General

ಲೇಖಕರು :ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ

ನೂರಾರು ಮತವಿಹುದು ಲೋಕದುಗ್ರಾಣದಲಿ ।

ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್ ॥

ಸಾರದಡುಗೆಯನೊಳವಿಚಾರದೊಲೆಯಲಿ ಮಾಡು ।

ಬೇರೆ ಮತಿ ಬೇರೆ ಮತ – ಮಂಕುತಿಮ್ಮll

  ಪ್ರಪಂಚವು ಬಹಳಷ್ಟು ವಿಶಾಲವಾಗಿದೆ.ಅದರೊಂದಿಗೆ ಇಲ್ಲಿನ ಮನುಕುಲವೂ ಸಹ.ಇಲ್ಲಿನ ಮನುಕುಲದಲ್ಲಿ ಹಲವಾರು ಜನಾಂಗಗಳನ್ನು ನಾವು ಕಾಣುತ್ತೇವೆ. ಆ ಪ್ರತಿಯೊಂದು ಜನಾಂಗಕ್ಕೂ ಸಹ ಅವುಗಳದ್ದೇ ಆದ ಪದ್ಧತಿ,ಆಚರಣೆ,ಕಟ್ಟಲೆಗಳು ಇವೆ.ಇವುಗಳೇ ಮುಂದೆ ಬೆಳೆಯುತ್ತಾ ಬೆಳೆಯುತ್ತಾ ಸಬಲವಾಗಿ ಮುಂದೆ ಧರ್ಮವಾಗಿ ರೂಪುಗೊಂಡವು.ಇವುಗಳು ಶತಮಾನ, ಶತಮಾನಗಳಿಂದ ಬಂದಿವೆ.ಇವುಗಳ ಉದ್ದೇಶ  ಮಾನವನ ಆಂತರಿಕ ,ಸಾಮಾಜಿಕ,ದೈಹಿಕವಾಗಿ ವಿಕಾಸ ಹೊಂದುವುದೇ ವಿನಃ ತಮ್ಮ ತಮ್ಮಲ್ಲೇ ಉಚ್ಛ ನೀಚತ್ವವನ್ನು ಬೇಧಿಸಲು, ಭಿನ್ನಾಭಿಪ್ರಾಯ ಕಲಹಗಳನ್ನು ಸೃಷ್ಠಿಸಿ ನಮ್ಮ ಅಂತ್ಯವನು ನಾವೇ ಮಾಡಿಕೊಳ್ಳಲು ಅಲ್ಲ.

ಆದರೆ ಇಂದು ನಡೆಯುತ್ತಿರುವ ಪರಿಸ್ಥಿತಿ ಹೀಗೆ ಇದೆ.

ಇಂದು ಸಮಗ್ರ ವಿಶ್ವವನ್ನು ಗಮನಿಸಿದಾಗ ಒಟ್ಟು ಇಲ್ಲಿ 4,300 ಧರ್ಮಗಳು ಹುಟ್ಟಿಕೊಂಡಿವೆ.ಇವೆಲ್ಲ ಧರ್ಮಗಳು ಇರೋದು ಮಾನವನಿಗಾಗಿಯೆ ಹೊರತು ಪ್ರಾಣಿಗಳಿಗಲ್ಲ.

ಇಷ್ಟಾದರೂ ಸಹ ಈ ಮಾನವನಿಗಾಗಿಯೇ ಇರುವ ಧರ್ಮಗಳ ಅರ್ಥವನ್ನು ಮಾನವನು ತಿಳಿಯದೇ ಮಂಕಾಗಿ,ಯಾವುದೋ ಆಮಿಷಕ್ಕೆ ಒಳಗಾಗಿ ತನ್ನ ತನವನ್ನು ಮರೆತು, ಬೀದಿಗೆ ಬಂದು ಧರ್ಮಗಳಲ್ಲಿ ಬಿರುಕು ಹುಟ್ಟಿಸುವ ಕೆಲಸ ಮಾಡ್ತಾ ಇದ್ದಾನೆ.ಧರ್ಮಗಳ ಉದ್ದೇಶ ಇದು ಅಲ್ಲ.ಆದರೆ ನಮ್ಮ ಉದ್ದೇಶ ಇದರ ಹೊರತಿಲ್ಲ. ನೋಡಿ ಎಷ್ಟು ದಯನೀಯ ಸಂಗತಿ.

ಇಲ್ಲಿ ಯಾವುದೂ ಶ್ರೇಷ್ಠವಿಲ್ಲ ಮತ್ತು ಕನಿಷ್ಠನೂ ಇಲ್ಲ.ಎಲ್ಲವೂ ಸಹ ಅವರವರ ಮನೋಭಾವದಲ್ಲಿ ಅಡಗಿದೆ.ನಾವು ಪಾಲಿಸುವ ಧರ್ಮವನ್ನು ಅರಿತು ನಾವು ನಡೆಯಬೇಕಷ್ಟೇ.ನಮ್ಮಲ್ಲಿಯೇ ಭೇದ-ಭಾವ ಮಾಡಿ ವಿನಾಕಾರಣ ನಮ್ಮ ನಾಶಕ್ಕೆ ನಾವೇ ಗುರಿ ಆಗೋದಲ್ಲ.ಇದನ್ನೇ ಶರಣರು ಹೇಳಿದ್ದು.ಇದಕ್ಕಾಗಿಯೇ ಕಲ್ಯಾಣ ಕ್ರಾಂತಿ ಆಗಿದ್ದು.

“ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ,

ಜಲವೊಂದೇ ಶೌಚ ಆಚಮನಕ್ಕೆ,”

ಎಂದು ಶರಣರು ಸ್ಪಷ್ಟ ವಾಗಿ ತಿಳಿಸಿದ್ದಾರೆ.ಹೋಗಲಿ  ಬೇರೆ ಧರ್ಮ ನಿನಗೆ ತೃಪ್ತಿ ಕೊಟ್ಟಿಲ್ಲ ಅಂದಾಕ್ಷಣ ಅದರ ಬಗ್ಗೆ ತಿಳಿಯದೆ ಇಲ್ಲ ಸಲ್ಲದ ಹಾಗೆ ಮಾತನಾಡೋದು,ಅದನ್ನು ನಿಂದಿಸೋದು, ಅವಮಾನಿಸೋದು ನಿನ್ನ ಹಕ್ಕಲ್ಲ.ಹೇಗೆ ನಿನ್ನ ಧರ್ಮದ ಮೇಲೆ ನಿನಗೆ ಪ್ರೇಮವೋ ಹಾಗೇ ಅವರದು ಅವರಿಗೆ ಪ್ರೇಮ,.ಅದಕ್ಕೆಂದೇ ಇಲ್ಲಿ ಡಿ. ವಿ. ಜಿ. ಯವರು ತಿಳಿಸಿದ್ದಾರೆ.ಈ ಲೋಕವೆಂಬ ಸಂಗ್ರಹಣಾ ಕೊಠಡಿಯಲ್ಲಿ(store room) ನೂರಾರು ಧರ್ಮಗಳಿವೆ.ನಿನಗೆ ಹಿಡಿಸಿದ್ದನ್ನು ನೀನು ಆಯ್ಕೆ ಮಾಡಿಕೋ.ನಿನ್ನ ಮನಸ್ಸಿನ ಒಲೆಯಲ್ಲಿ ಆ ವಿಚಾರವನ್ನು ಅಡುಗೆಮಾಡಿ ಸಾರವನ್ನು ಅನುಭವಿಸು. ಯಾರ ಬುದ್ಧಿ ಹೇಗಿರುತ್ತದೋ ಹಾಗೆ ಅವರ ಮತ.ಅದನ್ನು ನೀನು ಪ್ರೀತಿಸುವುದಾದರೆ ಪ್ರೀತಿಸು,ಆಗದಿದ್ದರೆ ಸುಮ್ಮನಿರು. ಆದರೇ ಅನ್ಯರ ಭಾವ ಅಭಿಪ್ರಾಯ ಅಥವಾ ಮತವನ್ನು ಕುಹಕವಾಡುವುದಾಗಲೀ, ಅಲ್ಲಗೆಳೆಯುವುದಾಗಲೀ, ಖಂಡಿಸುವುದಾಗಲೀ ಸಲ್ಲ. ಏಕೆಂದರೆ ಯಾರ ಬುದ್ಧಿ ಮತ್ತು ವಿಚಾರ ಹೇಗಿರುತ್ತದೆಯೋ ಅವರ ಮತವೂ ಹಾಗಿರುತ್ತದೆ.

          ಒಂದೇ “ಪರವಸ್ತು”ವನ್ನು ಕಂಡುಕೊಳ್ಳಲು ಸಾವಿರಾರು ಮಾರ್ಗಗಳು ಇವೆ. ಆ ಮಾರ್ಗಕ್ಕೆ ತಕ್ಕಂತೆ ಧರ್ಮಗಳಿವೆ.ಹೀಗೆ ಆ ಮಾರ್ಗದಲ್ಲಿ ಆ ಧರ್ಮಿಯನಿಗೆ ಅವನದೇ ಆದ ಅಧಿಕಾರ ಮತ್ತು ಸಂಪೂರ್ಣ ಸ್ವಾತಂತ್ರ್ಯ ಉಂಟು.ಯಾರು ಹೇಗೆ ಕಂಡುಕೊಳ್ಳುತ್ತಾರೆಯೋ ಹಾಗೆ ಅದರ ದರ್ಶನವಾಗುತ್ತದೆ.ಪ್ರತಿಯೊಬ್ಬರ ದರ್ಶನವು ಅವರವರ ವಿಚಾರಗಳ ಆಧಾರದ  ಮೇಲೆ ಸೃಷ್ಟಿಯಾಗಿರುವವು.ಅವುಗಳ ಮಾರ್ಗದಲ್ಲಿ ಭಿನ್ನತೆಯನ್ನು ನಾವು ಕಂಡರೂ ಸಹ ಅವುಗಳ ಗುರಿ ಮಾತ್ರ ಒಂದೇ ಆಗಿರುತ್ತದೆ. ‘आकाशात् पतितं तोयं यथा गच्छति सागरम्। सर्वदेव नमस्कारः केशवं प्रति गच्छति’।। ಎಂದರು ನಮ್ಮ ಹಿರಿಯರು.  ಯಾವ ಪದ್ದತಿಯನ್ನು ಅನುಸರಿಸಿ, ಯಾವುದೇ ಹೆಸರಿನಿಂದ ನಮಸ್ಕರಿಸಿದರೂ, ಆಕಾಶದಿಂದ ಬಿದ್ದ ಮಳೆಯ ನೀರು ಹರಿಯುವಾಗ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಟ್ಟ ನದಿಗಳಾದರೂ ಸೇರುವುದು ಒಂದೇ ಕಡಲೆಂಬಂತೆ, ನಮ್ಮೆಲ್ಲ ಆಚರಣಾ ಮಾರ್ಗಗಳು ಬೇರೆಯಾದರೂ ಸಹ,ನಮ್ಮ ಭಕ್ತಿ ಸಲ್ಲೋದು ಮಾತ್ರ ಪರಾತ್ಪರ ವಸ್ತುವನ್ನೆ.ಅಲ್ಲಿ ಉಚ್ಛ ನೀಚವಿಲ್ಲ, ಭಿನ್ನತೆ ಇಲ್ಲ,ಅಲ್ಲಿ ನಾಮವಿಲ್ಲ,ಅಲ್ಲಿ ಸಾಕಾರ ನಿರಾಕಾರ ಭೇದವಿಲ್ಲ.ಯಾವುದೇ ವ್ಯತ್ಯಾಸವಿಲ್ಲ. ಹಾಗಾಗಿ ಆ ಪರತತ್ವವನ್ನು ಕುರಿತಾದ ನಮ್ಮ ಚಿಂತನೆಗೆ, ಜಗತ್ತಿನಲ್ಲಿರುವ ಸಾವಿರಾರು ಮಾರ್ಗಗಳಲ್ಲಿ ಯಾವುದಾದರೊಂದು ಮಾರ್ಗವನ್ನು ಹುಡುಕಿಕೊಂಡು, ಆ ಮಾರ್ಗವನ್ನು ದೃಢವಾಗಿ ನಂಬಿ ನಡೆದು ಗುರಿ ತಲುಪಬೇಕೇ ವಿನಃ ಅನ್ಯರ ಭಾವ ಅಭಿಪ್ರಾಯ ಅಥವಾ ಮತವನ್ನು ಕುಹಕವಾಡುವುದಾಗಲೀ, ಅಲ್ಲಗೆಳೆಯುವುದಾಗಲೀ, ಖಂಡಿಸುವುದಾಗಲೀ ಸಲ್ಲ.

ಸ್ವಧರ್ಮದಲಿ ನಿಷ್ಠೆ,ಪರಧರ್ಮ ಸಹಿಷ್ಣುತೆ ಇರಬೇಕು.ಆಗ ಬದುಕು ಸಾರ್ಥಕ.

ಹೀಗೆ ಒಂದು ಪ್ರಸಂಗ. ಒಂದು ಬಾರಿ ಶಿವಯೋಗ ಮಂದಿರದಲ್ಲಿ ಸಾಧಕರಾಗಿದ್ದ ನವಿಲುಗುಂದದ ಶ್ರೀ ಬಸವಲಿಂಗ ಸ್ವಾಮಿಗಳು ಒಮ್ಮೆ ಮಂದಿರಕ್ಕೆ ಬಂದ ಅಥಿತಿಗಳೊಂದಿಗೆ  ಭಾಷಣ ಮಾಡುವಾಗ ಉತ್ಸಾಹದಿಂದ ” ನ ವೀರಶೈವ ಸಮಮ್ ಮತಮಸ್ತಿ ಭೂತಲೆ”,ಎನ್ನುವ ಆಗಮದ ಸಂಸ್ಕೃತೋಕ್ತಿಯನ್ನು ಉದ್ಧರಿಸಿ ಜಗತ್ತಿನ ಸರ್ವ ಶ್ರೇಷ್ಠ ಧರ್ಮ ನಮ್ಮ ವೀರಶೈವ ಧರ್ಮ ಎಂದು ತಮ್ಮ ಧರ್ಮವನ್ನು ಪ್ರತಿಪಾದಿಸಿದ್ದರು. ಈ ಸಭೆಯಲ್ಲಿ ಕುಮಾರ ಶ್ರೀಗಳು ಸಹ ಉಪಸ್ಥಿತರಿದ್ದರು.ಸಭೆ ಮುಗಿದ ಬಳಿಕ ಬಸವಲಿಂಗ ಶ್ರೀಗಳನ್ನು ಬರ ಹೇಳಿದರು.ಇದನ್ನು ತಿಳಿದ ಬಸವಲಿಂಗ ಸ್ವಾಮಿಗಳು “ನನ್ನ ಭಾಷಣವನ್ನ ಕೇಳಿ ಪ್ರಶಂಸಿಸಲು ಕರೆದಿದ್ದಾರೆ.” ಎಂದು ಖುಷಿಯಿಂದ ಹೊರಟರು.ಆದರೆ ಅಲ್ಲಿ ಕುಮಾರ ಶ್ರೀಗಳ ಗಾಂಭೀರ್ಯ ಮುಖವನ್ನು ನೋಡಿದಾಕ್ಷಣ ಇವರ ಮುಖದ ಸಂತೋಷ ಬಾಡಿ ಹೋಗಿತ್ತು.  “ಯಾವ ಯಾವ ಧರ್ಮಗಳ ಬಗೆಗೆ  ಓದಿಕೊಂಡಿರುವಿರಿ”? ಎಂದು ಗಾಂಭೀರ್ಯದಿಂದ ಕುಮಾರ ಶ್ರೀಗಳು ಪ್ರಶ್ನಿಸಿದಾಗ,ಬಸವಲಿಂಗ ಸ್ವಾಮಿಗಳ ಬಾಯಲ್ಲಿ ಮಾತೇ ಹೊರಡದೆ ಸುಮ್ಮನೆ ನಿಂತಿದ್ದರು.       “ಯಾಕೆ ಸುಮ್ಮನಾದಿರಿ”? ಎಂದು ಗುರುಗಳು  ಮತ್ತೆ ಪ್ರಶ್ನಿಸಿದಾಗ ಬಸವಲಿಂಗ ಶ್ರೀಗಳು ಇನ್ನೂ ಮೌನದಿಂದಿರುವುದರಲ್ಲಿ ಅರ್ಥವಿಲ್ಲ ಎಂದು ಅರಿತು ಭಯದಿಂದ ‘ ಇಲ್ಲ ಬುದ್ಧಿ,ನಾನು ವೀರಶೈವ ಧರ್ಮ ಬಿಟ್ಟು ಬೇರೆ ಧರ್ಮದ ಬಗೆಗೆ ಏನನ್ನು ತಿಳಕೊಂಡಿಲ್ಲ.’ ಎಂದು ಅಳುಕುತ್ತ  ಉತ್ತರಿಸಿದಾಗ, ಗುರುಗಳು ಶಾಂತರಾಗಿ ” ನಿಮ್ಮ ಧರ್ಮದ ಬಗ್ಗೆ ಮಾತ್ರ ತಿಳಿದ ನೀವು ಜಗತ್ತಿನ ಉಳಿದ ಧರ್ಮಗಳಿಗಿಂತ ನಿಮ್ಮ ಧರ್ಮವೇ ಶ್ರೇಷ್ಠ ಎಂದು ಹೇಗೆ ಹೇಳಿದಿರಿ?ಅದಕ್ಕೇನು ಅಧಾರಗಳಿವೆಯೇ? ಎಲ್ಲರಿಗೂ ಅವರವರ ಧರ್ಮ ಶ್ರೇಷ್ಠ. ಇವತ್ತಿನ ನಿಮ್ಮ ಭಾಷಣ ಕೇಳಿ ಅತಿಥಿಗಳು ಏನು ಭಾವಿಸಿಕೊಂಡಿರಬಹುದು? ಶಿವಯೋಗ ಮಂದಿರದ ಬಗ್ಗೆ ತಪ್ಪು ಭಾವನೆ ಅವರಿಗೆ ಬಂದಂತೆ ಅಗಲಿಲ್ಲವೆ ನೀವಾಡಿದ ನುಡಿಗಳು?ನಿಮ್ಮ ನುಡಿ ಬೇರೆಯವರ ಮನಕ್ಕೆ ನೋವು ತರಬಾರದು.ನುಡಿ ಸತ್ಯವಿರಬೇಕು.ಎಲ್ಲ ಧರ್ಮವು ಶ್ರೇಷ್ಠವೇ.ನಿಮ್ಮ ಧರ್ಮದಲ್ಲಿ ನಿಮಗೆ ನಿಷ್ಠೆಯ ಪರಿಪಾಲನೆ ಇರಬೇಕು,ಹಾಗೆ ಪರ ಧರ್ಮಗಳಲ್ಲಿ ಸಹಿಷ್ಣುತೆ, ಗೌರವ ಇರಬೇಕು ಆಗಲೇ ನಿಮ್ಮ ಸಾಧನೆ ಪೂರ್ಣವಾಗುತ್ತದೆ ಮತ್ತು ಭಗವಂತನಿಗೆ ಮೆಚ್ಚ್ಚುಗೆ ಆಗುತ್ತದೆ.”ಎಂದು ಸಂಪೂರ್ಣ ಎಲ್ಲ ಧರ್ಮಗಳ ಬಗ್ಗೆ ಅರಿತ ಕುಮಾರ ಶ್ರೀಗಳು, ತಮ್ಮ ಧರ್ಮದಲ್ಲಿ ನಿಷ್ಠಾವಂತರಾಗಿ,ಪರ ಧರ್ಮಗಳಲ್ಲಿ ಗೌರವವನ್ನು ನೀಡುವ ದಿವ್ಯ ಬೋಧೆಯನ್ನೂ ಅವರ ಮೂಲಕ ಈ ಸಮಾಜಕ್ಕೆ ಸೂಕ್ಷ್ಮವಾಗಿ ತಿಳಿಸಿದ್ದರು.

ಪೂಜ್ಯ ವಾಗೀಶ ದೇವರು ಶ್ರೀಧರಗಡ್ಡಿ

            ನಮ್ಮಭಾರತೀಯ ಅಧ್ಯಾತ್ಮಿಕ ಸಂಸ್ಕೃತಿಯಲ್ಲಿ ಪ್ರಾಚೀನಕಾಲದಿಂದಲೂ ಯೋಗಕ್ಕೆ ಮಹತ್ವ ಪೂರ್ಣ ವಾದಂತಹ ಸ್ಥಾನವನ್ನು ಕಲ್ಪಿಸಲಾಗಿದೆ. ಧರ್ಮದ ಆತ್ಯಂತಿಕ ಗುರಿಯಾದ ಮೋಕ್ಷ ಸಾಧನೆ, ಲಿಂಗಾಂಗ ಸಾಮರಸ್ಯ ಅಥವಾ ಶಿವಸಾಯುಜ್ಯ ಹೊಂದುವದೇ ಯೋಗದ ಮುಖ್ಯಗುರಿ. ಈ ಸಂದೇಶವನ್ನು ಪ್ರಾಚೀನಕಾಲದಿಂದಲೂ ಅನೇಕ ಋಷಿ ಮಹರ್ಷಿಗಳು ವಚನಗಳಲ್ಲಿ, ವೇದಗಳಲ್ಲಿ, ಉಪನಿಷತ್ತುಗಳಲ್ಲಿ,ಭಗವದ್ಗೀತೆಯಲ್ಲಿ ಹೀಗೆ ಹಲವಾರು ಧಾರ್ಮಿಕ ಗ್ರಂಥಗಳಲ್ಲಿ ಯೋಗದ ಮೂಲ ಗುರಿಯನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ. (ಆಗಮ ಕರ್ತೃ ವಾದಂತಹ ಪರಶಿವನೇ ನಮ್ಮ ಪ್ರಾಚೀನ ಋಷಿಮುನಿಗಳಿಗೆ ಯೋಗದ ಉಪದೇಶವನ್ನು ಮಾಡುತ್ತಾ ಬಂದಿದ್ದಾನೆ ಎಂಬುದು ನಮ್ಮ ಪುರಾತನರ ನಂಬಿಕೆ).

                         ಯೋಗಕ್ಕೆ ಅನಂತ ಪರಿಭಾಷೆಗಳಿವೆ. ಎಲ್ಲ ಧರ್ಮಗಳು, ಎಲ್ಲ ದರ್ಶನಗಳು, ಎಲ್ಲ ಮತಗಳು ತಮ್ಮದೇ ಆದಂತಹ ವಿಶಿಷ್ಟ ಕ್ರಿಯೆಗಳನ್ನು ಒಳಗೊಂಡಿವೆ, ಆದರೆ ಗುರಿ ಮಾತ್ರ ಒಂದೇ. ಜೀವನು ಶಿವ ನಾಗುವ, ಜೀನನು ಜೈನ ನಾಗುವ, ಬದ್ಧನು ಬುದ್ಧನಾಗುವ ಶ್ರೇಷ್ಠ ಮಾರ್ಗವನ್ನು ಈ ಯೋಗಮಾರ್ಗವು ಬೋಧಿಸುತ್ತದೆ. ಒಂದೇ ಮಾರ್ಗವನ್ನು ನಮ್ಮ ಪ್ರಾಚೀನ ಸಂತರು ಭಿನ್ನ ಭಿನ್ನವಾಗಿ ಚಿತ್ರಿಸಿದ್ದಾರೆ. ಸ್ವಾಮಿ ವಿವೇಕಾನಂದರು ರಾಜಯೋಗವನ್ನು, ಅರವಿಂದರ ಪೂರ್ಣಯೋಗವನ್ನು, ಮಹಾವೀರರು ಅಹಿಂಸಾ ಮಾರ್ಗ ವನ್ನು, ಬುದ್ಧರ ತ್ಯಾಗ ಮಾರ್ಗವನ್ನು, ಮಹಾದೇವಿ ಅಕ್ಕನವರು ವೈರಾಗ್ಯವನ್ನು, ಬಸವಣ್ಣನವರ ಭಕ್ತಿ ಮಾರ್ಗ ಹೀಗೆ ಅನೇಕ ಮಹಾತ್ಮರು ಲೋಕೋದ್ಧಾರಕ್ಕಾಗಿ ಆತ್ಮ ಉನ್ನತಿಗಾಗಿ ಅನೇಕ ಮಾರ್ಗಗಳನ್ನು ತೋರಿದ್ದಾರೆ.

ಯೋಗವು ವ್ಯಕ್ತಿಯಲ್ಲಿರುವ ಮೂಲಭೂತ ವಾದಂತಹ ಸ್ವಭಾವಗಳನ್ನು ನಿಯಂತ್ರಿಸಿ  ಆ ನಿಯಂತ್ರಣದ ಮೂಲಕ ವ್ಯಕ್ತಿಯನ್ನು ಪರಿಪೂರ್ಣದೆಡೆಗೆ, ಔನತ್ಯದ ಕಡೆಗೆ ಕೊಂಡೊಯ್ಯುವ ವಿಶಿಷ್ಟ ಮಾರ್ಗವಾಗಿದೆ.

ಈ ಮಾರ್ಗವನ್ನು ಅನುಷ್ಠಾನ ಮಾಡಿ, ಅನುಸಂಧಾನ ಮಾಡಿ ಅನುಭವಿಸ ಬೇಕಲ್ಲದೆ ಬುದ್ಧಿಯಿಂದ ವಿವರಿಸಲಾಗುವುದಿಲ್ಲ. ಒಂದು ಹಣ್ಣನ್ನು ಅಥವಾ ಸಿಹಿಯಾದ ಪದಾರ್ಥವನ್ನು ತಿಂದು ಅದರ ಸಂಪೂರ್ಣ ರುಚಿ, ಸ್ವಾದ ಅನುಭವಿಸಬೇಕಲ್ಲದೆ ಅದು ಹೇಗಿದೆ,ಅದರ ರುಚಿ ಹೇಗಿದೆ ಎಂದು ಪ್ರಶ್ನಿಸುವುದರಿಂದ ಅದರ ಸಂಪೂರ್ಣ ಅರಿವು ನಮಗೆ ಉಂಟಾಗುವುದಿಲ್ಲ. ಅರಿತವನು ಜ್ಞಾನಿಯಾಗುತ್ತಾನೆ, ಸಾಧಿಸಿದವನು ಸಿದ್ಧನಾಗುತ್ತಾನೆ, ಅನುಭವಿಸಿದವರು ಯೋಗಿಯಾಗುತ್ತಾನೆ. ಇಂತಹ ಸಿದ್ದರು ಸಂತರು ಮಹಾತ್ಮರು ಯೋಗಿಗಳು ಲೋಕದೊಳಗೆ ಇದ್ದು ಅಲೌಕಿಕವಾದ ಜೀವನವನ್ನು ಸಾಗಿಸುತ್ತಾರೆ

   ಈ ಯೋಗಮಾರ್ಗದಲ್ಲಿ ಮುಂದುವರೆಯುವವನಿಗೆ ವಿವೇಕ ವೈರಾಗ್ಯಗಳೆರಡು ಅತ್ಯವಶ್ಯಕ.  ಸಾಧಕರು ಆತ್ಮಸಂಯಮ ದೊಂದಿಗೆ ಶಾಸ್ತ್ರಗ್ರಂಥಗಳ ಅಧ್ಯಯನವನ್ನು ಮಾಡುತ್ತಾ ವಿವೇಕ ವೈರಾಗ್ಯಗಳನ್ನು ಗಳಿಸಿಕೊಳ್ಳುತ್ತಾ ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದರೆ ಈ ಸಾಧನೆ ಸಾಧ್ಯ ಎಂಬುದು ಗಮನೀಯ ವಾದಂತಹ ಸಂಗತಿ ಅದಕ್ಕೆ ಗೀತೆಯಲ್ಲಿ ಒಂದು ಉದಾಹರಣೆಯನ್ನು ಭಗವಂತನು ತಿಳಿಸಿದ್ದಾನೆ. 

“ಮನುಷ್ಯಾಣಾಂ ಸಹಸ್ರೇಷು ಕಸ್ತಿದ್ ಯತತಿ ಸಿದ್ಧಯೇ

ಯತತಾನಾಮಪಿ ಸಿದ್ದಾನಾಂ ಕಶ್ಚಿನ ಮಾಂ ವೇತ್ತಿ ತತ್ವ ತಹ”

                              ಸಾವಿರ ಜನರಲ್ಲಿ ಒಬ್ಬನು ಮಾತ್ರ ಈ ಸಾಧನೆಗಾಗಿ ಪ್ರಯತ್ನಿಸುತ್ತಾನೆ. ಇದಕ್ಕಿಂತ ಶ್ರೇಷ್ಠವಾದ ಸಾಧನೆ ಮತ್ತೊಂದಿಲ್ಲ. ಇದಕ್ಕಾಗಿ ಪ್ರಯತ್ನಿಸಿದಂತಹ  ಸಾವಿರಾರು ಜನರಲ್ಲಿ ಒಬ್ಬನು ಮಾತ್ರ ಈ ದುರ್ಲಭವಾದ ದಿವ್ಯ ಮಾರ್ಗವನ್ನು ಅನುಸರಿಸುತ್ತಾನೆ. ಈ ಅಪೇಕ್ಷೆ ಬೆಳೆದಂತೆಲ್ಲ ಭೌತಿಕ ವಸ್ತು ವಿಷಯಗಳಲ್ಲಿ ಮನಸ್ಸು ಉದಾಸೀನಭಾವವನ್ನು ತಾಳುತ್ತದೆ, ಉದಾತ್ತಿಕರಣಗೊಳ್ಳುತ್ತದೆ.

        “ಆತ್ಮ ವಿದ್ಯಾ ತಪೋ ಮೂಲಮ್”  ಎಂಬುವುದನ್ನು

ಅರಿತಂತಹ ಶ್ರೀ ಕುಮಾರ ಮಹಾಶಿವಯೋಗಿಗಳು ತಮ್ಮ ಗುರುಗಳಾದಂತಹ ಶ್ರೀ ಬಸವಲಿಂಗ ಮಹಾ ಶಿವಯೋಗಿಗಳವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಲೋಕ ಲೌಕಿಕಗಳೆರಡರ ಜ್ಞಾನವನ್ನು ಪಡೆಯುತ್ತಾ ಲೋಕ ಸಂಚಾರ ಗೈಯುತ್ತಾ ಶಂಭುಲಿಂಗನ ಬೆಟ್ಟದಲ್ಲಿ ತಪವನ್ನಾಚರಿಸಿ ತಮ್ಮ ಗುರುಗಳ ಮಾನಸ ಪುತ್ರರಾಗಿ ಹೊರಹೊಮ್ಮಿದರು. ಬಸವಲಿಂಗ ಮಹಾಶಿವಯೋಗಿಗಳು ತಮ್ಮ ದಿವ್ಯ ಶಕ್ತಿಯನ್ನೆಲ್ಲ ಶಿಷ್ಯನಿಗೆ ಧಾರೆಯೆರೆದರು. ಒಬ್ಬ ಸಮರ್ಥವಾದ ಗುರು ನಿಸ್ವಾರ್ಥತೆಯಿಂದ ತನ್ನೆಲ್ಲಾ ಶಕ್ತಿಯನ್ನು ಶಕ್ತಿಪಾತ ದೀಕ್ಷೆಯ ಮುಖಾಂತರ ತನ್ನ ಶಿಷ್ಯನಿಗೆ ಧಾರೆ ಎರೆಯುವುದನ್ನು ನಾವು ಭಾರತೀಯ ಪುರಾತನ ಪರಂಪರೆಯಲ್ಲಿ ಕಾಣುತ್ತೇವೆ ಇಂತಹ ದಿವ್ಯಶಕ್ತಿಯನ್ನು ಹೊಂದಿ, ಲೋಕ ಕಲ್ಯಾಣದಲ್ಲಿಯೇ ಆತ್ಮ ಕಲ್ಯಾಣವನ್ನು ಸಾಧಿಸುವ ದಿವ್ಯತೆಯನ್ನು ಹೊಂದಿ ಒಬ್ಬ ಶ್ರೇಷ್ಠ ಯೋಗಿಗಳಾಗಿ ಸಂತರಾಗಿ ಮಹಾತ್ಮರಾಗಿ ಹೊರಹೊಮ್ಮಿದರು. ಆದ್ದರಿಂದ ಈ ಯೋಗಮಾರ್ಗವು ನಿರಂತರವಾಗಿ ಮುನ್ನಡೆಯಲಿ ಎಂದು ಯೋಗದ ಮಹತ್ವವನ್ನು ನಮಗೆ ಅರುಹುತ್ತಾ ಬಂದಿದ್ದಾರೆ. ಒಟ್ಟಾರೆಯಾಗಿ  ಈ ಯೋಗಮಾರ್ಗವು ಸಾಮಾನ್ಯರನ್ನು ಮಾನವರನ್ನಾಗಿ, ಮಾನವರನ್ನು ಮಹಾ ಮಾನವರನ್ನಾಗಿ, ಮಹಾ ಮಾನವರನ್ನು ದೇವ ಮಾನವರನ್ನಾಗಿ ಮಾಡುವಂತಹ ಒಂದು ಪ್ರಕ್ರಿಯೆ ಆದ್ದರಿಂದ ನಾವೆಲ್ಲರೂ ಈ ಮಾರ್ಗವನ್ನು ಅನುಸರಿಸೋಣ, ನಮ್ಮ ಜೀವನವನ್ನು ಪಾವನ ವನ್ನಾಗಿ ಮಾಡಿಕೊಳ್ಳೋಣ, ತಮಗೆಲ್ಲರಿಗೂ ಶುಭವಾಗಲಿ

ಪೂಜ್ಯ ವಿಜಯಪ್ರಭು ದೇವರು ಬೂದಗುಂಪಾ

      ಪ್ರಿಯ ಸಹೃದಯರೆ ಭವ್ಯ ಪರಂಪರೆಯನ್ನ  ದಿವ್ಯ ಸಂಪ್ರದಾಯವನ್ನು ಹೊಂದಿದ ದೇಶ ಅದು ಭಾರತ ದೇಶ. ಈ ದೇಶ, ಈನಾಡು ಮತ್ತು ಸಂಸ್ಕೃತಿಯನ್ನ ಎಲ್ಲ ಜೀವಿಗಳಿಗೆ ತಿಳಿಸಿ ಅದರಂತೆ ನಡೆದು ಸಾರ್ಥಕ ಬದುಕನ್ನು ಕಟ್ಟಿಕೊಂಡು ಬಾಳಿ ಬದುಕಿ ಅಂತ ಹೇಳಿದವರು ಈ ದೇಶದ ದಾರ್ಶನಿಕರು, ಮಹಾತ್ಮರು, ಸಂತರು, ಮಹಾಂತರು ಅಂತಹ ಮಹಾತ್ಮರ ಇರುವಿಕೆಯನ್ನ ಅವರು ನಡೆಸಿದ ಜೀವನಶೈಲಿಯನ್ನು, ಅವರ ಆದರ್ಶದ ಪಥವನ್ನು, ಪವಾಡವನ್ನು, ಲೋಕ ಸೇವೆಯನ್ನು  ಇಂದಿನ ಪೀಳಿಗೆಗಳಿಗೆ ಗೊತ್ತು ಮಾಡಿಕೊಟ್ಟವರು ಕವಿಗಳು.

ಇಂತಹ ಕವಿಗಳಲ್ಲಿ 4 ಪ್ರಕಾರಗಳು

1 ವರ ಕವಿ

2 ಶಿವ ಕವಿ

3 ಆಶು ಕವಿ

4 ನರ ಕವಿ

ಹೀಗೆ ಎಲ್ಲದರ ಅರಿವನ್ನ ಎಲ್ಲದರಲ್ಲಿ ಪರಿಣಿತಿ ಹೊಂದಿದ ಹಲವಾರು ಕವಿಗಳು ನಮಗೆ ದೊರೆಯುತ್ತಾರೆ. ಧರ್ಮಗ್ರಂಥಗಳನ್ನ, ನೀತಿ ತತ್ವಗಳನ್ನ, ಪುರಾಣ ಪುಣ್ಯ ಕಥೆಗಳನ್ನ, ಉಪನಿಷದಾದಿ ಸಂಸ್ಕೃತ ಗ್ರಂಥಗಳನ್ನ, ಇಂತೆಲ್ಲ ಮಹಾನ ಗ್ರಂಥಗಳ ಸಾರವನ್ನು ಎಲ್ಲರ ಮನ ಮುಟ್ಟುವಂತೆ ಬರೆದು ಆ ಮಹಾನ್ ಗ್ರಂಥಕ್ಕೆ ಭಾಷ್ಯ  ಬರೆದು ಪುಸ್ತಕರೂಪದಲ್ಲಿ ನಮ್ಮೆಲ್ಲರ ಕೈಗೆ ಕೊಟ್ಟವರು ಶಿವ ಕವಿಗಳು ಇಂತಹ ಅನೇಕ ಶಿವ ಕವಿಗಳಲ್ಲಿ ಒಬ್ಬರು ದ್ಯಾಂಪುರದ ಚೆನ್ನ ಕವಿಗಳು.

 ಇವರು ಗದುಗಿನ ಹತ್ತಿರವಿರುವ ನಾರಾಯಣಪುರದಲ್ಲಿ ಕ್ರಿ.ಶ.1879 ರಲ್ಲಿ ಜನಿಸಿದರು ತಂದೆ ಕೊಟ್ಟೂರ ಬಸವಯ್ಯನವರು, ತಾಯಿ ನೀಲಾಂಬಿಕೆ ಈ ಇರ್ವ ದಂಪತಿಗಳು ದ್ಯಾಂಪುರದಲ್ಲಿ ವಾಸವಾಗಿದ್ದ ರಿಂದ ಕವಿಗಳಿಗೆ ದ್ಯಾಂಪುರ ಚೆನ್ನ ಕವಿಗಳೆಂದು ರೂಢಿ. ಕವಿಗಳು ತಮ್ಮ ಸೋದರಮಾವಂದಿರಾದ ನಾರಾಯಣಪುರದ ಕಲ್ಯಾಣ ಶಾಸ್ತ್ರಿಗಳವರಲ್ಲಿ ಕನ್ನಡ ಹಾಗೂ ಸಂಸ್ಕೃತ ವನ್ನ ಕಲಿತು, ವೀರಯ್ಯ ನವರೆಂಬ ಶಿಕ್ಷಕರ ಸಹಾಯದಿಂದ ತಮ್ಮ ಅಭ್ಯಾಸವನ್ನ  ಹೆಚ್ಚಿಸಿಕೊಂಡು, ಅಷ್ಟೇ ಅಲ್ಲದೆ ಕನ್ನಡದ ಪ್ರಸಿದ್ಧ ಕಾವ್ಯಗಳಾದ ಶಬರಶಂಕರ ವಿಳಾಸ, ರಾಜಶೇಖರ ವಿಳಾಸ, ಜೈಮಿನಿ ಭಾರತ ಹೀಗೆ ಮೊದಲಾದ ಉತ್ಕೃಷ್ಟ ಗ್ರಂಥಗಳನ್ನ ಆಸ್ಥೆಯಿಂದ ಅಭ್ಯಾಸ ಮಾಡಿ ಕಾವ್ಯ ಸಾಹಿತ್ಯದಲ್ಲಿ ಪರಿಣತಿ ಹೊಂದಿದರು. ಅಷ್ಟೇ ಅಲ್ಲ ಕಲಿತ ವಿದ್ಯೆ ನನ್ನೊಂದಿಗೆ ಇದ್ದರೆ ಸಾಲದು ನನಗೆ ತಿಳಿದ ಮಟ್ಟಿಗೆ ಇನ್ನುಳಿದವರಿಗೆ ತಿಳಿಸೋಣವೆಂಬ ಹಂಬಲದಿಂದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸುಮಾರು ಹದಿನಾರು ವರ್ಷ ಸೇವೆಯನ್ನ ಮಾಡಿದ ಕವಿಗಳು. ಇಂತಹ ಕವಿಗಳನ್ನ ಹುಡುಕಿ ಅವರಿಗೆ ಸ್ಥಾನಮಾನಗಳನ್ನು ಕಲ್ಪಿಸಿ ಧರ್ಮದ ತಿರುಳನ್ನ, ನಮ್ಮ ಸಂಸ್ಕೃತಿಯನ್ನು ಸಾಹಿತ್ಯ ರೂಪದಲ್ಲಿ ಎಲ್ಲೆಡೆ ಹರಡಿಸಿ ಎಂದು ಚೆನ್ನ ಕವಿಗಳಿಗೆ ಆಶೀರ್ವದಿಸಿದವರು ಪರಮಪೂಜ್ಯ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳು. ಪೂಜ್ಯರ ಅಪ್ಪಣೆಯಂತೆ ಚೆನ್ನ ಕವಿಗಳು ಧರ್ಮೋಪದೇಶ ಹಾಗೂ ಸಾಹಿತ್ಯ ಸೇವೆಗಾಗಿ ತಮ್ಮ ಉಳಿದ ಆಯುಷ್ಯವನ್ನು ಮೀಸಲಾಗಿಟ್ಟರು .

ಚೆನ್ನ ಕವಿಗಳೆಂದರೆ ಕನ್ನಡ ನಾಡಿನಲ್ಲಿರುವ ಸರ್ವ ಜನರಿಗೆ ಚಿರಪರಿಚಿತರು, ಇಂತಹ ಕವಿಗಳ ಪರಿಚಯ ಮಾಡಿಕೊಡುವುದೇoದರೆ ಸೂರ್ಯನ ಪರಿಚಯ ಮಾಡಿಕೊಟ್ಟಂತೆ ಸರಿ, ಬಲು ವಿಚಕ್ಷಣ ಮತಿಯುಳ್ಳ ಚೆನ್ನ ಕವಿಗಳಿಗೆ ಪದ್ಯಗಳನ್ನ ಕಟ್ಟುವುದೆಂದರೆ ಸಹಜ ಸ್ವಭಾವದಾಗಿತ್ತು ಅದರಂತೆ ಕಾವ್ಯಗಳನ್ನ  ಬರೆಯಬೇಕೆಂದರೆ ಯಾವಾಗಲೂ ಅವರಿಗೆ ಹುರುಪು ಹುಮ್ಮಸ್ಸು ಉಂಟಾಗುತ್ತಿತ್ತು . ಸಣ್ಣ ಹಳ್ಳಿಯಲ್ಲಿ ಹುಟ್ಟಿದ ಇವರ ಕವಿತ್ವದ ಪ್ರಭೆಯು ಕರ್ನಾಟಕದ ತುಂಬಾಬೆಳಗಿತು. ಈ ನಾಡಿಗೆ ಇವರು ಮಾಡಿದ ಸಾಹಿತ್ಯ ಸೇವೆಯು ಅಪಾರವಾಗಿದೆ.

ಕನ್ನಡ ನಾಡಿನ ಮೇಲೆ, ಕನ್ನಡ ಭಾಷೆಯ ಮೇಲೆ, ನುಡಿಯ ಮೇಲೆ ಎಷ್ಟೊಂದು ಅಭಿಮಾನ ಅಂದರೆ ಅವರೇ ಕುಮಾರೇಶ್ವರರ ಪುರಾಣದಲ್ಲಿ ತಿಳಿಸಿದ ಹಾಗೆ

       “ಕನ್ನಡಮ್ಮನ ಮಕ್ಕಳಾದೆಮಗೆ ಹೆಮ್ಮೆಯಿಂ

        ಕನ್ನಡದ ಭಾಷೆಯಂ ಬೆಳಿಸುವದೇ ಭೂಷಣಂ

        ಕನ್ನಡಕೆ ಮನ್ನಣೆಯನೆಸಗದವನದಮನೆಂಬುದರಿಂದ ರಚಿಸಿದೆನ್ನ

        ಕನ್ನಡದ ಕಬ್ಬದೊಳಗೊಪ್ಪಿರಲಿ ತಪ್ಪಿರಲಿ

        ಕನ್ನಡದ ಸೇವೆಯಂಮಾಡಿದುತ್ಸಾಹ  ವಿಂದೆನ್ನ

        ಮಾನಸಕಾಗದೇ ಕ್ಷಮಿಸಿ ನಲಿಯರೇ ಕರುನಾಡ ಜಾಣರೆಲ್ಲ”

ಇಷ್ಟೊಂದು ಕನ್ನಡ ಭಾಷಾಭಿಮಾನಿ ಕವಿಯಾಗಿದ್ದರು ಶ್ರೀ ಚೆನ್ನ ಕವಿಗಳು.

     “ತುಡುಗರೆಸಗಿದ ದೋಷಮದು  ಮೂರು ತಲೆಯನಕ

      ಬಿಡದು ಕವಿಕಾವ್ಯದೊಳು ನೆಗಳ್ದ ದೋಷಂ ಮುಂದೆ

      ಕೆಡದಿಹುದು ನೂರತಲೆಯನ್ನ ಮೆಂದೊರೆವ ನಾಣ್ನುಡಿಗಂಜು ದುತ್ಸಾಹದೆ”

ತುಡುಗರು ಮಾಡಿದ ದೋಷ, ತಪ್ಪು ಅದು ಅವರ ಮೂರು ತಲೆಮಾರಿನವರೆಗೆ ಬಿಡದೆ ಕಾಡಿದರೆ, ಕವಿಯು ಕಾವ್ಯ ರಚನೆಯಲ್ಲಿ ಮಾಡಿದ ತಪ್ಪು, ದೋಷವದು ನೂರು ತಲೆಮಾರಿನವರೆಗೆ ಕಾಡದೆ ಬಿಡದು ಎಂಬ ನಾಣ್ನುಡಿಗೆ ಅಂಜಿ ಬಹಳ ಎಚ್ಚರದಿಂದ ಪುರಾಣಗಳನ್ನ, ಕಾವ್ಯಗಳನ್ನ ಬರೆದಿದ್ದೇನೆ ಎನ್ನುವರು ಚೆನ್ನ ಕವಿಗಳು.

ಶ್ರೀ ದ್ಯಾಂಪುರದ ಚೆನ್ನಕವಿಗಳು ಬರೆದಿರುವ ಒಂಬತ್ತು ಪುರಾಣಗಳು ಇಂತಿವೆ :-

1 ಹೇಮರಡ್ಡಿ ಮಲ್ಲಮ್ಮನ ಪುರಾಣ

2 ಹಾಲಕೆರೆ ಶ್ರೀ ಅನ್ನದಾನೇಶ್ವರ ಮಹಾಪುರಾಣ

3 ನಾಲ್ವತವಾಡದ ವೀರೇಶ್ವರ ಪುರಾಣ

4 ಕಮತಗಿ ಶ್ರೀ ಹುಚ್ಚೇಶ್ವರ ಪುರಾಣ

5 ಕಂಬಳಿಹಾಳ ದೊಡ್ಡ ಬಸವೇಶ್ವರ ಪುರಾಣ

6 ಇಲಕಲ್ಲ ವಿಜಯ ಮಹಾಂತೇಶ್ವರ ಪುರಾಣ

7 ಮುಳಗುಂದದ ಬಾಲಲೀಲಾ ಮಹಾಂತೇಶ್ವರ ಪುರಾಣ

8 ಶಿರಹಟ್ಟಿ ಶ್ರೀ ಫಕೀರೇಶ್ವರ ಚರಿತ್ರೆ

9 ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣ

ಪುರಾಣಗಳು ಧರ್ಮದ ಸಾಂಕೇತಿಕ ನಿರೂಪಣೆಗಳು, ಪುರಾಣಗಳಲ್ಲಿ ದೇವರು, ದೇವತೆಗಳು ಮತ್ತು ವಿಶೇಷ ವ್ಯಕ್ತಿಗಳ ಅತಿಮಾನುಷಕ್ಕೆ ಕಾರಣವಾದ ಅಸಾಮಾನ್ಯ ಸನ್ನಿವೇಶ, ಸಂದರ್ಭಗಳು, ಅಸಮ-ವಿಷಮ ಪರಿಸರದಲ್ಲಿ ಸಮಾನತೆಗಾಗಿ ನಡೆದ ಅಸಾಮಾನ್ಯ ಘಟನೆಗಳು ಆ ಕಾಲಘಟ್ಟದ ಚರಿತ್ರೆಯನ್ನು ಗರ್ಭೀಕರಿಸಿಕೊಂಡಿ ರುತ್ತವೆ ಪುರಾಣಗಳು. ಈ ಹಿನ್ನೆಲೆಯಲ್ಲಿ ಪುರಾಣಗಳು ಮನುಷ್ಯ ಸಂಸ್ಕೃತಿಯ ಶಾಸನಗಳು. ಹೀಗಾಗಿ ಯಾವುದೇ ಸಂಸ್ಕೃತಿ, ಸಮಾಜ, ಸಮುದಾಯವನ್ನು ಅಭ್ಯಾಸ ಮಾಡುವುದಕ್ಕೆ ಅಥವಾ ಮನುಕುಲದ ಒಂದು ಕಾಲಘಟ್ಟದ ಚರಿತ್ರೆಯನ್ನು  ಅರಿಯುವುದಕ್ಕೆ ಇಂತೆಲ್ಲ ಪುರಾಣಗಳು ಸಹಕಾರಿಯಾಗುತ್ತವೆ. ಭವಿಷ್ಯದ ಬದುಕಿಗೆ ಮನುಷ್ಯನ ಚರಿತ್ರೆಗೆ, ಎಣ್ಣೆ ಬತ್ತಿಯಾಗುತ್ತವೆ, ವರ್ತಮಾನದ  ಲೌಕಿಕ ಬದುಕಿಗೆ ಗಚ್ಚುಗಾರೆ ಯಾಗುತ್ತವೆ ಇಂತಹ ಪುರಾಣಗಳು.

ಹೀಗೆ ಚೆನ್ನಕವಿಗಳು ರಚಿಸಿರುವ ಒಂಬತ್ತು ಪುರಾಣಗಳು “ವಾರ್ಧಕ ಷಟ್ಪದಿಯಲ್ಲಿ ವೆ” ಉಳಿದ ಸುಮಾರು ಹನ್ನೆರಡು ಕೃತಿಗಳು “ಶತಕ ಹಾಗೂ ಹಾಡುಗಬ್ಬಗಳ ರೂಪದಲ್ಲಿ ರಚಿತವಾಗಿವೆ.

1 ಕಾಲಕಾಲೇಶ್ವರ ಶತಕ 2 ಕಲ್ಲಿನಾಥ ಶತಕ 3 ಕೊಟ್ಟೂರೇಶ್ವರ ಶತಕ

4 ಬಸವ ತ್ರಿವಿಧಿ 5 ಅನ್ನದಾನೀಶ್ವರ ಜೋಗುಳಪದ 6 ನಲ್ನುಡಿ

7 ಶ್ರೀ ಗವಿಸಿದ್ದೇಶ್ವರ ಮಂಗಲ ಪದಗಳು 8 ಮಂತ್ರ ರಹಸ್ಯ 9 ಬೀಗಿತಿಯರ ಹಾಡು

10 ಮನೋ ಬೋಧೆ 11 ಶ್ರೀ ಕುಮಾರೇಶ್ವರ ಶತಕ 12 ಕೊನೆಯದಾಗಿ ತಾವು ಶಿವೈಕ್ಯರಾಗುವ 15 ದಿನಗಳ ಪೂರ್ವದಲ್ಲಿ ಬರೆದದ್ದು ಅದು ಸದಾಶಿವ ಲೀಲೆ.

ಕನ್ನಡ ಸಾಹಿತ್ಯದಲ್ಲಿ ಪ್ರಾಚೀನ ಕಾವ್ಯಗಳು ವಿಪುಲವಾಗಿವೆ, ಹಿಂದಿನ ಪರಂಪರೆಯನ್ನು ಬಿಡದೆ ಇಪ್ಪತ್ತನೆಯ ಶತಮಾನದಲ್ಲಿ ಕಾವ್ಯಗಳನ್ನು ಬರೆದವರು ವಿರಳ ಆದರೆ ಶ್ರೀ ಚನ್ನ ಕವಿಗಳು ಒಂಬತ್ತು ಪುರಾಣಗಳನ್ನು ಬರೆದು ಅದರ ಜೊತೆಗೆ ಶತಕಹಾಗೂಹಾಡುಗಳನ್ನ ರಚಿಸಿ ಈ ಕೊರತೆಯನ್ನ ಬಹುಮಟ್ಟಿಗೆ ಪೂರೈಸಿದವರು.

ಚೆನ್ನ ಕವಿಗಳ ಕೃತಿಗಳಲ್ಲಿ ರಸವತ್ತಾಗಿಯೂ ಜನಪ್ರೀಯವಾಗಿಯು ಇವೆ ಇವರು ಬರೆದ ಪುರಾಣಗಳನ್ನು ಆಸ್ಥೆಯಿಂದ ಶ್ರವಣ ಮಾಡುತ್ತಾರೆ.

ಇವರ ಕಾವ್ಯಶಕ್ತಿಯನ್ನ, ಸಾಹಿತ್ಯ ಸೇವೆಯನ್ನ ಅರಿತುಕೊಂಡ ಧಾರವಾಡದ ಶ್ರೀ ಮೃತ್ಯುಂಜಯ ಅಪ್ಪಗಳವರು ಇವರಿಗೆ ಕ್ರಿ.ಶ.1940 ರಲ್ಲಿ “ಕವಿರತ್ನ” ಎಂಬ ಬಿರುದನ್ನ ದಯಪಾಲಿಸಿದರು.

ಭರತಖಂಡದ ಬೇರೆಬೇರೆ ಭಾಗಗಳಲ್ಲಿ ಮಹಾನುಭಾವರನೇಕರು ಉದ್ಭವಿಸಿ ಭಾರತೀಯರ ಧರ್ಮ, ಸಂಸ್ಕೃತಿ, ನೀತಿ, ನಡೆ-ನುಡಿಗಳನ್ನುಳಿಸಿ ಶೋಧಿಸಿ ಅವು ಪ್ರಕಾಶಮಾನವಾಗುವಂತೆ ಪರಿಶ್ರಮಪಟ್ಟರು. ಇಂತಹ ಮಹನೀಯರ ಜೀವಿತ ಕಥನವನ್ನ, ಅವರು ನಡೆದ ಪಥವನ್ನ, ಪುರಾಣ ರೂಪದಲ್ಲಿ, ಶತಕ ರೂಪದಲ್ಲಿ ನಮ್ಮೆಲ್ಲರಿಗೂ ತಿಳಿಸಿ ಎಲ್ಲರಿಂದ ಗೌರವವನ್ನು ಪಡೆದು ಈ ವಿಧದ ಗೌರವಾನ್ವಿತ ಜೀವನವನ್ನು ಸಾಗಿಸಿ ದಿನಾಂಕ 5-3-1946 ರಲ್ಲಿ  ಕವಿಗಳಿಗೆ ಬದುಕನ್ನು ರೂಪಿಸಿಕೊಟ್ಟು ತಂದೆಯಾದ ಕುಮಾರ ಶಿವಯೋಗಿ ಸ್ಥಾಪಿಸಿದ ಶಿವಯೋಗ ಮಂದಿರದಲ್ಲಿ ಶಿವೈಕ್ಯರಾದರು.

ಶ್ರೀ ದ್ಯಾಂಪುರದ ಚೆನ್ನಕವಿಗಳು ರಚಿಸಿರುವ ಎಲ್ಲ ಕೃತಿಗಳ ಸಾರವನ್ನು ಸವಿದರೆ ಮಾನವನಿಗೆ ನಿಜವಾಗಿಯೂ ಸ್ವಾರ್ಥತ್ಯಾಗದ ಅರಿವು ಉಂಟಾಗುವುದು.

ಇಂತಹ ಮಹಾನ್ ಕವಿಯು  ಅಪೂರ್ವವಾದ ಕೃತಿಯನ್ನು ರಚಿಸಿಕೊಟ್ಟಿದ್ದಾರೆ ಅಂತಹ ಕೃತಿಗಳನ್ನು ಪಡೆದು ಓದಿ ಧನ್ಯಾತ್ಮರಾಗೋಣ .

ಶ್ರೀ ಜ.ಚ. ನಿಡುಮಾಮಿಡಿ ಶ್ರೀಶೈಲ ಸಂಸ್ಥಾನ (೧೯೫೯)

ವ್ಯಕ್ತಿವಿಕಾಸದ ಮುಖದಿಂದ ಸಾಮಾಜಿಕ ವಿಕಾಸ ಕ್ಷೇತ್ರದಲ್ಲಿ ಸಾಹಿತ್ಯ ಪ್ರಕಾಶ ಪ್ರಪಂಚದಲ್ಲಿ ಸಂಸ್ಥೆಗಳ ಸ್ಥಾನ ಬಹು ಎತ್ತರದೆಂಬುದಕ್ಕೆ ಸತ್ಯ ಸಾಕ್ಷಿಯಾಗಿ ನಿತ್ಯದೀಕ್ಷೆಗೊಂಡು ನಿಂತಿದೆ ಶಿವಯೋಗಮಂದಿರ, ವ್ಯಕ್ತಿವಿಕಾಸ ಸಾಧನಗಳು ಅನಂತ. ಅವುಗಳಲ್ಲಿ ಮುಖ್ಯವಾಗಿ ಎರಡು ಬಗೆ: ಒಂದು ಭೌತಿಕ, ಇನ್ನೊಂದು ಆಧ್ಯಾತ್ಮಿಕ. ಮೊದಲಿನದು ಗೌಣ, ಸಹಕಾರಿ. ಎರಡನೆಯದು ಮುಖ್ಯ ಫಲಕಾರಿ. ಇದನ್ನು ಚೆನ್ನಾಗಿ ನಿಟ್ಟಿಸಿ ಮಿಗಿಲಾಗಿ ಅಧ್ಯಾತ್ಮಿಕ ಸಾಧನೆಗಾಗಿಯೆ ಮೀಸಲಾಗಿ ಮೈಯ್ವೆತ್ತಿದೆ ಶಿವಯೋಗಮಂದಿರ.

ಶಿವಯೋಗಮಂದಿರ ಮೈದಾಳಿ ಇಂದಿಗೆ ಐವತ್ತು (೧೯೫೯) ವರುಷಗಳಾದವು. ವ್ಯಕ್ತಿ ಅಥವಾ ಸಂಸ್ಥೆಗಳ ಜೀವನದಲ್ಲಿ ಈ  ಮಧ್ಯಬಿಂದುವಿನ ವಯಸ್ಸು ವಿಶೇಷ ವರ್ಚಸ್ಸುಳ್ಳದ್ದು; ಸುವರ್ಣ ವರ್ಣವುಳ್ಳದ್ದು. ಸ್ವಾನುಭವ ಸುಮಧುರ ಫಲಭರಿತವಾದುದು.

ಶಿವಯೋಗಮಂದಿರ ಸಂಸ್ಥೆಯ ಗುರಿ ಅದರ ಹೆಸರಿನಲ್ಲಿಯೇ ಹೆಪ್ಪುಗಟ್ಟಿದೆ. ಶಿವಯೋಗಸಂಪತ್ತನ್ನು ತನ್ನ ಈ ಐವತ್ತು (೧೯೫೯) ವಯಸ್ಸಿನಲ್ಲಿ ಹಲವಾರು ವ್ಯಕ್ತಿಗಳಲ್ಲಿ ತುಂಬಿ ತುಳುಕಿಸಿದೆ; ಸಾಹಿತ್ಯ ಸಂಪತ್ತನ್ನು ಸೂರೆಗೊಂಡಿದೆ; ಸಂಗೀತರಸ ಗಂಗೆಯನ್ನು ಹರಿಯಿಸಿದೆ; ಸಾಮಾಜಿಕ ಸುಧಾರಣೆಗಳನ್ನು ಎಸಗಿದೆ.

ಮಾನವನ ಮುನ್ನಡೆಗೆ ಮನೋವಿಕಾಸವೆ ಮೂಲ. ಆ ಮನೋವಿಕಾಸಕ್ಕೆ ಮನೋನಿರೋಧವೆ ಮೂಲ. ಈ ಮೂಲವನ್ನರಿತು ಈ ಸಂಸ್ಥೆ ಇದಕ್ಕಾಗಿ ಹೆಣಗಿತು.; ಹೆಣಗುತ್ತಿದೆ. ಚಿತ್ತಚಾಂಚಲ್ಯವನ್ನು ಅಡಗಿಸಿ ಆ ನಿಶ್ಚಲಚಿತ್ತದಲ್ಲಿ ಮಂಗಳ ನೆನಹು ನಿಲ್ಲುವುದೆ ಶಿವಯೋಗ; ಆ ನೆನಹು ಮಣಿಹದಲ್ಲಿ ಮೂಡಿ ಬರುವುದೆ ಮಂದಿರ, ಅಂತಹ ಶಿವಯೋಗದ ಮಂಗಳ ಪ್ರಭಾವದಿಂದ ಪ್ರಜ್ವಲಿಸುವ ಅಚ್ಚಳಿಯದ ಜಂಗಮ ಮಂದಿರಗಳನ್ನು ಜನಾಂಗಕ್ಕೆ ತೋರುವುದೆ- ಒಳಿತಾದ ವಾತಾವರಣವನ್ನು ಬೀರುವುದೆ ‘ಶಿವಯೋಗಮಂದಿರ’ ಹೃದಯ ಧ್ಯೇಯ. ಆ ‘ಶಿವಯೋಗದ ಮಂದಿರ’ದಲ್ಲಿ ಅಂತಹ ಅನೇಕ ದಿವ್ಯ ವ್ಯಕ್ತಿಗಳು ತಯಾರಾದರು.

ಅವರೇ ಆ ಮಂದಿರದ ದೇವ ಮೂರ್ತಿಗಳು, ದಿವ್ಯ ಮೂರ್ತಿಗಳು.

ಶಿವಯೋಗಮಂದಿರದ ಹೆಗ್ಗುರಿಯು ಅದರ ಹೆಸರಿನಲ್ಲಿಯೆ ಹೆಪ್ಪುಗಟ್ಟಿರುವಂತೆ ಅದರ ಹೆಚ್ಚಳಿಕೆಯು ಅದರಲ್ಲಿಯೇ ಇದೆ. ಶಿವಯೋಗಕ್ಕಿಂತ ಶ್ರೇಷ್ಠ ಯೋಗವಿಲ್ಲ. ಉಳಿದ ನಾಲ್ಕು ಯೋಗಗಳು ಮಾನವನ ಉಪಾಂಗ ಸಾಧಕಗಳೇ ಹೊರತು  ಮುಖ್ಯಾಂಗ ಸಾಧಕಗಳಲ್ಲ. ಈ ಅರ್ಥ ಈ ಅಭಿಪ್ರಾಯ ಅವುಗಳ ಹೆಸರುಗಳಲ್ಲಿಯೆ ಹೆಚ್ಚು ನಿಚ್ಚಳವಾಗಿದೆ. ಹಠಯೋಗ  ಶರೀರಶುದ್ದಿಗೆ, ಶುದ್ಧ ಶರೀರಪ್ರಾಪ್ತಿಗೆ ಮೀಸಲು. ಮಂತ್ರಯೋಗ ಮಾತಿನ ಶುದ್ದಿಗೆ, ಶುದ್ಧ ಮಾತಿನ ಪ್ರಾಪ್ತಿಗೆ ಮೀಸಲು.  ಲಯಯೋಗ ಉಸುರಿನ ಶುದ್ಧಿಗೆ, ಆ ಶುದ್ಧ ಉಸಿರಿನ ಪ್ರಾಪ್ತಿಗೆ ಮೀಸಲು. ರಾಜಯೋಗ ಮೈ-ಮಾತು-ಉಸಿರುಗಳಿಗೆ  ರಾಜನಾದ ‘ಜೀವ’ನ ಶುದ್ಧಿಗೆ, ಶುದ್ಧ ಜೀವಪ್ರಾಪ್ತಿಗೆ ತವರು. ಆ ಶುದ್ಧಾತ್ಮನು ಪರಮಾತ್ಮನಾಗುವುದೆ ಶಿವಯೋಗ, ಇಂತಹ  ಅಗ್ಗಳದ ಶಿವಯೋಗಕ್ಕೆ ಮಂದಿರ ಮಂಗಳಸ್ಥಾನ ಶಿವಯೋಗಮಂದಿರ. ಹೆಸರಿನಲ್ಲಿ ಹಿರಿಮೆಗೆ ಇದಕ್ಕಿಂತ ಹೆಚ್ಚಿನ ಮಾತು ಬೇಕಿಲ್ಲ.

ಶಿವ ಅಂದರೆ ಮಂಗಳ ಮತ್ತು ಮಹಾದೇವ. ಆ ಮಂಗಳ ಪ್ರಾಪ್ತಿಗೆ ಮಂದಿರ ಶಿವಯೋಗಮಂದಿರ. ಎರಡನೆಯ ಅರ್ಥ ಪರಮಾತ್ಮ ಆ ಪರಮಾತ್ಮನ ಸತ್ಯ; ನಿತ್ಯ ಚಿದಾನಂದರೂಪ; ಪರಿಪೂರ್ಣಸ್ವರೂಪ. ಆ ಸಚ್ಚಿದಾನಂದ ನಿತ್ಯ ಪರಿಪೂರ್ಣರೂಪ ಶಿವನ ಸಂಪ್ರಾಪ್ತಿಯೆ ಸಾಮರಸ್ಯವೆ ಯೋಗ, ಆ ಶಿವಸಾಮರಸ್ಯ ಸಾಧನೆಯನ್ನು ಸಂಪಾದಿಸಿ ಕೊಡುವುದೆ ಶಿವಯೋಗ. ಅಂತಹ ಮಹತ್ತಿನ ಶಿವಯೋಗಕ್ಕೆ ಮಂಗಳಸ್ಥಾನ “ಶಿವಯೋಗಮಂದಿರ.”

ಶಿವಯೋಗಮಂದಿರವು ಸದುದ್ದೇಶದಿಂದ ಸ್ಥಾಪಿತವಾದ ಸಂಸ್ಥೆ .ಸದ್ಧರ್ಮ ಪ್ರಸಾರಕ್ಕಾಗಿ ಸಂಸ್ಥಾಪಿತವಾದ ಸಂಸ್ಥೆ, ಸಂಘ ಜೀವಿಗಳ-ಸಜ್ಜನ ಜೀವನವುಳ್ಳವರ ಮುಖಾಂತರ ಸಮಾಜ ಸುಧಾರಣೆಗಾಗಿ ಸೃಷ್ಟಿಸಲ್ಪಟ್ಟ ಸಂಸ್ಥೆ .ನಿರ್ದಿಷ್ಟವೂ ನಿರ್ದುಷ್ಟವೂ ಆದ ಧ್ಯೇಯ ಸಾಧನೆಗಾಗಿ ಸಂವೃದ್ಧಿಗೊಳಿಸಿದ ಸಂಸ್ಥೆ .ಕುಮಾರ ಯೋಗಿಯ ಕಾರಣಿಕತೆಯ ಕುರುಹಾಗಿ ರೂಪುಗೊಂಡ ಸಂಸ್ಥೆ ಸಮಾಜ ಮಂದಿರದ ಸುವರ್ಣ ಕಳಸವಾಗಿ ಕಂಗೊಳಿಸಿದ ಸಂಸ್ಥೆ . ಶಿವಯೋಗಮಂದಿರವು ಶಿವಯೋಗಕ್ಕೆ ಮಂದಿರವಾದಂತೆ ಸಮಾಜವೆಂಬ ಶಿವನಿಗೂ ಸಾಧಕರೆಂಬ ಶಿವಪ್ರಮಥರಿಗೂ ಮಂದಿರವಾಗಿ ಸೃಷ್ಟಿಯಾದ ಸಂಸ್ಥೆ .ಆಶ್ರಮಗಳ ಧ್ಯೇಯ ಕ್ಕಿಂತಲೂ

ವಿಶಾಲವಾದ ಧ್ಯೇಯ ವುಳ್ಳ ಏಕೈಕ ಸಂಸ್ಥೆ  .ಇದನ್ನು ಹೋಲುವ ಸಂಸ್ಥೆ ಸಮಾಜದಲ್ಲಿ ಹಿಂದಿಲ್ಲ, ಇಂದಿಲ್ಲ, ಮುಂದೆ ಹೇಗೋ ! ಕ್ರೈಸ್ತರ ಚರ್ಚುಗಳಿಗಿಂತ, ಬೌದ್ಧರ ವಿಹಾರಗಳಿಗಿಂತ ವಿಲಕ್ಷಣವಾದ ಸಂಸ್ಥೆಯಿದೆಂದರೆ ಅಲ್ಲಗಳೆಯುವಂತಿಲ್ಲ,

ಎಳೆ ಮಕ್ಕಳ ತಿಳಿ ಮನಸ್ಸನ್ನು ಶಿವಯೋಗದಲ್ಲಿ ಎರಕಹೊಯ್ದು ಮುದ್ದುರೂಹಿನ ಮಂಗಳ ಮೂರ್ತಿ – ಗಳನ್ನಾಗಿ ತಯಾರಿಸುವ ಪಡಿಯಚ್ಚು ಈ ಸಂಸ್ಥೆ . ಪರಿಶುದ್ಧ ಆಹಾರ, ಪರಿಶುದ್ಧ ವಿಹಾರ, ಪರಿಶುದ್ಧ ವಿಚಾರ, ಪರಿಶುದ್ಧ ಆಚಾರಗಳನ್ನು ಅಲ್ಲಿನ ಸಾಧಕರಿಗೆ ಸಣ್ಣ ವಟುಗಳಿಗೆ ಪ್ರಸಾದಿಸಿತು ಈ ಸಂಸ್ಥೆ . ಪ್ರಾಪಂಚಿಕ ವಾತಾವರಣಕ್ಕೆ ಅಲ್ಲಿ ತೃಣವಾದರೂ ಅನುವಿಲ್ಲ, ಶಿವಭಜನೆ,  ಶಿವಪೂಜೆ, ಸ್ವಾಧ್ಯಾಯ, ಸುಶ್ರವಣ, ಯೋಗ ಸಾಧನೆಗಳಲ್ಲಿ ಎಲ್ಲರೂ ಎಲ್ಲ ಕಾಲದಲ್ಲಿ ತಲ್ಲೀನರಾಗಿರುವರು. ಸಾಧನೆಯು ಸಿದ್ದಿಗೇರಿದ ಮೇಲೆ, ಸಾಧಕರು ಶಿವಯೋಗಿಗಳಾದ ಮೇಲೆ ಮಠಾಧಿಪತಿಗಳಾಗಿಯೋ ಆಗದೆಯೋ ಸಾಮಾಜಿಕ ಸುಧಾರಣೆಗೆ ಕಂಕಣಬದ್ಧರಾಗಬೇಕು. ಸಾಂಸ್ಕೃತಿಕ ಆವಿಷ್ಕರಣಕ್ಕೆ ಸಂಸಿದ್ದರಾಗಬೇಕು.

ಈ ರೀತಿ ವ್ಯಷ್ಟಿ-ಸಮಷ್ಟಿ ಜೀವನೋನ್ನತಿಯ ಗುರಿಗೆ ಗಮನವಿತ್ತು ಜೀವನವನ್ನೇ ಅದಕ್ಕಾಗಿ ಮುಡಿಪಿಟ್ಟವರಿಗೆ ಮಾತ್ರ ಅಲ್ಲಿನ ವಾಸಕ್ಕೆ ಪ್ರವೇಶ; ಅಲ್ಲಿನ ಸಾಧನೆಗೆ ಅವಕಾಶ. ಅಲ್ಲಿ ಪ್ರವೇಶ ಪಡೆದವರೆಲ್ಲರೂ ತಂತಮ್ಮ ಮನೆ ಮಾರುಗಳ-ಆಸ್ತಿಪಾಸ್ತಿಗಳ-ಬಂಧುಬಳಗದ-ತಂದೆತಾಯಿಗಳ ಮೋಹ ಮಮಕಾರಗಳನ್ನು ಸಂಪೂರ್ಣ ಮುರಿದಿಕ್ಕಿರಬೇಕು; ಇಲ್ಲವೆ ಮರೆ ಮಾಡಿರಬೇಕು. ಶಿವಯೋಗಮಂದಿರವೆ ತನ್ನ ಜನ್ಮಭೂಮಿ ಹಾನಗಲ್ಲ ಶ್ರೀ ಕುಮಾರಯೋಗಿಯೇ ತನ್ನ ಸ್ವಾಮಿ, ತನಗೆ ಬೇರಿನ್ನು ಯಾವ ಪೂರ್ವಾಶ್ರಮ ಸಂಬಂಧವಿಲ್ಲೆಂದು ದೃಢವಾಗಿ ನಂಬಿರಬೇಕು.

ಇಂದಿಗೆ ಐವತ್ತು (೧೯೫೯)  ವರುಷಗಳ ಹಿಂದೆ ವೀರಶೈವ ಸಮಾಜವು ನಟ್ಟಿರುಳಿನಲ್ಲಿತ್ತು . ಅದರ ನೈತಿಕ ತಾತ್ವಿಕ ರಕ್ತನಾಳಗಳ ಹರಿದಾಟವೆ ಕಮ್ಮಿಯಾಗಿತ್ತು  .ಅಷ್ಟಾವರಣಗಳಲ್ಲಿ ನಿಷ್ಠೆಯಿಲ್ಲದಾಗಿತ್ತು  .ಪಂಚಾಚಾರಗಳ ಪರಿಚಯವಿಲ್ಲದಾಗಿತ್ತು  .ಷಟಸ್ಥಲ ಸುವಾಸನೆಯಂತೂ ತೀರ ಶೂನ್ಯವಾಗುತ್ತ ಬಂದಿತ್ತು  .ವಿದ್ಯಾವ್ಯಾಸಂಗವಿರಲಿಲ್ಲ, ಕಲಾಪ್ರೇಮ ಕಣ್ಮುಚ್ಚಿತ್ತು. ಇವೆಲ್ಲವುಗಳ ಪ್ರಕಾಶಕ್ಕಾಗಿ ಪುನರುದ್ಧಾರಕ್ಕಾಗಿ ಈ ಸಂಸ್ಥೆ ಜನ್ಮ ಕೊಟ್ಟಿತು. ಈ ನಿಟ್ಟಿನಲ್ಲಿ ಇಡೀ ಸಮಾಜಕ್ಕೆ ಇದೊಂದೇ ಒಂದು ಸಂಸ್ಥೆ! ಆದರೂ ಜನನ ರೋಗಗಳಿಗೇನು ಕಡಿಮೆಯಿರಲಿಲ್ಲ ಅವನ್ನೆಲ್ಲ ಎದುರಿಸಿ ಏರಿ ಬರುವಂತೆ ತನ್ನ ಈ ಮಗುವನ್ನು ಸಾಕಿ ಸಲಹುವ ಸಾಮರ್ಥ್ಯ ಆ ಕಾರಣಿಕ ಕುಮಾರ ಯೋಗಿಯಲ್ಲಿತ್ತು ಅದರಿಂದಾಗಿ ಇನಿತು ದೀರ್ಘಕಾಲ ಈ ಸಂಸ್ಥೆ ಬಾಳಿ ಬೆಳಗಿತು; ಬೆಳಗಲಿದೆ.

ಒಂದು ಸಂಸ್ಥೆಯ ಪ್ರಗತಿಗೆ-ಪುಷ್ಟಾಂಗಕ್ಕೆ ಜನ-ಧನಗಳ ಬೆಂಬಲ ಅತ್ಯವಶ್ಯ. ಅವಿಲ್ಲದ ಸಂಸ್ಥೆ ಅದೆಂದಿಗೂ ಮುಂದುವರಿಯದು. ಅದರ ಅರುಣೋದಯದೊಡನೆ ಅಂಧಕಾರೋದಯವೂ ಕಟ್ಟಿಟ್ಟ ಬುತ್ತಿ. ಆದರೆ ಈ ಸಂಸ್ಥೆಗೆ ಹಾಗಾಗಲಿಲ್ಲ. ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಯ ಕೃಪಾಬಲದಿಂದ ಜನತೆಯ ಬೆಂಬಲವಿತ್ತು ಆತನ ಅಮೋಘ ಕರ್ತವ್ಯ ಶಕ್ತಿಯಿಂದ ಬರಬರುತ್ತ ಆರ್ಥಿಕ ಬಲವೂ ಬೆಂಗೂಡಿ ಬಂತು. ಸಂಸ್ಥೆ ಇನಿತೊಂದು ಕಾಲ ತಲೆಯೆತ್ತಿ ನಿಂತಿತು.

ಯಾವ ಸಂಸ್ಥೆಯೇ ಆಗಲಿ ಅದರ ಚಿರಾಯುತನಕ್ಕೆ ಬರೀ ಭೌತಿಕ ಶಕ್ತಿಯೇ ಸಾಧನವಲ್ಲ, ಭೌತಿಕ ಶಕ್ತಿ ಬರೀ ಭೂಷಣ, ಬರೀ ಥಳಕು ಮಾತ್ರ. ಅದು ಚೇತನವಾಗಲಾರದು; ಅದು ಚಿರಕಾಲವಿರದು. ಚಿರಕಾಲ ಬಾಳಿಸಬಲ್ಲುದು ಅಧ್ಯಾತ್ಮಿಕ ಚೇತನ. ಆ ಚೇತನವನ್ನು ಚೆನ್ನಾಗಿ ತನ್ನೊಳಗೆ ತುಂಬಿಕೊಂಡು ಪರಿಣಮಿಸಿಕೊಂಡಿದೆ ಈ ಶಿವಯೋಗಮಂದಿರ ಸಂಸ್ಥೆ !

ಜಗತ್ತು ಜಡ ದ್ರವ್ಯಗಳಿಂದ ತುಂಬಿರುವಂತೆ ಜನತೆಯೂ ಜಡಜೀವನದತ್ತ ಹೆಚ್ಚಾಗಿ ಹೆಚ್ಚು ಆಸಕ್ತಿ ಯಿಂದ ಸಾಗುತ್ತಿದೆ; ಸಾಯುತ್ತಿದೆ. ದಿಟವಾಗಿ ದಿಟ್ಟಿಸಿದರೆ ಮಾನವನ ಧ್ಯೇಯ ಅದಲ್ಲ, ಮಾನವನು ಚೇತನ ಸ್ವರೂಪಿ, ಚಿನ್ಮಯ ರೂಪಿ. ಜಡ ಪ್ರಕೃತಿಯು ತನ್ನ ಚಿನ್ಮಯರೂಪದ ಸಾಕ್ಷಾತ್ಕಾರ ಪಡೆಯಲಿಕ್ಕಾಗಿ ತನಗೆ ಸಾಧನವಾಗಿ ಸೇರಿದೆ. ಬರೀ ಸಾಧನೆಯಲ್ಲಿಯೆ ನಿಲ್ಲುವುದು ಪುರುಷಾರ್ಥವಲ್ಲ, ತ್ಯಾಗದಿಂದ ಭೋಗದಿಂದ ಸಚ್ಚಿದಾನಂದ ಯೋಗವನ್ನು ಪಡೆವ ಮಧುರ ಸುಂದರ ರಹಸ್ಯವನ್ನು ಮಾನವನು ಮನಗಾಣಬೇಕು. ಅದನ್ನು ಮನಗಾಣಿಸಲು ಈ ಶಿವಯೋಗಮಂದಿರ’ ಸಂಸ್ಥೆಯ ಸೃಷ್ಟಿ ಮತ್ತು ಸ್ಥಿತಿ.

ಇಂತಹ ಸಂಸ್ಥೆಗಳ ಬಾಳೇ ಸಾಮಾಜಿಕ ಬಾಳು ಮತ್ತು ಬೆಳಗು. ಇಂತಹ ಸಂಸ್ಥೆಗಳು ಬಾಳಿದಷ್ಟೂ ಸಮಾಜಗಳು ಸರ್ವಾಂಗ ಸುಂದರವಾಗಿ ಸಂಸ್ಕೃತಿ ಚಂದಿರವಾಗಿ ಬಾಳಬಲ್ಲವು, ಬೆಳಗಬಲ್ಲವು.

ಸಂಸ್ಥೆಗಳ ಅಸ್ತಿತ್ವಕ್ಕೆ ಸ್ಥಾನ ಮಹತ್ವವೂ ಒಂದು ಮುಖ್ಯಾಂಗ, ಶಿವಯೋಗಮಂದಿರ ಸ್ಥಳವು ಮಹತ್ತಿನಿಂದ ಮೆರೆಯುತ್ತಿದೆ. ಅದರ ಸುತ್ತು ಐತಿಹಾಸಿಕ ಸ್ಥಳಗಳಿವೆ; ಗ್ರಾಮಗಳಿವೆ. ಋಷ್ಯಾಶ್ರಮಗಳೂ ದೇವಸ್ಥಾನಗಳೂ ಇವೆ. ಇವಲ್ಲದೆ ಪುರಾಣ ಪ್ರಸಿದ್ದವಾದ ಮಹಾಕೂಟಾದಿ ತೀರ್ಥ ಕ್ಷೇತ್ರಗಳೂ ಇವೆ. ನಿಸರ್ಗ ಸೌಂದರ್ಯಕ್ಕೆ ಕೊರತೆಯಿಲ್ಲ, ಶಿವಯೋಗಮಂದಿರದ ಸುತ್ತೂ ಬೆಟ್ಟಗಳ ಸಾಲು, ಬಲಕ್ಕೆ ಹರಿವ ಹೊನಲು. ತರತರದ ತರುಗಳ ಗುಂಪು ತರುಲತೆಗಳ ಹೂಗಳ ಕಂಪು. ಕೋಗಿಲೆಗಳ ಕಲರವದಿಂಪು, ನವಿಲುಗಳ ನರ್ತನದ ಸೊಂಪು, ಇವೆಲ್ಲವೂ ‘ಶಿವಯೋಗಮಂದಿರ’ ಸಂಸ್ಥೆಗೆ ಮಿಗಿಲಾದ ಕಳೆಯನ್ನು ತಂದಿವೆ. ಸುರುಚಿರವಾದ ಸ್ಥಿತಿಯನ್ನುಂಟುಮಾಡಿವೆ.

ಧಾರ್ಮಿಕಾಚರಣೆಗಳಿಲ್ಲದೆ ಒಣಗಿ ನಿಂತ ಧಾರ್ಮಿಕ ಮರುಭೂಮಿಯ ಮೇಲೆ ಅಧ್ಯಾತ್ಮಿಕ ರಸದ ಹೊನಲನ್ನು ಹರಿಸಿತು ಶಿವಯೋಗಮಂದಿರ. ಸಾಮಾಜಿಕರ ಮೇಲೆ ದಟ್ಟಾಗಿ ಬಿದ್ದ ಅವಿದ್ಯೆಯೆಂಬ ನೆರಳನ್ನು ನಿವಾರಿಸಿ ವಿದ್ಯಾ ಕಿರಣಗಳನ್ನು ಹರಡಿ ಬೆಳಕ ನೀಡಿತು ಶಿವಯೋಗಮಂದಿರ, ನೈತಿಕ, ಸಾಂಸ್ಕೃತಿಕ ಮುಂತಾದ ಹುಲುಸಾದ ಬೆಳೆ ಬೆಳೆಯಿತು ಶಿವಯೋಗಮಂದಿರ, ಮಠಗಳಿಗೆ ಮೂರ್ತಿಗಳನ್ನು ಮೇಲ್ಮಟ್ಟದಲ್ಲಿ ಸಂಸ್ಕರಿಸಿ ತಯಾರಿಸುವ ಅತ್ಯುಚ್ಚ ಆದರ್ಶ ಸಂಸ್ಥೆ ಶಿವಯೋಗಮಂದಿರ. ವ್ಯಷ್ಟಿ ಸುಧಾರಣೆಯಿಂದ ಸಮಷ್ಟಿ ಸುಧಾರಣೆ ಯನ್ನು ಸಾಧಿಸಿತು ಶಿವಯೋಗಮಂದಿರ, ಅನೇಕರನ್ನು ಅನಾರ್ಯ ಜೀವನದಿಂದ ಆರ್ಯ ಜೀವನಕ್ಕೇರಿಸಿತು ಶಿವಯೋಗಮಂದಿರ, ದಾನವ ಜೀವಿಗಳನ್ನು ದೇವ ಜೀವಿಗಳನ್ನಾಗಿಸಿತು. ಶಿವಯೋಗಮಂದಿರ . ಮಾನವ ಹೃದಯರನ್ನು ಮಹಾದೇವ ಹೃದಯರನ್ನಾಗಿ ಮಾಡಿತು ಶಿವಯೋಗಮಂದಿರ.

ಇಲ್ಲಿ ಬಳಸಿದ ‘ಆರ್ಯ’ ಪದಕ್ಕೆ ಜಾತಿ, ಪಂಥ, ಪಂಗಡ- ಈ ಯಾವ ಅರ್ಥವಲ್ಲ, ಸಾಂಸ್ಕೃತಿಕ ಸ್ವಾನುಭಾವಿಕ ಜೀವನದ ಸಂಕೇತವದು. ‘ದಾನವ’ ಪದಕ್ಕೂ ಇಲ್ಲಿ ಜಾತಿಗೀತಿಗಳ ಸೋಂಕಿಲ್ಲ  .ಅನೈತಿಕತೆ, ಅನುದಾರತೆ, ಕಪಟ, ಕ್ರೌರ್ಯ, ಕ್ಷುದ್ರಭಾವ, ಅಸತ್ಯ, ಮೋಸ ಮುಂತಾದ ದುರ್ಗುಣ ಸೂಚಕವದು. ಶಿವಯೋಗಮಂದಿರವು ಐವತ್ತು ವರುಷಗಳಿಂದ ಧಾರ್ಮಿಕ,  ಅಧ್ಯಾತ್ಮಿಕ, ಸಂಗೀತ, ಸತ್ಕೃತಿ ಸಂಗ್ರಹ, ಸಾಮಾಜಿಕ ಮುಂತಾದ ಕ್ಷೇತ್ರಗಳ ಪಯಣಿಗರಿಗಾಗಿ ತನ್ನದೇ ಆದ ದಾರಿದೀಪಗಳನ್ನು ಇತ್ತಿದೆ. ಶಿವಯೋಗಮಂದಿರವು ಸಮಾಜ ಪುರುಷನಿಗಾಗಿ ಬೆಳೆದ ಆಧ್ಯಾತ್ಮಿಕದ ಒಂದು ಪರಮಾಮೃತ ಫಲ, ಸಾಹಿತ್ಯದ ಸುಗಂಧ ಸೂಸುವ ಸುಂದರ ಕಮಲ, ಸಂಗೀತದ ಸುಮಧುರ ಜಲ, ಶಿವಯೋಗಮಂದಿರ ಶಕ್ತಿ ಅಪಾರವಾದುದು, ಜೀವಂತ ಶಕ್ತಿಗಳು ವ್ಯಕ್ತಿರೂಪದಲ್ಲಿ ನಾಡಿನ ತುಂಬ ನಾಲ್ಕು ನಿಟ್ಟಿನಲ್ಲಿ ವಿರಾಜಿಸುತ್ತಿವೆ; ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ, ಶೈಕ್ಷಣಿಕ, ಆಧ್ಯಾತ್ಮಿಕ, ಸಂಗೀತ ಮುಂತಾದ ಸತ್ಕಾರ್ಯಗಳನ್ನು ಕೈಕೊಂಡು ಸಾಗಿಸುತ್ತಿವೆ. ಶಿವಯೋಗಮಂದಿರದ ಮೂರ್ತಿಕೀರ್ತಿಗಳಾಗಿ ಕಂಗೊಳಿಸುತ್ತಿವೆ. ಅವರೇ ಮಠಾಧಿಪತಿಗಳು ಅವರ ಮುಖಾಂತರ ಶಿವಯೋಗಮಂದಿರವು ಸಾಮಾಜಿಕರನ್ನು ನಾಡಿಗರನ್ನು ಸಂಸ್ಕರಿಸುತ್ತಿದೆ; ಶಾಂತಿಪ್ರದಾಯಕ ವಾಗಿ ನಿಂತಿದೆ. ಮಠಾಧಿಪತಿಗಳ ಮುಖಾಂತರ ತನ್ನ ಮರ್ತ್ಯದ ಮಣಿಹವನ್ನು ಮುಂದುವರಿಸುತ್ತಿದೆ. ನಾನಾ ಬಗೆಗಳಲ್ಲಿ ಜನತೆಯ ಬಾಳು ಬದುಕುಗಳನ್ನು ಹಸನಗೊಳಿಸುತ್ತಿದೆ. ನಡೆ-ನುಡಿಗಳನ್ನು ನಯಗೊಳಿಸುತ್ತಿದೆ. ಜನತೆಯ ಸೇವೆಯನ್ನು ಸತತ ಸಲ್ಲಿಸುತ್ತಿದೆ. ಬಾಳಿನ ಬೇಸರಿಕೆಯನ್ನು ಕಡಿಮೆ ಮಾಡುತ್ತಿದೆ. ಬದುಕಿನ ಸಾರ್ಥಕತೆಯನ್ನು ಕೈಗೂಡಿಸುತ್ತಿದೆ. ಒಟ್ಟಿನಲ್ಲಿ ತನ್ನ ಮಠಾಧಿಪತಿಗಳ ಮುಖಾಂತರ ಜ್ಞಾನ-ಕ್ರಿಯೆಗಳ ಪ್ರಸಾರ ದಾಸೋಹ ಸೇವೆ ಸಾಧ್ಯವಾದ ಮಟ್ಟಿಗೆ ಸಾಂಗವಾಗಿ ಸಾಗುವಂತಾಗಿದೆ.

ಶಿವಯೋಗಮಂದಿರ ಸಂಸ್ಥೆಯ ಈ ಅರ್ಧಶತಮಾನದ ಪ್ರಗತಿಪಥದಲ್ಲಿ ಚಕ್ರನೇಮಿಕ್ರಮದಂತೆ ಏರಿಳಿತಗಳಿಲ್ಲದಿಲ್ಲ: ಹಗಲಿರುಳುಗಳು ಬಾರದಿಲ್ಲ, ಮುನ್ನಡೆ-ಹಿನ್ನಡೆಗಳು ಸಂಭವಿಸದಿಲ್ಲ, ಕಷ್ಟ-ಸುಖಗಳು ಕಾಣದಿಲ್ಲ, ಆದರೂ ಅವೆಲ್ಲವನ್ನು ಜೀರ್ಣಿಸಿಕೊಂಡು ಜಾಗ್ರತವಾಗಿದೆ; ಇನಿತೊಂದು ಕಾಲ ಬಾಳಿದೆ; ಬದುಕಿದೆ.

ಇಂದಿನದು ವಿಜ್ಞಾನಯುಗ, ಇಂದಿನ ಜಗತ್ತು ಮತ್ತು ಜನತೆ ವಿಶಾಲ ವಿಚಾರದತ್ತ ಮುನ್ನಡೆಯುತ್ತಿದೆ. ಈ ಅರ್ಧಶತಕದಲ್ಲಿ ತನ್ನ ಅಧ್ಯಾತ್ಮಿಕ ಶಕ್ತಿಯನ್ನು ಸಂಪಾದಿಸಿಕೊಂಡ ಈ ಸಂಸ್ಥೆ ಇನ್ನು ಮುಂದೆ ಇದರೊಡನೆ ಬೌದ್ಧಿಕ ಭೌತಿಕ ಶಕ್ತಿ ಸಂಪದಗಳನ್ನು ಸಂಪಾದಿಸಿಕೊಳ್ಳಬೇಕಾಗಿದೆ. ವ್ಯಕ್ತಿಗಳ ಆತ್ಮೀಕ ಹಾರ್ದಿಕ ಶಕ್ತಿಯನ್ನು ಸಮೃದ್ಧಿಗೊಳಿಸಿದಂತೆ ಇನ್ನು ಮುಂದೆ ಭೌತಿಕ ವೈಜ್ಞಾನಿಕ ಶಕ್ತಿಗೆ ಸಂಚಲನೆಯನ್ನು ಸಂಚಯಿಸಬೇಕಾಗಿದೆ. ಆಧುನಿಕ ವಿಶಾಲ ಸಾಂಸ್ಕೃತಿಕ ನಾಗರಿಕ ನಿಟ್ಟಿನತ್ತ ಸಾಗಬೇಕಾಗಿದೆ. ಸಾಮ್ಯ ಶಾಂತಿ ಸಾಮ್ರಾಜ್ಯ ಸಂಸ್ಥಾಪಿಸ ಬೇಕಾಗಿದೆ; ಸಮರಸಭಾವವನ್ನು ಸಕಲರಲ್ಲಿ ಸಮೃದ್ಧಿಗೊಳಿಸಬೇಕಾಗಿದೆ. ಸರ್ವಧರ್ಮ ಸಮನ್ವಯವನ್ನು ಸಂವೃದ್ಧಿಗೊಳಿಸಬೇಕಾಗಿದೆ.

ಶ್ರೀ ವೀರಶೈವರಿಗೆ ಕೊಲ್ಲಿಪಾಕಿ, ಶ್ರೀಶೈಲ, ಹಿಮವತ್ಕೇದಾರ, ಉಜ್ಜಯಿನಿ, ಕಾಶಿ, ಕಲ್ಯಾಣ, ಕೂಡಲ ಸಂಗಮ, ಬಾಗೇವಾಡಿ ಮುಂತಾದವುಗಳು ಹೇಗೆ ಮಾನ್ಯ ಮತ್ತು ಪೂಜ್ಯ ಸ್ಥಾನಗಳಾಗಿವೆಯೊ ಹಾಗೆ ಶಿವಯೋಗ ಮಂದಿರವೂ ಇಂದು ಮಾನ್ಯ ಸ್ಥಾನವಾಗಿದೆ; ಪುಣ್ಯಸ್ಥಾನವಾಗಿದೆ.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

 

ಬನಶಂಕರಿಯಿಂದ ಏಳು ಕಿಲೋಮೀಟರ್‌ ದಾರಿಯನ್ನು ಕ್ರಮಿಸುತ್ತಿದ್ದಂತೆ ಶ್ರೀ ಶಿವಯೋಗ ಮಂದಿರವು ಕಾಣಬರುವುದು. ಸರಳ-ಸುಂದರ ವಿನ್ಯಾಸದ ಶ್ರೀ ಬಸವೇಶ್ವರ ಮಹಾದ್ವಾರ. ೧೯೯೭ಕ್ಕಿಂತ ಮುಂಚೆ ಇದರ ನಿರ್ಮಾಣವಾಗಿರಲಿಲ್ಲ. ಅನೇಕ ಸಲ ಸಂಸ್ಥೆಯ ಸಭೆಗಳಲ್ಲಿ ಮಹಾದ್ವಾರ ನಿರ್ಮಾಣದ ಠರಾವು ಆಗಿದ್ದವು. ೧-೪-೧೯೯೬ರಲ್ಲಿ ಮುಂಡರಗಿ. ಪೂಜ್ಯರು ಸಂಸ್ಥೆಯ ಅಧ್ಯಕ್ಷರಾದ ಸಂದರ್ಭದಲ್ಲಿ ಆರ್ಥಿಕ ಸ್ಥಿತಿ ಚನ್ನಾಗಿರಲಿಲ್ಲ. ವಿದ್ಯುತ್ ಬಿಲ್ ಸಹ ಬಹಳ ಉಳಿದಿತ್ತು. ರುದ್ರಾಭಿಷೇಕ ನಿಧಿ ೪/೫ ಲಕ್ಷ ರೂ.ಗಳು ಬಳಕೆಯಾಗಿದ್ದವು. ಮಹಾದ್ವಾರದ ಮುಂಭಾಗ ಮತ್ತು ಉತ್ತರದಲ್ಲಿದ್ದ ದಾಸೋಹ ಇಮಾರತಿಗಳು ಬಿದ್ದಿದ್ದವು. ಹೊಸ ಬಿಲ್ಡಿಂಗ್ ತಯಾರಾಗಿ ಈ ಸ್ಥಳ ಹಾಳುಬಿದ್ದಿತ್ತು, ಆರ್ಥಿಕ ಭದ್ರತೆಗಾಗಿ ದಾಸೋಹ ನಿಧಿಯನ್ನು ಮತ್ತು ರುದ್ರಾಭಿಷೇಕ ನಿಧಿಯನ್ನು ಪುನಃ ಪ್ರಾರಂಭಿಸಿ ಹಣಕಾಸಿನ ಅನುಕೂಲತೆಯಾಗಹತ್ತಿತು. ಜೊತೆಗೆ ಮುಂಡರಗಿ ಮಠದ ಸದ್ಭಕ್ತರಾದ ಶ್ರೀ ವೀರಣ್ಣ ಚನ್ನಬಸಪ್ಪ ಮುಷ್ಟಿ ಗಂಗಾವತಿ ಇವರು ಮಹಾದ್ವಾರ ಕಟ್ಟಡಕ್ಕಾಗಿ ೫೧ ಸಾವಿರಗಳನ್ನು ಸಲ್ಲಿಸಿದರು. ಲಿಂ. ಶ್ರೀ ಸದಾಶಿವ ಮಹಾಸ್ವಾಮಿಗಳ ೧೫ ನೆಯ ಪುಣ್ಯಾರಾಧನೆ ದಿ. ೨-೧೧-೯೮ರಂದು ಈ ಮಹಾದ್ವಾರದ ಪ್ರವೇಶೋತ್ಸವವು ಅನೇಕ ಪೂಜ್ಯರ -ವಟುಸಾಧಕರ ಸದ್ಭಕ್ತರ ಸಮೂಹದಿಂದ ನೆರವೇರಿತು. ಬಸವಾದಿ ಶಿವಶರಣರ ಆದರ್ಶಗಳನ್ನು ತತ್ವಗಳನ್ನು ಆಚರಿಸಿ ಎರಡನೆಯ ಬಸವೇಶ್ವರರೆಂದೇ ಖ್ಯಾತನಾಮರಾದ ಪೂಜ್ಯ ಸಂಸ್ಥಾಪಕರ ಸದಾಶೆಯನ್ನು ಸ್ಮರಿಸಿ ಶ್ರೀ ಬಸವೇಶ್ವರ ಮಹಾದ್ವಾರವೆಂದು ಹೆಸರಿಸಲಾಗಿದೆ. ಮಹಾದ್ವಾರದ ಎಡಭಾಗದಲ್ಲಿಯ ದಾಸೋಹದ ಹಳೆಜಾಗೆಯಲ್ಲಿ ದಕ್ಷಿಣಕ್ಕೆ ಅಭಿಮುಖವಾಗಿ ಶ್ರೀ ವಾಣಿಜ್ಯ ಮಳಿಗೆಗಳನ್ನು ರಚಿಸಲಾಯಿತು. ಬಂದ ಭಕ್ತರಿಗೆ ಅವಶ್ಯಕ ವಸ್ತುಗಳು ಲಭಿಸುವಂತಾಗಿದೆ. ಈ ಮಳಿಗೆಗಳಿಗೆ ವೈರಾಗ್ಯ ಶ್ರೀ ಮಲ್ಲಣಾರ್ಯರ ಹೆಸರಿಟ್ಟು ಸ್ಮರಿಸಲಾಯಿತು.

ಪೂರ್ವಾಭಿಮುಖವಾಗಿ ಮಹಾದ್ವಾರದಲ್ಲಿ ಪ್ರವೇಶಿಸುತ್ತಿದಂತೆ ಬಲಭಾಗದಲ್ಲಿ ಶ್ರೀ ವಿಜಯ ಮಹಾಂತೇಶ್ವರ ಅತಿಥಿಗೃಹ’ ಡಾ. ಮೂಜಗಂ ಅವರು ನೂರೊಂದು ಜನ ಗುರು ಜಂಗಮರೂಡನೆ ಪಾದಯಾತ್ರೆ ಮಾಡಿದ ನೆನಹಿನಲ್ಲಿ ರೂಪುಗೊಂಡಿದೆ. ಯಾತ್ರಾರ್ಥಿಗಳಾಗಿ ಆಗಮಿಸುವವರಿಗೆ ವಸತಿಗೆ ಅನುಕೂಲವಾಗಿದೆ. ಎಡಭಾಗದ ಕಟಂಜನದ ಕಾಂಪೌಂಡಿನಲ್ಲಿ ವಿಶಾಲವಾದ ಶ್ರೀ ನಾಲತ್ವಾಡ ವೀರೇಶ್ವರ ಶರಣರ ಉದ್ಯಾನವನ ಸುಂದರವಾಗಿ ರೂಪುಗೊಳ್ಳಹತ್ತಿದೆ. ದಕ್ಷಿಣದ ಗೇಟಿನಿಂದ ಮುಂದೆ ನಡೆದರೆ ದೊಡ್ಡ ಆಲದ ಮರದ ನೆರಳಿನಲ್ಲಿ ಸಾಗುತ್ತ ಬಲಕ್ಕೆ ಅರಕೇರಿಯವರ ಹಳೆ ಇಮಾರತಿ, ಇದರ ಮುಂದೆ ಗುಳೇದಗುಡ್ಡ ವಸ್ತ್ರದವರು ಕಟ್ಟಿಸಿದ ಇಮಾರತಿ ಇವು ಸಂಸ್ಥೆಯ ಸಂಚಾಲಕ ಶ್ರೀಗಳಿಗಾಗಿ ಇವೆ. ಎಡಭಾಗದ ಸಣ್ಣ ದ್ವಾರದಲ್ಲಿ ನಡೆದರೆ ಮೊದಲು ಬರುವುದು ಲಿಂ. ಶ್ರೀ ಸದಾಶಿವ ಮಹಾಸ್ವಾಮಿಗಳವರ ಗದ್ದುಗೆ. ಈ ಪೂಜ್ಯರು ಸುಮಾರು ೫೦ ವರುಷ ಪರ್ಯಂತರ ಸಂಚಾಲಕರಾಗಿ ಮಂದಿರದ ಸೇವೆಯನ್ನು ಮಾಡಿದವರು. ಗುರುಗಳಿಗಿಂತ ಚಿಕ್ಕದಾಗಿರಲೆಂದು ಹನ್ನೆರಡು ಕಮಾನುಗಳಲ್ಲಿ ಅಷ್ಟಕೋನ ಆಕಾರದ ಗದ್ದುಗೆ ಈ ಪೂಜ್ಯರದು. ಸುತ್ತಲು ಭಕ್ತರು ಸಂತಸದಿಂದ ಧ್ಯಾನ ಮಾಡಬಹುದು.

ಮುಂದೆ ಕಾಣುವುದು ಸಂಸ್ಥಾಪಕರ ಸಮಾಧಿ ಮಂದಿರ. ೬೩ ಕಲಶಗಳುಳ್ಳ ಗೋಪುರದ ಮಂದಿರ, ಭವ್ಯವಾದ ಶಿಲಾ ಮಂಟಪ, ಆಧುನಿಕ ಶಿಲ್ಪಕಲಾಕೃತಿಯ ವಿನೂತನ ಪ್ರಾತಿನಿಧ್ಯವಿಲ್ಲಿದೆ. ಭಾರತೀಯ ಸಂಸ್ಕೃತಿಯ ತವನಿಧಿ, ಮೂರನ್ನು ಒಳಗೊಂಡು ಅಖಂಡವಾದ ಎತ್ತರವಾದ ಕಮಾನು ಜಂಗಮತತ್ವದ ಔನ್ನತ್ಯವನ್ನು ಸೂಚಿಸುವ ಪಲ್ಲಕ್ಕಿದಂಡಿಗೆಯಂಥ ದೊಡ್ಡ ಕಮಾನು ಎಡ ಬಲಕ್ಕೆ ಚಿಕ್ಕೆರಡು ಕಮಾನುಗಳು. ಗುರು- ಜಂಗಮರ ಸಾಮರಸ್ಯವನ್ನು ಸಾಧಿಸಿ ಲಿಂಗತತ್ವದ ಮಹತ್ವವನ್ನು ಬಾನೆತ್ತರ ಬಿತ್ತರಿಸಿದ ಮಹಾತ್ಮನೀತನೆಂಬುದನ್ನು ಮುಂಭಾಗದ ಮೇಲಿರುವ ಲಿಂಗಮರಿ ಸೂಚಿಸುತ್ತದೆ. ಎಲ್ಲವನ್ನೊಳಗೊಂಡು ಲಿಂಗಮಯವಾದ ಸಂಕೇತವನ್ನು ತಿಳಿಸುತ್ತಿದೆ. ಈ ಮೇಲಿನ ಮಹಾಲಿಂಗವು ಒಳಹೊರಗು ಒಂದಾದ ಮಹಾನುಭಾವವೆಂಬುದನ್ನು ತಿಳಿಸುವ ಪೂರ್ವ ಪಶ್ಚಿಮದ ಕಮಾನುಗಳು, ಮಹಾ ಮಂದಿರವನ್ನು ಒಳ ಪ್ರವೇಶಿಸುತ್ತಿದ್ದಂತೆ ಶಿಲ್ಪಿಯ ಜಾಣ್ಮೆಯನ್ನು ಪರೀಕ್ಷಿಸಬಹುದು. ಸುಂದರ ಸುಳುಹುಗಳು, ಅಂದವಾದ ಮೂರ್ತಿಗಳು.

ಶ್ರೀ ಕುಮಾರಮಹಾಸ್ವಾಮಿಗಳವರು ವೀರಶೈವ ಸಮಾಜಕ್ಕೆ ಏನು ಮಾಡಲಿಲ್ಲವೆಂದು ಪ್ರಶ್ನಿಸಬೇಕೇ ಹೊರತು ಏನು ಮಾಡಿದರೆಂಬುದು ಸರಿಯೆನಿಸದು. ಪರಮ ಪೂಜ್ಯರ ಜೀವನವು ಸಂಪೂರ್ಣವಾಗಿ ಲೋಕಕಲ್ಯಾಣಕ್ಕಾಗಿ ಸವೆದಿತ್ತು. ಮಹಾಸ್ವಾಮಿಗಳು ಅಂದಣವನೇರಿ ಮೆರೆಯಲಿಲ್ಲ, ಕುಂದಣವ ಗಳಿಸಿ ಗಡಣಿಸಲಿಲ್ಲ. ಕೀರ್ತಿವಾರ್ತೆಗಾಗಿ ಕಾರ್ಯಕೈಗೊಳ್ಳಲಿಲ್ಲ, ವೈರಾಗ್ಯ ಪ್ರದರ್ಶಿಸಲು ವಿಷಯ ತೊರದವರಲ್ಲ. ವಿರಾಗವೇ ಉಸಿರಾಗಿತ್ತು, ಸಮಾಜ ಸೇವೆಗಾಗಿಯೇ ತನುವ ಮೀಸಲುಗೊಳಿಸಿದವರು. ಸಂಸ್ಕೃತಿ ಸಂವರ್ಧನೆಗಾಗಿ ಧನವನ್ನು ಸೂರೆಗೈದವರು. ಶಿವಯೋಗ ಸಾಧನೆಗಾಗಿ ಮನವ ಮೀಸಲಿಟ್ಟವರು. ತಮ್ಮ ತನುವಿನ ಬಗೆಗೆ ನಿರ್ಮೋಹಿಗಳು, ಮನದಲ್ಲಿ ನಿರಹಂಕಾರಿಗಳು. ವಿಷಯದಲ್ಲಿ ಉದಾಸೀನರು. ಭಾವದಲ್ಲಿ ದಿಗಂಬರರು, ಚಿತ್ತದಲ್ಲಿ ನಿರಪೇಕ್ಷೆಯುಳ್ಳವರು. ತಮಗಾಗಿ ಯಾವುದನ್ನು ಬಯಸಲಿಲ್ಲ. ಶಿವಾನುಭವವನ್ನು ಅರಿಯಲು ಆತುರಪಟ್ಟವರು. ಹಲವು ಅನುಭಾವಿಗಳನ್ನು ಸಂಧಿಸಿದ್ದರು. ಜ್ಞಾನಾನಂದದಲ್ಲಿ ಒಂದಾಗಿ ಸಮರಸಗೊಂಡ ಪುಣ್ಯಾತ್ಮರು ಅವರು. ತಮ್ಮ ಆತ್ಮಚರಿತೆಯನ್ನು ಬರೆಯಿಸಿಕೊಳ್ಳಲಿಲ್ಲ. ಬರೆವವರಿಗೆ ಜರಿದರು. ಮಹಾನುಭಾವರ ದಿವ್ಯ ಚರಿತೆ ಬರೆಯಲು ಪ್ರೇರಣೆ ನೀಡಿದರು. ಆತ್ಮಸ್ತುತಿಯನ್ನೆಂದೂ ಮೆಚ್ಚಲಿಲ್ಲ. ಪರನಿಂದೆಯನ್ನು ಕೇಳಲಿಲ್ಲ. ಅಂಥವರ ಪುಣ್ಯಸ್ಮಾರಕ ಮುಂದಿನವರಿಗೆ ಮಾರ್ಗದರ್ಶಕವೆಂದರಿದ ಪೂಜ್ಯರ ಉತ್ತರಾಧಿಕಾರಿಗಳಾದ ಶ್ರೀ ಸದಾಶಿವ ಮಹಾಸ್ವಾಮಿಗಳವರ ದಿವ್ಯ ಭವ್ಯ ಕೊಡುಗೆ ಈ ಮಂದಿರ.

ಭಾರತದೇಶ ಸಾಂಸ್ಕೃತಿಕ ಕಲೆಯಿಂದ ಖ್ಯಾತಿ ಗಳಿಸಿದಂತೆ ಶಿವಯೋಗಮಂದಿರದ ಪರಿಸರ ಇದಕ್ಕೆ ಹೊರತಾಗಿಲ್ಲ, ಉತ್ತರದಲ್ಲಿ ಮಹಾಕೂಟ, ಪಟ್ಟದ ಕಲ್ಲು ಹಾಗೂ ಐಹೊಳೆಯ ದೇಗುಲಗಳು ಶಿಲ್ಪಕಲೆಯ ವೈಭವಕ್ಕೆ ತಾಣವಾಗಿವೆ. ಪಶ್ಚಿಮದ ಬಾದಾಮಿಯ ಮೇಣಬಸದಿಗಳು ಶಿಲಾಭವ್ಯತೆಗೆ ಹೆಸರಾಗಿವೆ. ದಕ್ಷಿಣದ ಬನಶಂಕರಿಯು ಭಕ್ತರಿಗೆ ಭಕ್ತಿಯ ಕೇಂದ್ರವಾಗಿರುವಂತೆ ಶಿವಯೋಗಮಂದಿರದ ಪೂರ್ವಕ್ಕೆ ಮಲಾಪಹಾರಿಣಿ ಉತ್ತರ ವಾಹಿನಿಯಾಗಿ ಹರಿಯುತ್ತಿದ್ದು  ಮಹಾಶಿವಯೋಗಿಯ ಸಮಾಧಿಗೆ ಧಬೆಧಬೆಯಿಂದ ನಿತ್ಯ ಓಂಕಾರ ಧ್ವನಿಸುತ್ತಿದೆ. ಸುತ್ತಲಿನ ಗುಡ್ಡಗಳು ಶಿವಯೋಗಿಯ ಕೀರ್ತಿಯನ್ನು ಎತ್ತರಕ್ಕೆ ಸಾರುತ್ತಿವೆ. ಇವೆಲ್ಲವನ್ನು ಗಮನಿಸಿದರೆ ಇಂಥ ಪುಣ್ಯಪುರುಷರಿಗೆ ಚಿರಸ್ಮಾರಕ ರಚಿಸಿದ ಶ್ರೀ ಸದಾಶಿವರ ಶ್ರಮ ಸಾರ್ಥಕವಲ್ಲವೆ? ಸದಾಶಿವ ಮಹಾಸ್ವಾಮಿಗಳು ಯೋಜನಾಬದ್ಧರು. ಸ್ವತಃ ಈ ಗುರು ಮಂದಿರ ನಿರ್ಮಾಣದ ನಕಾಶೆಯನ್ನು ತಯಾರಿಸಿ ಶಿಲ್ಪಿಗಳಿಂದ ಸಾಕಾರಗೊಳಿಸಿದವರು. ಅಭಿಯಂತರ ಬುದ್ಧಿಯನ್ನು ಹೊಂದಿದಂತೆ ಕಲಾವಿದನ ಹೃದಯವುಳ್ಳವರಾಗಿದ್ದರು ಅವರು.

ಈ ಮಹಾಮಂದಿರದ ಉದ್ದ-ಅಗಲ, ಉತ್ತರ-ದಕ್ಷಿಣಕ್ಕೆ ೭೩ ಅಡಿಗಳಿದ್ದರೆ, ಪೂರ್ವ ಪಶ್ಚಿಮಕ್ಕೆ ೫೧ ಅಡಿಗಳಷ್ಟಿದೆ. ಪಾತಾಳ-ಮರ್ತ್ಯ ಸ್ವರ್ಗಲೋಕವೆಂಬಂತೆ ಮೂರು ಭಾಗಗಳಲ್ಲಿ ಹಂತಹಂತವಾಗಿ ವಿನ್ಯಾಸಗೊಂಡಿದೆ. ಉತ್ತರಾಭಿಮುಖವಾಗಿ  ನಿರ್ಮಾಣವಾದ ಮಂದಿರ ಮುಂಭಾಗದ ಎತ್ತರ ಕಮಾನಿನ ಅಳತೆ ೨೯ಅಡಿ ೩ ಇಂಚು ಅಗಲವಾಗಿದ್ದರೆ, ೧೪ ಅಡಿ ೯ ಇಂಚು ಎತ್ತರವಾದ ಈ ಕಮಾನು ನೋಡುವಂತಾಗಿದೆ. ಇಂಥ ದೊಡ್ಡ ಕಮಾನು ಬೇರೆಲ್ಲೂ ಕಾಣುವುದಿಲ್ಲ. ಪೂರ್ವ-ಪಶ್ಚಿಮದ ಕಮಾನುಗಳು ೯ ಅಡಿ ಅಗಲವಾಗಿದ್ದು, ೧೧ ಅಡಿ ಎತ್ತರವಾಗಿವೆ. ಈ ಮುಂಭಾಗದ ಕೆಲಸ ೧೯೫೬ರ ನಂತರ ನಿರ್ಮಾಣವಾಯಿತು. ಮೇಲ್ಬಾಗ ಮೊದಲೇ ಪೂರ್ಣವಾಗಿತ್ತು. ಆದರೆ ಆರ್‌ಸಿಸಿ ಆಗಿರಲಿಲ್ಲ.

ಮರ್ತ್ಯಲೋಕವನ್ನು ಪ್ರತಿನಿಧಿಸುವ ಎರಡನೆಯ ಹಂತವು ೧೩ ಅಡಿಗಳಿಗೂ ಎತ್ತರವಾದ ನಾಲ್ಕು ಕಂಬಗಳಿವೆ. ಸತ್ಯ-ಪ್ರೀತಿ- ಅಹಿಂಸ-ಧರ್ಮಗಳನ್ನು ಮರ್ತ್ಯದ ಮಾನವರಿಗೆ ಬೋಧಿಸುವಂತಿದೆ. ಪುರುಷಾರ್ಥಗಳೂ ನಾಲ್ಕು. ಇವು ಅತ್ಯುನ್ನತ ಮಾರ್ಗಗಳಲ್ಲವೆ? ಮೂರನೆಯದು ಸ್ವರ್ಗವನ್ನು ಪ್ರತಿನಿಧಿಸುತ್ತಿದ್ದು ಪಂಚಾಚಾರಗಳೇ ಪ್ರಾಣವೆಂಬುದನ್ನು ತಿಳಿಸುವ ಪಂಚಕಮಾನುಗಳು ಸುಂದರವಾಗಿವೆ. ಕಂಬಗಳ ಕೆಲಸವೂ ನೋಡುವಂತಿದೆ. ಈ ಎಲ್ಲ ವಿನ್ಯಾಸವನ್ನು ಗಮನಿಸಿದರೆ ವೀರಶೈವ ಸಿದ್ಧಾಂತವನ್ನೇ ತಿಳಿಯಬಹುದು. ಅಷ್ಟಾವರಣವೇ ಅಂಗ, ಪಂಚಾಚಾರಗಳೇ ಪ್ರಾಣ, ಷಟ್‌ಸ್ಥಲವೇ ಆತ್ಮವೆಂಬ

ತತ್ವತ್ರಯಗಳು ವೀರಶೈವರದು. ಗುರು-ಲಿಂಗ-ಜಂಗಮರು ಆರಾಧ್ಯರೆಂಬುದನ್ನು ಮುಂಭಾಗದ ಕಮಾನುಗಳು ತಿಳಿಸಿದರೆ

ಪಾದೋದಕ-ಪ್ರಸಾದಗಳು ಅವರಿಂದ ಸಾಧ್ಯವೆಂಬುದು ಪೂರ್ವ ಪಶ್ಚಿಮ ಕಮಾನುಗಳು ತಿಳಿಸುತ್ತವೆ. ಪೂಜ್ಯರನ್ನು ಪೂಜಿಸುವ ಸಾಧನಗಳು ವಿಭೂತಿ-ರುದ್ರಾಕ್ಷಿ-ಮಂತ್ರಗಳು ಅವುಗಳಲ್ಲಿಯೇ ಕೂಡಿವೆ.

ಎರಡನೆ ಹಂತದ ಐದಂಕಣಗಳು ಪಂಚಾಚಾರಗಳನ್ನು ಬೋಧಿಸಿದರೆ, ಮೇಲಿನ ಐದು ಕಮಾನುಗಳು ಆತ್ಮವನ್ನೊಳಗೊಂಡ ಷಟ್‌ಸ್ಥಲವನ್ನು ನಿರೂಪಿಸುತ್ತವೆ. ಸೋಪಾನಗಳನ್ನು ಹತ್ತಿ ಗಂಟೆಯನ್ನು ಬಾರಿಸಿ ಶಿವಯೋಗಿಯ ದರ್ಶನ ಮಾಡಿಕೊಳ್ಳಬೇಕು. ಕಪ್ಪುಶಿಲೆಯ ಸುಂದರವಾದ ಎತ್ತರವಾದ ಬಾಗಿಲ ವಿನ್ಯಾಸ, ಒಳಗಿನ ಗದ್ದುಗೆಯ ವೈಭವ ಬಂದ ಭಕ್ತರನ್ನು ಆಕರ್ಷಿಸದೆ ಬಿಡದು. ಒಳಗಿರುವ ದಿವ್ಯಚೇತನವೇ ಬಾಗಿಲ ಮೇಲೆ ಮಂಡಿಸಿದಂತಿರುವ ಕುಮಾರೇಶ್ವರ ಭಾವಚಿತ್ರವು ಭಕ್ತಿಯಿಂದ ವಂದಿಸುವ ಭಕ್ತ ವೃಂದವನ್ನು ಹರಸುತ್ತಿದೆ; ಭಾವುಕರನ್ನು ಮಾತನಾಡಿಸುವಂತಿದೆ.

ವಿಜ್ಞಾನ ಯುಗದ ಇಂದಿನ ಮಾನವರು ಕಲ್ಪನೆಯಲ್ಲಿ ದೇವರನ್ನು ಅರಸುತ್ತಾರೆ. ದೇವರು ಎಲ್ಲಿದ್ದಾನೆ? ಗುಡಿ ಗುಂಡಾರಗಳು ಶೋಷಣೆಯ ಕೇಂದ್ರಗಳು; ಶಿಲಾಮೂರ್ತಿಗಳಿಗೆ ನಮಸ್ಕಾರವೇಕೆ? ಇತ್ಯಾದಿ ಪ್ರಶ್ನೆಗಳು ಮೌಲಿಕವಾದವುಗಳೆ! ಧರ್ಮ ಮತ್ತು ವಿಜ್ಞಾನಕ್ಕೆ ಎಲ್ಲಿಲ್ಲದ ನಂಟು. ಅವೆರಡಕ್ಕೂ ಅವಿನಾಭಾವ ಸಂಬಂಧವುಂಟು. ವಿಜ್ಞಾನಿ ಐನ್‌ಸ್ಟೀನ್‌ನು ‘ಧರ್ಮವಿಲ್ಲದ ವಿಜ್ಞಾನ ಕುರುಡು, ವಿಜ್ಞಾನವಿಲ್ಲದ ಧರ್ಮ ಕುಂಟು’ ಎಂದು ಹೇಳಿದ್ದನ್ನು ಅರ್ಥೈಸಿಕೊಳ್ಳಬೇಕು. ಧರ್ಮ ಕ್ರಿಯಾಶೀಲ. ವಿಜ್ಞಾನ ಜ್ಞಾನಮಯ. ಕೇವಲ ಕ್ರಿಯೆಯಾಗಲಿ, ಕೇವಲ ಜ್ಞಾನವಾಗಲಿ ಸಾರ್ಥಕವಲ್ಲ. ಕ್ರಿಯಾಜ್ಞಾನಗಳ ಸಮನ್ವಯವಾಗಬೇಕು. ಒಂದೇ ರೆಕ್ಕೆಯಿಂದ ಹಕ್ಕಿ ಹಾರಲಾರದು. ಕುರುಡ-ಕುಂಟರಿಬ್ಬರು ಸೇರಿ ದಾರಿಯನ್ನು ಗಮನಿಸಿ ಗುರಿಯನ್ನು ಮುಟ್ಟಬಲ್ಲರು. ಮಾನವಧರ್ಮವನ್ನು ಅರ್ಥಮಾಡಿಕೊಳ್ಳಬೇಕು. ಮೂಢನಂಬಿಕೆಯನ್ನು ದೂರ ತಳ್ಳಿ, ಕ್ರಿಯಾ ಜ್ಞಾನಗಳಲ್ಲಿ ಏಕಾರ್ಥವನ್ನು ಹೊಂದಿದ ಶಿವಶರಣರು ಸಕಲ ಜೀವಿಗಳ ಲೇಸ ನೆರಹಿದವರು. ಮಾನವರಲ್ಲಿ ಮಹಾದೇವನನ್ನು ಕಂಡವರು. ಆ ಮಾರ್ಗದಲ್ಲಿ ಮುನ್ನಡೆದವರು. ಅದೇ ರೀತಿ ಈ ಸಂಸ್ಥೆಯ ಸಂಸ್ಥಾಪಕರು ಜೀವನ ಪರ್ಯಂತರ ಮಾನವರ ಕಲ್ಯಾಣ ಬಯಸಿದವರು ಮಹಾಚೇತನರು ಜಂಗಮ ಜ್ಯೋತಿಗಳು, ಅವರ ಸ್ಮರಣೆ-ವಂದನೆ, ತ್ರಿಕಾಲದಲ್ಲಿ ಯೋಗ್ಯ.

 ವಿಶ್ವಾಸದಲ್ಲಿ ದೇವರಿದ್ದಾನೆ. ಶ್ರದ್ಧೆಯೆಂಬ ಕನ್ನಡಕ ಹಾಕಿ ಸದ್ಭಾವನೆಯಿಂದ ವಂದಿಸಿದರೆ ಮಹಾಸ್ವಾಮಿಯ ಕರುಣೆ ಆಗುವುದು. ಕನ್ನಡಿಯು ಬಿಂಬದಂತೆ ಪ್ರತಿಬಿಂಬ ತೋರುವುದಿಲ್ಲವೆ? ಸದ್ಭಾವನೆಯ ಪ್ರತಿಫಲವೆ ದೇವದರ್ಶನದಲ್ಲಿ ಕಾಣುವುದು. ಗುರುಗಳ ಹಸ್ತಸ್ಪರ್ಶದಿಂದ ಶಿಲೆಯೂ ದೇವರಾಗುವುದು. ದುರಾಚಾರ-ದುರ್ನಡತೆ-ದುರಭ್ಯಾಸಗಳನ್ನು ದೂರಿರಿಸಿ ಸದ್ಭಾವ ಬೆಳಸಲೆಂದೇ ದೇವಸ್ಥಾನಗಳು ಬೆಳೆದಿವೆ.

ಶ್ರೀ ಕುಮಾರ ಮಹಾಸ್ವಾಮಿಗಳ ಗದ್ದುಗೆಯ ಬಾಗಿಲಲ್ಲಿ ದರ್ಶನ ಮಾಡಿಕೊಳ್ಳಬೇಕು. ಗರ್ಭಗುಡಿಯ ಗದ್ದುಗೆ  ನಿರ್ಮಾಣವಾದರೂ ಕಲಾತ್ಮಕವಾಗಿದೆ, ತಾತ್ವಿಕವಾಗಿದೆ. ಲಿಂಗದ ವಿನ್ಯಾಸದಲ್ಲಿ ಕೆಳಗೆ ಪೀಠ, ಮೇಲೆ ಬಾಣದಂತೆ ಗದ್ದುಗೆಯ ರಚನೆಯಾಗಿದೆ. ಸುಂದರವಾದ ಸಾಣಿ ಹಿಡಿದ ಕಂಬಗಳೆರಡರ ಮೇಲೆ ಮನೋಹರ ಕಮಾನಿನ ಮಧ್ಯದಲ್ಲಿ ಗದ್ದುಗೆಯಿದೆ. ಗರ್ಭಗುಡಿಯಲ್ಲಿ ಎಲ್ಲರಿಗೆ ಪ್ರವೇಶವಿಲ್ಲ. ಪಕ್ಕಾ ಮಡಿಯಿಂದ ಶುದ್ಧ ಮನಸ್ಸಿನ ಭಕ್ತರು ಮಾತ್ರ ಮರಿದೇವರು ಪೂಜೆಯನ್ನು ಮಾಡುವಾಗ ಪ್ರವೇಶ ಪಡೆಯಬಲ್ಲರು. ಮಹಾದೇವಿಯಕ್ಕನ ವಚನದಂತೆ ‘ಕಲ್ಯಾಣವೆಂಬುದಿನ್ನಾರಿಗೆ ಹೊಗಬಾರದು. – ಆಸೆ ಆಮಿಷ ಅಳಿದವಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು. ಎಲ್ಲರಿಗೂ ಆತ್ಮೋದ್ದಾರ ಅರ್ಥಾತ್ ಮಂಗಲಜೀವನ  ಲಭಿಸುವುದಿಲ್ಲ. ಬಂದವರಿಗೆಲ್ಲ ಮಹಾಶಿವಯೋಗಿಯ ಗದ್ದುಗೆ ಸೇವೆ ದೊರೆಯುವುದಿಲ್ಲ. ಯಾರು ಆಸೆ, ಆಮಿಷಗಳನ್ನು ಅಳಿಯುವುದಿಲ್ಲವೋ ಅವರು ಆತ್ಮೋದ್ಧಾರ ಮಾಡಿಕೊಳ್ಳಲಾರರು. ಅಂಥವರು ಶ್ರೀ ಸ್ವಾಮಿಯ ಕೃಪೆ ಹೊಂದಲಾರರು. ಅಜ್ಞ ಮಾನವರು,

ಅಹಂಕಾರಿಗಳು ಇತ್ತ ಬರಲಾರರು. ನೀನು ನಾನೆಂಬ ದ್ವಂದ್ವ ಅಳಿದು ಅಹಂಕಾರವನ್ನು ದೂರ ತಳ್ಳಿದರೆ ಮಾತ್ರ ಕುಮಾರೇಶನ ದರ್ಶನ ಲಭಿಸುವುದೆಂಬ ಭಾವನೆಯಿಲ್ಲಿದೆ. ದೂರದಿಂದಲೇ ಸ್ವಾಮಿಯ ದರ್ಶನ ಲಾಭ ಪಡೆದು ಅವರ ಸಾಧನೆ- ಸಂದೇಶಗಳನ್ನು ಮೆಲುಕು ಹಾಕಿದರೆ ಸಾಕು. ನಿಮ್ಮ ಪ್ರವಾಸ ಸಾರ್ಥಕ. ಶ್ರೀ ಸ್ವಾಮಿಯ ದರ್ಶನ ಪಡೆದು ಕೃತಾರ್ಥಭಾವದಿಂದ ಉತ್ತರಾಭಿಮುಖವಾಗಿ ಮುನ್ನೆಡವಾಗ ಬಲಭಾಗದಲ್ಲಿ ರುದ್ರಾಕ್ಷಿ ಮರಗಳ ವನ . ಮಂದೆ ಕಾಣುವ ಎತ್ತರದ ಕಾಂಪೌಂಡಿನಲ್ಲಿ ‘ಕಲ್ಮಠ’ ವೆಂದು ಕರೆಯಿಸಿಕೊಳ್ಳುವ ಜ್ಞಾನ ದೇಗುಲ, ಸಾಧಕರ ಸಾಧನೆಯ ಕೇಂದ್ರ. ಇದು ಎರಡನೆಯ ಸಲ ರೂಪುಗೊಂಡಿದೆ. ಇಲ್ಲಿ ಒಳಗೆ ಗವಿಗಳಿವೆ. ಯೋಗಸಾಧನೆಗೆ ಧ್ಯಾನ ಮಾಡಲು ಉಪಯೋಗವಾಗುತ್ತಿವೆ. ಎಡಬಲಕ್ಕೆ ಕೋಣೆಗಳಿವೆ. ಅಧ್ಯಾಪಕರು ವಾಸ ಮಾಡುತ್ತಾರೆ. ಯಾತ್ರಿಕರ ಗದ್ದಲ ಹೆಚ್ಚಾಗಿ ಶಿವಯೋಗ ಮಂದಿರದ ಶೈಕ್ಷಣಿಕ ನಿಯಮಾನುಸಾರವಾಗಿ ವಟು ಸಾಧಕರಿಗೆ ಮೇಲ್ಮಠದಲ್ಲಿ ಹಾಗೂ ಹಳೆ ಕನ್ನಡ ಶಾಲೆಯಲ್ಲಿ ಶ್ರೀ ಕುಮಾರೇಶ್ವರ ಸಂಸ್ಕೃತ ವಿದ್ಯಾಪೀಠವು ಕಾರ್ಯ ಮಾಡುತ್ತಿದೆ.

ಕಲ್ಮಠದ ಉತ್ತರಕ್ಕೆ ಹಿಂದೆ ವಿವರಿಸಿದಂತೆ ಎಡಭಾಗದಲ್ಲಿ ಶ್ರೀ ವಿಜಯಮಹಾಂತೇಶ್ವರ ಗ್ರಂಥಾಲಯ ಹಾಗೂ ಶ್ರೀ ರೇವಣಸಿದ್ದೇಶ್ವರ ವಾಚನಾಲಯವಿದೆ. ಬಲಭಾಗದಲ್ಲಿ ಮುದ್ರಣಾಲಯವಿತ್ತು. ಈಗ ಅದರ ಕಾರ್ಯ ನಡೆದಿಲ್ಲ. ಬೇರೆಡೆಗೆ ಅಚ್ಚು ಮಾಡಿಸಿ ಸುಕುಮಾರ ಪತ್ರಿಕೆ ಪ್ರಕಟವಾಗುತ್ತಿದೆ. ಈ ಕಲ್ಮಠದಿಂದ ಮುಂದೆ ಈಶಾನ್ಯ ದಿಕ್ಕಿಗೆ ಇರುವ ಇಮಾರತಿಗೆ ‘ಹೊಸಮಠ’ ವೆಂದು ಕರೆಯುತ್ತಾರೆ. ಇದನ್ನು ಹಾಲಕೆರೆ ಅಜ್ಜ ನವರು ಕಟ್ಟಿಸಿದ್ದಾರೆ. ಇಲ್ಲಿ ಎಡ ಭಾಗದಲ್ಲಿ ಗವಿಯಿದೆ. ಬಿಲ್ವವನದ ಮಧ್ಯದಲ್ಲಿ ಸಣ್ಣ ಗುಡಿಯಿದೆ. ಸಂಸ್ಥೆಯ ಸ್ಥಾಪನೆಗೆ ಸ್ಥಾನವನ್ನು ಹುಡುಕಲು ಬಂದ ಶ್ರೀ ವಿಜಯಮಹಾಂತ ಸ್ವಾಮಿಗಳವರ ಮಹಾಂತಮ್ಮನೆಂಬ ಗೋವು ಸೆಗಣಿ ಹಾಕಿ ಮಲಗಿದ ನೆನಹಿನಲ್ಲಿ ಇದನ್ನು ಕಟ್ಟಿಸಿದ್ದಾರೆ. ಇದರ ಮುಂದೆ ಹೊಸದಾಗಿ ಕಟ್ಟಿಸಿದ ಹೊಸಮಠವಿದೆ. ಇಲ್ಲಿ ಹಾಲಕೆರೆ ಶ್ರೀಗಳ ಶಿವಪೂಜೆ ನಡೆಯುತ್ತಿದೆ. ಇದನ್ನು ನೋಡಿ ಪಶ್ಚಿಮದ ಕಡೆಗೆ ಆಗಮಿಸಿದರೆ ಯಳಂದೂರು ಶ್ರೀ ಬಸವಲಿಂಗಸ್ವಾಮಿಗಳ ಸ್ಮಾರಕ ವಿಭೂತಿ ನಿರ್ಮಾಣ ಕೇಂದ್ರವಿದೆ. ಪರಿಶುದ್ಧ ಪಾವನ ಭಸ್ಮ ಗಟ್ಟಿಗಳನ್ನು ಪಡೆಯಬಹುದು. ಅಲ್ಲಿಂದ ಮತ್ತೆ ದಕ್ಷಿಣಕ್ಕೆ ಹೊರಳಿದರೆ ಗೋಶಾಲೆಯಿದೆ. ಇತ್ತೀಚೆಗೆ ಇಂದಿನ ಅಧ್ಯಕ್ಷರು ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ  ವಿನೂತನವಾಗಿ ನಿರ್ಮಿಸಿದ ಗೋಶಾಲೆಯನ್ನು ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರಿಂದ ಉದ್ಘಾಟನೆ ಮಾಡಿಸಿದರು. ಗೋಮೂತ್ರವನ್ನು ಸಂಗ್ರಹಿಸುವ ವ್ಯವಸ್ಥೆಯೂ ಆಗಿದೆ. ಅದರ ಪಕ್ಕದಲ್ಲಿ ಶ್ರೀ ಕುಮಾರೇಶ್ವರ ದಾಸೋಹ ಮಂದಿರ, ಶ್ರೀ ಸದಾಶಿವ ಮಹಾಸ್ವಾಮಿಗಳವರ ಅಮೃತ ಮಹೋತ್ಸವ ನೆನಹಿನಲ್ಲಿ ಕಟ್ಟಿಸಿದ ಮಹಾಮನೆ, ನಿರಂತರ ಪ್ರಸಾದ ವ್ಯವಸ್ಥೆ ನಡೆಯಲೆಂದು ೧೯೯೬ರಿಂದ ದಾಸೋಹ ನಿಧಿಯನ್ನು ಸ್ಥಾಪಿಸಲಾಯಿತು. ೫೦೧೧ ರೂ. ದಕ್ಕೂ ಹೆಚ್ಚಿಗೆ ದೇಣಿಗೆ ನೀಡಿದವರ ಹೆಸರಿನಲ್ಲಿ ಒಂದು ದಿನ ಪ್ರಸಾದ ವಿತರಣೆಯಾಗುವುದು. ಪ್ರಸಾದ ಸ್ವೀಕರಿಸಿ  ದಣಿವಾರಿಸಿಕೊಂಡು ನಿಮ್ಮ ಭಕ್ತಿಯ ಕಾಣಿಕೆಯನ್ನಿತ್ತು ಪಾವತಿ ಪಡೆಯಬೇಕು; ದಾಸೋಹ ಮಂದಿರಗಳಲ್ಲಿ ಪ್ರಸಾದ ಸ್ವೀಕರಿಸಿ ಹಾಗೇ ಹೋಗುವುದು ಭಕ್ತರ ಲಕ್ಷಣವಲ್ಲ. ತಮಗೆ ಸಾಧ್ಯವಾದಷ್ಟು ದಾನ ಮಾಡಬೇಕು.

ಸಮಯಾವಕಾಶವಿದ್ದರೆ ಮೇಲ್ಮಠದ ಕಡೆಗೆ ಶಾಂತವಾಗಿ ಹೋಗಿ ಬರಬಹುದು. ಶ್ರೀ ವಿಜಯ ಮಹಾಂತೇಶ್ವರ ಅತಿಥಿಗೃಹದಲ್ಲಿ ತಂಗಬಹುದು. ಅದರ ಮುಂದೆ ಅರಕೇರಿಯವರ ಖೋಲಿಯಿದೆ. ಇದು ಮೊದಲಿನ ಆಕಾರದಲ್ಲಿಯೇ ಇದೆ. ಶ್ರೀ ಸದಾಶಿವ ಮಹಾಸ್ವಾಮಿಗಳು ೩-೪ ದಶಕಗಳ ಕಾಲ ವಾಸ್ತವ್ಯ ಮಾಡಿದ್ದರು. ಸಾಧಕರಿಗೆ ಇಲ್ಲಿ ಸಂಸ್ಕೃತ ಪಾಠ ಹೇಳುತ್ತಿದ್ದರು. ಒಮ್ಮೆ ಬೆಳಗು ಮುಂಜಾನೆ ಶೌಚಕ್ಕಾಗಿ ಹೋಗುವಾಗ ಹಾವೊಂದು ಕಚ್ಚಿದ ಕಾರಣ ಗುಳೇದಗುಡ್ಡದ ವಸ್ತ್ರದ ಸದಾಶಿವಯ್ಯ  ಸಹೋದರರು ಅರಕೇರಿ ಖೋಲಿಯ ಬಲಭಾಗದಲ್ಲಿ ಪೂಜ್ಯ ಶ್ರೀಗಳಿಗಾಗಿ ಪೂಜಾ ಮಂದಿರವನ್ನು ಕಟ್ಟಿಸಿಕೊಟ್ಟರು. ಅದರ  ಬಲಭಾಗದಲ್ಲಿ ಸಂಸ್ಕೃತ ವಿದ್ಯಾಪೀಠವಿದೆ. ವಟು ಸಾಧಕರ ಶಿಕ್ಷಣ ಇಲ್ಲಿಯೇ ನಡೆಯುತ್ತಿದೆ. ಅದರ ಪಕ್ಕದಲ್ಲಿ ಶ್ರೀ ಕೊಟ್ಟೂರು ಬಸವೇಶ್ವರ ಮಂದಿರವಿದೆ. ಶಿವಯೋಗ ಮಂದಿರ ಸ್ಥಾಪನೆಯ ಪೂರ್ವದಲ್ಲಿದ್ದ ಕುರುಹು, ಕೇವಲ ಶಿಥಿಲವಾದ ಕಟ್ಟೆಯಿತ್ತು. ಉಸ್ಮಾನಾಬಾದ್ ಜಿಲ್ಲೆಯ ಮೊರಬ ಗ್ರಾಮದ ಶ್ರೀ ಶಂಭುಲಿಂಗ ಶಿವಾಚಾರ್ಯರು ಇದನ್ನು ಕಟ್ಟಿಸಿದರು. ಸಂಸ್ಥೆಯಲ್ಲಿ ಇದ್ದು ಅಧ್ಯಯನಗೈದು ಈ ಸ್ಮಾರಕವನ್ನು ಜೀರ್ಣೋದ್ಧಾರಗೈದಿರುವರು. ಇದರ ಪಕ್ಕದಲ್ಲಿ ಹುಬ್ಬಳ್ಳಿ ಮೂಜಗಂ ಅವರು ತಮ್ಮ ವಸತಿಗಾಗಿ ತಮ್ಮ ಮಠದಿಂದಲೆ ಈ ಧ್ಯಾನಧಾಮವನ್ನು ಕಟ್ಟಿಸಿದರು. ಧ್ಯಾನಧಾಮದ ಪಕ್ಕದಲ್ಲಿ ಬೈಲಹೊಂಗಲ ಶ್ರೀಗಳು ನೂತನ ಮಂದಿರವನ್ನು ಕಟ್ಟಿಸಿರುವರು. ಅದರ ಮುಂಭಾಗದಲ್ಲಿ ವಿನೂತನ ಕಟ್ಟಡ ಪ್ರಾರಂಭವಾಗಿ ಹಾಗೇ ಉಳಿದಿದೆ. ಮೇಲ್ಮಠಕ್ಕೆ ಹೋಗುವಾಗ ಕೊಳ್ಳ ದಾಟಿದ ಬಳಿಕ ಬಲಭಾಗದಲ್ಲಿ ತೆಂಗಿನ ಬನವಿದೆ. ಪರಮ ಪೂಜ್ಯ ಶ್ರೀ  ಕು ಮಾರಶಿವಯೋಗಿಗಳ ಜನ್ಮ ಶತಮಾನೋತ್ಸವ ಕಾಲಕ್ಕೆ ಅವರ ಜನ್ಮಭೂಮಿಯಿಂದ ಶ್ರೀಕುಮಾರ ಜ್ಯೋತಿಯನ್ನು ತರಲಾಯಿತು. ಆ ನೆನಹಿಗಾಗಿ ೧೦೧ ತೆಂಗಿನ ಮರಗಳನ್ನು ನೆಡಲಾಯಿತು. ನಂತರ ಮತ್ತೆ ಹಲವು ತೆಂಗಿನ ಸಸಿಗಳನ್ನು ಹಚ್ಚಲಾಗಿದೆ. ಎಡಭಾಗದಲ್ಲಿ ವ್ಯಾಕರನಾಳ ಶ್ರೀ ಪಟ್ಟಾಧ್ಯಕ್ಷರ ಗದ್ದುಗೆಯಿದೆ. ಕೆಳಗೆ ಶಿವಪೂಜೆಗಾಗಿ ಗವಿಯೂ ಇದೆ. ಶ್ರೀಗಳು ವ್ಯಾಕರನಾಳ ಮತ್ತು ಮುದಗಲ್ಲ ಹಿರೇಮಠದ ಅಧಿಕಾರಿಗಳಾಗಿದ್ದರು. ಸಂಸ್ಕೃತ ಪಂಡಿತರು. ಉತ್ತಮ ಸಾಧಕರಾಗಿ ವಟು ಸಾಧಕರಿಗೆ ಪ್ರೌಢ ಪಾಠಗಳನ್ನು ಹೇಳುತ್ತ ಯೋಗ ಸಾಧನೆಯಲ್ಲೂ ಪಳಗಿ ಯೋಗಶಿಕ್ಷಣವನ್ನು ಬೋಧಿಸುತ್ತಿದ್ದರು. ಮುಂದೆ ಬರುವುದು ಕುಮಾರವನ ತೆಂಗಿನ ಮರಗಳ ಮಧ್ಯದಲ್ಲಿ ವಟು ಸಾಧಕರ ಶಿವಪೂಜಾ ಹಾಗೂ ಪ್ರಸಾದ ನಿಲಯವಿದೆ. ಹಳೆಯ ಇಮಾರತಿ ಶಿಥಿಲವಾದಾಗ ಈ ನೂತನ ಮಂದಿರದ ನಿರ್ಮಾಣವಾದರೂ ಭದ್ರವಾಗಲಿಲ್ಲ. ೧೯೯೬ರಲ್ಲಿ ರಿಪೇರಿಯಾದರೂ ಸಾಕಾಗಲಿಲ್ಲ. ಪಕ್ಕದಲ್ಲೇ ಮಲಾಪಹಾರಿಣಿ ಹರಿಯುತ್ತಿದೆ. ವಟು ಸಾಧಕರಿಗೆ ಅನುಕೂಲವಾಗಿದೆ. ಶಿವಯೋಗ ಮಂದಿರದಲ್ಲಿ ದರ್ಶನೀಯ ಸ್ಥಳಗಳಾಗಿವೆ. ಇಲ್ಲಿ ಶಾಂತಿ-ಸಮಾಧಾನದೊಂದಿಗೆ ಯೋಗದ, ಶಿವಯೋಗದ ತರಬೇತಿಯನ್ನು ಅರಿತರೆ ಅವರೂ ಪರಮಶಾಂತಿಯನ್ನು ಪಡೆಯಲು ಸಾಧ್ಯವಾಗುವುದು. ಎಲ್ಲವನ್ನು ಅವಲೋಕಿಸಿ ಮರಳಿ ಊರಿಗೆ ಹೊರಡಬಹುದು.

ಮಹಾದ್ವಾರದ ಮುಂಭಾಗದಲ್ಲಿ ಗುಡ್ಡದ ಪಕ್ಕದಲ್ಲಿ ಶ್ರೀ ದೇವೀ ಹೊಸೂರ ಶೆಟ್ಟರ ವಸತಿಗೃಹಗಳು ನಿರ್ಮಾಣವಾಗಿವೆ. ಇವು ಇಲ್ಲಿಯ ಕೆಲಸಗಾರರಿಗೆ ಅನುಕೂಲವಾಗಿವೆ. ಅದರ ಪಕ್ಕದಲ್ಲಿ ಲೋಕೋಪಯೋಗಿ ಇಲಾಖೆಯವರು ನಿರ್ಮಿಸಿದ ಗೆಸ್ಟ್ ಹೌಸ್,. ಅದರ ಎಡಭಾಗದಲ್ಲಿ ಹೊಸದಾಗಿ ರೂಪುಗೊಂಡ ಕನ್ನಡ ಶಾಲೆ ನಿರ್ಮಾಣವಾಗಿದೆ. ಹಳೆ ಗೋವನಕಿ ಗ್ರಾಮದ ಮಕ್ಕಳಿಗೆ ಉಪಯೋಗವಾಗಿದೆ. ಎದುರಿಗೆ ಶ್ರೀ ಜಗದ್ಗುರು ಬಾಲಗಂಗಾಧರನಾಥ ಸ್ವಾಮಿಗಳು, ಆದಿ ಚುಂಚನಗಿರಿ ಇವರು ಸಂಸ್ಥೆಯ ಗೋವುಗಳಿಗೆ ಗೋಶಾಲೆಯನ್ನು ಕಟ್ಟಿಸಿದರು. ಈ ಶ್ರೀಗಳು ತಮ್ಮ ಪಟ್ಟಾಭಿಷೇಕದ ೩೦ನೇ ವರ್ಷದ ನೆನಹಿನಲ್ಲಿ ಚಿಕ್ಕರಥವನ್ನು ಸಂಸ್ಥೆಗೆ ಕಾಣಿಕೆಯಾಗಿ ಸಲ್ಲಿಸಿರುವರು. ವನಸಂಪತ್ತು ಬೆಳೆಸಲು ಸಹ ಶ್ರೀಗಳ ಸಹಕಾರ ಸಂದಿದೆ. ಅವರ ಕೊಡುಗೆ ಸ್ಮರಣೀಯ.

.

                                                     – ಶ್ರೀ ನಿ. ಪ್ರ. ನೀಲಕಂಠ ಸ್ವಾಮಿಗಳು, ಚಿಕ್ಕೋಡಿ

ಬದಾಮಿಯಿಂದ ೭ ಮೈಲಿನ ಅಂತರದಲ್ಲಿ ಶಿವಯೋಗಮಂದಿರವು ಮಲಪ್ರಭೆಯ ಎಡದಂಡೆಯಲ್ಲಿ ಪುಣ್ಯ ಭೂಮಿಯಾಗಿ ತೋರುತ್ತಿರುವದು. ಪೂಜ್ಯ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ನೂರಾರು ಎಕರೆ ಭೂಮಿ ಭಕ್ತರಿಂದ ದಾತೃಗಳಿಂದ ಸಂಸ್ಥೆಗೆ ದಾನವಾಗಿ ಬಂದಿದೆ. ವಿಶಾಲ ನಿರ್ಜನಾರಣ್ಯವಿಂದು ಪ್ರಶಾಂತ ಮಂಗಲಮಯ ಭೂಕೈಲಾಸವಾಗಿ ಪರಿಣಮಿಸಿದೆ. ಸಮಾಜ ನೌಕೆಯನ್ನು ನಡೆಯಿಸುವ ಸಮರ್ಥ ಧರ್ಮಗುರುಗಳ ಜನ್ಮಭೂಮಿಯೆಂದು ಸುಪ್ರಸಿದ್ಧವಾಗಿದೆ.

ನಾನಾ ದಿಗ್ಗೇಶಗಳಿಂದ ಅತಿಥಿ-ಅಭ್ಯಾಗತರು ಶಿವಯೋಗಮಂದಿರವನ್ನು ನಿರೀಕ್ಷಿಸಲು ಕುತೂಹಲದಿಂದ ಆಗಮಿಸುತ್ತಾರೆ. ಇಲ್ಲಿ ನಡೆಯುತ್ತಿರುವ ವಿವಿಧ ಚಟುವಟಿಕೆಗಳನ್ನು ಕಂಡು ಮನವಾರೆ ಹಾಡಿ ಹರಸುತ್ತಿರುವರು.

ಗೋರಕ್ಷಣೆ ಶಾಲೆಯತ್ತ ಗಮನಿಸಿದರೆ ಸುಮಾರು ೨೦೦ ಆಕಳುಗಳು ಇರುವವು, ಒಕ್ಕಲುತನವಿದ್ದು ಅವುಗಳ ಉಪಯೋಗ ಬಹುವಿಧವಾಗಿ ಆಗುತ್ತಿರುವದು. ಇಲ್ಲಿ ಶುದ್ಧ ವಿಭೂತಿಗಳನ್ನು ಮಾಡುವ ಕಾರ್ಯಾಲಯವು ಇದೆ. ಅದರ ಮುಖಾಂತರ ನಾಡಿನಲ್ಲಿ ಶಾಸ್ತ್ರೋಕ್ತ ವಿಭೂತಿಗಟ್ಟಿಗಳೂ ಪ್ರಚಾರದಲ್ಲಿ ಬಂದಿವೆ. ಪಂಚಸೂತ್ರಕ್ಕೆ ಸರಿಯಾದ ಲಿಂಗಗಳನ್ನು ಇಲ್ಲಿ ತಯಾರಿಸುತ್ತಾರೆ. ಈ ತೆರನಾಗಿ ಸ್ವಾತಿಕ ಕಲೆಗಳಿಗೆ ಉತ್ತೇಜನವನ್ನು ಈ ಸಂಸ್ಥೆಯು ಕೊಡುತ್ತಿರುವದು ತುಂಬಾ ಸ್ತುತ್ಯವಾದುದು.

ಶೈಕ್ಷಣಿಕ ದೃಷ್ಟಿಯಿಂದಲೂ ಈ ಸಂಸ್ಥೆಯು ಮುಂದುವರಿಯುತ್ತಿದೆ. ಇಲ್ಲಿ ರೇವಣಸಿದ್ದೇಶ್ವರ ವಾಚನಾಲಯವೂ ಇದೆ. ಅದರೊಂದಿಗೆ ಒಂದು ದೊಡ್ಡ ಗ್ರಂಥಾಲಯವೂ ಇದೆ. ಅದರಲ್ಲಿ ಸಂಸ್ಕೃತ, ಕನ್ನಡ, ಹಿಂದಿ, ಇಂಗ್ಲೀಷ ಭಾಷೆಯ ಪ್ರೌಢಸಾಹಿತ್ಯ ಗ್ರಂಥಗಳ ಅಪೂರ್ವ ಮತ್ತು ಅಮೂಲ್ಯ ಸಂಗ್ರಹವು ಇದೆ. ಅಲ್ಲಿರುವ ಸಾವಿರಾರು ತಾಡವೋಲೆ ಮತ್ತು ಕೈಬರಹದ ಗ್ರಂಥ  ಭಾಂಡಾರವು ಕರ್ನಾಟಕದಲ್ಲಿಯೇ ಅದ್ವಿತೀಯವಾಗಿದೆ. ಅವುಗಳನ್ನು ಪರಿಶೋಧಿಸಿ ಅಚ್ಚುಗೊಳಿಸಲು ‘ಸುಕುಮಾರ’ವೆಂಬ ಮಾಸ ಪತ್ರಿಕೆಯು ಪ್ರಕಟವಾಗುತ್ತಿದೆ. ಅದು ನಾಡಿನ ಪ್ರಗತಿಪರ ಪತ್ರಿಕೆಯಾಗಿ ಪ್ರಚಾರ ಹೊಂದುತ್ತಿದೆ. ‘ಸುಕುಮಾರ’ ಪತ್ರಿಕೆ ಮತ್ತು ಗ್ರಂಥಮಾಲೆಯ ಪ್ರಕಟನೆಗಾಗಿ ಉದಾರ ಹೃದಯರಾದ ಮಹಾಸ್ವಾಮಿಗಳವರೂ ಮತ್ತು ಭಕ್ತಾದಿಗಳೂ ಅನೇಕ ಮುಖವಾಗಿ ಸಹಾಯ ಸಲ್ಲಿಸಿದ್ದಾರೆ. ಗ್ರಂಥ ಸಂಶೋಧನಾಕಾರ್ಯವು ಚಿರಸ್ಥಾಯಿ ಯಾಗಿ ನಡೆಯುವಂತೆ ಒಂದು ಭಾವೀ ಯೋಜನೆಯು ಕ್ಷಿಪ್ರದಲ್ಲಿಯೇ ಕಾರ್ಯಗತವಾಗಲಿರುವದೆಂದು ತಿಳಿಯುತ್ತದೆ.

ದರ್ಶನಾರ್ಥವಾಗಿ ಬಂದ ಭಕ್ತಾದಿಗಳಿಗೆ ದಾಸೋಹಮಠವಿದೆ. ಅಲ್ಲಿ ಅರ್ಚನ ಮತ್ತು ಅರ್ಪಿತಕ್ಕೆ ಅನುಕೂಲತೆಯಿದೆ. ಸಂಸ್ಥೆಯ ಅನುಕೂಲತೆಗಾಗಿ ಸರಕಾರದವರು ಒಂದು ಬ್ರಾಂಚ್ ಪೋಷ್ಟ ಆಫೀಸನ್ನು ಚಿರಸ್ಥಾಯಿಯಾಗಿ ಮಾಡಿದ್ದಾರೆ.

ಅಲ್ಲಿ ಮುಖ್ಯವಾಗಿ ವಟುಗಳು ಶಿವಯೋಗಿಗಳು ಧಾರ್ಮಿಕ ಶಿಕ್ಷಣವನ್ನು ಹೊಂದುತ್ತಲಿರುವರು. ಸಾಧಕರು ಪ್ರತಿನಿತ್ಯವೂ ಮುಂಜಾನೆ ಯೋಗಾಸನಗಳ ಸಾಧನೆಯನ್ನು ಮಾಡುತ್ತಾರೆ. ಯೋಗದಲ್ಲಿ ತಜ್ಞತೆಯನ್ನು  ಪಡೆಯುತ್ತಾರೆ. ಪ್ರತಿನಿತ್ಯದ ಕಾಠ್ಯಕ್ರಮದಲ್ಲಿ ಅದಕ್ಕೆ ಪ್ರಾಧಾನ್ಯವನ್ನು ಕೊಟ್ಟಿದ್ದಾರೆ. ತ್ರಿಕಾಲದಲ್ಲಿಯೂ ಲಿಂಗಾರ್ಚನೆ, ಪುರಾಣ, ಪ್ರವಚನ, ಭಾಷಣ,  ಸಂಗೀತಕಲೆ ಮುಂತಾದ ಸಮಾಜ ಸುಧಾರಣೆಯ ಶಿಕ್ಷಣವು ಕೊಡಲಾಗುತ್ತಿದೆ. ಮಂದಿರದಲ್ಲಿಯೇ ಶಿಕ್ಷಣ ಪಡೆದ ಸ್ವಾಮಿಗಳು ಮತ್ತು ಶಾಸ್ತ್ರಿಗಳು ಶಿಕ್ಷಕರಾಗಿ, ಪ್ರಾಧ್ಯಾಪಕರಾಗಿ ದುಡಿಯುತ್ತಾರೆ. ಈಗಾಗಲೇ ಇಲ್ಲಿಂದ ಶಿಕ್ಷಣ ಪಡೆದ ಶಿವಯೋಗಿಗಳು ಕರ್ನಾಟಕ, ಮಹಾರಾಷ್ಟ್ರ ಹೈದರಾಬಾದ ಮತ್ತು ಮೈಸೂರು ಪ್ರಾಂತಗಳಲ್ಲಿಯ ಸುಪ್ರಸಿದ್ಧ ಮಠಗಳ ಅಧಿಪತಿಗಳಾಗಿ ಸಮಾಜ ಕಾರ್ಯ ಧುರಂಧರರಾಗಿದ್ದಾರೆ. ಪ್ರಾಥಮಿಕ ಮಾಧ್ಯಮಿಕ ಶಾಲೆಗಳನ್ನು ಕಾಲೇಜುಗಳನ್ನು ಅಲ್ಲದೆ ಫ್ರೀ ಬೋರ್ಡಿಂಗು ಗಳನ್ನೂ, ದಾಸೋಹ ಮಂದಿರಗಳನ್ನೂ, ಅನುಭವಮಂಟಪಗಳನ್ನು ಮಾಡಿಯೂ ಮಾಡುತ್ತಲೂ ಸಮಾಜದಲ್ಲಿ ಒಂದು ದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ. ಸ್ವಯಂಸೇವಕರಾಗಿ ಸಮಾಜ ಸುಧಾರಣೆಯ ಮುಖದಿಂದ ರಾಷ್ಟ್ರೋದ್ದಾರ ಕಾರ್ಯದಲ್ಲಿ ಹೇಗೆ ಇಂದಿಗೂ  ನೆರವಾಗುತ್ತಾರೆಂಬುದು ನಿರ್ವಿಕಾರ ಮನಸ್ಸಿನಿಂದ ವಿಚಾರಿಸಿದರೆ ಹೊಳೆಯದಿರದು.

ಧರ್ಮ-ನೀತಿಗಳ ಜೀವಾಳಗಳನ್ನಿಟ್ಟುಕೊಂಡು ಕೊನೆಯ ರಾಜಕಾರಣವನ್ನು ಯಾವ ರೀತಿಯಿಂದ ನಡೆಸುತ್ತಾರೆಂಬುದು ವಿಚಕ್ಷಣಮತಿಗಳಿಗೆ ತಿಳಿಯದಿರದು. ಇಂದು ರಾಷ್ಟ್ರೀಯ ಕಾರ್ಯಗಳು ಧರ್ಮದಿಂದಲೇ ನಡೆಯಬೇಕಾಗಿದೆ. ಧರ್ಮವಿಲ್ಲದಿದ್ದರೆ ಮೃತದೇಹದಂತೆ ನಾಡು ನಿರ್ವೀರ್ಯವಾಗುವಲ್ಲಿ ಯಾವ ಸಂದೇಹವೂ ಇಲ್ಲ

ಮಠಾಧಿಪತಿಗಳು ಶಿಕ್ಷಣದ ಸತ್ರವನ್ನು ಪ್ರಾರಂಭಮಾಡದಿದ್ದರೆ ಸಮಾಜವು ಇಷ್ಟೊಂದು ಉನ್ನತಾವಸ್ಥೆಗೆ ಬರುತ್ತಿರಲಿಲ್ಲ. ಈ ಎಲ್ಲ ಮುಂದಿನ ಹೊಣೆಗಾರಿಕೆಯನ್ನರಿತು ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರು ಶಿವಯೋಗಮಂದಿರವನ್ನು ಸ್ಥಾಪಿಸಿ  ಸಮಾಜಕ್ಕೆ ಹೇಳ ತೀರದಷ್ಟು ಉಪಕಾರ ಮಾಡಿದ್ದಾರೆ.

ಇಂಥ ಪವಿತ್ರ ಸಂಸ್ಥೆಗೆ ಸಹಾಯ ಸಹಕಾರ ಮತ್ತು ಸಹಾನುಭೂತಿಗಳನ್ನು ನೀಡುವದು ಸಕಲರ ಆದ್ಯ ಕರ್ತವ್ಯವಾಗಿದೆ. ನಿಮ್ಮ ಇರುವನ್ನು ಅರಿವನ್ನು ತಂದುಕೊಟ್ಟ ಸಂಸ್ಥೆಯ ಬಗ್ಗೆ ಆದರ ಅನುತಾಪಗಳು ಬೇಡವೇ ?

ಶಿವಯೋಗಮಂದಿರವು ಇಂದು ವಿಶ್ವವಿದ್ಯಾಲಯವಾಗಬೇಕಾಗಿದೆ. ಕರ್ನಾಟಕದ ಕತ್ತಲೆಯು ಬಯಲಾಗಿ ಪ್ರಚಂಡ ಪ್ರಕಾಶಮಯ ರವಿ ಶಿವಯೋಗಿ ಪುಂಗವರು ಉದಯಿಸಬೇಕಾಗಿದೆ. ಜ್ಞಾನಭಂಡಾರದ ಸೂರೆಯಾಗಲಿ, ಸಮಾಜಗಳು ವಿಕಾಸ ಹೊಂದಲಿ, ರಾಷ್ಟ್ರೋದ್ದಾರ ವಾಗಲಿ, ಅಖಿಲರಿಗೂ ಸುಖವಾಗಿ ಇದಕ್ಕಾಗಿಯೆ ಶಿವಯೋಗ ಮಂದಿರದ ನಿರೀಕ್ಷಣೆಯನ್ನು ಮಾಡಿರಿ.

ಜಾತೀಯತೆಯ ಭಾವನೆಯಿಂದ ಪ್ರೇರಿತವಾಗಿ ನೋಡಕೂಡದು. ಜಾತ್ಯಾತೀತ ತತ್ತ್ವವನ್ನವಲಂಬಿಸಿ ದವರಿಗೂ ಸಹ  ಜಾತಿಯನ್ನು ಬಿಟ್ಟರೆ ಗತಿಯಿಲ್ಲ, ಜಾತಿ ಮತ ಪಂಥಗಳ ಬುರುಕೆಗೆ ಯಾರೂ ಹೆದರಬೇಕಾಗಿಲ್ಲ, ಆದರೂ ಜಾತ್ಯಾಂಧರಾಗಬಾರದು. ವಿಶ್ವವ್ಯಾಪಿ ತತ್ತ್ವಗಳು ಎಲ್ಲಿದ್ದರೇನು ? ಅವೆಲ್ಲವೂ ಸ್ವಾಗತಾರ್ಹವೆಂದು ಭಾವಿಸಿ ಒಳಗಣ್ಣ ತೆರೆದು ನೋಡಬೇಕೆಂದು ಬೇಡಿಕೊಳ್ಳುತ್ತೇನೆ.

ಡಾ.ಚೆನ್ನಮಲ್ಲ ಸ್ವಾಮೀಜಿ ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ ಕನಕಗಿರಿ

ನಮ್ಮ ಭರತ ಭೂಮಿಯು ಅಧ್ಯಾತ್ಮದ ತವರೂರೆಂಬುದು ಎಲ್ಲರಿಗೂ ತಿಳಿದ ವಿಷಯ.ಬೇರೆ ದೇಶದಲ್ಲಿ ಎಲ್ಲವು ಇದೆ.ಅದರೆ  ಅಧ್ಯಾತ್ಮದ ಸುಳಿವು ಅಲ್ಲಿ ಕಾಣಸಿಗುವುದಿಲ್ಲ.ಎಲ್ಲಿ ಅಧ್ಯಾತ್ಮವಿರುವದಿಲ್ಲವೋ ಅಲ್ಲಿ ಏನೇಲ್ಲವಿದ್ದರು ಏನು ಎಲ್ಲದಂತೆ.ಏನೇಲ್ಲ ಸಾಧಿಸಿದರೂ ಜೀವನದೊಳಗೆ ಅದನ್ನು ಅನುಭವಿಸುವ ಸ್ವಭಾವ ಮತ್ತು ಶಾಂತಿ ,ನೆಮ್ಮದಿಯ ಬದುಕು ಸಾಗಿಸಲು ಅಧ್ಯಾತ್ಮ ಬೇಕು.

ಅಧ್ಯಾತ್ಮವೆಂದಾಕ್ಷಣ ಪ್ರತಿಯೊಬ್ಬರ ಮನದಲ್ಲುಂಟಾಗುವುದು ಧರ್ಮ-ಮತಗಳ ವಿಚಾರವಲ್ಲವೆ? ಹಿಂದು, ಮುಸ್ಲಿಂ, ಕ್ರೈಸ್ತ, ಬೌದ್ಧ ,ಜೈನ, ಸಿಖ್‌, ಧರ್ಮಗಳನ್ನು ಆಚರಿಸಿದರೆ ಮಾತ್ರ ಅದು ಅಧ್ಯಾತ್ಮವೆಂದು ತಿಳಿಯಬಾರದು . ಧರ್ಮ-ಅಧ್ಯಾತ್ಮ ಕೂಡಿಕೊಂಡಿವೆ. ಆದರೆ ಅಧ್ಯಾತ್ಮ  ಧರ್ಮದಿಂದಲ್ಲ. ಅಧ್ಯಾತ್ಮ ಅದ್ಬುತವಾದ ಒಂದು ತತ್ತ್ವ, ಅದು ಪ್ರತಿಯೊಬ್ಬರ ಜೀವನಕ್ಕೂ ಅವಶ್ಯವಾಗಿರುವಂತಹದು.ನಾವುಗಳು ಜೀವನದಲ್ಲಿ ಏನನ್ನೇ ಸಾದಿಸಿದರೂ ಸಹ ಆ ಸಾಧನೆಯು ಸಾರ್ಥಕವಾಗಬೇಕಾದರೆ ನಮ್ಮಲ್ಲಿ  ಅಧ್ಯಾತ್ಮದ ಅನುಭೂತಿಯಿದ್ದಾಗ ಮಾತ್ರ ಸಾಧನೆಯನ್ನ ಸರಿಯಾಗಿ ಅನುಭವಿಸಲು ಸಾಧ್ಯ.

ಜನರಿಲ್ಲದೂರು ರಣಹದ್ದುಗಳ

ತಾಣವಾಗುವುದು|                                                           

ವಿದ್ಯೆಯಿಲ್ಲದ ಬುದ್ಧಿ

ಲದ್ದಿಯಾಗರವಾಗುವುದು|

ಭಾವನೆಯಿರದ ಮನವು

ಭೂತದಾಗರವಾಗುವಂತೆ

ಆಧ್ಯಾತ್ಮವಿರದ ಬದುಕು

ಬಂಜರ ಭೂಮಿಯಂತೆಂದ ನಮ್ಮ ಚೆನ್ನ.||

ಅಧ್ಯಾತ್ಮವಿಲ್ಲದ ಬದುಕು ಬೆಳೆಯದೆ ಬಂಜರ ಭೂಮಿಯಂತೆ. ಏನೂ ಬೆಳೆಯಲು ಯೋಗ್ಯವಾಗಿರುವುದಿಲ್ಲ. ಅಧ್ಯಾತ್ಮದಿಂದ ಕೂಡಿದ ಬದುಕು ಏನನ್ನಾದರೂ ಸಾಧಿಸಲು ಸಮರ್ಥವಾಗಿರುತ್ತದೆ ಮತ್ತು ಶಾಂತಿ ನೆಮ್ಮದಿಯನ್ನು ಗಳಿಸುವ ಸಾಮರ್ಥ್ಯ  ಹೊಂದಿರುತ್ತದೆ. ಜಗತ್ತಿನಲ್ಲಿ  ಪಾಶ್ಚಾತ್ಯ ದೇಶದವರು ಏನೆಲ್ಲಾ ಸಾಧಿಸಿದ್ಧಾರೆ,ಯಾವುದು  ಅಸಾಧ್ಯವೆನ್ನುತ್ತೇವೆಯೋ ಅದನ್ನೆಲ್ಲಾ ಸಾಧಿಸಿ ತೋರಿಸಿದ್ದಾರೆ ಅದರೂ ಸಹ ನಮ್ಮ ದೇಶದ ಕಡೆ ಒಲವನ್ನು ತೋರಿ ,ಅಧ್ಯಾತ್ಮವನ್ನು ಹುಡುಕಿಕೊಂಡು ಭಾರತದತ್ತ ಹೆಚ್ಚು ಜನ ಆಕರ್ಷಣೆಯನ್ನು ಪಡೆಯುತ್ತಿರುವರು. ಬೇರೆಯವರು ನಮ್ಮಲ್ಲಿರುವ ಅಗಾಧವಾದ ಶಕ್ತಿಗೆ ಆಕರ್ಷಣೆಯಾಗುತ್ತಿರುವಾಗ,ಇಲ್ಲಿಯೇ ಹುಟ್ಟಿ ಬೆಳೆದು ನಮಗೆ ಅದರ ಬಗ್ಗೆ ಅಸಡ್ಡೆ ಭಾವನೆಯನ್ನು ತಾಳುವುದು ಉಚಿತವೆ? ಬದುಕಿನಲ್ಲಿ  ಶಾಂತಿ ನೆಮ್ಮದಿಯನ್ನು ಅನುಭವಿಸಲು ಅಧ್ಯಾತ್ಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ.| ಮತ್ತೊಮ್ಮೆ ಸ್ಪಷ್ಟಪಡಿಸುವೆ ಅಧ್ಯಾತ್ಮವನ್ನು ಅಳವಡಿಸಿಕೊಳ್ಳೋಣವೆಂದರೆ ಧರ್ಮವನ್ನು ಆಚರಿಸೋಣ ಎಂದು ಅರ್ಥವಲ್ಲ. ಮೇಲೆ ಹೇಳಿರುವಂತೆ ಧರ್ಮ ಮತ್ತು ಅಧ್ಯಾತ್ಮ ಭಿನ್ನವಾದುವುಗಳು.ಆದ್ದರಿಂದ ಜಂಜಾಟದಿಂದ  ಕೂಡಿದ ಬದುಕಿನಲ್ಲಿ ಶಾಂತಿ ನೆಮ್ಮದಿಗೆ ಅಧ್ಯಾತ್ಮ ಅವಶ್ಯವಾಗಿರುವಂತಹದು.ಜೀವನದಲ್ಲಿ ಅಧ್ಯಾತ್ಮವನ್ನಳವಡಿಸಿಕೊಂಡು ಅರಿವಿನ ಮೆಟ್ಟಲನ್ನೇರೋಣ.

ಡಿ. ಎಸ್. ಕರ್ಕಿ

ಇದೋ ಮಂದಿರ ಶಿವಮಂದಿರ

ಶಿವಯೋಗದ ಮಂದಿರ

ಪ್ರಕೃತಿಯ ಪರಮಾನಂದದ

ಸುಧೆ ಸೂಸುವ ಚಂದಿರ

ಹೊಳೆಗೆ ತನ್ನದೇ ಆದ ಚೆಲವು ಉಂಟು. ಗುಡ್ಡಕ್ಕೆ ಅದರದೇ ಆದ ಚೆಲವು ಇರುತ್ತದೆ. ಹೊಳೆಯ ಚೆಲುವೂ ಗುಡ್ಡದ ಚೆಲುವೂ ಕೂಡಿದ ಸ್ಥಳದಲ್ಲಂತೂ ಚೆಲುವು ಚೆಲ್ಲವರಿಯದಿರದು. ಜಲಶ್ರೀ ವನಶ್ರೀಗೆ ಸನ್ನಿಹಿತವಾದಾಗ ಸೌಂದರ್ಯಕ್ಕೆ ಸಾಕಾರದ ರೂಪ ಪ್ರಾಪ್ತವಾಗದಿದ್ದೀತೇ ? ಅವೆರಡರ ಯೋಗ ನಿಜವಾಗಿಯೂ ಸೌಂದರ್ಯ ಯೋಗ ಶಿವಯೋಗಮಂದಿರವು ಇಂಥ ಸೌಂದರ್ಯ ಯೋಗದ ಒಂದು ಸ್ಥಳ; ಉತ್ತರ ಕನ್ನಡ ನಾಡಿನ ನದಿಗಳಲ್ಲಿ ಮಲಪ್ರಭೆ ಹಿರಿಹೊಳೆಯೇನೂ ಅಲ್ಲ. ಆದರೂ ಅದರ ತೀರದಲ್ಲಿ ಸೌಂದರ್ಯಸ್ಥಾನಗಳು ಪ್ರವಾಸಿಯ ಕಣ್ಣನ್ನು ಅಲ್ಲಲ್ಲಿ ಕುಣಿಸುತ್ತವೆ. ಆದುದರಿಂದಲೇ ಅದರ ತೀರದಲ್ಲಿ ಕನ್ನಡಿಗರು ಅನೇಕ ಕ್ಷೇತ್ರಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಬಾದಾಮಿಯ ಬನಶಂಕರಿ, ಮಹಾಕೂಟ ಮೊದಲಾದವುಗಳು ಮಲಪ್ರಭೆಯ ತೀರದ ಸಮೀಪದಲ್ಲಿ ನೆಲಸಿವೆ. ಕನ್ನಡ ನಾಡಿನ ಅತ್ಯಂತ ಮಹತ್ವದ ಪುರಾತನ ಐತಿಹಾಸಿಕ ಪಟ್ಟಣಗಳಲ್ಲಿ ಕೆಲವು ಮ ಲಪ್ರಭೆಯ ತೀರದಲ್ಲಿ ನೆಲಸಿವೆ. ಅವುಗಳಲ್ಲಿ ಐಹೊಳಿ, ಪಟ್ಟದಕಲ್ಲು ಮೊದಲಾದವುಗಳನ್ನು ಹೆಸರಿಸಬಹುದು. ಅಂತೂ ಕನ್ನಡ ನಾಡಿನ ಕ್ಷೇತ್ರಗಳ ದೃಷ್ಟಿಯಿಂದ ಹಾಗು ಪ್ರಕೃತಿ ಸೌಂದರ್ಯದ ದೃಷ್ಟಿಯಿಂದ ಮಲಾಪಹಾರಿಗೆ ಒಂದು ವೈಶಿಷ್ಟ್ಯವಿದೆ. ಸೌಂದರ್ಯವೆಂಬ ಅಂಜನದಿಂದ ಕಣ್ಣಿನ ಮಲವನ್ನು ತೊಳೆಯುವ ಗಣ್ಯತೆ ಮಲಪ್ರಭೆಗೆ ಇರುವುದರಿಂದಲೇ ಮಲಾಪಹಾರಿ ಎಂಬ ಅನ್ವರ್ಥಕ ನಾಮ ಅದಕ್ಕೆ ರೂಢವಾಗಿರಬಹುದೇನೋ ! ಈಚೆಗೆ ಮಲಪ್ರಭೆಯ ತೀರದಲ್ಲಿ ಶಿವಯೋಗಮಂದಿರವು ಈ ಊಹೆಯನ್ನು  ಸಮರ್ಥವಾದ ರೀತಿಯಲ್ಲಿ ಮನಗಾಣಿಸುವಂತಿದೆ.

ಶಿವಯೋಗಮಂದಿರ ! ಸುಂದರವಾದ ಸ್ಥಳಕ್ಕೆ ತುಂಬಾ ಸಮಂಜಸವಾದ ಹೆಸರು, ಶಿವ, ಯೋಗ, ಮಂದಿರ- ಈ ಮೂರರಲ್ಲಿ ನಮಗೆ ಮೂರೂ ಬೇಕು. ಮಹೇಶ್ವರನ ಹೆಸರುಗಳಲ್ಲಿ ‘ಶಿವ’ ಎಂಬ ಹೆಸರು ಎಷ್ಟು ಚಿಕ್ಕದೋ ಅಷ್ಟೇ ಅರ್ಥಪೂರ್ಣವಾದುದು. ಸತ್ಯಂ, ಶಿವಂ ಸುಂದರಂ-ಎಂಬ ಜೀವನದ ಸರ್ವೋತ್ಕೃಷ್ಟ ತತ್ವಗಳಲ್ಲಿ ‘ಶಿವ’ ಶಬ್ದವು ಮಧ್ಯವರ್ತಿಯಾಗಿ, ಎಂದರೆ ಸತ್ಯವನ್ನು ಸೌಂದರ್ಯವನ್ನು ಸಮರಸಗೊಳಿಸುವ ಶುಭ ಸತ್ವವಾಗಿ ಸಮಾವೇಶವಾಗಿದೆಯೆಂಬುದನ್ನು ನೆನೆಯಬೇಕು. ಮಹಾದೇವನ ಮಂಗಲಮಯವಾದ, ಕರುಣಾ ಪೂರ್ಣವಾದ ಮಹೋನ್ನತವಾದ ಸ್ವರೂಪವನ್ನು ‘ಶಿವ’ ಶಬ್ದವು ಎರಡೆಂದರೆ ಎರಡೇ ಅಕ್ಷರಗಳಲ್ಲಿ ನಿರೂಪಿಸುತ್ತದೆ. ‘ಶಿವ’ ಶಬ್ದಕ್ಕೆ ‘ಶುಭ’ ಎಂಬ ಅರ್ಥವೂ ಉಂಟು. ಹೀಗೆ ಶುಭದಿಂದ ಪ್ರಾರಂಭವಾಗುತ್ತದೆ ‘ಶಿವಯೋಗಮಂದಿರದ ಹೆಸರು ಶುಭಕ್ಕೆ ‘ಯೋಗ’ದ ಯೋಗ ದೊರೆತು ಆನಂದದ ಆಗರವಾದಂತಿದೆ ಶಿವಯೋಗಮಂದಿರ.

ಶಿವಯೋಗಮಂದಿರದ ರಚನೆಗಾಗಿ ಸುಂದರವಾದ ಸನ್ನಿವೇಶವನ್ನು ಆಯ್ದ ಪ್ರತಿಭೆ ಸಾಮಾನ್ಯವಾದುದಲ್ಲ. 

ಸೌಂದರ್ಯರ್ಯಾನುಭವವನ್ನು ಶಿವಾನುಭವವನ್ನು ತನ್ನಲ್ಲಿ ಸಮರಸಗೊಳಿಸಿಕೊಂಡ ಪ್ರತಿಭೆಯದು. ಅದು  ಹಾನಗಲ್ಲ ಕುಮಾರ ಸ್ವಾಮಿಗಳಮಹಾ ವ್ಯಕ್ತಿತ್ವವನ್ನು ಬೆಳಗಿದ ಪ್ರತಿಭೆ.ಲಿಂಗೈಕ್ಯ ಹಾನಗಲ್ಲ ಕುಮಾರ ಶ್ರೀಗಳವರು ತಾವು ತಮ್ಮ ಚಿತ್ತದಲ್ಲಿ ಕಲ್ಪಿಸಿದ ಶಿವಯೋಗಮಂದಿರಕ್ಕಾಗಿ ಒಂದು ಅಂದವಾದ ಸ್ಥಳವನ್ನು ಅರಸುವ ಹೊಣೆಯನ್ನು ಲಿಂಗೈಕ್ಯ ಇಲಕಲ್ಲ ಮಹಾಂತ ಶಿವಯೋಗಿಗಳಿಗೆ ಒಪ್ಪಿಸಿದರು.ಇಲಕಲ್ಲ ಶ್ರೀಗಳವರ ಆಕಳು ಅಲೆಯುತ್ತ,ಅಲೆಯುತ್ತ ಈಗ ರಚಿತವಾಗಿರುವ ಶಿವಯೋಗಮಂದಿರದ ಸ್ಥಳದಲ್ಲಿ  ಒಮ್ಮಲೇ ಬಂದು ನಿಂತಿತಂತೆ ಆಗ ಆ ಸ್ಥಳ ಜನರ ಸಂಪರ್ಕ ದಿಂದ ಅತೀ ದೂರವಾಗಿ ಕಾಡಿನಲ್ಲಿ ಅಡಗಿಹೋದ ಸ್ಥಳ .ಶ್ರೀಗಳವರ ಘನವ್ಯಕ್ತಿತ್ವದ ಪ್ರಭಾವದಲ್ಲಿ  ಅದು ಶಿವಯೋಗಮಂದಿರವಾಗಿ ರಚನೆಗೊಂಡಿತು. ಪರಮಾತ್ಮನ ಕೃಪೆಯಿಂದಾಗಿ ಪ್ರಕೃತಿಗೆ ಪುಳಕವೇರಿದಂತಾಯ್ತು

ಮಂದಿರದ ಸ್ಥಳವು ಸೌಂದರ್ಯ ಯೋಗಕ್ಕೂ, ಶಿವಯೋಗಕ್ಕೂ. ತುಂಬಾ ಯೋಗ್ಯವಾದುದು, ಮಲಪ್ರಭೆಯ ತಟದಲ್ಲಿ ಮಂದಿರ ಮೂಡಿ ನಂದಾದೀಪವನ್ನು ಬೆಳಗುತ್ತಲಿದೆ. ಒಂದು ಬದಿಯಲ್ಲಿ ಮಲಪ್ರಭೆ ಪ್ರವಹಿಸುತ್ತಿದ್ದರೆ ಇನ್ನೊಂದು ಬದಿಗೆ ಎತ್ತರವಲ್ಲದ ಗುಡ್ಡಗಳು ತಮ್ಮ ತೋಳುಗಳನ್ನು ಚಾಚಿವೆ. ಗುಡ್ಡದ ಗಿಡಗಳು ಎತ್ತರವಾದವುಗಳಲ್ಲ ಪ್ರಕೃತಿ ಇಲ್ಲಿ ನಿಂತು ರಮಣೀಯ ದೃಶ್ಯ ಕಾವ್ಯವನ್ನು ರಚಿಸಿದುದಲ್ಲದೆ ಶ್ರಾವ್ಯಕಾವ್ಯವನ್ನೂ ರಚಿಸಿದ್ದಾಳೆ. ಎತ್ತರ ಎತ್ತರ ಬಂಡೆಗಲ್ಲುಗಳಿಂದ ಪ್ರಕೃತಿ ರಚಿಸಿದ  ಸೋಪಾನಗಳನ್ನು ಮಲಪ್ರಭೆ ಉತ್ಸಾಹದಿಂದ  ಇಳಿದು ಮುಂದುವರಿಯುವಾಗ ಅವಳ ಉತ್ಸಾಹದ ನಡೆ ನಾದವಾಗಿ ಪರಿಣಮಿಸಿದೆ, ಅದುವೆ ಇಲ್ಲಿ ನಿನದಿಸುವ ದಿಗುಡು.

ನಾದಯೋಗ : ಜೋಗವನ್ನು ನೆನೆದಾಗ ನನಗೆ ಯೋಗದ ನೆನಪು ಬರುತ್ತದೆ. ಅಲ್ಲಿ ನಾಟ್ಯವಾಡುವ ಶರಾವತಿ ಯೋಗದಲ್ಲಿ ತೊಡಗಿದಂತೆ ಭಾಸವಾಗುತ್ತದೆ. ಈ ಯೋಗದಿಂದಾಗಿಯೇ ಜೋಗಕ್ಕೆ ಜೋಗವೆಂಬ ಹೆಸರು ಬಂದಿರಬಹುದೇ ? ಅದೇನೇ ಇರಲಿ ಶಿವಯೋಗಮಂದಿರದ ಸ್ಮರಣೆ ಬಂದಾಗ ನನಗೆ ಮಲಪ್ರಭೆಯ ನಾದಯೋಗದ ನೆನಪು ಬರುತ್ತದೆ. ಒಂದೇ ಸವನೆ ನಿನದಿಸುವ ಮಲಾಪಹಾರಿಯ ದನಿ ಚಿತ್ತವನ್ನು ಒಂದಿಷ್ಟೂ ಕದಡದೆ ಅದರ ಏಕಾಗ್ರತೆಗೆ ಸಹಾಯಕವಾಗುವುದೆಂಬುದನ್ನು ಶಿವಯೋಗಮಂದಿರಕ್ಕೆ ಹೋಗಿ ಮನಗಾಣಬೇಕು. ನಾದ ಅಲ್ಲಿ ಧ್ಯಾನದ ಕಲ್ಪನೆಯನ್ನು ದೃಢೀಕರಿಸುತ್ತದೆ. ಪ್ರಶಾಂತವಾದ ಆ ಸ್ಥಳದಲ್ಲಿ ಪವಿತ್ರವಾದ ಆ ಎಡೆಯಲ್ಲಿ ತಾಳಲಯದೊಡನೆ ಹೊಮ್ಮುವ ಆ ನಾದವು ಅಲ್ಲಿ ನಾದಬ್ರಹ್ಮವಾಗಿದೆ.

ಸಲಿಲಯೋಗ : ಈ ಸ್ಥಳದ ಸೌಂದರ್ಯಕ್ಕೆ ಕಾರಣವಾದ ಇನ್ನೊಂದು ಮಹತ್ವದ ಸಂಗತಿಯೆಂದರೆ  ಅದಕ್ಕೆ ಒದಗಿದ  ಸಲಿಲಯೋಗ, ಹಳ್ಳವಾಗಿ, ಹೊಳೆಯಾಗಿ, ಕೊಳವಾಗಿ, ಕಾಲುವೆಯಾಗಿ ಸಲಿಲವು ಶಿವಯೋಗ ಮಂದಿರವನ್ನು  ಸಮೀಪವರ್ತಿಯಾಗಿ ಬಳಸಿದೆ. ಮಲಪ್ರಭೆಯ ಮಾತನ್ನಂತೂ ಈ ಮೊದಲೆ ಹೇಳಲಾಗಿದೆ. ಶಿವಯೋಗ ಮಂದಿರದಿಂದ ಎರಡು ಮೈಲು ಗುಡ್ಡದ ಓರೆಯ ಚೆಲುವನ್ನು ನೋಡುತ್ತ ಸಾಗುವುದರೊಳಗಾಗಿ “ಮಹಾಕೂಟ’ವು ನೋಟವನ್ನು ಸೆಳೆಯುತ್ತದೆ. ಅದನ್ನು ಸುತ್ತುವರಿದ ಜಲ ಅಲ್ಲಿ ಚೆಲುವನ್ನು ಚಿಗುರಿಸಿದೆ. ಶಿವಯೋಗ ಮಂದಿರದಿಂದ ಬಾದಾಮಿಯ ದಿಕ್ಕಿನಲ್ಲಿ ಸಾಗಿದರೆ ಮಧ್ಯದಲ್ಲಿ ಬನಶಂಕರಿಯ ಬನ ನಮ್ಮ ಕಣ್ಮನಗಳನ್ನು ಸೆಳೆಯುತ್ತದೆ. ಸುತ್ತಲಿನ ಪ್ರಶಸ್ತ ಸನ್ನಿವೇಶದಲ್ಲಿ ಸರಸ್ವತೀ ಹಳ್ಳದ

ಪಕ್ಕದಲ್ಲಿ ಹಳ್ಳದ ಜಲ ಕಾಲುವೆಗಳಲ್ಲಿ ಹರಿದು ತೆಂಗು, ಬಾಳೆಗಳ ಬನಗಳಿಗೆ ನೀರು ನೀಡಿ ತಂಪು ಮಾಡಿದೆ. ಸೊಗಸಾದ ತಾಣದಲ್ಲಿ ಸುವಿಶಾಲ ಕೊಳ್ಳವೊಂದರ ತಡಿಯಲ್ಲಿ ಬನಶಂಕರಿ ತಣಿದ ಮನಶಂಕರಿಯಾಗಿ ಅಲ್ಲಿ ನೆಲೆಸಿದ್ದಾಳೆ. ಸೊಗಸಾಗಿ ಹರಿಯುವ ಸರಸ್ವತಿಯ ಹಳ್ಳ ಶಂಕರಿಯ ಬನಕ್ಕೆ ನೀರ ನೀಡಿ ಕೃತಾರ್ಥವಾಗಿದ್ದಂತೆ ಅದರ ಸಮೀಪದಲ್ಲಿಯೇ ಮಲಪ್ರಭಾ ನದಿ ಶಿವನಯೋಗಕ್ಕೆ ಯೋಗ್ಯ ಸನ್ನಿವೇಶವನ್ನು ಶಿವಯೋಗಮಂದಿರದ ರೂಪದಲ್ಲಿ ಕಲ್ಪಿಸಿದೆ. ಅಂತೂ ಶಿವ  ಸರ್ವಮಂಗಳೆಯರಿಬ್ಬರೂ ಸಲಿಲ ಸೌಂದರ್ಯದ ಮಧ್ಯದಲ್ಲಿ ಮನೆ ಮಾಡಿದ ರಸಿಕರು ! ಶಿವಯೋಗ ಮಂದಿರದಲ್ಲಿ ಒಂದೆಡೆಗೆ ಜಲ ಸೋಪಾನಗಳನ್ನಿಳಿಯುವಂತೆ – ಜಲ ಜಲನೆ ಇಳಿದು ಹರಿಯುತ್ತಿದ್ದರೆ ಇನ್ನೊಂದೆಡೆಗೆ ಲತಾಮಂಟಪದ ಹತ್ತಿರ  ಮಡುಗಟ್ಟಿ ಗಂಭೀರವಾಗಿರುವುದು ಕಂಡು  ಬರುತ್ತದೆ. ಒಂದೊಂದು ಚೆಲುವಿನ ಒಂದು ಬಗೆ. ಶಿವಯೋಗ ಮಂದಿರಕ್ಕೆ ವ್ಯಾಸಂಗಕ್ಕಾಗಿ ಬರುವ, ಬಂದ ವಟುಗಳ ಸಲುವಾಗಿ ಏರ್ಪಡಿಸಿದ ನಿವಾಸ ಸ್ಥಾನದ ಮುಂದುಗಡೆಯಲ್ಲಿ ಲತಾಮಂಟಪ ತನ್ನ ನೆಳಲ ಬಲೆಯನ್ನು ಹರಡಿದೆ; ಬಳಿಲು ಬಳಿಲಿನ ಚೆಲುವನ್ನು ಹೆಣೆದಿದೆ. ಬೇಸಗೆಯಲ್ಲಿ ಲತಾ ಮಂಟಪದಲ್ಲಿ ಕುಳಿತು  ನೋಡಬೇಕು; ತೃಪ್ತಿಯಾಗದಿದ್ದರೆ ಒರಗಿ ನೋಡಬೇಕು. ಆಗ ಅದರ ಸೊಂಪಿನ ಕಲ್ಪನೆಯಾಗುವುದು. ಅದರ ಅಡಿಯಲ್ಲಿ ಹರಿಯುವ ಹೊಳೆಯ ತಂಪು ತೇಲಿ ತೇಲಿ ಬರುತ್ತಿರುವಾಗ ಅದಕ್ಕೆ ಮೈಯೊಡ್ಡಿ ಆನಂದದ ಅನುಭವವನ್ನು ಪಡೆಯಬೇಕು. ಬೆಳುದಿಂಗಳಲ್ಲಿ ಅಲ್ಲಿ ಎಡೆಯಾಗುವ ಭಾಗ್ಯ ದೊರೆತರಂತೂ ಆಗುವ ಆನಂದವನ್ನು ಏನೆಂದು ಹೇಳಬೇಕು ?

ಜಲ ಮಡುಗಟ್ಟಿದ ಈ ದಡ

ದಲಿ ನೆಲಸಿದ ಸೌಂಧರ

ಲತ ಲತೆ ಜತೆಗೂಡಿ ನೆಳಲ

ನೆಯ್ದಕ್ಕಿದೆ ಹಂದರ

ಕುಳ್ಳಿರು ಈ ತಂಪಿನಲ್ಲಿ

ಒಂದಾಗುವ ಸೋಂಪಿನಲ್ಲಿ

ತೇಲಲಿ ಎದೆ ತಂಪಿನಲ್ಲಿ

ನೈರ್ಮಲ್ಯದ ಸಂಗಕೆ

ಕರ್ಕಶ ಕಾರ್ಶ್ಯವೆಲ್ಲ

ಕರಗುವ ರಸರಂಗಕ್ಕೆ

ಸಂಸ್ಕೃತಿಯೋಗ : ಪ್ರಕೃತಿ ಸೌಂದರ್ಯಕ್ಕೂ ಶಾಂತಿಗೂ ಒಂದು ನಿಕಟ ಸಂಬಂಧವುಂಟೆಂದು ಹೇಳಬಹುದು. ಪ್ರಕೃತಿಯ ಲೀಲಾ ವಿಲಾಸ ಜನದಟ್ಟಣೆಯಿಂದ ದೂರವಾದಷ್ಟೂ ಅದರ ಶಾಂತಿಯ ಸ್ವರೂಪ ನಿಚ್ಚಳವಾಗುತ್ತದೆ. ಆದುದರಿಂದಲೇ ಪ್ರಕೃತಿಯ ಆವರಣದಲ್ಲಿ ತೆರೆದ ತಮ್ಮ ಸಂಸ್ಕೃತಿ ಶಿಕ್ಷಣ ಕೇಂದ್ರವನ್ನು ರವೀಂದ್ರರು ಶಾಂತಿನಿಕೇತನ’ವೆಂದು ಕರೆದುದು. ಪ್ರಕೃತಿ ಶಾಂತ ರೀತಿಯಲ್ಲಿ ಸಂಸ್ಕೃತಿ ಶಿಕ್ಷಣವನ್ನು ಒದಗಿಸುತ್ತದೆ. ಪ್ರಕೃತಿಯ ಯೋಗ ಚಿತ್ತಕ್ಕೆ ಒದಗಿದಾಗ ಅದು  ಶಾಂತಿಯಲ್ಲಿ ಹಾಗೂ ಸಂಸ್ಕೃತಿಯಲ್ಲಿ ಪರಿಣಮಿಸುತ್ತದೆ. ಪ್ರಕೃತಿಯ ಪ್ರಭಾವಕ್ಕೆ ಪಡಿನುಡಿಯುವ ಚಿತ್ತವಿದ್ದರಂತೂ ಅದು ಉಂಟು ಮಾಡುವ ಪರಿಣಾಮವನ್ನು ಏನೆಂದು ಉಪಮಿಸಬೇಕು.?

ಶಿವಯೋಗ ಮಂದಿರದ ಪ್ರಶಾಂತ ವಾತಾವರಣದಲ್ಲಿ ಸುಳಿದು ಕಣ್ಣನ್ನು ತಣಿಸುವ ಇನ್ನೊಂದು ನೋಟವೆಂದರೆ ಅಲ್ಲಿಯ ಶಾಂತಿಯೊಡನೆ ಸಮರಸವಾಗಿ ಮೇಯುವ ಗೋವುಗಳು, ಶಿವಯೋಗಮಂದಿರಕ್ಕೆ ಹಾಲಿನ ಪೂರೈಕೆಯಾಗುವುದು ಆ ಗೋವುಗಳಿಂದ, ಶಿವಯೋಗಮಂದಿರ ಶಾಂತಿಯನ್ನು ಮೌನವನ್ನು ಮಲಪ್ರಭೆಯ ದಿಡುಗು ಹೆಚ್ಚಿಸಿ ಧ್ಯಾನಾಸಕ್ತವಾಗಬಲ್ಲ ಮನಕ್ಕೆ ಅದೊಂದು ಸಂಗೀತದ ಹಿನ್ನೆಲೆಯಾಗಿ ಪರಿಣಮಿಸುತ್ತದೆ.

ಇದೋ ಹಗಲಿನ ಮಾತಾಯಿತು. ಸಂಜೆಯಾಗಿ ಧರೆಯ ಮೇಲೆ ಇರುಳಿಸಿ ನೆರಳು ಕವಿಯುತ್ತ ಹೋದಂತೆ ಶಿವಯೋಗಮಂದಿರದ ಮೌನ ಇನ್ನು ಗಂಭೀರವಾಗುತ್ತದೆ. ಆಕಾಶದ ನೀಲದಲ್ಲಿ ಆ ಮೌನ ವ್ಯಾಪಿಸಿ ಚಿಕ್ಕೆ ಚಂದ್ರರನೆಲ್ಲ ಮೌನ ಧ್ಯಾನದಲ್ಲಿ ಲೀನಗೊಳಿಸುತ್ತದೆ. ಇಂಥ ವಾಗ್ವಿಲಾಸಮಯ ಮೌನದ ತಾಣದಲ್ಲಿ ಇರುಳನ್ನು ಕಳೆದು ನೋಡಬೇಕು ಚಿಕ್ಕೆ ಚಂದ್ರರೊಡನೆ ಶಿವಯೋಗದ ಹಾಗು ಸೌಂದರ್ಯ ಯೋಗದ ಕಲ್ಪನೆಯಾಗಬೇಕಾದರೆ, ಸರಿ, ಲಿಂಗೈಕ್ಯ ಹಾನಗಲ್ಲ ಶ್ರೀಗಳವರ ಸೌಂದರ್ಯದೃಷ್ಟಿಗೆ ಶಿವಯೋಗ ಭಾವಕ್ಕೆ, ಸಕಲರಿಗೆ ಲೇಸನೆ ಬಯಸುವ ಸಮಾಜೋದ್ದಾರ ಬುದ್ದಿಗೆ ಅವರಿಂದ ನಿರ್ಮಿತವಾದ ಶಿವಯೋಗಮಂದಿರದ ಸುಂದರ ಸನ್ನಿವೇಶ ಸಾಕ್ಷಿಯಾಗಿ ನಿಂತಿದೆ.

ಒಂದು ಬದಿಗೆ ಹೊಳೆ; ಇನ್ನೊಂದು ಬದಿಗೆ ಎತ್ತರವಲ್ಲದ ಗುಡ್ಡದ ಸಾಲು, ನಡುವೆ ಸೊಗಸಾದ ಪ್ರಾಂಗಣ; ಪ್ರಕೃತಿಯ ಲೀಲಾರಂಗವಾಗಿದೆ ಶಿವಯೋಗಮಂದಿರ, “ಬನ್ನಿ, ಮೈಯೊಡ್ಡಿ ದಣಿವನ್ನು ಪರಿಹಾರ ಮಾಡಿಕೊಳ್ಳಿ.?” ಎಂದು ಕರೆಯುತ್ತಿದೆ ಚಿಕ್ಕ ಚಿಕ್ಕ ಜಲಪಾತದೊಡನೆ ನಕ್ಕು ನಲಿಯುವ ಹೊಳೆ;

ನಿರಿ ನೂಂಕಿ ಮಲಾಪಹಾರಿ ಶತಹಾಸದ ಗತಿಯಲ್ಲಿ;

ಹಾಡುವಳು ವಿಲಾಸ ಬೀರಿ ಮಾಧುರ್ಯದ ಮಿತಿಯಲ್ಲಿ.

ಶ್ರೀ ಬುದ್ಧಯ್ಯನವರು, ಪುರಾಣಿಕ

ಪುರಾಣಗಳಲ್ಲಿಯ ಸದಾಶಿವನು ತನ್ನ ವಿನೋದಕ್ಕೆಂದು ಚರಾಚರ ಸೃಷ್ಟಿಯನ್ನು ನಿರ್ಮಿಸಿದರೆ ಹಾನಗಲ್ಲ ಸದಾಶಿವ ಯೋಗಿಯು ಲೋಕದ ಜನರು ಸುಖಿಗಳಾಗಲೆಂದು ಹೊಸಯುಗವನ್ನೇ ನಿರ್ಮಿಸಿದನು. ಆ ಸದಾಶಿವನದು ಸ್ವಾರ್ಥ ಸೃಷ್ಟಿ, ಈ ಸದಾಶಿವಯತಿಯದು ಪರಾರ್ಥ ಸೃಷ್ಟಿ, ಈ ಯತಿವರನ ಜೀವನವೇ ಒಂದು ಪರಾರ್ಥ ಲೀಲೆಯಾಗಿ ಪರಿಣಮಿಸಿತು.

ಸದಾಶಿವಯತಿಯು ಅನಿಮಿತ್ತ ಬಂಧು ಶಂಭುಲಿಂಗನ ಸನ್ನಿಧಿಯಲ್ಲಿ ತಪವ ಮಾಡಿ ಲೋಕದ ಕಷ್ಟವನ್ನು ನಿರೀಕ್ಷಿಸಿದನು. ಆ ನಿರೀಕ್ಷಣೆ ಕಾರಣಿಕ ಇಚ್ಛೆಗೆ ಪ್ರೇರಣೆಯನ್ನು ನೀಡಿತು. ಆ ಇಚ್ಚೆಯೆ ಹೊಸ ಸೃಷ್ಟಿಗೆ ಚೈತನ್ಯ ಕೊಟ್ಟಿತು. ಹಾನಗಲ್ಲ ಶ್ರೀ ಸದಾಶಿವಯೋಗಿಗಳ ಪವಿತ್ರ ಇಚ್ಛಾಶಕ್ತಿಯ ಶಿವಯೋಗಮಂದಿರ ಮಹಾಸಭೆಗಳ ರೂಪದಲ್ಲಿ ಮೈದಾಳಿ ಬಂದಿತು. ದಿವ್ಯ ದೃಷ್ಟಿಯಿಂದ ದಿವ್ಯ ಸೃಷ್ಟಿಯಾಯಿತು.

ಮಾನವ ಜೀವನ ದೃಷ್ಟಿ ಲೌಕಿಕ ಪಾರಮಾರ್ಥವೆಂದು ಎರಡು ವಿಧ. ಅವೆರಡನ್ನು ಶ್ರೀಗಳವರು ಎರಡು ಸಂಸ್ಥೆಗಳಿಂದ ಸಾಧಿಸಿದರು. ಶ್ರೀಗಳ ಅಂತಃಶಕ್ತಿಯೆ ಐದು ದೃಷ್ಟಿಗಳಲ್ಲಿ ಒಡಮೂಡಿತು. ಶಿಕ್ಷಣ ,ಮುದ್ರಣ, ರಕ್ಷಣ, ಉದ್ಯಮ, ವಾಣಿಜ್ಯ, ಇವು ಶ್ರೀಗಳವರ ಐದು ದೃಷ್ಟಿಗಳು. ಅವುಗಳಿಂದ ಐದು ಸೃಷ್ಟಿಗಳಾದವು.

೧, ಶಿಕ್ಷಣ ಸೃಷ್ಟಿ

ಲೌಕಿಕ ಪಾರಮಾರ್ಥವೆಂದು ಶ್ರೀಗಳವರ ಶಿಕ್ಷಣ ಎರಡು ತೆರನಾಗಿತ್ತು. ಶಿವಯೋಗಮಂದಿರದಲ್ಲಿ ಅವೆರಡೂ ಶಿಕ್ಷಣಗಳ ಸಮನ್ವಯ ಸುಂದರವಾಗಿತ್ತು, ಮಾನವನ ವ್ಯವಹಾರವೆಲ್ಲ ಭಾಷೆಗಳ ಪರಿಜ್ಞಾನದಿಂದ ನಡೆಯಬೇಕು. ಸಮಾಜದ ಮಕ್ಕಳು ಮೊದಲು ಮಾತೃಭಾಷೆಯಾದ ಕನ್ನಡ ಕಲಿಯಲೆಂದು ಅನೇಕ ಪ್ರಾಥಮಿಕ ಶಾಲೆಗಳನ್ನು ಶ್ರೀಗಳವರು ಸ್ಥಾಪಿಸಿದರು,

ಧರ್ಮ ಸಂಸ್ಕೃತಿಗಳ ಪರಿಜ್ಞಾನ ಪಡೆಯಲು ಸಂಸ್ಕೃತ ಭಾಷೆಯ ಶಿಕ್ಷಣ ಅವಶ್ಯಕ, ಅದನ್ನು ಕಲಿಸುವ ಪಾಠಶಾಲೆಗಳನ್ನು ನಾಡಿನಲ್ಲಿ ಮೊದಲು ಸ್ಥಾಪಿಸಿದವರು ಶ್ರೀಗಳವರೆ; ಕಾಶಿಯಲ್ಲಿ ಪ್ರೌಢ ಶಿಕ್ಷಣ ಪಡೆಯಲು ಅರ್ಥಿಕ ಸಹಾಯ ನೀಡಿ ಪಂಡಿತ ಮತ್ತು ಶಾಸ್ತ್ರಿ ವರ್ಗವನ್ನು ಮುಂದೆ ತಂದರು, ಸಮಾಜದಲ್ಲಿ ಸಂಸ್ಕೃತ ಪಂಡಿತ ವರ್ಗ ಇಲ್ಲದಿದ್ದರೆ ಪರಳಿಯ ಪ್ರಕರಣದಲ್ಲಿ ಸಮಾಜಕ್ಕೆ ವಿಜಯ ಸಿಕ್ಕುವದು ಸಾಧ್ಯವಿರಲಿಲ್ಲ, ಸಂಸ್ಕೃತ ಶಿಕ್ಷಣ ಪ್ರಸಾರಕ್ಕೆ ಶ್ರೀಗಳವರು ಕೊಟ್ಟ ಪ್ರೋತ್ಸಾಹ   ಪರಿಮಿತವಾದುದು, ಶ್ರೀಗಳವರು ‘ಸಂಸ್ಕೃತ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ವಿಚಾರ ಮಾಡಿದರು .ಶಿವಯೋಗಮಂದಿರದಲ್ಲಿ ಸಂಸ್ಕೃತ ಸಾಹಿತ್ಯ ಮತ್ತು ಶಾಸ್ತ್ರಗಳ ಕ್ರಮವಾದ ಶಿಕ್ಷಣ ನಿರಂತರವಾಗಿ ಸಾಧಕರಿಗೆ ಸಿಗುವ ವ್ಯವಸ್ಥೆಯನ್ನು ಮಾಡಿದರು. 

ಧರ್ಮಪ್ರಸಾರವನ್ನು ಜನಮನರಂಜನೆಯಾಗುವಂತೆ ನಡೆಸಬೇಕೆಂದು ಅವರು ಗಾಯನ ವಿದ್ಯೆಗೆ ಉತ್ತೇಜನಕೊಟ್ಟರು. ಅವರ ಕೃಪೆಯಿಂದಲೇ ಇಂದು ನಾಡಿನಲ್ಲಿ ಸಂಗೀತ ಕಲೆ ಉಳಿದಿರುವದು, ಪಂ. ಪಂಚಾಕ್ಷರ ಗವಾಯಿಗಳವರ ಶಿಷ್ಯಕೋಟಿ ಹೆಚ್ಚಿ ಜನತೆಯಲ್ಲಿ ಸಂಗೀತ ಕಲೆಯ ಕಡೆಗೆ ಅಭಿರುಚಿ ಹುಟ್ಟುವಂತಾಯಿತು,

ಶ್ರೀಗಳವರು ಆಂಗ್ಲಭಾಷೆಯನ್ನು ಅಲಕ್ಷಿಸಲಿಲ್ಲ. ಅವರದು ಸಂಕುಚಿತ ದೃಷ್ಟಿಯಾಗಿರಲಿಲ್ಲ. ಧರ್ಮ ನಿಷ್ಠರಾದ ಆಂಗ್ಲ ವಿದ್ಯಾವಂತರು ಪರದೇಶಗಳಿಗೆ ಹೋಗಿ ವೀರಶೈವ ಧರ್ಮದರ್ಶನಗಳ ಪ್ರಚಾರ ಮಾಡಬೇಕೆಂಬ ಅವರ ಉದ್ದೇಶ ಸಣ್ಣದಾಗಿರಲಿಲ್ಲ. ಮಂದಿರದಲ್ಲಿ ಯೋಗಸಾಧಕರಿಗೆ ಕನ್ನಡ ಮರಾಠಿ ಭಾಷೆಗಳ ಶಿಕ್ಷಣದೊಂದಿಗೆ ಇಂಗ್ಲೀಷ ಶಿಕ್ಷಣಕ್ಕೂ ಉತ್ತೇಜನ ಕೊಟ್ಟಿದ್ದರು. ಶಿವಯೋಗಮಂದಿರವನ್ನು ಒಂದು ವಿಶಾಲ ವಿಶ್ವವಿದ್ಯಾಲಯವನ್ನಾಗಿ ಮಾರ್ಪಡಿಸುವಷ್ಟು ಅನುಕೂಲತೆಗಳನ್ನು ಶ್ರೀಗಳವರು ದೂರದೃಷ್ಟಿಯಿಂದ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲಿ ಒಂದೊಂದೇ ವಿದ್ಯಾಲಯ ಸ್ಥಾಪಿತವಾಗಿ ಪ್ರಗತಿ ಹೊಂದುತ್ತ ಹೋದರೆ ಒಂದಿಲ್ಲ ಒಂದು ದಿನ ಅದು ಆದರ್ಶ ವಿಶ್ವವಿದ್ಯಾನಿಲಯ’ವಾಗುವಲ್ಲಿ ಸಂದೇಹವಿಲ್ಲ.

‘ತ್ಯಾಗರಾಜ’ ಶಿರಸಂಗಿಯ ಲಿಂಗರಾಜರು ಶ್ರೀಗಳವರ ಪ್ರೇರಣೆಯಿಂದಲೇ ತಮ್ಮ ಆಸ್ತಿಯನ್ನೆಲ್ಲ ಸಮಾಜದ ಬಡಮಕ್ಕಳ ವಿದ್ಯಾಭ್ಯಾಸದ ಅನುಕೂಲತೆಗಾಗಿ ಧಾರೆಯೆರೆದರು. ಅವರ ಮೃತ್ಯುಪತ್ರದ ಬಗ್ಗೆ ಸುಪ್ರೀಮ್ ಕೋರ್ಟಿನಲ್ಲಿ ನ್ಯಾಯ ನಡೆದಾಗ ಶ್ರೀಗಳವರೇ ಅದಕಾಗಿ ಆರ್ಥಿಕ ಸಹಾಯವನ್ನು ದಯಪಾಲಿಸಿದರಲ್ಲದೆ ಅಭಿಮಾನಿ ಭಕ್ತರಿಂದ ಕೊಡಿಸಿದರು ಮತ್ತು ಶಿವಯೋಗಮಂದಿರ ಸಂಸ್ಥೆಯಿಂದ ಎರಡು ಸಾವಿರ ರೂಪಾಯಿಗಳನ್ನು ಕೊಡಮಾಡಿದರು. ಕೊನೆಗೆ, ಶ್ರೀಗಳವರ ಪರಿಶ್ರಮ ಮತ್ತು ಸದಿಚ್ಛೆಯ ಫಲವಾಗಿ ಸಿರಸಂಗಿ ದೇಶಗತಿಯ ವ್ಯಾಜ್ಯದ ನಿರ್ಣಯವು ಲಿಂಗಾಯತ ಫಂಡಿ’ಗೆ ಅನುಕೂಲವಾಗುವಂತೆ ಆಯಿತು. ಈ ಧರ್ಮ ಕಾರ್ಯದ ಗೆಲುವಿಗೆ ಶ್ರೀಗಳವರ ಶ್ರಮ ಸಾಹಸ ಮತ್ತು ನಿರ್ಮಲವಾದ ಹೃದಯವೂ ಕಾರಣವಾಗಿವೆ. ಈಗ ‘ಸಿರಸಂಗಿ ಫಂಡಿ’ ನಿಂದ ಪ್ರತಿವರ್ಷ ನೂರಾರು ಜನ ಪದವೀಧರರು ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುತ್ತಿರುವರು. ಈ ರೀತಿಯಾಗಿ ಶ್ರೀಗಳವರು ಆಂಗ್ಲ ವಿದ್ಯೆಯ ಪ್ರಗತಿಗೆ ಪ್ರೋತ್ಸಾಹವನ್ನೇ ನೀಡುತ್ತ ಬಂದರು ; ದಯಮಾಡಿಸಿದಲೆಲ್ಲ ಸಣ್ಣ ಪುಟ್ಟ ಇಂಗ್ಲಿಷ ಶಾಲೆ (ಎ.ವ್ಹಿ ಸ್ಕೂಲು) ಗಳಿಗೆ ಧನಸಹಾಯವನ್ನು ಒದಗಿಸುತ್ತಲೆ ಇದ್ದರು. ಶ್ರೀಗಳವರು ಅವಿಶ್ರಾಂತವಾಗಿ ಶ್ರಮಿಸಿ ಸಮಾಜದಲ್ಲಿಯ ಶಿಕ್ಷಣ ಸೃಷ್ಟಿಯ ಪೂರ್ಣ ವಿಕಾಸಕ್ಕೆ ಕಾರಣ ಕರ್ತರಾದರು. ಈ ಶಿಕ್ಷಣ ಕ್ಷೇತ್ರದಲ್ಲಿ ಶ್ರೀಗಳವರು ಮಾತೆಯರನ್ನು ಮರೆತಿರಲಿಲ್ಲ,

೨. ಮುದ್ರಣ ಸೃಷ್ಟಿ

ವೀರಶೈವ ಸಾಹಿತ್ಯ ಧರ್ಮ ಸಂಸ್ಕೃತಿಗಳ ಪ್ರಸಾರವಾಗಬೇಕೆಂದು ಶ್ರೀಗಳು ಹಗಲು ರಾತ್ರಿ ಚಿಂತಿಸುತ್ತಿದ್ದರು. ಪ್ರಸಾರ ಕಾರ್ಯಕ್ಕೆ ಪತ್ರಿಕೆಗಳು ಬೇಕು. ಅಲ್ಪಬೆಲೆಯಲ್ಲಿ ಸಣ್ಣ ಸಣ್ಣ ಅಂದವಾದ ಪುಸ್ತಕಗಳು ಅಚ್ಚಾಗಿ ಜನರ ಕೈಸೇರಬೇಕು. ಪ್ರಕಟವಾಗದಿರುವ ವೀರಶೈವ ವಾಗ್ಮಯವನ್ನು ಪ್ರಕಟಿಸಿ ಪ್ರಚುರಪಡಿಸಬೇಕು. ಇವೆಲ್ಲ ‘ಬೇಕು’ಗಳ ಪರಿಪೂರ್ಣತೆಗಾಗಿ ಶ್ರೀಗಳವರು ಮುದ್ರಣ ಮಂದಿರಗಳನ್ನು ಸ್ಥಾಪಿಸುವ ಕಾರ್ಯದಲ್ಲಿ ಮನಸ್ಸು ಹಾಕಿದರು. ಹುಬ್ಬಳ್ಳಿ ಜಗದ್ಗುರು ಮೂರುಸಾವಿರ ಮಠದಲ್ಲಿದ್ದ ಮುದ್ರಣ ಯಂತ್ರವು ಧಾರವಾಡದ ಶ್ರೀ ಶಿವಲಿಂಗ ಶಾಸ್ತ್ರಿಗಳವರಿಗೆ ಶ್ರೀಗಳವರಿಂದಲೇ ದೊರೆಯಿತು. ಶ್ರೀಗಳವರ ಕೃಪಾಬಲದಿಂದ ಶಿವಲಿಂಗಶಾಸ್ತ್ರಿಗಳು ‘ಧರ್ಮತರಂಗಿಣಿ’ ಎಂಬ ಧಾರ್ಮಿಕ ಮಾಸ ಪತ್ರಿಕೆಯನ್ನು ಸಂಪಾದಿಸಿ ಸೇವೆ  ಸಲ್ಲಿಸಿದರು. ಗದುಗಿನಲ್ಲಿ ‘ಶ್ರೀಸಿದ್ಧಲಿಂಗ ವಿಜಯ ಮುದ್ರಣಾಲಯ’ವು ಶ್ರೀಗಳವರ ಸಾಹಸದಿಂದ ನೆಲೆಗೊಂಡಿತು, ಈ ಮುದ್ರಣಯಂತ್ರಕ್ಕೆ ಶಿವಯೋಗಮಂದಿರದ ಎರಡು ಸಾವಿರ ರೂಪಾಯಿಗಳು ವೆಚ್ಛವಾಗಿರುವವು. ಈ ಮುದ್ರಣಾಲಯವು ಈಗ ಧಾರವಾಡದ ಲಿಂಗಾಯತ ಹೈಸ್ಕೂಲಿನಲ್ಲಿದ್ದು ಸಮಾಜ ಸೇವೆಯ ಕಾರ್ಯಕ್ಕೆ ಅನುವಾಗಿರುವದು. ಶ್ರೀಗಳವರ  ಧ್ಯೇಯಪೂರ್ತಿಗಾಗಿ ಮಂದಿರದಲ್ಲಿರುವ ಮುದ್ರಣಾಲಯವು ಸುವ್ಯವಸ್ಥಿತವಾಗಿ ನಡೆದು, ಅದರ ಮುಖಾಂತರ ಪತ್ರಿಕೆಗಳು, ಗ್ರಂಥಗಳು ಪ್ರಕಟವಾಗಿ, ಶ್ರೀಗಳವರ ಈ ಮುದ್ರಣ ಸೃಷ್ಟಿಯ ಕಾರ್ಯವನ್ನು ಮುಂದೊಯ್ಯಬೇಕಾಗಿದೆ.

೩. ರಕ್ಷಣ ಸೃಷ್ಟಿ

ಸಾಹಿತ್ಯ ಸಂಸ್ಕೃತಿಗಳ ಜೀವಾಳವಾದ ಪ್ರಾಚೀನ ಓಲೆಗರಿ ಕೋರಿಕಾಗದದ ಹೊತ್ತಿಗೆಗಳು ಸಮಾಜದ ಮನೆ ಮಠಗಳಲ್ಲಿ ಮೂಲೆಗುಂಪಾಗಿದ್ದವು, ಅವೆಚಿ, ಹುಳುಗಳ ಆಹಾರವಾಗಿ ನಿರ್ನಾಮವಾಗಿದ್ದವು. ಶ್ರೀಗಳವರು ದಯಮಾಡಿಸಿದಲ್ಲೆಲ್ಲ ಈ ಸಂಪತ್ತನ್ನು ಹುಡುಕಿ ತೆಗೆದು ಅದನ್ನು ಮಂದಿರದಲ್ಲಿ ಸಂಗ್ರಹಿಸಿಟ್ಟರು; ಶಿವಯೋಗ ಮಂದಿರದ ಗ್ರಂಥಾಲಯದಲ್ಲಿರುವ ಈ ಗ್ರಂಥರಾಶಿಯು ಅಮೂಲ್ಯವಾಗಿದೆ. ಅದನ್ನು ಒಂದು ಮಾದರಿಯ ಸಂಶೋಧನ ಕೇಂದ್ರವ ನ್ನಾಗಿ ಬೆಳೆಯಿಸಬಹುದಾಗಿದೆ. ಅಲ್ಲಿ ಪಂಡಿತರನ್ನು ಆಂಗ್ಲವಿದ್ವಾಂಸರನ್ನೂ ನೇಮಿಸಿ ಶ್ರೀಗಳವರ ಈ ಕಾಯಕವನ್ನು ಪೂರ್ಣಗೊಳಿಸುವ ಭಾರ ಮಂದಿರದ ಸ್ವಾಮಿಗಳನ್ನ ಕೂಡಿದೆ.

ಶ್ರೀಗಳವರು ಭೂರಕ್ಷಣ ಮತ್ತು ಗೋಮಾತೆಯ ಚಾಲನೆಯಲ್ಲಿಯೂ ಲಕ್ಷ ಹಾಕಿದರು, ಒಕ್ಕಲುತನ ಮತ್ತು ದನಗಳ ಪ್ರದರ್ಶನಗಳನ್ನು ಪ್ರತಿ ವರ್ಷ ಶಿವಯೋಗಮಂದಿರದ ಜಾತ್ರೆಯಲ್ಲಿ ನಡೆಸುವ ಪ್ರೇರಣೆಯನ್ನಿತ್ತಿದ್ದರು; ನಮ್ಮ ಭಾರತದ ಯೋಜನೆಗಳು ಕೈಗೂಡಬೇಕಾದರೆ ಭೂಮಿ ಮತ್ತು ಪಶುಗಳ ಸರಿಯಾದ ರಕ್ಷಣೆಯ ಕಾರ್ಯ ನಡೆಯಬೇಕೆಂಬುದನ್ನು ತಮ್ಮ ದಿವ್ಯ ದೃಷ್ಟಿಯಿಂದ ಕಂಡು ಅದನ್ನು ಪ್ರಯೋಗಕ್ಕೆ ತಂದವರಲ್ಲಿ ಅವರೆ ಮೊದಲಿಗರು. ಬರಿಯ ಸ್ನಾನ ಪೂಜೆಗಳಲ್ಲಿಯ ಗುರುಗಳು ಹೊತ್ತು ಕಳೆಯದೆ ಸಮಾಜದ ಕಾರ್ಯಗಳಲ್ಲಿಯೂ ಸಹಕಾರ ನೀಡಿ ಸಮಾಜದ ಪ್ರಗತಿಗೆ ಮುಂದಾಗಬೇಕೆಂಬ ಆದರ್ಶವನ್ನು ಹಾಕಿಕೊಟ್ಟ ಶ್ರೀಗಳವರ ದೃಷ್ಟಿ ಎಷ್ಟು ವಿಶಾಲವಾಗಿದ್ದಿತು !

೪. ಉದ್ಯಮ ಸೃಷ್ಟಿ

ಶ್ರೀಗಳವರು ಸಂಪದಭಿವೃದ್ಧಿಗೆ ಮೂಲವಾದ ಆಧುನಿಕ ಯಾಂತ್ರಿಕ ಉದ್ಯೋಗಗಳ ಸ್ಥಾಪನೆಗೆ ಹೆಚ್ಚು ಶ್ರಮಪಟ್ಟವರು. ಶಿವಯೋಗಮಂದಿರದ ಆರ್ಥಿಕ ಭದ್ರತೆಯನ್ನು ಲಕ್ಷಿಸಿ ಶ್ರೀಗಳವರು ಬಾಗಲಕೋಟೆಯಲ್ಲಿ ‘ಶಿವಾನಂದ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ ಫ್ಯಾಕ್ಟರಿ’ಯನ್ನು ಆಗ ಎರಡು ಲಕ್ಷ ರೂಪಾಯಿಗಳ ದೊಡ್ಡ ಬಂಡವಾಳ ಹಾಕಿ ಸ್ಥಾಪಿಸಿದರು. ಅದು  ಶಿವಯೋಗಮಂದಿರ ಸಂಸ್ಥೆಯ ಬೆನ್ನೆಲುವಿನಂತಿದೆ. ಅದರಿಂದ ಪ್ರತಿ ವರ್ಷ’ ಇಪ್ಪತ್ತು ಮೂವತ್ತು ಸಾವಿರ ರೂಪಾಯಿಗಳ ಉತ್ಪನ್ನ ಮಂದಿರಕ್ಕೆ ತನ್ಮೂಲಕವಾಗಿ ಸಮಾಜಕ್ಕೆ ಸಲ್ಲುತ್ತಿದೆ, ಬಾಗಲಕೋಟೆಗೆ ಬಂದ ಸ್ವಾಮಿಗಳಿಗೆ ಶಿವಾನಂದ ಜಿನ್ನು ಒಂದು ಅನುಕೂಲವಾದ ಪ್ರವಾಸಿ ಮಂದಿರ’ವಾಗಿದೆ. ಒಂದು ಚಿತ್ರ ಮಂದಿರವೂ ಇದರ ಅಂಗವಾಗಿ ನಡೆದಿರುವದು, ಈ ಪ್ರೆಸ್ಸಿನಿಂದ ೨೫೦ ಬಡ ಕುಟುಂಬಗಳ ಉಪಜೀವನವಾಗುತ್ತಿರುವದು. ವಿರಕ್ತಸ್ವಾಮಿಗಳೋಬ್ಬರ ಉದ್ಯಮ ಸೃಷ್ಟಿಯ ಈ ಮಹದ್ಯೋಜನೆ ಎಂತಹ ಚಾಣಾಕ್ಷ ಸಿರಿವಂತನ ಉದ್ಯೋಗ ಪ್ರಗತಿಯ ಕಾರ್ಯದಕ್ಷತೆಯನ್ನೂ ಮೀರಿ ನಿಲ್ಲುತ್ತದೆ. ಶ್ರೀಗಳವರಲ್ಲಿಯ ಬುದ್ಧಿವೈಭವ, ದೂರದೃಷ್ಟಿ, ಅಪರಿಮಿತವಾಗಿದ್ದವು, ಅಸಾಧಾರಣ ವಾಗಿದ್ದವು. ಅವರ ದೂರದೃಷ್ಟಿಯಿಂದಾಗಿ ಅಂದಿನ ಯುಗದಲ್ಲಿ ಉದ್ಯಮ ಕ್ಷೇತ್ರದಲ್ಲಿ ಹೊಸ ಸೃಷ್ಟಿಯ ನಿರ್ಮಿತವಾಗಿ ಅದು ಉಳಿದ ಉದ್ಯಮ ಪ್ರೇಮಿಗಳಿಗೂ ಕೈದೋರಿಕೆಯಾಯಿತು.

೫. ವಾಣಿಜ್ಯ ಸೃಷ್ಟಿ

ವ್ಯಾಪಾರದಲ್ಲಿಯೇ ಲಕ್ಷ್ಮಿ ಯ ವಾಸವೆಂಬುದು ಎಲ್ಲರ ಅನುಭವದ ಮಾತಾಗಿದೆ. ಶ್ರೀಗಳವರ ಪವಿತ್ರ ದೃಷ್ಟಿಯಲ್ಲಿ ವ್ಯಾಪಾರವು ದ್ರೋಹ ಚಿಂತನವಾಗಿರಲಿಲ್ಲ. ಬಾಗಲಕೋಟೆಯಲ್ಲಿ ಶಿವಯೋಗಮಂದಿರ ಸಂಸ್ಥೆಯ ವತಿಯಿಂದ ಶಿವಾನಂದ ಜಿನ್ನಿಂಗ್ ಫ್ಯಾಕ್ಟರಿಗೆ ಅಂಗವಾಗಿ ಒಂದು ಕಬ್ಬಿಣದ ಅಂಗಡಿಯನ್ನಿಕ್ಕಿಸಿದ್ದರು. ಅದರಿಂದ ಲಾಭ ಪಡೆಯಲೆಂದಲ್ಲ: ವ್ಯಾಪಾರದಿಂದ ಸ್ವಾರ್ಥ  ಪರಾರ್ಥವೆರಡನ್ನು ಪ್ರಾಮಾಣಿಕವಾಗಿ ಸಾಧಿಸಬಹುದೆಂಬುದನ್ನು ಸಮಾಜದ ವ್ಯಾಪಾರಿಗಳಿಗೆ ತೋರಲೆಂದು. ವ್ಯಾಪಾರವೂ ಒಂದು ಕಾಯಕವೆ. ಆದರೆ ಅದು ಸತ್ಯ ಶುದ್ಧವಾಗಿರಬೇಕು’ ಎಂದು ಶ್ರೀಗಳವರು ಭಕ್ತರಿಗೆ ಅಪ್ಪಣೆ ಕೊಡಿಸುತ್ತಿದ್ದರು.

ನಿರುಪಮವಾದ ವಿರಕ್ತಿ ಅಸದೃಶವಾದ ಸ್ವಾರ್ಥತ್ಯಾಗ ಬುದ್ದಿ, ಅದ್ವಿತೀಯವಾದ ಭೂತದಯೆ, ಅಚಲವಾದ ಧೈರ್ಯ, ಅಖಂಡವಾದ ಸಾಹಸ, ವಿಲಕ್ಷಣವಾದ ದೂರದರ್ಶಿತ್ವ, ಅತಿಶಯವಾದ ಶ್ರಮಸಹಿಷ್ಣುತೆ, ಕಠಿಣತರವಾದ ಮನೋನಿಗ್ರಹ, ಉಪಮಾತೀತವಾದ ಶಾಂತಿ ದಾಂತಿ ಮೊದಲಾದ ಸದ್ಗುಣಗಳು ಶ್ರೀಗಳವರಲ್ಲಿ ಮೂರ್ತಿಮಂತಾಗಿದ್ದವು, ಅದರಿಂದ ಅವರು ಹೊಸ ದೃಷ್ಟಿಯಿಂದ ಹೊಸ ಸೃಷ್ಟಿಯನ್ನು ಮಾಡಲು ಸಮರ್ಥರಾದರು. ಆಧುನಿಕ ನವನಾಗರಿಕತೆಯ ವೀರಶೈವರನೇಕರಿಗೆ ಶ್ರೀಗಳವರ ಪ್ರಭಾವವು ಗೋಚರಿಸದೆ ಹೋದುದು ದುರ್ದೈವದ ಮಾತು. ಕೋಲ್ಮಿಂಚು ಮಿಂಚಿ ಅನಂತದಲ್ಲಿ ಅಡಗಿ ಹೋಯಿತು ! ಕಳೆದುಕೊಂಡು ಹುಡುಕಿದರೆ ಆಗುವದೇನು

ಸಮಾಜದ ಅಜ್ಞಾನವನ್ನು ಹೋಗಲಾಡಿಸುವದಕ್ಕಾಗಿ ಹಗಲಿರುಳು ನಿರುಪಾಧಿಯಿಂದ ಪ್ರಯತ್ನಿಸಿದ ನಿಜವಾದ ಸದ್ಗುರುವು; ಹೊನ್ನು ಹೆಣ್ಣು ಮಣ್ಣುಗಳೆಂಬ ತ್ರಿವಿಧ ಮೋಹಜಾಲಗಳನ್ನು ಮೆಟ್ಟಿ ಮೆರೆದ ವಿಚಿತ್ರ ವೈರಾಗ್ಯಮೂರ್ತಿಯು .ಇಂದ್ರಿಯ ವ್ಯಾಪಾರಗಳನ್ನು ವಶದಲ್ಲಿಟ್ಟುಕೊಂಡು ಬಾಹ್ಯಾಡಂಬರಗಳನ್ನೆಲ್ಲ ಬದಿಗೊತ್ತಿದ ಸತ್ಯಸ್ವಾಮಿಯು; ಕೇವಲ ಶಿವಾರ್ಪಣ ಸದ್ಭುದ್ಧಿಯಿಂದ ಸಮಾಜ ಸೇವಾಕಾರ್ಯವನ್ನು ಕೊನೆಯವರೆಗೂ ಸಾಗಿಸಿದ ನಿಸ್ಸಿಮ ಸದಾಶಿವ’ ಶಿವಯೋಗಿಯು; ಇಂಥ ಶ್ರೀಗಳವರ ದಿವ್ಯ ಪಾದಗಳಿಗೆ ನನ್ನ ಅನಂತ ಪ್ರಣಾಮಗಳನ್ನು ತದೇಕ ಧ್ಯಾನದಿಂದ ಅರ್ಪಿಸುವೆನು.

ಲೇಖಕರು : ಪೂಜ್ಯ ಸದಾಶಿವ ದೇವರು ವಳಬಳ್ಳಾರಿ

ಭಾರತಾಂಬೆಯು ತನ್ನ ಮಡಿಲಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಇಟ್ಟು ತೂಗುತ್ತಿರುವಳು‌. ಈ ಮೂರುಗಳನ್ನು ನಮ್ಮ ದೇಶದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲೂ ಭಾರತವನ್ನು ಮೆರೆಸುತ್ತಿದ್ದೇವೆ. ಭಾರತದ ಕಲೆ ವಿಶ್ವದಲ್ಲಿಯೇ ತನ್ನದೇ ಒಂದು ಅಪ್ರತಿಮ ಸ್ಥಾನವನ್ನು ಪಡೆದಿದೆ. ಬೇಲೂರು, ಹಳೆಬೀಡು, ಎಲ್ಲೋರಾ, ಅಜಂತಾ, ಪಟ್ಟದಕಲ್ಲು, ಬಾದಾಮಿ, ಐಹೊಳೆ ಹೀಗೆ ದೇಶದ ಮೂಲೆ ಮೂಲೆಯಲ್ಲಿ ಹಬ್ಬಿದೆ, ಆ ಕಲೆ ಶಿವಯೋಗಮಂದಿರದಲ್ಲಿಯೂ ಹರಡಿದೆ. ಇಲ್ಲಿರುವ ಮಹಾ ಗುರುಗಳಾದ ಶ್ರೀ ಕುಮಾರೇಶ್ವರ ಕರ್ತೃ ಗದ್ದುಗೆ ಹಾಗೂ ಕಾಷ್ಟದಿಂದ ನಿರ್ಮಿಸಿದ ರಥ ಇದು ವಿಶ್ವದಲ್ಲಿಯೇ ಅತೀ ಎತ್ತರದ ಕಲಾಕೃತಿಯ ರಥವೆನಿಸಿದೆ.

ದ್ರೋಣಾಚಾರ್ಯರ ಶಿಷ್ಯೋತ್ತಮನಾದ ಏಕಲವ್ಯನಿಂದ ಹೆಬ್ಬೆರಳು ಪಡೆದುಕೊಂಡರೆ. ವೀರಶೈವ ಧರ್ಮಕ್ಕೆ ಅಪಾರವಾದ ಸೇವೆ ಸಲ್ಲಿಸಿ ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಶಿವಯೋಗಮಂದಿರದಂಥ ಮಹಾಸಂಸ್ಥೆಯನ್ನು ಸ್ಥಾಪಿಸಿ ವೀರಶೈವದಲ್ಲಿಯೇ ವೀರಶೈವ ಜ್ಞಾನದ ಬೃಹತ್ ಬೆಳಕನ್ನು ಸದಾಕಾಲ ನಡೆಯುವಂತೆ ಮಾಡಿದ ವೀರಶೈವಧರ್ಮ ಎಂದೆಂದೂ ಅದಃಪತನ ವಾಗದಂತೆ ಮಂದಿರದಿಂದ ಮಹಾ ಪೂಜ್ಯರನ್ನು ತಯಾರುಮಾಡುವ ಕಮ್ಮಟ ಶಾಲೆಯನ್ನಾಗಿ ಪರಿವರ್ತಿಸಿದವರು  ಪರಮಪೂಜ್ಯ ದಿವ್ಯಜ್ಯೋತಿ ಲಿಂ. ಹಾನಗಲ್ಲ ಗುರು ಕುಮಾರ ಶಿವಯೋಗಿಗಳು.

‘ಕಲ್ಲರಳಿ ಹೂವಾಗಿ ಕುಮಾರೇಶನ ಗೋಪುರಕ್ಕೆ ಬೆಳಕಾಗಿ’ ಬೆಳಗುವಂತೆ ಅವರ ಶಿಷ್ಯೋತ್ತಮ ರಲ್ಲಿ ಅಗ್ರಗಣ್ಯ ಅವತಾರಿ, ಸದಾಕಾಲ ಸಮಾಜ ಸೇವೆ, ಕ್ರಾಂತಿಯ ಹರಿಕಾರ, ಶಿಕ್ಷಣ ಪ್ರೇಮಿ ‘ನ ಭೂತೋ ನ ಭವಿಷ್ಯತಿ’ ಎನ್ನುವ ರೀತಿಯಲ್ಲಿ ಶಿವಯೋಗ ಮಂದಿರದ ಪ್ರಭೆಯನ್ನು ಭೂಮಿಯ ನಾನಾ ಮೂಲೆಯಲ್ಲಿ ಪಸರಿಸಿ ಪ್ರವಾಸಿ ತಾಣಗಳ ಮಾದರಿಯಲ್ಲಿ ಶಿವಯೋಗ ಮಂದಿರವನ್ನು ಪರಿವರ್ತಿಸಿದರು ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು ಹೊಸಪೇಟೆ-ಬಳ್ಳಾರಿ-ಹಾಲಕೆರೆ.

ಶ್ರೀಗಳು ಏನೇ ಮಾಡಿದರು ಅದ್ಭುತ. ಅಮೂಲ್ಯ ಕಾರ್ಯಗಳನ್ನೇ ಕೈಗೊಳ್ಳುವರು ಅಂಥ ಅದ್ಭುತಗಳಲ್ಲಿ ಜಗತ್ತಿಗೆ ಮಾದರಿಯಾದ ಎತ್ತರವಾದ ಮಹಾರಥವನ್ನು ತಮ್ಮ ಮಠದ ಸ್ವಂತ ಖರ್ಚಿನಿಂದ ಶಿವಯೋಗ ಮಂದಿರಕ್ಕೆ ಅರ್ಪಣೆ ಮಾಡಿರುವ ಮಹಾ ಸಾಧಕರಿವರು, ಅಲ್ಲದೆ ಸಾಹಿತ್ಯ ಅಭಿಮಾನಿಗಳಾದ ಇವರು ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸ್ವತಃ ಪೂಜ್ಯರು ಆಧುನಿಕ ವಿಜ್ಞಾನಕ್ಕೆ ಸವಾಲಾದವರು. ಇವರು ಅರ್ಪಿಸಿದ ಬೃಹತ್ ರಥದ ವಿವರಣೆಯನ್ನು ಈ ಕೆಳಗೆ ನೀಡಿದ್ದೇನೆ.

ರಥದ ಶೈಲಿ = ಕರ್ನಾಟಕ ಚಾಲುಕ್ಯ,ಕಲ್ಯಾಣ ಚಾಲುಕ್ಯ,ಹೊಯ್ಸಳ ಶೈಲಿ.

ರಥದ ತಾಳಿಕೆ = ಸುಮಾರು 500 ವರ್ಷಗಳ ಕಾಲ ತಾಳಿಕೆ ಬರಬಹುದು.

ರಥಕ್ಕೆ ಬಳಸಿದ ಕಟ್ಟಿಗೆಗಳು = ಭೋಗಿ, ಸಾಗವಾನಿ,ಮತ್ತಿ, ರಂಜಾ.

ರಥ ನಿರ್ಮಾಣದ ಅವಧಿ = ಸತತ ಐದು ತಿಂಗಳಲ್ಲಿ ಪೂರ್ಣಗೊಂಡಿತು.

  ಶ್ರೀ ಕುಮಾರೇಶ್ವರ  ರಥದ ಎತ್ತರ

  1. ಶ್ರೀ  ಕಳಸ = 5 ಅಡಿ.
  2. ಗೋಲಾಕಾರದ ಶಿಖರ 1 = 4ಅಡಿ.
  3. ಗೋಲಾಕಾರದ ಶಿಖರ 2 = 9 ಅಡಿ.
  4. ಶರಣರ ಮಂಟಪ = 14 ಅಡಿ.
  5. ದೇವರ ಮಂಟಪ = 9 ಅಡಿ.
  6. ಗಡ್ಡೆ = 23 ಅಡಿ.
  7. ಗಾಲಿ = 9* ಅಡಿ.

           ರಥದ ಒಟ್ಟು ಎತ್ತರ = 73 ಅಡಿಗಳು

[* ಗಾಲಿಯ ಅರ್ಧ ಭಾಗಕ್ಕೆ ರಥ ಬರುವುದರಿಂದ ಗಾಲಿಯನ್ನು 4 – 1/2 ಅಡಿ ಗಣನೆಮಾಡಲಾಗಿದೆ.]

       ಭಾವಚಿತ್ರ – ರಥದ ಸುತ್ತಲೂ 12 ಶಿವಶರಣರ ಭಾವಚಿತ್ರ ರಚಿಸಲಾಗಿದೆ.

ದೇವರ ಮಂಟಪದ ಸುತ್ತಲೂ =

1) ಶ್ರೀ ಬಸವೇಶ್ವರರು. 2) ರೇಣುಕಾಚಾರ್ಯರು.

3) ಅಲ್ಲಮಪ್ರಭುದೇವರು. 4) ಸಿದ್ಧಲಿಂಗೇಶ್ವರರು.

ಮೊದಲನೇ ಶರಣ ಮಂಟಪದಲ್ಲಿ=

1) ಸಿದ್ದರಾಮೇಶ್ವರರು. 2) ಅಕ್ಕಮಹಾದೇವಿ.

3) ಮಡಿವಾಳ ಮಾಚಯ್ಯ. 4)ಮೋಳಿಗೆ ಮಾರಯ್ಯಾ.

ಎರಡನೇ ಶರಣ ಮಂಟಪದಲ್ಲಿ=

1) ಎಳಂದೂರು ಬಸವಲಿಂಗ ಸ್ವಾಮಿಗಳು. 2) ಶ್ರೀವಿಜಯ ಮಹಾಂತ ಸ್ವಾಮಿಗಳು.3) ಬಿದರಿ ಕುಮಾರಸ್ವಾಮಿಗಳು. 4) ವೈರಾಗ್ಯದ ಮಲ್ಲಣ್ಣಾರ್ಯರು.

ಕಂಬಗಳು = ರಥದಲ್ಲಿ 24 ಕಂಬಗಳಿವೆ ಇವು ದಿನದ 24 ಗಂಟೆಗಳ ಸಂಕೇತಗಳಾಗಿವೆ. ದಿನದ ಗಂಟೆಗಳು ಮನುಷ್ಯನ ಜೀವನ ಉತ್ತಮವಾಗಿರಲಿ ಎಂದು, ಪ್ರತಿಯೊಂದು ಕಂಬಕ್ಕೆ ಹಿತ್ತಾಳೆ ಕಳಸವಿದೆ.

ಗಂಟೆಗಳು – ಗಡ್ಡೆಯ ಮೇಲ್ಭಾಗದಲ್ಲಿ 365 ಗಂಟೆಗಳಿವೆ ಒಂದು ವರ್ಷದ ದಿನಗಳು ಸಂಕೇತವಾಗಿವೆ.  ವರ್ಷ ಪೂರ್ಣವೂ ಗಂಟೆಯ ಸುಮಧುರ ನಾದದಂತೆ ಜೀವನವು ಮಧುರವಾಗಿರಲಿ.

ಲಿಂಗ ಪೂಜಾ ವಸ್ತುಗಳು =  ಬಿಲ್ವಪತ್ರೆ, ರುದ್ರಾಕ್ಷಿ, ಹೂವಿನ ಮಾಲೆಯ ಚಿತ್ರ, ಜೀವನದಲ್ಲಿ ಈ ಮೂರು ವಸ್ತುಗಳು ಮನಸ್ಸಿಗೆ, ದೇಹಕ್ಕೆ ಮತ್ತು ಆತ್ಮಕ್ಕೆ ಶಾಂತಿ ದೊರೆಯಲೆಂದು ಈ ಶಾಂತವಸ್ತುಗಳನ್ನು ಚಿತ್ರಿಸಲಾಗಿದೆ.

ಗಡ್ಡೆಯ ಮಧ್ಯಭಾಗ – ವೀರಶೈವ ಧರ್ಮದ ಪ್ರಮುಖ 24 ಯತಿಗಳ ಭಾವಚಿತ್ರ ಅಳವಡಿಸಿದೆ.

1) ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳು.

2) ಎಮ್ಮಿಗನೂರು ಶ್ರೀ ಜಡೆಯಸಿದ್ದರು.

3) ಕಪ್ಪನಹಳ್ಳಿ ಶ್ರೀ ರುದ್ರಮುನಿ ಶಿವಯೋಗಿಗಳು.

4) ಗೋಣಿಬೀಡು ಶ್ರೀ ಸಿದ್ಧವೀರ ಸ್ವಾಮಿಗಳು.

5) ಹಾಲಕೇರಿಯ ಶ್ರೀ ಹಿರಿಯ ಅನ್ನದಾನ ಮಹಾಸ್ವಾಮಿಗಳು. (ಗಡ್ಡದ ಅಜ್ಜನವರು)

6) ಒಳಬಳ್ಳಾರಿ ಶ್ರೀ ಚನ್ನಬಸವ ತಾತನವರು.

7) ಬಳ್ಳಾರಿಯ ಶ್ರೀ ಜ. ಕೊಟ್ಟೂರು ಸ್ವಾಮಿಗಳು.

8) ಹಾವೇರಿಯ ಶಿವಬಸವ ಸ್ವಾಮಿಗಳು.

9) ಶ್ರೀ ಡಾ‌.  ಜಚನಿಯವರು.

10) ಅನಂತಪುರದ ಶ್ರೀ ಲಿಂಗ ಮಹಾಸ್ವಾಮಿಗಳು.

11) ಬಾಗಲಕೋಟೆ ಕರವೀರಮಠದ ಶ್ರೀ ಶಾಂತವೀರ ಸ್ವಾಮಿಗಳು.

12) ರೋಣದ ಶ್ರೀ ಗುರುಪಾದ ಸ್ವಾಮಿಗಳು.

13) ಸವದತ್ತಿ ಶ್ರೀಅಪ್ಪಯ್ಯಸ್ವಾಮಿಗಳು.

14) ಕಂಚುಗಲ್ ಬಿದರಿ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು.

15) ಸಿಂದಗಿ ಶ್ರೀ ಶಾಂತವೀರ ಪಟ್ಟಾಧ್ಯಕ್ಷರು.

16) ಹಾನಗಲ್ಲ ಶ್ರೀ ಸದಾಶಿವ ಸ್ವಾಮಿಗಳು.

16) ಹುಬ್ಬಳ್ಳಿಯ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು.

17) ನಾಲ್ವತವಾಡ ಶ್ರೀವೀರೇಶ್ವರ ಶರಣರು.

18) ನಾಗನೂರು ಶ್ರೀ ಡಾ. ಶಿವಬಸವ ಸ್ವಾಮಿಗಳು.

19) ಹಾವೇರಿ ಶ್ರೀ ಶಿವಲಿಂಗ ಸ್ವಾಮಿಗಳು.

20) ಹುಬ್ಬಳ್ಳಿಯ ಜ. ಶ್ರೀ ಗಂಗಾಧರ ಸ್ವಾಮಿಗಳು.

22) ಪಂಚಾಕ್ಷರಿ ಶ್ರೀ ಗವಾಯಿಗಳು.

23) ಹಾಲಕೇರಿಯ ಶ್ರೀ ಅನ್ನದಾನ ಸ್ವಾಮಿಗಳು. (ಬೆತ್ತಜ್ಜನವರು)

24) ಹೊಸಪೇಟೆಯ ಶ್ರೀ ಜಗದ್ಗುರು ಡಾ.ಸಂಗನಬಸವ ಸ್ವಾಮಿಗಳು.

ಶಿವಾವತಾರಿಗಳು = ಶಿವನು ಭಕ್ತೋದ್ದಾರಕ್ಕಾಗಿ ಅವತರಿಸಿದ ಎಂಟು ಅವತಾರಗಳ ಚಿತ್ರಗಳು ರಚಿತ ಗೊಂಡಿದೆ.

ದಿಕ್ಪಾಲಕರು = ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಆಗ್ನೇಯ, ನೈಋತ್ಯ, ವಾಯುವ್ಯ, ಈಶಾನ್ಯ ಕ್ರಮವಾಗಿ ಇಂದ್ರ, ಅಗ್ನಿ, ಯಮ, ನಿರುತ, ವರುಣ, ವಾಯು, ಕುಬೇರ, ಈಶ.

ನಂದಿ ಮೂರ್ತಿ =  4 ನಂದಿಮೂರ್ತಿಗಳು.

ಚತುರ್ವಿಧ ಸಾಂಕೇತವಾಗಿವೆ ಇವು ಮಾನವನು ಧರ್ಮ, ಅರ್ಥ,  ಕಾಮ, ಮೋಕ್ಷವೆಂಬ ಪುರುಷಾರ್ಥಗಳನ್ನು ಸಾಧಿಸಿ ಮುಕ್ತನಾದಬೇಕೆಂಬುದು ಇದರ ಸಂಕೇತ.

ಗಣಪತಿ – ಮಹಾದ್ವಾರದ ಕೆಳಗೆ ವಿಗ್ನ ವಿನಾಶಕನಾದ ಪ್ರಸನ್ನ ಗಣಪತಿಯ ಮೂರ್ತಿ ಇದೆ.

ರಥದ ದ್ವಾರಪಾಲಕರು – ದೇವಲೋಕದ ದ್ವಾರಪಾಲಕರಾದ ಜಯ – ವಿಜಯರ ಭಾವಚಿತ್ರ.

 “ರಥ ನಿರ್ಮಾಣ ಮಾಡುವ ನಿಯಮಗಳಲ್ಲಿ ರಥದಲ್ಲಿ ಸಿಂಹ, ಸರ್ಪ ಮತ್ತು ಮೊಸಳೆಯ ಚಿತ್ರಣವಿರುವ ಬೇಕು” ಆದರೆ ಅವು ಕ್ರೂರ ಪ್ರಾಣಿಗಳು. ರಥವು ಶಾಂತಿಸ್ವರೂಪ ಇರಲೆಂದು ಬಿಲ್ವಪತ್ರೆ, ರುದ್ರಾಕ್ಷಿ, ಹೂವಿನ ಮಾಲೆಯನ್ನು ಕೆತ್ತಲಾಗಿದೆ.

ರಾಶಿಗಳು =  ವರ್ಷದ 12 ತಿಂಗಳುಗಳ ಸಾಂಕೇತವಾಗಿ ಮೇಷದಿಂದ ಮೀನದವರಿಗೆ -12 ರಾಶಿಗಳಿವೆ.

ರಥದ ಅಶ್ವಗಳು =  ದಶದಿಕ್ಕುಗಳು ಸಾಂಕೇತವಾಗಿ 10 ಕುದುರೆಗಳಿವೆ.

ಆನೆಗಳು  = ರಥದ ಮುಂಭಾಗ ಮತ್ತು ಹಿಂಭಾಗದಲ್ಲಿ ಒಟ್ಟು 14 ಆನೆಗಳಿವೆ ಚತುರ್ದಶ ಭುವನಗಳ ಸಾಂಕೇತಿಕವಾಗಿ.

ಗಾಲಿಗಳು =  6 ರಥದ ಗಾಲಿಗಳು ಇರುವವು.

ನಾಲ್ಕು ಯುಗ ಹಾಗೂ ಎರಡು ಆಯನಗಳ ಸಾಂಕೇತವಾಗಿ.

ಮುಂದಿನ ಎರಡು ಗಾಲಿಗಳು – ಕೃತಯುಗ, ತ್ರೇತಾಯುಗ.

ಹಿಂದಿನ ಎರಡು ಗಾಲಿಗಳು – ದ್ವಾಪರಯುಗ, ಕಲಿಯುಗ.

ಮಧ್ಯದ ಎರಡು ಗಾಲಿಗಳು – ಉತ್ತರಾಯಣ, ದಕ್ಷಿಣಾಯಣ.

ರಥದ ತೂಕ = 63 ಟನ್; ಶ್ರೀ ಕುಮಾರೇಶ್ವರ ಜೀವಿತ ಕಾಲ ಹಾಗೂ 63 ಪುರಾತನರ ಸಾಂಕೇತವಾಗಿ.

ರಥದ ಬೀದಿ = 600 ಫೂಟ್ ಉದ್ದ.

ರಥದ ಹಗ್ಗ = 108 ಅಡಿ ಉದ್ದವಿದೆ.

ರಥದ ಮಂಟಪ = 75 ಅಡಿ ಎತ್ತರವಿದೆ.

            ರಥ ನಿರ್ಮಾಣದ ಸಂಪೂರ್ಣ ವೆಚ್ಚದ ವಿವರ.

  1. ಕಟ್ಟಿಗೆಗೆ =                            1,00,00,000
  2. ಕಬ್ಬಿಣಕ್ಕೆ =                                 6,00,000
  3. ಹಿತ್ತಾಳೆಗೆ =                               1,50,000
  4. ವೇತನಕ್ಕೆ =                            30,00,000
  5. ರಥವು ಮಂದಿರಕ್ಕೆ ತಲುಪಿಸಲು = 6,00,000
  6. ಇತರೆ =                                30,00,000
  • ರಥದ ನಿರ್ಮಾಣದ ವೆಚ್ಚ  =     1,73,50,000
  • ರಥಬೀದಿ =                2,17,450
  • ರಥದ ಹಗ್ಗ =                57,050
  • ರಥದ ಮಂಟಪ =    22,00,000
  1. ಒಟ್ಟು ವೆಚ್ಚ  =           24,74,450

                                             =        1,73,50,000

                                             =           25,74,000

ರಥ ನಿರ್ಮಾಣ,ಹಗ್ಗ,ಬೀದಿ,

ಮಂಟಪ ಸಂಪೂರ್ಣ ವೆಚ್ಚದ ವಿವರ =     1,98,24,4540

– ರಥ ನಿರ್ಮಾಣ ಸ್ಥಳ =  ಉಡುಪಿಯ ಹೊಸನಗರದಲ್ಲಿ  – -ಪೆರ್ಡೂರಿಯ ಬುಕ್ಕಿಗುಡಿಯಂಬಲ್ಲಿ ನಿರ್ಮಾಣಗೊಂಡಿದೆ.

– ನಿರ್ಮಾಣ ಸಂಸ್ಥೆ =  ಶ್ರೀ ಡಿಸೈನರ್ಸ ಸಂಸ್ಥೆ.

 – ರಥದ ಹಗ್ಗ ನಿರ್ಮಾಣ ಸ್ಥಳ = ಚೆನ್ನೈಯಲ್ಲಿ ನಿರ್ಮಾಣಗೊಂಡಿದೆ.

– ಕುಶಲ ಶಿಲ್ಪಿಗಳು = 53 ಜನ ಸತತ ಕಾರ್ಯ ನಿರ್ವಹಿಸಿದ್ದಾರೆ.

– ನಿರ್ದೇಶಕರು = ಶ್ರೀ ರಾಜಶೇಖರ ಹೆಬ್ಬಾರ್.

– ನಿರ್ಮಾಪಕರು

 ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು.

ಜಗದ್ಗುರು ಶ್ರೀ ಕೊಟ್ಟೂರುಸ್ವಾಮಿ ಸಂಸ್ಥಾನಮಠ. ಹೊಸಪೇಟೆ-ಬಳ್ಳಾರಿ.

ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ. ಹಾಲಕೆರೆ.

ನಮ್ಮ ದೇಶದ ಸಂಸ್ಕೃತಿಯನ್ನು ಧಾರ್ಮಿಕ ಹಿನ್ನೆಲೆಯಲ್ಲಿ ತೋರಿಸಲು ರಥಗಳ ಪಾತ್ರ ಪ್ರಮುಖವಾಗಿವೆ. ಅದರಂತೆ ನಮ್ಮ ಶಿವಯೋಗ ಮಂದಿರದ 69 ಅಡಿ ಎತ್ತರದ ಮಹಾರಥ ವೀರಶೈವ ಧರ್ಮದ ತತ್ವಾಚರಣೆ ಹಾಗೂ ವೀರಶೈವ ದಾರ್ಶನಿಕರ ಚರಿತ್ರೆಯನ್ನು ಸಾರುವಂತಿದೆ, ಶ್ರೀ ಗುರು ಕುಮಾರೇಶ್ವರನ ಕೀರ್ತಿ ಗಗನಚುಂಬಿತವಾಗಿದೆ. ಪ್ರಪಂಚದ ಅತಿ ಎತ್ತರದ ಅಖಂಡ ರಥವಾಗಿದೆ. ರಥದ ನಿರ್ಮಾಣದ ವೆಚ್ಚ 1,73,50,000 ₹ಗಳ ವೆಚ್ಚವಾಗಿದೆ. ಶಿವರಾತ್ರಿಯ ಪುರಾಣದ ಮಂಗಲೋತ್ಸವದಂದು ರಥವನ್ನು ಮಹಾಗುರುಗಳ ಪಾದಕ್ಕೆ ಅರ್ಪಣೆ ಮಾಡಿ ರಥವನ್ನು 8-4-2010 ರಂದು ಎಳೆಯಲಾಯಿತು. ಈ ಭವ್ಯವಾದ ಕಾರ್ಯಕ್ರಮದಲ್ಲಿ ನಾಡಿನ ಗಣ್ಯ ಮಾನ್ಯರು ರಾಜಕೀಯದಲ್ಲಿ ಬಾನೆತ್ತರ ಬೆಳೆದ ಶ್ರೀ ಸೋನಿಯಾ ಗಾಂಧಿಯವರು. ಮಾನ್ಯಶ್ರೀ ಎಲ್.ಕೆ. ಅಡ್ವಾಣಿಯವರು. ಕನ್ನಡ ನಾಡಿನ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು. ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು‌‌.  ಪದ್ಮಭೂಷಣ ಶ್ರೀ ಪುಟ್ಟರಾಜ ಕವಿ ಗವಾಯಿಗಳು.ನಾಡಿನ ಎಲ್ಲಾ ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಗಣ್ಯ ಮಾನ್ಯರು ಆಗಮಿಸಿ ಶ್ರೀ ಗುರು ಕುಮಾರೇಶ್ವರರ ಚಿತ್ದರ್ಶನ, ಪ್ರಸಾದ ಸ್ವೀಕರಿಸಿ ಪುನೀತರಾಗಿದ್ದಾರೆ. ಅಂದಿನಿಂದ ಇಂದಿನವರೆಗೂ ಮಹಾಶಿವರಾತ್ರಿಯ ಮರುದಿನದಿಂದು ನೂರಾರು ಶಿವಯೋಗಿಗಳ ಸಮ್ಮುಖದಲ್ಲಿ, ಸಾವಿರಾರು ಭಕ್ತರ ನಡುವೆ ಶ್ರೀ ಕುಮಾರೇಶ್ವರ ಮಹಾರಥವನ್ನು ಎಳೆಯುವರು.

ಭಾರತಾಂಬೆಯು ತನ್ನ ಮಡಿಲಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಇಟ್ಟು ತೂಗುತ್ತಿರುವಳು‌. ಈ ಮೂರುಗಳನ್ನು ನಮ್ಮ ದೇಶದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲೂ ಭಾರತವನ್ನು ಮೆರೆಸುತ್ತಿದ್ದೇವೆ. ಭಾರತದ ಕಲೆ ವಿಶ್ವದಲ್ಲಿಯೇ ತನ್ನದೇ ಒಂದು ಅಪ್ರತಿಮ ಸ್ಥಾನವನ್ನು ಪಡೆದಿದೆ. ಬೇಲೂರು, ಹಳೆಬೀಡು, ಎಲ್ಲೋರಾ, ಅಜಂತಾ, ಪಟ್ಟದಕಲ್ಲು, ಬಾದಾಮಿ, ಐಹೊಳೆ ಹೀಗೆ ದೇಶದ ಮೂಲೆ ಮೂಲೆಯಲ್ಲಿ ಹಬ್ಬಿದೆ, ಆ ಕಲೆ ಶಿವಯೋಗಮಂದಿರದಲ್ಲಿಯೂ ಹರಡಿದೆ. ಇಲ್ಲಿರುವ ಮಹಾ ಗುರುಗಳಾದ ಶ್ರೀ ಕುಮಾರೇಶ್ವರ ಕರ್ತೃ ಗದ್ದುಗೆ ಹಾಗೂ ಕಾಷ್ಟದಿಂದ ನಿರ್ಮಿಸಿದ ರಥ ಇದು ವಿಶ್ವದಲ್ಲಿಯೇ ಅತೀ ಎತ್ತರದ ಕಲಾಕೃತಿಯ ರಥವೆನಿಸಿದೆ.

ದ್ರೋಣಾಚಾರ್ಯರ ಶಿಷ್ಯೋತ್ತಮನಾದ ಏಕಲವ್ಯನಿಂದ ಹೆಬ್ಬೆರಳು ಪಡೆದುಕೊಂಡರೆ. ವೀರಶೈವ ಧರ್ಮಕ್ಕೆ ಅಪಾರವಾದ ಸೇವೆ ಸಲ್ಲಿಸಿ ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಶಿವಯೋಗಮಂದಿರದಂಥ ಮಹಾಸಂಸ್ಥೆಯನ್ನು ಸ್ಥಾಪಿಸಿ ವೀರಶೈವದಲ್ಲಿಯೇ ವೀರಶೈವ ಜ್ಞಾನದ ಬೃಹತ್ ಬೆಳಕನ್ನು ಸದಾಕಾಲ ನಡೆಯುವಂತೆ ಮಾಡಿದ ವೀರಶೈವಧರ್ಮ ಎಂದೆಂದೂ ಅದಃಪತನ ವಾಗದಂತೆ ಮಂದಿರದಿಂದ ಮಹಾ ಪೂಜ್ಯರನ್ನು ತಯಾರುಮಾಡುವ ಕಮ್ಮಟ ಶಾಲೆಯನ್ನಾಗಿ ಪರಿವರ್ತಿಸಿದವರು  ಪರಮಪೂಜ್ಯ ದಿವ್ಯಜ್ಯೋತಿ ಲಿಂ. ಹಾನಗಲ್ಲ ಗುರು ಕುಮಾರ ಶಿವಯೋಗಿಗಳು.

‘ಕಲ್ಲರಳಿ ಹೂವಾಗಿ ಕುಮಾರೇಶನ ಗೋಪುರಕ್ಕೆ ಬೆಳಕಾಗಿ’ ಬೆಳಗುವಂತೆ ಅವರ ಶಿಷ್ಯೋತ್ತಮ ರಲ್ಲಿ ಅಗ್ರಗಣ್ಯ ಅವತಾರಿ, ಸದಾಕಾಲ ಸಮಾಜ ಸೇವೆ, ಕ್ರಾಂತಿಯ ಹರಿಕಾರ, ಶಿಕ್ಷಣ ಪ್ರೇಮಿ ‘ನ ಭೂತೋ ನ ಭವಿಷ್ಯತಿ’ ಎನ್ನುವ ರೀತಿಯಲ್ಲಿ ಶಿವಯೋಗ ಮಂದಿರದ ಪ್ರಭೆಯನ್ನು ಭೂಮಿಯ ನಾನಾ ಮೂಲೆಯಲ್ಲಿ ಪಸರಿಸಿ ಪ್ರವಾಸಿ ತಾಣಗಳ ಮಾದರಿಯಲ್ಲಿ ಶಿವಯೋಗ ಮಂದಿರವನ್ನು ಪರಿವರ್ತಿಸಿದರು ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು ಹೊಸಪೇಟೆ-ಬಳ್ಳಾರಿ-ಹಾಲಕೆರೆ.

ಶ್ರೀಗಳು ಏನೇ ಮಾಡಿದರು ಅದ್ಭುತ. ಅಮೂಲ್ಯ ಕಾರ್ಯಗಳನ್ನೇ ಕೈಗೊಳ್ಳುವರು ಅಂಥ ಅದ್ಭುತಗಳಲ್ಲಿ ಜಗತ್ತಿಗೆ ಮಾದರಿಯಾದ ಎತ್ತರವಾದ ಮಹಾರಥವನ್ನು ತಮ್ಮ ಮಠದ ಸ್ವಂತ ಖರ್ಚಿನಿಂದ ಶಿವಯೋಗ ಮಂದಿರಕ್ಕೆ ಅರ್ಪಣೆ ಮಾಡಿರುವ ಮಹಾ ಸಾಧಕರಿವರು, ಅಲ್ಲದೆ ಸಾಹಿತ್ಯ ಅಭಿಮಾನಿಗಳಾದ ಇವರು ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸ್ವತಃ ಪೂಜ್ಯರು ಆಧುನಿಕ ವಿಜ್ಞಾನಕ್ಕೆ ಸವಾಲಾದವರು. ಇವರು ಅರ್ಪಿಸಿದ ಬೃಹತ್ ರಥದ ವಿವರಣೆಯನ್ನು ಈ ಕೆಳಗೆ ನೀಡಿದ್ದೇನೆ.

ರಥದ ಶೈಲಿ = ಕರ್ನಾಟಕ ಚಾಲುಕ್ಯ,ಕಲ್ಯಾಣ ಚಾಲುಕ್ಯ,ಹೊಯ್ಸಳ ಶೈಲಿ.

ರಥದ ತಾಳಿಕೆ = ಸುಮಾರು 500 ವರ್ಷಗಳ ಕಾಲ ತಾಳಿಕೆ ಬರಬಹುದು.

ರಥಕ್ಕೆ ಬಳಸಿದ ಕಟ್ಟಿಗೆಗಳು = ಭೋಗಿ, ಸಾಗವಾನಿ,ಮತ್ತಿ, ರಂಜಾ.

ರಥ ನಿರ್ಮಾಣದ ಅವಧಿ = ಸತತ ಐದು ತಿಂಗಳಲ್ಲಿ ಪೂರ್ಣಗೊಂಡಿತು.

  ಶ್ರೀ ಕುಮಾರೇಶ್ವರ  ರಥದ ಎತ್ತರ

  1. ಶ್ರೀ  ಕಳಸ = 5 ಅಡಿ.
  2. ಗೋಲಾಕಾರದ ಶಿಖರ 1 = 4ಅಡಿ.
  3. ಗೋಲಾಕಾರದ ಶಿಖರ 2 = 9 ಅಡಿ.
  4. ಶರಣರ ಮಂಟಪ = 14 ಅಡಿ.
  5. ದೇವರ ಮಂಟಪ = 9 ಅಡಿ.
  6. ಗಡ್ಡೆ = 23 ಅಡಿ.
  7. ಗಾಲಿ = 9* ಅಡಿ.

           ರಥದ ಒಟ್ಟು ಎತ್ತರ = 73 ಅಡಿಗಳು

[* ಗಾಲಿಯ ಅರ್ಧ ಭಾಗಕ್ಕೆ ರಥ ಬರುವುದರಿಂದ ಗಾಲಿಯನ್ನು 4 – 1/2 ಅಡಿ ಗಣನೆಮಾಡಲಾಗಿದೆ.]

       ಭಾವಚಿತ್ರ – ರಥದ ಸುತ್ತಲೂ 12 ಶಿವಶರಣರ ಭಾವಚಿತ್ರ ರಚಿಸಲಾಗಿದೆ.

ದೇವರ ಮಂಟಪದ ಸುತ್ತಲೂ =

1) ಶ್ರೀ ಬಸವೇಶ್ವರರು. 2) ರೇಣುಕಾಚಾರ್ಯರು.

3) ಅಲ್ಲಮಪ್ರಭುದೇವರು. 4) ಸಿದ್ಧಲಿಂಗೇಶ್ವರರು.

ಮೊದಲನೇ ಶರಣ ಮಂಟಪದಲ್ಲಿ=

1) ಸಿದ್ದರಾಮೇಶ್ವರರು. 2) ಅಕ್ಕಮಹಾದೇವಿ.

3) ಮಡಿವಾಳ ಮಾಚಯ್ಯ. 4)ಮೋಳಿಗೆ ಮಾರಯ್ಯಾ.

ಎರಡನೇ ಶರಣ ಮಂಟಪದಲ್ಲಿ=

1) ಎಳಂದೂರು ಬಸವಲಿಂಗ ಸ್ವಾಮಿಗಳು. 2) ಶ್ರೀವಿಜಯ ಮಹಾಂತ ಸ್ವಾಮಿಗಳು.3) ಬಿದರಿ ಕುಮಾರಸ್ವಾಮಿಗಳು. 4) ವೈರಾಗ್ಯದ ಮಲ್ಲಣ್ಣಾರ್ಯರು.

ಕಂಬಗಳು = ರಥದಲ್ಲಿ 24 ಕಂಬಗಳಿವೆ ಇವು ದಿನದ 24 ಗಂಟೆಗಳ ಸಂಕೇತಗಳಾಗಿವೆ. ದಿನದ ಗಂಟೆಗಳು ಮನುಷ್ಯನ ಜೀವನ ಉತ್ತಮವಾಗಿರಲಿ ಎಂದು, ಪ್ರತಿಯೊಂದು ಕಂಬಕ್ಕೆ ಹಿತ್ತಾಳೆ ಕಳಸವಿದೆ.

ಗಂಟೆಗಳು – ಗಡ್ಡೆಯ ಮೇಲ್ಭಾಗದಲ್ಲಿ 365 ಗಂಟೆಗಳಿವೆ ಒಂದು ವರ್ಷದ ದಿನಗಳು ಸಂಕೇತವಾಗಿವೆ.  ವರ್ಷ ಪೂರ್ಣವೂ ಗಂಟೆಯ ಸುಮಧುರ ನಾದದಂತೆ ಜೀವನವು ಮಧುರವಾಗಿರಲಿ.

ಲಿಂಗ ಪೂಜಾ ವಸ್ತುಗಳು =  ಬಿಲ್ವಪತ್ರೆ, ರುದ್ರಾಕ್ಷಿ, ಹೂವಿನ ಮಾಲೆಯ ಚಿತ್ರ, ಜೀವನದಲ್ಲಿ ಈ ಮೂರು ವಸ್ತುಗಳು ಮನಸ್ಸಿಗೆ, ದೇಹಕ್ಕೆ ಮತ್ತು ಆತ್ಮಕ್ಕೆ ಶಾಂತಿ ದೊರೆಯಲೆಂದು ಈ ಶಾಂತವಸ್ತುಗಳನ್ನು ಚಿತ್ರಿಸಲಾಗಿದೆ.

ಗಡ್ಡೆಯ ಮಧ್ಯಭಾಗ – ವೀರಶೈವ ಧರ್ಮದ ಪ್ರಮುಖ 24 ಯತಿಗಳ ಭಾವಚಿತ್ರ ಅಳವಡಿಸಿದೆ.

1) ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳು.

2) ಎಮ್ಮಿಗನೂರು ಶ್ರೀ ಜಡೆಯಸಿದ್ದರು.

3) ಕಪ್ಪನಹಳ್ಳಿ ಶ್ರೀ ರುದ್ರಮುನಿ ಶಿವಯೋಗಿಗಳು.

4) ಗೋಣಿಬೀಡು ಶ್ರೀ ಸಿದ್ಧವೀರ ಸ್ವಾಮಿಗಳು.

5) ಹಾಲಕೇರಿಯ ಶ್ರೀ ಹಿರಿಯ ಅನ್ನದಾನ ಮಹಾಸ್ವಾಮಿಗಳು. (ಗಡ್ಡದ ಅಜ್ಜನವರು)

6) ಒಳಬಳ್ಳಾರಿ ಶ್ರೀ ಚನ್ನಬಸವ ತಾತನವರು.

7) ಬಳ್ಳಾರಿಯ ಶ್ರೀ ಜ. ಕೊಟ್ಟೂರು ಸ್ವಾಮಿಗಳು.

8) ಹಾವೇರಿಯ ಶಿವಬಸವ ಸ್ವಾಮಿಗಳು.

9) ಶ್ರೀ ಡಾ‌.  ಜಚನಿಯವರು.

10) ಅನಂತಪುರದ ಶ್ರೀ ಲಿಂಗ ಮಹಾಸ್ವಾಮಿಗಳು.

11) ಬಾಗಲಕೋಟೆ ಕರವೀರಮಠದ ಶ್ರೀ ಶಾಂತವೀರ ಸ್ವಾಮಿಗಳು.

12) ರೋಣದ ಶ್ರೀ ಗುರುಪಾದ ಸ್ವಾಮಿಗಳು.

13) ಸವದತ್ತಿ ಶ್ರೀಅಪ್ಪಯ್ಯಸ್ವಾಮಿಗಳು.

14) ಕಂಚುಗಲ್ ಬಿದರಿ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು.

15) ಸಿಂದಗಿ ಶ್ರೀ ಶಾಂತವೀರ ಪಟ್ಟಾಧ್ಯಕ್ಷರು.

16) ಹಾನಗಲ್ಲ ಶ್ರೀ ಸದಾಶಿವ ಸ್ವಾಮಿಗಳು.

16) ಹುಬ್ಬಳ್ಳಿಯ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು.

17) ನಾಲ್ವತವಾಡ ಶ್ರೀವೀರೇಶ್ವರ ಶರಣರು.

18) ನಾಗನೂರು ಶ್ರೀ ಡಾ. ಶಿವಬಸವ ಸ್ವಾಮಿಗಳು.

19) ಹಾವೇರಿ ಶ್ರೀ ಶಿವಲಿಂಗ ಸ್ವಾಮಿಗಳು.

20) ಹುಬ್ಬಳ್ಳಿಯ ಜ. ಶ್ರೀ ಗಂಗಾಧರ ಸ್ವಾಮಿಗಳು.

22) ಪಂಚಾಕ್ಷರಿ ಶ್ರೀ ಗವಾಯಿಗಳು.

23) ಹಾಲಕೇರಿಯ ಶ್ರೀ ಅನ್ನದಾನ ಸ್ವಾಮಿಗಳು. (ಬೆತ್ತಜ್ಜನವರು)

24) ಹೊಸಪೇಟೆಯ ಶ್ರೀ ಜಗದ್ಗುರು ಡಾ.ಸಂಗನಬಸವ ಸ್ವಾಮಿಗಳು.

ಗಾಲಿಗಳು =  6 ರಥದ ಗಾಲಿಗಳು ಇರುವವು.

ನಾಲ್ಕು ಯುಗ ಹಾಗೂ ಎರಡು ಆಯನಗಳ ಸಾಂಕೇತವಾಗಿ.

ಮುಂದಿನ ಎರಡು ಗಾಲಿಗಳು – ಕೃತಯುಗ, ತ್ರೇತಾಯುಗ.

ಹಿಂದಿನ ಎರಡು ಗಾಲಿಗಳು – ದ್ವಾಪರಯುಗ, ಕಲಿಯುಗ.

ಮಧ್ಯದ ಎರಡು ಗಾಲಿಗಳು – ಉತ್ತರಾಯಣ, ದಕ್ಷಿಣಾಯಣ.

ರಥದ ತೂಕ = 63 ಟನ್; ಶ್ರೀ ಕುಮಾರೇಶ್ವರ ಜೀವಿತ ಕಾಲ ಹಾಗೂ 63 ಪುರಾತನರ ಸಾಂಕೇತವಾಗಿ.

ರಥದ ಬೀದಿ = 600 ಫೂಟ್ ಉದ್ದ.

ರಥದ ಹಗ್ಗ = 108 ಅಡಿ ಉದ್ದವಿದೆ.

ರಥದ ಮಂಟಪ = 75 ಅಡಿ ಎತ್ತರವಿದೆ.

            ರಥ ನಿರ್ಮಾಣದ ಸಂಪೂರ್ಣ ವೆಚ್ಚದ ವಿವರ.

  1. ಕಟ್ಟಿಗೆಗೆ =                            1,00,00,000
  2. ಕಬ್ಬಿಣಕ್ಕೆ =                                 6,00,000
  3. ಹಿತ್ತಾಳೆಗೆ =                               1,50,000
  4. ವೇತನಕ್ಕೆ =                            30,00,000
  5. ರಥವು ಮಂದಿರಕ್ಕೆ ತಲುಪಿಸಲು = 6,00,000
  6. ಇತರೆ =                                30,00,000
  • ರಥದ ನಿರ್ಮಾಣದ ವೆಚ್ಚ  =     1,73,50,000
  • ರಥಬೀದಿ =                2,17,450
  • ರಥದ ಹಗ್ಗ =                57,050
  • ರಥದ ಮಂಟಪ =    22,00,000
  1. ಒಟ್ಟು ವೆಚ್ಚ  =           24,74,450

                                             =        1,73,50,000

                                             =           25,74,000

ರಥ ನಿರ್ಮಾಣ,ಹಗ್ಗ,ಬೀದಿ,

ಮಂಟಪ ಸಂಪೂರ್ಣ ವೆಚ್ಚದ ವಿವರ =     1,98,24,4540

 ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು.

ಜಗದ್ಗುರು ಶ್ರೀ ಕೊಟ್ಟೂರುಸ್ವಾಮಿ ಸಂಸ್ಥಾನಮಠ. ಹೊಸಪೇಟೆ-ಬಳ್ಳಾರಿ.

ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ. ಹಾಲಕೆರೆ.

ನಮ್ಮ ದೇಶದ ಸಂಸ್ಕೃತಿಯನ್ನು ಧಾರ್ಮಿಕ ಹಿನ್ನೆಲೆಯಲ್ಲಿ ತೋರಿಸಲು ರಥಗಳ ಪಾತ್ರ ಪ್ರಮುಖವಾಗಿವೆ. ಅದರಂತೆ ನಮ್ಮ ಶಿವಯೋಗ ಮಂದಿರದ 69 ಅಡಿ ಎತ್ತರದ ಮಹಾರಥ ವೀರಶೈವ ಧರ್ಮದ ತತ್ವಾಚರಣೆ ಹಾಗೂ ವೀರಶೈವ ದಾರ್ಶನಿಕರ ಚರಿತ್ರೆಯನ್ನು ಸಾರುವಂತಿದೆ, ಶ್ರೀ ಗುರು ಕುಮಾರೇಶ್ವರನ ಕೀರ್ತಿ ಗಗನಚುಂಬಿತವಾಗಿದೆ. ಪ್ರಪಂಚದ ಅತಿ ಎತ್ತರದ ಅಖಂಡ ರಥವಾಗಿದೆ. ರಥದ ನಿರ್ಮಾಣದ ವೆಚ್ಚ 1,73,50,000 ₹ಗಳ ವೆಚ್ಚವಾಗಿದೆ. ಶಿವರಾತ್ರಿಯ ಪುರಾಣದ ಮಂಗಲೋತ್ಸವದಂದು ರಥವನ್ನು ಮಹಾಗುರುಗಳ ಪಾದಕ್ಕೆ ಅರ್ಪಣೆ ಮಾಡಿ ರಥವನ್ನು 8-4-2010 ರಂದು ಎಳೆಯಲಾಯಿತು. ಈ ಭವ್ಯವಾದ ಕಾರ್ಯಕ್ರಮದಲ್ಲಿ ನಾಡಿನ ಗಣ್ಯ ಮಾನ್ಯರು ರಾಜಕೀಯದಲ್ಲಿ ಬಾನೆತ್ತರ ಬೆಳೆದ ಶ್ರೀ ಸೋನಿಯಾ ಗಾಂಧಿಯವರು. ಮಾನ್ಯಶ್ರೀ ಎಲ್.ಕೆ. ಅಡ್ವಾಣಿಯವರು. ಕನ್ನಡ ನಾಡಿನ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು. ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು‌‌.  ಪದ್ಮಭೂಷಣ ಶ್ರೀ ಪುಟ್ಟರಾಜ ಕವಿ ಗವಾಯಿಗಳು.ನಾಡಿನ ಎಲ್ಲಾ ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಗಣ್ಯ ಮಾನ್ಯರು ಆಗಮಿಸಿ ಶ್ರೀ ಗುರು ಕುಮಾರೇಶ್ವರರ ಚಿತ್ದರ್ಶನ, ಪ್ರಸಾದ ಸ್ವೀಕರಿಸಿ ಪುನೀತರಾಗಿದ್ದಾರೆ. ಅಂದಿನಿಂದ ಇಂದಿನವರೆಗೂ ಮಹಾಶಿವರಾತ್ರಿಯ ಮರುದಿನದಿಂದು ನೂರಾರು ಶಿವಯೋಗಿಗಳ ಸಮ್ಮುಖದಲ್ಲಿ, ಸಾವಿರಾರು ಭಕ್ತರ ನಡುವೆ ಶ್ರೀ ಕುಮಾರೇಶ್ವರ ಮಹಾರಥವನ್ನು ಎಳೆಯುವರು.