ಲೇಖಕರು :
ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ
ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.
ಮುಂಡರಗಿ
ಪಂಚ ಮಹಾಭೂತಗಳ – ಪಂಚೀಕರಣ
ಭೂತ ಪಂಚಕ ಪಂಚ | ಭೂತ ತವೆ ಕೂಡಲ
ದ್ಭೂತಮಯವಾದ ಭೂತಳಕೆ ಕರ್ತ ಭೂ-
ನಾಥ ಶ್ರೀಗುರುವೆ ಕೃಪೆಯಾಗು || ೬೧ ॥
ಪಂಚಮಹಾಭೂತಗಳ ಪ್ರತ್ಯೇಕವಾದ ವಿಷಯವನ್ನು ಪ್ರತಿಪಾದಿಸಿ ಅವುಗಳ ಪಂಚೀಕರಣವನ್ನು ಗ್ರಂರ್ಥಕರ್ತನು ಪ್ರಸ್ತಾಪಿಸುತ್ತಾನೆ.
ಮಹಾದೇವನಾದ ಪರಮಾತ್ಮನ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ್ಯಗಳೆಂಬ ಐದು ಮುಖಗಳಿಂದ ನೆಲ,ಜಲ, ಅನಲ, ಅನಿಲ, ಆಕಾಶಗಳೆಂಬ ಸಮಷ್ಟಿರೂಪ ಪಂಚಭೂತಗಳು ಹುಟ್ಟಿದವು. ಅವು ಮುಂದೆ
ʼ’ಪಂಚಮಹಾಭೂತಂಗಳ ಪಂಚಾಂಶಿಕಮಂ
ಪಂಚೀಕೃತಿಯನೈದುತ್ತಿರಲು ದೇಹವಾಯ್ತು”
ಎಂದು ಚನ್ನಬಸವಣ್ಣನವರು ಕರಣಹಸಿಗೆಯಲ್ಲಿ’ ದೇಹದ ಉತ್ಪತ್ತಿಗೆ ಪಂಚ ಮಹಾಭೂತಗಳ ಪಂಚೀಕರಣವೇ ಕಾರಣವೆಂದು ತಿಳಿಸಿದ್ದಾರೆ. ಈ ಪಂಚೀಕರಣದ ವ್ಯಾಖ್ಯೆಯನ್ನು ವಿದ್ಯಾರಣ್ಯ ಮುನಿಗಳು ತಮ್ಮ ಪಂಚದಶಿ’ಯೆಂಬ ವೇದಾಂತ ಗ್ರಂಥದಲ್ಲಿ –
“ದ್ವಿಧಾ ವಿಧಾಯ ಚ ಏಕೈಕಂ
ಚತುರ್ಧಾ ಪ್ರಥಮಂ ಪುನಃ |
ಸ್ವಸ್ವೇತರ ದ್ವಿತೀಯಾಂಶೈಃ
ಯೋಜಯೇತ್ ಪಂಚ ಪಂಚತೇ || ೧ – ೨೬ ||
ಎಂಬುದಾಗಿ ಪ್ರತಿಪಾದಿಸಿದ್ದಾರೆ. ಇದಕ್ಕೆ ಸರಿಯಾದ ಅರ್ಥಬರುವಂತೆ ಕನ್ನಡ ಷಟ್‌ಶಾಸ್ತ್ರಗಳ ನಿರ್ಮಾಪಕರಾದ ನಿಜಗುಣಶಿವಯೋಗಿಗಳು ತಮ್ಮ ಪರಮಾರ್ಥ ಗೀತೆಯಲ್ಲಿ –
“ಆ ಭೇದದೊಳರಿ ಭೂತಮಿವೈದು |
ಶೋಭೆಯನೈದಿದ ವೊಂದೊಂದೈದು ||
ಸರಿಭಾಗದೊಳೊಂದೆರಡಾಗಿ |
ಎರಡರೊಳೊಂದಂಶವೆ ನೆಲೆಯಾಗಿ ||
ಉಳಿದರ್ಧಂಶಂಗಳೆ ನಾಲ್ಕಾಗಿ |
ತಿಳಿಭಾಗಂ ಬಡೆದವು ಸಮನಾಗಿ ||
ನೆಲೆಯಾಗಿರ್ಧಾಯಂಶಂಗಳೊಳು |
ಉಳಿದ ನಿಜಾಂಶವನಾ ಮಿಕ್ಕರೊಳು ||
ಬೆರಕೆಯನೈದಿದಮೊಂದೊಂದೈದು |
ವಿರಚಿಸಿ ತತ್ತ್ವಮಿವಿಪ್ಪತ್ತೈದು ||
ಈ ತತ್ತ್ವಸಮೇಷ್ಟಿಯೇ ತನುವಾಯ್ತು!
ಈ ತೆರನಿಂ ಪಂಚೀಕೃತವಾಯ್ತು | |೨ – ೨||
ಸಕಲರಿಗೂ ತಿಳಿಯುವಂತೆ ಪಂಚೀಕರಣವನ್ನು ವಿಶದಪಡಿಸಿದ್ದಾರೆ.
ಈ ಪಂಚೀಕರಣವನ್ನು ಸ್ಪಷ್ಟವಾಗಿ, ಸ್ಪುಟವಾಗಿ ತಿಳಿಯಲು ಬೆಳ್ಳಿ-ಬಂಗಾರ ತಾಮ್ರ-ಹಿತ್ತಾಳಿ ಮತ್ತು ಕಬ್ಬಿಣವೆಂದು ಪಂಚಲೋಹದ ನಾಣ್ಯಗಳನ್ನು ತೆಗೆದು ಕೊಂಡು ಐದರಲ್ಲಿಯೂ ಎರಡೆರಡು ಭಾಗಮಾಡಿ ಒಂದರ್ಧಭಾಗವನ್ನು ಹಾಗೇ ಇಟ್ಟು, ಉಳಿದರ್ಧ ಭಾಗಗಳಲ್ಲಿ ಪುನಃ ನಾಲ್ಕು ನಾಲ್ಕು ಭಾಗಗಳನ್ನು ಮಾಡಿ ಈ ನಾಲ್ಕು ಭಾಗಗಳ ವಿನಿಮಯವನ್ನು ಇತರ ನಾಣ್ಯಗಳ ಭಾಗದೊಡನೆ ಮಾಡಿದರೆ, ಎಲ್ಲ ನಾಣ್ಯಗಳು ಪ್ರತಿಯೊಂದು ಲೋಹದ ಅಂಶವನ್ನು ಪಡೆದು, ತಾನು ಅರ್ಧ ಪ್ರಮಾಣ ದಲ್ಲಿ ಇರುವದರಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವದು. ಅಂದರೆ ಬಂಗಾರದ ನಾಣ್ಯವು ಅರ್ಧಭಾಗವಿದ್ದು ಉಳಿದ ಬೆಳ್ಳಿ, ತಾಮ್ರ, ಕಬ್ಬಿಣದ ಎರಡಾಣೆ (೧|೮ನೇ ಭಾಗ)ಯಷ್ಟನ್ನು ಪ್ರತಿಯೊಂದರಿಂದ ಪಡೆದು ತಾನು ಪೂರ್ಣವಾಗುವದು. ಇದರಂತೆ ಪೃಥ್ವಿ, ಅಪ್, ತೇಜ, ವಾಯು, ಆಕಾಶಗಳನ್ನು ವಿಭಾಗಿಸಿ ವಿನಿಮಯ ಗೊಳಿಸುವದ ರಿಂದ ಅವು ತಮ್ಮ ಸ್ವಂತ ಅಸ್ತಿತ್ವವನ್ನು ಅರ್ಧ ಇಟ್ಟುಕೊಂಡು ಉಳಿದಭೂತಗಳ ೮ ನೆಯ ಭಾಗವನ್ನು ಪಡೆದುಕೊಳ್ಳುತ್ತವೆ. ಹೀಗೆ ಐದು ಭೂತಗಳೂ ಐದೈದಾಗಿ ಇಪ್ಪತ್ತೈದು ಭಾಗಗಳಾಗುತ್ತವೆ. ಅಲ್ಲದೆ ಇಪ್ಪತ್ತೈದು ತತ್ತ್ವಗಳೆನಿಸುತ್ತವೆ. ಪೃಥ್ವಿಯಲ್ಲಿ ತನ್ನ ಅಂಶವು ಅರ್ಧವಾಗಿರುವದರಿಂದ ಹೆಚ್ಚು ಗುಣಧರ್ಮವು ಅದರದೇ ಆಗುವದು. ಉಳಿದ ಐದರ ಪ್ರಮಾಣವು ಅದರಲ್ಲಿ ಸಮಾವೇಶವಾಗಿರುತ್ತದೆ. ಶಾರೀರಿಕ ಗುಣಧರ್ಮವನ್ನು ವಿಂಗಡಿಸಿದರೆ ಪಂಚಭೂತಗಳ ಪಂಚೀಕರಣದ ಮರ್ಮವು ಸ್ಪಷ್ಟವಾಗುವದು.
ಶರೀರದಲ್ಲಿ ಕಾಣುವ ಪಂಚಕರ್ಮೇಂದ್ರಿಯಗಳು ಪೃಥ್ವಿಯ ಅಂಶಗಳು. ಅವು ಯಾವುಗಳೆಂದರೆ, ಗುದ, ಗುಹ್ಯ, ಪಾದ, ಪಾಣಿ, ಮುಖ (ಬಾಯಿ), ಪೃಥ್ವಿಯ ಅರ್ಧಭಾಗವೇ ಗುದೇಂದ್ರಿವು. ಪೃಥ್ವಿಯಲ್ಲಿ ಸೇರಿದ ಎಂಟನೇ ಭಾಗದ (೧|೮ನೇ ಭಾಗ) ಜಲವೇ ಗುಹ್ಯೆದ್ರಿಯವು. ಒಂದೆಂಟನೇ ಭಾಗದ ಅಗ್ನಿಯೇ ಪಾದವು. ಎಂಟನೇ ಭಾಗದ ವಾಯುವೇ ಪಾಣಿ (ಕೈ). ಅದರ ಎಂಟನೇ ಭಾಗದ ಆಕಾಶವೇ ಮುಖ (ಬಾಯಿ) ವೆನಿಸುವದು. ಗಂಧ, ರಸ, ರೂಪ, ಸ್ಪರ್ಶ, ಶಬ್ದಗಳೆಂಬ ಪಂಚತನ್ಮಾತ್ರೆಗಳೇ ಜಲದ ಅಂಶಗಳು. ಆ ಅಪ್ಪುವಿನ ಅರ್ಧಭಾಗವು ರಸವೆನಿಸುವದು. ಜಲದಲ್ಲಿ ಸೇರಿದ ಅಗ್ನಿಯ ಎಂಟನೇ ಭಾಗವು ರೂಪವಾಗುವದು. ವಾಯುವಿನ ಎಂಟನೇ ಭಾಗವು ಸ್ಪರ್ಶವಾಗುವದು. ಆಕಾಶದ ಎಂಟನೇ ಭಾಗವು ಶಬ್ದ, ಪೃಥ್ವಿಯ ಎಂಟನೇ ಭಾಗವೇ ಗಂಧವು.
ಇನ್ನು ಅಗ್ನಿತತ್ತ್ವದಿಂದ ಹುಟ್ಟಿದವುಗಳು ನೇತ್ರ, ತ್ವಕ್, ಶ್ರೋತ್ರ, ಘ್ರಾಣ, ಜಿಹ್ವೆ. ಗಳೆಂಬ ಜ್ಞಾನೆಂದ್ರಿಯಗಳು, ಅಗ್ನಿಯ ಅರ್ಧಭಾಗವೇ ನೇತ್ರವು ಉಳಿದರ್ಧ ಭಾಗದಲ್ಲಿ ಸೇರಿದ ಕಾಲುಭಾಗದ ವಾಯುವೇ ತ್ವಕ್ಕು; ಕಾಲುಭಾಗದ ಆಕಾಶವೇ ಶ್ರೋತ್ರವು. ಪೃಥ್ವಿಯ ಕಾಲುಭಾಗವೇ ಘ್ರಾಣವೆನಿಸುವದು. ಅಪ್ಪುವಿನ ಪಾದಾಂಶವೇ ಜಿಹ್ವೆ.ಯು.
ವಾಯು ಮಹಾಭೂತದಿಂದ ಉತ್ಪನ್ನವಾದವುಗಳು ವ್ಯಾನ, ಸಮಾನ, ಉದಾನ, ಅಪಾನ, ಪ್ರಾಣಗಳೆಂಬ ಪಂಚವಾಯುಗಳು, ವಾಯುವಿನ ಅರ್ಧಭಾಗವೇ ವ್ಯಾನವಾಯು, ಈ ವಾಯುವಿನ ಅರ್ಧಭಾಗದಲ್ಲಿ ಸೇರಿದ ಆಕಾಶದ ಪಾದಾಂಶವು ಸಮಾನವಾಗುವದು. ಅಗ್ನಿಯ ಕಾಲುಭಾಗವೇ ಉದಾನವಾಯು, ಕಾಲುಭಾಗವೇ ಅಪಾನವಾಯು. ಪೃಥ್ವಿಯ ಕಾಲುಭಾಗವೇ ಪ್ರಾಣವಾಯು. ಅಂತೇನೆ ಪೃಥ್ವಿಯನ್ನು ಬಿಟ್ಟು ಮೇಲಕ್ಕೆ ಹಾರಿದ ಮಾನವನಿಗೆ ಪ್ರಾಣವಾಯು ಸಿಕ್ಕುವದಿಲ್ಲ.
ಮನ-ಬುದ್ಧಿ-ಚಿತ್ತ ಅಹಂಕಾರಗಳೆಂಬ ಅಂತಃಕರಣ ಚತುಷ್ಟಯವು ಜಾತೃ ಅಥವಾ ಆತ್ಮನು ಹುಟ್ಟಿದ್ದು ಆಕಾಶ ಮಹಾಭೂತದಿಂದ. ಆಕಾಶದ ಅರ್ಧಭಾಗವೇ ಙ್ಞತೃ. ಆಕಾಶದ ಅರ್ಧಭಾಗದಲ್ಲಿ ಸೇರಿದ ಕಾಲುಭಾಗದ ವಾಯುವೇ ಮನವಾಗು ವದು. ಪಾದಾಂಶದ ಅಗ್ನಿಯೇ ಬುದ್ದಿಯು, ಅಪ್ಪುವಿನ ಪಾದಾಂಶವೇ ಚಿತ್ತ. ಪೃಥ್ವಿಯ ಪಾದಾಂಶವೇ ಅಹಂಕಾರ. ಹೀಗೆ ಇಪ್ಪತ್ತೈದು ತತ್ತ್ವಗಳು ಹುಟ್ಟಿದವು. ಪಂಚ ಕರ್ಮೇಂದ್ರಿಯಗಳು, ಪಂಚತನ್ಮಾತ್ರೆಗಳು, ಪಂಚಜ್ಞಾನೇಂದ್ರಿಯಗಳು, ಪಂಚವಾಯು ಗಳು, ಮತ್ತು ಅಂತಃಕರಣ ಚತುಷ್ಟಯದೊಡನೆ ಕೂಡಿದ ಆತ್ಮನು ಸೇರಿ ಇಪ್ಪತ್ತೈದು ತತ್ತ್ವಗಳಾಗುತ್ತವೆ.*
ಈ ಇಪ್ಪತ್ತೈದು ತತ್ತ್ವಗಳಿಂದಲೇ ಭೌತಿಕ ಶರೀರದ ಉತ್ಪತ್ತಿಯಾಗುವದೆಂದು ವೇದಾಂತಿಗಳು ಪ್ರತಿಪಾದಿಸುತ್ತಾರೆ. ಶಿವಾದ್ವೈತಿಗಳಾದ ಶರಣರು ಶರೀರ ಉತ್ಪತ್ತಿಗೆ ಮೂವತ್ತಾರು (೩೬) ತತ್ತ್ವಗಳನ್ನು ಹೇಳುತ್ತಾರೆ.
“ಆತ್ಮ ತತ್ತ್ವ ಇಪ್ಪತ್ತೈದು ; ವಿದ್ಯಾತತ್ತ್ವ ಹತ್ತು ; ಶಿವತತ್ತ್ವ ಒಂದು
ಅದೆಂತೆಂದೊಡೆಃ ಭೂತಾದಿ ಪಂಚಕಂಗಳೈದು,
ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು,
ಶಬ್ದಾದಿ ವಿಷಯಂಗಳೈದು,
ವಾಗಾದಿ ಕರ್ಮೇಂದ್ರಿಯಂಗಳೈದು
ಮನವಾದಿ ಪಂಚಕಂಗನೈದು; ಆತ್ಮತತ್ತ್ವ ಇಪ್ಪತ್ತೈದು
ಕರ್ಮಸಾದಾಖ್ಯ, ಕರ್ತೃಸಾದಾಖ್ಯ, ಮೂರ್ತಿಸಾದಾಖ್ಯ,
ಅಮೂರ್ತಿ ಸಾದಾಖ್ಯ, ಶಿವಸಾದಾಖ್ಯ,
ನಿವೃತ್ತಿಕಲೆ, ಪ್ರತಿಷ್ಠಾಕಲೆ, ವಿದ್ಯಾಕಲೆ
ಶಾಂತಿಕಲೆ, ಶಾಂತ್ಯತೀತಕಲೆ ಇಂತು ವಿದ್ಯಾತತ್ತ್ವಹತ್ತು
ಶಿವತತ್ತ್ವ ಒಂದು; ಇಂತು ಮೂವತ್ತಾರು ತತ್ತ್ವಂಗಳು
…………….ಅಪ್ರಮಾಣ ಕೂಡಲಸಂಗಮದೇವ.ʼʼ
ಜ.ಚ.ನಿ. ಯವರು ತಮ್ಮ ‘ಶಿವಾದೈತ ದರ್ಶನ’ ದಲ್ಲಿ (ಪುಟ ೩೧) “ಶಿವ, ಶಕ್ತಿ, ಸದಾಶಿವ, ಈಶ್ವರ, ಶುದ್ಧವಿದ್ಯೆ, ಮಾಯೆ, ಕಲಾ, ಕಾಲ, ಅಶುದ್ಧವಿದ್ಯೆ, ನಿಯತಿ, ರಾಗ, ಪುರುಷ, ಪ್ರಕೃತಿ, ಬುದ್ಧಿ, ಅಹಂಕಾರ, ಮನಸ್ಸು, ಪಂಚಕರ್ಮೇಂದ್ರಿಯ, ಪಂಚಜ್ಞಾನೇಂದ್ರಿಯ, ಪಂಚತನ್ಮಾತ್ರೆ, ಪಂಚಭೂತಂಗಳು” ಎಂದುದಾಗಿ ಮೂವತ್ತಾರು ತತ್ತ್ವಗಳನ್ನು ತಿಳಿಸಿದ್ದಾರೆ.
ಈ ಮೂವತ್ತಾರು ತತ್ತ್ವಗಳಲ್ಲಿ ಮೊದಲಿನವೈದು ಶುದ್ಧಾಧ್ವತತ್ತ್ವಗಳು. ಮಧ್ಯದವು ಎಂಟು ಮಿಶ್ರಾಧ್ವತತ್ತ್ವಗಳು, ಮುಂದಿನವು ಇಪ್ಪತ್ತು ಮೂರು ಅಶುದ್ಧಾದ್ವ ತತ್ತ್ವಗಳು. ಮೊದಲಿನವೈದು ಶುದ್ಧಾದ್ವತತ್ತ್ವಗಳು ಶಿವನಿಗೆ ಸಂಬಂಧಿಸಿದವು. ನಂತರ ಎಂಟು ಮಿಶ್ರಾಧ್ವತತ್ತ್ವಗಳು ಶಕ್ತಿಗೆ ಸಂಬಂಧವಾಗುತ್ತವೆ. ಇವರಿಬ್ಬರ ಸಂಯೋಗದಲ್ಲಿ ವ್ಯಕ್ತವಾಗುವ ಜೀವಾತ್ಮನು ಅಶುದ್ಧತತ್ತ್ವದಿಂದ ಉತ್ಪನ್ನವಾಗುವನು. ಹೀಗೆ ಮೂವತ್ತಾರು ತತ್ತ್ವಗಳಿಂದ ಜೀವಾತ್ಮನು ಜನಿಸುವನು.
ಪರಶಿವನು ೩೬ ತತ್ತ್ವಗಳ ತುತ್ತತುದಿಯಲ್ಲಿ ಕಂಗೊಳಿಸುತ್ತಿರುತ್ತಾನೆ. ಅವನ ಅಂಶನಾದ ಜೀವಾತ್ಮನು ೩೬ ತತ್ತ್ವಗಳಿಂದಲೇ ಹುಟ್ಟಿ ೨೧೬ ಸಕೀಲಗಳಲ್ಲಿ ಸಂಚರಿಸಿ ಶರಣನಾಗಿ ಪುನಃ ಮೂವತ್ತಾರು ತತ್ತ್ವವಿಶಿಷ್ಟ ಶಿವನಲ್ಲಿ ಲಿಂಗೈಕ್ಯನಾಗುವನು ಅಂತೆಯೇ ಆಚಾರ ಪರಿಪೂರ್ಣರಾದ ಶಿವಭಕ್ತರ ಮಹಾತ್ಮರ ಸಮಾಧಿಗಳನ್ನು ಸಹ ಈ ಮೇಲಿನ ತತ್ತ್ವದಂತೆ ನಿರ್ಮಿಸಲಾಗುತ್ತಿದೆ. ೩೬ ತತ್ತ್ವದ ದ್ಯೋತಕವಾಗಿ ಅಂಗನ ಅಷ್ಟು ೩೬ ಘನಪಾದ ಪಾದದಳತೆಯ ಮೆಟ್ಟಿಲನ್ನಿಳಿದು ೨೧೬ ಪಾದದ ಕುಂಬ ದಲ್ಲಿ ಪರಿಪೂರ್ಣನಾಗಿ ೩೬ ಘನಪಾದದ ಕಿರಿಗುಣಿಯಲ್ಲಿ ಮುಹೂರ್ತಗೊಳ್ಳುವನು.
ಪರಶಿವನು ೩೬ ತತ್ತ್ವಾಗ್ರದಲ್ಲಿ ಪರಿಶೋಭಿಸುತ್ತಿರುತ್ತಾನೆಂಬುದನ್ನು ಕವಿರಹ ದ್ಯಾಂಪೂರ ‘ಚನ್ನಕವಿ”ಗಳು ‘ಹಾನಗಲ್ಲ ಕುಮಾರೇಶ್ವರ ಪುರಾಣ”ದ ಇಪ್ಪತ್ತನೆ ಸಂಧಿಯ ಪ್ರಾರಂಭದಲ್ಲಿ ಪ್ರಾರ್ಥನಾ ರೂಪವಾಗಿ ವರ್ಣನೆ ಮಾಡಿದ್ದು ಅತ್ಯಂತ ಸುಂದರವಾಗಿದೆ. ಹಾಗೂ ಮೂವತ್ತಾರು ತತ್ತ್ವಗಳನ್ನು ಅರಿತುಕೊಳ್ಳಲು ಈ ಪದ್ಯ ಸಹಾಯಕವೂ ಆಗಿದೆ –
”ವರಪಂಚಭೂತಗಳು ಪಂಚ ತನ್ಮಾತ್ರೆಗಳು
ನೆರೆದೈದು ಕರ್ಮೇಂದ್ರಿಯಂಗಳುಂ ಪಂಚ ಭಾ-
ಸುರ ಚಿದಿಂದ್ರಿಯಗಳುಂ ಮಾನಸಾಹಂಕಾರ ಬುದ್ಧಿ, ಗುಣ, ರಾಗ, ವಿದ್ಯೆ
ಸುರುಚಿರ ನಿಯತಿ ಕಲಾ-ಕಾಲ ಪ್ರಕೃತಿಗಳುಂ
ಪುರುಷಮೀಶ್ವರ ಸದಾಶಿವಶಕ್ತಿಶಿವಗಳೆಂ
ಬುರುತರದೊಳೆಸೆವ ಮೂವತ್ತಾರು ತತ್ತ್ವಾಗ್ರದೊಳ್ಪೊಳೆವ
ಶಂಭು ಸಲಹು (೨೪ – ೧)
೩೬ ತತ್ತ್ವಗಳನ್ನು ಮೀರಿದಾತನು ಪರಶಿವನು. ತತ್ತ್ವಗಳ ಬಂಧನದಲ್ಲಿ ಮುಳುಗಿದವನು ಜೀವಾತ್ಮನು. ಶಿವಕವಿಯು ಪ್ರಸ್ತುತ ತ್ರಿಪದಿಯಲ್ಲಿ ಭೂತ ಪಂಚಕವು ಪಂಚಭೂತವನ್ನು ತವೆ ಕೂಡಲು ಅದ್ಭುತಮಯವಾದ ಮಾನವ ತನುವು ಉಂಟಾಗುವದೆಂಬುದನ್ನೇ ಪ್ರಸ್ತಾಪಿಸಿದ್ದಾನೆ. ಮತ್ತು ಈ ತನುಗುಣವನ್ನು ಕಳೆದುಕೊಳ್ಳಲು ಭೂತಳಕ್ಕೆ ಕರ್ತನಾದ, ತತ್ತ್ವಪರಿಪೂರ್ಣನಾಗಿ ಪರಿಶೋಭಿಸುವ, ಭೂನಾಥ ಶ್ರೀ ಗುರುವನ್ನು ಮೊರೆ ಹೋಗಬೇಕೆಂಬುದೇ ಶಿವಕವಿಯ ಅಭಿಪ್ರಾಯವು
. ದೇಹಗತವಾದ ಭೂತ ಪಂಚಕಕ್ಕೆ ಆಧ್ಯಾತ್ಮಿಕ ಭೂತಗಳೆಂತಲೂ, ಸಮಷ್ಟಿ ರೂಪಾದ ಮಹಾಭೂತ ಪಂಚಕವು ಆಧಿದೈವಿಕ ಭೂತವೆಂತಲೂ ಹೆಸರು. ಈ ಆಧ್ಯಾತ್ಮಿಕ ಪಂಚಭೂತಗಳು ಆಧಿ ದೈವಿಕ ಪಂಚಭೂತಗಳೊಡನೆ ಸೇರಿ ವ್ಯಾವಹಾರಿಕ ಜೀವನು ಪ್ರಾದುರ್ಭವಿಸುತ್ತಾನೆ. ಈ ಭೂಮಂಡಲದ ಕಾರ್ಯವು ಅದ್ಭುತಮಯ ವಾದುದು. ಇಲ್ಲಿಯ ವೈಚಿತ್ರ್ಯ ಹೇಳಲಸದಳವಾಗಿದೆ. ಜೀವಿಗಳು ಕೇವಲ ಭೂತ ಮಯವಾದರೆ ಭವ-ಬಂಧನ ತಪ್ಪುವದಿಲ್ಲ. ಭೂನಾಥನಾದ ಶ್ರೀ ಗುರುವಿಗೆ ಶರಣಾಗತರಾಗಬೇಕು. ದೇಹದ ಅಶುದ್ಧಭೂತ ತತ್ತ್ವಗಳನ್ನು ಪರಿಶೋಧಿಸಿ ಪಾವನಗೊಳಿಸಿ ಮಾಂಸಮಯ ಪಿಂಡವನ್ನು ಮಂತ್ರಪಿಂಡವನ್ನಾಗಿಸಿ ಇಂದ್ರಿಯ ಗಳಿಗೆಲ್ಲ ಲಿಂಗಸಂಬಂಧ ಮಾಡುವನು ಗುರುವರನು. ಅಲ್ಲದೆ ಪದಾರ್ಥಗಳನ್ನು ಪ್ರಸಾದವನ್ನಾಗಿ ಪರಿಣಮಿಸುವ ಸಾಮರ್ಥ್ಯವುಳ್ಳವನಾಗಿರುವದರಿಂದಲೇ ಭೂನಾಥ ನಾಗಿದ್ದಾನೆ. ಅಂಥ ಪರಮಗುರುವೆ ! ಕೃಪೆದೋರಿ ಎನ್ನ ಪಂಚಭೂತಮಯ ಶರೀರವನ್ನು ಶುದ್ಧಗೊಳಿಸಿ ಕಾಪಾಡು.
೧. ದೇಹ ವಿಕಾರ
ನಂದಿರ್ದ ಬೆಂಕಿ ಘನ | ಸಿಂಧುವನೆ ಆವರಿಸಿ
ನಿಂದುರಿವುತಿಹುದು ನಂದಿಪುದೇತರಲೈ?
ತಂದೆ ಶ್ರೀ ಗುರುವೆ ಕೃಪೆಯಾಗು ||೬೩ ||
ಈ ಪಂಚಭೌತಿಕವಾದ ತನುವು ಅಜ್ಞಾನದಿಂದ ಅನೇಕ ವಿಕಾರಗಳನ್ನು ಹೊಂದುತ್ತದೆ. ಅನೇಕ ಯಾತನೆಗಳನ್ನು ಅನುಭವಿಸುತ್ತದೆ. ತಾಪತ್ರಯಗಳಲ್ಲಿ ಬಳಲುತ್ತದೆ. ಈ ದುಃಖತತಿಯನ್ನು ನಿವಾರಿಸಬಲ್ಲವನು ಪರಮ ಶ್ರೀ ಗುರುವೆಂಬುದನ್ನು ಇಲ್ಲಿ ಶರಣಕವಿಯು ನಿರೂಪಿಸುತ್ತಾನೆ.
ಪ್ರಜ್ವಲಿಸುವ ಅಗ್ನಿಯನ್ನು ಕಂಡು ದೂರವಿರಬಹುದು; ಆದರೆ ನಂದಿ (ಆರಿದಂತೆ)ದಂತೆ ಕಾಣುವ ಬೂದಿ ಮುಚ್ಚಿದ ಅಗ್ನಿಯು ಅಪಾಯಕ್ಕೆ ಕಾರಣ ವಾಗುವದು. ಈ ಬೆಂಕಿಯು ಭೂಮಿಯ ಮೇಲೆ ಇರುವಂತೆ ನೀರಿನಲ್ಲಿಯು ಇರುತ್ತದೆ. ಅದಕ್ಕೆʼʼ ವಡವಾನಲ’ʼಎಂದು ಶಾಸ್ತ್ರಕಾರರು ಕರೆದಿರುವರು. ಇದು ಕಣ್ಣಿಗೆ ಕಾಣುವದಿಲ್ಲ. ಈ ಮಾತನ್ನು ಶರಣರೂ ಪಡಿನುಡಿದಿದ್ದಾರೆ.
“ಉದಕದೊಳಗೆ ಬೈಚಿಟ್ಟ ಬೇಗೆಯ ಕಿಚ್ಚಿನಂತಿದ್ದು
ಎಂದು ಅಣ್ಣನವರು ವಿವರಿಸಿದ್ದರೆ; ಸರ್ವಜ್ಞನು
ಕ್ಷೀರದಲ್ಲಿ ಘೃತ, ವಿಮಲ ನೀರಿನೊಳು ಶಿಖಿಯಿದ್ದು
ಆರಿಗೂ ತೋರದದು…… ಎಂದಿದ್ದಾನೆ.
“ಉದಕದೊಳಗೆ ಕಿಚ್ಚು ಹುಟ್ಟಿ ಸುಡುತ್ತಿದ್ದುದ ಕಂಡೆ’
ಮತ್ತು- ನೀರುಗಿಚ್ಚೆದ್ದರೆ ಸಮುದ್ರವೆ ಗುರಿ
ಒಡಲುಗಿಚ್ಚೆದ್ದರೆ ಆ ತನುವೇ ಗುರಿ,
ಎಂದುದಾಗಿ ಮಹಾಜ್ಞಾನಿ ಅಲ್ಲಮಪ್ರಭುಗಳು ವಿವೇಚಿಸಿದ್ದಾರೆ.
ಆದರೆ ಇಂದಿನ ಮುಂದುವರೆದ ವಿಜ್ಞಾನಿಯು ಇಂಥ ವಡವಾನಲದ ಶಕ್ತಿಯನ್ನು ಇನ್ನೂ ಉಪಯೋಗಿಸಿಕೊಂಡಂತೆ ತೋರುವದಿಲ್ಲ. ನೀರಿನ ಒತ್ತಡದಿಂದ ಕೇವಲ ವಿದ್ಯುತ್ತನ್ನು ತಯಾರಿಸಲಾಗುತ್ತಿದೆ. ಈ ವಿದ್ಯುತ್ತು ನೀರಿನ ತೇವಾಂಶದಲ್ಲಿ ಹಾಗೂ ದ್ರವಪದಾರ್ಥಗಳಲ್ಲಿ ಪಸರಿಸುವ ಪರಿಯನ್ನು ಕಾಣುತ್ತೇವೆ. ಒಣ ಪದಾರ್ಥಗಳಲ್ಲಿ ಅದರ ಪ್ರವಾಹ ಹರಿದು ಬರುವದಿಲ್ಲ. ಅದಕ್ಕಾಗಿಯೇ ವಿದ್ಯುತ್ತಿನ ರಿಪೇರಿ ಕೆಲಸ ಮಾಡುವಾಗ ಒಣಕಟ್ಟಿಗೆ ತುಂಡನ್ನು ಕಾಲಿನಕೆಳಗೆ ಇಟ್ಟುಕೊಳ್ಳುತ್ತಾರೆ.
ಮಹಾನುಭಾವಿಗಳು ಮೇಲೆ ತಿಳಿಸಿದಂತೆ ವಡವಾನಲವು ಘನತರವಾದ ಸಮುದ್ರದಲ್ಲಿ ವ್ಯಾಪಿಸಿಕೊಂಡು ಅಲ್ಲಿಯೇ ಸ್ಥಿರವಾಗಿ ನಿಂತು ಉರಿಯುತ್ತಿದೆ. ಅದನ್ನು ಯಾರೂ ಅರಿಸಲಾರರು. ಆದರೆ ಪಂಚಭೂತಗಳ ಶಕ್ತಿಯನ್ನು ನಿಯಂತ್ರಿಸಬಲ್ಲ ಆತ್ಮಜ್ಞಾನಿಯು ವಡವಾನಲವನ್ನು ಆರಿಸಬಹುದು; ನಿಶ್ಚಿತವಾಗಿ ಆರಿಸುತ್ತಾನೆ.
ಸಂಸಾರಸಾಗರದಲ್ಲಿ ಬೆಂಕಿಯಂತಿರುವ ಆತ್ಮಜ್ಞಾನವು ನಂದಿಹೋದರೆ ಅಜ್ಞಾನವು ಜೀವಾತ್ಮನನ್ನು ಆವರಿಸುವದು. ಬೂದಿಮುಚ್ಚಿದ ಕೆಂಡದಂತೆ ಅಜ್ಞಾನವು ಇವನನ್ನು ಒಳಗೊಳಗೆ (ಶರೀರದಲ್ಲಿ) ಬೇಯಿಸುತ್ತದೆ. ಅಲ್ಲದರಲ್ಲಿ ಅಹುದೆಂಬ ಬುದ್ಧಿಯು ಅಜ್ಞಾನಕ್ಕೆ ಕಾರಣ. ಜೀವಾತ್ಮನು ದೇಹವೇ ತಾನು, ದೇಹಸುಖವೇ ನಿಜಸುಖವೆಂದು ಸಾಂಸಾರಿಕ ವ್ಯಾಮೋಹದಲ್ಲಿ ಸಿಲುಕುತ್ತಾನೆ. ಸುಖ-ಸಂತೃಪ್ತಿಗಳು ದೊರೆಯದಿದ್ದಾಗ ನೊಂದುಕೊಳ್ಳುವನು;ದುಃಖಿತನಾಗುವನು.ಈ ಅಙ್ಞನದಿಂದ ಉಂಟಾಗುವ ನೋವು ಬಾಳ-ಸಮುದ್ರವನ್ನು ವ್ಯಾಪಿಸಿ ಎಡಬಿಡದೆ ದಹಿಸುತ್ತದೆ, ಈ ನೋವು ಆರದ ನೋವಾಗಿದೆ. ಇದರಿಂದ ಜೀವನವು ಬರಡಾಗುತ್ತದೆ. ಇದನ್ನು ನಿವಾರಿಸುವ ಸಾಮರ್ಥ್ಯ ಶ್ರೀ ಗುರುವಿನಲ್ಲಿದೆ. ಗುರುವೆ ! ನಿನ್ನ ಜ್ಞಾನಬೋಧೆಯಿಂದ ಎನ್ನಲ್ಲಿಯ ಅಜ್ಞಾನದ ಬೇಗೆಯನ್ನು, ಹೊಗೆಯನ್ನು ಹೋಗಲಾಡಿಸಿ ಆತ್ಮಜ್ಞಾನಾಗ್ನಿಯನ್ನು ಬೆಳಗಿಸಿ ಕಾಪಾಡು.
ಅಜ್ಞಾನದಿಂದ ತನುವಿನಲ್ಲಿ, ಕರುಣೇಂದ್ರಿಯಗಳಲ್ಲಿ ತಾಮಸೀತನ ಬೆಳೆಯುತ್ತದೆ. ತಾಮಸಗುಣವು ಜೀವಾತ್ಮನನ್ನು ದುಃಖಿಯನ್ನಾಗಿಸುತ್ತದೆ. ಈ ಮಾತನ್ನು ನಿಜ ಗುಣರು “ಕೈವಲ್ಯ ಪದ್ಧತಿ’ಯಲ್ಲಿ ತಿಳಿಸುತ್ತಾರೆ.
“ಒಡಲು ತಾನೆಂದರಿವುದೇ ಮಂದಮತಿ ಮೋಸ |
ಜಡಭಾವ ನಿದ್ರೆ ನಿಷೇಧ ಕಾರ್ಮಾಳಿ |
ಬಿಡದಲಸತೆ ಚಪಲು ವಿಡಿದು ವೃಥಾ |
ಕೆಡುವ ತನುವನ ಕೂಡಿಹುದು ತಾಮಸಗುಣ’
ಶರೀರವೇ ನಾನೆಂಬ ವ್ಯರ್ಥವಾದ ಮಂದಬುದ್ಧಿಯಿಂದ ಮೋಸ, ಅಲಸ್ಯ, ನಿದ್ರೆ, ದುಷ್ಕರಗಳನ್ನು ಬಿಡದೆ ಚಾಪಲ್ಯತನದಿಂದ ವ್ಯರ್ಥಕೆಡಿಸುವ ದೇಹಾಭಿಮಾನವೇ ತಾಮಸಗುಣವೆನಿಸುವದು. ಈ ತಾಮಸಗುಣವೇ ಬಾಳಸಮುದ್ರದಲ್ಲಿ ನೋವನ್ನುಂಟು ಮಾಡುವ ಅರದ (ನಂದದ) ಬೆಂಕಿಯಾಗಿದೆ. ಕಾರಣ ಗುರೂಪದೇಶದಿಂದ ತಾಮಸೀ ತನವು ದೂರವಾಗುವದು. ಅದಕ್ಕಾಗಿ ಗುರುಕರುಣೆ ಗುರೂಪದೇಶಗಳು ಅವಶ್ಯಬೇಕು.
ತಲೆಯಿಲ್ಲದಂಗನೆಯ | ಮೊಲೆಯೇಳು ತೊರೆತಿರಲು
ತಲೆಯೆಂಟರಿಂದ ಮೊಲೆಯನುಂಬುದ ಕಂಡಾ.
ನಲಸಿದೆನು ಗುರುವೆ ಕೃಪೆಯಾಗು || ೬೩ ||
ಅಜ್ಞಾನದಿಂದ ಬೆಂದ ನೊಂದ ಜೀವಾತ್ಮನು ಸಪ್ತವ್ಯಸನಗಳನ್ನು ಅಷ್ಟಮದ ಗಳಿಂದ ಸೇವಿಸಲು ಆತುರಪಡುತ್ತಾನೆಂಬ ವಿಷಯವನ್ನು ಬಹುಮಾರ್ಮಿಕವಾಗಿ ಇಲ್ಲಿ ಚಿತ್ರಿಸಿದ್ದಾನೆ.
‘ಸರ್ವೆಷು ಗಾತ್ರೇಷು ಶಿರಃ ಪ್ರಧಾನಮ್ |’
ಎಲ್ಲ ಅವಯವಗಳಲ್ಲಿ ಶಿರಸ್ಸೇ ಮುಖ್ಯವಾದುದು. ದೇಹದಲ್ಲಿ ತಲೆ ಮತ್ತು ಒಡಲು ಎಂಬೆರಡು ಪ್ರಧಾನ ಅಂಗಗಳು, ಶಿರದಿಂದಲೇ ಒಡಲಿಗೆ ಮನ್ನಣೆಯಿದೆ. ಒಡಲಿಗೆ ಅನ್ನವೇ ಆಹಾರವಾದರೆ ಮುಡಿ (ತಲೆ)ಗೆ ಜ್ಞಾನವೇ ಆಹಾರ, ಜ್ಞಾನವಿಲ್ಲದ ತಲೆ ಬರಿದಲೆಯೆನಿಸುವದು. ಅದು ಕೇವಲ ರುಂಡ, ರುಂಡವಿಲ್ಲದ್ದು ಮುಂಡವಾಗುವದು. ಅದಕ್ಕಾಗಿಯೇ ಲೌಕಿಕದಲ್ಲಿ ಅಜ್ಞಾನಿಗೆ ತಲೆಯಿಲ್ಲದವನೆನ್ನುವದು ರೂಢಿಯಾಗಿದೆ. ಇದೇ ಮಾತನ್ನು ಇಲ್ಲಿ ಶಿವಕವಿಯು ವ್ಯಂಜನಗೊಳಿಸಿದ್ದಾನೆ
ತಲೆಯಿಲ್ಲದಂಗನೆಯು ಅಲ್ಪ ಸುಖಕ್ಕಾಗಿ ಜೀವಿಯನ್ನು ನೋಯಿಸುತ್ತಾಳೆ ಬೇಯಿಸುತ್ತಾಳೆ. . ಈ ಅಂಗನೆಯ ಶಕ್ತಿ ಅಪರಿಮಿತವಾದುದು ಅಸಾಧ್ಯವಾದುದು. ಅಲ್ಲಮಪ್ರಭುಗಳೂ ಸಹ ಈಕೆಯ ಶಕ್ತಿಗೆ ಬೆರಗಾಗಿದ್ದಾರೆ –
ʼʼ….ಆ ಮರೆವೆಯೆಂಬ ಮಹಾಮಾಯೆ
ವಿಶ್ವದ ಮುಸುಕಿನಲ್ಲಿ; ನಾಬಲ್ಲೆ ಬಲ್ಲಿದರೆಂಬ
ಅರುಹಿರಿಯರೆಲ್ಲ ತಾಮಸಕ್ಕೊಳಗಾಗಿ
ಮೀನಕೇತನ ಬಲೆಗೆ ಸಿಕ್ಕು ; ಮಾಯೆಯ
ಬಾಯತುತ್ತಾದರಲ್ಲಾ ಗುಹೇಶ್ವರಾ !”
‘ಮರವೆ’ ಯೆಂದರೆ ಅಜ್ಞಾನವೆಂದೇ ಅರ್ಥವಾಗುವದು. ವೇದಾಂತಿಗಳು ಅಜ್ಞಾನಕ್ಕೆ ಮಾಯೆಯೆನ್ನುವ ವಿಚಾರವನ್ನು ಈಗಾಗಲೇ ತಿಳಿಸಿದ್ದಾಗಿದೆ. ಈ ಮಾಯೆಯು ಬಲ್ಲೆ, ಬಲ್ಲಿದೆನೆನ್ನುವ ಹಿರಿಯರನ್ನು ಸಹ ತಾಮಸೀ ಗುಣಿಗಳನ್ನಾಗಿ ಮಾಡಿ ಕಾಮನ ಬಲೆಗೆ ಸಿಕ್ಕಿಸಿ ತನ್ನ ಬಾಯತುತ್ತನ್ನಾಗಿಸಿ ನುಂಗುತ್ತಾಳೆ. ಇದು ಭಯಾನಕವೇ ಆಗಿದೆ. ಅಂದ ಮೇಲೆ ಸಾಮಾನ್ಯವಾದ ಅಜ್ಞ ಜೀವಿಯು ಮಾಯಾಂಗನೆಯ ವಶವಾಗುವದರಲ್ಲೇನು ಆಶ್ಚರ್ಯಕರವಾಗಿದೆ ?
ರಸ, ರುಧಿರ, ಮಾಂಸ, ಮೇಧಸ್ಸು, ಅಸ್ಥಿ, ಮಜ್ಞಾ, ಶುಕ್ಲಗಳೆಂಬ ಸಪ್ತಧಾತು ಗಳಿಂದ ಹುಟ್ಟಿದ ಜೀವಾತ್ಮನ ದೇಹವು ಮಾಯಾಂಗನೆಯ ಸಪ್ತವಿಧವಾದ ಮೊಲೆಗಳಿಗೆ ಆಶಿಸುವುದು ಸ್ವಾಭಾವಿಕ. ಇವಕ್ಕೆ ಸಪ್ತವ್ಯಸನಗಳೆಂತಲೂ ಕರೆಯುತ್ತಾರೆ. ೧. ಅಭಕ್ಷ್ಯ ಭಕ್ಷಣ, ೨. ಅಪೇಯಪಾನ, ೩, ದ್ಯೂತ, ೪, ವೇಶ್ಯಾಗಮನ, ೫, ವಾಕ್ಪಾರುಷ್ಯ, ೬. ಮೃಗಯಾವಿಹಾರ, ೭. ಚೌರ್ಯ ಇವು ಮಾಯಾಂಗನೆಯ ತೊರೆಬಿಟ್ಟ ಮೊಲೆಗಳು. ಜೀವಾತ್ಮನು ನಿಷಿದ್ಧ ವಸ್ತುಗಳಲ್ಲೇ ಹೆಚ್ಚು ಆಸಕ್ತಿಯುಳ್ಳವನಾಗಿರುತ್ತಾನೆ. ೧)ತಿನ್ನಬಾರದ (ತಿನ್ನಲು ಯೋಗ್ಯವಲ್ಲದ ಪದಾರ್ಥಗಳನ್ನು ಭಕ್ಷಿಸುವದು.೨) ಕುಡಿಯಲು ನಿಷೇಧಿಸಿದ ಮದ್ಯಾದಿ ಪೇಯವನ್ನು ಕುಡಿಯುವದು.೩) ಜೂಜಾಡುವದು. ೪) ಪರಸ್ತ್ರೀಗಮನ ಮಾಡುವದು. ೫) ಅವಾಚ್ಯ ಮತ್ತು ಕರ್ಕಶ ಶಬ್ದಗಳನ್ನು ಮಾತಾಡುವದು. ೬) ಬೇಟೆಯಾಡಿ ಪ್ರಾಣಿ ಹಿಂಸೆ ಮಾಡುವದು. ೭) ಪರರದ್ರವ್ಯವನ್ನು ಅಪಹರಣ ಮಾಡುವದು.
ಡಾ. ಫ.ಗು. ಹಳಕಟ್ಟಿಯವರು ವಚನಶಾಸ್ತ್ರಸಾರದ ೨ನೆಯ ಭಾಗದ ೧೨೪ನೇ ಪುಟದಲ್ಲಿ ʼʼತನುವ್ಯಸನ, ಮನವ್ಯಸನ, ಧನವ್ಯಸನ, ರಾಜ್ಯವ್ಯಸನ, ವಿಶ್ವವ್ಯಸನ, ಉತ್ಸಾಹವ್ಯಸನ, ಸೇವಕವ್ಯಸನ ಇಂತಿವು ಸಪ್ತವ್ಯಸನ’ʼ ಗಳೆಂದು ಶರಣ ಸಾಹಿತ್ಯದಿಂದ ಸಂಗ್ರಹಿಸಿದ್ದಾರೆ. ಎರಡೂ ವಿಧಗಳನ್ನು ಪರಿಶೀಲಿಸಿದರೂ ಮನುಷ್ಯನ ಅಧೋಗತಿಗೆ ಕಾರಣವಾದವುಗಳೇ ಇರುತ್ತವೆ. ಇಂಥ ಸಪ್ತವ್ಯಸನಗಳೆಂಬ ಮೊಲೆಯುಣ್ಣಲು ಜೀವನಿಗೆ ಎಂಟು ತಲೆಗಳಾಗುತ್ತವೆ. ಏಳನ್ನು ಎಂಟು ತಿನ್ನುವಾಗ ಆತುರತೆ ಹೆಚ್ಚಾಗುತ್ತದೆ. ಹಾಗಾದರೆ ಎಂಟು ತಲೆಗಳು ಯಾವುವೆಂಬುದನ್ನು ಅನುಭವಿಗಳು –
ʼʼ ಕುಲಂ ಛಲಂ ಧನಂ ಚೈವ
ರೂಪ ಯೌವನಮೇವಚ ।
ವಿದ್ಯಾ ರಾಜ್ಯಂ ತಪಶ್ಚೈವ
ಏತೇ ಚಾಷ್ಟಮದಾಃ ಸ್ಮೃತಾಃ ||
೧. ಕುಲಮದ,೨. ಛಲಮದ, ೩. ಧನಮದ, ೪, ರೂಪಮದ, ೫. ಯೌವನಮದ, ೬. ವಿದ್ಯಾನದ, ೩. ರಾಜ್ಯಮದ ಹಾಗೂ ೮.ತಪೋಮದಗಳೆಂದು ಅಷ್ಟಮದಗಳನ್ನು ವಿಂಗಡಿಸಿದ್ದಾರೆ. ಈ ಸಪ್ತವ್ಯಸನಗಳು ತಾಮಸೀಗುಣವುಳ್ಳವುಗಳಾದರೆ ಅಷ್ಟಮದಗಳು ರಾಜಸೀಗುಣಭರಿತವಾಗಿವೆ. ಸಪ್ತವ್ಯಸನಗಳೆಂಬ ಮೊಲೆಗಳನ್ನು ಅಷ್ಟಮದಗಳೆಂಬ ತಲೆಗಳಿಂದ ಭೋಗಿಸುವ ಜೀವನಿಗೆ ತೃಪ್ತಿಯಲ್ಲಿದೆ ? ತುಷ್ಟಿ ದೊರೆಯದಿದ್ದರೂ ಪುನಃಪುನಃ ಅವುಗಳಿಗಾಗಿ ಹಾತೊರೆಯುವ ಜೀವಾತ್ಮನ ಸ್ಥಿತಿಯನ್ನು ಲಕ್ಷಿಸುವವನಿಗೆ ಅಲಸಿಕೆ (ಜುಗುಪ್ಸೆ) ಬರುವದು ಸಹಜ. ಆ ಅಲಸಿಕೆ ಅರ್ಥಾತ್ ಜುಗುಪ್ಸೆಯು ಜ್ಞಾನಿಗೆ ಮಾತ್ರ ಬರಲು ಸಾಧ್ಯ.
ಗುರುವೆ ! ಜ್ಞಾನನಿಧಿಯೇ ನನ್ನ ವೈಷಯಿಕ ಸ್ಥಿತಿಯನ್ನು ನೋಡಿ ಅಲಸಿಕೆ ಪಡಬೇಡ, ಬೇಜಾರು ಮಾಡಿಕೊಳ್ಳದೆ ರಕ್ಷಿಸು. ನಿಜವಾದ ಸುಜ್ಞಾನವಿಲ್ಲದ್ದಕ್ಕಾಗಿ ಹೀಗಾಗಿರುವ ಕೃಪೆಮಾಡು, ಯಾಕೆಂದರೆ –
ʼʼ………….ಜ್ಞಾನಜ್ಯೋತಿ ಕೆಡಲೊಡನೆ
ನಾಬಲ್ಲೆ ಬಲ್ಲಿದರೆಂಬ ಅರುಹಿರಿಯರೆಲ್ಲರೂ
ತಾಮಸಕ್ಕೊಳಗಾಗಿ ಸೀಮೆ ತಪ್ಪಿ ಕೆಟ್ಟರು ಕಾಣಾ ಗುಹೇಶ್ವರಾ’
ಎಂದು ಅಲ್ಲಮಪ್ರಭುಗಳು ಜ್ಞಾನ ಹೀನವಾದಾಗ ಬಲ್ಲಿದಜ್ಞಾನಿಯೂ ತಾಮಸಕ್ಕೊಳ ಗಾಗಿ ಕೆಡುವರೆಂಬ ಮಾತನ್ನು ಬಿತ್ತರಿಸಿದ್ದಾರೆ. ಕಾರಣ ಅಜ್ಞಾನದಿಂದ ಆವರಿಸುವ ಸಪ್ತವ್ಯಸನಗಳನ್ನು ನಿವಾರಿಸಿ ಶರಣರು ನಿರೂಪಿಸುವ ಅಂತರಂಗ ಮತ್ತು ಬಹಿರಂಗ ಶುದ್ಧಿಗೊಳಿಸುವ ಸಪ್ತ ಸೂತ್ರಗಳನ್ನು ಬಾಳಿನಲ್ಲಿ ಒಡಮೂಡಿಸಿಕೊಳ್ಳಬೇಕು.
ಸಪ್ತ ಪದವು ಬಹಳ ಮಾರ್ಮಿಕವಾಗಿದೆ. ಸಪ್ತವ್ಯಸನಗಳನ್ನು ಪ್ರತಿಪಾದಿಸುವಂತೆ ; ಸಪ್ತಪದದಿಂದ ಉತ್ತಮ ಮಾರ್ಗದರ್ಶನವೂ ಸಿಕ್ಕುತ್ತದೆ. ಆದರೆ ಏಳು ಅಂಕೆಯನ್ನು ಕೆಲವರು ಅವಲಕ್ಷಣವೆಂದು ತಿಳಿಯುತ್ತಾರೆ.ʼʼ ಏಳು ಬೀಳುʼʼಎನ್ನುವರು. ಅದು ಸರಿಯಲ್ಲ. ಬಹುವಿಷಯಗಳನ್ನೊಳಗೊಂಡ ಈ ಸಪ್ತಪದವು ಮಹತ್ವದ್ದಿದ್ದು ಪವಿತ್ರವೂ ಆಗಿದೆ ವೇದಲ್ಲಿಯೂ ಏಳರ ಮಹತ್ವ ಇಂತಿದೆ.
ಸಪ್ತ ಪ್ರಾಣಾಃ ಪ್ರಭವಂತಿ ತಸ್ಮಾತ್ಸಪ್ತಾರ್ಚಿಷಃ |
ಸಮಿಧಸಪ್ತ ಜಿಹ್ವಾಃ ಸಪ್ತ ಇಮೇ ಲೊಕಾ ||
ಯೇಷು ಚರಂತಿ ಪ್ರಾಣಾ ಗುಹಾಶಯಾನ್ನಿಹಿತಾ
ಸ್ಸಪ್ತಸಪ್ತ ಅತಸ್ಸಮುದ್ರಾಗಿರಯಶ್ಚ ಸರ್ವೇ
ಸ್ಮಾತ್ಸ್ಯೆಂದಂತೆ ಸಿಂಧವ ಸ್ವರೂಪಾಃ ಅತಶ್ಚ ವಿಶ್ವಾ
ಓಷಧಯೋ ರಸಾಶ್ಚಯೇ ನೈಷ ಭೂತಸ್ತಿಷ್ಠತ್ಯಂತರಾತ್ಮಾ ||
ಹೀಗೆ-ಸಪ್ತ ಪದವು ಸಪ್ತ ಋಷಿಗಳನ್ನು, ಸಪ್ತ ಮಾತೃಕೆಯರನ್ನು, ಏಳಗ್ನಿಯನ್ನು ಏಳು ಸಮುದ್ರ, ಏಳುಗಿರಿಗಳನ್ನು ಮತ್ತು ವೇದಾಂತವನ್ನು ಭೋಧಿಸುವಾಗ ಶಿಷ್ಯನಿಗೆ ಸಪ್ತ ಭೂಮಿಕೆಗಳನ್ನು ಮತ್ತು ಲಗ್ನ ಸಮಾರಂಭದಲ್ಲಿ ಅಗ್ನಿ ಸಾಕ್ಷಿಯಾಗಿ ಸಪ್ತಪದಿಯನ್ನು ಮಾಡಿಸುವದನ್ನೂ ಸೂಚಿಸುತ್ತದೆ. ಭಕ್ತಿ ಭಾಂಡಾರಿ ಬಸವಣ್ಣನವರು ಸಕಲರ ಲೇಸಿಗಾಗಿ ಅಂತರಂಗ ಬಹಿರಂಗ ಶುದ್ಧಿಗಾಗಿ ಸಪ್ತಸೂತ್ರಗಳನ್ನೇ ಪ್ರತಿಪಾದಿಸಿದ್ದಾರೆ.
“ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ,
ಮುನಿಯಬೇಡ, ತನ್ನ ಬಣ್ಣಿಸಬೇಡ,
ಅನ್ಯರಿಗೆ ಅಸಹ್ಯಪಡಬೇಡ, ಇದಿರು ಹಳಿಯಲುಬೇಡ,
ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ಧಿ;
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿʼʼ
ಇದೇ ತೆರನಾಗಿ ಮಹಾದೇವನೇ ತಾನಾಗುವ ಸಪ್ತ ಸಾಧನಗಳನ್ನು ಆದಯ್ಯ ಶರಣರು ಬಹು ಮಾರ್ಮಿಕವಾಗಿ ಬೋಧಿಸಿದ್ದಾರೆ.
“ತನುವಿನಲ್ಲಿ ನಿರ್ಮೊಹ, ಮನದಲ್ಲಿ ನಿರಹಂಕಾರ
ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ
ವಿಷಯದಲ್ಲಿ ಉದಾಶೀನ, ಭಾವದಲ್ಲಿ ದಿಗಂಬರ
ಜ್ಞಾನದಲ್ಲಿ ಪರಮಾನಂದ ನೆಲೆಗೊಂಡ ಬಳಿಕ
ಸೌರಾಷ್ಟ್ರ ಸೋಮೇಶ್ವರ ಲಿಂಗವು ಬೇರಿಲ್ಲ ಕಾಣಿರೋ”
ಇಂಥ ಸಪ್ತ ಸಾಧನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಪ್ತವ್ಯಸನಗಳನ್ನು ಅವಶ್ಯವಾಗಿ ದೂರೀಕರಿಸಲು ಶಕ್ತರಾಗುತ್ತೇವೆ. ಅಲ್ಲದೆ ಅಷ್ಟಾವರಣದ ಸಾಕ್ಷಾತ್ಕಾರ ದಿಂದ ಅಷ್ಟಮದಗಳನ್ನು ನಿವಾರಿಸಿಕೊಳ್ಳಲು ಸಮರ್ಥರಾಗುತ್ತೇವೆಂಬುದನ್ನು ಶರಣ ಕವಿಯು ಈ ತ್ರಿಪದಿಯಲ್ಲಿ ಅಭಿವ್ಯಂಜನಗೊಳಿಸಿದ್ದಾನೆ.
ಸಪ್ತವ್ಯಸನಗಳನ್ನು ಅಷ್ಟಮದಗಳನ್ನು ಪರಿಹರಿಸಿಕೊಳ್ಳದಿದ್ದರೆ ತಲೆಯಿಲ್ಲದವರಾಗಿ ಮಾಯಾಂಗನೆಯ ಬಲೆಯಲ್ಲಿ ಬಿದ್ದು ಬಳಲಬೇಕಾಗುವದು. ಅದುಕಾರಣ ಅಷ್ಟಾವರಣದ ರಕ್ಷಾಕವಚದಿಂದ ಅಷ್ಟಮದಗಳನ್ನು ಧಿಃಕರಿಸಿ ಸಪ್ತ ಸಾಧನೆಗಳಿಂದ ಸಪ್ತವ್ಯಸನಗಳನ್ನು ನಾಶಮಾಡಿಕೊಂಡರೆ ಪರಿಶುದ್ಧನಾದ ಅಂಗವಾಗಿ ಭಕ್ತನಾಗುವ ಸೌಖ್ಯ ಸಿಕ್ಕುವದರಲ್ಲಿ ಯಾವ ಸಂದೇಹವಿಲ್ಲ. ಇದೆಲ್ಲದಕ್ಕೂ ಸದ್ಗುರುವಿನ ಕರಣೆಯೆಂಬುದು ಮೂಲವಾಗಿದೆ
ರಂಭೆ ತಾಂ ತರುತಿರ್ಪ * | ಒಂಬತ್ತು ತೂತಿನಾ
ಕುಂಭದೊಳ್ನೀರು – ತುಂಬಿಕೊಂಡಿರ್ದುದೇ
ನೆಂಬೆನೈ ಗುರುವೆ ಕೃಪೆಯಾಗು ||೬೪ ||
ಜೀವಾತ್ಮನು ಜ್ಞಾನವನ್ನು ಕಳೆದುಕೊಳ್ಳುವದಕ್ಕೆ ಕಾರಣವನ್ನು ಇಲ್ಲಿ ಸೂಚ್ಯವಾಗಿ ವಿವರಿಸುತ್ತಾನೆ. ಶಿವಕವಿಯ ದೃಷ್ಟಿಯಲ್ಲಿ ಸೌಂದರ್ಯಭಾವವೂ ತುಂಬಿ ಹೊರಸೂಸಿದೆ.
ಲೋಕ ವ್ಯವಹಾರದಲ್ಲಿ ನೀರು ತರುವ ನಾರಿಯರ ದೃಶ್ಯ ಸುಂದರವಾದುದು. ಕಮನೀಯವಾದುದು. ಆ ಸನ್ನಿವೇಶವನ್ನು ಮನೋಹರವಾಗಿ ಬಳಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಕೊಡಹೊತ್ತವಳು ಸಾಮಾನ್ಯಳಲ್ಲ; ಅವಳು ರಂಭೆ, ಪದಪ್ರಯೋಗ ದಲ್ಲಿಯೂ ಆಕರ್ಷಣೆಯಿದೆ. ಅಮರಸಿಂಹನು ತನ್ನ ಅಮರಕೋಶ”ದಲ್ಲಿ –
“ಘೃತಾಚೀ ಮೇನಕಾ ರಂಭಾ ಊರ್ವಶೀ ಚ ತಿಲೋತ್ತಮಾ ।”
ಎಂದು ದೇವಲೋಕದ ಅಪ್ಸರೆಯರ ಹೆಸರನ್ನು ಹೇಳಿದ್ದಾನೆ. ಕಾರಣ ಈ ಮಾಯಾಂಗನೆಯಾದ ರಂಭೆಯು ಸ್ವರ್ಗಲೋಕದ ಅಪ್ಸರೆಯಂತೆ ಮತ್ತಷ್ಟು ಮೋಹಿನಿ ಯಾಗಿದ್ದಾಳೆ. ಇವಳು ಹೊತ್ತ ಕುಂಭ (ಕೊಡ) ಒಂಬತ್ತು ತೂತುಗಳಿಂದ ಕೂಡಿದೆ. ರಂಧ್ರಗಳು ಒಂಬತ್ತಿದ್ದರೂ ಒಳಗಿನ ನೀರು ಮಾತ್ರ ಹರಿದು ಹೋಗುವದಿಲ್ಲ. ಈ ವೈಚಿತ್ರಕ್ಕೆ ಏನೆಂಬೆನೆಂದು ಸ್ವತಃ ಶಿವಕವಿಯು ಅಚ್ಚರಿಪಟ್ಟಿದ್ದಾನೆ. ಇದು ಆಶ್ಚರ್ಯಕರ ಘಟನೆಯಲ್ಲದೆ ಮತ್ತೇನು ?
ದೇಹಾಭಿಮಾನಿಯಾಗಿರುವ ಜೀವನು ಮಾಯಾಮಯನಾಗಿರುವದರಿಂದ ಅವನು ಹೊತ್ತಕಾಯವೇ ಘಟವು. ಈ ಶರೀರ ಕೊಡಕ್ಕೆ ಎರಡು ಕಿವಿ, ಎರಡು ಕಣ್ಣು, ಎರಡು ಮೂಗಿನ ಹೊರಳೆಗಳು, ಒಂದು ಬಾಯಿ, ಒಂದು ಗುಹ್ಯ, ಇನ್ನೊಂದು ಗುದ ಹೀಗೆ ಒಂಬತ್ತು ರಂಧ್ರಗಳಿವೆ. ಈ ಭೌತಿಕ ದೇಹವು ಒಂಬತ್ತು ಛಿದ್ರಗಳಿಂದ ತುಂಬಿದೆ. ಇಷ್ಟು ತೂತುಗಳಿದ್ದ ಕೊಡದಲ್ಲಿ ನೀರಿನಂತೆ ಚಂಚಲವಾದ ವಾಯುತತ್ತ್ವದ ಮನಸ್ಸು ಸೋರಿ ಹೋಗುವದಿಲ್ಲ. ಆದರೆ ಇಂದ್ರಿಯಗಳ ಮುಖಾಂತರ ತನ್ನ ಬಯಕೆಯ ಆಟವನ್ನು ಆಡುತ್ತಿದೆ. ಆದ್ದರಿಂದ ಹೊರಗಿನ ಬಹಿರ್ಮುಖಗಳಾದ ರಂಧ್ರಗಳನ್ನು ವಿಷಯಾದಿಗಳತ್ತ ಹರಿಬಿಟ್ಟಿರುವದರಿಂದ ಅವನು ಆಜ್ಞಾನಿಯಾಗಿದ್ದಾನೆ. ಇದನ್ನರಿತ ಅಣ್ಣನವರು –
ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ !
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ !
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯಾ ತಂದೆ !
ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ
ಇರಿಸು ಕೂಡಲಸಂಗಮದೇವಾ !
ಎಂದು ಕಾಲು, ಕಣ್ಣು, ಕಿವಿ ಮೊದಲಾದ ಇಂದ್ರಿಯಗಳು ಶಿವಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸೆಂದು ಶಿವನನ್ನು ಪ್ರಾರ್ಥಿಸಿದ್ದಾರೆ. ಶಿವನಲ್ಲಿ, ಶಿವಲಿಂಗ. ಧ್ಯಾನದಲ್ಲಿ, ಶಿವವಿಷಯಕಜ್ಞಾನದಲ್ಲಿ ಏಕನಿಷ್ಠಾಪರನಾಗುವದರಿಂದ ಚಂಚಲವಾದ ಮನಸ್ಸುಸ್ಥಿರವಾಗುವದು
ಜಮದಗ್ನಿಯ ಸತಿಯಾದ ರೇಣುಕಾ ಎಲ್ಲಮ್ಮನು ತನ್ನ ಪತಿಪೂಜೆಗಾಗಿ ಪ್ರತಿನಿತ್ಯ ಉಸುಗಿನ ಕೊಡದಲ್ಲಿ ಮಡಿ ನೀರನ್ನು ತುಂಬಿಕೊಂಡು ಸರ್ಪನ ಸಿಂಬಿಯ ಮೇಲಿಟ್ಟು ಕೊಂಡು ಬರುತ್ತಿದ್ದಳೆಂಬುದು ಪೌರಾಣಿಕ ಕಥೆಯು, ಅವಳು ತನ್ನ ಪಾತಿವ್ರತ್ಯಧರ್ಮ ದಿಂದ ಇಂಥ ಅಘಟಿತ ಘಟನೆಯನ್ನು ಮಾಡುತ್ತಿದ್ದಳು.
ಇದರಂತೆ ಜೀವಾತ್ಮನು ಗುರುಕರುಣೆಯಿಂದ ಕಾಯ-ಘಟವನ್ನು ದೀಕ್ಷಾಗ್ನಿ ಯಲ್ಲಿ ಸುಡಿಸಿಕೊಂಡು ನವರಂಧ್ರಗಳಲ್ಲಿ ನವಲಿಂಗಗಳನ್ನು ತುಂಬಿಸಿಕೊಳ್ಳಬೇಕು. ಅದರಿಂದ ಈ ಕಾಯಘಟವು ಭದ್ರವಾಗುವದು. ಇಂಥ ಕೊಡದಲ್ಲಿ ಭಕ್ತಿರಸವು ತುಂಬಿ ಅಂಗನಿಗೆ ಆನಂದದಾಯಕವಾಗಬಲ್ಲುದು. ಹರಿದಾಡುವ ಮನವೂ ಇಂದ್ರಿಯ ಲಿಂಗಗಳಿಂದ ಕಾಣುವ ಪದಾರ್ಥಗಳ ಭೌತಿಕ ಗುಣವನ್ನು ನಿವಾರಿಸಿ ಪ್ರಸಾದಗಳನ್ನಾಗಿ ಸ್ವೀಕರಿಸುವ ಸಾಮರ್ಥ್ಯವನ್ನು ಪಡೆಯುವದು. ಮತ್ತು ಆತ್ಮವೂ ಸಂತೃಪ್ತನಾಗುವನು. ಅಂಗನು ಸುಜ್ಞಾನ ಭರಿತ ಕ್ರಿಯೆಗಳಿಂದ ಲಿಂಗಾಂಗ ಸಾಮರಸ್ಯದ ಸುಖವನ್ನು ಸಾಧಿಸುವಂತಾಗುವನು.
ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅನುಭವಿಗಳು ಧರ್ಮಸಾಧನೆಗೆ ಕಾರಣವಾದ ಶರೀರಕ್ಕೆ ಅನೇಕ ಉಪಮೆಗಳನ್ನು ಕೊಟ್ಟಿದ್ದಾರೆ. ಇಲ್ಲಿ ಘಟವೆಂದು ವರ್ಣಿಸಿದಂತೆ ಹಲಕೆಲವರು ಶರೀರವನ್ನು ಹುತ್ತವನ್ನಾಗಿ, ಕ್ಷೇತ್ರವನ್ನಾಗಿ, ಕಾಂತಾರವನ್ನಾಗಿ, ತೋಟವನ್ನಾಗಿ, ಕೆರೆಯನ್ನಾಗಿ, ದೇವಾಲಯವನ್ನಾಗಿ ಉಪಮಿಸಿದ್ದಾರೆ. ಪ್ರಾಸಂಗಿಕವಾಗಿ ಈ ವಚನಗಳು ಮನನೀಯವಾಗಿವೆ ತೋಂಟದ ಸಿದ್ಧಲಿಂಗಯತಿಗಳು –
“ತನುವೆಂಬುದುದೊಂದು ಹುತ್ತಕ್ಕೆ ಒಂಬತ್ತು ಬಾಗಿಲು;
ತಾಮಸವೆಂಬ ಸರ್ಪಂಗೆ ತಲೆ ಹದಿನಾಲ್ಕು, ಒಡಲಾರು,
ಬಾಲನ ಬ್ರಹ್ಮಲೋಕಕ್ಕೆ ಇಟ್ಟು ಶಿರವ ಹರಿದ್ವಾರದಲ್ಲಿರಿಸಿ
ಕರಣೇಂದ್ರಿಯಂಗಳೆಂಬ ಕಾಳಕೂಟ ವಿಷವನೆ ಉಗುಳುತ್ತಿದೆ ನೋಡಾ |
ಆ ವಿಷವು ಶಿವಶರಣರಲ್ಲದವರನೆಲ್ಲರ ಸುಡುವುದ ಕಂಡೆನು
ಕಾಣಾ ಮಹಾಲಿಂಗ ಗುರುಶಿವಸಿದ್ದೇಶ್ವರ ಪ್ರಭುವೆ”
ಎಂದಿದ್ದರೆ – ಮಹಾ ಶಿವಶರಣೆ ಲಿಂಗಮ್ಮನು
ʼʼತನುವೆಂಬ ಹುತ್ತಕ್ಕೆ ಮನವೆಂಬ ಸರ್ಪ ಆವರಿಸಿ
ಹೆಡೆ ಎತ್ತಿ ಆಡುತ್ತಿರಲು, ಆ ಸರ್ಪನ ಕಂಡು
ನಾ ಹೆದರಿಕೊಂಡು ಗುರುಕರುಣವೆಂಬ ಪರುಷವ
ತಂದು ಮುಟ್ಟಿಸಲು ನೋಟ ನಿಂದಿತ್ತು;
ಹೆಡೆ ಅಡಗಿತ್ತು, ಗುರುಕರುಣವೆಂಬ ಪರುಷವೆ ನಿಂದಿತ್ತು.
ನಿಂದ ಪರುಷವನೆ ಕೊಂಡು ನಿಜದಲ್ಲಿ ನಿರ್ವಯಲಾಗುವ
ಶರಣರ ಪಾದವ ನಂಬಿ ಕೆಟ್ಟು, ಬಟ್ಟಬಯಲಾದೆನಯ್ಯ
ಅಪ್ಪಣ್ಣಪ್ರಿಯ ಚನ್ನಬಸವಣ್ಣಾ !’
ತನುವನ್ನು ಹುತ್ತನ್ನಾಗಿಯೂ, ಮನವನ್ನು ಸರ್ಪವನ್ನಾಗಿ ಕಂಡಿದ್ದಾರೆ. ತನು- ಹುತ್ತಿನ, ಮನ-ಸರ್ಪನ ವೈಷಯಿಕ ವಿಷವು ಗುರುಕರುಣದಿಂದ ದೂರವಾಗುವದರಲ್ಲಿ ಸಂಶಯವಿಲ್ಲ. ಶಿವಶರಣರಾದವರಿಗೆ ಈ ವಿಷ ಅಮೃತವಾಗುತ್ತದೆ. ಕಾರಣ ಸದ್ಗುರುವಿ ನಲ್ಲಿ ಶರಣಾಗತನಾಗಿ ಕಾಯವನ್ನು ಪಾವನವನ್ನಾಗಿಸಿ ಕೊಳ್ಳುವದು ಶಿಷ್ಯನ ಧರ್ಮವಾಗಿದೆ
ಗಾಳಿಗಿಕ್ಕಿದ ಸೊಡರಿ | ನೇಳಿಗೆಯನೇನೆಂಬೆ
ಬಾಳ್ವ ಧನಿಕರನು – ಗೀಳು ಮಾಡುವದೈ ಕೃ –
ಪಾಳು ಶ್ರೀ ಗುರುವೆ ಕೃಪೆಯಾಗು [೬೫ |
ಇನ್ನು ಗುರುಕರರುಣೆಯನ್ನು ಪಡೆಯದ ಕಾಯವು ಗಾಳಿಗಿಕ್ಕಿದ ಸೊಡರಿನಂತೆ ತೀವ್ರನಾಶವಾಗಿ ಹೋಗುವದೆಂಬುದನ್ನು ಸೋದಾಹರಣಪೂರ್ವಕವಾಗಿ ಪ್ರತಿಪಾದಿಸಿದ್ದಾನೆ.
ಮಾನವಜನ್ಮವು ಬಹು ಪುಣ್ಯಪ್ರದವಾದುದು. ಬಹುಜನ್ಮದ ಪುಣ್ಯದ ಫಲದಿಂದ ಮಾನವ ಶರೀರ ಲಭ್ಯವಾಗುತ್ತದೆ. ಅದರ ಮಹತ್ವವನ್ನರಿತು ಸಾರ್ಥಕ ಮಾಡಿಕೊಳ್ಳು ವದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ನೀತಿಕಾರರು –
“ಮಹತಾ ಪಣ್ಯ ಪಣ್ಯೇನ
ಕ್ರೀತೇಯಂ ಕಾಯನೌಸ್ತ್ವಯಾ |
ಪಾರಂ ದುಃಖೋದಧೇರ್ಗಂತುಂ
ತರ ಯಾವನ್ನ ಭಿದ್ಯತೇ ॥”
ಶರೀರವೆಂಬ ನೌಕೆಯನ್ನು ಮಹತ್ತರವಾದ ಪುಣ್ಯಫಲದಿಂದ ಖರೀದಿ ಮಾಡಿದ್ದೇವೆ. ಈ ನಾವೆಯಿಂದ ದುಃಖಮಯವಾದ ಸಂಸಾರಸಾಗರವನ್ನು ತೀವ್ರವಾಗಿಯೇ ದಾಟಬೇಕು. ಯಾಕೆಂದರೆ ಯಾವಾಗ ಈ ನೌಕೆಯು ಒಡೆದು ಹೋದೀತೆಂಬುದು . ಗೊತ್ತಿಲ್ಲವೆಂದು ಮಾರ್ಮಿಕವಾಗಿ ತಿಳಿಸಿದ್ದಾರೆ. ಮಾನವ ಜನ್ಮವೇ ಸಕಲ ಜೀವ ಜಂತುಗಳಲ್ಲಿ ಮಿಗಿಲಾಗಿದೆ
ಕ್ರಿಮಿ ಕೀಟ-ಪತಂಗೇಭ್ಯಃ ಪಶವಃ ಪ್ರಜ್ಞಯಾಧಿಕಾಃ |
ಪಶುಭೋSಪಿ ನರಾಃ ಶ್ರೇಷ್ಮಾ………..!!?
ಕ್ರಿಮಿ, ಕೀಟ, ಪತಂಗಗಳಿಗಿಂತಲೂ ಪಶುಗಳು ತಿಳುವಳಿಕೆಯುಳ್ಳವುಗಳಾಗಿರುತ್ತವೆ. ಅವುಗಳಿಗಿಂತ ಮಾನವನು ಶ್ರೇಷ್ಠನಾಗಿದ್ದಾನೆಂದು ವ್ಯಾಸರು ತಮ್ಮ ಪುರಾಣಗಳಲ್ಲಿ ಮಾನವ ಜನ್ಮದ ಅಧಿಕ್ಯತೆಯನ್ನು ಪ್ರತಿಪಾದಿಸಿದ್ದಾರೆ. ಶಿವಯೋಗಿ ಶಿವಾಚಾರ್ಯರು ತಮ್ಮ ಸಿದ್ಧಾಂತ ಶಿಖಾಮಣಿ’ಯಲ್ಲಿ –
”ದುರ್ಲಭಂ ಮಾನುಷಂ ಪ್ರಾಪ್ಯ
ಜನನಂ ಜ್ಞಾನ-ಸಾಧನಮ್ |
ಯೇ ನ ಜಾನಂತಿ ದೇವೇಶಂ
ತೇಷಾಮಾತ್ಮಾ ನಿರರ್ಥಕಃ” ॥ ೧೧.೬೩ ||
ದುರ್ಲಭವಾದ, ಜ್ಞಾನಕ್ಕೆ ಸಾಧನವಾದ ಮಾನುಷ ಜನ್ಮವನ್ನು ಪಡೆದೂ ಪರಮಾತ್ಮನನ್ನು ಯಾರು ತಿಳಿಯುವದಿಲ್ಲವೋ ಅವರ ಆತ್ಮವು ನಿರರ್ಥಕವಾದುದೆಂದು ಬೋಧಿಸಿದ್ದಾರೆ. ಆತ್ಮತತ್ತ್ವವನ್ನು ತಿಳಿಯಬೇಕಾದದ್ದು ಮಾನವ ಜನ್ಮದ ಮಹಾಮಣಿಹ. ಅದುವೇ ಮನುಷ್ಯನ ಕರ್ತವ್ಯವೂ ಆಗಿದೆ. ಕರ್ತವ್ಯವನ್ನು ಮರೆತರೆ ಕಾಯದ ಫಲ ದಕ್ಕುವದಿಲ್ಲ. ಅದು ನಿರರ್ಥಕವಾಗಿ ಹೋಗುವದು.
ಕರ್ತವ್ಯ ಚ್ಯುತಿಯಾದರೆ ವಾಸನಾ ಬಲವು ಬಲಿಯುವದು. ಈ ವಾಸನಾ ಗಾಳಿಯು ಜನ್ಮ-ಜನ್ಮಾಂತರದಲ್ಲಿ ಪವಿತ್ರ ಮಾನವ ಶರೀರವನ್ನು ಹಾಳು ಮಾಡಿ ಬಿಡುತ್ತದೆ. ಗಾಳಿಯಲ್ಲಿ ಇರಿಸಿದ ದೀಪಕ್ಕೆ ಏಳಿಗೆಯಾಗುವದಿಲ್ಲವೆಂಬುದು ಬಾಲಕನಿಗೂ ಸಹ ತಿಳಿದ ವಿಷಯ. ಈ ದೀಪಕ್ಕೆ ಪ್ರಾಣವಾಯು ಬೇಕು. ಅದು ಅತಿಯಾಗಬಾರದು. ಮಿತವಾದ, ಗಾಳಿಯಿಂದ ಜ್ಯೋತಿಯು ಶಾಂತವಾಗಿ ಬೆಳಗಿ ಪ್ರಕಾಶವನ್ನು ಕೊಡಬಲ್ಲುದು. ಇದರಂತೆ ಶರೀರವೆಂಬ ಪ್ರಣತಿಯಲ್ಲಿ ಜ್ಞಾನಜ್ಯೋತಿಯು ಪ್ರಾಣವಾಯುವಿನಿಂದಲೇ ಪ್ರಜ್ವಲಿಸುತ್ತದೆ. ಪ್ರಾಣವಾಯುವು ವಿಷಯವಾಸನಾ ರೂಪವನ್ನು ತಾಳಿದರೆ ಜ್ಞಾನ ಜ್ಯೋತಿಗೆ ಮಂಕುಬರುವದು. ಪ್ರಕಾಶ ಪಸರಿಸದು. ಅಂದರೆ ಶಾರೀರಿಕ ವ್ಯಾಮೋಹವು ಸುಜ್ಞಾನಕ್ಕೆ ಅಡ್ಡಿಯಾಗುವದು. ಅದು ಬಲು ಬಲವತ್ತರವಾದುದು. ಶಾರೀರಿಕ ವ್ಯಾಮೋಹದಿಂದ ವೈಷಯಿಕ ಗಾಳಿಯು ಬಲ್ಲಿದೆನೆನ್ನುವ ಜ್ಞಾನಧನಿಕರ ಜ್ಞಾನಜ್ಯೋತಿ ಯನ್ನು ನಷ್ಟಗೊಳಿಸಿ ಜೀವನವನ್ನೇ ಗೀಳು ಮಾಡಿ (ಹಾಳು ಮಾಡಿ) ಬಿಡುವದು. ಇಲ್ಲಿ “ಬಾಳ್ವ’ ಪದಕ್ಕಿಂತಲೂ ಬಲ್ಲ’ ಪದ ಪ್ರಯೋಗವು ಸಾರ್ಥಕವೆನಿಸುತ್ತದೆ
ಶರೀರವು ಸುಖಕ್ಕೂ, ಮತ್ತು ದುಃಖಕ್ಕೂ ಕಾರಣವಾಗಿದೆ. ವಿಷಯ ಗಾಳಿಯನ್ನು ದೂರಮಾಡಿ ಸತ್ಕರ್ಮಯುತವಾದರೆ ಅದು ಸುಖಕ್ಕೆ ಸಾಧನವಾಗುವದು, ವಾಸನಾಗಾಳಿ ಬಲಿಷ್ಠವಾದರೆ ದುಖಿಯೂ ಆಗುವದು. ಇದೇ ಮಾತನ್ನು ಮಹಾಭಾರತದಲ್ಲಿ
‘ಶರೀರಮೇವಾಯತನಂ ಸುಖಸ್ಯ
ದುಖಸ್ಯ ಚಾಪ್ಯಾಯತನಂ ಶರೀರಮ್ |
ಯದ್ಯಚ್ಛರೀರೇಣ ಕರೋತಿ ಕರ್ಮ
ತೇನೈವ ದೇಹೀ ಸಮುಪಾಶ್ನುತೆ ತತ್ ||
ʼʼಸುಖಕ್ಕೂ ಹಾಗೂ ದುಃಖಕ್ಕೂ ಶರೀರವೇ ಸದನ (ಮನೆ)ವಾಗಿದೆ. ಈ ಶರೀರದಿಂದ ಯಾವ ಪ್ರಕಾರದ ಕರ್ಮಮಾಡುವನೋ ಅಂಥ ಫಲವನ್ನು ಪಡೆಯುವನೆಂದು” ವ್ಯಾಸರು ನಿರೂಪಿಸಿದ್ದು ಸಮೀಚೀನವೇ ಆಗಿದೆ.
ಜ್ಞಾನಿಯೂ ಸಹ ಒಮ್ಮೊಮ್ಮೆ ವಾಸನಾಬಲದಿಂದ ದುಷ್ಕರ್ಮವನ್ನೇ ಮಾಡತೊಡಗುವನು. ಅಂಥ ಸಂದರ್ಭದಲ್ಲಿ –
ಕಾಮಾರ್ತಾ ಹಿಂ ಪ್ರಕೃತಿಕೃಪಣಾಃ :
ಚೇತನಾ…ಚೇತನೇಷು (ಮೇಘದೂತ)
ವಿಷಯ ವಾಸನಾಯುಕ್ತರಾದ ಕಾಮುಕರು ಚೇತನ ಮತ್ತು ಆಚೇತನ ವಸ್ತುಗಳಲ್ಲಿ ಸಹ ಸ್ವಭಾವತಃ ದೀನರಾಗುವರೆಂಬ ಕಾಲಿದಾಸನ ಮಾತು ಸತ್ಯವೆನಿಸುವದು. ಭಾರವಿಕವಿಯ “ಕಿರಾತಾರ್ಜುನೀಯ” ಕಾವ್ಯದಲ್ಲಿ,
ʼ’ಆಪಾತರಮ್ಯಾಃ ವಿಷಯಾಃ ಪರ್ಯಂತಪರಿತಾಪಿನಃ |
ʼʼಪ್ರಾರಂಭದಲ್ಲಿ ಶಬ್ದಾದಿ ವಿಷಯಗಳು ರಮ್ಯವೆನಿಸಿ ಅಂತ್ಯದಲ್ಲಿ ದುಃಖವನ್ನೇ ಕೊಡತಕ್ಕವುಗಳೆಂದೂ” ಪ್ರತಿಪಾದಿಸಿದ್ದಾನೆ. ಇಂಥ ವಿಷಯವಾಸನೆಯಿಂದ ಜೀವನು ಅನಂತ ಬಾಧೆಗಳನ್ನು ಅನುಭವಿಸಿ ಹುಟ್ಟು-ಸಾವುಗಳಿಗೆ ಒಳಗಾಗುವನು. ಇದನ್ನರಿತ ನಿಜಗುಣರು ದಯಾಮಯನಾದ ಶಂಕರನಲ್ಲಿ ಅನನ್ಯವಾಗಿ ಬೇಡಿಕೊಂಡದ್ದು ಯೋಗ್ಯವೆನಿಸಿದೆ.
ಶಂಕರಾ ! ನೋಡು ನೀನೆನ್ನ ಪರಿಭವದ ಬಾಧೆಯನು ಕೃಪೆ
ಮಾಡು ಬೇಗದೊಳಗಭಯವಿತ್ತು | ಶಂಕರಾ ।। ಪ ।।
ಮಾಯ ಕರ್ಮದ ಭಾಧೆ, ಕಾಯಕರಣದ ಬಾಧೆ |
ವಾಯು ವಿಷಯೇಂದ್ರಿಯದ ಬಾಧೆ | ಶಂಕರಾ ।।
ಹೇಯವಹ ಜನನ ಮರಣದ ಬಾಧೆ ತಾಪ- ಸಮು
ದಾಯದತಿಬಾಧೆ ಬಲುಹೆನಗೆ | ಶಂಕರಾ || ॥ ೧ ॥
ಹಸಿವು ತೃಷೆಗಳ ಬಾಧೆ ವ್ಯಸನವೇಳರ ಬಾಧೆ |
ದೆಸೆಗೆಡಿಸುವರಿಕುಳದ ಬಾಧೆ | ಶಂಕರಾ ||
ಕುಸುಮ ಬಾಣನ ಬಾಧೆ ಮದಶೋಕ ಮೋಹರತಿ
ವಿಸರದುರುಬಾಧೆ ಘನವೆನಗೆ | ಶಂಕರಾ ||
(ಕೈವಲ್ಯ ಪದ್ಧತಿ)
ದೇಹಧಾರಿಗೆ ಎನಿತೆನಿತು ಬಾಧೆಗಳಿವೆಯೆಂಬುದು ಈ ಪದ್ಯದಿಂದ ವೇದ್ಯವಾಗದೆ ಇರದು. ಇಷ್ಟು ಬಾಧೆಗಳನ್ನು ಸಹಿಸಿಯೂ ತೀವ್ರ ಶಿವನತ್ತ ಮನಹರಿದರೆ ಜೀವಾತ್ಮನ ತನು ಸಾರ್ಥಕವಾಗುವದು. ಶರೀರವು ಬಾಧೆಗಳಿಂದ ಲಘುತ್ವವನ್ನು ಹಾಗೂ ಆ ಕಷ್ಟಗಳನ್ನು ಪರಿಹರಿಸುವ ಪರಮಗುರುವಿನಲ್ಲಿ ಮೊರೆ ಹೊಕ್ಕರೆ ಸಾಫಲ್ಯತೆಯನ್ನು ಶಿವಯೋಗಿಗಳು ಪಡೆಯುವದು. ಆದ್ದರಿಂದ ಗುರುದೀಕ್ಷೆಯನ್ನು ಹೊಂದಿ ಶಿವಲಿಂಗಾರಾಧನೆಯಿಂದ ಕಾಯವನ್ನು ಕೀರ್ತಿಮಯಗೊಳಿಸಿಕೊಳ್ಳಬೇಕು. ಮತ್ತೊಂದೆಡೆಯಲ್ಲಿ ನಿಜಗುಣ ಶಿವಯೋಗಿಗಳು-
“ನರಜನ್ಮದಿಂದಿಹದೊಳು ಮಿಗಿಲುಂಟೆ?
ಎಂದು ಹಾಡಿಹರಿಸಿದ್ದಾರೆ. ನರಜನ್ಮಮಿಗಿಲಾಗಿದ್ದರೂ ಈ ಕಾಯದ ಇರುವಿಕೆಯು ಅನಿಶ್ಚಿತವಾದುದು ಅದನ್ನರಿತು ತೀವ್ರವಾಗಿ ಪರಶಿವನನ್ನು ಆರಾಧಿಸಬೇಕು. ಅಣ್ಣನವರು.
|| ೨ ||
ನೆರೆ ಕೆನ್ನಗೆ, ತೆರೆ ಗಲಕ್ಕೆ, ಶರೀರಗೂಡು ವೋಗದ ಮುನ್ನ,
ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ,
ಕಾಲಮೇಲೆ ಕೈಯ್ಯನೂರಿ ಕೋಲು ಹಿಡಿಯದ ಮುನ್ನ,
ಮುಪ್ಪಿಂದೊಪ್ಪುವಳಿಯದ ಮುನ್ನ,
ಮೃತ್ಯು ಮುಟ್ಟದ ಮುನ್ನ,
ಪೂಜಿಸು ನಮ್ಮ ಕೂಡಲ ಸಂಗಮದೇವನ.
ಮತ್ತು
“ನೀರಬೊಬ್ಬುಳಿಕೆಗೆ ಕಬ್ಬುನದ ಕಟ್ಟು ಕೊಟ್ಟು
ಸುರಕ್ಷಿತವ ಮಾಡುವ ಭರವನೋಡಾ !
ಮಹಾದಾನಿ ಕೂಡಲ ಸಂಗಮದೇವನ
ಭಜಿಸಿ ಬದುಕೋ ಕಾಯವ ನಿಶ್ಚಯಿಸದೆ.”
ಮುಂತಾಗಿ ಶರೀರದ ಯಥಾರ್ಥ ಚಿತ್ರವನ್ನು ಚಿತ್ರಿಸಿದ್ದಾರೆ. ಸ್ವಭಾವತಃ ಶರೀರವು ಜೀರ್ಣವಾಗುವಂಥಹದು. ಅಂತೆಯೇ ವ್ಯಾಕರಣಕಾರರು
ʼʼಶೀರ್ಯತ ಇತಿ ಶರೀರಮ್ʼʼ
ʼʼಜೀರ್ಣವಾಗಿ ಹೋಗುವದೆಂಬುದಾಗಿಯೇ ಇದಕ್ಕೆ ಶರೀರವೆಂದು ಹೆಸರು ಬಂದಿದೆ.” ಯೆಂದು ವ್ಯಾಖ್ಯೆಯನ್ನು ಮಾಡಿದ್ದಾರೆ. ಶರೀರವು ನೀರಗುರುಳ್ಳಿಯಂತೆ ನಶ್ವರವಾಗಿದ್ದು ಅದನ್ನೇ ಮೆಚ್ಚಿ ಸಮಯವನ್ನು ಕಳೆಯುವದಕ್ಕಿಂತ ಆದರಿಂದ ಸದ್ಧರ್ಮವನ್ನು ಸಾಧಿಸು ವದು ಮೇಲು. ಸ್ಕೂಲ ಶರೀರನಾಶವಾದರೂ ಕಾರಣಗತ ಸದ್ಗುಣಗಳು ಶಾಶ್ವತವಾಗಿ ಉಳಿಯುತ್ತವೆ. ಅಂತೆಯೆ ಹಿತೋಪದೇಶ”ದಲ್ಲಿ ಪಂಡಿತ ವಿಷ್ಣು ಶರ್ಮನು –
“ಶರೀರಂ ಕ್ಷಣವಿಧ್ವಂಸಿ ಕಲ್ಪಾಂತರ ಸ್ಥಾಯಿನೋ ಗುಣಾಃ |’
ಶರೀರವು ಕ್ಷಣಭಂಗುರವಾದರೆ, ತನುವಿನಿಂದ ಸಂಪಾದಿತವಾದ ಗುಣಗಳು ಯುಗ ಯುಗಾಂತರದಲ್ಲಿ ಅಮರವಾಗಿ ಉಳಿಯುತ್ತವೆ”ಯೆಂದು ಶರೀರದ ಸಾರ್ಥಕತೆಯ ಮಹತ್ವವನ್ನು ಬಿತ್ತರಿಸಿದ್ದಾನೆ.
ಪರಶಿವನನ್ನು ಕಾಣುವ ಪರಮಸಾಧನವೂ ಕಾಯ”ವೆಂದು ಮಹಾಜ್ಞಾನಿ ಚನ್ನಬಸವಣ್ಣನವರು ಕೆಳಗಿನಂತೆ ತಿಳಿಸಿದ್ದಾರೆ.
“ಕಾಯದಿಂದ ಲಿಂಗದರುಶನ,
ಕಾಯದಿಂದ ಜಂಗಮದರುಶನ,
ಕಾಯದಿಂದ ಪ್ರಸಾದ ಸಂಪತ್ತು,
ಕೂಡಲ ಚನ್ನಸಂಗಯ್ಯ ಈ ಕಾಯದಿಂದ ನಿಮ್ಮ ಕಂಡೆನಯ್ಯಾ !
ತನುವಿನಿಂದಲೇ ಲಿಂಗ-ಜಂಗಮ ದರ್ಶನವಾಗುವದು. ಅದರಿಂದಲೇ ಪರಮ ಪ್ರಸಾದ ಸಂಪತ್ತು ಲಭ್ಯವಾಗುವದು.
ಅದುಕಾರಣ ವಾಸನಾಗಾಳಿಯ ಸೆಳೆತಕ್ಕೆ ಸಿಕ್ಕು ನಾಶಹೊಂದುವ ಶರೀರವನ್ನು ಮತ್ತು ಅದರೊಳಗಿರುವ ಜ್ಞಾನ ಜ್ಯೋತಿಯನ್ನು ಶ್ರೀ ಗುರುಕರುಣೆಯಿಂದ ಬೆಳಗಿಸಿಕೊಳ್ಳಬೇಕು. ಕಾಯದ ಸಾಫಲ್ಯತೆಯನ್ನು ಪಡೆಯಬೇಕು. ಆತ್ಮಜ್ಞಾನದ ಸೊಬಗನ್ನು ಸಾಧಿಸಬೇಕು. ಅದುವೆ ಮಾನವ ಜೀವನದ ಮುಖ್ಯ ಗುರಿ, ಮೇರುಸಿರಿ, ಓ ಗುರುವೇ ಅಂಥ ಜ್ಞಾನ ಬೆಳಕನ್ನು ನೀಡಿ ಕೃಪೆಮಾಡಿ ಕಾಪಾಡು.
ಶಿವಕವಿಯು ಪಂಚಮಹಾಭೂತಗಳ ವಿಷಯವನ್ನು ತಿಳಿಸಿದ ಮೇಲೆ ದೇಹ ವಿಕಾರವನ್ನು ಪ್ರತಿಪಾದಿಸಿರುವದರಿಂದ ಅಧ್ಯಾತ್ಮಿಕ ಅಧಿಕಾರಿಗೆ ಶರೀರ ಮತ್ತು ಜೀವನದ ನೈಜವಿಚಾರಗಳನ್ನು ತಿಳಿಯುವಲ್ಲಿ ಸುಲಭವಾಗಿದೆ. ಸಾಂಸಾರಿಕ ಹೇಯವನ್ನು ಮನಗಾಣುವಲ್ಲಿ ಕ್ರಮಬದ್ಧವಾಗಿದೆ. ಕಾಲ-ಕಾಮ ಮಾಯೆಗಳ ಕಾಟವು ದೇಹವನ್ನು ಮುತ್ತಿ ದಹಿಸುತ್ತದೆ. ನಾಶಮಾಡುತ್ತದೆ. ಇದನ್ನರಿತು ಸದ್ಗುರು ಕರುಣೆಯನ್ನು ಶೀಘ್ರವಾಗಿ ಪಡೆಯಬೇಕಾದುದು ಮುಖ್ಯ ಧೈಯವೆಂಬ ಮಾತು ಸುಸ್ಪಷ್ಟವಾಗಿದೆ.