General

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ

ಶಶಿಸೂರ್ಯಬಿಂಬದಾ | ರಸಬಲಿದ ಪರ್ವತವ

ಶಿಶುವಾಗಿ ಹತ್ತಿಪಶುವಾಗಿ ಸುಳಿದೆನೈ

ಅಸಮ ಶ್ರೀ ಗುರುವೆ ಕೃಪೆಯಾಗು||೫೧||

 ಈ ದಾರ್ಶನಿಕ ಕವಿಯು ಶಿವಾಂಶಿಕನಾದ ಜೀವಾತ್ಮನು ಮಾಯ ಮೋಹಗಳ ತಮಂಧದಲ್ಲಿ ಮುಳುಗಿ ನಿವೃತ್ತಿಯನ್ನು ಅರಿಯದೆ ಪಶುವಾಗುವ ಪರಿಯನ್ನು ಇಲ್ಲಿ ಪ್ರದರ್ಶಿಸುತ್ತಾನೆ.

ಪರ್ವತಗಳಲ್ಲಿ ರಸಮೂಲಿಕೆಗಳು ಚಂದ್ರನ ಬೆಳದಿಂಗಳ ತಂಪನ್ನು ಸೂರ್ಯನ ಬಿಸಿಲಿನ ಶಾಖವನ್ನು ಹೊಂದಿ ಚೆನ್ನಾಗಿ ಬೆಳೆಯುತ್ತವೆ. ಗಿಡಮೂಲಿಕೆಗಳನ್ನು ಉಪಯೋಗಿಸುವ ಜ್ಞಾನವಿಲ್ಲದೆ ಜೀವಿಯು ಪಶ್ವತವನ್ನೆಲ್ಲ ಸುತ್ತಾಡಿ ಅಜ್ಞಪಶುವಿನಂತೆ

ತನ್ನ ಜೀವನವನ್ನೂ ಕಳೆದುಕೊಳ್ಳುತ್ತಾನೆ. ಸಂಜೀವಿನಿಯಿಂದ ಅಮರಕಾಯವನ್ನು ಪಡೆಯಬಹುದು. ಆದರೆ ತಜ್ಞರ ಮಾರ್ಗದರ್ಶನವಿಲ್ಲದೆ ಆ ಕಾಯಕಲ್ಪವನ್ನು ಕಲಿಯಲು ಸಾಧ್ಯವಾಗುವದಿಲ್ಲ. ಇದು ತ್ರಿಪದಿಯ ವಾಚ್ಯಾರ್ಥ.

ಮಾನವನ ದೇಹ ಪರ್ವತದಲ್ಲಿ ಶಸಿ ಸೂರ್ಯರೆಂದರೆ ಎಡಗಣ್ಣು ಮತ್ತು ಬಲಗಣ್ಣು ಅಥವಾ ಇಡಾ-ಪಿಂಗಳ ನಾಡಿಗಳು. ಎಡಗಣ್ಣಿಗೆ ಚಂದ್ರನೇತ್ರವೆಂತಲೂ, ಬಲಗಣ್ಣಿಗೆ ಸೂರ್ಯನೇತ್ರವೆಂತಲೂ ಕರೆಯುತ್ತಾರೆ. ಈ ಶರೀರದಲ್ಲಿ ಒಟ್ಟು ೭೨ ಸಾವಿರ ನಾಡಿಗಳಿರುತ್ತವೆಂದು ಚನ್ನಬಸವಣ್ಣನವರು “ಘಟಚಕ್ರದ”ಲ್ಲಿ ಪ್ರತಿಪಾದಿಸಿದ್ದಾರೆ.

ಈ ಮಾತನ್ನು ಇಂದಿನ ಶರೀರ ವಿಜ್ಞಾನವನ್ನು ಬಲ್ಲವರೂ ಒಪ್ಪುತ್ತಾರೆ. ಎಲ್ಲ ನಾಡಿಗಳಲ್ಲಿ ೧೫೦೦ ನಾಡಿಗಳು ಶರೀರಕ್ಕೆ ಕಾರಣವಾಗಿ ಕೆಲಸ ಮಾಡುತ್ತವೆ. ಅವುಗಳೊಳಗೆ ೭೦೦ ನಾಡಿಗಳು ಮುಖ್ಯವಾಗಿದ್ದು ಇವುಗಳಲ್ಲಿ ೧೦೦ ನಾಡಿಗಳು ಪ್ರಧಾನವಾಗಿರುತ್ತವೆ. ಮತ್ತೆ ಅವುಗಳಲ್ಲಿ ೨೮ ನಾಡಿಗಳು ಮಾತ್ರ ಅತ್ಯಂತ ಪ್ರಯೋಜನಕಾರಿಗಳಾಗಿರುತ್ತವೆ. ಈ ೨೮ ನಾಡಿಗಳಲ್ಲಿ ಪ್ರಾಣವಾಹಿನಿಯಾಗಿರುವ ಹತ್ತು ನಾಡಿಗಳು ಶರೀರದ ಎಲ್ಲ ಆಗು ಹೋಗುಗಳನ್ನು ಸೂಚಿಸಿ ನಿಯಂತ್ರಿಸುತ್ತವೆ. ಅತಿ ಮುಖ್ಯವೆನಿಸಿದ ಹತ್ತುವಿಧ-ಜೀವನಾಡಿಗಳಲ್ಲಿ ಇಡಾ-ಪಿಂಗಳಾ ಮತ್ತು ಸುಷುಮ್ಮಾ ಈ ಮೂರು ನಾಡಿಗಳು ಜೀವಾತ್ಮನ ಪ್ರಾಣ ಮಾರ್ಗದಲ್ಲಿರುತ್ತವೆ.

“ಇವುಗಳು ಅತ್ಯಂತ ಸೂಕ್ಷ್ಮವಾದ ಪಾರದರ್ಶಕವಾದ ದ್ರವ್ಯಗಳಿಂದ ನಿರ್ಮಾಣ ವಾಗಿದ್ದು ಆತ್ಮಶಕ್ತಿಯ ಸೂಕ್ಷ್ಮಪ್ರವಾಹಗಳನ್ನು ಒಯ್ಯುವ ಕಾಲುವೆಗಳಾಗಿವೆ”ಯೆಂದು ನವಕಲ್ಯಾಣಮಠದ ಶ್ರೀ ಕುಮಾರಸ್ವಾಮಿಗಳು ತಮ್ಮ ಶಿವಯೋಗ ರಹಸ್ಯ’ವೆಂಬ ಗ್ರಂಥದಲ್ಲಿ ಬರೆದಿದ್ದಾರೆ. ಇಂಥಾ ಇಡಾ ಮತ್ತು ಪಿಂಗಳಗಳು ಭಾವಪ್ರೇರಕ ದ್ರವಗುಣಗಳನ್ನು ಹೊಂದಿರುವದರಿಂದ ಅದುವೆ ಬಿಂಬವೆನಿಸುವದು, ಈ ಬಿಂಬ ದಿಂದ ಬಲಗೊಂಡ ಪರ್ವತವೆಂದರೆ ಜ್ಞಾನವುಳ್ಳ ಮಸ್ತಕವು, ಮಸ್ತಕದ ಸಹಸ್ರಾರ

ಚಕ್ರದಲ್ಲಿ ಜ್ಞಾನಿಯಾದ ಯೋಗಿಯು ಅಮೃತ ಬಿಂದುವನ್ನು ಪಡೆಯುತ್ತಿರುತ್ತಾನೆ. ಅದರಂತೆ ತಾಯಿಯ ಗರ್ಭದಲ್ಲಿದ್ದ ಶಿಶುವು (ಜೀವಾತ್ಮನು) ಇಡಾ ಪಿಂಗಳ ನಾಡಿಗಳಿಂದ ಆತ್ಮ ಶಕ್ತಿಯ ಸೂಕ್ಷ್ಮ ಬಿಂದುವನ್ನು ಪಡೆದು ಪೂರ್ವಜನ್ಮದ ಅರಿವನ್ನು ಹೊಂದುತ್ತಾನೆ. ಇದು ಶಿವನ ಲೀಲೆ. ಆದರೆ ತಾಯಿಯ ಹೊಟ್ಟೆಯಲ್ಲಿ ಜ್ಞಾನ ಪಡೆದ ಶಿಶುವು ಪ್ರಸೂತಿ ಗಾಳಿಯಿಂದ ಹೊರಬರುತ್ತಲೇ ಪಶುವಿನಂತೆ ಜ್ಞಾನಶೂನ್ಯವಾಗಿ ಬಿಡುತ್ತದೆ. ಅರ್ಥಾತ್ ಗರ್ಭಾವಸ್ಥೆಯಲ್ಲಿದ್ದ ಜೀವಾತ್ಮನು ಇಡಾ ಪಿಂಗಳ ನಾಡಿಗಳಲ್ಲಿ ಸಂಚರಿಸುತ್ತಿದ್ದು ಜ್ಞಾನದ ಕೇಂದ್ರವಾದ ಮಸ್ತಕದಲ್ಲಿ ಜ್ಞಾನವನ್ನು ಪಡೆದಿರುತ್ತಾನೆ. ಅದಕ್ಕಾಗಿ ಹಿಂದಿನ ಜನ್ಮದ ಸ್ಮರಣೆ ಬಂದು- ‘ದೇವಾ ! ಪರಮಾತ್ಮಾ! ಇನ್ನು ಮುಂದೆ ನನ್ನನ್ನು ಈ ಭವದಲ್ಲಿ ನೂಕಬೇಡ. ಇನ್ನೆಂದೂ ನಿನ್ನನ್ನು ಮರೆಯುವದಿಲ್ಲ’ ವೆಂದು ಅನನ್ಯಭಾವದಿಂದ ಜೀವಾತ್ಮನು ಪ್ರಾರ್ಥಿಸುತ್ತಾನೆ. ಆದರೆ ಪ್ರಸೂತಿ ಕಾಲಕ್ಕೆ ವಿಷ್ಣುವಾಯುವು ಗರ್ಭಾಶಯದಿಂದ ಜೀವನನ್ನು ಹೊರನೂಕುತ್ತಿರಲು ಪೂರ್ವಜನ್ಮದ ಅರಿವೆಲ್ಲ ಹಾರಿಹೋಗಿ ಮಾಯಾಮೋಹಗಳಲ್ಲಿ ಸಿಲುಕುತ್ತಾನೆ.

ಇದು ಕಾರಣ ಶಿಶುವಿನ ಜನ್ಮವಾಗುವ ಮುಂಚೆಯೇ ಗರ್ಭಾಷ್ಟಮಿಯಲ್ಲಿ ಶಿವಲಿಂಗ ಸಂಸ್ಕಾರವನ್ನಿತ್ತು ಪೂರ್ವದ (ಗರ್ಭಾವಸ್ಥೆಯಲ್ಲಿ ಉಂಟಾದ) ಜ್ಞಾನವುಳಿಯುವಂತೆ ಮಾಡುವದೇ ವೀರಶೈವ ಸಿದ್ದಾಂತದ ಪ್ರಮುಖ ವೈಶಿಷ್ಟ್ಯವಾಗಿದೆ. ಈ

ಅಭಿಪ್ರಾಯವನ್ನೇ ಶಿವಕವಿಯು ಬಿತ್ತರಿಸಿದ್ದಾನೆ. ತಾಯಿಯ ಹೊಟ್ಟೆಯಲ್ಲಿ ಜ್ಞಾನೋದಯವಾದ ಶಿಶುವಿಗೆ ಆ ಜ್ಞಾನವು ಪುನಃ ಪ್ರಾದುರ್ಭಾವವಾಗಬೇಕಾದರೆ ಶ್ರೀಗುರುವಿನಿಂದ ಗರ್ಭದ ಎಂಟನೇ ತಿಂಗಳಲ್ಲಿ ಲಿಂಗಧಾರಣ ಸಂಸ್ಕಾರವನ್ನು

ಮಾಡಿಸಬೇಕು. ಗುರುದೇವನು ಇಂಥ ಅದ್ಭುತ ಸಂಸ್ಕಾರವನ್ನು ಕರುಣಿಸುವದರಿಂದಲೇ ಅಸಮನೆನಿಸುತ್ತಾನೆ.

“ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ದ್ವಿಜ ಉಚ್ಯತೇ ||”

“ಹುಟ್ಟಿನಿಂದ ಶೂದ್ರನಾಗಿ ಸಂಸ್ಕಾರಬಲದಿಂದ ದ್ವಿಜನೆನಿಸುವನು” ಎಂಬ ಬ್ರಾಹ್ಮಣ್ಯ ವಾದವನ್ನು ತೆಗೆದು ಹಾಕುತ್ತಾನೆ ಶ್ರೀಗುರುವು, ಗರ್ಭದ ಎಂಟನೇ ತಿಂಗಳಲ್ಲಿ ಜ್ಞಾನೋದಯವಾದ ಶಿಶುವಿಗೆ ಲಿಂಗಸಂಸ್ಕಾರವನ್ನು ಕೊಡಿಸುವದರಿಂದ ಜನನವಾದ  ಮೇಲೆ ಬರುವ ಶೂದ್ರತ್ವವಾಗಲಿ, ಪಶುತ್ವವಾಗಲಿ, ಉಳಿಯಲಾರದು. ಮಹಾಭಾರತ ದಲ್ಲಿ ಹೇಳಿದಂತೆ

ಸುಭದ್ರಾದೇವಿಯ ಗರ್ಭದಲ್ಲಿದ್ದ ವೀರ ಅಭಿಮನ್ಯುವು ಚಕ್ರವ್ಯೂಹವನ್ನು ಬೇಧಿಸುವ ಕಥೆಯನ್ನು ಮಾವನಾದ ಶ್ರೀಕೃಷ್ಣನಿಂದ (ತಾಯಿಯ ಮುಖಾಂತರ) ಕೇಳಿದ್ದನು. ಅಂತೆಯೇ ಮಹಾಭಾರತ ಸಂಗ್ರಾಮದ ಸಂದರ್ಭದಲ್ಲಿ ಆ ಜ್ಞಾನ ಸಂಸ್ಕಾರವು ಅವನಿಗೆ ಬೋಧಕವಾಯಿತು. ಸಹಾಯಕವಾಯಿತು. ಆದರೆ ಚಕ್ರವ್ಯೂಹವನ್ನು ಪ್ರವೇಶಿಸುವ ಕಥೆಯನ್ನು ಮಾತ್ರ ಕೇಳಿದ್ದರಿಂದ ಆ ವ್ಯೂಹದಿಂದ ಮರಳಿ ಬಾರದೇ ಅಲ್ಲೇ ವೀರಸ್ವರ್ಗವನ್ನು ಪಡೆದನೆಂಬ ಕಥಾನಕವು ಜನಜನಿತವಾಗಿದೆ.

  ಇದರಂತೆ ತಾಯಿಯ ಗರ್ಭಸ್ಥಶಿಶುವಿಗೆ ಎಂಟನೇ ತಿಂಗಳಲ್ಲಿ ಅವಶ್ಯವಾಗಿ ಶಿವ (ಲಿಂಗ) ಸಂಸ್ಕಾರವನ್ನು ಶ್ರೀಗುರುವಿನಿಂದ ಕೊಡಿಸಬೇಕು. ಇದರಿಂದ ಮಕ್ಕಳು ಶಿವ ಸಂಸ್ಕಾರಿಗಳೂ, ಆದರ್ಶರೂ, ಶರಣಮಾರ್ಗಾವಲಂಬಿಗಳೂ ಆಗುವಲ್ಲಿ ಸಂದೇಹವಿಲ್ಲ.

  ಕರಿಯ ಬಣ್ಣದ ಪಕ್ಷಿ | ಗರಿಯ ಗಾಳಿಯ ಕೂಡಿ

ತಿರುಗಿ ನಾ ಸೋತು ಶಿರಬಾಗಿ ನಿಮ್ಮಂಘ್ರಿ

ಗೆರಗಿದೆನು ಗುರುವೆ ಕೃಪೆಯಾಗು||೫೨||

ಗರ್ಭಾಷ್ಟಮಿಯಲ್ಲಿ ಲಿಂಗಸಂಸ್ಕಾರವನ್ನು ಮಾಡಿಸದಿದ್ದರೆ, ಪಕ್ಷಿಯ ಗರಿಯಂತೆ ಜೀವಾತ್ಮನು ತಿರುಗುತ್ತಾನೆಂಬ ವಿಷಯವನ್ನು ಶಿವಕವಿಯು ವಿಶದಪಡಿಸಿದ್ದಾನೆ.

ಕಪ್ಪು ಬಣ್ಣದ ಪಕ್ಷಿಯ ಗರಿಯು ಸುಂಟರ ಗಾಳಿಯಲ್ಲಿ ಸಿಕ್ಕರೆ ಸುತ್ತಿ ಸುತ್ತಿ ಬರುತ್ತದೆ. ಕರಿಯಬಣ್ಣದ ಪಕ್ಷಿಯೆಂದರೆ ಅಜ್ಞಾನವು, ಅಜ್ಞಾನದಿಂದ ಸಂಬಂಧವಾಗುವ ಕುಕರ್ಮವೆಂಬ ರೆಕ್ಕೆಯು ಜೀವಾತ್ಮನಿಗೆ ಅಂಟುತ್ತದೆ. ಈ ದುರ್ವಾಸನೆಯ ಗಾಳಿಯಲ್ಲಿ

ಜೀವಾತ್ಮನು ಜನ್ಮ ಜನ್ಮಾಂತರಕ್ಕೆ ತಿರು ತಿರುಗಿ ಬರುತ್ತಾನೆ. ಇದರಿಂದ ಅವನು ಸೋಲನ್ನಪ್ಪಬೇಕಾಗುವದು.

ಗುರುವೆ ! ಈ ಸಾಂಸಾರಿಕ ದುರ್ವಾಸನೆಯ ಗಾಳಿಯಲ್ಲಿ ಹುಟ್ಟಿ ಬೇಸತ್ತಿರುವೆ. ನಿನ್ನ ಪದಕಮಲದಲ್ಲಿ ಶಿರಬಾಗಿಬೇಡುತ್ತೇನೆ, ಕರುಣಿಸು. ಸೋತವನಿಗೆ ಸಂತೈಸುವಲ್ಲಿ ಶ್ರೀಗುರುವೇ ಸಮರ್ಥನು. ಭೂಮಿಗೆ ಬರವಮುಂಚೆಯೇ ಶಿವಸಂಸ್ಕಾರವನ್ನಿತ್ತು

ಕರ್ಮದ ಗರಿಯನ್ನು ಕತ್ತರಿಸಿಹಾಕು, ಮಂತ್ರೋಪದೇಶಮಾಡಿ ಕಪ್ಪು ಪಕ್ಷಿಯನ್ನು ನನ್ನ ದೇಹದಿಂದ ಹಾರಿಸಿಬಿಡು. ಅರ್ಥಾತ್ ಅಜ್ಞಾನವನ್ನು ಹೋಗಲಾಡಿಸು.

ಶಿವದೀಕ್ಷಾ ಸಂಸ್ಕಾರದಿಂದ ಪಾಪ-ಕರ್ಮವೆಲ್ಲ ಕಪ್ಪು ಪಕ್ಷಿಗಳಾಗಿ ಹಾರಿ ಹೋದವೆಂದು “ಸ್ಕಂದ ಪುರಾಣ”ದ ಬ್ರಷ್ಟೋತ್ತರ ಖಂಡದಲ್ಲಿ ಉಲ್ಲೇಖನೀಯವಾಗಿದೆ.

ತನ್ಮಂತ್ರ ಧಾರಣಾದೇವ ತನ್ಮುನೇರ್ಹಸ್ತ ಸಂಗಮಾತ್ |  

 ನಿರ್ಯಯುಸ್ತಸ್ಯ ವಪುಷೋ ವಾಯಸಾಃ ಶತಕೋಟಯಃ || ೧.೫೮ ||

ತಾಯಿಗರ್ಭದ ಎಂಟನೇ ತಿಂಗಳಲ್ಲಿ ಶಿವಸಂಸ್ಕಾರವನ್ನು ಪಡೆದ ಶಿಶುವು ೮ನೇ ವರ್ಷದಲ್ಲಿ ಪುನಃ ಗುರು ಹಸ್ತಸ್ಪರ್ಶವನ್ನು ಹೊಂದಿ ಮಂತ್ರೋಪದೇಶವನ್ನು ಪಡೆಯಲೇಬೇಕು. ಗುರುವು ಶಿಷ್ಯನ ಮಸ್ತಕದ ಮೇಲೆ ಹಸ್ತವನ್ನಿಟ್ಟು ಶರೀರ ಶುದ್ದಿಗೊಳಿಸುವನು. ಕರ್ಣದಲ್ಲಿ ಷಡಕ್ಷರ ಮಹಾಮಂತ್ರವನ್ನು ಉಪದೇಶ ಮಾಡುವದರಿಂದ ಅವನ ಶರೀರದಲ್ಲಿಯ ಪಾಪಕರ್ಮವೆಂಬ ಶತಕೋಟಿ ಕಾಗೆಗಳು ಹಾರಿ ಹೋದವೆಂಬುದು ಮೇಲಿನ ಮಂತ್ರದಿಂದ ತಿಳಿದುಬರುತ್ತದೆ.

ಶಿವಸಂಸ್ಕಾರದಿಂದ ಸ್ಥೂಲ-ಸೂಕ್ಷ ಕಾರಣ ತನುಗಳು ಶುದ್ಧವಾಗುವವು, ಅದು ಕಾರಣ ಶ್ರೀಗುರುಪಾದದಲ್ಲಿ ಬಾಗಬೇಕು. ನತಮಸ್ತಕನಾಗಬೇಕು. ಶಿಷ್ಯನ ಮಸ್ತಕಕ್ಕೆ ಗುರುಪಾದದಂಗುಷ್ಟದ ಸ್ಪರ್ಶವಾಗುವದರಿಂದ ಗುರುಕರುಣೆಯಾಗುವದಲ್ಲದೆ ಜ್ಞಾನದ ಬೆಳಕು ಹರಿದುಬರುತ್ತದೆ. ಬಾಗಿದ ಬೆತ್ತ ಬಹುಕಾಲ ಬಾಳುತ್ತದೆ. ಗುರುಹಿರಿಯರಿಗೆ ಬಾಗದವನು ಹಕ್ಕಿಯ ರೆಕ್ಕೆಯಂತೆ ಗಾಳಿಗೆ ಹಾರಿ ಹೋಗುವನು. ನಾಶವನ್ನು ಹೊಂದುವನು. ಆದ್ದರಿಂದ ಶ್ರೀಗುರುಕೃಪೆ ಪಡೆದು ಕರ್ಮಚ್ಛೇದವನ್ನು ಹೊಂದುವದೇ

ಜೀವಾತ್ಮನ ಗುರಿಯಾಗಿದೆ. ಇದನ್ನು ಮನನಮಾಡಿಕೊಂಡ ಶಿವಕವಿಯ ಸಾಂಸಾರಿಕ ವಾಸನೆಯ ಗಾಳಿಯಲ್ಲಿ ಬಳಲಿ ಬೆಂಡಾಗಿ ಶಕ್ತಿ ಗುಂದಿ ಶ್ರೀಗುರುವಿನ ಅಂಘ್ರಿಗೆರಗಿ ಕೃಪೆಬೇಡಿದ್ದಾನೆ. ಆಧ್ಯಾತ್ಮಿಕ ಸಾಧಕರಿಗೆ ಮಾರ್ಗದರ್ಶನ ಮಾಡಿದ್ದಾನೆ.

ಸರಿಬಿತ್ತಿ ಬೆಸನೊಗದ | ಮರದ ಶಾಖೆಯೊಳು ವಾ

ನರರಾಜ ಕುಳಿತು-ಧರೆ ಮೂರನಾಳ್ವನೆಂ

ದರಿದೆ ಶ್ರೀಗುರುವೆ ಕೃಪೆಯಾಗು||೫೩||

ಶಿವಕವಿಯ ಬೆಡಗಿನ ಮಾತುಗಳಿಂದ ತಾತ್ವಿಕ ವಿಚಾರವನ್ನು ಬಿತ್ತರಿಸುತ್ತಾನೆ.  “ಸಂಗಾತ್ ಸಂಜಾಯತೇ ಜೀವಃ’. ಎಂಬ ಉಕ್ತಿಯಂತೆ ಎರಡು ವಸ್ತುಗಳ ಸಂಗದಿಂದ ಮತ್ತೊಂದು ವಸ್ತುವಿನ ಪ್ರಾಧುರ್ಭಾವವಾಗುವದು. ಅಂತೆಯೇ ಕೃಷಿ ಮಾಡಿದ

ಭೂಮಿಯಲ್ಲಿ ಬೀಜ ಮತ್ತು ನೀರನ್ನು ಹಾಕಿದರೆ ಸಸಿಯು ಹುಟ್ಟುತ್ತದೆ. ಆ ಸಸಿಯು ಬೆಳೆದು ದೊಡ್ಡದಾಗಿ ಮರವಾದರೆ ಅದರಲ್ಲಿ ಮಂಗಗಳು ವಾಸಮಾಡಬಲ್ಲವು. ಹಿರಿಯ ಮಂಗ ತನ್ನ ಹಿಂಡಿನೊಡನೆ ಮರದ ಶಾಖೆ ಶಾಖೆಗಳಲ್ಲಿ ಹಾರಾಡಿ ತಮ್ಮ ಚೇಷ್ಟೆಯನ್ನು ಮಾಡುವದು.

ಇದರಂತೆ : ಸರಿಯಾದ ಎರಡಾದ ತಂದೆಯ ಶುಕ್ಲ ಮತ್ತು ತಾಯಿಯ ಶೋಣಿತದ ಸಮಾಗಮದಿಂದ ಬೆಸವೆನಿಸುವ (ಒಂದಾದ) ಶರೀರವು ಉತ್ಪನ್ನವಾಗುವದು. ಈ ಶರೀರವು ತಾರುಣ್ಯಕ್ಕೆ ಬರಲು, ಬೆಳೆದ ಮರನಂತಾಗುವದು. ಅಂದರೆ ದೇಹವು ವೃಕ್ಷ ; ಇದರ ಕರುಣೇಂದ್ರಿಯಗಳೇ ಶಾಖೆಗಳೆನಿಸುವವು. ಇಂದ್ರಿಯಗಳಿಗೆ ಚಾಲನೆ ಕೊಡುವ ಮನಸ್ಸೇ ಮಂಗ, ಅದನ್ನೇ ವಾನರ ರಾಜನೆಂದು ಶಿವಕವಿಯು ಬಣ್ಣಿಸಿದ್ದಾನೆ. ಈ ಮನವು ಹಿರಿಯ ಮಂಗನಂತೆ ಅತಿ ಚಂಚಲವೂ ಕುಚೇಷ್ಟೆಯುಳ್ಳುದೂ ಆಗಿದೆ. ಕಪಿಯು ಮರದ ಶಾಖೆ-ಶಾಖೆಗಳಿಗೆ ಹಾರಾಡಿ ಕಾಯಿಯನ್ನೋ ಹಣ್ಣನ್ನೋ ತಿನ್ನುವಂತೆ ಮನವೆಂಬ ಮಂಗನು ಶರೀರದ ಇಂದ್ರಿಯಗಳ ಮುಖಾಂತರ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೆಂಬ ವಿಷಯಗಳ ಭೋಗಕ್ಕೆ ಹಾತೊರೆದು ಪಾತಾಳ ಲೋಕ, ಭೂಲೋಕ, ಸ್ವರ್ಗಲೋಕಗಳೆಂಬ ಮೂರು ಮಂಡಲಗಳನ್ನು ಆಳಬಯಸುವದು. ಸುಖದ ಕಲ್ಪನೆ ಅನಂತ ಮುಖವಾಗಿ ಮೂರು ಲೋಕಗಳ ವ್ಯಾಪ್ತಿಯೂ ಮನವೆಂಬ ಕಪಿರಾಯನಿಗೆ ಸಾಕಾಗುವದಿಲ್ಲ. ಅನೇಕ ಸಾಧು ಸಂತರು ಮನಸ್ಸಿಗೆ ಮಂಗನ ಹೋಲುವಿಕೆ (ಉಪಮೆ)ಯನ್ನು ಕೊಟ್ಟಿದ್ದು ಅತ್ಯಂತ ಸಮೀಚೀನವಾಗಿದೆ. ಷಡಕ್ಷರ ಕವಿಗಳು –

“ಮನವೆಂಬ ಮರ್ಕಟನ ಚಪಲ ಚೇಷ್ಟೆಗಳನು

ಎಷ್ಟೊಂದು ಬಣ್ಣಿಸಲಿʼʼ

ಎಂದು ಹಾಡಿ ದಣಿದಿದ್ದಾರೆ. ಷಣ್ಮುಖ ಶಿವಯೋಗಿಗಳು-

“ ಮನವೆಂಬ ಮರ್ಕಟವು ತನುವೆಂಬ ವೃಕ್ಷವನೇರಿ,

ಇಂದ್ರಿಯಗಳಿಂಬ ಶಾಖ-ಶಾಖೆಗಳಿಗೆ ಹಾರಿ,

ವಿಷಯಗಳೆಂಬ ಫಲಗಳ ಗ್ರಹಿಸಿ

ಭವದತ್ತ ಮುಖವಾಗಿ ಹೋಗುತ್ತಿದೆ ನೋಡಾ ಅಖಂಡೇಶ್ವರಾ’.

 ಎಂದು ಮರ್ಕಟನ ಸುಂದರ ಸಾದೃಶ್ಯವನ್ನು ಕಂಡಿದ್ದಾರೆ. ಇದೇ ತೆರನಾಗಿ ಅಣ್ಣ ಬಸವಣ್ಣನವರೂ

“ಮರವನೇರಿದ ಮರ್ಕಟನಂತೆ

ಹಲವು ಕೊಂಬೆಗೆ ಹಾಯುತ್ತಲಿದೆ;

ಬೆಂದ ಮನವ ನಾನೆಂತು ನಂಬುವೆನಯ್ಯ !

ಎಂತು ನಚ್ಚುವೆನಯ್ಯಾ ! ಎನ್ನ ತಂದೆ

ಕೂಡಲಸಂಗಮದೇವನಲ್ಲಿಗೆ ಹೋಗಲೀಯದಯ್ಯ !”

ಎಂದು ಮನಸ್ಸಿನ ಉಪಟಳವನ್ನು ಚಿತ್ರಿಸಿದ್ದಾರೆ ಮತ್ತು ಅನುಭವಿಗಳಾದ ಶಿಶುನಾಳ ಶರೀಫರ –

‘ʼಕಟ್ಟೋ ಮಂಗ್ಯಾನ್ನ ! ಬೇಡ್ತದ ಹಣ್ಣ!”

ಎಂಬ ಜಾನಪದ ಗೀತೆಯಲ್ಲಿಯೂ ಮೇಲಿನ ವಿಷಯ ಅಭಿವ್ಯಕ್ತವಾಗಿದೆ.

ʼ’ಮನ ಏವ ಮನುಷ್ಯಾಣಾಂ

ಕಾರಣಂ ಬಂಧ ಮೋಕ್ಷಯೋಃ |ʼʼ

ಮನಸ್ಸೇ ಭವಬಂಧನಗಳೆರಡಕ್ಕೂ ಅಲ್ಲದೆ ಮೋಕ್ಷಕ್ಕೂ ಕಾರಣವಾಗಿದೆಯೆಂದು ನೀತಿಕಾರರು ನಿರೂಪಿಸಿದ್ದಾರೆ.

 ಮನವೆಂಬ ಮಂಗನು ಸ್ಥೂಲ-ಸೂಕ್ಷ್ಮಕಾರಣಗಳೆಂಬ ತನುತ್ರಯದಲ್ಲಿ ಜಾಗ್ರತ್ ಸ್ವಪ್ನ-ಸುಷುಪ್ತಿಯಲ್ಲಿಯೂ ಸಂಚರಿಸುತ್ತಾನೆ. ಹೀಗೆ ಒಳಹೊರಗಿನ ತ್ರಿಭುವನಗಳನ್ನು ಆಳಬಲ್ಲ ಮಾನವನ ಮನಸ್ಸನ್ನು ಸ್ಥಿರಗೊಳಿಸಬಲ್ಲಾತನು ಗುರು ದೇವನೊಬ್ಬನೆ.

ಹೇ ಗುರುವೆ ! ಎನ್ನ ಮನವೆಂಬ ಮಂಗನನ್ನು ಷಡಕ್ಷರ ಮಂತ್ರೋಪದೇಶದಿಂದ ಶಿಕ್ಷಿಸಿ ಮಂತ್ರ ಜಪವೆಂಬ ಹಗ್ಗದಿಂದ ಅದನ್ನು ಕಟ್ಟುವ ಸಾಮರ್ಥ್ಯವನ್ನು ಕೊಡು. ಇಂಥ ಸನ್ಮಾರ್ಗವನ್ನು ತೋರಿಸಿಕೊಟ್ಟ ಗುರುನಾಥ ! ಕೃಪೆಮಾಡಿ ಉದ್ದರಿಸು.

ಹಿಂದಿನ ತ್ರಿಪದಿಯಲ್ಲಿ ಗುರು ಕರ್ಮಚ್ಛೇದನಗೊಳಿಸಿ ಮಂತ್ರೋಪದೇಶ ಮಾಡಿದ ಮೇಲೆ ಮಂತ್ರದ ಅನುಸಂಧಾನ ಅಥವಾ ನಾಮಜಪದಿಂದ ಮನವೆಂಬ ಮಂಗನನ್ನು ಬಂಧಿಸಲು ಬರುತ್ತದೆಂಬುದೇ ಇದರ ತಿರುಳು.

ಹದ್ದು ಹಾವನು ಕಚ್ಚಿ | ಬದ್ದ ವಿಷ ತಲೆಗೇರಿ

ಬಿದ್ದುದೈ ನೆಲಕೆ – ಮದ್ದು ಮಂತ್ರವ ಬಲ್ಲ

ಸಿದ್ದ ಶ್ರೀಗುರುವೆ ಕೃಪೆಯಾಗು ||೫೪||

ಲೌಕಿಕ ವೈದ್ಯನು ಶಾರೀರಿಕ ರೋಗವನ್ನು ಕಳೆದರೆ ಗುರುಸ್ವಾಮಿಯು ಭವ ರೋಗವನ್ನು ನಿವಾರಿಸಬಲ್ಲ ಅಲೌಕಿಕ ವೈದ್ಯನು. ಈ ಭವರೋಗ ವೈದ್ಯನ ಘನತೆಯನ್ನು ಕವಿರತ್ನ ಚನ್ನಕವಿಗಳು “ಹಾನಗಲ್ಲ ಶ್ರೀಕುಮಾರೇಶ್ವರ ಪುರಾಣ’ದಲ್ಲಿ ಸುಂದರವಾಗಿ ಬಣ್ಣಿಸಿದ್ದಾರೆ. ಶ್ರೀಗುರುನಾಥನನ್ನು ಮನದುಂಬಿ ನುತಿಸಿದ್ದಾರೆ.

“ಭವರೋಗಿಯಾದೆನೆಗೆ ಜ್ಞಾನ ಮೆಂಬೊಂದೌಷ-

ಧವನಿತ್ತು ಗುರುವೆಂಬ ವೈದ್ಯನಾ ಕಾಮಾದಿ

ವಿವಿಧ ವಿಷಯಂಗಳೆಂಬ ಪಥ್ಯಮಂ ಮಾಡಬೇಡೆಂದೊರೆದು ಕರುಣದಿಂದೆ |

ಶಿವಪೂಜೆಯೆಂಬ ಘನಪಥ್ಯಮಂ ಪಿಡಿಸಿದಂ

ಸುವಿರಕ್ತಿಯಿರದಾನಪಥ್ಯ ಸೇವನೆಯಿಂದ

ಭವರೋಗವಳಿಯದಳಲುವೆ ನನಗೆ ವೈರಾಗ್ಯಮಂ ಕೊಟ್ಟು ಸಲಹು ಶಿವನೆ ||”

ಮಾನವನು ಹುಟ್ಟುಸಾವೆಂಬ ಭವರೋಗದಲ್ಲಿ ಸಿಲುಕಿಕೊಂಡಿದ್ದಾನೆ. ಇಂಥ ರೋಗಿಗೆ ಶ್ರೀಗುರುವೇ ವೈದ್ಯನು. ಜ್ಞಾನೋಪದೇಶವೇ ಔಷಧ, ಔಷಧ ಕುಡಿದರೂ ಪಥ್ಯ ಮಾಡುವದು ರೋಗಿಯ ಕರ್ತವ್ಯ. ಆದರೆ ಕಾಮಾದಿ ವಿಷಯಗಳೆಂಬ ಅಪಥ್ಯ ಮಾಡಿದರೆ ಅವನ ಈ ಭವರೋಗವು ವಾಸಿಯಾಗಲಾರದು. ಅದಕ್ಕೋಸುಗ ಭವರೋಗ ವೈದ್ಯನು ಶಿವಪೂಜೆಯೆಂಬ ಘನವಾದ ಪಥ್ಯವನ್ನು ಮಾಡಹಚ್ಚಿ ವಿಷಯ ವೈರಾಗ್ಯವೆಂಬ ಅನುದಾನವನ್ನು ಕೊಟ್ಟರೆ ಭವರೋಗವು  ನಿವಾರಣೆಯಾಗಬಲ್ಲದು. ಇದೇ ರೀತಿಯಾಗಿ ತ್ರಿಪದಿಯ ಕರ್ತನಾದ ಶಿವಕವಿಯು, ಗುರುವು ಮಹಾ ವೈದ್ಯನೆಂತಲೂ, ಮಂತ್ರವನ್ನರಿತ ಸಿದ್ಧಪುರುಷನೆಂತಲೂ ಪ್ರಸ್ತಾಪಿಸಿದ್ದಾನೆ.

ಮೊದಲು ಲೌಕಿಕ ದೃಷ್ಟಾಂತವನ್ನು ಹೇಳುತ್ತಾನೆ. ನೂರಾರು ಮೈಲುಗಳ ಮೇಲೆ ಆಕಾಶದಲ್ಲಿ ಹಾರಾಡುತ್ತಿರುವ ಹದ್ದು ಆಮಿಷವನ್ನು ಕಂಡು ಭೂಮಿಗೆ ಎರಗುತ್ತದೆ. ಆಗ ಅದಕ್ಕೆ ದೊರಕಿದುದು ವಿಷವುಳ್ಳ ಹಾವು. ಅದನ್ನು ಕಚ್ಚಿ ತಿಂದಾಗ ವಿಷ ತಲೆಗೇರಿ ನೆಲಕ್ಕೆ ಬಿದ್ದು ಮೂರ್ಛಹೊಂದುತ್ತದೆ. ಕೊನೆಯುಸಿರನ್ನೂ ಎಳೆಯಬಹುದು ಅದಕ್ಕೆ ಉಪಚರಿಸುವವರಾರು ?

ಇದರಂತೆ ಅಂತರಾರ್ಥವನ್ನು ಹಿಂಜಿನೋಡಲು; ಹದ್ದು = ಪ್ರಾಣವಾಯು; ಪ್ರಾಣಕ್ಕೆ ಅಂಟಿಕೊಂಡಿರುವ ವೈಷಯಿಕ ವ್ಯಸನವೇ ಹದ್ದು. ಹಾವು ಎಂದರೆ ಇಲ್ಲಿ ಹಾವಿನಂತೆ ಡೊಂಕಾದ ಮನವೆಂಬ ಕುಂಡಲಿನಿ, ವಿಷಯಗತವಾದ ಬಯಕೆಯು ಮನದಲ್ಲಿ ಮನೆಮಾಡಿಕೊಂಡಿರುವದೇ ಕಚ್ಚುವಿಕೆ. ಮನಸ್ಸು ವಿಷಯಗಳ ವ್ಯಾಮೋಹದಲ್ಲಿ ಬಹಿಮುರ್ಖವಾಗಿ ಸಂಚರಿಸುವದರಿಂದ ಶ್ರೀಕೃಷ್ಣನು ಹೇಳುವಂತೆ- (ಗೀತೆಯಲ್ಲಿ) ಸಂಗದಿಂದ ಕಾಮಹುಟ್ಟಿ; ಕಾಮ ಪೂರ್ತಿಯಾಗದಿದ್ದರೆ ಕ್ರೋಧವು; ಕ್ರೋಧದಿಂದ

ಸಂಮೋಹವು; ಇದರಿಂದ ಬುದ್ಧಿ ಭ್ರಮಣೆಯೂ ಆಗುವದು. ಅಂದರೆ ವಿಷಯದ ಸಂಗವೆಂಬ ಅಂಧಕಾರವು ಬುದ್ಧಿಯನ್ನು ಕೆಡಿಸಿ ಜೀವಾತ್ಮನನ್ನು ಅಧೋಗತಿಗೆ ನೂಕುತ್ತದೆ. ವಿಷಯ-ವ್ಯಸನವು ತಲೆಗೇರಿದಂಥವನು ಪುನಃ ಪುನಃ ಭವಕ್ಕೆ ಬರುತ್ತಾನೆ. ಜನ್ಮ ಕರ್ಮಗಳ ಬಂಧನದಲ್ಲಿ ಸಿಲುಕುತ್ತಾನೆ.

ಪಂಚೇಂದ್ರಿಯವೆಂಬ ಹೆಡೆಯನುಳ್ಳ

ಸಂಸಾರಸರ್ಪ ದಷ್ಟವಾಗಲು;

ಪಂಚ ವಿಷಯವೆಂಬ ವಿಷಹತ್ತಿ ಮೂರ್ಛಿತರಾದರೆಲ್ಲ ಲೋಕವೆಲ್ಲ

 ಸರ್ವರ ಕಚ್ಚಿ ಕೂಡಿಯಾಡುವ ಸರ್ಪನ

ಬಾಯ ಕಟ್ಟಲರಿಯದೆ ಮರಣವಾದರಲ್ಲಿ ;

ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರನನರಿಯದವರಿಲ್ಲ.

ಎಂಬ ಸ್ವತಂತ್ರ ಸಿದ್ಧಲಿಂಗೇಶ್ವರರ ವಚನವು ಈ ತ್ರಿಪದಿಯ ಅರ್ಥವನ್ನೇ ಪುಷ್ಟಿಕರಿಸಿದೆ ; ಸ್ಪಷ್ಟಗೊಳಿಸಿದೆ.

 ಈ  ಭವಬಂಧನವನ್ನು ಬಿಡಸಬಲ್ಲ ವೈದ್ಯನು ಗುರುದೇವನು. ಅವನಿಗೇನೇ ಮದ್ದು ಗೊತ್ತು; ಮಂತ್ರ ಗೊತ್ತು. ಗುರುವು ದೀಕ್ಷೆಯನ್ನಿತ್ತು ಮೂಮಲಗಳನ್ನು ಕಳೆದು ಮಾಂಸಮಯ ಶರೀರವನ್ನು ಮಂತ್ರಮಯವನ್ನಾಗಿಸಿ ಷಡಕ್ಷರ ಮಂತ್ರವನ್ನು ಬೋಧಿಸಿ ಮನವು ಮಹಾಲಿಂಗದಲ್ಲಿ ಕೂಡುವ ಸಾಧ್ಯತೆಯನ್ನು ಕರುಣಿಸುತ್ತಾನೆ. ಅಂತೆಯೇ ಆತನು ಸಿದ್ಧಪುರುಷನು, ವೈಷಯಿಕ ಮದ್ದು ಹಾವಿನಂತಿರುವ ಮನವನ್ನು ಕಚ್ಚಿ ನೆಲಕ್ಕೆ (ಭವಕ್ಕೆ) ಬೀಳಿಸುವದನ್ನು ತಡೆಯಬಲ್ಲವನು. ಮದ್ದು ಮಂತ್ರಗಳನ್ನಿತ್ತು ರಕ್ಷಿಸಬಲ್ಲವನೇ ಸಿದ್ಧ ಶ್ರೀಗುರು. ಆತನ ಕರುಣೆ ಅತ್ಯವಶ್ಯವಾಗಿದೆ. ಗುರುಪುತ್ರನಾಗಿ ಶಿವಪೂಜೆಯೆಂಬ ಪಥ್ಯವನ್ನು ಹಿಡಿದು ವೈರಾಗ್ಯ-ಸಾಧನೆಯಿಂದ ಮಂತ್ರ ಜಪಾನುಷ್ಠಾನದಿಂದ ಮನವನ್ನು ಮಹಾಲಿಂಗದಲ್ಲಿ ಬೆರೆಯಿಸುವ ಶಕ್ತಿಯನ್ನು ಪಡೆಯಬಹುದು

ಸುರಲೋಕದರಸು | ನರಲೋಕವಾಳಲ್ಕೆ

ಸುರಲೋಕವೆಲ್ಲ ನರಲೋಕದೊಳಗಾದ

ಪರಿಗಂಡೆ ಗುರುವೆ ಕೃಪೆಯಾಗು ||೫೫||

“ಸರ್ವಂ ಶಿವಮಯಂ ಜಗತ್ʼʼ  ಸಕಲ ಜಗತ್ತು ಶಿವಮಯವಾಗಿದೆಯೆಂದು ಶಾಸ್ತ್ರಕಾರರು ಸಾರಿದ್ದಾರೆ. ಶಿವನಿಂದ ಉತ್ಪನ್ನವಾದ ಈ ಜಗವೆಲ್ಲವೂ ಶಿವನ ಒಂದು ಅಂಶವೆ. ಅಂದಮೇಲೆ ಮಾನವನು ಆತನ ಅಂಶನು ಅಥವಾ ಅಂಗನು, ಮಾನವನು ಪುಣ್ಯಮಯವಾದ ಶರೀರದಿಂದ ಮಹಾದೇವನನ್ನು ಕಾಣಬಲ್ಲನು. ಕೊನೆಗೆ ಅವನೇ ತಾನಾಗಬಲ್ಲನು. ಮಹಾಕವಿ

ಕಾಳಿದಾಸನು ತನ್ನ ಕುಮಾರ ಸಂಭವ’? ಮಹಾಕಾವ್ಯದಲ್ಲಿ –

ಶರೀರಮಾದ್ಯಂ ಖಲು ಧರ್ಮಸಾಧನಮ್ ||

ಶರೀರವೇ ಧರ್ಮಾಚರಣೆಗೆ ಪ್ರಥಮ ಸಾಧನವೆಂದು ಹೇಳಿದ್ದರೆ, ಕನ್ನಡದ ಶಿವಕವಿ-ಚಾಮರಸನ ಪ್ರಭುಲಿಂಗಲೀಲೆಯಲ್ಲಿ ಪರಮೇಶ್ವರನು-

“ಯೋಗ ಯೋಗ್ಯರು ಯೋಚಿಸುತ ಭೂ-

ಭಾಗದಲ್ಲಿ ಮಾನವ ಶರೀರಿಗ-

ಳಾಗಿ ಸಾಧಿಸಿ ನಿಜವನರಿವರು ಗಿರಿಜೆ ಕೇಳೆಂದ || ೩೪ ||

ಎಂದು ಪಾರ್ವತಿಗೆ ‘ಯೋಗವನ್ನು ಬಲ್ಲಿದ ಯೋಗಿಗಳು ಸಹ ಭೂವಲಯದಲ್ಲಿ ಮಾನವಶರೀರದಿಂದಲೇ ಭಕ್ತಿಮಾರ್ಗವನ್ನು ಸಾಧಿಸಿ ನಿಜವನ್ನು ಅರಿಯುತ್ತಾರೆಂದು” ತಿಳಿಸಿದ್ದಾನೆ. ಸಕಲ ಜೀವರಾಶಿಗಳಿಗೆ ದುರ್ಲಭವಾದ ಮಾನವ ಶರೀರವನ್ನು ಪಡೆದ

ಮೇಲೆ ಸನ್ಮಾರ್ಗದಲ್ಲಿ ನಡೆದು ಯೋಗ್ಯನಾಗಬೇಕು.

“ಸತ್ಯವ ನುಡಿವುದೇ ದೇವಲೋಕ;

ಮಿಥ್ಯವ ನುಡಿವುದೇ ಮರ್ತ್ಯಲೋಕ;’

ಎಂದು ಅಣ್ಣಬಸವಣ್ಣನವರು ತಿಳಿಸಿದಂತೆ ನಡೆ ನುಡಿಗಳೊಂದಾದರೆ ಸುರಲೋಕವು ಭೂಲೋಕದೊಳಗೇ ಇರುವದು. ದೇವಲೋಕದ ಶಿವನ ಅಂಶನಾದ ಮಾನವನು ಸನ್ಮಾರ್ಗದಲ್ಲಿ ಶಾಂತರೊಸೆದಹುದೆಂದು ಬಣ್ಣಿಸುವ ಮಾರ್ಗದಲ್ಲಿ

ನಡೆದರೆ ಅವನೇ ದೇವನಾಗುವನು. ಅವನಿರುವ ಈ ನರಲೋಕವು ಸುರಲೋಕವಾಗುವದು. ಗುರುಕರುಣೆಯನ್ನು ಪಡೆದ ಈ ದೇಹವು ಸುಂದರ ನಡೆಯಿಂದ ಸುರಲೋಕ ವೆನಿಸುವದು. ಅದರ ಒಡೆಯನಾದ ಜೀವಾತ್ಮನು ಅಥವಾ ಅಂಗನು, ಅವನೇ

ಅರಸನು, ತನ್ನ ಬಹಿರ್ಮುಖಗಳಾದ ನರಲೋಕರೂಪ ಇಂದ್ರಿಯಗಳನ್ನು ಲಿಂಗಗಳನ್ನಾಗಿ ಪರಿವರ್ತಿಸಿ ಅವನ್ನು ತನ್ನ ವಶದಲ್ಲಿಟ್ಟುಕೊಂಡನಾದರೆ ಸುರಲೋಕವಾಗುವದು. ಸುಂದರವಾಗುವುದು. ಸಜೀವನಾಗಿ ಶಿವಭಾವನೆಯಿಂದ ಇಂದ್ರಿಯ ಲೋಕವನ್ನೆಲ್ಲ ಸೌಂದರ್ಯವುಳ್ಳವುಗಳನ್ನಾಗಿ ಮಾಡಿದರೆ –

“ಸತ್ಯಂ ಶಿವಂ ಸುಂದರಂ”

ಎಂಬ ತತ್ತ್ವಯುಕ್ತನಾಗುವದರಲ್ಲಿ ಸಂದೇಹವಿಲ್ಲ. ಅದುಕಾರಣ ಸದಾಚಾರ ಸನ್ಮಾರ್ಗದಿಂದ ನಡೆದು ಈ ಮಾನವಜೀವನದಲ್ಲಿ ಕಾಣದ ಸುರಲೋಕವನ್ನು ಅಳವಡಿಸಿಕೊಂಡು ದೇವನಾಗಬಹುದು. ಯಾವ ಮಹಾತ್ಮನಾದರೂ ದೇವಲೋಕವನ್ನು ತರುವದಿಲ್ಲ. ಈ ಲೋಕವನ್ನೇ ತಮ್ಮ ಆದರ್ಶದಿಂದ ಉಪದೇಶದಿಂದ ಸನ್ಮಾರ್ಗ ತೋರಿ ಸ್ವರ್ಗಸದೃಶ್ಯವನ್ನಾಗಿ ಮಾಡುತ್ತಾರೆ. ಹಿಂದೀ ಸಾಹಿತ್ಯದ ಕ್ರಾಂತಿಕಾರಿ ಕವಿಯಾದ ಮೈಥಿಲಿ ಶರಣ ಗುಪ್ತನು ತನ್ನ ‘ಸಾಕೇತ’ವೆಂಬ ಮಹಾಕಾವ್ಯದಲ್ಲಿ

ಪುರುಷೋತ್ತಮ ರಾಮಚಂದ್ರನ ಜೀವನ ಚಿತ್ರಣವನ್ನು ಮಾಡುತ್ತ ಅವನ ಮುಖದಿಂದ ನುಡಿಸಿದ ಈ ಕೆಳಗಿನ ವಚನಗಳು ಮನನೀಯವಾಗಿವೆ-

“ಮೈಂ ಆರ್ಯೊಂಕಾ ಆದರ್ಶ ಬತಾನೆ ಆಯಾ |

ಭವಮೇಂ ನವ ವೈಭವ ವ್ಯಾಪ್ತ ಕರಾನೆ ಆಯಾ |

ನರ ಕೋ ಈಶ್ವರತಾ ಪ್ರಾಪ್ತ ಕರಾನೆ ಆಯಾ |

ಸಂದೇಶ ಯಹಾಂ ಮೈಂ ನಹೀಂ ಸ್ವರ್ಗ ಕಾ ಲಾಯಾ |

ಇಸ ಭೂತಲಕೋ ಹೀ ಸ್ವರ್ಗ ಬನಾನೆ ಆಯಾ || ಪುಟ ೨೩೪-೩೩.೫

“ನಾನು ಆರ್ಯರ (ಹಿರಿಯರ) ಅಥವಾ ಪೂರ್ವಜರ ಆದರ್ಶವನ್ನು ಹೇಳಲು ಬಂದಿದ್ದೇನೆ. ಈ ಭವದಲ್ಲಿ ನೂತನವಾದ ವೈಭವವನ್ನು ತುಂಬಲು ಬಂದಿದ್ದೇನೆ. ಮಾನವನಿಗೆ ಈಶ್ವರತ್ವದ ಪ್ರಾಪ್ತಿಯನ್ನುಂಟು ಮಾಡಿಸಲು ನನ್ನ ಆಗಮನವಾಗಿದೆ.

ಆದರೆ ನಾನು ಸ್ವರ್ಗದಿಂದ ಯಾವ ಸಂದೇಶವನ್ನು ಮಾತ್ರ ತಂದಿಲ್ಲ. ಈ ಭೂಮಂಡಲವನ್ನೇ ಸ್ವರ್ಗ (ಸದೃಶ) ವನ್ನಾಗಿ ಪರಿವರ್ತಿಸಲು ಬಂದಿದ್ದೇನೆ.”

ಪುಣ್ಯಪುರುಷರ ಜೀವನದ ಆದರ್ಶವನ್ನು ಅನುಸರಿಸಿ ನಡೆದರೆ ಅವನ ಜೀವನ ಸುರಲೋಕದಂತಾಗುವದು. ಗುರುವೆ ! ನಿಮ್ಮ ನಡೆ-ನುಡಿಯ ಆದರ್ಶದಿಂದ ನಿತ್ಯವಾದ ಸ್ವರ್ಗಸುಖವನ್ನು ಕಾಣುವ ಪರಿಯನ್ನು ತೋರಿ ರಕ್ಷಿಸು.

.* ಪ್ರೋ. ಎಸ್, ಡಿ, ಇಂಚಲ

ಕನ್ನಡಿಗರ ಜೀವನವನ್ನೇ ತಮ್ಮ ದಿವ್ಯವಾದ ತಪೋತೇಜಸ್ಸಿನಿಂದ ಬೆಳಗಿ ಮುನ್ನಡೆಸಿ ಹೋದ ಕಾರಣಿಕ ಶ್ರೀ ಕುಮಾರಯೋಗಿಯ ಪುಣ್ಯ ಸ್ಮರಣೆಯ ಗತಿಹೀನರಾದ ಮತಿಹೀನರಾದ ನಮಗೆ ಸ್ಫೂರ್ತಿಯನ್ನು ನೀಡುವುದರಲ್ಲಿ ಸಂದೇಹವಿಲ್ಲ. ನಿರುತ್ಸಾಹದ ನಿಬ್ಬೆರಗಿನಲ್ಲಿರುವ ಇಂದಿನ ಕನ್ನಡದ ಮಣ್ಣಿಗೆ ಕಾಯಕಯೋಗಿ ಕುಮಾರೇಶ್ವರನ ನೆನಹು ಆಶಾದಾಯಕವಾದ ಹೊಸ ಜೀವರಸವನ್ನು ಕರೆಯುವುದರಲ್ಲಿ ಯಾವ ಅಭ್ಯಂತರವೂ ಇಲ್ಲ. ಇಂಥ ಮಹಾಮಹಿಮರ ಜೀವನ ಚರಿತ್ರೆಯಿಂದ ನಾವಿಂದು ಬೆಳಕನ್ನು ತುಂಬಿಕೊಳ್ಳಬೇಕಾಗಿದೆ. ಕಾರ್ಯೋತ್ಸಾಹದ ಕಿಡಿಯನ್ನು ಹೊತ್ತಿಸಿಕೊಳ್ಳಬೇಕಾಗಿದೆ.  ಅವರಿತ್ತ ಆ ದಿವ್ಯ ಸಂದೇಶವು ಇಂದಿನವರಾದ ನಮಗೆ ಬಾಳಬಟ್ಟೆಯ ಪರಮಾಗಮ ವಾಗಿದೆ. ಅಂತೆಯೇ ಇಂದು ಶ್ರೀಗಳ ಸವಿನೆನಹು ಭಾರತ ಹುಣ್ಣಿಮೆಯ ಬೆಳದಿಂಗಳಂತೆ ನಮ್ಮ ಬುವಿ ಬಾನುಗಳನ್ನು ತುಂಬಿ ಮೈಮನಗಳನ್ನು ಅರಳಿಸಿ  ಚೇತನಕಾರಿಯಾಗಿ ತೂರಿ ಬರುತ್ತದೆ. ಅದರ ಶುಭ್ರವಾದ ಪವಿತ್ರ ಪ್ರವಾಹದಲ್ಲಿ ನಮ್ಮ ಮೈಮನಗಳನ್ನು ತೇಲುಬಿಟ್ಟು ನಮ್ಮ ಬಾಳಿನ ಮುಂಗೆಲಸಕ್ಕೆ ಮಂಗಳವನ್ನು ಹಾಡೋಣ. ಕಾರ್ಯಕ್ಷೇತ್ರದಲ್ಲಿ ಭಕ್ತಿ ವಿಶ್ವಾಸಗಳಿಂದ ಕಂಕಣ ಬದ್ಧರಾಗಿ ಇಳಿಯೋಣ.

ಕಾರಣಿಕ ಶ್ರೀ ಕುಮಾರಯೋಗಿಯ ಪಾವನತರವಾದ ಈ ಜೀವನ ಪ್ರವಾಹವು ಅನಂತಮುಖವಾಗಿ ಹರಿದು, ಕಾಡಾದ ಕನ್ನಡವನ್ನು ತನ್ನ ತ್ಯಾಗ ಸಾಹಸಗಳ ನಂದನವನವನ್ನಾಗಿ ಮಾಡುವ ಮಹತ್ಕಾರ್ಯದಲ್ಲಿ ಬಿಡುಗಡೆಯನ್ನು ಹೊಂದಿ ಬಯಲನ್ನೇ ಬೆಳಗಿ ಹೋಗಿದೆ. ಅದೊಂದು ಮಹಾತ್ಮನ ಪೂರ್ಣ ಚಿತ್ರವಾಗಿದೆ. ಸತ್ಯ ಸೌಂದರ್ಯದ  ಸಂಗೀತದಿಂದೊಡಗೂಡಿದ ಮಹಾಕಾವ್ಯವಾಗಿದೆ. ಶ್ರೀಗಳ ಬದುಕು ಅವರ ಆತ್ಮ ಸಾಕ್ಷಾತ್ಕಾರದ ಪ್ರತಿಬಿಂಬ; ಮಾನವ ಕಲ್ಯಾಣ ಸಾಧನೆಯ ಅಮೃತ ಸಿದ್ದಿ! ಸಮಾಜ-ಸಂಸ್ಕೃತಿ, ಸಾಹಿತ್ಯ-ಸಂಸ್ಕಾರದ ನಂದಾದೀಪ! ಕ್ರಾಂತಿಯ ಸ್ಟುರಣ! ಶಾಂತಿಯ ಸದನ! ದೀನ ದುರ್ಬಲರ ಅನವರತ ಆಧಾರ! ಹೀಗೆ. ನಾನಾ ಮುಖವಾದ ಶ್ರೀಗಳ ಜೀವನವು ಕನ್ನಡಿಗರ ಅಕ್ಷಯ ನಿಧಿಯಾಗಿದೆ. ತ್ಯಾಗ ಪ್ರೇಮ, ಸೇವೆಗಳ ಸಾರ ಸರ್ವಸ್ವವಾಗಿದೆ. ಅವರದು ಕೇವಲ ಆತ್ಮ ಕಲ್ಯಾಣಕ್ಕಾಗಿ  ದಲಿತ ದರಿದ್ರರ ಏಳ್ಗೆಗಾಗಿ ಪರಿತಪಿಸಿದ ಕೃಷಿ ಜೀವನವಾಗಿದೆ. ಅಂತೆಯೇ ಅವರು ಮೆಟ್ಟಿದ ನೆಲ ಪುಣ್ಯಕ್ಷೇತ್ರವಾಯಿತು. ಅವರು ಕೊಟ್ಟ ಆ ದೃಷ್ಟಿಯಿಂದ ಜನಾಂಗದಲ್ಲಿ ಒಂದು ನವೀನ ಸೃಷ್ಟಿಯೇ ಧರೆಗಿಳಿಯಿತು. ಆಗ ಕನ್ನಡ ನಾಡು  ಧನ್ಯವಾಗಿ ನಮ್ಮ ಸಮಾಜ ಚೇತರಿಸಿಕೊಂಡಿತು. ಬೀಡು ಬಿಟ್ಟು ಅಂಧಕಾರವು ಕರಗಿ  ಜ್ಞಾನಸೂರ್ಯ ಹೊಂಗಿರಣಗಳು ಬಾಳನ್ನು ಬೆಳಗಿದವು ಜನಜೀವನದಲ್ಲಿ ಧರ್ಮ, ನೀತಿ, ದಾನ ದುಡಿಮೆಗಳು ರೂಪಗೊಂಡು ಸತ್ವಯುತವಾದ ಸಮಾಜದ  ಉದಯವಾಯಿತು . ಜನ ಸಾಮಾನ್ಯರ ಬದುಕು ಕೊಳೆಯನ್ನು ಕಳೆದು ಹಸನಾಯಿತು. ಕಷ್ಟಕಾರ್ಪಣ್ಯ ಗಳನ್ನಳಿದು ಹಗುರಾಯಿತು. ಕಸಬು  ಕಾಯಕಗಳನ್ನು ಕೈಕೊಂಡು ಸ್ವಾವಲಂಬಿಯಾಗಿ ಸಮರ್ಥವಾಯಿತು. ಇದು ಅಮೋಘವಾದ ಕ್ರಾಂತಿ. ಈ ಬಗೆಯಾಗಿ ರಕ್ತರಹಿತ ಕ್ರಾಂತಿಯನ್ನೆಸಗಿದ ಅಮೋಘ ಶಕ್ತಿಯಾದ ಶಾಂತಿದೂತನಾದ ಕರ್ಮಯೋಗಿ ಕುಮಾರನ ಜೀವನವು ಅಸಾಮಾನ್ಯವಾದುದು ಎಂದು ಬೇರೆ ಹೇಳಬೇಕಾಗಿಲ್ಲ.

ಶ್ರೀಗಳ ವ್ಯಕ್ತಿತ್ವ ವೈವಿಧ್ಯಪೂರ್ಣವಾಗಿ ಉಜ್ವಲವಾದುದು. ವಿಶಾಲವಾದ ವೈರಾಗ್ಯ, ಮನನೀಯವಾದ ವಿಚಾರ ಸ್ವಾತಂತ್ರ್ಯ, ಆರ್ತರ ಬಗೆಗಿರುವ ಅಪಾರವಾದ ಅನುಕಂಪ, ಅಜ್ಞ ಸಮಾಜದ ಏಳೆಗೆ ತೋರಿದ ಅತುಲವಾದ ಕಳಕಳಿ, ಸಾಹಿತ್ಯ  ಸಂಸ್ಕೃತಿಗಳ ಅಭಿಮಾನ, ಸಂಘ ಸಂಸ್ಥೆಗಳ ಬಗೆಗಿರುವ ನವೀನ ದೃಷ್ಟಿ ಕಾರ್ಯ ಕುಶಲತೆ ಧರ್ಮ ಸಹಿಷ್ಣುತೆ, ಹಿಡಿದುದನ್ನು ಕೈಗೂಡಿಸಿಯೇ ಬಿಡುವ ದೃಢಸಂಕಲ್ಪ. ಸಂಗೀತ, ಚಿತ್ರ ಮೊದಲಾದ ಲಲಿತ ಕಲೆಗಳ ಬಗೆಗಿರುವ ಕಲಾಪ್ರೇಮ ಎಲ್ಲಕ್ಕೂ ಹೆಚ್ಚಾಗಿ ಮಾನವ ಕಲ್ಯಾಣ ಚಿಂತನೆ. ಇವೇ ಮೊದಲಾದ ಎಷ್ಟೋ ಸದ್ಗುಣಗಳಿಂದ ಮಂಡಿತವಾದ ಅವರ ಮೂರ್ತಿ ಪ್ರಭೆಯು ಪ್ರಕಾಂಡ ಪ್ರಭಾವವುಳ್ಳದ್ದಾಗಿತ್ತು. ತ್ಯಾಗ ಧೈರ್ಯ ಸಾಹಸಗಳಲ್ಲಿ ಶ್ರೀಗಳು ಅಸದೃಶರಾಗಿದ್ದು ಅದು ಸದಾ ಕಾಲವೂ ಸತ್ಯಕ್ಕಾಗಿ ಸತ್ಯದರ್ಶನಕ್ಕಾಗಿ ಜನತೆಯ ಸೌಭಾಗ್ಯಕ್ಕಾಗಿ ತಮ್ಮದಾದ ಎಂಥದನ್ನೂ ತ್ಯಾಗ ಮಾಡುವ ಮನೋನಿರ್ಧಾರ ಶ್ರೀಗಳ ವ್ಯಕ್ತಿತ್ವದಲ್ಲಿ ಮೂರ್ತಿ ಮುಂತಾಗಿತ್ತು. ನಮ್ಮ ನಾಡಿನಲ್ಲಿ ಯೋಗಿಯಾಗಿ ಬೈರಾಗಿಯಾಗಿ ಅವರ ಸ್ಥಾನ ಉನ್ನತವಾಗಿದೆ. ಸಾಹಿತ್ಯ ಶಿಕ್ಷಣ ಸಂಶೋಧಕರಾಗಿ ಸಂಗ್ರಾಹಕರಾಗಿ ಅವರ ಸ್ಥಾನ ಮಹಾ ಮಹೋನ್ನತವಾಗಿದೆ ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ. ಬಡವರ ಮಗುವಾಗಿ ಹುಟ್ಟಿ ಬಡತನದ ಬವಣೆಯಲ್ಲಿ ಬಳಲಿ ವಿದ್ಯಾರ್ಜನೆಗಾಗಿ ಹುಲುಬಿ ಹಂಬಲಿಸಿ ಆತ್ಮಶಕ್ತಿಯಿಂದ ನಿದಿಧ್ಯಾಸ ಅಭ್ಯಾಸಗಳ ಬಲದಿಂದ ಗುರುವಿನ ಅನುಗ್ರಹದಿಂದ ಮಾನವ ಜೀವನದ ಅಗ್ನಿ ಪರೀಕ್ಷೆಯಲ್ಲಿ ಬಿದ್ದು ಒರೆಗೆ ಬಂಗಾರದಂತೆ ಬೆಳಗಿ ಹೋದ ಕಾರಣಿಕ ಶಿವಯೋಗಿಯು ಕನ್ನಡ ತಾಯಿಯ ಅಮೃತ ಕುವರನಾದುದು ಗಮನಿಸತಕ್ಕ ಮಾತಾಗಿದೆ. ಶಿವನೇ ಸೃಷ್ಟಿಯಲ್ಲಿ ಹುಟ್ಟಿ ಸಾಮಾನ್ಯರ ಸೇವೆಗೈದು ತನ್ಮೂಲಕ ಶಿವಾನುಭವದ ಶಿಖರವನ್ನೇರುವುದಕ್ಕೆ ಕುಮಾರನ ಕಥೆಯು ಅಮರವಾದ ಉಪಮೆಯಾಗಿದೆ. ಕನ್ನಡಿಗರ ಸಾತ್ವಿಕ ಜೀವನದ ಬೃಹತ್ ಶೈಲಕ್ಕೆ ಗೌರೀಶಂಕರವಾಗಿದೆ. ಶಾಂತಿ ಕಿರಣಗಳನ್ನು ಸೂಸುವ ದೀಪಸ್ತಂಭವಾಗಿದೆ.

 ಶ್ರೀಗಳ ಕೀರ್ತಿಯನ್ನು ಕಾರ್ಯದಕ್ಷತೆಯನ್ನೂ ಸಮಾಜೋದ್ಧಾರವನ್ನೂ ಎತ್ತಿ ತೋರಿಸುವ ಜೀವಂತ ಕುರುಹುಗಳು ನಮ್ಮ ನಾಡಿನಲ್ಲಿ ಇನ್ನೂ ಮೌನ  ಗಂಭೀರವಾಗಿ ನಿಂತಿವೆ. ಶಿವಯೋಗ ಮಂದಿರವು ಅಂಥದೊಂದು ಸಜೀವ ಸಂಸ್ಥೆ, ಅದರ ಸಂಸ್ಥಾಪನೆಯ ಕಥನ ಗೀತೆಯನ್ನೂ ಮಹಿಮೆಯನ್ನೂ ಪವಿತ್ರಳಾದ ಮಲಪಹಾರಿಣಿಯು ಅಂದಿನಿಂದ ಇಂದಿನವರೆಗೆ ತನ್ನ ತರಂಗ ತರಂಗವಾದ ಜಲತರಂಗದ ಸಂಗೀತದೊಂದಿಗೆ ಮೌನವಾಗಿ ಜೋಗುಳಗರೆಯುತ್ತಿದ್ದಾಳೆ. ಕರ್ನಾಟಕದ ಆತ್ಮಾನುಭೂತಿಯ ಅಧ್ಯಾತ್ಮ ಕೇಂದ್ರವಾಗಿರುವ ಶ್ರೀಗಳ ಪಾದಧೂಳಿಯಿಂದ ಪಾವನವಾದ ಶಿವಯೋಗ ಮಂದಿರದ ಅಡಿದಾವರೆಗಳನ್ನು ತೊಳೆಯುವ ಚಿರಂತನ ಸೇವೆಯಲ್ಲಿ ನಿರತಳಾಗಿದ್ದಾಳೆ. ಸಮಾಜದ ತಾಯಿಯಾದ ಭಕ್ತಿಜ್ಞಾನ ವೈರಾಗ್ಯಗಳ ಸಂಗಮ ಕೇಂದ್ರವಾದ ನಮ್ಮ ಸಮಾಜದ ಗುರು ವರ್ಗವನ್ನು ತರಬೇತಿಗೊಳಿಸುವುದು ಸಮಾಜದ ಹಿತದೃಷ್ಟಿಯಿಂದ ಅತ್ಯಂತ ಮಹತ್ತರವಾದದ್ದೆಂದು ಕಂಡು ಹಿಡಿದ ಶ್ರೀಗಳು ಶಿವಯೋಗ ಸಾಧನೆಯ ಗರಡಿಯಂತಿದ್ದ ಈ ಮಂದಿರವನ್ನು ಸ್ಥಾಪಿಸಿದರು. ನವೋ ನವವಾಗುತ್ತಿರುವ ನಮ್ಮ ಸಮಾಜದ ಹಿತಸಂಬಂಧಗಳನ್ನು ಉಳಿಸಿ ಬೆಳಿಸಿ ಬೆಳಗಿಸಿಕೊಂಡು ಹೋಗುತ್ತಿರುವ ಗುರುವೃಂದವು ಇಲ್ಲಿಯ ಪವಿತ್ರ ವಾತಾವರಣದಲ್ಲಿ ತರಬೇತಿ ಹೊಂದುತ್ತಿರುವುದು ಅತ್ಯಂತ ಮಹತ್ವದ್ದು, ಈ ಮಂದಿರದ ಆಂತರ್ಯದಲ್ಲಿ ಅದರ ಸುತ್ತಲಿನ ತರಮರಾದಿಗಳಲ್ಲಿ ಖಗ ಮೃಗಾದಿಗಳಲ್ಲಿ ಶ್ರೀಗಳ ಅಧ್ಯಾತ್ಮ ಜ್ಯೋತಿಯು ಬೆಳಗುತ್ತಿರುವುದರಿಂದಲೇ ಮಂದಿರವು ಸಮಾಜಕ್ಕೆ ಸ್ಫೂರ್ತಿಯನ್ನು ನೀಡಲು ಶಕ್ತವಾಗಿದೆ . ಸಮಾಜದ ಆಗು ಹೋಗುಗಳ ಸೂತ್ರಗಳನ್ನು  ಹಿಡಿದು ಮುನ್ನಡೆಯಿಸುವುದೆ ಈ  ಮಂದಿರದ ಘನವಾದ ಉದ್ದೇಶವು , ಈ ಚೇತನಶಕ್ತಿ ನೈತಿಕ ಬಲ ಶ್ರೀಗಳ ಒಲವಿನಿಂದಧಿಕವಾಗಿ ಮಂದಿರದ ಮುಂದಿರುವ ಆಶಯವು  ಹಣ್ಣಿಸುವಂತೆ ನಮ್ಮ ಸಮಾಜದ ಮುಂದಾದುಗಳು ಗುರುಗಳು ಯತ್ನಿಸುವರಾಗಿ  ಆಶಿಸುತ್ತೇವೆ.

 ಹೀಗೆ ಶ್ರೀಗಳು ಕೇವಲ ತತ್ವಬೋಧನೆಗೆಂದು ನಿಂತ ವಚನ ವೀರರಾಗಿರದೆ  ತತ್ವಸಾಧನೆಯ ಸತ್ವಯುತವಾದ ಮುಂದಾಳುಗಳೂ ಕ್ರಿಯಾಶಿಲ್ಪಿಗಳೂ ಆಗಿದ್ದರು. ಆದುದರಿಂದಲೇ ಸಮಾಜ ಜಾಗೃತಿಯ ಬಗ್ಗೆ ತಾವು ಕಂಡ ಎಷ್ಟೋ ಕನಸುಗಳನ್ನು ನನಸಾಗಿಸಲು ತಮ್ಮ ಜೀವಮಾನದಲ್ಲೆಲ್ಲ ಹಸಿವು ನೀರಡಿಕೆಗಳಿಲ್ಲದೆ ಯತ್ನಿಸಿದ ರೆಂಬುದು ಗಮನಿಸತಕ್ಕ ಸಂಗತಿಯಾಗಿದೆ. ಲಿಂಗಾಯತ ಸಮಾಜದ ಸಂಘಟನೆಗಾಗಿ ಮಹಾಸಭೆಯೊಂದನ್ನು ೧೯೦೪ರಲ್ಲಿ ಸರದೇಸಾಯಿ ಶಿರಸಂಗಿಯವರ ಅಧ್ಯಕ್ಷತೆಯಲ್ಲಿ ಸಂಸ್ಥಾಪಿಸಿದರು. ಅದರ ನೇತೃತ್ವದಲ್ಲಿ ಸಮಾಜದಲ್ಲಿ ಕ್ರಾಂತಿಯಾಯಿತು. ಸಾಮಾಜಿಕ ಶೈಕ್ಷಣಿಕ ಸಾಂಪತ್ತಿಕ ಸಾಹಿತ್ಯಕ ಮತ್ತು ಔದ್ಯೋಗಿಕ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಯು ಅಖಂಡವಾಗಿ ಸಾಗಿತ್ತು. ಅಲ್ಲಿಗೆ ತಮ್ಮ ದೀರ್ಘವಾದ ಸಾಹಸದಿಂದ ಒಂದು ಲಕ್ಷದ ವರೆಗೆ ಹಣ ಶೇಖರಿಸಿ ಲಿಂಗಾಯತ ಎಜ್ಯುಕೇಶನ್ ಫಂಡನ್ನು ನಿರ್ಮಿಸಿದರು. ಸಮಾಜ ಜಾಗ್ರತೆಯ ಚಟುವಟಿಕೆಗಳೆಂದು ವೀರಶೈವ ಮಹಾಸಭೆಯ ಜೊತೆಯಲ್ಲಿಯೇ ಅದಕ್ಕೆ ಅಂಗವಾಗಿ ಲಿಂಗಾಯತ ಮಹಿಳಾ ಪರಿಷತ್ತು, ಲಿಂಗಾಯತ  ತರುಣ ಸಂಘ, ಶಿಕ್ಷಣ ಸಮ್ಮೇಲನ, ವೈದ್ಯಕೀಯ ಸಮ್ಮೇಲನ ಮೊದಲಾದ ಚಟುವಟಿಕೆಗಳನ್ನು ಪ್ರೋತ್ಸಾಹಿಸಿದರು. ಅದುದರಿಂದಲೇ ಅವರ ಜೀವಮಾನದ ಕಾಲವು ನಮ್ಮ ಸಮಾಜದ ಉತ್ಕ್ರಾಂತಿಯ ಕಾಲವಾಯಿತು.

ಈ ರೀತಿಯಿಂದ ಶ್ರೀಗಳವರ ಜೀವನವು ಗುಣಧರ್ಮಗಳಿಗೆ ನಿಧಿಯಾಗಿ, ಸತ್ಕರ್ಮಗಳ ಶಾಂತಿಯ ಆಗರವಾಗಿ ಮಾನವ ಕಲ್ಯಾಣಕ್ಕೆ ಉತ್ತುಂಗ ಶಿಖರವಾಗಿ ಗಂಭೀರವಾಯಿತು. ವ್ಯಕ್ತಿ ಮತ್ತು ಸಮಾಜಗಳ ಅನ್ನೋನ್ಯವಾದ ವಿಕಾಸದ ಸಂದರ್ಭದಲ್ಲಿ ಎದುರಾಗಿ ಬಂದ ಅನೇಕ ವಿಷಮ ಸನ್ನಿವೇಶಗಳನ್ನು ಸಹಿಸಿ ಉದಾರ ಭಾವನೆಯಿಂದ ವಿಶಾಲ ಹೃದಯದಿಂದ, ನಮ್ಮ ಜನಕ್ಕೆ ಆದರ್ಶ ವ್ಯಕ್ತಿಯಾಗಿ ನಮ್ಮವರ ಅಮೋಘ ಶಕ್ತಿಯಾಗಿ ಬಾಳಿದರು. ಜೀವನದ ಆಳಕ್ಕೆ ಇಂದು, ಮಾನವ ಕಲ್ಯಾಣದ ಎತ್ತರಕ್ಕೆ ಹಾರಿ ಜಗದಲವೂ ವಿಶಾಲವಾಗಿ ನಿಲ್ಲಲು ಸಮರ್ಥರಾದರು ಶ್ರೀಗಳು. ಅವರ ಆ ವ್ಯಕ್ತಿದೀಪ ನಮ್ಮೆಲ್ಲರ ಗರ್ಭಗುಡಿಯಲ್ಲಿ ನಂದಾದೀಪವಾಗಿ ಬೆಳಗುತ್ತಲಿದೆ, ಆ ಕರುಣಾಮಯ ಬೆಳಕು ಬರಡಾದ ನಮ್ಮ ಬಾಳಂಚಿನಲ್ಲಿ ಮತ್ತೊಮ್ಮೆ ಮೂಡಿ ಬೆಳಗಲೆಂದು ಅನನ್ಯ ಭಕ್ತಿಯಿಂದ ಪ್ರಾರ್ಥಿಸುವೆವು.

(ಆಕರ : ಸುಕುಮಾರ ಸಂ: ೪ 1956)

-ಡಾ. ಜಿ. ಎಸ್. ಶಿವರುದ್ರಪ್ಪ

ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,

ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು

ತೊಳಗಿ ಬೆಳಗುತ್ತಿದ್ದಿತಯ್ಯಾ ಶಿವನ ಪ್ರಕಾಶ………’

ಬಸವಣ್ಣನವರ ವ್ಯಕ್ತಿತ್ವವನ್ನು ಕುರಿತು, ಅವರ ಸಮಕಾಲೀನರಾದ ಶ್ರೀ ಅಲ್ಲಮ ಪ್ರಭುಗಳು ಮಾಡಿದ ವ್ಯಾಖ್ಯಾನ ರೂಪದ ವಚನ ಇದು. ದಿವ್ಯ ಅನುಭಾವಿಯೊಬ್ಬರು ಅಂದಿನ ಮಹಾ ಸಾಧಕರೊಬ್ಬರನ್ನು ಕುರಿತು ಆಡಿದ ಈ ರೂಪಕ ಬಸವಣ್ಣನವರ ವ್ಯಕ್ತಿತ್ವದ ಸಮಗ್ರ ಚಿತ್ರವನ್ನು ಕೊಡುವುದರ ಜೊತೆಗೆ, ಅಂದು ಶಿವಶರಣರಿಂದ ಪ್ರಚಲಿತವಾದ ವಚನವೆಂಬ ವಿಶಿಷ್ಟ ಸಾಹಿತ್ಯ ಪ್ರಕಾರದ ಸ್ವರೂಪ ಸ್ವಭಾವಗಳನ್ನೂ ಪರಿಚಯ ಮಾಡಿಕೊಡುತ್ತದೆ.

ಹೌದು; ಅಲ್ಲಮ ಪ್ರಭುಗಳು ಹೇಳುವಂತೆ ಬಸವಣ್ಣನವರು ಒಂದು ಜ್ಯೋತಿಯು; ಆದರೆ ಅದರಿಂದ ಬೆಳಗುತ್ತಿರುವುದು, ‘ಶಿವನ ಪ್ರತಾಪ’ ಅನುಭಾವದ ತೇಜಸ್ಸು. ಆ ಒಂದು ಜ್ಯೋತಿ ಹನ್ನೆರಡನೆಯ ಶತಮಾನದಂದು ತನ್ನ ದೀಪ್ತಿಯಿಂದ ಎಷ್ಟೊಂದು ದೀಪಗಳನ್ನು ಹತ್ತಿಸಿ ‘ತಮಂಧಘನ’ವಾದ ಅಂದಿನ ಆವರಣದಲ್ಲಿ ವಿನೂತನವಾದೊಂದು ಧಾರ್ಮಿಕ ಕ್ರಾಂತಿಯನ್ನೂ, ಅದರ ಪರಿಣಾಮರೂಪದ ಸಾಹಿತ್ಯ ಕ್ರಾಂತಿಯನ್ನೂ ಮಾಡಿ, ಪಂಪನ ನಂತರದ ಮತ್ತೊಂದು ನವೋದಯಕ್ಕೆ ಅಚಾರ್ಯಶಕ್ತಿಯಾಯಿತು. ಅಂತೆಯೇ ಅವರ ಬದುಕು ಎಷ್ಟೊಂದು ಕವಿಗಳ ಕಾವ್ಯಕ್ಕೆ ಪ್ರೇರಣೆಯನ್ನು ಸ್ಫೂರ್ತಿಯನ್ನು ನೀಡಿತು ! ಈ ದೃಷ್ಟಿಯಿಂದ ನೋಡಿದರೆ ಬಸವಣ್ಣನವರು ಕನ್ನಡ ಸಾಹಿತ್ಯದ ಪ್ರಯೋಗಶೀಲವಾದ ಕ್ರಾಂತಿ ಪ್ರವಾಹವೊಂದರ ದೊಡ್ಡ ತರಂಗವಾಗಿ ಗೋಚರಿಸುತ್ತಾರೆ.

ಮಹಾವ್ಯಕ್ತಿಗಳು ತಮ್ಮ ಬದುಕಿನ ಕಡಲನ್ನು ಕಡೆದು ಪಡೆದ ಭಾವ ಮೌಲ್ಯಗಳು ಅಂದಂದಿನ ಯುಗದ ಕವಿವಾಣಿಯ ಮೂಲಕ ಪ್ರಸಾರಗೊಳ್ಳುತ್ತವೆ. ಅಂತೆಯೇ ಬಸವಣ್ಣನವರ ಬದುಕು, ಹಾಗೂ ಅವರು ಮಥಿಸಿ ಬಾಳಿನಾಳದಿಂದ ತಂದ ಮೌಲ್ಯಗಳು, ಹರಿಹರ, ರಾಘವಾಂಕ ಮೊದಲಾದ ಕವಿಗಳ ಕಾವ್ಯದಲ್ಲಿ ಪುನಃ ಪ್ರಸಾರಿತವಾಗಿ ‘ಬಸವಯುಗ’ವೊಂದನ್ನು ಕನ್ನಡ ಸಾಹಿತ್ಯದಲ್ಲಿ ತೆರೆದಿವೆ. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಗೆ’-ಎಂಬ ಅವರ ಸಂಸಾರ ಸೂತ್ರ; ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರು, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ’- ಎಂಬ ಮಾತಿನಿಂದ ಧ್ವನಿತವಾಗುವ ಚಾರಿತ್ರಶುದ್ಧಿಯ ಬೆಲೆ; ‘ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರೆಲ್ಲರನು ಒಂದೇ ಎಂಬೆ’ ಎನ್ನುವಲ್ಲಿ ಕಂಡು ಬರುವ ಸಮಾನತೆಯ ಆದರ್ಶ; ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ – ಎಂಬಲ್ಲಿ ಕಂಡು ಬರುವ ಆ ವಿನಯ, ‘ಮೃದು ವಚನವೇ ಸಕಲ ಜಪಂಗಳಯ್ಯ’- ಎಂಬ ಮಾತಿನಿಂದ ವ್ಯಕ್ತವಾಗುವ ಆ ಮಾರ್ದವತೆ; ‘ನುಡಿದರೆ ಮುತ್ತಿನ ಹಾರದಂತಿರಬೇಕು…. ನುಡಿದರೆ ಲಿಂಗಮೆಚ್ಚಿ ಅಹುದೆನಬೇಕು’- ಎನ್ನುವಲ್ಲಿ ಮಾತಿನ ರೀತಿಯನ್ನು ಕುರಿತ ವಿವರಣೆ ಹಾಗೂ ಅದು ತಲುಪಬೇಕಾದ ನೆಲೆ; ‘ನಾಳೆಬಪ್ಪುದು ನಮಗಿಂದೇ ಬರಲಿ, ಇಂದು ಬಪ್ಪುದು ನಮಗೀಗಲೆ ಬರಲಿ, ಇದಕಾರಂಜುವರು, ಇದಕಾರಳುಕುವರು’ ಎನ್ನುವಲ್ಲಿ ಕಂಡು ಬರುವ ಶಿವಾರ್ಪಿತ ವ್ಯಕ್ತಿತ್ವದ ಮೃತ್ಯುಂಜಯ ಮನೋಭಾವ ಈ ಎಲ್ಲ ಭಾವಮೌಲ್ಯಗಳ ವಿಶಿಷ್ಟ ಸಮನ್ವಯ ಬಸವಣ್ಣನವರ ಜ್ಯೋತಿರ್ಮಯ ನಿರ್ಮಲಮುಗ್ಧ ಮನೋಹರ ಮೂರ್ತಿಯ ಚಿತ್ರವನ್ನು ಕನ್ನಡಕ್ಕೆ ನೀಡಿವೆ.

ಕನ್ನಡ ಸಾಹಿತ್ಯದ ದೃಷ್ಟಿಯಿಂದ ನೋಡುವುದಾದರೆ ಬಸವಣ್ಣನವರ ವಚನಗಳು ಅಪೂರ್ವವಾದ ಕಾಣಿಕೆ ಎನ್ನಬಹುದು. ಬಸವಣ್ಣನವರಿಗಿಂತ ಹಿಂದೆಯೇ ಈ ವಚನವಾಯದ ತೊರೆ ಹರಿಯುತಿದ್ದಿತಾದರೂ, ಬಸವಣ್ಣನವರ ವ್ಯಕ್ತಿತ್ವದ ನೆರೆ ನುಗ್ಗಿ ಅದರ ಪಾತ್ರ ವಿಸ್ತಾರವಾಯಿತು. ತುಂಬಿ ಗಂಭೀರವಾಯಿತು. ಆದರೆ ಒಂದು ಮಾತು: ಬಸವಣ್ಣನವರು ಪ್ರಧಾನವಾಗಿ ಸಾಹಿತಿಯಲ್ಲ: ದೊಡ್ಡ ಆಚಾರ್ಯರು. ಎಂದರೆ ಅವರು ಸಾಹಿತಿಯ ಮನೋಭಾವದಿಂದ ವಚನ ರಚನೆಗೆ ಕೈಹಾಕಿದವರಲ್ಲ, ತಾವು ಆಡಿದ ಮಾತು ಕಾವ್ಯವಾಯಿತೇ ಇಲ್ಲವೇ ಎಂದು ಶಂಕಿಸಿದವರಲ್ಲ ; ತಾವು ಬರೆದದ್ದು ಕಾವ್ಯವಾಗಲಿಲ್ಲವೆಂದು ಕೊರಗಿದವರೂ ಅಲ್ಲ, ಏಕೆಂದರೆ ಅವರಿಗಿರಲಿಲ್ಲ ಆಸ್ಥಾನ ಕವಿಯಾಗಿ ಪಂಡಿತರನ್ನು ಮೆಚ್ಚಿಸಬೇಕೆಂಬ ಹಂಬಲ; ಅವರಿಗಿದ್ದುದು ಬದುಕು ಹಸನಾಗಬೇಕೆಂಬ ಹೆಬ್ಬಯಕೆ, ಆ ಸುಧಾರಣೆಯನ್ನು ಕುರಿತ ಹಂಬಲ, ತುಡಿತ, ತೊಳಲಾಟ ಹಾಗೂ ಇದರಲ್ಲಿ ಜೀವ ಏರಿದ ಎತ್ತರ ಇವು ಅವರಿಗೆ ಪ್ರಧಾನ. ಹೀಗಾಗಿ ಅವರು ಆಡಿದ ಮಾತು ಅವರಿಗರಿವಿಲ್ಲದಂತೆಯೇ ಕಾವ್ಯವಾಯಿತು; ವಚನವೆಂಬ ಹೊಸ ಸಾಹಿತ್ಯ ಪ್ರಕಾರವೊಂದು ಮೂಡಿ ಬೆಳೆಯಿತು. ಅಂದಂದಿನ ಅನುಭವಗಳನ್ನು ನೇರವಾಗಿ, ಸರಳವಾಗಿ, ನಿರೂಪಿಸುವ ಆತ್ಮಕಥನದ ರೀತಿಯೇ ಇವುಗಳ ಚೆಲುವು. ಅದುವರೆಗೂ ಹರಿದು ಬಂದ ವಸ್ತುನಿಷ್ಠ ಪುರಾಣ ಪದ್ಧತಿಯನ್ನು ತೆಗೆದೊಗೆದು, ತಮ್ಮ ಅನುಭವಗಳನ್ನು ವಯಕ್ತಿಕವಾಗಿ ಅಭಿವ್ಯಕ್ತಗೊಳಿಸುವ ವ್ಯಕ್ತಿನಿಷ್ಠ ವಿಧಾನವೊಂದು ಮೂಡಿದುದು ಅತ್ಯಂತ ಹರ್ಷದಾಯಕವಾದ ಸಂಗತಿ. ಈ ಬಗ್ಗೆ ಬಸವಣ್ಣನವರೆ ಒಂದೆಡೆ

ತಾಳ ಮಾನ ಸರಿಸವನರಿಯೆ,

 ಓಜೆ ಬಜಾವಣೆ ಲೆಕ್ಕವನರಿಯೆ.

ಅಮೃತಗಣ ದೇವಗಣವನರಿಯೆ !

ಕೂಡಲ ಸಂಗಮದೇವಾ, ನಿನಗೆ ಕೇಡಿಲ್ಲವಾಗಿ

ಆನು ಒಲಿದಂತೆ ಹಾಡುವೆ.

ಎನ್ನುತ್ತಾರೆ. ಈ ವಚನ ಅಂದು ಮೈಗೊಂಡ ವಚನ ರಚನಾ ಕ್ರಮವನ್ನು ಹೇಗೋ ಹಾಗೆಯೇ ಕವಿ ಮನೋಧರ್ಮವನ್ನೂ ಬಿಂಬಿಸುತ್ತದೆ. ಆನು ಒಲಿದಂತೆ ಹಾಡುವೆ’ – ಎಂಬ ವ್ಯಕ್ತಿ ಸ್ವಾತಂತ್ರದ ಧೈರ್ಯ ಬಹುಶಃ ಅಂದಿನ ತನಕ ಯಾವ ಕವಿಗೂ ಬಂದಂತೆ ತೋರುವದಿಲ್ಲ, ತಮ್ಮ ಆಶ್ರಯದಾತರ ಮನಸ್ಸಂತೋಷಕ್ಕೋ ಪಂಡಿತ ಪ್ರಶಸ್ತಿಗೋ “ಮನುಜರ ಮೇಲೆ, ಸಾವವರ ಮೇಲೆ’ ತಮ್ಮ ಕಾವ್ಯವನ್ನು ಪ್ರೌಢವಾದ ಭಾಷೆಯಲ್ಲಿ ಕಟ್ಟಿದ ಪುರಾಣ ಕವಿ ಪುಂಗವರ ಪದ್ಧತಿಯಲ್ಲಿ ಅಂದಂದಿನ ಅನುಭವವನ್ನು ತಮ್ಮದೇ ಆದ ಆಡುಮಾತಿನ ಜಾಡಿನಲ್ಲಿ ಹರಿಸಿ ‘ಅನು ಒಲಿದಂತೆ ಹಾಡುವೆ’ ಎಂದ ವ್ಯಕ್ತಿನಿಷ್ಠವಾದ ಭಾವಗೀತಾತ್ಮಕವಾದ ಈ ಪದ್ಧತಿಯಲ್ಲಿ ! ಅಚ್ಚುಕಟ್ಟಾಗಿ ಇಕ್ಕೆಲಗಳಲ್ಲಿಯೂ ಸಾಲುಮರಗಳನ್ನು ಬೆಳೆಯಿಸಿಕೊಂಡು, ಛತ್ರ ಚಾವಡಿಗಳನ್ನು ನಿರ್ಮಿಸಿಕೊಂಡು, ನಗರದಿಂದ ನಗರಕ್ಕೆ ಸಾಗುವ ರಾಜಮಾರ್ಗಗಳಲ್ಲಿ, ಕಾಡು ಮೇಡುಗಳ ನಡುವೆ ಏರಿಳಿದು, ಗಿರಿನೆತ್ತಿಯ ತೀರ್ಥಕ್ಷೇತ್ರಗಳೆಡೆಗೆ ನಡೆಯುವ ಹೆಜ್ಜೆ ಬರೆದ ಕಾಲು ಹಾದಿಗಳ ರೀತಿಯಲ್ಲಿ !

ಬಸವಣ್ಣನವರ ವಚನಗಳಲ್ಲಿ ಬೇರೆ ಯಾರ ವಚನಗಳಲ್ಲಿಯೂ ಕಾಣದ ಒಂದು ವಿಶಿಷ್ಟ ಗುಣವೆಂದರೆ, ಅಂತರಂಗದ ಅಂದಂದಿನ ತೊಳಲಾಟಗಳ ನಿರೂಪಣೆ, ಸತ್ಯದ ಹಾದಿ ನಡೆವ ಮಹಾಸಾಧಕನೊಬ್ಬ ತನ್ನ ಅಂತರಂಗ ಹಾಗೂ ಬಹಿರಂಗ ಜಗತ್ತಿನೊಡನೆ ನಡೆಸಿದ ನಿರಂತರ ಹೋರಾಟದ ಕ್ರಿಯೆ-ಪ್ರತಿಕ್ರಿಯೆಗಳ ಚಿತ್ರ ಇವುಗಳಲ್ಲಿದೆ, ಪ್ರಾಮಾಣಿಕವಾದ ಆತ್ಮ ಸಂಶೋಧಕರೊಬ್ಬರು ಅಪೂರ್ವ ದಿನಚರಿಯ ವಿಶಿಷ್ಟ ಮಾದರಿಗಳನ್ನು ಬಸವಣ್ಣನವರ ವಚನಗಳಲ್ಲಿ ನಾವು ಕಾಣಬಹುದು. ಉದಾಹರಣೆಗೆ ಅವರ ವಚನಗಳಿಂದ ಎತ್ತಿಕೊಂಡ ಈ ಹಲವು ಮಾತುಗಳನ್ನು ನೋಡಿ

‘ಸಂಸಾರವೆಂಬ ಬಲೆಯಲ್ಲಿ ಸಿಲುಕಿದೆನಯ್ಯಾ

ಎನ್ನುವನು ಕಾಯಯ್ಯಾ’

‘ಕಾಂಚನವೆಂಬ ನಾಯ ನೆಚ್ಚಿ ನಿಮ್ಮ ನಾನು ಮರೆದೆನಯ್ಯಾ’

“ಎನ್ನವರೊಲಿದು ಹೊನ್ನ ಶೂಲದಲಿಕ್ಕಿದರೆನ್ನ ಹೊಗಳಿ, ಹೊಗಳಿ

ನಾನೇನು ಪಾಪವ ಮಾಡಿದೆನೋ?

“ಎನ್ನಲ್ಲಿ ಭಕ್ತಿ ಸಾಸವೆಯ ಪಡಾಗದನಿತಿಲ್ಲ:

ಎನ್ನ ಭಕ್ತನೆಂಬರು, ಸಮಯಾಚಾರಿಯೆಂಬರು |

ನಾನೇನು ಪಾಪವು ಮಾಡಿದ್ದೇನೋ’

 ‘ಬೆರಣಿಯನಾಯಲೊಲ್ಲದೆ ಅಟ್ಟುಣ್ಣ ತೆರಹಿಲ್ಲವೆನಗೆ

ನೀ ಕರುಣಿಸಾ ಕೂಡಲ ಸಂಗಮದೇವಾ’.

ಇಂತಹ ಮಾತುಗಳು ಅವರ ಮಾನಸಿಕ ಹೋರಾಟದ ವ್ಯಥೆಯ ಕಥೆಯನ್ನೂ, ಅಂತೆಯೇ ಅವರು ಏರಿದ ನಿಲುವನ್ನೂ ಸೂಚಿಸುತ್ತವೆ.

ಬಸವಣ್ಣನವರ ವಚನಗಳಲ್ಲಿ ಕಂಡು ಬರುವ ಮತ್ತೊಂದು ಗುಣವೆಂದರೆ, ಅವರ ರೂಪಕ ವೈಭವ, ಬಸವಣ್ಣನವರ ವಚನಗಳಲ್ಲಿ ಕನ್ನಡ ಸಾಹಿತ್ಯದಲ್ಲಿ, ನಾರಣಪ್ಪ, ಬಸವೇಶ್ವರ ಇವರಿಬ್ಬರ ಹಾಗೆ ಭಾಷೆಯ ಸಾಧ್ಯತೆಯನ್ನು ಸೂರೆಮಾಡಿದವರು ಹಾಗೂ ರೂಪಕ ನಿರ್ಮಾಣ ಮಾಡಿದವರು ವಿರಳವೆಂದೇ ಹೇಳಬೇಕು. ಒಂದು ಪಂಕ್ತಿಯಲ್ಲಿ ಒಂದೇ ಒಂದು ಚಿತ್ರ ಮಿನುಗುತ್ತಾ ನಿಲ್ಲುವುದುಂಟು- ‘ಕಪ್ಪೆ ಸರ್ಪನ ನೆಳಲಲ್ಲಿ ಇಪ್ಪಂತೆ ಆಯಿತಯ್ಯಾ’ ಎಂಬಲ್ಲಿಯಂತೆ; ಕೆಲವೆಡೆ ಒಂದೇ ವಚನದಲ್ಲಿ ಮೂರು, ನಾಲ್ಕು ಶಬ್ದ ಚಿತ್ರಗಳೂ ಬರುವುದುಂಟು

‘ಬೆಲ್ಲವ ತಿಂದ ಕೋಡಗನಂತೆ ಸಿಹಿಯನರಸದಿರಾ ಮನವೇ,

ಕಬ್ಬುತಿಂದ ನರಿಯಂತೆ ಹಿಂದಕ್ಕೆಳಸದಿರಾ ಮನವೇ,

 ಗಗನವನಡರಿದ ಕಾಗೆಯಂತೆ ದೆಸೆದೆಸೆಗೆ ಹಂಬಲಿಸದಿರಾ ಮನವೇ…..

ಹೀಗೆ ‘ಬೆಲ್ಲವ ತಿಂದ ಕೋಡಗ’ ‘ಕಬ್ಬು ತಿಂದ ನರಿ’ ‘ಗಗನವನಡರಿದ ಕಾಗೆ’- ಈ ಮೂರು ಚಿತ್ರಗಳೂ ಚಂಚಲ ಮನಸ್ಸಿನ ಸ್ವಭಾವದ ಪ್ರತಿಮೆಗಳಾಗಿವೆ. ಮತ್ತೆ ಕೆಲವೆಡೆ ಒಂದೇ ಪ್ರತಿಮೆ ಒಂದು ವಚನದ ತುಂಬ ತುಂಬಿ ಥಳಥಳಿಸುವುದೂ ಉಂಟು

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೋ?

 ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ,

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ?

ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ

ಮನೆಯೊಳಗೆ ಮನೆಯೊಡೆಯನಿಲ್ಲ.

ಮನಸ್ಸಿನ ರಿಕ್ತ ಸ್ಥಿತಿಯ ಸೊಗಸಾದ ಪ್ರತಿಮೆ, ‘ಮನೆಯೊಳಗೆ ಮನೆಯೊಡೆಯನಿಲ್ಲದ ಈ ಮನೆಯ ಚಿತ್ರ. ಮತ್ತೆ ಒಂದೊಂದು ಸಲ ಒಂದೇ ಒಂದು ಚಿತ್ರ ಮೂರು ನಾಲ್ಕು ವಚನಗಳಲ್ಲಿ ವಿಸ್ತರಿಸಿ ಸೊಗಸುವುದೂ ಉಂಟು ವಿಷಯವೆಂಬ ಹಸುರನನ್ನ ಮುಂದೆ ತಂದು ಪಸರಿಸದೆಯಯ್ಯಾ; ಹಸುವೇನ ಬಲ್ಲದು? ಹಸುರೆಂದೆಳಸುವುದು’ ಎಂದು ಮೊದಲಾಗುವ ಹಸುವಿನ ಚಿತ್ರ, ಇನ್ನೊಂದು ವಚನದಲ್ಲಿ, “ಕೆಸರಲ್ಲಿ ಬಿದ್ದ ಪಶುವಿನಂತಾನು ದೆಸೆದೆಸೆಗೆ ಬಾಯ ಬಿಡುತ್ತಿದ್ದೇನೆ” ಎಂದು ಮುಂದುವರಿದು, ಮತ್ತೊಂದು ವಚನದಲ್ಲಿ “ಅಡವಿಯೊಳಗೆ ಹೊಲಬುಗೆಟ್ಟ ಪಶುವಿನಂತೆ ಅಂಬೇ ಅಂಬೇ’ ಎಂದು ಒರಲುತ್ತಲಿದ್ದೇನೆ’ ಎಂದು ಮುಂದು ವರಿಯುತ್ತದೆ. ಹೀಗೆ ಈ ವಚನಗಳ ತುಂಬ ಇಂಥ ಚಿತ್ರಪರಂಪರೆ ಯಾರನ್ನಾದರೂ ಬೆರಗಾಗಿಸುತ್ತದೆ. ಅಂದಣವನೇರಿದ ಸೊಣಗ” ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗ” ““ಹಡಿಕೆಗೆ ಮೆಚ್ಚದ ಸೊಣಗ

“ಕೆಸರಲ್ಲಿ ಬಿದ್ದ ಪಶು” “ಮರವನೇರಿದ ಮರ್ಕಟ” ‘ಸಲುಗೆಗೆ ಸಲ್ಲದ ಕಳ್ಳ ನಾಣ್ಯ, – ಇತ್ಯಾದಿ ಚಿತ್ರಗಳು ಮಾನಸಿಕ ಅಪಕ್ವತೆ ಹಾಗೂ ಅವ್ಯವಸ್ಥೆಗೊಡ್ಡಿದ ಪ್ರತಿಮೆಗಳಾದರೆ, ‘ಅರಿಸಿನವನೆ ಮಿಂದು ಹೊಂದೊಡಿಗೆಮನೆ ತೊಟ್ಟು ಪುರುಷನ ಬಲವಿಲ್ಲದ ಲಲನೆಯಂತೆ” ಕಾಯುವ ಹೆಣ್ಣು ‘ಗಿಳಿಯ ಹಂಜರವಿಕ್ಕಿ ಸೊಡರಿಗೆಣ್ಣೆಯನೆರೆದು, ಬತ್ತಿಯನಿಕ್ಕಿ ಬರುವ ಹಾರುವ’ ವಧು- ದೇವಪತಿಗಾಗಿ ಹಾರೈಸಿ ನಿಂತ ಜೀವಸತಿಯ ಚಿತ್ರವನ್ನು ಕೊಡುತ್ತದೆ. ಇಂತಹ ಎಷ್ಟೋ ಚಿತ್ರಗಳಿಂದ ಈ ವಚನಗಳು ಅಪೂರ್ವ ತೇಜಸ್ಸಿನಿಂದ ಮಿನುಗುತ್ತವೆ.

ಬಸವಣ್ಣನವರ ವಚನಗಳಲ್ಲಿ ಈ ಬಗೆಯ ರೂಪಕ ಭಾಷೆ, ಅಂತರಂಗದ ತೀವ್ರ ತುಮುಲಗಳನ್ನು ನಿರೂಪಿಸಿ ದಂತೆ, ಅವರ ಸೂಕ್ತಿ ಸದೃಶವಾದ, ಸರಳವಾದ, ನಿರಾಲಂಕಾರವೆಂಬಂತಹ ಮಾತುಗಳೂ, ದೊರೆಯುತ್ತವೆ. ಅವರು ಅಂದಿನ ಸಮಾಜದ ನಡೆವಳಿಕೆಗಳನ್ನು ಕುರಿತು ಆಡಿದ ವಚನಗಳಲ್ಲಿ, ‘ಕೊಲ್ಲುವವನೇ ಮಾದಿಗ, ಹೊಲಸು ತಿಂಬವನೇ ಹೊಲೆಯ’ ‘ಲೋಕದ ಡೊಂಕ ನೀವೇಕೆ ತಿದ್ದುವಿರಯ್ಯಾ’ ‘ಅಯ್ಯಾ ಎಂದೊಡೆ ಸ್ವರ್ಗ, ಎಲವೊ ಎಂದೊಡೆ ನರಕ’ ‘ದೇವನೊಬ್ಬ ನಾಮ ಹಲವು’ – ಇಂತಹ ಮಾತುಗಳಲ್ಲಿ ಭಾಷೆಯನ್ನು ಅವರು ಬಳಸಿಕೊಂಡ ರೀತಿ ಸೊಗಸಾಗಿದೆ. ವಾಸ್ತವವಾಗಿ ಜನಭಾಷೆಯನ್ನು ವಚನ ರಚನೆಗೆ ಬಳಸಿಕೊಂಡು ಬಸವಣ್ಣನವರು ‘ಕನ್ನಡ ಮಾಧ್ಯಮ’ದ ಮಹತ್ತನ್ನು ಎತ್ತಿ ತೋರಿಸಿದ್ದಾರೆ. ಭಾಷೆ-ಛಂದಸ್ಸಿನ ದೃಷ್ಟಿಯಿಂದಲೂ ಅವರ ಸಾಧನೆ ಸಾಮಾನ್ಯವಾದುದೇನಲ್ಲ, ವಚನ ಶೈಲಿಯ ಈ ಮುಕ್ತಗಮನವನ್ನು ನೋಡಿ

ನೆರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರಗೂಡುವೋಗದ ಮುನ್ನ,

 ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ,

ಕಾಲಮೇಲೆ ಕಯ್ಯನೂರಿ ಕೋಲ ಹಿಡಿಯದ ಮುನ್ನ

ಮುಪ್ಪಿಂದೊಪ್ಪವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ

ಪೂಜಿಸು ನಮ್ಮ ಕೂಡಲ ಸಂಗಮದೇವನ

ಈ ಅಪೂರ್ವವಾದ ಧಾಟಿ, ಅಂದಿನ ಕಾಲಕ್ಕಾದರೂ ಸಂಪ್ರದಾಯದ ಪಾಚಿಯನ್ನು ಸರಿಸಿ ಸಾಮಾನ್ಯ ಭಾಷೆಯ ಸರಳ ಸೌಂದರ್ಯದ ಪರಿಚಯ ಮಾಡಿಕೊಡುತ್ತದೆ. ಇಲ್ಲಿನ ಮನೋಧರ್ಮ ಭಾವಗೀತೆಯ ಕವಿಯದು; ಇವುಗಳ ಭಾಷೆ ಜನಸಾಮಾನ್ಯದ ಆಡುಮಾತಿನ ಭಾಷೆ; ಇಲ್ಲಿನ ಶೈಲಿ ಸ್ವಚ್ಛಂದ, ಒಂದು ಮಾತಿನಲ್ಲಿ ಹೇಳುವುದಾದರೆ ಭಾವಗೀತಾತ್ಮಕವಾದ ಮುಕ್ತಛಂದದ ಮುಕ್ತಕಗಳು ಈ ವಚನಗಳು ಇವುಗಳಲ್ಲಿ ತೊಳಗಿ ಬೆಳಗುತ್ತಿರುವುದು ಶಿವನ ಸೋಪಾನವನ್ನೇರಿ ಹೊರಟ ಆತ್ಮಸಾಧಕರ ಮಿಂಚಿನ ಹೆಜ್ಜೆಗಳ ಗುರುತು. ಬಸವಣ್ಣನವರ ಮಾತಿನಲ್ಲಿಯೇ ಹೇಳುವುದಾದರೆ

ಕೆರೆ ಹಳ್ಳ ಬಾವಿಗಳು ಮೈದೆಗೆದರೆ

ಗುಳ್ಳೆ ಗೊರಚೆ ಚಿಪ್ಪುಗಳು ಕಾಣಬಹುದು;

 ವಾರಿಧಿ ಮೈದೆಗೆದರೆ ರತ್ನಂಗಳು ಕಾಣಬಹುದು,

ಕೂಡಲ ಸಂಗನ ಶರಣರು ಮನದೆರೆದು ಮಾತನಾಡಿದರೆ,

ಲಿಂಗವೆ ಕಾಣಬಹುದು.

 ಹೌದು; ಕೂಡಲಸಂಗನ ಶರಣರಾದ ಬಸವಣ್ಣನವರು ಮನದೆರೆದು ಮಾತಾಡಿದ್ದರಿಂದ ಕನ್ನಡ ಸಾಹಿತ್ಯಕ್ಕೆ ಲಭಿಸಿತು ಈ ವಚನ ದೃಷ್ಟಿ; ಇವುಗಳಲ್ಲಿ ತೊಳಗಿ ಬೆಳಗುತ್ತಿದೆ ಲಿಂಗಾನುಭಾವದ ದೃಷ್ಟಿ,

——————————————————————————-

Article collected by ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

– ಡಾ. ಜಿ.ಎಸ್. ಶಿವರುದ್ರಪ್ಪ

ಹನ್ನೆರಡನೆಯ ಶತಮಾನದಷ್ಟು ಹಿಂದೆಯ ಕನ್ನಡ ನಾಡಿನ ಪರಿಸರದಲ್ಲಿ ತನ್ನ ವೈಚಾರಿಕತೆ ಹಾಗೂ ಆತ್ಮ ಪ್ರತ್ಯಯದ ಮೂಲಕ ಹೆಣ್ಣಿನ ವ್ಯಕ್ತಿತ್ವಕ್ಕೆ ಒಂದು ಘನತೆ ಗೌರವವನ್ನು ತಂದುಕೊಟ್ಟ ಅಕ್ಕಮಹಾದೇವಿ, ಅಂದು ಬಸವಣ್ಣನವರ ವ್ಯಕ್ತಿಕೇಂದ್ರದಲ್ಲಿ ರೂಪುಗೊಂಡ ಶರಣ ಚಳುವಳಿಯ ಮೇಲೆ ಹಾದುಹೋದ ಒಂದು ಉಜ್ವಲವಾದ ಮಿಂಚಿನ ಗೆರೆಯಂತೆ ತೋರುತ್ತಾಳೆ. ಈ ಹೊತ್ತು ನಾವು ಅಕ್ಕಮಹಾದೇವಿಯ ವ್ಯಕ್ತಿತ್ವವನ್ನು ಹನ್ನೆರಡನೆಯ ಶತಮಾನದ ಸಾಮಾಜಿಕ ಧಾರ್ಮಿಕ ಸ್ವರೂಪದ ವಚನ ಚಳುವಳಿಯೊಂದಿಗೆ ಗುರುತಿಸುತ್ತೇವೆಯಾದರೂ, ಆಕೆಗೂ ಈ ಚಳುವಳಿಗೂ ಇದ್ದ ಸಂಬಂಧ ಕೇವಲ ಆಗಂತುಕವೂ ತಾತ್ಕಾಲಿಕವೂ ಆದದ್ದೆಂಬುದು ಮಾತ್ರ ನಿಜ. ಹಾಗೆ ನೋಡಿದರೆ ಈ ಸಂದರ್ಭದ ಮಹಾ ಅನುಭಾವಿಯಾದ ಅಲ್ಲಮನ ಸಂಬಂಧ ಕೂಡಾ, ಈ ಚಳುವಳಿಯೊಂದಿಗೆ, ಇದೇ ಸ್ವರೂಪದ್ದೇ. ಆದರೆ ಅಲ್ಲಮ ಈ ಚಳುವಳಿಯಲ್ಲಿ ವಹಿಸಿದ ಪಾತ್ರ, ಅಕ್ಕನದಕ್ಕಿಂತ ಭಿನ್ನವಾದದ್ದು ಹಾಗೂ ಮಹತ್ವದ್ದು. ಆತ ‘ಅನುಭವ ಮಂಟಪ’ದ ಅಧ್ಯಕ್ಷನಾಗಿ ಗುರುವಾಗಿ, ಮಾರ್ಗದರ್ಶಕನಾಗಿ, ವಿಮರ್ಶಕನಾಗಿ ‘ಪ್ರಭು’ ಎನ್ನುವ ಗೌರವಕ್ಕೆ ಪಾತ್ರನಾಗಿ, ಈ ಚಳುವಳಿಯೊಂದಿಗೆ ಹೆಚ್ಚು ಗಾಢವಾದ ಸಂಬಂಧವನ್ನು ಹೊಂದಿ ಕೆಲವು ಕಾಲವಾದರೂ ಜತೆಗೆ ಇದ್ದವನು. ಆದರೆ ಮಹಾದೇವಿ ಉಡುತಡಿಯಿಂದ ಶ್ರೀಶೈಲ ಶಿಖರಕ್ಕೆ ಬಿಟ್ಟ ಬೆಳಕಿನ ಬಾಣದಂತೆ ನೇರವಾಗಿ ಹೊರಟ ಹಾದಿಯಲ್ಲಿ, ಕಲ್ಯಾಣದ ಈ ಶರಣ ಕಿರಣ ಕೇಂದ್ರದಿಂದ ಆಕರ್ಷಿತಳಾಗಿ ಸ್ವಲ್ಪ ಕಾಲ ನಿಂತವಳು. ತನ್ನ ವ್ಯಕ್ತಿತ್ವ ಹಾಗೂ ಆನುಭಾವಿಕ ನಿಲುವುಗಳಿಂದ ಶರಣ ಸಮೂಹವನ್ನು ಬೆರಗುಗೊಳಿಸಿದವಳು. ತನ್ನ ವೈರಾಗ್ಯ ಮತ್ತು ವೈಚಾರಿಕತೆಯ ಪರಿಣತಿಯಿಂದ ‘ಅಕ್ಕ’ ಎಂದು ಕರೆಯಿಸಿಕೊಳ್ಳುವ ಗೌರವಕ್ಕೆ ಪಾತ್ರಳಾದವಳು ತನ್ನ  ಅಧ್ಯಾತ್ಮಿಕ ಸಂವಾದದಿಂದ ಶರಣ ಚಳುವಳಿಯ ಪ್ರಮುಖರ ಪ್ರಶಂಸೆಯನ್ನು ಗಳಿಸಿ ಕೊಂಡವಳು.?

ಆದರೆ ಅಕ್ಕಮಹಾದೇವಿ ಕಲ್ಯಾಣಕ್ಕೆ ಬರುವ ಮುನ್ನವೇ ಅವಳ ತಾತ್ವಿಕ ನಿಲುವುಗಳ ಹಾಗೂ ಜೀವನ ವಿಧಾನದ ಪರಿಕಲ್ಪನೆಗಳೂ ಬಹುಮಟ್ಟಿಗೆ ಸಿದ್ಧವಾಗಿದ್ದವು ಮತ್ತು ಆಕೆ ತನ್ನ ವೈಚಾರಿಕತೆ ಹಾಗೂ ನಿರ್ಭಯವಾದ ನಿಲುವು ಮತ್ತು ನಡೆಗಳಿಂದಾಗಿ ಸಾಕಷ್ಟು ಹೆಸರಾಗಿದ್ದಳೆಂದು ತೋರುತ್ತದೆ. ತನ್ನ ಪಯಣದ ಹಾದಿಯಲ್ಲಿ ಶರಣ ಚಳುವಳಿಯೊಳಕ್ಕೆ ಬಂದ ಈಕೆ, ಇಲ್ಲಿ ಎಷ್ಟು ಕಾಲ ಇದ್ದಳೆಂಬ ಬಗ್ಗೆ ಖಚಿತವಾಗಿ ಹೇಳಲುಬಾರದು. ಆದರೆ ಆಕೆ ಇಲ್ಲಿದ್ದದ್ದು ಕೆಲವೆ ಕಾಲದ ಮಟ್ಟಿಗೆ ಎಂಬುದರಲ್ಲಿ ಸಂದೇಹವಿಲ್ಲ. ಯಾಕೆಂದರೆ ಅವಳ ನಿಲುಗಡೆ ಕಲ್ಯಾಣವಲ್ಲ; ಶ್ರೀಶೈಲ, ಸ್ವತಂತ್ರವಾಗಿ ತನ್ನ ದಾರಿ ಹಾಗೂ ಗುರಿಗಳನ್ನು ಸ್ಪಷ್ಟವಾಗಿ  ಕಂಡುಕೊಂಡ ಈಕೆ ತಾತ್ವಿಕವಾಗಿ ಹಾಗೂ ವೈಚಾರಿಕವಾಗಿ ವಚನ ಚಳುವಳಿಗೆ ಋಣಿಯಾಗಿರುವುದು ತೀರಾ ಕಡಿಮೆ ಎಂದೇ ತೋರುತ್ತದೆ. ಈ ಚಳುವಳಿಯ ಅನೇಕ ಶರಣ ಶರಣೆಯರ ವ್ಯಕ್ತಿತ್ವ ಹಾಗೂ ಆಲೋಚನಾ ವಿಧಾನ ಮತ್ತು ಅವರವರ ಅಭಿವ್ಯಕ್ತಿಯ ಕ್ರಮಗಳು ರೂಪುಗೊಂಡದ್ದು ಕಲ್ಯಾಣ ಕೇಂದ್ರಿತ ವಚನ ಚಳುವಳಿಯಿಂದಲೇ. ಆದರೆ ಮಹಾದೇವಿಯಕ್ಕನ ವಿಚಾರದಲ್ಲಿ ಈ ಮಾತನ್ನು ಹೇಳುವ ಹಾಗಿಲ್ಲ. ಹಾಗೆಂದರೆ ಎತ್ತರದ ನಿಲುವನ್ನು ಗಳಿಸಿಕೊಂಡ ಅಂದಿನ   ಶರಣ ಚಳುವಳಿಯ ವ್ಯಕ್ತಿತ್ವಗಳ ಪ್ರಭಾವ ಆಕೆಯ ಮೇಲೆ ಆಗಲಿಲ್ಲ ಎಂದಾಗಲೀ, ವಚನಕಾರರನೇಕರ ಸಹವಾಸ ಹಾಗೂ ಸಂವಾದ ಅವಳ ಅಭಿವ್ಯಕ್ತಿಗೆ ನೆರವಾಗಲಿಲ್ಲವೆಂದಾಗಲೇ ಈ ಮಾತಿನ ಅರ್ಥವಲ್ಲ. ಆದರೆ ಅಕ್ಕ ಈ ಶರಣಸಮುದಾಯಕ್ಕೆ ಬರುವ ವೇಳೆಗಾಗಲೇ ಶರಣಧರ್ಮದ ತಾತ್ವಿಕ ನಿಲುವುಗಳೂ, ಸಾಮಾಜಿಕ ದೃಷ್ಟಿಕೋನಗಳೂ ಒಂದು ರೀತಿಯಲ್ಲಿ ಸಿದ್ಧವಾಗಿದ್ದು, ಇದರ ಚೌಕಟ್ಟಿನೊಳಗಿನ ಎಷ್ಟೋ ಸಂಗತಿಗಳೊಂದಿಗೆ ಆಕೆಯ ಅಭಿಪ್ರಾಯಗಳು ಹೆಣ್ಣೆ ಸಂಗತವಾಗದೆ ಹೋದವೆಂಬುದು ಗುರುತಿಸಿಕೊಳ್ಳಬೇಕಾದ ಅಂಶವಾಗಿದೆ. ಈ ದೃಷ್ಟಿಯಿಂದ  ಅಕ್ಕಮಹಾದೇವಿಯು ಈ ವಚನ ಚಳುವಳಿಯಲ್ಲಿ ಇತರರಿಗಿಂತ ಬೇರೆಯೇ ಆಗಿ ನಿಲ್ಲುತ್ತಾಳೆ  ಮತ್ತು ವೈಯಕ್ತಿಕ ನೆಲೆಯಲ್ಲಿ ಈ ಚಳುವಳಿಗೆ ಆಕೆ ತೋರುವ ಪ್ರತಿಕ್ರಿಯೆಗಳು  ಗಮನಾರ್ಹವಾಗಿವೆ.

ಭಗವತ್ಪರವಾದ ವ್ಯಾಕುಲತೆ, ಎಲ್ಲ ಅನುಭಾವಿಗಳಂತೆ ಪುಸ್ತಕ ಹಾಗೂ ಶಾಸ್ತ್ರಜ್ಞಾನಗಳ ಬಗ್ಗೆ ಅವಳಿಗಿದ್ದ ತಿರಸ್ಕಾರ, ಪರಂಪರಾಗತವಾಗಿ `ಜಾತಿ ಹಾಗೂ ವರ್ಣಭೇದಗಳನ್ನು  ಪ್ರತಿಪಾದಿಸುತ್ತಿದ್ದ ವೇದ-ಪುರಾಣ-ಆಗಮಗಳ ನಿರಾಕರಣೆ ಇತ್ಯಾದಿಗಳ ವಿಚಾರದಲ್ಲಿ ಅವರಿಗೆ ವಚನ ಚಳುವಳಿಯೊಂದಿಗೆ ಸಹಮತವಿದ್ದರೂ, ಮಾಯೆಯನ್ನು ಕುರಿತ ಅವಳ ವ್ಯಾಖ್ಯಾನ ಮಾತ್ರ ತೀರಾ ವಿಶಿಷ್ಟವಾದುದಾಗಿದೆ. ಹಾಗೆ ನೋಡಿದರೆ ಭಾರತೀಯ ತತ್ವಜ್ಞಾನದ  ಪ್ರಕಾರ’ಮಾಯೆ’ ಎಂದರೆ ಸತ್ಯವಲ್ಲದ, ಆದರೆ ಸತ್ಯದ ಹಾಗೆ ಭಾಸವಾಗುವ ಈ ಜಗತ್ತಿನ ತೋರಿಕೆ; ಮತ್ತು ಅನೇಕ ವಿಧವಾದ ಆಸೆ-ಆಮಿಷಗಳಿಂದ ಜಗತ್ತಿನೊಂದಿಗೆ ಜೀವನನ್ನು  ಬಂಧಿಸುವ ಒಂದು ಅವಿದ್ಯೆಯ ಉಪಕರಣ. ಹೀಗೆ ಮನುಷ್ಯನನ್ನು ಹಿಡಿದು ಕಟ್ಟುವ ಈ ಮಾಯೆಯನ್ನು ‘ಹೆಣ್ಣು-ಹೊನ್ನು-ಮಣ್ಣು’ ಎಂದು ವರ್ಣಿಸಲಾಗಿದೆ. ಸ್ವಲ್ಪ ವಿಚಾರ ಮಾಡಿ ನೋಡಿದರೆ ಈ ವ್ಯಾಖ್ಯಾನ ಮುಖ್ಯವಾಗಿ ಸಾಧಕನಾದ ಹಾಗೂ ಮುಮುಕ್ಷುವಾದ ಪುರುಷನ ದೃಷ್ಟಿಕೋನದಿಂದ ಹುಟ್ಟಿಕೊಂಡದ್ದು. ಆದರೆ ಅಕ್ಕಮಹಾದೇವಿ ಈ ಪರಿಕಲ್ಪನೆಯನ್ನು ಮೊಟ್ಟಮೊದಲಿಗೆ ಸ್ತ್ರೀಪರವಾಗಿ ವ್ಯಾಖ್ಯಾನಿಸಿರುವ ಕ್ರಮವು ತೀರಾ ವಿಶಿಷ್ಟವಾದುದಾಗಿದೆ. ಆಕೆ ಹೇಳುತ್ತಾಳೆ :

ಪುರುಷನ ಮುಂದೆ ಮಾಯೆ

ಸ್ತ್ರೀ ಎಂಬ ಅಭಿಮಾನವಾಗಿ ಕಾಡಿತ್ತು ನೋಡಾ

ಸ್ತ್ರೀಯ ಮುಂದೆ ಮಾಯೆ

ಪುರುಷನೆಂಬ ಅಭಿಮಾನವಾಗಿ ಕಾಡಿತ್ತು ನೋಡಾ

ಹೆಣ್ಣಿಗೆ ಗಂಡು ಮಾಯೆ

ಗಂಡಿಗೆ ಹೆಣ್ಣು ಮಾಯೆ

   ಈ ಮಾತುಗಳಲ್ಲಿ , ಹೆಣ್ಣು ಗಂಡಿನ ಪಾಲಿಗೆ ‘ಮಾಯೆ’ಯಾಗುವುದಾದರೆ, ಗಂಡು ಹೆಣ್ಣಿನ ಪಾಲಿಗೆ ಯಾಕೆ ಮಾಯೆ ಅಲ್ಲ ? ಎಂಬ ದೃಷ್ಟಿಕೋನ, ಮಹಿಳಾಪರವಾದ ಒಂದು ಪ್ರತಿಕ್ರಿಯೆಯಾಗಿದೆ. ಹಾಗೆಯೆ ಕಟ್ಟಿಕೊಂಡ ಹೆಂಡತಿಯನ್ನು ಗಂಡ ಅಧ್ಯಾತ್ಮ ಸಾಧನೆಯ ನೆಪದಿಂದ ಬಿಟ್ಟು ಹೋಗುವುದೂ ‘ವೈರಾಗ್ಯದ ಲಕ್ಷಣವಾಗುವುದಾದರೆ, ಕಟ್ಟಿಕೊಂಡ ಗಂಡನನ್ನು ತನ್ನ ಅಧ್ಯಾತ್ಮಸಾಧನೆಗಾಗಿ ಹೆಣ್ಣು ಬಿಟ್ಟು ಹೋಗುವುದೂ ವೈರಾಗ್ಯ ಯಾಕೆ ಆಗುವುದಿಲ್ಲ ಎನ್ನುವುದನ್ನು, ಆಕೆ ಕೌಶಿಕನನ್ನು ಬಿಟ್ಟು ಹೊರಟ ಸಂದರ್ಭವು. ಸಾಂಕೇತಿಸುತ್ತದೆ ಎಂದು ಭಾವಿಸುವುದು ತಪ್ಪೇನೂ ಆಗುವುದಿಲ್ಲ.

ವಚನ ಚಳುವಳಿಯ ಶರಣಧರ್ಮದೊಂದಿಗೆ ಸಂಗತವಾಗಲಾರದ ಆಕೆಯ ದೃಷ್ಟಿಕೋನಗಳೂ, ವಿಚಾರಗಳೂ ಸ್ವಾರಸ್ಯವಾಗಿದೆ  

ವಚನ ಚಳುವಳಿ ಲೌಕಿಕ ದಾಂಪತ್ಯ ಜೀವನವನ್ನು ಅಧ್ಯಾತ್ಮ ಸಾಧನೆಯ ನೆಲೆಗಟ್ಟನ್ನಾಗಿ ಒಪ್ಪಿಕೊಂಡಿತ್ತು. ಹಾಗೆಯೆ ಈ ಲೋಕ ಜೀವನವನ್ನೂ ಒಪ್ಪಿಕೊಂಡಿತ್ತು. ‘ಸತಿ  ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಗೆ’ ಎಂಬ ಜೇಡರ ದಾಸಿಮಯ್ಯನ ಮಾತೂ ‘ಮರ್ತಲೋಕವೆಂಬುದು ಕರ್ತಾರನ ಕಮ್ಮಟವಯ್ಯ’ ಎಂಬ ಬಸವಣ್ಣನವರ ಮಾತೂ, ಈ ನಿಲುವಿಗೊಂದು  ನೆಲೆಗಟ್ಟನ್ನು ಹಾಕಿದ್ದವು. ಸಂಸಾರದಲ್ಲಿದ್ದೂ ಶಿವಯೋಗವನ್ನು ಸಾಧಿಸಬಹುದು ಎಂಬ ಈ ಧರ್ಮಸೂತ್ರವೇ ಬಹುಶಃ ಬಹುಜನರನ್ನು ಈ ಚಳುವಳಿಯೊಳಕ್ಕೆ ಆಕರ್ಷಿಸಿರಬಹುದು. ಹಾಗೆ ನೋಡಿದರೆ ಈ ಶರಣ ಧರ್ಮದ ಚಳುವಳಿಯಲ್ಲಿ ಪಾಲುಗೊಂಡವರೆಲ್ಲ ಬಸವಣ್ಣನವರಿಂದ ಮೊದಲುಗೊಂಡು, ಸಂಸಾರಿಗಳೇ, ಗೃಹಸ್ಥರೇ ಮತ್ತು ಗೃಹಸ್ಥರಲ್ಲದ ಇತರ ಹಿರಿಯರು ಯಾರೂ ಗೃಹಸ್ಥನಾಗಿರುವುದು ಅಧ್ಯಾತ್ಮ ಸಾಧನೆಗೆ ಒಂದು ಆತಂಕ ಎಂಬ ಮಾತನ್ನು ಹೇಳಿದವರಲ್ಲ. ಹೀಗಿರುವಾಗ ಲೌಕಿಕ ದಾಂಪತ್ಯದ ಮೂಲವಾದ ಮದುವೆಯ ಕಲ್ಪನೆಯನ್ನೆ ಮಹಾದೇವಿ ಪ್ರಶ್ನಿಸಿದಳು. ಮತ್ತು ಸಂದರ್ಭದ ಒತ್ತಡದಿಂದ ತಾನು ಮದುವೆಯಾಗ ಬೇಕಾಗಿ ಬಂದ ಗಂಡನನ್ನೆ ಬಿಟ್ಟು ಬಂದ ಈ ಹೆಣ್ಣುಮಗಳ ನಡವಳಿಕೆ, ಲೌಕಿಕ ದಾಂಪತ್ಯವನ್ನು ಮೂಲಮಾನವಾಗಿ ಒಪ್ಪಿಕೊಂಡ ವಚನ ಚಳುವಳಿಯ ನಿಲುವಿಗೆ ವಿರೋಧವಾಗುವುದಿಲ್ಲವೆ – ಎಂಬ ಪ್ರಶ್ನೆ ಇಲ್ಲಿ ಸಹಜವಾಗಿಯೆ ಉದ್ಭವಿಸುತ್ತದೆಯಲ್ಲದೆ, ಅಕ್ಕನ ಈ ನಡವಳಿಕೆ ಹೇಗೆ ಈ ವಚನ ಚಳುವಳಿಯಲ್ಲಿ ಪಾಲುಗೊಂಡ ಮಹಿಳೆಯರಿಗೆ ಮಾದರಿಯಾದೀತು ಎಂಬ ಸಂಶಯಕ್ಕೆ ಅವಕಾಶಮಾಡಿಕೊಡುತ್ತದೆ. ಆದರೂ ಅಕ್ಕನ ನಿಲುವನ್ನು ಅಂದಿನ ಶರಣರು ಒಪ್ಪಿಕೊಂಡರು, ಗೌರವಿಸಿದರು, ಅವಳನ್ನು ‘ಅಕ್ಕ’ ಎಂದು ಪೂಜ್ಯಭಾವದಿಂದ ಹೊಗಳಿದರು. ಯಾಕೆ ?

 ಯಾಕೆಂದರೆ, ಅಕ್ಕ ‘ಮದುವೆ’ಯನ್ನು ನಿರಾಕರಿಸಿದವಳಲ್ಲ; ಮದುವೆ ಎಂಬ ವ್ಯವಸ್ಥೆಯನ್ನು ಪ್ರಶ್ನಿಸಿದಳು, ಪ್ರತಿಭಟಿಸಿದಳು. ‘ಮದುವೆ’ಯಲ್ಲಿ ಹೆಣ್ಣಿನ ಆಯ್ಕೆಯ ಸ್ವಾತಂತ್ರ ವನ್ನು ತಿರಸ್ಕರಿಸುವ ಪ್ರವೃತ್ತಿಯನ್ನು ವಿರೋಧಿಸಿದಳು, ಅಲ್ಲದೆ ಅವಳ ಮದುವೆಯ ಕಲ್ಪನೆ ಲೌಕಿಕವಾದದ್ದಲ್ಲ; ಅನುಭಾವಿಕವಾದದ್ದು. ಅಂದರೆ ತಾನು ‘ಹೆಣ್ಣು , ತನ್ನ ಬದುಕಿನ ಗಮ್ಯವಾದ ಆ ದೈವ ‘ಗಂಡು’ ಎನ್ನುವ ಭಾವನೆ ಅದು. ವೀರಶೈವ ಪರಿಭಾಷೆಯಲ್ಲಿ ಹೇಳುವುದಾದರೆ ‘ಶರಣ ಸತಿ ಲಿಂಗ ಪತಿ’; ವೈಷ್ಣವ ಪರಿಭಾಷೆಯಲ್ಲಿ ಹೇಳುವುದಾದರೆ ‘ಮಧುರಭಾವ’.

ಈ ಭಾವ ಹೆಣ್ಣಿಗೆ ಸಹಜವಾದಷ್ಟು ಅನುಕೂಲವಾದಷ್ಟು ಗಂಡಿನ ವಿಚಾರಕ್ಕೆ ಹೊಂದಲಾರದು. ಅಂದರೆ ಶರಣರೆಲ್ಲರೂ, ಅವರು ಗಂಡಾಗಲಿ ಹಣ್ಣಾಗಲೀ ತಾವೆಲ್ಲ ಸತಿಯರು, ಆ ದೇವರು ಅಥವಾ ಶಿವನೊಬ್ಬನೇ ನಿಜವಾದ ಗಂಡು ಎಂಬ ಈ ‘ಶರಣ ಸತಿ ಲಿಂಗ ಪತಿ’ ಎಂಬ ಕಲ್ಪನೆಯು ಲೌಕಿಕ ದಾಂಪತ್ಯ ಜೀವನವನ್ನು ಮೌಲಿಕವಾದ ಒಂದು ನೆಲೆ ಎಂದು ಅಂಗೀಕರಿಸಿದ ವೀರಶೈವ ಧರ್ಮದ ಆಚರಣೆಯಲ್ಲಿ ಎಷ್ಟರಮಟ್ಟಿಗೆ ಒಂದು  ತಾತ್ವಿಕ ನಿಲುವಾಗಿ ಸಲ್ಲಬಲ್ಲದೋ ಎಂಬ ಬಗ್ಗೆ ನನಗೆ ತೀರಾ ಅನುಮಾನಗಳಿವೆ’ ಅದರ ಬದಲು ಭಕ್ತ ಭಗವಂತ ಅಥವಾ ಶರಣ ಮತ್ತು ಲಿಂಗ ಈ ಸಂಬಂಧವೇ ಇಲ್ಲಿ ಹೆಚ್ಚು ಸುಗಮವಾಗುವಂತೆ ತೋರುತ್ತದೆ. ಆದರೂ ಪ್ರಾಸಂಗಿಕವಾಗಿ ಭಕ್ತನಾದವನು ಸತಿ ಭಾವವನ್ನು ಆರೋಪಿಸಿಕೊಂಡು ಸಾಧನೆಯಲ್ಲಿ ತೊಡಗಿದ ನಿದರ್ಶನಗಳು ಉಂಟು. ಬಸವಣ್ಣನವರಲ್ಲಿಯೂ ಅವರು ಈ ಭಾವದಲ್ಲಿ ನಿಂದ ಮನಃಸ್ಥಿತಿಯನ್ನು ಉಲ್ಲೇಖಿಸುವ ಒಂದೆರಡು ವಚನಗಳುಂಟು; ಉರಿಲಿಂಗ ದೇವ, ಗಜೇಶಮಸಣಯ್ಯ ಇಂಥ ಕೆಲವರು, ‘ಶರಣಸತಿ ಲಿಂಗಪತಿ’ ಭಾವದಲ್ಲಿಯೇ ತಮ್ಮ ವ್ಯಕ್ತಿತ್ವವನ್ನು ನಿಲ್ಲಿಸಿಕೊಂಡು ಬರದ ವಚನಗಳು ಇವೆ. ಆದರೆ ವಾಸ್ತವವಾಗಿ ‘ಶರಣಸತಿ ಲಿಂಗಪತಿ’ ಎಂಬ ನಿಲುವು ಈಗಾಗಲೇ ಹೇಳಿದಂತೆ ಹಣ್ಣಿನ ವ್ಯಕ್ತಿತ್ವ ಹಾಗೂ ಮನಃಸ್ಥಿತಿಗೆ ಹೆಚ್ಚು ಅನುಕೂಲಕರವಾದದ್ದು. ಈ ದೃಷ್ಟಿಯಿಂದ ಅಕ್ಕಮಹಾದೇವಿಗೆ ಈ ನಿಲುವು ಸಹಜವಾಗಿದೆ. ಅನೇಕ ಶಿವಶರಣೆಯರ ನಡುವೆ ಈಕೆಯೊಬ್ಬಳೆ ತಾನು ಸತಿ, ಲಿಂಗವೆ ಪತಿ ಎಂಬ ಭಾವದಲ್ಲಿ ನಿಂದವಳು. ಇದು ಅವಳ ಅನುಭಾವಕ್ಕೆ ಉಚಿತವಾಗಿದೆ. ಯಾಕೆಂದರೆ ಲೌಕಿಕ ದಾಂಪತ್ಯದ ಕಲ್ಪನೆಯನ್ನು ನಿರಾಕರಿಸಿ ತನ್ನ ಅನುಭಾವದ ಗಮ್ಯವಾದ ‘ಗಂಡನ’ ಅನ್ವೇಷಣೆಯಲ್ಲಿ ಹೊರಟವಳು ಅವಳು. ಇದರಿಂದಾಗಿ ತನ್ನ ಹಾಗೂ ಚನ್ನಮಲ್ಲಿಕಾರ್ಜುನನ ಸಂಬಂಧವೇ ಅವಳ ಅನುಭಾವದ ಮೂಲನೆಲೆಯಾಗಿದೆ. ಈ ಸಂಬಂಧ ಈ ಹೊತ್ತಿನದಲ್ಲ. ನಿನ್ನೆಯದಲ್ಲ. ಅನಂತಕಾಲದ್ದು. ಇದು ‘ಹರನೇ ನೀನೆನಗೆ ಗಂಡನಾಗಬೇಕೆಂದು ಅನಂತ ಕಾಲ ತಪಿಸಿದ್ದೆ  ನೋಡಾ’ ಎಂಬ ಅವಳ ಉಕ್ತಿಯಲ್ಲಿ ಸೂಚಿತವಾಗಿದೆ. ತಾತ್ವಿಕವಾಗಿ ನೋಡಿದರೆ, ಜೀವ ಹಾಗೂ ದೇವರ ಸಂಬಂಧ ಸನಾತನವಾದದ್ದು. ಅಕ್ಕ ಈ ತಾತ್ವಿಕ ನೆಲೆಯ ಜೀವಂತ ವ್ಯಾಖ್ಯಾನದಂತೆ ಇದ್ದಾಳೆ. ಈ ದೃಷ್ಟಿಯಿಂದ ಮಹಾದೇವಿ ಹರನ ಸನಾತನ ಸಂಗಾತಿಯ ಪ್ರತೀಕವಾಗಿದ್ದಾಳೆ. ಯಾವಾಗ ಈಕೆ ತನ್ನ ಹಾಗೂ ತನ್ನ ದೇವ ಪತಿಯ ಸನಾತನ ಸಂಬಂಧವನ್ನು ಗುರುತಿಸಿಕೊಳ್ಳುತ್ತಾಳೆಯೋ ಆಗ ಸಹಜವಾಗಿಯೆ ಈ ಲೋಕದ ಸಾಂಪ್ರದಾಯಿಕ ವೈವಾಹಿಕ ಸಂಬಂಧದ ಮೂಲಕ ಏರ್ಪಡುವ ದಾಂಪತ್ಯ ಅರ್ಥಹೀನವಾಗುತ್ತದೆ. ಇಹಕ್ಕೊಬ್ಬ ಗಂಡನೆ ಪರಕ್ಕೊಬ್ಬ ಗಂಡನೆ ?” (ವ. 91) ಎಂಬ ಅವಳ ಪ್ರಶ್ನೆ ಈ ನಿಲುವಿಗೆ ಸಹಜವಾಗಿಯೆ ಇದೆ. ಈ ಲೋಕದ ಗಂಡರು ‘ಸಾವಕೆಡುವ’ ಗಂಡರಾಗಿ ಕಾಣುತ್ತಾರೆ. ಇದಕ್ಕೆ ಬದಲಾಗಿ ಆಕೆ ತನ್ನ ಸನಾತನ ಪತಿಯಾದ ‘ಸಾವಿಲ್ಲದ ಕೇಡಿಲ್ಲದ’ ಪುರುಷನಿಗಾಗಿ ಹಂಬಲಿಸುತ್ತಾಳೆ. ಆದ ಕಾರಣವೆ ಸಂದರ್ಭದ ಬಲದಿಂದ ಕೌಶಿಕನೊಂದಿಗೆ ಒದಗಿದ  ಅವಳ ಒಲ್ಲದ ಮದುವೆ ಅವಳ ಪಾಲಿಗೆ ಹರಿಹರನು ವರ್ಣಿಸುವಂತೆ ‘ವಿಷಮ ಸುಖ ಸಂಪತ್ ಸಂಯೋಗ ಒಲ್ಲದ ಸನ್ನಿಧಿ’ಯಾಗಿ, ಮುರಿದುಬಿತ್ತು.

 ಅಕ್ಕ ತನ್ನ ಹಲವಾರು ವಚನಗಳಲ್ಲಿ ಅನುಭಾವಿಕ ನೆಲೆಯಲ್ಲಿ ತನಗೆ ಆಗಲೇ ಮದುವೆಯಾಗಿರುವ ಸಂಗತಿಯನ್ನು ಹೇಳಿಕೊಂಡಿದ್ದಾಳೆ. ಚೆನ್ನಮಲ್ಲಿಕಾರ್ಜುನನೆಂಬ ಗಂಡನೊಡನೆ  ಎಂದೋ ಮದುವೆಯಾದ ಈ ಹೆಣ್ಣು, ಈ ಭವದ ಹಾದಿಯಲ್ಲಿ ತನ್ನ ಗಂಡನನ್ನು ಹುಡುಕಿಕೊಂಡು ಆತನಿರುವಲ್ಲಿಗೆ ಹೊರಟಿದ್ದಾಳೆ. ತಾನು ಅನಂತ ಕಾಲದಿಂದ ಒಲಿದ ಹಾಗೂ ಮದುವೆಯಾದ ಗಂಡನನ್ನು ಹುಡುಕಿಕೊಂಡು ಹೊರಟ ರೀತಿಯೆ ಅಕ್ಕನ ಅನುಭಾವಿಕ ಅನ್ವೇಷಣೆಯ ಒಂದು ಪ್ರತೀಕವಾಗಿದೆ. ಪರಿಸ್ಥಿತಿ ಹೀಗಿರುವಾಗ ಆಕೆ ದಾಂಪತ್ಯ ಜೀವನದಲೌಕಿಕ ಕಲ್ಪನೆಯನ್ನು ನಿರಾಕರಿಸಿದ್ದು ತೀರಾ ಸಹಜವಾಗಿದೆ. ಆದರೆ ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎನ್ನುತ್ತ, ಲೌಕಿಕ ದಾಂಪತ್ಯ  ಜೀವನವನ್ನು ಅಧ್ಯಾತ್ಮ ಸಾಧನೆಗೆ ವಿರೋಧವಲ್ಲವೆಂದು ಒಪ್ಪಿಕೊಂಡ ಅಂದಿನ ಶರಣ ಧರ್ಮದ ಸಾಮಾಜಿಕ ನಿಲುವಿಗೆ ಅಕ್ಕನ ನಿಲುವು, ಒಂದು ವ್ಯಕ್ತಿನಿಷ್ಠವಾದ ಪ್ರತಿಕ್ರಿಯೆಯೋ ಎಂಬಂತೆ, ಪ್ರತ್ಯೇಕವಾಗಿಯೇ ಎದ್ದು ಕಾಣುತ್ತದೆ. ಆದರೆ ಆ ಕಾರಣಕ್ಕೆ ಅಕ್ಕ ಲೌಕಿಕ ಸಾಂಸಾರಿಕ ಜೀವನ ವಿಧಾನವನ್ನು, ಹಗುರವಾಗಿ ನೋಡುವುದಿಲ್ಲ. ಆಕೆ ಹೇಳುತ್ತಾಳೆ-

 ಹಾವಿನ ಬಾಯ ಹಲ್ಲ ಕಳೆದು

 ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು ಕಂಡಯ್ಯ

………………………………………………………………….

 ಚೆನ್ನಮಲ್ಲಿಕಾರ್ಜುನ ನೀನೊಲಿದವರು

 ಕಾಯಗೊಂಡಿದರೆನ ಬೇರ (ನ 157. ಎಲ್. ಬಸವರಾಜು)

  ಎಂದರೆ ಸಂಸಾರ ಎನ್ನುವದು ತ್ಯಾಜ್ಯವೇನಲ್ಲ. ಆದರೆ ಅದು ವಿಷದ ಹಲ್ಲುಗಳಿರುವ ಸರ್ಪವೆಂಬ ಅರುವಿರಬೇಕು ಈ ಹಾವಿನ ಬಾಯ ಹಲ್ಲುಗಳನ್ನು, ಅಂದರೆ ಕಾಮಕ್ರೋಧಾದಿಗಳನ್ನು, ಕಿತ್ತು ಹಾಕಿ ಬದುಕುವುದಾದರೆ ಹಾವಿನ ಸಂಗವೇ ಲೇಸು. ಆದರೆ ಸಂಸಾರವನ್ನು ಹೀಗೆ ಗೆದ್ದು ಬದುಕಲು ಚೆನ್ನಮಲ್ಲಿಕಾರ್ಜುನನ ಒಲುಮೆ ಅಗತ್ಯ. ಆದ ಕಾರಣ ನಿಜವಾದ ಭಕ್ತನಾಗಿ ಸಂಸಾರದಲ್ಲಿ ಬದುಕುವವರೂ ಗೌರವಾರ್ಹರೇ ಎಂಬುದು ಅಕ್ಕನ ನಿಲುವು; ಮತ್ತು ತನ್ನ ದಾರಿಯ ಬೇರೆ ಎಂಬುದನ್ನು ಕಂಡುಕೊಂಡ ಅಕ್ಕ, ಹಿಡಿದ ದಾರಿಯೇ ಸರಿ, ಆದ ಕಾರಣ ಉಳಿದವರು ಅದನ್ನು ಅನುಸರಿಸಬೇಕೆಂದು ಎಂದೂ ಹೇಳಲಿಲ್ಲ. ಯಾಕೆಂದರೆ ಆಧ್ಯಾತ್ಮ ಸಾಧನೆ ಎಂಬುದು ಮೂಲತಃ ವೈಯಕ್ತಿಕವಾದದ್ದು.

 ತನ್ನ ಇಷ್ಟ ದೈವವನ್ನು ತನ್ನ ಗಂಡನೆಂದು ಭಾವಿಸಿದ ಅಕ್ಕನ ದೈವದ ಕಲ್ಪನೆ ಅಂದಿನ ವೀರಶೈವ ಧರ್ಮದ ‘ಲಿಂಗ’ದ ಕಲ್ಪನೆಯಿಂದ ಭಿನ್ನವಾಗಿದೆ. ಆಕೆಯ ದೈವವಾದ ಚೆನ್ನಮಲ್ಲಿಕಾರ್ಜುನ ಪರಮ ಸಾಕಾರಸುಂದರಮೂರ್ತಿ, ಅಕ್ಕ ಆಗಾಗ ‘ರೂಹಿಲ್ಲದ ಚೆಲುವ’ನೆಂದು ಅವನನ್ನು ವರ್ಣಿಸಿದರೂ, ಅವಳ ಕಣ್ಣಿಗೆ ಮುಖ್ಯವಾಗಿ ಆತ ಸೌಂದರ್ಯದ ಮೂರ್ತಿಯೇ ಹೊರತು, ವೀರಶೈವದ ಇಷ್ಟಲಿಂಗ’ ಪ್ರತಿನಿಧಿಸುವ  ನಿರಾಕಾರಕ್ಕೆ ಸಮೀಪವಾದ ಸಂಕೇತವಲ್ಲ. ಯಾಕೆಂದರೆ ದೈವವನ್ನು ಗಂಡೆಂದು ಅಥವಾ ಗಂಡನೆಂದು ಕಲ್ಪಿಸಿಕೊಂಡ  ಅಕ್ಕನ ಕಣ್ಣಿಗೆ, ಆತ ಸರ್ವೆಂದ್ರಿಯ ಸಾಕಾರ ಸುಂದರನಾಗಿಯೇ ಕಾಣುತ್ತಾನೆ. ಆತನೊಂದಿಗೆ ಈಕೆ ಒಂದಾಗುವ ಸ್ಥಿತಿ ಕೇವಲ ‘ಬಯಲ’ ಅಥವಾ ಬೆಳಕಿನ ಅಥವಾ ಕೇವಲ ಜ್ಯೋತಿಯ ಸ್ಥಿತಿ ಮಾತ್ರವಾಗದೆ ಅದು ಉತ್ಕಟವಾದ ಪ್ರಣಯಾನುಭವವಾಗಿದ್ದು, ಶೃಂಗಾರದ ರೂಪಕಗಳ ಮೂಲಕವಾಗಿಯೆ ವರ್ಣಿತವಾಗಿದೆ.

 ಅಕ್ಕನ ಅನುಭಾವ ಚೆನ್ನಮಲ್ಲಿಕಾರ್ಜುನನನ್ನು ಕುರಿತ ಕನಸು, ಹಂಬಲ ಹಾಗೂ ತಳಮಳಗಳ ರೂಪದ ಅನ್ವೇಷಣೆಯ ಸ್ಥಿತಿಯಾಗಿರುವುದರಿಂದ, ಮುಖ್ಯವಾಗಿ ಅದು ಗಾಢವಾದ ಅಂತರ್ಮುಖ ಪ್ರವೃತ್ತಿಯಾಗಿದೆ. ಬಸವಣ್ಣನವರದು ಮುಖ್ಯವಾಗಿ ಸಮಾಜ ಕ್ಷೇಮಕಾತರವಾದ ಬಹಿರ್ಮುಖ ಪ್ರವೃತ್ತಿ; ಅಲ್ಲಮನದಾದರೋ ಇದ್ದೂ ಇಲ್ಲದಂತಹ ನೆಲೆಯಲ್ಲಿ ಸಂಚರಿಸುತ್ತಾ, ಈ ಎಲ್ಲವನ್ನು ಮೀರಿದ ಒಂದು ಊರ್ಧ್ವಮುಖ ಪ್ರವೃತ್ತಿ. ಅಕ್ಕನದು ಅಂತರ್ಮುಖ ಪ್ರವೃತ್ತಿಯಾದುದರಿಂದ ಸಮಾಜ ಸುಧಾರಣಾ ಪರವಾದ ಕಾಳಜಿಗಳು ಅವಳಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ. ಆಕೆ ತನ್ನೊಂದಿಗೆ ತಾನು ಮಾತನಾಡಿಕೊಂಡದ್ದಲ್ಲ ಅದ್ಭುತವಾದ ಭಾವಗೀತೆಯ ಗುಣವನ್ನು ಪ್ರಕಟಿಸುತ್ತದೆ.  ಆಗಾಗ ಆಕೆ ಲೋಕದೊಂದಿಗೆ ಮಾತನಾಡಿದರೂ ಅದು ತನ್ನ ಧೈರ್ಯಕ್ಕೆ, ಸಮಾಧಾನಕ್ಕೆ ಹಾಗೂ ತ ನ್ನ ನಡವಳಿಕೆಯ ಸಮರ್ಥನೆಗೆ, ತಾನೊಲಿದ ಗಂಡನೊಂದಿಗೆ ತನಗೆ ಒದಗಿದ ವಿರಹ ಹಾಗೂ ಆತನೊಂದಿಗೆ ತಾನು ಒಂದಾಗುವ ಉತ್ಕಟವಾದ ಹಂಬಲದ ಪ್ರಯಾಣದ ಉದ್ದಕ್ಕೂ ಅವಳು ಆಡುವ ಮಾತೆಲ್ಲ ಭಾರತೀಯ ಪ್ರೇಮ ಕಾವ್ಯದ ವಿರಹಗೀತಗಳ ಮಾದರಿಗಳಂತಿವೆ. ಅವಳ ವಚನಗಳಲ್ಲಿ ಉತ್ಕಟವಾದ ಶೃಂಗಾರಭಾವದ ಅನೇಕ ಕ್ಷಣಗಳು ದಾಖಲಾಗಿವೆ. ಈ ಅರ್ಥದಲ್ಲಿ ಅಕ್ಕಮಹಾದೇವಿ ಕನ್ನಡದ ಮೊದಲ ಹಾಗೂ ಮೊದಲ ದರ್ಜೆಯ ಕವಯಿತ್ರಿಯಾಗಿದ್ದಾಳೆ.

 ‘ಅಕ್ಕ ಏಕಾಂಗಿಯಾದ, ಆದರೆ ನಿಜವಾಗಿಯೂ ಧೀರಳಾದ ಹೆಣ್ಣು’ ಲೋಕದ ನಿಂದೆ, ಅಪವಾದ ಇತ್ಯಾದಿಗಳ ಬಗ್ಗೆ ಒಂದಿಷ್ಟೂ ತಲೆಕೆಡಿಸಿಕೊಂಡವಳಲ್ಲ. ನಿಜವಾದ ಅಧ್ಯಾತ್ಮ ಸಾಧಕರಲ್ಲಿ ಕಂಡು ಬರುವ ನಿರ್ಭಯತೆ ಆಕೆಯ ವ್ಯಕ್ತಿತ್ವದ ಲಕ್ಷಣವಾಗಿದೆ. ಆದರೆ ಆಕೆಯ ಈ ಧೈರ್ಯ ಲೋಕದ ಲಜ್ಜೆಯ ಗಡಿಯನ್ನೂ ದಾಟುವ ದಿಗಂಬರತ್ವ ಅಥವಾ  ಬತ್ತಲತನವನ್ನು ಕೈಗೊಳ್ಳವಷ್ಟು ಮುಂದುವರಿದಿತ್ತೆ ಅಥವಾ ಬೇರೆ ಮಾತಿನಲ್ಲಿ ಹೇಳುವುದಾದರೆ, ಆನೇಕರು ಭಾವಿಸಿರುವಂತೆ ಅಕ್ಕ ಬಟ್ಟೆಯ ಹಂಗನ್ನು ಕಿತ್ತೊಗೆದು, ಕೇಶರಾಶಿಯಿಂದ ತನ್ನ ದಿಗಂಬರತ್ವವನ್ನು ಮರೆಮಾಡಿಕೊಂಡು ಸಂಚರಿಸಿದಳೆ ಎನ್ನುವ ಸಂಗತಿ ತುಂಬ ವಿಲಕ್ಷಣವಾಗಿದೆ. ನಮ್ಮ ಮಟ್ಟಿಗೆ ಹೇಳುವುದಾದರೆ ಇದೊಂದು ತೀರಾ ಅಸಂಭಾವ್ಯವೂ, ಅಸಂಬದ್ಧವೂ ಆದ ಕಲ್ಪನೆಯಾಗಿದೆ. ಹನ್ನೆರಡನೆಯ ಶತಮಾನದಷ್ಟು ಹಿಂದಿನ ಆ ಪರಿಸರದಲ್ಲಿ ಹೆಣ್ಣೂಬ್ಬಳು, ಅವಳೆಂಥ ಅನುಭಾವಿಯಾಗಿದ್ದರೂ, ಬೆತ್ತಲೆಯಾಗಿ, ಕೂದಲನ್ನು ಮರೆಮಾಡಿಕೊಂಡು ಸಂಚರಿಸಿದಳೆಂಬುದು, ಅತ್ಯಂತ ಅಸಂಗತವೂ, ಅನುಚಿತವೂ ಆದ ಭ್ರಮಾಕಲ್ಪನೆಯಾಗಿ ಮಾತ್ರ ತೋರುತ್ತದೆ. ಈ ನಡವಳಿಕೆ ವೀರಶೈವ ಧರ್ಮಕ್ಕೆ ಸಂಪೂರ್ಣ ವಿರುದ್ಧ ಮಾತ್ರವಲ್ಲ; ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಕೂಡ ಹೆಣ್ಣಿಗೆ ಕ್ಷೇಮಕರವಾದದ್ದಲ್ಲ.

  ಈ ಕುರಿತು ಮೊದಲು ನಾವು ಗಮನಕ್ಕೆ ತೆಗೆದುಕೊಳ್ಳಬೇಕಾದದ್ದು ಅಂದಿನ ಸಮಕಾಲೀನ ವಚನಕಾರ್ತಿಯರ ಪ್ರತಿಕ್ರಿಯೆಗಳನ್ನು, ಅಕ್ಕನ ಸಮಕಾಲೀನರಾದ ಯಾವ ವಚನಕಾರ್ತಿಯರ ಯಾವ ವಚನಗಳಲ್ಲಿಯೂ ಈ ಕುರಿತು ಒಂದಾದರೂ ಪ್ರತಿಕ್ರಿಯೆ ದಾಖಲಾಗಿಲ್ಲವಲ್ಲ ! ಹಾಗೆಯೆ ಇತರ ಅನೇಕ ವಚನಕಾರರ ವಚನಗಳಲ್ಲಿ ಅಕ್ಕನ ಬತ್ತಲೆತನದ ಬಗ್ಗೆ ಒಂದಾದರೂ ಉಲ್ಲೇಖಗಳಿಲ್ಲವಲ್ಲ.

 ಅಕ್ಕನ ಸಮಕಾಲೀನರಾದ ಪ್ರಮುಖ ವಚನಕಾರರ ಹಾಗೂ ವಚನಕಾರ್ತಿಯರ, ಆನಂತರ ಅಕ್ಕನ ಬದುಕನ್ನು ಕುರಿತು ಮೊಟ್ಟ ಮೊದಲು ‘ಮಹಾದೇವಿಯಕ್ಕಗಳ ರಗಳೆ’ ಎಂಬ ಕಾವ್ಯವನ್ನು ಬರೆದ ಹರಿಹರನು ಕೂಡ ಆಕೆ ಬತ್ತಲೆಯಾಗಿ ನಡದಳೆಂದು ಹೇಳಿಲ್ಲ. ಆದರೆ ಹರಿಹರನೊಬ್ಬನ ಹೊರತು ಮುಂದಿನವರೆಲ್ಲರೂ ಆಕೆ ದಿಗಂಬರಳಾಗಿದ್ದಳೆಂದೂ, ಕೂದಲಿನಿಂದ ತನ್ನ ಮೈಯನ್ನು ಮರೆಮಾಡಿಕೊಂಡಿದ್ದಳೆಂದೂ ವರ್ಣಿಸಿದ್ದಾರೆ. ಆದರೆ ಈ ಸಂಗತಿಯನ್ನು ಕುರಿತ ಹರಿಹರನ ಕಾವ್ಯದ ಸಂದರ್ಭವೆ ಈ ಬಗೆಯ ತಪ್ಪುಗ್ರಹಿಕೆಗೆ ಆಸ್ಪದವನ್ನು ಕಲ್ಪಿಸುವಷ್ಟು ಸಂದಿಗ್ಧವಾಗಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ : ಅಕ್ಕ ಮೂರು ಷರತ್ತುಗಳ  ಒಂದು ಮೇರೆಗೆ ಕೌಶಿಕನನ್ನು ಮದುವೆಯಾಗಿ, ಅವನೊಡನೆ ಅರಮನೆಯಲ್ಲಿ ಕೆಲವು ಕಾಲ ಇದ್ದಳೆಂದು ಚಿತ್ರಿಸುವ ಹರಿಹರ, ಮೂರೂ ಷರತ್ತುಗಳನ್ನೂ ಉಲ್ಲಂಘಿಸಿದ ಕೌಶಿಕನ ಸಹವಾಸವನ್ನು ಮಹಾದೇವಿ ಬಿಟ್ಟು ಹೊರಟ ಸಂದರ್ಭವನ್ನು ಕುರಿತು ಹೀಗೆ ವರ್ಣಿಸಿದ್ದಾನೆ:ಒಂದು ದಿನ ಅರಮನೆಗೆ ಮಹಾದೇವಿಯ ಆರಾಧ್ಯ ದೇವರಾದ ಗುರುಗಳು ಬಂದಾಗ ಸಜ್ಜೆಮನೆಯಿಂದ ಸಂಭ್ರಮದಿಂದ ನಮಸ್ಕರಿಸಲು ಧಾವಿಸಿದ ಮಹದೇವಿಗೆ ಗುರುಗಳು ‘ಮಗಳೆ ದುಕೂಲಮಂ ಬಾಸಣಿಸಿಕೊಳ್ (ಮಗಳೆ ಬಟ್ಟೆಯನ್ನುಟ್ಟುಕೋ) ಎನ್ನಲಾಗಿ, ಆಕೆ ತನ್ನ ವಸ್ತ್ರಗಳ ಕಡೆ ಕೈ ಚಾಚಿದಾಗ ಕೌಶಿಕನು ‘ತೆಗೆ ತೆಗೆ ನಿನಗೇನ್ ಅತ್ಯಂತ ಭಕ್ತಿಗೆ ಮೀರಿದ ವಿರಕ್ತಿಗೆ ಸೀರೆಯೇಕೆಂದು ಕೈಯ್ಯ ದುಕೂಲಮಂ ಸೆಳೆಯಲು, ಹಾ ಮೂರು ತಪ್ಪು ತೀರ್ದುದು ಎನ್ನಿಚ್ಛೆ ಸಾರ್ದುದು, ಭವಿಸಂಗವೊಳಸೋರ್ದುದು ವಿರಕ್ತಿ ನಿಮಿರ್ದುದು ನಿಷ್ಠೆಯುಳಿದುದು ಬರ್ದುಂಕಿದೆನ್ ಬರ್ದುಂಕಿದೆನ್ ಎನುತ್ತೆ ಆಶಾರಹಿತ ಕೇಶಾಂಬರಿಯಾಗಿ ತಿರುಗಿ ಧವಳಾರದೊಳಗಿರ್ದ ಚನ್ನಮಲ್ಲಿಕಾರ್ಜುನನ ಕರಸ್ಥಳದೊಳ್ ಬಿಜಯಂಗೆಯ್ದಿಕೊಂಡು…… ಮಹಾದೇವಿ ಪುರಮಂ ಪೊರಮಟ್ಟು ಶ್ರೀ ಪರ್ವತಾಭಿಮುಖಿಯಾದಳ್.‌

    ಹರಿಹರನ ಅನಂತರ ಶರಣರ ವಚನಗಳ ಆಧಾರದಿಂದ ಶೂನ್ಯ ಸಂಪಾದನೆಯನ್ನು ಕಟ್ಟುವ ಅದ್ಭುತ ನಾಟಕೀಯ ತಂತ್ರವನ್ನು ಆವಿಷ್ಕಾರ ಮಾಡಿದ ಮೊದಲ ‘ಶೂನ್ಯ ಸಂಪಾದನಕಾರ’ನಾದ ಶಿವಗಣ ಪ್ರಸಾದಿ  ಮಹಾದೇವಯ್ಯನು (ಸು. 1460) ಅಕ್ಕ ಮಹಾದೇವಿಯು ಕಲ್ಯಾಣಕ್ಕೆ ಬಂದ ಸಂದರ್ಭವನ್ನು ಚಿತ್ರಿಸುತ್ತ-

‘ದಿಗಂಬರದುಡಿಗೆಯನುಟ್ಟು ಕೇಶವೆಂಬ ಅಂಬರವಂ ಮುಸುಕಿಟ್ಟು

 ಕರಸ್ಥಲದೊಳಿರ್ಪ ಇಷ್ಟಲಿಂಗದೊಳು ದೃಷ್ಟಿನಟ್ಟು ಭಾವಕವು

ಗೊಂಡು ಲೌಕಿಕದ ಲಜ್ಞಾಭಿಮಾನಮಂ ತೊಡೆದು

 ಭವಸಾಗರಮಂ ದಾಂಟಿ ಚೆನ್ನಮಲ್ಲಿಕಾರ್ಜುನನ

ವಿಕಳಾವಸ್ಥೆಯೊಳು ತನ್ನ ಮಡೆದು

ಎಂದು ವರ್ಣಿಸುತ್ತಾನೆ. ಹರಿಹರನಲ್ಲಿ ಆಕೆ ಶಯ್ಯಾಗೃಹದಲ್ಲಿ ಬೆತ್ತಲೆಯಾಗಿದ್ದುದು,ಅನಂತರ ಕೌಶಿಕ ತೆಗೆತೆಗೆ ನಿನಗೆ ಸೀರೆಯೇಕೆ ಎಂದದ್ದು ಆಮೇಲೆ ಆಕೆ ‘ಕೇಶಾಂಬರಿಯಾಗಿ ತಿರುಗಿ ಬಂದು’ ಇಷ್ಟಲಿಂಗವನ್ನು ಕೈಗೆತ್ತಿಕೊಂಡು ಪುರವನ್ನು ಬಿಟ್ಟು ಶ್ರೀಶೈಲಾಭಿಮುಖವಾಗಿ ಹೊರಟಿದ್ದು ಇದೆಲ್ಲವೂ, ಶಿವಗಣ ಪ್ರಸಾದಿ ಮಹಾದೇವಯ್ಯನ ಗ್ರಹಿಕೆಯಲ್ಲಿ ತಪ್ಪಾಗಿ ಭಾವಿತವಾಗಿ, ಅಕ್ಕ ‘ದಿಗಂಬರದುಡಿಗೆಯನುಟ್ಟು ಕೇಶವೆಂಬ ಅಂಬರಮಂ ಮುಸುಕಿಟ್ಟು’  ಬಂದಳೆಂಬ ವರ್ಣನೆಯಾಗಿ ಮಾರ್ಪಟ್ಟು ಮುಂದಿನ ಕೃತಿಕಾರರನ್ನು ದಾರಿತಪ್ಪಿಸಿತಂದು ತೋರುತ್ತದೆ. ಮುಂದಿನ ಎಲ್ಲರೂ ಅಕ್ಕ ದಿಗಂಬರೆಯಾಗಿ, ಕೇಶವನ್ನು ಮುಸುಕಿಟ್ಟು ಸಂಚರಿಸಿದಳಂದೇ ಚಿತ್ರಿಸಿದರು. ಮುಂದಿನ ಶೂನ್ಯ ಸಂಪಾದನಕಾರರು ಕಲ್ಯಾಣದ ಅನುಭವ ಮಂಟಪಕ್ಕೆ ಹೀಗೆ ದಿಗಂಬರಯೂ ಕೇಶಾಂಬರೆಯೂ ಆಗಿ ಬಂದ ಅಕ್ಕನನ್ನು, ಪ್ರಭುವು ನಾನಾ ಬಗೆಯಲ್ಲಿ ಪ್ರಶ್ನೆ ಮಾಡಿ, ನೀನು ನಿಜವಾಗಿಯೂ ಅನುಭಾವಿಯಾದ ಪಕ್ಷದಲ್ಲಿ ಹೀಗೆ ಕೂದಲನ್ನು ಯಾಕೆ ಮರೆಮಾಡಿದ್ದೀಯ ಎಂದು ಕೇಳಿದಂತೆಯೂ ಅದಕ್ಕೆ ಅಕ್ಕ ಸಮರ್ಪಕವಾದ ಉತ್ತರವನ್ನು ಕೊಟ್ಟಂತೆಯೂ ಅದ್ಭುತವಾದ ನಾಟ್ಯಮಯ ಸಂದರ್ಭವನ್ನು ಚಿತ್ರಿಸಿದ್ದಾರ” ಮುಂದೆ ಜನ ಮನದಲ್ಲಿ ಅಕ್ಕನನ್ನು ಕುರಿತು ಈ ‘ಕೇಶಾಂಬರೆ’ಯಾದ ಚಿತ್ರವೇ ಸ್ಥಾಯಿಯಾಗಿ ಉಳಿದುಬಂದಿದೆ; ಚಿತ್ರಕಾರರು ಅಕ್ಕಮಹಾದೇವಿಯನ್ನು ಹೀಗೆಯೆ ಚಿತ್ರಿಸಿದ್ದಾರೆ. ಆದರೆ, ಹೆಣ್ಣೋಬ್ಬಳು ಈ ಬಗೆಯ ‘ಅವಸ್ಥೆ’ಯಲ್ಲಿ ಇದ್ದಳೆಂಬುದು ಎಷ್ಟು ಸಂಭಾವ್ಯ ಹಾಗೂ ಉಚಿತ ಎಂಬುದರ ಬಗ್ಗೆ ಬಹುಜನ ಗಂಭೀರವಾಗಿ ವಿಚಾರ ಮಾಡಿದಂತೆ ತೋರುವುದಿಲ್ಲ.

 ಈ ಹಿನ್ನೆಲೆಯಲ್ಲಿ ದಿವಂಗತ ಶ್ರೀ ಎಚ್. ದೇವೀರಪ್ಪನವರು ಕೆಲವು ವರ್ಷಗಳ ಹಿಂದೆ ಬರೆದ ʼಕೇಶಾಂಬರೆಯ ದಿಗಂಬರೆಯೆʼ ಎಂಬ  ಸಂಶೋಧನ ಬರೆಹವೊಂದರ ವಿಚಾರ ಸರಣಿಯನ್ನು ಗಮನಿಸುವುದು ಅಗತ್ಯವಾಗಿದೆ..ಅವರು ಮುಖ್ಯವಾಗಿ ಹರಹರನಲ್ಲಿ  ಬರುವ ʼಕೇಶಾಂಬರೆʼ ಎಂಬ ಮಾತನ್ನು ಅರ್ಥೈಸಿರುವ ಕ್ರಮವು ತರ್ಕಬದ್ದವಾಗಿದೆ ಎಂಬುದು ನಮ್ಮ ಅಭಿಪ್ರಾಯ ಕೂಡ. ಅಕ್ಕಮಹಾದೇವಿ ಕೌಶಿಕನ ಅರಮನೆಯನ್ನು ಬಟ್ಟು ಹೋಗುವಾಗ  ʼಕೇಶಾಂಬರೆಯಾಗಿ ತಿರುಗಿ ಬಂದು  ಪರ್ವತಾಭಿಮುಖಿಯಾಗಿ ನಡೆತಂದಳ್‌ ಎಂಬ ವರ್ಣನೆಯಿದೆಯಷ್ಟೆ, ಕೌಶಿಕನನ್ನು ಕೊಟ್ಟ ಕೊನೆಯದಾಗಿ ತಿರಸ್ಕರಿಸಿದಾಗ ಆಕೆ ಕೇಶಾಂಬರೆಯಾಗಿ ತಿರುಗಿಬಂದು (ಅಂದರೆ ಅರಮನೆಯ ಒಂದು ಭಾಗದಿಂದ ಕೇಶಾಂಬರೆಯಾಗಿ  ಹಿಂದಕ್ಕೆ …  ಪೂಜಾಗೃಹಕ್ಕೆ ಬಂದು) “ಚೆನ್ನಮಲ್ಲಿಕಾರ್ಜುನನಂ ಕರಸ್ಥಲದೊಳ್ ಬಿಜಯಂಗೈಯ್ದಿಕೊಂಡು ಪುರವನ್ನು ಬಿಟ್ಟು ಹೊರಟಳೆಂಬುದು ಇಲ್ಲಿನ ಉಲ್ಲೇಖವಾಗಿದೆ. “ಕೇಶಾಂಬರೆ” ಎಂಬ ಪದಕ್ಕೆ ಕೇಶದಿಂದ ಮಾಡಿದ ಬಟ್ಟೆಯನ್ನು ಧರಿಸಿದವಳು ಎಂದು ಅರ್ಥ ಮಾಡಬೇಕಾಗುತ್ತದೆ’ ಎನ್ನುತ್ತಾರೆ ದೇವೀರಪ್ಪನವರು. ಇದೇ ಪದವನ್ನು ಬಳಸಲಾದ ಇನ್ನೂ ಒಂದೆರಡು ಉಲ್ಲೇಖಗಳ ಕಡೆ ಅವರು ಗಮನವನ್ನು ಸೆಳೆದಿದ್ದಾರೆ. ಹರಿಹರನ ‘ಅಕ್ಕಮಹಾದೇವಿಯ ರಗಳೆ’ಯಲ್ಲಿಯೆ, ಏಳನೆಯ ಸ್ಥಳದಲ್ಲಿ

 ಬರುತಿರ್ದಳಶಿಭಕ್ತಿಯುಡುತಡಿಯ ಮಹಾದೇವಿ

 ಪರಮ ವೈರಾಗ್ಯ ರಸವೆಯ್ದೆ ತನುವಂ ತೀವಿ

 ನಿಷ್ಠೆ ಪಾದದ ರಕ್ಷೆಯಾಗುತಿರೆ ನಡೆಯುತುಂ

 ಉಟ್ಟ ಕೇಶಾಂಬರಂ ದಟ್ಟಯಿಸಿ ಮೆರೆಯುತು

 ಎಂಬಲ್ಲಿ ‘ಉಟ್ಟ ಕೇಶಾಂಬರಂ’ ಎಂಬ ಮಾತನ್ನು ಗಮನಿಸಬೇಕು. ಹಾಗೆಯ ಹರಿಹರನ ‘ಕೇಶಿರಾಜ ದಂಡನಾಯಕನ ರಗಳೆ’ಯಲ್ಲಿಯೂ, ಆತ ಮಂತ್ರಿ ಪದವಿಯನ್ನು ತ್ಯಜಿಸಿ ಹೊರಟ ಸಂದರ್ಭವನ್ನು ಚಿತ್ರಿಸುವಾಗ

 ಆಸೆಗೆಡಗೊಡದೆ ತನ್ನಯ ವಸ್ತಮಂಬಿಟ್ಟು

 ಆಶಾಂಬರನ ಸುತಂ ಕೇಶಾಂಬರವನುಟ್ಟು

  ಎಂಬ ವರ್ಣನೆಯಿಂದ ಈ ಎರಡೂ ಸಂದರ್ಭಗಳಲ್ಲಿಯೂ ‘ಕೇಶಾಂಬರ’ ಎಂದರೆ ಕೇಶದಿಂದ ಅಂಬರ, ಉಣ್ಣಿಯ ನೂಲಿನಿಂದ ಮಾಡಿದ ಬಟ್ಟೆ ಅಥವಾ ಗೊಂಗಡಿ ಅಥವಾ ಕರಿಯ ಕಂಬಳಿಯ ನಿಲುವಂಗಿ ಎಂದು ಅರ್ಥವೇ ಹೊರತು, ಕೂದಲನ್ನು ಮರೆಮಾಡಿಕೊಂಡ ಬೆತ್ತಲೆಯ ಸ್ಥಿತಿ ಎಂದು ಅರ್ಥವಾಗುವುದಿಲ್ಲವೆಂದು ದೇವೀರಪ್ಪನವರು ವ್ಯಾಖ್ಯಾನಿಸುತ್ತಾರೆ. ಈಗಲೂ ಹಿಮಾಲಯದ ಪರಿಸರದಲ್ಲಿ ಕರಿಯಕಂಬಳಿಯ ನಿಲುವಂಗಿ ತೊಟ್ಟ ಸಾಧುಗಳಿದ್ದಾರೆ. ಕಾಳಿಕಂಬಳಿವಾಲಾ’ ಅನ್ನುವ ಸನ್ಯಾಸಿಯ ಹೆಸರು ಇಂದಿಗೂ ಪ್ರಸ್ಥಿವಾಗಿದೆ. ಈ ಹಿನ್ನೆಲೆಯಿಂದ ನೋಡಿದಾಗ `ತೆಗೆ ತೆಗೆ ನಿನಗೇನು ? ಅತ್ಯಂತ ಭಕ್ತಿಗೆ ಮೀರಿದ ವಿರಕ್ತಿಗೆ ಸೀರೆಯೇಕೆ’ ಎಂದು ಕೌಶಿಕನು ವ್ಯಂಗ್ಯವಾಗಿ ಮೂದಲಿಸಿದಾಗ, ಆಕೆಗೆ ಎಲ್ಲ ವಸ್ತ್ರಗಳ ಬಗೆಗೂ ಜಿಗುಪ್ಸೆಯುಂಟಾಗಿ, ‘ಕೇಶಾಂಬರ’ವನ್ನು, ಎಂದರೆ ಕರಿಯ ಕಂಬಳಿಯಿಂದ ಮಾಡಿದ ಉಡುಗೆಯನ್ನು ಧರಿಸಿ’ ಅರಮನೆ ಹಾಗೂ ನಗರವನ್ನು ಬಿಟ್ಟು ಹೊರಟು ಬಂದಿರಬೇಕು, ಆದ ಕಾರಣ ಮಹಾದೇವಿ ‘ಕೇಶಾಂಬರೆ’ಯಾಗಿದ್ದಳೆಂದರೆ, ತನ್ನ ಉದ್ದವಾದ ತಲೆಕೂದಲನ್ನು ಮರೆಮಾಡಿಕೊಂಡು ಬೆತ್ತಲೆಯ ಸ್ಥಿತಿಯಲ್ಲಿ ಇದ್ದಳೆಂದು ಅರ್ಥಮಾಡುವುದು ತೀರಾ ಅಸಂಗತವಾದ ಕಲ್ಪನೆ ಎನ್ನುವುದರಲ್ಲಿ ಸಂದೇಹವಿಲ್ಲ. ಮತ್ತು ‘ಬೆತ್ತಲೆ’ ಎಂದರೆ ಕೇವಲ ಶಾರೀರಿಕವಾದ ಒಂದು ವಸ್ತ್ರಹೀನ ಸ್ಥಿತಿ ಎಂದು ವಾಚ್ಯವಾಗಿ ಭಾವಿಸುವುದಕ್ಕಿಂತ, ಎಲ್ಲ ಬಗೆಯ ಆವರಣಗಳನ್ನೂ ಕಳಚಿಕೊಂಡ ಆತ್ಮದ ಒಂದು ಮುಕ್ತ ಸ್ಥಿತಿ ಎಂದು ಸಾಂಕೇತಿಕವಾಗಿ ಗ್ರಹಿಸುವುದೂ ಅಗತ್ಯವಾಗಿದೆ.

 “ಎಳೆಯಂದಿನಲ್ಲಿ ತಂದೆತಾಯಂದಿರ, ಯೌವನದಲ್ಲಿ ಕೈಹಿಡಿದ ಗಂಡನ, ಮುಪ್ಪಿನಲ್ಲಿ ಮಕ್ಕಳ ರಕ್ಷಣೆಯಲ್ಲಿ ಇರಬೇಕಾದ ಹೆಣ್ಣು, ಸ್ವಾತಂತ್ರ ಕ್ಕೆ ಅರ್ಹಳಲ್ಲ”- ಎಂಬ ಮನುಧರ್ಮ ಸೂತ್ರವು ನಿಯಂತ್ರಿಸಿದ ಸಾಂಸಾರಿಕ ಚೌಕಟ್ಟನ್ನು ದಾಟಿ, ಹೆಣ್ಣಿಗೆ ಇದರಿಂದಾಚೆಯ ಬೇರೊಂದು ಅಸ್ತಿತ್ವವೂ ವ್ಯಕ್ತಿತ್ವವೂ ಉಂಟು ಎಂಬುದನ್ನು ತನ್ನ ವೈಚಾರಿಕತೆ ಹಾಗೂ ದಿಟ್ಟತನದ ನಡವಳಿಕೆಯ ಮೂಲಕ ಸಾಧಿಸಿ ತೋರಿಸಿದ ಅಕ್ಕಮಹಾದೇವಿ, ಹನ್ನೆರಡನೆಯ ಶತಮಾನದ ಶರಣ ಚಳುವಳಿಯ ನಡುವೆ ಒಂದು ವಿಶಿಷ್ಟವೂ ಭಿನ್ನವೂ ಆದ ನಿಲುವಿನಿಂದ ಹೆಣ್ತನದ ಘನತೆ ಗೌರವಗಳ ಪ್ರತೀಕವಾಗಿದ್ದಾಳೆ.

ಡಾ. ಸಿ.ವಿ.ಪ್ರಭುಸ್ವಾಮಿಮಠ

ಅಲ್ಲಮಪ್ರಭು ಕನ್ನಡನಾಡಿನ ವಚನ ಚಳುವಳಿಯ ಫಲವಾಗಿ ಮೂಡಿಬಂದ ಧೀಮಂತ ಅನುಭಾವಿ ಮತ್ತು ಉನ್ನತ ತತ್ವಜ್ಞಾನಿ. ೧೨ನೇ ಶತಮಾನದಲ್ಲಿ ಬಾಳಿದ ಅಲ್ಲಮ ಪ್ರಭುವಿನ ಅಧಿಕೃತ ಚರಿತ್ರೆಯನ್ನು ತಿಳಿಸುವ ಒಂದೇ ಗ್ರಂಥ ಎಂಬುದಿಲ್ಲ. ಮುಖ್ಯವಾಗಿ ಅಲ್ಲಮನ ಚರಿತ್ರೆಯನ್ನು ಆತನನ್ನು ಕುರಿತು ರಚಿತವಾದ ಕಾವ್ಯಗಳಿಂದ, ಸ್ವತಃ ಅಲ್ಲಮನ ವಚನಗಳಿಂದ ಶೂನ್ಯಸಂಪಾದನೆಗಳಿಂದ ಜಾನಪದ ಕಾವ್ಯಗಳಿಂದ ತಿಳಿಯಬಹುದಾಗಿದೆ. ಕಾವ್ಯಗಳಲ್ಲಿ ಹರಿಹರನ ಸಂಪ್ರದಾಯ, ಚಾಮರಸನ ಸಂಪ್ರದಾಯ ಎಂದು ಪ್ರತ್ಯೇಕಿಸಿ ಗುರುತಿಸಲಾಗುತ್ತದೆ ಹರಿಹರನ ‘ಪ್ರಭುದೇವರ ರಗಳೆ’ ವಚನ ಚಳುವಳಿಗೆ ತುಂಬ ಸಮೀಪದಲ್ಲಿ ರಚಿತವಾದ ಕೃತಿಯಾದ್ದರಿಂದ ಅದು ಚರಿತ್ರೆಗೆ ಹೆಚ್ಚು ಸಮೀಪವಾದ ಕೃತಿಯೆಂದು ಗುರುತಿಸಲಾಗುತ್ತದೆ. ಚಾಮರಸನ ‘ಪ್ರಭುಲಿಂಗ ಲೀಲೆ’ ಅಲ್ಲಮನನ್ನು ಕುರಿತು ರಚಿತವಾದ ಸಾಂಕೇತಿಕ ತಾತ್ವಿಕ ಕಾವ್ಯ. ಇದೇ ಸಂದರ್ಭದಲ್ಲಿ ಪುರಾಣದೃಷ್ಟಿಗೆ ಎಳಂದೂರು ಹರೀಶ್ವರನ ‘ಪ್ರಭುದೇವ ಪುರಾಣ’ವನ್ನು ಹೆಸರಿಸಬಹುದಾಗಿದೆ.

ಇನ್ನು ‘ಶೂನ್ಯ ಸಂಪಾದನೆ’ ಸಂಪುಟಗಳು ವೀರಶೈವ ಧರ್ಮ ಒಂದು ಸಾಂಸ್ಥಿಕ ರೂಪವನ್ನು ಪಡೆಯುತ್ತಿರುವ ಸಂದರ್ಭದಲ್ಲಿ, ಅಲ್ಲಮನನ್ನು ಕೇಂದ್ರವ್ಯಕ್ತಿಯನ್ನಾಗಿಟ್ಟುಕೊಂಡು ಶೂನ್ಯತತ್ವವೊಂದನ್ನು ವಿಕಾಸಗೊಳಿಸಿದ ವಚನ ಸಂಪಾದನ ಕೃತಿಗಳು. ಇವುಗಳಲ್ಲದೆ ‘ಮಂಟೆಸ್ವಾಮಿಯ ಕಾವ್ಯ’ ಹಳ್ಳಿಗರ ಹಾಡುವಿನಂಥ ಜಾನಪದ ಕೃತಿಗಳು ಮತ್ತು ಇನ್ನೂ ಅನೇಕ ಕಾವ್ಯಭಾಗಗಳು, ಪುರಾಣಗಳು ಅಲ್ಲಮನ ವ್ಯಕ್ತಿತ್ವವನ್ನು ರೂಪಿಸಲು ಪ್ರಯತ್ನಿಸಿವೆ. ಸ್ವತಃ ಅಲ್ಲಮನ ವಚನಗಳು ಆತನ ಆಂತರಂಗಿಕ ವ್ಯಕ್ತಿತ್ವವು ವಿಕಾಸಗೊಂಡ ಬಗೆಯನ್ನು ಸೂಚಿಸುತ್ತವೆ.

ಮೇಲಿನ ಕೃತಿಗಳ ನೆರವಿನಿಂದ ಅಲ್ಲಮನ ಜೀವನ ಚರಿತ್ರೆಯ ಒಂದು ಸ್ಥೂಲವಾದ ಚಿತ್ರವನ್ನು ರೂಪಿಸಿಕೊಳ್ಳಬಹುದಾಗಿದೆ. ಅಲ್ಲಮನ ಜನ್ಮ ಬನವಾಸಿ ಪ್ರಾಂತಕ್ಕೆ ಸೇರಿದ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯಲ್ಲಿ. ಅದು ಕಾಳಾಮುಖ ಶೈವರ ದೊಡ್ಡ  ಅಧ್ಯಾತ್ಮಿಕ ಕೇಂದ್ರವಾಗಿತ್ತು. ಹರಿಹರ ಅಲ್ಲಮನ ತಂದೆ ನಾಗವಾಸಾಧಿಪತಿಯಾಗಿದ್ದನೆಂದು ಹೇಳಿದರೆ ಚಾಮರಸ ಆತನ ತಂದೆ ತಾಯಿಗಳ  ಹೆಸರುಗಳನ್ನು ಗುಣವಾಚಕವಾಗಿ ನಿರಹಂಕಾರ ಸುಜ್ಞಾನಿಯೆಂದು ಹೇಳುತ್ತಾನೆ  ಆಧುನಿಕ ಸಂಶೋಧನೆ ಅಲ್ಲಮನು ನಟ್ಟುವರ ಜಾತಿಗೆ ಸೇರಿದವನೆಂದು ಗುರುತಿಸಿದೆ.

ಅಲ್ಲಮನು ತಾರುಣ್ಯಕ್ಕೆ ಬಂದಾಗ ಕಾಮಲತೆ ಎಂಬುವಳನ್ನು ಮೋಹಿಸಿ ಅವಳ ಅಕಾಲ ಮರಣದಿಂದ ವೈರಾಗ್ಯದತ್ತ ತಿರುಗಿದನೆಂದು ಹರಿಹರ ಹೇಳಿದರೆ ಚಾಮರಸನು ಮೋಹಿಸಿ ಬಂದ ಮಾಯಾದೇವಿಯನ್ನು ತಿರಸ್ಕರಿಸಿ ಮಾಯಾ- ಕೋಲಾಹಲನಾದನೆಂದು ಹೇಳುತ್ತಾನೆ. ಇನ್ನು ಆತನ ಗುರುವಾದ ಅನಿಮಿಷಯೋಗಿ ಗುಹೆಯಲ್ಲಿ ಜ್ಯೋರ್ತಿಲಿಂಗವನ್ನು ನೀಡಿದ ಬಗ್ಗೆ ಹರಿಹರ, ಚಾಮರಸ, ಸ್ವತಃ ಅಲ್ಲಮನ ವಚನಗಳಲ್ಲಿ ಉಲ್ಲೇಖ ದೊರೆಯುವುದಲ್ಲದೆ ಅನಂತರ ಅಲ್ಲಮನು ತನ್ನ  ಕಠಿಣತಮ ಅಧ್ಯಾತ್ಮಿಕ ಸಾಧನೆಯಿಂದ ಉನ್ನತ ನೆಲೆಗೇರಿದ ಬಗೆಯು ತಿಳಿಯುತ್ತದೆ.

ಅಲ್ಲಮನು ಕೇವಲ ವೈಯಕ್ತಿಕವಾದ ಅಧ್ಯಾತ್ಮಿಕ, ಆನುಭವಿಕ ಸಾಧನೆಯಲ್ಲೇ ಮುಳುಗದೆ, ಲೋಕೋದ್ಧಾರದ ಕಾರ್ಯದಲ್ಲಿ ಮುಂದುವರಿದ ಬಗ್ಗೆ ಅವನ ವ್ಯಕ್ತಿತ್ವಕ್ಕೆ ಸಾಮಾಜಿಕ ಮುಖವೊಂದು ಇದ್ದ ಬಗ್ಗೆ ಅವನ ಸಂಪರ್ಕದಲ್ಲಿ ಬಂದು ತಮ್ಮ  ವ್ಯಕ್ತಿತ್ವವನ್ನು ಉದ್ಧರಿಸಿಕೊಂಡ ವ್ಯಕ್ತಿಗಳ ಸಂದರ್ಭಗಳು ಸೂಚನೆಯನ್ನು ನೀಡುತ್ತವೆ. ಉದಾಹರಣೆಗೆ ಗೊಗ್ಗಯ್ಯ, ಮುಕ್ತಾಯಕ್ಕ, ಸಿದ್ಧರಾಮ, ಗೋರಕ್ಷ, ಮಹಾದೇವಿಯಕ್ಕ, ಬಸವಣ್ಣನವರನ್ನು ಹೆಸರಿಸಬಹುದಾಗಿದೆ. ಲೋಕಕಲ್ಯಾಣವೇ ಮುಖ್ಯಗುರಿಯಾಗಿದ್ದ ಅಲ್ಲಮನು, ಬಳ್ಳಿಗಾವಿ. ಬನವಾಸಿ, ಸೊನ್ನಲಿಗೆ, ಕಲ್ಯಾಣ, ಕಾಶಿ, ಕೇದಾರ ಕ್ಷೇತ್ರಗಳನ್ನು ಸುತ್ತಿ ಕೊನೆಯಲ್ಲಿ ಶ್ರೀಶೈಲದ ಕದಳಿವನದಲ್ಲಿ ಕಣ್ಮರೆಯಾದಂತೆ ತಿಳಿಯುತ್ತದೆ.

ಅಲ್ಲಮಪ್ರಭುವಿನ ಲೋಕಕಲ್ಯಾಣದ ಕಾರ್ಯಕ್ರಮದಲ್ಲಿ ಅವನು ಕಲ್ಯಾಣದ ಅನುಭಾವಮಂಟಪದಲ್ಲಿ ನಿಂತು ಶರಣರೊಡನೆ ನಡೆಸಿದ ಅನುಭಾವಗೋಷ್ಠಿ ಮುಖ್ಯವಾದದ್ದು. ಅವರ ಅನೇಕ ವಚನಗಳ ಚಿಂತನೆಯ ಹಿನ್ನಲೆಯಲ್ಲಿ ಈ ಶಿವಾನುಭವಗೋಷ್ಠಿಯು ಕೆಲಸಮಾಡಿರುವುದನ್ನು ಗಮನಿಸಬಹುದಾಗಿದೆ. ಅಲ್ಲಮನ ವಚನಗಳ ಈ ಮುಖವನ್ನು ಪರಿಶೀಲಿಸುವ ಮೊದಲು  ಸ್ಥೂಲವಾಗಿಯಾದರೂ ಅನುಭಾವವೆಂದರೇನು? ಭಾರತೀಯ ಅನುಭಾವ ಪರಂಪರೆಯು ಸಾಗಿಬಂದ ಅನುಭವಿಕ ಘಟ್ಟಗಳನ್ನು ಕುರಿತು ಸಂಕ್ಷೇಪದಲ್ಲಿ ಪ್ರಸ್ತಾಪಿಸುವುದು ಉಚಿತವೆಂದು ಕಾಣುತ್ತದೆ. ವಚನಗಳ ಸಂದರ್ಭದಲ್ಲಿ ಅನುಭಾವವೆಂದರೆ ಅದು ಆತ್ಮವಿದ್ಯೆ, ಇರುವಿನೊಳಗಿನ ಅರಿವು ಅದು ಇಂದ್ರಿಯಾತೀತವಾದ ಅನುಭವ’ ಎಂದು ಮುಂತಾಗಿ ಹೇಳಲಾಗುತ್ತದೆ. ಅನುಭಾವ ಪರಂಪರೆಗಳನ್ನು ೧) ಹಿಂದೂ ೨) ಕ್ರಿಶ್ಚಿಯನ್ ೩) ಸೂಫಿ ,೪) ಬೌದ್ಧ ಎಂದು ಗುರುತಿಸಲಾಗುತ್ತದೆ. ಈ ಅನುಭಾವ ಪರಂಪರೆಗಳು ಕೊನೆಯಲ್ಲಿ ಒಂದೇ ಕೇಂದ್ರದಲ್ಲಿ ಕೊನೆಗೊಳ್ಳುತ್ತವೆ ಎಂದೂ, ..ಇಲ್ಲ ಅವು ತಮ್ಮ ತಮ್ಮ ವಿಶಿಷ್ಟತೆಯೊಂದಿಗೆ ಬೇರೆ ಬೇರೆಯಾಗಿಯೇ ಉಳಿಯುತ್ತವೆ ಎಂದೂ  ಕೆಳಗಿನಂತೆ ಗುರುತಿಸಲಾಗುತ್ತದೆ. ಅಭಿಪ್ರಾಯಗಳಿವೆ. ಭಾರತೀಯರಲ್ಲಿ ಅನುಭಾವ ಪರಂಪರೆಗಳ ಘಟ್ಟಗಳನ್ನು ಈ

೧) ವೇದಗಳ ಯಜ್ಞಗಳಿಂದ ರಹಸ್ಯ ತಿಳಿಯುವ ಪ್ರಯತ್ನ

೨) ಉಪನಿಷತ್ತುಗಳ ಕಾಲಕ್ಕೆ ಯಜ್ಞಗಳಿಂದ ದೊರೆಯುವ ಫಲ ಕ್ಷಣ ಭಂಗುರವೆಂದು ಶಾಶ್ವತ ಸುಖಸಾಧನೆಗೆ ಜ್ಞಾನಯಜ್ಞದ ಪ್ರತಿಪಾದನೆ

೩) ಭಗವದ್ಗೀತೆಯಲ್ಲಿ ಆತ್ಮನಿಂದ ಆತ್ಮನಲ್ಲಿಯೇ ಸಂತುಷ್ಟನಾಗುವ ಸ್ಥಿತಿ

ಇವಲ್ಲದೆ ಒಟ್ಟು ಭಾರತೀಯ ಶೈವ ಅನುಭಾವ ಪರಂಪರೆಯ ತಾತ್ವಿಕ ಚಿಂತನೆಗೆ ಪ್ರತಿಭಟನೆಯಾಗಿ ಅಲ್ಲಮನಲ್ಲಿ ಶರಣರ ಅನುಭಾವ ಪರಂಪರೆ ಪ್ರಾತಿನಿಧಿಕವಾಗಿ ರೂಪುಗೊಂಡಿರುವುದನ್ನು ಇತ್ತೀಚೆಗೆ ದಿವಂಗತ ಡಾ . ಡಿ.ಆರ್.ನಾಗರಾಜ ಅವರು ತಮ್ಮ “ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ” ಎಂಬ ಗ್ರಂಥದಲ್ಲಿ ಗುರುತಿಸಿದ್ದಾರೆ. ಇನ್ನು ಅಲ್ಲಮಪ್ರಭುವಿನ ವಚನಗಳ ಅಭಿವ್ಯಕ್ತಿ ಕ್ರಮವನ್ನು ಕುರಿತು ವಿವೇಚಿಸಿ, ಅನಂತರ ಪ್ರಾತಿನಿಧಿಕವಾಗಿ ಆತನ ಕೆಲವು ವಚನಗಳನ್ನು ವಿಶ್ಲೇಷಿಸಬಹುದಾಗಿದೆ. ಅಲ್ಲಮ ಪ್ರಭುವಿನ ವಚನಗಳು ಸಾಮಾನ್ಯವಾಗಿ ಅಂದು ಎಲ್ಲ ಶರಣರ ವಚನಗಳಂತೆ ಸ್ಥೂಲವಾಗಿ ಮೇಲುನೋಟಕ್ಕೆ ಕಂಡರೂ ಆತನ ವ್ಯಕ್ತಿ ವಿಶಿಷ್ಟವಾದ ಅಭಿವ್ಯಕ್ತಿ ಕ್ರಮವು ಆತನ ವಚನಗಳಲ್ಲಿರುವುದು ಕಂಡುಬರುತ್ತದೆ. ಅದನ್ನು ವಚನ ಪರಿಭಾಷೆಯಲ್ಲಿ “ಬೆಡಗು” ಎಂದು ಗುರುತಿಸಲಾಗುತ್ತದೆ. ಬೆಡಗು ಎಂದರೆ ಸೌಂದರ್ಯ, ಬೆರಗು, ಆಶ್ಚರ್ಯ, ವೈರುಧ್ಯಾತ್ಮಕ ಅಭಿವ್ಯಕ್ತಿ ಕ್ರಮ ಎಂದು ಗುರುತಿಸಲಾಗುತ್ತದೆ. ಈ ಬೆಡಗು ಕನ್ನಡ ವಚನ ಅಭಿವ್ಯಕ್ತಿಗೆ ವಿಶಿಷ್ಟವಾಗಿದ್ದರೂ, ಇದನ್ನು ಹೋಲುವ ಅಥವ ಇದಕ್ಕೆ ಪ್ರೇರಣೆಯನ್ನು ನೀಡಿರಬಹುದಾದ ಅಭಿವ್ಯಕ್ತಿ ರೀತಿ, ಸಂಸ್ಕೃತ, ಪ್ರಾಕೃತ, ಪಾಲಿ, ಹಿಂದಿ ಭಾಷೆಗಳಲ್ಲಿರುವುದು ಕಂಡು ಬರುತ್ತದೆ. ಸಂಸ್ಕೃತದಲ್ಲಿ ಅದನ್ನು ‘ಸಂಧಾಭಾಷಾ’ ಅಥವ ‘ಸಂಧ್ಯಾಭಾಷಾ’ ಅಂದರೆ ಸಂಜೆ ಮಂಪರಿನಂಥ ಅಸ್ಪಷ್ಟ ಅಭಿವ್ಯಕ್ತಿ ಕ್ರಮ ಎಂದು ಕರೆಯಲಾಗುತ್ತದೆ. ಅಸ್ಪಷ್ಟತೆ, ಗೂಢ, ರಹಸ್ಯಾತ್ಮಕತೆಯೇ ಇದರ ವೈಶಿಷ್ಟವಾಗಿದೆ. ಇದನ್ನೇ ಹಿಂದಿಯಲ್ಲಿ ‘ಉಲಟ್ ಭಾಷಾ’ ಎಂದು ಕರೆಯಲಾಗುತ್ತದೆ.

ಅಲ್ಲಮಪ್ರಭುವಿನ ಕೆಲವು ಸರಳ ವಚನಗಳ ಪ್ರಸ್ತಾಪದೊಂದಿಗೆ ಅವನ ಬೆಡಗಿನ ವಚನಗಳ ವಿಶೇಷತೆಯನ್ನು ಗುರುತಿಸಬಹುದಾಗಿದೆ. ಶರಣರ ಆಂದೋಲನ ಪ್ರಧಾನವಾಗಿ ಸಮಾಜೋ-ಧಾರ್ಮಿಕ ಕ್ರಾಂತಿಯ ಮೂಲಕ ರೂಪುಗೊಂಡಿದ್ದರಿಂದ ಸಾಮಾನ್ಯವಾಗಿ ಎಲ್ಲರ ವಚನಗಳಲ್ಲೂ ಈ ಸಾಮಾಜಿಕ ಮುಖವು ಕಾಣದಿರಲು ಸಾಧ್ಯವಿಲ್ಲ. ಅದಕ್ಕೆ ಅಲ್ಲಮಪ್ರಭು ಹೊರತಾಗುವುದಿಲ್ಲ.

“ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ

ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ

ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆʼʼ

 ಈ ವಚನದಲ್ಲಿ ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆ ಎಂದರೆ ದೇವರಿಗಾಗಿ ಸತ್ತವರಿಲ್ಲ ಎಂಬ ಸರಳ ಅರ್ಥದಂತೆಯೇ “ನಿಮಗಾಗಿ’ ದೇವನಿಗೆ ಆಗಿ ಸಂದು ಅಂದರೆ ಸಲ್ಲಿದವರು ಶಾಶ್ವತರು ಅವರಿಗೆ ಸಾವಿಲ್ಲ ಎಂಬ ಸ್ವಾರಸ್ಯಕರ ಅಂಶವನ್ನು ವ್ಯಕ್ತಪಡಿಸುತ್ತದೆ.

“ಕಲ್ಲಮನೆಯ ಮಾಡಿ ಕಲ್ಲದೇವರ ಮಾಡಿ

ಆ ಕಲ್ಲು ಕಲ್ಲ ಮೇಲೆ ಕೆಡೆದಡೆ, ದೇವರೆತ್ತ ಹೋದರೆ?

ಲಿಂಗ ಪ್ರತಿಷ್ಠೆಯ ಮಾಡಿದವರಿಗೆ ನಾಯಕ ನರಕ ಗುಹೇಶ್ವರಾ?

ಬಸವಣ್ಣನವರ ಹಾಗೆಯೇ ಅಲ್ಲಮನೂ ಸ್ಥಾವರ ದೇವಾಲಯ ನಿರ್ಮಾಣವನ್ನು ಸ್ಥಾವರ ಲಿಂಗ ಪ್ರತಿಷ್ಠಾಪನೆಯನ್ನು ವಿಡಂಬಿಸಿರುವುದು ಇಲ್ಲಿನ ವಿಶೇಷತೆಯಾಗಿದೆ.

“ಸಂಸಾರವೆಂಬ ಹೆಣಬಿದ್ದಿದ್ದಡೆ, ತಿನಬಂದ ನಾಯ ಜಗಳವನೋಡಿರೆ

ನಾಯ ಜಗಳವ ನೋಡಿ ಹೆಣನೆದ್ದು ನಗುತ್ತಿದೆ

ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿರೆʼʼ

ಸಂಸಾರವನ್ನು ಹೆಣಕ್ಕೆ ಹೋಲಿಸಿರುವುದು, ವಿಷಯ ಸುಖ ಬೆನ್ನು ಹತ್ತಿದ ಜೀವಿಗಳನ್ನು ಜಗಳ ಮಾಡುವ ನಾಯಿಗಳಿಗೆ ಹೋಲಿಸಿ, ಅವುಗಳ ಜಗಳ ಕಂಡು ಸಂಸಾರವೆಂಬ ಹೆಣ ನಗುತ್ತಿದೆ ಎಂದು ವೈರುಧ್ಯದಲ್ಲಿ ಹಿಡಿದು ಅರ್ಥ ಸ್ವಾರಸ್ಯ ಹೆಚ್ಚಿಸಿರುವುದು ಇಲ್ಲಿನ ವಿಶೇಷತೆಯಾಗಿದೆ.

ಢಾಂಬಿಕ ಭಕ್ತಿಯನ್ನು ವಿಡಂಬಿಸಿರುವುದಕ್ಕೆ-

“ಹಾಲನೇಮ ಹಿಡಿದಾತ ಬೆಕ್ಕಾಗಿ ಹುಟ್ಟುವ

ಕಡಲೆ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ”

ಇವು ನಿಜವಾದ ಭಕ್ತಿಯಿಲ್ಲದವರ ಪರಿ ಎಂದು ಅಲ್ಲಮ ವ್ಯಂಗ್ಯವಾಡುತ್ತಾನೆ.

ಕೊಟ್ಟ ಕುದುರೆಯನೇರಲರಿಯದೆ

ಮತ್ತೊಂದು ಕುದುರೆಯ ಬಯಸುವವರು

ವೀರರೂ ಅಲ್ಲ ಧೀರರೂ ಅಲ್ಲ…”

ದತ್ತ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಗುರಿಸಾಧಿಸದ ವ್ಯರ್ಥ ಸಾಹಸಿಗರನ್ನು ಕುರಿತ ವಿಮರ್ಶೆ ಇಲ್ಲಿ ವ್ಯಕ್ತವಾಗಿದೆ.

“ಎತ್ತಣ ಮಾಮರ ಎತ್ತಣ ಕೋಗಿಲೆ

ಎತ್ತಣಿಂದೆತ್ತ ಸಂಬಂಧವಯ್ಯಾ” ಎಂಬ ವಚನದಲ್ಲಿ ಅವ್ಯಕ್ತವಾದ ಜೀವ- ದೇವ ಸಂಬಂಧವನ್ನು ಅರ್ಥಪೂರ್ಣವಾಗಿ ವ್ಯಕ್ತಪಡಿಸಲಾಗಿದೆ.

“ವೇದವೆಂಬುದು ಓದಿನ ಮಾತು

ಶಾಸ್ತ್ರವೆಂಬುದು ಸಂತೆಯ ಸುದ್ದಿ…”

 ದೈವೀ ಅನುಭವವನ್ನು ಅನುಭವಕ್ಕೆ ತಂದುಕೊಳ್ಳಲಾಗದ ಸಾಂಪ್ರದಾಯಕ ಆರಾಧನೆಯ ಯಾಂತ್ರಿಕ ಸಾಹಸವನ್ನು ಅಲ್ಲಮನು ವಚನದಲ್ಲಿ ವಿಮರ್ಶೆಗೆ ಒಳಪಡಿಸಿದ್ದಾನೆ… ಗುಹೇಶ್ವರನೆಂಬುದು ಮೀರಿದ ಘನವು” ಎಂಬ ಮಾತಿನಲ್ಲೇ ಅದರ ಅಗಮ್ಯತೆ ವ್ಯಕ್ತವಾಗಿದೆ.

ಇನ್ನು ಬೆಡಗಿನ ವಚನಗಳನ್ನು ಕುರಿತು ಮಧ್ಯ ಕನ್ನಡ ಕಾಲದಲ್ಲಿ ನಡೆದ ಟೀಕು, ಭಾಷ್ಯವನ್ನು ಕುರಿತು ಒಂದೆರೆಡು ಮಾತುಗಳನ್ನು ಹೇಳಬೇಕು. ಟೀಕು, ಭಾಷ್ಯಗಳಲ್ಲಿ, ವಚನಗಳಿಗೆ ಸಿದ್ಧವಾದ ಅರ್ಥವನ್ನು ಧಾರ್ಮಿಕ ತಾಂತ್ರಿಕ ದೃಷ್ಟಿಯಿಂದ ಹೇಳುವ ಪ್ರಯತ್ನ ವಿಶೇಷವಾಗಿ ನಡೆಯಿತು. ಅವು ತಮ್ಮ ಉದ್ದೇಶದಲ್ಲಿ ಒಂದು ಮಟ್ಟದ ವಿಮರ್ಶೆಯಾಗಿ ಸಫಲವಾದವು ಆದರೆ ಕಾಲಕ್ರಮದಲ್ಲಿ ಆ ಪದಗಳಿಗೆ ಅದೇ ಅರ್ಥ ಎಂದು ಕಟ್ಟುಹಾಕಿ ವ್ಯಾಖ್ಯಾನ ಮಾಡುವ ಪರಂಪರೆ ಮುಂದುವರೆದಂತೆ ವಚನಗಳನ್ನು ಕುರಿತು ಬೇರೆ ಮುಕ್ತವ್ಯಾಖ್ಯಾನ ಸಾಧ್ಯವಾಗದೆ ಅವಕ್ಕೆ ಒಂದು ಅರ್ಥದ ಮಿತಿಯೇ ಉಂಟಾದಂತೆ ಕಂಡು ಬರುತ್ತದೆ ಆದರೆ ಆಧುನಿಕ ಕಾಲದಲ್ಲಿ ನಡೆದ ವಚನ ವಿಶ್ಲೇಷಣೆಯು ಭಿನ್ನ ವ್ಯಾಖ್ಯಾನ ಸಾಧ್ಯತೆಯನ್ನು ರೂಪಿಸುವುದರ ಮೂಲಕ ವಚನಗಳಿಗೆ ಹೊಸ, ಹೊಸ ವ್ಯಾಖ್ಯಾನಗಳು ಮೂಡಿ ಬರಲು ಕಾರಣವಾಯಿತು. ಉದಾಹರಣೆಗೆ ಅಲ್ಲಮನ ವಚನದ ಒಂದು ವ್ಯಾಖ್ಯಾನವನ್ನು ಗಮನಿಸಬಹುದಾಗಿದೆ.

 ಗಂಗಾದೇವಿ ಮುಂಡೆಯಾದಳು,

ಗೌರಿದೇವಿ ಓಲೆಯ ಕಳೆದಳು,

ಚಂದ್ರ ಸೂರ್ಯರಿಬ್ಬರೂ ನೀರಿಳಿದರಲ್ಲಾ!

ವಾಯುದೇವ ವಿಮಾನವ ಹೊತ್ತ,

ವಾಸುದೇವ ತಲೆಗೊಳ್ಳಿಯ ನಿರಿದ

ಅಲ್ಲಿಂದತ್ತ ಗುಹೇಶ್ವರ ಸತ್ತನೆಂಬ ಸುದ್ದಿ”

ಈ ವಚನದಲ್ಲಿ ಅಲ್ಲಮನು ಈಶ್ವರನ ನಿರಾಕಾರ ಸ್ವರೂಪವನ್ನು ಕುರಿತು ಹೇಳುತ್ತಾನೆ. ಅಂದರೆ ಕಲ್ಪನೆಯಾಚೆ ಶಬ್ದಕ್ಕೆ ಸಿಗದೆ ಉಳಿಯುವ ನಿರಾಕಾರ ಸ್ವರೂಪವನ್ನು ಶಬ್ದದಲ್ಲಿ ಹಿಡಿದಿಡಲು ಪ್ರಯತ್ನಿಸುತ್ತಾನೆ. ಶಿವನು (ಗುಹೇಶ್ವರ) ಸಾಯುತ್ತಾನೆ. ಗಂಡ ಸತ್ತಮೇಲೆ ಹೆಂಡಂದಿರಿಗೆ ವೈಧವ್ಯ ಪ್ರಾಪ್ತವಾಗುತ್ತದೆ. ಗಂಗೆ ಮುಂಡೆಯಾಗುತ್ತಾಳೆ. ಗೌರಿ ಮಾಂಗಲ್ಯದ ಸಂಕೇತವಾದ ಓಲೆಯನ್ನು ಕಳಚುತ್ತಾಳೆ. ಅಂತ್ಯ ಸಂಸ್ಕಾರದ ಸಿದ್ಧತೆ ನಡೆಯುತ್ತದೆ. ಚಂದ್ರಸೂರ್ಯರಿಬ್ಬರೂ ನೀರಿಳಿದು ಸ್ನಾನ ಮಾಡಿಸುತ್ತಾರೆ. ವಾಯುದೇವ ವಿಮಾನವ ಹೊತ್ತು ಸಾಗುತ್ತಾನೆ. ಶರೀರವೆಲ್ಲ ಸುಟ್ಟು ಸಂಸ್ಕಾರ ಮುಗಿದು ಅನಂತರ ಗುಹೇಶ್ವರ ಸತ್ತನೆಂಬ ಸುದ್ದಿ ಮಾತ್ರ ಉಳಿಯುತ್ತದೆ.

ವಿಶ್ವದೇಹಿಯಾದ ಶಿವನಿಗೆ ಸಂಸ್ಕಾರ ಮಾಡುವುದಕ್ಕೆ ಅವನ ಕಳ್ಳು ಬಳ್ಳಿಗೆ ಸೇರಿದ ಚಂದ್ರಸೂರ್ಯ ವಾಯುದೇವ ವಾಸುದೇವ ಭಾಗವಹಿಸುವರೆಂದು ಹೇಳುವ  ಅಲ್ಲಮನ ಕಲ್ಪಕತೆಯನ್ನು ಗಮನಿಸಬೇಕು. ಹೀಗಾಗಿ ಅನಂತತೆಯ ಮಧ್ಯದಲ್ಲಿ ನಡೆಯುವ ಈ ಬಯಲಿನ ಸಂಸ್ಕಾರವೂ ಕೂಡ ಇಲ್ಲಿ ಅರ್ಥಪೂರ್ಣವಾಗುತ್ತದೆ. ಲೌಕಿಕದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರೆಂದು ಬಡಿದಾಡುವ ನಮ್ಮ ಈ ಕೆಳಕೆಳಗಿನ ಬಡಿದಾಟಗಳೆಲ್ಲ ಇಲ್ಲಿಂದಿತ್ತಲೇ ಉಳಿದು ಅಲ್ಲಿಂದತ್ತ ಗುಹೇಶ್ವರ ಸತ್ತನೆಂಬ ಸುದ್ದಿ ಮಾತ್ರ ಉಳಿಯುತ್ತದೆ. ಗುಹೇಶ್ವರ ಸತ್ತನೆಂಬುದು ಕೇವಲ ಸುದ್ಧಿ, ಸೃಷ್ಟಿ, ಸ್ಥಿತಿ ಲಯ ಕ್ರಿಯೆಗಳಾಚೆ ತಾನೇ ತಾನಾಗಿ ಉಳಿಯುವ ಆತನಿಗೆ ಸಾವೆಂದರೇನು?  ಎಂದೂ ಸಾಯದ ಆತನನ್ನು ಕುರಿತು ಸತ್ತನೆಂದು ಸುದ್ಧಿ ಉಂಟಾದುದು, ಅವನ ಸಾವಿನ ಪರಿಣಾಮವಾಗಿ ಆತನ ಇಬ್ಬರೂ ಹೆಂಡಂದಿರು (ಗಂಗೆ-ಗೌರಿ) ವಿಧವೆಯರಾಗುವರೆಂದು ಹೇಳುವ ಅಲ್ಲಮನ ಕಲ್ಪಕತೆಯನ್ನು ಗಮನಿಸಬೇಕು. ಇಲ್ಲಿ ಆತನ ಶೂನ್ಯದ ದರ್ಶನ ಹೇಗೆ ವ್ಯಕ್ತವಾಗಿದೆ ಗಮನಿಸಬೇಕು.

ಶರಣರ ದೃಷ್ಟಿಯಲ್ಲಿ ಸಾವು ಎಂದೂ ನಾಶದ ಸಂಕೇತವಲ್ಲ. ಸಾವು ಎಂಬುದು ಸತ್ಯತತ್ವದ ಸಾಕ್ಷಾತ್ಕಾರ ಎಂಬ ಅರ್ಥದಲ್ಲಿ ಅಲ್ಲಮನು-

“ನಾ ಸತ್ತೆನೆಂದು ಹೆಣ ಕೂಗಿದುದುಂಟೆ?” ಎಂದು ಕೇಳುತ್ತಾನೆ. “ಮುಂಡೆಯಾಗುವಿಕೆ” “ಓಲೆ ಕಳೆಯುವಿಕೆ” “ನೀರಿಳಿಯುವುದು” “ವಿಮಾನ ಹೊರುವುದು” “ತಲೆಗೊಳ್ಳಿಯ ನಿರಿಯುವುದು” ಇವು ಜಡತ್ವದ ಅಳಿವಿನ ಸಂಕೇತಗಳಾದರೆ, ಗುಹೇಶ್ವರನ ಸಾವಿನ ಸುದ್ದಿ ಚಿರಂತನತ್ವದ ಪ್ರತೀಕವಾಗುತ್ತದೆ. ಒಟ್ಟು ಪರಿಣಾಮದಲ್ಲಿ ಅಂತ್ಯಸಂಸ್ಕಾರ ಈ ಅಖಂಡ ಪ್ರತಿಮೆ ಅಲ್ಲಮನ ಅನುಭಾವದೃಷ್ಟಿಗೆ ನಿರ್ಲಿಪ್ತ ಅಭಿವ್ಯಕ್ತಿಗೆ ಉತ್ತಮವಾದ ವಾಹಕವಾಗುತ್ತದೆ.

ಚಿಂತನೆಯ ದೃಷ್ಟಿಯಿಂದಲ್ಲದೆ ಕಾವ್ಯಾಭಿವ್ಯಕ್ತಿಯ ದೃಷ್ಟಿಯಿಂದಲೂ ಅಲ್ಲಮನು ಶಿಷ್ಟ ಕಾವ್ಯ ಸಂಪ್ರದಾಯದಿಂದ ಭಿನ್ನವಾಗಿ ನಿಲ್ಲುತ್ತಾನೆ. “ವಸ್ತುಕ-ವರ್ಣಕ ತ್ರಿಸ್ಥಾನದ ಮೇಲೆ ನುಡಿವ ನುಡಿಗಳು ಇತ್ತಿತ್ತಲ್ಲದೆ ಅತ್ತತ್ತಲಾರು ಬಲ್ಲರು? ಇವರೆತ್ತಲೆಂದರಿಯರು, ಗಾಳಿವಿಂಡುಗಡೆವರು ನಿಮ್ಮನ್ನೆತ್ತ ಬಲ್ಲರು ಗುಹೇಶ್ವರಾ?”

ರಾಜರ ದ್ವಾರದಲ್ಲಿ ನಿಂತು ತಮ್ಮ ಭೌತಿಕ ಅಪೇಕ್ಷೆಗಾಗಿ ಕಾವ್ಯ ರಚಿಸುವ ಕವಿಗಳ ಮಾತುಗಳು ಕೇವಲ ಈ ಲೋಕದ ಮಿತಿಯಲ್ಲಿ ರಚಿತವಾದವು ಅವರಿಗೆ ಅತ್ತತ್ತಲೇನು ಎಂಬುದು ತಿಳಿಯಲಾರದು ಹೀಗಾಗಿ ನಿಮ್ಮನ್ನೆತ್ತ ಬಲ್ಲರು ಗುಹೇಶ್ವರಾ? ಎಂದು ಪ್ರಶ್ನಿಸುವುದರ ಮೂಲಕ ಅಲ್ಲಮನು ಆ ಕಾವ್ಯ ಮಾರ್ಗದ ಮಿತಿಯನ್ನು ಶರಣರ ಕಾವ್ಯ ಮಾರ್ಗದ ಉನ್ನತಿಯನ್ನು ಸೂಚಿಸಿದ್ದಾನೆ.

ಡಾ.ಸರಜೂ ಕಾಟಕರ

ಮಹಾರಾಷ್ಟ್ರದ ಸಂತ ಪರಂಪರೆಯಲ್ಲಿ ಪ್ರಖ್ಯಾತರಾಗಿರುವ ಜ್ಞಾನೇಶ್ವರ, ಚಕ್ರಧರ, ಸಂತ ತುಕಾರಾಂ ಅವರುಗಳು ಬಸವಣ್ಣನವರ ಕಾಲದ ನಂತರ ಭಾರತದ ಅಧ್ಯಾತ್ಮದ ಕ್ಷೇತ್ರದಲ್ಲಿ ಕಾಣಿಸಿಕೊಂಡ ಮಹಾದಾರ್ಶನಿಕರು. ಸಂತ ಜ್ಞಾನೇಶ್ವರ ೧೨೭೫ ರಲ್ಲಿ ಹುಟ್ಟಿದರೆ ಸಂತ ತುಕಾರಾಮ ೧೫೩೦ ರಲ್ಲಿ ಹುಟ್ಟಿದ. ಈ ಇಬ್ಬರೂ ಮಹಾಪುರುಷರ ಚಿಂತನಶೈಲಿಯ ಮೇಲೆ ೧೨ನೇ ಶತಮಾನದ ವಚನ ಚಳುವಳಿಯ ಪ್ರಭಾವವಿರುವುದನ್ನು ಸಂಶೋಧಕರು ಗುರುತಿಸಿದ್ದಾರೆ.

ತುಕಾರಾಂ ಮಹಾರಾಷ್ಟ್ರದ ದೇಹುವಿನಲ್ಲಿ ಹುಟ್ಟಿದ. ಆತನ ತಂದೆ ಬೋಲೋಬಾ ಮತ್ತು ತಾಯಿ ಕನಕಾಯಿ, ತುಕಾರಾಂ ಜಾತಿಯಿಂದ ಕುಣಬಿಯಾಗಿದ್ದ ಮತ್ತು ವೃತ್ತಿಯಿಂದ ವಾಣಿ(ವ್ಯಾಪಾರಿ)ಯಾಗಿದ್ದ. ಆತನೇ ತನ್ನ ಜಾತಿ ಬಗ್ಗೆ ‘ಶೂದ್ರಾವಂಸಿ ಜನ್ಮಲೋ’ ಎಂದು ಹೇಳಿದ್ದಾನೆ. ‘ನಾನು ಶೂದ್ರನಾಗಿ ಹುಟ್ಟಿದ್ದರಿಂದಲೇ ನನಗೆ ಭಗವತ್ ದರ್ಶನವಾಯಿತು’ ಎಂದು ತುಕಾರಾಂ ತನ್ನ ಅಭಂಗವೊಂದರಲ್ಲಿ ಹೇಳಿದ್ದಾನೆ.

ಮನೆತನದಿಂದ ವ್ಯಾಪಾರಿಯಾಗಿದ್ದರಿಂದ ತುಕಾರಾಂ ತನ್ನ ತಂದೆಗೆ ಸಹಾಯ ಮಾಡುತ್ತ ಅಂಗಡಿ ನಡೆಸಲಾರಂಭಿಸಿದ. ಆತನ ತಂದೆಯ ಬಡ್ಡಿವ್ಯವಹಾರವೂ ಇತ್ತು. ಇದನ್ನೂ ತುಕಾರಾಂ ನಡೆಸಿದ. ಆತನ ಅನೇಕ ಅಭಂಗಗಳಲ್ಲಿ ಬಡ್ಡಿ ವ್ಯವಹಾರದ ಶಬ್ದಗಳು, ಮತ್ತು ವ್ಯಾಪಾರಕ್ಕೆ ಸಂಬಂಧಪಟ್ಟ ವ್ಯವಹಾರಗಳು ಪ್ರತಿಮೆಗಳಾಗಿ ಬರುತ್ತವೆ. ಆದರೆ ಆತ  ಸತ್ಯವ್ಯಾಪಾರಿಯಾಗಿದ್ದ ವ್ಯಾಪಾರದಲ್ಲಿಯ ತಟವಟಗಳು ಅವನಿಗೆ ಸೇರುತ್ತಿರಲಿಲ್ಲ.

ಆತ ೧೭ನೇ ವರ್ಷದವನಾಗಿದ್ದಾಗ ತಂದೆಯನ್ನು ಕಳೆದುಕೊಂಡ ಮನೆತನದ  ಜವಾಬ್ದಾರಿಗಳೆಲ್ಲ ತುಕಾರಾಂ ಮೇಲೆಯೇ ಹೊರಿಸಲ್ಪಟ್ಟವು. ಈ ವೇಳೆಗಾಗಲೇ ಆತ ಎರಡು ಬಾರಿ ಮದುವೆಯಾಗಿದ್ದ. ಆತನ ಮೊದಲನೆಯ ಹೆಂಡತಿಯ ಅನಾರೋಗ್ಯದಿಂದಾಗಿ ಆತ ಇನ್ನೊಂದು ಮದುವೆಯಾಗಬೇಕಾಯಿತು. ೧೬೨೯ರಲ್ಲಿ ಮಹಾರಾಷ್ಟ್ರದಲ್ಲಿ ಬಿದ್ದ ಭೀಕರ ಬರಗಾಲ ಅನೇಕ ಸಾವಿರ ಜನರನ್ನು ಬಲಿ ತೆಗೆದುಕೊಂಡಿತು. ಆತನ ಮೊದಲ ಹೆಂಡತಿ ಹಸಿವೆಯಿಂದ ಸತ್ತಳು; ಆತನ ಹಿರಿಯ ಮಗನೂ ತೀರಿಕೊಂಡ. ಇದೇ ಕಾಲಕ್ಕೆ ಜನರೂ ಸಾಯುತ್ತಿರುವುದನ್ನು ಆತ ನೋಡಿದ. ಈ ಘಟನೆಗಳು ಆತನ ಮನಸ್ಸಿನ ಮೇಲೆ ಅಪಾರವಾದ ಪರಿಣಾಮವನ್ನು ಬೀರಿದವು: ಇದರ ಪರಿಣಾಮವಾಗಿ ಆತ ವಿಠಲನಿಗೆ ಶರಣು ಹೋದ. “ಬೈಲಾ ಮೇಲಿ ಮುಕ್ತ ರಾಲಿ, ದೇವೆ ಮಾಯಾ ಸೋಡವಿಲಿ: ಪೋರಾ ಮೇಲೆ ಬರೆ ಝಾಲೆ, ದೇವೆ ಮಾಯಾ ವಿರಹಿತ ಕೇಲೆ’ ಎಂದು ತನಗೆ ಕಷ್ಟ ನೀಡಿದ ವಿಠಲನನ್ನು ಕೊಂಡಾಡಿದ.

ಆತನ ತಂದೆ ವಿಠಲನ ಭಕ್ತನಾಗಿದ್ದ. ತಂದೆ ಕಟ್ಟಿಸಿದ ವಿಠಲನ ಗುಡಿಯನ್ನು ರಿಪೇರಿ ಮಾಡಿದ ತುಕಾರಾಂ ಕೀರ್ತನೆಗಳಲ್ಲಿ ತಲ್ಲೀನನಾದ. ಉಪವಾಸ (ಏಕಾದಶಿ) ಗಳನ್ನು ಆರಂಭಿಸಿದ. ತನ್ನಲ್ಲಿರುವ ‘ಅಹಂ’ನ್ನು ಕಳೆಯುವುದಕ್ಕೋಸ್ಕರ ಸಂತರ ಪಾದೋದಕವನ್ನು ಸೇವಿಸಿದ. ೧೬೪೦ ರ ಜನವರಿ ೨೩ ರಂದು ಆತನ ಗುರುಗಳಾದ ಬಾಬಾಜಿ ಚೈತನ್ಯ ಕನಸಿನಲ್ಲಿ ಕಾಣಿಸಿಕೊಂಡು ‘ರಾಮಕೃಷ್ಣ ಹರಿ’ ಎಂಬ ಮಂತ್ರವನ್ನು ನೀಡಿದರೆಂದು ಪ್ರತೀತಿ ಇದೆ. ಸಾವಿರಾರು ಅಭಂಗಗಳನ್ನು ಬರೆದ ತುಕಾರಾಂ ಭಕ್ತಿಪಂಥದ ಅಗ್ರಗಣ್ಯ ಸಂತನಾದ.

ಬಸವಣ್ಣನವರು ಚಿಕ್ಕಂದಿನಿಂದಲೇ ಸನಾತನ ಧರ್ಮದ ಆಚರಣೆಗಳ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವುದನ್ನು ನೋಡುತ್ತೇವೆ; ಉಪನಯನವನ್ನು ಧಿಕ್ಕರಿಸಿದ ಬಸವಣ್ಣನವರು ಒಂದು ಪರ್ಯಾಯ ಧರ್ಮದ ಉಗಮಕ್ಕೆ ಕಾರಣರಾಗುತ್ತಾರೆ. ಆದರೆ ತುಕಾರಾಂನ ಜೀವನದಲ್ಲಿ ಇಂತಹ ಯಾವ ಘಟನೆಗಳೂ ಜರುಗುವುದಿಲ್ಲ. ಅತ್ಯಂತ ಸುಖದಿಂದಿದ್ದ ತುಕಾರಾಂ ಬರಗಾಲದ ಬವಣೆಗೆ ಸಿಕ್ಕು ಅಧ್ಯಾತ್ಮದ ಕಡೆಗೆ ತಿರುಗುತ್ತಾನೆ. ಆದರೆ ನಂತರದ ಘಟನೆಗಳು ನಾಟಕೀಯವಾಗುತ್ತ ಒಂದು ಹೊಸ ಸಮಾಜ ರಚನೆಗೆ ಕಾರಣವಾಗುತ್ತವೆ.

 ತುಕಾರಾಂನ ಆರಾಧ್ಯ ದೈವ ವಿಠಲ. ಆತ ವಿಷ್ಣು ಭಕ್ತ. ಬಸವಣ್ಣನವರ ಆರಾಧ್ಯ ದೈವ ಕೂಡಲಸಂಗಮ: ಬಸವಣ್ಣನವರು ಶೈವಭಕ್ತರು. ಆದರೆ ಇಬ್ಬರೂ ಭಕ್ತಿಯ ಮಾಧ್ಯಮದಿಂದ ಸಾಮಾನ್ಯ ಜನರನ್ನು ಸಂಘಟಿಸಿದರು. ಬಸವಣ್ಣನವರು ಕಾಯಕವೇ ಕೈಲಾಸವೆಂದು ಹೇಳಿದರು. ತುಕಾರಾಂನ ಮೂಲ ಉದ್ದೇಶ ನಿವೃತ್ತಿಯ ಕಡೆಗಿರುವುದನ್ನು ಕಾಣಬಹುದು.

ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಬಹುದೊಡ್ಡ ಹುದ್ದೆಯಲ್ಲಿದ್ದರು. ಆದರೆ ತುಕಾರಾಂ ತನಗೆ ಛತ್ರಪತಿ ಶಿವಾಜಿ ಮಹಾರಾಜರು ಕಳಿಸಿದ ಕಾಣಿಕೆಗಳನ್ನು ತಿರಸ್ಕರಿಸಿದ. ‘ಈ ವಸ್ತುಗಳು ನನ್ನ ಉಪಯೋಗಕ್ಕೆ ಬರುವಂಥವಲ್ಲ’ ಎಂದು ಹೇಳಿ “ಪ್ರಜೆಗಳು ಸುಖದಿಂದ ಇರುವಂತೆ ರಾಜ್ಯವನ್ನಾಳು’ ಎಂದು ಶಿವಾಜಿಗೆ ಸಂದೇಶ ಕಳಿಸಿದ.

ಬಸವಣ್ಣನವರು ‘ಅನುಭವ ಮಂಟಪ’ ಕಟ್ಟಿದರು. ತುಕಾರಾಂ ‘ದಿಂಡಿ’ ಆರಂಭಿಸಿದ. ಈ ದಿಂಡಿಯಲ್ಲಿ ಎಲ್ಲ ಜಾತಿಯ ಜನರಿಗೆ ಮುಕ್ತ ಪ್ರವೇಶವಿತ್ತು. ಸಾಮೂಹಿಕವಾಗಿ ಈ ಜನ ದೇವರನ್ನು ಸ್ಮರಿಸುತ್ತಿದ್ದರು. ಬಸವ ಅನುಯಾಯಿಗಳು ‘ಶರಣ’ರಾದರೆ ತುಕಾರಾಂನ ಅನುಯಾಯಿಗಳು ‘ವಾರಕರಿ’ಗಳಾದರು. ತುಕಾರಾಂನ  ಈ ದಿಂಡಿ ಒಂದು ಚಳವಳಿಯಾಗಿ ಹಬ್ಬಿತು. ದಿಂಡಿಯಲ್ಲಿ ಭಾಗವಹಿಸುವ ವಾರಕರಿಗಳಿಗೆ ಕೆಲವು ಕಟ್ಟುಪಾಡುಗಳಿದ್ದವು.ಅವರೆಲ್ಲರು ಸಚ್ಚಾರಿತ್ರ್ಯವಂತರಾಗಿರಬೇಕು : ಸುಳ್ಳು ಹೇಳುವಂತಿಲ್ಲ, ಕಳುವು, ಕೊಲೆ, ವ್ಯಭಿಚಾರ ಮಾಡುವಂತಿರಲಿಲ್ಲ. ಬಸವಣ್ಣನವರ  ಶರಣರೂ ಇದೇ ತತ್ವಗಳನ್ನು ಪಾಲಿಸುತ್ತಿದ್ದುದನ್ನು ಕಾಣಬಹುದಾಗಿದೆ.

ತುಕಾರಾಂನನ್ನು ಆಗಿನ ಕಾಲದ ವೈದಿಕರು ಅಪರಿಮಿತವಾಗಿ ಕಾಡಿದರು.ಒಬ್ಬ ಶೂದ್ರ, ಧರ್ಮವನ್ನು ಉಪದೇಶಿಸುತ್ತಿರುವುದು ಅವರನ್ನು ಕೆರಳಿಸಿತು. ನಾನಾ ರೀತಿಯ ಹಿಂಸೆಗಳನ್ನು ತುಕಾರಾಂಗೆ ನೀಡಲಾಯಿತು. ಆತ ಬರೆದ ಅಭಂಗಗಳನ್ನು ಇಂದ್ರಾಯಣಿ ನದಿಯಲ್ಲಿ ಒಗೆದರು. ಆದರೆ ತುಕಾರಾಂ ಇದ್ಯಾವುದನ್ನೂ ಲೆಕ್ಕಿಸಲಿಲ್ಲ; ತನ್ನ ಧ್ಯೇಯದಿಂದ ತುಸುವೂ ಹಿಂದೆ ಸರಿಯಲಿಲ್ಲ.

ಬಸವಣ್ಣನವರ ಜೀವನದಲ್ಲಿಯೂ ಇದೇ ತೆರನಾದ ಘಟನೆಗಳು ನಡೆದವು. ವೈದಿಕರಾಗಿ ಹುಟ್ಟಿದ್ದರೂ ವೈದಿಕ ಆಚರಣೆಗಳನ್ನು ವಿರೋಧಿಸಿದ್ದಕ್ಕಾಗಿ, ವೈದಿಕರೆಲ್ಲರೂ ಬಸವಣ್ಣನವರ ವಿರೋಧಿಗಳಾದರು. ದೊರೆಯತನಕ ದೂರು ಹೋಯಿತು. ಬಸವಣ್ಣನವರು ಇದ್ಯಾವುದನ್ನೂ ಲೆಕ್ಕಿಸಲಿಲ್ಲ; ತಮ್ಮ ಧ್ಯೇಯದಿಂದ ಅವರೂ ಹಿಂದೆ ಸರಿಯಲಿಲ್ಲ.

ತುಕಾರಾಂ ಹೇಳಿದ ಅಭಂಗಗಳು ವಚನಗಳ ಸಾರಸರ್ವಸ್ವವನ್ನೇ ಒಳಗೊಂಡಿವೆ. ‘ಬೋಲೆ ಕೈಸಾ ಚಾಲೆ ತ್ಯಾಚಿ ವಂದೀನ ಪಾವಲೆ’ ಎಂದು ತುಕಾರಾಂ ಹೇಳಿದರೆ ಬಸವಣ್ಣನವರು

“ನಡೆದಂತೆ ನುಡಿದರೆ ಇದೇ ಜನ್ಮ ಕಡೆ’ ಎಂದು ಹೇಳಿದ್ದಾರೆ. ಜನರ ಬಾಳು ಸುಗಮಗೊಳಿಸಲು, ಜನರನ್ನು ಸರಿಯಾದ ದಾರಿಗೆ ಹಚ್ಚಲು ಬಸವಣ್ಣ ಮತ್ತು ತುಕಾರಾಂ ಶ್ರಮಿಸಿದ್ದಾರೆ. ಇಬ್ಬರೂ ಏಕದೇವೋಪಾಸನೆಗೆ ಮಹತ್ವ ನೀಡಿದ್ದಾರೆ. ಆಲಸಿಗಳ ಬಗ್ಗೆ ತುಕಾರಾಂ ಕಿಡಿ ಕಾರಿದ್ದಾನೆ. ಬಸವಣ್ಣನವರು ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ. ಬಹುದೇವರ ಕಲ್ಪನೆಯನ್ನು ಇಬ್ಬರೂ ಖಂಡಿಸಿದ್ದಾರೆ. ದೇವರು ಮತ್ತು ಭಕ್ತರ ನಡುವಿನ ಪ್ರೀತಿ ‘ಸತಿ ಪತಿ ಭಕ್ತಿ’ಯಂತಿರಬೇಕೆಂದು ವಚನಗಳು ಹೇಳಿದರೆ, ತುಕಾರಾಂ ‘ಸತಿ ಪತಿ ಭಾವ’ ಎಂಬ ರೀತಿಯಲ್ಲಿರಬೇಕೆಂದು ಹೇಳುತ್ತಾನೆ. ಜಾತಿಗಿಂತ ಭಕ್ತಿಯೇ ಶ್ರೇಷ್ಠವೆಂದು ತನ್ನ ಅನೇಕ ಅಭಂಗಗಳಲ್ಲಿ ತುಕಾರಾಂ ಒತ್ತಿ ಹೇಳುತ್ತಾನೆ. ಇದೇ ರೀತಿಯ ಆಶಯವನ್ನು ಬಸವಣ್ಣನವರ ಅನೇಕ ವಚನಗಳಲ್ಲಿಯೂ ಕಾಣಬಹುದಾಗಿದೆ.

“ನೀರಿನಲ್ಲಿ ಮಿಂದರೆ ಅದರಿಂದ ದೇವರು ಪ್ರತ್ಯಕ್ಷನಾಗುತ್ತಾನೆಂಬ ನಂಬುಗೆಯನ್ನು ಇಬ್ಬರೂ ಟೀಕಿಸಿದ್ದಾರೆ. ಪರಸ್ತ್ರೀಯರನ್ನು ಸಹೋದರಿಯೆಂಬಂತೆ. ನೋಡಬೇಕೆಂದು ತುಕಾರಾಂ ಹೇಳಿದರೆ ಬಸವಣ್ಣನವರು ಪರಸ್ತ್ರೀಯರನ್ನು ಮಹಾದೇವಿ ರೂಪದಲ್ಲಿ ನೋಡಿದ್ದಾರೆ

 ʼ ತುಕಾ ಮಣೆ’ ಎನ್ನುವುದು ತುಕಾರಾಂನ ಅಂಕಿತ ನಾಮ. ಬಸವಣ್ಣನವರು ʼʼಕೂಡಲಸಂಗಮ ದೇವಾ’ʼ ಎಂದು ಅಂಕಿತನಾಮವನ್ನು ಬಳಸಿದ್ದಾರೆ. ಇಬ್ಬರೂ ಮನುಷ್ಯತ್ವಕ್ಕೆ ಬೆಲೆ ನೀಡಿದ್ದಾರೆ. ಒಬ್ಬ ಸಾಮಾನ್ಯ ಮನುಷ್ಯ, ಯಾರದೆ ಸಹಾಯವಿಲ್ಲದೆಯೇ ದೇವರನ್ನು ಹೇಗೆ ಮುಟ್ಟಬಹುದೆಂಬುದನ್ನು ಬಸವಣ್ಣ ಮತ್ತು ತುಕಾರಾಂ ಇಬ್ಬರೂ ದಾರಿ ತೋರಿಸಿದ್ದಾರೆ. ಆಡಂಬರದ ಪೂಜೆ ಪುನಸ್ಕಾರಗಳು. ಇಬ್ಬರಿಗೂ ಸಮ್ಮತವಿಲ್ಲ: ದೇವಸ್ಥಾನಕ್ಕೆ ಹೋಗದಯೇ ಭಕ್ತಿಯಿಂದ ದೇವರನ್ನು ಪಡೆಯಬಹುದೆಂದು ತುಕಾರಾಂ ಹೇಳಿದರೆ ಬಸವಣ್ಣನವರು ‘ಎನ್ನ ಕಾಲೇ ಕಂಬ’ ಎಂದು ಹೇಳಿ ಪ್ರತಿಯೊಬ್ಬನ ದೇಹವೇ ದೇವಸ್ಥಾನವೆಂಬ ಅದ್ಭುತ ಕಲ್ಪನೆಯನ್ನು ನೀಡಿದ್ದಾರೆ.

“ಪತಿವ್ರತೆಗೆ ಗಂಡನೊಬ್ಬನೇ. ಅದೇ ರೀತಿ ಭಕ್ತನಿಗೆ ದೇವನೊಬ್ಬನೇ’ ಎಂದು ತುಕಾರಾಂ ಹೇಳಿದರೆ, ಬಸವಣ್ಣನವರು

ನಂಬಬಲ್ಲ ಹೆಂಡತಿಗೆ ಗಂಡನೊಬ್ಬ ಕಾಣಿರೋ!

ನಂಬಬಲ್ಲ ಭಕ್ತರಿಗೆ ದೇವನೊಬ್ಬ ಕಾಣಿರೋ! ಎಂದು ಹೇಳಿದ್ದಾರೆ.

‘ದೇವನೊಬ್ಬ ನಾಮ ಹಲವು’ ಎಂಬ ಅವರ ವಚನ ಸುಪ್ರಸಿದ್ಧವಾದುದು.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಅರಣ್ಯದೊಳು ಪಣ್ಯ | ನಾರಿ ಮಾನವ ಮಾರಿ

ದಾರಿಗೊಂಡವರ ಸೂರೆಗೊಂಬಳು ಗುರುವೆ

ಸೇರಿದೆನು ನಿಮ್ಮ ಕೃಪೆಯಾಗು  ||೪೬||

ಗಂಡು ಹೆಣ್ಣುಗಳ ಆಕರ್ಷಣೆಯಲ್ಲಿ ಕಾಮನ ಪ್ರಾದುರ್ಭಾವವಾಗುವಂತೆ,  ಮಾಯೆಯು ಜೀವಿಗಳ ಮೋಹದಲ್ಲಿ ಮೈದೋರುತ್ತಾಳೆ. ೨೮ನೆಯ ತ್ರಿಪದಿಯ ತಿರುಳಿನಲ್ಲಿ ತಿಳಿಸಿದಂತೆ, ಮನದ ಮುಂದಣ ಆಸೆಯೇ ಮಾಯೆಯಾಗಿ ಪರಿವರ್ತನೆ

ಹೊಂದುವದು. ಈ ಮಾಯೆಯು ಮಾನವನಿಗೆ ಮಹಾಮಾರಿಯಾಗಿದ್ದಾಳೆ. ಮಾರಿಯೆಂದರೆ ಮೃತ್ಯುದೇವತೆ. ಇದು ಪ್ರ ಸಿದ್ಧವಾದ ಅರ್ಥ, ವೇದಾಂತಿಗಳು ಮಾಯೆಗೆ ಅವಿದ್ಯೆ, ಅಜ್ಞಾನ ಅಥವಾ ಅಧ್ಯಾಸವೆಂದು ಕರೆದಿರುವರು. ಅಜ್ಞಾನದಿಂದ ಇಲ್ಲದ ಸಂಸಾರದಲ್ಲಿ ಆರೋಪಹೊರಸಿ ಮೋಹಗೊಂಡು ಮರುಳಾಗುವದೇ ಮಾಯೆಯ ಮುಖ್ಯಕಾರ್ಯ. ಸರ್ವಜ್ಞ ಕವಿಯು-

“ಜೊಳ್ಳು ಮನುಜರು ತಾವು ಸುಳ್ಳು ಸಂಸಾರದೊಳು

ಮಳ್ಳಿಡಿದು ಮಾಯೆಯೆಂಬವಳ ಬಲೆಯೊಳಗೆ

ಹೊಳ್ಳಾಡುತಿಹರು ಸರ್ವಜ್ಞ “

ಎಂದು ಮೇಲಿನ ಅಭಿಪ್ರಾಯವನ್ನೇ ಪುಷ್ಟಿಕರಿಸಿದ್ದಾನೆ. ಮಾಯೆಯ ಬಗ್ಗೆ ಶಿವಶರಣರ   ವ್ಯಾಖ್ಯಾನ ಸರಳ ಹಾಗೂ ಸುಸ್ಪಷ್ಟವಾಗಿದೆ. ಅಕ್ಕಮಹಾದೇವಿಯು ಮಾಯೆಯ ಯಥಾರ್ಥ ಸ್ವರೂಪವನ್ನು ತಿಳಿಸಿದ್ದಾಳೆ.

“ಪುರುಷನ ಮುಂದೆ ಸ್ತ್ರೀ ಯೆಂಬ ಅಭಿಮಾನವಾಗಿ ಕಾಡಿಹುದು.

ಸ್ತ್ರೀಯ ಮುಂದೆ ಪುರುಷನೆಂಬ ಅಭಿಮಾನವಾಗಿ ಕಾಡಿಹುದು.

ಲೋಕವೆಂಬ ಮಾಯೆಗೆ ಶಿವಶರಣರ ಪರಿ ಹೊರಗಾಗಿಪ್ಪುದು.

ಚನ್ನಮಲ್ಲಿಕಾರ್ಜುನನೊಲಿದ ಶರಣಂಗ ಮಾಯೆಯೂ ಇಲ್ಲ.

ಮರಹೂ ಇಲ್ಲ. ಅಭಿಮಾನವೂ ಇಲ್ಲ. ಕೇಳಾ ಅಯ್ಯ !”

ಪುರುಷನಿಗೆ ಸ್ತ್ರೀಯು ಮಾಯೆ, ಸ್ತ್ರೀಯಗಳಿಗೆ ಪುರುಷ ಮಾಯೆ. ಇವರೀರ್ವರ ಮನದ ಮುಂದಣಬಯಕೆಯೇ ನಿಜವಾದ ಮಾಯೆ, ಕಾಲನ ಪರಿವೆಯಿಲ್ಲದೆ ಕಾಮನ ಬಾಣದ ಗುರಿಗೆ ಜೀವಿಯು ಮಾಯೆಯ ಬಲೆಯಲ್ಲಿ ಬೀಳುತ್ತಾನೆ.

“ಮಾಯೆಯೆಂಬ ರಕ್ಕಸಿ ಸಕಲ ಪ್ರಾಣಿಗಳ ಸಾರವ ಹೀರಿ.

ಹಿಪ್ಪೆಯ ಮಾಡಿ  ಉಃಫೆಂದು ಊದುತ್ತಿದ್ದಾಳೆ.

ಇಂತೀ ತ್ರಿವಿಧ ಮುಖದಲ್ಲಿ ಕಾಡುವ ನಿಮ್ಮ

ಮಾಯೆಯ ಗೆಲವೊಡೆ

ಆರಳವಲ್ಲವಯ್ಯಾ ಅಖಂಡೇಶ್ವರ ನೀವು ಕರುಣಿಸದನ್ನಕ್ಕರ”. 

ಎಂದು ಷಣ್ಮುಖಶಿವಯೋಗಿಗಳು ಅಪ್ಪಣೆಕೊಡಿಸಿದಂತೆ ಮಾಯೆಯೆಂಬ ರಾಕ್ಷಸಿಯು ಸಕಲ ಪ್ರಾಣಿಗಳನ್ನು   ವಿನಾಶಗೊಳಿಸುತ್ತಿರುವಳು. ಕಾಲ-ಕಾಮ-ಮಾಯೆಂಬ ತ್ರಿವಿಧ ಮುಖದಲ್ಲಿ ಕಾಡುವ ಮಾಯೆಯನ್ನು ಗುರುಕರುಣೆಯಿಂದ ಮಾತ್ರ ಗೆಲ್ಲಬಹುದು. ಗುರುಕೃಪೆಯಾದ ಶರಣಂಗೆ ಮಾಯೆಯ ಉಪದ್ರವವಿಲ್ಲವೆಂಬುದೇ ಅಕ್ಕನ ಅಭಿಪ್ರಾಯ. ಹಡಪದಪ್ಪಣ್ಣನು-

“ಮರೆದರೆ ಮಾಯೆ; ಅರಿದರೆ ಮಾಯೆ ಇಲ್ಲವೆಂದು ತಿಳಿಸಿದ್ದಾನೆ. ಚೆನ್ನಬಸವಣ್ಣ ನವರು- “ಗುರುಕರುಣಿಸೆ ಬಿಟ್ಟಿತ್ತು ಮಾಯೆ’ಯೆಂದು ಸಿದ್ದಾಂತಗೊಳಿಸಿದ್ದಾರೆ.

ಗುರುಕರುಣೆಯಿಲ್ಲದ ದೇವತೆಗಳಿಗೂ ಮಾಯೆಯು ಬಿಟ್ಟಿಲ್ಲ. ಬಿಡುವದೂ

ಇಲ್ಲ, “ಬಿಟ್ಟೆನೆಂದರೆ ಬಿಡದೀಮಾಯೆ, ಬಿಡದಿದ್ದರೆ ಬೆಂಬತ್ತಿತ್ತು ಮಾಯೆ’

ಮತ್ತು : “ಬ್ರಹ್ಮಘನವೆಂದಡೆ ಬ್ರಹ್ಮನ ನುಂಗಿತ್ತು ಮಾಯೆ,

ವಿಷ್ಣು ಘನವೆಂದಡೆ ವಿಷ್ಣುವ ನುಂಗಿತ್ತು ಮಾಯೆ,

ರುದ್ರ ಘನವೆಂದಡೆ ರುದ್ರನ ನುಂಗಿತ್ತು ಮಾಯೆ,

ತಾ ಘನವೆಂದಡ ತನ್ನ ನುಂಗಿತ್ತು ಮಾಯೆ

ಸರ್ವವೂ ನಿನ್ನ ಮಾಯೆ. ಒಬ್ಬರನೊಳಕೊಂಡಿದ್ದ ಹೇಳಾ ಗುಹೇಶ್ವರ ?

ಎಂದು ಮಾಯಾಕೋಲಾಹಲಿಗಳಾದ ಪ್ರಭುಗಳು ಗುಹೇಶ್ವರನಲ್ಲಿ ಮಾಯೆಯ ವ್ಯಾಪಕತೆಯನ್ನು ಹೇಳಿದ್ದಾರೆ. ಮಾಯೆಗೆ ಹೊರತಾದವರು ವಿರಳ.

ಶಿವಕವಿ ಬಸವಲಿಂಗಶರಣರು ಮಾಯೆಯ ಮಾರ್ಮಿಕ ವಿಷಯವನ್ನು

ಮನನೀಯವಾಗಿ ಪ್ರತಿಪಾದಿಸಿದ್ದಾರೆ.

ಅರಣ್ಯ’ವೆಂದರೆ ಸಂಸಾರ. ಶಾಸ್ತ್ರಕಾರರು ಅರಣ್ಯ ಪದಕ್ಕೆ ‘ಭವ’ವೆಂತಲೂ ಅರ್ಥೈಸಿದ್ದಾರೆ. ಪ್ರತಿಯೊಂದು ಭವ (ಜನ್ಮ ) ದಲ್ಲಿಯೂ ಮಾಯೆಯ ಬಲೆ ತಪ್ಪಿದ್ದಲ್ಲ. ಈ ಸಂಸಾರವೆಂಬ ಅರಣ್ಯದಲ್ಲಿ ಮಾಯೆಯು ಮಾನವನಿಗೆ ಮಾರಿಯಾಗಿ

ಕಾಡುತ್ತಿದ್ದಾಳೆ. ಬೆಲೆವೆಣ್ಣು ವೇಶ್ಯಯರೂಪದಲ್ಲಿ ಆಕರ್ಷಣಗೊಂಡು ಮನುಷ್ಯನನ್ನು ಮೂಲೆಗುಂಪನ್ನಾಗಿಸುತ್ತಾಳೆ. ಸೂಳೆಯು ಅಥವಾ ಪಣ್ಯನಾರಿಯು ತನ್ನ ವಿಟನ ಹಿತವನ್ನು ಬಯಸದೆ, ಆತನು ಸರ್ವಸ್ವವನ್ನು ಸೂರೆಮಾಡುವಂತೆ ಮಾಯೆಯು

ಮಾನವನನ್ನು ಮರವೆಯೆಂಬ ಬಲೆಗೆ ಸಿಕ್ಕಿಸಿ ಮುರಿಯುತ್ತಾಳೆ. ಪೂರ್ವಸುಕೃತದಿಂದ ಯಾರಾದರೂ ಪಾರಮಾರ್ಥಿಕ ಜೀವನವನ್ನು ಕಂಡುಕೊಂಡರೆ ಅವರನ್ನೂ ತನ್ನತ್ತ ಬಲಾತ್ಕಾರವಾಗಿ ಎಳೆದುಕೊಳ್ಳುತ್ತಾಳೆ. ಶಿವಭಕ್ತಿಪಥದಲ್ಲಿ ದಾರಿಹಿಡಿದ ಭಕ್ತನಿಗೆ ತನು- ಮನ-ಧನಗಳಿಗೆ ತೊಂದರೆ ಕೊಡುತ್ತಾಳೆ. ಗುರುವೆ ! ಶರಣರು ಉಪದೇಶಿಸಿದಂತೆ ನಿನ್ನ ಕರುಣೆಯಿಂದಲೇ ಇವಳ ಜಾಲದಿಂದ ಪಾರಾಗಬಹುದೆಂದು ನಿಶ್ಚಯಿಸಿ ನಿನ್ನ ಪಾದವನ್ನು ಸೇರಿದೆನು. ಮಾಯೆಗೆ ಅಳುಕದ, ಅಂಜದ ಶರಣ ಮಾರ್ಗದತ್ತ ಮುನ್ನಡೆಸಿ ಮಾಯೆಯ ಜಾಲವನ್ನು ಪರಿಹರಿಸು.

ಚಿಕ್ಕವ್ಯಾಧನ ಬಲೆಗೆ | ಸಿಕ್ಕಿದಣ್ಣಗಳೆಲ್ಲ

ರಕ್ಕಸಿಯ ಮನೆಯ ಮಕ್ಕಳಹರು ಗುರುವೆ

ಚಕ್ಕನೆ ಎನಗೆ ಕೃಪೆಯಾಗು   || ೪೭ ||

ಮಾಯೆ ಜೀವಿಗಳಿಗೆ ರಾಕ್ಷಸಿ ಜೀವಿಗಳನ್ನು ಹಿಡಿಸಿ ನುಂಗುವ ಹಿರಿಯ ಒಡತಿ. ಅವಳಿಗೆ ಸಹಾಯಕ ಚಿಕ್ಕ ಬೇಟೆಗಾರ; ಬೇಡ. ತಾನು ಚಿಕ್ಕವನಾದರೂ ಜೀವಿಗಳನ್ನು ತನ್ನ ಬಲೆಯೊಳಗೆ ಹಿಡಿಯುವಲ್ಲಿ ಬಲು ಜಾಣನಾಗಿದ್ದಾನೆ. ತನ್ನ ಬಲೆಗೆ ಬಿದ್ದ

ಪ್ರಾಣಿಗಳೆಲ್ಲವನ್ನು ಮಾಯಾರಾಕ್ಷಸಿಯ ಬಳಿಗೆ ಕಳುಹಿಸುತ್ತಾನೆ. ಇದೇ ಮಾತನ್ನು ಸ್ವತಂತ್ರ ಸಿದ್ಧಲಿಂಗೇಶ್ವರರು –

‘ಜಗದಗಲದ ಮಾಯಾಜಾಲವ ಹಿಡಿದು

ಕಾಲನೆಂಬ ಜಾಲಗಾರ, ಮಾಯಜಾಲವ ಬೀಸಿದ ನೋಡಯ್ಯ

ಆ ಜಾಲಕ್ಕೆ ಹೊರಗಾದವರನೊಬ್ಬರನೂ ಕಾಣೆ

ಬಲ್ಲ ಬಲ್ಲಿದರೆಂಬುವರೆಲ್ಲರ ಬಲೆಯ ಕಲ್ಲಿಯೊಳಗೆ ತುಂಬಿದ ಕಾಲ

ಆ ಕಾಲನ ಬಲೆಯಗೆ ಸಿಕ್ಕಿ ಬೀಳುತ್ತಿದೆ ಜಗವೆಲ್ಲ”

ಎಂದು ಹೇಳಿ; ಜಗದಗಲವಾದ ಮಾಯಾ ಬಲೆಯಲ್ಲಿ ಬೀಳುತ್ತಿರುವ ಜಗದ ಜೀವಿಗಳನ್ನು ಕಂಡು ಕನಿಕರಪಟ್ಟಿದ್ದಾರೆ.

ಮಾನವರನ್ನು ಮಾಯಾಬಲೆಯಲ್ಲಿ ಬೀಳಿಸುವ ಬೇಟೆಗಾರನು. ಈ ಬೇಟೆಗಾರನು  ಮಾನವನ ಮೈಯಲ್ಲಿ ಚಿಕ್ಕವನಾಗಿ ವಾಸಮಾಡಿದ್ದರೂ ಅವನ ಕೆಲಸ ಭಯಂಕರವಾಗಿದೆ.ಅರ್ಥಾತ್ ಮನುಷ್ಯನಲ್ಲಿ ಚಿಕ್ಕದಾದ ಆಶೆಯೆಂಬ ಬೇಡನು ಅವನನ್ನು (ಮಾನವನನ್ನು) ಆಶಾಪಾಶದಲ್ಲಿ ಕಟ್ಟಿ ಮೋಹಾಂಗನೆಯರ ಬಲೆಗೆ ಬೀಳಿಸುತ್ತಾನೆ. ಮೋಹಪಾಶದಿಂದ ಹೊರಗೆ ಬಾರದೆ ಮಾರಿಮಾಯೆಯ ಮನೆಗೆ ತಲುಪಬೇಕಾಗುವದು. ಭವಚಕ್ರದಲ್ಲಿ ತಿರುಗಬೇಕಾಗುವದು. ಅಂತೆಯೇ ಶಿವಕವಿಯು ಚಕ್ಕನೆ ಎನಗೆ ಕೃಪೆಯಾಗೆಂದು ಬೇಡಿದ್ದಾನೆ. ಈ ಮಾಯಾಪಾಶದಲ್ಲಿ ಬಂಧಿತನಾಗುವದಕ್ಕಿಂತ ಮುಂಚೆಯೇ ತೀವ್ರವಾಗಿ ನನ್ನನ್ನು ಪಾರುಮಾಡೆಂದು ಪ್ರಾರ್ಥಿಸಿದ್ದಾನೆ. ಓ ಗುರುವೆ ! ಚಿಕ್ಕವ್ಯಾಧನ ಬಲೆಯಲ್ಲಿ ಬೀಳಿಸದೆ ರಕ್ಷಿಸು.

ಹುಲ್ಲು ಮೇಯಲು ಬಂದ | ಹುಲ್ಲೆಯಾ ಕರುವನ್ನು

ಹುಲ್ಲೆ ಹುಲಿಯಾಗಿ ಮೆಲ್ಲುವದ ಬಲ್ಲೆನಾ-

ನೊಲ್ಲೆ ಶ್ರೀ ಗುರುವೆ ಕೃಪೆಯಾಗು         ||೪೮ ||

ಹುಲ್ಲೆ-ಚಿಗರಿ (ಜಿಂಕೆ) ಕರುವೆಂದರೆ ಅದರ ಮರಿ, ಚಿಕ್ಕದಾದ ಚಿಗರಿಯ ಮರಿಯು ಎಳೆಯ ಹುಲ್ಲಿಗಾಗಿ ಜಿಗಿಯುತ ಹೊಗುವದು. ಇದು ಅದರ ಸ್ವಭಾವ. ಅದರಂತೆ (ಜಿಂಕೆಯ ಮರಿಯಂತೆ) ಹಾರುವ (ಚಂಚಲವಾದ) ಜೀವಾತ್ಮನು ಹುಲ್ಲಿನಂತೆ ನಿಸ್ಸಾರವಾದ, ಬೆಲೆಯಿಲ್ಲದ ಸಾಂಸಾರಿಕ ವಿಷಯ ಸುಖವನ್ನು ಮೇಯ (ತಿನ್ನಲು ಬರುತ್ತಾನೆ.) ಆದರೆ ಹುಲ್ಲಿಗಾಗಿ ಹಂಬಲಿಸಿ ಮೇಯುವಲ್ಲಿ ತಲ್ಲೀನವಾದ ಹುಲ್ಲೆಯನ್ನು ಹುಲಿಯು ನೋಡಿ ಆನಂದದಿಂದ ತಿಂದುಹಾಕುತ್ತದೆ. ಹುಲಿಗೆ ಹುಲ್ಲೆಯು ಒಲುವಿನ ಓಗರ. ಅದನ್ನು ತಿನ್ನದೆ ಬಿಡುವದಿಲ್ಲ. ಹುಲ್ಲೆಯ ಕರುವಿನಂತಿದ್ದ ಜೀವಾತ್ಮನ ಕರಣವು ಸಾಂಸಾರಿಕ ವಿಷಯ ಸುಖವನ್ನು ಆಸ್ವಾದಿಸಲು ಬಯಸಿ, ಬಯಸಿ ಅಹಂಕಾರ-ಮಮಕಾರಗಳು ಅತಿಯಾಗಿ ಹೆಬ್ಬುಲಿಯಂತೆ ಅವನನ್ನೇ ನಾಶಮಾಡಿ ಬಿಡುತ್ತವೆ. ಜೀವಿಗೆ ಸಂಸಾರದ ಸುಖ ಸಿಕ್ಕದೆ ಹೋಗುತ್ತದೆ ಮತ್ತು ಅಹಂಕಾರಿಗೆ ಸುಖದ ಅನುಭವ ಆಗುವದಿಲ್ಲವೆಂಬುದು ಅನುಭವದ ನುಡಿ.

ಗುರುವೆ ! ನಾನು ಇದೆಲ್ಲವನ್ನು ನಿನ್ನ ದಯೆಯಿಂದ ತಿಳಿದಿದ್ದೇನೆ. ಅದು ಕಾರಣ

ಈ ಸಾಂಸಾರಿಕ ವಿಷಯವನ್ನು ತ್ಯಜಿಸಿ ನಿನ್ನ ಮೊರೆ ಹೊಕ್ಕಿದ್ದೇನೆ ರಕ್ಷಿಸು ಮತ್ತು ಷಣ್ಮುಖ

ಸ್ವಾಮಿಗಳು –

‘ಹುಲಿಯ ಬಾಯಲ್ಲಿ ಸಿಕ್ಕಿದ ಹುಲ್ಲೆಯಂತೆ

ಸರ್ಪನ ಬಾಯಲ್ಲಿ ಸಿಕ್ಕಿದ ಕಪ್ಪೆಯಂತೆ,

ಸಕಲಲೋಕಾದಿ ಲೋಕಗಳು ಮಾಯೆಯ ಬಲೆಯಲ್ಲಿ ಸಿಕ್ಕಿ

ಸೆರೆ ಹೋಗುವದ ಕಂಡು ನಾನಂಜಿ ನಿಮ್ಮ ಮೊರೆಹೊಕ್ಕೆ

ಕಾಯಯ್ಯ ಕಾರುಣ್ಯವಿಧಿಯೆ | ಅಖಂಡೇಶ್ವರಾ?

ಎಂದು ಶಿವನಲ್ಲಿ ಬೇಡಿಕೊಂಡಂತೆ ನಿನ್ನಲ್ಲಿ ಬೇಡಿಕೊಳ್ಳುತ್ತಿದ್ದೇನೆ. ಹುಲಿಯ ಬಾಯಲ್ಲಿ ಸಿಕ್ಕ ಹುಲ್ಲೆಯ ರಕ್ಷಕರಿಲ್ಲದೆ  ನಾಶವಾಗುವಂತೆ, ಹಾವಿನ ಬಾಯಲ್ಲಿ ಸಿಕ್ಕ ಕಪ್ಪೆಯಂತೆ ಮಾಯೆಯ ಬಲೆಯಲ್ಲಿ ಬಿದ್ದ ನಾನು ನಿನ್ನಿಂದಲೇ ರಕ್ಷಿಸಲ್ಪಡಬೇಕು. ನೀನಲ್ಲದೆ ಬೇರೆ ರಕ್ಷಕರಿಲ್ಲ. ನೀನೇ ಕಾರುಣ್ಯಮಯನೂ ರಕ್ಷಕನೂ ಇರುವಿ. ನನ್ನ ದುರ್ಗುಣಗಳನ್ನು ದೂರಮಾಡಿ ಸುಗಣಗಳನ್ನು ದಯಪಾಲಿಸುವವನೂ, ಅಹಂಕಾರವನ್ನು ನಿರಸನ ಮಾಡುವವನೂ ನೀನೇ. ಆದ್ದರಿಂದ ಗುರುನಾಥ ! ಹುಲ್ಲಿನಂತೆ ನಿಸ್ಸಾರವಾದ ಸಂಸಾರವನ್ನು ಪ್ರಸಾದವನ್ನಾಗಿಸಿ ಸ್ವೀಕರಿಸುವ ಸುಬುದ್ಧಿಯನ್ನು ಅನುಗ್ರಹಿಸು. ಸಾಂಸಾರಿಕ

ವಿಷಯಗಳು  ಪ್ರಸಾದವಾದರೆ ಪೋಷಕವಾಗುವದು. ಅದರಿಂದ ಮುಕ್ತನಾಗಬಹುದು. ಗುರುವೆ ! ಹುಲ್ಲೆಯ ಕರುವಿನಂತಿದ್ದ ನನ್ನ ಹರಣವು ಹಮ್ಮಿನಂತಿದ್ದ ಹೆಬ್ಬುಲಿಯ ಬಾಯಿಗೆ ಬೀಳದಂತೆ ರಕ್ಷಿಸು ಮತ್ತು ನನ್ನ ಹರಣವು ಹಮ್ಮಿನಂತಿದ್ದ ಹೆಬ್ಬುಲಿಯ

ಬಾಯಿಗೆ ಬೀಳದಂತೆ ರಕ್ಷಿಸು. ಮತ್ತು ನನ್ನ ಜೀವವಾಸನೆಗಳನ್ನು ಹಾಗೂ ಹಮ್ಮು ಬಿಮ್ಮುಗಳನ್ನು ನಿವಾರಿಸಿ ಶಿವಪ್ರಸಾದವನ್ನಾಗಿಸುವ ಸರಳ ಸಾತ್ವಿಕವಾದ ಶರಣ ಸಂಸಾರವನ್ನು ಕರುಣಿಸು.

ಹುಲಿ ಹುಲ್ಲೆಗಳು ತಮ್ಮ | ಕೊಲುವ ವ್ಯಾಧರ ತಲೆಯ

ಸನೆನುಂಗಿ ಮುಂಡ-ಸುಳಿದಾಡುವದ ಕಂಡಾ-

ನಲಸಿದೆನು ಗುರುವೆ ಕೃಪೆಯಾಗು       ||೪೯||

ಜೀವಾತ್ಮನಿಗೆ ಜೀವಭ್ರಾಂತಿಯನ್ನು ಹೋಗಲಾಡಿಸುವಲ್ಲಿ ಶಾಸ್ತ್ರಕಾರರಾಗಲಿ, ವಚನಕಾರರಾಗಲಿ ಸಾಕಷ್ಟು ಬೆಡಗಿನ ವಚನಗಳನ್ನು ಹೇಳಿದ್ದಾರೆ. ಗಹನವಾದ ವಿಷಯವನ್ನು ಸಹಜವಾಗಿ ಹೇಳಿದರೆ ಸಾಧಕರ ಮನಸ್ಸಿಗೆ ನಾಟುವದಿಲ್ಲ. ಅದಕ್ಕಾಗಿ

ಆಳವಾಗಿ, ದೀರ್ಘವಾಗಿ ವಿಚಾರಿಸಲೆಂದು ಇಂಥ ಅನೇಕ ಬೆಡಗಿನ ವಚನಗಳಿಂದ ಶಿವಕವಿಯು ಮಾಯಾ ನಿರಸನವನ್ನು ಪ್ರತಿಪಾದಿಸಿದ್ದಾನೆ.

ಹುಲಿ-ಹುಲ್ಲೆಗಳು ತಮ್ಮನ್ನು ಕೊಲ್ಲುವ ಬೇಟೆಗಾರನ ತಲೆಯನ್ನು ಹೇಗೆ ನುಂಗಬಲ್ಲವು ? ಎಂಬ ಪ್ರಶ್ನೆ ಸಹಜವಾದುದು. ಇಲ್ಲಿ ವಾಚ್ಯಾರ್ಥ ಅಸಂಭವವಾದರೂ ಲಕ್ಷ್ಯತರ್ಥ ಸಂಭವಿಸುತ್ತದೆ. ಬೇಟೆಯಾಡುವ ಬೇಡನು ಹುಲಿ-ಜಿಂಕೆ ಮೊದಲಾದ

ಪ್ರಾಣಿಗಳಿಗಾಗಿ ಗಿಡ ಗಂಟೆಗಳ ಮರೆಯಲ್ಲಿ ಕುಳಿತು ತನ್ನ ಮನದಲ್ಲಿ ವಿಚಾರ ಮಾಡುತ್ತಿರುತ್ತಾನೆ. ದೇವರು ಪ್ರತಿಯೊಂದು ಪ್ರಾಣಿಗೂ ತನ್ನನ್ನು ರಕ್ಷಿಸಿಕೊಳ್ಳುವ  ಜ್ಞಾನವನ್ನು ಬಲವನ್ನು ಕೊಟ್ಟಿರುತ್ತಾನೆ. ಆ ದಿಶೆಯಲ್ಲಿ ಪ್ರಾಣಿಗಳೂ ಸಹ ಬೇಟೆಗಾರನ

ಸುಳಿವನ್ನು ಕಂಡುಹಿಡಿದು ತಮ್ಮನ್ನು ಕೊಲ್ಲಬಂದ ಅವನ ಗುರಿಯಿಂದ ಪಾರಾಗಿ ಹೋಗುತ್ತವೆ. ಆಗ ವಿಚಾರಿಸುತ್ತಿರುವ ವ್ಯಾಧನ ತಲೆಯು ಬರಿದಲೆಯಾಗುತ್ತದೆ. ಜ್ಞಾನಶೂನ್ಯವಾದ ತಲೆಯು ಅದಾಗುತ್ತದೆ. ವಿಚಾರ ಶೂನ್ಯನಾದ ಬೇಟೆಗಾರನ

ಮುಂಡಮಾತ್ರ ಉಳಿಯುತ್ತಿದೆ. ಬೇಟೆಯಾಡುವ ಬಗ್ಗೆ ವಿಚಾರಿಸಿ, ಪ್ರಾಣಿಗಳನ್ನು ನಿರೀಕ್ಷಿಸಿ, ಕೊನೆಗೆ ಯಾವ ಬೇಟೆಯೂ ಸಿಗದಿದ್ದರೆ ಅವನಿಗೆ ಅಲಸಿಕೆ (ಬೇಸರ) ಯಾಗುವಲ್ಲಿ ಸಂದೇಹವಿಲ್ಲ. ಇದು ಶಬ್ದಾರ್ಥಗತವಾದ ಬಾಹ್ಯಚಿತ್ರ.

ಅಂತರಾರ್ಥ ಇಂತಿದೆ. ಹುಲಿ- ಅಹಂಕಾರ; ಹುಲ್ಲೆ ಜೀವ; ಕೊಲ್ಲುವವ್ಯಾಧ ವಿಷಯಗಳಲ್ಲಿಯ ಆಶೆಯೆಂಬ ಬೇಡ. ವಿಷಯಗತವಾದ ಆಶೆಯು ಅಹಂಕಾರಿ ಜೀವನನ್ನು  ನಿಸ್ತೇಜಗೊಳಿಸಿ ನಾಶಮಾಡುತ್ತದೆ. ಅಂದರೆ ಅಹಂಕಾರಿಯ ಆಶೆಯು ಕೈಗೂಡದಿದ್ದರೆ ಕಳೆಗುಂದಿದಂತಾಗುವದು ಸಹಜ, ಶಕ್ತಿ ಹೀನನಾಗಿ ವಿನಾಶೋನ್ಮುಖನಾದ ಜೀವಾತ್ಮನು

ಪೂರ್ವಸುಕೃತದಿಂದ, ಗುರು ಕೃಪೆಯ ಬಲದಿಂದಲೂ ಜ್ಞಾನಿಯಾದರೆ ಆಶೆಯೆಂಬ ಬೇಡನ ತಲೆಯಲ್ಲಿ ಶೂನ್ಯವಾಗಿ ಮುಂಡಮಾತ್ರ ಉಳಿಯುವದು. ಅರ್ಥಾತ್ ಗುರುಕರುಣೆಯಿಂದ ಜೀವನು ಸುಜ್ಞಾನವನ್ನು ಪಡೆದರೆ ಅಹಂಕಾರ ಮತ್ತು ಜೀವಭಾವವು ತೊಲಗಿ ಆಶೆಯು ಇಲ್ಲದಾಗುವದು. ಆಶೆಯೇ ಇಲ್ಲವಾದ ಮೇಲೆ ಅದರ ಉಪಟಳ ಇನ್ನಿಲ್ಲದಾಗುವದು.

ಈ ತ್ರಿಪದಿಯನ್ನು ಇನ್ನೊಂದು ತೆರನಾಗಿ ವಿಚಾರಿಸಬಹುದು. ಬೇಡನು ಅನಿಮಿತ್ತವೈರಿಗಳಾದ ಪ್ರಾಣಿಗಳನ್ನು ಕೊಲ್ಲುತ್ತಿದ್ದರೆ; ಮಾನವರಿಗೆ ನಿಮಿತ್ತವೈರಿಗಳೆನಿಸಿದ ಅಹಂಕಾರ, ಜೀವಭಾವ, ಆಶೆ ಇತ್ಯಾದಿ ದುರ್ಗುಣಗಳನ್ನು ಬೇಟೆಯಾಡುವರು

ಗುರು-ಜಂಗಮರು. ಇವರು ತಮ್ಮ ಉಪದೇಶವೆಂಬ ಬಾಣದಿಂದ ಮಾನವರಲ್ಲಿಯ ದುರ್ಗುಣಗಳನ್ನು ಕಡೆಯುತ್ತಾರೆ. ಅಲ್ಪಜ್ಞನಾದ ಮನುಷ್ಯನು ಗುರೂಪದೇಶವನ್ನು ನುಂಗಿಯೂ (ಪಡೆದೂ) ಪುನಃ ಪುನಃ ಅಧಃಪ್ರವೃತ್ತಿಯಲ್ಲಿ ನಡೆದರೆ ಬೇಟೆಗಾರರೆನಿಸಿದ ಗುರು ಜಂಗಮರಿಗೆ ಬೇಜಾರವಾಗುವದು ಖಂಡಿತ. ಮಾನವನು ಜ್ಞಾನವನ್ನು ಹೊಂದಿಯೂ ಅಜ್ಞಾನಿಯಾದರೆ ನಿಜತಲೆಯಿಲ್ಲದಾಗುವನು. ಅವನ ದಿಂಡ ಮಾತ್ರ ತೋರುವದು. ಗುರುವೆ ! ಎನ್ನ ದುರ್ಗುಣಗಳನ್ನು ದೂರಮಾಡಿ ಸುಗುಣಿಯನ್ನಾಗಿ ಮಾಡು. ಜೀವಭಾವದ ಆಲಸ್ಯವನ್ನು ಕಳೆದು ಸತ್ಕ್ರಿಯೆಗಳಲ್ಲಿ ಉತ್ಸಾಹಿಯನ್ನಾಗಿ ಮಾಡು.

ಬೇರಾಗಸಕೆ ಬೆಳೆದ | ನಾರಿಕೇಳದ ಕುಜವ

ನಾರ ಹಂಗಿಲ್ಲದೇರಿದೆ ನಾನಿಳಿಯ

ಲಾರೆನೈ ಗುರುವೆ ಕೃಪ

ಈ ಪದ್ಯದ ಮಾದರಿಯಲ್ಲಿ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಅರ್ಜುನನಿಗೆ ಉಪದೇಶಿಸಿದ್ದಾನೆ –

ಉರ್ಧ್ವ ಮೂಲಮಧಃಶಾಖಮ್

ಅಶ್ವತ್ಥಂ ಪ್ರಾಹುರವ್ಯಯಮ್ |

ಛಂದಾಂಸಿ ಯಸ್ಯ ಪರ್ಣಾನಿ

ಯಸ್ತಂ ವೇದ ಸ ವೇದವಿತ್ || ೧೫.೧ ||

ಹಾಲಿನಿಂದ ಉತ್ಪನ್ನವಾಗುವ ಬೆಣ್ಣೆಯು ಮಜ್ಜಿಗೆಯಲ್ಲಿ ಮೇಲೆ ತೇಲುತ್ತಿರುವಂತೆ, ಸಕಲಸಾರತರವಾದ ಆತ್ಮ ತತ್ತ್ವವೂ ಊರ್ಧ್ವವಾಗಿದೆ. ಅದು ಸೂಕ್ಷ್ಮಕ್ಕಿಂತಲೂ ಸೂಕ್ಷ್ಮವೂ, ಸ್ಥೂಲಕ್ಕಿಂತಲೂ ಸ್ಥೂಲವೂ ಆಗಿ, ಎಲ್ಲ ಜಗತ್ತಿಗೆ ಕಾರಣವಾಗಿ, ನಿತ್ಯವಾಗಿ

ಸರ್ವಕ್ಕೂ ಮಿಗಿಲಾಗಿ ತೋರುತ್ತದೆ. ಇದುವೆ ಊರ್ಧ್ವವೆನಿಸುವದು. ಈ ಪರವಸ್ತುವಿ ನಿಂದ ಉತ್ಪನ್ನವಾದ ಸಂಸಾರ ವೃಕ್ಷವೇ ಅಶ್ವತ್ಥವು. ಈ ಮರದ ಮೂಲವು ಮೇಲೆ ಇದ್ದು ಶಾಖೆಗಳು ಕೆಳಮುಖವಾಗಿವೆ. ಇದು ಸನಾತನವಾದುದು. ಇದರ ಎಲೆಗಳು

ಛಂದಸ್ಸುಗಳು. ಅದನ್ನು ಯಾವನು ಚನ್ನಾಗಿ ತಿಳಿದುಕೊಳ್ಳುವನೋ ಅವನು ವೇದವನ್ನು ತಿಳಿದವನಾಗುವನು. ಕಠೋಪನಿಷತ್ತಿನಲ್ಲಿಯೂ –

ಊರ್ಧ್ವಮೂಲೋವಾಕ್ಯಾಖ

ಏಷೋಡಶ್ವತ್ಥ: ಸನಾತನಃ

ತದೇವ ಶುಕ್ರಂ ತದ್ಬ್ರಹ್ಮ

ತದೇವಾಮೃತಮುಚ್ಯತೇ || ೨೩-೧ ||

ಮೇಲೆ (ಬೊಡ್ಡೆ)-ಬೇರು, ಕೆಳಗೆ ಕೊಂಬೆಗಳು ಇರುವ ಅಶ್ವತ್ಥ ವೃಕ್ಷವು ಬಹು ಸನಾತನವಾಗಿದ್ದು, ವಿಶುದ್ಧ ಜ್ಯೋತಿಸ್ವರೂಪವಾಗಿದೆ. ಅದುವೆ ಬ್ರಹ್ಮವಸ್ತು, ಅದಕ್ಕೇನೆ ಅಮೃತವೆಂದು ಕರೆಯಲಾಗುವದು. ಈ ಸ್ವಯಂಜ್ಯೋತಿ, ಅಮೃತಮಯ ಬ್ರಹ್ಮನಿಂದ ಹುಟ್ಟಿದ ಕೆಳಮುಖವಾದ ಸೃಷ್ಟಿಗೆ ಅಧಃಸೃಷ್ಟಿಯೆಂದು ಕರೆಯುತ್ತಾರೆ. ಸಾಂಸಾರಿಕ

ವಿಷಯಭೋಗಗಳೂ ಕೆಳಮುಖವಾಗಿವೆ. ಬ್ರಹ್ಮಸಂಭೂತನಾದ ಜೀವಾತ್ಮನು ವಿಷಯ ಭೋಗಗಳಲ್ಲಿ ತಲ್ಲೀನನಾದರೆ ಪುನಃ ಮೂಲಜ್ಞಾನದ ಅರಿವು ಹಾರಿಹೋಗುತ್ತದೆ. ಅಧೋಮುಖವಾದ ವಿಷಯಗಳನ್ನು ಕೆಳಮುಖವಾದ ಚಿತ್ತವೃತ್ತಿಯಿಂದ ತೀವ್ರವಾಗಿ, ಸಹಜವಾಗಿ ಗ್ರಹಿಸಿದಂತೆ; ಊರ್ಧ್ವಮುಖವಾದ ಮೂಲ ಪರವಸ್ತುವಿನ ಜ್ಞಾನವನ್ನು ಮಾಡಿಕೊಳ್ಳುವದು ಸುಲಭವಾಗುವದಿಲ್ಲ.

ಕಠೋಪನಿಷತ್ತು- ಭಗವದ್ಗೀತೆಗಳಂತೆ ಶಿವಕವಿಯು ಅಶ್ವತ್ಥವೃಕ್ಷದ ಕಲ್ಪನೆಯನ್ನು ಈ ವಿಲಕ್ಷಣವಾದ ತೆಂಗಿನಮರದ ನಿರೂಪದೊಡನೆ ವಾಚಕರಿಗೆ ಸನ್ನಿಹಿತಗೊಳಿಸಿದ್ದಾನೆ. ಇಲ್ಲಿಯೂ ತೆಂಗಿನಮರದ ಬೇರು ಆಕಾಶದಲ್ಲಿ ಬೆಳೆದಿವೆ. ಶಾಖೆಗಳು ಕೆಳಮುಖವಾಗಿವೆ. ಫಲಗಳು ಭೂಮಿಯನ್ನಾಶ್ರಯಿಸಿವೆ. ತೆಂಗು ಭೂಲೋಕದ ಕಲ್ಪವೃಕ್ಷ. ಅಶ್ವತ್ಥ  ಹಾಗಲ್ಲ. ತೆಂಗು ಕಲ್ಪವೃಕ್ಷದಂತೆ ಎಲ್ಲವನ್ನೂ ಕೊಡಬಲ್ಲುದು. ಅಶ್ವತ್ಥದಿಂದ ಹೆಚ್ಚಿನ ಲಾಭ ಸಿಕ್ಕದು. ತೆಂಗಿನ ದೃಷ್ಟಾಂತ ಗೀತೋಪನಿಷತ್ತುಗಳಿಗಿಂತಲೂ ಮಿಗಿಲಾಗಿದೆ. ತೆಂಗಿನ ಮರವು ಎಷ್ಟು ಎತ್ತರವಾಗಿದೆಯೋ ಹಾಗೆ ಶಿವ-ಜೀವರಿಗೂ ಅಷ್ಟು

ಅಂತರವಿದೆ. ಶಿವಾಂಶಿಕನಾದ ಜೀವನು ಫಲವನ್ನಾಶ್ರಯಿಸಿ ನಿಲ್ಲುವದು ಸರಿಯಲ್ಲ. ಮೂಲವನ್ನು ಅರಿಯಲೇಬೇಕು. ನಿವೃತ್ತಿ ಮಾರ್ಗದಿಂದಲೇ ಪ್ರವೃತ್ತಿಯಳಿಯುವದು. ಪ್ರವೃತ್ತಿಪಥಕ್ಕಿಳಿದ ಜೀವನು ನಿವೃತ್ತಿಯನ್ನು ಸಾಧಿಸುವ ರಂಗಭೂಮಿಯು

ಭೂವಲಯವೇ ಆಗಿದೆ. ಭೂಲೋಕದಲ್ಲಿಯೇ ಮಾನವ ಜನ್ಮದ ಸಾರ್ಥಕತೆಯನ್ನು ಸಾಧಿಸಲು ಸಾಧ್ಯವಾಗುವದು. ಸಕಲ ಸೌಭಾಗ್ಯದ ತವರು ಭೂಲೋಕ. ಸಕಲಸಿದ್ಧಿಯ ಆಗರ ಇಹಲೋಕ, ಭೌತಿಕ-ಪಾರಮಾರ್ಥಗಳೆರಡನ್ನು ಸಾಧಿಸುವ ಸ್ಥಾನವೂ ಇದಾಗಿದೆ.

ಪ್ರಭುಲಿಂಗಲೀಲೆಯಲ್ಲಿ ಶಿವನು ಪಾರ್ವತಿಗೆ ಉತ್ತರಿಸಿದ ನಿರೂಪವು ಅತ್ಯಂತ ಸಮೀಚೀನವಾಗಿದೆ- ”ನನ್ನ ಸನ್ನಿಧಿಯಲ್ಲಿದ್ದ ಈ ಪುಣ್ಯ ಜೀವಿಗಳು ಪುಣ್ಯ ತೀರಿದ ಮೇಲೆ ಪುನಃ ಭೂಲೋಕಕ್ಕೆ ತೆರಳಬೇಕಾಗುವದು. ಅಲ್ಲದೆ ಯೋಗ ಬಲ್ಲ ಯೋಗಿಗಳು ಸಹ ಮಾನವ ಶರೀರಿಗಳಾಗಿ ಭೂಮಿಯಲ್ಲಿ ಭಕ್ತಿಮಾರ್ಗದಿಂದ ಅಮೃತ ಫಲವನ್ನು ಪಡೆಯಬಲ್ಲರು. ಅಮರರಾಗಬಲ್ಲರು. ನಿತ್ಯಮುಕ್ತರಾಗುವರು’. ಭೂಮಿ ಯಲ್ಲಿಯೇ ಸಕಲ ಭೋಗಭಾಗ್ಯಗಳುಂಟು. ತೆಂಗಿನಂಥ ಅಮೃತ ಫಲ ಪಡೆಯಲು

ಸಾಧ್ಯವಾಗುವದು. ಈ ಫಲದಲ್ಲಿ ತೀರ್ಥ ಪ್ರಸಾದಗಳೆರಡೂ ಸಮನ್ವಿತವಾಗಿವೆ. ವೀರಶೈವ ಸಿದ್ದಾಂತದ ಮುಖ್ಯ ಫಲಗಳು

ಪಾದೋದಕ ಪ್ರಸಾದಗಳು. ಇವೆರಡರಿಂದಲೇ ಶರಣಜೀವನ, ಶರಣತತ್ವ ತಿರುಳು ಮೆರಗುಗೊಂಡಿದೆ.

ತೆಂಗಿನ ಫಲವು ಸುಲಭವಾಗಿ ಸಿಕ್ಕುವದಿಲ್ಲ. ತೆಂಗಿನಕಾಯಿಯನ್ನು ದೇವರಿಗೆ ಒಡೆಯುವದು ಸಾಮಾನ್ಯವಾದರೂ, ಸಾಂಕೇತಿಕ ಅರ್ಥ ಅಡಗಿದೆ. ಅಂತೆಯೇ ಕವಿಯು ಇಲ್ಲಿ ಇದರಿಂದ ಅನೇಕಾರ್ಥಗಳನ್ನು ಅಭಿವ್ಯಂಜಿಸಿ ತರಂಗಾಯಮಾನ ವಾಗಿಸಿದ್ದಾನೆ. ಅಜ್ಞಾನವೆಂಬ ಕಾಯಿ (ಜೀವಾತ್ಮನ ಶರೀರ ಅಥವಾ ಕಾಯ)ಯ ಮೇಲಿನ ಮಹಾಮಾರಿಯಾದ ಮಾಯೆಯೆಂಬ ಘಟ್ಟಿಯಾದ ಸಿಪ್ಪೆಯನ್ನು ತೆಗೆದು ಮಮಕಾರವೆಂಬ ಜುಬ್ಬರವನ್ನು ಸುಲಿದು ಅಹಂಕಾರವೆಂಬ ಚಿಪ್ಪನ್ನು ಒಡೆದಾಗ, ಮಾಯೆ, ಮಮಕಾರ, ಅಹಂಕಾರಗಳು ಕಳಚಿಹೋಗಿ ಅಮೃತಸದೃಶ್ಯವಾದ ನಿರ್ಮಲವಾದ ಎಳೆನೀರು, ಖೊಬ್ಬರಿಗಳು ಪ್ರಾಪ್ತವಾಗುತ್ತವೆ.  ಗುರುಕೃಪೆಯಿಂದ ಮಮಕಾರ-ಅಹಂಕಾರ ಮಾಯಾ ರಹಿತನಾದ ಶರಣನ ಹೃದಯವು ತೆಂಗಿನ ಹಾಲಿನಂತೆ ನಿರ್ಮಲವೂ ಖೊಬ್ಬರಿಯಂತೆ ಮಧುರವೂ ಆಗಿ ಶಿವನಿಗೆ ಸಮರ್ಪಿತ ವಾಗುತ್ತದೆ. ಇಂಥ ಶರಣನ ಹೃದಯವು ತೆಂಗಿನ ಹಾಲಿನಂತೆ ನಿರ್ಮಲವೂ ಖೊಬ್ಬರಿಯಂತೆ ಮಧುರವೂ ಆಗಿ ಶಿವನಿಗೆ ಸಮರ್ಪಿತವಾಗುತ್ತದೆ. ಇಂಥ ಶರಣನು ಊರ್ಧ್ವಮುಖಿಯಾಗಿ ಮೂಲ ತತ್ತ್ವವನ್ನು ಸೇರುತ್ತಾನೆ. ತ್ರಿಪದಿಯ ಅಂತರಾರ್ಥವು ಇಂತಾದರೆ, ವಾಚ್ಯಧ್ವನಿ ಕೆಳಗಿನಂತಿದೆ.

 ಅಧಃ ಪ್ರವತ್ತಿಯ ಮಾನವನ ಮನಸ್ಸು ಈ ಸಂಸಾರ ವೃಕ್ಷದಲ್ಲಿ ವ್ಯಕ್ತವಾಗಿ ತೋರುವ ಸ್ತ್ರೀಯಳ ಕುಚ-ಫಲವನ್ನು ಕಂಡು, ಆ ಕ್ಷಣದಲ್ಲಿಯೇ ಯಾರ ಹಂಗಿಲ್ಲದೆ ಸುಲಭವಾಗಿ ಅಲ್ಲಿಗೆ ಏರುತ್ತದೆ; ಭೋಗಲಾಲಸೆಯಿಂದ ಮನಸ್ಸು ನಿವೃತ್ತವಾಗು

ವುದಿಲ್ಲ. ಈ ಅಧೋಮುಖವಾದ ಮನಸ್ಸು ಸಾಂಸಾರಿಕ ಭೋಗದಿಂದ ಊರ್ಧ್ವ ಮುಖವಾಗಬೇಕಾದರೆ ಗುರುಕರುಣೆ ಅತ್ಯವಶ್ಯಬೇಕು.

ಗುರು ಕೃಪೆಯಿಂದ ಶುದ್ಧಾಂತಃಕರಣಿಯಾದ ಜೀವನು ಊರ್ಧ್ವ ಸೃಷ್ಟಿಯಲ್ಲಿ ನಡೆಯಬೇಕಾಗುವದು. ಮರದ ಬೇರಿನ ಕೊಂಬೆಗಳಿಗೆ ರಸಿರುವಂತೆ, ದೇಹದ ಮೂಲಬೇರು-ಮೂಲಜ್ಞಾನವು; ಆಗಸವೆಂದರೆ-ಬ್ರಹ್ಮರಂದ್ರ, ಅದರಿಂದಲೇ ಎಲ್ಲ

ಚೇತನಗಳು ಚಲಿಸುತ್ತವೆ. ಸಣ್ಣ ಮೆದುಳಿನಿಂದಲೇ ಶರೀರದ ಎಲ್ಲ ಕ್ರಿಯೆಗಳಿಗೆ ಪ್ರೇರಣೆ ದೊರೆಯುತ್ತದೆ. ಇಲ್ಲಿ   ನಾರಿಕೇಳಫಲವೆಂದರೆ ಇಷ್ಟಲಿಂಗವು. ಇದು ಶ್ರೀಗುರು ಕರುಣೆಯಿಂದ ಸಾಧ್ಯವಾಗುವದು. ಅವನಿಲ್ಲದೆ ಲಿಂಗದ ನೆಲೆಕಲೆಗಳು ತಿಳಿಯಲಾರವು. ಲಿಂಗದ ಉತ್ಪತ್ತಿಯೂ ಆಗುವದಿಲ್ಲ. ಯೋಗಾಭ್ಯಾಸಿಯಾದವನು ಬ್ರಹ್ಮರಂಧ್ರಕ್ಕೆರೆ ಬಹುದು. ಇಳಿದು ಬರುವದು ಕಠಿಣವಾಗುವದು. ಭ್ರಹ್ಮರಂಧ್ರದಿಂದಿಳಿದು ಜಾಗ್ರತಾವಸ್ಥೆಯಲ್ಲಿ ಫಲರೂಪ ಇಷ್ಟಲಿಂಗದ ಪೂಜೆ, ಅನುಸಂಧಾನವನ್ನು ಮಾಡಿ ನಿತ್ಯಮುಕ್ತರಾಗುವದೇ ವೀರಶೈವ ಸಿದ್ದಾಂತ.

ವೀರಶೈವರ ಪರಮ ಗುರುದೇವನು ಶಿಷ್ಯನ ಸಹಸ್ರಾರದಲ್ಲಿಯ ಚಿಚ್ಚ್ಯತನ್ಯವನ್ನು ಯೋಗ ಶಕ್ತಿಯಿಂದ ಶಿವದೀಕ್ಷೆಯಲ್ಲಿ ಇಷ್ಟಲಿಂಗವನ್ನಾಗಿ, ಅರುವಿನ ಕುರುಹನ್ನಾಗಿ ಕರುಣಿಸಬಲ್ಲನು. ಭೌತಿಕ ಮರವಾದ ತೆಂಗಿನ ಫಲದಲ್ಲಿ ತಂಪು, ಸೋಂಪು,

ಕಂಪುಗಳಿರುವಂತೆ, ಈ ಆಧ್ಯಾತ್ಮಿಕ ವೃಕ್ಷವಾದ ದೇಹದಲ್ಲಿ ಫಲರೂಪವಾದ

ಇಷ್ಟಲಿಂಗದಲ್ಲಿ ಶಿವಾತ್ಮವಿದ್ಯೆಯ ಸಾರಸರ್ವಸ್ವವು ಅಡಕವಾಗಿದೆ. ಲಿಂಗ ಸಾಕ್ಷಾತ್ಕಾರ

ದಿಂದಲೇ ಶರಣ ಮಾರ್ಗದ ಭದ್ರ ಬುನಾದಿ. ಅದಕ್ಕಾಗಿಯೇ ಜ.ಚ.ನಿ. ಯವರು

“ವೀರಶೈವ ಸಾಂಸ್ಕಾರಿಕ ಜೀವನ ಕಲೆಯನ್ನು ಬೋಧಿಸುವ ಪರಿಣತ ಪ್ರಜ್ಞೆಯ

ಪದ್ಯವಿದು’ ಎಂದು ಅನುಭವ ಪೂರ್ಣವಾಗಿ ಉಲ್ಲೇಖಿಸಿದ್ದು ಯಥೋಚಿತವಾಗಿದೆ.

ಈ ಚಿಕ್ಕದಾದ ತ್ರಿಪದಿಯಲ್ಲಿ ಅದೆಷ್ಟು ಅರ್ಥಗಳನ್ನು ಅಳವಡಿಸಿದ್ದಾರೆಂಬುದು

ಗಮನೀಯವಾಗಿದೆ. ಇಲ್ಲಿ ಶಿವಕವಿಯ ಅನುಭವ ಮಡುಗಟ್ಟಿದೆ. ಕೆನೆಗಟ್ಟಿದೆ.

ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,

ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ

ಬಯಲು, ನಿರ್ವಯಲು, ಬರಿಬಯಲು, ಬಚ್ಚಬರಿಯ ಬಯಲು ಮುಂತಾದ ಪಾರಿಭಾಷಿಕ ಪದಗಳು ವಿಶೇಷ ಗಮನ ಸೆಳೆಯುತ್ತವೆ. ಶೂನ್ಯ, ನಿಶೂನ್ಯ, ಸರ್ವಶೂನ್ಯ ನಿರಾಲಂಬ ಮುಂತಾದ ಪರ್ಯಾಯ ಪದಗಳಿಂದ ಇವು ಗುರುತಿಸಲ್ಪಡುವವು. ಶರಣರು ಪರವಸ್ತುವನ್ನುಬಯಲು ಎಂದು ಹೆಸರಿಸಿದ್ದಾರೆ. ಅವರ ದೃಷ್ಟಿಯಲ್ಲಿ ಪರವಸ್ತು ಕಾರ್ಯರೂಪವಾದ ವಿಶ್ವ ಹಾಗು ಕಾರಣರೂಪವಾದ ಮಹಾಲಿಂಗ ಇವೆರಡಕ್ಕೂ ಮೂಲವಾದುದು. ಅಂದರೆ ಅದು ಕಾರ್ಯವೂ ಅಲ್ಲ,ಕಾರಣವೂ ಅಲ್ಲ. ಅದು ಏನೂ ಅಲ್ಲದ್ದರಿಂದ ಮತ್ತು ಅದರೊಳಗೆ ಏನೂ ಇಲ್ಲದ್ದರಿಂದ ಅದು ಬರಿಬಯಲು. ವ್ಯಕ್ತಿಯು ಅಧ್ಯಾತ್ಮ ಸಾಧನೆಯ ಮೂಲಕ ಇಂತಹ ಬಯಲಿನಲ್ಲಿ (ಪರವಸ್ತು) ತನ್ನನ್ನು ಸಂಪೂರ್ಣವಾಗಿ ಲೀನಗೊಳಿಸಿ ಅದರಲ್ಲಿ ಸಮರಸವಾಗುವುದಕ್ಕೆ ಬಯಲಿನಲ್ಲಿ ಬಯಲಾಗುವುದು ಎನ್ನುವರು.

ಈ ಸ್ಥಿತಿಯನ್ನು ಕುರಿತು ಷಣ್ಮುಖ ಸ್ವಾಮಿಗಳು- ಆದಿ ಇಲ್ಲದ ಬಯಲು, ಅನಾದಿ ಇಲ್ಲದ ಬಯಲು, ಶೂನ್ಯವಿಲ್ಲದ ಬಯಲು,ನಿಶೂನ್ಯವಿಲ್ಲದ ಬಯಲು…. ಮಹಾಘನ ಬಚ್ಚಬರಿಯ ಬಯಲೊಳಗೆ ಎಚ್ಚರವಡಗಿ ನಾನೆತ್ತ ಹೋದೆನೆಂದರಿಯೆ ಎನ್ನುತ್ತಾರೆ. ಅಂದರೆ ಮಹಾಘನ ಮತ್ತು ಬಚ್ಚಬರಿಯ ಬಯಲು ಎನಿಸಿದ ಪರವಸ್ತುವಿನಲ್ಲಿ ಅಡಗಿ ಎತ್ತ ಹೋದೆನೆಂಬ ಭಾವವೂ ಅಳಿದ ಆನಂದದ ನಿಲವು. ಇದನ್ನೇ ಬಚ್ಚಬರಿಯ ಬಯಲೊಳಗೆ ಎಚ್ಚರವಡಗುವುದು, ಲಿಂಗಾಂಗ ಸಾಮರಸ್ಯವನ್ನು ಹೊಂದುವುದು ಅಥವಾ ಮೋಕ್ಷವನ್ನು ಪಡೆಯುವುದು ಎನ್ನಲಾಗಿದೆ.

ನಿರಾಕಾರ ಸ್ವರೂಪವಾದ, ಬಚ್ಚಬರಿಯ ಬಯಲೆನಿಸಿದ ಪರವಸ್ತುವನ್ನು ಅಧ್ಯಾತ್ಮ ಸಾಧಕನಾದ ಶರಣನು ಸಾಧನೆಯ ಪ್ರಥಮ ಹಂತದಲ್ಲಿ ಇಷ್ಟಲಿಂಗದ ರೂಪದಲ್ಲಿ ಕಾಣುವನು. ಸಾಧನೆಯ ಮುಂದಿನ ಹಂತದಲ್ಲಿ ಇಷ್ಟಲಿಂಗ ರೂಪದ ಪರವಸ್ತುವನ್ನೇ ಪ್ರಾಣಲಿಂಗದ ರೂಪದಲ್ಲಿ ಬಯಲಾಗಿ ಕಾಣುವನು. ಇದು ಭಾವದಲ್ಲಿಭಗವಂತನನ್ನು ಅಭಿವ್ಯಕ್ತಗೊಳಿಸುವ ಮತ್ತು ಆ ಭಾವವನ್ನೇ ಬಯಲುಗೊಳಿಸುವ ಕ್ರಿಯೆಯಾಗಿದೆ. ಪರವಸ್ತುವನ್ನುಭಾವದೃಷ್ಟಿಯಿಂದ ಕಂಡು ಅಭಿನ್ನಭಾವದಿಂದ ಬೆರೆಸಿ ಅನುಭವಿಸಿದಾಗ ಬೆರೆತೆನೆಂಬ ಭಾವವೂ ಇಲ್ಲ, ಪರವಸ್ತುವೂ ಇಲ್ಲ.ಭಾವ ಬಯಲಾಗಿ ಅರುಹು ಶೂನ್ಯವಾಗಿ ಅಖಂಡ ನಿರಾಳವೆನಿಸುವ ಸ್ಥಿತಿ ಇದು. ಏನೂ ಏನೂ ಇಲ್ಲದ ಬಚ್ಚಬರಿಯ ಬಯಲು.

ಬಯಲು ಬಯಲನೆ ಬಿತ್ತಿ, ಬಯಲು ಬಯಲನೆ ಬೆಳೆದು, ಬಯಲು ಬಯಲಾಗಿ ಬಯಲಾಯಿತ್ತಯ್ಯಾ ಎನ್ನುತ್ತಾರೆ ಅಲ್ಲಮಪ್ರಭು.ಬಚ್ಚಬರಿಯ ಬಯಲೆನಿಸಿದ ಪರವಸ್ತುವನ್ನು ಅರಿತು ಅನುಭವಿಸಿದ ಸದ್ಗುರುವು ಶಿಷ್ಯನಲ್ಲಿ ಬಯಲು ಜ್ಞಾನವೆಂಬ ಬೀಜವನ್ನು ಬಿತ್ತಿದಾಗ ಬೆಳೆವ ಜ್ಞಾನ ವೃಕ್ಷದಲ್ಲಿ ಪರವಸ್ತುವೇ ನಾನೆಂಬ ಫಲ ಪ್ರಾಪ್ತಿಯಾಗುತ್ತದೆ. ಆಗ ಶಿಷ್ಯನ ಭಾವನೆಗಳೆಲ್ಲ ಬಯಲಾಗುತ್ತವೆ.

ಲೇಖಕರು : ಪೂಜ್ಯ ಡಾ. ಅಭಿನವ ಕುಮಾರ ಚನ್ನಬಸವ ಸ್ವಾಮಿಗಳು ಓಲೆಮಠ ಜಮಖಂಡಿ

೧೯೦೩ರ ಫೆಬ್ರವರಿಯಲ್ಲಿ ಸವದತ್ತಿಯ ಕಲ್ಮಠದಲ್ಲಿ ಶ್ರೀ ಬಿದರಿ ಕುಮಾರಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬಸವಪುರಾಣ ಪ್ರವಚನವನ್ನು ಏರ್ಪಡಿಸಲಾಗಿತ್ತು.

ಎಂಟು ಕಾಂಡಗಳ ಪುರಾಣ ಪ್ರವಚನ; ಪ್ರತಿಕಾಂಡದ ಆರಂಭದ ದಿನ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಹೆಚ್ಚಿನ ಸಂಖ್ಯೆಯ ಶಿವಗಣಾರಾಧನೆ, ದಾಸೋಹದ ವ್ಯವಸ್ಥೆ ಮಾಡುವುದು. ಬಸವಣ್ಣನ ಜನನ ಸಂದರ್ಭವನ್ನು ದೃಶ್ಯ

ಪೂರ್ವಕವಾಗಿ ಮನವರಿಕೆ ಮಾಡುವ ಉದ್ದೇಶದಿಂದ ತೊಟ್ಟಿಲು, ನಾಮಕರಣ, ಲಿಂಗಧಾರಣ, ವಿವಾಹ ಮಹೋತ್ಸವ ಇತ್ಯಾದಿ ಕಾರ್ಯಕ್ರಮಗಳು ಪುರಾಣ ಪ್ರವಚನದ ಅಂಗವಾಗಿದ್ದವು. ಪ್ರವಚನವು ಆರು ತಿಂಗಳವರೆಗೂ ನಡೆದಿತ್ತು. ಈ ಸಮಾರಂಭದ

ಭಾವುಕ ಸಂದರ್ಭವೊಂದನ್ನು ಚಾರಿತ್ರಿಕ ಕಾರಣಕ್ಕಾಗಿ ಇಲ್ಲಿ ಗಮನಿಸಬಹುದು.

“ಮುರಗೋಡದ ಮಹಾನ್ ತಪಸ್ವಿ, ತ್ರಿಕಾಲ ಲಿಂಗಪೂಜಾನಿಷ್ಠೆಯ ಬಲದಿಂದ ಪವಿತ್ರ ಪರುಷಗಳನ್ನು ಹೊಂದಿದ ಶತಾಯುಷಿ, ಜಂಗಮ ಪುಂಗವ, ವೈರಾಗ್ಯವಿಭೂಷಿತ, ಶ್ರೀ ಶ್ರೀ ಮಹಾಂತ ಮಹಾಶಿವಯೋಗಿಗಳವರು (ಹೀಗೆ) ಅಪ್ಪಣೆ ಕೊಡಿಸಿದ್ದರು.

‘ಇದು ಮಹಾತ್ಮ ಬಸವಣ್ಣನವರ ಪುರಾಣ್ರೆಪಾ…. ಇದು ಅಂಥಿಂಥ ಪುರಾಣ ಅಲ್ರೆಪಾ ! ಇದು ಮಹಾಪುರಾಣ್ರೆಪಾ ಮೂರ್ನಾಲ್ಕು ತಿಂಗಳುಗಳ ಕಾಲ ವಿಧಿವತ್ತಾಗಿ ಇದನ್ನು ಪ್ರವಚನ ಮಾಡಬೇಕಾಗತೈತ್ರಪಾ ಕಾಂಡದಿಂದ ಕಾಂಡಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅನ್ನ ದಾಸೋಹ ನಡೆಯಿಸಿಕೊಂಡು ಹೋಗ ಬೇಕಾಗತೈತ್ರಪಾ…. ಒಟ್ಟಿನಲ್ಲಿ ಹೇಳಬೇಕೆಂದರೆ, ಪುರಾಣ ಮಂಗಲ ಕಾರ್ಯಕ್ರಮ ಜರುಗುವ ದಿನದೊಳಗಾಗಿ ಒಂದು ಲಕ್ಷ ತೊಂಭತ್ತಾರು ಸಾವಿರ ಗಣಂಗಳು ಪ್ರಸಾದ ವ್ಯವಸ್ಥೆಯನ್ನು ಭಕ್ತಿಪೂರ್ವಕವಾಗಿ ಮಾಡಬೇಕಾಗತೈತ್ರಪಾ !”- (ಶತಸಂಪದ, ಶಾಂತವೀರಪ್ಪ ಬೆಳ್ಳುಬ್ಬಿಯವರು, ಸ್ಮರಣ ಸಂಚಿಕೆ, ಬೆಳ್ಳುಳ್ಳಿಯವರು, ೧೯೦೭ರಲ್ಲಿ ಲಿಂಗೈಕ್ಯರಾದವರು. ಇವರು ಸ್ವತಃ ಈ ಪ್ರವಚನ ಸಂದರ್ಭದಲ್ಲಿ ಭಾಗವಹಿಸಿದ್ದರು) ಮುರುಗೋಡದ ಮಹಾಂತ ಶಿವಯೋಗಿಗಳ ಈ ಅಪ್ಪಣೆ ಪುರಾಣ ಪ್ರವಚನದ ಆ ಕಾಲದ ಪ್ರಭಾವ ಚಿತ್ರವನ್ನು

ಕೊಡುತ್ತದೆ.

ಈ ಪ್ರವಚನದ ಮತ್ತೊಂದು ವಿಶೇಷವೆಂದರೆ, ಬಸವಣ್ಣನವರ ಲಿಂಗದೀಕ್ಷಾ ಸನ್ನಿವೇಶವು ಪುರಾಣದಲ್ಲಿ ಬಂದಾಗ ಲಿಂಗ ಧರಿಸದೇ ಇರುವ ಲಿಂಗಾಯತರಿಗಾಗಿ ಲಿಂಗದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಮನೆ ಮಂದಿಯೆಲ್ಲಾ ಒಂದೇ

ಲಿಂಗವನ್ನು ಉಪಯೋಗಿಸುವ ಪದ್ಧತಿಹೋಗಿ ಪ್ರತಿಯೊಬ್ಬರೂ ಲಿಂಗಧಾರಣೆ ಮಾಡಿಕೊಳ್ಳಬೇಕೆಂಬ ಪ್ರಜ್ಞೆಯನ್ನು ಈ ಮೂಲಕ ತರಲಾಯಿತು. ಅದೇ ರೀತಿಯಾಗಿ ಬಸವಣ್ಣನವರ ವಿವಾಹ ಮಹೋತ್ಸವದ ಸನ್ನಿವೇಶವು ಸಾಮೂಹಿಕ ಉಚಿತವಿವಾಹವನ್ನು

ಏರ್ಪಡಿಸುವುದು ಬಡ, ದೀನದಲಿತ ಸಮುದಾಯಕ್ಕೆ ಈ ಮೂಲಕ ಆರ್ಥಿಕ ನೆರವು ಸಲ್ಲಿಸಿದಂತಾದುದು. ಪುರಾಣ ಪ್ರವಚನ ಶ್ರವಣ ಮಾಡಿದ ಪುಣ್ಯಮಾತ್ರ ದೊರೆಯುವುದಲ್ಲದೆ ಒಂದು ಅತ್ಯುತ್ತಮ ಸಮಾಜ ಕಲ್ಯಾಣಕಾರ್ಯವನ್ನು ಮಾಡಿದ

ಧನ್ಯತಾಭಾವವೂ ಸಂತೋಷವೂ ಇದರಿಂದ ಲಭ್ಯವಾಗುತ್ತಿತ್ತು !

ಸವದತ್ತಿ ಸುತ್ತ ಮುತ್ತಲಿನ ಹತ್ತೆಂಟು ಗ್ರಾಮಗಳ ಜನರು ಪ್ರತಿರಾತ್ರಿ ಮೂರ್ನಾಲ್ಕು ತಿಂಗಳುಗಳ ಕಾಲ ಪ್ರವಚನವನ್ನಾಲಿಸಲು ಬಂಡಿಗಳಲ್ಲಿ ಬರುತ್ತಿದ್ದರು. ದಾಸೋಹಕ್ಕಾಗಿ ತಮ್ಮ ಭಕ್ತಿಸೇವೆಯನ್ನು ಸಲ್ಲಿಸಿ, ಸಂತುಷ್ಟರಾಗಿ ಹೋಗುತ್ತಿದ್ದರು. ಕೊಡುಗೈ ದೊರೆಗಳು ಮಹಾದಾನಿಗಳು, ಧನ ಧಾನ್ಯ ವಸ್ತುಗಳನ್ನು ಭಕ್ತಿಭಾವದಿಂದ ಮಠಕ್ಕೆ ಅರ್ಪಿಸುತ್ತಿದ್ದರು. ಮೂರು ನಾಲ್ಕು ತಿಂಗಳವರೆಗೆ ನಡೆದ ಈ ಮಹಾಪುರಾಣ ಪ್ರವಚನದ ಆರಂಭದಿಂದ ಮಂಗಲ ಮಹೋತ್ಸವದವರೆಗೆ ದಾನ ಶಿಖಾಮಣಿ

ಬೆಳ್ಳುಬ್ಬಿ ಶಾಂತವೀರಪ್ಪನವರು ಪ್ರತಿನಿತ್ಯದ ಪ್ರಸಾದ ವಿತರಣೆಯ ಕಾರ್ಯವನ್ನು ನಿರ್ವಿಘ್ನವಾಗಿ ಸಾಗುವಲ್ಲಿ ವಿಶೇಷ ಲಕ್ಷ್ಯವಹಿಸಿದ್ದರು.

ಪ್ರತಿದಿನ ಭಜನೆ, ಕೀರ್ತನೆ, ವಿದ್ವತ್‌ಪೂರಿತ ಭಾಷಣಗಳು, ಗಾಯನ, ಶಿವಾನುಭವ, ಸಮಾಜ ಸೇವಾ ನಿರತ ಗಣ್ಯರಿಗೆ ಸನ್ಮಾನ ಪ್ರವಚನದ ಮಂಗಲ ಮಹೋತ್ಸವದ ಶುಭ ಸಮಾರಂಭಕ್ಕೆ ಅಥಣಿಯ ಗಚ್ಚಿನಮಠದ ತಪಸ್ವಿ, ವೈರಾಗ್ಯಮೂರ್ತಿ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಸಾನಿಧ್ಯ- ವಹಿಸಿಲೆಂದು ಆಗಮಿಸಿದ್ದರು. ಈ ಸಮಾರಂಭದ ಸಮ್ಮುಖ ವಹಿಸಲು ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಗಂಗಾಧರ ಮಹಾಸ್ವಾಮಿಗಳು, ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಮೊದಲಾದ ಅನೇಕ ದೇಶೀಕೋತ್ತಮರು ಆಗಮಿಸಿದ್ದರು.

ಅಭೂತಪೂರ್ವವಾಗಿದ್ದ ಈ ಕಾರ್ಯಕ್ರಮದ ಮಂಗಲ ಮಹೋತ್ಸವಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಬಹುದೆಂದು ನಂಬಲಾಗಿತ್ತು ಆದ್ದರಿಂದ ಮಹಾಪ್ರಸಾದದ ಸಮಗ್ರ ವೆಚ್ಚವನ್ನು ತಾವೇ ಭರಿಸುವುದಾಗಿ ಶ್ರೀಗಳಿಂದ ಅಪ್ಪಣೆ  ಪಡೆದಿದ್ದ ಶಾಂತವೀರಪ್ಪ ಬೆಳ್ಳುಬ್ಬಿಯವರು ೬೦ ಚೀಲ ಸಕ್ಕರೆ ಬಳಸಿ ಪ್ರಸಾದದ ವ್ಯವಸ್ಥೆ ಮಾಡಿದ್ದರು. ಈ ಸಮಾರಂಭ ಎಷ್ಟೊಂದು ಅದ್ದೂರಿಯಾಗಿತ್ತೆಂದರೆ ಕಿತ್ತೂರು ಶಾಲೆಯ ಉಪಶಿಕ್ಷಕರಾದ ಚನ್ನಬಸಪ್ಪನವರ ಮಗ ಬಸವ ಕವಿ ಒಂದು ಖಂಡಕಾವ್ಯವನ್ನೇ ಬರೆದಿದ್ದ. ಈ ಖಂಡಕಾವ್ಯ ಆ ಕಾಲದ ಈ ಘಟನೆಯ ಸ್ಥೂಲ ಚಿತ್ರವನ್ನು ಕೊಡುತ್ತದೆ. ಅದರ ಮುಖ್ಯಾಂಶಗಳು ಇಲ್ಲಿವೆ.

|| ಶ್ರೀ ಗುರು ಪ್ರಸನ್ನ ||

ಶ್ರೀಮತ್ ಸಚ್ಚಿದಾನಂದ ಪರಶಿವ ಮೂರ್ತಿಗಳಾದ ಸವದತ್ತಿ ಕಲ್ಮಠಾಧೀಶ

ಶ್ರೀ ಕುಮಾರ ಸ್ವಾಮಿಗಳವರ ಬೆಳೆಯಿಸಿದ ಶ್ರೀ ಬಸವೇಶ್ವರ ಪುರಾಣ

ಸಂಭ್ರಮಾತಿಶಯದ ವರ್ಣನಾ ಪರ-

ಕಂ |

ರುದ್ರಾಕ್ಷ ಭರಿತ ಕಂಠರ್ |

ಭದ್ರಪದ ಭಸ್ಮ ಭಸಿತ ಫಾಲರ್ ಶೀಲರ್ |

ಚಿದ್ರೂಪಮಿತ್ರ ನೇತ್ರನ |

ತದ್ರೂಪದೊಳೀ ಕುಮಾರ ಸ್ವಾಮಿಗಳೆಸೆವರ್ ||

ಸುಕುಮಾರಸ್ವಾಮಿಗಳವರ್

ಪ್ರಕಟಸಲೀ ಧರ್ಮಪಾಲ ಸಜ್ಜನರೆಲ್ಲರ್ |

ಅಕಳಂಕ ಬಸವ ಸಂಭ್ರಮ |

ವಖಿಲರ್ ತಲೆದೂಗುವಂತೆಗೈದರ್ ತ್ವರೆಯಿಂ ||

ಪಟ್ಟಣದೊಳಗಿನ ಧನಿಕರ

ಸೆಟ್ಟರ ಸಜ್ಜನರ ದೇವ ನಿಷ್ಠಾಪರರಾ

ದಿಟ್ಟರ ಸಹಾಯ ದಿಂದಂ

ನೆಟ್ಟಗೆ ಸತ್ಕಾರ್ಯಗೈದು ಪ್ರಕಟಿತರಾದರ್

ವಸುಧೆಯು ಬೆರಗಾಗುವ ತರ |

ಮೆಸೆವಾ ಸವದತ್ತಿ ಕಲ್ಲಮಠದೊಳು ನಿಜದಿಂ |

ದಸಮ ಸುಕುಮಾರ ಕರುಣದೆ |

ಬಸವೇಶ ಪುರಾಣ ಸಂಭ್ರಮಂ ಬೆಳೆಸಿದಪರ್

ಸವದತ್ತಿಯ ಕಡಲೊಡಲೊಳ್ |

ಭಾ |

ಅಥಣಿಯ ಮುರುಘ್ರೇಂದ್ರ ಸ್ವಾಮಿ ಗ

ಳತಿ ವಿಶಾಲ ಭ್ರೂಲತಾಂತ |

ರ್ಗತ ವಿರಕ್ತ ಸ್ತೋಮದಿಂ ಗುರುಸಿದ್ದ ಸ್ವಾಮಿಗಳೂ

ಪ್ರಥಿತ ಬೀಳೂರರ್ಮಠದ ಸ್ವಾಮಿ

ಳತಿ ಸುಶೀಲಾಭರಣ ನಿಷ್ಟಾ |

ಯುತ ಮಹಾ ಯೋಗೀಂದ್ರರಾ ಹಾನ್ಗಲ್ಲ ಸ್ವಾಮಿಗಳೂ

ವ |

ಇಂತುಮಲ್ಲದೆಯುಂ ಕಂತುಹರ ಸ್ವರೂಪಿಗಳಾದ ಕಲ್ಬುರ್ಗಿ

ಶಿರ್ಶಿಯಾದವಾಡ ಗದಗಾದ್ಯನಂತ ಮಠಾಧ್ಯಕ್ಷ

ರಂ ಗಣನಾತೀತ ಪಟ್ಟಚರ ಮೂರ್ತಿಗಳುಂ ವೇದಶ್ರುತಿ

ಸ್ಮೈತಿ ಶಾಸ್ತ್ರ ಪುರಾಣೇತಿಹಾಸ ನ್ಯಾಯ ತರ್ಕ ಮೀಮಾಂ

ಸಾದ್ಯಸಂಖ್ಯ ವಿಷಯವೇತ್ತ ವಿದ್ವನ್ಮುಕುಟ ಮಣಿಗಳುಂ

ಸಮ್ಮಿಳಿತ ಮಹೋದ್ಯೋಗಿವರ್ಯ ಸಂದರ್ಶಾನುಲಾಭೇಚ್ಛೆ

ಯಿಂ ಏತತ್ಪುರಾಣ ಮಹೋತ್ಸವ ದರ್ಶನಾಪೇಕ್ಷೆಯಿಂ

ಮತ್ತ ಮಾತ್ಮೀಯ ಧರ್ಮ ವಿಷಯೋಪನ್ಯಾಸಮಂಗೆಯ್ಯು

ವಾಕಾಂಕ್ಷಿಯಿಂದ ಮೈತಂದು ಅತಿ ಪ್ರಚಂಡ ಸಭಾಸ್ಥಾ

ನಮಂ ಸೇರಿ ಕೊಂಡಾಗಳ್

ಮ |

ಇದು ಸತ್ತಾಪಸವೃಂದವೋ ಪರಿಕಿಸಲ್ ಸನ್ಯಾಸಮು

ಹೃದೋ | ಇದು ಮಾಹೇಶ್ವರ ಸಂಘಮೋ ಮುನಿಜನಂ ಸಂ

ವರ್ತ ಸುಕ್ಷೇತ್ರಮೋ || ಇದು ಋಷ್ಯಾಶ್ರಮ ಮೋ ಮಹ

ತ್ಪ್ರಮಥಾಧರಾದೇದೀಪ್ಯ ಸಮ್ಮೇಳನವೋ | ಇದು ಕೈಲಾಸವೋ

ಯೋಗಿವರ್ಯ ಮಿಳಿತಂ ಸವದತ್ತಿಯೋ ಮಿತ್ರ ಪೇಳ್ ||

ವ |

ಪ್ರತ್ಯಕ್ಷ ಕೈಲಾಸದೊಲ್ ಸಿಂಗರದಿಂ ಕಂಗೊಳಿಪಯೋ

ಗಿಜನ ಸಾಮುಹ್ಯದೊಳ್

ಕಂ |

ವರ ವೀರಶೈವ ಧರ್ಮೊತ್

ಪರಿಷದ್ಬಹು ಭವ್ಯವಾದ ಹೊಸಮಠದೊಳು ತಾಂ |

ಜರುಗಿದುದು ಪಂಡಿತಾಗ್ರೇ

ಸರರ್ಣೆಯ್ಯುವ ಧರ್ಮ ವಿಷಯ ಚರ್ಚೆಗಳಿಂದಂ   

ರ |                 

ಮುತ್ತಿನ ಗುಚ್ಛಂಗಳು ತೂಗುತಿರಲ್ |

ಚಿತ್ರಿತ ಪಲ್ಲಕ್ಕಿಯು ಹೊಳೆಯುತಿರಲ್

 ಉತ್ತಮ ಹೊತ್ತಿಗೆಯದರೊಳ್ ಬೆಳಗಲ್                    

ಸುತ್ತಲುಯುತ್ಸವಮೆಸೆದುದುಮಿರಳೊಳ್ ||

ಬಂದನಿತು ಜನಕೆ ತಪ್ಪದೆ |

ಕುಂದಿನಿತುಂ ಬಾರದಂತೆ ಮುದವೆರ್ಚುವವೊಲ್ |

ಚಂದಾದ ಪ್ರಸ್ಥಮಾದುದು |

ಸುಂದರ ಸುಕುಮಾರ ಕರುಣದಿಂದಂ ನಿಜದಿಂ ||

ಸನ್ನುತ ವಿದ್ವಜ್ಜನರಿಗೆ |

ಮನ್ನಣೆಯಿಂ ಮೆಚ್ಚುಗೊಡುತ ಮಾದರಿಸಿದರಿಂ

ಉನ್ನತ ಕೀರ್ತಿಯ ಪಡೆದರ್ |

ಚಿನ್ಮಯರೀಧರ್ಮ ಕೃತ್ಯಮೇನತಿಶಯಮೋ ||

ಚಂ  |   

ಪರಹಿತ ಚಿಂತನಾತ್ಮ ತವ ವಂಶಲತಾಂಕುರ ಮೇಳುಂ ಸತ್ವರು |

ಸುರಚರ ಪತ್ರಪುಷ್ಟ ಫಲಬಾರದೆ ತೂಗುತೆ ಪೃಥ್ವಿ ಮಂಟಪಾಂ

ತರದೋಳೆ ಪೂರ್ಣ ಪರ್ಬುಗೆ ಯಶೇರ್ಣವ ಮುರ್ಕುಗೆ ಸರ್ವ

ಸಂಭ್ರಮಂ |

ನಿರುತದಿ ತೊಗೆಯಾಯುವತಿವರ್ಧಿಕೆ ಸಂತತ ಸೌಖ್ಯವೆರ್ಚುಗೆ ||

 ಕಂ |  

ನೀರಕ್ಷೀರ ನ್ಯಾಯದೆ

ಸೂರಿಗಳೇ ಪದ್ಯ ಪಠನವವಧರಿಸುತ್ತಂ !  

ದೂರುವ ಮತಿಯಂದೋರದೆ |

ತೋರುವದೈ ದೋಷಮಂ ನಿಜಾಂತರ್ಮಾನದಿಂ

ಇಂತಿಲ್ಲಿಗೆ ಶ್ರೀ ಬಸವಪುರಾಣ ಸಂಭ್ರಮಾತಿಶಯ ವರ್ಣನಾಪರ

ಪದ್ಯತಾರಾವಳಿಯು ಬಸವೇಶ್ವರ ಕಾರುಣ್ಯದಿ…. ಸಂಪೂರ್ಣಮಕ್ಕುಂ

ಇಂಥ ಅಪರೂಪದ ಸಂಧಿ ಸಂದರ್ಭವನ್ನುಂಟು ಮಾಡಿದ್ದ ಸವದತ್ತಿ ಕಲ್ಮಠದ ಬಸವಪುರಾಣ ಪ್ರವಚನವು ಹಲವು ಚಾರಿತ್ರಿಕ ಘಟನೆಗಳಿಗೆ ಕಾರಣವಾಯಿತು. ಕಾಲ ಇಂಥ ಒಂದು ಘಟನೆಯ ನಿರೀಕ್ಷೆಯಲ್ಲಿತ್ತು; ಅದು ಸವದತ್ತಿಯ ಕಲ್ಮಠದಲ್ಲಿ ಜರುಗಿತು.

ಚಿತ್ರದುರ್ಗದ ಬೃಹನ್ಮಠಕ್ಕೆ ಜಯದೇವ ಮಹಾಸ್ವಾಮಿಗಳು ಪೀಠಾಧಿಕಾರಿಯ ಗಳಾಗಲಿದ್ದಾರೆ ಎಂಬ ಸೂಚನೆಯನ್ನು ಅಥಣಿಯ ಮುರುಘ್ರೇಂದ್ರ ಮಹಸ್ವಾಮಿಗಳು ಭವಿಷ್ಯ ನುಡಿದದ್ದು (ಮುಪ್ಪಿನೇಂದ್ರ ಮಹಾಸ್ವಾಮಿಗಳ ಲಿಂಗೈಕ್ಯದಿಂದ ತೆರವಾಗಿದ್ದ

ಚಿತ್ರದುರ್ಗ ಬೃಹನ್ಮಠದ ಪೀಠಾಧಿಕಾರವು ಶಾಲಿವಾಹನ ಶಕೆ ೧೮೨೫ ನೇ ಶೋಭನಕೃತು ನಾಮ ಸಂವತ್ಸರ ಕಾರ್ತಿಕ ಶುದ್ಧ ತ್ರಯೋದಶಿ- ೩-೧೧-೧೯೦೩ ರಂದು ಜಯದೇವ ಮಹಾಸ್ವಾಮಿಗಳವರಿಗೆ ಒಲಿದು ಬಂದಿತು) ಶ್ರೀ ಶಿವಬಸವ ಮಹಾಸ್ವಾಮಿಗಳನ್ನು ಹಾವೇರಿಯ ಹುಕ್ಕೇರಿಮಠದ ಪೀಠಾಧಿಕಾರಕ್ಕೆ ನಿಯುಕ್ತಗೊಳಿಸಬೇಕೆಂಬ ಪ್ರಸ್ತಾಪ ಬಂದದ್ದು ಈ ಪುರಾಣ ಪ್ರವಚನ ಸಂದರ್ಭದಲ್ಲಿ, ಮುಖ್ಯವಾಗಿ ಗಿಲಿಗಿಂಚಿ ಗುರುಸಿದ್ದಪ್ಪ ಮತ್ತು ಅರಟಾಳ ರುದ್ರಗೌಡರಿಂದ ಆರಂಭವಾಗಿದ್ದ ಲಿಂಗಾಯತ ವಿದ್ಯಾಭಿವೃದ್ಧಿ ಫಂಡ್ ಗಮನಾರ್ಹವಾಗಿ ಬೆಳೆಯ ತೊಡಗಿತ್ತು. ಗಿಲಗಂಚಿಯವರ ನಿಧನಾನಂತರ ಅರಟಾಳ ರುದ್ರಗೌಡರು, ಸಿರಸಂಗಿ ಲಿಂಗರಾಜರು, ವಂಟಮುರಿ ದೇಸಾಯಿಯವರು ಫಂಡ್‌ಗೆ ವಿಶೇಷ ಚಾಲನೆ ನೀಡಿದ್ದರು. ಈ ಫಂಡ್ ಅಪ್ರಮಾಣವಾಗಿ ಬೆಳೆಯುತ್ತ ಹೋದಂತೆ, ವೀರಶೈವರಲ್ಲಿ ವಿದ್ಯಾವೈಖರಿಯು ಹೆಚ್ಚಾಗ ತೊಡಗಿತ್ತು.

 ಸಮಾಜದ ಉನ್ನತಿಗೆ ವಿದ್ಯೆಯೇ ಮೊದಲಾಗಬೇಕು ಎಂದು ಸದಾ ಚಿಂತಿಸುತ್ತಿದ್ದ ಹಾನಗಲ್ಲ ಕುಮಾರ ಸ್ವಾಮಿಗಳೂ ಮತ್ತು ಇಂಥ ಅಭಿಪ್ರಾಯವನ್ನೇ ಹೊಂದಿದ್ದ ಸಮಾಜದ ಗಣ್ಯರು ಇಂಥ ಪ್ರಸ್ತಾಪವನ್ನು ಒಂದು ಕ್ಲುಪ್ತ ಸಂದರ್ಭದಲ್ಲಿ ಸಂಧಿಗೆ ಬರಲು ಕಾಲ ಕಾಯುತ್ತಿತ್ತು. ವಿದ್ಯೆಯ ಅನುಕೂಲ ಕನ್ನಡನಾಡಿನ ಒಂದು ಪ್ರಾಂತದ ಸಮಾನಚಿಂತಕರಲ್ಲಿ ತ್ಯಾಗಜೀವಿಗಳಿಂದ ಆಗುತ್ತಿರುವಂತೆಯೇ ಇದು ವಿಸ್ತಾರಗೊಳ್ಳಬೇಕೆಂದು ಅವರ ಮಹದಾಸೆಯಾಗಿತ್ತು. ಹಾನಗಲ್ಲ ಕುಮಾರ ಸ್ವಾಮಿಗಳು ವಿರಕ್ತ ಪಟ್ಟಾಧಿಕಾರ ವಹಿಸಿಕೊಳ್ಳುವವರೆಗಿನ ಅವರ ಬದುಕಿನಲ್ಲಿ ವಿದ್ಯೆಯ ಜೊತೆಗೆ ಸಮಾಜದ ಒಟ್ಟು ಉದ್ದಾರವಾಗುವುದರ ಕಡೆಗೆ ಚಿಂತನೆ ನಡೆಸುತ್ತಿದ್ದರು. ವೀರಶೈವ ಧರ್ಮದ ಉದ್ಧಾರ ದಿಂದ ಸಮಗ್ರ ಸಮಾಜದ ಉದ್ಧಾರವಾಗುವ ವಿಚಾರ ಆಗ ಮೂಡಿದ್ದು ಇಲ್ಲಿ ವಿಶೇಷ.

ಅರಟಾಳ ರುದ್ರಗೌಡರು, ಸಿರಸಂಗಿ ಲಿಂಗರಾಜರು ಈ ಕುರಿತು ಆಲೋಚಿಸಿ, ವಿದ್ಯಾಭಿವೃದ್ಧಿಗೆ ಕೈಗೊಳ್ಳಬೇಕಾದ ಯೋಜನೆಗಳಿಗೆ ಸಂಬಂಧಿಸಿದಂತೆ ಸಲಹೆ ಸೂಚನೆ, ಮಾರ್ಗದರ್ಶನ, ಆಶೀರ್ವಾದಕ್ಕಾಗಿ ಹಾನಗಲ್ಲ ಕುಮಾರ ಸ್ವಾಮಿಗಳನ್ನು ಸಂಪರ್ಕಿಸಿದ್ದರು. ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದಾಗ, ‘ಭಕ್ತ ಶ್ರೇಷ್ಠರೇ ! ಪರಮಪಾವನಕರವೂ, ಮೋಕ್ಷೈಕ  ಸಾಧನೀಭೂತವೂ ಆದ ನಮ್ಮ ವೀರಶೈವಮತದ ಉತ್ಕರ್ಷವನ್ನು ಚಿಂತಿಸುವ ನಿಮ್ಮ ಆಲೋಚನೆಗಳು ಸರ್ವಜನ ಸಮಂಜಸವಾಗಿರುವವು. ಇದೇ ವಿಚಾರಗಳು ನನ್ನ ಮನೋಬುದ್ಧಿಯಲ್ಲಿಯೂ ತೆರೆಗಳಂತೆ ತೇಲಾಡಹತ್ತಿವೆ. ಮಹನೀಯರ

ಮನಸ್ಸಿನಲ್ಲಿ ತೇಲಾಡುತ್ತಿರುವ ವಿಚಾರ ತರಂಗಗಳನ್ನು ಎತ್ತಿಹಿಡಿಯಲಿಕ್ಕೆ ಮಹೇಶ್ವರನು ತತ್ಪರನಿರುವನು, ನಿಮ್ಮ ಪ್ರಚಂಡ ಸಾಹಸವನ್ನು ಮತ ಸುಧಾರಣಾ ತತ್ಪರತೆಯನ್ನು ಕಂಡು ನನಗೆ ಪರಮಾನಂದ ವಾಗಿರುತ್ತದೆ. ವೈದ್ಯ ಹೇಳಿದ್ದು ಹಾಲೋಗರ ರೋಗಿ ಬಯಸಿದ್ದು ಹಾಲೋಗರ ಎಂಬಂತೆ ಉಭಯತಾಪಿ ವಿಚಾರಗಳು ಒಂದೇ ಆಗಿ, ನಮ್ಮ ಮನೋದಯ ಸಿದ್ದಾರ್ಥಗಳನ್ನೇ ಸೂಚಿಸುತ್ತವೆ. ಪೂರ್ವದಲ್ಲಿ ಅನೇಕ ಮತಗಳು ತೀರ ಮುರಕಳಿಗೆ ಬಂದಿರಲು, ನಿಮ್ಮಂತಹ ಅಸಹಾಯ ಶೂರರಾದ ಕೆಲಮತಾಭಿಮಾನಿಗಳುದಿಸಿ, ರಾಜಾಶ್ರಯವನ್ನು ಸಂಪಾದಿಸಿ ಅಲ್ಲಲ್ಲಿಗೆ ಧರ್ಮ ಸಭೆಗಳನ್ನೇರ್ಪಡಿಸಿ, ತಂತಮ್ಮ ಮತಗಳನ್ನು ಜೀರ್ಣೋದ್ಧಾರ ಮಾಡಿ ಅವುಗಳನ್ನು ಪೂರ್ವದ ಸ್ಥಿತಿಗೆ ತಂದು, ಅಥವಾ ಇನ್ನಿಷ್ಟು ಪ್ರಕಾಶಿಸುವಂತೆ ಮಾಡಿ, ಅಕ್ಷಯಕೀರ್ತಿಯನ್ನು ಸಂಪಾದಿಸಿದರು…. ಮತ ಸುಧಾರಣೆಯ ಉತ್ಕಟೇಚ್ಛಗಳೂ, ಕೇವಲ ಮತೋನ್ನತ ಕಾರ್ಯದಲ್ಲಿಯೇ ತನುಮನಧನದಿಂದ ಸಾಹಸವಂತರಾಗಿ, ಇದಕ್ಕಾಗಿಯೇ ಆಯುಷ್ಯವನ್ನು ಬುದ್ಧಿಯನ್ನು

ವ್ಯಯಮಾಡುತ್ತಿರುವ ನಿಮ್ಮಂತಹ ಕಟ್ಟಭಿಮಾನಿಗಳೂ ಮತೋನ್ನತಿಯ ಕಾರ್ಯಭಾಗದಲ್ಲಿ ಭಾಂಡಾರರನ್ನು ಬಿಚ್ಚಿ ಬಿಡುವ ನಿಮ್ಮಂತಹ ವಿತರಣಶಾಲಿಗಳಾದ ಸಂಸ್ಥಾನಿಕರೂ ಇದ್ದ ಮೇಲೆ ಬೇಕಾದ ಕೆಲಸವನ್ನು ಮಾಡಬಹುದು. ಈ ಪುಣ್ಯ ಕಾರ್ಯವು ಸುಲಭವಾಗಿ ನೆರವೇರುವದಾಗಿ ಗುರ್ವಾಶೀರ್ವಾದವುಂಟು” (ಅರಟಾಳ ರುದ್ರಗೌಡರ ಚರಿತ್ರೆ, ಬಸವಯ್ಯ ಹಿರೇಮಠ) ಬ್ರಿಟಿಶ್ ಆಧಿಪತ್ಯದಿಂದ ಶಿಕ್ಷಣದ ಅನುಕೂಲ  ಪ್ರತಿಕೂಲ ಪರಿಣಾಮವಾಗಿ ಸುರಕ್ಷಿತ ಭಾರತೀಯ ವರ್ತನೆಗಳು ಆತಂಕಕಾರಿಯಾಗೇನೋ ಇದ್ದವು. ! ಆದರೆ, ಸ್ವಾವಲಂಬಿ ಚಿಂತನೆ ಮಾಡಿದ ಕೆಲವು ಸಂಘಟನೆಗಳು ಕೆಲವು ಪ್ರಯತ್ನಗಳನ್ನು ಮಾಡಿದ್ದವು. ಆಂಧ್ರರಾಜ್ಯದ ಗಾಜುಲು ಎನ್ನುವವರು ೧೮೮೪ ರಲ್ಲಿ “ಕ್ರೆಸೆಂಟ್’ ಎಂಬ ಆಂಗ್ಲ ಪತ್ರಿಕೆಯನ್ನು ಹೊರ ತರುವುದರ ಮೂಲಕ ದೇಶೀಯತೆ, ರಾಷ್ಟ್ರಾಭಿಮಾನಕ್ಕೆ ಸಂಬಂಧಿಸಿದ ಲೇಖನ ಬರೆದು ಜಾಗೃತಿಯನ್ನು ಪ್ರಚೋದಿಸಿದ್ದರು. ೧೮೫೨ ರಲ್ಲಿ ಮದ್ರಾಸ್ ದೇಶೀಯ ಸಂಘ’ ವೂ ಸ್ಥಾಪಿತವಾಗಿ ಶಾಲೆಗಳಲ್ಲಿ ಬೈಬಲ್‌ನ್ನು ಪಠ್ಯವಾಗಿಡುವುದನ್ನು ತಪ್ಪಿಸಿದ್ದಲ್ಲದೆ, ಕ್ರೈಸ್ತರಾಗಿ ಮತಾಂತರಗೊಂಡವರಿಗೆ ಅವಿಭಕ್ತ ಕುಟುಂಬದಲ್ಲಿ ಪಾಲು ಬೇಕೆಂಬ ಹಕ್ಕನ್ನು ತಿರಸ್ಕರಿಸುವಂತೆ ಮಾಡಿದ್ದರು. ಜನತೆಯ ಒಲವು ನಿಲುವುಗಳನ್ನು ಅರಿತ ಈ ಮುಖಂಡರು ೧೮೮೪ ರಲ್ಲಿ ಮದ್ರಾಸ್ ಮಹಾಜನ ಸಭೆ’ ಸ್ಥಾಪಿಸಿದ್ದರು. ಮೈಸೂರು ಪ್ರಾಂತದಲ್ಲಿ ದಿವಾನ್ ರಂಗಾಚಾರ್ಯ ಅವರು ೧೮೮೧ ರಲ್ಲಿ ಪ್ರಜಾಪ್ರತಿನಿಧಿ ಸಭೆ’ ಸ್ಥಾಪಿಸಿದ್ದರು. ೧೮೧೬ ರಲ್ಲಿ ಸೋಲಾಪುರದಲ್ಲಿ ಸ್ಥಾಪನೆಯಾಗಿದ್ದ ‘ಸಾರ್ವಜನಿಕ ಸಭೆ’ಯ ಅಧ್ಯಕ್ಷರಾಗಿದ್ದವರು ವಾರದ ಮಲ್ಲಪ್ಪವರು. ೧೯೦೨ ರಲ್ಲಿ ರಾಷ್ಟ್ರೀಯ ಮಹಾಸಭೆಯ ಪ್ರಾಂತೀಕ ಸಭೆ ಕರೆದಾಗಲೂ ವಾರದ ಮಲ್ಲಪ್ಪನವರೇ ಮುಂಚೂಣಿಯ ವ್ಯವಸ್ಥೆ ಮಾಡಿದ್ದರು. ಇಂಥ ಹಲವು ಸಭೆಗಳು ಸ್ಥಾಪಿತವಾಗಿ ಸಾರ್ವತ್ರಿಕವಾಗಿ ತೊಡಗಿಸಿಕೊಂಡಿದ್ದವು.

 ಸಕಾಲಿಕವಾದ ಒಂದು ಒತ್ತಾಯಕ್ಕೆ ಆ ಕಾಲದ ವೀರಶೈವರು ಅತ್ಯವಶ್ಯಕ ಸ್ಪಂದಿಸಬೇಕಾದ ಅವಶ್ಯಕತೆಗಳು ಮುಖ್ಯವಾಗಿ, ಲಿಂಗಾಯತರು ಹಿಂದೂಸಮಾಜದ ಒಂದು ಉಚ್ಚವರ್ಗದವರಿರುತ್ತಾರೆ ಎಂಬುದನ್ನು ಸಿದ್ಧ ಪಡಿಸುವುದು, ಲಿಂಗಾಯತರ

ಮುಖ್ಯ ವಿರಕ್ತ ಸ್ವಾಮಿಗಳ ಮಠಗಳ ಅಧಿಕಾರಿಗಳಿಗೆ ಅಡ್ಡಪಾಲಿಕೆಯಲ್ಲಿ ಸಂಚರಿಸುವ ನಷ್ಟವಾದ ಹಕ್ಕನ್ನು ಪುನಃ ದೊರಕಿಸಿಕೊಡುವುದು ಮತ್ತು ಶ್ರೀಮದ್ವೀರಶೈವ ಮಹಾಸಭೆಯ ಸ್ಥಾಪನೆ.

ಇಂಥ ಅಗತ್ಯ , ಅವಶ್ಯಕ ಕಾರ್ಯಗಳು ಧಾರ್ಮಿಕಸಮಾಜದ ಅಭಿವೃದ್ಧಿಗೆ  ಪ್ರಮುಖವಾಗಿದ್ದವು. ಮುಖ್ಯವಾಗಿ ಶಿಕ್ಷಣದ ಅನುಕೂಲ ಒದಗಿಸುವುದರ ಮೂಲಕ ವೀರಶೈವರನ್ನೂ ಅಭಿವೃದ್ಧಿಗೊಳಿಸಬೇಕೆಂಬ ಅರಟಾಳ ರುದ್ರಗೌಡರಂಥವರ

ಯೋಚನೆಗಳು ಒಟ್ಟು ವೀರಶೈವರ ಸ್ಥಿತಿಗತಿಗಳನ್ನು ಸುಧಾರಿಸಿ ಸಮಗ್ರ ಅಭಿವೃದ್ಧಿಯನ್ನುಂಟು ಮಾಡಿ ಅದಕ್ಕೊಂದು ಸಾಂಸ್ಥಿಕ ಸ್ವರೂಪದ ವೇದಿಕೆಯನ್ನು ಕಲ್ಪಿಸಬೇಕೆಂಬ ಹಾನಗಲ್ಲ ಕುಮಾರ ಸ್ವಾಮಿಗಳ ಯೋಚನೆಗಳು ಸಮ್ಮಿಲನಗೊಂಡವು. ಇದು ಸಾಕಾರಗೊಳ್ಳುವ ಅವಕಾಶ ಸವದತ್ತಿ ಪುರಾಣ ಮಂಗಲೋತ್ಸವದಂದು ನೆರವೇರಿತು.

ಇಂಥ ಹಿನ್ನೆಲೆಯಲ್ಲಿ ಮತ್ತು ಇದೇ ಸಂದರ್ಭದಲ್ಲಿ ಧಾರವಾಡದಲ್ಲಿ ಸ್ಥಾಪನೆಯಾಗಿದ್ದ ‘ವೀರಶೈವ ಮತ ಪ್ರಚಾರಕ ಸಂಘ’ವು ಕೆಲವು ಸ್ಥೂಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು ವಿವಿಧ ಪ್ರಾಂತಗಳಲ್ಲಿದ್ದ ವೀರಶೈವರು ತಮ್ಮ ಸೀಮಿತ ವಲಯಗಳಲ್ಲಿ

ಸಮಾಜೋನ್ನತಿಯ ಕಾರ್ಯಗಳನ್ನು ಪೂರೈಸಿದ್ದರಾದರೂ ಒಂದು ನಿರ್ದಿಷ್ಟ ಸ್ಥಳದಲ್ಲಿ ಸೇರಿ ಧಾರ್ಮಿಕ ಮತ್ತು ವ್ಯವಹಾರಿಕ ವಿಷಯಗಳನ್ನು ಕುರಿತು ಪರ್ಯಾಲೋಚಿಸಿ, ಒಮ್ಮನಸ್ಸಿನಿಂದ ವರ್ತಿಸಿದರೆ ಸಮಾಜ ಸುಧಾರಣೆ ಆಗುವುದೆಂದು ಯೋಚಿಸುತ್ತಿದ್ದರು. ಈ ಸಂಬಂಧವಾಗಿ ತುಮಕೂರಿನ ಪಿ. ಮಹಾದೇವಯ್ಯ ಮತ್ತು ಹಾಸನದ ಜಿ. ಶಾಂತವೀರಪ್ಪನವರು ಜನವರಿ ತಿಂಗಳಲ್ಲಿ ಧಾರವಾಡಕ್ಕೆ ಆಗಮಿಸಿದ್ದರು. ಮೇ ತಿಂಗಳಲ್ಲಿ ಸಕಾಲಿಕವಾಗಿ ನಡೆದ ಸವದತ್ತಿ ಪುರಾಣ ಮಂಗಲ ಮಹೋತ್ಸವಕ್ಕೆ ವೀರಶೈವ ಮತ ಪ್ರಚಾರ ಸಂಘದವರು ಹೋಗಬೇಕಾಯಿತು.

ಅಲ್ಲಿ ಸೇರಿದ್ದ ಹಾನಗಲ್ಲ, ಹುಬ್ಬಳ್ಳಿ, ಅಥಣಿ ಮಠಾಧಿಪತಿಗಳು ಮತ್ತು ಮೊದಲಾದ ದೇಶಿಕೋತ್ತಮರು ಸಹಾ ಅಂಥ ಚರ್ಚೆಗೆ ಅಣಿಯಾಗಿದ್ದು, ಸ್ವತಂತ್ರ ಧರ್ಮಬೋಧಕರನ್ನು ನೇಮಿಸಬೇಕು” ಎಂದು ಸಹಾ ಯೋಚಿಸುತ್ತಿದ್ದರು.

ಈ ಕೆಲಸಕ್ಕೆ ಹಾನಗಲ್ಲ ಕುಮಾರ ಸ್ವಾಮಿಗಳು ತಮ್ಮ ತಪೋಮಹಿಮೆಯ ಹಸ್ತದಿಂದ ಒಂದು ನೂರು ರೂಪಾಯಿಗಳನ್ನು ಕೊಟ್ಟರು. ಇದರಿಂದ ಪ್ರೇರಿತವಾದ ಉಳಿದ ವೀರಶೈವ ಸಮಾಜದ ಗಣ್ಯರು ಎರಡು ನೂರು ರೂಪಾಯಿಗಳನ್ನು

ವರ್ಗಣಿಯಿಂದ ಕೂಡಿಸಿದರು. ಇದಾದ ಕೆಲವೇ ದಿನಗಳಲ್ಲಿ ಹುಬ್ಬಳ್ಳಿಯಲ್ಲಿ ಮೂರು ಸಾವಿರ ಮಠದ ಶ್ರೀಗಳವರ ಅಡ್ಡ ಪಲ್ಲಕ್ಕಿಯ ಉತ್ಸವವೂ ಆಯಿತು. ಈ ಉತ್ಸವಕ್ಕೆ ಬೇರೆ ಬೇರೆ ಪ್ರಾಂತಗಳಿಗೆ ಸೇರಿದ ವೀರಶೈವ ಸದ್ಗೃಹಸ್ಥರೂ ಬಂದಿದ್ದರು.

ಇವರೆಲ್ಲರೂ ಕೂಡಿ ಸಮಾಜ ಸುಧಾರಣೆಯ ಪ್ರಸ್ತಾಪವನ್ನು ಮತ್ತಷ್ಟು ತೀವ್ರವಾಗಿ ಚಿಂತನೆ ನಡೆಸಿದರು.

 ಪ್ರವಚನದಂಥ ಪುಣ್ಯ ಸಂದರ್ಭ’ ಹಾಗೂ ಉತ್ಸಾಹದಿಂದ ಸೇರಿದ್ದು ಸಮಾಜದ ಗಣ್ಯರನೇಕರ ಸಮ್ಮುಖದಲ್ಲಿ ಹಾನಗಲ್ಲ ಕುಮಾರಸ್ವಾಮಿಗಳ ಮನಸ್ಸಿನಲ್ಲಿ ಮನೆ ಮಾಡಿಕೊಂಡಿದ್ದ ವೀರಶೈವ ಸಮಾಜ ಸುಧಾರಣೆಯ ಪ್ರಸ್ತಾಪಕ್ಕೆ ಮುಹೂರ್ತ ಕೂಡಿತು, ಪ್ರತಿವರ್ಷವೂ ಸಮಾಜ ಸುಧಾರಣೆಯ ಪ್ರಸ್ತಾಪವನ್ನು ಮುಂದಿರಿಸಿಕೊಂಡು ‘ವೀರಶೈವ ಮಹಾಸಭೆ’ಯನ್ನು ಕರ್ನಾಟಕದ ವಿವಿಧ ಪ್ರಾಂತಗಳ ಪ್ರಸಿದ್ಧ ಪಟ್ಟಣಗಳಲ್ಲಿ ನೆರವೇರಿಸಬೇಕಂತಲೂ ಸಂಕಲ್ಪ ಮಾಡಿದರು. ಇದು ತ್ವರಿತಗತಿಯಲ್ಲಿ ನಡೆಯಬೇಕಾಗಿದ್ದರಿಂದ ಮೊದಲನೆಯ ಮಹಾಸಭೆಯನ್ನು ೧೯೦೩ನೇ ಇಸವಿಯ ಡಿಸೆಂಬರ್

ಕೂಡಿಸಬೇಕೆಂತಲೂ ತೀರ್ಮಾನಿಸಲಾಯಿತು,

ಹಾನಗಲ್ಲ ಕುಮಾರ ಸ್ವಾಮಿಗಳ ಆಶೀರ್ವಾದವನ್ನು ಪಡೆದುಕೊಂಡು ಅರಟಾಳ ರುದ್ರಗೌಡ, ಸಿರಸಂಗಿ ಲಿಂಗರಾಜ ಅವರು ಮುಂಬಯಿ, ಮೈಸೂರು, ಮದ್ರಾಸ್, ಹೈದರಾಬಾದ್, ವಾಯುವ್ಯ ಪ್ರಾಂತಗಳಲ್ಲಿರುವ ವೀರಶೈವ ಮುಖಂಡರಿಗೂ

ಮತಾಭಿಮಾನಿಗಳಿಗೂ ಪ್ರಸಿದ್ಧ ಪತ್ರಿಕೆಗಳಿಂದಲೂ ಮೈಸೂರ್ ಸ್ಟಾರ್ ಪತ್ರಿಕೆಗಳಿಂದಲೂ ಸ್ವತಂತ್ರ ಲೇಖನಗಳಿಂದಲೂ ತಿಳಿಸಿ ಪಂಚಸಿಂಹಾಸನಾಧಿಪತಿಗಳ ಹಾಗೂ ವಿರಕ್ತ ಪೀಠಾಧಿಪತಿಗಳ ಅನುಮತಿಯನ್ನು ಪಡೆದುಕೊಂಡು ಧರ್ಮಸಭೆಯನ್ನು ಭವ್ಯವಾಗಿ ಸೇರಿಸಬೇಕೆಂದು ಗೊತ್ತು ಮಾಡಿದರು. ಈ ಧರ್ಮಸಭೆಯಲ್ಲಿ ಧಾರ್ಮಿಕ, ಸಾಮಾಜಿಕ, ವ್ಯವಹಾರಿಕ, ಔದ್ಯೋಗಿಕ

ಮೊದಲಾದ ಗಹನ ವಿಷಯಗಳೆಲ್ಲವು ಚರ್ಚಿಸುವ ಮುಖ್ಯ ಉದ್ದೇಶವಿರುವುದರಿಂದ ಈ ಸಭೆಗೆ ‘ಶ್ರೀ ಮದ್ವೀರಶೈವ ಮಹಾಸಭೆ’ ಎಂಬ ಹೆಸರನ್ನಿಡುವಂತೆ ಯುಕ್ತಿಯುಕ್ತವಾಗಿ ನಿರ್ಣಯಿಸಲಾಯಿತು. (ಅರಟಾಳ ರುದ್ರಗೌಡ ಚರಿತ್ರೆ, ಬಸವಯ್ಯ ಹಿರೇಮಠ)

೧೯೦೩ರ ಡಿಸೆಂಬರ್ ತಿಂಗಳು ಮೊದಲ ಮಹಾಸಭೆ ಕೂಡಿಸುವ ನಿಶ್ಚಯವನ್ನು ಹಾನಗಲ್ಲ ಕುಮಾರ ಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಮಾಡಲಾಯಿತು. ಮಹಾಸ್ವಾಮಿಗಳು ಧಾರವಾಡಕ್ಕೆ ಕೂಡಲೆ ಆಗಮಿಸಿ ಭಕ್ತ ಜನರನ್ನು ಕರೆಸಿ, ಅವರಿಗೆ ಉತ್ತೇಜನ ಕೊಟ್ಟು ನಿಧಿ ಸಂಗ್ರಹಣ ಕಾರ್ಯದಲ್ಲಿ ತೊಡಗಿದರು. ಇದು ಮೇ ಮತ್ತು ಜೂನ್ ಮೊದಲವಾರಗಳಲ್ಲಿ ವ್ಯವಸ್ಥೆ ನಡೆದು ಆದರೆ ೧೯೦೩ ರ ಜೂನ್ ೨೨ ರಂದು ಪ್ರಕಟಣೆಯ ಪತ್ರಗಳನ್ನು ಹೊರಡಿಸಿ ಸಾರ್ವಜನಿಕರ ಗಮನಕ್ಕೆ  ತರಲಾಯಿತು. ಒಂದೆರಡು ತಿಂಗಳುಗಳ ನಂತರ ಮಹಾಸ್ವಾಮಿಗಳು ಪುನಃ ಬಂದು ಈ ಕಾರ್ಯಕ್ಕೆ ಧನ ಸಹಾಯವು ವಿಶೇಷವಾಗಿ ತೊಡಗಿಸಬೇಕಾಗಿದ್ದರಿಂದ ಬ್ಯಾಡಗಿ, ಹುಬ್ಬಳ್ಳಿ, ಮಹಾರಾಜ ಪೇಟೆ, ಸಂಶಿ, ಗರಗ, ಮುಮ್ಮಿಗಟ್ಟಿ, ಮುಂತಾದ ಗ್ರಾಮಗಳ ವೀರಶೈವರನ್ನು ಧನಸಹಾಯಕ್ಕೆ ಪ್ರೋತ್ಸಾಹಿಸಿದರು. ಸ್ವತಃ ಮಹಾಸ್ವಾಮಿಗಳು ಬ್ಯಾಡಗಿ, ಹಾವೇರಿ,

ದೇವಿಹೊಸೂರು, ಆಲೂರು, ಹಾನಗಲ್ಲು ಮುಂತಾದ ಸ್ಥಳಗಳಿಗೆ ಧನ ಸಂಚಯಾರ್ಥವಾಗಿ ತೆರಳಿದರು.

 ಹಿಂದೂಸ್ಥಾನ ಸರಕಾರದಿಂದ ಜನಾಂಗವರ್ಣನೆಯನ್ನು ಸಂಗ್ರಹಿಸುವ ಕೆಲಸಕ್ಕೆ ನೇಮಿಸಲ್ಪಟ್ಟಿದ್ದ ಎಂಥೋವನ್ ಸಾಹೇಬರನ್ನು ಅವಶ್ಯಕವಾದ ವಿವರಣೆಯನ್ನು ಸಂಗ್ರಹಿಸುವ ಕೆಲಸವು ಸುಸೂತ್ರವಾಗಿ ಸಾಗುವಂತೆ ಸರಾಗಗೊಳಿಸಿದರು. ೧೯೦೩ರ ಡಿಸೆಂಬರ್ ತಿಂಗಳಿನಲ್ಲಿ ಪ್ಲೇಗಿನ ಹಾವಳಿಯಿದ್ದುದರಿಂದ ೧೯೦೪ ಮೇ ತಿಂಗಳಲ್ಲಿ ಶ್ರೀ ಮದ್ವೀರಶೈವ ಮಹಾಸಭೆ ಸೇರಿಸುವ ನಿರ್ಣಯವಾಯಿತು.

“ಆರಂಭಕ್ಕೆ ಧಾರವಾಡದ ವೀರಶೈವ ಮತಾಭಿಮಾನಿಗಳು, ತಮ್ಮಲ್ಲಿ ಸಾವಿರಾರು ರೂಪಾಯಿ ಹಣಕೂಡಿಸಿ ಮೊದಲನೇ ಶ್ರೀ ಮದ್ವೀರಶೈವ ಮಹಾಸಭೆಯು ನಮ್ಮ ಧಾರವಾಡದಲ್ಲಿ ಆಗಬೇಕಂತಲೂ, ಅದಕ್ಕೆ ವ್ಯತೆ ಬಾರದೆ ಸರಿಯಾಗಿ ಸಾಗಿಕೊಂಡು

ಹೋಗುವಂತೆ ನಾವೆಲ್ಲರೂ ತನುಮನಧನದಿಂದ ಸಹಾಯ ಮಾಡುವೆವೆಂತಲೂ ನಮ್ಮ ಬಿನ್ನಹವನ್ನು ಮನ್ನಿಸಿ ನಮಗೆ ಅಪ್ಪಣೆಯನ್ನೀಯ ಬೇಕೆಂತಲೂ ಮಹಾಸಭೆಯ ಮೂಲೋತ್ಪಾದಕರಾದ ಶ್ರೀ ಹಾನಗಲ್ ಕುಮಾರ ಮಹಾಸ್ವಾಮಿಗಳವರನ್ನೂ ರಾ. ಬ. ರುದ್ರಗೌಡ ಸಾಹೇಬರನ್ನೂ, ಶಿರಸಂಗಿಯ ಶ್ರೀಮಂತ ಸರ ದೇಸಾಯಿಯವರನ್ನು ಕೇಳಿಕೊಳ್ಳಲು ಮೂವರು ಮಹಾನುಭಾವರು ‘ನಿಮ್ಮ ಅಭಿಮಾನವನ್ನು ಆದರವನ್ನು ನೋಡಿ ಆನಂದಿಸುತ್ತೇವೆ’೦ಬುದಾಗಿ ಧಾರವಾಡದ ಮುಖಂಡರನ್ನು ಅಭಿನಂದಿಸಿ, ಅನುಮೋದನೆಯನ್ನು ಕೊಡಲಾಗಿ, ವೀರಶೈವರ ಈ ವೆಚ್ಚವನ್ನುಳಿಸಿ ಸಭಾಕಾರ್ಯಕ್ಕೆ ಸರಕಾರೀ  ಇಮಾರತಿಯನ್ನು ಕೊಟ್ಟು ಮೆಗಿಬ್ ದೊರೆಗಳವರ  ಧನ್ಯವಾದವನ್ನು ಎಷ್ಟು ಮಾಡಿದರೂ ತೀರದು. ರಾ |ಬ | ರುದ್ರಗೌಡ ಸಾಹೇಬರವರ ಆಳ್ವಿಕೆಯಿಂದಿತ್ತ ವೀರಶೈವ ಜನಾಂಗದವರು ವಿದ್ಯೆಯಲ್ಲಿ ಮೆಲ್ಲಮೆಲ್ಲನೆ ಮುಂದೊರೆಯ ಹತ್ತಿದ್ದರಿಂದ, ಸ್ವಾಭಾವಿಕವಾಗಿ ಸಾತ್ವಿಕ ಸ್ವಭಾವದವರಾದ ಲಿಂಗಾಯತರನ್ನು ಸರಕಾರದವರು ಆದರಿಸಹತ್ತಿದರು. ಅದರಿಂದ ವೀರಶೈವರ ಸಮಾಜಹಿತದ ಕೆಲಸಗಳು ಸುಲಭವಾಗಿ ನೆರವೇರಹತ್ತಿದ್ದವು.” (ಅರಟಾಳ ರುದ್ರಗೌಡರ ಚರಿತ್ರೆ, ಬಸವಯ್ಯ ಹಿರೇಮಠ) ಶ್ರೀ ಮದ್ವೀರಶೈವ ಮೊದಲ ಮಹಾಸಭೆಯು ಧಾರವಾಡದ ‘ದರ್ಬಾರ್‌ ಹಾಲ್’ನಲ್ಲಿ ೧೯೦೪, ಮೇ ೧೩. ೧೪,೧೫ ರ ಅದು ಮೂರು ದಿನಗಳ ಕಾಲ ಸಿರಸಂಗಿ ಲಿಂಗರಾಜ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಿತು.

 ಸವದತ್ತಿಯ ಪುರಾಣ ಪ್ರವಚನ ಸಂದರ್ಭದಲ್ಲಿ ಅಭಿಪ್ರಾಯಗಳ ಮಿಳಿತದಿಂದಾಗಿ ಮಹಾಸಭೆಯ ಸ್ಥಾಪನೆಯ ಸೂಚನೆ ಹೊರಬಂದಂತೆಯೇ ವೀರಶೈವಧರ್ಮದ (ಸ್ವತಂತ್ರ ಧರ್ಮಬೋಧಕರನ್ನು ನೇಮಿಸಬೇಕು’ ಎಂಬ ಹಾನಗಲ್ಲ ಕುಮಾರಸ್ವಾಮಿ

ಗಳಿಂದ ಹೊರಬಂದ ಸ್ಫೂಲವಾದ ಅಭಿಪ್ರಾಯವು ಮುಂದೊಂದುದಿನ ಶಿವಯೋಗ ಮಂದಿರ’ ವೆಂಬ ಸಂಸ್ಥೆಯ ಸ್ಥಾಪನೆಯ ಬೀಜಾಭಿಪ್ರಾಯವೇ ಆಗಿರಬೇಕು !

೧೯೫೧ರಲ್ಲಿ ಸದಾಶಿವ ಹುಕ್ಕೇರಿಯವರು ಸಂಗ್ರಹಿತ ಮಾಹಿತಿಗಳನ್ನಾಧರಿಸಿ “ಬಿದರಿ ಶ್ರೀ ಕುಮಾರೇಶ್ವರ ಪುರಾಣ’ ಕೃತಿಯನ್ನು ರಚಿಸಿದ್ದಾರೆ. ಅದರ ೧೨ನೆಯಸಂಧಿಯಲ್ಲಿ,

ಗಾನಮೊಂದೆಡೆಯಲ್ಲಿ ಧರ್ಮ

ಜ್ಞಾನಮೊಂದೆಸೆಯಲ್ಲಿ ಶಾಸ್ತ್ರವಿ

ಧಾನಮೊಂದೊರಳಿಲ್ಲಿಗಲ್ಲಿಗೆ ಶಿವನ ಭಜನೆಗಳು

ಏನು ಹೇಳಲಿ ತಾಳಮೇಳದ

ಗಾನದೊಡನಾ ಕೀರ್ತನದ ಸಂ

ಧಾನಮಿಹುದಾವಾಗಳುಂ ಕಲ್ಮಠದೊಳಗೆ ಬಿಡದೆ || ೭೨ ||

ಆಗ ಹಾನ್ಗಲ್ ಸ್ವಾಮಿಗಳು ಶಿವ

ಲೇಖಕರು

ಪೂಜ್ಯಶ್ರೀ ಸಿದ್ದೇಶ್ವರ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಬೂದಗುಂಪಾ

ಪ್ರಿಯ ಸಹೃದಯರೆ ಈ ಹುಟ್ಟು ಸಾವಿನ ಪ್ರಪಂಚದಲ್ಲಿ ನೊಂದು,ಬೆಂದ ಮಾನವರ ಕೂಗು,ಅಜ್ಞಾನ,ಅಂಧಶ್ರದ್ಧೆ,ಆರ್ತನಾದ ಹೀಗೆ ಬಳಲುತ್ತಿರುವ ಮರ್ತ್ಯಲೋಕದ ಮಹಾಮನೆಯ ಪುನರುಜ್ಜೀವನ ಗೊಳಿಸಲು ಪರಮಾತ್ಮ ಮಹಾತ್ಮರನ್ನ ಈ ಭುವಿಗೆ ಕಳಿಸುತ್ತಾನೆ. ಅಂತಹ ಮಹಾತ್ಮರ ಸಾಲಿನಲ್ಲಿ ಯುಗಪುರುಷ ಪೂಜ್ಯ ಶ್ರೀ ಕುಮಾರ ಶಿವಯೋಗಿಗಳು ಒಬ್ಬರು.ಇಂತಹ ಮಹಾತ್ಮರ ಪ್ರಭಾವದಿಂದ ಈ ಭೂಮಿಯ ನರ- ಹರನಾದ, ಜೀವ- ಶಿವನಾದ, ಮಾತು- ಮಂತ್ರವಾಯಿತು,ಸಮಾನತೆಯ ಬೆಳಕು ಹರಡಿತು,ನಿರ್ಮಲಭಾವ ಹುಟ್ಟಿತು, ಸ್ವಚ್ಛ ಆಚಾರ- ಉಚ್ಚ ವಿಚಾರ, ಸಕಲಜೀವಾತ್ಮರಿಗೆ ಲೇಸಬಯಸುವ ಮನೋಭಾವ ಹೀಗೆ ಹಲವಾರು ಉಚ್ಚ ವಿಚಾರಗಳ ಸರಮಾಲೆ ಜನ್ಮತಾಳಿತು.

  “ಕಾರ್ತಿಕದ ಕಗ್ಗತ್ತಲೆಯಲ್ಲಿ ಆಕಾಶದ ದೀಪವಾಗಿ ನೀ ಬಂದೆ”ಅನ್ನುವ ಕವಿವಾಣಿ ಪೂಜ್ಯರ ಜೀವನದಲ್ಲಿಯೂಕೂಡಾ ಅನ್ವಯವಾಗಿ ಅಕ್ಷರಶಃ ಸತ್ಯವಾಗಿದೆ.

ಶರಣ ವಾಣಿಯಂತೆ:- ಹೋನಿಂಗೆ ಬಂದಾತನಲ್ಲ, ಹೆಣ್ಣಿಂಗೆ ಬಂದಾತನಲ್ಲ, ಮಣ್ಣಿಂಗೆ ಬಂದಾತನಲ್ಲ,ಅಶನಕ್ಕೆ ಬಂದಾತನಲ್ಲ,ವ್ಯಸನಕ್ಕೆ ಬಂದಾತನಲ್ಲ,ಕೂಡಲಚನ್ನಸಂಗಯ್ಯ ಭಕ್ತಿಯ ಪಥವ ತೋರ ಬಂದನಯ್ಯ ನಮ್ಮ ಬಸವಣ್ಣ.

ಅವಿರಳಜ್ಞಾನಿ ಚನ್ನಬಸವೇಶ್ವರರು ತಿಳಿಸಿದಹಾಗೆ ಅಲ್ಲಿ ಬಸವಣ್ಣ ಭಕ್ತಿಯ ಪಥವ ತೋರ ಬಂದವನು,ಇಲ್ಲಿ ಕುಮಾರಶಿವಯೋಗಿಗಳು ಸ್ವಾಮಿತ್ವದ ಶಕ್ತಿಯ ಪಥವ ತೋರ ಬಂದವರು.

ಸ್ವಾಮಿತ್ವದ ಘನತೆ ಹೆಚ್ಚಿಸಲು ಶಿವಯೋಗ ಮಂದಿರವನ್ನು ಸ್ಥಾಪಿಸಿ ಅಲ್ಲಿ ಕರಗಿಹೋಗುವ, ಸೊರಗಿ ಹೋಗುವ, ಕಳೆದು ಹೋಗುವ ಭೌತಿಕ ಸಂಪತ್ತನ್ನು ಸಂಪಾದಿಸಲಿಲ್ಲ, ಸವೆಯದ, ಸಾಕೆನಿಸದಾ, ಕಳೆಗುಂದದ, ಮತ್ತೊಂದು ಬೇಕೆನಿಸದ, ಅಧ್ಯಾತ್ಮಿಕ ಜ್ಞಾನ, ಅರಿವು- ಆಚಾರ, ಯೋಗ- ಶಿವಯೋಗ, ವೇಷ್ಠಿಹಿತಕ್ಕಿಂತ-ಸಮಷ್ಠಿಹಿತ ಮುಖ್ಯ,ಸ್ಥಾನಮಾನಕ್ಕಿಂತ-ಸೇವಾಮನೋಭಾವ ಮುಖ್ಯ,ಜನ ನಾಯಕನಿಗಿಂತ-ಜನಸೇವಕ ಮುಖ್ಯ ಇಂತಹ ಸಂಪತ್ತನ್ನು ಗಳಿಸಿ ಈ ನಾಡಿಗೆ,ನುಡಿಗೆ,ಸಂಸ್ಕೃತಿಗೆ ಕೊಟ್ಟವರು ಕುಮಾರ ಶಿವಯೋಗಿಗಳು. ”      “ಉಣಗಲಿಸಿದ ನಮ್ಮ ಕುಮಾರ,

 ಉಡಗಲಿಸಿದ ನಮ್ಮ ಕುಮಾರ,

 ನುಡಿಗಲಿಸಿದ ನಮ್ಮ ಕುಮಾರ,

  ನಡೆಗಲಿಸಿದ ನಮ್ಮ ಕುಮಾರ “ಹೀಗೆ ಎಲ್ಲವನ್ನ ಕಲಿಸಿ ಅದರ ಅರಿವನ್ನ ಪಡೆದು, ಅನುಭವಿಸಿ, ಆಚರಿಸಿ ಅದರಂತೆ ಬಾಳಿಬದುಕಿ ಸಮಾಜಕ್ಕೆ ಮಾದರಿಯ ವ್ಯಕ್ತಿಗಳಾಗಿ, ಕೇವಲ ಸಮಾಜದ ವ್ಯಕ್ತಿಗಳಾಗಬೇಡಿ, ಸಮಾಜದ ಶಕ್ತಿಯಾಗಿ ಎನ್ನುವ ಉದಾತ್ತ ವಿಚಾರಗಳನ್ನು ನಾಡಿಗೆ ಬಿತ್ತರಿಸಿದ ಮಹಾಂತರು .

ಇಷ್ಟೆಲ್ಲ ವಿಷಯಗಳನ್ನ ಪೂಜ್ಯರ ಕುರಿತು ಹೇಳುವ ಉದ್ದೇಶ, ಪೂಜ್ಯರು ಶಿವಯೋಗಮಂದಿರ ಸ್ಥಾಪಿಸಿ ಇಲ್ಲಿಗೆ ನನ್ನ ಕೆಲಸ ಮುಗಿಯಿತು ಅಂತ ಕೈಚೆಲ್ಲಿ ಕುಳಿತವರಲ್ಲ, ಮಂದಿರಕ್ಕೆ ಬರುವ ಸಾಧಕ ವಟುಗಳಿಗೆ ವ್ಯವಸ್ಥೆ, ಬಂದ ಭಕ್ತರಿಗೆ ಅನ್ನ, ಅರಿವು, ಆನಂದ, ಆಶ್ರಯ, ಅನುಭವವನ್ನ ಕೊಡುವಂತಹ ಹಲವಾರು ಉದ್ದೇಶವನ್ನರಿಸಿಕೊಂಡು ಶಿವಯೋಗಮಂದಿರ ಸ್ಥಾಪನೆಯಾದ ಪ್ರಥಮ ಭಾಗದಲ್ಲಿ ಸಂಸ್ಥೆಯಲ್ಲಿ ಮುಖ್ಯವಾಗಿ 19 ಸದುದ್ದೇಶಗಳನ್ನ, ಉಪಾಯಗಳನ್ನ  ಜಾರಿಗೆ ತಂದರು. ಅವುಗಳು ಈ ಕೆಳಗಿನಂತಿವೆ.

1)ಶಿವಯೋಗ ಮಂದಿರ ಸಂಸ್ಥೆಗೆ ಅಧ್ಯಯನ ಗೈಯಲು ಬಂದು ಉತ್ತಮ ಸಂಸ್ಕಾರಪಡೆದು, ಯೋಗ್ಯ ಮಠಾಧಿಪತಿಗಳಾಗಲು,ಸಮಾಜಸೇವಾ ದೀಕ್ಷೆ ಪಡೆಯಲು ಸಂಸ್ಥೆಗೆ  ಸಂಸ್ಥೆಗೆ ಬಂದ 12 ವರ್ಷದವರಿಗೆ ವಟುಗಳೆಂದು, ಮುಂದೆ ಸಂಸ್ಥೆಯ ಸಂಸ್ಕಾರದಲ್ಲಿ ನುರಿತವರ್ಗೆ ಸಾಧಕರೆಂದು ಕರೆಯುವುದು.

ವಟುಗಳು,ಸಾಧಕರು,ವ್ಯಸ್ಥಾಪಕರು,ಅನುಭಾವಿಗಳು,ಸನ್ನುತ ಅಧ್ಯಾಪಕರು,ಗ್ರಂಥ ಶೋಧಕರು, ಬಹುಮನ್ನಣೆಯನ್ನಪಡೆದ  ಸೇವಕರನ್ನ ಹೀಗೆ ಏಳು ವರ್ಗಗಳನ್ನ ಪೂಜ್ಯರು ಸಂಸ್ಥೆಯಲ್ಲಿ ತೂಡಕಾಗದಂತೆ ನಿಯಮಿಸಿದರು.

2)ಅಲ್ಲಿ ಅಧ್ಯಯನ ಗೈಯುವಂತಹ ಗುರುಚರವರೇಣ್ಯರು ಸದಾಚಾರ,ಸುಜ್ಞಾನ,ನಿರುಪಮ ವಿರಕ್ತಿಗಳಾಗಿರಬೇಕು, ಸದ್ಭಕ್ತಿ ಷಟ್ಸ್ಥಲಶಾಸ್ತ್ರ ಪರಿಣತೆ ಹೊಂದಿರಬೇಕು, ಸುಭಾಷಣ, ದ್ವೈತಾದಿ ಸಿದ್ಧಾಂತ ಸುವಿಚಾರ, ಯೋಗನೀತಿ,ಕರುಣಾದಿ ಸದ್ಗುಣಗಳಿಂದಕೂಡಿ,ಮುಂದೆ ಶಿವಮತವನುದ್ದರಿಸಬೇಕೆಂಬುದೊಂದು ಪೂಜ್ಯರ ಮಹದೊದ್ದೇಶ.

3)ಸಂಸ್ಥೆಗೆ ಬಂದ ವಟುಗಳನ್ನ ಬಿಡದೆ ಇರಿಸಿಕೊಂಡು ಅವರಿಗೆ ಸರಿಯಾಗಿ ನ್ಯಾಯ,ವ್ಯಾಕರಣ,ವೇದಾಂತ ಶಾಸ್ತ್ರಗಳ ಪರಿಚಯಮಾಡಿಕೊಟ್ಟು,ಧರ್ಮ ಗ್ರಂಥಗಳ ಪರಿಕರಗಳಾದ ಆಗಮ, ಆಮ್ನಾಯ,ಉಪನಿಷತ್ತು, ಸ್ಮೃತಿ,ಇತಿಹಾಸ,ಪುರಾಣ, ಶರಣರ ವಚನವನೋದಿಸಿ, ಜೋತೆಗೆ ಲಿಂಗಾಂಗ ಸಾಮರಸ್ಯ ಜ್ಞಾನವನ್ನ ಕೊಟ್ಟು ಹೀಗೆ ಎಲ್ಲ ವಿಷಯವನ್ನ ಅರಿಯುವತನಕ 25ವರ್ಷ ಅಥವಾ 35,45,ವರ್ಷಗಳವರೆಗೆ ಇದ್ದು,ಬ್ರಹ್ಮಚರ್ಯಾದಿ ಸದ್ಗುಣ ವೃತ್ತಿ ಗಳಿಸಿಕೊಂಡು ಶಿವಯೋಗಿಯಾಗಿ,ಗುರುಜಂಗಮರ ಮಂಗಲಪೀಠಕ್ಕೆ  ಅಧಿಕಾರಿಯಾಗಬೇಕೆಂಬುವದೊಂದು ಶ್ರಿಸಂಸ್ಥೆಯ ಉದ್ದೇಶ.

4) ಅಲ್ಲಲ್ಲಿ ಶಿವಯೋಗ ಮಂದಿರದ ಶಾಖೆಗಳು ಸಲ್ಲಲಿತವಾಗಿ, ಶೋಭನಾಶ್ರ ಮವಾಗಿ ನೆಲೆಸಬೇಕು ಅಲ್ಲಿ ಸರ್ವರಿಗೂ ಶಿವಾನುಭವ ಬೋಧೆದೊರೆಯಬೇಕು.

ಮಂದಿರಕ್ಕೆ ಬಂದವರಿಗೆ ಓದಲು ಅನುಕೂಲವಾಗುವ, ಎಲ್ಲ ಧರ್ಮಗ್ರಂಥಗಳುಳ್ಳ

ಸದ್ವಾಚನಾಲಯವನ್ನ ಬಲ್ಲವರು ಮನವಪ್ಪುವಂತೆ ನಿರ್ಮಿಸಬೇಕು .

5)ಮತಾಸುಧಾರಣೆಗೆ ಅವಶ್ಯವೇನಿಸುವ ಸದ್ವಿಷಯಗಳನ್ನೊಳಗೊಂಡ ಕೀರ್ತನೆಗಳನ್ನು ರಚಿಸಿ ಕೇಳುಗರಿಗೆ ಪ್ರಿಯವಾಗಿ ಹೇಳುವ ಪುರಾಣಿಕರನ್ನ, ಪ್ರವಚನಕಾರನ್ನ ಘನವಾಗಿ ಹೆಚ್ಚಿಸುವುದು .

6)ನುತದಾರ್ಮಿಕ,ವ್ಯಾವಹಾರಿಕ,ಮಹಾಶಾಸ್ತ್ರಮತಿಯುಳ್ಳ ಬೋಧಕರನ್ನ ಎಲ್ಲ ಕಡೆಗಳಲ್ಲಿ ಕಳುಹಿಸಿ ಅವರ ಸತತ ಉಪದೇಶದಿಂದ ಜನರನ್ನ,ಸಮಾಜವನ್ನ ಎಚ್ಚರಿಸುವಂತೆ ಮಾಡುವದೊಂದು  ಸದುಪಾಯ.

7)ಮಂದಿರದಲ್ಲಿ ಗೋ ಶಾಲೆ ಸ್ಥಾಪಿಸಿ ಆ ಎಲ್ಲ ಗೋವುಗಳ ಗೋಮಯದಿಂದ ತನ್ಮೂಲಕ ವೀರಶೈವರಿಗೆ ಮುಖ್ಯವಾದ ಅಷ್ಟಾವರಣಗಳಲ್ಲಿ ಒಂದಾದ ಭಸ್ಮವನ್ನ ವಿಧ್ಯುಕ್ತವಾಗಿ ರಚಿಸಿ,ಅಷ್ಟೇ ಅಲ್ಲದೆ ಆ ಭಸ್ಮ ರಚನಾಕ್ರಮವನ್ನ ಬೇರೆ ಸ್ಥಳಗಳಲ್ಲಿಯೂ ಪರಿಶುದ್ಧವಾದ ರೀತಿಯಿಂದ ತಯಾರಿಸುವುದಕ್ಕೆ ಮಾರ್ಗದರ್ಶನ ನೀಡುವುದು .

8)ಶಿವಮತಿಯರಿಗೆ  ಅತ್ಯಂತ ಅವಶ್ಯವಾಗಿರುವ,ಜೀವನರೂಪವಾಗಿರುವ          ಇಷ್ಟಲಿಂಗವನ್ನ ಕ್ರಮತಪ್ಪದೆ ಶಾಸ್ತ್ರೋಕ್ತ ರೀತಿಯಿಂದ ಪಂಚಸೂತ್ರ ಲಿಂಗಗಳನ್ನ ಸುವಿಚಾರವಾಗಿ ಲಿಂಗಗಳನ್ನ ತಯಾರುಮಾಡುವ ಶಾಲೆ ಮಂದಿರದೊಳಗಾಗಬೇಕು  ಆ ಕ್ರಮವನ್ನೇ ಸರ್ವತ್ರ ಪ್ರಚಾರದಲ್ಲಿ ತರುವುದೊಂದು ಉಪಾಯ.

9) ಶಿಕ್ಷಕರು, ಸರ್ಕಾರಿ ಉದ್ಯೋಗಸ್ಥರು ವರ್ಷಕ್ಕೆ ಒಂದು ತಿಂಗಳು ರಜೆಯನ್ನ ಪಡೆದು ಅಥವಾ ಅನುಕೂಲವಿದ್ದ ಕಾಲದಲ್ಲಿ ಮಂದಿರಕ್ಕೆ ಬಂದು ಮತತತ್ವ ವಿಚಾರ ಮಾಡಿಕೊಂಡು ಹೋಗಿ ತಾವು ವಾಸಿಸುವ ಗ್ರಾಮದ ಮತ್ತು ನೆರೆಹೊರೆಯ ಗ್ರಾಮ ಗಳ ಭಕ್ತರಿಗೆ ನಮ್ಮ ವೀರಶೈವ ಧರ್ಮದ ಕುರಿತು ಉಪನ್ಯಾಸವನ್ನ ಪ್ರಾಕೃತ ಭಾಷೆಯಲ್ಲಿ ಸುಲಭ ಶೈಲಿಯಿಂದ ಸರ್ವರಿಗೂ ತಿಳಿಯುವಂತೆ ಹೇಳಿ ಶಿವಾನುಭವ ವಿಷಯ ಕುರಿತು ಚಿಕ್ಕ ಚಿಕ್ಕ ಪುಸ್ತಕಗಳನ್ನ ರಚಿಸಿ ಧರ್ಮ ತತ್ವವನ್ನ ಸರ್ವತ್ರ ವ್ಯಾಪಿಸುವಂತೆ ಮಾಡುವುದು.

10) ವೃದ್ಧರಾದ ಭಕ್ತ ಮಾಹೇಶ್ವರರು, ಹಾಗೂ ಮುಮುಕ್ಷುಗಳು ಮಂದಿರಕ್ಕೆ ಬಂದು ಶಿವಾನುಭವ ಶಾಸ್ತ್ರಗಳನ್ನು ಓದಿ, ಕೇಳಿ ತಿಳಿದುಕೊಂಡು ತಮ್ಮ ಬಂಧುಬಳಗದವರಿಗೆ, ಪರಿಚಿತರಿಗೆ ಜೊತೆಗೆ ಸ್ತ್ರೀಯರಿಗೆ ಮತಧರ್ಮ ಜ್ಞಾನವನ್ನು ಪಸರಿಸುವಂತೆ ಮಾಡುವುದು, ಜೊತೆಗೆ ಶಿವಯೋಗ ಸಾಧನಾಸಕ್ತರಿಗೆ ಮಂದಿರದಲ್ಲಿ ಸ್ಥಿರವಾಗಿರಲಿಕ್ಕೆ ಮಂದಿರದ ನಿಯಮಕ್ಕನುಸರಿಸಿ ಅನುಕೂಲ ಪಡಿಸುವುದು.

11) ಧರ್ಮ ಪ್ರಸಾರವನ್ನು ಮಾಡುವುದಕ್ಕೆ ಮುಖ್ಯವಾದ ಶಿವ ಕೀರ್ತನೆ, ಶಿವ ಭಜನೆ, ಶಿವ ಪುರಾಣ ಮುಂತಾದ ಅನೇಕ ಮಾರ್ಗಗಳಿಂದ ಹೆಚ್ಚುಹೆಚ್ಚಾಗಿ ಶೀಘ್ರವಾಗಿ ಧರ್ಮಬೋಧನೆ ಮಾಡಬಹುದು, ಅವುಗಳಿಗೆಲ್ಲ ಸಾಧನವಾದ ಸಂಗೀತ ವಿದ್ಯೆಯನ್ನು ತಕ್ಕವರಿಗೆ ಕಲಿಸುವಂತೆ ಅನುಕೂಲ ಮಾಡಿಕೊಡುವುದು.

12) ಕೃಷಿ ಕಾದಿ ಕಾಯಕ, ಒಕ್ಕಲುತನ, ವ್ಯಾಪಾರ ಮಾಡುವಂತಹ ಜನರು ಅನುಕೂಲ ಕಾಲದಲ್ಲಿ ಶಿವಯೋಗ ಮಂದಿರಕ್ಕೆ ಬಂದು ಸಾಧ್ಯವಾದ ಮಟ್ಟಿಗೆ ಧರ್ಮಜ್ಞಾನ ಮಾಡಿಕೊಳ್ಳುವಂತೆ ಏರ್ಪಡಿಸುವುದು, ಅನುಕೂಲ ಮಾಡುವುದು.

13) ಅನಾದಿಕಾಲದಿಂದ ಬಂದ ವೀರಶೈವ ಮತ ಬೋಧಕ ಕಾರ್ಯವನ್ನು ಕೈಕೊಂಡ  ಕಾಯಕದ ಗಣಂಗಳು ತಮ್ಮ ಕರ್ತವ್ಯವನ್ನು ಮರೆತು, ಕೇವಲ ತಮ್ಮ ಹೊಟ್ಟೆ ಹೊರೆದುಕೊಳ್ಳುವುದಕ್ಕೆ ರೂಪದಾರಿಗಳಾಗಿ ಮಾತ್ರ ಸಂಚರಿಸಿ, ದುಡ್ಡು ಸೆಳೆಯುತ್ತಿರುವರು ಇಂತಹ ದುಸ್ತರಪರಿಸ್ಥಿತಿ ನೋಡಿ ಪೂಜ್ಯರು ನಮ್ಮ ಪುರಾತನರು ಈ ಕಾಯಕ ಸ್ಥಾಪನೆಮಾಡಿದ ಉದ್ದೇಶ ಉದಾತ್ತತತ್ವವನ್ನು ಪ್ರಚಾರದಲ್ಲಿ ತರುವುದಕ್ಕಾಗಿ, ಇಂತಹ ವೇಷಧಾರಿಗಳನ್ನು ಶಿವಯೋಗ ಮಂದಿರಕ್ಕೆ ಬರಮಾಡಿಕೊಂಡು, ಅವರಿಗೆ ತಕ್ಕಶಿಕ್ಷಣವನ್ನು ಕೊಟ್ಟು, ಅವರ ಸ್ಥಿತಿಯನ್ನು ಸುಧಾರಿಸಿ ಬಳಿಕ ಅವರವರ ಕಾಯಕಗಳನ್ನು ಮಾಡಲಿಕ್ಕೆ ಅಪ್ಪಣೆಕೊಟ್ಟು ಶಿವ ಧರ್ಮವನ್ನು ಪ್ರಚಾರ ಪಡಿಸುವಂತೆ ಮಾಡುವುದು.

14) ವೀರಶೈವಧರ್ಮ ಜೀವನದ ರೂಪವಾದ ಅತ್ಯಂತ ಮುಖ್ಯವಾದ ಲಿಂಗಧಾರಣೆ, ಲಿಂಗಪೂಜೆ ಮುಂತಾದ ವಿಧಿಗಳನ್ನು ಶಾಸ್ತ್ರೋಕ್ತವಾಗಿ ಪ್ರತಿಯೊಂದು ಗ್ರಾಮದ ಗುರು ಸ್ಥಳದ ಮಹೇಶ್ವರರಿಗೆ (ಅಯ್ಯನವರಿಗೆ) ಅಭ್ಯಾಸ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟು ಅವರಿಂದ ಆ ಎಲ್ಲ ವಿಧಿಗಳನ್ನು ಶಾಸ್ತ್ರೋಕ್ತವಾಗಿ ಪ್ರಚಾರಕ್ಕೆ ತರುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದು.

15) ಸಂಸ್ಕೃತ ಭಾಷೆಯಲ್ಲಿರುವ ವೀರಶೈವ ಧರ್ಮಶಾಸ್ತ್ರ ಪ್ರಮಾಣಗ್ರಂಥಗಳನ್ನು, ಎಲ್ಲರೂ ಓದಿ ತಿಳಿದು ನಡೆಯಲಿ ಎಂಬ ದೂರದೃಷ್ಟಿಯಿಂದ ಸಂಸ್ಕೃತ ಪಂಡಿತರಿಂದ ಕನ್ನಡ ಭಾಷೆಗೆ ಪರಿವರ್ತನಗೊಳಿಸಿ, ಮುದ್ರಣವ ಮಾಡಿಸಿ ಆ ಗ್ರಂಥಗಳು ಎಲ್ಲರಿಗೂ ಅಲ್ಪಬೆಲೆಗೆ ಸಿಗುವಂತೆ ಮಾಡುವುದು.

16) ಪೂಜ್ಯರು ಸಂಸ್ಕೃತ ಗ್ರಂಥಗಳನ್ನು ಕೇವಲ ಕನ್ನಡಭಾಷೆಗೆ ಪರಿವರ್ತನೆ ಗೊಳಿಸುವುದು ಅಷ್ಟೇ ಅಲ್ಲ, ಇಂಗ್ಲಿಷ್ ಪಂಡಿತರನ್ನು ಶಿವಯೋಗ ಮಂದಿರಕ್ಕೆ ಕರೆಯಿಸಿಕೊಂಡು, ಮತಶಾಸ್ತ್ರ ಧರ್ಮಗ್ರಂಥಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆಯಿಸಿ, ಜೊತೆಗೆ ಆ ಇಂಗ್ಲಿಷ ಪಂಡಿತ ರಿಂದಲೇ ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ತಿಳಿಯುವಂತೆ ಉಪನ್ಯಾಸದ ಮೂಲಕ ಧರ್ಮಸಂಬಂಧದ  ವ್ಯಾಖ್ಯಾನಗಳನ್ನು ಕೊಡಿಸಿ, ಜೊತೆಗೆ ದೇಶದೆಲ್ಲೆಡೆ ನಡೆಯುವ ಧರ್ಮ ಪರಿಷತ್ತುಗಳಿಗೆ ಕಳುಹಿಸಿ ತತ್ವ ಪ್ರಚಾರ ಮಾಡುತ್ತ, ತಕ್ಕ ಪ್ರಸಂಗಗಳನ್ನು ನೋಡಿ ಇಂಗ್ಲಿಷ್ ಭಾಷೆಯಲ್ಲಿ ಸರ್ಕಾರಕ್ಕೆ ಧರ್ಮರಕ್ಷಣೆಯಬಗ್ಗೆ ಬೇಕಾಗುವ ಯಥಾರ್ಥ ಮಾಹಿತಿಯನ್ನ ಪತ್ರಗಳ ಮೂಲಕ ತಿಳಿಸುವುದು, ಜಗತ್ತಿನಲ್ಲಿ ನಡೆಯುವ ಧರ್ಮ ಸಂಸ್ಥೆಗಳ ಪರಿಚಯವನ್ನು ಮಾಡಿಕೊಂಡು, ಅವರ ಜೊತೆಗೆ ಪತ್ರ ವ್ಯವಹಾರ ನಡೆಸುವಂತೆ ಮಂದಿರದಲ್ಲಿ ವ್ಯವಸ್ಥೆ ಮಾಡುವುದು.

17) ವೀರಶೈವಮತ ಪರವಾದ ಭಾಷೆಗಳು, ಆಗಮಗಳು, ಉಪನಿಷತ್ತುಗಳು, ಜೊತೆಗೆ ಈ ಮತದ ಪೂರ್ವಿಕರಿಂದ ಕ್ರೋಡಿಕರಿಸಲ್ಪಟ್ಟ ಅನೇಕ ಸಂಸ್ಕೃತ, ಕನ್ನಡ ಗ್ರಂಥಗಳನ್ನು, ತಾಡೋಲೆಗಳನ್ನು, ಎಲ್ಲೆಡೆ ಶೋಧಿಸಿ ಸರಿಯಾಗಿ ಮುದ್ರಣ ಗೊಳಿಸಿ ತನ್ಮೂಲಕ ಎಲ್ಲೆಡೆ ಧರ್ಮಸಿದ್ಧಾಂತ ಪ್ರಚಾರ ಮಾಡಿಸುವುದು.

18) ಬರೀಸಂಸಾರದಲ್ಲಿ ಇದ್ದರೆ ಏನಾಯ್ತು ಸಾಧ್ಯವಾದ ಭಕ್ತ ಮಾಹೇಶ್ವರರಲ್ಲಿ ಸಂಸಾರಿಗಳಾದರೂ ಬ್ರಹ್ಮಚರ್ಯ ಪಾಲನೆ ಮಾಡಿದ ಭಕ್ತ ಮಹೇಶ್ವರರಿಗೆ ಮಂದಿರದಲ್ಲಿ ಸಾಧ್ಯವಾದ ಮಟ್ಟಿಗೆ ಶಿವಮತ ತತ್ವಗಳನ್ನು ಅಭ್ಯಾಸ ಮಾಡಲಿಕ್ಕೆ ಅನುಕೂಲ ಮಾಡಿಕೊಡುವುದು, ಜೊತೆಗೆ ವೀರಶೈವಮತ ಧರ್ಮವನ್ನ  

ಸೂಕ್ರಮದಿಂದ ಪ್ರಚಾರಕ್ಕೆ ತರಲಿಎಂಬ ಭಾವದಿಂದ, ಧರ್ಮಗ್ರಂಥಗಳ ಅಭ್ಯಾಸದ ಜೊತೆಗೆ ಪರೀಕ್ಷೆಯನ್ನ ಇಟ್ಟು ಆ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಂದಿರದಲ್ಲಿ ನಡೆಯುವ ಪ್ರಮುಖ ಸಭೆಯಲ್ಲಿ ತಕ್ಕ ಬಹುಮಾನವನ್ನು ನೀಡಿ, ಧರ್ಮದ ವಿಷಯದಲ್ಲಿ ಅವರಿಗೆ ಉತ್ತೇಜನ ಮಾಡುತ್ತಾ, ಪ್ರೋತ್ಸಾಹಿಸುವುದೊಂದುಪಾಯ.

19) ವರ್ಷಕ್ಕೊಮ್ಮೆ ಶಿವರಾತ್ರಿಯಲ್ಲಿ ಎಲ್ಲ ಜನರನ್ನ ಮಂದಿರಕ್ಕೆ ಬರಮಾಡಿಕೊಂಡು ಧರ್ಮಜ್ಞರಾದ ವಿದ್ಯಾವಂತರಿಂದ, ಪಂಡಿತರಿಂದವ್ಯಾಖ್ಯಾನ, ಕೀರ್ತನ, ಪುರಾಣ, ಶಿವಭಜನೆ, ಪ್ರವಚನ, ಸಂಗೀತಾದಿಗಳಿಂದ  ಹೀಗೆ ಮುಂತಾದ ದ್ವಾರಗಳಿಂದ ಶಿವಯೋಗ ಮಂದಿರದಲ್ಲಿ ಪ್ರತಿವರ್ಷ ಧರ್ಮಬೋಧನೆ ಕಾರ್ಯ ನಡೆಯುತ್ತಿರಬೇಕು.

 ಹೀಗೆ ಕುಮಾರ ಶಿವಯೋಗಿಗಳು ಕೇವಲ ಮಂದಿರವನ್ನ ಸ್ಥಾಪಿಸಿ ಸುಮ್ಮನೆ ಕುಳಿತವರಲ್ಲ.ಅಲ್ಲಿ ಪ್ರತಿದಿನ ಯಾವೆಲ್ಲ ಕಾರ್ಯಗಳು ನಡೆಯುತ್ತಿರಬೇಕು,ಅಲ್ಲಿನ ವ್ಯವಸ್ಥೆ ಹೇಗಿರಬೇಕು ಎಂಬುವದನ್ನು  ಮೊದಲೇ ತಮ್ಮ ಅಂತಃಚಕ್ಷುವಿನಿಂದ ಕಂಡು ಶಿವಯೋಗ ಮಂದಿರದಲ್ಲಿ 19 ಉಪಾಯಗಳನ್ನ, ಧ್ಯೇಯೋದ್ದೇಶಗಳನ್ನ  ನಿರ್ಣಯಮಾಡಿದರು ಇದುವೇ ಕುಮಾರಶಿವಯೋಗಿಗಳ ದೂರದೃಷ್ಟಿ . ಇಂತಹ ದೂರದೃಷ್ಟಿಯನ್ನ ಇಟ್ಟುಕೊಂಡು  ಮಂದಿರವನ್ನ ಸ್ಥಾಪಿಸಿದ್ದರಿಂದಲೇ  ಇಂದಿಗೂ ಒಂದುನೂರಾಹದಿಮೂರು ವಸಂತಗಳನ್ನು ಯಾವುದೇ ವಿಘ್ನವಿಲ್ಲದೆ ಸಾಗಿಬಂದೆದೆ ಅಂದ್ರೆ ಅದು ಕುಮಾರಶಿವಾಯೋಗಿಗಳ ಶಕ್ತಿ,  ಇಚ್ಛಾಶಕ್ತಿ, ಸಂಕಲ್ಪಶಕ್ತಿ,ಕ್ರಿಯಾಶಕ್ತಿ, ಈ ಮೂರು ದಿವ್ಯಶಕ್ತಿಗಳ ಪುಣ್ಯ ಸಂಗಮವೇ ಶಿವಯೋಗಮಂದಿರ ಸಂಸ್ಥೆ..  ಈ ಸಂಸ್ಥೆಯನ್ನ ಸ್ಥಾಪಿಸುವಾಗ ಪೂಜ್ಯರು ಹಲವಾರು ಕಷ್ಟ,ನಷ್ಟ,ನೋವನ್ನ ಅನುಭವಿಸುತ್ತಾ,ಯಾರ ಮನಸ್ಸನ್ನು ನೋಯಿಸದೆ ನಗುನಗುತಾ ಬಾಳಿ ಬದುಕಿದ ಮಹಾಚೇತನ,ಕಾವಿ ಲೋಕದ ತಂದೆ ಕುಮಾರ ಶಿವಯೋಗಿಗಳು.

         ಸಿದ್ದನೆಂದರೆ ಯಾರು ಮನವನೋಯಿಸದಾತ

             ನೂರುನೋವನು ಸಹಿಸಿ ನಗುತಲಿರುವಾತ,

         ಒಂದಾದ ನಡೆ-ನುಡಿಗೆ, ದಿಕ್ಕು-ದಶೆ ತೋರ್ವಾತ

              ಪರಮಗುರು ಆ ಸಾಧು  – ಮುದ್ದುರಾಮ