಾಗಿಯೂ ಅಪ್ಪಣೆ ಮಾಡುತ್ತಿದ್ದರು. ಪರ್ವತಶಿಖರದಲ್ಲಿ ಗಾಳಿಬಹಳವಾದಂತೆ ಮೇಲ್ಮಟ್ಟದ ಜೀವನದಲ್ಲಿ ವಿಪತ್ತುಗಳೂ ಬಹಳ.

ವ್ಯಕ್ತವಾದ ಗಾಳಿಯನ್ನು ಪೂಜಿಸಲು ಗುಡ್ಡವು ಅನುಕೂಲಕರವಾಗುವದರಿಂದ ಅದನ್ನೇ ಜನರು ಅವಲಂಬಿಸುತ್ತ ಬಂದಿದ್ದಾರೆ. ಗಾಳಿಗೆ ವ್ಯವಹಾರದಲ್ಲಿ ದೆವ್ವ ಮತ್ತು ಭೂತ-ಪಿಶಾಚವೆಂತಲೂ ಕರೆಯುತ್ತಾರೆ. ಈ ಭೂತ-ಪಿಶಾಚಗಳ ಬಗ್ಗೆಯೂ ಬಹುರಂಜಕ ಕಥಾನಕಗಳುಂಟು. ಅವುಗಳು ಸ್ಮಶಾನಗಳಲ್ಲಿ ಪರ್ವತಗಳ ಗುಹೆಗಳಲ್ಲಿ ವಾಸಮಾಡುತ್ತವೆಂತಲೂ ಕೆಲವರ ನಂಬಿಕೆ. ಯಥಾರ್ಥಜ್ಞಾನವಿಲ್ಲದ, ಆತ್ಮಜ್ಞಾನ  ರಹಿತರಾದ ಜನರು ಅವು ನಮ್ಮನ್ನು ಕಾಡಬಾರದೆಂದು ಪೂಜಿಸುವ ರೂಢಿಯೂ ಬಂದಿದೆ. ಈ ಮಾತಿಗೆ ಭೂಮಂಡಲದ ಬಹುಜನರು ಭಯಗ್ರಸ್ತರಾಗುತ್ತ (ಅವುಗಳಿಗೆ) ಮಾರುಹೋಗಿದ್ದಾರೆ. ಇಂಥ ಹದಿನಾಲ್ಕು ಭೂಮಂಡಲಗಳನ್ನು ಪರ್ವತಗಳು ಧರಿಸಿರುತ್ತವೆಂಬುದನ್ನು ಅನುಭವಿಗಳು ಉಸುರುತ್ತಾರೆ. ಅಮರ ಕೋಶಕಾರನು

ಮಹೀಧ್ರೇ ಶಿಖರಿಕ್ಷ್ಮಬೃತ್ ಅಹಾರ್ಯಧರ ಪರ್ವತಾ : 1 (೨-೨-೧)

 ಎಂದಿದ್ದಾನೆ ಮಹೀಧರ, ಕ್ಷ್ಮಬೃತ್, ಅಥವಾ ಭೂಭ್ರತ್ ಪದಗಳು ಮೇಲಿನ ಮಾತನ್ನೇ ವಿಶದೀಕರಿಸುತ್ತವೆ. ಪರ್ವತವು ಭೂಮಿಯನ್ನು ಹೊತ್ತುಕೊಂಡಿರುವು ದೆಂದರ್ಥವಾಗುವದು.

ಇನ್ನೊಂದರ್ಥದಲ್ಲಿ ಗುಡ್ಡವೆಂದರೆ ದೇಹ, ಅದರಲ್ಲಿ ವಾಯುವಿಕಾರಗಳುಂಟು. ಮಾನವರಿಗೆ ಗಾಳಿಯು  ಪ್ರಾಣದಾಯಕವಾಗಿರುವಂತೆ ಬಾಹ್ಯದಲ್ಲಿ ಸೌಮ್ಯವಾದ ಉಷ್ಣ ಮತ್ತು ತಂಪು ಸ್ಪರ್ಶದಿಂದ ಸಂತಸದಾಯಕವಾಗಿದೆ.  ಶರೀರದಲ್ಲಿ ವಾಯು ವಿಕಾರಗಳಾಗಿ ದುಃಖದಾಯಕವೂ ಆಗುವದು. ಒಮ್ಮೊಮ್ಮೆ ಗಾಳಿಯ (ಭೂತ-ಪಿಶಾಚಗಳ) ಪ್ರವೇಶವೂ ಕೆಲವರಿಗೆ ಆಗುವದುಂಟು. ಇಂಥ ಭೂತಗಳಿಂದ ಕೂಡಿದ ದೇಹ ವೆಂತಲೂ ಇಲ್ಲಿ ಅರ್ಥೈಸಬೇಕಾಗುವದು. ಶರೀರದಲ್ಲಿ ಗಾಳಿಯ ಪೂಜೆಯೆಂದರೆ ವಿಷಯ ವಾಸನಾರಾಧನೆಯ ಗೌರವವೆಂದಾಗುವದು. ವಿಷಯ ವಾಸನೆಯನ್ನು ಇರಿಸಿಕೊಳ್ಳದ ದೇಹಗುಡ್ಡ ಅಪರೂಪ. ಈ ದೇಹಗುಡ್ಡದ ಎತ್ತರ ಒಂದೇ ಆಳಿನ ಪ್ರಮಾಣದಲ್ಲಿದೆ. ಹೊರಗಿನ ಆಕಾರ ಚಿಕ್ಕದಾದರೂ ಅಂತರಂಗದ ವಿಸ್ತಾರ ಅಪಾರ. ಆದ್ದರಿಂದ ಈ ಆಳುಮಟ್ಟದ ದೇಹಪರ್ವತದಲ್ಲಿ ಈರೇಳು (ಹದಿನಾಲ್ಕು) ಲೋಕಗಳು  ತಾಳಿಕೊಂಡು ಬಂದಿವೆ. ಅಂದರೆ ಬ್ರಹ್ಮಾಂಡದಂತೆ ಪಿಂಡಾಂಡದಲ್ಲಿಯೂ ಹದಿನಾಲ್ಕು ಭುವನ ಗಳಿರುತ್ತವೆಂಬ ಮಾತನ್ನು ೧೮ ನೇ ತ್ರಿಪದಿಯಲ್ಲಿ ಅರಿತಿದ್ದೇವೆ. ಚನ್ನಬಸವಣ್ಣನವರು –

ಈರೇಳು ಲೋಕವನು ಒಡಲೊಳಗಿಟ್ಟುಕೊಂಡು

ಲಿಂಗರೂಪಾಗಿ ಭಕ್ತನ ಕರಸ್ಥಲಕ್ಕೆ ಬಂದು

ಪೂಜೆಗೊಂಡಿತ್ತು ನೋಡಾ….

ಎಂದಿದ್ದಾರೆ. ಲಿಂಗ ಮತ್ತು ಅಂಗಕ್ಕೆ ಅಭೇದವಿಲ್ಲವೆ ?

ಶರೀರಿಯು ಪ್ರಾಣವಾಯುವಿನಿಂದಲೇ ಬದುಕುತ್ತಿರುವದರಿಂದ ಅದನ್ನು ಗೌರವಿಸಬೇಕಾದ್ದು ಯೋಗ್ಯವೇ ಇದೆ. ಕೇವಲ ಗಾಳಿಯನ್ನು ಪೂಜಿಸಿ ಸ್ಪರ್ಶಸುಖಕ್ಕಾಗಿ ಆಶೆಪಟ್ಟರೆ ಅಧ್ಯಾತ್ಮಸಾಧನೆ ಸಿದ್ಧಿಸಲಾರದು. ಗಾಳಿಯ ಚಂಚಲತೆಯನ್ನು ನೀಗಿಸಿ ಸ್ಥಿರತೆಯನ್ನು ಸಾಧಿಸಿದರೆ ಮಾತ್ರ ಪ್ರಾಣಲಿಂಗಾನುಸಂಧಾನವು ಸಮನಿಸುವದು. ೫೯ನೇಯ ತ್ರಿಪದಿಯ ತಿರುಳಿನಲ್ಲಿ ಪ್ರಸ್ತಾಪಿಸಿದಂತೆ ಈ ವಾಯುವು ಶರೀರ ತುಂಬೆಲ್ಲ ಹರಿದಾಡಿ ಕಾಯವನ್ನು ಕಂಗೆಡಿಸುತ್ತದೆ. ಭಕ್ತಿಯ ಬಟ್ಟೆಯನ್ನು ಬಯಲಾಗಿಸುತ್ತಿದೆ. ತ್ವಕ್ಕು (ಚರ್ಮವು) ದೇಹವನ್ನೆಲ್ಲ ವ್ಯಾಪಿಸಿರುತ್ತದೆ. ಇದು ಜೀವನ ತೊಗಲಿನ ಚೀಲದಂತಾಗಿದೆ.  .. ಈ ತ್ವಗಿಂದ್ರಿಯವು ಸ್ಪರ್ಶ ಸುಖಕ್ಕಾಗಿ ಆಶಿಸುತ್ತದೆ. ಜೀವಾತ್ಮನು ಸ್ಪರ್ಶಸುಖ ಬಯಸಿ ಬಂಧನದಲ್ಲಿ ಸಿಲುಕುತ್ತಾನೆ.

ನಿಜಗುಣರು –

ತೊಗಲತಿತ್ತಿಗೆ ಸಮನಾದ ಕಾಯದೊಳು ಕಂ-

ಡಿಗಳು ತೆಗದಿರೆ ಪಲವವರೊಳಗೆ |

ಸಂಗತಿಯನುಳ್ಳ ಮಾರುತನಿರ್ದು ತೊಗಲದೆ |

ಸೊಗಸುದೋರುವ ಸೋಜಿಗವನು ಕಂಡು || ಜೀವ. ಸಂ. ಸ್ಥಳ – ೧೯ |

“ಕೈವಲ್ಯಪದ್ಧತಿ’ಯಲ್ಲಿ ”ತೊಗಲಿನ ಚೀಲದಂತೆ ಇರುವ ದೇಹಕ್ಕೆ ಕೆಲವು ತೂತು ಗಳನ್ನು ಮಾಡಿ ಅದರಲ್ಲಿ ವಾಯು ಧಾರಾಳವಾಗಿ ಸಂಚಾರಮಾಡುತ್ತಿರುವವರಿಗೆ ಅನೇಕ ಸೋಜಿಗಳನ್ನು ಕಾಣುವಿ’ಯೆಂದು ತೊಗಲಿನ ಚೀಲವಾದ ದೇಹಕ್ಕೆ ಗಾಳಿಯು  ಆಧಾರವೆಂದು ಅಭಿಪ್ರಾಯ ಪಟ್ಟಿರುವರು. ಗಾಳಿಯ ಸ್ಪರ್ಶ ಒಳ-ಹೊರಗೂ ಹಿತವಾಗುತ್ತದೆ. ಆದರೆ ಅತಿಯಾದರೆ ತೊಂದರೆದಾಯಕವೇ ಆಗುವದು. ಹೊರ ಚರ್ಮದ ಬಣ್ಣವನ್ನು ಕಂಡು( ಇನ್ನೊಂದು) ಆ ಚರ್ಮವನ್ನು ಸ್ಪರ್ಶಿಸುವ ಆಶೆಯನ್ನು ಪ್ರಕೃತಿಯು ಹುಟ್ಟಿಸುತ್ತದೆ. ಷಣ್ಮುಖಶ್ರೀಗಳು –

ಬಣ್ಣದ ಚರ್ಮದ ಹೆಣ್ಣಿನಂಗದ ಕೂಟಸುಖ ಸವಿಯೆಂದು

ಮನವೆಳಸುವ ಕಣ್ಣಗೆಟ್ಟಣ್ಣಗಳು ನೀವು ಕೇಳಿರೊ !

ಹೆಣ್ಣಿನಿಂದೇನು ಸುಖವುಂಟು ಎಡ್ಡಪ್ರಾಣಿಗಳಿರಾ !

ಹೇಸಿಕೆಯ ಕಿಸುಕುಳದ ಕೀವು ತುಂಬಿ ಒಸರುವ,

ಹಸಿಯ ಘಾಯದಲ್ಲಿ ವಿಷಯಾತುರತೆಯಿಂದ ಬಿದ್ದು

ಮತಿಮಸಳಿಸಿ, ಮುಂದುಗಾಣದೆ ಮುಳುಗಾಡು

ತಿಪ್ಪುದು ನೋಡಾ ಮೂಜಗವೆಲ್ಲ ಅಖಂಡೇಶ್ವರ.

ಎಂದು ಬಹುಮಾರ್ಮಿಕವಾಗಿ ಸ್ಪರ್ಶವಿಷಯ ಸುಖವನ್ನು ವಿಡಂಬಿಸಿದ್ದಾರೆ. ಮತ್ತು ಇನ್ನೊಂದೆಡೆ ಕೇವಲ ಸ್ಪರ್ಶಸುಖಕ್ಕೆ ಆಶಿಸಿ ಕೆಡುವ ಪ್ರಾಣಿ ‘ಗಜ’ದ ಗತಿಯನ್ನು ಅವಲೋಕಿಸಿ –

ತ್ವಗಿಂದ್ರಿಯ ವಿಷಯದಿಂದ ಗಜವು

ಕೆಡುವದು ರಾಜನ ಕೃತಕದಲ್ಲಿ

ಎಂದು ಮರುಗಿದ್ದಾರೆ. ರಾಜರು ತಮ್ಮ ಉಪಯೋಗಕ್ಕಾಗಿ ಆನೆಗಳನ್ನು ಹಿಡಿಯಲು ಅಡವಿಯಲ್ಲಿ ತಗ್ಗು ತೆಗೆದು ಮೇಲೆ ಚಪ್ಪರಹಾಕಿ ಹುಲ್ಲನ್ನು ಬೆಳೆಯಿಸುವರು. ಎಳೆಯ ಹಸುರಾದ ಹುಲ್ಲಿಗಾಗಿ ಆಶಿಸಿದ ಗಜವು ತಗ್ಗಿನಲ್ಲಿ ಬೀಳುವದು. ಜ್ಞಾನಿಯಾದ ಮಾನವನು ಒಂದೊಂದು ಇಂದ್ರಿಯದ ಸುಖಕ್ಕಾಗಿ ಬಯಸದೆ ಆತ್ಮದ ಅರಿವನ್ನು ಮಾಡಿಕೊಳ್ಳಬೇಕು. ಅಂದರೆ ತ್ವಕ್ಕಿನ ಜಡತ್ವವು ನಾಶನಾಗಬೇಕಾದರೆ ಆ ತ್ವಗಿಂದ್ರಿಯವನ್ನು ಜಂಗಮಲಿಂಗವನ್ನಾಗಿಸಬೇಕು. ಆಗ ಸ್ಪರ್ಶ ವಿಷಯವು  ಪ್ರಸಾದವಾಗುವದು. ತ್ವ ಕ್ಕು ಜಂಗಮಲಿಂಗಕ್ಕೆ ಮುಖನಾಗಬೇಕು. ಸ್ಪರ್ಶವನ್ನು ಸ್ಪರ್ಶಪ್ರಸಾದವನ್ನಾಗಿ ಭೋಗಿಸಬೇಕು. ಇಂಥ ಶಕ್ತಿಯು ಶ್ರೀಗುರು ಕರುಣೆಯಿಂದ ಮಾತ್ರ ಪಡೆಯಲು ಬರುತ್ತದೆ.

ಗುರುವಿಗೆ ನಮ್ಮ ತನುವನ್ನರ್ಪಿಸಬೇಕು. ಶರೀರದಿಂದ ಗುರುವಿನ ಸೇವೆಯನ್ನು ತಪ್ಪದೆ ಮಾಡಬೇಕು. ಅದರಿಂದ ಗುರುಕೃಪೆಯಾಗುವದು. ಗುರುಕರುಣೆಯಿಂದ ವಾಯುವನ್ನು ನಿಲ್ಲಿಸಿ ಮನವನ್ನು ಮಹಾಲಿಂಗದಲ್ಲಿ ನೆಲೆಗೊಳಿಸಿ ಸ್ಪರ್ಶವನ್ನು ಸ್ಪರ್ಶಪ್ರಸಾದವನ್ನಾಗಿಸಿ ಶೀತ-ಉಷ್ಣ ಮೃದು-ಕಠಿಣಗಳ ತಾರತಮ್ಯವನ್ನು ಸಮನ್ವಯಗೊಳಿಸುವ-ಶಕ್ತಿಯನ್ನು ಸಂಪಾದಿಸ ಬೇಕು ಪರಮಗುರುವೆ ! ನೀನು ಕರುಣೆದೋರು. ಅದರಿಂದ –

“ಎನ್ನ ತ್ವಕ್ಕದು ಚಲುವ ನಿನ್ನ ಚರಣವ ತೊಳೆವ

ಮನ್ನಣೆಯ ತೊತ್ತಾಗಿ ಇರ್ಪ್ಪುದಯ್ಯ’ʼ

ಎಂದು ಷಡಕ್ಷರಿ ಕವಿಗಳು ಹಾಡಿಹರಿಸಿದಂತೆ ಸಫಲತೆಯನ್ನು ಪಡೆಯಲಾಗುವದು.

೩. ನೇಂದ್ರಿಯ – ರೂಪ ವಿಷಯ

ಹುಬ್ಬಳ್ಳಿ ಪೇಟೆಯೊಳು | ಕಬ್ಬಿನ ಕೈಮಾರಾಟ

ಇಬ್ಬರೊಂದಾಗಿ – ಉಬ್ಬಿಮಾರಲು ಲಾಭ

ಹಬ್ಬಿತೈ ಗುರುವೆ ಕೃಪೆಯಾಗು  ||೬೮||

ಅಗ್ನಿತತ್ತ್ವದ ನೇಂದ್ರಿಯಕ್ಕೆ ಸೂರ್ಯನೇ ಅಧಿದೇವತೆ. ಕಣ್ಣಿನ ವಿಷಯ ರೂಪು. ಶ್ವೇತ (ಬಿಳಿ) ಪೀತ (ಹಳದಿ) ಹರಿತ (ಹಸಿರು) ಕಪೋತ (ಮಾಸ) ಮಾಂಜಿಷ್ಟ (ಕಂದು, ಕೆಂಪು) ಕೃಷ್ಣ (ಕಪ್ಪು) ಗಳೆಂದು ರೂಪಿನಲ್ಲಿ ಆರು ವಿಧ. ಈ ತ್ರಿಪದಿಯಲ್ಲಿ ನೇತ್ರದ ವ್ಯವಹಾರ ಹಾಗೂ ರೂಪ ವಿಷಯದ ವಿಚಾರ ಸುಂದರವಾಗಿ ಬಂದಿದೆ.

ಹಿಂದೆ ತಿಳಿಸಿದಂತೆ ಶಿವಕವಿಯು ವ್ಯಾಪಾರಿಯಾಗಿದ್ದುದರಿಂದ ಪೇಟೆಗಳ ಪರಿಚಯ ವ್ಯಾಪಕವಾಗಿದೆ. ಹುಬ್ಬಳ್ಳಿ ಪೇಟೆ ಬಹುದಿನಗಳಿಂದಲೂ ಪ್ರಸಿದ್ಧ. ಅದರ ಪರಿಚಯವಿಲ್ಲದವನು ತೀರ ವಿರಳ. ಆಗ ಸಕ್ಕರೆಯ ಕಾರಖಾನೆಗಳಿಲ್ಲದ ಕಾಲ. ಕೇವಲ ತಿನ್ನುವ ಬಿಳೆ ಕಬ್ಬುಗಳನ್ನೇ ಹೆಚ್ಚಾಗಿ ಬೆಳೆಯುತ್ತಿದ್ದರು. ಸಣ್ಣ ಸಣ್ಣ ಸಂತೆಗಳಲ್ಲಿಯೂ ಕಬ್ಬಿನ ಮಾರಾಟ ನಡೆಯುತ್ತಿತ್ತು. ಹುಬ್ಬಳ್ಳಿಯೆಂದ ಮೇಲೆ ಕೇಳಬೇಕೆ ? ಕಬ್ಬಿನ  ಮಾರಾಟ ಕೈ ಮೇಲೆಯೇ ನಡೆಯುತ್ತಿತ್ತು. ಕೈ ಮಾರಾಟವೆಂದರೆ ಮಾರುವವನು ತನ್ನ ಸಾಮಾನುಗಳನ್ನು ಹೊರತೆಗೆದು ಕೈಯಲ್ಲಿ ಹಿಡಿಯುತ್ತಲೇ ಮಾರಾಟವಾಗುವದು.   ಗಿರಾಕಿಗಳಿಗಾಗಿ ಕಾಯ್ದು ನಿಲ್ಲುವ ಅವಸರವಿರುವದಿಲ್ಲ. ಗ್ರಾಹಕರು ಹೇರಳವಾಗಿರುವ ದರಿಂದ ತಡವಿಲ್ಲದೆ ಸರಕು ಮಾರಾಟವಾಗುತ್ತಿತ್ತು. ಅದರಿಂದ ಕೊಡುವವನಿಗೂ, ಕೊಳ್ಳುವವನಿಗೂ ತೀರದ ಉತ್ಸಾಹವಾಗುವದು ಸಹಜ. ಇದು ಹೊರನೋಟದ  ಕಬ್ಬಿನ ವ್ಯಾಪಾರವಾದರೆ ಅಧ್ಯಾತ್ಮಿಕ ಕಬ್ಬಿನ ವ್ಯಾಪಾರ ಬಹು ಮಾರ್ಮಿಕವಾಗಿದೆ.

 ಹುಬ್ಬಳಿಯೆಂದರೆ = ಹುಬ್ಬಿನ ಬಳ್ಳಿ (ಹುಬ್+ಬಳ್ಳಿ), ಬಳ್ಳಿಯಂತಿರುವ ಹುಬ್ಬು. ಈ ಹುಬ್ಬುಗಳ ವ್ಯವಹಾರವೇ ಹುಬ್ಬಳ್ಳಿಯ ಪೇಟೆ, ಎರಡು ಹುಬ್ಬುಗಳ ಮೂಲಕ ನಡೆಯುವ ವ್ಯಾಪಾರ ಕಾಮಕೇಳಿ. ೪೪ನೆಯ ತ್ರಿಪದಿಯಲ್ಲಿ ವಿವರಿಸಿದಂತೆ ಕಾಮನಿಗೆ ಹುಬ್ಬುಗಳೇ ಬಿಲ್ಲು, ಅರಳುಗಂಗಳೇ ಬಾಣವೆಂದು ಅರಿತಿದ್ದೇವೆ. ಕಾಮಿಗಳು ಹುಬ್ಬುಗಳನ್ನು ಕುಣಿಸಿ (ಹಾರಿಸಿ) ಕುಡಿನೋಟಗಳನ್ನು ಬೀರಿ ಎಂಥ ಧೀರನ ಮನವನ್ನಾದರೂ ಸೆಳೆಯುತ್ತಾರೆ. ಹುಬ್ಬು ಮತ್ತು ಕಣ್ಣುಗಳ ಕಾಮ ಚೇಷ್ಟೆ ಕಬ್ಬಿನಂತೆ ರಸಿಕರಿಗೆ ರುಚಿಯಾಗಿರುತ್ತದೆ. ಈ ವ್ಯಾಪಾರದಲ್ಲಿ ಬಾಹ್ಯ ಪ್ರಪಂಚವನ್ನೇ ಮರೆಯುತ್ತಾರೆ. ಪರಸ್ಪರ ಪ್ರೇಮಿಗಳಲ್ಲಿ ಈ ಮನಸಿಜನ ವ್ಯಾಪಾರವು ಹೆಚ್ಚಿದರೆ. ಭೋಗದ ಲಾಭ ಬೆಳೆಯುವದು. ಅದು ಅತಿಯಾಗಿ ಬೆಳೆದರೆ ವೈಷಯಿಕವಾಸನೆ  ವ್ಯಾಪಿಸುವದು

ಹಿಂದೀ ಸಾಹಿತ್ಯದ ರಸಿಕ ಚಕ್ರವರ್ತಿಯೆನಿಸಿದ ಶೃಂಗಾರ ಕವಿಯೆಂದು ಪ್ರಖ್ಯಾತಿ ಪಡೆದ ‘ಬಿಹಾರಿಯು’ ತನ್ನ ‘ಸತಸಯಿ’ಯಲ್ಲಿ ಪ್ರಣಯಿಗಳ ನಯನ ಮತ್ತು ಹುಬ್ಬುಗಳ ವ್ಯಾಪಾರದ ವರ್ಣನೆಯನ್ನು ಸುಂದರವಾಗಿ ಮಾಡಿದ್ದಾನೆ .

*”ಕಹತ ನಟತ, ರೀಝತ, ಖಜತ, ಮಿಲತ, ಖಿಲತ, ಲಜಿಯಾತ |

ಭರೆ ಭೌನಮೇಂ ಕರತ ಹೈ ನೈನನ ಹೀ ಸೋಂ ಬಾತ. ||

‘ಕಾಮಾತುರಾಣಾಂ ನ ಭಯಂ ನ ಲಜ್ಜ್ಯಾʼʼಕಾಮಾತುರರಾದ ಕಾಮಿಗಳಿಗೆ  ಭಯವೆಲ್ಲಿ? ಯಾವುದೂ ಇರುವದಿಲ್ಲ. ಪ್ರೇಮಿಗಳು ಜನನಿಬಿಡವಾದ ಸಭಾ  ಭವನದಲ್ಲಿಯೂ ಸಹ ತಮ್ಮ ಪ್ರೇಮಾಲಾಪವನ್ನು ಮಾಡುತ್ತಾರೆ. ಇವರ ಸಂಭಾಷಣೆ ಶಬ್ದಗಳಿಂದಲ್ಲ. ಕೇವಲ  ಕಣ್ಣೋಟಗಳಿಂದ, ಸಂಭಾಷಣೆಗಳಲ್ಲಿಯೂ ಆಕರ್ಷಣೆಯಿದೆ, ರಸಿಕತೆಯಿದೆ. ನಾಯಕನು ಕಣ್ಣು ಸನ್ನೆಯಿಂದ ಪ್ರಿಯತಮಳನ್ನು ಕೇಳುತ್ತಾನೆ. ಅವಳು ಕೃತ್ರಿಮ ನಟನೆಯಿಂದ ಅನುಮತಿ ನೀಡುವದಿಲ್ಲ. ಇದು ಅವನಿಗೆ ಸಂತಸಪಡಿಸುತ್ತದೆ. ಆದರೆ ಆಕೆಗೆ ಸಿಟ್ಟು ಬರುತ್ತದೆ. ಆಗ ಒಬ್ಬರಿಗೊಬ್ಬರು ನೋಡುವದರಿಂದ ಇಬ್ಬರ ನೇತ್ರಗಳು ಒಂದಾಗುತ್ತವೆ. ಮುಖ ಅರಳುತ್ತದೆ. ಜನತೆಯ ಕಲ್ಪನೆ ಬಂದು ಅವಳು ತಕ್ಷಣ ನಾಚಿಕೊಳ್ಳುತ್ತಾಳೆ. ಹೀಗೆ ಕಾಮಿಗಳು ಯಾವ ಪರವೆಯಿಲ್ಲದೆ ತಮ್ಮ ಚೇಷ್ಟೆಯನ್ನು ಆಡುತ್ತಿರುತ್ತಾರೆ.

ಕನ್ನಡದ ಮಹಾಕವಿ ಚಾಮರಸನೂ ಸಹ ಕಾಮಿನಿಯರಿಗೆ ಕಂಗಳ ಮಾತು  ಸಹಜವೆಂದು ಬಣ್ಣಿಸಿದ್ದಾನೆ. ”ಪ್ರಭುಲಿಂಗಲೀಲೆ’ಯಲ್ಲಿ –

ಕಂಗಳಲಿ ಮಾತುಗಳು ತಿಳಿವೊಡೆ

ಕಂಗಳಲಿ ಮಾಟಗಳು ಬಗೆವೊಡೆ

ಕಂಗಳಲಿ ಸಮ್ಮೋಹಗಳು ಕಂಗಳಲಿ ನೇಹಗಳು |

ಕಂಗಳಲಿ ಸರ್ವಪ್ರಪಂಚುಗ –

ಳಂಗನೆಯರಿಗೆ ಸಹಜವೆಂದೆನೆ

ಕಂಗಳಿಂದಾ ವಿಮಳೆ ಸೂಚಿಸಲರಿದಳಾ ಮಾಯೆ

ವಿಮಳೆ ಮತ್ತು ಮಾಯಾದೇವಿಯರ ಮಾತು ಕಂಗಳ ಸಂಜ್ಞೆಯಿಂದ ನಡೆದ ಪ್ರಸಂಗವನ್ನು ಇಲ್ಲಿ ವರ್ಣಿಸಲಾಗಿದೆ.

ಕಣ್ಣುಗಳ ಕಾಮಚೇಷ್ಟೆಯು ಉಚ್ಚೃಂಖಲತೆಯನ್ನು ಹೊಂದಿದರೆ ಸಾಮಾಜಿಕ ಜೀವನವೇ ವ್ಯತ್ಯಸ್ತವಾಗುವದು. ಇಂದಿನ ಸ್ಟೇಚ್ಛಾ ಮನೋಭಾವವುಳ್ಳವರಲ್ಲಿ ಮತ್ತು ನಾಟಕ-ಚಲನಚಿತ್ರಗಳಲ್ಲಿ ಈ ವ್ಯವಹಾರ ಅತಿಯಾಗಿ ಕಾಣುತ್ತದೆ. ಇದರ ಪರಿಣಾಮ ಊಹಿಸಲಸಾಧ್ಯವಾಗಿದೆ.

*ವಿಶ್ವಾಮಿತ್ರ – ಪರಾಶರ ಪಭೃತಯೋ ವಾತಾಂಬುಪರ್ಣಾಶನಾಃ |

ತೇSಪಿ ಸ್ತ್ರೀ ಮುಖ ಪಂಕಜಂ ಸುಲಲಿತಂ ದೃಷ್ಟ್ವೈ ಮೋಹಂ ಗತಾಃ |

“ಕೇವಲ ಒಣಗಿದ ಎಲೆ ನೀರುಗಳನ್ನು ತಿಂದ ವಿಶ್ವಾಮಿತ್ರ ಪರಾಶರ ಮೊದಲಾದ ಮುನಿಗಳು ಸಹ ಸುಂದರವಾದ ಸ್ತ್ರೀಯರ ಮುಖಕಮಲವನ್ನು ಕಂಡು ಮೋಹಿತರಾದರೆಂದು ಭರ್ತೃಹರಿಯು ಹೇಳಿರುವಾಗ ಇನ್ನುಳಿದ ಸಾಮಾನ್ಯ ಮಾನವರ ಪಾಡೇನು

ನೇತ್ರವು ಸುಂದರ ರೂಪಕ್ಕಾಗಿ ಕಾತುರ ಪಡುತ್ತಿದೆ. ಚರ್ಮದ ಚೀಲವೆನಿಸಿದ ದೇಹದ ಬಣ್ಣ, ಹಾಗೂ ಯೌವನದ ಉಬ್ಬುಗಳನ್ನು ನಿರೀಕ್ಷಿಸ ಬಯಸುತ್ತದೆ. ಈ ರೂಪ ಸ್ಥಿರವಾದುದಲ್ಲ. ಮಹಾಪೂರವಿಳಿದ ನದಿಯಂತೆ ಯೌವನವು ಜಾರಿಹೋದ ಮೇಲೆ ರೂಪ ವಿರೂಪವಾಗುವದು. ಇದು

ಕಿಸುಕುಳದ, ಕೀವುರಕ್ತದ, ಒಸೆದು ತುಂಬಿದ

ಮಲಮೂತ್ರದ ರಂಜನ ಮುಸುಕಿದ

ಮಾಂಸ ಅಸ್ತಿಗಳ ಸುತ್ತಿನ ಹಸನಾದ ಚರ್ಮದ ಹೊದಿಕೆಯ

ಹುಸಿಯ ತನುವ ಮೆಚ್ಚಿ ಪಶುಪತಿ ನಿಮ್ಮ ನಾನು ಮರೆದೆನಯ್ಯ

ಅಖಂಡೇಶ್ವರಾ

ಸುಡು ಸುಡು ಈ ದೇಹದ ರೂಪು

ನೋಡಿದಡೇನೂ ಹುರುಳಿಲ್ಲವಯ್ಯ

ಎಲುವು ಚರ್ಮ ನರ ಮಾಂಸ ಮಲ ಮೂತ್ರಯುಕ್ತವಾದ

ಅನಿತ್ಯ ದೇಹವ ನಚ್ಚಿ ನಿಮ್ಮ ನಿಜವ ಮರೆದು

ಭವಭಾರಿಯಾದೆನಯ್ಯ ಅಖಂಡೇಶ್ವರಾ

ಎಂದು ಷಣ್ಮುಖ ಶಿವಯೋಗಿಗಳು ದೈಹಿಕ ರೂಪದ ಅಸಾರತೆಯನ್ನು ಭವದ ಮೂಲವನ್ನು ತಿಳಿಸಿದ್ದಾರೆ. ಉಡುತಡಿಯ ನವಯೌವನವತಿಯಾದ ಅಕ್ಕನ ಸುಂದರ ರೂಪವನ್ನು ಮೋಹಿಸಿದ ಕೌಶಿಕರಾಜನಿಗೆ ಅಕ್ಕನು ದೇಹದ ಯಥಾರ್ಥ ರೂಪವನ್ನು  ಬಿತ್ತರಿಸಿ ಮಾಯಾ ಪರೆಯನ್ನೇ ಹರಿಯುತ್ತಾಳೆ –

ಅಮೇಧ್ಯದ ಹಡಿಕೆ, ಮೂತ್ರದ ಕುಡಿಕೆ,

ಎಲುವಿನ ತಡಿಕೆ, ಕೀವಿನ ಹಡಿಕೆ,

ಸುಡಲೀ ದೇಹವ ಒಡಲುವಿಡಿದು ಕೆಡದಿರು

ಚನ್ನಮಲ್ಲಿಕಾರ್ಜುನನರಿ ಮರುಳೆ !

ಎಂದು ಹೇಳಿ ಸ್ವತಃ ತಾನೂ ದಿಗಂಬರೆಯಾಗಿ ವೀರವೈರಾಗ್ಯಶಾಲಿನಿಯಾಗಿ ಕೀರ್ತಿಕಾಯಳಾಗುತ್ತಾಳೆ. ದೀಪದ ರೂಪಕ್ಕಾಗಿ ಮೋಹಿಸುವ ಪತಂಗವು ಸುಟ್ಟು ಸಾಯುವಂತೆ ಮಾನವನು ನಾರಿಯರ ಹೊರಗಿನ ರೂಪಕ್ಕಾಗಿ ಮರುಳಾಗಿ   ಮನುಷ್ಯತ್ವವನ್ನು ಮಾರಿಕೊಳ್ಳುತ್ತಾನೆ.

ಸರ್ವೆಂದ್ರಿಯಾಣಾಂ ನಯನಂ ಪ್ರಧಾನಂ

ಪಂಚ ಜ್ಞಾನೇಂದ್ರಿಯಗಳಲ್ಲಿ ನೇತ್ರವೇ ಮುಖ್ಯವಾಗಿದೆ. ಉಳಿದ ನಾಲ್ಕರಲ್ಲಿ ಯಾವುದಾದರೂ ಕೊರತೆಯಾದರೆ ನಡೆಯಬಹುದು.. ಕಣ್ಣಿಲ್ಲದಿದ್ದರೆ ಪರಾಧೀನನಾಗ ಬೇಕಾಗುವದು. ಶಿವನು ತನ್ನ ಸೃಷ್ಟಿಯ ಸೌಂದರ್ಯವನ್ನು ಸವಿಯಲು ನೇತ್ರವನ್ನಿತ್ತಿದ್ದಾನೆ. ಶಿವಲಿಂಗದಲ್ಲಿ ದೃಷ್ಟಿಯನ್ನಿರಿಸಲು ಕಣ್ಣಿರಿಸಿದ್ದಾನೆ (ಜೀವನಿಗೆ) ಆ ಕಣ್ಣೋಟ ಕಾಮುಕ ದೃಷ್ಟಿಯುಳ್ಳುದಾಗಬಾರದು. ನೇತ್ರದೃಷ್ಟಿಯನ್ನು, ಲಿಂಗಕಲೆಯನ್ನು ನೋಡಿ ಶಿವಮಯಗೊಳಿಸಬೇಕು. ಅಂದರೆ ಮಾತ್ರ ನೇತ್ರವು ಶಿವಲಿಂಗವಾಗುವದು. ನೋಡುವ ರೂಪವೆಲ್ಲ ಶಿವಸ್ವರೂಪವಾಗುವದು. ಈ ದೃಷ್ಟಿಯ ವಿಷಯದಲ್ಲಿ ಜ್ಞಾನಿಯಾದ ಚನ್ನಬಸವಣ್ಣನವರ ಕೆಳಗಿನ ಒಂದೇ ವಚನ ಸಾಕು –

ಲಿಂಗದ ಕಲೆ ಅಂತರಂಗಕ್ಕೆ ವೇಧಿಸುವ

ಹಲವು ಸಾಧನಂಗಳಲ್ಲಿ

ಒಂದು ಸಾಧನವನಿಲ್ಲಿ ಹೇಳಿಹೆನು ಕೇಳಿರಯ್ಯ.

ಕರದಿಷ್ಟ ಲಿಂಗದಿ, ತೆರೆದಿಟ್ಟ ದೃಷ್ಟಿ ಎವೆಹಳಚದಂತಿರ್ದಡೆ

 ಆ ಲಿಂಗವು ಕಂಗಳಲ್ಲಿ ವ್ಯಾಪಿಸುತ್ತಿಹುದು.

ಆ ಮಂಗಲಮಯವಾದ ಕಂಗಳಲ್ಲಿ ಮನವನಿರಿಸಿ

ಲಿಂಗ ನಿರೀಕ್ಷಣೆಯಿಂದ ನೆನೆಯಲು

ಆ ಲಿಂಗಮೂರ್ತಿ ಮನವನಿಂಬುಗೊಂಡು

ಪ್ರಾಣಲಿಂಗವಾಗಿ ಪರಿಣಮಿಸುತಿಪ್ಪುದು

ಬಳಿಕ ಮನೋಮಯ ಲಿಂಗವನು –

ಭೇದವಿಲ್ಲದ ಸುವಿಚಾರದಿಂದ ಪರಿಭಾವಿಸಲು,

ಆ ಲಿಂಗಮೂರ್ತಿ ಭಾವದಲ್ಲಿ ಸಮರಸಗೊಂಡು

ಭಾವಲಿಂಗವಾಗಿ ಕಂಗೊಳಿಸುತಿಪ್ಪುದು.

ಆ ಭಾವಲಿಂಗವನು ಎಡೆಬಿಡದೆ ಭಾವಿಸುತ್ತ

ನೆನಹು ನಿರೀಕ್ಷಣೆಯಿಂದ ತಪ್ಪದಾಚರಿಸಲು,

ಶರಣನು ನಿತ್ಯ ತೃಪ್ತನಾಗಿ ವಿರಾಜಿಸುತಿಪ್ಪನು.

ಇದೇ ನಮ್ಮ ಕೂಡಲ ಚನ್ನಸಂಗಯ್ಯನೊಡನೆ

ಕೂಡುವ ಪರಮೋಪಾಯವು.

ನೋಡಿದಿರಾ ! ದೃಷ್ಟಿಯ ಮಹತ್ವ ಅದೆಷ್ಟು ಅಪಾರವಾಗಿದೆ. ಪರಶಿವನ ಕೂಡುವ ಸಾಧನವೇ ದೃಷ್ಟಿ, ಶಿವನೇ ತಾನಾಗುವ ಸಾಧನವೂ ದೃಷ್ಟಿ, ಮೊಗ್ಗೆಯ ಮಾಯಿದೇವರೂ ಮಹದೈಪುರೀಶ್ವರ ಶತಕದಲ್ಲಿ –

ಲಿಂಗದೊಳಿಟ್ಟ ದೃಷ್ಟಿ ನಿಜದೃಷ್ಟಿಯೊಳಿರ್ದ ಮನಂ ಮನಸ್ಸಿನೊ |

ಳ್ಪಿಂಗದ ನಿಂದಭಾವದರೊಳ್ನೆಲೆಗೊಂಡ ಶಿವಾತ್ಮಲಿಂಗವಾ ।

ಲಿಂಗದೊಳಿರ್ದು ನಿತ್ಯಸುಖಿಯಾಗಿ ವಿರಾಜಿಸುವಂಗೆ ಬಾಹ್ಯ ಕ |

ರ್ಮಂಗಳವೇತಕಯ್ಯ ಪರಮ ಪ್ರಭುವೇ ಮಹದೈಪುರೀಶ್ವರಾ || ೫೨ |

ಇಷ್ಟ ಲಿಂಗದಲ್ಲಿ ದೃಷ್ಟಿ-ಮನ-ಭಾವಗಳು ನೆಲೆನಿಂತರೆ ಶರಣನು ಚಿರ ಪರಿಣಾಮಿಯೆನಿಸುವನು. ನಿತ್ಯಸುಖಿಯಾಗುವನು. ಇಂಥವನಿಗೆ ಬಾಹ್ಯ ಕರ್ಮಗಳ ಅವಶ್ಯಕತೆಯೇ ಇಲ್ಲ. ಅಂದಮೇಲೆ ಪರಶಿವನು ದಯಪಾಲಿಸಿದ ನೇತ್ರವನ್ನು ಗುರು-ಲಿಂಗ-ಜಂಗಮರ ದರ್ಶನಕ್ಕಾಗಿ ಮೀಸಲಾಗಿಡಬೇಕು. ಶಿವಲಿಂಗ ನೋಡುವ ಕಣ್ಣಿನಲ್ಲಿ ಪರ ಸತಿಯ ನೋಡಿದಡೆ ಅಲ್ಲಿ ಲಿಂಗವಿಲ್ಲ. ಲಿಂಗವಿಲ್ಲದೆ ಸಂಯೋಗವಿಲ್ಲ. ಸಮರಸವಿಲ್ಲ. ಅದುಕಾರಣ ನೇತ್ರದ ನಿಜವನರಿದಾಚರಿಸಬೇಕು.

ಎಡ ನೇತ್ರದ ಈಡಾ ನಾಡಿಯೇ ಸತಿಯಾಗಿ ಬಲನೇತ್ರವಾದ ಪಿಂಗಳನಾಡಿಯು ಶಿವಲಿಂಗರೂಪಪತಿಯಾಗಿ ಸುಷುಮ್ನಾನಾಳವಾದ ಭ್ರೂ ಮಧ್ಯ (ಹುಬ್ ಬಳ್ಳಿ) ಪೇಟೆಯಲ್ಲಿ ಕೂಡಿದರೆ ಸಮರಸದ ನಿತ್ಯ ಸುಖಪ್ರಾಪ್ತಿಯಾಗಿ ನಿತ್ಯತೃಪ್ತತೆ ಲಭ್ಯವಾಗು ವದು. ಇಂಥ ತೃಪ್ತಿಗೆ ನಾಶವೆಂಬುದಿಲ್ಲ. ಈ ನಿತ್ಯತೃಪ್ತಿ ನೇತ್ರದ ದೃಷ್ಟಿಯೋಗದಿಂದ ಸಾಧ್ಯವೆಂಬುದನ್ನು ಮರೆಯದಿರಬೇಕು. ಓ ಗುರುವೆ ! ಎನ್ನ ನೇತ್ರದಲ್ಲಿ ಶಿವಲಿಂಗವನ್ನು ನೆಲೆಗೊಳಿಸಿ ರೂಪುಗಳನ್ನು ಶಿವಮಯಗೊಳಿಸಿ  ಭ್ರೂಮಧ್ಯದ ಅಜ್ಞಾಚಕ್ರದ ಎರಡೆಸಳಿನ ಕಮಲಮಧ್ಯದ ಮಹಾಲಿಂಗ ದರ್ಶನವನ್ನು ಮಾಡಿಸಿ ನಿತ್ಯ ಸುಖಿಯನ್ನಾಗಿಸು.

*

೪. ರಸನೇಂದ್ರಿಯ – ರಸ ವಿಷಯ

ಶಿರಹಟ್ಟಿಯೊಳಗೊಂದು | ಕರುವಿಲ್ಲದಾಕಳಿಗೆ

ಕರೆವ ಮೊಲೆಯಿಲ್ಲ ಕರೆದುಂಬುತಿದೆ ಗೋವು

ಕರಚೋದ್ಯ ಗುರುವೆ ಕೃಪೆಯಾಗು     || ೬೯ ||

ಇಲ್ಲಿ ರಸವಿಷಯದ ನಿರೂಪಣೆ ಬಂದಿದೆ. ರಸವನ್ನು ಗ್ರಹಿಸುವದು ಜಿಹ್ವೇಂದ್ರಿಯವು. ಇದಕ್ಕೆ ಅಪ್ಪುವೇ ಮಹಾಭೂತ. ವರುಣನೇ ಅಧಿದೇವತೆ. ಈ ಜಿಹ್ವೆ (ನಾಲಿಗೆ)ಗೆ ರಸವೇ ವಿಷಯವು. ಮಧುರ (ಸಿಹಿ) ಆಮ್ಲ (ಹುಳಿ) ತಿಕ್ತ (ಕಹಿ) ಕಟು (ಖಾರ) ಕಷಾಯ (ಒಗರು) ಲವಣ (ಉಪ್ಪು) ಗಳೆಂಬ ಆರು ರಸದ ಭೇದಗಳು. ಈ ತ್ರಿಪದಿಯಲ್ಲಿ ಪ್ರತಿಪಾದಿಸಿದ ರಸದ ವ್ಯಾಖ್ಯಾನವು ಅತ್ಯಂತ ನಿಗೂಢವಾಗಿದೆ. ಆಳವಾಗಿ ವಿಚಾರಿಸುವಂಥಹದೂ ಅಹುದು.

ಶಿರಹಟ್ಟಿಯೆಂಬುದು ಒಂದು ಊರಿನ ಹೆಸರಿರಬಹುದು. ಹಟ್ಟಿಯೆಂದರೆ ದನ ಕಟ್ಟುವ ಸ್ಥಳ, ಶಿರಪದವನ್ನು ಸಿರಿಯೆಂದುದಾಗಿ ತಿಳಿದರೆ ಸಂಪದ್ಯುಕ್ತವೆಂತಲೂ ಅರ್ಥವಾಗುವದು. ಶಿರಹಟ್ಟಿ-ಸಂಪದ್ಯುಕ್ತವಾದ ದನಗಳ ಸ್ಥಾನವು. ಹಿಂದಿನ ಕಾಲದಲ್ಲಿ ಗೋಧನವನ್ನು ಪ್ರಮುಖ ಸಂಪತ್ತನ್ನಾಗಿ ಪರಿಗಣಿಸುತ್ತಿದ್ದರು. ಪುರಂದರದಾಸರು ಹಾಡಿದ –

ನೀನಾರಿಗಾದೆಯೋ ಎಲೆಮಾನವ”

ಎನ್ನುವ ಪದದಿಂದ ಗೋವಿನ ಮಹತ್ವ ತಿಳಿಯದೇ ಇರದು. ಗೋವು ಪವಿತ್ರ ಪ್ರಾಣಿ, ಅದರ ಸೇವೆಗಾಗಿ ಅನೇಕ ಮಹಾನುಭಾವಿಗಳು ತಮ್ಮ ಜೀವನವೇ ಸವೆಸಿದ್ದಾರೆ. ರಘುಕುಲದ ದಿಲೀಪ ಮಹಾರಾಜನು ವಶಿಷ್ಠ ಮುನಿಗಳ ಅಪ್ಪಣೆಯಂತೆ ನಂದಿನಿಯ ಸೇವೆ ಮಾಡಿ ಪುತ್ರ ಫಲವನ್ನು ಪಡೆಯಲಿಲ್ಲವೆ ? ಇಂಥ ಗೋವುಗಳಿರುವ ಸ್ಥಳ ಶಿರಹಟ್ಟಿಯೇ ಸರಿ.

ಪೂಜ್ಯ  ಗುರುಗಳವರು ದನದ ಮನೆಗೆʼʼ ದ್ರವ್ಯದ ಮನೆ”ಯೆಂತಲೂ ಅಪ್ಪಣೆ ಮಾಡುತ್ತಿದ್ದರು. ಒಕ್ಕಲುತನ ಪ್ರಧಾನವಾದ ನಮ್ಮ ಭಾರತ ದೇಶವು ದನಗಳಿಗಾಗಿ ಪ್ರಾಶಸ್ಯ ನೀಡಿದೆ. ನೀಡಲೇಬೇಕು. ಬಸವನನ್ನು (ಎತ್ತನ್ನು) ದೇವರನ್ನಾಗಿ ಪೂಜಿಸುವ ಪರಂಪರೆಯೂ ಇದೆ. ಒಕ್ಕಲಿಗನನ್ನು ಮೇಲಕ್ಕೆತ್ತಿ ನಿಲ್ಲಿಸುವ ಎತ್ತು ಧರ್ಮ ಮೂರುತಿಯೂ ಆಗಿದೆ. ಕೃಷಿಕನಿಗೆ, ಸಾಧು-ಸತ್ಪರುಷರಿಗೆ, ಸತ್ಕಾರ್ಯಗಳಿಗೆ ಅತ್ಯುಪಯುಕ್ತವಾದ ಪ್ರಾಣಿ ಆಕಳು. ಅದರ ಹಾಲು ಭೂಲೋಕದ ಅಮೃತ ಅಂತೆಯೇ ಅನುಭವಿಗಳು ಪಾಲುಂಡು ಮೇಲುಂಬರೆ” ? ಎಂದು ವರ್ಣಿಸಿದ್ದಾರೆ. ಇಂಥ ಅಮೃತ ದೊರೆಯುವದು ಶಿರಹಟ್ಟಿಯಿಂದಲ್ಲವೇ ?

ಶಿವಕವಿ ಚಿತ್ರಿಸಿದ ನಮ್ಮ ಆಕಳು ವಿಚಿತ್ರವಾಗಿದೆ. ಇದಕ್ಕೆ ಕರುವಿಲ್ಲ. ಹಾಲು ಕರೆವ ಮೊಲೆಗಳಿಲ್ಲ. ಆದರೂ ತನ್ನ ಹಾಲು ಕರೆದು ತಾನೇ ಉಂಬುತ್ತಿದೆ. ಅಂದ ಮೇಲೆ ಕರಚೋದ್ಯವಲ್ಲದೆ ಮತ್ತೇನು ? ಆದರೆ ಬರಡಾಕಳವ ಕರೆದು ಚರತತಿಗಿತ್ತರು ನಮ್ಮ ಶರಣರು ಭಕ್ತಿಯ ಪ್ರಭಾವದಿಂದ” ವೆಂದಿದ್ದಾರೆ ವಚನಕಾರರು. ಇಂಥ ಶರಣರ  ನಾಡಿನಲ್ಲಿ ಮೊಲೆಯಿಲ್ಲದೆಯೂ ಹಾಲು ಕರೆದರೆ ಆಶ್ಚರ್ಯ ಪಡಬೇಕಾಗಿಲ್ಲ.   

ಲೌಕಿಕದಲ್ಲಿ ರಸವನ್ನು ಗ್ರಹಿಸುವ ರಸನೆಯು ಕೇವಲ ಭೌತಿಕ ರಸಗಳನ್ನು ಮಾತ್ರ ಅಸ್ವಾದಿಸುತ್ತದೆ .ಅದರೆ ಕವಿಯ ಅಭಿಪ್ರಾಯ ರಹಸ್ಯವಾಗಿದೆ . ಜಲತತತ್ತ್ವದ ಪಧಾರ್ಥಗಳೆಲ್ಲ ರಸಗಳೆನಿಸುತ್ತವೆ .ಈ ರಸಗಳಿಗಿಂತಲೂ ಭಿನ್ನವಾದ ಎರಡು ರಸಗಳನ್ನು ಅನುಬವಿಗಳು ತಿಳಿಸಿಸ್ಸಾರೆ .ಒಂದು ಕಾವ್ಯತ್ಮಕವಾದ ರಸ ,ಇನ್ನೊಂದು ಬ್ರಹ್ಮಾನಂದ ರಸ; “ರಸೋ ವೈ ಸಃ” ಆ ಪರಬ್ರಹ್ಮ ವಸ್ತುವೂ ರಸ ಸ್ವರೂಪವೆಂದು ಶೃತಿ ಸಾರಿದೆ. ಕಾವ್ಯವಿಮಾಂಸಕರು ಕಾವ್ಯರಸಕ್ಕೆ ಬ್ರಹ್ಮಾನಂದ ಸಹೋದರವೆಂದು ಕರೆದಿದ್ದಾರೆ. ಕಾವ್ಯರಸವು ಪಾಠಕನನ್ನು ತನ್ಮಯತೆಯಲ್ಲಿ ಮುಳುಗಿಸುತ್ತದೆ. ಇದರಂತೆ ಯೋಗಿ ಮತ್ತು ಶಿವಯೋಗಿಗಳು ಸಮಾಧಿ ಸ್ಥಿತಿಯಲ್ಲಿ ಲಿಂಗಾನಂದ ರಸವನ್ನು ಅನುಭವಿಸುತ್ತಾರೆ. ಇವರಿಗೆ ದೊರೆತ ರಸವು ಸಾಕ್ಷಾತ್ ಅಮೃತ ರಸ, ಈ ರಸದ ರುಚಿಯನ್ನೇ ಶಿವಕವಿಯು ರಚಿಸಿದ್ದಾನೆ.

 ಶಿರಹಟ್ಟಿಯೆಂದರೆ ಶಿರಸ್ಸು (ತಲೆ); ಮಸ್ತಕದಲ್ಲಿ ಸಹಸ್ರದಳ ಕಮಲವಿದೆ. ದೊಡ್ಡ ಮಿದುಳು ಮತ್ತು ಸಣ್ಣ ಮಿದುಳು ಕಡಗೋಲಿನ ಮುದ್ದೆಯಂತೆ ಅನಂತನಿರಿಗೆ (ಮಡಿಕೆ)ಗಳಿಂದ ಕೂಡಿದೆಯೆಂಬ ಮಾತನ್ನು ಇಂದಿನ ಶಾರೀರಿಕ ತಜ್ಞರೂ ಒಪ್ಪಿದ್ದಾರೆ. ಅದಕ್ಕಾಗಿ ಇದನ್ನು ಸಾವಿರದಳ ಕಮಲವೆಂದು ಶಾಸ್ತ್ರಕಾರರು ಕರೆದುದು ತರ್ಕಬದ್ಧ ವಾಗಿದೆ. ಮನುಷ್ಯನ ಜ್ಞಾನದ ವ್ಯವಹಾರವೆಲ್ಲ ಇಲ್ಲಿಂದಲೇ ನಡೆಯುತ್ತದೆ. ಶಿವಯೋಗದಲ್ಲಿ ಬಲ್ಲಿದನಾದ ಸದ್ಗುರುವು ಶಿಷ್ಯನ ಈ ಪಶ್ಚಿಮ ಶಿಖಾಚಕ್ರ ಮಧ್ಯದ ಮಹಾ ಚೈತನ್ಯವನ್ನು ಹೊರತೆಗೆದು ಅಂಗೈಯಲ್ಲಿ ಲಿಂಗವನ್ನಾಗಿ ಕರುಣಿಸುತ್ತಾನೆ. ಶಿರಸ್ಸಿನಲ್ಲಿ ಒಟ್ಟು ಮೂರು ಚಕ್ರಗಳನ್ನು ಕಂಡು ಹಿಡಿದಿದ್ದಾರೆ. ನಡುದಲೆಯಲ್ಲಿ ಬ್ರಹ್ಮ ಅಥವಾ ಸಹಸ್ರಚಕ್ರವೆಂದೂ ಮಸ್ತಕಾಗ್ರದಲ್ಲಿ ಶಿಖಾಚಕ್ರವೆಂದೂ, ತಲೆಯ ಹಿಂಭಾಗದಲ್ಲಿ  ಪಶ್ಚಿಮಚಕ್ರವೆಂದೂ ಗುರುತಿಸಿದ್ದಾರೆ. ಶಿವಯೋಗ ರಹಸ್ಯ’ವೆಂಬ ಗ್ರಂಥದಲ್ಲಿ ನವಕಲ್ಯಾಣ ಮಠದ ಶ್ರೀಗಳವರು (ಪುಟ ೩೧ರಲ್ಲಿ) ಸಹಸ್ರಾರದಲ್ಲಿ ಅಮೃತಲಿಂಗವಿಹುದು. ಯೋಗಿಯು ಅದನ್ನು ಲಕ್ಷಿಸಿ ಅಮೃತರಸ ಪಾನಮಾಡಿ ಜನನ-ಮರಣಗಳನ್ನು ನೀಗುವನು. ಎಂದು ತಿಳಿಸಿದ್ದಾರೆ. ಅಲ್ಲಮಪ್ರಭುದೇವರು

  “ಉನ್ಮನಿಯ ಜ್ಯೋತಿ ಬ್ರಹ್ಮರಂಧ್ರದ ಮೇಲೆ ಸಹಸ್ರದಳ ಪದ್ಮ

 ಅಲ್ಲಿ ಅಮೃತವಿಹುದು.

. ಅಲ್ಲಿ ಓಂಕಾರ ಸ್ವರೂಪನಾಗಿ ಗುಹೇಶ್ವರ ಲಿಂಗವು ಸದಾ ಸನ್ನಿಹಿತನು”

ಎಂದು ಅಪ್ಪಣೆ ಮಾಡಿರುವರು

 ಆಧುನಿಕ ಶರೀರ ವಿಜ್ಞಾನಿಗಳು ತಲೆಬುರುಡೆಯನ್ನು ಎರಡು ಭಾಗಗಳಲ್ಲಿ ವಿಭಾಗಿಸುತ್ತಾರೆ. ಮುಂಭಾಗದಲ್ಲಿ “ ಪಿಟ್ಯುಟರಿ ಗ್ರಂಥಿʼ’ಯೆಂದೂ ಹಿಂಭಾಗದಲ್ಲಿ “ಪೀನಿಯಲ್‌ಗ್ರಂಥಿ”ಯೆಂತಲೂ ಪರಿಶೋಧಿಸಿದ್ದಾರೆ. ಈ ಪೀನಿಯಲ್ ಗ್ರಂಥಿಯು

ಒಂದು ಸಣ್ಣ ಉದ್ದಿನ ಬೇಳೆಯಷ್ಟು ಎಂದರೆ ಇಂಚಿನ ಎಂಟನೆಯ ಒಂದು ಭಾಗದಷ್ಟಿದ್ದು ನೆರೆ ಬಣ್ಣದ್ದಿರುತ್ತದೆ. ‘ಪಿಟ್ಯುಟರಿ’ ಗ್ರಂಥಿಯು ಮಾಗಿದ ಒಂದು ಸಣ್ಣ ಕವಳೆಹಣ್ಣಿನ ಗಾತ್ರದ್ದಿದ್ದು ಮಿದುಳಿಗೆ ಜೋಡಿಸಲ್ಪಟ್ಟಿರುತ್ತದೆ. ಪೀನಿಯಲ್ ಗ್ರಂಥಿ ಮತ್ತು ಪಿಟ್ಯುಟರಿ ಗ್ರಂಥಿಗಳಲ್ಲಿ ಹುದುಗಿರುವ ಸಾಮರ್ಥ್ಯದ ವಿಕಾಸದ ಮುಖಾಂತರವಾಗಿ ಹೊಸ ಹೊಸ ಮತ್ತು ಅತಿ ಉಚ್ಚವಾದ ಜ್ಞಾನವು ಎಂದರೆ ಸ್ವಯಂ ಪ್ರಭೋಧವು, ಸ್ವಾನುಭಾವವು ಒಡಮೂಡುವದೆಂದು ಆಧುನಿಕ ವಿಜ್ಞಾನವು ಒಪ್ಪಿಕೊಳ್ಳುತ್ತಿದೆ” (ಶಿವಯೋಗ ರಹಸ್ಯದ ೪-೫ ಪುಟ) ಇಂಥ ಸಣ್ಣ ಮೆದುಳಿಗೆ ಆಕಸ್ಮಿಕವಾಗಿ ಪೆಟ್ಟು ಬಿದ್ದರೆ ಜ್ಞಾನ ಶೂನ್ಯವಾಗುವದು. ಇದು ಸಕಲರಿಗೂ ಅನುಭವ ಗಮ್ಯವಾಗಿದೆ.

ಸಣ್ಣ ಮೆದುಳಿಗೆ ಎಲ್ಲ ಜ್ಞಾನತಂತುಗಳು ಜೋಡಿಸಲ್ಪಟ್ಟಿರುತ್ತವೆ. ಈ ಜ್ಞಾನ ತಂತು (ನಾಡಿ)ಗಳೆಂಬ ಆಕಳುಗಳನ್ನು ಕಟ್ಟಿದ (ಹಟ್ಟಿ ಕೇಂದ್ರ) ಸ್ಥಾನ ಸಹಸ್ರಾರ ಅಥವಾ ಸಹಸ್ರದಳಕಮಲ. ಇಲ್ಲಿ ಇನ್ನೊಂದು ಗಮನಿಸಬೇಕಾದ ಯೌಗಿಕ ವಿಚಾರವೆಂದರೆ ಶರೀರದಲ್ಲಿ ಕುಂಡಲಿನೀ ಶಕ್ತಿಯಿರುತ್ತದೆ. ಇದು* ಬೆನ್ನು ಹುರಿಯ ಕೆಳಗಿನ ತುದಿಯಲ್ಲಿ ಸುಪ್ತವಾಗಿ ಸುರುಳಿಯಾಗಿ  ಅವಿತುಕೊಂಡಿರುತ್ತದೆ. ಈ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸಿದರೆ ನವಚೈತನ್ಯವು ಸ್ಪುರಿಸುವದು. ಜಾಗ್ರತವಾದ ಕುಂಡಲಿನೀ ಶಕ್ತಿಯು ಮೇರುದಂಡದ ಅಥವಾ ಬೆನ್ನು ಹುರಿಯ ಮುಖಾಂತರವಾಗಿ ಮಾರ್ಗಕ್ರಮಣ ಮಾಡಿ ಎರಡು ಹುಬ್ಬುಗಳ ನಡುವಿನ ಅಜ್ಞಾ ಚಕ್ರಕ್ಕೆ ಬಂದು ನಿಲ್ಲುವದು. ಇದಕ್ಕೇನೇ ಕುಂಡಲಿನೀ ಶಕ್ತಿಯ ಊರ್ಧ್ವಗಮನವೆನ್ನುವರು.” ಅದಕ್ಕೆ  ಉನ್ಮನವೆಂತಲೂ ಇನ್ನೊಂದು ಹೆಸರು. ಇಂಥ ಕುಂಡಲಿನಿಯೇ ಇಲ್ಲಿಯ ಗೋವು. ಇದಕ್ಕೆ ಅದಾವ ಕರುವಿಲ್ಲ. ಕರೆವ ಮೊಲೆಯೂ ಇಲ್ಲ. ಆದರೂ ಸಹಸ್ರಾರದಲ್ಲಿ ಅಮೃತ ಬಿಂದುವನ್ನು ಸುರಿಸುವದು. ಅಂದರೆ ಅಂಗನು ಲಿಂಗದ ಶಕ್ತಿಯನ್ನರಿತು ದೃಷ್ಟಿಯೋಗದಿಂದ ಸಮರಸದ ಕೂಟದಲ್ಲಿ ಆನಂದಭರಿತನಾಗುವನು.

 ಇಂಥ ಅಮೃತವನ್ನು ಸವಿಯುವದು ಸಾಮಾನ್ಯವಾದ ಮಾತಲ್ಲ. ಅಲ್ಪರ  ಶಕ್ತಿಯೂ ಅಲ್ಲ. ಇದು ಸಕಲರಿಗೆ ಸಾಧ್ಯವಾಗುವದೂ ಇಲ್ಲ. ಅಂದಮೇಲೆ ಆಶ್ಚರ್ಯ ವಲ್ಲದೆ ಮತ್ತೇನು ? ಸಹಸ್ರಾರದ ಸವಿಯನ್ನು ಸವಿಯಬಲ್ಲವನು ಐಕ್ಯಾಂಗನು. ಶರಣಸತಿಯು ಮಹಾಲಿಂಗಪತಿಯ ಸಮರಸದಲ್ಲಿ ಐಕ್ಯನಾಗಿ ನಿತ್ಯಮುಕ್ತನಾಗುವನು.

ಮುಂಡರಗಿಯ ಮೂಲಕರ್ತೃಗಳಾದ ಅನ್ನದಾನೀಶ್ವರರು ಹಾಗೂ ಎಡೆಯೂರ ತೋಂಟದ ಸಿದ್ಧಲಿಂಗರು ಸಹಸ್ರಾರದ ಸವಿಯನ್ನು ಸವಿದು ಅನಂತಕಾಲ ತಪಗೈದ ಉದಾಹರಣೆಗಳಿವೆ.

 ಸದ್ಗುರು ಕರುಣೆಯಿಂದ ಶಿವಲಿಂಗವನ್ನು ಪಡೆದು ‘ಕರಣ ಹಸಿಗೆ’ಯನ್ನು ಅರಿತು ಕುಂಡಿಲಿನಿ ಶಕ್ತಿಯನ್ನು ಜಾಗೃತಗೊಳಿಸಿಕೊಂಡು ಸಹಸ್ರದಳ ಪದ್ಮದ ಮಹಾಲಿಂಗವನ್ನು ಕಂಡು ಅಕ್ಷಯವಾದ ಅಮೃತರಸವನ್ನು ಸವಿಯುವದು  (ಜೀವಾತ್ಮನ) ಸದ್ಭಕ್ತನ ಪರಮ ಕರ್ತವ್ಯವಾಗಿದೆ. ಇದೆಲ್ಲವೂ ಗುರುಕೃಪೆಯಿಲ್ಲದೆ ಆಗದು. ಓ ಗುರುವೆ ! ಅಂಥ ಅಮೃತವನ್ನು ಸವಿಯುವ ಸೌಭಾಗ್ಯವನ್ನು ಅನುಗ್ರಹಿಸಿ ಸಲಹು.

*

೫. ಫ್ರಾಣೇಂದ್ರಿಯ – ಗಂಧವಿಷಯ

ಪಂಪಾಕ್ಷೇತ್ರದೊಳೊಂದು | ಸಂಪಿಗೆಯ ನನೆಯುಂಟು

ಕಂಪುಂಟು ಗಾಳಿ ತಂಪುಂಟೊಳಗಿಂಚಿನ**

ಗುಂಪುಂಟು ಗುರುವೆ ಕೃಪೆಯಾಗು   II ೭೦ II

 ಪಂಚಜ್ಞಾನೇಂದ್ರಿಯದ ಪಂಚವಿಷಯಗಳಲ್ಲಿ ಕೊನೆಯದು ಗಂಧತತ್ತ್ವ; ಗ೦ಧವಿಷಯ. ಗಂಧವನ್ನು ಗ್ರಹಿಸುವ ಇಂದ್ರಿಯ ನಾಶಿಕ. ಇದಕ್ಕೆ ಪೃಥ್ವಿಯೇ ಮಹಾಭೂತ. ಅಶ್ವಿನಿ ಅಧಿದೇವತೆ ; ಅಲ್ಲಿ ಗಂಧವಿಷಯವು ಸುಗಂಧ, ದುರ್ಗಂಧ ವೆಂದು ಇಬ್ಬಗೆಯಾಗುತ್ತದೆ.

ಶಿವಕವಿಯು ಪ್ರತಿಯೊಂದು ವಿಷಯವನ್ನು ಚಮತ್ಕಾರಿಕ ರೀತಿಯಲ್ಲಿ ಪ್ರತಿಪಾದಿಸಿದಂತೆ ; ಇಲ್ಲಿ ತನ್ನ ಶಿವಕ್ಷೇತ್ರ ದರ್ಶನದ ಪರಿಚಯವನ್ನು ಮಾಡಿಸುತ್ತ ಗಂಧ ವಿಷಯವನ್ನು ಮತ್ತು ಘ್ರಾಣೇಂದ್ರಿಯದ ತತ್ತ್ವವನ್ನು ಬಿತ್ತರಿಸಿದ್ದಾನೆ. *

ವಿಜಯನಗರ ಸಾಮ್ರಾಜ್ಯದಲ್ಲಿ ಪ್ರಸಿದ್ಧವಾದುದು ಪಂಪಾಕ್ಷೇತ್ರ. ಅಲ್ಲಿ ವಿರೂಪಾಕ್ಷನ ದರ್ಶನ, ಆ ಕ್ಷೇತ್ರದಲ್ಲಿ ಪಂಪಾಸರೋವರ, ಉದ್ಯಾನಗಳು ಎದ್ದು ಕಾಣುತ್ತಿವೆ. ಇದು ರಾಜನಿರ್ಮಿತ ಮತ್ತು ರಾಜರಕ್ಷಿತವಾದ ಮೇಲೆ ಕೇಳಬೇಕೇನು ? ಇದರ ವರ್ಣನೆಯನ್ನು ಅಷ್ಟಭಾಷಾ ಕವಿಯೆನಿಸಿದ ಚಂದ್ರಶೇಖರ ವಿರಚಿತ ಪಂಪಾಸ್ಥಾನ ವರ್ಣನೆಯ ಚಂಪೂ ಕಾವ್ಯವನ್ನು ಓದಿಯೇ ಆನಂದಪಡಬೇಕು. ಹಂಪೆಯ ಕ್ಷೇತ್ರದಲ್ಲಿರುವದು ಪಂಪಾಸರೋವರ. ಅದರ ಸುತ್ತಲಿನ ವನದಲ್ಲಿ  ಸಂಪಿಗೆಯ ಮರಗಳ ಸಮೂಹ. ಅವುಗಳ ಸಂಪಿಗೆ ಪುಷ್ಪದ ಮಕರಂದ ಸುತ್ತಲೂ ಪಸರಿಸಿದೆ. ಆ ಸುಗಂಧವು ಗಾಳಿಯನ್ನಾವರಿಸಿ ಸರೋವರದ ತಂಪಿನೊಡನೆ, ಗಿಳಿ ವಿಂಡುಗಳ ಇಂಚರದೊಡನೆ ಸಮರಸವಾಗಿ ಕಂಪನ್ನು ಬೀರುತ್ತಿದೆ..  ವಿರೂಪಾಕ್ಷೇಶ್ವರನ ದರ್ಶನ ಮಾಡಿಕೊಳ್ಳುವವರಿಗೆ ಆ ಕಂಪು ತನ್ಮಯತೆಯನ್ನು ಹುಟ್ಟಿಸುತ್ತದೆ. ಸಂಪಿಗೆಯ ಪುಷ್ಪವು ಬಲುಸುಗಂಧ. ಅದು ಮೊಗ್ಗಾದಾಗಿನಿಂದ ಮಾಗುವವರೆಗೆ ತನ್ನ ಸೌಗಂಧವನ್ನು ಸೂಸುತ್ತದೆ. ಕನ್ನಡಾಂಬೆಯ ಸಿರಿಮುಡಿಗೆ ಸಂಪಿಗೆಯ ಸುಗಂಧ ಸೌಂದರ್ಯವನ್ನೀಯುತ್ತ ಬಂದಿದೆ. ಇದೆಲ್ಲವೂ ಬಾಹ್ಯ ಸೌಗಂಧದ ಪರಿ.

 ಇನ್ನು ಅಂತರಂಗದ ಸುಗಂಧದ ಸೌರಭ ಹೀಗಿದೆ. ಪಂಪಾಕ್ಷೇತ್ರವೆಂದರೆ ಶರೀರ. ಈ ಕ್ಷೇತ್ರದಲ್ಲಿರುವ ಮಹಾಚೈತನ್ಯವೇ ಪಂಪಾಪತಿ ವಿರೂಪಾಕ್ಷ. ಇಲ್ಲಿರುವ ಸರೋವರ ಸದ್ಗುರುವಿನ ಕಾರುಣ್ಯರಸರೂಪಾದುದು. ಈ ಕಾರುಣ್ಯರಸದ ಸರಸ್ಸಿನ ಪರಿಸರದಲ್ಲಿರುವ ವನವೇ ಜ್ಞಾನೇಂದ್ರಿಯಗಳ ಗುಂಪು. ಅದರಲ್ಲಿ ಸಂಪಿಗೆಯ ಮೊಗ್ಗಿನಂತಿರುವದು ಘ್ರಾಣೇಂದ್ರಿಯವು. ಇದು ಗಂಧಗ್ರಾಹಕವಾಗಿರುವದರಿಂದ ಸಂಪಿಗೆಯ  ಸಾದೃಶ್ಯವನ್ನು ಹೊಂದಿದೆ. ನಾಶಿಕವು ಪೃಥ್ವಿಯ ತತ್ತ್ವದಿಂದಾದ ಕಾರಣ ಭಕ್ತಾಂಗವೆನಿಸುವದು. ಭಕ್ತನು ನಡೆದು  (ಆಚರಿಸಿ)ತೋರುವ ಸದಾಚಾರವೇ ಸುಗಂಧದ ಕಂಪು. ಮೂಗಿನಲ್ಲಿ ಚಂದ್ರನಾಡಿಯಿರುವದರಿಂದ ತಂಪೂ ಇದೆ. ಈ ದೇಹ ಕ್ಷೇತ್ರವಾದ ಮೇಲೆ ಪಂಚಾಚಾರಗಳ ಕಂಪೂ ಹಬ್ಬಿ ಶಿವನ ಸಾಕ್ಷಾತ್ಕಾರಕ್ಕೆ ಕಾರಣವಾಗುವದು.’’ ಎನ್ನ ಸದ್ಗುಣ ಗಂಧ’’ವೆಂದು ಮುಪ್ಪಿನಾರ್ಯರು ಹಾಡಿದ್ದು ಅರ್ಥಪೂರ್ಣವಾಗಿದೆ. ಇಲ್ಲಿ ‘ಗಿಂಚಿನ ಪದಕ್ಕಿಂತಲೂ ‘ಗಿಂಪಿನ’ ಪದ ಶೋಭಾಯ ಮಾನವೂ ಸಮಂಜಸವೂ ಆಗುವದು.

ವೀರಶೈವರ ಷಟ್‌ಸ್ಥಲ ಸಿದ್ಧಾಂತದಲ್ಲಿ ಶಿವಜ್ಞಾನ ಶಿವಕ್ರಿಯೆಗಳ ಸಮನ್ವಯವಿದೆ. ಇದಕ್ಕೆ ಜ್ಞಾನ ಕ್ರಿಯೆಗಳ ಸಮ-ಸಮುಚ್ಛಯ ತತ್ತ್ವವೆಂತಲೂ ಕರೆಯುವರು. ವೀರಶೈವನಿಗೆ ಅಷ್ಟಾವರಣವೇ ಅಂಗವಾದರೆ ಪಂಚಾಚಾರವೇ ಪ್ರಾಣ, ಷಟ್‌ಸ್ಥಲವೇ ಆತ್ಮವಾಗಿವೆ. ಈ ಅಷ್ಟಾವರಣಾಂಗನು ಪಂಚಾಚಾರಗಳನ್ನು ಪ್ರಾಣವನ್ನಾಗಿಸಿದರೇನೇ ಆತ್ಮನ ಸಂದರ್ಶನವಾಗುವದು. ಮೊದಲು ಆಚಾರ ಅಳವಡಬೇಕು. ಕ್ರಿಯೆ ನಡೆಯಲ್ಲಿ ಬರಬೇಕು. ಅನುಭಾವಿಗಳು –

ಆಚಾರಃ ಪರಮೋ ಧರ್ಮ: ಆಚಾರಃ ಪರಮಂ ತಪಃ ।

ಆಚಾರವೇ ಶ್ರೇಷ್ಠ ಧರ್ಮ ಹಾಗೂ ತಪಸ್ಸೆಂದು ಪ್ರತಿಪಾದಿಸಿದ್ದಾರೆ. ಪಂಚಾಚಾರದ ಸ್ವರೂಪವನ್ನು, ಮತ್ತು ಅದರ ಮಹತ್ವವನ್ನು ಚನ್ನಬಸವಣ್ಣನವರು~

ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ

ನೃತ್ಯಾಚಾರವೆಂಬ ಪಂಚಾಚಾರದ ಆಚರಣೆಯೆಂತೆಂದಡೆ ;

ಲಿಂಗವನಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ,

ಸಜ್ಜನ ಕಾಯಕದಲ್ಲಿ ತಂದು ಗುರುಲಿಂಗ ಜಂಗಮಕ್ಕೆ ನೀಡಿ

ಸತ್ಯ-ಶುದ್ಧನಾಗಿಹುದೆ ಸದಾಚಾರ,

ಶಿವಭಕ್ತರಲ್ಲಿ ಕುಲಗೋತ್ರ ಜಾತಿವರ್ಣಾಶ್ರಮವನರಸದೆ

ಅವರೊಕ್ಕುದ ಕೊಂಬುದೆ ಶಿವಾಚಾರ

ಶಿವಾಚಾರದ ನಿಂದೆಯ ಕೇಳದಿಹುದೆ ಗಣಾಚಾರ

ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ

ಭಕ್ತಿಯಿಂದ ಆಚರಿಸುವದೆ ಭೃತ್ಯಾಚಾರ

ಇಂತೀ ಪಂಚಾಚಾರವುಳ್ಳ ಭಕ್ತರ ಒಕ್ಕುದನಿಕ್ಕಿ ಸಲಹಯ್ಯಾ

ಪ್ರಭುವೇ ! ಕೂಡಲ ಚನ್ನಸಂಗಮದೇವಾ’ (೧೧೫೯)

ಇದಕ್ಕೂ ಸ್ಪಷ್ಟವಾದ ರೀತಿಯಲ್ಲಿ – ಮತ್ತೊಂದು ವಚನ.

ಅಯ್ಯಾ ! ಶ್ರೀಗುರು ಕರುಣಿಸಿಕೊಟ್ಟ ಲಿಂಗ ಜಂಗಮವಲ್ಲದೆ

ಅನ್ಯದೈವಂಗಳ ತ್ರೈಕರಣದಲ್ಲಿ ಅರ್ಚಿಸದಿರ್ಪುದೆ ಲಿಂಗಾಚಾರವೆಂಬೆನಯ್ಯಾ

ಭಕ್ತನಾದಡೆ ಸತ್ಯ ಶುದ್ಧ ಕಾಯಕವ ಮಾಡಿ,

ಮಾಹೇಶನಾದಡೆ ಸತ್ಯ ಶುದ್ಧ ಭಿಕ್ಷವ ಬೇಡಿ

ಸಮಸ್ತ ಪ್ರಾಣಿಗಳಲ್ಲಿ ಪಾತ್ರಾಪಾತ್ರವ ತಿಳಿದು

ಹಸಿವು ತೃಷೆ ಶೀತಕ್ಕೆ ಪರಹಿತಾರ್ಥಿಯಾಗಿರ್ಪುದೆ ಸದಾಚಾರ ವೆಂಬೆನಯ್ಯಾ

ಗುರು-ಮಾರ್ಗಾಚಾರದಲ್ಲಿ ನಿಂದ ಶಿವಲಾಂಛನಧಾರಿಗಳೆಲ್ಲಾ,

ಪರಶಿವಲಿಂಗವೆಂದು ಭಾವಿಸಿ,

ಅರ್ಥಪ್ರಾಣಾಭಿಮಾನವನರ್ಪಿಸುವುದೆ ಶಿವಚಾರವೆಂಬೆನಯ್ಯಾ

ಅಷ್ಟಾವರಣಂಗಳ ಮೇಲೆ ಅನ್ಯರಿಂದ ಕುಂದು-ನಿಂದೆಗಳು

ಬಂದು ತಟ್ಟದಲ್ಲಿ ಗಣಸಮೂಹವನೊಡಗೂಡಿ

ಆ ಸ್ಥಲವ ತ್ಯಜಿಸುವದೆ ‘ಗಣಾಚಾರ’ವೆಂಬೆನಯ್ಯ

…………ಷಟ್‌ಸ್ಥಲ ಮಾರ್ಗದಲ್ಲಿ ನಿಂದ

ಭಕ್ತಗಣಂಗಳಲ್ಲಿ ಪಂಚಸೂತಕಂಗಳ ಕಲ್ಪಿಸದೆ,

ಅವರಿದ್ದ ಸ್ಥಳಕ್ಕೆ ಹೋಗಿ, ತನು-ಮನ-ಧನಂಗಳ ಸಮರ್ಪಿಸಿ

ಅವರೊಕ್ಕುಮಿಕ್ಕುದ ಹಾರೈಸಿ ಹಸ್ತಾಂಜಲಿತರಾಗಿ

ಪ್ರತ್ಯುತ್ತರವ ಕೊಡದಿರ್ಪುದೆ ‘ಭೃತ್ಯಾಚಾರ’ವೆಂಬೆನಯ್ಯಾ?

ಎಂದು ಪಂಚಾಚಾರದ ಸೂಕ್ಷ್ಮತೆಯನ್ನು ಸಾರಿದ್ದಾರೆ. ಇಂತಹ ಪ್ರಾಣಸ್ವರೂಪವಾದ ಪಂಚಾಚಾರಗಳನ್ನು ಅಳವಡಿಸಿಕೊಳ್ಳುವದೇ ಭಕ್ತತನದ ಪರಮ ಸೌಗಂಧ ಎನಿಸುವದು.

ಲಿಂಗಾಚಾರದಿಂ ತನುಶುದ್ಧವಾಗಿತ್ತು ನೋಡಾ !

ಸದಾಚಾರದಿಂ ಮನಶುದ್ದವಾಯಿತ್ತು ನೋಡಾ

ಶಿವಚಾರದಿಂ ಧನಶುದ್ಧವಾಯಿತ್ತು ನೋಡಾ |

ಗಣಾಚಾರದಿಂ ನಡೆ ಶುದ್ಧವಾಗಿತ್ತು ನೋಡಾ !

ಭೃತ್ಯಾಚಾರದಿಂ ನುಡಿ ಶುದ್ಧವಾಯಿತ್ತು ನೋಡಾ !

ಪಂಚಾಚಾರಗಳಿಂದ ಜೀವನು ಶಿವನಾಗುವನು ನೋಡಾ !

ಮೃಡಗಿರಿಯ ಅನ್ನದಾನೀಶ (ಸ.ವ.ಸಂ. ೪೨೦)

ಪಂಚಾಚಾರಗಳಿಂದ ತನು-ಮನ-ಧನ-ನಡೆ-ನುಡಿಗಳು ಶುದ್ಧವಾಗಿ ಶಿವನಾಗು ವದರಲ್ಲಿ ಸಂದೇಹವಿಲ್ಲ. ಪುಷ್ಪಪರಿಮಳ ಅಭಿನ್ನವಾಗಿರುವಂತೆ ಅಂಗಲಿಂಗಗಳ ಸಮರಸವಾಗುವದು. ಸದ್ಗುಣಾಚಾರದ ಸೌಗಂಧ ಎಲ್ಲೆಡೆಯೂ ಪಸರಿಸಬಲ್ಲುದು.

ಪೃಥ್ವಿಯು ಪಂಚತನ್ಮಾತ್ರೆಗಳಿಂದ ಕೂಡಿದ್ದರೂ ಗಂಧ ಪ್ರಧಾನವಾಗಿದೆ. ಗಂಧವಿಲ್ಲದ ವಸ್ತು ನಿರರ್ಥಕ. ಪ್ರತಿಯೊಂದಂಶದಲ್ಲಿಯೂ ತನ್ನದೇ ಆದ ಗಂಧವಿರುತ್ತದೆ. ಗಂಧವಿರಹಿತವಾದರೆ ಆ ವಸ್ತುವಿಗೆ ಬೆಲೆಯಿಲ್ಲದಾಗುವದು. ಮತ್ತು ಗಂಧ ವಿಕೃತವಾದರೂ ಸರಿಯಲ್ಲ. ಗಂಧ ಪದಾರ್ಥವು ಜೀವನಕ್ಕೆ ಅತ್ಯವಶ್ಯಕವಾಗಿದೆ. ಪೂಜೆಯ ಸಾಮಗ್ರಿಯಲ್ಲಿ ಗಂಧವೂ  ಒಂದು.

“ಸುಗಂಧಂ ಪುಷ್ಟಿ ವರ್ಧನಮ್

ಸುಗಂಧವು ಶರೀರಕ್ಕೆ ಪುಷ್ಟಿಯನ್ನು, ತುಷ್ಟಿಯನ್ನು ಕೊಡುತ್ತದೆ. ಈ ಗಂಧವು

ಸೌಮ್ಯವಾಗಿರಬೇಕು. ಅದರಲ್ಲಿ ತೀವ್ರತೆಯಿರಬಾರದು. ಪ್ರಾಕೃತಿಕ ಗಂಧವು ಪ್ರಕೃತಿಗೆ ಹಿತಕರವಾಗುತ್ತದೆ. ಕೃತ್ರಿಮ ಗಂಧದಿಂದ ವಿಕಾರ ಬೆಳೆಯುತ್ತದೆ. ಇದರಿಂದ ನಾಶಿಕಕ್ಕೂ ಕುಂದು. ಅತಿಸುಗಂಧವನ್ನು ವಾಸಿಸುವ ಘ್ರಾಣವು ತನ್ನ ಶಕ್ತಿಯನ್ನು ಕಳೆದುಕೊಳ್ಳುವದು. ಮೋಹಕಗಂಧವು ಜೀವನವನ್ನೇ ಕೆಡಿಸುತ್ತದೆ.

“ಘ್ರಾಣೇಂದ್ರಿಯ ವಿಷಯದಿಂದ ಭ್ರಮರ ಕೆಡುವದು

ಸಂಪಿಗೆಯ ಪುಷ್ಪದಲ್ಲಿ

ಸಂಪಿಗೆಯ ಸೌಗಂಧವನ್ನು ಮೋಹಿಸಿ ಭ್ರಮರವು ಕಷ್ಟಕ್ಕೀಡಾಗುತ್ತದೆಂದು ಷಣ್ಮುಖ ಶಿವಯೋಗಿಗಳು ಉಪದೇಶಿಸಿದ್ದಾರೆ. ಗಂಧ ಸುಗಂಧವಾಗಬೇಕೇ ವಿನಾ ಅತಿಗಂಧ ವಾಗಲಿ, ದುರ್ಗಂಧವಾಗಲಿ ಆಗಬಾರದು. ಮೋಹಕ ಗಂಧವನ್ನು ವಾಸಿಸುವ ನಾಶಿಕಕ್ಕೆ ನೆಗಡಿಯಾಗಲೆಂದು ಷಡಕ್ಷರಿಗಳು ಮಾರ್ಮಿಕವಾಗಿ ಹಾಡಿದ್ದಾರೆ.

ಅಂಗನೆಯರು ತೊಡೆದು ಸೂಡಿ

ದಂಗಪುಷ್ಪ ವಾಸಿಸುವೊಡೆ

ಹಿಂಗದೆನ್ನ ನಾಸಪುಟಕೆ ನೆಗಡಿಯಾಗಲಿ |

ಮಂಗಳಾತ್ಮ ಷಡಕ್ಷರಿಯ

ಲಿಂಗದಂಘ್ರಿಗಿತ್ತ ಕುಸುಮ

ಹಾಂಗೆ ವಾಸಿಸುವರೆ ಘ್ರಾಣವಿಕಸವಾಗಲೆ

ಅಂಗನೆಯರು ಪೂಸಿಕೊಂಡ ಗಂಧದಿಂದ ವಿಕಾರವಾದರೆ ಮಂಗಳಾತ್ಮಕ ಮಹಾಲಿಂಗಕ್ಕರ್ಪಿಸಿದ ಪುಷ್ಪ ಪರಿಮಳವು ಜೀವನ ವಿಕಾಸಕ್ಕೆ ಕಾರಣವೆಂಬುದನ್ನು ಅರಿಯಬೇಕು. ಮೋಹಕ ಗಂಧವನ್ನು ಮೋಹಿಸುವ ನಾಸಿಕದ ಕ್ರಿಯೆಯನ್ನು ಶಿವನತ್ತ ತಿರುಗಿಸಬೇಕು ನಾಶಿಕದಲ್ಲಿ ಆಚಾರಲಿಂಗವಿರುವದರಿಂದ  ಸದ್ಭಾವನೆಯಿಂದ ಸದಾಚಾರದಲ್ಲಿ ಗಂಧವನ್ನು ಸುಗಂಧ ಪ್ರಸಾದವಾಗಿ ಸ್ವೀಕರಿಸುವದನ್ನು ಕಲಿತರೆ ತುಷ್ಟಿ-ಪುಷ್ಟಿಗಳೆರಡೂ ಲಭಿಸುತ್ತವೆ. ಓ ಗುರುವೆ ! ಇಂಥ ಗಂಧದ ಕಂಪನ್ನು ಸ್ವೀಕರಿಸಿ ಆನಂದಿಸುವ ಅನುವನ್ನು ನೀಡು

• ಬಿ. ಶಿವಮೂರ್ತಿ ಶಾಸ್ತ್ರಿ

ಚಂ| ವೃ| ಉರಿಯೊಳಗೈದೆ ಕರ್ಪೂರದವೊಲ್ ನಿಜಲಿಂಗದ ಸುಪ್ರಭಾತದೊಳ್ |

 ಬೆರೆದು ತದೇಕರೂಪವನೆ ತಾಳ್ದ ಮಹಾತ್ಮನ ಹಾನಗಲ್ಲಸ|

 ಚ್ಚರವರನಾ ಕುಮಾರ ಶಿವಯೋಗಿವರೇಣ್ಯನ ಪಾದಪಂಕಜಂ |

ನೆರೆನೆಲೆಸುತ್ತೆರಾಜಿಸುಗೆ ಸಂತತವೆನ್ನಯ ಹೃತ್ಸರಸಿನೊಳ್|

 ಕನ್ನಡ ನಾಡಿನಲ್ಲಿ ಇಂದಿನವರೆಗೆ ಆಗಿಹೋದ ಅನಂತ ಮಹಾನುಭಾವರು ಒಂದೊಂದು ಕಲೆಗಳಿಂದ ತಂತಮ್ಮ ಜೀವನವನ್ನು ರಮ್ಯಗೊಳಿಸಿಕೊಂಡಿದ್ದಾರೆ. ಅವರಲ್ಲಿ ಹಲವಾರು ಯೋಗಿಗಳಾಗಿ, ತ್ಯಾಗಿಗಳಾಗಿ, ಗ್ರಂಥಕಾರರಾಗಿ, ಮತೋದ್ಧಾರಕರಾಗಿ, ದೇಶಭಕ್ತರಾಗಿ ಬಾಳಿ ಬೆಳಕಿಗೆ ಬಂದಿದ್ದಾರೆ. ಆದರೆ ಅವೆಲ್ಲವನ್ನೂ ಸಂಪಾದಿಸುವ ಶ್ರೇಷ್ಠ ಮಹಾನುಭಾವರೆಂದರೆ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು, ಅವರ ಇಡೀಯ ಜೀವನವು ಕಾವ್ಯಮಯವಾದ ಒಂದು ಐತಿಹ್ಯವಾಗಿದೆ. ಅವರಲ್ಲಿ ರಾಜಕೀಯ ಕ್ಷೇತ್ರವೊಂದನ್ನು ಬಿಟ್ಟು ಉಳಿದ ಎಲ್ಲ ಸಾಮರ್ಥ್ಯಗಳೂ ಗುಂಘಿತವಾಗಿದ್ದುವು ವಿಚಾರ ಸ್ವಾತಂತ್ರ್ಯ, ವಿಶಾಲ ವೈರಾಗ್ಯ, ವ್ಯಾಪಕ ಭಾವನೆ, ಜೀವ ಕಾರುಣ್ಯ, ಸಮಾಜ ಕಳಕಳಿ, ಸಂಸ್ಕೃತಿಯ ಅಭಿಮಾನ, ಕಾರ್ಯ ಕುಶಲತೆ ಮೊದಲಾದ ಅಮೋಘ ಗುಣಗಳು ಅವರಲ್ಲಿ ನೆಲೆಗೊಂಡಿದ್ದುವು. ಮತ್ತು ಅಸದೃಶವಾದ ಸ್ವಾರ್ಥತ್ಯಾಗ ಅಚಲಿತವಾದ ಧೈರ್ಯ, ಅಖಂಡವಾದ ಸಾಹಸ, ಅಪಾರವಾದ ಕಷ್ಟಸಹಿಷ್ಣುತೆ, ಅಗಣಿತವಾದ ಗುಣಗ್ರಾಹಕತೆ, ಮುಂತಾದವುಗಳು ಅವರಲ್ಲಿ ಮೂರ್ತಿಮಂತವಾಗಿದ್ದವು. ಉದಾರ ಉದ್ದೇಶ, ಅತ್ಯಧಿಕ ಉತ್ತೇಜನ, ಪ್ರಚಂಡವಾದ ಆಸಕ್ತಿ, ಕೊನೆಯಿಲ್ಲದ ಕುತೂಹಲ ಇವೆಲ್ಲ ಅವರ ಹುಟ್ಟು ಗುಣವಾಗಿದ್ದುವು. ಇವೆಲ್ಲ ಸದ್ಗುಣಗಳಿಂದ ಶ್ರೀ ಕುಮಾರ ಶಿವಯೋಗಿಯು ತನ್ನ ಹೆಸರಿಗೆ ತಕ್ಕಂತೆ ತನ್ನ ಜೀವನದಲ್ಲಿ ಇಡಿಯ ಕನ್ನಡ ನಾಡಿನ ಕುವರನಾಗಿ, ವೀರಶೈವರ ಉದ್ಧಾರಕನಾಗಿ ಬಾಳಿದನು. ಸಾಮಾನ್ಯವಾಗಿ ಹೊಟ್ಟೆಯಲ್ಲಿ ಜನಿಸುವ ಕುಮಾರನು ತಮ್ಮ ತಂದೆತಾಯಿಗಳಿಗೆ ಮಾತ್ರ ಮುದ್ದಾಗಬಹುದು. ಆದರೆ ಒಂದು ಜನಾಂಗಕ್ಕೆ ಮುದ್ದುಗುವರನಾಗುವುದು ಕಷ್ಟ. ಬಾಲ ಕೇಳಿಗಳಿಂದ ತಂತಮ್ಮ ತಂದೆತಾಯಿಗಳನ್ನು ಪ್ರೀತಿಗೊಳಿಸಬಹುದು. ಆದರೆ, ಅಸಾಧಾರಣವಾದ ಪ್ರೌಢಲೀಲೆಗಳಿಂದ ಇಡೀ ಜನಾಂಗವನ್ನೇ ಪ್ರೇಮಗೊಳಿಸುವುದು ಸಾಹಸದ ಮಾತು. ಈ ಕಾರ್ಯವನ್ನು ಕುಮಾರ ಶಿವಯೋಗಿಯು ಮಾಡಿದನು. ಮಹಾನುಭಾವನಾದನು. ಆತನ ಸಹಜವಾದ ಕಿರುನಗೆ, ನನ್ನು ವಾತುಗಳು ಪುಣ್ಯಕಳೆಗಳನ್ನು ಕಂಡು ಕೇಳಿ, ಆನಂದವಶರಾಗದ ವ್ಯಕ್ತಿಗಳಿಲ್ಲ. ಅವರ ಮೃದುವಾದ  ಮಿತವಾದ, ಅನುಭವಪೂರ್ಣವಾದ ಮಾತುಗಳಿಗೆ ಮನಸೋಲದ ಪಂಡಿತರಿಲ್ಲ. ಅವರು ಚಿತ್ತಸ್ಥೈರ್ಯದಿಂದ ವಜ್ರಕ್ಕಿಂತಲೂ ಕಠೋರವಾಗಿ ಕಂಡರೂ ಕರುಳಿನಿಂದ ಕುಸುಮಕ್ಕಿಂತಲೂ ಮೃದುವಾಗಿದ್ದರು. ಅವರು ಉಕ್ಕುವ ತಮ್ಮ ತಾರುಣ್ಯದಲ್ಲಿಯೇ ಸಂಸಾರಕ್ಕೆ ತಿಲಾಂಜಲಿಯನ್ನು ತೆತ್ತರು. ಅನುಭವದ ಅಧ್ಯಾತ್ಮಿಕ ಜೀವನದಲ್ಲಿ ನಿಂತರು. ಮುಂದೆ ಸ್ವಲ್ಪ ದಿನಗಳಲ್ಲಿಯೇ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಆಡಿಯನ್ನಿಟ್ಟರು. ಆ ಕಾರ್ಯಗಳಲ್ಲಿ ಒದಗುವ ಯಾವ ಭಯಭೀತಿಗಳಿಗೂ ಅಂಜಲಿಲ್ಲ, ಅಳುಕಲಿಲ್ಲ, ದೊಡ್ಡ ನದಿಯ ಪ್ರವಾಹವು, ಎದುರಾಗುವ ಕಾಡು ಗಿಡಮರಗಳನ್ನು ತನ್ನ ಸೆಳವಿನಿಂದ ಭೇದಿಸಿ ದೊಡ್ಡ ದೊಡ್ಡ ಗುಂಡುಬಂಡೆಗಳ ಮೇಲೆ ನೆಗೆದು ಮುದಕ್ಕೆ ಸಾಗುವಂತೆ ಅವರು ತಮ್ಮ ಕಾರ್ಯಸಾಧನದಲ್ಲಿ ಎಡಬಿಡದೆ ಅಡ್ಡಬರುವ ದುರಂತವಾದ ಎಡರುಗಳನ್ನೂ ಸಹ ತಮ್ಮ ವೈರಾಗ್ಯಾದ ವಜ್ರಮುಷ್ಟಿಯಿಂದ ಹೊಡೆದು ಪುಡಿಮಾಡಿ ತಮ್ಮ ಧೈಯದತ್ತ ವಾಯುವೇಗದಿಂದ ಸಾಗುತ್ತಿದ್ದರು. ಸತ್ಯವನ್ನು ಎತ್ತಿ ಹಿಡಿಯಲು ಸ್ವಲ್ಪವೂ ಹೆದರದೆ ಸೆಣಸಿದರು. ಅವರು ಮಾಡಿದ ಆ ಕಾರ್ಯ ಪಟುತ್ವದ ಓಜಸ್ಸು ಇಡೀ ಕರ್ನಾಟಕವನ್ನೇ ಬೆಳಗಿತು. ಆ ಪುಣ್ಯ ಪುರುಷನ ಪ್ರತಿಬಿಂಬವು ಪ್ರತಿಯೊಬ್ಬ ಕನ್ನಡಿಗನ ಕಣ್ಣಲ್ಲಿ ತೋರಿ ಮಿಂಚಿತು. ಇದಲ್ಲದೆ ಆ ಮಹಾತ್ಮನು ವೀರಶೈವ ಸಮಾಜದಲ್ಲಿ ಬಸವಣ್ಣನಂತೆ ತನ್ನದೇ ಆದ ಒಂದು ಉಚ್ಚಸ್ಥಾನವನ್ನು ಗಳಿಸಿಕೊಂಡನಲ್ಲದೆ, ಪ್ರತಿಯೊಬ್ಬ ಸಮಾಜಾಭಿಮಾನಿಯ-ಸಂಸ್ಕೃತಾಭಿಮಾನಿಯ ಹೃದಯ ಮಂದಿರದ ಮಾನ್ಯ ಮೂರ್ತಿಯಾದನು. ವಿರಕ್ತಚಕ್ರವರ್ತಿಯಾದನು.

ಜನನ ಮತ್ತು ಬಾಲ್ಯ

ಧಾರವಾಡ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನಲ್ಲಿ ‘ಜೋಯಿಸರ ಹರಳಹಳ್ಳಿ’ ಎಂಬುದೊಂದು ಗ್ರಾಮವುಂಟು, ಆ ಗ್ರಾಮದಲ್ಲಿ ‘ಬಸವಯ್ಯ ಮತ್ತು ನೀಲಮ್ಮ ಎಂಬ ಹೆಸರಿನ ಧಾರ್ಮಿಕ ಭಾವನೆಯ ದಂಪತಿಗಳು, ಧಾರ್ಮಿಕಕ್ಕೂ ದಾರಿದ್ರಕ್ಕೂ ಅನಾದಿ ಕಾಲದಿಂದಲೂ ಅತ್ಯಂತ ಸ್ನೇಹವಿದ್ದಂತೆ ಅವರ ಮನೆಯಲ್ಲಿಯೂ ಇತ್ತು. ಹೀಗಿರಲು ಕೆಲವು ಕಾಲದ ಮೇಲೆ ಆ ಧಾರ್ಮಿಕ ದಂಪತಿಗಳ ಉದರದಲ್ಲಿ  ಕ್ರಿ. ಶ. ೧೮೬೭ರಲ್ಲಿ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಜನ್ಮತೊಟ್ಟರು. ಈ ಶಿಶುವು ಹಲವು ದಿನ ಹಣೆಯಲ್ಲಿ ಭಸ್ಮಧಾರಣವಿಲ್ಲದೆ ಹಾಲು ಕುಡಿಯದ್ದರಿಂದ ಈ ಶಿಶುವಿಗೆ ‘ಹಾಲಯ್ಯ’ ಎಂದು ಹೆಸರನ್ನಿಟ್ಟರೆಂದು ಜನ ಹೇಳುತ್ತಾರೆ. ಈ ಶಿಶುವು ಆ ದಂಪತಿಗಳಿಗೆ ಎರಡನೇ ಮಗನು. ಇವನು ಮುಂದೆ ಕ್ರಮವಾಗಿ ಬೆಳೆದು ಅಕ್ಷರಾಭ್ಯಾಸವನ್ನು ಆರಂಭಿಸಿದನು. ಹೀಗಿರುವಾಗ ಮೊದಲೇ ಮನೆಯಲ್ಲಿ ಬಡತನ; ಅದರಲ್ಲಿ ಮನೆಯನ್ನು ತೂಗಿಸಿಕೊಂಡು ಹೋಗುವ ಅಜ್ಜ-ಅಪ್ಪಗಳ ವಿಯೋಗ, ಹೀಗಾಗಿ ಇವರ ವಿದ್ಯಭ್ಯಾಸಕ್ಕೆ ಅನೇಕ ಅಡಚಣೆಗಳು ಅಡ್ಡವಾದುವು. ಮನೆಯ ಅಡಚಣೆಗಳಿಗಾಗಿ ಊರನ್ನೇ ಬಿಟ್ಟು ಅಲ್ಲೇ ಸಮೀಪದಲ್ಲಿರುವʼ ಕಜ್ಜರಿ ʼಎಂಬ ಗ್ರಾಮಕ್ಕೆ ಬಂದು, ಅಲ್ಲಿಯ ಒಬ್ಬ ಮಾನ್ಯಗೃಹಸ್ಥರ ಆಶ್ರಯದಿಂದ ಆತಂಕವಿಲ್ಲದೆ ವಿದ್ಯಾಭ್ಯಾಸವನ್ನು ಆರಂಭಿಸಿದರು. ‘ಬಡವರ ಮಕ್ಕಳು ಬುದ್ಧಿವಂತರುʼ ಎಂಬ ಮಾತು ಇವರಲ್ಲಿಯೂ ಸಾರ್ಥಕವಾಗಿತ್ತು, ತಮ್ಮ ಬುದ್ಧಿ ಕೌಶಲ್ಯದಿಂದ ಬೇಗಬೇಗ ಮಾಧ್ಯಮಿಕ ಪರೀಕ್ಷೆಯವರೆಗೆ ವಿದ್ಯಾರ್ಜನೆಯನ್ನು ಮಾಡಿದರು. ಆದರೆ ಪರೀಕ್ಷೆಯಲ್ಲಿ ಮಾತ್ರ ಉತ್ತೀರ್ಣರಾಗಲಿಲ್ಲ. ಆಮೇಲೆ ಲಿಂಗದಹಳ್ಳಿಯಲ್ಲಿ ಒಂದು ಪ್ರಾಥಮಿಕ ಶಿಕ್ಷಣದ ಕನ್ನಡ ಶಾಲೆಯನ್ನು ಪ್ರಾರಂಭಮಾಡಿ, ತಾವು ಶಿಕ್ಷಕರಾದರು. ಬಾಲಕರಿಗೆ ಪಾಠ ಹೇಳುತ್ತಲೇ ತಾವು ನಿಜಗುಣರ ಅಧ್ಯಾತ್ಮಿಕ ಗ್ರಂಥಗಳನ್ನು ನೋಡುತ್ತಿದ್ದರು. ಹೀಗೆ ಕೆಲವು ಕಾಲ ಕಳೆಯಲು ಇಲ್ಲಿರುವ ಸುದ್ದಿಯನ್ನು ಕೇಳಿ ಅವರ ತಾಯಿಯಾದ ನೀಲಮ್ಮನವರು ಅವರ ವಿವಾಹವನ್ನು ಮಾಡಬೇಕೆಂದು ಮಗನ ಮೇಲಿನ ಮಮತೆಯಿಂದ ಬಂದು ಮನೆಗೆ ಕರೆದು ತಮ್ಮ ಹೃದ್ಗತವನ್ನು ಹೇಳಿದರು. ಆ ಮಾತನ್ನು ಕೇಳಿ ಶ್ರೀಗಳು-ಅಮ್ಮಾ! ಆದಾಗದು. ಅದು ಮೂರು ದಿನದ ಸಂಸಾರ ನಾಲ್ಕನೆಯ ದಿನಕ್ಕೆ ದುಃಖದ ಸಾಗರ, ಅದರಲ್ಲಿ ನನ್ನನ್ನು ಕೆಡುಹಬೇಡ. ಈ ನಶ್ವರವಾದ ಶರೀರದಿಂದ ಸತ್ಯ ಶಾಂತಿಯನ್ನು ಸಂಪಾದಿಸಬೇಕಾಗಿದೆ. ಈ ಕಾಯವೆಂಬ ಕಾಡಿನಲ್ಲಿ ಕಾಲನು ಶಾರ್ದೂಲ ವಿಕ್ರೀಡತವನ್ನೂ, ಕಾಮನು ಮತ್ತೇ ಭವಿಕ್ರೀಡಿತವನ್ನೂ ಮಾಡುತ್ತಿದ್ದಾರೆ. ಇವರನ್ನು ಸದೆಬಡಿಯಲು ಕಾಲಾರಿಯೂ ಕಾಮಾರಿಯೂ ಆದ ಶಿವನನ್ನು ಆರಾಧಿಸಬೇಕಾಗಿದೆ. ಅದಕ್ಕಾಗಿ ನನ್ನ ಹೃದಯವು ಹಂಬಲಿಸುತ್ತದೆ. ಆದ್ದರಿಂದ ಪೂಜ್ಯಳಾದ ತಾಯಿಯೆ ! ನಿನ್ನ ರಕ್ಷಣೆಯ ಋಣ ವಿಮೋಚನೆಗಾಗಿ ಶಿಕ್ಷಕ ವೃತ್ತಿಯಿಂದ ಸಂಪಾದಿಸಿ ಈ ಮುನ್ನೂರು ರೂಪಾಯಿಗಳನ್ನು ನಿನ್ನ ಉಡಿಯಲ್ಲಿ ಹಾಕುತ್ತೇನೆ ಇಷ್ಟರಿಂದ ತೃಪ್ತಳೂ ಶಾಂತಳೂ ಆಗು. ಇನ್ನು ಮೇಲೆ ನೀ ತಾಯಿಯೆಂಬ ಭಾವನೆಯು ನನ್ನಲ್ಲಿಯೂ, ನಾನು ಮಗನೆಂಬ ಮೋಹವು ನಿನ್ನಲ್ಲಿಯೂ ಖಂಡಿತವಾಗಿ ಇರಕೂಡದು’ ಎಂದು ಹೇಳಿ ನಮಸ್ಕರಿಸಿ ಹಾಗೆಯೇ ವೀರವಿರತಿಯಿಂದ ಹುಬ್ಬಳ್ಳಿಗೆ ಬಂದು ಸೇರಿದರು. ಅಲ್ಲಿ ಆಗ ಪ್ರಸಿದ್ಧ ವೇದಾಂತಿಗಳೆನಿಸಿದ್ದ ಸಿದ್ಧಾರೂಢರಲ್ಲಿ ಒಳ್ಳೇ ಜಾಣ್ಮೆಯಿಂದ ನಿಜಗುಣರ ಗ್ರಂಥಗಳನ್ನು ಅಧ್ಯಯನ ಮಾಡಿದವರಾದರೂ ಅಲ್ಲಿ ನಿಜವಾದ ಶಾಂತಿಯನ್ನು ಹೊಂದಲಿಲ್ಲ. ಅವರ ಇಷ್ಟಲಿಂಗ ತ್ಯಾಗವೇ ಮುಂತಾದ ಕೆಲವು ಆಚರಣೆಗಳು ಇವರಿಗೆ ಮೆಚ್ಚುಗೆಯಾಗಲಿಲ್ಲ. ಆದಕಾರಣ ಅಲ್ಲಿಂದ ಶ್ರೀ ಜಡೆ ಸಿದ್ಧರಿದ್ದಲ್ಲಿಗೆ ಹೋಗಿ ಅವರಿಂದ ಇಷ್ಟಲಿಂಗದ ಅವಶ್ಯಕತೆಯನ್ನು ಅದರ ನೆಲೆ ಕಲೆಗಳನ್ನೂ ಅರಿತುಕೊಂಡು ಬಂದು ಮನಃ ಅವರ ಅಪ್ಪಣೆಯಂತೆ ಆರೂಢರಲ್ಲಿಯೇ ಇರಹತ್ತಿದರು.

ಯೋಗ್ಯ ಗುರುವನ್ನು ಹೊಂದುವ ಭಾಗ್ಯ

ಹೀಗೆ ಕೆಲವು ದಿನ ಕಳೆದ ಮೇಲೆ ಯೋಗಪಿತಾಮಹರೂ ಘನವೈರಾಗ್ಯ ಸಂಪನ್ನರೂ ಆದ ಶ್ರೀ ಎಳಂದೂರು ಬಸವಲಿಂಗಸ್ವಾಮಿಗಳು ದೇಶ ಸಂಚಾರಮಾಡುತ್ತಾ ಆರೂಢರಲ್ಲಿಗೆ ದಯಮಾಡಿಸಿದರು. ವೇದಾಂತದಲ್ಲಿಯೂ ಅಧ್ಯಾತ್ಮ ಅನುಭವದಲ್ಲಿಯೂ, ಯೌಗಿಕ ವಿದ್ಯೆಯಲ್ಲಿಯೂ ಇವರಿಗೆ ಇರುವ  ಅಪಾರವಾದ ವೈದುಷ್ಯವನ್ನು ಅಸದೃಶವಾದ ವೈರಾಗ್ಯವನ್ನೂ ಕಂಡು ಆರೂಢರ ವಿದ್ಯಾರ್ಥಿಗಳಲ್ಲಿ ಅಗ್ರಸ್ಥಾನವನ್ನು ಪಡೆದ ನಮ್ಮ ಕುಮಾರಸ್ವಾಮಿಗಳು ಮೆಚ್ಚಿ ಇವರೇ ನನಗೆ ಸದ್ಗುರುಗಳೆಂದು ನಂಬಿ ಅವರ ಬೆಂಬತ್ತಿದರು. ಅವರ ಆ ಜನ್ಮದವರೆಗೂ ಗುರುಸನ್ನಿಧಿಯಲ್ಲಿದ್ದು ಸೇವೆಗೆಯ್ಯುತ್ತ ಅವರ ಕೃಪೆಗೆ ಪಾತ್ರರಾಗಿ ಅವರಿಂದ ಶಿವಯೋಗ, ಶಿವಾನುಭವಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದರು. ಹೀಗೆ ಹಲವು ದಿನ ಗುರುಕುಲವಾಸದಲ್ಲಿರುತ್ತಿರಲು ಮುಂದೆ ಶ್ರೀ ಬಸವಲಿಂಗ ಸ್ವಾಮಿಗಳವರ ಅಂತ್ಯ ಸಮಯವು ಸಮೀಪಿಸಿತು. ಆಗ ಅವರು ಕುಮಾರನನ್ನು ಕರೆದು ತಮ್ಮ ಸಾಧನ ಸಾಮಗ್ರಿಗಳನ್ನೂ ಕೊಟ್ಟು ಅನುಗ್ರಹಿಸಿ ಲಿಂಗೈಕ್ಯರಾದರು. ಕುಮಾರನಾದರೂ ಗುರುವಿತ್ತುದನ್ನೆ ತನ್ನ ಜೀವನದ ಪರಮ ಸಂಪತ್ತೆಂದು ಸ್ವೀಕರಿಸಿ ಸಂತೋಷಚಿತ್ತನಾದರೂ ಗುರುವಿನ ವಿರಹದ ವ್ಯಥೆಯನ್ನು ಕೊಂಚಕಾಲ ಅನುಭವಿಸದೆ ಇರಲಿಲ್ಲ.

ತಷೋಭೂಮಿ !

ಅನಂತರ ಏಕಾಂಗಿಯಾಗಿದ್ದು ಪ್ರಶಾಂತ ಚಿತ್ತದಿಂದ ತಪಸ್ಸನ್ನಾಚರಿಸಿ ಭಾವೀ ಸಮಾಜ ಮತ್ತು ಸಂಸ್ಕೃತಿಗಳ ಸೇವೆಗೆ ಆತ್ಮಶಕ್ತಿಯನ್ನು ಸಂಪಾದಿಸಲು ಯೋಗ ಯೋಗ್ಯವಾದ ತಪೋಭೂಮಿಯಾದ ನಿಜಗುಣರಿಗೆ ನಿಜ ನೆಲೆಯಾದ ಶಂಭುಲಿಂಗನ ಬೆಟ್ಟಕ್ಕೆ ಬಂದರು. ಅಲ್ಲಿ ಅನಂತಕಾಲವಿದ್ದು ಅತ್ಯುಗ್ರತಪವನ್ನಾಚರಿಸಿ ಅಚ್ಚಳಿಯದ ಶಾಂತಿ ದಾಂತಿಗಳನ್ನು ಸಂಪದಿಸಿದರು. ಆತನಲ್ಲಿ ವಿಲಕ್ಷಣವಾದ ಆತ್ಮ ತೇಜಸ್ಸು ಅಲ್ಲಿ ಹೊರಹೊಮ್ಮಿತು. ಅಂತರಾತ್ಮನಲ್ಲಿ ಆತನಿಗೆ ಆಳವಾದ ನೆಮ್ಮಿಗೆಯು ಚಿಮ್ಮಿತು. ಆದ್ದರಿಂದ ಅವನು ಅಲ್ಲಿಂದ ಹೊರಟು ಸೊರಬ ಪ್ರಾಂತದ ಕ್ಯಾಸನೂರು ಷಟ್ಕಾವ್ಯದ ಗುರುಬಸವಸ್ವಾಮಿಗಳ ಗದ್ದಿಗೆಯಲ್ಲಿ ಕೆಲವು ದಿನ ನಿಂತು ಅನುಷ್ಠಾನವನ್ನು ಆಚರಿಸತೊಡಗಿದನು. ಅಲ್ಲಿ ಸ್ವಯಂಪ್ರಕಾಶದ ದಿವ್ಯಜ್ಞಾನವು ಆತನಲ್ಲಿ ಮೈದೋರಿತು. ಸಾಮಾನ್ಯವಾಗಿ ಮನುಷ್ಯಮಾತ್ರರಿಗಿರುವ ಮಾನ, ಮಾಯಾ, ಲೋಭಗಳು ನಷ್ಟವಾದವು. ರತಿ, ಭಯ, ಶೋಕಗಳು ನಿರ್ಮೂಲವಾದವು ಹೀಗಿರಲು ಇವರ ಈ ಕೀರ್ತಿಯು ನಾಡಿನ ನಾಲ್ಕೂ ಕಡೆಗೆ ಹಬ್ಬತೊಡಗಿತು.

ಹಾನಗಲ್ಲ ಮಠಾಧಿಕಾರ

ಅದೇ ಸಮಯದಲ್ಲಿ ಧಾರವಾಡ ಜಿಲ್ಲಾ ಹಾನಗಲ್ಲ ವಿರಕ್ತಮಠಕ್ಕೆ ಒಬ್ಬ ಒಳ್ಳೇ ಮೂರ್ತಿಗಳು ಬೇಕಾದುದರಿಂದ ಕೀರ್ತಿವೆತ್ತ ಇವರನ್ನೇ ಮಾಡಬೇಕೆಂದು ಭಕ್ತರಲ್ಲಿ ಯೋಚನೆಯು ಹುಟ್ಟಿತು. ಅದರಂತೆ ಎಲ್ಲರೂ ಸೇರಿ ಇವರ ಬಳಿಗೆ ಬಂದು ವಿಷಯವನ್ನು ಭಿನ್ನವಿಸಿದರು. ಅದಕ್ಕೆ ಇವರು ಮೊದಲು ಒಪ್ಪಲಿಲ್ಲವಾದರೂ ಕೊನೆಗೆ ಅವರ ಆಗ್ರಹಾತಿಶಯಕ್ಕೆ ಮಠದ ಸ್ವಾಮಿಗಳಾದರೂ ಮಠದ ಮೋಹವನ್ನಿಟ್ಟುಕೊಳ್ಳಲಿಲ್ಲ. ಭೂಮಿ ಕಾಣಿಕೆಗಳ ಸಂಪಾದನೆಯ ಲೋಭವನ್ನು ಹಚ್ಚಿಕೊಳ್ಳಲಿಲ್ಲ. ಮಠದಲ್ಲಿಯೇ ಒಂದು ಪಾಠಶಾಲೆಯನ್ನು ಸ್ಥಾಪಿಸಿ ಅನ್ನದಾನವನ್ನೂ ಜ್ಞಾನ ಬೋಧೆಯನ್ನೂ ಪ್ರಾರಂಭಿಸಿದರು.

ಮಹಾಸಭೆಯ ಸಂಸ್ಥಾಪನೆ

 ಇಡಿಯ ಸಮಾಜವೇ  ಅಜ್ಞಾನಾಂಧಕಾರದಲ್ಲಿರುವಾಗ, ಅನೈಕ್ಯದ ಕಾಡುಸ್ಥಿತಿಯಲ್ಲಿರುವಾಗ, ಇದೊಂದು ಪಾಠಶಾಲೆಯಿಂದ ಅದಕ್ಕೆ ಏನಾಗಬೇಕು? ಹಿರಿಯ ಮನೆಯ ಕತ್ತಲನ್ನೆಲ್ಲಾ ಒಂದೇ ಒಂದು ಮಿಣುಕುವ ಸೊಡರು ಹೇಗೆ ಕಳೆಯಬಲ್ಲುದು? ಎಂದು ಯೋಚಿಸಿ ಇದಕ್ಕಿಂತಲೂ ಮಿಗಿಲಾದ ಕಾರ್ಯವನ್ನು ಕೈಗೊಳ್ಳಬೇಕು, ಸಮಾಜದ ಪ್ರತಿಯೊಂದು ವ್ಯಕ್ತಿಯೂ ಸುಧಾರಣೆಯನ್ನು ಹೊಂದಬೇಕು. ಸಾಂಪತ್ತಿಕ, ಶೈಕ್ಷಣಿಕ, ನೈತಿಕ ಮೊದಲಾದ ಸಲಕರಣೆಗಳನ್ನು ಊರ್ಜಿತ ಸ್ಥಿತಿಗೆ ಬರಬೇಕು ಎಂಬ ಉದಾತ್ತವಾದ ಯೋಚನೆಯನ್ನು ಮಾಡಿ ಅದಕ್ಕಾಗಿ ಅಲ್ಲಿಲ್ಲಿ ಸಂಚರಿಸುತ್ತ ಬೋಧಿಸುತ್ತ ಹುರಿದುಂಬಿಸುತ್ತ ಧಾರವಾಡಕ್ಕೆ ಬಂದು ಅಲ್ಲಿಯ ಹಲವು ಪ್ರಮುಖರೊಡನೆ ಪರ್ಯಾಲೋಚಿಸಿ ಕ್ರಿ.ಶ.೧೯೦೪ರಲ್ಲಿ ತಮ್ಮ ದೀರ್ಘ ಸಾಹಸದಿಂದ ಶ್ರೀಮದ್ವೀರಶೈವ ಮಹಾಸಭೆಯನ್ನು ಸ್ಥಾಪಿಸಿದರು. ಜನ ಜಾಗ್ರತೆಯಿಲ್ಲದ ವಿಜ್ಞಾನ ಯುಗದ ಗಾಳಿಯಿಲ್ಲದ ಆ ಕಾಲದಲ್ಲಿ ಇಂತಹದೊಂದು ಮಹಾಸಭೆಯನ್ನು ಸ್ಥಾಪಿಸಿದ್ದು ಶ್ರೀಗಳಲ್ಲಿರುವ ಅದ್ವೀತಿಯವಾದ ಬುದ್ಧಿಸಾಮರ್ಥ್ಯವನ್ನು ವ್ಯಕ್ತಮಾಡುವುದಿಲ್ಲವೇ? ಆ ಸಭೆಯು ಆರೆಳು ವರ್ಷಗಳ ವರೆಗೆ ತಪ್ಪದೇ ಅವರ ನೇತೃತ್ವದಲ್ಲಿಯೇ ನಡೆಯಿತು. ಅದು ಈಗ ಕುಂಟುತ್ತಿರುವುದು ಲಿಂಗವಂತ ಸಮಾಜದ ದುರ್ದೈವವೇ ಸರಿ. ಆ ಸಭೆಯಿಂದ ಸಮಾಜದಲ್ಲಿ ಆದ ಕ್ರಾಂತಿಗಳು ಅನಿತಿನಿತಲ್ಲ. ಸಾಮಾಜಿಕ, ಶೈಕ್ಷಣಿಕ, ಸಾಂಪತ್ತಿಕ, ಸಾಹಿತ್ಯ ಮುಂತಾದ ಕಾರ್ಯಗಳು ಆ ಸಭೆಯ ಮುಖದಿಂದಲೇ ಸಾಗಹತ್ತಿದವು. ಅವು ಇಂದು ಈ ಸ್ಥಿತಿಯಲ್ಲಿರುವುದಾದರೂ ಆ ಮಹಾಸಭೆಯ ಬಲದಿಂದಲೇ. ಆ ಮೇಲೆ ಶ್ರೀಗಳು ಧರ್ಮೋತೇಜಕ ಸಭೆ, ಶಿವ ಪೋಷಿಣೀಸಭೆ ಮುಂತಾದವುಗಳನ್ನು ಸ್ಥಾಪಿಸಿ ಅಲ್ಲಲ್ಲಿ ನೆರವೇರಿಸಿದರು. ಅವುಗಳ ಮುಖದಿಂದ ಧಾರ್ಮಿಕ ನೈತಿಕ ವಿಚಾರಗಳನ್ನು ಹರಡಿದರು. ಆ ಕಾಲವು ವೀರಶೈವರ ಉತ್ಕ್ರಾಂತಿಯ ಕಾಲವಾಯಿತು.

ಸಂಸ್ಕೃತಿಯ ಸಂರಕ್ಷಣ

ಇವರಿಗೆ ಸಂಸ್ಕೃತಿಯಲ್ಲಿ ಅಪಾರವಾದ ಅಭಿಮಾನವಿತ್ತು. ಅದಕ್ಕಾಗಿ ಅವರು ತಮ್ಮ ತ್ರಿಕರಣಗಳನ್ನೂ ಸವೆಸಿದರು. ಅಲ್ಲಲ್ಲಿ ಸಭೆಗಳನ್ನು ಕರೆಯುತ್ತ ಸದ್ಬೋಧೆಯನ್ನು ಬೀರುತ್ತ ಸಂಚರಿಸುವಾಗ ಹಲವು ಕಡೆ ‘ನಿಧಿ’ ಕೂಡಿಸಿ ಪಾಠಶಾಲೆಗಳನ್ನು ಸ್ಥಾಪಿಸಿದರು. ಹಾವೇರಿ, ಹುಬ್ಬಳ್ಳಿ, ಬಾಗಲಕೋಟೆ, ಅಬ್ಬಿಗೇರಿ, ಅಕ್ಕಿಆಲೂರು, ರೋಣ, ಇಳಕಲ್ಲ, ನೀರಡಗುಂಭ, ಅನಂತಪುರ, ಕೆಳದಿ ಚಿತ್ತಾಪುರ ಮುಂತಾದ ಊರುಗಳಲ್ಲಿ ಕೆಲವು ಸ್ವಂತ ಪ್ರಯತ್ನದಿಂದಲೂ ಕೆಲವು ಪರಪ್ರೇರಣೆಯಿಂದಲೂ ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ಈಗ ಕೆಲವು ನಡೆಯುತ್ತಿವೆ, ನಿಂತುಹೋಗಿವೆ. ಮೊಟ್ಟಮೊದಲು ಸ್ವಾಮಿಗಳವರ ಉಪದೇಶದಿಂದಲೇ ವೀರಶೈವರಲ್ಲಿ ವಾಚನ ಮಂದಿರಗಳು ಸ್ಥಾಪಿತವಾದುವು. ಪ್ರಾಚೀನ ಗ್ರಂಥಗಳ ಸಂಶೋಧನವನ್ನು ಮಾಡಲಿಕ್ಕೆ ಒಂದು ಮಂಡಲವನ್ನು ಏರ್ಪಡಿಸಲು ಸ್ವಾಮಿಗಳವರು ಪ್ರಯತ್ನ ಮಾಡಿದರು.  ಆದರೆ ಜನ-ಧನ ಸಹಾಯವು ಸಾಕಷ್ಟಾಗದ ಮೂಲಕ ಅದು ಸಂಪೂರ್ಣ ಸಿದ್ಧಿಗೆ ಹೋಗಲಿಲ್ಲ. ಹಾಗಾದರೂ ಶ್ರೀಗಳವರು ಕೆಲವು ಮಂದಿ ಪಂಡಿತರನ್ನು ತಂಜಾವೂರು, ತ್ರಾವಣಕೋರ ಮೊದಲಾದ ಸ್ಥಳಗಳಿಗೆ ಕಳಿಸಿ, ಕೆಲವು ಮಹತ್ವದ ವೀರಶೈವ ಮತ ಗ್ರಂಥಗಳನ್ನು ಸಂಗ್ರಹಿಸಿ ಅವುಗಳ ಸಂಶೋಧನವನ್ನು ಮಾಡಿಸಿದರು ಮತ್ತು ಶಿವಯೋಗ ಮಂದಿರದಲ್ಲಿ ವೀರಶೈವ ಶಿಕ್ಷಣ ಸಮ್ಮೇಲನವನ್ನು ಸ್ಥಾಪಿಸಿದರು. ಆದರೆ ಅದು ಒಂದು ವರ್ಷ ಮಾತ್ರ ನಡೆಯಿತು. ಇದಲ್ಲದೆ ಕೊಲ್ಲಾಪುರದ ಕೈ ವೀರಬಸವಶ್ರೇಷ್ಠಿ ಬಿ. ಎ. ಅವರನ್ನು ಪಾಶ್ಚಾತ್ಯದೇಶಗಳಿಗೆ ವೀರಶೈವ ಪ್ರಚಾರಕ್ಕೆ ಕಳಿಸಬೇಕೆಂದು ಶ್ರೀಗಳವರು ಸಾಹಸಮಾಡಿದರು.  ಕಾರಣಾಂತರಗಳಿಂದ ಈ ಕಾರ್ಯವು ಕೊನೆಗಾಣಲಿಲ್ಲ. ಶ್ರೀಗಳವರ ಪ್ರಯತ್ನ ವಿಶೇಷದಿಂದಲೇ ಹುಳದ ಬಾಯಿಗೆ ಬಿದ್ದು ಹಾಳಾಗಿಹೋಗುತ್ತಿದ್ದ ಎಷ್ಟೋ ವಚನ ಗ್ರಂಥಗಳು ಪ್ರಸಾರಕ್ಕೆ ಬಂದವು. ಹೊಸಗ್ರಂಥಗಳಿಗೆ ಶ್ರೀಗಳವರು ಮುಕ್ತಹಸ್ತದಿಂದ ಸಹಾಯ ಮಾಡುತ್ತಿದ್ದರು. ಕನ್ನಡ ಸಂಸ್ಕೃತ ಮತ್ತು ಇಂಗ್ಲೀಷ್ ಓದುವವರಿಗೂ ಹಲವು ವಿಧವಾಗಿ ಸಹಾಯ ಮಾಡಿದರು. ಕಾಶಿಯಲ್ಲಿ ಅಭ್ಯಾಸ ಮಾಡುವಾಗ ಶ್ರೀ ಮ.ನಿ.ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳಿಗೂ, ಲಿಂಗೈಕ್ಯ ಶ್ರೀ ಬಾಳೇಹಳ್ಳಿ ಶ್ರೀ ಜಗದ್ಗುರು ಶಿವಾನಂದ ಶಿವಾಚಾರ ಮಹಾಸ್ವಾಮಿಗಳಿಗೂ ಶ್ರೀಗಳು ಧನಸಹಾಯ ಮಾಡಿದರೆಂದು ತಿಳಿದುಬರುತ್ತದೆ. ಧರ್ಮತರಂಗಿಣಿ, ಶಿವಪ್ರತಾಪ ಮೊದಲಾದ ಮಾಸ ಮತ್ತು ವಾರ ಪತ್ರಿಕೆಗಳು ಶ್ರೀಗಳವರ ಕೃಪೆಯಿಂದಲೇ ಹೊರಡುತ್ತಿದ್ದುವು. ಹೀಗೆ ಹಲವು ವಿಧವಾಗಿ ಶ್ರೀಗಳವರು ಲಿಂಗವಂತ ಸಂಸ್ಕೃತಿಯ ಸಂರಕ್ಷಣೆಯನ್ನು ಮಾಡಿದರು.

  ಸಮಾಜದ ಸಂಸ್ಕರಣ

 ಸಮಾಜದಲ್ಲಿರುವ ಇನ್ನಿತರ ಕೊರತೆಗಳಿಗಾಗಿ ಶ್ರೀಗಳವರು ಹಗಲಿರುಳು ಕನವರಿಸುತ್ತಿದ್ದರು. ಸಮಾಜದ ಪ್ರತಿಯೊಂದು ಕಲೆಗಳೂ ಹೇಗೆ ಮುಂದಕ್ಕೆ ಬರುವುವೆಂದು ಸದಾ ಯೋಚಿಸುತ್ತಿದ್ದರು. ಸಮಾಜದೇಳ್ಗೆಯ ಆಸಕ್ತಿಯು ಅವರ ರಕ್ತದ ಪ್ರತಿಕಣದಲ್ಲಿಯೂ ಬೆರೆತಿದ್ದಿತು. ಅದಕ್ಕಾಗಿ ಅವರು ಪಟ್ಟ ಶ್ರಮವನ್ನು ಊಹಿಸುವುದೇ ಅಸಾಧ್ಯ. ಸಮಾಜದಲ್ಲಿರುವ ಕಸವನ್ನೆಲ್ಲ ರಸವನ್ನಾಗಿ ಮಾಡಲು ಅವರು ಪ್ರಯತ್ನಪಟ್ಟರು. ಆ ಸಮಯದಲ್ಲಿ ತಮ್ಮ ಶರೀರದ ಸೌಖ್ಯವನ್ನೂ ಶ್ರಮವನ್ನೂ ಗಣಿಸಲಿಲ್ಲ. ಆ ಕಾರ್ಯದಲ್ಲಿ ಪ್ರವೃತ್ತರಾದಾಗ ಅವರಿಗೆ ಬಿಸಿಲು ಬೆಳದಿಂಗಳಾಗಿಯೂ, ಉಪವಾಸವು ಊಟವಾಗಿಯೂ, ಯೋಚನೆಯೇ ಜಪವಾಗಿಯೂ ಪರಿಣಮಿಸಿದವು. ಪರಳಿಯ ಪ್ರಕರಣದಲ್ಲಿ ಶ್ರೀಗಳು ವೀರಶೈವರ ಪರವಾಗಿ ಪ್ರಬಲವಾಗಿ ಹೋರಾಡಿ ಜಯಶೀಲರಾದ ವಿಷಯವು ಚಿರಸ್ಮರಣೀಯವಾಗಿದೆ. ಶಿರಸಂಗಿ ದೇಶಗತಿಯ ವ್ಯಾಜ್ಯದ ನಿರ್ಣಯವು ಲಿಂಗಾಯತ  ಫಂಡಿನಂತೆ ಆಗುವುದರ ಸಲುವಾಗಿ ಶ್ರೀಗಳು ಹೇರಳ ಹಣವನ್ನು ಕೂಡಿಸಿ ಕೊಟ್ಟುದಲ್ಲದೆ ಅಹೋರಾತ್ರಿ ಅವಿಶ್ರಾಂತ ಶ್ರಮವಹಿಸಿ ಕೆಲಸ ಮಾಡಿದ್ದನ್ನು ವೀರಶೈವ ಸಮಾಜವು  ಎಂದಿಗೂ ಮರೆಯುವಂತಿಲ್ಲ. ಕಲಘಟಗಿ, ಸಿದ್ದಾಪುರ ಮೊದಲಾದ ಕಡೆಗಳಲ್ಲಿ ಹೋಗಿ ಅಲ್ಲಿರುವ ಜನಗಳ ವಾಗದ್ವೈತದ ಹುಚ್ಚನ್ನು ಬಿಡಿಸಿ ಲಿಂಗಯೋಗದ ತತ್ವವನ್ನು ಬೀರಿದರು. ‘ಹಾನಗಲ್ಲ ಶ್ರೀಗಳಿಂದ ಸಿದ್ಧಾಪುರದ ಸಾಧು ನಿರಸನ’ ಎಂಬ ತಲೆ ಬರೆಹದ ಲೇಖನವನ್ನು ‘ಮೈಸೂರು ಸ್ಟಾರ್’ ಪತ್ರಿಕೆಯಲ್ಲಿ ಓದಿದ್ದು ಜನರ ನೆನಪಿನಲ್ಲಿದೆ. ಜನರ ವ್ಯಾಜ್ಯಗಳನ್ನು ತಮ್ಮ ಬುದ್ಧಿ ಬಲದಿಂದ ಬಗೆಹರಿಸಿ ಅವರು ಕೋರ್ಟು ಕಚೇರಿಗಳಿಗೆ ದುಡ್ಡು ಸುರಿಯದಂತೆ ಮಾಡುತ್ತಿದ್ದರು. ವಿವಾಹ ಕಾರ್ಯಗಳಲ್ಲಿ ಮದ್ದು, ಮೆರವಣಿಗೆ ಮೊದಲಾದವುಗಳಿಗೆ ಮಾಡುತ್ತಿದ್ದ ಅತಿವ್ಯಯವನ್ನು ಎಷ್ಟೋ ಕಡೆಗಳಲ್ಲಿ ಕಡಿಮೆ ಮಾಡಿದರು. ಹೀಗೆ ಒಂದಲ್ಲ ಎರಡಲ್ಲ ಅನಂತ ಬಗೆಯಾಗಿ ಸಮಾಜ ಸುಧಾರಣೆಯನ್ನು ಮಾಡಿದರು. ‘ಕಾಯಕವೇ ಕೈಲಾಸ’ ಎಂಬ ಶರಣರ ದಿವ್ಯ ಬೋಧನೆಯನ್ನು ಜನರಿಗೆ ಸಾರಿದರು. ಪ್ರತಿಕ್ಷಣದಲ್ಲಿಯೂ ಜನಜೀವನದಲ್ಲಿ ಬೆರೆತು ತಿಳಿವನ್ನು ಬೋಧಿಸಿದರು.

ಶಿವಯೋಗ ಮಂದಿರದ ಸ್ಥಾಪನೆ

ಈ ರೀತಿಯಾಗಿ ಅವರೊಬ್ಬರೇ ಸಮಾಜದಲ್ಲಿ ಸಂಚರಿಸಿ ಈ ಸುಧಾರಣೆಯ ಕಾರ್ಯವನ್ನು ಮಾಡುವುದಕ್ಕಿಂತಲೂ ಇಡಿಯ ಗುರುವರ್ಗವೇ ಸುಧಾರಿಸಿ ಈ ಕಾರ್ಯಕ್ಕೆ ಬೆಂಬಲಿಗರಾದರೆ ಪ್ರಗತಿಯ ಇನ್ನೂ ಹೆಚ್ಚು ಹೆಚ್ಚಾಗಿ ಸಾಗಿ ಶೀಘ್ರದಲ್ಲಿ ಸಮಾಜವು ಸುಧಾರಣೆಯ ಶಿಖರವನ್ನೇರುವುದೆಂದು ಮನಸ್ಸಿನಲ್ಲೇ ಯೋಚಿಸತೊಡಗಿದರು. ಅದೇ ಸಮಯಕ್ಕೆ ವೈರಾಗ್ಯಮೂರ್ತಿಯಾದ ಬಾಗಲಕೋಟೆಯ ಮಲ್ಲಣಾರ್ಯರ ಸಮಾಗಮವಾಯಿತು. ಬೆಂಕಿಯು ಗಾಳಿಯ ಸಂಪರ್ಕದಿಂದ ಪ್ರಜ್ವಲಿಸುವಂತೆ ಅವರ ಉತ್ತೇಜನ ಸಂಭಾಷಣೆಯಿಂದ ಇವರಲ್ಲಿ ಮೊಳೆತ ಯೋಜನೆಯು ಪಲ್ಲವಿಸಿ ಪ್ರಫುಲ್ಲವಾಯಿತು. ಕೂಡಲೇ ತಮ್ಮ ವಿಚಾರವನ್ನು ತಾವೇ ಸ್ಥಾಪಿಸಿದ ಬಾಗಲಕೋಟೆಯ ನಾಲ್ಕನೆಯ ವೀರಶೈವ ಮಹಾಸಭೆಯ ಮುಂದಿರಿಸಿ ನಿರ್ಧರಿಸಿದರು. ಆ ನಿರ್ಧಾರದಂತೆ ಕ್ರಿ.ಶ.೧೯೦೯ರಲ್ಲಿ ಬಿಜಾಪುರ ಜಿಲ್ಲಾ ಬಾದಾಮಿ ಸಮೀಪದ ಈಗಿರುವ ಸ್ಥಳದಲ್ಲಿ ‘ಶ್ರೀ ಶಿವಯೋಗ ಮಂದಿರವನ್ನು ಸ್ಥಾಪಿಸಿದರು. ಆ ಸಂಸ್ಥೆಯ ದಕ್ಷಿಣಕ್ಕೆ ಬನಶಂಕರಿ, ನಾಗನಾಥ, ಮಹಾಕೂಟ, ವಾತಾಪಿಪುರ (ಬಾದಾಮಿ) ಉತ್ತರ ಪಟ್ಟದಕಲ್ಲು, ಐಹೊಳೆ ಶಂಕರ ಲಿಂಗ ದೇವಾಲಯ, ಸಿದ್ಧನಾಥಾಶ್ರಮಗಳು ಶೋಭಿಸುತ್ತಿವೆ. ಕ್ರೂರ ಮೃಗಗಳ ವಾಸದಿಂದಲೂ, ಕಳ್ಳಕಾಕರ ಭಯದಿಂದಲೂ ಭೀಕರವಾದ ಆ ಅರಣ್ಯವು ಇಂದು ಆಶ್ರಮವಾಗಿ ಸತ್ಪುರುಷರಿಗೆ ಆಶ್ರಯವಾಯಿತು. ಮಗ್ಗುಲಲ್ಲಿಯೇ ತಿಳಿತಿಳಿಯಾಗಿ ಹರಿಯುವ ಮಲಪ್ರಭಾನದಿಯ ನೀರು, ಹಚ್ಚಗೆ ಹಸುರುಮುಡಿದು ಹೂತು ಕಾತು ಕಂಗೊಳಿಸುವ ತರುಲತೆಗಳು, ಆ ಹೂ ಗಂಪನ್ನು ಹೊತ್ತು ಹಗುರಾಗಿ ತೀಡುವ ತಂಗಾಳಿ ಪಾಂಥಸ್ಥರ ಪರಿಶ್ರಮವನ್ನು ಪರಿಹರಿಸುವುವು. ಅಲ್ಲಿ ಕುಕಿಲ್ವ ಕೋಗಿಲೆಗಳು, ನರ್ತಿಸುವ ನವಿಲುಗಳು, ಹರಿದಾಡುವ ಹರಿಣಗಳು, ಹಾರಾಡುವ ಹಕ್ಕಿಗಳು; ಓಡಾಡುವ ಮೊಲ ಅಳಿಲುಗಳು ನೋಡುವವರ ಕಣ್ಮನಗಳನ್ನು ತಣಿಸುವುವು. ಅನುಷ್ಠಾನಕ್ಕೆಂದು ಕಟ್ಟಿಸಿದ ಹಸರು ಹುಲ್ಲಿನ ಗುಡಿಸಲುಗಳು, ಕಲ್ಲುಬಂಡೆಗಳಿಂದ ಕಟ್ಟಿದ ಗವಿಗಳು ತಾವಾಗಿ ಹಟ್ಟಿ ಹೆಣೆದು ನಿಂತ ಲತಾ ಮಂಟಪಗಳು ಪ್ರತಿಯೊಬ್ಬರ ಚಿತ್ತವೃತ್ತಿಗಳನ್ನೂ ಸೆಳೆದು ಶಾಂತಿಗೊಳಿಸುವುವು, ಅದರಲ್ಲಿಯೂ ಚೈತ್ರ ಮಾಸದ ಹುಣ್ಣಿಮೆಯ ತಿಳಿಯಾದ ಬೆಳುದಿಂಗಳಲ್ಲಿ ನಿಂತು ಸುತ್ತಮುತ್ತಿನ ಆ ನೈಸರ್ಗಿಕ ವನ ಸೌಂದರ್ಯವನ್ನು ನಿರೀಕ್ಷಿಸುವ ಪ್ರತಿಯೊಬ್ಬನ ಹೃದಯದಲ್ಲಿ ಆನಂದವುಂಟಾಗುತ್ತದೆ. ಅಷ್ಟೇ ಅಲ್ಲ, ನೋಡುವವನ ಹೃದಯವೂ ಸಹ ಆ ಕಾಡಿನ ಚೆಲುವಿನಲ್ಲಿ ತಲ್ಲೀನವಾಗಿಬಿಡುತ್ತದೆ. ಇಂತಹ ಪ್ರಾಕೃತಿಕ ಸೌಂದಯ್ಯದಿಂದ ಕೂಡಿದ ಆ ಸಂಸ್ಥೆಯ ಸ್ಥಿರಜೀವಿತಕ್ಕೆ ಶ್ರೀಗಳವರು ಸುಮಾರು ೪-೫ ಲಕ್ಷ ರೂಪಾಯಿಗಳನ್ನು ಕೂಡಿಸಿದರು. ಸುಮಾರು ೪-೫ ಮೈಲಿನ ಭೂಮಿಯ ಸ್ವಾಮಿತ್ವವನ್ನು ಸತ್ಕಾರದಿಂದ ಸಂಪಾದಿಸಿದರು. ೧೦೦-೨೦೦ ಗೋವುಗಳನ್ನು ರಕ್ಷಿಸಿದರು. ಅವುಗಳ ಸಲುವಾಗಿ ೫೦ ಎಕರೆ ಗುಡ್ಡವನ್ನುಸರಕಾದವರಿಂದ ಇನಾಮನ್ನಾಗಿ ಪಡೆದರು. ಸದ್ಭಕ್ತರು ಬೇರೆಬೇರೆ ಕಡೆಗೆ ನೂರಾರು ಕೂರಿಗೆ ಭೂಮಿಯನ್ನು (೧ ಕೂರಿಗೆಗೆ ೪ ಎಕರೆ) ಭಕ್ತಿಯಿಂದ ಅರ್ಪಿಸಿದರು. ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಫ್ಯಾಕ್ಟರಿಯನ್ನು ಬಾಗಿಲು ಕೋಟೆಯಲ್ಲಿ ಸ್ಥಾಪಿಸಿದರು. ಶಿವಯೋಗ ಮಂದಿರದಲ್ಲಿಯೇ ಒಂದು ದೊಡ್ಡ ಗ್ರಂಥಾಲಯವನ್ನು ರಚಿಸಿದರು. ಅದರಲ್ಲಿ ಕನ್ನಡ, ಸಂಸ್ಕೃತ, ಮರಾಠಿ, ಹಿಂದಿ, ಇಂಗ್ಲೀಷ್ ಗ್ರಂಥಗಳನ್ನು ಸುಮಾರು ಮೂರು ಸಾವಿರಕ್ಕೂ ಮೇಲ್ಪಟ್ಟು ಶೇಖರಿಸಿದರು. ಇದಲ್ಲದೆ ತಾಳೆಯೋಲೆಗಳನ್ನು ಕೈಬರೆಹದ ಕಡತಗಳನ್ನೂ ೩೦೦-೪೦೦ಕ್ಕೆ ಕಡಿಮೆಯಿಲ್ಲದಷ್ಟು ಕೂಡಹಾಕಿದ್ದಾರೆ. ಪರಿಶುದ್ಧವಾದ ಭಸ್ಮ, ಪಂಚಸೂತ್ರದ ಶಿವಲಿಂಗಗಳನ್ನು ತಯಾರಿಸುವ ಏರ್ಪಾಡನ್ನು ಮಾಡಿದರು. ವೈದ್ಯರ ಸಂಶೋಧನವನ್ನು ಮಾಡಿದರು. ಹಲವು ದಿವ್ಯೌಷಧಿಗಳನ್ನು ತಯಾರಿಸಿದರು. ಬಿಳುಪನ್ನು ಕಳೆಯುವ ‘ಧೃತಿ’ ಎಂಬ ಸಿದ್ದೌಷಧಿಯು ಅಲ್ಲಿ ಈಗಲೂ ಸಿಕ್ಕುತ್ತದೆ. ಅದರಿಂದ ಎಷ್ಟೋ ಜನರು ಗುಣ ಹೊಂದುತ್ತಲಿದ್ದಾರೆ. ಶಿವರಾತ್ರಿಯ ಜಾತ್ರೆಯ ಕಾಲಕ್ಕೆ ಹಲವು ಪರಿಷತ್ತು ನಡೆಯುವಂತೆ ವ್ಯವಸ್ಥೆ ಮಾಡಿದ್ದಾರೆ. ಆ ಸಂಸ್ಥೆಯಲ್ಲಿ ಅಂದಿನಿಂದ ಇಂದಿನವರೆಗೆ ಸುಮಾರು ೩೦೦-೩೫೦ಕ್ಕೆ ಕಡಿಮೆಯಿಲ್ಲದಷ್ಟು ಸಾಧಕರು ಅಧ್ಯಯನ ಮಾಡಿ ತಯಾರಾಗಿದ್ದಾರೆ. ಕನ್ನಡ, ಸಂಸ್ಕೃತ, ಸಂಗೀತಗಳಲ್ಲಿ ಸಾಕಷ್ಟು ಜ್ಞಾನವನ್ನು ಸಂಪಾದಿಸಿದ್ದಾರೆ. ಅಷ್ಟಾಂಗ ಯೋಗವನ್ನೂ ಇಷ್ಟ ಲಿಂಗದ ವಿಚಾರವನ್ನೂ ಅರಿತುಕೊಂಡಿದ್ದಾರೆ. ಪ್ರಾಣಾಯಾಮದ ವಿಧಾನವನ್ನೂ ಪ್ರಾಣಲಿಂಗದ ನೆಲೆ ಕಲೆಗಳನ್ನೂ  ಗುರ್ತಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಆ ಸಂಸ್ಥೆಯಿಂದ ಭಾಷಣಕಾರರು, ಕೀರ್ತನಕಾರರು, ಪೌರಾಣಿಕರು, ಲೇಖಕರು, ಯೋಗಿಗಳು, ಅನುಭವಿಗಳು, ಸಂಗೀತಜ್ಞರು ಮುಂತಾಗಿ ಅನೇಕ ಕಲೆಗಳಲ್ಲಿ ತಯಾರಾಗಿದ್ದಾರೆ. ಈ ಸಂಸ್ಥೆಗೆ ಸಂಬಂಧಪಟ್ಟ ಶಾಖಾಮಂದಿರಗಳನ್ನು ಕಪ್ಪನಹಳ್ಳಿ, ಕೋಡಿಕೊಪ್ಪ, ಬಾದಾಮಿ ಮೊದಲಾದ ಸ್ಥಳಗಳಲ್ಲಿ ಸ್ಥಾಪಿಸಿದ್ದಾರೆ. ಈ ಸಂಸ್ಥೆಯಿಂದ ತಯಾರಾಗಿ ಹೋದ ಹಲವರು ಅಲ್ಲಲ್ಲಿ ಪಾಠಶಾಲೆ, ಬೋರ್ಡಿಂಗುಗಳನ್ನು ಸ್ಥಾಪಿಸಿದ್ದಾರೆ. ಆದುದರಿಂದ ವೀರಶೈವ  ಸಮಾಜಕ್ಕೂ ಸಂಸ್ಕೃತಿಗೂ ಈ ಸಂಸ್ಥೆಯಿಂದ ಅಪಾರವಾದ ಕೆಲಸವಾಗಿದೆ. ಈ ದೃಷ್ಟಿಯಿಂದ ವೀರಶೈವ ಸಮಾಜಕ್ಕೆ ಉಪಕಾರಮಾಡಿದ ಈ ಸಂಸ್ಥೆಯು ಆರ್ಯ ಸಮಾಜಕ್ಕೆ ‘ಕಾಂಗಡಿ ಗುರುಕುಲ’ವಿದ್ದಂತೆ ಇದೆಯೆನ್ನಬಹುದು. ಸಾಹಿತ್ಯಸೇವೆಗೆ, ಅನುಭವ ವಿಚಾರಕ್ಕೆ ೨೦ನೇ ಶತಮಾನದ ಅನುಭವ ಮಂಟಪವನ್ನು ಸ್ಥಾಪಿಸಿ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ದ್ವೀತಿಯ ಬಸವಣ್ಣನೆನಿಸಿದರು.

ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು ಎತ್ತರವೂ ತೆಳುವೂ ಆದ ಮೈಕಟ್ಟು, ಹೊಳೆಯುವ ಕಣ್ಣುಗಳು, ಮಿಗಿಲಾದ ಕಾರ್ಯ ಶ್ರದ್ಧೆ, ನೈಜವಾದ ವೈರಾಗ್ಯ, ದೂರದೃಷ್ಟಿಯಿಂದ ಕೂಡಿದ ಕಾರ್ಯಪಟುತ್ವ, ಮಿಗಿಲಾದ ವಿದ್ಯಾಭಿಮಾನ, ಅತಿಶಯವಾದ ಜ್ಞಾನಾಭಿರುಚಿ, ಚೊಕ್ಕವಾದ ಸತ್ಯಸಂಧತೆ, ಗಂಭೀರವಾದ ಮಾತುಕತೆ ಇತ್ಯಾದಿ ಸದ್ಗುಣಗಳಿಂದ ಕೂಡಿದ್ದರು, ಆದುದರಿಂದ ಅವರನ್ನು ನಿಜವಾಗಿಯೂ ಆಧುನಿಕ ಕಾಲದ ಮಹಾನುಭಾವರೆನ್ನಬಹುದು. ಈ ಮಹಾತ್ಮರನ್ನು ಕುರಿತು ಕನ್ನಡದಲ್ಲಿ ಸ್ಮಾರಕ ಸಂಚಿಕೆ’ ‘ಕಾರಣಿಕ ಕುಮಾರಶಿವಯೋಗಿ’ ಎಂಬ ಗ್ರಂಥಗಳು ಹುಟ್ಟಿವೆ. ಶಿವಯೋಗ ಮಂದಿರದ ಇತ್ತೀಚೆಗೆ ‘ಸುಕುಮಾರ’ ಎಂಬ ಒಂದು ಮಾಸ ಪತ್ರಿಕೆ ಕೂಡ ಪ್ರಕಟವಾಗುತ್ತಿದೆ. ಹೀಗೆ ಶ್ರೀಗಳ ಚರಿತ್ರೆಯು ಪ್ರಭಾವಪೂರ್ಣವಾಗಿದೆ.

(ಆಕರ : ವೀರಶೈವ ಮಹಾಪುರುಷರು ಲೇ:ಬಿ. ಶಿವಮೂರ್ತಿಶಾಸ್ತ್ರಿ)