General

• ಡಾ. ಎಂ. ಶಿವಕುಮಾರಸ್ವಾಮಿ

ವೀರಶೈವರ ಧಾರ್ಮಿಕ ಪರಿವೇಶದಲ್ಲಿ ಇಷ್ಟಲಿಂಗಕ್ಕೆ ಇರುವ ಸ್ಥಾನ ಬೇರೆ ಯಾವುದಕ್ಕೂ ಇಲ್ಲ. ಅವರಿಗೆ ಇಷ್ಟತಮವಾದುದು ಇಷ್ಟಲಿಂಗ. ‘ಇಷ್ಟ’ ಎಂದರೆ ಪ್ರಿಯ, ಮನೋಹರ, ಹೃದಯಂಗಮ- (ನೋಡಿ-ʼʼಇಷ್ಟಾರ್ಥ ವ್ಯವಚ್ಛಿನ್ನಾ ಪದಾವಲೀ” -ದಂಡಿ, ಇಷ್ಟಾರ್ಥವೆಂದರೆ ರಮಣೀಯವಾದ ಅರ್ಥ). ವೀರಶೈವರಿಗೆ ಅತ್ಯಂತ ಪ್ರಿಯವಾದುದು, ರಮಣೀಯವಾದುದು ಇಷ್ಟಲಿಂಗ, ಅವರ ದೃಷ್ಟಿಯಲ್ಲಿ ಅದಕ್ಕೆ ಇರುವ ಅನಂತ ಶಕ್ತಿಗಳಲ್ಲಿ ಎರಡು ಶಕ್ತಿಗಳು ಮುಖ್ಯ : ಒಂದು, ಇಷ್ಟಾವಾಪ್ತಿಕರತ್ವ ಮತ್ತು ಎರಡು,

ಅನಿಷ್ಟಪರಿಹಾರಕತ್ವ; ಇಷ್ಟವಾದುದನ್ನು ಪಡೆಯುವಂತೆ ಮಾಡುವುದು ಮತ್ತು ಇಷ್ಟವಲ್ಲದುದನ್ನು ಪರಿಹರಿಸುವುದು. ಇಷ್ಟವಾದುದು ಎಂದರೆ ಯಾವುದು ? ಯಾವುದಾದರೂ ಆಗಿರಬಹುದು.  ಆದರೆ ಯಾವುದೇ ಆದರೂ ಅದು ಸುಖವನ್ನು ಕೊಡುವುದಾಗಿರಬೇಕು ಎಂಬುದು ಸಾಮಾನ್ಯ ಇಚ್ಛೆ, ಸುಖ ಎರಡು ವಿಧ-ಲೌಕಿಕ ಸುಖ ಮತ್ತು ಅಲೌಕಿಕ ಅಥವಾ ಪಾರಮಾರ್ಥಿಕ ಸುಖ ಎಂದು.

ಪ್ರೇಯಸ್ ಮತ್ತು ಶ್ರೇಯಸ್ :

ಇವುಗಳನ್ನು ಕಠೋಪನಿಷತ್ತು ಪ್ರೇಯಸ್’ ಮತ್ತು ‘ಶ್ರೇಯಸ್’ ಎಂದು ಕರೆಯುತ್ತದೆ. ‘ಪ್ರೇಯಸ್’ ಎಂದರೆ ಸಾಮಾನ್ಯವಾಗಿ ಪ್ರಿಯವಾದುದು. ಅದು ಶುದ್ಧ ಅಥವಾ ಕೇವಲ ಸುಖವಲ್ಲ, ದುಃಖ ಅಥವಾ ಅಪ್ರಿಯವಾದುದರೊಂದಿಗೆ ಕೂಡಿಕೊಂಡ ಸುಖ, ತಾತ್ಕಾಲಿಕ ಸುಖ. ಅದೇ ಲೌಕಿಕ ಸುಖ. ಇನ್ನು ‘ಶ್ರೇಯಸ್’ ಎಂಬುದು ಶ್ರೇಯಸ್ಕರ, ಅಂದರೆ ಕೇವಲ ಸುಖಪರ್ಯವಸಾಯಿ, ಪರಮಾನಂದ, ಶಿವಾನಂದ. ಅದೇ ಅಲೌಕಿಕ ಅಥವಾ ಪಾರಮಾರ್ಥಿಕ ಸುಖ. ಇವರೆಡರಲ್ಲಿ ಯಾರು ಯಾವುದನ್ನೂ ಆಯ್ದುಕೊಳ್ಳಬಹುದು ? ಜ್ಞಾನಿಯು ಪ್ರೇಯಸ್ಸನ್ನು ಬಿಟ್ಟು ಶ್ರೇಯಸ್ಸನ್ನು ಆಯ್ದುಕೊಳ್ಳುತ್ತಾನೆ. ಅಜ್ಞಾನಿಯು ಯೋಗ ಕ್ಷೇಮದ

ದೃಷ್ಟಿಯಿಂದ ಪ್ರೇಯಸ್ಸನ್ನು ಆರಿಸಿಕೊಳ್ಳುತ್ತಾನೆ. ಈ ಪ್ರಶ್ನೆಗೆ ಕಠೋಪನಿಷತ್ತು ನೀಡುವ ಉತ್ತರ, ನೋಡಿ

ಅನ್ಯಚ್ಛ್ರೆಯೋ ನ್ಯದುತೈವ ಪ್ರೇಯಃ, ತೇ ಉಭೇ ನಾನಾರ್ಥೇ ಪುರುಷಂ ಸಿನೀತಃ|

ತಯೋಃ ಶ್ರೇಯ ಆದದಾನಾಯ ಸಾಧು ಭವತಿ, ಹಿಯತೇಽರ್ಥಾದ ಉ ಪ್ರೇಯೋ ವೃಣೀತೇ ||

ಶ್ರೇಯಶ್ಚ ಪ್ರೇಯಶ್ಚ ಮನುಷ್ಯಮೇತಃ, ತೌ ಸಂಪರೀತ್ಯ ವಿವಿನಕ್ತಿ ಧೀರಃ |

ಶ್ರೇಯೋ ಹಿ ಧೀರೋಽಭಿ ಪ್ರೇಯಸೋ ವೃಣೀತೇ, ಪ್ರೇಯೋ ಹಿ ಮಂದೋ

ಯೋಗಕ್ಷೇಮಾದ್ ವೃಣೀತೇ || (ಕಠ., ೨.೧-೨)

ʼʼಒಂದು ಶ್ರೇಯಸ್ಸು ಮತ್ತೊಂದು ಪ್ರೇಯಸ್ಸು, ಅವೆರಡೂ ಮನುಷ್ಯನನ್ನು ಬೇರೆ ಬೇರೆ ಉದ್ದೇಶಗಳೊಂದಿಗೆ ಜೋಡಿಸುತ್ತವೆ. ಅವೆರಡರಲ್ಲಿ ಶ್ರೇಯಸ್ಸನ್ನು ಆಯ್ದುಕೊಳ್ಳುವವನಿಗೆ ಒಳ್ಳೆಯದಾಗುತ್ತದೆ. ಯಾರು ಪ್ರೇಯಸ್ಸನ್ನು ಆಯ್ದುಕೊಳ್ಳುತ್ತಾನೋ ಅವನು ನಿಜವಾದ ಗುರಿಯಿಂದ ವಂಚಿತನಾಗುತ್ತಾನೆ. ಶ್ರೇಯಸ್ ಮತ್ತು ಪ್ರೇಯಸ್ ಎರಡೂ ಮನುಷ್ಯನೆಡೆಗೆ ಹೋಗುತ್ತವೆ. ಅವೆರಡನ್ನು ಪರೀಕ್ಷಿಸಿ ಜ್ಞಾನಿಯು (ಧೀರನು) ಪ್ರೇಯಸ್ಸಿಗೆ ಬದಲಾಗಿ ಶ್ರೇಯಸ್ಸನ್ನು ಆಯ್ದುಕೊಳ್ಳುತ್ತಾನೆ. ಮಂದಬುದ್ಧಿಯವನು ಯೋಗಕ್ಷೇಮದ ದೃಷ್ಟಿಯಿಂದ ಪ್ರೇಯಸ್ಸನ್ನು ಆಯ್ದುಕೊಳ್ಳುತ್ತಾನೆ.

ಇಷ್ಟ’ ವೆಂದರೆ ಶ್ರೇಯಸ್ :

ಈ ಹಿನ್ನೆಲೆಯಲ್ಲಿ ವಿಚಾರ ಮಾಡುವುದಾದರೆ ಇಲ್ಲಿ ‘ಇಷ್ಟ’ ವೆಂದರೆ ಶ್ರೇಯಸ್ ಎಂದೇ ತಿಳಿದುಕೊಳ್ಳಬೇಕು. ಶ್ರೇಯಸ್ಸೆಂದರೆ ಪಾರಮಾರ್ಥಿಕ ಆನಂದವನ್ನು ಹೊಂದುವುದು. ಅಂತಹ ಇಷ್ಟವನ್ನು ತಂದುಕೊಡುವುದರಿಂದ ಅದು ಇಷ್ಟಲಿಂಗ, ಅನಿಷ್ಟವಾದುದು ಎಂದರೆ ಯಾವುದು ನಮ್ಮ ನಿಜವಾದ ಹಿತಕ್ಕೆ ಧಕ್ಕೆ ತರುವುದೋ ಅದು. ಪರಮಾರ್ಥಕ್ಕೆ ಯಾವುದು ಪ್ರತಿಬಂಧಕವೋ ಅದನ್ನು ನಿವಾರಿಸುತ್ತದೆ ಎಂದು ಅದು ಇಷ್ಟಲಿಂಗ. ಇದು ಹೆಸರಿನ ದೃಷ್ಟಿಯಿಂದ ಇಷ್ಟಲಿಂಗ ಪರಿಕಲ್ಪನೆಯಲ್ಲಿ ಅಡಗಿದ ಅರ್ಥಗಾಂಭೀರ್ಯ. ಅದನ್ನು ಗರ್ಭೀಕರಿಸಿ ಮೊಗ್ಗೆಯ ಮಾಯಿದೇವರು ಹೀಗೆ ಹೇಳಿದ್ದಾರೆ:

ಇಷ್ಟಾವಾಪ್ತಿಕರು ಸಾಕ್ಷಾದನಿಷ್ಟಪರಿಹಾರಕಮ್ |

ಷ್ಟಿಃ ಪೂಜಾ ತಯಾ ನಿತ್ಯಮಿಷ್ಟಂ ಪೂಜಿತಮಾದರಾತ್ ||

ಇಪ್ಪಲಿಂಗಮಿತಿ ಪ್ರೋಕ್ತಮಾಚಾರ್ಯೈರ್ಲಿಂಗಪೂಜಕೈಃ |

ಇಷ್ಟಮರ್ಥ೦ ಸ್ವಭಕ್ತಾನಾಮನುಯಚ್ಛತಿ ಸರ್ವದಾ |

(ಅನು.ಸೂ., ೩.೯-೧೦)

ʼʼಅನಿಷ್ಟಗಳನ್ನು ನಿವಾರಿಸಿ ಇಷ್ಟಫಲವನ್ನು ನೀಡುವ ‘ಇಷ್ಟಿಃ ಪೂಜಾ’ ಎಂಬ ಅರ್ಥದಂತೆ ನಿತ್ಯವೂ ಆದರದಿಂದ ಪೂಜಿಸಲ್ಪಡುವ, ಭಕ್ತರ ಅಭೀಷ್ಟಗಳನ್ನು ಸದಾ ನೆರವೇರಿಸುವ ಪೂಜ್ಯವಸ್ತುವನ್ನು ಲಿಂಗಪೂಜಾನಿಷ್ಠ ಆಚಾರ್ಯರು ಇಷ್ಟಲಿಂಗವೆಂದು ಕರೆಯುತ್ತಾರೆ”.

ಇಷ್ಟಲಿಂಗ-ಸಂಕೇತವೋ ? ಸ್ವರೂಪವೋ ?

ಇಷ್ಟಲಿಂಗ ಪರಿಕಲ್ಪನೆಯಲ್ಲಿ ಅದು ಶಿವನ ಸಂಕೇತವೋ ? ಸ್ವರೂಪವೋ ? ಎಂಬುದು ಬಹುಮುಖ್ಯವಾದ ಪ್ರಶ್ನೆ. ಸಾಮಾನ್ಯ ಕಲ್ಪನೆಯೆಂದರೆ ಇಷ್ಟಲಿಂಗವು ಶಿವನ ಸಂಕೇತ; ಬಾಹ್ಯ ಅರ್ಚನೆಗೆ ಬೇಕಾದ ಒಂದು ಸಾಕಾರ ವಸ್ತು. ಅದನ್ನು ‘ಸಕಲ’ ಎಂದು ಕರೆದಿರುವುದು ಈ ಕಲ್ಪನೆಗೆ ಪೂರಕವಾಗಿರಬಹುದು. ಅದು ‘ದೃಕ್ಕಲಾಗ್ರಾಹ್ಯ’ (ಕಣ್ಣುಗಳ ಕಿರಣಾಂಶಗಳಿಂದ ಕಾಣಬಹುದಾದುದು) ಎಂಬ ಕಾರಣದಿಂದ ಸಾಕಾರವೆಂದು ಹೇಳಲ್ಪಟ್ಟಿರಬಹುದು. “ಸಕಲಂ ದೃಕ್ಕಲಾಗ್ರಾಹ್ಯಮಿಷ್ಟಲಿಂಗಸ್ಥಲಂ ಮಹತ್” (ಅನು.ಸೂ ೩.೬)ಎಂದು ಹೇಳುವ ಮೂಲಕ ಮಾಯಿದೇವರು ಇದನ್ನು ಸೂಚಿಸಿದ್ದಾರೆ ಎಂದುಕೊಳ್ಳಬಹುದು. ಆದರೆ ಇದು ಕೇವಲ ಭ್ರಮಾತ್ಮಕ ಕಲ್ಪನೆ ಮತ್ತು ಅವು ಅದನ್ನು ಸಮರ್ಥಿಸಲು ಭಾವಿಸಿಕೊಂಡ ಕೆಲವು ಯುಕ್ತಿಗಳು, ಏಕೆಂದರೆ ಇಷ್ಟಲಿಂಗವು ಪರಮಾತ್ಮನ ಸಂಕೇತ ಅಥವಾ ಚಿಹ್ನೆಯಲ್ಲ ಎಂಬುದನ್ನು ಮಾಯಿದೇವರ ಈ ಮಾತು ಸ್ಪಷ್ಟವಾಗಿ ತಿಳಿಸುತ್ತದೆ :

ಶಿವ ಏವ ಸ್ವಯಂ ಲಿಂಗಮಿತಿ ಲಿಂಗಸ್ಯ ವೈಭವಮ್ |

ನಾನ್ಯಚಿಹ್ನಾದಿಕಂ ಲಿಂಗಂ ತತ್ಸರ್ವಂ ಕೃತಕಂ ಚ ಯತ್ II (ಅನು. ಸೂ. ೩.೧)

“ಸ್ವಯಂ ಪರಮಾತ್ಮನೇ ಲಿಂಗ, ಹಾಗೆಂದೇ ಲಿಂಗಕ್ಕೆ ಮಹತ್ವ, ಬೇರೆ ಯಾವುದೇ ಚಿಹ್ನೆ ಮುಂತಾದುದು ಲಿಂಗವಲ್ಲ. ಅದೆಲ್ಲಾ ಕೃತಕ’ ಇಷ್ಟಲಿಂಗವು ಸಾಕಾರವೇ ನಿರಾಕಾರವೇ ಎಂಬುದನ್ನು ಪರೀಕ್ಷಿಸಲು ದೃಷ್ಟಿಯೋಗಕ್ಕೆ ಮೊರೆಹೋಗಬೇಕು. ಇಷ್ಟಲಿಂಗದಲ್ಲಿ ದೃಷ್ಟಿಯೋಗವನ್ನು ಸಾಧಿಸಿ ಅಂತರ್ಮುಖನಾದಾಗ ಯಾವ ಆಕಾರವೂ ಇರದು.

ಹೀಗೆ ಲಿಂಗವು ಅ೦ದರೆ ಇಷ್ಟಲಿಂಗವು ಶಿವನೇ. ಅದು ಅವನ ಸ್ವರೂಪವೇ ಹೊರತು ಬೇರಲ್ಲ ಈ ಪರಿಕಲ್ಪನೆಯ ಮೂಲ ಸ್ಫೂರ್ತಿಯು ಇಲ್ಲಿದೆ :

ಅಪರಿಚ್ಛಿನ್ನಮವ್ಯಕ್ತಂ ಲಿಂಗಂ ಬ್ರಹ್ಮ ಸನಾತನಮ್ |

ಉಪಾಸನಾರ್ಥಮಂತಃಸ್ಥಂ ಪರಿಚ್ಛಿನ್ನಂ ಸ್ವಮಾಯಯಾ || (ಸಿ.ಶಿ., ೬.೨೬)

ʼʼಅಖಂಡವೂ ಅವ್ಯಕ್ತವೂ ಆದ ಸನಾತನ ಬ್ರಹ್ಮವೇ ಆದ ಒಳಗಿನ ಲಿಂಗವು ಭಕ್ತರ ಉಪಾಸನೆಗಾಗಿ ತನ್ನ ಮಾಯೆಯಿಂದ ತಾನೇ ಬೇರೆ ಬೇರೆಯಾಯಿತುʼʼ, ಬೇರೆ ಬೇರೆಯಾಯಿತು ಎಂದರೆ ಭಾವಲಿಂಗ, ಪ್ರಾಣಲಿಂಗ ಮತ್ತು ಇಷ್ಟಲಿಂಗವೆಂದು ಮೂರು ರೂಪಗಳನ್ನು ಧರಿಸಿತು ಎಂದರ್ಥ. ವೀರಶೈವ ಪರಿಭಾಷೆಯಲ್ಲಿ ಲಿಂಗ ಶಬ್ದದ ನಿಷ್ಪತ್ತಿ ಮತ್ತು ಲಿಂಗತ್ರಯ ಧಾರಣ ಪರ್ಯವಸಾಯಿ ದೀಕ್ಷಾತ್ರಯ ಇಲ್ಲಿ ಪ್ರಸ್ತುತ.

ಲಿಂಗ ಶಬ್ದ ನಿಷ್ಪತ್ತಿ:

ʼಲೀಯತೇ ಗಮ್ಯತೇ ಜಗದ್ ಯತ್ರ ಯಸ್ಮಾತ್ ತತ್ ಲಿಂಗಮ್’- ಯಾವುದರಲ್ಲಿ ಪ್ರಪಂಚವು ಮೊದಲು ಅಡಗಿತ್ತೋ, ಯಾವುದರಿಂದ ಹೊರ ಹೊಮ್ಮುವುದೋ ಅದು ಲಿಂಗ, ಎಂಬ ನಿಷ್ಪತ್ತಿಯಂತೆ ಲಿಂಗವು ಪರಬ್ರಹ್ಮ ಪರಶಿವ

ರೇ ಲೀಯತೇ ಸರ್ವಂ ಜಗತ್ ಸ್ಥಾವರಜಂಗಮಮ್ |

ಪುನರುತ್ಪದ್ಯತೇ ಯಸ್ಮಾತ್ ತದ್ ಬ್ರಹ್ಮಲಿಂಗಸಂಜ್ಞಕಮ್ ||  (ಚಂ. ಆ., ಕ್ರಿ.ಪಾ. ೩.೮)  

“ಯಾವುದರ ಉದರದಲ್ಲಿ ಚರಾಚರಾತ್ಮಕ ಜಗತ್ತು ಅಡಗಿರುವುದೋ ಎಲ್ಲಿಂದ ಮತ್ತೆ ಅದು ಉತ್ಪನ್ನವಾಗುವುದೋ ಅದು ಲಿಂಗಸಂಜ್ಞೆಯುಳ್ಳ ಬ್ರಹ್ಮʼʼ ಶ್ರೀ ಸಿದ್ಧಾಂತ ಶಿಖಾಮಣಿಯಲ್ಲೂ ಇದರ ಪ್ರತಿಧ್ವನಿಯಿದೆ :

ಲಯಂ ಗಚ್ಛತಿ ಯತ್ರೈವ ಜಗದೇತಚ್ಚರಾಚರಮ್ |

ಪುನಃ ಪುನಃ ಸಮುತ್ಪತ್ತಿಂ ತಲ್ಲಿಂಗಂ ಬ್ರಹ್ಮ ಶಾಶ್ವತಮ್ |

(ಸಿ.ಶಿ., ೬.೩೭)

ಉಪನಿಷತ್ತುಗಳು ಅದನ್ನೇ ಬ್ರಹ್ಮವೆಂದು ಕರೆಯುತ್ತಾರೆ :ʼʼಸರ್ವಂ ಖಲ್ವಿದಂ ಬ್ರಹ್ಮತಜ್ಜಲಾನ್ ಇತಿ ಶಾಂತ ಉಪಾಸೀತ’ (ಛಾಂ. ಉ., ೩.೧೪.೧)-ಇದೆಲ್ಲವೂ ಬ್ರಹ್ಮವಲ್ಲದೆ ಬೇರಲ್ಲ; ಎಲ್ಲವೂ ಅದರಿಂದ ಹುಟ್ಟುತ್ತದೆ (ತಜ್ಜಃ), ಎಲ್ಲವೂ ಅದರಲ್ಲಿ ಲೀನವಾಗುತ್ತದೆ (ತಲ್ಲಃ) ಮತ್ತು ಅದರಿಂದ ಉಸಿರಾಡುತ್ತದೆ. (ತದನ್) ಎಂದು ಶಾಂತವಾಗಿ ಇರುತ್ತಾನೆ. (ತೈ.ಉ., ೨.೧ ನ್ನೂ ನೋಡಿರಿ), ತ್ರಿವಿಧ ದೀಕ್ಷೆಗಳ ಮೂಲಕ  ಗುರುವು ಶಿಷ್ಯನಿಗೆ ಲಿಂಗತ್ರಯವನ್ನು ಅನುಗ್ರಹಿಸುತ್ತಾನೆ.

ತ್ರಿವಿಧ ದೀಕ್ಷೆ-ಲಿಂಗತ್ರಯ ಪ್ರಧಾನ :

ವೇಧಾದೀಕ್ಷಾ, ಮಾಂತ್ರಿದೀಕ್ಷಾ (ಮನುದೀಕ್ಷಾ) ಮತ್ತು ಕ್ರಿಯಾದೀಕ್ಷಾ ಎಂದು ದೀಕ್ಷೆ ಮೂರು ವಿಧ. ಇವುಗಳಲ್ಲಿ ಶಿಷ್ಯನ ಮಸ್ತಕದ ಮೇಲೆ ಇರಿಸಿದ ಶ್ರೀ ಗುರುವಿನ ಹಸ್ತದಿಂದ ಮತ್ತು ಏಕಾಗ್ರ ದೃಷ್ಟಿಯಿಂದ ಶಿಷ್ಯನಲ್ಲಿ ಆಗುವ ಶಿವಭಾವದ ವಿನಿವೇಶವು ವೇಧಾದೀಕ್ಷೆ, ಶ್ರೀಗುರುವಿನಿಂದ ಶಿವಪಂಚಾಕ್ಷರಿ ಮಂತ್ರೋಪದೇಶವು ಮಾಂತ್ತೀ ದೀಕ್ಷೆ  ಕೂಡಿದುದು, ಕ್ರಿಯಾ ಪ್ರಾಧಾನ್ಯವುಳ್ಳದ್ದು ಮಂಡಲ ರಚನೆ, ಕುಂಡ ಸ್ಥಾಪನೆ ಮುಂತಾದ ಕ್ರಿಯೆಗಳೊಂದಿಗೆ ಕ್ರಿಯಾದೀಕ್ಷೆ,  

ಗುರೋರಾಲೋಕಮಾತ್ರೇಣ ಹಸ್ತ ಮಸ್ತಕಯೋಗತಃ |

ಯಃ ಶಿವತ್ವಸಮಾವೇಶೋ ವೇಧಾದೀಕ್ಷೇತಿ ಸಾ ಮತಾ||

ಮಾಂತ್ರೀದೀಕ್ಷೇತಿ ಸಾ ಪ್ರೋಕ್ತಾ ಮಂತ್ರಮಾತ್ರೋಪದೇಶಿನೀ |

ಕುಂಡಮಂಡಲಿಕೋಪೇತಾ ಕ್ರಿಯಾದೀಕ್ಷಾ ಕ್ರಿಯೋತ್ತರಾ ||

(ಸಿ.ಶಿ., ೬.೧೩-೧೪) (ಕಾ.., ಕ್ರಿ.ಪಾ., ೧.೧೩-೧೪ನ್ನೂ ನೋಡಿ)

ಈ ಮೂರು ದೀಕ್ಷೆಗಳ ಮೂಲಕ ಶ್ರೀಗುರುವು ಕ್ರಮವಾಗಿ ಕಾರಣ, ಸೂಕ್ಷ್ಮ ಮತ್ತು ಸ್ಥೂಲ ಶರೀರಗಳಲ್ಲಿನ ಆಣವ, ಮಾಯೀಯ ಮತ್ತು ಕಾರ್ಮಿಕವೆಂಬ ಮೂರು ಮಲಗಳನ್ನು ನಾಶಮಾಡಿ ಭಾವಲಿಂಗ, ಪ್ರಾಣಲಿಂಗ ಮತ್ತು ಇಷ್ಟಲಿಂಗಗಳನ್ನು ಅನುಗ್ರಹಿಸುತ್ತಾನೆ. ಇದು ಈ ಮೂರು ದೀಕ್ಷೆಗಳ ಉದ್ದೇಶ ಮತ್ತು ಫಲ :

ತನುತ್ರಯಗತಾನಾದಿಮಲತ್ರಯಮಸೌ ಗುರುಃ |

ದೀಕ್ಷಾತ್ರಯೇಣ ಸಂದಹ್ಯ ಲಿಂಗತ್ರಯಮುಪಾದಿಶೇತ್ ||

(ಕಾ.ಆ., ಕ್ರಿ.ಪಾ. ೧.೧೦)

ಇಡೀ ದೀಕ್ಷಾ ಸಂಸ್ಕಾರದ ಉದ್ದೇಶವೆಂದರೆ ಕಾರಣ ಶರೀರದಲ್ಲಿ ಭಾವಲಿಂಗವನ್ನೂ, ಸೂಕ್ಷ್ಮ ಶರೀರದಲ್ಲಿ ಪ್ರಾಣಲಿಂಗವನ್ನೂ, ಸ್ಥೂಲ ಶರೀರದಲ್ಲಿ ಇಷ್ಟಲಿಂಗವನ್ನೂ ಅನುಗ್ರಹಿಸಿ, ಅವುಗಳ ಅನುಸಂಧಾನವನ್ನು (ಸೂಕ್ಷ್ಮವಾದ ಸಂಬಂಧವನ್ನು) ಏರ್ಪಡಿಸುವುದು.ʼʼಇಷ್ಟಪ್ರಾಣಭಾವೇಷು ಲಿಂಗಧಾರಣಂ ವದಂತಿʼ’ (ಲಿಂ.ಉ., ಅಪ್ರಕಟಿತ ಉಪನಿಷತ್ತುಗಳು, ಪು. ೩೧೧), ”ಸರ್ವದೇಹೇಷು ಲಿಂಗಧಾರಣಂ ಭವತಿ” (ಅದೇ), ಎಂಬ ಶ್ರುತಿ-ಸೂಕ್ತಿಗಳು.

ಇಷ್ಟಂ ಸ್ಥೂಲತನೋ ಪ್ರೋಕ್ತಂ ಪ್ರಾಣಂ ಸೂಕ್ಷ್ಮತನೋಃ ಸ್ಮೃತಮ್ |

ಭಾವಾಖ್ಯಂ ಕಾರಣಸ್ಯೈವಂ ತನುತ್ರಯಗತಂ ತ್ರಯಮ್ ||

(ಚಂ.ಆ., ಕ್ರಿ.ಪಾ., ೩.೪೫)

ಹಾಗೆಯೇ ʼʼಭಾವಪ್ರಾಣೇಷ್ಟ ಲಿಂಗಾನಿ ಪೂಜಯೇದೇಕ ಭಾವತಃ’ʼ (ಸೂ.ಆ., ಕ್ರಿ.ಪಾ., ೬.೪೪) ಮುಂತಾದ ಆಗಮವಾಕ್ಯಗಳ ಆಶಯದಂತೆ, ಲಿಂಗವೆಂದರೆ ಇಷ್ಟಲಿಂಗವಷ್ಟೇ ಅಲ್ಲ, ಇಷ್ಟ- ಪ್ರಾಣ- ಭಾವಲಿಂಗ-ಸಮನ್ವಯ. (Synthesis of Ista-Prana-Bhavalingas) ಹೀಗೆ ಒಂದೇ ಮೂರಾಯಿತು. ಮೂರೂ ಪೂಜೆಯ ಏಕಭಾವದಲ್ಲಿ ಒಂದಾಯಿತು. ಅಂತಹ ಶ್ರೀಗುರು ಕೊಟ್ಟ ಪರವಸ್ತುವು ಪರಶಿವ ಸ್ವರೂಪವೇ ಹೊರತು ಸಂಕೇತವಲ್ಲ.

ಇಷ್ಟಲಿಂಗ-ಚಿತ್ಕಲಾಸಮಾವೇಶ :

ಇನ್ನೊಂದು ದೃಷ್ಟಿಯಿಂದ ನೋಡುವುದಾದರೆ ಅದು ಸಾಧಕನ ಚಿತ್ಕಲಾ ಸ್ವರೂಪವೇ ಆಗಿದೆ. ಹೇಗೆಂದರೆ, ಶ್ರೀಗುರುವು ಇಷ್ಟಲಿಂಗ ಸಂಸ್ಕಾರವನ್ನು ಮಾಡಿ ಹಸ್ತದಲ್ಲಿ ಅದನ್ನು ಸ್ಥಾಪಿಸಿ, ಶಿಷ್ಯನ ಮಸ್ತಕದಲ್ಲಿನ ಚಿತ್ಕಲೆಯನ್ನು (ಚಿತ್=ಜ್ಞಾನ, ಅರಿವು; ಅದರ ಕಲೆಯೆಂದರೆ, ಅಂಶ; ಅವನ ಅರಿವಿನ ಅಂಶವನ್ನು) ತನ್ನ ದೃಷ್ಟಿಯಿಂದ ಆಕರ್ಷಿಸಿ ಆ ಲಿಂಗದಲ್ಲಿ ಸಮಾವೇಶಗೊಳಿಸುತ್ತಾನೆ. ಆಮೇಲೆ ಅದನ್ನು ಶಿಷ್ಯನ ಹಸ್ತದಲ್ಲಿ ಇರಿಸುತ್ತಾನೆ. ಆ ಚಿತ್ಕಲೆಗೆ ಶಿವಕಲೆಯೆಂದೂ ಹೆಸರು

 ಜಲಕುಂಭಾಗ್ರಸದ್ ವ್ಯಾಪ್ತತೈಲಬಿಂದುರ್ಯಥಾ ತಥಾ |

ದೇಹ ಪ್ರಾಣಾತ್ಮಸುವ್ಯಾಪ್ತ ಸಂಸ್ಥಿತಾ ಶಾಂಭವೀ ಕಲಾ

ಜ್ವಲತ್ ಕಾಲಾನಲಾಭಾಸಾ ತಟಿತ್‌ ಕೋಟಿಸಮಪ್ರಭಾ |

ಸ್ಯೋರ್ಧ್ವೇ ತು ಶಿಖಾ ಸೂಕ್ಷ್ಮಾ ಚಿದ್ರೂಪಾ ಪರಮಾ ಕಲಾ

ಯಾ ಕಲಾ ಪರಮಾ ಸೂಕ್ಷ್ಮಾತತ್ವಾನಾಂ ಬೋಧೀನೀ ಪರಾ |

ತಾಮಾಕೃಷ್ಯ ಯಥಾನ್ಯಾಯಂ ಲಿಂಗೇ ಸಮುಪವೇಶಯೇತ್ ||

(ಕಾ.., ಕ್ರಿ.ಪಾ., ೧. ೧೨೨-೧೨೪)

“ನೀರಿನ ಕುಂಭದ ಮೇಲಿನ ಭಾಗವನ್ನು ಎಣ್ಣೆಯ ಹನಿಗಳು ವ್ಯಾಪಿಸಿದಂತೆ ದೇಹ ಪ್ರಾಣ ಆತ್ಮಗಳನ್ನು ವ್ಯಾಪಿಸಿ ನಿಂತಿದೆ ಶಿವಕಲೆ. ಅದು ಉರಿಯುವ ಕಾಲಾಗ್ನಿಯ ಹೊಳಪುಳ್ಳದ್ದು, ಕೋಟಿ ಮಿಂಚಿನ ಪ್ರಕಾಶವುಳ್ಳದ್ದು. ಅದರ ಮೇಲಿನ ಭಾಗದಲ್ಲಿ ಸೂಕ್ಷ್ಮಶಿಖೆ, ಚಿತ್‌ ಸ್ವರೂಪದ ಶ್ರೇಷ್ಠ ಕಲೆಯಿದೆ. ಆ ಶ್ರೇಷ್ಠ ಸೂಕ್ಷ್ಮ ಕಲೆಯು ತತ್ತ್ವಗಳ ಜ್ಞಾನದಾಯಿನಿ. ಅದನ್ನು ಸರಿಯಾದ ರೀತಿಯಲ್ಲಿ ಆಕರ್ಷಿಸಿ ಲಿಂಗದಲ್ಲಿ ಲಯಗೊಳಿಸಬೇಕು”. ಹಿಂದೆ ಹೇಳಿದ ಕ್ರಮವನ್ನು ಅದೇ ಶೈವಾಗಮವು ಮೊದಲೇ ಸ್ಪಷ್ಟಪಡಿಸಿದೆ :

ಶೈವೀಂ ಕಲಾಂ ಸ್ವಮನಸಾ ವಿಭಾವ್ಯ ಚ ತತಃಪರಮ್ |

ದೃಷ್ಟಾವಾನೀಯ ಚ ತಯಾ ಶಿಷ್ಯವಾಮಕರಸ್ಥಿತೇ |

ಲಿಂಗೇ ನಿವೇಶಯೇತ್ ಕ್ಷಿಪ್ರಂ ಮೂಲಮಂತ್ರಮನುಸ್ಮರನ್ ||

(ಕಾ.ಅ., ಕ್ರಿ.ಪಾ. ೧.೧೨೦)

“ಆ ಶಿವಕಲೆಯನ್ನು (ಶ್ರೀಗುರುವು) ತನ್ನ ಮನಸ್ಸಿನಲ್ಲಿ ಮೂಡಿಸಿಕೊಂಡು ಆನಂತರ ತನ್ನ ದೃಷ್ಟಿಯಲ್ಲಿ ಸೆಳೆದುಕೊಂಡು ಅದರಿಂದ (ದೃಷ್ಟಿಯ ಮೂಲಕ) ಶಿಷ್ಯನ ಎಡಗೈಯಲ್ಲಿರಿಸಿದ ಲಿಂಗದಲ್ಲಿ ಅದನ್ನು ಶಿವಕಲೆಯನ್ನು, ಚಿತ್ಕಲೆಯನ್ನು ಕ್ಷಿಪ್ರವಾಗಿ ಮೂಲಮಂತ್ರವನ್ನು (ಶಿವಪಂಚಾಕ್ಷರಿಯನ್ನು) ಸ್ಮರಿಸುತ್ತಾ ಸಮಾವೇಶಗೊಳಿಸಬೇಕುʼ’. ಅಂತಹ ಲಿಂಗವನ್ನು ಪ್ರಾಣಲಿಂಗವೆಂದು ಭಾವಿಸಿ ಪ್ರಾಣಕ್ಕಿಂತಲೂ ಹೆಚ್ಚು ಎಂಬಂತೆ ರಕ್ಷಿಸಿಕೊಂಡು ಪೂಜಿಸಬೇಕು. ತನ್ನ ಚಿತ್ಕಲಾಯುಕ್ತಲಿಂಗವನ್ನು ಶಿಷ್ಯನು ಸರ್ವದಾ ತನ್ನ ದೇಹದ ಮೇಲೆ ಧರಿಸಿಕೊಳ್ಳಬೇಕು ಎಂಬುದು ಶ್ರೀಗುರುವಿನ ಕಟ್ಟಳೆ. (ನೋಡಿ-ಸಿ.ಶಿ., ೬.೨೬), ಹಾಗೆ ಚಿತ್ಕಲಾಯುಕ್ತ ಶಿವಕಲಾಯುಕ್ತ ತನ್ನ ಇಷ್ಟಲಿಂಗವನ್ನು ಸಾಧಕನು ಶಿವನ ಸ್ವರೂಪವೇ ಎಂದು ತಿಳಿಯದೆ, ಕೇವಲ ಸಂಕೇತವೆಂದು ತಿಳಿಯುವುದು ಹೇಗೆ ಸಾಧ್ಯ ?

ಚಿತ್ಕಲೆ-ಶಿವಕಲೆ :

ಶಿಷ್ಯನ ಮಸ್ತಕಸ್ಥಿತ ಚಿತ್ಕಲೆಯನ್ನು ಶಿವಕಲೆಯೆಂದು ಕರೆಯುವುದರ ಹಿನ್ನೆಲೆಯನ್ನು ತಿಳಿದರೆ ಇಷ್ಟಲಿಂಗ ಪರಿಕಲ್ಪನೆಯ ಮೂಲಭೂತ ವಿಚಾರವನ್ನು ತಿಳಿದಂತಾಗುತ್ತದೆ. ಇಲ್ಲಿ ಮತ್ತೆ ಸ್ಮರಿಸಿಕೊಳ್ಳೋಣ. ಪರಮಾತ್ಮನ ಅಂಶ ಜೀವಾತ್ಮವೆಂದು ಹಿಂದೆ ಹೇಳಿದ್ದನ್ನು ಈ ವಿಚಾರದ ಸುಂದರ ನಿರೂಪಣೆಯನ್ನು ಇಲ್ಲಿ ಕಾಣಬಹುದು :

ಚಂದ್ರಕಾಂತೇ ಯಥಾ ತೋಯಂ ಸೂರ್ಯಕಾಂತೇ ಯಥಾ Sನಲಃ |

ಬೀಜೇ ಯಥಾಂಕರಃ ಸಿದ್ಧಸ್ತಥಾತ್ಮನಿ ಶಿವಃ ಸ್ಥಿತಃ ||

(ಸಿ.ಶಿ., ೫.೩೬)

“ಚಂದ್ರಕಾಂತ ಶಿಲೆಯಲ್ಲಿ ನೀರು, ಸೂರ್ಯಕಾಂತ ಶಿಲೆಯಲ್ಲಿ ಬೆಂಕಿ, ಬೀಜದಲ್ಲಿ ಮೊಳಕೆ ಇದ್ದಂತೆ, ಆತ್ಮದಲ್ಲಿ ಶಿವನು ಇದ್ದಾನೆ”. ಶಿವನು ಇದ್ದಾನೆ ಶಿವನ ಅಂಶವಿದೆ. ಆತ್ಮವೇ ಶಿವನ ಅಂಶ. ಅದೇ ಶಿವಕಲೆ. ಅದನ್ನು ಆವಾಹಿಸಿ ಇಷ್ಟಲಿಂಗದಲ್ಲಿ ನೆಲೆಗೊಳಿಸಿದಾಗ ಅದು ಕಲ್ಲಿನ ಲಿಂಗವಾಗಿ ಉಳಿಯದೆ  ಚಿಲ್ಲಿಂಗವಾಗುತ್ತದೆ. ಅದನ್ನು (ಲಿಂಗತ್ರಯ ಸಮನ್ವಯವನ್ನು) ಪೂಜಿಸುತ್ತಾ ಭಕ್ತಿಯ ವಿಕಾಸವನ್ನು ಸಾಧಿಸಿಕೊಂಡರೆ ಸಾಧಕ ತನ್ನಾತ್ಮವನ್ನೇ ಲಿಂಗವೆಂದು ಅರಿತು ಬೆರೆತು ಬೇರಾಗದಂತಿರುತ್ತಾನೆ. ತನ್ನಾತ್ಮವನ್ನು ಬಿಟ್ಟು ಹೊರಗೆಲ್ಲಿದ್ದಾನೆ ಶಿವ, ಹೊರಗೆಲ್ಲಿದೆ ಲಿಂಗ ? ಕಠೋಪನಿಷತ್ತು ಹೇಳುವಂತೆ (ಯಥಾದರ್ಶೇ ತಥಾತ್ಮನಿ’) ಆತ್ಮನಲ್ಲಿ ಪರಮಾತ್ಮನ ದರ್ಶನ ಎಂದರೆ ಆತ್ಮನೇ ಪರಮಾತ್ಮನೆಂಬ ಸಾಕ್ಷಾತ್ಕಾರ, ಕನ್ನಡಿಯಲ್ಲಿ ಹೇಗೋ ಹಾಗೆ ಸ್ಪಷ್ಟ. ಆದ್ದರಿಂದ ಈ ದೇಹ ಬಿದ್ದು ಹೋಗುವ ಮೊದಲೇ ಆತ್ಮದರ್ಶನ ಮಾಡಿಕೊಳ್ಳಿ. “ಹೊತ್ತು ಹೋದ ಬಳಿಕ ನಿಮ್ಮನ್ನಾರು ಬಲ್ಲರು ??”

ಸಂಕೇತ ಸೂಚಿ

ಅನು. ಸೂ……. ಅನುಭವಸೂತ್ರ

ಕಠ….. ಕಠೋಪನಿಷತ್

ಕಾ.ಆ……. ಕಾರಣಾಗಮ

 ಕ್ರಿ.ಪಾ……. ಕ್ರಿಯಾಪಾದ

ಚಂ.ಅ……… ಚ೦ದ್ರಜ್ಞಾನಾಗಮ

ಛಾಂ.ಉ……. ಛಾಂದೋಗ್ಯೋಪನಿಷತ್

ತೈ. ಉ……. ತೈತ್ತಿರೀಯೋಪನಿಷತ್

ಲಿಂ. ಉ…… ಲಿಂಗೋಪನಿಷತ್

ಸಿ.ಶಿ…. ಶ್ರೀ ಸಿದ್ಧಾಂತ ಶಿಖಾಮಣಿ

ಸೂ.ಆ….. ಸೂಕ್ಷ್ಮಾ ಗಮ

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಭ್ರೂಮಧ್ಯಾಜ್ಞೇಯ ನಿ | ಸ್ಸೀಮ ಪರಬ್ರಹ್ಮವನು

ನೇಮಿಸುತಲೆನ್ನವಾಮ ಹಸ್ತದೊಳಿತ್ತ

ಸ್ವಾಮಿ ಶ್ರೀಗುರುವೆ ಕೃಪೆಯಾಗು    ||೮೬||

ಎರಡು ಹುಬ್ಬುಗಳ ಮಧ್ಯಸ್ಥಾನವೇ ಭ್ರೂಮಧ್ಯ. ಹಿಂದೆ ಅದಕ್ಕೆ ಹುಬ್ಬಳ್ಳಿ ಪೇಟೆಯೆಂಬುದಾಗಿ ತಾತ್ತ್ವಿಕವಾಗಿ ವರ್ಣಿಸಲಾಗಿದೆ. ಈ ಭ್ರೂಮಧ್ಯದಲ್ಲಿರುವದು ಆಜ್ಞೇಯಚಕ್ರ. ಇದಕ್ಕೆ ಆಜ್ಞಾಚಕ್ರವೆಂತಲೂ ಹೆಸರು. ಭ್ರೂಮಧ್ಯಕ್ಕೆ ತ್ರಿಕೂಟವೆಂತಲೂ ಇನ್ನೊಂದು ನಾಮವುಂಟು. ಇಲ್ಲಿ ಈಡಾ ಪಿಂಗಳಾ ಮತ್ತು ಸುಷುಮ್ನಾ ನಾಡಿಗಳ ಕೂಟವಿರುವದರಿಂದ ತ್ರಿಕೂಟವೆನಿಸಿದೆ. ʼʼಶಿವಯೋಗ ಪ್ರದೀಪಿಕೆʼ’ಯ ಟೀಕಾಕಾರರು

ಇಡಾ ವಹತಿ ವಾಮೇ ಚ ಪಿಂಗಳಾ ಯಾತಿ ದಕ್ಷಿಣೇ

ಇಡಾ ಪಿಂಗಳಯೋರ್ಮ ಧ್ಯೆ ಸುಷುಮ್ನಾ ಸುಖರೂಪಿಣೀ ||”

ಎಂದು ಪ್ರತಿಪಾದಿಸಿದ್ದಾರೆ. ಇಂಥ ಭ್ರೂಮಧ್ಯದ ಆಜ್ಞಾಚಕ್ರದಲ್ಲಿರುವ ಬ್ರಹ್ಮನು ನಿಸ್ಸೀಮನು. ಇವನಿಗೆ ಸೀಮೆಯೆಂಬುದಿಲ್ಲ. ಅವನು ಅತ್ಯತಿಷ್ಠದ್ದಶಾಂಗುಲ” ನೆನಿಸಿದ್ದಾನೆ. ಇಲ್ಲಿ ಐಕ್ಯನೇ ಅಂಗನು. ನಿಸ್ಸೀಮಬ್ರಹ್ಮನೇ ಮಹಾಲಿಂಗನು. ಭಕ್ತನು ಆಧಾರಾದಿ ಚಕ್ರಗಳಿಂದ ಮೇಲೆರುತ್ತ ಆಜ್ಞಾಚಕ್ರದಲ್ಲಿ ಮಹಾಲಿಂಗವನ್ನು ಕಂಡು ಮಹಾಲಿಂಗವೇ ತಾನಾಗಿ ಬ್ರಹ್ಮರಂದ್ರದ ನಿಷ್ಕಳಬ್ರಹ್ಮನಲ್ಲಿ ಆನಂದಿಸುವ ಸ್ಥಿತಿಯೇ ಸಮಾಧಿಸ್ಥಿತಿಯೆನಿಸುವದು. ಈ ಭ್ರೂಮಧ್ಯದ ಆಜ್ಞಾಚಕ್ರದ ಸ್ಪಷ್ಟವಾದ ವಿವರವನ್ನು “ಉದ್ಧರಣೆಯ ವಾಚ್ಯ”ದಲ್ಲಿ ಅವಲೋಕಿಸಿ –

ಭ್ರೂಮಧ್ಯದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ,

ಆ ಭೂತತಮಂಧಕಾರ, ದ್ವಿದಳಪದ್ಮ, ಆ ಪದ್ಮ ಅನಂತೆಳೆ

ಮಿಂಚಿನವರ್ಣ, ಆ ದಳದಲ್ಲಿ ‘ಹಂಸ’ (ಹಂಕ್ಷಂ) ಎಂಬೆರಡಕ್ಷರ

ಆ ಕರ್ಣಿಕಾಮಧ್ಯದಲ್ಲಿ ಓಂಕಾರವೆಂಬ ಬೀಜಾಕ್ಷರ

ಆ ಓಂಕಾರ ಅನಂತ ಬೀಜಾಕ್ಷರಂಗಳನೊಳಕೊಂಡಿಹುದು

ನಾದಬಿಂದು-ಕಲೆಗಳಿಗೆ ಆಶ್ರಯವಾಗಿಹುದು

ತತ್ಪದ, ತ್ವಂಪದ, ಅಸಿಪದವೆಂಬಿವನೊಳಕೊಂಡು

ಭ್ರೂಮಧ್ಯದಲ್ಲಿ ಉತ್ತುಂಗ ಕಿರಣರಾಶಿಯೆಂಬ

ತೇಜೋವರ್ಧನಕ್ಕೆ ತಾನೆಯಾಗಿಹುದು.

ಅದು ಪ್ರಣವನಾದ, ಅಲ್ಲಿ ಮಹಾಲಿಂಗ

ಅದಕ್ಕೆ ಪಾತಾಳದಿಕ್ಕನುಳ್ಳ ಹೃದಯವೆಂಬ ಮುಖ

ಶಾಂತ್ಯತೀತೋತ್ತರ ಕಲಾಪರ್ಯಾಯನಾಮವನುಳ್ಳ ಚಿಚ್ಛಕ್ತಿ.

ಆ ಶಕ್ತಿಗೆ ಮಹಾಘನ ಬೆಳಗಿನ ಜ್ಯೋತಿವರ್ಣ

ಅಲ್ಲಿ ನಿರ್ಮುಕ್ತ ಸಾದಾಖ್ಯ ನಿರಾಳವೆಂಬ ಸಂಜ್ಞೆ ಗಂಭೀರದಿಕ್ಕು

ಅಲ್ಲಿ ಅಜಪೇಯನುಚ್ಚರಿಸುತ್ತ ಸದ್ಭಾವವೆಂಬ ಹಸ್ತದಿಂ

ಸುತೃಪ್ತಿದ್ರವ್ಯವನು ಹೃದಯವೆಂಬ ಮುಖಕ್ಕೆ

ಸಮರಸ ಭಕ್ತಿಯಿಂದರ್ಪಿಸುವಳಾ ಶಕ್ತಿ.

ಪರಶಿವ ಪೂಜಾರಿ, ಶಕ್ತಿಡಾಕಿನಿ, ಮಹಾಶ್ರೀಗುರು ಅಧಿದೇವತೆ

ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು ಓಂಕಾರವೆಂಬಬೀಜಾಕ್ಷರ

ಅದು ಪ್ರಣವದ ಜ್ಯೋತಿರಾಕೃತಿಯೊಳಿಹುದು

ಓಂ ಓಂ ಓಂ ಓಂ ಓಂ ಓಂ ಎಂಬ ಬ್ರಹ್ಮಾನಾದಮಂತ್ರ ಮೂರ್ತಿ

ಪ್ರಣವಕ್ಕೆ ನಮಸ್ಕಾರವು.

ಸದ್ಗುರುವು ಈ ಅಜ್ಞಾಚಕ್ರದ ನಿಸ್ಸೀಮಬ್ರಹ್ಮನನ್ನು ಮಹಾಲಿಂಗವನ್ನಾಗಿ ಕರದಿಷ್ಟಲಿಂಗದಲ್ಲಿ ಎರಕಗೊಳಿಸುವನು. ಮಹಾಲಿಂಗವನ್ನು ಆರಾಧಿಸುವ ಐಕ್ಯನು ಸಕಲ ಪದಾರ್ಥಗಳ ತೃಪ್ತಿಯನ್ನು ಸಂತೃಪ್ತಿ ಪ್ರಸಾದವನ್ನಾಗಿಸಿ ಮಹಾಲಿಂಗದ ಸಮರಸದಲ್ಲಿ ಸವಿದು ಬೆರೆದೇಕಮಯನಾಗುವನು. ಇಂಥ ಸಂತೃಪ್ತಿಗೆ ಕಾರಣವಾದ ನಿಸ್ಸೀಮಬ್ರಹ್ಮವನ್ನು ಅಜ್ಞಾಚಕ್ರದಿಂದ ಹೊರತೆಗೆದು ಇಷ್ಟಲಿಂಗದಲ್ಲಿಯೇ ಮಹಾಲಿಂಗವನ್ನಾಗಿ ಕರುಣಿಸಿದ ಶ್ರೀಗುರು ಎನ್ನ ಮಹಾಸ್ವಾಮಿಯೆನಿಸಿದ್ದಾನೆ. ಸರ್ವತಂತ್ರ ಸ್ವತಂತ್ರ ಸ್ವಾಮಿತ್ವ ಅಥವಾ ಪ್ರಭುತ್ವವನ್ನು ಪಡೆದ ನಿರಾಭಾರಿ ಗುರುಪುಂಗವನೆನಿಸಿದ್ದಾನೆ.

ಮಾನಿತ ಶ್ರೀಕಂಠ | ಸ್ಥಾನ ವಿಶುದ್ಧಿಯ ವಿ

ಜ್ಞಾನ ಬ್ರಹ್ಮವನುನೀನೊಲಿದು ಕರಕೆ ಕೊ

ಟ್ಟಾನೈಜ ಗುರುವೆ ಕೃಪೆಯಾಗು   ||೮೭ ||

ಮಾನವನ ದೇಹದಲ್ಲಿ ಕಂಠವು ಸುಂದರವಾದ ಅವಯವಾಬಗಿದೆ. ಇದಕ್ಕೆ ಎಲುವಿನ ಆಸರವಿಲ್ಲ. ಕೇವಲ ಸ್ನಾಯುಗಳಿಂದ ಸಂಯೋಜಿತವಾಗಿದೆ. ಶರೀರದ ರುಂಡ-ಮುಂಡಗಳನ್ನು ಒಂದುಗೂಡಿಸಿದೆ ಕಂಠ, ಈ ಕಂಠವು ಜ್ಞಾನೇಂದ್ರಿಗಳ ಕಾರ್ಯಕ್ಕೆ ಅತ್ಯಂತ ಸಹಕಾರಿಯಾಗಿದೆ. ಅದರ ಶ್ರೇಷ್ಠತೆಯನ್ನರಿತ ಶಿವಕವಿಯು ಕಂಠಕ್ಕೆ ಶ್ರೀಕಂಠವೆಂದು ಕರೆದಿದ್ದಾನೆ. ಕಂಠವು ಶರೀರದಲ್ಲಿ ಸುಂದರಾಂಗವೆನಿಸಿದಂತೆ ಮಹತ್ವಯುತವೂ ಆಗಿದೆ. ಬ್ರಹ್ಮರಚನೆಯ ಸೊಬಗು ಕಂಠದಿಂದ ಮೇಲೆಯೇ ವ್ಯಕ್ತವಾಗುತ್ತದೆ. ಪಂಚಜ್ಞಾನೇಂದ್ರಿಯಗಳು, ಮೂಲಬ್ರಹ್ಮಸ್ಥಾನವೆನಿಸಿದ ಪಶ್ಚಿಮಚಕ್ರ, ಶಿಖಾಚಕ್ರ, ಬ್ರಹ್ಮರಂಧ ಹಾಗೂ ಆಜ್ಞಾಚಕ್ರಗಳು ಕಂಠದ ಮೇಲ್ಬಾಗದಲ್ಲಿಯೇ ಇವೆ.

 ವೈಖರೀವಾಣಿಯ ಉಗಮಸ್ಥಾನವೂ ಕಂಠವಾಗಿದೆ. ಈ ಕಂಠದಲ್ಲಿರುವದು ವಿಶುದ್ಧಿ ಚಕ್ರವು. ಕಂಠವು ಸ್ವರಗಳ ಹಾಗೂ ಧ್ವನಿಗಳ ಪೆಟ್ಟಿಗೆಯೆಂದು ಭಾಷಾ ವಿಜ್ಞಾನಿಗಳು ಬರೆದಿದ್ದಾರೆ. ಕಂಠವಿದು ನಾದಬ್ರಹ್ಮನ ವ್ಯಕ್ತಸ್ಥಾನ. ನಾದವನ್ನು ಸುನಾದವನ್ನಾಗಿ ತೋರುವ ಸ್ಥಾನವೂ ಇದುವೆ. ಸಂಗೀತಸರಸ್ವತಿಗೆ ಆಶ್ರಯಸ್ಥಾನ, ಮತ್ತು ಕಂಠವು ಜೀವನದ ಬೇವು-ಬೆಲ್ಲ (ಕಹಿ-ಸಿಹಿ)ಗಳನ್ನು ನುಂಗವ ಸ್ಥಾನ. ಜೀವನದಲ್ಲಿ ಸುಖ-ದುಃಖಗಳನ್ನು ಸಹಿಸುವದು ಕಂಠ. ಸಮುದ್ರ ಮಂಥನದ ಕಾಲಕ್ಕೆ ಪ್ರಾದುರ್ಭವಿಸಿದ ಘೋರ ವಿಷವನ್ನು ಕಂಠದಲ್ಲಿರಿಸಿಕೊಂಡು ಶಿವನು ನೀಲಕಂಠ ನಾದನು. ಜೀವನದಲ್ಲಿ ಸಂಸಾರದ ಎಂಥ ಸಮಸ್ಯೆಗಳನ್ನಾದರೂ ತಾಳಿಕೊಂಡಿರೆಂತಲೂ ಪತಿಯ ಸೌಭಾಗ್ಯದ ಚಿನ್ಹವೆನಿಸಿದ ತಾಳಿಯನ್ನು ಸತಿಗೆ ಕಟ್ಟುವದು ಕಂಠಕ್ಕಲ್ಲವೆ!

 ಜೀವನಾವಶ್ಯಕವಾದ ಲಾಲಾರಸ (ದುಗ್ದರಸ) ಗ್ರಂಥಿಗಳು ಕಂಠದಲ್ಲಿಯೇ ಇರುತ್ತವೆ. ಈ ಗ್ರಂಥಿಗಳಿಗೆ ʼʼಪಿಟ್ಯುಟರಿ ಥೈರಾಯಿಡ್” ಮತ್ತು ‘ಪ್ಯಾರಾಥೈರಾಯಿಡ್ʼ ಎಂದೂ ಕರೆಯುತ್ತಾರೆ. ಸರ್ವಗ್ರಂಥಿ ನಿಯಂತ್ರಕವೆನಿಸಿಕೊಂಡಿರುವ ಪಿಟ್ಯುಟ ಗ್ರಂಥಿಯು ಎಲ್ಲ ಗ್ರಂಥಿಗಳ ಕ್ರಿಯೆಗಳ ಮೇಲೆ ಹತೋಟಿಯಿದೆʼ’ ಮತ್ತು ಮನುಷ್ಯನ ವ್ಯಕ್ತಿತ್ವ ನಿರ್ಧರಿಸುವದು ನಿರ್ನಾಳ (ಪಿಟ್ಯುಟರಿ) ಗ್ರಂಥಿಗಳೆಂಬುದು ಆಶ್ಚರ್ಯವೆನಿಸಿದರೂ ಸತ್ಯ”ವೆ೦ದು ವೈದ್ಯರು ಅನುಭವದಿಂದ ಈ ಮಾತನ್ನು ಬರೆದಿದ್ದಾರೆ. ಅಂದಮೇಲೆ ವಿವಿಧ ರೀತಿಯಲ್ಲಿ ಮಹತ್ವವೆನಿಸಿದ ಈ ಕಂಠವು ಶ್ರೀಕಂಠವಲ್ಲವೆ ! ಇಂಥ ಮನ್ನಣೆವೆತ್ತ ಶ್ರೀಕಂಠದಲ್ಲಿರುವುದು ವಿಶುದ್ಧಿ ಚಕ್ರವು, ಈ ಚಕ್ರ ಪರಿಶುದ್ಧವಾಗಿರುವದರಿಂದಲೆ ವಿಶುದ್ಧಿಯೆನಿಸಿದೆ.

ಶ್ರೀಕಂಠದಲ್ಲಿಯ ವಿಶುದ್ಧಿ ಚಕ್ರದಲ್ಲಿರುವ ಬ್ರಹ್ಮವಸ್ತವು ವಿಜ್ಞಾನಬ್ರಹ್ಮನೆನಿಸಿದ್ದಾನೆ. ವಿಶುದ್ಧತೆಯಲ್ಲಿರುವುದು ವಿಜ್ಞಾನ, ವಿಶುದ್ಧಿಗೆ ಆಧಾರವಾದ ಕಂಠವು ಪರಿಶುದ್ಧವಾಗಿದ್ದರೆ ನಾದವಿಜ್ಞಾನ ಯಥಾರ್ಥವಾಗುವದು. ಕಂಠವು ಅಶುದ್ಧವಾದರೆ ಸ್ವರ ಸಂಯೋಗ ವಿಕೃತವಾಗುವದು. ನಾದವು ಕಠೋರ-ಕರ್ಕಶವೆನಿಸುವದು. ಕಾರಣ ವಿಶುದ್ಧವಾದ ಪದ್ಮದಲ್ಲಿರುವ ಪರಶಿವನು ವಿಜ್ಞಾನಮಯನು. ಇವೆರಡರಲ್ಲಿ ಅದೆಂತಹ ಸಾಮ್ಯ ! ತತ್ತ್ವಜ್ಞಾನಿಗಳ ಪರಿಶೋಧನೆ ಅದ್ಭುತವಾದುದು ಅನುಪಮವಾದುದು.  ಇಂಥ ವಿಜ್ಞಾನಬ್ರಹ್ಮವನ್ನು ಗುರುವು ಪ್ರಸಾದಲಿಂಗವನ್ನಾಗಿ ಕರದಿಷ್ಟ ಲಿಂಗದಲ್ಲಿಯೇ ಬೆರೆಯಿಸುತ್ತಾನೆ.

ಸಿಹಿಕಹಿಗಳ ಅನುಭವವನ್ನು ಕಂಠಸ್ಥಾನದ ಶಬ್ದ ದ್ರವ್ಯಗಳನ್ನು ಪ್ರಸಾದಗೊಳಿಸಿ ಪ್ರಸಾದಲಿಂಗಕ್ಕರ್ಪಿಸುವ ಮಹಾನುಭಾವನು ಶರಣನಾಗಿದ್ದಾನೆ. ಶ್ರೀಕಂಠದ ಮುಖಾಂತರ ಕಾರ್ಯವನ್ನು ಪ್ರವೇಶಿಸುವ ಪಡಿಪದಾರ್ಥಗಳಲ್ಲಿ ಪ್ರಾಸಾದಿಕ ಶಕ್ತಿಯನ್ನು ತುಂಬಬಲ್ಲವನೇ ಶರಣನು. ಕಾಯವನ್ನೇ ಪ್ರಸಾದಮಯನಾಗಿಸುವನು ಶರಣನು. ಈ ವಿಶುದ್ಧಿ ಚಕ್ರದ ವಿಶೇಷ ವಿಚಾರವನ್ನು ʼʼಉದ್ಧರಣೆಯ ವಾಚ್ಯʼʼ ದಿಂದ ಅಳವಡಿಸಿಕೊಳ್ಳಿ –

ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ ಆಕಾಶವೆಂಬ ಮಹಾಭೂತ.

ಆ ಭೂತ ಕೃಷ್ಣ (ನೀಲ) ವರ್ಣ, ವರ್ತುಳಾಕಾರ.

ಷೋಡಶದಳ ಪದ್ಮ, ಆ ಪದ್ಮ ನೀಲವರ್ಣ.

ಆ ದಳದಲ್ಲಿ ಅ, ಆ, ಇ, ಈ, ಉ, ಊ, ಋ, ಋ, ಲೈ

ಲೈ, ಏ, ಐ, ಓ, ಔ, ಅಂ, ಅ ಎಂಬ ಹದಿನಾರಕ್ಷರ,

ಆ ಕರ್ಣಿಕಾ ಮಧ್ಯದಲ್ಲಿಯ ಕಾರವೆಂಬ ಬೀಜಾಕ್ಷರ

ಆ ಯಕಾರ ನೀಲವರ್ಣ. ಅದು ಮೇಘಧ್ವನಿ.

ಅಲ್ಲಿ ಪ್ರಸಾದಲಿಂಗ, ಅದಕ್ಕೆ ನೀಲವರ್ಣವನುಳ್ಳ ಈಶಾನ್ಯಮುಖ.

ಶಾಂತ್ಯತೀತ ಕಲಾಪರ್ಯಾಯ ನಾಮವನುಳ್ಳ ಪರಾಶಕ್ತಿ,

ಆ ಶಕ್ತಿ ನೀಲವರ್ಣ, ಅಲ್ಲಿ ಶಿವಸಾದಾಖ್ಯಪರವೆಂಬ ಸಂಜ್ಞೆ.

ಊರ್ಧ್ವದಿಕ್ಕು. ಶಿವಗಾಯತ್ರಿವೇದವನುಚ್ಚರಿಸುತ್ತ

ಸುಜ್ಞಾನಹಸ್ತದಿಂ ಸುಶಬ್ದದ್ರವ್ಯವನ್ನು ಶ್ರೋತ್ರವೆಂಬ

ಮುಖಕ್ಕೆ ಆನಂದ ಭಕ್ತಿಯಿಂದ ಅರ್ಪಿಸುವಳಾ ಶಕ್ತಿ.

 ಸದಾಶಿವ ಪೂಜಾರಿ. ಆ ಶಕ್ತಿ ತಾಕಿನಿ.

ಮಹಾದೇವ (ಸದಾಶಿವ) ನದಿ ದೇವತೆ. ಇಂತಿವೆಲ್ಲಕ್ಕೂ

ಮಾತೃಸ್ಥಾನವಾಗಿಹುದು ಯ ಕಾರವೆಂಬ ಬೀಜಾಕ್ಷರ

ಅದು ಪ್ರಣವದರ್ಪಣಾಕೃತಿಯಲ್ಲಿಹುದು.

ಓಂ ಓಂ ಓಂ ಯಾಂ ಯಾಂ ಎಂಬ ಬ್ರಹ್ಮನಾದ

ಮಂತ್ರಮೂರ್ತಿ ಪ್ರಣವಕ್ಕೆ ನಮಸ್ಕಾರವು.

ಇದು ವಿಶುದ್ಧಿಚಕ್ರ, ಶರಣಸ್ಥಲ.

ಈ ವ್ಯಾಖ್ಯೆಯಿಂದ ವಿಜ್ಞಾನಬ್ರಹ್ಮ ಹಾಗೂ ವಿಶುದ್ಧಿ ಚಕ್ರದ ಸ್ವರೂಪವು ವೇದ್ಯವಾಗುವದು. ಇಂಥ ವಿಜ್ಞಾನಬ್ರಹ್ಮವನ್ನು ನೈಜವಾಗಿ ಪ್ರಸಾದಲಿಂಗವನ್ನಾಗಿ ಕರುಣಿಸುವವನು ಶ್ರೀಗುರುವು. ಅವನಿಗೆ ಇದರಲ್ಲಿ ಅಸ್ವಾಭಾವಿಕತೆಯೆಂಬುದು ಇಲ್ಲವೇ ಇಲ್ಲ.

ಕುಂದದಾ ಸದುಹೃದಯ | ಮಂದಿರದನಾಹತಾ-

ನಂದಬ್ರಹ್ಮವನು-ತಂದೆನ್ನ ಕರಕಿತ್ತ

ತಂದೆ ಶ್ರೀಗುರುವೆ ಕೃಪೆಯಾಗು    ೮೮ |

ನ್ಯೂನತೆಯಿಲ್ಲದ, ಸಂಕುಚಿತವಾಗದ, ಕುಂದಿಲ್ಲದ, ಕುಂದದ, ವಿಶಾಲವೂ ದಯಾಪೂರಿತವೂ ಆದ ಹೃದಯ ಮಂದಿರವೇ ಅನಾಹತ ಚಕ್ರಕ್ಕೆ ಆಧಾರ. ಹೃದಯ ವೈಶಾಲ್ಯತೆಯೇ ಮುಖದ ಕನ್ನಡಿ.

ಹೃದಯ ಸ್ಥಾನದಲ್ಲಿ ಅನಾಹತಚಕ್ರ, ವಾಯುವೆಂಬ ಮಹಾಭೂತ

ಆ ಭೂತ ಮಾಂಜಿಷ್ಠವರ್ಣ, ಟ್ಕೋಣ ದ್ವಾದಶದಳಪದ್ಮ

ಆ ಪದ್ಮ ಕುಂಕುಮ (ಮಾಂಜಿಷ್ಣ) ವರ್ಣ

ಆ ದಳಗಳಲ್ಲಿ-ಕ, ಖ, ಗ, ಘ, ಙ, ಚ, ಛ,ಜ,ಝ,ಞ,ಟ,ಠ

 ಎಂಬ ಹನ್ನೆರಡಕ್ಷರ

ಆ ಕರ್ಣಿಕಾ ಮಧ್ಯದಲ್ಲಿ ವಾ ಕಾರವೆಂಬ ಬೀಜಾಕ್ಷರ.

ಆ ವಾ ಕಾರ ಶ್ವೇತ (ಶುಭ್ರ) ವರ್ಣ. ಅದು ಭೇರಿನಾದ.

ಅಲ್ಲಿ ಜಂಗಮಲಿಂಗ ಅದಕ್ಕೆ ಕೆಂಪು ವರ್ಣವನುಳ್ಳ ತತ್ಪುರುಷ ಮುಖ.

ಶಾಂತಿಕಲಾಪರ್ಯಾಯ ನಾಮವನುಳ್ಳ ಆದಿಶಕ್ತಿ

ಆ ಶಕ್ತಿ ಮಾಂಜಿಷ್ಠವರ್ಣ ಅಲ್ಲಿ ಅಮೂರ್ತಸಾದಾಖ್ಯ

ಗೂಢ (ಲಿಂಗಕ್ಷೇತ್ರ)ವೆಂಬ ಸಂಜ್ಞೆ ಉತ್ತರದಿಕ್ಕು

ಅಥರ್ವಣವೇದವನುಚ್ಚರಿಸುತ್ತ ಸುಮನವೆಂಬ ಹಸ್ತದಿಂ

 ಸುಸ್ಪರ್ಶನ ದ್ರವ್ಯವನು ತ್ವಕ್ಕು ಎಂಬ ಮುಖಕ್ಕೆ

ಅನುಭವ ಭಕ್ತಿಯಿಂದರ್ಪಿಸುವಳಾ ಶಕ್ತಿ . ಈಶ್ವರ ಪೂಜಾರಿ.

ಶಕ್ತಿ ಕಂಕಾಳಿ ಭೀಮ (ಈಶ್ವರ) ನಧಿದೇವತೆ.

ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು ವಾ ಕಾರವೆಂಬ ಬೀಜಾಕ್ಷರ.

ಅದು ಪ್ರಣವದ ಅರ್ಧಚಂದ್ರಾಕೃತಿಯಲ್ಲಿಹುದು.

ಓಂ ಓಂ ಓಂ ವಾಂ ವಾಂ ವಾಂ ಎಂಬ ಬ್ರಹ್ಮನಾದ

ಮಂತ್ರಮೂರ್ತಿ ಪ್ರಣವಕ್ಕೆ ನಮಸ್ಕಾರವು.

ಇದು ಅನಾಹತ ಚಕ್ರ, “ಪ್ರಾಣಲಿಂಗಸ್ಥಲ’ವು (ಉ. ವಾಚ್ಯ)

ಹೀಗೆ ಪ್ರಾಣ ಲಿಂಗಿಯು ಹೃದಯಮಂದಿರದ ಅನಾಹತಚಕ್ರದ ಆನಂದ ಬ್ರಹ್ಮವನ್ನು ಜಂಗಮ ಲಿಂಗವನ್ನಾಗಿ ಅಳವಡಿಸಿಕೊಳ್ಳುತ್ತಾನೆ. ಈ ಕಲೆಯನ್ನು ಕರಕಿತ್ತ ತಂದೆಯು ಶ್ರೀಗುರುವು.

ಜೀವನದಲ್ಲಿ ಸದುಹೃದಯವುಳ್ಳವನು ಆನಂದವನ್ನು ಅನುಭವಿಸುತ್ತಾನೆ. ಅಂಥವನ ಹೃದಯಭೂಮಿಕೆಯನ್ನು ದುಃಖ-ದುಮ್ಮಾನಗಳು ಪ್ರವೇಶಿಸಲಾರವು. ಅವನ ಆನಂದಕ್ಕೂ ಕುಂದು ಕೊರತೆ ಬಾರದು. ಆನಂದಬ್ರಹ್ಮವೇ ಅನಾಹತ ಚಕ್ರದಿಂದ ಹೊರಹೊಮ್ಮಿ ಕರದಿಷ್ಟಲಿಂಗದಲ್ಲಿ ಜಂಗಮಲಿಂಗವಾಗಿ ರೂಪುಗೊಳ್ಳು ವದು. ಜಂಗಮನು ಜ್ಞಾನಮೂರ್ತಿಯು, ಜ್ಞಾನಿಯಾದವನ ಆನಂದಕ್ಕೆ ಕುಂದೆಂಬುದು ತೋರುವದಿಲ್ಲ. ತಂದೆಯು ಮಗನಿಗೆ ಸದಾ ಆನಂದವನ್ನು ಉಂಟುಮಾಡಲು ಬಯಸಿದಂತೆ ಗುರುತಂದೆಯು ಆನಂದಬ್ರಹ್ಮವನ್ನು ತೋರಿಸಿಕೊಟ್ಟ ಮೇಲೆ ನಾನು ಆನಂದ ಭರಿತನಲ್ಲವೆ ! ಚನ್ನ ಸದಾಶಿವಯೋಗಿಯ ‘ʼಶಿವಯೋಗ ಪ್ರದೀಪಿಕೆ” ಯಲ್ಲಿ.

ಅಧೋಮುಖಾಷ್ಟ-ಪತ್ರಾಬ್ಜ

ಯುಕ್ತಂ ಹೃಚ್ಚಕ್ರಮಿಷ್ಟದಂ |

ತನ್ಮಧ್ಯ ಕರ್ಣಿಕಾಂ ಜ್ಯೋತಿ-

ಲಿಂಗಾಕಾರಮಿಮಾಂ ಸ್ಮರೇತ್ ||

ಎಂದು ಅನಾಹತ ಚಕ್ರದ ವಿವರಣೆಯನ್ನು ಪ್ರತಿಪಾದಿಸಿದರೆ ಅದಕ್ಕೆ ನಿಜಗುಣರು ತಮ್ಮ ಪಾರಮಾರ್ಥ ಪ್ರಕಾಶಿಕೆಯ ತೃತೀಯ ಪರಿಚ್ಛೇದದಲ್ಲಿ ‘ʼಹೃದಯ ಸ್ಥಾನದಲ್ಲಿಯ ಅನಾಹತನಾದಕ್ಕೆ ಕಾರಣಮಪ್ಪುದರಿಂದನಾಹತ ಸಂಜ್ಞೆಯುಳ್ಳ ʼʼಹೃದಯಚಕ್ರವು ಕದಳೀ ಕುಸುಮದಂತಧೋಮುಖವಾಗಿ ವಿಕಾಸಮಾದ ಬಾಹ್ಯದಳಂಗಳೆಂಟರ ಮಧ್ಯದಲ್ಲಿ ಗೋಪ್ಯಮಾದ ನಾಲ್ಕು ದಳಂಗಳುಳ್ಳುದಾ ಕಮಲಕರ್ಣಿಕೆಯನೆ ಜ್ಯೋತಿರ್ಮಯ ಲಿಂಗಾಕಾರ ಮಾಗಿ ಧ್ಯಾನಿಸಲ್ವೇಳ್ಕುಂ |” ಎಂಬ ಅರ್ಥವಿಸ್ತಾರವನ್ನು ಗೈದಿರುವರು.

ಹೃದಯದ ದ್ವಾದಶದಳದ ಅನಾಹತಪದ್ಮವು ಬಾಳೆಯ ಗೊನೆಯಂತೆ (ಹೂವಿನಗೊನೆ) ಕೆಳಮುಖವಾದ ಎಂಟುದಳಗಳಿಂದ ಕೂಡಿದ್ದು ಒಳಭಾಗದಲ್ಲಿ ಗೋಪ್ಯವೆನಿಸಿದ ನಾಲ್ಕು ದಳಗಳು ಮೇಲ್ಮುಖವಾಗಿ ಶೋಭಿಸುತ್ತವೆ. ಕುಂಕುಮವರ್ಣದ ಕಮಲದಲ್ಲಿರುವ ಆನಂದಬ್ರಹ್ಮವೇ ಕರದಿಷ್ಟಲಿಂಗದಲ್ಲಿ ಜಂಗಮಲಿಂಗ ವಾಗಿರುವದು.

 ಹೃದಯದ ಕಮಲವು ಎಂಟುದಳಗಳಿಂದ ಸ್ಫುಟವಾಗಿಯೂ ಅದರಲ್ಲಿ ನಾಲ್ಕು ದಳಗಳು ಗೋಪ್ಯವಾಗಿರುವದರಿಂದ ಅನೇಕರು ಹೃನ್ಮಾನಸ-ಸರೋವರದಲ್ಲಿ ಅಷ್ಟದಳ ಕಮಲವೆಂದೇ ವರ್ಣಿಸಿರುವರು. ಈ ಕಮಲದ ಮಧ್ಯಭಾಗದ ಚತುರ್ದಳಗಳ ಮಧ್ಯದಲ್ಲಿಯೇ ಶಿವನಿರುವನು ಪರಶಿವನು ಹೃದಯ, ಭ್ರೂಮಧ್ಯ ಮತ್ತು ಬ್ರಹ್ಮ ರಂಧ್ರಗಳೆಂಬ ಈ ಮೂರು ಸ್ಥಾನಗಳಲ್ಲಿರುವನೆಂಬ ಮಾತನ್ನು ಅನುಭವಿಗಳು ಪ್ರತಿಪಾದಿಸಿದ್ದುಂಟು. ಅಜ್ಞಾನಾವೃತವಾದ ಚೈತನ್ಯವು ಜೀವವೆನಿಸುವದು. ಜೀವಾತ್ಮನು ಅಷ್ಟದಳಕಮಲದಲ್ಲಿ ಸಂಚಾರಮಾಡುತ್ತಿದ್ದು ಗೋಪ್ಯಮುಖದ ಚತುರ್ದಳಗಳಲ್ಲಿಯ ಈಶ್ವರ ಚೈತನ್ಯವನ್ನು ಅರಿಯದೆ ದಳಗತವಾದ ವೃತ್ತಿಯನ್ನು ಅನುಭವಿಸುತ್ತಿರುವನು. ಚನ್ನಬಸವಣ್ಣನವರು ಅಷ್ಟದಳ ಕಮಲದ ವಿವರವನ್ನು ಈ ರೀತಿಯಾಗಿ ವಿವರಿಸಿರುವರು –

 ಇಂದ್ರದಳವೇರಲು ಗುಣಿಯಾಗಿಹನು.

ಅಗ್ನಿದಳವೇರಲು ಹಸಿವನು.

 ಯಮದಳವನೇರಲು ದುರಿತಚೇಷ್ಟಿತನಾಗಿಹನು.

ನೈಋತ್ಯದಳವೇರಲು ಕೋಪಿಸುತ್ತಿಹನು.

ವರುಣದಳವೇರಲು ನಿದ್ರೆಗೈವನು

ವಾಯವ್ಯದಳವೇರಲು ಸಂಚಲನಾಗಿಹನು

ಕುಬೇರದಳವೇರಲು-ಧರ್ಮಬುದ್ಧಿಯಾಗಿಹನು

ಈಶಾನ್ಯದಳವೇರಲು ವಿಷಯಾತುರನಾಗಿಹನು

ಮಧ್ಯಸ್ಥಾನಕ್ಕೆ ಬಂದಲ್ಲಿ ಸದ್ಭಾವಿಯಾಗಿ

ಮೋಕ್ಷವ ಬಯಸುತ್ತಿಹನು

ಇಂತೀ ಅಷ್ಟದಳಂಗಳಲ್ಲಿ ತಿರುಗುವ ಹಂಸನ

ನೆಲೆಯ ಕೆಡಿಸಿ ಸದ್ಭಾವಿಯಾಗಿರಬಲ್ಲ

ಕೂಡಲಚನ್ನಸಂಗಾ ! ನಿಮ್ಮ ಶರಣ.

ಮಾನಸಸರೋವರ ಮಧ್ಯದ ಹಂಸನಾದ ಜೀವಾತ್ಮನು ಪೂರ್ವದಿಕ್ಕಿನ ಇಂದ್ರದಳಕ್ಕೆ ಬರಲು ಸದ್ಗುಣಿಯಾಗುವನು. ಆಗ್ನೀಯದಿಕ್ಕಿನ ಅಗ್ನಿದಳದಲ್ಲಿ ಹಸಿವುಳ್ಳವನೂ, ದಕ್ಷಿಣ ದಿಕ್ಕಿನ ಯಮದಳದಲ್ಲಿ ದುರಿತಕರ್ಮಸ್ವಭಾವವುಳ್ಳವನೂ, ನೈಋತ್ಯ ದಿಕ್ಕಿನ ನೈಋತ್ಯ ದಳದಲ್ಲಿ ಕೋಪವುಳ್ಳವನೂ, ಪಶ್ಚಿಮ ದಿಕ್ಕಿನ ವರುಣನ ದಳದಲ್ಲಿ ನಿದ್ರಾಪರನೂ, ವಾಯವ್ಯದಿಕ್ಕಿನ ವಾಯವ್ಯದಳದಲ್ಲಿ ಚಂಚಲನೂ, ಉತ್ತರ ದಿಕ್ಕಿನ ಕುಬೇರನ ದಳದಲ್ಲಿ ಧರ್ಮ ಬುದ್ಧಿಯುಳ್ಳವನೂ, ಈಶಾನ್ಯದಿಕ್ಕಿನ ಈಶಾನ್ಯದಳದಲ್ಲಿ ವಿಷಯಾತುರನೂ ಆಗುವನು. ಆಯಾ ದಳಗಳನ್ನು ಆಶ್ರಯಿಸುತ್ತಿರಲು ಆಯಾಗುಣವುಳ್ಳ ಜೀವನು ಧರ್ಮಬುದ್ಧಿಯಿಂದ ಮಧ್ಯಸ್ಥಾನಕ್ಕೆ ಬರಲು ಮಹಾ ಚೈತನ್ಯನ ಸನ್ನಿಧಿಯಲ್ಲಿ ಸದ್ಭಾವಿ ಯಾಗಿ ಮೋಕ್ಷಾಪೇಕ್ಷಿಯಾಗುವನು. ಶರಣರು ಈ ಅಷ್ಟದಳಂಗಳಲ್ಲಿ ಸಂಚರಿಸುವ ಜೀವಾತ್ಮನಾದ ಹಂಸನ ನೆಲೆಯನ್ನು ಬದಲಿಸಿ ಆಧಾರಾದಿ ಚಕ್ರಗಳಲ್ಲಿ ಭಕ್ತಾದಿ ಸ್ಥಲಕ್ಕನುಗುಣವಾಗಿ ಆಚಾರಾದಿ ಲಿಂಗಗಳನ್ನು ಅರ್ಚಿಸುತ್ತ ಭ್ರೂಮಧ್ಯದ ಮಹಾಲಿಂಗದಲ್ಲಿ ಐಕ್ಯಸ್ಥಿತಿಯನ್ನು ಹೊಂದುವ ಶಕ್ತಿಯನ್ನು ಪಡೆದಿರುತ್ತಾರೆ. ಸದ್ಗುರುವು ಶರಣನಿಗೆ ನವಚಕ್ರಗತಬ್ರಹ್ಮನನ್ನು ನವಲಿಂಗಗಳನ್ನಾಗಿ ಸಂಸ್ಕರಿಸುತ್ತಾನೆ; ಕರುಣಿಸುತ್ತಾನೆ.

ಸಾಮಾನ್ಯವಾಗಿ ಆತ್ಮನ ವಿಚಾರಬರಲು ಹೃದಯವನ್ನೇ ಪ್ರತಿಯೊಬ್ಬನು ಮುಟ್ಟಿಕೊಳ್ಳುತ್ತಾನೆ. ಅಂತೆಯೇ ಆತ್ಮನನ್ನು ಅರಿಯುವ ಶಾಸ್ತ್ರಕ್ಕೆ ಅಧ್ಯಾತ್ಮ ಅಥವಾ ಆಧ್ಯಾತ್ಮ ಶಾಸ್ತ್ರವೆಂಬ ಹೆಸರು ಸಾರ್ಥಕವಾಗಿದೆ. ಉಪನಿಷದಾಗಮಗಳೂ ಸಹ ಆತ್ಮನನ್ನು ಹೃದಯದಲ್ಲಿಯೇ ವರ್ಣಿಸಿವೆ ‘ಶ್ವೇತಾಶ್ವತರೋಪನಿಷತ್ತಿ’ನಲ್ಲಿ-  

ಅಂಗುಷ್ಠ ಮಾತ್ರಃ ಪುರುಷಃ

ಅಂತರಾತ್ಮಾ ಸದಾ ಜನಾನಾಂ ಹೃದಯೇ ಸನ್ನಿವಿಷ್ಠಃ |ʼʼ

ಅಂಗುಷ್ಠ ಪ್ರಮಾಣದ ಪುರುಷನು ಜನರ ಹೃದಯ ಮಂದಿರದಲ್ಲಿರುತ್ತಾನೆಂದು ಹೇಳಿದೆ ಭಗವದ್ಗೀತೆಯಲ್ಲಿ

ಈಶ್ವರಃ ಸರ್ವಭೂತಾನಾಂ ಹೃದ್ದೇಶೇಽರ್ಜುನ ತಿಷ್ಠತಿ ।”

ಸಕಲ ಪ್ರಾಣಿಗಳ ಹೃದಯಸ್ಥಾನದಲ್ಲಿ ಈಶ್ವರನಿದ್ದಾನೆಂದು ಅರ್ಜುನನಿಗೆ ಕೃಷ್ಣನು ಬೋಧಿಸಿದ್ದಾನೆ. ಹೃದಯ ಕಮಲ ಕರ್ಣಿಕಾ ವಾಸದಲ್ಲಿರುವ ಹಂಸನನ್ನು ಅರಿಯ ಬೇಕೆನ್ನುವ ಅನೇಕ ಪ್ರಮಾಣಗಳು ಕಾಣಬರುತ್ತವೆ.

ಪಶ್ಯಾಮಿ ತಂ ಸರ್ವಜನಾಂತರಸ್ಥಂ

ನಮಾಮಿ ಹಂಸಂ ಪರಮಾತ್ಮರೂಪಮ್ ।।’

ಯೋಗ ಶಿಖೋಪನಿಷತ್ಕಾರರು ಸಕಲರ ಹೃದಯಾಂತರಾಳದಲ್ಲಿ ನೆಲಸಿದ ಪರಮಾತ್ಮನಿಗೆ ವಂದಿಸಿದ್ದಾರೆ. ಮತ್ತು –

 “ಹಂಸ ಏವ ಪರೋ ರುದ್ರಃ ಹಂಸ ಏವ ಪರಾತ್ಪರಃ |

ಸರ್ವದೇವಸ್ಯ ಮಧ್ಯಸ್ಥೋ ಹಂಸ ಏವ ಮಹೇಶ್ವರಃ |’

ಸರ್ವರ ದೇಹ ಮಧ್ಯಸ್ಥನಾದ ಹಂಸನೇ ರುದ್ರರೂಪನು. ಪರಾತ್ಪರ ಪರಮೇಶ್ವರ ನೆನಿಸಿದ್ದಾನೆ. ಅಂತೆಯೇ ಕನ್ನಡ ಜಾನಪದಕವಿಯೆಂದು ಕೀರ್ತಿವೆತ್ತ ಸರ್ವಜ್ಞನು ತನ್ನಂತೆ ಪರರ ಬಗೆದೊಡೆ ಕೈಲಾಸಬಿನ್ನಾಣವಕ್ಕು” ಯೆಂದು ಸಾರಿದ್ದಾನೆ. ಜ್ಞಾನಿಗಳು ಇಂಥ ಹಂಸನನ್ನು ಅರಿತು ಸಮದೃಷ್ಟಿಯನ್ನು ಸಂಪಾದಿಸಿ ಪರಮಹಂಸರೆನಿಸುತ್ತಾರೆ.

 ‘ಹಂಸ’ ಮಂತ್ರಕ್ಕೆ ಹಂಸ-ವಿದ್ಯೆ” ”ಯೆಂತಲೂ ಕರೆಯುತ್ತಾರೆ. ಹಂಸಜಪವನ್ನು ಜಪಿಸದಿರುವ ಜಂತುಗಳು ಇರುವದಿಲ್ಲ. ಉಸಿರಾಡಿಸುವ ಪ್ರತಿಯೊಂದು ಪ್ರಾಣಿಯು ಹಂಸವನ್ನು ಉಚ್ಚರಿಸುತ್ತದೆ. ಆದರೆ ಅದಕ್ಕೆ ಅದರ ಅರಿವಿರುವದಿಲ್ಲ. ಶ್ವಾಸವು  ಹೊರಬರುವಾಗ ‘ಹ’ಕಾರದಿಂದಲೂ ಒಳಗೆ ಹೋಗುವಾಗ ‘ಸʼ ಕಾರವಾಗಿಯೂ ಅಭಾಸವಾಗುತ್ತದೆ. ಹಿಂದೆ ತಿಳಿಸಿದಂತೆ ಪ್ರತಿನಿತ್ಯ ಜೀವಾತ್ಮನು ೨೧,೬೦೦ ಸಲ ಉಸಿರಾಡಿಸುತ್ತಾನೆ. ಅದನ್ನು ಕ್ರಮಗೊಳಿಸಿ ಜ್ಞಾನಪೂರ್ವಕ ಪ್ರಣವದೊಡನೆ ಉಸಿರಾಡಿಸಿದರೆ ಅದುವೆ ಹಂಸಮಂತ್ರವಾಗುವದು. “ಸಿದ್ಧಾಂತ ಶಿಖಾಮಣಿ’ಯಲ್ಲಿ

ಹಂಸರೂಪಂ ಪರಾತ್ಮಾನಂ

ಸೋಽಹಂಭಾವೇನ ಭಾವಯೇತ್ ||

ಹಂಸರೂಪ ಪರಮಾತ್ಮನನ್ನು ‘ಸೋಹಂ’ ಭಾವದಿಂದ ಭಾವಿಸಬೇಕೆಂದು ಪ್ರತಿಪಾದಿ ಸಲ್ಪಟ್ಟಿದೆ. ಹಂಸ’ ಮಂತ್ರವು ವೈಕೃತ ಪ್ರಾಣಾಯಾಮವಾಗಿ ಸೋಹಂ’ ಎಂದೆನಿಸುವದು.  ವೈಕೃತಪ್ರಾಣಾಯಾಮವೆಂದರೆ ರೇಚಕ-ಪೂರಕ-ಕುಂಭಕಗಳಿಂದ ಪ್ರಾಣ ನಿರೋಧಿಸಲ್ಪಡುವಂಥಹದು. ಈ ವಿಚಾರಗಳು ಜ. ಚ. ನಿ.ಯವರ ‘ಪರಮ ಹಂಸ’ ಪುಸ್ತಿಕೆಯಲ್ಲಿ ಅವಗತವೆನಿಸುವವು.

 ಹಂಸ ಅಥವಾ ಸೋಹಂ ಸಾಧನೆಗಿಂತ ಶರಣರ ಷಟ್‌ಸ್ಥಲ ಸಿದ್ಧಾಂತ ಮಿಗಿಲಾಗಿದೆ. ಪರಮಹಂಸವೆನಿಸುವವನು ಕೇವಲ ಜ್ಞಾನ ಮಾರ್ಗಾವಲಂಬಿಯಾಗಿರುತ್ತಾನೆ. ಶರಣನು ಅಷ್ಟದಳಂಗಳಲ್ಲಿ ತಿರುಗುವ ಹಂಸನ ನೆಲೆಯನ್ನು ಕೆಡಿಸಿ ಜ್ಞಾನಕ್ರಿಯೆಗಳಿಂದ ಸದ್ಭಾವಿಯಾಗಿ ಅನಾಹತ ಚಕ್ರದ ಅರಿವುಳ್ಳವನಾಗಿ ಆನಂದ  ಬ್ರಹ್ಮವನ್ನು ಜಂಗಮಲಿಂಗವನ್ನಾಗಿ ಅರ್ಚಿಸಿ ಅನುಭವಿಯಾಗುತ್ತಾನೆ. ಹೃದಯ ಕಮಲದಿಂದ ಮೇಲೇರಿ ಭ್ರೂಮಧ್ಯಕ್ಕೆ ಬಂದು ಮಹಾಲಿಂಗನ ದರ್ಶನ ಪಡೆಯುತ್ತಾನೆ. ಬಾಲಲೀಲಾ ಮಹಾಂತರ

ಅಷ್ಟದಳದ ಕಮಲ ತೊಟ್ಟಿಲೊಳಗೆ ಮಲಗಿ |

ಶ್ರೇಷ್ಠ ಸದ್ಗುಣ ಹಸ್ತ ಪದಗಳನಾಡುತ |

ನೆಟ್ಟನೆ ನಿಟಲಭ್ರೂಮಧ್ಯದ ಜ್ಯೋತಿಯ |

ದೃಷ್ಟಿಸಿ ನೋಡುತ ಕುಲುಕುಲು ನಗುತಿಹ

ಎನ್ನುವ ಈ ನುಡಿ ಸುಂದರ ಪ್ರಮಾಣವಾಗಿದೆ. ಅದು ಕಾರಣ ಹೃದಯಕಮಲದ ಆನಂದ ಬ್ರಹ್ಮವನ್ನು ತಿಳಿದು ಆನಂದಿಸಬೇಕು. ಆನಂದಿಸಿ ಕುಂದಿಲ್ಲದಂತಿರಬೇಕು. ಸಕಲ ವಸ್ತುವಿನಲ್ಲಿಯೂ ಶಿವಭಾವಿಯಾಗಿ ಬಾಳಬೇಕು.

ಎಲಸಿತದ ನಾಭಿಮಂ | ಡಲದ ಮಣಿಪೂರಕ ಸತ್

ಕಲೆಯ ಬ್ರಹ್ಮವನು-ಒಲಿದೆನ್ನ ಕರಕಿತ್ತು

ಸಲಹಿದೈ ಗುರುವೆ ಕೃಪೆಯಾಗು

॥ ೮೯ ||

 ನವಚಕ್ರಗಳಲ್ಲಿ ಆರನ್ನು ಪ್ರವೃತ್ತಿಕ್ರಮದಲ್ಲಿ ಪ್ರತಿಪಾದಿಸಿ ಏಳನೆಯದಾದ

ಮಣಿಪೂರಕ ಚಕ್ರದ ವಿವರವನ್ನು ಇಲ್ಲಿ ಹೇಳಿದ್ದಾನೆ. ಮಣಿಪೂರಕ ಚಕ್ರವು ನೆಲಸಿದ್ದು

ವಿಲಸಿತವಾದ ನಾಭಿಮಂಡಳದಲ್ಲಿ ನಾಭಿಮಂಡಲಕ್ಕೆ ಹೊಕ್ಕಳೆಂತಲೂ ಕರೆಯುತ್ತಾರೆ.

ನಾಭಿಯು ಕರುಳಿಗೆ ಸಂಬಂಧವುಳ್ಳದು. ಗರ್ಭಾವಸ್ಥೆಯಲ್ಲಿ ಶಿಶುವು ನಾಭಿಯ

ಮುಂಖಾಂತರವಾಗಿಯೇ ತಾಯಿಯ ಆಹಾರಾದಿ ಅನ್ನರಸವನ್ನು ಗ್ರಹಿಸುತ್ತದೆ. ಇದು

ಶರೀರದ ಸಮತೋಲನವನ್ನು ಕಾಯುವ ಮಧ್ಯಸ್ಥಾನವೂ ಹೌದು. ಇಲ್ಲಿರುವ

ಕರದಿಷ್ಟ ಲಿಂಗದಲ್ಲಿ ಶಿವಲಿಂಗವಾಗಿ ಪರಿಣಮಿಸುವನು.

ಮಣಿಪೂರಕ ಕಮಲದಲ್ಲಿ ಸತ್ಕಲಾಬ್ರಹ್ಮನು ವಾಸವಾಗಿರುತ್ತಾನೆ. ಈ ಸತ್ಕಲಾ ಬ್ರಹ್ಮನೇ

ಜ್ಞಾನೇಂದ್ರಿಯಗಳಲ್ಲಿ ಪ್ರಧಾನವಾದ ಕಣೇ ಶಿವಲಿಂಗಕ್ಕೆ ಮೂಲವಾಗಿದೆ.

ಕಣ್ಣಿಗೆ ಕಾಂತಿಯ (ತೇಜನ್ನು ಕೊಡುವ ಶಿವಲಿಂಗವು ಕಳಾಮಯವಾಗಿರುತ್ತದೆ.

ಅದರಂತೆ ನಾಭಿಮಂಡಲದ ಮಣಿಪೂರಕ ಚಕ್ರದ ಬ್ರಹ್ಮವೂ ಸತ್ಕಲಾ ಬ್ರಹ್ಮನಾಗಿದ್ದಾನೆ.

ನಾಭಿಸ್ಥಾನದಲ್ಲಿ ಜಠರಾಗ್ನಿಯ ತೇಜವೂ ತುಂಬಿದೆ. ಆದ್ದರಿಂದಲೇ ನಾಭಿಯಲ್ಲಿಯ

ಬ್ರಹ್ಮನು ಕಳಾಪೂರ್ಣನಾಗಿದ್ದಾನೆ. ಇಂಥ ಅನುಭವ ವೇದ್ಯವಾದ ಕಲಾಬ್ರಹ್ಮದ

ಅರಿವು ಸದ್ಗುರು ಕೃಪೆಯಿಲ್ಲದೆ ಆಗದು. ಗುರುನಾಥನು ಕೃಪೆ ಗೈದು ನಾಭಿಯ ಸತ್ಕಲೆಯ

ಬ್ರಹ್ಮವನ್ನು ಎನ್ನ ಕರದಿಷ್ಟಲಿಂಗದಲ್ಲಿ ಶಿವಲಿಂಗವನ್ನಾಗಿ ಸಂಯೋಜಿಸಿದ್ದಾನೆ.

ಶಿವಲಿಂಗವನ್ನು ಅರ್ಚಿಸುವ ಅಂಗನು ಪ್ರಸಾದಿಯಾಗಿದ್ದಾನೆ.

ಈ ನಾಭಿಯ ಮಣಿಪೂರಕ ಚಕ್ರದ ವಿಶೇಷವಾದ ಅನುಭವವನ್ನು

ಅನುಭವಿಗಳು ಕೆಳಗಿನಂತೆ ತಿಳಿಪಡಿಸಿದ್ದಾರೆ –

ನಾಭಿಸ್ಥಾನದಲ್ಲಿ ಮಣಿಪೂರಕ ಚಕ್ರ, ಅಗ್ನಿಯೆಂಬ ಮಹಾಭೂತ,

ಆ ಭೂತ ರಕ್ತವರ್ಣ ಇ; ತ್ರಿಕೋಣ ಅಲ್ಲಿ ದಶದಳ ಪದ್ಮ

ಆ ಪದ್ಮ ರಕ್ತವರ್ಣ, ಆ ದಳದಲ್ಲಿ ಡ, ಢ, ಣ. ತ. ಥ. ದ. ಧ. ನ.

ಪ. ಫ. ಎಂಬ ಹತ್ತಕ್ಷರ

ಆ ಕರ್ಣಿಕಾ ಮಧ್ಯದಲ್ಲಿ ಶಿ ಕಾರವೆಂಬ ಬೀಜಾಕ್ಷರ

ಆ ಶಿಕಾರ ರಕ್ತವರ್ಣ, ಅದು ಘಂಟಾನಾದ, ಅಲ್ಲಿ ಶಿವಲಿಂಗ ;

ಅದಕ್ಕೆ ರಕ್ತವರ್ಣವುಳ್ಳ ಅಘೋರ ಮುಖ.

ವಿದ್ಯಾಕಲಾಪರ್ಯಾಯ ನಾಮವನುಳ್ಳ ಇಚ್ಛಾಶಕ್ತಿ

ಆ ಶಕ್ತಿ ಕೆಂಪು ವರ್ಣ, ಅಲ್ಲಿ ಮೂರ್ತಿ ಸಾದಾಖ್ಯ

ಶರೀರವೆಂಬ ಸಂಜ್ಞೆ ದಕ್ಷಿಣದಿಕ್ಕು, ಅಲ್ಲಿ ಸಾಮವೇದವ-

ನುಚ್ಚರಿಸುತ್ತ ನಿರಹಂಕಾರವೆಂಬ ಹಸ್ತದಿಂದ ಸುರೂಪದ್ರವ್ಯವನು

ನೇತ್ರವೆಂಬ ಮುಖಕ್ಕೆ ಸಾವಧಾನ ಭಕ್ತಿಯಿಂದ ಅರ್ಪಿಸುವಳಾ ಶಕ್ತಿ

ರುದ್ರ ಪೂಜಾರಿ ಶಕ್ತಿ ಲಾಕಿನಿ ರುದ್ರ (ಹರ) ನಧಿದೇವತೆ.

ಇಂತಿವೆಲ್ಲಕ್ಕು ಮಾತೃಸ್ಥಾನ ವಾಗಿಹುದು ಶಿಕಾರವೆಂಬ ಬೀಜಾಕ್ಷರ

[15:58, 11/28/2022] Mangala Choukimath: ಓಂ ಓಂ ಓಂ ಶೀಂ ಶ್ರೀಂ ಶೀಂ ಎಂಬ

ಅದು ಪ್ರಣವದ ಕುಂಡಲಾಕೃತಿಯಲ್ಲಿ ಹುದು

ಬ್ರಹ್ಮನಾದ ಮಂತ್ರ-

ಮೂರ್ತಿ ಪ್ರಣವಕ್ಕೆ ನಮಸ್ಕಾರವು,

ಇದು ಪ್ರಸಾದಿಸ್ಥಲ ಇಲ್ಲಿ ಶಿವಲಿಂಗ ಇದಿರುವದು ಮಣಿಪೂರಕದಲ್ಲಿ

೮. ಸ್ವಾಧಿಷ್ಟಾನಚಕ್ರ-ಪಿಂಡಬ್ರಹ್ಮ (ಗುರುಲಿಂಗ)

|| ೯೦ ||

ಅಂಡಜದ ಅಗ್ರದ ಅ | ಖಂಡ ಸ್ವಾಧಿಷ್ಠಾನ

ಪಿಂಡಬ್ರಹ್ಮವನು-ಕಂಡೆನ್ನ ಕರಕಿತ್ತು-

ದಂಡ ಶ್ರೀಗುರುವೆ ಕೃಪೆಯಾಗು

“ಆತ್ರೋದ್ಧರಣೆ ವಾಚ್ಯ’ದಲ್ಲಿ ಸ್ವಾಧಿಷ್ಠಾನ ಚಕ್ರದ ವಿವರಣೆ ಕೆಳಗಿನಂತಿದೆ-

ಲಿಂಗಸ್ಥಾನದಲ್ಲಿ ಸ್ವಾಧಿಷ್ಠಾನಚಕ್ರ ಅಪ್ಪುವೆಂಬ ಮಹಾಭೂತ

ಆ ಭೂತ ಶ್ವೇತವರ್ಣ; ಧನುರ್ಗತಿ ಅಲ್ಲಿ ಷಡ್‌ಳಪದ್ಮ,

ಆ ಪದ್ಮಪಚ್ಛಿಯ ವರ್ಣ, ಆ ದಳದಲ್ಲಿ ಬ, ಭ, ಮ, ಯ, ರ, ಲ, ಎಂಬ ಆರಕ್ಷರ

ಆ ಕರ್ಣಿಕಾ ಮಧ್ಯದಲ್ಲಿ ಮಕಾರವೆಂಬ ಬೀಜಾಕ್ಷರ.

ಆ ಮಕಾರ ಶ್ವೇತವರ್ಣ ಅದು ವೇಣುನಾದ.

ಅಲ್ಲಿ ಗುರುಲಿಂಗ, ಅದಕ್ಕೆ ಶ್ವೇತವರ್ಣವನುಳ್ಳ ವಾಮದೇವಮುಖ

ಪ್ರತಿಷ್ಠಾಕಲಾ ಪರ್ಯಾಯ ನಾಮವನುಳ್ಳ ಜ್ಞಾನಶಕ್ತಿ

ಆ ಶಕ್ತಿ ಶ್ವೇತವರ್ಣ ಅಲ್ಲಿ ಕರ್ತೃ ಸಾದಾಖ್ಯ

ಗೂಢವೆಂಬ ಸಂಜ್ಞೆ ಪಶ್ಚಿಮ ದಿಕ್ಕು.

900

ಅಲ್ಲಿ ಯಜುರ್ವೇದವನುಚ್ಚರಿಸುತ್ತ ಸುಬುದ್ಧಿಯೆಂಬ ಹಸ್ತದಿಂ

ಸುರಸ ದ್ರವ್ಯವನು ಜಿಹ್ನೆಯೆಂಬ ಮುಖಕ್ಕೆ

ನೈಷ್ಠಿಕಾ ಭಕ್ತಿಯಿಂದ ಅರ್ಪಿಸುವಳಾ ಶಕ್ತಿ

ವಿಷ್ಣು ಪೂಜಾರಿ ಶಕ್ತಿರಾಕಿನಿ ವಿಷ್ಣು (ಮೃಡ) ಅಧಿದೇವತೆ

ಇಂತಿವೆಲ್ಲಕ್ಕು ಮಾತೃಸ್ಥಾನವಾಗಿಹುದು ಮ ಕಾರವೆಂಬ ಬೀಜಾಕ್ಷರ

ಅದು ಪ್ರಣವದ ದಂಡಕಾಕೃತಿಯಲ್ಲಿಹುದು

“ಓಂ ಓಂ ಓಂ ಮಾಂ ಮಾಂ ಮಾಂ’ ಎಂಬ ಬ್ರಹ್ಮನಾದ

ಮಂತ್ರ ಮೂರ್ತಿ ಪ್ರಣವಕ್ಕೆ ನಮಸ್ಕಾರವು

ಇದು ಮಾಹೇಶ್ವರಸ್ಥಲವು

ಈ ರೀತಿಯಾದ ಸ್ವಾದಿಷ್ಠಾನ ಚಕ್ರದ ವಿವರಣೆಯಿಂದ ಸದ್ಗುರುವಿನ ಸತ್ಸಂಸ್ಕಾರದ

ಅರಿವಾಗುವದು. ಜೀವಾತ್ಮನ ಅಂಡಕೋಶದ ಮೇಲ್ಬಾಗದಲ್ಲಿ (ಗುಹ್ಯ) ಖಂಡವಾಗದೇ

[15:58, 11/28/2022] Mangala Choukimath: ಇರುವ ಅಂದರೆ ಅಖಂಡ ಅಥವಾ ಪರಿಪೂರ್ಣವಾದ ಚಕ್ರ ಸ್ವಾಧಿಷ್ಠಾನ. ಇಲ್ಲಿರುವ

ಬ್ರಹ್ಮನು ಪಿಂಡಬ್ರಹ್ಮನು. ಅಂಡ (ತತ್ತಿ) ದಲ್ಲಿರುವ ಪಿಂಡ (ಮರಿ)ವು ವ್ಯಕ್ತವಾಗಿ

ಜೀವಿಯಾಗುವಂತೆ ಅಂಡದಗ್ರದಲ್ಲಿರುವ ಪಿಂಡಬ್ರಹ್ಮನನ್ನು ಗುರುವು ಗಟ್ಟಿಗತನದಿಂದ

ಹಾಗೂ ಚಾಣಾಕ್ಷತನದಿಂದ ಎನ್ನ ಕರಕಮಲದಲ್ಲಿ ಗುರುಲಿಂಗವನ್ನಾಗಿ ಕರುಣಿಸುವನು.

ಗುಹ್ಯಸ್ಥಾನದ ಅಂಡಕೋಶವು ಮೂತ್ರ ಸಂಗ್ರಹಕ್ಕೂ, ರೇತಸ್ಸಿನ ಆಶ್ರಯಕ್ಕೂ

ಕಾರಣವಾಗಿದೆ. ಇಲ್ಲಿರುವ ಪಿಂಡಬ್ರಹ್ಮನು ರಸಪದಾರ್ಥವನ್ನು ಗ್ರಹಿಸುವಂತೆ

ಜ್ಞಾನೇಂದ್ರಿಯದ ಗುರುಲಿಂಗವು ರಸಪ್ರಸಾದವನ್ನು ಸ್ವೀಕರಿಸುವದು. ಜ್ಞಾನೇಂದ್ರಿಯ

ಶೋಧಿಸಿರುವರೆಂಬುದು ಅಗಾಧವಾಗಿದೆ. ಅಸದೃಶವಾಗಿದೆ. ಪಿಂಡಬ್ರಹ್ಮನಿಂದಲೇ

ಗಳಿಗೂ ಅಂತರದಲ್ಲಿಯ ಚಕ್ರಗಳಿಗೂ ಎಂಥಹ ಸಾಮಂಜಸ್ಯವನ್ನು ಶಿವಾನುಭವಿಗಳು

ಜಗದುತ್ಪತ್ತಿಯಾಗುವಂತೆ ಅಂಡ (ಗುಹ್ಯ) ಕೋಶದಿಂದಲೇ ಜೀವಿಗಳ ಪ್ರಾದುರ್ಭಾ

ವವನ್ನು ಕಾಣುತ್ತೇವೆ.

ಸ. ಸ. ಮಾಳವಾಡ

ಪ್ರಸಕ್ತ ಹಾಡುಗಳಲ್ಲಿಯ ಪ್ರತಿಯೊಂದು ಪದಕ್ಕೂ ಶಬ್ದಾರ್ಥ ಅದರ ಹಿಂದಿರುವ ಸೂಕ್ಷ್ಮವಾದ ಅರ್ಥ, ವಿಶೇಷ ವಿಚಾರಗಳ ವಿವೇಚನೆಗಳನ್ನು ಇಲ್ಲಿ ಒದಗಿಸಲಾಗಿದೆ. ವಾಚ್ಯಾರ್ಥ, ಲಕ್ಷ್ಯಾರ್ಥ, ಧ್ವನ್ಯಾರ್ಥಗಳನ್ನು ಏಕಕಾಲಕ್ಕೆ ಸ್ಪಷ್ಟಪಡಿಸಲಾಗಿದೆ. ದೀರ್ಘಕಾಲದ ವ್ಯಾಸಂಗ, ಶ್ರವಣ, ಚಿಂತನಗಳ ಆಧಾರದಿಂದ ಮೂಡಿ ಬಂದ ಈ ಕೃತಿಯಲ್ಲಿಯ ವಿವೇಚನೆಯು ಓದುಗರಿಗೆ ಜಿಜ್ಞಾಸುಗಳಿಗೆ ಒಳ್ಳೆಯ ಮಾರ್ಗದರ್ಶನವನ್ನು ಒದಗಿಸುವಂತಿದೆ.

‘ಶ್ರೀ’ ಎಂಬ ಪದದ ಬಳಕೆಯು ಎಷ್ಟೊಂದು ಸರ್ವಸಾಮಾನ್ಯವಾಗಿದೆ? ಆದರೆ ಆ ಪದದ ವ್ಯಾಪಕವಾದ ಅರ್ಥವನ್ನು ಅರಿತವರು ಎಷ್ಟು ಜನ ? ವ್ಯಾಖ್ಯಾನಕಾರರು ”ಶ್ರೀ’ ಪದಕ್ಕೆ ‘ಐಶ್ವರ್ಯ, ಧರ್ಮ, ಕೀರ್ತಿ, ಬಲ, ಶಕ್ತಿ ಹಾಗೂ ತೇಜ ಎಂಬ ಆರು ಗುಣಗಳಿಂದ ಕೂಡಿದೆ” ಎಂಬ ಅರ್ಥವನ್ನು ಇಲ್ಲಿ ಒದಗಿಸಿದ್ದಾರೆ. ಪ್ರತಿಯೊಂದು ಪದವನ್ನೂ ಶೋಧಿಸಿ ಅರ್ಥ ವಿವರಿಸುವ, ವಿಷಯವನ್ನು ವಿವೇಚಿಸುವ ವಿವೇಚನೆಯನ್ನು ಆಧಾರ, ದೃಷ್ಟಾಂತ ಕಥೆ, ನ್ಯಾಯ ಸಾಮತಿಗಳ ಮೂಲಕ ಸುಗಮಗೊಳಿಸುವ ಕ್ರಮವಿಲ್ಲಿದೆ. ಕಂಠಿಯವರು ಆಯ್ದುಕೊಂಡ ಕ್ರಮದಲ್ಲಿ ಕೆಲವೊಂದು ಪುನರುಕ್ತಿ ದೀರ್ಘವಾಗಿರುವ ವಿವರಣೆಗಳು ಅನಿವಾರ್ಯವೆನಿಸಿವೆ. ಎಲ್ಲ ಪದಗಳಿಗೂ ಅರ್ಥ ಹೇಳಬೇಕೇ ? ಎಂದೂ ಕೆಲವರಿಗೆ ಅನಿಸಬಹುದು. ವಿಷಯವನ್ನು ಮನದಟ್ಟು ಮಾಡಿಕೊಡುವ ದೃಷ್ಟಿ ಸರ್ವಸಾಮಾನ್ಯರಿಗೂ ತಿಳಿಯಬೇಕೆಂಬ ಉದ್ದೇಶದಿಂದ ಹಾಗೆ ಮಾಡಲಾಗಿದೆಯೆಂದು ಭಾವಿಸಬೇಕು.  

 ಮಾನವ ಜೀವನದ ಪರಮ ಗುರಿಯೇನು ? ಇದು ಅತ್ಯಂತ ಮೂಲಭೂತ ಪ್ರಶ್ನೆ. ಇದು ಎಲ್ಲ ಬಗೆಯ ತಾತ್ವಿಕ ಜಿಜ್ಞಾಸೆಗೆ ತಳಹದಿ. ಈ ಪ್ರಶ್ನೆಗೆ ‘ಜೀವ ಪರಮರನೊ೦ದುಗೂಡಿಸುವುದು’ ಎಂಬ ಉತ್ತರವೂ ಸನಾತನವಾದುದೇ, ಹಾಗೆ  ‘ಒಂದುಗೂಡುವ’ ಬಗೆಯಲ್ಲಿಯ ವ್ಯತ್ಯಾಸಗಳು ವಿವಿಧ ತಾತ್ವಿಕ ಪಂಥಗಳಿಗೆ ಎಡೆಗೊಟ್ಟಿವೆ. ಒಂದುಗೂಡುವ ಹಾದಿಯ ಬಗೆಗೆ ವಿವಿಧ ಮತಗಳು, ವಾದಗಳು, ಜಗಳಗಳು ತಲೆದೋರಿವೆ. ಆದರೆ ಮೂಲಭೂತವಾದ ಅಂಶವೊಂದೇ ಆಗಿದೆ. ಪರಮಾತ್ಮನ ಅಸ್ತಿತ್ವವನ್ನು ಅಲ್ಲಗಳೆಯುವ ಇಲ್ಲವೆ ಆ ಬಗೆಗೆ ಮೌನವಾಗಿರುವ ಪಂಥಗಳೂ ಇವೆ, ಆದರೆ ಪರಮಾನಂದವನ್ನು ಅರಸುವ ದಿಶೆಯಲ್ಲಿ ಅವೂ ಸಾಗಿವೆ. ಪರಮಾನಂದವನ್ನು ಪಡೆಯುವುದು ಇಲ್ಲವೆ ಜೀವ-ಪರಮರು ಒಂದುಗೂಡುವುದು ಮೂಲಭೂತ ಸಂಗತಿ. ಇದನ್ನೇ ನಿಜಗುಣರು ವಿವೇಚಿಸಿದ್ದಾರೆ. ಕೈವಲ್ಯ ಪದ್ಧತಿಯ ‘ಜ್ಞಾನ ಪ್ರತಿಪಾದನ ಸ್ಥಲ’ ದ ಸಾರದಂತಿರುವ ʼʼಆರು ನೀನೆಂದು ವಿಚಾರಿಸುʼ‘ ಎಂಬ ಬೀಜಮಾತನ್ನು ನಿಜಗುಣರು ಹೇಳಿದ್ದಾರೆ. ಈ ಬೀಜಮಾತನ್ನು ವ್ಯಾಖ್ಯಾನಕಾರರು ”ತತ್ತ್ವಮಸಿ’ ಎಂಬ ಗೂಢ ಸೂತ್ರದೊಂದಿಗೆ ಸಮನ್ವಯಿಸಿ ವಿವರಿಸಿದ್ದಾರೆ. ತತ್ಪದ ಪರಮ (ಶಿವ) ವಾಚಕ; ‘ತ್ವಂ’ ಪದ ಜೀವವಾಚಕ. ಇದನ್ನು ಕುರಿತ ವ್ಯಾಖ್ಯಾನದಲ್ಲಿ ಗುರುವಾಣಿಯನ್ನು ಬಳಸಿಕೊಂಡು.

ಪರಶಿವನಿಗೆ ಮಾಯೆ ಉಪಾಧಿ;

ಜೀವನಿಗೆ ಕಪಟವಿದ್ಯೆ ಉಪಾಧಿ ;

ಉಪಾಧಿಯನ್ನು ಬಿಟ್ಟರೆ ಜೀವ-ಶಿವರಿಗೆ ಭೇದವಿಲ್ಲವು, ಎಂದು ಹೇಳಲಾಗಿದೆ. ಉಪಾಧಿಯಂದರೇನೆಂಬುದನ್ನು ವಿವರಿಸಲಾಗಿದೆ.

ಕಪಟದ ಅವಿದ್ಯೆಯಿಂದಾಗಿ ಮಾನವನು ಚಪಲ ವಿಷಯದೊಳಗೆ ಆಡುತ್ತಾನೆ; ಕೋಟಲೆಗೆ ಒಳಗಾಗುತ್ತಾನೆ. ಈ ಚವಲ ವಿಷಯದ’ ಬಂಧನದಿಂದ ಪಾರುಮಾಡಿ ಮಾನವನನ್ನು ಪರಮಾನಂದದತ್ತ ಕರೆದೊಯ್ಯುವುದೇ ನಿಜಗುಣರ ಉದ್ದೇಶವಾಗಿದೆ.

ನಾನು ಯಾರು ? ಎಂದು ವಿಚಾರಿಸುತ್ತ ಸರಿಯಾಗಿ ಸಾಗಿದಾಗ ಕೊನೆಯ ನಿಲುವು ‘ನಾನು (ಜೀವನು) ಶಿವ’ ಎಂದಾಗುತ್ತಿದೆ. ಅದೇ ನಿಜದ ನೆಲೆ, ಈ ನಿಜದ ನೆಲೆಯನ್ನೇ ನಿಜಗುಣರು ನಿರೂಪಿಸಿದ್ದಾರೆ. ಅವರು ʼʼದೇವಲಕ್ಷಣಗಳೆಲ್ಲ ಜೀವನೊಳು ಬೆಳಗುವ’ʼ

ಹಾದಿಯನ್ನು ಬೋಧಿಸಿದ್ದಾರೆ . ಆಧುನಿಕ ಕಾಲದಲ್ಲಿ ಶ್ರೀ ಅರವಿಂದರು ಇದನ್ನು ಬೋಧಿಸಿದ್ದುಂಟು..  

ನಿಜಗುಣ ಶಿವಯೋಗಿಗಳ ಬೋಧೆಯನ್ನು ತಾವು ಸರಿಯಾಗಿ ತಿಳಿದುಕೊಂಡ ವ್ಯಾಖ್ಯಾನಕಾರರು ಈ ಕೃತಿಯಲ್ಲಿ ಓದುಗರಿಗಾಗಿ ಅದನ್ನು ಸರಿಯಾಗಿ ವಿವರಿಸಿದ್ದಾರೆ.

‘ನಾನು ಶಿವ’ ಎಂಬ ಅರಿವು ನಮ್ಮಲ್ಲಿ ಜಾಗೃತವಾಗುವುದೇ ಪರಮಾನಂದವನ್ನು ಪಡೆಯುವ ಪಥವಾಗಿದೆ. ಈ ಬಗೆಯ ಅರಿವಿಗೆ ಶ್ರವಣಾದಿಗಳು ಬೀಜವಿದ್ದಂತೆ. ಆತ್ಮನ್ನು ಅಹಂಕಾರದಿಂದ ಬೇರ್ಪಟ್ಟು ಸಾಕ್ಷಿರೂಪನಾಗಿ ಸಂಸಾರದಲ್ಲಿದ್ದು ಚಿದ್ರೂಪವಾಗುವುದೇ ಈ ಅರಿವಿನ ಫಲ, ಅದು ಅಖಂಡ ಸುಖ,ʼʼ ಉತ್ತಮ ಸಹಜವೆನಿಪ ನಿಲುವು, ಶಂಭುಲಿಂಗ ತಾನಿಪ್ಪ ಇರುವು,” ಅರ್ಥಾತ್ ಜೀವ-ಪರಮರೊಂದುಗೂಡಿದ ಬಗೆ.

 ಸುಖವು ಮಾನವನ ಸಹಜ, ಆಂತರಿಕ ಸ್ವರೂಪ. ಆದರೆ ಮಾನವನು ಸುಖವನ್ನು ಹೊರಗೆ ಹುಡುಕುತ್ತ ಬಳಲುತ್ತಾನೆ, ಅಂತೆಯೇ ನಿಜಗುಣರು “ನಿನ್ನ ನಿಜವತಿಳಿ,  ಮನುಜ’ ಎಂದು ಒಡನುಡಿದಿದ್ದಾರೆ. ಇದು ಎಂದಿನಂತೆ ಇಂದೂ ಅವಶ್ಯಕವಾಗಿದೆ. ತನ್ನ ಬುದ್ಧಿ ಕಲ್ಪಿತ ಜಗತ್ತಿನಲ್ಲಿ ತೊಳಲಾಡುತ್ತಿರುವ ಆಧುನಿಕ ಮಾನವ ತನ್ನ ಪಾರಮಾರ್ಥಿಕ ಸತ್ತೆಯ ಸದ್ರೂಪವನ್ನು ಕಂಡುಕೊಳ್ಳಬೇಕಾಗಿದೆ. ‘ಸದ್ರೂಪ’ ಕ್ಕೆ ನಿಜಗುಣರು ‘ಉಳುಮೆ’ ಎಂಬ ಪದವನ್ನು ಬಳಸಿದ್ದಾರೆ. ನಾಮ ರೂಪಾದಿಗಳನ್ನು ನೇತಿಗೆಳೆದಾಗ ಉಳಿದುದೇ ‘ಉಳುಮೆ’ ಅದು ಸತ್ಯಪದ.

ನಿನ್ನೊಳಿಹುದು ಸತ್ಯಪದ

ಅದನನುಭವದಿಂ ನೋಡು, ಮನುಜ ನೀನಹೆ ಮುಕ್ತನು |

ಶಂಭುಲಿಂಗದೊಳಗೆ ಅನ್ಯವಿಲ್ಲದೆ ಮೆರೆವ

 ದ್ರೂಪು ನೀನಹುದು

ಎಂಬುದು ಇಲ್ಲಿಯ ಬೋಧೆಯ ತಿರುಳು. ಉಪಾಧಿಯಿರುವಾಗ ಸದ್ರೂಪವು ಹೊಳೆಯುವದಿಲ್ಲ. ಶುದ್ಧ ಚೈತನ್ಯ ದೃಷ್ಟಿಗೆ ಮಾತ್ರ ಅದು ಗೋಚರವಾಗುತ್ತದೆ. ಅಂತಹ ಚೈತನ್ಯ ದೃಷ್ಟಿಯನ್ನು ಪಡೆಯುವ ಕ್ರಮವು ‘ಜ್ಞಾನ ಪ್ರತಿಪಾದನ ಸ್ಥಲ’ ದಲ್ಲಿದೆ. ಆರು ತಾನೆಂದು ವಿಚಾರಿಸಿದಾಗ ”ತಾನು ದೇಹವಲ್ಲ, ಇಂದ್ರಿಯವಲ್ಲ, ಚಿತ್ತ, ಬುದ್ಧಿ, ಮನ ಅಹಂಕಾರಗಳೂ ತಾನಲ್ಲ. ಆದರೆ ತಾನು ಆತ್ಮ, ಸತ್ಯಪದ ಆನಂದೈಕರಸರೂಪದ ಅರಿವು, ಶಂಭುಲಿಂಗವೇ ಆದ ಉಳುಮೆ” ಎಂಬುದು ಸ್ಪಷ್ಟವಾಗುತ್ತಿದೆ.

 ತಾನು ತನ್ನೊಳು ತನ್ನ ನಿಜರೂಪ ನೋಡಲು ಮಾನವನು ಪರಮಾನಂದಮಯ ಚಿದಖಂಡರೂಪನಿರುವನು. ನಾನು ಯಾರು ? ಎಂಬುದರ ಅರ್ಥವಿಡಿದು ವಿಚಾರಿಸಿ ಜ್ಞಾನನಿಧಿ ಶಂಭುಲಿಂಗದ ನಿಜರೂಪ ತಾನೆಂದು ತಿಳಿದು ಅನುಭವಿಸುವ ಸುಖವೇ ಪರಮಾನಂದ. ಅದು ತುಂಬಿ ತುಳಕದ ಸಹಜಾನಂದ, ಅದನ್ನು ಶಬ್ದಗಳಲ್ಲಿ ವರ್ಣಿಸಲೂ ಸಾಧ್ಯವಿಲ್ಲ.

 ಇಂತಹ ಆನಂದದತ್ತ ನಮ್ಮ ನಿಜವಾದ ಅರಿವು ನಮ್ಮನ್ನು ಒಯ್ಯುತ್ತಿದೆ. ಈ ಆನಂದದತ್ತ ಸಾಗುವ ದಿಶೆಯಲ್ಲಿ ನಿಜಗುಣರು ಆರಂಭದಲ್ಲಿ ಸತ್, ಚಿತ್, ಆನಂದ ನಿತ್ಯ ಪರಿಪೂರ್ಣ ಇವುಗಳ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ನಂತರ ಶ್ರವಣಾದಿಗಳ ಬಗೆಗೆ ನಿರೂಪಿಸಿದ್ದಾರೆ. ಉಪಾಧಿ ನಿರಾಕರಣದ ಬಗೆಯನ್ನು ವಿವರಿಸಿದ್ದಾರೆ. ಅರಿವನ್ನು ಅನುಸಂಧಾನ ಮಾಡುವಲ್ಲಿ ಗುರುಕೃಪೆಯ, ಗುರುವಿನ ಉಪಕಾರ ಸ್ಮರಣೆಯ ಬಗೆಗೆ ಹೇಳಿದ್ದಾರೆ. ಕೊನೆಯಲ್ಲಿ ಜೀವನ್ಮುಕ್ತಿ, ಪ್ರಾರಬ್ಧ ಕರ್ಮಗಳನ್ನು ಕುರಿತು ವಿವೇಚಿಸಿ ಮಂಗಲವನ್ನು ಹಾಡಿದ್ದಾರೆ.

ಮೌಲಿಕವಿಚಾರ, ಹೃದಯಂಗಮ ನಿರೂಪಣೆಗಳು ನಿಜಗುಣರ ಕೃತಿಯಲ್ಲಿ ಕಂಡುಬರುತ್ತಿವೆ. ‘ಆತ್ಮ’ ವಿಚಾರದಲ್ಲಿ ಹೀಗೆ ಹೇಳಲಾಗಿದೆ.

 ಆತ್ಮನು ‘ಸಕಲಾರ್ಥ ಸಂಬಂಧಿ

ಸಕಲಾರ್ಥ ದೂರನು

ಸಕಲಾರ್ಥನೂ ಅಹುದು.’

ಇಲ್ಲಿ ಆತ್ಮನ ವ್ಯಾಪಕತ್ವ ನಿರ್ಲೇಪಕತ್ವ ಆತನು ಎಲ್ಲ ಪುರುಷಾರ್ಥಗಳ ಸ್ವರೂಪ ಎಂದು ಹೇಳಲಾಗಿದೆ. ಶ್ರೀ ಅರವಿಂದ ದರ್ಶನದಲ್ಲಿ ಈ ಬಗೆಯ ನಿರೂಪಣೆ ಇದೆ.

 ದೇಹ ಜಡ, ಆತ್ಮ ಅಜಡ

ದೇಹ ಬಹುರೂಪ, ಆತ ಏಕರೂಪ;

 ದೇಹ ಕೆಡುವದು, ಆತ್ಮ ನಿತ್ಯ;

ದೇಹ ಕಡೆಗೆ ಮಣ್ಣಾಗುತ್ತಿದೆ,

ಆತ್ಮ ನಿಜವಸ್ತುವಾಗುತ್ತಿದೆ.

ಇದರಂತೆ ‘ಅನುಭವಿ’ ‘ಜ್ಞಾನಿ’ ಇತ್ಯಾದಿ ವಿಷಯಗಳನ್ನು ಕುರಿತ ವಿವೇಚನೆಯು ಮೌಲಿಕವಾಗಿದೆ. ಬಳಸಿದ ದೃಷ್ಟಾಂತಗಳಿಂದಾಗಿ ಆ ವಿವೇಚನೆಯು ಸ್ಪಷ್ಟವೂ ಹೃದಯಂಗಮವೂ ಆಗಿದೆ. ವ್ಯಾಖ್ಯಾನಕಾರರ ವಿವರಣೆಯಿಂದಾಗಿ ಆ ವಿಷಯವು ಇನ್ನಷ್ಟು ಸುಗಮವಾಗಿದೆ.

 ಜ್ಞಾನ ಪ್ರತಿಪಾದನ ಸ್ಥಲʼವು ಮೂಲದಲ್ಲಿ ಸುಮಾರು ೨೮ ಪುಟಗಳಿದ್ದು, ೫೯ ಹಾಡುಗಳಿಂದ ಕೂಡಿದೆ. ಇಷ್ಟು ಸಾಮಗ್ರಿಯನ್ನು ಶಿವಕಾರುಣ್ಯ ಸ್ಥಲ’ ದಲ್ಲಿಯ ಒಂದರ್ಧ ಪುಟದ ಒಂದು ಹಾಡನ್ನು ಸೇರಿಸಿ ವ್ಯಾಖ್ಯಾನುಕಾರರು ಇಲ್ಲಿ ೨೪೨ ಪುಟಗಳ ಕೃತಿಯನ್ನು ರಚಿಸಿದ್ದಾರೆ. ಅರ್ಥಾತ್ ಮೂಲದ ಹತ್ತುಪಟ್ಟು ವಿವರಣೆ ಇಲ್ಲಿದೆ. ಇದರಿಂದ ವ್ಯಾಖ್ಯಾನುಕಾರರ ವ್ಯಾಸಂಗದ ದೀರ್ಘತೆ, ಚಿಂತನೆಯ ಆಳನಿಷ್ಠೆ, ಪರಿಶ್ರಮಗಳ ಪ್ರಮಾಣ ವ್ಯಕ್ತವಾಗುವಂತಿವೆ.

 ಮಾನವನ ನಿಜಸ್ವರೂಪ, ಅದನ್ನು ಅರಿತುಕೊಳ್ಳುವ ಬಗೆ, ಅಂತಹ ಅರಿವಿನ ಪರಿಣಾಮಗಳನ್ನು ಬೋಧಿಸಿದ ಜ್ಞಾನಪ್ರತಿಪಾದನ ಸ್ಥಲದ ಕೊನೆಯ ಮಂಗಲ ಪದ್ಯವು ನಿಜಗುಣರ ಕಾವ್ಯಪ್ರತಿಭೆ, ಅಧ್ಯಾತ್ಮ ವೈಭವಕ್ಕೆ ಸಾಕ್ಷಿಯಾಗುವಂತೆ ರಚಿತವಾಗಿದೆ. ಅದು ಕರ್ನಾಟಕ ಜನತೆಯ ಹೃದಯದಲ್ಲಿ ನೆಲೆಸಿನಿಂತ ಜ್ಯೋತಿ ಬೆಳಗುತಿದೆ, ವಿಮಲ ಪರಂಜ್ಯೋತಿ ಬೆಳಗುತಿದೆ” ಎಂಬ ಸುವಿಖ್ಯಾತ ಹಾಡಾಗಿದೆ.     

ಶಂಭುಲಿಂಗವೇ ತಾನಾದಾಗ ಹೊರಹೊಮ್ಮುವ ಪರಂಜ್ಯೋತಿಯನ್ನು ಈ ಹಾಡಿನಲ್ಲಿ ಬಣ್ಣಿಸಲಾಗಿದೆ. ದೀಪದಂತೆ ಪ್ರಕಾಶಮಾನ, ಕಮಲದಂತೆ ನಿರ್ಲಿಪ್ತವಾದ ಆತ್ಮಜ್ಯೋತಿ ಇಲ್ಲಿ ಉಪಮೇಯವಾಗಿದೆ. ಬೆಳಗಿ ಪ್ರಕಾಶ ಬೀರುತ್ತಿರುವ ದೀಪ, ವಿಕಸಿಸಿ ಸೊಬಗು ಸುವಾಸನೆಗಳನ್ನು ಹೊರಹೊಮ್ಮಿಸುತ್ತಿರುವ ಕಮಲ ಇವೆರಡೂ ಇಲ್ಲಿ ಉಪಮಾನಗಳಾಗಿವೆ. ಒಂದು ಉಪಮೇಯಕ್ಕೆ ಎರಡು ಉಪಮಾನಗಳನ್ನು ಸಮಾನವಾಗಿ ಕೊನೆಯವರೆಗೆ ಬಳಸಿ ಅವುಗಳನ್ನು ಅರ್ಥಪೂರ್ಣವಾಗಿ ಸಮನ್ವಯಗೊಳಿಸಲಾಗಿದೆ. ಈ ಹಾಡಿನಲ್ಲಿ ೧) ಆತ್ಮಜ್ಯೋತಿ ೨) ದೀಪ ೩) ಕಮಲ ಇವುಗಳ ಮತ್ತು ವಿಚಾರದ ಘನತೆ, ಪಾರಮಾರ್ಥಿಕ ಪ್ರಕಾಶ, ಕಾವ್ಯ ಸೌಂದರ್ಯಗಳ ಮುಪ್ಪುರಿಯಿದೆ. ಅಂತೆಯೇ ಇದು ಅತ್ಯಂತ ಮೆಚ್ಚುಗೆಯನ್ನು ಪಡೆದ ಕನ್ನಡ ನುಡಿಯ ಹಾಡಾಗಿದೆ.

 ಆತ್ಮ ಜ್ಯೋತಿಗೆ ಸಂಬಂಧಿಸುವಂತೆ ದೀಪ, ಕಮಲಗಳ ಸ್ವರೂಪದ ವಿವರ ಅವೆರಡರ ವ್ಯವಹಾರಗಳನ್ನು ಕುರಿತ ಕಲ್ಪನೆಯು ಸಾಮಾನ್ಯರಿಗೆ ಜಟಿಲವೆನಿಸಬಹುದು. ಅಲ್ಲದೆ ಪ್ರತಿಯೊಂದು ಪದದ ಅರ್ಥವನ್ನು ಮುಖ್ಯ ವಿಷಯದೊಂದಿಗೆ ಹೊಂದಿಸಿಕೊಳ್ಳುವದು ಸುಲಭವಾಗಲಿಕ್ಕಿಲ್ಲ. ಆದರೆ ವ್ಯಾಖ್ಯಾನುಕಾರರು ಅಂತಹ ಜಟಿಲತೆಯುಂಟಾಗದಂತೆ, ಪ್ರತಿ ಪದದ ಅರ್ಥವು ಸ್ಪಷ್ಟ, ಸುಸಂಬದ್ಧವಾಗುವಂತೆ ಮಾಡಿದ್ದಾರೆ. ಈ ಮೂಲಕ ಅವರು ಈ ಹಾಡಿನ ಹಿರಿಮೆಯನ್ನು ಎತ್ತಿ ತೋರಿಸಿದ್ದಾರೆ.

ಮಾನವನು ತಾನು ಶಿವನೆಂಬ ಅರಿವನ್ನು ಪಡೆದಾಗ ವಿಮಲ ಪರಂಜ್ಯೋತಿ ಬೆಳಗುವದು. ಅದು ಬೆಳಗುತ್ತಿರುವದು ಮಾನವನ ಹೃದಯಕಮಲದಲ್ಲಿ, ಆತ್ಮ ಜಾಗೃತಿಯಿಂದ ಇದು ನಿಜಗುಣರ ಸಂದೇಶ. ಈ ಸಂದೇಶವನ್ನು ವ್ಯಾಖ್ಯಾನುಕಾರರು ಈ ಕೃತಿಯಲ್ಲಿ ವಿವರಿಸಿ, ವಿವೇಚಿಸಿ ಮನದಟ್ಟು ಮಾಡಿಕೊಟ್ಟಿದ್ದಾರೆ. ವಾಚಕರು, ಜಿಜ್ಞಾಸುಗಳು ಇದರ ಪ್ರಯೋಜನ ಪಡೆಯಲಿ ! ನಾವೆಲ್ಲ ಅರಿವಿನತ್ತ ಪ್ರಶಾಂತ ಪರಂಜ್ಯೋತಿಯತ್ತ ಸಾಗುವಂತಾಗಲಿ !! ಇದು ನನ್ನ ಹಾರೈಕೆ.    

ಡಾ|| ಎಸ್. ಎಂ. ಹಿರೇಮಠ

ಪೀಠಿಕೆ: 

ಶಿವಕೀರ್ತನಕಾರರಾಗಿ ಪುರಾಣ ಪ್ರವಚನ ಪ್ರವೀಣರಾಗಿ ಬದುಕಿ ತನ್ಮೂಲಕ ಜನಪದ ಬದುಕಿಗೆ ಸುಸಂಸ್ಕಾರವನ್ನು ಸಂಪ್ರಾಪ್ತಗೊಳಿಸಿದ ದ್ಯಾಂಪುರದ ಚನ್ನಕವಿಗಳು ಲೇಖಕರಾಗಿ ಶಿವಕವಿಗಳಾಗಿ ಗಾಳಿಯಲ್ಲಿ ತೇಲಿಹೋಗುತ್ತಿದ್ದ ತಮ್ಮ ವಿಚಾರಗಳನ್ನು ಹಾಳೆಯಲ್ಲಿ ಹಿಡಿದಿರಿಸಿ ಅವಕ್ಕೆಲ್ಲ ಕೃತಿಯರೂಪ ಕೊಟ್ಟವರು. ವೀರಶೈವ ದರ್ಶನ ಸಂಸ್ಕೃತಿಯ ಸಾರಸಾರಾಯದಿಂದ ಸಂಸಿದ್ಧವಾದ ಅವರ ವ್ಯಕ್ತಿತ್ವದ ಪ್ರತಿಬಿಂಬವೆಂಬಂತೆ ಅವರ ರಚನೆಯ ಹಲವು ಕೃತಿಗಳು ಮೂಡಿಬಂದಿವೆ. ಓದುಗನು ಅವುಗಳನ್ನು ಪರಿಭಾವಿಸುತ್ತ ಮುನ್ನಡೆದಂತೆ ವೀರಶೈವತ್ವದ ಸಾಂಪ್ರಾದಾಯಿಕವಾದ ಸಮಗ್ರ ದರ್ಶನವು ಅವನಿಗಾಗುತ್ತದೆ. ಇಂತಹ ಕೃತಿಗಳ ಸಾಲಿನಲ್ಲಿಯೇ ನಿಲ್ಲಬಹುದಾದ ಒಂದು ಕಿರು ಕೃತಿ ಈ ಮಂತ್ರ ರಹಸ್ಯ

.ಕೃತಿಯ ಗಾತ್ರ : ಮಂತ್ರರಹಸ್ಯವು ಒಟ್ಟು ೭೭ ಪುಟಗಳಿಂದ ಕೂಡಿದ ಚಿಕ್ಕ ಕೃತಿ ಇದರ ಆಕಾರವು ೧/೮ ಡೆಮಿ ರೂಪದಲ್ಲಿದೆ. ಮೊಟ್ಟಮೊದಲಿಗೆ ಈ ಕೃತಿಯು ಕುಕನೂರಿನ ಕಪ್ಪತ್ತಪ್ಪಾ ನಾಲವಾಡ ಅವರು ಕ್ರಿ. ಶ. ೧೯೨೪ ರಲ್ಲಿ ಪ್ರಕಾಶನ ಗೊಳಿಸಿದರು. ನಾಲ್ಕು ಆಣೆಯ ಬೆಲೆಯಲ್ಲಿ ಒಂದು ಸಾವಿರ ಪ್ರತಿಗಳನ್ನು ಪ್ರಕಟಿಸಿ ಆ ಕಾಲದಲ್ಲಿ ವಿತರಿಸಲಾಯಿತು. ಮಂಗಳೂರಿನ ಧರ್ಮಪ್ರಕಾಶ ಛಾಪಖಾನೆಯಲ್ಲಿ ಕೃತಿಯು ಪ್ರಕಟವಾದ್ದರಿಂದ ಪ್ರಕಟಣೆಯ ಪರಿಣಾಮವು ಅತಿ ಸುಂದರವಾಗಿ ಮೂಡಿ ಬರಲು ಕಾರಣವಾಯಿತು. ಕೃತಿಗೆ ಲೇಖಕರೆ ಬರೆದಿರುವ ಮೂರು ಪುಟಗಳ ಔಚಿತ್ಯಪೂರ್ಣವಾದ ಪ್ರಸ್ತಾವನೆಯಿದೆ. ನಾಲ್ಕನೆಯ ಪುಟದಲ್ಲಿ ಸಾಂಪ್ರದಾಯಿಕ ಶೈಲಿಯ ಶಿವಪಾರ್ವತಿಯರ ಕಪ್ಪುಬಿಳುಪಿನ ಚಿತ್ರವಿದೆ. ಪಾರ್ವತಿಯ ತೊಡೆಯ ಮೇಲೆ ಗಣಪತಿ ಅಸೀನನಾಗಿದ್ದಾನೆ. ಶಿವನ ಪಾದ ಸನ್ನಿಧಿಯಲ್ಲಿ ಎಡಬಲಕ್ಕೆ ವ್ಯಾಘ್ರ ನಂದಿಗಳ ಚಿತ್ರ ಬಿಡಿಸಲಾಗಿದೆ. ಋಷಿದ್ವಯರು ಎಡ ಬಲಕ್ಕೆ ನಿಂತುಕೊಂಡು ಕಹಳೆ-ಭೇರಿ ನುಡಿಸುತ್ತಲ್ಲಿದ್ದಾರೆ. ೧೯-೫-೧೯೨೪ ಪೂರ್ಣಗೊಂಡು ಪ್ರಕಟವಾದಂತೆ ಉಲ್ಲೇಖ ಮಾಡಲಾಗಿದೆ.

ಕೃತಿಯ ಪಾತ್ರ : ಮಂತ್ರ ರಹಸ್ಯದ ಗಾತ್ರವು ಕಿರಿದಾಗಿದ್ದರೂ ಇದರ ಪಾತ್ರವು ವೀರಶೈವ ತತ್ವಾಚರಣೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ವೀರಶೈವರು ಅಷ್ಟಾವರಣ ಅನುಸಂಧಾನಿಗಳು.ಅವರ ಸಾಧನೆಗೆ ಅಷ್ಟಾವರಣಗಳು  ಅಂಗಪ್ರಾಯವಾಗಿವೆ. ಗುರು ಸೇವೆ, ಇಷ್ಟ ಲಿಂಗಾರ್ಚನೆ, ಜಂಗಮ ದಾಸೋಹ ವಿಭೂತಿಯಲ್ಲಿನ ವಿಶ್ವಾಸ, ರುದ್ರಾಕ್ಷಿಯಲ್ಲಿನ ನಂಬುಗೆ, ಪಾದೋದಕದಲ್ಲಿನ ಶ್ರದ್ಧೆ  ಪ್ರಸಾದದಲ್ಲಿನ ನಿಷ್ಠೆ, ಇವುಗಳನ್ನು ಧಾರಣಮಾಡಿ ನಿಲ್ಲುವ ಸಾಧಕನಲ್ಲಿಯ ಅಂತರಂಗದ ಅಂಗ. ಮನಸ್ಸು, ಸುನಿಶ್ಚಿತ ಏಕಾಗ್ರಗೊಳಿಸುವ ಮಹಾಸಾಧನವೇ ಮಂತ್ರ ಆದುದರಿಂದಲೇ ‘’ಮನಸಾ ತ್ರಾಯತ ಇತಿ ಮಂತ್ರ’ʼ. ಎಂದು ಅದರ ನಿರ್ವಚನ ಮಾಡಲಾಗಿದೆ. ಮನದಲ್ಲಿ ಮನಪೂರ್ವಕ ಮನನಿಸುವ ಕ್ರಿಯೆಯೆ ಮಂತ್ರವಾಗಿದೆ. ಇದು ಬಹಿರ್ಮುಖವಾಗಿರುವ ಮನಸ್ಸನ್ನು ಅಂತರ್ಮುಖವಾಗಿಸುವುದಕ್ಕೆ ಮಹಾ ಸಾಧನವಾಗಿ ನಿಲ್ಲುತ್ತದೆ. ಶಿವರೂಪ ಅರ್ಥಾತ್ ಲಿಂಗರೂಪವನ್ನು ಮನನಿಸುವ ಮಂತ್ರದಾಯಕವಾದ ಮನಸ್ಸು. ಆ ಶಿವರೂಪ ಅಥವಾ ಲಿಂಗ ರೂಪವೇ ಆಗಿ ಬಿಡುತ್ತದೆ. ಈ ಅರ್ಥದಲ್ಲಿಯೇ ಶಿವಯೋಗಿ ಸಿದ್ಧರಾಮನು “ಸಂಕಲ್ಪ-ವಿಕಲ್ಪಂಗಳ ಧರಿಸಿದಲ್ಲಿ ಮನವೆಸಿತ್ತು .ಅದು ಅಳಿದ ಭಾವ ತಲೆದೋರಿ ದಲ್ಲಿ ಮಹಾದೇವನೆ ತಾನೆನಿಸಿತ್ತು’ʼ ಎಂದಿದ್ದಾನೆ. ಸಪ್ತ ಕೋಟಿ ಮಂತ್ರಗಳಿವೆ ಯೆಂಬುದು ಪ್ರಾಜ್ಞರ ಹೇಳಿಕೆ. ಅವುಗಳಲ್ಲೆಲ್ಲ ವೀರಶೈವರಿಗೆ ಪರಮವಾದ ಮಹಾ ಮಂತ್ರವೆಂದರೆ- ಪಂಚಾಕ್ಷರ ಮಂತ್ರ. ʼ’ನಮಃ ಶಿವಾಯʼ’ ಎಂಬುದೇ ಆ ಮಂತ್ರ ವಾಗಿದೆ. ಪಂಚಾಕ್ಷರ ಮಂತ್ರದ ರಹಸ್ಯ ನಿರೂಪಣೆಯ ಕೃತಿಯ ವಸ್ತುವಾಗಿದ್ದು, ಅದುವೆ ಅದರ ಪಾತ್ರವಾಗಿದೆ. ವೀರಶೈವ ಸಾಧಕನು ಪಂಚಾಕ್ಷರ ಮಂತ್ರವನ್ನು ಜಪಿಸುವ ವಿಧಿ ವಿಧಾನಗಳನ್ನು ಕುರಿತಂತೆ ಸೈದ್ಧಾಂತಿಕ ನೆಲೆಯಲ್ಲಿ ಲೇಖಕರಾದ ಚನ್ನಕವಿಗಳು ಹತ್ತು ಹಲವು ಆಕರಗಳ ಅಧ್ಯಯನದಿಂದ ನಿರ್ಧಾರ ಪೂರ್ವಕವಾಗಿ ನಿರೂಪಿಸಿದ್ದಾರೆ. ಲೇಖಕರು ತಮ್ಮ ನಿರೂಪಣೆಗೆ ಎತ್ತಿಕೊಂಡಿರುವ ಗದ್ಯಮಾರ್ಗವು ಸರಳವೂ, ಖಚಿತವೂ ಆಗಿದೆ.

ಕೃತಿರಚನೆಗೆ ಒದಗಿಬಂದ ಪ್ರೇರಣೆ  :

ಕಲಬುರ್ಗಿ ಜಿಲ್ಲೆಯ ಇಂದಿನ ತಾಲೂಕಾ ಸ್ಥಳವಾಗಿರುವ ಸೇಡಂ ಗ್ರಾಮದ ನಿವಾಸಿಯಾಗಿದ್ದ ಸಿದ್ಧರಾಮಯ್ಯನೆಂಬ ಲೇಖಕನು ಪಂಚಾಕ್ಷರ ಮಂತ್ರ ವಿಷಯ ಕುರಿತಂತೆ ರಚಿಸಿದ್ದ ಕೃತಿಗೆ ಉತ್ತರವೆಂಬಂತೆ ಈ ‘ಮಂತ್ರ ರಹಸ್ಯ’ ಕೃತಿಯು ಕಾಣಿಸಿ ಕೊಳ್ಳುವುದರಿಂದ, ಸೇಡಂನ ಸಿದ್ಧರಾಮಯ್ಯನ ಕೃತಿಯೆ ಚನ್ನಕವಿಗಳಿಗೆ ಪ್ರೇರಣೆ ಒದಗಿಸಿದೆಯೆನ್ನಬಹುವಾಗಿದೆ. ಸಿದ್ಧರಾಮಯ್ಯನವರ ‘ಪಂಚಾಕ್ಷರ ಮಂತ್ರ ಮಹತ್ವ’ ಎಂಬುದು ತೀರಾ ಚಿಕ್ಕದಾದ ಕೃತಿಯಾಗಿದೆ. ಅವರಲ್ಲಿ ಲೇಖಕರು. “ಪಂಚಾಕ್ಷರ ಮಂತ್ರವನ್ನು ಬಹಿರಂಗವಾಗಿ ಸಕಲರಿಗೂ ಹೇಳಬಹುದಾಗಿದೆ”. ಎಂಬಂತೆ ಮಾತನಾಡಿದ್ದಾರೆ. ಕೃತಿಯಲ್ಲಿನ ಒಕ್ಕಣಿಕೆಯನ್ನಿಲ್ಲಿ ಉದ್ಧರಿಸಲಾಗಿದೆ, “ಶಿವಪಂಚಾಕ್ಷರಿ ಎಂಬ ಮಂತ್ರವನ್ನು ಸರ್ವರಿಗೂ ಬಾಹ್ಯದಲ್ಲಿ ಜಪಿಸುವದಕ್ಕೆ ಪ್ರಮಾಣ ಭೂತವಾದ ಈ ಗ್ರಂಥವು ಪಂಚಾಕ್ಷರ ಮಂತ್ರವು ಬಾಹ್ಯದಲ್ಲಿ ಜಪಿಸುವುದು ಸಪ್ರಮಾಣವೆಂದು ಸರ್ವರಿಗೂ ತಿಳಿಯಲೋಸುಗ ಈ ಕೃತಿ ಪ್ರಕಟಿಸಲ್ಪಟ್ಟಿರುವುದು” ಈ ಒಕ್ಕಣಿಕೆಗೆ ಚನ್ನಕವಿಗಳ ತೀವ್ರವಾದ ವಿರೋಧವಿದೆ. ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತ ಪಂಚಾಕ್ಷರ ಮಂತ್ರವನ್ನು ಗುಪ್ತವಾಗಿ ಜಪಿಸಬೇಕೆಂದು ಹೇಳುವುದಕ್ಕಾಗಿ ಅವರು ‘ಮಂತ್ರರಹಸ್ಯ’ ಕೃತಿ ರಚನೆಗೆ ಕೈ ಹಾಕಿದ್ದಾರೆ. ತಮ್ಮ ಪ್ರಸ್ತಾವನೆಯ ಭಾಗದಲ್ಲಿ ಈ ಮಾತುಗಳನ್ನು ಸುವ್ಯಕ್ತವಾಗಿಸಿರುವುದನ್ನು ಕಾಣಬಹುದಾಗಿದೆ. ʼʼಛಲವಂತರು ಶಿವಮಂತ್ರವನ್ನು ಬೈಲಿಗೆ ನಿಂತು ದೊಡ್ಡದಾದ ಧ್ವನಿಯಿಂದ ಕೂಗುವುದನ್ನು ಬಿಡಲೆಂತಲೂ ಇವರು ಗುಪ್ತವಾಗಿ ಜಪಿಸುವ ಪರಿಪಾಠವನ್ನು ಇಡಲೆಂತಲೂ ನಾನು ಉದ್ದೇಶಿಸಿ ಈ ಗ್ರಂಥವನ್ನು ಬರೆದಿಲ್ಲ. ಈ ಬಗೆಯ ಹೇವದ ಮೂರ್ತಿಗಳನ್ನು ತಿದ್ದುವುದು ಬ್ರಹ್ಮನಿಂದಾದರೂ ಆಗದು. ಆದರೆ ಯೋಗ್ಯಾಯೋಗ್ಯ ವಿಚಾರವನ್ನು ಮಾಡಬಲ್ಲ ಸಜ್ಜನರು ಪರೀಕ್ಷಿಸಿ ಯಥಾರ್ಥವಿದ್ದರೆ ಒಪ್ಪಲೆಂದು ಪರಮೋತ್ಸಾಹದಿಂದ ಬರೆದಿರುವನು” ಈ ಮಾತು ಕೃತಿಗೆ ಒದಗಿ ಬಂದ ಪ್ರೇರಣೆಯನ್ನು ಸ್ಪಷ್ಟ ವಾಗಿಸುತ್ತದೆ.

ವಸ್ತುವಿನ ಹಿನ್ನಲೆಯಲ್ಲಿನ ವಾದ-ಸಂವಾದದ ನೆಲೆಗಳು :

ಸೇಡಂನ ಸಿದ್ಧರಾಮಯ್ಯನ ವಾದಕ್ಕೆ ಚೆನ್ನಕವಿಗಳು ತಮ್ಮ ಈ ಕೃತಿಯ ಮೂಲಕ ಸಂವಾದವೊಂದನ್ನು ಸೃಷ್ಟಿಸಿಕೊಂಡಿದ್ದಾರೆಂದು ಹೇಳಬಹುದು. ಯಾವ ಆಕರಗಳನ್ನು  ಬಳಸಿಕೊಂಡು ಲೇಖಕ ಸಿದ್ಧರಾಮಯ್ಯ ʼʼಪಂಚಾಕ್ಷರ ಮಂತ್ರವು ಬಹಿರಂಗವಾಗಿ ಜಪಿಸಬಹುದೆಂದುʼ’ ಹೇಳಿದನೋ ಅದೇ ಆಕಾರಗಳ ಮೂಲಕವಾಗಿ ಚನ್ನಕವಿಗಳು “ಪಂಚಾಕ್ಷರ ಮಂತ್ರವು ಅಂತರಂಗದಲ್ಲಿಯೇ ಜಪಿಸುವ ಅಷ್ಟಾವರಣಾನುಸಂಧಾನವಾಗಿದೆʼ’ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ  . ಸಾಧಿತ ವಿಷಯಕ್ಕೆ ಇನ್ನು ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಪೂರೈಸುವುದು ಕೃತಿಯಲ್ಲಿ ಕಂಡುಬರುತ್ತದೆ. ರಾಜಶೇಖರ ವಿಳಾಸ, ಸಾನಂದಚಾರಿತ್ರ,ವಾತುಲಾಗಮ,ಕಾಮಿಕಾಗಮ,ಬ್ರಹ್ಮತರಖಂಡ,ಪಾರಮೇಶ್ವರಾಗಮ,ಸೂಕ್ಷ್ಮಾಗಮ,ವೀರಶೈವಾಮೃತ ಮಹಾಪುರಾಣ, ಶಿವ ಮಹಾಪುರಾಣ ಇವನ್ನು ಆಧರಿಸಿ ಸಿದ್ಧರಾಮಯ್ಯನು ತನ್ನ ವಾದವನ್ನು ಮಂಡಿಸಿದ್ದಾನೆ. ಚೆನ್ನಕವಿಗಳು ಮೇಲಿನ ಆಕರಗಳೊಂದಿಗೆ ಶೈವರತ್ನಾಕರ, ಯೋಗಶಿಖೋಪನಿಷತ್ತು ಸೂತಸಂಹಿತೆ, ಮೌಕ್ತಿಕೋಪನಿಷತ್ತು,ನಿಜಗುಣ ಶಿವಯೋಗಿಗಳ ವಿವೇಕಚಿಂತಾಮಣಿ, ಪರಮಾನುಭವ ಬೋಧೆ, ಕೈವಲ್ಯ ಪದ್ಧತಿ, ಪಾರಮಾರ್ಥ ಪ್ರಕಾಶಿಕೆ, ಹೇಮಕೋಶ, ಅಮರಕೋಶ, ಮನುಸ್ಮೃತಿ, ಯಾಜ್ಞವಲ್ಕ್ಯಸ್ಮೃತಿ, ಪಾತಂಜಲಿ ಯೋಗ ಸೂತ್ರ, ಸಹಸ್ರಮಹಾವಾಕ್ಯ, ರತ್ನಾವಳಿ, ರಾಮ ಪೂರ್ವತಾ ಪಿನ್ಯುಪನಿಷತ್ತು ಸುಪ್ರಭೇದಾಗಮ, ಸಿದ್ಧಾಂತ ಶಿಖಾಮಣಿ, ಶ್ವೇತಾಶ್ವತರೋಪನಿಷತ್ತು, ಸರ್ವಜ್ಞನ ವಚನಗಳು, ಶಿವಶರಣರ ಗೀತೆಗಳು, ಕವಿ ಕಲ್ಪದ್ರುಮ, ಶಬ್ದ ಕಲ್ಪ ದೃಮ, ಸ್ಕಂದ ಪುರಾಣ, ಮುದ್ದಲೋಪನಿಷತ್ತು, ಲಿಂಗ ಪುರಾಣ ಈ ಮುಂತಾದ ಆಕರಗಳನ್ನು ತಮ್ಮ ಹೇಳಿಕೆಗೆ ಪೂರಕವಾಗಿ ಇರಿಸಿಕೊಂಡಿದ್ದಾರೆ.

ಸಿದ್ಧರಾಮಯ್ಯನ ವಾದದ ಮುಖ್ಯ ಅಂಶಗಳು ಹೀಗಿವೆ :

೧) ಪಂಚಾಕ್ಷರ ಮಂತ್ರವನ್ನು ಬಹಿರಂಗವಾಗಿ ಉಚ್ಛರಿಸಬಹುದಾಗಿದೆ.

೨) ಪಂಚಾಕ್ಷರ ಮಂತ್ರವನ್ನು ಜನರಿಗೆ ಕೇಳುವಂತೆ ಗಟ್ಟಿಯಾಗಿ ಉಚ್ಚರಿಸಬಹುದಾಗಿದೆ.

೩) ಪಂಚಾಕ್ಷರ ಮಂತ್ರವನ್ನು ಯಾರು ಬೇಕಾದವರೂ ಹೇಳಬಹುದಾಗಿದೆ. ಕೇಳಬಹುದಾಗಿದೆ.

೪) ಪಂಚಾಕ್ಷರ ಮಂತ್ರದ ಪಠಣಕ್ಕೆ ನಿಶ್ಚಿತವಾದ ಅಧಿಕಾರ ಕಾಲ-ದೇಶಾದಿಗಳಾವವೂ ಇರಬೇಕಾದ ಅವಶ್ಯಕತೆಯಿಲ್ಲ.

೫) ಯಾವಾಗಲೂ ಸಾಧಕನು ಪಂಚಾಕ್ಷರ ಮಂತ್ರವನ್ನು ಜಪಿಸುತ್ತಲೇ ಇರಬೇಕು.

೬) ಪಂಚಾಕ್ಷರ ಮಂತ್ರದ ಬೋಧನೆಯಲ್ಲಿ ಮೇಲು-ಕೀಳು ಗುಣ-ಅವಗುಣಗಳನ್ನು ನೋಡಬೇಕಾದ ಅವಶ್ಯಕತೆಯಿಲ್ಲ.

೭) ಪಂಚಾಕ್ಷರ ಮಂತ್ರವು ಗುಪ್ತವಾಗಿರಿಸಿಕೊಳ್ಳಬೇಕಾದುದಿಲ್ಲ.

೮) ಪಂಚಾಕ್ಷರ ಮಂತ್ರದ ಪಠಣವನ್ನು ಯಾರು ಬೇಕಾದರೂ ಕೇಳಿದರೂ ತಪ್ಪಲ್ಲ.

೯) ಪಂಚಾಕ್ಷರ ಮಂತ್ರದ ಪಠಣಕ್ಕೆ ಯಾವುದೇ ವಿಧಿಯ ಅವಶ್ಯಕತೆಯಿಲ್ಲ.     

ಈ ಮೇಲಿನ ವಿಚಾರಗಳನ್ನು ಒಪ್ಪಿಕೊಳ್ಳದ ಚೆನ್ನಕವಿಗಳು ಆಧಾರಪೂರ್ವಕವಾಗಿ ಅವುಗಳಿಗೆ ತಮ್ಮ ವಿರೋಧವನ್ನು ವ್ಯಕ್ತಗೊಳಿಸಿದ್ದಾರೆ. ಅಷ್ಟೇ ಅಲ್ಲ ಅವು ಶಾಸ್ತ್ರ ವಿರೋಧವಾದವುಗಳೆಂದೂ ಸಾರಿದ್ದಾರೆ. ತಮ್ಮ ವಿಚಾರಗಳಿಗೆ ನಿದರ್ಶನ ಗಳನ್ನು ಕೊಡುತ್ತ ಸಂವಾದವನ್ನು ಈ ಮುಂದಿನಂತೆ ಮಂಡಿಸಿದ್ದಾರೆ.  

೧)’’ ಮಂತ್ರವನ್ನು ಗುಪ್ತವಾಗಿಯೇ ಉಚ್ಚರಿಸಬೇಕು’’ ಇದಕ್ಕೆ ಚನ್ನಕವಿಗಳು ಜಾಬಾಲೋಪನಿಷತ್ತು ಮತ್ತು ಮುಕ್ತಿಕೊಪನಿಷತ್ತು ಇವುಗಳಲ್ಲಿ ಹೇಳಿರುವ  ಮಾತನ್ನು ಉದ್ಧರಿಸುತ್ತಾರೆ. ‘ತನ್ನ ಸಿದ್ಧಿಂ ಪ್ರಯಚ್ಛಂತೆ ಮಂತ್ರಾಃ ಸಂಕೀರ್ತಿತಾ ಇವ’’ ಕೊಡಲಾರವು” ಎಂಬುದು ಆ ಉಲ್ಲೇಖವಾಗಿದೆ. ಸಾರವಾಗಿದೆ.ʼʼ ಕೂಗಿ ಉಚ್ಛರಿಸಿದ ಮಂತ್ರಗಳು ಸಿದ್ಧಿಯನ್ನು

ಕೊಡಲಾರವುʼʼಎಂಬುದು ಉಲೇಕದ ಸಾರವಾಗಿದೆ.

೨) ಮಂತ್ರವು ಜನರಿಗೆ ಕೇಳುವಂತೆ ನುಡಿದರೆ ಅದು ಸ್ತೋತ್ರವಾಗಬಹುದು. ಅಥವಾ ಭಜನ ರೂಪವಾಗಬಹುದು. ಆದರೆ ಜಪವಾಗಲಾರದು. ಇದರ ಸಮರ್ಥನೆಗೆ ಕವಿಗಳು ಮುಕ್ತಿಕೋಪನಿಷತ್ತಿನಲ್ಲಿ ಬರುವ ಪೂಜಾ ಕೋಟಿ ಸಮಂ ಸ್ತೋತ್ರಂ .. ಎನ್ನುವ ಶ್ಲೋಕವನ್ನು ಉದ್ಧರಿಸಿ ಪೂಜೆ, ಸ್ತೋತ್ರ, ಜಪ, ಧ್ಯಾನಗಳು ಬೇರೆ ಬೇರೆ  ಎಂದು ತೋರಿಸುತ್ತಾರೆ. ತನ್ಮೂಲಕ ಮನದಲ್ಲಿ ಮಂತ್ರವನ್ನು ಮನನಿಸುವುದು ಈ  ಜಪವಾಗುತ್ತದೆಂದು ಅರುಹುತ್ತಾರೆ.

 ೩) ಪಂಚಾಕ್ಷರ ಮಂತ್ರವನ್ನು ಯಾರು ಬೇಕಾದವರಿಗೆಲ್ಲ ಹೇಳಲು ಬಾರದು. ಇದಕ್ಕೆ ಲೇಖಕರು ಸೂತ ಸಂಹಿತೆಯಲ್ಲಿ ಬರುವ ವಿವರಗಳನ್ನು ಆಧಾರವಾಗಿ ಕೊಡುತ್ತಾರೆ. ‘ʼಉಚ್ಛಾರ ಜಪವಾದರೂ ನೀಚರೂ, ನಾಸ್ತಿಕರೂ ಕೇಳದಂತೆ ಅರಣ್ಯ ಮೊದಲಾದ ಏಕಾಂತ ಸ್ಥಳಗಳಲ್ಲಿ ಮಾಡಿದರೆ ತಕ್ಕ ಫಲವನ್ನು ಕೊಡುತ್ತದೆʼ’ ಎಂಬುದೇ ಅವರ ವಾದವಾಗಿದೆ. ”ಸ್ವಾಚಾರ ಪರಾಚಾರ ಗಳನ್ನು ಕೂಡಿ ನಡೆಸುವವನನ್ನೇ ಸೂತ ಸಂಹಿತೆಯು ನೀಚನೆಂದು  ಕರೆದಿದೆ.

 ೪) ಪಂಚಾಕ್ಷರ ಮಂತ್ರವು ಗುರುಮುಖದಿಂದಲೇ ಬೋಧಿತವಾಗಬೇಕು. ಗುರುವಾದವನೇ ಮಂತ್ರ ಬೋಧೆಗೆ ಅಧಿಕಾರಿಯಾಗಿರುತ್ತಾನೆ. ಶಿವಪುರಾಣದಲ್ಲಿ ಬರುವ ಉಲ್ಲೇಖವು ಇಲ್ಲಿ ಆಧಾರವಾಗಿದೆ. ʼ’ಶಿವ ಪಂಚಾಕ್ಷರಿʼ’ ಮಂತ್ರವನ್ನು ಗುರುವು ಅಂತಃಕರಣ ಪೂರ್ವಕವಾಗಿ ಏಕಾಂತದಲ್ಲಿ ಮೆಲ್ಲನೇ ಉಪದೇಶಿಸಬೇಕು. ಹೆ, ಪಾರ್ವತಿ ಗುರುವು ಈ ಮಂತ್ರವನ್ನು ಶಿಷ್ಯನಿಗೆ ಮೆಲ್ಲನೆ ಹೇಳಿ, ಅವನ ಮುಖದಿಂದ ಮೆಲ್ಲನೆ ಉಚ್ಚರಿಸುವಂತೆ ಮಾಡಬೇಕು. ಈ ಉಲ್ಲೇಖವು ಮಂತ್ರೋಪದೇಶಕ್ಕೆ ಗುರುವೇ ಅಧಿಕಾರಿಯೆಂದು ತಿಳಿಸುತ್ತದೆ. ಪಂಚಾಕ್ಷರ ಮಂತ್ರ ಜಪಕ್ಕೆ ನಿಶ್ಚಿತವಾದ ಕಾಲ, ಸ್ಥಳಗಳು ಬೇಕಾಗುತ್ತವೆ. ಎಲ್ಲೆಂದರಲ್ಲಿ ಯಾವಾಗ ಬೇಕೋ ಆವಾಗ ಜಪಿಸುವುದು ನಿಷಿದ್ಧವಾಗಿದೆ. ಈ ಹೇಳಿಕೆಯನ್ನು ಸಮರ್ಥಿಸಲು ಲೇಖಕರು ಶಿವಪುರಾಣದ ವಾಯು ಸಂಹಿತೆಯಲ್ಲಿ ಬರುವ ವಿಚಾರಗಳನ್ನು ತಿಳಿಸುತ್ತಾರೆ” ದಿನ ದಿನವೂ ನಿಶ್ಚಿತ ವೇಳೆಯಲ್ಲಿ ಮಂತ್ರವನ್ನು ಜಪಿಸಬೇಕು. ನದಿ ತೀರ, ಸಮುದ್ರ ತಡ, ಮಹಾಗಿರಿ, ಪುಣ್ಯಾಶ್ರಮ, ದೇವಾಲಯ, ಮನೋರಮ್ಯ ಸ್ಥಾನಗಳು ಮಂತ್ರಜಪಕ್ಕೆ ಯೋಗ್ಯವಾದ ಸ್ಥಾನಗಳಾಗಿವೆ. ಜಲಸನ್ನಿಧಿ, ದೇವ ಸನ್ನಿಧಿ, ಸೂರ್ಯ ಸನ್ನಿಧಿ, ಶಿವ ಸನ್ನಿಧಿಗಳೇ ಜಪವಿಧಿಗೋತ್ತರೋತ್ತರ ಸುಕೃತ ವಿಶಿಷ್ಟ ಸನ್ನಿಧಿಗಳೆಂದರಿವುದು.

 ೫) ಯಾವಾಗಲೂ ಸಾಧಕನು ಮಂತ್ರ ಜಪದಲ್ಲಿ ತೊಡಗುವುದಕ್ಕೆ ಸಾಧ್ಯವಾಗಲಾರದು. ನಿಶ್ಚಿತ ವೇಳೆಯಲ್ಲಿ ನಿರಂತರವಾಗಿ ಕೈಕೊಂಡ ಮಂತ್ರ ಜಪದಿಂದ ”ಮಂತ್ರಸಿದ್ಧ”ತ್ವವು ಪ್ರಾಪ್ತವಾಗುತ್ತದೆ. ಅಂತಹ ಮಂತ್ರಸಿದ್ಧರು ಮಾತ್ರ ಯಾವಾಗಲೂ ಮಂತ್ರ ಧ್ಯಾನದಲ್ಲಿ ಇರುವುದಕ್ಕೆ ಸಾಧ್ಯ. ಪಾರಮೇಶ್ವರಾಗಮದ  ತಿಷ್ಠನ್‌, ಶಿವನ್ ಭುಂಜನ್, ಸ್ವಪನ್, ಗಚ್ಛನ್” ಎಂಬ ಶ್ಲೋಕವು ಮಂತ್ರ ಸಿದ್ಧರ ಸಾಧನೆಗೆ ಪೂರಕವಾಗುತ್ತದೆ.

 ೬) ಸ್ನಾನ ಶಿವಾರ್ಚನೆಗಳಿಲ್ಲದ ಅನಾಚಾರಿಗಳೂ ಮಂತ್ರ ಜಪಕ್ಕೆ ಯೋಗ್ಯರಲ್ಲ ಎಂಬುದನ್ನು ಸ್ಕಂದ ಪುರಾಣ, ಲಿಂಗ ಪುರಾಣಗಳು ಬೋಧಿಸಿವೆ. ಸ್ಕಂದ ಪುರಾಣದಲ್ಲಿ ಬರುವ ದುರಾಚಾರಿಯಾದ ದಾರಾರ್ಹನೆಂಬ ರಾಜನ ಕಥೆಯನ್ನು ಚನ್ನ ಕವಿಗಳು ಈ ಸಂದರ್ಬದಲ್ಲಿ ಉದ್ದರಿಸಿದ್ದಾರೆ.(ರಾಜ ವಂಶದ ರಾಣಿ ಕಲಾವತಿ ಮಂತ್ರ ಉಪದೇಶ ಮಾಡಿದವನು ಗರ್ಗ ಮುನಿ)

೭) ಪಂಚಾಕ್ಷರವು ಮಂತ್ರ ಸಿದ್ಧರ ಅಂತರಂಗದ ದಿವ್ಯರತ್ನವಾಗಿದೆ. ಸರ್ಪವು ತನ್ನ ರತ್ನವನ್ನು ಗುಪ್ತವಾಗಿರಿಸಿಕೊಳ್ಳುವಂತೆ ಪಂಚಾಕ್ಷರ ಮಂತ್ರವೆಂಬ ಅನರ್ಥ್ಯ ರತ್ನವನ್ನು ಸಾಧಕನು ಅಂತರಂಗದಲ್ಲಿ ಜಪಿಸುತ್ತಿರಬೇಕು.

 (೮) ಪಂಚಾಕ್ಷರ ಮಂತ್ರವನ್ನು ಬೇಕಾದವರು ಕೇಳಬಹುದೆಂಬುದಕ್ಕೆ ಕವಿಗಳು ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಾರೆ. ‘ಸಾನಂದ’ ಮುನಿಯ ಮಂತ್ರವನ್ನು ಕೇಳಿದ ನರಕಿಗಳು ಉದ್ಧಾರವಾಗಲಿಲ್ಲವೆ? ಉಪಮನ್ಯುವಿನ ಮಂತ್ರ ಪಠಣವನ್ನು ಕೇಳಿ ಪಿಶಾಚಿಗಳು ತಮ್ಮ ಶಾಪದ ರೂಪವನ್ನು ನೀಗಲಿಲ್ಲವೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಚನ್ನಕವಿಗಳ ವಿವರವು ಹೀಗಿದೆ: ”ಕಾರುಣ್ಯೈಕ ನಿಧಿಯಾದ ಪರಮಾತ್ಮನು ಜೀವರನ್ನು ಅನೇಕ ರೀತಿಯಿಂದ ಉದ್ಧರಿಸುವನು. ಹಂದಿ ಮೊದಲಾದ ಕನಿಷ್ಠ ಜೀವಿಗಳು ಸಹ ಪ್ರಸಾದ ಭೋಗದಿಂದ ಮುಕ್ತಿಪಡೆದ ಇತಿಹಾಸಗಳು ಪುರಾಣಗಳಲ್ಲಿ ಅನೇಕವುಂಟು. ಇಷ್ಟದಿಂದಲೇ ಗುರು-ಲಿಂಗ-ಜಂಗಮರ ಪ್ರಸಾದಕ್ಕೆ ಹಂದಿ ಮೊದಲಾದವುಗಳು ಅರ್ಹವಾದವುಗಳೆಂದು ಯಾರೂ ಹೇಳಲಾರರು. ಅದರಂತೆ ಸಾನಂದ ಮುನಿಗಳು ಶಿವಮಂತ್ರದಿಂದ ನರಕಿಗಳನ್ನುದ್ದುರಿಸಿದರೆಂಬುದು ಇದೊಂದು ಬಗೆಯ ಪರಮಾತ್ಮನ ದಿವ್ಯ ಚೇಷ್ಟೆಯಲ್ಲದೇ ಅವನ ಆರಾಧಕರಾದ ನಮ್ಮ ಸಲುವಾಗಿ ಸ್ಪಷ್ಟವಾಗಿ ಹೇಳಿದ ವಿಧಿಶಾಸ್ತ್ರಕ್ಕೆ ಸಂಬಂಧಿಸಿದ್ದಲ್ಲ., ಇದರಂತೆ ಉಪಮನ್ಯುವಿನ ಕಥೆಯೂ ಸಹ.

೯) ಪಂಚಾಕ್ಷರ ಮಂತ್ರವನ್ನು ಪಡೆದುಕೊಳ್ಳುವುದಕ್ಕೆ ವಿಧಿಯುಂಟು. ಅದನ್ನು ಪಠಿಸುವುದಕ್ಕೂ ವಿಧಿ, ವಿಧಾನಗಳುಂಟು. ವೀರಶೈವ ಸಾಧಕನಿಗೆ ಗುರುವಾದವನು ದೀಕ್ಷೆಯನ್ನು ಅನುಗ್ರಹಿಸುವುದರ ಮೂಲಕ ಆ ವಿಧಿ, ವಿಧಾನಗಳನ್ನು ಅವನಿಗೆ ದೊರಕಿಸಿಕೊಡುತ್ತಾನೆ.

ವಾದಿಯ ಪ್ರಶ್ನೆಗಳಿಗೆ ಸಂವಾದಿಯ ಸಮರ್ಪಕ ಉತ್ತರಗಳು :

ಪರಂಪರಾಗತವಾಗಿ ಬಂದ ಪಂಚಾಕ್ಷರ ಮಂತ್ರ ಜಪದ ವಿಧಿ, ವಿಧಾನಗಳನ್ನು ಒಪ್ಪದ ವಾದಿಯು ಹಾಕುವ ಪ್ರಶ್ನೆಗಳಿಗೆ ಚನ್ನ ಕವಿಗಳು ಅತ್ಯಂತ ಸಮಂಜಸವಾದ ಉತ್ತರಗಳನ್ನು ನೀಡಿದ್ದಾರೆ

೧) ಅಷ್ಟಾವರಣಗಳಲ್ಲಿ ವಿಭೂತಿ, ರುದ್ರಾಕ್ಷಿ, ಗುರು-ಲಿಂಗ-ಜಂಗಮ ಪ್ರಸಾದ ಪಾದೋದಕಾದಿಗಳೆಲ್ಲ ಬಹಿರಂಗವಾಗಿಯೇ ಕಾಣುತ್ತಿರುವಾಗ ಮಂತ್ರ ವೊಂದೇ ಏಕೆ ಗುಪ್ತವಾಗಿರಿಸಬೇಕು? ಎಂಬುದು ಮೊದಲನೆಯ ಪ್ರಶ್ನೆ

  ಇದಕ್ಕೆ ಚೆನ್ನ ಕವಿಗಳು ನೀಡುವ ಉತ್ತರವು ಇಂತಿದೆ ;

 “ಸ್ತ್ರೀಯರ ಕುಚಗಳಾದರೂ ಅವಯವಗಳೇʼ ನೇತ್ರಗಳಾದರೂ ಅವಯವಗಳೇ, ಆದರೆ ಕುಚಗಳಂತೆ ಕಣ್ಣುಗಳನ್ನು ಮುಚ್ಚಿಕೊಳ್ಳಿರೆಂದು ಹೇಳಿದರೆ ಹುಚ್ಚತನ ವಲ್ಲವೇ?

೨) ದೇಶ-ಕಾಲಗಳ ವಿಚಾರವನ್ನು ಮೀರಿ ಪಂಚಾಕ್ಷರವನ್ನು ಏಕೆ ಜಪಿಸ ಬಾರದು? ಈ ಪ್ರಶ್ನೆಗೆ ಲೇಖಕರು ಇವಳು ನನ್ನ ಹೆಂಡತಿಯು. ನನ್ನ ಅಧೀನದಲ್ಲಿ ರುವವಳು, ಸಂಪರ್ಕ ಸುಖಕ್ಕಾಗಿ ಇವಳನ್ನು ಮದುವೆಯಾಗಿದ್ದೇನೆ ಎಂದ ಪತಿಯು, ಹಗಲು ಹೊತ್ತಿನಲ್ಲಿ ಮಂದಿಯೊಳಗೆ ಸತಿಯೊಡನೆ ಹೇಗೆ ವಿನೋದಿಸುವುದಕ್ಕೆ ಬರುವುದಿಲ್ಲವೋ, ಹಾಗೆಯೇ ಪಂಚಾಕ್ಷರ ಮಂತ್ರವು ಗುರು ಮುಖದಿಂದ ಪಡೆದರೂ ಸ್ಥಳ, ಕಾಲಗಳನ್ನು ಮೀರಿ ಜಪಿಸುಸುವದಕ್ಕೆ ಬರುವುದಿಲ್ಲ.

 ೩) ಚೊಕ್ಕ ನೈನಾರನು ಕೊಳಲಿನಲ್ಲಿ ಪಂಚಾಕ್ಷರ ಮಂತ್ರವನ್ನು ಊದುತ್ತಿ ದ್ದನು. ನಾನೇಕೆ ಅದನ್ನು ಬಾಯಿಯಿಂದ ಗಟ್ಟಿಯಾಗಿ ನುಡಿಯಬಾರದು? ಈ ಪ್ರಶ್ನೆಗೆ ಚೆನ್ನಕವಿಗಳು ಕೊಳಲಿನ ಅವ್ಯಕ್ತವಾದ ಮಧುರ ನಾದದಲ್ಲಿ ಅಕ್ಷರಗಳು ಉಚ್ಛಾರವಾಗುವದಿಲ್ಲ. ಅವನು ಭಕ್ತಿಯಿಂದ ಮನಸ್ಸಿನಲ್ಲಿ ಭಾವಿಸಿ ಮಂತ್ರವನ್ನು ಉಸಿರಿನಿಂದ ಊದುತ್ತಿದ್ದನು. ಅದರಿಂದ ಪಂಚಾಕ್ಷರಿಯನ್ನೇ ಊದುತ್ತಾನೆಂದು ಜನರಿಗೆ ತಿಳಿಯುತ್ತಿದ್ದಿಲ್ಲ”

೪) ಪಂಚಾಕ್ಷರ ಮಂತ್ರವು ವಿಧಿರಹಿತವಾಗಿ ಜಪಿಸಿದರೂ ಆಗುತ್ತದಲ್ಲ ? ಈ ಪ್ರಶ್ನೆಗೆ ಲೇಖಕರು; ಅಷ್ಟಾವರಣದ ಮಹತ್ವ ಹೇಳುವುದಕ್ಕಾಗಿ ಒಂದೊಂದು ಸಲ ವಿಧಿ ರಹಿತವಾದ ವಿಚಾರವು ಪುರಾಣಗಳು ಉಲ್ಲೇಖ ಮಾಡಿರುವುದುಂಟು. ಹಾಗೆಂದ ಮಾತ್ರಕ್ಕೆ ಅಷ್ಟಾವರಣ ಅನುಸಂಧಾನಕ್ಕೆ ವಿಧಿ-ನಿಯಮಗಳೇ ಬೇಕಿಲ್ಲ ಎಂದಲ್ಲ. ಈ ಮಾತನ್ನು ಒಂದು ಉದಾಹರಣೆಯಿಂದ ಅರಿತುಕೊಳ್ಳಬೇಕು……ʼʼಅತಿಪಾಪಿಯಾದ ಕಿರಾತನೋರ್ವನು ಅರಣ್ಯದಲ್ಲಿ ಪ್ರಾಣವಿಯೋಗ ತಾಪದಿಂದ ಬಿದ್ದಿರುವಾಗ ಸುಡುಗಾಡಿನ ಬೂದಿ ಕಾಲಿನಿಂದ ಬಂದ ಒಂದು ನಾಯಿಯು ಅವನ ಹಣೆಯನ್ನು ಮೆಟ್ಟಿತು. ನಾಯಿಯ ಕಾಲಿಗೆ ಹತ್ತಿದ ಹೆಣದ ಬೂದಿಯು ಆ ಶಬರನ ಹಣೆಗೆ ಹತ್ತಿತ್ತು ಅವನು ಮುಂದೆ ಕೆಲ ಹೊತ್ತಿನಲ್ಲಿ ಸತ್ತನು. ಇವರ ಹಣೆಯಲ್ಲಿ ವಿಭೂತಿಯನ್ನು ಧರಿಸಿದ್ದಾನೆ ಎಂದು ಶಿವನು ಆ ಶಬರನಿಗೆ ಮುಕ್ತಿಯನ್ನು ದಯಪಾಲಿಸಿದನು. ಇದು ವಿಭೂತಿಯ ಮಹಿಮೆಯನ್ನು ಸಾರುವುದಕ್ಕಾಗಿ ಹೇಳಿದ ಪುರಾಣದ ಕತೆ. ಹೀಗೆಂದ ಮಾತ್ರಕ್ಕೆ ನಾಯಿಯ ಕಾಲಿನಿಂದ ಬಂದ ಹೆಣದ ಬೂದಿಯನ್ನು ಮುಮುಕ್ಷುಗಳು ಪ್ರತಿದಿನದಲ್ಲಿ ಧರಿಸಬೇಕೆಂಬ ಅರ್ಥವಲ್ಲ. ವಿಭೂತಿಯು ಮುಕ್ತಿದಾಯಕವೆಂದು ಅದರ ಮಹಿಮೆಯನ್ನು ಹೀಗೆ ರೋಚಕವಾಗಿ ಹೇಳಲಾಗಿದೆ. ಆದರೆ ವಿಭೂತಿ ಧಾರಣಕ್ಕೆ ಯಾವುದೇ ವಿಧಿ, ನಿಯಮಗಳಿಲ್ಲವೆಂದು ಭಾವಿಸುವಂತಿಲ್ಲ, ಪಂಚಾಕ್ಷರ ಮಂತ್ರ ಜಪಕ್ಕೂ ಈ ಮಾತು ನಿಶ್ಚಯವಾಗಿ ಅನ್ವಯವಾಗುತ್ತದೆ ಎಂಬುದು ಲೇಖಕರ ಆಶಯವಾಗಿದೆ. ಹೀಗೆ ಚೆನ್ನ ಕವಿಗಳು ಸರಿಯಾದ ದೃಷ್ಟಾಂತ ನಿದರ್ಶನಾದಿಗಳಿಂದ ತಾವು ಹೇಳಬೇಕಾಗಿರುವ ವಿಷಯವನ್ನು ಓದುಗರಿಗೆ ಮನಗಾಣುವಂತೆ ಮಾಡಿದ್ದಾರೆ. ಒಟ್ಟಾರೆ ಪಾವನವಾದ ಪಂಚಾಕ್ಷರ ಮಂತ್ರವು ʼʼಮನೋಮಯಿ ಹೃದ್ಗತʼʼ ಎಂಬ ಮಾತನ್ನು ಖಚಿತಗೊಳಿಸಿರುವುದು.

 ಕೃತಿತ್ವದಲ್ಲಿ ವ್ಯಕ್ತಿತ್ವದ ಧ್ವನಿ :

ಕೃತಿಕಾರನಾದವನು ಎಷ್ಟೇ ಕೃತಿತ್ವದ ಚೌಕಟ್ಟಿನಿಂದ ದೂರ ಉಳಿಯಲು ಪ್ರಯತ್ನಿಸಿದರೂ ಅವನ ವ್ಯಕ್ತಿತ್ವದ ಹಲ ಕೆಲವು ಅಂಶಗಳು ನುಸುಳಿಕೊಂಡು ಅಲ್ಲಿ ಕಾಣದೇ ಬಿಡುವುದಿಲ್ಲ. ಈ ಮಾತು ಚನ್ನಕವಿಯ ಕೃತಿತ್ವ ವ್ಯಕ್ತಿತ್ವಕ್ಕೂ ಅನ್ವಯ ವಾಗುತ್ತದೆ. ಈ ದಿಸೆಯಲ್ಲಿ ಕಂಡು ಬರುವ ಕೆಲವು ಅಂಶಗಳನ್ನಿಲ್ಲಿ ಕಾಣಿಸಬಹುದು.

೧) ಚನ್ನಕವಿಗಳು ಅಪ್ಪಟ ವೀರಶೈವ ಧರ್ಮನಿಷ್ಠೆಯುಳ್ಳವರು.

೨) ವೀರಶೈವ ಧರ್ಮವು ಅತೀ ಪ್ರಾಚೀನವಾದುದೆಂಬ ನಿಶ್ಚಯದ ಹೇಳಿಕೆ ಅವರಲ್ಲಿದ್ದುದರಿಂದ ಪಂಚಾಕ್ಷರಮಂತ್ರದ ಬೇರುಗಳನ್ನು ಪ್ರಾಚೀನ ಆಕರಗಳಾದ ವೇದ-ಆಗಮ-ಉಪನಿಷತ್ತಾದಿಗಳಲ್ಲಿ ಗುರುತಿಸುತ್ತಾರೆ.

೩) ಕೃತಿಯನ್ನು ಓದುತ್ತನಡೆದಂತೆ, ಲೇಖಕರ ಬಹುಶೃತತ್ವದ ವ್ಯತ್ಪತ್ತಿ ಶಕ್ತಿಯು ತನ್ನ ರೂಪವನ್ನು ಕಾಣುವಂತೆ ಮಾಡುತ್ತದೆ.

೪) ಕೃತಿಯ ಬರಹದ ಶೈಲಿ ಸುಲಭವಾಗಿದ್ದರೂ ಸಾಂಪ್ರದಾಯಕವೆನಿಸುತ್ತದೆ.

೫)  ಪರಂಪರಾಗತವಾದ ವೀರಶೈವ ಧರ್ಮವನ್ನು ಯಥಾವತ್ತಾಗಿಯೇ ಅನುಸರಿಸ ಬೇಕೆಂದು ಅವರು ಒತ್ತಿ ಹೇಳುವಲ್ಲಿ ಕೆಲವು ಅನಿಷ್ಠಗಳು ಧರ್ಮದ ಹೆಸರಿನಲ್ಲಿ ಒಪ್ಪಿಕೊಂಡಂತಹ ನಿಲುವು ಅಲ್ಲಲ್ಲಿ ಕಂಡುಬರುತ್ತವೆ. ಒಂದೆರಡು ಉದಾ ಹರಣೆಗಳನ್ನು ಇಲ್ಲಿ ಎತ್ತಿ ಹೇಳಬಹುದಾಗಿದೆ.

 ಸ್ತ್ರೀಯಾದವಳಿಗೆ ಗುರುವಿನ ಸ್ಥಾನವು ಪ್ರಾಪ್ತವಾಗಲಾರದೆಂಬುದಕ್ಕೆ ಲೇಖಕರು ಕೊಡುವ ದಾರಾರ್ಹನ ಕಥೆಯು ಕವಿಗಳ ಹಳೆಯತನಕ್ಕೆ ಸಾಧಾರವಾಗುತ್ತದೆ. ಇನ್ನೊಂದು ಲಿಂಗ ಪುರಾಣದಲ್ಲಿ ಉಲ್ಲೇಖಗೊಂಡಿರುವ ಶೂದ್ರರ ಬಗೆಗಿನ ವಿಚಾರಗಳ ಬಗೆಗೆ ಕವಿಗಳು ತಾಳುವ ನಿಲುವು ಅಲ್ಲಿಬರುವ ವಿವರಣೆ ಹೀಗಿದೆ. ʼʼಕಲಿಯುಗದಲ್ಲಿ ಬ್ರಾಹ್ಮಣರು ಶೂದ್ರರೊಡನೆ ಮಂತ್ರ ಸಂಬಂಧ ಮಾಡುವರು. ಶುಭ್ರವಾದ ಹಲ್ಲುಗಳಿಂದಲೂ, ಕೃಷ್ಣಾಜಿನದಿಂದಲೂ, ರುದ್ರಾಕ್ಷಮಾಲಿಕೆಗಳಿಂದಲೂ, ಕಾವಿಯ ಕಪನಿ, ಮಸ್ತಕ ಪಾವುಡಗಳಿಂದಲೂ, ಬೋಳಿಸಿದ ಮಸ್ತಕದಿಂದಲೂ, ರಮ್ಯವಾಗಿ ಶೂದ್ರರು ಈ ಕಲಿಯುಗದಲ್ಲಿ ವೈದಿಕ ಧರ್ಮವನ್ನು ಆಚರಿಸುವರು’ʼ ಇಂಥ ಮಾತುಗಳನ್ನು ಉಲ್ಲೇಖ ಮಾಡುವುದರ ಮೂಲಕ ಕವಿಗಳು ʼʼವರ್ಣಾಶ್ರಮ ಧರ್ಮ”ವನ್ನು ಸಮ್ಮತಿಸುತ್ತಾರೆಂಬಂತೆ ಕಾಣುತ್ತದೆ. ಜಾತ್ಯಾತೀತ ಧರ್ಮ ನಿರಪೇಕ್ಷ ತತ್ತ್ವಗಳ ಪಾಲನೆಯಲ್ಲಿ ತೊಡಗಿರುವ ಇಂಥ ಸಾಮಾಜಿಕ ಸಂದರ್ಭದಲ್ಲಿ ಕವಿಗಳ ಮೇಲಿನ ವಿಚಾರಗಳು ತೀರಹಳೆಯ ಕಾಲದ ಆಲೋಚನೆಗಳಾಗಿ ತಮ್ಮ ಪ್ರಸ್ತುತತೆಯನಹ್ನು ಕಳೆದುಕೊಳ್ಳುತ್ತವೆ.

 ಧರ್ಮದ ತತ್ತ್ವವನ್ನು ಕಟ್ಟುನಿಟ್ಟಾಗಿ ಆಚರಿಸಬೇಕೆಂಬುದರ ಕಡೆಗೆ ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸುವುದರ ಮೂಲಕ ಲೇಖಕನಿಗಿರಬೇಕಾದ ಕ್ರಾಂತ ದೃಷ್ಠಿಯನ್ನು ಕಳೆದುಕೊಂಡಿದ್ದಾರೆನ್ನಬಹುದು

 ಸಮಾರೋಪ :

 ಚೆನ್ನಕವಿಗಳಿಗೆ ಪ್ರಾಚೀನ ವಾಙ್ಮಯದೊಂದಿಗೆ ವಚನ ವಾಙ್ಮಯದ ಪರಿಚಯವಿದೆ. ಹಿಂದೆ ಹೇಳಿದ ಕೆಲವು ಮಾತುಗಳ ನೆಲೆಯಲ್ಲಿ ಅವರು ಒಂದಿಷ್ಟು ಕಟ್ಟಾ ಸಂಪ್ರದಾಯವಾದಿಗಳಂತೆ ಕಂಡರೂ, ಪ್ರಗತಿಪರವಿಚಾರಗಳನ್ನು ಪೂರ್ಣವಾಗಿ ದೂರೀಕರಿಸಿಯೇ ಬಿಟ್ಟಿದ್ದಾರೆಂದು ಹೇಳುವಂತಿಲ್ಲ. ಈ ಮಾತುಗಳು ನೋಡಬೇಕು.

 “ಸ್ತ್ರೀ-ಶೂದ್ರರು ಈ ಪಂಚಾಕ್ಷರೀ ಮಂತ್ರವನ್ನು ಜಪಿಸಬಹುದೋ ಜಪಿಸ ಬಾರದೋ ಎಂಬ ಬಗ್ಗೆ ಸಧ್ಯ; ನನ್ನ ವಾದವಿಲ್ಲ. ಆದರೆ ಯಾರು ಪಂಚಾಕ್ಷರಿ ಮಂತ್ರವನ್ನು ಜಪಿಸಬೇಕೆಂದು ಬಯಸುವರೋ ಅವರು ಸದಾಚಾರಿಗಳು, ಭಗವತ್ಪೂಜಾ ಮೋಹಿಗಳು ಇದ್ದು, ವರ್ಣೋತ್ತಮನಾದ ಯೋಗ್ಯ ಗುರುವಿನಿಂದ ಉಪದೇಶ ಹೊಂದಿ, ಗೌಪ್ಯವಾಗಿ, ವಿಧಿಗನುಸರಿಸಿ ಜಪಿಸಬೇಕಲ್ಲದೆ ಬೈಲಿಗೆ ನಿಂತು ಕಂಡ ಕಂಡ ಜನರೊಡನೆ ವಿಧಿಗೆಟ್ಟು ಕೂಗುವುದು ಶಾಸ್ತ್ರಕ್ಕೆ ವಿರೋಧವೆಂಬುದನ್ನು ಸಮ ದೃಷ್ಟಿಯಿಂದ ಶೋಧಿಸಿ ಸಪ್ರಮಾಣವಾಗಿ ಸಿದ್ಧ ಪಡಿಸುವುದೇ ನನ್ನ ಮುಖ್ಯೋದ್ದೇಶವಾಗಿದೆ.” ದ್ಯಾಂಪುರ ಚೆನ್ನಕವಿಗಳು ತಾವು ಇಟ್ಟುಕೊಂಡ ಉದ್ದೇಶವನ್ನು ಸಮರ್ಪ ಕವಾಗಿ ನಿರ್ವಹಿಸಿದ್ದಾರೆಂದು ಧಾರಾಳವಾಗಿ ಹೇಳಬಹುದಾಗಿದೆ.

ಡಾ. ಬಿ. ವ್ಹಿ. ಶಿರೂರ

 ‘ಶಿವ’ ಎಂದರೆ ಮಂಗಲ, ಸತ್ಯ, ಸುಂದರ ಎಂಬರ್ಥಗಳಿವೆ. ಇಂಥ ಶಿವನೇ ಸರ್ವೋತ್ತಮನೆಂದು ನಂಬುವ ಮತ್ತು ಆರಾಧಿಸುವ ಜನರನ್ನು ”ಶೈವ”ರೆಂದು ಕರೆಯುವರು. ಅತೀ ಪ್ರಾಚೀನ ಕಾಲದಿಂದಲೂ ಈ ಶಿವನ ಆರಾಧನೆ ನಡೆಯುತ್ತ ಬಂದಿದೆ ಎಂಬುದಕ್ಕೆ ಹಲವಾರು ಆಧಾರಗಳು ದೊರೆಯುತ್ತಿವೆ.

 ಆರ್ಯರು ಭಾರತಕ್ಕೆ ಬರುವ ಪೂರ್ವದಲ್ಲಿ ಇದ್ದ ದ್ರಾವಿಡರು ಸುಸಂಸ್ಕೃತರಾಗಿದ್ದರು ಎಂಬುದಕ್ಕೆ ಸಿಂಧೂನದಿ ತೀರದ ಹರಪ್ಪಾ ಮಹಂಜೋದಾರೊಗಳಲ್ಲಿ ದೊರೆತಿರುವ ಅವಶೇಷಗಳೇ ಸಾಕ್ಷಿ ಅಲ್ಲಿ ಅಷ್ಟಾಂಗಯೋಗ ಮುದ್ರೆಯ ಶಿವ, ಸ್ವಸ್ತಿಕ, ನಂದಿ ಮೊದಲಾದವು ದೊರೆತಿದ್ದು ಆ ಕಾಲಕ್ಕಾಗಲೆ ಶೈವ ಧರ್ಮ ಪ್ರಚಲಿತದಲ್ಲಿತ್ತು ಎಂಬುದು ಸಾಬೀತಾಗಿದೆ.

ವೇದಗಳಲ್ಲಿ ಅತೀ ಪ್ರಾಚೀನವಾದುದು ಋಗ್ವದ. ಅದರಲ್ಲಿ ಅಗ್ನಿ, ವರುಣ, ಇಂದ್ರ, ಸೂರ್ಯ ಮೊದಲಾದ ದೇವತೆಗಳ ಪ್ರಾರ್ಥನಾ ಮಂತ್ರಗಳಿದ್ದರೂ ರುದ್ರನ ಪರವಾದ ಪ್ರಾರ್ಥನಾ ಮಂತ್ರಗಳು ವಿಶೇಷವಾಗಿವೆ. ಅಲ್ಲಿ ರುದ್ರನನ್ನು ಶಿವ, ಭೇಷಜ, ಕರುಣಿ, ರೌದ್ರ, ಶರ್ವ, ಭವ ಮುಂತಾಗಿ ಕರೆಯಲಾಗಿದೆ. ಯಜುರ್ವೇದದಲ್ಲಿ ಈ ರುದ್ರನ ಸ್ಥಾನ ಮತ್ತಷ್ಟು ಹೆಚ್ಚಾಗಿದೆ.  ಸಾಮವೇದದಲ್ಲಿ ರುದ್ರನ ಸ್ತುತಿಪದವಾದ ಹಲವಾರು ಮಂತ್ರಗಳಿವೆ. ಅಥರ್ವಣವೇದದಲ್ಲಿ ಈ ರುದ್ರನನ್ನು ಶಿವ, ಭವ, ಪಶುಪತಿ, ಎಂದು ಮುಂತಾಗಿ ಕರೆಯಲಾಗಿದೆ. ಈ ಎಲ್ಲ ವೇದಗಳಿಗೆ ಇರುವ ಬ್ರಾಹ್ಮಣ, ಅರಣ್ಯಕಗಳಲ್ಲೂ ಶಿವನ ಪ್ರಾರ್ಥನಾ ಪರವಾದ ಗದ್ಯಗಳಿವೆ. ಉಪನಿಷತ್ ಕಾಲದಲ್ಲಿ ರುದ್ರಶಿವನ ಪ್ರಾರ್ಥನಾ ಪರವಾದ ಗದ್ಯಗಳಿವೆ. ಉಪನಿಷತ್ ಕಾಲದಲ್ಲಿ ರುದ್ರಶಿವನ ಪ್ರತಿಷ್ಠೆ ಕಂಡು ಬರುತ್ತದೆ.

 ಅಲ್ಲಿಂದ ಮುಂದೆ, ರಾಮಾಯಣದಲ್ಲಿ ಶ್ರೀರಾಮನು ರಾವಣನ ಲಂಕಾನಗರಕ್ಕೆ ದಾಳಿ ಇಡುವ ಪೂರ್ವದಲ್ಲಿ ಸಾಗರವನ್ನು ದಾಟುವುದಕ್ಕೆ ಮೊದಲು ಶಿವಲಿಂಗವನ್ನು ಪೂಜಿಸಿದ್ದಂತೆ ಹೇಳಲಾಗಿದೆ. ಹಾಗೆಯೇ ಮಹಾಭಾರತದಲ್ಲಿ ಅರ್ಜುನನು ಪಾಶುಪತಾಸ್ತ್ರವನ್ನು ಪಡೆಯಲು ಶಿವನನ್ನು ಕುರಿತು ತಪಸ್ಸು ಮಾಡಿದ ಸನ್ನಿವೇಶವಿದೆ. ಅಶ್ವತ್ಥಾಮನು ಶಂಕರನನ್ನು ಭಜಿಸಿ ಭೀಕರವಾದ ಖಡ್ಗವನ್ನು ಪಡೆದನಂತೆ. ರಾವಣ, ಹಿರಣ್ಯಕಶಪ, ಬಾಣಾಸುರ ಮೊದಲಾದವರು ಪರಮ ಶಿವಭಕ್ತರಾಗಿದ್ದರು.

ಇವನ್ನು ದಾಟಿ ಚಾರಿತ್ರಿಕ ಕಾಲಕ್ಕೆ ಬಂದರೆ ಬುದ್ಧನು ಮರಣ ಶಯ್ಯೆಯಲ್ಲಿದ್ದಾಗ (ಕ್ರಿ.ಪೂ. ೪೮೩)  ಅಲಾಲಕುಮಾರ ಎಂಬ ಮುನಿಯು ಬಂದು ಅವನಿಂದ ಉಪದೇಶ ಪಡೆದನೆಂದು ಹೇಳಲಾಗುತ್ತಿದೆ. ಹಾಗೆ ಉಪದೇಶ ಪಡೆದ ಮುನಿ ಶೈವನಾಗಿದ್ದನೆಂಬುದು ಸಿದ್ಧವಾಗಿದೆ. ಕುಶಾನರ ಅರಸರು ಶೈವರಾಗಿದ್ದು ತಮ್ಮ ನಾಣ್ಯಗಳ ಒಂದು ಬದಿಗೆ ಪರಮ ಮಹೇಶ್ವರ ಎಂದು ಬರೆದಿದ್ದರೆ ಇನ್ನೊಂದು ಬದಿಗೆ ತ್ರಿಶೂಲಧಾರಿ  ನಂದೀಶ್ವರನ ಚಿತ್ರವಿದೆ. ಇವರಂತೆ ಹೂಣರೂ ಶಿವಭಕ್ತರಾಗಿದ್ದರು. ಈ ವಂಶದ ಮೆಹರನುಲನು ಪರಮ ಶಿವಭಕ್ತನಾಗಿದ್ದನು. ಮಗಧವಂಶದ ಭವನಾಗ ಮನೆತನದ ಅರಸರೂ ಶಿವಭಕ್ತರಾಗಿದ್ದರು. ಶಿವಲಿಂಗವನ್ನು ಪೂಜಿಸಿ ರಾಜ್ಯವನ್ನು ಪಡೆದುದಾಗಿ ಅವರ ಒಂದು ಶಾಸನ ಉಲ್ಲೇಖಿಸುತ್ತಿದೆ. ತತ್ವ ಪ್ರಕಾಶಿಕೆ ಸಂಖ್ಯಾಶಾಸ್ತ್ರವನ್ನು ಬರೆಯಿಸಿದ ಭೋಜರಾಜನು ಶಿವಭಕ್ತನಾಗಿದ್ದನು. ಗಂಗಾನದಿ ದಡದ ಮರ್ತಶಕವಂಶದ ೨ನೆಯ ಪ್ರವರಸೇನನು ಶೈವಧರ್ಮದ ಅನುಯಾಯಿಯಾಗಿದ್ದನು. ಕಲ್ಯಾಣ ಚಾಲುಕ್ಯರಲ್ಲಿ ಖ್ಯಾತಿವೆತ್ತ ೬ನೆಯ ವಿಕ್ರಮಾದಿತ್ಯನು ಪರಮ ಶಿವಭಕ್ತನಾಗಿದ್ದನು. ಅವನ ಕಾಲದ ಬಿಲ್ಹಣ, ಜ್ಞಾನೇಶ್ವರರು ಶೈವಮತಾವಲಂಬಿಗಳಾಗಿದ್ದರು. ಕಲ್ಯಾಣ ವಿಕ್ರಮಾದಿತ್ಯನ ತಂದೆ ಸೋಮೇಶ್ವರನೂ ಜ್ವರ ಪೀಡಿತನಾಗಿ  ಹಂಪೆಯ ವಿರೂಪಾಕ್ಷನನ್ನು ನೆನೆಯುತ್ತ ತುಂಗಭದ್ರಾನದಿಯಲ್ಲಿ ಮುಳುಗಿ ಪ್ರಾಣತೆತ್ತನು.

 ಮಹಾಭಾಷ್ಯಕಾರನಾದ ಪತಂಜಲಿಯು ತ್ರಿಶೂಲಧಾರಿಗಳಾದ  ಶಿವಭಾಗವತರನ್ನು ತನ್ನ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ. ಕಾಳಿದಾಸ ,ಬಾಣ, ಭವಭೂತಿ ಮೊದಲಾದ ಕವಿಗಳು ಶಿವನನ್ನು ಬಣ್ಣಿಸಿರುವರು. ನ್ಯಾಯ ವೈಶೇಷಿಕ, ದರ್ಶನಕಾರರಾದ ಗೌತಮ ಮತ್ತು ಕಣಾದ ಮುನಿಗಳು ಶೈವರಿದ್ದರೆಂದು ಪ್ರತೀತಿ. ಚೀನಾಪ್ರವಾಸಿ ಹುಯನ್‌ತ್ಸಾಂಗನು ಮಹೇಶ್ವರನ ಗುಡಿಗಳನ್ನೂ ಶಿವಪಂಥಿಗಳಾದ ಪಾಶುಪತರನ್ನೂ ತಾನು ಕಂಡಿರುವುದಾಗಿ ಹೇಳಿರುವನು.

 ಈ ಶೈವ ಮತವು ಭರತಖಂಡಲ್ಲಿ ಮಾತ್ರವಲ್ಲ ಜಾವಾ, ಬಾಲಿ, ಕಾಂಬೋಡಿಯಾ ಮೊದಲಾದ ದ್ವೀಪಗಳವರೆಗೂ ವ್ಯಾಪಿಸಿದ್ದುದಾಗಿ ತಿಳಿದು ಬರುವುದು. ಈಗಲೂ ಆ ಪ್ರದೇಶಗಳಲ್ಲಿ ಹಾಳುಬಿದ್ದ ಶಿವ  ದೇವಾಲಯಗಳೂ, ಶೈವ ವಿಗ್ರಹಗಳೂ ದೊರೆಯುತ್ತಿವೆ. ಭಾರತದ ತುಂಬ ಶೈವ ಧರ್ಮ ಪಸರಿಸಿತ್ತು ಎಂಬುದಕ್ಕೆ ಹನ್ನೆರಡು ಜ್ಯೋತಿರ್ಲಿಂಗಗಳು ರಾಮೇಶ್ವರದಿಂದ ಕೇದಾರದ ವರೆಗೆ ಇರುವುದೇ ಸಾಕ್ಷಿ.

 ಈ ಬಗೆಯಾಗಿ ಶೈವಧರ್ಮವು ನದಿ ಸಂಸ್ಕೃತಿಯ ಕಾಲದಿಂದ ಹಿಡಿದು ಇಲ್ಲಿಯವರೆಗೆ ಶಾಕ್ತರು, ಗಾಣ ಪತ್ಯರು, ಪಾಂಚನ್ಯರು ಮುಂತಾದ ರೂಪಗಳಲ್ಲಿ ಪ್ರವಹಿಸುತ್ತ ಬಂದಿದೆ. ಚಂದ್ರಜ್ಞಾನಾಗಮವು ಶೈವ, ಆದಿಶೈವ, ಪೂರ್ವಶೈವ, ಮಿಶ್ರಶೈವ, ಶುದ್ಧ ಶೈವ, ಮಾರ್ಗಶೈವ, ಸಾಮಾನ್ಯ ಶೈವ ಹಾಗೂ ವೀರಶೈವ ಎಂಬ ಪ್ರಭೇದಗಳನ್ನು ಹೇಳಿದೆ. ವಚನಕಾರರಲ್ಲಿ ಅಕ್ಕಮಹಾದೇವಿ ‘ಜಾತಿಶೈವರು ಅಜಾತಿ ಶೈವರು ಎಂದು ಎರಡು ಪ್ರಕಾರವಾಗಿ ಇಹರಯ್ಯ’ ಎಂದಿದ್ದರೆ ಪ್ರಸಾದಿ ಭೋಗಣ್ಣʼʼ ಶೈವವಾರು, ವೀರಶೈವ ಮೂರು’ ಎಂದಿದ್ದಾನೆ. ಕಲಕೇತಯ್ಯ, ಪ್ರಭು, ಬಸವಣ್ಣರು ‘ಷಟ್‌ಶೈವ’ಗಳನ್ನು ಪ್ರಸ್ತಾಪಿಸುವರು. ಇವುಗಳಲ್ಲದೆ ಕಾಳಾಮುಖ ಪಾಶುಪತ, ಕಾಪಾಲಿಕ ಶೈವರು ಆಂಧ್ರ ತಮಿಳುನಾಡು ಕರ್ನಾಟಕಗಳಲ್ಲಿ ಪ್ರಸಿದ್ಧರಾಗಿರುವರು. ಕಾಶ್ಮೀರ ಶೈವದ ಪ್ರಸ್ತಾಪವೂ ಇದೆ.

 ಈ ಶೈವ ಸಿದ್ಧಾಂತದಲ್ಲಿ ಪತಿ-ಪಶು-ಪಾಶ ಎಂಬ ತ್ರಿಪದಾರ್ಥಗಳು, ಮಂತ್ರ, ಪದ, ವರ್ಣ, ಭುವನ, ತತ್ವ, ಕಲೆಯೆಂಬ ಷಡ್ವಿಧಗಳು, ಜ್ಞಾನೇಂದ್ರಿಯ, ಕರ್ಮೇಂದ್ರಿಯ, ತನ್ಮಾತ್ರೆಗಳು ಮಹಾಭೂತ ಮೊದಲಾದ ೨೫ ಬುದ್ದಿ ತತ್ವಗಳು ಸೇರಿ ೩೬ ತತ್ವಗಳು ಇವುಗಳ ವಿಚಾರ ಪ್ರಮುಖವಾಗಿರುವದು. ಇವರಿಗೆ ಅತ್ಯುತ್ಕೃಷ್ಟವಾದ ಶಿವನೇ ಸತ್ಯದ ಸ್ವರೂಪ. ಅವನು ಅನಾದಿ, ಅನಂತ, ಸರ್ವವ್ಯಾಪಿ, ಸರ್ವಶಕ್ತ ಸರ್ವಜ್ಞ ,ಬಂಧಮುಕ್ತ, ಕಲ್ಯಾಣಕಾರಕ ಏನೆಲ್ಲ ಆಗಿದ್ದಾನೆ. ಸೃಷ್ಟಿ-ಸ್ಥಿತಿ-ಲಯಗಳಿಗೆ ಅವನೇ ಕಾರಣ.  ಆತ್ಮಗಳ ಪಾಶಗಳನ್ನು ಕಳಚಿ ಬಂಧಮುಕ್ತ ಮಾಡುತ್ತಾನೆ . ಶಕ್ತಿ ಶಿವನ ಅರ್ಧಾಂಗಿ ಚೈತನ್ಯ ಸ್ವರೂಪಿ . ಶಿವನ ಸೃಷ್ಟಿಗೆ

 ಸಹಾಯಕಳು .ಜೀವ-ಶಿವರ ನಡುವಿನ ಸೇತುವೆಯಿದ್ದಂತೆ ಶಿವನ ಪ್ರತಿರೂಪ ಆದರೂ ಸ್ವಂತ ಅಸ್ತಿತ್ವವಿಲ್ಲ., ಲೀಲೆಯಿಂದ ಶಕ್ತಿ,   ಲೀಲೆಯಳಿದಡೆ ಸ್ವಯಂಭೂ .

   ಆತ್ಮಗಳು ಅಸಂಖ್ಯ, ಶಾಶ್ವತ, ಶಿವ ನಿರ್ಮಿತಿಗಳಲ್ಲ. ಆತ್ಮ ದೇಹದಿಂದ ಭಿನ್ನ. ಆತ್ಮ ಚೇತನ, ದೇಹ ಅಚೇತನ, ದೇಹವು ಆತ್ಮನ ವಾಸಸ್ಥಾನ, ಕರ್ಮವು ಶರೀರದಲ್ಲಿ ಆತ್ಮನು ಬಂಧಿತವಾಗಲು ಕಾರಣವಾಗುತ್ತದೆ. ಒಂದೆಡೆ ಶುದ್ಧ ಚೈತನ್ಯ ಸ್ವರೂಪವಾದ ಶಿವ, ಇನ್ನೊಂದಡೆ ಶುದ್ಧ ಅಚೇತನವಾದ ವಸ್ತು ಇವೆರಡನ್ನು ಕೂಡಿಸುವುದೇ ಶಕ್ತಿ. ಶಿವನು ಒಬ್ಬ ಕುಂಬಾರನಿದ್ದಂತೆ ಅವನಿಗೆ ತಿಗರಿ, ಕೋಲುಗಳೆಂಬ ಸಾಮಗ್ರಿಬೇಕು ಅದೇ ಶಕ್ತಿ, ಅರಲು ಮಡಿಕೆ ಮಾಡಲು ಭೌತಿಕಸಾಧನ. ಮಾಯೆಯೇ ಈ ಭೌತಿಕ ಸಾಧನ. ಇಲ್ಲಿ ಎಲ್ಲವೂ ಶಿವನ ಇಚ್ಛೆಯಂತೆಯೆ ನಡೆಯುತ್ತದೆ. ಶಕ್ತಿ ಮಾಯೆಗಳಿಗೆ ಸ್ವಂತ ಅಸ್ತಿತ್ವವಿಲ್ಲ. ಜೀವಿಗಳಿಗೆ ಅಸ್ತಿತ್ವವಿದ್ದರೂ ಶಿವನ ಅನುಜ್ಞೆ ಹೊರತು ಏನೂ ಮಾಡಲು ಸಾಧ್ಯವಿಲ್ಲ, ಜೀವಿಗಳ ಉದ್ಧಾರಕ್ಕೆ ಶಿವನು  ರೂಪಧರಿಸಿ ಬರುತ್ತಾನೆ. ಜೀವನ ಪಾಶ ಜಾಲವನ್ನು ಹರಿಯುತ್ತಾನೆ. ಇದರಿಂದ ಜೀವನು ಮುಕ್ತನಾಗುತ್ತಾನೆ. ಮಹಾಪ್ರಳಯದಲ್ಲಿಯೂ ಪತಿ-ಪಶು ಪಾಶವೆಂಬ ತ್ರಿಪದಾರ್ಥಗಳು ಪರಸ್ಪರ ಭಿನ್ನವಾಗಿಯೇ ಇರುವವು ಶಿವಾರ್ಚನಾದಿ ಸಾಧನಗಳಿಂದ ಶಿವಾನುಗ್ರಹವನ್ನು ಪಡೆದ ಪಶುಗಳು (ಜೀವರು) ಶಿವ ಸಮಾನತಾರೂಪ ಮುಕ್ತಿಯನ್ನು ಪಡೆದೂ ಶಿವಾನಂದಮಯವಾಗಿದ್ದರೂ ಶಿವನಿಗಿಂತ ಭಿನ್ನರಾಗಿರುವರು. ಶಿವನು ಅನಾದಿ ಮುಕ್ತನು. ಪಶುಗಳು ಆದಿ ಮುಕ್ತರು ಆದುದರಿಂದ ಶೈವ ಸಿದ್ಧಾಂತವನ್ನು ದ್ವೈತ್ಯವೆಂದು ಹೇಳುವರು.

ಇವರಿಗೆ ಶಿವನೇ ಮುಖ್ಯ ದೇವತೆಯಾದುದರಿಂದ ಶಿವ ಪಂಚಾಕ್ಷರಿಮಂತ್ರವನ್ನೇ ಜಪಿಸುತ್ತಾರೆ. ಶಿವನನ್ನು ಸ್ಥಾವರ ಲಿಂಗರೂಪದಲ್ಲಿ ಪೂಜಿಸುತ್ತಾರೆ. ಆ ಶಿವನನ್ನು ಒಲಿಸಿಕೊಳ್ಳಲು ಯಜ್ಞ ಯಾಗ ಹವನಗಳನ್ನು ಮಾಡುತ್ತಾರೆ. ಅಗ್ನಿ ಮುಖಾಂತರವಾಗಿ ಸೂರ್ಯ ಚಂದ್ರಾದಿ ದೇವತೆಗಳನ್ನು ತೃಪ್ತಿ ಪಡಿಸುವರು. ಶ್ರಾದ್ಧಾದಿ ಕಾರ್ಯಗಳನ್ನು ಮಾಡುವರು. ಆ ಕಾಲಕ್ಕೆ ಪಿಂಡದಾನ ಕೊಡುವ ಪದ್ಧತಿ ಇದೆ. ಪಂಚ ಸೂತಕಗಳನ್ನು ಇವರು ಮನ್ನಿಸುವರು. 

‘ಶೈವ ಧರ್ಮವನ್ನು ಒಂದು ಮೊಗ್ಗೆಯವಸ್ಥೆಗೆ ಹೋಲಿಸಿದರೆ, ಇಂದು ಬೆಳೆದು ಬಂದಿರುವ ವೀರಶೈವ  ಧರ್ಮವನ್ನು ನಾವು ರಸತುಂಬಿದ ಫಲಕ್ಕೆ ಹೋಲಿಸಬಹುದಾಗಿದೆ. (ಎಸ್. ಸಿ. ನಂದಿಮಠ). ʼ’ವೀರಶೈವʼ’ ಎಂಬ ಪದದ ಮೊದಲಿನ ʼ’ವಿ” ಎಂಬ ಅಕ್ಷರವು ಲಿಂಗಾಂಗ ಸಾಮರಸ್ಯರೂಪವಾದ ವಿದ್ಯೆಯನ್ನು ಬೋಧಿಸುತ್ತದೆ. ಅಂತಹ ವಿದ್ಯೆಯಲ್ಲಿ ಯಾರು ಸತತ ವಿಹರಿಸುತ್ತಾರೋ ಅವರೇ ವೀರಶೈವರೆನ್ನಿಸಿಕೊಳ್ಳುತ್ತಾರೆ. ಯಾವ ಜ್ಞಾನವು  ವೇದಾಂತದಿಂದುತ್ಪನ್ನವಾದುದೋ ಅದು ವಿದ್ಯೆಯೆಂದು ಹೇಳಿಸಿಕೊಳ್ಳುತ್ತದೆ. ಅಂತಹ ವೇದಾಂತ ವಿದ್ಯೆಯಲ್ಲಿ ವಿಹರಿಸುವವರೆಲ್ಲ ವೀರಶೈವರು.

 ಈ ವೀರಶೈವದ ಉಗಮವನ್ನು ಕುರಿತು ಹಲವಾರು ತರ್ಕಗಳಿವೆ. ಪರಮೇಶ್ವರನ ಪಂಚಮುಖಗಳಿಂದುದ್ಭವಿಸಿದ ಪಂಚಾಚಾರ್ಯರಿಂದಲೇ ಈ ಧರ್ಮ ಸ್ಥಾಪನೆಯಾಯಿತೆಂದು ಹೇಳುವವರಿದ್ದಾರೆ. ಆದರೆ ಈ ಆಚಾರ್ಯರ ಪೀಠಾರೂಢರಾದ ಸ್ವಾಮಿಗಳು ಪ್ರಮಾಣ ಬದ್ಧವಾದ ಮತ್ತು ಮನ್ವಂತರದ ಚಿಕಿತ್ಸಕರಿಗೆ ಮನದಟ್ಟಾಗುವಂಥ ಆಧಾರಗಳಿಂದೊಡಗೂಡಿದ ತಮ್ಮ ತಮ್ಮ ಪೀಠಗಳ ಮತ್ತು ಆಚಾರ್ಯದ ಇತಿಹಾಸವನ್ನು ಬೈಲಿಗೆ ತರಲು  ಹವಣಿಸುವರೆಂದೂ ಹಾಗೆ ಮಾಡಿ ವೀರಶೈವಮತದ ಪ್ರಾಚೀನತೆಯ ನಿಜ  ಸ್ವರೂಪವನ್ನು ಕಂಡು ಹಿಡಿಯಲು ಕಾರಣೀಭೂತರಾದ ಶ್ರೇಯಸ್ಸಿಗೆ ಪಾತ್ರರಾಗುವರೆಂದೂ ನಮ್ಮ ಬಲವಾದ ಆಶೆ” (ಎಸ್.ಸಿ. ನಂದಿಮಠ, ಶಿವಾನುಭವ ೬-೩ ಪು. ೧೧೬) ಇನ್ನು ಬಸವಣ್ಣನಿಂದಲೇ ವೀರಶೈವ ಮತದ ಸ್ಥಾಪನೆಯಾಯಿತೆಂಬುದು ಕೆಲವರ ಗ್ರಹಿಕೆ. ಇದಾದರೂ ಸರಿಯಲ್ಲವೆಂದೆನಿಸುವುದು. ಬಸವಣ್ಣನವರ ಚರಿತ್ರೆಯನ್ನು ವಿವರಿಸುವ ಗ್ರಂಥಗಳ ಮೇಲಿಂದ ಅವರು ಮತ ಸ್ಥಾಪಕರಿದ್ದಂತೆ ತೋರುವದಿಲ್ಲ. ಭೀಮ ಕವಿಯಂತೂ ಅವರು ವೀರಶೈವ ದೀಕ್ಷೆಯನ್ನು ಪಡೆದರೆಂದು ಹೇಳುವನು. ಬಸವಣ್ಣನವರ ಭಕ್ತಿ ಮತ್ತು ಧರ್ಮದ ಮೇಲಿನ ಪ್ರೇಮವನ್ನು ಕೇಳಿ ದೇಶದೇಶಗಳಿಂದ ಶರಣರು ಅವರ  ಹತ್ತಿರ ಬರಹತ್ತಿದರೆಂದು ಸ್ಪಷ್ಟವಾಗಿ ಉಲ್ಲೇಖವಿದೆ. ಈ ಎಲ್ಲಾ ಶರಣರಿಗೆ, ಬಸವಣ್ಣನವರೇ ಗುರುಗಳಾಗಿಲ್ಲ, ತಿರುಗಿ ಬಸವಣ್ಣನವರೇ ಅವರೆಲ್ಲರನ್ನು ಪೂಜಿಸುತ್ತಿದ್ದರು. ಬಸವಣ್ಣನವರೇ ಮತಸ್ಥಾಪಕರಾಗಿದ್ದರೆ ಹೀಗಾಗುತ್ತಿದ್ದಿಲ್ಲ’ (ಎಸ್. ಸಿ. ನಂದಿಮಠ ಶಿವಾನುಭಾವ ೯-೭ ಪು. ೧೧೯.)

 ಹಾಗಾದರೆ ಇದರ ಉಗಮದ ಕಾಲವನ್ನು ಕುರಿತು ಮತ್ತೆ ಡಾ. ನಂದಿಮಠ ಅವರೇ ಈ ಮತವು ೧೧ನೆಯ ಶತಮಾನಕ್ಕೆ ಪೂರ್ವದಲ್ಲಿ ಉದಯಸಿತೆಂಬುದನ್ನು ಹೇಳಲು ಸಾಧ್ಯವಿಲ್ಲ’ʼ (ಅಲ್ಲೇ) ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಿದ್ದೂ ಕೆಲವರು ಸುಮಾರು ಐದು ಸಾವಿರ ವರುಷಗಳಷ್ಟು ಪ್ರಾಚೀನವಾದ ವೀರಶೈವ ಧರ್ಮ ಯುಗಧರ್ಮವಾಗಿ ಹಿರಿಮೆಯನ್ನು ಹೊಂದಿದೆ. ವೇದ, ಆಗಮ ಉಪನಿಷತ್ತು, ಶಿಲಾಶಾಸನಗಳು, ತಾಮ್ರಪಟಗಳು ಸೇರಿದಂತೆ ಅನೇಕ ಆಕರಗಳು ಲಭ್ಯವಿವೆ. ಇಂಥ ಪ್ರಮಾಣೀಕೃತ ಆಕರಗಳನ್ನು ಹೊಂದಿರುವ ವೀರಶೈವವು ಬಸವಪೂರ್ವ ಯುಗದಲ್ಲಿ ಇತ್ತು’ ಎಂಬ ವಾದವನ್ನು ಮಂಡಿಸುತ್ತಿದ್ದಾರೆ. ಈ ವಾದ ಇನ್ನೂ ಬಗೆಹರಿಯಬೇಕಿದೆ.

‘ವೀರಶೈವ’ ಎಂಬ ಪದವನ್ನು ಉಲ್ಲೇಖಿಸುವ ಕನ್ನಡದ ಮೊಟ್ಟ ಮೊದಲ ಶಾಸನ ʼ’ಮಲಕಾಪುರ ಶಾಸನ” (೧೧ನೆಯ ಶತಮಾನ) ಹಾಗಾದರೆ ಪ್ರಾಚೀನ ಕಾಲದಲ್ಲಿ ಇದಕ್ಕಿದ್ದ ಹೆಸರೇನು ?’ ಎಂಬ ಪ್ರಶ್ನೆಯನ್ನು ಹಾಕಿಕೊಂಡು ಡಾ. ನಂದಿಮಠ ಅವರು ಈಗಿನ ವೀರಶೈವವು ಪ್ರಾಚೀನ ಕಾಲದಲ್ಲಿ  ಪಾಶುಪತಪ೦ಥವಾಗಲೀ ಅಥವಾ ಅದರ ಒಳಭೇದಗಳಲ್ಲೊಂದಾಗಲೀ ಆಗಿರಬಹುದೆಂದು ನಮ್ಮ ತರ್ಕ. ನಿಟ್ಟೂರ ನಂಜಣಾರ್ಯ ಇವರನ್ನು ಮಹಾಪಾಶುಪತರೆಂದು ಕರೆದಿದ್ದಾನೆ. ಮಹಾಭಾರತದಲ್ಲಿದ್ದ ಪಾಶುಪತದ ಆಚಾರ ವಿಚಾರಗಳು ಈಗಲೂ ವೀರಶೈವದಲ್ಲಿ ಕಂಡು ಬರುವವು. ಆದ್ದರಿಂದ ಈಗಿನ ವೀರಶೈವ ಮತವು ಪ್ರಾಚೀನ ಕಾಲದಲ್ಲಿ ಪಾಶುಪತವಾಗಲಿ ಅಥವಾ  ಒಳಭೇದಗಳಲ್ಲೊಂದಾಗಲಿ ಆಗಿರಬಹುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ವೀರಶೈವರ ಪ್ರಮುಖ ಲಕ್ಷಣ ಷಟ್‌ಸ್ಥಲ.ʼʼ ಆ ಸಿದ್ಧಾಂತದಲ್ಲಿ ವೀರಶೈವರು ಬಗೆದಿರುವ ಜೀವ ಜಗತ್ತು-ದೇವರು ಇವುಗಳ ಸ್ವರೂಪವೂ ಪರಸ್ಪರ ಸಂಬಂಧವೂ ತಾತ್ವಿಕ ರೀತಿಯಿಂದ ನಿರೂಪಿತವಾಗಿದೆ ಮತ್ತು ಬಂಧಾದಿ ಚತುರ್ವಿಧ ವಿಷಯಗಳೂ ಪ್ರತಿಪಾದಿತವಾಗಿವೆ. ಷಟಸ್ಥಲ ಸಿದ್ಧಾಂತದ ದೃಷ್ಟಿಯಿಂದ ಜೀವನು ಆಣವಾದಿ ಮಲತ್ರಯಗಳಿಂದ ಬಂಧಿತನಾಗಿರುವುದೇ ಬಂಧ. ಬಂಧಕಾರಣಗಳಾದ ಮಲತ್ರಯಗಳನ್ನು ಲಿಂಗೋಪಾಸನೆಯಿಂದ ಕಳೆದು ಮೋಕ್ಷಹೊಂದಿ ಶಿವನಲ್ಲಿ ಬೆರೆಯುವದು. ಇದನ್ನೇ ಲಿಂಗಾಂಗ ಸಾಮರಸ್ಯ ಎಂದು ಕರೆಯುವರು. ಜಗತ್ತಿನ ಭೋಗವನ್ನು ಪ್ರಸಾದ ರೂಪದಿಂದ ಸ್ವೀಕರಿಸಿದರೆ ಲಿಂಗಭೋಗೋಪಭೋಗವಾಗುವದು. ಈ ಭೋಗಕ್ರಮವು ಷಟ್‌ಸ್ಥಲ ಮಾರ್ಗದಲ್ಲಿ ತತ್ವಬದ್ಧವಾಗಿ ಪ್ರತಿಪಾದಿಸಲ್ಪಟ್ಟಿರುವದು. ವೀರಶೈವರು ಷಟ್‌ಸ್ಥಲಕ್ಕನುಸರಿಸಿ ೩೬ ತತ್ವಗಳನ್ನಂಗೀಕರಿಸಿರುವರು. ಅವುಗಳಲ್ಲಿ ೧೧ ಲಿಂಗತತ್ವಗಳು, ೨೫ ಅಂಗತತ್ವಗಳು ೧೧ ಲಿಂಗ ತತ್ವಗಳು ಷಟ್‌ಸ್ಥಲಗಳ ಪಡ್ಲಿಂಗ ಸ್ವರೂಪವನ್ನು ಪಡೆಯುವವು ಹಾಗೆಯೇ ೨೫ ಅಂಗ ತತ್ವಗಳು ಜೀವನಿಗೆ ಷಡಂಗಗಳಾಗಿರುವವು. ಬಿಹಿರಿಂದ್ರಿಯಗಳು ಮುಖಗಳಾಗಿ, ಅಂತರಿಂದ್ರಿಯಗಳು ಹಸ್ತಗಳಾಗಿ ಶಬ್ದಾದಿ ವಿಷಯಗಳು ಭೋಗ್ಯ  ಪದಾರ್ಥಗಳಾಗಿ ಪರಿಣಮಿಸುವವು. ಹೀಗೆ ಈ ೨೫ ತತ್ವಗಳು ಆತ್ಮಾದಿ ಷಡಂಗ ಸ್ವರೂಪವನ್ನು ಹೊಂದುವವು. ಈ ಷಡಂಗಗಳಲ್ಲಿರುವ ಆತ್ಮನಿಗೆ ಕ್ರಮವಾಗಿ ಐಕ್ಯ, ಶರಣ, ಪ್ರಾಣಲಿಂಗಿ, ಪ್ರಸಾದಿ, ಮಹೇಶ, ಭಕ್ತನೆಂಬ ನಾಮಗಳುಂಟಾಗುವವು. ಇವು ಆರು ಅಂಗಷಟ್ ಸ್ಥಲಗಳಾಗಿರುವವು. ಇದು ಶೈವರ ೨೬ ತತ್ವ ವಿಚಾರದಿಂದ ಭಿನ್ನ ಎಂಬುದು ಸ್ಪಷ್ಟವಾಗುವದು. ಈ ೩೬ ಸ್ಥಲಗಳನ್ನು ೧೦೧ ಸ್ಥಲವಾಗಿಯೂ ವಿಭಜಿಸುವದುಂಟು. ಇವುಗಳಿಂದ ಅಂಗನ ದೇಹಿ೦ದ್ರಿಯಗಳು ಲಿಂಗದ ದೇಹಿಂದ್ರಿಯಗಳಾಗಿ   ಪರಿಣಮಿಸುವವು. ಅಂಗನು ಮಾಡುವ ಪ್ರತಿಯೊಂದು ಕ್ರಿಯೆಯೂ ಲಿಂಗ ಕ್ರಿಯೆಯಾಗುವದು ಇದೇ ಲಿಂಗಾಂಗ ಸಾಮರಸ್ಯ ಇದನ್ನು ಕಾರ್ಯರೂಪಕ್ಕೆ ತರಲು ಅಷ್ಟಾವರಣ ಪಂಚಾಚಾರಗಳನ್ನು ವೀರಶೈವರು ಕಲ್ಪಿಸಿಕೊಂಡಿದ್ದಾರೆ. ಇವು ವೀರಶೈವದ ವಿಶಿಷ್ಟ ಲಕ್ಷಣಗಳೇ. ಈಗ ಶೈವಕ್ಕೂ ವೀರಶೈವಕ್ಕೂ ಇರುವ ಸಾಮ್ಯ  ವೈಷಮ್ಯಗಳನ್ನು ಈ ರೀತಿ ಗುರುತಿಸಬಹುದು.

ಶೈವ:

  1.  ಚರ್ಯಾ, ಕ್ರಿಯಾ,ಯೋಗ, ಜ್ಞಾನ ಎಂಬ ನಾಲ್ಕು ಬಗೆಯ ಸಾಧನ ಮಾರ್ಗ
  2. ಸ್ಥಾವರಲಿಂಗ ಆರಾಧನೆ
  3. ಶಿವಪ್ರಸಾದ ಶಿವಜ್ಞಾನಗಳು ದೀಕ್ಷೆಯಿಂದ ಲಭಿಸುತ್ತವೆ. ಸಾಧಾರಾ ಆಧಾರಾವರ್ಜಿತ ದೀಕ್ಷೆಗಳು.
  4. ಯೋಗಕ್ಕಿಂತ ಭಕ್ತಿಗೆ ಪ್ರಾಶಸ್ತ್ಯ.
  5. .ಗುರು-ಲಿಂಗಗಳಿಗೆ ಮಹತ್ವ
  6. ಅಷ್ಟಾವರಣಗಳಲ್ಲಿ ಪಾದೋದಕದ ಬದಲಿಗೆ ಲಿಂಗೋದಕ ತೀರ್ಥಕ್ಕೆ ಮಹತ್ವ ರುದ್ರಾಕ್ಷಿ ಭಸ್ಮ, ಮಂತ್ರಗಳಿಗೆ ಆದ್ಯತೆ.
  7.  ಯಜ್ಞ, ಹೋಮ ಆಚರಣೆಗೆ ಪಂಚಯಜ್ಞ ಮಾರ್ಗ ಸ೦ಧ್ಯಾವ೦ದನೆ ಇತ್ಯಾದಿ ನಿಯಮಗಳು.
  8. .ಶಿವನು ಪಶುಪತಿ ಸಚ್ಚಿದಾನಂದ ಸ್ವರೂಪ ಸಗುಣನು. ಜ್ಯೋತಿರ್ಲಿಂಗ ಮೂರ್ತ ಸಾದಾಖ್ಯ.
  9. ಶಿವಪೂಜೆ ಶಿವಭಕ್ತಿ ಶಿವದರ್ಶನದಿಂದ ಭಕ್ತ ಪುನೀತನಾಗುವನು. ಸಾಧನ ಭಕ್ತಿಗೆ ಪ್ರಾಧಾನ್ಯ.
  10.  ಜಗತ್ ಸೃಷ್ಟಿಯಲ್ಲಿ ಪರಶಿವನ ಅವಸ್ಥೆಗಳು ಮೂರು-ನಿಷ್ಕಲ, ಸಕಲ ನಿಷ್ಕಲ, ಸಕಲ.
  11. ಶಿವನ ಲೀಲೆಗಳ ಗುಣಗಾನಕ್ಕೆ ಪ್ರಾಶಸ್ತ್ಯ
  12. ತಾತ್ವಿಕ ವಿಚಾರಗಳ ಚಿಂತನ ಮಂಥನಕ್ಕೆ ಪ್ರಾಶಸ್ತ್ಯ, ಪಂಡಿತ ಮಾನ್ಯರಿಗೆ ಮಹತ್ವ.
  13. ಜಾತಿಭೇಧ ಮೇಲು ಕೀಳು, ಅಸ್ಪೃಶ್ಯತೆಗಳ ಹಳಿಯುವಿಕೆ ಸ್ತ್ರೀಯರಿಗೆ ಸಮಾನತೆ ಇತ್ಯಾದಿಗಳು ತತ್ವಸಿದ್ಧಾಂತಗಳಲ್ಲಿ  ಮಾತ್ರ.
  14. ಪ್ರಭುತ್ವಕ್ಕೆ ಗೌರವ, ರಾಜಾಶ್ರಯ.
  15.  ಇಂದ್ರಿಯ ನಿಗ್ರಹ ಕಠಿಣಯೋಗ, ದೇಹ ದಂಡನೆ ಮೂಲಕ ಶಿವಭಕ್ತಿ ಆಚರಣೆ.
  16.  ದೇವಾಲಯ ಕೇಂದ್ರಿತ ಶಿವಭಕ್ತಿ ಪಾರಮ್ಯ ಪುರೋಹಿತಶಾಹಿತ್ವ, ಅನ್ಯಮತ ದೂಷಣೆ.
  17.  ಕೈಲಾಸಕ್ಕೆ ಪ್ರಾಶಸ್ತ್ಯ,
  18.  ಕಾಯಕ ದಾಸೋಹ ಕಲ್ಪನೆ ಇಲ್ಲ.
  19. ಕಾಯಕ್ಕೆ ಹೆಚ್ಚು ಮಹತ್ವವಿಲ್ಲ.
  20.  ಜೀವಾತ್ಮ ಪರಮಾತ್ಮ ದ್ವೈತಭಾವ.
  21.  ಗುರು, ಶಿವ, ದೀಕ್ಷೆಗಳಿಗೆ ಪ್ರಾಧಾನ್ಯ.
  22.  ಪಂಚಾಚಾರಗಳ ಆಚರಣೆ.
  23.  ಶಿವಯೋಗ ಸಾಧನೆಗೆ ಮಹತ್ವ.
  24.  ಶಿವಯೋಗ ಶಿವ ದರ್ಶನವೇ ಸದ್ಯೋನ್ಮುಕ್ತಿ
  25. ಧರ್ಮ ತತ್ವ ಸಿದ್ಧಾಂತಗಳು ಸಂಸ್ಕೃತದಲ್ಲಿ ಪಂಡಿತಮಾನ್ಯ.       

ವೀರಶೈವ :

  1. ಪಟಟ್ಸ್ಥಲ ಸಾಧನಮಾರ್ಗ ಸಮ ಸಮುಚ್ಚಯ ರೀತಿ.
  2. ಇಷ್ಟಲಿಂಗ ಆರಾಧನೆ
  3. ಪಂಚಾಕ್ಷರಿ ಮಂತ್ರಯುಕ್ತ ದೀಕ್ಷೆಗೆ ಪ್ರಾಶಸ್ಯ, ಎಲ್ಲ ದೀಕ್ಷೆಗಳ ಸಮನ್ವಯ
  4. ಭಕ್ತಿ ಮತ್ತು ಜ್ಞಾನಕ್ಕೆ ಮಹತ್ವ.
  5. ಗುರು-ಲಿಂಗ- ಜಂಗಮರಿಗೆ, ವಿಶೇಷವಾಗಿ ಜಂಗಮರಿಗೆ ಮಹತ್ವ.
  6. ಎಲ್ಲ ಅಷ್ಟಾವರಣಗಳಿಗೂ ಮಹತ್ವ.
  7. ಹೋಮ ಆಚರಣೆ ಇತ್ಯಾದಿ ವರ್ಜಿತ, ಇಷ್ಟಲಿಂಗ ಪೂಜೆ ಶ್ರೇಷ್ಠ. ಲಿಂಗಾಂಗ ಸಾಮರಸ್ಯ ಪ್ರಾಧಾನ್ಯ.
  8. ಮಲತ್ರಯಗಳನ್ನು ಕಳಚಿಕೊಳ್ಳಲು ಇಷ್ಟಲಿಂಗ ಆರಾಧನೆ ಸರಳಮಾರ್ಗ
  9. ಅಂಗನಲ್ಲಿಯ ಶಕ್ತಿಯೇ ಭಕ್ತಿ, ಸಾಧನ ಭಕ್ತಿಗಿಂತ ಸಾಧ್ಯಭಕ್ತಿಗೆ ಪ್ರಾಶಸ್ತ್ಯ.
  10. ಪರಬ್ರಹ್ಮ ಶಿವನ ಮೂರು ಸೂಕ್ಷ್ಮ ರೂಪಗಳು ಶೂನ್ಯ, ನಿಶೂನ್ಯ, ಬಯಲು
  11. ಶಿವಭಕ್ತಿ ಗುರು-ಲಿಂಗ-ಜಂಗಮ ಗುಣಗಾನಕ್ಕೆ ಪ್ರಾಶಸ್ತ್ಯ.
  12. ಸಾಮಾಜಿಕ ಚಿಂತನ ಮಂಥನಕ್ಕೆ ಹೆಚ್ಚಿನ ಪ್ರಾಶಸ್ತ್ಯ ಆಚರಣಾ ಮೂಲ ತತ್ವಕ್ಕೆ ಮಾನ್ಯತೆ. 
  13. ಜಾತಿಭೇದ ಮೇಲುಕೀಳು, ಅಸ್ಪೃಶ್ಯತೆಗಳನ್ನು ಹೋಗಲಾಡಿಸಲು ಆದ್ಯತೆ.
  14. ಪ್ರಭುತ್ವ ನಿರಾಕರಣೆ,ರಾಜಾಶ್ರಯ ತಿರಸ್ಕಾರ ಸಂಘಟನಾತ್ಮಕ ಪ್ರತಿಭಟನೆ
  15. ಇಂದ್ರಿಯ ನಿಗ್ರಹ ವಿರೋಧ. ಪರಸ್ತ್ರಿ ಸಂಗ ಖಂಡನೆ, ಅಂತರಂಗ ಬಹಿರಂಗ ಶುದ್ಧಿಗೆ ಆದ್ಯತೆ.
  16. ಇಷ್ಟಲಿಂಗ ಕೇಂದ್ರಿತ ಭಕ್ತಿ, ವೈದಿಕ ಮತ ವಿರೋಧ.
  17. ಇಹಕ್ಕೆ ಪ್ರಾಶಸ್ತ್ಯ.
  18. ಸತ್ಯಶುದ್ಧ ಕಾಯಕ, ದಾಸೋಹ.
  19. ಕಾಯವನ್ನು ಪ್ರಸಾದ ಕಾಯವಾಗಿಸಬೇಕು.
  20. ಲಿಂಗಾಂಗ ಸಾಮರಸ್ಯ ಭಾವ, ಶಕ್ತಿವಿಶಿಷ್ಟಾದ್ವೈತ ಮುಂದುವರಿಕೆ.
  21. ಜಂಗಮಕ್ಕೆ ಹೆಚ್ಚಿನ ಪ್ರಾಧಾನ್ಯತೆ.
  22. ಪಂಚಾಚಾರಗಳ ಕಟ್ಟುನಿಟ್ಟಿನ ಆಚರಣೆ.
  23. ಅಷ್ಟಾಂಗವನ್ನು ಲಿಂಗಾಂಗಯೋಗವಾಗಿಸಿ  ಶಿವಯೋಗವನ್ನು ವಿಸ್ತರಿಸಿದರು
  24. ಎಲ್ಲ ಯೋಗಗಳಿಗಿಂತ ಭಕ್ತಿಯೋಗವೇ ಶ್ರೇಷ್ಠ
  25. ಧರ್ಮ ತತ್ವ ಸಿದ್ಧಾಂತಗಳು ಜನಸಾಮಾನ್ಯರ ಕನ್ನಡ ನುಡಿಯಲ್ಲಿಯೇ ರಚನೆಗೊಂಡು ಜನ ಸಾಮಾನ್ಯರಿಗೆ ಹತ್ತಿರವಾದವು.*

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

 

 

 ಮಗನೆ ಈ ಸಂಸಾರ | ತೆಗಹನೇ ಪರಿಹರಿಪೆ

ದುಗುಡ ಬೇಡೆಂದು ನಗುತೊಂದಾಲೋಚನೆ

ಬಗೆದ ಶ್ರೀಗುರುವೆ ಕೃಪೆಯಾಗು || ||

ಎಷ್ಟೋ ದಿನಗಳಿಂದ ಜಂಗುಹಿಡಿದ ಕಬ್ಬಿಣವಾದರೂ ಪರುಷಮಣಿ ಸಂಸ್ಪರ್ಶದಿಂದ ಹೊನ್ನಾಗುವಂತೆ ಸದ್ಗುರು ಸನ್ನಿಧಿಯನ್ನು ಸೇರಿದ ಮೇಲೆ ಉದ್ಧಾರವಾಗದೆ ಮಾಣನು. ಶಿಷ್ಯನು ಶ್ರೀಗುರುವಿನಲ್ಲಿ ಆತ್ಮಾರ್ಪಣ ಭಕ್ತಿಯನ್ನು ಅರ್ಪಿಸಬೇಕು. ಅಂದರೆ ಅವನ ಎಲ್ಲ ಜೀವನಭಾರವು ಗುರುವಿಗೆ ಸಲ್ಲುತ್ತದೆ. ಮಾರ್ಜಾಲಕಿಶೋರನ್ಯಾಯದಂತೆ ಪರಮಗುರುವು ಶಿಷ್ಯನ ಸಕಲ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾನೆ.

ಶಿಷ್ಯನ ಅನನ್ಯವಾದ ಪ್ರಾರ್ಥನೆಯಿಂದ ಸಂತುಷ್ಟನಾದ ಕರುಣಾಮಯ ಗುರುನಾಥನು- ‘ಮಗನೆ’ಯೆಂದು ಸಂಬೋಧಿಸಿ ಹತ್ತಿರ ಕರೆದು. ತಂದೆ ಮಗನನ್ನು ಕರೆದು ಕೂಡ್ರಿಸಿಕೊಂಡು ಜೀವನ ಮಾರ್ಗವನ್ನು ತಿಳಿಸುವಂತೆ ಶಿಷ್ಯನಿಗೆ ಉಪದೇಶಿಸುತ್ತಾನೆ. ತಂದೆಗೆ ಮಗನ ಉತ್ಕರ್ಷದ ಚಿಂತೆಯಿರುವಂತೆ ಶಿಷ್ಯನ ಉದ್ಧಾರ ಕಾರ್ಯ ಪರಮಗುರುವಿಗಿದೆ. ಬುದ್ಧಿ ಕಲಿಸುವದು, ಸಮಸ್ಯೆಗಳಿಗೆ ಸದುಪಾಯ ತೋರುವುದು ತಂದೆಯಾದವನ ಕರ್ತವ್ಯವಲ್ಲವೆ ? ಸರ್ವಜ್ಞಮೂರ್ತಿಯು “ಬುದ್ಧಿಗಲಿಸದ ತಂದೆಗೆ ಶುದ್ಧ ವೈರಿ’ ಯೆಂದಿದ್ದಾನೆ. ಇಲ್ಲಿ ಸಾಕ್ಷಾತ್ ಅಧ್ಯಾತ್ಮ ತಂದೆಯು ಲಭ್ಯವಾದ ಬಳಿಕ ಶಿಷ್ಯನಿಗೆ ಇನ್ನೆಲ್ಲಿಯ ಚಿಂತೆ ? ಮತ್ತೆಲ್ಲಿಯ ಭಯ ? ಯಾವುದೂ ಉಳಿಯುವದಿಲ್ಲ. ಸಮುದ್ರವನ್ನು ಸೇರಿದ ನದಿಗೆ ರಭಸವೆಲ್ಲಿ ? ಉದ್ವೇಗವೆಲ್ಲಿ? ಎಲ್ಲವೂ ಅದರಲ್ಲಿ ಲೀನವಾಗಿ ಹೋಗುತ್ತದೆ. ಹಾಗೆ ಗುರುಸನ್ನಿಧಿಯಲ್ಲಿ ಶಿಷ್ಯನ ಸಂಸಾರಭಾವನೆಗಳೆಲ್ಲ ಅಡಗಿ ಮೋಕ್ಷದ ಬಯಕೆ ಬಲಿಯುತ್ತದೆ.

ಕೃಪಾಕರನಾದ ಶ್ರೀಗುರುವು ಶಿಷ್ಯನನ್ನು ‘ಬಾ ಅಪ್ಪಾ ಮಗನೆ !’ ಎಂದು ಸಮೀಪಕ್ಕೆ ಕರೆದು ಕುಳ್ಳಿರಿಸಿಕೊಂಡು  ನಗುಮುಖದಿಂದ ಬೋಧೆಗೆಯ್ಯುವ ದೃಶ್ಯ ಅಪೂರ್ವ. ರೋಗಿಯಾದವನಿಗೆ ವೈದ್ಯನ ಕರುಣಾಮಯ ದೃಷ್ಟಿಯು ಮತ್ತು ಸಾಂತ್ವನೆಯ ಮಾತುಗಳು ಅವನ ಅರ್ಧರೋಗವನ್ನೇ ಕಳೆಯುವಂತೆ ; ಭವರೋಗ ವೈದ್ಯನಾದ ಪರಮ ಗುರುವಿನ ನಗು ಮುಖದ ಕೃಪಾನೋಟ ಮನಸ್ಸಿಗೆ ನೆಮ್ಮದಿಯನ್ನು  ಕೊಡುತ್ತದೆ. ಬಿಸಿಲಿನಿಂದ ಬಳಲಿದವನಿಗೆ ನೆಳಲು ತಂಪನ್ನೀಯುವದಿಲ್ಲವೆ?

ಗುರುನಾಥನು ಶಿಷ್ಯನಾದ ನನಗೆ- ‘ಈ ಸಂಸಾರವು ಅಜ್ಞಾನದಿಂದ ಅಹಂಕಾರ ದಿಂದ ನಿನಗೆ ಭಾರವಾಗಿದೆ ಹೊರತು; ಅರಿತಾಚರಿಸಿದಲ್ಲಿ ಅದು  ಸಸಾರವಾಗುತ್ತದೆ. ಕಮಲ ಪತ್ರ ಬಿಂದುವಿನಂತೆ, ಕೆಸರಿನಲ್ಲಿದ್ದ ಕುಂಬಾರ ಹುಳದಂತೆ ಸಂಸಾರದಲ್ಲಿದ್ದು ಇಲ್ಲದಂತಿರಬೇಕು. ಆಗ ಸಂಸಾರವೇ ಸದ್ಗತಿಗೆ ಸಹಾಯಕವಾಗುವದು. ಬಸವಾದಿ ಪ್ರಮಥರು ಸಂಸಾರದಿಂದಲೇ ಸದ್ಗತಿಯನ್ನು ಸಾಧಿಸಲಿಲ್ಲವೆ ? ಜ್ಞಾನಿಯಾಗಿ ಗುರುಪುತ್ರನಾಗಿ ಸಂಸಾರಕ್ರಿಯೆಯನ್ನು ಆಚರಿಸಿದರೆ ಬಂಧನವಿಲ್ಲ. ಅರಿವಿಲ್ಲದ ಕ್ರಿಯೆ ; ಕ್ರಿಯೆಯಿಲ್ಲದ ಅರಿವೂ ವ್ಯರ್ಥ, ಕಾರಣ ಈ ಸಂಸಾರದ ದುಗುಡವನ್ನು ಬಿಡು. ಯಾವ ಕಳವಳವನ್ನು ಮಾಡಿಕೊಳ್ಳಬೇಡ. ಈ ದುಗುಡ-ದುಮ್ಮಾನಗಳನ್ನು ನಿವಾರಿಸಿಕೊಳ್ಳುವ ಪರಮೋಪಾಯವನ್ನು ಕರುಣಿಸುವೆನು. ಚಿತ್ತವಿಟ್ಟು ಕೇಳು.

 “ಭಕ್ತಿಯೇ ಮುಕ್ತಿಯ ಸಾಧನೆ. ಶ್ರದ್ಧಾ-ನಿಷ್ಠೆಗಳಿಂದ ಅದನ್ನು ಅಳವಡಿಸಿಕೊಳ್ಳು. ನವವಿಧ ಭಕ್ತಿಗಳಲ್ಲಿ ಕೊನೆಯದಾದ  ಆತ್ಮಸಮರ್ಪಣಾಭಕ್ತಿಯು ಅತ್ಯಂತ ಶ್ರೇಷ್ಠವಾದುದು. ಇದಕ್ಕೆ ಸುಂದರ ಉದಾಹರಣೆಯೆಂದರೆ- *ʼʼಮಾರ್ಜಾಲ ಕಿಶೋರ ನ್ಯಾಯ.” ಬೆಕ್ಕಿನ ಮರಿಗಳು ತಮ್ಮ ನಿರ್ವಹಣೆಯನ್ನೆಲ್ಲ ತಾಯಿಗೇನೆ ಬಿಟ್ಟಿರುತ್ತವೆ. ಕಣ್ಣುಮುಚ್ಚಿ ಧ್ಯಾನಸ್ಥರಂತೆ ನಿಶ್ಚಿಂತವಾಗಿರುತ್ತವೆ. ತಮ್ಮನ್ನು ತಾಯಿಗೆ ಅರ್ಪಿಸಿಕೊಂಡಿರುತ್ತವೆ. ಅದಕ್ಕಾಗಿ ತಾಯಿಬೆಕ್ಕೇ ಮರಿಗಳ ಸಂಪೂರ್ಣ ರಕ್ಷಣೆಯ ಹೊಣೆಹೊತ್ತಿರುತ್ತದೆ. ಇದರಂತೆ ಶಿವಮಯವಾದ ಸಂಸಾರದಲ್ಲಿದ್ದು ಅದರ ಎಲ್ಲ ಭಾರವನ್ನು ಶಿವನ ಮೇಲೆ ಹಾಕಿ ಕರ್ತವ್ಯ ಕರ್ಮವನ್ನು ಮಾಡು. ಕೊಡುವನೂ ಸಂಗ, ಕೊಂಬುವವನೂ ಸಂಗ’ನೆಂದು ಬಸವಣ್ಣನವರು ನೆರೆನಂಬಿದಂತೆ, ಮಾಡುವವನೂ ಶಿವ, ಮಾಡಿಸಿಕೊಳ್ಳುವವನೂ ಶಿವ. ಮಾಡುವ ಕೆಲಸವೂ ಶಿವಮಯವೆಂಬ ಪವಿತ್ರ ಭಾವನೆಯಿರಲಿ. ಇದನ್ನರಿತು ಆಚರಿಸಿದರೆ ಸಂಸಾರ ಸಸಾರವಾಗುವದರಲ್ಲಿ ಸಂದೇಹವಿಲ್ಲ. 

ಇದಕ್ಕೊಂದು ಚಿಕ್ಕ ದೃಷ್ಟಾಂತವನ್ನು ಮನವಿಟ್ಟು ಕೇಳು- ಒಬ್ಬ ರೈತನು ದಿನಾಲು ತಪ್ಪದೆ ತನ್ನ ಕುದುರೆಯನ್ನೇರಿ ಹೊಲಕ್ಕೆ ಹೋಗಿ ಕೃಷಿಕಾಯಕವನ್ನು ಪೂರೈಸಿ ಬರುತ್ತಿದ್ದನು. ಬರುವಾಗ ಹುಲ್ಲನ್ನೋ, ಕಟ್ಟಿಗೆಯನ್ನೂ ತರುತ್ತಿದ್ದನು. ಹೊಲಕ್ಕೆ ತಪ್ಪದೆ ಹೋಗುವದು ಒಕ್ಕಲಿಗನ ಕರ್ತವ್ಯ. ಜೊತೆಗೆ ಏನಾದರೂ ಕೆಲಸ ಮಾಡಿಯೇ ಬರಬೇಕು. ಅದಕ್ಕಾಗಿಯೇ ಹೊಲ ನೋಡದೆ ಹೋಯಿತು. ಸಾಲ ಕೇಳದೆ ಹೋಯಿತು” ಎಂಬ ವೇದಸದೃಶ ಗಾದೆ ಮಾತನ್ನು ಕೇಳಿರ ಬೇಕು. ಪ್ರತಿನಿತ್ಯವೂ ಹೊಲವನ್ನು ನೋಡುವದರಿಂದ ಕೃಷಿಕಾಯಕ ಸಫಲವಾಗುವದು. ಹೊಲಕ್ಕೆ ಹೋದ ರೈತನು ಬರಿಗೈಯಿಂದ ಬರಬಾರದು. ಅದು ರೈತನ ಲಕ್ಷಣವಲ್ಲ,  ಅದಕ್ಕಾಗಿ ಆ ರೈತನು ಬರಿಗೈಯಿಂದ ಬರುತಿರಲಿಲ್ಲ. ಒಮ್ಮೆ ಬರುವಾಗ ಅವನಿಗೊಂದು ವಿಚಾರ ಹೊಳೆಯಿತು. ಈ ಕುದುರೆಯ ಮೇಲೆ ನಾನು ಸುಖವಾಗಿ ಅಡ್ಡಾಡುತ್ತಿದ್ದೇನೆ. ಪಾಪ ! ಇದಕ್ಕೇಕೆ ಈ ಭಾರವಾದ ಹೊರೆಯನ್ನು ಹೊರಿಸಬೇಕು.  ಇದು ಸರಿಯಲ್ಲವೆಂದು ವಿಚಾರಿಸಿ ಅದನ್ನು ತನ್ನ ತಲೆಯ ಮೇಲಿಟ್ಟುಕೊಂಡು ನಡೆದನು. ದಿನಾಲು ಇದನ್ನು ನೋಡುತ್ತಿದ್ದ ಪಕ್ಕದ ಹೊಲದ ಯಜಮಾನನು ಅವನನ್ನು ಕೇಳಿದ, ”ಏನಪ್ಪಾ ತಮ್ಮಾ! ಇಲ್ಲಿ ನಿಲ್ಲು ನಿನಗೊಂದು ಮಾತು ಕೇಳಬೇಕಾಗಿದೆ. ನೀನು ದಿನನಿತ್ಯವೂ ಮೇವಿನ ಹೊರೆಯನ್ನಾಗಲಿ, ಕಟ್ಟಿಗೆಯನ್ನಾಗಲಿ ಮನೆಗೆ ಒಯ್ಯುತ್ತಿ ಆದರೆ ಆ ಭಾರವನ್ನು ನಿನ್ನ ತಲೆಯ ಮೇಲಿಟ್ಟು ಕೊಂಡೇಕೆ ಹೋಗುತ್ತೀ ? ನೀನು ಹೊತ್ತ ಹೊರೆಯ ಭಾರವೂ ಕುದುರೆಗೇನೆ ಬೀಳುವದಿಲ್ಲವೆ ? ನೀನೇಕೆ ವ್ಯರ್ಥ ಕಷ್ಟ ಪಡುತ್ತಿದ್ದೀಯಾ ! ಕುದುರೆಯ ಮೇಲೇನೇ ಮುಂದಿಟ್ಟುಕೊಂಡು ಹೋಗುವದು ಉಚಿತವಲ್ಲವೆ ?” ಎಂದು ಹಿತೋಕ್ತಿಗಳನ್ನಾಡಿದನು.

ಅವನ ಮಾತುಗಳನ್ನು ಅರ್ಥೈಸಿಕೊಂಡು ರೈತನು ತನ್ನ ಮೂರ್ಖತನಕ್ಕೆ ಮರುಗಿ ಸುಖವಾಗಿ ಬರಹತ್ತಿದನು. ಈ ದೃಷ್ಟಾಂತ ಕೇವಲ ರೈತನದಲ್ಲ, ಅದು ನಿನಗೂ ಅನ್ವಯಿಸುತ್ತದೆ-ನೀನು ಶಿವನೆಂಬ ಕುದುರೆಯನ್ನೇರಿ ಸಂಸಾರ ಸಾಗರವನ್ನು ದಾಟುತ್ತಿದ್ದೇನೆಂಬುದನ್ನೇ ಮರೆತಿರುವಿ. ಎಲ್ಲವನ್ನು ನಡೆಯಿಸಿಕೊಡುವವನು ಶಿವನು. ಆದರೆ ಹೊಲ, ಮನೆ ಮಡದಿ ಮಕ್ಕಳೆಲ್ಲರೂ ನನ್ನವರು. ನಾನೇ ನಡೆಸುವೆನೆಂಬ ಸಂಸಾರ ಭ್ರಾಂತಿಯೇ ಭಾರವಾಗಿದೆ. ಶಿವನ ಪ್ರೇರಣೆಯಿಲ್ಲದೆ ಯಾವುದೂ ನಡೆಯದು. ಅದು ಕಾರಣ ಶಿವನ ಧ್ಯಾನ ಮಾಡುತ್ತ, ಗುರು-ಲಿಂಗ- ಜಂಗಮಾರಾಧನೆ ಗೈಯ್ಯುತ್ತ ಎಲ್ಲ ಭಾರವನ್ನು ಪರಶಿವನ ಮೇಲೆ ಹಾಕಿ ಕಾಯಕ ಕೈಕೊಳ್ಳುವದೇ ಪ್ರತಿಯೊಬ್ಬರ ಕರ್ತವ್ಯ. ಇದುವೇ ಸುಲಭೋಪಾಯವು. ಇದರಿಂದ ಸುಖ ಖಂಡಿತವಾಗಿ ಸಿಕ್ಕುವದು.” ಎಂದು ಮುಂತಾಗಿ ಸದ್ಗುರುವಿನ ಆಲೋಚನೆಯನ್ನು ಆಲಿಸುವ ಶಿಷ್ಯನೇ ಕೃತಾರ್ಥನು.  ಪುಣ್ಯಮಯನು.

ಕರೆದು ಮಂಡೆಯ ಮೇಲೆ | ಕರವಿಟ್ಟು ಸಿರದಡಹಿ

ಗುರುಪುತ್ರನೆನಿಸಿ-ಸ್ಥಿರವಾಗಿ ಬಾಳೆಂದು

ಹರಸಿದೈ ಗುರುವೆ ಕೃಪೆಯಾಗು II ೭೭ ||

ಶ್ರೀಗುರುವು ಶಿಷ್ಯನನ್ನು ಸಮೀಪಕ್ಕೆ ಬರಮಾಡಿಕೊಂಡು ಆತ್ಮೀಯವಾಗಿ ಹಸನ್ಮುಖದಿಂದ ಸುಲಭೋಪಾಯಗಳನ್ನು ತಿಳಿಸುತ್ತ ಯಾವ ಯಾವ ಸಂಸ್ಕಾರವನ್ನು ದಯಪಾಲಿಸುವನು, ಏನನ್ನು ಅನುಗ್ರಹಿಸುವನು ಎಂಬುದನ್ನು ಶಿವಕವಿಯು ವಿಶದ ಪಡಿಸುತ್ತ ಹೋಗುತ್ತಾನೆ.

ಬಾಳಿನ ಬೇಗೆಯಲ್ಲಿ ಬಳಲಿದ ವ್ಯಕ್ತಿಯನ್ನು ಹತ್ತಿರಕ್ಕೆ ಕರೆದು ಮೈದಡಹಿ ತಲೆಯ ಮೇಲೆ ಹಸ್ತವನ್ನಿಟ್ಟು ಸಂತೈಸಿದರೆ ಅವನಿಗೆಷ್ಟು ಆನಂದವಾಗುವದೋ ಅದಕ್ಕೂ  ಮಿಗಿಲಾಗಿ ಗುರುಕರಸ್ಪರ್ಶದಿಂದ ಪರಮಾನಂದವೇ ಲಭ್ಯವಾಗುವದು. ಸದ್ಗುರುವಿನ ಸದಯಾಂತಃಕರಣವನ್ನು ಶಿಷ್ಯನು ಪುನಃ ಪುನಃ ಸಂಸ್ಮರಿಸುತ್ತಾನೆ. ಉಪಕೃತಿಯನ್ನು ಸ್ಮರಿಸುತ್ತಿರುವುದೇ ನಿಜವಾದ ಮಾನವೀಯತೆ. ಅದು ಅತ್ಮೋದ್ಧಾರದ ಮೈಲುಗಲ್ಲು

 ಗುರುದೇವಾ ! ಕಾಯ-ಕರ್ಮಗಳೆಂಬ ಮಾಯಾ ಸಂಸಾರಭ್ರಾಂತಿಯಲ್ಲಿ ಗತಿಗಾಣದ ನನ್ನನ್ನು ಉದ್ಧಾರಗೊಳಿಸಿದೆ. ಯೋಗಕ್ಷೇಮವನ್ನು ವಿಚಾರಿಸಿದೆ. ನಗುತೊಂದಾಲೋಚನೆಯನ್ನಿತ್ತು ಸಂತಸಗೊಳಿಸಿರುವೆ. ನಿನ್ನ ಉಪಕಾರ ಸ್ಮರಿಸಲ ಸದಳವಾಗಿದೆ. ಎನ್ನ ಶಿರದ ಮೇಲೆ ನಿನ್ನ ವರದ ಹಸ್ತವನ್ನಿಟ್ಟು ಗುರುಪುತ್ರನನ್ನಾಗಿಸಿದೆ  .ಗುರುಕರ ಜಾತನನ್ನಾಗಿಸಿದೆ. ನನ್ನ ಮಾಂಸಮಯ ಪಿಂಡವು ಮಂತ್ರಮಯವಾಯಿತು. ಧೈರ್ಯವಾಗಿ ಶಿವಬಾಳನ್ನು ಬಾಳೆಂದು ಹರಸಿದೆ-ಇಂಥ ಹರಕೆ ಸಾಮಾನ್ಯವೆ ! ಪುನರ್ಜಾತನನ್ನು ಮಾಡುವ ಸುಯೋಗ, ಗುರುಕರ ಜಾತನಾಗುವ ಶುಭಯೋಗವೂ ಹೌದು.

ಅಧ್ಯಾತ್ಮಜೀವನದಲ್ಲಿ ಗುರುಪುತ್ರನಾಗುವದೇ ಉನ್ನತ ಮಾರ್ಗ. ಅದರಲ್ಲೂ ವೀರಶೈವ ಸಿದ್ಧಾಂತವು ತತ್ತ್ವಪ್ರಧಾನವಾದುದು. ವೀರಶೈವವು ಜಾತಿವಾಚಕವಲ್ಲ. ತತ್ತ್ವಸೂಚಕವಾದುದು. ಗುರುಕರಜಾತನಾಗುವದು ಬಹುಮುಖ್ಯವಾದ ಪ್ರಕ್ರಿಯೆ. ಗುರುಪುತ್ರನಾಗುವಲ್ಲಿಯೇ ಪೂರ್ವಾಶ್ರಯ ಅಳಿಯುವದು ; ಮತ್ತು ಶಿವದೀಕ್ಷೆಯಿಂದ ಸಮಾನತೆಯು ಪ್ರಾಪ್ತವಾಗುವದು. ಸದ್ಗುರು ಕೃಪೆ ಪಡೆಯದೆ ಯಾವ ಫಲವಿಲ್ಲ. ಶರಣಸಂತತಿಗೆ ಕಾರಣಕರ್ತನು ಗುರುದೇವನೆ. ಜೀವಜಾಲಂಗಳೊಳಗೆ ಯಾವನ ನ್ನಾದರೂ ಪಾವನಮಾಡುವ ಮಹಾ ಶಕ್ತಿ ಸದ್ಗುರುವಿಗಿದೆ. ಅಂತೆಯೇ ಅನುಭವಿಗಳು  ಶಾಸ್ತ್ರಕಾರರು ,    

ಅಪುತ್ರಸ್ಯ ಗತಿರ್ನಾಸ್ತಿ”     

ಮಕ್ಕಳಾಗದವನಿಗೆ ಗತಿಯಿಲ್ಲವೆಂದರು. ಲೌಕಿಕ ಮಕ್ಕಳಾದರೆ ಸದ್ಗತಿಯೆಂದರ್ಥವಲ್ಲ. ಇದು ವೈಶಿಷ್ಟ್ಯಪೂರ್ಣವಾಗಿದೆ. ಅನೇಕ ಮಕ್ಕಳನ್ನು ಹಡೆಯುವ ಶ್ವಾನ ಸೂಕರಗಳಿಗೂ ಸದ್ಧತಿ ಸಿಕ್ಕಬೇಕಾದೀತು. ಸದ್ಗುರುವಿನ ವರಕರದಲ್ಲಿ ಸಂಜನಿಸಿ ಗುರುಪುತ್ರನೆನಿಸಬೇಕು. ಗುರುಪುತ್ರರಾಗದವರಿಗೆ ಸದ್ದತಿಯಿಲ್ಲವೆಂಬುದು ಗಮನೀಯವಾದುದು. ಗುರುಕರ ಜಾತನಾಗದೇ ಶಿವಜೀವರ, ಅಂಗ-ಲಿಂಗದ ಸಾಮರಸ್ಯದ ಸುಖದ ಸಂಬಂಧವೂ ಆಗುವದಿಲ್ಲ.

ವೀರಶೈವ ಪ್ರಕ್ರಿಯೆಯಲ್ಲಿ ಸ್ತ್ರೀಪುರುಷರೆಂಬ ಭೇದಭಾವವಿಲ್ಲ. ಲಿಂಗಾಂಗ ಸಾಮರಸ್ಯದ ಸುಖವನ್ನು ಸವಿಯಲು ಸಕಲರಿಗೂ ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟಿದೆ ಶರಣಧರ್ಮ. ಹಿಂದೂ ಸಂಸ್ಕೃತಿಯಲ್ಲಿ ಧಾರ್ಮಿಕಸ್ವಾತಂತ್ರ್ಯ ಸಿಕ್ಕದ ಮಹಿಳೆಗೆ ವೀರಶೈವರು ಪ್ರಾಚೀನ ಕಾಲದಿಂದಲೂ ಧರ್ಮಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ. ಶಿವಲಿಂಗವನ್ನು ಪೂಜಿಸುವ ಆರಾಧಿಸುವ ಅಧಿಕಾರ ಸಮನಾಗಿ ಬಂದಿದೆ.

ಗುರುಪುತ್ರನಾಗುವ ಸಂಸ್ಕಾರಕ್ಕೆ ಶಿವಸಂಸ್ಕಾರ ಅಥವಾ ದೀಕ್ಷಾಸಂಸ್ಕಾರವೆಂದು ಹೆಸರು. ಶ್ರೀಗುರುವಿನ ಶಕ್ತಿಪಾತವು ಶಿಷ್ಯನ ಮೇಲಾಗುವದರಿಂದ ಅವನ  ತನು-ಮನ-ಭಾವಗಳು ಪವಿತ್ರವಾಗುತ್ತವೆ. ಶರೀರದಲ್ಲಿದ್ದ ಮಲತ್ರಯಗಳು ಮಾಯವಾಗುತ್ತವೆ. ಅಲ್ಲದೆ ತನುತ್ರಯದಲ್ಲಿ ಶಿವಲಿಂಗತ್ರಯದ ಪ್ರತಿಷ್ಠೆಯೂ ನೆರವೇರುವದು: ಈ ವಿಚಾರವಾಗಿ ಶಿವಯೋಗಿ ಶಿವಚಾರ್ಯರ ನುಡಿಯನ್ನು ಆಲಿಸಿ

*ದೀಯತೇ ಚ ಶಿವಜ್ಞಾನಂ

ಕ್ಷೀಯತೇ ಪಾಶಬಂಧನಮ್ |

ಯಸ್ಮಾದತಃ ಸಮಾಖ್ಯಾತಾ

ದೀಕ್ಷೇತೀಯಂ ವಿಚಕ್ಷಣೈಃ||೬. ೧೧ ||

ಯಾವ ಸಂಸ್ಕಾರವು ಶಿವಜ್ಞಾನವನ್ನುಂಟು ಮಾಡುವದೋ ಮತ್ತು ಮಲಮಾಯಾ ಕರ್ಮಬಂಧನವನ್ನು ನಾಶಮಾಡುವದೋ ಅದಕ್ಕೆ ಶಾಸ್ತ್ರಜ್ಞರು “ದೀಕ್ಷೆ’ಯೆಂದು ಹೇಳುವರು. ಮಲತ್ರಯವನ್ನು ನಾಶಮಾಡಿ ಲಿಂಗತ್ರಯವನ್ನು ಕರುಣಿಸುವ ಸತ್ಕೃಯೆಯುಳ್ಳುದೇ ‘ದೀಕ್ಷೆ’ಯೆಂಬ ಅನ್ವರ್ಥಕ ನಾಮವನ್ನು ಹೊಂದಿದೆ. ಇಂಥ ಮಹತ್ತರವಾದ ಹಸ್ತ-ಮಸ್ತಕ ಸಂಯೋಗ ರೂಪಸತ್ಕೃಯೆಯಿಂದ ಗುರುಕರಜಾತನಾದ ಶರಣನಿಗೆ ಭವ-ಮರಣಗಳು ದೂರಾಗುತ್ತವೆ. ಈ ಕೃತಿಕರ್ತನಾದ ಶಿವಕವಿಯು  ತಮ್ಮ ‘ಶಿವಾನುಭವ ದರ್ಪಣದಲ್ಲಿ’-

ಗುರು ಕರೋದ್ಭವ ತಾನಾದ ಶರಣಗುಂಟೆ ಪರಿಭವ ?

ಪರಮಗುರುವು ಕರುಣದಿಂದ ಶಿರದಮೇಲೆ ಕರವನಿಡಲು |

ಪರುಷಮುಟ್ಟಿದ ಲೋಹದಂತೆ ಶರೀರ ಲಿಂಗವಾದ

ಶರಣಗಿನ್ನು ಉಂಟೆ ಪರಿಭವ ||

ಎಂದು ಗುರುಕರಸ್ಪರ್ಶದ ಮಹತ್ವವನ್ನು ಮಾರ್ಮಿಕವಾಗಿ ವರ್ಣಿಸಿದ್ದಾನೆ. ಪುನರ್ಜಾತನನ್ನು ಮಾಡುವ ಸದ್ಗುರುವನ್ನು ವೈರಾಗ್ಯನಿಧಿ ಅಕ್ಕಮಹಾದೇವಿಯು-

ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ,

ಭವಬಂಧನವ ಬಿಡಿಸಿ ಪರಮ ಸುಖವ ತೋರಿದ ಗುರುವೆ,

ಭವಿಯೆಂಬುದ ತೊಡೆದು ಭಕ್ತೆಯೆಂದೆನಿಸುವ ಗುರುವೆ,

ಚನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವ, ಶರಣು ಶರಣಾರ್ಥಿ,

ಎಂದು ಮನವಾರೆ ಕೊಂಡಾಡಿ ಶರಣುಗೈದಿದ್ದಾಳೆ. ಅಂದಮೇಲೆ ಸದ್ಗುರುವಿನ ಹರಕೆ ಸಾರ್ಥಕವಾಗುವದು. ಶಕ್ತಿಯುತವಾದುದು.

 ದೀಕ್ಷೆ ತ್ರೈತನುವಿಂಗೆ | ಶಿಕ್ಷೆಯಂ ಮನಸಿಂಗೆ

ಮೋಕ್ಷವಾತ್ಮಂಗೆ-ಈಕ್ಷಿಸುತ ಕೊಟ್ಟಪ್ರ-

ತ್ಯಕ್ಷ ಶ್ರೀಗುರುವೆ ಕೃಪೆಯಾಗು ೭೮ ||

ಹಿಂದಿನ ತ್ರಿಪದಿಯಲ್ಲಿ ದೀಕ್ಷಾವಿಧಾನಗಳನ್ನು ವಿವರಿಸಿ ಇಲ್ಲಿ ದೀಕ್ಷೆಯ ವೈವಿಧ್ಯತೆಯನ್ನು ಶಿವಕವಿಯು ನಿರೂಪಿಸುತ್ತಾನೆ.  

 ದೀಕ್ಷಾಸಂಸ್ಕಾರವು ಮೂಬಗೆಯಾಗಿದೆ. ಮೂರು ಶರೀರಗಳ ಮೂರು ಮಲಗಳನ್ನು ಕಳೆಯಲು ಮೂರು ದೀಕ್ಷೆಗಳು ಅವಶ್ಯವಾಗಬೇಕು.ʼʼ ಸಿದ್ಧಾಂತ ಶಿಖಾಮಣಿʼ’ ಯಲ್ಲಿ ಶಿವಯೋಗಿ ಶಿವಾಚಾರ್ಯರು

ಸಾ ದೀಕ್ಷಾ ತ್ರಿವಿಧಾ ಪ್ರೋಕ್ತಾ ಶಿವಾಗಮವಿಶಾರದೈಃ |

ವೇಧಾರೂಪಾ, ಕ್ರಿಯಾರೂಪಾ, ಮಂತ್ರರೂಪಾ ಚ ತಾಪಸ II ೬.೧೨ ||

ಗುರೋರಾಲೋಕಮಾತ್ರೇಣ ಹಸ್ತಮಸ್ತಕಯೋಗತಃ |

ಯಃ ಶಿವತ್ವ ಸಮಾವೇಶೋ ವೇಧಾದೀಕ್ಷೆತಿ ಸಾ ಮತಾ || ೬.೧೩

ಮಂತ್ರದೀಕ್ಷೇತಿ ಸಾ ಪ್ರೋಕ್ತಾ ಮಂತ್ರ ಮಾತ್ರೋಪದೇಶಿನೀ |

ಕುಂಡಮಂಡಲಿಕೋಪೇತಾ ಕ್ರಿಯಾದೀಕ್ಷಾ ಕ್ರಿಯೋತ್ತರಾ || ೬. ೧೪ ||

ಆದೀಕ್ಷೆಯು ವೇಧಾದೀಕ್ಷಾ, ಮಂತ್ರದೀಕ್ಷಾ, ಮತ್ತು ಕ್ರಿಯಾದೀಕ್ಷೆಯೆಂದು ಮೂಬಗೆಯಾಗಿದೆ. ಶ್ರೀಗುರುವಿನ ಕೃಪಾಕಟಾಕ್ಷೇಕ್ಷಣ ಮಾತ್ರದಿಂದಲೂ, ಹಸ್ತ ಮಸ್ತಕ ಸಂಯೋಗದಿಂದಲೂ ಉತ್ಪನ್ನವಾಗುವದೋ ಯಾವ ಜ್ಞಾನಕ್ರಿಯಾತ್ಮಕ ಶಿವತತ್ತ್ವ ಸಮಾವೇಶವು ಉತ್ಪನ್ನವಾಗುವದೋ ಅದು ವೇಧಾ ದೀಕ್ಷೆಯೆನಿಸುವದು. ಶಿವಪಂಚಾಕ್ಷರಿ ಮಂತ್ರೋಪದೇಶವನ್ನು ಮಾಡುವದರಿಂದ ಅದು ಮಂತ್ರದೀಕ್ಷೆ ಯೆನಿಸುವದು. ದೀಕ್ಷಾಂಗಭೂತ ಸತ್ಕೃಯೆಗಳಿಂದ ಯುಕ್ತವಾದುದು ಕ್ರಿಯಾದೀಕ್ಷೆ ಯೆನಿಸುವದು ಎಂದು ಮೂರು ದೀಕ್ಷೆಗಳ ವಿವರವನ್ನು ವಿಶದಪಡಿಸಿದ್ದಾರೆ.

ಜೀವನಿಗೆ ಸ್ಥೂಲವಾದುದು ಶರೀರ, ಸೂಕ್ಷ್ಮವಾದುದು ಮನಸ್ಸು. ಕಾರಣ ಸ್ಥಿತಿಯಲ್ಲಿರುವದು ಭಾವ. ಪ್ರತಿಯೊಬ್ಬನಿಗೆ ಈ ಮೂರರ ಕಲ್ಪನೆ ಬಂದೇ ಬರುತ್ತದೆ. ಸ್ಥೂಲಶರೀರಕ್ಕೆ ಕಾರ್ಯಾನ ಕಾರ್ಯಗಳಿಂದ ಅಂಟಿಕೊಂಡಿರುವದು ಕಾರ್ಮಿಕ ಮಲವು. ಸೂಕ್ಷ್ಮ ಶರೀರವಾದ ಮನಸ್ಸಿನಲ್ಲಿ ಹೊನ್ನು, ಹೆಣ್ಣು, ಮಣ್ಣುಗಳಲ್ಲಿ ವ್ಯಾಪ್ತವಾಗಿ ಮೋಹಗೊಂಡಂಥಹವುದೇ ಮಾಯಾಮಲವು. ಕಾರಣರೂಪಾದ ಭಾವವನ್ನು ಸಂಕುಚಿಗೊಳಿಸಿರುವದು ಆಣವಮಲವು. ಈ ಮೂರು ಮಲಗಳಿಂದ ಮಾನವನು ಪುನಃ ಪುನಃ ಭವಚಕ್ರದಲ್ಲಿ ತಿರುಗುತ್ತಾನೆ. ದುಃಖದಿಂದ ಬಳಲುತ್ತಾನೆ. ಪರಮಾತ್ಮನ ಅಂಶೀಭೂತನಾದ ಜೀವನು ದೇವನ ಸರ್ವಜ್ಞತ್ವ, ಸರ್ವಕರ್ತೃತ್ವ, ಸರ್ವವ್ಯಾಪಕತ್ವಗಳನ್ನು ಮರೆತು ಅಲ್ಪಜ್ಞನೂ, ಅಹಂಕರ್ತನೂ, ಸಂಕೋಚ ಸ್ವಭಾವಿಯೂ ಆಗುವನು. ಇದರಿಂದ ಭವ-ಬಂಧನ ತಪ್ಪುವದಿಲ್ಲ. ಇವುಗಳನ್ನು ನಾಶಮಾಡ ಬಲ್ಲಾತನೇ ಶ್ರೀಗುರು.

ಸದ್ಗುರುವು ಶಿಷ್ಯನನ್ನು ಕೃಪಾದೃಷ್ಟಿಯಿಂದ ಈಕ್ಷಿಸಿ ಕಾಯದಲ್ಲಿಯ ಕಾರ್ಮಿಕ ಮಲವನ್ನು ಹೋಗಲಾಡಿಸುತ್ತಾನೆ . ಸಕಾಮಕರ್ಮಂಗಳನ್ನು ಬಿಡಿಸಿ ನಿಷ್ಕಾಮ  ಕ್ರಿಯೆಗಳನ್ನು ಬೋಧಿಸಿ ಇಷ್ಟಲಿಂಗವನ್ನು ಅನುಗ್ರಹಿಸುತ್ತಾನೆ. ಇಲ್ಲಿ ಹಸ್ತ ಮಸ್ತಕ. ಸಂಯೋಗಾತ್ಮಕ ಕ್ರಿಯೆಯು ಬಹು ಮಹತ್ವವುಳ್ಳುದು.

ಈ ವೇಧಾಧೀಕ್ಷೆಯಲ್ಲಿ *೧. ಆಜ್ಞಾ ೨. ಉಪಮಾ ೩. ಸ್ವಸ್ತಿಕಾರೋಹಣ ೪. ಕಲಶಾಭಿಷೇಕ ೫. ವಿಭೂತಿಪಟ್ಟ ೬. ಲಿಂಗಾಯತ ೭. ಲಿಂಗಸ್ವಾಯತ ವೆಂದು ಏಳು ವಿಧಾನಗಳುಂಟು. ಸದಾಚಾರಗಳನ್ನು ಆಜ್ಞಾಪಿಸಿ, ಉತ್ತಮರ, ಶರಣರ ನಡೆಯನ್ನು ಉಪಮಿಸುತ್ತಾನೆ. ಸ್ವಸ್ತಿಕಾರೋಹಣ ಮಾಡಿ ಕಲಶಾಭಿಷೇಕಗೈಯುತ್ತ ಶರೀರಕ್ಕೆ ವಿಭೂತಿ ಪಟ್ಟವನ್ನು ಬರೆಯುತ್ತಾನೆ. ನಂತರ ಶಿಷ್ಯನ ಪಶ್ಚಿಮ ಚಕ್ರದಲ್ಲಿಯ ಮಹಾಚೈತನ್ಯವನ್ನು ಲಿಂಗದಲ್ಲಿ ಆಯತಗೊಳಿಸಿ ಶಿಷ್ಯನ ಅಂಗೈಗೆ ಸ್ವಾಧೀನ ಗೊಳಿಸುತ್ತಾನೆ. ಅರ್ಥಾತ್ ಲಿಂಗವನ್ನು ಕರುಣಿಸುತ್ತಾನೆ. ಈ ಎಲ್ಲ ಕ್ರಿಯಾ ವಿಧಾನಗಳನ್ನು ಮಾಡುವದರಿಂದ ಶಿಷ್ಯನ ತನುವು ವೇಧಿಸಲ್ಪಡುತ್ತದೆ. ಅದಕ್ಕಾಗಿ ಇದು ವೇಧಾದೀಕ್ಷೆಯೆನಿಸುವದು ಈ ಸಪ್ತ ಸಂಸ್ಕಾರಗಳಿಂದ ಸ್ಥೂಲತನುವಿನ ಕಾರ್ಮಿಕಮಲವು ನಾಶವಾಗುವದು. ಮಂತ್ರದೀಕ್ಷೆಯಲ್ಲಿ ಸೂಕ್ಷ್ಮವಾದ ಮನವು ಮಾಯಾಮಲದಿಂದ ದೂರವಾಗಿ ಪ್ರಾಣಲಿಂಗವನ್ನು ಪಡೆಯುವದು. ಶಿವಷಡಕ್ಷರ ಮಹಾಮಂತ್ರವು ಮನಕ್ಕೆ ಉಪದೇಶಿಸಲ್ಪಡುವದು. ಮಂತ್ರೋಪದೇಶವೆಂಬ ಮಹಾಕ್ರಿಯೆ ನಡೆಯುವದರಿಂದ ಇದಕ್ಕೆ ಮಂತ್ರದೀಕ್ಷೆಯೆಂಬ ನಾಮ ಬಂದಿದೆ. ಇದು ೧. ಸಮಯ ೨. ನಿಸ್ಸಂಸಾರ ೩. ನಿರ್ವಾಣ ೪. ತತ್ತ್ವ ೫. ಆಧ್ಯಾತ್ಮ ೬. ಅನುಗ್ರಹ ೭. ಸತ್ಯಸಿದಗಳೆಂದು ಏಳು ವಿಧವಾಗುತ್ತದೆ. ಈ ಏಳನ್ನು ಮನಕ್ಕೆ (ಪ್ರಾಣಕ್ಕೆ) ಉಪದೇಶಿಸಿ ಮಾಯಾಮಲವನ್ನು ದೂರಮಾಡುವನು. ಮೇಲಿನ ಏಳೂ, ಮನಸ್ಸಿನಲ್ಲಿ ಪರಿಣಾಮ ಬೀರುವಂಥವುಗಳು ಇದರಿಂದ ಪ್ರಾಣದ ಮಾಯಾಮಲವು ದೂರವಾಗಿ ಸಂಕುಚಿತದೃಷ್ಟಿಯಳಿದು ವಿಶಾಲದೃಷ್ಟಿಯು ಪ್ರಾಪ್ತವಾಗುವದು.

ಕ್ರೀಯಾದೀಕ್ಷೆಯಿಂದ ಶಿಷ್ಯನ ಜೀವಭಾವವನ್ನು ನಿವೃತ್ತಗೊಳಿಸಿ ದಿವ್ಯ ಭಾವವ ಅಂದರೆ ಲಿಂಗಾಂಗಸಾಮರಸ್ಯದ ರಹಸ್ಯವನ್ನು ತಿಳುಹಿ ಆಣವ ಮಲವನ್ನು ಸುಟ್ಟು ಭಾವಲಿಂಗವನ್ನು ಅನುಗ್ರಹಿಸುವನು. ಇಲ್ಲಿ ೧. ಏಕಾಗ್ರಚಿತ್ತ ೨. ದೃಢವ್ರತ ೩. ಪಂಚೇದ್ರಿಯಾರ್ಪಿತ ೪. ಅಹಿಂಸೆ ೫. ಮನೋಲಯ ೬, ಲಿಂಗನಿಜ ೭. ಸದ್ಯೋನ್ಮುಕ್ತಿಗಳೆಂಬ ಏಳು ಉಪಸಂಸ್ಕಾರಗಳಾಗುವವು. ಅರ್ಥಾತ್ ಈ ಏಳು ಸೂಕ್ಷ್ಮ ಕ್ರಿಯೆಗಳಿಂದ ಸೂಕ್ಷ್ಮವಾದ ಭಾವದಲ್ಲಿ ಭರಿತವಾದ ಆಣವಮಲವನ್ನು ಕಿತ್ತಿಹಾಕುವನು. ಭಾವ ವಿಶಾಲವಾಗುವದು .ಭಾವಲಿಂಗಕ್ಕೆ ಆಶ್ರಯವಾಗುವದು.  ಸಪ್ತ ಸತ್ಕ್ರಿಯಾ ಭರಿತವಾದ ಇದು ಕ್ರಿಯಾದೀಕ್ಷೆಯೆನಿಸಿದೆ.

ಈ ತೆರನಾಗಿ ವೇಧಾದೀಕ್ಷೆ, ಮಂತ್ರದೀಕ್ಷೆ, ಕ್ರಿಯಾದೀಕ್ಷೆಗಳಲ್ಲಿ ಏಳೇಳು ವಿಧವಾಗಿ ಒಟ್ಟಿಗೆ ಇಪ್ಪತ್ತೊಂದು ದೀಕ್ಷೆಗಳಾಗುವವು. ಷಟ್‌ಸ್ಥಲಬ್ರಹ್ಮಿ ಮಹಾಜ್ಞಾನಿಗಳಾದ ಚನ್ನಬಸವಣ್ಣನವರು ೮೮೫ನೆಯ ವಚನದಲ್ಲಿ ಮೇಲಿನ ೨೧ ದೀಕ್ಷಾ ವಿವರವನ್ನು ತಿಳಿಸಿದ್ದಾರೆ. ಮತ್ತು…….

ಮೂರೇಳು ಇಪ್ಪತ್ತೊಂದು ದೀಕ್ಷೆಯ

ಭಿನ್ನವಿಲ್ಲದೆ ಸದ್ಗುರು ಮುಖದಿಂದೆ

ಅರಿದಾನಂದಿಸಬೇಕು’ (೩೩೨ ವಚನ)

ಎಂದು ಇಪ್ಪತ್ತೊಂದು ದೀಕ್ಷೆಗಳು ಅವಶ್ಯವೆಂಬುದನ್ನು ನಿರೂಪಿಸಿದ್ದಾರೆ.

ಸದ್ಗುರುವು ಪ್ರತ್ಯಕ್ಷ ಶಿವನಾಗಿ ಶಿಷ್ಯನ ಉದ್ಧಾರಮಾಡುವಲ್ಲಿ ದೀಕ್ಷಾಗುರುವಾಗಿ ತನುತ್ರಯಗಳನ್ನು ಶುದ್ಧಗೊಳಿಸಿ ಇಷ್ಟಲಿಂಗವನ್ನು ಕರುಣಿಸುವನು. ಶಿಕ್ಷಾಗುರುವಾಗಿ ಮನಕ್ಕೆ ಮಂತ್ರವನ್ನು ಉಪದೇಶಿಸಿಸುವನು. ಮೋಕ್ಷಗುರುವಾಗಿ ಭಾವದಲ್ಲಿ ಪರಿಶುದ್ಧತೆಯನ್ನು ವ್ಯಾಪಕತೆಯನ್ನು ತುಂಬಿ ಭಾವಲಿಂಗವನ್ನು ನೆಲೆಗೊಳಿಸುವನು. ನಿತ್ಯ ಮುಕ್ತಿಯನ್ನು ಪಡೆದು ನಿತ್ಯಾನಂದವನ್ನು ಹೊಂದಲು ಅಣಿಗೊಳಿಸುವನು. ಶ್ರೀಗುರುವಿನ ಕರುಣಾದೃಷ್ಟಿಯ ಈಕ್ಷಣವು ಅಸಾಮಾನ್ಯವಾದುದು. ಆತನ ಈ ಕ್ಷಣದಿಂದ ಮೋಕ್ಷ ಸುಖ ಸಾಧ್ಯವಾಗುವದು. ಆದ್ದರಿಂದ ಗುರುನಾಥನು ಪ್ರತ್ಯಕ್ಷ ಶಿವನಲ್ಲದೆ ಮತ್ತೇನು ? ಅಪ್ರತ್ಯಕ್ಷ ಶಿವನಿಂದ ಇವೆಲ್ಲವೂ ಸಾಧ್ಯವಿಲ್ಲ. ಅದು ಕಾರಣವೇ ಅಣ್ಣನವರು- “ಶಿವಪಥವನರಿವೊಡೆ ಗುರುಪಥವೆ ಮೊದಲು ಎಂದು ಕೊಂಡಾಡಿದರು.

 ಅಡಿಗೆರಗಿದವನ ಶಿರ | ದಡಹಿ ಮನ್ನಸಿ ಎನ್ನ

ನುಡಿಯ ಬ್ರಹ್ಮವನು-ನಡೆಗೆ ತಂದಿತ್ತ ಎ-

ನ್ನೊಡೆಯ ಶ್ರೀಗುರುವೆ ಕೃಪೆಯಾಗು ||೭೬||

ಗುರುದೀಕ್ಷಾಸಂಸ್ಕಾರದ ಗರಿಮೆಯನ್ನು ಪುನಃ ಪುನಃ ಶಿವಕವಿಯು ಬಿತ್ತರಿಸಿದ್ದಾನೆ. ದೇವರದಾಸಿಮಾರ್ಯರು ಗುರುಕರುಣೆಯಿಂದಾದ ತಮ್ಮಿರವನ್ನು, ಸ್ವಾನುಭಾವವನ್ನು

ಉರಿವ ಕೆಂಡದ ಮೇಲೆ ತೃಣವ ತಂದಿರಿಸಿದರೆ

ಆ ತೃಣವನಾ ಕೆಂಡ ನುಂಗಿದಂತೆ

ಗುರುಚರಣದ ಮೇಲೆ

ತನುವೆಂಬ ತೃಣವ ತಂದಿರಿಸಿದರೆ

ಸರ್ವಾಂಗವೆಲ್ಲ ಲಿಂಗ ಕಾಣಾ ರಾಮನಾಥ

 ಎಂದು ತನುತುಂಬಿ, ಮನತುಂಬಿ, ಭಾವದುಂಬಿ ಹಾಡಿದ್ದಾರೆ. ಉರಿಯನ್ನು ಕಂಡ ತೃಣ ಉರಿಯಂತಾಗುವಂತೆ ಗುರುಚರಣವನ್ನು ಹೊಂದಿದ ಶಿಷ್ಯನ ತನುವು ಲಿಂಗಸ್ವರೂಪವಾಗುವದು. ಲಿಂಗಸ್ವರೂಪವನ್ನು ಅನುಭವಿಸಿ ಸರ್ವಾಂಗ ಲಿಂಗಿಯಾದ ಆನಂದದ ನಿಬ್ಬೆರಗಿನಲ್ಲಿ ಪುನಃ ಪುನಃ ಗುರುಸಾಮರ್ಥ್ಯವನ್ನು ಎತ್ತಿ ತೋರಿಸಿದ್ದಾನೆ.

ಗುರುವೆ! ತವಚರಣಾರವಿಂದಗಳಲ್ಲಿ ಶರಣಾಗತನಾದ ಎನ್ನ ಶಿರದಡಹಿ ಪ್ರೀತಿಯಿಂದ ನನ್ನ ನುಡಿಯನ್ನೂ  ಮಂತ್ರಮಯಗೊಳಿಸಿದೆ. ಚತುರ್ವೇದಗಳ ಸಾರತರವಾದ ಮಹಾವಾಕ್ಯಗಳೆನಿಸಿದ ‘ಅಹಂ ಬ್ರಹ್ಮಾಸ್ಮಿ” (ನಾನು ಬ್ರಹ್ಮನಿದ್ದೇನೆ.) ‘ಅಯಮಾತ್ಮಾ ಬ್ರಹ್ಮ’ (ಈ ಆತ್ಮನೇ ಬ್ರಹ್ಮನಾಗಿದ್ದಾನೆ.) ‘ಪ್ರಜ್ಞಾನಂ ಬ್ರಹ್ಮ (ಪ್ರಕೃಷ್ಟವಾದ ಜ್ಞಾನವೇ ಬ್ರಹ್ಮವಾಗಿದೆ) ಮತ್ತು ‘ತತ್ತ್ವಮಸಿ’ (ಆ ಬ್ರಹ್ಮವೇ ನೀನಾಗಿರುವೆ)ಯೆಂಬ ಬಾಯ್ (ನುಡಿ) ಬ್ರಹ್ಮವನ್ನು ಪ್ರತ್ಯಕ್ಷವಾಗಿ ಎನ್ನ  ಕಂಗಳಿಂದ ನೋಡಲು ಮನ ಮುಟ್ಟಿ ಪೂಜಿಸಲು, ಭಾವತುಂಬಿ ಹಾಡಲು ಸದ್ಗುರುನಾಥನೆ ! ಅನುವು ಮಾಡಿಕೊಟ್ಟಿರುವಿ. ಶಬ್ದ ಬ್ರಹ್ಮದಿಂದೇನು ಲಾಭ ? ಆ ಶಬ್ದಬ್ರಹ್ಮವನ್ನೇ ಆಚಾರ ಲಿಂಗವನ್ನಾಗಿ ಕ್ರಿಯಾಲಿಂಗವನ್ನಾಗಿ ಎನ್ನ ಕರಕಮಲಕ್ಕೆ ತಂದಿರಿಸಿದ ನೀನು ಎನ್ನೊಡೆಯನಲ್ಲವೆ ?

ಕ್ರಿಯೆಗೆ ಬಾರದ ವಸ್ತುವಿನಿಂದ ಯಾವ ಫಲವೂ ದೊರೆಯುವದಿಲ್ಲ. ನುಡಿಯ ಬ್ರಹ್ಮವು ನಡೆಗೆ ಬಾರದೆ  ಪ್ರಯೋಜನವಾಗುವದಿಲ್ಲ, ಕಲ್ಲುಸಕ್ಕರೆಯ ಸವಿಯನ್ನು ಮಾತಿನಿಂದ ನೆನೆದರೆ ಅದನ್ನು ಉಪಭೋಗಿಸಿದಂತಾಗುವದೇ ? ನುಡಿಯನ್ನು ನಡೆಯಲ್ಲಿ ಸಮನ್ವಯಗೊಳಿಸುವದೇ ವೀರಶೈವ ಸಿದ್ಧಾಂತ. ಜ್ಞಾನಗಮ್ಯವಾದ ವಿಷಯವನ್ನು ಆಚರಣೆಯಲ್ಲಿ ಅಳವಡಿಸುವದೇ ಶರಣರ ಮಹಾಮಾರ್ಗ, ಜ್ಞಾನ ಕ್ರಿಯೆಗಳ ಸಂಗಮದಲ್ಲಿಯೇ ಅನುಭವ ಪ್ರಾಪ್ತವಾಗುವದು. ಅನುಭವದಲ್ಲಿಯೇ ಆನಂದವನ್ನು ಹೊಂದುತ್ತೇವೆ. ವೀರಶೈವನು ನುಡಿದಂತೆ ನಡಿಯಲೇಬೇಕು. ಅಂತೆಯೇ ಚನ್ನಬಸವಣ್ಣನವರು-

ವೀರಶೈವನಾದಡೆ ಪರಧನ ಪರಸತಿಯರ ಮುಟ್ಟದಿರಬೇಕು.

ಎಂದೂ ಪರಹಿಂಸೆಯನೆಸಗದಿರಬೇಕು.

ಒಡಲಳಿದಡೆಯೂ ಹಿಡಿದಾಚಾರವ ಬಿಡದಿರಬೇಕು.

ಇಂತೀ ವೀರಾಚಾರವು ನೆಲೆಗೊಳ್ಳದೆ ವೀರವಂಶದಲ್ಲಿ

ಹುಟ್ಟಿದ ಮಾತ್ರಕ್ಕೆ ವೀರಶೈವನೆಂತಪ್ಪನಯ್ಯ ಕೂಡಲ ಚನ್ನಸಂಗಯ್ಯ

“ಹಿಡಿದಾಚಾರವನ್ನು ಬಿಡದೇ ಪಾಲಿಸುವಲ್ಲಿಯೇ ವೀರಶೈವತ್ವವು ಸಿದ್ಧಿಸುವದು” ಎಂದು ನಡೆ-ನುಡಿಯ ನಿರ್ವಚನ ಮಾಡಿದ್ದಾರೆ. ಅದುಕಾರಣ ನಡೆ-ನುಡಿ ಯೊಂದಾಗಿಸುವದೇ ಭವಭಂಧನದ ಬಿಡುಗಡೆಗೆ ಕಾರಣವಾಗಿದೆ.

ಮಸ್ತಕದೊಳಗೆ ನಿನ್ನ | ಹಸ್ತವನೆ ಇಟ್ಟು ನಿಜ

 ವಸ್ತುವನು ತೆಗೆದು  –ಹಸ್ತಪೀಠದೊಳಿತ್ತ

ಸ್ವಸ್ಥ ಶ್ರೀಗುರುವೆ ಕೃಪೆಯಾಗು  II ೮೦ ||

ಸದ್ಗುರುವಿನಿಂದ ಶಿವದೀಕ್ಷೆಯನ್ನು ಪಡೆದ ಶಿವಕವಿಯು ಅದರ ಪರಿಯನ್ನು ಸುಖದ ಸೊಬಗನ್ನು ನೆನೆನೆನೆದು ಮೆಲಕುಹಾಕಹತ್ತಿದ್ದಾನೆ. ಈ ದೀಕ್ಷಾವಿಧಾನವು ಈ ಶರಣ ʼನಿರಾಭಾರಿ ವೀರಶೈವ ಸಿದ್ಧಾಂತ’ ಪ್ರಕರಣದಲ್ಲಿ ಇದಕ್ಕೂ ಸ್ಪಷ್ಟವಾಗಿ ಪ್ರತಿಪಾದಿತ   ವಾಗಿದೆ-

ಪಾವನಾತ್ಮಕ ಸುಪುತ್ರನ ಮಸ್ತಕದೊಳು ಗುರು

ದೇವ ಕರವಾಂತು ಸಾಸಿರದಳದ ಚಿತ್ ಕಳೆಯ

ಭಾವದಿಂ ಮನ, ಮನದಿ ನೇತ್ರಂಗಳಿಂ ತೆಗೆದಿಷ್ಟರೂಪುಗೊಳಿಸಿ

ತೀವಿ ತಚ್ಛಿಷ್ಯನಂಗದ ಮೇಲೆ ಧರಿಸಿ ಸಂ-

ಜೀವ ಷಣ್ಮಂತ್ರ ಲಿಂಗವಿದೆಂದು ತಿಳುಹೆ ಚಿದ್

ಭಾವ ಕಳೆಯೊಳಗಿಷ್ಟಲಿಂಗವೇ ತಾನಾದ ಲಿಂಗಭಕ್ತನೆ ಶ್ರೇಷ್ಠನು || ೪ ||

ದೀಕ್ಷಾವಿಧಾನವು ಎಂಥ ಕಲಾತ್ಮಕವೂ ಕ್ರಿಯಾ-ಜ್ಞಾನ ಪ್ರಧಾನವೂ ಹಾಗೂ ಸದ್ಗುರು ಕೃಪಾಪೂರಿತವೂ ಆಗಿದೆ ! ಇದು ಸಾಮಾನ್ಯ ಗುರುವಿನಿಂದ ಸಾಧ್ಯವಿಲ್ಲ. ಲಿಂಗದ ಶಿಲಾಭಾವ ಹೋಗದೆ ಜೀವಾತ್ಮನ ಜಡಭಾವ ಅಳಿಯದು. ಸದ್ಗುರುವು ಶಿಷ್ಯನ ಪಾವನಾತ್ಮಕ ಮಸ್ತಕದ ಪಶ್ಚಿಮ ಶಿಖಾಚಕ್ರಮಧ್ಯದ ನಿಜವಸ್ತುವಾದ ಮಹಾಚೈತನ್ಯವನ್ನು ಅವನ ಶಿರದ ಮೇಲೆ ತನ್ನ ವರದ ಹಸ್ತವನ್ನು ಇಟ್ಟು ತನ್ನ ಭಾವದಲ್ಲಿ ಭಾವಿಸುತ್ತಾನೆ. ಆ ಚೈತನ್ಯವನ್ನು ಮನದಲ್ಲಿ ಮೂರ್ತರೂಪಗೊಳಿಸುತ್ತಾನೆ. ನಂತರ ಅದನ್ನು ಶಿಷ್ಯನ ಕಂಗಳಿಂದ ತನ್ನ ಕೃಪಾಪೂರ್ಣ ಲೋಚನಮುಖಾಂತರ ಹೊರತೆಗೆದು ಇಷ್ಟಲಿಂಗವನ್ನಾಗಿ ಮಾಡಿ ಕರುಣಾಮಯ ಹೃದಯದಿಂದ ಶಿಷ್ಯನ ವಾಮಹಸ್ತದಲ್ಲಿ ಇರಿಸುತ್ತಾನೆ. ಈ ಇಷ್ಟಲಿಂಗವು ನಿನ್ನ ಚಿತ್‌ಸ್ವರೂಪು. ಇದು ಸುಜ್ಞಾನ-ಸತ್ಕೃಯೆಗಳನ್ನು ಸಮನ್ವಯ ಗೊಳಿಸುವ ಸಾಧನವೆಂದು ಆಜ್ಞಾದಿ ದೀಕ್ಷೆಗಳಿಂದ ಉಪದೇಶಿಸಿ ಬಲಕರ್ಣದಲ್ಲಿ ಷಡಕ್ಷರ ಮಹಾಮಂತ್ರವನ್ನು ಬೋಧಿಸಿ, ಇದುವೆ ನಿನ್ನ ಪ್ರಾಣ. ಪ್ರಾಣ ಬೇರೆಯಲ್ಲ ; ಲಿಂಗ ಬೇರೆಯಲ್ಲ, ಲಿಂಗಪ್ರಾಣಿಯಾಗಿ ಬಾಳೆಂದು ಹರಸುತ್ತಾನೆ. ಶಿರದರಮನೆಯಿಂದ ಕರಕಮಲಕ್ಕೆ ಬಿಜಯಂಗೈಸಿದ ಈ ಮಹಾಲಿಂಗವು ಸಾಮಾನ್ಯವಲ್ಲ. ಇದು ಇಷ್ಟಲಿಂಗ. ಇಷ್ಟಾರ್ಥವನ್ನು ಪೂರೈಸುವಂಥಹದು.    

ಇಂಥ ಲಿಂಗದ ನೆಲೆ-ಕಲೆಗಳೇನೆಂಬ ಪ್ರಶ್ನೆಬರುವದು ಸಹಜ. “ವೀರಶೈವ ಚಿಂತಾಮಣಿ’ಯಲ್ಲಿ –

ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ |

ತದೇತಲ್ಲಿಂಗಮಿತ್ಯುಕ್ತಂ ಲಿಂಗಶಬ್ದಪರಾಯಣೈ II ೧೦ II

 ಲಿಂಗಮಧೇಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ |

ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ || ೧೧ |

ಯಾವ ಮಹಾವಸ್ತುವಿನಲ್ಲಿ ಸಕಲ ಚರಾಚರ ಪ್ರಾಣಿಗಳು ಲೀನವಾಗುವವೋ ಪುನಃ ಹುಟ್ಟುವವೋ; ಅದುವೆ ಲಿಂಗವೆಂಬುದಾಗಿ ಲಿಂಗತತ್ತ್ವವನ್ನು ಬಲ್ಲಜ್ಞಾನಿಗಳು ನಿರೂಪಿಸಿದ್ದಾರೆ. ಮತ್ತು ಈ ಲಿಂಗಮಧ್ಯದಲ್ಲಿ ಮೂರುಲೋಕದ ಸಕಲ ಚರಾಚರ ಜಗತ್ತು ಅಡಗಿದೆ. ಇದನ್ನು (ಲಿಂಗವನ್ನು) ಹೊರತುಪಡಿಸಿ ಬೇರೆ ಯಾವುದೂ ಇಲ್ಲ. ಎಲ್ಲವನ್ನು ಒಳಗೊಂಡ ಮಹಾಲಿಂಗವನ್ನು ಚನ್ನಾಗಿ ಪೂಜಿಸಬೇಕೆಂದು ತಿಳಿಸಿದ್ದಾರೆ. ಇದು ಬ್ರಹ್ಮಾದಿ ದೇವತೆಗಳಿಗೂ ದೊರಕಿಲ್ಲ, ಇಂಥ ಮಹಾ ಘನಲಿಂಗವನ್ನು ಗುರು ಇಷ್ಟಲಿಂಗವನ್ನಾಗಿ ಕರುಣಿಸುತ್ತಾನೆ. ಅರುಹಿನ ಕುರುಹನ್ನಾಗಿ ಉಪದೇಶಿಸುತ್ತಾನೆ. ಚಿಚ್ಚೈತನ್ಯದ ಚುಳುಕನ್ನಾಗಿ ಅನುಗ್ರಹಿಸುತ್ತಾನೆ. ಜಗದಣ್ಣ ಬಸವಣ್ಣನವರು-

ಜಗದಗಲ, ಮುಗಿಲಗಲ, ಮಿಗೆಯಗಲ, ನಿಮ್ಮಗಲ

ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ

ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮುಕುಟ

ಅಗಮ್ಯ, ಅಗೋಚರ, ಅಪ್ರತಿಮಲಿಂಗವೆ

ಕೂಡಲ ಸಂಗಮ ದೇವಯ್ಯಾ

ನೀವೆನ್ನ ಕರಸ್ಥಳಕ್ಕೆ ಬಂದು ಚುಳುಕಾದಿರಯ್ಯಾ

“ಜಗದ ವಿಸ್ತಾರದಲ್ಲಿ, ಆಕಾಶದ ಹರವಿನಲ್ಲಿ ವ್ಯಾಪಿಸಿದ, ಅಗಮ್ಯ, ಅಗೋಚರ, ಅಪ್ರತಿಮವಾದ ಮಹಾಲಿಂಗವು ಸದ್ಗುರು ಕೃಪೆಯಿಂದ ಎನ್ನ ಕರಸ್ಥಲಕ್ಕೆ ಚುಳುಕಾಗಿ ಬಂದಿತು.” ಎಂದು ಆನಂದದಿಂದ ಮಾರ್ಮಿಕವಾಗಿ ಇಷ್ಟಲಿಂಗದ ಹುಟ್ಟಿನ ಗುಟ್ಟನ್ನು ಪ್ರಕಟಗೊಳಿಸಿದ್ದಾರೆ. ಅದರ ಮಹತ್ವವನ್ನು ಮನದುಂಬಿ ಬಣ್ಣಿಸಿದ್ದಾರೆ.

ಬ್ರಹ್ಮಾಂಡಗತವಾದ ಮಹಾಲಿಂಗವು ಮಹಾಚೈತನ್ಯವಾಗಿದ್ದರೆ, ಪಿಂಡಾಂಡಕ್ಕೆ ಪ್ರಾಪ್ತವಾದ ಇಷ್ಟಲಿಂಗವು ಮಹಾಚೈತನ್ಯದ ಚುಳುಕು, ಇಷ್ಟಲಿಂಗವನ್ನು ಸಂಶೋಧಿಸಿದ ಮಹಾನುಭಾವರು ಮನುಷ್ಯನ ಆಕಾರಕ್ಕೇನೇ ಸಾದೃಶ್ಯಗೊಳಿಸಿದ್ದಾರೆ. ಈ ಲಿಂಗವು  ಐದು ಲಕ್ಷಣಗಳಿಂದ ಕೂಡಿರಬೇಕು. ಇವಕ್ಕೆ ಪಂಚಸೂತ್ರಗಳೆನ್ನುವರು.

ಲಿಂಗವೃತ್ತ ಸಮಂ ಪೀಠಂ ದೀರ್ಘ೦ ವಿಸ್ತಾರ ಮೇವ ಚ |

ತದರ್ಧ೦ ಗೋಮುಖಶೈವ ಇತ್ಯೇತಲ್ಲಿಂಗಪಂಚಕಮ್

ಪಂಚಸೂತ್ರಕೃತಂ ಲಿಂಗಂ ಧಾರಯೇದ್ವಿಧಿವತ್‌ ಶುಭಮ್ ||

ಲಿಂಗಕ್ಕೆ ಬಾಣ, ಪೀಠ, ವಿಸ್ತಾರ, ಎತ್ತರ ಮತ್ತು ಗೋಮುಖವೆಂದು ಪಂಚ ಲಕ್ಷಣಗಳು. ಬಾಣ (ಪೀಠದ ಮೇಲಿನ ಲಿಂಗ)ದ ಸುತ್ತಳತೆಯಷ್ಟು ಪೀಠದ ಎತ್ತರ ಮತ್ತು ವಿಸ್ತಾರವಿರಬೇಕು. ಪೀಠದಲ್ಲಿ ಅರ್ಧಬಾಣವು ಅಡಗಬೇಕು. ಗೋಮುಖವು ಸುತ್ತಳತೆಯ ಅರ್ಧವಾಗಿರಬೇಕು. ಹೀಗೆ ಪಂಚಸೂತ್ರಗಳಿಂದ ಕೂಡಿದ ಲಿಂಗವನ್ನೇ  ಸದ್ಗುರುವಿನಿಂದ ವಿಧಾನ ಪೂರ್ವಕ ಧರಿಸಬೇಕೆಂದು ʼʼವೀರಶೈವಾಚಾರ ಪ್ರದೀಪಿಕೆ” ಯಲ್ಲಿ ಪ್ರತಿಪಾದಿತವಾಗಿದೆ

 ಇಂಥ ಶಾಸ್ತ್ರೀಯವಾದ  ಪಂಚಸೂತ್ರಲಿಂಗಗಳನ್ನು ಬೆಳಕಿಗೆ ತಂದ ಶ್ರೇಯಸ್ಸು  ಕಾರಣಿಕ ಪುರುಷರಾದ ಶಿವಯೋಗಮಂದಿರ ಸಂಸ್ಥಾಪಕರಾದ ಹಾನಗಲ್ಲ ಶ್ರೀಕುಮಾರ ಮಹಾ ಶಿವಯೋಗಿಗಳಿಗೆ ಸಲ್ಲದೆ ಇರದು. ಶುದ್ಧವಾದ ಕಪ್ಪು ಕಲ್ಲಿನಲ್ಲಿ ಪಂಚ ಸೂತ್ರ(ಪಂಚಲಕ್ಷಣ)ಗಳಿಂದ ಕೂಡಿದ ಲಿಂಗವನ್ನು ತಯಾರಿಸುವ ವಿಧಾನವನ್ನು ಶಿವಯೋಗ   ಮಂದಿರದಲ್ಲಿ ಕಲಿಸಿಕೊಟ್ಟರು.

 ವೀರಶೈವರ ಧಾರ್ಮಿಕ ಕಲ್ಪನೆಗಳಲ್ಲಿ ಮತ್ತು ಆಚಾರ-ವಿಚಾರಗಳಲ್ಲಿ ವೈಜ್ಞಾನಿಕತೆ ತುಂಬಿ ತುಳುಕಿದೆ. ಇಲ್ಲಿ ಯಾವ ಮಾತನ್ನು ಮೂಢನಂಬಿಕೆಯಿಂದಾಗಲಿ ರಂಜನೆಯಿಂದಾಗಲಿ ಹೇಳಿಲ್ಲ. ಶಿವಪೂಜೆಗೆ ಕುಳಿತುಕೊಳ್ಳುವ ವ್ಯಕ್ತಿಯನ್ನು ಲಿಂಗದ ಆಕಾರ (ಪಂಚಸೂತ್ರದ ಲಿಂಗದಂತೆ)ವಾಗಿಯೇ ಕಾಣಬರುವನು. ಆಸನಯುಕ್ತವಾಗಿ ಕುಳಿತುಕೊಂಡ ಕೆಳಭಾಗವೇ ಪೀಠವಾಗುವದು. ನೀಳವಾದ ಕಾಯ (ದಿಡ)ವು ಅಷ್ಟೇ ಪ್ರಮಾಣದಲ್ಲಿರುತ್ತದೆ. ಅದರರ್ಧಶಿರವಿರುತ್ತದೆ. ಈ ಶಿರವೇ ಲಿಂಗದ ಬಾಣವೆನಿಸುವದು. ವಾಮಕರದಲ್ಲಿ ಲಿಂಗವನ್ನು ಧರಿಸಿ ಈ ಲಿಂಗನಿರೀಕ್ಷಣೆ ಮಾಡುವ ಸನ್ನಿವೇಶವೇ ಗೋಮುಖವೆಸಿಸುವದು. ಲಿಂಗದ ಆಕಾರಕ್ಕೂ ಅಂಗದ ಆಕಾರಕ್ಕೂ ಭೇದವಿಲ್ಲದೆ ಅಂಗದಲ್ಲಿ ಲಿಂಗವನ್ನು ಲಿಂಗ ಗುಣಗಳನ್ನು ಅಳವಡಿಸಿಕೊಂಡರೆ ಲಿಂಗವೇ ತಾನಾಗುವನು.

ಪಂಚಸೂತ್ರ ಲಿಂಗಗಳು ಮಾರಲಿಕ್ಕೆ ಸಿಕ್ಕಮೇಲೆ ನಾವೇ ಕಟ್ಟಿಕೊಳ್ಳಬಹುದಲ್ಲ ವೆಂಬ ವಿಚಾರ ಬರಬಹುದು. ಹಾಗೇ (ಗುರುಸಂಸ್ಕಾರವಿಲ್ಲದೆ) ಕಟ್ಟಿಕೊಂಡ ಲಿಂಗದಲ್ಲಿ ಚೈತನ್ಯ ಬರದು. ಯಾವ ಸಂಸ್ಕಾರ ದೊರೆಯದು. ಲಿಂಗದ ಪೂರ್ವಾಶ್ರಯ (ಶಿಲಾಭಾವ)ವೂ ಹೋಗದು. ಅಂಗದ ಜಡಭಾವ (ಮಾಂಸಮಯ ಪಿಂಡದ)ವೂ ಅಳಿಯದು. ಮಂತ್ರ ಲಭ್ಯವಾಗದು. ಲಿಂಗವನ್ನು ಖರೀದಿಸಿ ತಾವೇ ಕಟ್ಟಿಕೊಳ್ಳುವ ಮೂರ್ಖರನ್ನು ಅಂಬಿಗರ ಚೌಡಯ್ಯ ಶರಣನು ಕಟುವಾಗಿ ಖಂಡಿಸಿದ್ದಾನೆ.

ಅದುಕಾರಣ ಗುರುಕರುಣೆಯಲ್ಲಿ ಆತನ ಶಿವಯೋಗ ಬಲದಿಂದ ಸಂಸ್ಕರಿಸಿದ ಲಿಂಗವೇ ಇಷ್ಟಲಿಂಗವು. ಮನಕ್ಕೆ ಶಿಕ್ಷೆಯನ್ನಿತ್ತು ಪ್ರಾಣಲಿಂಗವನ್ನು ಸ್ವಾಯತ್ತೀ ಕರಿಸುವನು. ಸಂಸಾರ ಭ್ರಾಂತಿಯಿಂದ ಬಿಡುಗಡೆ ಮಾಡಿ ಭಾವಕ್ಕೆ ಮೋಕ್ಷವನ್ನು ಕರುಣಿಸುವ ಭಾವಲಿಂಗವನ್ನು ಸನ್ನಿಹಿತಗೊಳಿಸುವನು. ಅಂದಮೇಲೆ ಇಂಥ ಪರಿಪೂರ್ಣ ಚೈತನ್ಯಮಯ ಇಷ್ಟಲಿಂಗವುಳ್ಳವನೇ ಲಿಂಗಾಯತನು. ಅಥವಾ ಲಿಂಗವಂತನು. ಲಿಂಗವಿಲ್ಲದೆ ಲಿಂಗವಂತನೆನಿಸಲಾರನು. ಯಾಕೆಂದರೆ ನಮ್ಮ “ವಚನವಲ್ಲರಿ”ಯಲ್ಲಿ ಅವಲೋಕಿಸಿ:

ಸಿರಿಯುಳ್ಳವನೆ ಸಿರಿವಂತ,

ಗುಣವುಳ್ಳವನೆ ಗುಣವಂತ;

ಲಿಂಗವುಳ್ಳವನೆ ಲಿಂಗವಂತನು ನಿಜದಿಂ,

ಲಿಂಗಗುಣಗಳನ್ನು ಆಯತ-ಸ್ವಾಯತ-ಸನ್ನಿಹಿತ

ಮಾಡಿಕೊಂಡವನೆ ಲಿಂಗಾಯತನು.

ಲಿಂಗಾಂಗ ಸಾಮರಸ್ಯದ ಸವಿಯನುಂಡವನೆ ನಿಜವೀರಶೈವನೆಂದ-

ನಮ್ಮ ಮೃಡಗಿರಿಯ ಅನ್ನದಾನೀಶ || ೨೧ ||

ಹೆತ್ತ ತಂದೆ ತಾಯಿಗಳು ಲಿಂಗವಂತರಾಗಿದ್ದರೂ ಲಿಂಗವಿಲ್ಲದ ಪುತ್ರ ಲಿಂಗಾಯತನಲ್ಲ. ಸಿರಿಸಂಪಾದಿಸಿ  ಸಿರಿವಂತನೆನಿಸುವಂತೆ ಗುಣಗಳನ್ನು ಸಂಪಾದಿಸಿ ಗುಣವಂತನಾಗುವಂತೆ ಸದ್ಗುರುವಿನ ಕೃಪೆಪಡೆದು ಲಿಂಗಾಯತನಾಗಬೇಕು. ಇದುವೆ  ಲಿಂಗವಂತಿಕೆಯ ಮೂಲವಾಗಿದೆ. ಇಷ್ಟಲಿಂಗವನ್ನು ಗುರುವಿನಿಂದ ಆಯತವಾದ (ಬರಮಾಡಿಕೊಂಡ) ಮೇಲೆ ಅದನ್ನು ಅರ್ಚನೆಗಳಿಂದ ಸ್ವಾಯತಗೊಳಿಸಿ (ತನ್ನದನ್ನಾಗಿ ಮಾಡಿಕೊಂಡು )ಸನ್ನಿಹಿತಗೊಳಿಸಿಕೊಳ್ಳಬೇಕು. (ಸಮರಸಗೊಳ್ಳಬೇಕು) ಲಿಂಗವೇ ಪ್ರಾಣ; ಪ್ರಾಣವೇ ಲಿಂಗವಾಗಿ ಭಾವಲಿಂಗದಲ್ಲಿ ಬೆರೆಯಬೇಕು. ಒಂದಾಗಬೇಕು. ಅಂದರೆ ಮಾತ್ರ ನಿಜವಾದ ವೀರಶೈವನೆನಿಸುವನು. ಲಿಂಗಭಕ್ತನಾಗುವನು. ಇಂಥವನಿಗೆ ಸಮಾನ ಸುಖಿ ವಿರಳ. ಇಂಥ ಲಿಂಗಾನಂದರಸದಲ್ಲಿ ತಲ್ಲೀನರಾದ ಮಹಾನುಭಾವರು ಮನದುಂಬಿ, ಭಾವದುಂಬಿ ಹೃದಯವನ್ನೇ ಹೊರಗೆಡವಿದ್ದಾರೆ. ಲಿಂಗತತ್ತ್ವದ ಅಗ್ಗಳಿಕೆಯನ್ನು ವೆಗ್ಗಳವಾಗಿ ಹೊಗಳಿದ್ದಾರೆ. ನಿಜಗುಣಾರ್ಯರು-

ಪರತರ ಶಿವಲಿಂಗವೆಳಸಿ ನಿನಗಾಗಿ

ಕರಕಂಜದೊಳು ಕಾಣಿಸಿತು ಯೋಗಿ ಯಜಿಸು ||

ಎಂದು ಹಾಡಿದ್ದಾರೆ. ಸರ್ಪಭೂಷಣ ಶಿವಯೋಗಿಗಳು

ಕರದೊಳಗೆ ಕಾಣಿಪುದು ಪರವಸ್ತುವಿದನರಿಯ

ದರೆಮರುಳರೊಳಗರಸಿ ತೊಳಲಿ ಬಳಲುವರು || ಪ ||

ಗೋವಿನೊಳಗಿಹ ಘೃತವು ಗೋವಿನಂಗದ ರುಜೆಯ

ಗೋವಿನಿಂ ಪೊರಮಟ್ಟು ಕೆಡಿಸುವಂತೆ ||

ಜೀವಭಾವವ ಕಳೆಯಲಾ ವಿಮಲಚಿದ್ ಬಿಂದು

ವಾವರಿಸಿ ಪೊರಗಿಷ್ಟಲಿಂಗ ತಾನಾಗಿ ||೧||

ಕಾಷ್ಠದೊಡಲಿನ ಶಿಖಿಯ ಕಾಷ್ಠದಿಂದುಜ್ವಲಿಸಿ

ಕಾಷ್ಠವನೆ ಸುಟ್ಟು ತಾ ಬೆಳಗುವಂತೆ ||

ಶ್ರೇಷ್ಠ ಚಿತ್ ಕಳೆಯೆ ಪೊರಮೊಟ್ಟು ಜಡಭಾವವನು |

ನಿಟ್ಟೊರಸಲದು ಪ್ರಾಣಲಿಂಗ ತಾನಾಗಿ || ೨ ||

ಮನೆಯ ಸೊಡರಿನ ಬೆಳಗು ಮನೆಯ ಬಾಗಿಲೊಳೈದಿ

ಮನೆಯಂಗಣದ ಮರ್ಬ ನೂಂಕುವಂತೆ ||

ತನು ತಮವ ಕಳೆಯಲ್ಕೆ ಚಿನ್ನಾದ ಮುಚ್ಚಳಿಸು-

ತನುಪಮಾದ್ವಯ ಭಾವಲಿಂಗ ತಾನಾಗಿ || ೩ ||  

ʼʼ ಹಸ್ತಕಮಲದಲ್ಲಿ ಪರವಸ್ತುವಾದ ಇಷ್ಟಲಿಂಗವು ಸದ್ಗುರು ಕೃಪೆಯಿಂದ ಪ್ರತ್ಯಕ್ಷ ತೋರುವದನ್ನು ತಿಳಿಯದೆ ಪಾಮರರೊಡನೆ ಚರ್ಚಿಸಿ ತೊಳಲಾಡಿ ಬಳಲುತ್ತಿರುವರು. ಆಕಳಿಗೆ ಬೇನೆ ಬಂದರೆ ಅದರೊಳಗಿರುವ ಹಾಲಿನಲ್ಲಿಯ ತುಪ್ಪವು  ಗುಣಪಡಿಸಲಾರದು. ಹಾಲನ್ನು ಕರೆದು ಚನ್ನಾಗಿ ಕಾಸಿ, ಹೆಪ್ಪು ಹಾಕಿ, ಮಜ್ಜಿಗೆ ಮಾಡಿ, ಬೆಣ್ಣೆತೆಗೆದು ಕಾಯಿಸಿದರೆ ತುಪ್ಪವಾಗುವದು. ಅದನ್ನು ಗೋವಿನ ನೋವಿಗೆ ಹಚ್ಚಿ ತಿಕ್ಕಿದರೆ ಅದು ವಾಸಿಯಾಗುವಂತೆ, ಗುರುವು ಜೀವಭಾವವನ್ನು ಕಳೆದು ವಿಮಲ ಚೈತನ್ಯಮಯ ಬೆಳಗನ್ನು ಇಷ್ಟಲಿಂಗದಲ್ಲಿ ನೆಲೆಗೊಳಿಸಿದರೇನೆ ಇಷ್ಟಲಿಂಗವಾಗುವದು. ಕಟ್ಟಿಗೆ ಯೊಳಗಿನ ಬೆಂಕಿಯು ಮಥನದಿಂದ ಹೊರಬಂದು ಆ ಕಟ್ಟಿಗೆಯನ್ನೆಲ್ಲ ಸುಟ್ಟು ಬೆಳಗುವಂತೆ ಜೀವಾತ್ಮನೊಳಗಿರುವ ಶ್ರೇಷ್ಠ ಚಿತ್ಕಳೆಯೇ ಗುರುಕೃಪೆಯಿಂದ ಹೊರಬಂದು ಜೀವದ ಜಡಭಾವವನ್ನು ಕಳೆಯಲು ಪ್ರಾಣಲಿಂಗವಾಗಿ ಮನೋನೇತ್ರಕ್ಕೆ ಕಾಣಿಸುವದು. ಮನೆಯೊಳಗೆ ಹಚ್ಚಿಟ್ಟ ದೀಪದ ಬೆಳಕು ಮನೆಯ ಬಾಗಿಲೊಳಗೆ ವ್ಯಾಪಿಸಿ ಮನೆಯಂಗಳದ ಕತ್ತಲೆಯನ್ನು ಕಳೆಯುವಂತೆ, ತನುವಿನಲ್ಲಿ (ಭಾವದಲ್ಲಿ )ತುಂಬಿರುವ  ತಮ (ಅಜ್ಞಾನ ಕತ್ತಲೆ) ವನ್ನು ನೀಗಿದ ಚಿನ್ನಾದವೇ ಅನುಪಮದ ಭಾವಲಿಂಗವಾಗಿ ಬೆಳಗುವದು” ಎಂದು ಇಷ್ಟ-ಪ್ರಾಣ-ಭಾವಲಿಂಗಗಳ ಸ್ವರೂಪ ವನ್ನು ಅವಶ್ಯಕತೆಯನ್ನು ತಿಳಿಪಡಿಸುತ್ತ ಸ್ತುತಿಗೈದಿದ್ದಾರೆ.

ಕೆಲವರು ತಮ್ಮಂತರಂಗದಲ್ಲಿಯೇ ಪ್ರಾಣಲಿಂಗವಿರುವದರಿಂದ ಹೊರಗಿನ ಇಷ್ಟಲಿಂಗದ ಅವಶ್ಯಕತೆಯಿಲ್ಲವೆಂದು  ವಾದಿಸುತ್ತಾರೆ. ಈ ವಾದ ಬರಿ ಶುಷ್ಕವಾದುದು. ವ್ಯರ್ಥವಾದುದು. ಊಟಮಾಡದವನಿಗೆ ತೃಪ್ತಿಯಾಗುವದೇ ಇಲ್ಲ. ಬಾಹ್ಯದಿಂದಲೇ ಅಂತರಂಗದ ಅರಿವಾಗುವದು. ಕರ್ಮಯೋಗದಲ್ಲಿ ಬದ್ಧನಾಗಿ ಗುಡಿ-ಗೋಪುರ- ಕೆರೆಗಳನ್ನು ಕಟ್ಟಿಸುತ್ತಿದ್ದ ಸಿದ್ಧರಾಮನಿಗೂ ಇಷ್ಟಲಿಂಗವಿರಲಿಲ್ಲ. ಮಲ್ಲಿಕಾರ್ಜುನನ ಕೃಪೆಪಡೆದಿದ್ದರೂ ಸ್ಥೂಲತನುವಿನ ತಮ (ಅಹಂಕಾರ) ಅಳಿದಿರಲಿಲ್ಲ. ಹಣೆಗಣ್ಣನ್ನು ಪಡೆದಿದ್ದೇನೆಂಬ ಅಹಂಕಾರ ಅತಿಯಾಯಿತು. ಲೋಕೋದ್ಧಾರಕ್ಕಾಗಿ ಸಂಚರಿಸುವ ವ್ಯೋಮಕಾಯನಾದ ಅಲ್ಲಮನ ಮೇಲೂ ಸಿದ್ಧರಾಮನ ಉರಿಗಣ್ಣು ಭುಗಿಲ್ಲೆಂದಿತು. ಆದರೆ ಸರ್ವಾತ್ಮನಾದ ಅಲ್ಲಮನ ಅಡಿಯಲ್ಲಿ ಉರಿಗಣ್ಣು ನಂದಿತು. ಸಿದ್ಧರಾಮನ ಗರ್ವ ಮುರಿಯಿತು. ನೈಜತಾತ್ತ್ವಿಕ ವಿಚಾರಗಳನ್ನು ಪ್ರಭುವಿನಿಂದ ತಿಳಿದು ಇಷ್ಟಲಿಂಗದ ಅವಶ್ಯಕತೆಯನ್ನು ಅರಿತು, ಚನ್ನಬಸವಣ್ಣನಿಂದ ಅನುಗೃಹೀತನಾದ ಸಿದ್ಧರಾಮೇಶ್ವರನ ಶೂನ್ಯ ಸಂಪಾದನೆಯ ಪ್ರಕರಣ ಅತ್ಯಂತ ಮಾರ್ಮಿಕವಾಗಿದೆ.

ಸಾಮಾನ್ಯವಾಗಿ ಗರ್ಭಸ್ಥ ಶಿಶುವಿಗೆ ತಾಯಿಯು ಜೋಗುಳವನ್ನು ಹಾಡುವದಿಲ್ಲ. ಉಪಚರಿಸಿ ಮುತ್ತಿಕ್ಕಿ ಆನಂದಪಡಲಾರಳು. ಅದರಂತೆ ಅಂತರಂಗದ ಆತ್ಮಲಿಂಗದ ಸ್ಥಿತಿಯಾದರೂ ಅರುವಿಗೆ ಬರುವದಿಲ್ಲ. ಇಷ್ಟಲಿಂಗವಿಲ್ಲದೆ ಪ್ರಾಣಲಿಂಗದ ನೆಲೆಕಲೆಗಳೂ ತಿಳಿಯುವದಿಲ್ಲ. ದೀಪವನ್ನು ಬೆಳಗಿದರೇನೇ ಕಿರಣ, ಪ್ರಕಾಶಗಳು ಹೊರಸೂಸುವಂತೆ ಸದ್ಗುರುವಿನಿಂದ ಪಡೆದ ಇಷ್ಟಲಿಂಗವೇ ದೀಪವು, ದೀಪದ ಕಿರಣವೇ ಪ್ರಾಣಲಿಂಗವು, ಪ್ರಕಾಶವೇ ಭಾವಲಿಂಗವು. ಇಷ್ಟಲಿಂಗದಿಂದಲೇ ಪ್ರಾಣಲಿಂಗ- ಭಾವಲಿಂಗಗಳು ಅಳವಡುತ್ತವೆ. ಮೂರು ಲಿಂಗಗಳನ್ನು ಧಾರಣ ಮಾಡಿಕೊಂಡಲ್ಲದೆ ಮೂರುತನುಗಳು ತುಂಬವು. ಮೂರು ಮಲಗಳು ನಾಶವಾಗಿ ಪಾವನವಾಗವು.

 ಇಂಥ ಅಗಮ್ಯ, ಅನುಪಮ, ದಿವ್ಯಲಿಂಗವನ್ನು ಪಡೆದ ಮೇಲೆ ಅನ್ಯದೇವತೆ ಗಳನ್ನು ಆರಾಧಿಸುವ ಅವಶ್ಯಕತೆಯಿಲ್ಲ. ಈ ಲಿಂಗವ ಹೊರತುಪಡಿಸಿ ಯಾವ ದೈವವೂ ಇಲ್ಲವೆಂದು ಹಿಂದೆ ಅರಿತಿದ್ದೇವೆ. ಲಿಂಗಭಕ್ತನು ಅನ್ಯದೇವತೆಗಳ ಕಲ್ಪನೆಯನ್ನೂ ಮನದಲ್ಲಿ ತರಬಾರದು. ಅನೇಕ ಶರಣರು ಅನ್ಯದೇವತಾರ್ಚನೆಯನ್ನು ನಿಷ್ಠುರವಾಗಿ ಹೇಳಿದ್ದುಂಟು. ‘ಶಿವಾನಂದಲಹರಿ”ಯಲ್ಲಿ ಶಂಕರಾಚಾರ್ಯರು-

ಸಹಸ್ರಂ ವರ್ತಂತೇ ಜಗತಿ ವಿಬುಧಾಃ ಕ್ಷುದ್ರಫಲದಾಃ |

ನಮನ್ಯೇ ಸ್ವಪ್ನೇ ವಾ ತದನುಸರಣಂ ತತ್ಕೃಫಲಮ್ ||

ಹರಿಬ್ರಹ್ಮಾದೀನಾಮಪಿ ನಿಕಟಭಾಜಾಮಸುಲಭಂ

ಚಿರಂ ಯಾಚೇ ಶಂಭೋ ಶಿವ ! ತವ ಪದಾಂಭೋಜಭಜನಮ್ || ೪ ||

ಜಗತ್ತಿನಲ್ಲಿ ಕ್ಷುದ್ರಫಲವನ್ನು ಕೊಡುವ ಸಹಸ್ರಾರು ದೇವತೆಗಳಿರಬಹುದು. ಆದರೆ ಅವುಗಳನ್ನು ಸ್ವಪ್ನಾವಸ್ಥೆಯಲ್ಲಿಯೂ ನೆನೆಯುವದಿಲ್ಲ. ಅವುಗಳ ಫಲವನ್ನು ಬಯಸುವದಿಲ್ಲ. ಹರಿಬ್ರಹ್ಮಾದಿಗಳಿಗೆ ದುರ್ಲಭವಾದ ಶಿವನಪಾದವೊಂದೇ ತನ್ನ ಮನದಲ್ಲಿ ಸ್ಥಿರವಾಗಿರಲೆಂದು ಬೇಡಿಕೊಂಡಿದ್ದಾರೆ. ಅದರಂತೆ ಇಷ್ಟಲಿಂಗ ಭಕ್ತನು ಲಿಂಗಾಚಾರವೆನಿಸುವದು. ಅನ್ಯದೇವತೆಗಳನ್ನು ಮನ್ನಿಸಬಾರದು. ಲಿಂಗಾಚಾರಿಯಾದ ಭಕ್ತನು ಅನ್ಯದೇವತೆಗಳನ್ನು ಮನ್ನಿಸಬಾರದೆಂದರೆ ಅವುಗಳನ್ನು ತಿರಸ್ಕರಿಸುವದಲ್ಲ. ತನ್ನ ಲಿಂಗದಲ್ಲಿಯೇ ಎಲ್ಲವನ್ನು ಕಂಡುಕೊಳ್ಳಬೇಕು. ಯಾವುದೇ ದೇವರನ್ನು ಕಂಡರೂ ಇಷ್ಟಲಿಂಗಕ್ಕೇನೇ ಹಣೆಯಿಡಬೇಕಲ್ಲದೆ ಅವುಗಳಿಗೆ ಮಣಿಯಬಾರದು. ಮನದಲ್ಲಿ ಶಿವಲಿಂಗವನ್ನು ಧ್ಯಾನಿಸಬೇಕು. ಇಷ್ಟಲಿಂಗಕ್ಕೆ ಮಿಗಿಲಾಗಿ ಯಾವುದನ್ನೂ ಭಾವಿಸಬಾರದು. ಇಂಥ ಲಿಂಗನಿಷ್ಠಾಪರನು ಭವಮರಣಗಳನ್ನು ಸುಲಭವಾಗಿ ಜಯಿಸಬಹುದು. ಘನತರ ವೈರಾಗ್ಯ ನಿಧಿಯಾದ ಘನಮಠದಾರ್ಯರು.

 ಗುರುಕರ ಜಾತರು ನಮ್ಮವರು

ಭವಮರಣವ ಗೆಲಿವರು ನಮ್ಮವರು |

 ಪರಮವೀರಶೈವಾಚಾರವನೀ

ಧರೆಯೊಳ್ ಮೆರೆದರು ನಮ್ಮವರು || ಪ ||

ಮಾರಿಮಸಣಿಯೆಂಬೂರ ದೈವತರ

ಗಾರುಮಾಡುವರು ನಮ್ಮವರು ||

ಎಂದು ಹೆಮ್ಮೆಯಿಂದ ದೀರ್ಘವಾಗಿ ಹಾಡಿದ ಹಾಡು ಮನನೀಯವಾಗಿದೆ. ಪ್ರತಿಯೊಬ್ಬ ವೀರಶೈವನು ಈ ಹಾಡನ್ನು ಹಾಡಲೇಬೇಕು. ಹಾಡಿನ ನಾದದಲ್ಲಿ ಬೆರೆಯಬೇಕು. ಅರ್ಥದ ಆಳದಲ್ಲಿ ಮುಳುಗಬೇಕು.

ಇಷ್ಟಲಿಂಗ ವಿಜ್ಞಾನದಲ್ಲಿ ಇನ್ನೊಂದು ಮಾತು ವಿಚಾರಣೀಯವಾಗಿದೆ. ಪಂಚಸೂತ್ರದ ಲಿಂಗಕ್ಕೆ ಕಪ್ಪು ಕಂಥೆಯನ್ನಿಡುವದು ತಾತ್ವಿಕವೂ ಹಾಗೂ ವೈಜ್ಞಾನಿಕವೂ ಆಗಿದೆ. ವೀರಶೈವರು ಶಿವಾದೈತಿಗಳು ಅಥವಾ ಶಕ್ತಿವಿಶಿಷ್ಟಾದೈತಿಗಳು, ಲಿಂಗದ ಪೀಠವೇ ಶಕ್ತಿ, ಬಾಣವೇ ಶಿವ. ಈ ಶಿವ-ಶಕ್ತಿಯರ ಸಮ್ಮಿಲನದಿಂದ ಕೂಡಿದ್ದೇ ಲಿಂಗ. ಜಗವೂ ಶಿವ ಶಕ್ತಿಯರ ಸಮ್ಮಿಲನದಲ್ಲಿಯೇ ಪ್ರಾದುರ್ಭವಿಸಿದೆ. ಶಿವನಿಲ್ಲದೆ ಶಕ್ತಿಯಿಲ್ಲ. ಶಕ್ತಿಯಿಲ್ಲದೆ ಶಿವನಿಗೆ ಚೈತನ್ಯವಿಲ್ಲ. ಶಿವಶಕ್ತಿಯರ ಅದ್ವೈತತತ್ತ್ವವನ್ನು (ಸಾಮರಸ್ಯವನ್ನು) ಸಾರುವ ಈ ಇಷ್ಟಲಿಂಗವು ಜಗದಾಕಾರವುಳ್ಳುದಾಗಿದೆ. ಪರಿಪೂರ್ಣವಾಗಿದೆ. ಜಗತ್ತು ಗೋಲವಾಗಿದೆಯೆಂಬ ಮಾತನ್ನು ವಿಜ್ಞಾನಿಗಳೂ ಒಪ್ಪಿದ್ದಾರೆ ಮತ್ತು ಲಿಂಗಕ್ಕೆ ಕಪ್ಪು ಕಂಥೆಯನ್ನಿಡುವದೂ ಸಶಾಸ್ತ್ರೀಯವಾಗಿದೆ. ಲಿಂಗದಲ್ಲಿಯ ಪೀಠ (ಶಕ್ತಿ) ಬಾಣ (ಶಿವ)ಗಳನ್ನು ಪರಿಪೂರ್ಣಗೊಳಿಸುವ ಅಥವಾ ಒಂದಾಗಿಸುವ ಸಂಕೇತವೂ ಕಂಥೆಯಿಡುವುದಾಗಿದೆ. ಅಲ್ಲದೆ ಲಿಂಗವು ಆಯತವಾದ ಮೇಲೆ ಸ್ವಾಯತ ಸನ್ನಿಹಿತಗೊಳ್ಳಬೇಕಾದರೆ ನೋಟ-ಮಾಟ-ಕೂಟಗಳು ಅವಶ್ಯ. ಲಿಂಗದ ನೋಟ ದಿಂದಲೇ ಶಿವಯೋಗ ಸಾಧಿಸುವದು. ನೋಡುವ ಕಣ್ಣುಗುಡ್ಡೆಗಳು ಕಪ್ಪಾಗಿರುವದರಿಂದ ಲಿಂಗಕ್ಕೆ ಕಪ್ಪು ಕಂಥೆಯನ್ನು ಕೊಟ್ಟಿದ್ದಾರೆ. “ಸಮಾನಶೀಲವ್ಯಸನೇಷು ಸಖ್ಯಮ್” ಸಮಾನವಾದ ಶೀಲ ವ್ಯಸನವುಳ್ಳವರಲ್ಲಿ ಗಾಢವಾದ ಮಿತ್ರತ್ವ ಬೆಳೆಯುವಂತೆ ಕಂಥೆಯು ಕಪ್ಪು ; ಕಣ್ಣು ಗುಡ್ಡೆಯು ಕಪ್ಪು ; ಕಂಥೆಯನ್ನು ತಯಾರಿಸಲು ಉಪಯೋಗಿಸುವ ಬೂದಿಯೂ ಕಪ್ಪು, ಕೇರೆಣ್ಣೆಯೂ ಕಪ್ಪು; ಅಲ್ಲದೆ ಕಾಡಿಗೆಯೂ ಕಪ್ಪೇ ಇರುವದು. ಎಲ್ಲ ಕಪ್ಪುಗಳ ಶೀಲ ಸಮನಾಗಿದೆ.

ಕಂಥೆಯನ್ನು ಮಾಡುವಾಗ ಬೆರೆಸುವ ಕೇರೆಣ್ಣೆಯು ಅಗ್ನಿತತ್ತ್ವದ್ದಿದ್ದು ಕಣ್ಣೂ ಅಗ್ನಿತತ್ತ್ವದ್ದಾಗಿದೆ. ಕಾರಣ ಎರಡರಲ್ಲಿ ಪರಸ್ಪರ ಸಾಮ್ಯವಿದೆ. ಸ್ನೇಹವಿದೆ. ಲಿಂಗದ ಕಂಥೆಯ ಕಾಂತಿಯೊಡನೆ ಕಂಗಳ ಕಾಂತಿಯು ಬೆಳಗಿ ಅದಕ್ಕೆ ಪ್ರಕಾಶ ಪ್ರಾಪ್ತವಾಗುವದು. ಕರಿಯ ಮೋಡದಲ್ಲಿ ವಿದ್ಯುತ್‌ ಸಂಚಲನವು ವ್ಯಕ್ತವಾಗಿ ಕಾಣುವಂತೆ ಲಿಂಗ ಮತ್ತು ಕಣ್ಣಿನ ನೋಟದಲ್ಲಿ ಪ್ರಕಾಶವು ಸ್ಫುಟವಾಗಿ ತೋರುವದು. ಇದಲ್ಲದೆ ಲಿಂಗವನ್ನು ಅನಿಮಿಷದೃಷ್ಟಿಯಿಂದ ನೋಡುವವನ ಕಣ್ಣಿನ ಕಾಂತಿ ಕಳೆಯೇರುತ್ತದೆ. ಮತ್ತು  ಲಿಂಗದಮೇಲೆ ಪಾದೋದಕವನ್ನು ಎರೆದು ಸ್ವೀಕರಿಸುವದು ಆರೋಗ್ಯಕ್ಕೆ ಉತ್ತಮ ವಾಗಿದೆ. ಕೇರು ರೋಗ ನಿವಾರಕವಾಗಿದೆ. ಆದ್ದರಿಂದ ಲಿಂಗಕ್ಕೆ ಕಪ್ಪು ಕಂಥೆಯು ಅತ್ಯಂತ ಸಮೀಚೀನವಾಗಿದೆ.

ಇಂಥ ಅದ್ಭುತ ಶಕ್ತಿಯುಳ್ಳ ಇಷ್ಟಲಿಂಗವನ್ನು ಅಂಗೈಯಲ್ಲಿ ತಂದುಕೊಟ್ಟ ಗುರುವು ಸ್ವಸ್ಥನಾಗಿರುವನು. ಯಾಕಂದರೆ ತಂದೆಯು ಮಗನಿಗೆ ತನ್ನ ಎಲ್ಲ ಸಂಸಾರದ ಭಾರವನ್ನು ವಹಿಸಿಕೊಟ್ಟ ಮೇಲೆ ತಾನು ಸಖಿಯಾಗಿ, ನಿಶ್ಚಿಂತನಾಗಿರುವಂತೆ ಗುರುದೇವನು ತನ್ನ ಸನ್ನಿಧಿಯನ್ನು ಬಯಸಿಬಂದ ಶಿಷ್ಯನಿಗೆ ಮಸ್ತಕದೊಳಗಿನ ಪರವಸ್ತುವನು ಹಸ್ತದಲ್ಲಿ ತಂದಿರಿಸುವದರಿಂದ ಕೃತಕೃತ್ಯನಲ್ಲದೆ ಮತ್ತೇನು ? ಕಾರಣ ‘ಸ್ವಸ್ಥ’ ಪದಪ್ರಯೋಗವು ಔಚಿತ್ಯಪೂರ್ಣವಾಗಿದೆ. ಸಾರ್ಥಕವಾಗಿದೆ.

ಶ್ರೀಕಂಠ.ಚೌಕೀಮಠ.

ಅಧ್ಯಕ್ಷ.ಅಖಿಲ ಭಾರತ ವೀರಶೈವ ಮಹಾಸಭಾ ದೆಹಲಿ ರಾಜ್ಯ ಘಟಕ

ನವದೆಹಲಿ

೧೭೯೯ ರಿಂದ ೧೯೫೬  ರ ಕನ್ನಡಿಗರ ಬದುಕನ್ನು ಇತಿಹಾಸದ ಪುಟಗಳಿಂದ ನೋಡುವಾಗ, ಕನ್ನಡ ಮಾತನಾಡುವವರು ಕನ್ನಡದ ನೆಲದಲ್ಲಿ ಪರಕೀಯರಾಗಿ ಬಾಳಿದ ದುರಂತ ಚರಿತ್ರೆ ಎದ್ದು ಕಾಣುತ್ತದೆ.

ಕನ್ನಡ ರಾಜ್ಯದ ವಿಸ್ತಾರವು ಕವಿರಾಜಮಾರ್ಗದಲ್ಲಿ ವಿವರಿಸಿದಂತೆ ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೆ ಇತ್ತು. ಈ ನೆಲವನ್ನು ಅನೇಕ ಕನ್ನಡ ರಾಜವಂಶಗಳು ಆಳಿದವು. ವಿಜಯನಗರದ ಪತನದ ನಂತರ, ಕನ್ನಡ ಮಾತನಾಡುವ ಪ್ರದೇಶಗಳು ರಾಜಕೀಯವಾಗಿ ಪರಭಾಷಿಗರ ಕಪಿಮುಷ್ಠಿಯಲ್ಲಿ ಬಳಲತೊಡಗಿದವು

 ಟಿಪ್ಪು ಸುಲ್ತಾನನ ಮರಣದ ನಂತರ, ಕನ್ನಡ ಮಾತನಾಡುವ ಪ್ರದೇಶಗಳು ವಿವಿಧ ಭಾಷೆಗಳ ಇಪ್ಪತ್ತು ಆಡಳಿತ ವಿಭಾಗಗಳಲ್ಲಿ ಹಂಚಲ್ಪಟ್ಟವು. ಹೈದರಾಬಾದ್‌ನ ನಿಜಾಮರ ಆಳ್ವಿಕೆಯಲ್ಲಿ ಕನ್ನಡಿಗರು ಪರಕೀಯರಾಗಬೇಕಾಯಿತು.

ಮಾತೃಭಾಷೆಯ ಭಾಷಿಕರು “ಒಂದಾಗುವಿಕೆ”  ಮತ್ತು ಒಂದಾದವರ ರಾಜ್ಯದ ಹುಟ್ಟು  ರೋಚಕ ಹೋರಾಟದ ಫಲಶೃತಿಯಾಯಿತು

ಕನ್ನಡ ವಿದ್ವಜ್ಜನರ ಸಾತ್ವಿಕ ಹೋರಾಟದ ಜೊತೆಗೆ ಬಳ್ಳಾರಿಯ  ಶ್ರೀ ರಂಜಾನ್‌ ಸಾಬ್ ಬಲಿದಾನದ ನೆತ್ತರು ಕಲೆಗಳು ಚರಿತ್ರೆಯಲ್ಲಿ ಚಿರಸ್ಥಾಯಿಯಾಯಿತು..

ಹರಿದು ಹಂಚಿಹೋಗಿದ್ದ,ಕರ್ನಾಟಕ, ಮುಂಬಯಿ, ಮದರಾಸು ಮತ್ತು ಹೈದರಾಬಾದ್ ಪ್ರಾಂತಗಳ ಕನ್ನಡ ಪ್ರದೇಶಗಳು, ಮೈಸೂರು ಮತ್ತು ಕೊಡಗು ರಾಜ್ಯ ಸಾಂಸೃತಿಕವಾಗಿ ಒಂದುಗೂಡುವದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ.ಆದರೆ ಈ ನಾಲ್ಕೂ ಭಾಗಗಳಲ್ಲಿದ್ದ ಕರ್ನಾಟಕದ ಬಹುಸಂಖ್ಯಾತ ಸಮಾಜ ಬಾಂಧವರಾದ ವೀರಶೈವ-ಲಿಂಗಾಯತರು ಒಂದಾಗಿದ್ದರ ಪರಿಣಾಮ ಕರ್ನಾಟಕದ ಏಕೀಕರಣಕ್ಕೆ ಆನೆಬಲ ತಂದುಕೊಂಡಿದ್ದನ್ನು ಇತಿಹಾಸಕಾರರು ಮರೆತಿದ್ದು ಆಶ್ಚರ್ಯವೆನಿಸುತ್ತದೆ.

 ೧೯ ನೆಯ ಶತಮಾನದ ಆದಿಭಾಗದ ಛಿದ್ರ  ಕರ್ನಾಟಕದ ಬಹು ಸಂಖ್ಯಾತರಾದ ವೀರಶೈವ-ಲಿಂಗಾಯತರು ಮತ್ತು ಹೊರರಾಜ್ಯ ಗಳಲ್ಲಿ ಹರಿದು ಹಂಚಿಹೋಗಿದ್ದ  ವೀರಶೈವ-ಲಿಂಗಾಯತ ಧರ್ಮದ ೯೯ ಒಳಪಂಗಡಗಳನ್ನು ಪರಮ ಪೂಜ್ಯ ಲಿಂ. ಹಾನಗಲ್ಲ  ಕುಮಾರ ಶಿವಯೋಗಿಗಳವರು ಅಖಿಲ ಭಾರತ ವೀರಶೈವ ಮಹಾಸಭಾ ದ ಮೂಲಕ ಸಂಘಟಿಸಿ ಒಗ್ಗೂಡಿಸಿದ ಕ್ರಾಂತಿ ಕರ್ನಾಟಕದ ನೆಲದಲ್ಲಿ  ಅಭೂತಪೂರ್ವ ಒಗ್ಗಟ್ಟಿನ ಪರಿಸರವನ್ನೇ ಸೃಷ್ಠಿಸಿತು.

 ವೀರಶೈವ-ಲಿಂಗಾಯತ  ಧರ್ಮಿಯರಿಗಾಗಿ  ಸೃಷ್ಠಿಸಿದ “ ಸಮಾಜ ಸಂಘಟನೆ “ಮತ್ತು “ಸಮಾಜ ಸಂಸ್ಕರಣೆ” ಪರಮ ಪೂಜ್ಯ ಲಿಂ. ಹಾನಗಲ್ಲ  ಕುಮಾರ ಶಿವಯೋಗಿಗಳವರು ನೀಡಿದ  ಅದ್ಭುತ ಕೊಡುಗೆಗಳು. “ಸಮಾಜದ ಸಂಘಟನೆ” ಗೆ ಸ್ಥಾಪಿಸಿದ ಅಖಿಲ ಭಾರತ  ಮದ್ವೀರಶೈವ ಮಹಾಸಭೆ ಮತ್ತು “ಸಮಾಜ ಸಂಸ್ಕರಣೆ”ಗೆ ಸ್ಥಾಪಿಸಿದ ಶ್ರೀ ಮದ್ವೀರಶೈವ ಶಿವಯೋಗಮಂದಿರ. ಇವುಗಳ ಹುಟ್ಟು ಮತ್ತು ಕಾರ್ಯ ಸಾಧನೆಗಳು ಕೇವಲ ವೀರಶೈವ-ಲಿಂಗಾಯತರ ಏಕೀಕರಣಕ್ಕಷ್ಠೇ ಸೀಮಿತವಾಗಲಿಲ್ಲ, ಸಮಗ್ರ ಕರ್ನಾಟಕದ ಏಕೀಕರಣಕ್ಕೆ ದಿಕ್ಸೂಚಿಯಾಯಿತು ಮತ್ತು ಸರ್ವಧರ್ಮದವರಿಗೆ ಆಸರೆಯಾದವು.

೧೯೦೪ ರಲ್ಲಿ ಸ್ಥಾಪಿಸಿದ ಅಖಿಲ ಭಾರತ  ಮದ್ವೀರಶೈವ ಮಹಾಸಭೆ ೧೯೫೬ ರ ಕರ್ನಾಟಕ ಏಕೀಕರಣದ ವರೆಗೆ ಒಟ್ಟು ೧೬ ಬೃಹತ್‌ ಸಮ್ಮೇಳನಗಳನ್ನು ಕರ್ನಾಟಕದ ವಿವಿಧ ಪ್ರಾಂತಗಳಲ್ಲಿ ಮತ್ತು ಮಹಾರಾಷ್ಟ್ರದ ಸೊಲ್ಲಾಪುರ ಹಾಗು ತಮಿಳುನಾಡಿನ ಕುಂಭಕೋಣಂ ಗಳಲ್ಲಿ ನಡೆಯಸಿತು .ಈ ಕಾಲಘಟ್ಟದಲ್ಲಿ ಜರುಗಿದ ಸಮ್ಮೇಳನಗಳ ಅಧ್ಯಕ್ಷತೆ ,ಸ್ಥಳ ಮತ್ತು ಸಮ್ಮೇಳನದ ವರ್ಷಗಳ ವಿವರ ಈ ಕೆಳಗಿನಂತಿವೆ,

  1. ಶ್ರೀ ಸಿರಸಂಗಿ ಲಿಂಗರಾಜ ಸರದೇಸಾಯಿಯವರು  ಧಾರವಾಡ ೧೯೦೪.
  2. ಶ್ರೀ  ಸಿರಸಂಗಿ ಲಿಂಗರಾಜ ಸರದೇಸಾಯಿಯವರು ಬೆಂಗಳೂರು ೧೯೦೫
  3. ಶ್ರೀ  ಕೆ.ಪಿ.ಪುಟ್ಟಣ್ಣಶೆಟ್ಟರು ಸೊಲ್ಲಾಪುರ ೧೯೦೭
  4. ಶ್ರೀ  ರಾಜಾ ಲಖಮಗೌಡರು ಬಾಗಲಕೋಟೆ ೧೯೦೮
  5. ಶ್ರೀ  ವಾರದ ಮಲ್ಲಪ್ಪನವರು  ಬಳ್ಳಾರಿ ೧೯೦೯
  6. ಶ್ರೀ  ಮಾಮಲೆ ದೇಸಾಯಿಯವರು ಬೆಳಗಾವಿ ೧೯೧೧
  7. ಶ್ರೀ  ಅರಟಾಳ ರುದ್ರಗೌಡರು ನಿಪ್ಪಾಣಿ ೧೯೧೨
  8. ಶ್ರೀ  ಕೆ.ಪಿ.ಪುಟ್ಟಣ್ಣಶೆಟ್ಟರು ದಾವಣಗೆರೆ ೧೯೧೭
  9. ಶ್ರೀ  ಶಾಂತವೀರಪ್ಪ ಮೆಣಸಿನಕಾಯಿಯವರು ಬೀರೂರು ೧೯೨೦
  10. ಶ್ರೀ  ಸಿದ್ಧಪ್ಪ ಕಂಬಳಿಯವರು ಬೆಂಗಳೂರು ೧೯೨೭
  11. ಶ್ರೀ  ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ಧಾರವಾಡ ೧೯೩೩
  12. ಶ್ರೀ  ಸಿದ್ಧಪ್ಪ ಕಂಬಳಿಯವರು ರಾಯಚೂರು ೧೯೩೭
  13. ಶ್ರೀ  ಶಿ.ಶಿ.ಬಸವನಾಳರು ಹುಬ್ಬಳ್ಳಿ ೧೯೩೮
  14. ಶ್ರೀ  ಎಂ.ಎಸ್. ಸರದಾರರು ಕುಂಭಕೋಣಂ ೧೯೪೦
  15. ಶ್ರೀ  ಸಿ.ಸಿ.ಹುಲಕೋಟಿಯವರು ತುಮಕೂರು ౧౯౪ ౫
  16. ಶ್ರೀ ಮ.ನಿ.ಪ್ರ. ಸಂಗನಬಸವ ಶಿವಯೋಗಿಗಳು ಬಂಥನಾಳ ಬಸವಕಲ್ಯಾಣ ೧೯೫೫.

೧೯೨೭ ಬೆಂಗಳೂರಿನಲ್ಲಿ ಜರುಗಿದ ಅಖಿಲ ಭಾರತ  ಮದ್ವೀರಶೈವ ಮಹಾಸಭೆ ಮಹಾಸಮ್ಮೇಳನದಲ್ಲಿ ,ಸಮ್ಮೇಳನಾಧ್ಯಕ್ಷ  ಶ್ರೀ  ಸಿದ್ಧಪ್ಪ ಕಂಬಳಿಯವರು‌ ಕರ್ನಾಟಕ ಏಕೀಕರಣದ  ಬೆಂಬಲ ವಿಷಯದಮೇಲೆ ಮಂಡಿಸಿದ ೯ನೇ ನಿರ್ಣಯದ ಕರೆ ಸಮಸ್ತ ವೀರಶೈವ ಲಿಂಗಾಯತರಲ್ಲಿ ಸಂಚಲನವನ್ನು ಸೃಷ್ಠಿಮಾಡಿಬಿಟ್ಟಿತು. ೧೯೩೩ ರಲ್ಲಿ ಧಾರವಾಡದಲ್ಲಿ ಜರುಗಿದ ಸಮ್ಮೇಳನದಲ್ಲಿ ,ಸಮ್ಮೇಳನಾಧ್ಯಕ್ಷರಾದ ಶ್ರೀ ಫ.ಗು.ಹಳಕಟ್ಟಿಯವರು ಮಂಡಿಸಿದ  ಮೂರನೆಯ ನಿರ್ಣಯ ಕರ್ನಾಟಕ ಏಕೀಕರಣದ  ಬೆಂಬಲದ ನಿರ್ಣಯ ವಾಗಿತ್ತು. ಇದೇ ಸಮ್ಮೇಳನದಲ್ಲಿ  “ತರುಣರ ಸಮಾವೇಷದ ಸ್ವಾಗತಾಧ್ಯಕ್ಷರಾದ ಶ್ರೀ  ವ್ಹಿ.ಎಸ್.ಬಸವನಾಳ ಅವರು ಮಾತನಾಡುತ್ತ ತರುಣರಿಗೆ ಕರ್ನಾಟಕ ಏಕೀಕರಣದ ಹೋರಾಟದಲ್ಲೂ ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಯ ಹೋರಾಟದಲ್ಲಿಯೂ ಭಾಗಿಯಾಗಲು ಕರೆ ನೀಡಿದರು.ನಂತರ ೧೯೫೫ ರವರೆಗೆ   ಜರುಗಿದ ಎಲ್ಲ ವೀರಶೈವ ಸಮ್ಮೇಳನ ಗಳು ಕರ್ನಾಟಕ ಏಕೀಕರಣದ ಬೆಂಬಲದ ನಿರ್ಣಯಗಳನ್ನು ಮಂಡಿಸುತ್ತ ವೀರಶೈವ-ಲಿಂಗಾಯತರಲ್ಲಿ ಜಾಗೃತಿಯನ್ನುಂಟು ಮಾಡಿದವು.

ಅಖಿಲ ಭಾರತ  ಮದ್ವೀರಶೈವ ಮಹಾಸಭೆ ಮಹಾಸಮ್ಮೇಳನದಲ್ಲಿ ಮಹಿಳಾ ಪರಿಷತ್ತಿನ ಅಧ್ಯಕ್ಷರಾದ ಸೊಲ್ಲಾಪುರದ ಶ್ರೀಮತಿ ಜಯದೇವಿ ತಾಯಿ ಲಿಗಾಡೆಯವರು ರಕ್ತದಲ್ಲಿ ಪತ್ರ ಬರೆದು ಕರ್ನಾಟಕದ ಏಕೀಕರಣದಲ್ಲಿ ಹೋರಾಡಿದವರು. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿದವರು ಶ್ರೀಮತಿ ಜಯದೇವಿ ತಾಯಿ ಲಿಗಾಡೆಯವರು.

“ಸಮಾಜ ಸಂಸ್ಕರಣೆ”ಗೆ  ೧೯೦೯ ರಲ್ಲಿ ಸ್ಥಾಪನೆಗೊಂಡ  ಶ್ರೀ ಮದ್ವೀರಶೈವ ಶಿವಯೋಗಮಂದಿರದಿಂದ ಶಿಕ್ಷಣ ಪಡೆದ ಸಮಾಜಕ್ಕೆ ಅರ್ಪಿತರಾದ ಶಿವಯೋಗಮಂದಿರದ ಸಾಧಕರು ಅನ್ನ ಆಶ್ರಯ ಅಕ್ಷರಗಳ  ತ್ರಿವಿಧ ದಾಸೋಹಗಳ ಮೂಲಕ  ವೀರಶೈವ-ಲಿಂಗಾಯತರ ಜೊತೆಗೆ ಸರ್ವ ಧರ್ಮದವರನ್ನು  ಕರ್ನಾಟಕ ಏಕೀಕರಣಕ್ಕೆ ಸದೃಡವಾಗಿ ಸಜ್ಜುಗೊಳಿಸಿದರು.

ಶಿವಯೋಗಮಂದಿರದ ಪ್ರಪ್ರಥಮ ಸಪ್ತ ಸಾಧಕರಲ್ಲಿ ಒಬ್ಬರಾದ ಪೂಜ್ಯ ನವಲಗುಂದ ಬಸವಲಿಂಗ ಮಹಾಸ್ವಾಮಿಗಳು  ಸಾಹಿತ್ಯ ಕ್ಷೇತ್ರದಲ್ಲಿ ಹೆಸರುವಾಸಿಯಾದವರು.ಕರ್ನಾಟಕ ಏಕೀಕರಣಕ್ಕಂತೇ ಹುಟ್ಟಿಕೊಂಡ  ಧಾರವಾಡದ ಕರ್ನಾಟಕ ವಿದ್ಯಾವರ್ದಕ ಸಂಘದ ಉಪಾಧ್ಯಕ್ಷರಾಗಿ ,ಉತ್ತರಕರ್ನಾಟಕ ಪ್ರಾಂತೀಯ ಸಾಹಿತ್ಯ ಸಮಿತಿಯ ಅಧ್ಯಕ್ಷರಾಗಿ ಮತ್ತು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಕರ್ನಾಟಕದ ಏಕೀಕರಣಕ್ಕೆ ಅನುಪಮ ಸೇವೆ ಸಲ್ಲಿಸಿರುವರು. ಉಳಿದೆಲ್ಲ ಸಾಧಕರು ಅತ್ಯುತ್ತಮ ವಾಗ್ಮಿಗಳಾಗಿ,ಯೋಗ ಪಟುಗಳಾಗಿ ,ಸಂಚಾರಿಗಳಾಗಿ ಊರೂರು ಸುತ್ತಿ ಧರ್ಮ ಜಾಗೃತಿ ಮಾಡುತ್ತ ಸಮಾಜದ ಬಾಂಧವರನ್ನು ಒಂದುಗೂಡಿಸಿದರು.

ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಪರಮ ಶಿಷ್ಯರಾದ ಹಾಲಕೆರೆಯ ಶ್ರೀ ಮ.ನಿ.ಪ್ರ. ಅನ್ನದಾನೇಶ್ವರ ಮಹಾಸ್ವಾಮಿಗಳು (ಬೆತ್ತದ ಅಜ್ಜನವರು) ಜಕ್ಕಲಿಯ ಕರ್ನಾಟಕ ಏಕೀಕರಣದ ಪ್ರಮುಖ ಹೋರಾಟಗಾರ ಶ್ರೀ ಅಂದಾನಪ್ಪ ದೊಡ್ಡಮೇಟಿಯವರ ಹೋರಾಟಕ್ಕೆಬೆಂಬಲ ನೀಡಿ ಅವರ ಉಪವಾಸ ಸತ್ಯಾಗ್ರಹಕ್ಕೆ ಜಕ್ಕಲಿಯ ಶ್ರೀ ಅನ್ನದಾನೇಶ್ವರ ಮಠದ ಆವರಣ ನೀಡಿ ಉಳಿದ ಹೋರಾಟಗಾರರಿಗೆ ಆಶ್ರಯ ಮತ್ತು ಆಹಾರದ ವ್ಯವಸ್ಥೆ ಮಾಡಿದ್ದು ಚರಿತ್ರಾರ್ಹವಾದುದು. ಶ್ರೀ ಅಂದಾನಪ್ಪ ದೊಡ್ಡಮೇಟಿಯವರು ಕನ್ನಡ ತಾಯಿ ಭುವನೇಶ್ವರಿಯ ತೈಲ ವರ್ಣದ ಚಿತ್ರ ಬರೆಯಿಸಿ ಪ್ರಸಿಧ್ಧಿ ಪಡಿಸಿದ ಮಹಾನುಭಾವರು

ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ೧೨ ವರ್ಷ ಸೇವೆ ಮಾಡಿದ ಬೆಳಗಾವಿಯ ನಾಗನೂರಿನ ರುದ್ರಾಕ್ಷಿಮಠದ ಪೂಜ್ಯ ಮ.ನಿ.ಪ್ರ. ಶಿವಬಸವ ಸ್ವಾಮಿಗಳು ಗಡಿನಾಡ ಬೆಳಗಾವಿಯಲ್ಲಿ ಪೂಜ್ಯ ಹಾನಗಲ್ಲ ಕುಮಾರೇಶ್ವರರ ಹೆಸರಿನಲ್ಲಿ ಉಚಿತ ವಿದ್ಯಾರ್ಥಿ ವಸತಿ ನಿಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು ಭಾರತ ಸ್ವಾತಂತ್ರ್ಯ ಸಂಗ್ರಾಮ ಮತ್ತು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಪೂಜ್ಯ ಶಿವಬಸವ ಸ್ವಾಮಿಗಳವರು ಸೇವೆ ಅನನ್ಯವಾದುದ್ದು. ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲ ನಿರಂತರ ಅನ್ನ ಆಶ್ರಯಗಳನ್ನು ನೀಡಿದರು. ಶ್ರೀಗಳು  ಕೆಲವು ಕಾಲ ಭೂಗತರಾಗಿ ಹೋರಾಟಗಳಿಗೆ ಬೆಂಬಲ ನೀಡಿದರು.

ಬೆಳಗಾವಿ ಗಡಿ ಸಮಸ್ಯೆ ಕುರಿತು ಸಮೀಕ್ಷೆಗಾಗಿ ಬಂದ ಫಜಲಿ ಆಯೋಗ, ಮಹಾಜನ ಆಯೋಗಗಳ ಮುಂದೆ ಶ್ರೀಗಳು ಬೆಳಗಾವಿ ಕರ್ನಾಟಕದ್ದು ಎಂದು ಖಚಿತವಾಗಿ ಪ್ರತಿಪಾದಿಸಿದರು. ಅವರ ಕನ್ನಡ ಕಟ್ಟುವ ಕಾರ್ಯಗಳಿಂದಾಗಿ ಇಂದು ಬೆಳಗಾವಿ ಕರ್ನಾಟಕ ರಾಜ್ಯದಲ್ಲಿದೆ.

ಬೀದರ ಜಿಲ್ಲೆಯ ಭಾಲ್ಕಿ ಶ್ರೀ ಘ.ಚ .ಚನ್ನಬಸವ ಪಟ್ಟಾಧ್ಯಕ್ಷರು ,ರಜಕಾರ ಹಾವಳಿಯ ಸಂಧರ್ಭದಲ್ಲಿ ಹೊರಗೆ ಉರ್ದು ಬೋರ್ಡ ಹಾಕಿ ಒಳಗೆ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಿ, ಪೂಜ್ಯ ಹಾನಗಲ್ಲ ಕುಮಾರೇಶ್ವರರ ಹೆಸರಿನಲ್ಲಿ ಉಚಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಮೂಲಕ ಜನ ರನ್ನು ವಿದ್ಯಾವಂತರನ್ನಾಗಿಸಿ ಗಡಿನಾಡಿನಲ್ಲಿ ಕನ್ನಡದ ಕಹಳೆ ಮೊಳಗಿಸಿದ್ದರಿಂದ ಬೀದರ ಕರ್ನಾಟಕದಲ್ಲಿ ವಿಲೀನ ವಾಯಿತು.

ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು, ಅಂಧರಾದ  ಪಂಡಿತ ಪಂಚಾಕ್ಷರಿಗವಾಯಿಗಳಿಗೆ ದೇಶದ ಖ್ಯಾತ ಸಂಗೀತಗಾರರಿಂದ ಸಂಗೀತ ಶಿಕ್ಷಣವನ್ನು ನೀಡಿ ಅವರನ್ನು ಪ್ರಸಿದ್ಧ ಸಂಗೀತಗಾರರನ್ನಾಗಿ ರೂಪಿಸಿ ಅವರಿಂದ ಆರಂಭಿಸಿದ  ಗದುಗಿನ ವೀರೇಶ್ವರ ಪುಣ್ಯಾಶ್ರಮ ರಾಜ್ಯ ಮತ್ತು ಹೊರ ರಾಜ್ಯದ ದ ವಿವಿಧ ಸರ್ವಧರ್ಮದವರ ಮತ್ತು  ದಿವ್ಯಾಂಗದವರಿಗೆ ಉಚಿತ ವಸತಿ,ಪ್ರಸಾದ ಮತ್ತು ಶಿಕ್ಷಣದ ಕ್ರಾಂತಿ ಏಕೀಕರಣಕ್ಕೆ ಸಂಗೀತ ಮತ್ತು ಕಲೆಯ ಸಂಸೃತಿಯ ರಕ್ಷಣೆಯ ಮೂಲಕ  ಬಲವನ್ನು ನೀಡಿತು.

ಶ್ರೀ ಮನ್ಮಹರಾಜ ನಿರಂಜನ ಜಗದ್ಗುರು ಲಿಂ.ಗುರುಸಿದ್ಧ ರಾಜಯೋಗೀಂದ್ರ  ಮಹಾಸ್ವಾಮಿಗಳು ಉಚಿತ ಪ್ರಸಾದ ನಿಲಯಗಳು ಮತ್ತು ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದವರು. ಹುಬ್ಬಳ್ಳಿಯ ಸಮೀಪದ ಅದರಗುಂಚಿಯಲ್ಲಿ ಶಂಕರಗೌಡ ಪಾಟೀಲರು 1953ರಂದು ಕರ್ನಾಟಕ ಏಕೀಕರಣಕ್ಕೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದಾಗ ಹುಬ್ಬಳ್ಳಿ ಮೂರುಸಾವಿರದ ಮಠದಿಂದ ಬೆಂಬಲಿಗರಿಗೆ ಪ್ರಸಾದ ವ್ಯವಸ್ಥೆಮಾಡಿ ಹಲವು ಸತ್ಯಾಗ್ರಹಿಗಳಿಗೆ ಆಶ್ರಯ ನೀಡಿ ಸಲುಹಿದ್ದು ಪೂಜ್ಯ ಜಗದ್ಗುರುಗಳ ಮಾತೃಹೃದಯಕ್ಕೆ ಸಾಕ್ಷಿಯಾಗುತ್ತದೆ.

ಶಿವಯೋಗಮಂದಿರ ದಿಂದ ಮೊದಲ ಸಾಧಕರಾದ ಬಾಗಲಕೋಟೆಯ ಶ್ರೀ ಮ.ನಿ.ಪ್ರ. ಶಿವಮೂರ್ತಿ ಸ್ವಾಮಿಗಳು  ಚರಂತಿಮಠ ಮಠದ ಆಸ್ತಿಗಳನ್ನು ಬಾಗಲಕೋಟೆಯ ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆಗೆ ದಾನವಾಗಿ ದಯಪಾಲಿಸಿ ಆ ಭಾಗದ ಶಿಕ಼್ಣಣ ಕ್ರಾಂತಿಗೆ  ಅಮೂಲ್ಯ ಕಾಣಿಕೆಯನ್ನು ಕೊಟ್ಟರು.

 ಚಿಕ್ಕಮಗಳೂರ ಜಿಲ್ಲೆಯ ಕಡೂರು ತಾಲೂಕಿನ ಕಂಚುಕಲ್ಲ ಬಿದರೆಯ ದೊಡ್ಡಮಠದ ಶ್ರೀ ಪ್ರಭುಕುಮಾರ  ಪಟ್ಟಾಧ್ಯಕ್ಷರು ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರಿಂದ ಯೋಗ ಶಿಕ್ಷಣ ಪಡೆದು  ಮಹಾರಾಷ್ಟ್ರದ ನಾಸಿಕದ ಕುಂಭಮೇಳದಲ್ಲಿ ಯೋಗರಾಜ ಎಂದು ಬಿರುದು ಪಡೆದುಯೋಗದ ಮೂಲಕ ಶಿವಯೋಗಮಂದಿರಕ್ಕೆ ಮೆರಗು ತಂದರು.

ವೀರಶೈವ-ಲಿಂಗಾಯತ ಧರ್ಮದ ವೈದಿಕ ಆಚರಣೆಗಳ ರಕ಼್ಣೆಗೆ ಆರಂಭಿಸಿದ ಶ್ರೀ ಕುಮಾರೇಶ್ವರ ವೈದಿಕ ಪಾಠಶಾಲೆ ಹಾವೇರಿ , ಸಾವಿರಾರು ವಿದ್ಯಾರ್ಥಿಗಳನ್ನು ತನ್ನೆಡಗೆ ಆಕರ್ಷಿಸಿತು ಅದರ ಸಂಸ್ಥಾಪಕರಾದ ಶ್ರೀ ಸಿಂದಗಿಯ ಶ್ರೀ ಘ.ಚ ಶಾಂತವೀರ ಶಿವಾಚಾರ್ಯರು ಯೋಗ ಮತ್ತು ಆಯುರ್ವೇದದಲ್ಲಿ ಪಾರಂಗತರಾಗಿ ಪ್ರಾಥಸ್ಮರಣೀಯರಾಗಿರುವರು

ಶ್ರೀ ಮ.ನಿ.ಪ್ರ ಮಹಾಂತ ಸ್ವಾಮಿಗಳು ಚಿತ್ತರಗಿ -ಇಲಕಲ್ಲ  ಶಿವಯೋಗಮಂದಿರದಲ್ಲಿ ತರಬೇತಿ ಪಡೆದು ಅದ್ವೀತಿಯ ಪ್ರವಚನಕಾರರಾಗಿ ಪ್ರಸಿದ್ಧಿ ಹೊಂದಿ  ಗಡಿ ಪ್ರದೇಶವಾದ ಮಹಾರಾಷ್ಟ್ರದ ಗಡಹಿಂಗ್ಲಜ ಪ್ರಾಂತದಲ್ಲಿ  ದ್ಯಾವಾಪೂರದ ಬಸವಲಿಂಗ ಶಾಸ್ತ್ರಿಗಳವರೊಡನೆ ಸಂಚರಿಸಿ ಧರ್ಮ ಪ್ರಚಾರ ಮಾಡಿದ್ದು ಮಹತ್ವಪೂರ್ಣ ಬೆಳವಣಿಗೆಯಾಯಿತು.ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಇಂದಿಗೂ ಪ್ರಸಿದ್ಧಿಯಾಗಿವೆ.

ಶಿವಯೋಗಮಂದಿರದ ಕೈಬರಹದ “ಸುಕುಮಾರ “ಪತ್ರಿಕೆಯ ಬರಹಗಾರರಾಗಿ ಸಾಹಿತ್ಯ ಕೃಷಿ ಆರಂಭಿಸಿದ ಶ್ರೀ ಜ.ಚ.ನಿ ಯವರು ೬೦೦ ಕ್ಕೂ ಹೆಚ್ಚು ಕೃತಿಗಳನ್ನು ಬರೆದು “ಶಬ್ಧ ಬ್ರಹ್ಮ” ಎಂಬ ಸನ್ಮಾನಕ್ಕೆ ಭಾಜನರಾಗಿ ಜನಜಾಗೃತಿಯನ್ನುಂಟುಮಾಡಿದರು

ಇವರೆಲ್ಲ ಯತಿಗಳ ಜೊತೆಗೆ ಹಲವಾರು ಯತಿಗಳು  ಪ್ರವಚನ-ವ್ಯಾಖ್ಯಾನ ಗಳಿಂದ  ನಾಡಿನ ತುಂಬೆಲ್ಲ ಸಂಚರಿಸಿ ಧರ್ಮ ಜಾಗೃತಿಯನ್ನು ಮಾಡಿ ಉಚಿತ ವಿದ್ಯಾರ್ಥಿ ವಸತಿ ನಿಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಅವರಲ್ಲಿ ಪ್ರಮುಖರು,

  1. ಸಂಪಗಾವಿ  ಶ್ರೀ ನೀಲಕಂಠ ಶಿವಾಚಾರ್ಯ ಚರಮೂರ್ತಿಗಳು ಯರಗಂಬಳಿಮಠ
  2. ಹಾನಗಲ್ಲ ಶ್ರೀ ಮ.ನಿ.ಪ್ರ. ಮಹೇಶ್ವರ ಸ್ವಾಮಿಗಳು
  3. ಜಡೆಯ  ಶ್ರೀ ಮ.ನಿ.ಪ್ರ. ಸಿದ್ಧಬಸವ ಸ್ವಾಮಿಗಳು ಸೊರಬ ಶಿವಮೊಗ್ಗ.
  4. ಕಲ್ಯಾಣದ ಶ್ರೀ ಮ.ನಿ.ಪ್ರ. ಸಿದ್ದಲಿಂಗ ಸ್ವಾಮಿಗಳು ಪ್ರಭುಸ್ವಾಮಿಮಠ
  5. ಕಲಬುರ್ಗಿಯ ಶ್ರೀ.ಮ.ನಿ.ಪ್ರ. ಶಿವಮೂರ್ತಿ ಸ್ವಾಮಿಗಳು ಗದ್ದುಗೆಮಠ
  6. ಬನವಾಸಿಯ ಶ್ರೀ ಮ.ನಿ.ಪ್ರ. ಸಿದ್ದವೀರ ಸ್ವಾಮಿಗಳು ಶಿರ್ಸಿ ಉತ್ತರಕನ್ನಡ.
  7. ಕಲಬುರ್ಗಿಯ ಶ್ರೀ .ಘ.ಚ.ಕೆಂಚಬಸವ ಪಟ್ಟಾಧ್ಯಕ್ಷರು ರೋಜಾ ಹಿರೇಮಠ.
  8. ಚಿತ್ತಾಪೂರದ ಶ್ರೀ ಘ.ಚ.ಚಂದ್ರಶೇಖರ ಪಟ್ಟಾಧ್ಯಕ್ಷರು ಹಿರಿಯಮಠ
  9. ಕುಷ್ಠಗಿಯ ಶ್ರೀ ಘ.ಚ. ಪಟ್ಟದ ಕರಿಬಸವ ಶಿವಾಚಾರ್ಯರು ಹಿರಿಯಮಠ.
  10. ಸಖಿರಾಯಪಟ್ಟಣದ ಶ್ರೀ ಘ.ಚ, ಸದಾಶಿವ ಪಟ್ಟಾಧ್ಯಕ್ಷರು ಹಾಲುಸ್ವಾಮಿಮಠ.
  11. ಕಪನಿಹಳ್ಳಿಯ ಶ್ರೀ.ಮ.ನಿ.ಪ್ರ. ರುದ್ರಮುನಿ ಸ್ವಾಮಿಗಳು  ಶಿಕಾರಿಪುರ ಶಿವಮೊಗ್ಗೆ
  12. ಅನಂತಪುರದ ಶ್ರೀ.ಮ.ನಿ.ಪ್ರ. ಜಗದ್ಗುರು ಸಚ್ಚಿದಾನಂದ ಮುರುಘರಾಜೇಂದ್ರ ಸ್ವಾಮಿಗಳು ಆನಂದಪುರ ಶಿವಮೊಗ್ಗ
  13. ಹಾನಗಲ್ಲ ಶ್ರೀ ಮ.ನಿ.ಪ್ರ.ಸದಾಶಿವ ಸ್ವಾಮಿಗಳು ವಿರಕ್ತಮಠ.
  14. ಉಸ್ಮಾನಾಬಾದ ಮೊರಬ ದ ಶ್ರೀ ಘ.ಚ. ಶಂಭುಲಿಂಗ ಪಟ್ಟಾಧ್ಯಕ್ಷರು
  15. ಖೇಳಗಿ (ಹುಮ್ನಾಬಾದ) ಶ್ರೀ.ಮ.ನಿ.ಪ್ರ. ಆದಿನಾಥ(ಶಿವಲಿಂಗ) ಸ್ವಾಮಿಗಳು ವಿರಕ್ತಮಠ
  16. ನಿಡಗುಂದಿಕೊಪ್ಪದ ಶ್ರೀ ಮ.ನಿ.ಪ್ರ. ಚನ್ನಬಸವಸ್ವಾಮಿಗಳು ಶಾಖಾ ಶಿವಯೋಗಮಂದಿರ
  17. ಶ್ರೀ.ಮ.ನಿ.ಪ್ರ. ಜಗದ್ಗುರು ಅನ್ನದಾನ ಮಹಾಸ್ವಾಮಿಗಳು (೧೯೨೬) ಮುಂಡರಗಿ ಸಂಸ್ಥಾನಮಠ.
  18. ಅಂಕಲಗಿಯ ಶ್ರೀ ಮ.ನಿ.ಪ್ರ. ಸಿದ್ಧರಾಮ ಸ್ವಾಮಿಗಳು ಅಡವೀಸ್ವಾಮಿ ಮಠ.
  19. ತೆಲಸಂಗದ ಶ್ರೀ.ಘ.ಚ.ಬಸವಲಿಂಗ ಪಟ್ಟಾಧ್ಯಕ್ಷರು ಹಿರಿಯಮಠ
  20. ಚಿಕ್ಕಮಗಳೂರು ಜಿಲ್ಲೆಯ ತಾವರಕೆರೆಯ ಶಿಲಾಮಠಾಧ್ಯಕ್ಷ ಶ್ರೀ ಘ.ಚ.ಸಿದ್ಧಲಿಂಗ ಶಿವಾಚಾರ್ಯ ಗಿರಿಯಾಪುರಹಾರ್ನಹಳ್ಳಿಯ ಶ್ರೀ.ಮ.ನಿ.ಪ್ರ. ನೀಲಲೋಚನ ಸ್ವಾಮಿಗಳು ಕೋಡಿಮಠ.
  21. ಹುಬ್ಬಳ್ಳಿ ಹೊಸಮಠದ ಶ್ರೀ.ಮ.ನಿಪ್ರ. ಶಿವಬಸವ ಸ್ವಾಮಿಗಳು .
  22. ಆದವಾನಿ ಮತ್ತು ರಾವೂರು ಶ್ರೀ ಮ.ನಿ.ಪ್ರ. ಸಿದ್ದಲಿಂಗ ಸ್ವಾಮಿಗಳು.
  23. ಸಾಲೂರು ಶ್ರೀ.ಘ.ಚ.ಚನ್ನವೀರ ಶಿವಾಚಾರ್ಯರು.
  24. ಬಾರಂಗಿ ಕೂಡ್ಲಿಯ ಶ್ರೀ ಮ.ನಿ.ಪ್ರ. ಸದಾನಂದ ಸ್ವಾಮಿಗಳು ಪುರದಮಠ ಸಿದ್ದಾಪೂರ ಕಾರವಾರ
  25. ನೀರಡಗುಂಭದ ಶ್ರೀ.ಮ.ನಿ.ಪ್ರ.ಸಿದ್ಧಲಿಂಗ ಸ್ವಾಮಿಗಳು ಪಶ್ಚಿಮಾದ್ರಿ ಸಂಸ್ಥಾನಮಠ
  26. ಕಡಕೋಳ ಶ್ರೀ ಮ.ನಿ.ಪ್ರ. ನೀಲಕಂಠ ಸ್ವಾಮಿಗಳು ಚೌಕೀಮಠ.
  27. ಹೊಸಳ್ಳಿಯ ಶ್ರೀ.ಮ.ನಿ.ಪ್ರ. ಪ್ರಭು ಸ್ವಾಮಿಗಳು ಬೂದಿಸ್ವಾಮಿಮಠ ಸಂಸ್ಥಾನಮಠ.
  28. ಹಾವೇರಿಯ ಶ್ರೀ.ಮ.ನಿ.ಪ್ರ.ಶಿವಲಿಂಗ ಸ್ವಾಮಿಗಳು ಹುಕ್ಕೇರಿಮಠ

ಪೂಜ್ಯ ಹಾನಗಲ್ಲ  ಕುಮಾರ ಶಿವಯೋಗಿಗಳವರು ಕರ್ನಾಟಕ ಏಕೀಕರಣ ಎಂಬ ವಿಷಯದ ಮೇಲೆ ಹೋರಾಟ ಮಾಡದೇ ಇರಬಹದು .ಆದರೆ ಒಂದು ಕರ್ನಾಟಕದ ಬಹುಸಂಖ್ಯಾತ  ಸಮುದಾಯದ ಏಕಿಕರಣಕ್ಕೆ ಮಾಡಿದ ಹೋರಾಟ ಮತ್ತು ಅದರ ಫಲಶೃತಿಯ ಪರಿಣಾಮಗಳು ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆಗೆ ಅಂತರ್ಗಾಮಿಯಾಗಿ ಚೈತನ್ಯವನ್ನು ತುಂಬಿತು ಎನ್ನುವದರಲ್ಲಿ ಎರಡು ಮಾತಿಲ್ಲ.

ಕರ್ನಾಟಕದ ಏಕೀಕರಣಕ್ಕೆ  ಪೂಜ್ಯ ಹಾನಗಲ್ಲ  ಕುಮಾರ ಶಿವಯೋಗಿಗಳವರ ಕೊಡುಗೆಗಳನ್ನು ಇತಿಹಾಸಕಾರರು ಮರೆತಿರಬಹುದು ಆದರೆ

ವಾರ್ತಾ ಭಾರತಿ ೨೦೧೭ ರ ಪತ್ರಿಕೆಯಲ್ಲಿ  “Unification Of Karnatak”  ಎಂಬ ತಲೆಬರಹದ ಅಡಿಯಲ್ಲಿ ಶ್ರೀ ಬಿ.ಎಮ್‌ ಚಂದ್ರಶೇಖರ್‌ ಅವರು ಈ ಕೆಳಗಿನಂತೆ ದಾಖಲಿಸಿರುವರು

……………………

Cultural Renaissance

The impact of the British rule was the cultural awakening in the different regions of India. Karnataka, like other states of India, witnessed the cultural Renaissance. European scholars particularly missionaries as well as Kannada stalwarts promoted the Kannada Renaissance. Kannada newspapers also accelerated the cultural awakening. One may recall the services of those now no more with us, Prof. B. M. Sreekantaiah, Sri Hanagal Kumaraswamy, Hardekar Manjappa, Aluru Venkata Rao and many other literary and social leaders who worked with devotion and zeal for the cause of Kannada. Men of letters thus provided the necessary emotional and philosophical background of the agitation for the ‘Karnataka Ekikarana’, which was taken up and was organized by politicians like S. Nijalingappa and Kengal. Hanumantaiah and many others………….”

ಪರಮಪೂಜ್ಯ ಶ್ರೀ ಜಗದ್ಗುರು ತೋಂಟದ ಡಾ.ಸಿದ್ಧರಾಮ ಮಹಾಸ್ವಾಮಿಗಳು,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ

ಭಾರತೀಯ ಸಂಸ್ಕೃತಿ ‘ಸಮನ್ವಯ ಸಂಸ್ಕೃತಿ’ ಎಂಬ ಖ್ಯಾತಿಯನ್ನು ಪಡೆದಿದೆ. ಧರ್ಮ, ದರ್ಶನ, ಕಲೆ, ಸಾಹಿತ್ಯಗಳಲ್ಲಿ ಸಮನ್ವಯ ಸಾಧಿಸಿದಂತೆ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳಲ್ಲಿಯೂ ಸಮನ್ವಯ ಸಾಧಿಸಿದೆ.  ಅನೇಕತೆಯಲ್ಲಿ ಏಕತೆ’ (Unity in Diversity) ಈ ಸಂಸ್ಕೃತಿಯ ಜೀವಜೀವಾಳ, ಧರ್ಮ, ಅರ್ಥ, ಕಾಮ, ಮೋಕ್ಷಗಳು ಪ್ರತ್ಯೇಕ ಅರ್ಥವ್ಯಾಪ್ತಿಯನ್ನು ಹೊಂದಿದ್ದರೂ ಪ್ರತಿಯೊಬ್ಬ ಮನುಷ್ಯನು ಸಾಧಿಸಲೇಬೇಕಾದ ಅನಿವಾರ್ಯತೆಯಿಂದಾಗಿ ಇವುಗಳನ್ನು ಸೂತ್ರಬದ್ಧಗೊಳಿಸಿ ‘ಪುರುಷಾರ್ಥ ಚತುಷ್ಪಯ’ ಎಂದು ಹೆಸರಿಸಲಾಗಿದೆ. ಧರ್ಮ, ಅರ್ಥ, ಕಾಮ ಇವು ಇಹಲೋಕಕ್ಕೂ, ಮೋಕ್ಷವು ಪರಲೋಕಕ್ಕೂ ಸಂಬಂಧಿಸಿವೆ. ಆದರ್ಶಜೀವನ ದೃಷ್ಟಿಯಿಂದ ಇವುಗಳಲ್ಲಿ ಮೋಕ್ಷಕ್ಕೆ ಪ್ರಮುಖ ಸ್ಥಾನವಿದ್ದರೂ ವ್ಯಕ್ತಿಯ ಜೀವನದಲ್ಲಿ ಉಳಿದವುಗಳಿಗೂ ವಿಶೇಷ ಸ್ಥಾನವಿದೆ.

‘ಯತೋಭ್ಯುದಯ ನಿಶ್ರೇಯಸ ಸಿದ್ಧಿಃ ಸ ಧರ್ಮಃ’ ಧರ್ಮವು ವ್ಯಕ್ತಿಯ ಇಹಪರಗಳ ಅಭ್ಯುದಯಕ್ಕೆ ಮತ್ತು ನಿಶ್ರೇಯಸ ಸಿದ್ಧಿ (ಮೋಕ್ಷ)ಗೆ ಕಾರಣವಾಗಿರುವುದರಿಂದ ಪುರುಷಾರ್ಥಗಳಲ್ಲಿ ಅದಕ್ಕೆ ಆದ್ಯ ಸ್ಥಾನ. ಧರ್ಮ ಭಾರತೀಯ ಸಂಸ್ಕೃತಿಯ ಪ್ರಾಣ. ಅದರ ಅರ್ಥವೂ ಅತ್ಯಂತ ವ್ಯಾಪಕವಾದುದು. ನಮ್ಮ ನೆರೆಹೊರೆಯವರನ್ನು ಪ್ರೀತಿಸುವುದು, ಸಕಲ ಜೀವಾತ್ಮರಿಗೆ ಲೇಸನೆ ಬಯಸುವುದು, ತನ್ನಂತೆ ಪರರ ಬಗೆವುದು ಹೀಗೆ ವಿವಿಧ ರೂಪದಲ್ಲಿ ಧರ್ಮವು ಹೊರಹೊಮ್ಮುತ್ತದೆ. ಅಧ್ಯಾತ್ಮವೇ ಅದರ ತಿರುಳು. ಅರ್ಥ, ಕಾಮಗಳಿಗೂ ಧರ್ಮವೇ ಆಧಾರ. ಧರ್ಮಾಧಾರಿತ ಅರ್ಥ, ಕಾಮಗಳೇ ಜೀವನದ ಆ ಪರಮ ಗುರಿಯಾದ ಮೋಕ್ಷಕ್ಕೆ ಸಹಕಾರಿಯಾಗಿವೆ.

ಅರ್ಥ ಸಾಧನೆಯೂ ಧರ್ಮಮಾರ್ಗದಿಂದಲೇ ನಡೆಯಬೇಕು. ಅಧರ್ಮದಿಂದ ಅರ್ಜಿತವಾದ ಅರ್ಥ(ಹಣ)ವು ನಮ್ಮ ಹೃದಯ ಮತ್ತು ಆತ್ಮಗಳೆರಡನ್ನೂ ಕಲುಷಿತಗೊಳಿಸುತ್ತದೆ. ಜೀವನದ ಗುರಿ ಆತ್ಯಂತಿಕ ದುಃಖ ನಿವೃತ್ತಿಗೆ ಕಾರಣವಾದ ಮೋಕ್ಷವಾಗಿರುವುದರಿಂದ ಅಧರ್ಮದಿಂದ ಸಂಪಾದಿತವಾದ ಹಣವು ಮೋಕ್ಷ ಸಂಪಾದನೆಯಲ್ಲಿ ಅನೇಕ ಅಡೆತಡೆಗಳನ್ನುಂಟು ಮಾಡುವುದು.ಆದ್ದರಿಂದ ಧರ್ಮದ ಮೂಲಕ ಅರ್ಥ(ಹಣ)ದ ಸಂಪಾದನೆ ಮಾಡಬೇಕಾದುದು ಅನಿವಾರ್ಯ.

ಕಾಮವೆಂದರೆ ಕ್ಷಣಿಕವಾದ ವಿಷಯವಾಸನೆಯಲ್ಲ. ಲೋಕಹಿತವನ್ನೊಳಗೊಂಡ ಉದಾತ್ತ ಬಯಕೆ ಅದು. ಧರ್ಮಾಧಾರಿತ ಕಾಮವೂ ಪುರುಷಾರ್ಥ ಚತುಷ್ಪಯಗಳಲ್ಲಿ ಧರ್ಮದಷ್ಟೇ ಮಹತ್ವಪೂರ್ಣವಾದುದು. ‘ಧರ್ಮಾsವಿರುದ್ಧೋ ಭೂತೇಷು ಕಾಮೋsಸ್ಮಿ  ಭರತರ್ಷಭ’ (ಭಗವದ್ಗೀತೆ) ಶ್ರೀಕೃಷ್ಣನು “ಅರ್ಜುನ! ಧರ್ಮ ವಿರುದ್ಧವಲ್ಲದ ಕಾಮವೂ ನನ್ನ ಸ್ವರೂಪವಾಗಿದೆ’ ಎಂದು ಹೇಳುವ ಮೂಲಕ ಹಿತ, ಮಿತ, ಧರ್ಮಸಮ್ಮತವಾದ ಕಾಮಕ್ಕೆ ದೈವತ್ವದ ಮೆರುಗು ನೀಡಿರುವುದು ಅದರ ಮಹತ್ವಕ್ಕೆ ಹಿಡಿದ ಕನ್ನಡಿ.-

ಮೋಕ್ಷ ಸಂಪಾದನೆ ಮನುಷ್ಯನ ಪರಮಗುರಿ. ಅದನ್ನು ಪಡೆಯಲು ಮಾನವತ್ವದಿಂದ ಮೇಲೇಳಬೇಕಾಗುವುದು. ಮೋಕ್ಷಸ್ಥಿತಿಯಲ್ಲಿ ಪರಮ ಸುಖದ ಅನುಭವವುಂಟಾಗುತ್ತದೆ. ಭವಬಂಧನದಿಂದ ಬಿಡುಗಡೆಯಾಗುತ್ತದೆ.

ಆದರೆ ಇಂದು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಧರ್ಮ ಮತ್ತು ಮೋಕ್ಷಗಳನ್ನು ತಿರಸ್ಕರಿಸಿ, ಕೇವಲ ಅರ್ಥ ಮತ್ತು ಕಾಮಗಳಿಗೆ ಪ್ರಾಶಸ್ತ್ಯ ನೀಡಿರುವುದರಿಂದ ಸಮಾಜದಲ್ಲಿ ಸತ್ಯ, ನ್ಯಾಯ, ನೀತಿ, ಪ್ರಾಮಾಣಿಕತೆಯಂತಹ ಮೌಲ್ಯಗಳು ನೆಲಕಚ್ಚುತ್ತಿವೆ. ಮಾನವ ಬದುಕು ದುರ್ಭರವಾಗಿದೆ. ಕಾರಣ ಧರ್ಮ ಮಾರ್ಗದಿಂದ ಅರ್ಥೋಪಾರ್ಜನ ಹಾಗು ಕಾಮೋಪಭೋಗಗಳನ್ನು ಪೂರೈಸುತ್ತ ಮೋಕ್ಷ ಸಂಪಾದನೆ ಮಾಡುವುದೇ ವಿಹಿತ. ಆಗಲೇ ಪರಮಸುಖದ ಪ್ರಾಪ್ತಿ.

ಡಾ. ವಿ. ಜಿ. ಪೂಜಾರ

ತೋಂಟದ ಸಿದ್ಧಲಿಂಗ ಶಿವಯೋಗಿಗಳು ಹನ್ನೆರಡನೇ ಶತಮಾನದ ಬಸವಾದಿ ಶರಣರ ವಚನಗಳು ಹಾಗೂ ಅವರ ಧೈಯ ಆದರ್ಶಗಳನ್ನು ಮೈಗೂಡಿಸಿಕೊಂಡು, ಅವರು ನಡೆದ ಮಾರ್ಗದಲ್ಲೇ ನಡೆದ ಒಬ್ಬ ಶ್ರೇಷ್ಠ ವಚನಕಾರರು: ವೀರಶೈವ ಧರ್ಮದ ಇತಿಹಾಸದಲ್ಲಿಯೂ ವಚನ ಸಾಹಿತ್ಯದ ಇತಿಹಾಸದಲ್ಲಿಯೂ ವಿಶಿಷ್ಟ ಸ್ಥಾನವನ್ನು ಪಡೆದವರು. ಎರಡನೇ ಅಲ್ಲಮ  ಪ್ರಭುಗಳೆಂದೇ ಪ್ರಖ್ಯಾತರಾದ ಇವರು ವಚನ ಸಾಹಿತ್ಯದ ದ್ವಿತೀಯ ಘಟ್ಟಕ್ಕೆ ಇವರೇ ಆದ್ಯರು. ಹನ್ನೆರಡನೇ ಶತಮಾನದ ತರುವಾಯ ೧೩-೧೪ ನೇ ಶತಮಾನಗಳಲ್ಲಿ ಮುಸ್ಲಿಂರ ದಾಳಿಯಿಂದಾಗಿ ಕನ್ನಡ ಸಾಹಿತ್ಯಕ್ಕೆ ಕತ್ತಲೆ ಕವಿಯಿತು. ವಚನ ಸಾಹಿತ್ಯವೂ ಇದಕ್ಕೆ ಹೊರತಲ್ಲ. ೧೨ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಕ್ರಾಂತಿಯಾದಾಗ ಬಸವಾದಿ ಶರಣರೆಲ್ಲ ಉಳವಿಯತ್ತ ಹೋದರು. ವಚನ ಸಾಹಿತ್ಯದ ಸೃಷ್ಟಿ ಇದರಿಂದಾಗಿ  ಸ್ಥಗಿತಗೊಂಡಿತು. ಮುಂದೆ ಹದಿನೈದನೇ ಶತಮಾನದಲ್ಲಿ ಪ್ರೌಢದೇವರಾಯನ ಕಾಲಕ್ಕೆ ವೀರಶೈವ ಕಾವ್ಯ- ಪುರಾಣಗಳ ಸೃಷ್ಟಿ, ವಚನಗಳ ಸಂಕಲನ, ಸಂಪಾದನ ಹಾಗೂ ಅವುಗಳಿಗೆ ಟೀಕೆ- ವ್ಯಾಖ್ಯಾನ ಬರೆಯುವ ಕಾರ್ಯ ನಡೆಯಿತು. ನೂರೊಂದು ವಿರಕ್ತರು ಆಗ ವೀರಶೈವ ಸಾಹಿತ್ಯ ಸೃಷ್ಟಿಗೆ ಬಹುವಾಗಿ ಶ್ರಮಿಸಿದರು. ಇದಕ್ಕೆ ವಿಜಯನಗರದ ಅರಸನಾದ ಪ್ರೌಢದೇವರಾಯನು ಸಾಕಷ್ಟು ಪ್ರೋತ್ಸಾಹ ನೀಡಿದನು. ಲಕ್ಕಣ್ಣ ದಂಡೆಶ ಚಾಮರಸರಂಥಹ ಉದ್ದಾಮ ಕವಿಗಳು ಉತ್ಕೃಷ್ಟವಾದ ಕಾವ್ಯಗಳನ್ನು ಬರೆದರು. ಇವರ ತರುವಾಯ ಬಂದ ತೋಂಟದ ಸಿದ್ದಲಿಂಗರು ವಚನಗಳನ್ನು ರಚಿಸುವುದರ ಮೂಲಕ ಬತ್ತಿಹೋಗಲಿರುವ ವಚನಗಂಗೆಯನ್ನು ಪುನಃ ಪ್ರವಹಿಸುವಂತೆ  ಮಾಡಿದರು. ವಚನ ಸಾಹಿತ್ಯದ ಪುನಃಸೃಷ್ಟಿಗೆ ಕಾರಣರಾದರು. ಬಸವಾದಿ ಶರಣರು ಹನ್ನೆರಡನೇ ಶತಮಾನದಲ್ಲಿ ವಚನ ರಚಿಸಿ ಜನಜಾಗೃತಿ ಮಾಡಿದಂತೆ ಇವರು ತಮ್ಮ ಹಲವಾರು ಶಿಷ್ಯರೊಡಗೂಡಿ ವಚನ ರಚಿಸುತ್ತ, ದಾಸೋಹ ಸಂಸ್ಕೃತಿಯ ಮೂಲಕ ಜನಸೇವೆ ಮಾಡಿದರು.

ತೋಂಟದ ಸಿದ್ಧಲಿಂಗ ಶಿವಯೋಗಿಗಳು ಮೈಸೂರ ಜಿಲ್ಲೆಯ ಚಾಮರಾಜನಗರ ತಾಲೂಕಿನಲ್ಲಿರುವ ಹರದನಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಮಲ್ಲಿಕಾರ್ಜುನ, ತಾಯಿ ಜ್ಞಾನಾಂಬೆ. ಈ ಶಿವಭಕ್ತ ದಂಪತಿಗಳಿಗೆ ಬಹುದಿನ ಮಕ್ಕಳಾಗಲೇ ಇಲ್ಲ. ಈ ಕೊರಗನ್ನು ಆ ಊರಿನ ಮಠಾಧಿಪತಿಗಳಾದ ಗೋಸಲ ಚೆನ್ನಬಸವೇಶ್ವರರ ಬಳಿ ನಿವೇದಿಸಿಕೊಂಡರು. ಗುರುಗಳು ಕರುಣೆಯಿಂದ ಇವರಿಗೆ ಆಶೀರ್ವಾದ ಮಾಡಿ, ಶಿವಪೂಜೆಯಲ್ಲಿ ನಿರತರಾಗುವಂತೆ ಸೂಚಿಸಿದರು. ದಂಪತಿಗಳು ಇಂತಿರಲು ಅವರಿಗೆ ಸಿದ್ದಲಿಂಗರು ಜನಿಸಿದರು. ‘ಬೆಳೆಯ ಸಿರಿ ಮೊಳಕೆಯಲ್ಲಿ ಕಾಣು” ಎಂಬಂತೆ ಶಿಶುವಿನ ಮೊಗದಲ್ಲಿ ಶಿವತೇಜಸ್ಸು ಹೊಳೆಯುತ್ತಿತ್ತು. ಕೆಲ ಕಾಲ ಆತ ಶಾಲೆಗೆ ಹೋದ. ಆತ ಉಳಿದ ಮಕ್ಕಳಂತೆ ಇರದೆ ವಿಶಿಷ್ಟ  ರೀತಿಯಲ್ಲಿರುವುದನ್ನು ಗುರುಗಳು ಗುರುತಿಸಿದರು. ಮುಂದೆ ಆತ ಓದಿನಲ್ಲಿ ಅಷ್ಟಾಗಿ ಆಸಕ್ತಿಯನ್ನು ತೋರಲಿಲ್ಲ. ಆತನ ಮನಸ್ಸು ಆಧ್ಯಾತ್ಮದತ್ತ ಹೊರಳಿತು. ಇದನ್ನರಿತ ಆತನ ತಂದೆ-ತಾಯಿಗಳು ಆತನನ್ನು ಶಾಲೆ ಬಿಡಿಸಿ, ಗುರು  ಚೆನ್ನಬಸವೇಶ್ವರರ ಬಳಿಗೆ ಕಳುಹಿಸಿದರು. ಅವರು ಆತನಲ್ಲಿರುವ ಅಧ್ಯಾತ್ಮದ ಹಸಿವನ್ನು ಅರಿತರು. ಆತನನ್ನು ಪ್ರೀತಿಯಿಂದ ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು. ಸಿದ್ಧಲಿಂಗರು ಅಲ್ಲಿ ಗುರುವಿನ ಸೇವೆಯಲ್ಲಿ ನಿರತರಾದರು. ಹೂ ಪತ್ರಿ ತಂದು ನಿತ್ಯ ಗುರುವಿನ ಲಿಂಗಪೂಜೆಗೆ ಅಣಿ ಮಾಡಿಕೊಡುತ್ತಿದ್ದ ಸಿದ್ಧಲಿಂಗರಿಗೆ ಒಂದು ದಿನ ಗುರುಗಳು ತಮ್ಮ ಚರ ಪಟ್ಟಾಧಿಕಾರವನ್ನು ವಹಿಸಿಕೋ ಎನ್ನುವರು. ಇವರು ಅದನ್ನೊಪ್ಪಿಕೊಳ್ಳದೆ, ತಾನಿನ್ನೂ ಶಿವಯೋಗ ಸಾಧನೆಯನ್ನು ಮಾಡಬೇಕಾಗಿದೆ. ಪರಮಾತ್ಮನನ್ನು ಕಾಣಬೇಕಾಗಿದೆ. ಇದಕ್ಕಾಗಿ ನಾನು ಲೋಕ ಸಂಚಾರವನ್ನು ಕೈಗೊಳ್ಳುವೆನು. ಆದ್ದರಿಂದ ಈ ಪಟ್ಟಾಧಿಕಾರ ತಮಗೇ ಇರಲೆಂದರು. ಇವರ ಅಧ್ಯಾತ್ಮ ಶಕ್ತಿಗೆ ಮಾರುಹೋಗಿ, ಅನೇಕರು ಇವರ ಶಿಷ್ಯರಾಗಿ, ಇವರೊಡನೆ ಲೋಕ ಸಂಚಾರಕ್ಕೆ ಹೊರಟರು. ಸಿದ್ದಲಿಂಗರು ಗುರುಗಳಿಗೆ ,ತಾಯಿ, ತಂದೆಗಳಿಗೆ ವಂದಿಸಿ ಹೊರಡುವರು. “ಭಕ್ತನು ಭಕ್ತನ ಕಾಂಬುದು ಸದಾಚಾರ” ಎಂದು ಸಿದ್ದಲಿಂಗರು ಭಕ್ತರನ್ನು ಭೇಟಿಯಾಗಲು ಅವರೊಂದಿಗೆ ಕೂಡಿಕೊಂಡು ಸಾಧನೆ ಮಾಡಲು ಹೊರಟರು. ಅವರು ಕನ್ಯಾಕುಮಾರಿಯಿಂದ ಹಿಡಿದು ಹಿಮವತ್ಕೇದಾರ, ತ್ರಿಯಂಬಕ, ಶ್ರೀಶೈಲ, ಗೋಕರ್ಣ, ಮಹಾಬಲೇಶ್ವರ, ಹಂಪೆ, ಶಿವಗಂಗೆ, ಕಾಳಹಸ್ತಿ, ಪೋನ್ನಾಂಬಲ, ಕಂಚಿ, ಚಿದಂಬರಂ, ಅರುಣಾಚಲಂ, ರಾಮೇಶ್ವರ ಮುಂತಾದ ಕ್ಷೇತ್ರಗಳಿಗೆ ಭೇಟಿ ನೀಡಿದರು. ತಮಿಳುನಾಡಿನ ಅರುಣಾಚಲಂದಲ್ಲಿ ಬಹಳ ಕಾಲ ತಪಸ್ಸಿನಲ್ಲಿ ನಿರತರಾಗಿದ್ದರು. ಅಪಾರ ಶಿವಾನುಭವ ಪಡೆದರು.

 ಸಿದ್ಧಲಿಂಗರ ಹೆಸರಿನ ಹಿಂದೆ `ತೋಂಟದ’ ಎಂಬ ವಿಶೇಷಣ ಏಕೆ ಸೇರಿಕೊಂಡಿದೆ ಎಂದರೆ, ಅವರು ಕಗ್ಗೆರೆ ಎಂಬ ಊರಿನ ಬಳಿ ಇರುವ ತೋಟವೊಂದರಲ್ಲಿ ಬಹುಕಾಲ ತಪಸ್ಸು ಮಾಡಿದರು. ಅದಕ್ಕೆ ಈ ವಿಶೇಷಣ ಪ್ರಾಪ್ತವಾಗಿದೆ. ಇದಕ್ಕೆ  ಸಂಬಂಧಿಸಿದ ಘಟನೆಯೊಂದನ್ನಿಲ್ಲಿ ನೋಡಬಹುದು. ಸಿದ್ದಲಿಂಗರು ಲೋಕ ಸಂಚಾರದಲ್ಲಿದ್ದಾಗ  ತುಮಕೂರು ಜಿಲ್ಲೆಯ ಕಗ್ಗೆರೆ ಎಂಬ ಗ್ರಾಮಕ್ಕೆ ದಯಮಾಡಿಸಬೇಕೆಂದು ಇವರನ್ನು ಆ ಊರಿನ ನಿಂಬೆಣ್ಣ ಶೆಟ್ಟರು ಭಿನ್ನವಿಸಿಕೊಂಡರು. ತ್ರಿಕಾಲ ಜ್ಞಾನಿಗಳಾದ ಸಿದ್ದಲಿಂಗರು ಮುಂದಾಗುವುದನ್ನರಿತು ಬೇಡವೆಂದರು. ಆದರೂ ಆ ಭಕ್ತ ಬರಲೇಬೇಕೆಂದು ಹಟ ಹಿಡಿಯಲು, ಒಪ್ಪಿಕೊಂಡು ಊರಿಗೆ ಹೋದರು. ಆ ಊರ ಹೊರವಲಯದ ತೋಟದ ಹತ್ತಿರ ಇರುವ ಮಾವಿನ ಮರದ ಕೆಳಗೆ ಇವರನ್ನು ಕೂಡಿಸಿ, ಆ ಭಕ್ತ ಊರೊಳಗೆ ದೈವದೊಂದಿಗೆ ಬಂದು ಕರೆದುಕೊಂಡು ಹೋಗುವುದಾಗಿ ಹೇಳಿ ಹೋಗುವನು. ಅದೇ ವೇಳೆಗೆ ಆ ಊರಿನ ಮೇಲೆ ಬೇಡರ ಪಡೆಯೊಂದು ದಾಳಿ ಮಾಡಲು, ಜನರೆಲ್ಲ ಊರು ಬಿಟ್ಟು ಹೋದರು. ಆ ಭಕ್ತನೂ ಹೋದನು. ಇತ್ತ ಸಿದ್ದಲಿಂಗರು ನಿಂಬೆಣ್ಣ ಶೆಟ್ಟಿಯ ಬಿನ್ನಹ ಪೂರ್ಣವಾಗುವವರೆಗೆ ಅಲ್ಲಿಯೇ ಇರಬೇಕೆಂದು ನಿರ್ಧರಿಸಿ, ಅಲ್ಲಿನ ತೋಟವೊಂದರಲ್ಲಿ ಶಿವಯೋಗದಲ್ಲಿ ತಲ್ಲೀನರಾದರು. ಅಲ್ಲಿಯೇ ಇಷ್ಟ-ಭಾವ-ಪ್ರಾಣಲಿಂಗ ಯೋಗದಲ್ಲಿ ತಲ್ಲೀನರಾದರು. ದಿನಗಳು ಉರುಳಿದವು, ದಿನಗಳಾದಂತೆ ಅವರ ಮೇಲೆ ಹುತ್ತ ಬೆಳೆಯಿತು. ಕೆಲವು ದಿನಗಳ ನಂತರ ಆ ಊರಿನ ಜನ ಮರಳಿ ಬಂದರು. ಈ ಮಧ್ಯೆ ನಿಂಬೆಣ್ಣ ಶೆಟ್ಟಿಯ ಆಕಳೊಂದು ನಿತ್ಯವೂ ಆ ಹುತ್ತದ ಮೇಲೆ ಹಾಲು ಕರೆದು ಬರುತ್ತಿತ್ತು. ಹಗಲೆಲ್ಲ ಮೆಯ್ದು ಮನೆಗೆ  ಹಾಲಿಲ್ಲದೆ ಬರುವ ಹಸುವನ್ನು ಕಂಡು ಮನೆಯವರಿಗೆ ಅಚ್ಚರಿಯಾಯಿತು. ಒಂದು ದಿನ ದನಗಾಹಿ ಅದರ ಹಿಂದೆ ಹೋಗಿ   ನೋಡಿ, ನಿಜಸ್ಥಿತಿಯನ್ನು ನಿಂಬೆಣ್ಣಶೆಟ್ಟರಿಗೆ ತಿಳಿಸಿದನು. ಆಗ ಆತ ಅಲ್ಲಿಗೆ ಹೋಗಿ ಆ ಹುತ್ತವನ್ನು ಅಗೆಸಿದ. ಒಳಗಿದ್ದ  ತೇಜೋಮೂರ್ತಿ ಸಿದ್ದಲಿಂಗರ ದರ್ಶನವಾಯಿತು. ನಿಂಬೆಣ್ಣಶೆಟ್ಟಿ ತನ್ನಿಂದ ಪ್ರಮಾದವಾಯಿತೆಂದು ಕ್ಷಮೆಯಾಚಿಸಿದ. ಆತನನ್ನು ಶಿವಯೋಗಿಗಳು ಕ್ಷಮಿಸಲು, ಅವರನ್ನು ನಿಂಬೆಣ್ಣ ಶೆಟ್ಟಿ ವೈಭವದಿಂದ ತನ್ನ ಮನೆಗೆ ಕರೆದೊಯ್ದು ಸತ್ಕರಿಸಿದ. ಶಿವಯೋಗಿಗಳು ಸಂತುಷ್ಟರಾದರು. ಈ ಹೊತ್ತಿಗೆ ಅವರು ದೊಡ್ಡ ಶಿವಯೋಗಿಗಳೆಂದು ಖ್ಯಾತಿ ಪಡೆದರು. ಅವರ ಬಳಿಗೆ ಅನೇಕ ಶಿವಭಕ್ತರು ಬರತೊಡಗಿದರು. ಬೋಳಬಸವೇಶ್ವರ, ಫನಲಿಂಗಿದೇವ. ಗುಮ್ಮಳಾಪುರದ ಸಿದ್ಧಲಿಂಗಯತಿ, ಸ್ವತಂತ್ರ ಸಿದ್ಧಲಿಂಗರು, ಮುರಿಗೆ ಶಾಂತವೀರರು, ಸಿದ್ಧಮಲ್ಲೇಶ, ಸಂಪಾದನೆಯ ಸಿದ್ಧವೀರ, ಮರುಳಸಿದ್ಧ, ಚಂದ್ರಶೇಖರ, ಚಿಟ್ಟನದೇವ, ಸಪ್ಪೆಯಾರ್ಯ, ರಾಚವಟ್ಟಿ ದೇವ, ಶೀಲವಂತಯ್ಯ ಮುಂತಾದವರು ಅವರ ಶಿಷ್ಯರಾದರು. ಕೆಲವರು ಅಲ್ಲಲ್ಲಿಯೇ ಮಠಗಳನ್ನು ಸ್ಥಾಪಿಸಿಕೊಂಡು ನೆಲೆ ನಿಂತರು. ಇವರ ಕಾಲದಲ್ಲಿಯೇ ವಿರಕ್ತ ಮಠಗಳು ಅಧಿಕವಾಗಿ ಹುಟ್ಟಿಕೊಂಡವು. ಗುರುಪರಂಪರೆಯ ಮಠಗಳಿಗೂ ಇವರು ಪ್ರೋತ್ಸಾಹ ನೀಡಿದರು. ತೋಂಟದ ಸಿದ್ಧಲಿಂಗ ಶಿವಯೋಗಿಗಳಿಂದ ಎಳಂದೂರು, ದನಗೂರು, ಸೋಸಲೆ, ಮಾಗೂರು, ಸುತ್ತೂರು. ಗದಗ, ತಲಕಾಡು, ಹುಲ್ಲಹಳ್ಳಿ ಮೊದಲಾದ ಊರುಗಳಲ್ಲಿರುವ ಮಠಗಳು ವೀರಶೈವ ಧರ್ಮಜ್ಯೋತಿಯನ್ನು ಬೆಳಗಿಸುವ ಅಧ್ಯಾತ್ಮ ಕೇಂದ್ರಗಳಾದವು. ಸಿದ್ಧಲಿಂಗರು ಹರದನಹಳ್ಳಿಯ ಮಠದ ಹದಿನಾರನೇ ಅಧಿಪತಿಗಳಾಗಿ ರಾರಾಜಿಸಿದರು. ಅವರು ಸಂದರ್ಶಿಸಿದ ಕ್ಷೇತ್ರಗಳೆಲ್ಲವೂ ಪಾವನವಾದವು. ಬಸವಣ್ಣನವರಂತೆ  ಸಿದ್ಧಲಿಂಗರು ತುಂಬಾ ಜನಪ್ರಿಯರಾದರು. ಇವರ ತಪಸ್ಸಿನ ಪ್ರಭಾವಕ್ಕೆ ಅನೇಕ ಭಕ್ತರು ಒಳಗಾದರು. ಅನೇಕ ರಾಜರು ಇವರ ಬಳಿ ಬಂದು ಶಿಷ್ಯತ್ವ ವಹಿಸಿ ಶಿವಯೋಗ ಮಾರ್ಗದಲ್ಲಿ ನಡೆದರು.

 ಮರಗಳಲ್ಲಿ ಹಣ್ಣು, ಬಳ್ಳಿಯಲ್ಲಿ ಹೂ ಬಿಡುವುದು ಪರೋಪಕಾರಕ್ಕಾಗಿಯೇ ಮರ ಹಣ್ಣನ್ನು ತಾನೇ ತಿನ್ನದು,ಬಳ್ಳಿ  ತಾನೇ ಹೂವನ್ನು ಮುಡಿಯದು. ಇವು ನಿಸ್ವಾರ್ಥ ಭಾವನೆಯಿಂದ ಲೋಕಸೇವೆ ಮಾಡುವಂತೆ ಸಿದ್ದಲಿಂಗ ಶಿವಯೋಗಿಗಳು ಶಿವಾರ್ಪಣ ಬಾವನೆಯಿಂದ ದಾಸೋಹವನ್ನು ಮಾಡಿದರು. ತಾಯಿ ಹಸು ಕರುವನ್ನು ಹುಡುಕಿಕೊಂಡು ಹೋಗುವಂತೆ ಇವರು ದೀನರನ್ನು, ದುಃಖಿತರನ್ನು ಹುಡುಕಿಕೊಂಡು ಹೋಗಿ ಅವರಿಗೆ ಸಾಂತ್ವನ ಹೇಳಿದರು. ಅವರಲ್ಲಿ ಧೈರ್ಯ ತುಂಬಿ ಧರ್ಮ ಮಾರ್ಗದಲ್ಲಿ ಅವರು ನಡೆಯಂತೆ ಮಾಡಿದರು. ಒಮ್ಮೆ ಇವರ ಬಳಿಗೆ ಕುರುಡ ಜಂಗಮನೊಬ್ಬ ಬಂದು ನನಗೆ ಕಣ್ಣು ದಯಪಾಲಿಸಿರಿ ಎಂದು ಬೇಡಿಕೊಂಡ. ಅವನಿಗೆ ಶಿವಯೋಗಿಗಳು ಆಶೀರ್ವಾದ ಮಾಡಿ -ನೀನು ಬಾಹ್ಯ ಜಗತ್ತನ್ನು ನೋಡಲಾರೆ ಇಷ್ಟಲಿಂಗವನ್ನು ಕಾಣಲಾರೆ ನಿನ್ನ ಬಾಹ್ಯ ಕಣ್ಣೇನೋ ನಿರರ್ಥಕವಾಗಿದೆ. ಕೆಲವರು ಕಣ್ಣಿದ್ದೂ ಕುರುಡರಂತೆಯೇ ಇರುವರು. ಇಂಥವರಿಗೆ ಕಣ್ಣಿದ್ದೂ ಏನು ಪ್ರಯೋಜನ ಕಣ್ಣಿದ್ದೂ ಜಗತ್ತನ್ನು ನೋಡಿ ಶಿವನನ್ನು ನೋಡದಿದ್ದರೆ ಅವರೂ ಕುರುಡರೇ, ನೀನು ಶಿವನಲ್ಲೇ ಅಚಲವಾದ. ಶ್ರದ್ಧೆಯನ್ನಿಡು, ಶಿವಭಕ್ತಿಯೇ ಕಣ್ಣಲ್ಲವೇ? ಎಂದು ಹೇಳಿ ಆತನಿಗೆ ಜ್ಞಾನದ ಕಣ್ಣನ್ನು ದಯಪಾಲಿಸಿದರು. 

ಹೊಳಲುಗುಂದ ಗ್ರಾಮದಲ್ಲಿ ಮಾರಿಕಾಂಬಾ ದೇವತೆಗೆ ಕುರಿ, ಕೋಣಗಳನ್ನು ಬಲಿ ಕೊಡುವ ವಿಷಯ ತಿಳಿದು ಅಲ್ಲಿಗೆ ಸಿದ್ಧಲಿಂಗರು ಹೋಗುವರು. ಅದನ್ನು ತಡೆಯಲು ನಿರ್ಧರಿಸಿ, ಮಧ್ಯೆ ನಿಂತರು. ದೈವಿ ಸ್ವರೂಪಿಗಳಾದ ಪ್ರಾಣಿಗಳನ್ನು ಕೊಲ್ಲುವುದು ಸರಿಯಲ್ಲ. ಪ್ರಾಣಿಗಳನ್ನು ಸೃಷ್ಟಿಸುವ ಶಕ್ತಿ ಶಿವನೊಬ್ಬನಿಗೆ ಇದೆ ಅವನ್ನು ಸೃಷ್ಟಿಸಲಾರದ ನಮಗೆ ಅವನ್ನು ಕೊಲ್ಲಲು ಯಾವ ಅಧಿಕಾರ ಇದೆ ಎಂದು ಜನರನ್ನು ಪ್ರಶ್ನಿಸುತ್ತ, ಅಲ್ಲೇ ನಿಂತಾಗ ವಾದ್ಯಗಳ ಧ್ವನಿಯೂ ನಿಂತಿತು ಜನರೆಲ್ಲರೂ ಬೆರಗಾದರು. ಪ್ರಾಣಿ ಹಿಂಸೆ ಮಾಡುವುದು ಸರಿಯಲ್ಲ. ನಮ್ಮಂತೆ ಅವಕ್ಕೂ ಪ್ರಾಣವಿದೆ. ಕೊಲ್ಲಬಾರದೆಂದು ಅವುಗಳನ್ನು ಬಿಟ್ಟರು. ದೇವತೆ ಪ್ರಾಣಿಗಳ ಬಲಿ ಕೇಳುವುದಿಲ್ಲ. ಅವಳ ಹೆಸರಿನಲ್ಲಿ ಹೀಗೆ ಮಾಡುತ್ತಿರುವುದು ಸರಿಯಲ್ಲವೆಂದು ಜನತೆಗೆ ಮನದಟ್ಟಾಯಿತು. ಅವರೆಲ್ಲರ ಮನಸ್ಸು ಪರಿವರ್ತನೆಯಾಯಿತು. ಅವರ ಮೇಲೆ ಶಿವಯೋಗಿಗಳ ವ್ಯಕ್ತಿತ್ವದ ಪರಿಣಾಮವಾಯಿತು. ಅವರೆಲ್ಲರೂ ಶಿವಭಕ್ತರಾದರು.

ಈ ವೇಳೆಗೆ ಸಿದ್ದಲಿಂಗರಿಗೆ ವಯಸ್ಸಾಗಿತ್ತು. ಅವರು ಅಲ್ಲಿಂದ ಹಂಪೆಗೆ ಬಂದರು. ಅಲ್ಲಿ ಅನೇಕ ಶಿವಭಕ್ತರನ್ನು, ವಿರಕ್ತರನ್ನು, ಕವಿಗಳನ್ನು ಕಂಡು ಆನಂದಪಟ್ಟರು. ಅಲ್ಲಿ ಇವರನ್ನು ನಿರಂಜನ ಜಂಗಮರಂದು ಗೌರವಿಸಿದರು. ಹಂಪೆಯಲ್ಲಿ ಕೆಲಕಾಲ ಇದ್ದು, ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಹರಿಯುವ ನಾಗಿಣಿ ನದಿಯ ದಂಡೆಯಲ್ಲಿರುವ ಎಡೆಯೂರಿಗೆ ಬರುವರು  ಊರ ಬಳಿ ಕದಂಬ ನದಿಯ ಹರಿಯುತ್ತಿತ್ತು. ಈ ಎರಡು ನದಿಗಳ ನಡುವಿರುವ ಎಡೆಯೂರಿನಲ್ಲಿ ಸಿದ್ದಲಿಂಗರು ನೆಲೆಸಿ, ವಚನಗಳನ್ನು ರಚನೆ ಮಾಡುವರು. ಇವರ ಬಳಿ ಅನೇಕ ರಾಜರು, ಶಿವಭಕ್ತರು, ಸಾಧುಸಂತರು ಬರತೊಡಗಿದರು. ಇವರ ತಪಃಪ್ರಭಾವಕ್ಕೆ ಜನ ಒಳಗಾಗತೊಡಗಿದರು. ೭೦೧ ಜನ ವಿರಕ್ತರಿಗೂ ೨೦೦ ಜನ ಜಂಗಮರಿಗೂ ಇವರು ದೀಕ್ಷೆ ನೀಡಿದರು.

  ಸಿದ್ಧಲಿಂಗ ಶಿಷ್ಯರಲ್ಲಿ ಒಬ್ಬರಾದ ಚಿಟ್ಟಿಗದೇವ, ಚೆನ್ನರಾಯದುರ್ಗದ ಚೆನ್ನವೀರಪ್ಪ ಒಡೆಯನ ಕುಲಗುರುವಾಗಿದ್ದ. ಆ ಒಡೆಯನು ತನ್ನ ಗುರುವಿನ ಇಷ್ಟದಂತೆ ಸಿದ್ಧಲಿಂಗರಿಗೆ ಎಡೆಯೂರಿನಲ್ಲಿ ಭವ್ಯವಾದ ಕಲ್ಲಿನ ಮಠವೊಂದನ್ನು ಕಟ್ಟಿಸಿದ. ಶಿವಯೋಗಿಗಳು ಲಿಂಗೈಕ್ಯರಾಗುವವರೆಗೂ ಇದೇ ಮಠದಲ್ಲಿದ್ದರು. ತನ್ನ ಶಿಷ್ಯ ಬೋಳಬಸವನಿಗೆ ತಮ್ಮ ಅಧ್ಯಾತ್ಮ ಶಕ್ತಿಯನ್ನು ಧಾರೆಯೆರೆದು ಲಿಂಗೈಕ್ಯರಾದರು. ಶಿವನೊಡನೆ ಸಮರಸ ಹೊಂದಿ ಸಮಾಧಿಸ್ಥರಾದರು. ವೀರಶೈವರಿಗೆ ಇವರ ಸಮಾಧಿ ಶಿವದ್ವಾರವೇ ಆಗಿದೆ. ಶಿವದ್ವಾರದ ಸಮಾಧಿಯ ಮೇಲೆಯೇ ಈಗ ಎಡೆಯೂರಿನಲ್ಲಿ ಇವರ ಹೆಸರಿನ ಭವ್ಯ ದೇವಾಲಯ  ನಿರ್ಮಾಣಗೊಂಡಿದೆ. ಇಂದು ಎಡೆಯೂರಿನ ಸಿದ್ದಲಿಂಗೇಶ್ವರ ದೇವಾಲಯ ಯಾತ್ರಾರ್ಥಿಗಳಿಗೆ, ಅಧ್ಯಾತ್ಮದ ಹಸಿವು ಉಳ್ಳವರಿಗೆ ಪವಿತ್ರವಾದ ಹಾಗೂ ಪ್ರಮುಖವಾದ ಅಧ್ಯಾತ್ಮದ ಕೇಂದ್ರವಾಗಿದೆ. ಸಿದ್ಧಲಿಂಗೇಶ್ವರ ಧಾರ್ಮಿಕ, ಅಧ್ಯಾತ್ಮಿಕ ಕೇಂದ್ರಗಳು ಕರ್ನಾಟಕದ ಬಹುಭಾಗದಲ್ಲಿವೆ. ತುಮಕೂರಿನಲ್ಲಿ ಇವರ ಹೆಸರಿನ ದೇವಾಲಯವಿದೆ. ಗದುಗಿನಲ್ಲಿ ಇವರ ಹೆಸರಿನ ಪ್ರಸಿದ್ಧವಾದ ಮಠ ಇದೆ. ಇವರ ಪ್ರಭಾವ ಕರ್ನಾಟಕದ ವೀರಶೈವ ಮಠಗಳ ಮೇಲೆ ಉದ್ದಕ್ಕೂ ಆಗುತ್ತ ಬಂದಿದೆ.

ತೋಂಟದ ಸಿದ್ಧಲಿಂಗ ಶಿವಯೋಗಿಗಳು ಹನ್ನೆರಡನೆಯ ಶತಮಾನದ ಬಸವಾದಿ ಶಿವಶರಣರ ವಚನಗಳಿಂದ ಪ್ರಭಾವಗೊಂಡಿದ್ದಲ್ಲದೆ ಅವರ ವಚನಗಳಲ್ಲಿನ ಪ್ರಗತಿಪರ ಧೈಯ ಆದರ್ಶಗಳನ್ನು ತಮ್ಮ ವಚನಗಳಲ್ಲಿ ತರಲೆತ್ನಿಸಿದ್ದಾರೆ. ತಾವು ಸಾಧಿಸಿದ ಶಿವಯೋಗ ಸಿದ್ದಿ, ತಪಸ್ಸು ಹಾಗೂ ಅನುಸಂಧಾನಗಳನ್ನೆಲ್ಲ ತಮ್ಮ ವಚನಗಳಲ್ಲಿ ಎರಕ ಹೊಯ್ದಿದ್ದಾರೆ. “ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ” ಎಂಬುದು ಇವರ ವಚನಗಳ ಅಂಕಿತ. ಇವರು ರಚಿಸಿದ ವಚನಗಳಲ್ಲಿ ಷಟಸ್ಥಲದ ವಿವರಣೆ, ವೀರಶೈವ ಧರ್ಮ-ತತ್ವ-ಅನುಭಾವ ಒಡಮೂಡಿ ನಿಂತಿದೆ. ಸಿದ್ದಲಿಂಗರ ಸಾಧಕ ಜೀವನದ ವಿಧವಿಧದ ಅನುಭವಗಳು, ಅಂತರಂಗದ ಹೋರಾಟ, ಸಾಮಾಜಿಕ ಚಿಂತನೆ ಮುಂತಾದವು ಇವರ ವಚನಗಳಲ್ಲಿ ವ್ಯಕ್ತಗೊಂಡಿವೆ. ಷಟ್ ಸ್ಥಲ ಸಾಧನೆಯ ತಿಳುವಳಿಕೆಯನ್ನು ಸಾಮಾನ್ಯ ಜನರಿಗೆ ತಿಳಿಸುವಲ್ಲಿ ಇವರ ವಚನಗಳು ಯಶಸ್ವಿಯಾಗಿವೆ. ಧರ್ಮ-ತತ್ವ-ಅಧ್ಯಾತ್ಮ ವಿಷಯಗಳನ್ನು ಸಮೃದ್ಧವಾಗಿ ಒಳಗೊಂಡ ಇವರ ವಚನಗಳು ಮನುಕುಲಕ್ಕೆ ದಾರಿದೀಪವಾಗಿವೆ. ಅವರ ಸಾಧಕ ಜೀವನಕ್ಕೆ ಹಿಡಿದ ಕನ್ನಡಿಯಂತಿವೆ. ಅವರು ಎಡೆಯೂರನ್ನು ಮತ್ತೊಂದು ಕಲ್ಯಾಣ ಮಾಡಿ, ಮುಂದೆ ಬಂದ ಶರಣ ಕವಿಗಳಿಗೆ ಪೂಜ್ಯರಾದುದನ್ನು, ಗುರುಗಳಾದುದನ್ನು ನೋಡಿದರೆ  ಅವರ ವ್ಯಕ್ತಿತ್ವ ಎಂಥ ಘನವಾದುದು ಎಂಬುದು ವಿದಿತವಾಗುವುದು. ಈ ಕೆಳಗಿನ ಅವರ ವಚನಗಳಲ್ಲಿ ಅವರು ನೀಡಿದ ಸಂದೇಶವನ್ನು ಅರಿಯಬಹುದು

“ಜ್ಯೋತಿಯಿದ್ದ ಮನೆಯಲ್ಲಿ ಕತ್ತಲೆಯುಂಟೆ?

ಲಿಂಗವಿದ್ದ ಅಂಗದಲ್ಲಿ ಅಜ್ಞಾನವುಂಟೇ?”

“ಸತ್ಯದಲ್ಲಿ ನಡೆವುದು ಶೀಲ, ಸತ್ಯದಲ್ಲಿ ನುಡಿವುದು ಶೀಲ

ಸಜ್ಜನ ಸದಾಚಾರದಲ್ಲಿ ವರ್ತಿಸಿ, ನಿತ್ಯವನರಿವುದೆ ಶೀಲ ಕಾಣಿಭೋʼʼ

“ಕಾಯ ಬತ್ತಲೆಯಿದ್ದರೇನೋ ಮಾಯೆಯಳಿಯದನ್ನಕ್ಕರ

ಮಂಡೆ ಬೋಳಾದರೇನೋ ಸಂಸಾರ ವಿಷಯ ಭೇದಿಸದನ್ನಕ್ಕರʼʼ

ಒಡಲುಪಾಧಿಗೆ ಉಪಚಾರ ನುಡಿವ ವಿರಕ್ತರ ನಾಲಿಗೆ

ನಾಯ ಬಾಲಕ್ಕಿಂತ ಕರಕಷ್ಟ ನೋಡಾ”

`ಹೆಣ್ಣ ಬಿಟ್ಟೆ, ಮಣ್ಣ ಬಿಟ್ಟೆ, ಹೊನ್ನ ಬಿಟ್ಟೆನೆಂದು

ಜಗದ ಕಣ್ಣ ಕಟ್ಟಿ ಮೆರೆವ

ಕಣ್ಣ ಬೇನೆಯ ಬಣ್ಣದ ಅಣ್ಣಗಳು ನೀವು ಕೇಳಿಭೋʼʼ

ಮಾತಿನಲ್ಲಿ ಬಿಟ್ಟಿರಿಯೋ, ಮನದಲ್ಲಿ ಬಿಟ್ಟರಿಯೋ?

ಈ ನೀತಿಯ ಹೇಳಿರಿ ಎನಗೊಮ್ಮೆ

ತನುಮನದ ಮಧ್ಯದಲ್ಲಿ ಇರುವ ನೆನಹು ಕೆಟ್ಟು

ಲಿಂಗದ ನೆನಹಿನ ಆಯತವೇ ಸ್ವಾಯತವಾಗಿರಬಲ್ಲರೆ

ಬಿಟ್ಟರೆಂದೆಂಬೆನಯ್ಯ….ʼʼ

ಡಾ||  ಸಿ .ನಾಗಭೂಷಣ

ವಚನಸಾಹಿತ್ಯ ವಾಹಿನಿಯ ಮೂರು ಘಟ್ಟಗಳಲ್ಲಿ ಒಂದಾದ ಬಸವೋತ್ತರ ಯುಗದಲ್ಲಿ ಪ್ರಾತಿನಿಧಿಕ ವಚನಕಾರರಾಗಿದ್ದಾರೆ. | ಹನ್ನೆರಡನೇ ಶತಮಾನದ ಬಸವಾದಿ ಪ್ರಮಥರ ವಚನಗಳಿಂದ ಪ್ರಭಾವಿತರಾಗಿ ವಚನಗಳನ್ನು ರಚಿಸಿರುವುದರ ಜೊತೆಗೆ ಸ್ವಂತಿಕೆಯ ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳು ಬಸವಯುಗದ ವಚನ ಸಾಹಿತ್ಯದ ಸಮಗ್ರ ಸ್ವರೂಪ ಲಕ್ಷಣಗಳನ್ನು ಪ್ರತಿನಿಧಿಸುತ್ತವೆ ಮತ್ತು ಪೂರ್ವದ ವಚನಕಾರರ ಪರಂಪರೆಯನ್ನು ಮುಂದುವರಿಸಿವೆ.

ಅಖಂಡೇಶ್ವರ ವಚನಗಳ ಕರ್ತೃತ್ವದ ಬಗೆಗೆ, ಆರ್. ನರಸಿಂಹಾಚಾರ್ಯರು ತಮ್ಮ ಕವಿಚರಿತೆಯಲ್ಲಿ ಅಖಂಡೇಶ್ವರ ಅಂಕಿತದಲ್ಲಿ ವಚನಗಳನ್ನು ರಚಿಸಿರುವ ನಿರಾಲಂಬ ಶರಣನ ಕಾಲ ೧೭೦೦. ಇವನು ವೀರಶೈವ ಕವಿ. ಇವನನ್ನು ಶ್ರೀಮತ್ಪರಮಹ೦ಸ ಪರಿವ್ರಾಜಕ ಸದ್ಗುರು ಸಂಪ್ರದಾಯಕ ಸಿದ್ಧಯೋಗಿಂದ್ರರೆಂದು ಹೇಳಿದ್ದಾರೆ. ಕವಿಚರಿತಕಾರರನ್ನು ಅನುಸರಿಸಿ ರಂ. ಶ್ರೀ. ಮುಗಳಿಯವರು ಅಖಂಡೇಶ್ವರ ವಚನಗಳ ಕರ್ತೃ ಷಣ್ಮುಖ ಸ್ವಾಮಿಗಳೆಂದು ಹೇಳದೆ ನಿರಾಲಂಬ ಶರಣನಿಗೆ ಷಣ್ಮುಖ ಸ್ವಾಮಿಗಳೆಂದು ಕರೆಯುತ್ತ ಬಂದಿದ್ದಾರೆಂದು ಹೇಳಿದ್ದಾರೆ. ‘ನಿರಾಲಂಬಬಶರಣ’ ಎಂಬುದು ಷಣ್ಮುಖ ಸ್ವಾಮಿಗಳ ಹೆಸರನ್ನು ಪರ್ಯಾಯವಾಗಿ ಸೂಚಿಸಿರುವ ವ್ಯಕ್ತಿಸೂಚಕ ಪದವಾಗಿರದೆ ಅಧ್ಯಾತ್ಮದ ಉನ್ನತ ಸ್ಥರವನ್ನು ಸೂಚಿಸುತ್ತದೆ. ಲೋಕದಲ್ಲಿ ತೊಡಗುವ ಭಕ್ತ ಅನುಭಾವ ಮಾರ್ಗದಲ್ಲಿ ನಡೆದು ಅನುಭಾವಿ  ಶರಣನಾಗಿ ವಚನಗಳನ್ನು ಹೇಳುವಂತಹನಾಗುತ್ತಾನೆ.ಅಂತಹ ಭಕ್ತನ ಅನುಭಾವದ ಸ್ಥಿತಿಯನ್ನೇ ʼತೂರ್ಯನಿರಾಲಂಬ ಶರಣʼ ಎಂಬ ಪದವು ಧ್ವನಿಸುತ್ತದೆ.ಹೀಗಾಗಿ ಅಖಂಡೇಶ್ವರ ಅಂಕಿತದಲ್ಲಿ ವಚನಗಳನ್ನು ರಚಿಸಿರುವ ಕರ್ತೃ ನಿರಾಲಂಬ ಶರಣ ಎಂಬುದಕ್ಕಿಂತ    ಷಣ್ಮುಖ ಸ್ವಾಮಿಗಳು ಎಂದು ಪರಿಗಣಿಸುವುದೇ ಸೂಕ್ತ. ಷಣ್ಮುಖಸ್ವಾಮಿಗಳು ತನ್ನ ವಚನ ವೊಂದರಲ್ಲಿ ‘ಷಣ್ಮುಖನೆಂಬ ಗಣೇಶ್ವರನ ಹೃದಯ ಕಮಲದಲ್ಲಿ’ ಎಂದು ತಮ್ಮ ಹೆಸರನ್ನು ಹೇಳಿ ಹಂತಹಂತವಾಗಿ ಮುನ್ನಡೆದು ಹೇಗೆ ತಾವು ಐಕ್ಯ ಪದವಿಯನ್ನು ಹೊಂದಿದರೆಂಬಲ್ಲಿ ಅವರು ದಾಟಿದ ಅವಸ್ಥೆಗಳನ್ನು ಗಣೇಶ್ವರರ ಹೆಸರುಗಳಿಗೆ ಸಂಕೇತವಾಗಿಸಿ ಕೊಟ್ಟಿದ್ದಾರೆ. ಈ ಅಂಶವೂ ಸಹ ಅಖಂಡೇಶ್ವರ ವಚನಗಳ ಕರ್ತೃ ಷಣ್ಮುಖ ಸ್ವಾಮಿಗಳು ಎಂಬುದನ್ನು ಬೆಂಬಲಿಸುತ್ತದೆ.

ಅಖಂಡೇಶ್ವರ ವಚನಗಳು ಹೆಸರಿನ ಬಗೆಗೆ ವಚನಗಳನ್ನು ಸಂಪಾದಿಸಿದ ಸಂಪಾದಕರಲ್ಲಿ ಭಿನ್ನಾಭಿಪ್ರಾಯವಿದೆ. ಎಲ್ಲಾ ತಾಡವೋಲೆ ಮತ್ತು ಕೋರಿ ಕಾಗದಗಳಲ್ಲಿ “ಷಣ್ಮುಖ ಸ್ವಾಮಿಗಳು ನಿರೂಪಿಸಿದ ತೂರ್ಯ ನಿರಾಲಂಬ ಶರಣನ ಅರುಹಿನ ಷಟ್‌ಸ್ಥಲದ ವಚನ” ಎಂದು ಕಂಡುಬರುತ್ತದೆ. ‘ಅಖಂಡೇಶ್ವರ’ ಎಂಬುದು ಷಣ್ಮುಖ  ಶಿವಯೋಗಿಗಳ ವಚನಗಳ  ಅಂಕಿತವಾಗಿದೆ. ತಮ್ಮ ಗುರುವಿನ ಹೆಸರನ್ನೇ ಅಂಕಿತವನ್ನಾಗಿ ಬಳಸಿದ್ದಾರೆ. ಈ ವಚನಗಳನ್ನು ಬಸವಣ್ಣನ ವಚನಗಳು; ಅಲ್ಲಮನ ವಚನಗಳು ಎಂದು ಕರೆಯುವ ಹಾಗೆ ಷಣ್ಮುಖ ಶಿವಯೋಗಿಯ ವಚನಗಳು ಎಂದು ಕರೆಯಬೇಕು. ಆದರೆ ಕೆಲವು ಸಂಪಾದಕರು.

೧. ಶ್ರೀ ಷಣ್ಮುಖ ಶಿವಯೋಗಿ ಕೃತ ಅಖಂಡೇಶ್ವರ ವಚನಗಳು (ಶ್ರೀ ಸಿದ್ಧವೀರದೇವರು, ಹೊಸಮಠ) ೨. ಷಣ್ಮುಖ ಶಿವಯೋಗಿ ವಿರಚಿತ ಅಖಂಡೇಶ್ವರ ವಚನಗಳು (ವಿ. ಶಿವಾನಂದ) ಎಂಬ ಹೆಸರಿನಿಂದ ಸಂಪಾದಿಸಿದ್ದಾರೆ. ಈ ಬಗೆಗೆ ಚರ್ಚಿಸಿದ ಹ. ನಂ. ವಿಜಯಕುಮಾರರವರು ಪೂರ್ವದ ವಚನಗಳನ್ನು ಕರ್ತೃಗಳ ಹೆಸರಿನಲ್ಲಿ ಕರೆಯುವ ಹಾಗೆ ‘ಷಣ್ಮುಖ ಸ್ವಾಮಿಗಳ  ವಚನಗಳೆಂದೇ’ ತಾವು ಸಂಪಾದಿಸಿದ ವಚನಗಳಿಗೆ ಹೆಸರಿಟ್ಟಿದ್ದಾರೆ. ಇತ್ತೀಚಿಗೆ ಸಮಗ್ರ ವಚನ ಸಂಪುಟ ಮಾಲಿಕೆಯಲ್ಲಿಯ

ಸಂಕೀರ್ಣ ವಚನ ಸಂಪುಟ ೯ ರಲ್ಲಿ ಷಣ್ಮುಖ ಶಿವಯೋಗಿಯ ವಚನಗಳನ್ನು ‘ಷಣ್ಮುಖ ಸ್ವಾಮಿಗಳ ಷಟ್‌ಸ್ಥಲ ವಚನಗಳು ಎ೦ದು ಕರೆದಿದ್ದಾರೆ. ಹ. ನಂ. ವಿಜಯಕುಮಾರವರು ಸಂಪಾದಿಸಿದ ವಚನಗಳು ಸ್ಥಲ ಕಟ್ಟಿನ ವ್ಯಾಪ್ತಿಯಿಂದ ಹೊರಗುಳಿದಿವೆ. ಉಳಿದ ಸಂಪಾದಕರು ಸ್ಥಲಕಟ್ಟಿಗನುಗುಣವಾಗಿ ವಚನಗಳನ್ನು ಸಂಪಾದಿಸಿದ್ದಾರೆ.

 ವಚನಗಳ ಸಂಪಾದನೆಯ ಇತಿಹಾಸ : ವಚನಗಳಲ್ಲೆಲ್ಲ ಪ್ರಪ್ರಥಮವಾಗಿ ಮುದ್ರಿತಗೊಂಡ ವಚನಗಳು ಷಣ್ಮುಖ ಶಿವಯೋಗಿಯ ಷಟ್‌ಸ್ಥಲ ವಚನಗಳೇ ಆಗಿವೆ. ವಚನ ಸಾಹಿತ್ಯದಲ್ಲಿ ಈ ವಚನಗಳಿಗೆ ತನ್ನದೇ ಆದ ಒಂದು ಐತಿಹಾಸಿಕ ಮಹತ್ವ ಇದೆ. ಆರಂಭದಲ್ಲಿ ಪ್ರಕಟಗೊಂಡ ಈ ವಚನಗಳು ಶಾಸ್ತ್ರೀಯವಾಗಿ ಸಂಪಾದಿಸಲ್ಪಟ್ಟಿರುವುಗಳಾಗಿರದೆ ಪೇಟೆ ಅಥವಾ ಬಾಜಾರು ಪ್ರತಿಯಾಗಿದ್ದವು. ಪ್ರಥಮಬಾರಿಗೆ ‘ಅಖಂಡೇಶ್ವರ ವಚನ’ ಶೀರ್ಷಿಕೆಯಡಿಯಲ್ಲಿ ‘ಉಮಾ ಮಹೇಶ್ವರಿ ಪ್ರೆಸ್’ ಚಿತ್ತೂರು ಇವರು ೧೮೮೪ರಲ್ಲಿ ಪ್ರಕಟಿಸಿದರು. ೧೮೯೦ರಲ್ಲಿ ‘ಗ್ರಂಥರತ್ನಾಕರ’ ಮುದ್ರಣ ಶಾಲೆಯವರು ಅಖಂಡೇಶ್ವರ ವಚನ ಶಾಸ್ತ್ರ ಹೆಸರಿನಲ್ಲಿ ೧೩೨ ವಚನಗಳನ್ನು ಪ್ರಕಟಿಸಿದರು. ೧೯೧೧ರಲ್ಲಿ ಶಿವಲಿಂಗಶೆಟ್ರುರವರು ೧೩೦ ವಚನಗಳನ್ನು ಅಖಂಡೇಶ್ವರ ವಚನಶಾಸ್ತ್ರ ಹೆಸರಿನಲ್ಲಿ ಸಂಪಾದಿಸಿ ಪ್ರಕಟಿಸಿದರು. ೧೯೨೩ರಲ್ಲಿ ಬಳ್ಳಾರಿಯ ವೀರಶೈವ ಬುಕ್ ಡಿಪೋದವರು ೧೬೮ ವಚನಗಳನ್ನು ಅಖಂಡೇಶ್ವರ ವಚನವು ಹೆಸರಿನಲ್ಲಿ ಪ್ರಕಟಿಸಿದರು. ೧೯೫೯ರಲ್ಲಿ ಬಿ. ಜೆ. ಜಾನಕಿರವರು ಷಣ್ಮುಖ ಶಿವಯೋಗಿಗಳ ೮೫ ವಚನಗಳನ್ನು ಸಂಪಾದಿಸಿ ಪ್ರಕಟಿಸಿದರು. ಇವೆಲ್ಲವೂ ಜನಪ್ರಿಯ ಸ೦ಪಾದನ ಕೃತಿಗಳಾಗಿದ್ದು ಶಾಸ್ತ್ರೀಯ ಮತ್ತು ಶುದ್ಧಾತ್ಮಕವಾಗಿ ಸಂಪಾದಿತಗೊಂಡವುಗಳಲ್ಲ. ೧೯೪೪ರಲ್ಲಿ ಎರಡು ಹಸ್ತ     ಪ್ರತಿಗಳನ್ನುಪಯೋಗಿಸಿಕೊಂಡು ಸಿದ್ಧವೀರದೇವರು ಹೊಸಮಠರವರು ‘ಶ್ರೀ ಷಣ್ಮುಖ ಸ್ವಾಮಿಕೃತ ಅಖಂಡೇಶ್ವರ  ವಚನಗಳು’ ಹೆಸರಿನಲ್ಲಿ ಸಂಪಾದಿಸಿದರು. ಇದನ್ನು ಶ್ರೀ ಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆಯ ಎರಡನೆಯ ಕುಸುಮವಾಗಿ ಧಾರವಾಡದ ಮುರುಘಾಮಠದವರು ಪ್ರಕಟಿಸಿದ್ದರು. ೧೯೫೧ರಲ್ಲಿ ಈ ಕೃತಿ ಪುನರ್‌ಮುದ್ರಣ ಪಡೆಯಿತು. ಕೆ. ಎಸ್. ಪಾಟೀಲರವರು ಈ ಆವೃತ್ತಿಯ ಜೊತೆಗೆ ಒಂದು ತಾಳೆಯೋಲೆ ಪ್ರತಿ, ಎರಡು ಕಾಗದದ ಪ್ರತಿ, ಬಳ್ಳಾರಿಯ ಕಲ್ಲಚ್ಚಿನ ಪ್ರತಿಗಳನ್ನುಪಯೋಗಿಸಿಕೊಂಡು ೧೯೫೯ರಲ್ಲಿ ಮುರುಘಾಮಠದ ಮೂಲಕ ಪರಿಷ್ಕರಿಸಿ ಪ್ರಕಟಿಸಿದರು. ಈ ಮೂರು ಆವೃತ್ತಿಯಲ್ಲಿಯ  ಒಟ್ಟು ಪ್ರಕಟವಾದ ವಚನಗಳ ಸಂಖ್ಯೆ ೭೧೭, ಈ ಕೃತಿ ೧೯೮೬ರಲ್ಲಿ ನಾಲ್ಕನೇ ಪರಿಷ್ಕೃತ ಮುದ್ರಣದ ಹೆಸರಿನಲ್ಲಿ ಪ್ರಕಟವಾಗಿದೆ. ಆದರೆ ಮೂರನೆಯ ಮುದ್ರಣದಲ್ಲಿ ಇದ್ದಂತದ ವಿವರಕ್ಕಿಂತ ಯಾವುದೇ ಬದಲಾವಣೆ ಆಗಿಲ್ಲ. ಸಂಪಾದಕರ ಹೆಸರು ಮಾತ್ರ ಶ್ರೀ ನಿ.ಪ್ರ.ಸ್ವ, ಪ್ರಭುಸ್ವಾಮಿಗಳು ಎಂದು ಬದಲಾಗಿದೆ. ಹ. ನಂ. ವಿಜಯಕುಮಾರರವರು ೧೯೫೯ರ  ವೇಳೆಗೆ ಮೂರು ಆವೃತ್ತಿಗಳನ್ನು ಕಂಡಿದ್ದ ೭೧೭ಕ್ಕಿಂತ ಹೆಚ್ಚಿನ ವಚನಗಳು ದೊರೆಯದೆ ಇದ್ದರೂ ಹುಮನಾಬಾದಿನ ವೀರಶೈವ ಕಲ್ಯಾಣ ಪರಿಷತ್ತಿನವರ ಕೋರಿಕೆಯ ಮೇರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿಯ ಎರಡು ತಾಳೆವೋಲೆ ಪ್ರತಿ ಮತ್ತು ೧ ಕಾಗದದ ಪ್ರತಿ ಹಾಗೂ ಶ್ರೀ ಸಿದ್ಧವೀರ ದೇವರು ಹೊಸಮಠ ಸಂಪಾದಿಸಿದ ಮುದ್ರಿತ ಆವೃತ್ತಿಯನ್ನು ಉಪಯೋಗಿಸಿಕೊಂಡು ೧೯೭೭ರಲ್ಲಿ ಶಾಸ್ತ್ರೀಯವಾಗಿ ಪರಿಷ್ಕರಿಸಿ ಪ್ರಕಟಿಸಿದ್ದಾರೆ. ಈ ಸಂಪಾದನೆಯ ವಿಶೇಷ ಎಂದರೆ, ಉಳಿದ ಸಂಪಾದನ ಕೃತಿಗಳಲ್ಲಿಯ ಹಾಗೆ ‘ಶ್ರೀ ಷಣ್ಮುಖ ಸ್ವಾಮಿ ಕೃತ ಅಖಂಡೇಶ್ವರ ವಚನಗಳು’ ಎಂಬ ಹೆಸರಿನಿಂದ ಪ್ರಕಟವಾಗದೆ ‘ಷಣ್ಮುಖ ಸ್ವಾಮಿಗಳ ವಚನಗಳು’ ಎಂಬ ಹೆಸರಿನಿಂದ ಪ್ರಕಟವಾಗಿದೆ. ೧೯೮೦ರಲ್ಲಿ ವಿ. ಶಿವಾನಂದರವರು ಷಣ್ಮುಖ ಶಿವಯೋಗಿಗಳು ಜೀವಿಸಿದ್ದ  ಪರಿಸರದಲ್ಲಿ

 ದೊರೆತ ಹಸ್ತಪ್ರತಿಗಳನ್ನು ಸಂಗ್ರಹಿಸಿ ಅವುಗಳಲ್ಲಿಯ ಪ್ರಾದೇಶಿಕ ಮಹತ್ವವಿರುವದನ್ನು ಗುರುತಿಸಿ ಒಟ್ಟು ನಾಲ್ಕು ಕೋರಿ ಕಾಗದ ಪ್ರತಿಗಳು ಮತ್ತು ಈಗಾಗಲೇ ಪ್ರಕಟಗೊಂಡ ಎರಡು ಮುದ್ರಿತ ಪ್ರತಿಗಳನ್ನುಪಯೋಗಿಸಿಕೊಂಡು ಸಂಪಾದಿಸಿ ಕೊಟ್ಟಿದ್ದಾರೆ. ಷಣ್ಮುಖ ಶಿವಯೋಗಿಮಠದ ಶ್ರೀ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳು ಪ್ರಕಟಿಸಿದ್ದಾರೆ. ಸಮಗ್ರ ವಚನ ಸಂಪುಟದ ಜನಪ್ರಿಯ ಆವೃತ್ತಿಯ ಮಾಲೆಯಲ್ಲಿ ಸಂಕೀರ್ಣ ವಚನ ಸಂಪುಟ – ೯ರಲ್ಲಿ ವೀರಣ್ಣ ರಾಜೂರವರು ಷಣ್ಮುಖ ಸ್ವಾಮಿಗಳ ಷಟ್‌ಸ್ಥಲ ವಚನ ಹೆಸರಿನಲ್ಲಿ ಸಂಪಾದಿಸಿದ್ದಾರೆ. ಇದರಲ್ಲಿ ಹೆಚ್ಚಿನ ವಿಶೇಷ ಇಲ್ಲ. ಇದರ ಜೊತೆಗೆ ಅಖಂಡೇಶ್ವರ ಗ್ರಂಥ ಮಾಲೆಯಡಿಯಲ್ಲಿ ಅಖಂಡೇಶ್ವರ ವಚನ ಮಂಜರಿ ಹೆಸರಿನಲ್ಲಿ ೨೦೪ ವಚನಗಳು ಪ್ರಕಟವಾಗಿವೆ.

ಷಣ್ಮುಖ ಶಿವಯೋಗಿಗಳ ಕಾಲ

ಇವರ ಕಾಲದ ಬಗೆಗೆ ಹಲವಾರು ವಿದ್ವಾ೦ಸರು ಚರ್ಚಿಸಿ   ವ್ಯಕ್ತಪಡಿಸಿರುವ ಅಭಿಪ್ರಾಯದಲ್ಲಿ ಅಷ್ಟಾಗಿ ವಿರೋಧ ಕಂಡು ಬರುವುದಿಲ್ಲ. ವಿ. ಶಿವಾನಂದರವರು ಷಣ್ಮುಖ ಶಿವಯೋಗಿ ವಿರಚಿತ ಅಂಡೇಶ್ವರ ವಚನಗಳು, ಪ್ರಸ್ತಾವನೆಯಲ್ಲಿ ಇವರ ಕಾಲದ ಬಗೆಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಈ ಚರ್ಚೆಯಲ್ಲಿಯ ಎರಡು ಆಧಾರಗಳು ಇವರ ಕಾಲದ ಬಗೆಗೆ ಖಚಿತವಾದ ಮಾಹಿತಿಯನ್ನು ಒದಗಿಸುತ್ತವೆ.

೧.ಕಾಡಸಿದ್ಧೇಶ್ವರ ವಚನಗಳ ಟೀಕೆಯೊಂದು ದೊರೆತಿದ್ದು ಅದರಲ್ಲಿ ಷಣ್ಮುಖ ಶಿವಯೋಗಿ ಮತ್ತು ಅವರ ಸಮಕಾಲೀನ ವ್ಯಕ್ತಿಗಳ ಉಲ್ಲೇಖವನ್ನೊಳಗೊಂಡ ವಚನವೊಂದಿದೆ. ‘ನಿನ್ನಿನವರು ಇಂದಿನವರು ಹೋದ ದಾರಿ ಒ೦ದಲ್ಲದೆ ಎರಡಿಲ್ಲ. ನೋಡೆಂದನಯ್ಯಾ ಕಾಡಿನೊಳಗಾದ ಶಂಕರ ಪ್ರಿಯ ಚನ್ನಕದ೦ಬಲಿಂಗ ಪ್ರಭುವೆ. ಈ ವಚನದ ಟೀಕೆಯಲ್ಲಿ (ಕಾಡಸಿದ್ಧೇಶ್ವರ ವಚನ ಸಂ, ಹೊಳಲು ಚಂದ್ರಶೇಖರಶಾಸ್ತ್ರಿ, ಪು. ೪೭೮ ಹುಬ್ಬಳ್ಳಿ) ನಿನ್ನಿನವರು ಯಾರೆಂಬುದನ್ನು ಹೇಳಿ, ಇಂದಿನವರೆಂದಡೆ ತುರ್ತು ಈ ಕಲಿಯುಗದೊಳಗೆ ಸಿದ್ದೇಶ್ವರ ಸ್ವಾಮಿಗಳು. ಸಿಂಗಳಾಪುರದ ಬಸವರಾಜದೇವರು, ಘನಲಿಂಗದೇವರು, ಬೋಳಬಸವೇಶ್ವರ ಸ್ವಾಮಿಗಳು. ಶೀಲವಂತ ಚೆನ್ನಮಲ್ಲ ಸ್ವಾಮಿಗಳು. ಷಣ್ಮುಖಸ್ವಾಮಿಗಳು ಇಂತೀ ಗಣಂಗಳು ಲಿಂಗೈಕ್ಯ ರಾಗಿರುವಲ್ಲಿ ಗುಪ್ತರಾಗಿರುವರು ಎಂದಿದೆ. ಈ  ವ್ಯಾಖ್ಯಾನದಲ್ಲಿಯ ವಿವರದ ಪ್ರಕಾರ ಷಣ್ಮುಖ ಶಿವಯೋಗಿಗಳು ಕಾಡಸಿದ್ಧೇಶ್ವರರಿಗಿಂತ ಪ್ರಾಚೀನರು ಎ೦ಬುದಾಗಿ ತಿಳಿದುಬರುತ್ತದೆ. ಕಾಡಸಿದ್ದೇಶ್ವರರ  ಕಾಲ ೧೭೦೦-೨೫ ಎ೦ದು ಅಂದಾಜು ಮಾಡಲಾಗಿದೆ. ೧೭೦೦ಕ್ಕಿಂತ ಪೂರ್ವದಿಂದಲೂ ಜೀವಿಸಿದ್ದರು ಎಂಬುದಾಗಿ ತಿಳಿದುಬರುತ್ತದೆ.  

೨. ಅಖಂಡೇಶ್ವರ ವಚನಗಳ ಪ್ರಾಚೀನ ಮುದ್ರಿತ ಪ್ರತಿಗಳಲ್ಲಿ ಶ್ರೀ ಷಣ್ಮುಖ ಸ್ವಾಮಿಗಳು ಶ್ರೀ ಬಸವಲಿಂಗದೇವರಿಗೆ ನಿರೂಪಿಸಿದ ಅರುಹಿನ ಷಡುಸ್ಥಲದ ವಚನ ಎಂಬ ಉಲ್ಲೇಖ ಇದ್ದು ಈ ಬಸವಲಿಂಗಸ್ವಾಮಿಗಳು ಕಲಬುರ್ಗಿಯ ಗದ್ದುಗೆ ಮಠದ ಮೂಲ ಸ್ಥಾಪಕರಾಗಿದ್ದು ಜೀವಿಸಿದ್ದ ಕಾಲ ೧೭೨೫ ಎಂದು ತಿಳಿದುಬಂದಿದೆ. ಈ ವೇಳೆ ಗಾಗಲೇ ಷಣ್ಮುಖ ಶಿವಯೋಗಿಗಳು ವೃದ್ಧರಾಗಿರಬೇಕು ಎ೦ದೆನಿಸುತ್ತದೆ.  ಜೇವರ್ಗಿಯ ಷಣ್ಮುಖ ಶಿವಯೋಗಿ ಮಠದ ಇತ್ತೀಚಿನ ಮಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳು ತಮ್ಮ ಮಠದ ಹಳೆಯ ಕಾಗದಗಳಲ್ಲಿ ದೊರೆತ ಆಧಾರದ ಮೇಲೆ ಇವರ ಕಾಲವನ್ನು ಜನನ ೧೬೩೯ ಶೂನ್ಯ ಪಟ್ಟಕ್ಕೊಡೆಯರಾದ ಕಾಲ ಕ್ರಿ. ಶ. ೧೬೫೯. ಲಿಂಗೈಕ್ಯರಾದ ಕಾಲ ೧೭೧೧ ಎಂದು ನಿರೂಪಿಸಿ ಒಟ್ಟು ೧೬೩೯-೧೭೧೧ರ ವರೆಗೆ ೭೨ ವರ್ಷಗಳ ಕಾಲ ಜೀವಿಸಿದ್ದರು ಎಂಬ ಅಂಶವನ್ನು ಒದಗಿಸಿದ್ದಾರೆ. ಈ ಹೇಳಿಕೆಯನ್ನೇ ಸದ್ಯಕ್ಕೆ ಇಟ್ಟುಕೊಳ್ಳಬಹುದಾಗಿದೆ.

ಜೀವನ ಚರಿತ್ರೆ;

ಷಣ್ಮುಖ ಶಿವಯೋಗಿಗಳು ಜೀವಿಸಿದ್ದ ಕಾಲದಲ್ಲಾಗಲೀ ನಂತರದ ಕಾಲದಲ್ಲಾಗಲೀ ಅವರ ಚರಿತ್ರೆಯನ್ನು ಯಾವ ಕವಿಗಳೂ ಬರೆದ ಹಾಗೆ ಕ೦ಡು ಬರುವುದಿಲ್ಲ. ಅವರ ಚರಿತ್ರೆಯನ್ನು ತಿಳಿಯಲು ಇರುವ ಆಧಾರಗಳು, ಜೇವರ್ಗಿಯ ಮಠದಲ್ಲಿಯ ಕೆಲವು ಕಾಗದಗಳಲ್ಲಿಯ ವಿವರಗಳು ಐತಿಹ್ಯಗಳು ಜನಪ್ರತೀತಿ ಗಳಷ್ಟೇ ಆಗಿವೆ. ಇವುಗಳನ್ನು ಸಮರ್ಥಿಸಲು ಬಲವಾದ ಆಧಾರಗಳಿಲ್ಲವಾದರೂ ಒಪ್ಪಿಕೊಳ್ಳಲು ಅಡ್ಡಿಯಿಲ್ಲ. ಈ ಆಧಾರ ಗಳನ್ನೇ ಉಪಯೋಗಿಸಿಕೊಂಡು ಆಧುನಿಕರಲ್ಲಿ ಗುಂಜಿಹಳ್ಳಿ ಶ್ರೀ ಷಡಕ್ಷರ ಕವಿಯವರು ಶ್ರೀ ಷಣ್ಮುಖ ಶಿವಯೋಗೀಶ್ವರ ಕಾವ್ಯರತ್ನಾಕರ ಎಂಬ ಕಾವ್ಯವನ್ನು ರಚಿಸಿದ್ದಾರೆ. ವಿ. ಸಿದ್ಧ ರಾಮಣ್ಣರವರು ಷಟ್‌ಸ್ಥಲಜ್ಯೋತಿ ಷಣ್ಮುಖಸ್ವಾಮಿ ಎಂಬ ಸಂಗೀತ ಪ್ರಧಾನ ನಾಟಕ ರಚಿಸಿದ್ದಾರೆ. ಎಚ್. ತಿಪ್ಪೇರುದ್ರ ಸ್ವಾಮಿಯವರು ‘ಜಡದಲ್ಲಿ ಜಂಗಮ’ ಎ೦ಬ ಕಾದಂಬರಿಯನ್ನು ರಚಿಸಿದ್ದಾರೆ.

ಕಲಬುರ್ಗಿ ಜಿಲ್ಲೆಯʼ ಜೇವರ್ಗಿಯು’ ಇವರ ಜನ್ಮಸ್ಥಳ. ಜೇವರ್ಗಿಯ ಹಿರೇಗೌಡರ ಮನೆತನದಲ್ಲಿಯ ಮಲ್ಲಪ್ಪಶೆಟ್ಟಪ್ಪ ಮತ್ತು ದೊಡ್ಡಮ್ಮ ಎಂಬ ದಂಪತಿಗಳಿಗೆ ಪುತ್ರರಾಗಿ ಜನಿಸಿದರು. ಮು೦ದ ಅಖಂಡೇಶ್ವರ ಗುರುಗಳ ಪರಿಸರದಲ್ಲಿ ಬೆಳೆದರು. ಪ್ರಾರಂಭದಲ್ಲಿ ಚರಜ೦ಗಮರಾಗಿ ಲೋಕ ಸಂಚಾರ ಕೈಗೊಂಡು ಸಮಕಾಲೀನ ಜಡ ಸಮಾಜದಲ್ಲಿ ಜ೦ಗಮತೆಯನ್ನು ಮೂಡಿಸುತ್ತ ಪರ್ಯಟನೆ ಮಾಡುತ್ತ ಕೊನೆಗೆ ಜೇವರ್ಗಿ ಸಮೀಪದ ಕೋಳಕೂರ ಗ್ರಾಮದ ಭೀಮಾನದಿ ತಟಾಕದ ಭೀಮಕೊಳ್ಳದಲ್ಲಿ ನೆಲಸಿ ದೀರ್ಘ ತಪಸ್ಸು ಮಾಡಿ ಯೋಗಸಿದ್ಧಿ ಪಡೆದುಕೊಂಡು ವಚನ ರಚನೆ ಮಾಡಿದರು. ಇವರ ದಿವ್ಯ ಸಾಧನೆಯನ್ನು ಮನಗಂಡ ಅಖಂಡೇಶ್ವರ ಸ್ವಾಮಿಗಳು ಜೋಗಿಕೊಳ್ಳದಿಂದ ಜೇವರ್ಗಿಗೆ  ಬರಮಾಡಿಕೊಂಡು ಕ್ರಿ. ಶ. ೧೬೫೯ರಲ್ಲಿ ತಾವು ಸ್ಥಾಪಿಸಿದ್ದ ವಿರಕ್ತ ಮಠದ ಪಟ್ಟಗಟ್ಟಿದರು. ಹೀಗೆ ಇವರು ಅಖಂಡೇಶ್ವರರು ಸ್ಥಾಪಿಸಿದ ಮಠದ ಅಧಿಪತಿಯಾಗಿ ಧರ್ಮತತ್ತ್ವ ಬೋಧನೆ ಮಾಡುತ್ತ ಅಲ್ಲಿಯೇ ಜೀವಿಸಿದ್ದು ಐಕ್ಯವಾದರು. ಇವರು ಗುರು ಅಖಂಡೇಶ್ವರರ ಅಂಕಿತದಲ್ಲಿ ವಚನಗಳನ್ನು ಬರೆದು ಪ್ರಸಿದ್ಧ ರಾದ್ದರಿಂದ ಮತ್ತು ಅಖಂಡೇಶ್ವರರ ನಂತರ ಪ್ರಸಿದ್ಧವಾದ ಆ ಮಠ ಷಣ್ಮುಖ ಶಿವಯೋಗಿಗಳ ಮಠ ಎಂದೇ ಹೆಸರು ಬಂದಿತು.

ಷಣ್ಮುಖ ಶಿವಯೋಗಿಗಳು ಬಸವಯುಗದ ವಚನಗಳ ಪರಿಭಾಷೆ, ವಸ್ತುಧೋರಣ, ರೀತಿ, ನೀತಿ ಇತ್ಯಾದಿಗಳನ್ನು ಬಸವೋತ್ತರ ಯುಗದಲ್ಲಿ ಪ್ರತಿನಿಧಿಸಿದ ವ್ಯಕ್ತಿ ಮಾತ್ರವಾಗಿರದೆ, ಬಸವಾದಿಗಳ ಪ್ರಗತಿಪರ ಸಮಾಜೋಧಾರ್ಮಿಕ ಸುಧಾರಣಾ ತತ್ತ್ವಗಳನ್ನು, ಜೀವಿಸಿದ್ದ ಯುಗದಲ್ಲಿ ಮುಂದುವರೆಸಿದರು. ಇವರು ಅಂತ್ಯಜರಲ್ಲಿ ಕೆಲವರಿಗೆ ಲಿಂಗದೀಕ್ಷೆ ನೀಡಿದ್ದಲ್ಲದೆ ಸಹಭೋಜನ ಮಾಡಿದರು ಎಂಬ ಹೇಳಿಕೆಯನ್ನು ಸಮರ್ಥಿಸುವಂತೆ ಜೇವರ್ಗಿಯ ಹರಿಜನ ಕೇರಿಯಲ್ಲಿ ಇವರ ಗದ್ದುಗೆಯ ಕುರುಹುಗಳನ್ನು ಕಾಣಬಹುದಾಗಿದೆ. ಅಂತ್ಯಜರು ಇವರನ್ನು ಗುರುವಾಗಿ ಸ್ವೀಕರಿಸಿದ್ದರು. ಒಂದು ಮುದಿ ಎತ್ತು ಅವಸಾನದ  ಸ್ಥಿತಿಯಲ್ಲಿರುವಾಗ ಅದನ್ನು ಆರೈಕೆ ಮಾಡಿ ಅದರಿಂದ ಕಂಥಾಭಿಕ್ಷೆ ಕಾಯಕ ಮಾಡಿಸಿದರೆಂಬ ಐತಿಹ್ಯ ಇದೆ. ಈಗಲೂ ಜೇವರ್ಗಿಯ ಮಠದ ಮುಂದುಗಡೆ ನಂದಿಯ ಸಮಾಧಿ ಇದೆ. ಸುರಪುರದ ದೊರೆ ವೆಂಕಟಪ್ಪನಾಯಕನ ಮಹಾಮಂತ್ರಿ ನಿಷ್ಠೆಯ ವೀರಪ್ಪನವರು ಷಣ್ಮುಖ ಶಿವಯೋಗಿಗಳಿಗೆ ರಾಜಮರ್ಯಾದೆ ನೀಡಿ ಅವರನ್ನು ರಾಜಗುರುಗಳೆಂದು ಸ್ವೀಕರಿಸಿ ಜೇವರ್ಗಿಯಲ್ಲಿ ಅವರಿಗಾಗಿ ಒ೦ದು ಮಠವನ್ನು ಕಟ್ಟಿಸಿದ್ದರು. ಹೀಗೆ ಇವರು ವಿರಕ್ತಮಠದ ಅಧಿಪತಿಯಾಗಿ ಲೋಕೋದ್ಧಾರವನ್ನು ಕೈಗೊಳ್ಳುತ್ತಲೇ ಕ್ರಿ. ಶ. ೧೭೧೧ರಲ್ಲಿ ಶಿವಸಾಯುಜ್ಯ ಪದವಿಯನ್ನು ಪಡೆದರು. ಇವರ ಹೆಸರಿನ ರಥೋತ್ಸವವು ಪ್ರತಿವರುಷ ವೈಶಾಖ ಬಹುಳ ಪಂಚಮಿ ತಿಥಿಗೆ ಜೇವರ್ಗಿಯಲ್ಲಿ ಇಂದಿಗೂ ವೈಭವದಿಂದ ನಡೆಯುತ್ತದೆ.  

 ಕನ್ನಡ ಸಂಸ್ಕೃತಿಯಲ್ಲಿ  ಷಣ್ಮುಖ ಶಿವಯೋಗಿಗಳ ಕುರುಹುಗಳು :

 ಕನ್ನಡ ಸಾಂಸ್ಕೃತಿಕ ಪರಿಸರದಲ್ಲಿ ಷಣ್ಮುಖ ಶಿವಯೋಗಿಗಳ ಕುರುಹುಗಳು ಅಲ್ಲಲ್ಲಿ ಸಿಗುತ್ತವೆ. ಇವರು ಐಕ್ಯವಾದ ಗದ್ದುಗೆ ಜೇವರ್ಗಿಯಲ್ಲಿ ಇಂದಿಗೂ ಇದ್ದು ಪೂಜೆಗೊಳ್ಳುತ್ತಿದೆ. ಅಖಂಡೇಶ್ವರರು ಜೇವರ್ಗಿಯಲ್ಲಿ ಮಠವನ್ನು ಕಟ್ಟಿಸಿದ್ದರೂ ಇ೦ದಿಗೂ ಅದನ್ನು ಷಣ್ಮುಖ ಶಿವಯೋಗಿಗಳ ಮಠ ಎಂದೇ ಕರೆಯುತ್ತಾರೆ, ಜೇವರ್ಗಿಯ ಹರಿಜನ ಕೇರಿಯಲ್ಲಿಯೂ ಇವರ ಗದ್ದುಗೆ ಇದೆ. ಇವರ ಹೆಸರಿನ ಮಠಗಳು ಜೀವರ್ಗಿಯಲ್ಲಿ ಮಾತ್ರವಲ್ಲದೆ ಸುರಪುರ, ನೆಲೋಗಿ ಮತ್ತು ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ನಿರ್ಲಗಾ ತಾಲ್ಲೂಕಿನ ತಾಂಬಾಳಗಳಲ್ಲಿಯೂ  ಇವೆ. ಇವರು ಪೂಜೆ, ಅಧ್ಯಯನ ಮತ್ತು ಬರವಣಿಗೆಗೆ ತೊಡಗುತ್ತಿದ್ದ ಕೋಳತೂರ ಗ್ರಾಮದ ಭೀಮಾನದಿ ಹತ್ತಿರದ ಯೋಗಿಕೊಳ್ಳದ ಸುಂದರ ತಾಣವನ್ನು ಈಗಲೂ ಕಾಣಬಹುದು. 

ವಚನಗಳು ಮತ್ತು ಲಘು ಕೃತಿಗಳು:

 ಇವರು ವಚನಗಳನ್ನು ಮತ್ತು ಕೆಲವು ಲಘು ಕೃತಿಗಳನ್ನು ಬರೆದಿದ್ದಾರೆ. ಇವರು ಬರೆದಿರುವ ಅಖಂಡೇಶ್ವರ ಅಂಕಿತದ ೭೧೭ ವಚನಗಳೂ ಉಪಲಬ್ಧತವಾಗಿವೆ. ೪೧ ಚೌಪದಿಗಳುಳ್ಳ ಅಖಂಡೇಶ್ವರ ಜೋಗುಳ ಪದಗಳನ್ನು ರಚಿಸಿದ್ದಾರೆ. ಇತ್ತೀಚೆಗೆ ಇವರ ಬರೆದಿದ್ದವುಗಳೆಂದು ಹೇಳಲಾದ ಏಳು ಪರಿವರ್ಧಿನಿ ಷಟ್ಪದಿಯುಳ್ಳ ಪ೦ಚಸಂಜ್ಞೆಗಳ ಪದ ಮತ್ತು ಭಾಮಿನಿ ಷಟ್ಪದಿಯಲ್ಲಿ ರಚಿತವಾದ ನಿರಾಳಸದ್ಗುರುಸ್ತೋತ್ರ ದೊರೆತವುಗಳಾಗಿವೆ. ಇವುಗಳ ಜೊತೆಗೆ ಇವರು ಷಣ್ಮುಖ ಶಿವಯೋಗಿಗಳ ನಾಂದ್ಯ, ಪ್ರಾಣಲಿಂಗಸ್ಥಲದ ವ್ಯಾಖ್ಯಾನ ಕಾಲಜ್ಞಾನ ಸಾಹಿತ್ಯಗಳನ್ನು ಬರೆದಿರುವುದಾಗಿ ಜೇವರ್ಗಿಯ ಷಣ್ಮುಖ ಶಿವಯೋಗಿ  ಮಠದ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಶಾಂತಲಿಂಗ  ಮಹಾಸ್ವಾಮಿಗಳು, ಮಠಕ್ಕೆ ನಾನು ಭೇಟಿಕೊಟ್ಟಾಗ ತಿಳಿಸಿದ್ದಾರೆ. ಸದ್ಯಕ್ಕೆ ಇವು ಅನುಪಲಬ್ದವಾಗಿವೆ.

 ಷಣ್ಮುಖ ಶಿವಯೋಗಿಗಳೇ ತಮ್ಮ ವಚನಗಳನ್ನು ಸ್ಥಲಕಟ್ಟಿಗನುಗುಣವಾಗಿ ಜೋಡಿಸಿದ್ದಂತೆ ಕಾಣುತ್ತದೆ. ಈ ವಚನಗಳು ಮುಖ್ಯವಾಗಿ ವೀರಶೈವ ಸಿದ್ಧಾಂತವನ್ನು ನಿರೂಪಿಸುವ ಗ್ರಂಥವಾಗಿ ಕಂಡುಬರುತ್ತದೆಯಾದರೂ , ತನ್ನ ಕಾಲದ ಇತರ  ವಚನಕಾರರಲ್ಲಿ ಇಲ್ಲದ ಸಾಮಾಜಿಕ ವಿಡಂಬನೆ ಕ್ರಾಂತಿಕಾರಿಕ ಆಲೋಚನೆ, ಅನುಭಾವ ತತ್ತ್ವದರ್ಶನಗಳನ್ನು  ಕಾಣಬಹುದಾಗಿದೆ. ಇವರ ವಚನಗಳು ೧೪ ಸ್ಥಲಗಳಲ್ಲಿ ವಿಭಜನೆಗೊಂಡಿವೆ. ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಸಂಸಾರ ಹೇಯಸ್ಥಲ, ಗುರುಕರುಣ ಸ್ಥಲ, ಲಿಂಗಧಾರಣಸ್ಥಲ, ವಿಭೂತಿಸ್ಥಲ, ರುದ್ರಾಕ್ಷಿಸ್ಥಲ ಪ೦ಚಾಕ್ಷರಿಸ್ಥಲ, ಭಕ್ತಸ್ಥಲ, ಮಾಹೇಶ್ವರಸ್ಥಲ, ಪ್ರಸಾದಿಸ್ಥಲ ಪ್ರಾಣಿಲಿಂಗಸ್ಥಲ, ಶರಣಸ್ಥಲ, ಐಕ್ಯಸ್ಥಲ.

ಷಣ್ಮುಖ ಶಿವಯೋಗಿಗಳು ಬಸವಾದಿ ಪರಂಪರೆಯ ವಚನಕಾರರನ್ನು ಭಕ್ತಿ ಪೂರ್ವಕವಾಗಿ ಸ್ಮರಿಸಿದ್ದಾರೆ ಮತ್ತು ವಚನಗಳಿಂದ ಪ್ರಭಾವಿತರಾಗಿದ್ದಾರೆ. ಕರಗಳನ್ನು ಭಕ್ತಿಪೂರ್ವಕವಾಗಿ ಸ್ತುತಿಸಿದ್ದಾರೆ. ಕೆಳಕಂಡ ವಚನಗಳಲ್ಲಿ ತನಗಿಂತ  ಪೂರ್ವದ ಬಸವಾದಿ ಪ್ರಮಥರನ್ನು ಭಕ್ತಿಪೂರ್ವಕವಾಗಿ ಸ್ತುತಿಸಿದ್ದಾರೆ

ಎನ್ನ ತನುವೆಸವಣ್ಣನು

ಎನ್ನ ಮನವೆ ಚೆನ್ನಬವಣ್ಣನು

ಎನ್ನ ಪ್ರಾಣವೇ ಪ್ರಭುದೇವರು

(ಶರಣಸ್ಥಲ ವ. ಸಂ. ೮೨ ಪು. ೩೩೬)

ಮಾದಾರಚೆನ್ನಯ್ಯನ ಬಾಯಿತಾಂಬೂಲವ ಮೆಲುವೆ

ಡೋಹರ ಕಕ್ಕಯ್ಯನ ಒಕ್ಕುಮಿಕ್ಕುದನು೦ಬೆ

ಚೋಳಿಯಕ್ಕನ ಊಳಿಗದವನಾಗುವೆ

ಶ್ವಪಚಯ್ಯನ ಆಳಾಗಿರುವೆ

ಇನ್ನುಳಿದ ಸಕಲ ಗಣ೦ಗಳ ತೊತ್ತು ಬಂಟಲೆಂಕನಾಗಿ

ರಾಜಾಂಗಣ ಬಳಿಯುವೆನಯ್ಯಾ

(ಪ್ರಸಾದಿಸ್ಥಲ ವ. ಸಂ. ೪೨ ಪು. ೧೮೮೯)

ಇದೇ ರೀತಿ ಸಿದ್ಧರಾಮ, ಉರಿಲಿಂಗಪೆದ್ದಿ, ನಿಜಗುಣ ಶಿವಯೋಗಿ, ಅಕ್ಕಮಹಾದೇವಿ, ಬಿಬ್ಬಿ ಬಾಚಯ್ಯ, ಬೇಡರಕಣ್ಣಪ್ಪ ಮುಂತಾದ ನೂತನ ಪುರಾತನರನ್ನು ಒಂಭತ್ತು ವಚನಗಳಲ್ಲಿ ಸ್ಮರಿಸಿದ್ದಾನೆ.

ಬಸವಣ್ಣ, ಅಕ್ಕಮಹಾದೇವಿಯವರ ವಚನಗಳ ಪ್ರಭಾವ ಷಣ್ಮುಖ ಶಿವಯೋಗಿಗಳ ಮೇಲೆ ಯಾವ ರೀತಿ ಆಗಿದೆ ಎಂಬುದನ್ನು  ಹ. ನಂ.ವಿಜಯಕುಮಾರರವರು ತಾವು ಸಂಪಾದಿಸಿದ ಷಣ್ಮುಖ ಶಿವಯೋಗಿಗಳ ವಚನಗಳ ಕೃತಿಯ ಪ್ರಸ್ತಾವನೆಯಲ್ಲಿ   ನಿರೂಪಿಸಿದ್ದಾರೆ. ಆದಯ್ಯನ ವಚನಗಳ ಪ್ರಭಾವವೂ ಇವರ ವಚನಗಳ ಮೇಲಾಗಿರುವುದನ್ನು ಈ ಲೇಖನದಲ್ಲಿ ಪ್ರಥಮವಾಗಿ ಗುರುತಿಸಲಾಗಿದೆ.

ನೆರಕೆನ್ನೆಗೆ ತೆರೆಗಲ್ಲಕೆ

ಶರೀರ ಗೂಡುವೋಗದ ಮುನ್ನ…..  

ಲ್ಲುಹೋಗಿ ಬೆನ್ನುಬಾಗಿ

ಅನ್ಯರಿಗೆ ಹ೦ಗಾಗದ ಮುನ್ನ

(ಸ.ವ.ಸಂ. ೧ ವ.ಸಂ. ೧೬೧ ಪು. ೪೨)

ಬಸವಣ್ಣನವರ ಕಿರಿದಾದ ಈ ವಚನದಿಂದ ಪ್ರಭಾವಿತರಾಗಿ ಷಣ್ಮುಖ ಶಿವಯೋಗಿಗಳು ಸು. ಒಂದೂವರೆ ಪುಟದಷ್ಟು  ದೀರ್ಘವಾಗಿ ನಿರೂಪಿಸಿದ್ದಾರೆ.

ದೇಹವು ನಿಸ್ಸಾರವಾಗಿ ಯೌವ್ವನದ ಬಲಗೆಟ್ಟು

ಮುಪ್ಪಾವರಿಸಿ ಅಚೇತನಗೊಂಡು

ಸರ್ವಾಂಗವೆಲ್ಲ ನೆರೆತೆರೆಗಳಿಂದ ಮುಸುಕಲ್ಪಟ್ಟಾನಾಗಿ

ಆದಿವ್ಯಾದಿ ವಿಪತ್ತು

ರೋಗ ರುಜೆಗಳಿಂದ ಬಹು ದುಃಖಟ್ಟು

ಎದೆಗೂಡುಗಟ್ಟಿ ಬೆನ್ನು ಬಾಗಿ ಕಣ್ಣು ಒಳನಟ್ಟು

ಶರೀರ ಎಳಿತಾಟಗೊಂಡು ಕಾಲಮೇಲೆ ಕೈಯನೂರಿ

ಕೋಲ ಹಿಡಿದು ಏಳುತ್ತ ನಾನಾತರದ ದುಃಧಾವತಿಯಿಂದ

ರ್ತಕಟ್ಟು ನಷ್ಟವಾಗಿ ಹೋಯಿತು….

(ಸಂಸಾರ ಹೇಯಸ್ಥಲ ವ. ಸಂ. ೭)

ಈ ವಚನವು ಬಸವಣ್ಣನವರ ವಚನವು ಕೊಡುವಷ್ಟು ಸುಂದರವಾಗಿ ಅರ್ಥವಂತಿಕೆಯನ್ನು ಕೊಡಲಾರದು.

ನೀನೊಲಿದಡೆ ಕೊರಡು ಕೊನರುವುದಯ್ಯ

ನೀನೊಲಿದಡೆ ಬರಡು ಹಯನಹುದಯ್ಯ

ನೀನೊಲಿದಡೆ ವಿಷವೆಲ್ಲ ಅಮೃತವಹುದಯ್ಯ

ನೀನೊಲಿದಡೆ ಸಕಲಪಡಿ ಪದಾರ್ಥ ಇದರಲ್ಲಿರ್ಪವು

ಕೂಡಲ ಸಂಗಮದೇವ (ಸ. ವ. ಸಂ. ೧ ವ. ಸಂ. ೬೬)

ಎ೦ಬ ಬಸವಣ್ಣನವರ ವಚನವನ್ನು ಅನುಸರಿಸಿ ಇವರು

ನೀನೊಲಿದಡೆ ಕಲ್ಲೆಲ್ಲ ಕನಕವಯ್ಯ

ನೀನೊಲಿದಡೆ ಹುಲ್ಲೆಲ್ಲ ರಾಜಾನ್ನವಯ್ಯ

ನೀನೊಲಿದಡ ಕೊರಡೆಲ್ಲ ಕಲ್ಪವೃಕ್ಷವಯ್ಯ

ನೀನೊಲಿದಡ ಬರಡೆಲ್ಲ ಕಾಮಧೇನುವಯ್ಯ

ನೀನೊಲಿದಡೆ ಏನುಂಟು ಏನಿಲ್ಲವಯ್ಯ ಅಖಂಡೇಶ್ವರಾ

(ಭಕ್ತಸ್ಥಲ ವ. ಸಂ. ೫೮ ಪು. ೮೫)

ಎಂದು ರಚಿಸಿದ್ದಾರೆ. ಈ ವಚನದಲ್ಲಿ ಹೇಳುವ ಧಾಟಿ, ಬಳಸಿರುವ ಭಾಷೆ ಎಲ್ಲವೂ ಬಸವಣ್ಣನಿಂದ ನಿಚ್ಚಳವಾಗಿ ಪ್ರಭಾವಿತವಾಗಿರುವುದನ್ನು ಧ್ವನಿಸುತ್ತದೆ.

ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು ನೀನಲ್ಲದೆ ಮತ್ತಾರೂ ಇಲ್ಲಯ್ಯಾ ಕೂಡಲಸಂಗಮದೇವ

(ಸ. ವ. ಸಂ. ೧ ವ. ಸಂ. ೪೮೧)

ಬಸವಣ್ಣನವರ ವಚನ ಪಡಿಯಚ್ಚಿನಂತೆ ಕೆಳಕಂಡ ವಚನವನ್ನು ಶಿವಯೋಗಿಗಳು ರಚಿಸಿದ್ದಾರೆ.

ತಂದನೀನಯ್ಯ ಎನಗೆ ತಾಯಿನೀನಯ್ಯ ಎನಗೆ

ಬ೦ಧು ನೀನಯ್ಯ ಎನಗೆ ಬಳಗನೀನಯ್ಯ ಎನಗೆ

ಗತಿಯು ನೀನಯ್ಯ ಎನಗೆ ಮತಿಯು ನೀನಯ್ಯ ಎನಗೆ

ಸಕಲ ಚೈತನ್ಯವು ನೀನೆ ಅಯ್ಯ ಎನಗೆ

 ಅಖಂಡೇಶ್ವರ ನೀನೆದಿಕ್ಕಲ್ಲದೆ ಎನಗೆ ಮತ್ತಾರು ಇಲ್ಲಯ್ಯ

(ಮ.ಸ್ಥ. ವ. ಸಂ. ೭೭ ಪು. ೧೩೩)

ಷಣ್ಮುಖ ಶಿವಯೋಗಿಗಳು ಅಕ್ಕಮಹಾದೇವಿಯವರ  ವಚನಗಳಿಂದಲೂ ಪ್ರಭಾವಿತರಾಗಿ ವಚನಗಳನ್ನು ರಚಿಸಿದ ಹಾಗೆ ಕಂಡು ಬರುತ್ತದೆ. ನಿದರ್ಶನಕ್ಕೆ,

ಚಿಲಿಮಿಲಿ ಎಂದು ಓದುವ ಗಿಳಿಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಸರವೆತ್ತಿ ಹಾಡುವ ಕೋಗಿಲೆಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಎರಗಿ ಬ0ದಾಡುವ ತುಂಬಿಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಕೊಳನತಡಿಯೊಳಾಡುವ ಹ೦ಸೆಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಗಿರಿಗಹ್ವರದೊಳಗಾಡುವ ನವಿಲುಗಳಿರಾ

ನೀವುಕಾಣಿರೆ ನೀವು ಕಾಣಿರೆ

ಚೆನ್ನಮಲ್ಲಿಕಾರ್ಜುನನಲ್ಲಿದ್ದಹನೆಂದು ಹೇಳಿರೆ

(ಸ. ವ. ಸಂ. ವ. ಸಂ. ೧೭೪ ಪು. ೫೫)

ಎ೦ಬ ಅಕ್ಕಮಹಾದೇವಿಯ ವಚನದೊಂದಿಗೆ ಷಣ್ಮುಖ  ಶಿವಯೋಗಿಗಳ ವಚನವನ್ನು ಹೋಲಿಸಿ ನೋಡಿ.

ಅರಳಿಯ ಮರದೊಳಗಿರುವ ಅರಗಿಳಿಗಳಿರಾ

ನಮ್ಮ ಅಖಂಡೇಶ್ವರನ ಕಂಡಡೆ ಹೇಳಿರೇ

ಮಾವಿನ ಮರದೊಳಗೆ ಕೂಗುವ ಕೋಗಿಲೆ ಹಿಂಡುಗಳಿರಾ

ನಮ್ಮ ನಾಗಭೂಷಣನ ಕಂಡಡೆ ಹೇಳಿರೇ

ಕೊಳನ ತೀರದೊಳಗಾಡುವ ಕಳ ಹಂಸೆಗಳಿರಾ

ನಮ್ಮ ಎಳೆಯ ಚಂದ್ರನ ಕಂಡಡೆ ಹೇಳಿರೇ

ಮೇಘ ಧ್ವನಿಗೆ ಕುಣಿವ ನವಿಲುಗಳಿರಾ

ನಮ್ಮ ಅಖಂಡೇಶ್ವರನೆಂಬ ಅವಿರಳ

ಪರಶಿವನ ಕಂಡಡೆ ಹೇಳಿರೇ

(ಶರಣಸ್ಥಲ ವ. ಸ. ೩೦ ಪು. ೩೧೫)

ವಚನವು ಭಾವಗೀತಾತ್ಮಕತೆಯಿಂದ ಕೂಡಿದ್ದು, ತೀವ್ರವಾದ ಸ೦ವೇದನೆ ಮತ್ತು ಅರಸುವಿಕೆ ಉಕ್ಕಿಬರುತ್ತದೆ. ಆದರೆ, ಅಕ್ಕಳಿಗಿದ್ದ ಇಷ್ಟದೈವವನ್ನು ಅರಸುವಿಕೆಯ ತುರ್ತು ಇವರಿಗಿತ್ತೆ? ಎಂದೆನಿಸುತ್ತದೆ. ಅಂಬಿಗರ ಚೌಡಯ್ಯನಲ್ಲಿಯ,

ಗಾಳಿಬಿಟ್ಟಲ್ಲಿ ತೂರಿಕೊಳ್ಳಿರಯ್ಯಾ

ಗಾಳಿನಿನ್ನಧೀನವಲಯ್ಯ,

(ಸ.ವ.ಸಂ. ೧, ಪು. ೧೨೨)  

 ಎಂಬ ವಚನ ಷಣ್ಮುಖ ಶಿವಯೋಗಿಗಳಲ್ಲಿ ಕೆಳಕಂಡಂತೆ ಸಿಗುತ್ತದೆ.

ಗಾಳಿಬೀಸುವ ವೇಳೆಯಲ್ಲಿ ತೂರಿಕೊಳ್ಳಿರೋ ಬೇಗಬೇಗ

ಗಾಳಿ ನಿರ್ಮಿಚ್ಚೆಯಲ್ಲ ಕೇಳಿರೋ ಜಾಳಮನುಜರಿರಾ

(ಭ.ಸ್ಥ, ವ.ಸಂ. ೨೨)

ಮಡಿವಾಳ ಮಾಚಯ್ಯನ ವಚನದ ಪ್ರಭಾವವೂ ಇವರ ಮೇಲಾಗಿದೆ.

ಮನುಷ್ಯ ಜನ್ಮದಲ್ಲಿ ಬಂದು

ಶಿವಜ್ಞಾನವನರಿಯದಿದ್ದರೆ

ಆ ಕಾಗೆ ಕೋಳಿಗಳಿಂದ ಕರಕಷ್ಟ

ಕಾಣಾ ಕಲಿದೇವರದೇವಾ

ಎ೦ಬ ಮಡಿವಾಳ ಮಾಚಯ್ಯನ ವಚನದ ಜೊತೆ ಷಣ್ಮು ಶಿವಯೋಗಿಗಳ ಕೆಳಕಂಡ ವಚನವನ್ನು ಹೋಲಿಸಿ ನೋಡಬಹುದು.

ಶಿವಭಕ್ತನಾದ ಬಳಿಕ ತನ್ನ ಅರುಹು ಕುರುಹಿನ

ಭಕ್ತಿ ಮುಕ್ತಿಯ ಗೊತ್ತನರಿಯದ ಬಳಿಕ

ಆ ಕೋಳಿ ಕತ್ತೆಗಳಿಂದ ಕರಕಷ್ಟ ನೋಡಾ ಅಖಂಡೇಶ್ವರ

(ಭ. ಸ್ಥ, ವ. ಸಂ. ೩೨ ಪು. ೭೨)

ಆದಯ್ಯನಲ್ಲಿ ಬರುವ

ತೀರ್ಥಯಾತ್ರೆಯ ಮಾಡಿ ಪಾಪನ ಕಳೆದಿಹನೆಂಬ

ಯಾತನೆ ಬೇಡ ಕೇಳಿರಣ್ಣಾ

ಅನಂತ ಕರ್ಮವಲ್ಲಾ ಒಬ್ಬ ಶಿವಭಕ್ತನ

ದರುಶನ ಸ್ಪರ್ಶನದಿಂದ ಕೆಡುವವು.

(ಸ. ವ. ಸಂ. ೧, ವ. ಸಂ. ೯೬೯)

ಎಂಬ ವಚನದ ಜೊತೆಗೆ ಷಣ್ಮುಖ ಶಿವಯೋಗಿಗಳ ಕೆಳಕಂಡ ವಚನವನ್ನು ಹೋಲಿಸಿ ನೋಡಿದರೆ ಆದಯ್ಯನ ವಚನದಿಂದ ಪ್ರಭಾವಿತವಾಗಿದೆ ಎಂದು ಹೇಳಬಹುದು.

ಮುಕ್ತಿಯ ಪಡೆವೆನೆಂದು ಯುಕ್ತಿಗೆಟ್ಟು

ಸಕಲ ತೀರ್ಥ ಕ್ಷೇತ್ರಂಗಳಿಗೆಡೆಯಾಡಿ

ತೊಟ್ಟನ ತೊಳಲಿಬಳಲಿ ಬೆಂಡಾಗಲೇಕೊ

ಒಬ್ಬ ಶಿವಭಕ್ತನ ಅಂಗಳದಲ್ಲಿ ಎಂಭತ್ತೆಂಟು ಕೋಟಿ

ಕ್ಷೇತ್ರಂಗಳಿರ್ಪವು

ಆತನದರ್ಶನ ಸ್ಪರ್ಶನವಾದಾತಂಗೆ

ಅನಂತಕೋಟಿ ಭವ ಪಾಕ೦ಗಳು ಪರಿಹರವಪ್ಪುವು ನೋಡಾ

(ಭ.ಸ್ಥ. ವ. ಸಂ. ೮೨, ಪು. ೯

ಆದಯ್ಯನ ವಚನ :

ಮುತ್ತು ನೀರೊಳಗೆ ಹುಟ್ಟಿ ಮರಳಿನೀರಾಗದಂತೆ

ತಿಳಿಯ ಕಾಸಿದ ತುಪ್ಪ ಕ್ಷೀರವಾಗದಂತೆ

(ಸ.ವ.ಸಂ. ೧ ವ. ಸಂ. ೧೦೭೨)  

ಎ೦ಬ ಉಪಮೆಯು

ಷಣ್ಮುಖ ಶಿವಯೋಗಿಗಳಲ್ಲಿ :

ನೀರು ಘಟ್ಟಿಕೊಂಡು ಮುತ್ತಪ್ಪುದಲ್ಲದೆ ಮುತ್ತುನೀರಪ್ಪುದೇ

ಅಯ್ಯ ?

ಹಾಲು ಹೆಪ್ಪುಗೊ0ಡು ತುಪ್ಪವಪ್ಪುದಲ್ಲದೆ ತುಪ್ಪಹಾಲಪ್ಪುದೇ

ಅಯ್ಯ ?

ಎ೦ದು ನಿರೂಪಿತವಾಗಿದೆ. ಇವರೀರ್ವರ ವಚನದ ವಸ್ತು, ಧಾಟಿ ಒ೦ದೇ ಆಗಿದೆ.

ಆದಯ್ಯನು ತನ್ನ ವಚನಗಳಲ್ಲಿ ಬಳಸಿರುವ ಸಂಸ್ಕೃತದ ಪ್ರಮಾಣ ಗ್ರಂಥಗಳಲ್ಲಿಯ ಸಂಸ್ಕೃತ ಶ್ಲೋಕಗಳಲ್ಲಿ ಕೆಲವನ್ನು ಷಣ್ಮುಖ ಶಿವಯೋಗಿಗಳು ಬಳಸಿದ್ದಾರೆ. ಆದಯ್ಯನು ಜಂಗಮ ಶ್ರೇಷ್ಠತೆಯನ್ನು ನಿರೂಪಿಸುವ ಸಲುವಾಗಿ ಬಳಸಿರುವ

ಯಥಾಭೇರುಂಡ ಪಕ್ಷೀತ್ ದ್ವಿ ಮುಖಾತ್ ಪರಿಭುಂಜತೆ |

ತಥಾ ಭುಂಜಾಮಿ ದ್ವಿಮುಖಾಲ್ಲಿಂ

ಜಂಗಮಯೋರಹಂ

(ಸ.ವ.ಸಂ. ೧ ವ. ಸಂ. ೧೧೧೨)

ಎ೦ಬ ಸ೦ಸ್ಕೃತ ಶ್ಲೋಕವನ್ನೇ ಷಣ್ಮುಖ ಶಿವಯೋಗಿಗಳು ಸಹ ಜಂಗಮ ಶ್ರೇಷ್ಠತೆಯನ್ನು ನಿರೂಪಿಸುವಲ್ಲಿ ಬಳಸಿದ್ದಾರೆ.

ಯಥಾ ಭೇರುಂಡ ಪಕ್ಷೀತ್ ದ್ವಿಮುಖೇನ ಪ್ರಭುಂಜತೆ |

ತಥಾ ಚ ಉಮಯಾದೇವಿ ಮಮ ತೃಪ್ತಂತು ಜಂಗಮಂ ॥

(ಮ.ಸ್ಥ.ವ.ಸ೦.೮೫)

ಇಷ್ಟಲಿಂಗದ ಮಹತ್ತನ್ನು ಎತ್ತಿ ಹಿಡಿಯುವಲ್ಲಿ ಆದ್ಯಯನು ಬಳಸಿರುವ :

ಇಷ್ಟಲಿಂಗಮ ವಿಶ್ವಸ್ಯ ತೀರ್ಥ ಲಿಂಗಂತು ಯೋ ಭಜೇತ್ |

ಶುನಾಂ ಯೋನಿಶತಂತ್ವಾ ಚಂಡಾಲ ಗೃಹಮಾವಿಶೇತ್ ||

(ಸ.ವ.ಸಂ. ೧ ವ.ಸಂ. ೧೧೪೯)

ಎ೦ಬ ಉಕ್ತಿಯನ್ನೇ ಷಣ್ಮುಖ ಶಿವಯೋಗಿಗಳು ಸಹ ತನ್ನ ದೇಹದ ಮೇಲೆ ಇರುತಿರ್ಪ ಲಿಂಗವ ಸಾಮಾನ್ಯವ ಮಾಡಿ ಕ೦ಡ ಕ೦ಡ ದೇಗುಲದೊಳಗನ ಕಲ್ಲದೇವರೆಂದು ಭಾವಿಸಿ ಪೂಜಿಸುವವರನ್ನು ಹೋಲಿಸಲು ಬಳಸಿದ್ದಾರೆ.

ಇಷ್ಟ ಲಿಂಗಮ ವಿಶ್ವಾಸಂ ಸ್ಥಾವರ ಲಿ೦ಗೇನ ಪೂಜನಂ |

ಶ್ವಾನಯೋನಿ ಶತ೦ಗತ೦ ಚಾಂಡಾಲೋಗೃಹಮಾಚರೇತ್ ||   

(ಮ.ಸ್ಥ.ವ.ಸಂ. ೮೬)

ಷಣ್ಮುಣ ಶಿವಯೋಗಿಗಳ ಪ್ರಾಣಲಿಂಗಿಸ್ಥಲದಲ್ಲಿ ಬರುವ ವಚನಗಳಂತೂ ಆದಯ್ಯನ ವಚನಗಳನ್ನು ನೆನಪು ಮಾಡಿ  ಕೂಡುತ್ತವೆ.

ಪೂರ್ವದ ವಚನ ಸಾಹಿತ್ಯದ ಪ್ರಭಾವ ಷಣ್ಮುಖ ಶಿವಯೋಗಿಗಳ ವಚನಗಳ ಮೇಲೆ ನಿಚ್ಚಳವಾಗಿರುವುದನ್ನು ಮೇಲಿನ ವಿವರಣೆಗಳು ದೃಢೀಕರಿಸುತ್ತವೆ. ಬಸವಣ್ಣ, ಅಕ್ಕಮಹಾದೇವಿ, ಆದಯ್ಯ ಮುಂತಾದ ವಚನಕಾರರ ವಚನಗಳಲ್ಲಿ ಕಾಣಿಸಿಕೊಳ್ಳುವ ಸಂಕ್ಷಿಪ್ತತೆ, ಸೂತ್ರಬದ್ಧತೆ, ಉತ್ಕಟತೆ, ಕಲಾಮಂತಿಕೆ ಅಷ್ಟಾಗಿ ಇವರ ವಚನಗಳಲ್ಲಿ ಕಾಣಬರದೆ ವಾಚ್ಯತೆ, ವಿವರಣಾತ್ಮಕತೆಗೆ ಹೆಚ್ಚಿನ ಅವಕಾಶ ದೊರೆತಿದೆ.

ಒಂದು ಸಾಹಿತ್ಯಕ ಪರಂಪರೆ ತನ್ನ ಎಲ್ಲಾ ಸಾಧ್ಯತೆಗಳನ್ನು ಕಂಡುಕೊಂಡ ಮೇಲೆ ಬರುವ ಕೃತಿಕಾರರು ಆ ಹಿಂದಿನ

ಪರಂಪರೆಯಿಂದ ತಮ್ಮನ್ನು ತಾವು ಬಿಡಿಸಿಕೊಂಡು ಮೌಲಿಕ ರಚನೆ ಮಾಡುವುದು ತ್ರಾಸಿನಕೆಲಸ, ಆದಾಗ್ಯೂ ಪ್ರತಿಭಾಶಾಲಿಗಳು ಆ ಪ್ರಭಾವವನ್ನು ಅರ್ಜಿಸಿಕೊಂಡು ಪರಂಪರೆಯಿಂದ ಬಿಡಿಸಿಕೊಂಡು ಮೌಲಿಕ ಕೃತಿರಚನೆ ಮಾಡುವ ಸಾಧ್ಯತೆ ಇದೆ. ಷಣ್ಮುಖ ಶಿವಯೋಗಿಗಳು ಪೂರ್ವದ ವಚನಕಾರರ ಪರಂಪರೆಯನ್ನು ಗೌರವಿಸಿ ಪ್ರಭಾವಿತರಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಆದರೂ ಇವರ ೭೧೭ ವಚನಗಳೆಲ್ಲವೂ ಪೂರ್ವದ ಅನುಸರಣೆಯಿಂದ ಪ್ರೇರಿತವಾಗಿ ರಚಿತವಾದವುಗಳಲ್ಲ. ಸ್ವಂತಿಕೆಯ ವಚನಗಳು ಇವೆ

ಇವರು ತನ್ನ ಕಾಲದಲ್ಲಿ ಇದ್ದ ಸಹಗಮನ ಪದ್ಧತಿಯನ್ನು ಒಪ್ಪಿಕೊಂಡಿದ್ದರು ಎಂಬುದು ಕೆಳಕಂಡ ವಚನದಿಂದ ವಿದಿತವಾಗುತ್ತದೆ.

ಗ೦ಡಸತ್ತನೆ೦ದು ಗ೦ಡನೊಡನೆ ಕೆಂಡವ ಬೀಳುವನೆಂದು

ಪುಂಡ ವೀರಮಾಸ್ತಿ ತಾನುದಂಡೆಯ ಕಟ್ಟಿಕೊಂಡು

ಖಂಡಯವ ಪಿಡಿದು ತಂಡ ತಂಡದ ಜನರ ಮುಂದೆ

ಮೆರೆದು ಕೊಂಡು ಬಂದು

ಕಿಚ್ಚಿನ ಹೂ೦ಡವಕಂಡು ಹೆದರಿ ಹಿಮ್ಮೆಟ್ಟಿದಡೆ

ಅವಳಿಗದೇ ಭ೦ಗವಲ್ಲದೆ ಶೃಂಗಾರ ಮೆರವುದೇ ಅಯ್ಯ ?

(ಮ.ಸ್ಥ.ವ.ಸು. ೧೩೮)

ಪ೦ಚೇಂದ್ರಿಯ, ಅರಿಷಡ್ವರ್ಗ, ಕರಣ ಚತುಷ್ಟಯ ಇತ್ಯಾದಿ ಲೌಕಿಕ ಲೋಕ ವಿಚಾರಗಳಿಂದ ತನ್ನ ತನುಮನಗಳಲ್ಲಿ ಉಂಟಾದ ತುಮುಲ, ದೌರ್ಬಲ್ಯಗಳನ್ನು ಗುರುತಿಸಿ ಅವುಗಳಿಂದ ಪಾರಾಗುವ ನಿರಸನಗೊಳ್ಳುವ, ತನ್ನ ಅಂತರಂಗವನ್ನು ಒರೆಹಚ್ಚಿ ನೋಡುವಂತಹ  ಭಕ್ತನ ಅ೦ತರಂಗದ ನಿರೀಕ್ಷಣೆಯನ್ನು ಸೂಚಿಸುವ ಭಾವತೀವ್ರತೆಯ ಲಕ್ಷಣವನ್ನು, ಇಂತಹ ಸಂದರ್ಭದಲ್ಲಿ ಗುರುವನ್ನು ಮೊರೆ ಹೋಗುವಂತಹ ಅಂಶಗಳನ್ನು ಷಣ್ಮುಖ ಶಿವಯೋಗಿಗಳ ಸಂಸಾರ ಹೇಯಸ್ಥಲದಲ್ಲಿ ಬರುವ ವಚನಗಳಲ್ಲಿ ಕಾಣಬಹುದು.

ನಿದರ್ಶನಕ್ಕೆ,

 ಕೆಟ್ಟೆಕೆಟ್ಟೆನಯ್ಯ, ಒಡಲುಪಾಧಿವಿಡಿದು

ಕೆಟ್ಟೆ ಕೆಟ್ಟೆನಯ್ಯ ಒಡಲುದುರ್ಗುಣದೊಡನಾಡಿ

ಕೆಟ್ಟೆ ಕೆಟ್ಟೆನಯ್ಯ ನಿಮ್ಮಡಿಯ ಶತ್ತಿಯ ಮೆರೆದು

(ಸ.ಹೇ.ಸ್ಥ.ವ.ಸಂ. ೧೦)

ಮನವೆಂಬ ಮರ್ಕಟನು ತನುವೆ೦ಬ ವೃಕ್ಷವನೇರಿ

ಇ೦ದ್ರಿಯಗಳೆಂಬ ಶಾಖೆಗೆ ಹಾರಿ ವಿಷಯಗಳೆಂಬ

ಹಣ್ಣು ಫಲಗಳ ಗ್ರಹಿಸಿ

ಭವದತ್ತ ಮುಖವಾಗಿ ಹೋಗುತ್ತಿದೆ ನೋಡಾ

ಈ ಮನವೆ೦ಬ ಮರ್ಕಟನ ನಿಮ್ಮನೆನಹೆಂಬ ಪಾಶದಲ್ಲಿ ಕಟ್ಟಿ

ಎನ್ನನುಳುಹಿ ಕೊಳ್ಳಯ್ಯ

(ಅದೇ .ಸಂ.೧೪)

ಕುಸಿವು  ತೈಷಯಂಡಲೆಯಾವರಿಸಿ ಕುಸಿವ

  ದೆಸೆದೆಸೆಗೆ  ತಿರ್ಪದು ನೋಡಾ ತನುವು

ವಿಷಯ ವಿಕಾರದ೦ಡಲೆಯಾವರಿಸಿ

ದೆಸೆದೆಸೆಗೆ ನುಸುಳು ತಿಪ್ಪುದು ನೋಡಾ ಮನವು

ಈತನು ಮನದಲ್ಲಿ ಮುಸುಕಿದ ಮಾಯಾವಾಸನೆಯ ಕಳೆದು

(ಅದೇ ವ. ಸಂ. ೧೭)

ನಿಮ್ಮ ಭಕ್ತಿಯ ಲೇಸು ತೋರಿಸಿ ಬದುಕಿಸಯ್ಯ

ಸಾಕು ಮಾಡದು ಭವಬ೦ಧನ೦ಗಳ

ನೂಕಿಬಿಡದು ಸಕಲಸ೦ಸಾರವ

ಬೇಕೆ೦ದಳಿಸುವದು ವಿಷಯ ಭೋಗಕ್ಕೆ

(ಅದೇ ವ.ಸಂ. ೧೮)

ಸಕಲ ಲೋಕಾದಿಲೋಕಂಗಳು ಮಾಯಾಬಲೆಯಲ್ಲಿ ಸಿಲ್ಕಿ

ಸೆರೆ ಹೋಗುವುದು ಕಂಡು ನಾನಂಜಿ

ನಿಮ್ಮ ಮೊರೆಹೊಕ್ಕೆ ಕಾಯಯ್ಯ ಕಾರುಣ್ಯನಿಧಿಯೇ

(ಅದೇ ವ.ಸಂ. ೨೦)

ಷಟ್‌ಸ್ಥಲವು ಇವರಲ್ಲಿ ಕೇವಲ ಸಾಧನೆಯ ಮಾರ್ಗವಾಗಿರದೆ ಸಿದ್ಧಾಂತವಾಗಿಯೂ ನಿರೂಪಿಸಲ್ಪಟ್ಟಿದೆ. ಶಾಸ್ತ್ರೀಯ ನಿರೂಪಣೆ ಯನ್ನು ವಚನಗಳಲ್ಲಿ ಕಾಣಬಹುದು. ಪ್ರತಿಯೊಂದು ಸ್ಥಲದ ಸ್ವರೂಪ, ಲಕ್ಷಣ, ವೈಶಿಷ್ಟ್ಯಗಳು, ಅದರೊಳಗೆ ಸೇರುವ ಭಕ್ತಿಜ್ಞಾನ, ವೈರಾಗ್ಯ, ಅನುಭಾವ, ದಾಸೋಹ, ಕಾಯಕ ಶಿವಯೋಗ, ಶೀಲಚಾರಿತ್ರ ನೇಮ ಎಲ್ಲವೂ ಕ್ರಮಬದ್ಧವಾಗಿ ನಿರೂಪಿಸಲ್ಪಟ್ಟಿದೆ. ಕೆಲವೆಡೆ ಹೋಲಿಕೆಯೊಡನೆ ನಿರೂಪಿಸಲ್ಪಟ್ಟಿದೆ.

 ಉದಾ : ಭಕ್ತನಾದವನಿಗೆ ನುಡಿ, ತನು, ಮನ ಭಾವ, ಸರ್ವಕ್ರಿಯೆಯೆಲ್ಲವೂ ಶುದ್ಧವಾಗಿರಬೇಕು. ಲಿಂಗನಿಷ್ಠಾ ಪರನಾಗಿಯೂ, ಜಂಗಮವೇ ಪ್ರಾಣವಾಗಿಯೂ, ಅರ್ಥ ಪ್ರಾಣಾಭಿಮಾನ೦ಗಳು ಶಿವನ ಕೂಡಿರಬೇಕು. ಸದಾಚಾರದಲ್ಲಿ ನಡೆವುದು, ಶಿವನಲ್ಲಿ ಭಕ್ತಿಯಾಗಿರುವುದು. ಲಿಂಗಜಂಗಮ ಒಂದೆಯಾಗಿ ಕಾಂಬುದು, ವಿಭೂತಿ, ರುದ್ರಾಕ್ಷಿ ಲಿಂಗಧಾರಣ ಮುಂತಾದ  ಶಿವಲಾಂಛನವುಳ್ಳಂಥ ಶಿವಶರಣರಲ್ಲಿ ಅತಿಭಕ್ತಿ ಯಾಗಿರಬೇಕು ಎಂದು ಭಕ್ತನ ಲಕ್ಷಣವನ್ನು ಹೇಳಿದ್ದಾರೆ. ಪರಸ್ತ್ರೀಯರ ಮುಟ್ಟದಿರುವ, ಪರಧನವ ಅಪಹರಿಸದಿರುವ, ಪರದೈವವ ಪೂಜಿಸದಿರುವ, ಪರಹಿಂಸೆಯ ಮಾಡದಿರುವ ಪರಲೋಕದ ಫಲಪದವ ಬಯಸದಿರುವ, ಇಷ್ಟಲಿಂಗದಲ್ಲಿ ನೈಷ್ಠೆಯನ್ನು ಇಟ್ಟಿರುವವರೇ ವೀರಮಾಹೇಶ್ವರರು ಎಂದು ಹೇಳಿದ್ದಾರೆ.

ಅನುಭಾವಿಯಾದವನು ತಿರುಳುಕರಗಿದ ಹುರಿದ ಬೀಜದಂತಿರಬೇಕು. ದಗ್ಧ ಪಟದಂತಿರಬೇಕು ದರ್ಪಣದೊಳಗಣ ಪ್ರತಿಬಿಂಬದಂತಿರಬೇಕು.

ಇವರ ವಚನಗಳಲ್ಲಿ ಯೋಗ ಶಿವಯೋಗಗಳ ಬಗೆಗೂ ಉಲ್ಲೇಖ ಇದೆ. ಪ್ರಾಣಲಿಂಗಿಸ್ಥಲದ ಬಹುತೇಕ ವಚನಗಳು  ಯೋಗದ ವಿವರಣೆಗಾಗಿಯೇ ಮೀಸಲಾಗಿವೆ. ಮಂತ್ರ, ಲಯ ಹಠಯೋಗ, ರಾಜಯೋಗಗಳೆಂಬ ಚತುರ್ವಿಧಯೋಗಗಳ ಸ್ವರೂಪ, ಅವುಗಳಲ್ಲಿಯ ವಿಧಗಳು ಲಕ್ಷಣ ಇತ್ಯಾದಿಗಳ ಪ್ರತ್ಯಕ್ಷ ಅನುಭವಗಳನ್ನು ಸ್ಫುಟವಾಗಿ ನಿರೂಪಿಸಿ ಇವೆಲ್ಲವುಗಳಿಗಿಂತ ಮಿಗಿಲಾದದ್ದು ‘ಶಿವಯೋಗ’ ಎಂದು ಹೇಳಿ ಇದರಿಂದಲೇ ವ್ಯಕ್ತಿಯ ಪರಿಪೂರ್ಣ ಸಿದ್ಧಿಸಾಧ್ಯ ಎಂದು ನಿರೂಪಿಸಿದ್ದಾರೆ. ಅಷ್ಟಾವರಣಗಳ ಮಹತ್ವದ ಬಗೆಗೂ ವಚನಗಳಲ್ಲಿ ವಿವರವಿದೆ. ಅಷ್ಟಾವರಣಗಳಲ್ಲಿ ಒಂದಾದ ವಿಭೂತಿಯ ಬಗೆಗೆ ಒಂದು ಸ್ಥಲವನ್ನೇ ಮೀಸಲಾಗಿರಿಸಿದ್ದಾನೆ. ವಿಭೂತಿಯ ಲಕ್ಷಣ ಪ್ರಕಾರಗಳು ಮಹತ್ವ ಇತ್ಯಾದಿಗಳ ಬಗೆಗೂ ಸವಿವರವಾದ ನಿರೂಪಣೆ ಇದೆ. ಶ್ರೀ ವಿಭೂತಿಯ ಅಂತರಂಗದಲ್ಲಿ ವಿಶ್ವಾಸ ತುಂಬಿ ಧರಿಸಿದ ಮನುಜರಿಗೆ ಅನಂತ ಕೋಟಿ ಪಾತಕ೦ಗಳು  ಪರಿಹಾರವಾಗಿ ಶಿವಸಾಯುಜ್ಯ ಪದವು ದೊರೆಕೊಂಬುದು ಎಂದು ಅದರ ಮಹತ್ವವನ್ನು ವಿವರಿಸಿದ್ದಾರೆ. ಏಳು ವಚನಗಳಲ್ಲಿ ರುದ್ರಾಕ್ಷಿಯ ಬಗೆಗೆ ನಿರೂಪಿಸಲಾಗಿದೆ.

ವ್ಯಕ್ತಿಯ ವ್ಯಕ್ತಿತ್ವದ ಉನ್ನತ ಮೌಲ್ಯಗಳಾದ ಶೀಲ ,ಚಾರಿತ್ರ, ವ್ರತ ನೇಮಗಳ ನಿರೂಪಣೆಯು ಇವರ ವಚನಗಳಲ್ಲಿ ನಿರೂಪಿತವಾಗಿದೆ.

ಛಲವಿರಬೇಕು ಶಿವಭಕ್ತಿಯ ಮಾಡುವಲ್ಲಿ,

ಛಲವಿರಬೇಕು ನಿತ್ಯ ನೇಮದಲ್ಲಿ

ಶೀಲವ್ರತದಲ್ಲಿ ಹಿಡಿದು ಬಿಡನೆಂಬ ಸಟೆಯನಾಡದೆ

ಸತ್ಯವಚನವ ನುಡಿವಾತ

ಕುಟಿಲ ಕುಹಕವ ಮರೆತು ಸದಾಚಾರದಲ್ಲಿ

ನಡೆವಾತನೇ ಸದ್ಭಕ್ತ

ಸುರಚಾಪದಂತೆ ತೋರಿ ಅಡಗುವ ಮನವನಚ್ಚ ಬೇಡ

ಪರಧನ ಪರಸ್ತ್ರೀಯರ ಮುಟ್ಟವೆಂಬುದೆ ಎನ್ನ ಶೀಲ

ಒಡಲುಪಾಧಿಕೆಯ ವಿಡಿದು ಅನ್ಯರ ಅನ್ನ ವಸ್ತ್ರಂಗಳ

ಬಾಯ್ದೆರೆದು ಬೇಡನೆಂಬುದ ಎನ್ನ ವ್ರತ

ಸಕಲ ಪದಾರ್ಥ೦ಗಳ ಲಿಂಗಕ್ಕೆ ಕೊಡದೆ ಅ೦ಗದಿಚ್ಛೆಗೆ

ಕೊಳ್ಳೆನೆ೦ಬುದೇ ನೇಮ

ದಯವಿರಬೇಕು ಸಕಲ ಪ್ರಾಣಿಗಳಲ್ಲಿ, ಭಯವಿರಬೇಕು

ಗುರುಲಿಂಗ ಜಂಗಮದಲ್ಲಿ

ನಯವಿರಬೇಕು ಸಕಲ ಗುಣಂಗಳಲ್ಲಿ ಸ್ನೇಹವಿರಬೇಕು

ನುಡಿಗಡಣದಲ್ಲಿ

ಇತ್ಯಾದಿಯಾಗಿ ಆತ್ಮೀಯವಾದ ನುಡಿಗಳಲ್ಲಿ ನವುರಾಗಿ ನೀತಿಬೋಧನೆ ಮಾಡುವುದರ ಮೂಲಕ ವ್ಯಕ್ತಿ ಚಾರಿತ್ರ ಸಂಪನ್ನನಾಗಿ ಸಾರ್ಥಕ ಜೀವನ ಸಾಗಿಸಲು ಪ್ರೇರಣೆ ನೀಡಿದ್ದಾರೆ.

ಸಮಕಾಲೀನ ಸಮಾಜದಲ್ಲಿ ಕಂಡು ಬಂದ ಕುಂದು ಕೊರತೆಗಳು ವೈಪರೀತ್ಯಗಳನ್ನು ನವುರಾಗಿಯೂ, ಕಠೋರವಾಗಿಯೂ ವಿಡಂಬಿಸಿ ಅವುಗಳನ್ನು ನಿವಾರಿಸುವ ಯತ್ನವನ್ನು ವಚನಗಳ ಮೂಲಕ ಪ್ರಯತ್ನಿಸಿದ್ದಾರೆ. ಇಲ್ಲೆಲ್ಲಾ ಉಪಮೆ, ರೂಪಕ, ದೃಷ್ಟಾಂತ ನಾಣ್ಣುಡಿ, ಗಾದೆ ಮಾತುಗಳಿಗೆ ಹೆಚ್ಚಿನ ಆದ್ಯತೆ ತಲುಪಿದೆ.

ಬ೦ಧನಕ್ಕೊಳಗಾದ ಹುಲಿಗೆ ಬಲತ್ಕಾರ ಉಂಟೆ ಅಯ್ಯ ?

ಸ೦ಸಾರದ೦ದುಗದಲ್ಲಿ ತೊಳಲುವ ಜೀವನಿಗೆ

ಮು೦ದೆ ಮುಕ್ತಿಯನರಸುವ ಜ್ಞಾನ ಉ೦ಟೇ ಅಯ್ಯ

ಸಿರಿ ಬಂದೊದಗಿತ್ತೆಂದು ಹಿರಿದಾಗಿ ಹಿಗ್ಗಬೇಡ

ಸಿರಿಯೆಂಬುದು ಕನಸಿನ ಪರಿಯಂತೆ

ಮಡದಿ ಮಕ್ಕಳು ಪಡೆದ ದ್ರವ್ಯವು ಎನ್ನೊಡವೆ ಎಂದು

ನಚ್ಚಬೇಡಿರೊ ಎಲೆ ಹುಚ್ಚು ಮಾನವರಿರಾ ಎಂದು ಎಚ್ಚರಿಸಿದ್ದಾರೆ.

ಮಹೇಂದ್ರ ಜಾಲದ೦ತೆ ಕಣ್ಣ ಮುಂದೆ ಒಡ್ಡಿದ

ಹುಸಿಯ ಸ೦ಸಾರದಲ್ಲಿಯೇ ಎಡ್ಡಾಗಬೇಡಿರೋ 

ಎಂದು ಕಿವಿಮಾತು ಹೇಳಿದ್ದಾರೆ. ಅನ್ಯರಲ್ಲಿ ಅವಗುಣವ ಅರಸುವವರನ್ನು’ ತನ್ನ ಎಡೆಯಲ್ಲಿ ಕಪ್ಪೆ ಸತ್ತು ಬಿದ್ದುದನ್ನು ಅರಿಯದೆ ಪರರ ಎಡೆಯಲ್ಲಿ ನೊಣವ ಅರಸುವ ಮರಳುಗಳಿಗೆ   ಹೋಲಿಸಿದ್ದಾರೆ. ವೇಷದಾರಿ ಮಹಾಂತರನ್ನು ಹೊರಗೆ ಆಡಂಬರದ ವೇಷವ ತಾಳಿ ಜಡೆಯ ಬಿಟ್ಟರೇನು ಆಲದ ಮರಕ್ಕೆ ಬೇರಿಳಿದಂತೆ ಎಂದು ಮೂದಲಿಸಿದ್ದಾರೆ. ಪರಧನ, ಪರಸ್ತ್ರೀಯರ ಬಿಟ್ಟರೆ ಗುರುಲಿಂಗ ಜಂಗಮವು ಸಾಧ್ಯವು ನೋಡಾ ಎಂದು ಒಂದಡೆ ನಿರೂಪಿಸಿದ್ದಾರೆ. ಕನಕ, ಕಾಮಿನಿ ಭೂಮಿಗಾಗಿ ಹೊಡೆದಾಡಿ ಕಟ್ಟಿತೀ ಜಗವೆಲ್ಲಾ ಎಂದು ನೊಂದಿದ್ದಾರೆ. ತನ್ನ ತಾನರಿಯದೆ ಅನ್ಯರ ಗುಣಾವಗುಣಂಗಳ ಎತ್ತಿ ಹಿಡಿಯುವವರನ್ನು, ಸಜ್ಜನ ಸದ್ಭಾವಿ ಸತ್ಪುರಷರುಗಳ ಮನನೋವಂತೆ ಹಳಿದು ಹಾಸ್ಯವ ಮಾಡಿ ದೂಷಿಸುವವರನ್ನು ಶಿವಶರಣರೆಂದು ಹೇಗೆ ಕರೆಯಲಿ ಎಂದು ಚಿಂತಿಸಿದ್ದಾರೆ. ಹೊನ್ನು, ಹೆಣ್ಣು, ಮಣ್ಣಿಗಾಗಿ ಆಸೆಪಟ್ಟರೆ ಸಂಚಿತ ಪ್ರಾರಬ್ಧ ಆಗಾಮಿಕರ್ಮ ಬಿಡದು ಎಂದು ಎಚ್ಚರಿಸಿದ್ದಾರೆ. ಕೇವಲ ಮಾತಿನಲ್ಲಿ ತಾವು ಶಿವಾನುಭಾವಿಗಳೆಂದು ಗಳಹುತ್ತಿರುವವರನ್ನು ಮಾತುಕಲಿತ ಭೂತನಂತೆ ಆ ಮಾತು ಈ ಮಾತು ಹೋಮಾತುಗಳ ಕಂಡಕಂಡಲ್ಲಿ ನಿಂದನಿಂದಲ್ಲಿ ಮುಂದುವರಿದು ಹರಲೆಗುಟ್ಟುವ ಒಣಹರಟೆಗಾರರು ಎಂದೂ, ಅ೦ತರ೦ಗದಲ್ಲಿಯ ಅರಿಷಡ್ವರ್ಗ, ಅಷ್ಟಮದ, ಕರಣ ಚತುಷ್ಟಯಗಳನ್ನು ನಿಗ್ರಹಿಸದೆ ಬಹಿರಂಗದಲ್ಲಿ ಹಲವು ವ್ರತಗಳನ್ನು ಪಾಲಿಸುತ್ತ ತಾವು ಶೀಲವಂತರೆಂದು ಹೇಳಿಕೊಳ್ಳುವವರನ್ನು ‘ಹುತ್ತದೊಳಗಣ ಹಾವ ಕೊಲುವನೆಂದು ಮೇಲೆ ಹುತ್ತವ ಬಡಿವ ಅರೆ ಮರುಳರು ಎಂದು ಹರಿತವಾಗಿ ವಿಡಂಬಿಸಿದ್ದಾರೆ. ಭಕ್ತಿಯ ಮರೆತು ಯುಕ್ತಿ ಶೂನ್ಯರಾಗಿ ಮುಕ್ತಿಯ ಹೊಲಬು ತಪ್ಪಿ ಮಲತ್ರಯಂಗಳ ಕಚ್ಚಿ ಮೂತ್ರದ ಕುಳಿಯೊಳ್ ಮುಳು ಗಾಡುತಿರ್ಪ ಮೂಳ ಹೊಲೆಯರ ಮುಖವ ನೋಡಲಾಗದಯ್ಯ ಎಂದು ಹೀಗಳೆದಿದ್ದಾರೆ. ವೇದಶಾಸ್ತ್ರ ಆಗಮ ಪುರಾಣ ತರ್ಕ ವ್ಯಾಕರಣ ಇತಿಹಾಸ೦ಗಳ ಓದಿ ಹೇಳುವಾತ ಇವರ ಪ್ರಕಾರ ಜಾಣನಲ್ಲ. ಹೊನ್ನೆನ್ನದು, ಮಣ್ಣೆನ್ನದು, ಹೆಣ್ಣೆನ್ನೆದು, ಮನೆಯೆನ್ನದು., ಮಕ್ಕಳೆನ್ನವರೆಂದು ಭಿನ್ನಭಾವದಲ್ಲಿರ್ದು, ಸನ್ನಿಹಿತ ಜಂಗಮರೊಡನೆ ಸಹಭೋಜನ ಮಾಡಿದಡೆ ಕುನ್ನಿ ಕುಕ್ಕಟನ ಬಸುರಲ್ಲಿ ಬರುವುದು ತಪ್ಪದು ಎಂದು ಎಚ್ಚರಿಸಿದ್ದಾರೆ. ಇವರು ಪೂರ್ವದ ವಚನಕಾರರ ತತ್ತ್ವಗಳನ್ನು ಒಪ್ಪಿಕೊಂಡು ಅದರಂತೆ ನಡೆದವರು, ಜನ ಸಾಮಾನ್ಯರಿಗೆ ತಿಳುವಳಿಕೆಯನ್ನು ಹೇಳುವಂತಹ, ಸದಾಚಾರವನ್ನು ಬಯಸುವಂರಹವನ್ನು ಕುರಿತ ವಚನಗಳಲ್ಲಿ ಭಾಷೆಯಲ್ಲಿ ಸರಳತೆ ಇದೆ. ಪ್ರಾಸಬದ್ಧತೆ ಇದೆ. ತನ್ನನ್ನು ಪರೀಕ್ಷಿಸಿಕೊಳ್ಳುವ ಟೀಕಿಸುವ ಗುಣ ಇದೆ.

ಇವರ ವಚನಗಳಲ್ಲಿ ಅನೇಕ ಯೋಗಾಸನಗಳ ಹೆಸರು ,ಆಚರಣೆಗಳು ಕೇಳಿ ಬರುತ್ತವೆ.  ಬಹುಶಃ ಬ್ರಹ್ಮಚಾರಿಗಳಾಗಿದ್ದ ಇವರು ಯೋಗಾಸನಗಳನ್ನು ಕಲಿತಿದ್ದಿರಬಹುದು. ಇವರ ವಚನಗಳಲ್ಲಿ ಹದಿನೈದಕ್ಕೂ ಮೇಲ್ಪಟ್ಟು ಬೆಡಗಿನ ವಚನಗಳನ್ನು ಕಾಣಬಹುದಾಗಿದೆ. ಈ ಬೆಡಗಿನ ವಚನಗಳಲ್ಲಿ ಬಳಸಿರುವ ಭಾಷೆ ಲೌಕಿಕವಾಗಿದ್ದರೂ ತಲೆಕೆಳಕಾಗಿದ್ದು ಆಳವಾದ ಅನುಭಾವ ಮತ್ತು ಪಾಂಡಿತ್ಯದಿಂದ ಅರ್ಥೈಸಬೇಕಾಗುತ್ತದೆ.  ಷಣ್ಮುಖ ಶಿವಯೋಗಿಗಳ ವಚನಗಳು ಧಾರ್ಮಿಕ ತತ್ತ್ವಗಳನ್ನು ಹೊರಸೂಸುತ್ತಿದ್ದರೂ ಅವುಗಳಲ್ಲಿ ಅಲ್ಲಲ್ಲಿ ಸಾಹಿತ್ಯ ಗುಣ ಇಣುಕಿ ಹಾಕಿದೆ. ಕೆಲವು ವಚನಗಳಲ್ಲಿ ತಾನು ಹೇಳುವ ವಿಷಯಗಳನ್ನು ಸಲೀಸಾಗಿ ನಿರೂಪಿಸಲು ಅರ್ಥವಾಗುವಂತೆ ಮಾಡಲು ಉಪಮೆ, ರೂಪಕಗಳು ಗಾದೆಗಳು ನಾಣ್ಣುಡಿಗಳು ಯಥೇಚ್ಛವಾಗಿ ಬಳಸಿದ್ದಾರೆ. ಈ ಪದವಾಕ್ಯಗಳಲ್ಲಿ ಹುದುಗಿರುವ  ಅರ್ಥಗರ್ಭಿತವನ್ನು ಗಮನಿಸಬಹುದು.

ಉದಾ :

ಅಸಲುಕಳೆದ ಬಳಿಕ ಲಾಭ ಉಂಟೆ

ಉಪದೇಶವಿಲ್ಲದ ಲಿಂಗ ಜಡಪಾಷಾಣವೆ೦ದೆನಿಸಿತ್ತು

ಒಡಲಲ್ಲಿ ಕಲ್ಲು ಕಟ್ಟಿಕೊಂಡು ಮಡುವ ಬಿದ್ದಂತಾಯಿತ್ತು

ಕಟ್ಟಿದ ಬುತ್ತಿ ಎಷ್ಟು ದಿನ ಈಡೇರಲಾಪುದು ?

ಕಪಿಯ ಕೈಯಲ್ಲಿ ರತ್ನವ ಕೊಟ್ಟಡೆ ಅದು ಕಡಿದು ನೋಡಿ

ಕಲ್ಲೊಂದು

ಬಿಸಾಡುವಲ್ಲದೆ ಅದರ ಬೆಳಗನರಿವುದೆ ಅಯ್ಯ ?

ಕಬ್ಬಿನ ಸ್ವಾದ ಮದಗಜ ಬಲ್ಲುದಲ್ಲದೆ ಕುರಿ ಎತ್ತ ಬಲ್ಲುದಯ್ಯ?

ಕ್ಷೀರದ ರುಚಿಯ ಹಂಸ ಬಲ್ಲುದಲ್ಲದೆ ನೀರಗೋಳ ಎತ್ತ

ಬಲ್ಲುದಯ್ಯ ?

ತೊಟ್ಟಬಿಟ್ಟ ಹಣ್ಣು ಮರಳಿ ತೊಟ್ಟ ಹತ್ತಬಲ್ಲುದೆ

ಹಗಲ ಕಂಡ ಕಮರಿಯ ಇರುಳೆ ಬೀಳುವರೆ

ಹಂದಿ ಹಡಿಕೆಯ ನೆನಸಿ ಹಾಳುಗೇರಿಗೆ ಹೋಗುವಂತ

ಸಿಂಹದ ಮೊಲೆವಾಲು ಸಿಂಹದ ಮರಿಗಲ್ಲದೆ ಸೀಳುನಾಯಿಗೆ

ಯೋಗ್ಯವೇ ?

ಸುಟ್ಟ ಮಡಕೆಯಲ್ಲಿ ನೀರು ತು0ಬಿದಡೆ ನಿಲುವುದಲ್ಲದೆ

ಹಸಿಯ ಮಡಕೆಯಲ್ಲಿ

ನೀರ ತುಂಬಿದಡ ದಿಟವಾಗಿ ನಿಲ್ಲುವುದೆ

ಇತ್ಯಾದಿ ನಿತ್ಯ ಜೀವನದ ಸೂಕ್ತಿಗಳು ಸಂದರ್ಭೋಚಿತವಾಗಿ ವಚನಗಳಲ್ಲಿ ಬಳಸಲ್ಪಟ್ಟಿವೆ.

ಇವರ ಶಬ್ಧ ಸಂಪತ್ತಿನಲ್ಲಿ ಸಂಸ್ಕೃತ ಮತ್ತು ಕನ್ನಡ ಉಭಯ ಭಾಷೆಗಳ ಪದಗಳನ್ನು ಗುರುತಿಸಬಹುದು. ಒಂದೇ ವಚನದಲ್ಲಿಯೇ ಅಚ್ಚಗನ್ನಡ ಶಬ್ದಗಳು, ಸಂಸ್ಕೃತ ಭೂಯಿಷ್ಠ ಪದಗಳು ಸಮ್ಮಿಳಿತವಾಗಿರುವುದನ್ನು ನೋಡಬಹುದು. ಇವರ ವಚನಗಳಲ್ಲಿಯ ಅದರಲ್ಲೂ ತಾತ್ವಿಕ ವಚನಗಳ ಶೈಲಿಯು ಹೆಚ್ಚು ವಿಸ್ತೃತದಿಂದ ಕೂಡಿದ್ದು ಗದ್ಯ ಲಯವನ್ನು ಪಡೆದಿದೆ. ಇವರ ವಚನಗಳ ಶಿಲ್ಪ ನಾಲ್ಕು ಸಾಲುಗಳ ಬಂಧದಿಂದ ನಾಲ್ಕು ಪುಟದವರೆಗೂ ದೀರ್ಘಾರ್ತಕವಾಗಿದೆ.

ವೀರಶೈವಸಿದ್ಧಾಂತವನ್ನು ತರ್ಕಬದ್ಧವಾಗಿ ನಿರೂಪಿಸಲು ಸಂಸ್ಕೃತ ಪ್ರಮಾಣ ಗ್ರಂಥಗಳಾದ, ಶಿವಧರ್ಮ, ವೀರಶೈವ ಸಂಗ್ರಹ, ವೀರಮಾಹೇಶ್ವರ ಗ್ರಂಥ, ವಾತುಲಾಗಮ, ಶಿವರಹಸ್ಯ, ಸೂಕ್ಷ್ಮಾಗಮ, ಪರಮರಹಸ್ಯ, ಸಿದ್ಧಾಂತ ಶಿಖಾಮಣಿ, ಸ್ಕಾಂದ ಪುರಾಣ, ಪದ್ಮಪುರಾಣ, ಲಿಂಗಪುರಾಣ, ಬ್ರಹ್ಮಾಂಡ ಪುರಾಣ  ಮುಂತಾದ ಕೃತಿಗಳಿಂದ ಸಂಸ್ಕೃತ ಶ್ಲೋಕಗಳನ್ನು ಆಕರಗಳಾಗಿ ಬಳಸಿಕೊಂಡಿದ್ದು, ನಿರೂಪಣೆಯಲ್ಲಿ ಸ೦ದರ್ಭೋಚಿತವಾಗಿ  ಬಳಕೆಯಾಗಿವೆ.

ಒಟ್ಟಾರೆ ಇವರ ವಚನಗಳನ್ನು ಕುರಿತು, ಪ್ರಭುಸ್ವಾವಿಗಳು ಬೂದಿಹಾಳಮಠರವರು ಹೇಳಿರುವ ವೀರಶೈವತತ್ತ್ವಗಳನ್ನು ತಿಳಿಯಾದ ಭಾಷೆಯಲ್ಲಿ ತಿಳಿಸುವುದರಿಂದ ಇದು ಒಂದು  ಉಪದೇಶ ಗ್ರಂಥವೆಂದೂ, ಶಿವಾನುಭವ ಶಾಸ್ತ್ರ ಸಾರವೆಂದು, ಶಿವಾನುಭವ ಶಬ್ದಕೋಶವೆಂದು, ಹೇಳಲು ಅಭ್ಯಂತರವಿಲ್ಲ  ಎಂಬ ವಾಕ್ಯಗಳಲ್ಲಿ ಉತ್ಪ್ರೇಕ್ಷೆ ಇದ್ದರೂ ಸ್ವಲ್ಪ ಮಟ್ಟಿಗೆ ಖಚಿತತೆ ಇದೆ. ವೀರಶೈವ ಸಿದ್ಧಾಂತವನ್ನು ನಿರೂಪಿಸುವಲ್ಲಿ ಚೆನ್ನಬಸವಣ್ಣ ಆದಯ್ಯರನ್ನು ನೆನಪಿಗೆ ತಂದು ಕೊಡುತ್ತಾರೆ. ಇವರ ವಚನಗಳು ರಚನೆಯಾದ ನಂತರದ ಕಾಲದಲ್ಲಿ ತುಂಬ ಜನಪ್ರಿಯತೆಯನ್ನು ಗಳಿಸಿದ್ದವು ಎಂಬುದಕ್ಕೆ ಇಲ್ಲಿಯವರೆಗೂ ಪ್ರಕಟಗೊ0ಡ ಆವೃತ್ತಿಗಳೇ ಸಾಕ್ಷಿ. ಪ್ರಪ್ರಥಮವಾಗಿ ಪ್ರಕಟಗೊಂಡ ವಚನಗಳು ಎಂಬ ಖ್ಯಾತಿ ಇವರ ವಚನಗಳಿಗೆ ಸಲ್ಲುತ್ತದೆ. ಇವರ ವಚನಗಳನ್ನು ವಿಶ್ವಕರ್ಮ ಸಮಾಜದ ಪುರವಂತರು ಗುಗ್ಗಳ ಮೊದಲಾದ ಸಮಾರಂಭಗಳಲ್ಲಿ ಒಡಪುಗಳಾಗಿ ಉಗ್ಗಡಿಸುವುದು ವಿಶಿಷ್ಟವಾಗಿದೆ. ಅದ್ವೈತ ತತ್ವಾವಲಂಬಿಗಳು ಇವರ ವಚನಗಳಲ್ಲಿಯ ಯೋಗ ಅಧ್ಯಾತ್ಮಕ್ಕೆ ಸಂಬಂಧಿಸಿದ ವಚನಗಳನ್ನು ಕೆಲವೆಡೆ ಬಳಸಿಕೊಂಡಿದ್ದಾರೆ.

ಇವರೇ ಬರೆದರೆಂದು ಹೇಳಲಾದ ಅಖಂಡೇಶ್ವರ ಜೋಗುಳು ೪೧ ಪದಗಳು ದೊರೆತಿವೆ. ಜೋಗುಳ ಪದಗಳಲ್ಲಿ ಬರುವ ಬಹಳಷ್ಟು ವಿಷಯಗಳು ಇವರ ಪ್ರಾಣಿಲಿಂಗಿಸ್ಥಲದ ವಚನಗಳುನ್ನು ನೆನಪಿಗೆ ತಂದುಕೊಡುತ್ತವೆ. ಶಿವಾನುಭವವನ್ನು ನಿರೂಪಿಸಿವೆ. ಕಲ್ಯಾಣಪಟ್ಟಣದಲ್ಲಿ ಬಸವಾದಿ ಪ್ರಮಥರು ಶಿವನರೂಪವಾಗಿ ಕೂಡಿದ್ದರು   ಎಂದು ನೂತನ ಶರಣರುಗಳನ್ನು ನಾಲ್ಕು ಪದ್ಯಗಳಲ್ಲಿ  ಸ್ಮರಿಸಿದ್ದಾರೆ.

ನಿದರ್ಶನಕ್ಕೆ,

ಶುದ್ಧ ಪ್ರಸಾದವನು ಗುರುವಿನಿಂ ಪಡೆದು

ಸಿದ್ಧ ಪ್ರಸಾದವನು ಲಿಂಗದಿಂ ಪಡೆದು

ಚಿದ್ಘನ ಪ್ರಸಾದವನು ಚರದೊಳ್ ಪಡೆದು ಮಹಾ

ರುದ್ರಂಗೆ ಜೋಜೋ ಎಂದಳು ಶರಣೆ

ಜೋಜೋ ಎನ್ನಿರಿ ಅಸಮಾಕ್ಷ ಶಿವಗೆ

ಜೋಜೋ ಎನ್ನಿರಿ ಭಸಿತ ಭೂಸಿತಗೆ

ಜೋಜೋ ಎನ್ನಿರಿ ಶಶಿಯ ಸೂಡಿದಗೆ | ಪಾಡಿ |

ಜೋಜೋ ಎನ್ನಿರಿ ವೃಷಭವಾಹನಗೆ

ಇತ್ಯಾದಿಯಾಗಿ ಐದು ಪದಗಳಲ್ಲಿ ಶಿವನನ್ನು ಪರ್ಯಾಯ ನಾಮಗಳಿಂದ ಸ್ತುತಿಸಿದ್ದಾರೆ. ಒಂದು ಪದದಲ್ಲಿಯಂತೂ ಜೋಗುಳದ ಪದಗಳನ್ನು ಕೇಳಿದವರಿಗೆ ಶಿವನೊಲಿಯುವನು. ಸಿದ್ದಿ ದೊರಕುವುದು ಎಂದು ಹೇಳಿದ್ದಾರೆ.

ನಿರಾಳ ಸದ್ಗುರು ಸೋತ್ರ

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿವಿಭಾಗದಲ್ಲಿ ಕೆ. ೧೧೭೫/೧೮ ನಂಬರಿನ ಓಲೆಪ್ರತಿಯಲ್ಲಿಯು, ಷಣ್ಮುಖಸ್ವಾಮಿಯವರು ನಿರೂಪಿಸಿದ ನಿರಾಳ ಗುರುಸ್ತೋತ್ರ ಹೆಸರಿನಡಿಯಲ್ಲಿ ೨೫ ಭಾಮಿನಿ ಷಟ್ಪದಿ ಪದ್ಯಗಳಿವೆ. ಗುರುವನ್ನು, ಗುರುವಿನ ಮಹಿಮೆಯನ್ನು ನಾನಾ ತೆರನಾಗಿ ಸ್ತುತಿಸಲಾಗಿದೆ. ನಿದರ್ಶನಕ್ಕೆ ಕೆಲವು ಪದ್ಯಗಳು.

ಬಡವ ನಡೆನಡೆಯುತ್ತ ಭಾಗ್ಯವ

ನೆಡಹಿ ತಾಕ೦ಡ೦ತೆ ರೋಗಿಯು

ಹುಡುಕುತಿಪ್ಪೌಷಧಿಯ ಲತೆ ಕಾಲ್ದೊರಿ ಕಾಂಬಂತೆ

ಒಡಲಕ್ಷುಧೆಯಿಂದಲೆವವಗೆ ಪಾ

ಲ್ಗಡಲ ನಿಧಿಯೆನೆ ಕ೦ಡತೆರನೆ

ನ್ನೊಡೆಯ ಶ್ರೀ ಗುರುದೇವನ೦ಘ್ರಿಯ ಕ೦ಡು ಬದುಕಿದೆನು.

ಗುರುವೆ ಪರತರ ನಿತ್ಯನಿರುಪಮ

ಗುರುವೆ ಪರತರ ಸತ್ಯನದ್ವಯ

ಗುರುವೆ ಪರಬೊಮ್ಮಸ್ವರೂಪನೆ ಘನತಕೆ ಘನಮಹಿಮಾ

ಗುರುವೆ ಮುಕ್ತಿಗೆ ಮೂಲ ನಿಶ್ಚಲ

ಗುರುವೆ ಸುರಚಿರ ಭೇದ್ಯ ನಿರ್ಮಲ

ಗುರುವ ನಿನಗಿನ್ನಧಿಕಮಿಲ್ಲನುತಿಹುದು ಶೃತಿತತಿಯು

ಉಳಿದ ಲಘು ಕೃತಿಗಳು ಉಪಲಬ್ಧವಿಲ್ಲದೆ ಇರುವುದರಿಂದ ಸದ್ಯಕ್ಕೆ ಆ ಕೃತಿಗಳ ಬಗೆಗೆ ಏನನ್ನೂ ಹೇಳುವಂತಿಲ್ಲ